Wednesday, October 31, 2012

ಮಾತು-ಮೌನ
ಜ್ವರ ಹೇಗಿದೆ ಎಂದು ಕೇಳಬೇಕಿಲ್ಲ ನೀನು
ನನ್ನದನ್ನೇ ನಿನಗೆ ದಾಟಿಸಿಬಿಟ್ಟಿದ್ದೇನೆ.
ನಿದ್ದೆ ಬಂತೇ ಎಂದು ಕೇಳಬೇಕಿಲ್ಲ ನೀನು
ಕನಸನೆಲ್ಲಾ ನಿನಗೆ ಕಳಿಸಿಬಿಟ್ಟಿದ್ದೇನೆ.
ದುಃಖವೇ ಎಂದು ಕೇಳಬೇಕಿಲ್ಲ
ಅದು ನಮ್ಮಿಬ್ಬರಿಗೂ ಸೇರಿದ್ದು.
ಚಳಿಯೇ ಎಂದು ಕೇಳಬೇಕಿಲ್ಲ
ನನ್ನ ಬಿಸಿಯ ಉತ್ತರ ನಿನಗೆ ತಿಳಿದಿದ್ದೆ.
ಬರುವೆಯಾ ಎಂದು ಕೇಳಬೇಕಿಲ್ಲ
ನಾನು ಈಗಾಗಲೇ ಬಂದುಬಿಟ್ಟಿದ್ದೇನೆ. 
ಎಲ್ಲಿದ್ದೀಯಾ ಎಂದು ಮಾತ್ರ ಕೇಳಬೇಡ
ಅದು ನನಗೂ ಸರಿಯಾಗಿ ತಿಳಿದಿಲ್ಲ. 
ಒಟ್ಟಿನಲ್ಲಿ ಮಾತು ಸೋಲಲಿ
ಕೇಳಬೇಕಿದ್ದೆಲ್ಲ ಕೇಳಿಸಲಿ
ಮೌನ ತಲೆತಗ್ಗಿಸಿ ನಿಲ್ಲಲಿ

-ಡಾ. ಕೃಷ್ಣ . ಜಿ

ಸ್ಟೇಜ್


ಸ್ಟೇಜ್ ಹತ್ತಲಿಲ್ಲ ನಾವು
ಮೇಲೆ ಕರೆಯಲೂ ಇಲ್ಲ ಅವರು ನಮ್ಮನ್ನು.
ಕೈ ಬೀಸುತ್ತಲೇ 
ನಮ್ಮ ಸ್ಥಳವನ್ನು ತೋರಿಸಲಾಯಿತು.
ನಾವೂ ಕುಳಿತೆವು.
ಅವರು ಸ್ಟೇಜ್ ಮೇಲೆ ನಿಂತು
ನಮ್ಮ ಕಷ್ಟಗಳ ಕುರಿತು
ನಮಗೇ ತಿಳಿಹೇಳಿದರು 
ನಮ್ಮ ಕಷ್ಟ 
ನಮ್ಮದಾಗಿಯೇ ಉಳಿಯಿತು
ಎಂದೂ ಅವರದಾಗಲಿಲ್ಲ.
ಪಿಸುಗುಟ್ಟಲು ನಾವು ನಮ್ಮ ಸಂದೇಹ
ಮೈಯೆಲ್ಲಾ ಕಿವಿಯಾಗಿಸಿ ಆಲಿಸಿ
ನಿಟ್ಟುಸಿರು ಬಿಡುತ್ತಾ
ಕಿವಿ ಹಿಂಡಿದರು.
ತುಟಿ ಎರಡಾಗಿಸದಿರಲು ಆದೇಶಿಸಿದರು.
ಕ್ಷಮೆ ಯಾಚಿಸು. ಇಲ್ಲವಾದಲ್ಲಿ...

- ವಹರು ಸೋನವಣೆ (ಮೂಲ ಮರಾಟಿ)

ಕನ್ನಡಕ್ಕೆ: ಸಂವರ್ತ 'ಸಾಹಿಲ್'

(ಕವಿ ವಹರು ಭೀಲ್ ಆದಿವಾಸಿ ಸಮುದಾಯಕ್ಕೆ ಸೇರಿದವರು.)

Tuesday, October 30, 2012

ಮದುವೆಗಳು ಸೋಲದಿರಲಿ...

ಮದುವೆಗಳು ಸೋಲದಿರಲಿ...
 


- ಉಷಾ ಪಿ ರೈ

ವಿವಾಹ ಒಂದು ಅನುಬಂಧ. ಜನುಮಜನುಮದ ಸಂಬಂಧ ಎಂದೂ ಹೇಳುತ್ತಾರೆ. ಮದುವೆಗಳು ಮುರಿಯದಿದ್ದ ಕಾಲದಲ್ಲಿ ಈ ಹೇಳಿಕೆ ನಿಜವಾಗಿರಬಹುದು. ಆದರೆ ಈಗ ಇದು ಒಂದು ಮಿತ್ ಎಂದು ಅನಿಸುವಷ್ಟರ ಮಟ್ಟಿಗೆ ಕಳಕೊಳ್ಳುತ್ತಿದೆ. ವಿವಾಹ ಒಂದು ಹೊಂದಾಣಿಕೆ. ಸರಿಯಾಗಿದ್ದರೆ ಉಳಿದುಕೊಳ್ಳುತ್ತದೆ. ಸ್ವಲ್ಪಬಿರುಕು ಬಿಟ್ಟರೆ ಕುಸಿದು ಬೀಳುತ್ತದೆ.ಬಹಳ ಹಿಂದೆ ತೊಟ್ಟಿಲ ಕೂಸುಗಳಿಗೆ ವಿವಾಹಗಳಾಗುತ್ತಿದ್ದುವು. ಅದಕ್ಕೆ ಯಾವುದೇ ದಾಖಲೆಗಳಿರಲಿಲ್ಲ. ಅವರು ದೊಡ್ಡವರಾಗುತ್ತಾ ಎಲ್ಲರೂ ಹೇಳುವುದನ್ನು ಕೇಳಿಯೇ ಈ ಸಂಬಂಧವನ್ನು ಯಾವುದೇ ವಿರೋಧವಿಲ್ಲದೆ ಸ್ವೀಕರಿಸಿ ಒಪ್ಪಿಕೊಂಡು ಜೀವನ ನಡೆಸುತ್ತಿದ್ದರು. ಹೆರಿಗೆಯ ಯಂತ್ರವಾಗುತ್ತಿದ್ದರು. ಇಪ್ಪತ್ತೈದು ಮೂವತ್ತು ವರುಷ ಗಳಾಗಬೇಕಾದರೆ ಮುದುಕಿಯರೂ ಆಗುತ್ತಿದ್ದರು. ವಿವಾಹ ಎಲ್ಲಾ ವೈರುಧ್ಯಗಳನ್ನೂ ಮೀರಿದ ಹೊಂದಾ ಣಿಕೆಯಾಗಿರುತ್ತಿತ್ತು.ಕ್ರಮೇಣ ಆದ ಸಾಮಾಜಿಕ ಸುಧಾ ರಣೆಗಳಿಂದ ಬಾಲ್ಯ ವಿವಾಹ ನಿಂತು ಹೋದರೂ ಮೈನೆರೆಯುತ್ತಲೇ ಹೆತ್ತವರು ಆರಿಸಿದ ಹುಡುಗನೊಡನೆ ಮದುವೆಯಾಗುತ್ತಿತ್ತು. ಇಲ್ಲಿಯೂ ಜನುಮ ಜನುಮದ ಅನುಬಂಧ ವೆಂದು ಒಪ್ಪಿಕೊಂಡು ಎಲ್ಲಾ ವೈರುಧ್ಯಗಳನ್ನು ಮೀರಿ ಸಾಯುವತನಕ ಈ ಬಂಧನವನ್ನು ನಿಭಾಯಿಸುತ್ತಿದ್ದರು.
ಅರ್ಧ ಶತಮಾನದ ಹಿಂದೆ ಹೆಣ್ಣು ಮಕ್ಕಳಿಗೆ ಕಾಲೇಜಿಗೆ ಹೋಗಿ ಕಲಿಯುವ ಅವಕಾಶವಿದ್ದರೂ ವಿವಾಹ ಅಂದರೇನು ಎನ್ನುವ ಚಿಂತನೆಗೆ ಅವಕಾಶವೇ ಇಲ್ಲದಂತೆ ಹೆತ್ತವರು ಸೂಚಿಸಿದ ವರನೊಡನೆ ಮದುವೆಯಾಗುತ್ತಿತ್ತು. ಆಯ್ಕೆಯ ಅಥವಾ ವಿರೋಧಿಸುವ ಸ್ವಾತಂತ್ರ್ಯ ಇರದಿದ್ದರೂ ಒಪ್ಪಿಗೆಯೇ ಎಂದು ಕೇಳುತ್ತಿದ್ದರು. ಉತ್ತರಕ್ಕೆ ಕಾಯುತ್ತಿರಲಿಲ್ಲ. ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುವಂತೆ ಆ ತಲೆಮಾರಿನ ವರೂ ಈ ಸಂಬಂಧಕ್ಕೆ ಅಂಟಿಕೊಂಡಿರುತ್ತಿದ್ದರು. ಬಹಳ ಅಪರೂಪವಾಗಿ ಗಂಡ ಹೆಂಡಿರ ವಿರಸ ವಿಚ್ಛೇ ದನದಲ್ಲಿ ಕೊನೆಗೊಳ್ಳುತ್ತಿತ್ತು. ಕೋರ್ಟು ಕಚೇರಿಗೆ ಹೋಗದೆ ಗಂಡನನ್ನು ಬಿಟ್ಟುಬರುವುದೇ ವಿಚ್ಛೇದನವಾ ಗಿತ್ತು. ಹೀಗೆ ಆದಾಗ ಕಷ್ಟದ ಸುಳಿಯಲ್ಲಿ ಸಿಕ್ಕಿ ಒದ್ದಾಡು ವವರು ಹೆಂಗಸರೇ. ಇವೆಲ್ಲಾ ಹಳೆಯ ಕಥೆಗಳು.
ಈಗ ಮದುವೆಯ ಇಕ್ವೇಶನ್ ಬಹಳ ಬದಲಾಗಿದೆ. ಮಕ್ಕಳ ಆಧ್ಯತೆ ಹಾಗೂ ಆಯ್ಕೆಯ ಮೇರೆಗೇ ಮದುವೆ ಗಳು ನಡೆಯುತ್ತವೆ.ಅವರ ಆಯ್ಕೆಯನ್ನು ಹೆತ್ತವರು ಮನಸಿರಲಿ ಇಲ್ಲದಿರಲಿ ಒಪ್ಪಿಕೊಳ್ಳಬೇಕು. ಮದುವೆಗೆ ಮುಂಚೆ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಅವಕಾಶ ಗಳು ಸಾಕಷ್ಟಿವೆ. ಹಿಂದಿನಂತೆ ಒಂದು ಬಾರಿ ನೋಡಿ ಒಪ್ಪುವ ಗಂಡುಗಳೂ ಇಲ್ಲ; ಹೆಣ್ಣುಗಳೂ ಇಲ್ಲ. ಹೀಗಿದ್ದರೂ ನೂರರಲ್ಲಿ ನಲ್ವತ್ತು ಐವತ್ತರಷ್ಟು ಮದುವೆ ಗಳು ಸೋಲುತ್ತವೆ ಯಾಕೆ ಎನ್ನುವ ದೊಡ್ಡ ಪ್ರಶ್ನೆ ನಮ್ಮ ಮುಂದಿದೆ. ಮದುವೆಗಳು ಸೋಲುತ್ತಿರುವ ಈ ಕಾಲ ದಲ್ಲಿ ಲಿವ್ ಇನ್ ರಿಲೇಶನ್‌ಶಿಪ್‌ಗಳ ಕಡೆಗೆ ಇಂದಿನ ಜನಾಂಗದ ಮಕ್ಕಳು ವಾಲುತ್ತಿರುವುದು ಆತಂಕ ತರುವ ಸಂಗತಿಯಾಗಿದೆ.
ಯಾಕೆ ಮದುವೆಗಳು ಸೋಲುತ್ತಿವೆ? ಈ ಹಿಂದೆ ಸೋಲುಗಳಿರಲಿಲ್ಲವೇ?
ಹಿಂದೆಯೂ ಅಸಮ/ವಿಷಮ ದಾಂಪತ್ಯಗಳು ಇದ್ದವು. ಆದರೆ ಅವು ಹೊರಪ್ರಪಂಚಕ್ಕೆ ಗೊತ್ತಾಗು ತ್ತಿರಲಿಲ್ಲ. ಮನೆಯ ನಾಲ್ಕು ಗೋಡೆಗಳ ಒಳಗೆ ಜಗಳ, ಹೊಡೆತ ಎಲ್ಲವೂ ಮುಚ್ಚಿಹೋಗು ತ್ತಿದ್ದುವು. ಹತ್ತು ಹನ್ನೆರಡು ಮಕ್ಕಳು ಇದ್ದಾಗ ಮಕ್ಕಳ ಹೊಣೆಗಾರಿಕೆ ಪತಿಪತ್ನಿಯರ ನಡುವಿನ ಎಲ್ಲ ಅಸಮಾಧಾನಗಳನ್ನೂ ಹಿಂದಕ್ಕೆ ತಳ್ಳುತ್ತಿದ್ದುವು. ಅಸಮಾಧಾನಗಳಿಗೆ ಪರಿಹಾರ ಹುಡುಕುವ ಹಿರಿಯರು ಜೊತೆಗಿದ್ದರು. ಆರ್ಥಿಕವಾಗಿ ಮಹಿಳೆ ಪರಾವಲಂಬಿ ಯಾಗಿದ್ದ ಕಾರಣ ಹೊಂದಿಕೊಂಡು ಬಾಳ್ವೆ ನಡೆಸುವ ಅಗತ್ಯ ವಿತ್ತು. ಇವತ್ತು ಆ ಅಗತ್ಯ ಇಲ್ಲ. ಸಮಾನ ಸ್ವಾತಂತ್ರ್ಯ, ಸಮಾನ ವಿದ್ಯಾಭ್ಯಾಸ, ಸಮಾನ ವೇತನ ಹೆಣ್ಣನ್ನು ಗಂಡಿನ ಮೇಲೆ ಅವಲಂಬಿಸುವುದರಿಂದ ತಪ್ಪಿಸಿದೆ. ಪರಸ್ಪರ ಗೌರವ ಇದ್ದರೆ ಸರಿ ಇಲ್ಲವಾದರೆ ದೂರವಾಗುವುದೇ ಮೇಲು ಎನ್ನುವ ಭಾವನೆ ಎಲ್ಲರನ್ನೂ ಆವರಿಸಿದೆ. ಹೊಂದಾಣಿಕೆಯ ಪ್ರಯತ್ನವೂ ಇಲ್ಲ. ಪ್ರಶ್ನೆಯೂ ಇಲ್ಲ. ನಾನೇನು ಕಡಿಮೆ ಎನ್ನುವ ಅಹಂ ‘ವಿವಾಹ’ ಎನ್ನುವ ಒಂದು ಮಹತ್ವದ ವಿಧಿಯ ಸೋಲಿಗೆ ಕಾರಣವಾ ಗಿದೆ. ಅದಕ್ಕೆ ತಕ್ಕ ಹಾಗೇ ಇವತ್ತಿನ ಕಾನೂನುಗಳೂ ಸಹಕಾರಿಯಾಗುತ್ತಿದೆ.

ವಿವಾಹ ಅಂದರೇನು? ಒಂದು ಗಂಡು ಒಂದು ಹೆಣ್ಣನ್ನು ಸಾಮಾ ಜಿಕವಾಗಿ, ಧಾರ್ಮಿಕವಾಗಿ, ನ್ಯಾಯ ಯುತವಾಗಿ ಒಂದು ವಿಶಿಷ್ಟ ಬಂಧನಕ್ಕೆ ಒಳಗಾಗಿಸುವುದು. ಅವರು ದೈಹಿಕವಾಗಿ ಸೇರಲು ಲೈಸನ್ಸ್ ಕೊಡುವುದು. ಮೊದಲ ಹಂತದಲ್ಲಿ ಇಷ್ಟೇ. ಇದು ಪ್ರೇಮ ವಿವಾಹವಿರ ಬಹುದು ಅಥವಾ ಹಿರಿಯರ ಆಯ್ಕೆಯ ವಿವಾಹವಾಗಿರ ಬಹುದು. ಮೊದಲು ಉತ್ಕಟವಾದ ಪ್ರೀತಿ, ದೈಹಿಕ ಆಕರ್ಷಣೆ ಇಬ್ಬರಲ್ಲೂ ಉಕ್ಕಿ ಹರಿಯುತ್ತದೆ. ಎಷ್ಟು ಸಮಯ ಹಾಗಿರ ಬಹುದು? ಎಲ್ಲ ಅಬ್ಬರಗಳಿಗೂ ಉಬ್ಬರಗಳಿಗೂ ಇಳಿತ ಎನ್ನುವುದು ಇದ್ದೇ ಇದೆ. ಭರತ ಇಳಿದ ನಂತರ ವಾಸ್ತವ ಎದುರಾಗುತ್ತದೆ. ಜೀವನ ತನ್ನೆಲ್ಲಾ ಮುಖಗಳೊಡನೆ ಎದುರಾಗುತ್ತದೆ. ಮಕ್ಕಳಾಗುತ್ತವೆ; ಮನೆಯ ಜವಾಬ್ದಾರಿಗಳು ಹೆಚ್ಚುತ್ತವೆ.
ಹೆಚ್ಚಿನ ಸಮಯ ಮಕ್ಕಳಿಗಾಗಿಯೇ ಮೀಸಲಾಗುತ್ತದೆ. ದೈಹಿಕ ಆಕರ್ಷಣೆ ಕಡಿಮೆಯಾಗುತ್ತದೆ. ಇಬ್ಬರೂ ದುಡಿಯು ತ್ತಿದ್ದರೆ ಒಬ್ಬರಿಗೊಬ್ಬರಿಗೆ ಸಮಯ ಕೊಡುವುದೇ ಅಸಾಧ್ಯವಾಗುತ್ತದೆ. ಆದರೆ ಮಕ್ಕಳ ಬೇಕುಬೇಡಗಳನ್ನು ಪೂರೈಸುತ್ತಾ ಸಾಗುವಾಗ ಮಾನಸಿಕ ಅವಲಂಬನೆ ಬೆಳೆಯುತ್ತದೆ. ಮಕ್ಕಳು ಬೆಳೆಯುತ್ತ ಎದುರಾಗುವ ಸಮಸ್ಯೆಗಳು, ಅದಕ್ಕೆ ಹುಡುಕುವ ಉತ್ತರಗಳು ತಂದೆ ತಾಯಿ ಇಬ್ಬರನ್ನೂ ಹೆಚ್ಚು ಹೆಚ್ಚು ಬೆಸೆಯುತ್ತದೆ. ಆಗ ನಿಜವಾದ ವೈವಾಹಿಕ ಸಂಬಂಧ ಬೆಳೆಯುತ್ತದೆ. ವರುಷಗಳು ಕಳೆದಂತೆ ಈ ಬಂಧನ ಬಲವಾಗುತ್ತಾ ಹೋಗುತ್ತದೆ. ಮಕ್ಕಳು ಬೆಳೆದು ಅವರವರ ದಾರಿ ಹಿಡಿ ದಾಗ ಎಲ್ಲವೂ ನೀರವವಾದರೂ, ಮಕ್ಕಳ ಸುತ್ತಲೇ ಸುತ್ತುತ್ತಿದ್ದ ಮಾತುಗಳು ಮೌನವಾಗುತ್ತಾ ಹೋಗಿ ಇಬ್ಬರೂ ಮೌನದ ಮೊರೆ ಹೋದರೂ ಒಬ್ಬರಿಗೊ ಬ್ಬರು ಇದ್ದೇವೆಯಲ್ಲ ಎನ್ನುವ ಭಾವ ಧೈರ್ಯ ಕೊಡು ತ್ತದೆ. ಒಬ್ಬರಿಗೊಬ್ಬರು ಮಗುವಾಗುವ ಕಾಲವಿದು. ಇದೇ ವಿವಾಹ ಎನ್ನುವ ಅನುಬಂಧ. ಈ ಅನು ಬಂಧವೇ ಮದುವೆಯ ವಿಧಿಗೆ ಅರ್ಥ ಕೊಡುವುದು.
ಯಾರ ಜೀವನವೂ ಹೂವಿನ ಹಾಸಿಗೆಯೇ ಆಗಿರುವುದಿಲ್ಲ. ಹೂವಿನ ಜೊತೆಗೆ ಮುಳ್ಳುಗಳೂ ಇರುತ್ತವೆ. ಆ ಮುಳ್ಳುಗಳನ್ನು ಬುದ್ಧಿವಂತಿಕೆಯಿಂದ ಸರಿಸಿ ಹೂವಿನ ಮೇಲೆ ನಡೆಯುವ ಪ್ರಯತ್ನ ವಿವಾಹಗಳನ್ನು ಉಳಿಸುತ್ತದೆ. ಸಾಮಾಜಿಕ ಸ್ವಾಸ್ಥ್ಯ ಉಳಿಯಬೇಕಾದರೆ ಈ ವಿವಾಹದ ವಿಧಿಯನ್ನು ಉಳಿಸಬೇಕು.

ಕಾಣಿಕೆಜಲಾಲುದ್ದೀನ್ ರೂಮಿ
ಅನು : ಡಾ .ಎಚ್ .ಎಸ್ ಅನುಪಮಾ
Anupama in shimoga.JPG

ನಿನಗೊಂದು ಕಾಣಿಕೆ ಹುಡುಕಲು
ನಾನೆಂಥ ಪಾಡು ಪಟ್ಟೆ! ಗೊತ್ತಿಲ್ಲ ನಿನಗೆ..
ಒಂದೇ ಒಂದೂ ಸರಿಯೆನಿಸಲಿಲ್ಲ ನನಗೆ

ಹೊನ್ನಿನ ಗಣಿಗೆ ಹೊನ್ನ ಕಾಣಿಕೆ ತರುವುದೇ?
ಕಡಲಿಗೆ ನೀರ ಕಾಣಿಕೆ?
ನಾನು ತರುವುದೆಲ್ಲ
ಪೂರ್ವದೇಶಕ್ಕೆ ಮಸಾಲೆ ಒಯ್ದ ಹಾಗೆ..

ನನ್ನ ಹೃದಯ, ಆತ್ಮಗಳ 
ನಿನಗೆ ಕೊಡುವುದರಲ್ಲೂ ಅರ್ಥವಿಲ್ಲ
ಅವು ಆಗಲೇ ನಿನ್ನವು

ಎಂದೇ, 
ನಿನಗೊಂದು ಕನ್ನಡಿ ತಂದಿರುವೆ

ನಿನ್ನನೇ ನೋಡಿಕೋ
ನನ್ನ ನೆನಪಿಸಿಕೋ..

ಅರ್ನೆಸ್ಟೊ ಚೆಗುವಾರ ಎಂಬ ಕ್ರಾಂತಿಕಾರಿ ಭಾವಜೀವಿ
- ನಾರಾಯಣ್ ಕೆ.ಕ್ಯಾಸಂಬಳ್ಳಿ
ವಾರ್ತಾಭಾರತಿ 

ನಾನು ಎಂದಿಗೂ ಸೋತು ಮನೆಗೆ ಹಿಂದಿರುಗುವುದಿಲ್ಲ. ಸೋಲಿಗಿಂತ ಸಾವನ್ನೆ ಹೆಚ್ಚು ಇಚ್ಛಿಸುತ್ತೇನೆ ಎಂದು ಕ್ಯೂಬಾ ಬಿಡುವ ಮೊದಲು ಹೇಳಿದ ಮಾತಿನಂತೆಯೇ ನಿರಂತರವಾಗಿ ಹೋರಾಟದಲ್ಲೇ ತಮ್ಮ ಜೀವನವನ್ನು ಸವೆದು ಸೋಲಲು ಇಚ್ಛಿಸಿದೆ ತನನ್ನು ಸಾವಿಗೆ ಒಡ್ಡಿಕೊಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಗೆರಿಲ್ಲಾ ಯುದ್ಧ ತಂತ್ರ ನಿಪುಣ, ವೈದ್ಯ, ಬರಹಗಾರ, ಬುದ್ಧಿಜೀವಿ ಹಾಗೂ ಕ್ಯೂಬಾ ಕ್ರಾಂತಿಯ ಪ್ರಮುಖ ನೇತಾರ ಅರ್ನೆಸ್ಟೊ ಚೆಗುವಾರ ಜಗತ್ತಿನ ಕ್ರಾಂತಿಕಾರಿ ಹೋರಾಟಗಾರರಲ್ಲಿ ಪ್ರಮುಖರು. ಚೆಗುವಾರ ಜೂನ್ 14, 1928ರಂದು ಅರ್ನೆಸ್ಟೊ ಚೆಗುವಾರ ಲಿಂಚ್ ಮತ್ತು ಸೀಲಿಯಾ ಡ ಲಾ ಸೆರ್ನ್ ಎಂಬ ಸ್ಪಾನಿಷ್ ಮತ್ತು ಐರಿಷ್ ತಂದೆ ತಾಯಿಗಳ ಮೊದಲ ಮಗನಾಗಿ ಅರ್ಜೆಂಟೀನಾದ ರೊಸಾರಿಯೋ ಪಟ್ಟಣದಲ್ಲಿ ಜನಿಸಿದನು.

ಚೆಗುವಾರ ಚಿಕ್ಕಂದಿನಿಂದಲೇ ಬಡವರ, ಶ್ರಮಿಕರ ಪರವಾಗಿ ಹೆಚ್ಚು ಪ್ರೀತಿಯನ್ನು ಬೆಳೆಸಿಕೊಂಡವನು ಮತ್ತು ಎಡಪಂಥೀಯ ಒಲವು ಹೊಂದಿದ್ದ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವನಿಗೆ ಚಿಕ್ಕಂದಿನಿಂದಲೇ ಸ್ಪಷ್ಟ ರಾಜಕೀಯ ದೃಷ್ಟಿಕೋನಗಳ ಬಗೆಗೆ ಪರಿಚಯ ದೊರೆಯುತಿತ್ತು. ಸ್ಪಾನಿಷ್ ಅಂತರ್‌ಯುದ್ಧದ ಕಾಲದಿಂದಲೂ ಗಣತಂತ್ರವಾದಿಗಳ ಪ್ರಬಲ ಸಮರ್ಥಕರಾಗಿದ್ದ ತಂದೆಯ ಪ್ರಭಾವ ಚೆಗುವಾರನ ಮೇಲೆ ಸಹಜವಾಗಿಯೇ ಬೀರಿತ್ತು.

ಚೆಗುವಾರ ತನ್ನ 19ನೆ ವಯಸ್ಸಿನಲ್ಲಿ (1948) ವೈದ್ಯಕೀಯ ಕಲಿಕೆಗಾಗಿ ಬ್ಯೂನಸ್ ಐರ್ಸ್‌ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಾನೆ. ಆದರೆ 1951ರಲ್ಲಿ ವಿಶ್ವವಿದ್ಯಾಲಯದಿಂದ ಒಂದು ವರ್ಷ ರಜೆ ಪಡೆದು ತನ್ನ ಆಪ್ತಮಿತ್ರ ಆಲ್ಬರ್ಟ್ ಗ್ರಾನೆಡೋಸ್ ಜೊತೆಗೂಡಿ ಮೋಟರ್ ಸೈಕಲ್ ಮೇಲೆ ದಕ್ಷಿಣ ಅಮೆರಿಕಾದ ಪ್ರವಾಸ ಹೊರಡುತ್ತಾನೆ. ಚೆಗುವಾರನ ಬದುಕಿನಲ್ಲಿ ಈ ಪ್ರವಾಸ ಬಹಳ ಪ್ರಮುಖವಾದದ್ದು ಮತ್ತು ಚೆಗುವಾರ ತಾನೊಬ್ಬ ಕ್ರಾಂತಿಕಾರಿಯಾಗಿರಲು ಪ್ರಮುಖ ಕಾರಣ ಈ ಪ್ರವಾಸದ ಅನುಭವಗಳೇ.

ಅವನೆ ಹೇಳಿದ, ಬರೆದುಕೊಂಡಿರುವ ಹಾಗೆ ಆಂಡೀಸ್ ಪರ್ವತಶ್ರೇಣಿಯ ಉನ್ನತ ಶಿಖರವಾದ ಮಾಚು ಪಿಚ್ಚುವಿಗೆ ಹೋಗುವ ದಾರಿಯಲ್ಲಿ ಶ್ರೀಮಂತ ಭೂಮಾಲಕರಿಂದ ತುಂಡು ಭೂಮಿಗಳನ್ನು ಪಡೆದು ಕೃಷಿ ಮಾಡುತಿದ್ದ ರೈತಾಪಿ ಜನಸಮುದಾಯಗಳ ಹೀನಾಯ ಬದುಕು, ಕಡುಬಡತನ, ನನ್ನ ಮನಸ್ಸಿಗೆ ತಾಕಿತು. ಈ ಜನರಿಗೆ ನೆರವಾಗಬೇಕಿದ್ದಲ್ಲಿ ನಾನು ವೈದ್ಯಕೀಯ ಅಭ್ಯಾಸವನ್ನು ಬಿಟ್ಟು ಸಶಸ್ತ್ರ ಹೋರಾಟದ ರಾಜಕೀಯ ರಂಗಕ್ಕೆ ಪ್ರವೇಶಿಸಬೇಕಿದೆ ಎಂದು ಮನವರಿಕೆಯಾಯಿತು ಎಂದು ನಂತರ ಚೆಗುವಾರ ಬರೆದುಕೊಳ್ಳುತ್ತಾನೆ. ಹಾಗಾಗಿ ಈ ಮೋಟಾರ್ ಸೈಕಲ್ ಪ್ರವಾಸ ಚೆಗುವಾರನ ಕ್ರಾಂತಿ ಬದುಕಿನ ಬಹಳ ದೊಡ್ಡ ತಿರುವು.

ಮೋಟಾರ್ ಸೈಕಲ್ ಪ್ರವಾಸದ ಜೊತೆಗಾರ ಆಲ್ಬರ್ಟ್ ಗ್ರಾನೆಡೋಸ್ ಚೆ ಕುರಿತು ಹೇಳುತ್ತಾ ಟೆಟೆ (ಚೆ ನನ್ನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು) ನನ್ನು ನಾನು ಮೊದಲು ಭೇಟಿ ಆಗಿದ್ದು 1941ರಲ್ಲಿ. ಅದು ನನ್ನ ಸಹೋದರ ಥಾಮಸ್ ಮೂಲಕ. ಆಗ ನನಗೆ 13ವರ್ಷ ವಯಸ್ಸು. ನಮ್ಮಿಬ್ಬರನ್ನು ಒಟ್ಟೊಟ್ಟಾಗಿ ತಂದ ವಿಷಯವೆಂದರೆ ಓದುವ ಅಭಿರುಚಿ ಮತ್ತು ನಿಸರ್ಗ ಪ್ರೇಮ.ಚೆ ಮನೆಗೆ ನಾನು ವಾಡಿಕೆಯ ಅತಿಥಿಯಾಗಿದ್ದೆ. ಅಲ್ಲಿದ್ದ ಗ್ರಂಥಭಂಡಾರವನ್ನು ನನ್ನದೆಂಬಂತೆಯೇ ಬಳಸಿಕೊಳ್ಳುತ್ತಿದ್ದೆ. ಟೆಟೆ (ಚೆ) ಒಬ್ಬ ರೂಢಿಯ ಮಾತುಗಾರನಾಗಿದ್ದ. ನಾನು ಅವನೊಡನೆ ಎಷ್ಟೋ ರಾತ್ರಿಗಳೂ ಚರ್ಚಿಸುತ್ತಾ ಕಳೆದದುಂಟು.

ಒಮ್ಮೆ ವಿದ್ಯಾರ್ಥಿ ಚಳವಳಿಯಲ್ಲಿ ನನ್ನ ಬಂಧನವಾಯಿತು. ಆಗ ನನ್ನ ಸಹೋದರ ಥಾಮಸ್ ಜೊತೆ ಚೆ ನನ್ನ ನೋಡಲು ಪೋಲಿಸ್ ಠಾಣೆಗೆ ಬಂದಿದ್ದ. ನಾನು ಅವನ ಜೊತೆ ಮಾತನಾಡುತ್ತಾ ಬಂಧಿತರನೆಲ್ಲ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳನ್ನು ಬೀದಿಗೆ ಕರೆತರುವಂತೆ ನಾನು ಅವನಿಗೆ ಹೇಳಿದೆ. ಅದಕ್ಕೆ ಚೆ ಹೇಳಿದ ಮಾತು ಮಿಯಾಲ್ (ಆಲ್ಬರ್ಟ್ ಗ್ರಾನೆಡೋಸ್ ನನ್ನು ಪ್ರೀತಿಯಿಂದ ಕರೆಯುತಿದ್ದುದು) ನಮ್ಮನ್ನು ಬೀದಿಗಿಳಿಯಿರಿ ಎಂದು ಹೇಳುತ್ತಿದ್ದಿರಲ್ಲಾ? ಪೋಲಿಸರು ನಮ್ಮ ತಲೆಯ ಮೇಲೆ ಸರಿಯಾಗಿ ದೊಣ್ಣೆಗಳಿಂದ ಇಕ್ಕಲಿ ಅಂತೆಲೊ? ಅದೆಲ್ಲ ಆಗುವುದಿಲ್ಲ. ನನಗೆ ಪಿಸ್ತೂಲು ಕೊಟ್ಟರೆ ಮಾತ್ರ ನಾನು ಬೀದಿಗಿಳಿಯುತ್ತೇನೆ ಎಂದಿದ್ದ. ಇಂಥ ಅವನೊಟ್ಟಿಗಿನ ನೆನಪುಗಳು ಅದೆಷ್ಟೋ ಇದೆ.

ನಾವಿಬ್ಬರೂ ಮಾಡಿದ ಮೊದಲ ಪ್ರವಾಸದಲ್ಲಿ 1952ರಲ್ಲಿ ಫೆಬ್ರವರಿ 18ರಂದು ನಾವು ಚೆಲಿ ದೇಶದ ಟೆಮುಕು ನಗರಕ್ಕೆ ಬಂದೆವು. ಮಾರನೇ ದಿನ ಅಲ್ಲಿನ ಸ್ಥಳೀಯ ಪತ್ರಿಕೆ ಡೈರಿಯೋ ಆಸ್ಟ್ರಲ್ ನಮ್ಮ ಬಗ್ಗೆ ಒಂದು ಲೇಖನ ಪ್ರಕಟಿಸಿತು. ಆ ಲೇಖನದ ಶೀರ್ಷಿಕೆ ಮೋಟಾರ್ ಸೈಕಲ್ ಮೇಲೆ ಲ್ಯಾಟಿನ್ ಅಮೆರಿಕಾದಲ್ಲಿ ಇಬ್ಬರು ಕುಷ್ಠರೋಗ ತಜ್ಞರ ಪ್ರವಾಸ ಎಂದು. ಆ ಲೇಖನದ ಸಾರಾಂಶ ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ಮೋಟಾರ್ ಸೈಕಲ್ ಮೇಲೆ ಪ್ರವಾಸ ಮಾಡುತ್ತಿರುವ ಜೀವ ರಸಾಯನ ಶಾಸ್ತ್ರದ ತಜ್ಞ ಆಲ್ಬರ್ಟ್ ಗ್ರಾನೆಡೋಸ್ ಮತ್ತು ಬ್ಯುನಸ್ ಐರಿಸ್ ವಿಶ್ವವಿದ್ಯಾಲಯದಲ್ಲಿ ಔಷಧಶಾಸ್ತ್ರ ವಿಭಾಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಅರ್ನೆಸ್ಟೊ ಚೆಗುವಾರ ಸೆರ್ನಾ ಅವರು ನೆನ್ನೆ ಟೆಮುಕವಿಗೆ ಆಗಮಿಸಿದ್ದಾರೆ.

ಈ ಮೋಟಾರ್ ಸೈಕಲ್ ಸವಾರರು ಕಾರ್ಡೋವಾ ಪ್ರಾಂತ್ಯದಿಂದ ಡಿಸೆಂಬರ್ 29ರಂದು ತಮ್ಮ ಪ್ರಯಾಣವನ್ನು ಆರಂಭಿಸಿದರು. ದಕ್ಷಿಣ ದಿಕ್ಕಿಗೆ ಹೊರಟ ಅವರು ಮೆಂಡೋಜ ಮತ್ತು ಸಾಲ್ಟ ಮೂಲಕ ಹಾದು ಪೆಯುಲ್ಲಾ ಬಳಿ ಗಡಿದಾಟಿ ಚೆಲಿಗೆ ಪ್ರವೇಶಿಸಿದರು ಎಂದು ಬಹಳ ದೀರ್ಘವಾದ ಲೇಖನವನ್ನೆ ಪ್ರಕಟಿಸಿತ್ತು ಎನ್ನುವ ಅಲ್ಬರ್ಟೋ ಸಾನ್‌ಪಾಬ್ಲೊ ಕುಷ್ಠರೋಗ ಚಿಕಿತ್ಸಕೇಂದ್ರವನ್ನು ಭೇಟಿ ಮಾಡಿದ ಕುರಿತು ಹೀಗೆ ಹೇಳುತ್ತಾರೆ. ಸಾನ್‌ಪಾಬ್ಲೊ ಕುಷ್ಠರೋಗ ಚಿಕಿತ್ಸೆ ಕೇಂದ್ರದ ವೈದ್ಯರುಗಳು ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡು ರೋಗಿಗಳ ಚಿಕಿತ್ಸೆಯಲ್ಲಿ ಪಾಲ್ಗೊಳ್ಳುವಂತೆ ನಮಗೊಂದು ಪ್ರಯೋಗಾಲಯವನ್ನೇ ಒದಗಿಸಿಕೊಟ್ಟರು.

ನಾವು ಕುಷ್ಠರೋಗಿಗಳಿಗೆ ಮಾನಸಿಕ ಚಿಕಿತ್ಸೆ ನೀಡಲು ಪ್ರಯತ್ನಿಸಿ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿದೆವು. ರೋಗಿಗಳದ್ದೆ ಆದ ಒಂದು ಕಾಲ್ಜೆಂಡಾಟದ ತಂಡವನ್ನು ಸಂಘಟಿಸಿ ಅವರಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿದೆವು. ನಾವು ಅವರ ಬಗ್ಗೆ ಕೊಡುತ್ತಿದ್ದ ಗಮನ ಮತ್ತು ಅವರ ಜೊತೆಗಿದ್ದ ನಮ್ಮ ಹೊಂದಾಣಿಕೆಯ ಸಂಬಂಧ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಅವರೆಲ್ಲ ನಮ್ಮನ್ನು ತುಂಬಾನೆ ಹಚ್ಚಿಕೊಂಡರು. ಸಾನ್ ಪಾಬ್ಲೊದಿಂದ ಹೊರಡುವ ಹಿಂದಿನ ದಿನ ಕುಷ್ಠರೋಗಿಗಳ ಒಂದು ನಿಯೋಗ, ಗಂಡಸರು ಮತ್ತು ಮಕ್ಕಳು ಎಲ್ಲ ಸೇರಿ ನಮಗೆ ವಿದಾಯ ಹೇಳಲು ಬಂದರು ಮತ್ತು ನಮ್ಮ ಗೌರವಾರ್ಥ ತೆಪ್ಪಕ್ಕೆ ಮಾಂಬೋ ಟಾಂಗೋ ಎಂದು ಹೆಸರಿಟ್ಟಿದ್ದರು.

ಮಾಂಬೋ ಎನ್ನುವುದು ಪೆರುವಿನ ಒಂದು ನೃತ್ಯ. ಟಾಂಗೋ ಅರ್ಜೆಂಟೈನಾ ನೃತ್ಯ. ಅವರು ರೂಢಿಸಿದ ಹೆಸರುಗಳು ಅಂರ್ಜೆಂಟೈನಾ ಮತ್ತು ಪೆರುವಿನ ಸ್ನೇಹದ ಸಂಕೇತವಾಗಿತ್ತು. ಆ ಸಂದರ್ಭದಲ್ಲಿ ಮಳೆ ಬಂದರೂ ನಮ್ಮನ್ನು ಬೀಳ್ಕೊಡಲು ಬಂದಿದ್ದ ಆ ಜನರ ಉತ್ಸಾಹವನ್ನೇನೂ ಅದು ತೋಹಿಸಲಿಲ್ಲ.ಮೊದಲು ಅವರು ನಮ್ಮ ಗೌರವಾರ್ಥ ಹಾಡುಗಳನ್ನು ಹಾಡಿದರು. ಮೂರುಜನ ಕುಷ್ಠರೋಗಿಗಳು ಬೀಳ್ಕೊಡುಗೆ ಭಾಷಣವನ್ನು ಮಾಡಿದರು. ಅವರಿಗೆ ಭಾವಪೂರ್ಣವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಾಗದಿದ್ದರೂ, ಅವರ ಮಾತುಗಳು ಅವರ ಹೃದಯದಿಂದ ನೇರವಾಗಿ ಬಂದಂಥವುಗಳಾಗಿತ್ತು. ಸಾನ್ ಪಾಬ್ಲೊದಲ್ಲಿ ನಾವಿದ್ದ ಅವಧಿ ಅಲ್ಪ. ಆದರೆ ನಮ್ಮನ್ನು ಒಳ್ಳೆಯ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದ ಆ ಜನರನ್ನು ಬೀಳ್ಕೋಡಲು ಅರ್ನೆಸ್ಟೋನಂತೆ ನನಗೂ ವ್ಯಥೆಯಾಯಿತು ಎಂದು ತಾನು ಚೆ ಜೊತೆಗೆ ಕಳೆದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ.

ಚೆ 1953ರಲ್ಲಿ ತನ್ನ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ. ಅಲ್ಲಿಂದ ಮತ್ತೆ ಪ್ರವಾಸ ಹೊರಟು ಗ್ವಾಟಮಾಲಾಕ್ಕೆ ಬರುತ್ತಾನೆ. ಅಲ್ಲಿ ಚೆಗೆ ಯುದ್ಧದಲ್ಲಿ ಮುಳುಗಿದ್ದ ದೇಶವೊಂದರ ಮೊದಲ ಅನುಭವ ದೊರೆಯುತ್ತದೆ. ನಂತರ 1954ರಲ್ಲಿ ಅರ್ಬೆಂಜ್‌ರ ಸಮಾಜವಾದಿ ಸರಕಾರದ ವಿರುದ್ಧ ಸಿ.ಐ.ಎ. ಪ್ರೇರಿತವಾದ ಕ್ಷಿಪ್ರಕ್ರಾಂತಿಯನ್ನು ಅವರು ಕಣ್ಣಾರೆ ಕಂಡರು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳನ್ನು ರೂಪಿಸಲು ಪ್ರಯತ್ನಿಸುವ ಲ್ಯಾಟಿನ್ ಅಮೆರಿಕಾದಂತಹ ಯಾವುದೆ ಸರಕಾರವನ್ನು ಅಮೇರಿಕಾದಂತಹ ಸಾಮ್ರಾಜ್ಯಶಾಹಿ ದೇಶ ವಿರೋಧಿಸುತ್ತದೆ. ಮತ್ತು ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ಯಥಾಸ್ಥಿತಿಯಾಗಿ ಉಳಿಸಲು ಪ್ರಾರಂಭಿಸುತ್ತದೆ ಎಂಬುದನ್ನು ಚೆ ಗ್ರಹಿಸಿದರು.

ಇಂತಹ ಪರಿಸ್ಥಿತಿಯನ್ನು ಸರಿಪಡಿಸಲು ಸಶಸ್ತ್ರ ಹೋರಾಟದಿಂದ ಸಾಧಿಸುವ ಕ್ರಾಂತಿಯೊಂದೇ ಮದ್ದು ಎಂದು ಚೆ ಯೋಚಿಸುತ್ತಾನೆ. ಆನಂತರ ಹೇಗೋ ಗ್ವಾಟೆಮಾಲದಿಂದ ಹೊರಬಂದ ಚೆ ಫಿಡೆಲ್ ಕ್ಯಾಸ್ಟ್ರೋರನ್ನು ಭೇಟಿ ಮಾಡಿ ಅವರ ಧ್ಯೇಯಕ್ಕೆ ಜೊತೆಯಾಗುತ್ತಾನೆ. ನಂತರ ಕ್ಯೂಬಾದ ಸರ್ವಾಧಿಕಾರಿ ಜನರಲ್ ಪುಲ್ಗೆನ್ಸಿಯೋ ಬಟಿಸ್ಟಾ ವಿರುದ್ಧ ಸೇನಾ ದಂಡಯಾತ್ರೆ ಕೈಗೊಳ್ಳುವ ಯೋಜನೆ ರೂಪಿಸುತ್ತಾರೆ. 1956ರಲ್ಲಿ ಚೆ ಮತ್ತು ಕ್ಯಾಸ್ಟ್ರೋ ಹಾಗೂ ಇತರೆ 40ಮಂದಿ ಸ್ತ್ರೀ-ಪುರುಷ ಹೋರಾಟಗಾರರು ಜನರಲ್ ಬಿಟಿಸ್ಟಾನ ಸರಕಾರವನ್ನು ಕಿತ್ತೊಗೆಯಲು ಕ್ಯೂಬಾಕ್ಕೆ ಬರುತ್ತಾರೆ. ಈ ಹೋರಾಟಗಾರರ ಗುಂಪು ಸಿಯೆರಾ ಮೈಸ್ಟ್ರಾ ಪರ್ವತಗಳಲ್ಲಿ ನೆಲೆಸಲು ತೀರ್ಮಾನಿಸುತ್ತದೆ.

ಇದಕ್ಕೆ ಉತ್ತರವಾಗಿ ಬಟಿಸ್ಟಾ ಸಿಯೆರಾ ಮತ್ತು ಮೈಸ್ಟ್ರಾಕ್ಕೆ ಹೆಚ್ಚು ಸೈನಿಕ ಪಡೆಗಳನ್ನು ಕಳಿಸುತ್ತಾನೆ. ಚೆ ಮತ್ತು ಕ್ಯಾಸ್ಟ್ರೋ ಸೇರಿದಂತೆ 300ಜನ ಕ್ರಾಂತಿಕಾರಿಗಳನ್ನು ಮಣಿಸಲು 10ಸಾವಿರ ಸೈನಿಕ ಪಡೆಯನ್ನು ನಿಯೋಜಿಸುತ್ತಾನೆ. ಬಂಡಾಯಗಾರರ ಬಗ್ಗೆ ಮಾಹಿತಿ ಸಂಗ್ರಹಿಸಲೆಂದೆ ಅನೇಕ ವೇಳೆ ಸರಕಾರಿ ಸೈನಿಕರು ಸಾಮಾನ್ಯ ಜನರನ್ನು ವಿಚಾರಣೆಗೆ ಎಳೆದೊಯ್ಯುತ್ತಿದ್ದರು. ಜೊತೆಗೆ ಅನೇಕ ಅಮಾಯಕರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಮಕ್ಕಳನ್ನೂ ಒಳಗೊಂಡಂತೆ ಶಂಕಿತರನ್ನು ಸಾರ್ವಜನಿಕವಾಗಿ ಕೊಲೆಗೈದು ಅವರ ಶವಗಳನ್ನು ಬೀದಿಗಳಲ್ಲಿ ಸಾರ್ವಜನಿಕವಾಗಿ ನೇತು ಹಾಕುತ್ತಿದ್ದರು. ಅಂದರೆ ಸಾಮಾನ್ಯ ಜನರು ಕ್ರಾಂತಿಕಾರಿಗಳ ಜೊತೆ ಸೇರದಂತೆ ಎಚ್ಚರಿಕೆ ನೀಡುವುದು ಮತ್ತು ಭಯ ಹುಟ್ಟಿಸುವುದು ಇದರ ಉದ್ದೇಶವಾಗಿತ್ತು.

ಸರ್ವಾಧಿಕಾರಿ ಬಟಿಸ್ಟಾನ ಈ ವರ್ತನೆಗಳಿಂದ ಗೆರಿಲ್ಲಾ ಹೋರಾಟಗಾರರಿಗೆ ಬೆಂಬಲ ಇನ್ನಷ್ಟು ಹೆಚ್ಚಾಗುತ್ತಲೇ ಹೋಯಿತು. ಉದಾಹರಣೆ ವಕೀಲರು, ವಾಸ್ತುಶಿಲ್ಪಿಗಳು, ವೈದ್ಯರು, ಆಕೌಟೆಂಟ್‌ಗಳು ಸಾಮಾಜಿಕ ಕಾರ್ಯಕರ್ತರು ಮುಂತಾದ ಸುಮಾರು 45ಸಂಘಟನೆಗಳು ಜುಲೈ 26ರ ಚಳವಳಿಗೆ ಬೆಂಬಲ ಘೋಷಿಸಿದವು. ಅಮೇರಿಕಾ ಸರ್ವಾಧಿಕಾರಿ ಬಟಿಸ್ಟಾಗೆ, ವಿಮಾನ, ಹಡಗು, ಟ್ಯಾಂಕ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಒದಗಿಸಿತು. ನಾಪಾಂಬಾಂಬಿನಂತಹ ವಿನಾಶಕಾರಿ ಅಸ್ತ್ರಗಳು ಇದ್ದಾಗಲೂ ಬಟಿಸ್ಟಾನಿಂದ ಗೆರಿಲ್ಲಾ ಹೋರಾಟಗಾರರನ್ನು ಸೋಲಿಸಲು ಸಾಧ್ಯವಾಗಲಿಲ್ಲ.

1958 ಮಾರ್ಚ್ ಚುನಾವಣೆಗಳನ್ನು ಸರ್ವಾಧಿಕಾರಿ ಬಟಿಸ್ಟಾ ವಿರುದ್ಧ ಕ್ಯೂಬಾ ಜನತೆ ಬಹಿಷ್ಕರಿಸಿದರು. ರಾಜಧಾನಿ ಹವಾನಗಳಲ್ಲಿ 75% ಚುನಾವಣಾ ಬಹಿಷ್ಕಾರ ಇದ್ದರೆ ಸ್ಯಾಂಟಿಯಾಗೋ ನಗರದಲ್ಲಿ ಶೇ 98%ರಷ್ಟು ಬಹಿಷ್ಕಾರಗಳು ನಡೆಯಿತು. ಇದೇ ಸಂದರ್ಭದಲ್ಲಿ ಕ್ರಾಂತಿಕಾರಿಗಳು ಬಟಿಸ್ಟಾನನ್ನು ನೇರವಾಗಿ ಸೋಲಿಸಲು ಮುಖ್ಯ ನಗರಗಳಿಗೆ ಬಂದರು. ಆದರೆ ಸರ್ವಾಧಿಕಾರಿ ಬಟಿಸ್ಟಾ ಅಮೆರಿಕಾದೊಂದಿಗೆ ಸಮಾಲೋಚಿಸಿ ದೇಶಬಿಟ್ಟು ಪಲಾಯನ ಮಾಡಿದ. 1958 ಡಿಸೆಂಬರ್ 31ರಂದು ಬಟಿಸ್ಟಾ ದುರಾಡಳಿತವನ್ನು ಪತನ ಮಾಡಲಾಯಿತು. 1959ರ ಜನವರಿಯಲ್ಲಿ ರಾಜಧಾನಿ ಹವಾನ ನಗರವನ್ನು ಪ್ರವೇಶಿಸಿ ಅಧಿಕಾರವನ್ನು ವಶಕ್ಕೆ ತೆಗೆದುಕೊಂಡ ಮೊಟ್ಟ ಮೊದಲ ಬಂಡಾಯಗಾರ ಪಿಡಲ್ ಕ್ಯಾಸ್ಟ್ರೋ ಜೊತೆ ಚೆಗೆವಾರ ಕೂಡ ಇದ್ದರು. ಚೆ ಮತ್ತು ಕ್ಯಾಸ್ಟ್ರೋ ಕ್ಯೂಬಾದ ಹೊಸ ನಾಯಕರಾದರು. ಸರಕಾರದ ನೇತೃತ್ವವನ್ನು ಕ್ಯಾಸ್ಟ್ರೋ ವಹಿಸಿಕೊಂಡರು.

ಮುಂದೆ ಪಿಡಲ್ ಕ್ಯಾಸ್ಟ್ರೊ ಸರಕಾರದಲ್ಲಿ ಚೆ ಕೃಷಿ ಮಂತ್ರಿಯಾಗಿ ಅನೇಕ ಸುಧಾರಣೆಗಳನ್ನು ತಂದರು. ಭೂಸುಧಾರಣೆಯೊಂದಿಗೆ ಚೆ ಹೊತ್ತುಕೊಂಡ ಮತ್ತೊಂದು ಪ್ರಧಾನ ಕ್ಷೇತ್ರವೆಂದರೆ ಶಿಕ್ಷಣಕ್ಷೇತ್ರ. ಅವರು ರಾಷ್ಟ್ರೀಯ ಸಾಕ್ಷರತೆಗಾಗಿ ಹೆಚ್ಚು ಒತ್ತುಕೊಟ್ಟರು. ಅವರ ಒತ್ತಾಸೆಯಂತೆ ಕ್ಯೂಬಾ ಸರಕಾರವೂ 1961ನೆ ವರ್ಷವನ್ನು ಶಿಕ್ಷಣ ವರ್ಷವೆಂದು ಘೋಷಿಸಿತು. ಇದರ ಸಲುವಾಗಿ ಹಳ್ಳಿಗಾಡುಗಳಲ್ಲಿ ಬಹುತೇಕ ಅಕ್ಷರಸ್ಥರಿಗೆ ಓದುಬರಹ ಕಲಿಸಲು ಸಾಕ್ಷರತಾ ಆಂದೋಲವನ್ನು ಕೈಗೊಳ್ಳಲಾಯಿತು. ಈ ಆಂದೋಲನ ಮುಗಿಯುವ ವೇಳೆಗೆ 7ಲಕ್ಷಕ್ಕೂ ಹೆಚ್ಚು ಮಂದಿಗೆ ಓದು ಬರಹ ಕಲಿಸಲಾಯಿತು. ಇಂತಹ ಕ್ರಾಂತಿಕಾರ ಕೆಲಸದಿಂದ ದೇಶದ ಸಾಕ್ಷರತೆ ಶೇ. 96ಕ್ಕೆ ಏರಿಕೆಯಾಯಿತು.

ಆನಂತರ ಅವರು 1965ರಲ್ಲಿ ಕ್ಯೂಬಾವನ್ನು ಬಿಟ್ಟು ಹೊರಟು ತೃತೀಯ ಜಗತ್ತಿನ ಕ್ರಾಂತಿಗಳಿಗೆ ಬೆಂಬಲವಾಗಿ ಅವರು ತನ್ನ ಸುತ್ತಾಟವನ್ನು ಮುಂದುವರಿಸಿದರು. ಅದರ ಭಾಗವಾಗಿಯೇ ಅವರು ಬೊಲಿವಿಯಾದಲ್ಲಿ ಗೆರಿಲ್ಲಾ ಯೋಧರನ್ನು ಸಂಘಟಿಸಲು ಯತ್ನಿಸಿದರು. ಆದರೆ ಬೊವಿಲಿಯಾದಲ್ಲಿ ಚೆ ಗೆ ಸಾಮಾನ್ಯ ಜನರ ನೆರವು ಸಿಗಲಿಲ್ಲ. ಕ್ರಾಂತಿಕಾರಿಗಳ ಜೊತೆ ಸೇರಲು ಸಾಮಾನ್ಯಜನ ಹೆದರುತ್ತಿದ್ದರು. ಆದರೂ ಎದೆಗುಂದದೆ ಚೆ ತನ್ನ ಹೋರಾಟವನ್ನು ಮುಂದುವರಿಸಿದರು. ಆದರೆ ಅಮೆರಿಕಾದ ಸಿ.ಐ.ಎ. ನೆರವಿನಿಂದ ಬೊಲಿವಿಯಾ ಪಡೆಗಳು ಗೆರಿಲ್ಲಾ ಹೋರಾಟಗಾರರನ್ನು  ಪತ್ತೆಹಚ್ಚಿ ಹಲವು ಗೆರಿಲ್ಲಾ ಯೋಧರನ್ನು ಕೊಂದು ಚೆನನ್ನು 1967 ಅಕ್ಟೋಬರ್8ರಂದು  ಸೆರೆಹಿಡಿದರು.

ನಂತರ ಹಿಗುಎರಾ ಎಂಬ ಗ್ರಾಮದ ಶಾಲೆಯಲ್ಲಿ ಕೂಡಿಹಾಕಿ ಮಾರನೆ ದಿನ ಅಕ್ಟೋಬರ್ ೯ರಂದು ಮಧ್ಯಾಹ್ನ ೧:೩೦ರ ಸುಮಾರಿಗೆ  ಅಮೆರಿಕಾದ ಸಿ.ಐ.ಎ. ಅಧಿಕಾರಿಗಳ ಸಮ್ಮುಖದಲ್ಲಿ ಸಿ.ಐ.ಎ. ರೇಂಜರ್‌ಗಳು ತೀರ ಸಮೀಪದಿಂದ ಗುಂಡಿಟ್ಟು ಚೆ ನನ್ನು ಹತ್ಯೆ ಮಾಡುತ್ತಾರೆ. ನಂತರ ಅವನ ಮುಖವನ್ನು ಪಡಿಯಚ್ಚು ತೆಗೆದು ಅವನ ದೇಹವನ್ನು ಹತ್ತಿರದಿಂದ ಫೊಟೋ ತೆಗೆಯಲಾಯಿತು. ಮತ್ತು ಅವನ ಕೈಗಳನ್ನು ಮುಂಗೈಬಳಿ ಕತ್ತರಿಸಿ ಅವನ್ನು ಆಲ್ಕೊಹಾಲಿನಲ್ಲಿ ರಕ್ಷಿಸಿಟ್ಟರು. ಕಾರಣ ನಾವು ಕೊಂದ ವ್ಯಕ್ತಿ ಚೆಗುವಾರ ಎಂಬುದರ ಋಜುವಾತುವಿಗಾಗಿ ಅವರು ಹಾಗೆ ಮಾಡಿದರು. ಚೆ ಸತ್ತ ಸುದ್ದಿ ತಿಳಿದು ಜಗತ್ತಿನಾದ್ಯಂತ ಅವನ ಸಂಗಾತಿಗಳು ಶೋಕತಪ್ತರಾದರು.

ಹೀಗೆ ಚೆ ಕೈಗಳನ್ನು ಕ್ಯೂಬಾ ರಕ್ಷಿಸಿಟ್ಟಿದೆ. ಮತ್ತು ಇವು ವಿಮೋಚನೆಗಾಗಿ ಹೋರಾಟದಲ್ಲಿ ಅಸ್ತ್ರಗಳನ್ನು ಹಿಡಿದ ಕೈಗಳೂ, ತಮ್ಮ ಗಮನಾರ್ಹ ಚಿಂತನೆಗಳನ್ನು ಬರೆದು ಹಂಚಿದ ಕೈಗಳು, ಕಬ್ಬಿನ ಪ್ಲಾಂಟೇಷನ್‌ಗಳಲ್ಲಿ, ಬಂದರುಕಟ್ಟೆಗಳ ಮುಂತಾದ ನಿರ್ಮಾಣದ ಸ್ಥಳಗಳಲ್ಲಿ ಕೆಲಸ ಮಾಡಲು ಬಳಸಿದ ಕೈಗಳು ಎಂದು ಕ್ಯಾಸ್ಟ್ರೊ ಉದ್ಗರಿಸುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅಮೇರಿಕಾದಂತ ದುಷ್ಟಶಕ್ತಿಗಳು ಚೆ ನ ದೇಹವನ್ನು ಮಾತ್ರ ಹತ್ಯೆ ಮಾಡಿರಬಹುದು. ಆದರೆ ಚೆ ಹಂಚಿದ ಆಲೋಚನೆಗಳನ್ನು ನಿಯಂತ್ರಿಸಲು ಅಥವಾ ಹತ್ಯೆ ಮಾಡಲು ಸಾಧ್ಯವಿದೆಯೇ? ಇಲ್ಲಾ. ಯಾಕೆಂದರೆ ಚೆಗುವಾರ ನೋವುಣ್ಣುತ್ತಿರುವ ಜನತೆಗೆ ತಮ್ಮ ಬದುಕನ್ನು ಅರ್ಪಿಸಿಕೊಂಡವರು. ಹಾಗಾಗಿ ವಂಚಿತ ಜನತೆಗೆ ಚೆ ಎಂದಿಗೂ ಸ್ಫೂರ್ತಿಯಾಗಿರುತ್ತಾರೆ ಅನ್ನುವುದರಲ್ಲಿ ಯಾವ ಅನುಮಾವೂ ಇಲ್ಲ.

ಐರಿಶ್ ಬಂಡಾಯಗಾರರ ರಕ್ತ ನನ್ನ ಮಗನ ಧಮನಿಗಳಲ್ಲಿ ಹರಿಯುತ್ತಿತ್ತು ಎಂಬುದನ್ನು ನಾವು ಮೊಟ್ಟ ಮೊದಲು ಗಮನಿಸಬೇಕಾದ ವಿಚಾರ ಎಂದು ಚೆ ಸತ್ತ ನಂತರ ಅವರ ತಂದೆ ಪ್ರತಿಕ್ರಿಯಿಸಿದರು. ಚೆ ಇಲ್ಲವಾಗಿ ನಲವತ್ತೈದು ವರ್ಷಗಳು ಕಳೆದಿದ್ದರೂ ಅವನು ತನ್ನ ವಿಚಾರ, ಆಲೋಚನೆಗಳ, ಮಾನವೀಯವಾದ ವ್ಯಕ್ತಿತ್ವಗಳ ಮೂಲಕ ದಬ್ಬಾಳಿಕೆ, ಶೋಷಣೆ ಅನ್ಯಾಯಗಳ ವಿರುದ್ಧ ಇಂದಿಗೂ ನಮ್ಮ ಸರೀಕನಂತೆ ತನ್ನ ನಂತರದ ತಲೆಮಾರಿಗೆ ಯುವಕನಾಗಿ ಸದಾ ಜೊತೆಯಾಗುತ್ತಲೇ ಇದ್ದಾನೆ.

Monday, October 29, 2012

ನವೆಂಬರ್18 ರಂದು ಹೊನ್ನಾವರದಲ್ಲಿ ಸಂವಾದಗೋಷ್ಠಿ ಮತ್ತು ಪುಸ್ತಕ ಬಿಡುಗಡೆ

https://mail-attachment.googleusercontent.com/attachment/?ui=2&ik=64db019aae&view=att&th=13aad82564b68b12&attid=0.1&disp=inline&realattid=f_h8vufezx0&safe=1&zw&saduie=AG9B_P_apJ-8s6ZpZQ22vq2XigUY&sadet=1351549239122&sads=-I3jH4PGWL66MxP2xsMnAqMMNFM

ನಾನು ಹಾಗೂ ನಾನಲ್ಲ


ಜಲಾಲುದ್ದೀನ್ ರೂಮಿ
ಅನು : ಡಾ .ಎಚ್ .ಎಸ್ ಅನುಪಮಾhttps://mail-attachment.googleusercontent.com/attachment/?ui=2&ik=64db019aae&view=att&th=13977d21ca8486b9&attid=0.1&disp=inline&realattid=f_h6hx2bmf0&safe=1&zw&saduie=AG9B_P_apJ-8s6ZpZQ22vq2XigUY&sadet=1349931928250&sads=z5wx_BSLAaGOfoex5txlwbsGdC4&sadssc=1


ನಾನು ಕೊಚ್ಚಿಹೋಗಿರುವೆ
ಇನ್ನೂ ಬರದಿರುವ
ಪ್ರವಾಹದಲ್ಲಿ

ನಾನು ಬಂಧಿಸಲ್ಪಟ್ಟಿರುವೆ
ಇನ್ನೂ ಕಟ್ಟದಿರುವ 
ಬಂದೀಖಾನೆಯಲ್ಲಿ

ಸೋಲಿನಂಚಿಗೆ ಬಂದು
ನಿಂತಿದ್ದೇನೆ.
ಪಗಡೆಯಾಟವನಾಡದೇ 

ನೆತ್ತಿಗೆ ಅಮಲೇರಿಸಿಕೊಂಡಿದ್ದೇನೆ
ಒಂದು ಹನಿ 
ನಿನ್ನ ಮದಿರೆಯ ಕುಡಿಯದೇ

ಆಗಲೇ ಗಾಯಗೊಂಡು
ಹತನಾಗಿದ್ದೇನೆ
ರಣರಂಗವನ್ನು ಪ್ರವೇಶಿಸದೇ

ನನಗಿನ್ನೆಂದೂ ತಿಳಿಯದು 
ಬಿಂಬ ಪ್ರತಿಬಿಂಬಗಳ  
ನಡುವಣ ವ್ಯತ್ಯಾಸ

ನೆರಳಿನ ಹಾಗೆ
ನಾನಾಗಿರುವುದು
ಮತ್ತು 
ನಾನಲ್ಲದಿರುವುದು.


ಜನ ವಿರೋಧಿ ಖಾಸಗಿ ವಿಶ್ವವಿದ್ಯಾಲಯಗಳು ಬೇಡ


ಮಾರುತಿ ಹೆಚ್‌.
ಬೆಂಗಳೂರು


ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣವನ್ನು ಶೇ.30ಕ್ಕೆ ಹೆಚ್ಚಿಸುವ ಕಾರಣ ನೀಡಿ ರಾಜ್ಯಸರಕಾರ ಖಾಸಗಿ ವಿಶ್ವ ವಿದ್ಯಾಲಯಗಳ ಸ್ಥಾಪನೆಗೆ ಕೆಲವು ನಿರ್ದಿಷ್ಟ ಮಾನದಂಡಗಳ ಅಡಿಯಲ್ಲಿ ಅನುಮತಿ ನೀಡಲು ಮುಂದಾಗಿರುವುದು ಆತಂಕಕಾರಿ ವಿಚಾರವಾಗಿದೆ. ಸರಕಾರವು ಖಾಸಗಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಮುಂದಾಗಿರುವುದರ ಹಿಂದೆ ಉನ್ನತ ಶಿಕ್ಷಣವನ್ನು ಎಲ್ಲರಿಗೂ ದೊರಕಿಸಿಕೊಡುವ ತನ್ನ ಪ್ರಾಥಮಿಕ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದೆ ಅಲ್ಲದೆ ಉನ್ನತ ಶಿಕ್ಷಣವನ್ನು ಮಾರಾಟದ ಸರಕನ್ನಾಗಿ ಪರಿವರ್ತಿಸಿ, ಖಾಸಗಿ ವ್ಯಕ್ತಿ, ಕಂಪೆನಿಗಳ ಲಾಭಕ್ಕೆ ಅನುಕೂಲ ಮಾಡಿ ಕೊಡುವ ಉದ್ದೇಶ ಬಹಳ ಸ್ಪಷ್ಟವಾಗಿದೆ. ಇತ್ತೀಚೆಗೆ ನಡೆದ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿ ಗಳು, ನಾನಾ ವಿವಿ ಕುಲಪತಿಗಳು, ವಿಶ್ರಾಂತ ಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಒಳಗೊಂಡ ತಂಡ, ಖಾಸಗಿ ಸಂಸ್ಥೆಗಳಿಗೆ ಮುಕ್ತ ಸ್ವಾತಂತ್ರ, ವಿ.ವಿ.ಕ್ಯಾಂಪಸ್ ವಿಸ್ತಾರ, ಸೀಟು ಹಂಚಿಕೆ ಪ್ರಮಾಣ, ಶುಲ್ಕ ನಿಗದಿ, ವಿ.ವಿ.ಗಳ ಮೇಲೆ ನಿಗಾ ಇಡಲು ನಿಯಂತ್ರಣ ಪ್ರಾಧಿಕಾರ, ಇತ್ಯಾದಿ ವಿಚಾರಗಳನ್ನು ಚರ್ಚಿಸಿ 40 ಖಾಸಗಿ ವಿ.ವಿ. ಆರಂಭಿಸಲು ಹಸಿರು ನಿಶಾನೆ ತೋರಿರುವುದು ನಮ್ಮ ಸರಕಾರಿ ವಿ.ವಿ.ಗಳು ತಮ್ಮ ನೈತಿಕತೆ, ಸ್ವಾಯತ್ತತೆ ಕಳೆದುಕೊಂಡು ಬೀಗ ಜಡಿಯುವಂತೆ ಮಾಡುವುದು ಖಚಿತವಾಗಿದೆ.

ಈ ಹಿಂದೆಯೂ ಕೇಂದ್ರದ ಎನ್.ಡಿ.ಎ. ಸರಕಾರ ಉನ್ನತ ಶಿಕ್ಷಣ ಕ್ಷೇತ್ರವನ್ನು ಖಾಸಗಿ ಮತ್ತು ವಿದೇಶಿ ವಿ.ವಿ.ಗಳು ತೆರೆಯುವ ಸಲುವಾಗಿ ಉದ್ಯಮಿ ಕುಮಾರ ಮಂಗಳಂ ಬಿರ್ಲಾರನ್ನು ಅಧ್ಯಕ್ಷರನ್ನಾಗಿ ಮಾಡಿತು. ರಾಜ್ಯದಲ್ಲಿರುವ ಎಲ್ಲ ವಿಶ್ವ ವಿದ್ಯಾಲಯಗಳಿಗೆ ಕುಲಾಧಿಪತಿ(ಚಾನ್ಸಲರ್) ಆಗಿರುವಂತೆ ರಾಜ್ಯಪಾಲರು ಈ ಖಾಸಗಿ ವಿ.ವಿ.ಗಳಿಗೂ ಅವರೇ ಆಗಿರುತ್ತಾರೆ. ಈ ವಿ.ವಿ.ಗಳಿಗೆ ಕೇವಲ ಸಂದರ್ಶಕರಾಗಿ, ಸಭೆ ಸಮಾರಂಭ, ಪದವಿ ಪ್ರದಾನಗಳಿಗೆ ಅಧ್ಯಕ್ಷತೆ ವಹಿಸುವ ಕೆಲಸವಷ್ಟೆ ಅವರದಾಗಲಿದೆ. ಜೀವನ ಪರ್ಯಾಂತ ಕುಲಾಧಿಪತಿ, ಪರಮಾಧಿಕಾರ ಎಲ್ಲವೂ ಖಾಸಗಿ ಸಂಸ್ಥೆಯ ಮಾಲಕರಿಗೆ ಸಂಪೂರ್ಣ ನಿಯಂತ್ರಣವಿರುತ್ತದೆ.
ಇನ್ನು ಈ ವಿ.ವಿ.ಗಳಿಗೆ ನೇಮಿಸುವ ಉಪಕುಲಪತಿ (ವಿ.ಸಿ.), ಕುಲಸಚಿವರು (ರಿಜಿಸ್ಟ್ರರ್) ಪ್ರತಿ ನಿಖಾಯಗಳಿಗೆ (ವಿಭಾಗಗಳಿಗೆ) ಪ್ರೊಫೆಸರ್, ರೀಡರ್, ಉಪನ್ಯಾಸಕರ ನೇಮಕಾತಿ, ವಿವಿಧ ಸಮಿತಿಗಳ ನೇಮಕ, ಪಠ್ಯಕ್ರಮ, ಪ್ರವೇಶಾವಕಾಶ, ಶುಲ್ಕ ನಿಗದಿ ಹೀಗೆ ಆಡಳಿತದ ಎಲ್ಲ ವಿಚಾರಗಳಿಗೂ ಖಾಸಗಿ ವಿ.ವಿ.ಯ ಮಾಲಕರೇ ಎಲ್ಲ ಅಂತಿಮ ತೀರ್ಮಾನಿಕರು. ಈ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳ ಕುಟುಂಬ ಕೇಂದ್ರಿತ ಆಡಳಿತ ರಾಜಕೀಯ, ಸ್ವಜನ ಪಕ್ಷಪಾತ, ಕ್ಯಾಪಿಟೇಷನ್ ಶುಲ್ಕ, ದುಬಾರಿ ಶುಲ್ಕ, ಅಧ್ಯಾಪಕರಿಗೆ ಕಡಿಮೆ ಸಂಬಳ, ವಿದ್ಯಾರ್ಥಿಗಳಿಗೆ ದರ್ಜೆ (ಶ್ರೇಣಿ) ನೀಡುವುದರಲ್ಲಿ ಎಸಗುವ ಅಕ್ರಮಗಳು, ಪರೀಕ್ಷಾ ಅಕ್ರಮಗಳು ಇವೇ ಮುಂತಾದ ಗಂಭೀರ ಸಮಸ್ಯೆಗಳು ಉಲ್ಭಣಿಸುತ್ತವೆ.

ಖಾಸಗಿ ವಿ.ವಿ.ಗಳ ಒಟ್ಟು ಸೀಟುಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಕೇವಲ ಶೇ.30ರಷ್ಟು ಸೀಟುಗಳನ್ನಷ್ಟೇ ಕಲ್ಪಿಸಲಾಗಿದೆ. ಅದನ್ನು ಶೇ.50ಕ್ಕೆ ವಿಸ್ತರಿಸುವಂತೆ ಚರ್ಚೆ ನಡೆಯುತ್ತಿದೆ ಅಷ್ಟೆ, ಅದು ಕಾರ್ಯಾಗತಗೊಂಡಾಗಲೇ ನಿಜ. ರಾಜ್ಯದ ವಿದ್ಯಾರ್ಥಿಗಳು ಖಾಸಗಿ ವಿ.ವಿ.ಗಳು ನಿರ್ಧರಿಸಲಿರುವ ಪ್ರವೇಶ ಪರೀಕ್ಷೆ (ಸಿ.ಇ.ಟಿ.) ಯ ಎಲ್ಲ ಮಾನದಂಡ ಪೂರೈಸಿದರೆ ಮಾತ್ರ ಸೀಟು ಇಲ್ಲವೇ ಹೊರರಾಜ್ಯದ, ಹೊರ ದೇಶದ ಇತರೆ ಸಾಮಾನ್ಯವರ್ಗದ ವಿದ್ಯಾರ್ಥಿಗಳಿಂದ ಭರ್ತಿ ಮಾಡಿಕೊಳ್ಳುತ್ತಿವೆ.
ಇಲ್ಲಿ ಸರಕಾರಿ ಸಂಸ್ಥೆಗಳಲ್ಲಿ ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ ಇರುವ ಮೀಸಲಾತಿಯ ಪ್ರಸ್ತಾಪ ಇಲ್ಲದೆ ಸಾಮಾಜಿಕ ನ್ಯಾಯಕ್ಕೆ ಸಂಪೂರ್ಣವಾಗಿ ತೀಲಾಂಜಲಿ ಇಡಲಾಗುತ್ತಿದೆ. 2009ರ ಪ್ರಕಾರ ಭಾರತದಲ್ಲಿ ಒಟ್ಟು 127 ಪರಿಭಾವಿತ ಅಥವಾ ಸ್ವಾಯತ್ತ ವಿಶ್ವವಿದ್ಯಾಲಯಗಳಿವೆ. ಇದರಲ್ಲಿ 41 ಸರಕಾರಿ ಹಾಗೂ 86 ಖಾಸಗಿ ಸ್ವಾಮ್ಯದಲ್ಲಿವೆ. ಕರ್ನಾಟಕದಲ್ಲಿ 15 ಪರಿಭಾವಿತ ವಿ.ವಿ.ಗಳಿದ್ದು, ಅವುಗಳಲ್ಲಿ 12 ಖಾಸಗಿ ಆಡಳಿತದಲ್ಲಿವೆ. ಇವುಗಳ ಗುಣಾತ್ಮಕತೆ, ಕಾರ್ಯ ವೈಖರಿ, ಸಂಶೋಧನೆ, ಆಡಳಿತ ಇತರೆ ವಿಚಾರಗಳು ಸೇರಿದಂತೆ ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆಗಾಗಿ ಕೇಂದ್ರ ಸರಕಾರ ಆಗಿನ ಯು.ಜಿ.ಸಿ ಅಧ್ಯಕ್ಷ ಪ್ರೊ.ಯಶ್‌ಪಾಲ್ ನೇತೃತ್ವದ ಸಮಿತಿಯನ್ನು 1993ರಲ್ಲಿ ನೇಮಿಸಿತು.

ಈ ಸಮಿತಿ ಅಂತಿಮವಾಗಿ 2009ರ ಜೂನ್‌ನಲ್ಲಿ ತನ್ನ ವರದಿ ಸಲ್ಲಿಸಿತು. ವರದಿಯ ಶಿಪಾರಸುಗಳು ಸತ್ಯವನ್ನು ಕಣ್ಣಿಗೆ ರಾಚುವಂತೆ ಮಾಡಿತು. ಸ್ವಾಯತ್ತ ವಿ.ವಿ.ಗಳ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಿದ ಸಮಿತಿ, ಭಾರತೀಯ ಶಿಕ್ಷಣದ ಮೇಲೆ ಆಗಿರುವ ನಕಾರಾತ್ಮಕ ಪರಿಣಾಮಗಳನ್ನು ತಿಳಿಸಿತು. ಡೀಮ್ಡ್ ವಿ.ವಿ.ಗಳು ಸೂಕ್ತ ರೀತಿಯಲ್ಲಿ ಪಾಠ ಪ್ರವಚನಗಳು ನಡೆಸದಿರುವುದು, ಮೂಲ ಸೌಕರ್ಯ, ಸಿಬ್ಬಂದಿ ಇಲ್ಲದಿದ್ದದ್ದು, ಗರಿಷ್ಠ ಶುಲ್ಕ, ನಿಯಮಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಿದ ಹಲವು ಲೋಪಗಳ ಹಿನ್ನೆಲೆಯಲ್ಲಿ ಸ್ವಾಯತ್ತತೆ ನೀಡುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಮತ್ತು ಸ್ವಾಯತ್ತತೆ ಹಿಂಪಡೆಯುವ ಕುರಿತು ಶಿಪಾರಸು ಮಾಡಿತು. 

ಇದು ಖಾಸಗಿ ವಿ.ವಿ, ಡೀಮ್ಡ್ ವಿ.ವಿ.ಗಳ ನಿಜಬಣ್ಣ ಬಯಲು ಮಾಡಿದವು. ಅಲ್ಲದೇ ಉನ್ನತ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟಿಗೆ ಮೂಲ ಕಾರಣವಾಗಿಯೂ ಪರಿಣಮಿಸಿತು. ಖಾಸಗಿ ವಿ.ವಿ.ಗಳಿಗೆ ನಮ್ಮ ನೆಲದ ಸಾಹಿತ್ಯ, ಸಂಸ್ಕೃತಿ, ಚರಿತ್ರೆ, ಇತ್ಯಾದಿಗಳು ಬೇಕಾಗಿಲ್ಲ. ಕೇವಲ ಜಾಗತಿಕ ಬಂಡವಾಳಶಾಹಿಗಳ ಮಾರುಕಟ್ಟೆಗೆ ಪೂರಕವಾದ ಐಟಿ-ಬಿಟಿ ಮ್ಯಾನೆಜ್‌ಮೆಂಟ್ ಸ್ಟಡೀಸ್, ಯುದ್ಧ ಮಾರಕ ಅಸ್ತ್ರಗಳನ್ನು ಒದಗಿಸುವ ತಂತ್ರಜ್ಞಾನದ ಪಠ್ಯಕ್ರಮಕ್ಕೆ ಹೆಚ್ಚು ಒತ್ತು ನೀಡುತ್ತವೆ. ಆ ಮೂಲಕ ಕಾರ್ಪೋರೇಟ್ ಉದ್ಯಮಗಳ ಬೇಡಿಕೆಗೆ ತಕ್ಕಂತೆ ದುಡಿಮೆಗಾರರನ್ನು ರೂಪಿಸಿಕೊಳ್ಳುವ ತಯಾರಿಯಲ್ಲಿವೆ.

ಖಾಸಗಿ ವಿ.ವಿ. ಆಡಳಿತ ಮಂಡಳಿಯು ವಿ.ವಿ. ಕಟ್ಟಡವನ್ನು 40ಎಕರೆ ವಿಸ್ತಾರದಲ್ಲಿ ನಿರ್ಮಿಸುವುದು ತನ್ನಗೆ ಸೂಕ್ತ ಸ್ಥಳದಲ್ಲಿ ಪ್ರಾದೇಶಿಕ ಕೇಂದ್ರಗಳನ್ನು, ಅಧ್ಯಯನ ಕೇಂದ್ರಗಳನ್ನು ತೆರೆಯುವ ಅವಕಾಶ ಲಭಿಸುವುದರಿಂದ ಇದು ಒಟ್ಟಾರೆ ವಿಶ್ವ ವಿದ್ಯಾಲಯವೊಂದಕ್ಕೆ ಇರಬೇಕಾದ ಶೈಕ್ಷಣಿಕ ವಾತಾವರಣದ ಬದಲಿಗೆ ವಾಣಿಜ್ಯ ಸಂಕೀರ್ಣ ಮಳಿಗೆಯಾಗಿ ಮಾರ್ಪಾಡಲಿದೆ.

ನಿರಂಕುಶ ವರ್ತನೆಗಳಿಂದ ಶೈಕ್ಷಣಿಕ ವಾತಾವಾರಣವನ್ನು ಹಾಳುಗೆಡುವಲಿದೆ, ಇಬ್ಬರು ಕಳಂಕಿತ ಆರೋಪ ಹೊತ್ತ ಬೆಂ.ವಿ.ವಿ.ಯ ಮಾಜಿ ಉಪಕುಲಪತಿ ಎನ್.ಪ್ರಭುದೇವ್, ರಿಜಿಸ್ಟ್ರಾರ್ ಬಿ.ಸಿ.ಮೈಲಾರಪ್ಪ ಮುಂತಾದವರು ಹಾಲಿ ಸರಕಾರದ ಅಧಿಕಾರಾವಧಿಯಲ್ಲೇ ನೇಮಕ ಗೊಂಡವರು. 

ಸರಕಾರದ ಆದೇಶಗಳಿಗೆ ಕಿಂಚಿತ್ತು ಬೆಲೆ ನೀಡದಿದ್ದಾಗ, ಸರಕಾರ ಮೂಕ ಪ್ರೇಕ್ಷಕವಾಯಿತು. ಇನ್ನೂ ವಿ.ವಿ. ಕಾಯ್ದೆ, ರೋಸ್ಟರ್ ನಿಯಮ ಗಾಳಿಗೆ ತೂರಿ ನೇಮಕಾತಿಗಳಲ್ಲಿ ಅಕ್ರಮ ಎಸಗಿದ ಮೈಸೂರು ವಿ.ವಿ.ಮಾಜಿ ಕುಲಪತಿ ಪ್ರೊ.ಜೆ.ಶಶಿಧರ್ ಪ್ರಸಾದ್, ಬಿಜಾಪುರ ವಿ.ವಿ.ಯ ಸಯೀದಾ ಅಖ್ತರ್, ರಾಜೀವ್‌ಗಾಂಧಿ ವಿ.ವಿ.ಯ ಡಾ.ಪಿ.ಎಸ್.ಪ್ರಭಾಕರನ್ ಸೇರಿದಂತೆ ಹಲವಾರು ವಿ.ವಿ.ಗಳ ನೈತಿಕತೆಯನ್ನು ಬೀದಿಗೆ ತಂದಾಗ ಯಾವುದೇ ಶಿಸ್ತುಕ್ರಮ ಜರಗಿಸಲು ವಿಫಲವಾದ ಸರಕಾರ, ಖಾಸಗಿ ವಿ.ವಿ.ಗಳ ಮೇಲೆ ನಿಗಾವಹಿಸುವ ಗೋಸುಂಬೆ ಮಾತುಗಳಲ್ಲಿ ಎಷ್ಟು ಹುರುಳಿದೆ? 

ಈಗ ಖಾಸಗಿ ವಿ.ವಿ.ಸ್ಥಾಪನೆಗೆ ಮುಂದೆ ಬಂದಿರುವ 7 ಸಂಸ್ಥೆಗಳು ಯಾವ ವರ್ಗದ ಜನರಿಗೆ ಸೀಟುಗಳನ್ನು ಕಾದಿರಿಸಿದೆ ಎಂಬುದು ಸೇರಿದಂತೆ ಶುಲ್ಕ ನಿಗದಿ ಇತ್ಯಾದಿಗಳು ಸಾರ್ವಜನಿಕವಾಗಿ ಚರ್ಚಿತವಾಗಬೇಕಿದೆ.ಈಗ ಇರುವ ಸರಕಾರಿ ವಿ.ವಿ.ಗಳ ಶುಲ್ಕ ಭರಿಸಲಾಗದೇ ಉನ್ನತ ಶಿಕ್ಷಣವನ್ನು ಪಡೆಯಲಾಗದಂತಹ ಸ್ಥಿತಿ ರಾಜ್ಯದ ವಿದ್ಯಾರ್ಥಿಗಳಿಗೆ ಇರುವಾಗ, ತಮಗೆ ಇಚ್ಛಿಸಿದಷ್ಟು ವಂತಿಗೆ ವಸೂಲಿ ಮಾಡುವ, ತಮಗೆ ಅರ್ಹ ಎನಿಸಿದವರನ್ನು ನೇಮಿಸಿಕೊಳ್ಳುವ ಸಂವಿಧಾನದ ಆಶಯವಾದ ಮೀಸಲಾತಿ ಮಾನದಂಡವನ್ನು ಕೈಬಿಡುವ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಉನ್ನತ ಶಿಕ್ಷಣದಿಂದ ದೂರಗೊಳಿಸುವ ಅಂಶ ಬಿಟ್ಟರೆ ಈ ಖಾಸಗಿ ವಿ.ವಿ.ಗಳಿಂದ ಮತ್ತೇನು ಸಾಧನೆಯಾಗದು.

ಆರ್ಥಿಕ ಕ್ಷೇತ್ರವನ್ನು ತ್ರಿ-ಕರಣ (ಜಾಗತಿಕ- ಖಾಸಗಿ-ಉದಾರಿ) ಪ್ರವೇಶಿಸಿ ಸಾವಿರಾರು ದೇಶಿ ಉದ್ಯಮಗಳು ದಿವಾಳಿಯಾದವು. ಇನ್ನು ಉನ್ನತ ಶಿಕ್ಷಣ ಕ್ಷೇತ್ರವು ಖಾಸಗೀಕರಣ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಗಬಹುದಾದ ಅನಾಹುತ ನೆನಸಿಕೊಳ್ಳಲು ಭಯವಾಗುತ್ತಿದೆ.ಸರಕಾರಿ ಸ್ವಾಮ್ಯದ ವಿ.ವಿ.ಗಳು ಹಣಕಾಸು ಮೂಲಭೂತ ಸೌಲಭ್ಯ ವಂಚಿತ, ಸಿಬ್ಬಂದಿ, ಅಧ್ಯಾಪಕರು, ಉತ್ತಮ ಸಂಶೋಧನೆಗಳಿಲ್ಲದೆ ಸೊರಗುತ್ತಿವೆ.ಈ ಅಗತ್ಯವನ್ನು ತುರ್ತಾಗಿ ಪೂರೈಸುವುದು ಸರಕಾರದ ಪ್ರಥಮ ಆದ್ಯತೆಯಾಗಬೇಕಿದೆ. ಬಹುತೇಕ ಖಾಸಗಿ ಸಂಸ್ಥೆಗಳು ಕಲಾವಿಭಾಗ ಮುಚ್ಚಿ ಕೇವಲ ವಿಜ್ಞಾನ, ವಾಣಿಜ್ಯ (ಕಾಮರ್ಸ್) ಕೋರ್ಸ್‌ಗಳನ್ನು ತೆರೆದು ಮಾನವಿಕ ಶಾಸ್ತ್ರಗಳನ್ನು ಮೂಲೆಗುಂಪಾಗಿಸಿರುವ ಸಾಕಷ್ಟು ಉದಾಹರಣೆಗಳಿವೆ. ಅಂತಹುದರಲ್ಲಿ ಈ ಸಂಸ್ಥೆಗಳಿಗೆ ಪರಮಾಧಿಕಾರ ನೀಡಿದ್ದಲ್ಲಿ ಏನೇನು ಆಗಬಹುದು.

ಕಲಾವಿಭಾಗದ ಸ್ನಾತಕೋತ್ತರ ಪದವೀಧರರು ಜಾಗತೀಕರಣದ ಹೊಡೆತಕ್ಕೆ ನೆಲೆ-ಬೆಲೆ ಕಳೆದುಕೊಂಡು ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ. ಅಂಕವೇ ಮಾನದಂಡವಾಗಿರುವ ಈ ದಿನಗಳಲ್ಲಿ ಸೆಮಿಸ್ಟರ್, ನಾನ್ ಸೆಮಿಸ್ಟರ್ ಪದವೀಧರರ ನಡುವೆ ಬಹುದೊಡ್ಡ ಕಂದರ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಏನು ಸುಧಾರಣೆಯಾಗಿಲ್ಲ. ಈಗ ಸರಕಾರಿ ವಿ.ವಿ.ಗಳಲ್ಲಿನ ಅಧ್ಯಾಪಕರಿಗೆ ಯು.ಜಿ.ಸಿ. ವೇತನ ಲಕ್ಷ ರೂ.ಗಳವರೆಗೆ ದೊರಕುತ್ತಿದ್ದು, ಇದೇ ಪ್ರಮಾಣದ ವೇತನವನ್ನು ಖಾಸಗಿ ವಿ.ವಿ.ಗಳು ನೀಡುತ್ತವೆಯೇ? ಒಂದು ವೇಳೆ ಹಾಗೆ ನೀಡಬೇಕಾದಲ್ಲಿ ಯಾವ ಪ್ರಮಾಣದ ಶುಲ್ಕ ವಿದ್ಯಾರ್ಥಿಗಳಿಂದ ವಸೂಲಿ ಮಾಡಬೇಕಾಗಬಹುದು?

ಇಂದಿಗೂ ಪರಿಶಿಷ್ಟಜಾತಿ ವಿದ್ಯಾರ್ಥಿಗಳು ಶೇ.೧೧ಕ್ಕಿಂತ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇ.೫ಕ್ಕಿಂತಲೂ ಕಡಿಮೆ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವುದು ಆ ವರ್ಗದವರು ಹೆಚ್ಚು ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ವಿ.ವಿ.ಗಳು ಜಾತಿ ರಾಜಕೀಯದಿಂದ ಮೊದಲು ಮುಕ್ತಗೊಂಡು ನೈತಿಕತೆ, ಪಾರದರ್ಶಕತೆಗೆ ಮಾದರಿ ಮಾಡುವುದು, ಬಜೆಟ್‌ನಲ್ಲಿ ಸರಕಾರಿ ವಿ.ವಿ.ಗಳಿಗೆ ಸಂಶೋಧನೆ ಮೂಲ ಸೌಕರ್ಯಗಳಿಗೆ ಹೆಚ್ಚಿನ ಅನುದಾನದ ಸುಧಾರಣಾ ಕಾರ್ಯ ಆಗದಿದ್ದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತವಾಗಲಿದೆ. ಈಗಾಗಲೇ ಸರಕಾರಿ ಶಾಲೆಗಳನ್ನು ಮುಚ್ಚುತ್ತಿದ್ದು, ಅದರ ಬೆನ್ನಲ್ಲೆ ಉನ್ನತ ಶಿಕ್ಷಣವನ್ನು ಖಾಸಗೀಕರಣ ಮಾಡ ಹೊರಟಿರುವುದು ಈ ಸರಕಾರ ಅದರ ಭಾಗವಾದ ಶಿಕ್ಷಣ ಸಚಿವರುಗಳು ಯಾವ ವರ್ಗದ ಹಿತಾಸಕ್ತಿ ಪೋಷಕರು ಎಂದು ಅರ್ಥವಾಗಬೇಕಿದೆ. 

ವಿದ್ಯಾರ್ಥಿಗಳ ಸಂಖ್ಯೆ ಕುಂಠಿತ ನೆಪ ನೀಡಿ ಸರಕಾರಿ ವಿ.ವಿ.ಗಳನ್ನು ಮುಚ್ಚುವ ಉದ್ದೇಶ ಬಹಳ ಸ್ಪಷ್ಟವಾಗಿದೆ. ಸಂಪೂರ್ಣ ಅಸಹಾಯಕರಾಗುವ ವೊದಲೇ ಎಚ್ಚೆತುಕೊಳ್ಳುವುದು ಸರಿ. ಎಲ್ಲಾ ವಿ.ವಿ.ಗಳ ವ್ಯವಸ್ಥೆ ಕೂಡಲೇ ಸರಿಪಡಿಸಿ ಆ ಮೂಲಕವೇ ಎಲ್ಲಾ ವರ್ಗದವರಿಗೆ ತಾರತಮ್ಯರಹಿತ, ಏಕರೂಪಿ ಉನ್ನತ ಶಿಕ್ಷಣ ದೊರಕುವಂತಾಗಬೇಕು.ಇದಕ್ಕಾಗಿ ಈ ನಾಡಿನ ಶಿಕ್ಷಕರು, ವಿ.ವಿ.ಪ್ರಾಧ್ಯಾಪಕರು,ಪೋಷಕರು,ಶಿಕ್ಷಣ ತಜ್ಞರು,ಪ್ರಗತಿಪರ ಚಿಂತಕರು ಒಕ್ಕೊರಲಿನಿಂದ ಖಾಸಗಿ ವಿ.ವಿ.ಗಳ ಸ್ಥಾಪನೆಯನ್ನು ಖಂಡಿಸಬೇಕಾಗಿದೆ.

ಮಗಳ ಮಾತು

Kellie Hill '06 painted this portrait of her daughter as part of her 1,000 paintings a day project. It's titled "Naomi Sleeping." (Image courtesy of Kellie Hill '06)


ಅಂಗಳದಲಿ ಕೂತ
ನಾಲ್ಕು ವರುಷದ ಮಗಳು
ಸುತ್ತ ಹಾರಾಡುವ ಚಿಟ್ಟೆ
ಹಿಡಿದುಕೊಡಲು ಕೇಳಿದಳು
ಅದರ ಬೆನ್ನ ಬಿದ್ದು
ಹಾರಿದಲಿ ಹಾರಿ ಓಡಿದಲಿ ಓಡಿ
ಕೈ ಮುಳ್ಳುಕಂಟಿಗೂ ಚಾಚಿ 

ಗೀರುಗಾಯ
ನಾನು ದಣಿದ ಹಾಗೆ ಹಾರುವ ಚಿಟ್ಟೆಯೂ ದಣಿದು
ಇನ್ನೇನು ಸಾಕಾಯಿತೆನುವಾಗ
ಮೊಗದ ತುಂಬ ಚಿಟ್ಟೆ ಕೈಗೆ ಬಂದ ಖುಷಿ
ಕುಣಿದಾಡಿದ ಕೂಸ ಕಣ್ಣಲಿ ಬೆಳಕು

ಗೋಡೆಗೆ ಹಬ್ಬಿದ
ಮಲ್ಲಿಗೆ ಬಳ್ಳಿ ಹೂ ಕಡೆ
ಕೈ ಮಾಡುವ ಕೂಸು

ಸಣ್ಣ ಬುಟ್ಟಿ ತುಂಬ
ಹೂ ಕೊಯ್ದು ಮುಂದಿರಿಸಿದೆರಾತ್ರಿಹೊತ್ತು ಇರುಳ ಕೌದಿಯ
ಚಂದ್ರಗೊಂಡೆ ಬೇಕೆಂದಳು
ನೀರ ತುಂಬಿದ ಬಕೇಟು
ಅಂಗಳದಲಿರಿಸಿ
ಚಂದ್ರನ ಕೈಗೆ ತಾಗಿಸಿ ನಗಿಸಿದೆ

ಅವಳ ಬಿರಿದ ಸಂತಸ
ನನ್ನ ಆಕಾಶಕೇರಿಸಿದ ಗಳಿಗೆ
ಮತ್ತೆ ಕೇಳಿದಳು
ಅಪ್ಪ ಒಂದೇ ಒಂದು ಸಲ
ಅಮ್ಮನನ್ನು ತೋರಿಸು....

ದೂರದಲಿ
ಮುಗಿಲೆತ್ತರದಲಿ ಹಾರುವ ವಿಮಾನ
ಏನೋ ಬಡಿದು ಗಕ್ಕನೆ
ನೆಲಕ್ಕಪ್ಪಳಿಸಿದ ಸದ್ದು

ಉತ್ತರಿಸಲೆಂಬಂತೆ ತೆರೆವ ತುಟಿಗಳ 
ಮೊಗದಲಿ
ತುಂಬಿಬಂದ ಕಣ್ಣಕೊಳ

ಅಮ್ಮ ಚುಕ್ಕಿಯಾಗಿ
ಆಕಾಶ ಸೇರಿದ್ದಾಳೆ ಮಗಳೆ
ನಾವೂ ಆಕಾಶಕ್ಕ ಹೋದಾಗ
ಕಾಣುವಳು ಎಂದೆ

ಕೇಳಿ ಕ್ಷಣವೂ ತಡಮಾಡದೆ
ಹೇಳಿದಳು
ನಡಿ ನಾವೂ ಈಗಲೇ ಹೋಗೋಣ ..

(2008)

ಎಚ್ಚರಜಲಾಲುದ್ದೀನ್ ರೂಮಿ
ಅನು : ಡಾ .ಎಚ್ .ಎಸ್ ಅನುಪಮಾhttps://mail-attachment.googleusercontent.com/attachment/?ui=2&ik=64db019aae&view=att&th=13977d21ca8486b9&attid=0.1&disp=inline&realattid=f_h6hx2bmf0&safe=1&zw&saduie=AG9B_P_apJ-8s6ZpZQ22vq2XigUY&sadet=1349931928250&sads=z5wx_BSLAaGOfoex5txlwbsGdC4&sadssc=1


ಒಂದು ಸಂತಸದ ಚುಮುಚುಮು ಬೆಳಗು
ನೀ ನನಗೆ ಮೂರು ಮುತ್ತನಿತ್ತೆ
ಆ ಕ್ಷಣದ ಪ್ರೇಮಕ್ಕೆ
ನಾ ಕಣ್ತೆರೆಯಲೆಂದು.

ಚಲಿಸುತ್ತ ಈ ಬದುಕು 
ಕಳೆದುಹೋಗುವುದೆಂದು ಅರಿವ ಮುನ್ನ 
ಕಳೆದ ಇರುಳು
ಕನಸಿನಲಿ ಕಂಡಿದ್ದ ನೆನಪಿಡಲು ಯತ್ನಿಸಿದೆ

ನನ್ನ ಕನಸುಗಳ ಹುಡುಕಿದೆ
ಆದರೆ ಚಂದ್ರ ನನ್ನನೆತ್ತಿಕೊಂಡು ಓಡಿ
ಆಗಸಕೇರಿ ತೂಗು ಹಾಕಿದ.
ಹಾಡು ಹಾಡುತ್ತ ನನ್ನೆದೆ
ನಿನ್ನ ದಾರಿಯಲ್ಲಿ ಬಿದ್ದುಕೊಂಡಿತ್ತು ..

ನಿಧನಿಧಾನ
ಪ್ರೇಮ ಮತ್ತು ಹೃದಯದ ನಡುವೆ
ಸಂಭವಿಸಿದ ಎಲ್ಲವೂ
ಹಳೆಯದನು ಮತ್ತೆ ನೆನಪಿಸಿದವು.

ಸ್ಪರ್ಶದಿಂದ ಮುದಗೊಳಿಸುವೆ
ಆದರೂ ನಿನ್ನ ಹಸ್ತ ನೋಡಲಾರೆ.
ಮೃದುವಾಗಿ ಚುಂಬಿಸುವೆ
ಆದರೂ ಕಂಪಿಸುವ ತುಟಿಗಳ ನೋಡಲಾರೆ.
ನನ್ನಿಂದ ಮರೆಯಾಗಿಯೇ ನಿಂತಿರುವಿ
ಆದರೇನು? ನನ್ನ ಬದುಕಿಸಿರುವವ ನೀನು.

ಅಂಥ ಸಮಯ, ಮುತ್ತಿಕ್ಕಿ ಮುತ್ತಿಕ್ಕಿ
ನೀ ಬೇಸರಗೊಳುವ ಸಮಯ ಬರಬಹುದು. 
ನಿನ್ನಿಂದ ಅವಮಾನವಾದರೂ ಸರಿಯೆ
ನನಗದು ಖುಷಿಯೇ.
ಎಂತಾದರೂ ಹೇಗಾದರೂ
ನನಗೆ ಬೇಕಿರುವುದು ನಿನ್ನ ಗಮನವಷ್ಟೇ..


 

Sunday, October 28, 2012

ಅಪ್ಪ
ಅನುರಾಧ ಪಿ ಸಾಮಗ 

 


'ಮಕ್ಕಳಿಗೆ ಎಂದು ಅಲ್ಲಷ್ಟು ಇಲ್ಲಷ್ಟು ಕೂಡಿಟ್ಟ ಧನರಾಶಿ
ಒದಗೀತೆ ನೀರಿಲ್ಲದ ನಾಳೆಗಳಲಿ?! ಉಳಿಸಿದರೆ ನೀರುಳಿಸಿ'
ಎನ್ನುವ ಅಪ್ಪನ ಮಾತು ಬಿಡದೆ ಕಾಡಿದ ಗಳಿಗೆ
ಅವನ ಸೈಕಲ್ ಚಕ್ರದ ತಿರುಗುವಿಕೆಯ ಸದ್ದೂ ಕಾಡಿತು.
ಜೊತೆಗೆ ಇಂದಿನ ಆತನ ಅಂಗಾಂಗಗಳ ಮೌನವೂ.
ಬಿರುಬಿಸಿಲಿಗು, ಜಡಿಮಳೆಗು ಅದನೆ ನಂಬಿ ತಿರುಗಿದವ
ನಾಲ್ಕು ಕಾಸುಳಿಸಲು ಹತ್ತಾರು ಮೈಲಿ ತುಳಿದು ಸಾಗಿದವ
ನಾಲ್ಕಾರು ಜೀವಗಳ ಅಷ್ಟೂಕಾಲ ಮುಚ್ಚಟೆಯಲಿರಿಸಿದವ
ಕೊಡುವಲ್ಲಿ ತೂತುಕೈಯನೇ ಮೇಲಿರಿಸಿ,
ಪಡೆವಲ್ಲಿ ಬರಿಗೈಯ್ಯನು ಕೊನೆಗಿರಿಸಿದವ
ಮನವ ಮೆಟ್ಟಿ, ಮಾನವ ಮಾರ್ಗದರ್ಶಕವಾಗಿಸಿದವ
ಆಸೆಗಳ ಸಾಯಿಸಿ, ಸಂಯಮವ ದಾರಿದೀಪವಾಗಿಸಿದವ
ಲೋಕದೆದುರು ನಾನೆನ್ನುವುದ ಅಳಿಸಿ ದೈನ್ಯತೆಯನಪ್ಪಿದವ
ಜಗಕೆ ಮೇಲೇರುವ ಏಣಿಯಾಗಿ ತಾ ನಿಂತಲ್ಲೆ ನಿಂತವ
ವಾತ್ಸಲ್ಯ ಮಮತೆಗಳ ಉಸಿರಾಡಿದವ, 
ಅವಕೆ ತನ್ನನೇ ಬಲಿಯಿತ್ತವ
ದೂರದೂರಲಿರುವ ಹೆಂಗರುಳಪ್ಪ ಈಗ ಎಳೆಮಗುವಂತಾಗಿ
ಮೂಲೆಲಿರುವ ಸೈಕಲ್ ಹತ್ತಲಾರ, ಇಳಿಯಲಾರ, ಟ್ರಿಣ್ಣ್ ಅನ್ನಿಸಲಾರ

ಅಪ್ಪಾ, 
ನಿನ್ನ ತಾಯಿಯಾಗುವಾಸೆ ನನಗೀಗ
ನೀ ಕಳಕೊಂಡ ಗಳಿಗೆಗಳ ನನ್ನ ಜೋಳಿಗೆಯಿಂದ ಹೆಕ್ಕಿತೆಗೆವಾಸೆ
ತಿಕ್ಕಿತೊಳೆದು ನಿನ್ನ ನಗುವಿನ ಮುತ್ತುಮಾಣಿಕ್ಯಗಳಾಗಿಸುವಾಸೆ
ಇಂದಿನ ನನ್ನ ಸಾಮ್ರಾಜ್ಯಕೆ ನಿನ್ನ ಪಟ್ಟದ ಗುರುವಾಗಿಸುವಾಸೆ
ನೀನಾಗಲಾರೆನಾದರೂ, ನಿನ್ನ ಹೆಜ್ಜೆಗುರುತಲೆ ನಡೆದು
ನಿನ್ನಂತೆ ಮಗಳ ನಾಳೆಗಳಲೊಂದು ಅನುಭೂತಿಯಾಗುವಾಸೆ.
ಮಗನಲ್ಲ, ಮಗಳೆಂದು ಮನೆಮನಗಳಿಂದಟ್ಟದಿರು
ಈ ಮಾತುಗಳಿಗೆ ಅಪ್ಪನದೆಂದಿನಂತೆ ಮೌನ, ನಸುನಗುವಿನುತ್ತರ
ಇಂದು ತಂಗಿಯ ಜನ್ಮನಕ್ಷತ್ರ, ಆ ಬಾಯ್ತುಂಬಿತ್ತವಳ ಪರ ಅಷ್ಟೋತ್ತರ.

ಪ್ರಶಸ್ತಿಯ ಅವಘಡಗಳು.. « Avadhi / ಅವಧಿ

ಪ್ರಶಸ್ತಿಯ ಅವಘಡಗಳು.. « Avadhi / ಅವಧಿ

ಆ ಕ್ಷಣದ ಬದುಕು

ನಿನ್ನೆಯಲಿ ಬದುಕುವ ಸಂತ
ನಾಳೆಯನು ಕಾಯುವ ರಾಕ್ಷಸ
ಮುಖಾಮುಖಿಯಾಗುವಾಗ
ಹುಟ್ಟುತ್ತಿದೆ ಇಂದು

ಎಲ್ಲ ದಿಕ್ಕುಗಳ ತಾಗಿ ಬಂದ ಗಾಳಿ
ನನ್ನ ಮುಟ್ಟದೆ ಮುಂದೆ ಸಾಗುವುದಿಲ್ಲ
ಎದೆಯ ಅಗ್ನಿಕುಂಡದ ಕಿಡಿ
ಎತ್ತರಕೇರುತಿದೆ ಇನ್ನಷ್ಟು

ನಿನ್ನ ಬೆರಳ ಸ್ಪರ್ಷ
ಹುಟ್ಟಿಸಿದೆ
ಪ್ರೇಮಿಸುವುದೆಂದರೆ ಸಂತನಾಗುವ ಅರಿವು
ಹಾಗಂತ ರಾಕ್ಷಸನಾಗದೇ ಹೋದರೆ
ತಿನ್ನಲು ಬಾರದ ಬರಿ ಕಾಯಾಗಿ
ಉಳಿಯುತ್ತದೆ ಪ್ರೇಮ
ನಿನ್ನ ಸಂಗದಲಿ ಇಡುವ ಹೆಜ್ಜೆಗಳಿಗೆಲ್ಲ
ಸ್ಪರ್ಷದನುಭವ ಏಕಮುಖವಲ್ಲ


ಈ ದಾರಿ ಹೀಗೇ
ನಿನ್ನ ಹುಡುಕಲು ಹೊರಟರೆ
ಹೆಜ್ಜೆಗೊಮ್ಮೆ ನಾನೇ ಎದುರಾಗುವೆ
ನನ್ನ ಕಾಣಲು ಕಣ್ತೆರೆದರೆ
ಆಕಾಶದುದ್ದ ನಿಲುವುದು ನಿನ್ನ ಬಿಂಬ

ನಿಜ ಸುತ್ತೆಲ್ಲ ಜಡಿಮಳೆ
ಮುತ್ತಾಗುವ ಹನಿಗಷ್ಟೇ
ಬಾಯಿ ತೆರೆದಿರುವ  ಸಿಂಪಿ

ಎಲ್ಲ ನೆನೆಯುತ
ನಿನ್ನ ಬಿಂಬ ತುಂಬಿಕೊಂಡು
ಪ್ರತಿಸಂಜೆ ಮಲಗುವೆ
ಎಚ್ಚರಾಗದ ನಿದ್ದೆಗಾಗಿ
ಮಗಳು ತಟ್ಟಿ ತಟ್ಟಿ
ಎಚ್ಚರಿಸುತ್ತಾಳೆ ಪ್ರತಿ ಬೆಳಗು

ಎದೆಯಲಿ ಮತ್ತದೇ ಸಂತ ರಾಕ್ಷಸರ ನೆನಪು

ಬಿ ಎಂ ಬಶೀರ್ ರ ಕವಿತೆಗಳು

 

 

 

ನನ್ನ ದೊರೆಯ ನೀನೇನು ಬಲ್ಲೆ?

ಭವ್ಯ ಮಸೀದಿಯ ಹೊಳೆವ
ನೆಲದಲ್ಲಿ ಅವನು ಜಪಮಣಿ
ತಿರುಗಿಸುತ್ತಿದ್ದ...

ಮೀನು ಮಾರುವ ಅಬ್ಬು ಕಾಕ
ನನ್ನ ದೊರೆಯ ಜಪಿಸುತ್ತ
ಹಳೆಯ ಸೈಕಲನ್ನು
ಸುಡು ಬಿಸಿಲಲ್ಲಿ ತಿರುಗಿಸುತ್ತಿದ್ದ

ಅದೋ ನೋಡಿ...
ಮಸೀದಿಯಾ ಹೊಳೆವ ನೆಲದಲ್ಲಿ
ಆತನ ಜಪ ಮಣಿ ಸರ ಹರಿದು
ಚೆಲ್ಲಾಪಿಲ್ಲಿಯಾಗಿವೆ...

ಅಬ್ಬೂ ಕಾಕನ
ಜೊತೆಗೆ ಆತನ ಹಳೆಯ ಸೈಕಲು
ನನ್ನ ದೊರೆಯ ಸ್ವರ್ಗದಲ್ಲಿ
ಅತ್ಯುನ್ನತ ಸ್ಥಾನ ಪಡೆದಿದೆ....

2
ವಿದ್ಯುತ್ ಕೈ ಕೊಟ್ಟಿತ್ತು
ಮುಂಜಾನೆಯ ಅಜಾನ್ ಕರೆ
ಮಸೀದಿಯ ನಾಲ್ಕು ಗೋಡೆಯನ್ನು
ದಾಟಲಿಲ್ಲ....
ಹಕ್ಕಿಗಳ ಚಿಲಿಪಿಲಿ ಕರೆ
ನನ್ನನ್ನು ತಟ್ಟಿ ಎಬ್ಬಿಸಿತು

ಎಂದೂ ಇಲ್ಲದ
ಉತ್ಸಾಹದಿಂದ ಅಂದು
ನನ್ನ ದೊರೆಗೆ ಬಾಗಿದೆ!

3
ನನ್ನ ಮುಂದಿದ್ದ ಕಲ್ಲು ವಿಗ್ರಹಗಳನ್ನು
ಎಂದೋ ಮುರಿದು ಮುಂದೆ ಬಂದಿದ್ದೇನೆ
ಆದರೆ ಇದೀಗ...
ಏಕದೇವನ ಮುಂದೆ
ಪಾಲುದಾರಿಕೆಯನ್ನು ಬೇಡುತ್ತಿರುವ
ಶಬ್ದ, ಅಕ್ಷರಗಳ ವಿಗ್ರಹಗಳನ್ನು
ಮುರಿದು ಮುಂದೆ ಹೋಗಬೇಕಾಗಿದೆ
ಅದು ನನ್ನಿಂದ ಸಾಧ್ಯವಿದೆಯೆ?

4
ನಮಾಜಿಗೆ ಮುನ್ನ ಶುದ್ಧಿಯಾಗಲೆಂದು
ಮಸೀದಿಯ ಕೊಳದೆಡೆಗೆ
ನಡೆದೆ...
ಕೊಳದ ನೀರು ನನ್ನ
ನಮಾಜಿನ ಚಾಪೆಯ
ಕೊಳೆಯನ್ನು ಕಳೆಯಲೂ
ಸಾಕಾಗಲಿಲ್ಲ ದೊರೆಯೇ?

ಇನ್ನು ನನ್ನ ಅಶುದ್ಧಿಯನ್ನು
ಯಾವ ಕೊಳದಲ್ಲಿ ತೊಳೆಯಲಿ?
ನಿನ್ನ ನರಕದ ಬೆಂಕಿ ಮಾತ್ರ
ನನ್ನ ಕೊಳೆಯನ್ನು ಸುಟ್ಟು
ನನ್ನನ್ನು ಶುದ್ಧಿಯಾಗಿಸೀತು....

5
ಪಂಡಿತರು ಹೇಳಿದರು
ನಮಾಜಿಗೆ ನಿಂತ ನಿನ್ನ ಮುಖದ
ದಿಕ್ಕು ಕಾಬದೆಡೆಗಿರಲಿ!
ಪಂಡಿತರಿಗೆ ಗೊತ್ತಿರಲಿಲ್ಲ
ನನ್ನ ದೊರೆಯೇ....
ನಿಜವಾದ ಭಕ್ತನೊಬ್ಬ
ಮುಖ ಮಾಡಿದೆಡೆಗೆ
ಕಾಬಾ ತನ್ನ ದಿಕ್ಕನ್ನು
ಬದಲಿಸೂದು...

6
ನೀನು ನೂರಾರು ಪುಸ್ತಕಗಳನ್ನು
ಓದಿದ, ಕುರಾನ್ ಕಂಠ ಪಾಠ
ಮಾಡಿದ ಮಹಾ ಪಂಡಿತ...
ನಾನು ಬಲ್ಲೆ
ಚರ್ಚೆಯಲ್ಲಿ ಬೇರೆ ಬೇರೆ
ಧರ್ಮಗಳ ನೇತಾರರನ್ನು
ಕ್ಷಣ ಮಾತ್ರದಲ್ಲಿ ಸೋಲಿಸಿದೆನೆನ್ನೂದು
ನಿನ್ನ ಹೆಗ್ಗಳಿಕೆ...

ಆದರೆ ನನ್ನ ದೊರೆಯನ್ನು ನೀನೇನು ಬಲ್ಲೆ?
ಪಂಡಿತರಲ್ಲಿ ಮಹಾ ಪಂಡಿತ ಆತ
ಹೇಳು, ನಿನ್ನ ಪಾಂಡಿತ್ಯದಿಂದ
ಆ ದೊರೆಯ ಸೋಲಿಸುವ ಧೈರ್ಯವಿದೆಯೆ?

ಒಂದಕ್ಷರ ಕಲಿಯದ
ಮಂತ್ರದ ಒಂದು ಸಾಲೂ ತಿಳಿಯದ
ಮೀನು ಮಾರಿ ಹೊಟ್ಟೆ ಹೊರೆವ
ಅಬ್ಬೂ ಕಾಕನ ಭಕ್ತಿಗೆ
ನನ್ನ ದೊರೆ
ಕ್ಷಣ ಮಾತ್ರದಲ್ಲಿ ಸೋತ....!!

ಅಂಚಿನ ಮಾತು - ಅಂಬೇಡ್ಕರ್ ನೆಲೆ

('ಅಂಬೇಡ್ಡರ್ ಮತ್ತು ಕಾರ್ಟೂನ್ ವಿವಾದ' ಪುಸ್ತಕದ ನಮ್ಮ ಮೊದಲ ಮಾತುಗಳಿವು. ನಮ್ಮ ಪ್ರಕಾಶನದಿಂದ ಪ್ರಕಟವಾಗುತ್ತಿರುವ ಈ ಪುಸ್ತಕವು ನವೆಂಬರ್ 18 ರಂದು ಹೊನ್ನಾವರದಲ್ಲಿ ಬಿಡುಗಡೆಯಾಗುವುದು)    ಈ ಬೇಸಿಗೆಯ ಬಿಸಿಲಿನ ಬೇಗೆಯನ್ನು ವಿವಾದವೊಂದು ಮತ್ತಷ್ಟು ಹೆಚ್ಚಿಸಿತು. ಎನ್‌ಸಿಇಆರ್‌ಟಿ ೧೧ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಲ್ಲಿ ಸಂವಿಧಾನ ರಚನೆ ವಿಳಂಬ ಕುರಿತು ಶಂಕರ್ ಪಿಳ್ಳೈ ಕಾರ್ಟೂನ್ ಬಳಸಲಾಗಿತ್ತು. ಆ ಕಾರ್ಟೂನ್ ಅಂಬೇಡ್ಕರರನ್ನು ಅವಮಾನಿಸುವಂತಿದ್ದು ಅದನ್ನು ಪಠ್ಯದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಕೆಲವು ಸಂಸದರು ಒತ್ತಾಯ ತಂದರು. ಅದು ಸಂಸತ್ತಿನಲ್ಲಿ ಚರ್ಚೆ, ವಾಗ್ವಾದಕ್ಕೆ ದಾರಿ ಮಾಡಿಕೊಟ್ಟು ಅಂತೂ ಕೊನೆಗೆ ಸರ್ಕಾರ ಪಠ್ಯಪುಸ್ತಕ ಪರಿಶೀಲನಾ ಸಮಿತಿ ನೇಮಿಸಿ, ಇಡೀ ಪಠ್ಯವನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು.

   ಸರ್ಕಾರ ಕಾರ್ಟೂನ್ ವಿರೋಧದ ದನಿಯನ್ನು ತಣ್ಣಗಾಗಿಸಲು ಕೂಡಲೇ ಕಾರ್ಯಪ್ರವೃತ್ತವಾದರೂ ಅದರ ಕ್ರಮಗಳು ವ್ಯಾಪಕ ಟೀಕೆಗೆ ಗುರಿಯಾದವು. ಪರ-ವಿರೋಧವಾಗಿ ತಂತಮ್ಮ ನಂಬಿಕೆ, ದೃಷ್ಟಿಕೋನ, ಬದ್ಧತೆಗೆ ಅನುಗುಣವಾಗಿ ಒಂದಾದ ಮೇಲೊಂದು ಪ್ರತಿಕ್ರಿಯೆಗಳು ಬಂದವು. ಬೌದ್ಧಿಕ ವಲಯದಲ್ಲಷ್ಟೇ ಅಲ್ಲ, ಸಾರ್ವಜನಿಕ ವಲಯದಿಂದಲೂ ಪ್ರತಿಕ್ರಿಯೆಗಳು ಕೇಳಿಬಂದವು. 

   ಪಠ್ಯಪುಸ್ತಕದಲ್ಲಿ ಬಳಸಲಾದ ಕಾರ್ಟೂನ್ ಇಷ್ಟು ದೊಡ್ಡ ವಿವಾದವಾಗಲು ಕಾರಣ ಅದು ಕೋಟ್ಯಂತರ ಜನ ಅಪಾರವಾಗಿ ಗೌರವಿಸುವ ಅಂಬೇಡ್ಕರರಿಗೆ ಸಂಬಂಧಪಟ್ಟಿತ್ತು ಎನ್ನುವುದು. ಅಂಬೇಡ್ಕರ್ ಬೇರೆಬೇರೆ ಕಾರಣಗಳಿಗಾಗಿ ಇಂದು ಎಲ್ಲರಿಗೂ ಮುಖ್ಯವಾಗಿದ್ದಾರೆ. ರಾಜಕಾರಣಿಗಳ ಹಿತಾಸಕ್ತಿಗಳೇನೇ ಇರಲಿ, ಅದರ ಹೊರತಾಗಿ ಇಡೀ ಭಾರತದ ಶೋಷಿತರ ಆತ್ಮಗೌರವದ ಸಂಕೇತ ಅಂಬೇಡ್ಕರ್. ಸಾವಿರಾರು ವರ್ಷಗಳಿಂದ ಎಷ್ಟೋ ಸಮುದಾಯಗಳು ತಮ್ಮ ವಾಸಸ್ಥಳ, ಅಭಿವ್ಯಕ್ತಿ, ಅವಕಾಶ, ಸ್ವಾತಂತ್ರ್ಯ ಎಲ್ಲದರಲ್ಲೂ ಅಂಚಿಗೆ ತಳ್ಳಲ್ಪಟ್ಟಿದ್ದರು. ಅಂತ್ಯಜ ನೆಲೆಯಿಂದ ಭಾರತದ ಚರಿತ್ರೆ, ವರ್ತಮಾನವನ್ನು ನೋಡಿದ ಅಂಬೇಡ್ಕರ್ ಶೋಷಿತ ಸಮುದಾಯಗಳ ಮುನ್ನಡೆಗಾಗಿ ಹಗಲಿರುಳು ಕ್ರಿಯಾಶೀಲರಾಗಿ ರಚಿಸಿದ್ದು ಭಾರತದ ಸಂವಿಧಾನ. ಕಟ್ಟಕಡೆಯ ಮನುಷ್ಯನ ನೆಲೆಯಿಂದ ಎಲ್ಲವನ್ನೂ ಪರಿಭಾವಿಸುವ ಅಂಬೇಡ್ಕರ್ ದೃಷ್ಟಿಕೋನ ಸದ್ಯದ ಭಾರತಕ್ಕೆ ಸೂಕ್ತವೂ, ಅನಿವಾರ್ಯ ಅಗತ್ಯವೂ ಆದ ಯೋಚನಾಕ್ರಮವಾಗಿದೆ. 

   ಅಂಬೇಡ್ಕರರ ವಿಚಾರ, ಪ್ರಯತ್ನ, ಸಂಘಟನೆಗಳ ಹೊರತಾಗಿ, ಸಾಂವಿಧಾನಿಕವಾಗಿ ನೀಡಲ್ಪಟ್ಟ ಅವಕಾಶಗಳ ಹೊರತಾಗಿ ಅಂತ್ಯಜರ ನೆಲೆಯೇನೂ ಕ್ರಾಂತಿಕಾರಿ ಸುಧಾರಣೆ ಕಾಣಲಿಲ್ಲ. ಅರಿವಿನ ಸ್ಫೋಟದಿಂದ ಎಚ್ಚೆತ್ತು ಸಂಘಟಿತರಾದ ದಮನಿತ ವ್ಯಕ್ತಿತ್ವಗಳಿರುವಂತೆಯೇ ಇದ್ಯಾವುದೂ ಮುಟ್ಟದ, ಶೋಷಿತರಲ್ಲಿ ಶೋಷಿತರಾಗಿ ಬದುಕುತ್ತಿರುವ ಕೋಟ್ಯಂತರ ಜನ ಈ ದೇಶದಲ್ಲಿದ್ದಾರೆ. ಅವರನ್ನು ತಲುಪಲು ಸಮಾನ ಮನಸ್ಕರು ಒಗ್ಗಟ್ಟಾಗಿ ಶ್ರಮಿಸಬೇಕಾದ ಅಗತ್ಯವಿದೆ. ಜೊತೆಗೇ ಅಂಥ ಸಮುದಾಯಗಳು ಸಂಘಟಿತವಾಗಬೇಕಾದ ಅವಶ್ಯಕತೆಯೂ ಇದೆ. ಜಾಗತೀಕರಣಗೊಂಡ ಭಾರತದಲ್ಲಿ ಜಾತಿ ಪೂರ್ವಗ್ರಹಗಳು ತೊಲಗಿಲ್ಲ. ಜಾತಿ ಪ್ರಜ್ಞೆ ದಿನದಿಂದ ದಿನಕ್ಕೆ ದುರಭಿಮಾನವೆಂಬಂತೆ ಬೆಳೆಯುತ್ತಿದೆ. ರಾಷ್ಟ್ರೀಯ ರಾಜಕಾರಣ ಕೋಮುವಾದಿಯಾಗಿ ಜಾತಿ ರಾಜಕಾರಣವೇ ನಿಜವಾದ ಪ್ರಜಾಪ್ರಭುತ್ವದ ಉಳಿವು ಎಂದು ಬಿಂಬಿಸುತ್ತಿದೆ. ಹೀಗಾಗಿಯೇ ಸರ್ಕಾರೀ ಕೃಪಾಪೋಷಿತ ಯೋಜನೆಗಳೂ ಸಾಮಾಜಿಕ ಅನಿಷ್ಟಗಳನ್ನು ತೊಲಗಿಸುವ ಬದಲು ಮೊದಲಿನ ಸ್ಥಿತಿಯೇ ಮುಂದುವರೆದುಕೊಂಡು ಹೋಗಲು ಸಹಾಯ ಮಾಡುತ್ತಿವೆ. ಇದಕ್ಕೆ ಉತ್ತಮ ಉದಾಹರಣೆ ಬಡವರಿಗಾಗಿ ಸರ್ಕಾರ ನಿರ್ಮಿಸುವ ಮನೆಗಳು. ದಲಿತರ ಕೇರಿಗಳು ಅಂದು ಊರ ಹೊರಗೆ ದೂರದಲ್ಲಿದ್ದರೆ, ಇಂದು ಸರ್ಕಾರ ಸೃಷ್ಟಿಸಿರುವ ‘ಅಂಬೇಡ್ಕರ್ ನಗರ’, ‘ಆಶ್ರಯ’, ‘ಗಾಂಧಿ ನಗರ’, ‘ಹರಿಜನ ಕಾಲನಿ’ಗಳ ಬೆಂಕಿ ಪೆಟ್ಟಿಗೆಯಂಥ ಗೂಡುಗಳು ಊರ ಹೊರಗೇ ಇವೆ. ಜಾತಿ, ವರ್ಗ ಎರಡೂ ನೆಲೆಯಿಂದ ಸಮಾಜದ ಅಂಚಿಗೆ ತಳ್ಳಲ್ಪಟ್ಟವರು ಊರ ನಡುಮಧ್ಯ ಬಂದು ನಿಂತು ಒಂದು ಬಾವುಟ, ಬ್ಯಾನರ್ ಅಥವಾ ಮೂರ್ತಿಯನ್ನು ನಿಲಿಸುವುದು ದೊಡ್ಡ ಸವಾಲೇ ಸರಿ. ಅಷ್ಟೇ ಅಲ್ಲ, ಅದೇನಾದರೂ ಸಾಧ್ಯವಾದಲ್ಲಿ ಅದು ವಿಜಯದ, ಹೆಮ್ಮೆಯ ಪ್ರತೀಕವೂ. ಅಂಥ ಪ್ರತೀಕಗಳಿಗೆ ಧಕ್ಕೆಯಾದರೆ ಅದು ತಮ್ಮ ಆತ್ಮಗೌರವಕ್ಕೂ ಧಕ್ಕೆ ಎಂದವರು ಭಾವಿಸುವುದೂ ಸಹಜವೇ.

   ಎಂದೇ ಅಂಬೇಡ್ಕರ್ ಮೂರ್ತಿ ವಿರೂಪಗೊಳಿಸುವಿಕೆ ಅಷ್ಟೊಂದು ತೀವ್ರ ಪ್ರತಿಕ್ರಿಯೆಯನ್ನು ಹುಟ್ಟುಹಾಕುತ್ತದೆ. ಆದರೆ ಯಾವ ಶೋಷಿತರ ಸಲುವಾಗಿ ಅಂಬೇಡ್ಕರ್ ಹೋರಾಡಿದ್ದರೋ ಆ ಶೋಷಿತರ ಸಮಸ್ಯೆಗಳಿಗಿಂತ ಅಂಬೇಡ್ಕರ್ ಗೌರವದ ಪ್ರಶ್ನೆಯೇ ದೊಡ್ಡದಾಗಿರುವುದು ವರ್ತಮಾನದ ವೈರುಧ್ಯವಾಗಿದೆ. ಇತ್ತೀಚಿನ ಒಂದೆರೆಡು ಘಟನೆಗಳು ಈ ಮಾತನ್ನು ಸಮರ್ಥಿಸುತ್ತವೆ. 

   ಗಾಂಧಿಯನ್ನು ಹೊರತುಪಡಿಸಿ ಅಂಬೇಡ್ಕರ್ ಅವರು ‘ಗ್ರೇಟೆಸ್ಟ್ ಇಂಡಿಯನ್’ ಎಂದು ಆಯ್ಕೆ ಮಾಡಲಾಯಿತು. ಈ ಆಯ್ಕೆಯ ಬಗೆಗೆ ದಲಿತ ಸಮುದಾಯ ಸಂಭ್ರಮಿಸುವ ಹೊತ್ತಿನಲ್ಲೇ ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಮೂರ್ತಿ ವಿರೂಪಗೊಳಿಸುವಿಕೆಯೂ ನಡೆಯಿತು. ಜಾತಿ ವಿರೋಧಿ ಚಳುವಳಿ ಅತ್ಯಂತ ಪ್ರಬಲವಾಗಿ ನಡೆದ, ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ ತತ್ವದಡಿ ಮಧ್ಯಮ ಜಾತಿಗಳು ಅತಿ ಹೆಚ್ಚು ಮೀಸಲಾತಿ ಪಡೆದ, ದ್ರಾವಿಡ ಪಕ್ಷಗಳು ಆಡಳಿತ ನಡೆಸುವ ತಮಿಳುನಾಡಿನಲ್ಲಿ ಮತ್ತೆಮತ್ತೆ ಅಂಬೇಡ್ಕರ್ ಮೂರ್ತಿ ವಿರೂಪಗೊಳಿಸುವಿಕೆ ಸಂಭವಿಸುತ್ತಿರುವುದಾದರೂ ಏಕೆ? ಜಾತಿ/ಸಮುದಾಯಗಳ ಬಹುತ್ವವನ್ನು ಸಮಾಜ ಒಪ್ಪಿ ಗೌರವಿಸುವಂತೆ ಮಾಡುವಲ್ಲಿ ರಾಜಕೀಯ ಪಕ್ಷಗಳು ಸೋತಿರುವುದರ ಸೂಚನೆಯೇ ಇದು? 

   ಕಳೆದ ವರ್ಷ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಅಂಬೇಡ್ಕರ್ ಮೂರ್ತಿಯನ್ನು ಚಪ್ಪಲಿ ಹಾರ ಹಾಕಿ ವಿರೂಪಗೊಳಿಸಲಾಗಿತ್ತು. ಇಂಥ ಅಗೌರವದ ಕ್ರಿಯೆಗಳು ಪುನರಾವರ್ತನೆಯಾಗದಂತೆ ತಡೆಯಲು ಆ ಮೂರ್ತಿಯ ಸುತ್ತ ಕಬ್ಬಿಣದ ಪಂಜರ, ಬಾಗಿಲು ನಿರ್ಮಾಣ ಮಾಡಿ ಅದಕ್ಕೆ ಬೀಗ ಹಾಕಲಾಯಿತು. ೨೦೦೮ರಲ್ಲಿ ಆಂಧ್ರದ ವಿಜಯವಾಡದಲ್ಲಿ ಅಂಬೇಡ್ಕರ್ ಮೂರ್ತಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅದನ್ನು ಪವಿತ್ರಗೊಳಿಸಲಾಯಿತು. ಪಂಜರದಲ್ಲಿಟ್ಟು ಗೌರವ ಕಾಪಾಡಬೇಕಾದ ಅಂಬೇಡ್ಕರ್ ಮೂರ್ತಿ ದಲಿತ ಆಶೋತ್ತರಗಳ ಸಂಕೇತದಂತೆ ಭಾಸವಾಗುತ್ತದೆ. 

   ಈಗ ಒಳಮೀಸಲಾತಿಯ ಕೂಗು ತಾರಕ ಮುಟ್ಟಿದೆ. ಕೆಲವು ತಪ್ಪು ನಿರ್ಧಾರಗಳಿಂದ ಉಲ್ಬಣಿಸುತ್ತಲೇ ಬಂದ ಬಿಕ್ಕಟ್ಟು ಒಳಮೀಸಲಾತಿಯದು. ಇಂದು ದಲಿತ ಗುಂಪುಗಳ-ಉಪಜಾತಿಗಳ ನಡುವೆ ಸಿವಿಲ್ ವಾರ್ ಆಗುವಂತಹ ಉದ್ವಿಗ್ನತೆಯನ್ನು ಅದು ಸೃಷ್ಟಿಸಿದೆ. ಯಾವ ಗುಂಪೂ ತನ್ನ ನಿಲುವಿನಿಂದ ಕೊಂಚವೂ ಅತ್ತಿತ್ತ ಸರಿಯದೇ ಆಸ್ತಿ ಹಂಚಿಕೊಳ್ಳುವಾಗಿನ ಅಣ್ಣ ತಮ್ಮಂದಿರ ನಡುವಿನ ಅವಿಶ್ವಾಸ, ಅಶಾಂತಿಯಂತೆ ಅದು ಉಲ್ಬಣಿಸುತ್ತಿದೆ. ಒಂದಲ್ಲ ಒಂದು ದಿನ ತೀರ್ಮಾನವಾಗಲೇಬೇಕಾದ ಬಿಕ್ಕಟ್ಟಾಗಿ ಬೆಳೆದು, ಸಾಮಾಜಿಕ ನ್ಯಾಯ ಕುರಿತ ಪರಿಕಲ್ಪನೆಯೇ ಬದಲಾಗಬೇಕಾದ ಕಾಲ ಬಂದಿದೆಯೆಂದು ಸೂಚಿಸುತ್ತಿದೆ. 

   ದುರದೃಷ್ಟವೆಂದರೆ ಒಳಮೀಸಲಾತಿ ಕೇಳುವ ಭರಾಟೆಯಲ್ಲಿ ಉದ್ದೀಪಿತಗೊಳ್ಳುತ್ತಿರುವ ಜಾತಿ-ಉಪಜಾತಿ ಪ್ರಜ್ಞೆ ಪ್ರತಿ ಗುಂಪಿಗೊಬ್ಬ ನಾಯಕನನ್ನು, ಹೀರೋವನ್ನು ಸೃಷ್ಟಿಸುತ್ತಿದೆ. ಅದೇ ಧಾಟಿಯಲ್ಲಿ ಅಂಬೇಡ್ಕರರನ್ನು ಪರಿಶಿಷ್ಟ ಜಾತಿಗಳಲ್ಲೇ ಒಂದು ಜಾತಿಯ ನಾಯಕ ಎಂಬಂತೆ ಬಿಂಬಿಸುತ್ತಿದೆ. ಇದು ಆತ್ಮಹತ್ಯಾತ್ಮಕ ನಿಲುವು. ಇಂಥ ಸನ್ನಿವೇಶದಲ್ಲಿ ಅಂಬೇಡ್ಕರ್ ಕಾರ್ಟೂನ್ ವಿವಾದ ಹಾಗೂ ಮೂರ್ತಿ ಅಪವಿತ್ರೀಕರಣಗಳು ಪರಿಶಿಷ್ಟರನ್ನು ಮತ್ತಷ್ಟು ಒಡೆದು, ಸೆಕ್ಟೇರಿಯನ್ ಭಾವನೆಗಳನ್ನು ಉದ್ದೀಪಿಸುವುದೇನೋ ಎಂಬ ಆತಂಕವಿದೆ.

   ಹೀಗಿರುವಾಗ ನಿಜವಾದ ಅಂಬೇಡ್ಕರ್, ಅಂಬೇಡ್ಕರ್ ವಾದ ಏನೆಂದು ತಿಳಿದು ಪರಾಮರ್ಶಿಸುವ ಅನಿವಾರ್ಯತೆ ಉಂಟಾಗಿದೆ. ಶೋಷಿತ ಸಮುದಾಯಗಳ ಹಾಗೂ ಅಂಬೇಡ್ಕರ್‌ವಾದದ ಪುನಶ್ಚೇತನದ ದೃಷ್ಟಿಯಿಂದ ಇದೇ ಉಳಿವಿನ ದಾರಿಯಾಗಿದೆ. 


***

   ರಾಷ್ಟ್ರಮಟ್ಟದಲ್ಲಿ ಕಾರ್ಟೂನ್ ವಿವಾದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ. ದಲಿತರಲ್ಲೇ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಹಾಗೂ ಇದುವರೆಗೆ ಈ ವಿಷಯ ಕುರಿತು ಮಾತನಾಡದಿರುವವರೆಲ್ಲ ಅಂಗಳಕ್ಕೆ ಇಳಿದಿದ್ದಾರೆ. ಸಂವಿಧಾನ ರಚನಾ ಕಾಲದಲ್ಲಿ ಅಂಬೇಡ್ಕರ್ ಶ್ರಮವನ್ನು ಎಳೆಎಳೆಯಾಗಿ ನೆನಪು ಮಾಡಿಕೊಳ್ಳಲಾಗಿದೆ. ಈ ನಾಸ್ಟಾಲ್ಜಿಯಾ ಅಂಬೇಡ್ಕರರಂಥ ದಿಟ್ಟ ನಾಯಕನ ಕೊರತೆಯನ್ನು ಮತ್ತೆಮತ್ತೆ ಎತ್ತಿ ತೋರಿಸುತ್ತಲೇ ಅಂಬೇಡ್ಕರ್‌ವಾದಿಗಳು ಅವರ ಕಾಲಾನಂತರ ಹಿಡಿದ ದಾರಿಯನ್ನೂ ಸೂಚಿಸುತ್ತದೆ. ಈ ಎಲ್ಲ ಪ್ರತಿಕ್ರಿಯೆಗಳನ್ನು ಒತ್ತಟ್ಟಿಗಿಟ್ಟು ನೋಡುವುದು ೨೦೧೨ರ ಆಧುನಿಕಗೊಂಡ, ಅಭಿವೃದ್ಧಿಗೊಂಡ, ಕೈಗಾರಿಕೀಕರಣಗೊಂಡ, ಜಾಗತೀಕರಣಗೊಂಡ ಅಸಮಾನ ಭಾರತದ ಅಂತರಾಳದ ದನಿ ಕೇಳಿಸಿಕೊಳ್ಳುವ ದೃಷ್ಟಿಯಿಂದ ಮುಖ್ಯವಾಗಿದೆ. 

   ಹೀಗೆ ವಿವಾದವೊಂದರ ಹಿಂದೆಮುಂದೆ ಬಂದ ಪ್ರತಿಕ್ರಿಯೆಗಳನ್ನು ದಾಖಲಿಸುವುದು ಆ ಕಾಲಘಟ್ಟದ ತಲ್ಲಣವನ್ನು ಚರಿತ್ರೆಯಾಗಿ ದಾಖಲಿಸುವ ದೃಷ್ಟಿಯಿಂದ ಮುಖ್ಯವಾಗುವಂತೆಯೇ; ಅದರಿಂದ ಒದಗಬಹುದಾದ ಸಮಾಜ ಚಿತ್ರಣವು ಜಾತಿಗ್ರಸ್ತ ಭಾರತ ಮುಂದೆ ಹಿಡಿಯಬೇಕಾದ ದಾರಿಯನ್ನು ರೂಪಿಸಲೂ ಅವಶ್ಯಕವೆನಿಸಿತು. ಈ ಎಲ್ಲ ಕಾರಣಗಳಿಂದ ಕಾರ್ಟೂನ್ ವಿವಾದ ಕುರಿತು ಬಂದ ಅಕ್ಷರಶಃ ನೂರಾರು ಬರಹಗಳಲ್ಲಿ ಕೆಲವನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ. ಭಿನ್ನ ಧ್ವನಿಗಳನ್ನೂ, ಭಿನ್ನ ನಿಲುವುಗಳನ್ನೂ ತಿಳಿಯಬೇಕೆಂಬ ಉದ್ದೇಶದಿಂದ ಕೆಲವನ್ನು ಹೆಕ್ಕಿ, ಅನುವಾದಿಸಿ ಪ್ರಕಟಿಸಲಾಗಿದೆ. 

   ಸಮಯ, ಸ್ಥಳ ಮತ್ತು ಪುನರುಕ್ತಿಯಾಗಬಾರದೆಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಇಲ್ಲಿರುವ ಬರಹಗಳನ್ನು ಒಗ್ಗೂಡಿಸಲಾಗಿದೆ. ಇಲ್ಲಿರುವುದಕ್ಕಿಂತ ಇನ್ನೂ ಉತ್ತಮ ಬರಹಗಳು ಇದ್ದಿರಬಹುದು, ಅವನ್ನು ಕಣ್ತಪ್ಪಿನಿಂದ ಬಿಟ್ಟಿರಬಹುದೆಂಬ ಆತಂಕ ಇದ್ದೇ ಇದೆ. ಇನ್ನಷ್ಟು ಸಮಯ ತೆಗೆದುಕೊಂಡು, ಅನುವಾದಿಸಿ, ಇನ್ನೂ ಸಮಗ್ರವಾದೊಂದು ಸಂಪಾದನೆ ಮಾಡಲು ಸಾಧ್ಯವಿತ್ತೋ ಏನೋ? ಆದರೆ ಇದು ಅಪರಿಪೂರ್ಣವೆಂಬ ಭಾವನೆಯೇ ಇಂಥ ಇನ್ನೊಂದು ಪ್ರಯತ್ನಕ್ಕೆ ಪ್ರಚೋದನೆಯಾಗಬಹುದು ಅಥವಾ ಓದುಗರಲ್ಲಿ ಪುಸ್ತಕದ ಅರೆಕೊರೆ ಚಿಂತನೆಗೆ ಹಚ್ಚಬಹುದು. ಅಷ್ಟಾದಲ್ಲಿ ಈ ಸಂಪಾದನೆಯ ಉದ್ದೇಶ ಈಡೇರಿದಂತೆಯೇ! ಇದೆಲ್ಲದರ ನಡುವೆ ಈ ಹೊತ್ತಗೆ ನಿಮ್ಮ ಕೈಲಿದೆ.. 

***

   ಈ ಸಂಪಾದಿತ ಕೃತಿಯ ಬರಹಗಳನ್ನು ಹಲವು ಮೂಲದಿಂದ ಪಡೆಯಲಾಗಿದೆ. 

ಪ್ರಜಾವಾಣಿ, ವಿಜಯ ಕರ್ನಾಟಕ, ವಾರ್ತಾಭಾರತಿ, ಲಂಕೇಶ್ ಪತ್ರಿಕೆ, ಕನ್ನಡ ಪ್ರಭ, ಇಪಿಡಬ್ಲ್ಯೂ, ಔಟ್ ಲುಕ್ ಮತ್ತಿತರ ಪತ್ರಿಕೆಗಳು ಹಾಗೂ ಬ್ಲಾಗ್‌ಗಳಿಗೆ;

ಲೇಖನ ಒದಗಿಸಿದ ಪಿ. ಮಹಮದ್, ಮುಜಾಫ್ಫರ್ ಅಸ್ಸಾದಿ, ಶಿವಸುಂದರ್, ಬಿ. ಶ್ರೀಪಾದ ಭಟ್, ಮಹಾದೇವ ಹಡಪದ್, ಬಿ. ಉಮಾಪತಿ, ರೋಹಿತ್ ಧನಕರ್ ಹಾಗೂ ಕೋ. ಚೆನ್ನಬಸಪ್ಪ ಅವರಿಗೆ;

ಅನುವಾದದ ಸಮಯದಲ್ಲಿ ಅನುವಾದ ಅನುಮತಿಗಾಗಿ ಆನಂದ್ ತೇಲ್ತುಂಬ್ಡೆಯವರನ್ನು ಸಂಪರ್ಕಿಸಿದಾಗ ಕಾಪಿರೈಟ್ ಬಗೆಗೆ ತನಗೆ ನಂಬಿಕೆಯಿಲ್ಲವೆಂದೂ, ತನ್ನ ಬರಹಗಳನ್ನು ಸಮಾನಮನಸ್ಕರು ಮುಕ್ತವಾಗಿ ಬಳಸಿಕೊಳ್ಳಬಹುದೆಂದೂ ಹೇಳಿ ತಮ್ಮ ಘನತೆಯನ್ನು ತೋರಿಸಿದರು. ಆನಂದ್ ತೇಲ್ತುಂಬ್ಡೆಯವರಲ್ಲದೇ ಕಾಂಚಾ ಐಲಯ್ಯಾ, ಗೋಪಾಲ್ ಗುರು, ಪ್ಯಾಟ್ರಿಕ್ ಫ್ರೆಂಚ್, ಯೋಗೇಂದ್ರ ಯಾದವ್, ಎಸ್. ಆನಂದ್, ಶರ್ಮಿಳಾ ರೇಗೆ, ಕೆ. ಸತ್ಯನಾರಾಯಣ, ಎಂ.ಎಸ್.ಎಸ್. ಪಾಂಡ್ಯನ್ ಅವರ ಇಂಗ್ಲಿಷ್ ಲೇಖನಗಳನ್ನು ಅನುವಾದಿಸಿ ಬಳಸಲಾಗಿದೆ. ಈ ಎಲ್ಲ ಲೇಖಕರಿಗೆ;

ಎಸ್. ಆನಂದ್ ಬರಹವನ್ನು ಅನುವಾದಿಸಿಕೊಟ್ಟ ಹರ್ಷ ಕುಗ್ವೆ ಹಾಗೂ ಅಭಿಷೇಕ್; ಪಾಂಡ್ಯನ್ ಬರಹವನ್ನು ಅನುವಾದಿಸಿಕೊಟ್ಟ ಗಿರೀಶ್ ಪಟ್ಟಣಶೆಟ್ಟಿಯವರಿಗೆ; 

    ನಮ್ಮ ಕೃತಜ್ಞತೆಗಳು. 

   ಲಡಾಯಿ ಪ್ರಕಾಶನವು ಸಾಹಿತ್ಯಿಕ ಕೃತಿಗಳ ಜೊತೆಗೇ ವರ್ತಮಾನದ ಸಾಮಾಜಿಕ ಬಿಕ್ಕಟ್ಟುಗಳನ್ನು ಬಿಂಬಿಸುವ ಹಾಗೂ ವಾಗ್ವಾದ-ವಸ್ತು-ಚರ್ಚೆಗಳನ್ನೊಳಗೊಂಡ ಕೃತಿಗಳ ಪ್ರಕಟಣೆಯಲ್ಲಿ ತೊಡಗಿಸಿಕೊಂಡಿದೆ. ಸೃಜನಶೀಲ ಸಾಹಿತ್ಯದಂತೆಯೇ ವಿಚಾರ ಸಾಹಿತ್ಯವೂ ಜನರನ್ನು ತಲುಪಬೇಕೆನ್ನುವುದು ನಮ್ಮ ಆಶಯ. ಎಂದೇ ಇಂಥ ಹೊತ್ತಗೆಗಳನ್ನು ನಿಮ್ಮ ಕೈಲಿಡಲು ಸಾಧ್ಯವಾಗಿದೆ. ನಮ್ಮ ಪ್ರಕಟಣೆಗಳನ್ನು ಕೊಂಡು ಓದಿ, ಪ್ರೋತ್ಸಾಹಿಸುವ; ಆತಂಕದ ಗಳಿಗೆಗಳಲ್ಲೂ ಆಶಾಕಿರಣವಾಗಿ ಒದಗುವ ಎಲ್ಲ ಚೇತನಗಳಿಗೂ; ಮುಖಪುಟ ವಿನ್ಯಾಸ ಮಾಡಿದ ಕಲಾವಿದ ದಿನೇಶ್ ಕುಕ್ಕುಜಡ್ಕ ಹಾಗೂ ಒಳಪುಟ ವಿನ್ಯಾಸಗೊಳಿಸಿದ ವಿ.ಆರ್.ಕಾರ್ಪೆಂಟರ್ ಅವರಿಗೂ ನಮ್ಮ ಮನದಾಳದ ಕೃತಜ್ಞತೆಗಳು. 

                                                                                                                           -ಬಸೂ, ಅನುಪಮಾ.                                                      

ನಿತೀನ್ ಗಡ್ಕರಿ ರಕ್ಷಣೆಗೆ ಧಾವಿಸಿದ ಆರೆಸ್ಸೆಸ್- ಸನತ್‌ಕುಮಾರ ಬೆಳಗಲಿ

 

ವಾರ್ತಾಭಾರತಿ  


1947ರ ಸ್ವಾತಂತ್ರಕ್ಕಿಂತ ಮುನ್ನ ಭಾರತಕ್ಕೆ ಸ್ವಾತಂತ್ರ ನೀಡುವ ವಿಧೇಯಕ ಇಂಗ್ಲೆಂಡಿನ ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ನಡೆದ ಪ್ರಸಂಗವಿದು. ಆಂದಿನ ಇಂಗ್ಲೆಂಡ್ ಪ್ರಧಾನಿ ಕ್ಲೆಮೆಂಟ್ ಆಟ್ಲೆ ಈ ವಿಧೇಯಕವನ್ನು ಮಂಡಿಸಿದ್ದರು. ಈ ಕುರಿತು ಸದನದಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಯುದ್ಧ ಕಾಲದ ಪ್ರಧಾನಿ ವಿನಸ್ಟನ್ ಚರ್ಚಿಲ್ ವಿಧೇಯಕವನ್ನು ಬಲವಾಗಿ ವಿರೋಧಿಸಿದರು. ‘‘ಭಾರತಕ್ಕೆ ಸ್ವಾತಂತ್ರ ಬಿಟ್ಟುಕೊಟ್ಟರೆ ರಾಜ್ಯಾಧಿಕಾರ ಫಟಿಂಗರು, ಮೂರ್ಖರು, ಅಯೋಗ್ಯರು ಹಾಗೂ ಲೂಟಿಗಾರರ ವಶಕ್ಕೆ ಹೋಗುತ್ತದೆ’’ ಎಂದು ಹೇಳಿದ್ದರು.ಸ್ವಾತಂತ್ರದ ಆರು ದಶಕಗಳ ನಂತರ ನಮ್ಮ ಸರಕಾರದ ಅಧಿಕಾರ ಸೂತ್ರ ಹಿಡಿದವರನ್ನು ನೋಡಿದರೆ ಚರ್ಚಿಲ್ ಮಾತು ನೆನಪಾಗುತ್ತದೆ. ಚರ್ಚಿಲ್ ಅಂದು ಆಡಿದ ಮಾತನ್ನು ನಮ್ಮನ್ನು ಆಳುವವರು ನಿಜ ಮಾಡಿ ತೋರಿಸುತ್ತಿದ್ದಾರೆ. ಭೂಮಿ, ನೀರು, ರಕ್ತ ಎಲ್ಲವನ್ನು ಇವರು ದೋಚುತ್ತಿದ್ದಾರೆ. ಗಾಳಿಯನ್ನು ಮಾತ್ರ ಹಿಡಿದಿಟ್ಟುಕೊಳ್ಳಲು ಆಗಿಲ್ಲ. ಈ ಲೂಟಿಗಾರರಿಗೆ ಪಕ್ಷಭೇದವಿಲ್ಲ. ಸ್ವಾತಂತ್ರಕ್ಕಾಗಿ ಹೋರಾಡಿದ್ದಾಗಿ ಹೇಳುವ ಕಾಂಗ್ರೆಸ್‌ನಿಂದ ಹಿಡಿದು ರಾಷ್ಟ್ರಭಕ್ತಿಯ ಗುತ್ತಿಗೆ ಹಿಡಿದ ಬಿಜೆಪಿವರೆಗೆ ಎಲ್ಲರೂ ಹಗಲು ದರೋಡೆಕೋರರೆ.1977ರಲ್ಲಿ ಕೇಂದ್ರದಲ್ಲಿ ಮೊದಲ ಕಾಂಗ್ರೆಸ್ಸೇತರ ಸರಕಾರ ಅಧಿಕಾರಕ್ಕೆ ಬಂದಾಗ ಜನರೆದುರು ಆಯ್ಕೆಗಳಿದ್ದವು. 


ಕಾಂಗ್ರೆಸ್‌ನವರಿಗಿಂತ ಜೆಪಿ, ಮೂರಾರ್ಜಿ, ವಾಜಪೇಯಿ, ಅಡ್ವಾಣಿ, ಜಾರ್ಜ್ ಫೆರ್ನಾಂಡೀಸ್, ಮಧು ದಂಡವತೆ ಹೀಗೆ ಘಟಾನುಘಟಿಗಳು ಪ್ರತಿ ಪಕ್ಷ ಸಾಲಿನಲ್ಲಿ ಮಿಂಚುತ್ತಿದ್ದರು. ಎಡಪಕ್ಷಗಳಲ್ಲಿ ಭೂಪೇಶ್ ಗುಪ್ತ, ಸುಂದರಯ್ಯ, ಇಎಂಎಸ್, ಜ್ಯೋತಿಬಸು, ಎಕೆಜಿ, ಸುರ್ಜಿತ್, ಫರೂಕಿ ಒಬ್ಬರೆ ಇಬ್ಬರೆ ಎಲ್ಲರೂ ಸಿಂಹನದೃಶ ವ್ಯಕ್ತಿತ್ವ ಹೊಂದಿದವರು. ಅಂತಲೆ ಜನ ಕಾಂಗ್ರೆಸ್ಸೇತರ ಸರಕಾರವನ್ನು ತಂದರು.ಆದರೆ ಈಗ ಅದೇ ಶರದ್ ಪವಾರ್, ವೀರಭದ್ರ ಸಿಂಗ್, ಗಡ್ಕರಿ, ಎತ್ತ ನೋಡಿದರೆ ಇವೇ ಮುಖಗಳು.ವಾಜಪೇಯಿ, ಅಡ್ವಾಣಿಗಳ ಕೋಮುವಾದಿ ರಾಜಕಾರಣವೇನೆ ಇರಲಿ ವೈಯಕ್ತಿಕವಾಗಿ ಗಡ್ಕರಿಯಷ್ಟು ಇವರು ಹೆಸರು ಕೆಡಿಸಿಕೊಂಡಿರಲಿಲ್ಲ. ಯಾಕೆಂದರೆ ಇವರ್ಯಾರೂ ಉದ್ಯಮಪತಿಗಳಲ್ಲ. ಸ್ವಂತ ಹಿತಾಸಕ್ತಿಗಳಿರಲಿಲ್ಲ. ಸಾಮಾನ್ಯ ರಾಜಕೀಯ ಕಾರ್ಯಕರ್ತರಾಗಿ ಎತ್ತರಕ್ಕೆ ಬೆಳೆದವರು. ಅಂತಲೇ ತೊಂಬತ್ತರ ದಶಕದಲ್ಲಿ ವಾಜಪೇಯಿಯನ್ನು ಪ್ರಧಾನಿಯನ್ನಾಗಿ ದೇಶ ಒಪ್ಪಿಕೊಂಡಿತು.

ಆಗ ಅಧಿಕಾರದ ರುಚಿಕಂಡ ಬಿಜೆಪಿಯವರ ಹಸಿವು ಎಷ್ಟಿತ್ತೆಂದರೆ ವಾಜಪೇಯಿ ಸಂಪುಟದಲ್ಲಿದ್ದ ಅನಂತಕುಮಾರ್, ಪ್ರಮೋದ್ ಮಹಾಜನ್ ಸೇರಿದಂತೆ ಬಹುತೇಕ ಮಂತ್ರಿಗಳು ಹೊಟ್ಟೆ ಬಿರಿಯುವಷ್ಟು ಕಬಳಿಸಿದರು. ಸ್ವತಃ ವಾಜಪೇಯಿ ಅವರ ಅಳಿಯ ರಂಜನದಾಸ್ ಗುಪ್ತಾ ಗಂಟು ಬಿದ್ದ. ಹೀಗಾಗಿ ಅಧಿಕಾರ ಕಳೆದುಕೊಂಡರು. ಈಗ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ಆಕಾಶ-ಪಾತಾಳ ಒಂದು ಮಾಡುತ್ತಿದೆ. ಆದರೆ ವಾಜಪೇಯಿಯಂಥ ನಾಯಕ ಈಗಿಲ್ಲ. ಪಕ್ಷಾಧ್ಯಕ್ಷ ಗಡ್ಕರಿ ಹೊಲಸಿನಲ್ಲಿ ಮುಳುಮುಳುಗಿ ಒದ್ದಾಡುತ್ತಿದ್ದಾರೆ. ಕೋಟಿ ಕೋಟಿ ಕಬಳಿಸಿದ ಗಡ್ಕರಿ ಬೆಂಬಲಕ್ಕೆ ಆರೆಸ್ಸೆಸ್ ನಿಂತಿದೆ. 

ಯಾಕೆಂದರೆ ಈ ಗಡ್ಕರಿ ಸಂಘದ ಆಯ್ಕೆ, ಅಡ್ವಾಣಿ, ಜೇಟ್ಲಿ, ಸುಷ್ಮಾ ಸ್ವರಾಜ್, ಮುರಳಿಮನೋಹರ ಜೋಶಿ, ಹೀಗೆ ಪಕ್ಷದ ಯಾವ ಹಿರಿಯ ನಾಯಕನೂ ಪಕ್ಷಾಧ್ಯಕ್ಷನಾಗಕೂಡದು. ತಾವು ಹೇಳಿದಂತೆ ಕೇಳುವ ನಾಗಪುರದ ವ್ಯಾಪಾರಿ ನಿತೀನ್ ಗಡ್ಕರಿಯವರೇ ನಾಯಕನಾಗಬೇಕು ಎಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ ಭಾಗವತ್ ಪಟ್ಟು ಹಿಡಿದು ಗಡ್ಕರಿಯನ್ನು ಬಿಜೆಪಿ ಮೇಲೆ ಹೇರಿದರು.ಅಂತಲೆ ಈಗ ಆತನನ್ನು ಸಮರ್ಥಿಸಿಕೊಳ್ಳಲೇಬೇಕಾಗಿದೆ. ಆರೆಸ್ಸೆಸ್ ಗಡ್ಕರಿಯನ್ನು ಸಮರ್ಥಿಸಿಕೊಳ್ಳಲು ಕಾರಣವಿದೆ. ಗಡ್ಕರಿ ತಾನೊಬ್ಬನೇ ತಿಂದಿಲ್ಲ. ಕಬಳಿಸಿದ್ದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಗುರುದಕ್ಷಿಣೆಯಾಗಿ ಕೋಟಿ ಕೋಟಿ ರೂಪಾಯಿ ನೀಡಿದ್ದಾರೆ. 

ಗಡ್ಕರಿ ಮಹಾರಾಷ್ಟ್ರದ ಲೋಕೋಪಯೋಗಿ ಮಂತ್ರಿಯಾಗಿದ್ದಾಗ ಆ ರಾಜ್ಯದಲ್ಲಿ ಆರೆಸ್ಸೆಸ್‌ನ ನೂರಾರು ಭವನಗಳು ರಾಜ್ಯದ ಮೂಲೆ ಮೂಲೆಯಲ್ಲಿ ತಲೆ ಎತ್ತಿದವು. ಈ ಕಟ್ಟಡಗಳು ಹೇಗೆ ನಿರ್ಮಾಣಗೊಂಡವು, ಯಾರು ಹಣ ಒದಗಿಸಿದರು ಎಂಬುದರ ತನಿಖೆ ನಡೆದರೆ ಗುರುದಕ್ಷಿಣೆಯ ನಿಜ ಸ್ವರೂಪ ಬಯಲಾಗುತ್ತದೆ.1995ರಿಂದ 1999ರ ವರೆಗೆ ನಾಗಪುರ ಸೇರಿದಂತೆ ರಾಜ್ಯದ ಅನೇಕ ಕಡೆ ನಿರ್ಮಾಣಗೊಂಡ ಆರೆಸ್ಸೆಸ್ ಕಟ್ಟಡಗಳಿಗೆ ಯಾರು ಹಣ ಒದಗಿಸಿದರು? ಇದೆಲ್ಲ ಗುರುದಕ್ಷಿಣೆಯಾಗಿ ಬಂದ ಹಣದಲ್ಲಿ ನಿರ್ಮಾಣಗೊಂಡ ಕಟ್ಟಡಗಳು ಎಂದು ಮೋಹನ ಭಾಗವತ್ ಹೇಳಬಹುದು. ಆದರೆ ಕೋಟಿ ಕೋಟಿ ಹಣವನ್ನು ಗುರುದಕ್ಷಿಣೆಯಾಗಿ ನೀಡಿದ ಆ ಪುಣ್ಯಾತ್ಮ ಸ್ವಯಂ ಸೇವಕ ಯಾರು? ಇದೆಲ್ಲ ತನಿಖೆಯಾಗಬೇಕು. 

ಹೀಗೆ ತನಿಖೆ ಆಗಬಾರದೆಂದೇ ಆರೆಸ್ಸೆಸ್ ಸೇವಾ ಸಂಸ್ಥೆ ಎಂದು ಹೇಳಿಕೊಂಡು ಆದಾಯ ತೆರಿಗೆ ಜಾಲದಿಂದ ತಪ್ಪಿಸಿಕೊಳ್ಳುತ್ತ ಬಂದಿದೆ.ಕಾಂಗ್ರೆಸ್, ಬಿಜೆಪಿ ಹೀಗೆ ಎಲ್ಲೆಡೆ ಲೂಟಿಗಾರರೆ ತುಂಬಿದ್ದಾರೆ. ಎಡಪಕ್ಷಗಳು ಮಾತ್ರ ಅಂಥ ಯಾವುದೇ ಆರೋಪಕ್ಕೆ ಗುರಿಯಾಗಿಲ್ಲ. ಆದರೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಸ್ಥಿತಿಯಲ್ಲಿ ಅವುಗಳಿಲ್ಲ. ಹಾಗೆಂದು ಚರ್ಚಿಲ್ ಆಡಿದ ಮಾತನ್ನು ಸಮರ್ಥಿಸಿಕೊಳ್ಳಬೇಕಾಗಿಲ್ಲ. ಈ ಪರಿ ಭ್ರಷ್ಟಾಚಾರ ಭೂತಾಕಾರ ತಾಳಲು ಮುಖ್ಯ ಕಾರಣ ಲಂಗು ಲಂಗಾಮಿಲ್ಲದ ಸಂಪತ್ತು ಸಂಗ್ರಹಕ್ಕೆ ಇರುವ ಅವಕಾಶ ಅಂತಲೇ ಬುದ್ಧ, ಬಸವಣ್ಣ, ಪೈಗಂಬರ್ ಇಂಥ ಸಂಗ್ರಹ ಪ್ರವೃತ್ತಿಯನ್ನು ವಿರೋಧಿಸಿದ್ದರು.
‘‘ವ್ಯವಸ್ಥೆ ಕೆಟ್ಟು ಅವ್ಯವಸ್ಥೆಯಾಗಿ, ಕುವ್ಯವಸ್ಥೆಯಾಗಿ ನಂತರ ಹೊಸ ಸಮಾಜ ಆವಿಷ್ಕಾರಗೊಳ್ಳುತ್ತದೆ’’ ಎಂದು ಡಾ. ಲೋಹಿಯಾ ಹೇಳಿದ ಮಾತು ನೆನಪಿಗೆ ಬರುತ್ತದೆ. ದೇಶ ಅಧೋಗತಿಯ ಅಂಚಿಗೆ ಬಂದು ನಿಂತಿದೆ. ಬದಲಾವಣೆಗೆ ಕಾಲ ಪಕ್ವವಾಗುತ್ತಿದೆ. ಬೆಳಕಿನ ಕಿರಣಗಳು ಇಂದಿಲ್ಲ, ನಾಳೆ ಗೋಚರಿಸುತ್ತವೆ ಎಂಬ ಆಶಾಭಾವನೆಯೊಂದೆ ಈ ದೇಶವನ್ನು ಮುನ್ನಡೆಸುತ್ತಿದೆ.

ಶಿಕ್ಷಣ ಹಕ್ಕು ಕಾಯ್ದೆ: ಖಾಸಗಿಯವರಿಗೆ ಸರಕಾರ ಶರಣು

- ಅನಂತ ನಾಯ್ಕ. ಎನ್, ಬೆಂಗಳೂರು
 
ವಾರ್ತಾಭಾರತಿ  
 

ದೇಶದ ಸಂವಿಧಾನ ರಚಿತವಾಗಿ 10 ವರ್ಷದೊಳಗೆ 6ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪೂರೈಕೆ ಮುಗಿದಿರಬೇಕೆಂದು ಉದ್ದೇಶಿಸಲಾಗಿತ್ತು. ಈ ಗುರಿಯನ್ನು ತಲುಪಲು ಆಳುವ ಪ್ರಭುತ್ವಗಳಿಂದ ಸಾಧ್ಯವಾಗಲೇ ಇಲ್ಲ. ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ ನಂತರ ಶಿಕ್ಷಣ ಸಾರ್ವತ್ರೀಕರಣ ವಾಗಬೇಕೆನ್ನುವ ಚಳವಳಿಯ ಫಲವಾಗಿ ರೂಪಿತವಾದ ಕಾಯ್ದೆಗಳಲ್ಲಿ ‘‘ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009’’ ಕೂಡ ಪ್ರಮುಖವಾದದ್ದು. 2009ರಿಂದಲೇ ಬಹುತೇಕ ರಾಜ್ಯ ಸರಕಾರಗಳು ಈ ಕಾಯ್ದೆ ಜಾರಿಗೆ ಮುಂದಾದವು. ಆದರೆ ಕರ್ನಾಟಕ ರಾಜ್ಯ ಸರಕಾರ ಮಾತ್ರ ನಿರ್ಲಕ್ಷ ತಾಳಿತು. ಸುಪ್ರೀಂ ಕೋರ್ಟ್ ಮತ್ತು ಜನ ಚಳವಳಿಯ ಒತ್ತಡದಿಂದ ಪ್ರಸಕ್ತ ವರ್ಷ ರಾಜ್ಯದಲ್ಲಿ ಜಾರಿಗೆ ಮುಂದಾಗಿರುವಂತೆ ಕಾಣಿಸುತ್ತಿದ್ದರೂ ಖಾಸಗಿ ಶಾಲೆಯವರ ತಾಳಕ್ಕೆ ತಕ್ಕಂತೆ ರಾಜ್ಯ ಸರಕಾರ ಕುಣಿಯುತ್ತಿರುವುದು ಸ್ಪಷ್ಟಗೊಂಡಿದೆ.

ಚಳವಳಿಯ ಫಲವಾಗಿ ಶಿಕ್ಷಣ ಹಕ್ಕು:  (Central Advisory Board for Education)ಜನ ಚಳವಳಿಯ ಒತ್ತಡದಿಂದ 2002ರಲ್ಲಿ ಸಂವಿಧಾನದ 86ನೆ ತಿದ್ದುಪಡಿಯ ಮೂಲಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿ ಕಲಂ 21(ಎ)ನಲ್ಲಿ ಮಕ್ಕಳ ಶಿಕ್ಷಣದ ಹಕ್ಕನ್ನು ಖಾತ್ರಿಗೊಳಿಸಲಾಯಿತು. 2002ರಲ್ಲಿ ಶಿಕ್ಷಣ ಕೇಂದ್ರೀಯ ಸಲಹಾ ಮಂಡಳಿ ಯನ್ನು ರಚಿಸಲಾಗಿ ಇದರ ಶಿಫಾರಸಿನಂತೆ 2009 ಆಗಸ್ಟ್ 12ರಂದು ಲೋಕಸಭೆ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009ನ್ನು ಅಂಗೀಕರಿಸಿತು. ಎಸ್‌ಎಫ್‌ಐ ಸೇರಿದಂತೆ ಪ್ರಗತಿಪರ ಸಂಘಟನೆಗಳ ಹೋರಾಟದ ಫಲದಿಂದ ಈ ಕಾಯ್ದೆ ಪಡೆದದ್ದು ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ಈ ಕಾಯ್ದೆಯಲ್ಲಿ ಮಕ್ಕಳ ಕಡ್ಡಾಯ ದಾಖಲೆ, ನಿರಂತರ ಹಾಜರಾತಿ, ಗುಣಮಟ್ಟದ ಭಾವೈಕ್ಯತಾ ಶಿಕ್ಷಣ, ವಿಕಲಚೇತನರಿಗೆ ಆದ್ಯತೆ, ದೈಹಿಕ-ಮಾನಸಿಕ ದಂಡನೆ ನಿಷೇಧ, ಸರಕಾರ- ಪಂಚಾಯತ್‌ಗಳ, ಪಾಲಕರ ಕರ್ತವ್ಯ, ಜಾತಿ-ಧರ್ಮದ ಹೆಸರಿನಲ್ಲಿ ಪ್ರವೇಶ ನಿರಾಕರಣೆ-ಅವಮಾನಕ್ಕೆ ವಿರೋಧ, ಪ್ರವೇಶ ಪರೀಕ್ಷೆ, ಟ್ಯೂಷನ್ ನಿಷೇಧ, ಸೇರಿದಂತೆ ಖಾಸಗಿ ಶಾಲೆಗಳಲ್ಲಿ ಶೇ. 25ರಷ್ಟು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಕಡ್ಡಾಯ ಉಚಿತ ಪ್ರವೇಶ ನೀಡಬೇಕೆನ್ನುವುದು ಕಾಯ್ದೆ ಪ್ರಮುಖಾಂಶ.
(ಈ ವಿದ್ಯಾರ್ಥಿಗಳ ಶುಲ್ಕಗಳನ್ನು ಸರಕಾರವೇ ಖಾಸಗಿ ಶಾಲೆಗಳಿಗೆ ಭರಿಸಬೇಕು). ಇದು ಒಂದು ಕ್ರಾಂತಿಕಾರಿ ಕಾಯ್ದೆ ಅಲ್ಲದಿದ್ದರು ಮಕ್ಕಳ ಶಿಕ್ಷಣ ಹಕ್ಕಿನ ಖಾತ್ರಿ ಮೂಡಿಸುತ್ತಿರುವುದು ಸಂತೋಷಕರ. ಯಥಾವತ್ತಾಗಿ ಈ ಕಾಯ್ದೆಯ ಜಾರಿ ಸಾಧ್ಯವಿಲ್ಲವೆಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿ ಛೀಮಾರಿ ಹಾಕಿಸಿಕೊಂಡು ಬಂದಿವೆೆ. ಶೇ.25 ಬಡ-ಹಿಂದುಳಿದ-ದಲಿತ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಗಳಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ. ಏಕೆಂದರೆ ಅವರು ನಮ್ಮಲ್ಲಿರುವ ಶ್ರೀಮಂತ ಮಕ್ಕಳ ಜೊತೆ ಬೆರೆಯಲು ಸಾಧ್ಯವಿಲ್ಲವೆಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂವಿಧಾನ ವಿರೋಧಿವಾದವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿ ಶಾಲೆಗಳು ತಾರತಮ್ಯ ಕೇಂದ್ರಗಳಾಗಬಾರದು.
ಮಕ್ಕಳಲ್ಲಿ ಭೇದಭಾವ ತೋರ ಬಾರದು ಎಂದು ಹೇಳಿ 25% ಬಡ ವಿದ್ಯಾರ್ಥಿಗಳಿಗೆ ಕಡ್ಡಾಯ ಪ್ರವೇಶ ನೀಡಬೇಕು ಎನ್ನುವ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ ಗೆಲುವೇ ಸರಿ. ಇದನ್ನು ಕಡ್ಡಾಯವಾಗಿ ಜಾರಿ ಗೊಳಿಸಲು ಸರಕಾರ ಮುಂದಾ ಗುವ ಬದಲು ಬಡ ವಿದ್ಯಾರ್ಥಿಗಳನ್ನು ಗುರುತಿಸುವ ಮಾನದಂಡವಾಗಿ 3.5ಲಕ್ಷ ರೂ.ಗಳ ಆದಾಯ ಮಿತಿಯನ್ನು ನಿಗದಿಗೊಳಿಸುವ ಮೂಲಕ ಖಾಸಗಿಯವರಿಗೆ ಮತ್ತು ಶ್ರೀಮಂತರಿಗೆ ಲಾಭವಾಗುವಂತೆ ನಡೆದುಕೊಂಡಿದೆ. ಸರಕಾರಿ ನಿಯಮದಂತೆ ಬಿಪಿಎಲ್- ಎಪಿಎಲ್ ಪಟ್ಟಿಯ ಆದಾಯ ಪ್ರಮಾಣ 20 ಸಾವಿರದೊಳಗಿ ರುವುದು ಈ ಸರಕಾರಕ್ಕೆ ಅರಿವಾಗಲಿಲ್ಲ.

ಹಣ ಮಾಡುವುದಕ್ಕಾಗಿ ಶ್ರೀಮಂತರನ್ನು ಸೆಳೆಯುವ ಖಾಸಗಿಯವರ ಲಾಬಿಗೆ ರಾಜ್ಯ ಸರಕಾರ ಮಣಿದಿದೆ. ಇತರೆ ರಾಜ್ಯಗಳು ಬಡತನ ರೇಖೆಗಿಂತ ಕಡಿಮೆ ಇರುವ (ಬಿಪಿಎಲ್) ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನಿಯಮ ರೂಪಿಸಿ ಕೊಂಡಿವೆ. ಸರಕಾರಿ ನಿಯಮದಂತೆ ಹಣ ಮಾಡುವುದಕ್ಕಾಗಿ ಶ್ರೀಮಂತರನ್ನು ಸೆಳೆಯುವ ಖಾಸಗಿಯವರ ಲಾಬಿಗೆ ರಾಜ್ಯ ಸರಕಾರ ಮಣಿದು ಕಾಯ್ದೆಯ ವಿರುದ್ಧವಾಗಿ ನಡೆದುಕೊಂಡಿದೆ.ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದಿಲ್ಲೊಂದು ರೀತಿಯಿಂದ ಸರಕಾರದ ಸೌಲಭ್ಯಗಳನ್ನು ಪಡೆಯುತ್ತಿವೆ. ಭೂಮಿ ಖರೀದಿಯಲ್ಲಿ ರಿಯಾಯಿತಿ, ನೀರಿನ ತೆರಿಗೆ ವಿನಾಯಿತಿ, ವಿದ್ಯುತ್ ತೆರಿಗೆ ವಿನಾಯಿತಿ, ಸೇವಾ ತೆರಿಗೆ ವಿನಾಯಿತಿ, ಸೇರಿದಂತೆ ಸರಕಾರದ ವಿವಿಧ ಯೋಜನೆಯ ಲಾಭವನ್ನು ಪಡೆಯುತ್ತಿವೆ. 

ಹೀಗಾಗಿ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಬೇಕಾಗಿದೆ. ಹೀಗಿರುವಾಗ ಮತ್ತೆ ಜನತೆಯ ತೆರಿಗೆಯ ಹಣವನ್ನು 25% ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಭರಿಸಬೇಕು ಎನ್ನುವುದನ್ನು ನೆಪ ಮಾಡಿಕೊಂಡು ಪ್ರತಿ ವರ್ಷ, ಸಾವಿರಾರು ಕೋಟಿ ರೂ.ಗಳನ್ನು ಖಾಸಗಿಯವರಿಗೆ ನೀಡಲು ರಾಜ್ಯ ಸರಕಾರ ಹೊರಟಿದೆ. ಪಶ್ಚಿಮ ಬಂಗಾಲ-3,282, ಮಧ್ಯಪ್ರದೇಶ  4,423, ಬಿಹಾರ  4,705, ಗುಜರಾತ್  3,949 ಮತ್ತು ಕರ್ನಾಟಕ 11,848 ರೂ. ರಾಜ್ಯದಲ್ಲಿಯೇ ಅತಿಹೆಚ್ಚು ನೀಡುತ್ತಿರುವುದನ್ನು ಗಮನಿಸಿದಾಗ ರಾಜ್ಯ ಸರಕಾರ ಖಾಸಗಿ ಶಾಲೆಗಳ ಖಜಾನೆ ತುಂಬಲು ಮುಂದಾಗಿರುವುದು ಸ್ಪಷ್ಟವಾಗುತ್ತಿದೆ.
ಶಿಕ್ಷಣ ವ್ಯಾಪಾರೀಕರಣದ ಪ್ರಕ್ರಿಯೆಗೆ ಸರಕಾರದ ಅಧಿಕೃತವಾಗಿ ಸಹಕರಿಸುತ್ತಿದೆ. ಕಾಯ್ದೆಯ ಜಾರಿಗೊಳಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಸರಕಾರಿ ನಿಯಮದಂತೆ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮೀಸಲು ನಿಯಮದಂತೆ 1,12,474.00 ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡಬೇಕಾಗಿತ್ತು. ಆದರೆ ಕೇವಲ 41,663 (ಅಂದರೆ 37%) ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದ್ದು. ಸುಮಾರು 70,811 ವಿದ್ಯಾರ್ಥಿಗಳನ್ನು ಪ್ರವೇಶದಿಂದ ವಂಚಿಸಲಾಗಿದೆ. ಕಾಯ್ದೆ ಜಾರಿಯಲ್ಲಿ ವಿಫಲವಾಗುವ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಮಾಡಬೇಕು.

1 ಲಕ್ಷ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬೇಕು ಎನ್ನುವ ಸುಪ್ರೀಂ ಕೋರ್ಟ್‌ನ ತೀರ್ಪು ಇದ್ದರು ಕೂಡ ರಾಜ್ಯ ಸರಕಾರ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೋಟಿಸ್ ನೀಡುವಂತಹ ಕನಿಷ್ಠ ಕೆಲಸವನ್ನು ಮಾಡಿಲ್ಲ. ಅತಿ ಹೆಚ್ಚು ಖಾಸಗಿ ಶಾಲೆಗಳಿರುವ ಬೆಂಗಳೂರು ಉತ್ತರ 11.304(16%) ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವುದನ್ನು ಗಮನಿಸಿದರೆ, ಈ ಕಾಯ್ದೆಯನ್ನು ವಿಫಲ ಗೊಳಿಸುವಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂಬುದು ಸಾಬೀತಾಗುತ್ತಿದೆ.

ಖಾಸಗಿ ಶಾಲೆಗಳ ಕರಾಳ ಮುಖ: ಈ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ನಿರ್ಲಕ್ಷ ಧೋರಣೆ ಹೊಂದಿದ್ದರ ಜೊತೆಗೆ ವಿಫಲಗೊಳಿಸುವಲ್ಲಿ ಕುತಂತ್ರಗಳನ್ನು ನಡೆಸುತ್ತಿವೆ. ನಿಯಮಬದ್ಧವಾಗಿ ಬಡವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದರ ಬದಲಾಗಿ ಕಿರುಕುಳ ನೀಡಿ ತಮ್ಮ ಕರಾಳಮುಖದ ಪ್ರದರ್ಶನ ಮಾಡಿವೆ. ರಾಜ್ಯವ್ಯಾಪಿ ಕೇವಲ 37% ಬಡ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವುದನ್ನು ಗಮನಿಸಿದರೆ ಖಾಸಗಿ ಶಾಲೆಗಗಳಲ್ಲಿ ರಾಜರೋಷವಾಗಿ ಹಣ ಮಾಡುವ ದಂಧೆ ನಡೆಯುತ್ತಿರುವುದು ಬಹಿರಂಗ ಸತ್ಯ. ಬೆಂಗಳೂರಿನ ನಂದಿನಿ ಲೇಔಟ್‌ನ ಆಕ್ಸಫರ್ಡ್ ಸ್ಕೂಲ್‌ನಲ್ಲಿ ಕಾಯ್ದೆಯ 25% ಬಡ ವಿದ್ಯಾರ್ಥಿಗಳ ಕೋಟಾದ ಅಡಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಲು ಕೂದಲು ಕತ್ತರಿಸಿ ಅವಮಾನಿಸಲಾಗಿದೆ.ಇನ್ನೊಂದೆಡೆ ವಿದ್ಯಾರ್ಥಿಗಳ ಊಟದ ಡಬ್ಬಿಗಳನ್ನು ಪರೀಕ್ಷಿಸಿ ಮೊಟ್ಟೆ, ಮೀನು, ಮಾಂಸದ ಪದಾರ್ಥದ ಊಟವಾಗಿದ್ದರೆ ಅಂತಹ ವಿದ್ಯಾರ್ಥಿಗಳನ್ನು ವಾಪಸ್ಸು ಕಳಿಸಲಾಗುತ್ತಿದೆ. ವಿವಿಧ ರೀತಿಯ ಅಸ್ಪಶ್ಯತಾ ಆಚರಣೆಗೆ ದಲಿತ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. 

ಬಡ ವಿದ್ಯಾರ್ಥಿಗಳನ್ನು ಶ್ರೀಮಂತ ವಿದ್ಯಾರ್ಥಿಗಳ ಜೊತೆ ಬೆರೆಯಲು ಮುಕ್ತ ಅವಕಾಶ ಕಲ್ಪಿಸದೇ ಪ್ರತ್ಯೇಕತೆಯನ್ನು ಅನುಸರಿಸಲಾಗುತ್ತಿದ್ದರೂ ರಾಜ್ಯ ಸರಕಾರ ಮಾತ್ರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳದೆ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ವರ್ತಿಸಿದೆ. 

ಕುಸ್ಮಾ ಪರಿವಾರದ ಪ್ರತಿಷ್ಠೆ: ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ರಾಜ್ಯ ಸರಕಾರವನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತವಾಗಿದೆ. ಕುಸ್ಮಾದ ಬಹುತೇಕ ಸದಸ್ಯ ಶಾಲೆಗಳು ಸಂಘ ಪರಿವಾರದವೇ ಆಗಿವೆ. ಸಂಘ ಪರಿವಾರ ಮತ್ತು ಬಿಜೆಪಿಯಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡವರು ಕುಸ್ಮಾದ ಪದಾಧಿಕಾರಿಗಳಾಗಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿ ಒಂದು ವಾರಗಳ ಕಾಲ ಶಾಲೆ ಬಂದ್ ಮಾಡಲು ಮುಂದಾದರೂ ಅವರ ಮೇಲೆ ಕ್ರಮಕೈಗೊಳ್ಳುವ ಬದಲಾಗಿ ಐಷಾರಾಮಿ ಸಭೆಗಳ ಮೂಲಕ ರಾಜಿ ಸಂಧಾನಕ್ಕೆ ಮುಂದಾಗುತ್ತಿರುವ ರಾಜ್ಯ ಸರಕಾರದ ಕ್ರಮ ಖಂಡನೀಯ. 

ಕುಸ್ಮಾದ ಅಧ್ಯಕ್ಷರಾಗಿದ್ದ ಜೆ.ಎಸ್.ಶರ್ಮ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳು ಕೊಳಚೆ ನೀರು ಇದ್ದಂತೆ, ಕೊಳಚೆ ನೀರು ಸಮುದ್ರಕ್ಕೆ ಸೇರಿದರೆ ಸಮುದ್ರದ ನೀರು ಮತ್ತು ಸಂಸ್ಕೃತಿ ಹಾಳಾಗುತ್ತದೆ ಎನ್ನುವ ಈ ಹೇಳಿಕೆ ಮನುವಾದಿಯ ಮಲಿನ ಮನಸ್ಸನ್ನು ಅನಾವರಣಗೊಳಿಸಿದೆ.ಅಸ್ಪೃಶ್ಯತೆಯ ಆಚರಣೆಯ ಪ್ರತೀಕವಾಗಿರುವ ಈ ಮಾತನ್ನು ಆಡಿದ ಶರ್ಮರನ್ನು ಬಂಧಿಸಿ ಜೈಲಿನಲ್ಲಿರಿಸಬೇಕಿದ್ದ ಸರಕಾರ ತುಟಿಪಿಟಕ್ಕೆನ್ನದೆ ಮೌನವಾಗಿ ಇರುವುದನ್ನು ನೋಡಿದರೆ ಭಾರತದ ಸಂವಿಧಾನಕ್ಕಿಂತ ಸಂಘ ಪರಿವಾರದ ಅಜೆಂಡಾದ ರಕ್ಷಣೆಯ ಕೆಲಸದಲ್ಲಿ ಸರಕಾರ ತೊಡಗಿರುವುದು ಬಹಿರಂಗಗೊಂಡಿದೆ . 

ಕುಸ್ಮಾ ಕರೆ ನೀಡಿದ ‘‘ಶಾಲೆ ಬಂದ್‌ನಲ್ಲಿ ಆರೆಸ್ಸೆಸ್‌ನ ರಾಷ್ಟ್ರೋತ್ಥಾನ ಶಾಲೆಗಳ ಸರಸ್ವತಿ ವಿದ್ಯಾಮಂದಿರಗಳು ಸೇರಿದಂತೆ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಒಡೆತನದ ಶಿವಮೊಗ್ಗದ ಶಾಲೆ ಸೇರಿದಂತೆ ಬಿಜೆಪಿ ಮುಖಂಡರ ಸಂಸ್ಥೆಗಳು ಮುಂಚೂಣಿಯಲ್ಲಿ ಬಂದ್ ಆಗಿರುವುದನ್ನು ನೋಡಿದರೆ ಸರಕಾರ ಪ್ರಾಯೋಜಿತ ಹೋರಾಟವೆಂಬುದರಲ್ಲಿ ಸಂಶಯವಿಲ್ಲ. 

ಖಾಸಗಿ ಶಾಲಾ ಅಡಳಿತ ಮಂಡಳಿಯವರು ಸುಪ್ರೀಂ ಕೋರ್ಟ್‌ನ ತೀರ್ಪಿನ ಉಲ್ಲಂಘನೆ, ನ್ಯಾಯಾಂಗ ನಿಂಧನೆಯಲ್ಲಿ ತೊಡಗಿದ್ದರೂ ಶಿಕ್ಷಣ ಸಚಿವ ಕಾಗೇರಿ ಮಾತ್ರ ಪ್ರತಿಕ್ರಿಯಿಸದೆ ಮೌನವಾಗಿರುವುದು ಕಾಯ್ದೆ ವಿಫಲಗೊಳಿಸಲು ಖಾಸಗಿಯವರ ಜೊತೆ ಸರಕಾರ ಶಾಮೀಲಾಗಿರುವುದನ್ನು ಮತ್ತು ಖಾಸಗಿ ಶಾಲೆಗಳ ಏಜೆಂಟರಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಸಂಘಪರಿವಾರದ ಹಿಡಿತವಿರುವ ಕುಸ್ಮಾ ಮತ್ತು ರಾಜ್ಯ ಬಿಜೆಪಿ ಸರಕಾರ ಮಕ್ಕಳ ಶಿಕ್ಷಣ ಹಕ್ಕನ್ನು ಮರೆಮಾಚುತ್ತಿವೆ.ದಾರಿ ಯಾವುದಯ್ಯ? ಖಾಸಗಿ ಶಾಲೆಗಳ ನಿಯಂತ್ರಿಸಲು ಸೂಕ್ತ ಶಾಸನವನ್ನು ರೂಪಿಸಲಿ.

ಈ ಕಾಯ್ದೆಯ ಜಾರಿಯಲ್ಲಿ ಹಿಂದೇಟು ಹಾಕುತ್ತಿರುವ ಶಾಲೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾನ್ಯತೆ ರದ್ದು ಮಾಡಲು ಸರಕಾರ ಸೂಕ್ತ ಶಾಸನ ರಚನೆಗೆ ಮುಂದಾಗಬೇಕು. ಆರ್‌ಟಿಇ ಜಾರಿಗಾಗಿ ಕಾವಲು ಸಮಿತಿ, ಶಾಲಾ ಮಟ್ಟದಲ್ಲಿ ಪಾಲಕರ ಸಮಿತಿಗಳನ್ನು ರಚಿಸಲು ಸರಕಾರ ಮುಂದಾಗಬೇಕಿದೆ. ಬಡ ಮಕ್ಕಳಿಗೆ ಅವಮಾನಿಸುತ್ತಿರುವ ಖಾಸಗಿ ಶಾಲೆಗಳ ಉದ್ಧಟತನವನ್ನು ನಿಲ್ಲಿಸುವಂತಾಗಲು ಹೋರಾಟಗಳು ಬಲಗೊಳ್ಳಬೇಕಿದೆ. ಅಕ್ರಮ ಖಾಸಗಿ ಶಾಲೆಗಳ ಮಾನ್ಯತೆ ರದ್ದು ಮಾಡಿ ಸರಕಾರಿ ಶಾಲೆಗಳ ವ್ಯವಸ್ಥೆ ಬಲಗೊಳ್ಳಬೇಕಿದೆ.

ಸಂವಿಧಾನ ಬದ್ಧ ಕಾಯ್ದೆ ಜಾರಿಗೊಳಿಸುವಲ್ಲಿ ಸರಕಾರಗಳು ಮುಂದಾಗುವ ಬದಲು ಸರಕಾರಿ ಹಣವನ್ನು ಖಾಸಗಿಯವರತ್ತ ಹರಿಸಲು ಮುಂದಾಗಿರುವುದನ್ನು ನಿಲ್ಲಿಸಬೇಕಾಗಿದೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಅವಮಾನಿಸುವ, ವಂಚಿಸುವ ಕಾಯಕದಲ್ಲಿ ತೊಡಗಿವೆ. ಈಗ ಇರುವ ಅಂತಾರಾಷ್ಟ್ರೀಯ, ರಾಷ್ಟ್ರೀಯ, ಕೇಂದ್ರೀಯ, ನವೋದಯ, ರಾಜ್ಯ, ಇನ್ನಿತರ ಹೆಸರಿನ ಪ್ರತ್ಯೇಕ ಪಠ್ಯಕ್ರಮದ ಶಿಕ್ಷಣ ಪದ್ಧತಿಯು ಅಸಮಾನತೆಯ ಮುಂದುವರಿಕೆಯಾಗಿದೆ. ಇದನ್ನು ಸಮಾನ ಶಾಲಾ ಶಿಕ್ಷಣ ಪದ್ಧತಿಗಾಗಿ ಜನ ಚಳವಳಿ ಬಲಗೊಳ್ಳದ ಹೊರತು ಶಿಕ್ಷಣ ಮೂಲಭೂತ ಹಕ್ಕಿಗೆ ಅರ್ಥವಿರದು. ಬನ್ನಿ ಸಮಾನ ಶಾಲಾ ಶಿಕ್ಷಣ ಪದ್ಧತಿಗಾಗಿ ಚಳವಳಿಯ ದಾರಿಯತ್ತ ಸಾಗೋಣ.ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ 25% ವಿದ್ಯಾರ್ಥಿಗಳ ಪ್ರವೇಶ ವಿವರ
           ಜಿಲ್ಲೆಸೀಟುದಾಖಲು ಶೇ.
            ಬೆಂಗಳೂರು ಉತ್ತರ11304186816.52
            ಬೆಂಗಳೂರು ದಕ್ಷಿಣ16656240814.45
            ಬೆಂಗಳೂರು ಗ್ರಾಮ177994853.28
            ರಾಮನಗರ 128186667.60
            ತುಮಕೂರು3868143637.12
            ಮಧುಗಿರಿ82746355.98
            ಕೋಲಾರ2421173571.66
            ಚಿಕ್ಕಬಳ್ಳಾಪುರ1882141174.97
            ಚಿತ್ರದುರ್ಗ578394316.30
            ದಾವಣಗೆರೆ3234156048.23
            ಶಿವಮೊಗ್ಗ165042025.45
            ಮೈಸೂರು500580816.14
            ಚಾಮರಾಜನಗರ136256441.40
            ಮಂಡ್ಯ3507245670.03
            ಹಾಸನ1901103054.18
            ಚಿಕ್ಕಮಗಳೂರು97063965.87
            ಕೊಡಗು54922040.07
            ದಕ್ಷಿಣ ಕನ್ನಡ164576346.38
            ಉಡುಪಿ109843039.16
            ಬೆಳಗಾವಿ266553019.88
            ಬಿಜಾಪುರ5800 388366.94
            ಬಾಗಲಕೋಟೆ2161139464.50
            ಧಾರವಾಡ297679626.75
            ಗದಗ5822144224.76
            ಹಾವೇರಿ183889248.53
            ಕಾರವಾರ82857969.92
            ಚಿಕ್ಕೋಡಿ4354251357.71
            ಶಿರಸಿ30519563.93
            ಯಾದಗಿರಿ119443736.59
            ಬೀದರ್8100189923.44
            ರಾಯಚೂರು2799154455.16
            ಬಳ್ಳಾರಿ4241280166.04
            ಕೊಪ್ಪಳ2670179067.04
             ಗುಲ್ಬರ್ಗಾಮಾಹಿತಿ ಸಿಕ್ಕಿಲ್ಲ

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...