Wednesday, July 30, 2014

ಅಬ್ಬ ಮತ್ತೂ..


ಆಘಾ ಶಾಹಿದ್ ಆಲಿ 
                   ಕಾಶ್ಮೀರಿ ಕವಿ 


Akarsha Kamala


ಕನ್ನಡಕ್ಕೆ: ಆಕರ್ಷ ಕಮಲಾ 


ನನ್ನ ಅಬ್ಬ ಸತ್ತದ್ದು
ಸಂದಣಿಯಲ್ಲಿ,
ಒಂದು ಗುಂಡೇಟಿನಿಂದ!
ಟ್ರೈನಿನ ಕಿಟಕಿಯಿಂದಾಚೆಗೆ ಕಣ್ಣುಗಳು ಹೊರಳುತ್ತಿರುವಾಗ...
ಅಬ್ಬಾ....ಎಂಥಾ ಗುರಿ
ಸಾಗುತ್ತಿರುವ ಟ್ರೈನಿನ ಕಬ್ಬಿಣದೊಳಗಿಂದ
ಸೀದಾ ನುಸುಳಿಬಂದ
ಒಂದು ಸಣ್ಣ ಬುಲೆಟ್; ಅವನ ಎಡಗಣ್ಣು ..
ಧೂಳಿನ ಕಣದಂತೆ ಕಂಡಿತ್ತು
ಕಣ್ಣುಜ್ಜುತ್ತಾ ....
ಸೀಳಿತ್ತು ಬುರುಡೆ!
ನಂಬಲಾಗದ ಸತ್ಯ.
ಒಂದು ಸಣ್ಣ ಧೂಳ ಕಣ
ನನ್ನ ಅಬ್ಬನನ್ನೇ ಧೂಳಾಗಿಸಿತ್ತು...
ಅಚ್ಚರಿ...
ಸಾಗರದಂಥ ನೀಲ ಕಣ್ಣುಗಳ,
ಕಿಟಕಿಯ ಬದಿಯಲ್ಲಿ ,ಆ ಟ್ರೈನಿನಲ್ಲಿ,
ಅದೊಂದು ಸಣ್ಣ ಬುಲೆಟ್ ನ ಹಾದಿಯಲ್ಲೇ,
ಕುಳಿತಿದ್ದ ನನ್ನ ಅಬ್ಬ.
ಶಾಲುಗಳನ್ನು ಮಾರಿ
ಮನೆಗೆ ತೆರಳುತ್ತಾ ಹಣವನ್ನು ಎಣಿಸುತ್ತಿದ್ದನೇನೋ!
ಮೊದಲು ಕಣ್ಣು ,
ನಂತರ ಬುರುಡೆ,
ಆಮೇಲೆ ಅವನ ಚೀತ್ಕಾರ
ಉಹೂ , ಚೀರುವಷ್ಟು ಅವಧಿ ಇರಲಿಲ್ಲವೇನೋ !
ಅತ್ಯಾಶ್ಚರ್ಯ ........
ಎಲ್ಲವೂ ಒಂದೇ ಕಾಲದಲ್ಲೇ ನಡೆದುಹೋದ ಆ ಕ್ಷಣ !
ಸಾಗುತ್ತಿದ್ದ ಟ್ರೈನು, ನುಸುಳಿಬಂದ ಬುಲೆಟ್, ಸಾಗರದ ಕಣ್ಣುಗಳ ನನ್ನ ಅಬ್ಬ.
ಗುರಿ ಇಟ್ಟವ,
ತನ್ನದೆಲ್ಲಕ್ಕಾಗಿ ಹಂಬಲಿಸುತ್ತಿದ ಯೋಧ
ಮಗುವಿಗೆ ಜನ್ಮನೀಡುತ್ತಲೇ ಅಸುನೀಗಿದ ಹೆಂಡತಿ
ಮೂರೂ ನಡೆದು ಹೋಗಿದ್ದವು
ಮೂರು ಸತ್ತಿದ್ದವು
ಅಥವಾ ನಾಲ್ಕೇನೋ
ಆ ಮಗು, ಆ ತಾಯಿ , ಆ ಸಾಗರದ ಕಣ್ಣುಗಳ ಮನುಷ್ಯ
ಮತ್ತೆ ಆ ಯೋಧ
ತನ್ನ ಬುರುಡೆಗೇ ಗುರಿಯಿಟ್ಟುಕೊಂಡು ಸತ್ತಿದ್ದ
ರುಂಡ ಸಿಡಿದಿತ್ತು ಟೊಪ್ಪಿಗೆಯಲ್ಲಿ
ಮತ್ತವನ ಕಣ್ಣು ಬದುಕಿನತ್ತ ದೃಷ್ಟಿ ಹಾಯಿಸಿತ್ತು
ನಾನು ಸತ್ತಾಗ
ಅಬ್ಬನನ್ನು ಕೇಳಿದ್ದೆ
ತುಂಬಾ ನೋವಾಗಿತ್ತ ??
ಅಷ್ಟೇನಿಲ್ಲ , ಕ್ಷಣಿಕ ಎಂದಿದ್ದ:
ಅಳುಕಿನಿಂದಲೇ ಅವನೂ ಕೇಳಿದ್ದ
"ಫಾತಿಮಾ, ನಿನ್ನ ಅನುಭವ ಹೇಗಿತ್ತು ?"
"ತೀವ್ರವಾಗಿತ್ತು ", ನಾನೆಂದುಕೊಂಡೆ
ಗುಡ್ದದಾಚೆಗಿನ ಯೋಧ ನನ್ನ ಕಂಬಳಿಯನ್ನೇ ಕದ್ದಿದ್ದ
ನಿಜ ಹೇಳಬೇಕೆಂದರೆ ಹಿಮದಡಿಯಲ್ಲಿ ಸತ್ತಿದ್ದೆ.
"ಒಂದು ಸಹಜ ಸಾವು,.
ಎಲ್ಲಾ ದೈವ ಕೃಪೆ! ಈ ಕಣಿವೆಯಲ್ಲಿ ಒಂದು ಸಹಜ ಸಾವು" ಅಬ್ಬ ನುಡಿದಿದ್ದ
ಹೂ , ಸಹಜ ಎಂದುಕೊಂಡೆ
ಹಿಮಕ್ಕೆ ಮೈ ಒರಗಿ ಸಾಯುವುದು ಒಂದು ಸಹಜ ಸಾವು
ಆದರೆ..
ಅಲ್ಲೊಂದು .................. ಇರಲಿಲ್ವ
ನಿಜ ತಂದೆಗೆ ಈ ಪ್ರಶ್ನೆ ಕೇಳುವುದುಕ್ಕೆ
ಮುಜುಗರನೇ
ಅದಕ್ಕೆ ನಾನೇ ಖಾಲಿ ಹಾಳೆಗಳನ್ನೆಲ್ಲಾ
ತುಂಬಿಕೊಂಡೆ : ಅತ್ಯಾಚಾರ
ಹೌದು ಅತ್ಯಾಚಾರ
ಅಲ್ಲೊಂದು ದುಃಖ ಮಡುಗಟ್ಟಿತ್ತು
ನಾನು ಹಿಮಕ್ಕೆ ಮೈ ಒರಗಿಸಿಕೊಂಡು ಸತ್ತವಳಲ್ಲ
ಆ ಯೋಧ ಕಂಬಳಿಯನ್ನೇ ಕಸಿದಿದ್ದ
ರಕ್ತಸ್ರಾವವಾಗಿತ್ತು ....
ರಕ್ತ ಹೆಪ್ಪುಗಟ್ಟಿ ಸತ್ತಿದ್ದೆ
ಸಹಜನೇ ಅಲ್ವ , ರಕ್ತ ಹಿಮದಲ್ಲಿ ಹೆಪ್ಪುಗಟ್ಟುತ್ತದೆ
ಅದೇ ಆ ಕ್ಷಣದಲ್ಲೇ ಅವನ ಹೆಂಡತಿ , ಮಗುವಿಗೆ ಜನ್ಮ ನೀಡುತ್ತಲೇ ಸತ್ತಿದ್ದಳು
ಈ ಬಾರಿ ಮಗುವೂ ಅವನದಾಗಿರ್ಲಿಲ್ಲ
ಆ ಕ್ಷಣದಲ್ಲೇ ಅವನು ಉದ್ರಿಕ್ತನಾಗಿದ್ದ
ನನ್ನನ್ನೇನು ಬಲಾತ್ಕಾರ ಮಾಡಿರಲಿಲ್ಲ
ಅವನ ಸತ್ತ ಹೆಂಡತಿಯನ್ನು ಬಲಾತ್ಕಾರ ಮಾಡಿದ್ದ
ಮೂರೂ ನಡೆದು ಹೋಗಿದ್ದವು
ಮೂರು ಸತ್ತಿದ್ದವು
ಅಥವಾ ನಾಲ್ಕೇನೊ
ಆ ಹುಡುಗಿ , ಆ ಹೆಂಡತಿ , ಆ ಮಗು ಮತ್ತೆ ಆ ಮನುಷ್ಯ
ಹೆಣವೊಂದು ಶವದ ಮೇಲೆ ಸೃಷ್ಟಿಯ ಹೆಣ್ಣಿನ ಮೂಲಕ
ನನ್ನನ್ನ ಅತ್ಯಾಚಾರ ಮಾಡಿದ್ದ
ನಾ ಅವನನ್ನ
ಅವನ ಭಯ ...... ಅವನ ಪ್ರತೀಕಾರ
ನನ್ನನ್ನು ಕೆಡಿಸಿದ್ದಕ್ಕಿಂತ ಹೆಚ್ಚು
ನಾನು ಅವನನ್ನ ಕೆಡಿಸಿದ್ದೆ
ಹೆಣ್ಣ್ತನಕ್ಕೆ ಗುರಿಯಿಟ್ಟು ಕಂಬಳಿ ಕಸಿದಿದ್ದ
ಅವನ ಬುಲೆಟ್ ನನ್ನನ್ನೇನು ಸಾಯಿಸಿರಲಿಲ್ಲ
ಆದರೆ ಮೈಕೊರೆವ ಚಳಿ ಸಾಯಿಸಿತ್ತು
ಸಹಜವಾಗಿಯೇ
ಖಂಡಿತ ಒಂದು ಸಹಜವಾದ ಸಾವು ..
ನಂಬಲಾಗದ ಸತ್ಯ... ಆ ಯೋಧ
ನಾ ಸತ್ತ ರಾತ್ರಿಯೇ ಅವನೂ ಸತ್ತಿದ್ದ
೧೯ರ ಹರೆಯದ ಹುಡುಗ
ಕೈಯ್ಯ ಮೇಲೆ ಇನ್ನು ಕೂದಲು ಕೂಡ ಬೆಳೆದಿರಲಿಲ್ಲ
ಅವನಿಗೂ ನೀಲ ಸಾಗರದ ಕಣ್ಣುಗಳೇ
ಥೇಟ್ ರಿಜ್ವಾನಿನ ಥರ
ರಿಜ್ವಾನನ್ನು ಮಲಗಿಸಿದ ಹಾಗೇ ಇತ್ತು.
ಮದುವೆಯಾದ ಹುಡುಗ,
ಸತ್ತ ಯೋಧ,
ಅತ್ಯಾಚಾರಕ್ಕೊಳಗಾದ ಅತ್ಯಾಚಾರಿ
ಇವರೇ ನಮಗೆ ಕಾವಲು
ಇವರೇ ಈ ಸ್ವರ್ಗದ ರಕ್ಷಕರು

ಸಂವೇದನೆಯ ನೆಲೆಯನ್ನರಸುತ್ತಾ...

ನಾ. ದಿವಾಕರ

 ಸಂವೇದನೆಯ ನೆಲೆಯನ್ನರಸುತ್ತಾ...

 

 

ಮಾನವ ಸಮಾಜದ ಅಭ್ಯುದಯ ಮತ್ತು ಚಲನೆಯ ಇತಿಹಾಸವನ್ನು ಅವಲೋಕಿಸಿದಾಗ ಮನುಕುಲ ಹಲವು ಹಂತಗಳನ್ನು ದಾಟಿ, ಹಲವು ಮುಗ್ಗಟ್ಟು, ಬಿಕ್ಕಟ್ಟುಗಳನ್ನು ನಿವಾರಿಸಿ, ಹಲವಾರು ತೊಡಕುಗಳನ್ನು ಪರಿಹರಿಸಿ ಮುನ್ನಡೆದಿರುವುದು ಕಂಡುಬರುತ್ತದೆ. ಮನುಜ ಸಹಜ ಎನಿಸುವ ಕೆಲವು ಪ್ರವೃತ್ತಿಗಳು ಸಾಮುದಾಯಿಕ ನೆಲೆಯಲ್ಲಿ ಸಂಸ್ಕೃತಿಯ ರೂಪ ಪಡೆಯುತ್ತವೆ. ಸಾಂಸ್ಕೃತಿಕ ತಳಹದಿಯ ನಿರ್ಮಾಣ ಮತ್ತು ಅಭ್ಯುದಯದ ನೆಲೆ ತನ್ನದೇ ಆದ ಸಾಮುದಾಯಿಕ ಅಸ್ಮಿತೆಗಳ ಚೌಕಟ್ಟಿನೊಳಗೆ ಸಿಲುಕಿದಾಗ ಅಲ್ಲಿ ಒಂದು ನಾಗರೀಕತೆ ರೂಪುಗೊಳ್ಳುತ್ತದೆ.

 ಸಾಮಾನ್ಯವಾಗಿ ಒಂದು ನಿರ್ದಿಷ್ಟ ಪ್ರದೇಶದ ಜನಸಮುದಾಯಗಳ ಜೀವನ ಶೈಲಿ, ಸಾಂಸ್ಕೃತಿಕ ನೆಲೆಗಳು ಸಾಮಾಜಿಕ ಮೌಲ್ಯಗಳಾಗಿ ಪರಿವರ್ತಿತವಾದ ಸಂದರ್ಭದಲ್ಲಿ ನಾಗರಿಕತೆ ತನ್ನದೇ ಆದ ಆಂತರಿಕ ಮತ್ತು ಬಾಹ್ಯ ಸ್ವರೂಪ ಪಡೆಯುತ್ತದೆ. ಹೀಗೆ ರೂಪುಗೊಂಡ ನಾಗರಿಕತೆಯ ಒಡಲಲ್ಲಿ ಅಂತರ್ಗತವಾಗಿರುವ, ಆಳವಾಗಿ ಬೇರೂರಿರುವ ಜನಸಮು ದಾಯಗಳ ಮೂಲ ಪ್ರವೃತ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳು ತಮ್ಮ ಬಾಹ್ಯ ಸ್ವರೂಪವನ್ನು ಕಳೆದುಕೊಂಡರೂ ಆಂತರಿಕ ಸ್ವರೂಪವನ್ನು ಉಳಿಸಿಕೊಂಡಿರುತ್ತದೆ. ಬೆಳೆಸಿಕೊಳ್ಳುತ್ತಲೂ ಇರುತ್ತದೆ. ಸಮಕಾಲೀನ ಭಾರತೀಯ ಸಮಾಜದಲ್ಲಿ ಈ ದೇಶದ ಮಹಿಳೆಯರು, ದಲಿತರು, ಶೋಷಿತ ವರ್ಗ ಗಳು ಎದುರಿಸುತ್ತಿರುವ ದೌರ್ಜನ್ಯ, ಕಿರುಕುಳ ಮತ್ತು ಚಿತ್ರಹಿಂಸೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಭಾರತೀಯ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಒಳಸುಳಿವು ನಮ್ಮನ್ನು ನಾಗರಿಕತೆಯತ್ತ ಕೊಂಡೊಯ್ಯುತ್ತದೆ.

 ನಿರ್ಭಯ ಮತ್ತು ಸೌಜನ್ಯಾ ಪ್ರಕರಣಗಳು ದೇಶದ ಸುಪ್ತ ಮಹಿಳಾ ಪ್ರಜ್ಞೆಯನ್ನು ಜಾಗೃತಗೊಳಿಸಿವೆ. ಪ್ರಭುತ್ವ ಮತ್ತು ಆಡಳಿತಾರೂಢ ಸರಕಾರಗಳ ಕಾನೂನಾತ್ಮಕ ಪ್ರತಿಸ್ಪಂದನ ಎಷ್ಟೇ ಸಕಾರಾತ್ಮಕವಾಗಿ ಕಂಡರೂ ಭಾರತೀಯ ಮಹಿಳೆಯರು ತಮ್ಮ ಸ್ವಾಭಿಮಾನ, ಘನತೆ, ಗೌರವಗಳನ್ನು ರಕ್ಷಿಸಿಕೊಳ್ಳಲು ಕಾನೂನಿನ ಆಶ್ರಯವನ್ನೇ ಅವಲಂಬಿಸುವುದು ಅಸಾಧ್ಯ ಎಂದು ಕಳೆದ ಒಂದು ವರ್ಷದಲ್ಲಿ ಸ್ಪಷ್ಟವಾಗಿದೆ. ಮಹಿಳೆ ಎದುರಿಸುತ್ತಿರುವ ಸಮಸ್ಯೆ ಸಂಸ್ಕೃತಿ ಮತ್ತು ನಾಗರಿಕತೆಗೆ ಸಂಬಂಧಿಸಿದ್ದು. ಕಾನೂನುಗಳನ್ನು ರೂಪಿಸುವ ಪ್ರಭುತ್ವದ ಪ್ರತಿನಿಧಿಗಳಲ್ಲಿ ಮಹಿಳಾ ಸಂವೇದನೆ ಇಲ್ಲದಿದ್ದಲ್ಲಿ ಕಾನೂನು ಅನುಷ್ಠಾನ ಸೊರಗುತ್ತದೆ. ಇದು ಚಾರಿತ್ರಿಕ ಸತ್ಯ. ಭಾರತದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಮತ್ತು ರಾಜ್ಯಗಳ ಶಾಸನ ಸಭೆಗಳಲ್ಲಿ ಪುರುಷ ಸಮಾಜವನ್ನು ಮೇಳೈಸುವ, ಮೆರೆಸುವ ಒಂದು ಪ್ರವೃತ್ತಿ ನಿರಂತರವಾಗಿ ವ್ಯಕ್ತವಾಗುತ್ತಲೇ ಬಂದಿದೆ. ಈ ಪುರುಷ ಸಮಾಜ ಅಥವಾ ಪುರುಷ ಪ್ರಧಾನ ಸಮಾಜದಲ್ಲಿ ರೂಪುಗೊಳ್ಳುವ ಕಾನೂನುಗಳು ಎಷ್ಟೇ ಕ್ರಾಂತಿಕಾರಿಯಾಗಿ ಕಂಡುಬಂದರೂ ನಿರ್ಭಯ, ಸೌಜನ್ಯಾ, ಇರೋಮ್ ಶರ್ಮಿಳಾ ಮುಕ್ತರಾಗುವುದಿಲ್ಲ.

ಹಾಗಾಗಿಯೇ ನಮ್ಮ ಸಮಾಜದಲ್ಲಿ ದಲಿತರು ಎದುರಿಸುವಷ್ಟೇ ದೌರ್ಜನ್ಯ, ಆಕ್ರಮಣಗಳನ್ನು ಮಹಿಳೆಯರೂ ವಿಭಿನ್ನ ರೀತಿಯಲ್ಲಿ, ವಿಭಿನ್ನ ಆಯಾಮಗಳಲ್ಲಿ ಎದುರಿಸುತ್ತಾರೆ. ಮೇಲ್ಜಾತಿಯ ಮಹಿಳೆಯರಿಗಿಂತಲೂ ದಲಿತ ಮಹಿಳೆಯರು ಹೆಚ್ಚಿನ ದೌರ್ಜನ್ಯ ಎದುರಿಸುತ್ತಾರೆ. ಶರತ್‌ಚಂದ್ರ ಚಟರ್ಜಿ ತಮ್ಮ ನಾರಿಯ ಸ್ಥಾನ (1924) ಎಂಬ ಲೇಖನದಲ್ಲಿ (ಕೃ. ಪ್ರತಿರೋಧ ಅನು. ಕುಮಾರಪ್ಪ) ಹೀಗೆ ಹೇಳುತ್ತಾರೆ. ‘‘ಹೆಂಡತಿ ನಿನ್ನ ಸಂಪತ್ತು, ಗಂಡ ಎನಿಸಿಕೊಂಡ ಒಂದೇ ಕಾರಣಕ್ಕೆ ಸಮಯ ಬಿದ್ದಾಗ ಅವಳ ನಾರಿ ಧರ್ಮದ ಮೇಲೆ ಅತ್ಯಾಚಾರ ಎಸಗುವ, ಆಕೆಯನ್ನು ಮಾರಾಟ ಮಾಡುವ ನಿನ್ನ ಈ ಸ್ವೇಚಾಚಾರ ಪುರುಷ ಜನಾಂಗವನ್ನು ಹೀನಾಯಗೊಳಿಸಿದೆ. ಎಂದು ಹೇಳುತ್ತಾರೆ. ಮತ್ತೊಂದೆಡೆ ಶರತ್‌ಚಂದ್ರರು ‘‘ಭಾರತೀಯ ಸಮಾಜದಲ್ಲಿ ನಾರಿಯ ಗೌರವ ನಿಲ್ಲುವುದು ಆಕೆಯ ವ್ಯಕ್ತಿತ್ವದ ಮೇಲಲ್ಲ, ಬದಲಾಗಿ ಪುತ್ರ ಸಂತಾನದ ಮೇಲೆ. ಪುರುಷರ ದೃಷ್ಟಿಯಲ್ಲಿ ನಾರಿಯ ಬದುಕಿನ ಉದ್ದೇಶ ಇದೊಂದೇ ಆಗಿದೆ’’ ಎಂದೂ ಹೇಳುತ್ತಾರೆ. ಸಮಕಾಲೀನ ಸಂದರ್ಭದಲ್ಲಿ ದೆಹಲಿಯ ನಿರ್ಭಯ, ಧರ್ಮಸ್ಥಳದ ಸೌಜನ್ಯಾ, ಮುಂಬೈನ ಪತ್ರಿಕಾ ಛಾಯಾಗ್ರಾಹಕಿ, ಅಸ್ಸಾಂನ ಮಹಿಳೆ, ಸೇನೆಯ ದೌರ್ಜನ್ಯಕ್ಕೆ ತುತ್ತಾದ ಮನೋರಮಾ, ಅತ್ಯಾಚಾರಕ್ಕೊಳಗಾದ ಐದು ವರ್ಷದ ಹಸುಳೆ, ಬೆಂಗಳೂರಿನಲ್ಲಿ ನಡೆದ ಸರಣಿ ಅತ್ಯಾಚಾರದ ಪ್ರಕರಣಗಳು ಹೀಗೆ ದೌರ್ಜನ್ಯಕ್ಕೊಳಗಾದ ನಾರಿಯರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. 

ಈ ಎಲ್ಲ ನಾರಿ ಸಂತತಿಯ ಪ್ರತಿನಿಧಿಗಳು, ಕಠಿಣ ಕಾನೂನು, ಸಾಮಾಜಿಕ ಜಾಗೃತಿ, ಸಾಂಸ್ಕೃತಿಕ ಹಿರಿಮೆ, ಧಾರ್ಮಿಕ ಗರಿಮೆ ಇದ್ದಾಗ್ಯೂ ಸತತವಾಗಿ ಅತ್ಯಾಚಾರಕ್ಕೊಳಗಾಗುತ್ತಿರುವ ಕಾರಣಗಳನ್ನು ಶೋಧಿಸಿದಾಗ ಶರತ್‌ಚಂದ್ರರ ಈ ಮಾತುಗಳು ಹೆಚ್ಚು ಪ್ರಸ್ತುತ ಎನಿಸುತ್ತವೆ. ಪುರುಷ ಸಮಾಜ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ನೋಡುತ್ತದೆ ಎಂಬ ಸಾಮಾನ್ಯ ವಾದ ವ್ಯಾಖ್ಯಾನವನ್ನು ಮತ್ತಷ್ಟು ವಿಸ್ತರಿಸಬೇಕಿದೆ. ಏಕೆಂದರೆ ಭಾರತದ ಪಿತೃಪ್ರಧಾನ ವ್ಯವಸ್ಥೆ ತನ್ನ ಶ್ರೇಷ್ಠತೆಯ ಅಹಮಿಕೆಯಿಂದ ಮಹಿಳೆಯನ್ನು ಮತ್ತಷ್ಟು ನಿಕೃಷ್ಟವಾಗಿ ನೋಡಲಾರಂಭಿಸಿದೆ. ಕಳೆದ ಒಂದು ದಶಕಗಳಲ್ಲಿ ಹೆಚ್ಚು ತ್ತಿರುವ ಅಗೌರವಯುತವಾದ ಗೌರವಹತ್ಯೆಗಳು ಇದರ ಸಂಕೇತವಾಗಿ ಕಾಣುತ್ತದೆ. ಒಂದು ಕೌಟುಂಬಿಕ ಚೌಕಟ್ಟಿನಲ್ಲಿ, ಸಂಬಂಧಗಳ ಸರಳುಗಳಲ್ಲಿ ಮಹಿಳೆಯನ್ನು ಬಂಧಿಸುತ್ತಿದ್ದ ಭಾರತೀಯ ಸಮಾಜ ಈಗ ಆಕೆಯನ್ನು ಸಾಮುದಾಯಿಕ ಹಾಗೂ ತತ್ಸಂಬಂಧಿ ಸಾಂಸ್ಕೃತಿಕ ಚೌಕಟ್ಟಿನೊಳಗೆ ಬಂಧಿಸಲು ಯತ್ನಿಸುತ್ತಿದೆ. ಸಾಮುದಾಯಿಕ ನೆಲೆಯಲ್ಲಿ ಜಾಗೃತಗೊಳ್ಳುವ ಪುರುಷ ಸಮಾಜ ಮಹಿಳೆಯನ್ನು ನೋಡುವ ವಿಧಾನವೇ ಭಿನ್ನವಾಗಿರುತ್ತದೆ. ಹಾಗಾಗಿಯೇ ಸಮಾಜದಲ್ಲಿ ಒಂಟಿ ಮಹಿಳೆಯರನ್ನು ಅಬಲೆಯರಂತೆಯೇ ಕಾಣಲಾಗುತ್ತದೆ.

ಗುರುತು ಪತ್ರ

ಮೂಲ ಅರೇಬಿ: ಮೊಹಮ್ ಡರ್ವಿಸ್
ಕನ್ನಡಕ್ಕೆ: ಉದಯ್ ಇಟಗಿ


ಕವನದ ಹಿನ್ನೆಲೆ: ಮೊಹಮ್ ಡರ್ವಿಸ್ ಪ್ಯಾಲೈಸ್ತೀನಾದ ಪ್ರಸಿದ್ಧ ಕವಿ. ಹುಟ್ಟಿದ್ದು 1941ರಲ್ಲಿ ಪ್ಯಾಲೈಸ್ತೀನಾದ ಆಲ್-ಬಿರ್ವಿ ಎನ್ನುವ ಒಂದು ಸಣ್ಣ ಹಳ್ಳಿಯಲ್ಲಿ. 1948 ರಲ್ಲಿ ಇಸ್ರೇಲಿಯರು ಈತನ ಊರಾದ ಆಲ್-ಬಿರ್ವಿಯನ್ನು ಆಕ್ರಮಿಸಿಕೊಂಡಿದ್ದರಿಂದ ಅವರಿಗೆ ಹೆದರಿ ಈತನ ಕುಟುಂಬ ಲೆಬನಾನ್ಗೆ ಓಡಿಹೋಗುತ್ತದೆ. ಒಂದು ವರ್ಷ ಬಿಟ್ಟು ಮತ್ತೆ ಅವರು ತಮ್ಮ ಊರಿಗೆ ವಾಪಾಸಾದಾಗ ಈತನ ಊರು ಸೇರಿದಂತೆ ಹಲವು ಊರುಗಳು ಇಸ್ರೇಲಿಯರ ದಾಳಿಗೆ ನಾಶವಾಗಿ ಅವರ ಹಿಡಿತದಲ್ಲಿ ಸಿಕ್ಕಿಕೊಳ್ಳುತ್ತವೆ. ಆಗ ಡರ್ವಿಸ್ ಕುಟುಂಬ ಬೇರೊಂದು ಹಳ್ಳಿಯಲ್ಲಿ ನೆಲೆಸುತ್ತದೆ. ಮೂಲಕ ಅವರು ತಮ್ಮದೇ ನೆಲದಲ್ಲಿ ಪರಕೀಯರಾಗಿ ಜೀವಿಸುತ್ತಾರೆ. ತಮ್ಮದೇ ನೆಲದಲ್ಲಿ ತಮಗೆ ಸ್ಥಾನಪಲ್ಲಟವಾಗಿದ್ದನ್ನು ಹಾಗೂ ತಮ್ಮ ಗುರುತು ಅಳಿಸಿಹೋಗುವದನ್ನು ಕವಿ ಇನ್ನಿಲ್ಲದಂತೆ ಅನುಭವಿಸುತ್ತಾನೆ. ಹಾಗೆಂದೇ ಅವನ ಕವನಗಳು 1948ರಲ್ಲಿ ಉಂಟಾದ ಆಪತ್ತಿನಿಂದ ಪ್ಯಾಲೈಸ್ತೀನಿಯನ್ನರು ಅನುಭವಿಸಿದ ನಷ್ಟಗಳನ್ನು ಹಾಗೂ ಅವರ ಮೇಲೆ ಇಸ್ರೇಲಿಯರು ನಡೆಸಿದ ಸಾಂಸ್ಕೃತಿಕ ಮತ್ತು ರಾಜಕೀಯ ದಬ್ಬಾಳಿಕೆಯನ್ನು ಚಿತ್ರಿಸುತ್ತವೆ. ಪ್ರಸ್ತುತ ಕವನದಲ್ಲಿ ಕವಿಯು ಇಸ್ರೇಲಿಯರು ಪ್ಯಾಲೈಸ್ತೀನಿಯನ್ನರ ಗುರುತನ್ನು ಅಳಿಸಿಹಾಕುವ ಪ್ರಯತ್ನಗಳಿಗೆ ತೀವ್ರ ವಿರೋಧವನ್ನು ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತಾನೆ.


ಬರೆದುಕೊಳ್ಳಿ!
ನಾನೊಬ್ಬ ಅರೇಬಿ
ನನ್ನ ಗುರುತು ಪತ್ರದ ಸಂಖ್ಯೆ ಐವತ್ತು ಸಾವಿರ
ನನಗೆ ಎಂಟು ಜನ ಮಕ್ಕಳು
ಒಂಬತ್ತನೆಯದು ಬೇಸಿಗೆಯ ನಂತರ ಬರುತ್ತದೆ.
ನಿಮಗೆ ಕೋಪವೇ?

ಬರೆದುಕೊಳ್ಳಿ!
ನಾನೊಬ್ಬ ಅರೇಬಿ
ನಾನು ನನ್ನ ಗೆಳೆಯರೊಟ್ಟಿಗೆ
ಕಲ್ಲುಗಣಿಯಲ್ಲಿ ಕೆಲಸ ಮಾಡುವವ
ನನಗೆ ಎಂಟು ಜನ ಮಕ್ಕಳು
ಅವರೆಲ್ಲರ ಊಟ, ವಸತಿ,
ಓದು, ಬಟ್ಟೆಬರೆಯೆಲ್ಲವನ್ನೂ
ಕಲ್ಲುಗಣಿ ದುಡಿಮೆಯಲ್ಲಿಯೇ
ತೂಗಿಸುತ್ತೇನೆ.
ನಿಮಗೆ ಕೋಪವೇ?
ನಾನು ನಿಮ್ಮ ಮನೆಯ
ಬಾಗಿಲಿಗೆ ಬಂದು ಭಿಕ್ಷೆ ಬೇಡುವದಿಲ್ಲ.
ಅಥವಾ ನಿಮ್ಮ ಕಾಲಿಗೆ ಬಿದ್ದು
ಕರುಣೆ ತೋರಿಸೆಂದು ಬೇಡಿ
ಸಣ್ಣವನಾಗುವದಿಲ್ಲ.
ಅದಕ್ಕೇ ನಿಮಗೆ ಕೋಪವೇ?

ಬರೆದುಕೊಳ್ಳಿ!
ನಾನೊಬ್ಬ ಅರೇಬಿ
ಬಿರುದು ಬಾವಲಿಗಳಿಲ್ಲದ
ಸಾಧಾರಣ ಮನುಷ್ಯ.
ರೊಚ್ಚಿಗೆದ್ದ ಜನರ ನಾಡಿನಲ್ಲಿ
ತಾಳ್ಮೆಯಿಂದ ಕಾಯುತ್ತಿದ್ದೇನೆ.
ನನ್ನ ಹುಟ್ಟಿಗಿಂತ ಮೊದಲೇ
ನಾನಿಲ್ಲಿ ಬೇರು ಬಿಟ್ಟಿದ್ದೇನೆ
ಅಷ್ಟೇ ಏಕೆ ಯುಗಗಳು ಆರಂಭವಾಗುವದಕ್ಕೆ ಮುಂಚೆ,
ಪೈನ್ ಮತ್ತು ಆಲಿವ್ ವೃಕ್ಷಗಳು ಹುಟ್ಟುವ ಮುಂಚೆ
ಹಾಗೂ ಹುಲ್ಲು ಹುಟ್ಟುವ ಮೊದಲೇ
ನಾನಿಲ್ಲಿ ಗಟ್ಟಿಯಾಗಿ ನೆಲೆಯೂರಿದ್ದೇನೆ.

ನನ್ನ ಅಪ್ಪ ಸಾಧಾರಣ
ರೈತಾಪಿ ಕುಟುಂಬದಿಂದ ಬಂದವನು
ನನ್ನ ಅಜ್ಜನೂ ಸಹ ರೈತನೇ!
ಅವ ಒಳ್ಳೆಯ ಮನೆತನದಲ್ಲಿ ಹುಟ್ಟಲಿಲ್ಲ
ಒಳ್ಳೆಯ ಶಿಕ್ಷಣ ಪಡೆಯಲಿಲ್ಲ.
ಆದರೆ ನನಗೆ ಓದನ್ನು ಹೇಳಿ ಕೊಡುವ ಮೊದಲು
ಸೂರ್ಯನಿಗೆ ಮುಖಮಾಡಿ ನಿಲ್ಲುವದನ್ನು ಹೇಳಿಕೊಟ್ಟವನು.
ನನ್ನ ಮನೆ ಹುಲ್ಲು ಕಡ್ಡಿಗಳಿಂದ
ಮಾಡಿದ ಕಾವಲುಗಾರನ ಗುಡಿಸಲಿನಂತಿದೆ.
ಹೇಳಿ, ನಿಮಗೆ ನನ್ನ ಸ್ಥಾನಮಾನದ ಬಗ್ಗೆ ತೃಪ್ತಿಯೇ?

ಬರೆದುಕೊಳ್ಳಿ!
ನಾನೊಬ್ಬ ಅರೇಬಿ
ನೀವು ನನ್ನ ಪೂರ್ವಿಕರ
ಹಣ್ಣುತೋಟ ಮತ್ತು ನಾನು ನನ್ನ ಮಕ್ಕಳೊಟ್ಟಿಗೆ
ಉಳುಮೆ ಮಾಡುತ್ತಿದ್ದ ಭೂಮಿಯನ್ನು
ಕಿತ್ತುಕೊಂಡವರು.
ನೀವು ನಮಗೆ
ಕಲ್ಲುಬಂಡೆಗಳನ್ನು ಬಿಟ್ಟು
ಬೇರೇನೇನನ್ನೂ ಬಿಡಲಿಲ್ಲ.
ಆದರೂ ನಿಮಗೆ ಕೋಪವೇ!?

ಆದ್ದರಿಂದ
ಬರೆದುಕೊಳ್ಳಿ
ಮೊದಲ ಪುಟದ ಮೊದಲ ಸಾಲಿನಲ್ಲಿ.
ನಾನು ಜನರನ್ನು ದ್ವೇಷಿಸುವದಿಲ್ಲ
ಅಥವಾ ಆಕ್ರಮಿಸುವದಿಲ್ಲ.
ಆದರೆ ನಾನು ಹಸಿದರೆ,
ಅಥವಾ ರೊಚ್ಚಿಗೆದ್ದರೆ
ದುರಾಕ್ರಮಣಕಾರರ ಮಾಂಸವೇ
ನನ್ನ ಆಹಾರವಾಗುತ್ತದೆ.
ಎಚ್ಚರ.........
ಎಚ್ಚರ.........
ನನ್ನ ಹಸಿವಿನ ಬಗ್ಗೆ
ಮತ್ತು ನನ್ನ ರೊಚ್ಚಿನ ಬಗ್ಗೆ!


ಹನಿಗಳಲ್ಲಿ ಇರುವೆಗಳು

ಬಿ ಎಂ ಬಶೀರ್

1
ಗುಬ್ಬಿಯ
ತಲೆ ಮೇಲಿನ ನೆರಳಿಗೆ
ಒಂದು ಪುಟ್ಟ ಎಲೆ ಸಾಕು
ಮನುಷ್ಯನಿಗೋ
ಎಲ್ಲೆ ಇಲ್ಲ
ಆಕಾಶವೂ ಸಾಲೋದಿಲ್ಲ

2
ಹರಿದು ಬಿದ್ದ
ಕರಿಮಣಿ ಸರದಂತೆ
ಚೆಲ್ಲಾಪಿಲ್ಲಿಯಾಗಿರುವ
ಇರುವೆಗಳು

3
ಈ ಭೂಮಿ
ಯಾವ ಭಗದಿಂದ
ಉದುರಿ ಬಿದ್ದ
ಬೀಜ!?

4
ದೇವರೇ
ನನ್ನ ಉಪವಾಸ
ಬಡವರ ಹಸಿವಿನ
ಅಣಕವಾಗದಿರಲಿ!

5
ದೇವರೇ,
ಪುಟ್ಟ ಇರುವೆಗೆ
ದೊಡ್ಡ ದುಃಖ ಕೊಡಬೇಡ
ಅದರ ಕಣ್ಣೀರಲ್ಲೇ ಅದು
ಮುಳುಗಿ ಸತ್ತೀತು ಪಾಪ!

6
ಅವಳು ಅತ್ತ
ಇವನು ಅತ್ತ !!

7
ನಿನ್ನೆ ಸಂಜೆ
ಮನಸು ಚದುರಿದ ರಂಗೋಲಿ
ಚೆಲ್ಲಾಪಿಲ್ಲಿಯಾದ ಬಣ್ಣ
ಇಂದು ಮುಂಜಾನೆ
ಕಣ್ಣು ತೆರೆದರೆ ಮನಸು
ಸಾರಿಸಿಟ್ಟ ಅಂಗಳ !

8
ಸಕ್ಕರೆ ಕಾಯಿಲೆ
ಎಂದು ವೈದ್ಯರ ಮನೆಯ
ಬಾಗಿಲು ತಟ್ಟಿದರೆ
ಅಲ್ಲಿ ಇರುವೆಗಳು
ಸಾಲು ಗಟ್ಟಿ ನಿಂತಿವೆ !

9

ಅನಂತದಲ್ಲಿ ನೀನು
ತೇಲಿ ಬಿಟ್ಟ ಹಡಗು
ಈ ಭೂಮಿ
ಕಣದಲ್ಲಿ ಕಣವಾಗಿದ್ದ
ನನ್ನನ್ನು ಗುರುತಿಸಿ
ಹತ್ತಿಸಿಕೊಂಡೆಯಲ್ಲ
ಶರಣು ನನ್ನ ದೊರೆಯೇ

10
ಮದ್ಯದಂಗಡಿಯಲ್ಲಿ ಲೆಕ್ಕ ಬರೆದು
ಆತ ಪ್ರತಿ ದಿನ
ಮಗುವಿಗೆ ಹಾಲು
ಕೊಂಡೊಯ್ಯುತ್ತಾನೆ

12

ಇಷ್ಟಗಲ ಚಾಚಿರುವ
ಈ ಆಕಾಶ
ಯಾವ ಮರದ ಎಲೆ?
 
13
ಕವಿತೆಗಳು
ಸಿಹಿಯಾಗಿದ್ದರೆ
ಅಕ್ಷರಗಳು
ಇರುವೆಗಳಂತೆ
ಬಂದು ಮುತ್ತಿ ಕೊಳ್ಳುತ್ತವೆ

Tuesday, July 29, 2014

ಹಫೀಜ್ ಕವಿತೆಗಳುಹಫೀಜ್.
ಕನ್ನಡಕ್ಕೆ : ಚಿದಂಬರ ನರೇಂದ್ರ
1
ಭಗವಂತ ಕೆಳಕ್ಕೆ ಬಗ್ಗಿ
ನಿನಗೊಂದು ಹಸಿ ಹಸಿ
ಮುತ್ತು ಕೊಟ್ಟರೆ
ಏನಾಗಬಹುದು?

ಹಫೀಜ್ ನಿಗೆ ಖಗೋಳಶಾಸ್ತ್ರಕ್ಕೆ
ಸಂಬಂಧಿಸಿದ ಇಂಥ ಪ್ರಶ್ನೆಗಳಿಗೆ
ಉತ್ತರ ಕೊಡಲು ತಕರಾರೇನಿಲ್ಲ.

ಇಡೀ ದಿನ ಮತ್ತಿನಲ್ಲಿ
ಇಂಥ ತರಲೆ ಕವಿತೆಗಳನ್ನ
ಗುಣುಗುಣುಸುತ್ತಾ ಇರುತ್ತೀ ಅಷ್ಟೇ.


2
ನಿನ್ನೆ ರಾತ್ರಿ
ಶರಾಬು ಅಂಗಡಿಯ
ಗೋಡೆಯ ಮೇಲೆ,
ಭಗವಂತ,
ತನ್ನ ಬಾಡಿಗೆದಾರರಿಗೆಲ್ಲ
ಒಂದು ಕೊನೆಯ
ನೋಟೀಸ್ ಅಂಟಿಸಿದ್ದ.

ಅದು ಹೀಗಿತ್ತು.

ನಿಮಗೆ ಖುಶಿ ಕೊಡುವ
ಕೆಲಸವನ್ನು,
ನೀವು ನೀವಾಗೇ
ಹುಡುಕಿಕೊಳ್ಳದಿದ್ದರೆ
ಬಹುಶಃ
ಈ ಕಠಿಣ ಜಗತ್ತಿನ
ಕೋರೆ ಹಲ್ಲುಗಳು
ನಿಮ್ಮ ಚಡ್ಡಿ ಹರಿದು
ಒಳಗಿನ ಸಿಹಿ ಮಾಂಸಕ್ಕೆ
ಬಾಯಿ ಹಾಕುತ್ತವೆ.
ಹುಷಾರ್ !


3
ಈ ದೇವರಿಂದ
ನಾನು ಎಷ್ಟೆಲ್ಲಾ ಕಲಿತಿದ್ದೇನೆಂದರೆ
ನಾನೊಬ್ಬ
ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ
ಬೌದ್ಧ ಎಂದೆಲ್ಲಾ
ಹೇಳಿಕೊಳ್ಳಲೂ
ನನಗೆ ನಾಚಿಕೆಯಾಗುತ್ತದೆ.

ಸತ್ಯ ನನ್ನೊಂದಿಗೆ ಎಷ್ಟು
ಒಂದಾಗಿದೆಯೆಂದರೆ
ನನ್ನನ್ನು
ಗಂಡು, ಹೆಣ್ಣು, ಪ್ರವಾದಿ
ಅಥವಾ ಪವಿತ್ರ ಆತ್ಮ
ಎಂದುಕೊಳ್ಳಲೂ ಭಯವಾಗುತ್ತದೆ.

ಪ್ರೀತಿ ನನ್ನನ್ನು
ಎಷ್ಟು ಅಲ್ಲಾಡಿಸಿದೆಯೆಂದರೆ
ತಾನೇ ಬೆಂಕಿಯಲ್ಲಿ ಹಾರಿ
ನನಗೆ ಗೊತ್ತಿರುವ ಎಲ್ಲ
ಸಿದ್ಧಾಂತಗಳಿಂದ,
ವೇಷಗಳಿಂದ
ನನ್ನನು ಮುಕ್ತಗೊಳಿಸಿದೆ.


4
ಸಾವಿನ ಕಲ್ಪನೆ
ಎಷ್ಟು ಅದ್ಭುತ ಅಲ್ವೆ.

ಆದರೆ ಶುದ್ಧ
ನಿರರ್ಥಕ ತಗೀರಿ.

ದೊಡ್ಡ ಸುಳ್ಳು
ಕಣ್ರೀ ಇದೇಲ್ಲ.


5
ನಮ್ಮ ಮಹಾನ್ ಧರ್ಮಗಳೇಲ್ಲ
ದೊಡ್ಡ ದೊಡ್ಡ ಹಡಗುಗಳಾದರೆ
ಈ ಕವಿಗಳು
ಜೀವ ರಕ್ಷಕ ದೋಣಿಗಳಂತೆ.

ನನಗೆ ಗೊತ್ತಿರುವ
ಪ್ರತೀ ಜಾಣ ಮನುಷ್ಯನೂ
ಹಡಗಿನಿಂದ ದೋಣಿಗೆ ಹಾರಿದ್ದಾನೆ

ಇದೊಳ್ಳೆ ವ್ಯಾಪಾರ
ಅಲ್ಲವೆ ಹಫೀಜ್?    

ಹಾಫಿಜ್ ಕವಿತೆ

ಹಾಫಿಜ್ 
ಕನ್ನಡಕ್ಕೆ : ಆಕರ್ಷ

Akarsha Kamala


ಹೀಗೆ ಇದ್ದುಬಿಡೋಣ
ಹಗಲಿಗೆ ಒರಗಿಕೊಂಡ ನಕ್ಷತ್ರಗಳಂತೆ

ಜಗದ ಹಂಗಿನಲ್ಲಿ ಹುದುಗಿರಲಿ ಸೌಂದರ್ಯ
ಉರಿದು ಬೀಳೋಣ
ಪ್ರೀತಿಯ ತೆಕ್ಕೆಗೆ
ದಿವ್ಯ ಒಲವಿಗೆ

ಮೀರಲಿ ಬಿಡು ಇರುವಿಕೆ
ಕವಿಯ ಪ್ರೇಮದ ಎಲ್ಲಾ ವರ್ಣನೆಗಳ

ಅಗಸ್ಟ್ 3 ಹುಳಿಯೂರು : ಅವಕಾಶ ವಂಚಿತ ಸಮುದಾಯಗಳ ಮುಂದಿನ ಹೋರಾಟ-ಚರ್ಚೆ
ಇಟ್ಟರೆ ಬೆರಣಿಯಾದೆ, ತಟ್ಟಿದರೆ ಕುರುಳಾದೆ..
ಡಾ ಎಚ್ ಎಸ್ ಅನುಪಮಾ

ಎಂಟನೇ ಅದ್ಭುತದ ಸುತ್ತಮುತ್ತ 

ಬೇಸಿಗೆಯಿಡೀ ಕರಾವಳಿಯಲ್ಲಿ ಉರಿದಿದ್ದು ಸಾಲದೆಂಬಂತೆ ಇಲ್ಲಿ ಮಳೆ ಶುರುವಾಗುವ ಹೊತ್ತಿಗೆ ಉತ್ತರದ ಕಡೆ ಹೊರಟೆವು. ಉತ್ತರವೆಂದರೆ ಹಿಮಾಲಯಕ್ಕಲ್ಲ, ಬಿರುಬೇಸಿಗೆಯಲ್ಲಿ ಬೇಯುತ್ತಿರುವ ರಾಜಸ್ಥಾನಕ್ಕೆ, ದೆಹಲಿ-ಆಗ್ರಾ ಮಾರ್ಗವಾಗಿ. ದೆಹಲಿಯಿಂದ ಯಮುನಾ ನದಿಯ ಪೂರ್ವ ದಂಡೆಗುಂಟ ಚಲಿಸುತ್ತಿದ್ದೆವು. ಗಂಟೆ ಬೆಳಗಿನ ಹತ್ತಷ್ಟೇ, ಹೊರಗೆ ಕಾಲಿಟ್ಟರೆ ಕುಲುಮೆಯೊಳಗೆ ಇಳಿದ ಅನುಭವ.

ಆ ಬಿರುಬಿಸಿಲ ರಸ್ತೆಯಲ್ಲಿ ಹಲವು ವಿಸ್ಮಯಗಳು ಎದುರಾದವು.

ಅದು ಆರು ಲೇನುಗಳ ದೇಶದ ಅತಿ ದೊಡ್ಡ ರಸ್ತೆ - ಯಮುನಾ ಎಕ್ಸ್‌ಪ್ರೆಸ್ ವೇ. ದೆಹಲಿ ಎಷ್ಟು ಜನಭರಿತವೋ ಈ ಹೈವೇ ಅಷ್ಟೇ ಭಣಗುಡುತ್ತಿತ್ತು. ಆಚೀಚಿನ ಬಯಲುಗಳಲ್ಲಿ ಕಳ್ಳಿ ಗಿಡ, ಮರ ಜಾಲಿ, ಬಳ್ಳಾರಿ ಜಾಲಿ, ಎಕ್ಕದ ಗಿಡ, ಬೇವಿನ ಗಿಡ ಕಂಡವು. ವಿಸ್ತಾರವಾದ, ಫಲವತ್ತಾದ ಗಂಗಾಯಮುನಾ ನದೀಬಯಲುಗಳು ಮರುಭೂಮಿಯಾಗುತ್ತಿವೆಯೇ ಎಂದು ದಿಗಿಲಾಗುವಂತೆ ಮುಳ್ಳುಕಂಟಿ ಗಿಡಗಳೇ ಹೆಚ್ಚೆಚ್ಚು ಕಾಣತೊಡಗಿದವು.
ರಸ್ತೆಯ ಆಚೀಚೆ ಬಿತ್ತನೆಗೆ ಸಿದ್ಧವಾದ ಉತ್ತ ಹೊಲಗಳಿದ್ದವು. ನಡುನಡುವೆ ನಮ್ಮ ತಿರಿ, ಬಣವೆಗಿಂತ ಆಕೃತಿಯಲ್ಲಿ, ವಿನ್ಯಾಸದಲ್ಲಿ ಕೊಂಚ ಭಿನ್ನವಾದ, ಆಕರ್ಷಕವಾಗಿ ಕಟ್ಟಿದ ಧಾನ್ಯಸಂಗ್ರಹಗಳು ಕಂಡವು. ಬಣವೆಯ ಜೊತೆಗೇ ಮತ್ತೊಂದು ಆಕೃತಿ ಗಮನ ಸೆಳೆಯಿತು. ಉಳುಮೆಯಾದ ಹೊಲದ ಬದುಗಳಲ್ಲಿ, ಹಳ್ಳಿ ಮನೆಗಳ ಅಕ್ಕಪಕ್ಕದಲ್ಲಿ, ದಿಬ್ಬದ ಮೇಲೆ, ಕಂಪೌಂಡ್‌ಗೆ-ಬೇಲಿಗೆ ತಾಗಿದಂತೆ ವಿವಿಧ ಆಕಾರಗಳ ಮಣ್ಣುಬಣ್ಣದ ಪುಟ್ಟ ಗುಡ್ಡಗಳಿದ್ದವು. ದೆಹಲಿ, ನೋಯ್ಡಾ ದೂರದೂರವಾದ ಹಾಗೆ ಪ್ರತಿ ಮನೆ, ಹೊಲದಲ್ಲೂ ಅಂಥ ಹಲವು ಗೋಪುರ ಕಾಣತೊಡಗಿದವು. ಕೆಲವು ಸೂರು ಹೊದ್ದುಕೊಂಡಿದ್ದರೆ ಮತ್ತೆ ಕೆಲವು ಗೋಡೆಮೇಲೆ ಚಿತ್ತಾರ ಬರಕೊಂಡಿದ್ದವು. ಏನಿದು? ಡ್ರೈವರ್ ಕೇಳಿದರೆ ಉತ್ಸಾಹದಿಂದ ವಿವರಿಸಿದ್ದೇ ಅಲ್ಲದೆ ಸರಿಯಾಗಿ ಫೋಟೋ ತೆಗೆದುಕೊಳ್ಳಿ ಎಂದು ಒಂದೆರೆಡು ಕಡೆ ನಿಲ್ಲಿಸಿದರು.

ಅವು ಬಿಟೌಡಾ. ಸಗಣಿ ಬೆರಣಿಯ ಗೋಪುರಗಳು. ಕರ್ನಾಟಕದ ಬಯಲು ನಾಡಿನಲ್ಲಿ ಬೆರಣಿ ರಾಶಿ ಹಾಕಿದ್ದು ನೋಡಿದ್ದರೂ ಇಲ್ಲಿಯಷ್ಟು ಬೃಹತ್ ಪ್ರಮಾಣದ ಕಲಾತ್ಮಕ ಗೋಪುರಗಳನ್ನು ನೋಡಿದ ನೆನಪಾಗಲಿಲ್ಲ. ಮುಂದೆ ಮುಂದೆ ಹೋದಂತೆ ರಚನೆಯ ವಿವಿಧ ಹಂತಗಳಲ್ಲಿರುವ, ವಿಭಿನ್ನ ಆಕಾರ-ಚಿತ್ತಾರ-ಎತ್ತರ-ವಿನ್ಯಾಸ-ಬಣ್ಣದಲ್ಲಿರುವ ಗೋಪುರಗಳು ಕಾಣಿಸಿದವು. ಒಣಗಿದ ಕುಳ್ಳನ್ನು ಅಲ್ಯುಮಿನಿಯಂ ಬುಟ್ಟಿಗಳಲ್ಲಿ ತಲೆಮೇಲೆ ಹೊತ್ತು ಬ್ಯಾಲೆನ್ಸ್ ಮಾಡಿ ನಡೆವ ಹುಡುಗಿಯರು ಕಂಡರು.

ಮಲೆನಾಡು ಮತ್ತು ಘಟ್ಟದ ಸೆರಗಿನಲ್ಲಿ ಸಮೃದ್ಧ ಗಿಡಮರಗಳ ನಡುವೆ ಬದುಕುವವರಿಗೆ ಬೆರಣಿಯನ್ನು ಉರುವಲಾಗಿ ಕಲ್ಪಿಸಿಕೊಳ್ಳಲು ಕಷ್ಟ. ಆದರೆ ಭಾರತವಷ್ಟೇ ಅಲ್ಲ, ಪ್ರಪಂಚದಲ್ಲೇ ಅತ್ಯಂತ ಜನಪ್ರಿಯ ಗ್ರಾಮೀಣ ಇಂಧನ, ಬಡವರ ಇಂಧನ ಬೆರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಲಭವಾಗಿ ಸಿಗುವ; ಅತ್ಯಂತ ಕಡಿಮೆ ಬೆಲೆಗೆ ಸಿಗುವ; ನಿಶ್ಚಿತವಾಗಿ ಸಿಗುವ; ಬೇಕೆಂದಾಗ ಒಲೆ ಹೊತ್ತಿಸಿ, ಆರಿಸಬಹುದಾದ; ಮನೆಯಲ್ಲಿ ಜಾನುವಾರಿಲ್ಲದಿದ್ದರೂ ಬೀದಿಯಲ್ಲಿ ಸಗಣಿಯಾಗಿ, ಮಾರುಕಟ್ಟೆಯಲ್ಲಿ ಬೆರಣಿಯಾಗಿ ಸಿಗುವ ಈ ಇಂಧನವನ್ನು ನಮ್ಮ ದೇಶದ ಹಳ್ಳಿಗಳ ಮುಕ್ಕಾಲುಪಾಲು ಜನಸಂಖ್ಯೆ ಈಗಲೂ ನೆಚ್ಚಿದ್ದಾರೆ. ಒಮ್ಮೆ ಬೆರಣಿ ಒಲೆಯಲ್ಲಿ ಮಾಡಿದ ಅಡಿಗೆ ರುಚಿ ನೋಡಿದರೆ ಗ್ಯಾಸ್-ಕರೆಂಟ್-ಸೀಮೆಎಣ್ಣೆ ಒಲೆಗಳನ್ನು ಬಿಟ್ಟು ನೀವೂ ಅದನ್ನೇ ಬಳಸುತ್ತೀರಿ ನೋಡಿ ಎಂದು ನಮ್ಮ ಡ್ರೈವರ್ ಹೇಳಿದ್ದು ಉತ್ಪ್ರೇಕ್ಷೆಯಿರಬಹುದಾದರೂ ಅವರ ಮಾತುಗಳಿಂದ ಸಗಣಿಯ ಪ್ರಾಮುಖ್ಯತೆ, ಉರುವಲಾಗಿ ಬೆರಣಿ ಬಳಕೆ ಎಷ್ಟು ಸಾಮಾನ್ಯ ಎಂದು ತಿಳಿದುಬಂತು.

ಪ್ರತಿ ಬೆರಣಿಯ ಮೇಲೂ, ಬೆರಣಿ ಗೋಪುರದ ಮೇಲೂ ಕಂಡುಬರುತ್ತಿದ್ದವು ಕೈಬೆರಳ ಗುರುತುಗಳು. ವಿಶೇಷವಾಗಿ ಹೇಳುವುದು ಬೇಡ, ಅವು ಹೆಣ್ಮಕ್ಕಳವೇ. ಯಾಕೆಂದರೆ ಅಡಿಗೆ ಕೆಲಸ ಯಾರದೋ, ಇಂಧನ ಹೊಂದಿಸುವ ಜವಾಬ್ದಾರಿಯೂ ಅವರದೇ ಎನ್ನುವುದು ಅಲಿಖಿತ ನಿಯಮ. ಕೃಷಿ-ಕೂಲಿ ಕೆಲಸ ಮುಗಿಸಿ ಬರುವಾಗ ದಾರಿಯಲ್ಲಿ ಒಂದು ಒಣರೆಂಬೆ ಕಂಡರೂ ಹೆಣ್ಮಕ್ಕಳು ಮನೆಗೆ ಹೊತ್ತು ತರುವವರೇ. ಮೂರು ಹೊತ್ತೂ ಹೊಟ್ಟೆಯ ಬೆಂಕಿ ತಣಿಸಲು ಏನು ಅಡಿಗೆ ಬೇಯಿಸಲಿ ಎನ್ನುವುದು ಎಷ್ಟು ತಲೆಬಿಸಿಯ ವಿಚಾರವೋ, ವರ್ಷಾವಧಿಗಾಗುವಷ್ಟು ಉರುವಲು ಸಂಗ್ರಹ ಮಾಡುವುದೂ ಅವರಿಗೆ ಅಷ್ಟೇ ದೊಡ್ಡ ಚಿಂತೆ.

ಸಗಣಿ ಸಂಗ್ರಹಿಸಿ, ಬೆರಣಿ ತಟ್ಟಿ, ಎರಡೂ ಬದಿ ಒಣಗಿಸಿ, ಅವನ್ನು ಕಲಾತ್ಮಕವಾಗಿ ಸುರುಳಿಸುರುಳಿಯಲ್ಲಿ ಜೋಡಿಸಿಡುವ ಕೆಲಸ ಮಾಡುತ್ತಿದ್ದ ಹೆಂಗಸರು, ಮಕ್ಕಳು ಕಾಣಿಸಿದರು. ಬಹುಶಃ ಬೇಸಿಗೆ ಒಣ ಉರುವಲು ಕೂಡಿಕೊಳ್ಳುವ ಕಾಲವಾದ್ದರಿಂದ ಈ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಬರೀ ಸೆಗಣಿಯದಾದರೆ ಉರಿಯಲು ಕಷ್ಟ ಎಂದು ಅದರೊಡನೆ ಧಾನ್ಯಗಳ ಹೊಟ್ಟು, ಹುಲ್ಲು, ಇದ್ದಿಲ ಪುಡಿಯನ್ನೂ ಸೇರಿಸುತ್ತಾರಂತೆ. ಮೂರ್ನಾಲ್ಕು ದಿನ ಒಣಗಿಸಿ, ಬೆರಣಿಯನ್ನು ವಿಶಿಷ್ಟವಾಗಿ ಜೋಡಿಸಿ, ಮೇಲೊಂದು ದಪ್ಪನೆಯ ಪದರ ಸಗಣಿಯ ಗಿಲಾಯಿ ಮಾಡುತ್ತಿದ್ದರು. ಸಗಣಿ ವಾಟರ್‌ಪ್ರೂಫ್ ಆದ್ದರಿಂದ ಹೊರಗಣ ಪದರ ಮಳೆಗಾಲದಲ್ಲೂ ಉರುವಲು ಒದ್ದೆಯಾಗದಂತೆ ತಡೆಯುತ್ತದೆ. ಕೆಲವೆಡೆ ಮಾತ್ರ ಆರೆಂಟು ಅಡಿ ಎತ್ತರದ ಗೋಪುರಗಳ ಮೇಲೆ ದಂಟಿನ ಸೂರು ಹೊದೆಸಲಾಗಿತ್ತು. ಅದರ ಗೋಡೆಗಳ ಮೇಲೆ ಥರಥರದ ಚಿತ್ರ ಚಿತ್ತಾರಗಳು, ಜನಪದ ಕಲೆಯ ವಿವಿಧ ವಿನ್ಯಾಸಗಳು ಅರಳಿದ್ದವು. ಗೋಪುರಗಳ ಕೆಳಭಾಗದಲ್ಲಿ ಸುಣ್ಣ ಬಳಿದ ಒಂದು ತಗ್ಗು ಇರುತ್ತದೆ. ಅದು ಬೆರಣಿ ಹೊರತೆಗೆಯಬೇಕಾದ ಸ್ಥಳ. ಅಲ್ಲಿಂದ ಒಂದೊಂದೇ ಬೆರಣಿ ತೆಗೆದರೆ ಗೋಪುರ ಕುಸಿಯದೇ ಅದನ್ನು ಖಾಲಿ ಮಾಡಬಹುದು ಎಂದರು.

ಕಳೆದವರ್ಷ ಗ್ಯಾಸ್ ಸಿಲಿಂಡರ್ ಬಳಕೆಯನ್ನು ನಿರ್ಬಂಧಕ್ಕೊಳಪಡಿಸಿ ಸಬ್ಸಿಡಿ ಸಿಲಿಂಡರುಗಳ ಸಂಖ್ಯೆ ವಾರ್ಷಿಕ ಆರು ಎಂದು ನಿಗದಿಗೊಳಿಸಲಾಯಿತು. ಬೇಯಿಸಿ-ಹುರಿದು-ಕರಿದು ತಿನ್ನುವ ಭಾರತೀಯ ಅಡಿಗೆ ಶೈಲಿಗೆ ವರ್ಷಕ್ಕೆ ಆರು ಸಿಲಿಂಡರ್ ಏನೇನೂ ಸಾಲದು. ಅದಕ್ಕಿಂತ ಹೆಚ್ಚು ಬೇಕಾದವರು ಪ್ರತಿ ಸಿಲಿಂಡರಿಗೆ ೯೫೨ ರೂ. ಕೊಡಬೇಕು ಎಂದು ಸರ್ಕಾರ ಪ್ರಕಟಿಸಿತು. ಆಗ ಬೆರಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿತಂತೆ. ತಿಪ್ಪೆಗೆ ಹೋಗುವ ಸಗಣಿಯೆಲ್ಲ ಬೆರಣಿಯಾಗಿ ಒಂದು ಬೆರಣಿಗೆ ಒಂದೂವರೆ ರೂಪಾಯಿಯಂತೆ ಮಾರಾಟವಾಯಿತು. ಅದುವರೆಗೆ ನಾಕಾಣೆಗೆ ಸಿಗುತ್ತಿದ್ದ ಬೆರಣಿಯೂ ತುಟ್ಟಿಯಾಯಿತು, ಕಟ್ಟಿಗೆಯಂತೂ ಕೆಜಿಗೆ ಎಂಟು ರೂಪಾಯಿಯಾಯಿತು ಎಂದರು ನಮ್ಮ ಡ್ರೈವರ್.

ಒಟ್ಟಾರೆ ಗಿಡಮರಗಳಿಲ್ಲದ ಬಯಲು ನಾಡಿನ ಜನ ಉರುವಲಿಗೆ ಮಾಡಿಕೊಂಡ ಸುಲಭ ವ್ಯವಸ್ಥೆ, ಗಿಲಾಯಿ, ಚಿತ್ತಾರ, ವಾಪಸು ತೆಗೆಯಲು ಅನುಕೂಲವಾಗುವ ಜೋಡಣೆ ಇವೆಲ್ಲ ನಾವು ನೋಡಹೊರಟ ಜಗತ್ತಿನ ಎಂಟನೇ ಅದ್ಭುತಕ್ಕೆ ಸಮನಾಗಿವೆ ಎನಿಸಿತು.

ನೀನಾರಿಗಾದೆಯೋ ಎಲೆ ಮಾನವಾ?

ಪಶುಗಣತಿ ಪ್ರಕಾರ ಭಾರತದಲ್ಲಿ ಅಂದಾಜು ೨೮.೩ ಕೋಟಿ ದನ, ಎಮ್ಮೆಗಳಿವೆ. ಅವುಗಳಿಂದ ಅಜಮಾಸು ಪ್ರತಿದಿನ ೭೦ ಕೋಟಿ ಟನ್ ಸಗಣಿ ಉತ್ಪತ್ತಿಯಾಗುತ್ತದೆ. ಸಗಣಿಯ ವ್ಯವಸ್ಥಿತ ವಿಲೇವಾರಿಗೆ ಬೆರಣಿ ಉರುವಲು ಸಹಾಯಕವಾಗಿದೆ. ಇಲ್ಲದಿದ್ದರೆ ಕಂಡಕಂಡಲ್ಲಿ ದೇಹಬಾಧೆ ತೀರಿಸಿಕೊಳ್ಳುವ ಭಾರತೀಯರ ಅಭ್ಯಾಸದಿಂದ ದುರ್ನಾತ ಬೀರುವ ಊರುಕೇರಿಗಳು ಸಗಣಿ ತೊಪ್ಪೆಯಿಂದ ತುಂಬಿ ಹೋಗುತ್ತಿದ್ದವು.

ಭಾರತದ ಗ್ರಾಮೀಣ ಮಹಿಳೆಯರಿಗೆ ಈಗಲೂ ಗ್ಯಾಸ್ ತುಟ್ಟಿ. ಕರೆಂಟನ್ನು ನಂಬಲು ಸಾಧ್ಯವಿಲ್ಲ. ಸೋಲಾರ್ ಎಂದರೆ ಏನೋ ಎಂಥದೋ. ೧೧೦ ಕೋಟಿ ಜನಸಂಖ್ಯೆಯ ದೇಶಕ್ಕೆ ಇಂಧನ ಒದಗಿಸುವುದು ಸುಲಭದ ಮಾತಲ್ಲ. ಹಾಗಿರುವಾಗ ಬೆರಣಿಯು ಕಡಿಮೆ ಖರ್ಚಿನ, ನಿಸರ್ಗ ಸ್ನೇಹಿ, ಮರುಪೂರಣಗೊಳ್ಳಬಹುದಾದ ಇಂಧನವಾಗಿ ಒದಗಿ ಬಂದಿದೆ. ಬೆರಣಿಯನ್ನು ಉರುವಲಿಗೆ ಬಳಸುವುದರಿಂದ ಮರಗಿಡಗಳೂ ಉಳಿಯುತ್ತವೆ. ಸುಟ್ಟ ಬೂದಿ ಕ್ರಿಮಿನಾಶಕವಾಗಿ ಬಳಕೆಯಾಗುತ್ತದೆ.

ಆದರೆ ಪರಿಸರ ಸ್ನೇಹಿಯಾದ ಬೆರಣಿ ಅಷ್ಟೇನೂ ಬಳಕೆದಾರ ಸ್ನೇಹಿ ಅಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ. ಸಗಣಿಯಲ್ಲಿ ಅಸಂಖ್ಯ ಶಿಲೀಂಧ್ರ, ರೋಗಾಣುಗಳಿರುತ್ತವೆ. ಬರಿಗೈಲಿ ಮುಟ್ಟುವುದರಿಂದ ಕೆಲ ಚರ್ಮರೋಗಗಳು ಬರಬಹುದಾಗಿದೆ. ಇತ್ತೀಚೆಗೆ ಕೃಷಿಯಲ್ಲಿ ಬಳಸುತ್ತಿರುವ ರಾಸಾಯನಿಕದ ಪ್ರಮಾಣ ಮೇಲ್ಮೈ ನೀರು ಕಲುಷಿತಗೊಳಿಸುವಷ್ಟು ಅತಿಯಾಗಿದೆ. ಕೀಟನಾಶಕ ಸಿಂಪಡಿಸಿದ ಹುಲ್ಲು ತಿಂದ ಜಾನುವಾರುಗಳ ಸಗಣಿಯಲ್ಲೂ ಆರ್ಸೆನಿಕ್ ಅಂಶ ಪತ್ತೆಯಾಗಿದೆ. ಅದನ್ನು ಉರಿಸಿದಾಗ ಬರುವ ಹೊಗೆಯಲ್ಲೂ ಆರ್ಸೆನಿಕ್ ಅಂಶ ಹೆಚ್ಚಿರುವುದು ಗಂಗಾ-ಮೇಘನಾ-ಬ್ರಹ್ಮಪುತ್ರ ನದೀಬಯಲಿನ ಪ್ರದೇಶಗಳಲ್ಲಿ ನಡೆದ ಸಂಶೋಧನೆಯಿಂದ ಧೃಢಪಟ್ಟಿದೆ. ಒಲೆ ಮುಂದೆ ಕೂತು ಅದರ ಹೊಗೆ ಕುಡಿಯುವವರು ಶ್ವಾಸಕೋಶ ಸಂಬಂಧಿ ಕಾಯಿಲೆ, ಕಣ್ಣಿನ ಕಾಯಿಲೆಗೆ ತುತ್ತಾಗುತ್ತಾರೆ. ಮೊದಲೇ ಅಡಿಗೆ ಮನೆ ಎಂದರೆ ಕಿಷ್ಕಿಂಧೆ. ಬೆಳಕಿರುವುದಿಲ್ಲ, ಗಾಳಿಯಿರುವುದಿಲ್ಲ. ಅದರ ನಡುವೆ ಹೊಗೆಯೂ ತುಂಬಿಕೊಂಡರೆ ಅಲರ್ಜಿ ಅಸ್ತಮಾ, ದಮ್ಮು, ಟಿಬಿ, ಶ್ವಾಸಕೋಶ ಕ್ಯಾನ್ಸರಿನಂತಹ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರತಿವರ್ಷ ವಿಶ್ವಾದ್ಯಂತ ೧೬ ಲಕ್ಷ ಜನ ಮನೆಯೊಳಗಿನ ವಾಯುಮಾಲಿನ್ಯದ ಕಾರಣಕ್ಕೆ ಸಾಯುತ್ತಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು.

ಸಗಣಿ ಇಂಧನ ಬಳಕೆದಾರ ಸ್ನೇಹಿ ಆಗುವಂತೆ ಮಾಡಲು ಒಂದು ಮಾರ್ಗವಿದೆ: ಸಗಣಿಯನ್ನು ಗೋಬರ್ ಗ್ಯಾಸ್ ಆಗಿ ಪರಿವರ್ತಿಸುವುದು. ಕೈಗೆಟುಕುವ ದರ, ವಿಧಾನದಲ್ಲಿ ಗೋಬರ್ ಗ್ಯಾಸ್ ಉತ್ಪಾದಿಸಿಕೊಳ್ಳಲು; ಅದನ್ನು ಪ್ರೋತ್ಸಾಹಿಸಲು ಯೋಜನೆ ಹಮ್ಮಿಕೊಳ್ಳಬೇಕು. ಈಗ ಮನೆಯಲ್ಲಿ ನಾಲ್ಕೈದು ಜಾನುವಾರುಗಳಿದ್ದವರು ಸಬ್ಸಿಡಿ ಹಣದೊಂದಿಗೆ ಹತ್ತು ಸಾವಿರ ರೂಪಾಯಿ ಸೇರಿಸಿದರೆ ಒಂದು ಬಯೋಗ್ಯಾಸ್ ಪ್ಲಾಂಟ್ ಹಾಕಬಹುದು. ಗ್ಯಾಸ್ ತಯಾರಿ ನಂತರದ ಸ್ಲರಿಯನ್ನು ಗೊಬ್ಬರಕ್ಕೆ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ಸಗಣಿಯನ್ನು ಇಂಧನ ಮತ್ತು ಗೊಬ್ಬರ ಎರಡೂ ಆಗಿ ಬಳಸಲು ಸಾಧ್ಯವಾಗುವುದು ಈ ವಿಧಾನದ ಹೆಚ್ಚುಗಾರಿಕೆ ಎನ್ನಬಹುದು.

ಬೇರೆ ದೇಶಗಳಲ್ಲೂ ಬೆರಣಿ ಬಳಸುವರೇ ಎಂಬ ಪ್ರಶ್ನೆ ತೂರಿ ಬಂತು. ಗ್ರಾಮೀಣ ಈಜಿಪ್ಟ್‌ನ ಮನೆಯ ಗೋಡೆಗಳ ಮೇಲೆ ಬೆರಣಿ ನೋಡಿದ ನೆನಪಾಯಿತು. ಅದು ಒಂಟೆ ಸಗಣಿಯದು. ವಿಶ್ವ ಮಾಹಿತಿ ಜಾಲಾಡಿದರೆ ಬೆರಣಿಯನ್ನು ಇರಾನ್, ಚೀನಾ, ಮಂಗೋಲಿಯಾ, ಪ್ಯಾಲೆಸ್ಟೀನ್ ಸೇರಿದಂತೆ ಹಲವು ದೇಶಗಳಲ್ಲಿ ಜನ ಉರುವಲಾಗಿ ಬಳಸುತ್ತಿದ್ದಾರೆ. ವಿಶ್ವಾದ್ಯಂತ ಎರಡು ಬಿಲಿಯನ್ ಜನರ ಉರುವಲು ಸಗಣಿಯೇ ಆಗಿದೆ!

ದಿನನಿತ್ಯ ರಸ್ತೆಮೇಲೆ ಓಡಾಡುವ ವಾಹನಗಳು ಹೆಚ್ಚುತ್ತಿವೆ. ಪೆಟ್ರೋಲ್-ಡೀಸೆಲ್ ದಿನದಿನಕ್ಕೆ ತುಟ್ಟಿಯಾಗುತ್ತ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿದೆ. ಇದೇ ದರದಲ್ಲಿ ವಾಹನ-ಅಡಿಗೆ ಎರಡಕ್ಕೂ ಹೈಡ್ರೋಕಾರ್ಬನ್ ಇಂಧನ ಬಳಸಿದರೆ ಇನ್ನು ಅರ್ಧ ಶತಮಾನವೂ ಅದು ಬಾಳುವುದಿಲ್ಲ. ಮಿಲಿಯಗಟ್ಟಲೆ ವರ್ಷಗಳ ಕೆಳಗೆ ತಯಾರಾಗಿ ನೆಲದಡಿಯ ನಿದಾನವಾಗಿರುವ ತೈಲವನ್ನು, ನಮ್ಮ ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳ ಪಾಲಿನ ತೈಲವನ್ನು ನಾವೀಗಲೇ ಕಬಳಿಸುತ್ತಿದ್ದೇವೆ. ತೈಲಕ್ಕಾಗಿ ಯುದ್ಧ ನಡೆಯುತ್ತಿದೆ. ತೈಲಕ್ಕಾಗಿ ಸರ್ಕಾರಗಳು ಉರುಳುತ್ತಿವೆ. ತೈಲಭರಿತ ಬಡದೇಶಗಳ ಅಧ್ಯಕ್ಷರು ‘ಹೇಳಿದ ಮಾತು’ ಕೇಳದಿದ್ದರೆ ಅವರ ವಿಮಾನ ಪತನವಾಗುತ್ತದೆ. ಹೀಗಿರುವಾಗ ಒಂದು ಪರ್ಯಾಯ ಇಂಧನ ಸೃಷ್ಟಿಸಿಕೊಳ್ಳುವುದು ಮನುಷ್ಯಕುಲದ ಉಳಿವಿಗೆ, ನಾಗರಿಕತೆಯ ಉಳಿವಿಗೆ ಅನಿವಾರ್ಯವಾಗಿದೆ. ಕಡಿಮೆ ದರದ ನಿಸರ್ಗ ಸ್ನೇಹಿ ಇಂಧನ ಪೂರೈಕೆಯ ವ್ಯವಸ್ಥೆಯನ್ನು ಜಗತ್ತಿನ ಎಲ್ಲ ದೇಶಗಳ ನಾಯಕರು, ವಿಜ್ಞಾನಿಗಳು ಅಭಿವೃದ್ಧಿಪಡಿಸಬೇಕಿದೆ.

‘ಸೇವ್ ಫ್ಯುಯೆಲ್’ ಎಂಬ ಸ್ಲೋಗನ್ನಿನೊಡನೆ ಪರ್ಯಾಯವನ್ನೂ ಸೂಚಿಸುವ ಕಾಲ ಈಗ ಬಂದಿದೆ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...