Thursday, September 15, 2016

ಮೇವು ತಿನ್ನದ ಗೋವು ರೊಟ್ಟಿಗೆ ಎದೆ ಒಡೆದು ಸತ್ತೆ ಹೋಯಿತು..!
R Manasayya Tuci's photo.


-ಆರ್.ಮಾನಸಯ್ಯ


ಒಂದು ವರ್ಷದ ಹಿಂದೆ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ದಿನಕ್ಕೆ ಎರಡು ಮೂರು ಬಾರಿ ಆಕಳೊಂದು ತುಂಬು ಗರ್ಭಿಣಿಯಂತೆ ಓಡಾಡುತ್ತಿತ್ತು. ಅದನ್ನು ನೋಡಿದಾಗಲೆಲ್ಲ ನಮಗೆ ಅತ್ಯಂತ ಪ್ರ್ರೀತಿ, ಅದರ ಮೈ ಮೇಲೆ ಕೈಯಾಡಿಸಿ ಚೆನ್ನಾಗಿರು ಎಂದು ಹಾರೈಸಬೇಕೆನಿಸುತಿತ್ತು. ನಮ್ಮ ಎದುರಿನ ಮನೆಯವರಿಗೆ ಸೇರಿದ ಆಕಳು ಅದು. ಹಗಲೆಲ್ಲ ಜೋಗಿ ಜಂಗಮರಂತೆ ಮನೆ ಮನೆಗೆ ಹೋಗುವುದು ಅದರ ಚಾಳಿ. ಮನೆಗೆ ಬಂದ ಹಸುವಿಗೆ ರೊಟ್ಟಿ ಕೊಟ್ಟು, ಕುಂಕುಮ ಹಚ್ಚಿ, ನಮಸ್ಕಾರ ಮಾಡುವುದು ಕೆಲವರ ರೂಡಿ. ರೊಟ್ಟಿ ಮತ್ತು ಗೋಡೆಗೆ ಅಂಟಿಸಿದ ಕಾಗದಗಳನ್ನು ಮೆಯ್ಯುವುದೇ ಈ ಆಕಳದ ಆಹಾರ ಪದ್ದತಿ. ಮನೆಯವರು ನೆಪಮಾತ್ರಕ್ಕೆ ಯಾವಾಗಾದರೂ-ಏನಾದರೂ ಅದಕ್ಕೆ ಕೊಡುತ್ತಿರಬಹುದು. ತೇಟ ಜವಾರಿ ಕೆಂದಾಕಳು ಅದು. ಹೇಳಿ ಮಾಡಿಸಿದಂತ ಮೈಮಾಟ. ಮುಟ್ಟಿದರೆ ಮಾಸುವಷ್ಟು ಸ್ವಚ್ಛವಾದ ತ್ವಚೆ ಅದರದು. ಅರ್ಧಚಂದ್ರನಂತ ಕೊಂಬುಗಳು. ಅದರ ತಿರುಗಾಟವೇ ಆ ದಾರಿಗೆ ಒಂದು ಸೊಬಗು. ಒಂದು ದಿನ ಈ ಆಕಳು ಮುದ್ದಾದ ಬಿಳಿ ಹೋರಿ ಕರ ಹಾಕಿತು. ಹಳ್ಳಿಯಲ್ಲಿ ಹುಟ್ಟಿ ದನಕರುಗಳೊಂದಿಗೆ ಬೆಳೆದು ಬಂದ ನಾವು, ಮನೆಯವರೆಲ್ಲ ಸೇರಿ ಆಕಳು ಮತ್ತು ಕರುವನ್ನು ಹತ್ತಿರ ಹೋಗಿ ವಾತ್ಸಲ್ಯದ ತಾಯಿ ಮತ್ತು ಮಗುವಿನಂತೆ ಕಣ್ತುಂಬ ನೋಡಿ ಬಂದೆವು.
ಆದರೆ, ಕರು ಹಾಕಿದ ನಾಲ್ಕೇ ದಿನಗಳಲ್ಲಿ ಆಕಳು ಮತ್ತು ಕರುವನ್ನು ಮಾರಲು ಮನೆಯವರು ಅಗ್ಗ ಹಚ್ಚಿ ಎಳೆದೊಯ್ಯಲು ತಯ್ಯಾರಾದಾಗ ನನಗೆ ನಿಜವಾಗಲೂ ಸಂಕಟವಾಯಿತು. ಅವರ ಸಂಸಾರದ ತಾಪತ್ರಯಕ್ಕೆ ಅವರ ಆಕಳನ್ನು ಅವರು ಮಾರಲು ಹೊರಟಿದ್ದೇನು ಸರಿಯೆ. ಆದರೆ, ಇನ್ನೂ ನಾಲ್ಕು ದಿನ ತಡಮಾಡಬಾರದೆ? ಎಂಬ ಸ್ವಯಂ ತಕರಾರು ನನ್ನದು. ಇದನ್ನು ನಮ್ಮ ಮನೆಯವರಿಗೆ ಹೇಳಿದೆ. ಕೂಡಲೆ ನನ್ನ ಹೆಂಡತಿ ಹೇಳಿದ್ದು “ಆ ಆಕಳನ್ನು ನಾವೇ ತೆಗೆದುಕೊಳ್ಳೋಣ ಇಲ್ಲಿ ಸಾಕಲು ಸಾದ್ಯವಾಗದೆ ಹೋದರೆ ಪಕ್ಕದ ಸುಲ್ತಾನಪುರದ ನಮ್ಮಣ್ಣನ ಮನೆಗೆ ಕಳಿಸೋಣ” ಎಂದು ಬಿಟ್ಟಳು. ಅವಸರ ಮಾಡಿ ಆಕಳ ಖರೀದಿಯ ತೀರ್ಮಾನ ತೆಗೆದುಕೊಂಡೇ ಬಿಟ್ಟೆವು. ಮನೆ ಹೊರಗೆ ಹೋಗಿ ನೋಡುವಷ್ಟರಲ್ಲಿ ಆಕಳು ಮತ್ತು ಕರುವನ್ನು ರಾಯಚೂರು ದನದ ಸಂತೆಗೆ ಸಾಗಿಸಿದ್ದಾರೆ ಎಂದರು. ಮನೆಯವರನ್ನು ವಿಚಾರಿಸಿ, “ನಾವೇ ಖರೀದಿ ಮಾಡುತ್ತೇವೆ ವಾಪಸ್ ಕರೆಯಿಸಿ” ಎಂದು ಕೇಳಿದೆವು. ಜವಾರಿ ತಳಿ ಸಣ್ಣ ಒಡಲಿನ ಅಕಳಾಗಿದ್ದರಿಂದ ಆಕಳು ಮತ್ತು ಕರು ಸೇರಿ 12500 ರೂಪಾಯಿಗೆ ಮಾತು ಮುಗಿಯಿತು. ನಮ್ಮ ನೆಚ್ಚಿನ ಆಕಳು ಮತ್ತು ಕರು ನಮ್ಮ ಮನೆ ಮುಂದೆ ಬಂದು ನಿಂತವು. ಆಗ ನಮಗೆ ಆದ ಸಂತೋಷ ಹೇಳತೀರದು. ನಿರಪರಾಧಿಗೆ ಜಾಮೀನು ಕೊಟ್ಟು ಬಿಡುಗಡೆ ಮಾಡಿದಷ್ಟು ಸಂತೋಷ. ಬೀದಿಗೆ ತಳ್ಳಿದ ಬಾಣತಿಯನ್ನು ಪುನಾ: ಮನೆಯೊಳಗೆ ಕರೆತಂದು ಹಾರೈಕೆ ಮಾಡಿದಷ್ಟು ಸಂತಸ. ಅದೇ ದಿನ ಆಕಳು ಮತ್ತು ಕರುವನ್ನು ರಾಯಚೂರಿನಿಂದ 24 ಕಿ.ಮೀ ದೂರದಲ್ಲಿ ಇರುವ ಸುಲ್ತಾನಪುರದ ನಮ್ಮ ಬೀಗರ ಮನೆಗೆ ಸಣ್ಣ ಸಾಗಾಣಿಕೆ ಗಾಡಿಯ ಮೂಲಕ ಕಳುಹಿಸಿಕೊಟ್ಟೇವು. ಏಕೆಂದರೆ, ನಾವಿರುವುದು ಬಾಡಿಗೆ ಮನೆಯಲ್ಲಿ. ಆಕಳು ಮತ್ತು ಕರು ಕಟ್ಟಲು ಜಾಗೆ ಇಲ್ಲ. ಮೇಲಾಗಿ ಇವುಗಳಿಗೆ ಮೇವು ನಮ್ಮಲಿಲ್ಲ. ಇವುಗಳ ಸಾಕಾಣಿಕೆ ನಮ್ಮಿಂದ ಸಾದ್ಯವಿಲ್ಲ. ಆಚರಣಾತ್ಮಕವಾಗಿ ಅಸಾದ್ಯವಾದದ್ದನ್ನು ಆಚರಿಸಲು ಹೊರಟ ಆದರ್ಶ ನಮ್ಮದು.!

ಹೊಸದಾಗಿ ಗಂಡನ ಮನೆಗೆ ಹೋದ ಮಗಳ ಯೋಗ ಕ್ಷೇಮ ವಿಚಾರಿಸುವ ಹಾಗೆ ಪ್ರತಿ ದಿನ ರಾತ್ರಿ ನಮ್ಮ ಬೀಗನಿಗೆ ಫೋನ್ ಮಾಡಿ ಹೇಗಿದೆ ನಮ್ಮ ಆಕಳು ಮತ್ತು ಕರು ಎಂದು ಕೇಳುತ್ತಿದ್ದೇವು. ಮೊದಲೆರಡು ದಿನ ಆಕಳು ಮೆಯ್ಯುತ್ತಿಲ್ಲ ಎಂದ. ಜಾಗ ಬದಲಾಗಿದೆ, ಕರು ಹಾಕಿದ ನೋವು ಇರಬಹುದು ಎಂದು ನಾವೇ ಸಮಜಾಯಿಸಿಕೊಂಡೆವು. ನಾಲ್ಕು ದಿನಗಳಾದರೂ, ಎಂಟು ದಿನಗಳಾದರೂ ಆಕಳು ಹಸಿರು ಹುಲ್ಲು ತಿನ್ನುತ್ತಿಲ್ಲ ಎಂದು ಸುಲ್ತಾನಪುರದಿಂದ ಫೋನ್ ಬರಲಾರಂಭಿಸಿದವು. ಮನುಷ್ಯರು ಮನಸೋತು ತಿನ್ನುವಂತ ಸಮೃದ್ದ ಹಸಿರು ಮೇವು ಅಲ್ಲಿದೆ. ತೆಕ್ಕಿಗಟ್ಟಲೆ ಹಸಿರು ಹುಲ್ಲು ಹಾಕಿದರೂ ಆಕಳು ಅದನ್ನು ಮುಟ್ಟಲಿಲ್ಲ. ಇದೆಂತ ಆಕಳು, ಮೇವು ತಿನ್ನದ ಗೋವು ಈ ಜಗತ್ತಿನಲ್ಲೇ ಇಲ್ಲ, ಎಲ್ಲಿಂದ ತಂದಿರಿ ಇದನ್ನ, ಕೆಚ್ಚಲಲ್ಲಿ ಹಾಲಿಲ್ಲ, ಕರುವಿನ ಸಂಕಟ ನೋಡಲಿಕ್ಕೆ ಹಾಗೋದಿಲ್ಲ ಎಂದು ನಮ್ಮ ಬೀಗ ಫೋನಿನಲ್ಲಿ ಭಯಂಕರವಾಗಿ ಪೇಚಾಡಲು ಶುರುಮಾಡಿದ. ಆತ ಕೇಳಿದ ಪ್ರಶ್ನೆಗೆ ನಾವು ಉತ್ತರಿಸಿದೆವು. ಆದರೆ, ರೊಟ್ಟಿ, ಕಾಗದ, ಅನ್ನ ತಿಂದ ಹಸುವಿಗೆ ಹಸಿ ಮೇವು ಏಕೆ ಹಾಕಿದೆ ಎಂದು ಕೇಳುವ ಧೈರ್ಯ ಮಾತ್ರ ನಮಗೆ ಬರಲಿಲ್ಲ. ಗೋವುಗಳೆಲ್ಲ ಮೇವು ತಿನ್ನುತ್ತವೆ ಎಂಬುದು ಜಾಗತಿಕ ಸತ್ಯ. ನಾಗರಿಕ-ಧಾರ್ಮಿಕತೆಯ ಪರಿಣಾಮದಿಂದ ಮೇವು ತಿನ್ನದ ಗೋವುಗಳು ಇರುತ್ತವೆ ಎನ್ನುವುದು ಕೂಡ ಭಯಂಕರ ಸತ್ಯ! ಗೋವುಗಳ ಸಾಕಾಣಿಕೆ ಹಾಗೂ ಪೂಜೆ ವಿಭಿನ್ನ ಪರಿಣಾಮಗಳು. ಕೊನೆಗೆ, ಅಂದರೆ ಸುಲ್ತಾನಪುರಕ್ಕೆ ಹೋದ 18ನೇ ದಿನಕ್ಕೆ ನನ್ನ ಆಕಳು ಮೇವು ತಿನ್ನದೆ ಸತ್ತೇ ಹೋಯಿತು. ಅದರ ಕರುಳ ಕುಡಿ ಹೋರಿಯನ್ನು ನನ್ನ ಬೀಗ ಬೇರೆ ಆಕಳ ಹಾಲು, ಎಳೆ ಹುಲ್ಲು ಹಾಕಿ ಬದುಕಿಸಿಕೊಂಡಿದ್ದಾನೆ. ನನ್ನ ಆಕಳನ್ನು ಹಾಳು ಮಾಡಿದ ನಾಗರಿಕತೆ ಹಾಗೂ ಧಾರ್ಮಿಕತೆ ಬೇರಾವುದನ್ನು ಹಾಳು ಮಾಡದಿರಲಿ ಎಂದು ಹೋರಾಡುತ್ತೇನೆ. ನಿಮ್ಮ ನಂಬುಗೆ ನಮ್ಮನ್ನು ಹಾಳು ಮಾಡದಿರಲಿ ಎಂಬುದಷ್ಟೇ ನನ್ನ ವಿನಂತಿ.

-ಆರ್.ಮಾನಸಯ್ಯ
ರಾಜ್ಯಾಧ್ಯಕ್ಷರು TUCI ಕರ್ನಾಟಕ

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...