Friday, November 30, 2012

ನಾವು ನಡೆಯುವ ದಾರಿಗಳಲ್ಲಿ ಏನೇನೋ ಸಿಗುತ್ತದೆ...

ನಾವು ನಡೆಯುವ ದಾರಿಗಳಲ್ಲಿ ಏನೇನೋ ಸಿಗುತ್ತದೆ...

 

ಶೂದ್ರ ಶ್ರೀನಿವಾಸ್

 

ವಾರ್ತಾಭಾರತಿ  

 

ಕೆಲವು ದಿವಸಗಳ ಹಿಂದೆ ಉಡುಪಿ ಜಿಲ್ಲೆಯ ಕಾರ್ಕಳದ ಹಸಿರಿನ ಮಧ್ಯೆ ಸುತ್ತಾಡುತ್ತಿದ್ದೆ. ಜೊತೆಗೆ ಕವಿ ಮಿತ್ರ ಕೆ.ಪಿ.ಮೃತ್ಯುಂಜಯ ಅವರೂ ಇದ್ದರು. ಹೀಗೆಯೇ ಮಾತಾಡುತ್ತ ಅವರು ಉಪನ್ಯಾಸಕ ರಾಗಿದ್ದ ಪದವಿಪೂರ್ವ ಕಾಲೇಜಿಗೆ ಹೋದೆ. ಅಲ್ಲಿಯ ಅದ್ಯಾಪಕರೆಲ್ಲ ಪರಿಚಯವಾದರು. ಸುಮಾರು ಹತ್ತು ಎಕರೆಗೂ ಮೇಲ್ಪಟ್ಟಿದ್ದ ಪ್ರದೇಶದಲ್ಲಿ ವಿದ್ಯಾರ್ಥಿಗಳು ಓಡಾಡಿಕೊಂಡಿದ್ದರು. ಎಷ್ಟು ದೂರು ದಿಟ್ಟಿಸಿ ನೋಡಿದರೂ ಹಸಿರಿನಿಂದ ಕಂಗೊಳಿಸುವ ಪ್ರದೇಶ. ಆ ಕಾಲೇಜು ಇದ್ದ ಊರಿನ ಹೆಸರು ಬಜಗೋಳಿ ಎಂದು. ಒಂದು ಕ್ಷಣ ಆ ಹೆಸರೇ ಆಪ್ತ ಅನ್ನಿಸಿತು. ಅತ್ಯಂತ ಸೂಕ್ಷ್ಮ ಸಂವೇದನೆಯ ಕವಿಯಾದ ಕೆ.ಪಿ.ಮೃತ್ಯುಂಜಯ ಅವರು ನನ್ನ ಬಳಿ ಬಂದು ‘‘ಶೂದ್ರ ಸರ್ ನಮ್ಮ ಹುಡುಗರಿಗೆ ಲಂಕೇಶ್ ಮತ್ತು ದಲಿತ ಕವಿ ಸಿದ್ದಲಿಂಗಯ್ಯ ಅವರನ್ನು ಕುರಿತು ಒಂದು ಗಂಟೆ ಮಾತಾಡುವಿರಾ?’’ ಎಂದು ಕೇಳಿದರು. 

ಒಂದು ದೃಷ್ಟಿಯಿಂದ ನಾನು ಸಿದ್ಧವಾಗದಿದ್ದರೂ; ಆಗಲಿ’’ ಎಂದೆ. ಯಾಕೆಂದರೆ ನಾನು ಕಾರ್ಕಳಕ್ಕಾಗಿಯೇ ಹೋದವನಲ್ಲ. ಡಾ. ನಾ. ಮೊಗಸಾಲೆಯವರ ಆಹ್ವಾನದ ಮೇರೆಗೆ ಕಾಂತಾವರಕ್ಕೆ ಹೋಗಿದ್ದೆ. ಒಂದಷ್ಟು ಪುಸ್ತಕಗಳನ್ನು ಬಿಡುಗಡೆ ಮಾಡಲು. ಡಾ. ಮೊಗಸಾಲೆಯವರು ಎಷ್ಟು ಚೆನ್ನಾಗಿ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಅನ್ನಿಸಿತು. ತಪಸ್ಸಿನ ರೀತಿಯಲ್ಲಿ ತುಂಬ ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗುವುದಿದೆಯೆಲ್ಲ; ಅದು ಅಷ್ಟು ಸುಲಭದ ಕೆಲಸವಲ್ಲ. ಒಟ್ಟು ಅವರ ಚಟುವಟಿಕೆಯೇ ಆಪ್ತ ಅನ್ನಿಸಿತು. 

ಇದನ್ನೆಲ್ಲ ನನ್ನ ಮನಸ್ಸಿನಲ್ಲಿ ತುಂಬಿಕೊಂಟು ಕಾರ್ಕಳಕ್ಕೆ ಬಂದಿದ್ದೆ. ನೂರೈವತ್ತಕ್ಕೂ ಮೇಲ್ಪಟ್ಟು ಇದ್ದ ತರಗತಿಯಲ್ಲಿ ವಿದ್ಯಾರ್ಥಿಗಳು ಒಂದು ಕಡೆ. ಮತ್ತೊಂದು ಕಡೆ ವಿದ್ಯಾರ್ಥಿನಿ ಯರು. ಮುಖದ ತುಂಬ ಕಿಲಕಿಲ ನಗುವನ್ನು ದತ್ತವಾಗಿ ಪಡೆದ ಹುಡುಗಿ ಯರು. ಮೃತ್ಯುಂಜಯ ಅವರು ವಿದ್ಯಾರ್ಥಿಗಳಿಗೆ ನನ್ನನ್ನು ಪರಿಚಯ ಮಾಡಿಕೊಟ್ಟರು. ನಾನು ಲಂಕೇಶ್ ಅವರು ಮತ್ತು ಸಿದ್ದಲಿಂಗಯ್ಯ ಅವರ ಜೊತೆ ಓಡಾಡಿದವನು ಎಂಬುದನ್ನು ಕೇಳಿಯೇ ಚಪ್ಪಾಳೆ ಬಾರಿಸಿದರು. ಲಂಕೇಶ್ ಅವರ ಶ್ರೇಷ್ಠ ಕವನವನ್ನು ಮತ್ತೆ ಮತ್ತೆ ಪಾಠ ಮಾಡಿಸಿಕೊಂಡು ಖುಷಿಪಟ್ಟವರು.

ನಾನು ಒಂದು ಗಂಟೆ ಮಾತಾಡಿ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಕೊಡು ವಾಗ; ಮಧ್ಯದಲ್ಲಿ ಕೂತ ಒಬ್ಬ ಹುಡುಗಿಯ ಹೊಳಪು ಕಣ್ಣು ಒಂದಷ್ಟು ವರ್ಷ ಹಿಂದಕ್ಕೆ ಕರೆದುಕೊಂಡು ಹೋಯಿತು. ಅಷ್ಟೇ ಅಲ್ಲ ಆ ಹುಡುಗಿ ನನ್ನ ಮುಂದೆ ನಿಂತು ಏನೇನೋ ಪ್ರಶ್ನೆಯನ್ನು ಕೇಳುತ್ತಿದ್ದಾಳೆ ಎಂಬ ಭಾವನೆಗೆ ಪಕ್ಕಾದೆ. ಆ ಹುಡುಗಿ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಉದಗೀರ್‌ನಲ್ಲಿ ಕಲ್ಯಾಣನಾಡಿನ ಶರಣ ಸಮ್ಮೇಳನವಿತ್ತು. ಒಂದು ದೃಷ್ಟಿಯಿಂದ ವಿಚಿತ್ರ ರೀತಿಯಲ್ಲಿ ಪರಿಚಯವಾದ ಹುಡುಗಿ. ಆ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷರನ್ನಾಗಿ ಆರಿಸಿದ್ದರು. 

ಆ ಶರಣ ಸಮ್ಮೇಳನ ವೈವಿಧ್ಯತೆ ಏನೆಂದರೆ: ಪ್ರತಿವರ್ಷ ವೀರಶೈವರಲ್ಲದ ಒಬ್ಬ ಸಾಹಿತಿಯನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸುವುದು. ಇದನ್ನು ಎಷ್ಟೊ ವರ್ಷಗಳಿಂದ ಚಾಚು ತಪ್ಪದೆ ನಡೆಸಿಕೊಂಡು ಬರುವುದು ವೈಶಿಷ್ಟ ಪೂರ್ಣವಾದದ್ದು. ಇದಕ್ಕೆ ನಾನು ಇಷ್ಟಪಡುವ ಯಾರ್ಯಾರೋ ಸಮ್ಮೇಳನದ ಅಧ್ಯಕ್ಷ ರಾಗಿದ್ದಾರೆ. ಅಂಥ ಹಿನ್ನೆಲೆ ಇರುವ ಸಮ್ಮೇಳನವನ್ನು ಉದ್ಘಾಟಿಸಲು ನಿಂತಾಗ ರಾತ್ರಿ ಹನ್ನೊಂದು ವರೆಯಾಗಿತ್ತು. ನಾನು ಮಾತಾಡಿದ ಮೇಲೆ; ಆಗ ಅರಣ್ಯ ಸಚಿವರಾಗಿದ್ದ ದರ್ಶನಾಪುರ್ ಅವರು ಮಾತಾಡಿ ಕೂತರು. ಸಭೆಯ ಮಧ್ಯೆ ಒಬ್ಬ ಹುಡುಗಿ ಎದ್ದುನಿಂತು ‘‘ಅಂಕಲ್ ನೀವು ಬೀದರ್ ಜಿಲ್ಲೆಯ ಔರಾದ್‌ನಿಂದ ಚುನಾಯಿತ ರಾಗಿ ಬೆಂಗಳೂರು ಸೇರಿಕೊಂಡಿರಿ. ಮಂತ್ರಿಗಳೂ ಆದಿರಿ. ಆದರೆ ದಯವಿಟ್ಟು ಬಂದು ಔರಾದ್‌ನ್ನ ನೋಡಿ. ಯಾರೂ ರಸ್ತೆಯಲ್ಲಿ ಓಡಾಡಲು ಆಗುವುದಿಲ್ಲ. ವಾಹನಗಳನ್ನು ಓಡಿಸುವವರಿ ಗಂತೂ ನರಕವೇ ಸರಿ’’ ಎಂದು ಭಾವಪೂರ್ಣ ವಾಗಿ ಮಾತಾಡಿ ಕೂತರು. 

ಅಧ್ಯಕ್ಷತೆ ವಹಿಸಿದ್ದ: ನಾನು ಸದಾ ಇಷ್ಟಪಡುವ ಗದುಗಿನ ತೋಂಟದಾರ್ಯ ಸ್ವಾಮಿಗಳು ಆ ಹುಡುಗಿಯ ಮಾತುಗಳನ್ನು ಮೆಚ್ಚಿಕೊಂಡು ದರ್ಶನಾಪುರ ಅವರಿಗೆ ಉತ್ತರಿಸಲು ಹೇಳಿದರು. ಎರಡು ಕೈಗಳ ಬೆರಳುಗಳಲ್ಲಿ ಉಂಗುರಗಳು ದರ್ಶನಾಪುರ ಕೈಗಳಲ್ಲಿ ವಿಜೃಂಭಿಸುತ್ತಿದ್ದವು. ಎದ್ದುನಿಂತು ವಿನಯದಿಂದಲೇ ಉತ್ತರಿಸುತ್ತ ‘‘ನಾನು ಔರಾದ್ ಗೆ ಬರುವೆ. ಅಂದು ನೀನೂ ಇರಬೇಕು’’ ಎಂದು ಆ ಹುಡುಗಿಗೆ ಸೂಚಿಸಿ; ವೇದಿಕೆಯಿಂದಲೇ ಮೆಚ್ಚಿಗೆಯಿಂದ ಬೆನ್ನು ತಟ್ಟುವ ಮಾತಾಡಿ ಕೂತುಕೊಂಡರು.

ದರ್ಶನಾಪುರ್ ಅವರ ಮಾತಿನ ನಂತರ ಹಿರಿಯ ಅತಿಥಿಗಳೊಬ್ಬರು ಎದ್ದು ಮಾತಾಡ ತೊಡಗಿದರು. ಅವರು ಮಾತಿನ ಪ್ರಾರಂಭ ದಲ್ಲಿಯೇ; ಮಾತೇ ಮಹಾದೇವಿಯವರನ್ನು ಟೀಕಿಸಿ ಮಾತು ಶುರು ಮಾಡಿದರು.
ಆ ಕಾಲಘಟ್ಟದಲ್ಲಿ ಮಾತೇ ಮಹಾದೇವಿಯವರ ಹೇಳಿಕೆಗಳನ್ನು ಕುರಿತಂತೆ ಹಾಗೂ ಅವರ ಉದ್ಧಟತನ ಕುರಿತಂತೆ ಕರ್ನಾಟಕದ ಉದ್ದಗಲಕ್ಕೂ ಚರ್ಚೆಯಾಗುತ್ತಿತ್ತು. ಬೀದರ್ ಪ್ರದೇಶದಲ್ಲಿ ಆಕೆಯ ಸಂಘಟನೆ ತೀವ್ರವಾಗಿಯೇ ಇತ್ತು. ಇಂಥ ಸಮಯದಲ್ಲಿ ಮಾತೇ ಮಹಾದೇವಿ ಯವರನ್ನು ಟೀಕಿಸಿದ್ದಕ್ಕೆ ನೂರಾರು ಮಂದಿ ಪ್ರತಿಭಟಿಸತೊಡಗಿದರು. ಇದರ ನಾಯಕತ್ವ ವಹಿಸಿದ್ದ ಒಬ್ಬಾಕೆಯಂತೂ ವೇದಿಕೆಯ ಕಡೆ ನುಗ್ಗಿ; ಮೈಕ್ ಕೈಗೆ ತೆಗೆದುಕೊಂಡು ಮಾತಾಡಿ; ಹೀಗೆ ಮಾತಾಡಿದವರು ಕ್ಷಮಾಪಣೆ ಕೇಳುವ ವರೆಗೂ ಸಮಾವೇಶ ಮುಂದುವರಿಯಲು ಬಿಡುವುದಿಲ್ಲವೆಂದು ಹೇಳಿ ಹೋಗಿ ತಮ್ಮ ಜಾಗದಲ್ಲಿ ಕೂತರು. ಈ ಗದ್ದಲಕ್ಕೆ ಕಾರಣರಾದ ಅತಿಥಿಗಳು ಸುಮ್ಮನೆ ಕೂತರು. 

ವೀರಶೈವ ಮುಖಂಡರಾದ ವಿಶ್ವನಾಥ ರೆಡ್ಡಿ ಮುದ್ನಾಳರು ಪೆಚ್ಚಾಗಿ ಕೂತಿದ್ದರು. ಬೇರೆ ಬೇರೆ ಮಠಗಳಿಂದ ಬಂದಿದ್ದ ಹದಿನೈದು ಇಪ್ಪತ್ತು ಮಂದಿ ವೀರಶೈವ ಜಗದ್ಗುರುಗಳು ತಮ್ಮ ತಮ್ಮಲ್ಲಿಯೇ ಪಿಸುಪಿಸು ಮಾತಾಡತೊಡಗಿದ್ದರು. ಗದ್ದಲ ಮುಂದುವರೆದಿತ್ತು. ಆಗ ಗದಗಿನ ತೋಂಟದಾರ್ಯ ಸ್ವಾಮಿಗಳು ನನ್ನೊಡನೆ; ಇದನ್ನು ಹೇಗೆ ಪರಿಹರಿಸುವುದು ಎಂದರು. ಒಂದು ರೀತಿಯ ಹುಂಬ ಧೈರ್ಯದಿಂದ ‘‘ಸ್ವಾಮೀಜಿ ನಾನು ಪ್ರಯತ್ನಿಸುವೆ’’ ಎಂದು ಎದ್ದು ನಿಂತುಕೊಂಡೆ. ನಾನು ನಿಮ್ಮಿಡನೆ ಇಲ್ಲಿಂದಲೇ ಕೆಲವು ಮಾತುಗಳನ್ನು ಆಡಲು ಬಯಸುವೆ ಎಂದೆ. ನನ್ನನ್ನು ಸಮ್ಮೇಳನದ ಅಧ್ಯಕ್ಷರು ಎಂಬ ಕಾರಣಕ್ಕಾಗಿ ಗಂಭೀರವಾಗಿ ತಮ್ಮ ಸ್ಥಾನಗಳಲ್ಲಿ ಕೂತರು. ‘‘ನೋಡಿ, ನಾನು ಮಾತೇ ಮಹಾದೇವಿಯವರ ವಿದ್ವತ್ತನ್ನು ಮತ್ತು ಕ್ರಿಯಾಶೀಲತೆಯನ್ನು ತುಂಬ ಗೌರವಿಸತಕ್ಕಂಥವನು. 

ಹಾಗೆಯೇ ಆಕೆಯ ದಿಟ್ಟತನದ ಬಗ್ಗೆ ನನಗೆ ಗೌರವವವಿದೆ. ಆದರೆ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ; ಈಗಾಗಲೇ ಜನಮಾನಸದಲ್ಲಿ ‘ಕೂಡಲ ಸಂಗಮದೇವ, ಗುಹೇಶ್ವರ, ಚನ್ನಮಲ್ಲಿ ಕಾರ್ಜುನ’ ಮುಂತಾದ ಅಂಕಿತಗಳು ಮಿಥ್‌ಗಳಾಗಿ, ನಂಬಿಕೆಗಳಾಗಿ ನೂರಾರು ವರ್ಷಗಳಿಂದ ಬೇರು ಬಿಟ್ಟಿದೆ. ಇಂಥ ಸಮಯದಲ್ಲಿ ನನ್ನಂಥವರು ಮಾತೇ ಮಹಾದೇವಿ ಯವರಲ್ಲಿ ಅತ್ಯಂತ ವಿನಯದಿಂದ ಕೇಳಿಕೊಳ್ಳು ವುದೇನೆಂದರೆ: ತಮ್ಮ ಪ್ರತಿಭೆಯ ಮೂಲಕ ವಚನಗಳ ಅರ್ಥ ಬಾಹುಳ್ಯವನ್ನು ವಿಸ್ತರಿಸಲು ಪ್ರಯತ್ನಿಸಲಿ.
ಈ ದಿಕ್ಕಿನಲ್ಲಿ ನಾವೆಲ್ಲ ಆಕೆಯ ಸನ್ನಿಧಿಯಲ್ಲಿ ಕೂತು ವಿನಂತಿಸಿ ಕೊಳ್ಳೋಣ. ಅದಕ್ಕೆ ನಿಮ್ಮೆಲ್ಲರ ಸಹಕಾರ ಮತ್ತು ನಾಯಕತ್ವ ವನ್ನು ಬಯಸುವೆ. ಯಾಕೆಂದರೆ ವಚನಗಳು ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯ ಸಂದರ್ಭದಲ್ಲಿ ನಿಜವಾಗಿಯೂ ಅಮೂಲ್ಯ ವಾದಂಥವು’’ ಎಂದು ಒಂದು ಕ್ಷಣ ಗಂಭೀರವಾಗಿ ನಿಂತುಕೊಂಡೆ. ಗದ್ದಲದ, ಅಥವಾ ಪ್ರತಿಭಟನೆಯ ನಾಯಕತ್ವ ವಹಿಸಿದ್ದ ನಾಲ್ಕೆದು ಮಂದಿ ವೇದಿಕೆಯ ಕಡೆಗೆ ಬಂದರು. ನಾನು ಧೈರ್ಯದಿಂದ ನಿಂತೆ ಇದ್ದೆ. ಒಬ್ಬರು ವೇದಿಕೆಯ ಮೇಲೆ ಹತ್ತಿದರು. ಆಕೆ ಸಾಕಷ್ಟು ವಯೋವೃದ್ಧ ರಾಗಿದ್ದರು. ನನ್ನ ಎರಡೂ ಕೈಹಿಡಿದು ‘‘ನನ್ನಪ್ಪ ನಿನ್ನ ಮಾತಿನಿಂದ ಸಮಾಧಾನ ವಾಗಿದೆ’’ ಎಂದು ನನ್ನ ಕುತ್ತಿಗೆಗೆ ಹೂವಿನ ಹಾರ ಹಾಕಿದಾಗ ಪುಳಕಿತ ನಾಗಿದ್ದೆ. 

ಅದಕ್ಕಿಂತ ಹೆಚ್ಚಾಗಿ, ಆಕೆ ನನ್ನನ್ನು ಏಕವಚನ ದಲ್ಲಿ ಸಂಭೋದಿಸಿದಾಗ ನಿಜವಾಗಿಯೂ ಖುಷಿಯಾಗಿತ್ತು. ಒಂದು ವಿಧದ ಸಂತೋಷದಿಂದ ಸ್ವಾಮೀಜಿಯವರ ಪಕ್ಕದಲ್ಲಿ ಕೂತೆ. ‘‘ಶೂದ್ರ ಅವರೆ ಒಳ್ಳೆಯ ಕೆಲಸ ಮಾಡಿದಿರಿ’’ ಎಂದರು. ‘‘ಸ್ವಾಮೀಜಿ ನಾಲ್ಕೆ ನಾಲ್ಕು ಪ್ರೀತಿಯ ವಾಕ್ಯ ಗಳಿಂದ ನಾವು ಏನೇನೋ ಗೆಲ್ಲಬಹುದು’’ ಎಂದೆ. ಹಾಗೆಯೇ ಅವರಿಗೆ ನಮಸ್ಕರಿಸುತ್ತ; ಕೂಡಲಸಂಗಮದಲ್ಲಿ ಕೆಲವು ವರ್ಷಗಳ ಹಿಂದೆ ಅವರಾಡಿದ ಮಾತುಗಳನ್ನು ನೆನಪಿಸಿದೆ. ಅವರ ಕಣ್ಣಲ್ಲಿ ಚೈತನ್ಯದ ಹೊಳಪು ತುಂಬಿಕೊಂಡಿತ್ತು. ಆ ಹೊಳಪಿನ ಹಿನ್ನೆಲೆ ಕುರಿತು ಮುಂದಿನ ಸಂಚಿಕೆ ‘ವಾರ್ತಾಭಾರತಿ’ಯಲ್ಲಿ ಬರೆಯುವ ಆಸೆ ಇದೆ.

ಹೀಗೆ ಮಾತಾಡುತ್ತಲೇ ನನಗೆ ಮಾತೇ ಮಹಾದೇವಿ, ನಾಯಕತ್ವ ವಹಿಸಿದ್ದ ಆ ವಯೋವೃದ್ಧೆ ಹಾಗೂ ಆ ಹುಡುಗಿಯರ ಮಾತುಗಳ ಹಿನ್ನೆಲೆಯನ್ನು ಕುರಿತು ಯೋಚಿಸುತ್ತ ಹೋದೆ. ನಮ್ಮೆಲ್ಲರ ಮಾತುಗಳಿಗೆ ಹಾಗೂ ‘ಸಮಾಜಕ್ಕೆ ಎಷ್ಟೊಂದು ಮುಖಗಳಿರುತ್ತವೆ. ಇದಕ್ಕೆ ಸಂಬಂಸಿದಂತೆ ಸೂಚ್ಯವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದಾಗ ಆಪ್ತವಾಗಿ ನಕ್ಕಿದ್ದರು. ನಂತರ ತುಂಬ ದೀರ್ಘವಾದ ಅಧ್ಯಕ್ಷೆ ಭಾಷಣ. ಮನುಷ್ಯ ಸಂಬಂಧಗಳ ವೈರುಧ್ಯಗಳನ್ನು ಕುರಿತಂತೆ ಒಂದು ಅಮೋಘ ಭಾಷಣವನ್ನು ನಮ್ಮ ಮುಂದಿಟ್ಟಿದ್ದರು. ಇದು ಮುಗಿದಾಗ ರಾತ್ರಿ ಒಂದು ಗಂಟೆಯಾಗಿತ್ತು. ಆಗ ವಿಶ್ವನಾಥ ರೆಡ್ಡಿಯವರು ನನ್ನ ಕೈ ಕುಲುಕಿದಾಗ; ‘’ಸರ್, ನೀವು ಕಳೆದ ವರ್ಷ ನಮ್ಮ ಮನೆಗೆ ಬಂದ ವಿಷಯವನ್ನು ನನ್ನ ಅಣ್ಣ ನಂಜಪ್ಪ ರೆಡ್ಡಿಯವರು ತಿಳಿಸಿದರು.

ಆದರೆ ನಾನು ಬಂದು ನಿಮ್ಮನ್ನು ನೋಡಲಾಗಲಿಲ್ಲ. ಯಾಕೆಂದರೆ ಅದರ ಮಾರನೆಯ ದಿವಸ ನಾನು ಪಾಕಿಸ್ತಾನದ ಲಾಹೋರಿಗೆ ಶಾಂತಿ ಸಮ್ಮೇಳನಕ್ಕೆ ಹೋಗಬೇಕಾಗಿತ್ತು’’ ಎಂದೆ. ಅವರು ನನ್ನ ಮುಖವನ್ನೇ ನೋಡುತ್ತ; ‘‘ನೀವು ಬ್ರಾಹ್ಮಣ್ಯ ಅಥವಾ ಎಸ್.ಸಿ. ಎಂದು ತಿಳಿದಿದ್ದೆ’’ ಎಂದು ನನ್ನನ್ನು ಅಪ್ಪಿಕೊಂಡು ಸ್ವಲ್ಪ ದೂರದಲ್ಲಿ ನಿಂತಿದ್ದ ದರ್ಶನಾಪುರ್ ಅವರನ್ನು ಕರೆದು ‘‘ಬಾರಯ್ಯ ಇಲ್ಲಿ ಶೂದ್ರ ಶ್ರೀನಿವಾಸ ನಮ್ಮ ರೆಡ್ಡಿಯಂತೆ’’ ಎಂದು ಮತ್ತೆ ಯಾರ್ಯಾರಿಗೋ ಪರಿಚಯ ಮಾಡಿಕೊಟ್ಟರು. ಒಂದು ಕ್ಷಣ ನನಗೆ ಷಾಕ್ ಆಯಿತು. ಎಷ್ಟೋ ತಲೆಮಾರುಗಳ ಹಿಂದೆ; ರೆಡ್ಡಿ ಜಾತಿಯನ್ನು ಬಿಟ್ಟು ವೀರಶೈವ ಧರ್ಮಕ್ಕೆ ಸೇರಿದ್ದರೂ; ಮೂಲಬೇರುಗಳ ಬಗ್ಗೆ ಸೆಳೆತ ಇಟ್ಟುಕೊಂಡಿರುವುದರ ಬಗ್ಗೆ ಕುತೂಹಲವೂ ಬೆಳೆಯಿತು. ಇದನ್ನು ಕುರಿತು ಡಿ.ಆರ್. ನಾಗರಾಜ್ ಅಂಥವರ ಬಳಿ ಚರ್ಚಿಸಿದಾಗ; ಆತ್ಮೀಯವಾಗಿ ಪ್ರತಿಕ್ರಿಯಿಸುತ್ತ: ‘‘ಜಾತೀಯತೆಯ ವಿವಿಧ ಮುಖಗಳು ಸುತ್ತಿ ಬಳಸಿ ಹೇಗೆ ನಮ್ಮನ್ನು ಆವರಿಸಿಕೊಳ್ಳುತ್ತಿರುತ್ತದೆ’’ ಎಂದು ಹೇಳಿದ್ದ.

ಇರಲಿ, ಹೀಗೆ ನಾವು ಮಾತಾಡುತ್ತ ಪ್ರಸಾದಕ್ಕೆ ಹೊಗುವ ಸಮಯದಲ್ಲಿ ನನ್ನ ಜೊತೆಯಲ್ಲಿ ಖ್ಯಾತ ಕ್ಲಾರಿನೆಟ್ ವಿದ್ವಾಂಸರಾದ ಪಂಡಿತ್ ನರಸಿಂಹಲು ವಡವಾಟಿಯವರಿದ್ದರು. ಹಾಗೆಯೇ ಮತ್ತೊಬ್ಬ ಹಿರಿಯರಾದ ಬಸವರಾಜ್ ತಂಬಾಕೆಯವರಿದ್ದರು. ತಂಬಾಕೆಯವರು ಅತ್ಯಂತ ಕ್ರಿಯಾಶೀಲ ರೈತ ಮುಖಂಡರಾಗಿದ್ದರು. ಪ್ರೊ. ಎಂ.ಡಿ. ನಂಜುಂಡ ಸ್ವಾಮಿಯವರಿಗೆ ಆಪ್ತರಾಗಿದ್ದರು. ಇದ್ದಕ್ಕಿದ್ದಂತೆ ಆ ಹುಡುಗಿ ನಮ್ಮ ಮುಂದೆ ಪ್ರತ್ಯಕ್ಷವಾದಳು. ನಾವೆಲ್ಲ ಸಂತೋಷದಿಂದ ಬೆನ್ನು ತಟ್ಟಿದೆವು. ನೋಟ್ ಬುಕ್‌ನಲ್ಲಿ ಹಸ್ತಾಕ್ಷರ ಜೊತೆಯಲ್ಲಿ ವಿಳಾಸ ಮತ್ತು ನಾಲ್ಕು ಮೆಚ್ಚಿಗೆಯ ಮಾತುಗಳನ್ನು ಬರೆಸಿಕೊಂಡಳು. 

ಕೊನೆಗೆ ಆ ಹುಡುಗಿಯೇ ನಮಗೊಂದು ಪ್ರಶ್ನೆ ಹಾಕಿದಳು: ಅಂಕಲ್ ನಾನು ಯಾಕೆ ಬರೆಸಿಕೊಳ್ಳೂತ್ತಿದ್ದೇನೆ ಗೊತ್ತಾ? ನಾನು ಈ ಬಾರಿ ಎಸೆಸೆಲ್ಸಿಯಲ್ಲಿ ಮೊದನೆಯ ದರ್ಜೆಯಲ್ಲಿ ಪಾಸಾಗುತ್ತೇನೆ. ಮುಂದೆ ನಾನು ಕಾಲೇಜಿಗೆ ಹೋಗಿ ಓದಬೇಕು. ಆದರೆ ನಮ್ಮ ಮನೆಯಲ್ಲಿ ಅಮ್ಮ-ಅಪ್ಪಗೆ ನನ್ನನ್ನು ಓದಿಸಲು ಇಷ್ಟವಿಲ್ಲ. ಆದರೆ ನೀವೆಲ್ಲ ಗೊತ್ತು ಎಂದು ನಿಮ್ಮ ಹಿನ್ನೆಲೆಯ ನಾಲ್ಕು ಸಾಲು ನನ್ನ ಪರವಾಗಿದ್ದರೆ; ನಿಜವಾಗಿಯೂ ನನ್ನನ್ನು ಕಾಲೇಜಿಗೆ ಕಳಿಸಬಹುದು’’ ಎಂದು ಪೆನ್ನು ಮತ್ತು ನೋಟ್ ಬುಕ್ಕನ್ನು ಹಿಡಿದಿದ್ದ ನೋಟ; ಒಂದು ಕ್ಷಣ ದಿಗಿಲು ಹುಟ್ಟಿಸಿತು. ಅದೇ ಸಮಯಕ್ಕೆ ವಿಷಾದ ನಮ್ಮೆಲ್ಲರ ಮುಂದೆ ದಟ್ಟವಾಗಿ ಆಕಾರ ಪಡೆದಿತ್ತು. ಆ ಹುಡುಗಿಗೆ ಏನೋನೋ ಧೈರ್ಯ ಹೇಳಿ ‘‘ನಿನ್ನ ತಾಯಿ ತಂದೆಯವರನ್ನು ನಾವು ಒಪ್ಪಿಸುತ್ತೇವೆ ಓದಿಸಲು’’ ಎಂದು ಹೇಳಿದಾಗ ‘‘ಬೇಡ ಅನ್ನಿಸುತ್ತೆ ಅಂಕಲ್ ನಿಮ್ಮ ವಾಕ್ಯಗಳೇ ಪ್ರಮಾಣ ಪತ್ರವಾಗಿ ಅವರು ಮನಸ್ಸು ಬದಲಾಯಿಸಬಹುದು’’ ಎಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿ ತನ್ನವರ ಜೊತೆ ಸೇರಿಕೊಂಡಳು.

ನಾವೆಲ್ಲ ಆ ಮಗು ಹೋದ ದಿಕ್ಕಿನೆಡೆಗೆ ನೋಡುತ್ತ ನಿಂತೆವು. ಪಂಡಿತ್ ನರಸಿಂಹಲು ವಡವಾಟಿಯವರಂತೂ ವಿಷಾದದಿಂದ ‘‘ಎಂಥ ಧೈರ್ಯವಂತೆ ಹಾಗೆಯೇ ಎಷ್ಟೊಂದು ಜೀವನೋಲ್ಲಾಸ ತುಂಬಿಕೊಂಡಿದ್ದಾಳೆ. ಆ ಮಗುವನ್ನು ಕುರಿತೇ ಒಂದು ರಾಗ ಕಟ್ಟಿ ನುಡಿಸೋಣ ಅನ್ನಿಸುತ್ತಿದೆ’’ ಎಂದಿದ್ದರು. ಒಂದು ದೃಷ್ಟಿಯಿಂದ ಎಲ್ಲ ಸ್ವಾಮಿಗಳ ಮತ್ತು ನಮ್ಮ ನಡುವೆ ಚರ್ಚೆಯ ವಿಷಯವಾಗಿದ್ದಳು. ಮಾರನೆಯ ದಿವಸ ಸಮಾರೋಪದ ಸಮಾರಂಭ ಯಥಾಪ್ರಕಾರ ರಾತ್ರಿ ಹನ್ನೊಂದವರೆಗೆ ಪ್ರಾರಂಭವಾಯಿತು. 

ಒಂದು ಗಂಟೆ ವಡವಾಟಿಯವರ ಅದ್ಭುತ ಕ್ಲಾರಿನೆಟ್ ವಾದನವಿತ್ತು. ಆಗ ಅವರು ಆ ಹುಡುಗಿಯ ಗುಣಗಾನ ಮಾಡಿದರು. ನನ್ನ ಸಮಾರೋಪ ಭಾಷಣದಲ್ಲಿಯೂ ಪ್ರಸ್ತಾಪಿಸಿದೆ. ತೋಂಟದಾರ್ಯ ಸ್ವಾಮಿಗಳು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮ ಮುಗಿದಾಗ ರಾತ್ರಿ ಒಂದು ಗಂಟೆಯಾಗಿತ್ತು. ಬಹಳಷ್ಟು ಸ್ವಾಮಿಗಳು ತಮ್ಮ ಮಠಗಳಿಗೆ ಕರೆದರು. ಆದರೆ ಎಷ್ಟೊ ವರ್ಷಗಳಿಂದ ಬಾಲ್ಕಿಯ ಡಾ. ಚನ್ನಬಸವ ಪಟ್ಟದ್ದೇವರು ಅವರನ್ನು ನೋಡುವ ಆಸೆ ಇತ್ತು.
ತೋಂಟದಾರ್ಯ ಸ್ವಾಮಿಗಳೂ ಹೋಗಿ ಬರಲು ಸೂಚಿಸಿದರು. ಅದೊಂದು ಭಾವನಾತ್ಮಕ ಬೀಳ್ಕೊಡಿಗೆಯಾಗಿತ್ತು. ಆ ಹುಡುಗಿಯನ್ನು ಅಲ್ಲೆಲ್ಲ ಹುಡುಕಿದೆ. ಕಾಣಲಿಲ್ಲ. ಮಾತೇ ಮಹಾದೇವಿ ಪರ ನಿಂತಿದ್ದ; ಆ ಹಿರಿಯ ಮಹಿಳೆಯನ್ನು ಭೇಟಿಯಾದೆ. ‘‘ ಅಪ್ಪ, ಎಂದಾದರೂ ಈ ಕಡೆ ಬಂದರೆ ಭೇಟಿಯಾಗು. ಮಹಾದೇವಿ ತಾಯಿಯವರಿಗೆ ನಿಮ್ಮ ವಿಷಯ ತಿಳಿಸುವೆ’’ ಎಂದರು. ಕೊನೆಗೆ ಮೂರುನಾಲ್ಕು ಸ್ವಾಮಿಗಳ ಜೊತೆ ರಾತ್ರಿ ಎರಡು ಗಂಟೆಗೆ ಭಾಲ್ಕಿಗೆ ಹೊರಟೆವು. ಜೊತೆಯಲ್ಲಿ ಬಸವಲಿಂಗ ಪಟ್ಟದ್ದೇವರು ಇದ್ದರು. ಹಾಗೆ ನೋಡಿದರೆ ಉದಗೀರ್‌ನಿಂದ ಲಾಥೂರ್‌ಗೆ ಹೋಗುವ ಆಸೆ ಇತ್ತು. ಯಾಕೆಂದರೆ ಭೀಕರ ಭೂಕಂಪಕ್ಕೆ ತುತ್ತಾದ ಪ್ರದೇಶ.

ರಾಯಚೂರಿನ ಶಾಂತರಸರು ಸಿಕ್ಕಿದಾಗಲೆಲ್ಲ ಭಾಲ್ಕಿಯ ಚನ್ನಬಸವ ಪಟ್ಟದ್ದೇವರು ಅವರನ್ನು ನೋಡಿ ಬರಲು ತಿಳಿಸುತ್ತಿದ್ದರು. ಯಾಕೆಂದರೆ ಅವರೊಬ್ಬರು ನೈತಿಕ ಸಂಕೇತವೆಂದು. ಅದರ ಜೊತೆಗೆ ಆ ಕಾಲದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದರು. ಈ ದೃಷ್ಟಿಯಿಂದ ನಾನು ಭಾಲ್ಕಿಯ ಮಠದಲ್ಲಿದ್ದೀನಿ ಎಂಬುದು ಮನಸ್ಸಿಗೆ ಅನನ್ಯತೆಯನ್ನು ತುಂಬಿಕೊಟ್ಟಿತ್ತು. ಅದರಲ್ಲಿ ನೂರೇಳು ವರ್ಷದ ಈ ಮಠದ ಹಿರಿಯರನ್ನು ನೋಡುತ್ತಿದ್ದೇನೆ ಎಂಬುದು ಪುಳಕ ತುಂಬುವ ಸಂಗತಿಯಾಗಿರುತ್ತದೆ.
ರಾತ್ರಿ ಮೂರೂವರೆಗೆ ಮಲಗಿದರೂ ಬೆಳಗ್ಗೆ ಆರು ಗಂಟೆಗೆ ಎದ್ದು ಸ್ನಾನ ಮಾಡಿದೆ. ಏಳುಗಂಟೆಗೆ ಅವರ ಸಂಸ್ಥೆಯ ಮಕ್ಕಳಿಗೆ ನಾಲ್ಕು ಮಾತು ಹೇಳಲು ರಾತ್ರಿಯೇ ಬಸವಲಿಂಗಪಟ್ಟದೇವರು ಕಾರಿನಲ್ಲಿ ವಿನಂತಿಸಿಕೊಂಡಿದ್ದರು. ಸುಮಾರು ನಾಲ್ಕೆದು ಕಿ.ಮೀ. ದೂರದಲ್ಲಿದ್ದ ಸಂಸ್ಥೆಯಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳು ಆಡುತ್ತಿದ್ದರು. ಅತ್ಯಂತ ಶಿಸ್ತುಬದ್ಧವಾಗಿ ರೂಪಿಸಿದ ಸಂಸ್ಥೆ. ಆ ಮಕ್ಕಳಿಂದ ವಂದನೆಯನ್ನು ಸ್ವೀಕರಿಸಿ ಒಂದಷ್ಟು ಮಕ್ಕಳ ಕಥೆಗಳನ್ನು ಹೇಳಿ ಮಠಕ್ಕೆ ವಾಪಸ್ಸು ಬಂದೆವು.ಹಿರಿಯ ಸ್ವಾಮೀಜಿಯವರು ಭಕ್ತಾದಿಗಳಿಗೆ ದರ್ಶನಕೊಡಲು ಸಾದಾರಣವಾದ ಕುರ್ಚಿಯಲ್ಲಿ ಕೂತಿದ್ದರು. 

ಅವರ ದರ್ಶನಕ್ಕೆ ಹೋದೆ. ದರ್ಶನ ಪಡೆಯುವ ಮುನ್ನ ಶಾಂತರಸರು ಸಂಪಾದಿಸಿರುವ ‘ಕಾಯಕ ಪರಿಣಾಮಿ’ ಎಂಬ ಬೃಹತ್‌ಗ್ರಂಥವನ್ನು ಬಸವಲಿಂಗಪಟ್ಟದ್ದೇವರು ಕೊಟ್ಟರು. ನನ್ನನ್ನು ಅವರಿಗೆ ಪರಿಚಯ ಮಾಡಿಕೊಟ್ಟರು. ಪ್ರೀತಿಯಿಂದ ತಲೆಯ ಮೇಲೆ ಕೈಯಿಟ್ಟು ಬಾಯಿತುಂಬ ಸಕ್ಕರೆ ಹಾಕಿದರು. ಶಾಲು ಅರ್ಪಿಸಿ ಪ್ರಸಾದ ಜೊತೆಗೆ ಇನ್ನೂರು ರೂಪಾಯಿ ಇಟ್ಟಿದ್ದರು. ‘ಕಾಯಕ’ ಪರಿಣಾಮಿ’ ಕೃತಿಯ ಮೇಲೆ ಅವರ ಸಹಿ ಪಡೆದೆ. ಅಸ್ಪಷ್ಟ ಅಕ್ಷರಗಳ ಸಹಿ. ಪುಟ್ಟ ಮಕ್ಕಳ ಚಿತ್ರಮಾಲೆಯಂಥ ಅಕ್ಷರಗಳು. ಧನ್ಯತಾ ಭಾವನೆ ಮತ್ತು ಅನಾಥ ಭಾವನೆ ನನ್ನ ಮನಸ್ಸಿನಲ್ಲಿ ತುಂಬಿಕೊಂಡಿತ್ತು. 

ದೀರ್ಘಕಾಲದ ಬದುಕಿನಲ್ಲಿ ನಾನಾ ರೀತಿಯ ಏರುಪೇರುಗಳ ನಡುವೆ ಆ ಮಠವನ್ನು ಹಾಗೂ ಸುತ್ತಲಿನ ಜನತೆಯನ್ನು ನಿರ್ವಹಿಸಿದ ‘ಕಾಯಕ ಪರಿಣಾಮಿ’ಯನ್ನು ನೋಡುತ್ತಲೇ ಒಂದರ್ಧ ಗಂಟೆ ಕೂತಿದ್ದು ಹೊರಟೆ. ಗುಲಬರ್ಗಾಗೆ ಬಂದು ಗೆಳೆಯರನ್ನು ಕೂಡಿಕೊಂಡೆ. ಆ ಹಿರಿಯ ಚೇತನ ಚನ್ನಬಸವ ಪಟ್ಟದ್ದೇವರು ಜೊತೆಗೆ ಉದಗೀರ್‌ನಲ್ಲಿ ಬೆಳಕಿನಂತೆ ಬಂದು ಹೋದ ಆ ಹುಡುಗಿ ನನ್ನೊಳಗೆ ಆವರಿಸಿಕೊಂಡಿದ್ದರು. ಒಮ್ಮೊಮ್ಮೆ ಸುಮ್ಮನೆ ಯೋಚಿಸುವೆ: ಆ ಹುಡುಗಿ ಏನಾಗಿರಬಹುದೆಂದು...

ರೂಮಿ : ಮೂರು ಕವಿತೆಗಳು


ಜಲಾಲುದ್ದೀನ್ ರೂಮಿ
ಅನು : ಡಾ .ಎಚ್ .ಎಸ್ ಅನುಪಮಾ

Anupama in shimoga.JPG 1


ಸಂಗಾತಿಗಳೇ ಒಟ್ಟಾಗಿ ಎಲ್ಲರೂ, ಇದು ನಿದ್ರಿಸುವ ಸಮಯವಲ್ಲ; 
ದೇವನಾಣೆ, ನಿದ್ರಿಸುವವ ನಿಜ ಸಂಗಾತಿಯಲ್ಲ.

ಏತದೆಡೆ ತಿರುಗದೆ, ಹನಿ ಕಣ್ಣೀರು ಮಿಡಿಯದವ 
ಕೈದೋಟ ಪ್ರವೇಶಿಸಲಾರ, ಒಳಗಿನ ದಾರಿ ಅರಿಯಲಾರ

ಮಣ್ಣುನೀರಿನ ಲೋಕದಲಿ ಎದೆಬಯಕೆಗಳ ಹಿಂದೆ ಹೊರಟರೆ 
ನೀರಿಗಾಗಿ ಒಣಗಿದ ನದಿಯ ಕಡೆಗೆ ಓಡಿದಂತೆ 

ಚಂದ್ರಮನೇ, ಎದೆಯಾಗಸದಿಂದಿಳಿದು ಬಂದು ಇರುಳುಗಳ ಹಗಲಾಗಿಸು, 
ದುಃಖಿಸದಿರಲಿ ಬೆಳದಿಂಗಳಿರದ ರಾತ್ರಿಗಳಿಗೆ ಇರುಳ ಪಯಣಿಗರು 

ಪಾದರಸದ ಬಿಂದುವಿನಂತೆ ಅವನ ಪ್ರೇಮಕ್ಕಾಗಿ ನಾನು ಕಂಪಿಸದಿದ್ದಲ್ಲಿ 
ಅವನೆಲ್ಲಿರುವನೆಂಬ ಸೂಚನೆ ನನ್ನೆದೆಗೆ ತಿಳಿಯದೇ ಹೋಗಲಿ.

2

ಎಡಬಲ ಎಲ್ಲೆಡೆಯಿಂದ ಟೀಕೆ ಬೈಗುಳ ತೂರಿಬಂದರೂ 
ಹಿಂತಿರುಗಿ ಬರಲಾರ ಪ್ರೇಮದಲಿ ಕಳೆದುಹೋದವನು. 

ಚಂದ್ರ ಬೆಳದಿಂಗಳ ಸುರಿಸುತ್ತಾನೆ, ನಾಯಿ ಬೊಗಳುತ್ತದೆ. 
ಚಂದ್ರನಿಗೇನು ನಷ್ಟ? ಏನಿಲ್ಲ, ಅದೇ ನಾಯಿಯ ವಿಶೇಷತೆ 

ಪ್ರೇಮಿ ಪರ್ವತದಂತೆ; ಗಾಳಿಗೆ ಹಾರಿಹೋಗುವ ಒಣಹುಲ್ಲಲ್ಲ
ಪ್ರೇಮ ಗಾಳಿಯೇ ದಾರಿ ಬಿಟ್ಟ ದುಂಬಿಗಳ ಗುಂಪು.

ಪ್ರೇಮದಲ್ಲಿ ನಿಂದೆ ಇರಲೇಬೇಕೆನುವ ನಿಯಮವಿದ್ದರೆ
ನಿಂದೆಗೆ ಪ್ರೇಮಿ ಕಿವುಡಾಗಬೇಕೆಂಬ ನಿಯಮವೂ ಇದ್ದೇ ಇದೆ.

ನಿನ್ನೆರೆಡು ಲೋಕಗಳ ತ್ಯಜಿಸು ಅದುವೆ ನಿಜವಾದ ನಡಿಗೆ
ಎಲ್ಲ ಲಾಭಗಳ ತೊರೆ, ಪಡೆವೆ ಪ್ರೇಮಸಿರಿಯ ಕೊಡುಗೆ.
3

ಜಾರಿ ಬೀಳದಿರು, ನಿನ್ನ ಹಿಂದುಮುಂದಿರುವ ಹಾದಿ ನೆತ್ತರಿನಲಿ ತೊಯ್ದುಹೋಗಿದೆ; 
ಚಿನ್ನ ಕದಿವವರಿಗಿಂತ ನರಮನುಷ್ಯರ ಕದಿವವರು ಹೆಚ್ಚು ಈ ಕಾಲದಲ್ಲಿ.

ಜನರ ಅರಿವು, ತರ್ಕಗಳ ಕದಿಯಬಂದವರು 
ತನ್ನರಿವು ತಾ ಕಳೆದುಕೊಂಡವನ ಏನು ಮಾಡಿಯಾರು?

ನಿನ್ನ ಆತ್ಮ ಅಯೋಗ್ಯ, ಎದುರಾಳಿಯಿಲ್ಲದ್ದು ಎಂದು ಭಾವಿಸದಿರು, 
ಲೋಕಕ್ಕೆ ಹೊನ್ನಿನ ದಾಹ, ನಿನ್ನೆದೆ ಹೊನ್ನ ಗಣಿ.

ಪ್ರವಾದಿ ಹೇಳಿದ್ದಾರೆ; ‘ಮಾನವ ಗಣಿಯಿದ್ದಂತೆ’. 
ಚಿನ್ನಬೆಳ್ಳಿಯ ಗಣಿ, ಪಚ್ಚೆರತ್ನವಜ್ರಗಳ ಆಗರ ನಿನ್ನ ಹೃದಯ

ನಿಧಿಯ ಹುಡುಕಬಲ್ಲೆ, ಬದುಕಿನ ನಿಧಿ ಪಡೆಯಬಲ್ಲೆಯಾ? 
ನಿನ್ನ ನೀ ಹುಡುಕು, ಸಿರಿಯ ಸಂಪತ್ತು ಕರಗಬಹುದು.

ಮುಂಬೆಳಗು ನಸುಕತ್ತಲಾದರೇನು ನಿನ್ನ ಅಂಗೈಯಲ್ಲೇ ಇದೆ ಹಗಲು. 
ಸೂರ್ಯನೆಡೆ ತಿರುಗು ಆಗ ಮೊಗವೇ ಮುಂಬೆಳಗು. 

ಹಗಲುಸಿರ ಒಳಗೆಳೆದುಕೋ ನಿನ್ನ ಚೇತನ ಮತ್ತವಾಗುವುದು; 
ಮುಂಜಾವಿನ ಮುಖ ಸೂರ್ಯನೆಡೆ, ನೋಟ ಸಂಗಾತಿಯಾಗುವುದು

‘ಒಂದು ವೇಳೆ’, ‘ಅಕಸ್ಮಾತ್’ಗಳ ನಡುವೆ ಅದೆಷ್ಟೋ ಬಾರಿ ಬಿದ್ದು ಎದ್ದಿರುವೆ 
ದಿವಾಳಿ ನೀನು, ಸ್ವರ್ಗದ ಚಕ್ರ ಎಲ್ಲವನೂ ಹೊತ್ತೊಯ್ಯುತ್ತದೆ..
 
 
 

Thursday, November 29, 2012

ಆನಾ ಆಹ್ಮತೋವಾ ಎರಡು ಕವಿತೆಗಳು
1

ನಾ ಬಲ್ಲೆ : ವರ್ಷಗಳ ನೋವು ಹಾಗೂ ಕಷ್ಟನಿಷ್ಠುರಗಳಿಗೆ
ನನಗೆ ದೊರೆತ ಬಹುಮಾನ ನೀನು _
ಎಂದೂ ಈ ನೆಲದ ಸುಖಸಂತೋಷಗಳಿಗೆ
ಮೈ ತೆರೆಯದಿದ್ದುದಕ್ಕೆ
ಪ್ರಿಯತಮನಿಗೂ 'ನೀನು ನನಗೆ ಪ್ರಿಯ'
ಎಂದು ಹೇಳದಿದ್ದುದಕ್ಕೆ
ಎಲ್ಲರನ್ನೂ ಎಲ್ಲದಕ್ಕೂ ಮನ್ನಿಸಿದ್ದಕ್ಕೆ
ಇನ್ನು ಮುಂದೆ ನೀನೆ ನನ್ನ ದೇವತಾಪುರುಷ

2

ನಮ್ಮ ಈ ಶತಮಾನ ಹಿಂದಿನ ಎಲ್ಲವಕ್ಕಿಂತ ಏಕಿಷ್ಟು ಹೊಲಸಾಗಿದೆ?
ದುಃಖ ಅತಂಕಗಳ ಉಬ್ಬರದಲ್ಲಿ
ತನ್ನ ಹಾಳುಹುಣ್ಣನ್ನು ಸವರಿಕೊಂಡೂ
ಏಕೆ ಅದು ಗುಣ ಕಾಣಲಾರದ ಹೋಗಿದೆ?

ಸೂರ್ಯನಾಗಲೇ ಪಶ್ಚಿಮ ದಿಗಂತಕ್ಕಿಳಿದಿದ್ದಾನೆ
ಸಂಜೆಬೆಳಕಿನಲ್ಲಿ ಊರುಚಾವಣಿಗಳು ಮಿನುಗುತ್ತಿವೆ
ಇಲ್ಲಾಗಲೇ ಮನೆಬಾಗಿಲುಗಳ ಮೇಲೆ ಶಿಲುಬೆಯ ಗುರುತು ಬಿದ್ದಿವೆ
ಹದ್ದುಕಾಗೆಗಳಿಗೆ ಕರೆಹೋಗಿದೆ, ಅವು ಮೇಲೆ ಸುತ್ತುಹೊಡೆಯುತ್ತಿವೆ

ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ :ವಿಶ್ವವಿದ್ಯಾಲಯಕ್ಕೆ ಕಳಂಕವಡ್ಡಗೆರೆ ನಾಗರಾಜಯ್ಯ

ಬೆಂಗಳೂರುಕನ್ನಡ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಾಪಕರು ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷದ ಪರ ಇಲ್ಲವೇ ವಿರುದ್ಧ ಮಾತನಾಡದೆ ಇರುವಂತೆ ಸಿಂಡಿಕೇಟ್ ಸಭೆಯು ಆದೇಶ ಹೊರಡಿಸಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧವಾಗಿ ಅಧ್ಯಾಪಕರಿಗೆ ನೋಟಿಸ್ ನೀಡಿರುವುದಾಗಿಯೂ ಗೊತ್ತಾಗಿದೆ. ಈ ಸುದ್ದಿಯು ಆತಂಕ ಮತ್ತು ಆಶ್ಚರ‌್ಯವನ್ನುಂಟು ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗೆ ಇಷ್ಟ ಬಂದ ವಿಚಾರವನ್ನು ಒಪ್ಪುವ, ಪರವಹಿಸುವ ಇಲ್ಲವೇ ವಿರೋಧಿಸುವ ಹಕ್ಕು ನಾಗರಿಕರಿಗೆ ಇದೆ.

ಅಲ್ಲದೆ ವಿಶ್ವವಿದ್ಯಾಲಯಗಳಲ್ಲಿ ಕಾರ‌್ಯನಿರ್ವಹಿಸುವವರು ಸಮಾಜಮುಖಿಯಾಗಿ ಚಿಂತಿಸುವ ಮತ್ತು ಉತ್ತಮ ಸಮಾಜಕ್ಕಾಗಿ ದುಡಿಯುವ ಹೊಣೆಗಾರಿಕೆಯೂ ಇದೆ. ವಿವಿಧ ರಾಜಕೀಯ ಪಕ್ಷಗಳ ಮತ್ತು ಸಾಮಾಜಿಕ ಸಂಘಟನೆಗಳ ನಡೆಗಳನ್ನು ಕುರಿತು ಕಾಲಕಾಲಕ್ಕೆ ಚರ್ಚಿಸುವ ಮೂಲಕ ಪ್ರಜಾಪ್ರಭುತ್ವದಲ್ಲಿ  ಜನರಪರವಾದ ರಾಜಕಾರಣ ಜಾರಿಗೆ ತರಲು ಸಾಧ್ಯವಾಗುತ್ತದೆ. ಸಮಾಜಮುಖಿಯಗಿ ಕಾರ‌್ಯನಿರ್ವಹಿಸಲೆಂದೇ ಆರಂಭವಾಗಿರುವ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಮೇಲೆ ಈ ಹೊಣೆಗಾರಿಕೆ ಇನ್ನೂ ಹೆಚ್ಚಾಗಿದೆ. ಹೀಗಿರುವಾಗ ಅಧ್ಯಾಪಕರು ಸರ್ಕಾರಗಳ ಪರ ಇಲ್ಲವೇ ವಿರುದ್ಧ ಮಾತನಾಡಬಾರದು ಎಂಬ ಆದೇಶ ಹೊರಡಿಸುವುದು ಖಂಡನೀಯ. ಇದು ವಿಶ್ವವಿದ್ಯಾಲಯಕ್ಕೆ ಕಳಂಕ. ಅಧ್ಯಾಪಕರ ಅಭಿವ್ಯಕ್ತಿ ಸ್ವಾತಂತ್ರ್ಯವೆ ಹೀಗೆ ಹಲ್ಲೆಗೆ ಒಳಗಾದರೆ ಇನ್ನು ಸಾಮಾನ್ಯ ಜನರ ಪಾಡೇನು? ಕೂಡಲೆ ಈ ಆದೇಶವನ್ನು ಹಿಂತೆಗೆದುಕೊಂಡು ವಿಶ್ವವಿದ್ಯಾಲಯದ ಗೌರವವನ್ನು ಕಾಪಾಡಬೇಕೆಂದು ಕೋರುತ್ತೇವೆ.

ಬದುಕು ಬದಲಿಸದ 'ಬೀಗದ ಕೈ'!


 ನಿಸಾರ್‌ ಅಹ್ಮದ್‌
ಬೀಗ ರಿಪೇರಿ, ಚಾಮರಾಜನಗರ

ವಿಜಯ  ಕರ್ನಾಟಕ ಬದುಕು ಬದಲಿಸದ 'ಬೀಗದ ಕೈ'! 
 
 
'ಯಾವುದೇ ಕೆಲ್ಸ ಮಾಡ್ಬೇಕಾದ್ರೂ ನಿಯತ್ತು ಇರ‌್ಬೇಕು ಸಾರ್... ಅದೊಂದು ಇಲ್ಲಾಂದ್ರೆ ಬದ್ಕೋದು ಸ್ಯಾನೆ ಕಷ್ಟ. ನಮ್ ತಾತನ ಕಾಲ್ದಿಂದ್ಲೂ ನಾವು ಬೀಗ ರಿಪೇರಿ ಮಾಡಿಯೇ ಜೀವ್ನ ಮಾಡ್ತಿರೋದು. ನನಗೆ ಯಾವ ಥರ ಬೀಗ ತಂದ್ಕೊಟ್ರೂ ಒಂದ್ ನಿಮಿಷದಲ್ಲಿ ತೆಗೀತಿನಿ. ಅಷ್ಟೆ ಸಲೀಸಾಗಿ ರಿಪೇರಿನೂ ಮಾಡಿಕೊಡ್ತಿನಿ. ಆದ್ರೆ ಒಂದೇ ಒಂದು ದಿನವೂ ಆ ಕಸುಬ್ನ ದುರುಪಯೋಗ ಮಾಡ್ಕೊಂಡಿಲ್ಲ. ಅದು ನಮ್ಮಪ್ಪ ಹೇಳಿಕೊಟ್ಟ ನಿಯತ್ತು ಸಾಬ್...

ಇದೇ ಚಮಾಲ್ ಬೀದೀಲೇ ನಮ್ಮ ತಾತ, ನಮ್ಮಪ್ಪ ಬೀಗ ರಿಪೇರಿ ಮಾಡ್ತಿದ್ರೂ. ನಾನು ನಾಕನೇ ಕ್ಲಾಸ್‌ನಲ್ಲಿರೋವಾಗ್ಲೆ ಅಪ್ಪನ ಜತೆ ಕೆಲ್ಸ ಶುರು ಮಾಡ್ದೆ. ಅವಾಗೆಲ್ಲ ಮಗ ಓದಿದ್ದು ಸಾಕು, ಒಂದಷ್ಟ ಕೆಲ್ಸ ರೂಢಿಸಿಕೊಂಡ್ರೆ ಮುಂದೆ ದುಡ್ಕೊಂಡು ತಿಂತಾನೆ. ಇಲ್ಲಾ ಅಂದ್ರೆ ಪೋಲಿ ಆಗಿ ಬೀದಿ ಬೀದಿ ಅಲೀತಾನೆ ಅಂತ ಮನೆಲಿ ಸಾಲಿ ಕಡೆ ಹೋಗೋದು ಬ್ಯಾಡ ಅಂದ್ರು. ನಾನೂ ಓದು ಅಂದ್ರೆ ಮಾರ್ ದೂರ ಓಡ್ತಿದ್ನ. ಹಂಗಾಗಿ ಸೀದಾ ಅಪ್ಪನ ಜತೆ ಬೀಗ ರಿಪೇರಿ ಮಾಡೋಕೆ ಕುತ್ಕೊಂಡೆ. ಆಮೇಲೆ ಅಪ್ಪಂಗಿತ ನಾನೇ ಎಕ್ಸ್‌ಪರ್ಟು ಆದೆ ಅಂತ ಜನ ಮಾತಾಡ್ಕೊಳ್ಳೊರು. ಆಗೆಲ್ಲಾ ಅಬ್ಬ ನಂಗೆ ಗೊತ್ತಾಗ್ದಂಗೆ ಅಮ್ಮಿ ಹತ್ರ ಹೋಗಿ ಖುಸಿಯಿಂದ ಹೇಳ್ಕೊಳ್ಳೊರು. ಇದು ನಮ್ ಕುಲ ಕಸ್ಬು ಇದ್ದಂಗೆ. ಹಂಗಾಗಿ ಮಗ ನನ್ ಮೀರ‌್ಸಿ ಕೆಲ್ಸ ಮಾಡ್ತಾನೆ ಅಂದ್ರೆ ಅಬ್ಬಂಗೂ ಸಂತೋಷನೇ ಅಲ್ವಾ.

ಹಿಂಗೆ ನೋಡಿ ನಾನ್ ಈ ಉದ್ಯೋಗಕ್ಕೆ ಬಂದೆ. ಮನೆ ಬೀಗ ಕಳ್ಕೊಂಡೋರು, ಬೈಕ್ ಕೀ ಬೇಕಾದೋರು ಬರ‌್ತಾನೆ. ನಂದೂ ಒಂಥರಾ ಸೋಸಿಯಲ್ ಸರ್ವಿಸ್ಸೇ. ಆಮೇಲೆ ಈ ಕೆಲ್ಸ ಯಾರ್ ಬೇಕಾದ್ರೂ ಮಾಡೋಕೆ ಆಗೊಲ್ಲ. ಬೀಗ ಕೀನ ಒಡೀದೆ ಓಪನ್ ಮಾಡೋದು ನೋಡಿ ಸುಮಾರ್ ಜನ ನಾವೂ ಮಾಡ್ತಿವಿ ಅಂತ ಬರ‌್ತಾರೆ. ಆದ್ರೆ ಆ ಅಲ್ಲಾ ಅವ್ರ ಕೈಗೆ ವಿದ್ಯೆ ಹತ್ತೋಕೆ ಬಿಟ್ನಿಲ್ಲ. ಆಮೇಲೆ ನನ್ ಹತ್ರ ಬಂದು ಹೆಂಗೂ ಇದ್ಯೆ ಗೊತ್ತು, ಒಂದಷ್ಟು ದುಡ್ಡು ಮಾಡೋ ದಾರಿ ಹುಡ್ಕೋಣ ಅಂತಾರೆ. ಆದ್ರೆ ಜೀವ್ನದಲ್ಲಿ ನಂದಲ್ಲದ ದುಡ್ಡು ಮಾಡೋಕೆ ಹೋಗಿ ಕೈ ಸುಟ್ಟಿಕೊಂಡಿದ್ದು ಸಾಕಾಗಿದೆ. ಅದೇನ್ ಕತೆ ಅಂತ ಆಮೇಲ್ ಹೇಳ್ತಿನಿ...ಈಗೇನಿದ್ರು ಕೈಗೆ ಬಂದಿದ್ದು ಬಾಯಿಗೆ ಅಷ್ಟೆ. ನಂದು ಅಂತ ಆ ಅಲ್ಲಾ ಏನ್ ಕೊಡ್ತಾನೋ ಅಷ್ಟರಲ್ಲಿ ಬದ್ಕೋದು ಅಷ್ಟೆಯಾ.

ನಂಗೀಗ ನಲವತ್ತೈದು ವರ್ಸ ಆತು. ನಾಕು ಮಕ್ಳಿದಾರೆ. ದೊಡ್ಡವಳು ಫಸ್ಟ್ ಪಿಯುಸಿ ಓದ್ತಿದ್ದಾಳೆ. ಉಳಿದವ್ರ ಗಂಡು ಮಕ್ಳು. ಅವ್ರಲ್ಲಿ ಇಬ್ರು ಹೈಸ್ಕೂಲು ಓದ್ತಿದ್ದಾರೆ. ಇನ್ನೊಬ್ಬ ನನ್ ಜತೆ ಕಸ್ಬು ಕಲೀಯಾಕೆ ಬಂದಿದ್ದಾನೆ. ಮನೆಲಿ ಒಬ್ರಾದ್ರೂ ಇದನ್ನ ಕಲೀಲಿಲ್ಲಾ ಅಂದ್ರ ನಾನ್ ಸತ್ತ ಮೇಲೆ ಯಾರು ಇಲ್ದಂಗೆ ಆಗ್ದೆ ಇರ‌್ಲಿ ಅಂತ ಒಬ್ಬನ್ನ ಅಂಗಡಿಲಿ ಬಿಡ್ಕೊಂಡಿವ್ನಿ.

ಜೀವ್ನ ಹಿಂಗೆ ಯಾರ್ ತಂಟೆಗೆ ಹೋಗ್ದೆ ನಮ್ ತಂಟೆಗೆ ಯಾರೂ ಬರ‌್ದೆ ಸಾಗ್ತಾ ಇದೆ. ಆದ್ರೂ ಒಂದೊಂದ್ಸಾರಿ ಎಂಥ ಕತೇನೊ ಏನೋ ಅಂತ ಅನ್ಸುತ್ತೆ. ಕೆಲ್ಸ ವರ್ಸ ಹಿಂದೆ ನಮ್ ಓಣಿಲಿ ಹಿಂದೂ ಮುಸ್ಲಿಂ ಗಲಾಟೆ ಆಗಿತ್ತು. ಆಗ ಇವ್ರೆಲ್ಲಾ ಯಾಕೆ ಹಿಂಗಾಡ್ತಾರೆ ಅಂತ ಬೇಜಾರಾಗಿತ್ತು. ಹೊಟ್ಟೆ ತುಂಬಿದೋರು ಏನಾದ್ರೂ ಮಾಡ್ತಾರೆ. ನಮ್ ತರದೋರಿಗೆ ದಿನದ್ ದುಡಿಮೆ ಮಾಡ್ಕೊಂಡ್ರೆ ಸಾಕಾಗಿರುತ್ತೆ. ಕೊನೆಗೆ ಗಲಾಟೆ ಜೋರಾಗಿ ಎಲ್ರೂ ಓಣಿ ಬಿಟ್ ಹೋಗ್ಬಿಟ್ರು. ನಾನು ಮಾತ್ರ ಹೋಗ್ನಿಲ್ಲ. ಹೋಗೋಕೆ ಏಲ್ಲೂ ಜಾಗ ಇರ‌್ಲೂ ಇಲ್ಲ ಅನ್ನಿ. ಈಗ ಮತ್ತೆ ಬದುಕು ಪಸಂದಾಗಿ ಓಡ್ತಿದೆ. ಮತ್ತೆ ಯಾವತ್ತು ಏನಾಗುತ್ತೊ ಅಂತ ಭಯ ಆಗುತ್ತೆ. ಮಕ್ಳು ಒಳ್ಳೇತನದಲ್ಲಿ ಬೆಳ್ದು ದೊಡ್ಡೋರಾದ್ರೆ ಸಾಕು ಅಂತ ಅಲ್ಲಾನತ್ರ ಕೇಳ್ಕೊಳ್ಳೊದು.

ಒಂದೊಂದು ಸಾರಿ ದುಡ್ಮೆ ಸಾಕಾಗ್ದೆ ಇರೋ ಟೈಮಲ್ಲಿ ಏನಾದ್ರು ಮೇಲ್ ದುಡಿಮೆ ಇದ್ರೆ ಸಾಕು ಅಂತ ಯೋಚ್ನೆ ಮಾಡಿದ್ದಿದೆ. ಆದ್ರೆ ಅದೇ ಹೇಳಿದ್ನಲ್ಲ ಒಂದ್ಸಾರಿ ಕೈ ಸುಟ್‌ಕೊಂಡ ಮೇಲೆ ಮತ್ತೆ ಅಂತ ಕೆಲ್ಸಕ್ಕೆ ಕೈ ಹಾಕ್ಬಾರ್ದು ಅಂತ ಸುಮ್ಮನಿದೀನಿ. ಏನಾತು ಅಂದ್ರೆ, ಮನೆಲೀ ಕಷ್ಟ. ಮಕ್ಳು ಬೇರೆ ಬೆಳೀತಿದ್ವು. ದಿನಾ ನೂರು ಕಂಡ್ರೆ ಹೆಚ್ಚು. ಇದ್ದಿದ್ರಲ್ಲೆ ಸ್ವಲ್ಪ ದುಡ್ಡು ಉಳ್ಸಿಕೊಂಡಿದ್ವಿ. ಅದನ್ನ ಬಡ್ಡಿಗೆ ಅಂತ ಗೊತ್ತಿರೋರಿಗೆ ಕೊಟ್ಟಿದ್ವಿ. ಬಡ್ಡಿ ದುಡ್ಡಿ ತಿಂಗಳ ತಿಂಗಳ ಬಂದ್ರ ಹೆಂಗೊ ಬದ್ಕು ನಡೀತದೆ ಅಂತ ನಮ್ ಐಡಿಯಾ. ಆದ್ರೆ ಆ ಅಲ್ಲಾ ಮೆಚ್ನಿಲ್ಲಾ ಸಾಬ್. ಸಾಲ ಕೊಟ್ಟೋರು ಕೈ ಎತ್ತಿದ್ರು. ಕೊನೆಗೆ ನಮ್ ತಲೆ ಮೇಲೆ ಒಂದಷ್ಟು ಸಾಲ ಆಗೋಯ್ತು. ಅದನ್ ತೀರ‌್ಸೋಕೆ ಹೆಂಡ್ತಿ ಒಡ್ವೆ ಅಡ ಇಟ್ಟೆ. ಹಿಂಗೆ ಕಷ್ಟಗಳ ಕಷ್ಟ ಬಿದ್ದು ಬಿದ್ದು ಬಂತು. ಅಲ್ಲಾಗೆ ಪಸಂದ್ ಆಗ್ದೆ ಇರೋ ಕೆಲ್ಸ ಮಾಡೋಕೊಗಿ ಹಿಂಗಾಯ್ತು ಅಂದ್ಕೊಂಡು ಸುಮ್ನಾದೆ.

ಹಿಂಗಾಗಿ ಈಗ ಯಾರೇ ಗಿಲೀಟು ಮಾಡೋಣ ಬಾ ಅಂದ್ರೂ ಹೋಗೊನಿಲ್ಲ. ನಂದು ದುಡ್ಮೆ, ಕಸ್ಬು ನೋಡ್ಕೊಂಡು ಇರೋದು ಅಷ್ಟೆಯಾ. ಮನೆ ಕಡೆಲೂ ಅಷ್ಟೆ, ಹೆಂಡ್ತಿ ಬೀಡಿ ಕಟ್ತಾಳೆ, ಟೈಲರಿಂಗ್ ಮಾಡ್ತಾಳೆ. ಮಕ್ಳು ಚೆಂದ ಓದಿದ್ರೆ ಸಾಕು ಅಂತ ಅಲ್ಲಾ ಹತ್ರ ಕೇಳ್ಕೊಳ್ಳೊದು. ನಮ್ ನಸೀಬು ಎಲ್ಲಿದೆಯೊ ಅದ್ನ ಮಾಡ್ಕೊಂಡಿರೋದೆ ಸುಖ ಅಲ್ವಾ?'

ತಸ್ಲಿಮಾ ನಸ್ರೀನ್ : ಒಂಟಿ ಹಕ್ಕಿಯ ತುಡಿತ

ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್
ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಅವರಿಗೆ ಒಂಟಿತನ ಕಾಡುತ್ತಿದೆಯಂತೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಸರ್ಕಾರದ ನಿರ್ಬಂಧ ಅವರ ಮೇಲಿದೆ. ಒಂಟಿ, ಅಜ್ಞಾತ ಬದುಕಿನಿಂದ ರೋಸಿ ಹೋದ ಅವರು ಅಜ್ಞಾತ ಬದುಕಿಗೆ ಮುಕ್ತಿ ಹಾಡಿ ತಮ್ಮ ಇಷ್ಟದ ಊರುಗಳಾದ ಕೋಲ್ಕತ್ತ ಅಥವಾ ಪಶ್ಚಿಮ ಬಂಗಾಳದಲ್ಲಿ ನೆಲೆಸಲು ಸರ್ಕಾರದ ಅನುಮತಿ ಕೋರಿದ್ದಾರೆ.

“ಲಜ್ಜಾ” ಕಾದಂಬರಿಯ ವಿವಾದದಿಂದಾಗಿ ಮಹಿಳೆಯರೇ ಪ್ರಧಾನಮಂತ್ರಿಗಳಾಗಿರುವ ಬಾಂಗ್ಲಾದೇಶದಿಂದ ಹೊರಹಾಕಲ್ಪಟ್ಟ ತಸ್ಲೀಮಾ, (ಜನನ 1963) ಭಾರತದ ಆಶ್ರಯ ಪಡೆದು ಕೋಲ್ಕತ್ತದಲ್ಲಿ ವಾಸಿಸುತ್ತಿದ್ದರು. 2007 ರಲ್ಲಿ ಮೂಲಭೂತವಾದಿಗಳ ಪ್ರತಿಭಟನೆಯ ಕಾರಣಕ್ಕಾಗಿ ಅವರು ಐದು ವರ್ಷಗಳಿಂದ ದೆಹಲಿಯಲ್ಲಿ ಅಜ್ಞಾತ ಬದುಕು ನಡೆಸಿದ್ದಾರೆ.


ಸಾಂಪ್ರದಾಯಿಕ ಲೋಕದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡುವ ಈ ಲೇಖಕಿಯ ಬರಹಗಳೆಲ್ಲ ವಿವಾದಾತ್ಮಕ.  ತನ್ನ ಮೇಲಾದ ಅನ್ಯಾಯ, ಅತ್ಯಾಚಾರಗಳ ಬಗ್ಗೆ ಯಾವುದೇ ಮುಜುಗರವಿಲ್ಲದೆ, ಧೈರ್ಯದಿಂದ ಹೇಳಿಕೊಂಡಿದ್ದೇ ಅವರ ವಿರುದ್ಧ ಎಲ್ಲರೂ ಕಿಡಿಯಾಗಲು ಕಾರಣವಾಗಿದೆ.


ಮೊದಲಿಗೆ ತಸ್ಲಿಮಾ ಕವಯತ್ರಿಯಾಗಿಯೇ ಖ್ಯಾತಿ. ನಂತರ ಪತ್ರಕರ್ತೆಯಾಗಿ, ಅಂಕಣ ಬರಹಗಾರ್ತಿಯಾಗಿ, ಲೇಖಕಿಯಾಗಿ ಹೊರಹೊಮ್ಮಿದರು. “ಲಜ್ಜಾ” ಕಾದಂಬರಿಯಲ್ಲಿ ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮೇಲೆ ಅಲ್ಲಿಯ ಬಹುಸಂಖ್ಯಾತರಿಂದ ನಡೆಯುವ ದೌರ್ಜನ್ಯಗಳ ವರ್ಣನೆ ಇದೆ.


ಬಾಂಗ್ಲಾದ ಶೇಖ್ ಹಸೀನಾರವರ ಸರ್ಕಾರ ಇವರ `ಅಮರ್ ಮೆಯೇ ಬೆಲಾ` ಕೃತಿಯನ್ನು 1999ರಲ್ಲಿ  ನಿರ್ಬಂಧಿಸಿತು. ನಂತರ 2000 ರಲ್ಲಿ “ಲಜ್ಜಾ” ಹಾಗೂ “ಉತಾಲ್ ಹವಾ”ಗಳನ್ನು ನಿಷೇಧಿಸಿತು. ಲೈಂಗಿಕ ವಿವಾದಕ್ಕಾಗಿ `ಕಾ` ಎನ್ನುವ ಕೃತಿಯನ್ನು ಬಾಂಗ್ಲಾ ಹೈಕೋರ್ಟ್ ನಿಷೇಧಿಸಿತು.


2003 ರಲ್ಲಿ `ದ್ವಿ ಖಂಡಿತಾ` ಕೃತಿಯನ್ನು ಬಾಂಗ್ಲಾ ಸರ್ಕಾರ ಮತ್ತು ಪಶ್ಚಿಮ ಬಂಗಾಳದ ಹೈಕೋರ್ಟ್‌ಗಳು ನಿಷೇಧಿಸಿದವು. 2004 ರಲ್ಲಿ ಪ್ರಕಟವಾದ “ಸುಖ ಅಂಧಲಾಕರ”ನ್ನು ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಸರ್ಕಾರ ನಿಷೇಧಿಸಿತು. ಇವರ ವಿರುದ್ಧ ಮೂಲಭೂತವಾದಿಗಳು ಫತ್ವಾ ಹೊರಡಿಸಿದರು. ಏಕ ಕಾಲಕ್ಕೆ ಅವರು ಅನೇಕ ಮೂಲಭೂತವಾದಿ ಸಂಪ್ರದಾಯಬದ್ಧ ರಾಷ್ಟ್ರಗಳಿಂದಲೂ ಬಹಿಷ್ಕೃತರಾಗಿ ಅಜ್ಞಾತವಾಸಿಯಾಗಿದ್ದಾರೆ.


ಇವರ ವಿವಾದಿತ ಕೃತಿಗಳು:
`ದುಃಖಿತ ಮಹಿಳೆ` (1993), `ಪುಟ್ಟ ಪುಟ್ಟ ದುಃಖದ ಕತೆಗಳು` (1994), ಇವರ ಕಾದಂಬರಿ `ವಿರೋಧ್` (1992), `ಪ್ರತೀಕಾರ` (1992), `ಸಂಶೋಧನೆ` (1993), `ಲಜ್ಜಾ`(1993), `ಫೇರಾ` (1993), `ಅವನಿಗೆ ರಹಸ್ಯ ಹೇಳು`(1994) `ಫ್ರೆಂಚ್ ಪ್ರೇಮಿ` (2002), ಹಾಗೂ ಆತ್ಮಚರಿತ್ರೆಯ ಭಾಗಗಳಾದ `ನನ್ನ ಹುಡುಗಿತನ`(1999), `ಉತಾಲ್ ಹವಾ`(2000), `ದ್ವಿಖಂಡಿತೋ` (ಎರಡಾಗಿ ವಿಭಾಗ) (2003), `ಮಾತಾಡು`(2003), `ಆ ಕತ್ತಲ ರಾತ್ರಿಗಳು` (2004), `ನಾನು ಚೆನ್ನಾಗಿಲ್ಲ ಆದರೆ ನೀವು ನನ್ನ ದೇಶವನ್ನು ಚೆನ್ನಾಗಿ ಕಟ್ಟಿರಿ` (2006) ರಲ್ಲಿ ಪ್ರಕಟವಾದವು. ತಮ್ಮ ಬರಹಗಳಲ್ಲಿ ಹೆಣ್ಣಾಗಿ ಅನುಭವಿಸಿದ ಲೈಂಗಿಕ ದೌರ್ಜನ್ಯಗಳನ್ನು ನಿರ್ಭಿಡೆಯಿಂದ ಹೇಳಿಕೊಂಡಿದ್ದಾರೆ. ಹೆಣ್ಣಿನ ಮೇಲಾಗುವ ಅನ್ಯಾಯದ ಬಗ್ಗೆ ಆಕ್ರೋಶ ಹೊಂದಿದ್ದಾರೆ.
 ಅವರ ಕಾವ್ಯ ಅಶ್ಲೀಲವಾಗಿದೆ ಎಂದು ಅನೇಕ ಸಂಪ್ರದಾಯವಾದಿ ರಾಷ್ಟ್ರಗಳು ಅವರ ಕವಿತೆಗಳ ಮೇಲೆಯೂ ಬಹಿಷ್ಕಾರ ಹೇರಿದವು. ಅವರ ಕವಿತೆಗಳೆಲ್ಲ ಸ್ವಂತ ಬದುಕಿನ ಅನುಭವಗಳೇ. ಮಡಿವಂತ ಮನಸುಗಳಿಗೆ ಕಿರಿಕಿರಿಯಾಗುವ ಸಾಲುಗಳೇ ಹೆಚ್ಚು. ಇವರ ಕಾವ್ಯ ಲಿಂಗ ಸಮಾನತೆ ಪ್ರತಿಪಾದಿಸುತ್ತದೆ.
 “ಒಂದು ಕಥೆ” ಕವಿತೆಯಲ್ಲಿ ಪತಿ ಯಾವ ಯಾವ ಕಾರಣಕ್ಕಾಗಿ ತಲಾಖ್ ನೀಡಬಲ್ಲ ಎಂಬುದನ್ನು ವಿವರಿಸುತ್ತಾ: “ಆಕೆ ಹೆಣ್ಣು ಹಡೆದಳೆಂದು, ಈಕೆ  ಬಂಜೆಯೆಂದು ಮೂರನೆಯವಳಿಗೂ ತಲಾಖ್ ಹೇಳಿದ್ದಾನೆ . ಸಾಕಷ್ಟು ವರದಕ್ಷಿಣೆ ತರಲಿಲ್ಲವೆಂದು ನಾಲ್ಕನೆಯವಳಿಗೆ ಮುಖ ನೋಡದೆಯೇ ಹೊಡೆಯುತ್ತಾನೆ.

ಮಿರ್ಚಿಗಾಗಿ ಅಥವಾ ಉಳ್ಳಾಗಡ್ಡಿ, ಉಪ್ಪಿಗಾಗಿ” ಎಂದು ಹೇಳುವಲ್ಲಿ ಕೌಟುಂಬಿಕ ಹಿಂಸೆಯ ಬಗ್ಗೆ ನೋವು ವ್ಯಕ್ತಪಡಿಸುತ್ತಾರೆ. ಇವರ ಸಮಾನತೆಯ ತತ್ವ ಒಪ್ಪಿಕೊಳ್ಳಬಹುದು, “ನನಗೆ ಗೊತ್ತಿಲ್ಲ” “ಉಲ್ಟಾ ಆಟ” “ಮುಟ್ಟಿದರೆ ಮುನಿ” “ಹೆಣ್ಣು” ಕವಿತೆಗಳು ದಿಟ್ಟತನದಿಂದ ಕೂಡಿವೆ.

ಒಬ್ಬ ಮಹಿಳೆ ತನ್ನ ಆತ್ಮ ಚರಿತ್ರೆಯನ್ನು ಬರೆಯಲು ಬಹಳ ಧೈರ್ಯಬೇಕು. ಮಹಿಳೆಯರ ಜೀವನಾನುಭವಗಳು ಪುರುಷರಿಗಿಂತ ಭಿನ್ನ. ಆತ್ಮಕಥನ ತಸ್ಲಿಮಾರನ್ನು ಹೆಚ್ಚು ವಿವಾದಕ್ಕೊಳಪಡಿಸಿವೆ.  ಒಂಟಿ ನೋವಿನ, ತಲ್ಲಣದ ಕ್ಷಣಗಳು ಸಹನಾತೀತ. ತಸ್ಲಿಮಾರವರ ಒಂಟಿತನಕ್ಕೆ ಕೊನೆ ಎಂದು?  ಕೊನೆಯಾಗಲಿ

ಅಂಬೇಡ್ಕರ್ ವಾದಿಗಳು ಯಾರು? ಎದುರಿಸುತ್ತಿರುವ ಬಿಕ್ಕಟ್ಟುಗಳು ಯಾವುವು?


 
ಡಾ. ಆನಂದ್ ತೇಲ್ತುಂಬ್ಡೆ
ಅನು : ಡಾ .ಎಚ್ .ಎಸ್ . ಅನುಪಮಾ 
 

Anupama in shimoga.JPGಬೆಂಗಳೂರಿನ ಸ್ಫೂರ್ತಿಧಾಮದಲ್ಲಿ ಡಾ. ಆನಂದ್ ತೇಲ್ತುಂಬ್ಡೆ ೨೦೧೧ರ ಏಪ್ರಿಲ್ ೧೪ಕ್ಕೆ ಮಾಡಿದ ಅಂಬೇಡ್ಕರ್ ಸ್ಮರಣಾರ್ಥ ಉಪನ್ಯಾಸದ ಬರಹ ರೂಪ.

 
(- ಮುಂದುವರೆದ ಭಾಗ .. 3)
 
ಸರ್ಕಾರೇತರ ಸಂಸ್ಥೆಗಳು

೧೯೮೦ರ ಈಚೆಗೆ ವಿಶ್ವಾದ್ಯಂತ ಸರ್ಕಾರೇತರ ಸಂಘಸಂಸ್ಥೆಗಳು ಆಡಳಿತ ವ್ಯವಸ್ಥೆಯಲ್ಲಿ ಪಾಲು ಪಡೆದಿವೆ. ‘ವಾಷಿಂಗ್ಟನ್ ಕನ್ಸೆನ್ಸಸ್’ ಪ್ರಕಾರ ಜಾಗತಿಕ ಬಂಡವಾಳಶಾಹಿಗಳ ನೀತಿಯ ಫಲವಾಗಿ ರಾಷ್ಟ್ರಗಳು ತಮ್ಮ ಕಲ್ಯಾಣ ಕಾರ್ಯಕ್ರಮಗಳನ್ನು, ಆರ್ಥಿಕ ಯೋಜನೆಗಳನ್ನು, ಮಾರುಕಟ್ಟೆಗೆ ಪೂರಕವಾಗುವ ಕೆಲವು ಪಾರಂಪರಿಕ ಕ್ಷೇತ್ರಗಳನ್ನು ಕೈಬಿಟ್ಟವು. ಇದರಿಂದ ತೊಂದರೆಗೊಳಗಾದ ಜನರ ಸಮಸ್ಯೆಗಳಿಗೆ ಪರಿಹಾರಾತ್ಮಕವಾಗಿ ಕೆಲಸ ಮಾಡುವ ಉದ್ದೇಶದಿಂದ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳು ಶುರುವಾದವು. ಮೇಲಿನ ಕ್ರಮಗಳಿಂದ ದಲಿತರು ಸಹಜವಾಗಿಯೇ ತುಂಬ ತೊಂದರೆಗೊಳಗಾಗಿದ್ದರು. ಎಂದೇ ಅವರ ನಡುವೆ ಕೆಲಸ ಮಾಡಲು ವಿವಿಧೋದ್ದೇಶ ಹೊತ್ತ ಎನ್‌ಜಿಒಗಳ ಅವಶ್ಯಕತೆಯಿತ್ತು. ಲೆಕ್ಕವಿಲ್ಲದಷ್ಟು ಎನ್‌ಜಿಒಗಳು ತಲೆಯೆತ್ತಿ ಇಡೀ ದಲಿತ ಚಳುವಳಿಯನ್ನೇ ಆವರಿಸಿದವು. ಒಂದು ರೀತಿ ಹೇಳಬೇಕೆಂದರೆ ದಲಿತ ಚಳುವಳಿ ಎನ್‌ಜಿಒಕರಣಕ್ಕೊಳಗಾಯಿತು. ಕೆಲವು ಎನ್‌ಜಿಒಗಳು ನಿರ್ದಿಷ್ಟ ವಿಷಯಗಳ ಕುರಿತು ವೃತ್ತಿಪರವಾಗಿ ಕೆಲಸ ಮಾಡಿ ಸಮಾಜಸೇವೆ ಮಾಡಬಯಸುವ ತರುಣ ಪೀಳಿಗೆಯನ್ನು ತೊಡಗಿಸಿಕೊಂಡಿತು. ಸುಳ್ಳು ಆಶ್ವಾಸನೆಗಳ ದಲಿತ ನಾಯಕರಿಗಿಂತ ಸಾಮಾನ್ಯ ದಲಿತರಿಗೆ ಇವೇ ಆಪ್ತವಾದವು. ಆದರೆ ದಲಿತರಿಗೆ ಅವರ ಸಮಸ್ಯೆಗಳ ಕುರಿತು ಒಂದು ಸಮಗ್ರ ಮಾಹಿತಿ ನೀಡುವ ಬದಲು ಸಮಸ್ಯೆ-ಕಾರಣ-ಪರಿಹಾರ ಎಲ್ಲವನ್ನು ತುಂಡುತುಂಡಾಗಿ ನೋಡುವುದನ್ನು ಇವು ಕಲಿಸಿದವು. ಅಂಥ ಬಹಳಷ್ಟು ಎನ್‌ಜಿಒಗಳು ಅಂಬೇಡ್ಕರ್‌ವಾದದ ಮೇಲೆ ನಡೆಯುತ್ತ ತಮ್ಮನ್ನು ಅಂಬೇಡ್ಕರ್‌ವಾದಿಗಳೆಂದು ಕರೆದುಕೊಳ್ಳುತ್ತವೆ.

ಚಳುವಳಿಗಾರರು ಮತ್ತು ಬುದ್ಧಿಜೀವಿಗಳು

ಇವರೆಲ್ಲ ಅಲ್ಲದೆ ಮೇಲೆ ಹೇಳಿದ ಯಾವುದೇ ಸಂಘಟನೆಯಲ್ಲಿಲ್ಲದಿದ್ದರೂ ಸಾಮಾಜಿಕವಾಗಿ ಕ್ರಿಯಾಶೀಲರಾಗಿರುವ ಎಷ್ಟೋ ವ್ಯಕ್ತಿಗಳಿದ್ದಾರೆ. ತಮ್ಮ ಬೌದ್ಧಿಕ ನಿಲುವುಗಳ ಕಾರಣದಿಂದ ಕೆಲ ಮಟ್ಟಿಗಿನ ಮನ್ನಣೆ ಅವರಿಗೆ ಸಿಕ್ಕಿದೆ. ಸೆಮಿನಾರು, ಸಮ್ಮೇಳನ, ಸಭೆ, ಸಮಾಲೋಚನಾ ಕೂಟಗಳಲ್ಲಿ ಅವರನ್ನು ನೋಡಬಹುದು. ಅವರ ನಿಲುವುಗಳು ವೈಯಕ್ತಿಕವಾದರೂ ಅಂಬೇಡ್ಕರ್‌ವಾದಿಗಳು ಎಂದೇ ಕರೆದುಕೊಳ್ಳುತ್ತಾರೆ.

ಜನಸಾಮಾನ್ಯರು   

ಜನಸಾಮಾನ್ಯರೂ ಕೂಡಾ ತಮ್ಮನ್ನು ಅಂಬೇಡ್ಕರ್‌ವಾದಿ ಎಂದು ಕರೆದುಕೊಳ್ಳವವರಿದ್ದಾರೆ.

ಒಟ್ಟಾರೆಯಾಗಿ, ಗಾಬರಿ ಹುಟ್ಟಿಸುವ ಈ ಚಿತ್ರಣದತ್ತ ಒಮ್ಮೆ ವಿಮರ್ಶಾತ್ಮಕವಾಗಿ ಕಣ್ಣು ಹಾಯಿಸಿದರೆ ಒಂದಂತೂ ನಿಚ್ಚಳವಾಗಿ ಹೊಳೆಯುತ್ತದೆ. ಈ ಗುಂಪುಗಳ ಒಳಗಾಗಲೀ ಅಥವಾ ಗುಂಪುಗುಂಪುಗಳ ನಡುವೆಯಾಗಲೀ ಯಾವುದೇ ಸಮನ್ವಯವಿಲ್ಲ. ಸಿದ್ಧಾಂತವೊಂದರ ಎರಡೂ ತುದಿಗಳನ್ನು ಪ್ರತಿನಿಧಿಸುವಂಥವರು ಅಂಬೇಡ್ಕರ್‌ವಾದಿಗಳಲ್ಲಿದ್ದಾರೆ. ಇವರಲ್ಲಿ ಬಹಳಷ್ಟು ಜನ ಅಂಬೇಡ್ಕರ್ ಅವರನ್ನು ಮೇಲುಮೇಲೆ ಓದಿದವರು. ಆಳ ಜ್ಞಾನ ಹೊಂದಿದವರಲ್ಲ. ಬಹಳಷ್ಟು ಜನ ತಮ್ಮ ಸಂಕುಚಿತ ಮತ್ತು ತಾತ್ಕಾಲಿಕ ಲಾಭಕ್ಕಾಗಿ ತೋರಿಕೆಯ ಕಾಳಜಿ ಹೊಂದಿರುವವರು. ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತೂ ಅವರಿಗೆ ಅರಿವಿಲ್ಲ. ಇದೆಲ್ಲ ಸ್ಪಷ್ಟಪಡಿಸುವುದೇನೆಂದರೆ ಅಂಬೇಡ್ಕರ್‌ವಾದಿ ಅಸ್ಮಿತೆ ಎಂದು ಯಾವುದು ಸಾಮಾನ್ಯ ಭಾಷೆಯಲ್ಲಿ ಜನಪ್ರಿಯವಾಗಿದೆಯೋ ಅದು ಅಂಬೇಡ್ಕರರ ತಾತ್ವಿಕತೆ ಅಥವಾ ಸಿದ್ಧಾಂತದ ಮೂಲಾಧಾರ ಪಡೆದಿರುವುದಕ್ಕಿಂತ ಹೆಚ್ಚು ತನ್ನ ಜಾತಿ ಗುರುತಿನ ಆಧಾರವನ್ನು ನೆಚ್ಚಿಕೊಂಡಿದೆ. ಸಾಮಾನ್ಯವಾಗಿ ಅಂಬೇಡ್ಕರ್‌ವಾದಿ ಎಂದರೆ ಸಾಮಾಜಿಕ ಸ್ಥಾನಮಾನಕ್ಕಾಗಿ ಮೇಲ್ಜಾತಿಗಳ ದಬ್ಬಾಳಿಕೆ ವಿರುದ್ಧ ಹೋರಾಡುತ್ತಿರುವ ಜಾತಿಯಲ್ಲಿ ಹುಟ್ಟಿದವನು ಎಂದು ವ್ಯಾಖ್ಯಾನಿಸಲಾಗುತ್ತದೆ. ಉದಾಹರಣೆಗೆ ಮಹಾರಾಷ್ಟ್ರದ ಎಲ್ಲ ಮಹಾರರು, ಆಂಧ್ರದ ಮಾಲರು, ಕರ್ನಾಟಕದ ಹೊಲೆಯರು, ತಮಿಳುನಾಡಿನ ಪರಯ್ಯಾಗಳು, ಉತ್ತರ ಪ್ರದೇಶದ ಚಮಾರ್/ಜಾಟವ್ ಸಮುದಾಯದವರು, ಗುಜರಾತಿನ ವಂಕಾರರು ಮತ್ತು ಹೀಗೇ ಇನ್ನೂ ಅನೇಕರು ತಾವು ಮಾಡುವ ಕ್ರಿಯೆಗಳಿಗೆ ಸಂಬಂಧವೇ ಇಲ್ಲದಿದ್ದರೂ ಹುಟ್ಟಿನಿಂದ ತಂತಾನೇ ಅಂಬೇಡ್ಕರ್‌ವಾದಿಗಳಾಗಿದ್ದಾರೆ. ದುಃಖ ಮತ್ತು ಗಾಬರಿಯ ವಿಷಯವೇನೆಂದರೆ ಇದು ಜಾತಿಗೊಂದು ಸೌಮ್ಯವಾದ ತತ್ಸಮಾನ ಹೆಸರಾಗಿ ಬಳಕೆಯಾಗಿ ‘ದಲಿತ’ ಎಂಬ ಪದಕ್ಕಿಂತ ಸಂಕುಚಿತವಾಗಿರುವುದು.

ಅಂಬೇಡ್ಕರ್‌ವಾದಿಗಳು ಎದುರಿಸುತ್ತಿರುವ ಬಿಕ್ಕಟ್ಟು
   
ಮೇಲೆ ಹೇಳಿದ ಪ್ರತಿಯೊಬ್ಬ ಅಂಬೇಡ್ಕರ್‌ವಾದಿಯೂ ತಮಗೆ ಅರಿವಿದೆಯೋ ಇಲ್ಲವೋ ಕೆಲ ಬಿಕ್ಕಟ್ಟುಗಳನ್ನೆದುರಿಸುತ್ತಿದ್ದಾರೆ.

೧. ಐಡೆಂಟಿಟಿಯ ಬಿಕ್ಕಟ್ಟು

ಯಾವುದೇ ಐಡೆಂಟಿಟಿ ಅಥವಾ ಗುರುತು ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹವನ್ನು ಇತರರಿಂದ ಭಿನ್ನವಾಗಿ ಗುರುತಿಸಲು ಸಹಾಯ ಮಾಡುವಂತಿರಬೇಕು. ಆದರೆ ಹೋಲಿಕೆಯಿಲ್ಲದಂತಹ ಭಿನ್ನ ಗುಂಪುಗಳಲ್ಲಿರುವ ಎಲ್ಲ ತರಹದ ವ್ಯಕ್ತಿಗಳು ಒಂದೇ ಐಡೆಂಟಿಟಿಯನ್ನು ತಮ್ಮದೇ ಎಂದು ಸಾಧಿಸಹೊರಟಾಗ ಬಿಕ್ಕಟ್ಟು ಶುರುವಾಗುತ್ತದೆ. ಬಲಪಂಥೀಯ ಹಿಂದುತ್ವವಾದ ಪ್ರತಿಪಾದಿಸುವ ಬಿಜೆಪಿ ರಾಜಕಾರಣಿ ಅಥವಾ ಭಾಷೆ/ಧರ್ಮ/ಪ್ರಾತ್ಯ/ಜಾತಿ-ಉಪಜಾತಿ ಆಧಾರದ ಮೇಲೆ ಮನುಷ್ಯರನ್ನು ಗುರುತಿಸುತ್ತ ರಾಜಕಾರಣ ಮಾಡುವ ಶಿವಸೇನೆಯನ್ನು; ಒಬಿಸಿ ರೈತನ ಹೊಲದಲ್ಲಿ ಕೆಲಸ ಮಾಡುವ ಭೂಹೀನ ದಲಿತ ಕೂಲಿಕಾರ್ಮಿಕನ ಜೊತೆಗೋ ಅಥವಾ ೮೫%-೧೫% ಲೆಕ್ಕಾಚಾರದ ಆಧಾರದ ಮೇಲೆ ಒಬಿಸಿ ರೈತನನ್ನೂ, ಭೂಹೀನ ದಲಿತನನ್ನೂ ಒಗ್ಗೂಡಿಸಲು ಯತ್ನಿಸುವ ಬಿಎಸ್‌ಪಿ ರಾಜಕಾರಣಿಯ ಜೊತೆಗೋ ಒಟ್ಟಿಗೆ ಇಟ್ಟು ಹೋಲಿಸಬಹುದೇ? ದಲಿತ ಅಧಿಕಾರಿ ಹಾಗೂ ಅವನ ಮನೆಗೆಲಸದವರ ನಡುವೆ ಅಥವಾ ಅಧಿಕಾರಿ ಹಾಗೂ ಅವನು ಹಿಂದೆ ಬಿಟ್ಟು ಬಂದ ಕೇರಿಯವರ ನಡುವೆ ಸಾಮಾನ್ಯ ಅಂಶಗಳು ಬಹಳ ಕಡಿಮೆ ಇವೆ. ಹೀಗೆಯೇ ಮೇಲ್ಕಾಣಿಸಿದ ಭಿನ್ನಭಿನ್ನ ಗುಂಪುಗಳ ಹಿತಾಸಕ್ತಿಗೆ ಅನುಗುಣವಾಗಿ ಏಕಮಾತ್ರ ಅಂಬೇಡ್ಕರ್‌ವಾದಿ ಐಡೆಂಟಿಟಿ ಸಾಧ್ಯವಿಲ್ಲವಾಗಿದೆ. ದಲಿತರ ಒಳಗೇ ಅಂಬೇಡ್ಕರ್ ಐಡೆಂಟಿಟಿ ಬಗ್ಗೆ ಹೆಮ್ಮೆ ಶುರುವಾಗಿದ್ದರೂ ಅವರು ಇತರರೊಂದಿಗಿನ ತಮ್ಮ ಒಡನಾಟದ ವೇಳೆ ಅದನ್ನು ಮುಚ್ಚಿಡಬಯಸುತ್ತಾರೆ. ಅಂಬೇಡ್ಕರ್‌ವಾದಿ ಅಸ್ಮಿತೆಯು ಕೆಳವರ್ಗದ ಅಸ್ಪೃಶ್ಯ ಐಡೆಂಟಿಟಿ ಜೊತೆಗೆ ಸಂಬಂಧ ಹೊಂದಿರುವುದರಿಂದ ಮೇಲ್ಚಲನೆ ಹೊಂದಿರುವ ಎಷ್ಟೋ ದಲಿತರು ತಮ್ಮ ಮನೆತನದ ಹೆಸರುಗಳನ್ನು (ಸರ್ ನೇಮ್) ಬದಲಿಸಿ ಮೇಲ್ಜಾತಿ ಸೂಚಕ ಸರ್‌ನೇಮ್‌ಗಳನ್ನು ಹೊಂದಿದ್ದಾರೆ. ತಮ್ಮ ಜಾತಿ ಗುರುತು ಹೇಳಿಬಿಡಬಹುದೆನ್ನುವ ಕಾರಣಕ್ಕೆ ಅವರು ತಮ್ಮ ಡ್ರಾಯಿಂಗ್ ರೂಮಿನಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವುದಿಲ್ಲ. ಮೇಲ್ಜಾತಿಯವರ ಭಾಷೆ, ನಡವಳಿಕೆ, ಸಂಸ್ಕೃತಿ ಹಾಗೂ ಇನ್ನಿತರ ರೂಢಿ ಆಚರಣೆಗಳನ್ನು ಅನುಸರಿಸಿ ತಮ್ಮ ಜಾತಿ ಗುರುತು ಮುಚ್ಚಿಡುವವರು ಬಹಳಷ್ಟು ಜನ ಇದ್ದಾರೆ. ಮೇಲ್ಚಲನೆ ಪಡೆದ ದಲಿತರ ಈ ವಿವೇಚನಾ ಶೂನ್ಯ ನಡವಳಿಕೆಯೇ ಅವರನ್ನು ಸಾಮಾನ್ಯ ದಲಿತರಿಂದ ಬೇರ್ಪಡಿಸಿ ದೂರ ಇಟ್ಟಿರುವುದು.

೨. ಸೈದ್ಧಾಂತಿಕ ಬಿಕ್ಕಟ್ಟು

 ಅಂಬೇಡ್ಕರ್‌ವಾದಿ ಎನ್ನುವುದು ಸರಳ ಅಸ್ಮಿತೆಯಲ್ಲ, ಆದರೆ ಅದೊಂದು ಸೈದ್ಧಾಂತಿಕ ಐಡೆಂಟಿಟಿ ಎಂದು ಕೆಲವರು ವಾದಿಸಬಹುದು. ಸರಳ ಅಸ್ಮಿತೆಗಿಂತ ಸಂಕೀರ್ಣವಾದ ಸಮಸ್ಯೆಯನ್ನು ಇದು ತಂದೊಡ್ಡುತ್ತದೆ, ಏಕೆಂದರೆ ಆಗ ಅಂಬೇಡ್ಕರ್‌ವಾದಿ ಸಿದ್ಧಾಂತ ಏನೆಂಬ ಪ್ರಶ್ನೆ ಏಳಬಹುದು. ಅಂಬೇಡ್ಕರ್ ತಾತ್ವಿಕತೆ ಜಾತಿ ವಿನಾಶ ಎಂದಾದರೆ ಅದಕ್ಕೆ ವಿರುದ್ಧವಾದ ಅಭಿಪ್ರಾಯ ಹೊಂದಿಯೂ ತಾವು ಅಂಬೇಡ್ಕರ್‌ವಾದಿ ಎಂದುಕೊಳ್ಳುವವರು ಸಾಕಷ್ಟು ಜನರಿದ್ದಾರೆ. ಅವರಂತೂ ತಮ್ಮ ವಾದವನ್ನು ಎಲ್ಲಿಯವರೆಗೆ ಒಯ್ಯುತ್ತಾರೆಂದರೆ ಅಂಬೇಡ್ಕರ್ ಜಾತಿವಿನಾಶ ಬಯಸಿದ್ದರೆನ್ನುವುದನ್ನೇ ನಿರಾಕರಿಸುತ್ತಾರೆ. ಅವರ ಪ್ರಕಾರ ಜಾತಿ ಎಂದೂ ನಾಶವಾಗಲು ಸಾಧ್ಯವಿಲ್ಲ, ಆದ್ದರಿಂದ ಅದನ್ನು ಬಲಗೊಳಿಸುವುದೊಂದೇ ದಾರಿ. ಅದರಲ್ಲೇ ಕೆಲ ಚಾಣಾಕ್ಷರು ತಮ್ಮ ಜಾತಿ ಕುರಿತ ಅಭಿಪ್ರಾಯಗಳನ್ನು ಸಮರ್ಥಿಸಿಕೊಳ್ಳಲು ಮಾರ್ಕ್ಸ್‌ನ ಮಾತುಗಳನ್ನು ಪ್ರಮಾಣವನ್ನಾಗಿ ಬಳಸಿಕೊಳ್ಳುತ್ತಾರೆ. ಅವರು ಹೇಳುವಂತೆ ಜಾತಿಯನ್ನು ಬಲಪಡಿಸುವುದರಿಂದ ಜಾತಿ ವೈರುಧ್ಯಗಳು ಮಾಗುತ್ತ ಬಂದು ಕೊನೆಗೆ ಜಾತಿರಹಿತ ಸಮಾಜ ಉದಯವಾಗುತ್ತದೆ. ‘ದಲಿತ್ ವಾಯ್ಸ್’ ನ ವಿ.ಟಿ.ರಾಜಶೇಖರ್ ಈ ತಾತ್ವಿಕತೆಯ ಮುಖವಾಣಿಯಾಗಿದ್ದಾರೆ. ಮೂಲನಿವಾಸಿಗಳು - ದಲಿತರು, ಆದಿವಾಸಿಗಳು ಹಾಗೂ ಇನ್ನು ಕೆಲ ಜಾತಿಗಳು - ಜನಾಂಗೀಯ ಭಿನ್ನತೆ ಹೊಂದಿದ್ದು ಅವರು ಈ ನೆಲದ ಮೂಲನಿವಾಸಿಗಳೆಂದೂ; ಹಿಂದೂ ಸಾಮಾಜಿಕ ಸಂರಚನೆಯ ಶ್ರೇಣಿಯನ್ನು ತಲೆಕೆಳಗು ಮಾಡಿ ಉಳಿದವರನ್ನು ಎರಡನೆಯ ದರ್ಜೆ ನಾಗರಿಕರನ್ನಾಗಿಸಲು ಯತ್ನಿಸುತ್ತಾರೆಂದೂ ಹೇಳಿಕೊಳ್ಳುತ್ತಾರೆ. ಭಾರತೀಯ ಜಾತಿಗಳು ಜನಾಂಗೀಯ ಆಧಾರವನ್ನು ಹೊಂದಿಲ್ಲವೆಂದು ಅಂಬೇಡ್ಕರ್ ಸ್ಪಷ್ಟವಾಗಿ ತಿಳಿಸಿದ್ದಾಗ್ಯೂ, ಅಂಬೇಡ್ಕರರ ಕನಸು ಸಮಾನತೆ-ಸೋದರತೆ-ಸ್ವಾತಂತ್ರ್ಯದ ಆಧಾರದ ಮೇಲೆ ಸಮಾಜ ಕಟ್ಟುವುದು ಎಂದು ಹೇಳಿದ್ದಾಗ್ಯೂ ಅವರು ಅದಕ್ಕೆ ವ್ಯತಿರಿಕ್ತವಾದ ತತ್ವಗಳನ್ನು ಪ್ರತಿಪಾದಿಸಿ ಅಂಬೇಡ್ಕರ್‌ವಾದಿಗಳಾಗೇ ಮುಂದುವರೆಯುತ್ತಾರೆ. ೧೯೩೮ರಲ್ಲೇ ಅಂಬೇಡ್ಕರ್ ದಲಿತರಿಗೆ ಇಬ್ಬರು ವೈರಿಗಳ ವಿರುದ್ಧ ಹೋರಾಡುವುದು ಅವಶ್ಯವೆಂದು ತಿಳಿಸಿದ್ದರು: ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ. ಆದರೆ ಮೇಲ್ಚಲನೆ ಪಡೆದ ಕೆಲವು ದಲಿತ ಬುದ್ಧಿಜೀವಿಗಳು ದಲಿತ ಬಂಡವಾಳಶಾಹಿಯನ್ನು ಪ್ರೋತ್ಸಾಹಿಸುತ್ತ ದಲಿತ ಬೂರ್ಶ್ವಾಗಳ ಬೆಳವಣಿಗೆಯನ್ನು ಸ್ವಾಗತಿಸುತ್ತಿದ್ದಾರೆ. ಬ್ರಾಹ್ಮಣ್ಯ ಎಂದರೆ ಜಾತಿಯಿಂದ ಬ್ರಾಹ್ಮಣರಾಗಿ ಹುಟ್ಟಿದವರಲ್ಲಷ್ಟೇ ಅಲ್ಲ, ದಲಿತರಲ್ಲೂ ಬ್ರಾಹ್ಮಣರಿದ್ದಾರೆ ಎಂದಿದ್ದರು ಅಂಬೇಡ್ಕರ್. ಈ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸದೇ ಜಾತಿಯಿಂದ ಬ್ರಾಹ್ಮಣರಾಗಿರುವವರನ್ನಷ್ಟೇ ಗುರಿಯಾಗಿಸಿಕೊಳ್ಳಲಾಗಿದೆ. ಅನುಮಾನವೇ ಇಲ್ಲ, ಆಡಳಿತ ಮತ್ತು ಸಮಾಜದ ನೈತಿಕತೆ ದುರ್ಬಲರ ಪರವಾಗಿ ಕೆಲಸ ಮಾಡುವುದೆಂದು ಅಂಬೇಡ್ಕರ್ ಭಾವಿಸಿದ್ದರು. ಆದರೆ ಬಹಳಷ್ಟು ದಲಿತ ಬುದ್ಧಿಜೀವಿಗಳು ಜಾಗತೀಕರಣದ ಸಾಮಾಜಿಕ ವಿಕಾಸವಾದದ ನೀತಿಗಳಿಗೆ ಶರಣಾಗಿ ಬೆಂಬಲಿಸಿದ್ದಾರೆ. ಇತಿಹಾಸದ ಚಲನೆಯಲ್ಲಿ ರೂಪಿಸಲ್ಪಟ್ಟ ತತ್ವಗಳನ್ನು ಒಪ್ಪದೆ, ವಿಷಯಗಳು ಅನಾವರಣಗೊಳ್ಳುತ್ತ ಹೋದ ಹಾಗೆ ಸದ್ಯದ ವಾಸ್ತವದ ಬೆಳಕಿನಲ್ಲಿ ಅಂಬೇಡ್ಕರ್ ಅವನ್ನು ನೋಡಬಯಸುತ್ತಾರೆ. ವಾಸ್ತವವಾದಿಯಾಗಿರಲು ಬಹಳ ಅಗತ್ಯವಾಗಿರುವುದು ವರ್ತಮಾನದ ಬದುಕುವಿಕೆ. ಆದರೆ ಬಹಳಷ್ಟು ಅಂಬೇಡ್ಕರ್‌ವಾದಿಗಳು ತಮ್ಮ ಕಾಲಕ್ಕೆ ತಕ್ಕಂತೆ ಬದುಕಲು ವಿಫಲವಾಗಿದ್ದಾರೆ. ಹಾಗಿಲ್ಲದೇ ಇದ್ದಲ್ಲಿ ಸಮಾಜದ ರಚನಾತ್ಮಕ ಬದಲಾವಣೆಗಳನ್ನು ಗಮನಿಸಿರುತ್ತಿದ್ದರು ಹಾಗೂ ಕೇವಲ ಬ್ರಾಹ್ಮಣ ವಿರೋಧಿ ಆಡಂಬರದ ಮಾತುಗಳನ್ನು ಬಿಟ್ಟಿರುತ್ತಿದ್ದರು. 

ಹೀಗೇ ಹೇಳುತ್ತ ಹೋದರೆ ಸೈದ್ಧಾಂತಿಕ ವೈರುಧ್ಯಗಳು ಲೆಕ್ಕವಿಲ್ಲದಷ್ಟು ಇವೆ ಎನ್ನಬಹುದು. 

೩. ನಾಯಕತ್ವದ ಬಿಕ್ಕಟ್ಟು

ದಲಿತರು ಅಡ್ಡಡ್ಡ ಉದ್ದುದ್ದ ಸೀಳಿಹೋಗಿ, ಸೈದ್ಧಾಂತಿಕವಾಗಿಯೂ ಅಸ್ತವ್ಯಸ್ತವಾಗಿರುವಾಗ ಸಹಜವಾಗಿಯೇ ತಕ್ಕ ನಾಯಕತ್ವ ಇಲ್ಲದ ಬಿಕ್ಕಟ್ಟು ಎದುರಾಗಿದೆ. ಸ್ವಲ್ಪ ಮಟ್ಟಿಗೆ ಈ ಎಲ್ಲ ಬಿಕ್ಕಟ್ಟುಗಳೂ ಅಂತರ್‌ಸಂಬಂಧವುಳ್ಳವು. ಪ್ರತಿ ಸಾಮಾಜಿಕ ಗುಂಪೂ ಭಿನ್ನ ನಾಯಕತ್ವದಲ್ಲಿ ಹಲವು ಬಣಗಳನ್ನು ಹೊಂದಿವೆ. ದಲಿತ ಚಳುವಳಿಯ ನಾಯಕತ್ವದ ಮಾದರಿಯು ಪಾಳೇಗಾರಿಕೆಯ ಸಾಂಸ್ಕೃತಿಕ ದೃಷ್ಟಿಕೋನದ ಮಾದರಿಯಾಗಿದ್ದು ಅದು ಒಬ್ಬ ವ್ಯಕ್ತಿಯನ್ನು ನಾಯಕನನ್ನಾಗಿಸಿ ಅವನ ಸುತ್ತ ಎಲ್ಲವನ್ನು ಬಲಪಡಿಸಲು ಯತ್ನಿಸುತ್ತದೆ. ಒಂದು ಸಮಸ್ಯೆಯ ಕುರಿತು ಹೋರಾಡಲು ಜನರು ಒಂದಾಗಿ ಒಂದು ಸಾಮೂಹಿಕ ನಾಯಕತ್ವ ಹುಟ್ಟಲೆಂದು ಇದು ಬಯಸುವುದಿಲ್ಲ, ಅಂಥ ನಾಯಕತ್ವವನ್ನು ಬೆಳೆಯಗೊಡುವುದಿಲ್ಲ. ಈ ಮಾದರಿಯು ನಾಯಕ ಮತ್ತು ಅವನ ಅನುಯಾಯಿಗಳ ನಡುವೆ ಒಂದು ಅಂತರವನ್ನು ಕಾಯ್ದುಕೊಂಡು ಬರಲು ಸಂಪನ್ಮೂಲ ಗಳಿಸಬೇಕೆಂದು ಸದಾ ಪ್ರಯತ್ನಿಸುತ್ತದೆ. ಅದು ದಲಿತರ ನಡುವಿನಿಂದ ಹುಟ್ಟಿಬರುವುದು ಕಷ್ಟ. ಹೀಗಾಗಿಯೇ ಬಹಳಷ್ಟು ದಲಿತ ನಾಯಕರು ಸಂಪನ್ಮೂಲವನ್ನು ಹೊರಗಿನ ಸಿರಿವಂತರಿಂದ ಪಡೆದುಕೊಳ್ಳಬಯಸುತ್ತಾರೆ. ಸಹಜವಾಗೇ ತಮ್ಮ ದಾನಿಗಳ ಪರವಾಗಿ ಅವರು ಇರುತ್ತಾರೆ. ಎಲ್ಲ ನಾಯಕರೂ ಹೀಗೇ ಎಂದು ನಾನು ಹೇಳಬಯಸುವುದಿಲ್ಲ. ಹಾಗಿರುವುದೂ ಇಲ್ಲ. ಆದರೆ ತಮ್ಮ ಬೆಳವಣಿಗೆಯ ಒಂದಲ್ಲ ಒಂದು ಹಂತದಲ್ಲಿ ಈ ದ್ವಂದ್ವವನ್ನವರು ಎದುರಿಸುತ್ತಾರೆ, ಕೊನೆಗೆ ಸೂಕ್ಷ್ಮವಾಗಿ ತಮ್ಮ ಮೂಲ ಧ್ಯೇಯದಿಂದ ದೂರ ಸರಿಯತೊಡಗುತ್ತಾರೆ. ಇದು ನಾಯಕರಲ್ಲಿ ಒಂದು ಬಗೆಯ ಸ್ವಾರ್ಥವನ್ನು ಬೆಳೆಸಿ ನಾಶವಾಗುವ ಕಡೆಗಿನ ವಿಷವರ್ತುಲದತ್ತ ಅವರನ್ನು ಒಯ್ಯುತ್ತದೆ. ದಲಿತರನ್ನು ಈ ಜವುಗು ಗುಂಡಿಯಿಂದ ಮೇಲೆತ್ತಲು ಇಂಥ ನಾಯಕರೇ ದೊಡ್ಡ ಅಡ್ಡಗಾಲಾಗಿದ್ದಾರೆ.

೪. ರಾಜಕಾರಣದ ಬಿಕ್ಕಟ್ಟು

ದಲಿತರನ್ನು ರಾಜಕಾರಣ ಹಿಡಿದಿಟ್ಟುಕೊಂಡಿದೆ. ಏಕೆಂದರೆ ಇದು ಅಧಿಕಾರ ಹಿಡಿಯುವ ದಾರಿಯೆಂದು ಭಾವಿಸಲಾಗಿದೆ. ಅಂಬೇಡ್ಕರ್ ಹೇಳಿದ ‘ರಾಜಕೀಯ ಅಧಿಕಾರ ಎಲ್ಲ ಸಮಸ್ಯೆಗಳಿಗೆ ಕೀಲಿಕೈ ಇದ್ದಂತೆ’ ಎಂಬ ಮಾತು ದಲಿತರಲ್ಲಿ, ಅವರಲ್ಲೂ ಮೇಲ್ಚಲನೆ ಪಡೆದ ದಲಿತರಲ್ಲಿ ಬಹಳ ಜನಪ್ರಿಯವಾಗಿದೆ. ಈಗ ರಾಜಕೀಯವೆಂದರೆ ರಾಜಕಾರಣದ ಕಾರಿಡಾರುಗಳಿಗೆ ಹೇಗಾದರೂ, ಯಾವ ಮಾರ್ಗ ಬಳಸಿಯಾದರೂ ತಲುಪುವುದು ಎನ್ನುವಲ್ಲಿಗೆ ಬಂದು ನಿಂತಿದೆ. ಎಂದೇ ಅಧಿಕಾರ ಹಿಡಿಯಲು ದಲಿತ ನಾಯಕರು ನಡೆಸುವ ಎಲ್ಲ ಕಸರತ್ತುಗಳೂ ದಲಿತರ ಒಪ್ಪಿಗೆ ಪಡೆದುಕೊಳ್ಳುತ್ತವೆ. ಇಂಥ ನೀತಿಯು ಆಳುವ ವರ್ಗದಿಂದ ಚಾಣಾಕ್ಷವಾಗಿ ಬಳಸಿಕೊಳ್ಳಲ್ಪಟ್ಟಿದೆ ಹಾಗೂ ತನ್ನ ಹಸ್ತಕ್ಷೇಪಕ್ಕೆ ಅಪಾರ ಅವಕಾಶ ಇರಿಸಿಕೊಂಡಿದೆ. ಒಂದು ಕಾಲಕ್ಕೆ ಶಿವಸೇನೆ ಅಂಬೇಡ್ಕರ್‌ವಾದಿ ದಲಿತರನ್ನು ಗುರುತಿಸಿ ದೂರವಿಟ್ಟಿದ್ದು ಬಹಿಷ್ಕಾರದಂತೆ ತೋರುತ್ತಿತ್ತು, ಆದರೆ ಈಗ ಅಲ್ಲ. ಹಲವು ಪ್ರಮುಖ ದಲಿತ ನಾಯಕರು ಅದರೊಳಗೆ ಬಂದು ತಮ್ಮ ಇಮೇಜಿಗೆ ಯಾವುದೇ ಧಕ್ಕೆಯಾಗದಂತೆ ಹೊರನಡೆದಿದ್ದಾರೆ. ಅಂಬೇಡ್ಕರ್‌ವಾದಿಗಳು ಹಾಗೂ ಶಿವಸೇನಾ ನಡುವೆ ಮೈತ್ರಿಯುಂಟಾದಾಗ ಬುದ್ಧಿಜೀವಿಗಳಿಂದ ಗೊಣಗಾಟ ಕೇಳಿಬಂದಿತ್ತು, ಶಿವಶಕ್ತಿ+ಭೀಮಶಕ್ತಿ ಎಂದು. ಆದರೆ ಅದು ಮಹಾರಾಷ್ಟ್ರದ ಸದ್ಯದ ವಾಸ್ತವ ಆಗಿರುವಾಗ ಯಾವ ಸದ್ದೂ ಕೇಳಿಬರುತ್ತಿಲ್ಲ. ಅದಕ್ಕೆ ಬದಲಾಗಿ ಸೆಮಿನಾರುಗಳಲ್ಲಿ, ಬೌದ್ಧಿಕ ಸಭೆಗಳಲ್ಲಿ ಆ ವಿಚಾರ ಕುರಿತು ಚರ್ಚೆ ನಡೆಯತೊಡಗಿ ಅದಕ್ಕೊಂದು ಮಾನ್ಯತೆ ಒದಗಿಸಿಕೊಟ್ಟಿದೆ. ವೈರುಧ್ಯಮಯ ದಾಖಲೆಗಳಿರುವಾಗಲೂ ಸಹಾ, ಬಿಎಸ್‌ಪಿಯ ಇಡೀ ರಾಕಾರಣವೇ ರಾಜಕೀಯ ಅಧಿಕಾರ ದಲಿತರನ್ನು ವಿಮೋಚನೆಯತ್ತ ಒಯ್ಯುತ್ತದೆ ಎಂಬ ಗಟ್ಟಿ ನಂಬಿಕೆಯ ಮೇಲೆ ನಿಂತಿದೆ.  
 
                                                                                                                                                                                          - ಮುಂದುವರೆಯುವುದು
 

Wednesday, November 28, 2012

ಭಯದ ಉರುಳಲ್ಲಿ ಸಾಯುತ್ತಿರುವ ಸ್ವಾತಂತ್ರ್ಯ

ಬಿ. ಶ್ರೀನಿವಾಸ 
ಕಕ್ಕಿಲಾಯ


ಸೌಜನ್ಯ : ವಿಜಯ ಕರ್ನಾಟಕ


ರೋಗ್ಯ ಅಂದರೆ ಸಂಪೂರ್ಣವಾದ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸುಸ್ಥಿತಿ ಎನ್ನುವುದು 1946ರಷ್ಟು ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ವ್ಯಾಖ್ಯಾನ. ಜುಲೈ 28ರಂದು ಮಂಗಳೂರಿನಲ್ಲಿ ತಮ್ಮಷ್ಟಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಜನರ ಮೇಲೆ ದಾಳಿ ನಡೆಸಿದ ಪುಂಡರು ಈ ವ್ಯಾಖ್ಯಾನದ ಕೆನ್ನೆಗೆ ಹೊಡೆದಿದ್ದಾರೆ. ಏಟು ತಿಂದವರು ದೈಹಿಕವಾಗಿಯೂ, ಮಾನಸಿಕವಾಗಿಯೂ ಹಾನಿಗೊಂಡಿದ್ದರೆ, ಇಡೀ ಸಮಾಜದ ಪ್ರಜ್ಞೆಯೇ ಘಾಸಿಗೊಂಡು ನಲುಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಶಾಲಾ ಕಾಲೇಜುಗಳಲ್ಲಿ, ಮಹಾ ಮಳಿಗೆಗಳಲ್ಲಿ, ಹೊಟೇಲುಗಳಲ್ಲಿ, ಮಾತ್ರವಲ್ಲ, ಬಸ್ಸು-ರಿಕ್ಷಾಗಳಲ್ಲೂ ಪುಂಡುಪಡೆಗಳು ಠಳಾಯಿಸುತ್ತಾ ಹುಡುಗ-ಹುಡುಗಿಯರು ಪರಸ್ಪರ ಬೆರೆಯದಂತೆ, ಒಬ್ಬರಲ್ಲೊಬ್ಬರು ಮಾತನಾಡದಂತೆ ಬೆದರಿಕೆಯೊಡ್ಡುತ್ತಿರುವುದು ತೀರಾ ಸಾಮಾನ್ಯವಾಗಿದ್ದು, ಎಲ್ಲರೂ ಭಯದ ನೆರಳಲ್ಲೇ ಬದುಕುವಂತಾಗಿದೆ.
ಇಂತಹ ದಾಳಿಗಳನ್ನು ಪ್ರಚೋದಿಸಿ, ಬಹಿರಂಗವಾಗಿ ಬೆಂಬಲಿಸುವ ಶಕ್ತಿಗಳ ಜೊತೆಗೆ, ಅವನ್ನು ಪರೋಕ್ಷವಾಗಿ ಸಮರ್ಥಿಸುವ ಆಷಾಢಭೂತಿಗಳೂ ಸಾಕಷ್ಟಿದ್ದಾರೆ. ಒಂದು ವಾಕ್ಯದಲ್ಲಿ ದಾಳಿಯನ್ನು ಖಂಡಿಸಿ ಹತ್ತು ವಾಕ್ಯಗಳಲ್ಲಿ ದಾಳಿಗೊಳಗಾದವರಿಗೇ ಬುದ್ಧಿ ಹೇಳುವ ಸ್ವಾಮಿಗಳೂ, ಹುಟ್ಟುಹಬ್ಬಕ್ಕಿದಿರಾಗಿ ಸತ್ಯಾಗ್ರಹಕ್ಕೆ ಆಗ್ರಹಿಸುವ ಋಷಿ-ಮುನಿಗಳೂ, ದಾಳಿಗೊಳಗಾದ ಮಹಿಳೆಯರನ್ನೇ ದೂಷಿಸುವ ಮಹಿಳಾ ಆಯೋಗದವರೂ, ತಮ್ಮ ಮಕ್ಕಳಿಗೆ ಈ ಗುಮ್ಮನನ್ನು ತೋರಿಸುವ ಹೆತ್ತವರೂ, ದಾಳಿಗೊಳಗಾದವರ ಚಾರಿತ್ರ್ಯಹನನ ಮಾಡುವ ಮಾಧ್ಯಮಗಳೂ ಕಾಣಸಿಗುತ್ತಾರೆ. ದಾಳಿಕೋರರ ಕಾರ್ಯತಂತ್ರವು ಸಫಲವಾಗುತ್ತಿರುವುದಕ್ಕೆ ಇವೆಲ್ಲವೂ ಸ್ಪಷ್ಟವಾದ ನಿದರ್ಶನಗಳಾಗಿದ್ದು, ಸತ್ಯ ಸತ್ತು, ಅಪರಾಧಿಗಳು ತಪ್ಪಿಸಿಕೊಳ್ಳುವುದಕ್ಕೆ ನೆರವಾಗುತ್ತವೆ.
ಇಂತಹಾ ದಾಳಿಗಳು ಯಾಕಾಗುತ್ತವೆ? ಅವನ್ನು ನಡೆಸುವವರ ಮನೋಗತವೇನು? ಅಮೆರಿಕಾದ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸಾಂಘಿಕ ವರ್ತನೆಯ ತಜ್ಞರಾದ ಜಾನ್ ಜಾಸ್ಟ್ ಮತ್ತವರ ಸಹೋದ್ಯೋಗಿಗಳು ಮೇ 2003ರಲ್ಲಿ ಸೈಕಾಲಾಜಿಕಲ್ ಬುಲೆಟಿನ್ ಪತ್ರಿಕೆಯಲ್ಲಿ ಬರೆದ ಸಾಮಾಜಿಕ ಗ್ರಹಿಕೆಯ ಪ್ರಚೋದನೆಯಾಗಿ ರಾಜಕೀಯ ಸಾಂಪ್ರದಾಯಿಕತೆ’ ಎನ್ನುವ ಲೇಖನವು ಬಲಪಂಥೀಯ ಮೂಲಭೂತವಾದಿಗಳ ಮನದೊಳಕ್ಕೆ ಒಳ್ಳೆಯ ಇಣುಕು ನೋಟವನ್ನು ನೀಡುತ್ತದೆ. ಅವರೆನ್ನುವಂತೆ, ಬಲಪಂಥೀಯ ಸಂಪ್ರದಾಯವಾದಿಗಳಲ್ಲಿ ಸಾವಿನ ಭಯ, ಆಕ್ರಮಣಶೀಲತೆ, ವಿಚಾರಹೀನ ನಂಬಿಕೆಗಳು, ಸಂದಿಗ್ಧತೆ ಹಾಗೂ ಅನಿಶ್ಚಿತತೆಯನ್ನು ಎದುರಿಸಲಾಗದ ಅಸಹನೆ ಇವೇ ಮುಂತಾದ ವಿಶಿಷ್ಟವಾದ ಲಕ್ಷಣಗಳಿರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಅವರು ಬದಲಾವಣೆಯ ವಿರೋಧಿಗಳೂ, ಸಾಮಾಜಿಕ ಅಸಮಾನತೆಯ ಸಮರ್ಥಕರೂ ಆಗಿದ್ದು, ಅನಿಶ್ಚಿತತೆಯನ್ನು ಎದುರಿಸುವ ಆತಂಕದಿಂದ ಸದಾ ಪ್ರಚೋದಿತರಾಗಿರುತ್ತಾರೆ.
ಸಂಪ್ರದಾಯವಾದಿಗಳಿಗೆ ತಮ್ಮ ಮನಸ್ಸೊಂದೇ ಜಗತ್ತಾಗಿರುತ್ತದೆ. ಮೂಗಿನ ನೇರಕ್ಕಷ್ಟೇ ಆಲೋಚಿಸುವ ಅವರಿಗೆ ತಾವು ಹೇಳಿದ್ದೇ ಧರ್ಮ, ಅದೇ ನೈತಿಕತೆ, ಅದೇ ಕಾನೂನು, ತಮಗನಿಸಿದ್ದಷ್ಟೇ ಸಮಸ್ಯೆ, ಉಳಿದದ್ದೇನೂ ಇಲ್ಲ. ಅವರ ಜಡವಾದ ಚಿಂತನೆಗಳಿಗೂ ಸಮಾಜದ ಗತಿಶೀಲ ಚಿಂತನೆಗಳಿಗೂ ನಡುವಿನ ನಿರಂತರವಾದ ಸಂಘರ್ಷಗಳು ಹಲವು ವಿರೋಧಾಭಾಸಗಳಿಗೆ ಕಾರಣವಾದರೂ, ತಮ್ಮ ನಂಬಿಕೆಗಳಿಗೆ ಸುಸಂಗತವಾದ ಸಮರ್ಥನೆಗಳಿರಬೇಕೆನ್ನುವ ಅಗತ್ಯವು ಅವರಿಗೆ ಕಾಣುವುದಿಲ್ಲ. ಅವರ ಸಂಕುಚಿತ ಮನೋಭಾವಕ್ಕೆ ಹೊಂದದಿರುವುದೆಲ್ಲವೂ ಆತಂಕಕಾರಿಯಾಗಿ, ಭಯಾನಕ’, ಮಾರಣಾಂತಿಕ’. ದುಷ್ಟ’, ಭಯೋತ್ಪಾದಕ’, ರಾಕ್ಷಸೀಯ’ವಾಗಿ, ಕಾಣಿಸುತ್ತವೆ, ಇಲಿಯಿಲ್ಲದಲ್ಲೂ ಹುಲಿ ಕಾಣುತ್ತದೆ. ಅವರು ತಮ್ಮ ಆತಂಕವನ್ನು ಹೊರಹಾಕುವಾಗ ಬೇರೆಯವರನ್ನು ಮಾತನಾಡಗೊಡುವುದಿಲ್ಲ, ವೈಚಾರಿಕ ವಿವರಣೆಗಳು ಅವರಿಗೆ ಕೇಳಿಸುವುದೂ ಇಲ್ಲ. ಸೋಗಲಾಡಿತನ ಹಾಗೂ ಜಾಣ ಮರೆವುಗಳೇ ರಕ್ತಗತವಾಗಿರುವ ಸಂಪ್ರದಾಯವಾದಿಗಳು ತಮ್ಮ ಅಸಂಗತ ವಾದಗಳನ್ನು ಪುಷ್ಟೀಕರಿಸಲು ಯಾವುದನ್ನಾದರೂ ಎಗ್ಗಿಲ್ಲದೆ ಬಳಸಿಕೊಳ್ಳುತ್ತಾರೆ. ಹೀಗೆ ರಾಮ, ಗಾಂಧಿ, ವಿವೇಕಾನಂದ, ವೇದ, ಧರ್ಮಗ್ರಂಥಗಳು ಇತ್ಯಾದಿಗಳನ್ನೆಲ್ಲ ಬೇಕಾದಂತೆ ಬಳಸಿ, ಅಲ್ಲಿಲ್ಲಿಂದ ಉದ್ದುದ್ದನೆಯ ವಾಕ್ಯಗಳನ್ನೆತ್ತಿ ಬೊಬ್ಬಿರಿಯುವುದು ಹಾಗೂ ತಮ್ಮ ಕಾಲ್ಪನಿಕ ವೈರಿಗಳ ವಿರುದ್ಧ ಯುದ್ಧ’ ವನ್ನೂ, ಹೊಡಿ, ಬಡಿ, ಕಡಿ’ ಗಲಾಟೆಯನ್ನೂ ಪ್ರಚೋದಿಸುವುದು ಅವರ ನಿತ್ಯಕರ್ಮವಾಗಿರುತ್ತದೆ.
ಉಡುಗೆ-ತೊಡುಗೆಗಳು, ಆಚಾರ-ವಿಚಾರಗಳು ತೀರಾ ವೈಯಕ್ತಿಕವಾಗಿದ್ದು, ಅವುಗಳಿಂದ ನೈತಿಕತೆಯ ಸಮಸ್ಯೆಗಳಾಗಲೀ, ಅನ್ಯರಿಗೆ ತೊಂದರೆಗಳಾಗಲೀ ಇಲ್ಲವೆನ್ನುವುದು ಸಂಪ್ರದಾಯವಾದಿಗಳಿಗೆ ಹೊಳೆಯುವುದಿಲ್ಲ; ಒಂದಿಬ್ಬರ ವೈಯಕ್ತಿಕ ಆಯ್ಕೆಗಳ ಮೇಲೆ ಹರಿಹಾಯ್ದು ಇಡೀ ಸಮಾಜಕ್ಕೇ ಅವರು ತೊಂದರೆಯುಂಟು ಮಾಡುತ್ತಾರೆ. ಸಾಮಾಜಿಕ ಸಮಸ್ಯೆಗಳಿಗಿಂತ ಸ್ವಂತ ಹಿತಾಸಕ್ತಿಗಳೇ ಅವರಿಗೆ ಹೆಚ್ಚು ಮುಖ್ಯವಾಗಿರುವುದರಿಂದ ಹೊಟ್ಟೆ-ಬಟ್ಟೆಗಿಲ್ಲದವರ ಬವಣೆಗಿಂತ ಯಾರೋ ಒಬ್ಬರ ಬಟ್ಟೆಯ ಉದ್ದವೇ ಮುಖ್ಯವಾಗುತ್ತದೆ, ಕೋಟಿಗಟ್ಟಲೆಯನ್ನು ಕಾಡುವ ಬರಗಾಲಕ್ಕಿಂತ ಹತ್ತು ಜನರ ಹುಟ್ಟುಹಬ್ಬವೇ ದೊಡ್ಡ ಸಮಸ್ಯೆಯೆನಿಸುತ್ತದೆ, ಮುಕ್ಕಾಲಂಶ ಭಾರತೀಯರ ತೀವ್ರ ಬಡತನಕ್ಕಿಂತ ಅಲ್ಲೋ ಇಲ್ಲೋ ಆಗುವ ಮತಾಂತರಗಳೇ ದೇಶಕ್ಕೆ ಗಂಡಾಂತರವೆನಿಸುತ್ತವೆ. ಮಾತುಮಾತಿಗೆ ದೇಶಪ್ರೇಮವನ್ನು ಬೋಧಿಸುತ್ತಿದ್ದರೂ, ದೇಶದ ಅದಿರು, ಮರಳು, ಮರ ಇತ್ಯಾದಿಗಳನ್ನೆಲ್ಲ ಸೂರೆಗೈದು, ತೆರಿಗೆಯನ್ನೂ ವಂಚಿಸಿ, ಕಾನೂನನ್ನೂ ಭಂಜಿಸುವಾಗ ದೇಶದ ಹಂಗು ಇವರನ್ನು ಕಾಡುವುದಿಲ್ಲ. ಮಾತೆ, ಭಗಿನಿ, ಗೋಮಾತೆ ಎಂದೆಲ್ಲಾ ಊರಿಡೀ ದೀಪ ಹೊತ್ತಿಸುತ್ತಿದ್ದರೂ ತಮ್ಮಷ್ಟಕ್ಕೆ ತಾವಿರುವ ಹೆಣ್ಮಕ್ಕಳ ಮೇಲೆ ಹರಿಹಾಯುವಾಗ ಮಾತಭಕ್ತಿ, ಭಗಿನಿಪ್ರೀತಿಗಳು ನೆನಪಾಗುವುದಿಲ್ಲ.
ಸಂಪ್ರದಾಯವಾದಿಗಳ ಈ ಎಡೆಬಿಡಂಗಿತನಕ್ಕೆ ಜನ ಮರುಳಾಗಿ, ಅವರ ಅಸಂಬದ್ಧವಾದ ಸಮರ್ಥನೆಗಳನ್ನು ಒಪ್ಪಿಕೊಳ್ಳುವುದೇಕೆ? ಸಂಪ್ರದಾಯವಾದಿಗಳು ಜನರ ಅಜ್ಞಾನವನ್ನೂ, ಭವಿಷ್ಯದ ಬಗೆಗಿನ ಆತಂಕಗಳನ್ನೂ, ಚಂಚಲತೆಯನ್ನೂ ಬಳಸಿಕೊಂಡು, ಅವರ ಭಾವನೆಗಳಿಗೆ ಸುಲಭದಲ್ಲಿ ತಟ್ಟುವಂತೆ ತಮ್ಮ ವಾದಸರಣಿಗಳನ್ನು ಬೆಳೆಸುತ್ತಾ ಹೋಗುತ್ತಾರೆ. ಈ ವಾದಗಳು ಮೇಲ್ನೋಟಕ್ಕೆ ಸರಿಯೆಂದೂ, ಆ ಕ್ಷಣಕ್ಕೆ ಅತಿಶಕ್ಯವೆಂದೂ ಅನಿಸುವುದರಿಂದ ಜನರು ಸುಲಭದಲ್ಲಿ ಅವನ್ನು ನಂಬುತ್ತಾರೆ. ಇವೇ ಕಾರಣಗಳಿಗಾಗಿ ಸಂಪ್ರದಾಯವಾದಿಗಳು ತಮ್ಮ ಕಾಲ್ಪನಿಕ ಶತ್ರುಗಳ ವಿರುದ್ಧ ಹೂಡಲೆಳಸುವ ಯುದ್ಧಕ್ಕೆ ಮುಂಚೂಣಿಯ ಪದಾತಿಗಳೂ ದೊರೆಯುತ್ತಾರೆ. ಹೆಚ್ಚಾಗಿ ಸಮಾಜದ ಕೆಳವರ್ಗಗಳಿಗೆ ಸೇರಿರುವ, ವಿದ್ಯಾಭ್ಯಾಸ ಹಾಗೂ ಒಳ್ಳೆಯ ಉದ್ಯೋಗವಿಲ್ಲದೆ ಹತಾಶರಾಗಿರುವ ಯುವಕರು ಇಂತಹಾ ಪಡೆಗಳನ್ನು ಸೇರಿಕೊಂಡು, ಮೇಲ್ವರ್ಗದ ನಾಯಕತ್ವದ ಮೇಲಿನ ನಂಬಿಕೆ, ಪ್ರಚಾರ ಹಾಗೂ ಖ್ಯಾತಿಯ ಗೀಳು, ಬೆದರಿಸಿ ಹಣಗಿಟ್ಟಿಸುವ ಅವಕಾಶ, ಶರಾಬಿನ ಅಮಲು ಇತ್ಯಾದಿಗಳಿಂದ ಈ ದಾಳಿಗಳಿಗೆ ಪ್ರೇರಿತರಾಗುತ್ತಾರೆ.
ಯಾವ ಪ್ರಾಣಿಗಳಲ್ಲೂ ಕಂಡು ಬಾರದ ಸ್ತ್ರೀದೌರ್ಜನ್ಯದ ಪಿಡುಗು ಮನುಷ್ಯರಲ್ಲಿರುವುದಕ್ಕೆ ಸಾಮಾಜಿಕ ಸ್ಪಂದನದ ಕೊರತೆ, ಲೈಂಗಿಕ ಅಸೂಯೆ, ಸೂಕ್ತ ಸಂಗಾತಿ ದೊರೆಯದಿರುವ ಹತಾಶೆ, ಪುರುಷತ್ವದ ಅಹಮಿಕೆ, ಧರ್ಮಾಂಧತೆ, ಮಹಿಳೆಯನ್ನು ನಿಗ್ರಹಿಸುವ ಹಠ, ಅಶ್ಲೀಲ ಚಿತ್ರಗಳು ಹಾಗೂ ಮಾಧ್ಯಮಗಳ ಪ್ರಭಾವ, ಮದ್ಯವ್ಯಸನ ಇತ್ಯಾದಿ ಹಲವು ಕಾರಣಗಳಿವೆ. ವಿದ್ಯಾಭ್ಯಾಸ, ಉದ್ಯೋಗ ಹಾಗೂ ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳಿಂದಾಗಿ ಮಹಿಳೆಯರ ಸ್ಥಾನಮಾನಗಳು ಬಲಗೊಳ್ಳುತ್ತಿರುವುದರಿಂದ ಸಂಪ್ರದಾಯವಾದಿಗಳು ಆತಂಕಕ್ಕೀಡಾಗಿರುವುದು ಈ ದಾಳಿಗಳಿಗೆ ಮುಖ್ಯ ಕಾರಣಗಳಲ್ಲೊಂದು.
ಜೊತೆಗೆ, ಜನರ ವಿದ್ಯಾಭ್ಯಾಸದ ಮಟ್ಟವು ಹೆಚ್ಚುತ್ತಿರುವುದು, ದೇವರು-ಧರ್ಮಗಳ ಮೇಲಿನ ಶ್ರದ್ಧೆಯು ಇಳಿಯುತ್ತಿರುವುದು, ವಿಚಾರವಾದಿ ಚಳವಳಿಗಳು ಬಲಗೊಳ್ಳುತ್ತಿರುವುದು ಸಂಪ್ರದಾಯವಾದಿಗಳ ಚಿಂತೆಗೆ ಕಾರಣವಾಗಿವೆ. ಒಂದು ಕಾಲಕ್ಕೆ ಊರ ಹೊರಗೆ ದಬ್ಬಲ್ಪಟ್ಟಿದ್ದ ಅಸ್ಪಶ್ಯರು ನಮ್ಮ ಸಂವಿಧಾನದ ಬಲದಿಂದ ಓದುವಂತಾಗಿ ಸಮಾಜದಲ್ಲಿ ಸಹಭಾಗಿಗಳಾಗುತ್ತಿರುವುದೂ ಇವರ ನಿದ್ದೆಗೆಡಿಸುತ್ತಿದೆ. ಅಂತರ್ಜಾತೀಯ, ಅಂತರ್ಧರ್ಮೀಯ ವಿವಾಹಗಳು ಹಾಗೂ ಕೂಡುಬಾಳ್ವೆಗಳು ಅತ್ಯಂತ ಸಾಮಾನ್ಯವಾಗಿರುವುದಷ್ಟೇ ಅಲ್ಲದೆ, ಸರಕಾರಗಳಿಂದಲೂ, ನ್ಯಾಯಾಲಯಗಳಿಂದಲೂ ಪ್ರೋತ್ಸಾಹಿಸಲ್ಪಡುತ್ತಿರುವುದು ಈ ಶಕ್ತಿಗಳಿಗೆ ನುಂಗಲಾಗದ ಸತ್ಯವಾಗಿದೆ.
ಸಂಪ್ರದಾಯವಾದಿಗಳ ಕಾಲ್ಪನಿಕ ಆತಂಕಗಳಿಗೂ, ನೈತಿಕತೆಯ ಹೆಸರಲ್ಲಿ ಅವರು ನಡೆಸುವ ಭಯೋತ್ಪಾದನೆಗೂ ನಮ್ಮ ಸಂವಿಧಾನದತ್ತವಾದ ಸ್ವಾತಂತ್ರ್ಯಗಳು ಬಲಿಯಾಗಬೇಕೆ? ವಿಶ್ವದ ಎಲ್ಲ ಮುಕ್ತ ರಾಷ್ಟ್ರಗಳಂತೆ ನಮ್ಮ ಸಂವಿಧಾನದಲ್ಲೂ ಜಾತಿ, ವರ್ಣ, ಧರ್ಮ, ಪಂಗಡ, ಲಿಂಗ, ಪ್ರದೇಶಗಳ ಬೇಧವಿಲ್ಲದೆ ಪ್ರತಿಯೋರ್ವ ಭಾರತೀಯನಿಗೂ ಎಲ್ಲಾ ಮೂಲಭೂತ ಹಕ್ಕುಗಳನ್ನು ಒದಗಿಸಲಾಗಿದೆ. ಸ್ವತಂತ್ರವಾಗಿ ಜೀವಿಸುವ ಹಕ್ಕು, ಸಮಾನತೆಯ ಹಕ್ಕು, ಅಭಿವ್ಯಕ್ತಿಯ ಹಕ್ಕು, ಶಾಂತಿಯುತವಾಗಿ ಸಭೆ ಸೇರುವ ಹಕ್ಕು, ಆತ್ಮಸಾಕ್ಷಿಗನುಗುಣವಾಗಿ ಯಾವುದೇ ಧರ್ಮವನ್ನು ಆಚರಿಸುವ ಯಾ ಆಚರಿಸದಿರುವ ಹಕ್ಕು, ದೇಶದೆಲ್ಲೆಡೆಗೆ ಹೋಗುವ ಹಕ್ಕುಗಳು ನಮಗಿವೆ. ನಮ್ಮಲ್ಲಿ ಹದಿನೆಂಟು ವಯಸ್ಸಿನ ಎಲ್ಲರೂ ವಯಸ್ಕರೆಂದು ಪರಿಗಣಿಸಲ್ಪಟ್ಟು ಮತದಾನದ ಹಕ್ಕನ್ನೂ ಪಡೆಯುತ್ತಾರೆ, ಪರಸ್ಪರ ಸಮ್ಮತಿಯಿಂದ ಲೈಂಗಿಕಕ್ರಿಯೆಗಳಲ್ಲಿ ತೊಡಗುವ ಸ್ವಾತಂತ್ರ್ಯವನ್ನೂ ಪಡೆಯುತ್ತಾರೆ. ಆ ವಯಸ್ಸಿನ ಹುಡುಗಿಯರು ವಿವಾಹವನ್ನೂ ಆಗಬಹುದು, ವಿವಾಹವಾಗದೆಯೂ ಕೂಡಿ ಬಾಳಬಹುದು.
ಈ ಎಲ್ಲಾ ಹಕ್ಕುಗಳನ್ನು ನಮ್ಮಷ್ಟಕ್ಕೆ ಅನುಭವಿಸುವ ನಮ್ಮ ಸ್ವಾತಂತ್ರ್ಯವನ್ನು ಯಾರೂ ಪ್ರಶ್ನಿಸುವಂತಿಲ್ಲ; ಸರಕಾರಗಳೂ, ಪೋಲೀಸರೂ ನಮ್ಮೀ ಸ್ವಾತಂತ್ರ್ಯವನ್ನು ರಕ್ಷಿಸಲೇಬೇಕು. ಕಾಲಕಾಲಕ್ಕೆ, ಸ್ಥಳದಿಂದ ಸ್ಥಳಕ್ಕೆ ಬದಲಾಗುವ ಸಾರ್ವಜನಿಕ ನೈತಿಕತೆ ಹಾಗೂ ಸಭ್ಯತೆಗಳಿಗಿಂತ ಸಾಂವಿಧಾನಿಕ ನೈತಿಕತೆಗೇ ಹೆಚ್ಚಿನ ಪ್ರಾಶಸ್ತ್ಯವೆನ್ನುವುದನ್ನು ನಮ್ಮ ನ್ಯಾಯಾಲಯಗಳೂ ಸ್ಪಷ್ಟವಾಗಿ ಹೇಳಿವೆ. ಆದ್ದರಿಂದ ಭಾವನೆಗಳಿಗೆ ಧಕ್ಕೆಯಾಗುವ ನೆಪದಲ್ಲಿ, ಸಂಸ್ಕತಿ ರಕ್ಷಣೆಯ ಹೆಸರಲ್ಲಿ ಅನ್ಯರ ಭಾವನೆಗಳು ಹಾಗೂ ಸಂಸ್ಕತಿಯ ಮೇಲೆ ಯಾರೂ ದಾಳಿ ನಡೆಸುವಂತಿಲ್ಲ ? ಅವರವರ ಭಾವನೆಗಳೂ, ಸಂಸ್ಕತಿಗಳೂ ಅವರವರಿಗೆ. ಸ್ವಾಮಿಗಳೂ, ಋಷಿಮುನಿಗಳೂ ತಮ್ಮ ಮಠಮಂದಿರಗಳ ಸಂಸ್ಕತಿಯನ್ನು ಕಾಪಾಡಿಕೊಂಡರಷ್ಟೇ ಸಾಕು. ಸಾವಿರಾರು ಜಾತಿ-ಪಂಗಡಗಳಿರುವ ಭಾರತದಲ್ಲಿ ಪ್ರತಿ ಮನೆಗೂ ಅದರದ್ದೇ ಆದ ಸಂಸ್ಕತಿಯಿರುವಾಗ ಸಂಸ್ಕತಿ ರಕ್ಷಣೆಯೆನ್ನುವುದು ಸಮಾಜ ವಿರೋಧಿ, ಸಂವಿಧಾನ ವಿರೋಧಿ ನಡವಳಿಕೆಯಾಗುತ್ತದೆ. ಕಾನೂನು ಇಲ್ಲದ್ದರಿಂದ ಅಥವಾ ಪೋಲೀಸರು ಕ್ರಮ ಕೈಗೊಳ್ಳದ್ದರಿಂದ ತಾವೇ ದಾಳಿ ನಡೆಸಬೇಕಾಯಿತೆನ್ನುವುದು ಬಲಪಂಥೀಯ ಎಡೆಬಿಡಂಗಿತನದ ಪರಾಕಾಷ್ಠೆಯಷ್ಟೇ ಅಲ್ಲ, ಶಿಕ್ಷಾರ್ಹ ಅಪರಾಧವೂ ಆಗುತ್ತದೆ. ನಮ್ಮ ಸಂವಿಧಾನ ಹಾಗೂ ಕಾನೂನುಗಳ ಬಗ್ಗೆ ತಕರಾರೆತ್ತುವವರಿಗೆ ಇರುವ ಒಂದೇ ದಾರಿಯೆಂದರೆ ಸಂಸತ್ತಿನಲ್ಲಿ ಅದನ್ನು ಬದಲಾಯಿಸಲು ಅಗತ್ಯವಾದ ಬಹುಮತವನ್ನು ಪಡೆಯುವುದು; ಅದಾಗದಿದ್ದರೆ ತೆಪ್ಪಗಿರಲೇಬೇಕಾಗುತ್ತದೆ.
ದೇವರ ಹೆಸರಲ್ಲಿ ಅಧಿಕಾರವನ್ನೂ, ವೈಭೋಗವನ್ನೂ ಅನುಭವಿಸುತ್ತಿದ್ದು, ಈಗದನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಸಂಪ್ರದಾಯವಾದಿಗಳು ಮತ್ತು ಧರ್ಮ-ದೇವರ ಸೊಲ್ಲಿಲ್ಲದ, ಸರ್ವರಿಗೂ ಸಮಬಾಳನ್ನಿತ್ತಿರುವ ನಮ್ಮ ಸಂವಿಧಾನಗಳ ನಡುವಿನ ಈ ಸಂಘರ್ಷದಲ್ಲಿ ನಮ್ಮ ಸಂವಿಧಾನವೂ, ನಮ್ಮ ಸ್ವಾತಂತ್ರ್ಯವೂ ಜಯಿಸಲೇಬೇಕೆಂಬ ಪಣ ನಮ್ಮೆಲ್ಲರದಾಗಬೇಕು

ಮೂರ್ತ ಜೀವಗಳನ್ನು ಕೊಲ್ಲುವ ಅಮೂರ್ತ ಭ್ರಾಂತಿಗಳು
ಬಿ. ಶ್ರೀನಿವಾಸ 
ಕಕ್ಕಿಲಾಯ


ಸೌಜನ್ಯ : ವಿಜಯ ಕರ್ನಾಟಕ


ಆಸ್ಪತ್ರೆಯೊಂದರ ವೈದ್ಯರು ತಮ್ಮ ವತ್ತಿಧರ್ಮಕ್ಕಿಂತಲೂ ಮತಧರ್ಮವೊಂದರ ತಾಕೀತುಗಳಿಗೇ ಮನ್ನಣೆಯಿತ್ತು, ಅದಾಗಲೇ ಸಾಯಹೊರಟಿದ್ದ ಭ್ರೂಣವನ್ನು ಕೊಲ್ಲಲಾಗದೆಂದು ತುಂಬು ಚೈತನ್ಯದ ಹೆಣ್ಣಿನ ಸಾವಿಗೆ ಕಾರಣರಾದದ್ದು ಗರ್ಭಪಾತದ ನಿಯಮಗಳ ಬಗ್ಗೆ ವಿಶ್ವವ್ಯಾಪಿ ಚರ್ಚೆಯನ್ನು ಪ್ರಚೋದಿಸಿರುವುದರ ಜೊತೆಗೆ, ಸಾರ್ವಜನಿಕ ಜೀವನದಲ್ಲಿ ಧರ್ಮದ ಪಾಲ್ಗೊಳ್ಳುವಿಕೆಯ ಬಗ್ಗೆ ಇನ್ನೂ ದೊಡ್ಡದಾದ ಪ್ರಶ್ನೆಗಳನ್ನೆತ್ತಿದೆ. ಶಾಂತಿ-ಸೌಹಾರ್ದತೆಯನ್ನೇ ಬೋಧಿಸುವ ಧರ್ಮಗಳು ಯುದ್ಧ-ದೊಂಬಿ-ಭಯೋತ್ಪಾದನೆಗಳಿಗೆ ಪ್ರೇರಣೆಯಾಗುತ್ತಿರುವಂತೆಯೇ, ಕೈಕಾಲು ಮೂಡದಿರುವ ಭ್ರೂಣಗಳಲ್ಲೂ ದೇವರನ್ನು ಕಾಣುವ ಧರ್ಮ ನಿಯಮಗಳು ಪೂರ್ಣ ದೇಹದ, ಅರಿತ-ನುರಿತ ಮನುಷ್ಯರಲ್ಲಿ ಜೀವವಿರೋಧಿ ಸೈತಾನರನ್ನು ಕಂಡು ಅವರ ಸಾವುಗಳಿಗೆ ಕಾರಣವಾಗುತ್ತಿರುವುದರಿಂದ ಈ ಪ್ರಶ್ನೆಗಳು ಅತಿ ಪ್ರಸ್ತುತವೂ, ಮಹತ್ವಪೂರ್ಣವೂ ಆಗಿವೆ.

ಗರ್ಭಪಾತವು ಪ್ರಾಚೀನ ಕಾಲದಿಂದಲೂ, ಮತಧರ್ಮಗಳ ಹುಟ್ಟಿಗೂ ಮೊದಲು, ವಾಡಿಕೆಯಲ್ಲಿತ್ತು; ಅನಿವಾರ್ಯವಿದ್ದಾಗ ಎಲ್ಲಾ ಕಾಲಗಳಲ್ಲಿಯೂ, ಎಲ್ಲಾ ಸಮಾಜಗಳಲ್ಲಿಯೂ ನಡೆಯುತ್ತಲೇ ಇತ್ತು. ಇಂದಿಗೂ ಶೇ. 40ರಷ್ಟು ಮಹಿಳೆಯರು ಒಮ್ಮೆಯಾದರೂ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಬಯಸಿ ಪಡೆದ ಬಸುರು ಹೆಣ್ಣಿಗೆ ಅಪರಿಮಿತ ಆನಂದವನ್ನು ಕೊಡುವುದು ನಿಜವಾದರೂ, ಅದನ್ನು ಹೊತ್ತು, ಹೆತ್ತು, ಸಲಹುವ ಜವಾಬ್ದಾರಿಯೂ ಜೊತೆಗಿರುವುದರಿಂದ ಬಸುರಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ, ಕುಟುಂಬದ ಸಾಮರ್ಥ್ಯ, ಇತರ ಮಕ್ಕಳ ಜವಾಬ್ದಾರಿ ಇವೇ ಮುಂತಾದ ಸಾಮಾಜಿಕ ಹಾಗೂ ಆರ್ಥಿಕ ವಿಚಾರಗಳೆಲ್ಲವೂ ಬಸುರನ್ನು ಮುಂದುವರಿಸುವಲ್ಲಿ ನಿರ್ಣಾಯಕವಾಗುತ್ತವೆ. ವಿವಾಹೇತರ ಸಂಬಂಧಗಳಿಂದ, ರಕ್ತಸಂಬಂಧಗಳಿಂದ ಅಥವಾ ಬಲಾತ್ಕಾರದಿಂದಾಗಿ ಬಸುರುಂಟಾದರೆ, ಅದರಲ್ಲೂ ಅಪ್ರಾಪ್ತ ವಯಸ್ಸಿನ ಹುಡುಗಿಯರಲ್ಲಾದರೆ, ಹಲಬಗೆಯ ಸಂಕಟಗಳಿಗೂ, ಮುಜುಗರಗಳಿಗೂ ಕಾರಣವಾಗಿ ಗರ್ಭಪಾತವು ಅನಿವಾರ್ಯವಾಗುತ್ತದೆ. ಶೇ. 25-50ರಷ್ಟು ಗರ್ಭಗಳು ತಾವಾಗಿ ಕಳಚಿಕೊಳ್ಳುವುದಿದ್ದು, ಅದರಿಂದ ಸಮಸ್ಯೆಗಳಾದರೂ ವೈದ್ಯಕೀಯ ಗರ್ಭಪಾತದ ನೆರವು ಬೇಕಾಗುತ್ತದೆ. ಹೀಗೆ, ತನ್ನೊಳಗಿನ ಗರ್ಭದ ಗತಿಯನ್ನು ನಿರ್ಧರಿಸುವುದಕ್ಕೆ ಹಾಗೂ ಅದರಿಂದುಂಟಾಗಬಲ್ಲ ಸಮಸ್ಯೆಗಳನ್ನು ನಿಭಾಯಿಸುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನೂ, ಅದಕ್ಕೆ ಪೂರಕವಾದ ಸಾಮಾಜಿಕ ಸಹಾನುಭೂತಿಯನ್ನೂ, ವೈದ್ಯಕೀಯ ಸವಲತ್ತುಗಳನ್ನೂ, ಕಾನೂನಿನ ಬೆಂಬಲವನ್ನೂ ಹೆಣ್ಣಿಗೆ ಒದಗಿಸಬೇಕಾದದ್ದು ಎಲ್ಲಾ ಪ್ರಬುದ್ಧ ಸಮಾಜಗಳ ಹೊಣೆಯಾಗಿರುತ್ತದೆ.

ಸೋವಿಯತ್ ರಷ್ಯಾದಲ್ಲಿ ಲೆನಿನ್ ನೇತತ್ವದ ಆಡಳಿತವು 1920ರಲ್ಲಿ ಮೊತ್ತ ಮೊದಲು ಮಹಿಳೆಯರಿಗೆ ಅಂತಹಾ ಸ್ವಾತಂತ್ರ್ಯವನ್ನು ಒದಗಿಸಿತು. ಇಂದು ಭಾರತ, ಅಮೆರಿಕಾ, ಯೂರೋಪು ಹಾಗೂ ಮಧ್ಯಪ್ರಾಚ್ಯದ 130ಕ್ಕೂ ಹೆಚ್ಚು ದೇಶಗಳ ಕಾನೂನುಗಳ ಅನುಸಾರ 18-24 ವಾರಗಳೊಳಗಿನ ಗರ್ಭಿಣಿಯರು ತಾವು ಬಯಸಿದಾಗ ಸುರಕ್ಷಿತವಾಗಿ ವೈದ್ಯಕೀಯ ಗರ್ಭಪಾತವನ್ನು ಮಾಡಿಸಿಕೊಳ್ಳಬಹುದು. ನಮ್ಮಲ್ಲಿ 1971ರ ವೈದ್ಯಕೀಯ ಗರ್ಭಪಾತದ ಕಾನೂನಿನಂತೆ 18ರ ವಯಸ್ಸನ್ನು ಮೀರಿದ ಮಹಿಳೆಯು ಬಯಸಿದಲ್ಲಿ ತಜ್ಞ ವೈದ್ಯರ ನೆರವಿನಿಂದ 20 ವಾರಗಳೊಳಗೆ ಲಿಂಗಾಧಾರಿತವಲ್ಲದ ಗರ್ಭಪಾತವನ್ನು ಮಾಡಿಸಿಕೊಳ್ಳಬಹುದು. ಆದರೆ ಐರ್ಲೆಂಡ್, ಇರಾನ್, ಇರಾಕ್, ಹಾಗೂ ದಕ್ಷಿಣ ಅಮೆರಿಕಾ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಸುಮಾರು 60 ದೇಶಗಳಲ್ಲಿ ವಿವಿಧ ಧರ್ಮಗಳಿಂದ ಪ್ರೇರಿತವಾದ ತೀರಾ ಕಠಿಣವಾದ ಕಾನೂನುಗಳಿದ್ದು, ಬಸುರಿಯ ಪ್ರಾಣಾಪಾಯವನ್ನುಳಿದು ಬೇರೆ ಕಾರಣಗಳಿಗಾಗಿ ಗರ್ಭಪಾತವನ್ನು ಮಾಡಿಸುವಂತಿಲ್ಲ.

ಆದರೆ ಬಸುರನ್ನಿಳಿಸಬಯಸುವ ಹೆಣ್ಣನ್ನು ಯಾವುದೇ ಧರ್ಮದಿಂದ ಅಥವಾ ಕಾನೂನುಗಳಿಂದ ತಡೆಯಲು ಸಾಧ್ಯವಾಗದು. ನಮ್ಮಲ್ಲಿ 1971ಕ್ಕೆ ಮೊದಲು ಬ್ರಿಟಿಷರ ಕಾಲದ (1860) ದಂಡ ಸಂಹಿತೆಯಡಿ ಗರ್ಭಪಾತ ಮಾಡುವುದೂ, ಮಾಡಿಸಿಕೊಳ್ಳುವುದೂ 3-7 ವರ್ಷಗಳ ಶಿಕ್ಷಾರ್ಹ ಅಪರಾಧವಾಗಿದ್ದುದರಿಂದ ಗುಟ್ಟಾಗಿ ಬಸುರಿಳಿಸಲೆತ್ನಿಸಿ ಅಸಂಖ್ಯಾತ ಮಹಿಳೆಯರು ಸಾವಿಗೀಡಾಗುತ್ತಿದ್ದರು. ಇಂದು ಲ್ಯಾಟಿನ್ ಅಮೆರಿಕಾ ಹಾಗೂ ಆಫ್ರಿಕಾದ ದೇಶಗಳಲ್ಲಿ ಕಠಿಣವಾದ ನಿರ್ಬಂಧಗಳಿದ್ದರೂ, ಗರ್ಭಧಾರಣೆಯ ಪ್ರಮಾಣವು ಹೆಚ್ಚಿರುವುದರಿಂದ ಗರ್ಭಪಾತಗಳೂ ಅತಿ ಹೆಚ್ಚಿನ (ಸಾವಿರಕ್ಕೆ 30) ಸಂಖ್ಯೆಯಲ್ಲಾಗುತ್ತವೆ. ಆದರೆ, ಯೂರೋಪಿನ ಹಲವು ದೇಶಗಳಲ್ಲಿ ಗರ್ಭಪಾತಕ್ಕೆ ಪೂರ್ಣ ಸ್ವಾತಂತ್ರ್ಯವಿದ್ದರೂ ಗರ್ಭಧಾರಣೆಯು ಯೋಜಿತವಾಗಿ, ಕಡಿಮೆಯಾಗಿರುವುದರಿಂದ ಅತಿ ಕಡಿಮೆ (ಸಾವಿರಕ್ಕೆ 12) ಗರ್ಭಪಾತಗಳಾಗುತ್ತವೆ. ಗರ್ಭಪಾತಕ್ಕೆ ತೊಡಕಿರುವೆಡೆಗಳಲ್ಲಿ ಅನುಕೂಲಸ್ಥ ಮಹಿಳೆಯರು ಹೊರದೇಶಗಳಿಗಾದರೂ ಹೋಗಿ ಸುರಕ್ಷಿತವಾಗಿ ಬಸುರಿಳಿಸಿಕೊಂಡರೆ, ಹಾಗೆ ಮಾಡಲಾಗದವರು, ಅಥವಾ ಸವಿತಾಳಂತೆ ತುರ್ತುಸ್ಥಿತಿಗಳಲ್ಲಿ ಸಿಕ್ಕಿಕೊಂಡವರು, ಒಂದೋ ಆಸ್ಪತ್ರೆಗಳಲ್ಲೇ ಸಾವನ್ನಪ್ಪುತ್ತಾರೆ ಅಥವಾ ಅಸುರಕ್ಷಿತ ವಿಧಾನಗಳನ್ನೋ ಯಾ ಸ್ವಂತ ವಿಧಾನಗಳನ್ನೋ ಪ್ರಯತ್ನಿಸಿ ತೊಂದರೆಗೀಡಾಗುತ್ತಾರೆ. ಸರಕಾರ ಕೊಟ್ಟರೂ ಸಮಾಜ ಬಿಡದು ಎಂಬಂತಿರುವ ನಮ್ಮಲ್ಲಿ ಸುರಕ್ಷಿತ ಗರ್ಭಪಾತಕ್ಕೆ ಕಾನೂನಿನ ಮನ್ನಣೆಯಿದ್ದರೂ ಅಜ್ಞಾನ, ಬಡತನ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳಿಂದ ಅಡ್ಡಿಯುಂಟಾಗಿ ಅಸುರಕ್ಷಿತ ವಿಧಾನಗಳ ಮೊರೆ ಹೋಗುವಂತಾಗುತ್ತದೆ. ಪ್ರತೀ ವರ್ಷ ವಿಶ್ವದಲ್ಲಾಗುವ 5 ಕೋಟಿ ಗರ್ಭಪಾತಗಳಲ್ಲಿ 2 ಕೋಟಿಯಷ್ಟು ಅಸುರಕ್ಷಿತವಾಗಿದ್ದು (ಈ ಪೈಕಿ ಶೇ. 98ರಷ್ಟು ಬೆಳೆಯುತ್ತಿರುವ ದೇಶಗಳಲ್ಲಾಗುತ್ತವೆ), ಇದರಿಂದ ವರ್ಷಕ್ಕೆ 50,000 ಮಹಿಳೆಯರು ಸಾವನ್ನಪ್ಪುತ್ತಾರೆ ಹಾಗೂ ಲಕ್ಷಗಟ್ಟಲೆ ಹಾನಿಗೊಳಗಾಗುತ್ತಾರೆ. ಪ್ರತೀ ವರ್ಷ ನಮ್ಮ ದೇಶದಲ್ಲಾಗುವ ಒಂದು ಕೋಟಿಗೂ ಹೆಚ್ಚು ಗರ್ಭಪಾತಗಳಲ್ಲಿ ಅರ್ಧದಷ್ಟು ಅಸುರಕ್ಷಿತವಾಗಿದ್ದು, 20,000ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗುತ್ತಿವೆ. ಆದ್ದರಿಂದ ಬಸುರಿಳಿಸಬಯಸುವ ಮಹಿಳೆಯರಿಗೆ ಧಾರ್ಮಿಕ ಯಾ ನೈತಿಕ ಬೋಧನೆಗಳ ಬದಲಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನೂ, ವೈಧಾನಿಕ ಹಾಗೂ ಆರ್ಥಿಕ ಬೆಂಬಲವನ್ನೂ ಒದಗಿಸಿದರೆ ಈ ಸಾವು-ನೋವುಗಳನ್ನೆಲ್ಲ ತಡೆಯಬಹುದು.

ಸುರಕ್ಷಿತ ಗರ್ಭಪಾತಕ್ಕೆ ಧರ್ಮಪ್ರೇರಿತ ಕಾನೂನುಗಳೇ ಅತಿ ದೊಡ್ಡ ತೊಡಕಾಗಿದ್ದರೂ, ಯಾವುದೇ ಪ್ರಮುಖ ಧರ್ಮಗ್ರಂಥಗಳಲ್ಲಿ ಗರ್ಭಪಾತಕ್ಕೆ ನಿಷೇಧವಿಲ್ಲ, ಬಸುರಿ ಸಾಯುವಂತಿದ್ದರೂ ಗರ್ಭಪಾತ ಮಾಡಬಾರದೆಂದೂ ಹೇಳಿಲ್ಲ, ಗರ್ಭಪಾತದ ಅನಿವಾರ್ಯತೆಯನ್ನು ನಿರಾಕರಿಸುವ ಅವಿವೇಕತನವೂ ಅವುಗಳಲ್ಲಿಲ್ಲ. ಬದಲಿಗೆ, ಧರ್ಮಕಾರ್ಯಗಳ ಗುತ್ತಿಗೆದಾರರಂತೆ ವರ್ತಿಸುವವರು ಇವನ್ನು ತಮ್ಮಿಷ್ಟದಂತೆ ವಿಶ್ಲೇಷಿಸಿ, ಸಮಾಜದ ಮೇಲೆ ತಮ್ಮ ಆಣತಿಯನ್ನು ಹೇರಲೆತ್ನಿಸುವಾಗ ಸರಕಾರಗಳು ಸರ್ವರ ಹಿತ ಕಾಯುವುದನ್ನು ಬಿಟ್ಟು ಅವರ ಮುಂದೆ ಮಂಡಿಯೂರುವುದರಿಂದಲೇ ಇಂತಹಾ ತೊಡಕುಗಳು ಸಷ್ಟಿಯಾಗುತ್ತಿವೆ. ಈ ಧರ್ಮಪ್ರಚಾರಕರ ವರಸೆಗಳಲ್ಲಿ ಎದ್ದು ತೋರುವ ಎಡೆಬಿಡಂಗಿತನವೇ ಇದಕ್ಕೆ ಪುರಾವೆಯಾಗಿದೆ. ಗರ್ಭಪಾತ ಮಾಡಿಸಿಕೊಳ್ಳಬಲ್ಲ ಹೆಣ್ಣು ಬೇರೆಯವರನ್ನೂ ಕೊಲ್ಲಬಲ್ಲಳು ಎಂಬ ವಾದದಲ್ಲಿ ಹೆಣ್ಣಿನ ಪ್ರಬುದ್ಧತೆಯ ಕೀಳಂದಾಜು ಮಾತ್ರವಲ್ಲ, ನಿಜ ಜೀವನದ ಕಷ್ಟಗಳ ಬಗ್ಗೆ ಧರ್ಮಪ್ರಚಾರಕರ ವಿಚಾರ ಶೂನ್ಯತೆಯೂ ಕಾಣುತ್ತದೆ. ಗರ್ಭಾಂಕುರವಾಗಿ ಮಗುವಿನ ಜನನವಾಗುವವರೆಗೆ ಯಾವ ಹಂತದಲ್ಲಿ ಅದು ಮನುಷ್ಯನಾಗುತ್ತದೆ ಎನ್ನುವ ಬಗ್ಗೆಯೂ ವಿವಿಧ ಧರ್ಮಗಳಲ್ಲಿ ಒಮ್ಮತಾಭಿಪ್ರಾಯವಿಲ್ಲ. ಕೆಲವು ಮೊದಲ ದಿನ ಎಂದರೆ, ಇನ್ನು ಕೆಲವು ಮಧ್ಯದಲ್ಲಿ ಎಂದೂ, ಮತ್ತೆ ಕೆಲವು ಹುಟ್ಟಿನಲ್ಲಿ ಎಂದೂ ವ್ಯಾಖ್ಯಾನಿಸುತ್ತವೆ. ಗರ್ಭಾಂಕುರದ ಘಳಿಗೆಯಿಂದ ವಂಶವಾಹಿಗಳಲ್ಲೇ ಮನುಷ್ಯನನ್ನು ಕಾಣುವ ಧರ್ಮವು ಅವೇ ವಂಶವಾಹಿಗಳಲ್ಲಿರುವ ಜೀವವಿಕಾಸದ ಸಾಕ್ಷ್ಯವನ್ನು ನಿರಾಕರಿಸುತ್ತದೆ! ಇಂತಹಾ ವಿರೋಧಾಭಾಸಗಳ ನಡುವೆ, ಒಂದು ಧರ್ಮದ ಆಧಾರದಲ್ಲಿ ರಚಿತವಾದ ಕಾನೂನನ್ನು ಉಳಿದೆಲ್ಲರೂ ಪಾಲಿಸಬೇಕೆನ್ನುವುದು ಹುಚ್ಚಾಟವೇ ಸರಿ.

ಗರ್ಭದಲ್ಲಿರುವ ಜೀವವನ್ನುಳಿಸಬೇಕೆಂದು ಬೊಬ್ಬಿರಿಯುವ ಧರ್ಮನಿಷ್ಠರ ಬೂಟಾಟಿಕೆಯನ್ನು ಧರ್ಮಗಳ ಹೆಸರಲ್ಲಿ ಬಿದ್ದಿರುವ, ಬೀಳುತ್ತಿರುವ ಹೆಣಗಳಲ್ಲಿ ಎಣಿಕೆ ಮಾಡಬಹುದು. ಸುರಕ್ಷಿತ ಗರ್ಭಪಾತದಿಂದ ವಂಚಿತರಾಗಿ ಸತ್ತ ಬಸುರಿಯರು, ಬಸುರಿಳಿಸಿದ್ದಕ್ಕಾಗಿ ಧರ್ಮಾಂಧರಿಂದ ಕೊಲೆಯಾದ ತಜ್ಞ ವೈದ್ಯರು, ಕೆಲವು ಧರ್ಮಪ್ರಚಾರಕರ ಹಾಗೂ ಸ್ವಯಂಘೋಷಿತ ದೇವಮಾನವರ ಕಾಮತಷೆಯಿಂದ ಬಸುರಾದ ಅಸಂಖ್ಯಾತ ಪ್ರಕರಣಗಳಲ್ಲಿ ಆಮಿಷಕ್ಕೋ, ಬೆದರಿಕೆಗೋ ಮಣಿದು ಕೀಳಿಸಲ್ಪಟ್ಟ ಭ್ರೂಣಗಳು ಅಥವಾ ನೇಣಿಗೇರಿದ ಯಾ ಕೊಲೆಗೀಡಾದ ಅಮಾಯಕ ಹೆಣ್ಮಕ್ಕಳು, ಕುಲಧರ್ಮಕ್ಕಾಗಿ ನಮ್ಮಲ್ಲಿ ಪ್ರತೀ ವರ್ಷ ಬಲಿಯಾಗುತ್ತಿರುವ 5 ಲಕ್ಷಕ್ಕೂ ಹೆಚ್ಚು ಹೆಣ್ಣು ಭ್ರೂಣಗಳು, ಕಳೆದ ಎರಡು ಸಾವಿರ ವರ್ಷಗಳಲ್ಲಿ ಮತ-ಧರ್ಮ-ಪಂಗಡಗಳ ಹೆಸರಲ್ಲಿ ನಡೆದಿರುವ, ನಡೆಯುತ್ತಿರುವ ಯುದ್ಧ-ನರಮೇಧ-ದೊಂಬಿಗಳಲ್ಲಿ ಸಾವನ್ನಪ್ಪಿರುವ 70 ಕೋಟಿಗೂ ಹೆಚ್ಚು ನಿರಪರಾಗಳು ಈ ಧರ್ಮಗಳ ಜೀವಪ್ರೇಮವನ್ನೂ, ನೈತಿಕ ಬಂಡವಾಳವನ್ನೂ ಪ್ರಶ್ನಿಸುತ್ತಿದ್ದಾರೆ.

ಇಂದು ಬಹುತೇಕ ಎಲ್ಲ ದೇಶಗಳೂ ಬಹುಧರ್ಮೀಯ, ಬಹುವರ್ಣೀಯ, ಬಹುಸಾಂಸ್ಕೃತಿಕ ಸಮಾಜಗಳಾಗಿರುವುದರಿಂದ ಯಾವುದೇ ಒಂದು ಧರ್ಮದ ಕಲ್ಪನೆಗಳನ್ನು ಸಾಂವಿಧಾನಿಕ ನೀತಿ ನಿರೂಪಣೆಯಲ್ಲಿ ಸೇರಿಸುವುದು ಅಸಂಗತವೂ, ಅನ್ಯಾಯವೂ, ಅಪಾಯಕಾರಿಯೂ, ಅಮಾನವೀಯವೂ ಆಗುತ್ತದೆ. ಮನದೊಳಗಿನ ಧರ್ಮವು ಮನೆಯಲ್ಲಷ್ಟೇ ಇದ್ದು, ಗರ್ಭಪಾತ, ಚಿಕಿತ್ಸೆಯ ಆಯ್ಕೆಗಳೂ ಸೇರಿದಂತೆ ಅದರ ಕಟ್ಟುಪಾಡುಗಳೆಲ್ಲವೂ ಪಾಲಿಸಲಿಚ್ಛಿಸುವವರಿಗಷ್ಟೇ ಸೀಮಿತವಾಗಿರಬೇಕಲ್ಲದೆ, ಸಾರ್ವಜನಿಕ ಜೀವನಕ್ಕೆ, ವೈದ್ಯವೃತ್ತಿಗೆ ಮತ್ತು ಸರಕಾರಗಳಿಗೆ ತಟ್ಟಬಾರದು. ನಾನು ನಿಮ್ಮ ದೇಶದವಳೂ ಅಲ್ಲ, ನಿಮ್ಮ ಧರ್ಮದವಳೂ ಅಲ್ಲ, ನಂಜೇರುತ್ತಿರುವ ಗರ್ಭವನ್ನು ಕಿತ್ತು ನನ್ನನ್ನುಳಿಸಿ ಎಂದ ಸವಿತಾಳ ಆಕ್ರಂದನವು ಧರ್ಮ, ವರ್ಣ, ದೇಶ, ಭಾಷೆಗಳೆಂಬ ಭ್ರಾಂತಿಗಳ ನಂಜಿನಲ್ಲಿ ನರಳುತ್ತಿರುವ ಮನುಕುಲದ ಕೂಗೂ ಆಗಿದೆ.

ನಮ್ಮ ನೆಲದ ಶಿವಾಜಿ....

Basheer Bm Bm


ಬಿ. ಎಂ. ಬಶೀರ್

 
ಒಂದು ಐತಿಹಾಸಿಕ ಉದ್ಯಾನವನವನ್ನು ಶ್ಮಶಾನ ಮಾಡಿದ ಹೆಗ್ಗಳಿಕೆ ನಿಜಕ್ಕೂ ಮಹಾರಾಷ್ಟ್ರ ಸರಕಾರದ್ದು. 1925ರಲ್ಲಿ ಬ್ರಿಟಿಷರ ಕಾಲದಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಿರ್ಮಿಸಿದ ಈ ಶಿವಾಜಿ ಪಾರ್ಕ್‌ನಲ್ಲಿ ಬಾಳಾ ಠಾಕ್ರೆಯ ಅಂತ್ಯಕ್ರಿಯೆ ನಡೆಸಲು ಅನುಮತಿಯನ್ನು ನೀಡುವ ಮೂಲಕ, ತಾನೆಂತಹ ತಪ್ಪು ಮಾಡಿದ್ದೇನೆ ಎನ್ನುವುದು ಸರಕಾರಕ್ಕೆ ಈಗಲಾದರೂ ಮನವರಿಕೆಯಾಗಿರಬಹುದು. ಠಾಕ್ರೆ ಅಂತ್ಯಕ್ರಿಯೆ ನಡೆದ ಕೆಲವೇ ದಿನಗಳಲ್ಲಿ, ‘ಅಂತ್ಯಕ್ರಿಯೆ’ ನಡೆದ ಸ್ಥಳದ ಮೇಲೆ ಮಹಾರಾಷ್ಟ್ರದ ಶಿವಸೇನೆ ಪುಂಡರು ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ಅಷ್ಟೇ ಅಲ್ಲ, ಆ ಸ್ಥಳ ನಮಗೆ ‘ಅಯೋಧ್ಯೆ’ಯಷ್ಟೇ ಪವಿತ್ರ. ಅಂತ್ಯಕ್ರಿಯೆ ಸ್ಥಳದಲ್ಲಿ ನಿರ್ಮಿಸಿರುವ ರಚನೆಯನ್ನು ಶಿವಸೇನೆ ತೆರವುಗೊಳಿಸುವುದಿಲ್ಲ ಎಂದು ಸಂಜಯ್ ರಾವತ್ ಗುಡುಗಿದ್ದಾರೆ. ಈ ಮೂಲಕ, ಭವಿಷ್ಯದಲ್ಲಿ ಮುಂಬೈಯೊಳಗೆ ವಿವಾದಿತ ಅಯೋಧ್ಯೆಯೊಂದನ್ನು ಸೃಷ್ಟಿಸುವ ಸಂದೇಶವನ್ನೂ ನೀಡಿದ್ದಾರೆ. ಅತ್ಯಂತ ವಿಷಾದನೀಯ ಸಂಗತಿಯೊಂದನ್ನು ಈ ಸಂದರ್ಭದಲ್ಲಿ ನಾವು ನೆನಪು ಮಾಡಿಕೊಳ್ಳಬೇಕಾಗಿದೆ. ಈ ಹಿಂದೆ ಡಾ. ಬಿ. ಆರ್. ಅಂಬೇಡ್ಕರ್ ಅವರು ನಿಧನರಾದಾಗ ಇದೇ ಶಿವಾಜಿ ಪಾರ್ಕ್‌ನಲ್ಲಿ ಅವರ ಅಂತ್ಯ ಕ್ರಿಯೆ ನಡೆಸಲು ಅನುಮತಿ ಬೇಡಲಾಗಿತ್ತು. ಆದರೆ ಅಂದಿನ ಸರಕಾರ ಅದಕ್ಕೆ ಅನುಮತಿ ನೀಡಲಿಲ್ಲ. ಈ ದೇಶದ ತುಳಿಯಲ್ಪಟ್ಟ ಒಂದು ದೊಡ್ಡ ಸಮುದಾಯದ ಆತ್ಮಾಭಿಮಾನವನ್ನು ಎಚ್ಚರಿಸಿದ, ಅವರನ್ನು ತುಳಿದ ಮಂದಿಯಲ್ಲಿ ಪಾಪಪ್ರಜ್ಞೆಯನ್ನು ಬಿತ್ತಿ, ಅವರನ್ನೂ ಉನ್ನತಿಗೇರಿಸಿದ ಅಂಬೇಡ್ಕರ್‌ಗೆ ಸಿಗದ ಅವಕಾಶ, ಹಿಂಸೆಯ ತಳಹದಿಯಲ್ಲಿ ರಾಜಕೀಯ ನಡೆಸುತ್ತಾ, ಭಾಷೆ, ಧರ್ಮದ ಹೆಸರಲ್ಲಿ ದ್ವೇಷವನ್ನು ಬಿತ್ತಿ ರಾಜಕೀಯ ಪಕ್ಷವನ್ನು ಕಟ್ಟಿದ ನಾಯಕನಿಗೆ ಸಿಕ್ಕಿತು. ಇದೀಗ ಶಿವಾಜಿ ಪಾರ್ಕ್‌ನಲ್ಲಿ ಬಾಳಾಠಾಕ್ರೆಯ ಸ್ಮಾರಕವನ್ನು ನಿರ್ಮಿಸಲು ಪ್ರಯತ್ನ ನಡೆಯುತ್ತಿದೆ. ಈ ಶಿವಾಜಿ ಪಾರ್ಕ್‌ನಲ್ಲಿ ಈ ನೆಲದ ನಿಜವಾದ ಹೋರಾಟಗಾರ, ಬಂಡಾಯಗಾರ ಶಿವಾಜಿಯ ಪ್ರತಿಮೆಯಿದೆ. ಒಂದು ವೇಳೆ, ಠಾಕ್ರೆಯ ಪ್ರತಿಮೆ ಇದಕ್ಕೆ ಸ್ಪರ್ಧೆ ನೀಡಿದರೆ, ಶಿವಾಜಿಗೆ ಮಾಡುವ ಅತಿ ದೊಡ್ಡ ಅವಮಾನ.

ಶಿವಾಜಿಯ ವ್ಯಕ್ತಿತ್ವವನ್ನು ವಿರೂಪಗೊಳಿಸಿ, ಆತನನ್ನು ತನ್ನ ರಾಜಕೀಯ ಅಜೆಂಡಾಗಳಿಗೆ ಬಳಿಸಿದ ಹೆಗ್ಗಳಿಕೆ ಬಾಳಾಠಾಕ್ರೆಯದು. ಶಿವಾಜಿ ಪಾರ್ಕ್‌ನಲ್ಲಿ ಯಾಕೆ ಬಾಳಾಠಾಕ್ರೆಗೆ ಅವಕಾಶ ನೀಡಬಾರದು ಎನ್ನುವುದಕ್ಕೆ ನಾವೊಮ್ಮೆ ಶಿವಾಜಿಯ ಬದುಕಿನ ಪುಟಗಳನ್ನು ಹಿಂದಕ್ಕೆ ಬಿಡಿಸಿದರೆ ಸಾಕು, ತಿಳಿದು ಬಿಡುತ್ತದೆ. ಬಾಳಾಠಾಕ್ರೆ ಮಾತ್ರವಲ್ಲ, ಇಡೀ ಸಂಘಪರಿವಾರ ಶಿವಾಜಿಯ ವ್ಯಕ್ತಿತ್ವಕ್ಕೆ ಮಾಡಿದ ಅನ್ಯಾಯ ಬಯಲಾಗಿ ಬಿಡುತ್ತದೆ. ಇಂದು ಈ ದೇಶದ ಹೊಸತಲೆಮಾರಿಗೆ ಶಿವಾಜಿಯೆಂದರೆ, ಮೊಗಲರ ವಿರುದ್ಧ, ಮುಸ್ಲಿಮರ ವಿರುದ್ಧ ಹೋರಾಡಿದ ಒಬ್ಬ ಹಿಂದೂ ಸಾಮ್ರಾಟ ಮಾತ್ರ. ಇದು ಸಂಘಪರಿವಾರ ಮತ್ತು ಠಾಕ್ರೆ ಬಳಗ ಶಿವಾಜಿಯನ್ನು ವಿರೂಪಗೊಳಿಸಿದ ಪರಿ. ಮಳೆ ಬಿದ್ದ ನೆಲದಲ್ಲಿ ಬೀಜ ಸಹಜವಾಗಿ ಪುಟಿಯೊಡೆಯು ವಂತೆ ಶಿವಾಜಿ ಈ ನೆಲದಿಂದ ಎದ್ದು ಬಂದ. ಅವನನ್ನು ತಿಳಿಯದೇ ಇರುವ ಮಕ್ಕಳು, ಈ ನೆಲದ ಸ್ಪರ್ಶವನ್ನು ತನ್ನದಾಗಿಸಿಕೊಳ್ಳಲಾರರು. ಠಾಕ್ರೆ ಮತ್ತು ಸಂಘಪರಿವಾರದ ಹೀನ ರಾಜಕೀಯವನ್ನು ಅರ್ಥ ಮಾಡಿಕೊಳ್ಳುವ ಒಂದೇ ಒಂದು ಸುಲಭ ವಿಧಾನವೆಂದರೆ, ಶಿವಾಜಿಯ ಬದುಕಿನ ಪುಟಗಳನ್ನು ಬಿಡಿಸುವುದು. ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು.
***
ಕರ್ನಾಟಕದ ಪಾಲಿಗೆ ಟಿಪ್ಪು ಸುಲ್ತಾನ್ ಹೇಗೆಯೋ ಹಾಗೆಯೇ ಮಹಾರಾಷ್ಟ್ರಕ್ಕೆ ಶಿವಾಜಿ. ಇವರ ನೋವು, ದುಮ್ಮಾನ, ಹೋರಾಟ, ಸಂಘರ್ಷ, ಇವರಿಗಾದ ವಂಚನೆ ಮತ್ತು ಇವರ ಅಂತ್ಯಗಳಲ್ಲಿ ಹಲವು ಸಾಮ್ಯತೆಗಳಿವೆ. ಶಿವಾಜಿಗೂ ಟಿಪ್ಪುವಿಗೂ ಇರುವ ಎರಡು ಮುಖ್ಯ ವ್ಯತ್ಯಾಸಗಳೆಂದರೆ, ಟಿಪ್ಪುವಿಗೆ ಹೈದರಾಲಿಯ ಮೂಲಕ ರಾಜ್ಯ ಸಿಕ್ಕಿತು. ಆದರೆ ಶಿವಾಜಿ ಆದಿವಾಸಿಗಳು, ದಲಿತರು, ಬುಡಕಟ್ಟು ಜನರು ಮತ್ತು ಮುಸ್ಲಿಮರನ್ನು ಕಟ್ಟಿಕೊಂಡು ಒಂದು ಹೊಸ ಸಾಮ್ರಾಜ್ಯವನ್ನು ಕಟ್ಟಿದ. ಟಿಪ್ಪು ವಿದ್ಯಾವಂತನಾಗಿದ್ದ. ಅವನಲ್ಲಿ ವೈಜ್ಞಾನಿಕ ದೂರದೃಷ್ಟಿಯಿತ್ತು. ಶಿವಾಜಿ ನೆಲದಿಂದ ಸಿಡಿದು ಬಂದ ಸಹಜ ಮರ. ಶೌರ್ಯ, ಎದೆಗಾರಿಕೆಯೇ ಅವನ ಪಾಲಿನ ವರ. ಇಬ್ಬರಲ್ಲೂ ಇನ್ನೊಂದು ಮುಖ್ಯ ಸಾಮ್ಯತೆಯಿತ್ತು. ಈ ನೆಲದ ಮೇಲ್ವರ್ಣೀಯರ ಪಾಲಿಗೆ ಟಿಪ್ಪು ಮ್ಲೇಚ್ಛನಾಗಿ ದ್ದರೆ, ಶಿವಾಜಿ ಮೇಲ್ಜಾತಿಯವರ ಕಣ್ಣಲ್ಲಿ ಶೂದ್ರ ಅದರಲ್ಲೂ ಹೀನ ಜಾತಿಯವನಾಗಿದ್ದ. ಹಲವರ ಕಣ್ಣಲ್ಲಿ ಹಲವು ರೂಪಗಳನ್ನು ಶಿವಾಜಿ ಪಡೆದಿದ್ದ. ಸಂಘಪರಿವಾರದ ಕಣ್ಣಲ್ಲಿ ಶಿವಾಜಿ ಹಿಂದೂ ಸಾಮ್ರಾಟ. ದಲಿತರ ಕಣ್ಣಲ್ಲಿ ಶಿವಾಜಿ ಅಪ್ಪಟ ಬ್ರಾಹ್ಮಣ ವಿರೋಧಿ. ಬ್ರಾಹ್ಮಣರು ಶಿವಾಜಿಗೆ ಮಾಡಿದ ವಂಚನೆ, ಮತ್ತು ಶಿವಾಜಿಯಿಂದ ನಡೆದ ಹಲವು ಬ್ರಾಹ್ಮಣರ ಹತ್ಯೆಯನ್ನು ಇಟ್ಟುಕೊಂಡು ತಮ್ಮ ವಾದವನ್ನು ಮಂಡಿಸುತ್ತಾರೆ. ಮುಸ್ಲಿಮರು ಶಿವಾಜಿಯ ಕುರಿತಂತೆ ವೌನವನ್ನು ತಳೆದಿದ್ದಾರೆ. ಬಹುಶಃ ಸಂಘಪರಿವಾರ ಶಿವಾಜಿಯನ್ನು ವಿರೂಪಗೊಳಿಸಿದ ಕಾರಣ ವಿರಬಹುದು. ಶಿವಾಜಿ ನಡೆಸಿದ ಗೆರಿಲ್ಲಾ ಯುದ್ಧದ ಕಾರಣಕ್ಕಾಗಿ ಅವನನ್ನು ಡಕಾಯಿತ ಗುಂಪಿನ ನಾಯಕ ಎಂದು ವಾದ ಮಂಡಿಸುವವರೂ ಇದ್ದಾರೆ. ಒಂದಂತೂ ಸತ್ಯ. ಶಿವಾಜಿ ಯಾವುದೇ ನಿರ್ದಿಷ್ಟವಾದ ಸಿದ್ಧಾಂತ, ಅಜೆಂಡಾಗಳನ್ನು ಇಟ್ಟುಕೊಂಡು ಹೊರಟವನಲ್ಲ. ಬಂಡಾಯ ಶಿವಾಜಿಯ ಮೂಲಗುಣ. ಅವನ ದಾರಿಯಲ್ಲಿ ಎದುರಾದ ಎಲ್ಲರ ವಿರುದ್ಧವೂ ಹೋರಾಡಿದ. ಮರಾಠರು, ಮೊಗಲರು, ಬ್ರಾಹ್ಮಣರು ಎಲ್ಲರೂ ಅವನ ದಾರಿಯಲ್ಲಿ ಎದುರಾದರು. ಇದೇ ಸಂದರ್ಭದಲ್ಲಿ ಅವನ ಬೆಂಬಲವಾಗಿ ಮುಸ್ಲಿಮರು, ಬ್ರಾಹ್ಮಣರು, ಮರಾಠರೂ ಇದ್ದರು.

ಶಿವಾಜಿಯ ಬದುಕು ಹೋರಾಟದಲ್ಲೇ ಮುಗಿಯಿತು. ಅವನು ರಾಜ್ಯಾಭಿಷೇಕವಾದ ಬಳಿಕ ಬದುಕಿದ್ದು ಬರೇ ಆರು ವರ್ಷ. ರಾಜ್ಯ ಪದವಿಯನ್ನು ಅನುಭವಿಸುವುದಕ್ಕೆ ಅವನಿಂದಾಗ ಲಿಲ್ಲ. ಅಕಾಲ ಮರಣಕ್ಕೆ ಶಿವಾಜಿ ತುತ್ತಾದ. ಸತ್ತು ಒಂದು ವಾರದ ಬಳಿಕವಷ್ಟೇ ಜನರಿಗೆ ಗೊತ್ತಾಯಿತು ಶಿವಾಜಿ ಸತ್ತ ವಿಷಯ. ಆತನಿಗೆ ವಿಷ ಉಣಿಸಿ ಕೊಲ್ಲಲಾಯಿತು ಎನ್ನುತ್ತಾರೆ. ಟಿಪ್ಪುವಿನ ಮರಣವೂ ನಡೆದಿರುವುದು ವಂಚನೆ ಯಿಂದಲೇ ತಾನೆ. ನಿಜಾಮರು, ಮರಾಠರು, ಮೀರ್‌ಸಾದಿಕ್, ಪೂರ್ಣಯ್ಯ ಎಲ್ಲರೂ ಸೇರಿ ಮಾಡಿದ ವಿಷಪ್ರಾಷಣದ ಫಲ, ಟಿಪ್ಪುವಿನ ಭೀಕರ ಸೋಲು ಮತ್ತು ಮರಣ.

 ಶಿವಾಜಿಯ ಪಟ್ಟಾಭಿಷೇಕವೇ ಒಂದು ದುರಂತವಾಗಿ ಹೋಯಿತು. ಅವನ ಪಟ್ಟಾಭಿಷೇಕ ನಡೆಸಲು ಅಂದಿನ ಬ್ರಾಹ್ಮಣರು ಒಪ್ಪಲಿಲ್ಲ. ಯಾಕೆಂದರೆ ಶಿವಾಜಿ ಭೋಸಲೆ ಕೀಳು ಜಾತಿಗೆ ಸೇರಿದಾತ. ರಾಜ್ಯದ ಚಕ್ರವರ್ತಿಯಾಗಬೇಕಾದರೆ ಆತ ಕ್ಷತ್ರಿಯನಾಗಿರಬೇಕು. ಅಂತಿಮವಾಗಿ ಕಾಶಿಯ ಗಾಗಾಭಟ್ಟನನ್ನು ಅತಿ ಹಣದ ಆಮಿಶವೊಡ್ಡಿ ಕರೆತರಲಾಯಿತು. ಅವನಿಗೂ ಅವನ ಶಿಷ್ಯರಿಗೂ ಶಿವಾಜಿ ನೀಡಿದ ದಕ್ಷಿಣೆಯನ್ನು ಕೋಟೆಯಿಂದ ಒಯ್ಯುವುದಕ್ಕೇ ಶ್ರಮ ಪಡಲಾಯಿತು ಎಂಬ ಮಾತಿದೆ. ಗಾಗಾ ಭಟ್ಟ ಶಿವಾಜಿಯನ್ನು ಶುದ್ಧೀಕರಿಸಿದ ಮಾತ್ರವಲ್ಲ, ಆತನಿಗೆ ನಲವತ್ತರ ವಯಸ್ಸಿನಲ್ಲಿ ಹೊಸದಾಗಿ ಉಪನಯನ ಮಾಡಿದ. ಅಷ್ಟೇ ಅಲ್ಲ, ಹೊಸದಾಗಿ ವೈದಿಕ ಪದ್ಧತಿಯ ಪ್ರಕಾರ ಮದುವೆ ಮಾಡಿಸಿದ. ಇದಾದ ಬಳಿಕವಷ್ಟೇ ಶಿವಾಜಿಗೆ ಪಟ್ಟಾಭಿಷೇಕ ಮಾಡಲಾಯಿತು.

  ಸರಿ. ಹೀಗಾದರೂ ಈ ಪಟ್ಟಾಭಿಷೇಕ ಯಶಸ್ವಿಯಾಯಿತೇ? ಎಂದರೆ ಅದೂ ಇಲ್ಲ. ಶಿವಾಜಿಯ ಮೊದಲ ರಾಜ್ಯಾಭಿಷೇಕ ನಡೆದದ್ದು ರಾಯಗಡದಲ್ಲಿ. ಜೂನ್ 6, 1674ರಲ್ಲಿ. ಇದಾದ ಬಳಿಕ ಮತ್ತೆ ಶೈವರು ತಗಾದೆ ತೆಗೆದರು. ಶಿವಾಜಿಯ ಪಟ್ಟಾಭಿಷೇಕ ಸರಿಯಾಗಿ ನಡೆದಿಲ್ಲ ಎಂದು ಟೀಕಿಸತೊಡಗಿ ದರು. ಇದೇ ಸಂದರ್ಭದಲ್ಲಿ ಶಿವಾಜಿಯ ತಾಯಿ ಜೀಜಾಬಾಯಿ ತೀರಿಕೊಂಡರು. ಇನ್ನೋರ್ವ ಸೇನಾಪತಿ ಅಸುನೀಗಿದ್ದ. ಪತ್ನಿ ಕಾಶಿಬಾಯಿ ಮೃತ್ಯುವಶರಾದರು. ಇದೆಲ್ಲಕ್ಕೂ ಕಾರಣ ಗಾಗಾ ಭಟ್ಟ ಮಾಡಿದ ರಾಜ್ಯಾಭಿಷೇಕ ಎಂದು ಪುಕಾರು ಹಬ್ಬಿಸಲಾಯಿತು. ಜನರನ್ನು ಸಂತುಷ್ಟಿಗೊಳಿಸುವುದಕ್ಕಾಗಿಯೇ ಮೂರೇ ತಿಂಗಳಲ್ಲಿ ಮತ್ತೊಮ್ಮೆ ರಾಜ್ಯಾಭಿಷೇಕವನ್ನು ಮಾಡಿಸಿಕೊಳ್ಳಬೇಕಾಯಿತು. ಯಜುರ್ವೇದಿ ತಾಂತ್ರಿಕ ಗೋಸ್ವಾಮಿಯೊಬ್ಬನ ನೇತೃತದಲ್ಲಿ ಈ ರಾಜ್ಯಾಭಿಷೇಕ ನಡೆಯಿತು. ಇದು ಶಿವಾಜಿ ಆಡಳಿತದಲ್ಲಿ ಶೈವರು ಮತ್ತು ವೈದಿಕ ಬ್ರಾಹ್ಮಣರ ನಡುವಿನ ತಿಕ್ಕಾಟಕ್ಕೆ ಕಾರಣವಾಯಿತು. ಆಳದಲ್ಲಿ ಬ್ರಾಹ್ಮಣರು ಶಿವಾಜಿ ಯನ್ನು ಒಪ್ಪಿಕೊಂಡಿರಲೇ ಇಲ್ಲ. ಈ ಎಲ್ಲ ಸಂಘರ್ಷದ ನಡುವೆ ಆರು ವರ್ಷ ಆಡಳಿತ ನಡೆಸಿದ ಶಿವಾಜಿ ಅಕಾಲಿಕವಾಗಿ ಮರಣವಪ್ಪಿದ.

ಶಿವಾಜಿಯನ್ನು ಜಾತಿಯ ಕಾರಣಕ್ಕಾಗಿ ಕೆಲವು ಮೇಲ್ವರ್ಣೀ ಯರು ರಾಜನೆಂದು ಒಪ್ಪಿಕೊಂಡಿರಲೇ ಇಲ್ಲ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ.ರಾಂಝ್ಯದ ಪಾಟೀಲನೊಬ್ಬ ರೈತನ ಮಗಳನ್ನು ಬಲಾತ್ಕಾರ ಮಾಡಿದನೆಂಬ ಕಾರಣಕ್ಕೆ ಅವನನ್ನು ಹೆಡೆಮುರಿ ಕಟ್ಟಿ ಪುಣೆಯಲ್ಲಿ ಶಿವಾಜಿಯ ಎದುರಿಗೆ ತರಲಾಯಿತು. ಶಿವಾಜಿ ಪಾಟೀಲನಿಗೆ ಶಿಕ್ಷೆಯನ್ನು ಆದೇಶಿದ. ಆಗ ಪಾಟೀಲ, ಸಭೆಯಲ್ಲಿ ಹಾಜರಾಗಿದ್ದ ದಾದೋಜಿ ಕೊಂಡದೇವನಿಗೆ ಹೇಳಿದ ‘‘ಪಂತ ಕುಲೀನ ಮನೆತನದವರು ನ್ಯಾಯ ನೀಡಲಿ’’
 ನೇರವಾಗಿ ಶಿವಾಜಿಯನ್ನು ಪಾಟೀಲ ನಿಂದಿಸಿದ್ದ. ‘‘ಶಿವಾಜಿ ಕೆಳಜಾತಿಯವನಾಗಿ ರುವುದರಿಂದ ನನ್ನ ವಿರುದ್ಧ ನ್ಯಾಯ ನೀಡಲು ಅವನಿಗೆ ಅರ್ಹತೆಯಿಲ್ಲ’’ ಎಂದು ಹೇಳಿದ್ದ. ಮರಾಠ ಸರದಾರರಲ್ಲೂ ಹಲವರಿಗೆ ಶಿವಾಜಿಯನ್ನು ರಾಜನೆಂದು ಒಪ್ಪಿಕೊಳ್ಳಲು ಮುಜುಗರವಿತ್ತು. ಮರಾಠ ಕ್ಷತ್ರಿಯ ಕುಲವೆಂದು 96 ವಿಭಾಗಗಳನ್ನು ಉಲ್ಲೇಖಿಸುತ್ತದೆ. ಅದರಲ್ಲಿ ಭೋಸಲೆ ಎಂಬ ಹೆಸರಿಲ್ಲ. ಶಿವಾಜಿಯು ಭೋಸಲೆ ಅಡ್ಡ ಹೆಸರನ್ನು ಹೊಂದಿದ್ದ. ಮಹಾತ್ಮ ಜೋತಿಭಾ ಫುಲೆಯವರು ತಮ್ಮ ಪೋವಾಡೆ ಯಲ್ಲಿ ಶಿವಾಜಿಯನ್ನು ‘‘ಕೃಷಿಕ ಭೂಷಣ’’ ಎಂದು ಕರೆದಿರುವುದು ಇದೇ ಕಾರಣಕ್ಕೆ. ಶಿವಾಜಿ ರೈತ ಅಥವಾ ಕೃಷಿಕ ಸಮುದಾಯದಲ್ಲಿ ಬೆಳೆದು ಬಂದವನಾಗಿದ್ದ.

ಶಿವಾಜಿ ಸಾಮ್ರಾಜ್ಯ ಕಟ್ಟುವ ಸಂದರ್ಭದಲ್ಲಿ ಅವನ ಜೊತೆ ಜೊತೆಗೆ ಹೆಜ್ಜೆಯಿಟ್ಟವರಾರು. ಪ್ರಾಣಕ್ಕೆ ಪ್ರಾಣ ಕೊಟ್ಟು ಅವನನ್ನು ಕಾಪಾಡಿದವರಾರು? ಅವನಿಗೆ ದ್ರೋಹ ಬಗೆದವರಾರು? ಎಂಬಿತ್ಯಾದಿ ಪುಟಗಳನ್ನು ಬಿಡಿಸುತ್ತಾ ಹೋದರೆ ನಮ್ಮ ಎದೆ ಧಸ್ಸೆನ್ನುತ್ತದೆ. ಅದನ್ನು ಮುಂದಿನ ವಾರ ಹಂಚಿಕೊಳ್ಳುವೆ.

Tuesday, November 27, 2012

ದಿಕ್ಕೆಟ್ಟಿರುವ ಈ ಹೊತ್ತಿನಲ್ಲಿ ಜಗತ್ತಿನ ಅಂಕೆ ಹಿಡಿದವರು ಯಾರು?
-ಮಹದೇವ ಹಡಪದ


ಚಳವಳಿಗಳು ಸತ್ತಿವೆಯೇ, ಮೊಟಕಾಗಿವೆಯೇ, ಸೊರಗಿವೆಯೇ, ಅಥವಾ ಇಂದಿನ ಈ ಕಾಲಗರ್ಭದಲ್ಲಿ ಎಲ್ಲ ರೀತಿಯಿಂದಲೂ ಅಸಮತೆಗಳಿದ್ದರೂ ಸಮಾನತೆ ಬಂದಿದೆ ಎಂದು ಭಾವಿಸಿಕೊಂಡು ಮನುಷ್ಯ ತೆಪ್ಪಗಾಗಿದ್ದಾನೆಯೇ? ಚಳವಳಿಗಳ ಸಾಂಘಿಕ ಶಕ್ತಿ, ಆಲೋಚನಾ ಕ್ರಮಗಳು ಬದಲಾಗಿವೆಯೇ? ಇರುವ ವ್ಯವಸ್ಥೆ ಹೇಗಿದೆಯೋ ಹಾಗೇ ಇರುವಾಗ ಜಗತ್ತು ಬದಲಾಗಿದೆ ಎಂಬ ಭ್ರಮೆ ಆಂತರಿಕ ಶತ್ರುವಾಗಿ ಪ್ರವೇಶ ಪಡೆದ ರೀತಿ ಯಾವ ಬಗೆಯದು? ಚಳವಳಿಗಳು ಸಮರ್ಥ ನಾಯಕತ್ವದ ಕೊರತೆಯಿಂದಾಗಿ ಹಿಮ್ಮುಖವಾದವೇನು? ಅಧಿಕಾರದ ದಾಹ ಸಾಮಾನ್ಯ ಕಾರ್‍ಯಕರ್ತನಲ್ಲೂ ಆಸೆಯ ಬೀಜ ಬಿತ್ತಿದವೋ?
ರಾಶಿ ಮಾಡುವ ರೈತ ಕಾಳುಗಳಲ್ಲಿನ ಕಸ-ಕಡ್ಡಿ ತೆಗೆಯಲು ಗಾಳಿಗೆ ರಾಶಿ ತೂರುತ್ತಾನೆ. ಆ ತೂರುವ ಕ್ರಿಯೆಗೆ ಒಂದೇ ದಿಕ್ಕಿಗೆ ಚಲಿಸುವ ಗಾಳಿ ಬರಬೇಕು. ಆಗ ಮಾತ್ರ ಹೊಟ್ಟು-ಕಾಳು ಬೇರೆ ಬೇರೆ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ಆತ ದಿನಗಟ್ಟಲೇ ಗಂಟೆಗಟ್ಟಲೇ ಗಾಳಿಗೆದುರಾಗಿ ಕಾಯುತ್ತಾನೆ. ಸುತ್ತ ನಾಲ್ಕೂ ಕಡೆಗೆ ಬೀಸುವ ಹುಂಡಗಾಳಿಗೆ ಮೊರ ಹಿಡಿದು ತೂರಲು ಸಾಧ್ಯವಿಲ್ಲ ಹೇಗೋ ಹಾಗೇ… ಈ ಗೋಳೀಕರಣದ ವಿವಿಧ ಮಜಲಿನ ಮೈ-ಮಾಟಗಳಲ್ಲಿ ಹುಂಡಗಾಳಿಯ ಪರಿಣಾಮದಿಂದಾಗಿ ಸಾಮಾಜಿಕ ಸ್ವಾಸ್ತ್ಯ ಬಯಸುವ ಚಳವಳಿಗಳ ಅಸ್ತಿತ್ವವೂ ಗೊಂದಲಗೊಂಡಿದೆಯೇನೋ ಅನ್ನಿಸುತ್ತಿದೆ. ಚಳವಳಿಗಳ ಅಸ್ತಿತ್ವ ಒತ್ತಟ್ಟಿಗಿರಲಿ, ಅಧಿಕಾರದ ದಾರ್ಷ್ಟ್ಯ, ದುರಾಡಳಿತ, ಮತಾಂಧ ಯೋಜನೆಗಳನ್ನು, ಪಟ್ಟಭದ್ರ ಹಿತಾಸಕ್ತಿಗಳನ್ನು ಪ್ರಶ್ನಿಸುವ, ಧಿಕ್ಕರಿಸುವ ವೈಚಾರಿಕ ಮನಸ್ಸುಗಳು ಕೂಡ ಜಾಣಕುರುಡನ್ನು ಅಭಿನಯಿಸುತ್ತಿರುವುದು ಅಸಹ್ಯಕರವಾಗಿದೆ.

ಈಗ ನಾಡು-ನುಡಿ, ಸಂಸ್ಕೃತಿಗಳ ಕುರಿತಾಗಿ ಬೃಹತ್ತಾದ ಉತ್ಸವಗಳನ್ನು ಶಿಕ್ಷಣ ಸಂಸ್ಥೆಗಳು, ಮಠಗಳು, ಪ್ರಭಾವಿ ವ್ಯಕ್ತಿಗಳು ನಡೆಸುತ್ತಿದ್ದಾರೆ. ಅಲ್ಲೆಲ್ಲ ಚಳವಳಿಗಳು, ಸಾಮಾಜಿಕ ಸಮಸ್ಯೆಗಳನ್ನಲ್ಲದೆ ಮನುಷ್ಯನ ಬದುಕಿನ ತೀವ್ರತೆಯ ಕುರಿತಾಗಿ ದೀರ್ಘ ಚರ್ಚೆಗಳು, ಭಾಷಣಗಳು, ಠರಾವುಗಳು. ಹೀಗೆ ಮಾತಿನಲ್ಲೇ ಸಮಸ್ಯೆಗಳನ್ನು ಸೃಷ್ಟಿಸಿ ಪರಿಹಾರವನ್ನೂ ಕೊಟ್ಟುಬಿಡುವ ತಂತ್ರಗಾರಿಕೆಯೂ ಹುಂಡಗಾಳಿಗೆ ತೂರಿಬಿಡುವ ಕ್ರಿಯೆ ಆಗಿಬಿಟ್ಟಿದೆ. ಶಿವನ ಬೆವರ ಹನಿಯಿಂದ ಉದ್ಭವಿಸಿದ ವೀರಭದ್ರ,,, ದಕ್ಷಬ್ರಹ್ಮನ ಯಜ್ಞದ ಅಗ್ನಿ ನಾಶ ಮಾಡುವುದರೊಂದಿಗೆ ಆರಂಭವಾಗುವ ಪ್ರತಿಕ್ರಿಯಾತ್ಮಕ ಅಭಿಯಾನ ಇಂದಿನ ಕಾಲಘಟ್ಟದಲ್ಲಿ ಸಂಪೂರ್ಣ ನಿಂತೇ ಹೋಗಿದೆ ಅಂದರೆ, ಒಳಗೊಳ್ಳುವಿಕೆಯ ಕುಟಿಲ ನೀತಿಗೆ ಶಿವನ ಸಂಸ್ಕೃತಿ ಬಲಿಯಾಗಿದೆ ಅನ್ನುವುದು ನಿಶ್ಚಿತ. ಸಾಮಾಜಿಕ ವಾತಾವರಣದಲ್ಲಿ ಸಮಾನತೆ ಮಂತ್ರ ಒಂದು ಬೂಟಾಟಿಕೆಯ ತಂತ್ರವಾಗಿದೆ. ಸೋದರತೆಯೆಂಬುದು ಕೇವಲ ದೇಶಪ್ರೇಮದಲ್ಲಿ ಒಂದಾಗುವ, ಧರ್ಮಪ್ರೀತಿಯಲ್ಲಿ ಬೆಸೆದುಕೊಳ್ಳುವ ಹುಚ್ಚುಕಲ್ಪನೆಯ ಆದರ್ಶವಾಗಿ ಉಳಿದಿರುವಾಗ, ಭಾರತದಲ್ಲಿನ ಹಿಂದುಳಿದ ವರ್ಗದವರಿಗೆ ಪುರಾಣಗಳ, ದೇವದೇವರ ನಡುವಿನ ವ್ಯತ್ಯಾಸ ಉನ್ಮತ್ತ ಭಕ್ತಿಯ ಪರಾಕಾಷ್ಠೆ ಆಗಿದೆ. ಬ್ರಾಹ್ಮಣ್ಯದ (ಬ್ರಾಹ್ಮಣ್ಯ ಎಂಬುದು ಜಾತಿಯಲ್ಲ) ಕುಹಕ ನೀತಿ ಹುಟ್ಟುಹಾಕಿರುವ ಆದರ್ಶ ರಾಜ್ಯವೇ ಮಹಾತ್ಮರುಗಳ ಕನಸಿನ ರಾಜ್ಯ ಕಲ್ಪನೆಯೂ ಆಗಿದೆ. ಅಲ್ಲಿ ಈ ಯಾವ ಜನತಂತ್ರದ ಆಡಳಿತ, ಸುವ್ಯವಸ್ಥಿತ ಕಾನೂನು ಬೇಕಾಗುವುದಿಲ್ಲ. ಇವರ ಕಾಯ್ದೆಗಳನ್ನು ಮಾನ್ಯ ಮಾಡುವ ಸಚಿವಾಲಯಗಳು ಅಂದ್ರೆ ಮಠಗಳು.

ಇಂದು ಸಮಾಜ ಅನ್ನೋದು ಜಾತಿಯನ್ನಾಧರಿಸಿದ ಒಂದು ಕೋಮಿನ ಸಂಘಟನೆಯಾಗಿದೆ. ಲಿಂಗಾಯತ ಸಮಾಜ, ಬ್ರಾಹ್ಮಣ ಸಮಾಜ, ದಲಿತ ಸಮಾಜ, ಕುರುಬ ಸಮಾಜ, ಮುಸ್ಲಿಮ್ ಸಮಾಜ ಎಂಬ ವರ್ಗೀಕರಣಗಳು ಜನತಂತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಳಸಿಕೊಳ್ಳುತ್ತಿರುವ ಉಪಾಯಗಳಾಗಿವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಮತ್ತೆ ಮತ್ತೆ ಪ್ರಾದೇಶಿಕ ಪಕ್ಷಗಳು ನೆಲಕಚ್ಚುತ್ತಿರುವುದಕ್ಕೆ ಈ ವರ್ಗೀಕರಣವೇ ಕಾರಣವಿರಬಹುದು. ಚಳವಳಿಗಳು ಹುಟ್ಟುಹಾಕಿದ್ದ ರಾಜಕೀಯ ತೀವ್ರತೆಯನ್ನು ಅರ್ಥೈಸಿಕೊಳ್ಳಬೇಕಾದ ಹೊತ್ತಿನಲ್ಲಿಯೇ ಜಾತಿಯಾಧಾರಿತ ಸಮಾಜ ಕಲ್ಪನೆಗಳು ನಾಯಕತ್ವದ ಗೊಂದಲವನ್ನೆಬ್ಬಿಸಿ, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಚಳವಳಿಯ ಪ್ರಜ್ಞೆಗಳನ್ನು ನಾಶಗೊಳಿಸುತ್ತಿವೆ.
ಚಳವಳಿಗಳು ರೂಪಿಸಿದ್ದ ಪ್ರಜ್ಞೆ – ಜಾತಿ ಪ್ರಜ್ಞೆಯಾಗಿ ಬೆಳೆದಂತೆ ಮನುಷ್ಯ ನಿರ್ಮಿತ ಮೌಲ್ಯಗಳು ಹೆಚ್ಚು ಸಂಕೀರ್ಣಗೊಂಡವು. ಜ್ಞಾನದ ಆಕರಗಳು ಅಕ್ಷರವಂತರ ಕೈಗೆ ಸುಲಭದಲ್ಲಿ ಸಿಗುವಂತಾದ ಮೇಲೆ ಶೋಷಣೆಯ ರೂಪಗಳು ಹೊಸ ಮುಖವಾಡಗಳೊಂದಿಗೆ ಪ್ರತ್ಯಕ್ಷವಾದವು. ಅಂಬೇಡ್ಕರ್, ಲೋಹಿಯಾ ಮತ್ತು ಮಾರ್ಕ್ಸ, ಈ ಮೂವರ ಆಲೋಚನೆಗಳ ಪರಿಣಾಮದಿಂದಾಗಿ ಭಾರತದ ನಾಗರೀಕ ಸಮಾಜದಲ್ಲಿ ಮಹತ್ವದ ತಿರುವುಗಳನ್ನು ಕಾಣಲು ಸಾಧ್ಯವಾಯಿತು. ಮಾನವೀಯ ಹಕ್ಕುಗಳ ಹೋರಾಟದ ಪರ್ವ ಸ್ವಾತಂತ್ರ್ಯಪೂರ್ವದಲ್ಲಿಯೇ ಅಲ್ಲಲ್ಲಿ ಕೆಲ ನಾಯಕರುಗಳ, ಉದಾತ್ತ ರಾಜರುಗಳ, ಸಂತರ, ಸಮಾಜಸುಧಾರಕರ ನೇತೃತ್ವದಲ್ಲಿ ಆರಂಭವಾದರೂ, ಚಳವಳಿಯಾಗಿ ರೂಪಗೊಂಡದ್ದು ಈ ಮೂರು ಜನರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಒಳನೋಟದ ತೀಕ್ಷ್ಣ ದೃಷ್ಟಿಕೋನದಲ್ಲಿಯೇ ಅನ್ನಬಹುದು. ಈ ಸಾಧ್ಯತೆಯನ್ನು ಮನಗಂಡ ನಂತರವೇ ಸ್ವಾತಂತ್ರ್ಯದ ಕುರಿತಾದ ಭ್ರಮೆಗಳು ಹಕ್ಕಿನ, ಹಕ್ಕು ಚಲಾವಣೆಯ, ಸಮಾಜ ಬದಲಾವಣೆಯ ಮತ್ತು ಅಭಿವೃದ್ಧಿಯ ಕುರಿತಾದ ಆಶಯಗಳಾಗಿ ಪರಿವರ್ತನೆಯಾದವು.
ಸ್ವಾತಂತ್ರ್ಯದ ಸುಳ್ಳಾಟವು ಸತ್ಯವಾಗುತ್ತ ಹೊರಟ ಹಾದಿಯಲ್ಲಿಯೇ ಸತ್ಯದ ಸಮರ್ಥಕರು ಗ್ರಾಮೀಣವಾಸಿಗಳನ್ನು ನೀವೇ ಹೆಚ್ಚು ಸುಖವಾಗಿರುವವರು ಎಂದು ನಂಬಿಸಲು ಪ್ರಯತ್ನಿಸಿದರು. ಹಳ್ಳಿಗಳ ಅಂತಃಸತ್ವವೇ ಭಾರತದ ಭವ್ಯ ಪರಂಪರೆಯೆಂದು ನಿರೂಪಿಸಲು ಪ್ರಯತ್ನಿಸಿದರು. ಅಲ್ಲಿನ ನ್ಯಾಯಾಲಯಗಳನ್ನು, ವರ್ಗವ್ಯವಸ್ಥೆಯನ್ನು, ಊರು-ಕೇರಿಗಳನ್ನು ಹೇಗಿವೆಯೋ ಹಾಗೆಯೇ ಉಳಿಸಿಕೊಳ್ಳಲು ಹವಣಿಸುವ ಸನಾತನ ಸಂಸ್ಕೃತಿ ಆರಾಧಕರು ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಹಂಬಲಿಸಿದರು. ತಂತ್ರಕ್ಕೆ ಪ್ರತಿ ತಂತ್ರ ಹಾಕುವ ಮನಸುಗಳು ಈ ದೇಶದ ಹುಚ್ಚು ಭಾವನಾವಾದ ಮತ್ತು ಹುಚ್ಚುಚ್ಚು ಆಧ್ಯಾತ್ಮವಾದಗಳೆರಡನ್ನೂ ಒಂದರೊಡನೊಂದನ್ನು ಹೊಸೆಯಲು ಪ್ರಾರಂಭಿಸಿದರು, (ಇವತ್ತು ಬಾಬಾಸಾಹೇಬರನ್ನು ಮೂರ್ತೀಕರಿಸುತ್ತಿರುವ ದಲಿತ ಸಮುದಾಯಗಳಲ್ಲಿ ಈ ಮೇಲಿನ ಉನ್ಮತ್ತ ವಾದಗಳೆರಡೂ ಇಲ್ಲವೆಂಬುದನ್ನೂ ಮತ್ತು ಆತ್ಮಸ್ಥೈರ್ಯದ ಸಂಕೇತವಾಗಿ ಮಾತ್ರ ಡಾ|| ಅಂಬೇಡ್ಕರ್‌ರು ಇದ್ದಾರೆಂಬುದನ್ನು ವ್ಯಾಕುಲಗೊಳ್ಳುತ್ತಿರುವ ಪ್ರಗತಿಶೀಲ ಮನಸ್ಸುಗಳು ಅರ್ಥಮಾಡಿಕೊಳ್ಳಬೇಕು.) ಆ ಹೊಸೆಯುವ ಕ್ರಮದಲ್ಲಿ ಸಣ್ಣಪುಟ್ಟ ಅಸ್ತಿತ್ವಗಳೆಲ್ಲ ಭಾರತೀಯ ಆಧುನಿಕ ದರ್ಶನಗಳಾಗಿ ಉಳಿದುಕೊಳ್ಳಬೇಕಿತ್ತು. ಆದರೆ ಭಾರತೀಯತೆ ಎಂಬ ಭಾವನಾವಾದವೂ ಆಧ್ಯಾತ್ಮವಾದವೂ ಏಕಮುಖಿ ಸಂಸ್ಕೃತಿಯಾಗಿ ರೂಪುಗೊಳ್ಳುವ ಧಾವಂತದಲ್ಲಿ ಸಾವಿರಾರು ತೊರೆಗಳನ್ನು ಅಖಂಡ ಹಿಂದುತ್ವದಲ್ಲಿ ವಿಲೀನಗೊಳಿಸಿಕೊಂಡಿತು.
ಕನ್ನಡ ಕರಾವಳಿ ಜಿಲ್ಲೆಗಳಲ್ಲಿ ರೂಪಗೊಳ್ಳುತ್ತಿರುವ ಸನಾತನಿಗಳ ಹೊಸ ಅವತಾರಗಳನ್ನು, ಸಂಪ್ರದಾಯ, ಪರಂಪರೆಗಳ ವಕ್ತಾರರಂತೆ ವಹಿಸಿಕೊಂಡು ಹೋಗುತ್ತಿದ್ದ ನೈತಿಕ ಪೋಲಿಸರನ್ನು ಬೆತ್ತಲೆಗೊಳಿಸಿದ್ದ ಒಬ್ಬ ವರದಿಗಾರನನ್ನು ಜೈಲು ಸೇರಿಸುವ ಹುಂಬುತನ ಪ್ರದರ್ಶಿಸಿರುವ ಪೋಲಿಸ್ ವ್ಯವಸ್ಥೆಯೂ ಡೊನೇಶನ್ ದೊರೆಗಳ, ಮೂಲಭೂತಿಗಳ, ಧರ್ಮಾಂಧರ ಕೈ ದಾಳವಾಗಿ ನಡೆದುಕೊಂಡಿದ್ದು ಪ್ರಜಾತಂತ್ರದಲ್ಲಿನ ವ್ಯಂಗ್ಯವನ್ನು ತೋರಿಸುತ್ತದೆ. ಹೋಮಸ್ಟೇ ದಾಳಿಯ ಕುರಿತಾಗಿ ವರದಿ ಮಾಡಿದ ಸರಳ ಕಾರಣಕ್ಕಾಗಿ ನವೀನ ಸೂರಿಂಜೆಯಂಥ ದಿಟ್ಟ ಪತ್ರಕರ್ತನನ್ನು ಬಂದಿಸಲಾರರು, ಆ ಕಪ್ಪು ಕನ್ನಡಕದ ಗಿಣಿರಾಮನ ವೈಚಾರಿಕ ವಾಗ್ದಾಳಿಗೆ ತಡಯೊಡ್ಡಲು ಜಾಮೀನು ರಹಿತ ವಾರೆಂಟಗಾಗಿ ಕರಾವಳಿ ಜಿಲ್ಲೆಯ ಬಿಳಿ ಆನೆಗಳೆಲ್ಲವೂ ಶ್ರಮವಹಿಸಿರುವ ಅನುಮಾನವೂ ಇದೆ. ಆ ನೆಲದ ಬಗ್ಗೆ ಮೋಹ ಇಟ್ಟುಕೊಂಡವರು, ಅಯ್ಯೋ ಹೀಗಾಗುತ್ತಿದೆ ನನ್ನ ತವರು ಎಂದು ಅಲವತ್ತುಕೊಳ್ಳುವವರು ಗಳಗಳನೇ ಅತ್ತುಬಿಟ್ಟರೆ ಮೈಯಲ್ಲ ದುರಹಂಕಾರ ತುಂಬಿಕೊಂಡಿರುವ ಮೃದು ಮನಸಿನ ಆಸಾಮಿಗಳು ಕ್ಷಣಹೊತ್ತು ತಲ್ಲಣಿಸಿ ಅದಕ್ಕೂ ನಮ್ಮಲ್ಲೊಂದು ಬೇರುಂಟೆಂದು, ಹೊಸ ವರಸೆಯೊಂದಿಗೆ ಕೋಮು ಸಂಘಟನೆಯ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಆ ಉತ್ಸವಗಳ ಅಂತರಾಳದಲ್ಲಿ ಕಾವು ಕುಳಿತಿರುವ ಹಕ್ಕಿಯ ಉದ್ಧೇಶ ಬದಲಾದರೂ ಮೊಟ್ಟೆಯಿಂದ ಮೂಡಿಬರುವ ಶಿಶುವಿನ ರೂಪ ಭಯಂಕರವಾಗಿರುತ್ತದೆ.

ಸ್ವಚ್ಛತಾ ಕಾರ್ಮಿಕರ ಮುಕ್ತಿಯ ಮಾರ್ಗ ಯಾವುದು?

ಬೇಝ್‌ವಾಡ ವಿಲ್ಸನ್ ಮತ್ತು ಭಾಷಾ ಸಿಂಗ್


ಪ್ರತಿಯೊಬ್ಬರೂ ಪೂರ್ಣ ಮನಸ್ಸಿನಿಂದ ಆದರೆ ತಗ್ಗಿದ ದನಿಯಲ್ಲಿ ಹೇಳುತ್ತಾರೆ- ಇದು ರಾಷ್ಟ್ರೀಯ ಅವಮಾನ. ಮನಮೋಹನ್ ಸಿಂಗ್ ಮತ್ತು ಪ್ರತಿಭಾ ಪಾಟೀಲ್‌ರಿಂದ ಹಿಡಿದು ಮುಕೇಶ್ ಅಂಬಾನಿ ಮತ್ತು ಆಮೀರ್ ಖಾನ್‌ವರೆಗೆ ಈ ವಿಷಯದಲ್ಲಿ ಕಾಳಜಿ ವ್ಯಕ್ತಪಡಿಸಲು ತುದಿಗಾಲಲ್ಲಿ ನಿಲ್ಲುವ ಜನರಿಗೆ ಏನೂ ಕೊರತೆಯಿಲ್ಲ. ಆದರೆ, ಈ ಅವಮಾನದ ಭಾರ ಪೌರ ಕಾರ್ಮಿಕ ಸಮುದಾಯ ತಲೆಯ ಮೇಲೆ ಹೊರುವ ಹೆಡಿಗೆಯ ಭಾರವನ್ನು ಕಡಿಮೆ ಮಾಡಲು ಏನೂ ಮಾಡಿಲ್ಲ.
ರಾಷ್ಟ್ರೀಯ ಅವಮಾನ
ರಾಷ್ಟ್ರೀಯ ಅವಮಾನವೆಂದರೆ ರಾಷ್ಟ್ರೀಯ ಜವಾಬ್ದಾರಿಯೆಂದರ್ಥ. ಆದರೆ, ಈ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಯಾರೂ ಸಿದ್ಧರಿಲ್ಲ. ಮೂರು ದಶಕಗಳ ಹಿಂದೆ ನಾವು ಮಾನವ ಘನತೆಗಾಗಿ ಹೋರಾಟವನ್ನು ಆರಂಭಿಸಿದಾಗ ಈ ಅಮಾನವೀಯ ಪದ್ಧತಿಯು ಜಾರಿಯಲ್ಲಿರುವ ಬಗ್ಗೆ ಹಾಗೂ ಅದರ ಅರವಿನ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ ಎಂದು ನಾವು ಭಾವಿಸಿದ್ದೆವು. ಪ್ರತಿ ದಿನ ಲಕ್ಷಾಂತರ ಮಂದಿ ಪುರುಷ ಮತ್ತು ಮಹಿಳೆಯರು ಮಾನವ ತ್ಯಾಜ್ಯವನ್ನು ಸಂಗ್ರಹಿಸಿ ತಲೆಯಲ್ಲಿ ಹೊತ್ತು ವಿಲೇವಾರಿ ಮಾಡುತ್ತಿರುವುದು ತಮ್ಮ ಹಿತ್ತಲಲ್ಲೇ ನಡೆಯುತ್ತಿದ್ದರೂ ಜನರಿಗೆ ಅದರ ಬಗ್ಗೆ ಅರಿವಿಲ್ಲ ಎಂದುಕೊಂಡಿದ್ದೆವು. ಈ ಅನಾಗರಿಕ ಪದ್ಧತಿಯ ಬಗ್ಗೆ ಜನರಲ್ಲಿ ಜಾಗೃತಿ ಹುಟ್ಟಿಸಬಹುದೆಂದು ನಾವು ಭಾವಿಸಿದ್ದೆವು. ಅದು ನಮ್ಮ ಆಂದೋಲನಗಳ ಜೀವಾಳವಾಗಿತ್ತು. ಆದರೆ, ದುರಂತವೆಂದರೆ ವಿವಿಧ ಜನ ವರ್ಗಗಳಲ್ಲಿ- ರಾಜಕೀಯ ವರ್ಗ, ನೀತಿ ನಿರ್ಮಾಪಕರು, ಕಾನೂನು ವೃತ್ತಿಪರರು ಮತ್ತು ಬುದ್ಧಿಜೀವಿಗಳು- ಈ ಬಗ್ಗೆ ಜಾಗೃತಿ ಮೂಡಿದ್ದರೂ ಏನೂ ಬದಲಾವಣೆಯಾಗಿಲ್ಲ. ಈಗಲೂ ನಮ್ಮ ಗುರಿ ಕೈಯಿಂದ ಸ್ವಚ್ಛತೆ ಮಾಡುವುದನ್ನು ಇಲ್ಲವಾಗಿಸುವುದಾಗಿದೆ. ಅಂದರೆ, ವಾಸ್ತವ ನೆಲೆಗಟ್ಟಿನಲ್ಲಿ ಏನೂ ಬದಲಾವಣೆಯಾಗಿಲ್ಲ.
ಜನಗಣತಿ ಅಂಕಿಸಂಖ್ಯೆಯ ಫಲವಾಗಿ ನಮ್ಮಲ್ಲಿ ಇಂದು ಒಣ ಶೌಚಾಲಯಗಳ ಕುರಿತ ವಾಸ್ತವಿಕ ಅಂಕಿಅಂಶಗಳಿವೆ. ಆದರೆ, ತಮ್ಮ ಆರೋಗ್ಯ, ಘನತೆ ಮತ್ತು ಗೌರವವನ್ನು ಬಲಿಗೊಟ್ಟು ಇತರರ ತ್ಯಾಜ್ಯಗಳನ್ನು ಹೊರುವವರ ಬದುಕಿನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಈ ಹಂತದಲ್ಲಿ ಇದಕ್ಕೆ ತಿಳುವಳಿಕೆಯ ಕೊರತೆ ಕಾರಣವಲ್ಲ, ಬದಲಿಗೆ ಊಳಿಗಮಾನ್ಯ ಮೌಲ್ಯಗಳಲ್ಲಿ ಬೇರೂರಿರುವ ಜಾತೀವಾದಿ ಮನಸ್ಸುಗಳು ಜನರಲ್ಲಿ ಆಗುತ್ತಿರುವ ಜಾಗೃತಿಯನ್ನು ಹಿಮ್ಮೆಟ್ಟಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಉದ್ಯೋಗಗಳನ್ನು ಈಗಲೂ ಶುದ್ಧ ಮತ್ತು ಅಶುದ್ಧ ಎಂಬುದಾಗಿ ಪರಿಗಣಿಸಲಾಗುತ್ತಿದೆ ಹಾಗೂ ಜಾತಿ ವ್ಯವಸ್ಥೆಯ ತಳದಲ್ಲಿರುವ ವರ್ಗಗಳಿಗೆ ಅಶುದ್ಧ ಉದ್ಯೋಗಗಳನ್ನು ನೀಡಲಾಗುತ್ತಿದೆ.
ಬಹುಷಃ ನಾವು ಮನೋಭಾವನೆಯನ್ನು ಬದಲಾಯಿಸಿದಾಗ ಮಾತ್ರ ನಮ್ಮ ಶೌಚಾಲಯಗಳನ್ನು ಬದಲಾಯಿಸುತ್ತೇವೆ. ಒಬ್ಬರ ನಂತರ ಒಬ್ಬರು ಬಂದ ಪ್ರಧಾನಿಗಳು ಮತ್ತು ರಾಷ್ಟ್ರಪತಿಗಳು ನೀಡಿದ ಭರವಸೆಗಳ ಬಳಿಕವೂ ಯಾವುದೇ ಸದೃಢ ಕ್ರಮಗಳನ್ನು ತೆಗೆದುಕೊಳ್ಳದಿರಲು ಕಾರಣ ಇದೇ ಆಗಿದೆ. ಕೈಯಿಂದ ಮಾಡುವ ಶುಚಿತ್ವ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಭಾರತ ಸರಕಾರ ಇಂದಿಗೂ ಹೇಳಿಲ್ಲ. ನಾವು ಪದೇ ಪದೇ ಗಡುವುಗಳನ್ನು ಉಲ್ಲಂಸಿಕೊಂಡು ಬರುತ್ತಿದ್ದೇವೆ ಹಾಗೂ ನಮಗೆ ಅದರ ಬಗ್ಗೆ ಯಾವುದೇ ಅವಮಾನವಿಲ್ಲ. ತನ್ನ ಲಕ್ಷಾಂತರ ನಾಗರಿಕರಿಗೆ ಘನತೆಯ ಬದುಕನ್ನು ನೀಡುವ ತನ್ನ ಕರ್ತವ್ಯವನ್ನು ಈಡೇರಿಸುವಲ್ಲಿ ಈ ದೇಶ ವಿಲವಾಗಿದೆ.
ಹಿಂದೆಗೂ ಇಂದಿಗೂ ಇರುವ ವ್ಯತ್ಯಾಸವೆಂದರೆ ಹಿಂದೆ ನಾವು ಅದರ ಬಗ್ಗೆ ಮಾತನಾಡಲು ಬಯಸುತ್ತಿರಲಿಲ್ಲ. ಇಂದು ಕೈಯಿಂದ ಮಾಡುವ ಶುಚಿತ್ವ ಸುದ್ದಿಯಲ್ಲಿದೆ, ಅದು ಟಿವಿ ಕಾರ್ಯಕ್ರಮಗಳ ಚರ್ಚೆಗಳ ಭಾಗವಾಗಿದೆ. ಸರಕಾರಗಳೂ ಈ ಸಮಸ್ಯೆಯ ಬಗ್ಗೆ ಗಂಭೀರ ಆಲೋಚನೆಗಳನ್ನು ವ್ಯಕ್ತಪಡಿಸುತ್ತದೆ. ಆದರೆ, ಅಂತಿಮವಾಗಿ ಅದು ಕಾರ್ಯರೂಪಕ್ಕೆ ಬರುವುದಿಲ್ಲ. ಕೈಯಿಂದ ಮಾಡುವ ಶುಚಿತ್ವವನ್ನು ಕೊನೆಗೊಳಿಸಲು ಹಾಗೂ ಆ ಕೆಲಸದಲ್ಲಿ ತೊಡಗಿಕೊಂಡಿರುವವರ ಪುನರ್ವಸತಿಗಾಗಿ ಕೇಂದ್ರ ಸರಕಾರ 2011-12ರ ಹಣಕಾಸು ವರ್ಷದಲ್ಲಿ 100 ಕೋಟಿ ರೂ.ಯನ್ನು ತೆಗೆದಿರಿಸಿತು.
ಆದರೆ, ಇದರಿಂದ ಒಂದೇ ಒಂದು ರೂಪಾಯಿಯನ್ನು ಬಳಸಲಾಗಿಲ್ಲ. ಇದನ್ನು ಹೇಗೆ ವಿವರಿಸಲು ಸಾಧ್ಯ? ಅದಕ್ಕಿಂತಲೂ ದೊಡ್ಡ ದುರಂತವೆಂದರೆ, ಕೈಯಿಂದ ಶುಚಿತ್ವ ಮಾಡುವ ಕೆಲಸಗಾರರು ಮತ್ತು ಅಶುದ್ಧ ಉದ್ಯೋಗಗಳಲ್ಲಿ ತೊಡಗಿಕೊಂಡಿರುವವರ ಮಕ್ಕಳಿಗಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ನೀಡಲು ಹಣ ತೆಗೆದಿಟ್ಟಿದ್ದರೂ, ಆ ಹಣವನ್ನು ಬಳಸಲಾಗಿಲ್ಲ ಅಥವಾ ಬೇರೆ ಯೋಜನೆಗಳಿಗೆ ತಿರುಗಿಸಲಾಗಿದೆ. ಇಂಥ ಯೋಜನೆಗಳ ಬಜೆಟ್ ಹೆಚ್ಚಿಸಲು ಯೋಜನಾ ಆಯೋಗ ನಿರಾಕರಿಸಿದೆ. ಅವುಗಳಿಗೆ ಬೇಡಿಕೆಯಿಲ್ಲ ಎಂಬ ಕಾರಣವನ್ನು ಅದು ನೀಡುತ್ತಿದೆ. ಇಲ್ಲಿ ಯಾವುದೇ ಪ್ರಶ್ನೆಗಳನ್ನು ಕೇಳಲಾಗುತ್ತಿಲ್ಲ. ಯಥಾಸ್ಥಿತಿ ಮತ್ತು ಜಾತೀಯ ವ್ಯವಸ್ಥೆಯನ್ನು ಕಾಯ್ದುಕೊಂಡು ಬರಲು ವ್ಯವಸ್ಥೆ ಎಷ್ಟು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ!
1993ರ ಕಾನೂನು
ಕೈಯಿಂದ ಶುಚಿತ್ವ ಮಾಡುವ ಕೆಲಸಗಾರರನ್ನು ನಿಯೋಜಿಸುವುದರ ವಿರುದ್ಧ ಕೇಂದ್ರ ಸರಕಾರ 1993ರಲ್ಲೇ ಕಾನೂನೊಂದನ್ನು ತಂದಿದೆ. ಇಂದು 19ವರ್ಷಗಳ ಬಳಿಕ ನಮ್ಮ ಸಂಸತ್ತಿನಲ್ಲಿ ಇನ್ನೊಂದು ಕಾನೂನು ಸಿದ್ಧವಾಗುತ್ತಿದೆ. ಹಾಗಾದರೆ ಈ 19 ವರ್ಷಗಳಲ್ಲಿ ಏನಾಯಿತು? ಈ ಕಾನೂನಿನ ಅಡಿಯಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯನ್ನು ಶಿಕ್ಷಿಸಲಾಗಿಲ್ಲ. ಈ ಕಾನೂನಿನಲ್ಲಿ ಹಲವು ಲೋಪದೋಷಗಳಿವೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಆದರೆ ಒಬ್ಬನೇ ಒಬ್ಬ ವ್ಯಕ್ತಿಯನ್ನು ಶಿಕ್ಷಿಸದಿರಲು ಇದು ಕಾರಣ ವಾಗಲಾರದು. ಕೈ ಮೂಲಕ ಶುಚಿತ್ವ ಮಾಡುವ ಕೆಲಸಗಾರರಿಗೆ ಯಾಕೆ ಪುನರ್ವಸತಿ ಕಲ್ಪಿಸ ಲಾಗಿಲ್ಲ? ಯಾಕೆಂದರೆ, ನಮ್ಮ ಕಾನೂನು ನಿರ್ಮಾತೃಗಳಲ್ಲಿ ಬದ್ಧತೆ ಮತ್ತು ದೃಢ ನಿರ್ಧಾರವಿಲ್ಲ.
ಜನರನ್ನು ತೀರಾ ಅವಮಾನದತ್ತ ದೂಡುವ ಪದ್ಧತಿಯೊಂದರ ವಿರುದ್ಧ ನಮ್ಮಲ್ಲಿ ಬಲವಾದ ತಡೆಯೊಂದು ಬೇಕಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಲವಾದ ಜನಪರ ಕಾನೂನು ಮಾತ್ರ ಸ್ಥಿತಿಗತಿಯನ್ನು ಬದಲಿಸಬಲ್ಲದು. ಆದರೆ ಮೊದಲು ನಮ್ಮ ಸರಕಾರಗಳು ನಿರಾಕರಿಸುವ ಧೋರಣೆಯನ್ನು ನಿಲ್ಲಿಸಬೇಕು. ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಸರಕಾರಗಳು ಜೊತೆಯಾಗಿ ಕಾಲಬದ್ಧ ಕ್ರಿಯಾ ಯೋಜನೆಯನ್ನು ರೂಪಿಸಬೇಕು. 2003ರಲ್ಲಿ ಸಾಯಿ ಕರ್ಮಾಚಾರಿ ಆಂದೋಲನ್ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ, ತಮ್ಮಲ್ಲಿ ಕೈಯಿಂದ ಶುಚಿತ್ವ ಮಾಡುವ ಪದ್ಧತಿ ಅಥವಾ ಒಣ ಶೌಚಾಲಯಗಳು ಇಲ್ಲ ಎಂದು ಹಲವು ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದವು.
ಆದರೆ, ಇದು ಶುದ್ಧ ಸುಳ್ಳಾಗಿತ್ತು. 2010ರವರೆಗೂ ಈ ಸರಕಾರಗಳು ತಮ್ಮ ಅದೇ ನಿಲುವಿಗೆ ಅಂಟಿಕೊಂಡಿದ್ದವು. ದೇಶದ 252 ಜಿಲ್ಲೆಗಳಲ್ಲಿ ಈ ಅನಿಷ್ಟ ಪದ್ಧತಿ ಮುಂದುವರಿಯುತ್ತಿದೆ ಎಂದು ತೋರಿಸುವ ಪುರಾವೆಯನ್ನು 2010ರಲ್ಲಿ ಸಾಯಿ ಕರ್ಮಾಚಾರಿ ಆಂದೋಲನ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತು. ಆಗ, ಕೈಯಿಂದ ಶುಚಿತ್ವಗೊಳಿಸುವ ಪದ್ಧತಿಯ ದೇಶದಲ್ಲಿ ಎಷ್ಟರಮಟ್ಟಿಗೆ ಇದೆ ಎಂಬುದನ್ನು ತಿಳಿಯಲು ರಾಷ್ಟ್ರವ್ಯಾಪಿ ಹೊಸ ಸಮೀಕ್ಷೆ ನಡೆಸಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನಿರ್ಧರಿಸಿತು. ಸಮೀಕ್ಷೆಯ ವಿವಿಧಾನಗಳನ್ನು ಅಂತಿಮಗೊಳಿಸಲು ಸರಕಾರ ಕಾರ್ಯಪಡೆಯೊಂದನ್ನು ರಚಿಸಿತು.
ಆದರೆ, ಇಷ್ಟಕ್ಕೇ ಸರಕಾರ ಗಂಭೀರವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕಾರ್ಯಪಡೆಯಲ್ಲಿ ನಾಲ್ಕು ಸಚಿವಾಲಯಗಳ ಪ್ರತಿನಿಗಳಿದ್ದರು. ವರದಿ ಸಲ್ಲಿಕೆಯಾದ ಬಳಿಕ ದೇಶಾದ್ಯಂತ ಕೈಯಿಂದ ಶುಚಿತ್ವ ಮಾಡುವ ಕಾರ್ಮಿಕರನ್ನು ಗುರುತಿಸಲು ಹಣಕಾಸು ಸಚಿವಾಲಯ 35 ಕೋಟಿ ರೂ. ಬಿಡುಗಡೆ ಮಾಡಿತು. ಇಲ್ಲಿಯವರೆಗೆ ಏನೋ ಚೆನ್ನಾಗಿಯೇ ನಡೆಯಿತು. ಆದರೆ 13 ತಿಂಗಳ ಬಳಿಕ ಈಗ ಒಂದೇ ಒಂದು ಪೇಪರ್ ಚಾಲನೆಗೆ ಬಂದಿಲ್ಲ. ಆದರೆ, ಅಂತಿಮವಾಗಿ ಈ ಸಮೀಕ್ಷೆ ನಡೆಸುವ ಪ್ರಸ್ತಾಪವನ್ನು ಕೈಬಿಟ್ಟಿರುವುದಾಗಿ ಸರಕಾರ ಪ್ರಕಟಿಸಿತು. ಈ ಕೆಲಸ ಮಾಡಲು ಅರ್ಹ ತಾಂತ್ರಿಕ ಸಂಸ್ಥೆ ತನಗೆ ದೊರೆತಿಲ್ಲ ಎಂದು ಅದು ಇದಕ್ಕೆ ಕಾರಣ ನೀಡಿದೆ.
ಮತ್ತೆ ಈಗ ಸರಕಾರ ಒಮ್ಮೆಲೆ ಜನಗಣತಿ ಅಂಕಿಸಂಖ್ಯೆಗಳನ್ನು ಪತ್ತೆಹಚ್ಚಿದೆ. ಇದು ಮತ್ತಷ್ಟು ವಿಚಿತ್ರವಾಗಿದೆ. ದೇಶಾದ್ಯಂತವಿರುವ 7,94,390 ಒಣ ಶೌಚಾಲಯಗಳಲ್ಲಿ ಮಾನವ ಮಲವನ್ನು ಕೆಲಸಗಾರರು ಕೈಯಿಂದ ಶುಚಿಗೊಳಿಸುತ್ತಾರೆ. ಇವುಗಳ ಪೈಕಿ 73ಶೇ. ಗ್ರಾಮೀಣ ಪ್ರದೇಶಗಳಲ್ಲಿದ್ದರೆ 27 ಶೇ. ನಗರ ಪ್ರದೇಶಗಳಲ್ಲಿದೆ. 13,14,652 ಶೌಚಾಲಯಗಳಲ್ಲಿ ಮಾನವ ಮಲವನ್ನು ತೆರೆದ ಚರಂಡಿಗಳಿಗೆ ಬಿಡಲಾಗುತ್ತದೆ.
ಈಗ, ಈ ಅಂಕಿ ಅಂಶದ ಮೂಲಕ ಕೈಯಿಂದ ಶುಚಿತ್ವ ಮಾಡುವವರ ನೈಜ ಸಂಖ್ಯೆಯನ್ನು ತಿಳಿಯವುದು ಹೇಗೆ? ಇಷ್ಟೇ ಸಾಲದೆಂಬಂತೆ ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಉತ್ತರಖಂಡ ರಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಜನಗಣತಿ ಅಂಕಿಸಂಖ್ಯೆಗಳು ನಿಖರವಾಗಿಲ್ಲ ಎಂದು ದೂರಿದವು.
ವಾಸ್ತವವಾಗಿ ಯಾವ ಅಂಕಿ ಸಂಖ್ಯೆಗಳೂ ನಿಖರವಾಗಿರುವುದಿಲ್ಲ. 2010ರಲ್ಲಿ ಸಾಯಿ ಕರ್ಮಾಚಾರಿ ಆಂದೋಲನ್ ಸಲ್ಲಿಸಿದ ಅಂಕಿ ಅಂಶಗಳೂ ಪರಿಪೂರ್ಣವಾಗಿರಲಿಕ್ಕಿಲ್ಲ ಹಾಗೂ ಜನಗಣತಿಯ ವೇಳೆ ಸರಕಾರ ಸಂಗ್ರಹಿಸಿದ ಮಾಹಿತಿಯೂ ನಿಖರವಾಗಿರಲಿಕ್ಕಿಲ್ಲ. ರಾಜ್ಯಗಳ ಬಳಿ ಅವುಗಳದೇ ಆದ ಸಂಖ್ಯೆಗಳು ಇಲ್ಲದಿದ್ದರೆ, ಯಾವುದು ನಿಖರವಾದ ಸಂಖ್ಯೆಗಳು?
ಲಿಂಗ ಅಸಂವೇದಿ ಮಸೂದೆ
ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಹೊಸ ಮಸೂದೆಯನ್ನು ಮಂಡಿಸಲಾಗಿದೆ. ಅದು ಹಳೆಯ ಕಾನೂನಿನಿಂದ ಹೇಗೆ ಭಿನ್ನವಾಗಿದೆ? ಇದು ಕೆಲಸ ಮಾಡುತ್ತದೆಯೇ? ಸಾಧ್ಯತೆ ಕಾಣುತ್ತಿಲ್ಲ. ಈ ಮಸೂದೆ ತೀವ್ರ ಲಿಂಗ ಅಸಂವೇದಿತನದಿಂದ ಕೂಡಿದೆ. ಅದರ ಭಾಷೆ ಸೂಚಿಸುವಂತೆ ಎಲ್ಲ ಶೌಚ ಕೆಲಸಗಾರರು ಮತ್ತು ಸರಕಾರಿ ಅಕಾರಿಗಳು ಪುರುಷರು. ಹೆಚ್ಚಿನ ಶೌಚ ಕಾರ್ಮಿಕರು ಮಹಿಳೆಯರೇ ಆಗಿರುವ ಪ್ರಕರಣಗಳಲ್ಲಿ ಈ ಕಾಯ್ದೆ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಸಾಯಿ ಕರ್ಮಾಚಾರಿ ಸಮುದಾಯದ ಮಹಿಳೆಯರ ಸಮಸ್ಯೆಗಳು ಮತ್ತು ಅಗತ್ಯಗಳಿಗೂ ಸ್ಪಂದಿಸುವ ಪುನರ್ವಸತಿ ಯೋಜನೆಗಳ ಅಗತ್ಯವಿದೆ.ಎರಡನೆಯದಾಗಿ, ಶೌಚ ಕಾರ್ಮಿಕರನ್ನು ಗುರುತಿಸುವ ಅಥವಾ ಹೊಸದಾಗಿ ಸಮೀಕ್ಷೆ ನಡೆಸುವ ಜವಾಬ್ದಾರಿಯನ್ನು ಮಸೂದೆ ಸ್ಥಳೀಯ ಸಂಸ್ಥೆಗಳಿಗೆ ನೀಡುತ್ತದೆ.
ಈ ಸ್ಥಳೀಯ ಸಂಸ್ಥೆಗಳು ಯಾವಾಗಲೂ ನಿರಾಕರಣೆಯ ಉತ್ತರವನ್ನೇ ನೀಡಿವೆ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಸುಳ್ಳು ಅಫಿಡೇವಿಟ್‌ಗಳನ್ನು ಸಲ್ಲಿಸಿವೆ. ಹಾಗಾಗಿ, ಶೌಚ ಕೆಲಸಗಾರರು ಮತ್ತು ಒಣ ಶೌಚಾಲಯಗಳು ಇಲ್ಲ ಎಂದು ವಾದಿಸುವ ಸ್ಥಳೀಯ ಸಂಸ್ಥೆಗಳು ಮತ್ತು ಸರಕಾರಗಳಿಗೆ ಅವರನ್ನು ಗುರುತಿಸುವ ಜವಾಬ್ದಾರಿ ನೀಡಿರುವುದು ಸರಿಯೇ? ಈ ಕೆಲಸವನ್ನು ಎಂಎಸ್‌ಜೆಇಯೊಂದಿಗೆ ಗುರುತಿಸಿಕೊಂಡ ಸ್ವತಂತ್ರ ಸಂಸ್ಥೆಗಳಿಗೆ ಕೊಡಬೇಕಾಗಿತ್ತು.

ಕೃಪೆ: ದ ಹಿಂದೂ 

 

 

...

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...