Thursday, February 28, 2013

ದೇವನೂರರ ಬರವಣಿಗೆಯ ವಿಚಾರಸಂಕಿರಣ ಮತ್ತು ಪೊರೆ ಕಳಚಿದ ಪರಿ

 

-ಡಾ.ಎಸ್.ಬಿ.ಜೋಗುರ

 

ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನ ಕಿಕ್ಕಿರಿದು ತುಂಬಿತ್ತು. ಹಾಗೆ ಬಂದವರು ಯಾವುದೇ ಬಗೆಯ ಒತ್ತಡಗಳನ್ನು ಬೆನ್ನಿಗಂಟಿಸಿಕೊಂಡು ಬಂದವರಾಗಿರಲಿಲ್ಲ. ದೇವನೂರ ಮಹಾದೇವರ ಮೇಲಿನ ಪ್ರಾಮಾಣಿಕ ಪ್ರೀತಿ, ಮತ್ತು ಅವರ ಬರವಣಿಗೆಯಲ್ಲಿಯ ಸತ್ಯ, ಸತ್ವ, ಶಕ್ತಿಯನ್ನು ನಂಬಿ ಬಂದವರಾಗಿದ್ದರು. ಹಾಗಾಗಿಯೇ ಬೆಳಿಗ್ಗೆಯಿಂದ ಕುಳಿತವರು ಸಾಯಂಕಾಲದವರೆಗೂ ಎಲ್ಲೂ ಕದಲಲಿಲ್ಲ. ದೇವನೂರರ ಬರವಣಿಗೆಯನ್ನಾಧರಿಸಿದ ಕ್ರಿಯೆ, ತತ್ವ ಮತ್ತು ಅಭಿವ್ಯಕ್ತಿ ಎನ್ನುವ ಒಂದು ದಿನದ ವಿಚಾರ ಸಂಕಿರಣ ಎಲ್ಲ ಬಗೆಯ ಅಕಾಡೆಮಿಕ್ ಸೆಮಿನಾರ್ ಗಳನ್ನು, ಇತ್ತೀಚಿನ ಎಲ್ಲ ಬಗೆಯ ಸಾಹಿತ್ಯ ಕಾರ್ಯಕ್ರಮಗಳನ್ನು ಓವರ್ ಟೇಕ್ ಮಾಡುವ ಹಾಗೆ ನಡೆದದ್ದು ಒಂದು ದಾಖಲೆ.
ಕಾರ್ಯಕ್ರಮದ ಚಾಲನೆಯಲ್ಲಿ ನಟರಾಜ ಹುಳಿಯಾರರ ಕ್ರಿಯಾತ್ಮಕ ಚಲನಶೀಲತೆಯ ಮಾತುಗಳು, ದೇವನೂರರು ಯುವಜನತೆಗೆ ನೀಡಿದ ವಿಶ್ವಮಾನವ ಸಂದೇಶ ಮತ್ತು ಕೃತಿಕೇಂದ್ರಿತ ಜೀವನಪ್ರೀತಿಯ ಮಾತು ಇಡೀ ಸಭಾಭವನದ ಭಾವಪರವಶತೆಗೆ ಕಾರಣವಾಗಿತ್ತು. ಪುಟ್ಟಪ್ಪನವರ ಅಧ್ಯಕ್ಷೀಯ ನುಡಿಗಳೊಂದಿಗೆ ಮುಕ್ತಾಯವಾದ ಮೊದಲ ಘಟ್ಟ ಎರಡನೆಯ ಹಂತದ ಗೋಷ್ಟಿಗಳ ಕಾರ್ಯಕ್ರಮಕ್ಕೆ ಎಡೆ ಮಾಡಿಕೊಟ್ಟಿತು.
‘ಕ್ರಿಯೆ’ ಎನ್ನುವ ಮೊದಲ ಗೋಷ್ಟಿಯಲ್ಲಿ ಡಾ. ತುಕಾರಾಂ ದೇವನೂರರ ಒಡನಾಟ ತಮ್ಮನ್ನು ರೂಪಿಸಿದ ಬಗೆಯನ್ನು ಎಳೆ ಎಳೆೆಯಾಗಿ ಬಿಡಿಸಿಟ್ಟರೆ, ಮೋಹನ ನಾಗಮ್ಮನವರ ಅವರು ದೇವನೂರರು ತಮ್ಮ ಎದುರಿಗಿರುವ ಒಂದು ಆದರ್ಶಎಂದರು. ಎರಡನೆಯ ಗೋಷ್ಟಿ ‘ತತ್ವ’ ದಲ್ಲಿ ಹಂಪಿ ವಿಶ್ವವಿದ್ಯಾಲಯದ ಬಿ.ಎಂ.ಪುಟ್ಟಯ್ಯನವರು ದೇವನೂರರ ಚಿಂತನೆ ಒಟ್ಟು ಮನುಕುಲದ ಕಾಳಜಿಯ ಚಿಂತನೆ ಎಂದರೆ, ಅಶೋಕ ಶೆಟ್ಟರ್ ಅವರು ದೇವನೂರರನ್ನು ಒಂದು ರೇಡಿಮೇಡ್ ಚೌಕಟ್ಟಿಗೆ ಹೊಂದಿಸಲಾಗದು ಎಂದರು. ಎಸ್.ಬಿ.ಜೋಗುರ ಮಾತನಾಡಿ ದೇವನೂರರಲ್ಲಿ ಒಬ್ಬ ಸಮಾಜಶಾಸ್ತ್ರಜ್ಞ, ಮಾನವಶಾಸ್ತ್ರಜ್ಞ, ರಾಜಕೀಯ ಚಿಂತಕ ಅಡಕವಾಗಿರುವದಿದೆ ಎಂದರು.
ಮೂರನೇಯ ಗೋಷ್ಟಿಯಲ್ಲಿ ಮಾತನಾಡಿದ ಸಬಿತಾ ಬನ್ನಾಡಿ ದೇವನೂರರ ಕಥನಕ್ರಮವನ್ನು ಅತ್ಯಂತ ವಿಶಿಷ್ಟವಾದುದು ಎಂದು ಕೊಂಡಾಡಿದರೆ, ಕುಂಸಿ ಉಮೇಶ ಕೆಲವು ದೇವನೂರರ ಬದುಕಿನ ಕೆಲವು ತುಣುಕುಗಳನ್ನು ಎತ್ತಿ ತೋರಿಸಿ, ದೇವನೂರರು ಮಾತ್ರ ಹೀಗೆ ಬರೆಯಲು ಸಾಧ್ಯ ಎಂದರು. ಅಪ್ಪಗೆರೆ ಸೋಮಶೇಖರ ದೇವನೂರರನ್ನು ಒಂದೇ ರೀತಿಯಲ್ಲಿ ಗ್ರಹಿಸಲಾಗದು ಎಂದರು. ನಾಲ್ಕನೇಯ ಗೋಷ್ಟಿಯಲ್ಲಿ ಅವರ ಕಾದಂಬರಿಯ ಬಗ್ಗೆ ಮಾತನಾಡಿದ ನಟರಾಜ ಬೂದಾಳು ದೇವನೂರರ ಕೃತಿಗಳು ಮತ್ತೆ ಮತ್ತೆ ಓದಿದ ಮೇಲೂ ಅಗಮ್ಯವಾದುದನ್ನು ಹೇಳಲು ಹಾತೊರೆಯುವಂತಿರುತ್ತದೆ ಎಂದರು. ಮಲ್ಲಿಕಾರ್ಜುನ ಮೇಟಿಯವರು ದೇವನೂರರನ್ನು ನಾವು ವಿಭಿನ್ನವಾಗಿ ಓದಬೇಕಿದೆ ಎಂದರು. ಅರುಣಜೋಳದ ಕೂಡ್ಲಗಿಯವರು ದೇವನೂರರ ಬರವಣಿಗೆಯನ್ನು ವಸ್ತುನಿಷ್ಟವಾಗಿ ಅಧ್ಯಯನ ಮಾಡಬೇಕಿದೆ ಎಂದರು.
ಸಮಾರೋಪದಲ್ಲಿ ರಹಮತ ತರೀಕೇರೆ ಯವರು ದೇವನೂರರ ಬರವಣಿಗೆ ಮತ್ತು ದೇವನೂರರನ್ನು ರೂಪಿಸಿರುವುದು ಅವರ ನಾಲ್ಕು ದಶಕಗಳ ಹೋರಾಟ. ಆ ಹೋರಾಟವನ್ನು ದೇವನೂರರು ಬೆಳೆಸಿದರೆ, ದೇವನೂರರನ್ನು ಹೋರಾಟ ಬೆಳೆಸಿದೆ ಎನ್ನುವ ಮಾತನಾಡಿದರು. ಸಮಾರೋಪದ ಅಧ್ಯಕ್ಷರಾಗಿದ್ದ ದುರ್ಗಾದಾಸ್ ಅವರು ದೇವನೂರರ ಬರವಣಿಗೆಯಲ್ಲಿ ಮಾನವೀಯತೆ, ಅಂತ:ಕರುಣೆ ತುಂಬಿ ತುಳುಕುತ್ತಿದೆ ಎಂದರು.
ಒಂದು ಇಡೀ ದಿನ ದೇವನೂರರು ಆ ಸಭಾ ಭವನದಲ್ಲಿದ್ದ ಎಲ್ಲರನ್ನೂ ತಮ್ಮ ವಿಚಾರ ಮತ್ತು ಬರವಣಿಗೆಯ ಮೂಲಕ ಪರಕಾಯ ಪ್ರವೇಶವನ್ನು ಮಾಡಿದಂತಿತ್ತು. ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸಲ್ಪಟ್ಟ ಈ ದೇವನೂರರ ಬರಹದ ಬಗೆಗಿನ ವಿಚಾರ ಸಂಕಿರಣ ಅದರಲ್ಲಿ ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ತೊಡಗಿಸಿಕೊಂಡವರೆಲ್ಲರ ಪೊರೆ ಕಳಚುವ ಯತ್ನವನ್ನು ಮಾಡಿದೆ. ಇಂಥಾ ಒಂದು ಅಭೂತಪೂರ್ವವಾದ ವಿಚಾರಸಂಕಿರಣವನ್ನು ರೊಪಿಸಿ, ಸಂಘಟಿಸಿ ಯಶಸ್ಸುಗೊಳಿಸಿದ ಶ್ರೇಯಸ್ಸು ಮುಖ್ಯವಾಗಿ ಡಾ. ಎಮ್.ಡಿ.ವಕ್ಕುಂದ, ಬಸವರಾಜ ಸೂಳಿಬಾವಿ, ಶಂಕರ ಹಲಗತ್ತಿಯವರಿಗೆ ಸಲ್ಲುತ್ತದೆ. ಇವರ ಜೊತೆಗೆ ಮಾನಸಿಕವಾಗಿ, ಭೌತಿಕವಾಗಿ ಸಾಥ್ ನೀಡಿರುವ ಎಲ್ಲರೂ ಆ ದಿಸೆಯಲ್ಲಿ ಅಭಿನಂದನಾರ್ಹರು.

ಸಂಕಿರಣದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರಕೃಪೆ : ಹುಸೇನ್ ಪಾಷಾ

ವಿರೂಪಿತ ಚರಿತ್ರೆಯ ಬಲಿಪಶು ಟಿಪ್ಪು- ಇಸ್ಮತ್‌ ಪಜೀರ್‌


Nawab Tipu Sultan Bahadur


ರಾಷ್ಟ್ರೀಯತೆಯ ಪರಿಕಲ್ಪನೆಯೊಂದಿಗೆ ಹೋರಾಡಿದ ಪ್ರಪ್ರಥಮ ರಾಜ:
ನಮ್ಮ ಇತಿಹಾಸವನ್ನು ವಿರೂಪಗೊಳಿಸಿ ದಂತೆಯೇ ನಮ್ಮ ಸ್ವಾತಂತ್ರ ಸಂಗ್ರಾಮದ ಚರಿತ್ರೆಯನ್ನೂ ಕೆಲವು ಸಂದರ್ಭಗಳಲ್ಲಿ ತಿರುಚಲಾಗಿದೆ. ಉದಾ: ನಮ್ಮ ರಾಷ್ಟ್ರೀಯ ಚಳವಳಿಯಲ್ಲಿ ಮುಸ್ಲಿಮರ ಪಾತ್ರ ನಗಣ್ಯ. ಸ್ವಾತಂತ್ರ ಚಳವಳಿಯ ಬಗ್ಗೆ ಮುಸ್ಲಿಮರು ವಿಶೇಷ ಆಸ್ಥೆ ತೋರಿಸಿಲ್ಲ. ಅವರಿಗೆ ರಾಷ್ಟ್ರೀಯತೆಯ ಪರಿಕಲ್ಪನೆಯೋ, ಕಾಳಜಿಯೋ ಇರಲಿಲ್ಲ. ಇಂತಹ ಸತ್ಯಕ್ಕೆ ಅಪಚಾರವೆಸಗುವ ಕುತ್ಸಿತ ಪ್ರಯತ್ನಗಳು ಧಾರಾಳವಾಗಿ ನಡೆದಿದೆ. ಸ್ವಾತಂತ್ರದ ಸ್ಪಷ್ಟ ಪರಿಕಲ್ಪನೆಯೂ ಉಪಖಂಡದ ಪ್ರಜೆಗಳಲ್ಲಿ ಇರದೇ ಇದ್ದಂತಹ ಆ ಕಾಲದಲ್ಲಿ ಅಪ್ಪಟ ರಾಷ್ಟ್ರೀಯವಾದಿ ಧೋರಣೆಯೊಂದಿಗೆ ವಸಾಹತುಶಾಹಿ ಶಕ್ತಿಗಳೊಂದಿಗೆ ಕಾದಾಡಿ ರಣರಂಗದಲ್ಲೇ ರಮರಣವನ್ನಪ್ಪಿದ ಶಹೀದೇ ಮಿಲ್ಲತೇ ಫತೇ ಅಲಿ ಟಿಪ್ಪು ಸುಲ್ತಾನರ ಚರಿತ್ರೆಯ ಮೇಲೆ ಇತಿಹಾಸ ಲಂಪಟರು ಎರಚಿದ ಮಸಿ ಇಂದಿಗೂ ಮಾಸದಂತೆ ಪೀತ ಚರಿತ್ರೆಕಾರರ ಶನಿಸಂತಾನಿಗಳು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ.
ಟಿಪ್ಪುವನ್ನು ಓರ್ವ ಮೂಢ ಮತಾಂಧ ಎಂದು ಸುಳ್ಳಾರೋಪಿಸುವ ಭರದಲ್ಲಿ ಆತನಿಗಿದ್ದ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಇಲ್ಲವಾಗಿಸುವ ಪ್ರಯತ್ನ ಚರಿತ್ರೆಯುದ್ದಕ್ಕೂ ನಡೆಯುತ್ತಾ ಬಂದಿದೆ. ಅದೃಷ್ಟವಶಾತ್ ಸತ್ಯವನ್ನು ಒರೆಗೆ ಹಚ್ಚಿ ಅದಕ್ಕೆ ಇನ್ನಷ್ಟು ಹೊಳಪು ನೀಡುವಂತಹ ಸ್ವಸ್ಥ ಮನಸ್ಕ ಇತಿಹಾಸಕಾರರು ಲಂಪಟರಿಗೆ ಸಮರ್ಥ ವಾಗಿಯೇ ಕಾಲ ಕಾಲಕ್ಕೆ ಪ್ರತ್ಯುತ್ತರ ನೀಡುತ್ತಲೇ ಬಂದಿದ್ದಾರೆ. ಪ್ರಸ್ತುತ ಕಾಲಘಟ್ಟ ಭಾರತದ ಫ್ಯಾಸಿಸಂ ಉಚ್ಛ್ರಾಯ ಸ್ಥಿತಿಗೇರಿದ ಕಾಲಘಟ್ಟ. ಫ್ಯಾಸಿಸಂನ ಮೂಲ ಸಿದ್ಧಾಂತ ಒಂದು ಸುಳ್ಳನ್ನು ನೂರು ಬಾರಿ ಪುನರಾವರ್ತಿಸಿ ಅದನ್ನು ಸತ್ಯವೆಂದು ಸಾಬೀತುಪಡಿಸಲು ಹೆಣಗಾಡುವುದು.
ಕೆಲವು ಇತಿಹಾಸಕಾರರು ಟಿಪ್ಪು ರ, ಶೂರ ಸೇನಾನಿಯೇನೋ ಸರಿ ಆದರೆ ಅತನಿಗೆ ರಾಷ್ಟ್ರೀಯತೆಯ ಪರಿಕಲ್ಪನೆಯೇ ಇರಲಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಬರೆದದ್ದೂ ಇದೆ. ಆಸಕ್ತಿಯ ವಿಚಾರವೇನೆಂದರೆ ೧೭ನೇ ಶತಮಾನದಲ್ಲಿ ಪೋರ್ಚುUಸರೊಂದಿಗೆ ಕೆಚ್ಚೆದೆಯಿಂದ ಹೋರಾಡಿದ ರರಾಣಿ ಅಬ್ಬಕ್ಕಳನ್ನು ಭಾರತದ ಪ್ರಪ್ರಥಮ ಸ್ವಾತಂತ್ರ ಹೋರಾಟ ಗಾರ್ತಿಯೆನ್ನಲಾಗುತ್ತದೆ. ಆದರೆ ಉಪಖಂಡ ದಲ್ಲಿ ಸಾಮ್ರಾಜ್ಯಶಾಹಿ ಬ್ರಿಟಿಷರ ಕಪಿಮುಷ್ಠಿ ಯು ಮತ್ತಷ್ಟು ಬಲಿಷ್ಠಗೊಂಡ ಸಂದರ್ಭ ಅಂದರೆ ೧೮ನೇ ಶತಮಾನದ ಕೊನೆಯ ಒಂದೂವರೆ ದಶಕದಲ್ಲಿ ಉಪಖಂಡದ ಜನತೆಯ ಮೇಲೆ ದಾಸ್ಯದ ಸಂಕೋಲೆಯನ್ನು ಬಿಗಿಗೊಳಿಸಿದ ಬ್ರಿಟಿಷರ ವಿರುದ್ಧ ಕೆಚ್ಚೆದೆ ಯಿಂದ ಹೋರಾಡಿ ಹುತಾತ್ಮನಾದ ಟಿಪ್ಪುವನ್ನು ತನ್ನ ಸಾರ್ವಭೌಮತೆಯ ಉಳಿವಿಗಾಗಿ ಹೋರಾಡಿದ ಅರಸ ಎಂಬರ್ಥದಲ್ಲಿ ಚಿತ್ರಿಸಲಾಗುತ್ತಿದೆ.
೧೭೯೯ರ ಮೇ ೪ರಂದು ಟಿಪ್ಪು ಹುತಾತ್ಮನಾದ ಸುದ್ದಿ ತಿಳಿದಾಗ ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ ಮದ್ಯದ ಲೋಟವನ್ನೆತ್ತಿ ಲೇಡಿಸ್ ಎಂಡ್ ಜಂಟಲ್‌ಮ್ಯಾನ್, ಮದ್ಯದ ಈ ಗುಟುಕು ಇಂಡಿಯಾದ ಹೆಣಕ್ಕೆ ಎಂದು ಸಂತೋಷಾಚಾರಣೆ ಮಾಡಿದ್ದ. ಒಂದು ವೇಳೆ ಟಿಪ್ಪು ರಾಷ್ಟ್ರೀಯವಾದಿಯಾಗಿರದಿದ್ದರೆ ಆತ ಇಂಡಿಯಾದ ಹೆಣ ಎನ್ನುವುದಕ್ಕೆ ಬದಲಾಗಿ ಮೈಸೂರಿನ ಹೆಣ ಎನ್ನುತ್ತಿದ್ದನೇನೋ?
ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ವಿಸ್ತರಣೆಗೆ ಅತ್ಯಂತ ಪ್ರಬಲ ಮತ್ತು ಏಕೈಕ ತಡೆಯಾಗಿದ್ದದ್ದು ಟಿಪ್ಪು ಎಂಬ ಸತ್ಯವನ್ನು ಸ್ವತಃ ಬ್ರಿಟಿಷ್ ಪರವಿದ್ದ ಇತಿಹಾಸಕಾರರೇ ಬೇಕಾದಷ್ಟು ಕಡೆಗಳಲ್ಲಿ ದಾಖಲಿಸಿದ್ದಾರೆ. ಟಿಪ್ಪುರಣರಂಗದಲ್ಲಿ ಹುತಾತ್ಮ ನಾದ ಸುದ್ದಿ ತಿಳಿದಾಗ ಪಶ್ಚಾತ್ತಾಪದಿಂದ ನರಳಿದ ಮರಾಠರ ನಾನಾ ಹೃದಯವೇದನೆಯಿಂದ ಅಂದಿದ್ದ ಮಾತುಗಳನ್ನು ಬ್ರಿಟಿಷ್ ಇತಿಹಾಸಕಾರರು ಹೀಗೆ ದಾಖಲಿಸಿದ್ದಾರೆ. “Tippu is finished, the British power has increased. The whole East India is already theirs. Poona will be the next victim. Evil day seem to be ahead, there is no escape from destiny” ಈ ಮಾತುಗಳು ಟಿಪ್ಪುವಿಗೆ ಬ್ರಿಟಿಷರ ವಿರುದ್ಧವಿದ್ದ ರೋಷ, ಆತನ ಸ್ವಾತಂತ್ರ ವಾಂಛೆಗೆ ಅತೀ ದೊಡ್ಡ ನಿದರ್ಶನವೂ ಹೌದು.
ಟಿಪ್ಪು ಮರಾಠರನ್ನಾಗಲೀ ನಿಜಾಮರ ನ್ನಾಗಲೀ ಅಥವಾ ಇನ್ಯಾರೇ ದೇಶೀಯ ರಾಜರ ನ್ನಾಗಲೀ ತನ್ನ ಶತ್ರುಗಳೆಂದು ಪರಿಗಣಿಸಿರಲಿಲ್ಲ. ಬ್ರಿಟಿಷರನ್ನು ಉಪಖಂಡದಿಂದ ಒದ್ದೋಡಿಸುವ ಸಲುವಾಗಿ ಮರಾಠರು ಮತ್ತು ನಿಜಾಮರೊಂದಿಗೆ ಮೈತ್ರಿಯ ಹಸ್ತವನ್ನು ಟಿಪ್ಪು ಅನೇಕ ಬಾರಿ ಚಾಚಿದ್ದ. ಮೂರನೇ ಆಂಗ್ಲ ಮೈಸೂರು ಯುದ್ಧದ ಬಳಿಕ ಟಿಪ್ಪುಮರಾಠರ ಪ್ರತಿನಿಧಿ ಹರಿಪಂತನನ್ನು ಭೇಟಿಯಾಗಿ ಚೆನ್ನಾಗಿ ತಿಳಿದುಕೊಳ್ಳಿ. ಖಂಡಿತ ವಾಗಿಯೂ ನಾನು ನಿಮ್ಮ ಶತ್ರುವಲ್ಲ, ನಿಮ್ಮ ನಿಜವಾದ ಶತ್ರುಗಳು ಇಂಗ್ಲೀಷರು. ಅವರ ಕುರಿತಂತೆ ಎಚ್ಚರದಿಂದಿರಿ ಎಂದಿದ್ದ.-೧
ಗಾಂಧೀಜಿ ಯಂಗ್ ಇಂಡಿಯಾ ಪತ್ರಿಕೆ ಯಲ್ಲಿ ಬರೆದ ಲೇಖನವೊಂದರಲ್ಲಿ ಟಿಪ್ಪುವನ್ನು ಸ್ವಾತಂತ್ರ ಪ್ರವಾದಿ ಎಂದು ಕೊಂಡಾಡಿದ್ದರು. ೧೯೪೫ರ ಟಿಪ್ಪುಸ್ಮಾರಕೋತ್ಸವ ಸಂದರ್ಭ ಗಾಂಧೀಜಿಯವರು ಎ.ಜೆ.ಖಲೀಲರಿಗೆ ಬರೆದ ಪತ್ರವೊಂದರಲ್ಲಿ ಟಿಪ್ಪುವಿನ ಕಾಲದಲ್ಲಿ ಅವನು ಸಾಧಿಸಿದ ಕೆಲಸವೇ ಸಾಕು, ಅದೊಂದು ಆನಂದ ಮೂಲ, ಸ್ಫೂರ್ತಿ ಮೂಲ. ಒಂದೆಡೆ ಟಿಪ್ಪು ಬ್ರಿಟಿಷರನ್ನು ಉಪಖಂಡದಿಂದ ಒದ್ದೋಡಿಸುವ ಪ್ರಯತ್ನದಲ್ಲಿ ತಲ್ಲೀನನಾಗಿದ್ದರೆ, ಇನ್ನೊಂದೆಡೆ ನಮ್ಮ ಜನ ಹಿಂದೂ-ಮುಸ್ಲಿಂ ಎಂದು ಪರಸ್ಪರರೊಳಗೆ ಕಚ್ಚಾಡುತ್ತಾ ತಮ್ಮ ಬಾಗಿಲ ಬಳಿ ಇದ್ದ ಪರದೇಶಿ ಶತ್ರುವಿನ ಬಗ್ಗೆ ಉದಾಸೀನ ತಾಳಿದ್ದರು ಎಂದು ಉಲ್ಲೇಖಿಸಿದ್ದರು.
ಜವಾಹರ್‌ಲಾಲ್ ನೆಹರೂ ಅವರು ತನ್ನ ‘Discovery of India’ದಲ್ಲಿ ಹೈದರಾಲಿ-ಟಿಪ್ಪು ಬ್ರಿಟಿಷ್ ವಸಾಹತು ಶಾಹಿಯ ವಿರುದ್ಧ ಹೋರಾಡಿ ಈಸ್ಟ್ ಇಂಡಿಯಾ ಕಂಪೆನಿ ಸ್ಥಾಪಿಸ ಹೊರಟ ಪ್ರಭುತ್ವವನ್ನು ಸಂಪೂರ್ಣ ನಿರ್ನಾಮ ಮಾಡುವ ಹಂತಕ್ಕೆ ತಲುಪಿ ಬ್ರಿಟಿಷರಿಗೆ ವಿಪರೀತ ಯಾತನೆಯನ್ನು ತಂದೊಡ್ಡಿದ್ದರು ಎಂದು ಬರೆದಿದ್ದಾರೆ.
Alwood Equaite ತನ್ನ Romance of India ಕೃತಿಯಲ್ಲಿ ಒಂದು ವೇಳೆ ಹೈದರ್ ಜೀವಿಸಿದ್ದರೆ ಬಹುಶಃ ಆತ ಇಂಗ್ಲೀಷರೊಡನೆ ಸಂಧಾನ ಮಾಡಿ ಕೊಳ್ಳುತ್ತಿದ್ದನೇನೋ, ಆದರೆ ಟಿಪ್ಪುವಿನ ಉದ್ದೇಶ ಮಾತ್ರ ಇಂಗ್ಲೀಷರನ್ನು ಭಾರತದಿಂದ ಒದ್ದೋಡಿ ಸುವುದಾಗಿತ್ತು ಎಂದು ದಾಖಲಿಸಿದ್ದಾನೆ.
೧೭೮೭ರ ಫೆಬ್ರವರಿ ೨ರಂದು ಕಲ್ಲಿಕೋಟೆಯ ಫೌಜುದಾರ ಅರ್ಶದ್ ಬೇಗ್‌ನಿಗೆ ಬರೆದ ಪತ್ರವೊಂದರಲ್ಲಿ ಕಲ್ಲಿಕೋಟೆಯ ಜನರು ಬ್ರಿಟಿಷರಿಂದ ಯಾವುದೇ ಸಾಮಾನು ಸರಂಜಾಮು ಕೊಳ್ಳದಂತೆ ಅವರಿಗೆ ಕಟ್ಟಾಜ್ಞೆ ವಿಧಿಸಬೇಕು. ತನ್ಮೂಲಕ ಬ್ರಿಟಿಷರಿಗೆ ಸಂಕಷ್ಟ ವನ್ನು ತಂದೊಡ್ಡಬೇಕು ಎಂದು ಟಿಪ್ಪು ಬರೆದಿದ್ದನು. -೨
ಒಟ್ಟಾರೆಯಾಗಿ ಹೇಳುವುದಾದರೆ ರಾಷ್ಟ್ರೀಯತೆಯ ಪರಿಕಲ್ಪನೆಯನ್ನಿಟ್ಟು ಹೋರಾಡಿದ ವೊಟ್ಟ ಮೊದಲ ಅರಸ ಟಿಪ್ಪು. ಪರಕೀಯರ ಗುಲಾಮಗಿರಿಯಲ್ಲಿ ನಮ್ಮ ಜನತೆ ನಲುಗುವುದರ ಕುರಿತು ಟಿಪ್ಪುವಿಗೆ ಅಪಾರ ವೇದನೆಯಿತ್ತು. ಆದ್ದರಿಂದಲೇ ಸಾಗರದಾಚೆ ಯಿಂದ ಬಂದವರನ್ನು ಮಾತ್ರ ಟಿಪ್ಪು ಶತ್ರುಗಳೆಂದು ಪರಿಗಣಿಸಿದ್ದ. ದೇಶೀಯ ರಾಜರುಗಳ ಮೇಲೆ ಟಿಪ್ಪುವಿಗೆ ನಿಜವಾಗಿಯೂ ದ್ವೇಷವಿರಲಿಲ್ಲ. ಕೆಲವು ದೇಶೀಯ ರಾಜರುಗಳು ವ್ಯಾಪಾರಕ್ಕಾಗಿ ಬಂದ ಬ್ರಿಟಿಷರಿಗೆ ಸಾಮ್ರಾಜ್ಯ ವಿಸ್ತರಣೆಗೆ ಸಹಾಯ, ಸಹಕಾರ ನೀಡುತ್ತಿದ್ದು ದನ್ನು ಸಹಿಸದೇ ಟಿಪ್ಪು ಅವರ ಮೇಲೆಯೂ ಯುದ್ಧ ಹೂಡಬೇಕಾಗಿ ಬಂದಿತ್ತು. ಒಂದು ವೇಳೆ ಟಿಪ್ಪುವಿನ ಈ ಉನ್ನತ ವಿಚಾರಧಾರೆಗೆ ಅಂದಿನ ದೇಶೀಯ ರಾಜರು ಸಹಕರಿಸಿದ್ದಿದ್ದರೆ, ಟಿಪ್ಪುವಿಗೆ ಅಗತ್ಯ ಬೆಂಬಲ ನೀಡಿದ್ದಿದ್ದರೆ ೧೯೪೭ಕ್ಕಿಂತ ೧೫೦ ವರ್ಷಗಳ ಹಿಂದೆಯೇ ಭಾರತ ಸ್ವಾತಂತ್ರ ಪಡೆಯುತ್ತಿತ್ತು.
ನಾಡಿನ ರಕ್ಷಣೆಗಾಗಿ ಕರುಳ ಕುಡಿಗಳನ್ನು ಒತ್ತೆಯಿಟ್ಟ ಟಿಪ್ಪುವಿನ ಹೊರತಾದ ಇನ್ನೊಂದು ನಿದರ್ಶನ ಜಗತ್ತಿನ ಚರಿತ್ರೆಯಲ್ಲೇ ಸಿಗದು. ಪರಕೀಯರ ದಾಸ್ಯದಿಂದ ದೇಶವನ್ನು ವಿಮೋಚನೆಗೊಳಿಸುವ ನಿಟ್ಟಿನಲ್ಲಿ ರಣರಂಗ ದಲ್ಲೇ ರಮರಣವನ್ನಪ್ಪಿದ ಚರಿತ್ರೆ ಜಾಗತಿಕ ಇತಿಹಾಸದಲ್ಲೇ ವಿರಳ. ಅಂತಹ ವಿರಳಾತಿವಿರಳ ಅರಸರ ಪಾಲಿಗೆ ಸೇರಿದ ರಸ್ವಾತಂತ್ರ ಸೇನಾನಿ ಶಹೀದೇ ಮಿಲ್ಲತೇ ಫತೇ ಅಲಿ ಟಿಪ್ಪುಸುಲ್ತಾನ್....!
ಅಪೂರ್ವ ಮಾನವತಾವಾದಿ ಅರಸ: ಟಿಪ್ಪುತನ್ನ ವೈಯಕ್ತಿಕ ಬದುಕಿನಲ್ಲಿ ಓರ್ವ ಸಂಪ್ರದಾಯಸ್ಥ ಮುಸಲ್ಮಾನನಾಗಿದ್ದ. ಆದರೆ ಆತ ಎಂದೂ ತನ್ನ ಮುಸ್ಲಿಮೇತರ ಪ್ರಜೆಗಳ ಮೇಲೆ ತನ್ನ ನಂಬಿಕೆಯನ್ನು ಹೇರಿಲ್ಲ. ಆತ ಅತ್ಯಂತ ಸಹಿಷ್ಣು ರಾಜನಾಗಿದ್ದ ಮತ್ತು ಇತರ ಧರ್ಮೀಯರ ನಂಬಿಕೆಗಳನ್ನು ಅಪಾರವಾಗಿ ಗೌರವಿಸುತ್ತಿದ್ದ. ೧೭೮೭ರಲ್ಲಿ ಟಿಪ್ಪು ಹೊರಡಿಸಿದ ಘೋಷಣೆಯೊಂದು ಇಂತಿದೆ “ಪರಧರ್ಮ ಸಹಿಷ್ಣುತೆ ಕುರ್‌ಆನಿನ ಮೂಲಭೂತ ತತ್ವ”.
ಧರ್ಮದಲ್ಲಿ ಒತ್ತಾಯವಿಲ್ಲವೆಂದು ಕುರ್‌ಆನ್ ಹೇಳುತ್ತದೆ. ಸತ್ಯವಿವೇಚನೆಯು ದೋಷಾತೀತವಾದುದು. ಬೇರೆ ಧರ್ಮದ ದೈವ ವಿಗ್ರಹಗಳನ್ನು ದೂಷಿಸಬಾರದು ಎಂದು ಕುರ್‌ಆನ್ ಹೇಳುತ್ತದೆ. ಅಲ್ಲಾಹನನ್ನು ಬಿಟ್ಟು ಬೇರೆಯವರೊಡನೆ ಪ್ರಾರ್ಥಿಸುವರನ್ನು ನಿಂದಿಸಬೇಡಿ. ಹಾಗೆ ಮಾಡಿದರೆ ಅಲ್ಲಾಹನನ್ನೇ ದೂಷಿಸಿದಂತಾಗುತ್ತದೆ. ಅಲ್ಲಾಹನು ಇಚ್ಛಿಸಿದ್ದರೆ ನಮ್ಮನ್ನೆಲ್ಲಾ ಒಂದೇ ಕೋಮಿಗೆ ಸೇರಿಸುತ್ತಿದ್ದ..-೩
ಇಂತಹ ಅಪ್ಪಟ ಮಾನವತಾವಾದಿ ಟಿಪ್ಪುವಿಗೆ ಇತಿಹಾಸ ಲಂಪಟರು ಮತಾಂಧತೆಯ ಹಣೆಪಟ್ಟಿ ಹಚ್ಚಿ ಸತ್ಯಕ್ಕೆ ಅಪಚಾರವೆಸಗುತ್ತಿರುವುದು ದುರದೃಷ್ಟಕರ.
ಟಿಪ್ಪುವಿಗೆ ತಂದೆ ಹೈದರಾಲಿ ಹಿಂದೂ ಮತ್ತು ಇಸ್ಲಾಂ ಎರಡೂ ಧರ್ಮದ ಶಿಕ್ಷಣವನ್ನೂ ಕೊಡಿಸಿದ್ದ. ಮೌಲವಿ ಉಬೇದುಲ್ಲಾಹ್ ಇಸ್ಲಾಮೀ ಧಾರ್ಮಿಕ ಶಿಕ್ಷಣ ನೀಡುತ್ತಿದ್ದರೆ ಜೊತೆ ಜೊತೆಯಾಗಿ ಗೋವರ್ಧನ ಪಂಡಿತರು ಹಿಂದೂ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದರು. ಎಳೆವೆಯಲ್ಲೇ ಪಡೆದ ಈ ಶಿಕ್ಷಣ ಟಿಪ್ಪುವನ್ನು ಓರ್ವ ಅಪ್ಪಟ ಮಾನವತಾವಾದಿ ಯನ್ನಾಗಿ ರೂಪಿಸಿತು. ದೇವರು ಯಾವುದೇ ಒಂದು ಧರ್ಮದ ರೂಪಕ್ಕೆ ಸೀಮಿತವಲ್ಲ. ಅವನು ಯಾವುದರಿಂದಲೂ ಹೊರತಲ್ಲ ಎಂದು ಟಿಪ್ಪು ಪ್ರತಿಪಾದಿಸುತ್ತಿದ್ದ. ಟಿಪ್ಪುತನ್ನ ಆಡಳಿತಾವಧಿ ಯಲ್ಲಿ ೧೫೬ ದೇವಾಲಯಗಳಿಗೆ ಉಂಬಳಿ ನೀಡಿದ್ದ. ಹಿಂದೂ ಮರಾಠರು ಹಾನಿಗೈದಿದ್ದ ಶೃಂಗೇರಿ ಶಾರದಾ ಪೀಠ, ಶ್ರೀರಂಗ ದೇವಾಲಯದ ದುರಸ್ಥಿಗೆ ಉದಾರ ಧನ ಸಹಾಯ ನೀಡಿದ್ದ.
ಟಿಪ್ಪುವಿಗೆ ಮಾನವ ಘನತೆ ಮತ್ತು ಮಾನವ ಹಕ್ಕುಗಳ ಕುರಿತಂತೆ ಅಪಾರ ಕಾಳಜಿಯಿತ್ತು. ೧೭೮೭ರಲ್ಲಿ ಮಲಬಾರ್‌ನ ಗವರ್ನರ್ ಬರೆದ ಪತ್ರದಲ್ಲಿ ಮಲಬಾರ್ ಪ್ರದೇಶದಲ್ಲಿ ಕೆಳಜಾತಿಯ ಮಹಿಳೆಯರು ತಮ್ಮ ಸ್ತನಗಳನ್ನು ತೆರೆದು ಅರೆನಗ್ನವಾಗಿ ತಿರುಗಾಡುತ್ತಿದ್ದ ಪದ್ಧತಿಯನ್ನು ನಿಷೇಧಿಸಲು ಆದೇಶಿಸಿದ್ದ. ಧಾರ್ಮಿಕ ವಿಶ್ವಾಸದ ನೆಪದಲ್ಲಿ ಮೇಲ್ಜಾತಿ ಜನಗಳು ಕೆಳಜಾತಿಯ ಮಹಿಳೆಯರ ಮೇಲೆ ಹೇರಿದ್ದ ನೀಚ ಪದ್ಧತಿಯನ್ನು ಇಲ್ಲವಾಗಿಸಲು ಸಾದ್ಯಂತ ಯತ್ನಿಸಿದ ಟಿಪ್ಪುವಿನದು ಎಂತಹ ಮಾನಯ ಅಂತಃಕರಣ ಎನ್ನುವುದಕ್ಕೆ ಒಂದು ನಿದರ್ಶನವಷ್ಟೆ.
ಟಿಪ್ಪುವಿಗೆ ದುಡಿಯುವ ವರ್ಗದ ಜನರ ಮೇಲೆ, ಅವರ ಹಕ್ಕುಗಳ ರಕ್ಷಣೆಯ ಕುರಿತಂತೆ ಸ್ಪಷ್ಟವಾದ ಪರಿಕಲ್ಪನೆಯಿತ್ತು. ೧೭೮೯ರಲ್ಲಿ ಟಿಪ್ಪುತನ್ನ ಮಂತ್ರಿಮಂಡಲವನ್ನುದ್ದೇಶಿಸಿ ಮಾಡಿದ ಭಾಷಣ ಶ್ರಮಿಕ ವರ್ಗದ ಪರ ಮಿಡಿಯುವ ಆತನ ಅಂತರಂಗವನ್ನು ಪ್ರದರ್ಶಿಸುತ್ತದೆ. ಫರೋಗಳು ತಮ್ಮ ಗುಲಾಮರ ಪರಿಶ್ರಮದಿಂದ ಪಿರಮಿಡ್‌ಗಳನ್ನು ಕಟ್ಟಿದರು. ಚೀನಾ ಮಹಾಗೋಡೆಯ ದಾರಿಗುಂಟ ಬಲವಂತಕ್ಕೊಳಗಾಗಿ ಅದನ್ನು ಕಟ್ಟಿದ, ಕಟ್ಟುವಾಗ ತಮ್ಮ ಮೇಲ್ವಿಚಾರಕರ ಚಾಟಿ ಮತ್ತು ಕೊರಡೆಗಳಿಂದ ಪೆಟ್ಟು ತಿಂದ ಗುಲಾಮರ ರಕ್ತ ಹಾಗೂ ಮೂಳೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ರೋಮ್ ಸಾಮ್ರಾಜ್ಯ, ಬ್ಯಾಬಿಲೋನ್, ಗ್ರೀಸ್ ಮತ್ತು ಕಾರ್ಥೆಜ್‌ಗಳ ಭವ್ಯ ಕಟ್ಟಡಗಳನ್ನು ನಿರ್ಮಿಸಲು ಅಸಂಖ್ಯಾತ ಜನಗಳು ಗುಲಾಮ ರಾಗಿ ಸರಪಳಿಗಳಿಂದ ಬಂಧಿಸಲ್ಪಟ್ಟರು. ಸಾವಿರ-ಸಾವಿರ ಜನರು ರಕ್ತಹರಿಸಿ ಸಾವನ್ನಪ್ಪಿದ್ದರು. ಇದು ಕೈಲಾಗದ ದರ್ಪಿಷ್ಟ ರಾಜನೊಬ್ಬನ ಪೊಳ್ಳು ಕೀರ್ತಿಯ ಹಂಬಲಕ್ಕಾಗಿ ಅವನ ದಬ್ಬಾಳಿಕೆಗೊಳಗಾಗಿ ತಮ್ಮ ಮನೆ ಮಠಗಳಿಂದ ಎಳೆ ತಂದು ಗುಲಾಮರನ್ನಾಗಿ ಮಾಡಿ ಸರಪಳಿಗಳಿಂದ ಬಂಧಿತರಾದ ಜನರ ನೋವು ನರಳಿಕೆಗಳಿಂದ ಹುಟ್ಟಿಕೊಂಡ ಸಾಮ್ರಾಜ್ಯವೊಂದರ ಅವಶೇಷಗಳವು. ಆದುದರಿಂದ ನಮ್ಮ ರಸ್ತೆ ಮತ್ತು ಅಣೆಕಟ್ಟುಗಳ ಅಡಿಪಾಯ ದೊಡನೆ ಮಾನವರ ರಕ್ತ ಮತ್ತು ಕಣ್ಣೀರು ಬೆರೆಯಬಾರದು. - ೪
ಟಿಪ್ಪುತನ್ನ ಬದುಕಿನ ಬಹುಕಾಲ ಯುದ್ಧರಂಗದಲ್ಲೇ ಕಳೆಯಬೇಕಾಗಿ ಬಂದಿದ್ದರೂ ಆತ ತನ್ನ ಶತ್ರು ಸೈನಿಕರನ್ನು ಯುದ್ಧ ಭೂಮಿಯಲ್ಲಿ ಮಾತ್ರ ಶತ್ರುಗಳೆಂದು ಪರಿಗಣಿಸುತ್ತಿದ್ದ. ಶತ್ರುಗಳ ಸ್ತ್ರೀಯರ, ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯವೆಸಗಬಾರದೆಂದು ತನ್ನ ಸೈನಿಕರಿಗೆ ಆದೇಶಿಸಿದ್ದ. ಈ ನಿಟ್ಟಿನಲ್ಲಿ ಒಂದೇ ಶಾಸನವನ್ನು ಕ್ರಮವಾಗಿ ೧೭೮೩, ೧೭೮೫ ಮತ್ತು ೧೭೮೭ರಲ್ಲಿ ಮೂರು ಬಾರಿ ಹೊರಡಿಸಿದ್ದ. ಜಯಿಸಿದ ಶತ್ರುವಿನ ಸಂಪತ್ತನ್ನು ಲೂಟುವುದರಿಂದ ಕೆಲವೇ ಕೆಲವರು ಶ್ರೀಮಂತರಾಗುತ್ತಾರೆ. ರಾಷ್ಟ್ರವು ದರಿದ್ರಗೊಳ್ಳುತ್ತದೆ. ಮತ್ತು ಸಮಸ್ತ ಸೈನ್ಯಕ್ಕೆ ಅಪಕೀರ್ತಿ ತಟ್ಟುತ್ತದೆ. ಯುದ್ಧಗಳು ಕೇವಲ ಯುದ್ಧ ಭೂಮಿಗೆ ಸೀಮಿತವಾಗಿರಬೇಕು. ಅದನ್ನು ಅಮಾಯಕ ನಾಗರಿಕರ ಮೇಲೆ ಹೇರದಿರಿ. ಶತ್ರುಗಳ ಸ್ತ್ರೀಯರನ್ನು ಗೌರವಿಸಿ, ಅವರ ಮಕ್ಕಳನ್ನು ದುರ್ಬಲರನ್ನು ರಕ್ಷಿಸಿರಿ. - ೫ ಇಂತಹದ್ದೇ ಆದೇಶವನ್ನು ಟಿಪ್ಪುತನ್ನ ಮೈತ್ರಿ ಪಕ್ಷದವರಾದ ಫ್ರೆಂಚರಿಗೂ ಹೊರಡಿಸಿದ್ದ. ಇಂತಹ ಅಪ್ಪಟ ಮಾನಯ ಕಾಳಜಿಯ ಅರಸ ಜಾಗತಿಕ ಚರಿತ್ರೆಯಲ್ಲೇ ವಿರಳಾತಿವಿರಳ.
ಅತ್ಯಂತ ನ್ಯಾಯ ನಿಷ್ಠುರಿಯಾಗಿದ್ದ ಟಿಪ್ಪುತಪ್ಪಿತಸ್ಥರನ್ನು ಶಿಕ್ಷಿಸುವಾಗಲೂ ಅವರ ಮಾನವಹಕ್ಕುಗಳನ್ನು ಗೌರವಿಸುತ್ತಿದ್ದ. ಟಿಪ್ಪುಯಾರನ್ನೂ ಕಾನೂನು ಬಿಟ್ಟು ಶಿಕ್ಷಿಸುತ್ತಿರಲಿಲ್ಲ.
೧೭೮೭ರ ಟಿಪ್ಪುವಿನ ಕಂದಾಯ ನಿಯಮಾವಳಿಯಲ್ಲಿ ಮಳೆ ಬಾರದ ಹಾಗೂ ನೀರಾವರಿ ವ್ಯವಸ್ಥೆ ಸರಿಯಾಗಿರದಿದ್ದ ಕಷ್ಟ ಕಾಲದಲ್ಲಿ ರೈತರ ಮೇಲಿನ ಕಂದಾಯವನ್ನು ಕಡಿಮೆ ಮಾಡಬೇಕು. ಅಗತ್ಯ ಬಿದ್ದರೆ ಸಂಪೂರ್ಣ ಮನ್ನಾ ಮಾಡ ಬೇಕು. ರೈತ ಹೊಸದಾಗಿ ಜಮೀನನ್ನು ಉಳುಮೆ ಮಾಡಿದ ವೊದಲ ಮೂರು ವರ್ಷ ಕಂದಾಯವನ್ನು ಪಾವತಿಸಬೇಕಿಲ್ಲ.-೬
ಟಿಪ್ಪು ಸುಲ್ತಾನ್ ಅತ್ಯಂತ ಜನಪರ ರಾಜ, ತನ್ನ ಪ್ರಜೆಗಳ ನೋವು ನಲಿವುಗಳಿಗೆ ಸದಾ ಸ್ಪಂದಿಸುತ್ತಿದ್ದ ಕರುಣಾಮಯಿ ರಾಜ. ಮಾನವ ಹಕ್ಕುಗಳು ಮತ್ತು ಮಾನವ ಘನತೆಯ ಬಗ್ಗೆ ಸದಾ ಜಾಗೃತನಾಗಿದ್ದ ರಾಜ. ಮಹಿಳೆಯರ, ಮಕ್ಕಳ, ದುರ್ಬಲರ, ಶೋಷಿತರ ಬಗ್ಗೆ ಟಿಪ್ಪುವಿನಷ್ಟು ಕಾಳಜಿ ಹೊಂದಿದ್ದ ಇನ್ನೊಬ್ಬ ರಾಜ ಉಪಖಂಡದ ಚರಿತ್ರೆಯಲ್ಲೇ ಇನ್ನೊಬ್ಬ ಸಿಗಲಾರ. ಟಿಪ್ಪುವಿನ ಆಳ್ವಿಕೆಯ ಕಾಲ ಮತ್ತು ಆತನ ಹೋರಾಟ ಭಾರತದ ಚರಿತ್ರೆಯ ಪುಟಕ್ಕೆ ನಿಸ್ಸಂಶಯ ವಾಗಿಯೂ ಒಂದು ಮೆರುಗು. ಟಿಪ್ಪುವಿನ ಚರಿತ್ರೆಗೆ ಮಸಿ ಬಳಿಯುವವರು ಮಾನವತೆಗೇ ಕಳಂಕ.....  

ಆಕರ:1.ಕೋ.ಚೆನ್ನಬಸಪ್ಪ-ಹಿಂದೂ ಧರ್ಮ ರಕ್ಷಕ ಟಿಪ್ಪು ಸುಲ್ತಾನ್
2. Selected Letters of Tippu Sulthan - Krick Patrick
3. The Sword of Tippu Sulthan- Bhagwan S. Gidwani
4. The Sword of Tippu Sulthan - Bhagwan S. Gidwani
5. The Sword of Tippu Sulthan - Bhagwan S. Gidwani
6. The Sword of Tippu Sulthan - Bhagwan S. Gidwani

Wednesday, February 27, 2013

ಕ್ಷಮೆ ಯಾಚನೆಯ ರಾಜಕೀಯ

ಎಂ. ಜೆ. ಅಕ್ಬರ್

ಸೌಜನ್ಯ: ವಿಜಯ ಕರ್ನಾಟಕಒಂದು ಕ್ಷಮೆಯಾಚನೆ ಇಡೀ ಭೂತಕಾಲವನ್ನು ಬದಲಿಸಬಹುದಾದರೆ, ಅದಕ್ಕೆ ಏನಾದರೂ ಅರ್ಥವಿರಲೇಬೇಕು. ಅದು ಭವಿಷ್ಯವನ್ನು ಕಾಪಾಡಬಲ್ಲದು ಅಥವಾ ಇನ್ನೂ ಹೆಚ್ಚಿನದೇನೋ ಮಾಡಬಹುದು. ಆದರೆ ಕ್ಷಮೆಯಾಚನೆಯು ಆಂತರಿಕ ಪರಿವರ್ತನೆಯಿಂದ ಹುಟ್ಟದ ಹೊರತು, ಅದು ಕೇವಲ ಐತಿಹಾಸಿಕ ಪುನರುಕ್ತಿಯಾದೀತು ಅಷ್ಟೆ. ಜಲಿಯನ್‌ವಾಲಾ ಹತ್ಯಾಕಾಂಡ 'ಅತ್ಯಂತ ನಾಚಿಕೆಗೇಡಿನದ್ದು' ಎಂದು ಒಪ್ಪಿಕೊಳ್ಳಲು ಬ್ರಿಟಿಷ್ ಪ್ರಧಾನಿಯೊಬ್ಬರು 93 ವರ್ಷ 11 ತಿಂಗಳ ಸಮಯ ತೆಗೆದುಕೊಂಡರು. ಈ ಬ್ರಿಟಿಷ್ ಮಲಬದ್ಧತೆಯಿಂದಾಗಿ 'ಕ್ಷಮಿಸಿ' ಎಂಬ ಪದ ಕೊನೆಗೂ ಹೊರಬೀಳಲಿಲ್ಲ. ಆದರೆ ಯಾರಿಗೆ ಬೇಕಾಗಿದೆ ಅದು?

ಡೇವಿಡ್ ಕೆಮರೂನ್ ಅವರ ನಕಲಿ ಕ್ಷಮೆಯಾಚನೆಯಲ್ಲಿನ ವಿಳಂಬವು ತಾರ್ಕಿಕವಾಗಿತ್ತು. ಬ್ರಿಟಿಷ್‌ರಾಜ್ ಸ್ಥಳೀಯರಿಗೆ ಒಳ್ಳೆಯದೇ ಆಗಿತ್ತು ಎಂಬ ಮನೋಭಾವ ಅವರಲ್ಲಿ ಇದ್ದಂತಿತ್ತು. ಬ್ರಿಟನ್ನಿನ ಅತ್ಯುತ್ತಮ ಇತಿಹಾಸಕಾರರು ಮಾಧ್ಯಮಗಳಲ್ಲಿ ಅತ್ಯಂತ ಪ್ರಮುಖ ವೇಳೆಯನ್ನು ಅಲಂಕರಿಸಿ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡರು. ಅವರ ನಿರೂಪಣಾತ್ಮಕ ಟಿಪ್ಪಣಿಗಳು ಅವರಿಗೆ ಅನನುಕೂಲವಾದ ಕೆಲ ವಾಸ್ತವಾಂಶಗಳನ್ನು ಮುಚ್ಚಿಹಾಕಿದವು. 1765ರಲ್ಲಿ ಬಂಗಾಳದ ಜಮೀನ್ದಾರಿಕೆಯ ಸ್ವರೂಪದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಯಾಯಿತು. ಹೆಚ್ಚೂಕಡಿಮೆ ಅದೇ ವೇಳೆಗೆ, ಬಂಗಾಳದ ಜನಸಂಖ್ಯೆಯ ಮೂರನೇ ಒಂದು ಪಾಲು ಮಂದಿ ಅಂದರೆ ಅಂದಾಜು 1 ಕೋಟಿ ಜನ ಮಾನವ ನಿರ್ಮಿತ ಬರಗಾಲದಿಂದ ನರಳಿ ಮತಪಟ್ಟರು. ಭೂಗಂದಾಯಕ್ಕಾಗಿ ಈಸ್ಟ್ ಇಂಡಿಯಾ ಕಂಪನಿಯ ತಣಿಯದ ದುರಾಸೆ ಇದಕ್ಕೆ ಕಾರಣವಾಗಿತ್ತು. ಬಂಗಾಳದಲ್ಲಿ ಅದೇ ಸ್ವರೂಪದ ವಿನಾಶಕಾರಿ ಬರಗಾಲದೊಂದಿಗೇ ಬ್ರಿಟಿಷ್ ಆಡಳಿತ ಕೊನೆಗೊಂಡಿತು. ಆಗ ಸುಮಾರು 3 ಲಕ್ಷ ಜನ ಮತಪಟ್ಟಿದ್ದರು.

ಬ್ರಿಟಿಷ್ ಆಡಳಿತದ ಕೊನೆಯ ಐದು ದಶಕಗಳಲ್ಲಿ ಕೇವಲ ಶೇ. 1ರಷ್ಟು ಮಾತ್ರ ಸರಾಸರಿ ಬೆಳವಣಿಗೆ ಸಾಧಿಸಲಾಗಿತ್ತು. ಗ್ರಾಮೀಣ ಆರ್ಥಿಕತೆ ಸರ್ವನಾಶವಾಗಿತ್ತು. ಆದರೆ ಪಠ್ಯಪುಸ್ತಕಗಳ ಮೂಲಕ ಸ್ವರ್ಗದ ಆಜ್ಞೆಗಳ ತುತ್ತೂರಿ ಊದುತ್ತಿದ್ದರೆ, ಅವರ ಜತೆ ವಾಗ್ವಾದಕ್ಕಿಳಿಯುವ ತಾಕತ್ತು ಯಾರಿಗುಂಟು? ಬ್ರಿಟಿಷರ ಆಡಳಿತಕ್ಕಾಗಿ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಅವರನ್ನು ಅಭಿನಂದಿಸಿದರು.

1919ರ ಏಪ್ರಿಲ್ 13ರಂದು ಬೈಸಾಖಿಯ ದಿನ ಜಲಿಯನ್‌ವಾಲಾದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮನಬಂದಂತೆ ಗುಂಡಿನ ಮಳೆಗರೆಯಲು ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡಯರ್ ಆದೇಶಿಸಿದ್ದ. ತನ್ನ ಸೇನಾತುಕಡಿಯಲ್ಲಿದ್ದ ಭಾರತೀಯ ಮತ್ತು ಗೂರ್ಖಾ ಯೋಧರ ಮೂಲಕವೇ ಈ ಹತ್ಯಾಕಾಂಡ ನಡೆಸುವ ಮೂಲಕ ಆತ ತಮ್ಮ ಸಾಮ್ರಾಜ್ಯವನ್ನು ರಕ್ಷಿಸಿದ ಎಂದೇ ಬಹುಪಾಲು ಬ್ರಿಟಿಷರು ಇಂದಿಗೂ ನಂಬುತ್ತಾರೆ. 1650 ಸುತ್ತುಗಳ ಗುಂಡಿನ ಮಳೆಯೊಂದಿಗೆ 530 ಜನರನ್ನು ನಿರ್ದಯವಾಗಿ ಹತ್ಯೆ ಮಾಡಲಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಅದು ಅವನ ಸಾಮರ್ಥ್ಯವಾಗಿತ್ತು. ಕೇವಲ ಒಂದು ಗುಂಡು ಮಾತ್ರ ವ್ಯರ್ಥವಾಗಿತ್ತು. ಡಯರ್ ಸೈನಿಕ ಆಡಳಿತವನ್ನೂ ಘೋಷಿಸಿರಲಿಲ್ಲ ಅಥವಾ ಎಚ್ಚರಿಕೆಯನ್ನೂ ನೀಡಿರಲಿಲ್ಲ. ಮಾರಣಹೋಮ ನಡೆಸುವುದಕ್ಕಾಗಿಯೇ ಆತ ಗುಂಡು ಹಾರಿಸಿದ್ದ, ಮತ್ತು ಅದನ್ನು ಲಜ್ಜೆಯಿಲ್ಲದೆ ಸಮರ್ಥಿಸಿಕೊಂಡಿದ್ದ. ತಾನು ಈ ರೀತಿ ಬಲಪ್ರಯೋಗದ ಮೂಲಕ ಪಂಜಾಬಿನ ದಂಗೆಯನ್ನು ಹತ್ತಿಕ್ಕಿದ್ದೆ ಎಂದು ಹಂಟರ್ ಕಮಿಟಿ ಮುಂದೆ ಕೊಚ್ಚಿಕೊಂಡಿದ್ದ.

ಪಂಜಾಬಿಗಳಿಗೆ ತೆವಳುವಂತೆ ಆದೇಶ ನೀಡಿ ಡಯರ್ ಅತಿರೇಕ ನಡೆಸುತ್ತಿದ್ದಾನೆ ಎಂದು ಆಗ ಪಂಜಾಬಿನ ಗವರ್ನರ್ ಆಗಿದ್ದ ಮೈಕೆಲ್ ಓ'ಡ್ವೇರ್‌ಗೆ ಮನವರಿಕೆಯಾಯಿತು. ಆದರೂ ಜಲಿಯನ್‌ವಾಲಾ ಹತ್ಯಾಕಾಂಡವನ್ನು ಆತ ಬೆಂಬಲಿಸಿದ. ಇಂಗ್ಲೆಂಡ್‌ನಲ್ಲಿ ಸಾರ್ವಜನಿಕ ಅಭಿಪ್ರಾಯವಂತೂ ಡಯರ್‌ಗೆ ಪ್ರಚಂಡ ಬೆಂಬಲ ನೀಡುವಂತಿತ್ತು. 'ದ ಮಾರ್ನಿಂಗ್ ಪೋಸ್ಟ್' ಪತ್ರಿಕೆಯಂತೂ ಡಯರ್‌ಗೆ 'ಸಾಮ್ರಾಜ್ಯ ರಕ್ಷಕ' ಎಂಬ ಬಿರುದನ್ನೇ ನೀಡಿತು. ಅದರ ಸಂಪಾದಕ ಸರ್ ಎಡ್ವರ್ಡ್ ಕಾರ್ಸನ್, ಡಯರ್‌ಗೆ ಬಹುಮಾನ ನೀಡುವವರಲ್ಲಿ ಮೊದಲಿಗನಾಗಿದ್ದ. ನಂತರ ಓ'ಡ್ವೇರ್ ಕೂಡ ಬಹುಮಾನ ಘೋಷಿಸಿದ. ಹೀಗೆ ಕತಜ್ಞ ಬ್ರಿಟಿಷರು ಡಯರ್‌ಗೆ 30,000 ಪೌಂಡ್‌ಗಳ ಥೈಲಿಯನ್ನೇ ನೀಡಿ ಕೊಂಡಾಡಿದರು.

ಡಯರ್ ಮತ್ತು ಓ'ಡ್ವೇರ್‌ರ ಪೈಶಾಚಿಕ ಕತ್ಯಗಳನ್ನು (1940ರಲ್ಲಿ ಉಧಂ ಸಿಂಗ್ ಎಂಬಾತ ಈತನನ್ನು ಲಂಡನ್ನಿನಲ್ಲಿ ಗುಂಡಿಟ್ಟು ಸಾಯಿಸಿದ್ದ) ಐತಿಹಾಸಿಕ ನೆಲೆಯಲ್ಲಿ ಮಹತ್ವದ ಸಾಧನೆಯೆಂದು ಪರಿಗಣಿಸಲಾಗದಿದ್ದರೂ, ಭಾರತದಲ್ಲಿ ಸ್ವಾತಂತ್ರ್ಯ ಸಮರದ ಕಿಚ್ಚು ಹೆಚ್ಚಾಯಿತು. ಅಂತಿಮವಾಗಿ 1947ರಲ್ಲಿ ಭಾರತ ಸ್ವತಂತ್ರಗೊಳ್ಳುವುದರೊಂದಿಗೆ ಆ ಕಿಚ್ಚು ಶಮನವಾಯಿತು.

ರವೀಂದ್ರನಾಥ ಟಾಗೋರರು ಪಾಶ್ಚಾತ್ಯ ಗೌರವಗಳನ್ನು ಹಿಂದಿರುಗಿಸಿದರು; ಬ್ರಿಟಿಷ್ ಸೇನೆಗೆ ನೇಮಕಾತಿ ಏಜೆಂಟರಾಗಿದ್ದ ಗಾಂಧಿ, ಸ್ವರಾಜ್ಯದ ಹೋರಾಟಗಾರರಾಗಿ ಬದಲಾದರು; ಮೋತಿಲಾಲ್ ನೆಹರೂ ಆನಂದ ಭವನದಲ್ಲಿದ್ದ ಯುರೋಪಿಯನ್ ಪೀಠೋಪಕರಣಗಳನ್ನು ಮತ್ತು ಮನೆಯಲ್ಲಿ ಬಳಸುತ್ತಿದ್ದ ಪಾಶ್ಚಾತ್ಯ ಉಡುಗೆಗಳನ್ನು ತ್ಯಜಿಸಿದರು. 20ನೇ ಶತಮಾನವು ಜಲಿಯನ್‌ವಾಲಾ ಬಾಗ್‌ನಲ್ಲಿ ಜನಿಸಿತು. ಜಲಿಯನ್‌ವಾಲಾ ಘಟನೆಗೆ ಕಾರಣರಾದ ಕಟುಕರು, ತಮ್ಮ ಬ್ರಿಟಿಷ್ ವಸಾಹತುಶಾಹಿಯ ಕೊನೆಯ ಮುಖವಾಡವನ್ನೂ ಕಿತ್ತೆಸೆದುದಕ್ಕಾಗಿ ಭಾರತೀಯರು ಅವರಿಗೆ ಆಭಾರಿಗಳಾಗಿರಬೇಕು!

ಸಾಮ್ರಾಜ್ಯಶಾಹಿಗಳ ಕಾಲದಲ್ಲಿ ಆದರೆ ವಸಾಹತೀಕರಣವು ಒಂದು ಸಾಧನೆಯಾಗಿತ್ತೇ ಹೊರತು ವಿಷಾದದ ಸಂಗತಿಯಾಗಿರಲಿಲ್ಲ. ಕೆಮರೂನ್ ಪಶ್ಚಾತ್ತಾಪಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳಿರಲಿಲ್ಲ. ಆದರೆ ಭಾರತೀಯರು ಯಾಕೆ ಕ್ಷಮೆಯಾಚಿಸಲೇಬೇಕು ಎಂಬುದಕ್ಕೆ ಹಲವು ಕಾರಣಗಳಿವೆ. ಜಲಿಯನ್‌ವಾಲಾದಲ್ಲಿ ತಮ್ಮದೇ ದೇಶಬಾಂಧವರನ್ನು ಕೊಂದುಹಾಕಿದ್ದಕ್ಕೆ ಭಾರತೀಯರು ಮತ್ತು ಗೂರ್ಖಾಗಳು ಎಂದು ಕ್ಷಮೆಯಾಚಿಸುತ್ತಾರೆ? ತಮ್ಮಲ್ಲಿರುವ ಮದ್ದುಗುಂಡುಗಳು ಖಾಲಿಯಾಗುವವರೆಗೂ ಅವರು ಅಸಹಾಯಕ ನಾಗರಿಕರನ್ನು ಹಿಂಡಿ ಹಿಪ್ಪೆ ಮಾಡಿದರಲ್ಲವೆ? ಭಾರತದ ನಾಗರಿಕ ಸೇವೆಯ ಅಧಿಕಾರಶಾಹಿಗಳು ವಸಾಹತುಯುಗದ ಶೋಷಣೆಗಳನ್ನು ಇಂದಿಗೂ ಮುಂದುವರಿಸಿದ್ದಾರಲ್ಲ, ಅವರು ಕ್ಷಮೆ ಕೋರುವುದು ಯಾವಾಗ? ಬ್ರಿಟಿಷ್ ಆಡಳಿತವು ಯಾವತ್ತೂ ಸಂಪೂರ್ಣ ಬ್ರಿಟಿಷರದ್ದೇ ಆಗಿರಲಿಲ್ಲ. ವೇತನಕ್ಕಿಂತ ಹೆಚ್ಚಾಗಿ ಏನನ್ನೂ ಬಯಸದ ವಿಧೇಯ ಭಾರತೀಯರ ಒಂದು ವರ್ಗದ ಬೆಂಬಲವಿಲ್ಲದೆ ಅದು ಒಂದು ದಿನವೂ ಮುಂದುವರಿಯುತ್ತಿರಲಿಲ್ಲ. ತಮ್ಮ ತೋಟ-ಬಂಗಲೆಗಳನ್ನು ಕಾಪಾಡಿಕೊಳ್ಳಲು, ಮೊದಲೇ ಉಪವಾಸವಿದ್ದ ಬಡರೈತರನ್ನು ಸಾಯುವಂತೆ ಹಿಂಡಿ ಹಿಪ್ಪೆ ಮಾಡಿದ ಜಮೀನ್ದಾರರು ಮತ್ತು ನವಾಬರು ಕ್ಷಮೆ ಕೋರುವುದು ಯಾವಾಗ?

ಬ್ರಿಟಿಷರು ತಮ್ಮ 150 ವರ್ಷದ ಆಡಳಿತದ ಅವಧಿಯಲ್ಲಿ ತಾವಾಗಿಯೇ ಸೇವೆಗೆ ನಿಂತ ಲಕ್ಷಾಂತರ ಮೀರ್ ಜಾಫರ್‌ಗಳನ್ನು ಬಳಸಿಕೊಂಡರು ಅಷ್ಟೆ. ಅವರು ಆಳುವುದಕ್ಕಾಗಿಯೇ ದೂರದಿಂದ ಬಂದರೇ ಹೊರತು, ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವುದಕ್ಕಲ್ಲ. ಆಕ್ರಮಿತ ದೇಶದ ಸಂಪತ್ತನ್ನು ತಮ್ಮ 'ತಾಯ್ನಾಡಿಗೆ ವರ್ಗಾಯಿಸುವುದು' ಐರೋಪ್ಯ ವಸಾಹತೀಕರಣ ಯುಗದ ಸಾಮಾನ್ಯ ಲಕ್ಷಣವಾಗಿತ್ತು. ಅದು ಬ್ರಿಟಿಷರಿಗೆ ಮಾತ್ರವೇ ಇದ್ದ ವೈಶಿಷ್ಟ್ಯವಾಗಿರಲಿಲ್ಲ. ಅದು ಬ್ರಿಟಿಷ್ ಆಡಳಿತವಾಗಿದ್ದರೂ, ಎಲ್ಲಾ ದೋಷಗಳ ಹೊರತಾಗಿಯೂ, ಅಲ್ಜೀರಿಯಾದಲ್ಲಿ ಫ್ರಾನ್ಸ್‌ನ ವಸಾಹತುಶಾಹಿ, ಕಾಂಗೋದ ಬೆಲ್ಜಿಯಂ ವಸಾಹತುಶಾಹಿ ಅಥವಾ ಇಂಡೋನೇಷ್ಯಾದ ಡಚ್ ವಸಾಹತುಶಾಹಿಗಿಂತ ಹೆಚ್ಚು ಮಾನವೀಯವಾಗಿತ್ತು.

ಇತಿಹಾಸದ ಕನ್ನಡಿಯಲ್ಲಿ ಗಂಭೀರವಾದ ಸಂಶೋಧನೆ ನಡೆಸಲು ಮನಸ್ಸು ಮಾಡದಿರುವುದೇ ಭಾರತದ ಸಮಸ್ಯೆ. ಬ್ರಿಟಿಷರು ತಾವು ಬಲಾಢ್ಯರೆಂಬ ಒಂದೇ ಕಾರಣಕ್ಕೆ ತಮ್ಮ ಆಡಳಿತವನ್ನು ಜಾಗರೂಕತೆಯಿಂದ ಹಂತ ಹಂತವಾಗಿ ಸ್ಥಾಪಿಸಲಿಲ್ಲ; ಭಾರತೀಯರು ದುರ್ಬಲರಾದ್ದರಿಂದ ಅವರು ಯಶಸ್ವಿಯಾದರು. ಹಗಾಗಿ ನಮ್ಮ ಪೂರ್ವಜರ ಪರವಾಗಿ ಭಾರತೀಯರು ಸಂಘಟಿತ ಕ್ಷಮೆಯಾಚನೆ ಮಾಡುವುದಾದರೂ ಹೇಗೆ?

'ತೀವ್ರ ನಾಚಿಕೆಗೇಡು' ಎಂಬ ತಮ್ಮ ಹೇಳಿಕೆಗೆ, ಸವಾಲಿನ 2015ರ ಚುನಾವಣೆ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿರುವ ಪಂಜಾಬಿ ಮತದಾರರನ್ನು ಒಲಿಸಿಕೊಳ್ಳುವ ರಾಜಕೀಯ ನಿರ್ಧಾರ ಮಾತ್ರ ಇದು ಎಂಬ ಸ್ಪಷ್ಟನೆ ನೀಡುವ ಮೂಲಕ ಕೆಮರೂನ್ ಅವರು ಬ್ರಿಟನ್ ಮತ್ತು ಭಾರತ ಎರಡಕ್ಕೂ ಅನುಕೂಲ ಮಾಡಿಕೊಡಬಹುದು. ಹಾಗೆ ಮಾಡಿದರೆ ಅದಕ್ಕಾದರೂ ಒಂದು ಅರ್ಥವಿರುತ್ತದೆ. ಇಲ್ಲದಿದ್ದರೆ, ಬ್ರಿಟನ್ ಮತ್ತು ಭಾರತ ಇಂತಹ ಕ್ಷುಲ್ಲಕ ಕ್ಷಮೆಯಾಚನೆಯನ್ನು ಮರೆತು ಪರಸ್ಪರರನ್ನು ಉತ್ತಮ ಪ್ರವಾಸಿ ತಾಣಗಳಾಗಿ ಪರಿಗಣಿಸುವುದನ್ನು ಮುಂದುವರಿಸಬಹುದು.

ಸೂರ್ಯನೆಲ್ಲಿ ಪ್ರಕರಣ: ಕುರಿಯನ್ ಬಲಿಯಾಗಲೇಬೇಕಾದ ಕುರಿಯೆ


 ವಾರ್ತಾಭಾರತಿ ಸಂಪಾದಕೀಯ


ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅನೈತಿಕತೆ ಯನ್ನು ರಾಜಕಾರಣಿಗಳು ಒಂದು ಸಾಮಾಜಿಕ ಮೌಲ್ಯವನ್ನಾಗಿ ಪರಿವರ್ತಿಸುವ ಹಂತದಲ್ಲಿದ್ದಾರೆ. ಒಂದೆಡೆ ದಿಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಮೊಸಳೆ ಕಣ್ಣೀರು ಸುರಿಸುವ ಸರಕಾರ, ಆಳದಲ್ಲಿ ಆ ಕುರಿತಂತೆ ಎಷ್ಟರಮಟ್ಟಿಗೆ ಗಂಭೀರತೆಯನ್ನು ಹೊಂದಿದೆ ಎನ್ನುವುದಕ್ಕೆ ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣ ನಮ್ಮ ಮುಂದೆ ಉದಾಹರಣೆಯಾಗಿ ನಿಂತಿದೆ. ಅತ್ಯಾಚಾರ ಆರೋಪ ಇತರ ಅಕ್ರಮ, ಅವ್ಯವಹಾರಗಳಂತೆ ಅಲ್ಲ. ಅದು ಮನುಷ್ಯನ ಚಾರಿತ್ರವನ್ನು ಪ್ರಶ್ನಿಸುತ್ತದೆ. ಅತ್ಯಾಚಾರ ಆರೋಪವನ್ನು ಹೊಂದಿದ ಒಬ್ಬ ನಾಯಕ ಸಂಸತ್‌ನಲ್ಲಿರುವುದು, ಸಂಸತ್‌ಗೆ ಮಾಡುವ ಅವಮಾನವಾಗಿದೆ. ಚಾರಿತ್ರವಿಲ್ಲದ ಮನುಷ್ಯ ನಿಂದ ಪ್ರಾಮಾಣಿಕತೆಯನ್ನು ನಿರೀಕ್ಷಿಸುವುದೇ ನಮ್ಮ ಮೂರ್ಖತನವಾಗುತ್ತದೆ. ಆದರೆ ಅತ್ಯಾಚಾರ ಆರೋಪವನ್ನು ಹೊತ್ತ ನಾಯಕ ನೊಬ್ಬ ಈ ದೇಶದ ರಾಜ್ಯಸಭೆಯ ಉನ್ನತ ಸ್ಥಾನದಲ್ಲಿದ್ದರೆ, ಸಂಸತ್ತಿನ ಗತಿಯೇನಾಗಬೇಕು? ಇದೀಗ ಸೂರ್ಯನೆಲ್ಲಿ ಪ್ರಕರಣದಲ್ಲಿ ಆರೋಪಿ ಯಾಗಿ ಗುರುತಿಸಲ್ಪಡುತ್ತಿರುವ ರಾಜ್ಯಸಭೆ ಉಪ ಸಭಾಪತಿ ಪಿ.ಜೆ. ಕುರಿಯನ್ ವಿಚಾರ ಯುಪಿಎ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.


ಸೂರ್ಯನೆಲ್ಲಿ ಪ್ರಕರಣ ದಫನವಾಗಿ ಹೋಗುವ ಹಂತವನ್ನು ತಲುಪಿತ್ತು. ಸಂತ್ರಸ್ತರಿಗೆ ನ್ಯಾಯ ಮರೀಚಿಕೆಯಾಗಿ ಬಿಟ್ಟಿತ್ತು. ಆದರೆ ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ, ದೇಶದಲ್ಲಿ ಸಾಮೂಹಿಕ ಅತ್ಯಾಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು. ಎಲ್ಲಾ ಅತ್ಯಾಚಾರಗಳು ದೇಶದ ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾಗಲಾರಂಭಿಸಿ ದವು. ಸಾರ್ವಜನಿಕ ಪ್ರತಿಭಟನೆ ನ್ಯಾಯಾ ಲಯದ ಮೇಲೂ ಪರೋಕ್ಷ ಒತ್ತಡವನ್ನು ಬೀರಿತು.

ಅತ್ಯಾಚಾರ ಪ್ರಕರಣವನ್ನು ನ್ಯಾಯಾಲಯ ಕಳೆದ ಕೆಲವು ತಿಂಗಳುಗಳಿಂದ ಗಂಭೀರವಾಗಿ ಪರಿಗಣಿಸಲಾರಂಭಿಸಿತು. ಇಂತಹ ಸಂದರ್ಭದಲ್ಲೇ ಹೂತುಹೋದ ಸೂರ್ಯನೆಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಭೂತ ಮತ್ತೆ ಮೇಲೆದ್ದು ನಿಂತಿತು. ಈ ದೇಶದ ಸರ್ವೋಚ್ಚ ನ್ಯಾಯಾಲಯ ಅದರ ಪುನರ್ ವಿಚಾರಣೆಯನ್ನು ಬಯಸಿತು. ಯಾರೆಲ್ಲ ಹೆಸರುಗಳು ಈ ಅತ್ಯಾಚಾರದಲ್ಲಿ ತಳುಕು ಹಾಕಿಕೊಂಡಿದೆಯೋ ಅವರೆಲ್ಲ ಮತ್ತೆ ಕಟಕಟೆಯನ್ನು ಹತ್ತುವಂತಾಯಿತು. ಎಲ್ಲರಿಗೂ ಗೊತ್ತಿರುವಂತೆ ಸೂರ್ಯನೆಲ್ಲಿ ಪ್ರಕರಣದಲ್ಲಿ ರಾಜಕಾರಣಿಗಳ ಹೆಸರುಗಳೂ ತಳಕು ಹಾಕಿಕೊಂಡಿವೆ.

ವಿವಿಧ ರಾಜಕಾರಣಿಗಳು ಈ ಅತ್ಯಾಚಾರ ಪ್ರಕರಣವನ್ನು ಹಿಡಿದುಕೊಂಡು ರಾಜಕೀಯ ಆಟವನ್ನು ಆಡಿದ್ದಾರೆ. ಇದೀಗ ಮತ್ತೆ ಆಟವನ್ನಾಡುವುದಕ್ಕೆ ಮುಂದಾಗಿದ್ದಾರೆ. ಈ ಪುನರ್ ವಿಚಾರಣೆಯಿಂದ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎನ್ನುವುದು ಹಾಸ್ಯಾಸ್ಪದ. ಆದರೆ ಕನಿಷ್ಠ ವಿಚಾರಣೆಯ ಹೆಸರಲ್ಲಿ ಮತ್ತೊಮ್ಮೆ ಅದು ಚರ್ಚೆಗೆ ಬರುವುದರಿಂದ ಸಮಾಜಕ್ಕೆ ಕೆಲವು ಲಾಭಗಳಿವೆ. ಮುಖ್ಯವಾಗಿ, ಆರೋಪಿಗಳಿಗೆ ಕನಿಷ್ಠ ಮಾನಸಿಕ ಹಿಂಸೆ ಯಾದರೂ ಆಗಬಹುದಲ್ಲವೆ? ಆದರೆ ಸೂರ್ಯನೆಲ್ಲಿ ಪ್ರಕರಣದಲ್ಲಿ ರಾಜ್ಯಸಭೆ ಉಪ ಸಭಾಪತಿ ಪಿ.ಜೆ.ಕುರಿಯನ್ ಹೆಸರು ಸಿಲುಕಿ ಕೊಂಡಿರುವುದು ಸರಕಾರಕ್ಕೆ ಗಂಟಲ ಮುಳ್ಳಾಗಿ ಪರಿಣಮಿಸಿದೆ.


ರಾಜ್ಯಸಭೆಯ ಚರ್ಚೆಯಲ್ಲಿ ಕುರಿಯನ್ ಕೇಂದ್ರ ಬಿಂದುವಾಗಿ ಬಿಟ್ಟಿದ್ದಾರೆ. ವೃತ್ತಿ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗೆ ರಾಜ್ಯಸಭೆ ನಿನ್ನೆಯಷ್ಟೇ ಅಂಗೀಕಾರ ಮಾಡಿದೆ.  ಮನೆಗೆಲಸದವರು ಸೇರಿದಂತೆ ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳಗಳಿಗೆ ಕಡಿವಾಣ ಹಾಕುವ ಮಹತ್ವದ ವಿಧೇಯಕವೊಂದನ್ನು ಮಂಗಳ ವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು ಮತ್ತು ಅಂಗೀಕರಿಸಲಾಯಿತು ಕೂಡ. ಆದರೆ ಇದೇ ಸಂದರ್ಭದಲ್ಲಿ ಗುರುವಾರ, ರಾಜ್ಯ  ಸಭೆಯ ಉಪಾಧ್ಯಕ್ಷರ ಹೆಸರು ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡು ಸರಕಾರ ಮುಜುಗರಕ್ಕೀಡಾಗಬೇಕಾಯಿತು. 

ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕುರಿಯನ್ ಅವರ ಸಮರ್ಥನೆಗೆ ಸರಕಾರ ನಿಲ್ಲಬೇಕಾದಂತಹ ಪರಿಸ್ಥಿತಿ ಇರು ವಾಗ, ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟ ವಿಧೇಯಕಕ್ಕೆ ಗೌರವವಾದರೂ ಎಲ್ಲಿದೆ? ಬಹುಶಃ ವಿಧೇಯಕ ಜಾರಿಯಾಗುವ ಸಂದರ್ಭ ದ ಸೋಲಿನ ಸೂಚನೆಯನ್ನು ಕುರಿಯನ್ ಹೆಸರೇ ಸಾಬೀತು ಮಾಡುವಂತಿದೆ.ನಿಜ. ಸರಕಾರ ಹೇಳುತ್ತಿದೆ, ಕುರಿಯನ್ ಈ ಪ್ರಕರಣದಲ್ಲಿ ನೇರವಾಗಿ ಬಾಗಿಯಾಗಿಲ್ಲ ಎಂದು. ಸರಕಾರದ ಸಮರ್ಥನೆ ನಿಜವೇ ಆಗಿರಬಹುದು.  

ಆದರೆ ಪರೋಕ್ಷವಾಗಿ ಕುರಿಯನ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಸಂತ್ರಸ್ತ ಕುಟುಂಬ ಈಗಾಗಲೇ ಆರೋಪಿಸಿದೆ. ಈ ಆರೋಪ ದಿಂದ ಮುಕ್ತರಾಗುವವರೆಗೆ ಕುರಿಯನ್ ಕನಿಷ್ಠ ಉಪಸಭಾಧ್ಯಕ್ಷ ಸ್ಥಾನದಿಂದ ದೂರ ಉಳಿಯುವುದು ಸಹ್ಯವಾದ ಕ್ರಮವಾಗಿದೆ. ಅದರಿಂದ ಸರಕಾರದ ಘನತೆಯೂ, ರಾಜ್ಯಸಭೆಯ ಘನತೆಯೂ ಉಳಿದಂತಾ ಗುತ್ತದೆ.  ಪ್ರಕರಣ ವಿಚಾರಣಾ ಹಂತದಲ್ಲಿ ರುವುದರಿಂದ, ನೈತಿಕ ದೃಷ್ಟಿಯಿಂದ ಕುರಿಯನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಲೇಬೇಕಾಗುತ್ತದೆ. 

ಇದರ ಬದಲು ಆರೋಪ ಮಾಡಿದವರನ್ನು ದಮನಿಸುವುದು, ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದವರು, ಅದನ್ನು ಹಂಚಿಕೊಂಡವರ ಮೇಲೆ ಪ್ರಕರಣ ದಾಖಲಿಸುವುದು ಇವೆಲ್ಲ ಪರೋಕ್ಷವಾಗಿ   ಅವರ ಮೇಲಿರುವ ಆರೋಪಗಳಿಗೆ ಇನ್ನಷ್ಟು ಪುಷ್ಠಿಯನ್ನು ನೀಡುತ್ತದೆ. ಆದುದರಿಂದ, ಕುರಿಯನ್ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ನಡೆದು, ನ್ಯಾಯವನ್ನು ತಮ್ಮದಾಗಿಸಿ ಕೊಳ್ಳಬೇಕು. ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವುದರಿಂದ, ಆರೋಪದಿಂದ ಮುಕ್ತರಾಗ ಬಹುದು ಎನ್ನುವುದು ಭ್ರಮೆ ಮಾತ್ರ. ಅಂತಹ ಪ್ರಯತ್ನದಿಂದ ಅವರ ವರ್ಚಸ್ಸು ಇನ್ನಷ್ಟು ಕೆಡುತ್ತಾ ಹೋಗುತ್ತದೆ. ತಕ್ಷಣ ತಮ್ಮ ರಾಜ್ಯಸಭಾ ಉಪ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು. ಅವರು ಸದ್ಯಕ್ಕೆ ಮಂದೆಯೊಳಗಿರುವ ಕಪ್ಪು ಕುರಿ. ಅದನ್ನು ಬಲಿಕೊಡುವುದು ಸರಕಾರಕ್ಕೆ ಸದ್ಯದ ಸ್ಥಿತಿಯಲ್ಲಿ ಅನಿವಾರ್ಯ.

ವ್ಯಕ್ತಿತ್ವ ಘನತೆಯ ಜೀವಧ್ವನಿ - ಭನವಾರಿ ದೇವಿ
https://mail-attachment.googleusercontent.com/attachment/?ui=2&ik=64db019aae&view=att&th=13d19613e5efe26e&attid=0.12&disp=inline&realattid=file11&safe=1&zw&saduie=AG9B_P_apJ-8s6ZpZQ22vq2XigUY&sadet=1361944440183&sads=8_Q5h6XVHH20Ps5MAsnekr1v3bg&sadssc=1

- ಡಾ. ಎಚ್.ಎಸ್.ಅನುಪಮಾ
A
ತಾನು ಮಾಡದ ತಪ್ಪಿಗೆ ಅತ್ಯಾಚಾರಕ್ಕೊಳಗಾದ ಮಹಿಳೆ ಜೀವಮಾನವಿಡೀ ಅಪಮಾನಿತಳಾಗಿ ಬದುಕುವಂತೆ ಮಾಡಿರುವ ಮೌಲ್ಯ ವ್ಯವಸ್ಥೆ ನಮ್ಮ ಸಮಾಜದ್ದು. ವ್ಯಕ್ತಿತ್ವ ಘನತೆ, ಆತ್ಮ ಗೌರವ, ಸಮಗ್ರತೆಗಳೆಲ್ಲ ಮಣ್ಣಾಂಗಟ್ಟಿಯಂತೆ ಪುಡಿಪುಡಿಯಾಗಿ ಅದರ ಧೂಳಷ್ಟೇ ಹೆಣ್ಣಿನ ಕಣ್ಣು ತುಂಬುತ್ತಿವೆ. ಹೀಗಿರುವಾಗ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದರೆ ಸಮಾಜ ಹೇಗೆ ನಡೆಸಿಕೊಳ್ಳುತ್ತದೆ ಎಂಬ ಅರಿವಿದ್ದಾಗಲೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲೆಂದು ಕೋರ್ಟಿಗೆ ವರ್ಷಗಟ್ಟಲೆ ಅಲೆದು; ತಾನು ಹೇಳುವುದು ಸುಳ್ಳಲ್ಲ ಹಾಗೂ ಅತ್ಯಾಚಾರಿಗಳು ಹೇಳುವಂತೆ ತಾನು ಅವರ ಮೈಮೇಲೆ ಬಿದ್ದು ಮರುಳುಗೊಳಿಸಲಿಲ್ಲ ಎಂದು ಪ್ರತಿಪಾದಿಸಿ ಉದ್ಯೋಗ ಸ್ಥಳದ ಲೈಂಗಿಕ ದೌರ್ಜನ್ಯ ಕುರಿತ ‘ವಿಶಾಖಾ ಗೈಡ್ ಲೈನ್ಸ್’ ಎಂಬ ಕಾನೂನು ರೂಪುಗೊಳ್ಳಲು ಕಾರಣವಾದ ರಾಜಸ್ಥಾನದ ಭನವಾರಿ ದೇವಿ ಮತ್ತವರಂಥ ಆತ್ಮಾಭಿಮಾನಿ ಮಹಿಳೆಯರು ಮುಖ್ಯವೆನಿಸುತ್ತಾರೆ. ೨೦ ವರ್ಷ ಕೆಳಗೆ ತಳಸಮುದಾಯದ, ಅತ್ಯಂತ ಬಡ ಕುಟುಂಬದ, ಶಿಕ್ಷಿತಳಲ್ಲದ, ಅಧಿಕಾರವಿಲ್ಲದ ಭನವಾರಿಯಂಥ ಮಹಿಳೆ ತನ್ನ ಅಸಹಾಯಕತೆಗಾಗಿ ಹಳಹಳಿಸುತ್ತ ಕೂರದೇ ಮುಷ್ಠಿ ಕಟ್ಟಿ ನಿಂತಿದ್ದನ್ನು ದೆಹಲಿ ಪ್ರಕರಣ ಹಾಗೂ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಇನ್ನೊಮ್ಮೆ ನೆನೆಸಿಕೊಳ್ಳಬೇಕಾಗಿದೆ.


೧೯೯೨. ರಾಜಸ್ಥಾನ ಸರ್ಕಾರದ ಬಾಲ್ಯವಿವಾಹ ವಿರೋಧಿ ಆಂದೋಲನದ ಕಾರ್ಯಕರ್ತೆ ಭನವಾರಿ ದೇವಿ ಮೇಲ್ಜಾತಿ ಕುಟುಂಬದಲ್ಲಿ ನಡೆಯುತ್ತಿದ್ದ ೯ ತಿಂಗಳ ಹಸುಳೆಯ ಮದುವೆಯನ್ನು ವಿರೋಧಿಸಿ ನಿಲಿಸಿದಳು. ಅದಕ್ಕೆ ಕೋಪಗೊಂಡ ಆ ಸಮುದಾಯದವರು ಹೊಲದಿಂದ ಹಿಂದಿರುಗುವಾಗ ಗಂಡನೆದುರೇ ಆಕೆಯನ್ನು ಸಾಮೂಹಿಕ ಅತ್ಯಾಚಾರಕ್ಕೊಳಪಡಿಸಿದರು. ಪೊಲೀಸ್ ಸ್ಟೇಷನ್ನಿನಿಂದ ಆಸ್ಪತ್ರೆಗೆ, ಕೋರ್ಟಿಗೆ ಎಡೆಬಿಡದೆ ಗಂಡನೊಟ್ಟಿಗೆ ಅಲೆದ ಭನವಾರಿ ಎಲ್ಲರಿಂದ ಅಸಹಕಾರ, ಬಿರುನುಡಿಗಳನ್ನೇ ಎದುರಿಸಿದರೂ ಎದೆಗುಂದದೆ ಕೋರ್ಟು ಕಟ್ಟೆ ಹತ್ತಿದಳು. ಹಣ ಕೊಟ್ಟು ಕೇಸು ವಾಪಸ್ ತೆಗೆದುಕೊಳ್ಳುವಂತೆ ಎದುರಾಳಿಗಳು ಒತ್ತಾಯಿಸಿದಾಗ ಅವರೇ ಅತ್ಯಾಚಾರ ನಡೆಸಿದ್ದೆಂದು ಸಾಬೀತುಪಡಿಸುವುದರಿಂದಷ್ಟೇ ತನ್ನ ಘನತೆ ಉಳಿದೀತು ಎಂದು ಹೇಳಿ ಕೇಸು ಮುಂದುವರೆಸಿದಳು. ಹಣಕ್ಕೆ ರಾಜಿಯಾಗದ ಅವಳ ಜೊತೆ ಸೋದರರು, ಬಂಧುಗಳು ಮಾತು ಬಿಟ್ಟು ಸಂಬಂಧ ಕಡಿದುಕೊಂಡರು. ಹಣಕ್ಕಾಗಿ ಭನವಾರಿ ಸುಳ್ಳು ಕತೆ ಕಟ್ಟಿದ್ದಾಳೆಂದು ಅವಳ ಹಳ್ಳಿಯವರು, ಮತ್ತಿತರರು ಆಪಾದಿಸಿ ಸಹಾಯ ನೀಡಲು ನಿರಾಕರಿಸಿದರು. 


ಭನವಾರಿಯ ಬದುಕು ಛಿದ್ರವಾಗಿತ್ತು. ಹೆಣ್ಣುಮಕ್ಕಳಿಗೆ ಗಂಡು ಹುಡುಕುವುದು ಕಷ್ಟವಾಯಿತು. ಮಗನನ್ನು ಕಾಲೇಜಿಗೆ ಕಳಿಸಿದರೆ ಮೇಲ್ಜಾತಿಯ ಹುಡುಗರು ಮಾರಣಾಂತಿಕವಾಗಿ ಹೊಡೆದರು. ಆತನಿಗೆ ಹೆಣ್ಣು ಸಿಗುವುದು ಕಷ್ಟವಾಯಿತು. ಭನವಾರಿ ಜಾತಿಯ ಜನ ಅವಳನ್ನು ‘ಕಳಂಕಿತೆ’ ಎಂದು ಘೋಷಿಸಿ ಜಾತಿಯಿಂದ ಹೊರಹಾಕಿದರು. ೧೯೯೫ರಲ್ಲಿ ರಾಜಸ್ಥಾನ ಹೈಕೋರ್ಟು, ಮೇಲ್ಜಾತಿ ಪುರುಷರು ದಲಿತ ಭನವಾರಿಯ ಅತ್ಯಾಚಾರ ಮಾಡಿರಲಿಕ್ಕಿಲ್ಲ, ಅವಳ ಗಂಡ ಸುಮ್ಮನೇ ನೋಡುತ್ತ ನಿಂತಿರಲು ಸಾಧ್ಯವಿಲ್ಲ, ೫೨ ತಾಸಿನ ನಂತರ ವಿಚಾರಣೆಯಾಗಿರುವುದರಿಂದ ಆಕೆ ಹೇಳಿದ್ದು ಸುಳ್ಳಿರಬಹುದು ಎಂದು ಅವಳ ನಡತೆಯನ್ನೇ ಸಂಶಯಿಸಿ ತೀರ್ಪು ಬರೆಯಿತು!


ಈ ತೀರ್ಪು ಭನವಾರಿಯಿಂದಷ್ಟೇ ಅಲ್ಲ, ದೇಶಾದ್ಯಂತ ಎಲ್ಲರ ಆಕ್ರೋಶಕ್ಕೆ ಕಾರಣವಾಯಿತು. ಸಂಘಸಂಸ್ಥೆಗಳು, ಸಂಘಟನೆಗಳು ಅವಳ ಬೆಂಬಲಕ್ಕೆ ನಿಂತು ಕೇಸು ಸುಪ್ರೀಂಕೋರ್ಟಿಗೆ ಹೋಯಿತು. ಅಲ್ಲಿ ಜೆ.ಎಸ್.ವರ್ಮಾ ಅವರಿದ್ದ ವಿಭಾಗೀಯ ಪೀಠ ಅವಳ ಪರವಾಗಿ ತೀರ್ಪು ಬರೆಯಿತು. ಪರಿಹಾರ-ಶಿಕ್ಷೆ ರೂಪದ ತೀರ್ಪಷ್ಟೇ ಅಲ್ಲ, ಉದ್ಯೋಗ ಸ್ಥಳದ ಹೆಣ್ಣುಮಕ್ಕಳ ಭದ್ರತೆಯ ಸಲುವಾಗಿ ‘ವಿಶಾಖಾ ಗೈಡ್ ಲೈನ್ಸ್’ ರೂಪಿಸಿತು. ಅತ್ಯಾಚಾರ ಮಾಡಿದವರಿಗೆ ಶಿಕ್ಷೆ ಕೊಡಿಸುವುದನ್ನು ತನ್ನ ವ್ಯಕ್ತಿತ್ವ ಘನತೆಯ ಹೋರಾಟವೆಂಬಂತೆ ಸ್ವೀಕರಿಸಿದ ಭನವಾರಿಯ ಸ್ವಾಭಿಮಾನದ ನಡೆ ಧೈರ್ಯ ತುಂಬುವ ಮೈಲುಗಲ್ಲಿನಂತೆ ಪರಿಗಣಿಸಲ್ಪಟ್ಟಿತು.


ಮಹಿಳೆಯ ವ್ಯಕ್ತಿತ್ವ ಮತ್ತು ದೇಹದ ಸಮಗ್ರತೆ ಕುರಿತು ಇಡಿಯ ಸಮಾಜ ಮತ್ತೊಮ್ಮೆ ಯೋಚಿಸುವಂತೆ ಮಾಡಿದ ಭನವಾರಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಹಲವು ಮಹಿಳಾ ಸಂಘಟನೆಗಳು ಒಟ್ಟುಗೂಡಿ ಮಾರ್ಚ್ ೮ರಂದು ಮಂಗಳೂರಿನಲ್ಲಿ ನಡೆಸುತ್ತಿರುವ ‘ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ’ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.


ಬನ್ನಿ, ಮಂಗಳೂರಿನಲ್ಲಿ ಮಾರ್ಚ್ ೮ರಂದು ಎಲ್ಲರೂ ಸೇರೋಣ..


ಜಾರಿಯಾಗಬೇಕಿದೆ ಅಂಬೇಡ್ಕರ್ ಚುನಾವಣಾ ಪ್ರಣಾಳಿಕೆ
ರಘೋತ್ತಮ ಹೊ.ಬ, 
ಚಾಮರಾಜನಗರಸೌಜನ್ಯ: ವಾರ್ತಾಭಾರತಿಚುನಾವಣಾ ಪ್ರಣಾಳಿಕೆ ಹಾಗೆಂದರೆ ರಾಜಕೀಯ ಪಕ್ಷವೊಂದು ಚುನಾವಣಾ ಸಮಯದಲ್ಲಿ ತನ್ನ ಮತದಾರ ಬಂಧುಗಳಿಗೆ  ನೀಡುವ  ಆಶ್ವಾಸನೆ,ಭರವಸೆ ಎಂದರ್ಥ.ಒಟ್ಟಾರೆ ಅಧಿಕಾರಕ್ಕೆ  ಬಂದಾಗ ಈಡೇರಿಸಬಹುದಾದ ಕಾರ್ಯಕ್ರಮ ಎನ್ನಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಬಂದಾಗ ಪ್ರತಿಯೊಂದು ಪಕ್ಷದ ಅಭ್ಯರ್ಥಿ  ಇಂತಹ ಪ್ರಣಾಳಿಕೆ  ಘೋಷಿಸುವ ರೂಢಿ ಇಟ್ಟುಕೊಂಡೇ ಇರುತ್ತಾರೆ.  ಕೆಲವರು ಇದಕ್ಕೆ  ಅಪವಾದ ಇರಬಹುದು.  ಆದರೆ ಬಹುತೇಕ ಸಂದರ್ಭಗಳಲ್ಲಿ  ಅಂತಹ ಪ್ರಣಾಳಿಕೆ ಹೊರಡಿಸುವುದು  ಒಂದು ರೀತಿ ಸತ್ಸಂಪ್ರದಾಯವಾಗಿದೆ.ಆಶ್ಚರ್ಯವೆಂದರೆ ಬಾಬಾಸಾಹೇಬ್ ಅಂಬೇಡ್ಕರ್‌ರವರು ಕೂಡ  1951ರಲ್ಲಿ  ತಾವೇ ಸ್ಥಾಪಿಸಿದ್ದ ಆಲ್ ಇಂಡಿಯಾ ಷೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ (ಅಐಖಇಊ) ಪಕ್ಷದ ಪರವಾಗಿ ಒಂದು ಪ್ರಣಾಳಿಕೆ ಬಿಡುಗಡೆ ಮಾಡುತ್ತಾರೆ! 2ರೂ.ಗೆ ಕೆಜಿ ಅಕ್ಕಿ,  ಒಂದು ಸೀರೆ-ಒಂದು ರವಿಕೆ, ಕಲರ್ ಟಿವಿ,  ಎಮ್ಮೆ ಲೋನು,  ಹಸು ಲೋನು, ತಾಳಿಭಾಗ್ಯ, ಕುಂಕುಮ ಭಾಗ್ಯ...ಇತ್ಯಾದಿ ಅಗ್ಗದ, ರಚನಾತ್ಮಕವಲ್ಲದ ಯೋಜನೆ ಘೋಷಿಸುವ, ಯಾವುದೇ ದೂರದೃಷ್ಟಿಯಿಲ್ಲದ ಪ್ರಣಾಳಿಕೆಯ ಈ ದಿನಗಳಲ್ಲಿ  ಅಂಬೇಡ್ಕರರು ಅಂದು ನೀಡಿದ್ದ ಯೋಜನೆಗಳು? ಘೋಷಿಸಿದ್ದ ಆಶ್ವಾಸನೆಗಳು? ಒಂದು ರೀತಿ ಭವ್ಯಭಾರತದ ಅದ್ಭುತ ರೂಪುಗೊಳ್ಳುವಿಕೆಗೆ ದಾರಿದೀಪ ದಂತಿತ್ತು ಎಂದರೆ ಯಾರಿಗಾದರು ಆಶ್ಚರ್ಯ ವಾಗಬಹುದು. ಆದರೆ ಅದು ನಿಜ. ದುರಂತವೆಂದರೆ ಅಂತಹ ದಾರಿದೀಪವನ್ನು ಈ ದೇಶದ ಮಾಧ್ಯಮಗಳು, ವಿಚಾರವಾದಿ ಗಳು, ಬುದ್ಧಿಜೀವಿಗಳು ಗುರುತಿಸಲು ಹೋಗಿಲ್ಲ ಎಂಬುದು! ತಮ್ಮ ಪಕ್ಷದ ಧ್ಯೇಯ ಗಳನ್ನಾಗಿ ಇಟ್ಟುಕೊಳ್ಳಲು ಹೋಗಿಲ್ಲ ಎಂಬುದು.


೧೯೫೨ರ ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಅಂಬೇಡ್ಕರ್ ತಮ್ಮ ಪಕ್ಷದ ಪರವಾಗಿ ನೀಡಿದ್ದ ಆಶ್ವಾಸನೆಗಳು, ಯೋಜನೆಗಳು ಇಂತಿವೆ. ಮೊಟ್ಟ ವೊದಲನೆಯದಾಗಿ ಅವರು ಹೇಳುವುದು ತಮ್ಮ ಪಕ್ಷ ಈ ದೇಶದ ಪ್ರತಿಯೊಬ್ಬರನ್ನು ಸಮಾನತೆ ಆಧಾರದ ಮೇಲೆ ಕಾಣುತ್ತದೆ. ಹಾಗೆಯೇ ಎಲ್ಲೆಲ್ಲಿ ಸಮಾನತೆ ನಿರಾಕರಿಸಲ್ಪಟ್ಟಿದೆಯೋ ಅಲ್ಲೆಲ್ಲಾ ಅದನ್ನು ಜಾರಿಗೊಳಿಸಲು ಕಟಿಬದ್ಧವಾಗಿದೆ ಎಂದು! 

ಹೌದು, ಅಂಬೇಡ್ಕರರ ಈ ಘೋಷಣೆ ಈ ದೇಶದ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಮಾರ್ಗಸೂಚಿಯಾಬೇಕಿತ್ತು, ಸಂವಿಧಾನವಾಗಬೇಕಿತ್ತು. ಯಾಕೆಂದರೆ ಈ ದೇಶದ ಎಲ್ಲ ಸಮಸ್ಯೆಗಳಿಗೂ ಮುಖ್ಯ ಕಾರಣ ಅಸಮಾನತೆ. ಅದು ಹೋಗಲಾಡಿಸಲ್ಪಟ್ಟಿತೆಂದರೆ ತನ್ನಿಂತಾನೆ ಈ ದೇಶದ ಪ್ರಜಾಪ್ರಭುತ್ವ ಯಶಸ್ಸಿ ನೆಡೆಗೆ ಸಾಗುತ್ತದೆ.ಮುಂದೆ ಅವರು ನೀಡುವ ಎರಡನೆ ಪ್ರಮುಖ ಆಶ್ವಾಸನೆ, ಈ ದೇಶದ ಪ್ರತಿಯೊಬ್ಬ ನಾಗರೀಕನನ್ನು ಭಯಮುಕ್ತನನ್ನಾಗಿಸುವುದು. ವಾವ್! ಅದ್ಭುತ ಅಂಬೇಡ್ಕರರ ಈ ಆಶ್ವಾಸನೆ.ಯಾಕೆಂದರೆ ಎಲ್ಲಿ ದೊಂಬಿಯಾಗುತ್ತದೆಯೋ, ಯಾರ ಮನೆ ಲೂಟಿಯಾಗುತ್ತದೆಯೋ, ಯಾರ ಕತ್ತಿನ ಸರಕ್ಕೆ ಕತ್ತರಿ ಬೀಳುತ್ತದೆಯೋ, ಯಾರ ಜೀವ ಇನ್ನೊಬ್ಬರ ಮುಂದೆ ಕಾಲಕಸ ವಾಗುತ್ತದೆಯೋ ಎಂದು ಜನಸಾಮಾನ್ಯರು ಪ್ರತಿನಿತ್ಯ ನರಳುವ ಈ ಕಾಲದಲ್ಲಿ ಭಯಮುಕ್ತ ವಾತಾವರಣ ರೂಪಿಸುವುದು? ಹೌದು, ಅಂಬೇಡ್ಕರ್‌ರವರು ಹೇಳುವುದು ಇದನ್ನೆ. ಸಾಮಾಜಿಕ ಶಾಂತಿ ಸೌಹಾರ್ಧತೆ ಕಾಪಾಡುವುದನ್ನು.ಧಾರ್ಮಿಕ ಸಹಿಷ್ಣುತೆಯನ್ನು ಏತ್ತಿ ಹಿಡಿಯುವುದನ್ನು. ಮುಂದುವರೆದು ಅವರು ಒತ್ತಿ ಹೇಳುವುದು ತಮ್ಮ ಪಕ್ಷ ಸಂಸದೀಯ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು  ಗೌರವಿಸುತ್ತದೆ ಹಾಗೂ ಅದನ್ನು ಬಲಗೊಳಿಸುವಲ್ಲಿ ಶ್ರಮಿಸುತ್ತದೆ ಎಂದು. ಒಂದು ಮಾತು. ಅದೇನೆಂದರೆ ಅಂಬೇಡ್ಕರರು ರೂಪಿಸಿದ್ದ ಸಂವಿಧಾನ ಪ್ರತಿಪಾದಿಸಿದ್ದು ಸಂಸದೀಯ ಪ್ರಜಾಸತ್ತೆಯನ್ನು. ಈ ನಿಟ್ಟಿನಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಾಗಿ ಅಂತಹ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವ ಆಶ್ವಾಸನೆಯನ್ನು ಅವರು ನೀಡುತ್ತಾರೆ.


ಇಷ್ಟೆಲ್ಲಾ ಹೇಳಿದ ಮೇಲೆ ಅವರು ಒಂದು ಮಾತನ್ನು ಆರಂಭದಲ್ಲೆ ಸ್ಪಷ್ಟಪಡಿಸುತ್ತಾರೆ. ಅದೇನೆಂದರೆ ತಮ್ಮ ಪಕ್ಷ ಅಂದರೆ ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟ (ಎಸ್‌ಸಿಎಫ್), ಆಗ ಜಾರಿಯಲ್ಲಿದ್ದ ಯಾವುದೇ ವಾದ ಅಥವಾ ಇಸಂಗೆ ಅಂದರೆ ಸಮಾಜವಾದ, ಗಾಂಧಿವಾದ, ಕಮುನಿಸ್ಟ್‌ವಾದ ಇತ್ಯಾದಿಗಳಿಗೆ ಜೋತು ಬೀಳುವುದಿಲ್ಲ, ಬದಲಿಗೆ ತನ್ನದೇ ಸ್ವತಂತ್ರ ಅಸ್ತಿತ್ವ ಉಳಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸುತ್ತಾರೆ. ಪ್ರಸ್ತುತ ದಿನಗಳಲ್ಲಿ ಅಂತಹ ಸ್ವತಂತ್ರ ಅಸ್ತಿತ್ವವೇ ಅಂಬೇಡ್ಕರ್‌ ವಾದವಾಗಿ ರೂಪುಗೊಂಡಿದೆ ಎಂದು ಘಂಟಾಘೋಷವಾಗಿ ಹೇಳಬಹುದು. 

ಹಾಗೆಯೇ ಬಾಬಾಸಾಹೇಬರಿಗೆ ಅಂತಹ ವಾದದ ಅಸ್ತಿತ್ವದ ಸುಳಿವು ಸಿಕ್ಕಿತ್ತೆಂದು ಕಾಣುತ್ತದೆ. ಅದಕ್ಕೆ ಅವರು ಬೇರೆ ಎಲ್ಲಾ ವಾದಗಳನ್ನು ಅಥವಾ ಇಸಂಗಳನ್ನು ತಿರಸ್ಕರಿಸಿದರು ಎನ್ನಬಹುದು.ಹೀಗೆ ತಮ್ಮ ಪಕ್ಷಕ್ಕೆ ನಾನಾ ತತ್ವಗಳನ್ನು ರೂಪಿಸುವ ಅವರು ಮುಂದುವರೆದು ಆ ಪಕ್ಷದ ಪರವಾಗಿ ಹಲವಾರು ಯೋಜನೆಗಳನ್ನು ಸಹ ಘೋಷಿಸುತ್ತಾರೆ. ಬಹುಶಃ ಅಂಬೇಡ್ಕರರು ಅಂದು ಘೋಷಿಸಿದ್ದ ಯೋಜನೆಗಳು ಇಂದಿಗೂ ಎಷ್ಟು ಪ್ರಸ್ತುತ, ಇಂದಿನ ರಾಜಕೀಯ ಪಕ್ಷಗಳಿಗೂ ಕೂಡ ದೇಶದ ಅಭಿವೃದ್ಧಿಯ, ಐಕ್ಯತೆಯ ದೃಷ್ಟಿಯಿಂದ ಆ ಯೋಜನೆಗಳು ಎಷ್ಟು ಅಗತ್ಯ ಎಂಬುದು ಆ ಯೋಜನೆಗಳತ್ತ ಗಮನ ಹರಿಸಿದರೆ ಅರ್ಥವಾಗುತ್ತದೆ. 
ಈ ನಿಟ್ಟಿನಲ್ಲಿ ಅವರ ವೊದಲ ಯೋಜನೆ ಬೊಟ್ಟು ಮಾಡುವುದು ಈ ದೇಶದ ಇತರೆ ಹಿಂದುಳಿದ ವರ್ಗ(ಓಬಿಸಿ)ಗಳ ಬಗ್ಗೆ. ಹೌದು, ಪರಿಶಿಷ್ಟರ ಹಾಗೆ  ಓಬಿಸಿಗಳ ಬಗ್ಗೆ ಗಮನಹರಿಸುವ ಅಂಬೇಡ್ಕರರು ಹಿಂದುಳಿದ ವರ್ಗಗಳು ಆಡಳಿತ ವ್ಯವಸ್ಥೆಯಲ್ಲಿ ತಮ್ಮ ಪಾಲನ್ನು ಪಡೆಯು ವಂತಾಗಲು ಅವರಿಗೆ ಉನ್ನತ ಶಿಕ್ಷಣ ಯೋಜನೆ ರೂಪಿಸುವ ತನ್ಮೂಲಕ ಪರಿಶಿಷ್ಟರ ಹಾಗೆ ಓಬಿಸಿಗಳಿಗೂ ಕೂಡ ಸರಕಾರಿ ಸೇವೆ ಮತ್ತು ಮಿಲಿಟರಿ ಸೇವೆಯಲ್ಲಿ ಮೀಸಲಾತಿ ಜಾರಿಗೊಳಿಸುವ ನಿಲುವು ವ್ಯಕ್ತಪಡಿಸುತ್ತಾರೆ. 

ಈ ನಿಟ್ಟಿನಲ್ಲಿ ಮೀಸಲಾತಿ ಜಾರಿಗೊಳಿಸಿ ಎಂದು ಹೋರಾಡುವ ಹಿಂದುಳಿದ ವರ್ಗಗಳ ಹೋರಾಟಗಾರರನ್ನು ಕೋಮುವಾದಿಗಳು ಎಂದು ಜರೆಯುವುದರ ಹಿಂದಿರುವ ಸಂಚನ್ನು ತಮ್ಮಪಕ್ಷ (ಎಸ್‌ಸಿಎಫ್) ಉಗ್ರವಾಗಿ ಖಂಡಿಸುತ್ತದೆ ಎಂಬ ಎಚ್ಚರಿಕೆಯನ್ನು ಸಹ ಅವರು ನೀಡುತ್ತಾರೆ.ಮುಂದುವರೆದು ಅವರು ಸಮಾಜದಲ್ಲಿ ಮೇಲ್ಜಾತಿ ಮತ್ತು ಕೆಳಜಾತಿಗಳ ಮಧ್ಯೆ ಏರ್ಪಡುತ್ತಿರುವ ಅಸಮಾನತೆಯ ಕಂದರದ ಬಗ್ಗೆ ಪ್ರಸ್ತಾಪಿಸುತ್ತಾ ಅಂತಹ ಅಸಮಾನತೆಯ ಕಂದರವನ್ನು ದೂರಗೊಳಿಸಲು ಅಸಮಾನತೆಗೆ ಒಳಗಾದ ಪರಿಶಿಷ್ಟರಿಗೆ ಉನ್ನತ ಶಿಕ್ಷಣ ನೀಡುವ ಮತ್ತು ರಕ್ಷಣೆ, ವಿಜ್ಞಾನ ತಂತ್ರಜ್ಞಾನ, ನ್ಯಾಯಾಂಗ ಹೀಗೆ ಈ ದೇಶದ ಪ್ರತಿಯೊಂದು ಕ್ಷೇತ್ರವನ್ನು ತೆರೆದಿಡುವ ಮಾತನಾಡುತ್ತಾರೆ. 

ಆ ಮೂಲಕ ಜನ್ಮತಃ ಮೂಡಿಬಂದಿರುವ ಈ ಅಸಮಾನತೆಯ ಜಾಡನ್ನು ಕಿತ್ತೊಗೆಯಬಹು ದೆಂದು ಅವರು ಸಂದೇಶ ರವಾನಿಸುತ್ತಾರೆ.  ಅಂಬೇಡ್ಕರರು ಪರಿಶಿಷ್ಟರಿಗೆ ನೀಡಲು ಬಯಸಿದ್ದು ಅ..ಆ..ಇ..ಈ..  ಕಲಿಸುವ ಪ್ರಾಥಮಿಕ ಶಿಕ್ಷಣವನ್ನಲ್ಲ. ಬದಲಿಗೆ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ವಿಜ್ಞಾನಿ ಇತ್ಯಾದಿ.  ಈ  ದೇಶದ ಭವಿಷ್ಯ  ರೂಪಿಸುವ  ಸ್ಥಾನ  ಕಲ್ಪಿಸುವ ಐ.ಎ.ಎಸ್, ಐ.ಪಿ.ಎಸ್, ಪಿ.ಎಚ್.ಡಿ, ಇತ್ಯಾದಿ ಅತ್ಯುನ್ನತ ಶಿಕ್ಷಣವನ್ನು.  ಅಂದರೆ ಅಂಬೇಡ್ಕರರ  ಪ್ರಕಾರ ಈ ದೇಶದ ಪ್ರತಿಯೊಬ್ಬ ಪರಿಶಿಷ್ಟನು ಕನಿಷ್ಟ ಪಕ್ಷ ವಿಶ್ವವಿದ್ಯಾನಿಲಯ ಮಟ್ಟದ ಎಂ.ಎ, ಎಂ.ಎಸ್ಸಿ, ಇತ್ಯಾದಿ ಸ್ನಾತಕೋತ್ತರ ಪದವಿ ಪಡೆಯಲೇಬೇಕು! ಅದೇ ಅವರ ನೈಜ ಆಶಯವಾಗಿತ್ತು.


ಬಡತನ ನಿರ್ಮೂಲನೆ: ಅಂಬೇಡ್ಕರ್ ಪಕ್ಷ ಎಂದ ಮೇಲೆ ಅದು ಕೇವಲ ಪರಿಶಿಷ್ಟರ ಮತ್ತು ಹಿಂದುಳಿದವರ  ಏಳ್ಗೆಗಾಗಿಯಷ್ಟೆ ಕಾರ್ಯಕ್ರಮ ರೂಪಿಸುತ್ತದೆ  ಎಂಬ ಭಾವನೆ ಮೂಡಬಹುದು. ಆದರೆ ಅವರ ಪಕ್ಷದ  ಪ್ರಣಾಳಿಕೆಯ ಮುಂದುವರಿದ ಭಾಗ  ನೋಡುವುದಾದರೆ ಅದು ಸುಳ್ಳೆಂದು ಸಾಬೀತಾಗುತ್ತದೆ.  ಯಾಕೆಂದರೆ ಬಾಬಾ ಸಾಹೇಬರು ತಮ್ಮ ಪ್ರಣಾಳಿಕೆಯ ಆ ಭಾಗದಲ್ಲಿ  ಪ್ರಮುಖವಾಗಿ   ಪ್ರಸ್ತಾಪಿಸುವುದು ಬಡತನ ನಿರ್ಮೂಲನೆಯನ್ನು. ಗರೀಬಿ ಹಟಾವೋ ಎಂಬ ಕಾರ್ಯಕ್ರಮವನ್ನು ಇಂದಿರಾ ಗಾಂಧಿಯವರ ಸರಕಾರ ರೂಪಿಸಿರಬಹುದು. ಆದರೆ ಗರೀಬಿ ಎಲ್ಲಿ ಹಟಾವೋ(ನಿರ್ಮೂಲನೆ) ಆಗಿದೆ?  ಈ ನಿಟ್ಟಿನಲಿ ಬಡತನದ ಬಗ್ಗೆ ಅಂಬೇಡ್ಕರರು ಅಂದು ರೂಪಿಸಿದ್ದ ಯೊಜನೆಗಳು ಸಾಕಾರಗೊಂಡಿದ್ದರೆ ಸಾಕಾಗಿತ್ತು. ಬಡತನ ಖಂಡಿತ ನಿರ್ಮೂಲನೆಯಾಗಿರುತ್ತಿತ್ತು.

ಯಾಕೆಂದರೆ ಅಂಬೇಡ್ಕರ್‌ರವರು ಹೇಳಿರುವ ಹಾಗೆ ಬಡತನದ ಸಮಸ್ಯೆ ಎಂಬುದು ಎರಡಲಗಿನ ಕತ್ತಿಯ ಹಾಗೆ. ಒಂದು ಕಡೆ  ಕೃಷಿ ಉತ್ಪನ್ನದಲ್ಲಿ ಸಮೃದ್ಧಿ  ತೋರಿದರೂ ಮತ್ತೊಂದು ಕಡೆ ಏರುತ್ತಿರುವ ಜನಸಂಖ್ಯೆಗೆ ಅದು ಏನೇನು  ಸಾಲುವುದಿಲ್ಲ. ಈ ನಿಟ್ಟಿನಲಿ ಜನಸಂಖ್ಯೆಯ ನಿಯಂತ್ರಣವನ್ನವರು ಪ್ರತಿಪಾದಿಸುತ್ತಾರೆ. ಇನ್ನು ಕೈಗಾರಿಕೆಯಲ್ಲಿ  ಯಥೇಚ್ಛವಾಗಿ ಉತ್ಪತ್ತಿ ಇದರೂ ಅದು ಬಡವರನ್ನು ತಲುಪದಿರುವ ಬಗ್ಗೆ ಗಮನ ಸೆಳೆಯುವ ಅವರು ಕೈಗಾರಿಕೆಗಳ ರಾಷ್ಟ್ರೀಕರಣವನ್ನು  ಪ್ರತಿಪಾದಿಸುತ್ತಾರೆ. ಇದೇ ಸಂದರ್ಭದಲ್ಲಿ ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವ ಬಗ್ಗೆಯೂ ಬಾಬಾಸಾಹೇಬರು ಇಂಗಿತ ವ್ಯಕ್ತಪಡಿಸುತ್ತಾರೆ.

ಒಟ್ಟಾರೆ ಶೀಘ್ರ ಕೈಗಾರಿಕೀಕರಣ, ಕೃಷಿ ಉತ್ಪನ್ನ ಹೆಚ್ಚಿಸುವುದು, ಅದೇ ಸಮಯದಲ್ಲಿ ಜನಸಂಖ್ಯೆ ನಿಯಂತ್ರಿಸುವುದು ಬಡತನ ನಿರ್ಮೂಲನೆಯ ಸರಳ ಪರಿಹಾರೋಪಾಯವೆಂದು ಅಂಬೇಡ್ಕರರು ಕಂಡುಕೊಳ್ಳುತ್ತಾರೆ. ಅಂದಹಾಗೆ ಕೃಷಿ ಉತ್ಪನ್ನ ಹೆಚ್ಚಿಸುವ ನಿಟ್ಟಿನಲ್ಲಿ ಕಷಿಯ ಯಾಂತ್ರೀಕರಣ, ಸಾಕಷ್ಟು ರಸಗೊಬ್ಬರ ಪೂರೈಕೆ, ಆರೋಗ್ಯಕರ ಬಿತ್ತನೆ ಬೀಜ ಒದಗಿಸಬೇಕಾದ ಅಗತ್ಯತೆ ಹೇಳುವ ಅವರು ಸಣ್ಣ ಹಿಡುವಳಿಯ ಬದಲು ಬೃಹತ್ ಕೃಷಿ ಫಾರಂಗಳನ್ನು ಸ್ಥಾಪಿಸಬೇಕಾದ ಅಗತ್ಯತೆಯನ್ನು ಒತ್ತಿಹೇಳುತ್ತಾರೆ. ಬಡತನ ನಿರ್ಮೂಲನೆ ಅಂಬೇಡ್ಕರ್ ಪಕ್ಷದ ಪ್ರಮುಖ ಧ್ಯೇಯವಾಗಿತ್ತು.


ಆಂತರಿಕ ಆಡಳಿತ ಮತ್ತು ವಿದೇಶಾಂಗ ನೀತಿ: ಸ್ವಾತಂತ್ರ ಆಗತಾನೆ ಬಂದಿದ್ದ ಆ ಸಮಯದಲ್ಲಿ ದೇಶದಲ್ಲಿ ಆಗ ಉಂಟಾದ ಕೆಲವು ಪ್ರಮುಖ ಸಮಸ್ಯೆಗಳನ್ನು ಅಂಬೇಡ್ಕರರು ಗುರುತಿಸಿದ್ದರು. ಅವುಗಳೆಂದರೆ ಭಾಷಾವಾರು ಪ್ರಾಂತ್ಯ ರಚನೆ, ಆಡಳಿತದಲ್ಲಿ ಪಾರದರ್ಶಕತೆ, ಬೆಲೆಏರಿಕೆ, ಹಣದುಬ್ಬರ ಇತ್ಯಾದಿ. ಅದರಲ್ಲೂ ಕಾಂಗ್ರೆಸ್ಸಿಗರು ಅಂದು ಬಂಡಾವಾಳಶಾಹಿಗಳಿಂದ ಹಣಪಡೆದು ಚುನಾವಣೆ ಗೆಲ್ಲುತ್ತಿದ್ದದ್ದು, ಪ್ರತಿಫಲವಾಗಿ ಬಂಡಾವಾಳಶಾಹಿಗಳಿಗೆ  ದೇಶವನ್ನು ಅಡ ಇಡುವುದನ್ನು ಪ್ರಸ್ತಾಪಿಸುವ ಅಂಬೇಡ್ಕರ್‌ರವರು ಅದಕ್ಕೆ ತಡೆಯೊಡ್ಡಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಾರೆ. ಈ ನಿಟ್ಟಿನಲ್ಲಿ ತಮ್ಮ ಪಕ್ಷ ಬೃಹತ್ ಬಂಡವಾಳಿಗರಿಗೆ ಈ ದೇಶದ ಆಡಳಿತ ವ್ಯವಸ್ಥೆಯನ್ನು ಒಪ್ಪಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆಯ ನುಡಿಗಳನ್ನು ನುಡಿಯುತ್ತಾರೆ. 

ಈ ನಡುವೆ ಅಂದಿನ ನೆಹರು ಸರಕಾರದ ವಿದೇಶಾಂಗ ನೀತಿಯನ್ನು ಟೀಕಿಸುವ ಅವರು ಅಕ್ಕ ಪಕ್ಕದ ದೇಶಗಳ ಜೊತೆ ಒಳ್ಳೆಯ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳುವುದರ ಅಗತ್ಯತೆಯನ್ನು ಪ್ರತಿಪಾದಿಸುತ್ತಾರೆ. ಪ್ರಮುಖವಾಗಿ ಕಾಶ್ಮೀರ ವಿಷಯ ಪ್ರಸ್ತಾಪಿಸುವ ಅವರು ಮುಸ್ಲಿಂ ಬಾಹುಳ್ಯ ಕಾಶ್ಮೀರವನ್ನು ಪಾಕಿಸ್ತಾನಕ್ಕೂ, ಜಮ್ಮು ಮತ್ತು ಲಡಾಕ್ ಪ್ರಾಂತ್ಯಗಳನ್ನು ಭಾರತಕ್ಕೂ ಸೇರಿಸಿ ಆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬಹುದೆನ್ನುತ್ತಾರೆ. ದುರಂತವೆಂದರೆ ಕಾಶ್ಮೀರದ ಬಗ್ಗೆ ಅಂಬೇಡ್ಕರರು ಅಂದು ಸೂಚಿಸಿದ ಆ ಪರಿಹಾರ ಇನ್ನೂ ಜಾರಿಯಾಗದೆ ಆ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆಯಲ್ಲಾ ಎಂಬುದು.


ಬಡತನ ನಿರ್ಮೂಲನೆ, ಕೃಷಿಕ್ಷೇತ್ರ ವಿಸ್ತರಿಸುವುದು, ಬೃಹತ್ ನೀರಾವರಿ ಯೋಜನೆ, ಕೈಗಾರಿಕೀಕರಣ ಇತ್ಯಾದಿ ಆಶ್ವಾಸನೆ ನೀಡುವ ಅಂಬೇಡ್ಕರರಿಗೆ ಅದಕ್ಕೆಲ್ಲಾ ಸಂಪನ್ಮೂಲ ಸಂಗ್ರಹದ ಅಗತ್ಯಕ್ಕಾಗಿ ಅವರು ರಕ್ಷಣಾ ವೆಚ್ಚವನ್ನು ತಗ್ಗಿಸುವ ಮಾತನ್ನಾಡುತ್ತಾರೆ. ವಿಶೇಷವಾಗಿ ಕಾಶ್ಮೀರ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಿಕೊಂಡರೆ ಶೇ.೫೦ ರಕ್ಷಣಾ ವೆಚ್ಚ ಉಳಿಸಬಹುದು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತಾರೆ. ವಿಷಾದನೀಯವೆಂದರೆ ಈಗಲೂ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ವೆಚ್ಚ ವರ್ಷಂಪ್ರತಿ ದ್ವಿಗುಣಗೊಳ್ಳುತ್ತಲೇ ಇದೆ.

ಅಂಬೇಡ್ಕರ್‌ರವರು ಸೂಚಿಸಿದ ಪರಿಹಾರ ಸಾಧ್ಯವಾಗಿಯೇ ಇಲ್ಲ. ಸಂಪನ್ಮೂಲ ಸಂಗ್ರಹದ ಬಗ್ಗೆ ಅವರು ಸೂಚಿಸುವ ೨ನೇ ಪರಿಹಾರ ಉಪ್ಪಿನಕರ ವಿಧಿಸುವ ಬಗ್ಗೆ. ಹೌದು, ಸ್ವಾತಂತ್ರ ಬಂದ ನಂತರ ಗಾಂಧಿಜೀಯವರ ಒತ್ತಾಯದ ಮೇರೆಗೆ ಉಪ್ಪಿನ ಮೇಲಿನ ತೆರಿಗೆಯನ್ನು ಹಿಂಪಡೆಯಲಾಯಿತು. ಆದರೂ ಉಪ್ಪಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಬದಲಿಗೆ ಸರಕಾರದ ಬೊಕ್ಕಸಕ್ಕೆ 11ಕೋಟಿ ರೂಪಾಯಿ ನಷ್ಟವಾಯಿತು. ಈ ಬಗ್ಗೆ ಪ್ರಸ್ತಾಪಿಸುವ ಅಂಬೇಡ್ಕರ್‌ರವರು ಉಪ್ಪಿನ ಮೇಲೆ ತೆರಿಗೆ ವಿಧಿಸಿ ಆ ನಷ್ಟವನ್ನು ಭರ್ತಿ ಮಾಡುವ ಆಶ್ವಾಸನೆ ನೀಡುತ್ತಾರೆ. 

ಮುಂದುವರೆದು ಮದ್ಯಪಾನ ನಿಷೇಧದಿಂದ ಬೊಕ್ಕಸಕ್ಕೆ ನಷ್ಟವಾಗಿರುವ ಮತ್ತು ಅಂತಹ ನಿಷೇಧದಿಂದ ಮದ್ಯ ತಯಾರಿಕೆ ಕಳ್ಳಭಟ್ಟಿಯ ರೂಪ ಪಡೆದು, ಗೃಹ ಕೈಗಾರಿಕೆಯಾಗಿ ರೂಪುಗೊಂಡು ಹೆಂಗಸರು ಮಕ್ಕಳೆನ್ನದೆ  ಮನೆಮಂದಿಯೆಲ್ಲಾ ಕುಡಿಯಲು ಪ್ರಾರಂಭಿಸಿರುವುದನ್ನು ಗುರುತಿಸುವ ಅವರು ಮದ್ಯಪಾನ ನಿಷೇಧವನ್ನು ಹಿಂಪಡೆಯಬೇಕಾದುದರ ಬಗ್ಗೆ ತಮ್ಮ ಆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುತ್ತಾ ಆ ಮೂಲಕ ಬೊಕ್ಕಸಕ್ಕೆ ಪ್ರತಿವರ್ಷ 8.7ಕೋಟಿ ರೂಪಾಯಿ ನಷ್ಟ ಉಂಟಾಗುವುದನ್ನು ತಡೆಗಟ್ಟಬಹುದು ಎನ್ನುತ್ತಾರೆ.
ಹಾಗೆಯೇ ಸಂಪನ್ಮೂಲ ಕ್ರೋಢೀಕರಣದ ನಿಟ್ಟಿನಲಿ ಜೀವ ವಿಮೆಯನ್ನು ರಾಷ್ಟ್ರೀಕರಿಸಬೇಕಾದ ಅಗತ್ಯವನ್ನು ಅವರು ಪ್ರಸ್ತಾಪಿಸುತ್ತಾರೆ. ಅಂದಹಾಗೆ ಅಂಬೇಡ್ಕರರ ಈ ಒತ್ತಾಯದ ಫಲವಾಗಿಯೇ ಎಲ್.ಐ.ಸಿ(ಭಾರತೀಯ ಜೀವನ್ ಭೀಮಾ ನಿಗಮ್) ಪ್ರಾರಂಭವಾದದ್ದು ಎಂಬುದು ಬಹುತೇಕರಿಗೆ ತಿಳಿದಿಲ್ಲ! ಆದರೆ ಅದು ನಿಜ.ಒಂದು ಪ್ರಶ್ನೆ, ರಾಜಕೀಯ ಪಕ್ಷವೆಂದ ಮೇಲೆ ಅದು ಯಾರ ಜೊತೆಯಾದರು ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲೇ ಬೇಕಲ್ಲವೆ? 

ಆದರೆ ಅಂಬೇಡ್ಕರರು ಅಂತಹ ಯಾವುದೇ ಹೊಂದಾಣಿಕೆಯನ್ನು ಖಂಡತುಂಡವಾಗಿ ನಿರಾಕರಿಸುತ್ತಾರೆ. ಅವರದೇ ಮಾತುಗಳನ್ನು ಹೇಳುವುದಾದರೆ ನಮ್ಮ ಪಕ್ಷ ಅಂದರೆ ಎಸ್.ಸಿ.ಎಫ್ ಹಿಂದೂ ಮಹಾಸಭೆ ಅಥವಾ ಆರೆಸ್ಸೆಸ್ ನಂತಹ ಯಾವುದೇ ಪ್ರತಿಕ್ರಿಯಾತ್ಮಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸರ್ವಾಧಿಕಾರಿ  ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತದೆ, ಪಾರ್ಲಿಮೆಂಟರಿ ವ್ಯವಸ್ಥೆಯನ್ನು ನಾಶಗೊಳಿಸುತ್ತದೆ ಎಂಬ ಕಾರಣಕ್ಕೆ ಕಮ್ಯುನಿಸ್ಟರ ಜೊತೆ ಕೂಡ  ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.   

ತನ್ನನ್ನು ಬಿಟ್ಟರೆ ಬೇರೆ  ಯಾರೂ ಇಲ್ಲ ಎಂದು ವಿರೋಧ ಪಕ್ಷದ ಅಸ್ತಿತ್ವವನ್ನೆ  ವಿರೋಧಿಸುವ  ಕಾಂಗ್ರೆಸ್ ಪಕ್ಷದ ಜೊತೆ ಕೂಡ ತಮ್ಮ ಪಕ್ಷ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ. ಹೀಗಿದ್ದರೂ ಅಂಬೇಡ್ಕರರು ಒಂದು ಚುನಾವಣಾ  ಪೂರ್ವ ಹೊಂದಾಣಿಕೆಯನ್ನು ಪ್ರತಿಪಾದಿಸುತ್ತಾರೆ. ಅದೆಂದರೆ ಪಕ್ಷಗಳ ಜೊತೆಗಿನ ಹೊಂದಾಣಿಕೆಯಲ್ಲ. ಬದಲಿಗೆ ಸಮುದಾಯಗಳ ಜೊತೆಗಿನ ಹೊಂದಾಣಿಕೆ! ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳು( ಓಬಿಸಿ) ಮತ್ತು ಪರಿಶಿಷ್ಟವರ್ಗ(ಎಸ್ಟಿ)ಗಳ ಜೊತೆ ಸಹಯೋಗದಿಂದ ಕೆಲಸ ಮಾಡಬೇಕಾದ ಅಗತ್ಯವನ್ನು ಪ್ರತಿಪಾದಿಸುವ ಅವರು ಹಿಂದುಳಿದ ವರ್ಗಗಳನ್ನು ಒಳಗೊಳ್ಳುವ, ಈ ನಿಟ್ಟಿನಲ್ಲಿ ಸಾಧ್ಯವಾದರೆ ತಮ್ಮ ಪಕ್ಷದ ಹೆಸರಾದ ಆಲ್ ಇಂಡಿಯಾ ಷೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ ಅನ್ನು ಆಲ್ ಇಂಡಿಯಾ ಬ್ಯಾಕ್‌ವರ್ಡ್ ಕ್ಲಾಸ್ ಫೆಡರೇಷನ್ ಎಂದು ಬದಲಿಸಿಕೊಳ್ಳಲು ಕೂಡ ಸಿದ್ಧ ಎಂದು ಘೋಷಿಸುತ್ತಾರೆ.

ಈ  ನಡುವೆ ಸಮಾನ ಮನಸ್ಕ ಪಕ್ಷಗಳು ಸೇರಿಕೊಂಡು ರಂಗಗಳನ್ನು ರಚಿಸಿಕೊಳ್ಳಬೇಕಾದ ಅಗತ್ಯವನ್ನು ಹೇಳುವ ಅಂಬೇಡ್ಕರರು ಅಂತಹ ಪಕ್ಷಗಳು ತಮ್ಮ ಸಿದ್ಧಾಂತದ ನಿಟ್ಟಿನಲ್ಲಿ ಸ್ವಾಂiತ್ತತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ. ಈ ದಿಸೆಯಲ್ಲಿ ಅಂದಿನ ಸೋಷಿಯಲಿಸ್ಟ್ ಪಾರ್ಟಿ, ತಮಿಳುನಾಡಿನ ಪೆರಿಯಾರರ ಜಸ್ಟಿಸ್ ಪಾರ್ಟಿ ಇತ್ಯಾದಿಗಳ ಜತೆ ಕೆಲವು ಪೂರ್ವ ನಿಲುವಿನ ಶರತ್ತುಗಳ ಜೊತೆ ಒಂದು ರಂಗವನ್ನು ರೂಪಿಸಿಕೊಳ್ಳುವ  ಇಂಗಿತವನ್ನವರು ವ್ಯಕ್ತಪಡಿಸುತ್ತಾರೆ.


ಅದೇನೆ ಇರಲಿ ೧೯೫೧ರ ಅಕ್ಟೋಬರ್ ೬ರಂದು ಹೊಸದಿಲ್ಲಿಯ ತಮ್ಮ ನಿವಾಸದಲ್ಲಿ ನಡೆದ ತಮ್ಮ ಪಕ್ಷದ ಸಭೆಯಲ್ಲಿ ಅವರು ಬಿಡುಗಡೆಗೊಳಿಸಿದ ಆ ಪ್ರಣಾಳಿಕೆ ಎಲ್ಲ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಿಗೆ ಆದರ್ಶಪ್ರಾಯವಾಗುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ. ಯಾಕೆಂದರೆ ಅಂಬೇಡ್ಕರರು ತಮ್ಮ ಪಕ್ಷದ ಪರವಾಗಿ ಅಂದು ಘೋಷಿಸಿದ ಕನಿಷ್ಠ ಪ್ರಮಾಣದ ಯೋಜನೆಗಳು ಇಂದಿಗೂ ಕೂಡ ಜಾರಿಯಾಗಿಲ್ಲ. ಹಣದುಬ್ಬರ ನಿಯಂತ್ರಣಗೊಂಡಿಲ್ಲ, ಬಂಡವಾಳಿಗರ ಹಿಡಿತ ಕಡಿಮೆಯಾಗಿಲ್ಲ, ರಾಷ್ಟ್ರೀಕರಣಗೊಂಡಿದ್ದ ಕೈಗಾರಿಕೆಗಳು ಖಾಸಗೀಕರಣಗೊಂಡಿವೆ, ಕಪ್ಪು ಹಣದಂಧೆಯ ವಿರುದ್ಧ ಕ್ರಮ ಜರುಗಿಸಲಾಗಿಲ್ಲ.
ಭ್ರಷ್ಟಾಚಾರದ ವಿರುದ್ಧವಂತೂ ಕೇಂದ್ರ ಸರಕಾರ ಮೂಗು ಕಿವಿ ಮುಚ್ಚಿ ಕುಳಿತಿದೆ! ಒಟ್ಟಾರೆ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯ ಮೂಲಕ ಅಂಬೇಡ್ಕರರು ಕಂಡ ಬಹುತೇಕ ಕನಸುಗಳು ನನಸಾಗದೇ ಹಾಗೆ ಉಳಿದಿವೆ. ಈ ನಿಟ್ಟಿನಲ್ಲಿ ಸಮಾಧಾನ ಪಟ್ಟುಕೊಳ್ಳುವ ವಿಷಯವೆಂದರೆ ಅವರು ರೂಪಿಸಿದ ರಾಜಕೀಯ ಹೊಂದಾಣಿಕೆ ಸಿದ್ಧಾಂತ ಅಲ್ಲಲ್ಲಿ ಯಶಸ್ವಿಯಾಗಿರುವುದು. ಉದಾಹರಣೆಗೆ ಅಂಬೇಡ್ಕರರು ಪರಿಶಿಷ್ಟ ಜಾತಿ ಜನರು ಓಬಿಸಿಗಳ ಜೊತೆ ಹಾಗೂ ಎಸ್‌ಟಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕೆಂದು ಹೇಳಿದ್ದರು. 

ಅದರಂತೆ  ಎಸ್‌ಸಿ/ ಎಸ್‌ಟಿ/ ಓಬಿಸಿ/ಧಾರ್ಮಿಕ ಅಲ್ಪಸಂಖ್ಯಾತರನ್ನೊಳಗೊಂಡ ಅಂದರೆ ಬಹುಜನರನ್ನು ಒಳಗೊಂಡ ಬಹುಜನ ಸಮಾಜ ಪಕ್ಷ ಅಸ್ತಿತ್ವಕ್ಕೆ ಬಂದಿದೆ. ಸಮಗ್ರ ಕೈಗಾರಿಕೀಕರಣವನ್ನು ಅವರು ಬಯಸಿದ್ದರು ಅದು ಕೂಡ ಸಾಧ್ಯವಾಗಿದೆ. ಆದರೆ ಸಾಧ್ಯವಾಗದೆಂದರೆ ರಕ್ಷಣಾವೆಚ್ಚದ ಕಡಿತ. ಕಡಿತವಾಗುವುದಿರಲಿ ಅದು ಇನ್ನು ಏರುತ್ತಲೇ ಇದೆ. ಹಾಗೆ ಕಾಶ್ಮೀರ ಸಮಸ್ಯೆ ಪರಿಹಾರವಾಗಿಲ್ಲ. ಅದು ಇನ್ನು ಕಗ್ಗಂಟಾಗಿಯೇ ಇದೆ.


ದೇಶದ ಸಮಸ್ಯೆಗಳನ್ನು ಬಗೆಹರಿಸುವ, ದೇಶದ ಜನರ ಬದುಕನ್ನು ನೆಮ್ಮದಿ ಯಾಗಿಡುವ ಅಪೇಕ್ಷೆ ಈ ದೇಶದ ರಾಜಕೀಯ ಪಕ್ಷಗಳಿಗಿದ್ದರೆ ಅವು ಅಂಬೇಡ್ಕರರು ತಮ್ಮ ಪಕ್ಷಕ್ಕಾಗಿ ಅಂದು ರೂಪಿಸಿದ ಆ ಪ್ರಣಾಳಿಕೆಯತ್ತ ಕಣ್ಣು ಹಾಯಿಸಬೇಕಿದೆ. ಸಾಧ್ಯವಾದರೆ ಅವು ಅಂಬೇಡ್ಕರರ ಆ  ಶ್ರೇಷ್ಠ ಪ್ರಣಾಳಿಕೆಯನ್ನು ತಮ್ಮದಾಗಿಸಿಕೊಳ್ಳಲಿ.

ಕೊನೆಯ ಜಾವದ ರಾಗ

 

 

 


Venkatramana Gowda

ವೆಂಕಟ್ರಮಣ ಗೌಡ

 

ಸೌಜನ್ಯ : ಎನಿಗ್ಮಾ 

ರುಳ ಸಖಿಯ ತೆಕ್ಕೆಯಲಿ
ವಿಶ್ರಮಿಸುವ ಸೂರ್ಯನಿಗೆ
ಕೇಳುವ ಹಾಗೆ ಕೋಳಿ
ಹಗಲ ಹುಡುಗಿಯ ಬೇಗುದಿಯನ್ನು
ಕೊನೆಯ ಜಾವದಲಿ
ರಾಗ ಮಾಡಿ ಹಾಡುವುದು

~
ಸವರಾಜ ಸೂಳಿಭಾವಿಯವರ ಒಂದು ಕವಿತೆ ಇದು. ಹೋರಾಟದ ದಾರಿಯನ್ನು ನಂಬಿದವರಾದ ಬಸವರಾಜ ಸೂಳಿಭಾವಿಯವರಿಗೆ ಕವಿತೆ ಒಂದು ಬೆರಗು ಅಲ್ಲವೇ ಅಲ್ಲ. ಅವರು ಪದಗಳಿಗೆ ಪರವಶರಾಗಿ ಮೈಮರೆಯುವವರೂ ಅಲ್ಲ. ನಿರ್ಮೋಹಿಯಂತೆ ನೋಡಬಲ್ಲ ಶಕ್ತಿಯುಳ್ಳವರಾದ ಅವರ ಮನಸ್ಸಿನೊಳಗೆ, ಆ ಕಾರಣದಿಂದಲೇ ಹೋರಾಟದ ಒಡಲೊಳಗಿನ ಕನಸುಗಳನ್ನು ಕಾಪಾಡಿಕೊಳ್ಳಬಲ್ಲ ಆಶಾವಾದಕ್ಕೂ ಜಾಗವಿರುವುದು. ಹೋರಾಟಗಾರನೊಬ್ಬನ ಪಕ್ವತೆಯಲ್ಲಿ ಬಸೂ ಕವಿತೆಗಳು ಪ್ರಾಣ ಮಿಡಿಯುತ್ತವೆ. ತೀವ್ರ ಜೀವನಪ್ರೀತಿ ಮತ್ತು ಹೊರಗೆ ಕಾಣಿಸುವುದಕ್ಕಿಂತ ಬೇರೆಯದೇ ಮುಖವಿರುವ ಈ ಸಮಾಜದ ಹಿಡನ್ ಅಜೆಂಡಾಗಳ ಬಗೆಗಿನ ವ್ಯಾಕುಲಗಳೆರಡೂ ಸೂಳಿಭಾವಿಯವರ ಕವಿತೆಗಳಲ್ಲಿ ಹೋರಾಟದ ಅಂತಃಸತ್ವವನ್ನು ನೆಚ್ಚಿ ಮುನ್ನೆಲೆಗೆ ಬರುತ್ತವೆ.

ಮೇಲೆ ನಾನು ಉದ್ಧರಿಸಿರುವ ಅವರ ಪುಟ್ಟ ಕವಿತೆಯಲ್ಲಿ ಜರುಗುವುದು ಕೂಡ, ಅಂಥ ಒಂದು ಚಲನೆ. ಮುಖಾಮುಖಿಯಾಗುವುದೇ ಸಾಧ್ಯವಿಲ್ಲದ ಎರಡು ಮನಸ್ಸುಗಳು, ಅಯನಗಳು, ಜೀವನಗಳನ್ನು ಸೂಳಿಭಾವಿಯವರು ಕಾಣುವ ಪರಿ ಇಲ್ಲಿದೆ. ತುಂಬ ಸರಳವಾದ ರೂಪಕದ ಮೂಲಕವೇ ಅವರು ನಿರೂಪಿಸುವ ಯಾಜಮಾನ್ಯದ, ಅನ್ಯಾಯದ ಮತ್ತು ಅದರ ನೆರಳಲ್ಲಿ ನಲುಗುವ ಮತ್ತೊಂದು ಬದುಕಿನ ಕೊನೆಗಾಣದ ಬವಣೆಯ ಕಥನ, ಹೋರಾಟವನ್ನೇ ಧರ್ಮವೆಂದು ಸ್ವೀಕರಿಸಿರುವ ಅಂತರಂಗಕ್ಕೆ ಕಂಡಿರುವಂಥದ್ದು. ಹಾಗಾಗಿಯೇ ಇಲ್ಲಿ ನೋವಿನ ಕಥೆಗೂ ಒಂದು ರಾಗವಿದೆ.
ಬಸವರಾಜರು ಕಟ್ಟಿಕೊಡುವ ಈ ಚಿತ್ರ, ವರ್ಗಸಂಘರ್ಷದ ಬಗೆಗಿಂತ ಬೇರೆಯದು ಮತ್ತು ದೈಹಿಕಕ್ಕಿಂತ ಮನಸ್ಸಿನ ಸಂಕಟಕ್ಕೆ ಸಂಬಂಧಿಸಿದ್ದು. ಹಾಗಾಗಿ ಇದು ಕಣ್ಣಿಗೆ ಕಾಣುವ ನೋವಿಗಿಂತ ಕಾಣದ ನೋವಿನ ಜಗತ್ತಿಗೆ ತೆರೆದುಕೊಂಡ ಸಮಾಜವಾದಿ ವಾಸ್ತವದಲ್ಲಿ ನಿಚ್ಚಳಗೊಂಡ ನೋಟ.

ಇರುಳೆಂಬ ಮತ್ತೊಬ್ಬಳ ಸಂಗಸುಖದಲ್ಲಿ ಮೈಮರೆಯುವ ಸೂರ್ಯನಿಗೆ ತನ್ನ ನಿಜವಾದ ಸಂಗಾತಿಯಾದ ಹಗಲ ಹುಡುಗಿಯ ದುಃಖ ಅರ್ಥವಾಗುವುದೇ ಇಲ್ಲ. ಅವಳ ಬೇಗುದಿ ಅವನಿಗೆ ಕೇಳುವ ಹಾಗೆ ಕೊನೆಯ ಜಾವದಲ್ಲಿ ಹಾಡುತ್ತದೆ ಕೋಳಿ. ಪ್ರಾಕೃತಿಕ ಲಯವೊಂದು, ಬಸೂ ಅವರಿಗೆ ಈ ಪ್ರಕೃತಿಯಲ್ಲೇ ಅಡಕವಾಗಿರುವ ಅಪಸವ್ಯದ ರೂಪಕವಾಗಿಯೂ ಕಾಣಿಸುತ್ತದೆ. ಜಗತ್ತನ್ನೇ ಬೆಳಗುವನೆಂಬ ಹೆಗ್ಗಳಿಕೆ ಹೊತ್ತವನಿಗೆ ತನ್ನ ಮನೆಯ ಹೆಣ್ಣಿಗೆ ತನ್ನಿಂದಲೇ ಆಗುತ್ತಿರುವ ಅನ್ಯಾಯದ ಬಗ್ಗೆ ಹೇಳಲು ಇನ್ನಾರೋ ಬೇಕಾಗುತ್ತಾರೆ. ಎಲ್ಲ ನೋಡುವವನಿಗೆ ತನ್ನ ಮನೆಯೊಳಗಿನ ಜೀವವೊಂದರ ಬೇಗುದಿ ಅರ್ಥವಾಗುವುದೇ ಇಲ್ಲವೆನ್ನುವುದೇ ವೈಚಿತ್ರ್ಯ. ಮತ್ತು ಇದು ದನಿಯೆತ್ತಲಾರದವರ, ಎಲ್ಲವನ್ನೂ ಒಳಗೇ ಸಹಿಸಿಕೊಳ್ಳಬಲ್ಲ ಸಮೂಹವೊಂದರ ಇಡೀ ಚರಿತ್ರೆಯ ಆಳದಲ್ಲಿನ ಸಂಕಟವೂ ಆಗಿದೆ.

“ಹಗಲ ಹುಡುಗಿಯ ಬೇಗುದಿಯನ್ನು ಕೊನೆಯ ಜಾವದಲಿ ರಾಗ ಮಾಡಿ ಹಾಡುವುದು” ಎನ್ನುವುದು, ತಿರಸ್ಕೃತ ವರ್ಗವೊಂದರ ಒಳಗೇ ಪುಟಿದುಕೊಳ್ಳುವ ಅದಮ್ಯ ಚೈತನ್ಯದ ಪ್ರವಹಿಸುವಿಕೆಯನ್ನೇ ಹೇಳುತ್ತದೆ. ದನಿಯೆತ್ತಲಾರದವರ, ಎಲ್ಲವನ್ನೂ ಒಳಗೇ ಸಹಿಸಿಕೊಳ್ಳಬಲ್ಲ ಸಮೂಹದ ಚರಿತ್ರೆ ಬದಲಾಗುವ ಸಮಯ ಅದು. “ಕೊನೆಯ ಜಾವದಲಿ” ಎಂಬುದು ಈ ಹಿನ್ನೆಲೆಯಲ್ಲಿ ತುಂಬ ಧ್ವನಿಪೂರ್ಣವಾಗಿ ಕಾಣಿಸುತ್ತದೆ. ಇನ್ನು ಸುಮ್ಮನಿರುವುದು ಸಾಧ್ಯವಿಲ್ಲ, ಅನ್ಯಾಯವನ್ನು ನೋಡಿಕೊಂಡು ಕೂರಲಾಗದು ಎಂದೆನ್ನಿಸಿಬಿಡುವ ಘಳಿಗೆ ಅದು.

ಹೀಗೆ ಚರಿತ್ರೆಯನ್ನು ಹೊಸತಾಗಿ ಕಟ್ಟಬೇಕೆನ್ನುವುದು ಬಸೂರಂಥವರ ಹೋರಾಟದ ಭಾಗವೇ ಆದ ಹಂಬಲವಾಗಿರುವುದರಿಂದ, ಅವರ ಕಾವ್ಯ ಅದರಿಂದ ಬೇರೆಯಾಗಿ ನಿಲ್ಲುವುದಿಲ್ಲ. ಹೋರಾಟದ ಭಾಗವಾಗಿಯೇ ದನಿಗೊಳ್ಳುವ ಕವಿತೆಗಳ ಮೂಲಕ ಅವರು, ಎಚ್ಚರದಿಂದ ಬರೆಯಲಾಗಿರುವ ಮತ್ತು ನಿಜವಾದ ಕರುಳನ್ನು ಕತ್ತರಿಸಿ ತೆಗೆಯಲಾಗಿರುವ ಚರಿತ್ರೆಯ ಜೊತೆ ವಾಗ್ವಾದವನ್ನು ಏರ್ಪಡಿಸುತ್ತಾರೆ. ಚರಿತ್ರೆಯ ವ್ಯವಸ್ಥಿತವಲ್ಲದ, ಆದರೆ ಮೂಲ ಮತ್ತು ನಿಜ ರೂಪದ ಜೊತೆ ಸಂಪರ್ಕವನ್ನು ಕಟ್ಟುವ ಯತ್ನದಲ್ಲಿ ಹೊಸದೇ ಸಂವಾದವನ್ನು ಸಾಧ್ಯಗೊಳಿಸುತ್ತಾರೆ.

ಆಳದ ಗಾಯದ ತೀರದ ನೋವಿನಲ್ಲಿ, ಒಂದು ಕವಿತೆ ಕವಿತೆಯಾಗಲ್ಲದೆ ಜೀವನದ ನ್ಯಾಯಕ್ಕಾಗಿ ನಡೆವ ಜಂಗಮ ಗುಣವಾಗಿ ದಕ್ಕುವುದೆಂದರೆ ಹೀಗೇ ಇರಬೇಕು. ವಚನಗಳ ಕಾಲದ ಸಾಧ್ಯತೆಯ ಹಾಗೆ ಇದು.

Tuesday, February 26, 2013

ದಿನ-ಮಾನ


https://mail-attachment.googleusercontent.com/attachment/?ui=2&ik=64db019aae&view=att&th=13d19613e5efe26e&attid=0.12&disp=inline&realattid=file11&safe=1&zw&saduie=AG9B_P_apJ-8s6ZpZQ22vq2XigUY&sadet=1361944440183&sads=8_Q5h6XVHH20Ps5MAsnekr1v3bg&sadssc=1


ಡಾ.ಎಚ್.ಎಸ್.ಅನುಪಮಾಪಡುವಣದಲಿ ಇಳಿವ ಸೂರ್ಯನೇ
ಈ ಬಾಂದಳದಲ್ಲಿ 
ಮುಳುಗಿದವನಷ್ಟೇ ಮತ್ತೆ ಉದಿಸಬಲ್ಲ
ಎಂಬ ಪಾಠ ಹೇಳುತ್ತಿರುವೆಯಾ?

ಹಾರುತ್ತ ಹಾಡುವ ಪುಟ್ಟ ಹಕ್ಕಿಯೇ
ಬಂಡೆ ನುಂಗಲಾರದಂಥ ನಿನ್ನ ಹಾಡ
ನೀರೊಳಾಡುವ ಮೀನಿಗೂ ಕೇಳಿಸಬಲ್ಲೆಯಾ?

***

ತಣ್ಣೀರು ತುಂಬಿದ ಬಟ್ಟಲ
ಮುಂಚಾಚಿದ ಬೆಚ್ಚನೆಯ ಕೈ
ಸೋಕಿದ ಬೆರಳು ದಾಹ ಮರೆಯಿಸಿತು..

***

ಸೂರ್ಯಚಂದ್ರರ ಮೇಲಾಣೆ
ಯಾರೂ ತಕ್ಷಣ ಮೇಲೇರಲಾರರು
ತಕ್ಷಣ ಕೆಳಗಿಳಿಯಲೂ ಆರರು

***


ಸೂರ್ಯಚಂದ್ರರಂತೆ 
ಬೆಳಗಲೇ ಬೇಕೆಂದೇನಿಲ್ಲ ಪ್ರೇಮ
ಅದೃಶ್ಯವಾದರೂ ಸರಿಯೆ
ಗಾಳಿಯಾಗಿ ಉಸಿರುಗೊಳ್ಳಲಿ

***


ಹಾಡುಹಗಲು ದೀಪ ಬೆಳಗುವುದಿಲ್ಲ 
ಬತ್ತಿತೈಲ ಹಿಡಿದು ಕಗ್ಗತ್ತಲಲಿ ಕಾದಿರುವ  
ತಾವುಗಳಲಿ ಅದು ಬದುಕುತ್ತದೆ

***

ಎಲೆಯುದುರಿದ ಬೋಳು ಮರ
ಹಕ್ಕಿಯ ಮುಸ್ಸಂಜೆ ರಾಗ

ಮಾಗಿಯ ಕನಸು

***

ಅದೇ ಕೆಂಪು ಪಡುವಣ ಬಯಲು 
ಮುಳುಗುವ ಸೂರ್ಯ

ಒಬ್ಬಂಟಿ ಹಾದಿ

***

ಉದಯಾಸ್ತಮಾನಗಳ ಗಾಯ
ನೆತ್ತರು ಚೆಲ್ಲಿದ ಹಾದಿ

ದಿನವು ಹುಟ್ಟುತ್ತಿದೆ, ಮರಣಿಸುತ್ತಿದೆ..

***

ಉದುರುವ ನಸು ಹಳದಿ ಎಲೆ
ಅಲುಗುವ ಹಾಲು ಹಲ್ಲು

ಕವಿ ಕಾವ್ಯ ಮಿಲನ

***

ಅದೇ ಪಯಣದ ಹಾದಿ
ಒಮ್ಮೆ ಭಾರ ಒಮ್ಮೆ ಹಗುರ

ತೂಗುವ ಮಾಯಕಾರ ಯಾರೋ ?

***

ಚುಕ್ಕು ಬುಕ್ಕು ನಲ್ಲಿ 'ತೇವ ಕಾಯುವ ಬೀಜ'ದ ಕವನಗಳು

ಮುದ್ರಣಕ್ಕೆ ಸಿದ್ದವಾಗಿರುವ ನನ್ನ 'ತೇವ ಕಾಯುವ ಬೀಜ' ಕವನ ಸಂಕಲನದ ಕೆಲವು ಕವಿತೆಗಳು ಚುಕ್ಕು ಬುಕ್ಕು ನಲ್ಲಿ.. ಬಿಡುವು ಮಾಡಿಕೊಂಡು ಗಮನಿಸಿ

ಕಾರಂಚೇಡು ದಲಿತ ನರಮೇಧ
- ಎಚ್.ಆರ್.ಎಲ್.ಎಫ್

ಹಾಡೋಣ ಕುಣಿದಾಡೋಣ
ಆನಂದದ ಸ್ವಾತಂತ್ರವನ್ನು
ಪಡೆದಿದ್ದೇವೆ ಎಂದು
ಹಾಡೋಣ ಕುಣಿದಾಡೋಣ

ಸ್ವಾತಂತ್ರ ಹೋರಾಟದ ಕವಿ ಭಾರತಿ, ಸ್ವಾತಂತ್ರವನ್ನು ಸ್ವತಂತ್ರ ದೇಶದಲ್ಲಿ ಎಲ್ಲ ಜಾತಿಗಳಿಗೂ ವಿಮೋಚನೆಯಾಗುತ್ತದೆ ಎಂದು ಕನಸು ಕಂಡು ಮೇಲಿನಂತೆ ಹಾಡಿದ್ದರು. ಅವರು ಕನಸು ಕಂಡ ಹಾಗೆ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ ಸಿಕ್ಕಿತು. ನಂತರ ಸ್ವತಂತ್ರ ಭಾರತದಲ್ಲಿ ಎಲ್ಲ ಜಾತಿಗಳು ಹೇಗೆ ಇರುತ್ತದೆ ಎಂದು ನೋಡುವುದಕ್ಕೆ ಮುಂಚಿತವಾಗಿಯೆ ಆ ಕವಿ ಮರಣ ಹೊಂದಿದ್ದರು. ಪ್ರಜಾಪ್ರಭುತ್ವ ಆಡಳಿತ ಪದ್ಧತಿಯನ್ನು ಒಪ್ಪಿಕೊಂಡ ಭಾರತದಲ್ಲಿ ಸ್ವಾತಂತ್ರ ಪಡೆದು 37 ವರ್ಷಗಳ ನಂತರದಲ್ಲಿ ಘೋರವಾದ ಘಟನೆಯೊಂದು ನಡೆಯಿತು. ಭಾರತವು 38ನೆ ಸ್ವಾತಂತ್ರ ದಿನಾಚರಣೆ ಆಚರಿಸಲು ಒಂದು ತಿಂಗಳಿರುವಾಗಲೇ ಈ ಕ್ರೂರವಾದ ಘಟನೆ ನಡೆಯಿತು. ಅದು ಕಾರಂಚೇಡು ಹತ್ಯಾಕಾಂಡ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಶಿರಾಳದಿಂದ 7 ಕಿ.ಮೀ. ದೂರದಲ್ಲಿ ಕಾರಂಚೇಡು ಎಂಬ ಊರಿನಲ್ಲಿ ನಡೆದ ಆ ದಲಿತರ ಹತ್ಯಾಕಾಂಡದಲ್ಲಿ 8ಜನ ದಲಿತರನ್ನು ಕಗ್ಗೊಲೆ ಮಾಡಲಾಯಿತು.ಶತ್ರು ದೇಶವನ್ನು ನಾಶ ಮಾಡಲು ಹೋಗುವ ಸೇನೆಯಂತೆ 1985 ಜುಲೈ 15ರಂದು ಬೆಳಗ್ಗೆ ಕಾರಂಚೇಡು ಗ್ರಾಮಕ್ಕೆ ಸೇರಿದ ಮೇಲ್ಜಾತಿಯವರು ಮತ್ತು ಅವರೊಂದಿಗೆ ಸುತ್ತ ಮುತ್ತಲಿನ 7 ಗ್ರಾಮಗಳ ಮೇಲ್ಜಾತಿಯವರು (ಖಮ್ಮ ಜಾತಿಯವರು) ಒಕ್ಕೂಟದ ರೀತಿ ಮಾಡಿಕೊಂಡು ಕಾರಂಚೇಡು ದಲಿತರ ಮೇಲೆ ದಾಳಿ ಮಾಡಿದರು. 

ರಕ್ತ ಪಿಶಾಚಿಗಳು ಕತ್ತಿ, ಕೊಡಲಿ, ತಲವಾರು ಮುಂತಾದವುಗಳನ್ನು ಕೈಯಲ್ಲಿ ಹಿಡಿದು 7 ಕಿ.ಮೀ. ದೂರ ದಲಿತರನ್ನು ಓಡಿಸಿ ಕೊಚ್ಚಿ ಕೊಂದರು. ಈ ಕ್ರೂರವಾದ ದಾಳಿಯಲ್ಲಿ 8 ಜನ ದಲಿತರು ಸತ್ತರು.ಹಲವು ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು.
ಜಾತಿಯ ವೈರುಧ್ಯಗಳು- ಜನಾಂಗೀಯ ಕಗ್ಗೊಲೆ
ಕಾರಂಚೇಡು ಗ್ರಾಮದಲ್ಲಿ ಖಮ್ಮ ಜಾತಿಯವರು ಬಹುಸಂಖ್ಯೆಯಲ್ಲಿದ್ದಾರೆ. ಈ ಗ್ರಾಮವು ದೊಡ್ಡ ಗ್ರಾಮ ಪಂಚಾಯತ್ ಕೇಂದ್ರವೇ ಆಗಿದ್ದು, ಒಟ್ಟು 18ರಲ್ಲಿ 8 ವಾರ್ಡ್‌ಗಳಲ್ಲಿ ಖಮ್ಮ ಜಾತಿಯವರಿರುತ್ತಾರೆ. ಉಳಿದ 8 ವಾರ್ಡ್‌ಗಳಲ್ಲಿ ಹಿಂದುಳಿದ ಜಾತಿಗಳು ಮತ್ತು ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ.ಖಮ್ಮ ಜಾತಿಯವರು ಭೂಮಾಲಕರಾಗಿರುತ್ತಾರೆ. ಹತ್ತಿ, ತಂಬಕು, ಮುಂತಾದ ವಾಣಿಜ್ಯ ಬೆಳೆಗಳೊಂದಿಗೆ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದನ್ನು ಹೊರತುಪಡಿಸಿ ಬಡ್ಡಿ ವ್ಯವಹಾರ, ಇತರೆ ವ್ಯಾಪಾರಗಳು, ಸಿನೆಮಾ ಈ ರೀತಿ ಎಲ್ಲರಂಗಗಳಲ್ಲಿ ತಮ್ಮ ಹಿಡಿತವನ್ನು ಸಾಧಿಸಿರುತ್ತಾರೆ. ಇದರ ಜೊತೆಗೆ ರಾಜಕೀಯ ಪ್ರಭಾವವನ್ನು ಹೊಂದಿರುತ್ತಾರೆ.

ಮುಖ್ಯವಾಗಿ ಕಾರಂಚೇಡು ಗ್ರಾಮದಲ್ಲಿರುವ ಖಮ್ಮ ಜಾತಿಯವರು ಜಸ್ಟೀಸ್ ಪಕ್ಷದ ನಾಯಕರಾದ ಕುಪ್ಪುಸ್ವಾಮಿ ಮತ್ತು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳ ಬೆಂಬಲ ಹೊಂದಿರುತ್ತಾರೆ. ಈ ಜಾತಿಯವರು ವಿಭಿನ್ನ ರಾಜಕೀಯ ಪಕ್ಷದಲ್ಲಿದ್ದರೂ ತಮ್ಮ ಜಾತಿಯ ಅಧಿಪತ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಒಂದಾಗಿರುತ್ತಾರೆ. ಕಾಂಗ್ರೆಸ್ಸಿನಲ್ಲಿದ್ದ ರೆಡ್ಡಿಗಳ ರಾಜಕೀಯಕ್ಕೆ ಸವಾಲಾಗಿ ಹುಟ್ಟಿಕೊಂಡಿರುವುದು ತೆಲುಗು ದೇಶಂ ಪಕ್ಷ. 

ಈ ಪಕ್ಷವನ್ನು ಸ್ಥಾಪಿಸಿದವರು ಎನ್.ಟಿ. ರಾಮರಾವ್. ಇವರು ಖಮ್ಮ ಜಾತಿಗೆ ಸೇರಿದವರು. ಆದಕಾರಣ ತೆಲುಗು ದೇಶಂ ಸ್ಥಾಪನೆಯಾದ ತಕ್ಷಣವೇ ಕಾರಂಚೇಡಿನ ಖಮ್ಮ ಜಾತಿಯವರು ತೆಲುಗು ದೇಶಂ ಪಕ್ಷವನ್ನು ಬೆಂಬಲಿಸತೊಡಗಿದರು. ತೆಲುಗು ದೇಶಂ ಪಕ್ಷವು ಆಂಧ್ರದಲ್ಲಿ ರಾಜಕೀಯ ಅಧಿಕಾರ ಹಿಡಿದಿದ್ದು ಖಮ್ಮ ಜಾತಿಯ ರಾಜಕೀಯ ಪ್ರಭಾವವನ್ನು ಹೆಚ್ಚಿಸಿತು ಮತ್ತು ಎನ್.ಟಿ.ರಾಮರಾವ್ ತನ್ನ ಮಗಳನ್ನು ಇದೇ ಗ್ರಾಮದ ದಗ್ಗಬಾಟಿ ಚೆಂಚುರಾಮಯ್ಯನವರ ಮಗನಿಗೆ ಮದುವೆ ಮಾಡಿರುವುದು ಮತ್ತೊಂದು ವಿಶೇಷ. ದಗ್ಗಬಾಟಿ ಚೆಂಚುರಾಮಯ್ಯನವರು ಕ್ರೂರವಾದ ಭೂಮಾಲಕನಾಗಿದ್ದುದು ಇಲ್ಲಿ ಗುರುತಿಸಬೇಕಾದ ವಿಚಾರ.

ಈ ಮೇಲ್ಕಂಡ ಸಾಮಾಜಿಕ, ರಾಜಕೀಯ ಹಿನ್ನೆಲೆಯಿಂದ ಕಾರಂಚೇಡು ಖಮ್ಮ ಜಾತಿಯವರು ತಮ್ಮ ಜಾತಿಯ ಅಧಿಪತ್ಯವನ್ನು ಕಾಪಾಡುತ್ತಾ ಬಂದರು. ಈ ಕಾರಣಗಳಿಂದಾಗಿ ಕಾರಂಚೇಡು ಗ್ರಾಮದಲ್ಲಿ ಖಮ್ಮ ಜಾತಿಯವರು ಮಾಡಿದ್ದೇ ಕಾನೂನಾಗಿತ್ತು. ಅವರನ್ನು ಯಾರಾದರೂ ವಿರೋಧಿಸಿ ಮಾತನಾಡಿದರೆ ಹಲ್ಲೆಗೊಳಗಾಗುತ್ತಿದ್ದರು. ಕೆಲಜಾತಿಯ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಿರಂತರವಾಗಿ ನಡೆಯಿತ್ತಿತ್ತು. ಚುನಾವಣೆಗಳಲ್ಲಿ ಖಮ್ಮ ಜಾತಿಯವರು ತಮ್ಮ ಜಾತಿಯ ಹಿಡಿತವನ್ನು ಸಾಧಿಸುತ್ತಿದ್ದರು.

ಖಮ್ಮ ಜಾತಿಯವರ ಮೇಲೆ ಹೇಳಿದ ಜನವಿರೋಧಿ, ಪ್ರಜಾತಾಂತ್ರಿಕ ವಿರೋಧಿ, ದೇಶ ವಿರೋಧಿ ಕೆಲಸಗಳನ್ನು ಪ್ರಶ್ನೆ ಮಾಡುವಲ್ಲಿ ಮಾದಿಗ ಜಾತಿಯವರು ಮುಂಚೂಣಿಯಲ್ಲಿದ್ದರು. ಖಮ್ಮಜಾತಿಯವರು ಇತರೆ ಹಿಂದುಳಿದ ದಲಿತ ಸಮುದಾಯಗಳ ಮೇಲೆ ದಾಳಿ ಮಾಡಿದರೆ, ಹಲ್ಲೆಗೆ ಒಳಗಾಗುವ ಜಾತಿಯವರನ್ನು ಕಾಪಾಡುವ ಧೈರ್ಯವನ್ನು ಮಾದಿಗರು ಹೊಂದಿದ್ದರು.ಮಾದಿಗ ಜಾತಿಯವರು ಗ್ರಾಮೀಣ ಯುದ್ಧಕಲೆಯಲ್ಲಿ ನಿಪುಣತೆ ಹೊಂದಿದ್ದರು ಮತ್ತು ಸ್ವಾಭಿಮಾನದ ಕಿಚ್ಚು ಹೊಂದಿದವರಾಗಿದ್ದರು. ಇವರು ರೈತ ಕೂಲಿಗಳಾಗಿ ಖಮ್ಮ ಜಾತಿಯ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದರೂ ಸ್ವಾಭಿಮಾನ ಬಿಟ್ಟುಕೊಡದೆ ಸಾಮಾಜಿಕವಾಗಿ ಬದುಕಿದರು.
ಮಾದಿಗರ ಇಂತಹ ಸ್ವಾಭಿಮಾನದ ಬದುಕು ತಮ್ಮ ಜಾತಿಯ ಅಧಿಪತ್ಯಕ್ಕೆ ವಿರುದ್ಧವಾಗಿರುತ್ತದೆ ಎಂದು ಖಮ್ಮ ಜಾತಿಯವರು ಭಾವಿಸಿದರು. ಆದುದರಿಂದ ಮಾದಿಗರ ಮೇಲೆ ದಾಳಿ ಮಾಡಲು ಸೂಕ್ತ ಸಮಯ ಮತ್ತು ಕಾರಣಕ್ಕಾಗಿ ಕಾಯುತ್ತಿದ್ದರು. ಇಂತಹ ಸಂದರ್ಭದಲ್ಲಿಯೇ ಆಂಧ್ರ ವಿಧಾನಸಭಾ ಚುನಾವಣೆ ಬಂದಿತು. ಈ ಚುನಾವಣೆಯಲ್ಲಿ ಎನ್.ಟಿ.ರಾಮರಾವ್‌ರ ಅಳಿಯ ಕಾರಂಚೇಡು ದಗ್ಗುಬಾಟಿ ಸೆಂಚುರಾಮಯ್ಯನವರ ಮಗ ದಗ್ಗುಬಾಟಿ ವೆಂಕಟೇಶ್ವರ ರಾವ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.ಆದ ಕಾರಣ ದಗ್ಗುಬಾಟಿ ಸೆಂಚುರಾಮಯ್ಯನವರು ಮಾದಿಗರೆಲ್ಲರೂ ತನ್ನ ಮಗನಿಗೆ ಮತ ಚಲಾಯಿಸಬೇಕೆಂದು ಆದೇಶ  ಮಾಡಿದನು. 

ಆದರೆ ಮಾದಿಗರು ಕಾಂಗ್ರೆಸ್ಸನ್ನು ಬೆಂಬಲಿಸಿದರು. ಚುನಾವಣೆ ದಿನ ಮಾದಿಗರನ್ನು ಮತ ಚಲಾಯಿಸಲು ಬಿಡದೆ ಅಡ್ಡಿಪಡಿಸಿ ತೆಲುಗು ದೇಶಂ ಪಕ್ಷದ ಗೂಂಡಾಗಳು ಗಲಾಟೆ ಮಾಡಿದರು. ಅಷ್ಟೇ ಅಲ್ಲದೆ ಮತಗಟ್ಟೆ ಕೇಂದ್ರಕ್ಕೆ ಬೀಗ ಹಾಕಲು ಪ್ರಯತ್ನಿಸಿದರು. ಆದರೆ ಮಾದಿಗ ಸಮುದಾಯದವರು ಸಂವಿಧಾನವು ತಮಗೆ ನೀಡಿರುವ ಪ್ರಜಾತಾಂತ್ರಿಕ ಹಕ್ಕನ್ನು ಬಿಟ್ಟುಕೊಡಲಿಲ್ಲ. ಮತವನ್ನು ಚಲಾಯಿಸಿದರು. ಆದ ಕಾರಣ 300 ಖಮ್ಮ ಜಾತಿಯವರು ಮಾದಿಗರ ಹಟ್ಟಿಗೆ ನುಗ್ಗಿ ದಾಳಿ ಮಾಡಲು ಹೋದರು. ಮಾದಿಗರು ಹಿಂದಿರುಗಿಸಿ ಹೊಡೆ ದಾಗ ಖಮ್ಮಗಳು ವಾಪಸ್ಸು ಹೋದರು.
ಕಾರಂಚೇಡು ಖಮ್ಮ ಜಾತಿಯವರು ತಾವು ಮಾತ್ರ ಈ ಮಾದಿಗರ ಮೇಲೆ ಹಲ್ಲೆ ಮಾಡಲು ಆಗುವುದಿಲ್ಲ ಎಂದು ತೀರ್ಮಾನಿಸಿ ಸುತ್ತ- ಮುತ್ತಲಿನ 7 ಹಳ್ಳಿಗಳ ಖಮ್ಮ ಜಾತಿಗಳ ಮಧ್ಯ ದಲ್ಲಿ ಒಕ್ಕೂಟದ ರೀತಿ ಮಾಡಿಕೊಂಡು ಮಾದಿಗರ ಮೇಲೆ ಹಲ್ಲೆ ಮಾಡಲು ತೀರ್ಮಾನಿಸಿದರು.ಇಂತಹ ಸಂದರ್ಭದಲ್ಲಿ ೧೯೮೫ ಜುಲೈ ೧೫ರಂದು ಖಮ್ಮ ಜಾತಿಗೆ ಸೇರಿದ ಪೊಟ್ಟಿನ ಸೀನು ಮತ್ತು ರಾಯಡು ಪ್ರಸಾದ್ ಎಂಬ ಇಬ್ಬರು ಯುವಕರು ಮಾದಿಗರು ಕುಡಿಯುವ ನೀರಿನ ಹೊಂಡದಲ್ಲಿ ತಮ್ಮ ಎಮ್ಮೆಗಳ ಮೈ ತೊಳೆದರು ಮತ್ತು ಬಕೆಟ್‌ನಲ್ಲಿ ತಂದಿದ್ದ ಅಕ್ಕಿಯನ್ನು ತೊಳೆಯುತ್ತಾ ಅಕ್ಕಿ ತೊಳೆದ ನೀರನ್ನು ಹೊಂಡಕ್ಕೆ ಚೆಲ್ಲಿದರು. ಇದನ್ನು ನೋಡಿದ ಮಾದಿಗ ಜಾತಿಗೆ ಸೇರಿದ ಯುವಕರಾದ ಕತ್ತಿ ಚಂದ್ರಯ್ಯ ಎಂಬುವವರು ಖಮ್ಮ ಯುವಕರನ್ನು ಪ್ರಶ್ನಿಸಿದ್ದಾರೆ. ಪ್ರಶ್ನಿಸಿದ ಒಂದೇ ಕಾರಣಕ್ಕೆ ಚಂದ್ರಯ್ಯನ ಮೇಲೆ ಹಲ್ಲೆ ಮಾಡಲು ಖಮ್ಮ ಯುವಕರು ಪ್ರಯತ್ನಿಸಿದರು. 

ಆ ಸಮಯಕ್ಕೆ ಕುಡಿಯಲು ನೀರು ತೆಗೆದುಕೊಂಡು ಹೋಗಲು ಬಂದ ಮಾದಿಗ ಜಾತಿಯ ಮಹಿಳೆ ಮುನ್ನಂಗಿ ಸುವಾರ್ತ ಎಂಬುವವರು ಚಂದ್ರಯ್ಯನ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದಳು. ಕೂಡಲೇ ಖಮ್ಮ ಯುವಕರು ಮುನ್ನಂಗಿ ಸುವಾರ್ತಳ ಮೇಲೆ ಹಲ್ಲೆ ಮಾಡಲು ಬಂದರು. ಸುವಾರ್ತಳು ಅವರನ್ನು ತಾನು ನೀರು ತುಂಬಲು ತಂದಿದ್ದ ಕೊಡದಿಂದಲೇ ಹೊಡೆದು ಓಡಿಸಿದಳು. ತನ್ನ ರಕ್ಷಣೆಗಾಗಿ ಸುವಾರ್ತ ಖಮ್ಮ ಜಾತಿಯ ಯುವಕರನ್ನು ಓಡಿಸಿದ್ದೇ
ತಮ್ಮ ಜಾತಿಯ ಅಧಿಪತ್ಯದ ಮೇಲಾದ ದಾಳಿ ಎಂದು ಖಮ್ಮ ಜಾತಿಯವರು ಭಾವಿಸಿದರು. ಇದೇ ನೆಪವಾಗಿ ಅಕ್ಕಪಕ್ಕದ ಏಳು ಗ್ರಾಮಗಳ ಖಮ್ಮ ಜಾತಿಯವರನ್ನು ಸೇರಿಸಿಕೊಂಡು ಕಾರಂಚೇಡು ಮಾದಿಗರ ಮೇಲೆ ದಾಳಿ ಮಾಡಿ 8 ಜನ ದಲಿತರನ್ನು ಕೊಂದರು.ಇಲ್ಲಿಯೂ ಕೂಡ ದಲಿತರು ನಿರಾಯುಧರಾಗಿದ್ದರು. ಸರಕಾರದ ಪೊಲೀಸ್ ಪಡೆ ಮತ್ತು ಜಿಲ್ಲಾಡಳಿತಗಳು ದಗ್ಗುಬಾಡಿ ಚೆಂಚುರಾಮಯ್ಯರ ಆದೇಶಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದವು.

‘ತೆಲುಗು ಬಿಡ್ಡಲಾರ, ತೆಲುಗು ತಲ್ಲುಲಾರ ಈ ದೇಶಂ ಮೀದಿ, ತೆಲುಗು ತಲ್ಲಿ ಗೌರವಂಕೋಸಂ ತೆಲುಗುದೇಶಂ ಪಕ್ಷ ಕಟ್ಟಿದ್ದೇನೆ’ ಎಂದು ಮಾತಾಡಿದ ಎನ್.ಟಿ.ರಾಮರಾವ್‌ರವರ ತೆಲುಗುದೇಶಂ (ಆಂಧ್ರ)ನಲ್ಲಿ ತೆಲುಗು ದೇಶಂ ಪಕ್ಷದಿಂದಲೇ ತೆಲುಗು ಮಾದಿಗರನ್ನು ಕೊಂದರು. ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟ, ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದ ಕಾರಣ ದಿಂದ ಈ ಜನ ಕೊಲ್ಲಲ್ಪಟ್ಟರು.

ಕೃಪೆ: ಸ್ವಾಭಿಮಾನಿ ಪತ್ರಿಕೆ

Monday, February 25, 2013

ದಲಿತರ ದಯನೀಯ ಸ್ಥಿತಿ ಒಂದು ತುಲನಾತ್ಮಕ ವಿಮರ್ಶೆ


ಧನಂಜಯ ಭಟ್ರಹಳ್ಳಿ, ಚಿತ್ರದುರ್ಗ ಸ್ವಾತಂತ್ರ ಮತ್ತು ಸಂವಿಧಾನ ಬಂದು ಸುಮಾರು ವರ್ಷಗಳು ಕಳೆದರೂ ದಲಿತರ ದಯನೀಯ ಸ್ಥಿತಿ ಘೋರ ಪರಿಸ್ಥಿತಿಗೀಡಾಗಿದೆ. ಸುಮಾರು ವರ್ಷಗಳಿಂದ ಸಮಾಜದ ಮೇಲ್ವರ್ಗದ ಜನರಿಂದ ತುಳಿತಕ್ಕೊಳಗಾಗಿ ಶೋಷಣೆಗೊಳಗಾಗಿ ಜೀವನ ನಡೆಸುವ ದೃಶ್ಯಗಳು ನಮ್ಮ ಕಣ್ಣ ಮುಂದೆ ಗೋಚರಿಸುತ್ತವೆ.ಸಮಾಜದಲ್ಲಿ ಕಟ್ಟುಪಾಡುಗಳಿಂದ ಮೂಢ ನಂಬಿಕೆಯ ಸಂಪ್ರದಾಯಗಳಿಂದ ಬದುಕುವ ಸಾವು-ನೋವುಗಳಲ್ಲಿ ಸಮಸ್ಯೆಗಳ ಸಂಕಷ್ಟಗಳ ಸರಮಾಲೆಗಳಲ್ಲಿ ಜೀವನ ಸಾಗಿಸುವ ದಲಿತರು ಎಲ್ಲ ರೀತಿಯ ಸಂವಿಧಾನದ ಮೂಲಭೂತ ಹಕ್ಕುಗಳಿದ್ದರೂ ಪಡೆದುಕೊಳ್ಳಲಾಗದ ಹೀನಾಯ ಸ್ಥಿತಿಗೆ ತಲುಪಿದ್ದಾರೆ. ದಿನನಿತ್ಯದ ಪತ್ರಿಕೆಗಳಲ್ಲಿ ದಲಿತರ ಹೆಣ್ಣುಮಕ್ಕಳ ಅತ್ಯಾಚಾರ, ದಲಿತರ ಬಹಿಷ್ಕಾರ  ಮುಂತಾದ ಶೋಷಣೆ ವಿಷಯಗಳನ್ನು ಗಮನಿಸುತ್ತಲೇ ಇದ್ದೇವೆ. ಹೀಗೆ ದಲಿತರು ಯಾವುದೇ ತಮ್ಮಲ್ಲದ ತಪ್ಪಿಗೆ ಸಿಲುಕಿ ತೊಂದರೆಗೀಡಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಂತೂ ಈಗಲೂ ಕೂಡ ಹೊಟೇಲ್ಗಳಲ್ಲಿ ಬಿಸಾಡಿದ ಲೋಟಗಳನ್ನು ತೊಳೆದು ಕೊಂಡು ಕಾಫಿ, ಟೀ ಕುಡಿಯ ಬೇಕಾಗಿದೆ.

ಮೇಲ್ವರ್ಗದ ಜನ ತೀರಿಕೊಂಡರೆ ಅವರಿಗೆ ಶ್ಮಶಾನದಲ್ಲಿ ಆರು ಅಡಿ ಮೂರಡಿ ಹೂಳು ತೆಗೆಯುವುದಕ್ಕೆ ದಲಿತರು ಬೇಕು. ಅವರ ದನ ಕರುಗಳು ಸತ್ತರೆ ಊರ ಹೊರಗೆ ಸಾಗಿಸಲಿಕ್ಕೆ ದಲಿತರು ಬೇಕು, ಅವರ ಚಪ್ಪಲಿಗಳು ಕಿತ್ತು ಹೋದರೆ ಹೊಲಿಗೆ ಹಾಕಲಿಕ್ಕೆ ದಲಿತರು ಬೇಕು. ಇಂತಹ ಕೆಲಸಗಳನ್ನು ಮಾಡುವ ದಲಿತರಿಗೇಕೇ ಈ ಪರಿ ಶಿಕ್ಷೆ? ಹೀಗೆ ಎಲ್ಲ ರಂಗದಲ್ಲೂ ಕೂಡ ದಲಿತರು ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ, ಹಿಂಸೆ ಮುಂತಾದ ಪಾಪ ಕೂಪದ ಕೃತ್ಯಗಳಿಗೆ ಬಲಿಯಾಗಿರುವುದು ತುಂಬಾ ಖೇದ ಉಂಟು ಮಾಡುತ್ತದೆ.

ಮೇಲ್ವರ್ಗದ ಅತ್ಯಂತ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಕೂಡ ಮಡೆಸ್ನಾನ ಎನ್ನುವ  ಮೂಢನಂಬಿಕೆಯ ಆಚರಣೆ ಯಲ್ಲಿ ದಲಿತರಿಗೆ ವೊದಲ ಸ್ಥಾನ ದೊರಕಿಸಿ ಕೊಟ್ಟಿ ದ್ದಾರೆ. ಈ ರೀತಿಯ ಶೋಷಣೆಗೆ ಒಳಗಾ ಗುವ ದಲಿತರನ್ನು ನೋಡಿದಾಗ ಮೇಲ್ವರ್ಗದ ಜನ ಸಮುದಾಯ ಮನುವಾದಿ ಧರ್ಮ ವನ್ನು ಆಚರಿಸುತ್ತಿರುವುದು ಕಂಡುಬರುತ್ತಿದೆ. ಇದು ಸಂವಿಧಾನದ ಮೂಲ ಆಶಯಕ್ಕೆ ತದ್ವಿರುದ್ಧ ವಾಗಿದೆ ಎಂದು ಹೇಳಬಹುದು.

ರಾಜಕಾರಣಿಗಳು ಕೂಡ ಓಟುಗಳಿಸುವ ಯತ್ನದಲ್ಲಿ ಸಮಾನತೆ ಎನ್ನುವ ಪದಕ್ಕೆ  ಅವಮಾನ ಮಾಡಿ ಕೀಳು ಮನೋಭಾವನೆ ಯನ್ನು ತುಂಬಿಕೊಂಡು ಬಾಯಲ್ಲಿ ಮಾತ ನಾಡುವುದೊಂದು ಮನದೊಳಗೆ  ಕೇಡೊಂದು ಬಯಸಿ ಬೇರೆಯವರಿಗೆ ಮಾದರಿ ಯಾಗುತ್ತಾರೆ. ಇದಲ್ಲದೆ ಸಮಾನತೆಯ ಅವಕಾಶ ಕೊಡದೆ ತಮ್ಮ ಮನೆಯಲ್ಲೇ ದಲಿತರ ಕುಟುಂಬವನ್ನು  ಜೀತ ಪದ್ಧತಿಗೆ ಒಳಗಾಗಿಸುತ್ತಾರೆ.

ದಲಿತರಿಗೆ ಶಿಕ್ಷಣ ಹಾಗೂ ಆತ್ಮಸ್ಥೈರ್ಯ ತುಂಬಬೇಕಾದ ಅಗತ್ಯದ ಬಗ್ಗೆ ಅಂಬೇಡ್ಕರ್ ವಿವರಿಸುವ ವಿಧಾನ ವಿಶಿಷ್ಟವಾಗಿದೆ. ಮಾನವನ ಶರೀರ ಮನಸ್ಸು ರೋಗಗ್ರಸ್ತವಾಗುವುದು ಹೇಗೆ? ರೋಗಗ್ರಸ್ತ ಶರೀರದಲ್ಲಿ ನೋವು ರೋಗಗ್ರಸ್ತ ಮನದಲ್ಲಿ ನಿರುತ್ಸಾಹ ಇರುತ್ತದೆ. ಮನಸ್ಸು ನಿರುತ್ಸಾಹಿಯಾಗಿದ್ದಲ್ಲಿ ಏಳ್ಗೆಯಾಗುವುದೆಲ್ಲಿ? ಈ ನಿರುತ್ಸಾಹ ಉಂಟಾಗುವುದು ಹೇಗೆ? ಮೊದಲ ಕಾರಣವೆಂದರೆ ಮಾನವನಿಗೆ ತಾನಿರುವ ಸನ್ನಿವೇಶದಲ್ಲಿ ಉನ್ನತಿಗೇರಲು ಅವಕಾಶವೇ ಇಲ್ಲವಾದಲ್ಲಿ ಅಥವಾ ಏಳ್ಗೆ ಹೊಂದುವ ಆಸೆಯೇ ಕಮರಿ ಹೋಗಿದ್ದಲ್ಲಿ ಅವನಲ್ಲಿ ಉತ್ಸಾಹ ವಿರುವುದಾದರೂ ಎಲ್ಲಿಂದ? ಮಾನಸಿಕವಾಗಿ ಅವನು ರೋಗಗ್ರಸ್ತ ನಾಗುತ್ತಾನೆ. 

ತನ್ನ ಕೆಲಸದ ಫಲ ಸಿಗುವುದಾ ದಲ್ಲಿ ಯಾರಲ್ಲಾದರೂ ಉತ್ಸಾಹವಿರುತ್ತದೆ. ಶಾಲೆಗೆ ಹೋಗುವ ಒಬ್ಬ ವಿದ್ಯಾರ್ಥಿಗೆ ಅವನ ಶಿಕ್ಷಕ ನೀನ್ಯಾರು? ನೀನೋರ್ವ ದಲಿತನಲ್ಲವೇ? ಎಂದಲ್ಲಿ ಅವನು ಪರೀಕ್ಷೆ ಯಲ್ಲಿ ತೇರ್ಗಡೆಯಾಗಲು ಸಾಧ್ಯವೇ? ಇವನಿಗೇಕೆ ಬೇಕು ಮೊದಲ ಶ್ರೇಣಿ? ನಿನಗೆ ಮೂರನೆ ಶ್ರೇಣಿಯೇ ಸಾಕು. ಪ್ರಥಮ ಶ್ರೇಣಿಯಲ್ಲಿ ಬರಬೇಕಾದವರು ಮೇಲ್ಜಾತಿಯ ಹುಡುಗರು.

ಹೀಗೆ ವ್ಯವಸ್ಥೆ ಇರುವಲ್ಲಿ ಆ ಬಾಲಕನಿಗೆ ಉತ್ಸಾಹ ಸಿಗುವುದು ಹೇಗೆ ಸಾಧ್ಯ? ಅವನು ಏಳ್ಗೆ ಹೊಂದುವುದಾದರೂ ಹೇಗೆ? ಉತ್ಸಾಹದ ಮೂಲ ಇರುವುದು ಮನದಲ್ಲಿ. ಯಾರಿಗೆ ಪರಿಸ್ಥಿತಿ ಯಾವುದೇ ಆದರೂ ನಾನು ಹೋರಾಡಬಲ್ಲೇ ಎಂಬ ವಿಶ್ವಾಸ ವಿದೆಯೋ ಅಂತಹವನು ಉತ್ಸಾಹಿಯಾಗಿ ರುತ್ತಾನೆ. ಮತ್ತು ಏಳ್ಗೆಯನ್ನು ಹೊಂದಬಲ್ಲ ಎಂದು ಹೇಳಬಹುದು.

ದೇಶದಾದ್ಯಂತ ಇರುವ ಕೋಟ್ಯಂತರ ದಲಿತರಿಗೆ ಶತ ಶತಮಾನಗಳಿಂದಲೂ ಜಾತೀಯತೆಯ ವ್ಯೂಹದಿಂದ ಬಿಡುಗಡೆಯೇ ಸಿಕ್ಕಿಲ್ಲ. ಕೇವಲ ಜಾತಿಯ ಕಾರಣಕ್ಕೆ ದಲಿತರಿಗೆ ಇಂದಿಗೂ ಅವಮಾನ ಅವ್ಯಾಹತವಾಗಿ ನಡೆಯುತ್ತಿದೆ. ಸಾರ್ವಜನಿಕ ದೇವಸ್ಥಾನ, ನಲ್ಲಿ, ಬಾವಿ, ಕೆರೆ, ಪಂಚಾಯತ್, ಹೊಟೇಲ್  ಮುಂತಾದ ಸ್ಥಳಗಳ ಪ್ರವೇಶಕ್ಕೆ ಅವಕಾಶ ಇಂದಿಗೂ ಪೂರ್ಣವಾಗಿ ಸಿಗು ತ್ತಿಲ್ಲ. ಅಂತಹ ಪ್ರಯತ್ನ ನಡೆದಾಗಲೂ ಹತ್ಯೆ, ಕೊಲೆಗಳು ನಡೆಯುತ್ತಲೇ ಇವೆ. ತೀರ ಇತ್ತೀಚೆಗಷ್ಟೇ ತಮಿಳುನಾಡು ರಾಜ್ಯದಲ್ಲಿ  ದಲಿತರ ಕೇರಿಗಳನ್ನು ಸುಡಲಾಯಿತು. ದಲಿತರನ್ನು ಬಹಿಷ್ಕರಿಸಲಾಯಿತು, ಕೊಲ್ಲಲಾಯಿತು. 

ಗ್ರಾಮ ಭಾರತದಲ್ಲಿ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಈ ಕ್ಷಣಕ್ಕೂ ಜಾತಿ ಭೇದ ಉಗ್ರವಾಗಿ ಚಾಲ್ತಿಯಲ್ಲಿದೆ. ಪಟ್ಟಣಗಳಲ್ಲಿ  ಕೂಡ ಇಂದಿಗೂ ನಾಜೂಕಿನ ಜಾತಿಭೇದದಲ್ಲಿ ದಲಿತ ಸ್ನೇಹಿತ ಸಿಕ್ಕಾಗ ಕೈಗೆ ಕೈ ಕುಲುಕಿ ಧನ್ಯವಾದ ಹೇಳಿ ಮನೆಯಲ್ಲಿ ಸ್ನಾನ ಮಾಡುವುದಿದೆ. ಇದೆಲ್ಲವನ್ನು ಶತಮಾನಗಳಿಂದ ದಲಿತರು ಅನುಭವಿಸಿ ಕೊಂಡು ದೇಶದ ಸಮಗ್ರತೆ ಹಾಗೂ  ಸೌಹಾರ್ದತೆಯ  ದೃಷ್ಟಿಯಿಂದ  ಸಹಿಸಿ ಕೊಂಡು ಬರುತ್ತಿದ್ದಾರೆ. 

ಅನಕ್ಷರತೆ,  ಅನಾರೋಗ್ಯ, ನಿರುದ್ಯೋಗ ಮುಂತಾದ ನೂರಾರು ಸಮಸ್ಯೆಗಳಿದ್ದರೂ ಹೊಂದಿ ಕೊಂಡು  ಬಾಳುತ್ತ ಜಾತ್ಯಾತೀತ, ರಾಷ್ಟ್ರ ನಿರ್ಮಿಸುವ  ಆಶಾಭಾವನೆಯಿಂದ  ಹೋರಾಡುತ್ತಿದ್ದಾರೆ. ಇಷ್ಟೆಲ್ಲಾ ನೋವಿನಿಂದ ಇದ್ದರೂ ಸ್ವಾಭಿಮಾನದಿಂದ ಬದುಕಲು ಬಿಡದೇ ಇರುವಂತಹ ಕಠಿಣ ಪರಿಸ್ಥಿತಿ ಉಂಟಾಗಿದೆ. ಮೇಲ್ಜಾತಿ ಮೇಲೆ ನಡೆಯುವ ಒಂದು ಅಪರೂಪದ ಅವಮಾನ, ಒಂದು ಆಕಸ್ಮಿಕ ದೌರ್ಜನ್ಯ, ಒಂದು ಅಚಾನಕ್ ಅತ್ಯಾಚಾರ ಈ ಪರಿಯಾದ ಸಂಕಟ ಸೃಷ್ಟಿಸಿದರೆ ದಲಿತರ ದಯನೀಯ ಸ್ಥಿತಿ ಹೇಗಿದೆ ಅಂತ ಸ್ವಲ್ಪಆಲೋಚಿಸಿದ್ದೀರಾ?

ಸರಕಾರದ ಪುರಸಭೆಗಳಲ್ಲು ಕೂಡ  ಜಾಡಮಾಲಿ ಕೆಲಸ ಮಾಡುವವರು ಹೆಚ್ಚಾಗಿ  ದಲಿತರು. ಇವರಿಂದ ಸರಕಾರಿ ಅಧಿಕಾರಿಗಳ ಮನೆಗಳಲ್ಲಿರುವ ಶೌಚಾ ಲಯದ ಮಲ ಹೊರುವ ಪದ್ಧತಿಯನ್ನು  ಜೀವಂತವಾಗಿ ಗಮನಿಸಬಹುದು. ಹೀಗೇ ಅಮಾನಯ ವಾದ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಇವುಗಳಿಂದ ದಲಿತರಿಗೆ ಮುಕ್ತಿ ಯಾವಾಗ? 

ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993ರ 73 ತಿದ್ದುಪಡಿ ಬಂದಾಗಿನಿಂದಲೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ 22% ನಿಧಿಯನ್ನು ಸಮರ್ಪಕವಾಗಿ ಉಪಯೋಗಿಸಿದ್ದಾದರೆ  ಬಹುಶಃ ಅದರಲ್ಲಿ ದಲಿತರು ಸ್ವಲ್ಪಮಟ್ಟಿಗೆ ಆದರೂ ಅಭಿವೃದ್ಧಿಯಾಗುತ್ತಿದ್ದರೇನೋ ಆದರೆ ದುರದೃಷ್ಟವಶಾತ್ 22% ನಿಧಿಯ ಹೆಸರೇ ಗೊತ್ತಾಗದಂತೆ ಗ್ರಾಮ ಪಂಚಾಯತ್‌ಗಳಲ್ಲಿರುವವರು ತಿಂದು ತೇಗುತ್ತಿದ್ದಾರೆ. ಇದು ದಲಿತರಿಗೆ ಹೊಟ್ಟೆ ಉರಿಸುವ  ಹಾಗೂ ವಿಷಾದನೀಯ ಸಂಗತಿಯಾಗಿದೆ.

ದುರದೃಷ್ಟವಶಾತ್ ಇಂದಿಗೂ ಅತಿಹೆಚ್ಚು ಅಪಾರ್ಥಕ್ಕೊಳಗಾಗಿರುವ ಮತ್ತು ದೂಷಣೆಗೊಳಗಾಗುವ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್. ಅವರ ಮನದಾಳದ ವೇದನೆಯನ್ನು ಯಾವ ಉದ್ದೇಶಕ್ಕಾಗಿ ಯಾವ ಬದಲಾವಣೆಯನ್ನು ತರುವುದಕ್ಕಾಗಿ ಅವರು ಪ್ರಯತ್ನಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳುವ ಬದಲು ಮೀಸಲಾತಿಯನ್ನು ಮುಂದಿಟ್ಟುಕೊಂಡು ನಿಂದಿಸುವರೇ ಈ ಸಮಾಜದಲ್ಲಿ ತುಂಬಿ ತುಳುಕಾಡುತ್ತಿದ್ದಾರೆ

Sunday, February 24, 2013

ರಾತ್ರಿ ಪದ್ಯ

- ಹೆಚ್. ಸಿ. ಭವ್ಯ ನವೀನ್

 

ಅವಧಿ

 

ಎಲ್ಲಿ ಹೋಗುತ್ತವೊ ಈ ರಾತ್ರಿಗಳು
ದಿನಾ ಬರುವ ಅದೇ ಸೂರ್ಯನಿಗೆ ಹೆದರಿ
ಉಳಿಯಬಾರದೇ ಒಮ್ಮೆ

ಜಮಾನದ ಅರ್ಧಂಬರ್ಧ
ಕನಸುಗಳೆಲ್ಲ ಪೂರ್ಣಗೊಳ್ಳಲಿ ಇಂದು
ನೆನಹುಗಳ ಕಹಿ ಅರಗಿಹೋಗಲಿ
ಮೈಥುನದ ಬವಳಿಕೆ
ನಾಳೆಗಳ ಚಡಪಡಿಕೆ
ನಿಧಾನ ನಿಂತುಹೋಗಲಿ
ಮತ್ತೆ ಆಗ ಮೆಲ್ಲಗೆ ಬೆಳಕಾಗಲಿ
ಈಗಂತೂ ಉಳಿದು ಹೋಗಲಿ ಈ ರಾತ್ರಿ

*
ಕುಡಿದ ಅಪ್ಪನಿಗೆ
ಬೇಸತ್ತ ಅಮ್ಮನಿಗೆ
ನಡೆದ ಹೆಸರಿಲ್ಲದ ಯುದ್ಧ
ಚಿಗಿತ ಮಗಳಿಗೆ ಗೊತ್ತು
ಗೋಡೆಗಳಿಗೆ ಕಿವಿಯಲ್ಲ
ನಾಲಿಗೆಗಳೂ ಇವೆ
ಬೇಡುತ್ತಾಳೆ ನೋಡು
ಕರಗದಿರಲಿ ರಾತ್ರಿ
ಆ ನಾಲಗೆಗೆ ಹೊಸರುಚಿ
ಸಿಗುವ ತನಕ

**
ಬೆಳಗುಗಳ ಮುಖವಾಡ
ಮಾಸಿಹೋಗಿದೆ
ಕತ್ತಲೆಯ ಬಣ್ಣಗಳೋ
ತೊಳೆದಷ್ಟೂ ಗಾಢ
‘ಒಣ ವ್ರಣಗಳಿಗಿಂತ ಕಪ್ಪು ಕಲೆಗಳಿಗಿಂತ
ಹಸೀ ಗಾಯವೇ ಇರಲಿ
ಉಳಿದು ಹೋಗಿ ರಾತ್ರಿಗಳೇ’
ಎನ್ನುತ್ತಾಳೆ ಆಕೆ
‘ಕಣ್ ಕುಕ್ಕುವ ಮೆಹಫಿಲ್ನೊಳಗೆ
ರಾತ್ರಿ ರಾಣಿಯ ದರ್ಬಾರು
ನಿತ್ಯ ಸಾಯುವ ಆ ಹಗಲುಗಳ
ಸ್ವರ್ಗದ ದಾಸಿಯಾಗಿದ್ದು ಸಾಕು
ನಾನಿನ್ನು ನರಕವನ್ನೇ ಆಳುತ್ತೇನೆ
ಉಳಿದುಕೊಳ್ಳಿ ರಾತ್ರಿಗಳೇ’

***
ಮಲಗಿದ್ದಾರೆ
ಮಲಗಲು ಬಿಡಿ
ಅವರೆದ್ದರೆ
ಹೊಟ್ಟೆ ಕರುಳುಗಳೂ ಎದ್ದು
ಹಾಡುತ್ತವೆ ಪದ ಗುಟುರ್ ಗುಟುರ್
ಮಲಗಲಿ ಬಿಡಿ
ಗಾಳಿಯೇ ಬಾಗಿಲ ಗುದ್ದಿದರೂ ಭಯ ಪಾಪ
ಬೆಳಗಾದರೆ ಶೆಟ್ಟಿ ಬರುತ್ತಾನೆ
ಬಾಡಿಗೆಗೆ
ಮಾರ್ವಾಡಿ ಬಡ್ಡಿಗೆ
ಅವರಿಗೆ ಕೊಡಲೂ ಅವನಲ್ಲಿ ಕಾರಣಗಳೂ ಇಲ್ಲ
ಹೋಗದಿರು ರಾತ್ರಿಯೇ
ಕಾಸಲ್ಲದಿದ್ದರೆ.. ಮಾತಾದರೂ
ಹುಡುಕಿಕೊಳ್ಳಲಿ

****
ಹೊಟ್ಟೆಯೊಳಗೆ ಲಾವಾರಸ
ತುಂಬಿಕೊಂಡ ಅಮ್ಮನಂಥಾ ಹೆಣ್ಣು
ತಲೆ ತುಂಬಾ ಜಗತ್ತಿಟ್ಟುಕೊಂಡ
ಅಪ್ಪನಾಗದ ಗಂಡ
ಸುಮ್ಮನಿರಿ ರಾತ್ರಿಗಳೇ
ಬೇಗೆಗಳ ಮೀರಿ ಬಯಕೆ
ಹೊತ್ತಿಕೊಳ್ಳಲಿ
ವೀರ್ಯ ಶೌರ್ಯ ತೋರಿ
ಕರುಳು ಟಿಸಿಲೊಡೆಯಲಿ

*****
ರಸ್ತೆ ಫುಟ್ಪಾತ್ಗಳು
ರೈಲ್ವೇ ಫ್ಲಾಟ್ಫಾರಂಗಳೂ
ಅಮ್ಮನಾಗಲಿ ಬಿಡಿ
ಕುಂಟುತ್ತಲೇ ಓಡುವ
ಬೇ-ರಂಗೀ ಜಗತ್ತಿನ
ಮಾಯಾಗೋಡೆ
ಇರಲಿ ಇನ್ನಷ್ಟು ಹೊತ್ತು
ಬೇಡುವ-ಆಯುವ-ಕಸಿಯುವ
ಹಾಲಾತೀ ಶೈತಾನರ
ಆತ್ಮ ನಿವೇದನೆಗೆ
ಅವಕಾಶ ಕೊಡಿ ರಾತ್ರಿಗಳೇ
ಜೇಬುಗಳ್ಳ ಕಣ್ಣುಗಳಿಗೆ
ಪ್ರೀತಿ ಕದಿಯುವ ಕನಸನಿಡಿ
ಇರಿ ಇನ್ನಷ್ಟು ಹೊತ್ತು
ಬೆಳಗಲಿ
ಕಪ್ಪು ಕಂಬಳಿಯ ತೂತು ತಾರೆಗಳು

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...