Friday, March 24, 2017

ಸಾರಾ ಶಗುಫ್ತಾ : ಒಡಲ ತೇವಗೊಳಿಸುವ ಕಥನ

  
   ಸ್ನೇಹಲತಾ,ಎಸ್,ಗೌನಳ್ಳಿ.
ಪುಸ್ತಕದ ಬೆಲೆ : 150

ಸಾರಾ ಶಗುಫ್ತಾ ಕೇವಲ ಒಬ್ಬ ಕವಯಿತ್ರಿಯಲ್ಲ ಅವಳೊಂದು ಚಿಂತನಾ ಕ್ರಮ.ಬದುಕಿನಲ್ಲಿ ಅದೆಷ್ಟೋ ದುಃಖತಪ್ತ ನೋವುಗಳುಂಡು ಬರಹದಲ್ಲಿ ಚಿಗುರಿ ಚಿಕ್ಕ ವಯಸ್ಸಿಗೇ ಮಣ್ಣಾದಳು.ಮದುವೆ ಅನ್ನೋ ಸಾಂಸಾರಿಕ ಜಂಜಡದಲ್ಲಿ ಸುಮಾರು ನಾಲ್ಕು ಬಾರಿ ಮುಳುಗೆದ್ದ ಸಾರ ನಿಜಕ್ಕೂ ಅಸಾಮಾನ್ಯ ಮಹಿಳೆ.

    ಹೆಣ್ಣು ಸಂಧಿಸಲೇ ಬೇಕು ಒಬ್ಬ ಪುರುಷನನ್ನು ಪುರುಷ ಹೆಣ್ಣಿನ ಹಣೆಬರಹ ಎಂದು ಬರೆಯುವ ಸಾರಾ ಒಂಟಿ ಹೆಣ್ಣು ಬದುಕಿನ ಘೋರತೆಗಳನ್ನು ಕಂಡು ಅರಗಿಸಿಕೊಂಡ ಕೋಗಿಲೆ.ಅವನು ನನ್ನನ್ನು ಕಚ್ಚಿದ ಮೂರನೇ ನಾಯಿ ಎಂದು ತನ್ನ ಮೂರನೇ ಗಂಡನನ್ನು ಪರಿಚಯಿಸಿ ಹೀಗೆ ಬರೆಯುತ್ತಾಳೆ.
     ನಾನು ಕುಣಿಯಲಾರೆ ಅವರ ಅಂಗೈಯಲ್ಲಿ 
ನಡೆಸುಕೊಂಡರು ನನ್ನನ್ನು ಅಮಾನುಷವಾಗಿ 
ತಿರುಚಲಾಗಿದೆ ನನ್ನ ನಾಲಿಗೆಯನ್ನು 
ಅವರು ಅದೇಕೆ ಹೋಗುವುದಿಲ್ಲ ದೂರ? 
ಅವರೆಲ್ಲ ನನ್ನನ್ನು ಮತ್ತೆ ಮತ್ತೆ ಕಚ್ಚುವುದೇಕೆ? 
ಈಗ ನಾನೊಂದು ಹಿಡಿ ಮಣ್ಣು 
ನಾನು ಹೋಗುವುದಾದರೂ ಎಲ್ಲಿಗೆ? 
ಮರಳು ಭರಿತ ಈ ಬಿರುಗಾಳಿ ಮೆಟ್ಟಿ ನಿಲ್ಲುವುದು ನನ್ನನ್ನು 
ತಂತಿಯಾಗಲಾರೆ ನಾ 
ಆಗಿರುವೆ ನಾನು ನಾನೇ...!  
   ಇಂತಹ ಹಲವಾರು ಸಾಲುಗಳು ಓದುಗನಿಗೆ ಕಾಡದೇ ಇರಲಾರವು.

        ಗಂಡನ ನಿರ್ಲಕ್ಷತನದಿಂದಾಗಿ ತನ್ನ ಮಗುವನ್ನು ಕಳೆದುಕೊಂಡ ಸಾರಾ ಎದೆ ಹಾಲು ಹುಳಿಯಾಗುವುದಕ್ಕೂ ಮುನ್ನ ಕವಿತೆ ಬರೆಯುವೆ ಎಂದು ಪ್ರಮಾಣ ಮಾಡಿ ಬರೆಯತೊಡಗಿ ಪ್ರಸಿದ್ಧ ಕವಯಿತ್ರಿಯಾಗುತ್ತಾಳೆ.

      ಪಾಕಿಸ್ತಾನಿ ಕವಯಿತ್ರಿಯಾದ ಸಾರಾ ಪತ್ರಗಳ ಮೂಲಕವೇ ಸುಖ ದುಃಖ ಜೀವನ ಕಾವ್ಯವನ್ನು ಕುರಿತು ಭಾರತೀಯ ಗೆಳತಿಯಾದ ಅಮೃತಾ ಪ್ರೀತಂ ಜೊತೆಗೆ ಗಾಢವಾದ ಸಂಬಂಧ ಹೊಂದಿರುವ ತನ್ನ ಅಸ್ತಿತ್ವವನ್ನುಳಿಸಿಕೊಂಡು ಆ ಮೂಲಕ ನಮ್ಮೆದುರಿಗಿದ್ದಾಳೆ. 
        ಚಂದಿರನ ಬದಲಿಗೆ ಕೋರಲಾರೆ ಆಕಾಶವನ್ನು ಎಂದು ಹೇಳುವ ಸಾರಾ ಬಯಸಿದ್ದು ಕೇವಲ ಹಿಡಿ ಪ್ರೀತಿ,ಕಾಳಜಿ ತೋರುವ ಒಂದೇ ಒಂದು ಪುರುಷನನ್ನು.ಆದರೆ ನನ್ನ ಮಣ್ಣು ಇಲ್ಲಿಯವರೆಗೆ ಪ್ರೀತಿಯ ಪರಿಮಳದಿಂದ ಶುಷ್ಕವಾಗಿದೆ ಎಂದು ಹೇಳುವ ಅವಳು ಪ್ರೀತಿಯಿಂದ ವಂಚಿತಳಾಗಿ ತನ್ನ ಗಂಡಂದಿರ ದೇಹದ ದಾಹ ನೀಗಿಸಿ ಸುಸ್ತಾದ ದೌರ್ಭಾಗ್ಯಿಯಾಗಿದ್ದಳು.

      ತಲಾಖ್ ನಂತರ ಮಕ್ಕಳಿಗಾಗಿ ಪರಿತಪಿಸಿ ಅವುಗಳನ್ನು ಪಡೆಯಲು ಕಾತುರಗೊಂಡು ಕೊನೆಗೂ ಮಕ್ಕಳಿಂದ ದೂರಾಗಿಸಿದ ಕಾನೂನಿಗಿಂತಲೂ ದೇವರ(ಕುರಾನ್)ಮೇಲೆ ನ್ಯಾಯದ ಭರವಸೆಯಿತ್ತು ಸೋತ ಅಭಾಗ್ಯ ತಾಯಿಯಾಗಿದ್ದಳು.
      ಸಾರಾಳ ಇಡೀ ಬದುಕು ನೋವಿನಿಂದ ಕೂಡಿದ್ದರೂ ಅವಳು ತನ್ನ ಅಮ್ಮಿಯನ್ನು ಕಳೆದುಕೊಂಡಾಗ ಹೆಚ್ಚು ದುಃಖಿಯಾಗಿದ್ದಳು.ಜೀವನದಲ್ಲಿ ಎಲ್ಲರೂ ದೂರಾದರೂ ತಾಯಿ ಮಾತ್ರ ಅವಳ ಹುಚ್ಚಾಟಗಳನ್ನು ಸಹಿಸಿಕೊಂಡಿದ್ದಳು. ಸುಮಾರು ಬಾರಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಸಾರಾಗೆ ತಾಯಿಯ ಆರೈಕೆ,ಪ್ರೀತಿ ಮಾತ್ರ ಹಿತವಾಗಿತ್ತು.

      ತಾಯಿಯ ಆಸೆ ಪೂರೈಸಲೆಂದು ನಾಲ್ಕನೇ ಮದುವೆಯಾದ ಸಾರಾ ಗಂಡನ ಕಿರುಕುಳ ಸಹಿಸದೆ ವಿಚ್ಚೇದನ ಪಡೆದು ತಾಯಿಯಲ್ಲಿಗೆ ಮರಳುವಳು. ಹೀಗೆ ದುಃಖದಲ್ಲಿ ಜೊತೆಗಿದ್ದ ಅಮ್ಮಿಯ ಸಾಥ್ ಕಳಚಿಕೊಂಡಾಗ ಅವಳಿಗೆ ಆವರಿಸಿದ ಅನಾಥ ಪ್ರಜ್ಞೆ ಮತ್ತ್ಯಾವತ್ತು ಆಗಿರಲಿಲ್ಲ. 
    ಕೈ ಬಳೆಗಳೇ ಭರ್ಚಿಗಳಾಗಿ ಚುಚ್ಚುವವು ಎಂದು ಬರೆಯಲು ಹಚ್ಚಿದ ಅವಳ ನೋವಿನ ಆಳ ಅಳೆಯಲಾದೀತೆ.! ಕ್ರೂರ ಸಮಾಜದ ನಡವಳಿಕೆಯಿಂದ ಮನನೊಂದು ಕೆಲವೊಮ್ಮೆ ಮಾನಸೀಕ ಅಸ್ವಸ್ಥೆಯಾಗಿ ಹುಚ್ಚಾಸ್ಪತ್ರೆ ಸೇರಿ ಮರಳಿದ್ದಳು.ಬದುಕಿನ ಅಂತಿಮ ಘಟ್ಟದಲ್ಲಿ ಮಾನವೀಯ ಗುಣವುಳ್ಳ  ಸೈಯದ್ ಅಹಮದ್ ರ ಮೇಲೆ ಆಕೆಗೆ ಒಲವಾಗಿದ್ದರೂ, ಒರ್ವ ಸಾಂಸಾರಿಕ ವ್ಯಕ್ತಿಯ ಬದುಕನ್ನು ಪ್ರವೇಶಿಸಿ ಅವನ ಪತ್ನಿ ಮಕ್ಕಳಿಗೆ ದ್ರೋಹ ಬಗೆಯ ಬಾರದೆಂದು ನಿರ್ಧರಿಸಿದ್ದಳು.ಹೆಣ್ಣೊಬ್ಬಳಿಗಿರುವ ನೈತಿಕ ಪ್ರಜ್ಞೆ ಅವಳಲ್ಲಿತ್ತು.ಹಲವಾರು ಬಾರಿ ಸಾವಿಗಾಗಿ ಹಂಬಲಿಸಿದರೂ ಕೂಡ ಅದು ಮಾತ್ರ ಅವಳಿಂದ ಮುನಿಸಿಕೊಂಡಂತೆ ದೂರ ಸರಿಯುತ್ತಲೇ ಇತ್ತು.ಕೊನೆಗೂ ಜೂನ 4,1984ರಂದು ಚಲಿಸುವ ರೈಲಿನ ಎದುರಿಗೆ ನಿಂತು ಆತ್ಮಹತ್ಯೆ ಮಾಡಿಕೊಂಡು ಬಾರದ ಸಾವನ್ನೂ ಒಲಿಸಿಕೊಂಡು ದಫನ್ ಆದಳು. 

         ಸಮಸ್ತ ಬಂಧಗಳನ್ನು ಕಳಚಿ ಹೆಣ್ಣೊಬ್ಬಳು ತಾನು ತಾನಾಗಿ ಬದುಕಿ ವ್ಯಕ್ತಿತ್ವ ನಿರ್ಮಿಸಿಕೊಂಡು ಅಸ್ತಿತ್ವ ಉಳಿಸಿಕೊಂಡ ಸಾರಾ ಒಬ್ಬ ಧೀರ ನೀರೆ. ಇಡೀ ಪುಸ್ತಕ ಓದಿದ ಬಳಿಕ ನನಗನ್ನಿಸಿದ್ದು ಸಾರಾ ಒಂದುವೇಳೆ ಭಾರತದಲ್ಲಿ ಹುಟ್ಟಿದ್ದರೆ?  ಮಹಿಳೆಯ ಆಲೋಚನೆಗಳು ಆಕೆಯ ಸಂಸಾರದ ಶಯನಾಗಾರಕ್ಕಿಂತ ದೊಡ್ಡವು ಎಂದು ಹೇಳುವಲ್ಲಿ ಸಾರಾ ಎಂದರೆ ಅದೊಂದು ಚಿಂತನಾ ಕ್ರಮವೆಂದರೆ ತಪ್ಪಾಗಲಾರದು.ಇಂತಹ ಪ್ರತಿಭೆಯ ಅಸ್ತಿತ್ವವನ್ನು ಉಳಿಸಿದ ಅಮೃತಾ ಪ್ರೀತಂ ಹಾಗೂ ಕನ್ನಡಕ್ಕೆ ಇವಳನ್ನು ಪರಿಚಯಿಸಿದ ಹಸನ್ ನಯೀಂ ಸುರಕೋಡ ಮತ್ತು ಪುಸ್ತಕವನ್ನು ಪ್ರಕಟಿಸಿದ ಲಡಾಯಿ ಪ್ರಕಾಶನಕ್ಕೆ ಧನ್ಯವಾದಗಳು.
      

Thursday, March 23, 2017

2017 ರ ಮೇ ಸಾಹಿತ್ಯ ಮೇಳದ ಆಶಯ


2017 ಮೇ 6, 7 ರಂದು ಧಾರವಾಡದಲ್ಲಿ ನಡೆವ ಮೇ ಸಾಹಿತ್ಯ ಮೇಳದ ಆಶಯ ಹೀಗಿರಬೇಕೆಂದು ಅಂದುಕೊಂಡಿದ್ದೇವೆ. ಬದಲಾವಣೆಗಳು ಸೇರ್ಪಡೆಗಳು ಬೇಕು ಅನ್ನಿಸಿದರೆ ತಿಳಿಸಿ.. ಎಲ್ಲರೂ ಸೇರಿ ಜನಚಳುವಳಿಗೆ ಸನ್ನದ್ಧರಾಗಬೇಕಿದೆ.. ಪ್ರಜಾಪ್ರಭುತ್ವ ಉಳಿಸಲು ಪ್ಯಾಸಿಸಮ್ ಸಮಕಾಲೀನ ಚಹರೆಗಳನ್ನು ಗಮನಿಸಿ ಅದರ ವಿರುದ್ಧ ಬರಹಗಾರರು, ಕಲಾವಿದರು, ಜನಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿ/ನಿ ಯುವಜನರು ಮಹಿಳೆಯರು ಚಿಂತಕರು ಒಟ್ಟಾಗಿ ಇದು ಕೊನೆಯ ಯುದ್ಧ ಎಂಬಂತೆ ಹೋರಾಟಕ್ಕೆ ಇಳಿಯಬೇಕಿದೆ. ಜನತೆಯನ್ನು ಸಜ್ಜುಗೊಳಿಸಬೇಕಿದೆ.


ಸಂಗಾತಿಗಳೇ,

ನಾವು ಹಾಗೆ ಬಾಳಿದೆವು, ಬಾಳಲೆತ್ನಿಸಿದೆವು ಕೂಡಾ.

ಈ ನೆಲ ಬ್ರಿಟಿಷರ ನಂತರ ರಾಜಶಾಹಿ-ಪುರೋಹಿತಶಾಹಿ-ಜಮೀನ್ದಾರರ ಊಳಿಗಮಾನ್ಯ ವ್ಯವಸ್ಥೆಯನ್ನು ಮತ್ತೆ ಅಪ್ಪಿಕೊಳ್ಳದೇ ಪ್ರಜಾಪ್ರಭುತ್ವ ಮೌಲ್ಯಗಳ ನೆಲೆಯಾಗಬೇಕೆನ್ನುವುದು ಸಮಾನತೆಯ ಹೋರಾಟ ಕಟ್ಟಿದ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಹುಪಾಲು ಹಿರಿಯರ ಕನಸಾಗಿತ್ತು. ಈ ಆಶಯ ಹೊತ್ತೇ ಸಂವಿಧಾನ ರಚನೆಯಾಯಿತು. ಈ ನೆಲದ ಕಟ್ಟಕಡೆಯ ಮನುಷ್ಯನಿಗೂ ಸಂಪನ್ಮೂಲಗಳಿಗೆ ಅವಕಾಶವಿರಬೇಕು, ಬದುಕಿನ ಆಯ್ಕೆಗಳಿಗೆ ಅವಕಾಶವಿರಬೇಕೆಂದು ಹಲವು ಕಲ್ಯಾಣ ಕಾರ್ಯಕ್ರಮಗಳ ಯೋಜಿಸಲಾಯಿತು. ಪ್ರಜಾಪ್ರಭುತ್ವದ ಬಹುಮುಖ್ಯ ಲಕ್ಷಣ ಮುಕ್ತ ಅಭಿವ್ಯಕ್ತಿ. ಎಂದೇ ಮಾಧ್ಯಮಗಳಿಗೆ, ಪ್ರಜೆಗಳಿಗೆ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿ ಅಕ್ಷರದ ಹಕ್ಕು ಪ್ರತಿಯೊಬ್ಬರಿಗೂ ದೊರೆಯುವಂತೆ ಮಾಡಲಾಯಿತು. ಪ್ರತಿಯೊಬ್ಬ ಭಾರತೀಯನಿಗೂ ತನ್ನಿಚ್ಛೆಯ ಧರ್ಮ ಸ್ವೀಕರಿಸುವ, ಆಚರಿಸುವ, ಅನುಯಾಯಿಯಾಗುವ ಮುಕ್ತ ಅವಕಾಶ ಕಲ್ಪಿಸಲಾಯಿತು. ಈ ನೆಲ ಸರ್ವಧರ್ಮಗಳಿಗೆ ಸೇರಿದ ಜನರು ಸಹಬಾಳ್ವೆಯಿಂದ ಬದುಕಬಲ್ಲ ಸರ್ವಸಮಾನತೆಯ ನಾಡು ಆಗಬೇಕೆನ್ನುವುದೇ ನಮ್ಮ ಪೂರ್ವಸೂರಿಗಳು ಇಚ್ಛಿಸಿದ ‘ಸೆಕ್ಯುಲರ್’ ಸಮಾಜದ ಮೂಲಸ್ರೋತವಾಗಿತ್ತು.

ಆದರೆ ಈಗ ಏನಾಗಿದೆ? ಪ್ರಜಾಪ್ರಭುತ್ವ ಬಂದ, ಸಂವಿಧಾನ ಸ್ವೀಕರಿಸಿದ ೬೭ ವರ್ಷಗಳ ನಂತರ ದಿನದಿಂದ ದಿನಕ್ಕೆ ಡೆಮಾಕ್ರೆಟಿಕ್ ಮತ್ತು ಸೆಕ್ಯುಲರ್ ಮೌಲ್ಯಗಳು ಕುಸಿಯುತ್ತಿವೆ. ಜಾತಿ ಹೊಸ ಅವತಾರಗಳನ್ನೆತ್ತಿ ಕೆಲವರಿಗೆ ಅಪರಿಮಿತ ಅಧಿಕಾರ-ಅವಕಾಶವನ್ನೂ; ಹಲವರಿಗೆ ಬಂಧಿತ ಮನಸ್ಥಿತಿಯನ್ನೂ ಕೊಡಮಾಡಿದೆ. ಜಾತಿಯ ಕರಾಳತೆ ಎಷ್ಟೋ ಸೃಜನಶೀಲ, ಪ್ರತಿಭಾವಂತ ಮನಸುಗಳ ಕೊಲ್ಲುತ್ತಿದೆ. ಚುನಾವಣಾ ರಾಜಕಾರಣ ಹಿಡಿಯುತ್ತಿರುವ ದೆಸೆದಿಕ್ಕುಗಳ ನೋಡಿದರೆ ಈ ಹಿಂದೆ ವಿಶ್ವಕ್ಕೆ ಕಂಟಕಪ್ರಾಯರಾಗಿ ಬಂದುಹೋದ ಸರ್ವಾಧಿಕಾರಿಗಳು ಭಾರತದಲ್ಲಿ ಪುನರ್ಜನ್ಮವೆತ್ತಿ ಬಂದ ಅನುಮಾನವಾಗುವಂತಿದೆ. ಇವತ್ತು ಬಹುಸಂಖ್ಯಾತರ ದೊಡ್ಡ ಗಂಟಲಿನ ಅಬ್ಬರದ ಹಿಂದೆ ಅವಕಾಶಹೀನರು, ಅಂಚಿನವರು, ಅಲ್ಪಸಂಖ್ಯಾತರು ಅಧೀನವಾಗಿರಬೇಕೆಂಬ ಒತ್ತಾಯವಿದೆ. 

ನಿರಂಕುಶಾಧಿಕಾರ ನಮ್ಮನ್ನು ಎಂಥ ಅಪಾಯಕ್ಕೆ ದೂಡಿದೆ ಎಂದರೆ ಮುಕ್ತ ಅಭಿವ್ಯಕ್ತಿಗೆ ‘ಸಾವೇ ಗತಿ’ ಎನ್ನುವಂತೆ ವಿದ್ಯಮಾನಗಳು ಸಂಭವಿಸುತ್ತಿವೆ. ಪ್ರಾಣಭಯ, ಮುಖಕ್ಕೆ ಮಸಿ ಎರಚುವುದು, ಬಲವಂತದಿಂದ ಮೌನವಾಗಿಸುವುದು, ಹಿಂಸೆ, ಅತ್ಯಾಚಾರ, ಜಾತಿದೌರ್ಜನ್ಯ, ಅಸಹಿಷ್ಣುತೆ, ಬಡತನ, ಭಟ್ಟಂಗಿತನ, ಅವಕಾಶವಾದಿತನ ಎಲ್ಲವೂ ಹೆಚ್ಚುತ್ತಿದೆ. ಎದೆಯ ದಿಟ್ಟ ನುಡಿಗಳನ್ನು ಆಡುವ ಧೈರ್ಯ ಜನಸಾಮಾನ್ಯರಲ್ಲಿ ಕುಸಿಯುತ್ತಿರುವ ಸೂಚನೆಯಿದೆ. ಇವೆಲ್ಲದರ ವಿರುದ್ಧ ನ್ಯಾಯ ಕೇಳಿದರೆ; ‘ನನ್ನ ತಂದೆಯನ್ನು ಕೊಂದದ್ದು ಪಾಕಿಸ್ತಾನವಲ್ಲ, ಯುದ್ಧ’ ಎಂದು ಸತ್ಯ ಹೇಳಿದರೆ; ಆಜಾದಿ ಬೇಕು ಎಂದು ಘೋಷಣೆ ಕೂಗಿದರೆ ದೇಶದ್ರೋಹದ ಆಪಾದನೆ ಬೆನ್ನಿಗೇರುತ್ತದೆ. ಒಟ್ಟಿನಲ್ಲಿ ಪ್ರಜಾಪ್ರಭುತ್ವವೇ ನಾಶವಾಗುವ ಆತಂಕ ಎದುರಾಗಿದೆ

ದಿಕ್ಕೆಡಿಸುವ ಸಂಗತಿಯೆಂದರೆ ಇಂಥ ಆಗುಹೋಗುಗಳಿಗೆ ಜನಸಮುದಾಯ ತೋರುವ ನಿಷ್ಕ್ರಿಯತೆ ಹಾಗೂ ಮಾಧ್ಯಮಗಳ ಬೇಜವಾಬ್ದಾರಿತನ. ಮಾಧ್ಯಮಗಳು ಪ್ರಜಾಪ್ರಭುತ್ವ ಐದನೆಯ ಅಂಗವಾಗಿ ಜವಾಬ್ದಾರಿ ನಿರ್ವಹಿಸುವುದರ ಬದಲು ಅಂತಸ್ಸಾಕ್ಷಿ ಮಾರಿಕೊಂಡು ಪಟ್ಟಭದ್ರ ವ್ಯವಸ್ಥೆಯ ವಕಾಲತ್ತುದಾರರಾಗಿದ್ದಾರೆ. ಒಂದೆಡೆ ಮನುಷ್ಯ ರಕ್ತ ಬೀದಿಬೀದಿಯಲ್ಲಿ ಹರಿಯುತ್ತದೆ, ಇನ್ನೊಂದೆಡೆ ಗೋವುಗಳು ಪೂಜಿಸಲ್ಪಡುತ್ತವೆ. ಪ್ರತಿ ಕಾಲುಗಂಟೆಗೊಬ್ಬಳು ಅತ್ಯಾಚಾರಕ್ಕೊಳಗಾಗುತ್ತಾಳೆ, ಅದೃಶ್ಯ ‘ಭಾರತ ಮಾತೆ’ ಪೂಜಿಸಲ್ಪಡುತ್ತಾಳೆ. ಬಹುಸಂಖ್ಯಾತ ಸಾಮಾನ್ಯ ಮನುಷ್ಯರು ಹಸಿದರೇನು, ನರಳಿದರೇನು, ದಿಕ್ಕೆಟ್ಟರೇನು - ರಸ್ತೆಗಳು ಅರಳುತ್ತವೆ, ಹೈರೈಸುಗಳು ಏಳುತ್ತವೆ. ಮೂರ್ತಿಗಳು, ಸಂಕೇತಗಳು ವೈಭವೀಕರಣಕ್ಕೊಳಗಾಗುತ್ತವೆ.

ಇದು ಪ್ರತಿ ಹೆಜ್ಜೆಗೂ ಎಲ್ಲರ ಅನುಭವಕ್ಕೆ ನಿಲುಕುತ್ತಿದೆ. ಯಾವುದೂ ಸರಿಯಿಲ್ಲ ಎಂದು ಆಳದಲ್ಲಿ ಅನಿಸುತ್ತಿದೆ. ಆದರೂ ಅದನ್ನು ಗುರುತಿಸಲಾಗುತ್ತಿಲ್ಲ. ಯಾಕೆಂದರೆ ಅದಕ್ಕೆ ಧರ್ಮ-ಸಂಸ್ಕೃತಿ-ದೇಶಭಕ್ತಿ-ಸಂಸ್ಕೃತಿ-ಪರಂಪರೆ ಮುಂತಾದ ಮುಸುಕು- ಮುಖವಾಡಗಳು ನಿಜಸ್ಥಿತಿ ಅರಿಯದಂತೆ ಮಾಡಿವೆ. ಮುಖವಾಡಗಳನ್ನೆಲ್ಲ ಕಿತ್ತೊಗೆದಲ್ಲಿ ಜನರಿಗೆ ತಾವಿರುವ ವ್ಯವಸ್ಥೆಯ ನಿಜರೂಪದ ಅರಿವಾಗಿ ಬದಲಾವಣೆಯ ಯತ್ನಗಳಿಗೆ ಅವರ ಬೆಂಬಲ ಸಿಗಬಹುದಾಗಿದೆ. ಇಲ್ಲವಾದಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದವರು ಎಂಬ ಹುಸಿ ಹೆಮ್ಮೆಯಲ್ಲಿ ಕಳೆದುಹೋಗುತ್ತೇವೆ.  ಈ ನೆಲದ ಮೌಲ್ಯಗಳನ್ನು, ನ್ಯಾಯವನ್ನು, ಕನಸುಗಳನ್ನೂ ಕಳೆದುಕೊಳ್ಳುತ್ತೇವೆ. 

ಒಂದು ನಾಗರಿಕ ಸಮಾಜಕ್ಕೆ ಒದಗಬಹುದಾದ ದೊಡ್ಡ ಆಪತ್ತು ಜನರ ನಿಷ್ಕ್ರಿಯತೆ. ಅದು ಎಲ್ಲವನ್ನು ಸಹಿಸಿಕೊಳ್ಳುವ ನಿಷ್ಕ್ರಿಯತೆ, ಅನ್ಯಾಯ ಕಂಡೂ ಸುಮ್ಮನಿರುವ, ಆಸೆಯ ತೀವ್ರತೆ ಕಳೆದುಕೊಳ್ಳುವ ನಿಷ್ಕ್ರಿಯತೆ. ಅದಕ್ಕಿಂತಲೂ ಅಪಾಯ ಪಂಜಾಬಿನ ಕವಿ ‘ಪಾಶ್’ ಅವತಾರ್ ಸಿಂಗ್ ಸಂಧು ಹೇಳುವಂತೆ ‘ಕನಸುಗಳ ಸಾವು’. ಹಾಗಾಗದಂತೆ ನೋಡಿಕೊಳ್ಳುವುದು ಇವತ್ತು ಎಲ್ಲ ಜನಪರ ಸಾಹಿತಿ-ಕಲಾವಿದ-ಹೋರಾಟಗಾರರ ಆದ್ಯ ಕರ್ತವ್ಯವಾಗಿದೆ. 

ಈ ನಡುವೆ ಬಂದ ಐದು ರಾಜ್ಯಗಳ ಚುನಾವಣಾ ಫಲಿತಾಂಶ, ಆ ನಂತರದ ರಾಜಕೀಯ ಬೆಳವಣಿಗೆಗಳು ನಮಗೆ ಹೊಸ ಪಾಠಗಳ ಹೇಳುತ್ತಿವೆ. ನಮ್ಮ ನಾಳಿನ ಭವಿಷ್ಯ ಬರೆಯುವುದು ಇವತ್ತಿನ ರಾಜಕೀಯ ಆಯ್ಕೆಗಳೇ ಆಗಿರುವುದರಿಂದ ಆ ಕುರಿತು ಜನರನ್ನು ಎಚ್ಚರಿಸುವುದು, ಜಾಗೃತಿಗೊಳಿಸುವುದು ಹಾಗೂ ಮುಂದಿನ ದಾರಿಗಳ ಕುರಿತು ನಂನಮ್ಮಲ್ಲಿ ಚರ್ಚೆ-ಸಂವಾದಗಳ ಮೂಲಕ ಸ್ಪಷ್ಟ ಅಭಿಪ್ರಾಯ ಹೊಂದುವುದು ಅವಶ್ಯವಾಗಿದೆ.

ಇವೆಲ್ಲದರ ಹಿನ್ನೆಲೆಯಲ್ಲಿ ಜನತಂತ್ರ ಹಿಡಿದಿರುವ ದಿಕ್ಕುದಾರಿ ಯಾವುದು? ಅದನ್ನು ನೇರ್ಪಡಿಸುವ ಮಾರ್ಗ ಯಾವುದು? ಅದರಲ್ಲಿ ನಮ್ಮ ಪಾತ್ರವೇನು? ಸಾಹಿತ್ಯ ಅದನ್ನು ಹೇಗೆ ಗ್ರಹಿಸಿದೆ? ಮಾಧ್ಯಮಗಳು ಹೇಗೆ ಜನಾಭಿಪ್ರಾಯವನ್ನು ದಿಕ್ಕು ತಪ್ಪಿಸುವಂತೆ ರೂಪಿಸುತ್ತಿವೆ? ಮುಂತಾದ ವಿಷಯಗಳ ಕುರಿತು ಚರ್ಚಿಸಲು ಈ ಸಲದ ಮೇ ಸಾಹಿತ್ಯ ಮೇಳ ಆಯೋಜಿಸಲಾಗಿದೆ.

ಅನ್ನದ ಅಂಗನವಾಡಿ ಹೋರಾಟ : ಇನ್ನೂ ಎಷ್ಟು ಕಾಲ?Image result for ಅಂಗನವಾಡಿ ಹೋರಾಟ


ಬದುಕುವ ವೇತನ, ಕನಿಷ್ಟ ಸೌಲಭ್ಯಕ್ಕಾಗಿ ಆಗ್ರಹಿಸುತ್ತ ಅಂಗನವಾಡಿ ಸೋದರಿಯರ ಹೋರಾಟ ನಡೆಯುತ್ತಿದೆ. ದಶಕಗಟ್ಟಲೆಯಿಂದ ಎಲ್ಲ ರಾಜ್ಯಗಳಲ್ಲೂ ಹೋರಾಟ ನಡೆಯುತ್ತಲೇ ಇದೆ. ಇನ್ನೂ ಎಷ್ಟು ಕಾಲ ನಮಗೆ ಅಕ್ಷರ ತಿದ್ದಿಸಿದ ಈ ಅಮ್ಮಂದಿರು ಸೂಕ್ತ ವೇತನಕ್ಕಾಗಿ ಹೋರಾಡುವುದು? 

ಆಳುವ ಸರ್ಕಾರಗಳು ಹಾಗೂ ಸಮಾಜ ಗಮನಿಸಲಿ, ಇದು ಕೇವಲ ಒಂದು ಉದ್ಯೋಗ ನಡೆಸುವವರ ಹಕ್ಕೊತ್ತಾಯದ ಹೋರಾಟವಲ್ಲ. ಆಚೆಮೊನ್ನೆ ಪೌರಕಾರ್ಮಿಕರು, ಮೊನ್ನೆ ಮುನ್ನಾರ್ ಟೀ ತೋಟದ ಕಾರ್ಮಿಕರು, ನಿನ್ನೆ ಗಾರ್ಮೆಂಟ್ ಸೋದರಿಯರು, ಇವತ್ತು ಅಂಗನವಾಡಿ ಕಾರ್ಯಕರ್ತೆಯರು - ಇದು ಹೀಗೇ ಮುಂದುವರೆಯಲಿದೆ. ಏಕೆಂದರೆ ಘನತೆಯಿಂದ ಬದುಕಲು ಬೇಕಾದ ವೇತನ ನೀಡದೆ ಕೇವಲ ಶಿಸ್ತು, ದಕ್ಷತೆ, ಅಧೀನತೆಗಳನ್ನು ನೌಕರಸ್ಥರಿಂದ ಅಪೇಕ್ಷಿಸುತ್ತಿರುವುದು ದುಡಿಯುವ ವರ್ಗದ ಆಕ್ರೋಶಕ್ಕೆ ಕಾರಣವಾಗಿದೆ. ಅಸಂಘಟಿತ ವಲಯದಲ್ಲಿ ದುಡಿಯುವವರಂತೂ ಉದ್ಯೋಗ ಸುರಕ್ಷೆ, ಉದ್ಯೋಗ ಸ್ಥಳದಲ್ಲಿ ಸುರಕ್ಷೆ, ಕನಿಷ್ಟ ಬದುಕುವ ವೇತನವಿಲ್ಲದೆ ಗೇಯಬೇಕಿದೆ. ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಇಂಥ ದುಡಿಮೆಗಳಲ್ಲಿ ಇರುವವರು ಬಹುಪಾಲು ಮಹಿಳೆಯರೇ ಆಗಿದ್ದಾರೆ. ದಶಕಗಟ್ಟಲೆಯಿಂದ ಹೋರಾಟ ನಡೆಯುತ್ತಿದ್ದರೂ ಗರಿಷ್ಟ ದುಡಿಮೆ, ಕನಿಷ್ಟ ವೇತನ ಮುಂದುವರೆಯುತ್ತಿರುವುದು ಹಾಗೂ ಹೋರಾಟಗಳು ಹತ್ತಿಕ್ಕಲ್ಪಡುತ್ತಿರುವುದು ಆಕ್ರೋಶ ಹೆಚ್ಚಿಸಿದೆ. 

Image result for ಅಂಗನವಾಡಿ ಹೋರಾಟ


ಇದಲ್ಲದೆ ಉದ್ಯೋಗ ನೇಮಕಾತಿಯನ್ನು ಹೊರಗುತ್ತಿಗೆ ಎಂಬ ಪಿಡುಗು ಕಾಡುತ್ತಿದೆ. ಶಾಲಾಕಾಲೇಜು ಬೋಧಕ ಸಿಬ್ಬಂದಿ, ಚಾಲಕರು, ಸ್ವಚ್ಛತಾ ಸಿಬ್ಬಂದಿಯೂ ಸೇರಿದಂತೆ ಹಲವರ ಉದ್ಯೋಗ ಹೊರಗುತ್ತಿಗೆ ಆಧರಿಸಲ್ಪಟ್ಟಿದೆ. ಅವರು ಉದ್ಯೋಗ ಭದ್ರತೆಯಿಲ್ಲದೆ ಸದಾ ತುದಿಗಾಲಲ್ಲಿ ನಿಂತು ಹೊಸಹೊಸ ಯೋಜನೆಗಳ ಅನುಷ್ಟಾನಕ್ಕೆ, ದಾಖಲೀಕರಣಕ್ಕೆ ಹೆಚ್ಚುವರಿ ಹೊರೆಗಳನ್ನು ಹೊರುತ್ತಲೇ ಹೋಗಬೇಕಿದೆ. 

ಉದ್ಯೋಗ ಪ್ರತಿ ಪ್ರಜೆಯ ಹಕ್ಕು. ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಮತ್ತು ಶ್ರಮಕ್ಕೆ ತಕ್ಕ ವೇತನ ಎಲ್ಲ ಉದ್ಯೋಗಸ್ಥರಿಗೂ ದೊರೆಯಬೇಕು. ಯಾರನ್ನೇ ಆದರೂ ಅತಿದುಡಿಮೆಗೆ ಒಳಪಡಿಸುವುದು, ದುಡಿಮೆಗೆ ತಕ್ಕ ವೇತನ ನೀಡದಿರುವುದು, ಅವರ ಬೇಡಿಕೆಗಳಿಗೆ ಕಿವುಡಾಗಿರುವುದು ಅಮಾನವೀಯ ಮತ್ತು ನಾಗರಿಕ ಸಮಾಜಕ್ಕೆ ನಾಚಿಕೆಗೇಡು. ಎಂದೇ ಆಳುವ ಸರ್ಕಾರಗಳು ದುಡಿಯುವವರಿಗೆ ಘನತೆಯ ಬದುಕು ಮತ್ತು ಕನಿಷ್ಟ ವೇತನ ನೀಡಲು ಬಜೆಟಿನ ಹಣವನ್ನು ಮೀಸಲಿರಿಸಬೇಕು. ಈಗಾಗಲೇ ಜಾರಿಯಾಗಿರುವ ಕಾರ್ಮಿಕ ಕಾನೂನುಗಳ ಜಾರಿಗೊಳಿಸಬೇಕು. ಎಲ್ಲ ರಾಜ್ಯಗಳ ಮತ್ತು ಕೇಂದ್ರದ ಸರ್ಕಾರಗಳು ಏಕರೂಪದ ಕಾರ್ಮಿಕ ಸ್ನೇಹಿ ನೀತಿ ಜಾರಿಗೆ ತರಬೇಕು.

- ದು. ಸರಸ್ವತಿ, ಎಚ್. ಎಸ್. ಅನುಪಮಾ, ವಾಣಿ ಪೆರಿಯೋಡಿ, ಗುಲಾಬಿ ಬಿಳಿಮಲೆ, ಮಲ್ಲಿಗೆ ಸಿರಿಮನೆ, ಅಖಿಲಾ ವಿದ್ಯಾಸಂದ್ರ, ರತಿರಾವ್, ಗೌರಿ, ಸುಮನಾ ಮೈಸೂರು, ಜ್ಯೋತಿ ಹಿಟ್ನಾಳ. 

ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ.

Wednesday, March 22, 2017

‘ಅಸ್ಪೃಶ್ಯತೆಯ ಸಮಸ್ಯೆ’ : ಭಗತ್ ಸಿಂಗ್

ಭಗತ್ ಸಿಂಗ್ ಅವರ ಜೈಲ್ ಡೈರಿ ಪುಸ್ತಕದ (ಸಂ : ಚಮನಲಾಲ್ ಕನ್ನಡಕ್ಕೆ : ಎಚ್ ಎಸ್ ಅನುಪಮಾ) ಒಂದು ಭಾಗ

ಪುಸ್ತಕದ ಬೆಲೆ 170 ರೂ

ಈ ವೇಳೆಗೆ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಎನ್ನಬಹುದಾದಂತಹ ಒಂದು ಘಟನೆ ಭಾರತದ ಮಧ್ಯ-ದಕ್ಷಿಣ ಭಾಗದಲ್ಲಿ ಸಂಭವಿಸಿತು. ಅದಾಗಲೇ ಡಾ. ಬಿ. ಆರ್. ಅಂಬೇಡ್ಕರ್ ವಿದೇಶದಲ್ಲಿ ವಿದ್ಯಾಭ್ಯಾಸ ಪೂರೈಸಿ ಬಂದವರು ದಮನಿತರ, ಅಸ್ಪೃಶ್ಯರ ಸಂಘಟನೆ ಮಾಡಿ ಹೋರಾಟದಲ್ಲಿ ತೊಡಗಿದ್ದರು. ಕಾನೂನು ಮಾನ್ಯ ಮಾಡಿದ್ದರೂ ಅಸ್ಪೃಶ್ಯರನ್ನು ನೀರು ಬಳಸದಂತೆ ತಡೆದಿದ್ದ ಮಹಾಡ್‌ನ ಚೌಡರ್ ಕೆರೆಯ ನೀರು ಮುಟ್ಟಲು, ಬಳಸಲು ಸಾವಿರಾರು ಜನರೊಡನೆ ೧೯೨೭, ಮಾರ್ಚ್ ೨೦ರಂದು ಹೋದರು. ಆದರೆ ಸವರ್ಣೀಯರು ಇದರ ವಿರುದ್ಧ ನಿಂತು ಮುಂಬೈ ಹೈಕೋರ್ಟಿನಲ್ಲಿ ಕೇಸು ದಾಖಲಾಯಿತು. ಅದೇ ವರ್ಷ ಡಿ. ೨೫ರಂದು ಮಹಾಡ್‌ನಲ್ಲಿ ಮನುಸ್ಮೃತಿ ಸುಡಲಾಯಿತು. ಇದರ ಮರುವರುಷ ಕ್ಯಾಥರೀನ್ ಮೇಯೋಳ ಮದರ್ ಇಂಡಿಯಾ ಪ್ರಕಟವಾಗಿ ಭಾರತದ ಒಳಗನ್ನು ಹೊರಗು ಮಾಡಿ ತೋರಿಸಿತ್ತು. ಅದೇ ವೇಳೆಗೆ, ೧೯೨೮, ಜೂನ್‌ನಲ್ಲಿ ಭಗತ್ ಒಂದು ಲೇಖನ ಬರೆದು ಅಸ್ಪೃಶ್ಯತೆಯ ಸಮಸ್ಯೆಗಳನ್ನು ಪರಿಶೀಲಿಸಿದ. ಅವರು ಸಂಘಟಿತ ಹೋರಾಟ ನಡೆಸಬೇಕಾದ ಅವಶ್ಯಕತೆ ಇದೆಯೆಂದು ಹೇಳುತ್ತಾ, ಅಸ್ಪೃಶ್ಯರಿಗೆ ಮತಾಂತರವಾಗಬೇಕೆನಿಸುವುದು ತುಂಬ ಸಹಜ ಎಂದೂ ಹೇಳಿದ. ಆವಾಗಿನ್ನೂ ಅಂಬೇಡ್ಕರ್ ‘ನಾನು ಹಿಂದೂ ಆಗಿ ಸಾಯಲಾರೆ’ ಎಂದು ಘೋಷಿಸಿರಲಿಲ್ಲ. ಆದರೆ ಭಗತ್ ಸಿಂಗ್ ಯೋಚನೆಗಳು ತೀವ್ರಗಾಮಿಯಾಗಿ ಅಂಬೇಡ್ಕರರ ಚಿಂತನೆಗಳಿಗೆ ಪೂರಕವಾಗಿಯೇ ಇದ್ದವು. ತನ್ನ ಬರಹದಲ್ಲಿ ಭಗತ್ ಹೀಗೆ ಹೇಳಿದ್ದಾನೆ:
‘ಸಮಾಜದ ತುರ್ತ ಅಗತ್ಯದ ಕೆಲಸ ಮಾಡುವವರಿಗೂ ಅಗೌರವ ತೋರಿಸಲಾಗುತ್ತದೆ. ನಾವು ಭಂಗಿಗಳನ್ನು ತಾತ್ಸಾರದಿಂದ ನೋಡುತ್ತೇವೆ. ನೇಕಾರರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತೇವೆ. ನಮ್ಮ ಏಳ್ಗೆಗೆ ಅಡ್ಡಗಾಲಾಗಿರುವುದು ಇದೇ.
ಅಸ್ಪೃಶ್ಯರು ಪ್ರತ್ಯೇಕವಾಗಿ ಸಂಘಟಿತರಾಗಿ, ಮುಸ್ಲಿಮರಂತೆಯೇ ಪ್ರತ್ಯೇಕ ಹಕ್ಕುಗಳನ್ನು ಮತಕ್ಷೇತ್ರವನ್ನು ಕೇಳುವುದು ಸರಿಯಾಗಿಯೇ ಇದೆ. ಒಂದೋ ಜಾತಿ ಆಧರಿತ ತಾರತಮ್ಯ ಸರಿಪಡಿಸಿ ಇಲ್ಲವೇ ಅವರಿಗೆ ವಿಶೇಷ ಹಕ್ಕುಗಳನ್ನು ನೀಡಿ. ಶಾಲೆ, ಕಾಲೇಜು, ರಸ್ತೆ, ಬಾವಿಗಳ ಬಳಕೆಗೆ ಅವರಿಗೂ ಸಮಾನ ಅವಕಾಶ ಸಿಗುವಂತೆ ಕೌನ್ಸಿಲುಗಳೂ, ಅಸೆಂಬ್ಲಿಗಳೂ ಪ್ರಯತ್ನಿಸಬೇಕು. ಬರೀ ಬಾಯಿ ಮಾತಿನಲ್ಲಲ್ಲದೆ ಸಾರ್ವಜನಿಕ ಸ್ಥಳಗಳಿಗೆ ಅಸ್ಪೃಶ್ಯರ ಜೊತೆ ಉಳಿದವರೂ ಹೋಗಬೇಕು. ಅವರ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಆದರೆ ಧರ್ಮದ ಹೆಸರಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಕೂಗಾಡಿ ವಿರೋಧಿಸುವ ಅಸೆಂಬ್ಲಿ ಸದಸ್ಯರು ಅಸ್ಪೃಶ್ಯರನ್ನು ಅಪ್ಪಿಕೊಳ್ಳುವ ಧೈರ್ಯ ತೋರಿಯಾರೇ? ಎಂದೇ ಅಸ್ಪೃಶ್ಯರು ತಮ್ಮದೇ ಸಮುದಾಯದ ಪ್ರತಿನಿಧಿಯನ್ನು ಹೊಂದಿರಬೇಕಾದ ಅವಶ್ಯಕತೆಯಿದೆ. ಆಗಮಾತ್ರ ಅವರು ತಮಗಾಗಿ ಹೆಚ್ಚುವರಿ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಬಂಧುಗಳೇ, ಒಗ್ಗಟ್ಟಾಗಿ. ಆದರೆ ಅಧಿಕಾರಶಾಹಿಯ ಜಾಲದಲ್ಲಿ ಸಿಕ್ಕಿಬೀಳಬೇಡಿ. ಅವರು ನಿಮಗಾಗಿ ಸಹಾಯ ಹಸ್ತ ಚಾಚಲು ಸಿದ್ಧರಿರುವುದಿಲ್ಲ. ಬದಲಾಗಿ ತಮ್ಮ ಸಂಚಿಗೆ ನಿಮ್ಮನ್ನು ಹೇಗೆ ದಾಳವಾಗಿ ಬಳಸಬಹುದೆಂಬ ಲೆಕ್ಕಾಚಾರದಲ್ಲಿರುತ್ತಾರೆ. ನಿಮ್ಮ ಬಡತನ ಮತ್ತು ದಾಸ್ಯಕ್ಕೆ ನಿಜವಾದ ಕಾರಣ ಈ ಬಂಡವಾಳಶಾಹಿ ಅಧಿಕಾರಗಣವೇ ಆಗಿದೆ. ಎಂದೂ ಅವರೊಡನೆ ಒಂದುಗೂಡಬೇಡಿ. ಅವರ ತಂತ್ರಗಳ ಬಗೆಗೆ ಎಚ್ಚರವಿರಲಿ. ಆಗ ಎಲ್ಲ ಸರಿಯಾಗುತ್ತದೆ.
ಲಾತದ ಭೂತ ಮಾತಿಗೆ ಹೆದರುವುದಿಲ್ಲ. ಅಸ್ಪೃಶ್ಯವೆನಿಸಿಕೊಂಡ ಸಮುದಾಯದ ಬಂಧುಗಳೇ, ಒಂದಾಗಿ, ಸ್ವಾವಲಂಬಿಗಳಾಗಿ. ಆಗ ಇಡಿಯ ಸಮಾಜಕ್ಕೇ ಸವಾಲು ಹಾಕಿ ನೀವು ನಿಲ್ಲಬಲ್ಲಿರಿ. ಆಗ ಯಾರೂ ನಿಮ್ಮ ಹಕ್ಕುಗಳನ್ನು ನಿಮಗೆ ನಿರಾಕರಿಸಲಾರರು. ಬೇರೆಯವರು ನಿಮ್ಮನ್ನು ಮೋಸಗೊಳಿಸಲು ಬಿಡಬೇಡಿ. ಬೇರೆಯವರಿಂದ ಏನನ್ನೂ ನಿರೀಕ್ಷಿಸಲೂಬೇಡಿ. ಅಸ್ಪೃಶ್ಯರೆನಿಸಿಕೊಂಡ ಬಂಧುಗಳೇ, ನಿಜವಾದ ಜನಸೇವಕರೂ ಜನಬಂಧುಗಳೂ ಆಗಿರುವವರೇ, ಏಳಿ, ನಿಮ್ಮ ಚರಿತ್ರೆ ತಿಳಿಯಿರಿ. ಗುರು ಗೋವಿಂದ ಸಿಂಗರ ತೋಳ್ಬಲ ನೀವಲ್ಲದೆ ಬೇರಾರೂ ಆಗಿರಲಿಲ್ಲ. ನಿಮ್ಮ ಶಕ್ತಿಯಿಂದಲೇ ಶಿವಾಜಿ ಮಹಾರಾಜ ಅವನೇನು ಮಾಡಿರುವನೋ ಅದನ್ನು ಮಾಡಲು, ಇವತ್ತಿಗೂ ಇತಿಹಾಸದಲ್ಲಿ ಬದುಕಿರಲು ಸಾಧ್ಯವಾಯಿತು. ನಿಮ್ಮ ತ್ಯಾಗ ಬಂಗಾರದ ಅಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಏಳಿ, ಯಾರು ಬಿಡುಗಡೆ ಹೊಂದಲಿದ್ದಾರೋ ಅವರೇ ಎದ್ದು ಹೊಡೆತ ಕೊಡಬೇಕು.’
ವರ್ಗವ್ಯವಸ್ಥೆಯೇ ಮನುಷ್ಯನ ಎಲ್ಲ ಸಮಸ್ಯೆಗಳ ಮೂಲ ಎಂದು ಭಾವಿಸುವ ಕಮ್ಯುನಿಸ್ಟ್ ಮನಸೊಂದು ಜಾತಿಯೂ ದಮನಕ್ಕೆ ಮುಖ್ಯ ಕಾರಣ ಎಂದು ಗುರುತಿಸಿತ್ತು. ಭಾರತದ ಕಮ್ಯುನಿಸ್ಟರು ಜಾತಿಪ್ರಶ್ನೆ ಗುರುತಿಸುವುದಕ್ಕೆ ತೆಗೆದುಕೊಂಡ ದಶಕಗಟ್ಟಲೆ ಅವಧಿಯನ್ನು ಹೋಲಿಸಿದರೆ ಭಗತ್ ಅಂದೇ ಜಾತಿಯು ಸಮಸ್ಯೆಗಳ ಮೂಲವೆಂದು ಗುರುತಿಸಿರುವುದು ವಿಶೇಷವೆನಿಸುತ್ತದೆ. ಅಂದು ವರ್ಗಮೂಲ ಚಳುವಳಿ ಕಟ್ಟಿದವರು ಜಾತಿಯೂ ಈ ದೇಶದ ಜನಸಾಮಾನ್ಯರ ದಮನಕ್ಕೆ ಮೂಲ ಕಾರಣ ಎಂದು ಗುರುತಿಸಿದ್ದರೆ; ಅಂಬೇಡ್ಕರರಂಥ ದಮನಿತ ಸಮುದಾಯದ ಸಶಸ್ತ ನಾಯಕರು ಆ ಚಳುವಳಿಯನ್ನು ಮುನ್ನಡೆಸುವುದಾಗಿದ್ದರೆ.. ಸ್ವಾತಂತ್ರ್ಯ ಹೋರಾಟ ಮತ್ತು ಅದರ ಪ್ರತಿಫಲದ ಸ್ವರೂಪವೇ ಬೇರೆಯೇ ಆಗಿರುತ್ತಿರಲಿಲ್ಲವೇ?

ಬಸವಣ್ಣ ಏಕೆ ಬೇಕು? : ನಿವೇದನೆ

Image result for ರಂಜಾನ್ ದರ್ಗಾ


ರಂಜಾನ್ ದರ್ಗಾ

ನಮ್ಮ ಪ್ರಕಾಶನವು ಪ್ರಕಟಿಸುತ್ತಿರುವ ರಂಜಾನ್ ದರ್ಗಾ ಅವರ  ಬಸವಣ್ಣ ಏಕೆ ಬೇಕು? ಹೊಸ ಪುಸ್ತಕಕ್ಕೆ ಅವರು ಬರೆದ ಮೊದಲ ಮಾತು

ಪುಸ್ತಕದ ಬೆಲೆ : 30 ರೂನಿವೇದನೆ

 ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ.
ಜಲ ಬಿಂದುವಿನ ವ್ಯವಹಾರ ಒಂದೇ,
ಆಸೆಯಾಮಿಷ ರೋಷ ಹರುಷ ವಿಷಯಾದಿಗಳೆಲ್ಲ ಒಂದೇ.
ಏನನೋದಿ ಏನ ಕೆಳಿ ಏನು ಫಲ?
ಕುಲಜನೆಂಬುದಕ್ಕೆ ಆವುದು ದೃಷ್ಟ?
ಸಪ್ತಧಾತು ಸಮಂ ಪಿಂಡಂ ಸಮಯೋನಿ ಸಮದ್ಭವಂ |
ಆತ್ಮ ಜೀವ ಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ || ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
                                               -ಬಸವಣ್ಣ

Image result for ಬಸವಣ್ಣ


 ಮಾನವರ ಹುಟ್ಟು ಮತ್ತು ಪ್ರವೃತ್ತಿಗಳು ಒಂದೇ ಆಗಿವೆ. ಉತ್ತಮ ಕುಲದಲ್ಲಿ ಹುಟ್ಟಿದವರು ಎಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ. ಜಾತಿಗಳು ಮೂಲದಲ್ಲಿ ಕಾಯಕಗಳೇ ಇವೆ. ಆದ್ದರಿಂದ ಜಾತಿಗಳು ಸ್ಥಗಿತಗೊಂಡ ವರ್ಗಗಳು. ಮಾನವ, ಕಬ್ಬಿಣದ ಕಾಯಕದ ಮೂಲಕ ಕಮ್ಮಾರನಾದ, ಬಟ್ಟೆ ಒಗೆಯುವ ಮೂಲಕ ಮಡಿವಾಳನಾದ, ಮಗ್ಗದ ಕೆಲಸದಲ್ಲಿ ತೊಡಗಿದ ಕಾರಣ ನೇಕಾರನಾದ, ವೇದವನ್ನು ಓದುವುದನ್ನೇ ಕಾಯಕ ಮಾಡಿಕೊಂಡು ವೈದಿಕನಾದ. ಎಲ್ಲರೂ ಒಂದೇ ತೆರನಾಗಿ ಜನಿಸಿದ್ದಾರೆ. ಬಾಯಿ, ಭುಜ, ತೊಡೆ, ಪಾದ, ಕರ್ಣ ಮುಂತಾದ ಅಂಗಾಂಗಗಳಿಂದ ಜನಿಸಿದವರು ಯಾರೂ ಇಲ್ಲ ಎಂದು ಬಸವಣ್ಣನವರು ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ.

 ಉಳ್ಳವರು ಮತ್ತು ಬಡವರು ಎಂಬ ವರ್ಗಗಳು ಸತ್ಯ, ಆದರೆ ಕುಲಗೋತ್ರಗಳು ಅಸತ್ಯ. ಜಾತಿಗಳನ್ನು ಅಲ್ಲಗಳೆದ ಬಸವಣ್ಣನವರು ಜಾತಿಗಳ ಮೂಲದ ಕಾಯಕಗಳನ್ನು ಎತ್ತಿ ಹಿಡಿದರು. ’ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ! ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ಕೂಡಲಸಂಗಮದೇವಾ ಭಕ್ತರಲ್ಲಿ ಕುಲವನರಿಸಿದಡೆ ನಿಮ್ಮ ರಾಣಿವಾಸದಾಣೆ’ ಎಂದು ಬಸವಣ್ಣನವರು ಹೇಳುವ ಮೂಲಕ ಲಿಂಗವಂತರಲ್ಲಿ ಕುಲ ಜಾತಿಗಳಿಲ್ಲ, ಆದರೆ ಕಾಯಕಗಳಿವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಯಾವ ಕಾಯಕವೂ ದೊಡ್ಡದಲ್ಲ, ಯಾವ ಕಾಯಕವೂ ಚಿಕ್ಕದಲ್ಲ. ಆದ್ದರಿಂದ ಲಿಂಗವಂತರು ಮನೆಗೆ ಬಂದಾಗ ಅವರ ಕಾಯಕ ಯಾವುದೆಂದು ಕೇಳುವುದಿಲ್ಲವೆಂದು ಬಸವಣ್ಣನವರು ಹೇಳುತ್ತಾರೆ. ಲಿಂಗವಂತ ಧರ್ಮದಲ್ಲಿ ಸಮಗಾರ, ಡೋಹರ, ಮಾದರ, ಮಡಿವಾಳ, ಅಂಬಿಗ ಮುಂತಾದವು ಕಾಯಕಗಳೇ ಹೊರತು ಜಾತಿಗಳಲ್ಲ. ಹೀಗೆ ಬಸವಣ್ಣನವರು ಜಾತಿಗಳನ್ನು ಅಲ್ಲಗಳೆಯುವ ಮೂಲಕ ಕಾಯಕಜೀವಿಗಳನ್ನು ಒಂದುಗೂಡಿಸಿ ದುಡಿಯುವ ವರ್ಗವಾಗಿಸಿದ್ದಾರೆ.

 ಇಷ್ಟಲಿಂಗದ ಮೂಲಕ ಎಲ್ಲ ಕಾಯಕಜೀವಿಗಳನ್ನು ಒಂದು ಮಾಡಿದ್ದು ಮಧ್ಯಯುಗದ ಮಹಾನ್ ಸಾಧನೆ. ಈ ಸಾಧನೆಯನ್ನು ಭಾರತೀಯ ಸಮಾಜ ಇಂದಿಗೂ ಸಾಧಿಸುವಲ್ಲಿ ವಿಫಲವಾದದ್ದು ರಾಷ್ಟ್ರೀಯ ದುರಂತವಾಗಿದೆ. ಭಾರತೀಯ ಕಾಯಕಜೀವಿಗಳು ವರ್ಗವಾಗಿ ಒಂದಾಗದೆ ಜಾತಿ ಉಪಜಾತಿಗಳ ಗುಂಪುಗಳಲ್ಲೇ ಉಳಿದುಕೊಂಡಿರುವುದರಿಂದ ಭಾರತದೇಶ ಜಾತಿವಾದಿಗಳ, ಕೋಮುವಾದಿಗಳ ಮತ್ತು ಉಗ್ರವಾದಿಗಳ ರಣರಂಗವಾಗುತ್ತಿದೆ. ಫ್ಯಾಸಿಸ್ಟ್ ಶಕ್ತಿಗಳು ಧರ್ಮದ ಹೆಸರಿನಲ್ಲಿ ತಮ್ಮ ವಿಕೃತ ರೂಪವನ್ನು ಪ್ರದರ್ಶಿಸುತ್ತಿವೆ. ಇಂಥ ಅಸಹನೀಯ ಸಂದರ್ಭದಲ್ಲಿ ಬಸವತತ್ತ್ವ ಈ ದೇಶವನ್ನು ಫ್ಯಾಸಿಸ್ಟರಿಂದ ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಬಸವಣ್ಣನವರಿಗಿಂತ ಮೊದಲು ಇಂಥ ಜಾತಿಗಳನ್ನು ವರ್ಗವಾಗಿಸುವ ಐತಿಹಾಸಿಕ ಕಾರ್ಯವನ್ನು ಯಾರೂ ಮಾಡಿದ್ದಿಲ್ಲ ಎಂಬುದು ಗಮನಾರ್ಹವಾಗಿದೆ.

 ಬಸವತತ್ತ್ವಕ್ಕೆ ಮಹಾ ಪರಂಪರೆಯಿದೆ. ಮಹಾಭಾರತದ ಕಾಲದಲ್ಲೇ ಚಾರ್ವಾಕರು ಎಂದು ಕರೆಯಿಸಿಕೊಳ್ಳುವ ಲೋಕಾಯತರು ಶಾಂತಿ, ಸೌಹಾರ್ದ ಮತ್ತು ಸಮಾನತೆಗಾಗಿ ಧ್ವನಿ ಎತ್ತಿದ್ದಾರೆ. ಅವರು ಈ ಭೂಮಿಯ ಬಗ್ಗೆ ಸುಂದರವಾಗಿ ಮಾತನಾಡುತ್ತ ಚಾರ್ವಾಕರೆನಿಸಿದರು. ಈ ಲೋಕಕ್ಕೆ ಪ್ರಿಯರಾದ ಕಾರಣ ಲೋಕಾಯತರು ಎನಿಸಿದರು. ಲೋಕಾಯತರು ಹದ ಮಾಡಿದ ಸಾಮಾಜಿಕ ನ್ಯಾಯದ ಭೂಮಿಯಲ್ಲಿ ೨೬೦೦ ವರ್ಷಗಳಷ್ಟು ಹಿಂದೆಯೆ ಬುದ್ಧ ಮಾನವೀಯತೆಯ ಬೀಜ ಬಿತ್ತಿದ. ಆ ಮೊಳಕೆಯೊಡೆದ ಬೀಜವನ್ನು ಬಸವಣ್ಣ ೧೨ನೇ ಶತಮಾನದಲ್ಲಿ ಹೆಮ್ಮರವಾಗಿ ಬೆಳೆಸಿದರು. ನಂತರ ೨೦ನೇ ಶತಮಾನದಲ್ಲಿ ಅಂಬೇಡ್ಕರರು ಆ ಹೆಮ್ಮರದ ಫಲವನ್ನು ಸಂವಿಧಾನದ ರೂಪದಲ್ಲಿ ಕೊಟ್ಟರು.

 ಬುದ್ಧ, ಬಸವ, ಅಂಬೇಡ್ಕರರ ಅವೈದಿಕ ಮಾರ್ಗದರ್ಶನವನ್ನು ಭಾರತ ಕಡೆಗಣಿಸಿದರೆ ಅದು ವಿಕೃತಭಾರತವಾಗಿ ಮಾರ್ಪಡುತ್ತದೆ. ಇನ್ನೂ ಕಾಲ ಮಿಂಚಿಲ. ಈ ಮಹಾಪುರಷರು ಹಾಕಿಕೊಟ್ಟ ಮಾರ್ಗದಲ್ಲೇ ಮುಂದುವರಿಯುವುದರ ಮೂಲಕ ಭಾರತೀಯರು ಜಾತಿ ಮತ್ತು ವರ್ಗಗಳಿಲ್ಲದ ನವಸಮಾಜದ ನಿರ್ಮಾಣ ಮಾಡಬೇಕಿದೆ.

 ೧೨ನೇ ಶತಮಾನದಲ್ಲಿ ಬಸವಣ್ಣನವರು ಬಹಳಷ್ಟು ಮಹತ್ವದ ಕಾರ್ಯಸಾಧನೆ ಮಾಡಿದ್ದಾರೆ. ಕಾಯಕಜೀವಿಗಳು ಜಾತೀಯತೆಯಿಂದ ಹೊರ ಬಂದು ದುಡಿಯುವ ವರ್ಗವಾದಗಲೇ ವರ್ಗರಹಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂಬುದು ಅವರ ನಿಲವಾಗಿತ್ತು. ಐರೋಪ್ಯ ಖಂಡದ ಕಾರ್ಲ್ ಮಾರ್ಕ್ಸ್ ಅವರು ೧೯ನೇ ಶತಮಾನದಲ್ಲಿ ಇದೇ ಸತ್ಯವನ್ನು ವೈಜ್ಞಾನಿಕವಾಗಿ ಕಂಡು ಹಿಡಿದರು.

 ’ಸ್ಟೇಟ್ ವಿಲ್ ವಿದರ್ ಅವೆ’ (ಪ್ರಭುತ್ವ ನಾಶವಾಗಿ ಹೋಗುವುದು) ಎಂದು ಕಾರ್ಲ್ ಮಾರ್ಕ್ಸ್ ೧೯ನೇ ಶತಮಾನದಲ್ಲಿ ಹೇಳಿದರು. ಪ್ರಜಾಪ್ರಭುತ್ವದ ಬೇರುಗಳು ಪ್ರಭುತ್ವದ ಬೇರುಗಳಿಗಿಂತ ಆಳವಾಗಿದ್ದಾಗ ಮಾತ್ರ ಇದು ಸಾಧ್ಯ ಎಂದು ಅವರು ಎಚ್ಚರಿಸಿದರು. ನವಕಲ್ಯಾಣ(ಶರಣಸಂಕುಲ)ದಲ್ಲಿ ಕಾಯಕಜೀವಿಗಳ ಪ್ರಜಾಪ್ರಭುತ್ವವನ್ನು ಸೃಷ್ಟಿಸಿದ ಬಸವಣ್ಣನವರು ಅದನ್ನು ಸಬಲಗೊಳಿಸುವಲ್ಲಿ ಮಗ್ನರಾಗಿದ್ದರು. ರಾಜಪ್ರಭುತ್ವವವನ್ನು ನೇರವಾಗಿ ಎದುರಿಸುವ ಸಂದರ್ಭ ಅದಾಗಿರಲಿಲ್ಲ. ಆದರೆ ಶರಣರ ಜಾತಿವಿನಾಶ ಚಳವಳಿಯಿಂದ ಕಲ್ಯಾಣದ ರಾಜಪ್ರಭುತ್ವವ ಸಹಜವಾಗಿಯೆ ಶಿಥಿಲಗೊಳ್ಳತೊಡಗಿತು.

 ೧೨ನೇ ಶತಮಾನದಲ್ಲಿ ಊಳಿಗಮಾನ್ಯ ಪದ್ಧತಿಯ ಉತ್ಪಾದನಾ ವ್ಯವಸ್ಥೆಯಿತ್ತು. ಉತ್ಪಾದನಾ ಸಲಕರಣೆಗಳು ಕಾಯಕಜೀವಿಗಳ ಸೊತ್ತಾಗಿದ್ದವು. ಇಂಥ ಸಂದರ್ಭದಲ್ಲಿ ದುಡಿಯುವ ವರ್ಗವನ್ನು ಜಾತಿವ್ಯವಸ್ಥೆಯಿಂದ ಬಿಡಿಸಿ ವರ್ಗಪ್ರಜ್ಞೆಯನ್ನು ಮೂಡಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಅಲ್ಪಸಂಖ್ಯೆಯಲ್ಲಿದ್ದ ಶೋಷಕವರ್ಗ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ವರ್ಣಗಳಲ್ಲಿ ವಿಂಗಡಣೆಯಾಗಿತ್ತು. ಪಂಚಮರೂ ಸೇರಿದಂತೆ ಬಹುಸಂಖ್ಯೆಯಲ್ಲಿದ್ದ ಶೂದ್ರ ವರ್ಣ ವಿವಿಧ ಜಾತಿಗಳಲ್ಲಿ ವಿಂಗಡಣೆಯಾಗಿತ್ತು. ಇಂಥ ಸಂದರ್ಭದಲ್ಲಿ ಭಕ್ತಿಮಾರ್ಗದ ಮೂಲಕವೇ ಜನರನ್ನು ಒಂದುಗೂಡಿಸಲು ಸಾಧ್ಯ ಎಂಬುದನ್ನು ಬಸವಣ್ಣನವರು ಸಹಜವಾಗಿಯೆ ಅರ್ಥಮಾಡಿಕೊಂಡರು. ಬಸವಣ್ಣನವರ ಪರಿಕಲ್ಪನೆಯ ಭಕ್ತಿಯಲ್ಲಿ ವರ್ಣ, ಜಾತಿ ಮತ್ತು ವರ್ಗಗಳನ್ನು ಶಿಥಿಲಗೊಳಿಸುವ ಸಾಮರ್ಥ್ಯ ಇದೆ. ಆದರೆ ಒಂದು ತಲೆಮಾರಿನಲ್ಲೇ ಇದನ್ನೆಲ್ಲ ಸಾಧಿಸಲಿಕ್ಕಾಗದು. ಇದೊಂದು ನಿರಂತರ ಪ್ರಕ್ರಿಯೆಯಾಗಿರುವಂಥದ್ದು. ವರ್ಗಪ್ರಜ್ಞೆಯೊಂದಿಗೆ ಕಾಯಕಜೀವಿಗಳು ಒಂದಾಗಲೇ ಇದು ಸಾಧ್ಯ. ಅಂತೆಯೆ ಹಿಂಸೆಯ ಆ ಕಾಲಘಟ್ಟದಲ್ಲಿ ಅಹಿಂಸೆಯ ನೆಲೆಯಲ್ಲಿ ಭಾವನಾತ್ಮಕ ಸಮಾಜವೊಂದರ ನಿರ್ಮಾಣ ಮಾಡುವುದರ ಮೂಲಕ ರಾಜ್ಯಪ್ರಭುತ್ವಕ್ಕೆ ವಿಮುಖವಾಗುವುದು ಅನಿವಾರ್ಯವಾಗಿತ್ತು.

 ಸಂತರು, ದಾಸರು, ಅನುಭಾವಿ ಕವಿಗಳು ಮತ್ತು ದಕ್ಷಿಣ ಭಾರತಕ್ಕೆ ಬಂದ ಸೂಫಿಗಳು ಹಾಗೂ ಭಾರತದಲ್ಲಿ ಜನಿಸಿದ ಸೂಫಿಗಳೆಲ್ಲರೂ ೧೨ನೇ ಶತಮಾನದ ನಂತರದವರಾಗಿದ್ದಾರೆ. ಇವರಲ್ಲಿ ಕೆಲವರು ರಾಜಪ್ರಭುತ್ವಕ್ಕೆ ಮಾನವೀಯ ಮಾರ್ಗದರ್ಶನ ಮಾಡಲು ಬಯಸಿದರೆ ಬಹುಪಾಲು ಮಂದಿ ರಾಜಪ್ರಭುತ್ವಕ್ಕೆ ವಿಮುಖರಾದವರೇ ಇದ್ದಾರೆ.
 ಸಂತರನ್ನು ’ಮಹಾರಾಜ’ ಎಂದು ಕರೆಯಲಾಗುತ್ತಿದೆ. ಭಕ್ತಿಸಾಮ್ರಾಜ್ಯದ ಮಹಾರಾಜರಿವರು. ರಾಜಪ್ರಭುತ್ವಕ್ಕೆ ಆನುಭಾವಿಕ ನೆಲೆಯಲ್ಲಿ ಉತ್ತರನೀಡುತ್ತ ತಮ್ಮದೇ ಆದ ಜೀವನವಿಧಾನದೊಂದಿಗೆ ಅದಕ್ಕೆ ವಿಮುಖವಾಗಿಯೆ ಬಡವರಿಗೆ ಸಾಂತ್ವನದ ನೆಲೆಗಳನ್ನು ಗುರುತಿಸಿದವರು.

   ಗಾಳಿಯಲ್ಲಿ ತೇಲುವ ಟೊಳ್ಳುಮಾತುಗಳನ್ನು ರಂಜಕವಾಗಿ ಹೇಳುತ್ತ ಬಡವರನ್ನು ಭ್ರಮಾಲೋಕಕ್ಕೆ ಒಯ್ಯುವ ವರ್ತಮಾನದ ನಡೆದಾಡುವ ದೇವರುಗಳು ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡುತ್ತಿರುವುದರಿಂದ ಅವರೆಲ್ಲ ಭಕ್ತಿಪಂಥದವರ ರಾಜಪ್ರಭುತ್ವ ವಿರೋಧಿ ನಿಲವನ್ನು ಅರಿತುಕೊಳ್ಳಲು ಅಸಮರ್ಥರಾಗಿದ್ದಾರೆ.
 ಜಾತಿ ಮತ್ತು ವರ್ಗಗಳ ಮೇಲೆ ಅವಲಂಬಿಸಿರುವ ರಾಜ್ಯಶಕ್ತಿಯನ್ನು ಭಕ್ತಿಪಂಥ ಅಹಿಂಸಾತ್ಮಕವಾಗಿ ಎದುರಿಸುತ್ತಲೇ ಬಂದಿದೆ. ಅದರ ಮೂಲ ಸೆಲೆ ಶರಣರ ಚಳವಳಿಯಲ್ಲಿದೆ.

 ’ಊರ ಮುಂದೆ ಹಾಲ ಹಳ್ಳ ಹರಿಯುತ್ತಿರಲು ... ... ಬಿಜ್ಜಳನ ಭಂಡಾರವೆನಗೇಕಯ್ಯಾ.’, ’ಆನೀ ಬಿಜ್ಜಳನಿಗಂಜುವೆನೆ ಅಯ್ಯಾ’, ’ಭವಿ ಬಿಜ್ಜಳನ ಗದ್ದುಗೆ ಕೆಳಗೆ ಕುಳ್ಳಿರ್ದು ಓಲೈಸಿಹೆನೆಂದು ನುಡಿವರಯ್ಯಾ ಪ್ರಮಥರು.’, ’ಅರಸು ವಿಚಾರ, ಸಿರಿಯು ಶೃಂಗಾರ ಸ್ಥಿರವಲ್ಲ ಮಾನವಾ.’, ’ಅರಸರಿಯದ ಬಿಟ್ಟಿ’ ’ವ್ಯಾದನೊಂದು ಮೊಲವ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ (ಬೇಡನು ಮೊಲವನ್ನು ತಂದರೆ ಚಲಾವಣೆಯಲ್ಲಿರುವ ನಾಲ್ಕು ಕಾಸಿಗೆ ಖರೀದಿಸುವರು)., ನೆಲನಾಳ್ದನ ಹೆಣನೆಂದಡೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ.’, ’ಅರಸು ಪರಿವಾರ ಕೈವಾರ (ಹೊಗಳುಭಟ್ಟರು) ನೋಡಯ್ಯಾ.’ ’ಜೋಳವಾಳಿಂಗೆ (ಅನ್ನದ ಋಣಕ್ಕಾಗಿ) ಬಿಜ್ಜಳನಿಗೆ ಆಳಾದಡೇನು, ವೇಳೆವಾಳಿಂಗೆ (ಸಮರ್ಪಣಾ ಭಾವಕ್ಕೆ) ಕೂಡಿಕೊಂಡಿಪ್ಪ ಕೂಡಲಸಂಗಮದೇವ’ ಮುಂತಾದ ವಚನದ ಸಾಲುಗಳು, ಪ್ರಭುತ್ವದ ಬಗ್ಗೆ ಬಸವಣ್ಣನವರಿಗಿದ್ದ ನಿಲವಿನ ದ್ಯೋತಕಗಳಾಗಿವೆ. ಹಳೆ ವ್ಯವಸ್ಥೆಯ ಪ್ರಧಾನಿಯಾಗಿದ್ದುಕೊಂಡೂ ಹೊಸ ವ್ಯವಸ್ಥೆಯ ಹರಿಕಾರರಾಗಿದ್ದು ಬಸವಣ್ಣನವರ ಮಹಾ ಸಾಧನೆಯಾಗಿದೆ. ಇತಿಹಾಸದಲ್ಲಿ ಇಂಥ ಇನ್ನೊಂದು ಉದಾಹರಣೆ ಸಿಗುವುದಿಲ್ಲ.

 ಬಸವಣ್ಣನವರು ಬಿಜ್ಜಳ ರಾಜನ ವಿರುದ್ಧವಾಗಿರಲಿಲ್ಲ. ಆದರೆ ಹಿಂಸಾಮಯವಾದ ರಾಜ್ಯಶಕ್ತಿಯ ವಿರುದ್ಧವಾಗಿದ್ದರು. ಬಿಜ್ಜಳನ ಪ್ರಧಾನಿಯಾಗಿದ್ದುಕೊಂಡು ದೈನಂದಿನ ಕಾರ್ಯಗಳನ್ನೆಲ್ಲ ನಿಷ್ಠೆಯಿಂದ ಮಾಡುತ್ತ ಮತ್ತು ಕಾಯಕಜೀವಿಗಳನ್ನು ಹುರಿದುಂಬಿಸುತ್ತ ಪ್ರಾಮಾಣಿಕತೆಯನ್ನೇ ಉಸಿರಾಡಿದರು. ಕಾಯಕಜೀವಿಗಳು ಸ್ವಾವಲಂಬನೆಯ ಬದುಕು ಸಾಗಿಸುವುದರ ಮೂಲಕ ಪ್ರಜಾಶಕ್ತಿಯಾಗಿ ಬೆಳೆಯುವಂತೆ ನೋಡಿಕೊಂಡರು. ರಾಜ್ಯಶಕ್ತಿಯು ಯಾವುದೇ ರಕ್ತಕ್ರಾಂತಿಯಿಲ್ಲದೆ ಕುಸಿಯುವ ಪ್ರಸಂಗ ಬಂದೊದಗಿದೆ ಎಂದು ಮನುವಾದಿ ಪಟ್ಟಭದ್ರ ಹಿತಾಸಕ್ತಿಗಳು ಹಾಹಾಕಾರವೆಬ್ಬಿಸಿದವು. ಪ್ರಜಾಶಕ್ತಿಯ ಮೇಲೆ ದಾಳಿಯಾಗುವಂತೆ ನೋಡಿಕೊಂಡವು. ಶೋಷಣೆಯನ್ನು ಪ್ರತಿಪಾದಿಸುವ ವೈದಿಕಶಕ್ತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಮನುವಾದಿಗಳು ಹೀಗೆ ಶರಣರ ಮೇಲೆ ಅನ್ಯಾಯ ಮಾಡಿದರು. ಶರಣರ ಸಾವುನೋವಿಗೆ ಮೂಲ ಕಾರಣವಾದವು. ವೈದಿಕಧರ್ಮಸಿಂಹಾಸನ ಮತ್ತು ಅದಕ್ಕೆ ಪೂರಕವಾಗಿರುವ ರಾಜಸಿಂಹಾಸನದ ಉಳಿವಿಗಾಗಿ ಶ್ರಮಿಸಿದವು. ಪ್ರಜಾಶಕ್ತಿ ಮತ್ತು ರಾಜ್ಯಶಕ್ತಿ ಭಾರಿ ಪ್ರಮಾಣದಲ್ಲಿ ತದ್ವಿರುದ್ಧವಾಗುವಂಥ ಈ ಪ್ರಸಂಗ ಮಾನವ ಇತಿಹಾಸದಲ್ಲಿ ನಡೆದ ಮೊದಲ ಘಟನೆಯಾಗಿದೆ.

 ಜಾತಿಭೇದ, ವರ್ಣಭೇದ, ಲಿಂಗಭೇದ ಮತ್ತು ವರ್ಗಭೇದವಿಲ್ಲದ ಸ್ಥಿತಿಯಲ್ಲಿ ಮಾತ್ರ ಪ್ರಜಾಪ್ರಭುತ್ವ ನೆಲೆಗೊಳ್ಳಲು ಸಾಧ್ಯ ಎಂಬುದು ಬಸವಣ್ಣನವರ ದೃಢವಾದ ನಂಬಿಕೆಯಾಗಿತ್ತು ಎನ್ನುವುದಕ್ಕೆ ಅವರ ವಚನಗಳೇ ಸಾಕ್ಷಿಯಾಗಿವೆ. ಅಲ್ಲಿಯ ವರೆಗೆ ಜಗತ್ತಿನಲ್ಲಿ ಕೆಟ್ಟ ರಾಜನ ವಿರುದ್ಧ ಹೋರಾಡುತ್ತ ಒಳ್ಳೆಯ ರಾಜನನ್ನು ತರುವ ಸಂಪ್ರದಾಯವಿತ್ತು. ನಂತರ ಆತನೂ ಅಯೋಗ್ಯನೆಸಿದರೆ ಮತ್ತೆ ಹುಡುಕಾಟ ಪ್ರಾರಂಭವಾಗುತ್ತಿತ್ತು. ಇದು ಹೀಗೇ ನಿರಂತರವಾಗಿ ನಡೆದಿತ್ತು ಹೊರತಾಗಿ ರಾಜ್ಯಪ್ರಭುತ್ವಕ್ಕೆ ಪರ್ಯಾಯವಾಗಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯ ಕನಸನ್ನು ಯಾರೂ ಕಂಡಿರಲಿಲ್ಲ. ಆದ್ದರಿಂದಲೇ ಇಂಥ ಕನಸುಗಾರ ಬಸವಣ್ಣನವರು ನಮಗೆ ಮುಖ್ಯರೆನಿಸುತ್ತಾರೆ.

 ಬಸವಣ್ಣ ಏಕೆ ಬೇಕು? ಎಂಬುದನ್ನು ಈ ಕಾಲಮಾನದಲ್ಲಿ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುತ್ತ ಉತ್ತರ ಕಂಡುಕೊಳ್ಳಬೇಕಿದೆ. ಸುಲಿಗೆಕೋರರು ನಂಬಿಸುವ ಪ್ರಜಾಪ್ರಭುತ್ವದ ಜಾಗದಲ್ಲಿ ಜನರ ಪ್ರಜಾಪ್ರಭುತ್ವ ತರಬೇಕಿದೆ. ಅದಕ್ಕಾಗಿ ಮೊದಲಿಗೆ ಬಸವಣ್ಣನವರು ಆರಂಭಿಸಿದ ಜಾತಿವಿನಾಶ ಹೋರಾಟವನ್ನು ಮುಂದುವರಿಸಬೇಕಿದೆ.

 ೧೨ನೇ ಶತಮಾನದ ೨೧೧ ವಚನಕಾರರ ೧೪೯೩೪ ವಚನಗಳು ಸಿಕ್ಕಿವೆ. ಈ ವಚನಕಾರರಲ್ಲಿ ೩೩ ಮಂದಿ ವಚನಕಾರ್ತಿಯರಿದ್ದಾರೆ. ೫೬ ಮಂದಿ ಅಜ್ಞಾತ ವಚನಕಾರರಿದ್ದು ೧೨೨ ಮಂದಿ ವಚನಕಾರರಿದ್ದಾರೆ. ಈ ವಚನಕಾರರಲ್ಲಿ ಶೇಕಡಾ ೯೦ರಷ್ಟು ಜನ ವಿವಿಧ ಕಾಯಕಜೀವಿಗಳು, ದಲಿತ ಮೂಲದಿಂದ ಬಂದವರು ಮತ್ತು ಮಹಿಳೆಯರು ಇದ್ದಾರೆ. ೧೨ನೇ ಶತಮಾನದ ನಂತರ ಬಂದ ವಚನಕಾರರಲ್ಲಿ ಯಾವುದೇ ಕಾಯಕಜೀವಿಗಳ, ದಲಿತರ ಮತ್ತು ವಚನಕಾರ್ತಿಯರ ವಚನಗಳಿಲ್ಲ! (೧೫ನೇ ಶತಮಾನದ ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆಯ ಮೂರು ಸಾಲಿನ ಒಂದು ವಚನ ಮಾತ್ರ ಇದೆ.)
 ೧೨ನೇ ಶತಮಾನದ ನಂತರ ದಲಿತ, ಹಿಂದುಳಿದ ಮೊದಲಾದ ವಚನಕಾರರು ಮತ್ತು ವಚನಕಾರ್ತಿಯರು ಎಲ್ಲಿ ಹೋದರು? ಬೇರೆ ವಚನಕಾರರಿಗೆ ಸಿಕ್ಕ ಅವಕಾಶ ಅವರಿಗೇಕೆ ಸಿಗಲಿಲ್ಲ? ಅವರು ಬರೆಯುವ ವಾತಾವರಣವೇಕೆ ಸೃಷ್ಟಿಯಾಗಲಿಲ್ಲ? ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸುವ ಕಾಲ ಇದಾಗಿದೆ.

 ಬಸವಣ್ಣನವರ ಕಾಲದಲ್ಲಿ ಇದ್ದ ವಾತಾವರಣ ಸಂಪೂರ್ಣ ಬದಲಾಗಿ ಇಡೀ ಶರಣವ್ಯವಸ್ಥೆ ಮಠಮಾನ್ಯಗಳ ಹಿಡಿತದಲ್ಲಿ ಬಂದಿತು. ಮಹಾಮನೆ ಸಂಸ್ಕೃತಿಯ ಸ್ಥಾನದಲ್ಲಿ ಮಠಸಂಸ್ಕೃತಿ ವಿಜೃಂಭಿಸತೊಡಗಿತು. ಸ್ಥಾವರಲಿಂಗ ಚಿಗುರಿಸುವವರು ಮತ್ತೆ ಮುಂದೆ ಬಂದರು. ಮಹಿಳೆಯರಿಗೆ ಮತ್ತು ಒಟ್ಟಾರೆ ಕಾಯಕಜೀವಿಗಳಿಗೆ ಹಿನ್ನಡೆಯುಂಟಾಯಿತು. ಇದೇ ಸಮಾಜದೊಳಗಿನ ಪುರೋಹಿತಶಾಹಿಗಳು ವಚನಗಳನ್ನು ತಮ್ಮ  ಅನುಕೂಲಕ್ಕೆ ತಕ್ಕಂತೆ ತಿದ್ದಿದರು. ಅನೇಕ ಪ್ರಕ್ಷಿಪ್ತ ವಚನಗಳನ್ನು ಸೇರಿಸಿದರು. ಹೀಗೆಲ್ಲ ಮಾಡುವುದರ ಮೂಲಕ ಲಿಂಗಾಯತ ಮತ್ತು ವೀರಶೈವ ಎಂದು  ಗೊಂದಲ ಸೃಷ್ಟಿಸಿದರು.

 ಆ ಗೊಂದಲ ಇಂದಿಗೂ ಮುಂದುವರಿದಿದೆ. ವಚನಗಳ ಪರಿಷ್ಕರಣೆ ಮತ್ತು ಹೆಚ್ಚಿನ ಸಂಶೋಧನೆ ಈ ಕಾಲದ ಕಾರ್ಯವಾಗಬೇಕಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ಅಷ್ಟೇ ಅಲ್ಲದೆ, ಭಾಷಾವಿಜ್ಞಾನ, ಸಮಾಜವಿಜ್ಞಾನ, ಸಮಾಜಸೇವೆ, ಅರ್ಥವಿಜ್ಞಾನ, ಮನೋವಿಜ್ಞಾನ, ತತ್ತ್ವಜ್ಞಾನ, ಇತಿಹಾಸ ಮುಂತಾದ ವಿಭಾಗಗಳಲ್ಲಿ ಕೂಡ ಶರಣರ ಚಳವಳಿ ಮತ್ತು ವಚನಗಳು ಅಧ್ಯಯನದ ವಿಷಯಗಳಾಗಬೇಕಿದೆ.

 ನನ್ನ ಮೊಮ್ಮಗಳು ಅದಿತಿ ಮಗುವಾಗಿದ್ದಾಗಿನಿಂದಲೂ ಬಸವಣ್ಣನವರ ವಿವಿಧ ಭಾವಚಿತ್ರಗಳನ್ನು ನೋಡುತ್ತ ಬೆಳೆದವಳು. ಯಾವುದೇ ಪುಸ್ತಕದಲ್ಲಿ ಯಾವುದೇ ಪ್ರಕಾರದ ಬಸವಣ್ಣನವರ ಚಿತ್ರವಿದ್ದರೂ ತಂದು ತೋರಿಸುತ್ತ ’ಬಸಣ್ಣ’ ಎಂದು ಹೇಳುತ್ತಾಳೆ. ಬಸವಣ್ಣನವರ ಜೊತೆ ಮಾತನಾಡುವ ಬಯಕೆಯನ್ನು ನನ್ನ ಬಳಿ ಬಂದಾಗ ವ್ಯಕ್ತಪಡಿಸುತ್ತಲೇ ಇರುತ್ತಾಳೆ. ಅವಳು ಮಾತನಾಡಬೇಕು ಎಂದು ಹಟ ಮಾಡಿದಾಗಲೆಲ್ಲ ಕಲಬುರಗಿಯ ಸೋಮಣ್ಣ ನಡಕಟ್ಟಿ ಅವರು ಬಸವಣ್ಣನವರಾಗಿ ಮೊಬೈಲ್ ಮೂಲಕ ಮಾತನಾಡುತ್ತಾರೆ. ಧಾರವಾಡಕ್ಕೆ ಬಂದಾಗ ಪ್ರತಿಸಲವೂ ’ಬಸಣ್ಣ’ ಅವರನ್ನು ಧಾರವಾಡಕ್ಕೆ ಕರೆಯುತ್ತಿದ್ದಳು. ಈಗ ಅಮೆರಿಕದಿಂದ ಧಾರವಾಡಕ್ಕೆ ಬರುವವಳಿದ್ದಾಳೆ. ಅವಳಿಗಾಗಿ ಬಸವಣ್ಣನವರ ಕುರಿತು ಬರೆದ ಕವನವನ್ನು ಈ ಪುಸ್ತಕದ ಬ್ಲರ್ಬ್‌ಗೆ ಬಳಸಿರುವೆ.

 ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಲಡಾಯಿ ಪ್ರಕಾಶನದ ಬಸೂಗೆ ಕೃತಜ್ಞನಾಗಿದ್ದೇನೆ. ಅವರಿಗೆ ಶರಣುಶರಣಾರ್ಥಿ, ಲಾಲ್ ಸಲಾಂ ಮತ್ತು ಜೈ ಭೀಮ್.

ಧಾರವಾಡ                                                  
೨೨ .೦೩. ೨೦೧೭
ಚಿಲಿಯ ವಿಶ್ವನದಿ - ಪ್ಯಾಬ್ಲೊ ನೆರೂಡ

Image result for ಡಾ. ಎಚ್. ಅನುಪಮಾ,

- ಡಾ. ಎಚ್. ಅನುಪಮಾ, ಕವಲಕ್ಕಿ.


Image result for pablo neruda


ಪಾಬ್ಲೋ ನೆರೂಡ
Image result for ಓ ಎಲ್ ನಾಗಭೂಷಣ ಸ್ವಾಮಿ


ಓ ಎಲ್ ನಾಗಭೂಷಣ ಸ್ವಾಮಿ

ನಮ್ಮ ಪ್ರಕಾಶನ ಪ್ರಕಟಿಸುತ್ತಿರುವ ಹಿರಿಯ ಸಾಹಿತಿಗಳಾದ ಓ ಎಲ್ ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಪಾಬ್ಲೋ ನೆರೂಡನ 'ನೆನಪುಗಳು' ಆತ್ಮಕತೆ ಪುಸ್ತಕಕ್ಕೆ ಬರೆದ ಪ್ರಾಸ್ತಾವಿಕ ಮಾತುಗಳು

ಪುಸ್ತಕದ ಬೆಲೆ : 300 ರೂಪ್ರಸ್ತುತ ಭಾರತದ ಸಾಹಿತ್ಯಿಕ ವಲಯದಲ್ಲಿ ಹಲವು ತೆರನ ನಂಬಿಕೆಗಳು, ಧೋರಣೆಗಳು ಸ್ಪಷ್ಟವಾಗಿ ಕಂಡುಬರುತ್ತಿವೆ. ಕೆಲವರು ‘ಶುದ್ಧ ಸಾಹಿತಿ’ಗಳಾಗೇ ಉಳಿಯಬಯಸಿದರೆ ಮತ್ತೆ ಕೆಲವರು ತಂತಮ್ಮ ನಂಬಿಕೆ-ಸಿದ್ಧಾಂತಗಳಿಗೆ ನಿಷ್ಠರಾಗಿ ನಿಲ್ಲುತ್ತಾರೆ. ಕೆಲವು ಕವಿ ಕಲಾವಿದರು ಆರು ಹಾಕಿದರೆ ಅತ್ತೆ ಕಡೆ, ಮೂರು ಹಾಕಿದರೆ ಮಾವನ ಕಡೆ ಎನ್ನುವಂತಹ ಅವಕಾಶವಾದಿತನದ ಬೆನ್ನು ಬೀಳುತ್ತಾರೆ. ಬೀದಿಗೆ ಬಂದು ಘೋಷಣೆ ಕೂಗಿದರೆ, ಹೋರಾಟ ಮಾರ್ಗದಲ್ಲಿ ಎರಡು ಹೆಜ್ಜೆ ನಡೆದರೆ ‘ಶುದ್ಧ ಸಾಹಿತ್ಯ ಸಂವೇದನೆ’ಯ ಸೆಲೆ ಬತ್ತಿ ಹೋದೀತೆಂದು ಹೆದರಿ ದೂರ ಉಳಿವವರು ಒಂದೆಡೆ; ಜನರ ಸಂಘಟಿಸುತ್ತ, ಚಳುವಳಿಯಲ್ಲಿ ತೀವ್ರವಾಗಿ ತೊಡಗಿ, ಅದಕ್ಕೆ ಪೂರಕವಾಗಿಯಷ್ಟೇ ಬರೆಯುವ ಹೋರಾಟಗಾರ ಮನಸುಗಳು ಇನ್ನೊಂದೆಡೆ - ಇವರ ನಡುವೆ ಈಗ ಮತ್ತೂ ಒಂದು ಗುಂಪು ಬೆಳೆಯುತ್ತಿದೆ. ಅದು ಎಡಬಲಗಳ ಚರ್ಚೆಯ ಆಚೆಗೆ ಇರಬಯಸುತ್ತ ತನ್ನನ್ನು ತಾನು ‘ಮಧ್ಯಮ ಮಾರ್ಗಿ’ಯೆಂದು ಕರೆದುಕೊಳ್ಳುವ ಗುಂಪು. ಆದರೆ ಅವರದೇನು ಬುದ್ಧನ ಸುವರ್ಣಮಧ್ಯಮದಂತಹ ಪರ್ಯಾಯ ಮಾರ್ಗವಲ್ಲ, ಎಲ್ಲಿ ಬೇಕಾದರಲ್ಲಿ ಹಾರಿಬಿಡಲು ಸಾಧ್ಯಗೊಳಿಸುವ ಎಡಬಿಡಂಗಿತನದ ಮಾರ್ಗ ಅದು. 

ಈ ಕಾಲದ ಓಟವೇ ಹೀಗಿದೆ. ಸಕಲ ವೈರುಧ್ಯಗಳೂ ಕಣ್ಣಿಗೆ ರಾಚುವಷ್ಟು ಢಾಳಾಗಿ ಕಾಣುತ್ತಿವೆ. ಹೀಗಿರುತ್ತ ಸಾಹಿತ್ಯ, ರಾಜಕಾರಣ ಹಾಗೂ ಹೋರಾಟವನ್ನು ಸರಿದೂಗಿಸಿಕೊಂಡು ಕವಿಯಾಗಿರಲು ಸಾಧ್ಯ ಎಂದು ತೋರಿಸಿದ ಕೆಲವೇ ಮಾದರಿಗಳು ನಮ್ಮೆದುರಿಗಿವೆ. ಅಂಥವರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪಡೆದ ಚಿಲಿಯ ಕವಿ, ರಾಜಕಾರಣಿ, ವಾಗ್ಮಿ ಪ್ಯಾಬ್ಲೊ ನೆರೂಡ ಮುಖ್ಯನಾಗಿದ್ದಾನೆ. ಅವನ ದಾರಿಯ ಅವಲೋಕನವೂ ವರ್ತಮಾನಕ್ಕೆ ಬಹುಮುಖ್ಯವಾಗಿದೆ.

‘ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿಲ್ಲ..’

ಚಿಲಿ ದೇಶದ ದಕ್ಷಿಣ ಪ್ರಾಂತ್ಯದ ರೆಯೆಸ್-ಬಸುವಾಲ್ತೊ ದಂಪತಿಗಳಿಗೆ ೧೯೦೪ರಲ್ಲಿ ನೆಫ್ತಾಲಿ ರಿಕಾರ್ದೊ ಎಲಿಯೆಸರ್ ಎಂಬ ಮಗು ಹುಟ್ಟಿತು. ಅವ ಹುಟ್ಟಿ ಒಂದು ತಿಂಗಳಿಗೆ ತಾಯಿಯನ್ನು ಕಳೆದುಕೊಂಡ. ಹತ್ತನೇ ವಯಸ್ಸಿಗೆ ಕಾವ್ಯ ಬರೆಯಲು ಮೊದಲು ಮಾಡಿದ. ಇಪ್ಪತ್ತನೇ ಶತಮಾನ ಕಂಡ ಅತ್ಯಂತ ಸಂವೇದನಾಶೀಲ ಹಾಗೂ ಅತ್ಯುತ್ತಮ ಕವಿ ಎಂದು; ‘ವಿಶ್ವಕವಿ’ ಎಂದು ಹಲವರಿಂದ ಹೊಗಳಿಕೆಗೆ ಭಾಜನನಾದ. ಅವನೇ ಕನ್ನಡಪ್ರಜ್ಞೆಗೆ ತುಂಬ ಹತ್ತಿರದವನಾಗಿರುವ ಪ್ಯಾಬ್ಲೊ ನೆರೂಡ. 

ನೆರೂಡ ಸಂಪೂರ್ಣ ಕಾವ್ಯಮಾರ್ಗಿ. ಯುದ್ಧ, ಸಂಸ್ಕೃತಿ, ಪ್ರೇಮ, ಸಂಬಂಧ, ಇತಿಹಾಸ, ಜನ, ನೆಲ, ಸ್ಮರಣಗೀತೆ ಮುಂತಾದ ಹಲವೆಂಟು ವಿಷಯ ಕುರಿತು ಕವಿತೆ ಬರೆದ. ಬದುಕಿನುದ್ದಕ್ಕೂ ಕವಿತೆಯನ್ನೇ ಬರೆದ. ಆನಂದದಲ್ಲೂ, ಆತಂಕದಲ್ಲೂ, ಒಂಟಿಯಾಗಿರುವಾಗಲೂ, ಜನಕೋಟಿಯಲ್ಲೊಬ್ಬನಾಗಿ ಮಿಳಿತವಾದಾಗಲೂ, ಪ್ರೇಮದಲ್ಲೂ, ವಿರಹ ಅನುಭವಿಸುವಾಗಲೂ, ಸಸ್ನೇಹದಲ್ಲಿ ಮೀಯುವಾಗಲೂ, ಬೆನ್ನಿಗಿರಿಸಿಕೊಂಡಾಗಲೂ - ವ್ಯಕ್ತ ಸಂವೇದನೆಗೆ ಕಾವ್ಯವೇ ತನ್ನ ಮಾರ್ಗ ಎಂದು ನಂಬಿದ. ನವನವೀನ ಪ್ರಯೋಗಗಳಲ್ಲಿ, ಹೊಸ ಶೈಲಿಯಲ್ಲಿ ಕವಿತೆಗಳನ್ನು ಬರೆದ. ಕವಿತೆಗಾಗಿಯೇ ನೊಬೆಲ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನೂ, ಅಪಾರ ಕಾವ್ಯಾಭಿಮಾನಿಗಳನ್ನೂ ಗಳಿಸಿದ. ಗಣಿಕಾರ್ಮಿಕರು, ಸರಕು ಮಾರ್ಕೆಟ್ಟಿನ ಹಮಾಲಿಗಳು, ಭೂಗತ ರೌಡಿಗಳು, ಕುರಿಕಾಯುವ ಹುಡುಗರಿಂದ ಹಿಡಿದು ಚೆಗೆವಾರ, ಪಿಕಾಸೊ, ಸ್ಟಾಲಿನ್ ತನಕ ಸಮಾಜದ ಎಲ್ಲ ಸ್ತರಗಳ ಜನರು ಅವನ ಕಾವ್ಯಾಭಿಮಾನಿಗಳಾಗಿದ್ದರು. ಬಹುಜನರಿಗಾಗಿ ಬರೆದ, ಬಾಳಿದ ಕವಿಯೆಂದೇ ಅವನ ಕವಿತೆಗಳು ಜನರ ಎದೆಯ ಹಾಡುಗಳಾಗಿ ಇಂದಿಗೂ ಜನಮನದಲ್ಲಿ ಸ್ಥಾಯಿಯಾಗಿವೆ. 

೧೦ನೇ ವಯಸ್ಸಿಗೆ ತನ್ನ ಮೊದಲ ಕವಿತೆ ಬರೆದ ನೆಫ್ತಾಲಿ ರಿಕಾರ್ದೊಗೆ ತಂದೆಯಿಂದ ಬರಹ ಕೃಷಿಗೆ ಪ್ರೋತ್ಸಾಹ ದೊರೆಯಲಿಲ್ಲ. ಸಮೀಪದ ಶಾಲೆಯ ಅಧ್ಯಾಪಕಿಯಾಗಿದ್ದ (ಮುಂದೆ ನೊಬೆಲ್ ಪಡೆದ) ಗೇಬ್ರಿಯೆಲಾ ಮಿಸ್ಟ್ರೆಲ್ ಆರಂಭದ ದಿನಗಳಲ್ಲಿ ಹುಡುಗನ ಬೆನ್ನುತಟ್ಟಿ ಪ್ರೋತ್ಸಾಹಿಸಿದಳು. ೧೩ನೇ ವಯಸ್ಸಿಗೆ ತನ್ನ ಮೊದಲ ಪ್ರಬಂಧವನ್ನು ಸ್ಥಳೀಯ ಪತ್ರಿಕೆಯೊಂದರಲ್ಲಿ ಹುಡುಗ ನೆಫ್ತಾಲಿ ತನ್ನದೇ ಹೆಸರಿನಲ್ಲಿ ಪ್ರಕಟಿಸಿದ. ೧೬ ವರ್ಷ ಕಳೆಯುವುದರಲ್ಲಿ ಅನೇಕ ಕವಿತೆಗಳನ್ನು ಬರೆದಿದ್ದ. ತಂದೆಗೆ ತಿಳಿಯದಂತೆ ಸಾಹಿತ್ಯಿಕ ಸ್ಪರ್ಧೆಯಲ್ಲಿ ಭಾಗವಹಿಸಲು ಕಾವ್ಯನಾಮದ ಹುಡುಕಾಟಕ್ಕೆ ತೊಡಗಿದ. ಜೆಕ್ ಕವಿ ಜಾನ್ ನೆರೂಡನ ಹೆಸರಿನ ಭಾಗವೊಂದನ್ನು ಸೇರಿಸಿಕೊಂಡು ‘ಪ್ಯಾಬ್ಲೊ ನೆರೂಡ’ ಎಂಬ ಕಾವ್ಯನಾಮ ಇಟ್ಟುಕೊಂಡ ಎಳೆಯ ಕವಿಗೆ ೧೯ ವರ್ಷ ತುಂಬುವುದರೊಳಗೆ ಮೊದಲ ಸಂಕಲನ ಬಂತು. ಪ್ರೇಮ ಕವಿತೆಗಳ ಪುಸ್ತಕದ ೧೦ ಲಕ್ಷ ಪ್ರತಿ ಮಾರಾಟವಾಯಿತು! 

ನಂತರ ನೆರೂಡ ಹಿಂದಿರುಗಿ ನೋಡಿದ್ದೇ ಇಲ್ಲ. ಜನಪ್ರಿಯತೆ ಮತ್ತು ಕಾವ್ಯಕೃಷಿ ಎರಡೂ ಅಬಾಧಿತವಾಗಿ ಮುಂದುವರೆದವು. ದಕ್ಷಿಣ ಅಮೆರಿಕ ಹಾಗೂ ಚಿಲಿ ತೀವ್ರ ಸಂಘರ್ಷ ಎದುರಿಸುತ್ತಿದ್ದ ಕಾಲಕ್ಕೆ ಸಾಕ್ಷಿಯಾಗಿ ನೆರೂಡನ ಕವಿತೆಗಳು ಸೃಷ್ಟಿಯಾದವು. ಎಲ್ಲೇ ಹೋದರೂ, ಯಾವ ಹುದ್ದೆಯನ್ನೇ ನಿರ್ವಹಿಸುತ್ತಿದ್ದರೂ ಕವಿತೆ ಬರೆಯುವುದು ನಿಲ್ಲಿಸಲಿಲ್ಲ. ಯಾವ ನೆಲದಲ್ಲಿದ್ದನೋ ಅಲ್ಲಿಯ ಸಾರಸತ್ವ, ಸಂಕಟಗಳನ್ನೆಲ್ಲ ಹೀರಿಕೊಂಡು ಕವಿತೆ ಬರೆದ. ಎಂದೇ ಜನವಿರೋಧಿ ಆಳ್ವಿಕರಿಗೆ ಅವು ಅಪಾಯಕಾರಿಯಾಗಿ ಕಂಡವು. ಒಮ್ಮೆ ಪೋಲೀಸರಿಂದ ಅವನ ಮನೆ ತಪಾಸಣೆಗೊಳಗಾದಾಗ, ‘ಮನೆಯಲ್ಲಿ ಎಲ್ಲಿ ಬೇಕಾದರೂ ಹುಡುಕಿ, ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿಲ್ಲ..’ ಎಂದು ಹೇಳಿದ್ದ. 

ಆಸೆ ಮತ್ತು ಭರವಸೆಯ ಕುರುಹು ಎಂದು ಹಸಿರು ಬಣ್ಣದ ಶಾಯಿಯಲ್ಲೆ ಬರೆಯುತ್ತಿದ್ದ ಕನಸುಗಾರ ನೆರೂಡ ತನ್ನನ್ನು ತಾನು ಒಣನೆಲದಲ್ಲಿಯೂ ಹಾಯಿ ನಡೆಸುವ ನಾವಿಕ - ‘ನೇವಿಗೇಟರ್ ಆಫ್ ದಿ ಡ್ರೈ ಲ್ಯಾಂಡ್’ ಎಂದು ಕರೆದುಕೊಳ್ಳುತ್ತಿದ್ದ. ಒಂದು ದೇಶದ ನದಿಗಳು ಎಂದರೆ ಅಲ್ಲಿನ ಕವಿಗಳು ಎನ್ನುತ್ತಿದ್ದ ನೆರೂಡನಿಗೆ ಯಾವುದೇ ಸಮಾಜದ ಜೀವಸೆಲೆ ಅದರ ಕವಿ ಮನಸ್ಥಿತಿಯಲ್ಲಿರುತ್ತದೆ ಎಂಬ ಅಚಲ ವಿಶ್ವಾಸ. ಈ ಅರ್ಹತೆಯನ್ನು, ವಿಶ್ವಾಸವನ್ನು ಉಳಿಸಿಕೊಳ್ಳಲು ಕವಿಗಳು ನಿರಂತರ ಶ್ರಮಿಸಬೇಕಿದೆ. ಆ ದೃಷ್ಟಿಯಿಂದ ನೆರೂಡ ಯಶಸ್ವಿ ಕವಿ ಎನ್ನಬಹುದಾಗಿದೆ.

ರಾಜಕಾರಣಿ ನೆರೂಡ

ನೆರೂಡ ಕವಿಯಷ್ಟೆ ಆಗಿರಲಿಲ್ಲ, ಚಿಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯ ಮತ್ತು ಸಕ್ರಿಯ ರಾಜಕಾರಣಿಯೂ ಆಗಿದ್ದ. ೧೯೪೫ರಲ್ಲಿ ಅಟಕಾಮ ಮರುಭೂಮಿಯ ಅಂತೋಫಗಸ್ತಾ, ತರಪಾಕಾ ಪ್ರದೇಶಗಳ ಜನಪ್ರತಿನಿಧಿ ಸೆನೆಟರ್ ಆದ. ಕೇವಲ ೨೩ ವರ್ಷದವನಾಗಿದ್ದಾಗ ಜೀವನ ನಿರ್ವಹಣೆಗಾಗಿ ರಾಜತಾಂತ್ರಿಕ ಹುದ್ದೆ ಒಪ್ಪಿಕೊಂಡ. ಚಿಲಿಯ ರಾಯಭಾರಿಯಾಗಿ ಮೊದಲು ರಂಗೂನಿನಲ್ಲಿ ನಂತರ ಬಟಾವಿಯ, ಸಿಂಗಪುರ, ಶ್ರೀಲಂಕಾ, ಮೆಕ್ಸಿಕೊ, ಸ್ಪೇನ್, ಅರ್ಜೆಂಟೀನಾಗಳಲ್ಲಿ ಕೆಲಸ ನಿರ್ವಹಿಸಿದ. 

ಸ್ಪೇನ್ ಅಂತರ್ಯುದ್ಧದ ಕಾಲದಲ್ಲಿ ಸಂಪೂರ್ಣ ರಾಜಕಾರಣಿಯೇ ಆದ ನೆರೂಡ, ೨೦೦೦ ಜನ ನಿರಾಶ್ರಿತರನ್ನು ಸ್ಪೇನಿಗೆ ಕಳಿಸಲು ರಹದಾರಿ ನೀಡಿದ. ಆ ಕಾಲದ ಬಹುಪಾಲು ಬುದ್ಧಿಜೀವಿ ಹೋರಾಟಗಾರರಂತೆ ಕಮ್ಯುನಿಸಂ ಅನ್ನು ಪ್ರೀತಿಸಿದ. ಲೆನಿನ್ ೨೦ನೇ ಶತಮಾನದ ಮಹಾನ್ ಮೇಧಾವಿ ಎಂದು ಹೆಸರಿಸಿದ. ನಾಜಿ ಜರ್ಮನಿಯನ್ನು ಸೋಲಿಸಿದ ಮತ್ತು ಕಮ್ಯುನಿಸ್ಟ್ ತತ್ವಗಳನ್ನು ಜನಬದುಕಿಗೆ, ಆಳ್ವಿಕೆಗೆ ತಂದ ಸ್ಟಾಲಿನ್ ಆತನಿಗೆ ಬಹು ಪ್ರಿಯನಾಗಿದ್ದ. ಹಲವು ಕವಿತೆಗಳು ಸ್ಟಾಲಿನ್‌ಗಾಗಿ ಬರೆಯಲ್ಪಟ್ಟವು. ಸ್ಟಾಲಿನ್ ಶಾಂತಿ ಪ್ರಶಸ್ತಿಯೂ ನೆರೂಡನಿಗೆ ಸಿಕ್ಕಿತು. ನೆರೂಡ ಸ್ಟಾಲಿನ್ನನ ಎಂತಹ ಕಟ್ಟಾಭಿಮಾನಿ ಎಂದರೆ ಆತನ ತಪ್ಪು ನಡೆಗಳನ್ನು ಸಾರ್ವಜನಿಕವಾಗಿ ಟೀಕಿಸಲು ಹಿಂಜರಿದ. ಕವಿ ಕಲಾವಿದರನ್ನು ಸ್ಟಾಲಿನ್ ಸರ್ವಾಧಿಕಾರಿಯಂತೆ ಹತ್ತಿಕ್ಕುತ್ತಿರುವಾಗ ಅವನ ಮೇಲಿದ್ದ ಭಕ್ತಿ ತುಂಬಿದ ಪ್ರೀತಿ ಸುಮ್ಮನಿರುವಂತೆ ಮಾಡಿತು. ಅದಕ್ಕಾಗಿ ನೆರೂಡ ತನ್ನವರಿಂದ ದೂಷಣೆಗೊಳಗಾಗುವಂತೆ ಆಯಿತು. ಆಕ್ಟೇವಿಯೊ ಪಾಜ್ ಮತ್ತಿತರ ಗೆಳೆಯರನ್ನು ಕವಿ ಕಳೆದುಕೊಳ್ಳಬೇಕಾಯಿತು. ಆದರೆ ತನ್ನ ಈ ನಡೆಯನ್ನು ತಾನೇ ಆಳವಾಗಿ ನೆರೂಡ ವಿಮರ್ಶಿಸಿಕೊಂಡಿರುವುದನ್ನು ಈ ಆತ್ಮಕತೆಯ ಕೆಲ ಭಾಗಗಳಲ್ಲಿ ಕಾಣಬಹುದು. 

೧೯೪೬ರಲ್ಲಿ ಚಿಲಿ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿತ್ತು. ಕಮ್ಯುನಿಸ್ಟ್ ಪಕ್ಷಗಳು ರ‍್ಯಾಡಿಕಲ್ ಪಾರ್ಟಿಯ ಗೇಬ್ರಿಯೆಲ್ ಗೊನ್ಸಾಲೆಸ್ ವಿಡೇಲಾನನ್ನು ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಿದವು. ಆತ ನೆರೂಡನನ್ನು ಚುನಾವಣಾ ಪ್ರಚಾರದ ಮ್ಯಾನೇಜರ್ ಆಗಿ ನೇಮಿಸಿಕೊಂಡ. ನೆರೂಡ ದೇಶಾದ್ಯಂತ ತಿರುಗಿ ವಿಡೇಲಾ ಗೆಲುವಿಗೆ ಕಾರಣನಾದರೂ ಅಧ್ಯಕ್ಷನಾದ ನಂತರ ವಿಡೇಲಾ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಿದ! ೨೬,೦೦೦ ಜನ ಪಕ್ಷದ ಕಾರ್ಯಕರ್ತರ ಮತದಾನ ಹಕ್ಕು ಕಿತ್ತುಕೊಳ್ಳಲಾಯಿತು. ಬಂಧನದ ಸಾಧ್ಯತೆಗಳು ದಟ್ಟವಾದಾಗ ಅನಿವಾರ್ಯವಾಗಿ ನೆರೂಡ ಭೂಗತನಾಗಬೇಕಾಯಿತು. ತನ್ನ ತಾಯ್ನೆಲದಲ್ಲಿಯೇ, ತನ್ನವರಿಂದಲೇ ಪ್ರಾಣಕ್ಕೆ ಅಪಾಯ ಬಂದೆರಗಿದಾಗ ತಲೆಮರೆಸಿಕೊಂಡು ದೇಶ ಬಿಟ್ಟು ತೆರಳಬೇಕಾಯಿತು. ೧೯೫೨ರಲ್ಲಿ ವಿಡೇಲಾನ ಅಂತಿಮ ದಿನಗಳಲ್ಲಿ ಚಿಲಿ ಸೋಷಿಯಲಿಸ್ಟ್ ಪಕ್ಷವು ಸಾಲ್ವಡಾರ್ ಅಲ್ಲಂಡೆಯನ್ನು ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿಸುವ ಪ್ರಯತ್ನದಲ್ಲಿದ್ದಾಗ ಅಲ್ಲಂಡೆಯ ಗೆಳೆಯ ನೆರೂಡ ಮತ್ತೆ ಚಿಲಿಗೆ ಬಂದ. ಆ ವೇಳೆಗೆ ಅವ ವಿಶ್ವದ ಪ್ರಸಿದ್ಧ ಕವಿ, ಎಡಪಂಥೀಯ ಚಿಂತಕನಾಗಿದ್ದ. ನಂತರ ಕೊನೆಯವರೆಗೂ ಚಿಲಿಯಲ್ಲೇ ಉಳಿದ.

ತನ್ನ ಜೀವಿತ ಕಾಲದಲ್ಲಿಯೇ ಇಬ್ಬರು ಆಪ್ತ ಗೆಳೆಯರನ್ನು - ಕವಿ ಫ್ರೆಡರಿಕೊ ಗಾರ್ಸಿಯಾ ಲೋರ್ಕಾ ಮತ್ತು ಚಿಲಿ ಅಧ್ಯಕ್ಷನಾಗಿದ್ದ ಸಾಲ್ವಡಾರ್ ಅಲ್ಲಂಡೆ (೧೯೭೩) - ಅವರ ಸಾವನ್ನು ನೋಡಬೇಕಾಯಿತು. ಪರಮ ಪ್ರಿಯ ಚೆಗೆವಾರ ಹತ್ಯೆ (೧೯೬೭) ಆದದ್ದಕ್ಕೆ ಸಾಕ್ಷಿಯಾಗಬೇಕಾಯಿತು. ಚಿಲಿ ದೇಶವನ್ನು ಸರ್ವಾಧಿಕಾರಿ ಪಿನೊಶೆ ಆಳತೊಡಗಿದ ಮೇಲೆ ಮಾರ್ಕ್ಸಿಸ್ಟ್ ಚಿಲಿಯ ಅವನ ಕನಸು ಭಗ್ನವಾಯಿತು. ಅವನ ಮನೆಗಳು ಪೊಲೀಸರಿಂದ ದಾಳಿಗೊಳಗಾದವು. ಅವನು ವಿಶ್ವವಿದ್ಯಾಲಯಕ್ಕೆ ನೀಡಿದ ಪುಸ್ತಕ-ವಸ್ತುಗಳನ್ನು ಪಡೆಯದಿರುವಂತೆ ಉನ್ನತಮಟ್ಟದ ಒತ್ತಡಗಳು ಬಂದವು. ಅವು ಕೊನೆಗೆ ಏನಾದವೋ ಇವತ್ತಿಗೂ ಗೊತ್ತಿಲ್ಲ. ನೆರೂಡನೇ ‘ಅವು ಕಡಲಾಳ ಸೇರಿರಬಹುದು ಅಥವಾ ಕಾಳಸಂತೆಯ ದಾರಿ ಹಿಡಿದಿರಬಹುದು’ ಎಂದು ನೊಂದುಕೊಂಡಿದ್ದ.

ಒಟ್ಟಾರೆ ಎಲ್ಲ ಸಂಕಟಗಳನ್ನೂ ಕವಿತೆಗಳಲ್ಲಿ ತೋಡಿಕೊಳ್ಳುತ್ತಲೇ, ಅದಕ್ಕೆ ಪರಿಹಾರವನ್ನು ರಾಜಕೀಯ ಆಯ್ಕೆಗಳಲ್ಲಿ ಹುಡುಕಿದ ನೆರೂಡ ಬದುಕಿನ ಸಕಲ ಏರಿಳಿತಗಳಿಗೆ ಎದೆಕೊಟ್ಟ ಕವಿ ಜೀವ ಎನ್ನಬಹುದು.

ಕಡು ವ್ಯಾಮೋಹಿ 

ವೈನ್ ಪ್ರಿಯ ನೆರೂಡ ಎಲ್ಲಿ ಹೋದರೂ ಚಿಲಿ ವೈನ್ ಒಯ್ಯುತ್ತಿದ್ದ. ಮನೆಗೆ ಬಂದ ಗೆಳೆಯರ ಬಳಗಕ್ಕೆ ವೈನ್ ಮತ್ತು ಕಾವ್ಯ ಸಮಾರಾಧನೆಯನ್ನು ಕಂಠಮಟ್ಟ ಮಾಡಿಸಿ ತಾನು ತೃಪ್ತಿ ಹೊಂದುತ್ತಿದ್ದ. ವೈನು ಬಗ್ಗಿಸುವ, ಕುಡಿಯುವ ಗಾಜಿನ, ಲೋಹದ ಆಕರ್ಷಕ ಕಂಟೇನರ್‌ಗಳ ದೊಡ್ಡ ಸಂಗ್ರಹವೇ ಅವನಲ್ಲಿತ್ತು. 

ಅವನಿಗೆ ಕಡಲು ಇಷ್ಟ. ‘ನನ್ನ ಕಿಟಕಿಯಿಂದ ಕಡಲನ್ನು ನಾನು ನೋಡುವ ಬದಲು ಕಡಲೇ ತನ್ನ ನೊರೆಯ ಸಾವಿರ ಕಣ್ಣುಗಳಿಂದ ನನ್ನ ನೋಡುತ್ತಿದೆ’ ಎನ್ನುತ್ತಿದ್ದ. ಅವನಿಗೆ ಹಡಗು ಇಷ್ಟ. ನಾವಿಕರು ಇಷ್ಟ. ಅವರ ಸಾಹಸಯಾನದ ಕತೆ ಕೇಳಲು ಇನ್ನೂ ಇಷ್ಟ. ಎಂದೇ ಕಡಲ ತೀರದಲ್ಲಿ ನಾವೆಯಂತೆ ಕಾಣುವ ಮನೆಗಳ ಕಟ್ಟಿ, ಬಿಳಿಯ ಮೀನಿನ ಚಿತ್ರವಿರುವ ನೀಲಿ ಬಾವುಟವನ್ನು ಹಾರಿಸಿದ. 

‘ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು’ ಎಂದು ಕುವೆಂಪು ಹೇಳಿದ್ದು ಕವಿಯ ಜೀವಚೈತನ್ಯ ಕುರಿತು. ತನಗಿಷ್ಟ ಬಂದಲ್ಲಿ ತನ್ನಿಷ್ಟದಂತೆ ಮನೆ ಕಟ್ಟಿ, ಅಮೂಲ್ಯವೆನಿಸುವುದನ್ನೆಲ್ಲ ತಂದು ಒಪ್ಪಓರಣಗೊಳಿಸಿ, ಅದರೊಡನೆ ಬದುಕುತ್ತ ನೆಮ್ಮದಿ ಕಂಡುಕೊಳ್ಳುವುದು ಮನುಷ್ಯ ಗುಣ. ಇದರಿಂದ ನೆರೂಡ ಹೊರತಾಗಿರಲಿಲ್ಲ. ರಾಜಧಾನಿ ಸೆಂಟಿಯಾಗೊದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳ ತಾಣವಾಗಿ ಅವನದೊಂದು ಮನೆಯಿತ್ತು. ಕಡಲ ತೀರದ ಶಾಂತತೆ ಬಯಸಿ ತನ್ನ ಗತವೈಭವವನ್ನು ನೆನಪಿಸಿಕೊಂಡು ಬಿಕ್ಕುತ್ತಿದ್ದ ವಾಲ್ಪರೈಸೊ ನಗರಕ್ಕೆ ಹೋಗಿ ಮತ್ತೊಂದು ಮನೆ ಕಟ್ಟಿದ. ನಂತರ ಜನ-ಸಮಾಜದ ಕಣ್ಣಿಗೆ ಬೀಳದಂತೆ ಬದುಕುವ ಅಡಗುದಾಣದಂತೆ ಇಸ್ಲಾ ನೆಗ್ರಾದ ಕಡಲ ದಂಡೆಯಲ್ಲೂ ಮನೆ ಕಟ್ಟಿದ. ತುಂಬ ಕಕ್ಕುಲಾತಿಯಿಂದ ಮನೆಗಳ ರೂಪಿಸಿದ ಹೆಣ್ಣು ಮನಸ್ಸು ನೆರೂಡನದು. ಬೊಂಬೆ, ಮಣಿ, ಕಪ್ಪೆಚಿಪ್ಪು, ಬಣ್ಣದ ಗಾಜುಗಳಿಂದ ಹಿಡಿದು ಪುಸ್ತಕ, ನಕಾಶೆ, ಕಡಲ ನಾವಿಕನ ದಿಕ್ಸೂಚಿಯವರೆಗೆ ಎಲ್ಲವನ್ನೂ ಸಂಗ್ರಹಿಸಿ ಮನೆಯಲ್ಲಿ ಜೋಡಿಸಿದ ನೆರೂಡ. 

ಅವನಷ್ಟು ವಸ್ತು ಮೋಹ ಇರುವವರು ತುಂಬ ಕಡಿಮೆ. ನೆರೂಡ ತನಗೆ ಬೇಕೆನಿಸಿದ ವಸ್ತುಗಳನ್ನು ಹೇಗಾದರೂ ಪಡೆಯುತ್ತಿದ್ದ. ಕಪ್ಪೆಚಿಪ್ಪುಗಳಂತೆಯೇ ಕವಿಯ ಬಳಿ ವಿಶಿಷ್ಟ ಬೊಂಬೆ ಸಂಗ್ರಹವೂ ಇತ್ತು! ಬೊಂಬೆಯಾಕಾರದ ವೈನ್ ಬಾಟಲು, ಬಾಟಲಿಯೊಳಗೆ ಹಡಗು ಕೂರಿಸಿದ ಬೊಂಬೆ, ಹಡಗಿನ ಮುಂಚೂಣಿಯಲ್ಲಿರುತ್ತಿದ್ದ ಫಿಗರ್ ಹೆಡ್ ಬೊಂಬೆ ಎಲ್ಲ ಇದ್ದವು. ಕವಿಗೇಕೆ ಬೊಂಬೆ? ಅವನ ಮಾತುಗಳಲ್ಲೇ ನಮ್ಮ ಅಚ್ಚರಿಗೆ ಉತ್ತರವಿದೆ: ‘ಆಟವಾಡದ ಮಗು ಮಗುವೇ ಅಲ್ಲ, ಆಟವಾಡದೇ ಬೆಳೆದ ವ್ಯಕ್ತಿಗಳು ತಮ್ಮೊಳಗಿನ ಮಗುವನ್ನು ಶಾಶ್ವತವಾಗಿ ಕಳೆದುಕೊಂಡಿರುತ್ತಾರೆ. ತಮ್ಮೊಳಗಿನ ಮಗುತನಕ್ಕೆ ಅಪರಿಚಿತರಾಗಿರುತ್ತಾರೆ. ನಾನು ನನ್ನ ಮನೆಯನ್ನು ಬೊಂಬೆಮನೆಯ ಹಾಗೆ ಕಟ್ಟಿದ್ದೇನೆ. ಬೆಳಗಿನಿಂದ ಸಂಜೆಯವರೆಗೆ ಆಡುತ್ತೇನೆ’.

ಇಂಥ ಮಗುತನವನ್ನು ಉಳಿಸಿಕೊಂಡಿದ್ದ ನೆರೂಡ ತನ್ನ ಅಭಿರುಚಿ, ಅವಶ್ಯಕತೆಗೆ ತಕ್ಕಂತೆ ಮೂರೂ ಮನೆಗಳನ್ನು ನಿರ್ಮಿಸಿದ. ವಿಶ್ವದ ಎಲ್ಲ ಭಾಗಗಳಿಂದ ಅಮೂಲ್ಯ ವಸ್ತುಗಳ ಹೆಕ್ಕಿ ತಂದು, ಮನೆಯಲ್ಲಿ ಪೇರಿಸಿರುವ ಕಾರಣ ಅವು ಅದ್ಭುತ ಮ್ಯೂಸಿಯಂಗಳೆನ್ನಲು ತಕ್ಕುದಾಗಿವೆ. ತಾನು ಮರಣದ ಬಳಿಕ ಹದ್ದಾಗಿ ಮನೆಯೊಳ ಬರುತ್ತೇನೆ ಎಂದು ಹೇಳುತ್ತಿದ್ದನಂತೆ. ಒಮ್ಮೆ ಕಿಟಕಿಯೆಲ್ಲ ಮುಚ್ಚಿದ್ದರೂ ಹೇಗೋ ಒಂದು ಹದ್ದು ಅವನ ಮನೆಯೊಳ ಬಂದಾಗ ನೆರೂಡನ ಗೆಳೆಯ ಡಾ. ವೆಲಾಸ್ಕೊ ಅಚ್ಚರಿಯಿಂದ ಕವಿಮಾತು ನೆನಪಿಸಿಕೊಂಡಿದ್ದ. 

‘ನಾನು ನನ್ನ ಮನೆ ಇಸ್ಲಾ ನೆಗ್ರಾವನ್ನು ಜನತೆಗೆ ಅರ್ಪಿಸುತ್ತಿದ್ದೇನೆ; ಒಂದಲ್ಲ ಒಂದು ದಿನ ಅದು ಯೂನಿಯನ್ ಮೀಟಿಂಗುಗಳ ಸ್ಥಳವಾಗುತ್ತದೆ, ಗಣಿ ಕಾರ್ಮಿಕರು, ರೈತರು ವಿಶ್ರಾಂತಿ ಪಡೆಯುವ ಜಾಗವಾಗುತ್ತದೆ. ಹೊಟ್ಟೆಯ ಕಿಚ್ಚಿನ ಜನರ ಮೇಲೆ ನನ್ನ ಕಾವ್ಯವು ತೀರಿಸಿಕೊಳ್ಳುವ ಪ್ರತೀಕಾರ ಅದು’ ಎಂದು ಹೇಳಿದ. ಜನಪರ ಹೋರಾಟಗಾರನೊಬ್ಬ ಇದಕ್ಕಿಂತ ಉದಾತ್ತವಾಗಿ ತನ್ನ ನೆಲೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ?

ಬದುಕಿನ ಇಂಥ ಎಲ್ಲ ಏಳುಬೀಳುಗಳ ನಡುವೆಯೂ ಅವ ಪ್ರೇಮಿಸಿದ, ಕಾಮಿಸಿದ, ಮದುವೆಯಾದ, ಕವಿತೆಗಳ ಹೆರುತ್ತ ಹೋದ. ಮೂರನೆಯ ಸಂಗಾತಿ ಮಟಿಲ್ಡ ಉರುಷಿಯ ಕೊನೆಗಾಲದವರೆಗೆ ಅವನೊಡನೆ ಇದ್ದಳು. ನೆರೂಡನ ಮನೆ, ವಸ್ತು, ಪುಸ್ತಕಗಳು ನಾಶವಾಗದೇ ಬರುವ ಪೀಳಿಗೆಯ ಅವಲೋಕನಕ್ಕೆ ಅವು ಉಳಿಯುವಂತೆ ಮಾಡುವಲ್ಲಿ ಮಟಿಲ್ಡ ಹಾಗೂ ನೆರೂಡ ಫೌಂಡೇಷನ್ನಿನ ಪಾತ್ರ ದೊಡ್ಡದಿದೆ. 

ಕೊನೆಯ ದಿನಗಳು 

ಗೆಳೆಯ ಅಲ್ಲಂಡೆಯ ಸಾವಿನಿಂದ ನೊಂದಿದ್ದ ನೆರೂಡನಿಗೆ ಪಿನೊಶೆ ಅಧಿಕಾರ ಕಿತ್ತುಕೊಂಡದ್ದು ಜರ್ಝರಿತಗೊಳ್ಳುವಂತೆ ಮಾಡಿತು. ಸರ್ವಾಧಿಕಾರಿಯು ಆಡಳಿತ ಹಿಡಿದ ಹನ್ನೆರೆಡು ದಿನಗಳಲ್ಲಿ ಕವಿಯ ದೇಹ ಇಹಲೋಕ ತ್ಯಜಸಿತು. ಕ್ಯಾನ್ಸರ್ ಉಲ್ಬಣಿಸಿ ಮರಣ ಸಂಭವಿಸಿತು ಎಂಬ ಹೇಳಿಕೆ ಹೊರಬಿದ್ದರೂ, ಆಸ್ಪತ್ರೆಯಲ್ಲಿ ಒಬ್ಬ ವೈದ್ಯ ಬಂದು ಹೊಟ್ಟೆಗೆ ಇಂಜೆಕ್ಷನ್ ಚುಚ್ಚಿ ಹೋದ ಆರೇ ತಾಸುಗಳಲ್ಲಿ ಕವಿ ಕೊನೆಯುಸಿರೆಳೆದಿದ್ದರಿಂದ ಅದು ಕೊಲೆ ಎಂಬ ಆರೋಪ ಕೇಳಿಬಂತು. ಅಭಿಮಾನಿಗಳು ದಂಗೆಯೆದ್ದರು. ಮರಣೋತ್ತರ ಶವಪರೀಕ್ಷೆ ಆಯಿತು, ವರದಿ ಬಂತು. ಕೆಲವರು ಕವಿಯ ಸಾವಿನ ಹಿಂದೆ ಆಳುವವರ ಕೈವಾಡವಿದೆ ಎಂದು ಬಲವಾಗಿ ಶಂಕಿಸಿದರು; ಇಲ್ಲ ಎಂದು ಪರಿಣಿತರೆಂದರು. ಕೊನೆಗೆ ಕವಿಯ ಅಂತ್ಯಸಂಸ್ಕಾರ ಸಾರ್ವಜನಿಕ ಸಮಾರಂಭವಾಗದಂತೆ ಪಿನೊಶೆ ಸರ್ಕಾರ ಅವಸರದಲ್ಲಿ ತಾನೇ ಮಾಡಿ ಮುಗಿಸಿತು.  

‘ಎಲ್ಲ ವಸ್ತುಗಳಿಗೂ ಕೊನೆಗೇನಾಗುವುದು? ಸಾವು ಮತ್ತು ಮರೆವು ಎರಗುವುದು’ ಎನ್ನುತ್ತಾನೆ ನೆರೂಡ. ಆದರೆ ಅವನ ಕವಿತೆಗಾಗಲೀ, ನೆನಪುಗಳಿಗಾಗಲೀ ಅವೆರಡೂ ಬಂದೆರಗಿಲ್ಲ. ಇದಕ್ಕೆ ಚಿಲಿ ಎಂಬ ಪುಟ್ಟ ದೇಶದ ಅವನ ಮನೆಗಳಿಗೆ ಪ್ರತಿನಿತ್ಯ ಬಂದುಹೋಗುವ ಕಾವ್ಯಾಭಿಮಾನಿಗಳು, ಜಗತ್ತಿನ ಹಲವೆಂಟು ಭಾಷೆಗಳಿಗೆ ಇವತ್ತಿಗೂ ಮತ್ತೆಮತ್ತೆ ಅನುವಾದಗೊಳ್ಳುತ್ತಲೇ ಇರುವ ಅವನ ಕವಿತೆಗಳೇ ಸಾಕ್ಷಿಯಾಗಿವೆ. 

ಅವನು ತನ್ನ ದೇಶದಲ್ಲಿ ಅತಿ ಪ್ರಖ್ಯಾತನಾಗಿದ್ದ, ಅತಿ ದ್ವೇಷದ ಬೆಂಕಿಗೆ ಸುಟ್ಟುಕೊಂಡವನೂ ಆಗಿದ್ದ. ಜಗತ್ತಿನಲ್ಲೆ ಪ್ರಸಿದ್ಧ ಕವಿಯಾಗಿದ್ದ. ನೆರೂಡನನ್ನು ಅವನ ಎಡಪಂಥೀಯ ಒಲವಿಗಾಗಿ, ರೊಮ್ಯಾಂಟಿಕ್ ಪ್ರೇಮಕವಿತೆಗಳಿಗಾಗಿ, ರಾಜಕಾರಣದ ಸ್ಪಷ್ಟತೆಗಾಗಿ, ಪ್ರಕೃತಿ ಪ್ರೇಮಕ್ಕಾಗಿ ಹೀಗೆ ನಾನಾ ಕಾರಣಗಳಿಗಾಗಿ ಆರಾಧಿಸುವವರಿದ್ದಾರೆ. ಆದರೆ ಕವಿತೆ, ಸಿದ್ಧಾಂತ, ವಿಚಾರಗಳಾಚೆಗೂ ಬೆಳೆದುನಿಂತ ಅನನ್ಯ ಸೃಜನಶೀಲ ವ್ಯಕ್ತಿತ್ವ ಅದು ಎನ್ನುವುದಷ್ಟೇ ಸತ್ಯವಾಗಿದೆ.

***

ನೆರೂಡನ ಜೀವನದ ವಿವರಗಳು ೧೯೭೩ರಲ್ಲಿ ಆತ್ಮಕತೆ ‘ಮೆಮಾಯರ‍್ಸ್’ ಆಗಿ ದಾಖಲಿಸಲ್ಪಟ್ಟಿತು. ಅದನ್ನು ‘ನೆನಪುಗಳು’ ಆಗಿ ನಮ್ಮೆಲ್ಲರ ಪ್ರೀತಿಯ ಓ. ಎಲ್. ನಾಗಭೂಷಣ ಸ್ವಾಮಿ ಸರ್ ಕನ್ನಡಕ್ಕೆ ತಂದಿದ್ದಾರೆ. ೨೦೧೬ರಲ್ಲಿ ಕುಟುಂಬ ಸಮೇತ ದಕ್ಷಿಣ ಅಮೆರಿಕಾ ಪ್ರವಾಸ ಹೋಗುವ ಹೊತ್ತಿಗೆ ಓಎಲ್ಲೆನ್ ಅವರ ಕನ್ನಡಾನುವಾದದ ಕರಡು ನನಗೆ ಸಿಕ್ಕಿತು. ಅದನ್ನು ಓದುತ್ತ ದ. ಅಮೆರಿಕಾ ತಿರುಗಿದ್ದು ಆ ನೆಲ, ಜನ, ಸಮಾಜಗಳು ಪರಿಚಿತ ಎನ್ನುವಂತೆ ಮಾಡಿ ಅವಿಸ್ಮರಣೀಯ ಅನುಭವ ನೀಡಿತು. ಎಂದೇ ಓಎಲ್ಲೆನ್ ಸರ್‌ಗೆ ವೈಯಕ್ತಿಕವಾಗಿ ನಾನು ಋಣಿ. 

ದೀರ್ಘ ಅನುವಾದಗಳನ್ನು ಮಾಡುವಲ್ಲಿ ಓಎಲ್ಲೆನ್ ಸರ್ ಅವರ ಸಾಹಿತ್ಯ ಪ್ರೀತಿ ಮತ್ತು ಬದ್ಧತೆ ಅನನ್ಯ. ಅವರಿಗೆ ಅನುವಾದ ಎಂದರೆ ಒಂದು ವ್ರತದಂತೆ. ಎಂದೇ ಅವರ ಅನುವಾದಗಳ ಓದೂ ಸುಲಲಿತ. ಈ ಪುಸ್ತಕದ ಓದು ಹತ್ತಾರು ಸಾವಿರ ಮೈಲಿ ದೂರದಲ್ಲಿ ನೂರು ವರ್ಷ ಕೆಳಗೆ ಹುಟ್ಟಿದ ವ್ಯಕ್ತಿಯೊಬ್ಬನ ಜೀವನ ಚರಿತ್ರೆ ಓದುತ್ತಿರುವ ಅನುಭವ ನೀಡದೆ, ಇಲ್ಲೇ ಈಗ ಬಾಳಿದವನ ಕಥನ ಓದಿದ ಅನುಭವ ನೀಡುತ್ತದೆ. ಈ ಅನುವಾದದ ಮೂಲಕ ಸೃಜನಶೀಲ ಮನಸುಗಳ ಸಂವೇದನೆಯನ್ನು ವಿಸ್ತಾರಗೊಳಿಸುವ ಮಹತ್ತರ ಕಾರ್ಯವನ್ನು ಮಾಡಿರುವ ಸರ್, ನಿಮಗೆ ಎಲ್ಲ ಕನ್ನಡ ಮನಸುಗಳ ಪರವಾಗಿ ಧನ್ಯವಾದಗಳು..

ಈ ಅನುವಾದ ಪ್ರಕಟಗೊಳ್ಳಲು ಅನುಮತಿಸಿದ ಪೆಂಗ್ವಿನ್ ಇಂಡಿಯಾ ಪ್ರಕಾಶನ ಸಂಸ್ಥೆ; ಪುಟವಿನ್ಯಾಸ ಮಾಡಿದ ಅರುಣ ಕುಮಾರ್ ಜಿ; ಅಂದವಾಗಿ ಮುದ್ರಿಸಿದ ಇಳಾ ಮುದ್ರಣದ ಗುರು ಮತ್ತು ಸಿಬ್ಬಂದಿ ವರ್ಗಕ್ಕೆ ಪ್ರಕಾಶನವು ಅಭಾರಿಯಾಗಿದೆ. ಕೊಂಡು ಓದುವ ಮೂಲಕ ಹಾಗೂ ಪರಿಚಿತರಿಗೆ ಕಾಣಿಕೆಯಾಗಿ ಪುಸ್ತಕಗಳನ್ನು ನೀಡುವ ಮೂಲಕ ಓದುವ ವಲಯ ಸೃಷ್ಟಿಸುತ್ತಿರುವ ಎಲ್ಲ ಓದುಗ ಬಂಧುಗಳಿಗೂ ನಾವು ಋಣಿಯಾಗಿದ್ದೇವೆ.


Tuesday, March 21, 2017

ಹೋರಾಟದ ಮೇಲ್ಪಂಕ್ತಿ ಹಾಕಿಕೊಟ್ಟ ಮಾರುತಿ ಸುಜುಕಿ ಕಾರ್ಮಿಕರು


Image result for ಶಿವಸುಂದರ್


 ಅನುಶಿವಸುಂದರ್

Image result for suzuki labour movement


ಮಾರುತಿ ಸುಜುಕಿ ಕಾರ್ಮಿಕರು ದಮನಕಾರಿ ಆಡಳಿತ ವರ್ಗ ಮತ್ತು ಅವರೊಂದಿಗೆ ಕೈಜೋಡಿಸಿದ ಪ್ರಭುತ್ವವನ್ನು ವೀರೋಚಿತವಾಗಿ ಎದುರಿಸಿದ್ದಾರೆ.

ಗುತ್ತಿಗೆ ಕಾರ್ಮಿಕರ ನೇಮಕಾತಿ ವಿಷಯದಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್)  ಕಾರ್ಮಿಕರು ಮತ್ತು ಮೇಲುಸ್ತುವಾರಿ ಸೂಪರ್ವೈಸರ್ ಒಬ್ಬರ ನಡುವೆ ನಡೆದ ಘರ್ಷಣೆ ಮತ್ತು ಘರ್ಷಣೆಯಲ್ಲಿ ೨೦೧೨ರಲ್ಲಿ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಜನರಲ್ ಮ್ಯಾನೇಜರ್ ಒಬ್ಬರು ಸಾವನ್ನಪ್ಪಿದ ಪ್ರಕರಣ ಕೋರ್ಟಿನ ಮೆಟ್ಟಿಲನ್ನೇರಿದ್ದು ದೇಶದೆಲ್ಲೆಡೆ ಸುದ್ದಿಯಾಗಿತ್ತು. ಆದರೆ ಎಲ್ಲರ ಗಮನವು ಘರ್ಷಣೆ ಮತ್ತು ಕೋರ್ಟು ಕೇಸಿನ ಮೇಲೆ ಮಾತ್ರ ಕೇಂದ್ರೀಕೃತವಾಗಿದ್ದರಿಂದ ಕಾರ್ಮಿಕರು ಎಂಥಾ ಶೋಚನೀಯ ಪರಿಸ್ಥಿತಿಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದಾರೆಂಬ ವಾಸ್ತವ ಸಂಗತಿಗಳ ಮೇಲೆ ಮತ್ತು ಅವರು ಯೂನಿಯನ್ ಕಟ್ಟಿಕೊಳ್ಳುವ ಮೂಲಭೂತ ಹಕ್ಕಿಗಾಗಿಯೂ ಹೋರಾಡಲೇಬೇಕಾದ ಪರಿಸ್ಥಿತಿ ಇತ್ತೆಂಬ ಮೂಲಭೂತ ವಿಷಯಗಳ ಮೇಲೆ ಸಮಾಜದ ಗಮನ ಹರಿಯಲೇ ಇಲ್ಲ. ಇದೇ ಮಾರ್ಚ್ ೧೦ರಂದು ಗುರ್ಗಾಂನ  ಜಿಲ್ಲಾ ಕೋರ್ಟೊಂದು ದೇಶದ ಅತಿ ದೊಡ್ಡ ಕಾರು ಉತ್ಪಾದಕನಾದ ಮಾರುತಿ ಸುಜುಕಿಯ ೧೧೭ ಕಾರ್ಮಿಕರನ್ನು ದೋಷಮುಕ್ತರನ್ನಾಗಿ ಖುಲಾಸೆ ಮಾಡಿತು. ಉಳಿದ ೩೧ ಜನ ಕಾರ್ಮಿಕರನ್ನು ಕೊಲೆ, ಕೊಲೆ ಪ್ರಯತ್ನ, ದೊಂಬಿ, ಖಾಸಗಿ ಆಸ್ತಿಗೆ ಹಾನಿ ಇತ್ಯಾದಿ ಆರೋಪಗಳಡಿ ಶಿಕ್ಷೆಗೆ ಗುರಿಪಡಿಸಿತು. ಲೇಖನವು ಅಚ್ಚಿಗೆ ಹೋಗುವ ವೇಳೆಗೆ ಶಿಕ್ಷೆಯ ಪ್ರಮಾಣವನ್ನು ಮಾರ್ಚ್ ೧೮ರಂದು ಘೊಷಿಸಲಾಗುವುದೆಂದು ತಿಳಿದುಬಂದಿದೆ. ಅತ್ಯಂತ ಬಲಿಷ್ಠ ಬಹುರಾಷ್ಟ್ರೀಯ ಕಂಪನಿ ಮತ್ತು ಅದರ ಜೊತೆಗೆ ಯಾವುದೇ ಮುಚ್ಚುಮರೆಯಿಲ್ಲದೆ ಬಹಿರಂಗವಾಗಿ ಕೈಜೋಡಿಸಿದ ಪ್ರಭುತ್ವದ ವಿರುದ್ಧ ಅತ್ಯಂತ ಕಷ್ಟದ ಸಮಯದಲ್ಲೂ ವೀರೋಚಿತವಾಗಿ ಹೋರಾಟವನ್ನು ಮುನ್ನಡೆಸಿದ್ದ ಮಾರುತಿ ಸುಜುಕಿ ಕಾರ್ಮಿಕರ ಸಂಘಟನೆ (ಎಂಎಸ್ಡಬ್ಲ್ಯೂಯು) ಇಡೀ ನಾಯಕತ್ವ ಇದೀಗ ಶಿಕ್ಷೆಗೆ ಗುರಿಯಾಗಿದೆ.

Image result for suzuki labour movement

ಘರ್ಷಣೆಯ ಇತಿಹಾಸ ೨೦೧೧ರಿಂದ ಪ್ರಾರಂಭವಾಗುತ್ತದೆ. ಆಗ ಮಾರುತಿ ಸುಜುಕಿ ಕಾರ್ಮಿಕರು ಕಾರ್ಮಿಕ ಸಂಘಟನೆ ಮಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಾ ಸತತ ದಮನಕ್ಕೆ ಗುರಿಯಾಗುತ್ತಿದ್ದರು. ಕೆಲಸದಿಂದ ವಜಾ ಆಗುತ್ತಿದ್ದರು. ಅವರನ್ನು ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಾರ್ಮಿಕರನ್ನಾಗಿ ಕಾಣದೆ ಕಂಪನಿಯನ್ನು ಹಾಳುಮಾಡಲು ಪಣತೊಟ್ಟಿರುವ ಶತ್ರುಗಳೆಂಬಂತೆ ಕಾಣಲಾಗುತ್ತಿತ್ತು. ತಾವು ಕೆಲಸ ಮಾಡುತ್ತಿದ್ದ ಹೀನಾಯ ಪರಿಸ್ಥಿತಿಗಳ ವಿರುದ್ಧ ಅದೇ ವರ್ಷ ಕಾರ್ಮಿಕರು ಮೂರು ಮುಷ್ಕರಗಳನ್ನು ಮಾಡಿದ್ದರು. ಆದರೆ ಆಡಳಿತ ವರ್ಗವು ಯಾವುದೇ ಸಂಧಾನ ಮಾತುಕತೆ ನಡೆಸುವ ಮೊದಲು ಕಾರ್ಮಿಕ ಸಂಘಟನೆಯುಕಾರ್ಮಿಕ ಕಲ್ಯಾಣ ಮತ್ತು ಕುಂದುಕೊರತೆ ನಿವಾರಣಾ ಸಮಿತಿಯನ್ನು ರಚಿಸಿಕೊಳ್ಳಬೇಕೆಂದು ಶರತ್ತು ಹಾಕಿತ್ತು. ಕ್ರಮವು ಒಂದು ಕಾರ್ಮಿಕ ಸಂಘಟನೆಯ ನೈಜ ಸ್ವರೂಪವನ್ನು ದುಬಲಗೊಳಿಸುವ ಹುನ್ನಾರವೆಂದು ಕಾರ್ಮಿಕರು ಪರಿಗಣಿಸಿದ್ದರು. ಅಷ್ಟು ಮಾತ್ರವಲ್ಲದೆ ಕಾರ್ಮಿಕ ನಾಯಕರ ಮೇಲೆ ಆಡಳಿತ ವರ್ಗವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲು ಪ್ರಾರಂಭಿಸಿದರು. ಕಾರ್ಖಾನೆಯು ಪ್ರತಿ ೫೦ ಸೆಕೆಂಡಿಗೆ ಒಂದು ಹೊಸ ಕಾರನ್ನು ಉತ್ಪಾದಿಸುತ್ತಿತ್ತು; ಖಾಯಂ ಕೆಲಸಗಾರರಿಗೆ ಹೋಲಿಸಿದಲ್ಲಿ ಗುತ್ತಿಗೆ ಕಾರ್ಮಿಕರಿಗೆ ಅತ್ಯಂತ ಕಡಿಮೆ ಸಂಬಳವನ್ನು ನೀಡಲಾಗುತ್ತಿತ್ತು (ಇವರನ್ನು ಖಾಯಂಗೊಳಿಸುವುದು ಮಾರುತಿ ಸುಜುಕಿ ಕಾರ್ಮಿಕ ಸಂಘಟನೆಯ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.); ಎಲ್ಲಾ ಕಾರ್ಮಿಕರು ಎಂಥದೇ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿಯಲ್ಲಿದ್ದರೂ ಉತ್ಪಾದನಾ ಗುರಿಗಳನ್ನು ಮುಟ್ಟಲೇಬೇಕಿತ್ತು; ಮತ್ತು ಪ್ರಭುತ್ವವು ತೋರಿಕೆಗೂ ಸಹ ಒಂದು ನಿಷ್ಪಕ್ಷಪಾತಿ ಮಧ್ಯಸ್ತಿಕೆದಾರನ ಪಾತ್ರ ವಹಿಸಲೇ ಇಲ್ಲ. ಸ್ಥಳೀಯ ಪೊಲೀಸರಂತೂ ಬಹಿರಂಗವಾಗಿಯೇ ಆಡಳಿತವರ್ಗದ ಪರ ವಹಿಸಿದ್ದರು
ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯುದ್ದಕ್ಕೂ ಕಾರ್ಮಿಕರ ಪರ ವಕೀಲರು ಹೇಗೆ ೨೦೧೨ರ ಜುಲೈ ೧೮ರ ಘರ್ಷಣೆಯ ಪ್ರಕರಣದಲ್ಲಿ ನಡೆದಿರುವ ಆರೋಪಿಗಳ ಪತ್ತೆ ಹಚ್ಚುವ ವಿಧಿ ವಿಧಾನಗಳು ದೋಷಪೂರಿತವಾಗಿವೆ ಮತ್ತು ಪ್ರಮಾದಗಳಿಂದ ಕೂಡಿವೆ ಎಂಬುದನ್ನೂ, ಹೇಗೆ ಶಸ್ತಾಸ್ತ್ರಗಳನ್ನು ತಮ್ಮ ಕಕ್ಷಿದಾರರ ಸುಫರ್ದಿಯಲ್ಲಿದ್ದಂತೆ ತೋರಿಸಲು ಕುತಂತ್ರದಿಂದ  ತಂದಿರಿಸಲಾಗುತ್ತಿದೆಯೆಂದೂ, ಪೊಲೀಸರು ಹೇಗೆ ಸಾಕ್ಷಿಗಳನ್ನು ಸೃಷ್ಟಿಸುತ್ತಿದ್ದಾರೆಂಬುದನ್ನೂ, ಮತ್ತು ತನಿಖಾಧಿಕಾರಿಯೂ ಯಾವುದೇ ಪೂರಕ ಸಾಕ್ಷ್ಯಗಳಿಲ್ಲದಿದ್ದರೂ  ಕೇವಲ ಮೌಖಿಕ ಹೇಳಿಕೆಯನ್ನು ಆಧರಿಸಿ ದೋಷಾರೋಪ ಮಾಡುತ್ತಿದ್ದಾರೆಂಬುದನ್ನೂ ಸಮರ್ಥವಾಗಿ ನಿರೂಪಿಸುತ್ತಾ ಹೋದರು. ಇಲ್ಲಿ ಗಮನಿಸತಕ್ಕ ವಿಷಯವೆಂದರೆ ೨೦೧೩ರಲ್ಲಿ  ನ್ಯಾಯಾಂಗ ಬಂಧನದಲ್ಲಿದ್ದ ಕಾರ್ಮಿಕರ ಜಾಮೀನು ಅಹವಾಲನ್ನು ತಿರಸ್ಕರಿಸುತ್ತಾ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಬಗೆಯಲ್ಲಿ ಕಾರ್ಮಿಕ ಅಶಾಂತಿ ಪಸರಿಸಿದರೆ ವಿದೇಶಿಯರು ಬಂಡವಾಳ ಹೂಡಲು ಹಿಂದೆ ಸರಿಯಬಹುದೆಂದು ಬಹಿರಂಗವಾಗಿ ಟಿಪ್ಪಣಿ ಮಾಡಿತ್ತು. ಇದಕ್ಕಿಂತ ಹೆಚ್ಚಿನ ಉಲ್ಲೇಖಾರ್ಹ ಅಂಶವೊಂದಿದೆಕಾರ್ಮಿಕ ಸಂಘmನೆಯನ್ನು ಮಾಡಿಕೊಳ್ಳಲು ಅವಕಾಶ ಕೊಡಬೇಕೆಂಬ ಕಾರ್ಮಿಕರ ಬೇಡಿಕೆಗೆ ಪ್ರತಿಕ್ರಿಯಿಸುತ್ತಾ ಕಂಪನಿಯ ಅಧ್ಯಕ್ಷರು ಕಾರ್ಮಿಕರು ಯಾವ ಗಣನಾರ್ಹ ಬೇಡಿಕೆಯನ್ನೂ ಮುಂದಿಟ್ಟಿಲ್ಲವೆಂದೂ ಯಾವುದೇ ಬಗೆಯ ರಾಜಿ ಸಂಧಾನ ಸಾಧ್ಯವಿಲ್ಲವೆಂದು ಘೊಷಿಸಿದರು.
ಮಾರುತಿ ಕಾರ್ಮಿಕರ ಸಂಘಟನೆಯ ಹೋರಾಟ ದೇಶದೆಲ್ಲೆಡೆ ಕಾರ್ಮಿಕ ಹೋರಾಟಗಳು ಇಳಿಮುಖದಲ್ಲಿದ್ದಾಗ ಸಂಭವಿಸಿದ್ದು ಅತ್ಯಂತ ಮಹತ್ವದ್ದಾಗಿದೆ. ಬೇರೆಲ್ಲಾ ಸರ್ಕಾರಗಳಿಗಿಂತ ಈಗಿನ ಎನ್ಡಿಎ ಸರ್ಕಾರವು ಪ್ರಮುಖ ಕಾರ್ಮಿಕ ಸುಧಾರಣೆಗಳನ್ನು ತರುವ ಮೂಲಕ ಹೆಚ್ಚೆಚ್ಚು ವಿದೇಶಿ ಬಂಡವಾಳವನ್ನು ಆಕರ್ಷಿಸಲು ತನ್ನೆಲ್ಲಾ ಗಮನವನ್ನು ಕೇಂದ್ರೀಕರಿಸಿರುವ ಹಿನ್ನೆಲೆಯಲ್ಲೂ ಹೋರಾಟ ಮತ್ತಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಭಾರತದ ಕೈಗಾರಿಕೋದ್ಯಮಿಗಳು ಸಹ ಭಾರತದ ಕಾರ್ಮಿಕ ಕಾನೂನುಗಳಿಂದಾಗಿಯೇ ಭಾರತ ಹೆಚ್ಚು ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲವೆಂದು ಆರೋಪಿಸುತ್ತಾರೆ. ಆದರೆ ವಾಸ್ತವವೆಂದರೆ ಉದ್ಯಮಿಗಳು ಕಾರ್ಮಿಕ ಕಾನೂನನ್ನು ಪಾಲನೆ ಮಾಡುವುದಕ್ಕಿಂತ ಉಲ್ಲಂಘನೆ ಮಾಡುವುದೇ ಹೆಚ್ಚು. ಹೀಗಾಗಿಯೇ ಉದ್ಯೋಗಗಳಲ್ಲಿ ಗುತ್ತಿಗೆ ಕಾರ್ಮಿಕರ ಸಂಖ್ಯೆಯೇ ಪ್ರಧಾನವಾದ ಬಗೆಯಾಗುತ್ತಾ ಹೋಗುತ್ತಿದೆ. ಸರ್ಕಾರದ ಮತ್ತು ಕೈಗಾರಿಕೋದ್ಯಮಿಗಳ ಧೋರಣೆಯ ಕಾರಣದಿಂದಾಗಿಯೂ ಎಂಎಸ್ಐಎಲ್ ಕಾರ್ಮಿಕರ ಹೋರಾಟವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.
ನ್ಯಾಯಯುತವಾದ ಕೆಲಸದ ಅವಧಿಯನ್ನು ಮತ್ತು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಕೇಳುವ ಕಾರ್ಮಿಕರ ಬೇಡಿಕೆಗಳ ಮೇಲೆ  ವಿದೇಶೀ ಹೂಡಿಕೆಯನ್ನು ಹಿಮ್ಮೆಟ್ಟಿಸುತ್ತಿರುವ ಆರೋಪವನ್ನು ಹೊರಿಸಲು ಸಾಧ್ಯವಿಲ್ಲ. ಹೀಗಿದ್ದರೂ ಸುಧಾರಣೆ ಆಧಾರಿತ ಕಾರ್ಮಿಕ ಕಾನೂನಿನ ತಿದ್ದುಪಡಿಗಳೆಲ್ಲವೂ ಕಾರ್ಮಿಕರ ಹಕ್ಕುಗಳನ್ನು ಮತ್ತು ಕಾರ್ಮಿಕ ಕಲ್ಯಾಣ ಕ್ರಮಗಳನ್ನು ಕಡಿತಗೊಳಿಸುವ ಉದ್ದೇಶವನ್ನೇ ಹೊಂದಿವೆ. ಇದರ ಅರ್ಥ ಬದಲಾಗುತ್ತಿರುವ ಸಂದರ್ಭ ಮತ್ತು ಪ್ರಕ್ರಿಯೆಗಳಿಗೆ ತಕ್ಕ ಹಾಗೆ ಕಾರ್ಮಿಕ ಕಾನೂನುಗಳಲ್ಲಿ ತಿದ್ದುಪಡಿ ಬರಬಾರದೆಂಬುದಲ್ಲ. ಆದರೆ ಸುರಳೀತ ಉತ್ಪಾದನಾ ಪ್ರಕ್ರಿಯೆಯ ಹೊರೆಯನ್ನು ಅಸಂಘಟಿvರಾದ, ಅವಧಿಗಿಂತ ಹೆಚ್ಚು ದುಡಿಯು ಆದರೆ ಎಲ್ಲರಿಗಿಂತ ಕಡಿಮೆ ಪ್ರತಿಫಲ ಪಡೆಯುವ ಕಾರ್ಮಿಕರ ಮೇಲೆ ಹೊರಿಸುವುದನ್ನು ಒಪ್ಪಲಾಗದು. ಇತ್ತೀಚೆಗೆ ಬ್ಲೂಮ್ಬರ್ಗ್ ಎಂಬ ಪತ್ರಿಕೆಯೊಂದು ವರದಿ ಮಾಡಿದಂತೆ ಮಾರುತಿ ಕಂಪನಿಯಲ್ಲಿ ೨೦೧೩-೧೪ರಲ್ಲಿ ೬೫೭೮ ಗುತ್ತಿಗೆ ಕಾರ್ಮಿಕರಿದ್ದರು. ಆದರೆ ಅವರ ಸಂಖ್ಯೆ ೨೦೧೬ರಲ್ಲಿ ೧೦,೬೨೬ಕ್ಕೆ ಏರಿತ್ತು. ಈಗಾಗಲೇ ಎಲ್ಲಾ ಕಡೆಯಿಂದಲೂ ದಾಳಿಗೆ ಗುರಿಯಾಗಿ ನಿತ್ರಾಣವಾಗಿರುವ ಭಾರತದ ಕಾರ್ಮಿಕ ಸಂಘಟನೆಗಳು, ವಿದ್ಯಮಾನಗಳನ್ನು, ಅತ್ಯಗತ್ಯವಾಗಿ  ಎದುರಿಸಲೇ ಬೇಕಾಗಿದೆ.
ಕಾರ್ಮಿಕರು ಎದುರಿಸುತ್ತಲೇ ಇರುವ ಅನ್ಯಾಯದ ಇತಿಹಾಸಕ್ಕೆ ಸೇರುತ್ತಿರುವ ಮತ್ತೊಂದು ಸಂಗತಿಯೆಂದರೆ ನಿರಪರಾಧಿಗಳಾಗಿದ್ದರೂ ವರ್ಷ ಜೈಲಲ್ಲಿ ಕೊಳೆಯಬೇಕಾಗಿ ಬಂದ ೧೧೭ ದೋಷಮುಕ್ತ ಕಾರ್ಮಿಕರ ಹಕ್ಕುಗಳ ಉಲ್ಲಂಘನೆಯ ಪ್ರಶ್ನೆ. ಅವರ ಮೇಲೆ ಹೊರಿಸಲಾಗಿದ್ದ ಯಾವೊಂದು ಅಪರಾಧವೂ ಸಾಬೀತಾಗಲಿಲ್ಲ. ಸತ್ಯವೇ  ತಮಗೆ ಚಿತ್ರಹಿಂಸೆ ನೀಡಲೆಂದೇ ಸುಳ್ಳು ಮೊಕದ್ದಮೆಯನ್ನು ಹೂಡಲಾಯಿತೆಂಬ ಕಾರ್ಮಿಕರ ಪ್ರತಿಪಾದನೆಗೆ ಪುಷ್ಟಿಯನ್ನು ಒದಗಿಸುತ್ತದೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಅಲ್ಲಲ್ಲಿ ಕೆಲವು ಅಲ್ಪ ಸ್ವಲ್ಪ ಏರಿಳಿತಗಳಿದ್ದರೂ, ೨೦೧೧ರ ನಂತರದಲ್ಲಿ ಅದರಲ್ಲೂ ವಿಶೇಷವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಮಾರುತಿ ಸುಜುಕಿ ಕಾರ್ಮಿಕ ಸಂಘಟನೆಯ ನೇತ್ರೂತ್ವದಲ್ಲಿ ಎಲ್ಲಾ ಕಾರ್ಮಿಕರು ಅಭೂತಪೂರ್ವ ಐಕ್ಯತೆ ಮತ್ತು ಸೋದರತ್ವನ್ನು ತೋರಿದ್ದಾರೆ. ಅಷ್ಟು ಮಾತ್ರವಲ್ಲ ಪ್ರತಿಕೂಲ ಸಂದರ್ಭದಲ್ಲೂ ಓಕ್ಲಾ-ಫರೀದಾಬಾದ್-ನೋಯಿಡಾ-ಗುರ್ಗಾಂ-ಮನೇಸರ್ ಕೈಗಾರಿಕಾ ಪ್ರಾಂತ್ಯದ ಇತರ ಕಾರ್ಮಿಕರನ್ನು ಮಾತ್ರವಲ್ಲದೆ ಸುತ್ತಮುತ್ತಲಿನ ಬಹುಪಾಲು ಗ್ರಾಮಸ್ಥರನ್ನೂ, ನಾಗರಿಕ ಸಮಾಜದ ಸಂಘಟನೆಗಳನ್ನೂ ಮಾಧ್ಯಮದಲ್ಲಿರುವ ಹಿತೈಷಿಗಳನ್ನೂ ತಲುಪಿ ಒಂದು ಪ್ರಬಲವಾದ ನೆರವಿನ ಜಾಲವನ್ನು ಕಟ್ಟಿಕೊಳ್ಳುವ ಅಸಾಧಾರಣ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಮಾರುತಿ ಸುಜುಕಿ ಕಾರ್ಮಿಕ ಸಂಘಟನೆಯ ಸ್ಪೂರ್ತಿದಾಯಕ ಹೋರಾಟಗಳು ಮತ್ತು ಇತರ ವರ್ಗಗಳಿಗೂ ತಲುಪಿದ ಅವರ ಸಾಮರ್ಥ್ಯವು ಸ್ಪಷ್ಟ ಕಣ್ಣೋಟವುಳ್ಳ ಒಂದು ಕಾರ್ಮಿಕ ಐಕ್ಯತೆ ಏನನ್ನು ಸಾಧಿಸಬಹುದೆಂಬುದಕ್ಕೆ ನಿದರ್ಶನವಾಗಿದೆ. ಬರಲಿರುವ ದಿನಗಳಲ್ಲಿ ಪ್ರಭುತ್ವ ಮತ್ತು ಕೈಗಾರಿಕೋದ್ಯಮಿಗಳು ಹಿಂದಿಗಿಂತಲೂ ಹೆಚ್ಚಿನ ರೀತಿಯಲ್ಲಿ ಜೊತೆಗೂಡಿ ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ ಮಾಡುವುದು ಸ್ಪಷ್ಟವಾಗಿರುವಾಗ ಮಾರುತು ಸುಜುಕಿ ಕಾರ್ಮಿಕ ಸಂಘಟನೆಯು ಭವಿಷ್ಯದ ಸಂಘರ್ಷಕ್ಕೆ ಮಾದರಿಯೊಂದನ್ನು ಒದಗಿಸಿದೆ.
                                                                                     ಕೃಪೆ: Economic and Political Weekly
                                                                                March 18, 2017. Vol.52. No.11


                                                                                                                                 

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...