Monday, March 31, 2014

ಖಲೀಲ ಗಿಬ್ರಾನ್ ಅವರ ಎರಡು ಕಥೆಗಳು


 
ಖಲೀಲ ಗಿಬ್ರಾನ್
ಅನು : ಡಾ ಎಚ್ ಎಸ್ ಅನುಪಮಾ
 
ಜ್ಯೋತಿಷಿ

ದೇವಾಲಯದ ನೆರಳಿನಲ್ಲಿ ಒಂಟಿಯಾಗಿ ಕುಳಿತ ಕುರುಡನನ್ನು ನಾನು ಮತ್ತು ನನ್ನ ಗೆಳೆಯ ನೋಡಿದೆವು. ನನ್ನ ಗೆಳೆಯ ಹೇಳಿದ, ‘ನೋಡಲ್ಲಿ, ಈ ನೆಲದ ಅತಿ ಜ್ಞಾನಿ ಮನುಷ್ಯ ಅವನು.’

ನಂತರ ನನ್ನ ಗೆಳೆಯನನ್ನು ಅಲ್ಲೇ ಬಿಟ್ಟು ಕುರುಡನ ಬಳಿ ಹೋಗಿ ಕೂತೆ. ಮಾತಾಡತೊಡಗಿದೆವು.

ಕೊಂಚ ಹೊತ್ತಾದ ಮೇಲೆ ಕೇಳಿದೆ: ‘ಹೀಗೆ ಕೇಳ್ತೀನಿ ಅಂತ ಬೇಜಾರಾಗ್ಬೇಡಿ, ನಿಮಗೆ ಯಾವಾಗಿಂದ ಕುರುಡು?’

‘ಹುಟ್ಟಿದಾಗಿನಿಂದ’, ಆತನೆಂದ.

‘ಹೌದಾ? ಹಾಗಾದರೆ ನೀವು ವಿಷಯಗಳನ್ನು ತಿಳಿದುಕೊಳ್ಳುವುದು ಹೇಗೆ?’

‘ನಾನೊಬ್ಬ ಜ್ಯೋತಿಷಿ.’

‘ಆಂ?!’

‘ಆತ ತನ್ನ ಎದೆ ಮೇಲೆ ಕೈಯಿಟ್ಟುಕೊಂಡು ಹೇಳಿದ: ‘ನಾನು ಇಲ್ಲಿರುವ ಸೂರ್ಯ ಚಂದ್ರ ತಾರೆಯರನ್ನೆಲ್ಲ ಎಚ್ಚರದಿಂದ ಗಮನಿಸುತ್ತಾ ಇರುತ್ತೇನೆ.’
***ಮಹದಾಸೆ

ನನ್ನಣ್ಣ ಪರ್ವತ. ನನ್ನಕ್ಕ ಕಡಲು. ಇವರಿಬ್ಬರ ನಡುವೆ ನಾನಿಲ್ಲಿ ಕುಳಿತಿದ್ದೇನೆ.

ಏಕಾಂಗಿಯಾಗಿರುವಾಗ ನಾವು ಮೂವರೂ ಒಂದೇ. ನಮ್ಮನ್ನು ಬಂಧಿಸುವ ಪ್ರೀತಿ ಆಳವೂ, ಧೃಢವೂ, ವಿಚಿತ್ರವೂ ಆಗಿದೆ. ಅಲ್ಲಲ್ಲ, ಆ ಪ್ರೀತಿ ನನ್ನಕ್ಕ ಕಡಲಿಗಿಂತ ಆಳ. ನನ್ನಣ್ಣ ಪರ್ವತನ ಶಕ್ತಿಗಿಂತ ಶಕ್ತಿಯುತ. ಮತ್ತು ನನ್ನ ಅನೂಹ್ಯ ಹುಚ್ಚುತನಕ್ಕಿಂತ ಹುಚ್ಚುಚ್ಚು.

ನಾವು ಒಬ್ಬರನ್ನೊಬ್ಬರು ನೋಡಿಕೊಂಡ ಆ ಆದಿಮ ಬೆಳಕು ಹರಿದು ಯುಗಗಳೇ ಸರಿದವು. ಹುಟ್ಟು, ಪರಿಪೂರ್ಣ ಬದುಕು, ಸಾವು ಎಲ್ಲವನ್ನೂ ನೋಡಿದ್ದೇವಾದರೂ ನಾವಿನ್ನೂ ಕುತೂಹಲಿಗಳು. ಎಳೆಯರು.

ಎಳೆಯರು, ಕುತೂಹಲಿಗಳು; ಆದರೂ ಸಂಗಾತಿಗಳಿಲ್ಲದವರು. ಯಾರಿಂದಲೂ ಸಂಧಿಸಲ್ಪಡದವರು. ಮುಟ್ಟುವವರಿಲ್ಲದೆ ದುಃಖಿಗಳಾಗಿ ಬಿದ್ದರೂ ಸಂತೈಕೆ ಕಾಣದವರು. ಆಸೆ ಮತ್ತು ತೀವ್ರ ಕಾಮನೆಗಳನ್ನು ನಿಗ್ರಹಿಸಿಕೊಂಡಿದ್ದರೂ ಯಾವ ಸುಖವಿದೆ? ನನ್ನಕ್ಕನ ಹಾಸಿಗೆಯನ್ನು ಬೆಚ್ಚಗಾಗಿಸಬಲ್ಲ ಉರಿವ ದೇವರು ಯಾವಾಗ ಬರುತ್ತಾನೆ? ನನ್ನಣ್ಣನ ದಾಹದ ಉರಿಯನ್ನು ಯಾವ ಮಳೆದೇವತೆ ತಣಿಸುತ್ತಾಳೆ? ನನ್ನ ಹೃದಯವನ್ನು ಆಳುವ ಆ ಅವಳು ಯಾರು? 

ರಾತ್ರಿಯ ನೀರವತೆಯಲ್ಲಿ ನನ್ನಕ್ಕ ತನಗೆ ಗೊತ್ತಿಲ್ಲದ ತನ್ನ ಉರಿದೇವರ ಹೆಸರನ್ನು ಕನವರಿಸುತ್ತಾಳೆ. ನನ್ನಣ್ಣ ದೂರದಲ್ಲೆಲ್ಲೋ ಇರುವ ತಂಪುದೇವತೆಯ ಕರೆಯುತ್ತಾನೆ. ಆದರೆ ನಾನು ನನ್ನ ನಿದ್ರೆಯಲ್ಲಿ ಯಾರನ್ನು ಕರೆಯುವೆನೋ, ನನಗೆ ಗೊತ್ತಿಲ್ಲ.
***

ನಾನಿಲ್ಲಿ ಕುಳಿತಿದ್ದೇನೆ. ನನ್ನಣ್ಣ ಪರ್ವತ, ನನ್ನಕ್ಕ ಕಡಲು, ಇವರಿಬ್ಬರ ನಟ್ಟನಡುವೆ. ನಾವು ಮೂವರೂ ಏಕಾಂಗಿತನದಲ್ಲಿ ಒಂದೇ. ನಮ್ಮನ್ನು ಹಿಡಿದಿಟ್ಟ ಆ ಪ್ರೇಮವಾದರೋ ಆಳ, ಸಧೃಢ ಮತ್ತು ವಿಚಿತ್ರ.

ಜನಾದೇಶ ಖರೀದಿಗೆ ಕಾರ್ಪೊರೇಟ್ ಹುನ್ನಾರ

ಸನತಕುಮಾರ ಬೆಳಗಲಿ
ಜನಾದೇಶ ಖರೀದಿಗೆ ಕಾರ್ಪೊರೇಟ್ ಹುನ್ನಾರ

ಸ್ವಾತಂತ್ರದ ಆರೂವರೆ ದಶಕಗಳ ನಂತರ ಭಾರತದ ಜನತಂತ್ರ ಕವಲು ದಾರಿಗೆ ಬಂದು ನಿಂತಿದೆ. ಈ ಜನತಂತ್ರ ನಿಜವಾದ ಅರ್ಥದಲ್ಲಿ ಜನತೆಯ ಪ್ರಭುತ್ವವಾಗಿ ಅರಳಬೇಕೋ ಇಲ್ಲವೇ ಉಳ್ಳವರ ಖಾಸಗಿ ಸೊತ್ತಾಗಬೇಕೋ ಈ ಪ್ರಶ್ನೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನಮ್ಮೆದುರು ಬಂದು ನಿಂತಿದೆ. ಭಾರತ ಸರ್ವತಂತ್ರ ಸಮಾಜವಾದಿ ಗಣರಾಜ್ಯ ಎಂದು ಹೆಸರಿಟ್ಟುಕೊಂಡಿದ್ದರೂ ಇದೆಂದೂ ಜನತೆಯ ಪ್ರಭುತ್ವವಾಗಿರಲಿಲ್ಲ. ಹಾಗೆಂದು ಉಳ್ಳವರು ಸಂಪೂರ್ಣವಾಗಿ ಇದನ್ನು ಸಂಪೂರ್ಣವಗಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಸಲದ ಚುನಾವಣೆ ಈ ನಿಟ್ಟಿನಲ್ಲಿ ನಿರ್ಣಾಯಕ ವಾಗಿದೆ.

ಭಾರತದ ನೆಲ ಜಲ ಕಾಡನ್ನು ದೋಚ ಬೇಕಾದರೆ ಅದಕ್ಕು ಮೊದಲು ಪ್ರಭುತ್ವವನ್ನು ಪ್ರಜೆಗಳ ಕೈಯಿಂದ ಸಂಪೂರ್ಣ ಅಪಹರಣ ಮಾಡಬೇಕು. ಈ ಅಪಹರಣ ಮಾಡ ಬೇಕಾದರೆ ಈಗಿರುವ ಸಂವಿಧಾನ ಮತ್ತು ಸಂಸತ್ತನ್ನು ಬಳಸಿಕೊಳ್ಳಬೇಕು. ಈ ಗುರಿ ಸಾಧಿಸಬೇಕಾದರೆ ಕೇಂದ್ರ ಸರಕಾರದ ಅಧಿಕಾರ ಸೂತ್ರ ತಮ್ಮ ಚಮಚಾ ಕೈಯಲ್ಲಿರ ಬೇಕು. ಹಾಗಾಗಬೇಕಾದರೆ ಚುನಾವಣೆಯಲ್ಲಿ ತಮ್ಮ ಚೇಲಾ ಕೂಟ ಗೆಲ್ಲಬೇಕು. 

ಇದರ ಅರ್ಥ ಜನಾದೇಶವನ್ನೇ ಖರೀದಿ ಮಾಡಬೇಕು. ಈಗ ಸಂಘ ಪರಿವಾರದ ಪ್ರಧಾನಿ ಅಭ್ಯರ್ಥಿ ಕಾರ್ಪೊರೇಟ್ ಬ್ರೋಕರ್ ನರೇಂದ್ರ ಮೋದಿ ಪರವಾಗಿ ಮಾಧ್ಯಮಗಳ ಮೂಲಕ ಮೂಡಿ ಸಿದ ಸಮೂಹ ಸನ್ನಿ ಇಂಥ ಜನಾದೇಶ ಖರೀದಿ ಹುನ್ನಾರ ವಲ್ಲದೇ ಬೇರೇನೂ ಅಲ್ಲ. ಈ ಜನಾದೇಶ ಖರೀದಿಯ ಷಡ್ಯಂತ್ರದ ಭಾಗವಾಗಿ ನರೇಂದ್ರ ಮೋದಿಯ ವೈಭವೀಕರಣ ನಡೆ ದಿದೆ. ಆತನ ಚಿತ್ರವಿರುವ ಟಿ ಷರ್ಟುಗಳು, ಟೋಪಿಗಳು ಮುಖವಾಡಗಳು ದೇಶದ ತುಂಬ ರಾರಾಜಿಸುತ್ತಿವೆ. 

ಅಂತಲೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳನ್ನು ಕಾರ್ಪೊರೇಟ್ ಕಂಪೆನಿಗಳು ಖರೀದಿಸಿ ಈ ಕುತಂತ್ರ ನಡೆಸಿವೆ ಎಂದು ಕೇಜ್ರಿವಾಲ್ ಮಾಡಿದ ಆರೋಪದಲ್ಲಿ ಸುಳ್ಳೇನಿಲ್ಲ. ದೃಶ್ಯ ಮಾಧ್ಯಮಗಳಲ್ಲಿ ತೋರಿಕೆಗೆ ನಿಷ್ಪಕ್ಷಪಾತ ಸುದ್ದಿ ಪ್ರಸಾರ ಮಾಡುವಂತೆ ಕಂಡರೂ ಅತ್ಯಂತ ಸೂಕ್ಷ್ಮವಾಗಿ ನಡೆದಿರುವುದು ಮೋದಿ ಎಂಬ ನರಹಂತಕರನ್ನು ದೇಶದ ಮೇಲೆ ಹೇರುವ ಹುನ್ನಾರ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಪರ್ಯಾಯವಾಗಿ ಈ ದೇಶವನ್ನು ಉದ್ದರಿಸಲು ನರೇಂದ್ರ ಮೋದಿ ಎಂಬ ಪವಾಡ ಪುರುಷ ಅವತರಿಸಿ ಬಂದಿದ್ದಾನೆ ಎಂದು ನಗಾರಿ ಬಾರಿಸುವ ಕಾರ್ಪೊರೇಟ್ ಮಾಧ್ಯಮಗಳು ಯುಪಿಎ ಸರಕಾರದ ನೀತಿಗಳಿಗೆ ಪರ್ಯಾಯವಾಗಿ ಧೋರಣೆ ಯನ್ನು ಪ್ರತಿಪಾದಿಸುತ್ತಿರುವ ಎಡಪಕ್ಷಗಳನ್ನು ಯಾಕೆ ಕಡೆಗಣಿಸಿವೆ.

ದೃಶ್ಯ ಮಾಧ್ಯಮಗಳ ಎಲ್ಲ ಸುದ್ದಿ ಚಾನೆಲ್‌ಗಳ ವಾರ್ತೆಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳಿಗೆ ಒಂದೇ ಒಂದು ನಿಮಿಷ ಅವಕಾಶವನ್ನು ಯಾಕೆ ಕೊಡುತ್ತಿಲ್ಲ. ಮೋದಿ ವಿರುದ್ಧ ತಿರುಗಿ ಬಿದ್ದ ನಂತರ ಕೇಜ್ರಿವಾಲರನ್ನು ಕಡೆಗಣಿಸಿದ್ದೇಕೆ? ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಆತ ಅಭಿವೃದ್ಧಿಯ ಹರಿಕಾರ ಎಂದು ಬಿಂಬಿತವಾಗುತ್ತಿದೆ. 

ಜನಾದೇಶ ಖರೀದಿಗೆ ಮುನ್ನ ಉದಾರವಾದಿಗಳೆಂದು ಕರೆಸಿಕೊಳ್ಳುತ್ತಿದ್ದ ಕೆಲ ಬುದ್ಧಿಜೀವಿಗಳನ್ನು ಕೊಂಡುಕೊಳ್ಳಲು ಭಾರೀ ಬೆಲೆ ತೆರಲಾಗು ತ್ತಿದೆ. ಎಂ.ಜೆ.ಅಕ್ಬರ್, ಮಧುಕಿಶ್ವರ ಕನ್ನಡದ ಬೆಳವಾಡಿ ಹೀಗೆ ಮೋದಿಯ ಹೊಸ ಭಟ್ಟಂಗಿಗಳು ತಮಗೆ ವಹಿಸಿಕೊಟ್ಟ ಕೆಲಸ ಮಾಡಲು ತಮ್ಮ ಅಂತಃಸಾಕ್ಷಿಯನ್ನೇ ಕೊಂಡು ಕೊಂಡಿದ್ದಾರೆ.

ನೆಹರೂ-ಇಂದಿರಾ ಕಾಲದಲ್ಲೂ ಸರಕಾರದ ಮೇಲೆ ಬಂಡವಾಳಶಾಹಿಗಳ ನಿಯಂತ್ರಣವಿತ್ತು. ಟಾಟಾ, ಬಿರ್ಲಾಗಳು ತೆರೆಮರೆಯಲ್ಲಿ ನಿಂತು ಆಟ ಆಡುತ್ತಿದ್ದರು. ಆದರೆ ಖಾಸಗಿರಂಗಕ್ಕೆ ಪರ್ಯಾಯವಾಗಿ ಸಾರ್ವಜನಿಕ ಉದ್ಯಮ ರಂಗ ಆಗಿತ್ತು. ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ಧತಿ ಯಂತಹ ಕ್ರಮಗಳ ಮೂಲಕ ಸರಕಾರದ ಮೇಲೆ ಬಂಡವಾಳಶಾಹಿಯ ಹಿಡಿತ ಮಾತ್ರವಲ್ಲ ಜನತೆಯ ಅಧಿಕಾರವೂ ಇದೆ ಎಂದು ನಂಬಿಕೆ ಬರುತ್ತಿತ್ತು. ಆದರೆ ನವ ಉದಾರೀಕರಣದ ಕರಾಳ ಶಖೆ ಆರಂಭವಾದ ನಂತರ ಪ್ರಭುತ್ವ ಹಂತಹಂತವಾಗಿ ಸಿರಿವಂತರ ಕೈವಶವಾಗುತ್ತಿದೆ. 

ಆರೆಸ್ಸೆಸ್ ಎಂಬ ಫ್ಯಾಸಿಸ್ಟ್ ಸಂಘಟನೆ ತೋರಿಕೆಗೆ ಸ್ವದೇಶಿ ಜಾಗರಣ ಮಂಚ್ ಎಂಬ ನಾಟಕ ಆಡಿದರೂ ನರೇಂದ್ರ ಮೋದಿ ಮೂಲಕ ಭಾರತವನ್ನು ಕಾರ್ಪೊರೇಟ್ ಬಂಡವಾಳಿಗರಿಗೆ ಮಾರಾಟ ಮಾಡಲು ಜನರನ್ನು ಕೋಮು ಆಧಾರದಲ್ಲಿ ವಿಭಜಿಸುತ್ತಿದೆ. ಗೋಹತ್ಯೆ ನಿಷೇಧದ ಹೆಸರಿ ನಲ್ಲಿ ಕರಾವಳಿ ಸೇರಿದಂತೆ ಅನೇಕ ಕಡೆ ಗೂಂಡಾಗಿರಿ ನಡೆಸುವ ಸಂಘಪರಿವಾರ ಗೋಮಾಂಸ ರಫ್ತು ವ್ಯವಹಾರದಲ್ಲಿ ಆರೆಸ್ಸೆಸ್‌ಗೆ ಗುರುದಕ್ಷಿಣೆ ಸಲ್ಲಿಸುವ ಹಿಂದೂ ಸಿರಿವಂತರೆ ಹೆಚ್ಚಿನ ಸಂಖ್ಯೆಯಲ್ಲಿರುವವರನ್ನು ಯಾಕೆ ಮುಚ್ಚಿಡುತ್ತಿದೆ. 

ಜನರನ್ನು ಬಾಧಿಸುತ್ತಿರುವ ಯಾವ ಜ್ವಲಂತ ಪ್ರಶ್ನೆಗಳನ್ನು ಮೋದಿ ಈ ವರೆಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿಲ್ಲ. ಎಲ್ಲೆ ಹೋಗಲಿ ಅಲ್ಲಿ ಅತ್ಯಂತ ಕೀಳುದರ್ಜೆಯ ಭಾಷಣ ಮಾಡುವ ಈತ ಇತ್ತೀಚೆಗೆ ರಕ್ಷಣ ಸಚಿವ ಎ.ಕೆ.ಆ್ಯಂಟನಿ, ಅರವಿಂದ ಕೇಜ್ರಿವಾಲರಿಗೆ ಪಾಕ್ ಎಜೆಂಟರು ಎಂದು ದೂಷಿಸಿದ ದೇಶದ ಚರಿತ್ರೆಯ ಪ್ರಾಥಮಿಕ ಜ್ಞಾನವೂ ಇಲ್ಲದ ಈತ ಬಾಯಿಗೆ ಬಂದಂತೆ ಮಾತಾಡಿ ಅಪಹಾಸ್ಯಕ್ಕೆ ಈಡಾಗು ತ್ತಿದ್ದಾನೆ. ನೆಹರೂ ಬೇಡ ಕನಿಷ್ಠ ವಾಜಪೇಯಿಯನ್ನು ಪಕ್ಕಕ್ಕಿಟು ನೋಡಿದರೂ ಇಂಥವರು ನಮ್ಮ ಪ್ರಧಾನಿಯಾಗಬೇಕೆ! ಎಂದು ಅನಿಸದಿರದು.

ಮೋದಿ ಹಾರಾಡುವ ಹೆಲಿಕಾಪ್ಟರ್ ಯಾರದು? ಆತನ ಚುನಾವಣಾ ಪ್ರಚಾರಕ್ಕೆ ಅಂಬಾನಿ, ಅದಾನಿಗಳು ಕೋಟಿ ಕೋಟಿ ಹಣ ಕೊಡುವು ದಿಲ್ಲವೇ? ನೀವು ಪ್ರಧಾನಿಯಾದರೆ ಎಲ್.ಪಿ.ಜಿ. ಸಿಲಿಂಡರ್ ದರ ಇಳಿಸುವಿರಾ? ಪೆಟ್ರೋಲ್ ದರ ಕಡಿಮೆ ಮಾಡುವಿರಾ? ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸುವಿರಾ? ಈ ಯಾವ ಪ್ರಶ್ನೆಗಳಿಗೂ ಉತ್ತರಿಸದ ಮೋದಿ ತನ್ನ ಪರ್ಯಾಯ ಕಾರ್ಯಕ್ರಮಗಳನ್ನು ಜನರ ಮುಂದಿಡುವುದಿಲ್ಲ. 

ಯಾಕೆಂದರೆ ಕಾರ್ಪೊ ರೇಟ್ ಮಾಲಕರ ದಲ್ಲಾಳಿ ಎಂದು ಗೊತ್ತಾದರೆ ಜನ ತಮಗೆ ಓಟು ಹಾಕುವುದಿಲ್ಲ ಎಂದು ಆತನಿಗೆ ಗೊತ್ತಿದೆ. ನರೇಂದ್ರ ಮೋದಿ ಹೆಸರಿಗೆ ಮಾತ್ರ ಪ್ರಧಾನಿ ಅಭ್ಯರ್ಥಿ. ಆತ ಅಧಿಕಾರಕ್ಕೆ ಬಂದರೆ ಅಂಬಾನಿ ಸೇರಿದಂತೆ ದೇಶದ ಕಾರ್ಪೊರೇಟ್ ಕಂಪೆನಿಗಳೇ ದೇಶವನ್ನು ಆಳುತ್ತವೆ. ಈ ಚುನಾವಣೆ ಅವರಿಗೆ ಒಂದು ಉದ್ದಿಮೆ ಇದ್ದಂತೆ. ಉದ್ದಿಮೆಯಲ್ಲಿ ಹಣ ಹೂಡಿ ನೂರುಪಟ್ಟು ಲಾಭ ಮಾಡಿಕೊಳ್ಳುವಂತೆ ಈ ಚುನಾವಣೆಯಲ್ಲಿ ಈ ಬಂಡವಾಳಿಗರು ಹಣ ಹೂಡಿಕೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರ ದಲ್ಲಾಳಿ ಮಾತ್ರ.

Friday, March 28, 2014

ಗಿಬ್ರಾನ್ ಕಥೆಗಳು


 
ಖಲೀಲ ಗಿಬ್ರಾನ್
ಅನು : ಡಾ ಎಚ್ ಎಸ್ ಅನುಪಮಾ
 
  • ಪೂಜ್ಯ ಅಂತ ಒಂದು ಬೆಟ್ಟ ಇದೆ, ನೀನದರ ಬಗ್ಗೆ ಕೇಳಿರಬಹುದು. ಅದು ಪ್ರಪಂಚದಲ್ಲೇ ಅತಿ ಎತ್ತರದ ಬೆಟ್ಟ. ಅದರ ಶಿಖರದ ತುತ್ತತುದಿ ತಲುಪಿದಾಗ ನಿನಗೆ ಒಂದೇ ಒಂದು ಆಸೆ ಉಳಿಯುತ್ತದೆ: ಕೆಳಗಿಳಿಯುವುದು ಮತ್ತು ಕೆಳಗೆ ಕಣಿವೆಯಲ್ಲಿ ಬದುಕುವವರ ಜೊತೆ ಇರುವುದು.

ಅದಕ್ಕೇ ಅದನ್ನು ಪೂಜ್ಯ ಅಂತ ಅನ್ನೋದು.
  • ಮಾಗಿಯ ಕಾಲದಲ್ಲಿ ನಾನು ನನ್ನೆಲ್ಲ ದುಃಖಗಳನ್ನೂ ಒಟ್ಟುಗೂಡಿಸಿ ತೋಟದಲ್ಲಿ ಹೂತೆ. ಬೇಸಿಗೆಯ ತಿಂಗಳಲ್ಲಿ ವಸಂತ ಭೂಮಿಯನ್ನು ಮದುವೆಯಾದ. ಆಗ ನನ್ನ ತೋಟದಲ್ಲಿ ಈ ಮೊದಲೆಂದೂ ಅರಳದಂಥ ಹೂಗಳು ಅರಳಿದವು. ಅಕ್ಕಪಕ್ಕದ ಮನೆಯವರು ಅವನ್ನು ನೋಡಲೆಂದೇ ಬಂದವರು ನನಗೆ ಹೇಳಿದರು: ‘ಶಿಶಿರ ಬಂದಾಗ, ಈ ಹೂವು ಬೀಜವಾಗುವಾಗ ನಮಗೂ ಈ ಹೂವಿನ ಬೀಜಗಳನ್ನು ಕೊಡುವಿರಾ? ಮುಂದಿನ ವಸಂತಕ್ಕೆ ಚೆಂದದ ಹೂವು ನಮ್ಮ ತೋಟದಲ್ಲೂ ಅರಳುವಂತೆ ಬಿತ್ತಬಹುದು?’

  • ನನ್ನ ಅಪ್ಪ ಅಮ್ಮನಿಗೊಂದು ಮಗು ಬೇಕಾಗಿತ್ತು, ಅವರು ನನ್ನ ಪಡೆದರು. ನನಗೆ ಅಮ್ಮ ಮತ್ತು ಅಪ್ಪ ಬೇಕಿತ್ತು, ಇರುಳು ಮತ್ತು ಕಡಲನ್ನು ಪಡೆದೆ.

  • ನಿಜ, ನಿರ್ವಾಣ ಎನ್ನುವುದಿದೆ. ಅದು ನಿನ್ನ ಕುರಿಗಳನ್ನು ಹಸಿರು ಹುಲ್ಲುಗಾವಲಿಗೆ ಮೇಯಿಸಲು ಹೊಡೆದುಕೊಂಡು ಹೋಗುವುದರಲ್ಲಿದೆ; ನಿನ್ನ ಮಗುವನ್ನು ಮಲಗಿಸುವುದರಲ್ಲಿದೆ; ನಿನ್ನ ಕವಿತೆಯ ಕೊನೆಯ ಸಾಲುಗಳನ್ನು ಬರೆಯುವುದರಲ್ಲಿದೆ.

ತನ್ನ ಮನಬಿಚ್ಚಿ ನನ್ನೊಡನೆ ಮಾತನಾಡುವವನನ್ನು ಮೆಚ್ಚುತ್ತೇನೆ; ತನ್ನ ಕನಸುಗಳನ್ನು ಹಂಚಿಕೊಳ್ಳುವವನನ್ನು ಗೌರವಿಸುತ್ತೇನೆ. ಆದರೆ ನನಗೆ ಸೇವೆ ಮಾಡುವವನ ಎದುರು ಏಕೆ ನಾಚುತ್ತೇನೆ?

ಎಪ್ರಿಲ್ 1ಮತ್ತು 2 ರಾಯಚೂರು : ಮಹಾಂತೇಶ ನವಲಕಲ್ ಪುಸ್ತಕ ಬಿಡುಗಡೆ ಮತ್ತು ನಾಟಕ


ಗೆಳೆತನಡಾ.ಚೆನ್ನವೀರ ಕಣವಿ

 

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ತಣ್ಣೆಳಲ ತಂಪಿನಲಿ ತಂಗಿರುವೆನು;
ಜೀವನದನಂತ ದುರ್ಭರ ಬವಣೆ ನೋವುಗಳ
ಕಾವುಗಳ ಮೌನದಲಿ ನುಂಗಿರುವೆನು
ಗೆಳೆತನವೆ ಇಹಲೋಕಕಿರುವ ಅಮೃತ
ಅದನುಳಿದರೇನಿಹುದು-ಜೀವನ್ಮ್ರುತ!
[ಕೆಲವು ಪಠ್ಯಗಳಲ್ಲಿ ಮೇಲಿನೆರಡು ಸಾಲುಗಳು ಈಕೆಳಗಿನಂತಿವೆ-
ಗೆಳೆತನವೆ ಚಿರಬಾಳ ಸಂಜೀವಿನಿ
ವಿಶ್ವದಂತಃಕರಣ ಮಂದಾಕಿನಿ]

ಇಲ್ಲಿ ವಂಚನೆಯಿಲ್ಲ ಚಂಚಲತೆಯಿನಿತಿಲ್ಲ
ಮೇಲು ಕೀಳುಗಳೆಂಬ ಭೇದವಿಲ್ಲ
ಅಹಮಿಕೆಯ ನೆವಮಿಲ್ಲ ದ್ವೇಷ ಗುಣಮಣವಿಲ್ಲ
ಸಣ್ಣತನ ಸಂಕೋಚ ಮೊದಲಿಗಿಲ್ಲ
ಮನವು ಬಾನಗಲ, ಎದೆ ತಿಳಿಗೊಳದೊಲು
ಭಾವ ಶುದ್ಧ ಸ್ಫಟಿಕ-ಬೆಳದಿಂಗಳು!

ಉಪ್ಪಿಗಿಂತಲು ರುಚಿಯು ತಾಯಿಗಿಂತಲು ಬಂಧು
ಇಲ್ಲೆಂಬ ಗಾದೆನುಡಿ ಕೇಳಿರುವೆನು.
ಗೆಳೆತನದ ಶುಚಿರುಚಿಯು ಇದಕು ಮಿಗಿಲಾಗಿಹುದು
ಎಂಬ ಸಾಹಸ ಮಾಡೆ ದೋಷವೇನು?
ಕಂಡ ಕಂಡವರೇನು ಬಲ್ಲರಿದನು
ಉಂಡವನು ಕಂಡಿಹನು ಇದರ ಹದನು.

ಹೇಗೊ ಹೇಗೋ ಹೆಗಲುಗೊಟ್ಟು ಬಂದಿಹ ಕೂರ್ಪು
ಆಗು ಹೋಗುಗಳಿಂಗೆ ಬಾಗದಂತೆ,
ಸುಖಕೆ ಸಂತಸಬಟ್ಟು ದುಃಖದಲಿ ಸಹಭಾಗಿ-
ಯಾಗೆ ಜೀವನ ರಸದ ಪಾಕದಂತೆ-
ಸರಸವಿರಸವನೆಲ್ಲ ಅಪ್ಪುಕಯ್ದು
ಬಾಳುವರು ಗಂಧದೊಲು ಜೀವ ತೆಯ್ದು!

ಇನಿವಿರಿದು ಗೆಳೆತನದ ಗುಟ್ಟಿಹುದು ನಲ್ಗೆಳೆಯ
ಬಿನ್ನಣದ ನುಡಿಯಲ್ಲ ಎದೆಯ ಮೀಟಿ
ಜೀವ ಜೀವಕೆ ಇಂಬುಕಯ್ವವರು ನಾಲ್ವರಿರೆ
ಚದುರಂಗ ಬಲವಿದಕೆ ಯಾವ ಸಾಟಿ

***

Tuesday, March 25, 2014

ವಿಧವೆ ಮತ್ತು ಮಗು

 

ಖಲೀಲ ಗಿಬ್ರಾನ್
ಅನು : ಡಾ ಎಚ್ ಎಸ್ ಅನುಪಮಾ
 
ಉತ್ತರ ಲೆಬನಾನಿನ ಮೇಲೆ ಇರುಳು ಆವರಿಸಿತು. ಖದೀಶಾ ಕಣಿವೆ ಮತ್ತು ಆಸುಪಾಸಿನ ಹಳ್ಳಿಗಳನ್ನು ಹಿಮ ಹರಡಿಕೊಂಡಿತು. ಹೊಲ ಹುಲ್ಲುಗಾವಲುಗಳು ದೊಡ್ಡ ಹಾಳೆಗಳಂತೆಯೂ, ಅದರ ಮೇಲೆ ಕೋಪಗೊಂಡ ಪ್ರಕೃತಿ ನಾನಾ ಆಕಾರಗಳನ್ನು ಮೂಡಿಸುವಂತೆಯೂ ಕಾಣಿಸುತ್ತಿತ್ತು. ಜನ ಬೀದಿಯಿಂದ ಮನೆಯೊಳಗೆ ಬಂದರು. ಇರುಳನ್ನು ಮೌನ ನುಂಗಿ ಹಾಕಿತು. 

ಆ ಹಳ್ಳಿಗಳ ಬಳಿ ಒಂದು ಒಂಟಿ ಮನೆಯಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಆ ಹೊತ್ತಿನಲ್ಲಿ ಬೆಂಕಿಯೆದುರು ಕುಳಿತು ಉಣ್ಣೆ ನೂಲು ತೆಗೆಯುತ್ತಿದ್ದಳು. ಅವಳ ಪಕ್ಕ ಅವಳ ಏಕೈಕ ಮಗು ಒಮ್ಮೆ ಬೆಂಕಿಯತ್ತ, ಒಮ್ಮೆ ಅಮ್ಮನತ್ತ ದಿಟ್ಟಿ ಹರಿಸುತ್ತಾ ಇತ್ತು. 

ಒಂದು ಭಯಂಕರ ಗುಡುಗಿನ ಸದ್ದು ಕೇಳಿತು. ಪುಟ್ಟ ಹುಡುಗ ಹೆದರಿ ಕಂಗಾಲಾಗಿ ಅಮ್ಮನ ಕುತ್ತಿಗೆ ಬಳಸಿ ಅವಳ ಪ್ರೀತಿಯಲ್ಲಿ ರಕ್ಷಣೆ ಪಡೆಯಬಯಸಿತು. ಅವನನ್ನು ಎದೆಗೊತ್ತಿಕೊಂಡು ಮುದ್ದಿಸಿ ತೊಡೆ ಮೇಲೆ ಕೂರಿಸಿಕೊಳ್ಳುತ್ತಾ ಹೇಳಿದಳು: ‘ಹೆದರಬೇಡ ಮಗನೇ, ಪ್ರಕೃತಿ ತನ್ನ ಶಕ್ತಿಯನ್ನು ಮಾನವ ದೌರ್ಬಲ್ಯದೊಂದಿಗೆ ಹೋಲಿಸಿ ನೋಡುತ್ತಿದ್ದಾಳೆ. ಸುರಿಯುವ ಹಿಮ, ಚಲಿಸುವ ಮೋಡ, ಬೀಸುವ ಗಾಳಿ ಇದೆಲ್ಲದರ ಆಚೆ ಒಂದು ಮಹಾನ್ ಶಕ್ತಿಯಿದೆ. ಆ ಶಕ್ತಿಗೆ ಭೂಮಿಗೆ ಏನು ಬೇಕು ಎಂದು ಗೊತ್ತಿದೆ. ಏಕೆಂದರೆ ಭೂಮಿಯನ್ನು ಸೃಷ್ಟಿಮಾಡಿದ್ದು ಅವನೇ. ದುರ್ಬಲರನ್ನು ಆತ ಕರುಣೆಯಿಂದ ಕಾಣುತ್ತಾನೆ. 

ಧೈರ್ಯವಾಗಿರು ಮಗನೇ, ವಸಂತ ಕಾಲದಲ್ಲಿ ಪ್ರಕೃತಿ ನಸುನಗುತ್ತಾಳೆ. ಚೈತ್ರದಲ್ಲಿ ಗಹಗಹಿಸುತ್ತಾಳೆ. ಚಳಿಯಲ್ಲಿ ಆಕಳಿಸುತ್ತಾಳೆ, ಆದರೆ ಈಗವಳು ಅಳುತ್ತಿದ್ದಾಳೆ; ತನ್ನ ಕಣ್ಣೀರಿನಿಂದ ನೆಲದಾಳದಲ್ಲಿ ಅಡಗಿರುವ ಜೀವಗಳಿಗೆ ನೀರೆರೆಯುತ್ತಿದ್ದಾಳೆ.
ಮಲಗು ನನ್ನ ಮುದ್ದು ಮಗುವೇ, ನಿನ್ನ ತಂದೆ ಆಕಾಶದಿಂದ ನಮ್ಮನ್ನು ನೋಡುತ್ತಿದ್ದಾನೆ. ಹಿಮ ಮತ್ತು ಗುಡುಗು ನಮ್ಮನ್ನು ಅವನ ಬಳಿ ಒಯ್ಯುತ್ತವೆ. ಮಲಗು ಮಗುವೇ, ನಮಗೆ ಚಳಿಯೆನಿಸುವ ಈ ಹಿಮದ ಬಿಳಿ ಹೊದಿಕೆ ಬೀಜಗಳ ಬೆಚ್ಚಗಿಡುತ್ತದೆ. ಬಿರುಗಾಳಿಯೂ ಕೊನೆಗೆ ಮಾಗಿಯ ಮಾರುತವಾಗಿ ಹೂಗಳ ಅರಳಿಸುತ್ತದೆ.

ಹಾಗೆಯೇ ಮಗೂ, ಮನುಷ್ಯ ದುಃಖ ಮತ್ತು ಅಗಲಿಕೆಯ ಹೊರತಾಗಿ ಪ್ರೀತಿಯನ್ನು ಪಡೆಯಲಾರ. ತಾಳ್ಮೆಯ ಕಹಿ ಉಣ್ಣದೇ, ಸಹಿಸಲಾಗದ ಕಷ್ಟಗಳಿಲ್ಲದೇ ಪ್ರೇಮ ಗಳಿಸಲಾರ. ನಿದ್ರಿಸು ನನ್ನ ಪುಟ್ಟ ಮಗುವೇ, ಸಿಹಿ ಕನಸುಗಳು ನಿನ್ನ ಆತ್ಮವನ್ನು ಹುಡುಕಿ ಬರುತ್ತವೆ. ಏಕೆ ಗೊತ್ತೆ? ಆತ್ಮಕ್ಕೆ ರಾತ್ರಿಯ ಭಯಾನಕ ಕತ್ತಲೆಯದಾಗಲೀ, ಮೂಳೆ ನಡುಗಿಸುವ ಚಳಿಯದಾಗಲೀ ಹೆದರಿಕೆಯಿಲ್ಲ.’

ಪುಟ್ಟ ಹುಡುಗ ನಿದ್ದೆ ತುಂಬಿದ ಕಣ್ಣುಗಳಿಂದ ಅಮ್ಮನತ್ತ ನೋಡುತ್ತ ಹೇಳಿದ: ‘ಅಮ್ಮಾ, ನನ್ನ ಕಣ್ಣು ಎಳೆಯುತ್ತಿದೆ. ಆದರೆ ಪ್ರಾರ್ಥನೆ ಮಾಡದೇ ನಿದ್ದೆ ಮಾಡುವುದು ಹೇಗೆ?’

ಆಕೆ ಮಗುವಿನ ದೇವದೂತನಂತಹ ಮುಖವನ್ನು ನೋಡಿದಳು. ಕಣ್ಣು ಒದ್ದೆಯಾದವು. ಹೇಳಿದಳು: ‘ಆಯಿತು, ನಾನು ಹೇಳಿದಂತೆ ಹೇಳು. ‘ಓ ದೇವರೇ, ಬಡವರ ಮೇಲೆ ಕರುಣೆಯಿಡು. ಅವರನ್ನು ಚಳಿಯಿಂದ ರಕ್ಷಿಸು. ಅವರ ಕೃಶ ದೇಹಗಳನ್ನು ನಿನ್ನ ಕರುಣೆಯ ಕೈಗಳಿಂದ ಬೆಚ್ಚಗಿಡು. ಹಸಿವೆ, ಚಳಿಯಿಂದ ನರಳುತ್ತಿರುವ ಕುಸಿದ ಮನೆಗಳಲ್ಲಿರುವ ಅನಾಥರತ್ತ ನೋಡು. ಅಸಹಾಯಕ ವಿಧವೆಯರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೆದರಿ ಕರೆಯುತ್ತಿದ್ದಾರೆ, ಆಲಿಸು. ನಿನ್ನ ಹೃದಯವನ್ನು ಎಲ್ಲ ಮನುಷ್ಯರಿಗಾಗಿ ತೆರೆದಿಡು. ಆಗ ಎಲ್ಲರಿಗೂ ದುರ್ಬಲರ ಕಷ್ಟಗಳು ಕಾಣಬಹುದು. ಬಾಗಿಲು ಬಡಿಯುವ ದುಃಖಿಗಳ ಮೇಲೆ ಕರುಣೆಯಿಡಬಹುದು; ದಾರಿಹೋಕರನ್ನು ಬೆಚ್ಚನೆಯ ಜಾಗಗಳಿಗೆ ಬಿಟ್ಟುಕೊಳ್ಳಬಹುದು. ಹಕ್ಕಿಗಳತ್ತ ನೋಡು ಓ ದೇವರೇ, ಬಿರುಗಾಳಿಯ ಸಿಟ್ಟಿಗೆ ಹೊಲ ಮನೆ ಮರಗಳು ನಾಶವಾಗದೇ ಇರಲಿ. ನೀನು ಕರುಣಾಳು, ಪ್ರೇಮಮಯಿ.’

ನಿದ್ದೆ ಆ ಎಳೆಯ ಹುಡುಗನ ದೇಹಾತ್ಮವನ್ನು ಹೊಕ್ಕಿತು. ಅಮ್ಮ ಮೆಲುವಾಗಿ ಹಾಸಿಗೆ ಮೇಲೆ ಮಲಗಿಸುತ್ತಾ ಕಣ್ಣಿಗೆ ಮುತ್ತಿಟ್ಟಳು. ಅವನಿಗಾಗಿ ಒಂದು ನಿಲುವಂಗಿ ಹೊಲೆಯಬೇಕೆಂದುಕೊಂಡು ಉಣ್ಣೆ ನೇಯುತ್ತಾ ತಕಲಿಯ ಬಳಿ ಕೂತಳು.

(ಟಿಯರ‍್ಸ್ ಅಂಡ್ ಲಾಫ್ಟರ್)

ಗುರುತು


ವಿಭಾ


ವಾರ್ತಾಭಾರತಿ
Monday, March 24, 2014

ವಂಚಕರ ರಕ್ಷಾಕವಚ ಮೋದಿ 
ಸನತಕುಮಾರ ಬೆಳಗಲಿಈ ದೇಶ ಸ್ವಾತಂತ್ರದ ಅರವತ್ತು ವರ್ಷಗಳಲ್ಲಿ ಇಂಥ ಚುನಾವಣೆಯನ್ನು ಎಂದೂ ಎದುರಿಸಿರಲಿಲ್ಲ. ಸಂಸದೀಯ ಜನತಂತ್ರದ ಸತ್ಸಂಪ್ರದಾಯವನ್ನೇ ಕಡೆಗಣಿಸಿ ನರಹಂತಕ ಎಂಬ ಕುಖ್ಯಾತಿ ಪಡೆದ ವ್ಯಕ್ತಿಯೊಬ್ಬನನ್ನು ಪ್ರಧಾನಿಯನ್ನಾಗಿ ಬಿಂಬಿಸುವ ಹುನ್ನಾರ ಎಂದೂ ನಡೆದಿರಲಿಲ್ಲ. ಜನನಾಯಕರಾಗಿದ್ದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಕಾಲಾವಧಿಯಲ್ಲೂ ಜನತಂತ್ರಕ್ಕೆ ಇಂಥ ಅಪಚಾರ ನಡೆದಿರಲಿಲ್ಲ. ರಾಷ್ಟ್ರೀಯ ಪಕ್ಷವೊಂದು ವ್ಯಕ್ತಿಕೇಂದ್ರಿತ ಚುನಾವಣಾ ಪ್ರಚಾರವನ್ನು ಇದೇ ಮೊದಲ ಬಾರಿ ಹಮ್ಮಿಕೊಂಡಿದೆ. ಇದು ಅಮೆರಿಕನ್ ಮಾದರಿಯ ಅಧ್ಯಕ್ಷ ಮಾದರಿ ಆಡಳಿತ ಪದ್ಧತಿಯನ್ನು ದೇಶದ ಮೇಲೆ ಹೇರುವ ಕಾರ್ಪೊರೇಟ್ ಕುತಂತ್ರವಲ್ಲದೆ ಬೇರೇನೂ ಅಲ್ಲ. 

ಬಂಡವಾಳಶಾಹಿ ವ್ಯವಸ್ಥೆ ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗಲೆಲ್ಲ ಇಂಥ ಮಸಲತ್ತುಗಳು ನಡೆಯುತ್ತವೆ. 1930ರಲ್ಲಿ ಜಾಗತಿಕ ಬಂಡವಾಳಶಾಹಿಯ ಬಿಕ್ಕಟ್ಟು ಜರ್ಮನಿಯ ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನನ್ನು ಸೃಷ್ಟಿಸಿತು. ಆಗ ಪ್ರಭುತ್ವವನ್ನು ಬಂಡವಾಳಶಾಹಿ ಪಾದಸೇವೆಗೆ ಮೀಸಲಾಗಿಟ್ಟ ಹಿಟ್ಲರ್ ಹುಸಿ ರಾಷ್ಟ್ರೀಯವಾದದ ಹೀರೋ ಆಗಿ ಮಿಂಚಿದ ಇಟಲಿಯ ಫ್ಯಾಶಿಸ್ಟ್ ಪಾರ್ಟಿಯ ಮುಸಲೋನಿ ಅದೇ ಕಾಲಘಟ್ಟದಲ್ಲಿ ವೃಣದಂತೆ ಹುಟ್ಟಿಕೊಂಡ ಚಿಲಿಯಲ್ಲಿ ಫಿನೋಶೆ, ಇಂಡೊನೇಶ್ಯದಲ್ಲಿ ಸುಹಾತೊ ಅದೇ ಪಾದಗಾಣಿಕೆಯನ್ನು ಬಂಡವಾಳಶಾಹಿಗೆ ಸಲ್ಲಿಸಿದರು. 

ನವ ಉದಾರೀಕರಣದ ಈ ದಿನಗಳಲ್ಲಿ ಆರೆಸ್ಸೆಸ್ ಮತ್ತು ಕಾರ್ಪೊರೇಟ್ ಬಂಡವಾಳಶಾಹಿಯ ಅನೈತಿಕ ಸಂಬಂಧದ ಪರಿಣಾಮವಾಗಿ ನರೇಂದ್ರ ಮೋದಿ ಹುಟ್ಟಿಕೊಂಡಿ ದ್ದಾರೆ. ‘‘ಭಾರತವನ್ನು ಗೆಲ್ಲಿಸಲು ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಬೇಕು’’ ಎಂಬ ಅತ್ಯಂತ ವ್ಯವಸ್ಥಿತ ಪ್ರಚಾರವೊಂದು ದೇಶದಲ್ಲಿ ನಡೆದಿದೆ. ನರೇಂದ್ರ ಮೋದಿಯ ಜೀವನ ಚರಿತ್ರೆಯ ನೂರಾರು ಪುಸ್ತಕಗಳು ಮಾರುಕಟ್ಟೆಗೆ ಬಂದಿವೆ. 

ದೇಶದ ಯಾವುದೇ ಹಳ್ಳಿಗೆ ಹೋದರೂ ನಮೊ ಬ್ರಿಗೇಡ್ ಬೋರ್ಡುಗಳು ಕಾಣಿಸುತ್ತಿವೆ. ಆರು ತಿಂಗಳ ಹಿಂದೆ ಮಂಗಳೂರಿನಿಂದ ತೀರ್ಥಹಳ್ಳಿಗೆ ಹೋಗುವಾಗ ದಾರಿಯುದ್ದಕ್ಕೂ ಇಂಥ ಫಲಕಗಳನ್ನು ನೋಡಿ ಅಚ್ಚರಿ ಆಯಿತು. ಇದು ಕಾರ್ಪೊರೇಟ್ ಕಂಪೆನಿಗಳ ಪಾಪದ ಹಣದಿಂದ ಆರೆಸ್ಸೆಸ್ ರೂಪಿಸಿದ ಪ್ರಚಾರ ತಂತ್ರ. ಈಗಂತೂ ಲಂಚಕೋರರು, ಕಡುಭ್ರಷ್ಟರು, ನೀತಿಗೆಟ್ಟವರು ಭಾರತದ ಉದ್ಧಾರಕ್ಕಾಗಿ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ತಾವು ಬಿಜೆಪಿ ಸೇರುತ್ತಿರುವುದಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿಕೊಂಡು ಓಡಾಡು ತ್ತಿದ್ದಾರೆ. 

ಕರ್ನಾಟಕದಲ್ಲಂತೂ ಬಿಜೆಪಿಯಿಂದ ಸ್ಪರ್ಧಿಸಿದ ಯಾರಿಗೂ ಜನರ ಬಳಿ ಹೋಗಲು ಮುಖವಿಲ್ಲ. ಐದು ವರ್ಷಗಳ ಕರಾಳ ಆಡಳಿತದ ಕೆಸರು ಅವರನ್ನು ಮೆತ್ತಿಕೊಂಡಿದೆ. ಅಂತಲೇ ತಮ್ಮ ಬಗ್ಗೆ ಏನನ್ನೂ ಹೇಳಿಕೊಳ್ಳದ ಇವರು ಸದಾ ಮೋದಿ ಜಪ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆ ಬಗೆಗೂ ಯಾರೂ ಮಾತಾಡುತ್ತಿಲ್ಲ. ‘ಮೋದಿ ಪ್ರಧಾನಿಯಾದರೆ ದೇಶದ ಅಭಿವೃದ್ಧಿ’ ಎಂಬ ಏಕೈಕ ಜಪಮಂತ್ರದೊಂದಿಗೆ ಇವರು ಕಣಕ್ಕಿಳಿದಿದ್ದಾರೆ. ಕರ್ನಾಟಕದಲ್ಲಿ ಕೇವಲ ಹದಿನೆಂಟು ತಿಂಗಳ ಹಿಂದೆ ಬಿಜೆಪಿ ಸರಕಾರವಿತ್ತು. 

ಆ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ ಭ್ರಷ್ಟಾಚಾರ ಹಗರಣದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದರು. ನಂತರ ಕುರ್ಚಿ ಕಳೆದುಕೊಂಡ ಈ ವ್ಯಕ್ತಿ ತನ್ನದೇ ಪ್ರಾದೇಶಿಕ ಪಕ್ಷ ಕಟ್ಟಿದರು. ಅದು ದುಸ್ಸಾಹಸ ಎಂದು ಗೊತ್ತಾದಾಗ ತನ್ನ ಅನುಯಾಯಿಗಳನ್ನು ನಡುನೀರಿನಲ್ಲಿ ಕೈಬಿಟ್ಟು ಶೋಬಾ ಕರಂದ್ಲಾಜೆ ಜೊತೆಗೆ ಬಿಜೆಪಿ ಸೇರಿದರು. ಈಗ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರು ರಾಷ್ಟ್ರದ ಅಭಿವೃದ್ಧಿಗಾಗಿ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಸ್ಪರ್ಧಿಸುತ್ತಿರುವುದಾಗಿ ಹೇಳು ತ್ತಿದ್ದಾರೆ. 

ಇನ್ನು ಬಳ್ಳಾರಿಯ ಗಣಿ ಲೂಟಿಕೋರರ ಗ್ಯಾಂಗಿನ ಆಪ್ತ ಶ್ರೀರಾಮುಲುಗೂ ಕೂಡ ದೇಶದ ಕಾಳಜಿ. ಅಂತಲೆ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಅವರೂ ಸ್ಪರ್ಧಿಸುತ್ತಿದ್ದಾರೆ. ಯಡಿಯೂರಪ್ಪ ಅನುಯಾಯಿಗಳನ್ನೇ ಬಿಟ್ಟು ಬಿಜೆಪಿ ಸೇರಿದರೆ, ಶ್ರೀರಾಮುಲು ತಾನು ಕಟ್ಟಿದ ಪಕ್ಷವನ್ನೇ ತಬ್ಬಲಿ ಮಾಡಿ ಸಂಘ ಪರಿವಾರಕ್ಕೆ ಶರಣಾಗತ ರಾಗಿದ್ದಾರೆ. ಈತನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ದತ್ತು ತಾಯಿ ಸುಶ್ಮಾ ಸ್ವರಾಜ್ ವಿರೋಧಿಸಿದರೂ ಪಕ್ಷದಲ್ಲಿ ಅವರ ಮಾತು ನಡೆಯಲಿಲ್ಲ. ಆರೆಸ್ಸೆಸ್ ಕಣ್ಸನ್ನೆಗೆ ನಲುಗಿ ಅವರು ತೆಪ್ಪಗಾದರು. 

ಮೋದಿ ಪ್ರಧಾನಿಯಾಗುವುದು ಅಂಬಾನಿಗೆ ಮಾತ್ರವಲ್ಲ, ದೇಶದ ತುಂಬ ನಾಯಿಕೊಡೆ ಗಳಂತೆ ಹುಟ್ಟಿಕೊಂಡಿರುವ ಇಂಥ ಪರಮ ಭ್ರಷ್ಟರಿಗೂ ಮೋದಿ ಬೇಕು. ಕರ್ನಾಟಕದಲ್ಲಿ ನೋಟು ಏಣಿಸುವ ಯಂತ್ರವನ್ನು ಮನೆಯಲ್ಲಿಟ್ಟುಕೊಂಡಿದ್ದ ಮಾಜಿ ಮಂತ್ರಿಗೂ ಮೋದಿ ಬೇಕು. ಸದನದಲ್ಲಿ ಬ್ಲೂ ಫಿಲ್ಮ್ ನೋಡಿದ ಮೂವರು ಮಾಜಿಗಳಿಗೂ ಮೋದಿ ಪ್ರಧಾನಿಯಾಗಬೇಕು. ರಿಯಲ್ ಎಸ್ಟೇಟ್ ದಂಧೆಯ ಖದೀಮರು, ಜೈಲಿಗೆ ಹೋಗಿ ಬಂದ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಹರತಾಳ ಹಾಲಪ್ಪ, ನರ್ಸ್ ರೇಣುಕಾಚಾರ್ಯ ಇವರಿಗೆಲ್ಲ ಮೋದಿ ಪ್ರಧಾನಿಯಾಗಬೇಕಾಗಿದೆ. 

ಇಂಥವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಕೇಂದ್ರದ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿದ್ದಾರೆ. ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಅಂಬಾನಿಗಳು, ಅದಾನಿಗಳು ಕೋಟ್ಯಂತರ ರೂಪಾಯಿಗಳನ್ನು ನೀರಿನಂತೆ ಚೆಲ್ಲುತ್ತಿದ್ದಾರೆ. ಈ ದಗಾಕೋರರಿಗಷ್ಟೇ ಅಲ್ಲ ರವಿಶಂಕರ್, ಬಾಬಾ ರಾಮದೇವ್, ಅಸಾರಾಮ್ ಬಾಪು ಅಂಥ ಧಾರ್ಮಿಕ ದಂಧೆಕೋರರಿಗೂ ಮೋದಿ ಪ್ರಧಾನಿಯಾಗಬೇಕಾಗಿದೆ. 

ಮೂಢನಂಬಿಕೆ, ಜ್ಯೋತಿಷ್ಯ, ತಾಯತ, ವಾಸ್ತುಶಾಸ್ತ್ರ ಹೆಸರಿನಲ್ಲಿ ಅಮಾಯಕ ಜನರನ್ನು ವಂಚಿಸುತ್ತಿರುವ ಪಾತಕಿಗಳಿಗೆ ಮೋದಿ ಎಂಬ ರಕ್ಷಾಕವಚ ಬೇಕಾಗಿದೆ. ಅಸಾರಾಮ್ ಬಾಪುನಂತಹ ಅತ್ಯಾಚಾರ ಆರೋಪಿಯನ್ನು ರಕ್ಷಿಸಿದ ಮೋದಿ ಪ್ರಧಾನಿಯಾದರೆ ತಮ್ಮ ದಂಧೆಯೂ ಹುಲುಸಾಗಿ ನಡೆಯಬಹುದು ಎಂಬುದು ಇವರ ಸುಪ್ತ ಬಯಕೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾಗಪುರದಲ್ಲಿ ಹುತ್ತ ಕಟ್ಟಿಕೊಂಡಿರುವ ಜರ್ಮನಿಯ ನಾಝಿ ಪಾರ್ಟಿಯ ಭಾರತೀಯ ಶಾಖೆಯಾದ ಆರೆಸ್ಸೆಸ್‌ಗೂ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡುವ ಆತುರ. 

ಗುಜರಾತ್‌ನಲ್ಲಿ 2002ರಲ್ಲಿ ಸಾವಿರಾರು ಮುಸಲ್ಮಾನರ ಹತ್ಯಾಕಾಂಡದ ನಂತರವೂ ವಿಷಾದ ವ್ಯಕ್ತಪಡಿಸದ, ಕ್ಷಮೆಯಾಚಿಸದ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಿದರೆ ಡಾ.ಅಂಬೇಡ್ಕರ್ ರೂಪಿಸಿದ ಸಂವಿಧಾನ ವನ್ನು ಸಮಾಧಿ ಮಾಡಿ ತನ್ನ ಕಲ್ಪನೆಯ ಮನುವಾದದ ಆಧಾರಿತ ಹಿಂದೂರಾಷ್ಟ್ರ ಸ್ಥಾಪನೆಗೆ ದಾರಿ ಸುಗಮವಾಗುವುದು ಎಂದು ಅದರ ಲೆಕ್ಕಾಚಾರ.
ಅಟಲ್ ಬಿಹಾರಿ ವಾಜಪೇಯಿ ಕೂಡ ಆರೆಸ್ಸೆಸ್ ಸ್ವಯಂ ಸೇವಕನಾಗಿದ್ದರೂ ಮಿತ್ರ ಪಕ್ಷಗಳ ಬೆಂಬಲದಿಂದ ಪ್ರಧಾನಿಯಾದ ಅವರಿಗೆ ಆರೆಸ್ಸೆಸ್ ಅಜೆಂಡಾವನ್ನು ಸಂಪೂರ್ಣ ವಾಗಿ ಜಾರಿಗೆ ತರಲು ಸಾಧ್ಯವಾಗಿ ರಲಿಲ್ಲ. ಆ ಕಾರಣಕ್ಕಾಗಿ ನಾಗಪುರ ಗುರುಗಳು ಅವರ ಮೇಲೆ ಮುನಿಸಿ ಕೊಂಡಿದ್ದರು. ಆದರೆ ಮೋದಿ ಹಾಗಲ್ಲ ಆತನ ವ್ಯಕ್ತಿತ್ವವನ್ನೇ ಹಿಟ್ಲರ್ ಮಾದರಿಯ ಸರ್ವಾಧಿಕಾರಿ ವ್ಯಕ್ತಿತ. 

ಅಂತಲೆ ದಲಿತ, ಪ್ರಗತಿಪರ ದನಿಗಳನ್ನು ಹತ್ತಿಕ್ಕಿ ಹಿಂದೂರಾಷ್ಟ್ರ ನಿರ್ಮಿಸಲು ಮೋದಿ ಪ್ರಧಾನಿಯಾಗುವುದು ಆರೆಸ್ಸೆಸ್‌ಗೆ ಬೇಕಾಗಿದೆ. ಮೋದಿ ಪ್ರಧಾನಿಯಾದರೆ ಈ ದೇಶದ ಅಮೂಲ್ಯ ಅರಣ್ಯ ಸಂಪತ್ತನ್ನು, ಭೂಮಿಯನ್ನು, ನೀರನ್ನು ತಮಗೆ ಧಾರೆ ಎರೆದುಕೊಡುತ್ತಾರೆ ಎಂಬುದು ಕಾರ್ಪೊರೇಟ್ ಬಂಡವಾಳಶಾಹಿಗಳ ನಿರೀಕ್ಷೆಯಾಗಿದೆ. ಗುಜರಾತ್‌ನ ಸೂರತ್‌ನಲ್ಲಿ ಎಲ್ ಅಂಡ್ ಟಿ ಕಂಪೆನಿಗೆ 8 ಲಕ್ಷ ಚದರ ಮೀಟರ್‌ನಷ್ಟು ಬೆಲೆ ಬಾಳುವ ಭೂಮಿಯನ್ನು ಕೇವಲ ಒಂದು ರೂಪಾಯಿಗೆ ಒಂದು ಚದರ ಮೀಟರಿನಂತೆ ನೀಡಲಾಗಿದೆ. 

ಇದರ ಮಾರುಕಟ್ಟೆ ದರ ಚದರು ಮೀಟರಿಗೆ 950 ರೂ. ಆಗಿದೆ. ಟಾಟಾಗಳ ನ್ಯಾನೋ ಕಾರು ಉತ್ಪಾದನಾ ಘಟಕಕ್ಕೆ 1100 ಎಕರೆ ಭೂಮಿಯನ್ನು ಅತ್ಯಂತ ಅಗ್ಗ ದರದಲ್ಲಿ ನೀಡಲಾಗಿದೆ. ಇದೆಲ್ಲದರ ಪರಿಣಾಮವಾಗಿ ಗುಜರಾತ್ ಸರಕಾರ 33 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ಇದು ಮೋದಿ ಸಾಧನೆ. ಕಾರ್ಪೊರೇಟ್ ಬಂಡವಾಳಶಾಹಿಗಳು ಸಂಘ ಪರಿವಾರದ ಮನುವಾದಿಗಳು ಮತ್ತು ನೆಲಗಳ್ಳ ಭ್ರಷ್ಟ ರಾಜಕಾರಣಿಗಳು ತಮ್ಮ ಹಿತಾಸಕ್ತಿಯನ್ನು ರಕ್ಷಿಸಲು ನರೇಂದ್ರ ಮೋದಿ ಪ್ರಧಾನಿ ಯಾಗಬೇಕೆಂದು ಹಾತೊರೆಯುತ್ತಿದ್ದಾರೆ. ಅದನ್ನು ವಿಫಲಗೊಳಿಸಿದರೆ ಭಾರತವನ್ನು ಉಳಿಸಲು ಸಾಧ್ಯವಾಗುತ್ತದೆ.

Friday, March 21, 2014

ಮಾ 23 ಮೈಸೂರು : ಲೋಹಿಯಾ ನೆನಪಿನ ವಿಚಾರ ಸಂಕಿರಣ

ಮಾರ್ಚ 23 ಧಾರವಾಡ : ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಕಾವ್ಯ ವಾಚನ - ಮಂಥನ


ಮೂಢನಂಬಿಕೆ ಮತ್ತು ವೈಚಾರಿಕ ವಿವೇಕಜಿ.ಪಿ.ಬಸವರಾಜುವೈಚಾರಿಕ ಚಿಂತನೆ ಎಂದರೇನು? ಆಧುನಿಕ ತತ್ವಜ್ಞಾನಿ ಕೆಂಟ್ ಇದನ್ನು ಬಹಳ ಸೂಕ್ಷ್ಮವಾಗಿ ವ್ಯಾಖ್ಯಾನಿಸಿದ್ದಾನೆ. ನಮ್ಮ ಚಿಂತನೆ ಅಥವಾ ಆಲೋಚನೆಯ ಕ್ರಮ ಸತ್ಯಸಂಗತಿಯನ್ನು ಆಧರಿಸಿರಬೇಕು. ಸತ್ಯಸಂಗತಿ ಎಂದರೇನು? ನಡೆದ ಟನೆ ಅಥವಾ ಸಂಗತಿ. ಇಂದ್ರಿಯಾನುಭವಕ್ಕೆ ದಕ್ಕಬಹುದಾದ ಸಂಗತಿಗಳು. ನಾವದನ್ನು ನೋಡಬಹುದು; ಕಅರಿಯಕಿಬಹುದು. ಇದನ್ನು ಆಧಾರವಾಗಿಟ್ಟುಕೊಂಡು, ಇತರರನ್ನು ಒಪ್ಪಿಸಬಹುದು. ಅಂದರೆ, ಮನಸ್ಸಿನ ಭಾವ ರಾಗಗಳನ್ನು ಆಧರಿಸಿ ಈ ವೈಚಾರಿಕ ಚಿಂತನೆಯ ಮಹಲನ್ನು ಕಟ್ಟಲು ಬರುವುದಿಲ್ಲ.

 ಹಾಗಾದರೆ ಮನುಷ್ಯ ಕಬಲ್ಲಕಿ ಎಲ್ಲವೂ ನಮ್ಮ ಇಂದ್ರಿಯಾನುಭವಕ್ಕೆ ಬರುತ್ತದೆಯೇ? ಮನುಷ್ಯನ ಅನುಭವ ಎನ್ನುವುದು ಅವನ ಇಂದ್ರಿಯಗಳ ತಿಳುವಿನ ಆಚೆಗೂ ಚಾಚಿಕೊಂಡಿಲ್ಲವೇ? ಮನುಷ್ಯನ ರಾಗ ಭಾವಗಳನ್ನು ಅವಲಂಬಿಸಿಲ್ಲವೇ? ಅವುಗಳಿಗೆ ಜಾಗವೆಲ್ಲಿ? ಹಾಗೆ ನೋಡಿದರೆ ಮನುಷ್ಯ, ವೈಚಾರಿಕ ಚಿಂತನೆಗಿಂತ ಈ ಭಾವರಾಗಗಳಿಗೇ ಹತ್ತಿರದವನಲ್ಲವೇ? ಹೌದು, ಭಾವರಾಗಗಳು ಇಲ್ಲವಾದರೆ ಮನುಷ್ಯನ ಬದುಕಿಗೆ ಅರ್ಥವಾದರೂ ಎಲ್ಲಿ?

ಸಾಮಾಜಿಕ ಜೀವನದಲ್ಲಿ ನಾವು ರೂಪಿಸಿಕೊಂಡಿರುವ ಅನೇಕ ರೀತಿ ನೀತಿಗಳು, ಕಾನೂನು ಕಟ್ಟಳೆಗಳು, ಆಡಳಿತದ ಚೌಕಟ್ಟುಗಳು, ಶಿಕ್ಷೆಯ ವಿಧಿವಿಧಾನಗಳು ಇತ್ಯಾದಿ ಕೇಳುವುದು ಸತ್ಯಸಂಗತಿಯನ್ನು; ಇಂದ್ರಿಯಾನುಭವಕ್ಕೆ ಸಿಕ್ಕುವ ಪುರಾವೆಗಳನ್ನು. ಇಷ್ಟು ಸಾಕೆ? ಮನುಷ್ಯನಿಗೆ ಮುಖ್ಯವಾದದ್ದು ಅಂತರಂಗದ ಪುರಾವೆ; ಒಳ ಎಚ್ಚರ; ಅಲ್ಲಿ ನಿಜ-ಸುಳ್ಳುಗಳ ತೀರ್ಮಾನವಾಗುತ್ತದೆ. ಆದರೆ ಸಮಾಜಕ್ಕೆ ಬೇಕಾದದ್ದು ಸತ್ಯಸಂಗತಿ; ಎಲ್ಲರಿಗೂ ತೋರಿಸಿಕೊಡಲು ಬೇಕಾದ ಹೊರ ಪುರಾವೆ; ಅಂದರೆ ಇಂದ್ರಿಯ ಗ್ರಹಿಸುವ ಪುರಾವೆ. ಭಾವರಾಗಗಳನ್ನೇ ಆಧಾರವಾಗಿಟ್ಟುಕೊಂಡು, ನಮ್ಮ ಸಮಾಜವನ್ನು ಮುನ್ನಡೆಸುವುದು ಸಾಧ್ಯವಿಲ್ಲ. ಹಾಗೆಯೇ ಕೇವಲ ಕಸತ್ಯಸಂಗತಿಗಳನ್ನೇಕಿ ಆಧಾರವಾಗಿಟ್ಟುಕೊಂಡು ಒಂದು ಸಮಾಜ ಮುನ್ನಡೆಯಲು ಆಗದು. ಒಳಬೆಳಕು ನಡೆಸುವ ದಾರಿಯೇ ಮನುಷನಿಗೆ ಮುಖ್ಯ. ನ್ಯಾಯಾಲಯಗಳು ಈ ಒಳಬೆಳಕನ್ನು ಒಪ್ಪಲಾರವು. ಅವಕ್ಕೆ ಇಂದ್ರಿಯಾನುಭವದ ಮೂಲಕ ಇತರರನ್ನು ಒಪ್ಪಿಸಬಹುದಾದ ಸಂಗತಿಗಳು ಮುಖ್ಯವಾಗುತ್ತವೆ.

ಇಂಥ ಇಕ್ಕಟ್ಟಿನ ಸ್ಥಿತಿಯಲ್ಲಿರುವ ಸಮಾಜದಲ್ಲಿ, ವಸ್ತುಸ್ಥಿತಿ ಮತ್ತು ತರ್ಕವನ್ನು ಆಧರಿಸಿದ ವೈಚಾರಿಕ ಚಿಂತನೆಯ ಸ್ಥಾನವೇನು? ಇಲ್ಲಿ ಬುದ್ಧನ ಶಿಷ್ಯರಿಗೆ ಸಂಬಂಧಿಸಿದ ಒಂದು ಪ್ರಸಿದ್ಧ ಕತೆ ನೆನಪಿಗೆ ಬರುತ್ತದೆ. ಒಮ್ಮೆ ಬುದ್ಧನ ಶಿಷ್ಯರಿಬ್ಬರು ಒಂದು ಮುರುಕಲು ದೇವಸ್ಥಾನದಲ್ಲಿ ರಾತ್ರಿಯನ್ನು ಕಳೆಯಬೇಕಾಗುತ್ತದೆ. ವಿಪರೀತ ಚಳಿ. ಸತ್ತೇಹೋಗಬಹುದೆಂಬ ಭಯ. ಹೊದಿಯಲು ಕಂಬಳಿಗಳಿಲ್ಲ. ಚಳಿತಡೆಯಲಾಗುತ್ತಿಲ್ಲ. ಅವರಲ್ಲಿ ಬುದ್ಧನ ಮರದ ಪ್ರತಿಮೆಯೊಂದನ್ನು ಬಿಟ್ಟರೆ ಬೇರೆ ವಸ್ತುಗಳಿಲ್ಲ. ಏನು ಮಾಡುವುದು? ಒಬ್ಬ ಶಿಷ್ಯನೊಬ್ಬ ಬುದ್ಧನ ಮರದ ಪ್ರತಿಮೆಯನ್ನೇ ಉಪಯೋಗಿಸಿ ಬೆಂಕಿಹೊತ್ತಿಸುತ್ತಾನೆ. ಪ್ರತಿಮೆ ಉರಿದಷ್ಟು ಕಾಲ ಬೆಂಕಿ ಕಾಯಿಸಿಕೊಂಡು ಜೀವ ಉಳಿಸಿಕೊಳ್ಳುತ್ತಾ. ಇನ್ನೊಬ್ಬ ಶಿಷ್ಯ ಸೋಜಿಗದಿಂದ ಇದನ್ನೆಲ್ಲ ನೋಡಿ ಕೇಳುತ್ತಾನೆ: ಕಗುರುವಿನ ಪ್ರತಿಮೆಯನ್ನೇ ಬೆಂಕಿಗೆ ಹಾಕಿ ನಾಶಮಾಡಿದೆಯಲ್ಲ?ಕಿ ಶಿಷ್ಯ ಹೇಳುತ್ತಾನೆ: ಮೊದಲು ನಾವು ಉಳಿಯಬೇಕು. ಈ ಬೆಂಕಿಯಿಲ್ಲದಿದ್ದರೆ ಸತ್ತೇ ಹೋಗುತ್ತಿದ್ದೆವು. ಅಲ್ಲದೆ ಬುದ್ಧಗುರು ಉಳಿಯಬೇಕಾದದ್ದು ಕೇವಲ ಪ್ರತಿಮೆಯಲ್ಲಿ ಅಲ್ಲ; ನಮ್ಮ ತಲೆಯಲ್ಲಿ, ನಮ್ಮ ಎದೆಯಲ್ಲಿ.

ಈ ಕತೆ ಅನೇಕ ಸತ್ಯಗಳನ್ನು ಧ್ವನಿಸುತ್ತದೆ.

ಹಾಗಾದರೆ ವಸ್ತುಸಂಗತಿ ಮತ್ತು ತರ್ಕಗಳನ್ನು ನಿರಾಕರಿಸುವ ಮತ್ತು ಕೇವಲ ಮನುಷ್ಯನ ರಾಗಭಾವಗಳನ್ನು ಆಧರಿಸಿದ ನಂಬಿಕೆಗಳನ್ನು ನಾವೆಷ್ಟು ಮಾನ್ಯಮಾಡಬೇಕು? ಈಗ ನಮಗೆ ಎದುರಾಗುವುದು ಮನುಷ್ಯ ಕಾಲಾಂತರದಲ್ಲಿ ತನ್ನ ಜೊತೆಯಲ್ಲಿ ಉಳಿಸಿಕೊಂಡು ಬಂದ ಸಾವಿರಾರು ನಂಬಿಕೆಗಳು, ಇವುಗಳ ಸುತ್ತ ಇರುವ ಆಚರಣೆಗಳು. ನಂಬಿಕೆಗಳು ಉಳಿದಿರುವುದು ಹೊರಗೆ ಸಿಕ್ಕುವ ಪುರಾವೆಗಳಿಂದ ಅಲ್ಲ; ಅವುಗಳು ಉಳಿದಿರುವುದು ಒಳಬೆಳಕಿನ ಕಸುವಿನ ಮೇಲೆ. ಈ ನಂಬಿಕೆಗಳನ್ನ್ನು ಮಾನ್ಯ ಮಾಡಲು ಹೊರಟರೆ ಮೂಢನಂಬಿಕೆಗಳನ್ನು ದಾಟಿಕೊಂಡೇ ಹೋಗಬೇಕಾಗುತ್ತದೆ. ಮೂಢನಂಬಿಕೆ ಎನ್ನುವುದು ಯಾವುದೇ ಸಮಾಜವನ್ನು ಮುನ್ನಡೆಸಲಾರದು. ಈ ಎಚ್ಚರವೂ ಒಂದು ಸಮಾಜಕ್ಕೆ ಅಗತ್ಯ. ಆದರೆ ನಂಬಿಕೆ ಮತ್ತು ಮೂಢನಂಬಿಕೆಗಳನ್ನು ಗುರುತಿಸುವಾಗ ಸೂಕ್ಷ್ಮವಾದ ಅರಿವು ಅಗತ್ಯ. ನಂಬಿಕೆಗೂ, ಮೂಢನಂಬಿಕೆಗೂ ಅಂತರ ಇರುವುದನ್ನು ಗುರುತಿಸಿಕೊಂಡಾಗಲೆ ಸಮಾಜದ ನಡೆ ಸರಿಯಾದ ದಿಕ್ಕಿನಲ್ಲಿರಲು ಸಾಧ್ಯ.

ಮೂಢನಂಬಿಕೆ ಎನ್ನುವುದು ಕಮುಂದುವರಿದಕಿ ಸಮುದಾಯಗಳಲ್ಲಿ ಇಲ್ಲ, ಅದೆಲ್ಲ ಇರುವುದು ಕಹಿಂದುಳಿದಕಿ ಬುಡಕಟ್ಟು ಸಮುದಾಯಗಳಲ್ಲಿ ಎಂಬ ನಂಬಿಕೆಯೊಂದು ಇದೆ. ಆದರೆ ಈ ನಂಬಿಕೆಗೆ ಯಾವ ಆಧಾರವೂ ಇಲ್ಲ. ನಾಗರಿಕತೆಯ ತುಟ್ಟತುದಿಯನ್ನು ಮುಟ್ಟಿರುವ ಸಮುದಾಯಗಳಲ್ಲೂ ಮೂಢನಂಬಿಕೆಗಳಿವೆ.

ಮೂಢನಂಬಿಕೆ ಎನ್ನುವುದು ಸರಳ ಸಂಗತಿಯಲ್ಲ. ಅದು ಯಾವುದೇ ಪ್ರದೇಶಕ್ಕೆ, ಸಮುದಾಯಕ್ಕೆ ಸೀಮಿತವಾದುದಲ್ಲ. ಮನುಷ್ಯರು ಇರುವ ಕಡೆಗಳಲ್ಲೆಲ್ಲ ಇದೆ. ನಂಬಿಕೆಯ ನೆಲೆಗಟ್ಟಿನಲ್ಲಿಯೇ ಮನುಷ್ಯ ಸಂಬಂಧಗಳು ಹುಟ್ಟಿಕೊಂಡಿವೆ; ಪ್ರೀತಿಯ ಬಳ್ಳಿ ಹಬ್ಬಿದೆ. ಪರಸ್ಪರರಲ್ಲಿ ನಂಬಿಕೆ ಗೌರವ ಬೆಳೆದಿವೆ; ಅಷ್ಟೇಕೆ ಮನುಷ್ಯನ ಬದುಕಿಗೆ ಆಧಾರವೆನ್ನಿಸುವ ಮನುಷ್ಯತ್ವ ನಿಂತಿರುವುದೇ ನಂಬಿಕೆಯ ಮೇಲೆ. ಈ ನಂಬಿಕೆಯೇ ಅನೇಕ ಸಂದರ್ಭಗಳಲ್ಲಿ ಮೂಢನಂಬಿಕೆಯಾಗಿಯೂ ರೂಪ ಬದಲಿಸಿಕೊಂಡಿರುವುದು ಉಂಟು. ನಂಬಿಕೆ ಮತ್ತು ಮೂಢನಂಬಿಕೆಗಳ ಸುತ್ತಲೂ ಅನೇಕ ಆಚರಣೆಗಳು ಹುಟ್ಟಿಕೊಂಡು ಸಾವಿರಾರು ವರ್ಷಗಳಿಂದ ಬೆಳೆದುಕೊಂಡು ಬಂದಿವೆ. ನಂಬಿಕೆಗಳು ಮನುಷ್ಯ-ಮನುಷ್ಯರ ನಡುವಣ ಪ್ರೀತಿ-ಸಂಬಂಧಗಳನ್ನು ಗಟ್ಟಿಗೊಳಿಸಿದ್ದರೆ, ಮೂಢನಂಬಿಕೆಗಳು ಇದಕ್ಕೆ ವಿರುದ್ಧವಾದ ಕೆಲಸವನ್ನು ಮಾಡಿರುವುದೂ ಉಂಟು. ಪ್ರಾಣಿಬಲಿ, ಶಿಶುಬಲಿ, ಬಾಣಂತಿಯರ ಬಲಿ, ಅಷ್ಟೇಕೆ ಈಗಲೂ ಕೆಲವು ಸಮುದಾಯಗಳಲ್ಲ್ಲಿ ಕಾಲ್ತೆಗೆಯಲು ನಿರಾಕರಿಸುತ್ತಿರುವ ಬೆತ್ತಲೆಸೇವೆ, ಮಡೆಸ್ನಾನ, ಅಜಲು ಪದ್ಧತಿಯಂಥ ಅಮಾನವೀಯ ಆಚರಣೆಗಳು ಮೂಢನಂಬಿಕೆಯ ಫಲವಾಗಿ ಉಳಿದುಕೊಂಡು ಬಂದಿವೆ. ಮನುಷ್ಯ ತನ್ನ ಅನುಭವ, ತರ್ಕ, ವಿವೇಕವನ್ನ ಬಳಸಿ ಮೂಢನಂಬಿಕೆಗಳನ್ನು ಬಿಡುತ್ತ ಬಂದಿರುವುದನ್ನೂ ನಾವು ಮನುಷ್ಯ ನಡೆದುಬಂದ ಹಾದಿಯಲಿ ಗುರುತಿಸಬಹುದು. ಹಳೆಯ ಮೂಢನಂಬಿಕೆಗಳು ಹೋದರೂ, ಹೊಸ ಮೂಢನಂಬಿಕೆಗಳು ಹುಟ್ಟಿಕೊಳ್ಳುವುದುಂಟು. ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ಗೆರೆ ತುಂಬ ತೆಳುವಾದದ್ದು. ಈ ಗೆರೆಯನ್ನು ಗುರುತಿಸಿಕೊಳ್ಳದಿದ್ದರೆ ಮನುಷ್ಯ ನೆಮ್ಮದಿಯಲ್ಲಿ ಸಹಬಾಳ್ವೆ ಮಾಡಲಾರ; ಸಮಾನತೆ, ಮನುಷ್ಯ ನತೆಗಳನ್ನು ಉಳಿಸಿಕೊಳ್ಳಲಾರ.

 ಅನೇಕ ಬುಡಕಟ್ಟು ಸಮುದಾಯಗಳಲ್ಲಿ ಇವತ್ತಿಗೂ ಉಳಿದುಕೊಂಡು ಬಂದಿರುವ ನಂಬಿಕೆಗಳು, ಮೂಢನಂಬಿಕೆಗಳಂತೆ ಕಾಣಿಸಿದರೂ, ಅವು ಮನುಕುಲವನ್ನು ಪೊರೆಯುವ ಶಕ್ತಿಗಳಾಗಿ ಕೆಲಸಮಾಡುತ್ತಿವೆ. ಬುಡಕಟ್ಟುಗಳ ನಂಬಿಕೆ ಮತ್ತು ಅವಕ್ಕೆ ಸಂಬಂಧಿಸಿದ ಆಚರಣೆಗಳು ಇತರರಿಗೆ ವಿಚಿತ್ರವಾಗಿ ಕಾಣಬಹುದು. ಆದರೆ ಈ ಆಚರಣೆಗಳು ಎಂದೂ ತನ್ನ ಸಮುದಾಯದಲ್ಲಿರುವ ಯಾರೊಬ್ಬರ ಸಮಾನತೆಗೆ, ಗೌರವಕ್ಕೆ ಧಕ್ಕೆ ತಂದಿಲ್ಲ ಎಂಬುದು ಮುಖ್ಯ. ನೀರು, ಗಾಳಿ, ಭೂಮಿ, ತನ್ನ ಸುತ್ತಲಿನ ಪರಿಸರ, ಪ್ರಾಣಿಸಂಕುಲ ಎಲ್ಲವನ್ನೂ ಒಳಗೊಳ್ಳುವ ಈ ಆಚರಣೆಗಳು ಮನುಷ್ಯ ಈ ಎಲ್ಲದರ ನಡುವೆ ಬಾಳಬೇಕಾದ ಅನಿವಾರ್ಯತೆಯನ್ನು ತೋರಿಸುತ್ತವೆ. ಅವುಗಳನ್ನು ಪೊರೆಯಬೇಕಾದ ಸೂಚನೆಯನ್ನೂ ನೀಡುತ್ತವೆ. ದುಷ್ಟಶಕ್ತಿಗಳನ್ನು ಗುರುತಿಸಿ, ಅವುಗಳನ್ನು ಪಳಗಿಸುವ ಮತ್ತು ಒಟ್ಟು ಆವರಣದಲ್ಲಿ ಅವಕ್ಕೂ ಒಂದು ಜಾಗ ತೋರಿಸುವ ಉದಾತ್ತ ಗುಣವೂ ಈ ನಂಬಿಕೆಗಳಲ್ಲಿ ಮತ್ತು ಆಚರಣೆಗಳಲ್ಲಿ ಇವೆ. ಜನ್ಮ-ಪುನರ್ಜನ್ಮಗಳನ್ನು ನಂಬುವ ಈ ಬುಡಕಟ್ಟುಗಳು ತಮ್ಮ ಆದಿ ಪುರುಷ (ಬುಡಕಟ್ಟುಗಳಲ್ಲಿ ಮಹಿಳೆ ಮತ್ತು ಪುರುಷ ಎಂಬ ವ್ಯತ್ಯಾಸವೇ ಇಲ್ಲ)ಸಾವಿರಾರು ವರ್ಷಗಳ ನಂತರವೂ ಜೀವಿಸಿದ್ದಾನೆ; ಅವನ ಆತ್ಮ ತಮ್ಮ ಪರಿಸರದಲ್ಲಿಯೇ ಸುತ್ತುತ್ತಿದೆ ಎಂದು ಭಾವಿಸುತ್ತಾರೆ. ಈ ಕಾರಣಕ್ಕಾಗಿಯೇ ಅನೇಕ ಬುಡಕಟ್ಟುಗಳು ತಾವು ವಾಸಿಸುವ ಪ್ರದೇಶವನ್ನು, ಪರಿಸರವನ್ನು ತೊರೆಯಲು ಬಯಸುವುದಿಲ್ಲ. ಅಷ್ಟೇ ಅಲ್ಲ ಆದಿಅಯ್ಯನಿಗೆ (ಮೂಲ ಪುರುಷ) ತೊಂದರೆಯಾದೀತೆಂದು ಕೆಲವು ಮರಗಳನ್ನು ಕಡಿಯುವುದಿಲ್ಲ; ಕೆಲವು ಪ್ರಾಣಿಗಳನ್ನು ಕೊಲ್ಲುವುದಿಲ್ಲ.

ಭೂಮಿ ಕೂಡಾ ನಾಶವಾಗದಂತೆ ನೋಡಿಕೊಳ್ಳುವ, ಈ ಕಾರಣಕ್ಕಾಗಿ ಕೃಷಿಪದ್ಧತಿಯನ್ನೇ ಬೇರೆ ರೀತಿಯಲ್ಲಿಯೇ ರೂಢಿಸಿಕೊಂಡು ಬಂದಿರುವ ಬುಡಕಟ್ಟುಗಳೂ ಇವೆ. ಗೆಡ್ಡೆ ಗೆಣಸುಗಳನ್ನು ಭೂಮಿಯಿಂದ ಕೀಳುವಾಗಲೂ ಅವು ಮತ್ತೆ ಚಿಗುರುವಂತೆ ಒಂದಿಷ್ಟು ಭಾಗವನ್ನು ಭೂಮಿಯಲ್ಲಿಯೇ ಉಳಿಸುವ ಪದ್ಧತಿಯೂ ಕೆಲವು ಬುಡಕಟ್ಟುಗಳಲ್ಲಿದೆ. ತಮ್ಮತಮ್ಮ ವಿಭಿನ್ನತೆಯನ್ನು, ವಿಶೇಷತೆಯನ್ನು ಉಳಿಸಿಕೊಂಡರೂ ಈ ಬುಡಕಟ್ಟುಗಳು ಎಂದೂ ಮನುಷ್ಯ ಮನುಷ್ಯರ ನಡುವೆ ಮೇಲು-ಕೀಳು ಭಾವನೆಯನ್ನು ಹುಟ್ಟುಹಾಕುವುದಿಲ್ಲ. ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿದರೂ, ಅವುಗಳೊಂದಿಗೆ ಸಹಬಾಳ್ವೆ ನಡೆಸುವ ಅನೇಕ ತತ್ವಗಳನ್ನು ಪಾಲಿಸುವ ಗುಣ ಈ ಬುಡಕಟ್ಟು ಸಮುದಾಯಗಳಲ್ಲಿವೆ. ಪ್ರಾಣಿಪಕ್ಷಿಗಳ ವರ್ತನೆಯನ್ನು ಸೂಕ್ಷ್ಮವಾಗಿ ತಿಳಿಯುವ ಮತ್ತು ಅವುಗಳ ಮುಕ್ತ ಬದುಕಿಗೆ ಹೆಚ್ಚು ಅಡಚಣೆಯನ್ನು ಉಂಟುಮಾಡದ ರೀತಿಯಲ್ಲಿ ನಡೆದುಕೊಂಡು, ಇಡೀ ಪರಿಸರವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವ ಉದಾತ್ತಗುಣವನ್ನೂ ಬುಡಕಟ್ಟು ಸಮುದಾಯ ತೋರಿಸುತ್ತ ಬಂದಿವೆ.

ಇಂಥ ಸಮುದಾಯದ ನಂಬಿಕೆಗಳು ಪಂಚಭೂತಗಳಿಗೆ ಮಾರಕವಲ್ಲ; ಸೂರ್ಯಚಂದ್ರರಿಗೂ ಮಾರಕವಲ್ಲ. ಇದೆಲ್ಲವನ್ನು ತಿಳಿಯುವ ಒಳಮನಸ್ಸು ನಾಗರಿಕ ಎಂದು ಕರೆದುಕೊಳ್ಳುವ ಜಗತ್ತಿಗೆ ಇರಬೇಕಾಗುತ್ತದೆ. ಆಗಲೇ ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ಇರುವ ತೆಳುಗೆರೆ ಗೋಚರವಾಗುತ್ತದೆ. ಅದು ಕಾಣಿಸಿದರೆ ನಮ್ಮ ತೀರ್ಮಾನಗಳು ಸರಳವಾಗಿರುವುದಿಲ್ಲ.-ಜಿ.ಪಿ.ಬಸವರಾಜು

9480057580

ಅವಕಾಶ ವಂಚಿತರು ಅದರ ಮುಂದಿನ ಪ್ರಶ್ನೆಗಳು

ಶೂದ್ರ ಶ್ರೀನಿವಾಸ್

 

ಅವಕಾಶ ವಂಚಿತರು ಅದರ ಮುಂದಿನ ಪ್ರಶ್ನೆಗಳು

ಇಷ್ಟೆಲ್ಲ ಯೋಚಿಸುವಾಗ; ಆಫ್ರಿಕಾದ ಸೂಕ್ಷ್ಮ ಸಂವೇದನೆಯ ಲೇಖಕ ಮಾಯಾ ಏಂಜಲೋ ನೆನಪಾದಳು. ಆಕೆ ತನ್ನ ಕಾವ್ಯದಲ್ಲಿ ಕೇವಲ ಬಡತನ ಮತ್ತು ಗುಲಾಮ ಗಿರಿಯನ್ನು ಮಾತ್ರ ದಾಖಲಿಸುವುದಿಲ್ಲ. ಅದರ ಮೂಲಕ ವಿಕಾರ ಗೊಂಡು ಆಕ್ರಮಣಶೀಲವಾಗುವ ಆತಂಕ, ತಲ್ಲಣ ಮತ್ತು ವಿಷಾದ ನಮ್ಮನ್ನು ಅಪ್ಪಳಿಸುವುದರ ಜೊತೆಗೆ ಮತ್ತೆ ಏನೇನೋ ಅನುಭವಿಸಿದ್ದಾಳೆ ಎಂಬ ಸುಳಿವು ದೊರಕುತ್ತದೆ. ಅದು ಮಿಕ್ಕೆಲ್ಲದಕ್ಕಿಂತ ಭೀಕರವಾದದ್ದು ಅನ್ನಿಸಿದ್ದು: ಆಕೆಯ ಬಾಲ್ಯ ಕಾಲದಲ್ಲಿ ಆದ ಅನುಭವದ ಕರಾಳತೆಯನ್ನು ಓದಿ.

ಅದು ತಾನು ಹದಿನಾಲ್ಕನೆಯ ವಯಸ್ಸಿನಲ್ಲಿರುವಾಗ ತಾಯಿಯ ಗೆಳೆಯ ತನ್ನ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದ ನೆನಪನ್ನು ಬದುಕಿನುದ್ದಕ್ಕೂ ಹೊತ್ತು ತಿರುಗುವುದಿದೆಯಲ್ಲ; ಅದನ್ನು ಯಾವ ರೀತಿಯ ಶಬ್ದಗಳಿಂದ ವ್ಯಾಖ್ಯಾನಿಸುವುದು ಅನ್ನಿಸು ತ್ತದೆ. ಈ ಘಟನೆಯಿಂದ ತಾಯಿ ಮಗಳನ್ನು ನೋಡುವ ಕ್ರಮ ಹಾಗೂ ಮಗಳು ತಾಯಿಯನ್ನು ನೋಡುವ ಕ್ರಮ ಬದಲಾಗುತ್ತದೆ. ಅದಕ್ಕಿಂತ ಮಿಗಿಲಾಗಿ ಒಂದು ರೀತಿಯ ಆತಂಕ ಕಾರಿಯಾದ ಸಂಬಂಧದಲ್ಲಿ ಮುಂದು ವರಿಯುತ್ತದೆ. 

ಈ ರೀತಿಯ ಕಾರ್ಯ ವನ್ನು ಹೊತ್ತು ಮಾಯಾ ಜಗತ್ತಿನ ಎಂತೆಂಥ ಕಡೆಯೋ ವಿಭಿನ್ನ ಮಾನವೀಯ ವಿಷಯಗಳನ್ನು ಕುರಿತ ಪಾಠ ಮಾಡುವಾಗ ಅನುಭವಿಸುವ ಯಾತನೆಯನ್ನು ನಾವು ವಿವಿಧ ಹಂತಗಳಲ್ಲಿ ಅರ್ಥೈಸಿಕೊಳ್ಳ ಬಹುದು. ಅದರಲ್ಲೂ ನಮ್ಮ ಓದು ಮತ್ತು ಅರಿವಿನ ಮೂಲಕ ಎಷ್ಟೋ ತತ್ವಬದ್ಧವಾಗಿ ವ್ಯಾಖ್ಯಾನಿಸಿಕೊಂಡರೂ; ಅದಕ್ಕಿಂತ ಮೀರಿದ ಜಟಿಲವಾದದ್ದೊಂದು ವೇದನಾ ಪೂರ್ಣವಾಗಿ ಗುನುಗುನಿಸುತ್ತಿರುತ್ತದೆ. ಇದನ್ನು ಭಾವುಕತೆಯಿಂದ ಅಥವಾ ಭಾವನಾತ್ಮಕವಾಗಿ ಹೇಳಿದರೂ ಇಲ್ಲವೇ ಹೇಳದಿದ್ದರೂ ಅನುಭವಿಸಿದವರ ಪಾಲಿಗೆ ಅದು ಏನಾಗಿರುತ್ತದೆ ಎಂಬುದನ್ನು ಹೀಗೆಯೇ ಎಂದು ಹೇಳಲಾಗುವುದಿಲ್ಲ.

ಹೀಗೆ ಯೋಚಿಸುತ್ತಿರುವಾಗ ಮತ್ತೆ ಆ ಹುಡುಗಿಯ ದೂರವಾಣಿ ಕರೆ ಬಂತು. ‘‘ಸರ್, ಡಾ ಸಿದ್ಧಲಿಂಗಯ್ಯನವರ ದೂರವಾಣಿ ನಂಬರ್ ತಿಳಿಸುವಿರಾ? ಒಂದು ವೇಳೆ ಅವರಿಗೆ ಫೋನ್ ಮಾಡಿದರೆ ಸ್ವೀಕರಿಸಿ ಮಾತಾಡುವರಾ?’’ ಎಂದು ಮುಗ್ಧವಾಗಿ ಕೇಳಿದಾಗ ‘‘ಮಾತಾಡಿ ಎಂದು ದೂರವಾಣಿ ಸಂಖ್ಯೆಯನ್ನು ಕೊಟ್ಟೆ. ಮತ್ತು ಸಿದ್ಧಲಿಂಗಯ್ಯನವರು ಹೆಚ್ಚು ಮಾನವೀಯತೆ ಯಿಂದಲೇ ಮಾತಾಡುವರು’’ ಎಂದಾಗ ‘‘ಥ್ಯಾಂಕ್ಸ್ ಸರ್, ತೊಂದರೆ ಕೊಟ್ಟೆ’’ ಎಂದು ಫೋನಿಟ್ಟರು. ಈ ಒಟ್ಟು ಅನುಭವವನ್ನು ನಾನು ಹೇಗೆ ಅರ್ಥೈಸಿಕೊಂಡಿದ್ದರೂ; ಯಾರ್ಯಾರೋ ಹುಡುಗಿಯರು ಎದುರು ಬದುರಾದಾಗ; ನನಗೆ ಗೊತ್ತಿಲ್ಲದೆಯೇ ಅವರ ಹಿನ್ನೆಲೆ ಕುರಿತು ಯೋಚಿಸುತ್ತ ಹೋಗುವೆ. 

ಅದು ಸರಿಯೋ ತಪ್ಪೋ ಗೊತ್ತಿಲ್ಲ. ಆಗಾಗ ಯೋಚಿಸುವ ಪ್ರಕ್ರಿಯೆಯಿಂದ ಬಿಡುಗಡೆಯಾಗಲಂತೂ ಸಾಧ್ಯವೇ ಇಲ್ಲ. ಮನದ ಮೂಲೆ ಯೊಂದರಲ್ಲಿ ಗೂಡು ಕಟ್ಟಿಕೊಂಡು ಬೆಚ್ಚನೆ ಮಲಗಿಬಿಟ್ಟಿರುತ್ತದೆ. ಆದರೆ ಒಂದಂತೂ ಸತ್ಯ: ಕೊನೆಯ ಪಕ್ಷ ನೊಂದವರ ಧ್ವನಿಯಂತೂ ಆಗಬಲ್ಲಳು. ಮತ್ತು ಅದೇ ರೀತಿಯ ಒಂದಷ್ಟು ಮನಸ್ಸುಗಳನ್ನು ಬೆಳೆಸಬಲ್ಲಳು. ತಮ್ಮೆಲ್ಲ ದುಃಖದುಮ್ಮಾನಗಳ ನಡುವೆಯೂ ಬದುಕುವ ಅವಕಾಶಗಳನ್ನು ಕಿತ್ತುಕೊಳ್ಳುವ ಮಾನಸಿಕ ಸ್ಥೈರ್ಯವನ್ನು ತುಂಬಬಹುದು.

ಹೌದು ಈಗ ಬಹುಪಾಲು ಮಹಿಳೆಯರಿಗೆ ಎಲ್ಲಿಲ್ಲದ ಆತ್ಮಸ್ಥೈರ್ಯ ಬಂದಿದೆ. ದುಡಿದು ಹೇಗೋ ಬದುಕಬಹುದು. ಹಾಗೆಯೇ ತಾವು ತಿಂದ ನೋವನ್ನು ತಮ್ಮ ಮಕ್ಕಳು ತಿನ್ನದಿರಲಿ ಎಂದು ಯೋಚಿಸಿ ಶಿಕ್ಷಣದ ಕಡೆಗೆ ಹೆಚ್ಚು ಒತ್ತು ಕೊಡು ತ್ತಿದ್ದಾರೆ. ತಮ್ಮ ಮಕ್ಕಳು ತಮಗೇನೂ ಕೊಡದಿ ದ್ದರೂ ಚಿಂತೆಯಿಲ್ಲ. ಚೆನ್ನಾಗಿ ಬದುಕಬಲ್ಲರು ಎಂಬುದನ್ನು ತವಕದಿಂದ ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಈ ಕಾತುರತೆಯ ಆಶಯಗಳನ್ನು ಸಾರ್ಥಕ ಗೊಳಿಸಲು ಅದ್ಭುತ ಮನಸ್ಸುಗಳೆಲ್ಲ ಸೃಷ್ಟಿಯಾಗಬಹುದು. ಆದರೆ ಅವರನ್ನು ಕೂಡ ಎಚ್ಚರಿಕೆಯಿಂದಲೇ ಬೆಳೆಸಬೇಕಾಗುತ್ತದೆ. ಕೆಡುವುದಕ್ಕೆ ಸಾವಿರ ಮಾರ್ಗಗಳು ಬಾಯಿ ಚಾಚಿಕೊಂಡಿರುತ್ತವೆ.

ಆ ಉತ್ತರ ಕರ್ನಾಟಕದ, ಹೈದರಾಬಾದ್ ಕರ್ನಾಟಕದ ಛಲವಾದಿ ಹುಡುಗಿ ಮನಸ್ಸಿನ ತುಂಬ ಆವರಿಸಿಕೊಂಡಿರುವಾಗ ಖ್ಯಾತ ಲೇಖಕ ಸಚ್ಚಿದಾನಂದ ಮೊಹಂತಿಯವರ ಲೇಖನವೊಂದನ್ನು ಓದಿದೆ. ಆ ಲೇಖನದ ಹೆಸರು ‘ಎ ಬ್ಯಾಟರ್ಡ್, ಹೀರೋಯಿಕ್ ಸಿಸ್ಟರ್’ ಎಂದು. ಅಮೆರಿಕದಲ್ಲಿ ಹುಟ್ಟಿ ಇಂಡಿಯಾದ ರಾಷ್ಟ್ರೀಯತೆಯನ್ನು ಪಡೆದ ‘ಅಗ್ನೆಸ್ ಸ್ಮೆಡ್ಲೆ’ ಎಂಬ ಹುಡುಗಿಯ ಕಥೆ. ಆಕೆಯ 122ನೆಯ ಹುಟ್ಟುಹಬ್ಬದ ಸ್ಮರಣೆಯ ಲೇಖನ. 

ಸಚ್ಚಿದಾನಂದ ಮೊಹಂತಿಯವರು ಕೆಲವೊಮ್ಮೆ ಈ ರೀತಿಯಲ್ಲಿ ನಾವು ಮರೆತು ಹೋಗಿರತಕ್ಕಂಥ ಅಥವಾ ಇಲ್ಲಿಯವರೆಗೆ ನಮ್ಮ ಗಮನಕ್ಕೆ ಬಾರದ ಅಪೂರ್ವ ಹೋರಾಟ ಗಾರರನ್ನು ಪರಿಚಯಿಸುತ್ತಿರುತ್ತಾರೆ. ಆ ಪರಿಚಯದಲ್ಲಿ ಅದ್ಭುತ ಜೀವನ ಚಿತ್ರದ ಗುಣವಿರುತ್ತದೆ. ಸ್ಮೆಡ್ಲೆಯವರ ‘ದಿ ಡಾಟರ್ ಆಫ್ ಅರ್ಥ್’ ಕಾದಂಬರಿಯನ್ನು ಪರಿಚ ಯಿಸುತ್ತಲೇ ಆಕೆ ಎರಡನೆಯ ಮಹಾ ಯುದ್ಧದ ಸಮಯದಲ್ಲಿ ಎಲ್ಲೆಲ್ಲಿ ಸುತ್ತಾಡುವಳು ಹಾಗೂ ಯಾರ್ಯಾರ ಜೊತೆ ಮತ್ತು ಎಂತೆಂಥ ಹೋರಾಟದ ಸಂಘಟನೆಗಳ ಜೊತೆಯಲ್ಲಿ ಗುರ್ತಿಸಿ ಕೊಂಡಳು ಎಂಬ ಸ್ಮರಣೀಯ ಚಿತ್ರಣ ನಮ್ಮ ಮನಸ್ಸಿನಲ್ಲಿ ದಾಖಲಾ ಗುತ್ತದೆ.

ಆ ಕಾಲದ ಭಾರತದ ಕ್ರಾಂತಿಕಾರಿ ಹೋರಾಟಗಾರರಾದ ಸೈಲೇನ್ ಘೋಷ್, ಎಂ.ಎನ್. ರಾಯ್, ತಾರಕನಾಥ್‌ದಾಸ್ ಮುಂತಾದವರ ಸಂಪರ್ಕದಿಂದ ಭಾರತದ ಜೀವನ ಸಂಬಂಧಗಳ ಜೊತೆ ಅಗಾಧ ವಾದ ಒಲವನ್ನು ಬೆಳೆಸಿಕೊಂಡವಳು. ಸೆರೆಮನೆ ವಾಸವನ್ನು ಅನುಭವಿಸಿದವಳು. ಹಿಟ್ಲರ್‌ನ ಅತಿರೇಕಗಳನ್ನು ಅರಿಯಲು ಜರ್ಮನಿಯಲ್ಲೇ ಸುತ್ತಾಡಿದವಳು. ಸರೋಜಿನಿ ನಾಯ್ಡು ಅವರ ಸೋದರ ವೀರೇಂದ್ರನಾಥ ಚಟ್ಟೋಪಾಧ್ಯಾಯ ಎಂಬ ಕಲಾವಿದನನ್ನು ಪ್ರೀತಿಸಿ ಮದುವೆ ಯಾಗುವಳು. ನಂತರ ಆತನೊಡನೆ ಚೀನಾ ದೇಶದ ಷಾಂೈಗೆ ಹೋಗುವಳು.

ಆಗ್ನೆಸ್ ಸ್ಮೆಡ್ಲೆ ತಾನು ಬರೆದಂತೆ ಬದುಕಿದವಳು. ಸ್ಮೆಡ್ಲೆಯ ಬದುಕು ಕುರಿತು ಯೋಚಿಸಿದಾಗ ನನ್ನನ್ನು ಕಾಡಿದ್ದು ರೋಜಾ ಎಕ್ಸ್‌ಂಬರ್ಗ್. ಎಂಬತ್ತರ ದಶಕದಲ್ಲಿ ಆಕೆಯ ಒಂದಷ್ಟು ಪ್ರೇಮ ಪತ್ರಗಳನ್ನು ಅನುವಾದಿಸಿ ‘ಶೂದ್ರ’ದಲ್ಲಿ ಪ್ರಕಟಿಸಿದಾಗ ಎಂಥ ಆಪ್ತ ಪ್ರತಿಕ್ರಿಯೆ ಗಳನ್ನು ಸ್ವೀಕರಿಸಿದ್ದೆ. ಸ್ಮೆಡ್ಲೆ, ರೋಜಾ ಮತ್ತು ಸಿಮನ್‌ವೇಲ್ ಅವರ ಒಂದಷ್ಟು ಬರವಣಿಗೆ ಯನ್ನು ಓದಲು ಆ ಉತ್ತರ ಕರ್ನಾಟಕದ ಪತ್ರಿಕೋದ್ಯಮದ ಹುಡುಗಿಗೆ ಹೇಳುವ ಅನ್ನಿಸಿತು. 

ಹಾಗೆಯೇ ಎಂದಾದರೂ ಆಕೆಯ ಊರಿನ ಕಡೆಗೆ ಹೋದಾಗ ಆಕೆಯ ತಾಯಿ ಮತ್ತು ಚಿಕ್ಕಮ್ಮನನ್ನು ನೋಡುವ ಆಶಯವನ್ನು ತುಂಬಿಕೊಂಡೆ. ಹಾಗೆಯೇ ಮೂರು ತಲೆ ಮಾರಿನ ಈ ‘ಮನಸ್ಸುಗಳನ್ನು’ ಹೇಗೆ ಅವಲೋ ಕಿಸಿಕೊಳ್ಳಬಹುದು ಎಂದು ಯೋಚಿಸಿದೆ. ಸಾಧ್ಯವಾದರೆ ಡಾ. ಸಿದ್ಧಲಿಂಗಯ್ಯನವರನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ಉತ್ತರ ಕರ್ನಾಟಕದ ಕೆಲವು ಸಾಮಾಜಿಕ ವೈಪರೀತ್ಯ ಗಳನ್ನು ಅಧ್ಯಯನ ಮಾಡಲು ಅನುಕೂಲವಾಗು ವುದು. ಈ ಚಿಂತನೆಯ ಮಧ್ಯದಲ್ಲಿಯೇ ಇಲ್ಲಿಯವರೆಗೆ ಅವಕಾಶವಂಚಿತರಾದವರು ಎಷ್ಟು ಚೆನ್ನಾಗಿ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದ್ದಾರೆ ಅನ್ನಿಸಿತು.

Thursday, March 20, 2014

ಎಂ ಆರ್ ಕಮಲಾ : ಎರಡು ಕವಿತೆಗಳು


ಮಗಳ ಮಾತುಹಲ ಬಗೆಯ `ಶಾಂಪು'ವಿನಲ್ಲಿ ಮೀಯುವ ನನಗೆ
ನಿನ್ನ ಹರಳೆಣ್ಣೆ, ಹಂಡೆ, ಹಬೆಯಾಡುವ ನೀರು
ಅರ್ಥವಾಗದು ಕ್ಷಮಿಸು

ಗಿರಿಯ ಮೇಲಿಂದಿಳಿವ ನಿನ್ನ `ಇರುಳ ಮಾಲೆಯ ಕೇಶ'
ನನ್ನ ಉಡುಪು, ಮೈ ಬಣ್ಣಕ್ಕೆ ಹೊಂದದು -ಕ್ಷಮಿಸು

`ಪ್ಲೇ ಸ್ಟೇಶನ್' `ಮೊಬೈಲ್', ಕಂಪ್ಯೂಟರ್ ಗಳಲಿ ಮುಳುಗಿರುವ ನನಗೆ
ನಿನ್ನ ಮಣ್ಣ ಗಾಡಿ, ಅದರಂಟು, ನಂಟು ಕಗ್ಗಂಟು-ಕ್ಷಮಿಸು

ಹಾಯ್, ಬೈ , ಡ್ಯೂಡ್, ಚಾವ್ ಗಳ ನಾಲಗೆಗೆ
`ಬರ್ತೀನಿ, ಸಿಕ್ತೀನಿ' ಸಪ್ಪೆ ಎನ್ನಿಸಿದರೆ -ಕ್ಷಮಿಸು

ಮೈದುನ, ಅತ್ತಿಗೆ, ನಾದಿನಿ, ಷಡಕ ... ಎಷ್ಟೊಂದು
ಅರ್ಥವಾಗದ ನಿಘಂಟಿನ ಶಬ್ದಗಳು-ಕ್ಷಮಿಸು

ದಿನ ನಿತ್ಯ ಗೆಳೆಯರೊಂದಿಗೆ `roots', identity crisis'
`cultural shock' ನ ನನ್ನ ಚರ್ಚೆ -ನಿನಗೆ ಅರ್ಥವಾಗದು ಕ್ಷಮಿಸು


ಕಾಡದಿರು ಕವಿತೆ


ಕಾಡದಿರು ಕವಿತೆ
ನಾನು ನಿನ್ನವಳಲ್ಲ, ಯಾರವಳು ಅಲ್ಲ
ಯಾರ ಬೇಟ- ಬೇಟೆಯೂ ಅಲ್ಲ

ನನ್ನ ಬಗೆ ಬಾನಿಗೂ ಇದೆ
ನಿನ್ನಷ್ಟೇ ಮೋಹಕತೆ -ಮಳೆಬಿಲ್ಲ ಸೆಳೆತ
ಮುಂಗಾರ ಮೋಡ, ಅಮಾವಾಸ್ಯೆಯ ಕಗ್ಗತ್ತಲು
ಹಠಾತ್ತನೆ ಮಿನುಗುಗಳು!

ನನ್ನೊಳವಿಗೆ ಒಲವಾಗಲೆಂದು
ನನ್ನೊಲವಿಗೆ ನೀನೆ ಒಳವಾಗಲೆಂದು
ನಿನ್ನ ಮೊರೆ ಹೋದೆ, ನಾ ಹುಗಿದು ಹೋದೆ
ಮುಗಿದು ಹೋದೆ!

ಆದರೂ ವಂದನೆಗಳು ನಿನಗೆ-
ನಾಯಿ ನರಿಗಳ ಕಿರುಚಾಟದಲ್ಲೂ
ದೂರದ ಹಕ್ಕಿಯ ಹಾಡು ಕೇಳಿಸಿದ್ದಕ್ಕೆ.
ಕಂಬನಿಯಲ್ಲೂ ಸುಖದ ಬನಿ
ಕಾಣಲು ಕಲಿಸಿದ್ದಕ್ಕೆ
ದಿಕ್ಕೆಟ್ಟವಳಲ್ಲಿ ಧೀಶಕ್ತಿ ಮೂಡಿಸಿದ್ದಕ್ಕೆ

ಸದ್ಯ, ವಂದನೆಗಳು!

ಖುಷ್ವಂತ್ ಸಿಂಗ್ ಇನ್ನು ನೆನಪಷ್ಟೇ

ಹೃದಯ ಶಿವಖುಷ್ವಂತ್ ಸಿಂಗ್ ತಮ್ಮ 99 ನೇ ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಪಾಕಿಸ್ತಾನಕ್ಕೆ ಸೇರಿಕೊಂಡಿರುವ ಹದಾಲಿ ಎಂಬ ಅವಿಭಜಿತ ಭಾರತದ ಹಳ್ಳಿಯ ಸಿಖ್ ಕುಟುಂಬದಿಂದ ಬಂದ ಇವರು ಭಾರತ ಕಂಡ ಅಪರೂಪದ ಕಾದಂಬರಿಕಾರ, ಕಥೆಗಾರ, ಪತ್ರಕರ್ತ. ಬರವಣಿಗೆಯ ಸ್ತರದಲ್ಲಿ ತಮ್ಮದೇ ವೈವಿಧ್ಯತೆಗೆ ಹೆಸರಾಗಿದ್ದ ಖುಷ್ವಂತ್ ಸಿಂಗ್ ಎಂಭತ್ತಕ್ಕೂ ಹೆಚ್ಹು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕಾದಂಬರಿಗಳು, ಸಣ್ಣಕಥೆಗಳ ಸಂಕಲನಗಳು, ಆತ್ಮಚರಿತ್ರೆಗಳು, ಪಂಜಾಬಿ ಹಾಗೂ ಉರ್ದುವಿನಿಂದ ಮಾಡಿದ ಅನುವಾದಗಳು, ಜೋಕ್ ಗಳು, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಚಿಂತನೆಗಳು ಮತ್ತು ಅನೇಕ ಪ್ರಬಂಧಗಳು ಒಳಗೊಂಡಿವೆ. ಅವರಿಗಿದ್ದ ಜೀವನ ಪ್ರೀತಿ ಎಂಥಾದ್ದು ಎಂದರೆ, ತಮ್ಮ ಬದುಕಿನ ಕಟ್ಟಕಡೆಯ ದಿನಗಳಲ್ಲೂ ಬೆಳಗಿನ ಜಾವ 4 ಗಂಟೆಗೆ ಏಳುತ್ತಿದ್ದರು. ದಿನದ ಹೆಚ್ಚು ಸಮಯವನ್ನು ಆರಾಮಕುರ್ಚಿಯಲ್ಲಿ ಕುಳಿತು, ಓದುತ್ತ, ಬರೆಯುತ್ತ ಕಳೆಯುತ್ತಿದ್ದರು. ಕೊನೆಕೊನೆಗೆ ಬದುಕು ತುಸು ಹೆಚ್ಚೇ ನಿಧಾನಗತಿಯಲ್ಲಿ ಸಾಗಿದೆ ಎಂದು ಮನಗಂಡ ಅವರು ಸುಲಭದಲ್ಲಿ ಸುಸ್ತಾಗುತ್ತಿದ್ದರು, ಕಿವಿ ಮಂದವಾಗಿವೆ ಎಂದು ತಮಗೆ ತಾವೇ ಖಚಿತಪಡಿಸಿಕೊಂಡಿದ್ದರು. ಟಿವಿಯ ಗದ್ದಲ, ಮನೆಗೆ ಬಂದು ಹೋಗುವವರ ಮಾತುಗಳಿಂದ ಬೇಸತ್ತು ಮೌನದ ಮೊರೆ ಹೋಗುತ್ತಿದ್ದರು. ಅವರು ಹಾಗೆ ಮೌನದ ತೆಕ್ಕೆಗೆ ಹೊಕ್ಕಿ, ಕಳೆದುಹೋದ ಬದುಕನ್ನು ಮೆಲುಕುಹಾಕುತ್ತಿದ್ದರು. ಯಾವುದು ಅವರ ಬದುಕನ್ನು ಶ್ರೀಮಂತಗೊಳಿಸಿತೋ ಅದರ ಬಗ್ಗೆ, ಅವರಿಗೆ ಮುಖ್ಯವಾದುದರ ಬಗ್ಗೆ, ಅವರು ಮಾಡಿದ ತಪ್ಪುಗಳ ಬಗ್ಗೆ ಹಾಗೂ ಅವರಲ್ಲಿ ಮಡುಗಟ್ಟಿ ನಿಂತಿದ್ದ ವಿಷಾದದ ಬಗ್ಗೆ, ಅವರು ಹಾಳುಮಾಡಿದ ಅಮೂಲ್ಯ ಸಮಯದ ಬಗ್ಗೆ, ದೈನಂದಿನ ಬದುಕಿನಲ್ಲಿ ಕರುಣೆಗಿರುವ ಮಹತ್ವದ ಬಗ್ಗೆ, ಎಲ್ಲವನ್ನೂ ಮರೆಸುವ ನಗುವಿನ ಶಕ್ತಿ ತನ್ನನ್ನು ತಾನೇ ನೋಡಿ ನಗುವ ಸಾಮರ್ಥ್ಯದ ಬಗ್ಗೆ ಹಾಗೂ ಪ್ರಾಮಾಣಿಕವಾಗಿರಲು ಬೇಕಾಗಿದ್ದು ಏನು ಎನ್ನುವುದರ ಬಗ್ಗೆ- ತಮ್ಮ ಬಗ್ಗೆ ಮತ್ತು ಇತರರ ಬಗ್ಗೆ ಮೆಲುಕು ಹಾಕುತ್ತಿದ್ದರು. ಹಾಗಂತ ತಾವೇ ಹೇಳಿಕೊಂಡಿದ್ದರು.


ಖುಷ್ವಂತ್ ಸಿಂಗ್ ಅವರ ಬರವಣಿಗೆಯ ಬಯಲು ವಿಶಾಲವಾದದ್ದು. ಸಿಖ್ಖರ ಇತಿಹಾಸವನ್ನು ತೆರೆದಿಡುವ ಇವರು, ಪಂಜಾಬಿನ ದುರಂತವನ್ನೂ ಅಷ್ಟೇ ಕರಾರುವಾಕ್ಕಾಗಿ ಕಟ್ಟಿಕೊಡಬಲ್ಲರು. ಇವರು ಒಂದು ವೇಳೆ ಪಂಜಾಬಿನಲ್ಲಿ ಜನಿಸದೇ ಹೋಗಿದ್ದರೆ 'ಟ್ರೇನ್ ಟು ಪಾಕಿಸ್ತಾನ್' ಎಂಬ ಮಹತ್ವದ ಪುಸ್ತಕ ಬಹುಷಃ ನಮಗೆ ಸಿಗುತ್ತಿರಲಿಲ್ಲವೇನೋ. ದೇಶ ವಿಭಜನೆ ಕುರಿತಂತೆ ಸಾದತ್ ಹಸನ್ ಮಾಂಟೋ ತನ್ನ ಕಥೆಗಳ ಮೂಲಕ ತನ್ನದೇ ಅಸಹನೆಯನ್ನು, ವ್ಯಾಕುಲತೆಯನ್ನು, ಜೀವಹಾನಿ ಕುರಿತ ದುಗುಡವನ್ನು ವ್ಯಕ್ತಪಡಿಸಿದರೆ, ಖುಷ್ವಂತ್ ಸಿಂಗ್ 'ಟ್ರೇನ್ ಟು ಪಾಕಿಸ್ತಾನ್' ಎಂಬ ಐತಿಹಾಸಿಕ ಕಾದಂಬರಿಯಲ್ಲಿ ಭಾರತ-ಪಾಕಿಸ್ತಾನ ಗಡಿಯ ಒಂದು ಪುಟ್ಟ ಹಳ್ಳಿಯಲ್ಲಿ ಜರುಗುವ ಸಿಖ್ ಮತ್ತು ಮುಸಲ್ಮಾನರ ನಡುವಿನ ಸಂಘರ್ಷವನ್ನು ಸೂಕ್ಷ್ಮವಾಗಿ ಕಟ್ಟಿಕೊಡುತ್ತಾರೆ. ದೇಶ ವಿಭಜನೆ ಕುರಿತಂತೆ ಯಾರೇ ಬರೆದರೂ ಅಲ್ಲಿ ರಾಜಕೀಯ ವಿದ್ಯಮಾನಗಳು ಸಹಜವಾಗಿ ಸುಳಿಯುತ್ತವೆ. ಆದರೆ, 'ಟ್ರೇನ್ ಟು ಪಾಕಿಸ್ತಾನ್' ಕೃತಿಯಲ್ಲಿ ರಾಜಕೀಯ ವಿದ್ಯಮಾನಗಳ ಜೊತೆಗೆ ಮಾನವೀಯ ಮಿಡಿತಗಳು, ಜೀವಸಂಬಂಧಿ ಸಂಗತಿಗಳು, ಸಾಮಾಜಿಕ ತಲ್ಲಣಗಳು ತೀವ್ರವಾಗಿ ಪಡಿಮೂಡುತ್ತವೆ.

ಹಾಗೇನೆ, ದೇವರ ಅಸ್ಥಿರತೆ ಬಗ್ಗೆ ಮಾತಾಡುವ ಖುಷ್ವಂತ್ ಸಿಂಗ್ ಅವರಿಗಿದ್ದ ಆಧ್ಯಾತ್ಮದೆಡೆಗಿನ ಆಸಕ್ತಿ ಕುತೂಹಲ ಹುಟ್ಟಿಸುವಂಥದ್ದು. ಧಾರ್ಮಿಕ ಆಚರಣೆಗಳ ಬಗ್ಗೆ ನಂಬಿಕೆಯಿಲ್ಲದ ಇವರು ಧರ್ಮಗಳ ಬಗ್ಗೆ ಅಪಾರ ಗೌರವ ಹೊಂದಿದ್ದರು. ಜೈನ, ಸಿಖ್, ಬೌದ್ಧ, ಕ್ರಿಶ್ಚಿಯನ್, ಇಸ್ಲಾಂ, ಪಾರ್ಸಿ ಸರಿದಂತೆ ಅನೇಕ ಧರ್ಮಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ್ದರು. ಕೆಲವೊಂದು ಧರ್ಮಗ್ರಂಥಗಳನ್ನು ಅನುವಾದ ಕೂಡ ಮಾಡಿದ್ದರು. ಇವರ ಬಳಿ ಗುರುನಾನಕರ ಆದಿಗ್ರಂಥ ಹಾಗೂ ಬೈಬಲ್ಲಿನ ಹಳೇ ಒಡಂಬಡಿಕೆಗಳು ಯಾವಾಗಲೂ ಇರುತ್ತಿದ್ದವು. ಬೈಬಲ್ಲಿನ ಕೀರ್ತನೆಗಳಿಗೆ ಕಾವ್ಯದ ಗುಣ ಇರುವುದರಿಂದ ಅವರಿಗೆ ಅವು ಇಷ್ಟವಾಗುತ್ತಿದ್ದವು. ಹಾಗೇನೆ, ಸಿಖ್ ಧರ್ಮಶಾಸ್ತ್ರಗಳನ್ನು ಅನುವಾದಿಸುವಾಗ, ಅವುಗಳಲ್ಲಿ ವೇದ, ಉಪನಿಷತ್ ಮತ್ತು ಮಹಾಕಾವ್ಯಗಳ ಉಲ್ಲೇಖಗಳನ್ನು ಗಮನಿಸಿದ ಇವರು, ಇದರಿಂದಾಗಿ ತಮ್ಮ ಗಿಬ್ರಾನಿಯ ಅರ್ಥವನ್ನು ಸರಿಯಾಗಿ ತಿಳಿಯುವ ಸಲುವಾಗಿ ಅವುಗಳನ್ನು ಅಭ್ಯಾಸ ಮಾಡಬೇಕೆಂದು ತೀರ್ಮಾನಿಸುತ್ತಾರೆ. ಆದ್ದರಿಂದಲೇ, ಧರ್ಮಗಳ ಬಗ್ಗೆ ಬೆಳೆದ ಅವರ ಕುತೂಹಲ ಜೈನ, ಬೌದ್ಧ ಮತ್ತು ಇಸ್ಲಾಂ ಧರ್ಮಗಳನ್ನು ಓದುವಂತೆ ಪ್ರೇರೇಪಿಸುತ್ತದೆ.

ಖುಷ್ವಂತ್ ಸಿಂಗ್ ಅವರಿಗೆ ಉರ್ದು ಕಾವ್ಯವೆಂದರೆ ಅಪಾರ ಒಲವು. ಅದರಲ್ಲೂ ಮಿರ್ಜಾ ಗಾಲಿಬ್ ಬರೆದ ಗಜಲ್, ಶಾಯರಿಗಳೆಂದರೆ ಅವರಿಗೆ ಪ್ರಾಣ. ಹಾಗೇನೆ, ಇಕ್ಬಾಲ್, ಫೈಜ್ ಅಹಮದ್ ಫೈಜ್ ಕೂಡ ಇವರಿಗಿಷ್ಟ. ಹಾಗಾಗಿ ಖುಷ್ವಂತ್ ಸಿಂಗ್ ತಮ್ಮ ಬದುಕಿನುದ್ದಕೂ ಉರ್ದು ಸಾಹಿತ್ಯವನ್ನು ಅನುವಾದಿಸುತ್ತಲೇ ಬಂದಿದ್ದಾರೆ. ಗಾಲಿಬ್ ನನ್ನು ಬಹುವಾಗಿ ಪ್ರೀತಿಸುತ್ತಿದ್ದ ಇವರಿಗೆ, ಗಾಲಿಬ್ ಇಷ್ಟಿಷ್ಟೇ ಮದಿರೆ ಹೀರಿ ಜೀವ ಧಕ್ಕೆನಿಸುವ ದ್ವಿಪದಿ, ಶಾಯರಿ ಕಟ್ಟುತ್ತಿದ್ದದ್ದು ಇಷ್ಟ. ಅಲ್ಲಾನನ್ನು ಮತ್ತು ಪ್ರವಾದಿಗಳನ್ನು ಆರಾಧಿಸುತ್ತಿದ್ದರೂ, ಒಮ್ಮೆಯೂ ದೈನಂದಿನ ಪ್ರಾರ್ಥನೆಗಳನ್ನು ಮಾಡಿರದ, ರಂಜಾನ್ ತಿಂಗಳಿನಲ್ಲಿ ಉಪವಾಸವಿರದ, ಎಂದೂ ಮೆಕ್ಕಾಗೆ ಹಜ್ ಯಾತ್ರೆ ಕೈಗೊಂಡಿರದ ಗಾಲಿಬ್ ಇವರಿಗೆ ಆಪ್ತ ಎನಿಸಲು ಮತ್ತೊಂದು ಕಾರಣ.
ಹಾಗೇನೆ, 'ಸುಂದರವಾದ ಹೆಂಗಸರ ಸಂಗವನ್ನು ಸಂತೋಷಿಸುತ್ತೇನೆ' ಎಂದು ಮುಕ್ತವಾಗಿ ಹೇಳಿಕೊಳ್ಳುವ ಇವರು 'ದಿ ಕಂಪನಿ ಆಫ್ ವಿಮೆನ್' ಬರೆದುದದರಲ್ಲಿ ಅಚ್ಚರಿ ಪಡಬೇಕಿಲ್ಲ. ಸೆಕ್ಸ್ ಬಗ್ಗೆ ಇವರಿಗಿದ್ದ ದೃಷ್ಟಿಕೋನ ನಿಜಕ್ಕೂ ಕುತೂಹಲಕಾರಿಯಾದದ್ದು. ಇವರು ತಮ್ಮ 98 ನೇ ವಯಸಿನಲ್ಲಿ ಬರೆದ 'ಖುಷ್ವಂತ್ ನಾಮ' (ಕನ್ನಡಕ್ಕೆ: ಎಂ.ಎಸ್.ರುದ್ರೇಶ್ವರಸ್ವಾಮಿ) ಪುಸ್ತಕದ ಕೆಲವು ಸಾಲುಗಳೇ ಇದಕ್ಕೆ ಸಾಕ್ಷಿ: 'ಈ ದೇಶದಲ್ಲಿ ಲೈಂಗಿಕ ಹತಾಶೆಯಿದೆ. ಇದು ಪ್ರಾಯಶಃ, ನಮ್ಮಲ್ಲಿ ಹೆಚ್ಚುತ್ತಿರುವ ಲೈಂಗಿಕ ಹಿಂಸೆ ಮತ್ತು ಅತ್ಯಾಚಾರದ ಬಗ್ಗೆ ಹೇಳುತ್ತದೆ ಅನ್ನಿಸುತ್ತದೆ. ಅದನ್ನು ಲೈಂಗಿಕತೆಯ ನಿಗ್ರಹತೆ ಮತ್ತು ಅದರ ಬಗ್ಗೆ ತೋರುವ ಡಾಂಭಿಕತನಕ್ಕೆ ತಳುಕು ಹಾಕಲಾಗಿದೆ- ನಾವು ಭಾರತೀಯರು ಲೈಂಗಿಕತೆಯಲ್ಲಿ ಹೆಚ್ಚು ಆಸಕ್ತರು, ಬಹಳ ಕುತೂಹಲಿಗಳು, ಬಹಳ ಹಸಿವೆಯುಳ್ಳವರು ಆಗಿದ್ದರೂ, ಬಹಳ ಪರಿಜ್ಞಾನವುಳ್ಳವರಂತೆ, ಸಂಪ್ರದಾಯ ಪಾಲಕರಂತೆ ನಟಿಸುತ್ತೇವೆ. ಭಾರತೀಯರು ಹೆಚ್ಚಾಗಿ ಲೈಂಗಿಕತೆಯನ್ನು ಸರಿಯಾದ ಜಾಗದಲ್ಲಿ ಹೊಂದದೆ, ತಮ್ಮ ಮಿದುಳಿನಲ್ಲಿ ಹೊಂದಿರುತ್ತಾರೆ ಆದರೆ, ವಯಸಾಗುತ್ತಿದ್ದಂತೆ, ಅದು ತೊಡೆಸಂದಿನಿಂದ ತಲೆಗೆ ಸ್ಥಳಾಂತರಗೊಂಡು, ಅದೊಂದು ಗೀಳಾಗುತ್ತದೆ'.

ಹೀಗೆ, ಪ್ರತಿನಿತ್ಯ ಉಣ್ಣುವ ಆಹಾರದಿಂದ, ಕುಡಿಯುವ ಮಧ್ಯದಿಂದ, ಬದುಕುವ ವಿಧಾನದಿಂದ ಎಲ್ಲದರಿಂದಲೂ ಜೀವನಪ್ರೇಮವನ್ನು ಹುಡುಕುತ್ತ, ಹಂಚುತ್ತಿದ್ದ ಖುಷ್ವಂತ್ ಸಿಂಗ್ ಆದರ್ಶವಾಗುತ್ತಾರೆ. ತಮ್ಮ ಇಳಿವಯಸಿನಲ್ಲೂ ಸಂಜೆಯ ಮಾಲ್ಟ್ ವಿಸ್ಕಿ, ಹರಟೆ, ಓದು, ಒಂಟಿತನ, ಗಾಸಿಪ್ ಕಡೆಗಿನ ಆಸಕ್ತಿ, ಜೋಕ್ ಗಳ ಮೂಲಕ ಬದುಕನ್ನು ಸಹಜವಾಗಿ ಬದುಕಿದ್ದ ಇವರು, ಎಂಭತ್ತರ ದಶಕದಲ್ಲಿ ಸ್ವತಃ ರಾಜ್ಯಸಭಾ ಮೆಂಬರಾಗಿದ್ದುಇವತ್ತಿನ ರಾಜಕಾರಣ ಕುರಿತಂತೆ ತೀವ್ರವಾದ ಅಸಾಮಾಧಾನ ಹೊಂದಿದ್ದರು. ಒಂದು ವೇಳೆ, ಭಾರತ ಒಂದು ರಾಷ್ಟ್ರವಾಗಿ ಉಳಿಯಬೇಕಾದರೆ, ಮತ್ತದು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ, ಅದು ಒಂದಾಗಿ ಉಳಿಯಬೇಕು, ತನ್ನ ಜ್ಯಾತ್ಯಾತೀತ ನಂಬಿಕೆಗಳನ್ನು ಪುನರುಚ್ಚರಿಸಬೇಕು ಮತ್ತು ಮತೀಯವಾದಿ ಪಕ್ಷಗಳನ್ನು ರಾಜಕೀಯ ವಲಯದಿಂದಲೇ ಬೇರು ಸಹಿತ ಕಿತ್ತೆಸೆಯಬೇಕು. ಇವತ್ತಿನ ಯುವ ಪೀಳಿಗೆ ಮತೀಯ ಭಾವನೆಗಳಿಗೆ ಫ್ಯಾಸಿಸ್ಟ್ ಧೋರಣೆಗಳಿಗೆ ಕಿಮ್ಮತ್ತು ನೀಡದೆ, ಅವುಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದಿದ್ದರು. ಹಾಗೇನೆ, ಸ್ವತಃ ಪತ್ರಕರ್ತರಾಗಿ ಅಪಾರ ಅನುಭವ ಹೊಂದಿದ್ದ ಖುಷ್ವಂತ್ ಸಿಂಗ್ ಪ್ರಸ್ತುತ ಪತ್ರಿಕೋದ್ಯಮ ಕುರಿತಂತೆ ತಮ್ಮದೇ ನಿಲುವು ಹೊಂದಿದ್ದರು. ಬದುಕಿನ ಕೊನೆಕೊನೆಯ ದಿನಗಳಲ್ಲಿ ಗಾಂಧೀಜಿಯ ಪ್ರಸ್ತುತತೆ ಬಗ್ಗೆ ಮಾತಾಡಿದ್ದರು.
ಹೀಗೆ, ತಮ್ಮ ಬದುಕಿನ ವಿವಿಧ ಸ್ತರಗಳಲ್ಲಿ ತಾವು ಪಡೆದುಕೊಂಡ ದರ್ಶನವನ್ನು ತಮ್ಮ ಕೃತಿಗಳಲ್ಲಿ ದಾಖಲಿಸಿ ಮರಳಿಬಾರದೂರಿಗೆ ಹೊರಟ ಖುಷ್ವಂತ್ ಸಿಂಗ್ ಇನ್ನು ನೆನಪಷ್ಟೇ. ನಮಗುಳಿಯುವುದು ಅವರ ಬೆಲೆ ಕಟ್ಟಲಾಗದ ಕೃತಿಗಳು, ಬದುಕನ್ನು ರೂಪಿಸಬಲ್ಲ ಆದರ್ಶಗಳು ಮಾತ್ರ.

ಖುಷ್ವಂತ್ ಸಿಂಗ್ : ಪ್ರಿಯತಮನ ಕಳೆದುಕೊಂಡ ಭಾಗ್‌ಮತಿ

ವಾರ್ತಾಭಾರತಿ ಸಂಪಾದಕೀಯವಿಚ್ಛಿದ್ರ ಭಾರತವನ್ನು ತನ್ನ ಬರಹಗಳಲ್ಲಿ ಆರ್ದ್ರವಾಗಿ ಕಟ್ಟಿಕೊಟ್ಟ ಖುಷ್‌ವಂತ್ ಸಿಂಗ್ ಇನ್ನಿಲ್ಲ. ಭಾರತ ವಿಭಜನೆಯ ಕಾಲಘಟ್ಟವನ್ನು ಸಾದತ್ ಹಸನ್ ಮಂಟೋ ಹೇಗೆ ತನ್ನ ಹರಿತವಾದ ವ್ಯಂಗ್ಯಗಳಲ್ಲಿ ಕತ್ತರಿಸಿ ಇಟ್ಟನೋ, ಅಂತೆಯೇ ಖುಷ್‌ವಂತ್ ಸಿಂಗ್ ಸ್ವಾತಂತ್ರೋತ್ತರ ಭಾರತವನ್ನು ವಿಷಾದ, ವ್ಯಂಗ್ಯ ಮತ್ತು ತಮಾಷೆಗಳ ಮೂಲಕ ತೆರೆದಿಡುತ್ತಾ ಬಂದವರು. ದೇಶ ವಿಭಜನೆಯ ಬೆಂಕಿಯಲ್ಲಿ ಸಾದತ್ ಹಸನ್ ಮಾಂಟೋ ತನ್ನನ್ನು ತಾನು ಸುಟ್ಟುಕೊಂಡು ಬರೆದರು. ಆದರೆ ಸಿಂಗ್ ಆ ಬೂದಿಯಲ್ಲಿ ಅರಳಿ ನಿಂತರು ಮಾತ್ರವಲ್ಲ, ಉದ್ದಗಲಕ್ಕೆ ಹರಡಿದರು. ಇದೀಗ ಖುಷ್‌ವಂತ್ ಸಿಂಗ್ ಇಲ್ಲದ ದಿಲ್ಲಿ ಎನ್ನುವ ಭಾಗ್‌ಮತಿ ತನ್ನ ಇನಿಯನನ್ನು ಕಳೆದುಕೊಂಡವಳಂತೆ ಬಿಕೋ ಅನ್ನುತ್ತಿದ್ದಾಳೆ. ಭಾರತವನ್ನು ಮುಖ್ಯವಾಗಿ ತನ್ನ ಪ್ರೀತಿಯ ದಿಲ್ಲಿಯನ್ನು ಬೇರೆ ಬೇರೆ ಭಂಗಿಗಳಲ್ಲಿ ನೋಡಿ ಅವರು ಬರೆದರು. ಅಂಕಣಕಾರರಾಗಿ, ವರದಿಗಾರನಾಗಿ, ಸಂಪಾದಕನಾಗಿ, ಕಾದಂಬರಿಕಾರನಾಗಿ ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಹಾಸ್ಯಗಾರನಾಗಿ... ಹೀಗೆ ತನ್ನನ್ನೇ ಬೇರೆ ಬೇರೆಯಾಗಿ ವಿಭಜಿಸಿ ಈ ಸ್ವಾತಂತ್ರೋತ್ತರ ಭಾರತವನ್ನು ಅವರು ಮತ್ತೆ ಮತ್ತೆ ಬರೆದರು. ಅವರು ಬರೆದಂತೆ ಈ ಭಾರತ ಹಿಗ್ಗಿ ಕೊಳ್ಳತೊಡಗಿತು. ಹೊಸ ಹೊಸ ಆಯಾಮಗಳಿಂದ ಭಾರತದ ಸಂದರ್ಭಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಯಿತು. ಕೊನೆಯವರೆಗೂ ಬರೆಯುತ್ತಲೇ ಬದುಕಿದ ಖುಷ್‌ವಂತ್ ಸಿಂಗ್, ತನ್ನ ತಮಾಷೆಗೆ, ವ್ಯಂಗ್ಯಕ್ಕೆ ತನ್ನನ್ನೇ ಬಿಡಲಿಲ್ಲ. ಅವರನ್ನೇ ಅವರು ತಮಾಷೆ ಮಾಡಿಕೊಂಡರು. ಅದರ ಕಾರಣ ದಿಂದಲೇ ಇಂದು ನಾವು ಖುಷ್‌ವಂತ್ ಸಿಂಗ್ ಜೋಕುಗಳನ್ನು ಆಡಿಕೊಂಡು ನಗುತ್ತೇವೆ. ತುಂಟತನ ಖುಷ್‌ವಂತ್ ಸಿಂಗ್ ಬರಹದ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. 

ತನ್ನೊಳಗಿನ ವಿಷಾದಗಳನ್ನು ಉತ್ಕಟವಾದ ಭಾವುಕತೆ ಯಿಂದಲೋ, ಭಾವೋದ್ವೇಗದಿಂದಲೋ ಬರೆದ ವರಲ್ಲ ಸಿಂಗ್. ಭಾರತದೊಳಗಿನ ವಿರೋಧಾಭಾಸ ಗಳನ್ನೆಲ್ಲ ವ್ಯಂಗ್ಯ, ವಿನೋದಗಳ ಮೂಲಕವೇ ಕಟ್ಟಿಕೊಟ್ಟರು. ಇಂದು ಖುಷ್‌ವಂತ್ ಸಿಂಗ್ ಯುವಕರಿಗೆ ಹೆಚ್ಚು ಪರಿಚಯ ತಮ್ಮ ತುಂಟ, ಪೋಲಿ ಬರಹಗಳಿಗಾಗಿ. ಆದರೆ ಖುಷ್‌ವಂತ್ ಆಳದಲ್ಲೊಬ್ಬ ದುರಂತ ನಾಯಕನಿದ್ದಾನೆ. ಹಲವು ವಿರೋಧಾಭಾಸಗಳನ್ನು, ವಿಪರ್ಯಾಸಗಳನ್ನು ತನ್ನೊಳಗೆ ಕಟ್ಟಿಕೊಂಡ ಕಾರಣದಿಂದಲೇ ಅವರು ಉತ್ಕಟವಾಗಿ ಬರೆಯುವುದಕ್ಕೆ ಸಾಧ್ಯವಾಯಿತು. ಅವರ ಬರಹಗಳ ಬೇರು, ಭಾರತ-ಪಾಕ್ ವಿಭಜನೆಯ ಗಾಯಗಳಲ್ಲಿದೆ. ಆ ಗಾಯ ಮತ್ತೆ ಮತ್ತೆ ಅವರನ್ನು ಬೆನ್ನುಹತ್ತುತ್ತಲೇ ಇತ್ತು. 1984ರಲ್ಲಿ ಸಿಖ್ಖರ ಅಮೃತಸರಕ್ಕೆ ಇಂದಿರಾಗಾಂಧಿ ಸೇನೆಯನ್ನು ನುಗ್ಗಿಸಿದಾಗ ಅತಿಯಾಗಿ ವೇದ ೆಗೊಳಗಾದವರು ಖುಷ್‌ವಂತ್ ಸಿಂಗ್. ಈ ಕಾರಣಕ್ಕಾಗಿಯೇ ಅವರು ತಮಗೆ ಸಿಕ್ಕಿದ ಪದ್ಮಭೂಷಣ ಪ್ರಶಸ್ತಿಯನ್ನು ಸರಕಾರಕ್ಕೆ ಮರಳಿಸಿದರು. ಸಿಖ್ ಹತ್ಯಾಕಾಂಡದ ಕುರಿತಂತೆ ಅಪಾರ ನೋವನ್ನು ಹೊತ್ತು ಕೊಂಡಿದ್ದರೂ, ಅವರು ಒಳ ಗೊಳಗೆ ಇಂದಿರಾ ಗಾಂಧಿಯನ್ನು ಮೆಚ್ಚಿಕೊಳ್ಳುವವ ರಾಗಿದ್ದರು. 1980ರಿಂದ 86ರ ಅವಧಿಯಲ್ಲಿ ಖುಷ್‌ವಂತ್ ಸಿಂಗ್ ರಾಜ್ಯಸಭೆಯ ಸದಸ್ಯರಾಗಿದ್ದರು ಎನ್ನುವುದೂ ಗಮನಾರ್ಹ.

  ದೇಶವಿಭಜನೆಯ ಕಾಲದಲ್ಲಿ ಖುಷ್‌ವಂತ್ ಸಿಂಗ್ ಲಾಹೋರ್‌ನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಎಲ್ಲರಂತೆ ಅವರೂ ಭಾರತ ಕಡೆಗೆ ದೌಡಾಯಿಸಿದರು. ಅವರು ಪಾಕಿಸ್ತಾನದಿಂದ ಭಾರತಕ್ಕೆ ಬಂದ ಅನುಭವವೇ ಮುಂದೆ 1956ರಲ್ಲಿ ‘ಟ್ರೈನ್ ಟು ಪಾಕಿಸ್ತಾನ್’ ಕಾದಂಬರಿಯಾಗಿ ರೂಪ ಪಡೆಯಿತು. ಪಂಜಾಬ್ ಮತ್ತು ಉರ್ದು ಲೇಖಕರ ಸಂಘದಿಂದ ಅವರ ಸೃಜನಶೀಲತೆ ಅರಳುತ್ತಾ ಹೋಯಿತು. ಭಾರತದ ವಸ್ತುಸ್ಥಿತಿಯನ್ನು ಈ ಕಾರಣದಿಂದಲೇ ಅವರಿಗೆ ಸ್ಪಷ್ಟವಾಗಿ ಅರಿತು ಬರೆಯಲು ಸಾಧ್ಯವಾಯಿತು. ಸಿಖ್ಖರಾಗಿದ್ದು ಕೊಂಡು ಈ ದೇಶದ ಅಲ್ಪಸಂಖ್ಯಾತರ ತಲ್ಲಣ ಗಳನ್ನು ಅರ್ಥ ಮಾಡಿಕೊಂಡಿದ್ದರು. ಸಿಖ್ ಹತ್ಯಾಕಾಂಡದ ಕುರಿತಂತೆ ತನ್ನ ಬರಹಗಳಲ್ಲಿ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತಲೇ, ಎಲ್ಲೂ ಆಕ್ರೋಶದ ಬೆಂಕಿಗೆ ಸೃಜನಶೀಲತೆ ಸುಟ್ಟು ಹೋಗದಂತೆ ಜಾಗ್ರತೆ ವಹಿಸಿದರು. ಯಾವುದೇ ಒಂದು ವಿಷಯಕ್ಕೆ ಅವರು ಬದ್ಧರಾಗಿ ನಿಲ್ಲಲಿಲ್ಲ. ಅದರೊಳಗಿನ ಒಳಿತು, ಕೆಡುಕುಗಳನ್ನು ಸಮಾನವಾಗಿ ಸ್ವೀಕರಿಸುತ್ತಾ, ತನ್ನ ಬರಹಗಳನ್ನು ಉದ್ದಗಲಕ್ಕೆ ಹರಿಸಿದರು. ಗಾಂಧಿಯ ಸಸ್ಯಾಹಾರ ವನ್ನು ಪ್ರಕೃತಿ ವಿರೋಧಿ ಎಂದು ಕರೆಯುತ್ತಲೇ ನಾನೂ ಒಬ್ಬ ಗಾಂಧಿವಾದಿ ಎಂದು ಸಿಂಗ್ ಬರೆಯುತ್ತಾರೆ. ಸಂತಾ ಬಂತಾ ಜೋಕುಗಳನ್ನು ಬರೆದು ತನ್ನನ್ನು ತಾನೇ ತಮಾಷೆ ಮಾಡಿಕೊಂಡರು. ಹೆಣ್ಣಿನ ಬಗ್ಗೆ ಅತಿರೇಕ ಎನ್ನುವಷ್ಟು ಬರೆದರು. ಅದೆಲ್ಲವೂ ಅವರೊಳಗಿನ ಸೃಜನಶೀಲತೆ ಯನ್ನು ರಕ್ಷಿಸಿಕೊಳ್ಳುವ ಬೇರೆ ಬೇರೆ ಮಾರ್ಗಗಳೇ ಆಗಿದ್ದವು. ಆದುದರಿಂದಲೇ ಅವರು ತನ್ನ ಉಸಿರಿನ ಕೊನೆಯವರೆಗೂ ಬರೆಯುತ್ತಲೇ ಬದುಕುವುದಕ್ಕೆ ಸಾಧ್ಯವಾಯಿತು.

  ಅವರ ದಿಲ್ಲಿ ಕೃತಿ ಕೇವಲ ಕಾದಂಬರಿಯಲ್ಲ. ಅದು ದಿಲ್ಲಿಯ ಆತ್ಮಕಥನ. ದಿಲ್ಲಿಯನ್ನು ಗಂಡು, ಹೆಣ್ಣೂ ಅಲ್ಲದ ಭಾಗ್‌ಮತಿಗೆ ಹೋಲಿಸುತ್ತಾರೆ ಮಾತ್ರವಲ್ಲ, ತನ್ನ ಬದುಕನ್ನು ಪೊರೆಯುವ ಪ್ರಿಯತಮೆಯಾಗಿ ಕಲ್ಪಿಸಿಕೊಂಡು ಬರೆಯುತ್ತಾರೆ. ಸಿಂಗ್ ಕಟ್ಟಿಕೊಟ್ಟ ದಿಲ್ಲಿ ಇಂದು ಭಾಗ್‌ಮತಿಯ ಪ್ರೀತಿ, ಮೋಹಗಳಾಚೆ, ಕ್ರೌರ್ಯ, ಹಣ, ಲೋಭಗಳಿಂದ ವಿಕಾರ ರೂಪಪಡೆಯುತ್ತಿದೆ. ಅತ್ಯಾಚಾರಕ್ಕಾಗಿ ವಿಶ್ವದಲ್ಲಿ ಸುದ್ದಿಯಾಗುತ್ತಿದೆ. ತನ್ನ ಸಾಂಸ್ಕೃತಿಕ ಹಿನ್ನೆಲೆ, ಮಹತ್ವಗಳನ್ನೆಲ್ಲ ಕಳೆದುಕೊಂಡು ಬರೇ ಕೆಟ್ಟ ರಾಜಕೀಯಗಳಿಗೆ ಬಲಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಿಂಗ್ ನಮ್ಮ ನಡುವಿನಿಂದ ಅಗಲಿದ್ದಾರೆ. ಬದುಕನ್ನು ಅಪಾರವಾಗಿ ಪ್ರೀತಿಸುತ್ತಾ, ಅದರೊಳಗಿನ ಒಳಿತುಕೆಡುಕುಗಳನ್ನು ಸಮಾನವಾಗಿ ಸ್ವೀಕರಿಸುತ್ತಾ, ವರ್ತಮಾನವನ್ನು ಎಚ್ಚರದ ಕಣ್ಣಿನಿಂದ ನೋಡುತ್ತಾ ಬಂದ ಖುಷ್‌ವಂತ್ ಸಿಂಗ್ ಎನ್ನುವ ತಾತ ನಮ್ಮ ನಡುವೆ ಇಲ್ಲ ಎನ್ನುವುದನ್ನು ಜೀರ್ಣಿಸಿಕೊಳ್ಳುವುದಕ್ಕೆ ಇನ್ನೂ ಒಂದಿಷ್ಟು ಸಮಯ ಬೇಕಾದೀತೋ ಏನೋ?

ಅರುಣಕುಮಾರ : ಖುಷ್ವಂತ್ ಸಿಂಗ್ ಒಂದು ವಿದಾಯ ಚಿತ್ರ
ಮಾರ್ಚ 23 ಹೊನ್ನಾಳ್ಳಿ : 9ನೇ ಕಾವ್ಯಬೋಧಿ


ಮೆಯಿರಾ ಪೈಬಿ: ಮಹಿಳಾ ಮಾರ್ಗದ ಪಂಜು ಧಾರಿಣಿಯರು

ಡಾ. ಎಚ್. ಎಸ್. ಅನುಪಮಾ

 
ಈಶಾನ್ಯ ಭಾರತದ ರಾಜ್ಯ ಮಣಿಪುರ ತನ್ನ ಸೌಂದರ್ಯಕ್ಕೆಷ್ಟೋ ಅಷ್ಟೇ ಸಶಸ್ತ್ರ ಹೋರಾಟ, ಮಾದಕ ವ್ಯಸನ ಮತ್ತು ಏಡ್ಸ್‌ನಂತಹ ದೊಡ್ಡ ಸಮಸ್ಯೆಗಳಿಂದಾಗಿಯೂ ಪ್ರಸಿದ್ಧಿ ಹೊಂದಿದೆ. ನೋಡಲು ಚೀನೀಯರಂತೆ ಕಾಣುವ ಅವರು ಇತ್ತೀಚೆಗೆ ಭಾರತದ ವಿವಿಧ ಕಡೆಗಳಲ್ಲಿ ಜನಾಂಗೀಯ ಹಿಂಸೆಗೂ ಈಡಾಗುತ್ತಿದ್ದಾರೆ. ಇದೆಲ್ಲದರ ನಡುವೆಯೇ ಮಹಿಳಾ ಚಳುವಳಿ ಹುಡುಕುತ್ತಿರುವ ಪರ್ಯಾಯ ಮಾರ್ಗ ಮತ್ತು ನ್ಯಾಯ ವ್ಯವಸ್ಥೆಯ ದಾರಿದೀಪವಾಗಬಲ್ಲಂಥ ಮಹಿಳಾ ಹೋರಾಟದ ಪರಂಪರೆ ಮಣಿಪುರ ರಾಜ್ಯದಲ್ಲಿದೆ. ಇತ್ತೀಚೆಗೆ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಕರ್ನಾಟಕಕ್ಕೆ ಕರೆಸಿಕೊಂಡ ಮೂವರು ಮಣಿಪುರದ ಮಹಿಳೆಯರು ತಮ್ಮ ರಾಜ್ಯದ ಅನನ್ಯ ಮಹಿಳಾ ಶಕ್ತಿಯ ಪ್ರತೀಕವಾಗಿ ಕಂಡುಬಂದರು. ಅಲ್ಲದೇ ತಮ್ಮ ನೆಲದ ಗುಣ ಹೊತ್ತ ಮಹಿಳಾ ಸಂಘಟನೆ ‘ಮೆಯಿರಾ ಪೈಬಿ’ಯ ಬಗೆಗೆ ಬೆಳಕು ಚೆಲ್ಲಿದರು. 

ಮಣಿಪುರ, ಮೆಯಿರಾ ಪೈಬಿ ಮತ್ತು ಆ ಮಹಿಳೆಯರ ಕುರಿತು ಒಂದಷ್ಟು:
 
ಈಶಾನ್ಯ ರಾಜ್ಯಗಳಲ್ಲಿ ಮಣಿಪುರ ಕಣಿವೆ ಮತ್ತು ಪರ್ವತಗಳ ಪುಟ್ಟ ರಾಜ್ಯ. ರಾಜ್ಯದ ನಡುಭಾಗ ಕಣಿವೆಯಾದರೆ ಅದನ್ನು ಬಟ್ಟಲಿನಂತೆ ಸುತ್ತುವರೆದ ಪರ್ವತಗಳಿವೆ. ಕಣಿವೆ ಸಮುದ್ರ ಮಟ್ಟದಿಂದ ೭೯೦ ಮೀಟರ್ ಎತ್ತರದಲ್ಲಿದ್ದರೆ ಪರ್ವತಗಳು ೧೫೦೦-೧೮೦೦ ಮೀ.ನಷ್ಟು ಎತ್ತರ ಇವೆ. ರಾಜ್ಯದ ೯೦% ಪರ್ವತ, ೧೦% ಕಣಿವೆ. ಒಟ್ಟು ೯ ಜಿಲ್ಲೆಗಳಿದ್ದು ೩೫೨ ಕಿಮೀ ಅಂತರರಾಷ್ಟ್ರೀಯ ಗಡಿಯನ್ನು ಬರ್ಮಾದೊಂದಿಗೆ ಹೊಂದಿದೆ. ನಾಗಾಲ್ಯಾಂಡ್-ಅಸ್ಸಾಂ-ಮಿಜೋರಾಂಗಳಿಂದ ಉಳಿದ ಮೂರು ದಿಕ್ಕುಗಳಲ್ಲಿ ಸುತ್ತುವರಿದ ಮಣಿಪುರ ೨೭ ಲಕ್ಷ ಜನಸಂಖ್ಯೆಯ, ಕರ್ನಾಟಕದ ಒಂದು ಜಿಲ್ಲೆಯಷ್ಟು ಪುಟ್ಟ ರಾಜ್ಯ.
 
ಮಣಿಪುರಕ್ಕೆ ಬರ್ಮಾ ಜೊತೆಗೆ ಚರಿತ್ರೆಯ ಕಾಲದಿಂದಲೂ ನಿರಂತರ ಸಂಘರ್ಷವಿದೆ. ಕೆಲಕಾಲ ಬರ್ಮಾ ಮಣಿಪುರ ದೊರೆಯ ಅಧೀನದಲ್ಲಿದ್ದರೆ ಮತ್ತೆ ಕೆಲಕಾಲ ಬರ್ಮಾದ ಆಳ್ವಿಕೆಯಲ್ಲಿ ಮಣಿಪುರವಿತ್ತು. ಬರ್ಮಾದಿಂದ ರಾಜ್ಯ ವಶಪಡಿಸಿಕೊಳ್ಳಲು ಮಣಿಪುರದ ಅರಸು ಬ್ರಿಟಿಷರ ಸಹಾಯ ಪಡೆದ. ನಂತರ ಬ್ರಿಟಿಷರೇ ಕಾಂಗ್ಲಾ ಕೋಟೆಯಲ್ಲಿ ಯೂನಿಯನ್ ಜ್ಯಾಕ್ ಧ್ವಜ ಹಾರಿಸಿ ರಾಜ್ಯ ನಮ್ಮದೇ ಎನ್ನುವವರೆಗೆ ಅಲ್ಲಿ ಸಂಘರ್ಷಗಳ ಸರಮಾಲೆಯೇ ಸಂಭವಿಸಿತು. ೧೮೯೧ರಲ್ಲಿ ರಾಜ್ಯ ಬ್ರಿಟಿಷ್ ಸ್ವಾಧೀನಕ್ಕೆ ಹೋದಮೇಲೆ ಸ್ವತಂತ್ರ ಹೋರಾಟ ಶುರುವಾಯಿತು. ೧೯೪೪ರಲ್ಲಿ ಸುಭಾಸ್ ಚಂದ್ರ ಬೋಸ್ ನೇತೃತ್ವದಲ್ಲಿ ಮೊತ್ತಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜ ಮೊಯಿರಾಂಗ್‌ನಲ್ಲಿ ಹಾರಿತು. ೧೯೪೭ರಲ್ಲಿ ಭಾರತದೊಂದಿಗೆ ಸ್ವತಂತ್ರವಾಗಿ ಬೇರೆ ಸ್ಟೇಟ್ ಅಸೆಂಬ್ಲಿಯನ್ನು ಹೊಂದಿತು. ಮಣಿಪುರದ ರಾಜ ಅಸೆಂಬ್ಲಿ ಮುಖ್ಯಸ್ಥನಾದ. ಆದರೆ ೧೯೪೯ರಲ್ಲಿ ಅದು ಭಾರತದಲ್ಲಿ ಸೇರಿತು ಹಾಗೂ ೧೯೭೨ರಲ್ಲಿ ಭಾರತದ ಒಂದು ರಾಜ್ಯವಾಯಿತು.

ಈ ಬೆಟ್ಟಕಣಿವೆಗಳ ನಾಡಿನ ಜನ ಶ್ರಮಜೀವಿಗಳು. ತಮ್ಮ ಆಳ್ವಿಕರು ಗಡಿ ಕಾಯುವುದರಲ್ಲಿ, ರಾಜ್ಯ ವಿಸ್ತರಿಸುವುದರಲ್ಲಿ ಮುಳುಗಿರುವಾಗ ಹೊಟ್ಟೆಪಾಡಿಗಾಗಿ ಬೆವರು ಹರಿಸಿದವರು. ಅಲ್ಲಿ ಸಂಪತ್ತೆಂದರೆ ಕಾಡು ಮತ್ತು ರಟ್ಟೆಬಲ. ಹಲವು ಬುಡಕಟ್ಟು ಗುಂಪುಗಳನ್ನು ಹೊಂದಿದ ನೆಲ ಶ್ರಮಿಕರ, ಬಡವರ ರಾಜ್ಯವೆಂದರೂ ಅಡ್ಡಿಯಿಲ್ಲ.
 
ಶ್ರಮಿಕ ಸಮಾಜವಾದ್ದರಿಂದ ಅಲ್ಲಿ ಮಹಿಳೆಯ ಪಾತ್ರ, ಜವಾಬ್ದಾರಿ ಎಂಥದೆಂದು ಊಹಿಸಬಹುದು. ಮಣಿಪುರಿಯ ಗಾದೆಗಳು ನೋಡಿ ಹೇಗಿವೆ! ‘ಜ್ಞಾನ ತಾತ ಮುತ್ತಾತರಿಂದ ದೊರೆಯುತ್ತದೆ. ಕಾದಿಟ್ಟ ಆಸ್ತಿ ಅಮ್ಮ ಅಜ್ಜಿಯರಿಂದ ದೊರೆಯುತ್ತದೆ’; ‘ಕಟ್ಟಿಗೆ ತರೋನು ಗಂಡ, ಉಳಿದಿದ್ದನ್ನೆಲ್ಲ ತರೋಳೇ ಹೆಂಡತಿ.’ ಗಾದೆ ಹೀಗಿರಲು ಕಾರಣವಿದೆ. ಕೌಟುಂಬಿಕ ಕೆಲಸ ಕಾರ್ಯಗಳ ಜೊತೆಗೆ ಮಣಿಪುರಿ ಹೆಣ್ಣುಮಕ್ಕಳು ಸಂಸಾರದ ಆರ್ಥಿಕ ಹೊರೆಯನ್ನು ನಿಭಾಯಿಸಬೇಕಿತ್ತು. ಏಕೆಂದರೆ ೧೭ರಿಂದ ೬೦ ವರ್ಷದೊಳಗಿನ ಗಂಡಸು ಯಾವಾಗೆಂದರೆ ಆಗ ರಾಜನ ಸೇವೆಗೆ ಲಭ್ಯವಿರಬೇಕೆಂಬ ಅಲಿಖಿತ ನಿಯಮ ಜಾರಿಯಲ್ಲಿತ್ತು. ಮನೆಯ ಪುರುಷ ಮನೆಯ ಕೆಲಸಗಳಿಗಾಗಿ ಲಭ್ಯವಿರುವುದು ನಿಶ್ಚಿತವಲ್ಲದ ಕಾರಣ ಮಹಿಳೆ ಮನೆಯ ಜವಾಬ್ದಾರಿ ಹೊರುತ್ತಿದ್ದಳು. 

ಆದರೆ ಕುಟುಂಬದೊಳಗೆ ಅವಳ ಪಾತ್ರ ಏನೇ ಇದ್ದರೂ ಸಾಮಾಜಿಕವಾಗಿ ಪುರುಷ ನಿಯಂತ್ರಣ-ಕಟ್ಟಳೆಗಳು ಬಹಳಷ್ಟಿದ್ದವು. ಅವು ಪರಂಪರೆ ಹೆಸರಿನಲ್ಲಿ ಮುಂದುವರೆಯುತ್ತ, ಸಶಸ್ತ್ರ ಗುಂಪುಗಳ ಬೆಂಬಲ ಪಡೆಯುತ್ತ ಹೆಚ್ಚಾಗತೊಡಗಿದವು. ಸ್ವತಂತ್ರ ಬರುವ ಮೊದಲಿನ ಬವಣೆ ಒಂದು ತೆರನದ್ದಾದರೆ ಸ್ವಾತಂತ್ರ್ಯಾನಂತರ ಮಹಿಳಾ ಸಮಸ್ಯೆಗಳ ಸ್ವರೂಪ ಮಗದೊಂದು. ಬಡತನ, ನಿರುದ್ಯೋಗ, ಸಶಸ್ತ್ರ ಗುಂಪುಗಳ ನಿರಂತರ ಕದನ, ಸೇನಾ ದೌರ್ಜನ್ಯ, ಸರ್ಕಾರದ ನಿರ್ಲಕ್ಷ್ಯ, ಗಡಿ ಚಕಮಕಿ ಇಂಥ ಕೊನೆಯಿಲ್ಲದ ಹತ್ತು ಹಲವು ಸಮಸ್ಯೆಗಳಲ್ಲಿ ಮಹಿಳೆಯರು ಮುಳುಗಿಹೋದರು.

ಆಗ ಇದಕ್ಕೆಲ್ಲ ಉತ್ತರವೋ ಎಂಬಂತೆ ಹುಟ್ಟಿಕೊಂಡ ಮಹಿಳಾ ಸಂಘಟನೆ ‘ಮೆಯಿರಾ ಪೈಬಿ.’

‘ಪಂಜುಧಾರಿಣಿ’ - ಇದು ಮೆಯಿರಾ ಪೈಬಿಯ ಕನ್ನಡ ಅನುವಾದ. ಎರಡು ಅಡಿ ಉದ್ದದ ಬಿದಿರ ಗಳದಲ್ಲಿ ಸೀಮೆಎಣ್ಣೆ ತುಂಬಿ ಒಳಗೊಂದು ಬಟ್ಟೆ ತುಂಡು ನೇತುಬಿಟ್ಟು ಮೇಲ್ತುದಿಗೆ ಬೆಂಕಿ ಕೊಟ್ಟರೆ ಬೆಂಕಿಯೂ ಅದೇ, ಬೆಳಕೂ ಅದೇ, ದಾರಿಯೂ ಅದೇ, ದೀಪವೂ ಅದೇ. ಅದೇ ಮೆಯಿರಾ. ಅದನ್ನು ಹಿಡಿದ ಮಹಿಳೆಯರ ಸಂಘಟನೆಯೇ ಮೆಯಿರಾ ಪೈಬಿ.

ಮೆಯಿರಾ ಪೈಬಿಯಲ್ಲಿ ಹೆಚ್ಚುಕಮ್ಮಿ ಇಡೀ ಮಣಿಪುರದ ಪ್ರತಿ ಮೈತೈ ಮಹಿಳೆಯೂ ಇದ್ದಾಳೆ. ಮೈತೆಯ್ ಮಣಿಪುರದ ಬಹುಸಂಖ್ಯಾತ ಕುಲ. ಶ್ರಮಿಕ, ಕೃಷಿಕ ಕುಲ. ಮೈತೆಯ್ ಲೋನ್ ಭಾಷೆಯನ್ನಾಡುವವರು. ಈಗೆರೆಡು ಶತಮಾನ ಹಿಂದಿನವರೆಗೂ ಅವರು ಪ್ರಕೃತಿ ಪೂಜಿಸುವ ‘ಅನಿಮಿಸ್ಟ್’ ಪಂಥದವರು. ಎರಡು ಶತಮಾನ ಹಿಂದೆ ತಮ್ಮ ರಾಜನೊಂದಿಗೆ ವೈಷ್ಣವ ಪಂಥ ಸೇರಿದರು. ಬೆಂಕಿ ಅವರ ಪವಿತ್ರ ಸಂಕೇತ. ಬೆಂಕಿ ಹಚ್ಚಿದ ಪಂಜು ನ್ಯಾಯ ಕೇಳುವ ಹೋರಾಟದ ಸಂಕೇತ. 
 
ಮಣಿಪುರಿ ಮಹಿಳೆಯರ ಸಂಘಟನೆ ಈ ಹೆಸರಿಟ್ಟುಕೊಳ್ಳುವುದಕ್ಕಿಂತ ಮೊದಲೇ ಆ ನೆಲ ಜಾಗೃತ ಮಹಿಳೆಯರನ್ನು ಹೊಂದಿತ್ತು. ಅವರು ಒಂದು ಶತಮಾನದಿಂದಲೂ ಚಳುವಳಿಯೋಪಾದಿಯಲ್ಲಿ ಹೋರಾಟದಲ್ಲಿ ತೊಡಗಿದ್ದರು. ಮಣಿಪುರದ ಮೊದಲ ಮಹಿಳಾ ಚಳುವಳಿ ೧೯೦೪ರಲ್ಲಿ ನಡೆಯಿತು. ಬ್ರಿಟಿಷರೊಂದಿಗೆ ಮತ್ತು ಅವರ ರಾಜಕೀಯ ದಲ್ಲಾಳಿಯಾಗಿದ್ದ ತಮ್ಮ ರಾಜನೊಂದಿಗೆ ಭಿನ್ನಮತ ಹುಟ್ಟಿ ಅದು ಶುರುವಾಯಿತು. ಬ್ರಿಟಿಷ್ ಅಧಿಕಾರಿಗಳ ನಿವಾಸ ಕಟ್ಟಲು ಅಗತ್ಯವಿರುವ ಮರಮುಟ್ಟು ಕಡಿಯಲು ಸಮುದಾಯದ ಗಂಡಸರನ್ನೆಲ್ಲ ಹೊತ್ತುಗೊತ್ತಿಲ್ಲದೆ ಪುಕ್ಕಟೆ ಬಳಸಿಕೊಳ್ಳತೊಡಗಿದಾಗ ಮೊದಲ ಪ್ರತಿರೋಧದ ಬೀಜ ಮೊಳೆಯಿತು. ಬಲವಂತವಾಗಿ ತಮ್ಮ ಮೇಲೆ ಹೇರಿದ ಶ್ರಮವನ್ನು ಮಹಿಳೆಯರು ವಿರೋಧಿಸಿದರು. ಪ್ರತಿಭಟನೆ-ಪ್ರದರ್ಶನಗಳೇ ಪ್ರತಿರೋಧ ತೋರಿಸುವ ದಾರಿಗಳಾದ ಮಂದಗಾಮಿ ಚಳುವಳಿ ಅದಾಗಿತ್ತು.

೧೯೩೯ ಎರಡನೆಯ ಮಹಿಳಾ ಚಳುವಳಿಯ ಕಾಲ. ಅಕ್ಕಿಗೆ ತೀವ್ರ ಕೊರತೆ ಶುರುವಾಗಿ ಕುಟುಂಬದ ಹೊಟ್ಟೆ ತುಂಬಿಸುವ ದಾರಿಗಳೇ ಕಾಣದೇ ಜನ ಕಂಗಾಲಾದರು. ಬೆಳೆದ ಅಕ್ಕಿ ರಫ್ತಾಗುತ್ತಿತ್ತು. ಕುಟುಂಬದ ಹೊಟ್ಟೆ ತುಂಬಿಸಲಾಗದೇ ಕಂಗೆಟ್ಟು ಮಹಿಳೆಯರು ರಾಜನಿಗೆ ಅಹವಾಲು ಸಲ್ಲಿಸಹೋದರು. ಒಳಗೆ ಆಸ್ಥಾನದಲ್ಲಿ ಕೆಲವರು ಅಹವಾಲು ಹೇಳುತ್ತಿದ್ದರೆ ಆಸ್ಥಾನದ ಹೊರಗೆ ಸಾವಿರಾರು ಮಹಿಳೆಯರು ಒಗ್ಗೂಡಿದ್ದರು. ಸ್ಥಳೀಯ ಉತ್ಪನ್ನ ಸ್ಥಳೀಯರಿಗೇ ಸಿಗಬೇಕೆನ್ನುವುದು ಮಹಿಳೆಯರ ಬೇಡಿಕೆಯಾಗಿತ್ತು. ಅಹಿಂಸಾತ್ಮಕವಾಗಿ ಹೋರಾಡಿದರೂ ಮೊದಲ ಚಳುವಳಿಗಿಂತ ತೀವ್ರವಾಗಿ ಈ ಚಳುವಳಿ ನಡೆಯಿತು. ಅಕ್ಕಿ ಮೂಟೆ ಹೇರಿಹೇರಿ ಕಳಿಸುತ್ತಿದ್ದ ಮಿಲ್‌ಗಳನ್ನು ಮುಚ್ಚಿಸುವವರೆಗೂ ಮುಂದುವರೆಯಿತು.

೭೦-೮೦ರ ದಶಕದಲ್ಲಿ ಬೇರೆ ಸಾಮಾಜಿಕ ಸಮಸ್ಯೆ ತಲೆದೋರಿತು. ರಾಜ್ಯದ ಯುವ ಜನತೆ ಸಾರಾಯಿ-ಹೆರಾಯಿನ್‌ಗಳಲ್ಲಿ ಮುಳುಗಿಹೋದರು. ಭೂಗತ ಚಟುವಟಿಕೆಗಳು ಹಾಗೂ ಅಪರಾಧ ಪ್ರಕರಣಗಳು ಹೆಚ್ಚತೊಡಗಿದವು. ರಕ್ಷಣಾ ಪಡೆಗಳು ವಿಶೇಷಾಧಿಕಾರ ಪಡೆದು ತಮ್ಮ ಗಂಡ ಮಕ್ಕಳನ್ನು ಹಿಂಸಿಸುವಾಗ, ಸಾರಾಯಿ-ಮಾದಕ ವ್ಯಸನದಿಂದ ಕುಟುಂಬಗಳು ಒಡೆದುಹೋಗುವಾಗ ಮಹಿಳೆಯರು ಧ್ವನಿಯೆತ್ತದೇ ಉಳಿಗಾಲವಿಲ್ಲ ಎಂದರಿತರು. ಸಾಮಾಜಿಕ ಸಮಸ್ಯೆಗಳನ್ನು ನಿಯಂತ್ರಿಸುವುದು ತಮ್ಮ ಕರ್ತವ್ಯ ಎಂದು ಭಾವಿಸಿ ಪ್ರತಿ ಊರುಕೇರಿಯಲ್ಲೂ ಪಂಜು ಹಿಡಿದು ಹೊರಟರು. 

ಇಲ್ಲಿ ಮಣಿಪುರದ ಮಾದಕ ವ್ಯಸನಿಗಳು ಮತ್ತು ಎಚ್‌ಐವಿ ಕುರಿತು ಕೆಲ ಮಾತು ಹೇಳಬೇಕು: ವಿಯೆಟ್ನಾಂ ಮತ್ತು ಲಾವೋಸ್‌ನಿಂದ ಭಾರತ-ಮ್ಯಾನ್ಮಾರ್ ಗಡಿ ಮೂಲಕ ಮಣಿಪುರಕ್ಕೆ ಮಾದಕ ವಸ್ತು ಬರುತ್ತದೆ. ಹೆರಾಯಿನ್‌ನ ಅತಿ ಶುದ್ಧ ರೂಪವಾದ ನಂ.೪ ಅಲ್ಲದೇ ಇನ್ನೂ ಕಡಿಮೆ ಬೆಲೆಯ ಎಷ್ಟೋ ಮಾದಕ ಪದಾರ್ಥಗಳು ಮಣಿಪುರದಲ್ಲಿ ಲಭ್ಯವಿದ್ದು ೧೪-೧೫ ವರ್ಷ ವಯಸ್ಸಿನ ಮಾದಕ ವ್ಯಸನಿಗಳ ಸಂಖ್ಯೆ ಏರುತ್ತಿದೆ. ಅಲ್ಲಿನ ಮಹಿಳೆಯರ ಪ್ರಕಾರ ಯುವಜನತೆ ಹೀಗೆ ಮಾದಕ ವ್ಯಸನಕ್ಕೆ ಬಲಿಯಾಗಲು ನಿರುದ್ಯೋಗ, ಮಾರುಕಟ್ಟೆ ಆರ್ಥಿಕತೆ, ಸೇನೆ, ಸಶಸ್ತ್ರ ಗುಂಪುಗಳ ಜೊತೆಗೆ ಕೌಟುಂಬಿಕ ರಚನೆಯೂ ಮುಖ್ಯ ಕಾರಣವಾಗಿದೆ. 

ಮಣಿಪುರದಲ್ಲಿ ಯುವ ಸಮೂಹದ ದನಿಯನ್ನು ಕೇಳುವವರಿಲ್ಲ. ಕುಟುಂಬಗಳು ತೀರ ಸಾಂಪ್ರದಾಯಿಕವಾಗಿದ್ದು ಕುಟುಂಬ ಸದಸ್ಯರ ನಡುವೆ ಸಂವಹನ ಅತಿಕಡಿಮೆ ಇದೆ. ಕುಟುಂಬದ ಹಿರಿಕಿರಿಯರ ನಡುವೆ ಕಂದಕವಿದ್ದು ಸ್ನೇಹ, ಭಾವುಕ ಸಂಬಂಧವೂ ಕಡಿಮೆಯಿರುತ್ತದೆ. ಔಪಚಾರಿಕ ಬಿಗು ವಾತಾವರಣ ಇರುತ್ತದೆ. ಈ ಕಾರಣದಿಂದಲೇ ಮಾದಕ ವ್ಯಸನ, ಶಸ್ತ್ರಾಸ್ತ್ರ ಹೋರಾಟ, ಎಚ್‌ಐವಿ ಎಲ್ಲಕ್ಕೂ ತರುಣ ಪೀಳಿಗೆ ಬಲಿಯಾಗುತ್ತಿದೆ. 

೧೯೯೦ರ ಹೊತ್ತಿಗೆ ಹೆರಾಯಿನ್ ಚುಚ್ಚಿಕೊಳ್ಳುವ ಆರು ಜನರಲ್ಲಿ ಎಚ್‌ಐವಿ ಇರುವುದು ಪತ್ತೆಯಾಯಿತು. ಮಾದಕ ವ್ಯಸನಿಗಳು ಅದೇ ಸಿರಿಂಜುಗಳನ್ನು ಮತ್ತೆಮತ್ತೆ ಗುಂಪುಗಳಲ್ಲಿ ಬಳಸುತ್ತ ಎಚ್‌ಐವಿ ಹರಡುವಿಕೆಗೆ ಕಾರಣವಾಗಿ ದೊಡ್ಡ ಸವಾಲಾದರು. ಆಗ ಪೊಲೀಸರು ಮಾದಕ ವ್ಯಸನಿಗಳನ್ನು ಬಂಧಿಸತೊಡಗಿದರು. ಯಾವಾಗ ನೋಡಿದರೂ ಕನಿಷ್ಠ ೫೦೦ ವ್ಯಸನಿಗಳು ಲಾಕಪ್ಪಿನಲ್ಲಿ ಇರುತ್ತಿದ್ದರು. ಎಲ್ಲ ವ್ಯಸನಿಗಳಿಗೂ ಕಡ್ಡಾಯ ರಕ್ತಪರೀಕ್ಷೆ ಮಾಡತೊಡಗಿದರು. ಕೈಕಾಲು, ಮೈಮೇಲೆ ಚುಚ್ಚಿಕೊಂಡ ಗುರುತು ಕಂಡರೆ ಪೊಲೀಸರು ಅಂಥವರನ್ನು ಬಂಧಿಸುತ್ತಿದ್ದರು. ಕೆಲವು ಬಂಡುಕೋರ ಗುಂಪುಗಳು ಪ್ರತಿ ಕುಟುಂಬಕ್ಕೂ ಒಂದೊಂದು ಬುಲೆಟ್ ಕೊಟ್ಟು ಮುಂದಿನ ಬಾರಿ ಬರುವಾಗ ಯಾರಾದರೂ ವ್ಯಸನಿ ಅವರ ಮನೆಯಲ್ಲಿದ್ದರೆ ಅದೇ ಬುಲೆಟ್‌ನಿಂದ ಕೊಲ್ಲುವುದಾಗಿ ಹೇಳಿಹೋಗುತ್ತಿದ್ದರು. ಮೆಡಿಕಲ್ ಶಾಪುಗಳು ಸಿರಿಂಜ್ ಮಾರುವುದನ್ನು ನಿಲ್ಲಿಸಿದವು.

ಆದರೆ ಇದ್ಯಾವುದೂ ವ್ಯಸನಿಗಳ ಸಂಖ್ಯೆಯನ್ನು ಕಡಿಮೆ ಮಾಡಲಿಲ್ಲ. ಅವರು ಭೂಗತರಾದರು. ಕೌನ್ಸೆಲಿಂಗ್, ಡಿ ಅಡಿಕ್ಷನ್ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡರು. ಸಿರಿಂಜ್ ಸಿಗದಿದ್ದರೇನು, ಪ್ಲಾಸ್ಟಿಕ್ ಕೊಳವೆಯ ತುದಿಗೆ ಸೂಜಿ ಚುಚ್ಚಿ ಹೆರಾಯಿನ್ ಅನ್ನು ದೇಹದೊಳಗೆ ಸೇರಿಸುತ್ತಿದ್ದರು. ಕೇವಲ ಆರು ತಿಂಗಳಲ್ಲಿ ಹೆರಾಯಿನ್ ಚುಚ್ಚಿಕೊಳ್ಳುವವರಲ್ಲಿ ೧-೨% ಎಚ್‌ಐವಿ ಬಾಧಿತರಿದ್ದದ್ದು ೫೦% ಗೇರಿತು. ೧೯೯೭ರ ಹೊತ್ತಿಗೆ ಈ ಸಂಖ್ಯೆ ೮೯% ಕ್ಕೇರಿತು. ಎಚ್‌ಐವಿ ಬಂದ ಕೇವಲ ಒಂದೆರೆಡು ಮೂರು ವರ್ಷಗಳಲ್ಲೇ, ಕೊನೆಯ ಹಂತ ಏಡ್ಸ್‌ಗೆ ತಲುಪುವ ಮೊದಲೇ ರೋಗಿಗಳು ಅಪೌಷ್ಟಿಕತೆ, ಓವರ್‌ಡೋಸ್, ಕಾಯಿಲೆಗಳಿಂದ ತೀರಿಕೊಳ್ಳತೊಡಗಿದರು. ಪೂರ್ತಿ ಮಾದಕ ವ್ಯಸನ ತ್ಯಜಿಸಬೇಕೆಂದು ಡಿ ಅಡಿಕ್ಷನ್ ಸೆಂಟರ್ ಹೇಳುತ್ತಿದ್ದವು. ಆದರೆ ಅಲ್ಲಿ ಬಂದು ಹೋದ ೮೦-೯೦% ಜನ ಮತ್ತೆ ಅವೇ ಗೆಳೆಯರ ಬಳಗ, ಅದೇ ವಾತಾವರಣ, ಬಡತನಗಳಿಂದ ಮರುವ್ಯಸನಿಗಳಾಗುತ್ತಿದ್ದರು. ಬಹಳಷ್ಟು ಎಚ್‌ಐವಿ ಬಾಧಿತರು ಹೇಳಿದಂತೆ ಅವರಿಗೆ ಎಚ್‌ಐವಿ ಪಾಸಿಟಿವ್ ಎಂದು ಗೊತ್ತಾದಾಗ ಖೇದವೇನೂ ಆಗಲಿಲ್ಲ. ತಾವು ತುಂಬ ರಿಸ್ಕ್ ತೆಗೆದುಕೊಂಡೇ ಏನೋ ಮಾಡುತ್ತಿದ್ದೇವೆ, ಮಾಡುವಾಗಲೂ ಎಲ್ಲ ಜೊತೆಗಿರುತ್ತೇವೆ, ಏನೋ ಒಂದು ಆಗಿ ಸಾಯುವಾಗಲೂ ಎಲ್ಲರೂ ಒಟ್ಟಿಗೇ ಸಾಯುತ್ತೇವೆ ಎಂದು ಭಾವಿಸಿದ್ದರು! 

ಪರಿಸ್ಥಿತಿ ಹೀಗಾಗಲು ಕೆಲ ಮಟ್ಟಿಗೆ ಬಂಡುಕೋರ ಗುಂಪುಗಳೂ ಕಾರಣವಾದವು. ಮಣಿಪುರದಲ್ಲಿ ಏಳು ಪ್ರಬಲ ಬಂಡುಕೋರ ಗುಂಪುಗಳಿದ್ದು ಅದರಲ್ಲಿ ಕನಿಷ್ಠ ಮೂರು ಸಮಾನಾಂತರ ಸರ್ಕಾರ ನಡೆಸುತ್ತ ತಮ್ಮ ‘ಜನ’ರ ಮೇಲೆ ತೆರಿಗೆ ವಿಧಿಸುತ್ತವೆ. ಆ ಗುಂಪುಗಳ ಒಳಜಗಳಗಳಿಂದ ಅಪಹರಣ, ಕೊಲೆ, ಲೂಟಿ ಸರ್ವೇ ಸಾಮಾನ್ಯ. ಕನಿಷ್ಠ ಮೂರು ಗುಂಪುಗಳಿಗಾದರೂ ಹಫ್ತಾ ಕೊಡದೇ ಯಾವ ಸಾರಿಗೆ ವ್ಯವಸ್ಥೆಯೂ, ವ್ಯಾಪಾರ-ವ್ಯವಹಾರವೂ ಅಲ್ಲಿ ನಡೆಯಲು ಸಾಧ್ಯವಿಲ್ಲ. ಮಾದಕ ವಸ್ತು ವ್ಯಾಪಾರ ಆ ಗುಂಪುಗಳ ಒಂದು ಪ್ರಮುಖ ಆರ್ಥಿಕ ಮೂಲ. ಅವು ಹರಡಿರುವ ಮಾದಕ ವಸ್ತು ಸಾಗಣಾ ಜಾಲ ಎಷ್ಟು ವಿಸ್ತೃತವೆಂದರೆ ಯಾವ ದಾರಿಯಲ್ಲಾದರೂ ಮಾದಕ ವಸ್ತು ಜನಸಾಮಾನ್ಯರ ಕೈಗೆ ಎಟುಕುವಂತಿದೆ. 

ಇಂಥ ಹೊತ್ತಿನಲ್ಲಿ ನಡುರಾತ್ರಿ ಮೆಯಿರಾ ಪೈಬಿಗಳು ಮನೆಮನೆಗಳಿಗೆ ತೆರಳಿ ವ್ಯಸನಿ ಮಗ/ಮಗಳಿಗೆ ರಕ್ತ ತಪಾಸಿಸಲು ಹೇಳುತ್ತಿದ್ದರು. ವ್ಯಸನ ಮುಕ್ತಗೊಳಿಸುವ ಕ್ಯಾಂಪುಗಳ ಬಗೆಗೆ ತಿಳಿಹೇಳಿದರು. ಅಷ್ಟೇ ಅಲ್ಲ, ಪ್ರತಿರಾತ್ರಿ ಹಳ್ಳಿಯ ಹೊರವಲಯದಲ್ಲೊಂದು ಚಾದರ ಹಾಸಿಕೊಂಡು ಗುಂಪುಗಳಲ್ಲಿ ಹಳ್ಳಿ ಕಾಯತೊಡಗಿದರು. ಅವಶ್ಯವಾದಾಗ ಕರೆಂಟು ಕಂಬಕ್ಕೆ ಕಲ್ಲು ಕುಟ್ಟಿ ಟಣ್‌ಟಣ್ ಸದ್ದಿನಿಂದ ಉಳಿದವರನ್ನು ಕರೆಯುತ್ತಿದ್ದರು. ಕುಡಿದು ಬಂದು ಹೆಂಡತಿಯನ್ನು ಹೊಡೆವ, ಮಾದಕ ವ್ಯಸನಿಗಳಾಗಿ ಬಿದ್ದುಕೊಳ್ಳುವ, ಹೆಂಗಸರನ್ನು ಹಿಂಸಿಸುವ ಗಂಡಸರನ್ನು ರಾತ್ರಿಪಾಳಿಯ ಪೈಬಿಗಳು ತಡೆಯುತ್ತಿದ್ದರು. ಹಿಂಸೆ ಅತಿಯಾದರೆ ಗಂಡಸನ್ನು ಹೊಡೆದು ಸಾರ್ವಜನಿಕವಾಗಿ ಅಪಮಾನಿಸುತ್ತಿದ್ದರು. ಸ್ಥಳೀಯವಾಗಿ ತಯಾರಾಗುತ್ತಿದ್ದ ಸಾರಾಯಿಯನ್ನು ವಶಪಡಿಸಿಕೊಂಡು ನಾಶಗೊಳಿಸತೊಡಗಿದರು. ಪ್ರದರ್ಶನ, ಪ್ರತಿಭಟನೆ, ರಸ್ತೆತಡೆ, ಸಾರ್ವಜನಿಕ ಸಮಾವೇಶ, ಮುಷ್ಕರಗಳಿಗೆ ಕರೆಕೊಟ್ಟರು. ಉಪವಾಸ ಸತ್ಯಾಗ್ರಹ, ರ‍್ಯಾಲಿಗಳು ನಡೆದವು. ಶಾಂತಿಯುತ ಸಮಾಜ ಕಟ್ಟುವ ಉದ್ದೇಶ ಹೊತ್ತು ಶುರುವಾದ ಈ ನಡೆ ಕ್ರಮೇಣ ಹಳ್ಳಿಹಳ್ಳಿಗೂ ತಂತಾನೇ ಹಬ್ಬಿತು.

ಈ ಮಹಿಳಾ ಗುಂಪಿನ ಪ್ರಯತ್ನ ಹಾಗೂ ಮೊರಾರ್ಜಿಯವರ ಬೆಂಬಲದಿಂದ ಮಣಿಪುರದಲ್ಲಿ ವ್ಯಸನಿಗಳ ಸಂಖ್ಯೆ ಇಳಿಮುಖವಾಗುತ್ತಿರುವಾಗಲೇ ೧೯೮೦ರಲ್ಲಿ ನಡೆದ ಚಕಮಕಿಯ ನಂತರ ಸೇನೆ ಇನ್ನಷ್ಟು ಕಠಿಣ ಕಾನೂನುಗಳೊಂದಿಗೆ ತಳವೂರಿತು. ಉಗ್ರ ಗುಂಪುಗಳನ್ನು ಸದೆಬಡಿಯಲು ವಿಸ್ತೃತ ಕಾರ್ಯಕ್ರಮಗಳನ್ನು ಹಾಕಿಕೊಂಡಿತು. ಆಗ ಸೇನಾ ದೌರ್ಜನ್ಯವೂ, ಭೂಗತ ಗುಂಪುಗಳ ಚಟುವಟಿಕೆಯೂ ಹೆಚ್ಚಾಯಿತು. ಮಾನವ ಹಕ್ಕು ಉಲ್ಲಂಘನೆ, ಹಲ್ಲೆ, ಕೊಲೆ, ಅತ್ಯಾಚಾರ, ಎನ್‌ಕೌಂಟರ್‌ಗಳು ಹೆಚ್ಚಾದವು. 

ಬುಡಕಟ್ಟು ನಾಯಕ ಇಬೋಂ ಶಾನನ್ನು ಉಗ್ರವಾದಿ ಎಂದು ಸೇನೆ ಬಂಧಿಸಿದಾಗ ಮಹಿಳೆಯರೇ ಅವನನ್ನು ಬಿಡುಗಡೆಗೊಳಿಸಿದರು. ಹೀಗೆ ಗುಂಪಾದ ಮಹಿಳೆಯರು ಇಮಾ ಚೋಬಿ ನೇತೃತ್ವದಲ್ಲಿ ‘ಅಖಿಲ ಮಣಿಪುರ ಮಹಿಳಾ ಅಭಿವೃದ್ಧಿ ಮತ್ತು ಸುಧಾರಣಾ ಸಮಾಜ’ ಸ್ಥಾಪಿಸಿದರು. ಇದರ ಜೊತೆಗೆ ಅಲ್ಲಲ್ಲಿ ಪ್ರತ್ಯೇಕವಾಗಿ ಹಲವು ಕಡೆ ಮಹಿಳೆಯರು ಸಂಘಟಿತರಾದರು. ಕಾಲು ಹಸಿರುಗಟ್ಟುವಂತೆ ಹೊಡೆದು, ಬಂಧಿಸಿ ಸೇನಾವಾಹನದಲ್ಲಿ ಕರೆದೊಯ್ಯುತ್ತಿದ್ದ ಎಳೆ ಹುಡುಗರನ್ನು ಬಿಡಿಸಿಕೊಂಡರು. ಇವೆಲ್ಲ ಸಂಘಟನೆಗಳೂ ಮುಂದೆ ‘ಮೆಯಿರಾ ಪೈಬಿ’ ಎಂದು ಗುರುತಿಸಿಕೊಂಡವು. 

ಅವು ಕಳ್ಳತನ, ಉಗ್ರಗಾಮಿಗಳಿಂದ ಹಣ ವಸೂಲಿ, ವಿವಾಹ ಬಾಹಿರ ಸಂಬಂಧ, ಮಾದಕ ವ್ಯಸನ, ಪ್ರೇಮಿಸಿ ಓಡಿಹೋಗುವುದು, ಹೆಂಡತಿ ಬಿಟ್ಟು ಹೋಗುವುದು, ಸೈನ್ಯ ಕಾರ್ಯಾಚರಣೆ ಇಂಥ ಎಲ್ಲದರಿಂದ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸತೊಡಗಿದವು. ಅದರಲ್ಲೂ ‘ಓಡಿಹೋದ’ ಜೋಡಿಗಳ ಸಮಸ್ಯೆಯನ್ನು ವಿಶೇಷವಾಗಿ ಕೈಗೆತ್ತಿಕೊಂಡವು. ಮದುವೆಯಾಗಲೊಪ್ಪದ ಗಂಡನ್ನು ಹಿಡಿದು ಒಂದೋ ಮದುವೆಯಾಗಬೇಕು, ಇಲ್ಲದಿದ್ದಲ್ಲಿ ಅವಳ ಜೀವನಕ್ಕೆ ಆಧಾರ ನೀಡಬೇಕು ಎಂದು ಪ್ರಕರಣಗಳನ್ನು ಇತ್ಯರ್ಥಗೊಳಿಸಿದವು.  

ಮೆಯಿರಾ ಪೈಬಿ ಎಲ್ಲಕ್ಕಿಂತ ಗಮನ ಸೆಳೆದಿದ್ದು ಯಾವ ಹೆಣ್ಣುದೇಹವನ್ನು ಸಮಾಜ, ಪ್ರಭುತ್ವ, ಸೇನೆ, ಸಶಸ್ತ್ರ ಗುಂಪುಗಳು ತಮ್ಮ ಹಸಿವಿಗಾಗಿ, ನಿಯಂತ್ರಣದ ಒಂದು ಭಾಗವಾಗಿ ಬಳಸಿಕೊಂಡವೋ ಅದೇ ದೇಹವನ್ನು ಪ್ರತಿಭಟನೆಯ ಅಸ್ತ್ರವಾಗಿಯೂ ಬಳಸಿಕೊಂಡಾಗ. ಒಂದು ಕಡೆ ಆಂತರಿಕ ಸ್ವಾಯತ್ತತೆಗೆ ಹೊಡೆದಾಡುವ ವಿವಿಧ ಸ್ವಾಯತ್ತ ಗುಂಪುಗಳು, ಇನ್ನೊಂದು ಕಡೆ ಆಧುನಿಕ-ಜಾಗತಿಕ-ಧಾರ್ಮಿಕ ಜಗತ್ತು ಒಡ್ಡುತ್ತಿರುವ ವಿಪ್ಲವಗಳು ಈ ಎಲ್ಲದರ ನಡುವೆ ಉಸಿರುಕಟ್ಟಿದಂತಹ ವಾತಾವರಣದಲ್ಲಿ ಬದುಕಬೇಕಾಗಿದ್ದರೂ; ಹಿಂಸೆಗೆ ಪ್ರತಿಹಿಂಸೆ ಉತ್ತರವಾಗದಂತೆ ತಡೆದು ನಿಲ್ಲಬಲ್ಲ ದೊಡ್ಡ ಪ್ರತಿರೋಧ ಶಕ್ತಿಯಾಗಿ, ಮಾದರಿಯಾಗಿ ಅವರು ನಮ್ಮ ಮುಂದಿದ್ದಾರೆ.

ಮೆಯಿರಾ ಪೈಬಿಯ ಪ್ರತೀಕಗಳೋ ಎಂಬಂತಿರುವ ನಾಲ್ವರ ಪರಿಚಯ ಇಲ್ಲಿದೆ:

೧. ಇಮಾ ಲೋರೆಂಬಮ್ ನಾನ್ಬಿದೇವಿ

ಜು. ೧೦, ೨೦೦೪. ಭಾರತೀಯ ಅರೆಸೇನಾಪಡೆ ಅಸ್ಸಾಂ ರೈಫಲ್ಸ್‌ನ ಯೋಧರು ತಂಗ್ಜಂ ಮನೋರಮಾ ಎಂಬ ೩೨ ವರ್ಷದ ಮಹಿಳೆಯನ್ನು ಬೆಳಕು ಹರಿಯುವ ಮೊದಲೇ ಬಂಧಿಸಿ ಕರೆದೊಯ್ದರು. ಅವಳು ಸಶಸ್ತ್ರ ಕ್ರಾಂತಿಕಾರಿ ಗುಂಪಿನವಳು ಎನ್ನುವುದು ಬಂಧನಕ್ಕೆ ಕಾರಣ. ಮರುಬೆಳಿಗ್ಗೆ ನಾಲ್ಕು ಕಿಲೋಮೀಟರ್ ದೂರದಲ್ಲಿ ಅರೆನಗ್ನಾವಸ್ಥೆಯ ಅವಳ ಶವ ಪತ್ತೆಯಾಯಿತು. ಗುದದ್ವಾರ, ಯೋನಿಗಳಲ್ಲಿ ಕಲ್ಲುಗಳಿದ್ದವು, ಗುಂಡುಗಳಿದ್ದವು. ದೇಹದ ಮೇಲೆ ಗುಂಡಿನ ಗಾಯಗಳಿದ್ದವು. ಅವಳು ಓಡಿಹೋಗಲು ಪ್ರಯತ್ನಿಸಿದ್ದರಿಂದ ಗುಂಡು ಹಾರಿಸಿದ್ದಾಗಿ ಸೇನಾ ವಕ್ತಾರರು ಹೇಳಿಕೆ ನೀಡಿದರು! ಶವ ಪರೀಕ್ಷೆಯಲ್ಲಿ ಆಕೆಯ ದೇಹದ ಮೇಲೆ ವೀರ್ಯ ಇದ್ದದ್ದು ಪತ್ತೆಯಾಯಿತು. ಕೇಸು ಗೌಹಾತಿ ಹೈಕೋರ್ಟಿಗೆ ಹೋಯಿತು. ಆದರೆ ರಾಜ್ಯದಲ್ಲಿ ಸಶಸ್ತ್ರ ಸೇನಾ ಪಡೆಗಳ ವಿಶೇಷಾಧಿಕಾರ ಕಾಯ್ದೆ ಇರುವುದರಿಂದ ಆ ಕೇಸು ತಾಂತ್ರಿಕವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ, ತಾನು ವಿಚಾರಣೆ ನಡೆಸಲಾಗುವುದಿಲ್ಲ ಎಂದು ಕೋರ್ಟು ಹೇಳಿತು.

ಈ ಘಟನೆಯ ನಂತರ ಮಣಿಪುರದ ಸಾಹಿತಿ ಎಂ. ಕೆ. ಬಿನೋದಿನಿ ದೇವಿ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಿದರು. ಐದು ದಿನಗಳ ನಂತರ ಸುಮಾರು ಮೂವತ್ತು ನಡುವಯಸ್ಕ ಮಹಿಳೆಯರು ನಗ್ನರಾಗಿ ಮಣಿಪುರದ ರಾಜಧಾನಿಯ ಬೀದಿಗಳಲ್ಲಿ ನಡೆದು ಹೋಗಿ ‘ಭಾರತೀಯ ಸೇನೆಯೇ, ನಮ್ಮ ಮೇಲೆ ಅತ್ಯಾಚಾರವೆಸಗಿ, ನಾವು ಮನೋರಮಾ ತಾಯಂದಿರು’ ಎಂದು ಘೋಷಣೆ ಹಾಕಿದರು. ಅವರ ಗುಂಪನ್ನು ಮುನ್ನಡೆಸಿದ್ದು ರಮಣಿ ನೇತೃತ್ವದ ಮೆಯಿರಾ ಪೈಬಿ. 

ಮಹಿಳೆಯರು ಬೆತ್ತಲಾಗಿ ನಡೆಸಿದ ಪ್ರತಿಭಟನೆ ಮಣಿಪುರವಷ್ಟೇ ಅಲ್ಲ, ಇಡೀ ವಿಶ್ವದ ಗಮನ ಸೆಳೆಯಿತು. ಅಹಿಂಸಾತ್ಮಕ ಪ್ರತಿಭಟನೆಯ ಆತ್ಯಂತಿಕ ರೂಪವಾಗಿ ನಡೆದ ಆ ಪ್ರದರ್ಶನ ಅವರ ಆಕ್ರೋಶ ಯಾವ ಮಟ್ಟದ್ದು ಎಂದು ತಿಳಿಸಿತು. 

ಅದರಲ್ಲಿ ಪಾಲ್ಗೊಂಡವರಲ್ಲಿ ಒಬ್ಬರಾದ, ವಿದ್ಯಾರ್ಥಿ ದಿನಗಳಿಂದಲೂ ಸಾರಾಯಿ ವಿರೋಧಿ ಆಂದೋಲನದ ಸಕ್ರಿಯ ಕಾರ್ಯಕರ್ತೆಯಾಗಿ ಹಲವು ಬಾರಿ ಜೈಲಿಗೆ ಹೋಗಿಬಂದ ಇಮಾ ಲೋರೆಂಬಮ್ ನಾನ್ಬಿದೇವಿ ಘಟನೆಯನ್ನು ವಿವರಿಸಹೊರಟರೆ ಉದ್ವೇಗಗೊಳ್ಳುತ್ತಾರೆ. ೬೦ ದಾಟಿರುವ ಆ ತಾಯಿ ತಾವೆಲ್ಲ ಆ ಕೊನೆಯ ಮೆಟ್ಟಿಲೇರಿ ಬೆತ್ತಲಾಗಿ ಪ್ರತಿಭಟನೆಗೆ ಮುಂದಾಗುವ ನಿರ್ಧಾರಕ್ಕೆ ಬಂದ ಘಳಿಗೆ ವಿವರಿಸುವಾಗ ಮಣಿಪುರದ ಮಹಿಳಾ ಹೋರಾಟದ ಇತಿಹಾಸವನ್ನೇ ಕಣ್ಮುಂದೆ ಬಿಚ್ಚಿಡುತ್ತಾರೆ. ಬದುಕುವ ಹಕ್ಕು ಹಾಗೂ ಘನತೆಯ ಬದುಕು ಎರಡನ್ನೂ ಪ್ರತಿಪಾದಿಸಿದ ಆ ಪ್ರತಿಭಟನೆ ಅತ್ಯಂತ ಸಾಂಪ್ರದಾಯಿಕ ಮಣಿಪುರಿ ಸಮಾಜದ ಮಹಿಳೆಯರ ಅಂತಸ್ಸಾಕ್ಷಿ ಬಡಿದೆಬ್ಬಿಸಿದ್ದಷ್ಟೇ ಅಲ್ಲ, ಮಹಿಳೆಯರ ತಾಯ್ತನ-ಜವಾಬ್ದಾರಿಗಳನ್ನೂ ನೆನಪು ಮಾಡಿಕೊಟ್ಟಿತು ಎನ್ನುತ್ತಾರೆ. 

ಅವರು ಹೇಳುತ್ತಾರೆ: ‘ಇವತ್ತು ಹಾಗೆ ಬಟ್ಟೆ ಬಿಚ್ಚಿ ನಿಲ್ಲು ಎಂದರೆ ನನ್ನ ಬಳಿ ನಿಲ್ಲಲು ಸಾಧ್ಯವಿದೆಯೋ ಇಲ್ಲವೋ?! ನಮಗೆ ಮನೋರಮಾ ಪರಿಚಿತಳಲ್ಲ. ಆಕೆ ಯಾರೆಂದೇ ನಮಗೆ ತಿಳಿದಿರಲಿಲ್ಲ. ಆದರೆ ಅವತ್ತು ಮನೋರಮಾ ದೇಹ ನೋಡಿದ ಮೇಲೆ ಹೊಟ್ಟೆಯಲ್ಲಿ ಎಂಥ ತಡೆಯಲಾರದ ಸಂಕಟ ಆಯಿತು ಎಂದರೆ ನಾವೆಲ್ಲ ಅಮ್ಮಂದಿರು ಏನು ಮಾಡಬಲ್ಲೆವು ಎಂದು ಉರಿಯತೊಡಗಿದೆವು. ಯಾರೇ ಆಗಲಿ, ಯಾತಕ್ಕೇ ಆಗಲಿ, ಹೆಣ್ಣೊಬ್ಬಳನ್ನು ಅಷ್ಟು ಕ್ರೂರವಾಗಿ ನಡೆಸಿಕೊಳ್ಳಬೇಕೆ? ತಪ್ಪಿದ್ದರೆ ವಿಚಾರಣೆ ನಡೆಸಿ ಜೈಲಿಗೆ ತಳ್ಳಿ, ಅತ್ಯಾಚಾರವೆಸಗಿ ಕೊಲ್ಲುವುದೇಕೆ? ಹೀಗೆಂದು ಎಷ್ಟು ಸಲ ಹೇಳುವುದು? ಹೇಗೆಹೇಗೆಲ್ಲ ಹೇಳುವುದು? ಇವಕ್ಕೆಲ್ಲ ಕೊನೆ ಎಂದು? ಅತ್ಯಾಚಾರ ಮಾಡಬೇಕಿದ್ದರೆ ಕದ್ದು ಮುಚ್ಚಿ ಮರೆಯಲ್ಲಿ ಏಕೆ ಮಾಡುತ್ತೀರಿ, ಬನ್ನಿ, ನಡುಬೀದಿಯಲ್ಲೇ ಮಾಡಿ ಎನ್ನುತ್ತ ಬೆತ್ತಲಾಗಿ ಘೋಷಣೆ ಕೂಗಿದೆವು.’

ಅವರ ಪ್ರತಿಭಟನೆಯ ವಿಧಾನ ಇಡೀ ಲೋಕದ ಗಮನ ಸೆಳೆಯಿತು, ಆದರೆ ಸೇನೆ ಮಾತ್ರ ವಿವಿಧ ಕಾರಣಗಳಿಗಾಗಿ ಇನ್ನೂ ಮಣಿಪುರದಲ್ಲೇ ಉಳಿದಿದೆ. ಈಗಲೂ ಮನೋರಮಾ ದೇಹ ಇಂಫಾಲದ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಸೂಕ್ತ ಶವಪರೀಕ್ಷೆ ಆಗಿಲ್ಲವೆಂದು ಹಾಗೇ ಇದೆ. ಮರು ಶವಪರೀಕ್ಷೆಗಳಲ್ಲಿ ಹೊಸಹೊಸ ವಿಚಾರಗಳು ಬೆಳಕಿಗೆ ಬರುತ್ತಲೇ ಇವೆ. 

ಮನೋರಮಾನಂತೆ ಎಷ್ಟು ಜನ ಅತ್ಯಾಚಾರಕ್ಕೊಳಗಾದರೋ, ಕೊಲೆಯಾದರೋ ಯಾರಿಗೂ ಗಮನವೇ ಇರಲಿಲ್ಲ. ಆ ಅತ್ಯಾಚಾರದ ನಂತರ ದೇಶಾದ್ಯಂತ ಸಾರ್ವಜನಿಕರ ಗಮನ ಕಾಯ್ದೆಯ ವಿರುದ್ಧವಾಗಿ, ವಿಶೇಷಾಧಿಕಾರ ದುರುಪಯೋಗಪಡಿಸಿಕೊಳ್ಳುವ ಸೈನ್ಯದ ಕುರಿತಾಗಿ ಹರಿಯಿತು. 
೨. ಇರೋಂ ಶರ್ಮಿಳಾ ಚಾನು

ನವೆಂಬರ್ ೨, ೨೦೦೦. ಮಣಿಪುರದ ಇಂಫಾಲ ಕಣಿವೆಯ ಒಂದು ಹಳ್ಳಿ ಮಾಲೋಮ್. ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ಹತ್ತು ಜನರನ್ನು ಅಸ್ಸಾಂ ರೈಫಲ್ಸ್ ಅರೆಸೇನಾ ಪಡೆಯ ಯೋಧರು ಗುಂಡು ಹಾರಿಸಿ ಕೊಂದರು. ಸತ್ತವರಲ್ಲಿ ೬೨ ವರ್ಷದ ಲಿಸಾಂಗ್ಬಮ್‌ನಿಂದ ಹಿಡಿದು ೧೯೮೮ರಲ್ಲಿ ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿ ಪಡೆದ ಸಿನಮ್ ಚಂದ್ರಮಣಿ ಕೂಡಾ ಸೇರಿದ್ದರು. 

೨೮ ವರ್ಷ ವಯಸ್ಸಿನ, ಪಶುವೈದ್ಯ ಇಲಾಖೆಯ ನೌಕರರ ಮಗಳಾದ ಇರೋಂ ಶರ್ಮಿಳಾ ಚಾನು ಪ್ರತಿ ಗುರುವಾರ ಉಪವಾಸ ಮಾಡುತ್ತಿದ್ದಾಕೆ. ಈ ಹತ್ಯಾಕಾಂಡ ನಡೆದ ಗುರುವಾರ ಉಪವಾಸವಿದ್ದಳು. ಸತ್ತವರ ಕುರಿತು, ಸೇನೆಯ ನಿಲ್ಲದ ಅಟಾಟೋಪಗಳ ಕುರಿತು ಕೇಳಿದ್ದಳು. ಮೆಯಿರಾ ಪೈಬಿಯ ಚಟುವಟಿಕೆಗಳನ್ನು ಗಮನಿಸಿದ್ದಳು. ಸತ್ತವರ ದೇಹಗಳನ್ನು ನೋಡಿ ಆಕೆ ಎಷ್ಟು ನೊಂದುಕೊಂಡಳೆಂದರೆ ಸೈನ್ಯ ಮತ್ತು ಅರೆಸೇನಾಪಡೆಗಳಿಗೆ ವಿಶೇಷಾಧಿಕಾರ ನೀಡಿ, ಮನಬಂದಂತೆ ಕೊಲ್ಲುವ ಅವಕಾಶ ಕೊಟ್ಟ ಕಾಯ್ದೆ ವಾಪಸು ತೆಗೆದುಕೊಳ್ಳುವವರೆಗೆ ಉಪವಾಸ ಮಾಡುವುದಾಗಿ ಘೋಷಿಸಿದಳು. ಉಪವಾಸ ಕುಳಿತ ಮೂರನೇ ದಿನಕ್ಕೆ ದೇಹಸ್ಥಿತಿ ಗಂಭೀರವಾಯಿತು. ಪೊಲೀಸರು ಆತ್ಮಹತ್ಯೆ ಪ್ರಯತ್ನವೆಂದು ಐಪಿಸಿ ಸೆ. ೩೦೯ರ ಅಡಿಯಲ್ಲಿ ಬಂಧಿಸಿದರು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬದುಕುಳಿಯಲೆಂದು ಆಕೆಯ ಮೂಗಿಗೆ ಒತ್ತಾಯವಾಗಿ ಆಹಾರ ನಳಿಕೆ (ರೈಲ್ಸ್ ಟ್ಯೂಬ್) ಏರಿಸಲಾಯಿತು. ಅಂದಿನಿಂದ ಆಹಾರ ಮತ್ತು ನೀರು ಎರಡೂ ನಳಿಕೆ ಮೂಲಕ ಆಕೆಯ ದೇಹ ಸೇರುತ್ತಿವೆ. 

ಆತ್ಮಹತ್ಯೆ ಪ್ರಯತ್ನಕ್ಕಾಗಿ ಗರಿಷ್ಠ ಒಂದು ವರ್ಷ ಕಾಲ ಮಾತ್ರ ಜೈಲು ಶಿಕ್ಷೆ ನೀಡಬಹುದು. ಆದ್ದರಿಂದ ಕಳೆದ ೧೪ ವರ್ಷಗಳಿಂದ ಪ್ರತಿ ವರ್ಷ ಶರ್ಮಿಳಾ ಬಿಡುಗಡೆಯಾಗುವುದು, ಆತ್ಮಹತ್ಯೆ ಪ್ರಯತ್ನವೆಂದು ಮತ್ತೆ ಮರುದಿನ ಬಂಧಿಸುವುದು, ಒಂದು ವರ್ಷದ ಬಳಿಕ ಮತ್ತೆ ಬಿಡುಗಡೆಯಾಗುವುದು ಪ್ರಹಸನದಂತೆ ನಡೆಯುತ್ತಲೇ ಇದೆ. 

ವಿಶ್ವದಲ್ಲೇ ಅತಿ ದೀರ್ಘಕಾಲ ಉಪವಾಸ ಸತ್ಯಾಗ್ರಹ ನಡೆಸಿದ ವ್ಯಕ್ತಿ ಇರೋಂ ಶರ್ಮಿಳಾ. ಆಕೆಯ ಧೈರ್ಯಕ್ಕೆ, ಬದುಕುಳಿವ ಛಲಕ್ಕೆ, ಹೋರಾಟದ ಗುಣಕ್ಕೆ ಹಲವು ಪ್ರಶಸ್ತಿಗಳು ಸಂದಿವೆ. ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೂ ಆಕೆ ಬೆಂಬಲ ಸೂಚಿಸಿದ್ದರು. ವಿಶ್ವಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯ ಕುರಿತು ಗಮನ ಸೆಳೆದಿದ್ದು, ಅದನ್ನು ವಾಪಸ್ ತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಅಂತರರಾಷ್ಟ್ರೀಯ ಒತ್ತಡ ತಂದಿದ್ದು ಇರೋಂ ಶರ್ಮಿಳಾ ಉಪವಾಸ. ತದನಂತರ ಸೇನೆಯನ್ನು ಮಾನವೀಯಗೊಳಿಸುವ ಪ್ರಯತ್ನ ಕಾಗದದ ಮೇಲಾದರೂ ನಡೆಯುತ್ತಿದೆ. ಸೇನಾ ದೌರ್ಜನ್ಯಗಳ ವಿರುದ್ಧ ದಾವೆಯನ್ನು ಸಿವಿಲ್ ಕೋರ್ಟುಗಳಲ್ಲೇ ಹೂಡಬಹುದೆಂದು ವರ್ಮಾ ಸಮಿತಿ ಸಲಹೆ ಮಾಡಿದೆ.

೩. ತಾಕೆಲ್ಲಂಬಂ ರೇಣು ಬಾಲಾ ದೇವಿ

ಪ್ರೀತಿಸಿ ಮದುವೆಯಾಗಿದ್ದ ತಾಕೆಮುಂಗ್ ಹ್ಯಾಂಗ್ಜೊ ಮತ್ತು ರೇಣುಬಾಲಾ ಇಬ್ಬರೂ ಸೇರಿ ಅಂಗಡಿ ನಡೆಸುತ್ತಿದ್ದರು. ಆ ಗುಡ್ ಫ್ರೈಡೆಯ ದಿನ ಅವರ ಮದುವೆಯ ಎರಡನೇ ವಾರ್ಷಿಕೋತ್ಸವ. ಅವರಿಗೆ ೧೧ ತಿಂಗಳ ಪುಟ್ಟ ಮಗನಿದ್ದ. ಗಂಡ ತನ್ನಿಬ್ಬರು ದೋಸ್ತರೊಡನೆ ಮನೆಯಿಂದ ಫಿಲ್ಮ್ ರೋಲ್ ತರಲು ಸ್ಕೂಟರಿನಲ್ಲಿ ಹೊರಬಿದ್ದ. ಕೂಡಲೇ ಅರೆಸೇನಾಪಡೆಯ ಕಮ್ಯಾಂಡೋಗಳು ಅವನ ಹಿಂದೆ ಕುಳಿತವನನ್ನು ಗುಂಡು ಹಾಕಿ ಕೊಂದರು. ರೇಣು ಗಂಡ ಹಾಗೂ ಮತ್ತೊಂದು ಸ್ಕೂಟರಿನಲ್ಲಿದ್ದ ಗೆಳೆಯರು ಕೈಯೆತ್ತಿ ಶರಣಾದಾಗಲೂ ೨೦ ನಿಮಿಷ ಅವರನ್ನು ಹಿಂಸಿಸಿ, ವಿಚಾರಣೆ ನಡೆಸಿ ರಸ್ತೆ ಮೇಲೇ ಪ್ರತ್ಯಕ್ಷ ಸಾಕ್ಷಿಗಳೆದುರು ಕೊಲ್ಲಲಾಯಿತು. ಗುಂಡಿನ ಸದ್ದು ಮನೆಯಲ್ಲಿದ್ದ ರೇಣುವಿಗೂ ಕೇಳಿತ್ತು. ಆದರೆ ಅದು ತನ್ನ ಗಂಡನ ಜೀವ ತೆಗೆದೀತೆಂಬ ಕಲ್ಪನೆ ಆಕೆಗಿರಲಿಲ್ಲ.

ಮನೆಯಿಂದ ಸಂಭ್ರಮದಿಂದ ಹೊರಬಿದ್ದ ಒಲಿದ ಜೀವ ಕೆಲವೇ ನಿಮಿಷಗಳಲ್ಲಿ ತಣ್ಣಗಾಯಿತು. ಆತ ತೀರಿಕೊಂಡ ಮೇಲೆ ರೇಣುವಿಗೆ ಇಡಿಯ ಜಗತ್ತೇ ತಲೆಕೆಳಗಾದಂತೆ ಅನಿಸಿತು. 

ಸಹಜವೇ. ಒಂದು ಕಡೆ ಆಪ್ತಜೀವವನ್ನು ಕಳೆದುಕೊಂಡ ದುಃಖ, ಮತ್ತೊಂದು ಕಡೆ ಕೆಕ್ಕರಿಸಿ ನೋಡುವ ಸಮಾಜ. ಮಣಿಪುರದ ಸಮಾಜ ತುಂಬ ಸಾಂಪ್ರದಾಯಿಕ ಹಾಗೂ ಪುರುಷ ಪ್ರಧಾನ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಏನೇ ಇರಲಿ, ಅವಳಿಗೆ ಮುಕ್ತ ಚಲನೆಯಾಗಲೀ, ಹಕ್ಕು-ಅಧಿಕಾರಗಳಾಗಲೀ ಇಲ್ಲ. ಮರುಮದುವೆ, ವಿಧವಾ ವಿವಾಹ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಮಣಿಪುರದಲ್ಲಿ ಅತ್ಯಾಚಾರಕ್ಕೊಳಗಾದವರು ಹಾಗೂ ಗಂಡಸಿನಿಂದ ತ್ಯಜಿಸಲ್ಪಟ್ಟವರು ತಾಯಿ ಮನೆಯವರಿಗೆ ಒಂದು ಹೊರೆಯೆಂದು ಪರಿಗಣಿಸಲ್ಪಡುತ್ತಾರೆ. ವಿಧವೆಯರ ಮೇಲೆ ಗಂಡನ ಮನೆಯವರೇ ದೌರ್ಜನ್ಯ ಎಸಗಿದ ಅನೇಕ ಉದಾಹರಣೆಗಳಿವೆ. ಅಸಹಾಯಕ ವಿಧವೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಅದನ್ನು ಒಳಗೇ ಮುಚ್ಚಿಟ್ಟುಕೊಳ್ಳುತ್ತಾರೆ. ವಿಧವೆಯಾಗುವುದು ಎಂದರೆ ಸಾಮಾಜಿಕವಾಗಿ ಸತ್ತಂತೆ. ಇದ್ದರೂ ಇಲ್ಲದಂತೆ. ಅವಳಿಗೆ ಹಾಗೂ ಮಕ್ಕಳಿಗೆ ಕೊಡಬೇಕಾದ ಪಾಲಿಗಾಗಿ ದೊಡ್ಡ ಯುದ್ಧವೇ ನಡೆಯುತ್ತದೆ. 

ಸಾಮಾಜಿಕ ವ್ಯವಸ್ಥೆ ವಿಧವೆಯನ್ನು ಹೀಗೆ ನಡೆಸಿಕೊಂಡರೆ ಸರ್ಕಾರ ಇದಕ್ಕಿಂತ ಭಿನ್ನವಾಗೇನೂ ಇಲ್ಲ ಎಂದು ರೇಣುವಿಗೆ ಬೇಗನೇ ತಿಳಿಯಿತು. ಏಕೆಂದರೆ ಸೈನ್ಯದಿಂದ ಬಂಡುಕೋರನೆಂಬ ಅನುಮಾನದಲ್ಲಿ ಬಂಧಿಸಲ್ಪಟ್ಟು ಎನ್‌ಕೌಂಟರಿನಲ್ಲಿ ಸತ್ತವರ ವಿಧವೆಗೆ ಸರ್ಕಾರ ಯಾವ ಪರಿಹಾರವನ್ನೂ ಕೊಡುವುದಿಲ್ಲ. ದುಡಿಯುವ ಗಂಡನಿಲ್ಲದ ಅಸಹಾಯಕ ಮಹಿಳೆ ಆಫೀಸಿನಿಂದ ಆಫೀಸಿಗೆ ಸಹಾಯಧನಕ್ಕಾಗಿ ಅಲೆಯುವಾಗ ಅನುಮಾನದಿಂದ ಅವಳನ್ನು ನೋಡಲಾಗುತ್ತದೆ. 

ಒಬ್ಬ ವಿಧವೆ ಹೇಳಿಕೊಂಡಂತೆ ಗಂಡ ಮಾಡಿದ್ದ ೫೦ ಸಾವಿರ ಸಾಲ, ಇಬ್ಬರು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಅವಳು ಸೋಪ್ ತಯಾರಿಸಿ ಮಾರುವುದು, ಬಟ್ಟೆ ಹೊಲಿಯುವುದನ್ನು ಕೈಗೊಂಡಳು. ಆದರೆ ಹೊರಗೆ ಓಡಾಡಿ ವ್ಯಾಪಾರ ಮಾಡಿ ಬಂದರೆ ನೆರೆಹೊರೆಯವರಿಂದ ಸಡಿಲ ನಡತೆಯವಳೆಂಬ ಮಾತು ಕೇಳಬೇಕಾಯಿತು ಎಂದು ಆಕೆ ನೊಂದುಕೊಳ್ಳುತ್ತಾಳೆ. ತನ್ನದು ಅಳಲೂ ಸಾಧ್ಯವಿಲ್ಲದಂತಹ ಸ್ಥಿತಿ ಎನ್ನುತ್ತಾಳೆ. ತಾಯಿ ಅತ್ತರೆ ಮಕ್ಕಳು ತಮ್ಮ ಅಸಹಾಯಕ ಸ್ಥಿತಿಗೆ ಕಂಗಾಲಾದಾರು ಎಂದು ಕಣ್ಣೀರು ನುಂಗಿಕೊಳ್ಳುವ; ಆಸ್ತಿ, ಶಿಕ್ಷಣ, ಉದ್ಯೋಗವಿಲ್ಲದ ಅವಳಂಥ ಎಷ್ಟೋ ವಿಧವೆಯರು ಸಂಕಷ್ಟದಲ್ಲಿದ್ದಾರೆ. ಕುಟುಂಬ ಸಾಕಬೇಕಾದ ಅನಿವಾರ್ಯತೆಗೆ ಕೆಲವರು ಮಾದಕ ವಸ್ತು/ಶಸ್ತ್ರಾಸ್ತ್ರ ಸಾಗಣೆದಾರರಾಗಿ; ಲೈಂಗಿಕ ಕಾರ್ಯಕರ್ತರಾಗಿ ತಮಗಿಷ್ಟವಿಲ್ಲದ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ.  

ಇಂಥವರನ್ನೆಲ್ಲ ಸೇರಿಸಿ ‘ಎಕ್ಸ್ಟ್ರಾಜುಡಿಷಿಯಲ್ ಎಕ್ಸಿಕ್ಯೂಷನ್ ವಿಕ್ಟಿಮ್ಸ್ ಫ್ಯಾಮಿಲೀಸ್ ಅಸೋಸಿಯೇಷನ್ ಆಫ್ ಮಣಿಪುರ್’ ರೂಪುಗೊಂಡಿತು. ಅದು ವಿಧವೆಯರು ಮತ್ತವರ ತಾಯಂದಿರು ಸೇರಿ ೨೦೦೯ರಲ್ಲಿ ರಚಿಸಿಕೊಂಡಿರುವ ಸಂಘ. ಎಷ್ಟೋ ವಿಧವೆಯರು ತಮ್ಮ ಗಂಡನನ್ನು ಕೊಲ್ಲಲಾಯಿತು ಎಂದು ಕನಿಷ್ಠ ದೂರನ್ನೂ ದಾಖಲಿಸಿಲ್ಲ. ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಎಂಬ ಭಾವನೆ ಅಷ್ಟು ಗಾಢವಾಗಿದೆ. ಅದರ ನಡುವೆಯೇ ಸೋದರಿತ್ವದಲ್ಲಿ ನಂಬಿಕೆಯಿಟ್ಟು ಸೇನಾ ಕಾರ್ಯಾಚರಣೆ-ದೌರ್ಜನ್ಯದಿಂದ ಸಂತ್ರಸ್ತರಾದವರ ಕುಟುಂಬಗಳೆಲ್ಲ ಒಂದಾಗಿ ನ್ಯಾಯಕ್ಕಾಗಿ ಹೋರಾಡುವಂತೆ ಈ ಸಂಘಟನೆ ಪ್ರೇರೇಪಿಸುತ್ತಿದೆ. 

ಅದರ ಅಧ್ಯಕ್ಷೆ ರೇಣುಬಾಲಾ. ಮಣಿಪುರದ ಈ ಸಂಘವು ವಿಧವೆಯರಲ್ಲಿ ಅವರ ಹಕ್ಕು ಕುರಿತು ಜಾಗೃತಿ ತುಂಬುತ್ತ, ಎಲ್ಲರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತ, ೧೫೨೮ ನಕಲಿ ಎನ್‌ಕೌಂಟರ್‌ಗಳಲ್ಲಿ ಸತ್ತವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಕೇಸು ನಡೆಸುತ್ತಿದೆ.

೪. ಚಿತ್ರಾ ಅಹಾಂತೆಮ್

ನೇರ, ನಿರ್ಭಿಢೆಯ ದಿಟ್ಟ ಮಹಿಳೆ ಚಿತ್ರಾ ಮಣಿಪುರದ ‘ಇಂಫಾಲ್ ಫ್ರೀ ಪ್ರೆಸ್’ ಇಂಗ್ಲಿಷ್ ದೈನಿಕದ ಸಹ ಸಂಪಾದಕಿ. ಸೈನ್ಯವಿರಲಿ, ಆಂತರಿಕ ಸ್ವಾಯತ್ತತೆಗಾಗಿ ಹೊಡೆದಾಡುವ ಮಣಿಪುರದ ಗುಂಪುಗಳಿರಲಿ, ಪಿತೃಪ್ರಧಾನ ಸಮಾಜದ ಬಿಗಿ ಹಿಡಿತದ ಬಗೆಗಿರಲಿ, ಬಹುಸಂಖ್ಯಾತ ಮೆಯಿತೆಯ್ ಕುಲದ ಯಾಜಮಾನ್ಯವಿರಲಿ - ಎಲ್ಲಿ ದೌರ್ಜನ್ಯವಿದೆಯೋ, ಅನ್ಯಾಯವಿದೆಯೋ ಅದನ್ನೆಲ್ಲ ಖಂಡಿಸುವ ದಿಟ್ಟೆ ಚಿತ್ರಾ. ಚಿತ್ರಾ ಮಾತನಾಡಿದರೆ ಮಹಿಳಾ ಪ್ರಜ್ಞೆಯ ಆತ್ಮಸಾಕ್ಷಿ ಮಾತನಾಡುತ್ತಿರುವಂತೆ ಭಾಸವಾಗುತ್ತದೆ. 

ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿಯ ಮಗಳಾದ ಚಿತ್ರಾಗೆ ಮಣಿಪುರದಲ್ಲಿ ನೆಲೆಯಾಗುವ ಗುರಿಯೇ ಇರಲಿಲ್ಲ. ಅಲ್ಲಿನ ನಿರಂತರ ಆಂತರಿಕ ಸಂಘರ್ಷ, ಸಾಂಪ್ರದಾಯಿಕ ಸಮಾಜ ಮಹಿಳೆಗೆ ಹೇರುವ ನಿರ್ಬಂಧ ಈ ಎರಡನ್ನೂ ಸೂಕ್ಷ್ಮವಾಗಿ ಗ್ರಹಿಸಿದ್ದ ಚಿತ್ರಾ ಮಣಿಪುರದ ಹೊರಗೆ ಎಲ್ಲಾದರೂ ನೆಲೆಯಾಗಬಯಸಿದ್ದರು. ಎಂದೇ ಚಂದೀಘರ್‌ನಲ್ಲಿ ಜರ್ನಲಿಸಂನ ಮೂರು ವರ್ಷದ ಓದು ಮುಗಿದಾದ ಮೇಲೆ ಹೊರಗೆಲ್ಲಾದರೂ ನೆಲೆಯಾಗಲು ಅವಕಾಶ ಹುಡುಕುತ್ತಿದ್ದರು. 

ಆದರೆ ಅದೇ ವೇಳೆಗೆ ಅವರ ತಂದೆ ಕಿಡ್ನಿ ವೈಫಲ್ಯದಿಂದ ತೀವ್ರ ಅನಾರೋಗ್ಯಕ್ಕೊಳಗಾದರು. ತಂದೆಯ ಕೊನೆಯ ದಿನಗಳಲ್ಲಿ ಜೊತೆಯಿರಲು ಇಂಫಾಲಕ್ಕೆ ಬಂದ ಚಿತ್ರಾಗೆ ಬಿಟ್ಟು ಬರುವಾಗ ದೃಢನಿರ್ಧಾರವಿದ್ದರೂ ನಂತರ ಅದನ್ನು ಅರಗಿಸಿಕೊಂಡು ಬದುಕಲು ಸ್ವಲ್ಪ ಸಮಯ ಹಿಡಿಯಿತು. ಆದರೆ ಕೊನೆಗೆ ಹುಟ್ಟಿದೂರಿನಲ್ಲಿಯೇ ಸಕ್ರಿಯವಾಗಿ ಕರ್ಮಭೂಮಿಯನ್ನು ಕಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಯಿತು.

ಕಾಲೇಜು ದಿನಗಳಲ್ಲಿ ಎಚ್‌ಐವಿ ಕುರಿತು ಒಂದು ಸ್ಕಿಟ್‌ಗೆ ಕಥೆ ಬರೆದಿದ್ದರು. ಅದನ್ನಿಟ್ಟುಕೊಂಡು ೧೯೯೯ರಲ್ಲಿ ಅವರ ಗೆಳೆಯರು ಒಂದು ಸಾಕ್ಷ್ಯಚಿತ್ರ ಮಾಡಹೊರಟರು. ಕಡಿಮೆ ಬಜೆಟಿನಲ್ಲಿ, ಕಡಿಮೆ ದುಡ್ಡಿನಲ್ಲಿ ಆ ಡಾಕ್ಯುಮೆಂಟರಿ ತಯಾರಾಯಿತು. ಅದರ ತಯಾರಿಕೆಯ ವೇಳೆ ಚಿತ್ರಾ ಕೆಲವರ ಮುಂದೆ ಮೈಕ್ ಹಿಡಿದು ‘ಎಚ್‌ಐವಿ ಬಗ್ಗೆ ಹೇಳಿ’ ಅಂದರೆ ಓಡಿ ಹೋಗುತ್ತಿದ್ದರು. ಮತ್ತೆ ಕೆಲವರು ಅದು ತಮಗೆ ಸಂಬಂಧವೇ ಇರದ ಕೊಳಕರ, ಕಾಮುಕರ, ಮಾದಕ ವ್ಯಸನಿಗಳ ಕಾಯಿಲೆ ಎಂದು ಭಾವಿಸಿದರು. 

ಆದರೆ ಚಿತ್ರಾ ಡಾಕ್ಯುಮೆಂಟರಿ ಕಾಯಿಲೆ, ಮಾದಕ ವ್ಯಸನವನ್ನು ಬೇರೆ ರೀತಿ ಗ್ರಹಿಸಿತು. ಜೊತೆಗೆ ಅದು ‘ಡ್ರಗ್ ಅಡಿಕ್ಟ್’ ಎಂಬ ಪದಬಳಕೆ ನಿಷೇಧಿಸಿಕೊಂಡಿತು. ಆ ಪದವೇ ವ್ಯಕ್ತಿತ್ವವನ್ನು ನೇತ್ಯಾತ್ಮಕವಾಗಿ ಅಳೆದು ವ್ಯಕ್ತಿಯನ್ನು ಮೂಲೆಗುಂಪು ಮಾಡುವ ಸನ್ನೆಗಳನ್ನು ಹೊಂದಿದೆ. ಯಾರು ನಿರ್ಲಕ್ಷ್ಯಕ್ಕೆ ಒಳಗಾಗಿರುವವರೋ, ಅಸಹಾಯಕರೋ, ಅಂಚಿನಲ್ಲಿರುವವರೋ, ಆಕ್ರೋಶ ಹೊಂದಿರುವವರೋ ಅಂಥವರೇ ಮಾದಕ ವ್ಯಸನಿಗಳಾಗಿರುತ್ತಾರೆ. ಅವರಿಗೆ ‘ಅಡಿಕ್ಟ್’ ಎಂಬ ಬಿರುದು ನೀಡಿದರೆ ಮತ್ತೆ ಮೂಲೆಗುಂಪಾಗಿ ಹೊರಗೇ ಉಳಿಯುತ್ತಾರೆ ಎನ್ನುವುದು ಚಿತ್ರಾ ವಾದ. ಡ್ರಗ್ ಬಳಸುವವರಿಗೆ ಹೊಸ ಸಿರಿಂಜುಗಳನ್ನು ಪೂರೈಸಿ ಆ ಮೂಲಕ ಅವರ ವಿಶ್ವಾಸ ಸಂಪಾದಿಸಿ ಅವರನ್ನು ಆ ವಿಷವರ್ತುಲದಿಂದ ಹೊರತರಬೇಕೆಂದು ಅವರ ತಂಡ ಪ್ರತಿಪಾದಿಸಿತು. 

ಈ ಸಾಕ್ಷ್ಯಚಿತ್ರ ಹಲವರನ್ನು ಸೆಳೆಯಿತು. ಸೋಷಿಯಲ್ ಅವೇರ್‌ನೆಸ್ ಸರ್ವೀಸ್ ಆರ್ಗನೈಸೇಷನ್ (ಸಾಸೊ) ಸಂಘಟನೆ ಎಚ್‌ಐವಿ ಬಾಧಿತರ ಹಾಗೂ ಮಾದಕ ವ್ಯಸನಿಗಳ ಕುರಿತೇ ಕೆಲಸ ಮಾಡುತ್ತಿತ್ತು. ಅದು ಚಿತ್ರಾರನ್ನು ತಮಗಾಗಿ ಕೆಲಸ ಮಾಡುವಂತೆ ಕೇಳಿಕೊಂಡಿತು.

ಆ ವೇಳೆಗೆ ಪೀಪಲ್ಸ್ ಲಿಬರೇಷನ್ ಆರ್ಮಿ ಎಂಬ ಸಶಸ್ತ್ರ ಗುಂಪು ಹಿಂದಿ ಸಿನಿಮಾಗಳು ಭಾರತ ರಾಷ್ಟ್ರೀಯತೆ ಹಾಗೂ ಮುಖ್ಯವಾಹಿನಿಯ ಸಂಸ್ಕೃತಿಯನ್ನಷ್ಟೇ ಬಿಂಬಿಸುವುದರಿಂದ ಅವನ್ನು ನೋಡಬಾರದು ಎಂಬ ನಿಷೇಧದ ಕರೆಕೊಟ್ಟಿತು. ಮಣಿಪುರಿಗಳು ಬಾಲಿವುಡ್ ಅಭಿಮಾನಿಗಳು. ಆದರೆ ಸಶಸ್ತ್ರ ಗುಂಪಿನ ಹೇಳಿಕೆಗೆ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಧೈರ್ಯ ಯಾರಿಗೂ ಇರಲಿಲ್ಲ. ಆಗ ಚಿತ್ರಾ ‘ನಾವು ಏನು ನೋಡಬೇಕು? ಏನು ನೋಡಬಾರದು ಎಂದು ನಿರ್ಧರಿಸಲು ಪಿಎಲ್‌ಎಗೆ ಅಧಿಕಾರ ಕೊಟ್ಟವರು ಯಾರು? ಅದೂ ಸ್ವಾಯತ್ತತೆ ಬಯಸುವ ಗುಂಪಿನಿಂದ ಇಂತಹ ನಿರ್ದೇಶನವೇ?’ ಎಂದು ಪ್ರಶ್ನಿಸಿ ಮಣಿಪುರದ ಪ್ರಮುಖ ಪ್ರಗತಿಪರ ಇಂಗ್ಲಿಷ್ ದೈನಿಕ ‘ಇಂಫಾಲ ಫ್ರೀ ಪ್ರೆಸ್’ನ ಸಂಪಾದಕರಿಗೆ ಪತ್ರ ಬರೆದರು. ಆಗ ಆ ಸಶಸ್ತ್ರ ಗುಂಪು ಚಿತ್ರಾ ಮೇಲೆ ತಿರುಗಿ ಬಿತ್ತು. ನಿರಂತರ ಬೆದರಿಕೆ ಕರೆಗಳು ಬಂದವು.

ಆ ಪತ್ರಿಕೆ ಚಿತ್ರಾರನ್ನು ಕಾಲಂ ಬರೆಯಲು ಕೇಳಿತು. ಚಿತ್ರಾ ‘ಫುಟ್‌ನೋಟ್ಸ್ ಫ್ರಂ ಮೈ ಡೈರಿ’ ಬರೆಯತೊಡಗಿದರು. ಒಂದು ಹಂತದಲ್ಲಿ ಪತ್ರಿಕೆಯ ಸಂಪಾದಕಿಯೂ ಆದರು. ಮಣಿಪುರದ ಸಾಂಪ್ರದಾಯಿಕ ಸಮಾಜ ಒಂದು ಹೆಣ್ಣನ್ನು, ಅದರಲ್ಲೂ ಜೀನ್ಸ್-ಕುರ್ತಿ ತೊಟ್ಟ ತರುಣಿಯನ್ನು ಇಂಗ್ಲಿಷ್ ದೈನಿಕವೊಂದರ ಸಂಪಾದಕಿಯಾಗಿ ನೋಡಲು ಏನೇನು ಪೂರ್ವಗ್ರಹಗಳನ್ನಿಟ್ಟುಕೊಂಡಿದೆ ಎಂದು ವೃತ್ತಪತ್ರಿಕೆ ಆಫೀಸಿಗೆ ಸಂಪಾದಕರನ್ನು ಭೇಟಿಯಾಗಲು ಬಂದವರು ತೋರಿಸುವ ಪ್ರತಿಕ್ರಿಯೆಗಳಿಂದಲೇ ಅರ್ಥ ಮಾಡಿಕೊಂಡರು. ಅವರ ಆಶ್ಚರ್ಯ, ಅಪನಂಬಿಕೆ, ತಿರಸ್ಕಾರಗಳನ್ನೆ ತಮ್ಮ ಮೆಟ್ಟಿಲಾಗಿ ಮಾಡಿಕೊಂಡರು. 

ಕೆವೈಕೆಎಲ್ ಎಂಬ ಸಶಸ್ತ್ರ ಗುಂಪು ೧೧ನೇ ತರಗತಿಯ ನಂತರ ಹುಡುಗಿಯರು ಮಣಿಪುರದ ಸಾಂಪ್ರದಾಯಿಕ ಉಡುಗೆಯಾದ ಫನೇಕ್ ಅನ್ನೇ ಧರಿಸಬೇಕೆಂದು ಕಡ್ಡಾಯ ಹೇರಿತು. ಮೊದಲ ಪಿಯುಸಿ ಹುಡುಗಿಯರು ತಮ್ಮ ಯೂನಿಫಾರಂ ತೊಟ್ಟು, ಫನೇಕ್ ಧರಿಸಿ, ಭಾರದ ಬ್ಯಾಗ್ ಹೆಗಲಿಗೇರಿಸಿ, ನೀರಿನ ಬಾಟಲ್ ಹಿಡಿದು, ಎರಡು ಜಡೆ ಮೇಲೆತ್ತಿ ಕಟ್ಟಿದರೆ ಹೇಗೆ ಕಾಣುವುದೆಂದು ವ್ಯಂಗ್ಯವಾದೊಂದು ಚಿತ್ರ ಕಲ್ಪಿಸಿಕೊಂಡು ಚಿತ್ರಾ ಬರೆದರು. ಅವರ ವಿನೂತನ ಶೈಲಿಯ ಬರವಣಿಗೆ ಹುಡುಗಹುಡುಗಿಯರಿಗೆ ಅಪರಿಮಿತ ಖುಷಿ ತಂದರೆ ಸಶಸ್ತ್ರ ಗುಂಪನ್ನು ಕೆರಳಿಸಿತು. ಅವರ ಆಫೀಸಿಗೆ ಶಸ್ತ್ರಧಾರಿಗಳು ಬಂದು ಧಮಕಿ ಹಾಕಿ ಹೋದರು. ಆಗವರು ರಿಪೋರ್ಟಿಂಗ್ ನಿಮಿತ್ತ ಶಿಲ್ಲಾಂಗ್‌ಗೆ ಹೋಗಿದ್ದರು. ಮರುದಿನ ಪತ್ರಿಕೆಯಲ್ಲಿ ‘ನಾನು ಇಷ್ಟು ಸಣ್ಣ ಊರಿನ ಆಫೀಸಿನಲ್ಲಿದ್ದೇನೋ ಇಲ್ಲವೋ ನಿಮಗೆ ತಿಳಿಯದೇ ಬಂದಿರಿ ಎಂದರೆ ನಿಮ್ಮ ಇಂಟೆಲಿಜೆನ್ಸ್ ತುಂಬ ಕಳಪೆಯಾಗಿದೆ. ಅದನ್ನು ಸುಧಾರಿಸಿಕೊಳ್ಳಿ, ನಿಮ್ಮೊಡನೆ ಮಾತನಾಡಬೇಕು, ನನ್ನ ಆಫೀಸ್ ವೇಳೆ ಇದು, ಬನ್ನಿ’ ಎಂದು ಆಹ್ವಾನಿಸಿದರು. ಹಲವು ಕಾಲ ಆ ಗುಂಪಿನೊಡನೆ ವಾಗ್ವಾದ, ಚಕಮಕಿ ಮುಂದುವರೆಯಿತು. ಇಂಫಾಲದ ಎಲ್ಲ ವಾಹನ ನಿಲುಗಡೆಯ ಸ್ಥಳಗಳನ್ನೂ ಒಂದೊಂದು ಭೂಗತ ಗುಂಪು ನಿಯಂತ್ರಿಸುತ್ತದೆ. ಚಿತ್ರಾ ಒಮ್ಮೆ ಅದನ್ನು ಸವಿವರವಾಗಿ ವರದಿ ಮಾಡಿ ಆ ಗುಂಪುಗಳ ಕೆಂಗಣ್ಣಿಗೂ ಗುರಿಯಾದರು. ಇಂಥ ವಿವಾದಾತ್ಮಕ ವಿಷಯಗಳ ಜೊತೆಗೇ ಸೆಕ್ಸ್, ಲೈಂಗಿಕ ಅಲ್ಪಸಂಖ್ಯಾತರು, ಮದುವೆ, ವಿಚ್ಛೇದನ, ಮಹಿಳಾ ಸಮಸ್ಯೆಗಳು ಹೀಗೆ ಸಾಧಾರಣವಾಗಿ ಯಾರೂ ಬರೆಯದ ಸೂಕ್ಷ್ಮ ವಿಷಯಗಳನ್ನೆತ್ತಿಕೊಂಡು ಚಿತ್ರಾ ಚರ್ಚಿಸಿದರು. ಈಗಲೂ ಬರೆಯುತ್ತಿದ್ದಾರೆ.

ಅವರ ತಂದೆ ೨೦೦೦ನೇ ಇಸವಿಯಲ್ಲಿ ತೀರಿಕೊಂಡರು. ಸಹಕಲಾವಿದನೊಬ್ಬನನ್ನು ಮೆಚ್ಚಿ ಮದುವೆಯಾದರು. ಮದುವೆ ಗೆಳೆಯನನ್ನು ನೀಡಲು ವಿಫಲವಾಗಿ ವಿಚ್ಛೇದನದಲ್ಲಿ ಕೊನೆಗೊಂಡಿತು. ಒಬ್ಬ ಮಗನ ಜೊತೆ ಒಂಟಿಯಾಗಿರುವ ಚಿತ್ರಾ ರಕ್ತ ಹರಿಸಿ ಹಿಂಸಿಸುವ ಹಾಗೂ ರಕ್ತ ಹರಿಸದೇ ಹಿಂಸೆ ನೀಡುವ ವ್ಯಕ್ತಿ-ವಸ್ತು-ವ್ಯವಸ್ಥೆಗಳ ಬಗೆಗೆ ಸೂಕ್ಷ್ಮವಾಗಿ ಯೋಚಿಸಬಲ್ಲ ಮಹಿಳೆ. ಮಿಲಿಟರಿ ವಿರೋಧಿಸಿ ಸ್ವಾಯತ್ತ ಗುಂಪುಗಳನ್ನು ಒಳಗೊಳಗೇ ಬೆಂಬಲಿಸುವ ಸಂಘಟನೆಗಳನ್ನು ಕಟುವಾಗಿ ಟೀಕಿಸುತ್ತಾರೆ. ಸೇನೆಯಿಂದ ಮಹಿಳೆ ಎಷ್ಟು ಬಾಧಿತಳೋ ಸ್ವಾಯತ್ತ ಗುಂಪುಗಳ ಹೋರಾಟದಿಂದಲೂ ಅಷ್ಟೇ ತೊಂದರೆಗೊಳಗಾಗಿದ್ದಾಳೆ ಎಂದು ಧೈರ್ಯವಾಗಿ ಹೇಳುತ್ತಾರೆ. 

***

ಮಹಿಳೆಯ ಮೇಲಿನ ಹಿಂಸೆ ಎರಡು ತೆರನದ್ದು: ಒಂದು ಸಮಾಜ ರಚನೆಯಲ್ಲೇ ಹುದುಗಿಹೋಗಿರುವಂತಹ; ಹಿಂಸೆ ಎಂದೇ ಗುರುತಿಸಲ್ಪಡದ; ಕೌಟುಂಬಿಕ ಹಿಂಸೆ/ಲೈಂಗಿಕ ದೌರ್ಜನ್ಯ/ಭ್ರೂಣ ಹತ್ಯೆ/ವರದಕ್ಷಿಣೆ ಇತ್ಯಾದಿ. ಇನ್ನೊಂದು ಪುರುಷ ಪ್ರಧಾನತೆಯ ಕಾರಣವಾಗಿ ಸಂಭವಿಸುವ ಅವಕಾಶ-ಅಧಿಕಾರ ವಂಚನೆ, ತಾರತಮ್ಯ ಇತ್ಯಾದಿ. ಸಮಾಜ ರಚನೆಯಲ್ಲಿರುವ ಅಗೋಚರ ದೌರ್ಜನ್ಯ ವಿಧವೆಯರನ್ನು, ವಿಚ್ಛೇದಿತ ಮಹಿಳೆಯರನ್ನು ನಡೆಸಿಕೊಳ್ಳುವುದರಲ್ಲಿ ವ್ಯಕ್ತವಾಗುತ್ತದೆ. ಮಣಿಪುರದಲ್ಲಿ ವಿಧವೆಯರಷ್ಟೇ ಅಲ್ಲ, ಮಹಿಳೆ ತನ್ನ ಸಮಸ್ಯೆ ಮಾತನಾಡಹೊರಟರೆ ರಾಷ್ಟ್ರೀಯ ಸಮಸ್ಯೆ ಹಾಗೂ ಆಂತರಿಕ ಭದ್ರತೆಗಳು ಅಪಾಯದಲ್ಲಿರುವಾಗ ಈ ವಿವಾದಗಳು ಬಗೆಹರಿದರೆ ಮಹಿಳಾ ಸಮಸ್ಯೆಗಳೂ ಬಗೆಹರಿಯುತ್ತವೆ ಎಂದು ಅವರ ಬಾಯಿ ಮುಚ್ಚಿಸಲಾಗುತ್ತದೆ. ಎಂದೇ ಮಹಿಳಾ ಚಳುವಳಿಯೂ ಮುಖ್ಯವಾಗಿ ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಮಹಿಳಾ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸಿತ್ತು. ಈಗ ಮಣಿಪುರದ ಮಹಿಳೆಯರು ರಾಜಕೀಯ ಮತ್ತು ನಾಗರಿಕ ಹಕ್ಕುಗಳಷ್ಟೇ ಅಲ್ಲ; ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಾಗಿಯೂ ಹಕ್ಕು ಪ್ರತಿಪಾದಿಸತೊಡಗಿದ್ದಾರೆ. 

ಮಣಿಪುರದ ಈ ಮುಂಚಿನ ಪೀಳಿಗೆ ತಮ್ಮ ಸ್ವಾಯತ್ತತೆಗೆ ಹೆಚ್ಚು ಒತ್ತು ಕೊಟ್ಟ ಕಾರಣ ಇವತ್ತು ಅಷ್ಟು ಸಣ್ಣ ರಾಜ್ಯದಲ್ಲಿ ೩೩ ಸ್ವಾಯತ್ತತೆ ಕೇಳುವ ಗುಂಪುಗಳೂ, ಅವರ ಬೆಂಬಲಿಗರೂ ಹುಟ್ಟಿಕೊಂಡು ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. ಆದರೆ ಇಂದಿನ ಪೀಳಿಗೆ ತಮ್ಮ ಸಾಂಸ್ಕೃತಿಕ ಮೂಲಗಳಿಗೆ ಮರಳಲು ತವಕಿಸುತ್ತಿದೆ. ಈಗ ಮಣಿಪುರದಲ್ಲಿ ಒಂದೆಡೆ ಸ್ವಾಯತ್ತತೆ ಕೇಳುವ ಸಶಸ್ತ್ರ ಗುಂಪುಗಳಿದ್ದರೆ, ಇನ್ನೊಂದೆಡೆ ಸಶಸ್ತ್ರ ಗುಂಪುಗಳಿಗೆ ಸೈನ್ಯದ ಮೂಲಕ ಉತ್ತರ ಕೊಡುವ ಧಾವಂತದ ಸರ್ಕಾರವಿದೆ. ಅಲ್ಲಿ ‘ಗ್ರಾಮೀಣ ಅಭಿವೃದ್ಧಿ ದಳ’ಗಳನ್ನು ಹಳ್ಳಿಗಳ ಸುರಕ್ಷತೆ ದೃಷ್ಟಿಯಿಂದ ರಚಿಸಲಾಗಿದೆ. ಆಂತರಿಕ ಹಾಗೂ ಬಾಹ್ಯ ಶತ್ರುಗಳ ವಿರುದ್ಧ ಹೋರಾಡುವ ಈ ದಳ ಸಮಾಜದ ಅರೆಶಿಕ್ಷಿತ, ಶಿಕ್ಷಿತ ಯುವಕರನ್ನೆಲ್ಲ ಪೂರ್ವ ತರಬೇತಿಯಿಲ್ಲದೆ ಸೈನ್ಯಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆಯನ್ನು ಚಾಲ್ತಿಯಲ್ಲಿಟ್ಟಿದೆ. ಕೋವಿ ಹಿಡಿಯುವುದು ಬಿಟ್ಟು ಬೇರೆ ಉದ್ಯೋಗಾವಕಾಶಗಳೇ ಇಲ್ಲ ಎಂಬ ಪರಿಸ್ಥಿತಿ ಸಮಾಜವನ್ನು ಮಿಲಿಟರೀಕರಣಗೊಳಿಸುತ್ತಿದೆ. ಅದು ಮಹಿಳೆಯರ ಪಾಲಿಗೆ ಪುರುಷ ಪ್ರಧಾನ್ಯತೆಯನ್ನು ದುಪ್ಪಟ್ಟುಗೊಳಿಸಿದಂತಾಗಿದೆ. ಇದನ್ನು ಗುರುತಿಸಿ ಅದರ ವಿರುದ್ಧ ಮಹಿಳೆಯರೇ ಹೋರಾಡಬೇಕಾದ ಅನಿವಾರ್ಯತೆಯಿದೆ.

ಇಲ್ಲಿ ಮೆಯಿರಾಗಳ ಮಿತಿಯನ್ನೂ ಗುರುತಿಸಬೇಕಾಗುತ್ತದೆ: ಈಗ ತಲೆ ಎತ್ತುತ್ತಿರುವ ಎನ್‌ಜಿಒಗಳು, ಅವರು ಕೊಡುವ ಹಣ ಮೆಯಿರಾ ಪೈಬಿಗೆ ದೊಡ್ಡ ಸವಾಲು. ಆದರೆ ಮಹಿಳೆ ಪ್ರಾಜೆಕ್ಟ್‌ಗಳಾಚೆ ಇದ್ದಾಳೆ, ಸಮಸ್ಯೆ ಪ್ರಾಜೆಕ್ಟ್‌ಗಳಾಚೆ ಇದೆ ಎಂದು ಸಂಘಟನೆಯೇ ತೋರಿಸಿಕೊಡಬೇಕಿದೆ. 

ಕೇವಲ ಮೈತೈ ಕುಲದವರಷ್ಟೇ ಇರುವ ಈ ಮಹಿಳಾ ಸಂಘಟನೆ ವಿಸ್ತಾರಗೊಳ್ಳಬೇಕಿದೆ. ಮೈತೆಯ್ ಅಲ್ಲದೆ ಇತರ ಸಮುದಾಯದವರು ಮೈತೆಯ್‌ಗಳ ಯಜಮಾನಿಕೆ ತಮ್ಮ ಮೇಲೆ ಹೇರಲ್ಪಟ್ಟಿದೆ ಎಂದು ಭಾವಿಸದಂತೆ ನೋಡಿಕೊಳ್ಳುವುದು ಅವಶ್ಯವಿದೆ. ಮಣಿಪುರವನ್ನು ಒಡೆದು ತಮಗೆ ಬೇರೆ ರಾಜ್ಯ ಕೊಡಬೇಕೆಂದು ಒತ್ತಾಯಿಸುವ ಕುಕಿ ಮತ್ತು ಜೋಮಿ ಬುಡಕಟ್ಟು ಹಾಗೂ ಗ್ರೇಟರ್ ನಾಗಾಲ್ಯಾಂಡಿಗೆ ಮಣಿಪುರದ ಕೆಲ ಭಾಗ ಸೇರಿಸಬೇಕೆನ್ನುವ ನಾಗಾ ಬುಡಕಟ್ಟುಗಳನ್ನು ಮೆಯಿರಾಗಳು ವಿರೋಧಿಸುತ್ತಾರೆ. ಏಕೆಂದರೆ ಅವು ಮಣಿಪುರದ ಸಮಗ್ರತೆ ಬಗ್ಗೆ ಮಾತನಾಡುವುದಿಲ್ಲ, ಸಂಸ್ಕೃತಿ ಬಗ್ಗೆ ಹೇಳುವುದಿಲ್ಲ; ಬದಲಿಗೆ ತಂತಮ್ಮ ಕುಲಗಳ ಆಧಾರದ ಮೇಲೆ ಬೇರೆ ರಾಜ್ಯ ಕೇಳುತ್ತ ಬಂಡುಕೋರ ಗುಂಪುಗಳನ್ನು ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ಕುಕಿ, ಜೋಮಿ, ನಾಗಾಗಳ ಮೇಲೆ ನಡೆವ ಸೇನಾ ದೌರ್ಜನ್ಯ ಕುರಿತು ಮೈತೈಗಳ ಮೆಯಿರಾ ಪೈಬಿಗಳು ಮೌನ ತಾಳುತ್ತಾರೆ. ಆ ಬುಡಕಟ್ಟುಗಳಿಂದ ರಕ್ಷಣೆ ಪಡೆಯಲು ಈಗ ಮಣಿಪುರದ ಸರ್ಕಾರ, ಅಧಿಕಾರಿಗಳೊಡನೆ ಕೈಜೋಡಿಸಬೇಕಾದ ಅನಿವಾರ್ಯತೆ ಹುಟ್ಟಿಕೊಂಡಿದೆ. 

ಒಂದು ಐಡೆಂಟಿಟಿಗಾಗಿ ಹುಟ್ಟಿಕೊಳ್ಳುವ ಪ್ರಾದೇಶಿಕತೆ ಅಥವಾ ಬುಡಕಟ್ಟು ಅಸ್ಮಿತೆಗಳು ನಾಯಕ, ರಾಜಕಾರಣಿ, ಕವಿ, ಹೋರಾಟಗಾರ ಎಲ್ಲರ ಮನಸುಗಳನ್ನೂ ದ್ವೀಪಗಳಾಗಿಸುತ್ತಿರುವ ಕಾಲ ಇದು. ಅದರ ನಡುವೆ ಪ್ರಾದೇಶಿಕತೆಯನ್ನು ಎಷ್ಟರಮಟ್ಟಿಗೆ, ಯಾತಕ್ಕೆ ಪೋಷಿಸಬೇಕೆನ್ನುವುದನ್ನು ಸ್ಪಷ್ಟಗೊಳಿಸಿಕೊಳ್ಳಬೇಕು. ಇಲ್ಲದೇ ಹೋದರೆ ಯಾವ ಹಿಂಸೆಯನ್ನು ವಿರೋಧಿಸುತ್ತೇವೋ ಇನ್ನೊಬ್ಬರ ಮೇಲೆ ಅದೇ ಹಿಂಸೆ ಸಂಭವಿಸಲು ಕಾರಣವಾದ ಉಪಕರಣಗಳಾಗುವ ಅಪಾಯವಿದೆ.

ಹೀಗೆ ತನ್ನನ್ನು ತಾನೇ ಸಮಾಜ ಒಡೆದುಕೊಳ್ಳುತ್ತಿರುವಾಗ ಎಲ್ಲ ಮನುಷ್ಯರ ಪರವಾಗಿ ತಾಯಂದಿರು ಯೋಚಿಸಬೇಕು. ‘ಅಸ್ಮಿತೆ ಪ್ರಜ್ಞೆ’ ಮತ್ತು ‘ಟೆರಿಟೋರಿಯಲ್ ಪ್ರಜ್ಞೆ’ ಪುರುಷ ಪ್ರಜ್ಞೆ. ಅದನ್ನು ಮೀರಲು ಮಹಿಳೆಗೆ ಸಾಧ್ಯವಾಗಬೇಕು. ಮನಸ್ಸುಗಳನ್ನು ಸಂಕುಚಿಸುವ ಎಲ್ಲ ಪ್ರಜ್ಞೆಗಳನ್ನು ಮೀರಿ ನ್ಯಾಯಸೂಕ್ಷ್ಮದ ಮನುಷ್ಯ ಬೆಳೆಯಬೇಕು. 

ಎಲ್ಲ ಮನುಷ್ಯರಿಗೆ ಗಾಯವಾದರೆ ಬರುವುದು ಹನಿ ಕಣ್ಣೀರು ಮತ್ತು ಒಸರುವುದು ಕೆಂಪು ರಕ್ತ. ಬಹುಶಃ ನೊಂದವರೆಲ್ಲ ಒಂದುಗೂಡಲು ಈ ನೋವೇ ನೆಲೆಯಾಗಬೇಕು.

ಇದು ಚಿತ್ರಾ ಮತ್ತವರಂಥ ಅಸಂಖ್ಯ ಈಶಾನ್ಯ ಸೋದರಿಯರಿಗೆ ನಮ್ಮ ಮನದಾಳದ ಪ್ರಾರ್ಥನೆ. ಹಾಗಾದಲ್ಲಿ ಮೆಯಿರಾ ಪೈಬಿ ನಿಜವಾದ ಯಶೋಗಾಥೆ ಎನಿಸಿಕೊಳ್ಳಲಿದೆ. ಆಗ ಮಾತ್ರ ಅಗ್ನಿಕುಂಡವಾಗಿರುವ ಮಣಿಪುರ ಹೂದೋಟವಾಗಿ ನಳನಳಿಸಲು ಸಾಧ್ಯವಿದೆ.

-

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...