Monday, November 14, 2016

ಲಿಂಗಾಯತರು ಮರೆತ ಶಾಹು ಮಹಾರಾಜರು


Image result for ಶ್ರೀಧರ ಪ್ರಭು


~ ಶ್ರೀಧರ ಪ್ರಭು 
_________________


Image result for shahu maharaj


ನೆನ್ನೆ ದಿನ ಬೆಳಗಾವಿಯಲ್ಲಿ ನಡೆದ ಕರ್ನಾಟಕ ಲಿಂಗಾಯತ ಎಜುಕೇಶನ್ (KLE) ಸೊಸೈಟಿಯ ನೂರನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿಯವರು ಪಾಲ್ಗೊಂಡು ನೋಟು ಬದಲಾವಣೆಗೋಸ್ಕರ ದೇಶ ಎಂಥೆಂಥ ತ್ಯಾಗಕ್ಕೆ ತಯಾರಾಗಬೇಕಿದೆ ಎಂಬ ಬಗ್ಗೆ ಅಪ್ಪಣೆ ಕೊಡಿಸಿ ಹೋಗಿದ್ದಾರೆ. ವೇದಿಕೆಯ ಮೇಲಿದ್ದ ಅವರದೇ ಪಕ್ಷದ ಹಲವು ರಾಜಕಾರಣಿಗಳು ತಾವು ಈಗಾಗಲೇ ದೇಶದ ಸಲುವಾಗಿ 'ಸರ್ವಸ್ವ' ವನ್ನೂ ತ್ಯಾಗ ಮಾಡಿರುವುದರಿಂದ ಪ್ರಧಾನಿಗಳು ಬೇರೆ ಇನ್ಯಾರಿಗೋ ಬೇರೇನೂ ಇನ್ನೇನೋ ತ್ಯಾಗ ಮಾಡಲು ಕರೆ ಕೊಡುತ್ತಿದ್ದಾರೆ ಎಂದು ಗ್ರಹಿಸಿಕೊಂಡು ಸುಮ್ಮನಾಗಿರಬಹುದು. ಈ ಸಮಾರಂಭದಲ್ಲಿ ಪ್ರಧಾನಿಗಳಾಗಲಿ ಅಥವಾ ಸ್ಥಳೀಯ ಗಣ್ಯರಾಗಲಿ ಯಾರಾದರೂ ಶಾಹು ಮಹಾರಾಜರ ಬಗ್ಗೆ ಒಂದೇ ಒಂದು ಮಾತಾದರೂ ಆಡಬಹುದು ಎಂದು ನಿರೀಕ್ಷೆಯಿಟ್ಟುಕೊಂಡಿದ್ದ ನನ್ನಂಥವರಿಗೆ ತೀವ್ರ ನಿರಾಶೆಯಾಯಿತು.
ಇಂದು ಲಿಂಗಾಯತರೂ ಸೇರಿದಂತೆ, ಮುಂಬೈ ಕರ್ನಾಟಕ ಪ್ರಾಂತ್ಯದ ವೀರಶೈವ ಸಮುದಾಯ ಮತ್ತು ಅನೇಕಾನೇಯ ಅಬ್ರಾಹ್ಮಣ ಸಮುದಾಯಗಳು ಅತ್ಯಂತ ಚಿರಋಣಿಯಾಗಿರಬೇಕಾಗಿರುವುದು ಶಾಹು ಮಹಾರಾಜರಿಗೆ.

ಇದೇ ಬೆಳಗಾವಿಯಲ್ಲಿ ೧೯೧೧ ರಲ್ಲಿ ಜರುಗಿದ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ಆರನೇ ಅಧಿವೇಶನದ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶ್ರೀಮಂತ ಬುಳ್ಳಪ್ಪ ಮಾಮಲೇ ದೇಸಾಯರು (ಈಗ ಎಲ್ಲೂ ಸಹ ಇವರ ಒಂದೇ ಒಂದು ಪಟ ಲಭ್ಯವಿಲ್ಲ!) ಮೊಟ್ಟ ಮೊದಲು ಸ್ಮರಿಸಿದ್ದು ಶಾಹು ಮಹಾರಾಜರನ್ನು. ಶಾಹು ಮಹಾರಾಜರಿಗೆ ವಂದನೆ ಸಲ್ಲಿಸಿದ ಮೇಲೆಯೇ ಈ ಅಧಿವೇಶನ ಪ್ರಾರಂಭವಾಗಿದ್ದು.

Image result for shahu maharaj

ಕೊಲ್ಹಾಪುರ, ಬೆಳಗಾವಿ ಸಾಂಗ್ಲಿ ಮುಂತಾದೆಡೆಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ತೆರೆಯಲು ಸಹಾಯಮಾಡಿದ್ದು ಶಾಹು ಮಹಾರಾಜರು. ೧೮೮೩ ರಲ್ಲಿ 'ಲಿಂಗಾಯತ ಫಂಡ್ ಸಮಿತಿ' ಮತ್ತು ೧೯೦೬ ರಲ್ಲಿ ಲಿಂಗಾಯತ ಎಜುಕೇಶನ್ ಅಸೋಸಿಯೇಷನ್ (LEA) ಗಳನ್ನೂ ಸ್ಥಾಪಿಸಲು ಮಹಾರಾಜರು ಧನಸಹಾಯ ನೀಡಿದ್ದರು. ಈ ಸಂಸ್ಥೆಗಳಿಂದ ಸ್ಥಾಪಿತವಾದ ವಿದ್ಯಾಸಂಸ್ಥೆಗಳಿಂದ ಪದವಿ ಪಡೆದ ನೂರಾರು ಲಿಂಗಾಯತ ಸಮುದಾಯದ ಯುವಕರು ಬದುಕು ಕಟ್ಟಿಕೊಳ್ಳುವಂತಾಯಿತು. ೧೯೧೧ ರ ವೀರಶೈವ ಮಹಾಸಭೆಯ ಇದೇ ಅಧಿವೇಶನದಲ್ಲಿ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂದು ನಿರ್ಧರಿಸಲಾಯಿತು. ಅಂದಿನವರೆಗೆ ಕೇವಲ ೧೮ ಲಿಂಗಾಯತ ಯುವಕರು ಮಾತ್ರ ಪದವೀಧರರಾಗಿದ್ದರು. ಒಬ್ಬನೇ ಒಬ್ಬ ಲಿಂಗಾಯತ ವಿದ್ಯಾರ್ಥಿ ಸ್ನಾತಕೋತ್ತರ ಪದವಿ ಪಡೆದಿರಲಿಲ್ಲ.

೧೯೩೩ ರಲ್ಲಿ ಫ.ಗು. ಹಳಕಟ್ಟಿಯವರ ನೇತೃತ್ವದಲ್ಲಿ ಧಾರವಾಡದಲ್ಲಿ ನಡೆದ ೧೧ ನೇ ವೀರಶೈವ ಮಹಾಸಭಾದ ಅಧಿವೇಶದಲ್ಲಿ ಇದಕ್ಕೊಂದು ಸ್ಪಷ್ಟರೂಪ ಸಿಕ್ಕಿತು. ಈ ವಿಶ್ವವಿದ್ಯಾಲಯ ಪರಿಕಲ್ಪನೆಗೆ ಸಾಕಷ್ಟು ಕೊಡುಗೆ ನೀಡಿದವರು ಶಾಹು ಮಹಾರಾಜರು.
Image result for shahu maharaj

ದೂರದ ಚಿತ್ರದುರ್ಗದ ಬೃಹನ್ಮಠದವರಿಗೆ ಕೊಲ್ಹಾಪುರದಲ್ಲಿ "ಲಿಂಗಾಯತ ಉಚಿತ ಪ್ರಸಾದ ನಿಲಯ ಮತ್ತು ವಸತಿ ಗೃಹವನ್ನು" ಸ್ಥಾಪಿಸಲು ಪ್ರೇರೇಪಿಸಿ, ಅಲ್ಲಿನ ಎಲ್ಲ ಹಣಕಾಸಿನ ಜವಾಬ್ದಾರಿಯನ್ನು ವಹಿಸಿಕೊಂಡವರು ಶಾಹು ಮಹಾರಾಜರು. (Ref: Community Dominance and Political Modernisation: The Lingayats By Shankaragouda Hanamantagouda Patil: Mittal Publications New Delhi ಮೊದಲ ಮುದ್ರಣ ೨೦೦೧)

ಅಷ್ಟೇ ಅಲ್ಲ. ಅಂದು ಸಂಪೂರ್ಣ ಒಂದೇ ಸಮುದಾಯದ ಹಿಡಿತದಲ್ಲಿದ್ದ ರಾಜಕಾರಣವನ್ನು ಭೇದಿಸಿ, ಲಿಂಗಾಯತರ ನೇತೃತ್ವದಲ್ಲಿ ತಳ ಸಮುದಾಯಗಳ ಸಮರ್ಥ ಪರ್ಯಾಯ ರಾಜಕಾರಣವನ್ನು ಕಟ್ಟಲು, ಸಿದ್ದಪ್ಪ ಕಂಬಳಿ ಮತ್ತಿತರಿಗೆ ಸಾಕಷ್ಟು ತನುಮನಧನ ಸಹಾಯ ಒದಗಿಸಿಕೊಟ್ಟವರು ಶಾಹು ಮಹಾರಾಜರು.

ತಮ್ಮದೇ ಸಮುದಾಯದವರು ತಮ್ಮ ಸಮುದಾಯಗಳಿಗೆ ಸಹಾಯ ಮಾಡುವುದು ದೊಡ್ಡದೇನಲ್ಲ; ಆದರೆ ಬೇರೊಂದು ಸಮುದಾಯದ ಓರ್ವ ದೊರೆ ಪ್ರಜಾರಾಜ್ಯದ ಆಶಯದೊಂದಿಗೆ ಲಿಂಗಾಯತ ಸಮುದಾಯದ ಶ್ರೇಯೋಭಿವೃದ್ಧಿಗೆ ಸಾಸಿವೆಯಷ್ಟೂ ಪ್ರಚಾರ ಪಡೆಯದೇ ಸಾಗರದಷ್ಟು ಕೊಡುಗೆ ನೀಡಿದ್ದನ್ನು ಇಂದು ಸ್ಮರಿಸುವವರೇ ಇಲ್ಲ.

ಇಂದು ಲಿಂಗಾಯತರಿಗೋಸ್ಕರ ಇಷ್ಟೆಲ್ಲಾ ತ್ಯಾಗ ಮಾಡಿದ ಶಾಹು ಮಹಾರಾಜರ ಸ್ಮಾರಕದ ಸ್ಥಿತಿ ಹೇಗಾಗಿದೆ ನೋಡಿ! ಇನ್ನು ಡೊನೇಶನ್ ಹಣದಲ್ಲಿ ಮಹಲುಗಳನ್ನು ಕಟ್ಟಿಸಿಕೊಂಡವರು ಹೇಗಿದ್ದಾರೆ?

ಈ ಚಿತ್ರದಲ್ಲಿರುವ ಶಾಹು ಮಹಾರಾಜರ ಸಮಕಾಲೀನರಾದ, ಕೆ ಎಲ್ ಇ ಸಂಸ್ಥೆಯ ಸ್ಥಾಪಕರಾದ ಅರಟಾಳ ರುದ್ರಗೌಡರು, ವೀರಭದ್ರಪ್ಪ ನಾಯಕರು, ವೈಜಪ್ಪ ಆನಿಗೋಳರನ್ನೂ ಒಂದು ದಿನ ಲಿಂಗಾಯತರು ಮರೆತು ಈಗಿರುವ ತಮ್ಮ ಸಮುದಾಯದ ಮಹಾನ್ ನಾಯಕರನ್ನೇ ತಮ್ಮ ಸಮುದಾಯದ ಆದಿ ಪುರುಷರೆಂದು ಮೆರೆಸಿದರೆ ಆಶ್ಚರ್ಯವಿಲ್ಲ!

ಇದು ವೀರಶೈವರ ದುರಂತವೋ, ಆ ಸಮುದಾಯವನ್ನು ಮುನ್ನಡೆಸುತ್ತಿರುವ ಮುಖಂಡರ ಜಾಣ ಕುರುಡೋ ಗೊತ್ತಿಲ್ಲ!

1 comment:

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...