Thursday, October 31, 2013

ವೈದ್ಯಕೀಯ ನಿರ್ಲಕ್ಷ್ಯ ಮತ್ತು ಕೋರ್ಟ್ ತೀರ್ಪಿನ ಸುತ್ತಮುತ್ತ
- ಡಾ. ಅಶೋಕ್ ಕೆ.ಆರ್.ವರ್ತಮಾನ


ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಅಬ್ಬಬ್ಬಾ ಎನ್ನಿಸುವ 6 ಕೋಟಿ ಪರಿಹಾರ ಘೋಷಿಸಿದೆ. ಪ್ರಕರಣ ದಾಖಲಾದ ದಿನದಿಂದ ಬಡ್ಡಿಯನ್ನೂ ಸೇರಿಸಿ ಕೊಡಬೇಕಿರುವುದರಿಂದ ಈ ಪರಿಹಾರದ ಮೊತ್ತ ಹನ್ನೊಂದು ಕೋಟಿಯನ್ನು ದಾಟಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಹದಿನೈದು ವರುಷಗಳ ಹಿಂದೆ ಮರಣಹೊಂದಿದ ಡಾ.ಅನುರಾಧಾ ಸಹಾರ ಪತಿ ಡಾ.ಕುನಾಲ್ ಸಹಾ ನಡೆಸಿದ ದೀರ್ಘ ಹೋರಾಟಕ್ಕೆ ಜಯ ಸಂದಿದೆ. ತಪ್ಪು ಮಾಡಿದ ವೈದ್ಯರಿಂದ ಲಕ್ಷಗಳ ಲೆಕ್ಕದಲ್ಲಿ ಮತ್ತು ಆ ವೈದ್ಯರು ಕಾರ್ಯನಿರ್ವಹಿಸುತ್ತಿದ್ದ ಕೋಲ್ಕತ್ತಾದ ಎ.ಎಮ್.ಆರ್.ಐ ಆಸ್ಪತ್ರೆ (ಇದೇ ಗುಂಪಿನ ಆಸ್ಪತ್ರೆಗೆ ಇತ್ತೀಚೆಗೆ ಬೆಂಕಿ ಬಿದ್ದು ತೊಂಬತ್ತು ರೋಗಿಗಳು ಅಸುನೀಗಿದ್ದರು) ಕೋಟಿಗಳ ಲೆಕ್ಕದಲ್ಲಿ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ದಿನವಹಿ ನಡೆಯುವ ನೂರಾರು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳಲ್ಲಿ ಅಪರೂಪಕ್ಕೆ ಒಂದರಲ್ಲಿ ಪರಿಹಾರ ಘೋಷಣೆಯಾಗಿದೆ. ಆದರೀ ಪ್ರಕರಣದಲ್ಲಿ ಗಮನಿಸಬೇಕಾದದ್ದೆಂದರೆ ಪರಿಹಾರಕ್ಕಾಗಿ ಕೋರ್ಟಿನ ಮೊರೆಹೊಕ್ಕವರೂ ಕೂಡ ವೈದ್ಯರೇ ಆಗಿರುವುದು. ತನ್ನ ಪತ್ನಿಗೆ ಯಾವ ರೀತಿ ತಪ್ಪು ಚಿಕಿತ್ಸೆಯನ್ನು ನೀಡಲಾಯಿತು ಎಂಬುದನ್ನು ಅರಿಯಲು ತಾವು ಕೂಡ ವೈದ್ಯರಾಗಿದ್ದು ಅವರಿಗೆ ಅನುಕೂಲವಾಯಿತು. ಕೊಟ್ಟಿರುವುದು ತಪ್ಪು ಚಿಕಿತ್ಸೆಯೋ ಅಲ್ಲವೋ ಎಂಬುದನ್ನು ಅರಿಯಲಾಗದ ಜನಸಾಮಾನ್ಯರ ಪಾಡೇನು?
 medical-malpractice
ವೈದ್ಯಕೀಯ ನಿರ್ಲಕ್ಷ್ಯವೆಂಬುದು ಭಾರತದಲ್ಲಿ ಸರ್ವೇ ಸಾಮಾನ್ಯವೆಂಬಂತೆ ನಡೆಯುತ್ತದೆ. ಬಹುತೇಕ ಪ್ರಕರಣಗಳಲ್ಲಿ ನಿರ್ಲಕ್ಷ್ಯ ನಡೆದಿರುವ ಕುರುಹೂ ಕೂಡ ರೋಗಿ ಮತ್ತವರ ಸಂಬಂಧಿಕರಿಗಿರುವುದಿಲ್ಲ. ವೈದ್ಯರ ಅಜಾಗರೂಕ ಮನೋಭಾವ, ಎಲ್ಲವೂ ನನಗೇ ಗೊತ್ತು ಎಂಬ ಅತಿಯಾದ ಆತ್ಮವಿಶ್ವಾಸ, ಮತ್ತು ಬಹಳಷ್ಟು ಸಲ ರೋಗಿಗೆ ಕೊಡುತ್ತಿರುವ ಔಷಧಿಯ ಬಗ್ಗೆ ಸ್ವತಃ ವೈದ್ಯರಿಗೇ ಸರಿಯಾದ ತಿಳುವಳಿಕೆ ಇರದಿರುವುದು ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕಾರಣ. ಇಂಥಹುದೊಂದು ನಿರ್ಲಕ್ಷ್ಯ ಮನೋಭಾವ ಎಲ್ಲ ವೃತ್ತಿಯಲ್ಲಿರುವವರಲ್ಲಿಯೂ ಇರುತ್ತದಾದರೂ ವೈದ್ಯಕೀಯ ವೃತ್ತಿ ಒರ್ವ ವ್ಯಕ್ತಿಯ ಜೀವದ ಜೊತೆಗೆ ಸಂವಹನ ನಡೆಸುವುದರಿಂದ ಚಿಕ್ಕದೊಂದು ತಪ್ಪೂ ಪ್ರಾಣಹರಣಕ್ಕೆ ಕಾರಣವಾಗಿಬಿಡಬಹುದು. ವೈದ್ಯರೂ ಕೂಡ ಮನುಷ್ಯಜಾತಿಗೇ ಸೇರಿರುವುದರಿಂದ ವೈಯಕ್ತಿಕ ತೊಂದರೆಗಳು, ಅವರ ಮನಸ್ಥಿತಿ, ಕೊಡುತ್ತಿರುವ ಚಿಕಿತ್ಸೆಯ ಬಗೆಗಿನ ಅಜ್ಞಾನ ಅವರ ಕೆಲಸದ ಮೇಲೂ ಪರಿಣಾಮ ಬೀರಿ ತಪ್ಪು ಚಿಕಿತ್ಸೆಯನ್ನು ನೀಡುವಂತೆ ಮಾಡಿಬಿಡಬಹುದು. ಗೊತ್ತಿಲ್ಲದೆ ಮಾಡಿಬಿಡುವ ತಪ್ಪಿನಿಂದ ರೋಗಿಯ ಪ್ರಾಣಹರಣವಾಗಿಬಿಟ್ಟಲ್ಲಿ ಕೋರ್ಟಿನಿಂದ ರೋಗಿಯ ಸಂಬಂಧಿಗಳಿಗೆ ಪರಿಹಾರ ದೊರಕಬಹುದು ಆದರೆ ವೈದ್ಯರ ಎಲ್ಲ ತಪ್ಪುಗಳೂ ಅವರಿಗೆ ಗೊತ್ತಿಲ್ಲದಂತೆಯೇ ನಡೆದುಬಿಡುತ್ತವೆಯೇ?

ಯಾವಾಗ ಶಿಕ್ಷಣವೆಂಬುದು ಸರಕಾರದ ಹತೋಟಿ ಮೀರಿ ಖಾಸಗೀಕೊರಣಗೊಂಡು ಮತ್ತದಕ್ಕಿಂತ ಹೆಚ್ಚಾಗಿ ವ್ಯಾಪಾರೀಕರಣಗೊಂಡಿತೋ ವೈದ್ಯವೃತ್ತಿ ಕೂಡ ಸೇವಾವಲಯದಿಂದ ಹೊರಬಂದು ಉದ್ಯಮವಲಯಕ್ಕೆ ಸೇರಿಬಿಟ್ಟಿತು. ಇವತ್ತು ವೈದ್ಯ ವೃತ್ತಿಯೆಂಬುದು ಪಕ್ಕಾ ಬ್ಯುಸಿನೆಸ್. “ನಾನಿಷ್ಟು ಹಣ ಹೂಡಿಕೆ ಮಾಡಿದ್ದೀನಿ, ಇದು ನನ್ನ ಬಂಡವಾಳ, ತಿಂಗಳಿಗೆ ಇಷ್ಟು ಲಕ್ಷದ ಖರ್ಚಿದೆ ಆಸ್ಪತ್ರೆ ಸಾಗಿಸಲು, ಹಾಗಾಗಿ ನನಗೆ ದಿನಕ್ಕಿಷ್ಟು ಬ್ಯುಸಿನೆಸ್ ನಡೆಯಬೇಕು” ಇದು ಇಂದಿನ ಬಹುತೇಕ ಖಾಸಗಿ ಆಸ್ಪತ್ರೆಯ ಮೀಟಿಂಗುಗಳಲ್ಲಿ ಕೇಳಿ ಬರುವ ಮಾತು! ಮುಂಚಿನಿಂದಲೂ ವೈದ್ಯಕೀಯ ವೃತ್ತಿಯಲ್ಲಿ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದವಾದರೂ ಅದಕ್ಕೊಂದು ಉದ್ಯಮದ ರೂಪ ಬಂದಿದ್ದು ಕಾರ್ಪೋರೇಟ್ ಉದ್ಯಮ ಆಸ್ಪತ್ರೆಗಳಲ್ಲಿ ಬಂಡವಾಳ ಹೂಡಲಾರಂಭಿಸಿ ದೊಡ್ಡ ಮತ್ತು ಸಣ್ಣ ಊರುಗಳಲ್ಲಿ ಸರಣಿ ಆಸ್ಪತ್ರೆಗಳನ್ನು ತೆರೆಯಲಾರಂಭಿಸಿದ ಮೇಲೆ. ಹಳೆಯ ಸರಕಾರಿ ಹಾಗೂ ಖಾಸಗೀ ಆಸ್ಪತ್ರೆಗಳ ಒಳಗೆ ಹೋಗುತ್ತಿದ್ದಂತೆ ಬರುತ್ತಿದ್ದ ‘ಆಸ್ಪತ್ರೆ’ ವಾಸನೆ ಈ ನವ ಉದ್ಯಮದ ಆಸ್ಪತ್ರೆಗಳಲ್ಲಿಲ್ಲ! ಹವಾನಿಯಂತ್ರಿತ ಕಟ್ಟಡ, ಮೇಲ್ನೋಟಕ್ಕೆ ಅಚ್ಚುಕಟ್ಟು ವ್ಯವಸ್ಥೆ, ಅತ್ಯಾಧುನಿಕ ಸೌಲಭ್ಯವಿರುವ
ಈ ಆಸ್ಪತ್ರೆಗಳಲ್ಲಿ ರೋಗಿಗಳ ಮೇಲೆ ವಿಧಿಸುವ ವೆಚ್ಚವೂ ಅಧಿಕ. ನಾವು ಕೊಡುವ ಸೇವೆಗೆ ಈ ವೆಚ್ಚ ಕಡಿಮೆಯೆಂಬುದು ಆಸ್ಪತ್ರೆಯವರ ಅನಿಸಿಕೆ. ರೋಗಿಗಳಿಗೆ ತಿಳಿಯದ, ಹೊರಪ್ರಪಂಚಕ್ಕೆ ಗೊತ್ತಾಗದ ಅತಿ ಹೆಚ್ಚು ವೈದ್ಯಕೀಯ ನಿರ್ಲಕ್ಷ್ಯ ನಡೆಯುವುದು ಇಂತಹ ಆಸ್ಪತ್ರೆಗಳಲ್ಲೇ. ಹಳೆಯ ಸರಕಾರಿ – ಹಳೆಯ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಸೀಮಿತ ಸೌಕರ್ಯಗಳಲ್ಲೇ ಚಿಕಿತ್ಸೆ ನೀಡಬೇಕಾದ ಕರ್ಮ. ಒಂದಿದ್ದರೆ ಹಲವಿಲ್ಲ ಎಂಬ ಪರಿಸ್ಥಿತಿ. ಮೇಲಾಗಿ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯೂ ಇದ್ದು ತಮಗಿರುವ ಜ್ಞಾನದಲ್ಲೇ ಎಲ್ಲ ರೋಗಗಳಿಗೂ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆಯೂ ಇದೆ. ನಗರಗಳ ಝಗಮಗಿಸುವ ಆಸ್ಪತ್ರೆಗಳಲ್ಲಿ ಈ ಯಾವ ಕೊರತೆಯೂ ಇರುವುದಿಲ್ಲ, ಉನ್ನತಾನಿಉನ್ನತ ಶಿಕ್ಷಣ ಪಡೆದಿರುವ ತಜ್ಞರ ಉಪಸ್ಥಿತಿಯಲ್ಲೂ ಇಂಥ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ ನಡೆದುಬಿಡುವುದಾದರೂ ಯಾಕೆ? ರೋಗಿಗಳನ್ನು ದುಡ್ಡು ಕೊಡುವ ಮಿಷಿನ್ನುಗಳು ಎಂಬ ಈ ಆಸ್ಪತ್ರೆಗಳ ಆಡಳಿತವರ್ಗದ ಮನಸ್ಥಿತಿಯೇ ಇದಕ್ಕೆ ಕಾರಣ.

 wockhardthospitalbgtbangalore

ಅದು ಮೈಸೂರಿನ ಖ್ಯಾತ ಖಾಸಗಿ ಕಾರ್ಪೋರೇಟ್ ಆಸ್ಪತ್ರೆ. ಬಹುತೇಕ ಎಲ್ಲ ಖಾಸಗಿ ಕಾರ್ಪೋರೇಟ್ ಆಸ್ಪತ್ರೆಯ ಆಡಳಿತ ವರ್ಗ ತನ್ನಲ್ಲಿ ಕೆಲಸಕ್ಕಿರುವ ವೈದ್ಯರಿಗೆ ಥೇಟ್ ಸಾಫ್ಟ್‌ವೇರ್ ಕಂಪನಿಗಳಂತೆಯೇ ಟಾರ್ಗೆಟ್ ನೀಡುತ್ತದೆ! ತಿಂಗಳಿಗಿಷ್ಟು ಆಪರೇಷನ್ ನಡೆಸಬೇಕು, ತಿಂಗಳಿಗಿಷ್ಟು ಡಯಾಲಿಸಿಸ್ ಮಾಡಿಸಬೇಕು, ತಿಂಗಳಿಗಿಷ್ಟು ಎಂ.ಆರ್.ಐ, ಸಿಟಿ ಸ್ಕ್ಯಾನ್ ಮಾಡಿಸಬೇಕು ಎಂಬ ಟಾರ್ಗೆಟ್ ವಿಧಿಸುತ್ತದೆ! ಸತತವಾಗಿ ಟಾರ್ಗೆಟ್ ಮುಟ್ಟಿಸದ ವೈದ್ಯರಿಗೆ ‘ಪಿಂಕ್ ಸ್ಲಿಪ್’ ನೀಡುವ ಪದ್ಧತಿಯೂ ಉಂಟು! ಇದೇ ರೀತಿಯ ಟಾರ್ಗೆಟ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿಯೂ ಇದೆ. ಜನರೆಲ್ಲ ಆರೋಗ್ಯದಿಂದಿದ್ದು ಅವರ ಕಿಡ್ನಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ತಿಂಗಳಿಗಿಷ್ಟು ಡಯಾಲಿಸಿಸ್ ಮಾಡಿ ಟಾರ್ಗೆಟ್ ತಲುಪಿ ಆಡಳಿತವರ್ಗದಿಂದ ಶಹಬ್ಬಾಸ್ಗಿರಿ ಪಡೆಯುವುದು ಹೇಗೆ ಸಾಧ್ಯ? ಲ್ಯಾಸಿಕ್ಸ್ ಎಂಬ ದೇಹದ ನೀರು ಹೆಚ್ಚು ಹೊರ ಹೋಗುವಂತೆ ಮಾಡುವ ಇಂಜೆಕ್ಷನ್ ನೀಡಿ ದೇಹದ ಖನಿಜಾಂಶಗಳಲ್ಲಿ ಏರುಪೇರು ಸೃಷ್ಟಿಸಿ ಅದರ ಲ್ಯಾಬ್ ರಿಪೋರ್ಟನ್ನು ಪಡೆದು ತದನಂತರ ರೋಗಿಯಲ್ಲಿ ತಾನೇ ಸೃಷ್ಟಿಸಿದ ರೋಗವನ್ನು ಮತ್ತಷ್ಟು ಭಯಭೀತ ದನಿಯಲ್ಲಿ ‘ಕಿಡ್ನಿ ಹೋಗಿಬಿಟ್ಟಿದೆ’ ಎಂದು ವಿವರಿಸಿ ಡಯಾಲಿಸಿಸ್ ಮಾಡಲಾಗುತ್ತದೆ! ತನಗಿದ್ದ “ಭಯಂಕರ” ರೋಗ ವಾಸಿಯಾದ ಖುಷಿಯಲ್ಲಿ ರೋಗಿ, ಟಾರ್ಗೆಟ್ ತಲುಪಿದ ಖುಷಿಯಲ್ಲಿ ವೈದ್ಯ, ಹೂಡಿದ ಬಂಡವಾಳಕ್ಕೆ ತಕ್ಕಂತೆ ಲಾಭ ಮಾಡುತ್ತಿರುವ ಖುಷಿಯಲ್ಲಿ ಆಸ್ಪತ್ರೆಯ ಆಡಳಿತ ವರ್ಗ…… ಇದು ಇಂದಿನ ಬಹುತೇಕ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಸಂಗತಿ. ಇದನ್ನು ವೈದ್ಯಕೀಯ ನಿರ್ಲಕ್ಷ್ಯವೆನ್ನಬೇಕೋ ಅಥವಾ ದಂಧೆಯೆಂದು ಕರೆಯಬೇಕೋ? ವೈದ್ಯಕೀಯ ನಿರ್ಲಕ್ಷ್ಯಕ್ಕೆ ಹಣದ ರೂಪದ, ನಿಷೇಧದ ರೂಪದ ದಂಡ ವಿಧಿಸಬಹುದು, ಆದರೀ ದಂಧೆಗೆ?

ಡಾ ಅನುರಾಧ ಸಹಾ ಪ್ರಕರಣ ನ್ಯಾಯಲಯದ ಮೆಟ್ಟಿಲೇರಿದ್ದು ಅವರ ಪತಿ ಕೂಡ ವೈದ್ಯರಾಗಿದ್ದರಿಂದ. ಮತ್ತದು ಗೆಲುವು ಕಂಡಿದ್ದು ಡಾ ಕುನಾಲ್ ಸಹಾ ಹಲವು ಸಲ ತಾವೇ ವಾದ ಮಾಡಿದ್ದರಿಂದಾಗಿ. ಎಷ್ಟು ಜನಸಾಮಾನ್ಯರಿಗೆ ಇದು ಸಾಧ್ಯವಿದೆ? ಅಲ್ಲದೆ ಈ ಪ್ರಕರಣ ಇತ್ಯರ್ಥವಾಗಲು ಹದಿನೈದು ವರುಷಗಳು ಹಿಡಿದವು. ಎಷ್ಟು ಜನರಿಗೆ ಅಷ್ಟು ವರುಷಗಳ ಕಾಲ ಹೋರಾಡಲು ಸಾಧ್ಯವಿದೆ? ಈ ಪ್ರಕರಣದಿಂದ ವೈದ್ಯಕೀಯ ನಿರ್ಲಕ್ಷ್ಯ ಕಡಿಮೆಯಾಗುತ್ತದಾ? ಬಹುಶಃ ಇಲ್ಲ. ಕೋರ್ಟಿನ ಭಯದಿಂದ ಮತ್ತಷ್ಟು ಮಗದಷ್ಟು ಅನವಶ್ಯಕ ಲ್ಯಾಬ್ ಪರೀಕ್ಷೆಗಳನ್ನು ಅನಿವಾರ್ಯವೆಂಬಂತೆ ಬಿಂಬಿಸಿ ರೋಗಿಗಳಿಂದ ಇನ್ನಷ್ಟು ಹಣ ವಸೂಲು ಮಾಡಲು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಮತ್ತು ವೈದ್ಯರಿಗೆ ಅನುಕೂಲವಾಗುತ್ತದೆಯಷ್ಟೇ.

ಮಾಧ್ಯಮಗಳ ಅತಿರೇಕತೆ ಮತ್ತು ಸಾಮಾಜಿಕ ಪರಿಣಾಮ  -ಡಾ.ಎಸ್.ಬಿ.ಜೋಗುರ


’ಜನ ಈ ಅವಿವೇಕಿ ಪತ್ರಿಕೆಗಳ ಬುಡುಬುಡಿಕೆಗೆ ತಕ್ಕಂತೆ ಅಂತರ್ಲಾಗ ಹಾಕುವ ಕೋತಿಗಳಾಗುವುದನ್ನು ಬಿಟ್ಟು ವಾಸ್ತವವನ್ನು ಸ್ವಚ್ಛ ಕಣ್ಣುಗಳಿಂದ ನೋಡುವುದನ್ನು ಕಲಿತುಕೊಳ್ಳಬೇಕಾಗಿದೆ. ಜನ ಇವತ್ತು ವಿಕೃತ ವರದಿಗಳಿಗೆ ಎಷ್ಟೊಂದು ಒಗ್ಗಿ ಹೋಗಿದ್ದಾರೆಂದರೆ ನಿಜ ಹೇಳುವವರನ್ನೇ ಪೀತ ಪತ್ರಿಕೆಗಳೆಂದು ಜರಿಯತೊಡಗಿದ್ದಾರೆ.’
                                                                                              -ಕೆ.ಪಿ.ಪೂರ್ಣಚಂದ್ರ ತೇಜಸ್ವಿ


 ಮಾಧ್ಯಮಗಳು ಬಾಳುವ ಮನೆಯ ಬೊಗಳುವ ನಾಯಿಗಳಾಗಬೇಕೇ ಹೊರತು, ಸಜ್ಜನರನ್ನೂ ಭಯ ಬೀಳಿಸುವ ಬಿಡಾಡಿ ನಾಯಿಗಳಾಗಬಾರದು. ತಮಗಿರುವ ವಿಶೇಷ ಸ್ವಾತಂತ್ರ್ಯವನ್ನು ಸಮುದಾಯದ ಪ್ರಜ್ಞೆಯನ್ನು ಸದಾ ಜಾಗೃತವಾಗಿಡುವಲ್ಲಿ ಬಳಸಿಕೊಳ್ಳಬೇಕು. ಮನಸಿಗೆ ವಿರುದ್ಧವಾದ, ಆತ್ಮ ನಿವೇದನೆಯ ಆರ್ತತೆಯನ್ನು ಮೀರಿಯೂ ಸುದ್ದಿ ಮಾಡುವ ಪ್ರಮೇಯ ಬಂದೊದಗುವದೇ ಇವತ್ತಿನ ಮಾದ್ಯಮ ಲೋಕದ ಬಹು ದೊಡ್ಡ ವ್ಯಂಗ್ಯ ಮತ್ತು ವಿಷಾದ. ಸಮಾಜದ ಎದುರಲ್ಲಿ ಹಿಟ್ಲರನ ಜೊತೆಗಿದ್ದ ಗೊಬೆಲ್ ತರಹ ಒಂದು ಸುಳ್ಳನ್ನು ಹತ್ತು ಬಾರಿ ಹೇಳುವ, ಆ ಮೂಲಕ ಅದನ್ನು ಸತ್ಯ ಮಾಡುವ ಕುಚೇದ್ಯದ ಬೆಲೆಯನ್ನು ತಡವಾಗಿಯಾದರೂ ನಾವು ತೆರಬೇಕಾಗುತ್ತದೆ. ಅದನ್ನು ನಾವೇ ತೆರಬೇಕು, ತಕ್ಷಣವೇ ತೆರಬೇಕೆಂದೇನೂ ಇಲ್ಲ. ನಮ್ಮ ಮಕ್ಕಳು, ಮೊಮ್ಮಕ್ಕಳು ತೆತ್ತರೂ ಅಚ್ಚರಿ ಪಡಬೇಕಿಲ್ಲ. ಮಾಧ್ಯಮ ಲೋಕ ಉದ್ಯಮವಾದದ್ದೇ ಅಲ್ಲಿಯ ನೈತಿಕ ಮಟ್ಟ ಕುಸಿಯತೊಡಗಿದ್ದು ಸರ್ವಗ್ರಾಹ್ಯವಾದ ಸಂಗತಿ. ಅದು ಪ್ರಿಂಟ್ ಮೀಡಿಯಾ ಇರಲಿ, ಇಲೆಕ್ಟ್ರಾನಿಕ್ ಮೀಡಿಯಾ ಇರಲಿ ಸ್ವನಿಯಂತ್ರಣದ ಅಂಕುಶವಿರದಿರೆ ಆ ಪತ್ರಿಕೆಯ ಸಂಪಾದಕನೊಬ್ಬನ  ಮನೋಭಿಲಾಷೆಯ ದಾರಿಗುಂಟ ಆ ಮಾಧ್ಯಮದ ಬರವಣಿಗೆ ಸಾಗುವ ಅಪಾಯವಿದೆ.

    ಮಾಧ್ಯಮಗಳಲ್ಲಿ ಈಗೀಗ ಹೊಣೆಗಾರಿಕೆ ಮತ್ತು ಗಾಂಭೀರ್ಯತೆಯಿರದ ಕೆಲ ಪ್ರಭೃತಿಗಳು ಪ್ರವೇಶ ಪಡೆಯುತ್ತಿದ್ದಾರೆ. ಇವರಿಗೆ ಪತ್ರಿಕಾ ವರದಿಗಾರನೆನಿಸಿಕೊಳ್ಳುವುದು ಜವಾಬ್ದಾರಿಯ ಸ್ಥಾನವಾಗಿ ತೋರದೇ, ಸಾಮರ್ಥ್ಯ ಮತ್ತು ವಯಸ್ಸನ್ನು ಮೀರಿ ದೊರೆಯಬಹುದಾದ ಲಂಬರೂಪದ ಸ್ಥಾನಮಾನಗಳ ಹಂಬಲವೇ ಮುಖ್ಯವಾಗುತ್ತಿರುವುದರಿಂದಾಗಿ, ಇಂಥವರು ಬರೆಯುವ ಸುದ್ದಿ, ಅದರ ವಸ್ತು ನಿಷ್ಟ ವಿವರಣೆ ಮತ್ತು ಸಾಮಾಜಿಕ ಪರಿಣಾಮಗಳ ನಿರೀಕ್ಷೆಯ ಮಟ್ಟವನ್ನು ನಾವು ಊಹಿಸಬಹುದಾಗಿದೆ. ಕೇವಲ ರೋಚಕವಾಗಿ ಬರೆಯುವುದೇ ಬರವಣಿಗೆಯಲ್ಲ. ಹಾಗೆಯೇ ತನ್ನ ಮೂಗಿನ ನೇರಕ್ಕೆ ಸುದ್ದಿಯನ್ನು ಹೊಸೆಯುವುದೂ ಸರಿಯಲ್ಲ. ಪತ್ರಿಕೆಯೊಂದರ ಮೇಲೆ ಖಾಸಗಿ ಒಡೆತನವಿರಬಹುದಾದರೂ ಅದು ಸುದ್ದಿ ಮಾಡುವ ವಿಷಯಗಳ ಮೇಲೆ ಒಡೆತನವಿರಲಾರದು. ಅಷ್ಟಕ್ಕೂ ಸಮಾಜದ ಜಾಗೃತಿಗಾಗಿಯೇ ಮಾಧ್ಯಮಗಳು ಕೆಲಸ ಮಾಡಬೇಕಿರುವುದರಿಂದ ಸುದ್ದಿಯ ಔಚಿತ್ಯತೆ ಮತ್ತು ಸಕಾಲಿಕತೆಯನ್ನು ಸ್ತಿತಪ್ರಜ್ಞೆಯಿಂದ ನಿರ್ವಹಿಸಿ ಅದನ್ನು ಸಮಾಜದ ಎದುರು ಅನಾವರಣಗೊಳಿಸಬೇಕಾಗುತ್ತದೆ. ವ್ಯಕ್ತಿಗತವಾಗಿ ಆರೋಹಿಸಿಕೊಂಡಿರುವ ಧಿಮಾಕುಗಳನ್ನು ಮೀರಿ, ಮುರಿದು ಪತ್ರಕರ್ತನಾದವನೂ ಸಮಾಜಕ್ಕೆ ಅಕೌಂಟೇಬಲ್ ಆಗಿರಬೇಕು ಎನ್ನುವ ಪ್ರಜ್ಞೆಯೊಂದಿಗೆ ಕೆಲಸ ಮಾಡುವ ಅನಿವಾರ್ಯತೆಯಿದೆ. ಈಚೆಗಷ್ಟೇ ಮಾರಾಟವಾದ ’ವಾಸಿಂಗಟನ್ ಪೋಸ್ಟ್’ ಅನ್ನೋ ಪತ್ರಿಕೆ ಅನೇಕ ದಶಕಗಳ ಕಾಲ ಅತ್ಯಂತ ಹೊಣೆಗಾರಿಕೆಯಿಂದ ತನ್ನ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬಂದಿರುವುದಿತ್ತು. ಒಂದು ಬಾರಿ ತೀರಾ ಮಾನವೀಯ ನೆಲೆಯಲ್ಲಿ ಸಲಿಂಗ ಕಾಮವನ್ನು ಬೆಂಬಲಿಸಿ ಬರೆದ ಕಾರಣ ಅದರ ಸಾಂಪ್ರದಾಯಿಕ ಓದುಗರಿಂದ ವ್ಯಾಪಕವಾದ ಪ್ರತಿಕ್ರಿಯೆಗಳನ್ನು ಎದುರಿಸಬೇಕಾಯಿತು. ಆ ಪತ್ರಿಕೆಯ ಇಮೇಜಿಗೂ ಪರೋಕ್ಷವಾಗಿ ಅಂಥಾ ಸುದ್ದಿ ಸಲ್ಲುವದಿಲ್ಲ ಎನ್ನುವುದು ತಡವಾಗಿ ಮನದಟ್ಟಾಯಿತು.

    ಯಾವುದೇ ಒಂದು ವರದಿ ಅದರ ಪೂರ್ವಾಪರ ತಿಳುವಳಿಕೆ, ವಸ್ತುನಿಷ್ಟ ಅಧ್ಯಯನ, ನಿಖರವಾದ ಮಾಹಿತಿಗಳಿಲ್ಲದೇ ಹೀಗೇ ವರದಿಗಾರನೊಬ್ಬನ ಖಾಸಗಿ ತೆವಲು ಮತ್ತು ಭಾವನೆಗಳಲ್ಲಿ ತಳಮಳಿಸಿ ಭಟ್ಟಿ ಇಳಿದು ಬಂದರೆ ಅದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುವದರಲ್ಲಿ ಸಂಶಯವೇ ಬೇಡ. ಈಚೆಗೆ ಎರಡು ಪ್ರಮುಖ ವಿಷಯಗಳ ಬಗ್ಗೆ ಮಾಧ್ಯಮಗಳು ನಿರಂತರವಾಗಿ ಬರೆಯುತ್ತ, ಚರ್ಚಿಸುತ್ತ ಬಂದವು. ಒಂದು ಅನಾಮಿಕನಂತಿದ್ದ ಯೋಗೇಶ ಮಾಸ್ಟರ್ ನ ’ಢುಂಡಿ’ ಕೃತಿಯ ಬಗ್ಗೆ, ಇನ್ನೊಂದು ಅನಂತಮೂರ್ತಿ ನರೇಂದ್ರ ಮೋದಿಯವರ ಬಗ್ಗೆ ನೀಡಿದ ಹೇಳಿಕೆಯ ಬಗ್ಗೆ. ಎರಡೂ ಖಾಸಗಿ ಸಂಗತಿಗಳೇ.. ಒಂದು ಕೃತಿಯ ರೂಪದಲ್ಲಿದ್ದರೆ, ಇನ್ನೊಂದು ಹೇಳಿಕೆಯ ರೂಪದಲ್ಲಿರುವಂಥದು. ಈ ಬಗೆಯ ವಿಷಯಗಳು ಭಾರತದಂತಹ ಬಹುದೊಡ್ಡ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯಾವ ಬಗೆಯ ಮತ್ತು ಎಷ್ಟರ ಮಟ್ಟಿಗಿನ ಸ್ಥಾನ ಗಿಟ್ಟಿಸಿಕೊಳ್ಳಬೇಕು ಎನ್ನುವುದನ್ನರಿತು ಪ್ರತಿಕ್ರಿಯಿಸುವುದು ಮಾಧ್ಯಮಗಳ ಬಹುದೊಡ್ದ ಪ್ರಾಜ್ಞ ಗುಣ.  ನಗಣ್ಯ ಎನಿಸಬಹುದಾದ ಸಂಗತಿಗಳು ನಮ್ಮ ನಮ್ಮ ಮೂಗಿನ ನೇರಕ್ಕೆ ಸಂಬಂಧಿಸಿವೆ ಎನ್ನುವ ಕಾರಣದಿಂದ ಅನಾಗತ್ಯ ಹಳಿಯುವ, ಹೊಗಳುವ ಎರಡೂ ಕ್ರಮಗಳೂ ಮಾಧ್ಯಮಕ್ಕೆ ತರವಲ್ಲ. ಈಗೀಗ ನಮ್ಮ ಸಮಾಜದಲ್ಲಿ ಸಿನಿಕತನ ಅತಿಯಾಗುತ್ತಿದೆ. ಅವರು ತುಂಬಾ ಕ್ರಿಯಾಶೀಲರೆಂದು  ಮಾತನಾಡುವಾಗಲೇ ಆತ ಇಡೀ ವ್ಯವಸ್ಥೆಯೇ ಕೊಳೆತು ನಾರುವಾಗ ನಾನೊಬ್ಬ ಒಳ್ಳೆಯವನಾಗಿ ಏನು ಮಾಡಬೇಕಿದೆ..? ಎಂದು ಕೇಳುವ ಅತ್ಯಂತ ರೋಗಗ್ರಸ್ಥ ಮನಸಿನ ಸ್ಥಿತಿಯಿದೆ. ಮಾಧ್ಯಮಗಳು ಎಂಥಾ ಸಿನಿಕನಾಗಿರುವವನಲ್ಲಿಯೂ ಆಶಾವಾದ ಮತ್ತು ಜಾಗೃತಿಯನ್ನುಂಟು ಮಾಡುವಂತಿರಬೇಕು. ಅದೇ ಅವು ಸಮಾಜಕ್ಕೆ ಕೊಡಮಾಡಬೇಕಿರುವ ಬಹು ದೊಡ್ಡ ಕಾಣಿಕೆ. ಬರೆದದ್ದೆಲ್ಲಾ ಸರಿಯಾದುದ್ದೇ ಎಂದು ಸಮರ್ಥಿಸುವ, ಅದ್ದಕೊಂದಷ್ಟು ಸಾಕ್ಷಿಯಂತಿರುವ ಪುಡಿ ಬರವಣಿಗೆಗಳನ್ನು ಪೇರಿಸುವ, ಆ ಮೂಲಕ ಓದುಗನ ಕೈಗಿಡುವ ಕ್ರಮವಿದೆಯಲ್ಲಾ, ಸಮಾಜಕ್ಕೆ ಅದೊಂದು ದಡ್ದ ಕಾಣಿಕೆ. ಈ ಬಗೆಯ ಜಡವಾದ ಸಿನಿಕತನಕ್ಕೆ ಪರ್ಯಾಯವಾದ ಮಾರ್ಗವೊಂದಿದೆ ಅದೇ ಕ್ರಿಯಾಶೀಲತೆ. ಅದನ್ನು ಸಾಧ್ಯ ಮಾಡುವಲ್ಲಿ ಮಾಧ್ಯಮಗಳು ಪರೋಕ್ಷ-ಅಪರೋಕ್ಷವಾಗಿ ನೆರವಾಗಬೇಕು. ಬೆಳಿಗ್ಗೆ ಎದ್ದೊಡನೆ ಹೋಲ್ ಸೇಲಾಗಿ ಜೋತಿಷ್ಯವನ್ನು ಗುತ್ತಿಗೆ ಹಿಡಿದವರಂತೆ ಪ್ರಸಾರ ಮಾಡುವ ಚಾನೆಲ್‌ಗಳಿಂದ, ವೀಕ್ಷಕರಲ್ಲಿ ಅದ್ಯಾವ ಬಗೆಯ ಕ್ರಿಯಾಶೀಲತೆಯನ್ನು ಮಾಧ್ಯಮಗಳಿಂದ ನಿರೀಕ್ಷಿಸಬೇಕು ಎನ್ನುವುದೇ ಬಹು ದೊಡ್ದ ಪ್ರಶ್ನೆ. ಸಮಾಜದ ಹಂಗು ಹರಿದು ಮುನ್ನುಗ್ಗುವ ಮಾಧ್ಯಮಲೋಕ ತನ್ನ ಹಿಂದೆ ಸಾತತ್ಯವಾಗಿ ಅಹಿತಕರವಾದುದನ್ನೇ ಬಿಡುತ್ತಿರುತ್ತದೆ. ಡಿ.ಆರ್. ನಾಗರಾಜ ಒಂದು ಕಡೆ ಹೀಗೆ ಹೇಳುತ್ತಾರೆ. ’ ಸಿನಿಕತನ ತೀರಾ ಕೊಳೆತು ಹೋದಾಗ ಸಭ್ಯ ಡಕಾಯಿತರನ್ನು ಸೃಷ್ಟಿಸುತ್ತದೆ. ಸಿನಿಕತನ ತಾತ್ವಿಕವಾಗಿ ಬೆಳೆಯುತ್ತಾ ಹೋದರೆ ಅದು ಅಂತಿಮವಾಗಿ ಸಮಾಜದ ಹಂಗನ್ನೇ ತೊರೆಯುತ್ತದೆ.’

    ಈ ಕಾಲದ ಬಲು ಅಪರೂಪದ ಪತ್ರಿಕೆ ಮತ್ತು ಸಂಪಾದಕ ಲಂಕೇಶ. ಪತ್ರಿಕೆಯೊಂದನ್ನು ಅದರ ಸಂಪಾದಕನಿಂದ ಬೇರ್ಪಡಿಸಲಾಗದ ಯಾವುದಾದರೂ ಪತ್ರಿಕೆ ಇದ್ದರೆ ಅದು ಮೇಸ್ಟ್ರ ಲಂಕೇಶ ಪತ್ರಿಕೆ. ಆ ಪತ್ರಿಕೆಯಲ್ಲಿ ಪ್ರಕಟವಾಗುವ ಎಲ್ಲ ಬಗೆಯ ಬರಹಗಳಿಗೆ ಶಕ್ತಿಯನ್ನು ತುಂಬುವಷ್ಟು ಕ್ರಿಯಾಶೀಲತೆ ಲಂಕೇಶ ಪತ್ರಿಕೆಗಿತ್ತು. ಬರಹಗಾರ ಮತ್ತು ಬರವಣಿಗೆಯನ್ನು ಹೀಗೇ ಹೊಟ್ಟೆಗಾಕಿಕೊಳ್ಳುವ, ಅರಗಸಿಕೊಳ್ಳುವ ಗುಣ ಅಲ್ಲಿರಲಿಲ್ಲ. ಅಲ್ಲಿದ್ದದ್ದು ಚಿಕಿತ್ಸಕ ದೃಷ್ಟಿ. ಸಾಮಾಜಿಕ ಪರಿಣಾಮದ ಆಶಯ. ಹಾಗಾಗಿಯೇ ಲಂಕೇಶರು ತಮ್ಮ ಬದುಕಿನುದ್ದಕ್ಕೂ ತೆಳುವಾಗಿ ಏನನ್ನೂ ಬರೆದದ್ದಿಲ್ಲ. ಲಂಕೇಶರಲ್ಲಿ ಸಮಾಜವನ್ನು ಚೂಪಾಗಿ ತಿವಿಯುವ ಮತ್ತು ತಿದ್ದುವ, ಕಿವಿಗೆ ಮುರುವು ಚುಚ್ಚುವ ಅಕ್ಕಸಾಲಿಗನ ಗುಣವಿತ್ತು. ಈಗ ಆ ಬಗೆಯ ಗುಣವಿರುವ ಪತ್ರಿಕೆಗಳು ತೀರಾ ಅಪರೂಪ. ಅದೊಂದು ರಾಜ್ಯದ ಅತ್ಯುತ್ತಮ ದಿನ ಪತ್ರಿಕೆ ಎಂದು ಹೇಳುವಾಗಲೂ ಅಲ್ಲಿರುವ ಸಾಂಸ್ಕೃತಿಕ ರಾಜಕಾರಣದ ಗುಣಾವಗುಣಗಳು ನೆನಪಾಗದೇ ಇರಲಾರವು. ಕೇವಲ ರಾಜಕೀಯ ವಲಯಕ್ಕೆ ಸೀಮಿತವಾಗಿರಬೇಕಾದ ರಾಜಕೀಯ ಗುಣಗಳು ಇಂದು ಮಾಧ್ಯಮಗಳ ವಲಯವನ್ನೂ ಪ್ರವೇಶಿಸಿರುವುದರಿಂದ ಸಾಮಾಜಿಕ ಸದಾಶಯದ ನಿರೀಕ್ಷೆಯ ಮಾತುಗಳನ್ನಾಡುವುದು ಕೂಡಾ ಕಷ್ಟವಾಗುತ್ತದೆ.

    ಒಂದು ಕಡೆ ಡಿ.ಆರ್.ನಾಗರಾಜ  ಚರ್ಚಿಸುವಂತೆ ಪತ್ರಿಕೆಯೊಂದರಲ್ಲಿ ಎರಡು ಮುಖ್ಯವಾದ ಗುಣಗಳಿರುತ್ತವೆ ಒಂದು ಸಾಕ್ರೇಟಿಸ್ ನ ಗುಣ, ಇನ್ನೊಂದು ಅವನದೇ ಸಮಕಾಲೀನ ಚಿಂತಕ ಡಿಯೋಜಿನಸ್ ಗುಣ. ಸಾಕ್ರೇಟಿಸ್ ನ ಗುಣ ಅತ್ಯಂತ ಗಹನವಾದ ವಿಚಾರ, ವಿಷಯಗಳನ್ನು ಆಧರಿಸಿ ಬರವಣಿಗೆ ಮಾಡುವಂಥದ್ದು. ಇದು ಪತ್ರಿಕೆಯ ಜೀವಾಳವಾದರೂ ಅಂಥಾ ಬರವಣಿಗೆಯ ಹಿಂದೆ ಬೋರ್ ಹೊಡೆಸಬಹುದಾದ ಗುಣಗಳಿರುವುದನ್ನು ಅಲ್ಲಗಳೆಯುವಂತಿಲ್ಲ. ಇನ್ನು ಡಿಯೋಜಿನಿಸ್ ತರದ ಬರವಣಿಗೆ ತುಂಟತನ, ಛೂ ಬಾಣ, ನಗೆಚಟಾಕಿ, ಪುಂಡಲೀಕ್ ಶೇಠ್ ರ ’ಹುಬ್ಬಳ್ಳಿಯಾಂವ’ ಥರ ಬರವಣಿಗೆಗಳು. ಇವು ಕೂಡಾ ಒಂದು ಪತ್ರಿಕೆ ರಸವತ್ತಾಗಲು ತೀರಾ ಮುಖ್ಯ. ಈ ಡಿಯೋಜಿನಿಸ್ ತರದ ಬರವಣಿಗೆ ಮಹತ್ತರವಾದುದನ್ನು ಹೇಳದಿದ್ದರೂ ಓದುಗ ಬಯಸುವಂಥದ್ದು. ಒಂದು ಸಾರಿ ಈ ಡಿಯೋಜಿನಿಸ್ ಮೆಸಿಡೊನಿಯಾ ಪಟ್ಟಣದಲ್ಲಿ ಒಂದೆಡೆ ಹಾಯಾಗಿ ಬಿಸಿಲು ಕಾಯಿಸುತ್ತಾ ಕುಳಿತಿದ್ದ. ವಿಕಾರವಾದ ಗಡ್ದ, ಕೆದರಿದ ಕೂದಲು.. ಅಲ್ಲಿಗೆ ರಾಜ ಅಲೆಕ್ಝಾಂಡರ್ ಆಗಮನ. ಆತ ಈ ಡಿಯೋಜಿನಿಸ್ ಎದುರು ನಿಂತು ಹೇಳು ನಿನಗೆ ಏನು ಬೇಕು..? ನಾನು ಈ ಸಾಮ್ರಾಜ್ಯದ ಅಧಿಪತಿ ಎಂದ. ಆಗ ಡಿಯೋಜಿನಿಸ್ ಆತನನ್ನು ನೋಡುತ್ತಾ ತಣ್ಣಗೆ ’ಮೊದಲು ನನ್ನ ಎದುರಿಂದ ಬದಿಗೆ ಸರಿ, ನೆರಳು ಬೀಳುತ್ತಿದೆ. ಬಿಸಿಲು ಕಾಯಿಸಲು ಬಿಡು’ ಅಂದನಂತೆ. ಹೀಗೆ ಚುಟುಕಾಗಿ, ಚುರುಕಾಗಿ ಈ ಬಗೆಯ ಬರಹಗಳಿರುತ್ತವೆ. ಈ ಎರಡೂ ಗುಣಗಳು ಪತ್ರಿಕೆಗೆ ತೀರಾ ಮುಖ್ಯ. ಅತಿಯಾದರೆ ಅಪಾಯವೆನ್ನುವ ತಿಳುವಳಿಕೆಯೂ ಮುಖ್ಯ.

    ಮಾಧ್ಯಮ ಜಗತ್ತು ಸಂಸಾರಸ್ಥ ಹೆಂಗಸಿನ ಗುಣವುಳ್ಳದ್ದಾಗಿರಬೇಕು. ಮನೆಯಲ್ಲಿ ಮತ್ತೆ ಮತ್ತೆ ಕಸ ಬೀಳುತ್ತಲೇ ಇರುತ್ತದೆ. ಮತ್ತೆ ಮತ್ತೆ ಕಸ ಗುಡಿಸುತ್ತಲೇ ಇರಬೇಕು. ಈ ಕ್ರಿಯೆಯಲ್ಲಿಯೇ ಮಾಧ್ಯಮಗಳ ಕ್ರಿಯಾಶೀಲತೆಯ ಗುಣ ಅಡಕವಾಗಿರಬೇಕು. ಕೊನೆಯದಾಗಿ ಪತ್ರಿಕೆಗಳ ಬಗ್ಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು [ಪುಟ-೭೩೦ ಹೊಸ ವಿಚಾರಗಳು] ಹೇಳುವ ಮಾತು ಹೀಗಿದೆ. ’ಬೆಂಗಳೂರಿನಲ್ಲಂತೂ ವರದಿಗಳಿಗಾಗಿ ವರದಿಗಾರರಾಗಿ ಲಂಚ, ಗುಂಡಿನ ಪಾರ್ಟಿಗಳು ಮತ್ತು ಇದೆಲ್ಲವನ್ನು ನಿರ್ವಹಿಸಲು ಕಮಿಶನ್ ಏಜೆಂಟರುಗಳೆಂಬ ತಲೆಹಿಡುಕರ ಬಳಗ ಇತ್ಯಾದಿಗಳು ನಿರ್ಮಾಣವಾಗಿದೆ. ಇಂಥಾ ಜನಗಳಿಂದ ಸೈದ್ಧಾಂತಿಕ ಸ್ಪಷ್ಟತೆಯನ್ನಾಗಲೀ, ಸ್ವಚ್ಛ ವರದಿಗಳನ್ನಾಗಲೀ ನಿರೀಕ್ಷಿಸುವುದು ಅಸಾಧ್ಯ. ಆದರೆ ಈ ಎಲ್ಲ ಪತ್ರಿಕೆಗಳೂ ಉನ್ನತ ಹಂತದಲ್ಲೂ ಧೋರಣೆಗಳನ್ನು ರೂಪಿಸುವ ಮಟ್ಟದಲ್ಲೂ ಭ್ರಷ್ಟಗೊಂಡಿದೆ ಎಂಬುದೇ ಅಚ್ಚರಿಯ ಸಂಗತಿ.’ ಎಂದಿರುವದಿದೆ. ಅಂತಿಮವಾಗಿ ಇಡೀ ಸಮಾಜವೇ ಭ್ರಷ್ಟವಾಗಿರುವಾಗ ಮಾಧ್ಯಮಲೋಕ ಅಷ್ಟೇ ನಿಯತ್ತಾಗಿ ಉಳಿಯಬೇಕು ಎನ್ನುವುದು ಯಾವ ನ್ಯಾಯ ಸ್ವಾಮಿ..? ಎಂಬ ಸಿನಿಕತನದ ಮಾತು ಮೂಡದಿದ್ದರೆ ಸಾಕು.

                                         
 

ಪಟೇಲರ ತತ್ವಗಳ ಸಮಾಧಿಯ ಮೇಲೆ ಮೋದಿಯ ಪ್ರತಿಮೆ


ಬಿ ಎಂ ಬಶೀರ್

ಸೌಜನ್ಯ : ವಾರ್ತಾಭಾರತಿ

ಭಾರತವೆಂದರೆ ಫ್ಯಾಂಟಸಿಗಳ ತವರೂರು. ನಾವು ಇಲ್ಲಿ ವಾಸ್ತವವನ್ನು ಫ್ಯಾಂಟಸಿ ರೂಪದಲ್ಲಿ ಮಾತ್ರ ಇಷ್ಟ ಪಡುತ್ತೇವೆ. ಇರುವವರನ್ನು ಕೊಂದು, ಬಳಿಕ ಅವರನ್ನು ವರ್ಣರಂಜಿತವಾಗಿ ನಮ್ಮ ಮೂಗಿನ ನೇರಕ್ಕೆ ರೂಪಿಸಿಕೊಳ್ಳುವುದರಲ್ಲಿ ಸಿದ್ಧಹಸ್ತರು. ಇಂತಹದೊಂದು ಮನಸ್ಥಿತಿಯಲ್ಲೇ ನಾವು ಪುರಾಣ ಗಳನ್ನು ಸೃಷ್ಟಿಸಿಕೊಂಡಿದ್ದೇವೆ. ನಮ್ಮ ಇತಿಹಾಸವನ್ನು ಗೊಂದಲಗೊಳಿಸಿ, ಅದಕ್ಕೆ ರೋಚಕತೆಯನ್ನು ತುಂಬಿ ನಮಗೆ ನಾವೇ ಮೈಥುನ ಮಾಡಿ ಕೊಳ್ಳುತ್ತಿದ್ದೇವೆ. ನಮ್ಮೆಲ್ಲ ಇತಿಹಾಸ ಪುರುಷರು ನಮ್ಮ ಈ ಮನಸ್ಥಿತಿಗೆ ಬಲಿಯಾಗಿದ್ದಾರೆ.

ಅದಕ್ಕೆ ಗಾಂಧಿಯೂ ಹೊರತಲ್ಲ, ಪಟೇಲರೂ ಹೊರತಲ್ಲ. ನರೇಂದ್ರ ಮೋದಿ ಆಗಸದೆತ್ತರ ಪಟೇಲರ ಪ್ರತಿಮೆಯೊಂದನ್ನು ತಯಾರಿಸುವುದಕ್ಕೆ ಹೊರಟಿ ದ್ದಾರೆ. ಮತ್ತು ಅದಕ್ಕೆ ಬೇಕಾದ ಕಬ್ಬಿಣಗಳನ್ನು ದೇಶಾದ್ಯಂತ ಸಂಗ್ರಹಿಸುವುದಕ್ಕೆ ಹೊರಟಿದ್ದಾರೆ. 600 ಅಡಿ ಎತ್ತರದ ಅಂದರೆ ಅಮೆರಿಕದ ಲಿಬರ್ಟಿ ಪ್ರತಿಮೆಯ ದುಪ್ಪಟ್ಟು ಎತ್ತರ ಇರುವಂತಹ ಪ್ರತಿಮೆಯನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ ನರೇಂದ್ರ ಮೋದಿ.


ಅಂದ ಹಾಗೆ ಇದಕ್ಕೆ ವೆಚ್ಚವಾಗುವ ಹಣ ಎಷ್ಟು ಗೊತ್ತೆ? 2,500 ಕೋಟಿ ರೂಪಾಯಿ! ಈ ಮೂಲಕ ನರೇಂದ್ರ ಮೋದಿ ಏನನ್ನು ಸಾಧಿಸಲು ಹೊರಟಿದ್ದಾರೆ? ಕನಿಷ್ಠ ಪಟೇಲರ ವೌಲ್ಯವನ್ನಾದರೂ ಎತ್ತಿ ಹಿಡಿಯುವ ಪ್ರಯತ್ನ ಇದರ ಹಿಂದೆ ಇದೆಯೆಂದಾಗಿ ದ್ದರೆ 2,500 ಕೋಟಿ ರೂ.ಯನ್ನು ದೇಶ ಸಹಿಸಬಹು ದಾಗಿತ್ತು. ಒಂದೆಡೆ ಈ ದೇಶ ಶೇ. 50ರಷ್ಟು ಬಡತನ, ಆಹಾರ ಕೊರತೆಯಿಂದ ನರಳುತ್ತಿರು ವಾಗ, ಯಾರನ್ನು ಉದ್ಧರಿಸಲು ಇಷ್ಟು ಕೋಟಿ ಯನ್ನು ವ್ಯಯ ಮಾಡುತ್ತಿದ್ದಾರೆ. ಒಬ್ಬ ಮೋದಿಯನ್ನು ಪ್ರಧಾನಿ ಮಾಡುವುದಕ್ಕಾಗಿ 2,500 ಕೋಟಿ ರೂಪಾಯಿ ಯನ್ನು ವೆಚ್ಚ ಮಾಡಲಾಗುತ್ತದೆ ಎಂದರೆ ಇದು ವಲ್ಲಭಭಾಯಿ ಪಟೇಲರಿಗೆ ಮಾಡುವ ಅವಮಾನ ವಾಗಿದೆ.


ನಿಜ. ಪಟೇಲರನ್ನು ಮರೆತರೆ ಭಾರತ ಗಣರಾಜ್ಯವನ್ನು ಮರೆತ ಹಾಗೆ. ದೇಶ ಸ್ವಾತಂತ್ರಗೊಂಡ ಬಳಿಕವೂ ಒಂದೆಡೆ ಪೋರ್ಚು ಗೀಸರು, ಮಗದೊಂದೆಡೆ ಹೈದರಾಬಾದ್ ನಿಜಾಮರು ಹಾಗೆಯೇ ಮೈಸೂರು ಅರಸರು ಈ ದೇಶವನ್ನು ತಿಗಣೆಗಳಂತೆ ಕಚ್ಚಿ ಕುಳಿತ್ತಿದ್ದಾಗ ವಿವಿಧ ತಂತ್ರಗಳನ್ನು ಬಳಸಿ ಅವರಿಂದ ದೇಶಕ್ಕೆ ಮುಕ್ತಿ ನೀಡಿದ್ದು ಪಟೇಲರು. ಸ್ವತಂತ್ರ ಭಾರತದ ಅಳಿದುಳಿದ ಬಿರುಕುಗಳನ್ನು ಮುಚ್ಚಿ ಈ ದೇಶವನ್ನು ಅಖಂಡಗೊಳಿಸಿದ್ದು ವಲ್ಲಭಭಾಯಿ ಪಟೇಲ್. ಅವರು ದೇಶವನ್ನು ಒಂದು ಗೂಡಿಸಿದರು. ಆದರೆ ನರೇಂದ್ರ ಮೋದಿ ಮತ್ತು ಅವರ ಆದರ್ಶ ವಾಗಿರುವ ಆರೆಸ್ಸೆಸ್ ಇಂದು ಮಾಡುತ್ತಿರುವುದು ಏನು? ಇವರು ಕಾಲಿಟ್ಟಲ್ಲೆಲ್ಲ ದೇಶ ಒಡೆಯುತ್ತದೆ. ಹಿಂದೂ-ಮುಸ್ಲಿಮರು ಹೊಡೆದಾಡತೊಡಗುತ್ತಾರೆ.

ವಲ್ಲಭಭಾಯಿ ಪಟೇಲ್ ಒಂದುಗೂಡಿಸಿದ ದೇಶ, ಆರೆಸ್ಸೆಸ್‌ನಂತಹ ಸಂಘಟನೆಯಿಂದ ಮತ್ತೆ ಬಿರುಕುಬಿಡುತ್ತಿದೆ. ಇಂತಹ ಸಂಘಟನೆಯ ಆಶೀರ್ವಾದದಿಂದ ಅಧಿಕಾರ ಹಿಡಿಯಲು ಹೊರಟಿರುವ ನರೇಂದ್ರಮೋದಿ ಅವರು ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಾರೆನ್ನುವುದೇ ಒಂದು ಅಸಂಗತ ನಾಟಕ. ನರೇಂದ್ರ ಮೋದಿ ತನ್ನ ಒಡೆಯುವ ರಾಜಕೀಯಕ್ಕೆ ಇಂದು ಪಟೇಲರನ್ನು ಬಳಸಲು ಮುಂದಾಗಿದ್ದಾರೆ. ಆದರೆ ಈ ದೇಶಕ್ಕೆ ಬೇಕಾಗಿರುವುದು ಒಂದುಗೂಡಿಸುವ ಪಟೇಲ್. ಆದರೆ ಮೋದಿ ನಿರ್ಮಿಸಲು ಹೊರಟಿರುವುದು ದೇಶ ಒಡೆಯುವ ಪಟೇಲರನ್ನು.

ಗುಜರಾತಿನಲ್ಲಿ 2,500 ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವುದು ಪಟೇಲರನ್ನು ಗೌರವಿಸುವುದಕ್ಕಲ್ಲ, ಅವಮಾನಿಸುವುದಕ್ಕೆ. ಯಾವ ಸಂಘಟನೆಯನ್ನು ಪಟೇಲರು ನಿಷೇಧಿಸಿದ್ದರೋ, ಯಾವ ಸಂಘಟನೆ ಪಟೇಲರನ್ನು ‘ದೇಶವನ್ನು ವಿಭಜಿಸಿದ್ದಾನೆ’ ಎಂದು ಅವಮಾನಿಸಿತ್ತೋ ಅದೇ ಸಂಘಟನೆ ಇದೀಗ ಪಟೇಲರನ್ನು ಬಳಸಿಕೊಂಡು ರಾಜಕೀಯ ನಾಟಕ ಆಡಲು ಹೊರಟಿದೆ. ದಿವಂಗತ ಹೊ.ವೆ.ಶೇಷಾದ್ರಿ ಆರೆಸ್ಸೆಸ್‌ನ ನೇತಾರರಾಗಿ ಕೆಲಸ ಮಾಡಿದವರು. ಅಲ್ಲದೆ ಆರೆಸ್ಸೆಸ್‌ನ ಹಿರಿಯ ಚಿಂತಕರು. ಇವರು ಬರೆದ ಕೃತಿಯೇ ‘ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಶನ್’.

ಈ ಕೃತಿಯಲ್ಲಿ ಶೇಷಾದ್ರಿಯವರು ಪಟೇಲರ ಮೇಲೆ ‘ದೇಶ ವಿಭಜನೆ’ಯ ನೇರ ಆರೋಪವನ್ನು ಮಾಡುತ್ತಾರೆ. ‘ನೆಹರೂ ಹಾಗೂ ಪಟೇಲ್ ಅನುಮೋದಿಸಿರುವ ಈ ಯೋಜನೆ ಯು, ಭಾರತವನ್ನು ತುಂಡರಿಸುವುದನ್ನು ಹಾಗೂ ಪಾಕಿಸ್ತಾನದ ಸೃಷ್ಟಿಯನ್ನು ಪ್ರತಿಪಾದಿಸಿತು...’ ಎಂದು ಸ್ಪಷ್ಟವಾಗಿ ಬರೆಯುತ್ತಾರೆ. ಆರೆಸ್ಸೆಸ್ ಕಾರ್ಯಾಲಯ ಈ ಕೃತಿಯನ್ನು ಯಾವ ನಾಚಿಕೆಯೂ ಇಲ್ಲದೆ ಮಾರಾಟ ಮಾಡುತ್ತಿದೆ.

ಗುಜರಾತಿನ ಮುಖ್ಯ ಕಾರ್ಯಾಲಯದಲ್ಲೂ ಇದು ಮಾರಾಟವಾಗುತ್ತಿರುವುದನ್ನು ಪತ್ರಿಕೆಗಳು ವರದಿ ಮಾಡಿವೆ. ನರೇಂದ್ರ ಮೋದಿ ನಿಜಕ್ಕೂ ಪಟೇಲರ ಮೇಲೆ ಗೌರವವನ್ನು ಹೊಂದಿ ದ್ದಾರಾದರೆ, ಅವರು ಪ್ರತಿಮೆಗೆ ಶಿಲಾನ್ಯಾಸ ನೆರವೇರಿಸುವ ಮುನ್ನ, ಈ ಕೃತಿಯನ್ನು ನಿಷೇಧಿಸಬೇಕಾಗಿತ್ತು. ಯಾಕೆ ಅವರು ಇನ್ನೂ ಈ ಕೃತಿಯನ್ನು ನಿಷೇಧಿಸಿಲ್ಲ? ಈ ಹಿಂದೆ ಜಸ್ವಂತ್ ಸಿಂಗ್ ಅವರು ‘ಜಿನ್ನಾ’ ಕುರಿತಂತೆ ಕೃತಿಯೊಂದನ್ನು ಬರೆದಿದ್ದರು. ಅದರಲ್ಲಿ ಸರ್ದಾರ್ ವಲಭಭಾಯಿ ಪಟೇಲ್ ಬಗ್ಗೆ ಆಕ್ಷೇಪಾರ್ಹ ಸಾಲುಗಳು ಇವೆ ಎಂದು ನರೇಂದ್ರ ಮೋದಿಯವರು ಈ ಕೃತಿಯನ್ನು ಗುಜರಾತ್‌ನಲ್ಲಿ ನಿಷೇಧಿಸಿದ್ದರು. ಆದರೆ ಹೊ. ವೇ. ಶೇಷಾದ್ರಿಯ ಕೃತಿಯ ತಂಟೆಗೆ ಈವರೆಗೆ ಹೋಗಿಲ್ಲ. ಇದರ ಅರ್ಥ ವೇನು? ಈ ದೇಶವನ್ನು ವಿಭಜಿಸಿದವರಲ್ಲಿ ಪಟೇಲರು ಸೇರಿದ್ದಾರೆ ಎನ್ನುವುದನ್ನು ಮೋದಿ ಪರೋಕ್ಷವಾಗಿ ಒಪ್ಪಿಕೊಂಡ ಸೂಚನೆಯೇ ಇದು?

  ಆರೆಸ್ಸೆಸ್ ಪಟೇಲರಿಗೆ ವಂಚಿಸಿದ ಕತೆ ಇತಿಹಾಸ. ಗಾಂಧಿ ಹತ್ಯೆಯ ಬಳಿಕ ಆರೆಸ್ಸೆಸ್ಸನ್ನು ನಿಷೇಧಿಸಲು ಶಿಫಾರಸು ಮಾಡಿರುವುದೇ ವಲ್ಲಭಭಾಯಿ ಪಟೇಲ್. ಗಾಂಧಿ ಹತ್ಯೆಗೆ ಆರೆಸ್ಸೆಸ್ ಚಿಂತನೆಗಳೇ ಕಾರಣ ಎಂದು ಪಟೇಲ್ ನಂಬಿದ್ದರು. 1948ರಲ್ಲಿ ಆರೆಸ್ಸೆಸ್ಸನ್ನು ನಿಷೇಧಿಸುವ ಸಂದರ್ಭದಲ್ಲಿ ಪಟೇಲರು ಹೊರಡಿಸಿದ ನೋಟಿಫಿಕೇಶನ್‌ನಲ್ಲಿ ‘‘ಆರೆಸ್ಸೆಸ್ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದೆ.

ದ್ವೇಷವನ್ನು ಬಿತ್ತಿದೆ. ಗಲಭೆಗಳನ್ನು ನಡೆಸಲು ಪ್ರೇರಣೆ ನೀಡಿದೆ’’ ಎಂದು ತಿಳಿಸಿದ್ದರು. ಅಷ್ಟೇ ಅಲ್ಲ, ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ‘‘ಆರೆಸ್ಸೆಸ್ ದೇಶ ವಿರೋಧಿ ಲಕ್ಷಣಗಳನ್ನು ಹೊಂದಿದೆ’’ ಎಂದಿದ್ದರು. ಆರೆಸ್ಸೆಸ್‌ನ ಮುಖಂಡ ಶ್ಯಾಮ್ ಪ್ರಸಾದ್ ಮುಖರ್ಜಿ ಯವರಿಗೆ ಬರೆದ ಪತ್ರದಲ್ಲೂ ಆರೆಸ್ಸೆಸ್‌ನ ದೇಶ ವಿರೋಧಿ ಚಟುವಟಿಕೆಗಳನ್ನು ಉಲ್ಲೇಖಿಸಿದ್ದರು. ಹಾಗೆಯೇ ಗೋಳ್ವಾಲ್ಕರ್‌ಗೆ ಬರೆದ ಪತ್ರದಲ್ಲಿ, ಆರೆಸ್ಸೆಸ್ ಚಿಂತನೆಯೇ ಗಾಂಧೀಜಿಯನ್ನು ಬಲಿತೆಗೆದು ಕೊಂಡಿತು ಎಂದು ಬರೆಯು ತ್ತಾರೆ. ಇಷ್ಟೆಲ್ಲ ಆದರೂ ವಲಭಭಾಯಿ ಪಟೇಲ್ ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ಹಿಂದೆಗೆಯುತ್ತಾರೆ. ಅದಕ್ಕೆ ಕಾರಣ, ಆರೆಸ್ಸೆಸ್ ಅವರಿಗೆ ನೀಡಿದ ವಾಗ್ದಾನ. 

1949ರಲ್ಲಿ ಆರೆಸ್ಸೆಸ್ ಪಟೇಲ್ ಅವರಿಗೆ ಕೆಲವು ವಾಗ್ದಾನ ವನ್ನು ನೀಡಿತು. ಒಂದು, ಅದು ತನ್ನ ಸಂವಿಧಾನ ವನ್ನು ಪುನರ್ ರಚಿಸಿತು. ಮತ್ತು ರಾಜಕೀಯ ದಲ್ಲಿ ಯಾವತ್ತೂ ಪ್ರವೇಶಿಸುವುದಿಲ್ಲ ಹಾಗೂ ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ತನ್ನನ್ನು ಸೀಮಿತಗೊಳಿಸುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿತು. ಆ ವಾಗ್ದಾನವನ್ನು ನಂಬಿ ಪಟೇಲರು ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ಹಿಂದೆಗೆಯಲು ಕಾರಣರಾದರು. ಆದರೆ ಇಂದು ಆರೆಸ್ಸೆಸ್ ತನ್ನ ಆ ವಾಗ್ದಾನವನ್ನು ಉಳಿಸಿ ಕೊಂಡಿದೆಯೆ? ತಾನು ನೀಡಿದ ವಾಗ್ದಾನವನ್ನೇ ಮರೆತ ಆರೆಸ್ಸೆಸ್ ಮತ್ತು ಅದರ ಪ್ರೀತಿಯ ಕುವರ ನರೇಂದ್ರ ಮೋದಿ ಇಂದು ಅತ್ಯಂತ ಎತ್ತರದ ಪಟೇಲರ ಪ್ರತಿಮೆಯನ್ನು ನಿಲ್ಲಿಸಲು ಹೊರಟಿ ದ್ದಾರೆ. 

ಇದು ಪಟೇಲರ ತತ್ವಗಳ ಸಮಾಧಿಯ ಮೇಲೆ ನಿಲ್ಲಿಸುವ ಪ್ರತಿಮೆಯಲ್ಲದೆ ಇನ್ನೇನು? ಇಂದು ಆರೆಸ್ಸೆಸ್ ಮತ್ತು ಮೋದಿ ನಿಜವಾದ ಪಟೇಲರನ್ನು ಅಳಿಸಿ ಅಲ್ಲಿ ಆರೆಸ್ಸೆಸ್ ಪಟೇಲರನ್ನು ನಿಲ್ಲಿಸಲು ಹೊರಟಿದ್ದಾರೆ. ಪಟೇಲರ ನಿಜವಾದ ವ್ಯಕ್ತಿತ್ವವನ್ನು ಅಳಿಸಿ ಹಾಕಿ ತಮ್ಮ ರಾಜಕೀಯ ಪೂರಕವಾದ ಪಟೇಲರನ್ನು ಅಂದರೆ ನೆಹರೂ ವಿರೋಧಿ ಪಟೇಲರನ್ನು ಪ್ರತಿಷ್ಠಾಪಿಸುವ ಉದ್ದೇಶ ನರೇಂದ್ರ ಮೋದಿ ಮತ್ತು ಬಳಗದ್ದಾಗಿದೆ. ಆದರೆ ನರೇಂದ್ರ ಮೋದಿಯ ಪಟೇಲರ ಪ್ರತಿಮೆ ಅದೆಷ್ಟೇ ಎತ್ತರವಿರಲಿ, ನಿಜವಾದ ಪಟೇಲರ ವ್ಯಕ್ತಿತ್ವದ ಎತ್ತರವನ್ನು ಆ ಪಟೇಲರ ಪ್ರತಿಮೆ ಸರಿಗಟ್ಟಲಾರದು. ಇದನ್ನು ಮೋದಿ ಬಳಗ ನೆನಪಿನಲ್ಲಿಡಬೇಕಾಗಿದೆ.

ವಿಚಾರವಂತಿಕೆಯನ್ನು ದೂರವಿಟ್ಟ ದುರಂತ


-ಜಿ.ಪಿ.ಬಸವರಾಜು
ಧರ್ಮ ಎಂದರೇನು? ಈ ಪ್ರಶ್ನೆಯನ್ನು ಎತ್ತಿದ ತಕ್ಷಣವೇ ಅನೇಕ ವಿವರಣೆಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಬುದ್ಧನಿಂದ ಆರಂಭಿಸಿ ಅಥವಾ ಅದಕ್ಕೂ ಹಿಂದಕ್ಕೆ ಹೋಗಿ, ಇಂದಿನವರೆಗೂ ಧರ್ಮವನ್ನು ವಿವಿಧ ನೆಲೆಯಲ್ಲಿ ಬಣ್ಣಿಸುವವರ ದಂಡೇ ಸಿದ್ಧವಾಗಿ ನಿಲ್ಲುತ್ತದೆ. ಪ್ರತಿಯೊಂದು ಧರ್ಮದ ಹುಟ್ಟು, ಬೆಳವಣಿಗೆ, ಅದರ ಸುಸಂಗತತೆ  ಹೀಗೆ ಅನೇಕ ಅಂಶಗಳನ್ನು ಎತ್ತಿಕೊಂಡು ಪ್ರವಚನಕ್ಕೆ ಆರಂಭಿಸುವವರಿಗೆ ನಮ್ಮಲ್ಲಿ ಬರವೇ ಇಲ್ಲ. ಅಷ್ಟೇಕೆ, ಯಾವ ದೇಶದಲ್ಲಾದರೂ ಧರ್ಮವನ್ನು ವೈಭವೀಕರಿಸಿ ವರ್ಣಿಸುವವರ ಸಂಖ್ಯೆ ಅಧಿಕವಾಗಿಯೇ ಇದೆ. ಆದರೂ ಈ ಭೂಮಿಯ ಮೇಲೆ ಧರ್ಮದ ಹೆಸರಿನಲ್ಲಿ ನಡೆದಷ್ಟು ಅಮಾನುಷ ಕೃತ್ಯಗಳು ಬೇರೆ ಯಾವುದರ ಹೆಸರಿನಲ್ಲಿಯೂ ನಡೆದಿಲ್ಲ.

ಭಾರತದಲ್ಲಂತೂ ಧರ್ಮ ಎಂದರೆ ಮೈ ನಡುಗಬೇಕು, ಅಷ್ಟೊಂದು ಮಠಗಳಿವೆ, ಧರ್ಮಕ್ಷೇತ್ರಗಳಿವೆ, ಧರ್ಮಗುರುಗಳಿದ್ದಾರೆ. ಯೋಗ, ಸಂಗೀತ, ಆಯುರ್ವೇದ, ದೇಸೀಪದ್ಧತಿಯ ಚಿಂತನೆ ಹೀಗೆ ಅನೇಕ ಸಂಗತಿಗಳನ್ನು ತಂದು ಧರ್ಮದ ಜೊತೆ ತಳುಕುಹಾಕಿ ಚೀಲಗಟ್ಟಲೆ ಹಣತುಂಬಿಸಿಕೊಳ್ಳುವ ಧಂದೆಯೂ ನಮ್ಮ ನಾಡಿನಲ್ಲಿ ನಿರ್ಲಜ್ಜ ರೀತಿಯಲ್ಲಿ ನಡೆಯುತ್ತಲೇ ಇದೆ. ಮತಧರ್ಮಗಳು, ಧರ್ಮಪೀಠಗಳು, ಜಾತಿಕೇಂದ್ರಗಳು ಅಧಿಕಾರ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಜಾತಿ ಸಂಘಟನೆಗಳು ಹೆಚ್ಚುತ್ತಲೇ ಹೋಗುತ್ತಿವೆ. ಧರ್ಮ ಎನ್ನುವುದು ಯಾವುದಕ್ಕೂ ಅಂಟಿಕೊಂಡ ಸಂಗತಿಯಲ್ಲ ಎಂದು ಹೇಳುತ್ತಿದ್ದರೂ, ಧರ್ಮ ಮತ್ತು ರಾಜಕೀಯದ ನಂಟು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಲೇ ಹೋಗುತ್ತಿದೆ. ಮತಧರ್ಮಗಳ ವಿಚಾರ ಬಂದಾಗ ನಮ್ಮ ರಾಜಕಾರಣಿಗಳು ಓಟುಗಳ ಮೇಲೇ ಕಣ್ಣಿಟ್ಟು ಮಾತನಾಡುವುದು ಒಂದು ಪರಿಪಾಠವಾಗಿ ಹೋಗಿದೆ. ಮುಕ್ತವಾಗಿ ಮತಧರ್ಮಗಳನ್ನು ವಿವೇಚಿಸುವ, ಅವುಗಳ ಓರೆಕೋರೆಗಳನ್ನು ವಿಮರ್ಶೆಗೆ ಒಡ್ಡುವ ಕ್ರಮವೇ ನಮ್ಮಲ್ಲಿ ಮರೆಯಾಗುತ್ತಿದೆಯೇನೋ ಎಂಬಂಥ ವಾತಾವರಣ ನಿರ್ಮಾಣವಾಗುತ್ತಿದೆ. ಒಂದು ಸಾಹಿತ್ಯ ಕೃತಿಯಲ್ಲಿ ಧರ್ಮದ ಪ್ರಶ್ನೆ ಬಂದರೆ ಸಾಕು ಬೀದಿಗಿಳಿದು ಪ್ರತಿಭಟಿಸುವ, ಕೃತಿಕಾರನ ಕ್ಷಮೆಗೆ ಒತ್ತಾಯಿಸುವ ಸಂದರ್ಭಗಳನ್ನು ನಾವೆಲ್ಲ ನೋಡುತ್ತಿದ್ದೇವೆ. ಮತಧರ್ಮಗಳು ತೀರ ಸೂಕ್ಷ್ಮ ಸಂಗತಿಗಳಾಗುತ್ತ, ಯಾರೂ ಅವುಗಳ ಬಗ್ಗೆ ಮಾತನಾಡದಂಥ ವಾತಾವರಣ ಸೃಷ್ಟಿಯಾಗಿದೆ.

ಮನುಷ್ಯರ ಬದುಕನ್ನು ಪ್ರೀತಿ, ಸಹನೆ, ಕರುಣೆಗಳಿಂದ ಕಟ್ಟಲು ರೂಪಿಸಿದ ಮಾರ್ಗವೇ ಧರ್ಮ. ಬುದ್ಧ ಕರುಣೆಯನ್ನೇ ತನ್ನ ಮಾರ್ಗದ ಮುಖ್ಯ ಅಂಶವಾಗಿಸಿಕೊಂಡ. ಜೈನ ಧರ್ಮ ಅಹಿಂಸೆಯನ್ನೇ ಬೋಧಿಸಿತು. ನನ್ನ ಧರ್ಮ ಎಂದರೆ ಕರುಣೆ ಎನ್ನುತ್ತಾರೆ ದಲಾಯಿ ಲಾಮ. ಕ್ಷಮಿಸುವುದನ್ನು ಒಂದು ಧರ್ಮ ಹೇಳಿದರೆ, ಸಹಜೀವನಕ್ಕೆ ಅಗತ್ಯವಾದ ಸಹನೆಯನ್ನು ಇನ್ನೊಂದು ಧರ್ಮ ಹೇಳುತ್ತದೆ. ಗಾಂಧೀಜಿಯವರಿಗೆ ಸತ್ಯವೇ ಧರ್ಮವಾಗಿತ್ತು. ಸತ್ಯ, ಕರುಣೆ, ಅಹಿಂಸೆ ಹೀಗೆ ಸರಳ ರೂಪದಲ್ಲಿ ಧರ್ಮವನ್ನು ನೋಡಿದಾಗ ಅದು ಹೆಚ್ಚು ಅರ್ಥವಂತಿಕೆಯನ್ನು ತುಂಬಿಕೊಂಡಿರುತ್ತದೆ. ಮನುಷ್ಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿಯೂ ಕಾಣಿಸುತ್ತದೆ. ಇಂಥ ಸರಳವಾದ ಸಂಗತಿಗಳಿಂದ ಧರ್ಮವನ್ನು ನೋಡಿದಾಗ ಅದು ಸುಲಭವಾಗಿ ಅರ್ಥವೂ ಆಗುತ್ತದೆ. ಅದಕ್ಕೆ ಅರ್ಥವಾಗದ ಮಂತ್ರಗಳು, ಶ್ಲೋಕಗಳು ಬೇಡ. ಉದ್ದುದ್ದ ವ್ಯಾಖ್ಯಾನಗಳು, ಅರ್ಥವಿವರಣೆಗಳು ಬೇಡ. ಸತ್ಯವಂತನಾಗಿ ಬದುಕುವುದು ಕಷ್ಟ. ಆದರೆ ಸತ್ಯವಂತನಾಗಿರು ಎಂದು ಹೇಳಿದಾಗ ಅದು ಮನುಷ್ಯರಿಗೆ ಅರ್ಥವಾಗುತ್ತದೆ. ಅದರ ಆಚರಣೆಗೂ ಅವರು ಪ್ರಯತ್ನಿಸಬಹುದು.

ಪ್ರತಿಯೊಂದು ಧರ್ಮವೂ ವ್ಯಕ್ತಿಯ ಘನತೆಯನ್ನು ಹೆಚ್ಚಿಸಲು ನೋಡುತ್ತದೆ. ಅವನ ಅಂತರಂಗದ ವಿಕಾಸಕ್ಕೆ ನೆರವಾಗುವಂತಿರುತ್ತದೆ. ಅಲ್ಲಿ ಗುಲಾಮಗಿರಿ ಇರುವುದಿಲ್ಲ. ಗುಲಾಮಗಿರಿಯಿಂದ ಮನುಷ್ಯನನ್ನು, ಮನುಷ್ಯನ ಮನಸ್ಸನ್ನು ಬಿಡಿಸುವುದೇ ಧರ್ಮದ ಮುಖ್ಯ ಗುರಿಯಾಗಿರುತ್ತದೆ. ಆದರೆ ಇವತ್ತು ನಮ್ಮ ಧರ್ಮಗಳು ಹೇಗಿವೆ ನೋಡಿ. ನಮ್ಮ ಧರ್ಮಗುರುಗಳನ್ನು ನೋಡಿದರೂ ಅದು ತಿಳಿದುಬಿಡುತ್ತದೆ.  ನಮ್ಮಲ್ಲಿ ಯಾವ ಧರ್ಮಗುರುವೂ ಸಮಾನತೆಯನ್ನು ಇಷ್ಟಪಡುವುದಿಲ್ಲ. ಎಲ್ಲರೂ ಅವರ ಮುಂದೆ ಭಕ್ತರು; ಅಂದರೆ ಈ ಭಕ್ತರು ಗುರುವಿಗೆ ಅಡಿಯಾಳಾಗಿರಬೇಕು. ತನ್ನನ್ನು ಪೂಜಿಸಬೇಕು, ಹೊತ್ತು ಮೆರೆಯಬೇಕು, ತನ್ನ ಕಾಲಿಗೆರಗಬೇಕು ಇತ್ಯಾದಿ ಈ ಬಗೆಯ ಆಚರಣೆಗಳಿಗೆ ಮತ್ತು ವಿಚಾರಗಳಿಗೇ ಒತ್ತು ಇರುತ್ತದೆ. ಇಲ್ಲವಾದರೆ ಅಡ್ಡಪಲ್ಲಕ್ಕಿ ಉತ್ಸವ ಯಾಕೆ ನಡೆಯಬೇಕು. ದರ್ಬಾರು ಯಾಕೆ ನಡೆಯಬೇಕು?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಂತೂ ಸಮಾನತೆಗೆ ಹೆಚ್ಚು ಒತ್ತು ಇರುತ್ತದೆ. ಈ ವ್ಯವಸ್ಥೆಯ ಅಡಿಯಲ್ಲಿ ಬದುಕುವವರೆಲ್ಲರೂ ಸಮಾನರು. ಇಲ್ಲಿ ಯಾರದೂ ದರ್ಬಾರು ಇರುವುದಿಲ್ಲ. (ರಾಜಕಾರಣಿಗಳ ದರ್ಬಾರು ಇರುವುದಿಲ್ಲವೇ ಎಂದರೆ ಅದಕ್ಕೂ ಒಂದು ಕೊನೆ ಎಂಬುದು ಇರುತ್ತದೆ. ಅಂಥ ದರ್ಬಾರನ್ನು ಮತದಾರರು ಕೊನೆಗೊಳಿಸುವ ಅವಕಾಶವನ್ನು ಪಡೆದಿರುತ್ತಾರೆ) ದರ್ಬಾರು ನಡೆಸುತ್ತಿದ್ದ ರಾಜರ ಕಾಲವಂತೂ ಮುಗಿಯಿತು. ರಾಜರ ಪಳೆಯುಳಿಕೆಗಳಾಗಿ ಉಳಿದಿರುವ ರಾಜವಂಶಸ್ಥರ ದರ್ಬಾರುಗಳು ಸಾಂಕೇತಿಕವಾಗಿ ನಡೆದರೂ, ಅವು ಸಾರ್ವಜನಿಕವಾಗಿ ನಡೆಯುವಂತಿಲ್ಲ. ಹೀಗಾಗಿಯೇ ಅವುಗಳನ್ನು ಖಾಸಗೀ ದರ್ಬಾರುಗಳೆಂದು ಕರೆಯುತ್ತಾರೆ. ಅಲ್ಲಿ ರಾಜನಿಗೆ ಮುಜುರೆ ಸಲ್ಲಿಸುವುದು, ಕಪ್ಪ ಕಾಣಿಕೆ ಸಲ್ಲಿಸುವುದು ಇತ್ಯಾದಿ ಆಚರಣೆಗಳು ಕೇವಲ ಸಾಂಕೇತಿಕವಾಗಿರುತ್ತವೆ. ಆಗಿಹೋದ ಒಂದು ಕಾಲದ ವ್ಯವಸ್ಥೆಯ ಅಣಕಗಳಂತೆ ಈ ಆಚರಣೆಗಳು ಕಾಣುವುದರಿಂದ ಯಾರೂ ಇಂಥ ಆಚರಣೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ; ಪ್ರಹಸನಗಳನ್ನು ನೋಡಿ ನಗುತ್ತಾರೆ. ಇಂಥ ಆಚರಣೆಗಳಲ್ಲಿ ಭಾಗವಹಿಸುವವರು ಸಾರ್ವಜನಿಕರ ಕರುಣೆಗೆ ಪಾತ್ರರಾಗುವ ಸ್ಥಿತಿಯೂ ಇದೆ. ಇಂಥ ಹೊತ್ತಿನಲ್ಲಿ ವಿವೇಚನೆಯಿಲ್ಲದ ಕೆಲವರು ಧರ್ಮಗುರುಗಳು ಅಡ್ಡಪಲ್ಲಕ್ಕಿ, ಉದ್ದಪಲ್ಲಕ್ಕಿ ಉತ್ಸವಗಳನ್ನು ಆಚರಿಸಿಕೊಳ್ಳಲು ನೋಡುತ್ತಾರೆ. ಅನಗತ್ಯ ಗೊಂದಲ, ವಿವಾದಗಳನ್ನೂ ಹುಟ್ಟುಹಾಕುತ್ತಾರೆ. ಈ ಪಲ್ಲಕ್ಕಿಯ ಉತ್ಸವವೇ ಹಾಸ್ಯಾಸ್ಪದವಾದದ್ದು. ಒಬ್ಬರ ಹೆಗಲಮೇಲೆ ಕುಳಿತು ಪ್ರಯಾಣಿಸುವುದು ಎಂಥ ಅಮಾನವೀಯ. ಮುದುಕರೋ, ನಡೆಯಲಾಗದ ದುರ್ಬಲರೋ ಇಂಥದನ್ನು ಬಯಸಿದರೆ ಅದಕ್ಕೆ ಅರ್ಥವಿರುತ್ತದೆ. ಅದೊಂದು ನೆರವು ಎಂದುಕೊಂಡು ಅದನ್ನು ಒದಗಿಸಬಹುದು. ಆದರೆ ಧಡಿಯರಾದವರು, ಗಟ್ಟಿಮುಟ್ಟಾಗಿದ್ದು ಕುಸ್ತಿಗೆ ಇಳಿಯಬಲ್ಲ ಜಟ್ಟಿಗಳಂಥ ಸ್ವಾಮಿಗಳು ತಮ್ಮನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ ಎಂದು ಜನರಿಗೆ ಹೇಳುವುದು ಎಂಥ ಹಾಸ್ಯಾಸ್ಪದ. ಇಂಥ ಆಚರಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತವೆ. ಇದಕ್ಕೆ ಧರ್ಮದ ಹೊದಿಕೆ ಇರುತ್ತದೆ. ಹೀಗಾಗಿ ಇದನ್ನು ಪ್ರಶ್ನಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಒಂದೇ ಜಾತಿಗೆ ಸೇರಿದ ಜನ ಈ ಉತ್ಸವಗಳ ವಿಚಾರದಲ್ಲಿ ???? ??????? ಯುದ್ಧಕ್ಕೆ ಮುಂದಾದರೂ ಸರ್ಕಾರಗಳು ಮೌನವಾಗಿದ್ದುಬಿಡುತ್ತವೆ. ಇಂಥ ಉತ್ಸವಗಳನ್ನು ನಿಷೇಧಿಸುವ ಧೈರ್ಯವನ್ನು ತೋರುವುದಿಲ್ಲ. ಜಾತಿ ಸಂಘಟನೆಗಳು, ಅವುಗಳ ಬಲಾಬಲಗಳು, ಓಟಿನ ರಾಜಕಾರಣ ಹೀಗೆ ಎಲ್ಲವೂ ಸೇರಿಕೊಂಡು ಇಂಥ ಪಲ್ಲಕ್ಕಿ ಉತ್ಸವಗಳು ನಿಷೇಧಕ್ಕೆ ಒಳಗಾಗುವುದಿಲ್ಲ. ನಷೇಧದ ಮಾತಿರಲಿ, ಆರೋಗ್ಯಕರ ಚರ್ಚೆಗೂ ಇಲ್ಲಿ ಅವಕಾಶವಿರುವುದಿಲ್ಲ.

ಮುಖ್ಯವಾದ ಮಾತೆಂದರೆ ಮನುಷ್ಯ ಮೊದಲು ಗುಲಾಮಗಿರಿಯಿಂದ ಹೊರಬರಬೇಕು. ಮುಕ್ತವಾಗಿ ಚಿಂತಿಸುವ, ಚರ್ಚಿಸುವ ವಿಚಾರವಂತಿಕೆಯನ್ನು ತನ್ನದಾಗಿ ಮಾಡಿಕೊಳ್ಳಬೇಕಾದರೆ  ಮೊದಲು ಅವನು ಸ್ವತಂತ್ರನಾಗಬೇಕು. ಮೌಢ್ಯಗಳಿಂದ ಹೊರಬರಬೇಕು. ಸಮಾನತೆ ನಮಗೆ ಬೇಕು ಎಂದು ಹೇಳುತ್ತಲೇ ಅರ್ಹನೋ, ಅನರ್ಹನೋ ಆದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ಮೆರೆಸುವ ಮೌಢ್ಯಕ್ಕೆ, ದಾಸ್ಯಕ್ಕೆ ನಾವು ಒಳಗಾಗುತ್ತೇವೆ. ಅದೂ ಸಾರ್ವಜನಿಕವಾಗಿ ಇಂಥ ಆಚರಣೆಗಳು ಇರಬೇಕೇ ಬೇಡವೇ ಎಂದು ನಾವು ಯೋಚಿಸುವುದೇ ಇಲ್ಲ. ನಮ್ಮ ಜಾತಿ, ನಮ್ಮ ಧರ್ಮ ಎಂದ ಕೂಡಲೇ ನಮ್ಮ ವಿಚಾರ ಶಕ್ತಿಯೇ ಕುಗ್ಗಿಹೋಗಿಬಿಡುತ್ತದೆ.

ವಿಚಾರವಂತಿಕೆ ಎಂಬುದನ್ನು ನಮ್ಮ ಹತ್ತಿರ ಕರೆದುಕೊಂಡರೆ ಎಲ್ಲ ರೀತಿಯ ಮೌಢ್ಯಗಳೂ ದೂರವಾಗುತ್ತವೆ. ಆದರೆ ವಿಚಾರವಂತಿಕೆ ಯಾರಿಗೆ ಬೇಕು? ಬರ್ಟ್ರಂಡ್ ರಸೆಲ್, ಕುವೆಂಪು ಅವರಿಗಿಂತ ನಮಗೆ ಮಂಕುಬೂದಿಯ ಬಾಬಾಗಳೇ ಹೆಚ್ಚು ಪ್ರಿಯ. ಹೀಗಾಗಿಯೇ ಈ ನಾಡಿನಲ್ಲಿ ಬೂದಿಬಾಬಾಗಳ ಸಂಖ್ಯೆ ಹೆಚ್ಚು. ಮನುಷ್ಯನನ್ನು ಮನುಷ್ಯ ಹೆಗಲಮೇಲೆ ಹೊತ್ತು ನಡೆಸುವ ಉತ್ಸವಗಳು, ಪಾದವನ್ನು ತೊಳೆದು ಕೊಳೆ ನೀರನ್ನು ಕುಡಿಯುವ ಆಚರಣೆಗಳು, ನದಿನೀರಿನಲ್ಲಿ ಹೆಣಗಳನ್ನು ತೇಲಿಬಿಡುವ ಪದ್ಧತಿಗಳು, ಮಡಸ್ನಾನದಂಥ ಅನಿಷ್ಟಗಳು, ಇಂಥವೇ ನೂರಾರು ಆಚರಣೆಗಳು ಇಲ್ಲಿ ಜೀವಂತವಾಗಿರುವುದರ ಹಿಂದೆ ವಿಚಾರವಂತಿಕೆಯನ್ನು ನಾವು ದೂರವಿಟ್ಟಿರುವ ದೊಡ್ಡ ಚರಿತ್ರೆಯೇ ಇದೆ.

ಸೌಜನ್ಯ : ಸಂಯುಕ್ತ ಕರ್ನಾಟಕ-ಜಿ.ಪಿ.ಬಸವರಾಜು

೯೪೮೦೦ ೫೭೫೮೦

ನ 1 ಕುಂದಾಪೂರ : ಸೌಹಾರ್ದ ದೀಪಾವಳಿ

Wednesday, October 30, 2013

ಸಮಾನ ಶಿಕ್ಷಣದೆಡೆಗಿನ ಪಯಣ

ಸಮಾನ ಶಿಕ್ಷಣದೆಡೆಗಿನ ಪಯಣ

 

ರೂಪ ಹಾಸನ

 

ವಾರ್ತಾಭಾರತಿ

 

ಹಳ್ಳಿಗಳ ಸರಕಾರಿ ಶಾಲೆಗಳ ಮಕ್ಕಳಿಗಾಗಿ ನಮ್ಮ ಪ್ರೇರಣಾ ವಿಕಾಸ ವೇದಿಕೆಯಿಂದ ನಡೆಸುವ ನಿರಂತರ ಕಾರ್ಯಕ್ರಮಗಳಿಂದಾಗಿ ಬಹಳಷ್ಟು ವಿಶೇಷಗಳು, ವೈರುಧ್ಯಗಳೂ ಕಣ್ಣಿಗೆ ಬೀಳುತ್ತಿರು ತ್ತವೆ. ಈಗ್ಗೆ ೩-೪ ವರ್ಷದ ಹಿಂದೆ ಹಳ್ಳಿಯ ಶಾಲೆಯೊಂದರಲ್ಲಿ ಕಾರ್ಯಕ್ರಮದಲ್ಲಿದ್ದಾಗ ಹೆಣ್ಣುಮಕ್ಕಳೇ ಹೆಚ್ಚಾಗಿದ್ದರು. ಈಗ ಹೆಣ್ಣುಮಕ್ಕಳಿಗೂ ಶಿಕ್ಷಣ ಕೊಡಬೇಕೆಂದು ಜನರಲ್ಲೂ ಜಾಗೃತಿ ಮೂಡಿದೆ ಎನಿಸಿ ಸಮಾಧಾನವಾಗಿತ್ತು. ಆದರೆ ಮುಂದೆ ಬೇರೆ ಹಳ್ಳಿಗಳ ಶಾಲೆಗಳಿಗೆ ಹೋದಾಗಲೂ ಹೆಣ್ಣುಮಕ್ಕಳೇ ಹೆಚ್ಚಾಗಿ ಕಾಣಲಾರಂಭಿಸಿದಾಗ ಸಂದೇಹ ಕಾಡಲಾರಂಭಿಸಿತು. ಸಮಾಜದಲ್ಲಿ ಹೆಣ್ಣುಮಕ್ಕಳು ಹುಟ್ಟುವ ಸಂಖ್ಯೆಯೇ ಗಣನೀಯ ಪ್ರಮಾಣದಲ್ಲಿ ಕುಸಿದಿರುವಾಗ, ಶಾಲೆಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿರಲು ಹೇಗೆ ಸಾಧ್ಯ? ಅನುಮಾನದಿಂದ ಶಿಕ್ಷಕ ಮಿತ್ರರನ್ನು ಅಡ್ಡಪ್ರಶ್ನೆ ಮಾಡಲಾರಂಭಿಸಿದಾಗ ತಿಳಿದದ್ದು ಈಗ ಹೆಚ್ಚಿನ ಸರಕಾರಿ ಶಾಲೆಗಳಲ್ಲಿ ಉಳಿದಿರುವವರು ಬಡ ಹೆಣ್ಣುಮಕ್ಕಳು ಮತ್ತು ತಳಸಮುದಾಯದ ಮಕ್ಕಳು! .

ಹತ್ತಿರದಲ್ಲೆಲ್ಲೂ ಖಾಸಗಿ ಶಾಲೆಗಳಿಲ್ಲದೇ, ಅನಿವಾರ್ಯವಾಗಿ ಸರಕಾರಿ ಶಾಲೆಯನ್ನೇ ಅವಲಂಬಿಸಬೇಕಾದಲ್ಲಿ ಮಾತ್ರ ಜಾತಿ, ವರ್ಗ, ಲಿಂಗ ಭೇದವಿಲ್ಲದೇ ಎಲ್ಲರೂ ಸರಕಾರಿ ಶಾಲೆಗೇ ಬರುತ್ತಾರಷ್ಟೇ. ಆಯ್ಕೆ ಇದ್ದರೆ ಹೆಚ್ಚಿನ ಉಳ್ಳವರು ಬಯಸುವುದು ಕಾನ್ವೆಂಟ್‌ಗಳನ್ನೇ. ಅದರಲ್ಲೂ ಒಂದೇ ಮನೆಯಲ್ಲಿ ಗಂಡು-ಹೆಣ್ಣುಮಕ್ಕಳಿಬ್ಬರೂ ಇದ್ದರೆ, ಬಡತನವಿದ್ದರೂ ಕಷ್ಟಪಟ್ಟಾದರೂ ಗಂಡನ್ನು ಕಾನ್ವೆಂಟ್ ಶಾಲೆಗೆ ಸೇರಿಸಿ, ಹೆಣ್ಣನ್ನು ಸರಕಾರಿ ಶಾಲೆಗೆ ಸೇರಿಸಲಾಗುತ್ತದೆ! ಸಮಾನ ಶಿಕ್ಷಣ ವ್ಯವಸ್ಥೆ ಇಲ್ಲದಿದ್ದರೆ, ದುರ್ಬಲರು, ಶೋಷಿತರು ಹೇಗೆ ಅಂಚಿಗೆ ತಳ್ಳಲ್ಪಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ.


ಸ್ವಾತಂತ್ರ ದೊರೆತ ಎರಡು ದಶಕಗಳ ನಂತರ ಹುಟ್ಟಿ, ಗ್ರಾಮೀಣ ಪ್ರದೇಶದ ಸಾಮಾಜಿಕ ಭೇದವಿಲ್ಲದೇ ಕಿಕ್ಕಿರಿದು ತುಂಬಿರುತ್ತಿದ್ದ ಸರಕಾರಿ ಶಾಲೆಗಳಲ್ಲಿ ಓದಿದ ನನ್ನಂತಹವರಿಗೆ, ಕಳೆದೆರಡು ದಶಕಗಳಿಂದ ಆಗುತ್ತಿರುವ ವೇಗದ ಬದಲಾವಣೆ ದಿಗ್ಭ್ರಮೆ ಮೂಡಿಸುತ್ತಿದೆ.ನಮ್ಮ ಭಾರತಕ್ಕೆ ಇದೆಲ್ಲಾ ಏನಾಗಿ ಹೋಯ್ತು? ಎಲ್ಲೆಲ್ಲೂ ಅಸಮಾನತೆಯೇ ತಾಂಡವವಾಡುತ್ತಿರುವಂತೆ ಯಾಕೆ ಕಾಣುತ್ತಿದೆ? ಇದನ್ನು ಎಲ್ಲಿಂದ ಸರಿಪಡಿಸುವುದು? ಸರಿಪಡಿಸುವವರಾರು? ಹೇಗೆ ಸರಿಪಡಿಸುವುದು? ಎಂಬ ಪ್ರಶ್ನೆಗಳು ಕಾಡಲಾರಂಭಿಸುತ್ತವೆ.


ಸಮ ಸಮಾಜವೆಂಬ ಬಂಗಲೆಯ ಅಡಿಪಾಯವಾದ, ಸಮಾನ ಶಿಕ್ಷಣ ವ್ಯವಸ್ಥೆ ಎಂಬುದೇ ಒಂದು ಆದರ್ಶದ ಸ್ಥಿತಿ ಇರಬಹುದೇ? ಅದನ್ನು ಎಂದಿಗೂ ಸಾಧಿಸಲು ಸಾಧ್ಯವಾಗುವುದಿಲ್ಲವೇ? ಆದರೆ ಸಮಾನ ಶಿಕ್ಷಣ ವ್ಯವಸ್ಥೆ ಉಳ್ಳ ಅಮೆರಿಕಾ, ಕ್ಯೂಬಾ, ಚೀನಾ, ರಷ್ಯಾ, ಬ್ರಿಟನ್ ರಾಷ್ಟ್ರಗಳು ಕಣ್ಣೆದುರಿಗಿವೆಯಲ್ಲಾ? ಅಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಸಾಧ್ಯವಾಗುತ್ತಿಲ್ಲ? ಇಲ್ಲಿ ಅಂತಹ ಪ್ರಯತ್ನಗಳು ಆಗಲೇ ಇಲ್ಲವೇ? ಚರಿತ್ರೆಯ ಗರ್ಭವನ್ನು ಬಗೆಯುತ್ತಾ ಹೊರಟರೆ, ಅಸಹನೀಯ ಸತ್ಯಗಳು ಕಣ್ಣ ಮುಂದೆ ನಿಲ್ಲುತ್ತವೆ.


ನಿಜವಾದ ಸಮಾನತೆಯ ಅಡಿಪಾಯದ ಶಿಕ್ಷಣ ಹಕ್ಕು ಕಾಯ್ದೆ ಮೊದಲು ಮಂಡನೆಯಾದದ್ದು ಸ್ವಾತಂತ್ರಪೂರ್ವದ 1882ರಲ್ಲಿ ಜ್ಯೋತಿ ಬಾ ಫುಲೆ ಅವರಿಂದ. ಅದುವರೆಗೆ ಕೆಲವೇ ಕೆಲವು ಮೇಲ್ಜಾತಿ, ಮೇಲ್ವರ್ಗದ ಪುರುಷರಿಗೆ ಸೀಮಿತವಾಗಿದ್ದ ಶಿಕ್ಷಣ, ಎಲ್ಲರ ಹಕ್ಕು ಎಂದು ಪ್ರತಿಪಾದಿಸಿದ್ದು, ಜೊತೆಗೆ ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರೊಡಗೂಡಿ ಮಹಿಳೆ ಮತ್ತು ತಳಸಮುದಾಯದವರಿಗಾಗಿಯೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಶಿಕ್ಷಣ ಮತ್ತು ಸಮಾನತೆ ಕುರಿತ ಅವರ ನಿಜವಾದ ಕಾಳಜಿಯನ್ನು ತೋರಿಸುತ್ತದೆ. 

ಆ ನಂತರ ಗೋಪಾಲಕೃಷ್ಣ ಗೋಖಲೆಯವರು 1911ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಬಿಲ್ ಮಂಡನೆ ಮಾಡಿದಾಗ ಬಹುಸಂಖ್ಯಾತರ ವಿರೋಧವನ್ನು ಎದುರಿಸ ಬೇಕಾಯಿತು. ಇದರ ವಿರುದ್ಧವಾಗಿ 11,000 ವಿರೋಧಿ ಸಹಿಗಳನ್ನು ಸಂಗ್ರಹಿಸಲಾಯಿತು. 1937ರವರೆಗೂ ಈ ಬಿಲ್ ಪಾಸ್ ಆಗಲಿಲ್ಲ. ಮಹಾತ್ಮಾ ಗಾಂಧಿ ಎಲ್ಲರಿಗೂ ಶಿಕ್ಷಣ ಎಂಬುದಕ್ಕೆ ಪರವಾಗಿ ವಾದಿಸಿದ್ದು ಗಟ್ಟಿಯಾಗಿ ನಿಂತಿದ್ದು ಒಂದು ಇತಿಹಾಸ. ರಾಜಮಹಾ ರಾಜರು, ಸಾಮಂತರು, ಭೂಮಾಲಕರು ಎಲ್ಲರಿಗೂ ಶಿಕ್ಷಣ ಕೊಟ್ಟರೆ ಆಳುಗಳ ಕೆಲಸವನ್ನು ಮಾಡುವ ವರ‍್ಯಾರು ಎಂದು ಪ್ರತಿರೋಧ ಒಡ್ಡಿದರು.

ಸ್ವಾತಂತ್ರ ನಂತರ 1948-49ರಲ್ಲಿ ಅಸೆಂಬ್ಲಿಯಲ್ಲಿ ಮತ್ತೆ ಉಚಿತ ಶಿಕ್ಷಣದ ಕುರಿತು ಚರ್ಚೆಗಳಾಯಿತು. ಅಲ್ಲಿಯವರೆಗೆ 14 ವರ್ಷ ದವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡ ಬೇಕೆಂದಿದ್ದು 11 ವರ್ಷಕ್ಕೆ ಇಳಿಸಬೇಕೆಂದು ಭೂಮಾಲಕರು ವಾದ ಮಾಡಿದರು.ಆದರೆ ಅಂಬೇಡ್ಕರ್ 11ವರ್ಷದ ನಂತರ ಮಕ್ಕಳು ಬಾಲಕಾರ್ಮಿಕರಾಗುತ್ತಾರೆಂಬ ಭವಿಷ್ಯವನ್ನು ಮುಂದಾಲೋಚಿಸಿ 14 ವರ್ಷದವರೆಗಿನ ಶಿಕ್ಷಣ ವನ್ನು ಕಡ್ಡಾಯಗೊಳಿಸಲು ಒಪ್ಪಿಸಿದರು. ಆದರೆ ನಮ್ಮ ಅಸಮಾನ ಭಾರತದ ಸಾಮಾಜಿಕ ವ್ಯವಸ್ಥೆಗೆ ಇದರೊಂದಿಗೇ ಸಮಾನ ಶಿಕ್ಷಣ ವ್ಯವಸ್ಥೆಯೂ ಕಡ್ಡಾಯವಾಗಿ ಜಾರಿಗೊಳ್ಳಬೇಕಿತ್ತು. ಏಕೋ ಕಡ್ಡಾಯ ಶಿಕ್ಷಣದ ಕುರಿತೇ ನಡೆದ ಸುದೀರ್ಘ ಚರ್ಚೆಗಳು ಸಮಾನ ಶಿಕ್ಷಣದವರೆಗೆ ಆ ಹಂತದಲ್ಲಿ ತಲುಪಲೇ ಇಲ್ಲ.


ಭಾರತದಲ್ಲಿ ಬಹುಶಃ ಅತಿ ಹೆಚ್ಚು ಚರ್ಚೆಗೊಳಗಾಗಿದ್ದು ನಮ್ಮ ಶಿಕ್ಷಣ ವ್ಯವಸ್ಥೆ. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಇಂದಿಗೂ ಶಿಕ್ಷಣಕ್ಕೆ ಸಂಬಂಧಿಸಿದ 3,000 ಕೇಸುಗಳು ಜೀವಂತವಾಗಿರುವುದೇ ಇದಕ್ಕೆ ಸಾಕ್ಷಿ. ಎಷ್ಟೆಲ್ಲಾ ಸಂಘರ್ಷಗಳಾದರೂ ಸಂವಿಧಾನದ ಮೂಲ ಆಶಯವಾದ ಸಮಾನತೆ, ಸಾಮಾಜಿಕ ನ್ಯಾಯ, ತಾರತಮ್ಯರಹಿತವಾದ ಶಿಕ್ಷಣದಿಂದ ನಿಧಾನಕ್ಕೆ ದೂರ ಸರಿಯುತ್ತಾ, ಇವುಗಳನ್ನೇ ಒಡೆದು ದೊಡ್ಡ ಗೋಡೆಗಳನ್ನು ಕಟ್ಟಿ ಶ್ರೇಣೀಕೃತ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸಲಾಗುತ್ತಿದೆಯೆಂಬುದೇ ದುರಂತ.

ವರ್ಗ ಹಾಗೂ ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಬಂಡವಾಳಶಾಹಿಗಳ ಕಪಿಮುಷ್ಟಿಗೆ ಸಿಕ್ಕಿ ಇಂದು ಶಿಕ್ಷಣವೂ ಒಂದು ವ್ಯಾಪಾರವಾಗಿಬಿಟ್ಟಿದೆ. ಸಾಮಾಜಿಕ-ಆರ್ಥಿಕತೆಯ ದಟ್ಟವಾದ ತಾರತಮ್ಯಕ್ಕೆ ಒಳಗಾಗಿದ್ದ, ಅಸಮಾನತೆಯೇ ತಾಂಡವವಾಡುತ್ತಿದ್ದ ನಮ್ಮ ದೇಶ, ಸಮಾನತೆಯ ಆಶಯದ ಸಂವಿಧಾನವನ್ನು ರೂಪಿಸಿಕೊಂಡ ನಂತರವಾದರೂ ಇದನ್ನೆಲ್ಲಾ ಮೀರಲು ತನ್ನದೇ ಆದ ಸಶಕ್ತ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಿತ್ತಲ್ಲವೇ? ಪ್ರಯತ್ನಗಳು ಆಗಲೇ ಇಲ್ಲವೆಂದಲ್ಲ


ಸಮಾನ ಶಾಲಾ ವ್ಯವಸ್ಥೆಯನ್ನು ಪ್ರತಿಪಾದಿ ಸುವ 1964-66ರ ಕೊಥಾರಿ ಆಯೋಗ ಸಮಾನ ಶಿಕ್ಷಣದ ಆಶಯದ ಸಾರ್ವಜನಿಕ ಶಾಲಾ ವ್ಯವಸ್ಥೆಯ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ, ಸಾಮಾಜಿಕ ಬದಲಾವಣೆಯನ್ನು ತರುವ ದೊಡ್ಡ ಕನಸನ್ನು ಕಂಡಿತ್ತು. ಸಮಾನ ಶೈಕ್ಷಣಿಕ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ಭದ್ರ ತಳಪಾಯವಾಗುವುದಲ್ಲದೇ ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸುವ ಆಶಯವಿತ್ತು. ಅದು ಸಾಕಾರವಾಗಿದ್ದರೆ ಬಹುಶಃ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾತ್ರವಲ್ಲ ಸಾಮಾಜಿಕ ವಾಗಿಯೂ ಮಹತ್ತರವಾದ ಬದಲಾವಣೆಗಳಾಗಿರುತ್ತಿದ್ದವು. 

ಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಜಾತಿ, ಮತ, ಲಿಂಗ, ಆರ್ಥಿಕ-ಸಾಮಾಜಿಕ ಸ್ಥಿತಿ ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಎಲ್ಲರಿಗೂ ಶಿಕ್ಷಣವೆಂಬುದಕ್ಕೆ ಮಾತ್ರ ಪ್ರಾಮುಖ್ಯತೆ ನೀಡುವ ಆರೋಗ್ಯಕರ ವಾದ ಆಶಯವಿತ್ತು. ನೆರೆಹೊರೆ ಶಾಲಾ ಪದ್ಧತಿಯ ಮೂಲಕ ಒಂದು ಪ್ರದೇಶದ ಮಕ್ಕಳು ಯಾವುದೇ ಭೇದವಿಲ್ಲದೇ, ಒಂದೇ ಶಾಲೆಯಲ್ಲಿ ಓದುವ ವ್ಯವಸ್ಥೆಯ ಜೊತೆಗೆ ಸಂಪೂರ್ಣವಾಗಿ ಉಚಿತವಾದ ಶಿಕ್ಷಣವನ್ನು ಸರಕಾರವೇ ನೀಡುವುದರೊಂದಿಗೆ ಕನಿಷ್ಠ ಮಟ್ಟದ ಮೂಲಭೂತ ಸೌಕರ್ಯಗಳನ್ನು ಎಲ್ಲ ಶಾಲೆಗಳೂ ಹೊಂದಬೇಕೆಂದು ವಿಧಿಸಲಾಗಿತ್ತು. ಎಲ್ಲಕ್ಕಿಂಥಾ ಮುಖ್ಯವಾಗಿ ಪ್ರಾಥಮಿಕ ಹಂತದವರೆಗೆ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿತ್ತು. ಇವು ಸಮಾನತೆ ಯನ್ನು ಬಯಸುವವರೆಲ್ಲರೂ ಒಪ್ಪಿಕೊಳ್ಳು ವಂತಹ ಆಶಯಗಳೇ.


ಕೊಥಾರಿ ಆಯೋಗದ ಶಿಫಾರಸಿನಂತೆ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಗೊಳಿಸಲು 1968, 1986 ಮತ್ತು ೧೯೯೨ರ ರಾಷ್ಟ್ರೀಯ ಶಿಕ್ಷಣ ನೀತಿಗಳು ಭರವಸೆ ಯನ್ನೇನೋ ನೀಡಿದವು. ಆದರೆ ಅದನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನಗಳು ಆಗಲೇ ಇಲ್ಲ. ಈ ಉನ್ನತ ಕನಸಿನ ಸಾಕಾರಕ್ಕಾಗಿ ದೇಶದ ಒಟ್ಟು ಉತ್ಪನ್ನದ ಶೇಕಡ 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕೆಂದು ಕೊಥಾರಿ ಆಯೋಗ ಸೂಚಿಸಿದ್ದರೂ, ಇದುವರೆಗೂ ಯಾವ ಸರಕಾರವೂ ಶೇಕಡ 3ರ ಮೀಸಲನ್ನೂ ಮೀರಿಲ್ಲದಿರುವುದು ನಮ್ಮ ಪಟ್ಟಭದ್ರಹಿತಾಸಕ್ತಿಗಳಿಗೆ ಶೈಕ್ಷಣಿಕ ಕ್ಷೇತ್ರದ ಬಗೆಗಿನ ನಿರ್ಲಕ್ಷ್ಯವನ್ನೂ, ಮಾನವ ಸಂಪನ್ಮೂಲದ ಅಭಿವೃದ್ಧಿ ಕುರಿತು ಆಮೂಲಾಗ್ರ ಬದಲಾವಣೆಯ ಕನಸುಗಳಿಲ್ಲದಿ ರುವುದನ್ನು ಸೂಚಿಸುತ್ತದೆ.

ಆಳುವ ವರ್ಗವಾಗಲೀ ಅಧಿಕಾರಶಾಹಿಯಾಗಲೀ ಕೊಥಾರಿ ಆಯೋಗದ ಮಹತ್ವವನ್ನು ಅರಿಯಲೇ ಇಲ್ಲ. ಅಥವಾ ಅರಿತರೂ ಅಸಮಾನತೆಯನ್ನೇ ಉಂಡುಡುವ ಪೂರ್ವಾಗ್ರಹಪೀಡಿತ ಮನಸ್ಸುಗಳು ಅದನ್ನು ಸದ್ದಿಲ್ಲದೇ ಪಕ್ಕಕ್ಕಿಟ್ಟವೋ? ಒಟ್ಟಿನಲ್ಲಿ ಶಿಫಾರಸು ಮೂಲೆಗುಂಪಾಯಿತು. 1986ರಲ್ಲಿ ಎಚ್ಚೆತ್ತ ಸರಕಾರ, ಈ ಶಿಫಾರಸು ಜಾರಿಯಾಗದೇ ಇರುವುದಕ್ಕೆ ಕಾರಣಗಳನ್ನು ಹುಡುಕಲು ಆಚಾರ್ಯ ರಾಮಮೂರ್ತಿ ಸಮಿತಿಯನ್ನು ನೇಮಿಸಿತು. ಅದು ಸಮುದಾಯದಲ್ಲಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆ ಆಳವಾಗಿ ಬೇರೂರಿರುವುದರಿಂದ ಪರಸ್ಪರರಲ್ಲಿ ಅಸಹನೆ ಬೆಳೆಯುತ್ತಿದೆ.

ಇಂತಹ ಸಂದರ್ಭದಲ್ಲಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹೇರಲಾಗುವುದಿಲ್ಲ, ಗುಣಾತ್ಮಕ ಶಿಕ್ಷಣ ಬೇಕೆನಿಸಿದ ಪೋಷಕರು ತಮಗೆ ಬೇಕೆನಿಸಿದ ಕಾನ್ವೆಂಟ್‌ಗಳಿಗೆ ಮಕ್ಕಳನ್ನು ಕಳಿಸುತ್ತಾರೆ ಅಲ್ಲಿ ಜಾತಿ-ಮತಗಳ ತಾರತಮ್ಯವಿಲ್ಲ ಎಂದು ಹೇಳಿತು. ಆದರೆ ಸರಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳ ನಡುವಿನ ವರ್ಗ ತಾರತಮ್ಯ ಹಾಗೂ ಆಂಗ್ಲಭಾಷೆ ಹಾಗೂ ಮಾತೃಭಾಷಾ ಮಾಧ್ಯಮದ ಮಕ್ಕಳ ನಡುವಿನ ವ್ಯತ್ಯಾಸ ದಿನದಿಂದ ದಿನಕ್ಕೆ ಅಧಿಕವಾಗುತ್ತಾ ಈಗ ಅಗಾಧವಾಗಿ ಬೆಳೆದು ನಿಂತಿದೆ. 

ಸಮಾನ ಶಿಕ್ಷಣವೆಂಬುದು ಅಸಮಾನತೆಯನ್ನು ತೊಡೆಯುವಲ್ಲಿನ ಪ್ರಮುಖ ಅಸ್ತ್ರವಾಗಿರುವುದರಿಂದ, ಅದು ಹೇರಿಕೆ ಎಂದೆನಿಸದೇ ಕಷ್ಟವಾದರೂ ಎಲ್ಲರೂ ಅನುಸರಿಸಲೇ ಬೇಕಾದ ಕಾನೂನಾಗಬೇಕು. ಆಗ ಸಾಮಾಜಿಕ ಅಸಮಾನತೆಯನ್ನು ಮೀರುವ ಸ್ಪಷ್ಟ ಮಾರ್ಗಗಳು ಕಾಣಲಾರಂಭಿಸುತ್ತದೆ. ಸಮುದಾಯದಲ್ಲಿ, ಸಮಾಜದಲ್ಲಿ ಅಸಮಾನತೆಯನ್ನು ತೊಡೆಯಲೆಂದೇ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದು ಎಂಬುದನ್ನು ನಾವು ಮರೆಯಬಾರದು. ಅಸಮಾನತೆಯ ಯಥಾಸ್ಥಿತಿಯೇ ಮುಂದುವರಿಯುವುದಾದರೆ ಇದನ್ನು ಸಂವಿಧಾನಬದ್ಧ ಪ್ರಜಾಪ್ರಭುತ್ವವಾದಿ ದೇಶವೆಂದು ಏಕೆ ಹೇಳಬೇಕು?

ಜೊತೆಗೆ ತಮ್ಮದೇ ಆದ ಶಾಲೆಗಳನ್ನು ತೆರೆದು ನಿರ್ವಹಿಸುವ ಹಕ್ಕು ಸಂವಿಧಾನ ದಲ್ಲಿಯೇ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ದೊರಕಿರುವುದರಿಂದ ಇದೂ ಸಮಾನ ಶಿಕ್ಷಣ ವ್ಯವಸ್ಥೆಗೆ ಮಾರಕ ಮತ್ತು ಸರಕಾರವೇ ಒಂದು ಸೀಮಿತ ವರ್ಗಕ್ಕಾಗಿ ಸೈನಿಕ ಶಾಲೆ, ನವೋದಯ ವಿದ್ಯಾಶಾಲೆ, ಕೇಂದ್ರೀಯ ಶಾಲೆಗಳನ್ನು ನಡೆಸುವುದೇ ಸಂವಿಧಾನ ವಿರೋಧಿ ನಿಲುವು ಎಂದು ಸಮಿತಿ ಆರೋಪಿಸಿದ್ದರಲ್ಲಿ ಕೊಂಚ ವಾಸ್ತವಾಂಶವಿದೆ.

ಆದರೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸುತ್ತಲೇ ಐಕ್ಯತೆಯ ಆಶಯವನ್ನೂ ಅಳವಡಿಸಿಕೊಳ್ಳಲು ಸಂವಿಧಾನದಲ್ಲೇ ಇರುವ ಅಪಾರ ಸಾಧ್ಯತೆಗಳೆಡೆಗೆ ನಾವಿಂದು ಗಮನಹರಿಸಬೇಕಾಗಿದೆ. ಇದರೊಂದಿಗೇ ಕಾನ್ವೆಂಟ್‌ಗಳು ದುಬಾರಿ ವಂತಿಗೆ, ಶುಲ್ಕ ಪಡೆದು ಉತ್ತಮ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯವನ್ನು ನೀಡಲಾರಂಭಿಸಿದ್ದು, ಆ ಮಟ್ಟದ ವ್ಯವಸ್ಥೆಯನ್ನು ಒದಗಿಸಲು ಸರಕಾರ ಸೋತಿದ್ದು, ಖಾಸಗಿಗೆ ಕಡಿವಾಣವಿಲ್ಲದ ಸರಕಾರಿ ನುಸುಳುಗಳು ಸಮಾನ ಶಿಕ್ಷಣ ವ್ಯವಸ್ಥೆಯ ಆಶಯಕ್ಕೆ ಧಕ್ಕೆಯಾಗಿವೆ. ಖಾಸಗಿ ಶಾಲಾ ವ್ಯವಸ್ಥೆ ಈ 15-20 ವರ್ಷಗಳಲ್ಲಿ ಉಳ್ಳವರು-ಇಲ್ಲದವರ ಮಧ್ಯೆ ಬೃಹತ್ ಕಂದಕ ಸೃಷ್ಟಿಸಿಬಿಟ್ಟಿದೆ.


ಸಂವಿಧಾನದ 350ಎ ಕಲಂ ಪ್ರಾಥಮಿಕ ಹಂತದವರೆಗಾದರೂ ಮಾತೃಭಾಷೆ ಶಿಕ್ಷಣಕ್ಕೆ ಆಯಾ ರಾಜ್ಯ ಸರಕಾರಗಳು ಅನುವು ಮಾಡಿಕೊಟ್ಟು ಮಕ್ಕಳ ಹಕ್ಕನ್ನು ಕಾಪಾಡಬೇಕೆಂದು ಪ್ರತಿಪಾದಿಸುತ್ತದೆ. 2009ರಲ್ಲಿ ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆ ಕೂಡ ಇದನ್ನೇ ಹೇಳುತ್ತದೆ. 19ಎ ಕಲಂ ಮಗುವಿನ ಮಾತೃಭಾಷೆಯ ಕಲಿಕೆಗೆ ಒತ್ತು ನೀಡುತ್ತದೆ. ಅದನ್ನು ನಿರ್ಲಕ್ಷಿಸಿ ಬೇರೆ ಭಾಷೆಯನ್ನು ಹೇರುವುದರಿಂದ ಮಕ್ಕಳ ನಿಜವಾದ ವ್ಯಕ್ತಿತ್ವ ಪೂರ್ಣಪ್ರಮಾಣದಲ್ಲಿ ಹೊರಹೊಮ್ಮಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಗು ತನ್ನ ಅಭಿವ್ಯಕ್ತಿ ಸ್ವಾತಂತ್ರವನ್ನು, ಕ್ರಿಯಾಶೀಲತೆಯನ್ನೂ ಕಳೆದುಕೊಳ್ಳುತ್ತದೆ. ಆದರೆ ನಮ್ಮ ಸರಕಾರಗಳು, ಜೊತೆಗೆ ನ್ಯಾಯಂಗವೂ ಈ ಆಶಯಕ್ಕೆ ಗಂಭೀರವಾದ ಒತ್ತನ್ನು ನೀಡದಿರುವುದು ನಿಜಕ್ಕೂ ಖೇದಕರ.


ಜಾಗತೀಕರಣದ ದಾಳಿಯಿಂದಾಗಿ ಪ್ರಾದೇಶಿಕ ಸಂಸ್ಕೃತಿ, ಭಾಷೆ, ಜಾನಪದೀಯ ಸತ್ವ ನಿಧಾನಕ್ಕೆ ಕಣ್ಮರೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಆಧುನಿಕ ಅವಶ್ಯಕತೆಗಳ ನೆಪ ಹೇಳಿ ನಾವೂ ಆಂಗ್ಲಭಾಷೆ ಕಲಿಕೆಯೆಡೆಗೆ ಮುಖ ಮಾಡುತ್ತಿದ್ದೇವೆ. ನಮ್ಮ ಉಚ್ಚ ನ್ಯಾಯಾಲಯವೂ ಶಾಲೆ ಹಾಗೂ ಭಾಷಾ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೇ ಕೊಟ್ಟಿದ್ದು ಸಮಾನ ಶಿಕ್ಷಣ ವ್ಯವಸ್ಥೆಯೆಡೆಗಿನ ಹಿನ್ನಡೆಯಾಗಿದೆ. ಕಳೆದ 19 ವರ್ಷದಿಂದ ನಡೆಯುತ್ತಿರುವ ಕರ್ನಾಟಕದ ಭಾಷಾ ಮಾಧ್ಯಮದ ವಿವಾದವನ್ನು ಮೊನ್ನೆ ಸರ್ವೋಚ್ಚ ನ್ಯಾಯಾಲಯ, ಇದರಲ್ಲಿ ಸಂವಿಧಾನಾತ್ಮಕ ತೊಡಕುಗಳಿರುವುದರಿಂದ ಸಾಂವಿಧಾನಿಕ ಪೀಠವೇ ಇದನ್ನು ಬಗೆಹರಿಸಲೆಂದು ಹೇಳಿ ಕೈ ತೊಳೆದುಕೊಂಡಿದೆ. 

ತೀರ್ಪು ಭಾಷಾಮಾಧ್ಯಮದ ಪರವಾಗಿ ಬಂದರೆ ಭಾರತದ ಒಟ್ಟು ಶೈಕ್ಷಣಿಕ ವ್ಯವಸ್ಥೆಯೇ ಬದಲಾಗುವ ಸಾಧ್ಯತೆಗಳಿವೆ. ಹೀಗೆ ಸಮಾನ ಶಿಕ್ಷಣಕ್ಕಾಗಿ ನಡೆದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದಕ್ಕೆ ಬಹುಶಃ ನಮ್ಮನ್ನಾಳುವ ಪ್ರಭುಗಳಿಗೆ ಇಚ್ಛಾಶಕ್ತಿ ಇಲ್ಲದ್ದು, ಆಡಳಿತಯಂತ್ರದ ವೈಫಲ್ಯ, ನ್ಯಾಯಾಂಗದ ವ್ಯತಿರಿಕ್ತ ತೀರ್ಪುಗಳು, ಜನರ ನಿರಾಸಕ್ತಿ ಎಲ್ಲವೂ ಕಾರಣವಿರಬಹುದೆನಿಸುತ್ತದೆ. ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಲೇ ರೂಪಿತವಾದ 2009ರ ಶಿಕ್ಷಣ ಹಕ್ಕು ಕಾಯ್ದೆಯಿಂದ ಸಮಾನ ಶಿಕ್ಷಣ ಸಾಧ್ಯವೆಂದು ಸರಕಾರ ಹೇಳುತ್ತಿದೆ.

ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ಇದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯೇ ಹೊರತು ಸಮಾನ ಶಿಕ್ಷಣ ಕಾಯ್ದೆಯಲ್ಲ! ನಮ್ಮ ಸಂವಿಧಾನದಲ್ಲೇ ಶಿಕ್ಷಣವನ್ನು ಒಂದು ಹಕ್ಕಾಗಿ ಪರಿಗಣಿಸಿದ ನಂತರ ಇದಕ್ಕಾಗಿ ಇನ್ನೊಂದು ಕಾಯ್ದೆಯ ಅವಶ್ಯಕತೆಯೂ ಇರಲಿಲ್ಲ. ಜೊತೆಗೆ ಶೇಕಡಾ ೨೫ರ ಹಿಂದುಳಿದ ವರ್ಗಗಳ ಮೀಸಲಾತಿ, ಶಿಕ್ಷಣ ಖಾಸUಕರಣದ ಸ್ಪಷ್ಟ ನಿದರ್ಶನವಾಗಿದೆ. ಈ ಮೀಸಲಾತಿಯೇ ಕೆಲವೇ ವರ್ಷಗಳಲ್ಲಿ ಸರಕಾರಿ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿ ಶಾಲೆಗಳು ಮುಚ್ಚಲ್ಪಟ್ಟರೆ, ಇನ್ನೂ ಶಾಲೆಯಿಂದ ಹೊರಗುಳಿದ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಡುವವರಾರು? 

ಲಾಭಕ್ಕಾಗಿ ಶಾಲೆಯೆಂಬ ಅಂಗಡಿಗಳನ್ನು ತೆರೆದಿರುವ ಖಾಸಗಿಯವರು ಕಾಳಜಿಯಿಂದ ಮಕ್ಕಳನ್ನು ಹುಡುಕಿ ತಂದು ಶಿಕ್ಷಣ ನೀಡುವ ಜವಾಬ್ದಾರಿ ಹೊರುತ್ತಾರೆಯೇ? ಎಲ್ಲವನ್ನೂ ಖಾಸಗಿಯವರೇ ನಿರ್ವಹಿಸುವುದಾದರೆ ಸರಕಾರದ ಹೊಣೆಗಾರಿಕೆಯೇನು? ಜೊತೆಗೆ 6 ವರ್ಷದ ಒಳಗಿನ ಮಕ್ಕಳ ವಿದ್ಯಾಭ್ಯಾಸದ ಕುರಿತು ಈ ಕಾಯ್ದೆ ಮತ್ತು ಇದುವರೆಗಿನ ಎಲ್ಲ ಸರಕಾರಿ ಶೈಕ್ಷಣಿಕ ನೀತಿಗಳೂ ಮೌನವಾಗಿರುವುದು ಏನನ್ನು ಸೂಚಿಸುತ್ತದೆ? ಸರಕಾರದಿಂದ ಈ ವಯಸ್ಸಿನ ಮಕ್ಕಳಿಗೆ ಯಾವುದೇ ಶೈಕ್ಷಣಿಕ ವ್ಯವಸ್ಥೆ ಇಲ್ಲದಿರುವುದರಿಂದ ಸಹಜವಾಗಿ ಅವರು ಖಾಸಗಿ ವ್ಯವಸ್ಥೆಯ ಮೊರೆ ಹೋಗುತ್ತಾರೆ. 

ಇಂತಹವರು 6 ವರ್ಷ ತುಂಬಿದ ನಂತರ ಮತ್ತೆ ಸರಕಾರಿ ಶಾಲೆಗಳಿಗೆ ಹಿಂದಿರುಗುತ್ತಾರೆ ಎಂಬ ನಿರೀಕ್ಷೆಯೇ ಮೂರ್ಖತನದ್ದಾಗುತ್ತದೆ. ಖಾಸಗಿಗೆ ಕಡಿವಾಣ ಸಾಧ್ಯವಿಲ್ಲವೆಂದಾದರೆ ಶಿಕ್ಷಣ ರಾಷ್ಟ್ರೀಕರಣವೊಂದೇ ಅಂತಿಮಮದ್ದೇನೋ ಎನಿಸುತ್ತದೆ. ಈ ಶಿಕ್ಷಣ ಹಕ್ಕು ಕಾಯ್ದೆಗೇ ನೆರೆಹೊರೆ ತತ್ವವನ್ನು ಮೂಲವಾಗಿಟ್ಟುಕೊಂಡು ಖಾಸಗಿ ಹಾಗೂ ಸರಕಾರಿ ಶಾಲೆಗಳೆರಡಕ್ಕೂ ಅನ್ವಯಿಸುವಂತೆ ಸಮಾನ ಶಾಲಾ ವ್ಯವಸ್ಥೆ, ಸಮಾನ ಪಠ್ಯ, ಸಮಾನ ಮೂಲಭೂತ ಸೌಲಭ್ಯಗಳಿರುವ, ಆಯಾ ರಾಜ್ಯಗಳ ಮಾತೃಭಾಷೆಯನ್ನು ಪ್ರಾಥಮಿಕ ಹಂತದವರೆಗಾದರೂ ಶಿಕ್ಷಣ ಮಾಧ್ಯಮವಾಗಿಸಿ ಇಂಗ್ಲಿಷನ್ನು ಒಂದನೆ ತರಗತಿಯಿಂದಲೇ ಒಂದು ಭಾಷೆಯಾಗಿ ಕಲಿಸುವ ಸಮಾನ ಶಿಕ್ಷಣವನ್ನು ಪ್ರತಿಪಾದಿಸುವ ತಿದ್ದುಪಡಿ ತಂದರೆ ಮಾತ್ರ ಏನಾದರೂ ಬೇರುಮಟ್ಟದ ಗುಣಾತ್ಮಕ ಬದಲಾವಣೆಗಳಾಗಬಹುದೆನಿಸುತ್ತದೆ.


‘ಮಾತೃಭಾಷೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಒಳಗೊಂಡೇ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು. ಖಾಸಗಿ ಶಿಕ್ಷಣ ವ್ಯವಸ್ಥೆ ತಾರತಮ್ಯಕ್ಕಾಗಿಯಲ್ಲದೇ, ಲಾಭಕ್ಕಾಗಿಯಲ್ಲದೇ ಸರಕಾರದ ನಿಯೋಜಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ರಾಜ್ಯ ಸರಕಾರದ ಆದೇಶ-ಶಿಸ್ತು ಮತ್ತು ರಾಷ್ಟ್ರೀಯ ಶೈಕ್ಷಣಿಕ ನೀತಿಯಡಿಯೇ ಕೆಲಸ ಮಾಡಬೇಕು. 6 ವರ್ಷಕ್ಕೆ ವೊದಲಿನಿಂದ ಹಿಡಿದು 14 ವರ್ಷದವರೆಗೆ ಸಂಪೂರ್ಣ ಉಚಿತ ಶಿಕ್ಷಣ, ಸರಕಾರ ನೀಡಬೇಕು ಮತ್ತು ವಿಕೇಂದ್ರಿತ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ನೆರವನ್ನು ಸರಕಾರವೇ ನೀಡಬೇಕು.

ಸಂವಿಧಾನದ ಸಮಾನತೆಯ ತತ್ವಕ್ಕೆ ಬದ್ಧವಾಗಿ ಶಿಕ್ಷಣ ವ್ಯವಸ್ಥೆಯಿರಬೇಕು. ಸಮಾನ ಶಿಕ್ಷಣವನ್ನು ಏಕರೂಪ ಶಿಕ್ಷಣವೆಂದು ಗ್ರಹಿಸಿದ್ದರಿಂದ ಇದರ ಬಗ್ಗೆ ದ್ವಂದ್ವವೇರ್ಪಟ್ಟಿದೆ. ಅದನ್ನು ಸರಿಯಾದ ಕ್ರಮದಲ್ಲಿ ತಿಳಿಹೇಳಿ ಜನಾಭಿಪ್ರಾಯ ಮೂಡಿಸಬೇಕು’ ಎನ್ನುತ್ತಾರೆ ಖ್ಯಾತ ಶಿಕ್ಷಣತಜ್ಞ ಅನಿಲ್ ಸದ್ಗೋಪಾಲ್.ಇತ್ತೀಚೆಗೆ ಕರ್ನಾಟಕ ಸರಕಾರ ನೆರೆಹೊರೆ ಶಾಲಾ ನಿಯಮವನ್ನು ಅನುಸರಿಸಿ ಪಬ್ಲಿಕ್ ಶಾಲೆಗಳನ್ನು ಸದ್ಯಕ್ಕೆ ಪ್ರತಿ ಜಿಲ್ಲೆಯ ಒಂದು ಗ್ರಾಮಪಂಚಾಯತ್‌ನಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸುವ ಪ್ರಸ್ತಾಪ ಮಾಡಿದೆ. ಸುತ್ತಲಿನ ಸರಕಾರಿ ಶಾಲೆಗಳನ್ನು ಇದರಲ್ಲಿ ವಿಲೀನಗೊಳಿಸುವ ಉದ್ದೇಶವಿದೆ. 

ಆದರೆ ಈ ನೆರೆಹೊರೆ ನಿಯಮ ಸರಕಾರಿ ಶಾಲೆಗಳಿಗೆ ಮಾತ್ರ ಅನ್ವಯಿಸಿ ಖಾಸಗಿ ಶಾಲೆಗಳನ್ನು ಇದರಿಂದ ಹೊರಗಿಟ್ಟರೆ ಅದು ಅಸಮಾನತೆಯನ್ನು ಮತ್ತಷ್ಟು ವೃದ್ಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.ವೈವಿಧ್ಯತೆಯ ಭಾರತ ದೇಶಕ್ಕೆ ಐಕ್ಯತೆಯನ್ನು ಕಲಿಸಲಾಗುವುದು ಸಮಾನ ಶಿಕ್ಷಣ ವ್ಯವಸ್ಥೆಯಿಂದ. ಇದನ್ನು ಗುರಿಯೆಡೆಗಿನ ಪಯಣವಾಗಿಸಿ, ಹಂತ ಹಂತವಾಗಿ ಸಮಾನತೆಯನ್ನು ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಲು ಸರಕಾರ ಗಟ್ಟಿ ಮನಸು ಮಾಡಿದರೆ ಮಾತ್ರ ಈ ಆಶಾವಾದ ಉಳಿದೀತೇನೋ?

ಕನಕದಾಸರ ತಾತ್ವಿಕತೆಯ ಅನುಸಂಧಾನ: ಹೊಸ ಓದು 
 
ಸೌಜನ್ಯ : ಪ್ರಜಾವಾಣಿ
ಮಧ್ಯಯುಗೀನ ಎಂದು ಸ್ಥೂಲವಾಗಿ ಕರೆಯಲ್ಪಡುವ ಕ್ರಿ.ಶ. ಎರಡನೆಯ ಶತಮಾನದಿಂದ ಹಿಡಿದು ಸುಮಾರು ೧೫ನೇ ಶತಮಾನದವರೆಗಿನ ಕಾಲಮಾನ ಅಖಿಲ ಭಾರತದ ಕ್ಯಾನ್ವಾಸಿನಲ್ಲಿ ಅತ್ಯಂತ ತಲ್ಲಣದ ಕಾಲ.  ರಾಜಕೀಯ, ಧಾರ್ಮಿಕ, ತಾತ್ವಿಕ ಸಂಘರ್ಷಗಳು ತೀವ್ರವಾಗಿ ನಡೆದ ಕಾಲ. ಈ ಕಾಲಮಾನದ ಸಮಾಜೋ ಧಾರ್ಮಿಕ ಚರಿತ್ರೆಯನ್ನು, ಜೀವನ ಮೀಮಾಂಸೆ -– ಕಾವ್ಯ ಮೀಮಾಂಸೆಯನ್ನು, ತಾತ್ವಿಕ ಸಂಘರ್ಷವನ್ನು ನೋಡುವ, ಓದುವ ಅನೇಕ ಕ್ರಮಗಳಿವೆ.
  ಕೃತಿಯ ರಚನೆ ಹೇಗೆ ಒಂದು ಸಾಂಸ್ಕೃತಿಕ ರಾಜಕಾರಣವೋ ಅದನ್ನು ‘ಓದುವುದು’ ಕೂಡ ಒಂದು ಸಾಂಸ್ಕೃತಿಕ ರಾಜಕಾರಣ.  ಸಮಾಜಕ್ಕೆ ಯಾವುದನ್ನು ಓದಿಸಬೇಕು, ಹೇಗೆ ಓದಿಸಬೇಕು, ಯಾವುದನ್ನು ಓದಿಸಬಾರದು, ಯಾವುದನ್ನು ಓದಲು ಸಿಗದಂತೆ ನೋಡಿಕೊಳ್ಳಬೇಕು ಇತ್ಯಾದಿ ಸಂಗತಿಗಳು ಗಂಭೀರ ರಾಜಕಾರಣದ ಭಾಗವೇ ಆಗಿವೆ.

ಇದು ಅಧಿಕಾರ ಕೇಂದ್ರಗಳನ್ನು ಮತ್ತು ಸಮೂಹವನ್ನು ನಿಯಂತ್ರಿಸುವ ಪರೋಕ್ಷ ರಾಜಕಾರಣವಾಗಿರುವುದರಿಂದ ಇದನ್ನು ಹಿತಾಸಕ್ತ ಗುಂಪುಗಳು ಗಂಭೀರವಾಗಿ ನಿರ್ವಹಿಸುತ್ತವೆ. ಈವರೆಗೆ ನಡೆಸಿರುವ ಕ್ರಮದ ಬಗೆಗೆ ನನಗೆ ಕುತೂಹಲವಿದೆ.  ಯಾವ ಓದಿನ ಮೂಲಕ ಕನಕ ಇಂದು ನಮ್ಮ ಮುಂದೆ ಇದ್ದಾನೆಯೋ ಆ ಓದು ಕನಕನನ್ನು ಬೇರೆ ಓದುಗಳಿಂದ ದೂರ ಇರಿಸಿದೆ.
ಸಾಮಾನ್ಯವಾಗಿ ಉತ್ತರದ ಮೂಲಕವೇ ಭಾರತದ ಸಾಂಸ್ಕೃತಿಕ ಚರಿತ್ರೆಯನ್ನು, ರಾಜಕೀಯ ಚರಿತ್ರೆಯನ್ನು, ಕಾವ್ಯ ಮೀಮಾಂಸೆಯನ್ನು, ಕಾವ್ಯ ಮಾರ್ಗವನ್ನು ನೋಡಿ, ದಕ್ಷಿಣವನ್ನು ಒಂದು ಅನುಬಂಧವಾಗಿ ನೋಡುವ ಕ್ರಮವೇ ದೀರ್ಘಕಾಲದಿಂದ ಚಾಲ್ತಿಯಲ್ಲಿದೆ.

ರಾಮಾಯಣ ಮಹಾ ಭಾರತಗಳು, ವೈಷ್ಣವ ಭಕ್ತಿಪಂಥ, ದಶಾವ ತಾರಗಳು ಮತ್ತು ಆ ಸಂಬಂಧೀ ಕಾವ್ಯ ರಚನೆಗಳು ಹಾಗೂ ಇಡಿಯಾಗಿ ಭಾರತೀಯ ಕಾವ್ಯಮೀಮಾಂಸೆಯೇ ಉತ್ತರದ ಮೂಲಕ ಭಾರತವನ್ನು ಕಟ್ಟಿಕೊಡುವ ಮತ್ತು ತನ್ಮೂಲಕ ದಕ್ಷಿಣವನ್ನು ಅದರ ‘ಪರಿಶಿಷ್ಟ’ವನ್ನಾಗಿಸುವ ಪ್ರಯತ್ನವಾಗಿದೆ. ಇದು ಕೇವಲ ನಮ್ಮ ಭಾಷೆಯ, ನಮ್ಮ ನೆಲದ ಮೇಲಿನ ಅಭಿಮಾನದ ನಿಲುವಲ್ಲ. ಬದಲಿಗೆ ಅಂತಹ ಒತ್ತಾಯಗಳು ಸ್ಥಳೀಯ ಪ್ರಸ್ಥಾನಗಳು ನೀಡಿದ ತಾತ್ವಿಕತೆಯೊಳಗಿಂದಲೇ ಮೂಡಿವೆ.

ಹಾಗೆಯೇ, ಭಾರತದ ದಾರ್ಶನಿಕ ಚರಿತ್ರೆಯನ್ನು ದ್ವೈತಾದ್ವೈತಗಳ ಮೂಲಕ ಮಾತ್ರವೇ ದಾಖಲಿಸಿ ಅವುಗಳ ಮೂಲಕ ಮಾತ್ರ ನೋಡಲು ಒತ್ತಾಯಿಸುವ ಓದುಗಳು ಕೂಡಾ ಚಾಲ್ತಿಯಲ್ಲಿವೆ.  ಇಲ್ಲೆಲ್ಲ ನಿರಾಕರಣೆ ಗೊಳ್ಳುವ ಅಥವಾ ನಿರ್ಲಕ್ಷ್ಯಕ್ಕೀಡಾಗುವ ‘ಬಹುತ್ವ’ ದೃಷ್ಟಿಕೋನವು ಮಾತ್ರ ನಿಜವಾದ ಭಾರತವನ್ನು ಕಾಣಿಸಿಕೊಡಬಲ್ಲದು.  ಈಗ ನಮ್ಮ ಮುಂದಿರುವ ಸಮಸ್ಯೆಯೆಂದರೆ ನಮ್ಮ ಚರಿತ್ರೆಯನ್ನು ಇಂತಹ ಬಹುತ್ವದ ಮೂಲಕ ಕಟ್ಟಿಕೊಳ್ಳಬೇಕಾಗಿರುವುದು.

  ದ್ವೈತಾದ್ವೈತ ವನ್ನು ನಿರಾಕರಿಸುವ ದೃಷ್ಟಿಕೋನಗಳನ್ನು, ಅಧಿಕಾರ ಕೇಂದ್ರಗಳಿಗೆ ಮಣಿಯದ, ಅವುಗಳ ಪರವಾದ ಅಧಿಕಾರ ನಿರ್ವಚನಕ್ಕೆ ಒದಗಿ ಬಾರದ ತಾತ್ವಿಕತೆಗಳನ್ನು ನಿರಂತರವಾಗಿ ಹೊರಗೆ ನಿಲ್ಲಿಸುವ ಪ್ರವೃತ್ತಿಯು ಭಾರತೀಯ ಸಾಂಸ್ಕೃತಿಕ ರಾಜಕಾರಣದಲ್ಲಿ ಚಾಲ್ತಿಯಲ್ಲಿದೆ.  ಹೀಗೆ ಹೊರಗೆ ನಿಲ್ಲಿಸುವ ನಿಲುವು ಕನಕನನ್ನು ವ್ಯಾಖ್ಯಾನಿಸಿಕೊಟ್ಟಿರುವುದರಿಂದ ಈ ಪೀಠಿಕೆ ಅಗತ್ಯವೆನ್ನಿಸಿದೆ.

ಮಧ್ಯಯುಗೀನ ಭಾರತದ ನಿಜವಾದ ನಾಡಿಮಿಡಿತವನ್ನು ಆಲಿಸಬೇಕಾದರೆ ನಾವು ಶ್ರಮಣಧಾರೆಗಳಲ್ಲಿಗೇ ಹೋಗಬೇಕು.  ಸ್ಥೂಲ ವಾಗಿ ಬೌದ್ಧ, ಜೈನ, ಸಿದ್ಧ, ನಾಥ, ಶರಣ, ಸೂಫಿ, ಕಾಪಾಲಿಕ, ಆಜೀವಿಕ,  ತತ್ತ್ವಪದ ಕಾರರು ಮತ್ತು ಶಾಕ್ತ ಪಂಥಗಳನ್ನು ಶ್ರಮಣಧಾರೆಗಳೆಂದು ಸೂಚಿಸುತ್ತಾರೆ. ಇವುಗಳಲ್ಲಿ ಒಂದೆರಡು ಧಾರೆಗಳನ್ನು ಬಿಟ್ಟರೆ ಉಳಿದವು ಅಖಿಲ ಭಾರತೀಯ ವ್ಯಾಪ್ತಿ ಉಳ್ಳವು. ಕೆಲವು ಅರ್ಧ ವಿಶ್ವವನ್ನೇ ವ್ಯಾಪಿಸಿದಂಥವು.

  ಇವುಗಳು ರೂಪುಗೊಳ್ಳು ವಲ್ಲಿ ಕರ್ನಾಟಕದ ದೊಡ್ಡ ಪಾಲಿದೆ. ಭಾರತದ ತಾತ್ವಿಕ ನಕಾಶೆಯೊಂದನ್ನು ಬಿಡಿಸಿದರೆ ಅದರಲ್ಲಿ ಕರ್ನಾಟಕ ಆಯಕಟ್ಟಿನ ಭಾಗ. ಅಖಿಲ ಭಾರತೀಯ ದರ್ಶನಗಳಲ್ಲಿ ಹಲವು ಕರ್ನಾಟಕದ ಕೊಡುಗೆ.  ಮಂಗಳೂರಿನ ಕರಾವಳಿಯ  ನೆಲದಿಂದ ಇಡೀ ಭಾರತ ಮತ್ತು ಅದರಾಚೆಗೂ ವ್ಯಾಪಿಸಿರುವ ನಾಥಪಂಥವು ಈ ನೆಲದ ಕೊಡುಗೆ.  ಇಂದಿಗೂ ಭಾರತದ ಬಹಳ ದೊಡ್ಡ ಪಂಥ, ದರ್ಶನವೆಂದರೆ ನಾಥ ಪಂಥವೇ.  ಧರ್ಮಸ್ಥಳದ ಮಂಜುನಾಥನಿಂದ ಹಿಡಿದು ಕಾಶಿವಿಶ್ವನಾಥ, ನೇಪಾಳದ ಪಶುಪತಿನಾಥನವರೆಗೆ ಅದರ ವ್ಯಾಪ್ತಿ ಇದೆ. ಬೌದ್ಧ ಮಹಾಯಾನ ಪ್ರವರ್ತಿತವಾದದ್ದು ಕರ್ನಾಟಕದ ನಾಗಾರ್ಜುನನಿಂದ.

  ಭಾರತೀಯ ಬದುಕಿನ ಮುಖ್ಯ ಚಹರೆಗಳು ಇಲ್ಲಿ ಕಾಣಬರುತ್ತವೆ. ಭಾರತದ ಮೂಲ ನಿವಾಸಿಗಳ ಸ್ವತಂತ್ರ ಚಹರೆಗಳಲ್ಲಿ ಮುಖ್ಯ ವಾದುವುಗಳೆಂದರೆ, ಜಲಸಂಸ್ಕೃತಿ, ನಾಗಸಂಸ್ಕೃತಿ, ಮಾತೃಸಂಸ್ಕೃತಿ, ಶಿವಸಂಸ್ಕೃತಿ, ದಕ್ಷಿಣಾಚರಣೆ ಮುಂತಾದುವು. ಹೊರಗಿನಿಂದ ಬಂದ ಆರ್ಯ ಸಂಸ್ಕೃತಿಯು  ಗುರಿಯಿಟ್ಟು ಈ ನೆಲದ ಸಾಂಸ್ಕೃತಿಕ ಚಹರೆಗಳನ್ನು ವ್ಯವಸ್ಥಿತವಾಗಿ ನಾಶ ಮಾಡುತ್ತಲೇ ಇದೆ.

ಗಂಗೆಯ  ಸಾಕ್ಷಿಯಲ್ಲಿ ನಡೆಯುತ್ತಿದ್ದ ಎಲ್ಲ ಧಾರ್ಮಿಕ ಸಾಂಸ್ಕೃತಿಕ ಆಚರಣೆಗಳನ್ನು ಯಜ್ಞ ಹೋಮಗಳ ಅಗ್ನಿ ಸಂಸ್ಕೃತಿಯ ಆಚರಣೆಗಳಾಗಿಸಿ, ವೈಷ್ಣವ ಶಕ್ತಿಯ ಕೈಲಿ ನಾಗಮರ್ದನ ಮಾಡಿಸಿ, ಎಲ್ಲರ ಅಮ್ಮನ ತಲೆ ತೆಗೆಸಿ, ಎಲ್ಲ ದಶಾವತಾರಗಳಲ್ಲೂ ಶಿವಭಕ್ತರನ್ನು ನಾಶಮಾಡಿ, ದಕ್ಷಿಣವನ್ನು ಕೀಳಾಗಿಸಿ, ಉತ್ತರದ ಪಾರಮ್ಯವನ್ನು ಮೆರೆಸಲು ಈಗಲೂ ಊರೂರಲ್ಲೂ ಕಟ್ಟುತ್ತಿರುವ ದೇವಸ್ಥಾನಗಳು  ಬಹುಪಾಲು ವೈಷ್ಣವ ದೇವ ಸ್ಥಾನಗಳೇ ಆಗಿರುವುದು ಆಕಸ್ಮಿಕವೇನಲ್ಲ.

ನಿಮ್ಮ ನಗರಪಟ್ಟಣಗಳಲ್ಲಿ ಸುಮಾರು ಅರ್ಧಶತಮಾನದಲ್ಲಿ  ಹೊಸದಾಗಿ ಕಟ್ಟಿರುವ ದೇವಸ್ಥಾನಗಳು ಯಾವ ದೇವರವು ಎಂದು ಒಂದು ಸಮೀಕ್ಷೆ ಮಾಡಿನೋಡಿ. ಅದರಲ್ಲಿ ಶೈವ ದೇವಸ್ಥಾನಗಳೇನಾದರೂ ಹೊಸದಾಗಿ ನಿರ್ಮಾಣಗೊಂಡಿವೆಯೆ? ಉತ್ತರದ ಆರ್ಯ ರಿಗೆ ನಾಗಬನಗಳು, ಶೈವ ದೇಗುಲಗಳು ಮೈಲಿ ಗೆಯ ಜಾಗಗಳು! (ಶಂಬಾ ಅವರ ಸಂಶೋಧನೆಗಳನ್ನು ಗಮನಿಸಿ).

ಇದಕ್ಕೆ ಪ್ರತಿಭಟನೆಯ ರೂಪದಲ್ಲಿ ನೀರಿನ ಪ್ರಾತಿನಿಧಿಕ ದೈವಗಳಾದ, ಗಂಗೆ, ಕೆರೆಯಂಗಳದ ಬೀರ (=ನೀರು) ಭದ್ರರು, ಯಜ್ಞ ಹೋಮಗಳನ್ನು ನಾಶಮಾಡಿ, ಹಳ್ಳಿಹಳ್ಳಿಗಳಲ್ಲಿಯೂ ಪ್ರತೀ ವರ್ಷ ತಲೆಯ ಮೇಲೆ ಗಂಗೆಯನ್ನು ಹೊತ್ತು ಅಗ್ನಿಯನ್ನು ಕಾಲಲ್ಲಿ ತುಳಿದು ತಮ್ಮ ಪ್ರತಿಭಟನೆಯನ್ನು ದಾಖಲಿಸುತ್ತಲೇ ಇದ್ದಾರೆ. ಹಾಗಾಗಿ ಈ ಸಂಘರ್ಷದ ಹಿಂದೆ ಉತ್ತರದ ಆರ್ಯರ ಮತ್ತು ದಕ್ಷಿಣದ ದ್ರಾವಿಡ ರಾಜಕಾರಣದ ತಿಕ್ಕಾಟವಿದೆ.

  ಕನಕನನ್ನು ಈವರೆಗೆ ವೈಷ್ಣವ ಪಾಂಥಿಕ ಓದಿನ ಮೂಲಕ ಮಾತ್ರ ಕಾಣಿಸಿಕೊಡಲಾಗಿದೆ.  ಅವನನ್ನು ದಾಸನೆಂದೋ, ಕೀರ್ತನ ಕಾರನೆಂದೋ ನೋಡಲು ಬೇಕಾಗುವಷ್ಟನ್ನು ಮಾತ್ರ ಕಾಣಿಸಿಕೊಡಲಾಗಿದೆ. ಅವನ ‘ನಳ ಚರಿತ್ರೆ’ಯಾಗಲೀ, ‘ರಾಮಧಾನ್ಯ ಚರಿತೆ’ ಯಾಗಲೀ ಮುನ್ನೆಲೆಗೆ ಬರದಂತೆ ನೋಡಿ ಕೊಳ್ಳಲಾಗಿದೆ.   ಕನಕನ ಕೃತಿಗಳನ್ನು ಅವನಿಂದ ಅಪಹರಿಸಿರುವುದಕ್ಕಿಂತ ಹೆಚ್ಚಾಗಿ ಅವನನ್ನು ವೈಷ್ಣವ ಭಕ್ತಿಯ ಓದಿಗೆ ಒಗ್ಗಿಸಲು ಆಗಿರಬಹುದಾದ ಪ್ರಕ್ಷಿಪ್ತಗಳೇ ಹೆಚ್ಚು.

  ಸಮಾ ಜದ ಕೆಳಸ್ತರದ ಒಪ್ಪಿಗೆಯನ್ನು ಉತ್ಪಾದಿಸಿ ಕೊಳ್ಳಲು ಕನಕ ಒಳ್ಳೆಯ ಮಾಧ್ಯಮವಾಗಿ ಅವರಿಗೆ ಒದಗಿ ಬಂದಿದ್ದಾನೆ.  ಹಾಗಾಗಿ ಕನಕನ ಬಗೆಗಿಂತ ಅವನ ಕೃತಿಯ ಬಗೆಗಿನ ಪ್ರಕ್ಷಿಪ್ತಗಳು ಹೆಚ್ಚು.  ಆದರೆ ಕನಕ ಹಾಗೆ ಉಡುಪಿಯಲ್ಲಿ ಕೃಷ್ಣನೆದುರು ನೆಲೆ ನಿಂತವನಲ್ಲ.  ಅವನು ಸದಾ ತಿರುಗುತ್ತಿದ್ದ ಜಂಗಮ ಪ್ರವೃತ್ತಿಯವನು. ತಾತ್ವಿಕವಾಗಿ ಕೂಡ ಎಲ್ಲವನ್ನೂ ಅವನು ದಾಟುತ್ತಲೇ ಇದ್ದವನು.  ಆದರೆ ಪಂಥೀಯ ದೃಷ್ಟಿಕೋನವು ಕೃಷ್ಣನನ್ನೂ ತಿರುಗಲು ಬಿಡುತ್ತಿಲ್ಲ, ಕನಕನನ್ನೂ ತಿರುಗಲು ಬಿಡುತ್ತಿಲ್ಲ.

ಹಾಗಾಗಿ ಕನಕನನ್ನು ಉಡುಪಿಯವನೆಂದೋ, ವಿಜಯನಗರ ದವನೆಂದೋ ನೋಡದೆ ಬಾಡದವನೆಂದು ನೋಡಿದಾಗ ಕಾಣುವ ನೋಟವೇ ಬೇರೆ.  ಕನಕ ಅತ್ಯಾಶ್ರಮಿ ಅಂದರೆ ವರ್ಣಾಶ್ರಮ ಧರ್ಮಗಳನ್ನು ಮೀರಿದವನು.  ಲೋಕ ಸಮಾನತೆಯನ್ನು ನಿರಾಕರಿಸುವ ಯಾವ ಪ್ರಮಾಣ ಗಳನ್ನೂ (ಪ್ರಶ್ನಿಸಬಾರದು ಎನ್ನುವ ದಾಖಲೆಗಳು) ಮಾನ್ಯ ಮಾಡಿದವನಲ್ಲ ಎಂಬುದು ಗೋಚರಿಸುತ್ತದೆ.

ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಒಬ್ಬರೆಂದು ಕನಕದಾಸರನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಇರುವ ಇತರರೆಂದರೆ ಪುರಂದರದಾಸರು, ವಿಜಯದಾಸರು, ಇತ್ಯಾದಿ ಕೃಷ್ಣಮಠದ ಒಳಗೋ ಹೊರಗೋ ನಿಂತವರು ಮತ್ತು ಮೈಸೂರು ಅರಮನೆಯೆಂಬ ಅಧಿಕಾರ ಕೇಂದ್ರದ ಸುತ್ತ ಸುತ್ತುತ್ತಿದ್ದ ಕೆಲವರು. ಮಧುರ ಧ್ವನಿಯ ಕ್ವಾಷ್ಠಿಗರ ಈ ಪಂಥೀಯ ದೃಷ್ಟಿ ಕೋನದಿಂದಾಗಿ ಕರ್ನಾಟಕ ಸಂಗೀತಕ್ಕೆ ಆಗಿರುವ ಊನ ತೀರಾ ಗಂಭೀರವಾದದ್ದು.  ಕನ್ನಡದ ನೂರಾರು ತತ್ವಪದಕಾರರನ್ನು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಅಸ್ಪೃಶ್ಯರನ್ನಾಗಿಸಿ ಅವರನ್ನು ಆಚೆಗೆ ನಿಲ್ಲಿಸಿದ ಅಪಖ್ಯಾತಿಗೆ ಈ ಪಾಂಥಿಕರು ಹೊಣೆಗಾರರು.

ತತ್ವಪದಕಾರರು ವೈಷ್ಣವ ಭಕ್ತಿಪಂಥದವರಲ್ಲ ಎಂಬ ಒಂದೇ ಕಾರಣಕ್ಕೆ ಅವರೆಲ್ಲರನ್ನೂ ಹೊರಗಿಡಲಾಗಿದೆ.  ಇನ್ನು ಕನಕದಾಸರಂಥವರ ಬಗೆಗೆ ಕೂಡ ಅವರ ನಿಲುವೇನೂ ಉದಾರವಾದುದಲ್ಲ. ಕನಕ ದಾಸರ ಕೀರ್ತನೆಗಳನ್ನು ಸಂಗೀತ ಕೃತಿಗಳನ್ನು ಒಳಗೆ ಬಿಟ್ಟುಕೊಂಡರೇ ಹೊರತು ಕನಕದಾಸ ರನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ.

ಶಿಶುನಾಳ ಶರೀಫ, ನಿಜಗುಣ ಶಿವಯೋಗಿ, ಚಿದಾನಂದಾ ವಧೂತ, ನಾಗಲಿಂಗ, ಕೆಸ್ತೂರದೇವ, ಮಹಲಿಂಗರಂಗ, ಕಡಕೋಳ ಮಡಿವಾಳಪ್ಪ, ಖೇಮಣ್ಣ, ಶಂಕರಾನಂದಯೋಗಿ, ಹಾಗಲ ವಾಡಿ ಮುದ್ದುವೀರಸ್ವಾಮಿ, ಕೈವಾರ ನಾರೇಯಣ, ಸರ್ಪಭೂಷಣ ಶಿವಯೋಗಿ, ಹರಿಹರಗುರು, ಘನಮಠ ಶಿವಯೋಗಿ  ಇಂತಹ ನೂರಾರು ತತ್ವಪದಕಾರರಿಲ್ಲದ ಕರ್ನಾಟಕ ಸಂಗೀತ ಕೃಶವಾಯಿತು. ಇವರೆಲ್ಲ ರಾಗ ತಾಳಗಳ ಜತೆಗೆ ತಮ್ಮ ರಚನೆಗಳನ್ನು ಮಾಡಿದ್ದಾರೆ.

ಆದರೆ ಕನಕನನ್ನು ಓದಿಕೊಡುವ ರಾಜಕಾರಣ ತುಂಬಾ ಸಂಕೀರ್ಣವಾದದ್ದು.  ಬಹಳ ದೊಡ್ಡ ಲಾಭ ಇರುವುದಾದರೆ ಮಾತ್ರ ಸಣ್ಣ ಗಾಯ ಮಾಡಿಕೊಳ್ಳುವ ಕುಟಿ ಲೋಪಾಯಗಳೂ ಇರಲು ಸಾಧ್ಯವೆಂಬ ಎಚ್ಚರ ಇಂತಹ ಕಡೆ ಅಗತ್ಯವಿದೆ. ಕನಕನನ್ನು, ಕನಕನ ಕೃತಿಗಳನ್ನು ಮಾತ್ರ ಅಪಹರಿಸಲಾಗಿದೆ ಎಂದು ನಂಬಿಸುವ ಹಿಂದೆ ಅವನು ಆರಾಧಿಸಿದ ದೈವದ ಗತಿಯೂ ಅದೇ ಎಂದು ತಿಳಿದರೆ ಗಾಬರಿಯಾಗುತ್ತದೆ.

ಕುರಿಗಳು ಮೇಯಲು ಹೋದಲ್ಲೆಲ್ಲಾ ಹೊತ್ತೊಯ್ದು, ಬೀಡು ಬಿಟ್ಟಲ್ಲಿ ತಮ್ಮ ದೈವವನ್ನು ಸಿಕ್ಕಿದ ಇಟ್ಟಿಗೆಯ ಮೇಲಿಟ್ಟುಕೊಂಡು ಆರಾಧಿಸಿದ ವಿಠಲ-ಬೀರಪ್ಪನ ಪಾಡೂ ಅದೇ ಆಗಿದೆ. ಹಂಪಿಯ ಬೀರಪ್ಪ ಕೂಡ ಕೈತಪ್ಪಿದ್ದಾನೆ. ಇದು ಕೇವಲ ಕೈತಪ್ಪಿದ ದೈವಗಳ ಪಟ್ಟಿಗೆ ಮಾತ್ರ ಸೀಮಿತವಲ್ಲ, ಸಮೂಹದ ಅಸ್ಮಿತೆಗಳೇ ಕಳೆದುಹೋಗಿ, ಮತ್ತಾರದೋ ಕೈಸಾಲದ ತಾತ್ವಿಕತೆಯಲ್ಲಿ ಜೀವಿಸಬೇಕಾಗಿಬರುವ ಅನಿವಾರ್ಯವನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಗಮನಿಸಿದಾಗ ಗಾಬರಿಯಾಗುತ್ತದೆ.

  ಕನಕ ಲಕ್ಷ್ಮೀಶನ ಹಾಗೆ, ಕುಮಾರವ್ಯಾಸ, ಪುರಂದರದಾಸನ  ಹಾಗೆ ವೈಷ್ಣವ ಭಕ್ತಿಪಂಥಕ್ಕೆ ಸೀಮಿತನಾದವನಲ್ಲ.  ‘ರಾಮಧಾನ್ಯ ಚರಿತೆ’ ಯಂತಹ ಕೃತಿ ರಚಿಸಿದ ಕನಕನಿಗೆ ಬದುಕೆಂದರೆ ಭಕ್ತಿಯಷ್ಟೇ ಅಲ್ಲ; ಅದರಾಚೆಗಿನ ಸಾಮಾಜಿಕತೆ ಕೂಡ ಅವನಿಗೆ ಅಷ್ಟೇ ಮುಖ್ಯ.  ವರ್ಣಾಶ್ರಮ ಧರ್ಮದ ನಿರಾಕರಣೆ ಕನಕನಿಗೆ ವೈಯಕ್ತಿಕ ಅಗತ್ಯವಾಗಿರಲಿಲ್ಲವೆನ್ನುವುದಕ್ಕೆ ಈ ಕೃತಿಯೇ ಸಾಕ್ಷಿ.  ಇನ್ನು ಲೌಕಿಕ ಪಾರಲೌಕಿಕಗಳನ್ನು ಕನಕ ಸಮಾನ ನೆಲೆಯಲ್ಲಿ ಕಂಡವನು.

  ಅವನ ‘ನಳಚರಿತ್ರೆ’ ಕುಟುಂಬ ಪ್ರೇಮದ ಸಾಮ ರಸ್ಯವನ್ನು ಪೋಷಿಸುವ ಕೃತಿ.  ತೀರಾ ಇತ್ತೀಚಿನ ವರೆಗೆ ಕುಟುಂಬಗಳಲ್ಲಿ ದಾಂಪತ್ಯ ಕಲಹ ಗಳಾದಾಗ ‘ನಳಚರಿತ್ರೆ’ಯನ್ನು ಓದಿಸುವ ಆಚರಣೆ ಚಾಲ್ತಿಯಲ್ಲಿತ್ತು. ಸಾಂಸಾರಿಕ ಬದುಕಿನ ಔನ್ನತ್ಯವನ್ನೂ, ಇಂದ್ರಿಯ ಸಮೇತ ಬಾಳುವ ಮನುಷ್ಯನ ಸಂಕಟಗಳ ಅನೇಕ ಆಯಾಮಗಳನ್ನು ತೆರೆದಿಡುವ ಈ ಕೃತಿಯು ಹಿನ್ನೆಲೆಗೆ ಸರಿಯುವಂತೆ ಮಾಡಲಾಗಿದೆ.

ಕುಟುಂಬ ದೊಡ್ಡದೆನ್ನುವ ಮಹಾಕವಿಯನ್ನು  ತೆರೆಮರೆಗೆ ಸರಿಸಿ, ದ್ವೈತ ಓದಿನ ಮೂಲಕ ಕಟ್ಟಿಕೊಟ್ಟ ಕನಕನನ್ನು ಇನ್ನೊಮ್ಮೆ ಓದಬೇಕಾದ ಅನಿವಾರ್ಯ ಈಗ ಸೃಷ್ಟಿಯಾಗಿದೆ.  ಯಾವ ಗಮಕಿಯೂ, ‘ನಳಚರಿತ್ರೆ’ಯನ್ನಾಗಲೀ, ಚಾಮ ರಸನ ‘ಪ್ರಭುಲಿಂಗಲೀಲೆ’ಯನ್ನಾಗಲೀ, ಹರಿ ಹರನ ‘ಗಿರಿಜಾಕಲ್ಯಾಣ’ವನ್ನಾಗಲೀ ವಾಚಿಸು ವುದಿಲ್ಲ. ಹಾಗೆ ವಾಚಿಸಲೇಬೇಕಾದರೆ ನಂತರ ಮಡಿಯಾಗುತ್ತಾರೆ!

ಕನಕನನ್ನು ಕರ್ನಾಟಕದ ಒಂದು ಸಮೂಹ ತಮ್ಮ ಸಮಾಜೋರಾಜಕೀಯ ಬಲಸಂವ ರ್ಧನೆಗೆ ಒದಗಿಬರುವ ಸಂಕೇತವನ್ನಾಗಿ ಆಯ್ಕೆ ಮಾಡಿಕೊಂಡಿದೆ. ಕುರುಬ ಸಮೂಹವು ಭಾರತದ ಮೂಲಕುಲಗಳಲ್ಲಿ ಒಂದು. ಸುಮಾರು ಮೂರು ಸಾವಿರ ವರುಷಗಳ ಭಾರತೀಯ ತಾತ್ವಿಕ ಸಂಘರ್ಷಗಳಿಗೆ ಸಾಕ್ಷಿ ಯಾಗಿದೆ. ಭಾರತೀಯ ಕಾವ್ಯಮೀ ಮಾಂಸೆಯ ಅನ್ವಯದ ದೃಷ್ಟಿಯಿಂದ ವಿಶ್ವ ಮಟ್ಟದ ಮಹಾ ಕವಿ ಕಾಳಿದಾಸನು ಕೂಡ ಈ ಸಮೂಹದ ಒಳಗಿದ್ದಾನೆ.

ಮೂಲತಃ ಪಾಶುಪತಶೈವ-ಶಾಕ್ತಪರಂಪರೆಯ, ಹಾಲು–ರಸ–ಜಲಸಂಸ್ಕೃ ತಿಯ, ತಾಯಿಪ್ರಧಾನದ, ನಾಗಾರಾಧನೆಯ, ಕುರಿಹಿಕ್ಕೆ-ಬಳ್ಳಗಳನ್ನೂ ಪಶುಪತಿಯೆಂದು ಆರಾಧಿಸಿದ, ಒಟ್ಟಾರೆಯಾಗಿ ದ್ವೈತಾದ್ವೈತ ಗಳನ್ನು ದಾಟಿ ಬದುಕಿನ ಸಮೂಹವು  ಇತ್ತೀಚಿನ ಕನಕನ ತಾತ್ವಿಕತೆ ಯನ್ನು ತನ್ನ ಅಸ್ಮಿತೆಗಳ ಆಕರವನ್ನಾಗಿ ಬಳಸಿ ಕೊಳ್ಳುವಾಗ ಕಾಯ್ದು ಕೊಳ್ಳಬೇಕಾದ ಎಚ್ಚರ ವನ್ನು ಅದು ತನ್ನ ಸಾಂಸ್ಕೃತಿಕ ರಾಜಕಾರಣದಲ್ಲಿ ನಿಭಾಯಿಸ ಬೇಕಾಗುತ್ತದೆ.

ಇಂಥದೇ ಎಚ್ಚರ ವನ್ನು ಅಗಸರು ಮಡಿವಾಳ ಮಾಚಿದೇವನ ಮೂಲಕ, ಬೆಸ್ತರು ಅಂಬಿಗರ ಚೌಡಯ್ಯನ ಮೂಲಕ, ಮಾದಿಗರು ಮಾದಾರ ಚೆನ್ನಯ್ಯನ ಮೂಲಕ, ತಮ್ಮ ಸಾಂಸ್ಕೃತಿಕ ಚಹರೆಗಳನ್ನು ಹುಡುಕಲು ಹೊರಟರೆ, ಸಮಾಜೋ ರಾಜಕೀಯಕ್ಕೆ ಐಕನ್ ಮಾಡಿಕೊಂಡರೆ, ನಿಭಾಯಿಸಬೇಕಾಗುತ್ತದೆ. ಇಲ್ಲೆಲ್ಲ ಮೇಲೊಬ್ಬ ಯಜಮಾನನೋ ಅವನ ಪ್ರತಿನಿಧಿಯ ಕಣ್ಗಾವಲೋ ಇದ್ದೇ ಇರುತ್ತದೆ.  ಕುರುಬರು ವೈಷ್ಣವರಲ್ಲ ಆದ್ದರಿಂದ ಅವರು ಶೈವರು ಎನ್ನುವ ಅಗತ್ಯವಿಲ್ಲ.

ಜುಂಜಪ್ಪನನ್ನು ಕೃಷ್ಣ ನೆಂದು, ಬೀರಪ್ಪನನ್ನು ಶಿವನೆಂದು ಸಮೀಕ ರಿಸುವುದೂ ಅನೇಕ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಬೀರಪ್ಪ ಬೀರಪ್ಪನಾಗಿರಲಿ, ಜುಂಜಪ್ಪ ಜುಂಜಪ್ಪನಾಗಿರಲಿ. ಮಂಟೇಸ್ವಾಮಿ ಲೋಕಕ್ಕೆ ಬಂದು ಶಿವ, ವಿಷ್ಣು, ಬ್ರಹ್ಮಾದಿಗಳನ್ನು ಸೃಷ್ಟಿಸಿ ಅವರಿಗೆ ಕೆಲಸಗಳನ್ನು ವಹಿಸಿಕೊಟ್ಟು ತಾನು ಧರೆಗೆ ದೊಡ್ಡವನಾಗಿ ಓಡಾಡುತ್ತಿದ್ದಾನೆ. ಅವನು ನಮಗೆ ಮಾದರಿಯಾಗಲಿ. ಶಂಕರರನ್ನೋ, ಮಧ್ವರನ್ನೋ, ರಾಮಾನು ಜರನ್ನೋ ಆಯ್ಕೆ ಮಾಡಿಕೊಂಡವರು ಯಾವ ಕಾರಣಕ್ಕೂ ಮತ್ತೊಂದು ತಾತ್ವಿಕತೆಯ ಅಥವಾ ತಾತ್ವಿಕರ ಅಂಕೆಯನ್ನು ಎಂದಿಗೂ ಸಹಿಸುವುದಿಲ್ಲ ಎನ್ನುವ ಮಾದರಿಯನ್ನು ಗಮನಿಸಬೇಕಾಗಿದೆ.

ಜಾಣರು*

ಮಲಯಾಳಂ ಮೂಲ: ಪವಿತ್ರನ್ ತೀಕ್ಕುನಿ.
ಕನ್ನಡಕ್ಕೆ:ಕಾಜೂರು ಸತೀಶ್


 

ನಿನ್ನ ಮಗ
ಸೈಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ.
ನನ್ನ ಮಗಳು
ವಿವೇಕಾನಂದ ವಿದ್ಯಾಭವನದಲ್ಲಿ.
ಅವನ ಮಗನೂ,ಮಗಳೂ
ಇಸ್ಲಾಮಿಕ್ ಪಬ್ಲಿಕ್ ಶಾಲೆಯಲ್ಲಿ.
ಒಂದೇ ಬೆಂಚಲ್ಲಿ ಕೂತು
ಒಂದೇ ಪುಸ್ತಕವನ್ನು ಹಂಚಿಕೊಂಡು
ಒಂದೇ ಹಸಿವನ್ನು ಓದಿ
ನಾವು ಕಲಿಯದ ಪಾಠವನ್ನು ಕಲಿತ
ಆ ಹಳೆಯ ಇಸ್ಕೂಲು ಈಗಲೂ ಇದೆ-
ಹಳೆಯ ಕಾಲದ ನಮ್ಮ ಅಪ್ಪ-ಅಮ್ಮಂದಿರಂತೆ.
ಪರಮ ದರಿದ್ರರಾದ
ಕೆಲವರ ಮಕ್ಕಳು ಅಲ್ಲಿ ಕಲಿಯುತ್ತಿದ್ದಾರೆ
ಶಿಲುಬೆ,ಖಡ್ಗ,ಶೂಲಗಳೊಂದಿಗೆ.
ನಮ್ಮ ಮಕ್ಕಳು
ಒಮ್ಮೊಮ್ಮೆ ಕೋಪದಿಂದ ಗುಡುಗುವಾಗ
ಮಧ್ಯಬಂದು ತಡೆಯಲು
ಅವರಾದರೂ ಜಾಣರಾಗಲಿ.
     ****

ವಿವಶತೆವಿಭಾ


ಹುಣ್ಣಿಮೆಯ ಆ ಸುಂದರ ರಾತ್ರಿ
ನೀನುಸುರಿದ ಪಿಸುಮಾತು
ಒದ್ದೆ ಮದರಂಗಿಯ ಸುವಾಸನೆ
ಸುಳ್ಳು ತಕರಾರುಗಳು
ಸುಮ್ಮನೆ ನೀಡಿದ ಭಾಷೆಗಳು
ಮೈಯ ತಿರುವುಗಳಲಿ
ತುಟಿಯೊತ್ತಿದ ಗಳಿಗೆಗಳು
ಎಲ್ಲ ನೆನಪಿಸಿಕೊ
ನಿನ್ನ ನಿರ್ದಯ ಮನಸು
ಇನ್ನೂ ಕರಗದಿದ್ದರೆ
ಒಮ್ಮೆ ಅಪ್ಪಣೆ ನೀಡು-ಸಾಕು
ನೆನಪಿನ ನಿಧಿಯನ್ನು ಹುಗಿದುಬಿಡುತ್ತೇನೆ
ಜತೆಗೆ ನಾನೂ ಅಲ್ಲಿಯೇ ಹೂತುಹೋಗುತ್ತೇನೆ.

***

ಚಿತ್ರ ಡಾ. ಜಿ ಕೃಷ್ಣ

Tuesday, October 29, 2013

ಭೀತಿಯ ಆ ರಾತ್ರಿ!
ಭೀತಿಯ ಆ ರಾತ್ರಿ!

 

ಭೀತಿಯ ಆ ರಾತ್ರಿ!

ಹರ್ಷ ಮಂದರ್

ಅನುವಾದ : ಸುನೀಲ್ ರಾವ್

ವಾರ್ತಾಭಾರತಿ

ಇಪ್ಪತ್ತೆರಡು ವರ್ಷಗಳ ಹಿಂದೆ ಕಾಶ್ಮೀರದ ಕುನನ್ ಪೋಷ್ಪೋರದಲ್ಲಿ, ಭಾರತೀಯ ಸೈನಿಕರಿಂದಲೇ ಸಾಮೂಹಿಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ  ನ್ಯಾಯ ಸಿಗುವುದು ಯಾವಾಗ? ಆವತ್ತು ಫೆಬ್ರವರಿ 23, 1991ರ ರಾತ್ರಿ,  ಹಿಮಾವೃತ ಕಾಶ್ಮೀರದ ಕುಪವಾರ ಜಿಲ್ಲೆಯ, ಕುನನ್ ಪೋಷ್ಪೋರ ಎಂಬ ಹಳ್ಳಿಯೊಂದರಲ್ಲಿ ಜನ ತಮ್ಮ ಮನೆಗಳಲ್ಲಿ ರಜಾಯಿ ಹೊದ್ದು ಕೊಂಡು ಬೆಚ್ಚಗೆ ಮಲಗಿದ್ದರು. ರಾತ್ರಿಯ ನಿಶ್ಯಬ್ದವನ್ನು ಹಾಳುಗೆಡವಿ ಯಾರೋ ಹೊರಗಡೆಯಿಂದ ಬಾಗಿಲುಗಳನ್ನು ಜೋರಾಗಿ ಡಬಡಬ ಬಡಿಯುತ್ತಿದ್ದರು. ಆ ರಾತ್ರಿ ಮತ್ತೊಂದು ಅನಾಹುತವನ್ನು ಎಸಗಿಬಿಡುವುದಕ್ಕೆ ಸೈನ್ಯ ತಯಾರಾಗಿ ಬಂದಿತ್ತು; ಕುನನ್  ಪೋಷ್ಪೋರದಲ್ಲಿ ಉಗ್ರಗಾಮಿಗಳು ಅಡಗಿ ಕೊಂಡಿದ್ದಾರೆ ಎಂಬ ಅನುಮಾನದಿಂದ ಮಾಡಿದ ದಾಳಿ ಅದಾಗಿತ್ತು.


ಆ ಕಣಿವೆಯ ಸುತ್ತ ಸೈನ್ಯದ ಬಿಗಿ ಭದ್ರತೆಯಿದೆ.  ಮತ್ತು ರೂಢಿಯಂತೆ ಭದ್ರತಾ ಪಡೆಗಳು ಮನೆಗಳಿಗೆ ನುಗ್ಗಿ ಗಂಡಸರನ್ನು ಆಚೆ ಎಳೆತಂದು ಇಂಟಾರಾಗೇಶನ್ ಮಾಡುವುದು ಮಾಮೂಲು. ಅದೇ ಊರಿನಲ್ಲಿ ಇಂಟರಾಗೇಶನ್  ಟಾರ್ಚರ್ ರೂಮುಗಳಾಗಿ ಮಾರ್ಪಾಟಾಗಿದ್ದ ಎರಡು ಮನೆಗಳಿಗೆ ಇವರನ್ನು ಎಳೆದೊಯ್ಯುತ್ತಿದ್ದರು. ಆ ಗಂಡಸರನ್ನು ಮರದ ಕೊರಡಿನ ಮೇಲೆ ಮಂಡಿಯೂರಿ ಬಗ್ಗಿಸಿ, ಮುಂದೆ ಇಟ್ಟಿದ್ದ ಖಾರದಪುಡಿಯ ದೊಡ್ಡ ಡಬ್ಬದಲ್ಲಿ ಅವರ  ಮುಖವನ್ನು ಅದುಮುತ್ತಿದ್ದರು. ಹಾಗೂ ಕರೆಂಟು ಶಾಕ್ ಕೊಟ್ಟು ಬಾಯಿ ಬಿಡಿಸಲು ಯತ್ನಿಸುತ್ತಿ ದ್ದರು.


ಮನೆಯ ಗಂಡಸರಿಗೆ ಗುರುತಿಲ್ಲದ, ಸೈನ್ಯದ ತುಕಡಿಯೊಂದು ಅವರ ಮನೆಗಳಿಗೆ ನುಗ್ಗಿ, ಎಂಟರಿಂದ ಎಂಬತ್ತು ವರ್ಷದ ಯಾವ ಹೆಣ್ಣು ಮಕ್ಕಳನ್ನೂ ಬಿಡದೇ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು.ಎಳೆಯ ಕಂದಮ್ಮಗಳ ಚೀರಾಟದ ಮುಂದೆಯೇ ಅವರ ಅಮ್ಮಂದಿರ ಅತ್ಯಾಚಾರವಾಗಿತ್ತು.“ಕುಡಿದ ಅಮಲಿನಲ್ಲಿದ್ದ ಎಂಟು ಜನ ಗಂಡಸರು ಒಬ್ಬರಾದ ಮೇಲೊಬ್ಬರು ಸರದಿಯಂತೆ ನನ್ನನ್ನು ಬಲಾತ್ಕಾರ ಮಾಡಿಬಿಟ್ಟರು” ಎಂದು ಮಹಿಳೆಯೊಬ್ಬರು ಆ ದುರ್ಘಟನೆಯನ್ನು ನೆನೆಸಿಕೊಂಡರೆ, ಸಾಕ್ಷ್ಯದಾರಳಾದ ಮತ್ತೊಬ್ಬ ಮಹಿಳೆ-“ತನ್ನ ಮೇಲಾಗುತ್ತಿದ್ದ ಅತ್ಯಾಚಾರದಿಂದ ಮಾನಸಿಕ ಆಘಾತಕ್ಕೆ ತುತ್ತಾದ ನನ್ನ ಎಂಟು ವರ್ಷದ ಮಗಳು ಕಿಟಕಿಯಿಂದ ಆಚೆ ಜಿಗಿದು ಸಂಪೂರ್ಣ ವಿಕಲಳಾಗಿದ್ದಾಳೆ” ಎಂದು ಕಣ್ಣೀರಿಡುತ್ತಾಳೆ.
ಮಾರನೆ ದಿನ ಬೆಳಗ್ಗೆ ಸೈನ್ಯದ ತುಕಡಿಗಳು ಹಳ್ಳಿಯನ್ನು ಬಿಟ್ಟ ನಂತರವೇ ಮನೆಯ ಗಂಡಸರು ವಾಪಸ್ಸು ಮರಳಬೇಕು ಎಂದು ಸೈನಿಕರು ಆಜ್ಞೆ ಮಾಡಿದ್ದರು. ಗಂಡಸರು ತಮ್ಮ ಮನೆಗಳಿಗೆ ಹಿಂದಿರುಗಿದರೆ ಅವರ ಅಮ್ಮ, ಅಕ್ಕ, ತಂಗಿ, ಹೆಂಡತಿ ರಕ್ತ ಸ್ರಾವದಿಂದ ನರಳಾಡುತ್ತಾ, ಮನೆಯ ಹಜಾರದಲ್ಲಿ ಪ್ರಜ್ಞೆಯಿಲ್ಲದೇ ಬೆತ್ತಲೆಯಾಗಿ ಬಿದ್ದಿದ್ದರು; ಅವರ ಸುತ್ತ ಎಳೇ ಕಂದಮ್ಮಗಳು ಏನು ಮಾಡಬೇಕೆಂದು ತೋಚದೇ ಚೀರುತ್ತಾ ಕೂತಿದ್ದವು. 


ಎರಡು ದಿನಗಳ ನಂತರ, ಧೈರ್ಯ ಮಾಡಿ ಕುನನ್ ಪೋಷ್ಪೋರದ ಗಂಡಸರು ತಮ್ಮ ಮನೆಗಳಲ್ಲಾದ ದುರ್ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ಹೋಗಿದ್ದರು. ಆದರೆ ಪೊಲೀಸರು ಕಂಪ್ಲೇಂಟು ತೆಗೆದುಕೊಳ್ಳಲಿಲ್ಲ. ಆಮೇಲೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಮುಂದೆ ಇವರೆಲ್ಲಾ ಧರಣಿ ಕೂತ ಮೇಲೆ, ಎಸ್‌ಎಮ್ ಯಾಸೀನ್ ಅವರು ಹಳ್ಳಿಗೆ ಭೇಟಿಯಿತ್ತಿದ್ದರು. ಅವರ ಮನೆಗಳಲ್ಲಿ ಜರಗಿ ಹೋಗಿದ್ದ ಭೀಕರತೆಯನ್ನು ಕಣ್ಣಾರೆ ಕಂಡು “ಕ್ಷುದ್ರ ಪಿಶಾಚಿಗಳಂತೆ ವರ್ತಿಸಿದ್ದಾರೆ” ಎಂದು ವರದಿ ಮಾಡಿದ್ದರು. ಅವರ ಭಾರೀ ಒತ್ತಾಯದ ಮೇರೆಗೆ ಮಾರ್ಚ್ 18, 1991ರಂದು ಪೋಲೀಸರು ಎಫ್‌ಐಆರ್ ದಾಖಲಿಸಿ ಕೊಂಡರು. 

ಆದರೆ ಒಂದು ತಿಂಗಳ ನಂತರ, ಪ್ರಾಸಿಕ್ಯೂಶನ್ ನಿರ್ದೇಶಕರೊಬ್ಬರು, “ಇದು ಕ್ರಿಮಿನಲ್ ಪ್ರಾಸಿಕ್ಯೂಶನ್ ಎಂದು ಪರಿಗಣಿಸಲು ನಾಲಾಯಕ್ಕು” ಎಂದು ಪೊಲೀಸರು ಮಾಡಿದ್ದ ವರದಿಯ ಮೇಲೆ ನಿರ್ಣಯ ಕೊಟ್ಟರು. ಒಂದು ತಿಂಗಳ ನಂತರ, ಅಕ್ಟೋಬರ್ ೨೧ರಂದು, ಅಪರಾಧವೆಸಗಿದವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಕ್ರಿಮಿನಲ್ ಮೊಕದ್ದಮೆಯನ್ನು ಮುಚ್ಚಿಹಾಕಲಾಯಿತು.


ಯಾವ ವಿಚಾರಣೆಯೂ ಇಲ್ಲದೆ ಹನ್ನೊಂದು ವರ್ಷಗಳೇ ಸಂದಿತ್ತು. ಬಹುಶಃ ಭಾರತದ ಇತಿಹಾಸದಲ್ಲೇ ಸಾಮೂಹಿಕ ಅತ್ಯಾಚಾರಕ್ಕೊಳಗಾದ, ಲೈಂಗಿಕ ದೌರ್ಜನ್ಯದ ಬಹುದೊಡ್ಡ ಮತ್ತು ಏಕೈಕ ಘಟನೆ ಇದೇ ಅನಿಸುತ್ತದೆ. ಆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಹಳ ಕಾಲವಿತ್ತು, ನಂತರ ಚುನಾವಣೆಗಳು ಜರಗಿ ಸರಕಾರಗಳು ನಿರ್ಮಾಣವಾದ ನಂತರವೂ, ಯಾವುದೇ ಮುಖ್ಯಮಂತ್ರಿ ಯಾಗಲಿ ಅಥವಾ ಇನ್ನಿತರ ಮಂತ್ರಿಗಳು ಈ ಹಳ್ಳಿಯ ಕಡೆ ತಿರುಗಿ ನೋಡುವ ಯತ್ನವನ್ನೂ ಮಾಡಲಿಲ್ಲ; ಎಲ್ಲರೂ ಈ ಬಾಧಿತರನ್ನು ಅಚ್ಚುಕಟ್ಟಾಗಿ ಮರೆತುಬಿಟ್ಟಿದ್ದರು.


ಪುನಃ 2004ರಲ್ಲಿ ನಿರ್ಗತಿಕ ಹಳ್ಳಿಗರು; ಪ್ರಾಯಶಃ ಸಣ್ಣಪುಟ್ಟ ರೈತರು ಹಾಗೂ ತೋಟಗಾರರು ಒಂದಷ್ಟು ಹಣವನ್ನು ಕೂಡಿ ಹಾಕಿ, ತಮಗೆ ದೊರಕಿದ್ದ ನ್ಯಾಯವಲ್ಲದ ಮಾಜಿ ತೀರ್ಪಿನ ಬಗ್ಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಮುಂದೆ ಮತ್ತೊಮ್ಮೆ ದೂರು ದಾಖಲಿಸಿದರು. ಬದುಕುಳಿದಿದ್ದ ಬಾಧಿತರ ಬಳಿಯಲ್ಲಿ ಆಯೋಗ ಹೇಳಿಕೆಗಳನ್ನು ಪಡೆದುಕೊಂಡಿತು (ಮದುವೆಯಾದ ಬಾಧಿತರು ಮಾತ್ರ ದೂರು ದಾಖಲು ಮಾಡಬೇಕು, ಮದುವೆಯಾಗದ ಯುವತಿಯರು ದೂರು ಕೊಡುವುದು ಬೇಡ, ಮುಂದೆ ಅವರ ಭವಿಷ್ಯಕ್ಕೆ ಹಾನಿಯಾಗುತ್ತದೆ ಎಂದು ಹಳ್ಳಿಗರು ನಿರ್ಧಾರಕ್ಕೆ ಬಂದಿದ್ದರು). 

ಸತತ ಏಳು ವರ್ಷಗಳ ವಿಚಾರಣೆ ಮತ್ತು ತನಿಖೆಗಳ ನಂತರ ಅಕ್ಟೋಬರ್ 16, 2011ರಂದು ಆಯೋಗವು-“ಫೆಬ್ರವರಿ 23-34, 1991ರಂದು ಮಧ್ಯರಾತ್ರಿ ನಡೆದ ಸಾಮೂಹಿಕ ಅತ್ಯಾಚಾರಕ್ಕೆ, 4ರಜಪುತನ್ ರೈಫಲ್ಸ್ ಹಾಗೂ 68 ಮೌಂಟೇನ್ ಬ್ರಿಗೇಡ್‌ನ ಸಿಬ್ಬಂದಿಯೇ ಕಾರಣ” ಎಂಬ ವರದಿಯನ್ನು ಬಿಡುಗಡೆ ಮಾಡಿತು. ಸರಕಾರಕ್ಕೆ ಈ ವರದಿಯನ್ನು ಕೊಟ್ಟು, ಕೂಡಲೇ ಕುನನ್ ಪೋಷ್ಪೋರದ ಬಾಧಿತರಿಗೆ ತಲಾ ಎರಡು ಲಕ್ಷ ರೂ. ಹಾಗೂ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ವಿಧಿಸಲು, ಎಸ್‌ಎಸ್‌ಪಿ ಗ್ರೇಡ್‌ಗಿಂತಲೂ ಮೇಲ್ದರ್ಜೆಯ ತಂಡವೊಂದನ್ನು ನೇಮಕ ಮಾಡಿ, ಕ್ರಿಮಿನಲ್ ಮೊಕದ್ದಮೆಯ ಫೈಲನ್ನು ಮತ್ತೆ ತೆಗೆಸಿ ವಿಚಾರಣೆ ಶುರು ಮಾಡಿ, “ಆದಷ್ಟು ಬೇಗ ತನಿಖೆಯನ್ನು ಮುಕ್ತಾಯ ಮಾಡಬೇಕು” ಎಂದು ಆದೇಶವನ್ನು ಹೊರಡಿಸಿತು.


ಇಷ್ಟೆಲ್ಲಾ ಆದರೂ, ಅಸೆಂಬ್ಲಿಯಲ್ಲಿ ಸ್ವಲ್ಪ ಗದ್ದಲವಾಗಿದ್ದು ಬಿಟ್ಟರೆ, ರಾಜ್ಯ ಸರಕಾರ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಕೊನೆಗೆ ಆ ಹಳ್ಳಿಯನ್ನು ಪ್ರತಿನಿಧಿಸುತ್ತಿದ್ದ ಶಾಸಕರು ಹಾಗೂ ಕಾನೂನು ಮಂತ್ರಿಯಾಗಿದ್ದ ವ್ಯಕ್ತಿ ಕೆಲವೇ ಕೆಲವು  ವಯಸ್ಸಾದವರನ್ನು ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಕರೆದೊಯ್ದಿದ್ದರು. ಹಾಗೂ ಮೂವತ್ತೊಂಬತ್ತು ಜನ ಮಹಿಳೆಯರಿಗೆ ತಲಾ ಒಂದೊಂದು ಲಕ್ಷ ರೂಪಾಯಿಯನ್ನು ಪರಿಹಾರವಾಗಿ ಹಂಚಿದ್ದರು. ಆದರೆ ಕ್ರಿಮಿನಲ್ ಮೊಕದ್ದಮೆಯ ಕೇಸು ಪುನಶ್ಚೇತನಗೊಳ್ಳಲೇ ಇಲ್ಲ.
ಕೊನೆಯದಾಗಿ, ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳು ಕುನನ್ ಪೋಷ್ಪೋರದ ಮಹಿಳೆಯ ಬೆಂಬಲಕ್ಕೆ ನಿಂತು, ಮಾರ್ಚ್ 2013ರಂದು, ಮಾನವ ಹಕ್ಕು ಆಯೋಗದ ವರದಿಯನ್ನು ಜಾರಿಗೊಳಿಸಿ ಕ್ರಿಮಿನಲ್ ಕೇಸಿನ ತನಿಖೆ ಮತ್ತೆ ಶುರು ಮಾಡಿಸಬೇಕೆಂದು, ಸುಪ್ರೀಂ ಕೋರ್ಟಿನಲ್ಲಿ ಅಹವಾಲು ಸಲ್ಲಿಸಿದ್ದರು.


ಜೂನ್ ೨೦೧೩ರಂದು, ಹಿರಿಯ ಪತ್ರಕರ್ತೆ ಸೀಮಾ ಮುಸ್ತಫಾ, ನೀತಿ ಸಂಹಿತೆಯ ವಿಶ್ಲೇಷಣಾ ಕೇಂದ್ರದ ತಂಡವೊಂದನ್ನು ಕುನನ್ ಪೋಷ್ಪೋರಕ್ಕೆ ಭೇಟಿ ನೀಡಲು ಆಹ್ವಾನಿಸಿದ್ದರು. ಆ ತಂಡದಲ್ಲಿ- AUDWAನ ಸೆಹ್ಬ ಪರೂಕಿ, ಸಿಪಿಐ- ಎಂನ ಮುಹಮ್ಮದ ಸಲೀಂ, ಸಿಪಿಐನ ಬಾಲಚಂದ್ರ, ನಿವೃತ್ತ ಪೊಲೀಸ್ ಅಧಿಕಾರಿ ರಾಮ ಮೋಹನ್ ಹಾಗೂ ನಾನು ಇದ್ದೆವು. ನಮ್ಮನ್ನು ಭೇಟಿ ಮಾಡಲು ಅಲ್ಲಿ ನೆರೆದಿದ್ದ ಪುರುಷರು ಮತ್ತು ಮಹಿಳೆಯರ ಮಾತುಗಳನ್ನು ನಾವು ಆಲಿಸುತ್ತಿದ್ದೆವು. ಅವರಲ್ಲಾದ ಆಳವಾದ ಗಾಯ ಇನ್ನೂ ಮಾದಿರಲಿಲ್ಲ. ಯಾತನೆ-ತಳಮಳಗಳು ಇನ್ನೂ ಶಾಂತವಾಗಿರಲಿಲ್ಲ. ಅವರ ನೋವನ್ನು ಆಲಿಸುತ್ತಿದ್ದರೆ ಅಕ್ಟೋಬರ್ 22ರಂದು ನಡೆದ ಘಟನೆ ಅನ್ನಿಸುತ್ತಿರಲಿಲ್ಲ; ನಿನ್ನೆ ರಾತ್ರಿ ನಡೆದ ಹಿಂಸೆ ಎಂದು ಮನಕ್ಕೆ ತಾಕುತ್ತಿತ್ತು.


ಬಹಳ ಜನ ಮಹಿಳೆಯರು ಮಾತಾಡಲು ಶಬ್ದಗಳಿಲ್ಲದೇ ಕಣ್ಣೀರಾಗಿದ್ದರು. ಒಬ್ಬ ವಯೋವೃದ್ಧ ತನ್ನ ವಯಸ್ಸಿನ ತಾಯಿಯ ಮೇಲೆ ಅತ್ಯಾಚಾರವಾಗಿದ್ದ ಘಟನೆಯಿಂದ ಆಘಾತಕ್ಕೆ ಒಳಗಾದವರು ಇನ್ನೂ ಹೊರಬಂದಿರಲಿಲ್ಲ. ಆತ ನನ್ನನ್ನು ಕೇಳಿದರು, “ದಿಲ್ಲಿಯಲ್ಲಿ ಒಬ್ಬ ಹೆಣ್ಣು ಹುಡುಗಿಯ ಮೇಲೆ ಅತ್ಯಾಚಾರವಾದಾಗ, ದೇಶಾದ್ಯಂತ ಜನ ದಂಗೆಯೆದ್ದರು, ಹದಿನೈದು ದಿನಗಳ ಕಾಲ ಮೇಣದಬತ್ತಿ ಹಚ್ಚಿ ಪ್ರತಿಭಟನೆ ಮಾಡಿದರು. ಆದರೆ, ನಮ್ಮ ಅನ್ಯಾಯದ ವಿರುದ್ಧ ಯಾರು ಹೋರಾಡುತ್ತಾರೆ? ಯಾರು ಧ್ವನಿಯೆತ್ತುತ್ತಾರೆ?” ಎಂದು. 

ಹದಿಹರೆಯಕ್ಕೆ ಬಂದ ಯುವಕರು ಸಮಾಜದಲ್ಲಾಗುವ ಕಿರಿಕಿರಿಯ ಬಗ್ಗೆ ನಮ್ಮಲ್ಲಿ ಹೇಳಿದ್ದರು-ಶಾಲೆಗೆ ಹೋದರೆ ಸಹಪಾಠಿಗಳು, “ರೇಪ್ ಆಗಿದ್ದು ನಿನ್ನ ಅಮ್ಮನ ಮೇಲಾ ಅಥವಾ ಅಕ್ಕನ ಮೇಲಾ ಎಂದು ಕೇಳುತ್ತಾರೆ! ಅವರಿಗೇನು ಉತ್ತರಿಸಬೇಕು?” ಎಂದು. ಶಸ್ತ್ರಚಿಕಿತ್ಸೆಯ ಮೂಲಕ ಸುಮಾರು ಹದಿನೈದು ಮಂದಿ ಮಹಿಳೆಯರ ಗರ್ಭಕೋಶವನ್ನು ತೆಗೆಯಲಾಗಿತ್ತು, ಅವರೆಲ್ಲಾ ತಮ್ಮ ಹೆಣ್ಣುಮಕ್ಕಳಿಗೆ ಮದುವೆಯಾಗುತ್ತದೋ ಇಲ್ಲವೋ, ಅವರ ಮುಂದಿನ ಭವಿಷ್ಯವೇನು ಎಂದು ಬಹಳ ವ್ಯಾಕುಲರಾಗಿದ್ದರು.

ಹೈಕೋರ್ಟ್ ಆದೇಶ ವಿಧಿಸಿದ್ದರೂ ಸಹ, ಕುಪವಾರ ಸೆಷನ್ಸ್ ಕೋರ್ಟ್‌ನಲ್ಲಿ ಮೇ 2013ರಂದು, ಅಪರಾಧಿಗಳ ಪತ್ತೆಯಾಗದ ಕಾರಣ ಕೇಸನ್ನು ಮುಚ್ಚಬೇಕಾಗಿ ಪೊಲೀಸರು ಮನವಿಯನ್ನು ಸಲ್ಲಿಸಿದರು. ಮತ್ತೆ ಜೂನ್ 10, 2013ರಂದು ಕುನನ್ ಪೋಷ್ಪೋರದ ಹಳ್ಳಿಗರ ಪರವಾಗಿ ತನಿಖೆ ಸರಿಯಾಗಿ ನಡೆಯುತ್ತಿಲ್ಲವೆಂದೂ, 4ರಜಪುತನ್ ರೈಫಲ್ಸ್ ಹಾಗೂ 125 ಸೈನ್ಯದ ಸಿಬ್ಬಂದಿ ದೋಷಿತರು ಎಂದು ತಿಳಿದರೂ ಕ್ರಮ ಜರಗಿಸುತ್ತಿಲ್ಲ ಎಂದು ಪ್ರೊಟೆಸ್ಟ್ ಪಿಟಿಷನ್ ಸಲ್ಲಿಸಲಾಯಿತು.

ಪೊಲೀಸರು ಸರಿಯಾದ ತನಿಖೆ ಮಾಡುವುದಾಗಲೀ ಅಥವಾ ಅಪರಾಧಿಗಳ ಪತ್ತೆಗೆ ಪೆರೇಡ್ ನಡೆಸುವುದಾಗಲೀ ಮಾಡಲಿಲ್ಲ. ಕುನನ್ ಪೋಷ್ಪೋರಕ್ಕೆ ನಾವು ಭೇಟಿಯಿತ್ತ ನಂತರ, ಜೂನ್ 18, 2013ರಂದು, ಜಿಲ್ಲೆಯ ನ್ಯಾಯಮೂರ್ತಿಗಳು, ಪೊಲೀಸರ ಅರ್ಜಿಯನ್ನು ತಿರಸ್ಕರಿಸಿ, ಪಟ್ಟಿ ಮಾಡಲಾದ ಅಪರಾಧಿಗಳ ತನಿಖೆಯನ್ನು ಮಾಡಿ...ಅಪರಾಧಿಗಳನ್ನು ಘೋಷಿಸಬೇಕು ಎಂದು ತೀರ್ಪನ್ನಿತ್ತರು.


ನ್ಯಾಯವಿಲ್ಲದೆ, ಬದುಕಿದ್ದೂ ಏನ್ ಪ್ರಯೋಜನ ಸ್ವಾಮಿ? ಎಂದು ಹಳ್ಳಿಯ ಮುಖಂಡರೊಬ್ಬರು ನಮ್ಮಲ್ಲಿ ಹಲುಬಿದರು. ಆ ಭೀತಿಯ ರಾತ್ರಿ ಕಳೆದು ಇಪ್ಪತ್ತೆರಡು ವರ್ಷಗಳು ಮುಗಿದುಹೋಗಿವೆ. ಕುನನ್ ಪೋಷ್ಪೋರದ ನೂರಾರು ಜನ ಮಹಿಳೆಯರು ಮತ್ತು ಯುವತಿಯರನ್ನು ಅಮಾನುಷವಾಗಿ ಭಾರತೀಯ ಸೈನ್ಯದ ಸಿಬ್ಬಂದಿ ಅತ್ಯಾಚಾರ ಮಾಡಿದ್ದಾರೆ. ಇವತ್ತಿನವರೆಗೂ ಒಬ್ಬೇ ಒಬ್ಬ ಅಪರಾಧಿಗೆ ಶಿಕ್ಷೆಯಾಗಲಿಲ್ಲ. ನಾವು ಬದುಕುವುದಾದರೂ ಹೇಗೆ? ಹೇಳಿ.


(ಅಹರ್ನಿಶಿ ಪ್ರಕಾಶನ ಹೊರತರುತ್ತಿರುವ ಚಿಂತಕ, ಹೋರಾಟಗಾರ ಹರ್ಷ ಮಂದರ್ ಅವರ ಪುಸ್ತಕ ‘ಅಸಮಾನತೆಯ ಬಣ್ಣಗಳು’-ಇದಕ್ಕಾಗಿ ನಾನು ಮಾಡಿದ ಒಂದು ಲೇಖನದ ಅನುವಾದ)

ಗಡಿಯಾರವಿ ಆರ್ ಕಾರ್ಪೆಂಟರ್


ನನ್ನ ಪ್ರಿಯ ಗೆಳತಿ,
ನೀನೀಗ ಗರ್ಭಕಟ್ಟುವ ವೇಳೆಯ
ಗಡಿಯಾರವನ್ನು ಕಟ್ಟಿದ್ದೀಯ ಎಂದು ತಿಳಿದು ಉದ್ರೇಕಗೊಂಡಿದ್ದೇನೆ.
ಆದರೆ, ಕ್ಷಮಿಸಿಬಿಡು ಗೆಳತಿ,
ಇಲ್ಲಿನ ಈ ಶುಷ್ಕ ವಾತಾವರಣ ನನ್ನನ್ನು
ವಿಷವುಣಿಸುವ ಗಡಿಯಾರಗಳನ್ನು ತೊಡಲು ಪ್ರೇರೇಪಿಸುತ್ತಿದೆ.
ನಾನಾ ಆಮಿಷಗಳ ಕಂದಕಗಳನ್ನು ನಿರ್ಮಿಸುತ್ತಿದೆ.

ನೀನು ತಿಳಿದಂತೆ ಇಲ್ಲಿ,
ಕೈಗೆ ಕಟ್ಟುವ, ಗೋಡೆಗೆ ನೇತಾಡುವ, ಶೋಕೇಸಿನ ಶೆಲ್ಫಿನಲ್ಲಿ ಕೂರವ,
ಅರಮನೆಯ ಕಮಾನುಗಳಲ್ಲಿ, ಸರ್ಕಲ್ಲಿನ ಗೋಪುರಗಳಲ್ಲಿ ಎದ್ದುನಿಂತಿರುವ,
ನಿಲ್ದಾಣಗಳಲ್ಲಿ ಎಚ್ಚರಿಸುವ ಗಡಿಯಾರಗಳು ಇಲ್ಲವೇ ಇಲ್ಲ.
ಇಷ್ಟೇ ಏಕೆ?
ಹಳ್ಳಿಗನ ನೆತ್ತಿಯ ಮೇಲಿನ ಗಡಿಯಾರ,
ಮಿಡಿಚಿಟ್ಟೆಗಳು ರೆಕ್ಕೆ ಬದಲಿಸುವ ಗಡಿಯಾರ,
ಹೂ ಮಾರುವ ಹುಡುಗಿ ಮಗ್ಗುಲು ಬದಲಿಸುವ ಗಡಿಯಾರ,
ಪೋಲಿಹುಡಗನ ಸ್ವಪ್ನ ಸ್ಖಲನವನ್ನು ನಿರಾಕರಿಸುವ ಗಡಿಯಾರ,
ಮುದುಕಿಯ ಹಲ್ಲುಕಡಿತಕ್ಕೆ ಸಿಕ್ಕು ನಲುಗುವ ಗಡಿಯಾರ,
ನಾಯಿಗಳು ಊಳಿಡುತ್ತಲೇ ಬೆದೆಬೀಳುವ ಗಡಿಯಾರ,
ಇಲ್ಲ, ಯಾವುದೂ ಇಲ್ಲಿಲ್ಲ.

ಅಲ್ಲದೆ,
ಗಾಂಧಿಯ ಅಹಿಂಸಾ ಮುಳ್ಳುಗಳಲ್ಲೇ ತೃಪ್ತಿಪಡುತ್ತಿದ್ದ ಗಡಿಯಾರ,
ಅಂಬೇಡ್ಕರ್ ಬುದ್ಧನತ್ತ ಜಾರಿದ ಗಡಿಯಾರ,
ಲಂಕೇಶ್ ಟೀಕೆ-ಟಿಪ್ಪಣಿಯ ಮದ್ಯವನ್ನು ಹೀರುತ್ತಿದ್ದ ಗಡಿಯಾರ,
ಇಂದಿರಾ ಉಳುವವನಿಗೆ ಕಟ್ಟಿದ ಗಡಿಯಾರ,
ಡಾಲಿಯ ಮೇಜಿನಾಕಾರದ ಗಡಿಯಾರ,
ಚೆಗುವಾರನ ಬಂದೂಕಿನ ನಳಿಕೆಯಿಂದಲೇ ನಡೆಯುತ್ತಿದ್ದ ಗಡಿಯಾರ,
ಇವುಗಳು ಇದ್ದರೂ ಇಲ್ಲದಂತೆ, ಇಲ್ಲದಿದ್ದರೂ ಇದ್ದಂತೆ ಇರುವ ಗೊಂದಲಪುರವಾಗಿದೆ.

ಇರುವುದನ್ನು ತೊಡಲು ಬಿಡುತ್ತಿಲ್ಲ.
ಇಲ್ಲದ್ದನ್ನು ಹುಡುಕಲೂ ಆಸ್ಪದವಿಲ್ಲ

ಇಲ್ಲಿನ ಗಡಿರೇಖೆಗಳಿಗೊಂದರಂತೆ,
ಇರುವೆ ಸಾಲುಗಳಂತೆ
ಭೂಪಟದಲ್ಲಿ ಬಡಾವಣೆಗಳನ್ನು ವಿಭಜಿಸುವ ಗಡಿಯಾರಗಳನ್ನು
ಅಲ್ಲಲ್ಲಿ ಬೆಳೆಸಿದ್ದಾರೆ.
ಅವುಗಳಿಗೆ ಕಾಲಕಾಲಕ್ಕೆ ನೀರೆರೆದು,
ವಿಷದ ಚುಚ್ಚುಮದ್ದನ್ನು ನೀಡುತ್ತಿದ್ದಾರೆ.
ಆ ಕಾಲು ಹಾದಿಯಲ್ಲಿ ಹಾಯುವ ಎಲ್ಲರಿಗೂ ಒಂದೊಂದು ಉಚಿತ ಕೊಡುಗೆಯಾಗಿ
ಆ ಗಡಿಯಾರಗಳೇ ದಕ್ಕುತ್ತಿವೆ.
ಅವು ಕುಂಟು ನೆಪ ಹೇಳುವ, ಹೆಳವನಂತೆ ನಟಿಸುವ,
ಸೋಮಾರಿಯ ಹಾಗೆ ಸುಮ್ಮನೇ ಬಿದ್ದುಕೊಂಡಿರುವ,
ಹಟಕ್ಕೆ ಬಿದ್ದು ಸೋತ ಪೈಲ್ವಾನನಂತೆ ಕಾಣಿಸುವ
ಈ ಎಲ್ಲ್ಲ ಗಡಿಯಾರಗಳೂ,
ಕಿಸೆಗಳ್ಳನ ಹಸಿವನ್ನು, ತಲೆಹಿಡುಕನ ಹತಾಶೆಯನ್ನು,
ಸಂಸಾರಿಯ ಗೊಂದಲವನ್ನು, ಸನ್ಯಾಸಿಯ ಆತಂಕವನ್ನು
ನಿರ್ಲಕ್ಷಿಸುತ್ತಾವಾದರೂ
ಅವರ ಆತ್ಮಗಳ ಹಿನ್ನೆಲೆಗೆ ತೆರಳಿ ಹಿಂಸಿಸಲು ಮಾತ್ರ ಮರೆಯುವುದಿಲ್ಲ.

ಆದ್ದರಿಂದ ದಯವಿಟ್ಟು ಕ್ಷಮಿಸುಬಿಡು ಗೆಳತಿ
ನಿನ್ನಲ್ಲಿಗೆ ಧಾವಿಸಿ ಗೂಡುಕಟ್ಟಲು
ವಿಷದ ಮುಳ್ಳುಗಳ ಗಡಿಯಾರಕ್ಕೆ ಸಮಯವಿಲ್ಲ.
***

ಕನ್ನಡಿ ಮುಂದಷ್ಟು ಹೊತ್ತು....

ಚಿದಂಬರ ನರೇಂದ್ರ

ಎಲ್ಲಾದರೂ ಸರಿ,
ಕನ್ನಡಿಯೊಂದು ಕಂಡರೆ,
ಒಂದು ಕ್ಷಣ conscious ಆಗಿ
ಮುಂದುವರೆಯುವುದು ಸ್ವಭಾವ.
ಸ್ವಭಾವ ಅಂತೀರೊ ಇಲ್ಲ
ಭಯ ಅಂತೀರೊ ಗೊತ್ತಿಲ್ಲ.

ನಮ್ಮನ್ನು, ನಮಗೆ
ಇದ್ದ ಹಾಗೇಯೇ
ತೋರಿಸುವ ವಸ್ತುಗಳೇಲ್ಲ,
fragile ಆಗಿರೋದು ಒಂದು ವಿಚಿತ್ರ.
ವಿಚಿತ್ರ ಅಂತೀರೊ ಇಲ್ಲ
ಎಚ್ಚರಿಕೆ ಅಂತೀರೊ ಗೊತ್ತಿಲ್ಲ.

ಈ ಕನ್ನಡಿಗಳೆಲ್ಲ, ಬೇರೆ ಬೇರೆ ಸೈಜಿನ
ಬೇರೆ ಬೇರೆ ವಿನ್ಯಾಸದ
ಫ್ರೇಮ್ ಹಾಕಿ ಹಾಕಿಕೊಂಡಿರುತ್ತವೆ.
ಫ್ರೇಮ್ ಇಲ್ಲದ ಕನ್ನಡಿ ಇಷ್ಟ ಆಗೋದಿಲ್ಲ.
ಇದನ್ನೇನು ಶೋಕಿ ಅಂತೀರೊ
safety ಅಂತೀರೊ ಗೊತ್ತಿಲ್ಲ.

ಭೂತಗನ್ನಡಿ ಅಂತಲೂ ಕೂಡ ಒಂದಿದೆ
ಇದ್ದದ್ದನ್ನು ದೊಡ್ಡದಾಗಿ ತೋರಿಸುತ್ತದೆ.
ಮ್ಯೂಸಿಯಂಗಳಲ್ಲಿ, ನಮ್ಮನ್ನ ವಿಕಾರವಾಗಿ
ತೋರಿಸುವ, ವಿಚಿತ್ರ ಕನ್ನಡಿಗಳನ್ನ
ಕೂಡ, ನೀವು ನೋಡಿರಬಹುದು.
ಇವಕ್ಕೇನಂತೀರೊ ಗೊತ್ತಿಲ್ಲ.

ಈ ಕನ್ನಡಿಯ ಗೆಳೆತನ
ಎಷ್ಟು ಮಜ,
ಎಷ್ಟು ಸುಖ ಕೊಡತ್ತೊ
ಅಷ್ಟೇ ದುಗುಡ,
ಅಷ್ಟೇ ದುಃಖನೂ ಕೊಡತ್ತೆ
ನೀವೇನಂತಿರೊ ಗೊತ್ತಿಲ್ಲ.

ರಾತ್ರಿಯ ಬೆಳಕುಪ್ರವರ ಕೊಟ್ಟೂರು
ನಿನ್ನ ಮನೆಯ ಅಂಗಳದಲ್ಲಿನ
ಚುಕ್ಕಿಗಳ ನಡುವೆ ನೇತುಬಿಟ್ಟಿದ್ದೇನೆ
ಆಕಾಶಬುಟ್ಟಿ
ಒಳಗೆ
ರೆಕ್ಕೆ ಕಟ್ಟಿದ ಮಿಂಚುಹುಳುಗಳು


ಬೇಡ, ದೀಪ ಹಚ್ಚಬೇಡ,
'ಆ ಬೆಳಕ' ಹರಡಬೇಡ
ಹಚ್ಚಿಟ್ಟ ದೀಪಕ್ಕೆ
ರಾತ್ರಿಯೊಂದಿಗೆ ಬದುಕುವಷ್ಟು ಕಸುವಿಲ್ಲ
ಎಣ್ಣೆ ಬಸಿಯುವ ಮಣ್ಣಿನ ಪ್ರಣತಿಯ
ಮೈಯೊಳಗೆ ಸಾವಿರ ತೂಕದ ಕತ್ತಲು
ಯಾರ ದೇಹದ ಕಿಮ್ಮತ್ತು
ಎಷ್ಟು ರಾತ್ರಿಯ ಬೆಳಕು
ಮತ್ತದೇ ಪ್ರಶ್ನೆ

ಪಕ್ಕದ ಬೀದಿಯ ಹುಡುಗಿ
ಕೆಂಪು ದೀಪದಡಿ
ಇದೇ ಬೆಳಕನ್ನು ಹುಡುಕುತ್ತಾ
ಕೈ ಸಾರಿಸುತ್ತಾಳೆ
ಸುಟ್ಟ ಸೀರೆ ಸೆರಗಿನಂಚಿನಲ್ಲಿ ಕಣ್ಣುಗಳು
ಒದ್ದೆಯಂತೆಯೂ
ಬೆಳಕು ಮತ್ತು ಕತ್ತಲು
ಸದ್ಯ ಮತ್ತು ಶಾಶ್ವತದಂತೆಯೂ
ಕಂಡವು

ಆಕಾಶಬುಟ್ಟಿಯೊಳಗೆ
ಒಂದಷ್ಟು ಚಣ ಕತ್ತಲು ಹೊಕ್ಕಿದರೆ
ಕಣ್ಣು ಮುಚ್ಚಿಕೋ...
ಗೋಡೆ ಗೋಡೆಗೂ ಮಿಂಚುಹುಳದ ತತ್ತಿ
ತತ್ತಿಗೆ ಕಾವು ಕೊಡುವ
ಆ ದಿನಕ್ಕೆ ನನ್ನಾತ್ಮವನ್ನು
ಮಣ್ಣು ಮಾಡಿಕೊಳ್ಳುತ್ತೇನೆ


ಮದರಂಗಿ


ದು ಸರಸ್ವತಿ
ವಾರ್ತಾಭಾರತಿ


ದ ರಾ ಬೇಂದ್ರೆ ಅವರ 'ನಾನು ಬಡವಿ'
 

ಲಕ್ಷ್ಮಣ್‌ಪುರ್ ಬಾಥೆ ಹತ್ಯಾಕಾಂಡ: ದಲಿತರಿಗೆ ನ್ಯಾಯ ಮರೀಚಿಕೆ?ರಘೋತ್ತಮ ಹೊ.ಬ
ಚಾಮರಾಜನಗರ

ಮತ್ತೊಂದು ದಲಿತರ ನರಮೇಧದ ತೀರ್ಪು ಹೊರಬಿದ್ದಿದೆ. ಈ ಬಾರಿ ಹೊರಬಿದ್ದಿರುವ ತೀರ್ಪು ಬಿಹಾರದ ಲಕ್ಷ್ಮಣ್‌ಪುರ್ ಬಾಥೆ ಎಂಬ ಹಳ್ಳಿಯೊಂದಕ್ಕೆ ಸಂಬಂಧಿಸಿದ್ದು. ರಣವೀರ ಸೇನೆ ಎಂಬ ಮೇಲ್ಜಾತಿ ಭೂಮಿಹಾರ್  ಸಮುದಾಯದ ದೌರ್ಜನ್ಯಕೋರ ಗುಂಪು 1997ರ ಡಿಸೆಂಬರ್ 1ರ ಮಧ್ಯರಾತ್ರಿ 11 ಗಂಟೆಗೆ 27 ಮಹಿಳೆಯರು, 16 ಮಕ್ಕಳೂ ಒಳಗೊಂಡಂತೆ ಲಕ್ಷ್ಮಣ್‌ಪುರ್ ಬಾಥೆ ಗ್ರಾಮದ 58 ದಲಿತರನ್ನು ಸಾಮೂಹಿಕವಾಗಿ ಕೊಲ್ಲುತ್ತದೆಂದರೆ, ಅಂತಹ ಗುಂಪು ಕೊಲೆಯಲ್ಲಿ ಒಂದು ವರ್ಷದ ಹಾಲುಗಲ್ಲದ ಕಂದನೂ ಇರುತ್ತದೆಂದರೆ ಅಂತಹ ಹಂತಕರಿಗೆ ನೀಡಬಹುದಾದ ಶಿಕ್ಷೆಯ ಪ್ರಮಾಣವನ್ನು ಎಂಥವರಾದರೂ ಊಹಿಸಬಹುದು. ಆದರೆ ದುರಂತವೆಂದರೆ  ಕಳೆದ ಅಕ್ಟೋಬರ್ 9ರಂದು ಹೊರಬಿದ್ದ ತೀರ್ಪಿನಲ್ಲಿ ಪಾಟ್ನಾ ಉಚ್ಚ ನ್ಯಾಯಾಲಯ ಲಕ್ಷ್ಮಣ್‌ಪುರ್ ಬಾಥೆ ಹತ್ಯಾಕಾಂಡದ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ !


ಖಂಡಿತ, 16ವರ್ಷಗಳ ಕಾಲ ನಡೆದ ಈ ಹತ್ಯಾಕಾಂಡದ ವ್ಯಾಜ್ಯೆ ದಿಢೀರನೆ ಕೈಗೆತ್ತಿಕೊಂಡಿದ್ದಲ್ಲ. ಘಟನೆ ನಡೆದ  ಸಂದರ್ಭದಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಅಂದಿನರಾಷ್ಟ್ರಪತಿ ಡಾ.ಕೆ.ಆರ್.ನಾರಾಯಣನ್ ‘ಸ್ವಾತಂತ್ಯೋತ್ತರ ಭಾರತದಲ್ಲೆ ಇದೊಂದು ಅತ್ಯಂತ ಅಪಮಾನಕರ ಘಟನೆ’ ಎಂದು ಖಂಡಿಸಿದ್ದರು. ಯಾಕೆಂದರೆ ಘಟನೆ ನಡೆದ ರಾತ್ರಿ ನಿದ್ರೆಯಲ್ಲಿದ್ದ ಆ  ದಲಿತರನ್ನು 100ಕ್ಕೂ ಹೆಚ್ಚಿದ್ದ  ರಣರ ಸೇನೆಯ ರಣಹೇಡಿಗಳು ಕೊಂದಿದ್ದರು. 

ಎರಡು ದೋಣಿಗಳ ಮೂಲಕ ಸೋನೆ ಎಂಬ ನದಿಯನ್ನು ದಾಟಿ ಗ್ರಾಮದ ಒಳಕ್ಕೆ ನುಗ್ಗಿದ್ದ ಆ ಪಾತಕಿಗಳು ಮನೆಗಳ ಬಾಗಿಲುಗಳನ್ನು ಮುರಿದು ಮಲಗಿದ್ದ ಮಕ್ಕಳು,  ಮಹಿಳೆಯರ ಮೇಲೆ ಮನಬಂದಂತೆ ಗುಂಡಿನ ಮಳೆಗರೆದಿದ್ದರು. ಮುನ್ಷಿ ರಾಜವಂಶಿ ಎಂಬ ಘಟನೆಯ ಪ್ರತ್ಯಕ್ಷ ಸಾಕ್ಷಿಯ ಪ್ರಕಾರ ಅವನ ಕಣ್ಣೆದುರೇ ಆತನ ಹೆಂಡತಿ, ಸೊಸೆ, ಮೊಮ್ಮಗ ಮತ್ತು ಛೋಟೆಲಾಲ್  ಎಂಬ ಹಾಲುಗಲ್ಲದ ಹಸುಳೆಯನ್ನು ಕೊಲ್ಲಲಾಗಿತ್ತು.

‘ನಾನು ಅವರನ್ನು (ರಣವೀರ ಸೇನೆಯ ಕಾರ್ಯಕರ್ತರನ್ನು) ಸ್ಪಷ್ಟವಾಗಿ ನೋಡಿದೆ. ಐದು ಸೆಲ್‌ಗಳಿದ್ದ ಟಾರ್ಚ್ ಒಂದನ್ನು ಹಿಡಿದು ಅವರು ನಮ್ಮನ್ನು ಹುಡುಕುತ್ತಿದ್ದರು. ನನಗೆ ಪ್ರತಿಯೊಂದು ಸ್ಪಷ್ಟವಾಗಿ ನೆನಪಿದೆ’ ಮುನ್ಷಿ ಹೇಳುತ್ತಾ ಹೋಗುತ್ತಾರೆ. ‘ನಾವು ಗ್ರಾಮದಲ್ಲಿ ಅವರ ಜೊತೆಯಲ್ಲೇ ವಾಸಿಸುತ್ತಿದ್ದೆವು. ಅವರ ಹೊಲದಲ್ಲಿಯೇ ದುಡಿಯುತ್ತಿದ್ದೆವು. ಕಡಿಮೆ ಎಂದರೂ  ಪ್ರತಿದಿನ ಹತ್ತು ಸಾರಿಯಾದರೂ ಅವರನ್ನು ನೋಡುತ್ತಿದ್ದೆವು. ಹೀಗಿರುವಾಗ ನಾನು ಅವರನ್ನು ಗುರುತಿಸದಿರಲು ಹೇಗೆ ಅಸಾಧ್ಯ? 

ಖಂಡಿತ, ಅವರು ನಮ್ಮ ಮೇಲೆ ದಾಳಿ ಮಾಡುತ್ತಾರೆಂಬ ಸಣ್ಣ ಸುಳಿವು ಸಿಕ್ಕಿದ್ದಿದ್ದರೂ ನಾವು ಎಚ್ಚೆತ್ತು ಕೊಳ್ಳುತ್ತಿದ್ದೆವು’ ಘಟನೆಯಲ್ಲಿ ಬದುಕುಳಿದ ಲಕ್ಷ್ಮಣ್ ರಾಜವಂಶಿ  ಎಂಬ ಮತ್ತೊಬ್ಬ ಸಾಕ್ಷಿಯ ಹೇಳಿಕೆ ಇದು. ಇಂತೆಲ್ಲಾ ಸಾಕ್ಷಿಗಳ ಆಧಾರದ ಮೇಲೆ ಪಾಟ್ನಾದ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2010 ಎಪ್ರಿಲ್ 10ರಂದು ಲಕ್ಷ್ಮಣ್‌ಪುರ್ ಬಾಥೆ ಘಟನೆಯ 16 ಆರೋಪಿಗಳಿಗೆ  ಮರಣ ದಂಡನೆಯನ್ನೂ,  10  ಆರೋಪಿಗಳಿಗೆ  ಜೀವಾವಧಿ ಶಿಕ್ಷೆಯನ್ನೂ  ವಿಧಿಸಿ ತೀರ್ಪು ನೀಡಿತ್ತು.

ಆ ಸಂದರ್ಭದಲ್ಲಿ ತೀರ್ಪು ನೀಡಿದ ನ್ಯಾಯಾಧೀಶ ವಿಜಯ್ ಪ್ರಕಾಶ್ ಮಿಶ್ರಾ ಘಟನೆಯನ್ನು ‘ಡಿಸೆಂಬರ್ 1, 1997ರ ಲಕ್ಷ್ಮಣ್‌ಪುರ್‌ಬಾಥೆ ಘಟನೆ ನಾಗರಿಕ ಸಮಾಜಕ್ಕೆ  ಕಳಂಕದ ಮಾದರಿಯದ್ದು  ಮತ್ತು ಕ್ರೂರತೆಯಲ್ಲಿ ಅಪರೂಪದಲ್ಲೇ  ಅಪರೂಪದ್ದು’ ಎಂದು ಬಣ್ಣಿಸಿದ್ದರು. ಆ ಮೂಲಕ ದಲಿತರಿಗೆ ಮಿಶ್ರಾ ನ್ಯಾಯ ಒದಗಿಸಿದ್ದರು. ಆದರೆ?


ಸೆಷನ್ಸ್ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ  ಸಲ್ಲಿಸುತ್ತಲೇ ಮೊನ್ನೆ ಪಾಟ್ನಾ ಉಚ್ಚ ನ್ಯಾಯಾಲಯ ಮರಣದಂಡನೆ ಇರಲಿ, ಆರೋಪಿಗಳನ್ನು ಆರೋಪದಿಂದಲೇ ಸಂಪೂರ್ಣ  ಮುಕ್ತಗೊಳಿಸಿದೆ. ಸಾಕ್ಷ್ಯಾಧಾರಗಳ ಕೊರತೆ ಎಂದಿರುವ ಸದರಿ ನ್ಯಾಯಾಲಯ ಮೇಲೆ ಹೇಳಿದ ಸಾಕ್ಷಿಗಳ ಸಾಕ್ಷಿಯನ್ನು quiet improbable ಎಂದಿದೆ.

ಅಲ್ಲದೆ ರಣವೀರ ಸೇನೆಯವರಿಂದ ಹತ್ಯಾಕಾಂಡದ ಮಾತು ಒತ್ತಟ್ಟಿಗಿರಲಿ, ಇಡೀ ಘಟನೆಯನ್ನೇ ನ್ಯಾಯಾಲಯ ‘ದುರದೃಷ್ಟಕರ, ವಾಹನಗಳ ಮೂಲಕ ನಡೆದ ಅಪಘಾತ!’ ಎಂದು ಬಣ್ಣಿಸಿದೆ!! ಆ ಕಾರಣಕ್ಕಾಗಿ ಮೋಟಾರು ವಾಹನ ಕಾಯಿದೆ 1988, ಸೆಕ್ಷನ್ 163-ಅ, ಷೆಡ್ಯೂಲ್11ರ ಪ್ರಕಾರ ಸತ್ತ ಆ 58 ದಲಿತ ಬಲಿಪಶುಗಳಿಗೆ  ಅವರ ವಯಸ್ಸು, ಆದಾಯ ಮತ್ತು ಗಾಯದ ಪ್ರಮಾಣದ ಪ್ರಕಾರ ಪರಿಹಾರ ನೀಡಲು  ಅದು ಸರಕಾರಕ್ಕೆ ಆದೇಶಿಸಿದೆ!


ಅಂದರೆ 100ಕ್ಕೂ ಹೆಚ್ಚು ಮೇಲ್ಜಾತಿ ರಣವೀರ ಸೇನೆಯವರ ಗುಂಪಿಗೆ ಬಲಿಯಾದ ಲಕ್ಷ್ಮಣ್‌ಪುರ್ ಬಾಥೆ ಎಂಬ ಆ ಹಳ್ಳಿಯ ಆ 58 ದಲಿತರು  ಡಿಸೆಂಬರ್ 1ರ ಆ ಮಧ್ಯರಾತ್ರಿ ರಸ್ತೆ ಅಪಘಾತದಿಂದ ಸತ್ತರು! ಆ ಕಾರಣದಿಂದ ರಾತ್ರಿ ಕತ್ತಲಾಗಿತ್ತಲ್ಲ (ರಾತ್ರಿ 11 ಗಂಟೆ), ವಾಹನ ಸವಾರರನ್ನು ಗುರುತಿಸಲು ಸಾಧ್ಯವಾಗುವುದಿಲ್ಲವಲ್ಲ. ಆದ್ದರಿಂದ ಅವರೆಲ್ಲ (ರಣರ ಸೇನೆಯ ಆರೋಪಿಗಳು) ಆರೋಪಮುಕ್ತರು! ಲಕ್ಷ್ಮಣ್‌ಪುರ್ ಬಾಥೆ ತೀರ್ಪಿನ ಸಾರಾಂಶವಿದು!

ಖಂಡಿತ, ಇಂತಹದ್ದನ್ನೆಲ್ಲ  ಹೇಳಲು ಎದೆ ‘ಹೊಡೆದುಕೊಳ್ಳುತ್ತದೆ’. ಮುಂದುವರಿದು ವಿಜಯ್ ಪ್ರಕಾಶ್‌ಮಿಶ್ರಾ ನೇತೃತ್ವದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಲಕ್ಷ್ಮಣ್‌ಪುರ್ ಬಾಥೆ ಘಟನೆಯ ಆರೋಪಿಗಳಿಗೆ ಮರಣದಂಡನೆ ನೀಡಿದ್ದ ಬಗ್ಗೆ ಕಳಕಳಿ(?) ವ್ಯಕ್ತಪಡಿಸಿರುವ ಪಾಟ್ನಾ ಉಚ್ಚ ನ್ಯಾಯಾಲಯದ ಸದರಿ ನ್ಯಾಯಾಧೀಶರುಗಳಾದ ವಿ.ಎನ್.ಸಿನ್ಹ ಮತ್ತು ಎ.ಕೆ.ಲಾಲ್ ‘ತಾವು ಯಾವುದೇ ಆರೋಪಿಗಳಿಗೆ ಮರಣದಂಡನೆ  ವಿಧಿಸುವುದರ ವಿರುದ್ಧ’ ಎಂದು ತಮ್ಮ ಮಾನವೀಯತೆಯ(?)ಒಳ ತೋಟಿಯನ್ನು ತೋಡಿಕೊಳ್ಳುತ್ತಲೆ ಅಷ್ಟೂ ಜನ ರಣರ ಸೇನೆಯ (16ಜನ ಮರಣದಂಡನೆಗೀಡಾಗಿದ್ದವರು ಮತ್ತು 10ಜನ ಜೀವಾವಧಿ ಶಿಕ್ಷೆಗೊಳಗಾಗಿದ್ದವರನ್ನೊಳಗೊಂಡಂತೆ ಒಟ್ಟು 26ಜನ) ಆರೋಪಿಗಳ ಮೇಲೆ ಹೊರಿಸಿದ್ದ ಆರೋಪವನ್ನು ತಳ್ಳಿಹಾಕಿದ್ದಾರೆ!  

ಘನತೆವೆತ್ತ ನ್ಯಾಯಾಧೀಶರುಗಳಿಗೆ ರಣವೀರ ಸೇನೆಯ ಕಾರ್ಯಕರ್ತರುಗಳಿಗೆ ಮರಣದಂಡನೆ ವಿಧಿಸಿದ್ದರ ಬಗ್ಗೆ ಅಂತಹ ಆತಂಕವಿದ್ದರೆ ಅದನ್ನು ಜೀವಾವಧಿಶಿಕ್ಷೆಗಾದರೂ ಇಳಿಸಬಹುದಿತ್ತಲ್ಲವೆ? ಊಹ್ಞೂಂ, ನ್ಯಾಯಾಲಯ ಹಾಗೆ ಮಾಡಲಿಲ್ಲ. ಬದಲಿಗೆ ‘ಸಾಕ್ಷ್ಯಾಧಾರಗಳ ಆಧಾರದ ಮೇಲೆ’ ಕೆಳಹಂತದ ನ್ಯಾಯಾಲಯವೊಂದು ದಲಿತರ ಹತ್ಯಾಕಾಂಡದ ಆರೋಪಿಗಳಿಗೆ ಮರಣದಂಡನೆ ವಿಧಿಸಿದರೆ ಅದೇ ‘ಸಾಕ್ಷ್ಯಾಧಾರಗಳ ಕೊರತೆಯ ಆಧಾರದ ಮೇಲೆ’ ಮೇಲಿನ ಹಂತದ ಆ ನ್ಯಾಯಾಲಯ  ದಲಿತರ ಹತ್ಯಾಕಾಂಡದ ಅದೇ ಆರೋಪಿಗಳನ್ನು ಸಂಪೂರ್ಣ ಖುಲಾಸೆಗೊಳಿಸಿದೆ!

ಹಾಗೆಯೇ ‘ಗಾಯದ ಮೇಲೆ ಉಪ್ಪು ಸುರಿದಂತೆ’  58 ದಲಿತರ ಹತ್ಯೆಯನ್ನು  ‘ವಾಹನಗಳ ಮೂಲಕ ನಡೆದ ಸ್ವಾಭಾವಿಕ ದುರದೃಷ್ಟಕರ ಅಪಘಾತ’ ಎಂದು ಅದು ಷರಾ ಬರೆದಿದೆ! ಖಂಡಿತ, ಇಂತಹ ತೀರ್ಪನ್ನು ಒಪ್ಪಬೇಕೋ, ಬಿಡಬೇಕೋ ಅದು ನಾಗರಿಕ ಸಮಾಜಕ್ಕೆ  ಸೇರಿದ್ದು.ಯಾಕೆಂದರೆ ಇಂತಹದ್ದೆ ತೀರ್ಪುಗಳು  ಅಯೋಧ್ಯೆ ವಿಷಯದಲ್ಲಿ, 2002ರ ಗುಜರಾತ್ ಹಿಂಸೆಯ ಸಂದರ್ಭದಲ್ಲಿ, 1996ರ ಬೊತಾನಿ ತೋಲಾ ದಲಿತರ ಹತ್ಯಾಕಾಂಡದ 23 ನ ರಣರಸೇನೆಯ  ಆರೋಪಿಗಳನ್ನು ಆರೋಪಮುಕ್ತಗೊಳಿಸಿದ ಸಂದರ್ಭದಲ್ಲಿ, 2006 ಖೈರ್ಲಾಂಜಿ ಘಟನೆಯಲ್ಲಿ ಹೊರಬಿದ್ದಿವೆ. ಒಟ್ಟಾರೆ ದಲಿತರ ನರಮೇಧ  ಮತ್ತು ಅವರಿಗೆ ನ್ಯಾಯ ಎಂದರೆ ಈ ಥರ!  ಅದೇ ದಲಿತರಿಂದ ಇಂತಹದ್ದೇ ಘಟನೆಯಾದಾಗ?


ಉದಾಹರಣೆಗೆ 1992 ಫೆಬ್ರವರಿಯಲ್ಲಿ ದಲಿತರಿಂದ 15 ಜನ ಮೇಲ್ವರ್ಗದವರ ಹತ್ಯೆಯಾದಾಗ ಅಂದಿನ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಸರಕಾರ ಆರೋಪಿಗಳನ್ನು ಟಾಡಾ ಕಾಯ್ದೆಯಡಿ ಬಂಧಿಸಿ ದಲಿತ ಆರೋಪಿಗಳಿಗೆ ಉಗ್ರ  ಶಿಕ್ಷೆಯಾಗುವಂತೆ ನೋಡಿಕೊಂಡಿತು! ಆದರೆ ಲಕ್ಷ್ಮಣ್‌ಪುರ್ ಬಾಥೆಯಲ್ಲಿ ದಲಿತರ ಹತ್ಯೆಯಾದಾಗ ಅದೇ ಲಾಲೂ ಪ್ರಸಾದ್ ಯಾದವ್ ಸರಕಾರ ರಣರಸೇನೆ ವಿರುದ್ಧ ಅಂತಹ ಉಗ್ರಕ್ರಮಕ್ಕೆ ಮುಂದಾಗಲಿಲ್ಲ! ಬದಲಿಗೆ  ನೊಂದ ದಲಿತರ ಕಣ್ಣೊರೆಸಲು  ಅಮೀರ್‌ದಾಸ್ ಎಂಬ ನ್ಯಾಯಾಧೀಶರ  ನೇತೃತ್ವದಲ್ಲಿ  ವಿಚಾರಣಾ ಆಯೋಗವೊಂದನ್ನು ನೇಮಿಸಿದ ತರುವಾಯ ತನ್ನ ಕೈತೊಳೆದುಕೊಂಡಿತು! ಅಂದಹಾಗೆ ತದನಂತರವಾದರೂ ಏನು? 

ಲಾಲೂ ಯಾದವ್ ನಂತರ ಬಂದ ಹಾಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ರಣವೀರ ಸೇನೆ ಬಗ್ಗೆ ತನಿಖೆ ನಡೆಸುತ್ತಿದ್ದ ಆ ಅಮೀರ್‌ದಾಸ್ ಆಯೋಗವನ್ನೇ ರದ್ದುಗೊಳಿಸಿದರು! ಆ ಮೂಲಕ ವ್ಯವಸ್ಥೆ ಯಾರ ಪರ ಎಂಬುದನ್ನು ನಿತೀಶ್ ತೋರಿಸಿಕೊಟ್ಟಿದ್ದರು. ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ 'ದಲಿತರ ರಕ್ತದಾಹ ಪೀಡಿತ ರಣವೀರ ಸೇನೆ'ಯ ಮುಖ್ಯಸ್ಥ ಬ್ರಹ್ಮೇಶ್ವರ್ ಸಿಂಗ್ ಅಲಿಯಾಸ್ ಮುಖಿಯಾ ಕಳೆದ 2012ರ ಜೂನ್ 1ರಂದು ಅನಾಮಧೇಯರಿಂದ ಹತ್ಯೆಗೀಡಾಗಿದ್ದಾನೆ. ಈ ನಿಟ್ಟಿನಲ್ಲಿ ವ್ಯವಸ್ಥೆಯ ಇಂತಹ ‘ವ್ಯತಿರಿಕ್ತ ತೀರ್ಪು’ಗಳಿಗೆ ಒಮ್ಮೊಮ್ಮೆ ಇಂತಹ ಪ್ರತಿಹಿಂಸೆಯೇ ಉತ್ತರದಂತೆ ಕಂಡರೆ ಆಶ್ಚರ್ಯವೇನಿಲ್ಲ.ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...