Sunday, January 22, 2017

ನಮ್ಮ ಕಡೆ ಹುಡುಗರು


ಪರ್ಯಾಯ ಮಾಧ್ಯಮಗಳುImage result for ರಾಜೇಂದ್ರ ಚೆನ್ನಿ

ರಾಜೇಂದ್ರ ಚೆನ್ನಿ


ದಕ್ಷಿಣಾಯಣದ ಕೆಲವರು ಹೀಗೇ ಮಾತನಾಡುತ್ತಾ ಪರ್ಯಾಯ ಮಾಧ್ಯಮಗಳ ಬಗ್ಗೆ ಮುಖ್ಯವಾಗಿ ಅನ್ನಿಸಿದ್ದು ಹೀಗೆ:
೧.
ಇಂದು ಮಾಧ್ಯಮಗಳು ನಮ್ಮ ಆಲೋಚನೆ, ಬದುಕು, ರಾಜಕೀಯ ಇವುಗಳನ್ನು ರೂಪಿಸುತ್ತಿವೆಯೆನ್ನುವುದು ವಾಸ್ತವ ಸಂಗತಿ. ಹೀಗೆ ಹೇಳುವಾಗ ಅದೊಂದು ವಸ್ತುನಿಷ್ಠ ಹೇಳಿಕೆಯೆ ಹೊರತು, ಅದು ಮಾಧ್ಯಮಗಳ ಉಗ್ರ ಅವಹೇಳನವೂ ಅಲ್ಲ; ಅವುಗಳಿಂದ ಪ್ರಭಾವಿತರಾಗುವ ಜನರ ಬಗ್ಗೆ ತಿರಸ್ಕಾರದ ಭಾವನೆಯಾಗಲಿಲ್ಲ. ಮಾಧ್ಯಮಗಳೊಂದಿಗೆ ಬದುಕುವುದು ಹಾಗೂ ನಿರ್ವಹಿಸುವುದು ಅನಿವಾರ್ಯ. ಈ ಸ್ಥಿತಿಗೆ ಪರ್ಯಾಯವಿಲ್ಲ. ಮಾಧ್ಯಮ ತಂತ್ರಜ್ಞಾನಗಳ್ನು ಬಳಸುವುದು ಅವಶ್ಯಕ ಹಾಗೂ ಸೃಜನಶೀಲವೂ ಹೌದು.
೨. ನಮ್ಮ ಸದ್ಯದ ಸಮಸ್ಯೆಯೆಂದರೆ ಅ) ಪ್ರಭಾವಿಯಾದ ಟಿ.ವಿ. ವಾಹಿನಿಗಳು/ ಸಂಸ್ಥೆಗಳು ಕಾರ್ಪೊರೇಟ್ ಬಂಡವಾಳಶಾಹಿಗಳ ಒಡೆತನದಲ್ಲಿವೆ. ಅಲ್ಲದೆ ಅವು ರಾಜಕೀಯ ಪಕ್ಷಗಳ ಜೊತೆಗೆ ಅನೇಕ ಸ್ತರಗಳಲ್ಲಿ ಸಹಭಾಗಿಗಳಾಗಿವೆ. ಹೀಗಾಗಿ ಅವುಗಳು ವೈರುಧ್ಯಗಳಿಂದ ಕೂಡಿವೆ. ತಮ್ಮ ವಸ್ತುನಿಷ್ಠತೆ, ಪಾರದರ್ಶಕತೆ, ಪ್ರಜಾಪ್ರಭುತ್ವವಾದಿ ಧೋರಣೆ ಹಾಗೂ ಶೈಲಿಗಳ ಬಗ್ಗೆ ತಮ್ಮನ್ನು ಸಮರ್ಥಿಸಿಕೊಳ್ಳಲೇಬೇಕಾದ ಸ್ಥಿತಿಯಲ್ಲಿವೆ. ಅದೇ ಹೊತ್ತಿಗೆ ಸೂಕ್ಷ್ಮವಾಗಿ ಮತ್ತು ಒರಟಾಗಿ ಕೂಡ ಅವು ಕೆಲವು ರಾಜಕೀಯ ಸಿದ್ಧಾಂತಗಳಿಗೆ ಅನುಕೂಲವಾಗುವ ಸಾಂಸ್ಕೃತಿಕ ರಾಜಕಾರಣವನ್ನು ಮಾಡುತ್ತಲಿವೆ. ಇದನ್ನು ಮುದ್ರಿತ ಪತ್ರಿಕೋದ್ಯಮದ ಬಗ್ಗೆಯೂ ಹೇಳಬಹುದು. ಇತ್ತೀಚೆಗೆ ಗೋವಾದಲ್ಲಿ ನಡೆದ ಚರ್ಚೆಯಲ್ಲಿ ಸಾಗರಿಕಾ ಘೋಶ್ ಅವರು ನಿಖಿಲ್ ವಾಗಳೆಯವರೊಂದಿಗೆ ದನಿಗೂಡಿಸಿ “Don’t trust the Big media” ಎನ್ನುವುದನ್ನು ಈ ಕಾರಣಗಳಿಗಾಗಿಯೇ ಹೇಳಿದರು. ಈ big media ಜೊತೆಗೆ ಅದು ಅನುಸರಿಸುವ ಬಂಡವಾಳಶಾಹಿ ಮಾರ್ಗದಲ್ಲಿ ಅದರೊಂದಿಗೆ ಸ್ಪರ್ಧೆ ಮಾಡುವುದು ಅಸಾಧ್ಯ.
೩.
Big media , ಅಲ್ಲಲ್ಲಿ ಪ್ರಜಾಪ್ರಭುತ್ವವಾದಿ space ಗಳನ್ನು ಇಟ್ಟುಕೊಂಡಿಲ್ಲವೆಂದಲ್ಲ, ಆದರೆ ಅವುಗಳ ಸಮಗ್ರ ರಚನೆ ಹಾಗೂ ಸ್ವರೂಪಗಳು ಅವುಗಳನ್ನು ನಿಷ್ಕ್ರಿಯಗೊಳಿಸುತ್ತವೆ.
೪.
ಇಂದಿನ ರಾಜಕೀಯದ ಆಕ್ರಾಮಕ ಸ್ವರೂಪವು ನಮ್ಮ ಮಾಧ್ಯಮಗಳಿಗೆ ಮಾದರಿಯಾಗಿ, ಅವುಗಳನ್ನು ಅನೇಕ ಅಂಶಗಳಲ್ಲಿ (ಉದಾಹರಣೆಗೆ Anchor politics ನಲ್ಲಿ) ಪುನರುಚ್ಚಾರವಾಗುತ್ತಿದೆ.
೫.
ಸಾಮಾಜಿಕ ತಾಣಗಳು, ಮಾಧ್ಯಮಗಳು ಸೈದ್ಧಾಂತಿಕವಾಗಿ ನೋಡಿದರೆ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯನ್ನು ಅಭಿವ್ಯಕ್ತಿಯಲ್ಲಿ ಬೆಂಬಲಿಸಬೇಕು. ಆದರೆ ವಸ್ತುಸ್ಥಿತಿಯೆಂದರೆ social media ನಲ್ಲಿ ಕೂಡ ಸಾಂಸ್ಕೃತಿಕ ಉಗ್ರರ ಹಾವಳಿಯಿಂದಾಗಿ ಈ ಯಾವ ಲಕ್ಷಣಗಳೂ ಉಳಿಯುವುದು ಕಷ್ಟವಾಗುತ್ತಿದೆ. ಮುಜುಗರ, ಅವಮಾನ, trolling ಇವುಗಳಿಂದ ಅವು ಅಧೋಗತಿಗೆ ಹೋಗುತ್ತಿದೆ.
೬. ಆದರೆ ನಮ್ಮ ಮಾಧ್ಯಮ ಪರಿಣಿತ ಯುವಜನಾಂಗವೊಂದು ಅಭಿಪ್ರಾಯ ರೂಪಿಸುವಲ್ಲಿ, ಪ್ರತಿಭಟನೆ ಕಟ್ಟುವುದರಲ್ಲಿ ಮಾಧ್ಯಮಗಳನ್ನು ಬಳಸುವ ಸಾಧ್ಯತೆಗಳನ್ನು ತೋರಿಸಿಕೊಟ್ಟಿದೆ. ಈಗ ಪ್ರಶ್ನೆ ಇರುವುದೆಂದರೆ ಪರ್ಯಾಯ ಮಾಧ್ಯಮ ಸಾಧ್ಯತೆಗಳಿಗೆ ಒಂದು ಖಚಿತವಾದ ರೂಪಕೊಟ್ಟು ಅದಕ್ಕೆ ಒಂದು ಸಾಂಘಿಕ ಸ್ವರೂಪವನ್ನು ಕೊಡುವುದು ಹೇಗೆ ಎನ್ನುವುದು. ದಕ್ಷಿಣಾಯಣದ ನಮ್ಮ ರಾಜಕೀಯ ನಿಲುವು ಸ್ಪಷ್ಟವಾಗಿದೆ. ಪ್ರಜಾಪ್ರಭುತ್ವದ ಪರವಾಗಿ ಹಾಗೂ ಫ್ಯಾಸಿಜಿಮನ್ ವಿರುದ್ಧವಾಗಿ ಈ ಪರ್ಯಾಯ ಮಾಧ್ಯಮಗಳು ನಮಗೆ ಬೇಕಿವೆ.
೭. ಆದರೆ ಇದು ಸಿದ್ಧಾಂತಿಗಳು, ಕೇವಲ activist ಗಳು ಮಾಡುವ ಕೆಲಸ ಅಲ್ಲವೇ ಅಲ್ಲ. ಇದು ನಮ್ಮ ಪ್ರತಿಭಾವಂತ ಯುವ ಬರಹಗಾರರು, ಕವಿಗಳು, ವ್ಯಂಗ್ಯಚಿತ್ರಕಾರರು, visual culture ನ ಸೃಜನಶೀಲರು, ಸಾಕ್ಷಿಚಿತ್ರ, ಚಿತ್ರಗಳ ನಿರ್ಮಾಪಕರು, ನಿರ್ದೇಶಕರು, ಪತ್ರಕರ್ತರು ಮಾಡಬೇಕಿದೆ. ಇದು ಸೃಜನಶೀಲ ಮನಸ್ಸುಗಳ ಕ್ಷೇತ್ರ ಬೆಂಬಲಕ್ಕಾಗಿ ಪರಿಣಿತರು, ವಿದ್ವಾಂಸರು ಇದ್ದೇ ಇರುತ್ತಾರೆ.
೮. ಅದಕ್ಕಾಗಿ ಫೆಬ್ರುವರಿ ೧೮, ೧೯ ರಂದು ಧಾರವಾಡದಲ್ಲಿ ಎರಡು ದಿನದ ಸಹಚರ್ಚೆಯನ್ನು ಏರ್ಪಡಿಸುತ್ತಿದ್ದೇವೆ. ದಿನೇಶ್ ಅಮೀನ್ ಮಟ್ಟು ಇದಕ್ಕೆ ಚಾಲನೆ ಕೊಡುತ್ತಾರೆ. ಗಣೇಶ್ ದೇವಿ, ದೇವನೂರು ಮಹಾದೇವ ಜೊತೆಗಿರುತ್ತಾರೆ. ಅಂದ ಹಾಗೆ ಚಟುವಟಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಇರುವುದಿಲ್ಲ. ಭಾಷಣಗಳೂ ಇರುವುದಿಲ್ಲ. ಇದು ಶುರುವಾಗುವುದು brain storming ಗೋಷ್ಠಿಯಿಂದ. ಅದರಲ್ಲಿಯೇ ಎರಡು ದಿನಗಳಲ್ಲಿ ಮಾಡಬಹುದಾದ ಚರ್ಚೆಯ ಕಾರ್ಯಸೂಚಿ ಸಿದ್ಧಮಾಡುವುದು, ಚರ್ಚೆಯ ಸ್ವರೂಪವನ್ನೂ ನಿರ್ಧರಿಸುವುದು.
೯. ನಮ್ಮ ಉದ್ದೇಶ ಗಂಭೀರವಾಗಿಯೇ ಇದೆ. ಇಂದು ಜನಸಮುದಾಯಗಳು ಬದುಕುಳಿಯಬೇಕಾದರೆ ಒಳ್ಳೆಯ cultural politics ನಿಂದ ಒಳ್ಳೆಯ ರಾಜಕೀಯ ಕ್ರಿಯೆಗಳು ರೂಪುಗೊಳ್ಳಲೇಬೇಕು. ಇದನ್ನು ಸೃಜನಶೀಲ ಮನಸ್ಸುಗಳು ಮಾಡಲೇಬೇಕು. ಇದು ಸಾಂಘಿಕವಾಗಿ, ಸಂಘಟನಾತ್ಮಕವಾಗಿ ಆದರೆ ನೇತಾರರು ಇಲ್ಲದೇ ಚಳುವಳಿಯಾಗಿ ನಡೆಯಬೇಕು. (ಈ ಬೇಕು ಎನ್ನುವ ನಿರ್ದೇಶಕ ವಾಕ್ಯಗಳನ್ನು ತಾವು ಬದಲಾಯಿಸಿಕೊಳ್ಳಿ).
ಹೀಗಾಗಿ ನೀವು ಬನ್ನಿ. ನಿಮ್ಮ ಒಪ್ಪಿಗೆ ಅಭಿಪ್ರಾಯ ಇವುಗಳನ್ನು ತಿಳಿಸಿ- e mail, facebook, ಪತ್ರ ಇವುಗಳ ಮೂಲಕ ನೀವು ಬರೆದದ್ದು, ಈ ಮೇಲಿನ ಟಿಪ್ಪಣಿಗೆ ಸೇರುತ್ತಾ ೧೮, ೧೯ ರ ಚರ್ಚೆಗಳಿಗೆ ವಿಷಯವಾಗುತ್ತದೆ. ನಿಮ್ಮ ಪ್ರತಿಕ್ರಿಯೆ ಬಂದ ಕೂಡಲೇ ಧಾರವಾಡದಲ್ಲಿ ಕಾರ್ಯಕ್ರಮದ ಸ್ಥಳ ಇತ್ಯಾದಿ ತಿಳಿಸುತ್ತೇವೆ.

ದಕ್ಷಿಣಾಯಣ ಕರ್ನಾಟಕ : ಸಂಚಾಲಕರ ವಿನಂತಿ
Image result for ರಾಜೇಂದ್ರ ಚೆನ್ನಿ


ಭಾರತದ ಖ್ಯಾತ ಬರಹಗಾರರು ಭಾಷಾತಜ್ಞರು ಆಗಿರುವ ಗಣೇಶ್ ದೇವಿಯವರು ಮಹಾರಾಷ್ಟ್ರದ ಧಾಭೋಲ್‌ಕರ್, ಪಾನ್ಸರೆ ಹಾಗೂ ಕರ್ನಾಟಕದ ಕಲಬುರ್ಗಿಯವರ ಹತ್ಯೆಗಳ ನಂತರ ಸಾಹಿತ್ಯವಲಯದಲ್ಲಿ ನಡೆದ ಪ್ರತಿಭಟನೆಯ ಬಹುದೊಡ್ಡ ಅಭಿಯಾನದಲ್ಲಿ ಭಾಗಿಯಾಗಿ ತಮ್ಮ ಪ್ರಶಸ್ತಿಯನ್ನು ವಾಪಸ್ಸು ಮಾಡಿದರು. ತಮ್ಮ ವೃತ್ತಿ ಜೀವನದ ಅರ್ಧಭಾಗವನ್ನು ಆದಿವಾಸಿಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಕಳೆದಿರುವ ಅವರು ಸಾಹಿತ್ಯ ವಿಮರ್ಶೆಯಲ್ಲಿ ’ದೇಶೀವಾದದ’ ಪ್ರಬಲ ಸಮರ್ಥಕರು ಬರಹಗಾರ ಬುದ್ಧಿಜೀವಿಗಳ ಕೊಲೆಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ಯದ ಹಲ್ಲೆಗಳಿಂದಾಗಿ ತೀವ್ರ ಕಳವಳದಲ್ಲಿದ್ದ ಗಣೇಶ್ ದೇವಿಯವರಿಗೆ ಹೊಳೆದದ್ದೆಂದರೆ ಮರಾಠಿ, ಗುಜರಾತಿ, ಕೊಂಕಣಿ ಮತ್ತು ಇತರ ಬರಹಗಾರರ ಬಳಗವೊಂದನ್ನು ಮಾಡಿಕೊಂಡು ಅಭಿಯಾನವೊಂದನ್ನು ಆರಂಭಿಸುವುದು. ಇದಕ್ಕಾಗಿ ಅವರಿಗೆ ಹೊಳೆದದ್ದು ಒಂದು ಅದ್ಭುತವಾದ ರೂಪಕ.
ದಕ್ಷಣಾಯಣ - ಈ ಕಾಲದಲ್ಲಿ ರಾತ್ರಿಗಳು ದೀರ್ಘವಾಗಿರುತ್ತವೆ. ಹಗಲುಗಳು ಚಿಕ್ಕದಾಗಿರುತ್ತವೆ. ರಾತ್ರಿಗಳೇ ದೀರ್ಘವಾಗಿರುವ ಕಾಲದಲ್ಲಿ ಎಚ್ಚರವಾಗಿರುವುದು ಅನಿವಾರ್ಯ. ಒಬ್ಬರ ಬೆಂಬಲಕ್ಕೆ ಇನ್ನೊಬ್ಬರು ಕೈಹಿಡಿಯುವುದು ಅವಶ್ಯಕ. ಅದರಲ್ಲೂ ಬರಹಗಾರರು, ಕ್ರಿಯಾಶೀಲರು, ಚಲನಚಿತ್ರ ನಿರ್ದೇಶಕರು, ಪತ್ರಿಕೋದ್ಯಮಿಗಳು, ಚಿತ್ರಕಾರರು, ಹೀಗೆ ಸೂಕ್ಷ್ಮಮನಸ್ಸಿನವರು ಮುಖ್ಯವಾಗಿ ಸಮಾಜದೊಂದಿಗೆ ಇರುವವರು ಒಂದುಗೂಡಲೇಬೇಕಾದ ಕಾಲ. ಹೀಗೆ ಆರಂಭವಾದ ಅಭಿಯಾನ ಈಗ ಭಾರತದ ಅನೇಕ ರಾಜ್ಯಗಳ, ಅನೇಕ ಕ್ರಿಯಾಶೀಲ ವ್ಯಕ್ತಿಗಳನ್ನು ಒಂದುಗೂಡಿಸಿದೆ. ಇದು ಯಾವ ರಾಜಕೀಯ ಪಕ್ಷದ ಬಾಲಂಗೋಚಿಯೂ ಅಲ್ಲ; ಒಂದೇ ಸಿದ್ಧಾಂತದ ಬೆಂಬಲವನ್ನು ಅದು ಮಾಡುವುದಿಲ್ಲ. ಮುಖ್ಯವಾಗಿ ಪ್ರಜಾಪ್ರಭುತ್ವವನ್ನು ಒಳಗಿಂದಲೇ ನಾಶಮಾಡುವ, ಅಭಿವ್ಯಕ್ತಿ ಸ್ವಾತಂತ್ಯವನ್ನು ಹರಣಮಾಡುವ ಎಲ್ಲಾ ಪ್ರವೃತ್ತಿಗಳನ್ನು ವಿರೋಧಿಸುವ ಸಹಮನಸ್ಕರ ಚಳುವಳಿ ಇದಾಗಿದೆ. ಇದು ಸಂಘಟನೆಯಲ್ಲ. ಇದಕ್ಕೆ ಅಧಿಕೃತ ಪದಾಧಿಕಾರಿಗಳೂ ಇಲ್ಲ. ನಮ್ಮ ಕಾಲದ ಎಲ್ಲಾ ದಂಡುಗಳಿಗೆ ರಾಜಕಾರಣ ಕಾರಣವಾಗಿರುವುದರಿಂದ ರಾಜಕಾರಣದಿಂದ ದೂರವಿರುವುದು ಸಾಧ್ಯವೇ ಇಲ್ಲ. ನಮ್ಮ ಚಿಂತನೆ, ನಮ್ಮ ಬರಹಕ್ಕೆ ಅದೊಂದು ಆಯಾಮ ಇದ್ದೇ ಇರುವುದಕ್ಕೆ ಬಂಡವಾಳಶಾಹಿ, ಕೋಮುವಾದ, ಹಿಂಸೆ ಇವುಗಳನ್ನು ಅತ್ಯಂತ ವಿಮರ್ಶಕವಾಗಿ ನೋಡುವುದು ಅನಿವಾರ್ಯ. ಮುಖ್ಯವಾಗಿ ಅಭಿವ್ಯಕ್ತಿಸುವ ಸಾಮರ್ಥ್ಯವಿರುವವರೆಲ್ಲ ಇಂದು ಬರೆಯುವ, ಮಾತನಾಡುವ ಹೇಳುವ ದೊಡ್ಡ ಜವಾಬ್ದಾರಿಯನ್ನು ಹೊರಲೇಬೇಕಿದೆ. ಈ ಜವಾಬ್ದಾರಿಯನ್ನು ನಮ್ಮ ಸಮುದಾಯಗಳು ನಮಗೆ ಒಪ್ಪಿಸಿವೆ.
ಎಲ್ಲಾ ಹೋರಾಟಗಳಿಗೆ ಈಗ ಒಂದು ದಿಕ್ಕು ನಿಚ್ಚಳವಾಗಿ ಕಾಣುತ್ತಿದೆ. ಪ್ಲಾಸಿಜಮ್‌ನ ವಿರುದ್ಧ ನಾವು ಒಂದಾಗಿ ಈಗ ನಿಲ್ಲದಿದ್ದರೆ ನಮಗೆ ನಾಳೆಗಳೇ ಇಲ್ಲ. ಅತಿಶಯೋಕ್ತಿಯೆಂದುಕೊಳ್ಳಬೇಡಿ. ಈಗ ಆಗಬೇಕಿರುವುದು ಒಂದು ಅಂತಿಮವಾದ ದೊಡ್ಡ ಸಾಂಸ್ಕೃತಿಕ ಹೋರಾಟ. ಅದರಲ್ಲಿ ಇದು ನಾಯಕರಿಗಾಗಿ ಕಾಯುವ ಹೋರಾಟವಲ್ಲ. ಪಕ್ಷ ಪ್ರಣಾಳಿಕೆಗಳ ಬಿಸಿಲುಗುದುರೆಗಳನ್ನು ಹಿಂಬಾಲಿಸುವುದಲ್ಲ. ನಮಗೆ ಇರುವ ಎಲ್ಲಾ ಶಕ್ತಿಯನ್ನು ನಮಗೆ ಗೊತ್ತಿರುವ ಮಾಧ್ಯಮಗಳ ಮೂಲಕ ಪ್ರಾಮಾಣಿಕವಾಗಿ ದುಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ದಕ್ಷಿಣಾಯಣ ಒಂದು ಸಾಂಸ್ಕೃತಿಕ ಚಳುವಳಿಯಾಗಿ, ಸಾಂಸ್ಕೃತಿಕ ರಾಜಕೀಯವಾಗಿ ರೂಪುಗೊಳ್ಳುತ್ತಿದೆ. ಇದು ಸಹಭಾಗಿಗಳಾಗುವ ಎಲ್ಲರಿಗೂ ಒಂದು ಹುಡುಕಾಟ. ದಕ್ಷಿಣಾಯಣದ ಇಲ್ಲಿಯವರೆಗಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಮ್ಮ ಅನುಭವವೆಂದರೆ ಪ್ರತಿಭಟನೆ, ಅಭಿವ್ಯಕ್ತಿಯಲ್ಲಿ ನಾವು ಒಂಟಿಯಲ್ಲ. ಭಾರತೀಯ ಬರಹಗಾರರ, ಕಲಾವಿದರ, ಕ್ರಿಯಾಶೀಲರ ದೊಡ್ಡ ಸಮುದಾಯವೇ ನಮ್ಮ ಜೊತೆಗಿದೆ. ಇದಕ್ಕಿಂತ ಹೆಚ್ಚಿನ ನೈತಿಕ ಧೈರ್ಯ, ಸಂಕಲ್ಪವನ್ನು ಯಾವ ಚರಿತ್ರೆಯೂ ನಮಗೆ ನೀಡಲಾರದು.
ಈಗ ನಾವು ಕರ್ನಾಟಕದ ಸಹಮನಸ್ಕರೆಲ್ಲ ಸೇರಿ ದಕ್ಷಿಣಾಯಣ ಕರ್ನಾಟಕವನ್ನು ರೂಪಿಸಬೇಕಿದೆ. ಇದು ಒಟ್ಟಿಗೆ ಹೆಜ್ಜೆ ಇಡಲು ಸಿದ್ಧರಾಗಿರುವ ಎಲ್ಲರ ಚಳುವಳಿ. ಇದಕ್ಕೆ ಶಕ್ತಿ ಕನ್ನಡದ ಮಾನವಪರ, ಜನಸಮುದಾಯಗಳ ಪರಂಪರೆಗಳು ಮತ್ತು ಅವುಗಳನ್ನು ಇಂದಿನ ತುರ್ತುಗಳಿಗೆ ಒಗ್ಗೂಡಿಸಬೇಕಾದ ಅರಿವು ಮತ್ತು ವಿವೇಕ. ಇಲ್ಲಿ ಯಾರೂ ನೇತಾರರಿಲ್ಲ. ಒಟ್ಟಿಗೆ ಕುರಿತು ಚಿಂತಿಸುವುದು. ಸುತ್ತಲಿನ ವಿದ್ಯಮಾನಗಳ ಅರಿಯುವುದು. ಅರಿವು ತೋರಿದಂತೆ ನಮ್ಮ ನಡೆಯನ್ನು ಒಟ್ಟಾಗಿ, ಸಾಂಘಿಕವಾಗಿ ರೂಪಿಸಿಕೊಳ್ಳುವುದು. ನಮಗೆ ಅನ್ನಿಸಿದ್ದು ನಿಮಗೂ ಅನ್ನಿಸಿದರೆ ನಮ್ಮನ್ನು ಸಂಪರ್ಕಿಸಿ. SMS, Email, Whats App, ಪತ್ರ ಯಾವುದಾದರು ಸರಿ. ನೀವು ನಮ್ಮೊಂದಿಗೆ ಇದ್ದೀರಿ ಎನ್ನುವುದಾದರೆ ಬೇಗನೇ ಒಂದು ಕಡೆಗೆ ಸೇರೋಣ. ದಕ್ಷಿಣಾಯಣ ಕರ್ನಾಟದೊಂದಿಗೆ ಬನ್ನಿ.

ರಾಜೇಂದ್ರ ಚೆನ್ನಿ
ಸಂಚಾಲಕ
(ಅಂದರೆ ನೀವು ನನ್ನನ್ನು ಸಂಪರ್ಕಿಸಬಹುದು ಎಂದೂ ಮಾತ್ರ)

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...