Tuesday, March 29, 2016

'ಅಂಡಮಾನ್: ಕಂಡ ಹಾಗೆ' ಪುಸ್ತಕಕ್ಕೆ ಬಹುಮಾನ
ನಮ್ಮ ಲಡಾಯಿ ಪ್ರಕಾಶನ ಪ್ರಕಟಿಸಿದ ಡಾ. ಎಚ್. ಎಸ್. ಅನುಪಮಾ ಅವರ ಪ್ರವಾಸ ಕಥನ 'ಅಂಡಮಾನ್: ಕಂಡ ಹಾಗೆ' ಪುಸ್ತಕವು 2013ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರವಾಸ ಕಥನ ವಿಭಾಗದ ಪುಸ್ತಕ ಬಹುಮಾನ ಪಡೆದುಕೊಂಡಿದೆ. ಲಡಾಯಿ ಬಳಗವು ಡಾ. ಅನುಪಮಾ ಅವರನ್ನು ಅಭಿನಂದಿಸುತ್ತದೆ. ಈ ಪುಸ್ತಕ ಬೆಲೆ ಕೇವಲ 80 ರೂ. ಈ ಸಂದರ್ಭದಲ್ಲಿ ನಮ್ಮ ಓದುಗ ಬಳಗವನ್ನು ನೆನೆಯುತ್ತೇನೆ. ಅವರ ಮತ್ತು ನಿಮ್ಮ ಸಹಕಾರ ಮತ್ತು ಸಹಭಾಗಿತ್ವ ಎಂದಿನಂತೆ ಮುಂದುವರೆಯಲಿ.

Monday, March 28, 2016

ಎಪ್ರೀಲ್ 3 ಬೆಂಗಳೂರು : ನಮ್ಮ ಪ್ರಕಾಶನದ ಮೂರು ಪುಸ್ತಕಗಳ ಬಿಡುಗಡೆಪ್ರಿಯರೆ
ನಮ್ಮ ಲಡಾಯಿ ಪ್ರಕಾಶನದಿಂದ ಬಿಡುಗಡೆಯಾದ ಶೂದ್ರ ಶ್ರೀನಿವಾಸ್ ಅವರ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಎಪ್ರೀಲ 3 ರಂದು ಬೆಂಗಳೂರಿನ ನ್ಯಾಶನಲ್ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 10.15 ಗಂಟೆಗೆ ನಡೆಯುವುದು. ನಮ್ಮ ಪ್ರಕಾಶನದ ಕಾರ್ಯಗಳ ಪ್ರೀತಿ ತೋರುವ ತಾವು ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ವಿನಂತಿಸಿಕೊಳ್ಳುವೆ.
ಎಂದಿನಂತೆ ನಿಮ್ಮ ಸಹಕಾರ ಮತ್ತು ಸಹಭಾಗಿತ್ವ ಬಯಸುವೆ.
Sunday, March 27, 2016

ಮೇಕಿಂಗ್ ಹಿಸ್ಟರಿ: ಮಧ್ಯವರ್ತಿ – ಖರೀದಿದಾರ ವರ್ಗದ ಉಗಮಕ್ಕಿದ್ದ ಸಾಮಾಜಿಕ ಸ್ಥಿತಿಗತಿ:- 1


Making history
 
 
 
 
 
 
 
 
 
 
 
 
 
 
 
 
 
 
 
 
 
ಸಾಕೇತ್ ರಾಜನ್
 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಸೌಜನ್ಯ : ಹಿಂಗ್ಯಾಕೆ

ಕರ್ನಾಟಕವನ್ನು ಕೊಳ್ಳೆ ಹೊಡೆಯಲು ವಸಾಹತುಶಾಹಿ ಮತ್ತು ಊಳಿಗಮಾನ್ಯ ಪದ್ಧತಿಯ ಒಗ್ಗಟ್ಟೇ ಆಧಾರವಾಗಿತ್ತು. ಬೇರೊಂದು ಪ್ರಮುಖ ವ್ಯವಸ್ಥೆಯ ಸಹಕಾರವಿಲ್ಲದೆ ಭವಿಷ್ಯದ ದಿನಗಳಲ್ಲಿ ರಾಜಕೀಯ ಮತ್ತು ಆರ್ಥಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದು ವಸಾಹತುಶಾಹಿಗೆ ಸಾಧ್ಯವಿರಲಿಲ್ಲ. ಸಾಮಾಜಿಕ ರಚನೆಯ ಮಧ್ಯವರ್ತಿ ವರ್ಗವೇ ಈ ಪ್ರಮುಖ ವ್ಯವಸ್ಥೆಯಾಗಿತ್ತು. ಮೇಲ್ನೋಟಕ್ಕೆ ಊಳಿಗಮಾನ್ಯತೆ ಮತ್ತು ವಸಾಹತುಶಾಹಿ ಸಹಬಾಳ್ವೆಯಿಂದ ಜೊತೆಯಾಗಿ ನಡೆಯುವಂತೆ ತೋರಿದರೂ ಅಂತಿಮವಾಗಿ ವಸಾಹತುಶಾಹಿಯ ಹಸ್ತಕ್ಷೇಪದಿಂದ ಅದರ ನಿಜ ವಕ್ತಾರನಂತೆ ಹೊರಹೊಮ್ಮಿದ್ದು ಮಧ್ಯವರ್ತಿ ವರ್ಗ. ಪಾಳೇಗಾರರು, ದೇಸಾಯಿ, ಜಾಗೀರುದಾರರು ಮತ್ತು ದೇಶಮುಖರು ನೆಲೆ ನಿಂತ ನಂತರ ವಸಾಹತುಶಾಹಿ ತನ್ನ ನೆಲೆ ಸುಭದ್ರಗೊಳಿಸಲು ಮಾಡಬೇಕಿದ್ದ ಬಹುಮುಖ್ಯ ಕಾರ್ಯವೆಂದರೆ ಮಧ್ಯವರ್ತಿ ವರ್ಗವನ್ನು ಸೃಷ್ಟಿಸುವುದು. ಭೂಮಾಲೀಕರು ವಸಾಹತುಶಾಹಿಯ ಮೈತ್ರಿಕೂಟದ ಭಾಗವಾಗಿದ್ದರು; ಮಧ್ಯವರ್ತಿಗಳು ವಸಾಹತುಶಾಹಿ ಬಂಡವಾಳದ ಏಜೆಂಟುಗಳಾಗಿದ್ದರು. 
ಕರ್ನಾಟಕದಲ್ಲಿ ಮಧ್ಯಮವರ್ಗದ ಮಧ್ಯವರ್ತಿ ಅಧಿಕಾರಿಗಳ (Comprador bureaucrat bourgeoise) ಜನನವಾಗಲು ಒಂದು ಶತಮಾನಕ್ಕೂ ಅಧಿಕ ಸಮಯವಿಡಿಯಿತು. ಈ ಸೃಷ್ಟಿ ಸಾಧ್ಯವಾಗಲು ಬೇಕಾಗಿದ್ದ ಸಾಮಾಜಿಕ ಆಧಾರಗಳನ್ನು ಇತಿಹಾಸದ ಈ ಘಟ್ಟದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಮಧ್ಯವರ್ತಿ ವರ್ತಕರು ಮತ್ತು ಮಧ್ಯವರ್ತಿ ಅಧಿಕಾರಿಗಳು ಶತಮಾನದ ನಂತರ ಮಧ್ಯಮವರ್ಗದ ಮಧ್ಯವರ್ತಿ ಅಧಿಕಾರಿಗಳ ಸೃಷ್ಟಿಗೆ ಚಿಮ್ಮುಹಲಗೆಯಾದರು. ಕರ್ನಾಟಕದಲ್ಲಿನ ವಸಾಹತುಶಾಹಿ ಆಡಳಿತದ ಮೊದಲ ದಶಕಗಳಲ್ಲಿ ಮಧ್ಯವರ್ತಿ ವರ್ತಕರು ಮತ್ತು ಅಧಿಕಾರಿಗಳನ್ನು ಸೃಷ್ಟಿಸಲಿಡಿದ ದಾರಿಯನ್ನು ಈ ಭಾಗದಲ್ಲಿ ನೋಡೋಣ. ಪೋರ್ಚುಗೀಸರ ವಸಾಹತಿನಿಂದ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮಧ್ಯಮವರ್ಗದ ಮಧ್ಯವರ್ತಿ ವರ್ತಕರು ಹೊರಹೊಮ್ಮಿದ್ದನ್ನು ಈಗಾಗಲೇ ಒಂದನೇ ಸಂಪುಟದಲ್ಲಿ ನೋಡಿದ್ದೇವೆ. (72) ಈಗ ರಾಜ್ಯದ ಇತರೆ ಭಾಗಗಳಲ್ಲಿ ಮಧ್ಯವರ್ತಿ ವರ್ಗದ ಸೃಷ್ಟಿಯಾದ ಬಗೆಯನ್ನು ನೋಡೋಣ. 
ವಸಾಹತುಶಾಹಿಯ ಬಹುಮುಖ್ಯ ಮೈತ್ರಿಯಾಗಿದ್ದ ಊಳಿಗಮಾನ್ಯತೆ, ಅದೇ ಸಮಯದಲ್ಲಿ ಮಧ್ಯವರ್ತಿ ವರ್ಗದ ಜನನಕ್ಕೆ ಬೇಕಾದ ಪ್ರಮುಖ ಸಾಮಾಜಿಕ ತಳಹದಿಯಾಗಿತ್ತು. ಭಾರತದ ಮಧ್ಯಮವರ್ಗದ ಮಧ್ಯವರ್ತಿಗಳ ಬಗ್ಗೆ ಮೆಚ್ಚುವಂತಹ ಅಧ್ಯಯನ ಮಾಡಿರುವ ಸುನಿತಿ ಕುಮಾರ್ ಘೋಷ್ ತಮ್ಮ ಪುಸ್ತಕ The Indian Big Bourgeoisieನಲ್ಲಿ ಹತ್ತಲವು ಬಾರಿ ಊಳಿಗಮಾನ್ಯ ಪದ್ಧತಿ ಮಧ್ಯವರ್ತಿಗಳ ಉಗಮಕ್ಕೆ ಸಹಕರಿಸಿದ್ದನ್ನು ನೆನೆಯುತ್ತಾರೆ. ಬ್ರಿಟೀಷರು ಒಂದುಗೂಡಿಸಿದ್ದ ಊಳಿಗಮಾನ್ಯತೆಯ ಕಸದಿಂದ ಮಧ್ಯವರ್ತಿ ವರ್ಗ ಉದ್ಭವಿಸಿತು. ನಿವೃತ್ತಿ ವೇತನ ಪಡೆದ ಅಥವಾ ‘ನೆಲೆ ಕಂಡ’ ಈ ಊಳಿಗಮಾನ್ಯ ಶಕ್ತಿಗಳು ಅಥವಾ ಬ್ರಿಟೀಷರಿಂದ ನೇರವಾಗಿ ಸನ್ನದು ಪಡೆದ ಅವರ ವಂಶಸ್ಥರು ಅಧಿಕಾರದ ದಾರಿ ಅಥವಾ ವಸಾಹತಿನ ವ್ಯಾಪಾರದ ಹಾದಿ ಹಿಡಿದರು; ವ್ಯಾಪಾರ ವಹಿವಾಟಿನ ಮೊದಲ ರೂಪ ಹಣವನ್ನು ಸಾಲದ ರೂಪದಲ್ಲಿ ನೀಡುವುದು. ಭೂಮಾಲೀಕ ಸಮುದಾಯದಲ್ಲಾದ ಈ ವ್ಯತ್ಯಾಸ ಹಲವು ವರುಷಗಳ ಬ್ರಿಟೀಷ್ ಆಡಳಿತ ಮತ್ತು ವ್ಯಾಪಾರದಲ್ಲಿ ವ್ಯಾಪಾರದಲ್ಲಿ ಮುಂದುವರೆದ ಪರಿಣಾಮವಾಗಿ ಮಧ್ಯವರ್ತಿ ವರ್ತಕರು ಮತ್ತು ಅಧಿಕಾರಿಗಳ ಮೊದಲ ಸಾಲು ರೂಪುಗೊಂಡಿತು. ರೂಪುಗೊಳ್ಳುತ್ತಿದ್ದ ಈ ಮಧ್ಯವರ್ತಿ ವರ್ಗದ ಮೂಲಕ್ಕೆ ಕೈಗೊಂಬೆ ರಾಜರನ್ನೂ ಸೇರಿಸಬೇಕು. ಊಳಿಗಮಾನ್ಯತೆಯ ಕೈಗೊಂಬೆಯಾಗಿದ್ದ ಒಡೆಯರ್ ಸಾಮ್ರಾಜ್ಯ ಬ್ರಿಟೀಷ್ ಬಂಡವಾಳದ ಬೆಳವಣಿಗೆಯೊಂದಿಗೆ ನಿಧಾನವಾಗಿ ಮಧ್ಯವರ್ತಿಯಾಗಿ ಭ್ರಷ್ಟಗೊಂಡಿತು. 
ಸಂಡೂರಿನ ‘ಸಂತೃಪ್ತ’ ಘೋರ್ಪಡೆಗಳನ್ನೂ ಈ ಸಂದರ್ಭದಲ್ಲಿ ನೆನೆಸಿಕೊಳ್ಳಬೇಕು. ಮರಾಠರೆಡೆಗಿದ್ದ ತಮ್ಮ ನಿಷ್ಠೆಯನ್ನು ಘೋರ್ಪಡೆಗಳು ಬದಲಿಸಿದರು. ಮನ್ರೋನನ್ನು ಬೆಂಬಲಿಸುತ್ತ ತಮ್ಮ ಬಂದೂಕುಗಳನ್ನು ಮಾಜಿ ಗುರುಗಳಾದ ಪೇಶ್ವೆಯರೆಡೆಗೆ ತಿರುಗಿಸಿ, ಗೆದ್ದು ಬಳ್ಳಾರಿ ಜಿಲ್ಲೆಯ ಸಂಡೂರು ಸಾಮ್ರಾಜ್ಯವನ್ನು ತಮ್ಮದಾಗಿಸಿಕೊಂಡರು. ಹತ್ತೊಂಬತ್ತನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿ ಪ್ರಮುಖ ವರ್ತಕರಾಗಿ ಮತ್ತು ಆಯಕಟ್ಟಿನ ಜಾಗಗಳಲ್ಲಿನ ಅಧಿಕಾರಿಗಳಾಗಿ ಅವರು ಹೊರಹೊಮ್ಮಿದರು. ಅವರು ಒರಗಿ ಕುಳಿತ ಆರಾಮು ಖುರ್ಚಿ ಮೂರು ಕಾಲಿನ ಮೇಲೆ ಸಮತೋಲನ ಸಾಧಿಸಿತ್ತು – ಒಂದು ಕಾಲು ಊಳಿಗಮಾನ್ಯತೆ, ಒಂದು ವ್ಯಾಪಾರ ಮತ್ತೊಂದು ಅಧಿಕಾರಶಾಹಿತನ. 
ಮಸೂದ್ ದನ್ಮೋಲೆ ಸರಿಯಾಗಿ ಹೇಳುತ್ತಾನೆ: “…ಬಹಳ ಸ್ಪಷ್ಟವಾಗಿ ತಿಳಿಯುವ ಅಂಶವೆಂದರೆ ಈ ಸಾಂಪ್ರದಾಯಿಕ ಆಳ್ವಿಕೆದಾರರು ಅಥವಾ ಅವರ ವಂಶಸ್ಥರು ಅಥವಾ ಅವರಂತೆಯೇ ಯೋಚಿಸುವವರು, ಸ್ಥಳೀಯ ಸಮುದಾಯ ಮತ್ತು ವಿದೇಶಿ ಬಂಡವಾಳಗಾರರ ಮಧ್ಯೆ ಇದ್ದ ಮಧ್ಯಮವರ್ಗದ ಮಧ್ಯವರ್ತಿಗಳ ಬೆಳವಣಿಗೆಗೆ ಮೊಲೆಯುಣಿಸುವವರಾಗಿದ್ದರು. ಈ ಹೊಸ ಸ್ಥಳೀಯ ಮಧ್ಯವರ್ತಿಗಳ ವರ್ಗ, ಹೆಚ್ಚೂ ಇಲ್ಲ ಕಡಿಮೆಯೂ ಅಲ್ಲ, ಸಾಮ್ರಾಜ್ಯಶಾಹಿಯ ಕೈಕೆಲಸದವರಾಗಿದ್ದರು.” (73) 
ಹಾಗಾಗಿ ಮಧ್ಯವರ್ತಿಗಳ ಸೃಷ್ಟಿಗೆ ಅತ್ಯಗತ್ಯವಾಗಿ ಬೇಕಿದ್ದ ಮೂಲವಾಗಿತ್ತು ಊಳಿಗಮಾನ್ಯತೆ. ಊಳಿಗಮಾನ್ಯತೆಯ ಹಲಗೆಯಿಂದ ಮಧ್ಯವರ್ತಿ ಅಧಿಕಾರಶಾಹಿ ಮತ್ತು ವರ್ತಕರು ಚಿಮ್ಮಿದರು. ಮೊದಲಿಗೆ ಮಧ್ಯವರ್ತಿ ವರ್ತಕರ ಮೂಲವನ್ನು ನೋಡೋಣ. ಈ ವರ್ಗ ಹಲವು ವಿಧದಲ್ಲಿ ಹೊರಹೊಮ್ಮಿತು. 
ಮೊದಲಿಗೆ, ನಮ್ಮ ಬಳಿ ಮಾವೋ ತ್ಸೇ ತುಂಗ್ ತನ್ನ Analysis of the classes in chinaದಲ್ಲಿ ವಿವರಿಸಿದ ಮಾದರಿಯಿದೆ; ಮದ್ಯವರ್ತಿಗಳು ವಸಾಹತುಶಾಹಿ ಕಾರ್ಖಾನೆಗಳ ವ್ಯಾಪಾರದ ಸ್ಥಳಗಳಲ್ಲಿ ಅಧಿಕಾರಿಗಳ ರೂಪದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಯಿತು. (74) ಕರ್ನಾಟಕದ ಬಂದರುಗಳು ಬ್ರಿಟೀಷರ ವ್ಯಾಪಾರದ ಪ್ರವೇಶದ್ವಾರವಾಗಿರಲಿಲ್ಲ; ಕಲ್ಕತ್ತಾ, ಬಾಂಬೆ, ಮದ್ರಾಸ್ ಮತ್ತು ಸೂರತ್ ಈ ಪಾತ್ರವನ್ನು ನಿರ್ವಹಿಸುತ್ತಿದ್ದವು, ಮಾವೋ ವಿವರಿಸಿದ ಮಧ್ಯಮವರ್ತಿಗಳ ಉಗಮದ ಮಾದರಿಯನ್ನು ಈ ನಗರಗಳಲ್ಲಿ ಕಾಣಬಹುದು. ಕರ್ನಾಟಕದ ಕಾಫೀ ವ್ಯಾಪಾರವನ್ನು ಉದಾಹರಣೆಯಾಗಿಸಿಕೊಂಡು ಮಧ್ಯವರ್ತಿತನದ ನೇರ ಹೇರಿಕೆಯನ್ನು ಕರ್ನಾಟಕದಲ್ಲಿ ಕಾಣಬಹುದು, ಸಣ್ಣ ಪ್ರಮಾಣದಲ್ಲಿ. (75) 
ಈ ವಿದ್ಯಮಾನಗಳನ್ನು ಧೃಡೀಕರಿಸುತ್ತ ಮಾಲತಿ. ಕೆ. ಮೂರ್ತಿ ಬರೆಯುತ್ತಾರೆ: “….ದಕ್ಷಿಣ ಕೆನರಾ ಮತ್ತು ವಿದೇಶಗಳ ನಡುವೆ ನೇರ ವ್ಯಾಪಾರ ಕಡಿಮೆಯಿತ್ತು.” (76) ಈ ಸಮಯದ ಬ್ರಿಟೀಷ್ ವರದಿಗಳು: “ಯಾವ ದೇಶದ ಹಡಗುಗಳೂ ಈ ಜಿಲ್ಲೆಯ ಬಂದರುಗಳಿಗೆ ಯಾವತ್ತೂ ಬಂದಿರಲಿಲ್ಲ” ಎಂದು ಹೇಳುತ್ತವೆ. (77) ಮತ್ತಷ್ಟು ಸೇರಿಸುತ್ತ ಮಾಲತಿ: “ಈ ಪ್ರದೇಶದಲ್ಲಿ ಯುರೋಪಿಯನ್ ವರ್ತಕರ ಹೆಚ್ಚು ಕಮ್ಮಿ ಎಲ್ಲಾ ವ್ಯಾಪಾರವನ್ನೂ ದಲ್ಲಾಳಿಗಳ ಮೂಲಕ, ಸಹಾಯಕರ ನೆರವಿನೊಂದಿಗೆ ನಡೆಸಲಾಗುತ್ತಿತ್ತು.” (78) 
1818ರಲ್ಲಿ ಬಾಂಬೆಯೊಂದರ ವ್ಯಾಪಾರವೇ ಇಡೀ ಕೆನರಾದ ವಹಿವಾಟಿಗಿಂತ ನಲವತ್ತು ಪ್ರತಿಶತಃ ಅಧಿಕವಿತ್ತು. (79) ಕರ್ನಾಟಕದ ಕರಾವಳಿಯುದ್ದಕ್ಕಿದ್ದ ಬಂದರುಗಳು ಒಳನಾಡು ಮತ್ತು ಬಾಂಬೆಯ ನಡುವಿನ ಸಾಗಾಣಿಕೆಯ ಸ್ಥಳವಾಗಿತ್ತು. 
ಬ್ರಿಟೀಷರು ಕನ್ನಡ, ತುಳು ಮತ್ತು ಕೊಡವ ನಾಡಿನಲ್ಲಿ ನೇರವಾಗಿ ವ್ಯಾಪಾರ ಮಾಡದ ಕಾರಣ ಕರ್ನಾಟಕದ ಮಧ್ಯವರ್ತಿ ವರ್ತಕರು ದಲ್ಲಾಳಿಗಳಾಗಿ ಬಾಂಬೆ ಮತ್ತು ಮದ್ರಾಸಿನ ಮಧ್ಯವರ್ತಿಗಳಾದರು. ಹಾಗಾಗಿ ಗಮನಿಸಿದಾಗ – ಯಾವಾಗಲೂ ಅಲ್ಲದಿದ್ದರೂ – ಹತ್ತೊಂಬತ್ತನೇ ಶತಮಾನದಲ್ಲಿ ಆಕ್ರಮಣಕ್ಕೊಳಗಾದ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಮಧ್ಯವರ್ತಿ ವರ್ತಕರ ಬೆಳವಣಿಗೆ ಕುಂಠಿತವಾಗಿತ್ತು. ಹತ್ತೊಂಬತ್ತನೇ ಶತಮಾನ ಬ್ರಿಟೀಷರಿಗೆ ಹದಿನೆಂಟನೇ ಶತಮಾನಕ್ಕಿಂತ ಹೆಚ್ಚಿನ ಪ್ರದೇಶಗಳನ್ನು ನೀಡಿತು. ಇದು ಏನನ್ನು ಸೂಚಿಸುತ್ತಿತ್ತೆಂದರೆ ಈಗಾಗಲೇ ಬಾಂಬೆ, ಮದ್ರಾಸ್, ಕಲ್ಕತ್ತಾ ಮತ್ತು ಸೂರತ್ತಿನಲ್ಲಿ ವಸಾಹತುಶಾಹಿಯ ವ್ಯಾಪಾರ ವಹಿವಾಟಿನಲ್ಲಿ ಗೂಡು ಕಟ್ಟಿಕೊಂಡಿದ್ದ ಮಧ್ಯವರ್ತಿಗಳಿಗೆ ಬ್ರಿಟೀಷ್ ಸಾಮ್ರಾಜ್ಯ ಇಂಚಿನಷ್ಟು ವಿಸ್ತಾರಗೊಂಡರೂ ಅಪಾರ ಅನುಕೂಲವಾಗುತ್ತಿತ್ತು. ಬ್ರಿಟೀಷರ ಸೇವೆಗೈದ ಕರ್ನಾಟಕದ ವರ್ತಕರು ನೇರ ಮಧ್ಯವರ್ತಿಗಳಾಗದಿದ್ದರೂ ತಮ್ಮ ಮಧ್ಯವರ್ತಿ ವ್ಯಕ್ತಿತ್ವಕ್ಕೆ ‘ಚ್ಯುತಿ’ ಬರುವಂತೆ ನಡೆದುಕೊಳ್ಳಲಿಲ್ಲ ಮತ್ತು ಮಧ್ಯವರ್ತಿಗಳ ಆರ್ಥಿಕ ಮತ್ತು ರಾಜಕೀಯ ಪಾತ್ರ ವಸಾಹತುಶಾಹಿಯ ಸೇವೆಯಲ್ಲಿರುವಂತೆ ನೋಡಿಕೊಂಡರು. ದಲ್ಲಾಳಿಗಳ ದಲ್ಲಾಳಿಗಳಾಗಿದ್ದ ಒಂದಷ್ಟು ಕುಳ್ಳಗೆ, ದಪ್ಪಕ್ಕಿದ್ದ ಇವರು ರುಪಾಯಿಗಳಲ್ಲಿ ವ್ಯವಹರಿಸುತ್ತಿದ್ದರೆ ಇವರ ಬಲಾಢ್ಯ ದಾಯಾದಿಗಳು ಪೌಂಡ್ ಮತ್ತು ಬಾಂಬೆಯಲ್ಲಿ ಸ್ಟರ್ಲಿಂಗಿನಲ್ಲಿ ವ್ಯವಹಾರ ಮಾಡುತ್ತಿದ್ದರು. 
ಬ್ರಿಟೀಷರು ಪರಿಚಯಿಸಿದ ಆರ್ಥಿಕತೆಯ ಗುರಿ ಸ್ಥಳೀಯ ವರ್ತಕರ ಬಹುದೊಡ್ಡ ಗುಂಪನ್ನು ಹೇಳಹೆಸರಿಲ್ಲದಂತೆ ಮಾಡುವುದಾಗಿತ್ತು ಮತ್ತು ಆ ಗುಂಪಿನ ಕೆಲವೇ ಕೆಲವರನ್ನು ಮಧ್ಯವರ್ತಿಗಳನ್ನಾಗಿ ಪರಿವರ್ತಿಸುವುದಾಗಿತ್ತು; ಆಧಾರಗಳ ಕೊರತೆಯಿಂದ ಈ ಮೇಲ್ಪದರದ ಜನರ್ಯಾರು ಎಂದು ಗುರುತಿಸುವುದು ನಮಗೆ ಸಾಧ್ಯವಾಗುತ್ತಿಲ್ಲ. 
ಇವೆಲ್ಲವೂ ಕರ್ನಾಟಕದಲ್ಲಿ ಮಧ್ಯವರ್ತಿ ವರ್ತಕರ ರೂಪುಗೊಳ್ಳುವಿಕೆಗೆ ನಡೆಯುತ್ತಿದ್ದ ಚಟುವಟಿಕೆಗಳಾದರೆ, ಒಳಗೊಳಗೇ ಮತ್ತೊಂದು ಬೆಳವಣಿಗೆ ನಡೆಯುತ್ತಿತ್ತು. ಕೆಲವು ನೇರ ಮಧ್ಯವರ್ತಿಗಳು ಬ್ರಿಟೀಷ್ ಸಾಮ್ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದರು. ಕರ್ನಾಟಕ ಇತಿಹಾಸದ ಈ ಭಾಗ ರಾಜಕೀಯವಾಗಿ ಬಹಳ ಪ್ರಮುಖವಾದ ಸಂಕೇತವಾಗಿದೆ. ಆರನೇ ಪಾವ್ ಲಾವ್ (Pavlov) ಇದರ ಬಗ್ಗೆ ಬರೆಯುತ್ತ: “ಜಗತ್ ಸೇಠರು 1782ರವರೆಗೆ ಕಂಪನಿಯ ಬ್ಯಾಂಕರುಗಳಾಗಿದ್ದರು. ಅವರ ಜಾಗಕ್ಕೆ ಅಗರ್ ವಾಲ್ ಸಮುದಾಯದ ದೊಡ್ಡ ಮಾರ್ವಾಡಿ ಬ್ಯಾಂಕರುಗಳ ಸದಸ್ಯರಲ್ಲೊಬ್ಬರಾದ ಗೋಪಾಲ್ ದಾಸರ ಮಾರ್ವಾಡಿ ಬ್ಯಾಂಕ್ ಬಂತು. ಅವನು ಮತ್ತವನ ತಮ್ಮ 1770ರಲ್ಲಿ ಕಲ್ಕತ್ತಾಗೆ ಹೋದರು. ಮತ್ತಲ್ಲವರ ಅದೃಷ್ಟ ಖುಲಾಯಿಸಿತು. ಅವನ ಮಗ ಭವಾನಿದಾಸ್ ಬ್ರಿಟೀಷರ ಸೈನ್ಯ 1799ರಲ್ಲಿ ಮೈಸೂರನ್ನಾಕ್ರಮಿಸುವಾಗ ಶಸ್ತ್ರಾಸ್ತ್ರಗಳನ್ನು ಪೂರೈಸಿದರು. ಭವಾನಿದಾಸರ ಸೇವೆ ಎಷ್ಟು ಮಹತ್ವದ್ದಾಗಿತ್ತೆಂಬುದಕ್ಕೆ ಆಕ್ರಮಣಕಾರರಾದ ಬ್ರಿಟೀಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ನಂತರ ಟಿಪ್ಪು ಸುಲ್ತಾನನ ಖಡ್ಗವನ್ನು ಅವರಿಗೆ ನೀಡಿದ್ದೇ ಸಾಕ್ಷಿ.”(80) 
ವಸಾಹತುಶಾಹಿಯ ವಿರುದ್ಧ ಕಾದಾಡಿದ, ಬ್ರಿಟೀಷರ ವಿರುದ್ಧದ ಹೋರಾಟದ ಸಂಕೇತವಾಗಿದ್ದ ಖಡ್ಗ ಮಾರ್ವಾಡಿ ಮಧ್ಯವರ್ತಿಗಳಿಗೆ ಬಹುಮಾನವಾಗಿ ದಕ್ಕಿದ್ದು ಇತಿಹಾಸದ ವ್ಯಂಗ್ಯವೇ ಸರಿ. ಈ ಬಹುಮಾನ ಕರ್ನಾಟಕದ ಮಾರುಕಟ್ಟೆಯನ್ನು ಕರ್ನಾಟಕದ ಶತ್ರುಗಳಿಗೆ ಉಡುಗೊರೆಯಾಗಿ ಒಪ್ಪಿಸುವುದರ ಭವಿಷ್ಯವಾಣಿಯಾಗಿತ್ತು ಮತ್ತು ಕರ್ನಾಟಕದಲ್ಲಿ ಬ್ರಿಟೀಷ್ ವಸಾಹತಿನ ಸೇವೆಗೆ ಮತ್ತು ಅವರ ಲೂಟಿಯ ರಕ್ಷಣೆಯ ಹೊಣೆಯನ್ನು ಈ ಗುಲಾಮರಿಗೆ ಒಪ್ಪಿಸಿತ್ತು. ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ಬನಿಯಾಗಳು ಬಿಜಾಪುರ ಭಾಗದಲ್ಲಿ ಮಧ್ಯವರ್ತಿ ಬಲೆ ಹರಡಿದ್ದನ್ನು ಈಗಾಗಲೇ ನೋಡಿದ್ದೇವೆ. (81) 
ಮೈಸೂರಿನ ಹೃದಯ ಭಾಗಕ್ಕೆ ಪಶ್ಚಿಮ ಮತ್ತು ವಾಯುವ್ಯ ಭಾರತದಿಂದ ಬಂದ ವಸಾಹತಿನ ಮಧ್ಯವರ್ತಿಗಳ ಬಗ್ಗೆ ತಿಳಿಯುವುದು ಆನಂದ ರಂಗ ಪಿಳ್ಳೈರ (ಎ.ಆರ್. ಪಿಳ್ಳೈ) ಡೈರಿಯಲ್ಲಿನ ಬರಹಗಳನ್ನು ಭೇಟಿಯಾದಾಗ. ಪಿಳ್ಳೈ ಫ್ರೆಂಚ್ ವಸಾಹತಿನ ಪ್ರಮುಖ ಮಧ್ಯವರ್ತಿಗಳಾಗಿದ್ದರು, ಫ್ರೆಂಚರ ವಹಿವಾಟಿನಲ್ಲಿ ಅವರ ಪಾತ್ರ ಗಮನಾರ್ಹವಾಗಿತ್ತು. 1709ರಲ್ಲಿ ಹುಟ್ಟಿದ್ದ ಎ.ಆರ್. ಪಿಳ್ಳೈ 1716ರಲ್ಲಿ ಮದ್ರಾಸಿನಿಂದ ಪಾಂಡಿಚೇರಿಗೆ ವಲಸೆ ಹೋದರು. ತಮ್ಮ ಭಾಮೈದ, ಫ್ರೆಂಚಿನ ಪ್ರಮುಖ ಸ್ಥಳೀಯ ಏಜೆಂಟಾಗಿದ್ದ ನನಿಯಾ ಪಿಳ್ಳೈರವರ ಸೂಚನೆಯ ಮೇರೆಗೆ.” (82) 
ತಮಿಳುನಾಡಿನಲ್ಲಿ ಅನೇಕ ವ್ಯಾಪಾರಗಳನ್ನು ಸ್ಥಾಪಿಸಿ “ಯುರೋಪಿನ ವಸ್ತುಗಳಿಗೆ ದೇಶದೊಳಗಡೆ ಮಾರುಕಟ್ಟೆ ಸ್ಥಾಪಿಸುವ ಕೆಲಸವನ್ನು ಚುರುಕುಗೊಳಿಸಿದರು” (83) 
ಆದಾಗ್ಯೂ, ಮುಖ್ಯವಾದ ಅಂಶವೆಂದರೆ “ಚಿಕ್ಕದೇವರಾಜರ ನಂತರ ಬಂದ ಒಡೆಯರ್ ಗಳು ಫ್ರೆಂಚಿನ ಮಧ್ಯವರ್ತಿಗಳಾದ ಆನಂದ ರಂಗ ಪಿಳ್ಳೈರಂತವರ ಚಟುವಟಿಕೆಗಳು ವ್ಯಾಪಿಸುವುದಕ್ಕೆ ಅವಕಾಶಗಳನ್ನೊದಗಿಸಿದರು; ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವವರ ಸಹಾಯಕ್ಕೆ ಕರ್ನಾಟಕದ ವರ್ತಕರನ್ನು ನಂಬದೆ ಕರ್ನಾಟಕದ ಒಳನಾಡಿನಲ್ಲಿ ವಸಾಹತುಶಾಹಿಯ ಆರ್ಥಿಕ ದಲ್ಲಾಳಿಗಳಾಗಿದ್ದ ಮಾರವಾಡಿ ಮತ್ತು ಗುಜರಾತಿಗಳನ್ನು ನಂಬಿದರು. ಆನಂದ ರಂಗ ಪಿಳ್ಳೈರವರ ಡೈರಿಯಲ್ಲಿ ಅವರ ಜೊತೆ ವ್ಯವಹರಿಸಿದ ಸಂಬು ದಾಸ್ ಗೆ ಪುರಸ್ಕಾರ ಕೊಟ್ಟ ಬಗ್ಗೆ ಹೇಳಲಾಗಿದೆ. ಅದು ಮೈಸೂರಿನ ಶ್ರೀರಂಗಪಟ್ಟಣದ ಗುಜರಾತಿ ಲಾಲ್ ದಾಸ್ ಗೆ ಸಿಗಬೇಕಿತ್ತು.” (84) 
ಮೈಸೂರಿನ ವಸಾಹತು ವಿರೋಧಿ ಸರಕಾರದ ಪತನದ ನಂತರ ಹೊಸ ಮಾರುಕಟ್ಟೆಗೆ ವಸಾಹತುಶಾಹಿಯ ಪ್ರವೇಶದ ದಲ್ಲಾಳಿಗಳಾಗಿ ಪಶ್ಚಿಮ ಭಾರತದ ಸ್ಥಾಪಿತ ಮಧ್ಯವರ್ತಿ ಕುಟುಂಬಗಳು ದಕ್ಷಿಣದ ಕಡೆಗೆ ಹೆಜ್ಜೆ ಹಾಕಿದರು. ಇದು ಎಷ್ಟು ವೇಗವಾಗಿ ನಡೆಯುತ್ತಿತ್ತೆಂದರೆ ಮಂಗಳೂರು ಬ್ರಿಟೀಷರ ಕೈವಶವಾದ ತಿಂಗಳ ನಂತರ ಅಲ್ಲಿಗೆ ಭೇಟಿ ಕೊಟ್ಟ ಬುಚನನ್ನಿಗೆ ಬದಲಾವಣೆಗಳು ಗೋಚರಿಸಲಾರಂಭಿಸುತ್ತು. ಬುಚನನ್ ಬರೆಯುತ್ತಾನೆ: “ಹೈದರಾಲಿಯ ಕಾಲದ ಪ್ರಮುಖ ವರ್ತಕರು ಮಾಪಿಳ್ಳೈ ಮತ್ತು ಕೊಂಕಣಿಗಳು (ಗೌಡ ಸಾರಸ್ವತ ಬ್ರಾಹ್ಮಣರು); ಕಂಪನಿ ಈ ಸರಕಾರವನ್ನು ವಶಪಡಿಸಿಕೊಂಡ ನಂತರ ಕೆಲವರು ಗುಜರಾತಿನಿಂದ ಬಂದಿದ್ದಾರೆ, ಹಲವರು ಸೂರತ್, ಖಚ್, ಬಾಂಬೆ ಮತ್ತು ಉತ್ತರದ ಇತರೆ ಜಾಗಗಳಿಂದ ಬಂದಿದ್ದಾರೆ. ಇವರು ಮುಖ್ಯವಾಗಿ ವೈಶ್ಯ ಜಾತಿಗೆ ಸೇರಿದವರು, ಪಾರ್ಸಿ ಜನಾಂಗದವರೂ ಹಲವರಿದ್ದಾರೆ….. ವಹಿವಾಟಿಗೆ ಉಪಯೋಗಿಸಲಾಗುವ ಹಡಗುಗಳು ಇತರೆ ಬಂದರುಗಳಿಗೆ ಸೇರಿರುವುದೇ ಜಾಸ್ತಿ.” (85) 
ಈ ಅಂಶವನ್ನು ಆರ್. ಡಿ. ಚೋಕ್ಸಿ (Choksey) ದೃಡೀಕರಿಸುತ್ತ: “ಬ್ರಿಟೀಷ್ ಆಕ್ರಮಣದ ತರುವಾಯ ಮಾರವಾಡಿಗಳು ಹೆಚ್ಚಿನ ಸಂಖೈಯಲ್ಲಿ ನೆಲೆ ಕಂಡಿದ್ದಾರೆ. ಅವರಲ್ಲಿನ ಬಹುತೇಕರು ಬಾಂಬೆಯಿಂದ ಬಂದಿದ್ದಾರೆ, ಬನಿಯಾಗಳಂತಲ್ಲದೆ, ಇವರು ದೂರದೂರದ ಹಳ್ಳಿಗಳಿಗೆ ಹೋಗಿ ನೆಲೆ ನಿಂತು ನಿಧಾನಕ್ಕೆ ಆ ಹಳ್ಳಿಗಳಲ್ಲಿ ಬಡ್ಡಿ ಕೊಡುತ್ತಿದ್ದ ಸ್ಥಳೀಯರನ್ನು ಇಲ್ಲವಾಗಿಸಿದರು.” (86) 
ಈ ವಿದ್ಯಮಾನವನ್ನು ಸುನಿತಿ ಘೋಷ್ ವಿವರಿಸುತ್ತಾ: “ಕಡಲಾಚೆ ಮತ್ತು ಸ್ಥಳೀಯ ವ್ಯವಹಾರದ ಪರಿಸ್ಥಿತಿಯಲ್ಲಿ ವಿದೇಶಿ ವರ್ತಕರ ದಲ್ಲಾಳಿಗಳಾಗದ ಭಾರತೀಯ ವರ್ತಕರು ಪತನ ಕಂಡು ಮಧ್ಯವರ್ತಿ ವರ್ತಕರು ಶಕ್ತರಾಗಿದ್ದನ್ನು ವಿಧಿ ಕೂಡ ತಡೆಯಲು ಸಾಧ್ಯವಿರಲಿಲ್ಲ.” (87) 
ವಸಾಹತು ಸರಕಾರದ ಮಧ್ಯಸ್ಥಿಕೆ, ಬ್ರಿಟೀಷರ ನೇರ ಆಡಳಿತವಿದ್ದ ಬೆಂಗಳೂರಿನ ಕಂಟೋನ್ಮೆಂಟಿನಲ್ಲಿ ಸ್ಥಳೀಯ ವರ್ತಕರ ವಿರುದ್ಧ ಮದ್ರಾಸಿನ ಮಧ್ಯವರ್ತಿಗಳನ್ನು ರಕ್ಷಿಸಿ ಪ್ರೋತ್ಸಾಹಿಸಿದ್ದನ್ನು ನರೇಂದ್ರ ಫಣಿ ಧೃಡೀಕರಿಸುತ್ತಾರೆ. ಅವರು ಬರೆಯುತ್ತಾರೆ: “ಬ್ರಿಟೀಷರ ಸಂಪೂರ್ಣ ನಿಯಂತ್ರಣದಲ್ಲಿದ್ದ ಆಡಳಿತ ಮತ್ತು ಸೈನ್ಯವನ್ನು ಮತ್ತಷ್ಟು ಬಲಪಡಿಸಿದ್ದು ಬಹುತೇಕ ನಿವಾಸಿಗಳು ಮೈಸೂರೇತರರಾಗಿರುವಂತೆ ನೋಡಿಕೊಂಡದ್ದು. ಈ ಕ್ರಮ ಮೈಸೂರು ರಾಜ್ಯದ ಮೇಲಿನ ನಿಯಂತ್ರಣವನ್ನು ಪ್ರಭಾವಿಯಾಗಿಸಲು ಬಹುಶಃ ಅವಶ್ಯಕವಾಗಿತ್ತು, ಬ್ರಿಟೀಷರ ಸಂಪೂರ್ಣ ನಿಯಂತ್ರಣವಿಲ್ಲದ ಸಾಮ್ರಾಜ್ಯದ ‘ಬ್ರಿಟೀಷ್ ದ್ವೀಪವಾಗಿತ್ತು’ ಕಂಟೋನ್ಮೆಂಟ್; ಮೈಸೂರಿನಿಂದ ಹೊರತಾಗಿ ಅದರಲ್ಲೂ ಬೆಂಗಳೂರಿನ ಪೇಟೆಯಿಂದ ಹೊರತಾಗಿ ಉಳಿಸಿಕೊಳ್ಳುವ ಜರೂರಿತ್ತು. ಇಲ್ಲಿನ ಅಧಿಕಾರಿಗಳಿಗೆ ‘ಸಾಧ್ಯವಾದಷ್ಟು ಖಾಸಗಿ ಕಟ್ಟಡಗಳು ಬೆಂಗಳೂರಿನ ಪೇಟೆಯ ಕಡೆಗೆ ಬೆಳೆಯದಂತೆ’ ನೋಡಿಕೊಳ್ಳಬೇಕೆಂದು ಸೂಚಿಸಲಾಗಿತ್ತು. ಈ ಸೂಚನೆ ಕೇವಲ ಭೌಗೋಳಿಕ ಉದ್ದೇಶದ್ದಾಗಿದ್ದರೆ ಅದನ್ನು ಮೀರುವುದು ಅಷ್ಟೇನೂ ಮಹತ್ವದ್ದಾಗಿರುತ್ತಿರಲಿಲ್ಲ. ಹಾಗಾಗಿ ಬ್ರಿಟೀಷರು ಕಂಟೋನ್ಮೆಂಟ್ ಮತ್ತು ಬೆಂಗಳೂರು ನಗರದ ನಡುವಿನ ವ್ಯಾವಹಾರಿಕ ಸಂಬಂಧಗಳು ಒಂದು ಮಿತಿಯಲ್ಲಿರುವಂತೆ ನೋಡಿಕೊಂಡರು. ಪೇಟೆಯಲ್ಲಿ ಇದೇ ಸಮಯದಲ್ಲಿ ಸುರಕ್ಷಿತವಾಗಿದ್ದ ವರ್ತಕರು ಕಂಟೋನ್ಮೆಂಟಿನಲ್ಲಿ ಉನ್ನತಿ ಪಡೆಯದಂತೆ ‘ನ್ಯಾಯಬದ್ಧ’ವಾಗಿಯೇ ಹೊರಗಿಡಲಾಯಿತು. ಪೇಟೆಯ ವರ್ತಕರಿಗೆ ಕಂಟೋನ್ಮೆಂಟಿನಲ್ಲಿ ಅಂಗಡಿ ತೆರೆಯುವ ಅವಕಾಶವಿರಲಿಲ್ಲ. ಆದರೆ ತಮ್ಮ ವಸ್ತುಗಳನ್ನು ಕಂಟೋನ್ಮೆಂಟಿನ ಸಾಮಾನ್ಯ ಮತ್ತು ರೆಜಿಮೆಂಟಿನ ಬಜಾರುಗಳಿಗೆ ವೋಲ್ ಸೇಲ್ ದರದಲ್ಲಿ ಮಾರಾಟಮಾಡಬಹುದಾಗಿತ್ತು.” (88)

ಮುಂದೆ: 
ಮಧ್ಯವರ್ತಿ - ಖರೀದಿದಾರ ವರ್ಗದ ಉಗಮಕ್ಕಿದ್ದ ಸಾಮಾಜಿಕ ಸ್ಥಿತಿಗತಿ ಭಾಗ 2

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

ಬೀಗ ಜಡಿದ ಆ ಮನೆ


Kajooru Sathish's photo.

ಮಲಯಾಳಂ ಮೂಲ- ಅಜೀಶ್ ದಾಸನ್

ಕನ್ನಡಕ್ಕೆ-
ಕಾಜೂರು ಸತೀಶ್
ಆ ಮನೆಗೆ ಬೀಗ ಜಡಿದು
ಎಷ್ಟೋ ದಿನಗಳಾದವು.

ಒಂದು ರಾತ್ರಿ
ಒಬ್ಬ ಕಳ್ಳ
ಮನೆಯೊಳಗೆ ಎಲ್ಲರೂ ನಿದ್ರಿಸುತ್ತಿರಬಹುದು ಎಂದುಕೊಂಡು
ಹೆಂಚು ತೆಗೆದು
ಅಟ್ಟದಿಂದಿಳಿದು
ಬೆಕ್ಕಿನ ಹೆಜ್ಜೆಯಿಟ್ಟು
ಬಾಗಿಲು, ಕಿಟಕಿಯ ಪರದೆಯೊಳಗೆಲ್ಲ ಅಡಗಿ
ಸದ್ದಿಲ್ಲದೆ ಹುಡುಕಾಡತೊಡಗಿದ.

ಅವನ ಕೈಬೆರಳುಗಳಿಂದ
ಕಾಲಿನ ಹೆಜ್ಜೆಗಳಿಂದ
ಸೂಕ್ಷ್ಮ ನೋಟದಿಂದ
ಮೈ 'ಜುಂ' ಎಂದು
ರೋಮಗಳು ನಿಮಿರಿ
ಕಣ್ಣುಗಳು ಕಿರಿದಾಗಿ
ಎಷ್ಟೋ ದಿನಗಳಿಂದ
ಬೀಗ ಜಡಿದ ಆ ಮನೆಗೆ
ಕಚಗುಳಿಯಿಟ್ಟಂತೆನಿಸುತಿದೆ
ಕಚಗುಳಿಯಿಟ್ಟಂತೆನಿಸುತಿದೆ!
**

ಇನ್ನೊಂದಿಷ್ಟು ಇರುವೆಗಳುಬಿ ಎಂ. ಬಶೀರ್

1
ಈ ಜಗತ್ತಿನಲ್ಲಿ ನನಗೆ
ಯಾರನ್ನೂ ಕಳೆದು ಕೊಳ್ಳೋದಕ್ಕಿಲ್ಲ
ಒಂದು ಸಣ್ಣ
ಇರುವೆಯನ್ನೂ ಕೂಡ
2
ಒಂದು ಇರುವೆ
ನನ್ನ ಬಲವಾಗಿ ಕಚ್ಚಿತು
ಯಾವ ಜನ್ಮದ ಸಾಲವೋ
ಈ ಜನ್ಮದಲ್ಲಿ ತೀರಿತು
3
ನದಿಯಲ್ಲಿ ಉಸಿರಿಲ್ಲದೆ
ತೇಲುತ್ತಿರುವ ದೇಹದ ಮೇಲೆ
ಉಸಿರಾಡುತ್ತಾ
ಇರುವೆ
4
ಆನೆಯ ಮೇಲೆ
ಕುಳಿತ ರಾಜ
ಅವನ ಕಿರೀಟದ
ತುತ್ತ ತುದಿಯ ಮೇಲೆ
ಪಾದ ಊರಿ
ಇರುವೆ !
5
ಅವನು ಇರುವೆಯನ್ನು ತುಳಿದ
ನನ್ನ ಪ್ರಾಣ ಇರುವೆಯೊಳಗಿರುವ
ಗುಟ್ಟು
ಅವನಿಗೆ ತಿಳಿದು ಹೋಗಿರಬೇಕು

ರೋಹಿತ್ ವೇಮುಲನಿಗಾಗಿ ಸಂಸತ್ತಿನಲ್ಲಿ ಕಣ್ಣೀರು ಸುರಿಸಿದವರು ಈಗೆಲ್ಲಿದ್ದಾರೆ?

ಮೂಲ ಮಲೆಯಾಳಂ : ಅರುಂಧತಿ ಬಿ
ಕನ್ನಡಕ್ಕೆ: ಸ್ವಾಲಿಹ್ ತೋಡಾರ್

ಹೈದರಬಾದ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಹಾಗೂ ವೈಸ್ ಛಾನ್ಸುಲರ್ ಅಪ್ಪಾ ರಾವ್ ಅವರ ಉದ್ದೇಶವೇನೋ ತಿಳಿಯದು. ಅವರ ನಡೆಗೆ ವಿದ್ಯಾರ್ಥಿ ಸಮುದಾಯಗಳಿಂದ ತೀವ್ರ ಪ್ರತಿರೋಧವಂತೂ ವ್ಯಕ್ತವಾಗಿದೆ. ತಮ್ಮ ವಾಪಾಸಾತಿಯನ್ನು ವಿದ್ಯಾರ್ಥಿಗಳು ಪ್ರತಿಭಟಿಸುತ್ತಾರೆ ಎಂದು ಮೊದಲೇ ತಿಳಿದಿದ್ದ ವೀಸಿ ಹಾಗೂ ಸಂಗಡಿಗರು ಪೊಲೀಸರನ್ನು ಛೂ ಬಿಟ್ಟು, ಕ್ಯಾಂಪಸ್ ಗೆ ಬೀಗ ಜಡಿದು, ವಿದ್ಯಾರ್ಥಿಗಳ ಮೂಲಭೂತ ಸೌಲಭ್ಯಗಳನ್ನು ನಿಷೇಧಿಸುವ ಮೂಲಕ ತಾವು ಗೆಲ್ಲಬಹುದೆಂದು ಭಾವಿಸಿದ್ದರು. ಇದರ ಜೊತೆಗೆ ದೈಹಿಕ ಹಿಂಸೆಯೂ ಸೇರಿದರೆ ವಿದ್ಯಾರ್ಥಿಗಳಲ್ಲಿ ಭೀತಿ ಹುಟ್ಟಿಸಬಹುದೆಂದು ಅವರು ಲೆಕ್ಕಹಾಕಿದ್ದರು.


ಆದರೆ, ಈಗ ಭೀತಿಗೊಳಾಗುವ ಸರದಿ ಅವರದ್ದು. ಎಷ್ಟು ಸಂಖ್ಯೆಯ ವಿದ್ಯಾರ್ಥಿಗಳ ಮೇಲೆ ಅವರು ದೌರ್ಜನ್ಯ ನಡೆಸಿದರೋ ಅದಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗ ಚಳವಳಿಯ ಅಖಾಡಕ್ಕೆ ಜಿಗಿದಿದ್ದಾರೆ. ಮೆಸ್ ಗೆ ಬೀಗ ಜಡಿದು ಅನ್ನಪಾನೀಯಗಳನ್ನು ನಿಷೇಧಿಸಿದಾಗ ವಿವಿಧ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳು ಮುಂದೆ ಬಂದು ಆಹಾರಗಳನ್ನು ಸಿದ್ಧಪಡಿಸಿ ವಿತರಿಸಿದರು. ಆಹಾರ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಹಂಚಿದ ಕಾರಣಕ್ಕಾಗಿ ಉದಯಭಾನು ಎಂಬ ವಿದ್ಯಾರ್ಥಿಯ ಮೇಲೆ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿದರು. ಈಗಲೂ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೆಲ್ಲಾ ಸಂಭವಿಸಿಯೂ ವಿದ್ಯಾರ್ಥಿಗಳು ಹಿಂಜರಿಯಲಿಲ್ಲ. ಸ್ವತಃ ಆಹಾರ ಸಿದ್ಧಪಡಿಸಿಕೊಂಡು, ಇತರ ವಿದ್ಯಾರ್ಥಿಗಳ ನಡುವೆ ಹಂಚಿಕೊಂಡು ಹೋರಾಟವನ್ನು ಮುಂದುವರಿಸಿದರು. ಇಂಟರ್ನೆಟ್ ಕನೆಕ್ಷನ್ ಕಟ್ ಮಾಡಿದರೆ ವಿದ್ಯಾರ್ಥಿಗಳು ಹೊರ ಜಗತ್ತಿನೊಂದಿಗೆ ಸಂಪರ್ಕಿಸುವುದನ್ನು ತಪ್ಪಿಸಬಹುದೆಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಭಾವಿಸಿತ್ತೇನೋ? ಆದರೆ, ಪೊಲೀಸ್ ದಬ್ಬಾಳಿಕೆಯನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಪೋನ್ ಗಳಲ್ಲಿ ಶೂಟ್ ಮಾಡಿ, ಸಾಧ್ಯವಾದಷ್ಟು ವಿಡಿಯೋಗಳನ್ನು ಶೇರ್ ಮಾಡಿದರು. ಹೀಗೆ ಸಾಮಾಜಿಕ ತಾಣಗಳಲ್ಲಿ ಈ ಇಶ್ಶೂ ಜೀವಂತವಾಗಿರುವಂತೆ ನೋಡಿಕೊಳ್ಳಲಾಯಿತು.

ಆಕಾಡಮಿಗಳಿಂದ, ಮಾಧ್ಯಮಗಳಿಂದ, ಹೈದರಬಾದ್ ವಿಶ್ವಾವಿದ್ಯಾಲಯದ ಹಳೆ ವಿದ್ಯಾರ್ಥಿಗಳಿಂದ ಹಾಗೂ ಬುದ್ಧಿಜೀವಿಗಳಿಂದ ಸಾಕಷ್ಟು ಬೆಂಬಲ ಲಭಿಸದಿದ್ದರೂ, ವಿದ್ಯಾರ್ಥಿಗಳು ತಮ್ಮ ಹೋರಾಟ ಮುಂದುವರಿಸಿದರು. ಈ ವಿಶ್ವಾವಿದ್ಯಾಲಯದಲ್ಲಿ ಎಬಿವಿಪಿಗಳು ಸಹ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರೆಲ್ಲಾ ವೈಸ್ ಛಾನ್ಸುಲರ್ ಜೊತೆಗಿದ್ದಾರೆ. ಆಗಿದ್ದರೂ, ಉಳಿದ ವಿದ್ಯಾರ್ಥಿಗಳು ನಲ್ವತ್ತು ನಲ್ವತ್ತೈದು ಡಿಗ್ರಿ ಶಾಖದಲ್ಲಿ ಕುಡಿಯುವ ನೀರು ಸಹ ಇಲ್ಲದೆ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಟಾಯ್ಲೆಟ್ ಉಪಯೋಗಕ್ಕೆ ಇಟ್ಟಿರುವ ನೀರನ್ನು ಕುಡಿಯುವ ಪರಿಸ್ಥಿತಿಯನ್ನೂ ಅವರು ನಿಭಾಯಿಸಿದರು. ಈ ಎಲ್ಲಾ ದಬ್ಬಾಳಿಕೆಗಳ ನಡುವೆಯೂ ಹೋರಾಟದ ಅಖಾಡಕ್ಕಿಳಿದಿದ್ದ ಯಾವ ವಿದ್ಯಾರ್ಥಿಯೂ ಸಹ ಕ್ಯಾಂಪಸ್ ಬಿಟ್ಟು ಹೋಗುವುದೋ, ಚಳವಳಿಯನ್ನು ಸ್ಥಗಿತಗೊಳಿಸಿ ವಾಪಾಸಾಗುವುದೋ ಅಥವಾ ಹೋಸ್ಟೆಲ್ ಕೋಣೆಗಳಲ್ಲಿ ಅಡಗಿ ಕೂರುವುದಕ್ಕೋ ಸಿದ್ಧರಾಗಲಿಲ್ಲ.

ಅದು ಆಡಳಿತ ಮಂಡಳಿ ಹಾಗೂ ಅವರ ಪ್ರೇರಕ ಶಕ್ತಿಗಳ ಭೀತಿಗೆ ಕಾರಣವಾದವು. ಹಾಗೆ ನೋಡಿದರೆ, ಕ್ಯಾಂಪಸ್ ನಲ್ಲಿ ಈಗ ನಡೆಯುತ್ತಿರುವುದು ಅಕ್ಷರಶಃ ಮಾನವ ಹಕ್ಕುಗಳ ಉಲ್ಲಂಘನೆ. ಸದ್ಯ, ನಮಗೆ ಇತರ ವಿಶ್ವವಿದ್ಯಾಲಯಗಳಿಂದ ಬೆಂಬಲ ಲಭಿಸ ತೊಡಗಿದೆ. ಮುಖ್ಯವಾಹಿನಿ ಮಾಧ್ಯಮಗಳು ನಮ್ಮನ್ನು ಕೈ ಬಿಟ್ಟಿದ್ದರೂ, ನಾವು ಸಾಮಾಜಿಕ ಮಾಧ್ಯಮಗಳ ಮೂಲಕ ದೇಶಾದ್ಯಂತ ಸುದ್ದಿ ಹರಡಿದೆವು. ಇದನ್ನೆಲ್ಲಾ ಕಂಡು ಸಮಸ್ಯೆ ಇನ್ನಷ್ಟು ದೊಡ್ಡದಾಗಬಹುದೆಂಬ ಭಯದಿಂದ ಅವರು ಇಂಟರ್ನೆಟ್ ಕನೆಕ್ಷನ್, ಕುಡಿಯುವ ನೀರಿನ ಮೇಲಿನ ನಿಷೇಧವನ್ನು ಕೈ ಬಿಟ್ಟರು. ಇದು ಕ್ಯಾಂಪಸ್ ಸಹಜ ಸ್ಥಿತಿಗೆ ಮರಳಿದೆ ಎಂದು ಹೊರಗಿನವರನ್ನು ನಂಬಿಸುವ ಆಡಳಿತ ವರ್ಗದ ತಂತ್ರವೂ ಆಗಿರಬಹುದು.

ಈ ಸಂದರ್ಭದಲ್ಲಿಯೇ ನಾವು ನಮ್ಮ ಮಾತುಗಳನ್ನು ಸ್ಪಷ್ಟವಾಗಿ ಹೇಳಬೇಕಿದೆ. ನೀವು ಕುಡಿಯುವ ನೀರು, ಆಹಾರ ಕೊಟ್ಟರೂ, ರೋಹಿತ್ ಗೆ ನ್ಯಾಯ ಸಿಗುವವರೆಗೂ, ನೀವು ದಬ್ಬಾಳಿಕೆಯ ಮೂಲಕ ಇಲ್ಲಿಂದ ಬಂಧಿಸಿ ಕೊಂಡೊಯ್ದ ಮೂವತ್ತಾರು ವಿದ್ಯಾರ್ಥಿಗಳು ಹಿಂದಿರುಗುವವರೆಗೂ, ವಿದ್ಯಾರ್ಥಿಗಳ ಮುಂದೆಯೇ ಪೊಲೀಸರಿಂದ ಹಲ್ಲೆಗೊಳಗಾಗಿ ಬಂಧಿಸಲ್ಪಟ್ಟ ಅಧ್ಯಾಪಕರನ್ನು ಬಿಡುಗಡೆಗೊಳಿಸುವವರೆಗೂ ಹಾಗೂ ಅವರೊಂದಿಗೆ ಕ್ಷಮೆ ಬೇಡುವವರೆಗೂ ಈ ಹೋರಾಟ ಮುಂದುವರಿಯುತ್ತದೆ ಎಂಬುದನ್ನು ಸಾರಿ ಹೇಳಬೇಕಿದೆ.

ಯಾವುದೇ ದಬ್ಬಾಳಿಕೆಯ ಅಸ್ತ್ರಗಳನ್ನು ಉಪಯೋಗಿಸಿ ನೀವು ನಮ್ಮನ್ನು ಸೋಲಿಸುವ ಪ್ರಯತ್ನ ಮಾಡಬಹುದು. ಆದರೆ, ನಮ್ಮದು ಗೆಲ್ಲಲೇ ಬೇಕಾದ ಹೋರಾಟ. ಕಾರಣ, ಈ ಹೋರಾಟಕ್ಕೆ ಒಂದು ಕಾರಣವಿದೆ. ನಮ್ಮ ಮಟ್ಟಿಗೆ ಅದು ಅಷ್ಟೊಂದು ಪ್ರಬಲವಾದುದು. ನೋಡಿ. ಇಲ್ಲಿ ಈಗ ನಮ್ಮ ಜೊತೆಗೆ ರೋಹಿತನ ತಾಯಿ ರಾಧಿಕ ವೇಮುಲಯಿದ್ದಾರೆ. ಅವರನ್ನು ನಾನು ‘ಪ್ರತಿರೋಧದ ತಾಯಿ’ ಎಂದು  ಕರೆಯಲು ಇಷ್ಟಪಡುತ್ತೇನೆ. ಎಷ್ಟೊಂದು ಧೈರ್ಯಶಾಲಿಯವರು. ಸೋನಿ ಸೂರಿಯಂತೆ, ಇರೋಮ್ ಶರ್ಮಿಳಾರಂತೆ, ರಾಧಿಕ ವೇಮುಲ ಸಹ ಇನ್ನು ನಮ್ಮ ಜೊತೆಗಿರುತ್ತಾರೆ. ನ್ಯಾಯ ಸಿಗಬೇಕಾದ ಕಡೆಯಿಂದೆಲ್ಲಾ ಅನ್ಯಾಯ, ನಿರ್ಲಕ್ಷ್ಯವನ್ನು ಪಡೆದ ಅವರು ರೋಹಿತನ ನ್ಯಾಯಕ್ಕಾಗಿ ಹೋರಾಡಲು ಈಗಲೂ ಕಟಿಬದ್ಧರಾಗಿದ್ದಾರೆ.

ಸದ್ಯ ರಾಧಿಕ ವೇಮುಲ ಕ್ಯಾಂಪಸ್ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಅವರ ಮಗನ ರಾಜಕಾರಣವನ್ನು ಬೆಂಬಲಿಸುವ, ರೋಹಿತ್ ನನ್ನು ಈಗಲೂ ಹೃದಯದಲ್ಲಿಟ್ಟುಕೊಂಡು ಓಡಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿರುವ ಕ್ಯಾಂಪಸಿಗೆ ಪ್ರವೇಶಿಸಲೂ ಸಹ ಆ ತಾಯಿಗೆ ಅನುಮತಿ ಇಲ್ಲವೆಂದರೆ ಏನೆನ್ನೋಣ? ನಮ್ಮ ಹೋರಾಟದ ಆವೇಶ ಹೆಚ್ಚಾಗಲು ಇದು ಒಂದು ಕಾರಣ ಎನ್ನೋಣವೇ? ಕಡು ಬಿಸಿಲಲ್ಲಿ, ರಾತ್ರಿಗಳಲ್ಲಿ ಉಕ್ಕಿನ ಬೇಲಿಗಳ ನಡುವೆ ಕೂತು ರೋಹಿತ್ ಗಾಗಿ ಘೋಷಣೆಗಳನ್ನು ಕೂಗುವುದು ಆ ತಾಯಿಗೆ ಸಾಧ್ಯವಾಗುವುದಾದರೆ, ನಮಗೂ ಅದು ಸಾಧ್ಯ.

ನಮಗೆ ಆತಂಕವಿರುವುದು, ನಮ್ಮ ನಡುವಿನಿಂದ ಬಂಧಿಸಿ ಕೊಂಡೊಯ್ಯಲಾದ ವಿದ್ಯಾರ್ಥಿಗಳು, ಅಧ್ಯಾಪಕರ ಕುರಿತು ಮಾತ್ರ. ಅವರನ್ನು ಸಂಪರ್ಕಿಸುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಸದ್ಯಕ್ಕೆ ನಮಗೆ ದೊರೆತಿರುವ ಮಾಹಿತಿಯ ಪ್ರಕಾರ ಅವರೆಲ್ಲಾ ಈಗ ರಿಮ್ಯಾಂಡ್ ಕೈದಿಗಳಾಗಿ ಜೈಲಲ್ಲಿದ್ದಾರೆ. ಅದಕ್ಕೂ ಮುನ್ನ ಅವರನ್ನು ಯಾವ್ಯಾವ ಪೊಲೀಸ್ ಠಾಣೆಗಳಿಗೆ ಸುತ್ತಿಸಲಾಯಿತು? ಯಾವ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು? ಎಂಬ ಯಾವ ವಿಷಯವೂ ನಮಗೆ ತಿಳಿದಿಲ್ಲ. ನಮ್ಮ ವಕೀಲರುಗಳ ಪ್ರಯತ್ನವೆಲ್ಲಾ ವಿಫಲವಾದವು. ಈಗ ಹೇಳಿ, ಇದೆಲ್ಲಾ ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ನಡೆಯುವಂತಹದ್ದೇ?

ಇಂತಹ ಘಟನೆಗಳನ್ನು ನಾವು ಈ ಮೊದಲು ಕಾಶ್ಮೀರದಿಂದ ಮಾತ್ರ ಕೇಳುತ್ತಿದ್ದೆವು. ಈಗ ಹೈದರಬಾದಿನಿಂದ ಕೇಳುತ್ತಿದ್ದೇವೆ.  ಹೈದರಾಬಾದ್ ವಿಶ್ವವಿದ್ಯಾಲಯವನ್ನು ಕಾಶ್ಮೀರವನ್ನಾಗಿಸುವ ಪ್ರಯತ್ನ ಈಗ ಎಗ್ಗಿಲ್ಲದೆ ನಡೆಯುತ್ತಿದೆ. ಇಟಿಜಿoಡಿಛಿeಜ ಆisಚಿಠಿಠಿeಚಿಡಿಚಿಟಿಛಿe ಈಗ ಇಲ್ಲಿಗೂ ಕಾಲಿಟ್ಟಿದೆ. ಅಂದರೆ, ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದವರನ್ನು ದಬ್ಬಾಳಿಕೆಯ ಮೂಲಕ ಬಂಧಿಸಿ ಕರೆದೊಯ್ಯುವುದು. ಬಳಿಕ ಅವರ ಕುರಿತು ಯಾವ ವಿವರವನ್ನೂ ನೀಡದಿರುವುದು. ಅವರ ಮೇಲೆ ಜಾಮೀನು ರಹಿತ ಕೇಸುಗಳನ್ನು ಜಡಿಯಲಾಗುತ್ತದೆ. ದಲಿತ ವಿರೋಧಿ ಕಾನೂನಿನಡಿಯಲ್ಲಿ ಬಂಧಿಸಲ್ಪಡಬೇಕಾದ ವ್ಯಕ್ತಿ ವೈಸ್ ಛಾನ್ಸುಲರಾದ ಕ್ಯಾಂಪಸಿನಲ್ಲಿ ಈಗ ಇದೆಲ್ಲಾ ನಡೆಯುತ್ತಿದೆ ಎನ್ನುವುದೇ ನಮ್ಮ ನಡುವಿನ ಮಹಾ ವೈರುಧ್ಯ.

ಇಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಇದು ಅಪ್ಪಾ ರಾವ್ ವಿರುದ್ಧದ ಹೋರಾಟ ಮಾತ್ರವಲ್ಲ. ಕೇವಲ ಅಪ್ಪಾ ರಾವ್ ಎಂಬ ವ್ಯಕ್ತಿಗೆ ಇಷ್ಟೊಂದು ದಾರ್ಷ್ಟ್ಯದಿಂದ ಮುಂದುವರಿಯೋದು ಸಾಧ್ಯವೆಂದು ನಂಬಲು ನಾವು ಮೂರ್ಖರಲ್ಲ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪತ್ರಗಳನ್ನು ಬರೆದಿರುವವರು ಇಲ್ಲಿರುವ ಒಬ್ಬರು ಸಚಿವರು. ಸಚಿವಾಲಯದಿಂದಲೂ ಮೇಲಿಂದ ಮೇಲೆ ಪತ್ರಗಳ ರವಾನೆಯಾದವು. ಭಾರತ ಮಾತೆಯ ಪುತ್ರ ಮರಣ ಹೊಂದಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ರೋಹಿತ್ ಆತ್ಮಹತ್ಯೆಯನ್ನು ಬಣ್ಣಿಸಿದ್ದಾರೆ. ಬ್ರೆಸಲ್ಸ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ, ಪಾಕಿಸ್ತಾನವನ್ನು ಸೋಲಿಸಿದ ಕ್ರಿಕೆಟ್ ತಂಡವನ್ನು ಅಭಿನಂದಿಸಿ ಟ್ವೀಟ್ ಮಾಡುವ ಪ್ರಧಾನ ಮಂತ್ರಿಯವರಿಗೆ ಯಾಕೆ ಸ್ವಂತ ದೇಶದ-ಅದು ಕೂಡ ರಾಷ್ಟ್ರಪತಿಯವರಿಂದ ಮೊದಲ ರ್ಯಾಂಕ್ ಪಡೆದ- ಕೇಂದ್ರೀಯ ವಿಶ್ವವಿದ್ಯಾಲಯವೊಂದರ ಮೇಲೆ ನಡೆದ ಅತಿಕ್ರಮಣದ ಕುರಿತಂತೆ, ಸಾವಿರಾರು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಒಂದು ಮಾತನ್ನೂ ಹೇಳಲು ಸಾಧ್ಯವಾಗುತ್ತಿಲ್ಲ?

ಸ್ಮೃತಿ ಇರಾನಿ ಎಲ್ಲಿದ್ದಾರೆ?

ರೋಹಿತ್ ನನ್ನು ತನ್ನ ಮಗ ಎಂದು ಹೇಳಿ ಭಾವಾವೇಷ ತೋರಿ ಕಣ್ಣೀರು ಸುರಿಸಿದ ಸ್ಮೃತಿ ಇರಾನಿಯವರು ಈಗ ಎಲ್ಲಿದ್ದಾರೆ? ಅವರು ತಮ್ಮ ಮಕ್ಕಳೆಂದು ಹೇಳಿಕೊಂಡವರೇ ಈಗ ಇಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯಾಕೆ ಅವರಿಗೀಗ ಅಳು ಬರುತ್ತಿಲ್ಲ? ಗೌರವಾನ್ವಿತ ಸಚಿವರೇ, ತಮ್ಮ ಮಕ್ಕಳಿಲ್ಲಿ ಕುಡಿಯಲು ನೀರಿಲ್ಲದೆ, ತಿನ್ನಲು ಆಹಾರವಿಲ್ಲದೆ, ಪೊಲೀಸರ, ರ್ಯಾಪಿಡ್ ಆ?ಯಕ್ಷನ್ ಪೋರ್ಸ್ ಸಿಬ್ಬಂದಿಗಳ ನಾನಾ ರೀತಿಯ ಹಲ್ಲೆ, ದಬ್ಬಾಳಿಕೆಗಳನ್ನು ಅನುಭವಿಸುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿನಿಯವರೊಂದಿಗೆ ನಿಮ್ಮ ರ್ಯಾಪಿಡ್ ಆ?ಯಕ್ಷನ್ ಪೋರ್ಸ್ ಸಿಬ್ಬಂದಿಗಳು ‘ನಿಮ್ಮನ್ನೆಲ್ಲಾ ರೇಪ್ ಮಾಡುತ್ತೇವೆ ಹುಷಾರ್’ ಎಂದು ಉಚ್ಛ ಸ್ವರದಲ್ಲಿ ಕೂಗಿ ಹೇಳಿದರು. ಇಷ್ಟೊಂದು ಹೀನಾಯವಾಗಿ ಅವಮಾನಿಸಲ್ಪಡುತ್ತಿರುವ ಹೆಣ್ಣು ಮಕ್ಕಳೊಂದಿಗೆ ನಿಮಗೆ ಏನನ್ನೂ ಹೇಳಬೇಕೆನಿಸುವುದಿಲ್ಲವೇ?

ಆದ್ದರಿಂದಲೇ ನಾನು ಹೇಳಿದೆ, ಇದು ಅಪ್ಪಾ ರಾವ್ ಎಂಬ ವ್ಯಕ್ತಿ ಮಾತ್ರ ನಡೆಸುತ್ತಿರುವ ದಬ್ಬಾಳಿಕೆಯಲ್ಲ. ಇದನ್ನೆಲ್ಲಾ ನಡೆಸಲು ಆ ಮನುಷ್ಯನಿಗೆ ಅನುಮತಿ, ಅಧಿಕಾರವನ್ನು ನೀಡಿರುವುದು ಕೇಂದ್ರ ಹಾಗೂ ತೆಲಂಗಾಣ ರಾಜ್ಯ ಸರಕಾರ. ರಾಜ್ಯದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಇದುವರೆಗೂ ಘಟನೆಗೆ ಸಂಬಂಧಿಸಿದಂತೆ ತುಟಿ ಬಿಚ್ಚಿಲ್ಲ. ದಲಿತ ವಿರೋಧಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇಡೀ ಘಟನೆಯ ಹಿಂದಿದೆ ಎನ್ನಲು ಇದಕ್ಕಿಂತ ಹೆಚ್ಚು ಪುರಾವೆ ಬೇಕೇ?

ಮೌನವೂ ಒಂದು ರಾಜಕಾರಣವೆಂಬುದು ನಮಗೆ ಅರ್ಥವಾಗುತ್ತದೆ. ನೀವು ಮೌನವಹಿಸುವುದಾದರೆ ಅದರರ್ಥ ನೀವು ಶೋಷಕರ ಜೊತೆಗಿದ್ದೀರೆಂದು. ಇಲ್ಲಿ ಯಾರೆಲ್ಲಾ ಮೌನ ಪಾಲಿಸುತ್ತಿದ್ದಾರೆಂಬುದು ನಮಗೆ ಅರ್ಥವಾಗುತ್ತಿದೆ. ಪ್ರಧಾನ ಮಂತ್ರಿಯವರು ಮಾತನಾಡುತ್ತಿಲ್ಲ. ಎಂಎಚ್ ಆರ್ ಡಿ ಮಂತ್ರಿಗಳೂ ಮಾತನಾಡುತ್ತಿಲ್ಲ, ರಾಜ್ಯದ ಮುಖ್ಯಮಂತ್ರಿಯೂ ಮಾತನಾಡುತ್ತಿಲ್ಲ..ಈ ಮೌನ ಈ ಎಲ್ಲರ ರಾಜಕೀಯ ಹಿತಾಸಕ್ತಿಗಳನ್ನು ವಿವರಿಸುತ್ತವೆ.

ಇವರೊಂದಿಗೆ ಕೇರಳ ಮುಖ್ಯಮಂತ್ರಿಯವರನ್ನೂ ಸಹ ಸೇರಿಸಬೇಕಾಗುತ್ತದೆ. ಇಲ್ಲಿಂದ ಬಂಧಿಸಲ್ಪಟ್ಟವರಲ್ಲಿ, ದಬ್ಬಾಳಿಕೆಗೊಳಗಾದವರಲ್ಲಿ, ಹೋರಾಟಗಳಲ್ಲಿ ಭಾಗಿಯಾದವರಲ್ಲಿ ಹೆಚ್ಚಿನ ಮಲೆಯಾಳಿ ವಿದ್ಯಾರ್ಥಿಗಳಿದ್ದಾರೆ. ಆ ವಿದ್ಯಾರ್ಥಿಗಳೊಂದಿಗೆ ಏನಾದರು ಸಹತಾಪ ಇದ್ದಿದ್ದರೆ ಕೇರಳ ಮುಖ್ಯಮಂತ್ರಿಯವರು ಬಾಯಿ ತೆರೆಯಬೇಕಿತ್ತು. ಕಾನೂನಿಗೆ ವಿರುದ್ಧವಾಗಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಲ್ಲಿ ಕಾನೂನಿನ ಮೂಲಕವೇ ನಾವದನ್ನು ಎದುರಿಸುತ್ತೇವೆ ಎಂದು ಮುಖ್ಯಮಂತ್ರಿಯವರಿಗೆ ಹೇಳಬಹುದಿತ್ತು. ಬಂಧನಕ್ಕೊಳಗಾಗಿರುವ ವಿದ್ಯಾರ್ಥಿಗಳು ಎಲ್ಲಿದ್ದಾರೆ? ಹೇಗಿದ್ದಾರೆ? ಎಂಬುದು ಸಹ ತಿಳಿಯದ ಸ್ಥಿತಿಯಲ್ಲಿದ್ದೇವೆ. ವಿದ್ಯಾರ್ಥಿಗಳು ತೀವ್ರ ಮಾನವ ಹಕ್ಕುಗಳ ಉಲ್ಲಂಘನೆಯ ಬಲಿಪಶುಗಳಾಗಿದ್ದಾರೆ. ಈ ಕುರಿತು ಚಂದ್ರಶೇಖರ್ ರಾವ್ ಉತ್ತರಿಸಬೇಕೆಂದು ಕೇರಳದ ಮುಖ್ಯಮಂತ್ರಿಯವರು ಆಗ್ರಹಿಸಬಹುದಿತ್ತು. ಆದರೂ, ಮುಖ್ಯಮಂತ್ರಿಯವರು ಒಂದೇ ಒಂದು ಅಕ್ಷರವನ್ನೂ ಮಾತನಾಡುತ್ತಿಲ್ಲ.

ಇನ್ನು ಮತ್ತೊಂದು ವಿಭಾಗವಿದೆ. ಮಾಧ್ಯಮಗಳು. ಇಂಡಿಯಾ ಎಂದರೆ ದೆಹಲಿ ಎಂದು ಅವರ ಭಾವನೆ. ದೆಹಲಿಯಲ್ಲಿ ನಡೆಯುವ ಘಟನೆಗಳೇ ಭಾರತಕ್ಕೆ ಸಂಬಂಧಿಸಿದಂತೆ ಪ್ರಮುಖ ಸುದ್ಧಿ ಎಂಬುದು ಅವರ ನಂಬಿಕೆ. ನಮ್ಮ ಅನೇಕ ಮಾಧ್ಯಮಗಳು ದೆಹಲಿಯನ್ನೇ ಕೇಂದ್ರ ಸ್ಥಾನವನ್ನಾಗಿಸಿಕೊಂಡಿದೆ.  ದೆಹಲಿಯ ಜೆಎನ್ ಯುವಿನಲ್ಲಿ ಅವರಿಗೆ ಕಂಡ ಪ್ರಾಧಾನ್ಯತೆ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಕಾಣಲಿಲ್ಲ.

ಇಲ್ಲಿ ಕ್ಯಾಂಪಸಿನೊಳಗೆ ಪ್ರವೇಶಿಸಲು ಮಾಧ್ಯಮಗಳಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಆದರೂ, ಮಾಧ್ಯಮಗಳಿಗೆ ಈ ಕುರಿತು ಪ್ರಶ್ನಿಸಬೇಕೆನಿಸುವುದಿಲ್ಲ. ಸುದ್ದಿಗಳನ್ನು ವರದಿ ಮಾಡುವ ಹಕ್ಕನ್ನು ಹಣಿಯುವುದನ್ನೂ ಕಂಡು ಹೇಗೆ ನಿಮಗೆ ಮೌನವಾಗಿರುವುದು ಸಾಧ್ಯವಾಗುತ್ತದೆ?

ಈ ಮೌನಕ್ಕೆ ಇನ್ನೇನಾದರೂ ಕಾರಣವಿದೆಯೇ? ನಮ್ಮ ಮಾಧ್ಯಮಗಳಿಗೆ ಒಂದು ಅಭ್ಯಾಸವಿದೆ. ಸೆನ್ಸೇಷನಲ್ ಸುದ್ದಿಗಳಿಗಾಗಿ ಅವುಗಳು ಸದಾ ಹಪಾಹಪಿಸುತ್ತವೆ. ಕ್ಯಾಪಿಟಲ್ ಲಾಜಿಕ್ ಅದು. ರೋಹಿತ್ ವೇಮುಲನ ರೀತಿ ಇನ್ನೊಂದು ಆತ್ಮಹತ್ಯೆ ನಡೆದಾಗ ದೆಹಲಿಯಾದಿಯಾಗಿ ಎಲ್ಲಾ ಪ್ರದೇಶಗಳ ಮಾಧ್ಯಮಗಳು ಏನೇ ಕಷ್ಟಗಳನ್ನು ಸಹಿಸಿಯಾದರೂ ಇಲ್ಲಿಗೆ ಓಡೋಡಿ ಬರುತ್ತವೆ. ಅಂದರೆ, ಅವರು ಇಲ್ಲೀತನಕ ಬರಬೇಕಾದರೆ ಸಾವು ಸಂಭವಿಸಬೇಕು. ಹತ್ಯೆಗಳು ನಡೆಯಬೇಕು. ಜೀವಂತ ಮನುಷ್ಯನ ಜೀವಂತ ಹೋರಾಟಗಳಿಗೆ ಇಲ್ಲಿ ಬೆಲೆ ಯಾವುದೇ ಬೆಲೆ ಇಲ್ಲ.

ಯೂನಿಟ್ ಗಳಿಗೆ ಇತ್ತ ಬರುವ ತೊಂದರೆಗಳು, ಸಲಕರಣೆಗಳೊಂದಿಗೆ ಒಳ ಪ್ರವೇಶಿಸುವ ಕಷ್ಟಗಳ ಕುರಿತು ಟಿವಿ ವಾಹಿನಿಗಳು ನೆಪೆ ಹೇಳಬಹುದು. ಆದರೆ, ಪತ್ರಿಕೆಗಳು? ಯಾಕೆ ದೇಶದ ಮುಖ್ಯವಾಹಿನಿಯಲ್ಲಿರುವ ಪತ್ರಿಕೆಗಳು ಇದನ್ನೊಂದು ಸುದ್ದಿಯಾಗಿ ಪ್ರಕಟಿಸುತ್ತಿಲ್ಲ? ಯಾಕೆ ದಿ ಹಿಂದೂವಿನಂತಹ ಪತ್ರಿಕೆಗಳಲ್ಲೂ ಸಹ ಇದಕ್ಕೆ ಸಂಬಂಧಿಸಿದ ಸುದ್ದಿಗಳು ಪ್ರಮುಖ ಪುಟಗಳಲ್ಲಿ ಪ್ರಕಟವಾಗುತ್ತಿಲ್ಲ? ನಮ್ಮ ಎಲ್ಲಾ ಕಾಲವು ಒಂದು ಬ್ರಾಹ್ಮಣಿಕಲ್ ಸ್ಟೇಟ್ ಆಗಿತ್ತು. ಈ ಕಾಲವೂ ಅದೇ ಹಾದಿಯಲ್ಲಿದೆ. ಅಂತಹ ಪ್ರಭುತ್ವದ ಅಡಿಪಾಯವನ್ನೂ, ಬ್ರಾಹ್ಮಣ್ಯವನ್ನೂ ಪ್ರಶ್ನಿಸುವ ಮೂವ್ ಮೆಂಟಿದು. ಇದು ಕೇವಲ ಒಬ್ಬ ರೋಹಿತ್ ಗಾಗಿ ನಡೆಸುತ್ತಿರುವ ಹೋರಾಟವಲ್ಲ. ಸಾವಿರಾರು ರೋಹಿತ್ ಗಳಿಗಾಗಿ ನಡೆಸುತ್ತಿರುವ ಹೋರಾಟವಿದು. ಭಾರತದ ಎಲ್ಲಾ ಸಂಸ್ಥೆಗಳಲ್ಲೂ ಇರುವ ಜಾತೀಯತೆಯನ್ನು ಪ್ರಶ್ನಿಸುವ ಹೋರಾಟವಿದು. ಮಾಧ್ಯಮಗಳಲ್ಲೂ ಜಾತಿಯಿದೆ. ಇಲ್ಲಿ ಎಷ್ಟು ಶೇಖಡ ದಲಿತ ಪತ್ರಕರ್ತರಿದ್ದಾರೆಂಬುದು ನಮಗೆ ತಿಳಿದಿದೆ. ಆದ್ದರಿಂದ ಇಲ್ಲಿ ನಡೆಯುತ್ತಿರುವ ದಲಿತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬೇಕಾದ ರೀತಿಯಲ್ಲಿ ಮಂಡಿಸಲು ಮಾಧ್ಯಮಗಳು ಆಸಕ್ತಿ ತೋರುತ್ತಿಲ್ಲ. ಆದರೆ, ಇದೆಲ್ಲವನ್ನು ಮೀರಿ ನಮ್ಮೊಂದಿಗೆ ಜೊತೆಯಾಗುವ ಹಲವರು ಇಲ್ಲಿದ್ದಾರೆ. ಅವರೆಲ್ಲಾ ಇರುವ ಒಂದು ಪ್ಲಾಟ್ ಫಾರಮಿನಲ್ಲಿ ನಮ್ಮ ಹೋರಾಟ ನಡೆಯುತ್ತಿದೆ.

 ಸದ್ಯದ ಸುದ್ದಿಯ ಪ್ರಕಾರ, ಇತರ ಒಂಬತ್ತು ವಿದ್ಯಾರ್ಥಿಗಳ ಮೇಲೂ ಕೇಸು ಜಡಿಯಲಾಗಿದೆ. ಅವರು ಯಾವ ಕ್ಷಣದಲ್ಲಿ ಬೇಕಾದರೂ ಬಂಧನಕ್ಕೊಳಗಾಗಬಹುದು. ಹೀಗೆ ದಬ್ಬಾಳಿಕೆಗೊಳಗಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಇಲ್ಲಿನ ವಿಶೇಷವೆಂದರೆ, ಬಂಧಿಸಲ್ಪಡುತ್ತಿರುವವರು, ಕೇಸು ಜಡಿಯಲ್ಪಟ್ಟವರು, ಆರೋಪ ಹೊರಿಸಲ್ಪಟ್ಟವರೆಲ್ಲಾ ಈ ಹೋರಾಟದ ಮುಂಚೂಣಿಯಲ್ಲಿದ್ದವರೇ ಆಗಿದ್ದಾರೆ. ಆ ಮೂಲಕ ಹೋರಾಟವನ್ನು ದಾರಿ ತಪ್ಪಿಸುವ ಶತ ಪ್ರಯತ್ನ ನಡೆಯುತ್ತಿದೆ.

ಹಾಗಾದರೆ ಇಲ್ಲಿ ಕೇಳಿ. ನೀವು ಹೊಡೆದು ಬಡಿದು ಕೊಂದರೂ ರೋಹಿತ್ ಗಳಿಗಾಗಿ ಆರಂಭಿಸಿರುವ ಈ ಹೋರಾಟ ಮುಂದುವರಿದೇ ತೀರುತ್ತದೆ. ಸದ್ಯ, ನೀವು ನೀರು, ಇಂಟರ್ನೆಟ್ ಕನೆಕ್ಷನ್ ಹಿಂದಿರುಗಿಸಲಿಲ್ಲವೇ? ಹಾಗೆಯೇ, ನಾಳೆ ವಿದ್ಯಾರ್ಥಿಗಳ ಮುಂದೆ ನೀವು ಮೊಣಕಾಲೂರುತ್ತೀರಿ ನೋಡಿ. ಇಲ್ಲಿ ನಿಯೋಜಿಸಿರುವ ಪೊಲೀಸರನ್ನು ಖಂಡಿತ ನಾಳೆ ನೀವು ಸ್ಥಳಾಂತರಗೊಳಿಸುತ್ತೀರಿ. ಆ ಬಳಿಕ ಅಪ್ಪಾ ರಾವ್ ವೈಸ್ ಛಾನ್ಸುಲರ್ ಹುದ್ದೆಯಿಂದ ಕೆಳಗಿಳಿಯಲೇ ಬೇಕಾಗುತ್ತದೆ. ಯಾವ ಕಾರಣಕ್ಕೂ ಅಪ್ಪಾ ರಾವ್ ಎಂಬ ವೈಸ್ ಛಾನ್ಸುಲರ್ ಅಧೀನದಲ್ಲಿ  ಯಾವ ವಿದ್ಯಾರ್ಥಿಯೂ ಇಲ್ಲಿ ಕಲಿಯವುದಿಲ್ಲ. ಪರೀಕ್ಷೆ ಬರೆಯುವುದಿಲ್ಲ.

ಇನ್ನು ಮುಂದಿನ ವಿದ್ಯಾರ್ಥಿಗಳಿಗಾಗಿ, ಅವರ ಹಕ್ಕುಗಳ, ನ್ಯಾಯದ ರಕ್ಷಣೆಗಾಗಿ ಈ ಹೋರಾಟ ಮುಂದುವರಿಯುತ್ತದೆ. ಈ ಹೋರಾಟ ವಿದ್ಯಾರ್ಥಿಗಳಿಗೆ ವಿರುದ್ಧವೆಂದೂ, ವಿದ್ಯಾರ್ಥಿಗಳ ಭವಿಷ್ಯವನ್ನು ನಾಶಪಡಿಸುತ್ತದೆಂದು ಯಾರು ಅಬ್ಬರಿಸಿದರೂ, ಆ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಮುಂದಿನ ಜನಾಂಗದ ಹಕ್ಕುಗಳನ್ನು ರಕ್ಷಿಸುವ ಹೋರಾಟವಿದು. ಆದ್ದರಿಂದ ವಿದ್ಯಾರ್ಥಿಗಳ ಇತಿಹಾಸದಲ್ಲಿ ಇದು ಅತ್ಯಂತ ಪ್ರಮುಖ ಹೋರಾಟವಾಗಿ ಕಾಣಿಸಿಕೊಳ್ಳುತ್ತದೆ.

--------------ಅರುಂಧತಿ ಬಿ

ಹೈದರಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ

ಕನ್ನಡಕ್ಕೆ: ಸ್ವಾಲಿಹ್ ತೋಡಾರ್

Saturday, March 26, 2016

ಹೊಸ ಶಾಲೆಯ ಕನಸು

ಚಾಮರಾಜ ಸವಡಿ

ಶಾಲೆಯೊಂದನ್ನು ಪ್ರಾರಂಭಿಸುವ ಕನಸಿಗೆ ರೆಕ್ಕೆಪುಕ್ಕ ಬಲಿಯೊಡಗಿವೆ.

ಕೊಪ್ಪಳಕ್ಕೆ ಹೋಗಬೇಕೆಂದು ನಿರ್ಧರಿಸಿದಾಗ ನನ್ನ ಮನಸ್ಸಿನಲ್ಲಿದ್ದ ಹಲವಾರು ಯೋಜನೆಗಳ ಪೈಕಿ ಇದು ಮಹತ್ವದ್ದು. ಇಂಗ್ಲಿಷ್ ಜ್ಞಾನದ ಕೊರತೆ ನನ್ನನ್ನು ದಶಕಗಳ ಕಾಲ ಕಾಡಿತ್ತು. ಆದ್ದರಿಂದ ನನ್ನೂರ ಮಕ್ಕಳಿಗೆ ಅತ್ಯುತ್ತಮ ಇಂಗ್ಲಿಷ್ ಅನ್ನು ಸ್ವಚ್ಛ ಕನ್ನಡದ ಮೂಲಕ ಸುಲಭವಾಗಿ ಕಲಿಸುವ ವಿಧಾನವನ್ನು ನನ್ನ ಸೋದರ, ಹೈಸ್ಕೂಲ್‍ನಲ್ಲಿ ಇಂಗ್ಲಿಷ್ ಶಿಕ್ಷಕನಾಗಿರುವ ವೀರೇಶ್ ಸವಡಿ ಜೊತೆ ಅಭಿವೃದ್ಧಿಪಡಿಸಿದ್ದೇನೆ. ಲಾಂಗ್ವೇಜ್ ಲ್ಯಾಬ್‍ (ಭಾಷಾ ಪ್ರಯೋಗಾಲಯ) ಕೂಡ ಅಭಿವೃದ್ಧಿಯಾಗಿದೆ. ಇಂಗ್ಲಿಷ್ ಕಲಿಯಲು ನಮ್ಮ ಮಕ್ಕಳು ಬೇರೆ ಊರಿಗೆ ಹೋಗಬೇಕಿಲ್ಲ. ಸುಲಭ ದರದಲ್ಲಿ, ಅತ್ಯುತ್ತಮ ಇಂಗ್ಲಿಷ್ ಹೇಳಿಕೊಡುವ ಅಕಾಡೆಮಿ ಪ್ರಾರಂಭವಾಗಿದೆ.

ಇನ್ನೇನು ಬೇಸಿಗೆ ರಜೆ ಹತ್ತಿರ ಬಂತು. ನಮ್ಮ ಲಾಂಗ್ವೇಜ್ ಲ್ಯಾಬ್‍ ಕಾರ್ಯಾರಂಭ ಮಾಡಿದೆ. ರಜೆ ಮುಗಿಯುತ್ತಲೇ ಶಾಲೆ ಪ್ರಾರಂಭವಾಗಲಿದೆ. ಜೊತೆಗೆ, ವಿಶೇಷ ಮಕ್ಕಳಿಗೆಂದೇ ವಿವಿಧ ಥೆರಪಿಗಳನ್ನು ಒದಗಿಸುವ ಪುಟ್ಟ ಶಾಲೆಯನ್ನು ಮನೆಯಲ್ಲೇ ಪ್ರಾರಂಭಿಸಲಿದ್ದೇನೆ. ಬಹುಶಃ ಇಂಥದೊಂದು ಶಾಲೆ ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಿಯೂ ಇರದು.


ಮಗಳು ಗೌರಿಗೆ ಇಂಥದೊಂದು ಶಿಕ್ಷಣ ಕೊಡಿಸಲು ನಾನು ಹದಿನಾಲ್ಕು ವರ್ಷ ಅಲೆದಾಡಿದೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೂ, ಬಾಲ್ಯಾವಸ್ಥೆಯಲ್ಲೇ ಕಲಿಸಬೇಕಿದ್ದ ಅವಕಾಶ ಸಿಗಲಿಲ್ಲ. ಕನಿಷ್ಟ ಬೇರೆ ಮಕ್ಕಳಿಗಾದರೂ ಅಂಥದೊಂದು ಸೌಲಭ್ಯ ಸುಲಭವಾಗಿ ಸಿಗಲೆಂಬುದು ನನ್ನ ಕನಸು. ಸುಲಭವಾಗಿ ಇಂಗ್ಲಿಷ್ ಕಲಿಕೆ, ವಿಶೇಷ ಶಾಲೆಗಳು ಸದ್ಯ ದೊಡ್ಡ ನಗರಗಳಲ್ಲಿ ಮಾತ್ರ ಲಭ್ಯ. ಅದೂ ತೀರಾ ದುಬಾರಿ ದರದಲ್ಲಿ. ಅಂಥ ಸೌಲಭ್ಯಗಳು ಇನ್ಮುಂದೆ ಕೊಪ್ಪಳದಲ್ಲಿ ಸಿಗಲಿವೆ.
ನಿಮ್ಮ ಶುಭಾಶಯಗಳಷ್ಟು ನನ್ನ ಜೊತೆಗಿರಲಿ, ಸಾಕು.

ಛಾಯಾಗ್ರಾಹಕನ ಕಣ್ಣಲಿ ಈ ಸಂಜೆ

ಚಿತ್ರ: ಡಾ. ಕೃಷ್ಣ ಗಿಳಿಯಾರ


ಚಿತ್ರ: ಡಾ. ಕೃಷ್ಣ ಗಿಳಿಯಾರ


ಚಿತ್ರ: ಬಸೂ

ಚಿತ್ರ:  ಶಿವಶಂಕರ ಬಣಗಾರ


ಯುದ್ಧ ಮುಗಿದ ಊರಿನ ಚಿತ್ರಗಳುಬಿ. ಶ್ರೀನಿವಾಸಚಿತ್ರ -1ಸಂಡೂರಿನಲ್ಲಿ
ಮಳೆ ಸುರಿಯುತ್ತಿದೆ.
ಕಾಡು ಬೆಟ್ಟ
ಸವೆದರೂ॒
ಬಹುಶಃ
ಯಾರೋ
ರೋಧಿಸುತ್ತಿರಬೇಕು.


 ಚಿತ್ರ -2
   

ಹರೆಯದ ಹುಡುಗನ
ಹೆಣವನ್ನು
ಮುದುಕ ಮುದುಕಿ
ತಳ್ಳುವ ಗಾಡಿಯಲ್ಲಿಟ್ಟು
ಮಸಣದತ್ತ
ಹೆಜ್ಜೆ ಹಾಕುತ್ತಿದ್ದಾರೆ.


 ಚಿತ್ರ -3

ಸಂಡೂರಿನ
ಸಾಲಿಗುಡಿಯಲ್ಲಿ
ಭೂಗೋಳದ ಮೇಷ್ಟ್ರು
ಮರುಭೂಮಿಯ
ಪಾಠ ಹೇಳುತ್ತಿದ್ದಾರೆ
ಮಕ್ಕಳು
ಹೊರಗೆ ನೋಡುತ್ತಿದ್ದಾರೆ.


 ಚಿತ್ರ -4

 ಆತ
ಇನ್ನೂ ಹುಡುಕುತ್ತಲೇ
ಇದ್ದಾನೆ
ಸಂಡೂರಿನ
ಬೀದಿಗಳನ್ನು
ಊರ ಕೊಂದ
ಕೊಲೆಗಡುಕರನ್ನು

 ಚಿತ್ರ -5
ಯಾರದ್ದೋ ಹೆಣ
ಊರವರೆಲ್ಲ ಸೇರಿ
ಹೊತ್ತು ನಡೆದಿದ್ದಾರೆ
ಹತ್ತಿರ ಹೋಗಿ ನೋಡಿದೆ
'ಊರಿನದ್ದೇ ಹೆಣ’!
        ॒॒॒॒॒॒॒
        ಯಾರ ಕಂಗಳಲ್ಲೂ
        ನೀರಿಲ್ಲ
        ಪರದೇಸಿಗಳಾದ
        ಭೀತಿಯಿದೆ.


 ಚಿತ್ರ -6

ಗಣಿಯ ಸದ್ದು
ನಿಂತಾಗ
ಮಲಗಿತ್ತು
ಹೊಲ
ಸಾವ ಹೊದ್ದು


  ಚಿತ್ರ -7

 ರೈಲು ಡಬ್ಬಿಗೆ                      
 ಅದಿರು ತುಂಬುವ ಹುಡುಗ

ಲಾರಿ ಓಡಿಸುವ ಡ್ರೈವರ್ರು
ಟಿಪ್ಪರಿನ ಕ್ಲೀನರ್ರು

ಟೀಬಿ ಆಸುಪತ್ರಿಯಲ್ಲಿ
ನಿಂತ ತುಂಬುಗರ್ಭಿಣಿ

ಗಂಡಿ ನರಸಿಂಹನ
ದೇಗುಲದ ಮುಂದೆ

ಸಿಲವಾರದ ಗಂಗಳ ಹಿಡಿದು
ಕುಳಿತಿರುವ ಚಿತ್ರಗಳ ಬರೆದವರಾರು?
       'ಗಾಯದ ಹೂವುಗಳು' ಕುರಿತು
 

ಗೆಳೆಯ ಕಾಜೂರು ಸತೀಶ್ ರ 'ಗಾಯದ ಹೂಗಳು' ಕವನ ಸಂಕಲನ ಇಂದು ತಲುಪಿತು. ಸಂಕಲನದ ಹೆಸರೇ ನನ್ನೊಳಗೊಂದು ತಲ್ಲಣ ಹುಟ್ಟಿಸಿದೆ. ಸಂಕಲನವನ್ನು ಮುಟ್ಟುವಾಗ ಬೆರಳು ಸುಮ್ಮನೆ ಕಂಪಿಸುತ್ತಿದ್ದವು. ಎದೆಯೊಳಗೆ ಯಾವುದೊ ಸಂಕಟ ಎದ್ದುಬಂದ ಹಾಗೆ ತಳಮಳ. ಅದು ತುಂಬ ಆಳಕ್ಕಿಳಿಯಿತು. ಒಂದೆರಡು ಕವಿತೆಗಳನ್ನಷ್ಟೆ ಓದಲು ಸಾಧ್ಯವಾಗಿದೆ. ಕಣ್ಮುಚ್ಚಿ ಧ್ಯಾನಸ್ಥವಾಗುವ ಮನಸು ಓದು ಮುಂದುವರೆಸಲು ಒಪ್ಪುತ್ತಿಲ್ಲ.
ಸತೀಶ್ ನಮ್ಮ ನಡುವಿನ ತುಂಬ ಭರವಸೆಯ ಯುವಕವಿ. ಎಫ್ ಬಿ ಮೂಲಕವೆ ಪರಿಚಯವಾದ ಅವರ ಸಾಲು ಎಷ್ಷು ತಾಕಿದ್ದವು ಎಂದರೆ ಕಳೆದ ಸಲ ಹಾವೇರಿಯಲ್ಲಿ ನಾವು ಸಂಘಟಿಸಿದ ಮೇ ಸಾಹಿತ್ಯ ಮೇಳದಲ್ಲಿ ಕವಿತೆ ಓದಲು ಅವರನ್ನು ಕರೆಯಿಸಿಕೊಂಡಿದ್ದೆ. ಮೌನವಾಗಿ ಗಾಢವಿಷಾಧವನ್ನು ಗುಲ್ಜಾರರಷ್ಟೆ ಅವರು ಕನ್ನಡದಲ್ಲಿ ಸಶಕ್ತವಾಗಿ ಕಟ್ಟಿಕೊಡಬಲ್ಲರು.


ಈ ರಾತ್ರಿಗೆ ನಾನು ಅವರ ಗಾಯದ ಹೂಗಳೊಂದಿಗಿರುವೆ. ಗಾಯಗೊಳಿಸದೆ ಕವಿತೆ ಓದಿಸಲು ಅವರಿಗೆ ಬರುವುದಿಲ್ಲ. ಹಿಂಸೆ ಮತ್ತು ಉನ್ಮಾದದ ಉತ್ಪಾದನೆಯಲ್ಲಿ ರಾಜ್ಯದ ಕೆಲ ಶಕ್ತಿಗಳು
ಮುಳುಗಿರುವ ಸಮಯದಲ್ಲಿ ಈ ಕವಿ ತಾನು ಗಾಯಗೊಂಡು ಲೋಕವನ್ನು ಮಾನವೀಯವಾಗಿಸಲು ಅಕ್ಷರಗಳನ್ನು ಒಳಗಿಳಿಸಿಕೊಂಡಿದ್ದಾರೆ. ಈ ಕವಿಗೊಂದು ಶರಣು.
*

ಹೊಲೆ ಮಾದಿಗರ ಹೋಟೆಲ್ಡಾ.ಹೆಚ್.ಡಿ. ಉಮಾಶಂಕರ್'s photo.

ವಿಕಾಸ ಆರ್ ಮೌರ್ಯ.


ಘಮ ಘಮ ರಾಗಿ ರೊಟ್ಟಿ
ಉಚ್ಚೆಳ್ ಚಟ್ನಿ
ಜೊತೆಗೆ ಈರುಳ್ಳಿ ತುಂಡು
ಒಂದು ಮೆಣಸಿನಕಾಯಿ
ಗೌರ್ಮೆಂಟ್ ಎಮ್ಮೆಯ ಹಾಲು
ಪ್ರೀತಿ ಬಿಟ್ಟು ಬೇರೇನೂ ಬೆರೆಸಿಲ್ಲ
ಖಡಕ್ ಛಹಾ ಕಾಫಿ ಸವಿದು
ರುಚಿ ನೋಡುವಿರಂತೆ ಒಳ ಬನ್ನಿ
ಇದು ಹೊಲೆಮಾದಿಗರ ಹೋಟೆಲ್


ಅಮ್ಮನ ನೆನೆಸುವ ಮಮತೆ
ಅಪ್ಪನ ನೆನೆಸುವ ಸೇವೆ
ಅಣ್ಣ ತಮ್ಮನ ನೆನೆಸುವ ನಗೆ
ಅಕ್ಕ ತಂಗಿಯರ ನೆನೆಸುವ ಪ್ರೀತಿ
ಬಂದುತ್ವ ಬಿಟ್ಟು ಮುನಿಸಿನ ಮಾತಿಲ್ಲ
ಹಕ್ಕನ್ನು ಭಿಕ್ಷೆಯೆಂದರೆ ತೆಪ್ಪಗಿರುವುದಿಲ್ಲ
ಅನ್ನ.ನೀಡುವ ನಮ್ಮ ಹಕ್ಕಿಗೆ
ಉಂಡು ಬಂಧುತ್ವ ಬೆಸೆಯ ಬನ್ನಿ
ಇದು ಹೊಲೆ ಮಾದಿಗರ ಹೋಟೆಲ್

ಮನು ಯಾಜ್ಞವಲ್ಕ್ಯರ ಮೀರಿ
ಕಟ್ಟಿದ ಕನಸು
ಶಾಸ್ತ್ರ ಸ್ಮೃತಿಗಳ ಮುರಿದು ಬೆಂಕಿಯಿಟ್ಟು
ಉರಿಸಿದ ಒಲೆ
ಸ್ವಾಭಿಮಾನವ ಕುದಿಸಿ ಇಂಗಿಸಿದ ಅನ್ನ
ಘನತೆ ಘನೀಭವಿಸಿದ ಮುದ್ದೆ
ಬುದ್ಧಮೈತ್ರಿಯ ಮೈಮರೆತು
ಬೆರೆಸಿದ ಸಾರು
ನಿಮ್ಮ ಹೊಟ್ಟೆ ತುಂಬುವವರೆಗೂ
ತಣ್ಣಗಾಗದು ಈ ಎದೆ
ತಣ್ಣಗಾಗುವಿರಂತೆ ಒಮ್ಮೆ ಒಳ ಬನ್ನಿ
ಇದು ಹೊಲೆಮಾದಿಗರ ಹೋಟೆಲ್

ಸಸ್ಯ ಮಾಂಸವೆಂಬ ಭೇದವಿಲ್
ಬ್ರಾಹ್ಮಣರೆ ಶ್ರೆಷ್ಟರೆಂಬ ಭ್ರಮೆಯಿಲ್ಲ
ಮೇಲು ಕೀಳೆಂಬ ಮಾತಿಲ್
ಬೆವರ ಸುರಿಸಿದವರೇ ಶ್ರೆಷ್ಟರು
ಗುಣದೊಳಧಮರೆ ಕನಿಷ್ಟರು
ತಾರತಮ್ಯ ಬಿತ್ತಿದ ದರ್ಮವ ಧಿಕ್ಕರಿಸಿ
ಮನುಷ್ಯರಾಗಲು ಒಳ ಬನ್ನಿ
ಒಳ ಬಂದಿರಾ, ತಿಂದಿರಾ
ಹೃದಯದಿಂದೊಮ್ಮೆ ನೋಡಿ
ಈಗಿದು ಮನುಜರ ಹೋಟೆಲ್

***


* ವಿಕಾಸ್ ಅವರ ಈ ಕವನಕ್ಕೆ ಚಿಕ್ಕಬಳ್ಳಾಪುರದ ಜೀವನ್ ಪ್ರಕಾಶನವು ಯುಗಾದಿ ಕಾವ್ಯ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಬಂದಿದೆ.  ಅಭಿನಂದನೆಗಳು

ತಪ್ಪು ಅಳತೆ
*

ಮಲಯಾಳಂ ಮೂಲ- ಸುತಾರ್ಯ ಸಿ

ಕನ್ನಡಕ್ಕೆ-
ಕಾಜೂರು ಸತೀಶ್ 
 
 
 
 
ಕೆಲವೊಮ್ಮೆ ತಪ್ಪಾದ ಅಳತೆಗೋಲಿನಿಂದಲೇ ಅಳೆಯುತ್ತೇವೆ ನಾವು
ಮತ್ತೆ ಮತ್ತೆ ಅಳೆಯುತ್ತಲೇ ಇರುತ್ತೇವೆ.

ಯಾವುದೋ ಸಂಖ್ಯೆಯೊಂದರ ಸಣ್ಣ ತಪ್ಪು
ಅದರಿಂದ ತಪ್ಪಾಗುವ ದೂರ, ವೇಗ,
ಆಳ, ಅಗಲ.
ಈ ನಡುವೆ ಒಂದು ಸಣ್ಣ ಅಕ್ಷರ ತಪ್ಪು
ನೆನಪುಗಳನ್ನೇ ಬುಡಮೇಲಾಗಿಸುತ್ತದೆ.

ಆದರೂ,
ನಮಗೆ ತಪ್ಪಾದ ಅಳತೆಯೇ ಇಷ್ಟ.
ದೂರ ಕಡಿಮೆಯಾಗಿ, ವೇಗ ಹೆಚ್ಚಾಗಿ
ಆಳ ಅಗಲಗಳೆಲ್ಲ ಒಂದಾಗಿಬಿಡುತ್ತವೆ.
ಆಮೇಲೆ ಎಲ್ಲವೂ ಸುಲಭ.

ನಿನ್ನಲ್ಲಿಗಿರುವ ದೂರ,
ನಿನ್ನಲ್ಲಿಗೆ ಬರಬೇಕಾದ ವೇಗ
ತಪ್ಪಿಹೋದಾಗಲೇ
ನಾನು ಎಲ್ಲೂ ತಪ್ಪದ ಹಾಗೆ ತೂಗುಹಾಕಿದ್ದು,
ಬಾವಲಿಯ ಹಾಗೆ.

Friday, March 25, 2016

ಬಾಗೇಶ್ರೀ ಅನುವಾದ:ಗೇಬ್ರಿಯಾಲ ಮಿಸ್ತ್ರಾಲ್ ನಾಲ್ಕು ಕವಿತೆಗಳು
ನಾವು ಅನೇಕ ತಪ್ಪುಗಳನ್ನು ಮಾಡಬಹುದು. ಆದರೆ ಮಕ್ಕಳ ಬಗ್ಗೆ ಅಸಡ್ಡೆ ತೋರುವುದು ಎಲ್ಲಕ್ಕಿಂತ ದೊಡ್ಡ ಅಪರಾಧ, ಜೀವನದ ತಳಹದಿಯ ಬಗ್ಗೆಯೇ ತಳೆವ ಉದಾಸೀನ. ಮಾಡಬೇಕಾದ ಅನೇಕ ಕೆಲಸಗಳನ್ನು ಆಮೇಲೆ ಮಾಡಿದರಾಯಿತು ಅಂತ ಮುಂದೆ ತಳ್ಳಬಹುದು. ಆದರೆ ಮಕ್ಕಳು ನಮಗಾಗಿ ಕಾಯುವುದಿಲ್ಲ. ಮಗುವಿನ ಮೂಳೆ ಬೆಳೆದು ಗಟ್ಟಿ ಆಗುತ್ತಿರುವುದು ಈಗ, ದೇಹದಲ್ಲಿ ರಕ್ತ ಉತ್ಪಾದನೆ ಆಗುತ್ತಿರುವುದು ಈಗ, ಪಂಚೇಂದ್ರಿಯಗಳು ಚುರುಕಾಗುತ್ತಿರುವುದು ಈಗ. ಮಗುವಿನ ಕರೆಗೆ “ನಾಳೆ ಬಾ” ಅನ್ನಲಾಗುವುದಿಲ್ಲ. ಯಾಕೆಂದರೆ ಕಂದನ ಹೆಸರೇ “ಇಂದು”


ಇದು ಚಿಲಿ ದೇಶದ ಕವಿಯತ್ರಿ, ಸ್ತ್ರೀವಾದಿ, ಚಿಂತಕಿ, ಲೇಖಕಿ, ಶಿಕ್ಷಣ ತಜ್ಞೆ ಗೇಬ್ರಿಯಾಲ ಮಿಸ್ತ್ರಾಲ್ (ಇದು ಆಕೆಯ ಕಾವ್ಯ ನಾಮ, ಮೂಲ ಹೆಸರು ತುಂಬಾ ಉದ್ದ!) ಹೇಳುವ ಮಾತು. ಈಕೆ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಲ್ಯಾಟಿನ್ ಅಮೇರಿಕಾದ ಮಹಿಳೆ.
 
ಸ್ಪಾನಿಶ್ ಬರಹಗಾರರ ಬಗ್ಗೆ ವಿಶೇಷ ಪ್ರೀತಿ ಇರುವ ಮಂದಿಗೂ ನೆರುಡಾ, ಮಾರ್ಕ್ವೆಸ್ ಹೀಗೆ ಒಂದು ಹತ್ತು ಹೆಸರುಗಳ ಆಚೆ ತಿಳಿದಿರುವುದು ಕಷ್ಟ. ಓ.ಎಲ್. ನಾಗಭೂಷಣಸ್ವಾಮಿ ಅವರು ಇತ್ತೀಚಿಗೆ ಒಂದಿಷ್ಟು ಮಿಸ್ತ್ರಾಲ್ ಕವಿತೆಗಳನ್ನು ಪರಿಚಯಿಸುವವರೆಗೆ ನನಗೆ ಈಕೆಯ ಬಗ್ಗೆ ಗೊತ್ತಿರಲಿಲ್ಲ. ನೆರುಡಾ ತನ್ನ ಆತ್ಮಚರಿತ್ರೆಯಲ್ಲಿ ನಾವು ಅರಿಯದ, ಪ್ರಾಯಶಃ ಅನುವಾದ ಆಗದ ಬಹಳಷ್ಟು ಸ್ಪಾನಿಶ್ ಬರಹಗಾರ ಬಗ್ಗೆ ಬರೆಯುತ್ತಾನೆ, ಅದರಲ್ಲಿ ಅವನಿಗೆ ಪಾಠ ಹೇಳಿದ ಮಿಸ್ತ್ರಾಲ್ ಕೂಡ ಒಬ್ಬಾಕೆ ಅಂತ ಓ.ಎಲ್.ಎನ್. ಹೇಳಿದರು.
 
ಬಹಳ ಕಷ್ಟದಲ್ಲಿ ಬೆಳೆದ ಮಿಸ್ತ್ರಾಲ್ ಟೀಚರ್ ಆದದ್ದು, ರಾಯಭಾರಿಯಾಗಿ ದೇಶ ವಿದೇಶ ಸುತ್ತಿದ್ದು, ಆಕೆ ವೈಯ್ಯಕ್ತಿಕ ಜೀವನದಲ್ಲಿ ಅನುಭವಿಸಿದ ಕಷ್ಟಗಳು (ತಾನು ಮದುವೆ ಆಗಬೇಕು ಎಂದುಕೊಂಡವನು ಆತ್ಮಹತ್ಯೆ ಮಾಡಿಕೊಂಡು ಸತ್ತ ಬಳಿಕೆ ಆಕೆ ಮದುವೆ, ಮಕ್ಕಳು ಎಲ್ಲ ಬೇಡ ಅಂತ ಇದ್ದುಬಿಟ್ಟಳು) ಎಲ್ಲವೂ ವಿಶಿಷ್ಟವಾದದ್ದು. ಈಕೆಯ ಕವಿತೆ, ಬರಹಗಳು ಬಹಳ ತೀವ್ರ ಅನುಭವ ಮತ್ತು ಭಾವನೆಗಳನ್ನು ಸರಳ ಮತ್ತು ಲಿರಿಕಲ್ ಶೈಲಿಯಲ್ಲಿ ಕಟ್ಟುವ ಬಗೆ ಮನಸ್ಸಿಗೆ ಮುಟ್ಟುತ್ತದೆ. “ಕವಿತೆ ನನ್ನ ಇಂದ್ರಿಯಕ್ಕೆ ಮತ್ತು ನಾವು ‘ಆತ್ಮ’ ಎಂದು ಹೆಸರಿಟ್ಟಿರುವ ನನ್ನತನಕ್ಕೆ ಒಂದು ಬಗೆಯ ನೆಮ್ಮದಿ ತರುತ್ತದೆ. ನನ್ನದೇ ಕವಿತೆಗಿಂತಲೂ ಬೇರೆಯರವ ಕವಿತೆಗಳು ತರುವ ನೆಮ್ಮದಿ ದೊಡ್ಡದು. ಕವಿತೆ ನನ್ನ ರಕ್ತ ಸಂಚಲವನ್ನು ನಿಯಮಿತಗೊಳಿಸುತ್ತದೆ, ನನ್ನೊಳಗೆ ಇನ್ನೂ ಉಳಿದಿರುವ ಬಾಲಕಿಯ ನೆನಪನ್ನು ಕಾಪಾಡುತ್ತದೆ, ಹೊಸಬಳನ್ನಾಗಿ ಮಾಡುತ್ತದೆ, ಪ್ರಪಂಚದ ಬಗ್ಗೆ ಕಲ್ಮಶರಹಿತ ಪ್ರೀತಿ ಹುಟ್ಟಿಸುತ್ತದೆ” ಅನ್ನುವ ಗೇಬ್ರಿಯಾಲಳ ಕಾವ್ಯಮಯ ಗದ್ಯ ಲೇಖನಗಳೂ ಚೆಂದ (ಆಕೆ ಅನಾನಸ್ ಹಣ್ಣಿನ ಬಗ್ಗೆ, ಮುತ್ತಿನ ಬಗ್ಗೆ ಬರೆದ ಪುಟ್ಟ ಲೇಖನಗಳನ್ನು ಓದಿ).  
 
ಈಕೆಯ ಬಗ್ಗೆ ಇಲ್ಲಿ ಒಂದು ವಿಸ್ತ್ರತ ಲೇಖನವಿದೆ: http://www.poetryfoundation.org/bio/gabriela-mistral
 
ಗೇಬ್ರಿಯಾಲಳ ಕೆಲ ಕವಿತೆಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡಿದ್ದೇನೆ. ಅರಿಯದ ಭಾಷೆಯ ಪದ್ಯಗಳನ್ನು ಇಂಗ್ಲೀಷಿನಲ್ಲಿ ಮಾತ್ರ ಓದಿಕೊಂಡು ಮಾಡುವ ಅನುಸರಣೆ/ಅನುವಾದ ಅದೆಷ್ಟರ ಮಟ್ಟಿಗೆ “ಮೂಲ”ದ ಅನುವಾದ ಅನ್ನಬಹುದೋ ನಾ ಕಾಣೆ. ಆದರೂ ಓ.ಎಲ್.ಎನ್. ಅವರೇ ಅಂದ ಹಾಗೆ ಅನುವಾದದ ನಂತರವೇ ಅಲ್ಲವೇ ಯಾವುದೇ ಪಠ್ಯಕ್ಕೆ “ಮೂಲ” ಅನ್ನುವ ಪಟ್ಟ ಸಿಗುವುದು?! ಇದು ಸಧ್ಯದ ಅನುವಾದ. ಮತ್ತೆ ಪರಿಷ್ಕರಿಸುತ್ತೇನೆ. 
 
ಹುಡುಗಿ 
 
ವಯಸ್ಸು ಹನ್ನೆರಡಿದ್ದಾಗ
ನಾಲ್ಕರ ಹುಡುಗಿಯ ಹಾಗಿವಳು ಅಂದರು
ಯಾಕಂದರೆ ನನ್ನ ವಯಸ್ಸಿಗೆ
ತಕ್ಕಂತೆ ನಾನಿರಲಿಲ್ಲ 
ಹೊಲಿಗೆ, ಅಡುಗೆ ಬರುತ್ತಿರಲಿಲ್ಲ
ಕಣ್ಣಲ್ಲಿ ಯಾವಾಗಲೂ ಕನಸು 
ಕತೆ, ಪದ್ಯ ಕೇಳುವ ಹುಚ್ಚು
ಪಾತ್ರೆ ಉಜ್ಜು ಅಂದರೆ ಉಹೂಂ
ಎಲ್ಲಕ್ಕಿಂತಾ ಹೆಚ್ಚು
ಹೀಗೆ ಕವನ ಕಟ್ಟುವುದೇ ಮೆಚ್ಚು!

ಮತ್ತೆ ನೋಡುವುದೆಂದರೆ 
 
ಇಲ್ಲ… ಇನ್ನೆಂದೆಂದೂ ಇಲ್ಲ
ನಡುಗುವ ತಾರೆಗಳ ರಾತ್ರಿಯಲ್ಲಿಲ್ಲ
ಇಣುಕುವ ಮುಂಜಾವಿನ ಬೆಳಕಿನಲ್ಲಿಲ್ಲ
ಮಟಮಟ ಮಧ್ಯಾಹ್ನದ ಅಗ್ನಿಕುಂಡದಲ್ಲಿಲ್ಲ
 
ಗದ್ದೆಯ ಸುತ್ತ ಸುತ್ತಿ ದೂರ ಮರೆಯಾಗುವ
ಕಾಲು ಹಾದಿಯ ಕೊನೆಯಲ್ಲಿಲ್ಲ 
ಬೆಳದಿಂಗಳ ಹಾಲಲ್ಲಿ ಮಿಂದು ಚಿಮ್ಮುವ
ಚಿಲುಮೆಯ ತುಟ್ಟತುದಿಯಲ್ಲಿಲ್ಲ
 
ಅವನ ಹೆಸರು ಕೂಗುತ್ತ, ಕತ್ತಲಲ್ಲಿ ಕರಗುತ್ತಾ
ಸುತ್ತಿದ ಕಾಡ ಹೆಮ್ಮರಗಳ ಅಡಿಯಲ್ಲಿಲ್ಲ
ನನ್ನ ರೋಧನದ ಮಾರ್ದನಿ ನನ್ನೊಡಲಿಗೆ 
ತಿರುಗೆಸೆವ ಗುಹಾಂತರ ದೇಗುಲದಲ್ಲಿಲ್ಲ 
 
ಓ… ಅವನನ್ನು ಮತ್ತೊಮ್ಮೆ ನೋಡಲಾರೆನೆ?
ಎಲ್ಲೋ ಎಂತೋ ಹೇಗಾದರೂ ಸರಿ 
ನರಕದ ಕರಿನೀರ ಸುಳಿಯಲ್ಲಿ, ಉರಿವ ಬಾಣಲೆಯಲ್ಲಿ
ತಣ್ಣನ ಚಂದಿರನಡಿ ರಕ್ತ ಹೆಪ್ಪುಗಟ್ಟುವ ಗಳಿಗೆಯಲ್ಲಿ
 
ಚಳಿ ಮಳೆ ಬಿರುಗಾಳಿ ಸುಡುಬೇಸಿಗೆಯಲ್ಲಿ 
ಅವನ ಆ ಎತ್ತಿದ ಕತ್ತ ಬಳಸಿದ
ಬಿರುಸು ಬಿಗಿದಪ್ಪುಗೆಯ ಮಿಲನದಲ್ಲಿ  
ಅವನೊಡನೆ ಮತ್ತೊಮ್ಮೆ ಇರುವುದೆಂದರೆ… 

ಜೋಗುಳ 
 
ಮಲಗು ನನ್ನ ಮುದ್ದು ಮಲಗು  
ಚಿಂತೆ ಭಯವಿಲ್ಲದೆ ಮಲಗು 
ನನ್ನಾತ್ಮಕ್ಕೆ ನಿದ್ದೆ ಬರದಿದ್ದರೆ ಬೇಡ 
ವಿಶ್ರಾಂತಿ ಇಲ್ಲದಿದ್ದರೆ ಹೋಗಲಿ
 
ಮಲಗು ನನ್ನ ಮುದ್ದು ಮಲಗು 
ರಾತ್ರಿಯ ನಿನ್ನ ಕನಸಿನ ಪಿಸುದನಿಗೆ  
ಹುಲ್ಲು ಹಾಸು, ಕುರಿಮರಿಯ ತುಪ್ಪಳ
ಮೀರಿದ ಮೃದುರೇಶಿಮೆಯ ಸ್ಪರ್ಷವಿರಲಿ
 
ನನ್ನ ಮೈ ಮನಗಳ ತಳಮಳ 
ನಿನ್ನ ಜೊತೆ ಮಂಪರಿಗೆ ಇಳಿಯಲಿ 
ನಿನ್ನಲ್ಲಿ ನನ್ನ ಕಣ್ಣು ಮುಚ್ಚಲಿ 
ನಿನ್ನಲ್ಲಿ ನನ್ನ ಎದೆ ವಿರಮಿಸಲಿ  
 
ಅಮ್ಮ ಮತ್ತು ಸಾವು 

ತಲೆ ಎಣಿಸುವ ತಂತ್ರಗಾರ್ತಿ
ಸಾವೆಂಬ ಚಾಲಕಿ ಮುದುಕಿಯೇ,
ನೀ ನಡೆವ ಹಾದಿಯಲ್ಲಿ
ನನ್ನ ಕಂದನ ನೆರಳೂ ಸುಳಿಯದಿರಲಿ

ಹಸಿಗೂಸುಗಳ ಮೂಸುತ್ತ
ಹಾಲ ಪಸೆ ಅರಸುತ್ತ ನಡೆವ ನಿನಗೆ
ಉಪ್ಪು, ಜೋಳದ ವಾಸನೆ ಬಡಿಯಲಿ
ನನ್ನೆದೆಯ ತೇವ ತೋರದಿರಲಿ

ಲೋಕದೆಲ್ಲ ಅಮ್ಮಂದಿರ ಗುಮ್ಮ
ಬುರುಡೆ ಮಾಲೆಗಳ ಅಜ್ಜಮ್ಮ
ನೀನಲೆವ ಕಡಲ ತಡಿಯಲ್ಲಿ
ನನ್ನ ಕಂದ ಕಾಲ್ತೊಡರದಿರಲಿ

ನನ್ನ ಕಂದನಿಗಿತ್ತ ಹೆಸರು
ಅವಳು ಮುಟ್ಟುವ ಹೂವ ಕಂಪು
ನಿನ್ನ ಜ್ಞಾಪಕ ಚಿತ್ರಪಟದಿಂದ
ಅಳಿಸಿ ನಿವಾಳಿಸಿ ಹೋಗಲಿ
 
ಉಪ್ಪು ಉಸುಕಿನ ಸುಂಟರಗಾಳಿಯೆದ್ದು
ತಲೆ ಕೆಡಿಸಿ, ಹುಚ್ಚು ಹಿಡಿಸಿ
ನಿನಗೆ ಪೂರ್ವಾಪರಗಳ
ಅರಿವೇ ಇಲ್ಲದಂತಾಗಿ ಹೋಗಲಿ
 
ಅಮ್ಮನಾರು ಕಂದನಾರೆಂದು ತೋಚದ
ಕಡಲ್ಯಾವುದು ಮೀನ್ಯಾವುದೆಂದು ಅರಿಯದ
ಆ ದಿನ, ಆ ಗಂಟೆ, ಆ ಗಳಿಗೆ
ನಾನು ಮಾತ್ರವೇ ನಿನ್ನ ಕಣ್ಣಿಗೆ ಬೀಳಲಿ
 
ಪುಟ್ಟ ಪಾದಗಳು 

ಮಗುವಿನ ಪುಟ್ಟ ಪಾದಗಳು
ಚಳಿಗೆ ನೀಲಿಗಟ್ಟಿದ ಪಾದಗಳು…
ಅಯ್ಯೋ ದೇವರೆ!
ಕಂಡೂ ಕೈಹಿಡಿಯದ ಈ ಮಂದಿ ಎಂಥವರು!
 
ಗಾಯಗೊಂಡ ಪುಟ್ಟ ಪಾದಗಳು
ಕಲ್ಲುಮುಳ್ಳು ಚುಚ್ಚಿ ಗಾಯವಾದ ಪಾದಗಳು
ಮಣ್ಣು ಹಿಮ ಮೆಟ್ಟಿ ಘಾಸಿಗೊಂಡ ಪಾದಗಳು
ಕುರುಡು ಮಂದಿಗೆ ನೀನು ಮೆಟ್ಟಿದ ನೆಲದಲ್ಲಿ
ಅರಳುವ ಬೆಳಕಿನ ಹೂವು ಕಾಣುವುದಿಲ್ಲ
ನಿನ್ನ ರಕ್ತಸಿಕ್ತ ಪುಟ್ಟ ಪಾದ ಇಟ್ಟಲ್ಲೆಲ್ಲ
ನಳನಳಿಸುವ ಕೆಂಗುಲಾಬಿ ತೋರುವುದಿಲ್ಲ
ನೇರ ದಾರಿಯಲ್ಲಿ ದಿಟ್ಟ ನಡೆವ
ನಿನ್ನ ಪಾದ ಎಡವುವ ಪ್ರಶ್ನೆ ಇಲ್ಲ ಮಗುವಿನ ಪುಟ್ಟ ಪಾದಗಳು
ಮರುಗುವ ಪುಟ್ಟ ರತ್ನಗಳು… 
ಕಂಡೂ ಕಾಣದ ಈ ಮಂದಿ ಎಂಥವರು! 
 
ಮುಸ್ಸಂಜೆ

ಈ ಮಧುರ ಗಳಿಗೆ 
ನನ್ನೆದೆ ಕರಗುವ ಮೊಂಬತ್ತಿ
ಧಮನಿಯಲಿ ಹರಿಯುತ್ತಿದೆ
ಮದಿರೆಯಲ್ಲ, ಮಂದ ತೈಲ 
ಬದುಕು ಚಿಗರೆಯಂತೆ ಚಂಗನೆ
ಸದ್ದು ಸುಳಿವಿಲ್ಲದೆ ಓಡಿದೆ

ಆಜಾದಿಸ್ವತಂತ್ರ ಬಂತು ಅಂತ ಸುದ್ದಿ ಬಂತಪ
ಸ್ವರಾಜ್ಯನೂ ಅಂತೇನೋ ಒಂದ್ ಬಂತು ಅಂದ್ರು
ಐವತ್ತರವತ್ ವರ್ಷ ಕೆಳಗೇ
ಕೆಂಪುಕ್ವಾಟೆ ಕಡಿಂದ ಆಜಾದಿ ಬಂತು ಅಂತನೂ ಅಂದ್ರು 
ಆದ್ರೆ ಅಣ, ಬಂದಿದ್ದು ಅದೆಲ್ಲಿ ಕಳೆದ್ಹೋಯ್ತು? ಗೊತ್ತೇ ಆಗ್ನಿಲ್ಲ
ದಪ್ಪದಪ್ಪನ ದಫ್ತರದಾಗೆ ಹುಡುಕಿದ್ನಿ
ಪೊಲೀಸ್ ಠಾಣ್ಯಾಗೆ ನೋಡಿದ್ನಿ
ಹುಡುಕೇ ಹುಡುಕಿದ್ವಿ
ಎಲ್ಲೆಲ್ಲೂ ಸಿಗಲಿಲ್ಲ
ಇಲ್ಲೀವರ‍್ಗೂ ನೋಡಿಲ್ಲ ಕಣಣೋ ಆ ಆಜಾದಿ ಅಂದ್ರೆ ಹೆಂಗಿದೆ ಅಂತ
ಅದೇನ್ ಬೆಳ್ಳಕಿದೆಯೋ ಕರ್ರಗೋ
ದೊಡ್ಡಕಿದೆಯೋ ಸಣ್ಣಕೋ
ಓ ತಮಾ, ನಿನಗೇನರೆ ಸಿಕ್ರೆ ಆ ಆಜಾದಿನ
ನಮ್ಮೂರ‍್ಗೂ ವಸಿ ಕರಕೊಂಡ್ ಬಾರ್‌ಲೆ
ಒಂದ್ಸಲನಾದ್ರೂ ನೋಡೇ ಬಿಡಣ ಅವನೌನ ಅದ್ ಏನದು ಅಂತ..

ಮಹಾರಾಷ್ಟ್ರದ ದಂಡಕಾರಣ್ಯ ಪ್ರದೇಶದ ಗಡಚಿರೋಲಿಯ ಅಜ್ಞಾತ ಕವಿಯೊಬ್ಬನ ಕವಿತೆ. 
ಕನ್ನಡಕ್ಕೆ: ಡಾ. ಎಚ್. ಎಸ್. ಅನುಪಮಾ

ಪಿಡಿಪಿ, ಬಿಜೆಪಿ ಕೂಡಿಕೆ : ಎಷ್ಟೊಂದು ಪ್ರಶ್ನೆ

ಎಸ್ ಸಿ. ದಿನೇಶಕುಮಾರ್


Dinesh Kumar Dinoo's photo.


ಪಿಡಿಪಿ, ಬಿಜೆಪಿ ಎರಡನೇ ಬಾರಿ ಕೂಡಿಕೆ ಮಾಡಿಕೊಂಡಿವೆ. ಈ ಬಾರಿಯ ಕೂಡಿಕೆಗೆ ಏನೇನು ಒಪ್ಪಂದ, ಒಳ ಒಪ್ಪಂದ, ಜಂಟಲ್ ಮ್ಯಾನ್ ಅಗ್ರೀಮೆಂಟು, ಕಾಂಪ್ರಮೈಸ್ ಗಳು... ಇತ್ಯಾದಿ ಇತ್ಯಾದಿಗಳು? ಇಬ್ಬರೂ ಮುಗುಮ್ಮಾಗಿದ್ದಾರೆ. ಆದರೆ ಅನುಮಾನಗಳಿಗೇನು ಬರ? ಪಠಾಣ್ ಕೋಟ್ ವಿಷಯ ಇಟ್ಕೊಂಡು ಬಡಪಾಯಿ ಪಾಕಿಸ್ತಾನವನ್ನ ಸುಖಾಸುಮ್ಮನೆ ಬ್ಲಾಕ್ ಮೇಲ್ ಮಾಡ್ತಾ ಇದ್ದೀರಾ ಅಂತ ಹುರಿಯತ್ ನವರು ಕೆಣಕುತ್ತಾ ಇದ್ದರೂ ಐವತ್ತಾರಿಂಚಿನ ಎದೆ ಸುತ್ತಳತೆಯ ಮೋದಿ ಸರ್ಕಾರ ಮುಗುಮ್ಮಾಗಿದೆ. ದಿಲ್ಲಿಯ ಪಾಕ್ ಹೈಕಮಿಷನ್ ಕಚೇರಿಯಲ್ಲಿ ನಡೆದ ಪಾಕಿಸ್ತಾನ ದಿನಾಚರಣೆಯಲ್ಲಿ ಇಂಡಿಯಾ ವಿರೋಧಿಗಳೆಲ್ಲ ಮಿನಿಸ್ಟರ್ ಪ್ರಕಾಶ್ ಜಾವಡೆಕರ್ ಮುಂದೆಯೇ ಮಿಲಾಯಿಸಿಕೊಂಡಿದ್ದಾರೆ. ಮೋದಿ ಸರ್ಕಾರ ತುಟಿಬಿಚ್ಚುತ್ತಿಲ್ಲ. 

ಕಾಶ್ಮೀರದಲ್ಲಿ ಅದ್ಯಾವುದೋ ಹೆಣ್ಮಕ್ಕಳ ಪ್ರತ್ಯೇಕತಾವಾದಿ ಸಂಘ ಪಾಕಿಸ್ತಾನ ಬಾವುಟ ಹಾರಿಸಿ, ಪಾಕ್ ರಾಷ್ಟ್ರಗೀತೆ ಹಾಡಿ ಏನ್ ಮಾಡ್ಕೋತೀರಾ ಅನ್ನೋ ಚಾಲೆಂಜು ಹಾಕಿದೆ. ಇವಾಗ ಸೆಡಿಷನ್ ಕೇಸೂ ಇಲ್ಲ ಮಣ್ಣೂ ಇಲ್ಲ. ರಾಜನಾಥನ ಬಣ್ಣದ ತಗಡಿನ ತುತ್ತೂರಿ ಶಬ್ದ ಮಾಡುತ್ತಿಲ್ಲ. ಅದೆಲ್ಲ ಹೋಗಲಿ, ಜೆಎನ್ ಯು ನಲ್ಲಿ ಭಾರತ್ ಕೀ ಬರ್ ಬಾದಿ ಎಂದು ಘೋಷಣೆ ಕೂಗಿದ ಅಷ್ಟೂ ಜನ ಕಾಶ್ಮೀರಿ ಫೋಟೋಗಳನ್ನು ಇಂಡಿಯಾ ಟಿವಿ ಸಾಕ್ಷಿ ಸಮೇತ ನೀಡಿದೆ. ಎಲ್ಲರೂ ದಿಲ್ಲಿಯಲ್ಲಿ ವಾಸವಾಗಿರೋ ಕಾಶ್ಮೀರಿಗಳು. ಅವರನ್ನು ಬಂಧಿಸಿ ಎದೆಗಾರಿಕೆ ಇದೆಯಾ ಸರ್ಕಾರಕ್ಕೆ ಅಂದ್ರೆ ಅದೂ ಕೂಡ ಇಲ್ಲ. 

ಅದು ಮುಗಿಬೀಳೋದು ಬರೀ ವಿದ್ಯಾರ್ಥಿಗಳ ಮೇಲೆ ಮಾತ್ರ. ಪಿಡಿಪಿ ಜತೆಗಿನ ಕೂಡಾವಳಿಗೆ ಇನ್ನೇನೇನು ಬಿಟ್ಟುಕೊಡಲಿದೆ ಬಿಜೆಪಿ? ಅದೆಲ್ಲ ಹಾಳಾಗಿ ಹೋಗಲಿ, ಜೆ ಎನ್ಯೂ ನಲ್ಲಿ ಅಫ್ಜಲ್ ಈವೆಂಟ್ ನಿಂದ ಅಷ್ಟೊಂದು ರಣರಂಪ ಮಾಡಿದರಲ್ಲ, ಈಗ ಯಾವ ಮುಖ ಹೊತ್ತು ಅಫ್ಜಲ್ ಗುರುವನ್ನು ಹುತಾತ್ಮ ಎನ್ನುವ, ಆತನ ಮರಣದಂಡನೆಯನ್ನು ನ್ಯಾಯಾಂಗದ ಅಣಕವೆಂದು ಹೇಳುವ, ಶಾಂತಿಯುತ ಚುನಾವಣೆಗೆ ಸಹಕರಿಸಿದ್ದಕ್ಕಾಗಿ (!) ಹಫೀಜ್ ಸಯೀದ್ ನಂಥವನಿಗೆ ಥ್ಯಾಂಕ್ಸ್ ಹೇಳುವ ಪಿಡಿಪಿ ಜತೆ ಮತ್ತೆ ಅಧಿಕಾರ ಅನುಭವಿಸುತ್ತಾರೆ? ಇವರಿಗೆ ನಾಚಿಕೆ-ಮಾನ-ಮರ್ಯಾದೆ ಏನೂ ಇಲ್ಲವಾ? ಹೋಗಲಿ ಈ ಭಕ್ತರೆಂಬ ಪ್ರಾಣಿಗಳಿಗೆ ಸೆನ್ಸೇಷನ್ ಕೂಡ ಇಲ್ಲದಂತಾಗಿ ಹೋಯಿತಾ? ಒಬ್ಬನಾದರೂ ಧೈರ್ಯವಾಗಿ ಮೋದಿಜೀ ಇದು ಯಾಕೋ ಸರಿಕಾಣ್ತಾ ಇಲ್ಲ ಅಂತ ಹೇಳಬಾರದಾ? ಪಾಪ ಭಕ್ತರು ನಾಸ್ಟ್ರಾಡಮಸ್ಸನ್ನ ಭವಿಷ್ಯವನ್ನು ಡೀಕೋಡ್ ಮಾಡೋದ್ರಲ್ಲೇ ಬಿಜಿಯಾಗಿದ್ದಾರೆ ಅನ್ಸುತ್ತೆ. ಟಿವಿ ಚಾನಲ್ಲುಗಳಿಗೆ ಪ್ಯಾಕೇಜು ಮುಂದುವರೆಯಲಿದೆ. ಕಾಶ್ಮೀರದಲ್ಲಿ ಕೂಡಿಕೆ ಸರ್ಕಾರ ಸಾಂಗೋಪಾಂಗವಾಗಿ ಅಧಿಕಾರ ಸ್ಥಾಪಿಸಲಿದೆ.

ಮಹಿಳಾ ಚಳುವಳಿ: ಇಂದು-ಮುಂದುಡಾ. ಎಚ್. ಎಸ್. ಅನುಪಮಾ, ಕವಲಕ್ಕಿ.


ತೆರಣಿಯ ಹುಳದ ತಳಮಳ

ಮಹಿಳಾ ಚಳುವಳಿ ಎಂಬುದೊಂದು ಸಂಭವಿಸುತ್ತಿದೆಯೆ ಎಂಬ ಪ್ರಶ್ನೆ ಮತ್ತೆಮತ್ತೆ ಕೇಳಿಬರುತ್ತದೆ. ನಮ್ಮ ಹಲವಾರು ಸಂಗಾತಿಗಳು, ಸಮಾನ ಮನಸ್ಕರು ಈ ಪ್ರಶ್ನೆ ಎತ್ತುತ್ತಾರೆ. ಕೆಲ ಕುಹಕಿಗಳು ‘ನೀವು ಇಷ್ಟು ಹೋರಾಡಿದರೂ ದಿನನಿತ್ಯ ಅತ್ಯಾಚಾರ, ದೌರ್ಜನ್ಯಗಳು ಸಂಭವಿಸುತ್ತಿದೆಯಲ್ಲ? ಮಹಿಳಾ ಚಳುವಳಿ ಇಲ್ಲ ಎನ್ನಲು ಇದೇ ಸಾಕ್ಷಿಯಲ್ಲವೆ’ ಎಂದೂ ಕಟಕಿಯಾಡುತ್ತಾರೆ.

ನಿಜ. ಜನ್ಮಾಂತರಗಳಿಂದ ಒಳಗನ್ನು ಹೊರತೋರದೆ ಒತ್ತಿಒತ್ತಿ ಇಟ್ಟುಕೊಂಡವರು ಆಡುವುದು ಕಷ್ಟ, ಅವರು ಆಡಿದ್ದನ್ನು ಅರಗಿಸಿಕೊಳ್ಳುವುದೂ ಕಷ್ಟ. ಆದರೆ ಹಿಂದೆಯೂ ಇಂದಿಗೂ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರೆಲ್ಲ ಒಟ್ಟಾಗಿ ತಮ್ಮ ಕೊನೆಯಿರದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಂಘಟಿತರಾಗಿ ಹೋರಾಟ ಕಟ್ಟಲಾಗಿಲ್ಲ. ಒಂದು ಸಿದ್ಧಾಂತ, ಪಕ್ಷ, ನಾಯಕತ್ವದಡಿ ಸಮಗ್ರ ಚಳುವಳಿ ರೂಪಿಸಲಾಗಿಲ್ಲ. ಚಳುವಳಿಯ ಮಾತು ಹೋಗಲಿ, ಬಹುಪಾಲು ಮಹಿಳೆಯರಿಗೆ ತಾರತಮ್ಯ ಇದೆಯೆಂದು, ತಾರತಮ್ಯದ ಮೂಲ ಯಾವುದಿರಬಹುದು ಎಂದು ಇನ್ನೂ ಅರ್ಥವಾಗಿಲ್ಲ. ತುಳಿದವರು ಮೇಲೇಳಬಾರದು ಎಂದೇ ದಮನದ ನೆಲೆಯನ್ನು ಅತ್ಯಂತ ಜಾಗರೂಕವಾಗಿ, ನಾಜೂಕಾಗಿ, ಆದರೆ ಗಟ್ಟಿಯಾಗಿ ಹೆಣೆಯಲಾಗಿದೆ. ‘ತೆರಣಿಯ ಹುಳು’ ತನಗರಿವಿಲ್ಲದೆ ತಾನೇ ಬಲೆ ನೇಯ್ದು ಬಂಧಿಸಿಕೊಳ್ಳುವಂತೆ ಹೆಣ್ಣು ಸಹಾ ತನ್ನ ಸುತ್ತ ಬೇಲಿಯನ್ನು ತಾನೇ ಬಿಗಿದುಕೊಳ್ಳುವಂತೆ ಮಾಡಲಾಗಿದೆ. ಪಿತೃಪ್ರಾಧಾನ್ಯದ ಸಕಲ ಭಾರಗಳನ್ನೂ ತನ್ನ ಮೇಲೆಳೆದುಕೊಂಡೇ ಬದುಕಬೇಕಿರುವುದರಿಂದ ಮಹಿಳೆ ತನ್ನ ದಮನದ ನೆಲೆಗಳು ಮತ್ತು ಬಿಡುಗಡೆಯ ಹೋರಾಟಗಳನ್ನು ಗುರುತಿಸುವುದೂ ಕಷ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಮಹಿಳೆಯ ದೃಷ್ಟಿಯಿಂದ ಚಳುವಳಿ ಎಂದರೇನು? ಚಳುವಳಿಯ ವ್ಯಾಖ್ಯೆ, ಅರ್ಥ ಏನು ಎಂದು ಪರಿಶೀಲಿಸುವ ಅಗತ್ಯವಿದೆ.

ಭಾರತೀಯ ಸಮಾಜದ ಲಿಂಗತಾರತಮ್ಯ ಮಗು ತಾಯಿಯ ಹೊಟ್ಟೆಯಲ್ಲಿರುವಾಗಲೇ ಶುರುವಾಗುತ್ತದೆ. ಬೆಳೆಯುವ ಹೆಣ್ಣುಮಗು ಒಂದಲ್ಲ ಒಂದು ಹಂತದಲ್ಲಿ ತಾನು ಹೆಣ್ಣು, ಅದಕ್ಕೇ ಹೀಗಿರಬೇಕು; ತಾನು ಹೆಣ್ಣು, ಆ ಕಾರಣಕ್ಕೇ ಅವಕಾಶ ವಂಚಿತಳಾದರೂ ಸುಮ್ಮನಿರಬೇಕು ಎನ್ನುವುದನ್ನು ಹೆಜ್ಜೆಹೆಜ್ಜೆಗೂ ಅರಗಿಸಿಕೊಂಡು ಬದುಕಬೇಕಾಗಿದೆ. ಅವಳಿಗೆ ಶಿಕ್ಷಣಕ್ಕಿಂತ ವಿವಾಹವೇ ಮುಖ್ಯ. ಉದ್ಯೋಗಕ್ಕಿಂತ ಮನೆ ಕೆಲಸಗಳ ನಿಭಾಯಿಸಬಲ್ಲ ಕೌಶಲ್ಯವೇ ಮುಖ್ಯ. ಮದುವೆ-ಮನೆವಾಳ್ತೆ-ತಾಯ್ತನಗಳು ಹೊರಿಸುವ ಕೊನೆಮೊದಲಿಲ್ಲದ ಜವಾಬ್ದಾರಿಗಳ ನಡುವೆ ಕುಟುಂಬದ ಆರ್ಥಿಕ ಚಟುವಟಿಕೆಯಲ್ಲೂ ಪಾಲ್ಗೊಳ್ಳಬೇಕು. ಹೀಗೆ ಬಹುವಿಧದ ಹೊರೆಗಳಿಂದ ನಲುಗುವ ಹೆಣ್ಣಿಗೆ ಅದರ ನಡುವೆಯೇ ತನ್ನತನ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಒಂದು ಹೆಜ್ಜೆ ಹೊರಗಿಟ್ಟು ಸಂಘಟಿತಳಾಗಬೇಕು ಅನಿಸಿಬಿಟ್ಟರೆ ಅದೇ ಒಂದು ಹೋರಾಟ. ವ್ಯಕ್ತಿಗತ ನೆಲೆಯ ಈ ಹೋರಾಟ ನಿರಂತರ. ಕುಟುಂಬದ ಪ್ರತಿ ಸದಸ್ಯರ, ಸಮಾಜದ ಅನುಮಾನ, ಅರೆಸಮ್ಮತಿ, ಅಸಹಕಾರಗಳ ನಡುವೆಯೇ ಅವಳು ತನ್ನ ಸಾರ್ವಜನಿಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸಾರ್ವಜನಿಕ ರಂಗಕ್ಕೆ ಬಂದಮೇಲೂ ತಾರತಮ್ಯ, ಅಸಡ್ಡೆ, ಅಸುರಕ್ಷಿತತೆ, ಅವಕಾಶ ವಂಚನೆ, ದಬ್ಬಾಳಿಕೆಯನ್ನು ಹೆಜ್ಜೆಹೆಜ್ಜೆಗೂ ಎದುರುಗೊಳ್ಳಬೇಕು. ಹಾಗಾಗಿಯೇ ಭಾರತೀಯ ಸಮಾಜದ, ಅಷ್ಟೇ ಏಕೆ ಪ್ರಪಂಚದ ಬಹುಪಾಲು ಹೆಣ್ಮಕ್ಕಳು ಬಿಡುಗಡೆಯನ್ನು ವೈಯಕ್ತಿಕ ಹಾಗೂ ಸಾಮೂಹಿಕ ಎರಡೂ ನೆಲೆಗಳಲ್ಲಿ ಹೋರಾಡಿಯೇ ಪಡೆಯಬೇಕಾಗಿದೆ.

ಹಾಗಾದರೆ ಈಗ ಮಹಿಳಾ ಚಳುವಳಿ ನಡೆಯುತ್ತಿದೆಯೆ?

ಚಳುವಳಿ ಒಂದು ಸಮಸ್ಯೆಗೆ ಮೂಲ ಕಾರಣವಾದ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಹೊರಡುತ್ತದೆ. ದಮನದ ನೆಲೆ ನಿರಂತರವಾಗುಳಿವ ವ್ಯವಸ್ಥೆಯಲ್ಲಿ ಚಳುವಳಿಯೂ ನಿರಂತರವಾಗಿ ರೂಪಾಂತರ ಹೊಂದುತ್ತ ಚಾಲ್ತಿಯಲ್ಲಿರುತ್ತದೆ. ಒಂದು ಚಳುವಳಿ ಹುಟ್ಟಿಕೊಳ್ಳುವ ಕಾರಣ, ಅದರ ಸ್ವರೂಪ, ನಡೆಗಳನ್ನು ಆಯಾ ಕಾಲ, ಸಮಾಜಗಳೇ ನಿರ್ಧರಿಸುತ್ತವೆ. ಅದೊಂದು ನಿರಂತರ ಪ್ರಕ್ರಿಯೆ.

ಈ ಕಾಲದ ಮಹಿಳಾ ಸಮಸ್ಯೆಗಳಾದರೂ ಯಾವುವು? ಅದರ ವಿಸ್ತಾರ ಬಹುದೊಡ್ಡದು. ಸಮಾಜವನ್ನು ಕಾಡುವ ಎಲ್ಲ ಸಮಸ್ಯೆಗಳೂ ಮಹಿಳೆಯರನ್ನೇ ಅಂತಿಮವಾಗಿ ಬಾಧಿಸುತ್ತವೆ. ಎಂದೇ ಪರಿಸರ ನಾಶ, ಯುದ್ಧ, ನೆರೆ, ಬರ, ಜಾಗತೀಕರಣ, ನಿರುದ್ಯೋಗ, ಗಣಿಗಾರಿಕೆ, ಅನಕ್ಷರತೆ, ಬಡತನ, ಕೃಷಿ ಬಿಕ್ಕಟ್ಟು, ವಲಸೆ ಮುಂತಾದ ಸಮಾಜದ ಸಕಲೆಂಟು ಸಮಸ್ಯೆಗಳು ಮಹಿಳಾ ಸಮಸ್ಯೆಗಳೂ ಆಗಿವೆ. ಇದರ ಜೊತೆಗೆ ವರದಕ್ಷಿಣೆ, ವೇಶ್ಯಾವಾಟಿಕೆ, ಸ್ತ್ರೀ ಭ್ರೂಣಹತ್ಯೆ, ಮರ್ಯಾದಾ ಹತ್ಯೆ, ಎಚ್ಚೈವಿ ಕಾಯಿಲೆ, ಅತ್ಯಾಚಾರ, ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ವಿಧವಾ ಪದ್ಧತಿ, ಜಾತಿ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ವೇತನ ತಾರತಮ್ಯ, ದೇವದಾಸಿ ಪದ್ಧತಿ ಮೊದಲಾದವು ಹೆಣ್ಣು ತಾನು ಹೆಣ್ಣೆಂಬ ಕಾರಣಕ್ಕೇ ಅನುಭವಿಸುವ ತೊಂದರೆಗಳು. ಈ ಎಲ್ಲವನ್ನೂ ಒಂದು ಹೋರಾಟ, ಒಂದು ಪ್ರತಿಭಟನೆ, ಒಂದು ಸಂಘಟನೆ, ಒಬ್ಬ ವ್ಯಕ್ತಿಯ ಜೀವಮಾನ ಕಾಲದಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಎಂದೇ ಇವೆಲ್ಲವನ್ನೂ ಪ್ರತ್ಯೇಕವಾಗಿ ನೋಡುವ ಸಂಘಟನೆ, ಸಂಸ್ಥೆಗಳು ರೂಪುಗೊಂಡಿವೆ. ಆಳದಲ್ಲಿ ಅವೆಲ್ಲದರ ಉದ್ದೇಶ ಭಿನ್ನವಾಗಿದ್ದರೂ ಅವುಗಳ ಹೋರಾಟ ಲಿಂಗತಾರತಮ್ಯ ಹಾಗೂ ಅದರ ಮೂಲವಾದ ಪಿತೃಪ್ರಾಧಾನ್ಯವನ್ನೇ ಪ್ರಶ್ನಿಸುತ್ತವೆ.

ಸಡಿಲವಾದ ಅರ್ಥದಲ್ಲಿ ಈ ಬಹುನೆಲೆಯ ಹೋರಾಟಗಳು ಹಂಚಿಕೊಳ್ಳಲ್ಪಟ್ಟ ಮಹಿಳಾ ಸಮಸ್ಯೆಗಳು. ಆದರೆ ಈ ಎಲ್ಲ ವಿಷಯಾಧಾರಿತ ಸಂಘಟನೆ, ಹೋರಾಟಗಳ ಒಟ್ಟೂ ಪ್ರಯತ್ನವೇ ಮಹಿಳಾ ಚಳುವಳಿ. ಆದ್ದರಿಂದ ಚಳುವಳಿ ಎಂಬ ಪದವನ್ನು ಮಹಿಳಾ ಚಳುವಳಿಯ ವಿಷಯದಲ್ಲಿ ಮರುವ್ಯಾಖ್ಯಾನ ಮಾಡಬೇಕಾದ ಅವಶ್ಯಕತೆಯಿದೆ.

ಭಾರತದ ಮಹಿಳಾ ಚಳುವಳಿ

ಭಕ್ತಿ ಚಳುವಳಿಯ ಕಾಲದಿಂದಲೂ ಮಹಿಳೆ ಧಾರ್ಮಿಕ ಸಮಾನತೆ ಕೇಳಲು ಶಕ್ತಳಾಗಿದ್ದಳೇ ಹೊರತು ಸಾಮಾಜಿಕ ಸ್ಥಾನಮಾನಗಳಲ್ಲಿ ಯಾವ ಬದಲಾವಣೆಯೂ ಸಾಧ್ಯವಾಗಿರಲಿಲ್ಲ. ದೇವರ ಎದುರು ಸಮಾನತೆಯನ್ನು ಭಕ್ತಿಯ ನೆಪದಲ್ಲಾದರೂ ಸಾಧಿಸಲು ಹಲವು ಹೆಣ್ಮಕ್ಕಳು ಪ್ರಯತ್ನಪಟ್ಟರು. ಕೆಲ ಆಧ್ಯಾತ್ಮಿಕ ಪುರುಷರೂ ಹೆಣ್ಣಿನ ಸಂಕಷ್ಟಗಳ ಅರಿತು ಹಾಡಿದರು. ಕರ್ನಾಟಕದ ವಚನ ಚಳುವಳಿ ಹಲವು ಹೆಣ್ಣುಮಕ್ಕಳಿಗೆ, ಅದರಲ್ಲೂ ತಳ ಸಮುದಾಯದ ಹೆಣ್ಣುಮಕ್ಕಳಿಗೆ ಸಮಾಜದ ಆಗುಹೋಗುಗಳಲ್ಲಿ ನೇರ ಪಾಲ್ಗೊಳ್ಳುವ ಅವಕಾಶ ನೀಡಿತು. ಸಂಪ್ರದಾಯದ ಚೌಕಟ್ಟಿನೊಳಗೆ ಬಂಧಿತಳಾಗಿದ್ದರೂ ಅದರ ನಡುವೆಯೇ ಪ್ರತಿರೋಧದ ಪರೋಕ್ಷ ಪ್ರಯತ್ನಗಳು ಮಹಿಳೆಯರಿಂದ ಅಲ್ಲಿಲ್ಲಿ ಕಂಡುಬಂದಿದೆ. ಆದರೂ ಅದು ಚಳುವಳಿಯ ರೂಪ ಪಡೆದದ್ದು ೧೯ನೇ ಶತಮಾನದಿಂದೀಚಿಗೆ ಎಂದು ಗುರುತಿಸಲಾಗುತ್ತದೆ. ಒಟ್ಟಾರೆ ಭಾರತೀಯ ಮಹಿಳೆಯ ಸಾಮಾಜಿಕ ಸ್ಥಿತಿಗತಿಗಳಲ್ಲಿ ಈ ಮೂರ್ನಾಲ್ಕು ತಲೆಮಾರುಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದರೆ ಅದಕ್ಕೆ ಮಹಿಳಾ ಹೋರಾಟ ಮತ್ತದು ಅನಿವಾರ್ಯಗೊಳಿಸಿದ ಕಾನೂನು ಜಾರಿಯೂ ಒಂದು ಕಾರಣವಾಗಿದೆ. ಎಲ್ಲ ಮಹಿಳಾಪರ ಕಾನೂನುಗಳೂ ಲಿಂಗತಾರತಮ್ಯವನ್ನು ಗುರುತಿಸಿ ವಿರೋಧಿಸಿದ ಬಳಿಕವೇ ಜಾರಿಯಾಗಿವೆ.

ಭಾರತದ ಮಹಿಳಾ ಚಳುವಳಿ ಕೆಲವು ವಿಶೇಷತೆಗಳನ್ನು ಹೊಂದಿದೆ. ಕೈಗಾರಿಕಾ ಕ್ರಾಂತಿ ಮತ್ತು ವೈಜ್ಞಾನಿಕ ಆವಿಷ್ಕಾರಗಳು ಯೂರೋಪಿನಲ್ಲಿ ಸುಧಾರಣಾವಾದಿ ಚಿಂತನೆಗಳನ್ನು ಸೃಷ್ಟಿಸಿ ಹೋರಾಟ ಶುರುಮಾಡುವ ೭೫ ವರ್ಷ ಮೊದಲೇ ಭಾರತದಲ್ಲಿ ಮಹಿಳಾ ಚಳುವಳಿ ಶುರುವಾಯಿತು. ಇದು ಒಂದು ವಿಶೇಷವಾದರೆ ಶುರುಮಾಡಿದವರು ಪುರುಷರು ಎನ್ನುವುದು ಇನ್ನೊಂದು ವಿಶೇಷ. ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದ ಭಾರತೀಯ ಪುರುಷರು ಅಥವಾ ಭಾರತೀಯ ಸಮಾಜದಲ್ಲಿ ಆಸಕ್ತಿ-ಹಿತಾಸಕ್ತಿ ಹೊಂದಿದ್ದ ವಸಾಹತುಶಾಹಿ ಸಮಾಜಶಾಸ್ತ್ರಜ್ಞರು ಮಹಿಳಾ ಸಮಸ್ಯೆಗಳ ಸುಧಾರಣೆಯ ಹೋರಾಟಕ್ಕೆ ನಾಂದಿ ಹಾಡಿದರು. ಒಟ್ಟೂ ಭಾರತದ ಮಹಿಳಾ ಜಾಗೃತಿಯಲ್ಲಿ ೪ ಹಂತಗಳನ್ನು ಗುರುತಿಸಲಾಗಿದೆ:

೧.    ೧೯ನೇ ಶತಮಾನದ ಆದಿಭಾಗದಲ್ಲಿ ರಾಜಾರಾಮ್ ಮೋಹನರಾಯ್ ಅವರಿಂದ ಶುರುವಾದ ಜಾಗೃತಿಯು ಸಾಮಾಜಿಕ ಸುಧಾರಣಾ ಚಳುವಳಿಯ ಆರಂಭವೆನ್ನಬಹುದು. ೧೮೨೫ರ ವೇಳೆಗೆ ಶುರುವಾದ ಇದು ನಂತರ ಬಾಲ್ಯ ವಿವಾಹ ನಿಷೇಧ, ವಿಧವಾ ಪದ್ಧತಿ ನಿಷೇಧ, ವಿಧವಾ ಮರುವಿವಾಹಕ್ಕೆ ಅವಕಾಶದಂತಹ ಇತರ ವಿಷಯಗಳನ್ನು ಗಣನೆಗೆ ತೆಗೆದುಕೊಂಡಿತು. ಸರಿಸುಮಾರು ಇದೇ ವೇಳೆ ಈಶ್ವರಚಂದ್ರ ವಿದ್ಯಾಸಾಗರ ಅವರು ಬಾಲ್ಯವಿವಾಹ, ವಿಧವಾ ಪದ್ಧತಿ, ಬಹುಪತ್ನಿತ್ವದಂತಹ ವಿಷಯಗಳನ್ನು ವಿರೋಧಿಸಿ ಕಾನೂನಾತ್ಮಕ ಹೋರಾಟವನ್ನೂ ರೂಪಿಸಿದರು. ಆದರೆ ಈ ಎಲ್ಲ ಸುಧಾರಣೆಗಳು ಮೇಲ್ಜಾತಿ ಮಹಿಳೆಯರ ಸಮಸ್ಯೆಗಳನ್ನೇ ಮುಖ್ಯವಾಗಿ ಗುರಿಯಾಗಿಸಿಕೊಂಡಿದ್ದವು. ಆ ದೃಷ್ಟಿಯಿಂದ ಫುಲೆ ದಂಪತಿಗಳು ಭಾರತದ ಮಹಿಳಾ ಚಳುವಳಿಯ ಆದ್ಯರು ಎನ್ನಬಹುದು. ಫುಲೆ ದಂಪತಿಗಳು ೧೮೪೮ರಷ್ಟು ಹಿಂದೆಯೇ ಮಹಿಳೆಯರಿಗೆ ಮತ್ತು ಅಸ್ಪೃಶ್ಯರಿಗಾಗಿ ಶಾಲೆ ತೆರೆದು ಪ್ರಬಲ ವಿರೋಧದ ನಡುವೆಯೇ ಶಾಲೆ ನಡೆಸಿ ಮಹಿಳಾ ಸಬಲೀಕರಣಕ್ಕೆ ತಾತ್ವಿಕ ನೆಲೆಗಟ್ಟನ್ನು ಒದಗಿಸಿದರು. ಅಷ್ಟೇ ಅಲ್ಲ, ಸಮಾಜ ಬಹಿಷ್ಕರಿಸಿದ ಬಸುರಾದ ವಿಧವೆಯರು ಮಕ್ಕಳನ್ನು ಹೆರಲು ಹಾಗೂ ಅಂಥ ಮಕ್ಕಳನ್ನು ಸಾಕಲು ಆಶ್ರಮಗಳನ್ನು ಶುರುಮಾಡಿದರು. ಹೀಗೆ ತಿರಸ್ಕೃತ ಮಹಿಳೆಯರನ್ನು ಮುಖ್ಯವಾಹಿನಿಯಲ್ಲಿರುವಂತೆ ನೋಡಿಕೊಳ್ಳುವ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡರು. ಫುಲೆಗಳಿಂದ ಪ್ರಭಾವಿತಗೊಂಡಿದ್ದ ತಾರಾಬಾಯಿ ಶಿಂಧೆ ೧೮೮೨ರಲ್ಲಿ ‘ಸ್ತ್ರೀ ಪುರುಷ ತುಲನ’ ಎಂಬ ಭಾರತದ ಮೊತ್ತಮೊದಲ ಮಹಿಳಾ ಸಂವೇದನೆಯುಳ್ಳ ಹೊತ್ತಿಗೆಯನ್ನು ಪ್ರಕಟಿಸಿದಳು. ನಿರ್ಭಿಡೆಯಿಂದ ದೇವರನ್ನೂ, ಪುರಾಣ ಶಾಸ್ತ್ರಗ್ರಂಥಗಳನ್ನೂ ತರಾಟೆಗೆ ತೆಗೆದುಕೊಂಡಳು. ಆಗ ಪ್ರಕಟವಾಗಿದ್ದ ಪುಸ್ತಕವೊಂದರ ಕಥೆಗಳ ಸ್ತ್ರೀಪಾತ್ರ ಪೋಷಣೆ, ನಾಟಕಗಳ ಸ್ತ್ರೀ ಪಾತ್ರ, ಪುರಾಣದಲ್ಲಿ ಮಹಿಳೆಯ ಚಿತ್ರಣ, ದೇವಾನುದೇವತೆಗಳ ವರ್ತನೆಗಳು, ಅಂದಿನ ಸಮಾಜದಲ್ಲಿ ಪುರುಷರ ತಾರತಮ್ಯದ ನಡವಳಿಕೆಗಳು ಮುಂತಾದವನ್ನೆಲ್ಲ ತರಾಟೆಗೆ ತೆಗೆದುಕೊಂಡ ತಾರಾಬಾಯಿ ಆ ಲೇಖನವನ್ನು ಪುಸ್ತಕ ಮಾಡಿ ಅಚ್ಚು ಹಾಕಿದ್ದೇ ದೊಡ್ಡ ಹೋರಾಟವಾಗಿತ್ತು. ಮಹಿಳೆ ಧೈರ್ಯವಾಗಿ ತನ್ನ ಕುಲಕ್ಕಾಗುತ್ತಿರುವ ಅನ್ಯಾಯವನ್ನು ಅಷ್ಟು ಕಟುಮಾತುಗಳಲ್ಲಿ ಗಟ್ಟಿದನಿಯಲ್ಲಿ ಹೇಳಲು ಸಾಧ್ಯವಾಗಿಸಿದ್ದು ಫುಲೆಗಳು ತಂದ ಶಿಕ್ಷಣ, ಸಾಮಾಜಿಕ ಸುಧಾರಣೆ. ಅವರ ಸಮಕಾಲೀನಳಾಗಿದ್ದ ಪಂಡಿತಾ ರಮಾಬಾಯಿ ಎಂಬ ಬ್ರಾಹ್ಮಣ ಮಹಿಳೆ ಅಂತರ್ಜಾತಿ ವಿವಾಹವಾದದ್ದೇ ಅಲ್ಲದೆ ವಿಧವೆಯಾದ ನಂತರ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಳು. ಆಕೆ ೧೮೮೭ರಲ್ಲಿ ಬರೆದ ಹೈ ಕ್ಯಾಸ್ಟ್ ಹಿಂದೂ ವುಮನ್ ಪುಸ್ತಕವು ಹಿಂದೂ ಮೇಲ್ಜಾತಿಯಲ್ಲಿದ್ದ ಮಹಿಳಾ ವಿರೋಧಿ ಅಂಶಗಳನ್ನು ಢಾಳಾಗಿ ತೆರೆದಿಟ್ಟಿತು. ಅಲ್ಲಿಂದಾಚೆಗೆ ಹಲವು ಸುಧಾರಣಾಕಾರರು ವಿವಿಧ ವಿಷಯಗಳನ್ನೆತ್ತಿಕೊಂಡು ಬೇರೆಬೇರೆ ನೆಲೆಯಲ್ಲಿ ಮಹಿಳಾ ಸುಧಾರಣೆಗೆ ಪ್ರಯತ್ನಿಸಿದರು. ಇದು ಸುಧಾರಣೆಯ ಕಾಲ ಎನ್ನಬಹುದು.
೨.    ಎರಡನೆಯ ಹಂತದ ಮಹಿಳಾ ಚಳುವಳಿ ೧೯೧೫-೧೯೪೭ರವರೆಗಿನದು. ಇದು ಸ್ವಾತಂತ್ರ ಚಳುವಳಿಯ ಕಾವು ಉತ್ತುಂಗದಲ್ಲಿದ್ದ ಕಾಲ. ಮಹಿಳೆಯರ ರಾಜಕೀಯ ಜಾಗೃತಿಯ ಕಾಲ. ಆಗ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರನ್ನು ಗಾಂಧಿ ಹೆಚ್ಚೆಚ್ಚು ತೊಡಗಿಸಿಕೊಂಡರು. ಕ್ವಿಟ್ ಇಂಡಿಯಾ, ದಂಡಿ ಮುಂತಾದ ಚಳುವಳಿ-ಸತ್ಯಾಗ್ರಹಗಳ ಸಮಯದಲ್ಲಿ ಸಾಮಾನ್ಯ ಮಹಿಳೆಯರು ಕೂಡಾ ಭಾಗವಹಿಸಿದರು. ಅದೇವೇಳೆಗೆ ಅಂಬೇಡ್ಕರ್ ಡಿಪ್ರೆಸ್ಡ್ ಕ್ಲಾಸ್ ವುಮೆನ್ಸ್ ಅಸೋಸಿಯೇಷನ್ ಶುರುಮಾಡಿ ೧೯೨೭ರ ಹೊತ್ತಿಗೆ ಸಾವಿರಾರು ಹಿಂದುಳಿದ ಮಹಿಳೆಯರನ್ನು ಸಂಘಟಿಸಿದ್ದರು. ಮಹಿಳಾ ಶೋಷಣೆಯ ವಿವಿಧ ಮಗ್ಗುಲುಗಳ ಬಗ್ಗೆ ಆಳವಾಗಿ ಚಿಂತಿಸಿ, ಧಾರ್ಮಿಕ-ಸಾಮಾಜಿಕ-ರಾಜಕೀಯ ಹಕ್ಕುಗಳನ್ನು ಸಂವಿಧಾನದತ್ತವಾಗಿ ನೀಡಲು ಶ್ರಮಿಸಿದ ಮೊದಲ ವ್ಯಕ್ತಿ ಅಂಬೇಡ್ಕರ್. ‘ಯಾವುದೇ ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳ್ಗೆಯನ್ನು ಪರಿಗಣಿಸಬೇಕು’ ಎಂದು ಮಹಿಳೆಯರ ಸ್ಥಿತಿಗತಿಯನ್ನು ಸಮಾಜದ ಏಳ್ಗೆಯ ಸೂಚ್ಯಂಕವಾಗಿ ಪರಿಗಣಿಸಿದ ಅಂಬೇಡ್ಕರ್ ಭಾರತದಲ್ಲಿ ಮಾನವ ಹಕ್ಕು ಹಾಗೂ ಮಹಿಳಾ ಹಕ್ಕು ಹೋರಾಟಗಳಿಗೆ ಕಾನೂನಿನ ಚೌಕಟ್ಟು ನೀಡಿದ ಮೊದಲ ನಾಯಕರಾಗಿದ್ದಾರೆ. ಅವರ ಕಾಲದಲ್ಲಿ ಮಹಿಳಾ ಶಾಲೆ, ಕಾಲೇಜು, ಹಾಸ್ಟೆಲುಗಳು ಶುರುವಾದವು. ಮಹಿಳೆಯರು ಪತ್ರಿಕೆ ಶುರುಮಾಡಿದರು. ಧಾರ್ಮಿಕವಾಗಿ ಬೌದ್ಧ ಧರ್ಮದ ಪ್ರಚಾರದಲ್ಲಿ ತೊಡಗಿಸಿಕೊಂಡರು. ಅಂಬೇಡ್ಕರ್ ಶುರುಮಾಡಿದ್ದ ಚಳುವಳಿಯು ಶೋಷಿತ ವರ್ಗದ ಮಹಿಳೆಯರಲ್ಲಿ ಹೊಸಜಾಗೃತಿಯನ್ನೇ ಮೂಡಿಸಿತು. ಹೀಗೆ ಸ್ವಾತಂತ್ರ್ಯ ಚಳುವಳಿಯ ಕಾಲದ ಎರಡು ಭಿನ್ನಧಾರೆಗಳಲ್ಲಿ ಸಾಕಷ್ಟು ಮಹಿಳೆಯರು ತೊಡಗಿಕೊಂಡು ಕೌಟುಂಬಿಕ ಜಗತ್ತಿನಾಚೆಗೂ ತಮ್ಮ ಕ್ರಿಯಾಶೀಲತೆಯ ಪರಿಧಿಯನ್ನು ವಿಸ್ತರಿಸಿಕೊಂಡರು. ಮಹಿಳಾ ಲಾಯರ್, ಡಾಕ್ಟರ್, ರಾಜಕಾರಣಿ, ಗಮನಾರ್ಹ ಬರಹಗಾರರೆಲ್ಲ ಈ ಅವಧಿಯಲ್ಲೇ ಬಂದರು.
೩.    ಮೂರನೆಯ ಹಂತ ಸ್ವಾತಂತ್ರ್ಯಾನಂತರದ ಹಂತ. ಆದರೆ ಸ್ವಾತಂತ್ರ ಬಂದ ಮೊದಲ ವರುಷಗಳಲ್ಲಿ ಮಹಿಳಾ ಚಳುವಳಿ ಕೊಂಚ ಮಂಕಾಯಿತು. ಸರ್ವರಿಗೂ ಸಮಾನತೆಯೊದಗಿಸಿದ ಸಂವಿಧಾನವು ಮಹಿಳೆಗೂ ಸಮಾನ ನಾಗರಿಕ ಹಕ್ಕುಗಳನ್ನು ನೀಡಿತು. ಮತದಾನದ ಹಕ್ಕು, ವಿಚ್ಛೇದನದ ಹಕ್ಕು, ಆಸ್ತಿ ಹಕ್ಕು, ದತ್ತು ಸ್ವೀಕಾರದ ಹಕ್ಕುಗಳೆಲ್ಲ ಕೊಡಲ್ಪಟ್ಟವು. ಆದರೆ ನಂತರ ವರದಕ್ಷಿಣೆ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ದೇವದಾಸಿ ಪದ್ಧತಿ, ಪ್ರಜನನ ಹಕ್ಕುಗಳು, ಉದ್ಯೋಗ ಸ್ಥಳದಲ್ಲಿ ಭದ್ರತೆಯಂತಹ ವಿಷಯಗಳು ಮುನ್ನೆಲೆಗೆ ಬಂದವು. ಪರಂಪರೆ, ರೂಢಿ, ಆಚರಣೆ, ಸಾಹಿತ್ಯ ಎಲ್ಲವನ್ನು ಮಹಿಳಾ ದೃಷ್ಟಿಕೋನದಿಂದ ನೋಡುವ ಪರಿಪಾಠ ಬೆಳೆಯಿತು. ಆಧುನಿಕ ಭಾರತವನ್ನು ಪ್ರಭಾವಿಸಿದ ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್ ಮೊದಲಾದ ಅನೇಕ ಚಿಂತಕರು ಹೆಣ್ಮಕ್ಕಳ ಚಿಂತನೆ-ಹೋರಾಟಗಳನ್ನೂ ಪ್ರಭಾವಿಸಿದರು.

೧೯೭೨ರಲ್ಲಿ ಸಂಭವಿಸಿದ ಮಹಾರಾಷ್ಟ್ರದ ಆದಿವಾಸಿ ಬಾಲಕಿ ಮಥುರಾ ಅತ್ಯಾಚಾರ ಪ್ರಕರಣವು ಮಹಿಳಾ ಚಳುವಳಿಯ ಹೊಸ ಅಲೆ ಶುರುವಾಗಲು ಕಾರಣವಾಯಿತು. ಅತ್ಯಾಚಾರವನ್ನು ಮುಖ್ಯ ವಿಷಯವಾಗೆತ್ತಿಕೊಂಡು ಹೆಣ್ಣಿನ ಕುರಿತು ಸಮಾಜದ ದೃಷ್ಟಿಕೋನವನ್ನು ಪ್ರಶ್ನಿಸುತ್ತ ಕಾನೂನಿನ ಆಮೂಲಾಗ್ರ ಬದಲಾವಣೆಗೆ ಈ ಪ್ರಕರಣ ನಾಂದಿ ಹಾಡಿತು. ೧೯೭೫-೮೫ರ ದಶಕವನ್ನು ಮಹಿಳಾ ದಶಕವೆಂದು ಯುನಿಸೆಫ್ ಘೋಷಿಸಿದ್ದು ಹಲವು ಮಹಿಳಾ ವಿಷಯಗಳು ಮುನ್ನೆಲೆಗೆ ಬರಲು ಕಾರಣವಾಯಿತು. ಮಹಿಳಾ ಪ್ರಕಾಶನ ಹುಟ್ಟಿಕೊಂಡಿತು. ಮಹಿಳಾ ಚಳುವಳಿ ಹಾಗೂ ದೌರ್ಜನ್ಯ ವಿರೋಧ ಒಟ್ಟೊಟ್ಟಿಗೆ ಬೆಳೆದವು. ದೌರ್ಜನ್ಯ ಪ್ರಕರಣ, ತನಿಖೆ, ತೀರ್ಪು, ಶಿಕ್ಷೆಯ ಸ್ವರೂಪ, ಪ್ರಮಾಣ ಮತ್ತಿತರ ಕಾನೂನು ಪರಿಭಾಷೆ ಬದಲಾದವು. ದೇಶದ ಮೊತ್ತಮೊದಲ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ - ‘ಫೋರಂ ಅಗೇನ್ಸ್ಟ್ ರೇಪ್’ ಲೋತಿಕಾ ಸರ್ಕಾರ್ ಅವರಿಂದ ಶುರುವಾಯಿತು. ನಂತರ ಅದು ‘ಫೋರಂ ಅಗೇನ್ಸ್ಟ್ ಅಪ್ರೆಷನ್ ಆಫ್ ವುಮನ್’ ಎಂದಾಯಿತು. ಅದು ಒಂದು ರಾಷ್ಟ್ರೀಯ ಸಮ್ಮೇಳನ ಏರ್ಪಡಿಸಿ ಸಾಮಾನ್ಯ ಮಹಿಳೆಗೆ ನ್ಯಾಯಾಂಗ ಸಹಾಯ ಪಡೆಯುವುದು ಎಷ್ಟು ಅಸಾಧ್ಯವಾಗಿದೆ ಎಂದು ಪ್ರತಿಪಾದಿಸುತ್ತ ಅತ್ಯಾಚಾರ ಕಾನೂನು ಬದಲಾಗಬೇಕೆಂದು ಒತ್ತಾಯಿಸಿತು. ಆ ಸಮಯದಲ್ಲೇ ಸಹೇಲಿ ಗುಂಪು ಹುಟ್ಟಿಕೊಂಡಿತು. ಸೀಮಾ ಸಖಾರೆ ಅಖಿಲ ಭಾರತ ಮಟ್ಟದಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಸಂಘಟನೆಯಲ್ಲಿ ಸಕ್ರಿಯವಾದರು. ಒಮ್ಮೆ ಅತ್ಯಾಚಾರಕ್ಕೊಳಗಾದವಳು ವಿಚಾರಣೆಯ ವೇಳೆ ಪೊಲೀಸರಿಂದ, ನ್ಯಾಯಾಲಯದಿಂದ, ಮಾಧ್ಯಮದವರಿಂದ ಮತ್ತೆಮತ್ತೆ ಅತ್ಯಾಚಾರಕ್ಕೊಳಗಾಗುವಂತಹ ನ್ಯಾಯ ವ್ಯವಸ್ಥೆಯನ್ನು ಬಲವಾಗಿ ಟೀಕಿಸಿದರು. ಈ ಪ್ರಕರಣ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಬಲಿಪಶುವಿನ ಪರವಾಗಿ ನಿಂತು ಮಹಿಳೆ ಸಂಘಟಿತವಾಗಿ ಧ್ವನಿಯೆತ್ತುವಲ್ಲಿ ಹೊಸ ಯುಗವನ್ನೇ ತೆರೆಯಿತು. ದೇಶದ ಹಲವಾರು ಕಡೆ ಅತ್ಯಾಚಾರಕ್ಕೊಳಗಾದ ದುರ್ಬಲ ಮಹಿಳೆಯರ ಪರವಾಗಿ ಕೆಲಸ ಮಾಡುವ ಸಂಘಟನೆ, ವೇದಿಕೆಗಳು ಹುಟ್ಟಿಕೊಂಡವು.

ಆಮೇಲಿನ ಶಾಬಾನೊ ಪ್ರಕರಣ, ರೂಪ್ ಕನ್ವರ್ ಸತಿ ಪ್ರಕರಣ, ಭನವಾರಿ ದೇವಿಯ ಪ್ರಕರಣಗಳು ಮಹಿಳೆಯರ ಮೇಲಾಗುವ ಹಲವು ತೆರನ ಹಿಂಸೆಗಳನ್ನು ಮುನ್ನೆಲೆಯ ಚರ್ಚೆಗೆ ಬರುವಂತೆ ಮಾಡಿದವು. ರಾಜಸ್ಥಾನದ ಬಾಲ್ಯವಿವಾಹ ವಿರೋಧಿ ಆಂದೋಲನದ ಭನವಾರಿ ಅತ್ಯಾಚಾರಕ್ಕೊಳಗಾಗಿದ್ದು ತನ್ನ ಉದ್ಯೋಗದ ಕಾರಣಕ್ಕಾಗಿ. ಇದನ್ನು ಆಧಾರವಾಗಿಟ್ಟುಕೊಂಡು ವಿಶಾಖ ಹಾಗೂ ಇನ್ನಿತರ ನಾಲ್ಕು ಸಂಘಟನೆಗಳು ರಾಜಸ್ಥಾನ ಹಾಗೂ ಭಾರತ ಸರ್ಕಾರದ ವಿರುದ್ಧ ಕೋರ್ಟಿಗೆ ಹೋದವು. ಆ ಕೇಸಿನ ವಿಚಾರಣೆಯ ವೇಳೆ ಕೋರ್ಟ್ ‘ವಿಶಾಖ ಗೈಡ್‌ಲೈನ್ಸ್’ ನಿರೂಪಿಸಿದ್ದು ಅದನ್ನು ಇಂದಿಗೂ ಅನುಸರಿಸಲಾಗುತ್ತಿದೆ. ೧೯೯೭ರ ತೀರ್ಪು ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವ್ಯಾಖ್ಯೆ ನೀಡಿ ಅದನ್ನು ನಿಭಾಯಿಸುವುದರ ಕುರಿತು ನೀತಿ ನಿಯಮಾವಳಿ ರೂಪಿಸಿತು.

ಭಾರತೀಯ ಅರೆಸೇನಾಪಡೆ ಅಸ್ಸಾಂ ರೈಫಲ್ಸ್‌ನ ಯೋಧರು ತಂಗ್ಜಂ ಮನೋರಮಾ ಎಂಬ ೩೨ ವರ್ಷದ ಮಹಿಳೆಯನ್ನು ಇಂಫಾಲದ ಹೊರವಲಯದಲ್ಲಿದ್ದ ಅವಳ ಮನೆಯಿಂದ ಬಂಧಿಸಿ ಕರೆದೊಯ್ದರು. ಅವಳು ಸಶಸ್ತ್ರ ಕ್ರಾಂತಿಕಾರಿ ಗುಂಪಾದ ಪಿಎಲ್‌ಎನವಳು ಎನ್ನುವುದು ಬಂಧನಕ್ಕೆ ಕಾರಣ. ಮರುಬೆಳಿಗ್ಗೆ ಅಲ್ಲಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಅರೆನಗ್ನಾವಸ್ಥೆಯ ಅವಳ ಶವ ಪತ್ತೆಯಾಯಿತು. ಗುದದ್ವಾರ, ಯೋನಿಗಳಲ್ಲಿ ಕಲ್ಲುಗಳಿದ್ದವು, ಬುಲೆಟ್‌ಗಳಿದ್ದವು. ಐದು ದಿನಗಳ ನಂತರ ಮಣಿಪುರದ ಮೀರಾ ಪೈಬಿ ಮಹಿಳಾ ಹೋರಾಟಗಾರರ ಗುಂಪಿನ ಸುಮಾರು ಮೂವತ್ತು ನಡುವಯಸ್ಕ ಮಹಿಳೆಯರು ನಗ್ನರಾಗಿ ಮಣಿಪುರದ ರಾಜಧಾನಿಯ ಬೀದಿಗಳಲ್ಲಿ ನಡೆದು ಹೋಗಿ ‘ಭಾರತೀಯ ಸೇನೆಯೇ, ನಮ್ಮ ಮೇಲೆ ಅತ್ಯಾಚಾರವೆಸಗಿ, ನಾವು ಮನೋರಮಾ ತಾಯಂದಿರು’ ಎಂದು ಘೋಷಣೆ ಕೂಗಿದರು. ಈಗಲೂ ಮನೋರಮಾ ದೇಹ ಇಂಫಾಲದ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಸೂಕ್ತ ಶವಪರೀಕ್ಷೆ ಆಗಿಲ್ಲವೆಂದು ಹಾಗೇ ಇದೆ. ಮರು ಶವಪರೀಕ್ಷೆಗಳಲ್ಲಿ ಹೊಸಹೊಸ ವಿಚಾರಗಳು ಬೆಳಕಿಗೆ ಬರುತ್ತಲೇ ಇವೆ. ಅವಳಂತೆ ಎಷ್ಟು ಜನ ಅತ್ಯಾಚಾರಕ್ಕೊಳಗಾದರೋ, ಕೊಲೆಯಾದರೋ ಯಾರಿಗೂ ಗಮನವೇ ಇರಲಿಲ್ಲ. ಆ ಅತ್ಯಾಚಾರದ ನಂತರ ದೇಶಾದ್ಯಂತ ಸಾರ್ವಜನಿಕರ ಗಮನ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯ ವಿರುದ್ಧವಾಗಿ, ವಿಶೇಷಾಧಿಕಾರ ದುರುಪಯೋಗಪಡಿಸಿಕೊಳ್ಳುವ ಸೈನ್ಯದ ಕುರಿತಾಗಿ ಹರಿಯಿತು. ಇರೋಂ ಶರ್ಮಿಳಾ ಉಪವಾಸ ಶುರು ಮಾಡಿ ಸಶಸ್ತ್ರ ಪಡೆಗಳ ದೌರ್ಜನ್ಯವನ್ನು ವಿರೋಧಿಸಿದರು. ಅವರ ಉಪವಾಸ ಇನ್ನೂ ಮುಂದುವರಿದೇ ಇದೆ.

ಇದಲ್ಲದೆ ಮಹಿಳಾ ಸಂಘಟನೆಗಳು ಮಹಿಳೆಗೆ ರಾಜಕೀಯ ಪ್ರಾತಿನಿಧ್ಯ, ಆಸ್ತಿ ಹಕ್ಕು, ಉದ್ಯೋಗ ಮತ್ತಿತರ ಅವಕಾಶಗಳಲ್ಲಿ ಮೀಸಲಾತಿ ಮುಂತಾದ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ನಡೆಸಿದವು. ಅದರ ಫಲವೋ ಎಂಬಂತೆ ಹಲವಾರು ಮಹಿಳಾ ಪರ ಕಾನೂನುಗಳು ರೂಪುಗೊಂಡವು. ಈ ಅವಧಿಯ ಮಹಿಳಾ ಹೋರಾಟಗಳು ಮಹಿಳಾ ಪರ ಕಾನೂನು ರೂಪಿಸುವುದರಲ್ಲಿ ಹಾಗೂ ನ್ಯಾಯವ್ಯವಸ್ಥೆ ಸುಧಾರಣೆಯತ್ತ ಗಮನ ಕೊಟ್ಟವು. ಮಹಿಳಾ ದೃಷ್ಟಿಕೋನದಿಂದ ಕಲೆ, ಸಾಹಿತ್ಯ, ಘಟನೆ, ಪುರಾಣೇತಿಹಾಸಗಳನ್ನು ನೋಡುವ, ವಿಶ್ಲೇಷಿಸುವ ಪರಿಪಾಠ ಬೆಳೆಯಿತು.

ಜೊತೆಗೆ ದಲಿತ ಮಹಿಳಾ ಜಾಗೃತಿಯ ಹೊಸ ಅಧ್ಯಾಯ ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಶುರುವಾಯಿತು. ಅದುವರೆಗೆ ಮಹಿಳಾ ಚಳುವಳಿ ಹಿನ್ನೆಲೆಗೆ ಸರಿಸಿದ್ದ ಜಾತಿ ಪ್ರಶ್ನೆ ಮುಂಚೂಣಿಗೆ ಬರುವಂತಾಯಿತು. ಅರೆಕಾಲಿಕ ಹಾಗೂ ಗುತ್ತಿಗೆ ಆಧಾರಿತ ಮಹಿಳಾ ನೌಕರರ ಸಂಘಟನೆಗಳು ಕಾರ್ಮಿಕ ಹಕ್ಕುಗಳಿಗಾಗಿ ಹೋರಾಟ ನಡೆಸಿದವು. ಸಂಘಟಿತ ಹಾಗೂ ಅಸಂಘಟಿತ ವಲಯದ ಮಹಿಳಾ ಉದ್ಯೋಗಿಗಳ ಸಂಘಟನೆ, ಹಕ್ಕೊತ್ತಾಯಗಳು ಕೇಳಿಬಂದವು.

೪.    ಈಗೊಂದು ದಶಕದಿಂದ ನಾವು ನೋಡುತ್ತಿರುವುದು ಹೊಸ ಅಲೆಯ ಮಹಿಳಾ ಚಳುವಳಿ. ಸಂಪರ್ಕ ಕ್ರಾಂತಿಯ ಈ ಯುಗ ಜಾಗತೀಕರಣ, ಖಾಸಗೀಕರಣ, ಅಭಿವೃದ್ಧಿಯ ಯುಗವೂ ಆಗಿದ್ದು ಮಹಿಳೆಗೆ ಬಿಡುಗಡೆಯ ಭ್ರಮೆಯನ್ನೂ, ಅದರ ಬೆನ್ನಿಗೇ ನಾನಾ ಸಂಕಷ್ಟಗಳನ್ನು ತಂದೊಡ್ಡಿದೆ. ದೌರ್ಜನ್ಯದ ಜೊತೆಗೆ ಪರಿಸರ, ಸಮಾನ ಶಿಕ್ಷಣ, ಮಾತೃಭಾಷಾ ಶಿಕ್ಷಣ, ಉದ್ಯೋಗ ಹಕ್ಕು, ಮಾನವ ಸಾಗಾಟ, ಕನಿಷ್ಟ ವೇತನ, ಯುದ್ಧ, ವಲಸೆ, ಕೃಷಿಬಿಕ್ಕಟ್ಟು ಮೊದಲಾದ ಹತ್ತಾರು ಸಮಸ್ಯೆಗಳನ್ನಿಟ್ಟುಕೊಂಡು ಕೆಲಸ ಮಾಡುವ ಸ್ವಾಯತ್ತ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು ಹುಟ್ಟಿಕೊಂಡಿವೆ.

ಈಚಿನ ೨-೩ ದಶಕಗಳಲ್ಲಿ ಜಾಗತೀಕರಣ-ಅಭಿವೃದ್ಧಿ-ಕೋಮುವಾದದಿಂದ ತೊಂದೆಗೀಡಾದ ಮಹಿಳೆಯರ ಸಂಘಟನೆಗಳೂ ಬಂದಿವೆ. ಮೇಧಾ ಪಾಟ್ಕರ್ ಅವರ ನರ್ಮದಾ ಬಚಾವೋ ಆಂದೋಲನ, ಭೂಪಾಲಿನ ವಿಷಾನಿಲ ಸಂತ್ರಸ್ತರ ಮಹಿಳಾ ಸಂಘಟನೆ, ಬಾಬ್ರಿ ಮಸೀದಿ-ಗುಜರಾತ್ ನರಮೇಧದ ಬಳಿಕ ಹುಟ್ಟಿಕೊಂಡ ಮಾನವ ಹಕ್ಕು ಸಂಘಟನೆಗಳ ಮಹಿಳೆಯರು, ಮಹಾಶ್ವೇತಾದೇವಿ ಅವರ ಸಂಘಟನೆ-ಬರಹ, ದಂಡಕಾರಣ್ಯದ ಜನಸಂಗ್ರಾಮ ಪರಿಷದ್‌ನ ಅನುರಾಧಾ ಗಾಂಧಿ ಮತ್ತಿತರ ಎಡಪಂಥೀಯ ಹೋರಾಟಗಾರರು ಶುರುಮಾಡಿದ ಆದಿವಾಸಿ ಕ್ರಾಂತಿಕಾರಿ ಮಹಿಳಾ ಸಂಘಟನ್ ಮೊದಲಾದವನ್ನು ಇಲ್ಲಿ ಉದಾಹರಿಸಬಹುದು. ದೌರ್ಜನ್ಯ ತಡೆ, ಲಿಂಗಸೂಕ್ಷ್ಮ ಸಮಾಜಕ್ಕೆ ಒತ್ತಾಯ, ಮಹಿಳಾ ಸ್ನೇಹಿ ಪರ್ಯಾಯ ಅಭಿವೃದ್ಧಿ ಮಾದರಿ, ಕೃಷಿ ಬಿಕ್ಕಟ್ಟು ನಿರ್ವಹಣೆ, ಸ್ವಚ್ಛತೆ, ಮಹಿಳಾ ಮೀಸಲಾತಿ ಜಾರಿಯೂ ಸೇರಿದಂತೆ ಹಲವು ವಿಷಯಗಳನ್ನೆತ್ತಿಕೊಂಡು ಮಹಿಳೆಯರು ಸಂಘಟಿತರಾಗಿದ್ದಾರೆ. ಭಾರತದ ಮಹಿಳಾ ಚಳುವಳಿ ದೌರ್ಜನ್ಯ ವಿರೋಧದ ಜೊತೆಜೊತೆಗೆ ಸಮಾನ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಕ್ಕುಗಳನ್ನೂ ವ್ಯಾಖ್ಯಾನಿಸುತ್ತ ಸ್ಥಾಪಿಸಲೆತ್ನಿಸಿದೆ. ಸ್ತ್ರೀಭ್ರೂಣ ಹತ್ಯೆ, ಮರ್ಯಾದಾ ಹತ್ಯೆ, ಜಾತಿ ಪಂಚಾಯ್ತಿಯ ಮಹಿಳಾ ವಿರೋಧಿ ನೀತಿ, ಕೋಮುವಾದ, ಅಭಿವೃದ್ಧಿ ಮಾದರಿಗಳ ಮಹಿಳಾ ವಿರೋಧಿ ಅಂಶಗಳನ್ನು ಎತ್ತಿ ತೋರಿಸುತ್ತಲೇ ರಾಜಕೀಯ ಪ್ರಾತಿನಿಧ್ಯ, ಮಹಿಳೆಯ ದೇಹವನ್ನು ಸರಕೀಕರಣಗೊಳಿಸುವುದು, ವಸ್ತ್ರಸಂಹಿತೆ ವಿರೋಧ, ಅತ್ಯಾಚಾರ ತಡೆಗೆ ಕಠಿಣ ಕಾನೂನಿಗಾಗಿ ಒತ್ತಾಯಿಸಿ ಹೋರಾಟ ನಡೆದಿದೆ. ಗುಲಾಬಿ ಗ್ಯಾಂಗ್‌ನಂತಹ ಕೆಲವು ಸ್ವಾಯತ್ತ ಮಹಿಳಾ ಗುಂಪುಗಳು ಊರೂರುಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನಿಟ್ಟುಕೊಂಡು ಹೋರಾಟ ಮಾಡುತ್ತಿವೆ. ಒಟ್ಟಾರೆ ಬದಲಾದ ಕಾಲದಲ್ಲೂ ಇರುವ ಪಿತೃಪ್ರಾಧಾನ್ಯದ ನಾನಾಮುಖಗಳ ಆಳಗಲವನ್ನು ಇವೆಲ್ಲವು ಎತ್ತಿ ತೋರಿಸುತ್ತಿವೆ.

ಚಳುವಳಿಗೆ ಪೂರಕವಾಗಿ ಎಂಬಂತೆ ಸರ್ಕಾರವೂ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳು, ಮಹಿಳೆಯರಿಗೆಂದೇ ವಿಶಿಷ್ಟ ಕೋರ್ಸುಗಳು, ಮಹಿಳಾ ಬ್ಯಾಂಕು, ಮಹಿಳಾ ಠಾಣೆ, ಗ್ರಾಮೀಣ ಮಹಿಳೆಯರಿಗಾಗಿ ಸ್ತ್ರೀಶಕ್ತಿ ಮೊದಲಾದ ಯೋಜನೆಗಳನ್ನು ಹಾಕಿಕೊಂಡು ತಳವರ್ಗದ ಗ್ರಾಮೀಣ ಮಹಿಳೆಯರೂ ಜಾಗೃತರಾಗಿ ಕ್ರಿಯಾಶೀಲಗೊಳ್ಳಲು ಕಾರಣವಾಗಿದೆ. ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ.

ಮಹಿಳಾ ಚಳುವಳಿ: ಸವಾಲು-ಸಾಧ್ಯತೆಗಳು

ಇಷ್ಟೆಲ್ಲ ಹೋರಾಟ ನಡೆಯುತ್ತಿದೆಯೆಂದರೆ ೨೧ನೇ ಶತಮಾನದ ಮಹಿಳೆ ಆಧುನಿಕತೆಯನ್ನು ಮೈಗೂಡಿಸಿಕೊಂಡು ಲಿಂಗತಾರತಮ್ಯದ ಸಮಸ್ಯೆಗಳಿಲ್ಲದೆ ಬದುಕಲು ಸಾಧ್ಯವಾಗಿದೆಯೆ? ಖಂಡಿತ ಇಲ್ಲ. ಮೇಲೆ ಉದಾಹರಿಸಿದ, ಉದಾಹರಿಸದ ಇನ್ನೂ ಅನೇಕ ಸಂಘ, ಸಂಸ್ಥೆ, ಹೋರಾಟಗಳು ಮಾಡಿರುವ ಕೆಲಸ ಹೆಣ್ಣು ಎದುರಿಸುತ್ತಿರುವ ಸಮಸ್ಯೆಗಳಿಗೆ ಹೋಲಿಸಿದರೆ ಏನೇನೂ ಅಲ್ಲ. ಮಹಿಳಾ ಚಳುವಳಿಯೋ, ಹೋರಾಟವೋ, ಬಿಡುಗಡೆಯೋ, ಸಂಘಟನಾ ಕೆಲಸವೋ ಅಂತೂ ಮಹಿಳೆ ಇನ್ನೂ ಬಲಿತ ಹೆಜ್ಜೆಯನ್ನಿಟ್ಟು ಧೃಢವಾಗಿ ನಡೆಯುವುದು ಸಾಧ್ಯವಾಗಿಲ್ಲ.

ಸರ್ವಸಮಾನತೆ ಸಾರುವ ಸಂವಿಧಾನ ಬಂದು ೬೫ ವರ್ಷಗಳಾದ ನಂತರವೂ ಹಿಂದೂ ದೇವಾಲಯದೊಳಗೆ ಮಹಿಳೆಗೆ ಪ್ರವೇಶ ನೀಡಬೇಕೋ ಬೇಡವೋ ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಮಹಿಳಾ ಮೀಸಲಾತಿ ಕುರಿತು ದಶಕಗಳಿಂದ ಮಾತು ಕೇಳಿಬರುತ್ತಿದ್ದರೂ ಬೆರಳೆಣಿಕೆಯಷ್ಟು ಮಹಿಳಾ ರಾಜಕಾರಣಿಗಳಿದ್ದಾರೆ. ಕಾನೂನಿನ ಒತ್ತಾಯವಿಲ್ಲದಿದ್ದರೆ ರಾಜಕೀಯ ಪಕ್ಷಗಳಾಗಲೀ, ಸಮಾಜವಾಗಲೀ ಅವಕಾಶವಂಚಿತರಿಗೆ ಯಾವ ಅವಕಾಶವನ್ನೂ ಮೀಸಲಿಡುವುದಿಲ್ಲ ಎನ್ನುವುದು ಮತ್ತೆಮತ್ತೆ ಸಾಬೀತಾಗುತ್ತಿದೆ. ಕಾನೂನಿನ ಬೆಂಬಲವಿದ್ದರೂ ಅದನ್ನು ನಿರುಪಯೋಗಿಯಾಗಿಸುವ ರಾಜಕೀಯ ಹುನ್ನಾರಗಳೂ ದಿನನಿತ್ಯ ಸಂಭವಿಸುತ್ತಿವೆ. ಧರ್ಮಾಧಾರಿತ ಧೃವೀಕರಣದ ತಂತ್ರವಾಗಿ ದಲಿತರನ್ನು, ಮಹಿಳೆಯರನ್ನು ಕೋಮುವಾದ ದಿಕ್ಕು ತಪ್ಪಿಸುತ್ತಿದೆ. ಜನಸಾಮಾನ್ಯರ ಮಾತಂತಿರಲಿ, ದಲಿತ - ಮಹಿಳಾ ನಾಯಕಿಯರನ್ನೂ ಸಹಾ ಹಿಂದೂತ್ವದ ಜಾಲದೊಳಗೆ ಸೆಳೆಯಲಾಗಿದೆ. ತಮಗರಿವಿಲ್ಲದೆ ಜಾತಿ, ಧರ್ಮ ಮತ್ತು ರಾಜಕಾರಣಗಳು ಒಡ್ಡುವ ಭಾವುಕ ಹಾಗೂ ಲೌಕಿಕ ಬಲೆಯೊಳಗೆ ಮಹಿಳೆಯರು ಬೀಳುತ್ತ ಲಿಂಗಪ್ರಶ್ನೆ ಮರೆಗೆ ಸರಿಯುತ್ತಿದೆ. ಮಹಿಳಾ ಜಾಗೃತಿಯ ಕೊರತೆ ಹಾಗೂ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರ ‘ಇಲ್ಲದಿರುವಿಕೆ’ ಎದ್ದುಕಾಣುತ್ತಿದೆ. ಇದಕ್ಕೆ ಕಾರಣಗಳು ಹಲವಾರು.

    ಇಂದಿಗೂ ಹೆಣ್ಣು ತನಗೆ ವಿಧಿಸಲಾದ ಮಿತಿಗಳನ್ನು ದಾಟಿ ಬರುವುದರಲ್ಲಿ ನಾಲ್ಕು ಘಟ್ಟಗಳನ್ನು ಗುರುತಿಸಲಾಗಿದೆ:

o    ಅಸಹಾಯಕತೆಯ ಅರಿವು
o    ಸ್ಥಿತಿಗತಿಯ ಕುರಿತು ಪ್ರಶ್ನೆ ಕೇಳಿಕೊಳ್ಳುವುದು
o    ಆದ್ಯತೆಯ ಹುಡುಕಾಟ
o    ಸ್ವಾಯತ್ತತೆಯ ಕಡೆಗಿನ ಪಯಣ

ಇಷ್ಟೆಲ್ಲ ವರ್ಷಗಳ ಸ್ವಾತಂತ್ರ್ಯದ ನಂತರವೂ, ಇನ್ನೂ ಈ ನಾಲ್ಕರಲ್ಲಿ ಎರಡನೆಯ ಘಟ್ಟದ ಅನುಭವವನ್ನೂ ಗುರುತಿಸಲಾರದ ಕೋಟ್ಯಂತರ ದಮನಿತ ಮಹಿಳೆಯರಿದ್ದಾರೆ. ಸಮಾಜ ಈಗ ಹೆಣ್ಣು ಎಂದು ಯಾರನ್ನು ನೋಡುತ್ತಿದೆಯೋ ಅವಳು ನಿಜವಾದ ಹೆಣ್ಣಲ್ಲ. ಅದು ಪುರುಷಪ್ರಧಾನ ಸಮಾಜದ ಕಲ್ಪನಾ ವಿಲಾಸ ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿದೆಯೋ ಆ ಚೌಕಟ್ಟಿಗೆ ಸರಿಯಾಗಿ ತನ್ನನ್ನು ರೂಪಿಸಿಕೊಂಡ ಹೆಣ್ಣು. ಗುಟ್ಟು ಕಾಪಾಡುವುದರಲ್ಲೇ ಹೆಣ್ತನವಿದೆ ಎಂದು ಭಾವಿಸಿದ, ತಾನು ಕಳೆದುಕೊಂಡಿರುವುದೇನೆಂದೇ ತಿಳಿಯದವರು ಅವರು. ಮುಳುಗಿದ ಅರಿವೇ ಇಲ್ಲದವರನ್ನು ಮೇಲೆತ್ತುವುದು ಹೇಗೆ? ಅಂಥವರನ್ನು ಸಂಘಟಿಸುವುದು ಹೇಗೆ?

ಅಮೆರಿಕನ್ ಆಫ್ರಿಕನ್ ಬರಹಗಾರ್ತಿ ಗ್ರಾಡಾ ಕಿಲೋಂಬಾ ತಮ್ಮ ಒಂದು ಲೇಖನದಲ್ಲಿ ಅವರ ಹಿರಿಯರಾದ ಕರಿಯ ಗುಲಾಮರು ತಮ್ಮ ನೆನಪಿನಿಂದ ಹೇಳುತ್ತಿದ್ದ ಸಂಕಟವನ್ನು ಪ್ರಸ್ತಾಪಿಸಿದ್ದಾರೆ. ಅಮೆರಿಕದ ಬಿಳಿಯ ಮಾಲೀಕರು ತಮ್ಮ ಎಸ್ಟೇಟು, ತೋಟ, ಮನೆಗಳಲ್ಲಿ ಕೆಲಸ ಮಾಡುವ ಕರಿಯ ಗುಲಾಮರ ಬಾಯಿಯಲ್ಲಿ ದವಡೆಗಳ ನಡುವೆ ಒಂದು ಕಬ್ಬಿಣದ ಕಚ್ಚುಕಂಬಿಯನ್ನಿಡುತ್ತಿದ್ದರು. ಗುಲಾಮರು ಪರಸ್ಪರ ಮಾತನಾಡುತ್ತ ಕಾಲ ವ್ಯಯಿಸಬಾರದು ಹಾಗೂ ಕಬ್ಬು, ಕಾಫಿ-ಕೋಕೋ ಬೀಜಗಳ ಅವರು ತಿನ್ನಬಾರದು ಎನ್ನುವುದು ಕಚ್ಚುಕಂಬಿಯ ಉದ್ದೇಶ. ಈ ಪದ್ಧತಿ ಸುಮಾರು ೩೦೦ ವರ್ಷ ಚಾಲ್ತಿಯಲ್ಲಿತ್ತು. ಅದು ಸೊಲ್ಲಡಗಿಸುವ, ಬಲವಂತದ ಮೌನ ಹೇರುವ ಕ್ರಮ. ಜನಸಮುದಾಯದ ಹಕ್ಕಿನ ನಿರಾಕರಣೆ. ಕರಿಯ ಗುಲಾಮರಂತೆ ಮಹಿಳೆಯರೂ ಸಾವಿರಾರು ವರ್ಷಗಳಿಂದ ಅದೃಶ್ಯ ಕಚ್ಚುಕಂಬಿಯನ್ನು ತಮ್ಮ ಬಾಯಲ್ಲಿಟ್ಟುಕೊಂಡೇ ಬದುಕಿದ್ದಾರೆ. ಅದನ್ನು ತೆಗೆಯಲಾಗಿದ್ದರೂ ಅದೃಶ್ಯವಾದದ್ದನ್ನು ಊಹಿಸಿಕೊಂಡೇ ಮೌನವಾಗಿದ್ದಾರೆ. ಹೀಗೆ ಹಲ್ಲು ಕಚ್ಚಿ ಸಹಿಸಿಕೊಂಡಿರುವವರ ಬಾಯಿ ಬಿಚ್ಚಿಸುವುದಕ್ಕೆ ಇರುವ ಸವಾಲುಗಳೇ ಮಹಿಳಾ ಚಳುವಳಿ ಕಟ್ಟಲು ಇರುವ ಮೊದಲ ತೊಡಕುಗಳಾಗಿವೆ.

ಸಮಾಜ ವೇಗವಾಗಿ ಚಲಿಸುತ್ತಿದೆ. ಅದಕ್ಕೆ ಕಾರಣ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಅದು ಸಾಧ್ಯವಾಗಿಸಿರುವ ಸಂವಹನ. ಆದರೆ ಈ ವೇಗದ ಹೊರತಾಗಿಯೂ ಕೌಟುಂಬಿಕ ಹಾಗೂ ನೈತಿಕ ಮೌಲ್ಯಗಳೆಂದು ಮಹಿಳೆಯ ಮೇಲೆ ಹೇರಿದ ಆದರ್ಶಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಇವತ್ತಿಗೂ ಕಲಿತ, ವೇತನ ತರುವ ಹೆಣ್ಣುಮಗಳು ಮನೆಯ, ಮಕ್ಕಳ ಕೆಲಸಗಳನ್ನೆಲ್ಲ ಸಂಪೂರ್ಣ ನಿಭಾಯಿಸುವ ಜವಾಬ್ದಾರಿಯನ್ನು ಮಾತಿಲ್ಲದೇ ಒಪ್ಪಿಕೊಳ್ಳಬೇಕಾಗಿದೆ. ಮುಮ್ಮುಖ ನೋಟ, ಹಿಮ್ಮುಖ ಚಲನೆಯ ಅನುಭವವನ್ನು ಮಹಿಳೆಗೆ ಈ ಸನ್ನಿವೇಶ ನೀಡುತ್ತಿದ್ದು ಅವಳಿಗೆ ತನ್ನ ನಿಜ ಸ್ಥಿತಿಗತಿಯ ಅರಿವು ಮೂಡುವುದೇ ದುಸ್ತರವಾಗಿದೆ. ಎಂದೇ ಚಳುವಳಿ, ಹೋರಾಟಗಳು ನಿರಂತರವಾಗಿರಬೇಕಾದ ಅನಿವಾರ್ಯತೆ ಹುಟ್ಟಿಕೊಂಡಿದೆ. ನಿರಾಶಾವಾದಕ್ಕೆ, ಸಿನಿಕತನಕ್ಕೆ ಈಡುಮಾಡುವ ಅಪಾಯಗಳ ನಡುವೆಯೇ ಸಂಘಟಿತಳಾಗಬೇಕಿರುವುದು ಮಹಿಳಾ ಚಳುವಳಿ ಎದುರಿಸುವ ಸವಾಲಾಗಿದೆ. ಸಂಘಟನೆ ಎಲ್ಲ ಕಾಲದಲ್ಲೂ ಮಹಿಳೆಗೆ ಕಷ್ಟ. ಸಿಮನ್ ದಿ ಬೊವಾ ಕೂಡಾ ಸಂಘಟನೆಯ ಕಷ್ಟಗಳ ಬಗ್ಗೆ ಮಾತನಾಡಿದ್ದರು. ಸಂಘಟನೆಯ ಅವಶ್ಯಕತೆ ಇದೆಯೆಂದು ಹೆಣ್ಣಿಗೆ ಅನಿಸುತ್ತಿಲ್ಲ. ಸಂಘಟಿತವಾಗಿ ಪ್ರಯತ್ನಿಸಬೇಕೆಂದು, ಪರಿಹಾರ ಕಂಡುಕೊಳ್ಳಬಹುದೆಂದು ಭರವಸೆಯಿಲ್ಲ. ಇದು ದಾಟಬೇಕಾದ ದೊಡ್ಡ ಅಂತರಂಗದ ಮಿತಿಯಾಗಿದೆ. ಮಹಿಳೆಯ ಈ ಮನಸ್ಥಿತಿ ರೂಪಿಸಿರುವ ಸಮಾಜವೂ ಸಮಗ್ರ ಮಹಿಳಾ ಚಳುವಳಿ ರೂಪುಗೊಳ್ಳದಿರುವುದಕ್ಕೆ ಜವಾಬ್ದಾರಿ ಹೊತ್ತುಕೊಳ್ಳಬೇಕಾಗಿದೆ.

    ಕೌಟುಂಬಿಕ ಅಡೆತಡೆಗಳನ್ನು ದಾಟಿಕೊಂಡು ಹೊರಬಂದ ನಂತರವೂ ಮಹಿಳೆ ಸಂಘಟನಾತ್ಮಕವಾಗಿ ಹಲವು ಗೊಂದಲಗಳನ್ನು ಎದುರಿಸಬೇಕಿದೆ. ಚಳುವಳಿಗಳಿಗೆ ಸಿದ್ಧಾಂತ ಮತ್ತು ಆಚರಣೆ ಎಂಬ ಎರಡು ಆಯಾಮಗಳಿರುತ್ತವೆ. ಚಳುವಳಿಯೊಂದು ಪ್ರಬುದ್ಧಾವಸ್ಥೆ ತಲುಪುವವರೆಗೆ ಕೇವಲ ಆಲೋಚನೆಗಳಿರುತ್ತವೆ. ಆಲೋಚನೆಗಳು ಆಚರಣೆಗಳನ್ನು ರೂಪಿಸುತ್ತವೆ. ಆಲೋಚನೆಗಳ ಆಚರಣಾತ್ಮಕ ಪರಿಪಕ್ವತೆಯಲ್ಲಿ ಸಿದ್ಧಾಂತ ರೂಪುಗೊಳ್ಳುತ್ತದೆ. ಮಹಿಳಾ ಚಳುವಳಿ ಆಲೋಚನೆ, ಆಚರಣೆಗಳ ಮಟ್ಟದಲ್ಲೇ ಇದ್ದು ಕಾಲಕ್ಕೆ ತಕ್ಕಂತೆ ಸೈದ್ಧಾಂತಿಕವಾಗಿ ಗಟ್ಟಿಗೊಳ್ಳುವುದು, ಒಟ್ಟುಗೂಡುವುದು ಅವಶ್ಯವಿದೆ. ಹಾಗಾಗದಂತೆ ವ್ಯವಸ್ಥೆಯಲ್ಲೆ ಅಡಕವಾಗಿರುವ ಹಲವು ದ್ವಂದ್ವಗಳು ತಡೆಯುತ್ತಿವೆ. ನಮ್ಮ ಸಂವಿಧಾನ ಮಹಿಳೆಯನ್ನು ಒಬ್ಬ ವ್ಯಕ್ತಿಯಾಗಿ ನೋಡುತ್ತದೆ. ಆದರೆ ಧರ್ಮ ಬೇರೆಯೇ ಚೌಕಟ್ಟು ವಿಧಿಸುತ್ತದೆ. ಸಂವಿಧಾನ ಧರ್ಮದ ಕುರಿತು ಮಾತನಾಡಬಯಸುವುದಿಲ್ಲ. ಅದು ವ್ಯಕ್ತಿಯ ಸ್ವಾತಂತ್ರ್ಯ ಎನ್ನುತ್ತದೆ. ಆದರೆ ಅದೇ ಸ್ವಾತಂತ್ರ್ಯ ಹೆಣ್ಣುಮಕ್ಕಳಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸಿದೆ. ಯಾವ ಜಾತಿ/ಧರ್ಮವು ನಿಮ್ಮನ್ನು ಸಂಕಲೆಯೊಳಗಿಟ್ಟಿದೆಯೊ ಅದನ್ನೆ ನಿಮ್ಮ ಸಂಸ್ಕೃತಿಯ ಮೂಲ ಎನ್ನಲಾಗುತ್ತದೆ. ಯಾವ ಜಾತಿ/ಧರ್ಮ ನಿಮ್ಮನ್ನು ಅಧಿಕಾರಹೀನರನ್ನಾಗಿಸಿದೆಯೊ ಅದನ್ನು ಬಿಟ್ಟು ಬದುಕಲು ಜನಸಾಮಾನ್ಯರಿಗೆ, ಮಹಿಳೆಯರಿಗೆ ಅವಕಾಶವೇ ಇಲ್ಲವಾಗಿದೆ.
    ಸಮಾಜವು ಜಾತಿ-ಧರ್ಮ-ಭಾಷೆಗಳಿಂದ ಛಿದ್ರವಾಗಿದೆ. ಎಲ್ಲ ತಾರತಮ್ಯಕ್ಕೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣವಾಗಿರುವುದು ಜಾತಿಪದ್ಧತಿ. ಭಾರತೀಯ ಸಮಾಜದ ಸಾಮಾಜಿಕ, ಆರ್ಥಿಕ ಅಸಮಾನ ರಚನೆಗಳೇ ಲಿಂಗತಾರತಮ್ಯದ ಮೂಲ ಕಾರಣವಾಗಿ ಇವತ್ತಿಗೂ ಮುಂದುವರೆದಿವೆ. ಅವಮರ್ಯಾದಾ ಹತ್ಯೆ-ಖಾಪ್ ಪಂಚಾಯ್ತಿಗಳು ಸಂಭವಿಸುತ್ತಿರುವುದೇ ಅದಕ್ಕೆ ಸಾಕ್ಷಿ. ವಾಸ್ತವ ಹೀಗಿದ್ದರೂ ‘ಸ್ತ್ರೀವಾದವೆಂಬುದೇ ಪಾಶ್ಚಾತ್ಯ ಪರಿಕಲ್ಪನೆ. ಭಾರತದಲ್ಲಿ ಲಿಂಗವಿಶಿಷ್ಟ ಜವಾಬ್ದಾರಿಗಳಿವೆ; ಲಿಂಗ ಅನನ್ಯತೆಯ ಕುರುಹಾದ ಆಚರಣೆಗಳಿವೆಯೇ ಹೊರತು ಲಿಂಗತಾರತಮ್ಯ ಇಲ್ಲ’ ಎನ್ನುವುದು ಸನಾತನ ಭಾರತ ಸಂಸ್ಕೃತಿಯ ಪ್ರತಿಪಾದಕರ ಆರೋಪವಾಗಿದೆ. ಹೀಗಿರುತ್ತ ಜಾತಿ-ಧರ್ಮಗಳನ್ನು ಬಿಡಲಾಗದೆ, ಅವನ್ನಿಟ್ಟುಕೊಂಡು ಸಮಾನತೆ ಸಾಧಿಸಲಾಗದೆ ಜನಸಾಮಾನ್ಯರು ಚಳುವಳಿಗಳ ತಾತ್ವಿಕ ಸಂಕಥನಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ. ಕೋಮುವಾದವು ಈ ನಿರ್ವಾತವನ್ನು ಬಳಸಿಕೊಂಡು ಮಹಿಳೆಯನ್ನು ದಾಳವಾಗಿ ಮಾಡಿಕೊಂಡಿದೆ. ಮಹಿಳೆಯರಲ್ಲಿ ಇದರ ಅರಿವು ಮೂಡಿಸಿ ಜಾತಿ-ಧರ್ಮಗಳೆಂಬ ಸಂಸ್ಥೆಗಳು ತಮ್ಮ ರಚನೆಯಲ್ಲಿಯೇ ಮಹಿಳಾ ವಿರೋಧಿಗಳೆಂದು ಅರ್ಥ ಮಾಡಿಸುವುದು ಚಳುವಳಿಯ ಎದುರಿಗಿರುವ ದೊಡ್ಡ ಸವಾಲಾಗಿದೆ.
    ಹೆಣ್ಣಿಗೆ ಹಲವು ಶೋಷಿತ ಐಡೆಂಟಿಟಿಗಳಿವೆ. ಸಂಘಟನೆ-ಹೋರಾಟದ ಹಲವು ನೆಲೆಗಳೂ ಇವೆ. ಜಾತಿ-ವರ್ಗಗಳನ್ನು ಪರಿಗಣಿಸಿದಾಗ ಮಹಿಳೆಯ ಕಷ್ಟಗಳು ಬೇರೆಬೇರೆ. ಎಂದೇ ಜಾತಿದೌರ್ಜನ್ಯದ ವಿರುದ್ಧ ಹೋರಾಡಲು ಜಾತಿ ಅಸ್ಮಿತೆ ಬೇಕಿದೆ. ಆದರೆ ಮಹಿಳಾ ಚಳುವಳಿ ಮೊದಲು ಹೊಟ್ಟೆ ತುಂಬಿದವರ ಚಳುವಳಿ ಎಂಬ ಅಪಹಾಸ್ಯಕೆ ಈಡಾಗಿತ್ತು. ಅವು ವರ್ಗ ಸಮಸ್ಯೆಯಷ್ಟು ಜಾತಿ ಸಮಸ್ಯೆಯನ್ನು, ಎಲ್ಲ ದೌರ್ಜನ್ಯ-ತಾರತಮ್ಯಕ್ಕಿರುವ ಜಾತಿ ಸಂಬಂಧವನ್ನು ಗುರುತಿಸುವಲ್ಲಿ ವಿಫಲವಾಗಿದ್ದವು. ಆದರೆ ಮೂರನೆಯ ಅಲೆಯ ಮಹಿಳಾ ಚಳುವಳಿಯ ಹೊತ್ತಿಗೆ ಹೆಣ್ಮಕ್ಕಳನ್ನು ಸೆಳೆದ ಅಂಬೇಡ್ಕರ್ ಚಿಂತನೆಗಳು ಹಾಗೂ ಪ್ರತ್ಯೇಕವಾಗಿ ರೂಪುಗೊಳ್ಳತೊಡಗಿದ ದಲಿತ ಮಹಿಳಾ ಚಳುವಳಿ ದಲಿತ ಮಹಿಳೆಯ ಸಮಸ್ಯೆಯನ್ನು ಎಲ್ಲ ಮಹಿಳಾಪರ ಮನಸುಗಳೂ ಪರಿಗಣಿಸುವಂತೆ, ಜಾತಿ ಎನ್ನುವುದು ಬಹುಮುಖ್ಯ ದಮನದ ನೆಲೆಯೆಂದು ಗುರುತಿಸುವಂತೆ ಮಾಡಿತು. ಐಡೆಂಟಿಟಿ ರಾಜಕಾರಣದ, ಜಾತಿ ರಾಜಕಾರಣ ದಿನಗಳಲ್ಲಿ ಇದೆಲ್ಲದರ ನಡುವೆಯೇ ಮಹಿಳೆ ಸಮನ್ವಯವನ್ನೂ, ಒಳಗೊಳ್ಳುವಿಕೆಯನ್ನೂ ಸಾಧಿಸುವುದು ದೊಡ್ಡ ಸವಾಲಾಗಿದೆ.
    ಸದಾ ಕೇಳಿಬರುವ ಒಂದು ಪ್ರಶ್ನೆ: ಮಹಿಳಾ ಚಳುವಳಿಯೆಂಬ ಪ್ರತ್ಯೇಕ ಚಳುವಳಿ ನಡೆಸುವುದು ಸಾಧುವೆ? ಹಾಗೆ ನೋಡಿದರೆ ಎಲ್ಲ ವಿಷಯಗಳೂ ಮಹಿಳೆಗೆ ಸಂಬಂಧಪಟ್ಟವೇ. ಬೆಲೆ ಏರಿಕೆ, ಎಸ್‌ಇಝಡ್, ಕೋಮುವಾದ, ಪರಿಸರ ನಾಶ, ಗಣಿ, ಭ್ರಷ್ಟಾಚಾರ ಇವೆಲ್ಲ ಮಹಿಳೆಗೆ ಸಂಬಂಧಿಸಿದ್ದೇ. ಎಂದೇ ಈ ಎಲ್ಲ ಹೋರಾಟಗಳ ತಾತ್ವಿಕತೆಯೊಟ್ಟಿಗೆ ಮಹಿಳೆ ಬೆರೆತುಕೊಳ್ಳಬೇಕು. ಅದೇ ವೇಳೆಗೆ ಎಲ್ಲ ಜನಪರ ಹೋರಾಟಗಳೂ ಮಹಿಳಾ ಸಮಸ್ಯೆಗಳನ್ನು ತಮ್ಮವಾಗಿ ಎತ್ತಿಕೊಳ್ಳಬೇಕು. ಜಾಗತೀಕರಣದ ದಿನಗಳಲ್ಲಿ ಚಳುವಳಿಗಳನ್ನಾಗಲೀ, ಅದರ ದಾರಿ-ಗುರಿಗಳನ್ನಾಗಲೀ ತುಂಡುತುಂಡಾಗಿ ನೋಡುವುದರಿಂದ ಒಟ್ಟಾರೆ ಸಾಮಾಜಿಕ ಬದಲಾವಣೆ ಸಾಧ್ಯವಾಗದೇ ಹೋದೀತು. ಹಾಗಾಗಿ ಮಹಿಳೆ ಎಲ್ಲ ಹೋರಾಟಗಳ ಭಾಗವಾಗಬೇಕು. ಎಲ್ಲ ಹೋರಾಟಗಳೂ ಮಹಿಳಾ ಸಮಸ್ಯೆಗಳನ್ನು ಪರಿಗಣಿಸಬೇಕು. ಅದು ನಿಜವಾದ ಮಹಿಳಾ ಸಬಲೀಕರಣದ ದಾರಿ ಹಾಗೂ ಜನಚಳುವಳಿಗಳ ಅಂತಿಮ ಗುರಿ. ಎಲ್ಲ ಮಾನವ ಜೀವಿಗಳಂತೆಯೇ ಹೆಣ್ಣಿಗೂ ಸ್ವಾತಂತ್ರ್ಯ ಮತ್ತು ಸ್ವಾಯತ್ತ ಬದುಕನ್ನು ಸಾಕಾರಗೊಳಿಸಬೇಕಾದದ್ದು ಮಾನವ ಸಮಾಜದ ಉಳಿವಿನ ದಾರಿ.

‘ಅಮೆಜಾನ್ ದಾಟಬಹುದು, ಅನುದಿನದ ಅಂತರಗಂಗೆಯನ್ನು ದಾಟುವುದು ಹೇಗೆ?’

ಭಾರತೀಯ ಮಹಿಳೆ ಜಾತಿ-ಧರ್ಮ-ಕುಟುಂಬಗಳು ಒಂದರೊಳಗೊಂದು ಹೆಣೆದುಕೊಂಡಿರುವ ಕಾರಣವಾಗಿ ಪರಿಣಾಮಕಾರಿ ಜಾತ್ಯತೀತ ಹೋರಾಟ ಕಟ್ಟುವುದು ಕಷ್ಟಸಾಧ್ಯವಾಗಿದೆ. ಒಂದು ಕಡೆ ಜಾತಿಧರ್ಮದ ಆಧಾರದ ಮೇಲೆ ಮನುಷ್ಯರನ್ನು ಒಡೆಯುವ ಕೋಮುವಾದವು ಅರಿವಿನ ಬೆಳಕಿನೆಡೆಗೆ ಒಯ್ಯಬಹುದಾದ ಧರ್ಮ ಎಂಬ ಸಂಸ್ಥೆಯನ್ನು ಸಂಪೂರ್ಣ ಢಾಂಭಿಕ ಆಚರಣೆಗಳಿಗಷ್ಟೆ ಸೀಮಿತಗೊಳಿಸಿದೆ. ಭಾರತ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ, ಹಿಂದೂತ್ವವನ್ನು ತನ್ನೆಲ್ಲ ಅಜೆಂಡಾಗಳ ಕಾರ್ಯಸೂಚಿಯಾಗಿಸಿಕೊಂಡಿರುವ ರಾಜಕಾರಣವು ಭಾರತೀಯ ಸಂಸ್ಕೃತಿಯನ್ನು ವೈಭವೀಕರಿಸುತ್ತ ಅದರ ಮುಖ್ಯ ವಕ್ತಾರಳಾಗಿ, ವಾಹಕಳಾಗಿ ಹೆಣ್ಣನ್ನು ಕಾಣಿಸುತ್ತ ಧಾರ್ಮಿಕ, ಸಾಂಸ್ಕೃತಿಕ ಸಂಕೇತಗಳಲ್ಲಿ ಹೆಣ್ಣನ್ನು ಬಳಸಿಕೊಳ್ಳುತ್ತಿದೆ. ಎಂದೇ ಬಹುಪಾಲು ಹೆಣ್ಮಕ್ಕಳು ಧರ್ಮ ಮತ್ತದು ವಿಧಿಸಿರುವ ಕೌಟುಂಬಿಕ-ಪಾರಂಪರಿಕ ಚೌಕಟ್ಟಿನಿಂದ ಹೊರಬರಲಾರದವರಾಗಿದ್ದಾರೆ.

ಇನ್ನೊಂದು ಕಡೆ ಮಾರುಕಟ್ಟೆ ಸೃಷ್ಟಿಸಿರುವ ಭ್ರಮಾತ್ಮಕ ಜಗತ್ತಿನಲ್ಲಿ, ಬಂಡವಾಳಶಾಹಿ ಲಾಭಕೋರತನದ ಕೊನೆಯ ಬಲಿಪಶು ಹೆಣ್ಣು ಮತ್ತವಳ ದೇಹವೇ ಆಗಿದೆ. ಎಲ್ಲವೂ ಸರಕಾಗಿರುವ ಕಾಲದಲ್ಲಿ ಹೆಣ್ಣು, ಹೆಣ್ತನ, ಗರ್ಭಕೋಶ, ಲೈಂಗಿಕತೆ, ಇಷ್ಟಾನಿಷ್ಟ, ಕಣ್ಣೀರು ಎಲ್ಲವೂ ಕಚ್ಛಾವಸ್ತುಗಳಾಗಿವೆ. ಸರಕೀಕರಣ ಸೃಷ್ಟಿಸಿರುವ ಕೊಳ್ಳುಬಾಕತನಕ್ಕೆ ಹಣವೇ ಮೌಲ್ಯ. ಅಲಂಕರಣವೇ ಸೌಂದರ್ಯ. ಆರೋಗ್ಯ, ನೈತಿಕತೆ, ಸಹಬಾಳ್ವೆ, ಚಿಂತನೆಗಳಿಗೆ ಬೆಲೆಯಿಲ್ಲ, ಸಮಯವೂ ಇಲ್ಲ.

ಹೀಗೆ ಧರ್ಮರಾಜಕಾರಣ ಮತ್ತು ಮಾರುಕಟ್ಟೆ ಹುಟ್ಟುಹಾಕಿರುವ ಅನೂಹ್ಯ ಸಾಮಾಜಿಕ ಬದಲಾವಣೆಗಳು ಮಹಿಳೆಯರ ಮತ್ತು ಶೋಷಿತರ ಚಳುವಳಿ ಕಟ್ಟಲು ದೊಡ್ಡ ತೊಡಕುಗಳಾಗಿವೆ. ‘ಧರ್ಮ-ಅರ್ಥ’ಗಳು ರಾಜಕಾರಣದೊಂದಿಗೆ ಹಸ್ತಕ್ಷೇಪ ಮಾಡುತ್ತಿರುವುದರಿಂದಲೇ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಜನತಂತ್ರ ದುರ್ಬಲಗೊಳ್ಳುತ್ತ, ಸಾಂಕೇತಿಕಗೊಳ್ಳುತ್ತ ಸಾಗುತ್ತಿದೆ. ಹೀಗಿರುತ್ತ ಡೆಮಾಕ್ರಸಿ, ಧರ್ಮ, ರಾಷ್ಟ್ರೀಯತೆ, ಮಾರುಕಟ್ಟೆ ಮತ್ತಿತರ ‘ಒಪ್ಪಿತ’ ವ್ಯವಸ್ಥೆಗಳನ್ನು ಪ್ರಶ್ನಿಸುತ್ತಲೇ ಅವನ್ನು ಅರ್ಥಪೂರ್ಣಗೊಳಿಸುವ ಜವಾಬ್ದಾರಿ ಮಹಿಳೆಯ ಮೇಲಿದೆ. ಮದುವೆ ಮತ್ತು ಕುಟುಂಬ ಎಂಬ ಸಾಮಾಜಿಕ ರಚನೆಗಳನ್ನು ಹಾಗೂ ಧರ್ಮ/ ರಾಜಕಾರಣಗಳನ್ನು ಚಲನಶೀಲಗೊಳಿಸುವ ಜವಾಬ್ದಾರಿಯೂ ಹೆಣ್ಮಕ್ಕಳ ಮೇಲಿದೆ.

ಭಾರತದಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ, ಯಾವುದೇ ಚಳುವಳಿಯನ್ನು ಮಹಿಳೆಯೊಬ್ಬಳು ಮುನ್ನಡೆಸಿಲ್ಲ. ಅಂಥ ಸಮರ್ಥ ಮಹಿಳಾ ನಾಯಕತ್ವ ಇನ್ನೂ ರೂಪುಗೊಂಡಿಲ್ಲ. ನಾಯಕತ್ವಕ್ಕೆ ಬೇಕಾದ ತ್ಯಾಗ ಮತ್ತು ಅರಿವು ಹೆಣ್ಣಿಗೆ ಸಾಧ್ಯವಾಗಲಿಕ್ಕಿಲ್ಲ ಎಂದೇ ಅನುಮಾನಿಸಲಾಗುತ್ತದೆ. ನಾಯಕತ್ವ ರೂಪುಗೊಳ್ಳದೇ ಇರುವುದರ ಮೂಲ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿದೆ. ಇದನ್ನು ಎದುರಿಸಿ ಮಹಿಳೆ ನಿಲ್ಲಬೇಕಾದರೆ ಸ್ವ ಬಿಡುಗಡೆ ಅತಿ ಮುಖ್ಯ ಘಟ್ಟವಾಗುತ್ತದೆ. ಇದು ಕತ್ತಿಯಂಚಿನ ದಾರಿ. ‘ನಾನು ಮಹಿಳೆ ಎನ್ನುವುದು ಗೊತ್ತು. ಆದರೆ ಅದು ಅದು ನನ್ನ ಮಿತಿಯಲ್ಲ ಎನ್ನುವುದೂ ಗೊತ್ತು’ - ಎನ್ನುವುದು ಮಹಿಳಾ ಘೋಷವಾಕ್ಯವಾಗಬೇಕು. ಭಾರತೀಯರ ಕೌಟುಂಬಿಕ ಹಾಗೂ ವೈಯಕ್ತಿಕ ಬದುಕಿನಲ್ಲಿ ಲಿಂಗಸೂಕ್ಷ್ಮ ಬದಲಾವಣೆ ತರುವತ್ತ ಜನಚಳುವಳಿಗಳು ಗಮನ ಹರಿಸಬೇಕು. ಅದರಲ್ಲೂ ಮಹಿಳೆಗೆ ಈಗ ಎರಡೆರಡು ಗಹನ ಜವಾಬ್ದಾರಿಗಳಿವೆ: ಒಂದು ಸೆಲ್ಫಿ ಮತ್ತು ಇನ್ನೊಂದು ಗ್ರೂಪಿ. ಕುಟುಂಬ ಮತ್ತು ಸಮಾಜ. ಈ ಎರಡನ್ನೂ ನಿಭಾಯಿಸುವ ಶಕ್ತಿಯನ್ನೂ, ಬೆಸೆಯುವ ಪ್ರೀತಿಯನ್ನೂ ಮಹಿಳೆ ಬೆಳೆಸಿಕೊಳ್ಳಬೇಕು.

ಗೂಡುಗಳ ಬೆಳಗುವ ಜೋತಮ್ಮನಾಗುತ್ತಲೆ ಲೋಕ ಬೆಳಗುವ ದೀವಟಿಗೆಯೂ ಆಗಬೇಕು. ಕಾಲದ ಅಗತ್ಯಕ್ಕೆ ತಕ್ಕಂತೆ ತನ್ನತನವನ್ನು ಮರುರೂಪಿಸಿಕೊಳ್ಳದೆ ಸಂಕಷ್ಟದಲ್ಲಿರುವ ಪುರುಷ ಸಮುದಾಯಕ್ಕೆ ತಾಯಿಯಾಗಿ ಅವರನ್ನೂ ದಾಟಿಸಬೇಕು. ಅದೇ ಮಹಿಳಾ ರಾಜಕಾರಣ. ಅದೇ ಸುಂದರ ನಾಳೆಗಳನ್ನು ತರಬಹುದಾದ ಆಶಾಕಿರಣ.


ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...