Thursday, January 28, 2016

ವೇಮುಲ ಕುರಿತು ಎರಡು ಕವಿತೆಗಳು

ಡಾ. ಎಚ್ ಎಸ್ ಅನುಪಮಾ

೧.    ಬಲೆ ಎಂದಿನಿಂದ ಇದೆ

ತಮ್ಮ ವೇಮುಲ
ಯಾಕಯ್ಯ ತಂದೆ ಇಂಥ ತಳಮಳ?
ನೆತ್ತರ ಬಸಿದು
ನರನಾಡಿಗಳ ಹೊಸೆದು
ದೊಂದಿ ಹೊತ್ತಿಸ ಹೊರಟವನು
ಉರಿದು ಲಯವಾಗಬಹುದೆ ಹೀಗೆ
ಯಾರೊ ಹೊತ್ತಿಸಿದ ಕಿಚ್ಚಿಗೆ?
ಒದ್ದೆ ರೆಕ್ಕೆಯ ಹಕ್ಕಿಗೆ   
ಒಳಗದೆಂಥ ಬೇಗೆ?

ನಿನ್ನ ಕಣ್ಣಹನಿ ಎಣಿಸಲೆಂದು
ಪಹರೆ ಕೂತಿವೆ ಕೊಳ್ಳಿದೆವ್ವಗಳು
ಬೇಯಿಸುತ್ತಾವೆ ತಮ್ಮ ಹಸಿವಿಗೆ
ನೀನೊಂದು ರೊಟ್ಟಿ ತುಣುಕೆಂಬ ಹಾಗೆ.
ಕಿತ್ತುಕೊಂಡವರು ಬಿಟ್ಟುಕೊಡಲಾರರು ಸುಲಭಕ್ಕೆ.
ಸೋಲುವ ಭಯಕ್ಕೆ
ಕತ್ತಿ ಹಾರ ಕಟ್ಟಿಕೊಂಡಿರುತ್ತದೆ ನಾಲಿಗೆ.

ರೆಕ್ಕೆ ತೇವಗೊಂಡ ಹಕ್ಕಿಗಳೇ
ಕೆಂಡದ ಬಾವಿಯೊಳಗೆ ಕೊಡ ಇಳಿಬಿಟ್ಟರೆ
ಹಗ್ಗ ಸುಟ್ಟು ಹೋಗದೆ?
ಇದು ತಿಳಿಯದು ಪರಬ್ರಹ್ಮನ ಅರಿತವರಿಗೆ
ತಿಳಿಯುವಾ, ತಿಳಿಸುವಾ, ಬ್ರಹ್ಮನಿಜ ತೋರಿಸುವಾ
ಗೌಳಿ ಪತನ ಫಲ ನೆಚ್ಚಿ
ನೆಲದ ಗಡಿಯಾರವ
ಶತಮಾನಟ್ಟಲೆ ಹಿಂದೆ ತಿರುಗಿಸಲಾಗಿದೆ
ನೆಲಕೆ ರಕ್ತಗಂಬಳಿ ಹಾಸುವವರೆಗೆ
ನೆಮ್ಮದಿಯಿಲ್ಲ ನಮ್ಮ ನಾಯಕನಿಗೆ

ಜಿಗಣಿ ಬಲೆ ಎಂದಿನಿಂದ ಇದೆ
ಮಾಲಕರು ಬದಲಾಗಿದ್ದಾರೆ ಅಷ್ಟೆ
ಕಿತ್ತು ಕಡಿದು ಹಾರಿಬಿಡೋಣ ಒಟ್ಟಿಗೆ
ಸೂರ್ಯ, ಬಿಸಿಲು, ಬೆಳಕು, ರೆಕ್ಕೆ ಎಲ್ಲ ನಮದೇ
ಕರುಣದ ಗುರುವಿದ್ದಾನೆ
ಬಾಬಾ ಕಾಣಿಸಿದ ಬೆಳಕಿನಾಗಸವಿದೆ
ನಮ್ಮ ಹಗಲುಗಳಿಂದ ಬಿಸಿಲ ಅಪಹರಿಸಲಾರರು ಯಾರೂ
ನಮ್ಮ ಆಗಸದಿಂದ ಸೂರ್ಯನ ಕಿತ್ತುಕೊಳ್ಳಲಾರರು ಯಾರೂ
ನಮ್ಮ ಇರುಳಿನಿಂದ ಚಿಕ್ಕೆಗಳ ಕದಿಯಲಾರರು ಯಾರೂ
ನಿರ್ಗಮಿಸಲಾರರು ಶಾಶ್ವತವಾಗಿ ನೆಲದ ಮೇಲಿನ ಯಾರೂ..

೨ ಕರುಣವೆಂಬುದು ಬರಿಯ ಶಬುದವಷ್ಟೆ ?

ಶಾಯಿ ಕುಡಿವ ಲೇಖನಿ
ಪತಾಕೆ ಹಿಡಿವ ಕೈ
ತುತ್ತುಣಿಸುವ ಬೆರಳುಗಳೂ
ಕೊಲುವ ಹತಾರಗಳಾಗಿ
ಹರಿತಗೊಳುತಿರುವ ಈ ಹೊತ್ತು
ಪ್ರಾರ್ಥಿಸುತ್ತಿದ್ದೇವೆ
‘ಕಟುಕನೆ ಕತ್ತಿ ಹಿಡಿದ ಕೈ ಕೆಳಗಿಳಿಸು
ಮಸೆಯದಿರು ಅಲಗು’ ಎಂದು.
ಕುರಿಮಂದೆ ಸಾಲಾಗಿ
ತಲೆಗೊಟ್ಟು ನಿಂತಿರುವಾಗ
ಸುಮ್ಮನಾದೀತೇ ಕತ್ತಿ?
ಬಿಮ್ಮನುಳಿದೀತೇ ರಟ್ಟೆಯ ಶಕ್ತಿ?
ತಣ್ಣಗಿದ್ದೀತೇ ಹಸಿ ನೆತ್ತರ ಕಂಡು
ಬಿಸಿಯಾಗುವ ಮನಸು?
ಕಲ್ಲಿಗು ದೇವರಿಗು
ಪವಾಡಕೂ ಕಣ್ಕಟ್ಟಿಗು
ಬಲಿಗೂ ಓಕುಳಿಗೂ
ಫರಕೇ ಇಲ್ಲದ ಕಡೆ
ಕರುಣವೆಂಬುದು ಬರಿಯ ಶಬುದವಷ್ಟೆ?!

ಹುಚ್ಚುಖೋಡಿ ಹಾದಿಯಲಿ
ಸಹಸ್ರಮಾನಗಳಿಂದ
ಶಬುದಗಳು ಉದುರಿಬಿದ್ದಿವೆ
ಒಂದು ಹನಿ ಮಳೆ ಬೀಳದೆ
ಯುಗಯುಗಾಂತರಗಳೇ ಸರಿದು ಹೋಗಿವೆ
ಸಮತೆಯ ಹಾದಿ ಕ್ರಮಿಸಬೇಕು
ಹಸಿರೆಲೆ ಉದುರುವ ಮೊದಲೆ..


ಮೂಲಭೂತವಾದಿಗಳು ಮತ್ತು ದಲಿತ, ದಲಿತೇತರರ ನಡುವಿನ ಸಂಘರ್ಷ 

 

 

 

 

 

ಪಿ. ಸಾಯಿನಾಥ್

ಕನ್ನಡಕ್ಕೆ: ಡಾ. ಕಿರಣ್ ಎಂ ಗಾಜನೂರು

 


ರೋಹಿತ್ ವೇಮುಲ ಆತ್ಮಹತ್ಯೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ನಮ್ಮ ನಡುವಿನ ಖ್ಯಾತ ಪತ್ರಕರ್ತ ಮತ್ತು ಚಿಂತಕ ಪಿ. ಸಾಯಿನಾಥ್ ಮಾಡಿದ ಭಾಷಣದ ಕನ್ನಡ ಭಾವಾನುವಾದ. . .
 
 

 
 
ಭಾರತದ ತಳವರ್ಗದ, ತುಳಿತಕ್ಕೊಳಗಾದವರ, ಅಂಚಿಗೆ ತಳ್ಳಲ್ಪಟ್ಟವರ ನೆಲೆಯಲ್ಲಿ ಯೋಚಿಸಿದರೆ ರೋಹಿತ್ ಬಹಳ ದೊಡ್ಡ ಸಾಧನೆ ಮಾಡಿದ್ದಾನೆ! ಆತ ಮಾಡಿದ ಸಾಧನೆಯನ್ನು ನೀವು ತಿಳಿದುಕೊಳ್ಳಬೇಕಾದರೆ ಈ ದೇಶದ ಜನಗಣತಿಯ ವರದಿಗಳನ್ನು, ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಗಳನ್ನು, ನ್ಯಾಷನಲ್ ಸ್ಯಾಂಪೆಲ್ ಸರ್ವೇ (National Sample Survey) ಇಲಾಖೆಯ ಅಂಕಿ-ಅಂಶಗಳನ್ನು ಗಮನಿಸಬೇಕು. ಆಗ ಆತ ಮಾಡಿರುವ ಸಾಧನೆ ಏನು ಎಂಬುದು ಅರ್ಥವಾಗುತ್ತದೆ.
 
1.28 ಬಿಲಿಯನ್ ಜನಸಂಖ್ಯೆಯುಳ್ಳ ಭಾರತದಲ್ಲಿ ಕೇವಲ 3 ಶೇಕಡಾ, ಕೇವಲ ಮೂರೇ ಮೂರು ಶೇಕಡಾ ಗ್ರಾಮೀಣ ಕುಟುಂಬಗಳಲ್ಲಿ ಮಾತ್ರ ಪದವೀಧರರಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಸರಾಸರಿ. ಇದನ್ನು ಆದಿವಾಸಿ ಮತ್ತು ದಲಿತರ ಹಿನ್ನಲೆಯಲ್ಲಿ ನೋಡಿದರೆ ಆ ಸಂಖ್ಯೆ ಇನ್ನೂ ಕೆಳಹಂತದಲ್ಲಿದೆ. ಭಾರತದ ಜನಗಣತಿಯ ವರದಿಗಳು ತೋರಿಸುವಂತೆ ಈ ದೇಶದಲ್ಲಿ ಸುಮಾರು 400 ಮಿಲಿಯನ್ ಜನರು ಇದುವರೆಗೂ ಯಾವುದೇ ಹಂತದ ಶಿಕ್ಷಣ ಸಂಸ್ಥೆಗಳ ಒಳಭಾಗವನ್ನು ನೋಡಿಯೇ ಇಲ್ಲ ! ಆ ಹಿನ್ನಲೆಯಿಂದ ಬಂದ ರೋಹಿತ್ ಮೆರಿಟ್ ಕೋಟಾದಲ್ಲಿ ಪಿ.ಹೆಚ್.ಡಿ ಹಂತಕ್ಕೆ ಬರುತ್ತಾನೆ ಎಂದರೆ ಅದಕ್ಕಿಂತ ಸಾಧನೆ ಏನಿದೆ! ಇದು ಸಾಧನೆ ಎಂದರೆ.
 
ಆದರೆ ದುರಂತ ಎಂದರೆ ಇಂದು ಈ ಸಮಾಜದ ನಿರಂತರ ಶೋಷಣೆಯನ್ನು, ತಾರತಮ್ಯವನ್ನು ಜಯಿಸಿ ಮೆರಿಟ್ ಆಧಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪಿ.ಹಚ್.ಡಿ ಹಂತಕ್ಕೆ ಬಂದ ರೋಹಿತನ ವಿರುದ್ಧ ನಿಂತಿರುವುದು ಕಾಲೇಜು ಡ್ರಾಪ್ ಔಟ್ ಆದ ಶಿಕ್ಷಣ ಸಚಿವರು! ನನಗೆ ತಿಳಿದಿರುವಂತೆ ಇವರು ಭಾರತದ ರಾಜಕೀಯ ಇತಿಹಾಸದಲ್ಲಿನ ಅತ್ಯಂತ ಕಳಪೆ ಶಿಕ್ಷಣ ಸಚಿವರು. ಇದರಲ್ಲಿ ನನಗೆ ಯಾವ ಸಂಶಯವೂ ಇಲ್ಲ! ನಾನು ರೋಹಿತ್ ನನ್ನು ಅವರೊಂದಿಗೆ ಹೋಲಿಸುವುದಿಲ್ಲ, ಏಕೆಂದರೆ ನಮಗೆ ಅವರ ಶೈಕ್ಷಣಿಕ ಅರ್ಹತೆಗಳೇನು ಎಂಬುದೇ ಗೊತ್ತಿಲ್ಲ! ಅವರು ಪ್ರತಿಬಾರಿ ಪ್ರಮಾಣ ಪತ್ರಗಳನ್ನು ಸಲ್ಲಿಸುವಾಗ ಅವರ ಪದವಿ ಬದಲಾಗುತ್ತಿರುತ್ತವೆ, ಕಳೆದ ಚುನಾವಣೆಯ ನಂತರ ಅವರು ಎ.ಎಲ್ ವಿಶ್ವವಿದ್ಯಾನಿಲಯದ ಪ್ರಮಾಣ ಪತ್ರ ಪ್ರದರ್ಶಿಸಿದ್ದರು. . . 
 
sainath speech on rohit vemula
 
ಆ ಹುಡುಗನನ್ನು ನೋಡಿ, ಅವನು ಶಾಲೆಗಳ ಮುಖವನ್ನೇ ನೋಡದ ಆ ೪೦೦ ಮಿಲಿಯನ್ ಜನರ ನಡುವಿನಿಂದ ಬಂದಿದ್ದಾನೆ, ಈ ದೇಶದ ಶೋಷಿತ ಇತಿಹಾಸದ ಮಧ್ಯದಿಂದ ಎದ್ದು ಬಂದಿದ್ದಾನೆ. ಈ ಸಮಾಜದ ಶೋಷಣೆಯಿಂದ ನಲುಗಿ, ಜೀತ ಕಾರ್ಮಿಕನಾಗಿ ದುಡಿದು ಪಿ.ಹೆಚ್.ಡಿ ಅಧ್ಯಯನಕ್ಕೆಂದು ಬಂದಿದ್ದಾನೆ.
ಆದರೆ ಏನಾಗುತ್ತಿದೆ ನೋಡಿ? ಕೇಂದ್ರ ಮಂತ್ರಿ ನಾನು ಎರಡು ಪತ್ರ ಬರೆದೆ ಎನ್ನುತ್ತಾರೆ! ಶಿಕ್ಷಣ ಸಚಿವರು ನಾನು ಐದು ಪತ್ರ ಬರೆದೆ ಎಂದು ಹೇಳುತ್ತಿದ್ದಾರೆ. ಆಶ್ಚರ್ಯದ ವಿಷಯ ಎಂದರೆ ಆ ಹುಡುಗರ ಮೇಲೆ ಏನು ಕ್ರಮ ಜರುಗಿಸಲಾಗಿದೆ ಎಂದು ಐದು ಪತ್ರ ಬರೆಯುವ ಶಿಕ್ಷಣ ಸಚಿವರು ಆ ಮಕ್ಕಳಿಗೆ ಕಳೆದ ಏಳು ತಿಂಗಳಿಂದ ಶಿಷ್ಯವೇತನ ಏಕೆ ಕೊಟ್ಟಿಲ್ಲ ಎಂದು ಒಂದೇ ಒಂದು ಸಾಲು ಬರೆಯುವುದಿಲ್ಲ. . .
 
ಆ ಮಕ್ಕಳ ಕುರಿತು ತೆಗೆದುಕೊಂಡ ಕ್ರಮವನ್ನು ತಿಳಿಯಲು ಐದು ಪತ್ರ ಬರೆಯುವ ನೀವು ಪತ್ರದಲ್ಲಿ ಆ ಹುಡುಗನ ಕುಟುಂಬ ಆಧರಿಸಿದ್ದ, ಆತ ಸರಳವಾಗಿ ಬದುಕು ನಡೆಸಿ ಉಳಿಸಿ ಕುಟುಂಬಕ್ಕೆ ಕಳುಹಿಸುತ್ತಿದ್ದ ಶಿಷ್ಯವೇತನವನ್ನು ತಡೆದ ವ್ಯವಸ್ಥೆಯ ಕುರಿತು ಒಂದು ಪ್ಯಾರ, ಒಂದು ಸಾಲು, ಒಂದೇ ಒಂದು ಪದವನ್ನು ಬರೆಯುವುದಿಲ್ಲ. ಆತನ ಮೇಲೆ ತೆಗೆದುಕೊಂಡ ಕ್ರಮದ ಮೇಲಿನ ನಿಮ್ಮ ಆಸಕ್ತಿ ಆತನ ಶಿಷ್ಯವೇತನ ನಿಲ್ಲಿಸಿರುವುದರ ಕುರಿತು, ಅದನ್ನೇ ನಂಬಿಕೊಂಡ ಆತನ ಕುಟುಂಬದ ಪರಿಸ್ಥಿತಿಯ ಮೇಲೆ ಇರುವುದಿಲ್ಲ!
 
ನಾವು ಇಂದು ರಾಜಕೀಯ, ಅಕಾಡೆಮಿಕ್ ಮತ್ತು ರಾಷ್ಟ್ರ ಎಂಬ ಮೂರು ಮುಖ್ಯ ವಿಷಯಗಳನ್ನು ಗಮನಿಸುವ ಹಂತಕ್ಕೆ ಬಂದಿದ್ದೇನೆ. ನಾನು ಈ ವಿಷಯಗಳ ಕುರಿತ ಪತ್ರಿಕಾ ವರದಿಗಳನ್ನು ಗಮನಿಸುತ್ತಿದ್ದೇನೆ, ಇಲ್ಲಿ ಆತ ಬರೆದ ಆತ್ಮಹತ್ಯಾ ಪತ್ರವನ್ನು ಆತ್ಮಹತ್ಯೆಯಿಂದ ಪ್ರತ್ಯೇಕಿಸಿ ನೋಡುವ ಪ್ರಯತ್ನ ನಡೆಯುತ್ತಿದೆ, ಆತ್ಮಹತ್ಯಾ ಪತ್ರವನ್ನು ಆತನ ಬದುಕಿನಿಂದ ಪ್ರತ್ಯೇಕಿಸಿ ನೋಡುವ ಪ್ರಯತ್ನಗಳು ನಡೆಯುತ್ತಿವೆ. ನಾವು ರೋಹಿತನ ಸಾವನ್ನಷ್ಟೆ ನೋಡಿದರೆ ಸಾಲದು, ಬದಲಾಗಿ ಆತ ಬದುಕಿದ ಬದುಕಿನ ರೀತಿಯನ್ನು ಗಮನಿಸಬೇಕು. ರೋಹಿತನ ಬದುಕನ್ನು, ಸಂಘಟನೆಯನ್ನು, ಸ್ನೇಹಿತರನ್ನು ಸಂಗಾತಿಗಳನ್ನು ಆತ ಬರೆದ ಪತ್ರದಿಂದ ಪ್ರತ್ಯೇಕಿಸಿ ಓಹೋ ಇದು ಒಂದು ದುಖ: ತರುವ ಆತ್ಮಹತ್ಯೆ ಅಷ್ಟೆ, ಇದಕ್ಕೂ ಶೋಷಣೆಗೂ, ಇದಕ್ಕೂ ಈ ಸಮಾಜದಲ್ಲಿನ ರಚನಾತ್ಮಕ ತಾರಮತ್ಯಕ್ಕೂ ಸಂಬಂದವಿಲ್ಲ ಎಂದು ಮಾತನಾಡುವ ಶುಷ್ಕ ಮನಸ್ಸಿನವರು ನಮ್ಮ ನಡುವೆ ಬರೆಯುತ್ತಿದ್ದಾರೆ. . . . 
 
ಇನ್ನೂ ಮುಖ್ಯವಾದ ವಿಚಾರ ಇಂದು ಹಿಂದೂಸ್ಥಾನ್ ಟೈಮ್ಸ್ ನಲ್ಲಿ ಒಬ್ಬ ಪತ್ರಕರ್ತ ಇದು ಒತ್ತಡದಿಂದ ಸಂಬವಿಸಿದ ಆತ್ಮಹತ್ಯೆ ಎಂದು ಬರೆಯುತ್ತಾರೆ. ಇದೇ ವ್ಯಕ್ತಿ ಹಿಂದೆ ರೈತರ ಆತ್ಮಹತ್ಯೆಗಳು ಒತ್ತಡದಿಂದ ಸಂಬವಿಸಿರುವುದು ಇದಕ್ಕೂ ಆರ್ಥಿಕತೆಗೂ ಯಾವುದೇ ಸಂಬಂದವಿಲ್ಲ ಎಂದು ಬರೆದಿದ್ದರು. ಇಂದು ರೋಹಿತನ ಆತ್ಮಹತ್ಯೆ ಒತ್ತಡದಿಂದ ಸಂಬವಿಸಿದೆ ಇದು ಶೋಷಣೆಯ ಕಾರಣಕ್ಕೆ ನಡೆದ ಘಟನೆ ಅಲ್ಲ ಎಂದು ಬರೆಯುತ್ತಾರೆ. ನಾವು ಇವರಿಗೆ 27ರ ಆ ಹುಡುಗ ಸಾಯುವ ಒತ್ತಡ ಎಲ್ಲಿಂದ ಬಂತು? ನಿಮ್ಮ ತರ್ಕವೆ ಸರಿ ಎಂದಾದರೆ ಈ ಸಮಾಜದ ಕೆಲವೇ ವರ್ಗ ಮತ್ತು ಜಾತಿಯವರು ಯಾಕೆ ಒತ್ತಡಕ್ಕೆ ಒಳಗಾಗುತ್ತಾರೆ? ಎಂಬ ಪ್ರಶ್ನೆಗಳನ್ನು ಕೇಳಬೇಕಿದೆ. . .
 
ಇಲ್ಲಿ ಇನ್ನೊಂದು ವಿಷಪೂರಿತ ತರ್ಕವೊಂದಿದೆ. ಈ ಲೇಖಕ ವಿವರಿಸುವಂತೆ ಇದು ಭಾವಾನಾತ್ಮಕ ಒತ್ತಡದಿಂದ ಸಂಬವಿಸಿದ ಆತ್ಮಹತ್ಯೆ ಅಲ್ಲ! ಬದಲಾಗಿ ಇದು ಮನೋವೈಜ್ಞಾನಿಕ , ಮಾನಸಿಕ ಸ್ಥಿಮಿತಕ್ಕೆ ಸಂಬಂಧಿಸಿ ಆತನೊಳಗೆ ಸಂಬವಿಸಿರುವ ಸಂಗತಿಯೆಂದು ಅವರು ಬರೆಯುತ್ತಾರೆ. ರೋಹಿತ್ ನ ಆತ್ಮಹತ್ಯಾ ಪತ್ರ ಎಲ್ಲಿಯೂ ನಮಗೆ ಬೇರೆ ಕಾರಣಗಳನ್ನು ತೋರಿಸುವುದಿಲ್ಲ ಅದು ಆತನೊಳಗೆ ಹುಟ್ಟಿರುವ ಜೀಗುಪ್ಸೆಯ ಕಾರಣದಿಂದ ಸಂಬವಿಸಿರುವ ಕ್ರಿಯೆ, ಇದಕ್ಕೂ ಹೊರಗಿನ ಸಂಗತಿಗಳಿಗೂ ಸಂಬಂಧವಿಲ್ಲ ಎಂದು ಬರೆಯುತ್ತಾರೆ. ಇಂತಹ ಮಂದಿ ನಮ್ಮ ನಡುವೆ ಇದ್ದಾರೆ. ಸದ್ಯಕ್ಕೆ ದೇಶದ ವಿದ್ಯಾರ್ಥಿಗಳ ಈ ಎಲ್ಲಾ ಹೋರಾಟವನ್ನು ಒಂದು ಪಿತೂರಿ ಎಂದು ಕರೆಯುತ್ತಿರುವ ಬರಹಗಾರರನ್ನು ಮರೆತು ಬಿಡೋಣ.... 
 
ಅದಕ್ಕೆ ಬದಲಾಗಿ ವಿಶಾಲ ದೃಷ್ಟಿಯಲ್ಲಿ ಈ ಸಮಾಜವನ್ನು ಅರ್ಥಮಾಡಿಕೊಳ್ಳಲು, ಸಮಸ್ಯೆಯನ್ನು ಗುರುತಿಸಲು ಈ ಸಮಾಜದಲ್ಲಿ ರೋಹಿತ್ ಎಲ್ಲಿದ್ದಾನೆ, ದಲಿತರು ಎಲ್ಲಿದ್ದಾರೆ, ಎಲ್ಲಿ ಶೋಷಣೆ ನಡೆಯುತ್ತಿದೆ ಎಂಬುದನ್ನು ನೋಡೋಣ. 3 ದಿನಗಳ ಹಿಂದೆ ನಾನು ರಾಜಸ್ಥಾನದಲ್ಲಿ ಇದ್ದೆ. ಅಲ್ಲಿನ ಹೈಕೋರ್ಟ್ “ರಾಜಸ್ಥಾನ್ ಪಂಚಾಯಿತಿ ಕಾಯ್ದೆಯನ್ನು” ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅನೂರ್ಜಿತಗೊಳಿಸಿದೆ. ನಿಮಗೆ ಗೊತ್ತಿರಲಿ ಪ್ರಸ್ತಾಪಿತ ರಾಜಸ್ಥಾನ್ ಪಂಚಾಯಿತಿ ಕಾಯ್ದೆ ಶೈಕ್ಷಣಿಕ ಅರ್ಹತೆಯನ್ನು ಒಂದು ಮಾನದಂಡ ಎಂದು ಪರಿಗಣಿಸಿರುವುದರಿಂದ ಇದು ಶೇ ತೊಂಭತ್ತರಷ್ಟು ಮಹಿಳೆಯರು ಗ್ರಾಮೀಣ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ನಿರಾಕರಿಸುತ್ತದೆ. ಇದು ಜಾರಿಯಾದರೆ ಶೇ75 ದಲಿತ ಮಹಿಳೆಯರು ಗ್ರಾಮೀಣ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ.
 
ವಿವರವಾಗಿ ನೋಡುವುದಾದರೆ ಈ ಕಾಯ್ದೆಯ ಪ್ರಕಾರ 21 ವರ್ಷಕ್ಕೆ ಮೇಲ್ಪಟ್ಟ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಬಹುದು. 21ರ ವಯಸ್ಕರ ಗುಂಪಿನಲ್ಲಿ ಕೇವಲ 11.1 ಶೇ ಜನರು ಮಾತ್ರ ಶಾಲೆಯಲ್ಲಿ ಕಲಿತಿದ್ದಾರೆ. ಆ ಕಾರಣಕ್ಕೆ ಮಿಕ್ಕ 89.9 ಶೇ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೆ ಕಳೆದುಕೊಳ್ಳಲಿದ್ದಾರೆ. ಇನ್ನೂ ಪಂಚಾಯಿತಿ ಅಧ್ಯಕ್ಷರಾಗಲು 8ನೇ ತರಗತಿಗಿಂತ ಮೇಲಿನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು ಎನ್ನುತ್ತದೆ ಈ ಕಾಯ್ದೆ. ಇದರಿಂದ 90.4 ಶೇ ದಲಿತ ಮಹಿಳೆಯರು ಮತ್ತು 62 ಶೇ ಪುರುಷರು ಪಂಚಾಯಿತಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.
 
ನಿಮಗೆ ಒಂದು ಆಸಕ್ತಿಕರ ಅಂಶ ತಿಳಿಸಬೇಕು ದೇಶದ ಎಲ್ಲಾ ನ್ಯಾಯಾಲಯಗಳಿಗೆ ಹೋಲಿಸಿದರೆ ರಾಜಸ್ತಾನ್ ಹೈಕೊರ್ಟ್ ಗೆ ಒಂದು ವಿಷೇಷತೆ ಇದೆ. ಅಲ್ಲಿ ಸಂವಿಧಾನ ಕರ್ತೃ ಡಾ. ಅಂಬೇಡ್ಕರ್ ಪ್ರತಿಮೆ ನ್ಯಾಯಾಲಯದ ಹೊರಗೆ ಟ್ರಾಫಿಕ್ ಕಡೆ ಮುಖ ಮಾಡಿಕೊಂಡು ನಿಂತಿದ್ದರೆ ನ್ಯಾಯಾಲಯದ ಒಳಗೆ ಮನುವಿನ 20 ಅಡಿ ಪ್ರತಿಮೆ ನಿಲ್ಲಿಸಲಾಗಿದೆ. ದೇಶದ ಯಾವ ನ್ಯಾಯಾಲಯದಲ್ಲಿಯೂ ಇಂತಹ ಅಸಂಗತಿ ಕಾಣಲು ಸಿಗಲಾರದು! ಇರಲಿ, ವಿಷಯ ಅದಲ್ಲ. ಈ ರೀತಿಯ ಅನ್ಯಾಯಯುತ ಕಾಯ್ದೆಯನ್ನು ಸುಪ್ರಿಂ ಕೊರ್ಟ್‌ನ ಸಂವಿಧಾನಿಕ ಪೀಠ ಪರಿಶಿಲನೆಗೆ ಒಳಪಡಿಸುತ್ತದೆ ಎಂಬ ಭರವಸೆಯನ್ನು ನಾವು ಉಳಿಸಿಕೊಳ್ಳೊಣ. ಆದರೆ ಈ ಕಾಯ್ದೆ ನಿಜಕ್ಕೂ ಅನ್ಯಾಯ ಮತ್ತು ಶೋಷಣೆಯ ಪ್ರತೀಕವಾಗಿದೆ ಇದರ ವಿರುದ್ಧ ನಾವು ಹೋರಾಟವನ್ನು ರೂಪಿಸಬೇಕಿದೆ. . . .
 
ಇದೊಂದೇ ಸಮಸ್ಯೆಯಲ್ಲ. ನಾವು ಜಾತಿಗಳ ಸಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶಗಳನ್ನು ನೋಡಿದರೆ ಈ ದೇಶದಲ್ಲಿ ಬಡವರ ಬದುಕು ಏನಾಗಿದೆ ಎಂಬುದು ಅರ್ಥವಾಗುತ್ತದೆ. ಒಂದು ವಿಷಯದಲ್ಲಿ ನಾನು ಸ್ಮೃತಿ ಇರಾನಿಯವರ “ಇದು ದಲಿತ ಮತ್ತು ದಲಿತೇತರರ ನಡುವಿನ ಸಂಘರ್ಷವಲ್ಲ” ಎಂಬ ಹೇಳಿಕೆಯನ್ನು ಸಮರ್ಥಿಸುತ್ತೇನೆ. ಖಂಡಿತ ಅದು ಸತ್ಯ. ಇದು ದಲಿತ ಮತ್ತು ದಲಿತೇತರರ ನಡುವಿನ ಹೋರಾಟವಲ್ಲ ಬದಲಾಗಿ ಇದು “ಹಿಂದೂ ಮೇಲ್ಜಾತಿ ಮೂಲಭೂತವಾದಿಗಳು ಮತ್ತು ದಲಿತ, ದಲಿತೇತರರ ಹಾಗೂ ಮನುಷ್ಯತ್ವವುಳ್ಳ ಮನುಷ್ಯರ ನಡುವಿನ ಸಂಘರ್ಷ”. ನಾವು ಮೊದಲೇ ಗುರುತಿಸಿದಂತೆ ಈ ದೇಶದಲ್ಲಿ 400 ಮಿಲಿಯನ್ ಜನರು ಇದುವರೆಗೂ ಯಾವ ಮಾದರಿಯ ಶಿಕ್ಷಣ ಸಂಸ್ಥೆಗಳ ಒಳಗೂ ಕಾಲಿಡಲಾಗಿಲ್ಲ ಈ ದೇಶಧ ಒಟ್ಟು ಜನಸಂಖ್ಯೆಯ ಮೂರನೆ ಒಂದು ಭಾಗದಷ್ಟು ಜನರಿಗೆ ಶಿಕ್ಷಣವನ್ನು ನಿರಾಕರಿಸಲಾಗಿದೆ ಇವರಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ವಂಚನೆಗೆ ಒಳಪಟ್ಟವರು ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಬಡ ಹಿಂದುಳಿದ ಸಮುದಾಯಗಳ ವಿಧ್ಯಾರ್ಥಿಗಳು 
 
ಇಂದು ಭಾರತ 68 ಮಿಲಿಯನ್ ಪದವೀಧರರನ್ನು ಹೊಂದಿದೆ. ಆದರೆ ಇದರ ಆರು ಪಟ್ಟು ಜನರು ಅನಕ್ಷರಸ್ತರಾಗಿದ್ದಾರೆ. ಈ ದೇಶದಲ್ಲಿ ಅಸಮಾನತೆ ಎಷ್ಟು ಹೆಚ್ಚಿದೆ ಎಂದರೆ ಎಲ್ಲಾ ಮಾದರಿಯ ತಾರತಮ್ಯಗಳನ್ನು ಮರುಹೇರಿಕೆ ಮಾಡಲಾಗುತ್ತಿದೆ. ಇಂದು ಸಮೀಕ್ಷೆಗಳನ್ನು ನೋಡಿದರೆ ಈ 1.28 ಬಿಲಿಯನ್ ಜನಸಂಖ್ಯೆಯ ದೇಶದಲ್ಲಿ 100 ಜನ ಭಾರತೀಯರು ಒಟ್ಟು ಜನಸಂಖ್ಯೆಯ ಎರಡನೇ ಒಂದು ಭಾಗದಷ್ಟು ಸಂಪತ್ತನ್ನು ಹೊಂದಿದ್ದಾರೆ. ಅದರಲ್ಲಿ 15 ಜನ ಭಾರತೀಯರು ಈ ದೇಶದ ಅರ್ಧದಷ್ಟು ಜನಸಂಖ್ಯೆಯ ಸಂಪತ್ತನ್ನು ಹೊಂದಿದ್ದಾರೆ. ಈ ಎಲ್ಲಾ ಪ್ರಕರಣಗಳ ಪರಿಣಾಮ ಅನುಭವಿಸುತ್ತಿರುವವರು ಈ ದೇಶದ ದಲಿತ, ಆದಿವಾಸಿ, ಮಹಿಳೆ ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು. . . 
 
ಇನ್ನು ಈ ದೇಶದ ಜನಸಂಖ್ಯೆಯ ಉಗ್ರಾಣವಾದ ಗ್ರಾಮೀಣ ಭಾರತವನ್ನು ನೋಡಿದರೆ ನಿಮಗೆ ಆಶ್ಚರ್ಯವಾಗಬಹದು. ಈ ದೇಶದ ಪ್ರತಿಶತಃ ಒಂದರಷ್ಟು ಜನರು ಈ ದೇಶದ ಶೇ 46 ರಷ್ಟು ಸಂಪನ್ಮೂಲಗಳ ಮೇಲಿನ ಒಡೆತನ ಹೊಂದಿದ್ದಾರೆ. ಇದು ಅಮೇರಿಕಾಕ್ಕಿಂತ ಕೆಟ್ಟ ಸ್ಥಿತಿ. ಅಲ್ಲಿ ಶೇ1 ಜನರು ಆ ದೇಶದ 39ಶೇ ಸಂಪತ್ತಿನ ಒಡೆತನ ಹೊಂದಿದ್ದಾರೆ. ಈ ಎಲ್ಲಾ ಘಟನೆಗಳು ಕಳೆದು 15-20 ವರ್ಷಗಳಿಂದ ಈಚೆಗೆ ನವ ಉದಾರಿಕರಣದ ಹೆಸರಿನಲ್ಲಿ ಘಟಿಸಲ್ಪಟ್ಟಿವೆ.
 
ನೀವು ಒಪ್ಪಿ ಬಿಡಿ, ನಿಜವಾದ ಅರ್ಥದಲ್ಲಿ ಇಂದು ನಿಮ್ಮ ದೇಶ ಅಳಲ್ಪಡುತ್ತಿರುವುದು “ಸಾಮಾಜಿಕ ಮತ್ತು ಆರ್ಥಿಕ ಮೂಲಭೂತವಾದಿಗಳ ಒಕ್ಕೂಟ" ಮತ್ತು ಮಾರುಕಟ್ಟೆ ಆರ್ಥಿಕತೆಯ ಮೂಲಭೂತವಾದಿಗಳಿಂದ ಇದು ಭಾರತಕ್ಕೆ ಸೀಮಿತವಾದ ಮೈತ್ರಿಕೂಟವಲ್ಲ ಬದಲಾಗಿ ಇದು ವಿಶ್ವವ್ಯಾಪಿಯಾಗಿದೆ. ನಿಮಗೆ ಆಶ್ಚರ್ಯವಾಗಬಹದು ಜಗತ್ತಿನ ಅತ್ಯಂತ ಅಪಾಯಕಾರಿ ಬಂಡವಾಳಶಾಹಿ ಆರ್ಥಿಕತೆಯ ಜನಕ ಯುನೈಟೆಡ್ ಸ್ಟೇಟ್ಸ್ ಜಗತ್ತಿನ ಅತಿ ಅಪಾಯಕಾರಿಯಾದ ಎರಡು ಧಾರ್ಮಿಕ ಮೂಲಭೂತವಾದಿಗಳಾದ ಇಸ್ರೇಲ್ ಮತ್ತು ಸೌದಿ ಅರೇಬಿಯಾಗಳನ್ನು ತನ್ನ ಯುದ್ಧಗಳಿಗಾಗಿ ಆಶ್ರಯಿಸಿದೆ. ಹಾಗೆ ನೊಡಿದರೆ ನಾವೀಗ ಅತ್ಯಂತ ಶಕ್ತಿಶಾಲಿ, ಒಗ್ಗೂಡಿದ ಶತ್ರುವಿನ ವಿರುದ್ದ ಹೋರಾಡಬೇಕಿದೆ. . . . 
 
ನಾವು ಇಂದು ನಮ್ಮ ನಡುವಿನ ರಚನಾತ್ಮಕ, ಸಾಮಾಜಿಕ, ಆರ್ಥಿಕ, ಕಾನೂನಾತ್ಮಕ ತಾರತಮ್ಯಗಳ ಕುರಿತು ಧ್ವನಿ ಎತ್ತಬೇಕಿದೆ ಈ ದೇಶದಲ್ಲಿನ 75ಶೇ ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಹೆಚ್ಚೆಂದರೆ ತಿಂಗಳಿಗೆ 5000 ಸಂಪಾದನೆ ಮಾಡುತ್ತಿದ್ದಾನೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಇದು ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ದೊರೆಯುವ ಚಿತ್ರಣ. ಇದನ್ನು ನೀವು ಅದಿವಾಸಿ ಮತ್ತು ದಲಿತರಿಗೆ ಅನ್ವಯಿಸಿ ನೋಡಿದರೆ ಪರಿಸ್ಥಿತಿ ಇನ್ನೂ ಭೀಕರವಾಗಿದೆ, ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. . .
 
ಪ್ರಮುಖವಾಗಿ academic institutionಗಳಿಗೆ ಸಂಬಂಧಿಸಿದ ಇತ್ತೀಚಿನ ಈ ಹೋರಾಟಗಳನ್ನು ಕೆಲವು ಜನರು ಓಹೋ ಇದು ಹೈದರಾಬಾದ್ ಪ್ರಕರಣವಾ, ಅಯ್ಯೋ ಅಲ್ಲಿನ ಸ್ಥಿತಿಯೇ ಹಾಗಿದೆ ಬಿಡಿ ಈ ತರಹದ ಘಟನೆಗಳು ಅಲ್ಲಿ ನಡೆಯುತ್ತಲೇ ಇರುತ್ತವೆ ನಮಗ್ಯಾಕೆ ಎಂಬ ಮಾತುಗಳನ್ನು ಹೇಳುತ್ತಾರೆ. ಆದರೆ ನಿಮಗೆ ನಾನು ಒಂದು ವಿಷಯ ಹೇಳಬೇಕು ನಾನು ದೇಶದ ಪ್ರತಿಷ್ಟಿತ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಒಬ್ಬ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ ನನ್ನ ಅವಧಿಯ ಶೇ 80ರಷ್ಟು ಸಮಯ ಮಿಸಲಾತಿ ವಿರೋಧಿಸುವ ಮನಸ್ಸುಗಳನ್ನು ಎದುರಿಸುವುದರಲ್ಲಿಯೇ ಕಳೆದು ಹೋಗಿದೆ ಎಂಬ ಸತ್ಯವನ್ನು ನಿಮ್ಮೆದುರು ಇಡುತ್ತಿದ್ದೇನೆ. ಆ ಎಲ್ಲಾ ಹೋರಾಟಗಳು ಇಂದು ದಾಖಲೆಗಳಲ್ಲಿವೆ. ಆ ಸಮಯದಲ್ಲಿ ಸುಪ್ರಿಂ ಕೊರ್ಟ್ ಅದೇಶವನ್ನು ಧಿಕ್ಕರಿಸಿ ಹಿಂದುಳಿದ ವರ್ಗದ 27ಶೇ ಮಿಸಲಾತಿಯನ್ನು ಕಡಿತಗೊಳಿಸುವ ಪ್ರಯತ್ನಗಳು ನಡೆದವು. ಆದ್ದರಿಂದ ದಯಮಾಡಿ ಇದು ಹೈದಾರಾಬದ್ ನಲ್ಲಿ ಮಾತ್ರ ನಡೆಯುತ್ತಿರುವ ಸಂಗತಿ ಎಂಬ ಮೂರ್ಖತನದ ಹೇಳಿಕೆಗಳನ್ನು ನಂಬಬೇಡಿ. ಇಂದು ತಾರತಮ್ಯ ಎಂಬುದು ದೇಶದ ಪ್ರತಿಷ್ಟಿತ ಸಂಸ್ಥೆಗಳಲ್ಲಿಯೇ ನಡೆಯುತ್ತಿದೆ . . .
 
ಈ ಹಂತದಲ್ಲಿ ನಾವು ವಿಶ್ವವಿದ್ಯಾನಿಲಯಗಳ ಉಳಿವಿಗೆ ಏನು ಮಾಡಬೇಕು? ಎಂಬುದರ ಕುರಿತು ನನ್ನ ಸ್ನೇಹಿತ ಪ್ರೊ. ಸುಖ್ದೇವ್ ಥೋರಟ್ ಒಂದು ನೀಲನಕ್ಷೆಯನ್ನು ಒದಗಿಸಿದ್ದಾರೆ. ನಾನು ಅವರು ನೀಡಿದ ಆ ವರದಿಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ನಾವು ಬದಲಾವಣೆ ಆರಂಭಿಸುವುದಿದ್ದರೆ ಅದು ಈ ವರದಿಯಿಂದಲೇ ಆರಂಭವಾಗಲಿ, ನಮಗಿರುವ ಉತ್ತಮ ಆರಂಭ ಅದೆ ಆಗಲಿದೆ . . .
 
ಇದರ ಮುಂದೆ ನಾವು ಹಲವು ರಾಜಕೀಯ ಹೋರಾಟಗಳನ್ನು ನಡೆಸಬೇಕಿದೆ. ಹೊರಗೆ ಇನ್ನೂ ಹಲವು ಹೋರಾಟಗಳು ನಮ್ಮನ್ನು ಎದಿರು ನೋಡುತ್ತಿವೆ. ದಯಮಾಡಿ ಅರ್ಥಮಾಡಿಕೊಳ್ಳಿ, ಇದು ಹೈದರಾಬಾದ್ ಗೆ ಮಾತ್ರ ಸೀಮಿತವಾಗಿಲ್ಲ. ಅಲಹಬಾದ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಸ್ನೇಹಿತ ಸಿದ್ಧಾರ್ಥ್ ವರದರಾಜ್ ಅವರನ್ನು ಇದೇ ಎಬಿವಿಪಿ ಗುಂಪು ಕುಲಪತಿಗಳ ಕಟ್ಟಡದಲ್ಲಿ ಬಂಧನಕ್ಕೆ ಒಳಪಡಿಸಿತ್ತು. ಅವರ ಭಾಷಣವನ್ನು ಕ್ಯಾಂಪಸ್ ನಲ್ಲಿ ನಿಷೇಧಿಸಲಾಯಿತು. ನೀವು ಹೊರಕ್ಕೆ ಬಂದರೆ ದಾಳಿ ನಡೆಸುತ್ತೇವೆ ಎಂದು ಬೆದರಿಕೆಯನ್ನು ಒಡ್ಡಲಾಗಿತ್ತು! ಜನ ಮರೆತಿರಬಹದು, ಮಧ್ಯಪ್ರದೇಶದ ಒಬ್ಬರು ಕುಲಪತಿಗಳನ್ನು ಮನಬಂದಂತೆ ಧಳಿಸಲಾಗಿತ್ತು, ಬಿದ್ದ ಹೊಡೆತಗಳನ್ನು ತಾಳಲಾರದೆ ಅವರು ಅಸುನೀಗಿದ್ದರು. ಇದು ಈ ವಿವಿ ಯಲ್ಲಿ ನಡೆಯುತ್ತಿರುವ ಘಟನೆ ಮಾತ್ರ ಅಲ್ಲ. ಇನ್ನೂ ನಿಮ್ಮ ಉಪಕುಲಪತಿಗಳ ವಿಷಯ ಅವರು ಧೀರ್ಘ ರಜೆಯ ಮೇಲೆ ತೆರಳಿದ್ದಾರೆ ಅವರ ರಜೆ ಹಾಗೆ ದೀರ್ಘವಾಗಲಿ ಎಂದು ಆಶಿಸುತ್ತೇನೆ . . .
 
ನನಗೆ ಅನ್ನಿಸುವಂತೆ ರೋಹಿತ್ ಸಾವು/ಆತ್ಮಹತ್ಯೆ ನಮ್ಮನ್ನು ಒಂದಾಗಿಸಬೇಕಿದೆಯೇ ಹೊರತು ನಮ್ಮಲ್ಲೆ ಒಡಕು ಮೂಡಿಸಬಾರದು! ಅವನು ಅವನ ಸಂಘಟನೆಯ ವಿರೋಧವನ್ನು ಮಾಡುತ್ತಿದ್ದ, ಅವನು ತನ್ನದೆ ಸ್ನೇಹಿತರನ್ನು ವಿರೋಧಿಸುತ್ತಿದ್ದ, ಎಂಬ ಹೇಳಿಕೆಗಳನ್ನು ನೀಡುವ, ಆ ಮೂಲಕ ನಮ್ಮನ್ನು ಒಡೆಯುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆತನ ನೆನಪನ್ನು ನಮ್ಮಿಂದ ಅಳಿಸುವ ಕ್ರೌರ್ಯಕ್ಕೆ, ಅನ್ಯಾಯಕ್ಕೆ ಜನ ಮುಂದಾಗುತ್ತಿದ್ದಾರೆ. ಆದರೆ ಒಂದು ಶ್ಲಾಘನೀಯ ಅಂಶ ಎಂದರೆ ಈ ಎಲ್ಲಾ ವಿರೋಧ, ತಂತ್ರ, ಕುತಂತ್ರಗಳನ್ನು ಎದುರಿಸಿ ಪ್ರತಿರೋಧ ಎಂಬುದು ದೇಶದ ಮೂಲೆ ಮೂಲೆಗಳಿಂದ ಹರಿದು ಬರುತ್ತಿದೆ ಮತ್ತು ಅದು ವಿಧ್ಯಾರ್ಥಿಗಳ ಕಡೆಯಿಂದ ಹರಿದು ಬರುತ್ತಿದೆ . . . . 
 
ನಿಮಗೆ ನೆನಪಿರಲಿ ಕಳೆದ 105 ದಿನಗಳಿಂದ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟೀಟ್ಯೋಟ್” ಪುಣೆ ವಿಧ್ಯಾರ್ಥಿಗಳು ಈ ಸರ್ಕಾರದ ವಿರುದ್ಧ ವಿಶ್ವವಿದ್ಯಾನಿಲಯದ ಮೇಲೆ ಯುಧಿಷ್ಟರನ ಹೇರಿಕೆಯನ್ನು ವಿರೋಧಿಸಿ ಹೋರಾಡುತ್ತಿದ್ದಾರೆ. ನಿಮಗೆ ಗೊತ್ತಾ ನೈಜವಾದ ಮಹಾಭಾರತದಲ್ಲಿ ಯುಧಿಷ್ಟಿರ ಎಷ್ಟು ಪರಿಶುಧ್ಧ ಆತ್ಮ ಎಂದರೆ ಅವನು ಎಂದೂ ಸುಳ್ಳನ್ನೆ ಹೇಳಿರಲಿಲ್ಲ! ಆ ಕಾರಣಕ್ಕೆ ಆತನ ರಥ ಭೂಮಿಯಿಂದ 6 ಇಂಚು ಮೇಲಕ್ಕೆ ಚಲಿಸುತ್ತಿತ್ತು. ಇದೊಂದು ಆಸಕ್ತಿಕರ ಪವಿತ್ರತೆಯ ಉದಾಹರಣೆ ಯುಧಿಷ್ಟರ ಒಬ್ಬ ಕುಡುಕ, ಜೂಜುಕೋರ, ಜೂಜಿನಲ್ಲಿ ತನ್ನ ಹೆಂಡತಿಯನ್ನೆ ಪಣವಾಗಿ ಸೋತವನು ಆದರೆ ಅವನು ಸುಳ್ಳನ್ನು ಮಾತ್ರ ಹೇಳಿರಲಿಲ್ಲ ಆ ಕಾರಣಕ್ಕೆ ಅವನು ಪವಿತ್ರ. . .! ಅವನು ದ್ರೋಣರಿಗೆ “ಅಶ್ವಥಾಮ ಸತ್ತ” ಎಂದು ಸುಳ್ಳು ಹೇಳಿದ ದಿನ ಅವನ ರಥ ನೆಲವನ್ನು ತಾಕಿತಂತೆ ಆದರೆ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟೀಟ್ಯೋಟ್” ನ ಯುಧಿಷ್ಟರರ ರಥ ಭೂಮಿಯಿಂದ ಮೇಲೆ ಎದ್ದೆ ಇಲ್ಲ! ಅದು ಕೆಸರಿನಲ್ಲಿ ಹೂತು ಹೋಗಿದೆ. ಆ ಕಾರಣಕ್ಕೆ ಅವರನ್ನು ಯಾರು ಗೌರವಿಸುತ್ತಿಲ್ಲ. . .. 
 
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿಧ್ಯಾರ್ಥಿಗಳೆ, ನೀವು ಈ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಿದೆ. ಈ ಹೋರಾಟದ ಜೊತೆಗೆ ಇನ್ನು ಮುಖ್ಯವಾದ ಸಂಗತಿಗಳನ್ನು ನೀವು ಮುಂಚೂಣಿಗೆ ತರಬೇಕಿದೆ. ಇದನ್ನು ನಾವು ರೋಹಿತ್ ವೇಮುಲ ಎಂಬ ಚೇತನದ ಆತ್ಮಹತ್ಯೆಯ ಪರಿಣಾಮ ಎಂದು ನಾನು ಗುರುತಿಸುತ್ತೇನೆ, ಜಗತ್ತು ಓದಿಕೊಳ್ಳುತ್ತದೆ . . .
ಬಹಳ ಹಿಂದೆ ಒಬ್ಬ ಫ್ರೆಂಚ್ ಬರಹಗಾರ ವಿಕ್ಟರ್ ಹ್ಯೂಗೋ ಬರೆಯುತ್ತಾನೆ All the forces in the world are not so powerful as an idea whose time has come.. . .ನನಗೆ ಅನ್ನಿಸುವಂತೆ 2016 ರಲ್ಲಿ ಭಾರತಕ್ಕೆ ಆ ಸಮಯ ಬಂದಿದೆ. ಆ ಅಲೋಚನೆ ಹಿಂದಿನ ಬೇಡಿಕೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಲಿಂಗಾಧಾರಿತ ನ್ಯಾಯದ ಹಕ್ಕೊತ್ತಾಯವಾಗಿದೆ. ಜೊತೆಗೆ ರೋಹಿತ್ ಮತ್ತು ಲಕ್ಷಾಂತರ ರೋಹಿತರುಗಳ ನ್ಯಾಯಯುತ ಹಕ್ಕಾಗಿದೆ. ನಮ್ಮ ಹೋರಾಟದ ಮಾದರಿಗಳು ಭಿನ್ನ ಇರಬಹದು ಆದರೆ ಉದ್ದೇಶ ಅಂಬೇಡ್ಕರ್ ಹೇಳಿದ ಶಿಕ್ಷಣ , ಸಂಘಟನೆ, ಹೋರಾಟದ ಹಕ್ಕುಗಳಿಗಾಗಿದೆ ಎಂಬುದನ್ನು ಮರೆಯದಿರೋಣ. . . 
ಧನ್ಯವಾದಗಳು.

Tuesday, January 26, 2016

ಬಿಂದು ಕೃಷ್ಣನ್ - ಮೂರು ಮಲೆಯಾಳಿ ಕವಿತೆಗಳುಮಲೆಯಾಳಿ, ಇಂಗ್ಲಿಷ್ ಮೂಲ: ಬಿಂದು ಕೃಷ್ಣನ್
ಕನ್ನಡಕ್ಕೆ: ಡಾ. ಎಚ್. ಎಸ್. ಅನುಪಮಾ


 ೧. ಮರೆವಿನ ಹಗೇವು

ನನ್ನಮ್ಮ ಏನನ್ನೂ ಬಿಸಾಡುವುದಿಲ್ಲ
ತುಕ್ಕು ಹಿಡಿದ ಮೊಳೆಯನ್ನೂ
ಎಲ್ಲವೂ ಒಂದಲ್ಲ ಒಂದು ದಿನ
ಬೇಕಾದಾವು ಎಂಬ ಆಲೋಚನೆ.
ಎಲ್ಲ ಎತ್ತಿಡುತ್ತಾಳೆ,
ನಮ್ಮ ಮನೆ
ದೊಡ್ಡ ಕಸದ ಗುಂಡಿ ಈಗ.

ನನ್ನಪ್ಪ ಸಂಪೂರ್ಣ ವಿರುದ್ಧ
ಅವ ಎಲ್ಲ ಬಿಸುಡುವವ
ಗಡಿಯಾರದ ಮುಳ್ಳು
ಅವ ಪಡೆದ ಪದಕ ಪಾರಿತೋಷಕ
ಸವಿನೆನಪು ಹುದುಗಿಸಿದ ಮಿದುಳ ಜೀವಕೋಶ..
ಎಲ್ಲ ಅಂದರೆ ಎಲ್ಲವನೂ
ಕಳಕೊಂಡವನು ಅವನು

ಈಗ ನನ್ನಮ್ಮ
ಅವನ ಎಲ್ಲವನ್ನೂ
ತಾನೇ ಎತ್ತಿಡುತ್ತಾಳೆ

ಇತ್ತೀಚೆಗೆ ಭಯ ನನಗೆ
ಎಲ್ಲಿ ನನ್ನಮ್ಮ
ಪೆಟ್ಟಿಗೆಯಲಿ ಕಾಪಿಟ್ಟ
ಉದುರಿ ಬಿದ್ದ ನನ್ನ ಮೊದಲ ಹಲ್ಲ
ನನಗೆ ಕೊಡುವಾಗ
ಅಪ್ಪ
‘ಯಾರೀ ಹೆಂಗಸು?’
ಎಂದು ಕೇಳಿಯಾನೋ
ಎಂದು.

೨. ಮಗಳಿಗೆ

ಮೊದಲ ಬಾರಿ ನೀ ಕಡಲ ನೋಡಿದಾಗ
ನೀ ನನ್ನ ಸೊಂಟದಲಿದ್ದೆ
ಪುಟ್ಟ ಕಣ್ಣುಗಳೊಳಗೆ
ಅಪಾರ ಕಡಲು ಭೋರ್ಗರೆಯಿತು
ನಿನ್ನ ನಗು ಮಾಯವಾಗಿ
ಅಂಜಿ, ಕಣ್ಣು ಕಿವಿಗಳ ಮುಚ್ಚಿ
ನನ್ನ ಹೆಗಲಿಗೊತ್ತಿ ಮಲಗಿದೆ

ಮೊದಲ ಬಾರಿ ಮಳೆ ನೋಡಿದಾಗ
ನನ್ನ ತೊಡೆ ಮೇಲೆ ಕೂತಿದ್ದೆ
ನಿನ್ನ ಪುಟ್ಟ ಕಣ್ಣುಗಳೊಳಗೆ
ಆಗಸ ಇಳಿಯಿತು
ಪುಟ್ಟ ಪುಷ್ಟ ಬೆರಳುಗಳ ಅರಳಿಸಿ
ಕೇಕೆ ಹಾಕುತ್ತ
ಮಳೆಯ ಸ್ವಾಗತಿಸಿದೆ

ಮೊದಲ ಬಾರಿ ನಿನ್ನ ಪ್ರೇಮ
ಮತ್ತಾರದೊ ಕಂಗಳಲ್ಲಿ ಸಾಕಾರವಾಗುವಾಗ
ನಾ ನಿನ್ನೊಡನಿರುವುದಿಲ್ಲ
ನಿನ್ನ ನಗು ಕಳಕೊಳ್ಳದಿರು
ಅತಿ ಉದ್ವೇಗಗೊಳದೆಯೂ ಇರು
ಕಡಲೊಳಗೆ ಹೆಜ್ಜೆಯಿಡದೆ
ಮಳೆಯಲಿ ತೋಯಿಸಿಕೊಳದೆ
ಬದುಕಬಲ್ಲೆನೆಂದು ತಿಳಿಯದಿರು
ಬೇಕೆಂದಾಗ ಒಂದು ದೋಣಿ ಮತ್ತು ಛತ್ರಿ
ನಿನ್ನ ಬಳಿಯಿವೆ ಎಂದಷ್ಟೆ ಖಾತ್ರಿ ಪಡಿಸಿಕೊ..

೩. ದೇವರ ಸ್ವಂತ..


ಅಳಿವೆಯ ನೀರು
ಉರಿವ ಸೂರ್ಯನ ಬೆಳಕಿಗೆ ಥಳಥಳಿಸುತಿತ್ತು
ಹೌಸ್ ಬೋಟಿನಲ್ಲಿ
ಪರದೇಶಿಯೊಬ್ಬ ಧರಿಸಿದ ಕಪ್ಪು ಕನ್ನಡಕ
ಅವನ ಕಂಗಳ ಕುರುಡಾಗಿಸಿ
ಬಿಸಿಲು ಬೆಳದಿಂಗಳಾಯಿತು.

ಎಣ್ಣೆ ಹಚ್ಚಿ ಮಿಂದು
ಅರಿಶಿನ ಸಿಂಧೂರ ಧರಿಸಿ
ದೇವರ ಸ್ವಂತ ರಾಜ್ಯದ ಮೀನು
ನಿರ್ಭಾವುಕ ಕಣ್ಣುಗಳಲಿ ನೋಡುತ್ತ
ಬೋರಲಾಗಿ ಅವನೆದುರು ಬಿದ್ದಿತು
ದೇವರ ಸ್ವಂತ ಕಲ್ಪವೃಕ್ಷವು
ಅವಗೆ ಹಾಲನೆರೆಯಿತು

ನನ್ನೆಡೆಗೆ ಬರುವ ಮೊದಲು
ಎಲ್ಲಕ್ಕು ನ್ಯಾಯ ಒದಗಿಸಿದ ಅವ
ಇಲ್ಲ, ಬಿಳಿಯ ಹಾಸಿಗೆ ಬಟ್ಟೆಯ ಮೇಲೆ ರಕ್ತಕಲೆಗಳಿರಲಿಲ್ಲ
ಅಲೆಗಳೊಡನೆ ಸೆಣಸುವುದು ಅದು
ಮೊದಲ ಬಾರಿಯೇನಾಗಿರಲಿಲ್ಲ

ನಾ ಹೊರಟಾಗ
ಬೆಳದಿಂಗಳು ನಿಜವಾಗಿಯೂ ಸುರಿಯಿತು
ಆಗ ನೋಡಿದೆ
ನನ್ನ ನೆರೆಯ ಶೆಜಿಯೆತ್ತನ್ ದೋಣಿ ನಡೆಸುತ್ತಿದ್ದ
ಕಳಾಹೀನ ಮುಖ, ಕೆಂಪು ಕಣ್ಣು..

‘ಏಯ್, ಇದರಲ್ಲಿ ತಲೆಹೋಗುವಂಥದೇನಿದೆ?
ನನ್ನ ಗುಡಿಸಲ ಹಿಂದಿನ ಹಳ್ಳದಲ್ಲಿ
ಇವತ್ತು ಮನದಣಿಯೆ ಮೀಯಬೇಕಿದೆ
ಇವತ್ತು ರಾತ್ರಿ ನನ್ನಪ್ಪ
ಔಷಧ ಕುಡಿಯಲಿದ್ದಾನೆ
ಕೆಮ್ಮದೆ ಮಲಗಿ ನಿದ್ರಿಸಲಿದ್ದಾನೆ.
ಇವತ್ತು ನನ್ನ ಸೋದರ
ಹೊಟ್ಟೆ ತುಂಬ ಉಂಡು
ಅಳದೆ ಮಲಗಲಿದ್ದಾನೆ.
ಅದೂ ಮುಖ್ಯ ತಾನೇ?
ಅದು ಮಾತ್ರವೇ ಮುಖ್ಯ ತಾನೇ?

ಇಷ್ಟೆಲ್ಲ ವರ್ಷ ದೋಣಿ ನಡೆಸಿದರೂನು
ನಿನಗಿನ್ನೂ ತಿಳಿದಿಲ್ಲವೆ ಶೆಜಿಯೆತ್ತ
ಅತಿಥಿ ದೇವೋಭವ ಎಂದು?’
***


(ಚಿತ್ರ: ಕೃಷ್ಣ ಗಿಳಿಯಾರ್)

Monday, January 25, 2016

ವ್ಯಕ್ತಿಗತವಾಗಿ ಸಂಸ್ಕೃತ ಭಾಷೆಯ ಬಗ್ಗೆ ಮುನಿಸೇನೂ ಇಲ್ಲ ಆದರೆ ಬೈರಪ್ಪರ ರಂಪ ಸಹಿಸಲಾರೆ...ಯೋಗೇಶ್ ರಾಜಮಾರ್ಗಚೆಡ್ಡಿಗಳು ಮತ್ತು ಅವರು ಹಿಡಿಯುವ ಲಾಠಿಗಳಿಂದ ಸ್ವಾತಂತ್ರ್ಯ ಬಂದಿರುವುದು ಎಂಬ ಇತಿಹಾಸವಿದ್ದಿದ್ದರೆ ಭೈರಪ್ಪನವರಿಗೆ ಒಪ್ಪಿಕೊಳ್ಳಲು ಆಗುತ್ತಿತ್ತೇನೋ. ಆರ್ ಎಸ್ ಎಸ್ ಎಂಬ ಸಂಘ ಪರಿವಾರದ ಮಂದಿಯ ಕೊಡುಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಏನೂ ಇಲ್ಲ ಎಂದು ಭೈರಪ್ಪನವರಿಗೆ ಗೊತ್ತಿಲ್ಲವೇ? ಬ್ರಿಟೀಷರು ತಾವು ಪ್ಯಾಂಟು ಹಾಕಿಕೊಂಡು, ಭಾರತದಲ್ಲಿ ತಮ್ಮ ಪೋಲಿಸರಿಗೆ ಒಗೆದಂತಹ ದೊಗಲೆ ಖಾಕಿ ಚಡ್ಡಿಯನ್ನೇ ಇನ್ನೂ ಉಟ್ಟುಕೊಂಡಿರುವವರು ಈ ದೇಶದ ಸಂಸ್ಕೃತಿಯ ರಕ್ಷಕರು!
ಇನ್ನು ಅವರ ಸಂಸ್ಕೃತ ಪ್ರೇಮ ಅವರಿಗೆ ಇದ್ದರೆ ಯಾರದೇನು ಅಭ್ಯಂತರ. ಆದರೆ ಅದನ್ನು ಕನ್ನಡದ ಮೇಲೆ ಪ್ರಹಾರ ಮಾಡುವಷ್ಟು ಮೌಲ್ಯ ಹೇರಿಕೆಯ ಅವರ ಮನೋಧರ್ಮಕ್ಕೆ ಆಶ್ಚರ್ಯ ಮತ್ತು ಖೇದ. 

ಸಂಸ್ಕೃತವೆನ್ನುವ ದೇವಭಾಷೆಯೇ ಮನುಷ್ಯರ ನಡುವೆ ಕಂದಕಗಳನ್ನು ನಿರ್ಮಿಸಿದ್ದು, ಭಾರತದಲ್ಲಿ ಭಾಷೆಯಲ್ಲಿನ ಶ್ರೇಷ್ಟತೆಯ ಗೀಳಿನ ರೋಗವನ್ನು ಹತ್ತಿಸಿದ್ದು, ಸಾಮಾನ್ಯ ಮತ್ತು ತಳವರ್ಗದ ಜೀವಿಗಳಿಂದ ಅಕ್ಷರ ಭಾಗ್ಯವ ಕಸಿದುಕೊಂಡಿದ್ದು. ಭೈರಪ್ಪನವರು ಹೇಳುವಂತೆ ಇಡೀ ಭಾರತವನ್ನು ಒಂದುಗೂಡಿಸಿರುವುದು ಸಂಸ್ಕೃತ ಎಂದರೆ, ಬಹುಶಃ ವೈದಿಕರನ್ನು ಒಂದು ಗೂಡಿಸಿದ್ದಿರಬಹುದು. ಭಾರತವೆಂದರೆ ವೈದಿಕರ ಅಗ್ರಹಾರವೆಂದುಕೊಂಡಂತಿದೆ ಭೈರಪ್ಪನವರು. ಕನ್ನಡ ಬೆಳೆಯ ಬೇಕಾದರೆ ಕನಿಷ್ಟಪಕ್ಷ ಸಂಸ್ಕೃತದ ಪ್ರಾಥಮಿಕ ಜ್ಞಾನವಿರಬೇಕು. ಇಲ್ಲವಾದರೆ ಶುದ್ಧ ಕನ್ನಡ ಬರೆಯಲು ಬರುವುದಿಲ್ಲ ಎನ್ನುವ ಭೈರಪ್ಪನವರಿಗೆ ಕನ್ನಡ ಬಗ್ಗೆ ಪ್ರಾಥಮಿಕ ಜ್ಞಾನವೂ ಇದ್ದಂತಿಲ್ಲ. 

ಅನುಭವ ಮಂಟಪದಲ್ಲಿ ಕನ್ನಡದಲ್ಲಿ ಬರೆದ ಶರಣೆಲ್ಲರೂ ಸಂಸ್ಕೃತದ ಪ್ರಾಥಮಿಕ ಪಾಠ ಮಾಡಿಕೊಳ್ಳುವ ಶಾಲೆಯೊಂದನ್ನು ಮಾಡಿಕೊಂಡಿದ್ದರೆ, ಅಥವಾ ನಮ್ಮ ಕನ್ನಡ ಜನಪದ ಸಾಹಿತ್ಯದ ಕೊಡುಗೆಗಳನ್ನು ನೀಡಿದವರು ಬೀಸುವ ಕಲ್ಲುಗಳ ಮೇಲೆ, ದನ ಕಟ್ಟುವ ಕೊಟ್ಟಿಗೆಗಳಲ್ಲಿ ಯಾವ ಸಂಸ್ಕೃತ ಪಂಡಿತರಿಂದ ಸಂಸ್ಕೃತ ಪಾಠ ಮಾಡಿಸಿಕೊಂಡರೋ!ಕನ್ನಡಕ್ಕೆ ಸಂಸ್ಕೃತ ಅಗತ್ಯವೂ ಅಲ್ಲ. ಸಂಸ್ಕೃತವು ದೇಶಕ್ಕೆ ಬರುವ ಮುನ್ನವೇ ಕನ್ನಡವೇ ಮೊದಲಾದ ದೇಶೀಭಾಷೆಗಳು ಈ ನೆಲದಲ್ಲಿ ಮೂಡಿದ್ದವು. ಸಂಸ್ಕೃತ ನನ್ನ ದೃಷ್ಟಿಯಲ್ಲಿ ಇಂಗ್ಲೀಷ್‌ನಷ್ಟೇ ಪರಕೀಯ ಭಾಷೆ. ಕನ್ನಡ, ತಮಿಳು, ತೆಲುಗು, ಒರಿಯಾ, ಭೋಜ್‌ಪುರಿ ಹೀಗೆ ಅನೇಕ ದೇಶೀಭಾಷೆಗಳು ಈ ನೆಲ ಮೂಲದವು. 

ದೇವಭಾಷೆ ಎನಿಸಿಕೊಂಡಿರುವ ಸಂಸ್ಕೃತ ಕನಿಷ್ಟಪಕ್ಷ ಈ ನೆಲದ್ದಿರಲಿ, ಮನುಷ್ಯರದ್ದೂ ಅಲ್ಲ ಎಂಬಂತೆ ಮಾಡಿಟ್ಟಿರುವರು. ಕನ್ನಡಕ್ಕೆ ಮತ್ತು ಇತರ ಯಾವುದೇ ಭಾಷೆಗಳಿಗೆ ಸಂಸ್ಕೃತದ ಅನಿವಾರ್ಯತೆಯೇನಿಲ್ಲ. ಆದರೆ, ಸಂಸ್ಕೃತ ನುಸುಳಿರುವ ಬಗೆ ಮಾತ್ರ ಆಕ್ರಮಣಕಾರಿಯೇ. ವ್ಯಕ್ತಿಗತವಾಗಿ ನನಗೆ ಸಂಸ್ಕೃತ ಎಂಬುವ ಭಾಷೆಯ ಬಗ್ಗೆ ಮುನಿಸೇನೂ ಇಲ್ಲ. ಯಾವುದೇ ಭಾಷೆಯನ್ನು ಮನ್ನಿಸುವಂತೆ ಅದನ್ನೂ ಮನ್ನಿಸುತ್ತೇನೆ. ಆದರೆ ಅದರ ಶ್ರೇಷ್ಟತೆಯ ಬಗೆಗಿರುವ ಗೀಳಿನ ಬಗ್ಗೆ, ಅದು ಅನಿವಾರ್ಯ ಎನ್ನುವ ನಿಲುವಿನ ಬಗ್ಗೆ ನನ್ನ ವಿರೋಧವಿದೆ.

(ಕ್ಷಮೆಕೋರುತ್ತಾ: ನನ್ನ ಕನ್ನಡದ ಬರವಣಿಗೆಯಲ್ಲೂ ಸಂಸ್ಕೃತ ಭಾಷೆಯ ಗಾಢ ಪ್ರಭಾವವಿದೆ ಎಂಬುದನ್ನು ನಾನು ಬಲ್ಲೆ. ಆದರೆ ನಾನು ಶುದ್ಧ ಕನ್ನಡವನ್ನೇ ಬಳಸಬೇಕೆಂಬ ಹಟ ಹಿಡಿದಿರುವವನೇನಲ್ಲ. ಒಟ್ಟಾರೆ ಜನರಿಗೆ ಅರ್ಥವಾದರಾಯಿತು ಎಂಬ ಧೋರಣೆಯವನು. ಹಾಗಾಗಿ ಕನ್ನಡದ ಬರವಣಿಗೆಯಲ್ಲಿ ಪಾರ್ಸಿ, ಹಿಂದಿ, ಇಂಗ್ಲೀಷ್ ಬಳಕೆಗಳು ಇರುವಂತೆ ಸಂಸ್ಕೃತವೂ ಇರುತ್ತದೆ. ಆದರೆ ಅದು ಎಂದಿಗೂ ಮೂಲವೂ ಅಲ್ಲ. ಅನಿವಾರ್ಯವೂ ಅಲ್ಲ.)

ಶಾಸಕ ಸುರೇಶ್ ಕುಮಾರ್ ಗೆ ದಿನೇಶ್ ಅಮಿನ್ ಮಟ್ಟು. ಸವಾಲು
ದಿನೇಶ್ ಅಮಿನ್ ಮಟ್ಟು

ಪ್ರೀತಿಯ ಗೆಳೆಯರಾದ ಸುರೇಶ್ ಕುಮಾರ್,

‘ಸೆಕ್ಯುಲರ್ ವಾದ’ದ ಕುರಿತು ಕಳೆದ ಶನಿವಾರ ನಾನು ಮಾಡಿದ ಭಾಷಣದ ವರದಿ ಬಗ್ಗೆ ನಿಮ್ಮ ಅವಸರದ ಪ್ರತಿಕ್ರಿಯೆನ್ನು ಗಮನಿಸಿದೆ. ಅದರ ಬಗ್ಗೆ ನನ್ನ ಸ್ಪಷ್ಟೀಕರಣವನ್ನು ವರದಿಮಾಡಿದ ಪತ್ರಿಕೆಗೆ ಪ್ರತ್ಯೇಕವಾಗಿ ಕಳುಹಿಸುತ್ತೇನೆ, ಅದನ್ನು ನೀವು ಓದಿಕೊಳ್ಳಬಹುದು. ನಿಮ್ಮ ಪ್ರತಿಕ್ರಿಯೆಯಲ್ಲಿ ನಾನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರನ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದೀರಿ. ಅದಕ್ಕಷ್ಟೇ ಈ ಪ್ರತಿಕ್ರಿಯೆ. ರಾಜೀನಾಮೆಯ ಸವಾಲನ್ನು ಸ್ವೀಕರಿಸಲು ನಾನು ರೆಡಿ ಇದ್ದೇನೆ. ಅದಕ್ಕಿಂತ ಮೊದಲು ನನ್ನ ಮನದ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ.

ಹಿಂದೆ ಪತ್ರಕರ್ತನಾಗಿ ಈಗ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹಿಂದೂ ಮತ್ತು ಮುಸ್ಲಿಮ್ ಕೋಮುವಾದಗಳೆರಡನ್ನೂ ನಾನು ವಿರೋಧಿಸುತ್ತಾ ಬಂದವನು. ಆರ್ ಎಸ್ ಎಸ್,ವಿಶ್ವಹಿಂದು ಪರಿಷತ್, ಬಜರಂಗದಳ, ಹಿಂದೂ ಜಾಗರಣವೇದಿಕೆ ಮೊದಲಾದ ಸಂಘಟನೆಗಳ ಕೋಮುವಾದವನ್ನು ಮಾತ್ರವಲ್ಲ ಮುಸ್ಲಿಮ್ ಲೀಗ್, ಎಸ್ ಡಿಪಿ ಐ,ಪಾಪ್ಯುಲರ್ ಫ್ರಂಟ್ ಮೊದಲಾದ ಸಂಘಟನೆಗಳ ಕೋಮುವಾದವನ್ನು ಕೂಡಾ ನಾನು ವಿರೋಧಿಸುತ್ತಾ ಬಂದವನು. ಬುರ್ಕಾ ಧಾರಣೆಯನ್ನು ಪ್ರಶ್ನಿಸಿ ನಿಂದನೆಗೆ ಒಳಗಾದವನು. ಪತ್ರಿಕೆಗಳ ನಿಷ್ಠಾವಂತ ಓದುಗನಾಗಿ ನೀವು ಇದನ್ನು ಗಮನಿಸಿದ್ದೀರಿ ಎಂದು
ನಂಬಿದ್ದೇನೆ.

ಹಿಂದುತ್ವದ ಪ್ರಯೋಗಶಾಲೆಯೆಂಬ ಕುಖ್ಯಾತಿಗೊಳಗಾದ ಊರಿನ ಮೂಲನಿವಾಸಿ ನಾನು. ನನ್ನ ಕಣ್ಣೆದುರೇ ಎರಡೂ ಕೋಮುಗಳ ಹುಡುಗರು ಕೋಮುವಾದದ ಬೆಂಕಿಗೆ ಹಾರಿ ಬದುಕನ್ನು ಸುಟ್ಟುಕೊಳ್ಳುತ್ತಿರುವುದನ್ನು ಕಂಡಾಗ ವೇದನೆಯಾಗುತ್ತದೆ, ಸೂಕ್ಷ್ಮ ಮನಸ್ಸಿನ ನಿಮಗೂ ನೋವಾಗಿರಬಹುದೆಂದು ತಿಳಿದುಕೊಂಡಿದ್ದೇನೆ. ಇದು ನನ್ನಲ್ಲಿ ಆಗಾಗ ಆಕ್ರೋಶವನ್ನು ಹೊರಡಿಸುತ್ತದೆ.

ನಮ್ಮೆಲ್ಲರ ಪಾಲಿಗೆ ಸುಡುವ ಬೆಂಕಿಯಾಗಿ ಕಾಡುತ್ತಿರುವ ಕೋಮುವಾದವನ್ನು ಎದುರಿಸಲು ಭಾಷಣ-ಬರವಣಿಗೆಯ ಜತೆಗೆ ರಚನಾತ್ಮಕವಾಗಿ ಇನ್ನು ಏನನ್ನಾದರೂ ಮಾಡಬೇಕೆಂದು ನನಗನಿಸುತ್ತಿದೆ.

ಕೋಮುವಾದದ ಬಗ್ಗೆ ನೀವು ವ್ಯಕ್ತಪಡಿಸಿರುವ ಕಳಕಳಿ-ಕಳವಳ ಪ್ರಾಮಾಣಿಕವಾದುದೆಂದು ನಾನು ನಂಬಿರುವುದರಿಂದ ನನ್ನೊಳಗೊಂದು ಆಸೆ ಹುಟ್ಟಿಕೊಂಡಿದೆ. ಆದರೆ ನಾವು ಹೇಳಿರುವುದನ್ನು ನಾವು ಮಾತ್ರ ನಂಬಿದರೆ ಸಾಲದು ಇತರರೂ ನಂಬಬೇಕಾಗುತ್ತದೆ. ನಿಮ್ಮ ಮೇಲೆ ಆ ನಂಬಿಕೆ ಬರಬೇಕಾದರೆ ಎರಡೂ ಧರ್ಮಗಳ ಕೋಮುವಾದವನ್ನು ನೀವು ವಿರೋಧಿಸಬೇಕಾಗುತ್ತದೆ. ರಾಜಕೀಯ ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಿಮಗೆ ಇದು ಸಾಧ್ಯವೆಂದು ನನಗನಿಸುವುದಿಲ್ಲ.ಯಾಕೆಂದರೆ ನೀವೆಂದೂ ಹಿಂದೂ ಕೋಮುವಾದವನ್ನು ಬಹಿರಂಗವಾಗಿ ವಿರೋಧಿಸಿಲ್ಲ. ಆದ್ದರಿಂದ ಎಲ್ಲ ಧರ್ಮಗಳ ಕೋಮುವಾದವನ್ನು ನೀವು ಪ್ರಾಮಾಣಿಕವಾಗಿ ವಿರೋಧಿಸುವುದಾದರೆ ನಿಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ, ಪರಿವಾರದಿಂದ ಕಳಚಿಕೊಂಡು ಹೊರಬರಬೇಕಾಗುತ್ತದೆ. ದಯವಿಟ್ಟು ಆ ಕೆಲಸವನ್ನು ಮಾಡಿ ಪಕ್ಷದ ಬಂಧನದಿಂದ ಹೊರಬನ್ನಿ.

ಅಂತಹದ್ದೊಂದು ನಿರ್ಧಾರವನ್ನು ನೀವು ಕೈಗೊಳ್ಳುವುದಾದರೆ ನಾನು ಕೂಡಾ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನ ಹುದ್ದೆಗೆ ಈ ಕ್ಷಣದಲ್ಲಿಯೇ ರಾಜೀನಾಮೆ ನೀಡುತ್ತೇನೆ. ನನಗೆ ನಿಮ್ಮ ರೀತಿಯ ಯಾವುದೇ ಪಕ್ಷ-ಪರಿವಾರದ ಬಂಧನ ಇಲ್ಲ. ನಾನು ಈಗಿನ ಹುದ್ದೆಗೆ ರಾಜೀನಾಮೆ ನೀಡುವುದು ಮಾತ್ರವಲ್ಲ ಮುಂದೆಂದೂ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ನೀವು ನಂಬುವ ದೇವರಲ್ಲಿಗೆ ಬಂದು ಪ್ರಮಾಣ ಮಾಡುತ್ತೇನೆ. (ನನ್ನ ನಂಬಿಕೆಗಿಂತ ನಿಮ್ಮ ನಂಬಿಕೆ ಮುಖ್ಯ)
ಇಬ್ಬರೂ ಕೂಡಿ ಕೋಮುವಾದದ ವಿರುದ್ಧ ಕನಿಷ್ಠ ರಾಜ್ಯದಲ್ಲಿಯಾದರೂ ಆಂದೋಲನವನ್ನು ಕಟ್ಟೋಣ. ಅಜರ್ ಮಸೂದ್ ನಿಂದ ಹಿಡಿದು ನಜ್ಮಲ್, ಸೈಯ್ಯದ್, ಅಸೀಪ್, ಸುಹೇಲ್ ಮಾತ್ರವಲ್ಲ, ಸ್ವಾಧ್ವಿ ಪ್ರಜ್ಞಾ, ಅಸೀಮಾನಂದ, ಕರ್ನಲ್ ಪುರೋಹಿತ್, ಭುವಿತ್ ಶೆಟ್ಟಿ ವರೆಗೆ ಕೋಮುವಾದದಲ್ಲಿ ತೊಡಗಿಡಸಿಕೊಂಡಿರುವ ಎಲ್ಲರನ್ನೂ ವಿರೋಧಿಸೋಣ. ಕೋಮುವಾದಕ್ಕೆ ಚಿತಾವಣೆ ನೀಡುತ್ತಿರುವ ಆರ್ ಎಸ್ ಎಸ್, ವಿಶ್ವಹಿಂದು ಪರಿಷತ್, ಬಜರಂಗದಳ, ಮುಸ್ಲಿಮ್ ಲೀಗ್, ಎಸ್ ಡಿಪಿ ಐ, ಪಾಪ್ಯುಲರ್ ಫ್ರಂಟ್ ಮೊದಲಾದ ಎಲ್ಲ ಸಂಘಟನೆಗಳನ್ನೂ ವಿರೋಧಿಸೋಣ. ಜತೆಗೆ ಜಾತೀಯತೆ ಬಗ್ಗೆ ಹಿಂದುತ್ವವಾದಿಗಳ ಆತ್ಮವಂಚಕ ನಡವಳಿಕೆಯನ್ನೂ ಬಯಲಿಗೆಳೆಯೋಣ. ಈ ಮೂಲಕ ಇದೇ ಜಾತೀಯತೆಯಿಂದ ನರಳಿ ಪ್ರಾಣಾರ್ಪಣೆ ಮಾಡಿದ ಸೋದರ ರೋಹಿತ ವೇಮುಲನ ತ್ಯಾಗವನ್ನೂ ಗೌರವಿಸಿದಂತಾಗುತ್ತದೆ.

ದಯವಿಟ್ಟು ಇದನ್ನು ಸವಾಲೆಂದು ತಿಳಿದುಕೊಳ್ಳಬೇಡಿ, ಸಲಹೆ ಎಂದು ಸ್ವೀಕರಿಸಿ. ನನ್ನ ರಾಜೀನಾಮೆಗೆ ಒತ್ತಾಯಿಸಿ ನೀವು ಇಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದೀರಿ ಎಂದು ನಿಮ್ಮ ಮಾಧ್ಯಮ ಕಚೇರಿಯ ಆಹ್ಹಾನದ ಮೂಲಕ ತಿಳಿದುಬಂತು. ನನ್ನ ಸಲಹೆಯನ್ನು ನೀವು ಒಪ್ಪುವುದಾದರೆ ನಾನೇ ಅಲ್ಲಿಗೆ ಬರುತ್ತೇನೆ. ಇಬ್ಬರೂ ಒಟ್ಟಿಗೆ ನಮ್ಮ ನಿರ್ಧಾರಗಳನ್ನು ಮಾಧ್ಯಮದ ಮುಂದೆ ಘೋಷಿಸಿಬಿಡುವ.

ನಿಮ್ಮ ಉತ್ತರದ ನಿರೀಕ್ಷೆಯಲ್ಲಿ
ದಿನೇಶ್ ಅಮಿನ್ ಮಟ್ಟು.

Sunday, January 24, 2016

ಮುಳ್ಳುಹಾದಿಯಲಿ ಹೆಜ್ಜೆಯಿಟ್ಟ ದಿಟ್ಟೆಡಾ. ಎಚ್. ಎಸ್. ಅನುಪಮಾ


 
‘ಒಂದಾನೊಂದು ಕಾಲದಲ್ಲಿ’ ನ್ಯಾಯದ ಗಂಟೆ ಬಾರಿಸಿದ ಕೂಡಲೇ ತನ್ನ ರಾಜ್ಯದಲ್ಲಿ ಏನೋ ಅನ್ಯಾಯವಾಗಿದೆ ಎಂದು ಸ್ವತಃ ರಾಜನೇ ಬಂದು ವಿಚಾರಿಸಿ ನ್ಯಾಯ ಪರಿಹರಿಸುತ್ತಿದ್ದನಂತೆ. ಆದರೆ ಅದು ಕತೆಗಳಲ್ಲಷ್ಟೆ. ಕೋಟ್ಯಂತರ ಮಹಿಳೆಯರು ಈ ಎಲ್ಲ ಶತಮಾನಗಳಲ್ಲಿ ಅನ್ಯಾಯವಾಗಿದೆ ಎಂದು ಗಂಟೆ ಬಾರಿಸುವುದಿರಲಿ, ಹೇಳುವ ಅವಕಾಶವೂ ಇಲ್ಲದೆ ಮೂಕವಾಗಿ ಬಾಳಿ ಹೋಗಿದ್ದಾರೆ. ಆದರೂ ಅನಾದಿಯಿಂದ ಮಹಿಳೆ ಪರ್ಯಾಯ ನ್ಯಾಯ ವ್ಯವಸ್ಥೆಯನ್ನು ಸೃಷ್ಟಿಸಿಕೊಂಡಿರುವುದೂ ನಿಜವೇ. ಜಾನಪದದಲ್ಲಿ, ಪುರಾಣಗಳಲ್ಲಿ ಅಲ್ಲಲ್ಲಿ ಇದಕ್ಕೆ ದೃಷ್ಟಾಂತಗಳು ಸಿಗುತ್ತವೆ. ವ್ಯವಸ್ಥೆಯೊಂದರ ದಮನಿತರೆಲ್ಲ ನ್ಯಾಯಕ್ಕಾಗಿ ಪರ್ಯಾಯ ವ್ಯವಸ್ಥೆಯೊಂದನ್ನು ತಮಗರಿವಿಲ್ಲದಂತೆ ಸೃಷ್ಟಿಸಿಕೊಂಡಿರುತ್ತಾರೆ. ಅವರು ಹಿಡಿದ ದಾರಿಗಳು ಭಿನ್ನ; ಅವರು ನಂಬಿದ ತತ್ವಗಳು ಭಿನ್ನ; ಅವರ ಚಿಂತನೆಯ ಮೂಲ, ಸ್ವರೂಪವೂ ಭಿನ್ನ. ಈ ಎಲ್ಲ ಭಿನ್ನತೆಗಳ ಜೊತೆಗೇ ಅವರ ಗಟ್ಟಿತನ ಹಾಗೂ ಹೋರಾಟದ ಕೆಚ್ಚೂ ಉಳಿದವರಿಗಿಂತ ಭಿನ್ನ. ಅಲ್ಲಿಲ್ಲಿ ಮಿಂಚುಹುಳದ ಬೆಳಕಿನಂತೆ ಇಂಥ ಕೆಲವರ ಪ್ರಯತ್ನಗಳಿದ್ದರೂ ಕಾಲ ಪ್ರವಾಹದಲ್ಲಿ ಗುರುತುಳಿಯದಂತೆ ಅವು ಕೊಚ್ಚಿಹೋಗಿರುವುದೂ ನಿಜವಾಗಿದೆ. ಎಂದೇ ಪರ್ಯಾಯ ಮಾರ್ಗ ಕ್ರಮಿಸಿದವರನ್ನು, ಕ್ರಮಿಸುತ್ತಿರುವವರನ್ನು ಅದರೆಲ್ಲ ಏಳುಬೀಳುಗಳೊಡನೆ ಅರ್ಥೈಸಿಕೊಳ್ಳುವುದು ಅವಶ್ಯವಾಗಿದೆ. 

ವ್ಯವಸ್ಥೆಯ ಭಾಗವಾಗಿಲ್ಲದೇ; ವ್ಯವಸ್ಥೆಯನ್ನು ನೆಚ್ಚಿಕೊಳ್ಳದೇ; ಪಾರಂಪರಿಕ ಲಿಂಗ ತಾರತಮ್ಯ, ಜಾತಿ ತಾರತಮ್ಯ, ವರ್ಗ ತಾರತಮ್ಯಗಳ ವಿರುದ್ಧ ಹೋರಾಡಿದ, ಸಂಘಟಿಸಿದ ಮಹಿಳೆಯರಲ್ಲಿ ಅನುರಾಧಾ ಒಬ್ಬರು. ನ್ಯಾಯದ, ಸಮಸಮಾಜದ ಕನಸು ಹೊತ್ತರೂ ಮಾವೋವಾದದ ಸಶಸ್ತ್ರ ಹೋರಾಟವನ್ನು ಬೆಂಬಲಿಸಿದ ಕಾರಣಕ್ಕೆ ಮಹಿಳಾ ಚಳುವಳಿಯ ಡಿಸ್ಕೋರ್ಸ್‌ಗಳಲ್ಲಾಗಲೀ, ಬರಹಗಾರ್ತಿ ಎಂದಾಗಲೀ, ರಾಜಕಾರಣಿಯೆಂದಾಗಲೀ ಉಳಿದ ಸಮಾಜದ ಗುರುತಿಸುವಿಕೆಯಿಂದ ದೂರವುಳಿದವರು ಅವರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಪಕ್ಷದ ಸೆಂಟ್ರಲ್ ಕಮಿಟಿಯ ಏಕೈಕ ಮಹಿಳಾ ಸದಸ್ಯೆಯಾಗಿದ್ದ; ಕಾ. ನರ್ಮದಾ/ಅವಂತಿ/ರಮಾ/ಜಾನಕಿ/ವರ್ಷಾ ಹೀಗೆ ಹಲವು ಹೆಸರುಗಳನ್ನು ಪಡೆದು ಗೃಹ ಸಚಿವಾಲಯದ ‘ಮೋಸ್ಟ್ ವಾಂಟೆಡ್’ ಲಿಸ್ಟಿನಲ್ಲಿದ್ದ ಅನುರಾಧಾ ಶ್ಯಾನ್‌ಭಾಗ್ ಅಥವಾ ಅನುರಾಧಾ ಗಾಂಧಿ ಮಾವೋವಾದಿ ಪಕ್ಷದ ಒಳಗೆ ಹಾಗೂ ಆದಿವಾಸಿ ಸಮಾಜದೊಳಗೆ ಲಿಂಗ ಪ್ರಶ್ನೆಯನ್ನೆತ್ತಿದವರು. ಮಹಾರಾಷ್ಟ್ರದ ನಿಷೇಧಿತ ಸಿಪಿಐ(ಎಂಎಲ್) ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ಪಕ್ಷದ ಪ್ರಣಾಳಿಕೆಯಲ್ಲಿ, ನೀತಿನಿಯಮ/ಕಾರ್ಯಯೋಜನೆಗಳನ್ನು ರೂಪಿಸುವ ಸಮಯದಲ್ಲಿ ಜಾತಿ ಪ್ರಶ್ನೆಯನ್ನು, ಸ್ತ್ರೀವಾದವನ್ನು ಸೇರಿಸಿದವರು. ದಂಡಕಾರಣ್ಯದ ಆದಿವಾಸಿ ಕೃಷಿಕ ಸಮುದಾಯಗಳಲ್ಲಿ ‘ಸಹಕಾರಿ ಸಂಸ್ಥೆ’ಗಳನ್ನು ರೂಪಿಸುವ ಅವಶ್ಯಕತೆಯನ್ನು ಸಹಸಂಗಾತಿಗಳಿಗೆ ಮನವರಿಕೆ ಮಾಡಿಕೊಟ್ಟವರು. ಬುದ್ಧಿಜೀವಿಗಳಿಂದ; ಆಳುವವರಿಂದ; ಆರಕ್ಷಕರಿಂದ; ಮಾಧ್ಯಮಗಳಿಂದ ‘ದುಷ್ಟ’ರಂತೆ ಬಿಂಬಿಸಲ್ಪಟ್ಟ ನಕ್ಸಲ್ ಹೋರಾಟದ ಮುಂಚೂಣಿಯಲ್ಲಿದ್ದು ತೀವ್ರ ಅನಾರೋಗ್ಯದ ನಡುವೆ ವರ್ಷಗಟ್ಟಲೆ ಭೂಗತರಾಗಿದ್ದವರು. ಕೊನೆಗೆ ದಂಡಕಾರಣ್ಯದ ದುರ್ಗಮ ಕಾಡುಗಳಲ್ಲಿ ಮಲೇರಿಯಾಗೆ ತುತ್ತಾಗುವವರೆಗೆ ತಮ್ಮ ಅಸ್ತಿತ್ವವನ್ನೇ ಮರೆತು ಬದುಕಿದವರು ಅನುರಾಧಾ. 
‘ದೇಶದ ಅತಿ ದೊಡ್ಡ ಸಮಸ್ಯೆ ಎಂದರೆ ನಕ್ಸಲ್ ಹಾವಳಿ’ ಎಂದು ಹೇಳುವ ರಾಜಕಾರಣಿಗಳು ಬಹುರಾಷ್ಟ್ರೀಯ ಕಂಪನಿಗಳಿಗೆ ದೇಶವನ್ನು ಒತ್ತೆಯಿಡುವಾಗ ನಕ್ಸಲ್ ಹಣೆಪಟ್ಟಿ ಹೊತ್ತ ಹೋರಾಟಗಾರರು ಸಂಘಟನೆಯಲ್ಲಿ ತೊಡಗಿದರು. ಜನರನ್ನು ದೋಚುವವರು ದೊಡ್ಡ ನಾಯಕರೆಂದು ಸಕಲ ಗೌರವಗಳಿಗೆ ಪಾತ್ರರಾದರೆ; ತನ್ನದೆನ್ನುವ ಎಲ್ಲವನ್ನು ತೊರೆದು, ಲೂಟಿಕೋರರ ಬುಡ ಅಲುಗಿಸುವ ಹೋರಾಟಗಾರರು ಅನುಮಾನ/ಎನ್‌ಕೌಂಟರ್‌ಗಳಿಗೆ ಬಲಿಯಾದರು. ಈಗ ಕೋಮುವಾದಿ ರಾಜಕಾರಣ ವಿಜೃಂಭಿಸುತ್ತ ಜನಪರ ಬದ್ಧತೆಯ ಸಿದ್ಧಾಂತಗಳು ಯುವಪೀಳಿಗೆಯನ್ನು ಆಕರ್ಷಿಸದೇ ಹೋಗಿವೆ. ಚುನಾವಣೆ ಫಲಿತಾಂಶಗಳು ನೈಜ ಜನಾದೇಶವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಲಹುತ್ತಿವೆಯೇ ಎಂಬ ಬಗ್ಗೆಯೇ ಅನುಮಾನಗಳಿವೆ.

ಇಂಥ ವಿಪರ್ಯಾಸಗಳ ಹೊತ್ತಿನಲ್ಲಿ ಅನುರಾಧಾ ಹಾಗೂ ಅವರ ಸಂಗಾತಿಗಳ ಬದುಕು-ಹೋರಾಟ-ಪ್ರತಿಪಾದನೆಯತ್ತ ಒಂದು ನೋಟ ಇಲ್ಲಿದೆ:

ಅನುರಾಧಾ ಶಾನಭಾಗ್ ಗಾಂಧಿ (೧೯೫೪-೨೦೦೮)

ಕೊಡಗಿನ ಗಣೇಶ್ ಶಾನ್‌ಭಾಗ್ ಎಳವೆಯಲ್ಲಿ ಮನೆಬಿಟ್ಟು ಸುಭಾಸ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಸೇರಿದರು. ನಂತರ ಲಾ ಓದಿ ಮುಂಬೈ ಹೈಕೋರ್ಟಿನ ವಕೀಲರಾದರು. ಕಮ್ಯುನಿಸ್ಟ್ ಪಕ್ಷ ಸೀಳುಗಳಾಗಿ ಒಡೆಯುವ ಮುನ್ನ ಅದರಲ್ಲಿದ್ದ ಗಣೇಶ್ ಸಿಪಿಐ ಪಕ್ಷದ ಕಚೇರಿಯಲ್ಲೇ ಕುಮುದ್ ಅವರನ್ನು ಮದುವೆಯಾದರು. ಆ ದಂಪತಿಗಳಿಗೆ ಅನುರಾಧಾ ೧೯೫೪ರಲ್ಲಿ ಹುಟ್ಟಿದರು.

೧೯೭೦ರ ದಶಕ ಕಮ್ಯುನಿಸಮ್ಮಿನ ಪ್ರಭಾವಳಿ ಎಲ್ಲೆಲ್ಲೂ ತೀವ್ರವಾಗಿದ್ದ ಕಾಲ. ಚೀನಾದಲ್ಲಿ ಮಾವೋ ತಂದ ಸಾಂಸ್ಕೃತಿಕ ಕ್ರಾಂತಿ; ಅಮೆರಿಕದಲ್ಲಿ ವಿಯೆಟ್ನಾಂ ಯುದ್ಧಕ್ಕೆ ಬಂದ ಪ್ರತಿಕ್ರಿಯೆ; ಭಾರತದ ನಕ್ಸಲ್‌ಬರಿ ಹೋರಾಟ ಇವೆಲ್ಲವೂ ಕೇವಲ ಭಾರತದಲ್ಲಷ್ಟೇ ಅಲ್ಲ, ದಕ್ಷಿಣ ಏಷಿಯಾದಲ್ಲೇ ಕಮ್ಯುನಿಸ್ಟ್ ಅಲೆಯನ್ನು ಹುಟ್ಟುಹಾಕಿದ್ದವು. ಆಗ ಎಲ್ಫಿನ್‌ಸ್ಟನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಅನುರಾಧಾ ‘ಪ್ರೊಗ್ರೆಸಿವ್ ಯುತ್ ಮೂವ್‌ಮೆಂಟ್’ ಎಂಬ ತೀವ್ರಗಾಮಿ ವಿದ್ಯಾರ್ಥಿ ಚಳುವಳಿಯನ್ನು ಸೇರಿದರು. ತೀವ್ರ ಬರ ಎದುರಿಸುತ್ತಿದ್ದ ಮಹಾರಾಷ್ಟ್ರ ಮತ್ತು ಸುತ್ತಮುತ್ತಣ ಪ್ರದೇಶಕ್ಕೆ; ಬಾಂಗ್ಲಾ ನಿರಾಶ್ರಿತ ಶಿಬಿರಗಳಿಗೆ ಭೇಟಿ ಕೊಟ್ಟರು. ಬರ ಪರಿಸ್ಥಿತಿಯ ಕುರಿತು ಮುಂಬಯಿಯ ಚಿಂತಕರ, ಬರಹಗಾರರ ಚರ್ಚೆ ಏರ್ಪಡಿಸುತ್ತಿದ್ದರು. ಆಗ ಬಲಗೊಳ್ಳತೊಡಗಿದ್ದ ದಲಿತ್ ಪ್ಯಾಂಥರ್ಸ್ ಜೊತೆಯೂ ಸಂಬಂಧ ಹೊಂದಿದ್ದರು. ಮರಾಠಿ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಮಾಜ ಮತ್ತು ರಂಗಭೂಮಿಯ ನಡುವಿನ ಸಂಬಂಧಗಳ ಕುರಿತು ಪ್ರಶ್ನೆ ಎತ್ತಿದರು. 

ಸಮಾಜಶಾಸ್ತ್ರ ಎಂಫಿಲ್ ಮಾಡಿದ ಅನುರಾಧಾಗೆ ವಿಲ್ಸನ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ದೊರೆಯಿತು. ಅದೇವೇಳೆ ತುರ್ತು ಪರಿಸ್ಥಿತಿ ಜಾರಿಯಾಗಿ ಅನುರಾಧಾ ಮತ್ತು ಸಂಗಾತಿಗಳು ಚಿಂತಕ-ಬರಹಗಾರ-ಕಲಾವಿದರನ್ನು ಒಟ್ಟುಗೂಡಿಸಿ ‘ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಡೆಮೋಕ್ರೆಟಿಕ್ ರೈಟ್ಸ್’ ಎಂಬ ಮಾನವ ಹಕ್ಕು ಸಂಘಟನೆ ಆರಂಭಿಸಿದರು. ನಾಟಕಕಾರ ವಿಜಯ್ ತೆಂಡೂಲ್ಕರ್ ಅದರ ಅಧ್ಯಕ್ಷರಾದರೆ, ಅಸ್ಘರ್ ಅಲಿ ಎಂಜಿನಿಯರ್ ಉಪಾಧ್ಯಕ್ಷರಾಗಿದ್ದರು. ಪ್ರಭುತ್ವವು ಕಾನೂನಿನ ಪರಿಧಿಯಾಚೆಗೆ ಜನಜೀವನದಲ್ಲಿ ಹಸ್ತಕ್ಷೇಪ ಮಾಡುವುದನ್ನು ಈ ಸಂಘಟನೆ ವಿರೋಧಿಸಿತು. 

ಅದೇ ವೇಳೆ ಸಮಾನ ಮನಸ್ಕ ಸಂಗಾತಿಯಾಗಿ ಕೊಬಾಡ್ ಗಾಂಧಿ ಪರಿಚಯವಾಗಿ ಅನುರಾಧಾ ಮದುವೆಯಾದರು. ಮುಂಬಯಿ ವೊರ್ಲಿಯ ಶ್ರೀಮಂತ ಪಾರ್ಸಿ ಕುಟುಂಬದ ಕೊಬಾಡ್ ಡೂನ್ ಸ್ಕೂಲಿನಲ್ಲಿ ಓದಿದವರು. ಸಂಜಯ್ ಗಾಂಧಿಯ ಸಹಪಾಠಿ. ನಂತರ ಉನ್ನತ ವಿದ್ಯಾಭ್ಯಾಸಕ್ಕೆಂದು ಲಂಡನ್ನಿಗೆ ಚಾರ್ಟರ್ಡ್ ಅಕೌಂಟೆನ್ಸಿ ಮಾಡಲು ತೆರಳಿದಾಗ ಅಲ್ಲಿ ತೀವ್ರಗಾಮಿ ಗುಂಪುಗಳ ಸಂಪರ್ಕಕ್ಕೆ ಬಂದು ಭಾರತಕ್ಕೆ ವಾಪಸಾಗಿದ್ದರು. 

ಸಂಸದೀಯ ರಾಜಕಾರಣದಿಂದ, ರಾಜಕೀಯ ನಾಯಕರಿಂದ, ಜನ ಪ್ರತಿನಿಧಿಗಳಿಂದ ಹಾಗೂ ಅಧಿಕಾರಿಗಳಿಂದ ಜನಪರವಾದ ಏನನ್ನೂ ಸಾಧಿಸುವುದು ಅಸಾಧ್ಯ; ಶೋಷಿತ ಎಚ್ಚೆತ್ತು ಕ್ರಾಂತಿಯಾಗಿ ಅವನ ಕೈಗೆ ಅಧಿಕಾರ ಮತ್ತು ಸಂಪನ್ಮೂಲ ದೊರೆತಾಗಲಷ್ಟೇ ನಿಜವಾದ ಸ್ವಾತಂತ್ರ್ಯ ದೊರೆತ ಹಾಗೆ ಎಂದು ಹೋರಾಟಗಾರರ ಒಂದು ಗುಂಪು ಭಾವಿಸಿತು. ಅದಕ್ಕಾಗಿ ಜನಹೋರಾಟವನ್ನು ಸಶಸ್ತ್ರ ಮಾರ್ಗದಲ್ಲಿ ಕೊಂಡೊಯ್ಯಬಯಸಿತು. ಹೀಗೆ ಅಸ್ತಿತ್ವಕ್ಕೆ ಬಂದದ್ದು ಸಿಪಿಐ (ಎಂಎಲ್) ಪೀಪಲ್ಸ್ ವಾರ್ ಗುಂಪು. ಪೀಪಲ್ಸ್ ವಾರ್ ಗ್ರೂಪ್ (ಪಿಡಬ್ಲ್ಯುಜಿ) ಕಟ್ಟುವುದರಲ್ಲಿ ಕೊಬಾಡ್ ಪ್ರಮುಖ ಪಾತ್ರ ವಹಿಸಿದರು. ತನ್ನ ಕಾರ್ಯಕ್ಷೇತ್ರವಾಗಿ ಆಂಧ್ರಪ್ರದೇಶ, ಒರಿಸ್ಸಾ, ಛತ್ತೀಸ್‌ಘರ್ ಹಾಗೂ ಮಹಾರಾಷ್ಟ್ರ ರಾಜ್ಯಗಳನ್ನು ವ್ಯಾಪಿಸಿದ ದಂಡಕಾರಣ್ಯವನ್ನು ಪಿಡಬ್ಲ್ಯುಜಿ ಆಯ್ದುಕೊಂಡಾಗ ಕೊಬಾಡ್ ಅದರ ಜವಾಬ್ದಾರಿ ವಹಿಸಿಕೊಂಡರು. ಅನುರಾಧಾ ನೆಲೆಯೂ ಮುಂಬಯಿಯಿಂದ ಸ್ಥಳಾಂತರಗೊಂಡಿತು. ವಕೀಲರ ಮಗಳಾದ, ಸಮಾಜ ಶಾಸ್ತ್ರ ಎಂಫಿಲ್ ಪದವೀಧರೆಯಾಗಿ ಅಕ್ಯಾಡೆಮಿಕ್ ವಲಯದಲ್ಲಿ ಬುದ್ಧಿಜೀವಿಯಾಗಿ ಬೆಳೆಯತೊಡಗಿದ್ದ, ರಂಗ-ಸಂಗೀತಾಸಕ್ತಳಾದ ಅನುರಾಧಾ ದಂಡಕಾರಣ್ಯದ ಆದಿವಾಸಿಗಳನ್ನು ಸಂಘಟಿಸುವ ಕೆಲಸಕ್ಕೆ ಮುಂಬಯಿಯಿಂದ ಹೊರಟರು. 

ಇದುವರೆಗಿನ ಅವರ ಹೋರಾಟ-ಜಾಗೃತಿಯ ಸ್ವರೂಪ ಒಂದು ರೀತಿಂiiದಾಗಿದ್ದರೆ ನಂತರದ ಬದುಕು ಇನ್ನೊಂದು ಘಟ್ಟ ಪ್ರವೇಶಿಸಿತು. 

೧೯೮೨ರಲ್ಲಿ ನಾಗಪುರದ ಇಂದೋರ್ ಬಸ್ತಿಯಲ್ಲಿ ಬಾಡಿಗೆ ಮನೆ ಹಿಡಿದರು. ಹೋಗಿ ಬರುವವರಿಂದ ತುಂಬಿದ ಅವರ ಮನೆ ಛತ್ರದಂತಿತ್ತು ಎಂದು ಗೆಳೆಯರ ಬಳಗ ಈಗಲೂ ನೆನೆಯುತ್ತದೆ. ಅಲ್ಲಿ ಅನುರಾಧಾ ಅರೆಕಾಲಿಕ ಉಪನ್ಯಾಸಕ ವೃತ್ತಿಗೆ ಸೇರಿದರು. ಓಡಾಡಲು ಒಂದು ಬೈಸಿಕಲ್ ಕೊಂಡರು. ಆಗಷ್ಟೇ ಕೈಗಾರಿಕಾ ತಾಣವಾಗುತ್ತಿದ್ದ ನಾಗಪುರದ ಕಾರ್ಮಿಕರ ಪರಿಸ್ಥಿತಿ ದುಸ್ತರವಾಗಿತ್ತು. ಬಹುತೇಕ ಕಾರ್ಮಿಕರು ಅಸಂಘಟಿತರು ಹಾಗೂ ದಲಿತ ಸಮುದಾಯದವರು. ಚಂದ್ರಾಪುರ, ಅಮರಾವತಿ, ಜಬಲ್‌ಪುರ, ಯಾವತ್ಮಲ್‌ಗಳಲ್ಲಿ ಕೂಲಿಕಾರ್ಮಿಕರನ್ನು, ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಸಂಘಟಿಸಿದರು. ಅವರು ವಾಸಿಸುತ್ತಿದ್ದ ಇಂದೋರಾ ಬಸ್ತಿ ಭಾರತದಲ್ಲೇ ಅತಿ ದೊಡ್ಡ ದಲಿತ ಆವಾಸವಾಗಿತ್ತು. ಅಲ್ಲಿ ಗೂಂಡಾ ಹಾವಳಿ ಹೆಚ್ಚು ಎಂದು ಜನ ಹಗಲು ಹೊತ್ತಿನಲ್ಲೂ ಒಬ್ಬೊಬ್ಬರೇ ಓಡಾಡಲು ಹೆದರುತ್ತಿದ್ದರು. ಅಂಥಲ್ಲಿ ಅನುರಾಧಾ ಏಕಾಂಗಿಯಾಗಿ ನಡುರಾತ್ರಿ ತಮ್ಮ ಬೈಸಿಕಲ್ ಮೇಲೆ ಮನೆಗೆ ಬರುತ್ತಿದ್ದರು. ಬಸ್ತಿಯ ಜನರ ಜೊತೆ ಸಂಪರ್ಕ ಬೆಳೆಸಿದರು. ಇವರ ಪ್ರೋತ್ಸಾಹದಿಂದ ಬಸ್ತಿಯ ಎಷ್ಟೋ ಹುಡುಗರು ಓದು ಮುಂದುವರೆಸಿದರು. ಹಾಡುಗಾರರ ತಂಡ ಕಟ್ಟಿದರು. ಬಿವಜಿ ಬಡ್ಕೆ ಎಂಬಾತ ಗಂಟಲ ಕ್ಯಾನ್ಸರ್‌ಗೆ ತುತ್ತಾದಾಗ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡಿದರು. ಮನೆಗೆಲಸಕ್ಕೆ ಹೋಗುತ್ತಿದ್ದ ಬಸ್ತಿಯ ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದರೂ ಅದು ಆಕಸ್ಮಿಕ ವಿದ್ಯುತ್ ಶಾಕ್ ಎಂದು ಕೇಸು ಮುಚ್ಚಿಹೋಗುವುದರಲ್ಲಿತ್ತು. ಅದಕ್ಕೆ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿ ಅನುರಾಧಾ ಪ್ರತಿಭಟನೆ, ಪ್ರದರ್ಶನ ನಡೆಸಿದರು. ಈ ವೇಳೆಗೆ ಅವರು ಹಲವು ಬಾರಿ ಜೈಲು ವಾಸ ಅನುಭವಿಸಿದ್ದರು. 

೧೯೯೦ರ ಹೊತ್ತಿಗೆ ಅನುರಾಧಾ ಆರೋಗ್ಯ ಹದಗೆಡುತ್ತಿದ್ದರೂ ಸಂಘಟನೆಗೆ ಅನುಭವಿ ಸಂಘಟಕರ ಜರೂರಿ ಇದೆಯೆಂದು ದಂಡಕಾರಣ್ಯಕ್ಕೆ ಹೋದರು. ಆ ವೇಳೆಗೆ ಆರ್ಥಿಕ ಉದಾರೀಕರಣ ನೀತಿ ಬಂದು ಬಹುರಾಷ್ಟ್ರೀಯ ಕಂಪನಿಗಳಿಗೆ ಸರ್ಕಾರವೇ ಮಣೆ ಹಾಕಿತು. ಆದಿವಾಸಿಗಳನ್ನು ಅವರ ಪಾರಂಪರಿಕ ಅರಣ್ಯ ವಾಸಸ್ಥಳಗಳಿಂದ ಎತ್ತಂಗಡಿ ಮಾಡುತ್ತ ಪುನರ್ವಸತಿಯ ಅನಿವಾರ್ಯ ಕಷ್ಟಗಳಿಗೆ ಈಡುಮಾಡಿತು. ಹೀಗೆ ಸಿರಿವಂತರ ಬಂಡವಾಳ ಬೆಳೆಸಲು ತಮ್ಮ ನೆಲೆ, ನೆಲ, ಹಕ್ಕುಗಳನ್ನು ಕಳೆದುಕೊಂಡ ಆದಿವಾಸಿಗಳನ್ನು ಸಂಘಟಿಸುವತ್ತ ಮಾವೋವಾದಿ ಪಕ್ಷ ಗಮನ ಹರಿಸಿತು. ಸಹಜವಾಗಿಯೇ ಉದ್ಯಮಿಗಳ, ಅಧಿಕಾರಿಗಳ, ರಾಜಕಾರಣಿಗಳ ಕೆಂಗಣ್ಣಿಗೆ ಅವರು ಗುರಿಯಾಗಬೇಕಾಯಿತು.

ಬುಡಕಟ್ಟು ಜನರನ್ನು ಸಂಪರ್ಕಿಸಿ, ಅವರ ವಿಶ್ವಾಸ ಗಳಿಸಿ, ಸಂಘಟನೆ ಕಟ್ಟುವುದು ಸುಲಭದ ಕೆಲಸವಾಗಿರಲಿಲ್ಲ. ಅನುರಾಧಾ ಅವರ ಭಾಷೆ ಕಲಿತರು, ಜನಜೀವನ ಅಭ್ಯಸಿಸಿದರು. ಅವರೊಳಗೊಬ್ಬರಾಗಿ ಬೆರೆತರು. ‘ಉಳುವವನೇ ಒಡೆಯ, ಆದಿವಾಸಿಯದೇ ಅಡವಿ’, ಶೋಷಿತರ ಕೈಗೆ ಪ್ರಭುತ್ವ-ಅಧಿಕಾರ’, ‘ಮಹಿಳಾ ವಿಮೋಚನೆ’ ಇಂಥವು ಸ್ಲೋಗನ್ನುಗಳಾಗಿದ್ದವು. 

ಅಡವಿಯ ಬದುಕೂ ಸುಲಭವಾಗಿರಲಿಲ್ಲ. ಬಂಧನದ ಸಾಧ್ಯತೆ ಸದಾ ಇರುವುದರಿಂದ ಗುಟ್ಟಾಗಿ ಬದುಕಬೇಕು. ತಮ್ಮ ಭಾರ ತಾವೇ ಹೊತ್ತು ಸಾಗಬೇಕು. ಸದಾ ಚಲಿಸುತ್ತಿರಬೇಕು. ‘ಡಿಕ್ಲಾಸಿಂಗ್ ಒನ್‌ಸೆಲ್ಫ್’ ಎಂಬ ಮಾರ್ಕ್ಸಿಸ್ಟ್ ತತ್ವದಂತೆ ವರ್ಗ ಅಸ್ಮಿತೆ ಕಳೆದುಕೊಳ್ಳುವುದು ಹೋರಾಟದ ಬದುಕಿನಲ್ಲಿ ತುಂಬ ಮುಖ್ಯ. ಅನುರಾಧಾ ಅದನ್ನು ಅಕ್ಷರಶಃ ಪಾಲಿಸಿದರು. ತಲೆಯ ಮೇಲೆ ಅಪಾಯದ ಕತ್ತಿ ಸದಾ ತೂಗುತ್ತಿರುವಾಗ ಕಾಡುಮೇಡುಗಳನ್ನು ಸಂಗಾತಿಗಳೊಂದಿಗೆ ಸುತ್ತಿದರು. ೧೯೯೮-೯೯ರ ವೇಳೆಗೆ ತೀವ್ರ ಬರ ಆ ಪ್ರದೇಶವನ್ನು ಬಾಧಿಸಿತು. ಕುಡಿಯುವ ನೀರಿಗೆ, ಧಾನ್ಯಕ್ಕೆ ಹಾಹಾಕಾರ. ಸರ್ಕಾರ ನೀಡಿದ ಪಡಿತರ ಅಕ್ಕಿಯಲ್ಲಿ ಕಲ್ಲುಗಳೇ ತುಂಬಿರುತ್ತಿದ್ದವು. ಒಂದು ಅರಣ್ಯ ಪ್ರದೇಶದ ಹತ್ತು ಹಳ್ಳಿಗಳಿಗೆ ನೀರುಣಿಸುತ್ತಿದ್ದ ಕೆರೆಗೆ ಕಾಯಕಲ್ಪ ಅವಶ್ಯವಾಗಿತ್ತು. ಅದಕ್ಕಾಗಿ ಅಧಿಕಾರಿಗಳೊಡನೆ ಚರ್ಚೆ, ಪ್ರತಿಭಟನೆ, ಹಕ್ಕೊತ್ತಾಯ ಜಾಥಾ ನಡೆಸಿದರೂ ಉಪಯೋಗವಾಗದೇ ಹೋಯಿತು. ಆಗ ಸಂಘಟನೆಯ ಕಾರ್ಯಕರ್ತರು ಗ್ರಾಮಸ್ಥರೊಂದಿಗೆ ಕೆರೆ ಕಾಮಗಾರಿ ಪೂರ್ಣಗೊಳಿಸಿದರು. ಕೇಂದ್ರ ಸರ್ಕಾರದ ‘ಉಗ್ರ’ರ ಪಟ್ಟಿಯಲ್ಲಿದ್ದವರು ಸುಮಾರು ೧೦೦ ಕೆರೆಗಳನ್ನು ಅನುರಾಧಾ ಮೇಲುಸ್ತುವಾರಿಯಲ್ಲಿ ಆದಿವಾಸಿಗಳ ಸಹಾಯದಿಂದ ನಿರ್ಮಿಸಿದರು. 

ಇದರ ಜೊತೆಗೆ ಅನುರಾಧಾ ‘ಕ್ರಾಂತಿಯಿಲ್ಲದೆ ಮಹಿಳೆ ಉಳಿಯುವುದಿಲ್ಲ, ಮಹಿಳೆಯಿಲ್ಲದೆ ಕ್ರಾಂತಿಯಾಗುವುದಿಲ್ಲ’ ಎಂಬ ನಂಬಿಕೆಯಿಂದ ಆದಿವಾಸಿ ಮಹಿಳೆಯರ ಸಂಘಟನಾ ಕಾರ್ಯದಲ್ಲಿ ತೊಡಗಿಕೊಂಡರು. ಮಾವೋವಾದಿ ಸಂಘಟನೆ ಹಾಗೂ ಆದಿವಾಸಿ ಸಮಾಜದ ಒಳಗಿರುವ ಪುರುಷಪ್ರಾಧಾನ್ಯ ಹೋದ ಹೊರತು ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ; ಜಾತಿಪದ್ಧತಿ ಹಾಗೂ ಪುರುಷ ಪ್ರಾಧಾನ್ಯವನ್ನು ಇಂಚಿಂಚೇ ನಿರ್ಮೂಲನಗೊಳಿಸದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ ಎನ್ನುವುದು ಅವರ ನಿಲುವಾಗಿತ್ತು. ಈ ತಾತ್ವಿಕತೆಯೊಂದಿಗೆ ವಂಚಿತರಲ್ಲಿಯೇ ಅಂಚಿಗೆ ಸರಿಸಲ್ಪಟ್ಟ ಆದಿವಾಸಿ ಮಹಿಳೆಯರನ್ನು ಜಾಗೃತಿಗೊಳಿಸಿ ‘ಆದಿವಾಸಿ ಕ್ರಾಂತಿಕಾರಿ ಮಹಿಳಾ ಸಂಘಟನ್’ ಕಟ್ಟಿದರು. ೧೯೮೬ರಲ್ಲಿ ಶುರುವಾದ ಕೆಎಎಂಎಸ್‌ನಲ್ಲಿ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ರಾಜ್ಯದ ಏಳು ಜಿಲ್ಲೆಗಳ ೪೦ ಲಕ್ಷ ಜನಸಂಖ್ಯೆಯ ೯೦ ಸಾವಿರ ಹೆಣ್ಣುಮಕ್ಕಳು ಸದಸ್ಯರಾಗಿದ್ದಾರೆ. ಆ ಪ್ರದೇಶದಲ್ಲಿ ವಾಸಿಸುವ ಮಾದಿಯಾ, ಮುರಿಯಾ, ದೊರ‍್ಲಾ, ಗೊಂಡ, ರಾಜಗೊಂಡ, ಹಳ್ಬ, ಬತಾರಾ ಇನ್ನಿತರ ಆದಿವಾಸಿ ಬುಡಕಟ್ಟುಗಳ ಮಹಿಳಾ ಸಂಘಟನೆ ಅದು. ಅನುರಾಧಾ ಆ ಹೆಣ್ಣುಮಕ್ಕಳಿಗೆ ತರಗತಿ ನಡೆಸಿ ಅಕ್ಷರಜ್ಞಾನ ನೀಡಿದರು. ಸ್ಥಳೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಮಾನ ಕುರಿತು ಅವರಿಗೆಲ್ಲ ತಿಳಿಸಿದರು. ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಅವಶ್ಯಕತೆ ಕುರಿತು ಹಿರಿಯರಿಗೆ ಮನದಟ್ಟು ಮಾಡುತ್ತ ಕಾಡುಮೇಡು ಅಲೆದರು. ಸಂಘಟನೆಯ ಹೊಸ ಸದಸ್ಯರಿಗೆ ಹಾಗೂ ಆದಿವಾಸಿ ಸಮುದಾಯಗಳಿಗೆ ಬೋಧನಾ ಸಾಮಗ್ರಿಗಳನ್ನು ತಾವೇ ತಯಾರಿಸಿದರು. ಹಿಂದಿ-ಇಂಗ್ಲಿಷ್-ಮರಾಠಿಯಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಗಳ ಜೊತೆಗೆ ದಿನಚರಿಯನ್ನೂ ಬರೆದಿಟ್ಟರು. 

ಹೀಗೆ ದಂಡಕಾರಣ್ಯದಲ್ಲಿ ಭಾರತದ ಅತಿದೊಡ್ಡ, ರಹಸ್ಯ ಮಹಿಳಾ ಸಂಘಟನೆ ‘ಕ್ರಾಂತಿಕಾರಿ ಆದಿವಾಸಿ ಮಹಿಳಾ ಸಂಘಟನ್’ ಕಟ್ಟಿದವರಲ್ಲಿ ಅನುರಾಧಾ ಒಬ್ಬರು. 

ಆದಿವಾಸಿ ಸಮಾಜ ಮಹಿಳೆಯರ ಪಾಲಿಗೆ ಆದರ್ಶ ಸಮಾಜವೇನಲ್ಲ. ಅಲ್ಲಿ ಹೆಣ್ಣುಮಕ್ಕಳು ದಿನಕ್ಕೆ ೧೬ ತಾಸು ಕೂಲಿಗಳಾಗಿ, ಹೊಲದಲ್ಲಿ ಕೆಲಸಗಾರರಾಗಿ, ಅರಣ್ಯ ಉತ್ಪನ್ನಗಳ ಸಂಗ್ರಾಹಕರಾಗಿ ದುಡಿಯುವುದಲ್ಲದೇ ಮನೆಗೆ ಬಂದಮೇಲೆ ಸಂಸಾರದ ಜವಾಬ್ದಾರಿಯನ್ನೂ ನಿಭಾಯಿಸುತ್ತಾರೆ. ಆದರೆ ಇಷ್ಟೆಲ್ಲ ಶ್ರಮ ವಹಿಸಿ ದುಡಿದರೂ ಹಕ್ಕುಗಳಿಂದ ಅವರು ವಂಚಿತರು. ಹೆಣ್ಣುಮಕ್ಕಳಿಗೆ ಬಿತ್ತುವ ಅಧಿಕಾರವಿಲ್ಲ. ಬೆಳೆದದ್ದರಲ್ಲಿ ಪಾಲು ಕೇಳುವಂತಿಲ್ಲ. ಮುಟ್ಟಾದಾಗ ಊರಹೊರಗೆ ಒಬ್ಬರೇ ಇರಬೇಕು. ಅಪಹರಣ, ಬಲವಂತದ ಮದುವೆ, ಬಹುಪತ್ನಿತ್ವ ಸರ್ವೇಸಾಮಾನ್ಯ. ಅದೇವೇಳೆ ಶುರುವಾದ ಸರ್ಕಾರೀ ಪ್ರಾಯೋಜಿತ ‘ಸಲ್ವಾ ಜುದುಂ’ ಸಂಘಟನೆಯಿಂದ, ಅರಣ್ಯಾಧಿಕಾರಿಗಳು, ಕಾಂಟ್ರಾಕ್ಟರ್‌ಗಳು, ಪೊಲೀಸರು ಹಾಗೂ ಜಮೀನ್ದಾರರಿಂದ ಆದಿವಾಸಿ ಮಹಿಳೆಯರು ದೌರ್ಜನ್ಯ ಎದುರಿಸುತ್ತಿದ್ದರು. ಮಾನವ ಕಳ್ಳ ಸಾಗಾಣಿಕೆಯಲ್ಲಿ ಹೆಣ್ಣುಮಕ್ಕಳು ನಾಪತ್ತೆಯಾಗುತ್ತಿದ್ದರು. ಹೀಗೆ ಸಮುದಾಯದೊಳಗಿನ ಹಾಗೂ ಹೊರಜಗತ್ತಿನ ಪುರುಷರಿಂದ ನಿರಂತರ ದೌರ್ಜನ್ಯಕ್ಕೊಳಗಾಗುತ್ತಿದ್ದ ಮಹಿಳೆಯರನ್ನು ಕೆಎಎಂಎಸ್ ಸಂಘಟಿಸಿತು. 

ಅನುರಾಧಾ ಪ್ರತಿವರ್ಷ ಮಾರ್ಚಿ ೮ರಂದು ಆದಿವಾಸಿ ಮಹಿಳೆಯರನ್ನು ಒಟ್ಟುಗೂಡಿಸಿ ಜಾಥಾ, ಪ್ರತಿಭಟನೆ, ರಾಸ್ತಾ ರೋಕೋಗಳನ್ನು ಸಂಘಟಿಸುತ್ತಿದ್ದರು. ನಾರಾಯಣಪುರದಂತಹ ಸಣ್ಣ ಊರಿನ ಮಹಿಳೆಯರು ಸೌಂದರ್ಯ ಸ್ಪರ್ಧೆ ವಿರೋಧಿಸಿ ಪ್ರತಿಭಟಿಸಿದರು. ಮಕ್ಕಳ ಶಿಕ್ಷಣಕ್ಕೆ ತಕ್ಕ ಸೌಲಭ್ಯ ಒದಗಿಸಿಕೊಡುವಂತೆ ತಾಲೂಕಾ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದರು. ಅತ್ಯಾಚಾರ ವಿರೋಧಿಸಿ, ಸಾರಾಯಿ ನಿಷೇಧಿಸುವಂತೆ ಆಗ್ರಹಿಸಿ ಊರೂರುಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದವು. ಆದಿವಾಸಿ ಸಮುದಾಯದ ಗಂಡಸರು ಮಹಿಳೆಯರನ್ನು ಸಮಾನವಾಗಿ ನಡೆಸಿಕೊಳ್ಳುವಂತೆ ಕೆಎಎಂಎಸ್ ಅವರೊಡನೆ ಸಂವಾದ ನಡೆಸಿ ಒಪ್ಪಿಸಿತು. ಸಮುದಾಯವೆಲ್ಲ ಒಂದುಗೂಡಿ ಗಣಿಗಾರಿಕೆ, ಸ್ಥಳಾಂತರದ ವಿರುದ್ಧ ದನಿಯೆತ್ತುವಂತೆ ಮಾಡಿತು.

ಸಂಘಟನೆಯ ಕೆಲಸಗಳ ನಡುವೆ ಅನುರಾಧಾ ಎಲ್ಲಾದರೊಮ್ಮೆ ಮುಂಬಯಿಗೆ ಹೋಗಿಬರುತ್ತಿದ್ದರು. ಪಕ್ಷದ ಕೆಲಸವಿರುತ್ತಿತ್ತು, ಜೊತೆಗೆ ಭೇಟಿಗಾಗಿ ಅತಿ ಸ್ವಲ್ಪ ಸಮಯವಿರುತ್ತಿತ್ತು. ಎಂದೇ ತಾಯ್ತಂದೆಯರನ್ನು ಭೇಟಿಮಾಡುತ್ತಿರಲಿಲ್ಲ. ತಮ್ಮ ಬದುಕಿನ ನೆರಳು ಅವರ ಮೇಲೆ ಬೀಳಬಾರದು ಹಾಗೂ ಪೊಲೀಸ್ ಕೆಂಗಣ್ಣಿಗೆ ಕುಟುಂಬ ಗುರಿಯಾಗಬಾರದೆಂದು ತಂದೆ ತೀರಿಕೊಂಡಾಗಲೂ ಹೋಗಲಿಲ್ಲ. ಈ ಕಾರಣಕ್ಕೆ ರಕ್ತಸಂಬಂಧಗಳನ್ನು ತೊರೆದೇಬಿಟ್ಟಿದ್ದರು. ಮಕ್ಕಳು ಬೇಡವೆಂಬ ನಿರ್ಧಾರಕ್ಕೂ ಬಂದಿದ್ದರು.

ಬರದ ದಿನಗಳಲ್ಲಿ ಹುಣಿಸೆ ನೀರಿನೊಂದಿಗೆ ಮುದ್ದೆಯಾದ ಅನ್ನ ಊಟ ಮಾಡುವಾಗ ಅನ್ನ ಗಂಟಲಲ್ಲಿಳಿಯದೆ ಊಟಕ್ಕೆ ಬಹಳ ಹೊತ್ತು ತೆಗೆದುಕೊಳ್ಳುತ್ತಿತ್ತು. ಹೊತ್ತುಗೊತ್ತಿಲ್ಲದ ಆಹಾರನಿದ್ದೆಗಳಿಂದ ತೀವ್ರ ಅಸಿಡಿಟಿಯಾಗಿ ಜಠರದ ಹುಣ್ಣು (ಅಲ್ಸರ್) ಆಯಿತು. ಹಲವು ಬಾರಿ ಮಲೇರಿಯಾ ಜ್ವರ ಬಂತು. ಆ ವೇಳೆಗಾಗಲೇ ಪೊಲೀಸರ ವಾಂಟೆಡ್ ಲಿಸ್ಟ್ ಸೇರಿಹೋಗಿದ್ದರಿಂದ ಹೆಸರು ಬದಲಿಸಿಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವುದು ಅನಿವಾರ್ಯವಾಗಿ ಚಿಕಿತ್ಸೆ ಪಡೆಯುವುದು ದುಸ್ತರವಾಯಿತು. ಮಲ್ಟಿಪಲ್ ಸ್ಕ್ಲಿರೋಸಿಸ್ ಎಂಬ ಸರ್ವಾಂಗವನ್ನೂ ಬಾಧಿಸುವ ಕಾಯಿಲೆ ಶುರುವಾಗಿ ಶ್ವಾಸಕೋಶ, ಕಿಡ್ನಿ, ಹೃದಯ, ಮೂಳೆ, ಕೀಲು ಎಲ್ಲದರ ಮೇಲೆ ತನ್ನ ಪರಿಣಾಮ ತೋರಿಸಿತು. ಭಾರ ಹೊರುವುದು ಕಷ್ಟವಾಗಿ, ಮೆಟ್ಟಿಲು ಹತ್ತಿಳಿಯುವುದು ಅಸಾಧ್ಯ ಎನ್ನುವಂತಾಗಿ ಅವರ ಹೆಗಲ ಮೇಲಿನ ಚೀಲದಿಂದ ಕಂಬಳಿಯೂ ಭಾರವೆಂದು ಹೊರಹೋಯಿತು. 

ಸಂಘಟನೆಯ ಹೆಣ್ಣುಮಕ್ಕಳಿಗೆ ನಾಯಕತ್ವದ ತರಬೇತಿ ಕೊಡುತ್ತಿರುವಾಗಲೇ ಮತ್ತೆ ಮಲೇರಿಯಾ ಜ್ವರ ಬಂತು. ಈ ಬಾರಿ ಫಾಲ್ಸಿಪಾರಂ ಮಲೇರಿಯಾ ಎಂಬ ಪ್ರಾಣಾಂತಿಕ ರೋಗಾಣುವಿನ ಎರಡೆರೆಡು ತಳಿಗಳು ಅವರ ದೇಹ ಪ್ರವೇಶಿಸಿದ್ದವು. ಅನಿಯಮಿತ ಆಹಾರ, ಕಾಯಿಲೆ, ವಿಶ್ರಾಂತಿ-ಆರೈಕೆಯಿಲ್ಲದೆ ಜರ್ಝರಿತವಾಗಿದ್ದ ದೇಹ ಮಲೇರಿಯಾ ದಾಳಿಗೆ ಸೊರಗಿಹೋಯಿತು. ತಜ್ಞವೈದ್ಯರ ಚಿಕಿತ್ಸೆ ಪಡೆಯುವುದು ಕಷ್ಟವಾಗಿದ್ದರಿಂದ ದಂಡಕಾರಣ್ಯದ ಛಲಗಾತಿಯ ಜರ್ಝರಿತ ದೇಹವನ್ನು ಸಾವು ಸೋಲಿಸುವುದು ತಡವಾಗಲಿಲ್ಲ. ಕೊನೆಗಳಿಗೆಯಲ್ಲಿ ಆಸ್ಪತ್ರೆಗೆ ದಾಖಲಾದರೂ ತಮ್ಮ ೫೪ನೇ ವಯಸ್ಸಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕಾಮ್ರೇಡ್ ಅನುರಾಧಾ ಕೊನೆಯುಸಿರೆಳೆದರು.

ಅನುರಾಧಾ ಅವರ ಬರವಣಿಗೆಗಳನ್ನು ಆನಂದ್ ತೇಲ್ತುಂಬ್ಡೆ ಹಾಗೂ ಶೋಮಾ ಸೇನ್ ‘ಸ್ಕ್ರಿಪ್ಟಿಂಗ್ ದಿ ಚೇಂಜ್’ ಎಂಬ ಪುಸ್ತಕವಾಗಿ ಸಂಪಾದಿಸಿದ್ದಾರೆ. ಇದುವರೆಗೆ ಆಪ್ತೇಷ್ಟ-ಸಂಗಾತಿಗಳ ವಲಯದಲ್ಲಷ್ಟೇ ಉಳಿದಿದ್ದ ಅನುರಾಧಾ ಬರಹ-ಚಿಂತನೆಗಳು ಸಂಪಾದಿತ ಕೃತಿಯಿಂದ ಎಲ್ಲರಿಗೂ ಲಭ್ಯವಾಗಿದೆ. ಅರುಂಧತಿ ರಾಯ್ ಅವರ ಪ್ರವೇಶಿಕೆಯಿರುವ ಪುಸ್ತಕವು ಜಾತಿ ಮತ್ತು ಲಿಂಗ ಎಂಬ ಎರಡು ವಿಭಾಗಗಳನ್ನೊಳಗೊಂಡಿದೆ. ಹಲವಾರು ಗಂಭೀರ ಹಾಗೂ ಸಮಕಾಲೀನ ಸಂಗತಿಗಳನ್ನು ಅವರ ಪ್ರಬಂಧಗಳು ಪ್ರೌಢವಾಗಿ ಚರ್ಚಿಸಿವೆ. ಅತ್ಯಾಚಾರ ಕಾನೂನು ಸಮಗ್ರವಾಗಿ ಬದಲಾಗಬೇಕಿದೆ ಎಂದು ಪ್ರತಿಪಾದಿಸುವ ಅವರು ಹೆಣ್ಣು, ಶೀಲ ಹಾಗೂ ಹೆಣ್ಣಿನ ದೇಹದ ಸಮಗ್ರತೆ ಕುರಿತ ಸಮಾಜದ ದೃಷ್ಟಿಕೋನಗಳನ್ನು ವಿಶ್ಲೇಷಿಸಿದ್ದಾರೆ. 

ಆ ಪುಸ್ತಕದಲ್ಲಿ ಅವರು ಸಂಗ್ರಹಿಸಿದ ಬಸ್ತಾರ್ ಹೆಣ್ಣುಮಕ್ಕಳ ಒಂದು ಹಾಡು ಇದು:

ಹುಡುಗನ್ ಹೆರ‍್ತಿ, ಹುಡುಗೀನ್ ಹೆರ‍್ತಿ, ಆದ್ರೆ ನಿನ್ನೆಸರು ಎಲ್ಲೂ ಇರಲ್ಲ ಅಕ್ಕಾ
ಹಗೇವ್ನ ತುಂಬ ಭತ್ತ ತುಂಬ್ಕಂಡೈತೆ, ಆದ್ರೆ ಹೆಂಗ್ಸಿಗದು ಸಿಗಲ್ಲ ಕಣಕ್ಕ
ಹುಡುಗಾಟಗತಿ ವಯಸ್ನಾಗೇ ತಾಳಿ ಬಿಗ್ದು ಕಳಿಸಿಬಿಡ್ತಾರ್ ಕಣಕ್ಕ,
ಹೋಗಲ್ಲಂತೇನಾರ ಅಂದ್ಯ, ಹೊಡ್ದು ಅಟ್ಟಿಬಿಡತಾರೆ ಅಕ್ಕ

ನೋಡ್ತಿರು, ಗಾಳೀಲೆಲ್ಲ ತುಂಬತೈತೆ ಒಂದ್ ಕೂಗು
ಬೂಮಿಆಕಾಸ ಸಮ, ಗಂಡ್ಸು ಹೆಂಗ್ಸು ಸi ಅಂಬೂದು
ಆ ಕೆಂಪ್ ಹೂಗಿಡ, ಜಗ್ಗಿ ಹೂ ಬಿಡ್ತ ಇದೆ ನೋಡಕ್ಕ,
ನಾವೂ ಆ ಹೂವಿನ್ ದಾರೀಲೆ ಹೋರಾಡಣ ಕಣಕ್ಕ
ಕೆಂಪು ಬೆಳಕಿನ ದಿಕ್ಕಲೆ ಹೋಗ್ತ ಇರ‍್ಬೇಕು ಅಂತ
ನಾನಂತೂ ಗಟ್ಟಿ ನಿಚ್ಚೈಸಿಬಿಟ್ಟಿದೀನಿ ಕಣಕ್ಕ..

ಅವರು ಕ್ರಮಿಸಿದ ಹಾದಿ ಕಡಿಮೆ ಜನ ಪಯಣಿಸಿರುವಂತದು. ಹೊರಗಿನ ಸಮಾಜಕ್ಕೆ ಅನುರಾಧಾ ಎಷ್ಟು ದಿನ ನೆನಪಿರುತ್ತಾರೋ, ಎಷ್ಟು ಜನ ಅವರ ಹೆಸರು ತಿಳಿದಿದ್ದಾರೋ ಗೊತ್ತಿಲ್ಲ. ಅವರ ಹೆಸರು ಇತಿಹಾಸದ ಪುಟಗಳಲ್ಲಿ ದಾಖಲಾಗದೆಯೂ ಹೋಗಬಹುದು. ಆದರೆ ಸ್ವಾಯತ್ತತೆಯೆಡೆಗಿನ ದಂಡಕಾರಣ್ಯದ ಆದಿವಾಸಿಗಳ ನಡಿಗೆಯಲ್ಲಿ ಇವರ ಹೆಜ್ಜೆ ಗುರುತು ಅಳಿಸಲಾರದಂತೆ ಇದೆ ಎನ್ನುವುದು ವಾಸ್ತವವಾಗಿದೆ.

ಬಂದೂಕು ವರ್ಸಸ್ ಬಂದೂಕು - ಬೇಕೆ?

ನಮ್ಮಲ್ಲಿ ಹಲವರಿಗೆ ಮಾವೋವಾದಿಗಳು ಯಾಕೆ, ಹೇಗೆ ಆ ದಾರಿಗೊಲಿಯುತ್ತಾರೆ? ಅವರೇಕೆ ಭೂಗತರಾಗಬೇಕು? ಅವರೇಕೆ ಶಸ್ತ್ರದ ದಾರಿ ಹಿಡಿಯುತ್ತಾರೆ? ಎಂಬ ಅಚ್ಚರಿ. ನಕ್ಸಲೈಟ್, ಮಾವೋವಾದಿ, ಗೆರಿಲ್ಲಾ ಹೋರಾಟ, ಸಶಸ್ತ್ರ ಹೋರಾಟ ಮುಂತಾದ ಪದ-ವಿಷಯಗಳು ಬಂದಕೂಡಲೇ ಬಹಳಷ್ಟು ಚಿಂತಕರು ತಮ್ಮ ಚಿಂತನೆಯನ್ನು ಅಲ್ಲಿಗೆ ನಿಲ್ಲಿಸಿಬಿಡುತ್ತಾರೆ. ಅಲ್ಲಿಂದಾಚೆಗೆ ಒಂದೋ ಅಹಿಂಸಾತ್ಮಕ ಮಾರ್ಗ ಬೆಂಬಲಿಸುವ ಕಟ್ಟಾ ನಕ್ಸಲ್ ವಿರೋಧಿಗಳಾಗಿಯೋ ಅಥವಾ ಅವರ ಕಠಿಣ ಜೀವನ-ಹೋರಾಟಕ್ಕೆ ಕರುಣೆ ತೋರಿಸುವ ಮೃದುಹೃದಯಿಗಳೋ ಆಗುತ್ತಾರೆ. ಆದರೆ ಆದಿವಾಸಿ ಸಮುದಾಯಗಳ ದೃಷ್ಟಿಯಿಂದ ಹೋರಾಟಗಾರರನ್ನು ನೋಡಿದರೆ ವಂಚಿಸುವವರು ಯಾರು? ಹಿಂಸೆಯನ್ನು ಉದ್ದೀಪಿಸುವವರು ಯಾರು? ಹಿಂಸೆ ಯಾವುದು? ಅಹಿಂಸೆ ಯಾವುದು? ಬೆಚ್ಚನೆಯ ಜಾಗಗಳಲ್ಲಿರುವ ನಮಗೆ ‘ಹಿಂಸಾತ್ಮಕ’ ಎನಿಸಿದ್ದು ಅಸಹಾಯಕರ ದೃಷ್ಟಿಯಲ್ಲಿ ಧೈರ್ಯದ ಹೆಜ್ಜೆಯೇ? ಎಂಬೆಲ್ಲ ಪ್ರಶ್ನೆಗಳೇಳುತ್ತವೆ. ಇಲ್ಲಿ ಅನುರಾಧಾ ನೆಪದಲ್ಲಿ ದಂಡಕಾರಣ್ಯದ ಮಾವೋವಾದಿ ಹೋರಾಟಗಾರರತ್ತ ಗಮನ ಹರಿಸಿದರೆ ಗುಲಾಬಿಗಿಂತ ಬಂದೂಕಿನ ದಾರಿ ಆಯ್ದುಕೊಂಡದ್ದೇಕೆ ಎಂದು ತಿಳಿದುಬರುತ್ತದೆ. 

ಮಾವೋವಾದಿಗಳು ಆದಿವಾಸಿಗಳೊಡನೆ ಶುರುಮಾಡಿದ ಹಕ್ಕು ಪ್ರತಿಪಾದನಾ ಚಳುವಳಿಯಿಂದ ಸಮೃದ್ಧ ಅದಿರು-ಗಣಿಯ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸರ್ಕಾರಕ್ಕೆ ಕಷ್ಟವಾಯಿತು. ಆಗ ಚಳುವಳಿಯನ್ನು ಮಟ್ಟಹಾಕಲು, ಭೂಸ್ವಾಧೀನ ಸುರಳೀತಗೊಳಿಸಲು ಸರ್ಕಾರ ತನ್ನೆಲ್ಲ ರಕ್ಷಣಾಪಡೆಗಳನ್ನೂ ಬಳಸಿತು. ಅತಿ ಕಠಿಣ ಹಾಗೂ ಕ್ರೂರ ಕಾನೂನುಗಳು ಬಂದು ತಮಗೆ ಬೇಕಾದವರನ್ನು, ಅನುಮಾನ ಬಂದವರನ್ನು ಹಿಡಿದು ಬಂಧಿಸುವ; ವಿಚಾರಣೆಯ ನೆಪದಲ್ಲಿ ಶಿಕ್ಷಿಸುವ; ದೌರ್ಜನ್ಯ ಎಸಗುವ ಅಧಿಕಾರ ರಕ್ಷಣಾ ಪಡೆಗಳಿಗೆ ಸಿಕ್ಕಿತು. ಈ ‘ಜಂಗ್ಲಿ ಕಾನೂನು’ಗಳು ಹೋರಾಟಗಾರರು ಶಸ್ತ್ರಗಳನ್ನೇ ನೆಚ್ಚಿಕೊಳ್ಳಲು ಉತ್ತೇಜಿಸಿತು. ಮಾವೋವಾದಿಗಳು ಸೇತುವೆ ಉಡಾಯಿಸಿದರು, ಪೋಲೀಸರನ್ನು ಕೊಂದರು. ಪೊಲೀಸರು ಎನ್‌ಕೌಂಟರ್ ಹೆಸರಿನಲ್ಲಿ ಹೋರಾಟಗಾರರನ್ನು ಕೊಂದರು. ಆದಿವಾಸಿಗಳ ಒಂದು ಗುಂಪಿಗೆ ಶಸ್ತ್ರಾಸ್ತ್ರ ಕೊಟ್ಟು ಸಲ್ವಾ ಜುಡುಂ ಎಂದರು. ಹೀಗೆ ಬೃಹತ್ ವ್ಯವಸ್ಥೆಯನ್ನೂ, ಸರ್ಕಾರವನ್ನೂ, ಸಮಾಜವನ್ನೂ ಎದುರುಹಾಕಿಕೊಂಡು, ಬಂಧನದಿಂದ ತಪ್ಪಿಸಿಕೊಂಡು ಚಳುವಳಿಯನ್ನು ಮುಂದುವರೆಸಲು ಶಸ್ತ್ರಾಸ್ತ್ರಗಳು, ಕೆಎಎಂಸ್‌ನ ಹೆಣ್ಣುಮಕ್ಕಳು ಅನಿವಾರ್ಯವೆಂಬ ಭಾವನೆ ಮಾವೋವಾದಿ ಹೋರಾಟಗಾರರಲ್ಲಿ ಬಂತು. ದಶಕಗಳ ಕಾಲ ಬಂಧನಕ್ಕೊಳಗಾಗದಂತೆ ಬದುಕಬೇಕೆಂದರೆ ಭೂಗತವಾಗಬೇಕಾಗುತ್ತದೆ. ತಮ್ಮ ಅಸ್ಮಿತೆಯನ್ನು, ಅಸ್ತಿತ್ವವನ್ನು ಮರೆತು ಬದುಕಬೇಕಾಗುತ್ತದೆ. ಅಂತಹ ವ್ಯಕ್ತಿತ್ವಗಳಿಗೆ ರಾಜಿಗೊಳಗಾಗಿ ಬದುಕಲು ಸಾಧ್ಯವಾಗುವುದಿಲ್ಲ. ಹಾಗೆಯೇ ಕಾನೂನಿನ ಚೌಕಟ್ಟಿನೊಳಗೆ ಲಿಬರಲ್ ಆಕ್ಟಿವಿಸ್ಟ್ ಆಗಿ ಯೋಚಿಸಲು, ಕೆಲಸ ಮಾಡಲೂ ಸಾಧ್ಯವಾಗುವುದಿಲ್ಲ. ಎಂದೇ ಸವಾಲು, ಕಷ್ಟಗಳನ್ನೆದುರಿಸಿದರೂ ತಮ್ಮ ತತ್ವಗಳಿಗನುಗುಣವಾಗಿ ಬದುಕುತ್ತಾ ಉಳಿದವರಿಗಿಂತ ಭಿನ್ನ ಮಾರ್ಗ ಹಿಡಿಯುತ್ತಾ ಸಮಾಜದಿಂದ ಪ್ರತ್ಯೇಕಿಸಲ್ಪಡುತ್ತಾರೆ. 

ಪ್ರಸ್ತುತ ವ್ಯವಸ್ಥೆಯಲ್ಲಿ ನಂಬಿಕೆಯಿಡದೆ ಚುನಾವಣೆ ಬಹಿಷ್ಕರಿಸುವ; ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸುವ; ಸಮಾನಾಂತರ ಜನಾಡಳಿತ, ಜನರ ಸರ್ಕಾರ ನಡೆಸಬೇಕೆನ್ನುವ ಮಾವೋವಾದಿಗಳು ದೇಶದ ಸಮಗ್ರತೆಗೇ ದೊಡ್ಡ ಸವಾಲಾಗಿ ಕಾಣಿಸುತ್ತಾರೆ. ಎಂದೇ ೧೯೯೧ರಲ್ಲಿ ಮಹಾರಾಷ್ಟ್ರದಲ್ಲಿ ಕೆಎಎಂಎಸ್ ಅದರ ಮಾತೃ ಸಂಘಟನೆ ಪಿಡಬ್ಲ್ಯುಜಿಯಂತೆಯೇ ನಿಷೇಧಕ್ಕೊಳಗಾಯಿತು. ಅದರಲ್ಲಿದ್ದ, ಇಲ್ಲದ ಹಲವರನ್ನು ಟಾಡಾ ಅಡಿ ಬಂಧಿಸಲಾಯಿತು. ೨೦೦೨ರಲ್ಲಿ ಪೋಟಾ ಬಂತು. ನಂತರ ಎಂಸಿಒಸಿಎ, ಯುಎಪಿಎ - ಹೀಗೆ ನಾಲ್ಕಾರು ಭಯಾನಕ ಕಾಯ್ದೆಗಳು ಬಂದು ಸಣ್ಣ ಭಿನ್ನಮತ, ನಿಷೇಧಿತ ಸಂಘಟನೆ/ವ್ಯಕ್ತಿಗಳೊಡನೆ ಸಂಪರ್ಕಗಳು ನಕ್ಸಲರೆಂಬ ಹಣೆಪಟ್ಟಿ ಹಚ್ಚಿ ಅನುಮಾನದಿಂದ ನೋಡಲು ಸಾಕಾಯಿತು. 

ಹೀಗೆ, ಒಂದು ಉದಾತ್ತ ಅನುಕರಣೀಯ ಮಾದರಿಯಾಗಬೇಕಿದ್ದ ಅರಣ್ಯವಾಸಿಗಳ ಸಂಘಟನೆ ತನ್ನ ಸಶಸ್ತ್ರ ಸ್ವರೂಪದಿಂದಲೇ ಇತರ ಸಂಘಟನೆಗಳಿಂದ ಬೆಂಬಲ ಪಡೆಯಲು ವಿಫಲವಾಗಿದೆ. ಬಾಹ್ಯ ಜಗತ್ತಿನ ವರಸೆಗಳನ್ನು ಸ್ಪಷ್ಟವಾಗಿ ತಿಳಿಯದ ಆದಿವಾಸಿ ಸಮುದಾಯವನ್ನು ಜಾಗೃತಗೊಳಿಸುವುದು, ಸಂಘಟಿಸಿ ಹೋರಾಟ ಕಟ್ಟುವುದು ಆ ಸಮುದಾಯದ ದೃಷ್ಟಿಯಿಂದ ತೀರಾ ಅಗತ್ಯವೇ ಆಗಿದ್ದರೂ ಆದಿವಾಸಿಗಳಿಗೆ, ಅದರಲ್ಲೂ ಮಹಿಳೆಯರಿಗೆ ನೀಡಿದ ಶಸ್ತ್ರಾಸ್ತ್ರ ತರಬೇತಿಯನ್ನು ಅರಗಿಸಿಕೊಳ್ಳಲು ಉಳಿದವರಿಗೆ ಕಷ್ಟವಾಗಿದೆ. ಮಾವೋವಾದಿಗಳು ‘ಜನ ಸರ್ಕಾರ’ ಎಂದು ಅಶಿಕ್ಷಿತ, ಅರೆಶಿಕ್ಷಿತ, ಮುಗ್ಧ ಆದಿವಾಸಿಗಳ ಹೆಸರಿನಲ್ಲಿ ತಾವೇ ಸರ್ಕಾರ ನಡೆಸುವುದು; ಉತ್ತರದಾಯಿತ್ವ ಇಲ್ಲದಂತೆ ಇಡೀ ಸಮಾಜ, ಸರ್ಕಾರ, ಆಡಳಿತ, ಮಾಧ್ಯಮ, ಕಾನೂನುಗಳಿಂದ ದೂರ ಉಳಿದಿರುವುದು ಇವತ್ತಿಗೂ ಅವರನ್ನು ಬೆಂಬಲಿಸಲು ಉಳಿದವರಿಗಿರುವ ತೊಡರಾಗಿದೆ. ಚುನಾವಣೆ, ಪಂಚಾಯತ್‌ರಾಜ್‌ನಂತಹ ಡೆಮಾಕ್ರಸಿಯ ಒಪ್ಪಿತ ಹತಾರಗಳ ಬಗೆಗೆ ಉಳಿದ ಸಮಾಜಕ್ಕಿರುವ ನಂಬಿಕೆ ಮಾವೋವಾದಿಗಳಿಗಿಲ್ಲದಿರುವುದೂ ಈ ಬಿರುಕಿನ ಮತ್ತೊಂದು ಕಾರಣವಾಗಿದೆ. 

ಕೊನೆಗೂ ಆಳುವವರ ಉದ್ದೇಶ ಮತ್ತು ಹೋರಾಡುವವರ ಸಿದ್ಧಾಂತದ ನಡುವೆ ಹೊಂದಾಣಿಕೆಯೇ ಆಗದೆ, ಜನರ ಬಗೆಗೆ ಮಾತನಾಡುವ ಇಬ್ಬರೂ ಪರಸ್ಪರ ಶತ್ರುಗಳಾದರು. ಅದರ ಪರಿಣಾಮವೇನು? ಅನುರಾಧಾ, ಕೊಬಾಡ್, ಸಾಕೇತ್‌ರಂತಹ ಈ ಸಮಾಜಕ್ಕೆ ಅವಶ್ಯವಿದ್ದ ಎಷ್ಟೋ ಜೀವಗಳು ಭೂಗತರಾಗಿ ದೇಶವಿರೋಧಿಗಳೆನಿಸಿಕೊಂಡು ಬದುಕಿ ಕೊನೆಯಾಗಬೇಕಾಯಿತು. ಜನಸಾಮಾನ್ಯರ ಬದುಕು ಕಷ್ಟದಲ್ಲೇ ಮುಂದುವರೆದು, ಅದೇ ಬದುಕೆಂದು ಒಪ್ಪಿಕೊಳ್ಳುವಂತಾಯಿತು.  

ಹಿರಿಯ ಗೆಳತಿ ಮೊನ್ನೆ ನೆನಪಿಸಿದ ಒಂದು ಕತೆ ಸುಮ್ಮನೆ ನೆನಪಾಗುತ್ತಿದೆ: ಒಬ್ಬ ನಕ್ಸಲ್ ಹುಡುಗನಿಗೆ ಅಡವಿಯಲ್ಲಿರುವ ಅವನ ತಾಯಿ ದಿನಾ ರೊಟ್ಟಿ ಒಯ್ದು ಕೊಟ್ಟುಬರುತ್ತಿರುತ್ತಾಳೆ. ಅವನೆಲ್ಲಿದ್ದರೂ ಹುಡುಕಿ ಅವಳು ತರುವ ರೊಟ್ಟಿ ಅದು ಹೇಗೆ ಅಷ್ಟು ಬಿಸಿಯಿರುತ್ತದೆ ಎನ್ನುವುದು ಅವನ ಅಚ್ಚರಿ. ಒಂದು ದಿನ ಅವನ ಅವ್ವ ಪೊಲೀಸರ ಗುಂಡಿಗೆ ಬಲಿಯಾಗುತ್ತಾಳೆ. ಹುಡುಗ ಅವ್ವ ಬರಲಿಲ್ಲವೆಂದು ಹುಡುಕಿ ಹೋದಾಗ ಅವಳ ಶವ ಕಾಣುತ್ತದೆ. ಹತ್ತಿರ ಹೋದರೆ ಕಾಣಿಸುವುದು ಅವಳ ಹೊಟ್ಟೆಗವಚಿಕೊಂಡಿದ್ದ ರೊಟ್ಟಿಗಂಟು! ಅದ ಸರಿಸಿದರೆ ಕಾಣುವುದು ಸುಟ್ಟು ಕಪ್ಪಾಗಿದ್ದ ಹೊಕ್ಕುಳ ಪ್ರದೇಶ!! ಅಲ್ಲಿರುತ್ತದೆ ಬಿಸಿರೊಟ್ಟಿಯ ಗುಟ್ಟು.. 

ಆದರೆ..

ಸಹವಾಸಿ/ದೇಶವಾಸಿಗಳ ಬದುಕನ್ನು ಉತ್ತಮಪಡಿಸುವ ಉದಾತ್ತ ಧ್ಯೇಯದಿಂದ ತಮ್ಮ ‘ಉತ್ತಮ’ ಬದುಕನ್ನು ತ್ಯಾಗಮಾಡಿ, ಹಲವು ಬೇನಾಮಿ ಹೆಸರುಗಳಲ್ಲಿ ಎಲ್ಲೆಲ್ಲೋ ವಾಸಿಸಿ, ಅನಾರೋಗ್ಯ ಅಪಘಾತಕ್ಕೊಳಗಾಗಿ, ಜೀವನವನ್ನೇ ಬಲಿದಾನ ಮಾಡಿದ ಹೋರಾಟದಿಂದ ನಿರೀಕ್ಷಿತ ಪ್ರತಿಫಲ ಸಿಕ್ಕಿದೆಯೇ? ಆದಿವಾಸಿಗಳಲ್ಲಿ ಜಾಗೃತಿ ಮೂಡಿಸಿರುವುದು ನಿರ್ವಿವಾದವಾದರೂ ವ್ಯವಸ್ಥೆಯಿಂದ ಮತ್ತಷ್ಟು ಅವಗಣನೆಗೆ, ಪ್ರಹಾರಕ್ಕೆ, ತಾರತಮ್ಯಕ್ಕೆ ಆದಿವಾಸಿಗಳು ಒಳಗಾಗಲು ಶಸ್ತ್ರಾಸ್ತ್ರ ಸ್ನೇಹ ಕಾರಣವಾಗಿಲ್ಲವೇ? ಬೃಹತ್ ಪ್ರಭುತ್ವದೆದುರು, ಕಂಪನಿಗಳ ಅಂತರರಾಷ್ಟ್ರೀಯ ಹಿತಾಸಕ್ತಿಯೆದುರು ಸ್ಥಳೀಯ ಪ್ರತಿರೋಧ ಅರ್ಥಪೂರ್ಣವಾಗಿದೆಯೆ? ಆದಿವಾಸಿಗಳೇ ಅಭಿವೃದ್ಧಿಯ ಥಳುಕಿಗೆ ಕರಗಿ ಹೋಗುತ್ತಿರುವಾಗ ಅವರನ್ನು ಬೇರೆಯೇ ‘ಪ್ರಜೆ’ಗಳನ್ನಾಗಿಸಿ ಅರಣ್ಯವಾಸಿಗಳಾಗಿಯೇ ಇರಿ ಎನ್ನುವುದು ಸರಿಯೇ? ಮುಗಿಯದ ಅಸಹಾಯಕತೆ ಎದುರಿಸುವ ಆದಿವಾಸಿ ಜನರು ಕೊನೆಗೆ ಹಿಂಸೆಯನ್ನು ಒಪ್ಪಿಕೊಳ್ಳುವಂತಹ ಬದಲಾವಣೆಯಾಗುವುದಕ್ಕೆ ಕಾರಣವಾದರೂ ಯಾವುದು? 

ಮಹಿಳಾ ದೌರ್ಜನ್ಯ ನಾನಾ ಸ್ವರೂಪ-ಪ್ರಮಾಣಗಳಲ್ಲಿ ಹಿಂದೆಂದಿಗಿಂತ ಹೆಚ್ಚಿರುವಾಗ ಅನುರಾಧಾ ಅವರಂತಹ ವ್ಯವಸ್ಥೆಯಲ್ಲಿ ಕರಗಿಹೋಗದ ಹೋರಾಟಗಾರ್ತಿ ನಮ್ಮ ನಿಮ್ಮ ನಡುವೆಯೇ ಕ್ರಿಯಾಶೀಲವಾಗಿದ್ದರೆ; ಅಥವಾ ಆದಿವಾಸಿಗಳ ನಡುವೆಯೇ ಅಡಗುತಾಣಗಳ ಹಂಗಿಲ್ಲದೆ ತಿರುಗಾಡಬಲ್ಲ ವಾತಾವರಣದಲ್ಲಿದ್ದರೆ ಇನ್ನೂ ಹೆಚ್ಚು ಸಾಧಿಸಬಹುದಿತ್ತೆ ಎನಿಸದೇ ಇರುವುದಿಲ್ಲ. ನಕ್ಸಲರ ಜೊತೆ ಮಾತುಕತೆ, ಸಂವಾದ ನಡೆಯುತ್ತಿರುವ; ಆ ಚಳುವಳಿಯೊಳಗೇ ಭಿನ್ನಮತ ಹುಟ್ಟಿಕೊಂಡಿರುವ ಈ ಕಾಲದಲ್ಲಿ ಪರ್ಯಾಯ ನ್ಯಾಯದ ದಾರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ವಿಶ್ಲೇಷಿಸಿ ಸೂಕ್ತ ತಿದ್ದುಪಡಿಗಳೊಂದಿಗೆ ಹೆಣ್ಣುಮಕ್ಕಳು ಮುಂದುವರೆಯಬೇಕಿದೆ. ಕೋಮುವಾದಿ ರಾಜಕಾರಣದ ಢಾಂಭಿಕತೆಯ ಎದುರು ಸೈದ್ಧಾಂತಿಕ ಬದ್ಧತೆಯ ಹಾದಿ ಹಿನ್ನಡೆ ಅನುಭವಿಸುತ್ತಿರುವ ಕಾಲದಲ್ಲಿ ಮುಖ್ಯವಾಹಿನಿಯ ಸಮಾಜದೊಳಗೇ ಹೋರಾಟ ರೂಪಿಸುವುದು ಆಯ್ಕೆಯಾಗಿ ಆ ಚಳುವಳಿಯ ಮುಂದಿದೆ.


ರೋಹಿತ್ ವೆಮುಲ ಅವರ ಒಂದು ಕವಿತೆಯ ಅನುವಾದ

ಮೂಲ: ರೋಹಿತ್ ವೆಮುಲ
ಕನ್ನಡಕ್ಕೆ: ಸಂವರ್ತ 'ಸಾಹಿಲ್'
 

 
 
 
 
 
ಒಂದು ದಿನ
ಮುಂದೊಂದು ದಿನ 
ನಿಮಗೆ ಅರ್ಥವಾಗಲಿದೆ 
ನಾನು ಯಾಕೆ ಆಕ್ರಮಣಕಾರಿ ಆಗಿದ್ದೆ ಎಂಬುದು 
ವ್ಯವಸ್ಥೆಯ ಹಿತಾಸಕ್ತಿಗಳ ತಾಳಕ್ಕೆ
ನಾ ಯಾಕೆ ಕುಣಿಯಲಿಲ್ಲವೆಂದು.

ಒಂದು ದಿನ
ಮುಂದೊಂದು ದಿನ
ಅರ್ಥವಾಗಲಿದೆ ನಿಮಗೆ 
ನಾ ಕ್ಷಮೆ ಯಾಚಿಸಿದ್ದು ಯಾಕೆಂದು
ಬೇಲಿಯ ಪಕ್ಕದಲ್ಲೇ
ಬಲೆ ಹಾಸಿದ್ದಾರೆ ಎಂದು.

ಒಂದು ದಿನ
ಮುಂದೊಂದು ದಿನ
ಕುರೂಪಗೊಂಡು
ನಾ ಸಿಗುವೆನು ನಿಮಗೆ
ಇತಿಹಾಸದ ಮಾಸಿದ ಪುಟದಲ್ಲಿ
ಅದ ನೋಡಿ ನೀವು 
ನಾನು ವಿವೇಕಿ ಆಗಿರಬೇಕಿತ್ತು 
ಎಂದು ಆಶಿಸುವಿರಿ 
ಆ ರಾತ್ರಿ
ನನ್ನ ನೆನೆದು ಮುಗುಳ್ನಗುವಿರಿ
ಅಂದು, ಆ ದಿನದಂದು
ನಾ ಪುನರುಜ್ಜೀವಿಸುವೆ!
***

 
 

(ರೋಹಿತ್ ವೆಮುಲ ಅವರ ಸ್ನೇಹಿತ ಆಯೂಬ್ ರೆಹಮಾನ್ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗೆ ೨೨ ಜೆನವರಿ ೨೦೧೬ರನ್ದು ಬರೆದ ಲೇಖನದಲ್ಲಿ ಸೆಪ್ಟೆಂಬರ್ ೩ರನ್ದು ರೋಹಿತ್ ಬರೆದ ಎಂದು ಹೇಳಲಾದ ಕವಿತೆ)

Friday, January 22, 2016

ಸಂಭ್ರಮದಲ್ಲಿ ಗಿರಡ್ಡಿಯವರ ಬಾಲ ಗಂಗಾಧರ ಅವತಾರ!


ರಂಜಾನ್ ದರ್ಗಾ 

ಧಾರವಾಡದಲ್ಲಿ ‘ಧಾರವಾಡ ಸಾಹಿತ್ಯ ಸಂಭ್ರಮ’ ಆರಂಭವಾಗಿದೆ. ಈ ಬಾರಿಯ ಸಾಹಿತ್ಯ ಸಂಭ್ರಮವನ್ನು ಡಾ. ಕಲಬುರ್ಗಿ ಅವರಿಗೆ ಅರ್ಪಿಸಲಾಗಿದೆ. ಈ ಸುದ್ದಿ ಪ್ರಜಾವಾಣಿ ಮುಖಪುಟದಲ್ಲಿ ಪ್ರಕಟವಾಗಿದೆ.

ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದ ಪ್ರಮುಖ ವಿಷಯ, ಬಹು ಚರ್ಚಿತ ‘ಅಸಹಿಷ್ಣುತೆ’. ಹಿಂದಿನ ಮೂರು ಆವೃತ್ತಿಗಳಲ್ಲಿ ‘ಸಂಭ್ರಮ’ದ ಗೌರವಾಧ್ಯಕ್ಷರಾಗಿ, ಗೋಷ್ಠಿಗಳ ರೂಪುರೇಷೆ ಹಾಗೂ ಕಾರ್ಯಕ್ರಮಗಳ ಆಯೋಜನೆ ಕುರಿತು ಅಮೂಲ್ಯ ಸಲಹೆ-ಸೂಚನೆ ನೀಡಿದ್ದ ಡಾ. ಕಲಬುರ್ಗಿ ‘ಈ ಬಾರಿ ಇಲ್ಲ’ ಎನ್ನುವ ನೋವು ಆಯೋಜಕರನ್ನು ಮಾತ್ರವಲ್ಲ, ಪ್ರತಿವರ್ಷ ಭಾಗವಹಿಸುವ ಪ್ರತಿನಿಧಿಗಳನ್ನೂ ಕಾಡುತ್ತಿದೆ ಎಂದು ಸಂಭ್ರಮ ಟ್ರಸ್ಟ್ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಅವರು ತಿಳಿಸಿದ್ದಾರೆ.

ಕಲಬುರ್ಗಿ ಅವರು ಈ ಬಾರಿಯ ಸಂಭ್ರಮದಲ್ಲೂ ಇರುತ್ತಾರೆ; ಅವರ ಹತ್ಯೆ ಬಿತ್ತಿದ ಭೀತಿ, ಅದರ ಬೆನ್ನಲ್ಲೇ ಭುಗಿಲೆದ್ದ ‘ಅಸಹಿಷ್ಣುತೆ’ ಎಂಬ ಆತಂಕದ ಬಗೆಗಿನ ಚರ್ಚೆಯ ಮೂಲಕ ಎಂದು ಅವರು ನುಡಿದಿದ್ದಾರೆ. ಆದರೆ ಇದೇ ಅಧ್ಯಕ್ಷ ಮಹಾಶಯರು ಮುಂದುವರಿದು ಹೇಳಿದ್ದೇನು ಗೊತ್ತೆ?

”ಕಲಬುರ್ಗಿ ಅವರು ಹಾಕಿಕೊಟ್ಟ ಸಂಶೋಧನೆಯ ಮಾದರಿಯ ಮೂಲಕ ಅಸಹಿಷ್ಣುತೆ ಎನ್ನುವುದು ಬೆಳೆದು, ನಂತರ ಅದುವೇ ಅವರ ಸಾವಿಗೆ ಕಾರಣವಾಗುವಂಥ ಪರಿಸ್ಥಿತಿ ನಿರ್ಮಾಣವಾಯಿತು” ಎಂದು ‘ತೀರ್ಪು’ ನೀಡಿದ್ದಾರೆ.
ಇದೆಂಥ ಸಂಭ್ರಮ? ಇದೆಂಥ ಅರ್ಪಣೆ? ಡಾ. ಗಿರಡ್ಡಿ ಗೋವಿಂದರಾಜ ಅವರು ಇಷ್ಟೊಂದು ಸಂವೇದನಾಹೀನ ವ್ಯಕ್ತಿಯೆ?
ಇನ್ನು ಈ ‘ಸಂಭ್ರಮ’ದ ಆಶಯ ಕೂಡ ವಿಚಿತ್ರವಾಗಿದೆ. ಇ.ಎಸ್. ಸುಧೀಂದ್ರ ಪ್ರಸಾದ್ ಡಾ. ಗಿರಡ್ಡಿ ಗೋವಿಂದರಾಜ ಅವರನ್ನು ಮಾತನಾಡಿಸಿ ಬರೆದ ಈ ಪುಟ್ಟ ಲೇಖನದ ಶೀರ್ಷಿಕೆ ‘ಮಧ್ಯಮ ಮಾರ್ಗಕ್ಕೆ ಬಲ ತುಂಬುವ ಆಶಯ’ ಎಂದಿದೆ. ಈ ‘ಸಂಭ್ರಮ’ ಬುದ್ಧನ ‘ಮಧ್ಯಮ ಮಾರ್ಗ’ದ ಕಡೆಗೆ ವಾಲಿರಬಹುದು ಎಂಬ ಭಾವನೆಯೊಂದಿಗೆ ಓದುತ್ತ ಹೋದಂತೆ ಭ್ರಮನಿರಸನವಾಯಿತು.

ಎಡ ಮತ್ತು ಬಲ ಪಂಥಗಳು ಅತಿರೇಕಕ್ಕೆ ಹೋಗಿ ಹೆಚ್ಚು ಪ್ರಖರವಾಗಿ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ಅವೆರಡರ ನಡುವಿನ ಮಧ್ಯಮ ಮಾರ್ಗವನ್ನು ಅವಲಂಬಿಸಿರುವ ಅನೇಕ ಜನರು ಇದ್ದಾರೆ. ಆದರೆ, ಅವರ ಪ್ರಯತ್ನ ಅಷ್ಟಾಗಿ ಮುಂದಕ್ಕೆ ಬರುತ್ತಿಲ್ಲ. ಈ ಪ್ರಯತ್ನವನ್ನು ಬಲಪಡಿಸುವ ಉದ್ದೇಶ ಈ ಬಾರಿಯ ಸಂಭ್ರಮದ ಆಶಯ ಎಂದು ಡಾ. ಗಿರಡ್ಡಿ ಗೋವಿಂದರಾಜ ಅವರು ಸ್ಪಷ್ಟಪಡಿಸಿದ್ದಾರೆ.

ಏನಿದರ ಮರ್ಮ? ಎಂಬ ಪ್ರಶ್ನೆ ಸಹಜವಾಗಿಯೆ ಏಳುತ್ತದೆ. ಈ ಅವಕಾಶವಾದ ಖಂಡಿತವಾಗಿಯೂ ಯಥಾಸ್ಥಿತಿಯ ಪರವಾಗೇ ಇರುವಂಥದ್ದು. ಇದು ಮಧ್ಯಮ ವರ್ಗದ ಗುಣವಿಶೇಷವೂ ಹೌದು. ಇಂದಿನ ಕಾರ್ಪೊರೇಟ್ ಜಗತ್ತಿಗೆ ಬೇಕಾಗಿರುವುದು ಇಂತ ಮನಸ್ಥಿತಿಯೆ ಎಂಬುದನ್ನು ಒತ್ತಿ ಹೇಳುವ ಅವಶ್ಯಕತೆ ಇಲ್ಲ. ಕಾರ್ಪೊರೇಟ್ ಜಗತ್ತಿಗೆ ದಲಿತ ಮತ್ತು ಎಡಪಂಥೀಯ ಚಳವಳಿಗಳು ಬೇಡ. ಬಲಪಂಥೀಯ ಪ್ರಖರತೆಯನ್ನು ಬೇಕಾದಾಗ ಮಾತ್ರ ಉಪಯೋಗಿಸಿಕೊಳ್ಳುವ ತಂತ್ರಗಾರಿಕೆ ಅವರಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕರಗತವಾಗಿದೆ.

ಅಸಹಿಷ್ಣುತೆಗೆ ಬಲಪಂಥೀಯ ಅತಿರೇಕದ ಕೃತ್ಯಗಳು ಮತ್ತು ಎಡಪಂಥೀಯರ ದುರ್ಬಲ ಪ್ರತಿರೋಧಗಳು ಎಂಬುದು ಭಾರತೀಯ ವರ್ತಮಾನವನ್ನು ಸಹಜವಾಗಿ ನೋಡುವವರಿಗೂ ಅರ್ಥವಾಗುತ್ತದೆ. ಎಡಪಂಥೀಯರು ಪ್ರಬಲವಾಗಿದ್ದರೆ ಖಂಡಿತವಾಗಿಯೂ ಈ ಅಸಹಿಷ್ಣುತೆಯ ಕ್ರೌರ್ಯಕ್ಕೆ ಅವಕಾಶವಿರುತ್ತಿರಲಿಲ್ಲ. ಪರಿಸ್ಥಿತಿ ಹೀಗಿರುವ ಕಾರಣಕ್ಕಾಗಿಯೇ ದೇಶದ ನೂರಾರು ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು ಮತ್ತು ದೇಶರಕ್ಷಕರು ತಮಗೆ ಸಂದ ಗೌರವ ಪ್ರಶಸ್ತಿಗಳನ್ನು ಹಿಂದುರುಗಿಸಿ ಅಸಹಿಷ್ಣುತೆ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಆ ಮೂಲಕ ದೇಶದ ಬಹುತ್ವ ಸಂಸ್ಕೃತಿಯ ರಕ್ಷಣೆಗೆ ತಮ್ಮ ಅಳಿಲು ಸೇವೆ ಸಲ್ಲಿಸಿದ್ದಾರೆ. ನಿಜಕ್ಕೂ ಅವರ ಈ ನಿರ್ಧಾರ ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಯ ಉಳಿವಿಗೆ ಬಹು ದೊಡ್ಡ ಕಾಣಿಕೆಯಾಗಿದೆ. ಸೃಜನಶೀಲ ಸಮುದಾಯ ಇದಕ್ಕಿಂತ ಹೆಚ್ಚಿಗೆ ಇನ್ನೇನು ಮಾಡಲು ಸಾಧ್ಯ? ಇಷ್ಟಾದರೂ ಈ ಸಂಭ್ರಮಿಸುವವರಿಗೆ ಅರ್ಥವಾಗಬಾರದೆ?
ದೇಶದಲ್ಲಿ ದಲಿತರ ಮೇಲೆ, ಮಹಿಳೆಯರ ಮೇಲೆ ಮತ್ತು ಆಹಾರ ಸಂಸ್ಕೃತಿಯ ಮೇಲೆ ಅನ್ಯಾಯ ಅತ್ಯಾಚಾರ ನಡೆಯುತ್ತಿದ್ದರೂ ಎಲ್ಲ ವಾಸ್ತವವನ್ನು ನಿರಾಕರಿಸುತ್ತ ‘ಮಧ್ಯಮ ಮಾರ್ಗ’ ಎಂದು ಹೇಳುವುದರಲ್ಲಿ ಏನಾದರೂ ಅರ್ಥವಿದೆಯೆ? ಏನು ಈ ಮಧ್ಯಮ ಮಾರ್ಗ ಎಂಬುದನ್ನು ಗಿರಡ್ಡಿ ವಿವರಿಸಬಲ್ಲರೆ? ‘ಹಾಗೂ ಸೈ, ಹೀಗೂ ಸೈ’ ಎಂಬುದು ಮಧ್ಯಮ ಮಾರ್ಗವೇ?

ಈ ಮಧ್ಯಮಮಾರ್ಗದ ಅವಕಾಶವಾದಿ ಸಿದ್ಧಾಂತದಿಂದಾಗಿಯೆ ಡಾ. ಕಲಬುರ್ಗಿ ಅವರಿಗೆ ‘ಧಾರವಾಡ ಸಾಹಿತ್ಯ ಸಂಭ್ರಮ’ವನ್ನು ಅರ್ಪಿಸುತ್ತಲೇ, ‘ಕಲಬುರ್ಗಿ ಅವರು ಹಾಕಿಕೊಟ್ಟ ಸಂಶೋಧನೆಯ ಮಾದರಿಯ ಮೂಲಕ ಅಸಹಿಷ್ಣುತೆ ಬೆಳೆಯಿತು’ ಎಂಬ ಧಾಷ್ಟ್ರ್ಯವನ್ನು ತೋರಲು ಗಿರಡ್ಡಿ ಅವರಿಗೆ ಸಾಧ್ಯವಾಯಿತು ಎಂಬುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ.

***ಅಶೋಕ್ ಶೆಟ್ಟರ್ 
ಪ್ರಜಾವಾಣಿ ಪತ್ರಿಕೆಯಲ್ಲಿ ಸುಧೀಂದ್ರ ಪ್ರಸಾದ್ ಅವರ ವರದಿಯಲ್ಲಿ ಪ್ರಸ್ತಾಪವಾದಂತೆ "ಎಂ.ಎಂ.ಕಲಬುರ್ಗಿಯವರು ಹಾಕಿಕೊಟ್ಟ ಸಂಶೋಧನೆಯ ಮಾದರಿಯ ಮೂಲಕ ಅಸಹಿಷ್ಣುತೆ ಎನ್ನುವದು ಬೆಳೆದು. ನಂತರ ಅದುವೇ ಅವರ ಸಾವಿಗೆ ಕಾರಣವಾಗುವಂಥ ಪರಿಸ್ಥಿತಿ ನಿರ್ಮಾಣವಾಯಿತು"..ಎಂದು ಗಿರಡ್ಡಿ ಗೋವಿಂದರಾಜರು ಹೇಳಿದರಂತೆ. ಗಿರಡ್ಡಿ ಗೋವಿಂದರಾಜರು ಯಾರೆಂಬುದು ಗೊತ್ತಿಲ್ಲದವರಿಗೆ ಸಂಕ್ಷಿಪ್ತವಾಗಿ ಹೇಳಬಹುದಾದದ್ದು ಏನೆಂದರೆ ಅವರು ಪ್ರಸ್ತುತ ಧಾರವಾಡದಲ್ಲಿ ನಡೆಯುತ್ತಿರುವ "ಧಾರವಾಡ ಸಾಹಿತ್ಯ ಸಂಭ್ರಮ" ವೆಂಬ ಒಂದು ಖಾಸಗಿ ಟ್ರಸ್ಟ್ ವರ್ಷೇ ವರ್ಷೇ ಆಯೋಜಿಸುವ ಸಾಹಿತ್ಯ-ಸಮಾವೇಶದ ಆಯೋಜಕರು.

ಅದೇ ವರದಿಯ ಪ್ರಕಾರ ಸಾಹಿತ್ಯ ಸಂಭ್ರಮದ ಹಿಂದಿನ ಮೂರು "ಆವೃತ್ತಿ"ಗಳಲ್ಲಿ ಸಂಭ್ರಮದ ಗೌರವಾಧ್ಯಕ್ಷರಾಗಿ ಗೋಷ್ಠಿಗಳ ರೂಪುರೇಷೆ ಹಾಗೂ ಕಾರ್ಯಕ್ರಮಗಳ ಆಯೋಜನೆ ಕುರಿತು ಅಮೂಲ್ಯ ಸಲಹೆ ಸೂಚನೆ ನೀಡಿದ್ದ ಡಾ. ಕಲಬುರ್ಗಿ 'ಈ ಬಾರಿ ಇಲ್ಲ' ಎಂಬ ನೋವೂ ಅವರನ್ನು ಕಾಡುತ್ತಿದೆಯಂತೆ. ಮತ್ತು ಧಾರವಾಡ ಸಾಹಿತ್ಯ ಸಂಭ್ರಮದ ಈ ಆವೃತ್ತಿ ಕಲಬುರ್ಗಿಯವರ ಸ್ಮರಣೆಗೆ ಸಮರ್ಪಿತವಂತೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ಸಂಭ್ರಮದ ಪ್ರಮುಖ ವಿಷಯ ಬಹುಚರ್ಚಿತ "ಅಸಹಿಷ್ಣುತೆ" ಅಂತೆ 

ಅಲ್ಲಿಗೆ 'ಮಧ್ಯಮ ಮಾರ್ಗಿ' ಗಳಾದ ಗಿರಡ್ಡಿಯವರು "ಎಂ.ಎಂ.ಕಲಬುರ್ಗಿಯವರು ಹಾಕಿಕೊಟ್ಟ ಸಂಶೋಧನೆಯ ಮಾದರಿಯ ಮೂಲಕ ಅಸಹಿಷ್ಣುತೆ ಎನ್ನುವದು ಬೆಳೆಯಿತು" ಎನ್ನುವ ಮೂಲಕ ಕಲಬುರ್ಗಿಯವರ ಕುರಿತು ಬೆಲ್ಜಿಯನ್ ಪ್ರೊಫೆಸರ್ ಬಾಲಗಂಗಾಧರ್ ಎಂಬುವರು ತಮ್ಮದೊಂದು ಬರಹದಲ್ಲಿ ಹೇಳಿದ ಮಾತುಗಳನ್ನೇ ಬೇರೆ ಶಬ್ದಗಳಲ್ಲಿ ಹೇಳಿದ್ದಾರೆ.

ಗಿರಡ್ಡಿಯವರು ಪರೋಕ್ಷವಾಗಿ ಕಲಬುರ್ಗಿಯವರು ತಮ್ಮ ಸಾವಿಗೆ ತಾವೇ ಕಾರಣರು ಎಂದಿದ್ದಾರೆ ಅಥವಾ ಪ್ರಜಾವಾಣಿಯ ವರದಿಗಾರರು ಅದನ್ನು ತಪ್ಪಾಗಿ ಗ್ರಹಿಸಿದ್ದಾರೆ..ಪುರುಷೋತ್ತಮ ಬಿಳಿಮಲೆ 

ಮಾನ್ಯ ಗಿರಡ್ಡಿಯವರು ತುಂಬ ತಿಳಿದವರು, ಹಾಗೆ ಹೇಳಬಾರದಿತ್ತು . ಕಲಬುರ್ಗಿ ಅವರು ಕನ್ನಡದ ಮಾಹಿತಿಗಳ ಮೂಲಕವೇ ಕನ್ನಡವನ್ನು ಕಟ್ಟಿದ ಮಹನೀಯ. ಅವರ ಸಂಶೋಧನಾ ವಿಧಾನ ನಮಗೊಂದು ಮಾದರಿ. ಯಾರಿಗಾದರೂ ಅದು ಒಪ್ಪಿತವಲ್ಲದಿದ್ದರೆ, ಅವರು ಅವರ ವಿರುದ್ಧ ಬರೆಯಬಹುದು, ಬದಲು ಗುಂಡು ಹಾರಿಸುವುದಲ್ಲ.

ಸಾಹಿತ್ಯ ಸಂಭ್ರಮದಲ್ಲಿ ಅನೇಕ ಮಹನೀಯರಿದ್ದಾರೆ, ಅವರಿಗಿದು ತಿಳಿದೀತು ಅಂತ ನಾನು ಭಾವಿಸುವೆ.
 
***

ಶ್ರೀನಿವಾಸ ಕಾರ್ಕಳ


***

ಅಲವಿಕಾ ಲಾ

ಅರೆ! ಯಾರ ಸಂಶೋಧನೆಯ ಮಾದರಿಯ ಮೂಲಕ ಅಸಹಿಷ್ಣುತೆ ಬೆಳೆಯಿತು ಅಂತಿದ್ದಾರೋ ಅವರಿಗೇ ಗೋಷ್ಠಿಗಳು ಸಮರ್ಪಿತವೇ!?

Thursday, January 21, 2016

‘ಹೋರಾಟದ ಹಾಡುಗಳ ಕಮ್ಮಟ’ : ಅರ್ಜಿ ಆಹ್ವಾನಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸುತ್ತಿರುವ ‘ಹೋರಾಟದ ಹಾಡುಗಳ ಕಮ್ಮಟ’ದ ಸಾಹಿತ್ಯ ಅಕಾಡೆಮಿಯ ಪ್ರಕಟಣೆ ಮತ್ತು ಅರ್ಜಿ ನಮೂನೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯು, ೨೦೧೬ರ ಫೆಬ್ರವರಿ ೧೦, ೧೧ ಮತ್ತು ೧೨ರಂದು, ಶಿವಮೊಗ್ಗ ಜಿಲ್ಲೆಯ ಸಾಗರದ ದೇವರಾಜು ಅರಸು ಕಲಾಕ್ಷೇತ್ರದಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ, ವಸತಿ ಸಹಿತ ಮೂರು ದಿನಗಳ ರಾಜ್ಯ ಮಟ್ಟದ ‘ಹೋರಾಟದ ಹಾಡುಗಳ ಕಮ್ಮಟ’ವನ್ನು ಡಾ. ಬಿ.ಎಂ. ಪುಟ್ಟಯ್ಯ ಅವರ ನಿರ್ದೇಶನದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದೆ.
* ೧೦ ರಾಜ್ಯದ ಯಾವುದೇ ಜಿಲ್ಲೆಗೆ ಸೇರಿರುವ ಪರಿಶೀಷ್ಟ ಜಾತಿಯ ೨೦ರಿಂದ ೩೦ರ ವಯೋಮಿತಿಯಲ್ಲಿರುವ ವಿದ್ಯಾರ್ಥಿಗಳು, ಶಿಕ್ಷಕರು-ಉಪನ್ಯಾಸಕರು ಅರ್ಜಿ ಸಲ್ಲಿಸಬಹುದು.

* ಆಸಕ್ತ ಅಭ್ಯರ್ಥಿಗಳು ಸಾಮಾಜಿಕ ಹೋರಾಟಗಳ ಬಗ್ಗೆ ತಮಗಿರುವ ತಿಳುವಳಿಕೆಯನ್ನು ಅರ್ಜಿಯೊಂದಿಗೆ ಬರೆದು ಸಲ್ಲಿಸಬೇಕು.

* ವಯಸ್ಸಿಗೆ ಸಂಬಂಧಿಸಿಂತೆ ಎಸ್.ಎಸ್.ಎಲ್.ಸಿ. ಅಂಕಪಟ್ಟಯ ದೃಡೀಕೃತ ಪಟ್ಟಿಯನ್ನು ಲಗತ್ತಿಸಬೇಕು.

* ಜಾತಿಗೆ ಸಂಬಂದಿಸಿಂತೆ ಪರಿಶೀಷ್ಟ ಜಾತಿಯ ದೃಡೀಕೃತ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.

* ೧೦ ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಮೂರು ದಿನಗಳು ಶಿಬಿರದಲ್ಲೇ ವಾಸ್ತವ್ಯ ಮಾಡಬೇಕು.

* ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ ‘ಹೋರಾಟದ ಹಾಡುಗಳ ಕಮ್ಮಟಕ್ಕೆ ಅರ್ಜಿ’ ಎಂದು ನಮೂದಿಸರಬೇಕು.

* ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬಂದು ಹೋಗುವ ರಾಜ ಹಂಸ ಬಸ್ ದರ / ಸಾಮಾನ್ಯ ರೈಲ್ವೆ ದರವನ್ನು ನೀಡಲಾಗುವುದು. ಹಾಗೂ ಮೂರು ದಿನಗಳು ಊಟ, ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು.

* ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ ಸೈಟ್
(http://karnatakasahithyaacademy.org) ನಿಂದ ಪಡೆದುಕೊಳ್ಳಬಹುದು.

* ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಜನವರಿ ೩೧ರ ವೇಳೆಗೆ ಅಕಾಡೆಮಿಯ ವೆಬ್‌ಸೈಟ್ http://karnatakasahithyaacademy.org ನಲ್ಲಿ ಪ್ರಕಟಿಸಲಾಗುವುದು.

* ಆಯ್ಕೆಯಲ್ಲಿ ಅಕಾಡೆಮಿಯ ತೀಮಾನವೇ ಅಂತಿಮ.

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೨೭.೦೧.೨೦೧೬

* ಅರ್ಜಿಯಲ್ಲಿ ಕಡ್ಡಾಯವಾಗಿ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ಇ-ಮೆಯಿಲ್ ವಿಳಾಸ ನಮೂದಿಸಬೇಕು.

* ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.

* ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸಬೇಕು.

ಡಾ. ಬಿ.ಎಂ. ಪುಟ್ಟಯ್ಯ
ಹೋರಾಟದ ಹಾಡುಗಳ ಕಮ್ಮಟದ ನಿರ್ದೇಶಕರು
ಕೇರಾಫ್ / ಕರ್ನಾಟಕ ಸಾಹಿತ್ಯ ಅಕಾಡೆಮಿ
ಕನ್ನಡ ಭವನ, ಜೆ.ಸಿ. ರೋಡ್
ಬೆಂಗಳೂರು - ೫೬೦ ೦೦೨
(೦೮೦-೨೨೨೧೧೭೩೦/ ೨೨೧೦೬೪೬೦)
                                                                                                                               ಸಿ.ಎಚ್. ಭಾಗ್ಯ
                                                                                                                                ರಿಜಿಸ್ಟ್ರಾರ್
ಅರ್ಜಿ ನಮೂನೆ

ಕರ್ನಾಟಕ ಸಾಹಿತ್ಯ ಅಕಾಡೆಮಿ
ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು - ೫೬೦ ೦೦೨
(ವಿಶೇಷ ಘಟಕ ಯೋಜನೆಯಡಿಯಲ್ಲಿ)

ಹೋರಾಟದ ಹಾಡುಗಳ ಕಮ್ಮಟ
ಅರ್ಜಿ


೧    ಅಭ್ಯರ್ಥಿಯ ಹೆಸರು       
೨    ವಯಸ್ಸು, ಜಾತಿ (ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಹಾಗೂ ಜಾತಿ ಪ್ರಮಾಣ ಪತ್ರ ಲಗತ್ತಿಸಿದೆ)       
೩    ಉದ್ಯೋಗ       
೪    ಸಂಪರ್ಕ ವಿಳಾಸ       
೫    ಮೊಬೈಲ್ ಸಂಖ್ಯೆ       
೬    ಇ-ಮೆಯಿಲ್       
೭    ಸಾಹಿತ್ಯ ಅಕಾಡೆಮಿಯ ಯಾವುದೇ ಕಮ್ಮಟದಲ್ಲಿ ಭಾಗವಹಿಸಿದ್ದರೆ ಅದರ ವಿವರಗಳು       
೮    ಇತರೆ ಆಸಕ್ತಿಗಳು       


ಅಭ್ಯರ್ಥಿಯ ಸಹಿ
ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...