Sunday, March 31, 2013

ಎಲ್ಲ ಪಕ್ಷಗಳ ನಾಯಕರಿಗೊಂದು ಬಹಿರಂಗ ಪತ್ರ

ಡಾ ಎಚ್ ಎಸ್ ಅನುಪಮಾಚುನಾವಣೆಗಳು ಬರುತ್ತಿವೆ. ಸಾರ್ವತ್ರಿಕ ಶಾಂತಿ ಘೋಷಿಸಲಾಗಿದೆ. ತೋಳಗಳು ಕೋಳಿಸಂತತಿಯ ಆಯಸ್ಸು ಹೆಚ್ಚಿಸುವತ್ತ ಪ್ರಾಮಾಣಿಕ ಆಸಕ್ತಿ ವಹಿಸತೊಡಗಿವೆ.

- ಜಾರ್ಜ್ ಎಲಿಯಟ್

ಚುನಾವಣೆ ಹತ್ತಿರ ಬರುತ್ತಿದೆ. ಇದುವರೆಗೆ ದಿನನಿತ್ಯವೂ ಪತ್ರಿಕೆಗಳಲ್ಲಿ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಗಳು ನಡೆಸುತ್ತಿದ್ದ ನಾನಾರೀತಿಯ ಕಸರತ್ತುಗಳನ್ನು ಗಮನಿಸಿದ್ದೇವೆ. ಸಂಭಾವ್ಯ ಪಟ್ಟಿ, ಪ್ರಥಮ ಸಂಭವನೀಯ ಪಟ್ಟಿ, ಪ್ರಥಮ ಪಟ್ಟಿ, ದ್ವಿತೀಯ ಪಟ್ಟಿ, ಅಂತಿಮ ಪಟ್ಟಿ, ಭಿನ್ನಮತ ಇವೆಲ್ಲ ಯಾವ ಪಕ್ಷದ ಕಾರಿಡಾರುಗಳಲ್ಲಿ ಹೇಗೆಹೇಗೆ ನಡೆದು ಏನಾಗಬಹುದೆಂದು ಸೂಕ್ಷ್ಮವಾಗಿ ರಾಜಕೀಯ ವಿದ್ಯಮಾನಗಳನ್ನು ಗಮನಿಸುವ ಪ್ರತಿಯೊಬ್ಬರೂ ಊಹಿಸಬಹುದಾಗಿದೆ. ಭಿನ್ನಮತೀಯರನ್ನು ಸುಮ್ಮನಿರಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೆಂದರೆ ಚುನಾವಣೆಯನ್ನು ಅರ್ಧ ಗೆದ್ದ ಹಾಗೆ ಎಂದು ಎಲ್ಲ ಪಕ್ಷಗಳೂ ಭಾವಿಸಿರುವುದರಿಂದ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನದ ಕೊನೆಯ ಕ್ಷಣದವರೆಗೆ ಊಹೆ, ಕಸರತ್ತು, ಲಾಬಿ, ಭಿನ್ನಮತ ಎಲ್ಲವೂ ನಡೆಯುತ್ತಿರುತ್ತವೆ.

ಹೌದು. ಚುನಾವಣೆಯೆಂಬ ಮಾಯಾಬಜಾರ್ ತಂದುಕೊಡುವ ಅಖಂಡ ಐದು ವರ್ಷಗಳ ಎಣೆಯಿಲ್ಲದ ಅಧಿಕಾರಕ್ಕಾಗಿಯೇ ಈ ಎಲ್ಲ ಕಸರತ್ತು ಎಂದು ಅರಿತುಕೊಳ್ಳುವುದು ಕಷ್ಟವೇನಲ್ಲ. ತಾನು ಪ್ರತಿನಿಧಿಸುವ ಜನರಿಗಾಗಿಯೇ ಕೆಲಸ ಮಾಡಲು ಬಯಸುವವನು ಸೋತರೂ ಜನರ ನಡುವೆ ಇದ್ದು ಕೆಲಸ ಮಾಡುತ್ತಾನೆ. ಆದರೆ ಈಗ ‘ಜನಸೇವೆ’ ಎಂದರೆ ಗೆದ್ದು, ಅಧಿಕಾರ ಪಡೆದು ತನ್ನ ಹಿಂಬಾಲಕರಿಗೆ ಕೊಡುವ ಅಪಾತ್ರದಾನವಾಗಿರುವುದರಿಂದ ಗೆಲುವು ಮುಖ್ಯವೇ ಹೊರತು ಜನಸೇವೆಯಲ್ಲ. ಚುನಾವಣೆಗೆ ನಿಲ್ಲುವ ಯಾವ ಅಭ್ಯರ್ಥಿಯೂ ವಿರೋಧಪಕ್ಷವಾಗಿ ಜನಸೇವೆ ಮಾಡುವ ಕನಸು ಹೊಂದುವುದಿಲ್ಲ. ಇಂದು ನಿನ್ನೆ ರಾಜಕೀಯಕ್ಕೆ ಬಂದವನೂ ಹೇಗಾದರೂ ಮಾಡಿ, ಮತದಾರರ ಹಾದಿಯುದ್ದಕ್ಕೂ ಹಣಹೆಂಡ ಸುರಿದು ಗೆಲ್ಲಲು ಪ್ರಯತ್ನಿಸುತ್ತಾನೆಯೇ ಹೊರತು ಸೋಲಬಯಸುವುದಿಲ್ಲ. 

ಇದೆಲ್ಲ ಇರಲಿ. 

ಎಲ್ಲ ರಾಜಕೀಯ ಪಕ್ಷಗಳ ನಾಯಕರೇ, ಈ ಪತ್ರ ಬರೆದ ಉದ್ದೇಶ ಎಚ್ಚೆತ್ತ ಮಹಿಳಾ ಸಮೂಹ ಸೂಕ್ಷ್ಮವಾಗಿ ನಿಮ್ಮ ರಾಜಕೀಯ ನಡೆಗಳನ್ನು ಗಮನಿಸುತ್ತಿದೆ ಎಂದು ಹೇಳುವುದು. ಅನಾದಿಯಿಂದ ಮಹಿಳೆಯರನ್ನು ಅಧಿಕಾರದಿಂದ ದೂರ ಇಡಲಾಗಿದೆ. ಮಹಿಳೆ ಎಲ್ಲಿದ್ದರೂ ವಿರೋಧ ಪಕ್ಷದವಳೇ, ಆಳುವವರ ಪರವಾಗಿರುವುದಿಲ್ಲ. ಎಂದೇ ಪ್ರಶ್ನಿಸುವ ಹೆಣ್ಣುಗುಣಕ್ಕೆ ಹೆದರಿ ಅವಳನ್ನು ಅಧಿಕಾರದ ಸ್ಥಾನಗಳಿಂದ ದೂರವಿಡಲಾಗಿದೆ. ಅವಳನ್ನು ನಿಭಾಯಿಸುವುದು ಕಷ್ಟವೆಂಬ ಕಾರಣಕ್ಕೆ ಒಳವ್ಯೂಹ ತಂತ್ರ ಗುಟ್ಟುಗಳ ರಾಜಕಾರಣದ ಲೋಕಕ್ಕೆ ಅವಳು ಸೂಕ್ತವಲ್ಲವೆಂಬ ಮಿಥ್ ಸೃಷ್ಟಿಸಿ, ‘ವಿನ್ನಬಲಿಟಿ’ ಇಲ್ಲವೆಂದು ಹಣೆಪಟ್ಟಿ ಹಚ್ಚಿ ರಾಜಕೀಯದ ಕಾರಿಡಾರುಗಳಿಗೆ ಕಾಲಿಡದಂತೆ ನೋಡಿಕೊಳ್ಳಲಾಗಿದೆ. 

ಇತ್ತೀಚೆಗೆ ಮಹಿಳಾ ಮೀಸಲಾತಿ ಬಿಲ್ ಮಂಡಿಸಿದ ಸಂದರ್ಭದಲ್ಲಿ ಪಕ್ಷಭೇಧ ಮರೆತು ಎಲ್ಲ ಮಹಿಳಾ ಸಂಸತ್ ಸದಸ್ಯೆಯರು ಅಪ್ಪಿ ಹಿಡಿದು ಸಂಭ್ರಮಿಸಿದ್ದ ಚಿತ್ರ ಇನ್ನೂ ಕಣ್ಣ ಮುಂದಿದೆ. ನಮ್ಮ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳೂ ಮಹಿಳಾ ಮೀಸಲಾತಿಯ ಪರವಾಗಿಯೇ ಮತ ಹಾಕಿದ್ದವು. ಹಾಗೆ ಮುಕ್ತಕಂಠದಿಂದ ಮಹಿಳಾ ಮೀಸಲಾತಿ ಬೆಂಬಲಿಸಿ ಕತ್ತಿ ಹರಿತಗೊಳಿಸಿಕೊಂಡವರು ಈಗ ಅಭ್ಯರ್ಥಿ ಆಯ್ಕೆ ಸಮಯದಲ್ಲಿ ಏಕೆ ತಂತಮ್ಮ ಕತ್ತಿಗಳನ್ನು ಒರೆಯಲ್ಲಿಟ್ಟು ಸುಮ್ಮನಿದ್ದಾರೆ? ಸಮಸಮಾಜದ ಕನಸು ಬಿತ್ತುವ ಎಡ ಪಕ್ಷಗಳಿಂದ ಹಿಡಿದು ಶಕ್ತಿದೇವತೆಯನ್ನು ಶಂಖಜಾಗಟೆ ಹಿಡಿದು ಪೂಜಿಸುವ ಕೋಮುವಾದಿಗಳ ತನಕ ಎಲ್ಲ ರಾಜಕೀಯ ಪಕ್ಷಗಳೂ, ಸಂಘಟನೆಗಳೂ ಮಹಿಳೆಯರನ್ನು ಆಟಕ್ಕುಂಟು, ಲೆಕ್ಕಕ್ಕಿಲ್ಲವೆಂಬಂತೆ ಭಾವಿಸಿದ್ದಾರೆ. ಬೃಂದಾ ಕಾರಟ್ ಬಿಟ್ಟರೆ ಎಡಪಕ್ಷಗಳಲ್ಲಿ ವರ್ಚಸ್ವೀ ಮಹಿಳಾ ನಾಯಕತ್ವ ಬೆಳೆದು ಬರಲಿಲ್ಲ. ಇದುವರೆಗೆ ಆಡಳಿತ ನಡೆಸಿದ ಸರ್ಕಾರದಲ್ಲಿ ಒಬ್ಬರನ್ನು ಹೊರತುಪಡಿಸಿ ಮಹಿಳಾ ಪ್ರತಿನಿಧಿಗಳೇ ಇರಲಿಲ್ಲ. ಪ್ರಗತಿಪರ ಸಂಘಟನೆಗಳು ಸೇರಿ ರಚಿಸಿಕೊಂಡಿರುವ ಪ್ರಜಾ ಪ್ರಗತಿ ರಂಗದಲ್ಲಿಯೂ ಮಹಿಳಾ ನಾಯಕಿಯರ ಹೆಸರು ಮುಂಚೂಣಿಯಲ್ಲಿ ಕೇಳಿಬರುವುದಿಲ್ಲ. ಕರ್ನಾಟಕದ ಕಾಂಗ್ರೆಸ್ ನಾಯಕರಿಗೂ ತಮ್ಮ ಪಕ್ಷಾಧ್ಯಕ್ಷರು ಹೇಳುವ ತನಕ ಮಹಿಳಾ ರಾಜಕಾರಣಿಗಳು ಕಣ್ಣಿಗೇ ಬೀಳಲಿಲ್ಲ. ಕರೆಕರೆದು ಕೆಲವು ಮಹಿಳೆಯರನ್ನು ಸೇರಿಸಿಕೊಳ್ಳಲಾಗುತ್ತಿದೆಯಾದರೂ ಅದು ಥಳುಕುಬಳುಕಿನಿಂದ ಜನರನ್ನು ಸೆಳೆಯಬಹುದೆಂದೇ ಹೊರತು ಮಹಿಳಾ ನಾಯಕತ್ವ ಬೆಳೆಸಲೆಂದಲ್ಲ. 

ಚೆಲುವ ಕನ್ನಡನಾಡು ರಚಿತಗೊಂಡು ೬೩ ವರ್ಷಗಳ ಬಳಿಕವೂ ಮಹಿಳಾ ಮುಖ್ಯಮಂತ್ರಿಯಾಗಬಹುದಾದ ಅಭ್ಯರ್ಥಿ ಕಂಡುಬರುವುದಿಲ್ಲ. ಇವೆಲ್ಲ ಸೂಚಿಸುವುದಾದರೂ ಏನನ್ನು?

ಸಂವಿಧಾನ ರಚನಾ ಸಭೆಯ ಕಾಲದಿಂದಲೂ ಸೂಕ್ತ ಪ್ರಾತಿನಿಧ್ಯವಿಲ್ಲದೇ ಮಹಿಳೆ ವಂಚಿತಳಾಗಿರುವ ಕ್ಷೇತ್ರ ರಾಜಕಾರಣ. ಅಧಿಕಾರ ವಿಕೇಂದ್ರೀಕರಣದ ಕನಸಿನಿಂದ ಪಂಚಾಯತ್ ರಾಜ್ ಮಸೂದೆ ಬಂತು. ಅದರ ಫಲವಾಗಿ ಬಹುತೇಕ ಗ್ರಾಮ/ತಾಲೂಕಾ/ಜಿಲ್ಲಾ ಪಂಚಾಯತ್‌ಗಳಲ್ಲಿ ಮಹಿಳಾ ಪ್ರತಿನಿಧಿಗಳನ್ನು ಕಾಣಬಹುದಾಗಿದೆ. ಆದರೆ ಹಾಗೆ ರಾಜಕೀಯ ಪ್ರವೇಶಿಸಿದ ಸಾವಿರಾರು ಮಹಿಳಾ ಪ್ರತಿನಿಧಿಗಳಲ್ಲಿ ಕೈ ಬೆರಳೆಣಿಕೆಯಷ್ಟು ಮಹಿಳೆಯರೂ ತಮ್ಮ ಸ್ಥಾನವನ್ನು ಮೆಟ್ಟಿಲೋಪಾದಿಯಲ್ಲಿ ಬಳಸಿಕೊಂಡು ವಿಧಾನಸಭೆ, ಸಂಸತ್ತಿಗೆ ಆಯ್ಕೆಯಾಗಲು ಸಾಧ್ಯವಾಗುತ್ತಿಲ್ಲವೇಕೆ? ಅಧಿಕಾರ, ಹಣಕಾಸು ನಗಣ್ಯವೆನ್ನುವಷ್ಟಿರುವ ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರನ್ನು ಕೈಗೊಂಬೆಗಳಾಗಿ ರಾಜಕೀಯ ನಡೆಸಲು ಬಿಟ್ಟು ಉನ್ನತ ಮಟ್ಟದ ಅಧಿಕಾರ ಸ್ಥಾನಗಳಿಗೆ ಮಾತ್ರ ಜಾತಿ/ಹಣ/ಕುಟುಂಬದ ಹೆಸರಿನ ಬೆಂಬಲವಿರುವ ಕೆಲವೇ ನಾಯಕಿಯರನ್ನೇ ತರಲಾಗುತ್ತಿದೆ ಏಕೆ? 

ಇತ್ತೀಚೆಗೆ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತ ಮಹಿಳಾಲೋಕ ಈ ಎಲ್ಲ ಪ್ರಶ್ನೆ ಕೇಳಿಕೊಳ್ಳತೊಡಗಿದೆ. ಹೆಣ್ಣು, ಮಾನ, ಶೀಲ ಇತ್ಯಾದಿ ‘ಮೌಲ್ಯ’ಗಳ ಕುರಿತು ಎಗ್ಗಿಲ್ಲದೇ ಮಾತನಾಡುವ ಯಾವ ರಾಜಕಾರಣಿ/ರಾಜಕೀಯ ಪಕ್ಷವಾದರೂ ಮಹಿಳೆಯನ್ನು ಓಟ್‌ಬ್ಯಾಂಕ್ ಎಂದು ಪರಿಗಣಿಸಿದೆಯೆ? ತನ್ನ ಮಹಿಳಾ ಪ್ರತಿನಿಧಿಗಳನ್ನು ಸಮಷ್ಟಿಗಾಗಿ ಮತ್ತು ಮಹಿಳೆಯರ ಏಳ್ಗೆಗಾಗಿ ಮುಕ್ತವಾಗಿ ಕೆಲಸ ಮಾಡಲು ಬಿಟ್ಟಿದೆಯೆ? ಮಹಿಳಾ ಬಸ್, ಮಹಿಳಾ ಬ್ಯಾಂಕ್, ಮಹಿಳಾ ಪೊಲೀಸ್ ಸ್ಟೇಷನ್, ರಾತ್ರಿಪಾಳಿ ನಿಷೇಧಗಳೆಂಬ ಮೇಲುಮೇಲಿನ ತೋರುಗಾಣಿಕೆಯ ಸ್ಲೋಗನ್ನುಗಳಿಂದ ಇಷ್ಟು ದಿನ ಏನೂ ಸಾಧಿಸಿದ್ದಾದರೂ ಏನು? ತನ್ನ ಕುರ್ಚಿಯಲ್ಲಿ ಕೂರುವ ಜಾಗಕ್ಕೆ ಪಾಲು ಕೇಳುತ್ತ ಬಾರದಿರಲೆಂದೇ ಲಂಗ, ಸೀರೆ, ಬ್ಲೌಸು, ದುಡ್ಡು, ತಾಳಿ ಕೊಡುತ್ತೇವೆಂಬ ಆಮಿಷಗಳೇ? ನಿಜವಾದ ಮಹಿಳಾಪರ ಕಾಳಜಿಯಿದ್ದರೆ ಮಹಿಳಾ ಮೀಸಲಾತಿ ಕಾನೂನು ಇಲ್ಲದಿದ್ದರೂ ತಂತಮ್ಮ ಪಕ್ಷದಲ್ಲಿ ಅರ್ಹ ಮಹಿಳೆಯರಿಗೆ ಕನಿಷ್ಠ ಮೂರನೇ ಒಂದು ಭಾಗದಷ್ಟಾದರೂ ಸೀಟು ಕೊಡಲು ಯಾವ ಅಡಚಣೆಯಿದೆ? ಅಂಥ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲು ಏನು ಕಷ್ಟವಿದೆ?

ಇತ್ತೀಚೆಗೆ ಪಕ್ಷದ ನಾಯಕಿಯೊಬ್ಬರು ಮಹಿಳೆಯರ ಹೆಸರಿಲ್ಲದ ಪಟ್ಟಿಯನ್ನು ತಿರಸ್ಕರಿಸಿದ್ದು ಎಚ್ಚೆತ್ತ ಮಹಿಳಾಪ್ರಜ್ಞೆಯ ಒಂದು ಕುರುಹಾಗಿ ಭಾವಿಸಬಹುದಾದರೆ, ರಾಜಕೀಯ ಬಂಧುಗಳೇ, ನಿಮ್ಮ ನಡೆಗಳನ್ನು ನಾವು ಗಮನಿಸುತ್ತಿದ್ದೇವೆ. ಪಕ್ಷಗಳಲ್ಲಿ ಮಹಿಳಾ ನಾಯಕತ್ವ ಬೆಳೆಸಿ. ಮುಕ್ತವಾಗಿ ಕೆಲಸ ಮಾಡಲು ಅವಕಾಶ ಕೊಡಿ. 

ಇಲ್ಲದಿದ್ದರೆ ಸೂಕ್ತ ಪ್ರಾತಿನಿಧ್ಯವಿಲ್ಲದ ಪಕ್ಷಗಳ ಮಹಿಳಾ ಅಭ್ಯರ್ಥಿಗಳು ತಂತಮ್ಮ ಸ್ಥಾನ ತೊರೆದು ಹೊರಬರಬೇಕು. ಅಂಥ ಪಕ್ಷಗಳಿಗೆ ಮತ ನೀಡಲು ಮಹಿಳೆಯರೂ ನಿರಾಕರಿಸಬೇಕು. ಅಂಥ ಪಕ್ಷಗಳನ್ನು ಎಲ್ಲ ಮತದಾರರೂ ನಿರಾಕರಿಸಬೇಕು. ಇದಕ್ಕೆಲ್ಲ ಪೂರ್ವಭಾವಿಯಾಗಿ ಜನಾಂದೋಲನವೊಂದು ರೂಪುಗೊಳ್ಳಬೇಕು. ಆಗಲಾದರೂ ಮರುಭೂಮಿ, ಮಲೆನಾಡು, ರಣಪ್ರದೇಶ, ಹಿಮಾಲಯಗಳ ಈ ಅಸಮಾನ ಭಾರತವು ಸಮತಟ್ಟಾದ ಹಸಿರು ಭೂಮಿಯಾದೀತು. ಭಾರತೀಯ ಮಹಿಳೆಯ ಅಧಿಕಾರವೆಂಬ ಇರುಳ ದಿಗಂತದಿಂದ ಖಾಯಂ ಅಸ್ತಂಗತವಾಗಿರುವ ಸೂಕ್ತ ಪ್ರಾತಿನಿಧ್ಯ, ಸಮಾನ ಗೌರವಗಳು ಮತ್ತೆ ಉದಿಸಬಹುದು

Saturday, March 30, 2013

ಬರವಣಿಗೆ ಮತ್ತು ಹೋರಾಟದ ನಡುವೆ

ಬರವಣಿಗೆ ಮತ್ತು ಹೋರಾಟದ ನಡುವೆ

ಶೂದ್ರ ಶ್ರೀನಿವಾಸ್

ಸೌಜನ್ಯ: ವಾರ್ತಾಭಾರತಿ

 

ಒಬ್ಬ ಪ್ರಾಮಾಣಿಕ ಹೋರಾಟಗಾರನ ಹಿಂದೆ; ಎಂತೆಂಥ ಮಹನೀಯರು ಕೆಲಸ ಮಾಡುತ್ತಿರುತ್ತಾರೆ. ಇದು ಹಿಂದೆಯೂ ನಡೆಯುತ್ತಿತ್ತು. ಈಗಲೂ ದೊಡ್ಡ ಪ್ರಮಾಣದಲ್ಲಿ  ನಡೆಯುತ್ತದೆ ಅಥವಾ ನಡೆಯುತ್ತಿದೆ. ಇತ್ತೀಚೆಗೆ  ಕಣ್ಮರೆಯಾದ ನೈಜೀರಿಯಾದ ಚಿನುವಾ ಅಚಿಬೆ....ಅವರನ್ನು ಕುರಿತು ಯೋಚಿಸುವಾಗ ನಾನಾ ಸಂಗತಿಗಳು ಗರಿಗೆದರಿ ನಿಲ್ಲುತ್ತವೆ. ಅದರಲ್ಲೂ ನೆಲ್ಸನ್ ಮಂಡೇಲರಂಥ ನಾಯಕರು ಪ್ರತಿಕ್ರಿಯಿಸುವಾಗ; “ನನ್ನ ಜೈಲಿನ ಗೋಡೆಗಳು ನಿಧಾನವಾಗಿ ಕೆಳಗಿಳಿಯಲು ಚಿನುವಾ ಅಚಿಬೆಯವರಂಥ ಗಟ್ಟಿಮನಸ್ಸಿನ ಲೇಖಕರ ಮತ್ತು ಚಿಂತಕರ ಕೆಲಸ ಮಹತ್ವಪೂರ್ಣವಾದದ್ದು” ಎಂದಿದ್ದಾರೆ. ಹಾಗೆ ನೋಡಿದರೆ ಅಚಿಬೆಯವರು ತಮ್ಮ ಎಂಬತ್ತೆರಡು ವರ್ಷಗಳ ದೀರ್ಘ ಕಾಲದ ಬದುಕಿನಲ್ಲಿ ಕಂಡ ಹೋರಾಟಗಳು, ರೂಪಿಸಿದ ಅಭಿಪ್ರಾಯಗಳು ಹಾಗೂ ತವ್ಮೊಡನೆ ಧ್ವನಿಗೂಡಿಸಲು ಸಮಾನ ಮನಸ್ಕರನ್ನು ಭೇಟಿಯಾಗಿರುವ ಪ್ರಮಾಣ ಅಪಾರವಾದದ್ದು. 

ಕಷ್ಟಸುಖಗಳನ್ನು ಬದಿಗಿಟ್ಟು ನನ್ನ ಭಾಷೆ, ಸಂಸ್ಕೃತಿ ಮತ್ತು ಜನತೆ ನಿಜವಾಗಿಯೂ ಗಂಡಾಂತರಗಳನ್ನು ಎದುರಿಸುತ್ತಿದೆ ಎಂಬ ಅಭಿಪ್ರಾಯ ಮೂಡಿದೊಡನೆ ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇದು ಜಗತ್ತನ್ನು ಕಟ್ಟಿದ ಮತ್ತು ಕಟ್ಟುತ್ತಿರುವ ಎಲ್ಲ ಹಿರಿಯ ಮನಸ್ಸುಗಳಿಗೆ ಅನ್ವಯಿಸುತ್ತದೆ. ಸುಮಾರು ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಗಾಂಧಿ ಭವನದಲ್ಲಿ ಖಾಸಗಿಯಾಗಿ ಕೂತು ಡಾ.ಎಲ್.ಸಿ.ಜೈನ್ ಅವರೊಡನೆ ಚರ್ಚಿಸುತ್ತಿದ್ದೆ. ಡಾ. ಜೈನ್ ಅವರು ಅಪ್ರತಿಮ ಗಾಂಧಿ ವಾದಿ ಮತ್ತು ಅರ್ಥಪೂರ್ಣ ಅರ್ಥಶಾಸ್ತ್ರಜ್ಞರಾಗಿದ್ದರು. ಯೋಜನಾ ಆಯೋಗದ ಸದಸ್ಯರಾಗಿದ್ದರು. 

ಇದಕ್ಕಿಂತ ಮಿಗಿಲಾಗಿ ನೆಲ್ಸನ್‌ಮಂಡೇಲ ಅವರು ಇಪ್ಪತ್ತೇಳು ವರ್ಷಗಳ ಸೆರೆವಾಸದಿಂದ ಬಿಡುಗಡೆಯಾಗಿ ದಕ್ಷಿಣ ಆಫ್ರಿಕಾಗೆ ಸ್ವಾತಂತ್ರದ ಕನಸುಗಳು ಮುಂದುವರಿದ ಭಾಗವಾಗಿ  ಪ್ರಜಾಪ್ರಭುತ್ವಕ್ಕೆ ತಳಹದಿ ಹಾಕಿದವರು. ಇಂಥ ನಾಯಕ ಅಧ್ಯಕ್ಷರಾಗಿದ್ದ ಸಮಯದಲ್ಲಿ ಡಾ.ಜೈನ್ ಅವರು ಭಾರತದ ರಾಯಭಾರಿಯಾಗಿದ್ದವರು. ಕೇವಲ ಗುಡಿಗುಡಿ ರಾಯಭಾರಿಯಾಗದೆ ಅಲ್ಲಿಯ ಜನಜೀವನವನ್ನು ಅಧ್ಯಯನ ಮಾಡುವುದರ ಜೊತೆಗೆ; ಪ್ರಜಾಪ್ರಭುತ್ವ ಹೇಗೆ ನೆಲೆಗೊಳ್ಳಲು ಸಿದ್ಧಗೊಳ್ಳುತ್ತಿದೆ ಎಂದು ಅಧ್ಯಯನ ಮಾಡಲು ಪ್ರಯತ್ನಿಸಿದವರು.

ಯಾಕೆಂದರೆ ಯಾವುದೇ ಸಮಾಜದಲ್ಲಿ ಪ್ರಾರಂಭದ ಕಷ್ಟಗಳು ಎಷ್ಟು ಸಿಕ್ಕು ಸಿಕ್ಕಾಗಿರುತ್ತವೆ ಎಂಬುದನ್ನು ನಾವು ಸ್ವಾಭಾವಿಕವಾಗಿಯೇ ಊಹಿಸಬಹುದು. ಆದರೆ ಆ ಸಿಕ್ಕು ಮತ್ತು ಸಂಕಷ್ಟಗಳನ್ನು ಬಿಡಿಸುವುದಕ್ಕೆ ದಟ್ಟವಾದ ಮಾನಸಿಕ ಸ್ಥೈರ್ಯ ಮತ್ತು ತ್ಯಾಗ ಬೇಕಾಗುತ್ತದೆ.ಡಾ. ಜೈನ್ ಅವರು ಇಂಥದ್ದನ್ನೆಲ್ಲ ಅರಿಯುವ ಕಳಕಳಿ ಇದ್ದವರು ಹಾಗೂ ದಕ್ಷಿಣ ಆಫ್ರಿಕಾದ ಚಿಂತಕರ ಜೊತೆ ಸಂಪರ್ಕವನ್ನಿಟ್ಟು ಕೊಂಡಿದ್ದವರು. 

ಇಂಥ ಜೈನ್ ಅವರು ಚಿನುವಾ ಅಚಿಬೆಯಂಥವರನ್ನು ಮತ್ತೆ ಮತ್ತೆ ನೆನಪಿಗೆ ತರುವಂಥ ಒಂದು ಮಾತು ಹೇಳಿದರು: “ಆಫ್ರಿಕಾದಲ್ಲಿ ಬಿಳಿಯರ ಅಮಾನಯ ಆಡಳಿತದ ವಿರುದ್ಧ ಹೋರಾಡುವ  ಮನಸ್ಸುಗಳು ಒಂದು ಕಡೆಯಾದರೆ; ನಾಲ್ಕು ಅಕ್ಷರಗಳನ್ನು ಕಲಿತ ನೂರಾರು ಯುವಕರು ವಿದೇಶಗಳಿಗೆ ಓಡಿ ಹೋಗಿ ಅಧ್ಯಯನ ಮಾಡುತ್ತಲೇ ದಕ್ಷಿಣ ಆಫ್ರಿಕಾದ ಪರವಾಗಿ ಹೋರಾಟಕ್ಕೆ ಬೆಂಬಲ ಸೂಚಿಸುವ ಮನಸ್ಸುಗಳ ಜೊತೆ ಸಂಪರ್ಕ ಸೇತುವೆಯಾದರು. ಮತ್ತು ಆಯಾದೇಶದ ಲೇಖಕರು ಮತ್ತು ಕಲಾವಿದರು ಹಾಗೂ ಸಾಮಾಜಿಕ ಚಿಂತಕರು ಜಗತ್ತಿನ ಉದ್ದಗಲಕ್ಕೂ ನೆಲ್ಸನ್ ಮಂಡೇಲ ಅವರ ಬಿಡುಗಡೆ ಮತ್ತು ಆಫ್ರಿಕಾದ ಬಿಡುಗಡೆಗೆ ನಡೆಸಿದ ಪ್ರಯತ್ನ ಅಪ್ರತಿಮವಾದದ್ದು” ಇದನ್ನು ಹೇಳುವಾಗ ಡಾ. ಜೈನ್ ಅವರ ಮುಖದಲ್ಲಿ ಎಂಥ ಭಾವನಾತ್ಮಕ ಚೈತನ್ಯ ಎದ್ದು ಕಾಣುತ್ತಿತ್ತು.

ಇಂಥ ಹತ್ತಾರು ಸಂಗತಿಗಳನ್ನು ಅವರನ್ನು ಭೇಟಿಯಾದಾಗಲೆಲ್ಲ ಕೇಳಿರಬಹುದು. ಅವರ ಶ್ರೀಮತಿ ದೇವಕಿ ಜೈನ್ ಅವರಿಂದ ಕೂಡ. ಈ ದೃಷ್ಟಿಯಿಂದ ಆ ಕಾಲಘಟ್ಟದಲ್ಲಿ ನಾವೆಲ್ಲ ಯಾರ‍್ಯಾರೋ ಲೇಖಕರು ಮತ್ತು ಕಲಾವಿದರೊಡನೆ ಕೂಡಿ ಎತ್ತಿದ ಧ್ವನಿಯನ್ನು ನೆನಪು ಮಾಡಿಕೊಂಡರೆ ಹಾಯ್ ಅನ್ನಿಸುತ್ತದೆ. ಈ ಹಾಯ್‌ನ ಮನಸ್ಥಿತಿಯ ಮೂಲಕ ‘ಥಿಂಗ್ಸ್ ಫಾಲ್ ಅಪಾರ್ಟ್’ ಕೃತಿ ಮತ್ತೆ ಮತ್ತೆ ಮನಸ್ಸಿನಲ್ಲಿ ಗರಿಗೆದರಿ ನಿಲ್ಲುತ್ತದೆ. ಯಾಕೆಂದರೆ ಆಫ್ರಿಕಾದಲ್ಲಿ ಕಪ್ಪು ಜನರ ಹೋರಾಟದ ಜೊತೆಯಲ್ಲಿಯೇ ಅಮೆರಿಕದಲ್ಲಿ ‘ಬ್ಲಾಕ್ ಪಾಂಥರ್ಸ್’ ಸಂಘಟನೆಯ ಹೋರಾಟದ ತೀವ್ರತೆ ಇದ್ದ ಕಾಲ ಘಟ್ಟವದು. 

ಇದರ ಪ್ರಭಾವದಿಂದ ಹುಟ್ಟಿಕೊಂಡ ಮಹಾರಾಷ್ಟ್ರದಲ್ಲಿಯ ‘ದಲಿತ ಪಾಂಥೆರ್ಸ್’ ಚಳವಳಿ ಹಾಗೂ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟಿಕೊಂಡದ್ದು. ಅದಕ್ಕೆ ಹಿನ್ನೆಲೆಯಾಗಿ ಡಾ. ಸಿದ್ದಲಿಂಗಯ್ಯ ಅವರ “ಹೊಲೆಮಾದಿಗರ ಹಾಡು”ಗಳ ಸಂಕಲನ ಕೆಲಸ ಮಾಡುವಾಗ ಚಿನುವ ಅಚಿಬೆಯಂಥವರು ಚರ್ಚೆಯಾಗುತ್ತ ಹೋದವರು. ಡಾ.ಡಿ.ಆರ್.ನಾಗರಾಜ್ ಅಂತೂ ದಲಿತ ಸಂಘರ್ಷ ಸಮಿತಿಯ ಶಿಬಿರಗಳಲ್ಲಿ ಅಚಿಬೆ ಮತ್ತು ಅವರ ‘ಥಿಂಗ್ಸ್ ಫಾಲ್ ಅಪಾರ್ಟ್’ ಕೃತಿಯನ್ನು ಚರ್ಚೆಗೆ ತೆಗೆದುಕೊಳ್ಳುತ್ತಿದ್ದುದನ್ನು ಕಂಡಿದ್ದೇನೆ. ಈ  ದೃಷ್ಟಿಯಿಂದ  ‘ಥಿಂಗ್ಸ್ ಫಾಲ್ ಅಪಾರ್ಟ್’ ಕೃತಿಯು ನಮ್ಮ ಮೇಲೆ ಇಷ್ಟು ಪ್ರಭಾವ ಬೀರಿರಬೇಕಾದರೆ; ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಇನ್ನೆಷ್ಟು ಪ್ರಭಾವ ಬೀರಿರಲಾರದು?

ಜಗತ್ತಿನ ಉದ್ದಗಲಕ್ಕೂ ಮಾನವ ಹಕ್ಕುಗಳ ಹೋರಾಟಗಾರರಿಗೆ ಈ ಕೃತಿಯು ಒಂದು ‘ಮ್ಯಾನಿಫೆಸ್ಟೋ” ಆಗಿಕೆಲಸ ಮಾಡತೊಡಗಿತು.ಇಂಥ ಮಹಾನ್ ಲೇಖಕ ಹುಟ್ಟಿದ್ದು 1930ರಲ್ಲಿ ಒಗಿಡಿ ಪಟ್ಟಣದ ಇಗ್‌ಬೊದಲ್ಲಿ. ಬಾಲ್ಯಕಾಲ್ಯದಿಂದಲೂ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದವರು. ಓದಿನ ಬಗ್ಗೆ ಅಪಾರ ವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದವರು. ಧರ್ಮಗಳನ್ನು ಕುರಿತು ಮತ್ತು ಬುಡಕಟ್ಟು ಜನಾಂಗಗಳ ಸಂಸ್ಕೃತಿಯ ಬಗ್ಗೆ ಗಂಭೀರವಾದ ಅಧ್ಯಯನದ ಮನಸ್ಥಿತಿಯನ್ನು ತವ್ಮೊಳಗೆ ಬಿಟ್ಟುಕೊಂಡವರು. 

ಬಿಳಿಯರ ದಬ್ಬಾಳಿಕೆ ಮತ್ತು ಶೋಷಣೆಯಿಂದ ಕೇವಲ ಮನುಷ್ಯ ಸಂಬಂಧಗಳು ಮಾತ್ರ ನಾಶವಾಗುವುದಿಲ್ಲ; ಒಂದು ಜೀವಂತ ಸಂಸ್ಕೃತಿಯ ನಾಶವಾಗುತ್ತದೆಂದು ತಿಳಿದಿದ್ದರು. ಇಂಥ ಮನಸ್ಥಿತಿಯ ಅಚಿಬೆ ಪ್ರಾರಂಭದಲ್ಲಿ ನೈಜೀರಿಯಾದ ಆಕಾಶವಾಣಿಯಲ್ಲಿ ಕೆಲಸ ಮಾಡಿದರು. ಮುಂದಿನ ದಿನಗಳಲ್ಲಿ ಬಿಬಿಸಿಗೆ ಸೇರಿದರು. ತಮ್ಮ ಇಪ್ಪತ್ತೆಂಟನೆಯ ವಯಸ್ಸಿನಲ್ಲಿ ‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯನ್ನು ಬರೆದರು. ಅದರ ಪ್ರಖರತೆಯ ಗುಣದಿಂದ ಕೇವಲ ಲಂಡನ್ ಮತ್ತು ನೈಜಿರಿಯಾ ಮಾತ್ರ ಅಲ್ಲ ಜಗತ್ತಿನಾದ್ಯಂತ ಅದರ ಹೆಚ್ಚುಗಾರಿಕೆ ಪ್ರಚಾರಗೊಂಡಿತು. 

ಹಾಗೆ ನೋಡಿದರೆ ಈ ಕಾದಂಬರಿಯನ್ನು ಬರೆದದ್ದು ಲಂಡನ್‌ನಲ್ಲಿ. ಇದೇ ಸಮಯದಲ್ಲಿ ಕ್ರಿಸ್ತಿ ಒಕೊಲಿ ಎಂಬಾಕೆಯನ್ನು 1961ರಲ್ಲಿ ಮದುವೆಯಾದರು. ಮೂರು ಮಕ್ಕಳ ತಂದೆಯಾದರು. ಲಂಡನ್‌ನಲ್ಲಿ ಇದ್ದೇ ಮೇಲಿನ  ಕಾದಂಬರಿಯನ್ನು ಬರೆದರೂ; ಬ್ರಿಟಿಷ್ ವಸಾಹತುಶಾಹಿಗಳಿಂದ ತನ್ನ ದೇಶದ ಆದಿವಾಸಿಗಳು ಹೇಗೆ ನಾಶವಾಗುತ್ತಿದ್ದಾರೆ ಎಂಬ ಚಿತ್ರಣವನ್ನು ಹೊಂದಿರುವಂಥ ಕಾದಂಬರಿ. ಪ್ರಾರಂಭದಲ್ಲಿ ಎಲ್ಲ ದೊಡ್ಡ ಲೇಖಕರೂ ಎದುರಿಸುವ ರೀತಿಯಲ್ಲಿ ಅಚಿಬೆಯವರೂ ಪ್ರಕಾಶಕರ ಕೊರತೆಯಿಂದ ನರಳಿದರು. ಆದರೆ ಮುಂದೆ ಈ ಕಾದಂಬರಿಯ ಹೆಚ್ಚುಗಾರಿಕೆಯ ಪ್ರಚಾರ ಬೆಳೆದಂತೆಲ್ಲ; ಜಗತ್ತಿನ ಉದ್ದಗಲಕ್ಕೂ ಐವತ್ತಕ್ಕೂ ಮಿಗಿಲಾಗಿ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿತು.

ಒಂದು ಕೋಟಿಗೂ ಮೀರಿ ಪ್ರತಿಗಳು ಮಾರಾಟವಾದವು. ಇದರಿಂದ ಮತ್ತಷ್ಟು ಸ್ವತಂತ್ರ ವಾಗಿ ಯೋಚಿಸುವ ಮತ್ತು ಕ್ರಿಯಾಶೀಲವಾಗುವ ಮನಸ್ಥಿತಿಯನ್ನು ಬೆಳೆಸಿ ಕೊಂಡರು. ವಿವಿಧ ಹಿರಿಯ ಮನಸ್ಸುಗಳ ಜೊತೆಯ ಸಂಪರ್ಕ ಸೇತುವೆ ವಿಸ್ತಾರಗೊಂಡಿತು. ಇದರಿಂದ  ಎಲ್ಲಕಪ್ಪುಜನರ ಸ್ಥಿತಿಗತಿಯ ಬಗ್ಗೆ ಮಾನವ ಪ್ರೇಮಿಗಳ ಅರಿವಿಗೆ ತಂದರು. ಹಾಗೆಯೇ ಕೆಲವು ಪ್ರಮುಖ ವಿಮರ್ಶಕರು ಹೇಳುವುದುಂಟು: ಆಂಗ್ಲ ಸಾಹಿತ್ಯಕ್ಕೆ ಷೇಕ್ಸ್‌ಪಿಯರ್ ಹೇಗೋ, ರಷ್ಯನ್ ಸಾಹಿತ್ಯಕ್ಕೆ ಪುಷ್ಕಿತ ಪ್ರಭಾವ ಇದ್ದಂತೆ ನೈಜಿರಿಯಾದ ಸಾಹಿತ್ಯಕ ಮತ್ತು ಜನಾಂಗಕ್ಕೆ ಜಿನುವಾ ಅಚಿಬೆ ಕೂಡ ಪ್ರಮುಖರು. 

ಈ ಪ್ರಚಾರದ ಬಗ್ಗೆ ಕಿಂಚಿತ್ತೂ ಯೋಚಿಸದ ಅಚಿಬೆಯವರು ಅದರ ಗುಣಾತ್ಮಕ ಪ್ರಚಾರದಿಂದ ಹೆಚ್ಚು ಮಾನವ ಪ್ರೇಮಿಯಾದರು. ಎಲ್ಲ ಮಾನವ ಸಂಘಟನೆಗಳು ತಮ್ಮತ್ತ ಮತ್ತು ತಮ್ಮ ದೇಶದ ಕಡೆ ನೋಡುವಂಥ ವಾತಾವರಣವನ್ನು ಸೃಷ್ಟಿಸಿದರು. ಈ ದೃಷ್ಟಿಯಿಂದ ನೆಲ್ಸನ್‌ಮಂಡೇಲ ಅವರ ಮಾತು ಎಷ್ಟು ಮಾರ್ಮಿಕವಾದದ್ದು. ಬರವಣಿಗೆ ಎಂಬುದು ಅರಿವಿನ ಅಸ್ತ್ರವನ್ನು ಎಲ್ಲೆಲ್ಲಿಗೋ ಕರೆದೊಯ್ಯಬಹುದು ಎಂಬುದಕ್ಕೆ ‘ಥಿಂಗ್ಸ್ ಫಾಲ್ ಅಪಾರ್ಟ್’ ರೀತಿಯ ಕೃತಿಗಳು ಒಟ್ಟು ಮಾನವ ಕುಲದಲ್ಲಿ; ಬದಲಾವಣೆ ಮತ್ತು ಮನುಷ್ಯ ಸಂಬಂಧಗಳನ್ನು ಶ್ರೀಮಂತಗೊಳಿಸುವ ನೆಲೆಯಲ್ಲಿ ಎಂಥ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿರುತ್ತವೆ. 

ಆದರೆ ಸೋಜಿಗದ ಸಂಗತಿಯೆಂದರೆ: ಇವೆಲ್ಲ ಬದಲಾವಣೆಯಾಗ ಬೇಕು ಎಂಬ ಕೂಗಿನಿಂದ ಹುಟ್ಟಿಕೊಂಡಂಥವು ಅಲ್ಲ. ವಿಷಾದದಿಂದ ಸೃಷ್ಟಿಯಾದ ಆತ್ಮಕಥನಗಳು, ಆದ್ದರಿಂದಲೇ ಅವುಗಳಿಗೆ ಸಾರ್ವಕಾಲಿಕ ನಿರತರತೆ ಇದೆ.ಅಚಿಬೆಯವರ ವಿಷಾದ ಮತ್ತು ಅನುಭವ ತುಂಬಿದ ಚಿಂತನೆಗೆ; ಒಂದು ಪೀಠಿಕೆಯ ರೂಪದಲ್ಲಿ ಯೇಬ್ಸ್ ಮಹಾಕವಿಯ ‘ದಿ ಸೆಕೆಂಡ್ ಕಮಿಂಗ್’ ಎಂಬ ಕವನ ಎಂಥ ವಿಸ್ತಾರವನ್ನು ದೊರಕಿಸಿ ಕೊಡುತ್ತದೆ. ಯೇಟ್ಸ್‌ನ ಬಹಳಷ್ಟು ಕವಿತೆಗಳಂತೆ ಇದೂ ಕೂಡ ತುಂಬ ಇಷ್ಟವಾದದ್ದು. ಎಷ್ಟು ಬಾರಿ ಮೆಲ್ಲಗೆ ಮತ್ತು ಗಟ್ಟಿಯಾಗಿ ಓದಿಕೊಂಡಿರುವೆ. ಒಂದೊಂದು ಓದಿಗೂ ಈ ಇಪ್ಪತ್ಮೂರು ಸಾಲಿನ ಕವಿತೆಯು ಅರ್ಥೈಸುತ್ತ ಬಂದಿರುವ ಕ್ರಮವೇ ಅದ್ಭುತವಾದದ್ದು. 

ಅದರ ಪ್ರಾರಂಭದ ಸಾಲುಗಳು ಹೀಗಿವೆ: “ಟರ್ನಿಂಗ್ ಅಂಡ್ ಟರ್ನಿಂಗ್ ಇನ್ ದಿ ವೈಡನಿಂಗ್ ಗೈರ್/ದಿ ಫಾಲಕನ್ ಕೆನಾಟ್ ಹಿಯರ್ ದಿ ಫಾಲಕರನ್,/ ಥಿಂಗ್ಸ್ ಫಾಲ್ ಅಪಾರ್ಟ್; ದಿ ಸೆಂಟರ್ ಕೆನಾಟ್ ಹೈಲ್ಡ್ ಮಿಯರ್ ಅನಾರ್ಕಿ ಈದ್ ಲೂಡ್ ಅಪಾನ್ ದಿ ವರ್ಲ್ಡ್/ ದಿ ಬ್ಲಡ್ ಡೀಮ್ಡ್ ಟ್ರೇಡ್ ಈ ಲೂಸ್ಡ್ ಅಂಡ್ ಎವರಿವೇರ್/ ದಿ ಸೆರೆಮನಿ ಆಫ್ ಇನ್ನೋಸೆನ್ಸ್ ಈಸ್ ಡ್ರೌನ್ಡ್/ ದಿ ಬೆಸ್ಟ್ ಲ್ಯಾಕ್ ಆಲ್ ಕನ್‌ವಿಕ್ಷನ್, ವೈಲ್ ದಿ ವರ್ಸ್ಟ್/ ಆರ್ ಫುಲ್ ಆಫ್ ಫ್ಯಾಶನೇಟ್ ಇನ್‌ಟೆನ್‌ಸ್ಟಿ”
ಹೀಗೆ ಮುಂದುವರಿಯುವ ಕವನದಲ್ಲಿ ಅಚಿಬೆಯವರಿಗೆ ‘ದಿ ಫಾಲಕನ್ ಕೆನಾಟ್ ಹಿಯರ್ ದಿ ಫಾಲಕನರ್’ ಎಂಬ ಸಾಲಿನ ಧ್ವನಿಯೂ ತುಂಬ ಕಾಡಿರಬೇಕು ಅನಿಸುತ್ತದೆ. ಯಾಕೆಂದರೆ ಆಫ್ರಿಕಾದ ರಾಷ್ಟ್ರಗಳಲ್ಲಿ ಮುಗ್ಧ ಕಪ್ಪು ಜನರನ್ನು ಎಷ್ಟೆಷ್ಟು ರೀತಿಯಲ್ಲಿ ಹಿಂಸಿಸಿರಬಹುದು ಎಂಬ ಚಿತ್ರಣ ಮುಖಾಮುಖಿಯಾಗುತ್ತದೆ.

ಇತ್ತೀಚೆಗೆ ನಮ್ಮಲ್ಲಿಯ ಗಂಭೀರ ವಿಮರ್ಶಕರಾದ ಡಾ. ಎಚ್.ಎಸ್ ರಾಘವೇಂದ್ರ ರಾವ್ ಅವರು ‘ಕಪ್ಪುಕವಿತೆ’ ಎಂಬ ಸಂಕಲನವನ್ನು ತಂದಿದ್ದಾರೆ. ಇದನ್ನು ಅಭಿನವದವರು ಪ್ರಕಟಿಸಿದ್ದಾರೆ. ಇಲ್ಲಿಯ ಬಹುಪಾಲು ಕವಿತೆಗಳು ನಮ್ಮ ಮನಸ್ಥಿತಿಗೆ ಮತ್ತು ಕಾವ್ಯದ ಜಾಯಮಾನಕ್ಕೆ ಹತ್ತಿರವಾಗಿರುವಂಥವು. ಯಾಕೆಂದರೆ ಡಾ. ಹೆಚ್. ಎಸ್.ಆರ್. ಅವರು ಕಾವ್ಯದ ಗಂಭೀರ ವಿದ್ಯಾರ್ಥಿಯಾಗಿರುವುದರಿಂದ; ಅದರ ಲಯವನ್ನು ಎಷ್ಟು ಚೆನ್ನಾಗಿ ಹಿಡಿದಿಟ್ಟಿದ್ದಾರೆ ಅನ್ನಿಸುತ್ತದೆ; ಒಟ್ಟು ‘ಕಪ್ಪು ಕವಿತೆ’ಗಳನ್ನು ಓದುತ್ತಿದ್ದರೆ. ಈ ಸಂಕಲನದಲ್ಲಿ ಅಚಿಬೆಯವರ ಮೂರು ಕವಿತೆಗಳಿವೆ. ಅದರಲ್ಲಿ ‘ದಿಕ್ಕೆಟ್ಟ ಹೆಂಗಸು ಮತ್ತು ಅವಳ ಮಗು’ ಎಂಬ ಕವಿತೆ ಮನಸ್ಸಿಗೆ ಎಷ್ಟೊಂದು ರೀತಿಯಲ್ಲಿ ತಟ್ಟುತ್ತದೆ.

ಆ ಕವಿತೆಯ ಕೆಲವು ಸಾಲುಗಳು ಹೀಗಿವೆ: “ಊದಿಕೊಂಡ ಖಾಲಿಹೊಟ್ಟೆ, ಬರಿಯ ಪಕ್ಕೆ ಪಕ್ಕೆ/ ಊದಿಕೊಂಡ ಹೊಟ್ಟೆ ಹಿಂದೆ ತೊಳೆಯದಿರುವ ಕುಂಡೆ/ ಎಲ್ಲ ತಾಯಂದಿರು ಆಸೆಬಿಟ್ಟವರು./ನಿಟ್ಟುಸಿರು ಬಿಟ್ಟವರು, ಇವಳೊಬ್ಬಳನ್ನು ಬಿಟ್ಟು/ ಇವಳ ತುಟಿಗಳ ನಡುವೆ ಮುಗುಳುನಗೆ ನೆರಳು/ಇವಳ ಕಣ್ಣುಗಳಲ್ಲಿ ತಾಯ ಹೆಮ್ಮೆಯ ಮರುಳು/ ಮಗನ ಬುರುಡೆಯ ಮೇಲೆ ಉಳಿದಿರುವ/ ತುಕ್ಕು ಬಣ್ಣದ ಕೂದಲನ್ನು ಬಾಚುತ್ತಿದ್ದಾಳೆ” ಹೀಗೆ ಕೇವಲ ಅಚಿಬೆ ಮಾತ್ರವಲ್ಲ; ಒಟ್ಟು ಆಫ್ರಿಕಾದ ಕವಿಗಳು ತಮ್ಮ ಒಟ್ಟು ಅನುಭವವನ್ನು ಎಷ್ಟು ಚೆನ್ನಾಗಿ ಕವಿತೆಗಳಲ್ಲಿ ಹಿಡಿದಿಟ್ಟಿದ್ದಾರೆ ಎಂಬುದನ್ನು ಡಾ. ಎಚ್.ಎಸ್. ಆರ್. ಅವರು ನಮಗೆ ಪರಿಚಯಿಸಿದ್ದಾರೆ.

1960ರಲ್ಲಿ ‘ನೋ ಲಾಂಗರ್ ಅಟ್ ಈಸ್’ ಕಾದಂಬರಿಯನ್ನು ಪ್ರಕಟಿಸಿದರು. ನೈಜೀರಿಯಾದ ಸ್ವಾತಂತ್ರದ ಪ್ರಾರಂಭದ ದಿನಗಳನ್ನು ಚಿತ್ರಿಸುವ ಅದ್ಭುತ ಕಾದಂಬರಿ. ನಂತರ ‘ಆರೋ ಆಫ್ ಗಾಡ್’ ಕಾದಂಬರಿ ಇಗ್‌ಬೊ ಮತ್ತು ಯುರೋಪಿನ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ನಾನಾ ಒಳಸುಳಿಗಳನ್ನು ಚಿತ್ರಿಸುವಂಥದ್ದು. ಹೀಗೆಯೇ ‘ಆಂಟ್ ಹಿಲ್ಸ್ ಆಫ್ ಸವನ್ನಾ’ ಕಾದಂಬರಿ ರಾಜಕೀಯ ವಿಡಂಬನೆಯಿಂದ ಕೂಡಿರುವಂಥದ್ದು. ಹೀಗೆ ಬರವಣಿಗೆ ಮತ್ತು ಹೋರಾಟದ ಮೂಲಕ ನೈಜೀರಿಯಾದ ಸ್ವಾತಂತ್ರ ಚಳವಳಿಯ ಜೊತೆ ನಿಂತವರು.

ಸ್ವಾತಂತ್ರದ ನಂತರ ಸರ್ವಾಧಿಕಾರಿ ಆಡಳಿತ ನೆಲೆಗೊಂಡಾಗ ಅವರ ವಿರುದ್ಧ ಸಿಡಿದು ನಿಂತವರು, ‘ಎ ಮ್ಯಾನ್ ಆಫ್ ದಿ ಪೀಪಲ್’ ಕಾದಂಬರಿ ಬಯಾಫ್ರಾದ ಹೋರಾಟದಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸಿರುವಂಥದ್ದು. ಮುಂದೆ 1967ರಲ್ಲಿ ಬಯಾಫ್ರಾ ನೈಜೀರಿಯಾದಿಂದ ಸಿಡಿದೆದ್ದು ಸ್ವತಂತ್ರವಾದಾಗ; ಅದರ ಪರವಾಗಿ ನಿಂತರು ಅಚಿಬೆ. ಆದರೆ ನೈಜೀರಿಯಾ ಬಯಾಫ್ರಾವನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ರಾಜಕೀಯ ನಾಯಕರ ಪ್ರತಿಷ್ಠೆ ಮತ್ತು ಹುಸಿ ಘೋಷಣೆಗಳಿಗೆ ತುಂಬ ಬೇಸರಪಟ್ಟುಕೊಂಡರು.

ಅಚಿಬೆಯವರು ನಾನಾ ಕಾರಣಗಳಿಗಾಗಿ ಎಪ್ಪತ್ತರ ದಶಕದಲ್ಲಿಯೇ ಅಮೆರಿಕದಲ್ಲಿ ಉಳಿದರು. 1990ರಲ್ಲಿ ಕಾರು ಅಪಘಾತವಾಯಿತು. ಆಗ ಅವರು ಬಾರ್ಡ್ ಕಾಲೇಜ್ ಹಾಗೂ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಮುಂದೆ ತಮ್ಮ ಬದುಕಿನ ಬಹುಕಾಲವನ್ನು ಗಾಲಿಕುರ್ಚಿಯಲ್ಲಿಯೇ ಕಳೆದರು. ಇಷ್ಟೆಲ್ಲ ದುಡಿದ ಚಿನುವಾ ಅಚಿಬೆಯವರಿಗೆ ತನ್ನ ಸಮಾಜ ತನ್ನ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆಯೇನೋ ಎಂಬ ಭಾವನೆ ದಟ್ಟವಾಗಿ ಕಾಡತೊಡಗುತ್ತದೆ. ಹಾಗೆಯೇ ಜೋಸೆಫ್ ಕಾನ್ರಾಡ್ ರೀತಿಯ ಕಾದಂಬರಿಕಾರರು ಯಾಕೆ ಹೀಗೆ ಬರೆಯುತ್ತಾರೆ ಮತ್ತು ಯೋಚಿಸುತ್ತಾರೆ ಎಂದು ವಿಷಾದದಿಂದ ಅಚಿಬೆಯವರು ನರಳುವರು.

ಅಚಿಬೆಯವರು ನೋಬೆಲ್ ಪ್ರಶಸ್ತಿಗೆ ಅರ್ಹರು ಎಂದು ಸಾಕಷ್ಟು ಚಿಂತಕರು ಧ್ವನಿಯೆತ್ತಿದರು. 2007ರಲ್ಲಿ ಅವರಿಗೆ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಇದರ ಮಧ್ಯೆ ತನ್ನ ದೇಶದ ರಾಜಕೀಯ ಭ್ರಷ್ಟಾಚಾರದ ಬಗ್ಗೆ ಧ್ವನಿಯೆತ್ತುತ್ತಲೇ ಬಂದರು. ತನ್ನ ರಾಷ್ಟ್ರ ಅತ್ಯುನ್ನತ ‘ಕಮಾಂಡರ್ ಆಫ್ ದಿ ಫೆಡರರ್ ರಿಪಬ್ಲಿಕ್’ ಎಂಬ ಗೌರವವನ್ನು ಎರಡು ಬಾರಿ ಕೊಡಲು ಬಂದಾಗ ಅದನ್ನು ನೇರವಾಗಿಯೇ ತಿರಸ್ಕರಿಸಿದರು. ಇದನ್ನೆಲ್ಲ ಆಫ್ರಿಕಾದ ಮತ್ತೊಬ್ಬ ಮಹಾನ್ ಲೇಖಕ ಮತ್ತು ನೋಬೆಲ್ ಪ್ರಶಸ್ತಿ ವಿಜೇತ ವೊಲೆ ಸೆಯಿಂಕಾ ಅಚಿಬೆ ಬಗ್ಗೆ ಅಗಾಧವಾದ ಒಲವನ್ನು ಹೊಂದಿದ್ದರು. ಅಚಿಬೆಯವರ ವೈವಿಧ್ಯಮಯ ಎಂಬತ್ತೆರಡು ವರ್ಷಗಳ ಬದುಕು ಎಷ್ಟು ಸ್ಮರಣೀಯವಾದದ್ದು. ಅಚಿಬೆ ನೆನಪಾದಾಗಲೆಲ್ಲ ಯೆಟ್ಟ್ಸ್ ಕವಿಯ ‘ದಿ ಸೆಕಂಡ್ ಕಮಿಂಗ್’ ಓದಬೇಕೆನ್ನಿಸುತ್ತದೆ.  

Thursday, March 28, 2013

ಆಗ ರಾಮರಥ: ಈಗ ರಾಮಕಥಾ;ಸಂಘ ಪರಿವಾರದ ಹೊಸ ಹುನ್ನಾರಸನತ್‌ಕುಮಾರ ಬೆಳಗಲಿ

ಗುಲ್ಬರ್ಗದಲ್ಲಿ ಕೆಂಡದಂಥ ಬಿಸಿಲು. ಕಳೆದ ವಾರ ಅಲ್ಲಿ ಹೋಗಿದ್ದ ನಾನು ಮುಂಜಾನೆ 9ಕ್ಕೆ ಸುಸ್ತಾಗಿ ಹೋದೆ. ಕೈಗೆ ಕೆಲಸವಿಲ್ಲದ, ಕುಡಿಯುವ ನೀರಿಲ್ಲದ ಈ ಭಾಗದ ಜನ ಬೆಂಗಳೂರು- ಮಂಗಳೂರುಗಳಿಗೆ ಗುಳೆ ಹೊರಟ ದೃಶ್ಯಗಳನ್ನು ದಾರಿಯುದ್ದಕ್ಕೂ ಕಂಡೆ. ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್ ಹೀಗೆ ಎಲ್ಲ ರೈಲು ನಿಲ್ದಾಣಗಳಲ್ಲಿ ಹೆಗಲ ಮೇಲೆ ಮಕ್ಕಳನ್ನು, ಕೈಯಲ್ಲಿ ಸರಂಜಾಮುಗಳ ಗಂಟನ್ನು ಹೊತ್ತುಕೊಂಡು ಈ ಜನ ನಿಂತದ್ದನ್ನು ಕಂಡು ಕರಳು ಕಿವಿಚಿತು. ಕೆಲ ಕುಟಂಬಗಳು ಮಕ್ಕಳ ವಾರ್ಷಿಕ ಪರೀಕ್ಷೆಯನ್ನು ಲೆಕ್ಕಿಸದೆ ತುತ್ತಿನ ಚೀಲ ತುಂಬಿಸಲು ಹೊರಟಿದ್ದಾರೆ. ಇದು ಈ ಭಾಗದ ಜನರ ಪ್ರತಿ ವರ್ಷದ ಗೋಳು.

ಇಂಥ ಹೈದರಾಬಾದ್ ಕರ್ನಾಟಕದಲ್ಲಿ ಒಂದೆಡೆ ಹೊಟ್ಟೆಪಾಡಿಗಾಗಿ ಜನ ಗುಳೆ ಹೊರಟಿದ್ದಾರೆ. ಇನ್ನೊಂದು ಕಡೆ ಚುನಾವಣೆಯ ಕಾವು ನಿಧಾನವಾಗಿ ಏರುತ್ತಿದೆ. ಎಲ್ಲ ಕಡೆಗಳಂತೆ ಇಲ್ಲೂ ರಿಯಲ್ ಎಸ್ಟೇಟ್ ಮಾಫಿಯಾದ ಖದೀಮರು ಸಮಾಜ ಸೇವಕರೆಂಬ ಲಫಂಗರು ಕಾಂಗ್ರೆಸ್, ಬಿಜೆಪಿ, ಕೆಜೆಪಿ ಟಿಕೇಟಿಗಾಗಿ ಓಡಾಡುತ್ತಿದ್ದಾರೆ. ಈ ನಡುವೆ ನಾವೆಲ್ಲ ತುಂಬ ಹೆಮ್ಮೆಪಟ್ಟುಕೊಳ್ಳುತ್ತಿದ್ದ ಶುಭ್ರ ಚಾರಿತ್ರದ ಜನನಾಯಕ ಎಸ್.ಕೆ.ಕಾಂತಾ ಕೆಜೆಪಿ ಸೇರಿ ಸಮಾನ ಮನಸ್ಕರಲ್ಲಿ ದಿಗಿಲು ಮೂಡಿಸಿದ್ದಾರೆ. ಖರ್ಗೆ, ಧರ್ಮ ಸಿಂಗ್ ಮತ್ತಿತರ ಘಟಾನುಘಟಿಗಳು ತಮ್ಮ ಮಕ್ಕಳನ್ನು ವಿಧಾನಸಭೆ ಮೆಟ್ಟಿಲು ಹತ್ತಿಸಲು ಕಸರತ್ತು ಆರಂಭಿಸಿದ್ದಾರೆ.

ಈ ನಡುವೆ ರಾಮಚಂದ್ರಾಪುರದ ಮಠದ ರಾಘವೇಶ್ವರ ಭಾರತಿ ಸ್ವಾಮಿ ಇಲ್ಲಿ ಬಂದು ‘ರಾಮಕಥಾ’ ಪ್ರಹಸನ ನಡೆಸಿದ್ದಾನೆ. ವಾಸ್ತವವಾಗಿ ಇದು ಧಾರ್ಮಿಕ ಕಾರ್ಯಕ್ರಮವಲ್ಲ.  ಬಿಜೆಪಿಗೆ ಹಿಂದೂ ಓಟ್ ಬ್ಯಾಂಕ್ ನಿರ್ಮಿಸುವ ಷಡ್ಯಂತ್ರ ಇದರ ಹಿಂದಿದೆ. ತೊಂಬತ್ತರ ದಶಕದ ಆರಂಭದಲ್ಲಿ ರಾಮರಥ ಕಾರ್ಯಕ್ರಮ ನಡೆಸಿ ದೇಶದ ಶಾಂತಿ ಸೌಹಾರ್ದತೆಗೆ ಕೊಳ್ಳಿ ಇಟ್ಟ ಸಂಘಪರಿವಾರ ಈ ಬಾರಿ ಹೆಸರನ್ನು ಕೊಂಚ ಬದಲಿಸಿ ‘ರಾಮಕಥಾ’ ಎಂಬ ನಾಟಕ ನಡೆಸಿದೆ. ಕರ್ನಾಟಕದಲ್ಲಿ ಇದರ ಪ್ರಯೋಗಕ್ಕೆ ಗುಲ್ಬರ್ಗವನ್ನು ಆರಿಸಿಕೊಂಡಿರುವುದರ ಹಿಂದೆ ತುಂಬ ಆಳವಾದ ಪಿತೂರಿ ಇದೆ.

ಈ ಹಿಂದೆ ಇದೇ ರೀತಿ ರಾಮರಥ, ಇಟ್ಟಿಗೆ ಯಾತ್ರೆ, ಶಿಲಾಪೂಜೆ, ಪಾದುಕೆ ಪೂಜೆ, ಕರಾವಳಿ ಜಿಲ್ಲೆಗಳನ್ನು ಮತ್ತು ಉತ್ತರ ಕರ್ನಾಟಕದ ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳನ್ನು ರೋಗಗ್ರಸ್ತಗೊಳಿಸಿದ್ದ ಸಂಘಪರಿವಾರಕ್ಕೆ ಹೈದರಾಬಾದ್ ಕರ್ನಾಟಕದ ಗುಲ್ಬರ್ಗ, ರಾಯಚೂರು, ಬೀದರ, ಕೊಪ್ಪಳಗಳನ್ನು ಆಕ್ರಮಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಹಿಂದೆ ಆಕ್ರಮಿಸಿಕೊಂಡ ಪ್ರದೇಶಗಳಲ್ಲಿ ತನ್ನ ಕೋಟೆ ಕುಸಿಯುತ್ತಿರುವುದರಿಂದ ದಿಗಿಲುಗೊಂಡ ಆರೆಸ್ಸೆಸ್ ಚಡ್ಡಿ ಗ್ಯಾಂಗು ಈಗ ಗುಲ್ಬರ್ಗಕ್ಕೆ ಲಗ್ಗೆ ಇಟ್ಟಿದೆ.

ಹನ್ನೊಂದನೆ ಶತಮಾನದಲ್ಲಿ ಬಸವಣ್ಣನವರು, ಹದಿನೇಳನೆ ಶತಮಾನದಲ್ಲಿ ಬಂದೇ ನವಾಜರು ಓಡಾಡಿದ ಗುಲ್ಬರ್ಗ-ಬೀದರಗಳು ಇಂದಿಗೂ ಸೌಹಾರ್ದತೆಯ ತಾಣಗಳಾಗಿವೆ. ಸೂಫಿ, ಶರಣ, ಸಂತರು ಜನಿಸಿದ ಈ ನೆಲದಲ್ಲಿ ಫ್ಯಾಸಿಸ್ಟ್ ಮನುವಾದಿಗಳು ಕಾಲೂರಲು ಈವರೆಗೆ ಸಾಧ್ಯವಾಗಿಲ್ಲ. ಬಸವಣ್ಣ, ಬಂದೇ ನವಾಜರ ಜೊತೆ ಅಂಬೇಡ್ಕರ್ ಪ್ರಭಾವವೂ ಇಲ್ಲಿದೆ. ಹಿಂದೆ ಬೌದ್ಧಧರ್ಮವೂ ಇಲ್ಲಿ ನೆಲೆಯೂರಿದ್ದ ಹಿನ್ನೆಲೆ ಇದೆ. ಇಂಥ ತಾಣವನ್ನು ವಶಪಡಿಸಿಕೊಳ್ಳಲು ಈ ಬಾರಿ ಸಂಘಪರಿವಾರ ಮತ್ತೆ ರಾಮಕಥಾ ಕುಚೇಷ್ಟೆ ಆರಂಭಿಸಿದೆ.

ಸಂಘ ಪರಿವಾರ ತನ್ನ ಹಿಡನ್ ಅಜೆಂಡಾ ಜಾರಿಗೆ ಈ ಬಾರಿ ರಾಮಚಂದ್ರ ಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಯನ್ನು ಮುಂದೆ ಮಾಡಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ಈತನ ದನಗಳ ಜಾತ್ರೆಗೆ 3 ಕೋಟಿ ರೂಪಾಯಿ ಬಜೆಟ್ ಅನುದಾನ ನೀಡಿದ್ದರು. ಅದಷ್ಟೇ ಅಲ್ಲ ಶತಮಾನಗಳಿಂದ ಆಸ್ತಿಕರ ಯಾತ್ರಾ ಸ್ಥಳವಾಗಿರುವ ಗೋಕರ್ಣದ ದೇವಾಲಯವನ್ನೇ ಡೀನೋಟಿಫೈ ಮಾಡಿ ಈ ಸ್ವಾಮಿಗೆ ಹಸ್ತಾಂತರಿಸಿದ್ದರು. ಇದಕ್ಕೆ ಕಾರವಾರ ಜಿಲ್ಲೆಯ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿ ದ್ದರು. ಗೋಕರ್ಣದಲ್ಲಿ ಪ್ರತಿಭಟನೆಯ ನಡೆದಿತ್ತು. 

ಇಂಥ ಗೋಮುಖದ ವಂಚಕ ಸ್ವಾಮಿಯನ್ನು ಗುಲ್ಬರ್ಗಕ್ಕೆ ಕರೆದುಕೊಂಡು ಬಂದು ‘ರಾಮಕಥಾ’ ಎಂದು ಹೊಸ ಪ್ರಹಸನವನ್ನು ಆರೆಸ್ಸೆಸ್ ಆರಂಭಿಸಿದೆ. ಈ ಬಾರಿ ಅಪ್ಪಿತಪ್ಪಿಯೂ ಪರಿವಾರದ ಸಂಘಟನೆಗಳ ಹೆಸರನ್ನು ಬಳಸಿಲ್ಲ. ಇದಕ್ಕಾಗಿ ರಾಮಕಥಾ ಉತ್ಸವ ಸಮಿತಿ ಎಂಬ ಹೊಸ ಸಮಿತಿಯನ್ನು ಅದು ಹುಟ್ಟು ಹಾಕಿದೆ. ಇದಕ್ಕಾಗಿ ರಚಿಸಿದ ಸಿದ್ಧತಾ ಸಮಿತಿಯಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಜೆಡಿಎಸ್ ನಾಯಕರ ಹೆಸರನ್ನು ಅವರನ್ನು ಕೇಳದೆ ಹಾಕಿಕೊಂಡಿದೆ. ಸ್ಥಳೀಯ ಲಿಂಗಾಯತ ಪ್ರಮುಖರ ಹೆಸರನ್ನು ಸೇರಿಸಲಾಗಿದೆ. ಈ ಬಗ್ಗೆ ಅವರನ್ನು ವಿಚಾರಿಸಿದಾಗ ಯಾರ ಒಪ್ಪಿಗೆಯನ್ನು ತೆಗೆದುಕೊಳ್ಳದೆ ಹೆಸರು ಹಾಕಿಕೊಳ್ಳಲಾಗಿದೆ ಎಂದು ತಿಳಿದು ಬಂತು.

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಮಕಥಾ ಸೋಗಿನಲ್ಲಿ ಕೋಮುದಳ್ಳುರಿ ಹಬ್ಬಿಸಲು ಹೊರಟಿರುವ ಸಂಘಪರಿವಾರ ಹುನ್ನಾರದ ವಿರುದ್ಧ ಗುಲ್ಬರ್ಗದ ಸೌಹಾರ್ದ ಚಿಂತನ ವೇದಿಕೆ ಪ್ರತಿಭಟನಾ ಕಾರ್ಯಕ್ರಮ ಒಂದನ್ನು ರೂಪಿಸಿತ್ತು. ನಮ್ಮ ನಡುವಿನ ಅಪರೂಪದ ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಮತ್ತು ಹೆಸರಾಂತ ಚಿಂತಕಿ ಮೀನಾಕ್ಷಿ ಬಾಳಿ ಅವರು ಸಮಾನ ಮನಸ್ಕರನ್ನೆಲ್ಲ ಸೇರಿಸಿದ್ದರು. ಮಾರ್ಚ್ ೨೦ರಂದು ನಡೆದ ಸಭೆಗೆ ನಾನೂ ಹೋಗಿದ್ದೆ. ಸ್ಥಳೀಯ ಲಿಂಗಾಯತ ಸಮಾಜದ ಪ್ರಮುಖರು, ದಲಿತ- ಹಿಂದುಳಿದ ಸಂಘಟನೆಗಳ ನಾಯಕರು, ಕಾರ್ಯ ಕರ್ತರು ಸಭೆಗೆ ಬಂದಿದ್ದರು.
ಗುಲ್ಬರ್ಗದ ಪ್ರತಿಭಟನೆಯ ವಿಶೇಷವೆಂದರೆ ಉಳಿದ ಕಡೆ ಪ್ರತಿಭಟನೆ ನಡೆದರೆ ಅದೇ ಪ್ರಗತಿಪರ ಸಂಘಟನೆಗಳು, ಕಾರ್ಯಕರ್ತರು ಮಾತ್ರ ತುಂಬಿರುತ್ತಾರೆ. ಪ್ರತಿ ಬಾರಿ ಕಾರ್ಯಕ್ರಮದಲ್ಲೂ ಅವೇ ಮುಖಗಳಿರುತ್ತವೆ. ಆದರೆ ಗುಲ್ಬರ್ಗದಲ್ಲಿ ಮೀನಾಕ್ಷಿ ಬಾಳಿ ಮತ್ತು ನೀಲಾ ಅವರು ಸ್ಥಳೀಯ ಲಿಂಗಾಯತ ಸಮುದಾಯದ ಪ್ರಮುಖರನ್ನು ಮಾತನಾಡಿಸಿದರು. ವಚನ ಸಂಸ್ಕೃತಿಯನ್ನು ತಿರುಚುವ ವೈದಿಕೀಕರಣಗೊಳಿಸುವ ಹುನ್ನಾರಕ್ಕೆ ಬಲಿಯಾಗಬೇಡಿ ಎಂದು ಎಚ್ಚರಿಸಿ ದರು. ಈ ಮಾತು ಅವರಿಗೆ ತಟ್ಟಿತು. ಒಂದೇ ದಿನದಲ್ಲಿ ನೂರಾರು ಜನರನ್ನು ಸೇರಿಸಿದರು.

ಅಂತಲೇ ಸಂಘಪರಿವಾರದ ರಾಮಕಥಾ ಹುನ್ನಾರದ ವಿರುದ್ಧ ನಡೆದ ಪ್ರತಿಭಟನಾ ಸಭೆಗೆ ರಶೈವ ಮಹಾಸಭಾ ಪ್ರಮುಖರಾದ ಶಿವಶರಣಪ್ಪ ಕಲಬುರ್ಗಿ, ಸೋಮಣ್ಣ ನಡಕಟ್ಟಿ, ಡಿ.ಬಿ.ಪಾಟೀಲ, ಬಿಡಿ ಜತ್ತಿಯವರ ಪುತ್ರಿ ಶ್ರೀಮತಿ ವಿಲಾಸವತಿ ಖೂಬಾ,  ಕಾಶಿನಾಥ ಅಂಬಲಗಿ ಪ್ರಭು ಖಾನಾಪುರೆ, ಡಿಎಸ್‌ಎಸ್ ನಾಯಕರಾದ ಬಿ.ವಿ.ಚಕ್ರವರ್ತಿ, ಇಕ್ಕಳಕಿ ಮುಂತಾದವರು ಭಾಗವಹಿಸಿದ್ದರು. ಇವರ ಹೆಸರುಗಳನ್ನೆಲ್ಲ ಸಂಘಪರಿವಾರ ರಾಮಕಥಾ ಸಮಿತಿಯಲ್ಲಿ ಹಾಕಿತ್ತು. ಅವರೇ ಬಂದು ಈ ವಂಚನೆಯನ್ನು ಬಯಲಿಗೆಳೆದರು.

ಗುಲ್ಬರ್ಗದಲ್ಲಿ ಸಂಘಪರಿವಾರದ ಈವರೆಗೆ ಕಾಲೂರಲು ಸಾಧ್ಯವಾಗಿಲ್ಲ. ಅಂದರೆ ಅದರ ಶ್ರೇಯಸ್ಸು ಇಲ್ಲಿನ ಪ್ರಗತಿಪರ ತಂಡವಾದ ಸೌಹಾರ್ದ ಚಿಂತನ ವೇದಿಕೆಗೆ ಸಲ್ಲುತ್ತದೆ. ಮುಖ್ಯವಾಗಿ ಈ ಭಾಗದ ಪ್ರಮುಖ ಲೇಖಕ ಆರ್.ಕೆ.ಹುಡುಗಿ, ನೀಲಾ, ಮೀನಾಕ್ಷಿ ಬಾಳಿ ಅಂಥವರು ನಿರಂತರವಾಗಿ ಮೈತುಂಬ ಕಣ್ಣುಗಳನ್ನಿಟ್ಟುಕೊಂಡು ಈ ಭಾಗದ ಶಾಂತಿ ನೆಮ್ಮದಿ ಕದಡದಂತೆ ಕಾಪಾಡುತ್ತಲೇ ಬಂದಿದ್ದಾರೆ. 

ಕೋಮುವಾದಿ ವಿರೋಧಿ ಹೋರಾಟವನ್ನು ಹೇಗೆ ನಡೆಸಬೇಕೆಂಬುದಕ್ಕೆ ಗುಲ್ಬರ್ಗ ಅತ್ಯುತ್ತಮ ಉದಾಹರಣೆಯಾಗಿದೆ. ಬರೀ ಪ್ರಗತಿಪರರನ್ನು ಮಾತ್ರವಲ್ಲ ಸಮಾಜದ ಎಲ್ಲ ಜನರನ್ನು ಒಳಗೊಂಡಾಗ ಮಾತ್ರ ಫ್ಯಾಸಿಸ್ಟ್‌ಶಕ್ತಿಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಸಾಧ್ಯವಾಗುತ್ತದೆ ಎಂಬುದನ್ನು ಗುಲ್ಬರ್ಗದ ಸಂಗಾತಿಗಳಿಂದ ನಾವು ಕಲಿಯಬೇಕಾಗಿದೆ.

ನಿರ್ಲಕ್ಷ್ಯ: ಸಹನೆ, ಮಾನವೀಯತೆ, ದಕ್ಷತೆಗಳೆಂಬ ತ್ರಿಗುಣಗಳಾಚೆ..

- ಡಾ. ಎಚ್.ಎಸ್.ಅನುಪಮಾ


ನೀನು ಇರುಳ ಸೃಷ್ಟಿಸಿರಬಹುದು, ನಾನು ಹಣತೆ ಮಾಡಿದೆ.
ನೀನು ಮಣ್ಣು ಸೃಷ್ಟಿಸಿರಬಹುದು, ನಾನು ಬಟ್ಟಲ ತಯಾರಿಸಿದೆ.
ನೀನು ಗುಡ್ಡಬೆಟ್ಟಮರಳುಗಾಡು ಸೃಷ್ಟಿಸಿರಬಹುದು,
ನಾನು ಗದ್ದೆಹೊಲಹೂತೋಟಗಳ ನಿರ್ಮಿಸಿದೆ. 
ನಾನು, ಶಿಲೆಯನ್ನು ಗಾಜನ್ನಾಗಿ
ವಿಷವನ್ನು ಪ್ರತಿವಿಷವಾಗಿ ಬದಲಾಯಿಸಿದೆ..

-    ಸರ್ ಮೊಹಮದ್ ಇಕ್ಬಾಲ್

ಹೊಸ ಕಾಯಿಲೆಗಳು ಸೃಷ್ಟಿಯಾಗುತ್ತಿರಬಹುದು, ಮನುಷ್ಯ ಚಿಕಿತ್ಸೆಯ ಸಾಧ್ಯತೆಗಳನ್ನು ನಿರಂತರ ಹುಡುಕುತ್ತಲೇ ಇದ್ದಾನೆ. ಮನುಷ್ಯ ಪ್ರಯತ್ನ ಸಣ್ಣದಲ್ಲ. ಹಾಗಾದರೆ ಔಷಧಿ ವಿಷವಾಗುವುದು, ಪ್ರತಿವಿಷವೇ ಘನಘೋರ ವಿಷವಾಗುವುದು ಹೇಗೆ?

ದಿನ ಬೆಳಗಾದರೆ ಸುದ್ದಿಪತ್ರಿಕೆ, ನ್ಯೂಸ್‌ಚಾನೆಲ್ಲುಗಳಲ್ಲಿ ‘ವೈದ್ಯರ ನಿರ್ಲಕ್ಷ್ಯ: ರೋಗಿ ಸಾವು’ ಎಂಬ ವರದಿಯಿರುತ್ತದೆ. ವೈದ್ಯರ ಮೇಲಾಗುವ ಹಲ್ಲೆ, ಪರಿಹಾರ ಮತ್ತು ಸೂಕ್ತ ಕ್ರಮಕ್ಕಾಗಿನ ಒತ್ತಾಯ ವರದಿಯಾಗುತ್ತದೆ. ಹಾಗಾದರೆ ವೈದ್ಯರ ನಿರ್ಲಕ್ಷ್ಯದಿಂದ ಸಾವುಂಟಾಗುವ ಪ್ರಕರಣ ಹೆಚ್ಚುತ್ತಿದೆಯೇ?

ಹೌದು. ಈಗ ಎಲ್ಲವೂ ಹೆಚ್ಚಿದೆ. ಜನಸಂಖ್ಯೆ, ಸಾವಿನ ಸಂಖ್ಯೆ, ರೋಗಿ-ಆಸ್ಪತ್ರೆ-ವೈದ್ಯರು-ಅವರನ್ನು ತಯಾರಿಸುವ ಕಾಲೇಜುಗಳು- ಜೊತೆಗೆ ವರದಿ ಮಾಡುವ ಮಾಧ್ಯಮಗಳು - ಈ ಎಲ್ಲದರ ಸಂಖ್ಯೆ ಹೆಚ್ಚಿದೆ. ಅಂತೇ ನಿರ್ಲಕ್ಷ್ಯದಿಂದಾಗುವ ಸಾವುಗಳ ಸಂಖ್ಯೆಯೂ.
ಅಂಥ ಸಾವಿನ ಪ್ರಕರಣಗಳ ವರದಿ ಟಿಪ್ ಆಫ್ ದಿ ಐಸ್‌ಬರ್ಗ್ ಅಷ್ಟೆ. ಅದಕ್ಕಿಂತ ಎಷ್ಟೋ ಹೆಚ್ಚು ಪ್ರಕರಣಗಳು ಸಂಭವಿಸಿ ಬೆಳಕಿಗೆ ಬಾರದೇ ಹೋಗುತ್ತದೆ. ಎಷ್ಟೋ ಸಲ ನಿರ್ಲಕ್ಷವೋ, ಹಣೆಬರಹವೋ, ಕೈಗುಣವೋ ತಿಳಿಯದೇ ಹೋಗುತ್ತದೆ.

ರೋಗಿಯ ಪ್ರಾಣ ಹೋದಮೇಲೆ ಮಾತ್ರ ತಿಳಿಯುವಂತಹ; ನಿರ್ಲಕ್ಷ್ಯವಾದರೂ ನಿರ್ಲಕ್ಷ್ಯವೆನಿಸದ ಕ್ರಿಯೆಗಳೆಷ್ಟೋ ಇವೆ. ಎಲ್ಲವನ್ನೂ ಕ್ರಮಪ್ರಕಾರ ಮಾಡಿಯೂ ಕೈತಪ್ಪಿ ಹೋಗುವ ಜೀವಗಳಿವೆ. ಸಾವಿಗೆ, ಬೇಜವಾಬ್ದಾರಿತನಕ್ಕೆ ಎಷ್ಟೊಂದು ಆಯಾಮಗಳಿವೆ?! ಆದರೆ ಯಾವುದು ನಿರ್ಲಕ್ಷ್ಯ ಎಂಬ ಬಗೆಗೆ ಜನಸಾಮಾನ್ಯರಲ್ಲಿ ಅಸ್ಪಷ್ಟ ಗ್ರಹಿಕೆಗಳಿವೆ. ಕೆಲ ವರ್ಷಗಳ ಕೆಳಗೆ ಇಂಗ್ಲಿಷ್ ವಾರಪತ್ರಿಕೆಯೊಂದು ಮೆಡಿಕಲ್ ನೆಗ್ಲಿಜೆನ್ಸ್ ಕುರಿತು ವರದಿ ಮಾಡಿತ್ತು. ಅಪರೂಪದಲ್ಲಿ ಅಪರೂಪದ ಪ್ರಕರಣಗಳನ್ನು ಹೆಕ್ಕಿಹೆಕ್ಕಿ ವರದಿ ಮಾಡಿ ವೈದ್ಯಕೀಯ ನಿರ್ಲಕ್ಷ್ಯವೆಂದರೆ ಆಪರೇಶನ್ ಮಾಡುವಾಗ ಹೊಟ್ಟೆಯಲ್ಲಿ ಕತ್ತರಿ ಉಳಿಸುವುದು, ಐಸಿಯುನಲ್ಲಿ ತೂಕಡಿಸುವುದು ಎನ್ನುವಂತೆ ಬಿಂಬಿಸಲಾಗಿತ್ತು.

ವೈದ್ಯರಿಂದ ಗುಣವಾದ ರೋಗಿಗಳ ಸಂಖ್ಯೆಗೆ ಹೋಲಿಸಿದರೆ ನಿರ್ಲಕ್ಷ್ಯದಿಂದಾಗುವ ಸಾವಿನ ಸಂಖ್ಯೆ ಬೆರಳೆಣಿಕೆಯದು. ಆದರೆ ಸಾವಿರ ಚಿತ್ತಾರವನ್ನು ನುಸಿ ನುಂಗುವಂತೆ ಒಂದು ವಿಫಲ ಕೇಸಿನಿಂದ ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಜೀವಮಾನವಿಡೀ ಆ ಕೊರಗು, ಆತಂಕ ಅನುಭವಿಸಬೇಕಾಗುತ್ತದೆ. ಇದೇಕೆ ಹೀಗೆ? ದಿನವೂ ಸಾವಿರಾರು ಅಪಘಾತ ಸಾವು ಸಂಭವಿಸುತ್ತವೆ. ಕುಡಿಕುಡಿದು, ತಂಬಾಕು ಬಳಸಿ ಜನ ಸತ್ತರೂ ಬಾರ್ ಮಾಲೀಕನ ಮೇಲೆ, ತಂಬಾಕು ಕಂಪನಿ/ಅಂಗಡಿಗಳ ಮೇಲೆ ಹಲ್ಲೆಯಾಗುವುದಿಲ್ಲ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಸಂಭವಿಸುವ ಸಾವುಗಳು - ಅವು ಬೆರಳೆಣಿಕೆಯಷ್ಟು ಇದ್ದರೂ - ಏಕೆ ಪ್ರಚಾರ ಪಡೆಯುತ್ತವೆ? ವೈದ್ಯರ ನಿರ್ಲಕ್ಷ್ಯ ಕೊಲೆಗೆ ಸಮನೆಂದು ಏಕೆ ಪರಿಗಣಿಸಲಾಗುತ್ತದೆ? ಕಾನೂನಿನ ಚಾಟಿಯೇಟು ವೈದ್ಯ ಎಚ್ಚರದಲ್ಲಿರುವಂತೆ ಮಾಡಬೇಕೆಂಬ ಉದ್ದೇಶ ಹೊಂದಿದ್ದರೂ ವೈದ್ಯ ಗಮನ ತಪ್ಪಿ ಮೈಮರೆಯುವುದು ಹೇಗೆ?

ಒಂದು ಕಾಲದಲ್ಲಿ ಸೇವಾ ಕ್ಷೇತ್ರವಾಗಿದ್ದ ವೈದ್ಯಕೀಯ ವಲಯ ಇಂದು ‘ವೈದ್ಯಕೀಯ ಪ್ರವಾಸೋದ್ಯಮ’ವಾಗಿದೆ. ಅಣಬೆಗಳಂತೆ ತಲೆಯೆತ್ತುತ್ತಿರುವ ಮೆಡಿಕಲ್ ಕಾಲೇಜುಗಳಲ್ಲಿ ಕೋಟ್ಯಂತರ ಖರ್ಚು ಮಾಡಿ ವೈದ್ಯಪದವಿ, ಸ್ನಾತಕೋತ್ತರ ಪದವಿ ಗಳಿಸುವವರಿದ್ದಾರೆ. ಅಷ್ಟು ಹಣ ಸುರಿದು ಓದಿದವರು ಖಂಡಿತಕ್ಕೂ ಸಮಾಜಸೇವೆಯ ಇರಾದೆ ಹೊತ್ತಿರುವುದಿಲ್ಲ. ಸಮಾಜದ ಉಳಿದ ವರ್ಗಗಳಂತೆಯೇ ವೈದ್ಯರೂ ಗಳಿಸಿ ಗಣ್ಯರಾಗುವ ಧಾವಂತದಲ್ಲಿರುತ್ತಾರೆ. ಧನದಾಹದ ಆರಂಭ ಬಿಂದು ಇದು. ನಿರ್ಲಕ್ಷ್ಯ, ಸಾವಿನ ಮೂಲವೂ ಇದುವೇ.
***

ಮೊದಲೆಲ್ಲ ಸೇವೆ ಮತ್ತು ದಾನ ವೈದ್ಯವೃತ್ತಿಯ ಭಾಗವೆಂದು ಪರಿಭಾವಿಸಲಾಗುತ್ತಿತ್ತು. ಆದರೆ ಈಗ ಫೀಸು ಕೇಳಿ ವಸೂಲಿ ಮಾಡುವ, ಕೊಡದಿದ್ದರೆ ಚಿಕಿತ್ಸೆ ನೀಡದ, ಆದರೂ ತನ್ನದು ಸೇವೆಯೆಂದುಕೊಳ್ಳುವ ವೈದ್ಯರ ಬಗೆಗೆ ಭಯಗೌರವ ತುಂಬಿದ ಆಕ್ರೋಶ ಬೆಳೆದಂತಿದೆ. ವ್ಯಕ್ತಿಯೊಬ್ಬನ ಅನಾರೋಗ್ಯದಿಂದ ಇಡೀ ಕುಟುಂಬ ಸಂಕಷ್ಟದಲ್ಲಿರುತ್ತದೆ. ಚಿಕಿತ್ಸೆಗೆ ಹಣ ಹೊಂದಿಸಲು ಪರದಾಡಿರುತ್ತದೆ. ಎಲ್ಲ ನಷ್ಟಗಳಿಗಿಂತ ಜೀವನಷ್ಟ ದಾರುಣ ಮತ್ತು ದುಷ್ಟ. ಪ್ರತಿ ಸಾವು ಕನಿಷ್ಠ ಆರು ಜನರ ಬದುಕಿನ ಗತಿ-ಗಮ್ಯವನ್ನೇ ಬದಲಿಸುತ್ತದೆ. ಕ್ಷಣಾರ್ಧದಲ್ಲಿ ಬದುಕನ್ನು, ಕನಸುಗಳನ್ನು ನುಚ್ಚುನೂರು ಮಾಡುತ್ತದೆ. ಇವೆಲ್ಲದರ ಹಿನ್ನೆಲೆಯಲ್ಲಿ ವೈದ್ಯರು ನೆನಪಿಡಬೇಕಾದ ಕೆಲ ಸಂಗತಿಗಳಿವೆ:

    ಗೆಳೆಯ - ಸಂಬಂಧಿಯಲ್ಲದ ವ್ಯಕ್ತಿಯ ನೋವನ್ನು ತನ್ನದರ ಜೊತೆಗೆ ಸಮೀಕರಿಸಿಕೊಂಡು ಅದರಿಂದ ಹೊರಬರುವ ದಾರಿಯನ್ನು ತಿಳಿಸಿ ಬೀಳ್ಕೊಡುವ ಪ್ರಕ್ರಿಯೆಯಲ್ಲಿ ವೈದ್ಯ ತನ್ನೊಳಗನ್ನೂ ತಾನು ಹೊಕ್ಕು ಬರಬೇಕು. ಈ ಪರಕಾಯ ಪ್ರವೇಶದಿಂದ ರೋಗಿ ಬರೀ ರೋಗಿಯಲ್ಲ. ಆತ ಯಾರದೋ ಗಂಡ/ಹೆಂಡತಿ, ಮಗ, ಮಗಳು, ಸೋದರ, ತಾಯಿ ಎಂಬ ಅರಿವಾಗುತ್ತದೆ. ಆ ಎಲ್ಲ ಪಾತ್ರ ನಿಭಾವಣೆಯಲ್ಲಿ ವೈದ್ಯಕೀಯವು ವ್ಯಕ್ತಿಗೆ ಸಹಾಯ ಮಾಡಬೇಕಾಗುತ್ತದೆ. ರೋಗ ಮತ್ತು ಔಷಧಿ ಬದುಕಿನ ಒಂದು ಭಾಗವಾಗಬೇಕೇ ಹೊರತು ಬದುಕೇ ರೋಗದ ಭಾಗವಾಗದಂತೆ ವೈದ್ಯ ನೋಡಿಕೊಳ್ಳಬೇಕಿದೆ. ಮನುಷ್ಯನ ಮನಸ್ಸು, ಸಂಬಂಧಗಳ ಜಟಿಲತೆಗಳನ್ನು ಒಳಹೊಕ್ಕು ತಿಳಿದು ಏನನ್ನೂ ಮುಚ್ಚಿಡದೇ ಇದ್ದದ್ದನ್ನು ಇದ್ದಿದ್ದ ಹಾಗೇ ಹೇಳುವ ವಾಸ್ತವವಾದೀ ಧೋರಣೆ ವೈದ್ಯನಿಗೆ ಅನಿವಾರ್ಯವಾಗಿದೆ.
    ರೋಗ ಕೇವಲ ರೋಗಿಗಷ್ಟೇ ಅಲ್ಲ, ಅವನ ಸಂಬಂಧಿಗಳಿಗೂ, ವೈದ್ಯರಿಗೂ ಸವಾಲಿನ ಆತಂಕದ ವಿಷಯ. ಕಾಯಿಲೆ-ಚಿಕಿತ್ಸೆ-ಸಂಭವನೀಯ ಪರಿಣಾಮ-ದುಷ್ಪರಿಣಾಮಗಳ ಬಗೆಗೆ ವೈದ್ಯರು ಮೊದಲೇ ತಿಳಿಸಬೇಕು. ಅದು ವೈದ್ಯನ ಆತಂಕವನ್ನು ಕೊಂಚ ಕಡಿಮೆ ಮಾಡುತ್ತದೆ. ಸೂಕ್ತವಾಗಿ ತಿಳಿಸದಿರುವುದು ಮೊದಲ ನಿರ್ಲಕ್ಷ್ಯವಾಗುತ್ತದೆ. ಬರಿಯ ವೈಜ್ಞಾನಿಕ ಮಾಹಿತಿ ಮತ್ತು ಜ್ಞಾನವನ್ನು ರೋಗಿಗೆ ವರ್ಗಾಯಿಸಿದರೆ ಸಾಲದು. ಅರಿವನ್ನು ಭಾವನೆಯೊಂದಿಗೆ ಬೆರೆಸಿ, ಎಚ್ಚರಗೊಳಿಸಿ ಧೈರ್ಯ ತುಂಬಬೇಕಾಗುತ್ತದೆ. ಎದುರಿರುವವರ ಪ್ರಶ್ನೆಗಳು, ಪ್ರತಿಕ್ರಿಯೆಗಳು ಕಿರಿಕಿರಿಯೆನಿದರೂ ರೋಗಿ/ಸಂಬಂಧಿಗಳ ಜೊತೆಗಿನ ಸಣ್ಣ ಮಾತುಕತೆ ಔಷಧಿಯಷ್ಟೇ ಕೆಲಸ ಮಾಡಬಲ್ಲದು. ಆ ಗ್ರೌಂಡ್‌ವರ್ಕ್ ಔಷಧಿಗಿಂತ ದೀರ್ಘ ಪರಿಣಾಮವುಳ್ಳದ್ದು.
    ಎಷ್ಟು ನೋಡಿದರೂ ಕಾಯಿಲೆ ಮುಗಿಯುವುದಿಲ್ಲ. ಸೇವೆ ಬಯಸುವ ರೋಗಿಗಳ ಸಂಖ್ಯೆ ಕೊನೆಯಾಗುವುದಿಲ್ಲ. ವಿಶ್ರಾಂತಿ-ಮನರಂಜನೆಗೆಂದು ಸಮಯ ಮೀಸಲಿಡುವುದು ವೈದ್ಯನ ಮಟ್ಟಿಗೆ ಅಲಿಖಿತ ಅಪರಾಧ. ಹೀಗಿರುತ್ತ ವೈದ್ಯರಿಗೆ ಸವೆಯದೆ ಉಳಿಯುವುದೇ ಒಂದು ಸವಾಲು. ನಾನೊಬ್ಬಳೇ ವೈದ್ಯೆಯಲ್ಲ; ಸಾಧ್ಯವಾದಷ್ಟು ಕೇಸುಗಳನ್ನು ನಾನೇ ನೋಡಬೇಕೆನ್ನುವ ‘ಹಪಾಹಪಿತನ’ ಸೇವೆಯಲ್ಲ; ಸ್ವಂತದ ಬದುಕಿಗೆ, ಸಣ್ಣಪುಟ್ಟ ಕಷ್ಟಸುಖಸಂಭ್ರಮಗಳಿಗೆ ಸಮಯ ಮೀಸಲಿಟ್ಟುಕೊಳ್ಳಲೇಬೇಕು. ಇಲ್ಲದಿದ್ದರೆ ತಿಜೋರಿ ಎಷ್ಟು ಬೇಗ ತುಂಬುವುದೋ ಅಷ್ಟೇ ಬೇಗ ಸವೆಯುವಿಕೆಯೂ ಸಂಭವಿಸುತ್ತದೆ ಎಂದು ವೈದ್ಯರು ನೆನಪಿಡಬೇಕು.
    ವೈದ್ಯಕೀಯ ಸತ್ಯ ಯಾವಾಗಲೂ ಅರ್ಧಸತ್ಯ ಅಥವಾ ಸಾಪೇಕ್ಷ ಸತ್ಯ. ಯಾವುದೇ ಚಿಕಿತ್ಸೆ, ಔಷಧಿ, ಚಿಕಿತ್ಸಾ ಕ್ರಮ ಅದೆಷ್ಟೇ ಯಶಸ್ವಿಯಾಗಿದ್ದರೂ ಪರಿಣಾಮ ನಿಶ್ಚಿತವಲ್ಲ. ದೈಹಿಕ ಭಿನ್ನತೆಗಳ ಕಾರಣದಿಂದ ಪ್ರತಿ ರೋಗಿಯ ಚಿಕಿತ್ಸೆಯೂ ಹೊಸ ಸವಾಲೇ. ಅನುಭವ ಕಲಿಸುವ ಪಾಠಕ್ಕಿಂತ ದೊಡ್ಡದು ಯಾವುದೂ ಇಲ್ಲ. ಆದರೆ ಅನುಭವ ಏನೂ ಉಪಯೋಗಕ್ಕೆ ಬರದಂತಾಗುವ ಸನ್ನಿವೇಶಗಳೂ ಇರುವುದರಿಂದ ವೈದ್ಯ ಸರ್ವಶಕ್ತನಲ್ಲ ಎಂಬ ವಿನೀತಭಾವ ಅವಶ್ಯ. ಆಗ ಹೆಗಲ ಮೇಲೆ ತಲೆಯಿರುತ್ತದೆ, ನೆಲದ ಮೇಲೆ ಕಾಲಿರುತ್ತದೆ.
    ಕಾನೂನು ಹೇಗಾದರೂ ವ್ಯಾಖ್ಯಾನಿಸಲಿ, ರೋಗಿ ಗ್ರಾಹಕನಲ್ಲ. ವೈದ್ಯ ವ್ಯಾಪಾರಿಯಲ್ಲ.  
***

ಯಾವ ವೈದ್ಯಕೀಯ ಕಾಲೇಜೂ ರೋಗಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು, ಸಮಾಜದೊಂದಿಗೆ ಉತ್ತಮ ಸಂಬಂಧ ಹೇಗೆ ಹೊಂದಬೇಕೆಂದು ಭಾವೀ ವೈದ್ಯನಿಗೆ ಕಲಿಸುವುದಿಲ್ಲ. ಅದನ್ನು ಪ್ರತಿ ವೈದ್ಯ ತನ್ನ ವ್ಯಕ್ತಿತ್ವ, ಸುತ್ತಮುತ್ತಲ ಪರಿಸರದೊಂದಿಗಿನ ಒಡನಾಟದಿಂದ ನಿರಂತರ ಕಲಿಯಬೇಕು. ವೈದ್ಯ ಮತ್ತು ರೋಗಿಯದು ವಿಶಿಷ್ಟ, ವಿಚಿತ್ರ ಸಂಬಂಧ. ಅತ್ತಲಾಗಿ ವ್ಯವಹಾರವೂ ಅಲ್ಲದ, ಇತ್ತಲಾಗಿ ಸೇವೆಯೂ ಅಲ್ಲದ; ಗೆಳೆತನವೂ ಅಲ್ಲದ, ರಕ್ತಸಂಬಂಧವೂ ಅಲ್ಲದ; ಯಾಜಮಾನಿಕೆಯೂ ಅಲ್ಲದ, ತಂದೆತನದ್ದೂ ಅಲ್ಲದ ಸಂಬಂಧ ಅದು.

ಈಗಾಗಲೇ ವೈದ್ಯವೃತ್ತಿ ಮಾರುಕಟ್ಟೆಯ ಪ್ರಭಾವಕ್ಕೊಳಗಾಗಿದೆ. ಜೊತೆಗೆ ಬಿಗಿಯಾದ ಕಾನೂನೂ ಬಂದರೆ ಸಣ್ಣಪುಟ್ಟ ಕಾಯಿಲೆಯಾದರೂ ಅವಶ್ಯವಿರುವ, ಇಲ್ಲದಿರುವ ನೂರೆಂಟು ತಪಾಸಣೆ, ಶುಲ್ಕ ಹೇರಲ್ಪಟ್ಟು ಪಕ್ಕಾ ವ್ಯವಹಾರವಾಗುವುದರಲ್ಲಿ ಸಂದೇಹವಿಲ್ಲ. ಅಮೆರಿಕದಂತಹ ದೇಶಗಳಲ್ಲಿ ಇನ್ಶೂರೆನ್ಸ್ ಇಲ್ಲದೆ ಸಾಮಾನ್ಯರು ಆಸ್ಪತ್ರೆಗೆ ಹೋಗಲಾರದಂತಹ ಸ್ಥಿತಿಯನ್ನು ಇಂಥ ಕಾನೂನುಗಳೇ ಸೃಷ್ಟಿಸಿವೆ. ಎಂದೇ ಕೇವಲ ಕಾನೂನು ಕ್ರಮಗಳಿಂದ ವೈದ್ಯಕೀಯ ಸೇವೆ ಸುಧಾರಿಸುವುದಿಲ್ಲ. ವೈದ್ಯನೆಂದರೆ ಸೂಪರ್‌ಹ್ಯೂಮನ್ ಅಲ್ಲ, ಕೇವಲ ಮನುಷ್ಯ. ಸಮಾಜದ ಒಂದು ಭಾಗ. ವೈದ್ಯ ಮತ್ತು ಸಮಾಜ ಇದನ್ನು ಅರಿಯಬೇಕು.

ತಪ್ಪು ಮಾಡಲು ಮತ್ತು ಅದಕ್ಕೆ ಮಾಫಿ ಕೇಳಲು ಅರ್ಹತೆ ಬೇಕು ಎಂದೇನಾದರೂ ಇದ್ದಲ್ಲಿ ವೈದ್ಯನಿಗೆ ಆ ಅರ್ಹತೆ ಎಂದೂ ದೊರೆಯುವುದಿಲ್ಲ. ಎಂದೇ ತಪ್ಪುಗಳಾಗದಂತೆ ಆದಷ್ಟು ಎಚ್ಚರ ವಹಿಸಬೇಕು. ತಪ್ಪಿತಸ್ಥನಿಗೂ ತಪ್ಪೊಪ್ಪಿಗೆಯ ಅವಕಾಶವಿದೆಯೆನ್ನುವುದನ್ನು ಮರೆಯಬಾರದು.


Wednesday, March 27, 2013

ವೈದಿಕ ವಿರೋಧಿ ನಿಲುವೇ ವಚನಕಾರರ ಮೂಲ ಗುರಿ

ಬ್ರಾಹ್ಮಣ ವಿರೋಧಿ ಚಳವಳಿ ಕುರಿತು ವಚನಗಳಲ್ಲಿ ಸರಿಯಾದ ಅಭಿವ್ಯಕ್ತಿಯೇ ಇಲ್ಲವೆನ್ನುವುದಾದರೆ ವಚನ ಚಳವಳಿಯಾದರೂ ಹುಟ್ಟಿಕೊಂಡಿದ್ದೇಕೋ? ಮಾನ್ಯ ಝಳಕಿ ಹಾಗೂ ಬಾಲಗಂಗಾಧರರು ತಮ್ಮ ವಾದಕ್ಕೆ ಬೇಕಾದ ವಚನಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ವಿಶ್ಲೇಷಿಸಲು ಹೊರಟಿದ್ದರ ಹಿನ್ನೆಲೆ ಏನಿರಬಹುದು? ಯಾರನ್ನೋ ಸಂತೈಸಲು ಶರಣರ ಮೂಲ ಆಶಯಕ್ಕೇ ಕೊಡಲಿ ಏಟು ಹಾಕ ಹೊರಟಿದ್ದು ಹುನ್ನಾರವೋ, ಸನಾತನಿಗಳ ಮೇಲಿನ ವ್ಯಾಮೋಹವೋ, ಆ ಕಾಲದ ದಲಿತ ಚಳವಳಿಗಾರರ ಮೂಲಭೂತವಾದವನ್ನೇ ಹುಸಿಗೊಳಿಸುವ ಸನ್ನಾಹವೋ ಅಥವಾ ಇವೆಲ್ಲವೋ ಚರ್ಚಿಸಿ ಖಂಡಿಸಲೇಬೇಕಿದೆ.

ವೈದಿಕ ಧರ್ಮದ ಮೌಢ್ಯ, ಕಂದಾಚಾರ, ಅಸ್ಪೃಶ್ಯತೆ, ಅಮಾನವೀಯ ಮಡಿ ಮೈಲಿಗೆಗಳನ್ನು ವಿರೋಧಿಸಿಯೇ ಅಲ್ಲವೆ ಬೌದ್ಧಧರ್ಮ ಹುಟ್ಟಿಕೊಂಡಿದ್ದು. ನಂತರ ಹುಟ್ಟಿ ಬಂದ ಜೈನಧರ್ಮ ಕೂಡ ಹುಟ್ಟಿದ್ದೇ ವೈದಿಕ ಧರ್ಮವನ್ನು ವಿರೋಧಿಸಿ. ಆದರೆ, ತನ್ನ ವಿಪರೀತ ಅಹಿಂಸಾ ಪ್ರತಿಪಾದನೆ ಮೂಢನಂಬಿಕೆಗಳಿಂದ ಸರ್ವರನ್ನೂ ಆಕರ್ಷಿಸದಾಯಿತು. ಮಧ್ಯೆ ಬಂದ ಚಾರ್ವಾಕ ಧರ್ಮ ಸ್ವಚ್ಛಂದ ಜೀವನವೇ ಮುಕ್ತಿ ಮಾರ್ಗವೆಂದು ಇಂದಿನ ಬುದ್ಧಿಜೀವಿಗಳಂತೆ ಸೆಡ್ಡು ಹೊಡೆಯಿತಾದರೂ ಸೋತಿತು. ವೀರಶೈವ ಧರ್ಮವಾದರೂ ಹುಟ್ಟಿದ್ದೇಕೆ? ವೈದಿಕ ಧರ್ಮವನ್ನು ಅದರ ಪೊಳ್ಳುತನ ಡಾಂಭಿಕತೆ ಜಾತೀಯತೆಯನ್ನು ನಾಶಮಾಡಲೆಂದೇ ಹೊರತು ರಾಜಿ ಮಾಡಿಕೊಳ್ಳುವುದಕ್ಕಲ್ಲವೆಂಬುದಕ್ಕೆ ವಚನಗಳಿಗಿಂತ ಆಧಾರ ಬೇಕೆ?

ಹುಟ್ಟಿನಿಂದ ಬ್ರಾಹ್ಮಣನಾದ ಬಸವಣ್ಣ ತನ್ನ ಜನರ ಜಾತೀಯತೆಯಿಂದ ಬೇಸತ್ತು, ಅಸ್ಪೃಶ್ಯ ಆಚರಣೆಗೆ ಅಸಹ್ಯಿಸಿ ಡಾಂಭಿಕತೆಗೆ ವ್ಯಥಿಸಿ ಜನಿವಾರ ಕಿತ್ತೆಸೆದು ಸರ್ವಸಮಾನತೆಯ ಶಿವದಾರವನ್ನು ಸರ್ವರಿಗೂ ಹಾಕಿ ಅಂಗದ ಮೇಲೆ ಲಿಂಗ ಧರಿಸಿದವರೆಲ್ಲರನ್ನು `ಇಂವಾ ನಮ್ಮವ ಇಂವಾ ನಮ್ಮವ' ಎಂದು ತಬ್ಬಿ ಮೈದಡವಿ ಮುಟ್ಟಿ ಸಂತೈಸಿ ಸಮಾನತೆಯನ್ನು ಸಹಬಾಳ್ವೆಯಲ್ಲಿ ತರಲು 12ನೇ ಶತಮಾನದಲ್ಲೇ ಯತ್ನಿಸಿದ್ದಲ್ಲದೇ, `ಅನುಭವ ಮಂಟಪ'ವನ್ನೇ ಕಟ್ಟಿ ಅದರಲ್ಲಿ ದಲಿತರು ಶೂದ್ರರು ಮಹಿಳೆಯರನ್ನು ಒಗ್ಗೂಡಿಸಿ ಅವರಿಗೆ ಅರಿವು ನೀಡುತ್ತಲೇ `ಕುಳಿತುಣ್ಣದೆ ಕಾಯಕ ಮಾಡಿ ಉಣ್ಣೆಂದು, ಯಾರೂ ಮೇಲಲ್ಲ ಕೀಳಲ್ಲ'ವೆಂದು ಪ್ರತಿಪಾದಿಸಿದ. ಇತರ ಶರಣ ಶರಣೆಯರಿಂದಲೂ ಖಡಕ್ಕಾದ ವಚನಗಳನ್ನು ಬರೆಸಿದ ಮಹಾನುಭಾವ.

ಇಷ್ಟೆಲ್ಲಾ ಇರುವಾಗ ವೀರಶೈವ ಚಳವಳಿಯನ್ನೇ ಅಳ್ಳಕಗೊಳಿಸಲು ಹೊರಟಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ದಲಿತ, ಶೂದ್ರರ ಮೇಲೆ ಅಥವಾ ಅವರಿಗೆ ದೊರಕುತ್ತಿರುವ ಮೀಸಲಾತಿಯ ಮೇಲಿನ ಪ್ರಹಾರಕ್ಕೆ ಪೂರ್ವಸಿದ್ಧತೆಯಂತೆ ಭಾಸವಾಗುತ್ತಿದೆ. ಸ್ಪಷ್ಟವಾಗಿ ವಚನಗಳ ಮೂಲಕ, ತಮ್ಮ ನೇರ ನಡವಳಿಕೆಗಳ ಮೂಲಕ ಶರಣರು ನಿರ್ದಾಕ್ಷಿಣ್ಯವಾಗಿಯೇ ಬ್ರಾಹ್ಮಣ್ಯವನ್ನು ವಿರೋಧಿಸಿರುವುದನ್ನು ಕೇವಲ ವಚನಗಳ ಅಂಕೆಸಂಖ್ಯೆಗಳ ಮೂಲಕ ಅಲ್ಲಗಳೆಯಲು ಹೊರಟಿರುವುದು ಅಪಕ್ವತೆಯೋ ಜ್ಞಾನದ ಕೊರತೆಯೋ ಯಾರನ್ನೋ ಓಲೈಸಬೇಕೆಂಬ ಹೊಯ್ದೊಟವೋ ಎಂಬ ಜಿಜ್ಞಾಸೆ ಕಾಡದಿರದು.
`ನೀರ ಕಂಡಲ್ಲಿ ಮುಳುಗುವರಯ್ಯ / ಮರ ಕಂಡಲ್ಲಿ ಸುತ್ತುವರಯ್ಯ / ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು / ನಿನ್ನನೆತ್ತಬಲ್ಲರು ಕೂಡಲ ಸಂಗಮದೇವ'ನೆಂದು ಬಸವಣ್ಣ ಮಾರ್ಮಿಕವಾಗಿ ತನ್ನ ಪೂರ್ವಾಶ್ರಮದ ಕುಲಜರನ್ನೇ ಕೀಟಲೆ ಮಾಡಿಲ್ಲವೆ?  `ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಯ್ಯ ಬಡವನು / ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ'ವೆಂಬ ಆತನ ಮಾತಲ್ಲಿ ಗುಡಿ ಸಂಸ್ಕೃತಿಯ ಬಗ್ಗೆ ವಿರೋಧವಿಲ್ಲವೆ? ಅಷ್ಟೇಕೆ `ವೇದಕ್ಕೆ ಬರೆಯ ಕಟ್ಟುವೆ / ಶಾಸ್ತ್ರಕ್ಕೆ ನಿಗಳವನಿಕ್ಕುವೆ / ತರ್ಕದ ಬೆನ್ನ ಬಾರನೆತ್ತುವ ಆಗಮದ ಮೂಗ ಕೊಯ್ಯುವೆ ನೋಡಯ್ಯೊ' ಎನ್ನುವ ಬಸವಣ್ಣ ಬ್ರಾಹ್ಮಣರ ಮೂಲಭೂತ ಸರಕ್ಕನ್ನೇ ನೇರವಾಗಿ ಲೇವಡಿ ಮಾಡಿಲ್ಲವೆ? ` ವೇದ ಶಾಸ್ತ್ರ ಪುರಾಣಗಳೆಂಬ ಕೊಟ್ಟಣ ಕುಟ್ಟುತ್ತಾ ನುಚ್ಚು ತೌಡು ಕಾಣಿರೋ' ಎಂದು ಅವುಗಳ ನಿರರ್ಥಕತೆಯನ್ನು ಅಕ್ಕ ಘೋಷಿಸಿದ್ದಾಳೆ.

`ವೇದವನೋದಿದರೇನು, ಶಾಸ್ತ್ರವ ಕೇಳಿದರೇನು' ಎಂಬುದೇ ವಚನಕಾರರ ಮುಖ್ಯ ಧೋರಣೆಯಾಗಿತ್ತು. ವೇದೋಕ್ತವಾದ ಸನಾತನ ಧರ್ಮ ತನ್ನ ವರ್ಣ ವ್ಯವಸ್ಥೆಯಿಂದ ವ್ಯಕ್ತಿಗಳಲ್ಲಿ ಶ್ರೇಷ್ಠ ಕನಿಷ್ಠರೆಂಬ ತಾರತಮ್ಯವನ್ನು ಕಲ್ಪಿಸುತ್ತಾ ಯಜ್ಞಯಾಗಾದಿಗಳಿಂದ ಪ್ರಾಣಿವಧೆಯನ್ನು ಸಮರ್ಥಿಸುತ್ತಾ `ಸರ್ವಂ ಖಲಿಧ್ವಂ ಬ್ರಹ್ಮಾ' ಎಂದು ಉದ್ಘೋಷಿಸಿರುವುದು ವಚನಕಾರರಿಗೆ ವಿಲಕ್ಷಣವೆನ್ನಿಸಿರಬಹುದು. ಇನ್ನು ಅಂಬಿಗರ ಚೌಡಯ್ಯ ದೇವಸ್ಥಾನಕ್ಕೆ ಹೋಗುವವರನ್ನು ಕುರಿತು, `ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆಯಡಿಯಾಗಿ ಬೀಳುವ ಲೊಟ್ಟೆ ಮೂಗನ ಕಂಡರೆ ಮೆಟ್ಟಿದ ಎಡಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆ' ಎನ್ನುತ್ತಾನೆ.

`ಗುಡಿ ಸಂಸ್ಕೃತಿ'ಯನ್ನು ಬಸವಣ್ಣ ಮತ್ತು ಚೌಡಯ್ಯ ಖಂಡಿಸಿರುವ ಪರಿಯಲ್ಲೇ ಪೆಟ್ಟು ತಿಂದ ಶೂದ್ರನಿಗಿರಬೇಕಾದ ರೋಷ ಕಾಣುತ್ತದಲ್ಲವೆ?  ಹಿಂದೆಲ್ಲಾ ವೃತ್ತಿಯಿಂದಲೇ ಅವರ ಜಾತಿಯನ್ನು ಗುರುತಿಸಿ ಕೀಳಾಗಿ ಕಾಣುವ ಪ್ರವೃತ್ತಿ ಬೆಳದಿದ್ದರಿಂದ ಶರಣರು ಅದಕ್ಕೆ `ಕಾಯಕ'ವೆಂದು ಕರೆದು `ಕಾಯಕವೇ ಕೈಲಾಸ'ವೆಂದು ಗೌರವಿಸಿ ಕಾಯಕದಿಂದ ಸರ್ವರನ್ನೂ ಗುರುತಿಸಿ ಜಾತಿಯನ್ನು ತೊಳೆದ ಪರಿ ಅನನ್ಯ.

`ಏನನರಿತು ನುಡಿದಡೂ ಕುಲಛಲ ಮಲಂ ನಾಸ್ತಿಯಾಗಿರಬೇಕು' ಅನ್ನುತ್ತಾನೆ ಅರಿವಿನ ಮಾರಿತಂದೆ. ` ಕಲ್ಲಮನೆಯಡಿ ಕಲ್ಲದೇವರ ಮಾಡಿ, ಆ ಕಲ್ಲು ಕಲ್ಲ ಮೇಲೆ ಕೆಡೆದರೆ ದೇವರೆತ್ತ ಹೋದರೋ?' - ಹೀಗೆ ದೇವರ ಗುಡಿಯ ಸ್ಥಾವರಲಿಂಗದ ಭಂಗುರವನ್ನು ತೋರಿಸಿ ನಗುವ ಅಲ್ಲಮನನ್ನೇ ಅನುಭವ ಮಂಟಪದ ಅಧ್ಯಕ್ಷನನ್ನಾಗಿ ಕೂರಿಸಿದ ಬಸವಣ್ಣ ಹಾಗೂ ಇತರ ಶರಣರು ಅಸ್ಪೃಶ್ಯನೊಬ್ಬನನ್ನು ಗೌರವಿಸಿ ಮೇಲುಜಾತಿ ಡಾಂಭಿಕರನ್ನು ಕೆಣಕಿ ಅಣಕಿಸಿದ್ದಾರಲ್ಲವೆ? `ನೆಲವೊಂದೇ ಹೊಲಗೇರಿ, ಶಿವಾಲಯಕ್ಕೆ, ಜಲವೊಂದೇ ಶೌಚಾಚಮನಕ್ಕೆ.  ಕುಲವೊಂದೇ ತನ್ನತಾನರಿದವಂಗೆ' ಎನ್ನುವ ಬಸವಣ್ಣನಿಗೆಲ್ಲಿಯ ಬ್ರಾಹ್ಮಣ್ಯದ ದಾಕ್ಷಿಣ್ಯ!

ಡಂಕನ್ ಝಳಕಿ, ಎನ್.ಎಸ್. ಬಾಲಗಂಗಾಧರರೇಕೆ ಪೂರ್ವಗ್ರಹ ಪೀಡಿತರಾದರೋ?  ಬಸವಣ್ಣನವರು ಬ್ರಾಹ್ಮಣರ ಗೋತ್ರಗಳನ್ನೇ ಮುಲಾಜಿಲ್ಲದೆ ಹೇಳುತ್ತಾ ಅವರೆಲ್ಲರೂ ಶೂದ್ರ ಸಂಜಾತರೆಂಬುದನ್ನು ಹೇಗೆ ಪಟ್ಟಿ ಮಾಡುತ್ತಾರೆ ವೀಕ್ಷಿಸಿ: `ವಸಿಷ್ಠ ದಾಸಿಯ ಮಗ ಮಾರ್ಕಂಡೇಯ ಮಾತಂಗಿಯ ಮಗ ದುರ್ವಾಸ ಚಮ್ಮೋರ ಕಶ್ಯಪ ಕಮ್ಮೋರ ಕೌಂಡಿಣ್ಯ ಕಾರಿಕ ವಿಶ್ವಾಮಿತ್ರ ಕ್ಷತ್ರಿಯ'. ಕೀಳು ಕುಲವಾದರೇನು ತಮ್ಮ ಯೋಗ್ಯತೆಯಿಂದ ಲೋಕವಂದಿತರಾಗಲಿಲ್ಲವೆ ಎಂಬ ಮಾರ್ಮಿಕ ಧ್ವನಿ ಇಲ್ಲಿದೆಯಲ್ಲವೆ? ಹಾಗೆ `ಕಾಸಿ ಕಮ್ಮೋರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ ವೇದವನೋದಿ ಬ್ರಾಹ್ಮಣನಾದ, ಲಿಂಗಸ್ಥಲನರಿದವನೇ ಕುಲಜನೆಂಬೋ' ಎಂಬ ಬಸವಣ್ಣನ ವಿಚಾರವಾದದೆದುರು ಮೇಲುಕೀಳು ನಿಲ್ಲುವುದೇ ಇಲ್ಲ.

`ಕೊಲುವವನೆ ಮಾದಿಗ ಹೊಲಸು ತಿಂಬುವವನೇ ಹೊಲೆಯ'  ನೆಂಬ ಅಣ್ಣನ ಆಂತರ್ಯದಲ್ಲಿ `ಹಿಂಸಿಸುವನೇ ಮಾದಿಗ, ಮಾನಸಿಕವಾಗಿ ಹಿಂಸೆಗೀಡುಮಾಡುವವನೇ (ಜಾತಿವಾದಿ) ಹೊಲೆಯ'ನೆಂಬ ಪ್ರತಿಧ್ವನಿ ಕೇಳುವುದಿಲ್ಲವೆ?' ಕುಲವೇನೋ ಆವಂದಿರ ಕುಲವೇನೋ, ಸಕಲ ಜೀವಾತ್ಮರಿಗೆ ಲೇಸನು ಬಯಸುವವನೇ ಕುಲಜ' ನೆಂಬ ಆತ ಅಂದು ತಾವೇ ಮೇಲೆಂದು ಬೊಬ್ಬೆಯಿಡುತ್ತಿದ್ದ ಮನುಧರ್ಮಿಗಳ ಅಟ್ಟಹಾಸವನ್ನು ಮಟ್ಟ ಹಾಕದೆ ಬಿಟ್ಟವನೇ ಅಲ್ಲ. ಆದರೇನು ಎಲ್ಲಾ ಧರ್ಮಗಳನ್ನು ಕಾಲಕ್ರಮೇಣ ಜಾತಿಗಳನ್ನಾಗಿ ಮಾರ್ಪಡಿಸಿಕೊಂಡ ಪಾಪಿಗಳಾದ ನಾವು, ವೀರಶೈವ ಧರ್ಮವನ್ನು ಜಾತಿಯೆಂದೇ ಪರಿಗಣಿಸಿ ಅವನಿಗೇ ದೇವಾಲಯ ಕಟ್ಟಿ ಕೂರಿಸಿ ಅವನ ವಚನವನ್ನು ಹಾಡುತ್ತಾ ಅವನನ್ನೇ ಮರೆತವರು ನಾವು.
ಈವತ್ತೇನಾಗಿದೆ, ಜಾಗತೀಕರಣದಲ್ಲಿ ಮನುಷ್ಯ ಮತ್ತು ಯಂತ್ರ ಬಿಟ್ಟರೆ ಮತ್ತೇನಿದೆ?ಇಲ್ಲಿ ಜೀವ ಪ್ರೀತಿ ಗೌಣ.  ಹಳೆಮಂದಿ ಅವಿಭಕ್ತತೆಗೆ ಇಂಬುಕೊಟ್ಟರೆ ವಿಭಕ್ತತೆಗೆ ಒತ್ತು ಕೊಡುವುದು ಜಾಗತೀಕರಣ. ಒಂದೇ ಕಂಪೆನಿಯಲ್ಲಿ ಗಂಡ ಹೆಂಡತಿ ಮಗ ಮಗಳು ಅಳಿಯ ದುಡಿಯುತ್ತಿದ್ದು ಅವರೆಲ್ಲರೂ ಪ್ರತ್ಯೇಕವಾಗಿ ವಾಸಿಸುತ್ತೇವೆಂದರೆ ಅದಕ್ಕೂ ಹೌಸ್‌ರೆಂಟ್ ಅಲೋಯೆನ್ಸ್ ಕೊಡುತ್ತೇವೆ ಎಂಬ ಕಂಪೆನಿಗಳಿವೆ. ಜಾಗತೀಕರಣದ್ದು ಬೆಂಕಿಯ ಬೆಳಕು.  ಅಂದರೆ ಅಲ್ಲಿ ಬೆಳಕೂ ಇಲ್ಲ.  ಬರೀ ಸುಡುವ ಗುಣ.  ಐಟಿಬಿಟಿಯವರು ದವಸಧಾನ್ಯ ಬೆಳೆಯಲುಂಟೆ?  ನಾವೀಗ ಬೆಟ್ಟಗುಡ್ಡ ನದಿನೆಲ ಅರಣ್ಯ ಎಲ್ಲವನ್ನೂ ಅಗೆದು ಬಗೆದು ಕಡಿದು ಮಾರಿಕೊಳ್ಳುತ್ತಿದ್ದೇವೆ.  ನಾಡು ನುಡಿ ನೆಲ ಜಲ ಧರ್ಮ ಭಾಷೆಯ ಬಗ್ಗೆ ನಿರ್ಮೋಹಿಗಳಾಗುತ್ತಿದ್ದೇವೆ. ಆದರೆ ಶರಣರು ಇಂತಹ ಧರ್ಮಲಂಡರ, ಭಂಡರ ದಾರಿ ತುಳಿದವರಲ್ಲವೇ ಅಲ್ಲ.  ದುಡಿದುಣ್ಣಬೇಕೆಂದರು. ಸಹಬಾಳ್ವೆಗೆ ಒತ್ತುಕೊಟ್ಟರು. ಪರಸತಿ ಪರಧನವ ಒಲ್ಲೆನೆಂದರು.

ಜಗತ್ತಿನ ಪ್ರವಾದಿಗಳಲ್ಲೆೀ ಬಸವಣ್ಣನವರಿಗೆ ಪರಮೋಚ್ಚ ಸ್ಥಾನ ಇದೆ.  ಅವರು ನಿರ್ಮಿಸಿದ ಸಮಾಜದಲ್ಲಿ ಹಾರವರೂ ಇರಲಿಲ್ಲ,  ಸ್ವಪಚರೂ ಇರಲಿಲ್ಲವೆಂದಾಗ 850 ವರ್ಷಗಳ ಹಿಂದೆಯೇ ಬ್ರಾಹ್ಮಣರನ್ನು ಬಸವಣ್ಣ ಅಥವ ವಚನಕಾರರು ವಿರೋಧಿಸಲೇ ಇಲ್ಲವೆಂಬುದು ಹಾಸ್ಯಾಸ್ಪದವಲ್ಲವೆ?  `ಹೊಲೆಯ ಹೊಲಬಿಗನಾದೊಡೆ ಅವನ ಹೊರೆಯಲ್ಲಿಪ್ಪುದು ಲೇಸು ಕಂಡಯ್ಯ' ಎಂಬ ಅಣ್ಣ ಬದುಕಿದ ದಾರಿ ತೋರುವ ಶಕ್ತಿ ಅಸ್ಪೃಶ್ಯನಿಗಿದ್ದಾಗ ಅವನ ಜೊತೆಗಿರಬೇಕೆನ್ನುತ್ತಾರೆ. ಎಂತಹ ಉದಾತ್ತ ಭಾವ!  ವರ್ಣಸಂಕರ ವಿವಾಹಕ್ಕೆ ಎಡೆಕೊಟ್ಟ ಬಸವಣ್ಣನವರನ್ನು ನಾವು ಅಂದೇ ಅನುಸರಿಸಿ ಅಂತರ್ಜಾತೀಯ ವಿವಾಹಗಳಿಗೆ ಮುಂದಾಗಿದ್ದಿದ್ದರೆ ಇಂದು ಜಾತಿಯೂ ಇರುತ್ತಿರಲಿಲ್ಲ - ಮೀಸಲಾತಿಯೂ ಇರುತ್ತಿರಲಿಲ್ಲ. ಬಸವಣ್ಣನವರನ್ನು ಅವರ ಅನುಯಾಯಿಗಳೇ ಅನುಸರಿಸದೆ ತಾವೂ ಬ್ರಾಹ್ಮಣರ ನಕಲಿನಂತಾದದ್ದು ಮಾತ್ರ ಈ ದೇಶದ ದೊಡ್ಡ ದುರಂತ.
ಸ್ತ್ರೀ ಕುಲಕ್ಕೂ ಶರಣರು `ಹೆಣ್ಣು ಹೆಣ್ಣಲ್ಲ ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ'  (ಸಿದ್ಧರಾಮಣ್ಣ) ಎನ್ನುತ್ತಾರೆ. ಆಗಿನಿಂದಲೂ ನಾವು ಸ್ತ್ರೀಯರನ್ನು ಸರಿಸಮನಾಗಿ ನಡೆಸಿಕೊಂಡಿದ್ದರೆ ಗೌರವಿಸಿದ್ದರೆ ವರದಕ್ಷಿಣೆಯ ಭೂತ ಜನ್ಮತಾಳುತ್ತಿರಲಿಲ್ಲ.  (ಬ್ರಾಹ್ಮಣರು ಅವರ ಸ್ತ್ರೀಯರನ್ನು ಶೂದ್ರರೆಂದೇ ಭಾವಿಸಿ ಪೂಜೆ ಪುರಸ್ಕಾರಗಳಿಂದ ನಿಷೇಧಿಸಿದ್ದರು)   ಆ ಕಾಲದಲ್ಲಿ ಸೂಳೆಯರಿಗೂ ಗೌರವ ಸ್ಥಾನಮಾನವಿತ್ತೆಂಬುದಕ್ಕೆ ಸೂಳೆ ಸಂಕವ್ವನೇ ಸಾಕ್ಷಿ.  ಆದರೆ ಇಂದು ನಮ್ಮ ಮಹಿಳೆಯರಿಗೆ ಜಾತ್ಯತೀತ ರಾಷ್ಟ್ರದಲ್ಲಿ  ರಕ್ಷಣೆಯೇ ಇಲ್ಲದಂತಾಗಿದೆ ಎಂದರೆ ಇದಕ್ಕೆ ಯಾರು ಹೊಣೆ?
ನಾವೀಗ ಅಸ್ಪೃಶ್ಯತೆ ಜಾತ್ಯತೀತತೆ ಸ್ತ್ರೀಸಮಾನತೆಯನ್ನು ನಿಜ ಅರ್ಥದಲ್ಲಿ ತರಬೇಕೆಂದರೆ ಬಸವ ತತ್ವವನ್ನು ತತ್ವಶಃ ಪಾಲಿಸಬೇಕಿದೆ.  ಈ ನಿಟ್ಟಿನಲ್ಲಿ ಜಾತಿ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು, ಮಠಾಧೀಶರುಗಳ ಬಗ್ಗೆ ಎಚ್ಚರವಹಿಸುವ ಅಗತ್ಯವಿದೆ.  ಹೀಗೆ ಹೇಳುವಾಗ ವಚನಗಳಲ್ಲಿ ವೈದಿಕ ವಿರೋಧಿ ನಿಲುವನ್ನು ನಿಷ್ಠುರವಾಗಿಯೇ ಶರಣರಿಂದ ಪ್ರತಿಪಾದಿಸಲಾಗಿದೆ ಎಂಬುದನ್ನು ಮರೆಮಾಚಲೇಕೆ?

ಜಾತ್ಯತೀತ ಸಂವೇದನೆಯ ವಚನ ಸಂಹಿತೆಸೌಜನ್ಯ: ಪ್ರಜಾವಾಣಿ


ನಿಸ್ಸಂದೇಹವಾಗಿ ವಚನ ಸಾಹಿತ್ಯ ಚಳವಳಿಯು ಜಾತ್ಯತೀತವಾದ  ಅವೈದಿಕ ಸಮುದಾಯಗಳ ನಾಡಿ ಬಡಿತದ ಸಂವೇದನೆ. ಬಸವಣ್ಣನವರ ವಚನಗಳಂತೂ ಇಡೀ ಜಾತಿ ವ್ಯವಸ್ಥೆಯ ವಿನಾಶದ ಕಹಳೆಯನ್ನು ಆತ್ಯಂತಿಕವಾಗಿ ಆರ್ದ್ರವಾಗಿ ಮಾರ್ದನಿಸುತ್ತವೆ. ಬ್ರಾಹ್ಮಣ್ಯದ ಮನು ಪ್ರಣೀತವಾದ ಜಾತಿ ನೆಲೆಯ ಆಚಾರ ವಿಚಾರಗಳನ್ನು ವಚನಕಾರರು ಒಕ್ಕೊರಲಲ್ಲಿ  ಸಮಗ್ರವಾಗಿ ನಿರಾಕರಿಸುತ್ತಾರೆ.  ವೈದಿಕ ಜಾತಿ ವ್ಯವಸ್ಥೆಯ ಪ್ರತಿರೋಧವನ್ನು ವಿರಾಟ್ ಪ್ರಮಾಣದಲ್ಲಿ ವಚನಕಾರರು ಅಭಿವ್ಯಕ್ತಿಸಿರುವುದು ಅಸಾಮಾನ್ಯ ಚಾರಿತ್ರಿಕವಾದುದು. ಜಾತಿ ಕೂಪದಿಂದ ಪಾರಾಗಲು ಅಧ್ಯಾತ್ಮದ ಬೆಳಗಿಗಾಗಿ  ಇಡೀ ವಚನ ಪರಂಪರೆ ಉತ್ಕಟವಾಗಿ ಪರಿತಪಿಸುತ್ತದೆ.

ವಚನ ಚಳವಳಿ ಮೂಲತಃ ದಲಿತರದು. ಮಾದರ ಚನ್ನಯ್ಯ ಹೊಲೆಯರ ಹೊನ್ನಯ್ಯರಂತವರು ತಮ್ಮ ಹಟ್ಟಿಗಳಲ್ಲಿ, ಕೇರಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ಜಾತ್ಯತೀತ ಅಧ್ಯಾತ್ಮದ ಹದವನ್ನು ಆ ವೇಳೆಗಾಗಲೇ ಕಂಡುಕೊಂಡು; ಜಾತಿ ವಿನಾಶದ ವಿರುದ್ಧದ ದಂಗೆಯನ್ನು ವ್ಯಾಪಕವಾಗಿ ಮೊಳಗಿಸಲು  `ಕುಲ ಹದಿನೆಂಟು ಜಾತಿ'ಗಳ ಮುಂದೆ ವಿನಂತಿಸುತ್ತಾ ನಿಂದಿದ್ದಾಗ ಇದ್ದಕ್ಕಿದ್ದಂತೆ ಬಸವಣ್ಣ ನಾಯಕನಾಗಿ ಮುಂದೆ ಒಂದು ಜಾತ್ಯತೀತವಾದ ಕನಸನ್ನು ವ್ಯಾಪಕವಾಗಿ ಎಲ್ಲ ತಬ್ಬಲಿ ಜಾತಿಗಳ ಮುಂದೆ ಅರ್ಥಪೂರ್ಣವಾಗಿ, ಪ್ರಾಮಾಣಿಕವಾಗಿ ಆರ್ದ್ರವಾಗಿ ಆದೇಶಿಸಿದ.

ಬಸವಣ್ಣನ ಅಂತರಂಗದಲ್ಲಿದ್ದ ಮುಕ್ತಿಯ ದನಿಯು ದಲಿತರದು. ಜಾತಿಯನ್ನು ಹುಟ್ಟುಹಾಕಿದ ವ್ಯವಸ್ಥೆಯ ವಿರುದ್ಧ ಬಂಡೇಳಲು ಬಸವಣ್ಣ ಜಾತಿ ವ್ಯವಸ್ಥೆಯ ತಳದಲ್ಲಿದ್ದ ಹೊಲೆ ಮಾದಿಗರನ್ನೇ ತನ್ನವರು ಎಂದು ಗುರುತಿಸಿಕೊಂಡು ಹೋರಾಟಕ್ಕೆ ಇಳಿಯಬೇಕಾಗಿತ್ತು. ಯಾಕೆಂದರೆ ಜಾತಿ ವ್ಯವಸ್ಥೆಯ ಅಪಾರ ಒತ್ತಡ, ಹೊರೆ, ಹಿಂಸೆ, ಅನ್ಯಾಯ ದಲಿತರ ತಲೆ ಮೇಲೆಯೇ ಬಿದ್ದಿತ್ತು. ಆ ಹೊರೆಯ ಹಿಂಸೆಯನ್ನು ಭಾವನಾತ್ಮಕವಾದ ಮಾತಿನಿಂದಾದರೂ (ವಚನದಿಂದ) ಒಂದಿಷ್ಟು ಇಳಿಸಲು ಬಸವಣ್ಣ ತಾನು `ಇಂತವರ ಸಂಗದಿಂದ ಹುಟ್ಟಿದವನು'ಎಂದು ಹೇಳಿಕೊಳ್ಳುವ ಮೂಲಕ ಜಾತಿಯ ಹಿಂಸೆಯ ಕಣ್ಣು ತೆರೆಸಲು ಯತ್ನಿಸುವನು. ದುರ್ದೈವ ಎಂದರೆ ಬಸವಣ್ಣನ ಈ ಪರಿಯ ಕಣ್ಣು ತೆರೆಸುವ ಯತ್ನವೇ ಹಲವರಿಗೆ ಕುತ್ತಾಗಿ ಪರಿಣಮಿಸಿದೆ. ಬಸವಣ್ಣನ ಜಾತ್ಯತೀತ ತತ್ವವನ್ನೇ ಇಡೀ ವಚನಕಾರರು ಅನುಸರಿಸಿದ್ದಾರೆ.

ದಲಿತ ವಚನಕಾರರು ಜಾತಿ ವ್ಯವಸ್ಥೆಯ ಬಗ್ಗೆ ವ್ಯಕ್ತಪಡಿಸಿರುವ ಸಂಗತಿಗಳು ಎಲ್ಲರಿಗೂ ತಿಳಿದಿವೆ. ಇದನ್ನು ಮತ್ತೆ ಉಲ್ಲೇಖಿಸುವುದಿಲ್ಲ. ಆದರೆ ಅವತ್ತಿನ ಮಧ್ಯಕಾಲೀನ ವಚನಕಾರರಂತೆ, ತತ್ವಪದಕಾರರಂತೆ, ಭಕ್ತಿಪಂಥದ ಕವಿಗಳಂತೆ, ಹಳ್ಳಿಗಾಡಿನ ನಾಥ ಪಂಥದ ಅಲಕ್ಷಿತ ಅವಧೂತರಂತೆ ಇದ್ದ ನನ್ನ ಕಾಲದ ಬಾಲ್ಯ ಕಾಲದ ದಲಿತ ಕೇರಿಯ ನನ್ನ ಸಂಬಂಧಿಕರು ವಚನಕಾರರ ಮುಂದುವರಿದ ಭಾಗದಂತೆಯೇ ಮಂಟೇಸ್ವಾಮಿ, ಮಾದೇಶ್ವರರಂಥಹ ಅನೇಕರ ಕುರಿತು ಕಾವ್ಯ ನಿರೂಪಿಸುತ್ತ ಜಾತಿ ವ್ಯವಸ್ಥೆಯ ಬಗೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದನ್ನು ಇಲ್ಲಿ ನೆನಪಿಸಬೇಕಾದುದಿದೆ.

ದಲಿತರ ಕಾವ್ಯಗಳಾದ ಮಾದೇಶ್ವರ ಹಾಗೂ ಮಂಟೇಸ್ವಾಮಿ ಕಾವ್ಯಗಳು ಸ್ವತಃ ವಚನಕಾರರ ಕಾಲದ ಕೊನೆಗಳಿಗೆಯಲ್ಲಿ ಲಿಂಗಾಯತ ಜಾತಿಯು ತಲೆ ಎತ್ತುತ್ತಿದ್ದುದರ ಬಗ್ಗೆ ತೀವ್ರವಾಗಿ ಆಕ್ಷೇಪಿಸುತ್ತವೆ. ಯಾರು ನಿಜವಾದ ಶೈವರು, ಲಿಂಗವಂತರು ಎಂದು  ಅಲಕ್ಷಿತ ಜಾತಿಗಳ ವಚನಕಾರರು ಪ್ರಶ್ನಿಸುತ್ತಾರೆ. ಅಂತಹ ಅಂಚಿನ ದನಿಯ ವಚನಕಾರರ ಅಳಿದುಳಿದ ಪಳೆಯುಳಿಕೆಯಂತಿದ್ದ ಎಷ್ಟೋ ತತ್ವ ಪದಕಾರರು, ಕಲಾವಿದರು, ಜನಪದ ಅಧ್ಯಾತ್ಮವಾದಿಗಳು ಜಾತ್ಯತೀತತೆಯನ್ನು ಸಾರಿದ ಬಸವಣ್ಣನ ಯತ್ನದಲ್ಲೂ ಹುಳುಕು ಹುಡುಕುವರು.

ಇದನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದೆನೆಂದರೆ; ಅಂತಹ ಜಾತ್ಯತೀತ ವಚನ ಚಳವಳಿಯೂ ಹೊಸ ಜಾತಿವಾದದತ್ತ ಹೊರಳಿದ ದುರಂತವನ್ನು ನೆನಪಿಸಲು. ಪಂಚಾಚಾರ್ಯರು ಅರ್ಥಾತ್ ಉತ್ತರದಿಂದ ಬಂದ ವೈದಿಕ ನೆಲೆಯ ಶೈವರು ಬಸವಣ್ಣನ ಜಾತ್ಯತೀತ ನೆಲೆಯ ಸಮಾಜವನ್ನು ಜಾತಿ ಸಮಾಜಗಳಾಗಿ ವಿಂಗಡಿಸಲು ಬೇಕಾದ ಧಾರ್ಮಿಕ ರಾಜಕಾರಣವನ್ನು ಮಾಡಿದ್ದಾರೆ. ಈ ಬಗ್ಗೆ ಗಾಢವಾಗಿ ಬಲ್ಲವರಾದ ಎಂ.ಎಂ. ಕಲಬುರ್ಗಿ ಅವರೂ, ಚಿದಾನಂದಮೂರ್ತಿ ಅವರೂ ತಿಳಿ ಹೇಳಬೇಕಾದುದಿದೆ. ಜಾತ್ಯತೀತ ಚಳವಳಿಗೆ ಜಾತಿಯ ಪೆಟ್ಟು ಬಿದ್ದ ಮೇಲೆ ಅಲ್ಲಿದ್ದ ಅಸಂಖ್ಯ ದಲಿತರು ಮರಳಿ ತಮ್ಮ ಜಾತಿಗಳ ಒಡಲಿಗೆ ಬಂದು ಜಾತ್ಯತೀತವಾದ ಅಭಿವ್ಯಕ್ತಿಗಳನ್ನು ಬೇರೆ ಬೇರೆ ರೀತಿಯಲ್ಲಿ ಕಂಡುಕೊಂಡಿದ್ದಾರೆ.
ಆದರೆ ಆ ಹೊತ್ತಿಗಾಗಲೇ ಜಾತಿ ವ್ಯವಸ್ಥೆಯು ಅಪರೋಕ್ಷ ಪುರೋಹಿತ ಹಾಗೂ ಬ್ರಾಹ್ಮಣಶಾಹಿಯ ಮೂಲಕ ಎಲ್ಲ ಬಗೆಯ ಅವೈದಿಕ ನೆಲೆಗಳಿಗೂ ನುಗ್ಗಿ ದಾಳಿ ಮಾಡಿ ಜಾತಿಯ ಆಚಾರ ವಿಚಾರಗಳನ್ನು ಒಪ್ಪಿಸಿ ಬೇರೊಂದು ಬಗೆಯಲ್ಲಿ ವರ್ಣಾಶ್ರಮ ಜಾತಿ ವ್ಯವಸ್ಥೆಯನ್ನು ಕುಲಗಳ ಮೂಲಕ, ಮತ ಭೇದಗಳ ಮೂಲಕ ವಿಚ್ಛಿದ್ರಕಾರಿಯಾಗಿ ವಿಂಗಡಿಸಿ ಅಸಂಖ್ಯವಾದ ರೀತಿಯಲ್ಲಿ ಜಾತಿ ವ್ಯವಸ್ಥೆಯನ್ನು ಹಬ್ಬಿಸಿದೆ. ಇದರಿಂದಲೇ ಕೇವಲ ನಾಲ್ಕೇ ನಾಲ್ಕು ವರ್ಣಗಳಿದ್ದ ಶ್ರೇಣಿಯು ಒಡೆದು ಸಾವಿರಾರು ಜಾತಿ, ಒಳಜಾತಿಗಳು ಹುಟ್ಟಿಕೊಳ್ಳಲು ಸಾಧ್ಯವಾದದ್ದು.

ಅಂದರೆ ವಚನ ಚಳವಳಿಯು ಜಾತ್ಯತೀತತೆಯನ್ನು ಬಿತ್ತಲು ಮುಂದಾದಂತೆಯೇ, ಆ ಜಾತ್ಯತೀತ ದರ್ಶನವನ್ನೇ ನಾಶಪಡಿಸಿ ಮರಳಿ ಜಾತಿ ವ್ಯವಸ್ಥೆಯ ಸೂತ್ರವನ್ನು ಊಳಿಗಮಾನ್ಯ ಜಾತಿಗಳ ಯಜಮಾನರ ಮೂಲಕ ವಿಕೃತವಾಗಿ ವ್ಯಾಪಿಸಿದ್ದುದು ಜಾತಿವಾದದ ದಿಗ್ವಿಜಯದ ಪರಿಸ್ಥಿತಿಯನ್ನು ಹೇಳುತ್ತಿದೆ ಹಾಗೂ ಯಾವತ್ತೂ ಕೂಡ ಮೇಲ್ಜಾತಿಗಳು ಯಾವ ಕಾರಣಕ್ಕೂ ತಮ್ಮ ಸ್ಥಾನಮಾನಗಳನ್ನು ಬಿಟ್ಟುಕೊಡಲು ಸಿದ್ಧವಿರುವುದಿಲ್ಲ ಎಂಬ ವಾಸ್ತವವನ್ನು ನೆನಪಿಸುತ್ತಿದೆ. ವಚನ ಚಳವಳಿಯ ಕಾಲದ ಜಾತಿ ವ್ಯವಸ್ಥೆಯ ಒತ್ತಡಗಳ ಮೂಲವನ್ನು ಅರಿಯದೆಯೇ ಅಲ್ಲಿನ ಜಾತಿ ಸೂಚಕ ವಿವರಗಳನ್ನು ಪಟ್ಟಿ ಮಾಡಬಾರದು. ಆಗಿನ್ನೂ ಊಳಿಗಮಾನ್ಯ ಜಾತಿ ವ್ಯವಸ್ಥೆಯು ಚಲಾವಣೆಯಲ್ಲಿತ್ತು. ಕೆಲವು ಭೂಪರು ಊಳಿಗಮಾನ್ಯ ವ್ಯವಸ್ಥೆ ಎಂಬುದೇ ಕರ್ನಾಟಕದಲ್ಲಿ ಇರಲಿಲ್ಲ ಎಂದು ಹೇಳುವುದಿದೆ. ಸಂಪತ್ತಿನ ಮೇಲಿನ ಅಧಿಕಾರ ಹಿಡಿದಿದ್ದ ಭೂಮಾಲೀಕ ಜಾತಿಗಳ ನೀತಿಯೇ ಊಳಿಗಮಾನ್ಯ ವ್ಯವಸ್ಥೆ.
ಇಂತಹ ಅಧಿಕಾರದ ನಡುವೆ ಬಸವಣ್ಣ ಜಾತ್ಯತೀತ ಕಾಯಕ ಹೇಳಿದ. ಕುಲಕಸುಬುಗಳು ಇದರಿಂದ ಜಾತಿ ಕೂಪವಾಗುವುದು ತಪ್ಪುತ್ತಿತ್ತು. ಆದರೆ ಊಳಿಗಮಾನ್ಯ ಜಾತಿಗಳು ಪುರೋಹಿತಶಾಹಿ ಬ್ರಾಹ್ಮಣ್ಯದ ಜಾತಿ ನೀತಿಯ ಚಿಲ್ಲರೆ ಆಕರ್ಷಣೆಗಳಿಗೆ ಒಳಗಾಗಿ ಜಾತ್ಯತೀತತೆಯನ್ನು ನಿರಾಕರಿಸಿತು. ಇದರಿಂದಲೇ ವಚನಕಾರರ ಜಾತ್ಯತೀತ ಕನಸುಗಳು ಭಗ್ನವಾದುದು. ವಚನಕಾರರು ತಮ್ಮ ಕಾಲದಲ್ಲೆೀ ಈ ಬಗೆಯ ವಿಕೋಪಗಳನ್ನು ತೀವ್ರವಾಗಿ ಪ್ರಶ್ನಿಸುವರು. ಬಸವಣ್ಣನ ಜಾತ್ಯತೀತ ನಡತೆಯು ಜಾತಿನಿಷ್ಠವಾಗಿದ್ದ ಮೇಲ್ಜಾತಿಗಳಿಗೆ ಅಪಥ್ಯವಾಗಿತ್ತು. ಅದರಿಂದಲೇ ಅವರೆಲ್ಲ ಬ್ರಾಹ್ಮಣ್ಯದ ಕುಟಿಲತೆಯ ಜೊತೆಗೂಡಿ ಜಾತ್ಯತೀತ ಕ್ರಾಂತಿಯ ಅಧ್ಯಾತ್ಮ ದಂಗೆಯ ನಡತೆಯನ್ನು ಹದಗೆಡಿಸಿದ್ದುದು.

ವಚನ ಚಳವಳಿಯ ನಂತರದ ಕರ್ನಾಟಕದಲ್ಲಿ ನೂರಾರು ಒಳ ಜಾತಿಗಳು ಹುಟ್ಟಿಕೊಂಡದ್ದನ್ನು ಜಾತಿ ವ್ಯವಸ್ಥೆಯ ಹುನ್ನಾರದ ಭಾಗವಾಗಿಯೇ ಗ್ರಹಿಸಬೇಕು. ಈ ಕಾಲಮಾನದಲ್ಲೇ ಹೊಸ ಬಗೆಯ ಅನೇಕ ಜಾತಿಗಳು, ಜಾತಿಯ ತಾರತಮ್ಯಗಳು, ಅಸ್ಪೃಶ್ಯತೆಯ ವಿವಿಧ ಒಳ ಬಗೆಗಳು ಕುಲಮೂಲ ಸಂಬಂಧಗಳಲ್ಲೂ ಉಂಟಾದುದು. ಇದನ್ನೆಲ್ಲ ವಚನಗಳ ಜಾತ್ಯತೀತತೆಯ ಹಂಬಲದ  ಭಾಗವಾಗಿ ಗಮನಿಸಬೇಕು.  `ಕುಲವೆರಡಲ್ಲದೆ ಹಲವಿಲ್ಲ, ದಿನವೆರಡಲ್ಲದೆ ಸಪ್ತ ದಿನವಿಲ್ಲ.  ಜಾತಿ ಜಾತಿಯ ಕೂಡಿದಲ್ಲದೆ ನಿಹಿತ ಸುಖವಿಲ್ಲ . ಜಾತಿ ಜಾತಿಯ ಕೊಂದು ನಿಹಿತ, ಅನಿಹಿತವ ಕೆಡಿಸಿ, ಜಾತ ಅಜಾತನ ಕಂಡು ನಿಹಿತವಾಗಿರಿ ,  ಹೊಲೆ ಹದಿನೆಂಟು ಜಾತಿಯೆಂಬ ಕುಲವಿಲ್ಲ'  ಎಂದು ಸಾರುವ ವಚನಕಾರರು ಅಖಂಡವಾಗಿ ಜಾತಿ ವಿರೋಧಿ ಆಂದೋಲನವನ್ನು ಸಾಮಾಜಿಕ ನ್ಯಾಯದ ಭಾಗವಾಗಿ ನ್ಯಾಯ ನೀತಿಯ ಅಧ್ಯಾತ್ಮವನ್ನು ಬಾಳಿ ಬದುಕಿ ಬಿತ್ತರಿಸಿದರು.

`ಜಾತಿವಿಡಿದು ಸೂತಕವನರಸುವೆ, ಜ್ಯೋತಿವಿಡಿದು ಕತ್ತಲೆಯನರಸುವೆ, ಇದೇಕೊ ಮರಳು ಮಾನವ' ಎಂದು ಕೇಳುವ ವಚನಗಳ ಈ ದನಿ ಜಾತಿಯ ಬೇರನ್ನು ಕಿತ್ತುಕೊಳ್ಳಿ ಎಂಬುದರ ಹಂಬಲವಲ್ಲವೇ...  `ಕುಲಗೋತ್ರ ಜಾತಿ ಸೂತಕದಿಂದ ಕೆಟ್ಟವರೊಂದು ಕೋಟ್ಯಾನು ಕೋಟಿ'  ಎಂದು ವಿಷಾದಿಸುವುದರ ಹಿಂದೆ ಜಾತ್ಯತೀತತೆಯ ಆರ್ದ್ರತೆ ಅಖಂಡ ಮಾನವತ್ವದ ಪರವಾಗಿ ಇಲ್ಲವೇ ಇಲ್ಲವೇ... ಇದೆಲ್ಲ ಜಾತಿ ವಿರೋಧಿ ಅಭಿವ್ಯಕ್ತಿಗಳಲ್ಲವೇ... ಈ ಜಾತಿ ವಿರೋಧಿ ವಚನಾಂದೋಲನದ ನಂತರ ಸ್ವತಃ ದಲಿತರು ಜನಪದ ಮಹಾಕಾವ್ಯಗಳ ಮೂಲಕ ಮತ್ತೊಮ್ಮೆ ವಿವಿಧ ಬಗೆಯಲ್ಲಿ ಜಾತಿವ್ಯವಸ್ಥೆಯ ವಿರುದ್ಧ ದಂಗೆ ಏಳುವರು. ದಲಿತರ ಆ ಬಗೆಯ ಅಪರೋಕ್ಷ ದಂಗೆಯನ್ನು ಮನಗಾಣಲು ಭಾಗಶಃ ಬಲು ಬುದ್ಧಿ ಜೀವಿಗಳಿಗೆ ಬೇರೆಯದೇ ಆದ ಪಂಚೇಂದ್ರಿಯಗಳು ಬೇಕೇನೊ.

ನಮ್ಮ ಸಂವಿಧಾನದ ಆರಂಭದಲ್ಲಿ ಜಾತ್ಯತೀತ  ಗಣರಾಜ್ಯದ ಮುಖ್ಯವಾದ ಒಂದು ಪ್ರತಿಧ್ವನಿ ಇದೆ. ಈ ದನಿಯ ಆಧಾರದಲ್ಲೇ ಇಡೀ ಸಂವಿಧಾನ ರಚನೆಯಾಗಿದೆ. ಕೇವಲ ಒಂದು ಬಾರಿ ಮಾತ್ರ  ಜಾತ್ಯತೀತ ಪದ ಬಳಕೆಯಾಗಿದೆ ಎಂದ ಮಾತ್ರಕ್ಕೆ ಸಂವಿಧಾನವು ಜಾತ್ಯತೀತತೆಯ ಪರವಾಗಿಲ್ಲ ಎಂದು ಹೇಳಲಾಗುವುದೇ... ಸ್ವತಃ ಪೇಜಾವರಶ್ರೀ ಅವರು ಜಾತಿ ವ್ಯವಸ್ಥೆಯ ಇರುವಿಕೆಯನ್ನು ಒಪ್ಪಿ ಸುಧಾರಣೆಗೆಂದು ದಲಿತರ ಕೇರಿಗಲ್ಲಿ ಪಾದಯಾತ್ರೆಯನ್ನು ಪ್ರಾಯಶ್ಚಿತ್ತ ಎಂಬಂತೆ ಮಾಡಿ ಸ್ವತಃ ವೈದಿಕ ಜಾತಿ ಮತಿಗಳಿಗೆ ತಿಳಿ ಹೇಳುವ ಕಾಯಕದಲ್ಲಿ ಮುಂದಾಗಿದ್ದಾರೆ. ಅಂತಹ ಬ್ರಾಹ್ಮಣ್ಯವೇ ಜಾತಿ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳುವ ಸಲುವಾಗಿ `ಮತಾಂತರ ಬೇಡ, ನಾವೆಲ್ಲ  ಹಿಂದೂ'ಗಳು ಎಂಬ ಹೊಸ ಒಪ್ಪಂದಕ್ಕೆ ಮುಂದಾಗುತ್ತಿದೆ. ಭಕ್ತಿಪಂಥದ ಕವಿಗಳು, ತತ್ವಪದಕಾರರು, ಮೌಖಿಕ ಪರಂಪರೆಯ ಅದೆಷ್ಟೋ ಅನಾಮಿಕ ನಿರೂಪಕರು ಜಾತಿ ವ್ಯವಸ್ಥೆಯ ವಿರುದ್ಧವಾಗಿಯೇ ಧ್ವನಿತಾರ್ಥದಲ್ಲಿ ದಂಗೆಯ ಸೊಲ್ಲೆತ್ತಿದವರು. ಆ ಸಲುವಾಗಿಯೇ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗೂ ತತ್ವ ದರ್ಶನಗಳು ಜಾತ್ಯತೀತವಾದ ವಿರಾಟ್ ಅಭಿವ್ಯಕ್ತಿಗಳನ್ನು ಮಾಡಿದ್ದುದು. ಈ ಬಗೆಯನ್ನು ಅರಿಯದವರು ಮನುವಾದಿಗಳಿಗಿಂತಲೂ ಅಪಾಯಕಾರಿಯಾದವರು. ಅವರ ಈ ರೀತಿಯು ಬೌದ್ಧಿಕ ಅಸ್ಪೃಶ್ಯತೆಯನ್ನು ಪ್ರತಿಪಾದಿಸುವ ಪರೋಕ್ಷ ಜಾಣ್ಮೆಯ ವಿಧಾನವಾಗಿದೆ.

`ತಾಯ ಮೊಲೆಹಾಲೆ ನಂಜಾಗಿ ಕೊಲುವೊಡೆ ಇನ್ನಾರ ದೂರುವೆಯೊ ತಂದೇ' ಎಂಬ ಆರ್ತದನಿ ಆಗಲೂ ಇಂತವರ ನಡುವಿನಿಂದಲೇ ಹುಟ್ಟಿಬಂದಿರಬೇಕು. ಜ್ಞಾನಿಗಳು, ಸಂಶೋಧಕರು ವರ್ತಮಾನದ ಕುರುಡನ್ನು ಸರಿಪಡಿಸಿ ಬೆಳಕಿನತ್ತ ಮುನ್ನಡೆಸುವರು ಎಂಬುದು ಒಂದು ಆದರ್ಶ. ಆದರೆ ಇಂತಹ ಚಿಂತಕರು ಕಗ್ಗತ್ತಲ ಕ್ರೌರ್ಯದ ಹೆಪ್ಪುಗಟ್ಟಿದ ಜಾತಿ ನೆತ್ತರ ಹತ್ಯೆಯನ್ನೇ `ಇಲ್ಲ ಇಲ್ಲಾ... ಇದೆಲ್ಲ ಕಗ್ಗೊಲೆಯ ಜಾತಿ ಕ್ರೌರ್ಯ ಅಲ್ಲ' ಎಂದು ಹೇಳಿದರೆ; ಆ ಕಗ್ಗೊಲೆಯಿಂದ ನೆಲಕಚ್ಚಿ ಬೆಳಕಿಗಾಗಿ ದಾಹದಲಿ ತವಕಿಸುವವರ ಎದೆಯ ನಡುಕ ಹೇಗಿರಬಹುದು... ದಮನಿತರ ದನಿಯ ಎದೆಗೂ, ಕೊರಳಿಗೂ ಬರ್ಜಿಯ ತಿವಿಯಲು ಮುಂದಾಗುವ ಬೌದ್ಧಿಕತೆಯ ಧೀಮಂತಿಕೆಗೂ ಏನೆಂದು ಹೇಳುವುದೂ... ಇಷ್ಟು ಸಾವಿರ ವರ್ಷಗಳ ಅಸ್ಪೃಶ್ಯತೆ, ಜಾತೀಯತೆ, ಮತೀಯತೆಯ ಬೇಟೆಗಳಿಂದಲೂ ನಾವಿನ್ನೂ ಬದುಕಿರುವುದು ಇಂತವರಿಗೆ ಮುಳ್ಳಾಗಿದೆಯೆ... ಹೋಗಲಿ... ಈ ವಿದ್ವಾಂಸರು, ವರ್ತಮಾನದ ಹೊಸ ಹೊಸ ಜಾತಿ ರೂಪಗಳ ಬಗ್ಗೆ ಕುರುಡಾಗಿರುವರೇ... ಬೌದ್ಧಿಕವಾದ ತಾಯ್ತನದ ಸಾಮಾಜಿಕ ಅರಿವೂ ಕೂಡ ಇಂತಹವರಿಗೆ ಜಾಗತಿಕ ಮಾರಾಟದ ಯೋಜನೆಗಳ ಸರಕೇ... ಇಂತಹ ಅಧ್ಯಯನ ಕೂಡ ಜಾತಿವಾದವನ್ನು ಹಿಂದುತ್ವದ ಹಂಗಿನಲ್ಲಿ ಪರೋಕ್ಷವಾಗಿ ಮಂಡಿಸುವ ಚಮತ್ಕಾರವಾಗಿದೆ. ಈ ಚಮತ್ಕಾರವನ್ನು ಹೇಗೆ ಅರ್ಥೈಸುವುದು... .. ದಲಿತರ ಪರವಾದ ವಚನ ಚಳವಳಿಯನ್ನೇ ಅಪವ್ಯಾಖ್ಯಾನಗೊಳಿಸಿ ಬಿಟ್ಟರೆ ತಮ್ಮ ವೈದಿಕ ಹಾದಿಗೆ ಪಯಣ ಸುಲಭ ಎಂದು ಇಂತವರು ತಿಳಿದಿರಬಹುದು... ಸಾಧ್ಯವಿಲ್ಲ, ಈ ಬಗೆಯ ವಿದ್ವಾಂಸರನ್ನು ಕಂಡು ಅಯ್ಯೋ ಎನಿಸುವುದು.

ಅಚಿಬೆ, ದೇವನೂರು ಮತ್ತು ಲೋಹಿಯಾಡಿ . ಉಮಾಪತಿ

ಸೌಜನ್ಯ : ವಿಜಯ ಕರ್ನಾಟಕವಸಾಹತುವಾದೋತ್ತರ ಬರೆಹಗಳ ಮೇಲೆ ಅಪಾರ ಪ್ರಭಾವ ಬೀರಿದ, ಆಫ್ರಿಕನ್ ಸಾಹಿತ್ಯದ ಪಿತಾಮಹ ಚಿನುವಾ ಅಚಿಬೆ ತೀರಿ ಹೋಗಿದ್ದಾರೆ. ಷೆರ್ಲಾಕ್ ಹೋಮ್ಸ್‌ನಂತಹ ಅದ್ಭುತ ಮಾನವೀಯ ಪತ್ತೇದಾರ ಪಾತ್ರವನ್ನು ಸೃಷ್ಟಿಸಿದ ಆರ್ಥರ್ ಕಾನನ್ ಡಾಯ್ಲ್ ಕುರಿತು ಪಿಯುಸಿಯಲ್ಲಿ ನಮಗೆಲ್ಲ ಪ್ರೇರಣಾದಾಯಕ ಪಾಠ ಹೇಳಿದ್ದರು ಜಯದೇವ ಮೇಷ್ಟ್ರು. ನಾವು ಏಳೆಂಟು ಮಂದಿ (ಆ ಕಾಲಕ್ಕೆ ಅದು ದೊಡ್ಡ ಸಂಖ್ಯೆ) ವಿದ್ಯಾರ್ಥಿಗಳು ಐಚ್ಛಿಕ ವಿಷಯವಾಗಿ ಇಂಗ್ಲಿಷ್ ಸಾಹಿತ್ಯ ಓದಲೆಂದು ಮೈಸೂರಿನ ಮಹಾರಾಜಾ ಕಾಲೇಜಿಗೆ ಅರ್ಜಿ ಹಾಕಿಬಿಟ್ಟಿದ್ದೆವು. ಮೂರ್ನಾಲ್ಕು ಮಂದಿಗೆ ಸೀಟೂ ಸಿಕ್ಕಿಬಿಟ್ಟಿತ್ತು. ಚಿತ್ರದುರ್ಗದಲ್ಲಿ ಇಂಗ್ಲಿಷ್ ಅಟ್ಟವನ್ನು ಉತ್ಸಾಹದಿಂದ ಹತ್ತಿದ್ದ ನಮಗೆ ಮೈಸೂರಿನ ಇಂಗ್ಲಿಷ್ ಬೆಟ್ಟ ಶುರುವಿನಲ್ಲಿ ಹಿಮಾಲಯವೇ ಆಗಿ ಬೆಚ್ಚಿ ಬೀಳಿಸಿದ್ದುಂಟು.

ಆಗ ತಮ್ಮ ಸದಾ ಹಸಿರು ಜೀವಪರ ಕೃತಿ Things Fall Apart ಮೂಲಕ ಮನಸ್ಸಿಗೆ ಹತ್ತಿರವಾದವರು ಅಚಿಬೆ. ವಸಾಹತುಪೂರ್ವ ನೈಜೀರಿಯಾ ಈ ಕಾದಂಬರಿಯ ಭೂಮಿಕೆ. ಇಂಗ್ಲಿಷರ ವಸಾಹತುವಾದ ಮತ್ತು ಸ್ಥಳೀಯ ಪಾರಂಪರಿಕ ಸಂಸ್ಕೃತಿಯ ನಡುವಣ ಘರ್ಷಣೆಯನ್ನು ಚಿತ್ರಿಸುವ ಈ ಕೃತಿ, ಜಾಗತಿಕ ಮನ್ನಣೆ ಗಳಿಸಿದ ಮೊಟ್ಟಮೊದಲ ಆಫ್ರಿಕನ್ ಕಾದಂಬರಿ.

ಆಫ್ರಿಕಾದ ಹಳ್ಳಿ, ಬುಡಕಟ್ಟು ಜೀವನ, ವಸಾಹತುವಾದದ ಜೊತೆ ಮುಖಾಮುಖಿ ಕುರಿತು ಆಫ್ರಿಕನ್ ದೃಷ್ಟಿಕೋನದಿಂದ ಬರೆಯಲಾದ ಕೃತಿ. ವಸಾಹತುಶಾಹಿ ಹಸ್ತದಿಂದ ಮುಕ್ತಗೊಂಡ ಸ್ವತಂತ್ರ ನೈಜೀರಿಯಾವನ್ನು ಕಟ್ಟುವ ಕ್ರಿಯೆಯಲ್ಲಿ ಎದುರಾದ ಭ್ರಮನಿರಸನಗಳು, ಭ್ರಷ್ಟಾಚಾರ, ಜನಾಂಗೀಯ ಘರ್ಷಣೆಗಳು ಹಾಗೂ ಯುದ್ಧದ ಕುರಿತೂ ಅಚಿಬೆ ಬರೆದಿದ್ದಾರೆ. ಅರಾಜಕತೆ ಮತ್ತು ಭ್ರಷ್ಟಾಚಾರವನ್ನು ಪ್ರತಿಭಟಿಸಿ ಎರಡು ಸಲ ತಮ್ಮ ದೇಶದ ಸರಕಾರಿ ಸಮ್ಮಾನವನ್ನು ನಿರಾಕರಿಸಿದವರು.

ಆಫ್ರಿಕಾ ಕುರಿತು Heart of Darkness ಕಿರು ಕಾದಂಬರಿ ಬರೆದ ಖ್ಯಾತ ಪೋಲಿಶ್- ಬ್ರಿಟಿಷ್ ಲೇಖಕ ಜೋಸೆಫ್ ಕೋನ್ರಾಡ್‌ನ ಮೇಲೆ ಅಚಿಬೆ ಹೊರಿಸಿದ ವರ್ಣಭೇದದ ಆರೋಪ ಇಂಗ್ಲಿಷ್ ಸಾಹಿತ್ಯ ವಲಯದ ಜೇನುಗೂಡಿಗೆ ಕಲ್ಲೆಸೆದಿತ್ತು. ಆಫ್ರಿಕನ್ನರನ್ನು ಮನುಷ್ಯರನ್ನಾಗಿ ಬಗೆಯದೆ, ಅವರ ಭಾಷೆ ಸಂಸ್ಕೃತಿಯನ್ನು ಧಿಕ್ಕರಿಸಿ ಆಫ್ರಿಕಾವನ್ನು ಐರೋಪ್ಯರು ಪ್ರವೇಶಿಸುವ ಕರಾಳ ಭಯಾನಕ ಕಾಡು ಎಂದು ಚಿತ್ರಿಸಿದ ಕೋನ್ರಾಡ್ ವಿರುದ್ಧ ಮಾಡಿದ್ದ ದಿಟ್ಟ ಟೀಕೆ ಅಚಿಬೆ ಅವರನ್ನು ನೊಬೆಲ್ ಬಹುಮಾನದಿಂದ ದೂರ ಇಟ್ಟಿತು ಎನ್ನುವ ವಾದವಿದೆ. ಸಹ ಆಫ್ರಿಕನ್ ಸಾಹಿತಿ ವೋಲೆ ಸೋಯಿಂಕಾ ಅವರಿಗೆ ನೊಬೆಲ್ ಪ್ರಶಸ್ತಿ ಬಂದಾಗ ಅಚಿಬೆ ಸಂಭ್ರಮಿಸುತ್ತಾರೆ. ನಿಮಗೆ ಈ ಬಹುಮಾನ ಬಾರದ ಕುರಿತು ಏನೆನ್ನಿಸುತ್ತದೆ ಎಂಬ ಪತ್ರಕರ್ತನೊಬ್ಬನ ಪ್ರಶ್ನೆಗೆ ಅಚಿಬೆ ಉತ್ತರ- ನೊಬೆಲ್ ಬಹುಮಾನ ಮುಖ್ಯವಾದದ್ದೇ. ಆದರೆ ಅದು ಯೂರೋಪಿಯನ್ ಬಹುಮಾನ. ಆಫ್ರಿಕನ್ ಬಹುಮಾನ ಅಲ್ಲ... ಸಾಹಿತ್ಯ ಎಂಬುದು ಹೆವಿವೇಟ್ ಛಾಂಪಿಯನ್‌ಶಿಪ್ ಅಲ್ಲ...

ಇತ್ತೀಚೆಗೆ ಪ್ರಕಟವಾದ, ತಿಂಗಳೊಪ್ಪತ್ತಿನಲ್ಲೇ ಮೂರು ಮುದ್ರಣಗಳನ್ನು ಕಂಡಿರುವ ದೇವನೂರ ಮಹಾದೇವ ಅವರ ಬಿಡಿಬರೆಹಗಳ ಸಂಕಲನ 'ಎದೆಗೆ ಬಿದ್ದ ಅಕ್ಷರ'. ಅಭಿನವ ಪ್ರಕಾಶನದ ಈ 200ನೆಯ ಪ್ರಕಟಣೆಯಲ್ಲಿ ಚಿನುವ ಅಚಿಬೆ ಮೈಸೂರಿಗೆ ಬಂದಿದ್ದ ಪ್ರಸ್ತಾಪವಿದೆ.

ಇಬ್ಬರು ಮಹಾನ್ ಕಪ್ಪು ಬರೆಹಗಾರರು ಸಂಧಿಸುವ ಈ ಸಂದರ್ಭದ ಪುಟ್ಟ ಲೇಖನದ ಶೀರ್ಷಿಕೆ- 'ಅಸ್ಪೃಶ್ಯನಾಗಿರು ವುದೆಂದರೆ'. ಇಂಡಿಯಾದ 'ಮುಟ್ಟಿಸಿಕೊಳ್ಳಬಾರದ' ಮನುಷ್ಯರ ಕುರಿತು ಅಚಿಬೆ ದುಃಖಿತರಾಗುತ್ತಾರೆ. ದೇವನೂರ ಲೇಖನ ಹೀಗಿದೆ.

- ಆಫ್ರಿಕಾ ಲೇಖಕ ಚಿನುವಾ ಅಚಿಬೆಯವರು ಮೈಸೂರಿಗೆ ಬಂದಿದ್ದಾಗ ನಮ್ಮಲ್ಲಿನ ಒಂದು ಹಳ್ಳಿಗೆ ಹೋಗಿ ಬಂದು ಅವರು ಅಂದದ್ದು ನನ್ನನ್ನು ಮತ್ತೂ ಕಂಗೆಡಿಸಿತು. ಅವರು ಅಂದರು- ''ನಿಮ್ಮ ಹಳ್ಳಿಯ ಅಸ್ಪೃಶ್ಯರನ್ನು ನಾನು ಕಂಡೆ. ಇಂದಿನಿಂದ ನಾನು ಹೆಚ್ಚು ದುಃಖಿತನಾದೆ. ನಮ್ಮ ಆಫ್ರಿಕಾದಲ್ಲು 'ಗಾಡ್ ಚಿಲ್ಡ್ರನ್' (ದೇವರ ಮಕ್ಕಳು) ಎಂಬ ಜನ ಇದ್ದಾರೆ. ಅಲ್ಲಿ ಅವರ ರಕ್ತ ಭೂಮಿಗೆ ಬಿದ್ದರೆ ಪಾಪ ಬರುತ್ತೆ. ಇಲ್ಲಿ ಈ ಹರಿಜನರ ರಕ್ತ ಭೂಮಿಗೆ ಬಿದ್ದರೆ ಪುಣ್ಯ ಬರುತ್ತೆ''. ಇಲ್ಲಿನ ನನ್ನನ್ನೂ ಸೇರಿಸಿ ಯಾವ ಲೇಖಕನೂ ಅಚಿಬೆಯಷ್ಟು ಡಿಸ್ಟರ್ಬ್ ಆದಂತೆ ನನಗೆ ಕಂಡಿಲ್ಲ. ನಮ್ಮೆಲ್ಲರ ರಕ್ತ, ಮಿದುಳು ಜಡಗಟ್ಟಿ ಹೋಗಿದೆ ಅನ್ನಿಸುತ್ತದೆ. ಜಾತಿಯು ನಮ್ಮ ಸಂವೇದನೆಯನ್ನು ಮತ್ತು ಸೃಷ್ಟಾತ್ಮಕತೆಯನ್ನು ಚಿವುಟಿ ಹಾಕಿದೆ.

ಇಲ್ಲಿನ ಜಾತಿಯ ಅಸ್ಪೃಶ್ಯತೆ ಭೀಕರ, ಆದರೆ ನಮಗೆಲ್ಲ ಸಾಮಾನ್ಯ, ರೂಢಿಗತ. ಅಂದರೆ ತಮಟೆ ಬಡಿಯುವ ರೂಢಿಯನ್ನು ದಲಿತರು ನಿರಾಕರಿಸಿದರೆ ಅವರ ಚರ್ಮದಿಂದಲೇ ತಮಟೆ ಮಾಡಿ ಬಡಿಯುವಷ್ಟು ಕ್ರೂರತೆ ಸವರ್ಣೀಯ ಮನಸ್ಲಲ್ಲಿದೆ. ನಮ್ಮ ಭಾರತದಲ್ಲಿ ಸಾಮರಸ್ಯ ಇದ್ದರೆ, ಅದು ಜಾತಿ ರೂಢಿಗಳನ್ನು ಸುತ್ತಿರುವ ಅಮಾನವೀಯ, ಅವಮಾನಕರವಾದ ಸಂಬಂಧಗಳ ಸಾಮರಸ್ಯ. ಆದರೆ ನಮಗೆ ಬೇಕಾಗಿರುವುದು- ಜಾತಿ, ಮತಗಳ ರೂಢಿಗಳನ್ನು ಕಿತ್ತ ಮಾನವೀಯ ಘನತೆಯ ಸಂಬಂಧ. ಎಲ್ಲಿವರೆಗೆ ಅಂದರೆ, ಹಳ್ಳೀಲಿ ಬೇರೆ ಕೋಮಿನ ಗಂಡು- ಹೆಣ್ಣಿಗೆ ಊರೊಟ್ಟಿನವರೆಲ್ಲ ಸೇರಿ ಮದುವೆ ಮಾಡುವವರೆಗೆ. ಅಲ್ಲಿಯವರೆಗೂ ನಮಗೆ ಬಿಡುಗಡೆ ಇಲ್ಲವೇ ಇಲ್ಲ. ಊರಾಚೆ ಎಸೆಯಲ್ಪಟ್ಟವರ ಅಸಹನೆಗೆ ಒಂದು ಉದಾಹರಣೆ ಹೇಳುತ್ತೇನೆ. ದಲಿತ ಹುಡುಗರು ನಮ್ಮೂರ ಹೈಸ್ಕೂಲಲ್ಲಿ ಕೈ ಬೊಗಸೆಯಲ್ಲಿ ನೀರು ಕುಡಿಯಬೇಕಿತ್ತು. ನೀರನ್ನು ಕುಡಿಯಲೇಬೇಕಲ್ಲ! ನಾನು ಉಸಿರೆತ್ತದೆ ನೀರು ಕುಡಿಯುತ್ತಿದ್ದೆ. ಆದರೆ ಕ್ಷಮಿಸಿ- ಆಗ ನಾನು ಯಾರಿಗೂ ಕಾಣದಂತೆ ಆ ಪಾತ್ರೆಯಲ್ಲಿದ್ದ ನೀರಿಗೆ ಉಗಿಯುತ್ತಿದ್ದೆ. ಆ ಬಗ್ಗೆ ಈಗ ಬೇಸರವಾದರೂ ಆಗ ಅದು ನನ್ನ ಅಭಿವ್ಯಕ್ತಿ ಆಗಿತ್ತು...

ನನಗೆ ಇನ್ನೂ ಅರ್ಥವಾಗದ್ದು ಅಂದರೆ- ಅಸ್ಪೃಶ್ಯರ ಬಗ್ಗೆ ಕಾರಣವೇ ಇಲ್ಲದೆ ಅಸಹನೆಪಡುವ ಜಾತ್ಯಸ್ಥರ ಮನದಾಳವೇನು ಎಂಬುದು. ಇದಕ್ಕೆ ಚಾಂಡಾಲರ ಕಡೆಗೆ ನೋಡುವೆ. ಯಾಕೆಂದರೆ ಚಾಂಡಾಲರಾದ ಅಸ್ಪೃಶ್ಯರು ಬ್ರಾಹ್ಮಣ ಹೆಣ್ಣು ಮತ್ತು ಶೂದ್ರಾದಿ ಗಂಡಿನ ಮಕ್ಕಳಂತೆ- ಈ ಪುರಾತನ ಅಸಹನೆ ಜಾತ್ಯಸ್ಥ ಹಿಂದೂ ರಕ್ತದಲ್ಲಿ ಉಳಿದು ಹರಿಯುತ್ತಿರಬಹುದೆ ? ಹುಟ್ಟಿದ ಮಕ್ಕಳದೇನು ತಪ್ಪು? ಈಗಲಾದರೂ ಇದನ್ನು ನಾವು ಅರಿತುಕೊಳ್ಳಬೇಕಾಗಿದೆ.

ಲೋಹಿಯಾ ವಿಚಾರಗಳಿಂದ ವಾಸ್ತವತೆಯಲ್ಲಿ ಬಹುದೂರ ಸರಿದಿರುವ ಅವಕಾಶವಾದೀ ಸಮಾಜವಾದಿಗಳ ಪೈಕಿ, ಮುಲಾಯಂಸಿಂಗ್ ಯಾದವ್ ಪ್ರಮುಖರು. ಭಾರತದ ಸಮಾಜವನ್ನು ಕಾಡುವ ಹಲವು ರೋಗಗಳ ವಿರುದ್ಧ ದಿಟ್ಟ ದನಿಯೆತ್ತಿದ ಡಾ.ರಾಮಮನೋಹರ ಲೋಹಿಯಾ ಕಾಂಗ್ರೆಸ್ಸಿನ ಕಡು ವಿರೋಧಿ. ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಹಲವು ಲೋಹಿಯಾವಾದಿಗಳು ಲೋಹಿಯಾ ಅವರ ಕಾಂಗ್ರೆಸ್ ವಿರೋಧವನ್ನು ಮಾತ್ರವೇ ತಲೆಯ ಮೇಲೆ ಹೊತ್ತು ನಡೆದು ಅವರು ಪ್ರತಿಪಾದಿಸಿದ ಉಳಿದ ಮೌಲ್ಯಗಳನ್ನು ಗಾಳಿಗೆ ತೂರಿದರು. ಮೊನ್ನೆ ಮಾರ್ಚ್ 23ಕ್ಕೆ ಲೋಹಿಯಾ ಹುಟ್ಟಿ 102 ವರ್ಷಗಳು ಸಂದವು. ಉತ್ತರಪ್ರದೇಶದ ಮುಲಾಯಂಸಿಂಗ್ ಅವರ ಸಮಾಜವಾದೀ ಪಾರ್ಟಿಯ ಸರಕಾರ ಲೋಹಿಯಾ ಜಯಂತಿ ಆಚರಿಸಿತು.

ಈ ಸಂದರ್ಭದಲ್ಲಿ ಲೋಹಿಯಾ ಅವರ ಕೆಲ ವಿಚಾರಗಳನ್ನು ಅವರ ಮಾತುಗಳಲ್ಲೇ ನನೆಯುವುದು ಪ್ರಸ್ತುತ- ಭಾರತದ 40 ಕೋಟಿ ಜನರನ್ನು ಮೇಲೆತ್ತಬಯಸುವ ಪ್ರತಿಯೊಬ್ಬನನ್ನು ಈ ರಾಜಕೀಯ, ಮುಗಿಸಿಬಿಡಬೇಕೆಂದು ಪ್ರಮಾಣ ಮಾಡಿದಂತಿದೆ. ದಾರ ಧರಿಸಿದವರೊಂದಿಗೆ ನನಗೆ ವೈರತ್ವವಿಲ್ಲ. ಅವರನ್ನೂ ನಾನು ಮೇಲೆತ್ತಬಯಸುತ್ತೇನೆ. ಶೂದ್ರ, ಹರಿಜನ, ಸ್ತ್ರೀಯರು ಹಾಗೂ ಮುಸಲ್ಮಾನರು ಕೂಡ ಉತ್ಕರ್ಷ ಸಾಧಿಸಿದರೆ ಮಾತ್ರ ಇವರು ಮೇಲೇಳಬಹುದೆಂದು ನಾನು ನಂಬಿದ್ದೇನೆ... ಕೆಲವರು ದಾರ ಧರಿಸಿದವರ ವಿರುದ್ಧ ಸೇಡಿನೊಂದಿಗೆ ಅವರಿಗಿಂತ ಮುಂದೆ ಹೋಗಬೇಕೆನ್ನುವ ಯೋಚನೆಯಿಂದ ಕಾರ್ಯಪ್ರವೃತ್ತರಾಗುವ ಸಾಧ್ಯತೆ ಇದೆ. ಇದು ಸೂಕ್ತವೆನಿಸದು. ಅಷ್ಟೇ ಅಲ್ಲ, ಸಾಧ್ಯವೂ ಅಲ್ಲ. ಇಂಥ ಮನೋಧರ್ಮದ ಮೂಲಕ ಎರಡು ಮುಖವುಳ್ಳ, ಹೊಗಳುಭಟರಾದ, ದ್ವೇಷವನ್ನು ಬಳಸಿಕೊಳ್ಳಬಹುದಾದ ವಿಶೇಷ ಸಾಮರ್ಥ್ಯವುಳ್ಳ ಶೂದ್ರರು ಮಾತ್ರ ಮುನ್ನುಗ್ಗಬಲ್ಲರು. ಆದರೆ ನಿಜವಾಗಿಯೂ ಸಮರ್ಥರಾದ ಜನರನ್ನೇ ನಾವು ನಿರ್ಮಿಸಬೇಕಾಗಿದೆ. ಆಗ ಮಾತ್ರ ದ್ವಿಜ, ಶೂದ್ರರೆನ್ನುವ ನಾಮಕರಣವನ್ನು ಅಂತಿಮವಾಗಿ ತೊಡೆದು ಹಾಕಬಲ್ಲ ರಾಜಕಾರಣ ರೂಪುಗೊಳ್ಳಬಹುದು... ಹಾಗೆಯೇ ಐದರಿಂದ ಹತ್ತು ವರ್ಷದ ಮಕ್ಕಳು ಶಿಕ್ಷಣ ಪಡೆಯುತ್ತಿರುವ ಪ್ರಾಥಮಿಕ ಶಾಲೆಗಳು ಸಮಾಜವಾದೀ ಪಕ್ಷ ಬಯಸುವಂತೆ ಒಂದೇ ಮಾದರಿಯವಾದರೆ ಭಂಗಿ, ಕುರ್ಮಿ, ಬ್ರಾಹ್ಮಣ, ರೈತ ಹಾಗೂ ಪ್ರಧಾನಿಯ ಮಗು ಒಂದೇ ಥರದ ಶಿಕ್ಷಣ ಪಡೆಯುತ್ತದೆ. ಇದು ಭಾರತಕ್ಕೆ ಅವಶ್ಯವಿರುವ ಪ್ರಥಮ ಸುಧಾರಣೆ. ಇದರ ಹೊರತು ಏನೇನೂ ಮಾಡಲಾಗದೆಂದು ನಂಬಿದ್ದೇನೆ...

ನೆಮ್ಮದಿಯ ನಾಳೆಗಳ ಹುಡುಕುತ್ತಾ... ಕರ್ನಾಟಕ ಜನಸಾಹಿತ್ಯ ಸಮಾವೇಶ

                                    -ಡಾ. ಅಪ್ಪಗೆರೆ ಸೋಮಶೇಖರ್


ಕನ್ನಡಿಗರಾದ ನಾವು ಇಂದು ಸಂಕ್ರಮಣಾವಸ್ಥೆಯ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಪ್ರಸ್ತುತ ಕನ್ನಡ ನಾಡು ವಿಘಟನಕಾರಿ ಹಾಗೂ ವಿಚ್ಛಿದ್ರಕಾರಿ ಸನ್ನಿವೇಶದಲ್ಲಿ ಸಿಲುಕಿ ತಲ್ಲಣಿಸುತ್ತಿದೆ. ಮಾನವೀಯ ಮನಸ್ಸು, ಹೃದಯ, ಅಂತಃಕರಣಗಳು ಕಳೆದು ಹೋಗಿವೆ. ಮುಖವಾಡತನವೆ ಮೌಲ್ಯವಾಗಿದೆ. ನಮ್ಮ ಸಂವಾದ, ಚರ್ಚೆಗಳು ಸಾಕ್ಷಿಪ್ರಜ್ಞೆಯನ್ನು ಕಡೆಗಣಿಸುತ್ತಿವೆ. ನೈತಿಕ ವ್ಯಕ್ತಿತ್ವ ಎನ್ನುವುದು ಅಪಹಾಸ್ಯಕ್ಕೆ ಒಳಗಾಗಿದೆ. ಸಾಮಾಜಿಕ ಅಧಃಪತನ, ರಾಜಕೀಯ ದಿವಾಳಿತನ, ಬೌದ್ಧಿಕ ದಾರಿದ್ರ್ಯ, ಸಾಹಿತ್ಯಿಕ-ಸಾಂಸ್ಕೃತಿಕ ದಗಲ್ಬಾಜಿತನ ಇಡೀ ಸಮಾಜವನ್ನು ವಿನಾಶಕಾರಿ ಹಂತಕ್ಕೆ ತಂದು ನಿಲ್ಲಿಸಿವೆ. ಮೌಢ್ಯದ ಮಡೆಸ್ನಾನವನ್ನು ಸಮರ್ಥಿಸುವ ಚಿಂತಕರು, ಸಾಹಿತಿಗಳು ವಿವೇಕಶೂನ್ಯರಾಗಿ ವರ್ತಿಸುತ್ತಿದ್ದಾರೆ. ನರಬಲಿ, ಮರ್ಯಾದ ಹತ್ಯಾ, ಪಂಕ್ತಿಭೇದ ನೀತಿ, ಹೆಣ್ಣು ಮಕ್ಕಳ ಮಾರಾಟ ಮತ್ತು ಅವರ ಮೇಲಿನ ಹಲ್ಲೆ-ಅತ್ಯಾಚಾರ ಯಾವ ಸಂಕೋಚವೂ ಇಲ್ಲದೆ ನಡೆಯುತ್ತಿವೆ. ಹಳ್ಳಿಗಳು ಬರಿದಾಗುತ್ತ ಕೊಳೆಗೇರಿಗಳು ಬೆಳೆಯುತ್ತಿವೆ. ರೈತ, ಕೃಷಿ ಕೂಲಿ ಕಾರ್ಮಿಕರು, ಪೌರಕಾರ್ಮಿಕರ ಬದುಕುಗಳು ಅಸ್ತಿತ್ವವನ್ನೆ ಕಳೆದುಕೊಳ್ಳುತ್ತಿವೆ. ಅಸ್ಪೃಶ್ಯತೆ, ಜಾತೀಯತೆಗಳು ಭಿನ್ನ ಸ್ವರೂಪದಲ್ಲಿ  ವಿಜೃಂಭಿಸುತ್ತಿವೆ. ಹಿಂದುತ್ವವಾದಿ ಮಠಮಾನ್ಯ, ಧರ್ಮಾಂಧತೆಗಳು ಸಂವಿಧಾನಾತ್ಮಕವಾದ ಪ್ರಜಾಪ್ರಭುತ್ವದ ಮೌಲ್ಯವನ್ನೆ ಮಣ್ಣುಪಾಲು ಮಾಡುತ್ತಿವೆ. ಇತ್ತೀಚೆಗೆ ಕೆಲವು ಬುದ್ಧಿಮಾಂದ್ಯ ಜಾತಿವಾದಿ ಬ್ರಾಹ್ಮಣಶಾಹಿ ಮನಸ್ಥಿತಿಗಳು ಕರ್ನಾಟಕದಲ್ಲಿ ೧೨ನೇ ಶತಮಾನದಲ್ಲಿ ವಚನ ಚಳವಳಿಯೇ ನಡೆದಿಲ್ಲ, ಸಮಾಜದಲ್ಲಿ ಜಾತೀಯತೆಯೇ ಇಲ್ಲ ಇತ್ಯಾದಿ ಹುಸಿ ಸುದ್ದಿಗಳನ್ನ ಹಬ್ಬಿಸುವ ಮೂಲಕ ಸಮಾಜವನ್ನ ಗೊಂದಲಕ್ಕೆ ಈಡುಮಾಡುತ್ತಿದ್ದಾರೆ. ಈ ಬಗೆಯ ರೋಗಗಳಿಗೆ ಕನ್ನಡ ನಾಡು ಬಲಿಯಾಗದಂತೆ ಕಾಪಾಡುವುದು, ಪ್ರಜಾಪ್ರಭುತ್ವದ ಬಗೆಗೆ ನಂಬಿಕೆ ಇರುವ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ.

ಇಂತಹ ಆತಂಕಕಾರಿ ಸನ್ನಿವೇಶದ ಸಂದರ್ಭದಲ್ಲಿಯೂ ಕರ್ನಾಟಕದ ಉದ್ದಗಲಕ್ಕೆ ಅಲ್ಲಲ್ಲಿ ನಡೆಯುತ್ತಿರುವ ದಲಿತ ಸಂಘರ್ಷ ಸಮಿತಿಗಳು ನಡೆಸುತ್ತಿರುವ ಅರ್ಥಪೂರ್ಣವಾದ ಅಧ್ಯಯನ ಶಿಬಿರಗಳು; ಸಮಾಜಮುಖಿ ಚರ್ಚೆ, ಸಂವಾದ, ವಿಚಾರ ಸಂಕಿರಣಗಳು; ಪೌರಕಾರ್ಮಿಕ ಕೊಳೆಗೇರಿ ವೇಶ್ಯಾ ಮಹಿಳೆಯರ ಸಮಸ್ಯಾಧಾರಿತ ಮಹಿಳಾ ಸಂಘಟನೆಗಳ ಜಾಗೃತ ಸಮಾವೇಶಗಳು ಪರ್ಯಾಯ ಚಿಂತನೆಯ, ಪ್ರತಿರೋಧದ ಸಂಕೇತಗಳಾಗಿದ್ದು ಭರವಸೆಯನ್ನ ಮೂಡಿಸಿವೆ. ೨೩, ೨೪ ಮಾರ್ಚ್ ೨೦೧೩ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕರ್ನಾಟಕ ಜನಸಾಹಿತ್ಯ ಸಮಾವೇಶವು ಇಂತಹ ಮಹತ್ವದ ಭರವಸೆಗಳಲ್ಲಿ ಒಂದಾಗಿದ್ದು, ಜೀವಪರ ಚಿಂತಕರ ಆಶಾವಾದವನ್ನು ಇಮ್ಮಡಿಗೊಳಿಸಿ; ಪ್ರತಿಗಾಮಿ ಬುದ್ಧಿಜೀವಿಗಳ ನಿದ್ದೆಗೆಡಿಸಿದೆ. ಧಾರವಾಡವು ಕನ್ನಡ ಸಾಹಿತ್ಯ ಪ್ರಜ್ಞೆಯನ್ನು ವಿಸ್ತರಿಸಿದ ನೆಲ. ಆ ಕಾರಣಕ್ಕಾಗಿ ಪ್ರತಿಯೊಬ್ಬ ಕನ್ನಡತಿ, ಕನ್ನಡಿಗನೂ ಕೂಡ ಧಾರವಾಡದ ಮಣ್ಣಿಗೆ ಋಣಿಗಳು. ಈ ಕನ್ನಡದ ನೆಲದಲ್ಲಿ ಕೆಲವೇ ದಿನಗಳ ಅಂತರದಲ್ಲಿ ನಡೆದ ಧಾರವಾಡ ಸಾಹಿತ್ಯ ಸಂಭ್ರಮ ಹಾಗೂ ಕರ್ನಾಟಕ ಜನಸಾಹಿತ್ಯ ಸಮಾವೇಶ ಕನ್ನಡ ನಾಡಿನ ಸ್ಪಷ್ಟವಾದ ಎರಡು ವೈರುಧ್ಯದ ನೆಲೆಗಳನ್ನ ಸಂಕೇತಿಸುತ್ತವೆ. ಇದು ಕನ್ನಡದ ಎರಡು ಮನಸ್ಥಿತಿಗಳ ಚಿಂತನೆಯ ಸ್ತರಗಳನ್ನು ಪ್ರತಿನಿಧಿಸುತ್ತದೆ. ’ಸಂಭ್ರಮ’ವು ಪ್ರಾಯೋಜಕತ್ವದ, ವ್ಯಾಪಾರೀಕರಣದ, ಹಲವು ನಿರ್ಬಂಧನೆಯ, ಐಷಾರಾಮಿಯ, ಬಹುತೇಕ ಒಂದೇ ಕೋಮು-ಜಾತಿಯ ಸಾಹಿತಿಗಳ ಆಸ್ಥಾನ ಗೋಷ್ಠಿಯಾದರೆ (ಪ್ರಜ್ಞಾವಂತರ ಪ್ರತಿಭಟನೆಯಿಂದಾಗಿ ಸಂಭ್ರಮಕಾರರು ತಮ್ಮ ಪೂರ್ವಗ್ರಹ ಮನಸ್ಥಿತಿಯನ್ನು ಬದಲಾಯಿಸಿಕೊಂಡದ್ದು ಸ್ವಾಗತಾರ್ಹ. ಧಿಕ್ಕಾರಕ್ಕೆ ದಿಕ್ಕೆಡುತ್ತಾರೆ ಎಂಬುದಕ್ಕೆ ಇದು ಸಾಕ್ಷಿ.); ’ಜನಸಾಹಿತ್ಯ ಸಮಾವೇಶ’ವು ಎಲ್ಲಾ ಜಾತಿ ಸಮುದಾಯದ ಜನಸಾಮಾನ್ಯರ, ಪ್ರಜಾಸತ್ತಾತ್ಮಕ ಮೌಲ್ಯಾಧಾರಿತ ಮುಕ್ತ ಅವಕಾಶ, ಚರ್ಚೆ, ಚಿಂತನೆಯ; ಯಾವುದೇ ಕಂಪನಿ, ಮಾಧ್ಯಮ, ಅಕಾಡೆಮಿಗಳ ಪ್ರಾಯೋಜಕತ್ವದ ಹಂಗಿಲ್ಲದ; ನಿರ್ಬಂಧನೆಗಳಿಲ್ಲದ ವಿಚಾರ ಪೂರ್ಣ ಚರ್ಚಾ ಗೋಷ್ಠಿ. ಈ ಬಗೆಯ ಎರಡು ವೈರುಧ್ಯದ ನೆಲೆಗಳ ಮುಖಾಮುಖಿ, ಸಂಘರ್ಷಾತ್ಮಕ ಚರ್ಚೆ, ವಾಗ್ವಾದಗಳಿಗೆ ಐತಿಹಾಸಿಕ ಹಿನ್ನೆಲೆ ಇದೆ. ’ಸಂಭ್ರಮ’ ಹಾಗೂ ’ಸಮಾವೇಶ’ದ ಮುಖಾಮುಖಿ ಚರ್ಚೆ ಚರಿತ್ರೆಯ ಪುನರಾವರ್ತನೆ, ಮುಂದುವರಿಕೆಯ ಪಾಠವೇ ಆಗಿದೆ.

 ಎಪ್ಪತ್ತರ ದಶಕದಲ್ಲಿ ಬಿ. ಬಸವಲಿಂಗಪ್ಪನವರು ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪ್ರಾಸಂಗಿಕವಾಗಿ ಮಾತನಾಡುತ್ತ ’ಕನ್ನಡ ಸಾಹಿತ್ಯದಲ್ಲಿ ಬಹುತೇಕ ಬೂಸಾ ಸಾಹಿತ್ಯವಿದೆ’ ಎಂದು ಹೇಳಿದರು. ಈ ಅವಕಾಶವನ್ನು ದುರುಪಯೋಗ ಪಡಿಸಿಕೊಂಡ ಜಾತಿವಾದಿಗಳು ದಲಿತ ವಿರೋಧಿ ಜಾತಿ ಗಲಭೆಯನ್ನಾಗಿ ಮಾರ್ಪಡಿಸಿ, ಬಸವಲಿಂಗಪ್ಪನವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಕೊಡುವಂತೆ ಮಾಡಿದರು. ಆ ಮೂಲಕ ಚಾರಿತ್ರಿಕವಾದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹುಟ್ಟಿಗೆ ಕಾರಣರಾದರು. ೧೯೭೯ರಲ್ಲಿ ಚನ್ನಣ್ಣವಾಲೀಕಾರರು ಹಂಪನಾ ಅವರಿಗೆ ಪತ್ರ ಬರೆದು ಧರ್ಮಸ್ಥಳದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ದಲಿತ ಗೋಷ್ಠಿಯೊಂದನ್ನು ಏರ್ಪಡಿಸಬೇಕೆಂದು ಕೇಳಿದರು. ಅದಕ್ಕೆ ಪ್ರತಿಯುತ್ತರವಾಗಿ ಹಂಪನಾ ಅವರು ’ಕನ್ನಡದಲ್ಲಿ ದಲಿತ, ಬಲಿತ, ಕಲಿತ ಎಂಬುದಿಲ್ಲ’ ಎಂದು ಹೇಳುವ ಮೂಲಕ ಪರ್ಯಾಯವಾದ ಬಂಡಾಯ ಸಾಹಿತ್ಯ ಸಮ್ಮೇಳನ, ಸಂಘಟನೆ, ಚಳವಳಿಯ ಹುಟ್ಟಿಗೆ ಕಾರಣರಾದರು. ಹಾಗೆಯೇ ಧಾರವಾಡದ ಸಂಭ್ರಮಕಾರರು ತಮ್ಮ ಅಜ್ಞಾನದ ಅತಿರೇಕದ ಕಾರಣದಿಂದಾಗಿ ’ಕರ್ನಾಟಕ ಜನಸಾಹಿತ್ಯ ಸಮಾವೇಶ’ದ ಹುಟ್ಟಿಗೆ ಕಾರಣರಾದದ್ದು ಚಾರಿತ್ರಿಕ ಸಂಗತಿಯಾಗಿದೆ.
ಹಲವು ಕಾರಣಗಳಿಗಾಗಿ ಕರ್ನಾಟಕ ಜನಸಾಹಿತ್ಯ ಸಮಾವೇಶವು ಮುಖ್ಯವೆನಿಸುತ್ತದೆ. ’ಹಳೆ ಬೇರು ಹೊಸ ಚಿಗುರು’ ಪರಿಕಲ್ಪನೆಯಲ್ಲಿ ಹುಟ್ಟಿಕೊಂಡಿರುವ ಸಮಾವೇಶವು, ಹಿರಿಯರ ಅನುಭವ ಹಾಗೂ ಕಿರಿಯರ ಚಿಂತನೆಗಳನ್ನು ಒಗ್ಗೂಡಿಸುವ ಹಿನ್ನೆಲೆಯಲ್ಲಿ ಯಶಸ್ವಿಯಾಗಿದೆ. ದೇವನೂರ ಮಹಾದೇವ ಅವರು ಹೇಳಿದ ಯುವಕರು ನಾಯಕತ್ವವನ್ನು ವಹಿಸಿಕೊಂಡರೆ, ನಾವು ಅವರನ್ನು ಹಿಂಬಾಲಿಸುತ್ತೇವೆ ಎಂಬ ಮಾತುಗಳನ್ನು ಸಮಾವೇಶದುದ್ದಕ್ಕೂ ಬಹುತೇಕರು ನೆನಪು ಮಾಡಿಕೊಳ್ಳುತ್ತಾ, ’ಹಿರಿಯರನ್ನು ಗೊಬ್ಬರ ಮಾಡಿಕೊಂಡು ಕಿರಿಯರು ಬೆಳೆಯಬೇಕಿದೆ’ ಎಂಬ ತಾತ್ವಿಕತೆಯನ್ನು ಪ್ರತಿಪಾದಿಸಿದರು. ಎಚ್. ಜನಾರ್ಧನ್(ಜನ್ನಿ) ಅವರ ಬಿದುರಿನ ತತ್ವಪದ, ಹೋರಾಟದ ಹಾಡಿನೊಂದಿಗೆ ಆರಂಭವಾದ ಸಮಾವೇಶವು, ಸತೀಶ್ ಕುಲಕರ್ಣಿ ಅವರ ’ಕಟ್ಟುತ್ತೇವ ನಾವು ಕಟ್ಟುತ್ತೇವ...’ ಹಾಗೂ ಕುವೆಂಪು ಅವರ ’ಓ ನನ್ನ ಚೇತನ...’ ಎಂಬ ಅನಿಕೇತನ ಗೀತೆಯನ್ನು ಜನ್ನಿ ಹಾಡುವಾಗ ಇಡೀ ಸಭೆ ಅವರ ಹಾಡಿಗೆ ದನಿಯಾಯಿತು. ಈ ಎಲ್ಲಾ ಹಾಡುಗಳು ಎಪ್ಪತ್ತರ ದಶಕದ ದಲಿತ ಚಳವಳಿಯ ಹೋರಾಟದ ಹಾಡುಗಳನ್ನ ನೆನಪಿಸುತ್ತಾ ಸಮಾವೇಶದ ಆಶಯವನ್ನು ಪ್ರತಿಪಾದಿಸಿದವು. ಡಾ. ಎಂ. ಡಿ. ಒಕ್ಕುಂದ ಅವರ ಪ್ರಸ್ತಾವನೆಯ ಮಾತುಗಳು ಸಮಾವೇಶದ ರೂಪುರೇಷೆ, ಪರಿಕಲ್ಪನೆ, ದೃಷ್ಟಿಕೋನದ ಚೌಕಟ್ಟನ್ನು ನಿರ್ಮಿಸಿಕೊಟ್ಟರೆ; ಆಶಯದ ಮಾತುಗಳನ್ನಾಡಿದ ಮರಾಠಿ ದಲಿತ ಲೇಖಕರಾದ ಲಕ್ಷ್ಮಣ ಗಾಯಕವಾಡ, ಬಾನು ಮುಷ್ತಾಕ್, ಡಾ. ಜಿ. ರಾಮಕೃಷ್ಣ ಅವರು ಹೋರಾಟದ ಚರಿತ್ರೆಯನ್ನ, ಸಾಹಿತ್ಯದ ತಾತ್ವಿಕತೆಯನ್ನ, ಸಾಹಿತ್ಯ-ಸಮಾಜ-ಲೇಖಕರ ನಡುವಿನ ಸಂಬಂಧದ ಜಿಜ್ಞಾಸೆಯನ್ನ ತರ್ಕಕ್ಕೆ ಒಡ್ಡಿದರು. ಈ ಎಲ್ಲಾ ಹಿರಿಯರ ಮಾತುಗಳನ್ನ ಪ್ರಜ್ಞೆಯಾಗಿಸಿಕೊಂಡ ಇಡೀ ಸಮಾವೇಶವು ತನ್ನೆಲ್ಲಾ ಚಿಂತನೆ, ಚರ್ಚೆಯ ಮೂಲಕ ಪರಂಪರೆಯನ್ನು ಪುನರ್ ಅವಲೋಕಿಸುತ್ತಾ, ಪ್ರಸ್ತುತಕ್ಕೆ ಮುಖಾಮುಖಿಯಾಗಿಸುತ್ತಾ ಸಂವಾದಿಸತೊಡಗಿದ್ದು ವಿಶೇಷ. ವರ್ತಮಾನದ ಬಿಕ್ಕಟ್ಟು; ಸಮಾಜ ಮತ್ತು ನನ್ನ ಬರಹ; ಕವಿಗೋಷ್ಠಿ; ಹೊಸತಲೆಮಾರಿನ ಸಾಹಿತ್ಯ; ಸಮಾಜ ವಿಜ್ಞಾನ ಬರೆಹ ಮತ್ತು ಸಂಸ್ಕೃತಿ ಚಿಂತನೆ; ಹೊಸತಲೆಮಾರು ನಮ್ಮ ಗ್ರಹಿಕೆ; ಹೊಸ ಸಾಹಿತ್ಯ ಚಳವಳಿಯ ಸಾಧ್ಯತೆ ಎಂಬ ಪರಿಕಲ್ಪನೆಯಲ್ಲಿ ರೂಪಿತಗೊಂಡ ಸಮಾವೇಶವು ಕರ್ನಾಟಕದ ಸಾಮಾಜಿಕ, ರಾಜಕೀಯ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ನೆಲೆಗಳನ್ನು ವಿಮರ್ಶಾತ್ಮಕ ವಿಶ್ಲೇಷಣೆಗೆ ಒಳಪಡಿಸಿತು.
ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಂಶೋಧಕರು, ಹೋರಾಟಗಾರರು, ಚಿಂತಕರನ್ನೊಳಗೊಂಡಿದ್ದ ಈ ಸಮಾವೇಶದಲ್ಲಿ ಕರ್ನಾಟಕದ ದಲಿತ, ಬಂಡಾಯ, ರೈತ, ಮಹಿಳಾ ಚಳವಳಿಗಳನ್ನ ಮೆಲುಕು ಹಾಕುತ್ತಲೇ, ಅವುಗಳ ಇತಿಮಿತಿ-ಮೌಲ್ಯಗಳನ್ನ ವಿಮರ್ಶಾತ್ಮಕವಾಗಿ ಚರ್ಚಿಸುತ್ತ ಪ್ರಸ್ತುತದ ಸಾಮಾಜಿಕ ಚಳವಳಿಗಳ ಸಾಧ್ಯತೆಗಳೇನು ಎಂಬುದನ್ನು ಕುರಿತು ಗಂಭೀರವಾಗಿ ವಿವೇಚಿಸಲಾಯಿತು. ಕೇವಲ ಸಾಹಿತ್ಯಕ ಸಂವಾದ ಮಾತ್ರವಾಗಿರದ ಸಮಾವೇಶವು: ’ಅಂತರ್‌ಜಲ ಬರಿದಾಗಿ ಭೂಮಿ ಬಿಸಿಯಾಗುತ್ತಿರುವ ದುರಂತ, ಪ್ರಕೃತಿಯ ವಿನಾಶ, ಪ್ರಸ್ತುತ ರಾಜಕಾರಣದ ಸೋಗಲಾಡಿತನ, ಪ್ರಜಾಸತ್ತಾತ್ಮಕ ರಾಜಕಾರಣದ ಅಗತ್ಯ, ಕೊಳಗೇರಿ ಆದಿವಾಸಿ ದಲಿತ ವೇಶ್ಯಾ ಧಾರ್ಮಿಕ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ತಲ್ಲಣಗಳು, ಶೋಷಿತ ಅಸ್ಪೃಶ್ಯ ಸಮುದಾಯದ ಲೇಖಕ-ಲೇಖಕಿಯರ ತೊಳಲಾಟ, ವಚನ ಸಾಹಿತ್ಯ ಚಳವಳಿಯ ಮರು ನೆನಪು, ಹಿರಿಯರ ಅರಿವಿನಲ್ಲಿ ಕಿರಿಯರು ಮತ್ತು ಅವರ ಬರಹ, ಕಿರಿಯರ ಪ್ರಜ್ಞೆಯಲ್ಲಿ ಪ್ರಸ್ತುತ ಸಮಾಜಿಕ ಸಂಗತಿಗಳು’ ಇತ್ಯಾದಿ ಮೌಲಿಕ ವಿಚಾರಗಳು ಸಮಾವೇಶದ ಉದ್ದಕ್ಕೂ ಮಂಥನಕ್ಕೆ ಒಳಗಾದವು. ಕೇಸರಿ ಹರವೂ ನಿರ್ದೇಶನದ ನಗರ ಮತ್ತು ನದೀ ಕಣಿವೆ ಎಂಬ ಸಾಕ್ಷ್ಯಚಿತ್ರ ಪ್ರದರ್ಶನವು ನಮ್ಮೊಳಗಿರಬಹುದಾದ ನಿಸರ್ಗ ಕುರಿತ ಕಾಳಜಿಗಳೇನು ಎಂಬುದನ್ನು ಪ್ರಶ್ನಿಸುತ್ತಲೇ ಪ್ರತಿಯೊಬ್ಬರನ್ನು ಆತ್ಮಾವಲೋಕನಕ್ಕೆ ಹಚ್ಚಿತು.

ದು. ಸರಸ್ವತಿ, ನಾಗೇಶ ಹೆಗಡೆ, ಬಂಜಗೆರೆ ಜಯಪ್ರಕಾಶ, ಎಸ್. ಬಿ. ಜೋಗುರ, ಮುಜಾಫರ್ ಅಸ್ಸಾದಿ, ಕುಂ. ವೀರಭದ್ರಪ್ಪ, ಎಸ್. ಜಿ. ಸಿದ್ಧರಾಮಯ್ಯ, ಎಚ್. ಎಸ್. ಅನುಪಮಾ, ಎಸ್. ಗಂಗಾಧರಯ್ಯ, ಕೆ. ಫಣಿರಾಜ್, ರಂಗನಾಥ್ ಕಂಟನಕುಂಟೆ, ಜಿ.ಪಿ. ಬಸವರಾಜು, ನಟರಾಜ್ ಬೂದಾಳು, ಸಿದ್ಧನಗೌಡ ಪಾಟೀಲ್, ಬಿ. ಎಂ. ಪುಟ್ಟಯ್ಯ, ರಹಮತ್ ತರೀಕೆರೆ ಅವರುಗಳು ಮಂಡಿಸಿದ ಚಿಂತನೆಗಳು ಹಾಗೂ ಬರಹಗಾರರಾದ ಸರ್ಜಾಶಂಕರ್ ಹರಳಿಮಠ, ಪೀರ್‌ಬಾಷಾ, ವೀರಣ್ಣ ಮಡಿವಾಳರ, ಅನಸೂಯ ಕಾಂಬಳೆ, ವಸಂತ ಬನ್ನಾಡಿ, ಟಿ.ಕೆ. ದಯಾನಂದ, ಬಾಲ ಗುರುಮೂರ್ತಿ, ರಮೇಶ ಅರೋಲಿ ಅವರ ಅಸಲಿ ಅನುಭವದ ಮಾತುಗಳು ಇಡೀ ಸಮಾವೇಶಕ್ಕೆ ಜೀವಂತಿಕೆಯನ್ನ ತಂದುಕೊಟ್ಟವು. ತಮ್ಮಷ್ಟಕ್ಕೆ ತಾವೇ ತಮ್ಮ ಇತಿಮಿತಿಯೊಳಗೆ ಕೆಲಸ ಮಾಡುತ್ತಿರುವ ದಲಿತ, ರೈತ, ಮಹಿಳಾ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಹೋರಾಟಗಾರರನ್ನ; ಎಲ್ಲಾ ಜಾತಿ, ಮತ, ಧರ್ಮದ ಪ್ರಜ್ಞಾವಂತರನ್ನ; ಸೂಕ್ಷ್ಮ ಚಿಂತನೆಯ ಯುವ ಲೇಖಕ-ಲೇಖಕಿಯರನ್ನ; ಅಲೆಮಾರಿ ಆದಿವಾಸಿ ಸಮುದಾಯಗಳನ್ನ; ಮನುಷ್ಯತ್ವ ಮತ್ತು ಪ್ರಜಾಪ್ರಭುತ್ವದ ಬಗೆಗೆ ನಂಬಿಕೆ ಇರುವವರನ್ನು ಜನಸಾಹಿತ್ಯ ಸಂಘಟನೆಯ ವೇದಿಕೆ ಅಡಿಯಲ್ಲಿ ಸಂಘಟಿಸಿ ಮುಂದಿನ ದಿನಗಳಲ್ಲಿ ಹೊಸ ಬಗೆಯ ಹೋರಾಟ, ಚಿಂತನೆಯನ್ನ ರೂಪಿಸುವ ಆಶಾವಾದವನ್ನು ಬಿಂಬಿಸಿದ್ದು ಸಮಾವೇಶದ ಮೌಲಿಕ ನಿರ್ಣಯದ ಹೊಸ ಹೆಜ್ಜೆಯಾಗಿದೆ. ಆ ನಿಟ್ಟಿನಲ್ಲಿ ಕರ್ನಾಟಕದ ಪ್ರಜ್ಞಾವಂತ ಮನಸ್ಸುಗಳು ಕ್ರೀಯಾಶೀಲವಾಗುವ ಮೂಲಕ ನೆಮ್ಮದಿಯ ನಾಳೆಗಳನ್ನ ಕಂಡುಕೊಳ್ಳಬೇಕಿದೆ.

Tuesday, March 26, 2013

ಜನಸಾಹಿತ್ಯ ಸಮಾವೇಶದ ಹಾಡಿನ ಕೆಲ ಚಿತ್ರಗಳು


https://mail-attachment.googleusercontent.com/attachment/?ui=2&ik=64db019aae&view=att&th=13da0a8299bd7255&attid=0.21&disp=inline&realattid=file20&safe=1&zw&saduie=AG9B_P_apJ-8s6ZpZQ22vq2XigUY&sadet=1364353912442&sads=I40kS2lkVKFeDJp7xdHB5mSq8d4&sadssc=1https://mail-attachment.googleusercontent.com/attachment/?ui=2&ik=64db019aae&view=att&th=13da0a8299bd7255&attid=0.22&disp=inline&realattid=file21&safe=1&zw&saduie=AG9B_P_apJ-8s6ZpZQ22vq2XigUY&sadet=1364353926910&sads=_12HZ5S39HLigfNPVTpOe34Q0f0
https://mail-attachment.googleusercontent.com/attachment/?ui=2&ik=64db019aae&view=att&th=13da0a8299bd7255&attid=0.24&disp=inline&realattid=file23&safe=1&zw&saduie=AG9B_P_apJ-8s6ZpZQ22vq2XigUY&sadet=1364353939529&sads=DCR6TThOyWo9PrR8oGKakHt1HNAhttps://mail-attachment.googleusercontent.com/attachment/?ui=2&ik=64db019aae&view=att&th=13da0a8299bd7255&attid=0.23&disp=inline&realattid=file22&safe=1&zw&saduie=AG9B_P_apJ-8s6ZpZQ22vq2XigUY&sadet=1364353931712&sads=ZkYhNsXiwd_gJiTzSRk_2vxxP4c
https://mail-attachment.googleusercontent.com/attachment/?ui=2&ik=64db019aae&view=att&th=13da0a8299bd7255&attid=0.25&disp=inline&realattid=file24&safe=1&zw&saduie=AG9B_P_apJ-8s6ZpZQ22vq2XigUY&sadet=1364353950436&sads=OSRVBnfL3Ttv63Fc1f0XOf17AbAhttps://mail-attachment.googleusercontent.com/attachment/?ui=2&ik=64db019aae&view=att&th=13da0a8299bd7255&attid=0.26&disp=inline&realattid=file25&safe=1&zw&saduie=AG9B_P_apJ-8s6ZpZQ22vq2XigUY&sadet=1364353963593&sads=ZhLro2vUkcCvE3Xawe7y-XtFwns

ಜನಸಾಹಿತ್ಯ ಸಮಾವೇಶದ ಕೆಲ ಚಿತ್ರಗಳು
Photo


 1. ಕಡ ತಂದ ವಿಚಾರ, ಚಂದಾ ಎತ್ತಿದ ಹಣ
  ಗೋಡೆ ಮೇಲೆ ಗೀಚಿದ ಘೋಷಣೆ
  ಚಲೋ, ರ‍್ಯಾಲಿ, ವೇದಿಕೆ, ಶಾಮಿಯಾನ
  ಹೊಟ್ಟೆ ಹಸಿವವರೆಗೆ ಭೀಕರ ಭಾಷಣ....
  http://thamboori.blogspot.in/2013/03/blog-post_23.html
  (ನಿನ್ನೆ ಧಾರವಾಡದಲ್ಲಿ ನಡೆದ ಕರ್ನಾಟಕ ಜನಸಾಹಿತ್ಯ ಸಮಾವೇಶದಲ್ಲಿ ಕವನ.... )

 2. ಜನಸಾಹಿತ್ಯದ ನಡುವೆ ಒಂದಿಷ್ಟು ಬದಲಾವಣೆಯ, ಹೋರಾಟದ ಹಾಡುಗಳು.. 

 3. ಧಾರವಾಡಕ್ಕೆ ಬರ್ರಿ

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...