Thursday, August 30, 2012

ನಾನು ಓದಿದ ’ಸ್ವಾತ೦ತ್ರ್ಯದ ಓಟ’…

ಬೊಳುವಾರರಿಗೆ ಒ೦ದು ಪತ್ರ

- ವಿ ಎನ್ ಲಕ್ಷ್ಮಿನಾರಾಯಣ

avadhi


ಪ್ರಿಯ ಬೋಳುವಾರ್

ನನ್ನದೇ ಕಾರಣಗಳಿಂದಾಗಿ ತುಂಬಾ ನಿಧಾನವಾಗಿ,ಇಂದು ನಿಮ್ಮ ಕಾದಂಬರಿಯನ್ನು ಓದಿ ಮುಗಿಸಿದೆ. ನೀವು ಒಂದೊಂದು ಅಕ್ಷರವನ್ನೂ ಕೆತ್ತಿದಂತೆ ನಾನು ಒಂದೊಂದು ಅಕ್ಷರವನ್ನೂ ಕಾಗುಣಿತದ ಪಲ್ಲಟಗಳೊಂದಿಗೆ ಓದಿದ್ದೇನೆ. ಪ್ರಾರಂಭದ ಐನೂರು ಪುಟಗಳನ್ನು (ನನಗೆ ಗೊತ್ತಿಲ್ಲದ)ಹೊಸ ಪದಗಳ ಗುರುತು, ಮುದ್ರಣ ದೋಷ, ತೇಪೆ, ಪುನರುಕ್ತಿ, ಸೂಚ್ಯತೆಯ ಅವಗಣನೆ, ರಾಚನಿಕ ಶಿಥಿಲತೆ ಮುಂತಾದ ‘ದೋಷ’ ಗಳನ್ನು ಗೆರೆ ಎಳೆದು ಗುರುತಿಸುತ್ತಲೇ ನನ್ನ ಪೆನ್ನಿಗೆ ದಕ್ಕದ ಕಣ್ಣೀರನ್ನು ಹತ್ತಿಕ್ಕುತ್ತಲೇ ಓದಿದೆ. ಮುಂದಿನ ಪುಟಗಳು ನನ್ನ ಯತ್ನವನ್ನು ನಿರರ್ಥಕವೆನಿಸುವಂತೆ ಮಾಡಿದ್ದರಿಂದ ಕೈಬಿಟ್ಟು ಸುಮ್ಮನೆ ಓದಿಕೊಂಡು ಹೋದೆ.

ತುಂಬಾ ಆಕಸ್ಮಿಕಗಳು ಕತೆಯ ಹೆಣಿಗೆಯಲ್ಲಿ ಇರುವುದು ನಿಜ. ಸ್ವಲ್ಪ ಎಡಿಟ್ ಮಾಡಿದರೆ ಬಹಳಷ್ಟು ತೇಪೆಗಳು ಇಲ್ಲವಾಗಬಹುದು. ಓದುಗನ ಸಂವೇದನೆಯ ಮೇಲೆ ಪೂರ್ಣ ನಂಬಿಕೆಯಿರಿಸಿದರೆ ‘ಸಕಾರಣ ವಿವರಣೆ’ಯೂ ನಿವಾರಣೆಯಾಗಬಹುದು. ಇಷ್ಟಾದರೂ ನಿಮ್ಮ ಪಾತ್ರಗಳ ತಿಳುವಳಿಕೆ, ಜ್ಞಾನ, ಜಾಣ್ಮೆ, ನಿಮ್ಮ ಪಾತ್ರಗಾರಿಕೆ, ಸಂಬಂಧಗಳ ಜೋಡಣೆ, ಘಟನೆಗಳ ಹೆಣಿಗೆಯ ಮುಂದೆ ಅವೆಲ್ಲಾ ನಗಣ್ಯವಾಗುತ್ತವೆ. ‘ನಿಮ್ಮ ದೇವರಿಗೆ ಹೆಂಡತಿ ಇದ್ದಿದ್ದರೆ … ‘ಧಾಟಿಯಲ್ಲಿ ಹೇಳುವುದಾದರೆ ವ್ಯಾಸ, ವಾಲ್ಮೀಕಿ ನಮ್ಮ ಮಧ್ಯೆ ಇದ್ದಿದ್ದರೆ ಅವರು ನಿಮ್ಮ ಹಾಗೆಯೇ ಇರುತ್ತಿದ್ದರೇನೋ ಅನ್ನಿಸುತ್ತದೆ. ನಿಮ್ಮ ಕಾದಂಬರಿಯನ್ನು ಅದರ ಎಲ್ಲ ಓರೆ-ಕೋರೆಗಳೊಂದಿಗೆ ಪೂರ್ಣವಾಗಿ ಅನುಭವಿಸಬೇಕಿದ್ದರೆ ತುಂಬಾ ವ್ಯಾಪಕವಾದ, ಆಳವಾದ ತಿಳುವಳಿಕೆ ಬೇಕಾಗುತ್ತದೆ. ಹಾಗೆಂದು ಅದಿಲ್ಲದ ಓದುಗರಿಗೆ ನಿಲುಕುವುದಿಲ್ಲ ಎಂದು ಹೇಳಲಾಗದು. ಅವರವರಿಗೆ ದಕ್ಕುವಷ್ಟು ಸಿಗಬಲ್ಲ ಪಾತಳಿಗಳು ನಿಮ್ಮ ಕಾದಂಬರಿಯಲ್ಲಿ ಇವೆ. ಒಟ್ಟಿಗೆ ತಾತ್ವಿಕ-ಜನಪ್ರಿಯ ಬರಹ ಇದು.

ಈಚೆಗೆ ಲೇಖನವೊಂದರಲ್ಲಿ, ‘ಜೀವನನಿಷ್ಠರಾದ’ ಕಾರಂತರ ಬರವಣಿಗೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಡವರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಎಡರಾಜಕಾರಣಕ್ಕೆ ಸ್ಥಳಾವಕಾಶ ಸಿಗದ ‘ಆಯ್ದ ಮರೆವು’ ಅಥವಾ ‘ಬಲಪಕ್ಷಪಾತ’ವನ್ನು ಕಮ್ಯೂನಿಸಂ ಕುರಿತಾದ ಅವಜ್ಞೆಯ ಪ್ರಶ್ನೆಯ ಸಂದರ್ಭದಲ್ಲಿ ಗುರುತಿಸಲಾಗಿತ್ತು. ನಿಮ್ಮ ಕಾದಂಬರಿಯಲ್ಲಿ ಮಹಮದೀಯ ಮತ್ತು ಮನುವಾದಿ ಪಾತ್ರಗಳ ಜೊತೆ/ಎದುರುನಿಲ್ಲಬಹುದಾದ ಎಡಪಂಥೀಯ ಮನಸ್ಸುಗಳಿಗೆ ಜಾಗಸಿಕ್ಕಿಲ್ಲ ಎಂಬುದು ಗಮನಕ್ಕೆ ಬರುತ್ತದೆ. ಇದು ಎಡ-ಬಲಗಳ ‘ಕೋಟಾ’ ದ ಪ್ರಶ್ನೆಯಲ್ಲ. ಬೀಡಿ ಸುತ್ತುವ ಬಡವರ ಜೀವನವನ್ನು ಚಿತ್ರಿಸುವಾಗ ದಕ್ಷಿಣ ಕನ್ನಡದ ಜನಜೀವನದ ಈ ಆಯಾಮ ಹೇಗೆ ಹೊರಗುಳಿಯಿತು ಎಂಬ ಪ್ರಶ್ನೆ ಕಾಡುತ್ತದೆ. ಮತ-ಧರ್ಮ-ಮಾನವತೆಯ ಕೇಂದ್ರಬಿಂದುವಿನ ಜೀವನಭಾಗ ಇದೂ ಅಲ್ಲವೆ? ನಿಮ್ಮ ಆಲೋಚನಾಕ್ರಮದಲ್ಲಿ ಇದಕ್ಕೆ ಕಾರಣ ಸಿಗುತ್ತದೆಯೆ?

ತೆಲುಗು ಭಾಷಿಕರು ಮಾತನಾಡುವಾಗ ಕನ್ನಡಕ್ಕೆ ಹೋಲಿಸಿದರೆ ತಲೆಕೆಳಗೆನ್ನಿಸುವ ವಾಕ್ಯ ರಚನೆಯನ್ನು ಬಳಸುವುದನ್ನು ಗಮನಿಸಿದ್ದೇನೆ. ಸಂಸ್ಕೃತದ ವಾಕ್ಯರಚನೆಗೆ ಮೊದಲು-ಕೊನೆಯೆಂಬುದಿಲ್ಲ. ‘ಸಾಬಿ’ ವಾಕ್ಯರಚನೆ ಯಾವಾಗಲೂ ಹೀಗಿದೆಯೋ ಇಲ್ಲವೋ ನನಗೆ ತಿಳಿಯದು. ಆದರೆ ನಿಮ್ಮ ನಿರೂಪಣೆ ಮಾತ್ರ ಮೊದಲಿಂದ ಕೊನೆಯ ಕಡೆ ಹರಿಯದೆ ಕೊನೆಯಿಂದ ಮೊದಲಿಗೆ,ಮುಂದಿನಿಂದ ಹಿಂದಕ್ಕೆ ಅಥವಾ ಎಲ್ಲಿಂದ ಎಲ್ಲಿಗೆ ಬೇಕಾದರೂ ಹರಿಯುತ್ತದೆ. ತೊಂದರೆಯೇನಿಲ್ಲ. ನಾನು ನಿರೂಪಣಾ ತಂತ್ರಗಳ ಬಗ್ಗೆ ಹೇಳುತ್ತಿಲ್ಲ. ಜಯಂತಕಾಯ್ಕಿಣಿಯ ಕತೆಗಳಲ್ಲಿ ಹಿಂದಿ ಸಿನಿಮಾ ಕತೆಯಂತೆ ಎಲ್ಲಿ ಯಾವಾಗ ಏನು ಬೇಕೋ ಅದು ಸಿದ್ಧವಾಗಿ ಸಿಕ್ಕಿಬಿಡುತ್ತದೆ. ‘ಹಾಂ ಹೇಳಲು ಮರೆತಿದ್ದೆ’ ಎಂದು ಜೋಡಿಸಿಕೊಳ್ಳುವ ವಿವರಗಳು ಓದುಗನಿಂದ ರಿಯಾಯತಿಯನ್ನು ಬೇಡುತ್ತವೆ. ಇಲ್ಲವೇ ಯಾಮಾರಿಸಲು ನೋಡುತ್ತವೆ. ನಿಮ್ಮ ಬರವಣಿಗೆಗೆ ಈ ಗುಣ/ದೋಷವೂ ಇದೆ.

ಕನ್ನಡದಲ್ಲಿ ಸ್ವಮೋಹವನ್ನು ಸಮುದಾಯದ ಪ್ರೀತಿಯಾಗಿ ವಿಸ್ತರಿಸಿಕೊಂಡು ಬರೆದ ಲೇಖಕರು ಬಹಳ ವಿರಳ. ಇಷ್ಟು ದೊಡ್ಡ ಭಿತ್ತಿಯನ್ನು ನಿರ್ಮಿಸಿಕೊಂಡು ಪ್ರಾರಂಭ-ಮಧ್ಯೆ-ಕೊನೆಗಳನ್ನು ನಿಮ್ಮದೇ ಆದ ವಿನ್ಯಾಸದಲ್ಲಿ ನಿಭಾಯಿಸಿರುವ ನಿಮ್ಮ ಕಥನ ಸಾಮರ್ಥ್ಯದ ಬಗ್ಗೆ ಹೆಮ್ಮೆಯಾಗುತ್ತದೆ. ಹಣಕ್ಕಾಗಿ ಬರೆದದ್ದಲ್ಲ ಎಂಬ ನಿಮ್ಮ ಮಾತಿನಲ್ಲಿ ಅಪ್ರಾಮಾಣಿಕತೆ ಕಾಣಿಸುವುದಿಲ್ಲ. ಇಂಥ ಇನ್ನಷ್ಟು ಕಾದಂಬರಿಗಳನ್ನು ಕೊಡಿ ಎಂದು ಕೇಳಲಾರೆ. ಈ ಕಾದಂಬರಿಯನ್ನು ಕೊಟ್ಟ ನಿಮ್ಮ ಬಗ್ಗೆ ಪ್ರೀತಿ-ಮೆಚ್ಚುಗೆಗಳಿವೆ.

ವಂದನೆಗಳೊಂದಿಗೆ

ವಿ.ಎನ್.ಲಕ್ಷ್ಮೀನಾರಾಯಣ

ಮೈಸೂರು.

ಉಗ್ರರಿಗೆ ಶಿಕ್ಷೆ: ದ್ವಂದ್ವ ಬೇಡvartabharati editorial

ಬುಧವಾರ ಎರಡು ಮಹತ್ವದ ತೀರ್ಪುಗಳು ಹೊರಬಿದ್ದಿವೆ. ಒಂದು ವಿದೇಶಿ ಉಗ್ರನಿಗೆ ಸಂಬಂಧಿಸಿದ ತೀರ್ಪು. ಇನ್ನೊಂದು ಸ್ವದೇಶಿ ಉಗ್ರರಿಗೆ ಸಂಬಂಧಿಸಿದ ತೀರ್ಪು. ಮುಂಬೈ ದಾಳಿಗೆ ಸಂಬಂಧ ಪಟ್ಟ ಪ್ರಕರಣದಲ್ಲಿ ಉಗ್ರ ಅಜ್ಮಲ್ ಕಸಬ್‌ನಿಗೆ ಸುಪ್ರೀಂಕೋರ್ಟ್ ಮರಣದಂಡನೆಯನ್ನು ಖಾಯಂಗೊಳಿಸಿದೆ. ಇದೇ ಸಂದರ್ಭದಲ್ಲಿ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ, ಒಬ್ಬ ಮಾಜಿ ಸಚಿವೆ, ಹಾಗೆಯೇ ಇನ್ನೊಬ್ಬ ಸಂಘಪರಿವಾರದ ಮುಖಂಡ ಸೇರಿದಂತೆ ಸುಮಾರು 32 ಮಂದಿ ದುಷ್ಕರ್ಮಿಗಳನ್ನು ದೋಷಿಗಳೆಂದು ಸ್ಥಳೀಯ ನ್ಯಾಯಾಲಯ ಗುರುತಿಸಿದೆ. ಈ ತೀರ್ಪು ಏಕ ಕಾಲದಲ್ಲಿ ಪ್ರಕಟವಾಗಿರುವುದು ಕಾಕತಾಳೀಯವೇ ಆಗಿದ್ದರೂ, ಪರೋಕ್ಷವಾಗಿ ಎರಡು ಪ್ರಕರಣಗಳಲ್ಲಿರುವ ಸಮಾನ ಅಂಶಗಳನ್ನು ಗುರುತಿಸಲು ಇವು ನಮಗೆ ಸಹಾಯ ಮಾಡಿವೆ. ಮುಂಬೈ ದಾಳಿಗೆ ಸಂಬಂಧಿಸಿದಂತೆ ನಮಗೆ ದೊರಕಿದ ಏಕೈಕ ಉಗ್ರ ಕಸಬ್. ಆದರೆ ಇಡೀ ದುರಂತಕ್ಕೆ ಹೋಲಿಸಿದರೆ ಇವನು ಅದರಲ್ಲೊಂದು ಸಣ್ಣ ಕ್ರಿಮಿ ಮಾತ್ರ. ಮುಂಬೈ ದಾಳಿಯ ಸಂಚು ಎಲ್ಲಿ ನಡೆಯಿತು, ಹೇಗೆ ನಡೆಯಿತು, ಭಾಗವಹಿಸಿದವರು ಯಾರು, ಅವರ ಹಿನ್ನೆಲೆಯೇನು ಎನ್ನುವುದೆಲ್ಲವೂ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಸಂಚಿನ ಹಿಂದೆ ಪಾಕಿಸ್ತಾನ ಇದೆಯೆನ್ನುವುದನ್ನು ಭಾರತ ವಾದಿಸುತ್ತಾ ಬಂದಿದೆಯಾದರೂ, ಆ ದೇಶದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವಲ್ಲಿ ಭಾರತ ವಿಫಲವಾಗಿದೆ. ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ದ್ವಂದ್ವ ನೀತಿಯನ್ನು ಅನುಸರಿಸುತ್ತಾ ಬಂದಿದೆ. ಆದುದರಿಂದ ನಾವು ಕಸಬ್ ಎಂಬ ಸೂತ್ರದ ಗೊಂಬೆಯನ್ನು ಗಲ್ಲಿಗೇರಿಸಿ ಸಂತೃಪ್ತಿ ಪಡಬೇಕಾದಂತಹ ಸನ್ನಿವೇಶದಲ್ಲಿ ಬಂದು ನಿಂತಿದ್ದೇವೆ. ಕಸಬ್ ಗಲ್ಲಿಗೇರುವುದನ್ನು ಈಗಾಗಲೇ ಮಾಧ್ಯಮಗಳು ಮತ್ತು ಸಾರ್ವಜನಿಕ ವಲಯ ತೀರ್ಮಾನಿಸಿಯಾಗಿದೆ.

ಅದಕ್ಕೆ ಪೂರಕವಾಗಿ ನ್ಯಾಯಾಲಯದ ತೀರ್ಪು ಹೊರ ಬಿದ್ದಿದೆ. ಆದರೆ ಬರೇ ಕಸಬ್‌ನನ್ನು ಗಲ್ಲಿಗೇರಿಸಿದಾಕ್ಷಣ ಮುಂಬೈಯ ನಾಶ, ನಷ್ಟಕ್ಕೆ ನ್ಯಾಯ ದೊರಕಿದಂತಾಗುತ್ತದೆಯೇ? ಎಂಬ ಪ್ರಶ್ನೆ ಇನ್ನೂ ಉತ್ತರವಿಲ್ಲದೆ ಬಿದ್ದು ಕೊಂಡಿದೆ. ಮುಂಬೈ ದಾಳಿಯ ಕುರಿತಂತೆ ಒಂದು ಗಂಭೀರ ತನಿಖೆ ನಡೆಸಿ, ಅದರ ಹಿನ್ನೆಲೆ ಮುನ್ನೆಲೆಗಳನ್ನು ಹೊರತೆಗೆಯುವ ಅಗತ್ಯವಿದೆ ಯಾದರೂ, ಈ ದೇಶದ ಮುಖಂಡರು ಬರೇ ‘ಪಾಕಿಸ್ತಾನ’ದ ಹೆಸರನ್ನು ಹೇಳಿಕೊಂಡು ತನ್ನ ಹೊಣೆಯಿಂದ ಜಾರಿಕೊಂಡಿದ್ದಾರೆ. ಆದರೂ ಒಬ್ಬ ಕಸಬ್‌ನನ್ನಾದರೂ ಗಲ್ಲಿಗೇರಿಸಲು ನಮಗೆ ಸಾಧ್ಯವಾಯಿತಲ್ಲ ಎನ್ನುವುದಷ್ಟೇ ನೆಮ್ಮದಿಯ ವಿಷಯ.

ಒಂದು ರೀತಿಯಲ್ಲಿ ಮುಂಬೈ ದಾಳಿ ಪ್ರಕರಣಕ್ಕಿಂತಲೂ ಗಂಭೀರವಾದುದು ಗುಜರಾತ್ ಹತ್ಯಾಕಾಂಡ ಪ್ರಕರಣ. ಮುಂಬೈ ದಾಳಿಯಲ್ಲಿ ಸುಮಾರು 170 ಮಂದಿ ಮೃತಪಟ್ಟಿದ್ದರೆ ಗುಜರಾತ್ ಹತ್ಯಾಕಾಂಡದಲ್ಲಿ 2000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.ಈ ಹತ್ಯಾಕಾಂಡದ ಒಂದು ಪ್ರಮುಖ ಪ್ರಕರಣವಾಗಿರುವ ನರೋಡಾ ಪಾಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬುಧವಾರ ನ್ಯಾಯಾಲಯ ತನ್ನ ತೀರ್ಪನ್ನು ನೀಡಿದೆ. ಮುಂಬೈ ದಾಳಿಯನ್ನು ನಡೆಸಿರುವ ಕಸಬ್ ಸ್ವದೇಶಿಯಲ್ಲ. ಅವನಿಗೆ ಈ ದೇಶದೊಂದಿಗೆ ಯಾವ ಸಂಬಂಧವೂ ಇಲ್ಲ. ಅವನು ಯಾರು ಎನ್ನುವುದನ್ನು ನಾವೆಲ್ಲರೂ ಸ್ಪಷ್ಟವಾಗಿ ಗುರುತಿಸಬಲ್ಲೆವು.

ಆದರೆ, ಗುಜರಾತ್ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಉಗ್ರರು ಪಾಕಿಸ್ತಾನೀಯರಲ್ಲ. ಅವರು ತಮ್ಮನ್ನು ತಾವು ಭಾರತೀಯರೆಂದು ಕರೆಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ನರೋಡಾ ಪಾಟಿಯಾ ಹತ್ಯಾಕಾಂಡದ ನೇತೃತ್ವವನ್ನು ವಹಿಸಿದಾಕೆ ಒಂದು ರಾಜ್ಯದ ಮಾಜಿ ಸಚಿವೆ. ಗುಜರಾತ್‌ನ ಸಚಿವೆಯಾಗಿ ಒಂದು ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದಾರೆ. ಹಾಗೆಯೇ, ವಿಶ್ವ ಹಿಂದೂ ಪರಿಷತ್‌ನ ಮುಖಂಡ ಬಾಬು ಬಜರಂಗಿಯೂ ತನ್ನನ್ನು ತಾನು ಭಾರತೀಯ ಎಂದು ಹೆಮ್ಮೆಯಿಂದ ಹೇಳಿಕೊಂಡು, ಹತ್ಯಾಕಾಂಡವನ್ನು ಒಂದು ಸಾಂಸ್ಕೃತಿಕ ಚಟುವಟಿಕೆಯೋ ಎಂಬಂತೆ ನಡೆಸಿದ್ದಾನೆ.

ಅಂದರೆ ಇವರೆಲ್ಲರೂ ಒಂದು ರಾಜ್ಯದ ಸರಕಾರದ ಭಾಗವಾಗಿ, ಅದರ ನೆರಳಲ್ಲಿ ನಿಂತು ಈ ಹತ್ಯಾಕಾಂಡವನ್ನು ನಡೆಸಿದ್ದಾರೆ. ಈ ಕಾರಣಕ್ಕೆ ಮುಂಬೈ ದಾಳಿಗಿಂತಲೂ ಗುಜರಾತ್ ಹತ್ಯಾಕಾಂಡ ದೇಶಕ್ಕೆ ಹೆಚ್ಚು ಅವಘಡವನ್ನು ತರಬಲ್ಲುದು. ಅಥವಾ ತಂದಿದೆ. ಇಂದಿಗೂ ಮುಂಬೈ ದಾಳಿಯಲ್ಲಿ ಕಗ್ಗೊಲೆ ನಡೆಸಿದವರು ತಮ್ಮನ್ನು ತಾವು ಸಮರ್ಥಿಸಿಕೊಂಡಿಲ್ಲ ಮತ್ತು ಜಾಗತಿಕವಾಗಿ ಅವರು ಉಗ್ರರೆಂದೇ ಗುರುತಿಸಲ್ಪಡುತ್ತಿದ್ದಾರೆ. ಆದರೆ ಗುಜರಾತ್‌ನಲ್ಲಿ 2000ಕ್ಕೂ ಅಧಿಕ ಮಂದಿಯನ್ನು ಬರ್ಬರವಾಗಿ ಕೊಂದು ಹಾಕಿದವರನ್ನು ಭಿನ್ನ ದೃಷ್ಟಿಯಲ್ಲಿ ನೋಡುವ ಪ್ರಯತ್ನವನ್ನು ಈ ದೇಶದ ಒಂದು ಗುಂಪು ಮಾಡುತ್ತಿದೆ.

Wednesday, August 29, 2012

ಬಿಳಿಗುಲಾಬಿ


ನನ್ನೆಲ್ಲಾ ಕನಸುಗಳಲ್ಲಿ ನಾನರಸುತ್ತಿದ್ದೆ
ಹೋಲಿಕೆಯೇ ಇರದ ಒಂದು ಬಿಳಿಗುಲಾಬಿಯನ್ನು
ಆ ಅದೃಶ್ಯ ಹೂವಿನ ಗಮಲನ್ನು
ಹಿಂಬಾಲಿಸುತ್ತಾ ಹೋದೆ
ಜಾಗರ, ನಿದ್ದೆ, ಸ್ವಪ್ನಗಳಲ್ಲಿ.
ಕೊನೆಗೊಮ್ಮೆ ನಿದ್ದೆಯೊಳಗಿನ ನಿದ್ದೆಯಲ್ಲಿ
ಸ್ಪಪ್ನದೊಳಗಿನ ಸ್ಪಪ್ನದಲ್ಲಿ
ಅದು ದೊರಕಿತು
ಬೇಟೆ ಕಂಡ ಬರ್ಬರ ಹಸಿವಿನ ಆದಿಮ ಬೇಟೆಕಾರನಂತೆ
ಆತುರಾತುರವಾಗಿ ಅದನ್ನು ಕೀಳಹೊರಟಾಗ
ನಾನದನ್ನು ಕೀಳುವ ಮುನ್ನವೇ
ಅದು ನನ್ನ ಪೂರ್ತಿ ನುಂಗಿಬಿಟ್ಟಿತು
ಶಿವಪ್ರಕಾಶ ಈಗಿಲ್ಲ ಮೂಲೋಕದಲ್ಲೆಲ್ಲಿಯೂ
ಅವನೀಗ ಒಂದು ಬಿಳಿ ಗುಲಾಬಿ
ನಿದ್ದೆಯೊಳಗಿನ ನಿದ್ದೆಯೊಳಗಿನ
ಸ್ಪಪ್ನದೊಳಗಿನ ಸ್ಪಪ್ನದಲ್ಲಿ..

- ಎಚ್.ಎಸ್.ಶಿವಪ್ರಕಾಶ್

Tuesday, August 28, 2012

ಎಂಡೋಸಲ್ಫಾನ್ ಎಂಬ ಸ್ವರ್ಗದೊಳಗೊಂದು ನರಕ- ಜಿ ಎನ್ ಮೋಹನ್

ಕೃಪೆ : ವಿಜಯ ಕರ್ನಾಟಕ

‘ಸ್ವರ್ಗಕ್ಕೆ ಬನ್ನಿ’-ಅಂತ ಡಾ ವೈ ಎಸ್ ಮೋಹನ್ ಕುಮಾರ್ ಕರೆ ಮಾಡಿದಾಗ ನನಗೆ ಆಶ್ಚರ್ಯವಾಗಿತ್ತು. ಕಾಸರಗೋಡಿನ ಪಾತಾಳ ಎನ್ನಬಹುದಾದಊರೊಂದರಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಮೋಹನ್ ಕುಮಾರ್ ನನಗಾದ ಆಶ್ಚರ್ಯವನ್ನುಕಂಡುಕೊಂಡರೇನೋ..?. ‘ಸ್ವರ್ಗ’ ಎನ್ನುವುದು ನಮ್ಮ ಊರಿನ ಹೆಸರು. ಖಂಡಿತಾ ಬನ್ನಿ ಎಂದರು.ನಾನೂ ಹಾಗೂ ಕ್ಯಾಮೆರಾಮನ್ ಅಬ್ದುಲ್ಹಮೀದ್, ಶ್ರೀಪಡ್ರೆಯವರೊಂದಿಗೆ ಕಾಡುಕಣಿವೆ ಬೆಟ್ಟ ಗುಡ್ಡ ಏರುತ್ತಾ, ಇಳಿಯುತ್ತಾ ತಲುಪಿದ್ದು ‘ಸ್ವರ್ಗ’ವನ್ನು. ಅದು ನಿಜಕ್ಕೂಸ್ವರ್ಗ. ಎಲ್ಲೆಡೆ ಗೇರು ಹಣ್ಣಿನ ಮರಗಳು. ಇನ್ನೇನು ಆಕಾಶಕ್ಕೆ ಮುತ್ತಿಟ್ಟೆ ಎನ್ನುವಷ್ಟು ಎತ್ತರಕ್ಕೆ ಎದ್ದು ನಿಂತಬೆಟ್ಟಗಳು, ಇನ್ನೊಂದೆಡೆ ಪ್ರಪಾತ.ಅಲ್ಲಿಂದ ಎದ್ದೇಳುತ್ತಿರುವ ಹೊಗೆಯ ಮೋಡಗಳು ಅಲ್ಲೊಂದು ಊರಿದೆ ಎಂಬ ಕುರುಹನ್ನು ಬಿಟ್ಟುಕೊಡುತ್ತಿತ್ತು. ಡಾ ಮೋಹನ್ಕುಮಾರ್ ಕೈ ತೋರಿಸಿದ ಕಡೆಯೆಲ್ಲಾ ಹೊರಳುತ್ತಾ ನಾವು ತಲುಪಿಕೊಂಡಿದ್ದು ದಟ್ಟ ಗೇರು ತೋಟಗಳಊರನ್ನು.

ಆಗ ಬಿಚ್ಚಿಕೊಳ್ಳಲುಆರಂಭಿಸಿದ್ದು ನರಕ. ಗೇರು ತೋಟದ ನಡುವೆ ಇದ್ದ ಒಂದೊಂದೇ ಮನೆಯ ಬಾಗಿಲು ಬಡಿಯುತ್ತಾ ಹೋದಂತೆ ಇದು ‘ಹಸಿರಿಲ್ಲದ, ಉಸಿರಿಲ್ಲದ, ಹೆಸರಿಲ್ಲದ ನರಕ..’ ಎನ್ನುವಂತೆ ಆಯಿತು. ನಡೆಯಲಾಗದ, ತೆವಳಲೂ ಆಗದ ಮಕ್ಕಳು ಶೂನ್ಯ ದೃಷ್ಟಿಯಿಂದ ನಮ್ಮೆಡೆಗೆ ನೋಡುತ್ತಿದ್ದರು. ಇಪ್ಪತ್ತುದಾಟಿದವರೂ ಸಹಾ ಇನ್ನೂ ಹಸುಗೂಸುಗಳಂತೆ ಅಮ್ಮನನ್ನು ಆತುಕೊಂಡಿದ್ದರು. ಮುಖದ ಆಕಾರವೇ ಬದಲಾದಮಕ್ಕಳು ಉಸಿರು ಎಳೆದುಕೊಳ್ಳಲೂ ಸಂಕಟಪಡುತ್ತಿದ್ದರು. ಶಾಲೆಯ ಬಾಗಿಲು ಮುಟ್ಟಲಾಗದ ಮಕ್ಕಳುಅಸಹಾಯಕರಾಗಿ ನಮ್ಮನ್ನು ನೋಡುತ್ತಿದ್ದರೆ, ಶಾಲೆಯತ್ತ ಹೆಜ್ಜೆ ಹಾಕುವ ಅದೃಷ್ಟ ಪಡೆದ ಎಷ್ಟೋ ಮಕ್ಕಳ ಮೈಯಲ್ಲಿ ಬೊಬ್ಬೆಗಳಿದ್ದವು. ಚರ್ಮಸುಟ್ಟು ಮುದುಕರಂತೆ ಕಾಣುತ್ತಿದ್ದರು. ಕೈ, ಕಾಲಲ್ಲಿನ ಬೆರಳುಗಳು ವಿಕಾರ ರೂಪು ಪಡೆದಿದ್ದವು.

ಅದು 2001. ಪುಟ್ಟಗ್ರಾಮದಲ್ಲಿ ವೈದ್ಯ ಮಾಡುತ್ತಿದ್ದ ಮೋಹನ್ ಕುಮಾರ್ ಅವರಿಗೆ ಇದ್ದಕ್ಕಿದ್ದಂತೆ ಯಾಕೋ ಎಲ್ಲವೂ ಸರಿಇಲ್ಲ ಎನಿಸಲು ಆರಂಭಿಸಿತು.ಅವರ ಬಳಿ ಬರುತ್ತಿದ್ದ ರೋಗಿಗಳ ಸಂಖ್ಯೆ ಧಿಡೀರನೆ ಹೆಚ್ಚಾಗಿತ್ತು, ಮಾನಸಿಕ ಅಸ್ವಸ್ಥತೆ, ಅಂಗವಿಕಲತೆ, ಗರ್ಭ ಧರಿಸದಿರುವಿಕೆ ಹೀಗೆ ರೋಗಗಳ ಸರಮಾಲೆಯೇಕಾಣಿಸಿಕೊಳ್ಳತೊಡಗಿತ್ತು. ಮೋಹನ್ ಕುಮಾರ್ ಸುಮ್ಮನೆ ಕೂರಲಿಲ್ಲ. ವೈದ್ಯಕೀಯ ಪ್ರಕರಣಗಳನ್ನುತಿರುವಿ ಹಾಕತೊಡಗಿದರು. ಕ್ರಿಮಿನಾಶಕದ ಪರಿಣಾಮವಾಗಿ ಬೇರೆಡೆ ಆಗಿರುವ ಪರಿಣಾಮಕ್ಕೂ ಇಲ್ಲಿನ ರೋಗದ ರೀತಿಗೂ ತಾಳೆಯಾಯಿತು. ಈರೋಗದ ಹಿಂದೆ ಇರುವುದು ಎಂಡೋಸಲ್ಫಾನ್ ಎನ್ನುವುದು ಗೊತ್ತಾಗಿ ಹೋಯಿತು. ಪರಿಸರ ಚಳವಳಿಯಲ್ಲಿಮುಂಚೂಣಿಯಲ್ಲಿದ್ದ ಶ್ರೀಪಡ್ರೆ ಅವರೊಂದಿಗೆ ವಿಷಯ ಹಂಚಿಕೊಂಡರು. ಎಂಡೋಸಲ್ಫಾನ್ ಕೇವಲ ಕ್ರಿಮಿಕೀಟಗಳನ್ನಲ್ಲ, ಜನರನ್ನೂ ಹೊಸಗಿ ಹಾಕುವ ರಕ್ಕಸ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಕೆಲಸ ಆರಂಭವಾಯಿತು. ಅದಾಗಿ ಇನ್ನೂ ಸ್ವಲ್ಪ ದಿನವೂ ಆಗಿರಲಿಲ್ಲ. ಮತ್ತೆಶ್ರೀಪಡ್ರೆ ಫೋನಾಯಿಸಿದರು. ಎಂಡೋಸಲ್ಫಾನ್ ಕಾಸರಗೋಡು ಗಡಿಯನ್ನೂ ದಾಟಿ ಕರ್ನಾಟಕದಲ್ಲೂ ರುದ್ರ ನರ್ತನ ಆರಂಭಿಸಿಬಿಟ್ಟಿತ್ತು. ನಿಡ್ಲೆ, ಕೊಕ್ಕಡ, ಪಟ್ರಮೆಯಲ್ಲಿ ಕಂಡ ದೃಶ್ಯ ಕರುಳು ಕತ್ತರಿಸುವಂತಿತ್ತು. ಅಲ್ಲಿನಅಮ್ಮಂದಿರ ಕಣ್ಣಲ್ಲಿ ಇದ್ದ ಮೂಕವೇದನೆ, ಮಕ್ಕಳು ಅನುಭವಿಸುತ್ತಿದ್ದ ಯಾತನೆ ಎರಡೂ ತತ್ತರಿಸುವಂತೆ ಮಾಡಿತ್ತು. ಕೇರಳದಲ್ಲಿ ಮಾತ್ರಎಂದುಕೊಂಡಿದ್ದ ಎಂಡೋಸಲ್ಫಾನ್ ಉರಿ ಮಾರಿ ಪುತ್ತೂರು, ಸುಳ್ಯ, ಬಂಟ್ವಾಳ, ಭಟ್ಕಳ ಎಲ್ಲೆಡೆ ಕಾಣಿಸಿಕೊಂಡಿತು.

ಅದಾಗಿ 11 ವರ್ಷಗಳುಕಳೆದುಹೋಗಿದೆ. ಈ ಮಧ್ಯೆ ಸುಮಾರು ೧೬೦ ಸತ್ಯಶೋಧಕ ವರದಿಗಳು ಬಂದಿವೆ. ಸಾವಿರಾರು ಪ್ರತಿಭಟನೆಗಳುಜರುಗಿವೆ. ಹಲವರು ಸಾವನ್ನಪ್ಪಿದ್ದಾರೆ.ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಅದರ ಹೊಡೆತದಿಂದ ನರಳುತ್ತಿದ್ದಾರೆ. ಆದರೂ ಎಂಡೋಸಲ್ಫಾನ್ರುದ್ರನರ್ತನ ಮಾತ್ರ ನಿಂತಿಲ್ಲ. ‘ ನಮಗೆ ಪರಿಹಾರ ನೀಡಿ ಇಲ್ಲವೇ ದಯಾ ಮರಣ ಕೊಟ್ಟುಬಿಡಿ’ ಎಂದು ಸಂತ್ರಸ್ತರು ಬರೆದ ಸಾವಿರಾರು ಅಂಚೆಕಾರ್ಡುಗಳು ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಗಳನ್ನು ಹುಡುಕುತ್ತಲೇ ಇವೆ.

‘ಡರ್ಟಿ ಡಜನ್’ಎಂದು ಜಗತ್ತಿನ ಎಲ್ಲೆಡೆ ಮೂದಲಿಕೆಗೆ ಒಳಗಾದ ವಿಷ ಕುಟುಂಬದ ಸದಸ್ಯ ಈ ಎಂಡೋಸಲ್ಫಾನ್. ನಮಗೆಗೊತ್ತಿರುವುದು ಎಂಡೋಸಲ್ಫಾನ್ ಎಂಬ ಹೆಸರು ಮಾತ್ರ. ಆದರೆ ಈ ಕ್ರಿಮಿನಾಶಕಕ್ಕೆ ನೂರೆಂಟುಹೆಸರಿದೆ. 1950ರ ದಶಕದ ಆರಂಭದಲ್ಲಿ ಅಮೇರಿಕಾ ಹುಟ್ಟುಹಾಕಿದ ಈ ಕ್ರಿಮಿನಾಶಕವನ್ನು 1955ರಲ್ಲಿ ಬೇಯರ್ ಕ್ರಾಪ್ ಸೈನ್ಸ್ ಕಂಪನಿ ಕೈಗೆತ್ತಿಕೊಂಡದ್ದೇ ತಡ ಜಗತ್ತಿನ ಎಲ್ಲೆಡೆ ವ್ಯಾಪಿಸಿತು. ಕೃಷಿಕರುಎಲ್ಲೆಲ್ಲಿದ್ದಾರೋ ಅಲ್ಲೆಲ್ಲಾ ಎಂಡೋಸಲ್ಫಾನ್ ಅತಿ ಬೇಗ ಪ್ರಚಾರಕ್ಕೆ ಬಂತು. ಇದಕ್ಕೆ ಕಾರಣವೂ ಇದೆ. ಯಾಕೆಂದರೆ ಎಂಡೋಸಲ್ಫಾನ್ ಅತಿ ಸುಲಭ ಬೆಲೆಯಲ್ಲಿ ಕೈಗೆಟುಕುತ್ತದೆ. ಆದರೆ ಯಾವಾಗಕಾಸರಗೋಡಿನ ಸ್ವರ್ಗ ತನ್ನೊಳಗಿನ ನರಕವನ್ನು ಬಿಚ್ಚಿಟ್ಟಿತೋ ಅಲ್ಲಿಂದ ಎಂಡೋಸಲ್ಫಾನ್ ನ್ನು ಕಟಕಟೆಯಲ್ಲಿ ನಿಲ್ಲಿಸುವ ಕೆಲಸ ಅಲ್ಲಿಂದ ಆರಂಭವಾಯಿತು. ಗೇರು ತೋಟವನ್ನು ಕಾಡುತ್ತಿದ್ದ ಸೊಳ್ಳೆಗಳನ್ನು ಇಲ್ಲವಾಗಿಸಲು ಬಂದಿಳಿದದ್ದು ಎಂಡೋಸಲ್ಫಾನ್. ಎಂಡೋಸಲ್ಫಾನ್ ಸರ್ವಂತರ್ಯಾಮಿಯಂತೆ ತೂಗಾಡುವ ಗೇರು ಹಣ್ಣಿನಿಂದ ಹಿಡಿದು ಊಟದ ಬಟ್ಟಲಿನವರೆಗೆ ಬಂದುನಿಂತಿತು. ಕಾಫಿ, ಟೀ, ಹಣ್ಣು, ತರಕಾರಿ, ಹೂವು ಮಾತ್ರವಲ್ಲದೆಹತ್ತಿ, ತಂಬಾಕು ಹೀಗೆ ಎಲ್ಲೆಡೆ ಎಂಡೋಸಲ್ಫಾನ್ ತನ್ನ ಗುರುತು ಬಿಟ್ಟುಕೊಟ್ಟಿತ್ತು.

ಇದು ಜನರ ಮೇಲೆಮಾತ್ರವಲ್ಲದೆ ದಟ್ಟ ಅರಣ್ಯದಲ್ಲಿ ವನ್ಯಜೀವಿಗಳ ಮೇಲೆ, ಸಾಗರ ಹೊಕ್ಕು ಅಲ್ಲಿನಜಲರಾಶಿಯ ಮೇಲೆ ಪರಿಣಾಮ ಬೀರಲು ಆರಂಭಿಸಿತು. ಎಂಡೋಸಲ್ಫಾನ್ ಗುಣವೇ ಅಂತಹದ್ದು. ಅದು ಎಲ್ಲೆಂದರಲ್ಲಿ ಮನೆಯ ನೆಂಟನಂತೆಹೊಂದಿಕೊಂಡುಬಿಡುತ್ತದೆ, ಭೂಮಿಯಲ್ಲಿ ಸಲೀಸಾಗಿ ಹಿಂಗುತ್ತದೆ. ನೀರಿನಲ್ಲಿ ಸೇರಿಹೋಗುತ್ತದೆ. ಗಾಳಿಯಲ್ಲಿಆರಾಮವಾಗಿ ತೇಲುತ್ತದೆ. ದೂರದಲ್ಲಿ ಬರುವ ಮಳೆ ಮೋಡಗಳನ್ನು ಹೇಗೆ ರೈತರು ಕಂಡುಹಿಡಿದುಬಿಡುತ್ತಾರೋಹಾಗೆಯೇ ಚಿಟ್ಟೆಗಳು ಪಟ ಪಟನೆಸಾಯುತ್ತಿದ್ದಂತೆ ಎಂಡೋ ಇಲ್ಲಿ ಕಾಲೂರಿ ನಿಂತಿದೆ ಎನ್ನುವುದನ್ನು ಕಂಡುಕೊಳ್ಳುತ್ತಾರೆ. ಇಂದು ಕಾಸರಗೋಡಿನಲ್ಲಿಚಿಟ್ಟೆಗಳು ಇಲ್ಲ, ಕಾಸರಗೋಡು ಒಂದು ಪುಟ್ಟ ಚಿಟ್ಟೆಯಂತೆ ಪತರಗುಟ್ಟಲು ಆರಂಭವಾದದ್ದೇ ತಡ ಜಗತ್ತು ಎಚ್ಚೆತ್ತುಕೊಂಡಿತು. .

ಎಂಡೋಸಲ್ಫಾನ್ ಜಗತ್ತಿನಾದ್ಯಂತ ಬಳಕೆಯಲ್ಲಿದ್ದರೂ, ಭಾರತದಲ್ಲಿಯೂ ಸಾಕಷ್ಟು ವರ್ಷಗಳಿಂದ ಇದ್ದರೂಇದ್ದಕ್ಕಿದ್ದಂತೆ ಅದರ ಪರಿಣಾಮ ಕಾಸರಗೋಡು ಹಾಗೂ ಅಂತಹ ಪ್ರದೇಶಗಳಲ್ಲಿ ತೀವ್ರವಾಗಿ ಕಾಣಿಸಿಕೊಂಡಬಗ್ಗೆಯೂ ಸಾಕಷ್ಟು ಅಧ್ಯಯನಗಳು ಜರುಗಿದೆ. ಬಯಲ ಪ್ರದೇಶದಲ್ಲಿ ಎಂಡೋ ಸಿಂಪಡಿಸುವ ಕಡೆ ಇದು ನಿಧಾನ ವಿಷವಾದರೆ, ಒಂದು ಬಟ್ಟಲಿನಂತೆ ಇರುವ ಪಶ್ಚಿಮ ಘಟ್ಟಗಳ ಪ್ರಾಕೃತಿಕಸ್ವರೂಪವೇ ಎಂಡೋ ತಕ್ಷಣದ ಕೊಲೆಗಾರನಂತೆ ಕಾಣಲು ಕಾರಣವಾಗಿದೆ. ಇಲ್ಲಿ ಸಿಂಪಡಿಸುವ ಕ್ರಿಮಿನಾಶಕಚದುರಿ ಹಂಚಿಹೋಗುವುದಿಲ್ಲ ಬದಲಿಗೆ ಘನೀಕರಿಸಿ ಕುಳಿತುಕೊಳ್ಳುತ್ತದೆ. ಎಂಡೋಸಲ್ಫಾನ್ ಬಗ್ಗೆ ಕೇರಳ, ಕರ್ನಾಟಕದಲ್ಲಿ ಬಂದಷ್ಟು ವ್ಯಾಪಕ ವಿರೋಧ ಇತರ ಕಡೆ ಬಾರದೆ ಇರುವುದಕ್ಕೂ ಇದು ಕಾರಣ.ನಿಧಾನವಾಗಿ ಹೆಜ್ಜೆ ಹಾಕುತ್ತಿರುವ ಕೊಲೆಗಾರ ಜನರ ಕಣ್ಣಿಗೆ ಕಾಣುತ್ತಿಲ್ಲ ಎಂಬ ಆತಂಕ ಈಚಳವಳಿಯಲ್ಲಿದೆ.

ಎಂಡೋಸಲ್ಫಾನ್ ದೊಡ್ಡ ಪೆಟ್ಟು ನೀಡಿರುವುದು ಭಾರತಕ್ಕೆ.ವ್ಯಂಗ್ಯವೆಂದರೆ ಎಂಡೋಸಲ್ಫಾನ್ ಗೆ ಜಾಗತಿಕ ನಿಷೇಧ ಹೇರಲು ಸಜ್ಜಾದಾಗ ಅದನ್ನು ವಿರೋಧಿಸಿದ್ದು ಭಾರತವೇ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 90ರ ದಶಕದವೇಳೆಗೆ ಇಡೀ ಜಗತ್ತು ವರ್ಷಕ್ಕೆ 12,800ಮೆಟ್ರಿಕ್ ಟನ್ ನ್ನಷ್ಟುಎಂಡೋಸಲ್ಫಾನ್ ಅನ್ನು ಕಬಳಿಸುತ್ತಿದೆ.ಕೃಷಿ ರಾಸಾಯನಿಕಕ್ಷೇತ್ರದಲ್ಲಿ ಎಂಡೋಸಲ್ಫಾನ್ ಜಗತ್ತಿನ ಏಳನೆಯ ಅತಿ ದೊಡ್ಡ ಕ್ರಿಮಿನಾಶಕ, ಇಡೀ ಜಗತ್ತು ಇದನ್ನು ಭಯಂಕರ ಕ್ರಿಮಿನಾಶಕ ಎಂದು ಬಣ್ಣಿಸಿ ಹೊರದೂಡಲು ಯತ್ನಿಸಿದಾಗ ೮೦ ದೇಶಗಳುಇದಕ್ಕೆ ಸಮ್ಮತಿ ಸೂಚಿಸಿದ್ದವು. 2011 ರ ಏಪ್ರಿಲ್ ನಲ್ಲಿ ನಡೆದ ಸ್ಟಾಕ್ ಹೋಂ ಸಮಾವೇಶಎಂಡೋಸಲ್ಫಾನ್ ನ ಮೇಲೆ ಜಾಗತಿಕ ನಿಷೇದ ಹೇರಲು ಸಜ್ಜಾಯಿತು. ಆದರೆ ಇಲ್ಲಿ ವಿರೋಧವ್ಯಕ್ತವಾದದ್ದು ಭಾರತ ಮತ್ತು ಚೀನಾದಿಂದ. ಇದಕ್ಕೆ ಕಾರಣ ಈಗ ಎಂಡೋಸಲ್ಫಾನ್ ಕಂಪನಿಯ ಮಾಲೀಕತ್ವ ಇರುವುದು ಚೀನಾದ ಕೈನಲ್ಲಿ. ಭಾರತ ಎಂಡೋಸಲ್ಫಾನ್ ಅನ್ನು ಅತಿ ಹೆಚ್ಚು ಉತ್ಪಾದಿಸುತ್ತಿರುವ, ರಫ್ತು ಮಾಡುತ್ತಿರುವ ದೇಶ ಸಹಾ. ಹಾಗಾಗಿಯೇ ಸಂಸತ್ತಿನಲ್ಲಿಎಂಡೋಸಲ್ಫಾನ್ ನಿಷೇದಿಸಬೇಕು ಎಂಬ ಕೂಗೆದ್ದಾಗ ಹಲವು ರಾಜ್ಯಗಳು ಈ ನಿಷೇದಕ್ಕೆ ಒಪ್ಪಿಗೆಕೊಟ್ಟಿಲ್ಲ ಎಂಬ ಕಾರಣವನ್ನು ಶರದ್ ಪವಾರ್ ಮುಂದುಮಾಡಿದರು. ಆದರೆ ಆರ್ ಟಿ ಐ ದಾಖಲೆಗಳು ಹೇಳಿದ್ದು ಬೇರೆಯದ್ದೇ ಕಥೆ. ಯಾವೊಂದು ರಾಜ್ಯವೂ ವಿರೋಧ ವ್ಯಕ್ತಪಡಿಸಿಲ್ಲ ಎನ್ನುವ ಅಂಶಹೊರಬಿತ್ತು. ಭಾರತ ಕ್ರಿಮಿನಾಶಕ ಲಾಬಿಗೆ ಮಣಿದಿದೆ ಎನ್ನುವುದು ಸುಸ್ಪಷ್ಟ.

ಎಂಡೋಸಲ್ಫಾನ್ ಗೆ ಉರುಳುತ್ತಿರುವ ಜೀವಗಳನ್ನು ಶರದ್ ಪವಾರ್ ಅವರು ಕ್ರಿಕೆಟ್ ಅಂಕಣದಲ್ಲಿ ಬೀಳುತ್ತಿರುವ ವಿಕೆಟ್ ಗಳೇನೋ ಎನ್ನುವಸಂಭ್ರಮದಿಂದ ನೋಡುತ್ತಿರುವಾಗಲೇ ‘ಹಿರೋಶಿಮಾ ಸಿಂಡ್ರೋಮ್’ ತಲೆ ಎತ್ತಿದೆ. ಎಲ್ಲಿ ನಮಗೆ ಹುಟ್ಟುವ ಮಗು ಅಂಗವೈಕಲ್ಯ ಹೊಂದುತ್ತದೋ ಎನ್ನುವ ಕಾರಣಕ್ಕೇಗರ್ಭಪಾತ ಮಾಡಿಸಿಕೊಳ್ಳುವವರ ಸಂಖ್ಯೆ ಇನ್ನಿಲ್ಲದಂತೆ ಹೆಚ್ಚುತ್ತಿದೆ. ಎಂಡೋ ಪೀಡಿತ ಗ್ರಾಮಗಳ ಹೆಣ್ಣು ಮಕ್ಕಳಿಗೆ ಮದುವೆಯಾಗುತ್ತಿಲ್ಲ. ಮದುವೆಯಾದ ಅನೇಕರಿಗೆ ಗರ್ಭ ನಿಲ್ಲುತ್ತಿಲ್ಲ. ಮಕ್ಕಳಾದರೂ ಅವರಬದುಕಿನಲ್ಲಿ ಬೆಳಕು ಮಿನುಗುತ್ತಿಲ್ಲ. ಸ್ವರ್ಗದ ಈ ಎಲ್ಲಾ ನರಕವನ್ನೂ ನೋಡಿ ಘಟ್ಟ ಏರಿ ವಾಪಸಾಗುತ್ತಿದ್ದಾಗ ತೂಗಾಡುತ್ತಿದ್ದ ಗೇರು ಹಣ್ಣನ್ನು ತೋರಿಸಿ ಶ್ರೀ ಪಡ್ರೆ ತಿನ್ನಿ ಎಂದರು. ಹಣ್ಣಿಗೆ ಕೈಹಾಕಿದ್ದ ನಾನು ಹಾಗೇ ಹಿಂದೆ ಸರಿದೆ. ಪಶ್ಚಿಮ ಘಟ್ಟದಲ್ಲಿ ಪಟ ಪಟನೆ ಸಾಯುತ್ತಿರುವ ಚಿಟ್ಟೆಗಳು ನೆನಪಾದವು.

ಸರ್ಕಾರ ತಾಯಿಯಂತೆ ಯೋಚಿಸಲಿ

ರೂಪ ಹಾಸನಕಡಿಮೆ ಮಕ್ಕಳಿರುವ ನೆವದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದರಿಂದ ಗ್ರಾಮೀಣ ಬಡ ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನು ಕುರಿತು, ಹಾಗೂ ಅದರ ಹಿಂದೆ ಇರುವ ವಾಸ್ತವ ಕಹಿ ಸತ್ಯಗಳನ್ನು ಕಳೆದ ೧೫ ದಿನಗಳಿಂದ ವಿಜಯ ಕರ್ನಾಟಕ ಪತ್ರಿಕೆ ’ಮುಚ್ಚು-ಮರೆ’ ಶೀರ್ಷಿಕೆಯಡಿ ಜನರ ಮುಂದಿರಿಸುವುದರ ಜೊತೆಗೆ ಸರ್ಕಾರದ ಕಣ್ಣು ತೆರೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ತನ್ಮೂಲಕ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂಬ ಮಾತನ್ನು ಸಾಬೀತುಪಡಿಸಿದೆ. ರಾಜ್ಯದ ಒಂದೊಂದು ಜಿಲ್ಲೆಯದೂ ಒಂದೊಂದು ಕಥೆಯಾದರೆ, ಒಂದೊಂದು ಶಾಲೆಯದು ವಿಭಿನ್ನ ಸಮಸ್ಯೆ, ಒಂದೊಂದು ಮಗುವಿನದು ಬೇರೆ ಬೇರೆಯದೇ ಸಂಕಟ. ಈ ವರ್ಷ ಹತ್ತಕ್ಕಿಂಥಾ ಕಡಿಮೆ ಇರುವ ೩೦೦೦ ಶಾಲೆಗಳನ್ನು ಮುಚ್ಚುವುದೆಂದರೆ ಅಂದಾಜು ೨೫೦೦೦ ಬಡ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡಿದಂತೆ. ಈ ಪ್ರಮಾಣ ಪ್ರತಿ ವರ್ಷ ಹೆಚ್ಚುತ್ತಾ ಹೋಗುತ್ತದೆ ಎಂಬುದೇ ಆತಂಕದ ವಿಷಯ.
ಒಂದು ಸರ್ಕಾರವೆಂದರೆ ಕಾಳಜಿ-ಅಂತಃಕರಣವಿರುವ ತಾಯಿಯಂತೆ. ಕುಟುಂಬದಲ್ಲಿ ಮಗುವೊಂದು ಬಡಕಲಾಗಿ, ಅನಾರೋಗ್ಯದಿಂದಿದ್ದರೆ, ತಾಯಿ ಆ ಮಗುವಿಗೆ ಹೆಚ್ಚಿನ ಪೌಷ್ಟಿಕ ಆಹಾರದೊಂದಿಗೆ ತನ್ನ ಪ್ರೀತಿಯನ್ನು ನೀಡಿ ಶ್ರದ್ಧೆಯಿಂದ ಮಗುವನ್ನು ಸಶಕ್ತಗೊಳಿಸಲು ಪ್ರಯತ್ನಿಸುತ್ತಾಳೆ. ಮುಂದಿನ ಸಮಾಜ ಹೇಗಿರಬೇಕು? ಎಂಬುವುದನ್ನು ನಿರ್ಧರಿಸುವುದು ಆ ನಾಡಿನ ಶಿಕ್ಷಣ ವ್ಯವಸ್ಥೆ. ನಿಜವಾದ ಕಾಳಜಿಯುಳ್ಳ ಸರ್ಕಾರ ಅದಕ್ಕೆ ಪೂರಕವಾಗಿ ಯೋಚಿಸಬೇಕು. ಸರ್ಕಾರಿ ಶಾಲೆಯಲ್ಲಿ ಮಕ್ಕಳು ಕಡಿಮೆಯಾಗುತ್ತಿದ್ದಾರೆ ಎಂದಾಕ್ಷಣ ಶಾಲೆಯನ್ನೇ ಮುಚ್ಚಿ ಕೈ ತೊಳೆದುಕೊಳ್ಳುವುದಲ್ಲ. ಬದಲಿಗೆ ಸರ್ಕಾರಿ ಶಾಲೆಗಳನ್ನು ಬಲಗೊಳಿಸಲು ಇರುವ ಪರ್ಯಾಯ ಮಾರ್ಗಗಳನ್ನು ಹುಡುಕಿ ಅನುಷ್ಠಾನಗೊಳಿಸಬೇಕು.
ಬಹು ಮುಖ್ಯ ಅಂಶವೆಂದರೆ ಶಿಕ್ಷಣ ಮಾರಾಟದ ಸರಕಲ್ಲ. ದೊಡ್ಡ ದೊಡ್ಡ ಮಾಲ್‌ಗಳಲ್ಲಿ, ಬಣ್ಣ ಬಣ್ಣದ ಆಕಷಕ ಪ್ಯಾಕ್‌ಗಳಲ್ಲಿ, ರೋಚಕ ಜಾಹಿರಾತು ನೀಡಿ ಹರಾಜಿಗಿಡುವಂತದ್ದಲ್ಲ. ಆದರೆ ಇಲ್ಲಿ ಏನಾಗಿದೆ ಎಂದರೆ ಖಾಸಗಿವಲಯವೇ ಸರ್ಕಾರಿ ವ್ಯವಸ್ಥೆಯನ್ನು ನುಂಗಿ ನೀರು ಕುಡಿಯುವಂತಾಗಿದೆ. ಖಾಸಗಿವಲಯದ ಪಾಲುದಾರಿಕೆ ಎಷ್ಟು ಪ್ರಮಾಣದಲ್ಲಿರಬೇಕು? ಯಾವ ಸ್ವರೂಪದಲ್ಲಿರಬೇಕು? ಅದರ ಮೇಲೆ ಸರ್ಕಾರದ ಹಿಡಿತ ಹೇಗಿರಬೇಕು? ಅದಕ್ಕೆ ಒಂದು ಸ್ಪಷ್ಟ ನೀತಿ ನಿಯಮ ಅಂತೇನಾದರೂ ಇದೆಯೇ? ಇಲ್ಲವೇ ಇಲ್ಲ. ಉದಾಹರಣೆಗೆ ಕರ್ನಾಟಕ ಸಾರಿಗೆ ಎಂಬ ಸಾರ್ವಜನಿಕ ವ್ಯವಸ್ಥೆ ಹಾಗೂ ಖಾಸಗಿ ಸಾರಿಗೆ ವ್ಯವಸ್ಥೆ, ಒಂದರ ಮೇಲೆ ಒಂದು ಪೈಪೋಟಿ ಇಲ್ಲದೇ, ಸ್ಪರ್ಧೆಗೆ ಇಳಿಯದೇ ಎರಡೂ ಒಟ್ಟಾಗಿ ಸಾಗ್ತಾ ಇಲ್ಲವೇ? ಹಾಗೇ ಖಾಸಗಿವಲಯ ಮಿತಿ ಮೀರಿ ಹೋಗದಂತೆ ಕಠಿಣ ಹಾಗೂ ಸಮಗ್ರ ಶೈಕ್ಷಣಿಕ ನೀತಿಯೊಂದನ್ನು ರೂಪಿಸಬೇಕು. ಈಗಿನಂತೆ ಬೇಕಾಬಿಟ್ಟಿ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಖಾಸಗಿ ಶಾಲೆಗಳನ್ನು ಪ್ರಾರಂಭಿಸದಂತೆ, ಅವುಗಳಿಗೆ ಪರವಾನಗಿ ನೀಡಲು ಮಾನದಂಡಗಳನ್ನು ರೂಪಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
ಒಂದು ಕಡೆ ಖಾಸಗಿವಲಯ ಕೊಬ್ಬಿ ನಿಲ್ಲೋದಕ್ಕೆ ಹಾಸಿಗೆ ಹಾಕಿಕೊಟ್ಟು ಇನ್ನೊಂದು ಕಡೆ ಸರ್ಕಾರಿ ಶಾಲೆಗಳನ್ನು ಸಾವಿರದ ಲೆಕ್ಕದಲ್ಲಿ ಮುಚ್ಚುತ್ತಾ ಹೋಗಿ, ಕೆಲವೇ ವರ್ಷಗಳಲ್ಲಿ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ನಿಲ್ಲಿಸಿ, ’ಬೇಕಿದ್ದರೆ ಖಾಸಗಿ ಶಾಲೆಯಲ್ಲಿ ಕಲಿಯಲಿ, ಇಲ್ಲದಿದ್ದರೆ ಕೂಲಿ ಮಾಡಲು ಹೋಗಲಿ’ ಎಂಬ ಸಂದೇಶವನ್ನೇನಾದರೂ ಸರ್ಕಾರ ಕೊಡ್ತಾ ಇದ್ಯಾ ಅನ್ನಿಸ್ತಾ ಇದೆ. ಒಂದು ಹಳ್ಳಿಯ ಸರ್ಕಾರಿ ಶಾಲೆ ಮುಚ್ಚುವ ಮೂಲಕ ಆ ಊರಿನ ಸಾಂಸ್ಕೃತಿಕ ನೆಲೆಗಟ್ಟನ್ನೇ ಕಳಚಿದಂತಾಗುತ್ತದೆ. ಪ್ರಾಥಮಿಕ ಶಾಲೆ ಓದುತ್ತಿರುವ ಪುಟಾಣಿ ಮಕ್ಕಳು ಏಕಾಂಗಿಯಾಗಿ, ದೂರದ ಶಾಲೆಗೆ ನಡೆದು ಅಥವಾ ಬಸ್‌ಗಳಲ್ಲಾದರೂ ಹೇಗೆ ಹೋಗಬಲ್ಲರು? ಬಸ್‌ಗಳೇ ಪ್ರವೇಶಿಸದ, ರಸ್ತೆಗಳೇ ಇಲ್ಲದ ಕುಗ್ರಾಮಗಳು ರಾಜ್ಯದಲ್ಲಿ ಎಷ್ಟಿವೆ ಎನ್ನೋದು ನಗರದಲ್ಲಿ ವಿಲಾಸಿ ಜೀವನ ನಡೆಸುತ್ತಿರುವ, ವಿಮಾನ-ಹೆಲಿಕಾಫ್ಟರ್‌ಗಳಲ್ಲಿ ಹಾರಾಡುವ ನಮ್ಮ ರಾಜಕಾರಣಿಗಳಿಗೆ ತಿಳಿದಿದೆಯೇ? ಅನನುಕೂಲ ಭೌಗೋಳಿಕ ಪ್ರದೇಶದಲ್ಲಿ, ಅದರಲ್ಲೂ ಮನೆಯ ಹತ್ತಿರದ ಶಾಲೆಗೇ ಹೆಣ್ಣು ಮಕ್ಕಳನ್ನು ಸುರಕ್ಷತೆಯ ದೃಷ್ಟಿಯಿಂದ ಕಳಿಸೋದಕ್ಕೆ ಗ್ರಾಮೀಣ ಪೋಷಕರು ಹೆದರ‍್ತಾರೆ. ಇನ್ನು ದೂರದ ಶಾಲೆಗೆ ಮಕ್ಕಳನ್ನು ಹೇಗೆ ಕಳುಹಿಸುತ್ತಾರೆ? ಅಲ್ಲಿಗೆ ಹೆಣ್ಣು ಮಕ್ಕಳ ಶೈಕ್ಷಣಿಕ ಭವಿಷ್ಯವನ್ನ ಮುಚ್ಚಿದಂತೆನೇ ಅಲ್ವೇ?
೨೦೧೧ರ ಜನಗಣತಿಯಂತೆ ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ೧,೧೧,೦೦೦. ಇದು ಹೋಗಲಿ, ಸರ್ಕಾರದ ಸರ್ವಶಿಕ್ಷಣ ಅಭಿಯಾನ ಶೈಕ್ಷಣಿಕ ಮಾಹಿತಿ ೨೦೧೦-೧೧ರ ಪ್ರಕಾರವೇ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ೩೯೮೪೧. ನಿಜಕ್ಕೂ ಸರ್ಕಾರಕ್ಕೆ ಕಣ್ಣಿದೆಯೇ? ಇದ್ದಿದ್ದರೆ ಇಂಥ ದಿವ್ಯ ನಿರ್ಲಕ್ಷ್ಯ ಯಾಕೆ? ಈ ಮಕ್ಕಳನ್ನಾದರೂ ಶಾಲೆಗೆ ಸೇರಿಸುವ ಪ್ರಾಮಾಣಿಕ ಪ್ರಯತ್ನವನ್ನೇನಾದರೂ ಸರ್ಕಾರ ಮಾಡಿದರೆ ಈಗ ಇರುವ ಶಾಲೆಗಳು ಸಾಲದೇ ಮತ್ತಷ್ಟು ಹೊಸ ಶಾಲೆಗಳನ್ನು ತೆರೆಯಬೇಕಾಗುತ್ತದೆ. ರಾಜ್ಯದಲ್ಲಿ ಲಂಗುಲಗಾಮಿಲ್ಲದೇ ಹುಟ್ಟಿಕೊಂಡಿರುವ ೩೦೦೦ ಕ್ಕೂ ಹೆಚ್ಚಿನ ಅನಧಿಕೃತ ಶಾಲೆಗಳನ್ನು ಮುಚ್ಚಿದರೆ ಸರ್ಕಾರಿ ಶಾಲೆಗೆ ಮಕ್ಕಳು ತಾವಾಗಿಯೇ ಬರುತ್ತಾರೆ. ಖಾಸಗಿ ಶಾಲೆಗಳಿಗೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಪರವಾನಗಿ ನೀಡಿ ದಶಕಗಳಿಂದ ಖಾಸಗಿ ಹಿತಕ್ಕೆ ಬಲಿಯಾಗಿರುವ ಸರ್ಕಾರ ಮತ್ತು ಅಧಿಕಾರಶಾಹಿಯ ಸಂಚಿಗೆ ಇವತ್ತು ಬಡ ಮಕ್ಕಳ ಶಿಕ್ಷಣ ಬಲಿಯಾಗಬೇಕಾಗಿದೆ.
ಶಿಕ್ಷಣ ಇಲಾಖೆಯ ದಾಖಲೆಗಳ ಪ್ರಕಾರವೇ ರಾಜ್ಯದಲ್ಲಿ ೧೩ ಸಾವಿರ ಶಾಲೆಗಳಲ್ಲಿ ಶೌಚಾಲಯವಿಲ್ಲ. ೮೩೮೯ ಶಾಲೆಗಳಲ್ಲಿ ನೀರಿಲ್ಲ, ೮೦೦೦ ಶಿಕ್ಷಕರ ಹುದ್ದೆಗಳು ಭರ್ತಿಗಾಗಿ ಕಾಯುತ್ತಿವೆ! ೨೧೯೧೦ ಶಾಲೆಗಳಿಗೆ ಆಟದ ಮೈದಾನವಿಲ್ಲ, ೭೬೩ಕ್ಕೂ ಹೆಚ್ಚು ಶಾಲೆಗಳಿಗೆ ಕಟ್ಟಡವೇ ಇಲ್ಲ, ೨೫೭ಕ್ಕೂ ಹೆಚ್ಚು ಶಾಲೆ ಶಿಥಿಲಾವಸ್ಥೆಯಲ್ಲಿವೆ. ೨೮%ರಷ್ಟು ಶಾಲೆಗಳು ಮೂಲಸೌಕರ್ಯದ ಕೊರತೆ ಎದುರಿಸುತ್ತಿವೆ. ಇಂತಹ ಸರ್ಕಾರಿ ಶಾಲೆಗಳಿಗೆ ಒಂದಿಷ್ಟು ಅನುಕೂಲತೆ ಇರುವವರ‍್ಯಾರು ತಮ್ಮ ಮಕ್ಕಳನ್ನು ಸೇರಿಸಲು ಬಯಸುತ್ತಾರೆ? ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಡಿ ದರ್ಜೆ ನೌಕರರಿಲ್ಲ. ಅವರು ಮಾಡುವ ಕೆಲಸವನ್ನೆಲ್ಲಾ ಮಕ್ಕಳೇ ಮಾಡಬೇಕು! ಶೌಚಾಲಯ ಸ್ವಚ್ಛಗೊಳಿಸೋದು, ಶಾಲೆಯ ಒಳ ಹೊರಗೆ ಶುದ್ಧಿ ಮಾಡೋದು, ಬಿಸಿ ಊಟದ ತಯಾರಿಯಲ್ಲಿ ಸಹಾಯ ನೀಡುವ ಕೆಲಸವನ್ನೆಲ್ಲಾ ಮಕ್ಕಳಿಂದ, ಇದೆಲ್ಲಾ ಮಾಮೂಲು ಅನ್ನೋ ರೀತಿಲಿ ಮಾಡಿಸಲಾಗುತ್ತಿದೆ. ಇಲ್ಲೆಲ್ಲಾ ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಂiiನ್ನು ಸರ್ಕಾರ ಮತ್ತು ಅಧಿಕಾರಶಾಹಿಯೇ ತಿಳಿದೂ ಮಾಡುತ್ತಿದೆ. ಸರ್ಕಾರಿ ಶಾಲೆ ಮಕ್ಕಳು ಅಂದ್ರೆ ಯಾಕಿಷ್ಟು ತಾತ್ಸಾರ? ಬೇಲಿಯೇ ಎದ್ದು ಹೊಲ ಮೆಯ್ದರೆ ಯಾರಿಗೆ ದೂರು ಕೊಡೋದು?
ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಸುಧಾರಣೆಗೆ ಆಗ್ರಹಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ್ದ ಹೈಕೋರ್ಟ್ ’ಇದು ಸರ್ಕಾರಿ ಶಾಲೆಗಳ ಅಳಿವು-ಉಳಿವಿನ ಪ್ರಶ್ನೆ. ಮಕ್ಕಳನ್ನು ಮನುಷ್ಯರಂತೆ ನಡೆಸಿಕೊಳ್ಳಿ, ಡಿಸೆಂಬರ್ ೨೦೧೧ರ ಒಳಗೆ ಮೂಲ ಸೌಕರ್ಯ ಒದಗಿಸಿ’ ಎಂದು ಆದೇಶಿಸಿತ್ತು. ಕೊರತೆಯಂತೂ ಸರಿಯಾಗಲಿಲ್ಲ. ಈಗ ಶಾಲೆಗಳನ್ನೇ ಮುಚ್ಚಿ ಸಮಸ್ಯೆಗೆ ಶಾಶ್ವತ ಮೋಕ್ಷ ಕಾಣಿಸ್ತಿದೆ ಸರ್ಕಾರ!
’ಸರ್ಕಾರಿ ಶಾಲೆ ಮುಚ್ಚುವಿಕೆಯಿಂದ ಯಾವುದೇ ಕಾರಣಕ್ಕೂ ಮಕ್ಕಳ ಮೂಲಭೂತ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ ಆಗಬಾರದು. ನಿಗದಿತ ಅಂತರಕ್ಕಿಂಥಾ ದೂರವಿರುವ ಶಾಲೆಗಳಿಗೆ ಪ್ರಯಾಣಿಸಲು ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕು. ಗುಡ್ಡಗಾಡು ಹಾಗೂ ಭೌತಿಕ ಅಸಮತೋಲನಗಳಿರುವ ಪ್ರದೇಶಗಳಲ್ಲಿ ಮಕ್ಕಳ ವಾಸಸ್ಥಳದ ಹತ್ತಿರದಲ್ಲಿಯೇ ಸರ್ಕಾರ ಶಾಲೆಗಳನ್ನು ಪ್ರಾರಂಭಿಸಬೇಕು. ಉಚಿತ ಸಾರಿಗೆ ವ್ಯವಸ್ಥೆ ಮಾಡದೇ ಶಾಲೆಗಳನ್ನು ವಿಲೀನ ಮಾಡುತ್ತಿರುವುದು ಕೋರ್ಟ್‌ನ ಗಮನಕ್ಕೆ ಬಂದರೆ ಅದು ನ್ಯಾಯಂಗ ನಿಂದನೆಯಾಗುತ್ತದೆ’ ಎಂದು ಹೈಕೋರ್ಟ್ ಇದೇ ೨೦೧೨, ಜೂನ್ ೨೦ರಂದು ನೀಡಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಉಚಿತ ಸಾರಿಗೆ ವ್ಯವಸ್ಥೆ
ಅಂತ ಒತ್ತಿ ಹೇಳಿದೆ. ಆದರೆ ’ಸಾರಿಗೆ ವ್ಯವಸ್ಥೆನೇ’ ಇಲ್ಲ ಇನ್ನು ’ಉಚಿತ’ ಎಲ್ಲಿಂದ ಬಂತು ಅಂತ ಜನ ಕೇಳ್ತಾ ಇದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆಯನ್ನೂ ಪರಿಗಣಿಸದೇ ಮನ ಬಂದ ಹಾಗೆ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರಕ್ಕೆ ಹೈಕೋರ್ಟ್‌ನ ಆದೇಶ ಯಾವ ಲೆಕ್ಕ? ಅಧಿಕಾರಿಗಳು ನಮಗೆ ಶಾಲೆ ಮುಚ್ಚುವ ಸ್ಪಷ್ಟ ಆದೇಶ ಬಂದಿಲ್ಲ ಅಂತ ಸಬೂಬು ಹೇಳುತ್ತಾ, ದಾಖಲೆಗಳಲ್ಲಿ ಶಾಲೆಗಳನ್ನು ತೋರಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಶಾಲೆಗಳು ’ವಿ-ಲೀನ’ಗೊಂಡಿವೆ. ಇದೇ ೨೦೧೨ರ ಜುಲೈ ೨೪ರಂದು ಶಿಕ್ಷಣ ಇಲಾಖೆ ಶಾಲೆಗಳನ್ನು ವಿಲೀನಗೊಳಿಸಲು ರಾಜ್ಯದ ಎಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶ ನೀಡಿದೆ. ’ವಿಲೀನಗೊಳಿಸುವಾಗ ಘಟ್ಟ ಪ್ರದೇಶಗಳಲ್ಲಿ, ಆಯಾ ಪ್ರದೇಶದ ಭೌತಿಕ ಲಕ್ಷಣಗಳನ್ನು, ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಅನುಕೂಲವಾಗುವುದನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಸಮಸ್ಯೆಗಳನ್ನು ಪರಿಹರಿಸಿ ಸಂಬಂಧಿಸಿದ ಇವರಿಬ್ಬರೂ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು, ಉಚಿತವಾಗಿ ಸಾರಿಗೆ ಭತ್ಯೆಯನ್ನು ಭರಿಸಲು ವಿಲೀನಗೊಳಿಸಿದ ಪ್ರತಿ ಶಾಲೆಯ ಅಂತರ ಪ್ರತಿ ಮಗುವಿನ ವಿವರವನ್ನು ನೀಡಬೇಕೆಂದು’ ಆದೇಶಿಸಿದೆ. ಆದರೆ ಇದುವರೆಗೂ ಸರ್ಕಾರ ರಾಜ್ಯದ ಯಾವುದೇ ಭಾಗದಲ್ಲೂ, ಯಾವ ಮಗುವಿಗೂ ಉಚಿತ ಸಾರಿಗೆ ವ್ಯವಸ್ಥೆ ಏರ್ಪಡಿಸಿಲ್ಲ, ಸಾರಿಗೆ ಭತ್ಯೆ ನೀಡಿಲ್ಲ. ಇಂತಹದೊಂದು ವ್ಯವಸ್ಥೆಯನ್ನು ಜಾರಿಗೆ ತರಲು ಇನ್ನೂ ಪ್ರತ್ಯೇಕ ಸಮಿತಿಯನ್ನೂ ರಚಿಸಿಲ್ಲವೆಂದರೆ ಸರ್ಕಾರ ಖಾಸಗಿಗೆ ತನ್ನನ್ನ ಮಾರಿಕೊಂಡ ಅನುಮಾನ ಬಲವಾಗ್ತಾ ಇದೆ.
ಯಾವುದೇ ಮಗುವೂ ಶಿಕ್ಷಣ ಹಕ್ಕಿನಿಂದ ವಂಚಿತವಾಗದಂತೆ ತಕ್ಷಣವೇ ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ನೀಡಬೇಕು. ಇನ್ನೂ ಸಾವಿರ ಸಂಖ್ಯೆಯಲ್ಲಿ ಶಾಲೆಯ ಹೊರಗಿರುವ ಮಕ್ಕಳಿಗೂ ಉಚಿತ ಶಿಕ್ಷಣ ನೀಡಲು ಸಶಕ್ತ ಯೋಜನೆ ರೂಪಿಸಬೇಕು. ಇಲ್ಲದೇ ಇದ್ರೆ ’ಉಚಿತ’ ’ಕಡ್ಡಾಯ’ ಎಲ್ಲಾ ಸಂವಿಧಾನದಲ್ಲಿ, ಕಾಯ್ದೆನಲ್ಲಿ ಮಾತ್ರ. ವಾಸ್ತವದಲ್ಲಿ ಕಾಟಾಚಾರ ಅಷ್ಟೇ ಎನ್ನಿಸಿಬಿಡುತ್ತೆ. ಸೊರಗುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಲು ಮೂಲಸೌಲಭ್ಯಗಳನ್ನು ಒದಗಿಸುವ ಜೊತೆಗೆ ಖಾಲಿ ಹುದ್ದೆಗಳಿಗೆ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು.
ಎಲ್ಲಕ್ಕಿಂಥಾ ಮುಖ್ಯವಾಗಿ ಶಿಕ್ಷಣ ಖಾಸಗಿಕರಣ ಸರ್ಕಾರಿ ಶಾಲೆಗಳನ್ನು ನಿರ್ನಾಮ ಮಾಡದಂತೆ ಪ್ರಬಲ ಶೈಕ್ಷಣಿಕ ನೀತಿಯೊಂದನ್ನು ತುರ್ತಾಗಿ ರೂಪಿಸಬೇಕು. ಈಗಲಾದರೂ ಸರ್ಕಾರ ಶಾಲೆಯನ್ನ ಅಂಗಡಿ ಅಂದುಕೊಂಡಿದೆಯಾ, ವಿದ್ಯಾಲಯ ಅಂದ್ಕೊಂಡಿದ್ಯಾ ಅಂತ ಆತ್ಮಾವಲೋಕನ ಮಾಡಿಕೊಂಡು, ಪ್ರಾಮಾಣಿಕತೆ ಇದ್ದರೆ, ಅನಧಿಕೃತ ಖಾಸಗಿ ಶಾಲೆಗಳನ್ನು ತಕ್ಷಣ ಮುಟ್ಟುಗೋಲು ಹಾಕಿಕೊಂಡು ತಾಯಿಯ ಸ್ಥಾನದಲ್ಲಿ ನಿಂತು, ಶಿಕ್ಷಣ ವ್ಯವಸ್ಥೆ ಯಾವುದೇ ಲಾಭ ಮತ್ತು ಲಾಭಿಗಳಿಗೆ ಮಣಿಯದಂತೆ ’ಮಕ್ಕಳ’ ಶೈಕ್ಷಣಿಕ ಹಿತದೃಷ್ಟಿಯಿಂದ ಮಾತ್ರ ಪುನರ್‌ರೂಪುಗೊಳಿಸಬೇಕು. ಇಲ್ಲದೇ ಇದ್ದರೆ ಮನು ಸಂಸ್ಕೃತಿಯ ಕಾಲದಲ್ಲಿ ಕೆಲವರಿಗೆ ಶಿಕ್ಷಣವನ್ನ ನಿರಾಕರಿಸಿದ್ದ ಪಿಶಾಚಿ, ಇವತ್ತು ಗವಾಕ್ಷಿಯಲ್ಲಿ ಬಂದು ಕೂತಿದೆ ಅಂತಾಗುತ್ತೆ!


[ವಿಜಯ ಕರ್ನಾಟಕ ೨೨.೮. ೨೦೧೨]


ವಿಭಾ ಕವಿತೆ-ರೂಪ ಹಾಸನ ಅವರ ಸ್ಪಂದನೆ

ಕದ್ದರೆಂದು

ಅವರು ನಮ್ಮ ಪಾಲಿನ
ರೊಟ್ಟಿ ಕದ್ದರೆಂದು
ನಾವು ದೂರುವುದು ಬೇಡ.
ಅವರ ಹೊಟ್ಟೆ ತಣ್ಣಗಿರಲಿ-
ನಮ್ಮ ಹೊಟ್ಟೆಗಳಿಗೆ ತಣ್ಣೀರು
ಸಮಾಧಾನ ಹೇಳಬಲ್ಲದು.

ಅವರು ನಮ್ಮ ರಾತ್ರಿಯ
ನಿದ್ದೆ ಕದ್ದರೆಂದು
ನಾವು ಹಲುಬುವುದು ಬೇಡ.
ಅವರು ನಿದ್ದೆಯೆಂದ
ಎಚ್ಚರಾಗದಿರಲಿ-
ಈ ನಿದ್ರಾಹೀನ ರಾತ್ರಿಗಳಲ್ಲಿ
ನಕ್ಷತ್ರಗಳು ನಮ್ಮ ಜೊತೆಗಿರುತ್ತವೆ.

ಅವರು ನಮ್ಮ ತುಟಿಯ
ಮೇಲಿನ ನಗೆಯ ಕದ್ದರೆಂದು
ನಾವು ದುಃಖಿಸುವುದು ಬೇಡ.
ಅವರು ಸದಾ ಮಂದಸ್ಮಿತರಾಗಿರಲಿ
ನಾವು ಇಡೀ ಜಗತ್ತಿನ ಕಣ್ಣೀರಿಗೆ
ಬೊಗಸೆಯಾಗೋಣ.

ಅವರು ನಮ್ಮ ರೊಟ್ಟಿ, ನಿದ್ರೆ
ಮತ್ತು ನಗೆಯನ್ನು ಕದ್ದದ್ದಕ್ಕೆ
ಒಂದು ಸಲ ನಾವು ಆ ಮೇಲಿನವನ
ಅದಾಲತ್ತಿನಲಿ ನ್ಯಾಯ ಕೇಳೋಣ.
ಆದರೆ, ಸದ್ಯದ ಸ್ಥಿತಿ ಹೇಗಿದೆ
ನೋಡು.
ಅವರು ಕದಿಯ ಬೇಕೆಂದರೂ
ನಮ್ಮ ಬಳಿ ಏನೂ ಉಳಿದಿಲ್ಲ!

ಅವರು ನಮ್ಮಷ್ಟೇ ನಿರುಪಾಯರಾದ
ಬಗ್ಗೆ ನನಗೆ ಖೇದವಿದೆ.

-ವಿಭಾ

[ವಿಭಾ ನಮ್ಮ ನಡುವೆ ಇದ್ದು ಆಕಸ್ಮಿಕವಾಗಿ ತೀರಿಕೊಂಡ ಪ್ರತಿಭಾನ್ವಿತ ಕವಯಿತ್ರಿ. ಜೀವ ಮಿಡಿತದ ಸದ್ದು ಅವರ ಕವನ ಸಂಕಲನ. ಪ್ರಸ್ತುತ ’ಕದ್ದರೆಂದು’ ಕವಿತೆಯನ್ನು ೨೦೦೬ರಲ್ಲಿ ಬೆಂಗಳೂರಿನ ಸಂಚಯ ಪ್ರಕಾಶನ ಹೊರತಂದಿರುವ ’ಜೀವ ಮಿಡಿತದ ಸದ್ದು’ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.]

ನಿರ್ಲಿಪ್ತ ಮನಸಿನ ದೃಢತೆಯಲ್ಲಿ.............’ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು’ ಎಂಬ ಗಾಂಧೀಜಿಯ ಮಾತು ನೆನಪಾಗುತ್ತಿದೆ. ಒಂದು ಕೆನ್ನೆಗೆ ಹೊಡೆಸಿಕೊಂಡ ನೋವನ್ನು ಮರೆಯುವುದೇ ಕಷ್ಟ. ಅದಕ್ಕೆ ಸಿಟ್ಟಾಗದಿರುವುದು, ಪ್ರತೀಕಾರ ತೀರಿಸದಿರುವುದು ಇನ್ನೂ ಕಷ್ಟ. ಅಂಥದ್ದರಲ್ಲಿ ಒಂದು ಕೆನ್ನೆಗೆ ಹೊಡೆದವನಿಗೇ ಇನ್ನೊಂದು ಕೆನ್ನೆಗೂ ಹೊಡೆಯಲು ಹೇಳುವುದೆಂದರೆ ಬಹುಶಃ ನಿರ್ಲಿಪ್ತತೆ ಮತ್ತು ಪ್ರಬುದ್ಧತೆಯನ್ನು ಏಕಕಾಲಕ್ಕೆ ಹೊಂದಿರುವ ವ್ಯಕ್ತಿಗೆ ಮಾತ್ರ ಸಾಧ್ಯವೇನೋ? ಕ್ಷಮೆಯೆನ್ನುವುದೇ ದುಬಾರಿಯಾಗಿರುವ ಪ್ರಸ್ತುತ ಸಂದರ್ಭದಲ್ಲಿ ಈ ಮಾತು ಬಹುಶಃ ಬೆರಳೆಣಿಕೆಯ ಸಂತ ವ್ಯಕ್ತಿತ್ವಗಳಿಗೆ ಮಾತ್ರ ಅನ್ವಯವಾದೀತು.
ಪ್ರಸ್ತುತ ’ಕದ್ದರೆಂದು’ ಕವಿತೆಯಲ್ಲಿ ಪ್ರಸ್ತಾಪವಾಗಿರುವ ಅವರು ಪ್ರಭುತ್ವ ಹಾಗೂ ಸ್ವಾರ್ಥಕ್ಕೆ ಸಂಕೇತವಾದವರು. ಪರರದೆಲ್ಲವನ್ನೂ ಕಸಿಯುವ ಹೃದಯ ಹೀನರೂ ಹೌದು. ಇಲ್ಲಿ ಕವಿ ಅತ್ಯಂತ ನಿರ್ಲಿಪ್ತ ಭಾವದಿಂದ, ನಮ್ಮ ಪಾಲಿನ ರೊಟ್ಟಿ ಕದ್ದವರನ್ನು ನಾವು ದೂರುವುದು ಬೇಡ, ಅವರು ಅದನ್ನು ಪಡೆದು ಸಮಾಧಾನದಿಂದ ಇರಲಿ, ಗುಟುಕು ನೀರೂ ನಮ್ಮನ್ನು ತಣ್ಣಗಿಡಬಲ್ಲುದು ಎನ್ನುತ್ತಾರೆ. ನಮ್ಮ ಪಾಲಿನ ಅನ್ನವನ್ನು ಕದ್ದವರನ್ನೂ ಕ್ಷಮಿಸಿ, ನಾವು ನೀರು ಕುಡಿದು ಹೊಟ್ಟೆ ತುಂಬಿಕೊಳ್ಳಬಹುದೆಂಬ ಉದಾತ್ತ ನಿಲುವು ಕವಿಯದು.
ಅವರು ನಿರ್ದಾಕ್ಷಿಣ್ಯವಾಗಿ ನಮ್ಮ ರಾತ್ರಿಯ ನಿದ್ದೆಯನ್ನು ಕದ್ದರೆಂದೂ ಸಂಕಟ ಪಡುವುದರ ಬದಲು ಆ ನಿದ್ದೆ ಕದ್ದವರು, ಎಚ್ಚರಾಗದಂತೆ ಸುಖ ನಿದ್ದೆ ಮಾಡಲೆಂದು ಕವಿ ಆಶಿಸುತ್ತಾ ನಿದ್ರೆ ಇಲ್ಲದ ರಾತ್ರಿಗಳಲ್ಲಿ ನಕ್ಷತ್ರಗಳಾದರೂ ನಮ್ಮ ಜೊತೆಗಿರುತ್ತವಲ್ಲಾ ಎಂಬ ಸಮಾಧಾನವನ್ನು ತಾಳುತ್ತಾರೆ. ನಿದ್ದೆ ಮಾಡಿದರೆ ನಕ್ಷತ್ರಗಳ ಸೊಬಗನ್ನು ಕಾಣುವುದರಿಂದ ವಂಚಿತರಾಗುತ್ತೇವೆ. ನಿದ್ದೆ ಇಲ್ಲದಿದ್ದಾಗಲೂ ಆ ಸಮಯವನ್ನು ಗುಣಾತ್ಮಕವಾಗಿ ಹೇಗೆ ಕಳೆಯಬಹುದೆಂಬ ಪರ್ಯಾಯಗಳ ಚಿಂತನೆ ಮನಸಿಗೆ ಮಾಡಿಕೊಳ್ಳುವ ಸಮಾಧಾನವೂ ಹೌದು.
ಅವರು ಇಷ್ಟನ್ನು ಕದ್ದು ಸುಮ್ಮನಾಗುವವರಲ್ಲ! ಅವರು ನಮ್ಮ ತುಟಿಯ ಮೇಲಿನ ನಗೆಯನ್ನೂ ಕದಿಯುವಂತವರು! ಆದರೆ ಅದಕ್ಕೂ ನಾವು ದುಃಖಿಸುವುದು ಬೇಡವೆಂದೇ ಕವಿ ದೃಢ ನಿರ್ಧಾರ ಮಾಡುತ್ತಾರೆ. ಅವರು ನಮ್ಮ ನಗೆಯನ್ನು ಕದ್ದು ಅದರಿಂದ ತಾವು ಸಂತೋಷಿತರಾಗಿರಲಿ ನಮಗೆ ಇಡೀ ಜಗತ್ತಿನ ನೋವನ್ನು ಸಂತೈಸುವ ಕಾಯಕವಿದ್ದರೆ ಅಷ್ಟೇ ಸಾಕು ಎಂಬ ವಿಶಾಲ ಆಶಯ. ನಿಷ್ಕರುಣಿಗಳಾದ ಅವರು, ನಮ್ಮ ಪಾಲಿನ ರೊಟ್ಟಿ, ನಿದ್ರೆ ಹಾಗೂ ನಗೆಯನ್ನು ಕದ್ದದ್ದಕ್ಕೆ ಮೇಲಿನ ಲೋಕದಲ್ಲಿ ನ್ಯಾಯ ಕೇಳೋಣವೆಂಬ ಸಮಾಧಾನವನ್ನೂ ಹೊಂದುತ್ತಾರೆ.
ಆದರೆ ವಿಪರ್ಯಾಸವೆಂದರೆ ವಾಸ್ತವದಲ್ಲಿ ಅವರು ಕದಿಯಲು ಉತ್ಸುಕರಾಗಿದ್ದರೂ ಎಲ್ಲ ಕಳೆದುಕೊಂಡ ನಮ್ಮ ಬಳಿ ಈಗ ಏನೂ ಉಳಿದಿಲ್ಲ! ನಾವಾದರೂ ಏನೂ ಇಲ್ಲದೆಯೂ ಬದುಕಲು ಪರ್ಯಾಯಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಮನಸನ್ನು ಹಗುರ ಮಾಡಿಕೊಂಡಿದ್ದೇವೆ. ಆದರೆ ನಮ್ಮಿಂದ ಕಿತ್ತುಕೊಳ್ಳಲು ಏನೂ ಉಳಿಯದೇ ಅವರು ನಮ್ಮಷ್ಟೇ ಅಸಹಾಯಕರಾಗಿರುವ ಬಗ್ಗೆ ಕವಿಗೆ ಖೇದವಿದೆ. ಈ ಕವಿತೆಯಲ್ಲಿ ಬರುವ ನಿರ್ಲಿಪ್ತ, ತಣ್ಣನೆಯ ದನಿ ಆಳವಾಗಿ ನಮ್ಮೆದೆಗಳಲ್ಲಿ ನಾಟಿ ಉಳಿದು ಬಿಡುತ್ತದೆ. ಆಳುವವರ ದೌರ್ಜನ್ಯವನ್ನು ನಿರಾಕರಿಸುತ್ತಲೇ, ಅವರನ್ನು ಕ್ಷಮಿಸುತ್ತಾ ಅವರ ಕ್ರೌರ್ಯವನ್ನು ಉದಾತ್ತತೆಯಿಂದ ನಿರ್ಲಕ್ಷಿಸುವ ಸಂತತನಕ್ಕೆ ಶರಣು.


ರೂಪ ಹಾಸನಹಿಂಸೆಯನ್ನೇ ದಂಧೆಯಾಗಿಸಿಕೊಂಡಿರುವವರ ಹುನ್ನಾರಗಳು ಮತ್ತು ಅಸ್ಸಾಂಸೀಮಾ ಮುಸ್ತಾಫ

ಅನುವಾದ: ಸುರೇಶ್ ಭಟ್ ಬಾಕ್ರಬೈಲ್1980 ಮತ್ತು 1990ರ ದಶಕಗಳಲ್ಲಿ ನಡೆದಂತಹ ಕೋಮು ಹಿಂಸಾಚಾರದ ಘಟನೆಗಳನ್ನು ವ್ಯಾಪಕವಾಗಿ ವರದಿ ಮಾಡಿರುವವರಿಗೆ ಇಂಥಾ ಘಟನೆಗಳ ಅಧಿಕೃತ ಆವೃತ್ತಿಗಳ ಬಗ್ಗೆ ಹೆಚ್ಚೆಚ್ಚು ಅನುಮಾನ. ಯಾಕೆಂದರೆ ಬಹುತೇಕ ವೇಳೆ ಇವೆಲ್ಲವೂ ತಿರುಚಲ್ಪಟ್ಟಿರುತ್ತವೆ. ಸ್ಥಾಪಿತ ಹಿತಾಸಕ್ತಿಗಳು ಒಂದು ಸಮುದಾಯವನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟುವ ಸಲುವಾಗಿ ತಪ್ಪು ವ್ಯಾಖ್ಯಾನಗಳನ್ನು, ತಿರುಚಿದ ವರದಿಗಳನ್ನು, ಸುಳ್ಳುಗಳನ್ನು ಎಷ್ಟು ವ್ಯಾಪಕವಾಗಿ ಹಬ್ಬಿಸುತ್ತವೆ ಎಂಬುದರ ಅರಿವು ಜನಸಾಮಾನ್ಯರಿಗಿಲ್ಲ.ಸ್ಥಾಪಿತ ಹಿತಾಸಕ್ತಿಗಳು ಹೀಗೆ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಹೊತ್ತಲ್ಲಿ ಸಮುದಾಯಗಳ ನಾಯಕತ್ವ ಮತ್ತು ಸರಕಾರಗಳು ಏನು ಮಾಡುತ್ತವೆ? ಪರಿಸ್ಥಿತಿಯನ್ನು ಸುಧಾರಿಸುವುದ ಕ್ಕೋಸ್ಕರ ತಮ್ಮಿಂದ ಸಾಧ್ಯ ವಿರುವುದನ್ನೆಲ್ಲ ಮಾಡಿದ್ದೇವೆಂದು ಹೇಳುತ್ತಾ ವೊಸಳೆ ಕಣ್ಣೀರು ಸುರಿಸುತ್ತಿವೆ. ನಿದರ್ಶನಗಳಿಗಾಗಿ ಇತಿಹಾಸದ ಪುಟಗಳನ್ನು ತೀರಾ ಹಿಂದಕ್ಕೆ ತಿರುವಬೇಕಾಗಿಲ್ಲ. 1938ರಲ್ಲಿ ಇದೇ ಅಸ್ಸಾಂ ರಾಜ್ಯದಲ್ಲಿ ನಡೆದ ಹಿಂಸಾಚಾರದ ಘಟನೆಗಳನ್ನೆ ತೆಗೆದುಕೊಳ್ಳೋಣ.

ಅನಿಯಂತ್ರಿತ ಸರಣಿ ಹಿಂಸಾಚಾರದ ನೇತೃತ್ವವನ್ನು ವಹಿಸಿದ್ದು ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ (ಎಎಎಸ್‌ಯು). ಆದರೆ ಎಲ್ಲಾ ಕಾರ್ಯಾಚರಣೆಗಳ ಮೇಲುಸ್ತುವಾರಿಯನ್ನು ನೋಡಿಕೊಂಡದ್ದು ಆರೆಸ್ಸೆಸ್ ಮತ್ತು ಬಿಜೆಪಿ. ಅಂದು ರಾಜ್ಯಾದ್ಯಂತ ನಡೆದ ಗಲಭೆಗಳಲ್ಲಿ ನೂರಾರು ಜನ ಬಲಿಯಾದರು. ಹಳ್ಳಿಗೆ ಹಳ್ಳಿಗಳೇ ನಾಶವಾದವು. ಅದೇ ಸಂದರ್ಭದಲ್ಲಿ ನೆಲ್ಲೀ ಎಂಬಲ್ಲಿ 3,000ಕ್ಕೂ ಅಧಿಕ ಜನರ ಮಾರಣಹೋಮ ನಡೆದಾಗ ಆ ಘಟನೆ ವಿಶ್ವಾದ್ಯಂತ ಸುದ್ದಿ ಮಾಡಿತು.

ಇದೇ ತೆರನಾದ ಇನ್ನೂ ಹಲವಾರು ಹತ್ಯಾಕಾಂಡಗಳು ನಡೆದಿವೆಯಾದರೂ ಅವುಗಳನ್ನು ಗುರುತಿಸಲಾಗಿಲ್ಲ. ಆಗ ಹಿಂಸಾಚಾರದ ಘಟನೆಗಳನ್ನು ವರದಿ ಮಾಡಲೆಂದು ಅಲ್ಲಿಗೆ ಹೋಗಿದ್ದ ಪತ್ರಕರ್ತರನ್ನು ಬೆಚ್ಚಿಬೀಳುವಂತೆ ಮಾಡಿದ್ದು ರಾಜ್ಯದ ಉದ್ದಗಲಕ್ಕೂ ಹರಿದಾಡುತ್ತಿದ್ದ ವದಂತಿಗಳು. ಆ ವದಂತಿಗಳಿಂದಾಗಿ ರೊಚ್ಚಿಗೆದ್ದ ಗ್ರಾಮಸ್ಥರು ತಂತಮ್ಮ ರಕ್ಷಣೆಗಾಗಿ ಪರಸ್ಪರರ ಮೇಲೆ ದಾಳಿ ಮಾಡುತ್ತ ಇದ್ದರು. ಆದರೆ ವಾಸ್ತವದಲ್ಲಿ ಅವರನ್ನೆಲ್ಲ ದಾಳಿ ಮಾಡಲು ಪ್ರೇರೇಪಿಸಲಾಗಿತ್ತು. ಯಾಕೆಂದರೆ ಯಾರನ್ನು ಶತ್ರುಗಳೆಂದು ಪರಿಭಾವಿಸಲಾಗಿತ್ತೊ ಅವರು ನಿಜವಾಗಿ ಯಾವುದೇ ದಾಳಿಯ ಸಿದ್ಧತೆ ನಡೆಸುತ್ತಿರಲಿಲ್ಲ.

ಅವತ್ತು ಅಸ್ಸಾಂ ರಾಜ್ಯಕ್ಕೆ ಕಿಚ್ಚು ಹಚ್ಚಲು ಉದ್ದೇಶಿಸಿದ್ದ ಯಾವ ಶಕ್ತಿಗಳಿದ್ದವೊ ಆ ಶಕ್ತಿಗಳು ಹಬ್ಬಿಸಿದ್ದ ಸುಳ್ಳು ಮತ್ತು ವದಂತಿಗಳು ನಿರೀಕ್ಷಿತ ಪರಿಣಾಮ ಬೀರುವಲ್ಲಿ ಸಫಲವಾಗಿದ್ದವು. ಒಂದು ಹಳ್ಳಿಯ ಜನ ಸ್ವರಕ್ಷಣೆಗಾಗಿ ಪಕ್ಕದ ಹಳ್ಳಿಯವರ ಮೇಲೆ ದಾಳಿ ನಡೆಸಲಾರಂಭಿಸಿದರು. ಜನರು ಬಿಲ್ಲುಬಾಣ, ಭರ್ಚಿ ಇತ್ಯಾದಿಗಳೊಂದಿಗೆ ಮನೆಮನೆಗಳಿಂದ ಹೊರಬೀಳುತ್ತಿದ್ದ ದೃಶ್ಯಗಳು ಮಧ್ಯಕಾಲೀನ ಇತಿಹಾಸವನ್ನು ನೆನಪಿಸುವಂತಿತ್ತು. ರಾಜ್ಯದ ಆಡಳಿತ ಯಂತ್ರ ಮತ್ತು ಸರಕಾರ ಎಲ್ಲೋ ನಾಪತ್ತೆಯಾಗಿದ್ದವು. ಅರೆಸೇನಾ ಪಡೆಗಳು ಸ್ಥಳೀಯ ಅಧಿಕಾರಿಗಳಿಂದ ಸೂಚನೆಗಳಿಗಾಗಿ ಕಾಯುತ್ತ ಅಸಹಾಯಕರಾಗಿ ನಿಂತಿದ್ದ ದೃಶ್ಯಗಳನ್ನು ನಾವು ಕಂಡೆವು.

http://www.theforthright.com/wp-content/uploads/2012/07/assam-riots.jpg

ಹಲವು ದಿನಗಳಾದರೂ ಸೂಚನೆಗಳು ಬರಲೂ ಇಲ್ಲ; ಅಸ್ಸಾಂಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವ ಕೆಲಸವೂ ಆಗಲಿಲ್ಲ. ಅಂದು ಹೆಚ್ಚಿನ ಹಿಂಸೆಗೆ ತುತ್ತಾದವರು ಯಾರು? ಬಾಂಗ್ಲಾದೇಶೀಯ ವಲಸೆಗಾರರು ಎಂಬ ಹಣೆಪಟ್ಟಿ ಹಾಕಿಸಿಕೊಂಡ ಮುಸ್ಲಿಮರು. ಹಣೆಪಟ್ಟಿ ಹಾಕಲು ಕಾರಣವಾದ ಶಕ್ತಿಗಳು ಹಿಂಸಾಚಾರದಿಂದ ಖುಷಿ ಪಡುತ್ತಿದ್ದಂತೆ ತೋರುತ್ತಿತ್ತು. ಈಗ 2012ನೆ ಇಸವಿಯಲ್ಲಿ ಅಸ್ಸಾಂನಲ್ಲಿ ನಡೆಯುತ್ತಿರುವುದೆಲ್ಲ ಹಳೆಯದರ ಪುನರಾವರ್ತನೆಯಂತಿದೆ. ಹಿಂಸಾಚಾರ ಆರಂಭವಾಗುವುದಕ್ಕೂ ಹಲವಾರು ವಾರಗಳ ಮೊದಲೆ ಸುಳ್ಳು ವದಂತಿಗಳ ಹರಿದಾಟ ಪ್ರಾರಂಭವಾಗಿತ್ತು. ಅವರು ನಿಮ್ಮ ಭೂಮಿಗಳನ್ನು ಕಬಳಿಸಲಿದ್ದಾರೆ. ಅವರು ನಿಮ್ಮನ್ನು ಕೊಲ್ಲಲಿದ್ದಾರೆ.

ಇವೇ ಮೊದಲಾದ ಸುಳ್ಳು ಸುದ್ದಿಗಳ ಮೂಲಕ ಬೋಡೋ ಮತ್ತು ಮುಸ್ಲಿಮರ ನಡುವೆ ದ್ವೇಷ ಭಾವನೆಗಳನ್ನು ಉದ್ರೇಕಿಸಲಾಗುತ್ತಿತ್ತು. ರಾಜ್ಯಾದ್ಯಂತ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದ ವರ್ತಮಾನ ಸರಕಾರಕ್ಕೆ ಬಂದಿರಲೆಬೇಕು. ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದಾಗ ಗುಪ್ತಚರ ವರದಿಗಳು ಬರುತ್ತಾ ಇದ್ದರೂ ಪರಿಸ್ಥಿತಿಯನ್ನು ನಿಯಂತ್ರಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ತೋರಿಬರುತ್ತದೆ. ತತ್ಪರಿಣಾಮವಾಗಿ ಸುಮಾರು 100 ಜನ ಹತ್ಯೆಗೀಡಾದರು, 4 ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾದರು. ತುಂಬಾ ಭಯಭೀತರಾಗಿರುವ ಈ ಜನರೆಲ್ಲ ತಮ್ಮ ಮನೆಮಠಗಳಿಗೆ ಮರಳಲು ನಿರಾಕರಿಸುತ್ತಿದ್ದಾರೆ.

ರಾಜ್ಯದ ಜನತೆ ಇಂಥಾ ಘೋರ ಸಂಕಷ್ಟ ಅನುಭವಿಸುತ್ತಿದ್ದರೆ ಅತ್ತ ಕಾಂಗ್ರೆಸ್ ಆಡಳಿತದ ರಾಜ್ಯ ಮತ್ತು ಕೇಂದ್ರ ಸರಕಾರಗಳು ಪರಸ್ಪರರತ್ತ ಬೆಟ್ಟುಮಾಡುವುದರಲ್ಲಿ ನಿರತವಾಗಿವೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಮರುಸ್ಥಾಪಿಸುವ ಬಗ್ಗೆ ಯಾರಿಗೂ ಚಿಂತೆ ಇರುವಂತಿಲ್ಲ. 1984ರಲ್ಲಿ ಇಂದಿರಾ ಗಾಂಧಿಯ ಹತ್ಯೆ ನಡೆದಾಗಲೂ ದಿಲ್ಲಿಯಾದ್ಯಂತ ವದಂತಿಗಳು ಹಬ್ಬಿದ್ದವು. ಪರಿಣಾಮವಾಗಿ ಸೃಷ್ಟಿಯಾದ ಕೋಮು ಉದ್ವಿಗ್ನತೆ 3,000ಕ್ಕೂ ಅಧಿಕ ಸಿಖ್ಖರ ಹತ್ಯಾಕಾಂಡದಲ್ಲಿ ಪರ್ಯವಸಾನವಾಯಿತು. ಆ ಸಂದರ್ಭದಲ್ಲೂ ಸರಕಾರ ನಿಷ್ಕ್ರಿಯವಾಗಿತ್ತು. ಅದು ವದಂತಿಗಳ ಮಹಾಪೂರವನ್ನು ತಡೆಯುವ ಪ್ರಯತ್ನ ಮಾಡಲಿಲ್ಲ.

Assam's communal clashes: Politics over governance?

ಒಂದು ವದಂತಿ ಹೀಗಿತ್ತು: ಪಂಜಾಬಿನಿಂದ ಬರುತ್ತಿರುವ ರೈಲುಗಳ ತುಂಬಾ ಸಿಖ್ಖರ ಹೆಣಗಳೇ ತುಂಬಿಕೊಂಡಿವೆ. ವಾಸ್ತವದಲ್ಲಿ ದಿಲ್ಲಿಯ ಹಿಂದೂ ದೊಂಬಿಗಳು ನಗರದ ಹೊರವಲಯದಲ್ಲಿ ರೈಲುಗಳನ್ನು ತಡೆದು ಸಿಖ್ಖರನ್ನು ಹೊರಗೆಳೆದು, ಕೊಂದು, ಮರಳಿ ರೈಲುಗಳಲ್ಲಿ ತುಂಬುತ್ತಿದ್ದರು. ಅಂದು ದಿಲ್ಲಿ ರೈಲು ನಿಲ್ದಾಣದಲ್ಲಿ ರೈಲುಗಳಲ್ಲಿ ಇದ್ದ ೨೦೦ ಚಿಲ್ಲರೆ ಸಿಖ್ಖರ ಶವಗಳನ್ನು ನನ್ನ ಕಣ್ಣಾರೆ ಕಂಡಿದ್ದೆ. ಅವರ ಪೈಕಿ ಒಬ್ಬನೇ ಒಬ್ಬ ಹಿಂದೂ ಇರಲಿಲ್ಲ. ಅಂದಿನ ಆ ಸಿಖ್ಖರ ಮೇಲಿನ ದಾಳಿಗಳಲ್ಲಿ ಕಾಂಗ್ರೆಸ್ ನಾಯಕರು ಮತ್ತು ಬಿಜೆಪಿ ಕಾರ್ಯ ಕರ್ತರು ಒಂದಾಗಿದ್ದರೆನ್ನುವುದನ್ನು ನೆನಪಿಸಿಕೊಳ್ಳಬೇಕಾಗಿದೆ.ಈ ಬಾರಿಯ ಅಸ್ಸಾಂ ಹಿಂಸಾಚಾರಕ್ಕೆ ಉದ್ದೇಶಪೂರ್ವಕವಾಗಿ ರಾಷ್ಟ್ರವ್ಯಾಪಿ ಸ್ವರೂಪ ನೀಡಲಾಗಿದೆ. ಪುಣೆ ಮತ್ತು ಮುಂಬೈನಲ್ಲಿ ನಡೆದ ಸಣ್ಣಪುಟ್ಟ ಜಗಳಗಳು ಮುಸಲ್ಮಾನರು ಮತ್ತು ಈಶಾನ್ಯ ರಾಜ್ಯದವರ ನಡುವಿನ ಸಂಘರ್ಷಗಳೆಂಬಂತೆ ವರದಿಯಾದವು.

ಅಸ್ಸಾಂ ಹಿಂಸಾಚಾರ ಪ್ರತಿಭಟಿಸಲು ಮುಂಬೈಯಲ್ಲಿ ರ‍್ಯಾಲಿಯೊಂದನ್ನು ಆಯೋಜಿಸಿದ ರಾಜಾ ಅಕಾಡಮಿ ಒಂದು ಸಂದೇಹಾಸ್ಪದ ಸಂಘಟನೆ. ಅದರ ವಿಶ್ವಾಸಾರ್ಹತೆಯೂ ಪ್ರಶ್ನಾರ್ಹ. ಮೊದಲೇ ಊಹಿಸಿದಂತೆ ರ‍್ಯಾಲಿಯ ವೇಳೆ ಹಿಂಸಾಚಾರ ಭುಗಿಲೆದ್ದಿತು. ಪ್ರತಿಭಟನಕಾರರು ಮಾಧ್ಯಮ ಪ್ರತಿನಿಧಿಗಳು ಮತ್ತು ಪೊಲೀಸರ ಮೇಲೆ ದಾಳಿ ಮಾಡಲಿದ್ದರು ಎಂಬುದನ್ನೂ ವೊದಲೇ ಊಹಿಸಬಹುದಾಗಿತ್ತು.

ಮುಸ್ಲಿಂ ಸಮುದಾಯದ ಹೆಚ್ಚು ವಿಶ್ವಾಸಾರ್ಹ ವ್ಯಕ್ತಿಗಳು ಹಾಗೂ ಸಂಘಟನೆಗಳು ಘಟನೆಯ ನ್ಯಾಯಾಂಗ ತನಿಖೆಗಾಗಿ ಒತ್ತಾಯಿಸಿವೆ. ಈ ಘಟನೆಯ ಬಳಿಕ ರಾಷ್ಟ್ರಾದ್ಯಂತ ಒಂದು ಕುಟಿಲ ವದಂತಿಯನ್ನು ಹಬ್ಬಿಸಲಾಯಿತು. ಅದೇನೆಂದರೆ ಮುಸ್ಲಿಮರು ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ; ಹಾಗಾಗಿ ಈಶಾನ್ಯ ರಾಜ್ಯದವರು ಭಾರತದ ಇತರೆಡೆಗಳಲ್ಲಿ ಸುರಕ್ಷಿತರಲ್ಲ. ಅತಿದೊಡ್ಡ ಸಮಸ್ಯೆ ಸೃಷ್ಟಿಯಾದದ್ದು ಬೆಂಗಳೂರಿನಲ್ಲಿ.

ರಾಜ್ಯ ಹಾಗೂ ಕೇಂದ್ರ ಸರಕಾರಗಳು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಂಡು ವದಂತಿಗಳನ್ನು ನಿಲ್ಲಿಸಬೇಕಾಗಿತ್ತು. ಆದರೆ ವಾಸ್ತವದಲ್ಲಿ ಅವು ಮಾಡಿದ್ದೇನು? ಈಶಾನ್ಯ ರಾಜ್ಯಗಳ ಜನರಲ್ಲಿ ನಂಬಿಕೆ ಮೂಡಿಸುವ ಬದಲು, ಅವರಿಗೆ ಭರವಸೆ ಒದಗಿಸುವ ಬದಲು ಹುಟ್ಟೂರಿಗೆ ಪಲಾಯನ ಮಾಡಲು ರೈಲುಗಳನ್ನು ಒದಗಿಸಿದವು. ಸಾಲದ್ದಕ್ಕೆ ಅಸ್ಸಾಮಿನತ್ತ ತೆರಳುತ್ತಿದ್ದ ರೈಲೊಂದಕ್ಕೆ ದಾಳಿ ಮಾಡಿದ ಅಪರಿಚಿತರು ರೈಲಿನಲ್ಲಿದ್ದ ಮುಸ್ಲಿಮರನ್ನು ಕೊಂದುಹಾಕಿದರು.

30 ವರ್ಷಗಳ ಪತ್ರಿಕಾ ವೃತ್ತಿಯ ಬಳಿಕ ಒಂದನ್ನಂತೂ ಕಲಿತುಕೊಂಡಿದ್ದೇವೆ. ಅದೇನೆಂದರೆ ಕೋಮು ಹಿಂಸಾಚಾರದ ಘಟನೆಗಳೆಂದೂ ಕಾಕತಾಳಿಯವಾಗಿ ಸಂಭವಿಸುವುದಿಲ್ಲ. ಹಿಂಸೆಯನ್ನೇ ಒಂದು ದಂಧೆಯನ್ನಾಗಿ ಮಾಡಿಕೊಂಡಿರುವವರ ಪ್ರಚೋದನೆ ಇಲ್ಲದೆ ಜನ ಪರಸ್ಪರರ ವಿರುದ್ಧ ಕಾದಾಡಿ ಸಾಯಲು ಹೊರಡುವುದಿಲ್ಲ. ಭಾರತದಲ್ಲಿ ನಡೆದಿರುವಂಥಾ ಎಲ್ಲ ದಂಗೆಗಳ ಹಿಂದೆ ಒಂದು ರಾಜಕೀಯ ಯೋಜನೆ ಇದೆ.

ಆ ಯೋಜನೆ ಬರೀ ಸುಳ್ಳುಗಳು, ವದಂತಿಗಳು ಮತ್ತು ರಾಜಕೀಯ ಅಜೆಂಡಾಗಳನ್ನು ಗಟ್ಟಿಗೊಳಿಸುವ ಹಾಗೂ ಮತಗಟ್ಟೆಗಳನ್ನು ಬಲಪಡಿಸುವ ರಾಜಕಾರಣದ ಮೇಲೆ ಆಧರಿಸಿದೆ. ಇದೀಗ ಬೆಂಗಳೂರಿನಲ್ಲಿ ಹಬ್ಬಿದ ವದಂತಿಗಳಿಗೆ ಬಜರಂಗ ದಳವೇ ಕಾರಣವೆಂಬ ಸುದ್ದಿಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಲಾರಂಭಿಸಿವೆ. ಇದು ಸ್ಥಳೀಯರಿಗೆ ಗೊತ್ತಿರುವ ವಿಷಯವೂ ಹೌದು. ದುರದೃಷ್ಟದ ಸಂಗತಿ ಏನೆಂದರೆ ರಾಜಕೀಯ ಮುಂದಾಳುಗಳು ಮತ್ತು ಪಕ್ಷಗಳು ತಮ್ಮ ಹೊಣೆಗಾರಿಕೆ ಅರಿತು ಸ್ಪಂದಿಸುವ ಬದಲು ಬೆಂದ ಮನೆಯಲ್ಲಿ ಹಿರಿಯಲು ಹೊರಟಿವೆ.

ಮತಗಟ್ಟೆಗಳ ಕ್ರೋಢೀಕರಣ ಮತ್ತು ಜನರ ಧ್ರುಕರಣದ ಉದ್ದೇಶ ಇಟ್ಟುಕೊಂಡು ಉಗ್ರ ಭಾಷಣಗಳನ್ನು ಮಾಡಲಾಗುತ್ತಿದೆ; ರ‍್ಯಾಲಿ ನಡೆಸುವ ಬೆದರಿಕೆ ಒಡ್ಡಲಾಗುತ್ತಿದೆ. ಈ ನಿರ್ಲಜ್ಜ ರಾಜಕೀಯ ನಾಯಕರ ದೃಷ್ಟಿಯಲ್ಲ ಕೇವಲ 2014ರ ಚುನಾವಣೆಗಳ ಮೇಲೆ ನೆಟ್ಟಿದೆ. ಯಾರಿಗೂ ಜಾತ್ಯತೀತತೆಯನ್ನು ಉಳಿಸಿ ಬೆಳೆಸುವುದು ಬೇಕಾಗಿಲ್ಲ. ಕಾರಣ ಸರಳ. ಭಾವೋದ್ವೇಗ ಉಂಟುಮಾಡುವಂತಹ ಕರ್ಕಶ ಭಾಷಣಗಳು ಮತ್ತು ಜನರಲ್ಲಿ ಅಭದ್ರತೆ ಮೂಡಿಸುವಂತಹ ಪ್ರಸಕ್ತ ಹಿಂಸಾಚಾರಗಳು ಗಿಟ್ಟಿಸಿಕೊಡುವಷ್ಟು ವೋಟುಗಳನ್ನು ಜಾತ್ಯತೀತತೆ ತಂದುಕೊಡುವುದಿಲ್ಲ. ಆದರೆ ಇದಕ್ಕಾಗಿ ದೇಶ ತೆರುತ್ತಿರುವ ಬೆಲೆ ಮಾತ್ರ ಅಪಾರ.

ಕೃಪೆ: ದ ಸ್ಟೇಟ್ಸ್‌ಮನ್

ಅನುವಾದ: ಸುರೇಶ್ ಭಟ್ ಬಾಕ್ರಬೈಲ್

Monday, August 27, 2012

ಮತ್ತೆ ಮತ್ತೆ ರೂಮಿ
ನಿನ್ನ ಪ್ರೇಮದಲ್ಲಿ ಆಗಸವಿಲ್ಲದಿದ್ದರೆ ಅದು ಶುಭ್ರವಾಗಿರುವುದಿಲ್ಲ
ನಿನ್ನ ಪ್ರೇಮದಲ್ಲಿ ಸೂರ್ಯನಿಲ್ಲದಿದ್ದರೆ ಅದು ಯಾವ ಬೆಳಕನ್ನೂ ನೀಡುವುದಿಲ್ಲ
ನಿನ್ನ ಪ್ರೇಮದಲ್ಲಿ ನದಿಯಿಲ್ಲದಿದ್ದರೆ ಅಲ್ಲಿ ಬರೀ ಮೌನ, ಚಲನೆಯಿರುವುದಿಲ್ಲ
ನಿನ್ನ ಪ್ರೇಮದಲ್ಲಿ ಬೆಟ್ಟ, ನೆಲವಿಲ್ಲದಿದ್ದರೆ ಅಲ್ಲಿ ಬೆಳೆಯುವುದೇನೂ ಇರುವುದಿಲ್ಲ.


***

ಗಂಧರ್ವರಿಗೆ ಮುಕ್ತಿ ನಿಜವಾದ ಜ್ಞಾನದಿಂದ
ಪ್ರಾಣಿಗಳಿಗೆ ಶುದ್ಧ ಅಜ್ಞಾನದಿಂದ
ಆದರೆ ಮಾನವ ಇವೆರೆಡರ ನಡುವೆ
ಒಮ್ಮೆ ಮೇಲಕ್ಕೆ ಮತ್ತೊಮ್ಮೆ ಅದರ ಪಾತಾಳಕ್ಕೆ..

- ಜಲಾಲುದ್ದೀನ್ ರೂಮಿಕರ‍್ನಾಟಕ ಓದು: ಕೆಲವು ಕೇಳ್ವಿಗಳು;'ಕರ್ನಾಟಕ ಓದು' ಕಮ್ಮಟನಮಸ್ಕಾರ
ಕಳೆದ ಎರಡು ವರುಷಗಳಿಂದ ಕನ್ನಡ ಪ್ರಜ್ಞೆಯ ನಿಜ ದಿಕ್ಕನ್ನು ಕಂಡುಕೊಳ್ಳುವ ಸಲುವಾಗಿ ನಾಡಿನ ಹೆಮ್ಮೆಯ ವಿದ್ವಾಂಸರಾದ ಕೆ.ವಿ.ನಾರಾಯಣ್

ಮಾರ್ಗದರ್ಶನದಲ್ಲಿ ನಾಡಿನ ವಿವಿದೆಡೆಗಳಲ್ಲಿ ನಡೆಯುತ್ತಿರುವ 'ಕರ್ನಾಟಕ ಓದು' ಕಮ್ಮಟ ಈಗ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದೆ. ದಿನಾಂಕ 01.09.2012 ಮತ್ತು02.09.2012 ಶನಿವಾರ ಬೆಳಿಗ್ಗೆ 10ರಿಂದ ಭಾನುವಾರ ಸಂಜೆ 5ರವರೆಗೆ. ದೊಡ್ಡಬಳ್ಳಾಪುರದ ಕನ್ನಡ ಹೋರಾಟಗಾರ ತ.ನ.ಪ್ರಭುದೇವ್ ಅವರ ತೋಟದಲ್ಲಿ (ಹಳ್ಳಿಮನೆನಿಸರ್ಗಧಾಮ, ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರಕ್ಕೆ ಹೋಗುವ ರಸ್ತೆ, ತಿಮ್ಮಸಂದ್ರಕ್ಕಿಂತ ಮೊದಲು ಸಿಗುತ್ತದೆ.) 'ಬಯಲು ಬಳಗ' ಈ ಕಮ್ಮಟದ ಜವಾಬ್ದಾರಿ ಹೊತ್ತಿದೆ.

ಇದು ನಿಮಗೆ ಅಧಿಕೃತ ಆಹ್ವಾನ.

ದಯಮಾಡಿ ತಮ್ಮ ಭಾಗವಹಿಸುವಿಕೆಯ ಕುರಿತು ಒಂದು ರೀಪ್ಲೇ ಅಥವಾ ಫೋನ್ ಕಾಲ್ ನಿರೀಕ್ಷಿಸುತ್ತೇವೆ. ಶನಿವಾರ ದೊಡ್ಡಬಳ್ಳಾಪುರದಲ್ಲಿ ಉಳಿಯಲು ವ್ಯವಸ್ಥೆ ಇರುತ್ತದೆ.

ಕಮ್ಮಟದ ವಿವರಗಳಿಗೆ ಅಟ್ಯಾಚ್ ಮಾಡಿರುವ ನುಡಿ ಡಾಕ್ಯುಮೆಂಟ್ ನೋಡಿ.

ಡಾ.ಕೆ.ವೈ.ನಾರಾಯಣಸ್ವಾಮಿ- 9739007127, ಡಾ.ರವಿಕುಮಾರ್ ಬಾಗಿ-9448881480.ಕರ‍್ನಾಟಕ ಓದು: ಕೆಲವು ಕೇಳ್ವಿಗಳು


ಕರ‍್ನಾಟಕ ಓದು ಎಂಬ ಮಾತನ್ನು ಬಳಕೆಗೆ ತಂದು ಎರಡು ವರುಶಗಳು ಕಳೆದಿವೆ. ಹಲವು ಗೆಳೆಯಲು ಬೆರೆ ಬೇರೆ ಕಡೆಗಳಲ್ಲಿ ಸೇರಿ ಮಾತುಕತೆಯಲ್ಲಿ ಕರ‍್ನಾಟಕ ಓದು ಎಂದರೇನು, ಅದು ಏಕೆ ಬೇಕು, ಅದನ್ನು ಕಟ್ಟುವ ಬಗೆ ಹೇಗೆ ಎಂಬುದನ್ನು ಕಂಡುಕೊಳ್ಳಲು ತೊಡಗಿದ್ದೇವೆ. ಕೆಲವೊಮ್ಮೆ ಮಾತಿನ ಓಟದಲ್ಲಿ ದಿಟವೆನಿಸುವ ಮಾತುಗಳು ಒಂದು ಚೌಕಟ್ಟಿಗೆ ಸಿಲುಕದೆಯೂ ಹೋಗುವುದುಂಟು. ಆಡಿದ ಮಾತುಗಳನ್ನು ಬರಹಕ್ಕೆ ಇಳಿಸಲು ಮುಂದಾಗಿರುವುದೂ ಉಂಟು. ಏನೇ ಇರಲಿ ಹೊಸಬರು ಈ ದಿಕ್ಕಿನಲ್ಲಿ ತೊಡಗಿಕೊಳ್ಳಲು ಅನುವು ದೊರೆಯ ಬೇಕಾದರೆ ಈವರಗೆ ನಡೆದ ಮಾತುಕತೆಯಲ್ಲಿ ತಲೆ ಎತ್ತಿದ ಕೇಳ್ವಿಗಳಲ್ಲಿ ಕೆಲವನ್ನು ಮತ್ತೆ ಮುಂಚೂಣಿಗೆ ತರುವುದು ಸರ ಎನಿಸಿದೆ. ಹೀಗಾಗಿ ಈ ಮುಂದಿನ ಮಾತುಗಳು.
೧.ಕರ‍್ನಾಟಕ ಓದು ಎಂಬುದು ದಾರಿಯೋ? ಇಲ್ಲವೇ ಗುರಿಯೋ? ಇಲ್ಲವೇ ಎರಡೂ ಆಗಿದೆಯೋ?
ಒಂದು ವೇಳೆ ಅದು ದಾರಿ ಎಂದು ತಿಳಿದರೆ ಆ ದಾರಿ ಹಿಡಿದು ಯವ ಗುರಿಯನ್ನು ತಲುಪಬೇಕು ಎಂಬುದು ನಮಗೆ ಗೊತ್ತಿರಬೇಕು. ಹಾಗಿಲ್ಲದಿದ್ದರೆ ಅದು ಸೆಳೆದೊಯ್ಯುವ ಕಡೆಗೆ ಸಾಗುತ್ತೇವೆ. ಬದಲಿಗೆ ಅದನ್ನು ಗುರಿ ಎಂದು ತಿಳಿದರೆ ಆ ಗುರಿಯನ್ನು ತಲುಪಲು ಇರುವ ದಾರಿ ಯಾವುದು ಎಂದು ಗೊತ್ತಿರ ಬೇಕು. ಅಂತಹ ದಾರಿ ಒಂದೋ ಇಲ್ಲವೇ ಹಲವು ಇವೆಯೋ ಎಂಬುದನ್ನೂ ಗುರುತಿಸಿಕೊಳ್ಳಬೇಕು. ಆಗ ಐಆವ ದಾರಿಯನ್ನು ಆಯ್ದುಕೊಳ್ಳಬೇಕು ಎಂಬ ಕೇಳ್ವಿಯೂ ಎದುರಾಗುತ್ತದೆ. ದಾರಿ ಗೊತ್ತಿಲ್ಲದಿದ್ದರೆ ಗುರಿಯ ಹಂಬಲ ಮಾತ್ರ ಉಳಿದುಕೊಳ್ಳುತ್ತದೆ. ಒಂದು ವೇಳೆ ದಾರಿ ಗುರಿಗಳೆರಡೂ ಒಂದೇ ಎಂದು ತಿಳಿಯಬಹುದೇ? ಅಂದರೆ ದಾರಿಯಲ್ಲಿ ಸಾಗುವುದೇ ಗುರಿಯೇ ಹೊರತು ಅದಕ್ಕೆ ಬೇರೊಂದು ಗುರಿಯಿಲ್ಲ ಎಂದೂ ತಿಳಿಯಬಹುದು. ದಾರಿಯೇ ಗುರಿಯಾಗಿ ಬಿಟ್ಟಿರುತ್ತದೆ.
ಒಂದೆರಡು ಎತ್ತುಗೆಗಳ ಮೂಲಕ ಈ ಗೋಜಲನ್ನು ಬಿಡಿಸಲು ಹೊರಡೋಣ. ಕಣ್ಣು ಮತ್ತು ನೋಟದ ನಂಟನ್ನು ನೋಡಿ. ಕಣ್ಣು ಇಲ್ಲವೇ ದಿಟ್ಟಿಯು ನೋಟವನ್ನು ನಮಗೆ ಕಾಣಿಸುವ ಹತ್ಯಾರು; ಹಾಗಾಗಿ ಅದು ದಾರಿ. ನೋಟ ನಮ್ಮ ಗುರಿ;ಅದನ್ನು ಕಣ್ಣೀನ ಮೂಲಕ ನಾವು ನೋಟುತ್ತೇವೆ;ಪಡೆಯುತ್ತೇವೆ. ಆದರೆ ನಮ್ಮ ಕಣ್ಣು ನಮ್ಮ ನೋಟವನ್ನು ಹಿಡಿತದಲ್ಲಿ ಇರಿಸಿಕೊಳ್ಳುತ್ತದೆ. ಏನನ್ನು ನೋಡಬೇಕು ಮತ್ತು ಎಷ್ಟನ್ನು ನೋಡಬೇಕು ಮುಂತಾದವುಗಳನ್ನು ಕಣ್ಣು ನಮಗೆ ತಿಳಿಸಿಕೊಡುತ್ತಿರುತ್ತದೆ. ಅಂದರೆ ಕಣ್ಣು ಕೇವಲ ದಾರಿ ಮಾತ್ರ ಅಲ್ಲ ;ಅದು ನಮ್ಮ ನೋಟದ ಚಹರೆಗಳನ್ನು ಕಟ್ಟುವ ಕೆಲಸವನ್ನೂ ಮಾಡುತ್ತದೆ. ದಾರಿ ಮತ್ತು ಗುರಿಗಳು ಹೀಗೆ ಒಂದರೊಡನೊಂದು ಬೆಸೆದುಕೊಂಡಿರುತ್ತವೆ.
ಇನ್ನೊಂದು ಕಡೆಯಿಂದ ಇದನ್ನು ನೋಡೋಣ. ದೀಪದ ಬೆಳಕು ನಮಗೆ ಏನನ್ನಾದರೂ ನೋಡಲು ನೆರವಾಗುತ್ತದೆ. ಆ ಬೇಕಿಲ್ಲದಿದ್ದರೆ ಕತ್ತಲು.ಹಾಗಾಗಿ ಏನೂ ಕಾಣದು. ಹೀಗಿರುವಾಗ ದೀಪವು ನಮಗೆ ನಾವು ನೋಡಬೇಕಾದುದನ್ನು ತೋರಿಸುತ್ತದೆ. ನಾವು ನೋಡುತ್ತಿರುವುದು ದೀಪವನ್ನು ಬಿಟ್ಟಿರುವುದನ್ನಲ್ಲ. ಏಕೆಂದರೆ ದೀಪದ ಬೆಳಕಿನಲ್ಲಿ ನಮಗೆ ದೀಪವೂ ಕಾಣಿಸುತ್ತಿರುತ್ತದೆ. ಅಂದರೆ ಇಲ್ಲಿಯೂ ಕೂಡ ದಾರಿ ಮತ್ತು ಗುರಿಗಳು ಒಂದರೊಡನೊಂದು ಹೆಣೆದುಕೊಂಡಿರುವುದು ಗೊತ್ತಾಗುತ್ತದೆ.
ತಿಳಿವನ್ನು ಪಡೆಯಲು ದಾರಿಗಳನ್ನು ಹುಡುಕುವಾಗ ನಾವು ಆಯ್ದುಕೊಳ್ಳುವ ದಾರಿಯು ನಾವು ಯಾವ ತಿಳಿವನ್ನು ಪಡೆಯಬೇಕು ಎಂಬುದನ್ನೂ ಹಿಡಿತದಲ್ಲಿರಿಸಿಕೊಂಡಿರುತ್ತದೆ. ಆದ್ದರಿಂದ ನಾವು ದಾರಿಯನ್ನು ಆಯ್ದುಕೊಳ್ಳುವಾಗ ಎಚ್ಚರವಹಿಸಬೇಕಾಗುತ್ತದೆ. ಇಲ್ಲದಿದ್ದರೆ ನಾವು ನಮಗೆ ಬೇಕಾದನ್ನು ನೋಡುವ ಬದಲು ನೋಡಿದ್ದನ್ನೇ ನಮಗೆ ಬೇಕಾದದ್ದು ಎಂದು ತಿಳಿಯುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಓದು ಎಂಬುದನ್ನು ಅರಿಯಲು ಮುಂದಾಗಬೇಕಿದೆ.
೨. ನಾವು ತಿಳಿದದ್ದು ಕೇವಲ ತಿಳಿವಾಗಿರುತ್ತದೋ ಇಲ್ಲವೇ ಅದು ನಮ್ಮ ಬದುಕನ್ನು ಬದಲಿಸಲು ನೆರವಾಗುತ್ತದೋ?
ಈಗ ನಾವು ಪಡೆಯುತ್ತಿರುವ ಕಲಿಕೆ ನಮ್ಮಲ್ಲಿ ಇದು ಸರಿ ಇದು ತಪ್ಪು ಎಂಬ ತಿಳಿವನ್ನು ಮೂಡಿಸಲು ಹೆಣಗುತ್ತದೆ.ಈ ಮಾತನ್ನೂ ಹೀಗೂ ಹೇಳಬಹುದು. ಯಾವುದೇ ಇರಲಿ ಅದನ್ನು ಬೇಕು/ಬೇಡ.ಸರಿ/ತಪ್ಪು. ದಿಟ/ಸಟೆ, ಬೆಳೆಸಬೇಕಾದ್ದು/ ಹೊಸಕಬೇಕಾದ್ದು ಎಂದು ಒಡೆದು ನೋಡಲು ಬರುತ್ತದೆ ಎಂದು ಕಲಿಸಲಾಗುತ್ತದೆ. ಎತ್ತುಗೆಗಾಗಿ ಒಂದು ಮಾತನ್ನು ನೋಡೋಣ: ಹೆಚ್ಚು ಬೆಳೆದರೆ ಎಲ್ಲರ ಹಸಿವು ಹಿಂಗುತ್ತದೆ ಎಂದು ಹೇಳಿದರೆ ಅದನ್ನು ಸರಿ ಎಂದು ತಿಳಿಯುತ್ತೇವೆ. ಹೆಚ್ಚು ಬೆಳೆಯಲು ಇರುವ ದಾರಿಗಳನ್ನು ಹುಡುಕುತ್ತೇವೆ. ಹೀಗೆ ಹೆಚ್ಚು ಬೆಳೆಯುವಾಗ ಕಳೇದುಕೊಂಡದ್ದೇನು ಮತ್ತು ಹೆಚ್ಚು ಬೆಳೆದರೂ ಅದು ಎಲ್ಲರ ಹಸಿವನ್ನು ಏಕೆ ಹಿಂಗಿಸುವುದಿಲ್ಲ ಎಂಬ ಕೇಳ್ವಿಯನ್ನು ನಾವು ಎದುರಿಸುವುದೇ ಇಲ್ಲ. ಹೀಗೆ ಕೇಳಿಕೊಳ್ಳುವುದನ್ನು ಕಲಿಕೆಯು ನಮ್ಮಲ್ಲಿ ಬೆಳೆಸಿಲ್ಲ. ಅಂದರೇನಾಯ್ತು? ತಿಳಿವನ್ನು ಬದುಕಿನಲ್ಲಿ ನೆಲೆಗೊಳಿಸಿಕೊಳ್ಳುವಾಗಲೂ ಎಚ್ಚರ ಬೇಕಾಗುತ್ತದೆ. ಏಕೆಂದರೆ ಆ ತಿಳಿವು ಒಂದು ತುಂಬಲಾರದ ಕಂದಕವನ್ನೇ ತೋಡುತ್ತಿರಬಹುದು ಎಂಬ ಅರಿವೂ ನಮ್ಮಲ್ಲಿ ಇರುವುದಿಲ್ಲ. ಹಾಗಾಗಿ ತಿಳಿವು ಎಂಬುದು ತನಗೆ ತಾನೇ ಬಿಡಿಯದ ಮಾತಲ್ಲ. ಅದು ಬದುಕಿನೊಡನೆ ಪಡೆದುಕೊಳ್ಳುವ ನಂಟನ್ನು, ಬೆಸುಗೆಯನ್ನು ಅರಿತೇ ಅದನ್ನು ನಾವು ಬೇಕಾದುದೋ ಅಲ್ಲವೋ ಎಂಬುದನ್ನು ಗುರುತಿಸಿಕೊಳ್ಳಬೇಕಾಗುವುದು. ಕರ‍್ನಾಟಕ ಓದು ಎಂಬುದು ತಿಳಿವನ್ನು ಪಡೆದುಕೊಳ್ಳವು ಹತ್ಯರು ಮಾತ್ರವಾಗಿ ಉಳಿಯದೇ ಆ ತಿಳಿವು ನಮ್ಮ ಹಸನಾದ ಬದುಕಿಗೆ ಬೇಕೋ ಬೇಡವೋ ಎಂಬುದನ್ನೂ ಕೂಡ ನಮಗೆ ತಿಳಿಸಿಕೊಡುವಂತೆ ಆಗಬೇಕು.
ಈಗ ಮೊದಲಿಗೆ ಬರೋಣ. ತಿಳಿವು ನಮ್ಮ ಗುರಿಯಾಗುವುದಾದರೆ ಆಗ ಅದನ್ನು ಪಡೆದುಕೊಳ್ಳುವ ಹತ್ಯಾರುಗಳು ಕೂಡ ನಮ್ಮ ಬಗಲಲ್ಲಿ ಇರಬೇಕಾಗುತ್ತದೆ. ನಮ್ಮ ಬೇಕುಗಳಿಗೆ ತಕ್ಕಂತೆ ಈ ಹತ್ಯಾರುಗಳೂ ಕೂಡ ಬದಲಾಗುತ್ತಲೇ ಇರಬೇಕಾಗುತ್ತದೆ. ಈ ಮಾತು ಗಮನದಲ್ಲಿರಬೇಕು. ಏಕೆಂದರೆ ಬದಲಾಗದ ಹತ್ಯಾರುಗಳಿಲ್ಲ. ಅಂದರೆ ಕರ‍್ನಾಟಕ ಓದು ಎಂಬುದು ಅಚ್ಚುಕಟ್ಟಾದ ಹೇಳಿಕೆಗಳ ಚೌಕಟ್ಟಲ್ಲ. ಅದು ಬಳಕೆಯಿಂದ ಕಟ್ಟುವ ಮತ್ತು ಬೇಕೆಂದಾಗ ಬದಲಾಗುವ ಹತ್ಯಾರು ಎಂಬುದನ್ನು ಮರೆಯಬಾರದು.
೩. ಲೋಕದಲ್ಲಿ ನಾಡುಗಳ ಗಡಿಗೆರೆಗಳು ತೆಳುವಾಗುತ್ತಿರುವಾಗ ಕರ‍್ನಾಟಕ ಓದು ಎಂಬುದು ನಮ್ಮನ್ನು ಹೆಳವರನ್ನಾಗಿ ಮಾಡುವುದಿಲ್ಲವೇ?
ಪೈಪೋಟಿ ಮತ್ತು ನಾಳೆಗಾಗಿ ಈಹೊತ್ತನ್ನು ಮುಡಿಪಿಡುವುದು ಇವೆರಡೂ ನಮ್ಮ ಇಂದಿನ ಬದುಕಿನ ನೆಲೆಗಳಾಗಿವೆ. ಪೈಪೋಟಿ ಇಲ್ಲದೆಯೂ ಇಂದಿನ ದಂದುಗವನ್ನು ನಡೆಸುತ್ತಿರುವ ಜನರ ಬದುಕು ಇದರಿಂದ ನಮ್ಮ ಕಣ್ಣೆದುರಿಗೆ ಬರುವುದೇಇಲ್ಲ. ಇಡೀ ಲೋಕದಲ್ಲಿ ಏನು ನಡೆಯುತ್ತಿದೆ ಅದು ನಮಗೂ ತಿಳಿಯಬೇಕು, ನಾವು ಹಾಗೇ ಅಗಬೇಕು ಎಂಬ ಹಂಬಲದ ಕೈಮೇಲಾದರೆ ಆಗ ನಾವು ಈಹೊತ್ತನ್ನು ಬಲಿಕೊಡುತ್ತೇವೆ. ’ನಮ್ಮ ಚಿಂತೆ ನಮಗೆ ಹಾಸಲುಂಟು ಹೊದೆಯಲುಂಟು’ ಎಂದ ಬಸವಣ್ಣನ ಮಾತನ್ನು ನಾವು ಜನರ ನೋವಿಗೆ ಬೆನ್ನುಮಾಡಿದ ಮಾತೆಂದು ತಿಳಿಯಬಾರದಲ್ಲವೇ?
ಈ ಕೇಳ್ವಿಯನ್ನು ಕೆಲವರು ಇನ್ನೂ ಒಂದು ನಿಟ್ಟಿನಲ್ಲಿ ಮುಂದಿಡುತ್ತಾರೆ. ಲೋಕದ ಯಾವುದೋ ಮೂಲೆಯಲ್ಲಿ ನಡೆಯುತ್ತಿರುವುದು ಇಲ್ಲಿ ನಮ್ಮ ಮೇಲೆ ಹಿಡಿತ ಪಡೆಯುತ್ತಿರುವುದರಿಂದ ನಾವು ಎಲ್ಲವನ್ನು ಒಂದು ಚೌಕಟ್ಟಿನಲ್ಲಿ ಇರಿಸಿ ನೋಡಬೇಕೇ ಹೊರತು ಬಿಡಿಯಾಗಿ ನೋಡುವುದರಿಂದ ನಮಗೆ ಬರಲಿರುವ ಹೊಡೆತಗಳ ಅರಿವು ನಮಗೆ ಗೊತ್ತಾಗದೇ ಹೋಗುತ್ತದೆಯಲ್ಲವೇ? ಮಾರುಕಟ್ಟೆಯ ತೋಳುಗಳು ಉದ್ದವಾಗುತ್ತಿರುವುದನ್ನು ಕಂಡವರು ಈ ಮಾತನ್ನು ನಮ್ಮ ಮುಂದೆ ಇಡುತ್ತಿದ್ದಾರೆ. ದಿಟ. ರೋಗ ಮತ್ತು ಅದರ ಮದ್ದು ಎರಡೂ ಒಂದೇ ಬೇರಿನಿಂದ ಹುಟ್ಟುತ್ತವೆ ಎಂದು ತಿಳಿದರೆ ಮಾತ್ರ ಈ ಗೊಂದಲ ಮುಂದುವರೆಯುತ್ತದೆ. ರೋಗ ಎಲ್ಲಿಂದಲೇ ಹುಟ್ಟಿರಲಿ ಮದ್ದು ನಮ್ಮಲ್ಲೇ ಇರಬೇಕು ಎಂಬ ತಿಳಿವು ನಮ್ಮಲ್ಲಿ ಮೂಡದಿದ್ದರೆ ಆಗ ಈಗಿರುವ ಲೋಕದ ಚಿಂತೆಯ ಹಂಗಿನಿಂದ ನಾವು ಹೊರಬರಲಾರೆವು. ಪೈಪೋಟಿಯಲ್ಲಿ ಕೈಕಾಲು ಸೋಲುವುದರಿಂದ ತಪ್ಪಿಸಿಕೊಳ್ಳಲಾರೆವು.

ಸೆಪ್ಟೆಂಬರ್ ೧ ಮತ್ತು ೨ ರಂದು ನಡೆಯುವ ಕಮ್ಮಟದ ವೇಳಾಪಟ್ಟಿ
೦೧.೦೯.೨೦೧೨
೧೦:೩೦-೧೨:೦೦ ಟಿಪ್ಪಣಿಯನ್ನು ಚರ್ಚಿಸುವುದು
೧೨:೧೫-೧:೪೫ ಟಿಪ್ಪಣಿಯನ್ನು ಚರ್ಚಿಸುವುದು
೧:೪೫-೨:೩೦ ಊಟ
೨:೩೦-೪:೦೦ ಒಳಗೊಳ್ಳುವಿಕೆ ಎಂದರೇನು? (ಗುಂಪು ಚರ್ಚೆ)
೪:೧೫-೫:೪೫ ಒಳಗೊಳ್ಳುವಿಕೆ ಎಲ್ಲರೊಡನೆ ಮಾತು
೦೨.೦೯.೨೦೧೨
೯:೩೦-೧೧:೦೦ ಕಲಿಕೆಯ ಹಕ್ಕು: ಎದುರಾಗಿರುವ ಸವಾಲುಗಳು (ಗುಂಪು ಚರ್ಚೆ)
೧೧:೧೫-೧೨:೪೫ ಕಲಿಕೆಯ ಹಕ್ಕು: ಎಲ್ಲರೂ ಕೂಡಿ ಮಾತು
೧೨:೪೫-೧:೩೦ ಊಟ
೧:೩೦-೩:೦೦ ಬರೆಯುವ ಕೆಲಸ
೩:೧೫-೪:೪೫ ಬರಹವನ್ನು ತಿದ್ದುವ ಕೆಲಸ

ಗಾಂಧೀಜಿಯ ಸ್ವಾತಂತ್ರ್ಯ; ಅಂಬೇಡ್ಕರ್ ಸಂವಿಧಾನ.
– ಡಾ. ಮೊಗಳ್ಳಿ ಗಣೇಶ್

ಆಧುನಿಕ ಭಾರತವನ್ನು ರೂಪಿಸಿದವರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದವರೆಂದರೆ ಗಾಂಧಿ ಮತ್ತು ಅಂಬೇಡ್ಕರ್. ಕತ್ತಲ ಕೂಪವಾಗಿದ್ದ ಭಾರತಕ್ಕೆ ಇವರಿಬ್ಬರ ಹೋರಾಟ ಮತ್ತು ಚಿಂತನೆಗಳು ಅಪಾರವಾದ ಜೀವ ತುಂಬಿವೆ. ತಿರಸ್ಕೃತ ಸಮಾಜಗಳಿಗೆ ಇವರಿಬ್ಬರು ಅಸ್ತಿತ್ವ ರೂಪಿಸಿದ ನಾಯಕರ ರೀತಿಯಲ್ಲೆ ಕಾಣುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ಭಾರತ ದೇಶದ ಮಾನವೀಯ ಪ್ರಜ್ಞೆಯ ಸಂಕೇತ. ಬಿಡುಗಡೆಯ ಅಖಂಡ ಪ್ರತಿರೋಧ ಶಕ್ತಿಯ ಚೈತನ್ಯವಾಗಿ ಇವರು ಸಮಾಜಗಳನ್ನು ಮುನ್ನಡೆಸಿದರು. ನೈತಿಕತೆಯ ಪರಮಾದರ್ಶ ಗಾಂಧಿ ಮತ್ತು ಅಂಬೇಡ್ಕರ್. ಎಲ್ಲ ನೊಂದವರ ಹೊರಗಣ್ಣಾಗಿ ಗಾಂಧಿ ಕಂಡರೆ ಅಂತವರ ಒಳಗಣ್ಣಾಗಿ ಅಂಬೇಡ್ಕರ್ ಗೋಚರವಾಗುತ್ತಾರೆ. ಈ ಎರಡೂ ದೃಷ್ಟಿಗಳು ಸದಾ ಒಂದನ್ನೊಂದು ಅಂತರ್ಗತಿಸಿಕೊಂಡು ಬೆಳಕಿನ ಹಾದಿಯಲ್ಲಿ ದೇಶವನ್ನೂ ಸಮೂಹವನ್ನೂ ನಡೆಸಿವೆ. ದೇಶದ ಹೊರ ಮೈಯ ಹೊರಗಣ್ಣಿನಂತೆಯೆ ಗಾಂಧೀಜಿ ಇದ್ದರು. ಒಂದು ದೇಶದ ಅಂತಃಸಾಕ್ಷಿಯನ್ನು ಬಲ್ಲವರಾಗಿದ್ದ ಅವರು ಸದಾ ಸಮಾಜದ ಹಿತಕ್ಕಾಗಿ ತಮ್ಮನ್ನು ತಾವು ದಂಡಿಸಿಕೊಳ್ಳುತ್ತಿದ್ದರು. ವಶಾಹತುಶಾಹಿ ಜಗತ್ತನ್ನು ನಿರಾಕರಿಸಿದ್ದ ಅವರ ಪ್ರತಿರೋಧವು ದೇಶದ ಅಂತಃಸತ್ವದಿಂದಲೆ ಬಂದುದಾಗಿತ್ತು.

ಗಾಂಧೀಜಿಯವರನ್ನೂ ಅಂಬೇಡ್ಕರ್ ಅವರನ್ನೂ ನಾವು ನಮ್ಮ ಅಗತ್ಯಗಳ ಎರಕದಿಂದ ಕಂಡುಕೊಂಡಿರುತ್ತೇವೆ. ನಮ್ಮ ಅನಿವಾರ್ಯತೆಗಳನ್ನು ಮೀರಿದ ವ್ಯಕ್ತಿತ್ವ ಅವರದು. ಒಂದು ಸಮಾಜದ ಅಗತ್ಯದಿಂದ ರೂಪುಗೊಳ್ಳುವ ವ್ಯಕ್ತಿತ್ವಗಳು ಅದರ ಒಟ್ಟು ಮೌಲ್ಯವ್ಯವಸ್ಥೆಯನ್ನೆ ನಿರ್ಮಿಸುತ್ತಿರುತ್ತವೆ. ಗಾಂಧಿ, ಅಂಬೇಡ್ಕರ್ ಹಾಗಾಗಿಯೆ ಭಾರತದ ಅಂತಃಸತ್ವದ ಎರಡು ವಿಶಿಷ್ಟ ವ್ಯಕ್ತಿತ್ವಗಳು. ಅಂತೆಯೆ ಈ ಸಮಾಜಗಳ ಅಂತಃಕರಣಕ್ಕಾಗಿ ಕೊನೆತನಕ ಹೋರಾಡಿದ ಚೈತನ್ಯಗಳು. ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ವೈರುಧ್ಯಗಳು ನಮ್ಮ ವೈರುಧ್ಯಗಳಾಗಬೇಕಾಗಿಲ್ಲ. ಅವರವರ ಬೌದ್ಧಿಕ ಸಂಘರ್ಷದ ಕಥನಗಳು ಮೇಲು ಪದರಿನಲ್ಲಿ ಭಿನ್ನವಾಗಿದ್ದರೂ ಆ ಭಿನ್ನತೆಯ ನಡುವೆಯೆ ಇಬ್ಬರೂ ದಲಿತ ಸಮಾಜದ ಮುಕ್ತಿಯ ಕಡೆಗೆ ಪ್ರಾಮಾಣಿಕವಾಗಿ ದುಡಿದವರು. ಬುದ್ಧನನ್ನು ಹೊರತು ಪಡಿಸಿದರೆ ದಲಿತರ ಮೇಲೆ ಅಪಾರ ಪ್ರೇಮ, ಅಂತಃಕರಣ ಹಾಗೂ ಘನತೆ ಇದ್ದದ್ದು ಗಾಂಧೀಜಿಗೆ ಮಾತ್ರ. ಅಂಬೇಡ್ಕರ್ ಅವರಿಗೆ ತಂತಾನೆ ಅಗಾಧವಾದ ಹೊಣೆಗಾರಿಕೆ ದಲಿತರ ಪರವಾಗಿ ಇತ್ತು. ಒಂದು ದೇಶವನ್ನು ಪ್ರೀತಿಸಿದಷ್ಟೆ ಸಮನಾಗಿ ಗಾಂಧೀಜಿ ಆ ದೇಶದ ಎಲ್ಲರನ್ನು ಗೌರವಿಸುತ್ತಿದ್ದರು. ಅವರ ನಿಷ್ಠೆಯು ಪ್ರಶ್ನಾತೀತವಾದುದು. ಗಾಂಧೀಜಿಗೆ ದಲಿತರಷ್ಟೇ ಅಂತಿಮವಾಗಿರದೆ ಇಡೀ ಮನುಕುಲವೆ ಸುಖವಾಗಿ ಸರ್ವೊದಯದ ಹಾದಿಯಲ್ಲಿ ಅನಂತತೆಯ ಕಡೆಗೆ ಸಾಗಬೇಕು ಎಂಬ ಮಹಾಶಯವಿತ್ತು. ವಸಾಹತುಶಾಹಿಯ ಮೂಲಕವೇ ಗಾಂಧೀಜಿ ಇಪ್ಪತ್ತನೆ ಶತಮಾನವನ್ನು ಅದರ ಎಲ್ಲ ಸಾಧ್ಯತೆಗಳಿಂದ ಗ್ರಹಿಸಿದ್ದರಿಂದ ಸಾಮ್ರಾಜ್ಯವನ್ನು ನಿರಾಕರಿಸುತ್ತಲೆ ಸಮಾಜದ ಒಳಗಿನ ಜಾತಿಯ ವೈರುಧ್ಯಗಳನ್ನು ಕಳೆದುಕೊಳ್ಳಬೇಕಾಗಿತ್ತು.

ಈ ಪರಿಯ ಸವಾಲು ವರ್ಗದ ಸವಾಲುಗಳನ್ನು ಬಿಡಿಸಿಕೊಂಡಷ್ಟು ಸರಳವಾಗಿರಲಿಲ್ಲ. ವರ್ಗಗಳು ಕಾಣಲ್ಪಡುವ ಶೋಷಣೆಯ ವ್ಯವಸ್ಥೆಯಾದರೆ; ಜಾತಿಯ ಹಿಂಸೆಯು ಧಾರ್ಮಿಕ ಅಧಿಕಾರದಲ್ಲಿ ಪ್ರಶ್ನಾತೀತವಾಗಿ ನಡೆವ ‘ಕರ್ಮ’ವಾಗಿ ಪರಿಣಮಿಸಿದ್ದರಿಂದ ಅದು ಸಮಾಜಕ್ಕೆ ಬೇಕಾದ ವ್ಯವಸ್ಥೆಯೆ ಆಗಿ ಬೆರೆತುಹೋಗಿತ್ತು. ಅದರ ಬೇರುಗಳು ಕಾಣದ ಆಯಕಟ್ಟುಗಳಲ್ಲಿ ಸಮಾಜವನ್ನು ನಿಯಂತ್ರಿಸುತ್ತಿತ್ತು. ಗಾಂಧೀಜಿ ಇಂತಹ ದುರವಸ್ಥೆಯನ್ನು ಸರಿಪಡಿಸಲು ಪ್ರಯತ್ನಿಸಿದಂತೆಲ್ಲ ಅವರ ಹಿಂಬಾಲಕರೇ ಅದನ್ನು ಗುಪ್ತವಾಗಿ ಉಳಿಸಿಕೊಳ್ಳುತ್ತಿದ್ದರು. ಅದರ ಪ್ರಾಯಶ್ಚಿತ್ತಕ್ಕೋ ಎಂಬಂತೆ ಗಾಂಧೀಜಿ ಪ್ರತಿ ಹೋರಾಟದ ಸಂದರ್ಭದಲ್ಲಿ ಮಹಿಳೆಯರು ಹಾಗೂ ಅಸ್ಪೃಶ್ಯರು ಚಳುವಳಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಅಷ್ಟರ ಮಟ್ಟಿಗೆ ನಮ್ಮ ಹೋರಾಟ ವಿಫಲವೇ ಎಂದು ಭಾವಿಸುತ್ತಿದ್ದರು. ಗಾಂಧೀಜಿಯವರ ನೈತಿಕತೆಯನ್ನು ತಾಳ್ಮೆಯಿಂದ ಗಮನಿಸಬೇಕು. ದಲಿತರನ್ನು, ಅದರಲ್ಲಿ ಮಲ ಹೊರುವ ಭಂಗಿಗಳನ್ನು ಗಾಂಧೀಜಿ ಕಂಡು ಅಪಾರವಾಗಿ ಅವರ ‘ಸೇವೆ’ಯಲ್ಲಿ ತಾವೂ ಗುರುತಿಸಿಕೊಂಡು ತಮ್ಮ ಆಶ್ರಮದಲ್ಲಿ ಉಳಿಯಲು ಬಂದವರೂ ಕೂಡ ಕಡ್ಡಾಯವಾಗಿ ಮಲ ತೊಳೆವ ಕರ್ಮವನ್ನು ಮಾಡಬೇಕು ಎಂದು ಕೋರುತ್ತಿದ್ದರು. ಈ ಕೆಲಸವನ್ನು ಸ್ವತಃ ತನ್ನ ಮಡದಿಯ ಮೂಲಕವೂ ಗಾಂಧೀಜಿ ಮಾಡಿಸುತ್ತಿದ್ದರು. ಒಂದು ಕಡೆ ವಸಾಹತುಶಾಹಿ ಸಾಮ್ರಾಜ್ಯದ ವಿರುದ್ಧ ಹೋರಾಡುತ್ತಲೇ ಇನ್ನೊಂದೆಡೆ ಸಮಾಜದ ಹೇಯ ಜಾತಿಪದ್ಧತಿಯ ಸುಧಾರಣೆಯ ಬಗೆಗೂ ಗಾಂಧೀಜಿ ಅವಿಶ್ರಾಂತವಾಗಿ ಚಿಂತಿಸುತ್ತಿದ್ದರು. ‘ಹರಿಜನ್’ಎಂಬ ಹೆಸರಿನಲ್ಲಿ ಪತ್ರಿಕೆಯನ್ನು ಆರಂಭಿಸಿದ ಮೊದಲಿಗರು ಅವರು. ಅಸ್ಪೃಶ್ಯತೆಯ ಮಹಾಸಾಮ್ರಾಜ್ಯವು ಇವತ್ತಿಗೂ ಇಷ್ಟೊಂದು ಪ್ರಮಾಣದಲ್ಲಿ ವ್ಯಾಪಿಸಿಕೊಂಡಿರುವಾಗ; ಪತ್ರಿಕೋದ್ಯಮದಲ್ಲಂತೂ ಅದರ ಸಾಮಥ್ರ್ಯ ದ್ವಿಗುಣಿಸಿರುವಾಗ; ಅದರ ವಿರುದ್ಧ ಬರೆಯಲು ಹೋರಾಡಲು ಆಗದಿರುವಾಗ; ಇನ್ನು ಆ ಕಾಲದಲ್ಲಿ ಗಾಂಧೀಜಿ ‘ಹರಿಜನ್’ ಹೆಸರಿನಲ್ಲಿ ಪತ್ರಿಕೆ ಆರಂಭಿಸಿದ್ದು ಸಣ್ಣ ಸಂಗತಿಯಲ್ಲ. ಅಸ್ಪೃಶ್ಯರ ಗುರುತಿನಲ್ಲಿ ಅವರ ಪರವಾಗಿ ಬರೆಯಲು ಒಂದು ಪತ್ರಿಕೆಯನ್ನು ಆರಂಭಿಸಿದ್ದು ಚಾರಿತ್ರಿಕವಾಗಿತ್ತು. ಅಖಂಡವಾಗಿ ಸಮಾಜವನ್ನು ಭಾವಿಸುತ್ತಿದ್ದ ಗಾಂಧೀಜಿಗೆ ಅನಿವಾರ್ಯವಾಗಿ ಸಮಾಜದ ಎಲ್ಲರ ಹಿತದ ಜೊತೆಯೇ ಅಸ್ಪೃಶ್ಯರ ಪರವಾಗಿ ಚಿಂತಿಸಬೇಕಾಗಿತ್ತು. ಇದು ಅತ್ಯಂತ ಕಠಿಣವಾದ ಚಿಂತನೆಯ ದಾರಿ. ಕೊಲ್ಲುವವನನ್ನೂ ಕೊಲ್ಲಿಸಿಕೊಳ್ಳುವವನನ್ನೂ ಇಬ್ಬರನ್ನೂ ಹೆಗಲ ಮೇಲೆ ಕೂರಿಸಿಕೊಂಡು ವಶಾಹತುಶಾಹಿ ಸಾಮ್ರಾಜ್ಯದ ಸಮುದ್ರವನ್ನು ಹಾಯುತ್ತಿದ್ದ ಗಾಂಧೀಜಿಗೆ ವೈರುಧ್ಯಗಳು ಎದುರಾದದ್ದು ಸಾಮಾನ್ಯ. ಗಾಂಧಿ ಇಂತಹ ಪ್ರಬಲ ವೈರುಧ್ಯವನ್ನು ತಾಯ್ತನದ ಅಂತಃಕರಣದಲ್ಲಿ ಹೊತ್ತುಕೊಂಡೇ ಇಬ್ಬರ ನಡುವೆಯು ವಿಶ್ವಾಸವನ್ನು ಅಂತಃಕರಣದ ನೀತಿಯನ್ನು ತರಲು ಯತ್ನಿಸುತ್ತಿದ್ದರು. ಭಾರತದ ಯಾವ ತತ್ವ ಪ್ರವರ್ತಕರಿಗೂ ಇಂತಹ ಧ್ಯಾನವಾಗಲೀ, ಅನಂತವಾದ ಸಮುದಾಯ ಪ್ರೀತಿಯಾಗಲೀ ಇರಲಿಲ್ಲ. ಬುದ್ಧ ಇಂಥದನ್ನು ಸಾಧಿಸಿದ್ದ. ಹಿಂದೂ ಧರ್ಮದ ಯಾವ ಆಚಾರ್ಯರೂ ಇಂತಹ ದಾರಿಯಲ್ಲಿ ಒಂದಿಷ್ಟು ಹೆಜ್ಜೆಯನ್ನೂ ಇಡಲು ಆಗಿರಲಿಲ್ಲ. ಬಸವಣ್ಣ ಒಂದಷ್ಟು ದೂರ ಧೀರತೆಯಲ್ಲಿ ಸಾಗಿದ್ದು ನಿಜ. ಹಿಂದೂ ಧರ್ಮವು ಜಾತಿಯ ತರ್ಕವನ್ನು ಅಡಗಿಸಿಟ್ಟುಕೊಂಡಿದ್ದರಿಂದ ಅದರ ಬಹುಪಾಲು ಪ್ರವರ್ತಕರು ಅಲ್ಲಲ್ಲೇ ನಿಂತು ಹೋದರು.

ಗಾಂಧೀಜಿ ಆಧುನಿಕ ಇಪ್ಪತ್ತನೆ ಶತಮಾನದ ಅಖಂಡ ಸ್ವಾತಂತ್ರ್ಯದ ದಾಹದಲ್ಲಿ ಹೋರಾಡಿದ್ದು ಅಸಾಮಾನ್ಯವಾದುದು. ದಾರ್ಶನಿಕನ ಎಲ್ಲ ಗುಣಗಳು ಗಾಂಧೀಜಿಗೆ ಇದ್ದವು. ಅದರಲ್ಲೂ ತಾಯ್ತನ ಅವರಲ್ಲಿ ಅವಿನಾಭಾವವಾಗಿ ಕೂಡಿಕೊಂಡಿತ್ತು. ಜಗತ್ತಿನ ಎಲ್ಲ ಶ್ರೇಷ್ಠ ಚಿಂತಕರು, ದಾರ್ಶನಿಕರು, ಹೋರಾಟಗಾರರು, ಕವಿಗಳು ಮತ್ತು ವಿಜ್ಞಾನಿಗಳು ತಾಯ್ತನ ಸ್ವಭಾವದವರು. ಇಂತಹ ತಾಯ್ತನದವರು ಸದಾ ಸ್ವಾತಂತ್ರ್ಯದ ಪರಮ ನೆಲೆಯನ್ನೇ ಧ್ಯಾನಿಸುತ್ತಿರುತ್ತಾರೆ. ಟಾಲ್ ಸ್ಟಾಯ್ ಗೆ ಇದ್ದ ಸೌಂದರ್ಯ ಪ್ರಜ್ಞೆ ಗಾಂಧಿಗೂ ಇತ್ತು. ಅಂತೆಯೇ ಐನ್ ಸ್ಟೈನ್ ಗೆ ಇದ್ದ ಸತ್ಯ ಶೋಧನೆಯ ಗುಣವೂ ಗಾಂಧಿಗೆ ಇತ್ತು. ಈ ತರಹದ ಎರಡೂ ಭಾವನೆಗಳು ಗಾಂಧಿಯ ಚಿಂತನೆಯಲ್ಲಿ ಇದ್ದಿದ್ದರಿಂದಲೇ ಅವರ ವ್ಯಕ್ತಿತ್ವದಲ್ಲಿ ಅನೇಕ ವೈರುಧ್ಯಗಳೂ, ವಿಚಿತ್ರ ಸ್ವಭಾವಗಳೂ ಕಾಣುತ್ತವೆ. ಸ್ವಾತಂತ್ರ್ಯದ ಬಗ್ಗೆ ಗಾಂಧೀಜಿ ಹೋರಾಡಿದವರು ಎಂದರೆ ಅದು ಕಡಿಮೆ ಮಾತಾಗುತ್ತದೆ. ಸ್ವಾತಂತ್ರ್ಯದ ಅಪರಿಮಿತ ಧ್ಯಾನದ ಕಡೆಗೆ ಗಾಂಧಿ ನಡೆದವರು. ಸ್ವಾತಂತ್ರ್ಯವೆ ಅವರಿಗೆ ವಿಮುಕ್ತಿ. ಸ್ವಾತಂತ್ರ್ಯವನ್ನು ಗಾಂಧಿ ಎಂದೂ ಬಿಡಿಯಾಗಿ ನೋಡುತ್ತಿರಲಿಲ್ಲ. ಸ್ವಾತಂತ್ರ್ಯದ ಅಂತರ್ಜಲದ ಹಾದಿಯನ್ನು ಗಾಂಧಿ ಬಲ್ಲವರಾಗಿದ್ದರು. ವ್ಯಕ್ತಿಯ ಮುಕ್ತಿಮಾರ್ಗಕ್ಕಿಂತ ದೇಶದ ಮುಕ್ತಿ ಗಾಂಧಿಗೆ ಮುಖ್ಯವಾಗಿದ್ದರಿಂದಲೇ, ಇಡೀ ದೇಶದ ಉದ್ದಕ್ಕೂ ಅವರು ಅಲೆದಾಡಿ ಸಮಾಜದ ಕೊನೆಯವನ ದನಿಗೂ ಸ್ಪಂದಿಸಲು ಸಾಧ್ಯವಾಗಿದ್ದು. ಸ್ವಾತಂತ್ರ್ಯದ ದರ್ಶನ ಗಾಂಧೀಜಿಗೆ ಆಗಿತ್ತು. ಅದರಿಂದಲೆ ಅವರು ದೇಶವನ್ನು ಕಟ್ಟುವ ಕಡೆಗೆ ಯೋಚಿಸಿದ್ದು. ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಒಂದೇ ದಾರಿಯ ಪಯಣಿಗರು. ಇಬ್ಬರಲ್ಲೂ ಸ್ವಾತಂತ್ರ್ಯದ ಕಿಡಿ ಇತ್ತಾದರೂ ಅವರಿಬ್ಬರೂ ಸ್ವಾತಂತ್ರ್ಯವನ್ನು ಎರಡು ವಿಭಿನ್ನ ಧಾರೆಗಳಿಂದ ಹುಡುಕಿದರು.

ಗಾಂಧಿಗೆ ಸ್ವಾತಂತ್ರ್ಯದ ತೊಟ್ಟಿಲಲ್ಲಿ ಎಲ್ಲರನ್ನೂ ತೂಗುವ ತಿಳುವಳಿಕೆಯಿತ್ತು. ಆದರೆ ಈ ದೇಶದ ಅಂತಃಸಾಕ್ಷಿಗೆ ಸ್ವಾತಂತ್ರ್ಯ ಇಲ್ಲ ಎಂಬುದನ್ನು ಅರಿತಿದ್ದ ಅಂಬೇಡ್ಕರ್ಗೆ ಹೇಗೆ ಎಲ್ಲರನ್ನೂ ಗಾಂಧೀಜಿ ಒಂದೇ ತೊಟ್ಟಿಲಲ್ಲಿ ತೂಗುವರೋ ಎಂಬ ವಿರೋಧವಿತ್ತು. ಹೀಗಾಗಿ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಬಗ್ಗೆ ಅಂಬೇಡ್ಕರ್ ಅವರಿಗೆ ಮುಗಿಯದ ತಕರಾರುಗಳಿದ್ದವು. ದೇಶಕ್ಕೆ ಸ್ವಾತಂತ್ರ್ಯ ಬಂದರೂ ಅದು ಸಮಾಜದ ಕೊನೆಯ ತನಕ ತಲುಪುವುದೇ ಎಂಬ ದಟ್ಟ ಹಾಗೂ ವಾಸ್ತವ ಅನುಮಾನ ಅಂಬೇಡ್ಕರ್ ಅವರಿಗೆ ಇದ್ದುದು ಸಹಜವಾಗಿತ್ತು. ಹಾಗೆ ನೋಡಿದರೆ ಹಿಂದೂ ಧರ್ಮ ಯಾರಿಗೂ ಎಂದೂ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ, ಹಾಗೆಯೇ ಮುಂದೆ ಕೂಡ ಅದು ಸ್ವಾತಂತ್ರ್ಯವನ್ನು ದಲಿತರಿಂದ ಹರಣ ಮಾಡಿ ಅವರನ್ನು ಅಸ್ಪೃಶ್ಯರನ್ನಾಗಿಯೇ ಮಾಡಿ ಆಳ್ವಿಕೆ ಮಾಡುತ್ತದೆ ಎಂದು ವಾದಿಸುತ್ತಿದ್ದರು. ಹಾಗಾಗಿಯೆ ಪೂನಾ ಒಪ್ಪಂದದಲ್ಲಿ ಅಂಬೇಡ್ಕರ್ ಅವರು ದಲಿತರಿಗೆ ವಿಶೇಷ ಹಕ್ಕು ಬಾಧ್ಯತೆಗಳ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದು. ಇಂತಹ ನಿಲುವಿಗೆ ಗಾಂಧಿಯವರ ಪ್ರತಿಕ್ರಿಯೆ ಹಠವಿಡಿದ ಮಗುವಿನಂತಿತ್ತು. ಈ ಹಠವು ಅಂಬೇಡ್ಕರ್ ಅವರಿಗೆ ಕ್ರೂರವಾಗಿ ಕಂಡಿತ್ತು. ಗಾಂಧಿಗೆ ದಲಿತರು ಪ್ರತ್ಯೇಕ ಅಸ್ತಿತ್ವ ಹೊಂದಿ ದೇಶದ ಒಳಗೆ ಬದುಕುವುದು ಅನೈತಿಕವೆನಿಸಿತ್ತು. ದೇಹದ ಒಳಗಿದ್ದೂ ದೇಹದ ಆಚೆ ಇರುವಂತೆ, ಅಸ್ಪೃಶ್ಯರನ್ನು ಯಾಕೆ ಹೊರಗಿಟ್ಟು ದೇಶವನ್ನು ರೂಪಿಸಬೇಕು ಎಂಬ ಅವರ ಒಳತುಡಿತ ಸುಲಭವಾಗಿ ಅರ್ಥವಾಗುವಂತಿರಲಿಲ್ಲ. ಹಾಗೆ ದಲಿತರನ್ನು ಪ್ರತ್ಯೇಕವಾಗಿ ಇಟ್ಟುಬಿಟ್ಟರೆ ಅವರ ಭವಿಷ್ಯ ಇನ್ನೂ ಭಯಂಕರವಾಗಿರುತ್ತದೆ ಎಂದು ಗಾಂಧಿ ಎಣಿಸಿರಬೇಕು. ಇಂದಿನ ದಲಿತರ ಭಗ್ನಸ್ಥಿತಿಯಲ್ಲಿ ಮೀಸಲಾತಿಯ ವರ್ಗೀಕರಣ ಹಾಗೂ ದಲಿತರ ಒಳಗೇ ಬೆಳೆಯುತ್ತಿರುವ ವರ್ಗ ಹಾಗೂ ಉಪಜಾತಿಗಳ ಗೋಡೆಗಳು ಭಯ ಹುಟ್ಟಿಸುತ್ತವೆ. ದಲಿತರನ್ನು ಪ್ರತ್ಯೇಕಿಸಿದ ಮಾತ್ರಕ್ಕೆ ಅವರಿಗೆ ಎಲ್ಲ ಬಗೆಯ ಸ್ವಾತಂತ್ರ್ಯ ಮತ್ತು ಸಮಾನತೆ ಸಿಕ್ಕಿಬಿಡುತ್ತದೆ ಎಂಬುದರಲ್ಲಿ ಗಾಂಧೀಜಿಗೆ ವಿಶ್ವಾಸ ಇರಲಿಲ್ಲ. ಅಂಬೇಡ್ಕರ್ಗೆ ಅಪಾರವಾದ ವಿಶ್ವಾಸವಿತ್ತು.’ದಲಿತಸ್ಥಾನ್’ನ ಪ್ರಸ್ತಾಪ ಅವರಿಂದ ಉಂಟಾಗಿತ್ತು. ದೇಶದ ಸ್ವಾತಂತ್ರ್ಯವನ್ನೇ ಮತ್ತೆ ವಿಂಗಡಿಸಿ, ಸಮಾಜವನ್ನೇ ಮತ್ತೆ ಸೀಳುವುದು ಆ ಹೊತ್ತಿಗೆ ಯಾವ ಸ್ವಾತಂತ್ರ್ಯ ಹೋರಾಟಗಾರರಿಗೂ ಇಷ್ಟವಿರಲಿಲ್ಲ. ಹಾಗೆ ಬೇಡಿಕೆ ಮಂಡಿಸುವವರು ಖಳನಾಯಕರಂತೆ ಚಿತ್ರಿಸಲ್ಪಡುತ್ತಿದ್ದರು. ಪಾಕಿಸ್ತಾನದ ರೂವಾರಿ ಜಿನ್ನಾ ಅವರಿಗೆ ರಾಷ್ಟ್ರೀಯ ಕಾಂಗ್ರೆಸ್ ನ ಬಹುಪಾಲು ನಾಯಕರು ಖಳನಾಯಕನ ಸ್ಥಾನವನ್ನೇ ನೀಡಿದ್ದರು.

ಅಂಬೇಡ್ಕರ್ ಅವರ ಬಗೆಗೂ ಇದೇ ನಿಲುವು ಇತ್ತು. ಈಗಲೂ ಅನೇಕರು ಅಂಬೇಡ್ಕರ್ ಅವರನ್ನು ಗಾಂಧಿಯ ಮುಂದೆ ಖಳನಾಯಕನಂತೆಯೋ, ಪ್ರತಿನಾಯಕನಂತೆಯೋ ಚಿತ್ರಿಸುತ್ತಾರೆ. ಅರುಣ್ ಶೌರಿಯಂತಹ ಹಳದಿ ಕಣ್ಣಿನ ಪತ್ರಕರ್ತರು ಅಂಬೇಡ್ಕರ್ ಅವರನ್ನು ಅಪಮಾನಕರವಾಗಿ; ಈ ದೇಶದ ದಲಿತರ ನೈತಿಕ ಸ್ವಾತಂತ್ರ್ಯದ ಹಂಬಲಕ್ಕೆ ಮಸಿ ಬಳಿಯುವಂತೆ ಈಗಲೂ ಬರೆಯುವುದಿದೆ. ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಯಾವ ಹೋರಾಟವನ್ನೂ ಮಾಡದೆ ಗಾಂಧೀಜಿಯನ್ನು ಅಪಮಾನಿಸುತ್ತಾ ದೇಶದ ದಲಿತರನ್ನು ಅವರ ವಿರುದ್ಧ ಎತ್ತಿಕಟ್ಟುತ್ತಿದ್ದರು ಎಂಬ ಅರ್ಥದಲ್ಲಿ ಅರುಣ್ಶೌರಿ ಬರೆದು ಈ ಹೊತ್ತಿನ ದಲಿತಪ್ರಜ್ಞೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಬಲಪಂಥೀಯ ಮನಸ್ಸು ಒಟ್ಟಿಗೇ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಆಳದಲ್ಲಿ ವಿರೋಧಿಸುತ್ತಿರುತ್ತದೆ.

ಅಂಬೇಡ್ಕರ್ ಅವರ ಬಗೆಗಿನ ಗಾಂಧಿಯ ನಿಲುವುಗಳು ಎಲ್ಲೂ ವ್ಯಕ್ತಿಗತವಾದುವಲ್ಲ. ಹಾಗೆಯೇ ಅಂಬೇಡ್ಕರ್ ಅವರು ಕಟುವಾಗಿ ಗಾಂಧಿಗೆ ಪ್ರತಿಕ್ರಿಯಿಸುತ್ತಿದ್ದುದು ಕೂಡ ತನ್ನೊಬ್ಬನ ಅಸ್ತಿತ್ವದ ಕಾರಣಕ್ಕಾಗಿ ಅಲ್ಲ. ದಲಿತ ಸಮುದಾಯದ ಅಖಂಡ ಪ್ರಜ್ಞೆ ಅಂಬೇಡ್ಕರ್ ಅವರಲ್ಲಿತ್ತು. ಅಷ್ಟೇ ಅಲ್ಲದೇ ಇಂತಹ ನರಕ ಸೃಷ್ಟಿಸಿರುವ ಹಿಂದೂ ಧರ್ಮದ ಸಾಮಾಜಿಕ ರಚನೆಯ ಸೆರೆವಾಸದ ಬಗ್ಗೆ ಖಚಿತವಾದ ತಿಳುವಳಿಕೆಯೂ, ವಿಷಾದವೂ ಇತ್ತು. ಜಾತಿಯು ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಂಡಿರುತ್ತದೆ ಎಂಬುದರಲ್ಲಿ ಗಾಂಧಿಗಿಂತಲೂ ಅಂಬೇಡ್ಕರ್ ಗೆ ಹೆಚ್ಚಿನ ಅನುಭವ ಇತ್ತು. ವರ್ಣಶ್ರಮ ಪದ್ಧತಿಯ ಜಾತಿಶ್ರೇಣಿಯಂತೆಯೇ ಸಮಾಜದಲ್ಲಿ ಅಧಿಕಾರ ವಿಂಗಡನೆಯಾಗಿ ಕೊನೆಯ ಅಸ್ಪೃಶ್ಯರಿಗೆ ಯಾವ ಅಸ್ತಿತ್ವವೂ ಇಲ್ಲದಿರುವಾಗ; ಸ್ವಾತಂತ್ರ್ಯದ ಯಾವ ಅವಕಾಶವನ್ನು ನೀಡದೆ ಇರುವಾಗ; ಅವರಿಗೆ ದೇಶವೇ ಇಲ್ಲದಿರುವಾಗ; ದೇಶಕ್ಕೆ ಸ್ವಾತಂತ್ರ್ಯಬೇಕು ಎಂದು ಹೋರಾಡುವುದು ವ್ಯಂಗ್ಯವಾಗಿ ಕಾಣುತ್ತಿತ್ತು. ವಸಾಹತುಶಾಹಿ ವ್ಯವಸ್ಥೆಗಿಂತಲೂ ಕ್ರೂರವಾದದ್ದು ಹಿಂದೂ ವ್ಯವಸ್ಥೆ ಎಂಬುದನ್ನು ಅಂಬೇಡ್ಕರ್ ಮತ್ತೆ ಮತ್ತೆ ಪ್ರತಿಪಾದಿಸುತ್ತಿದ್ದರು. ಪರಿವರ್ತನೆಯಲ್ಲಿ ಗಾಂಧಿ ಆತ್ಯಂತಿಕವಾದ ಕನಸುಗಾರ. ರಾಮರಾಜ್ಯದ ಅವರ ಕನಸು ನ್ಯಾಯದ ಪರಮ ಆದರ್ಶ, ಅಂತೆಯೆ ಸ್ವಾತಂತ್ರ್ಯದ ಸಾಕ್ಷಾತ್ಕಾರ. ಅಂಬೇಡ್ಕರ್ ವಾಸ್ತವವಾದಿ ಚಿಂತಕ. ಸವಿಗನಸೇ ಇಲ್ಲದ ಸಮಾಜದಿಂದ ಬಂದ ಅಂಬೇಡ್ಕರ್ ದುಃಸ್ವಪ್ನಗಳನ್ನು ಮಾತ್ರ ಕಂಡಿದ್ದರು. ಈ ಸಮಾಜದ ಸನಾತನತೆಯ ಹೇಸಿಗೆಯನ್ನು ಕಂಡಿದ್ದ ಅವರಿಗೆ ಇಲ್ಲಿ ಯಾವುದೂ ಬದಲಾಗುವುದಿಲ್ಲ ಎಂಬ ಚಾರಿತ್ರಿಕ ವಿಷಾದ ತುಂಬಿಕೊಂಡಿತ್ತು.

ಬೃಹತ್ ಭಾರತದ ಚರಿತ್ರೆಯನ್ನು ತಿಳಿದಿದ್ದ ಗಾಂಧಿಗೆ ಅದರ ಅಖಂಡ ಛಲವು ಗಾಢವಾಗಿ ಪ್ರಭಾವಿಸಿತ್ತು. ಇದೇ ಅಖಂಡ ಭಾರತವು ಅಂಬೇಡ್ಕರ್ ಅವರಿಗೆ ಹಿಂಸೆಯ ಕೂಪವೆಂದು ತಿಳಿದಿತ್ತು. ಗಾಂಧಿ ಇಂತಹ ನರಕದ ಒಳಗಿಂದಲೇ ಅಹಿಂಸೆಯನ್ನು ಸ್ವಾತಂತ್ರ್ಯಕ್ಕಾಗಿ ಸಾಧಿಸಿದವರು. ಅಂಬೇಡ್ಕರ್ ಈ ನರಕದಲ್ಲಿದ್ದು ಸರ್ವನಾಶವಾಗುವ ಬದಲು ಬೌದ್ಧಧರ್ಮದಲ್ಲಿ ಸಮುದಾಯದ ಸ್ವಾತಂತ್ರ್ಯವನ್ನು ಪಡೆಯಲು ಯತ್ನಿಸಿದರು. ಇಬ್ಬರೂ ಸ್ವಾತಂತ್ರ್ಯದ ದಾಹದಲ್ಲಿ ಬೇರೆ ಬೇರೆ ದಿಕ್ಕಿನಲ್ಲಿ ನಡೆದವರಾದರೂ ಆಧುನಿಕ ಭಾರತದ ಸಂದರ್ಭದಲ್ಲಿ ಅಲಕ್ಷಿತರ ಪರವಾದ ನ್ಯಾಯಕ್ಕಾಗಿ ಶ್ರಮಿಸಿದವರು. ಗಾಂಧಿ ಸರ್ವೋದಯದ ಪ್ರಜಾತತ್ವಕ್ಕಾಗಿಯೇ ತಮ್ಮ ಆಲೋಚನೆಗಳನ್ನು ಕೇಂದ್ರೀಕರಿಸಿದರು. ಅಂಬೇಡ್ಕರ್ ಜಾತ್ಯತೀತ ಪ್ರಜಾಪ್ರಭುತ್ವಕ್ಕಾಗಿ ವೈಚಾರಿಕ ಆಕ್ರಂದನ ಮಾಡಿದರು. ಇವೆರಡೂ ತುಂಬ ಸಂಕೀರ್ಣವಾದ ತಾತ್ವಿಕ ನೆಲೆಗಳು.

ಗಾಂಧಿ ಬಯಸುವ ಸರ್ವೋದಯ ರಮ್ಯ ಆಧ್ಯಾತ್ಮದ ಭಿತ್ತಿಯಲ್ಲಿ ಬೇರು ಬಿಟ್ಟಿದೆ. ಅಂಬೇಡ್ಕರ್ ವೈಚಾರಿಕ ಆಧ್ಯಾತ್ಮದಲ್ಲಿ ವಿಶ್ವಾಸವಿಟ್ಟವರು. ಅದರಿಂದಾಗಿಯೇ ಅವರು ಬೌದ್ಧಧರ್ಮವನ್ನು ಸ್ವೀಕರಿಸಿದ್ದು. ಬುದ್ಧನ ಕಾಣ್ಕೆಯಲ್ಲಿ ಅಪರಿಮಿತವಾದ ಪ್ರಜಾತತ್ವ ಇದೆ ಎಂಬುದು ಅಂಬೇಡ್ಕರ್ಗೆ ತಿಳಿದಿತ್ತು. ಹೀಗಾಗಿಯೇ ಪ್ರಜಾಪ್ರಭುತ್ವದ ಸರ್ವೋಚ್ಚ ನೀತಿಸಂಹಿತೆಯಾದ ಸಂವಿಧಾನದಲ್ಲಿ ಅಂಬೇಡ್ಕರ್ ಜಾತ್ಯತೀತತೆಯನ್ನು ಮಹಾಮಂತ್ರದಂತೆ ನುಡಿಸುವುದು. ಜಾತಿಯ ನಾಶವಾಗದೇ ದೇಶಕ್ಕೆ ಸ್ವಾತಂತ್ರ್ಯದ ಅರ್ಥ ಕಾಣುವುದಿಲ್ಲ ಎಂಬುದು ಅಂಬೇಡ್ಕರ್ ಚಿಂತನೆಯಲ್ಲಿ ಕಾಣುವ ನೋಟ. ಅದಕ್ಕಾಗಿಯೇ ಅವರು ಬುದ್ಧನ ವೈಚಾರಿಕತೆಯಿಂದ ಸಂವಿಧಾನವನ್ನು ಜಾತ್ಯತೀತವಾಗಿ ರೂಪಿಸಿರುವುದು. ಪ್ರಜಾಪ್ರಭುತ್ವದಲ್ಲಿ ವರ್ಗಗಳಿಗೆ ಯಾವ ಅಪಾಯವೂ ಇರುವುದಿಲ್ಲ. ಇಂಗ್ಲೆಂಡಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಾರ್ಮಿಕ ಪಕ್ಷಕ್ಕೂ, ಉದಾರವಾದಿ ಶ್ರೀಮಂತರ ಪಕ್ಷಕ್ಕೂ ಅಧಿಕಾರದ ಹಂಚಿಕೆಯಲ್ಲಿ ಸ್ನೇಹ ಒಪ್ಪಂದ ಸಾಮಾನ್ಯ. ಅಮೆರಿಕದ ಪ್ರಜಾಪ್ರಭುತ್ವ ಎಷ್ಟೇ ಆದರ್ಶವಾಗಿದ್ದರೂ ಅದು ಅಂತಿಮವಾಗಿ ಖಾಸಗೀ ಬಂಡವಾಳಶಾಹಿ ವ್ಯವಸ್ಥೆಯ ಸ್ವರ್ಗಸ್ಥಾನ.

ಭಾರತದ ಸಂವಿಧಾನದಲ್ಲಿ ಇಂತಹ ಅಪಾಯಗಳು ನುಸುಳದಂತೆ ನೋಡಿಕೊಂಡಿದ್ದರೂ, ಇಲ್ಲಿ ಜಾತಿಗಳು ಪಕ್ಷಗಳ ಮೂಲಕ ಪ್ರವೇಶಗೊಂಡು ಜಾತಿ ರಾಜಕಾರಣವನ್ನು ಸಮರ್ಥವಾಗಿ ಮಾಡುತ್ತಿರುತ್ತವೆ. ಅಂಬೇಡ್ಕರ್ಗೆ ಈ ಮುನ್ನೋಟ ಇದ್ದಿದ್ದರಿಂದಲೇ ದ್ವಿಮತದಾನವನ್ನು ದಲಿತರಿಗೆ ನೀಡುವ ಮೂಲಕ ರಾಜಕೀಯ ಸ್ವಾತಂತ್ರ್ಯವನ್ನು ಪಡೆಯಲು ಹೋರಾಡಿದರು. ಆ ಮೂಲಕ ಜಾತ್ಯತೀತ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಯೋಚಿಸಿದರು. ಇಂತಹ ಯತ್ನ ಕೂಡ ಅಪಾಯಕಾರಿಯಾಗಿ ಮುಂದೆ ಜಾತಿಗಳ ಒಳಗೇ ಅಸಮಾನತೆಗಳನ್ನು ನಿರ್ಮಿಸಬಲ್ಲದು ಎಂಬ ಅನುಮಾನ ಅಂಬೇಡ್ಕರ್ ಅವರಿಗೆ ಇರಲಿಲ್ಲ. ಜಾತ್ಯತೀತತೆಯ ಅವರ ಕನಸು ಅವರ ಮುಂದೆಯೇ ಮುರಿದು ಬಿದ್ದಿತ್ತು. ಪ್ರತ್ಯೇಕ ಮತಕ್ಷೇತ್ರಗಳನ್ನು ಒತ್ತಾಯಿಸಲು ಜಾತ್ಯತೀತತೆಯ ಬಗೆಗೆ ಮಾತನಾಡುತ್ತ, ಬೌದ್ಧ ಧರ್ಮಕ್ಕೆ ಮತಾಂತರವಾದ ಅವರ ದಾರಿ ಸಂಕೀರ್ಣ ತಿರುವುಗಳಿಂದ ಕೂಡಿತ್ತು.

ಗಾಂಧಿಗೆ ಎಲ್ಲ ದಾರಿಗಳು ಮುಕ್ತವಾಗಿದ್ದವು. ಅವರ ಆಲೋಚನೆಗೆ ಸಾಮಾಜಿಕ ತಡೆಗೋಡೆಗಳು ಇರಲಿಲ್ಲ. ಅಖಂಡ ಸಮಾಜದ ಜೊತೆ ಮಾತನಾಡುವುದು ಅವರಿಗೆ ಸುಲಭವಾಗಿತ್ತು. ಅಂಬೇಡ್ಕರ್ ಪ್ರಧಾನ ಸಮಾಜದ ಎಲ್ಲ ಅಧಿಕಾರದ ನೆಲೆಗಳನ್ನು ಪ್ರಶ್ನಿಸಬೇಕಿತ್ತು. ಅದರ ಅಪರಾಧಗಳನ್ನು ಬಯಲು ಮಾಡಬೇಕಿತ್ತು. ಗಾಂಧಿಗೆ ದೇಶದ ಮಾನ ಮುಚ್ಚುವುದೇ ದೊಡ್ಡ ಕರ್ತವ್ಯವಾಗುತ್ತಿತ್ತು. ದೇಶದ್ರೋಹಿ ಎಂದು ಅಂಬೇಡ್ಕರ್ ಅವರನ್ನು ಯಾರಾದರೂ ಕರೆಯುವುದು ಸುಲಭವಿತ್ತು. ಅಂತಹ ಯಾವ ಕೇಡನ್ನು ಎಸಗದಿದ್ದರೂ ಅಂತಹ ಪಟ್ಟಗಳು ದಲಿತ ಕೇರಿಯಿಂದ ಬಂದು ಅಖಂಡತೆಯನ್ನು ಪ್ರಶ್ನಿಸುವ ಯಾರಿಗಾದರೂ ಇದ್ದಂಥದೇ.

ಜಾತಿವ್ಯವಸ್ಥೆಯಿಂದ ಬಿಡುಗಡೆ ಪಡೆಯುವುದು ಬಹುದೊಡ್ಡ ಸ್ವಾತಂತ್ರ್ಯ ಚಳುವಳಿಯೇ. ಪರಕೀಯರನ್ನು ಹೊರಗಟ್ಟುವುದು ಗಾಂಧಿಗೆ ಸುಲಭವಿತ್ತು. ದೇಶದ ಒಳಗೇ ಇದ್ದು ದೇಶ ಭ್ರಷ್ಟರನ್ನಾಗಿಸಿದ್ದವರನ್ನು ಅಂಬೇಡ್ಕರ್ ಎಲ್ಲಿಯೂ ಹೊರಕ್ಕೆ ಅಟ್ಟಲು ಸಾಧ್ಯವಿರಲಿಲ್ಲ. ಬಹಿಷ್ಕೃತ ಭಾರತದಲ್ಲಿ ಸ್ವತಃ ದಲಿತರೇ ಹೊರಗೆಸೆಲ್ಪಟ್ಟವರಾಗಿದ್ದರು. ಇಂತವರ ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ಅಂಬೇಡ್ಕರ್ ಏಕಾಂಗಿಯಾಗಿದ್ದರು. ಅವರು ದೊಡ್ಡ ಸಮಾಜಗಳನ್ನು ಎದುರು ಹಾಕಿಕೊಂಡು, ಅವರ ಜೊತೆಯೇ ನ್ಯಾಯದ ಹಕ್ಕೊತ್ತಾಯವನ್ನು ಮಾಡಬೇಕಿತ್ತು. ಗಾಂಧೀಜಿ ಇಂತಹ ಸಂಕಟದಲ್ಲಿ ಮುಳುಗಿ ಸಾಮಾಜಿಕ ಎಚ್ಚರಕ್ಕಾಗಿ ಹೋರಾಡುವ ಅಂಬೇಡ್ಕರ್ ವಿರುದ್ಧ ವೈಯಕ್ತಿಕವಾಗಿ ಟೀಕಿಸಲಿಲ್ಲ. ಅಂಬೇಡ್ಕರ್ ಅವರ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಅವರ ವಿಚಾರಗಳಿಂದಲೇ ಪ್ರಭಾವಿತರಾಗಿದ್ದೂ ಉಂಟು. ದೇಶದ ಒಳಗಿನವರ ವಿರುದ್ಧ ಹೋರಾಡಿಯೇ ಅಂಬೇಡ್ಕರ್ ಸ್ವಾತಂತ್ರ್ಯವನ್ನು ಹಂಚಿಕೊಳ್ಳಬೇಕಾಗಿದ್ದರಿಂದ ಅವರ ಸ್ವಾತಂತ್ರ್ಯ ಚಳುವಳಿಯನ್ನು ಬೇರೆಯಾಗಿಯೇ ಭಾವಿಸಬೇಕು. ವಸಾಹತುಶಾಹಿ ವ್ಯವಸ್ಥೆಯ ಜೊತೆ ಉಗ್ರವಾದ ತಿರಸ್ಕಾರ ಅವರಿಗೆ ಇರಲಿಲ್ಲವಾದರೂ ಆ ವ್ಯವಸ್ಥೆ ದೇಶ ಬಿಟ್ಟು ಹೋಗಬೇಕು ಎಂಬುದನ್ನು ಒಪ್ಪಿಕೊಂಡಿದ್ದರು. ಅವರು ಬ್ರಿಟಿಷರ ಪರವಾಗಿ ಕೆಲಸ ನಿರ್ವಹಿಸಲಿಲ್ಲ. ಕಾಂಗ್ರೆಸ್ ನ ನಾಯಕರ ಬಗ್ಗೆ ಆಪ್ತ ಸಂಬಂಧ ಇರದಿದ್ದರೂ ಒಟ್ಟು ಸ್ವಾತಂತ್ರ್ಯ ಚಳುವಳಿಯ ಬಗೆಗೆ ಗೌರವವನ್ನೇ ಹೊಂದಿದ್ದರು. ಅವರಿಗಿದ್ದ ಬಹುದೊಡ್ಡ ತಡೆ ಎಂದರೆ ಹಿಂದೂ ಸಾಮ್ರಾಜ್ಯ. ಈ ಹಿಂದೂ ಸಾಮ್ರಾಜ್ಯ ವಸಾಹತುಶಾಹಿಗಿಂತಲೂ ಭಯಂಕರವಾಗಿತ್ತು. ಅದನ್ನು ಸದೆಬಡಿದರೆ ಮಾತ್ರ ಬಹುಸಂಖ್ಯಾತ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಜಾತಿಗಳು ಹಾಗೂ ಮಹಿಳೆಯರು ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಒತ್ತಾಯಿಸುತ್ತಿದ್ದರು.

ಸರ್ವೋದಯದ ಪ್ರಜಾಪ್ರಭುತ್ವವು ಒಂದೇ ಹಂತದಲ್ಲಿ ಫಲಿಸುವಂತಹದ್ದಾಗಿರಲಿಲ್ಲ. ಭ್ರಾತೃತ್ವವೂ ಅಷ್ಟೊಂದು ಸಲೀಸಾದ ಆದರ್ಶವಾಗಿರಲಿಲ್ಲ. ಒಬ್ಬರನ್ನೊಬ್ಬರು ಕ್ರೂರವಾಗಿ ಜಾತಿಯ ಕ್ರಮಗಳಿಂದ ಸೀಳಿಕೊಂಡಿರುವಾಗ ಭ್ರಾತೃತ್ವ ಎಂಬುದೇ ಹುಸಿಯಾದುದಾಗಿತ್ತು. ಮಾನವೀಯ ಘನತೆಯನ್ನು ಕಳೆದುಕೊಂಡಿರುವ ಹಿಂದೂ ಧರ್ಮವು ಪ್ರಜಾಪ್ರಭುತ್ವದ ಎಲ್ಲ ಆದರ್ಶಗಳನ್ನು ಕಾಲಕಾಲಕ್ಕೆ ಉಪಾಯವಾಗಿ ನುಂಗಬಲ್ಲದು. ಜಾತಿಯ ಜೊತೆಗೆ ಮತೀಯ ಮೂಲಭೂತವಾದವನ್ನು ಅದು ಸಾಂಗವಾಗಿ ಬೆಳೆಸಬಲ್ಲದು. ಇಂಥಲ್ಲಿ ಏಕತೆಯಾಗಲೀ, ಸಮಾನತೆಯಾಗಲೀ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರಿಗೆ ಗಾಢವಾಗಿ ಅನಿಸಿದ್ದರಿಂದಲೇ ದಲಿತರಿಗೆ ರಾಜ್ಯಾಧಿಕಾರದಲ್ಲಿ ಪ್ರಮುಖ ಪಾತ್ರ ಇರಬೇಕು ಎಂದು ಒತ್ತಾಯಿಸಿ, ಆ ಹಂತ ತಲುಪಿದಾಗಲೇ ದಲಿತರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ ಎಂದು ಸೂಚಿಸಿದ್ದರು. ಗಾಂಧೀಜಿಗೆ ಜಾತ್ಯತೀತವಾದ ಹಂಬಲವಿರಲಿಲ್ಲ ಎಂದೇನಿಲ್ಲ. ಜಾತಿಗಳ ನಡುವೆ ಸಾಮರಸ್ಯ ಸಾಧ್ಯವಾಗಬೇಕಾದರೆ ಮನುಷ್ಯನ ಒಳಗಿರುವ ನಿರಂಕುಶ ಸ್ವಭಾವ ಅಳಿಯಬೇಕೆಂದು ಅಂಬೇಡ್ಕರ್ ಹೇಳುತ್ತಿದ್ದರು.

ಹಿಂದೂ ಮೇಲುಜಾತಿಗಳು ನಿರಂಕುಶಪ್ರಭುತ್ವದ ತತ್ವದಲ್ಲಿ ನಂಬಿಕೆ ಇಟ್ಟುಕೊಂಡೇ ಬೆಳೆದಿದ್ದು ಅಂತಹ ಮೌಲ್ಯಗಳಿಗಾಗಿ ಯಾವುದೇ ಹೇಯ ರಕ್ತಪಾತವನ್ನು ಮಾಡಲು ಹೇಸುವುದಿಲ್ಲ. ಕೆಳಜಾತಿಗಳು ಮಾತ್ರ ದಾಸ್ಯದಲ್ಲಿ ಸದಾ ಕರಗಿ ಹೋಗುತ್ತಿರುತ್ತವೆ. ಜಾತಿಗಳು ಸಾಮ್ರಾಜ್ಯಶಾಹಿ ಸ್ವಭಾವವನ್ನು ಪಡೆದಿರುವುದರಿಂದಲೇ ಹಿಂದೂ ಸಾಮ್ರಾಜ್ಯವು ಬಲಿಷ್ಠವಾಗಿರುವುದು. ಇಂತಹ ಗ್ರಹಿಕೆಗಳಿಂದ ಅಂಬೇಡ್ಕರ್ ಮನುಧರ್ಮ ಶಾಸ್ತ್ರವನ್ನು ಸುಟ್ಟುಹಾಕಿದ್ದು. ಬ್ರಾಹ್ಮಣ್ಯದ ಸಾಮ್ರಾಜ್ಯಶಾಹಿ ಧೋರಣೆಯು ಮನುಧರ್ಮಶಾಸ್ತ್ರದಲ್ಲಿ ನಿರ್ಲಜ್ಜವಾಗಿ ವ್ಯಕ್ತವಾಗಿದೆ. ಅಮಾನವೀಯವಾಗಿ ಇಡೀ ಸಮಾಜದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಯತ್ನ ಅದರ ತತ್ವದಲ್ಲಿದೆ. ಇಂತಹ ಗ್ರಂಥವು ಗಾಂಧೀಜಿಗೆ ಅಪಮಾನವೆನಿಸಲಿಲ್ಲ. ಅದನ್ನು ಅವರು ಸುಟ್ಟು ಹಾಕುವ ಧೈರ್ಯ ಮಾಡಲಿಲ್ಲ. ಸೌಮ್ಯವಾಗಿಯೇ ಅಂತಹ ಅಮಾನವೀಯ ಮೌಲ್ಯಗಳನ್ನು ಪಕ್ಕಕ್ಕೆ ಸೇರಿಸುತ್ತಿದ್ದ ಗಾಂಧಿಯ ಪ್ರತಿಭಟನೆಯು ಸಾತ್ವಿಕವಾದುದು. ಸಂತ ಶೈಲಿಯ ಗಾಂಧಿಯ ಭಾವನೆಗಳು ಯಾರ ಮನಸ್ಸಿಗೂ ನೋವು ಉಂಟಾಗಬಾರದು ಎಂಬಂತೆ ವ್ಯಕ್ತವಾಗುತ್ತಿದ್ದವು. ಇಂಥಲ್ಲಿ ಗಾಂಧಿಯ ವ್ಯಕ್ತಿತ್ವ ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಸನಾತನ ಮೌಲ್ಯ ವ್ಯವಸ್ಥೆಯ ಬಗ್ಗೆ ಗಾಂಧಿಗೆ ಅನುಕಂಪ ಮಾತ್ರವಲ್ಲ, ಗೌರವವೂ ಇತ್ತು. ಅದರ ಪರಂಪರೆಯನ್ನು ಯಾವತ್ತೂ ಅವರು ಕಡೆಗಣಿಸಿರಲಿಲ್ಲ. ಜಾತಿಯ ಬಗ್ಗೆ ಅವರಿಗೆ ಆರಂಭದಲ್ಲಿ ಹಳೆಯ ಅಭಿಪ್ರಾಯಗಳೇ ಇದ್ದವು. ನಂತರ ಅವರು ಅಂಬೇಡ್ಕರ್ ಅವರ ವೈಚಾರಿಕ ಪ್ರತಿರೋಧದ ಎದುರು ತಿದ್ದಿಕೊಳ್ಳಬೇಕಾದುದಷ್ಟೇ ಅಲ್ಲದೇ, ದಲಿತರ ಬಗ್ಗೆ ಗಾಢವಾಗಿ ಸ್ಪಂದಿಸುವುದನ್ನು ರೂಢಿಮಾಡಿಕೊಂಡರು. ಹಿಂದೂ ಧರ್ಮದ ಲೋಪಗಳನ್ನು ಕೊನೆಯ ಘಟ್ಟದಲ್ಲಿ ಗಾಂಧಿ ಸೂಕ್ಷ್ಮವಾಗಿ ಎತ್ತಿ ಆಡಿದ್ದಿದೆ. ಸ್ವಾತಂತ್ರ್ಯದ ದಾಹದಲ್ಲಿ ಗಾಂಧಿಯೂ, ಅಂಬೇಡ್ಕರ್ ಅವರೂ ನಿರಂತರವಾಗಿ ಒಂದೇ ಆಗಿದ್ದರು. ಸರ್ವೋದಯದ ಪ್ರಜಾ ರಾಜ್ಯವೇ ನಿಜವಾದ ‘‘state’ ಎಂದು ಗಾಂಧಿ ನಂಬಿದ್ದರು. ಅದಕ್ಕೆ ತಕ್ಕುದಾದ ರಾಜ್ಯಾಂಗ ಪದ್ಧತಿ ಇಲ್ಲ ಎಂಬುದು ಅಂಬೇಡ್ಕರ್ರ ತಗಾದೆಯಾಗಿತ್ತು. ಇವರಿಬ್ಬರ ಸ್ವಾತಂತ್ರ್ಯದ ಅಂತರಂಗವನ್ನು ಹಲವು ನೆಲೆಗಳಲ್ಲಿ ಅರ್ಥೈಸಬಹುದು.

ಧರ್ಮರಹಿತ ರಾಜಕಾರಣವನ್ನು ಅಂಬೇಡ್ಕರ್ ಕನಸಿದ್ದರು. ಹಿಂದೂ ಧರ್ಮದ ಮೇಲಿನ ಅವರ ಆಕ್ರೋಶವು ಈ ಬಗೆಯ ಒತ್ತಾಯವನ್ನು ಉಂಟುಮಾಡಿತ್ತು. ಹಾಗಿದ್ದರೂ ಅಂಬೇಡ್ಕರ್ ಎಲ್ಲ ಧರ್ಮಗಳ ಅಸ್ತಿತ್ವವನ್ನು ಮನ್ನಿಸಿಯೇ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಬುದ್ಧನ ತತ್ವವೇ ಸಂವಿಧಾನದಲ್ಲಿ ಅಡಕವಾಗಿರುವುದು. ಗಾಂಧೀಜಿ ಮಾನವ ಧರ್ಮದ ರಾಜಕಾರಣಕ್ಕೆ ಗಮನಹರಿಸಿದ್ದರಿಂದಲೇ ಹಿಂದ್ ಸ್ವರಾಜ್ಯದ ಬಗ್ಗೆ ಸಮರ್ಥಿಸಿದ್ದು. ಈ ಬಗೆಯ ರಾಜಕಾರಣದ ಮೂಲಕವೇ ಅರಿಸ್ಟಾಟಲ್, ಪ್ಲೇಟೋ ಹೇಳಿದ ರಾಜಕೀಯ ಆಧ್ಯಾತ್ಮವನ್ನು ತಲುಪಲು ಸಾಧ್ಯ ಎಂದು ಭಾವಿಸಿದ್ದರು. ಪ್ಲೇಟೋನ ಆದರ್ಶ ರಾಜ್ಯದ ಕಲ್ಪನೆಯು ಸದಾ ಮಾನವ ಕೇಂದ್ರಿತವಾದುದೇ ಆಗಿತ್ತು. ಅದು ಚಾಣಕ್ಯನ ಪ್ರಭುನಿಷ್ಠ ರಾಜಕಾರಣವನ್ನು ಎಂದಿಗೂ ಬೆಂಬಲಿಸುವಂಥದ್ದಲ್ಲ. ಅಂಬೇಡ್ಕರ್ ಕನಸಿನ ಆದರ್ಶ ರಾಜ್ಯದಲ್ಲಿ ಬುದ್ಧನ ಜ್ಞಾನೋದಯವು ಅಖಂಡ ಹಿಂದೂ ಸಮಾಜದ ಜ್ಞಾನೋದಯವಾಗಿ ಮಾರ್ಪಡಬೇಕು ಎಂದಾಗಿತ್ತು. ಅದನ್ನವರು ಸಂವಿಧಾನದ ಮೂಲಕ ಪುನರ್ ಸೃಷ್ಟಿಸಿದರು.

ಇಂತಹ ಆದರ್ಶ ಸ್ವಾತಂತ್ರ್ಯ ಇಂದಿಗೂ ಭಾರತದ ಎಲ್ಲ ಸಮುದಾಯಗಳಿಗೂ ಸಿಕ್ಕಿಲ್ಲ. ಬಹುಪಾಲು ಎಲ್ಲರ ಸ್ವಾತಂತ್ರ್ಯವೂ ಕೃತಕವಾದದ್ದು. ಪ್ರಾಣಿಯ ಕೊರಳಿಗೆ ಕಟ್ಟಿಬಿಟ್ಟ ಹಗ್ಗದ ದೂರದಷ್ಟು ಸ್ವಾತಂತ್ರ್ಯ ಇದ್ದಂತೆ ಆಗಿದೆ. ಹಾಗೆಯೇ ಅದು ಒಬ್ಬರಿಂದ ಇನ್ನೊಬ್ಬರು ಕಸಿದುಕೊಂಡದ್ದು. ಜಾತಿಪದ್ಧತಿಯು ಇಂತಹ ದಾಸ್ಯ ಶ್ರೇಣಿಯನ್ನು ಬಲವಾಗಿ ಬಿತ್ತಿರುವುದರಿಂದ ಇಂದಿಗೂ ಸಮಾಜಗಳಿಗೆ ತಕ್ಕುದಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಈ ಬಗೆಯ ಸಮಾಜದಲ್ಲಿ ಆರ್ಥಿಕ ಸ್ವಾತಂತ್ರ್ಯ ಕನಸಿನ ಮಾತು. ಒಂದು ತುಂಡು ಜಮೀನಿಗಾಗಿ ಈಗಲೂ ಬಡ ಕೂಲಿ ಕಾರ್ಮಿಕ ಅಥವಾ ಹಳ್ಳಿಯ ದಲಿತ ತುಂಬ ಕಷ್ಟಪಡಬೇಕಾದ ಸ್ಥಿತಿಯಿದೆ. ಇಪ್ಪತ್ತೊಂದನೆ ಶತಮಾನದಲ್ಲೂ ದಲಿತರ ಭೂಮಿಯ ಕನಸು ಹಾಗೆಯೇ ಉಳಿದಿದೆ. ಮತ್ತೊದೆಡೆ ಭೂಮಿಯ ಯಜಮಾನ್ಯ ಪಡೆದಿದ್ದ ರೈತರು ಭೂಮಿಯ ಸಹವಾಸ ಸಾಕು ಎನ್ನುವಂತಾಗಿ ಆರ್ಥಿಕ ದಾರಿಗಳು ಕವಲುರೂಪದಲ್ಲಿ ಸಾಗಿ ಇಕ್ಕಟ್ಟಿನಲ್ಲಿದ್ದಾರೆ. ರಾಜಕಾರಣ ಮಾತ್ರ ಸರ್ವತಂತ್ರ ಸ್ವತಂತ್ರವಾಗಿದೆ. ದಲಿತರಿಗೆ ಸ್ವಾತಂತ್ರ್ಯವಿದ್ದೂ ಅದು ಮತ್ತೊಬ್ಬರ ಮೂಲಕ ಚಲಾಯಿಸುವಂತಾಗಿದೆ.

ಗಾಂಧಿ ಮತ್ತು ಅಂಬೇಡ್ಕರ್ ಬಹಳ ದೂರದ ರೂಪಕಗಳಂತೆ ಮಾಸುತ್ತಿರುವ ದುರಂತವೂ ಇಂತಹ ಸ್ಥಿತಿಯ ಒಳಗೇ ಇದೆ. ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಇಪ್ಪತ್ತೊಂದನೆ ಶತಮಾನದಲ್ಲಿ ಎಚ್ಚರಿಕೆಯಿಂದ ನಮ್ಮ ಸಮಸ್ಯೆಗಳ ಜೊತೆ ಅನುಸಂಧಾನ ಮಾಡಬೇಕೇ ಹೊರತು ತುರ್ತಾದ ರಾಜಕೀಯ ಸ್ಪರ್ಧೆಗಳಲ್ಲಿ ಅವರನ್ನು ಬಳಸುವುದು ಅನೈತಿಕ. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ, ಅದನ್ನು ಸಮಾಜಗಳಿಗೆ ತಕ್ಕಂತೆ ಸಂವಿಧಾನ ಬದ್ಧವಾಗಿ ನೀಡಿದ್ದರೂ, ಅವುಗಳ ನಿರ್ವಹಣೆ ಮಾತ್ರ ಅದೇ ನಿರಂಕುಶ ಜಾತಿ ವ್ಯವಸ್ಥೆಯ ಹಿಡಿತದಲ್ಲೇ ಇದೆ. ದಲಿತರ ಮೇಲಿನ ಹಲ್ಲೆ ಆಕ್ರಮಣಗಳ ಸಂದರ್ಭದಲ್ಲಿ ಇಡೀ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿತ್ಯವೂ ನೋಡುತ್ತಿದ್ದೇವೆ. ಗಾಂಧೀಜಿ ತಂದುಕೊಟ್ಟ ಸ್ವಾತಂತ್ರ್ಯವನ್ನು ಸಂವಿಧಾನದ ಚೌಕಟ್ಟಿನಲ್ಲಿ ರಾಜಕಾರಣ ಮೀರುತ್ತಲೇ ಅದಕ್ಕೆ ತಿದ್ದುಪಡಿಗಳನ್ನು ಮಾಡಿಕೊಳ್ಳುತ್ತಿರುತ್ತದೆ.

ನವ ವಸಾಹತುಶಾಹಿಯ ಸುಂದರ ರೂಪಗಳು ಆಧುನಿಕೋತ್ತರ ಜಗತ್ತಿನ ಮಾಯೆಯ ಒಳಗೆ ನುಸುಳಿ ಬರುವುದು ಇಂತಹ ಮಾರ್ಗಗಳಿಂದಲೇ. ನಮ್ಮ ದೇಶದ ರಾಜಕಾರಣಿಗಳು ಹಾಗೂ ಉದ್ಯಮಿಗಳೇ ಜಾಗತೀಕರಣವನ್ನು ವಿಕಾರಗೊಳಿಸುತ್ತ ಮಗುಮ್ಮಾಗಿರುವುದು. ದೇಶದ ಒಳಗಿನ ಸ್ವಾತಂತ್ರ್ಯವು ಅಖಂಡವಾಗಿದ್ದಾಗ ಮಾತ್ರ ಹೊರಗಿನ ಆರ್ಥಿಕ ಆಕ್ರಮಣಗಳನ್ನು ತಡೆಯಲು ಸಾಧ್ಯವಾಗುವುದು. ಗಾಂಧೀಜಿ ದೇಶದ ಹೊರಮೈ ಸ್ವಾತಂತ್ರ್ಯವನ್ನು ಗೆದ್ದಿದ್ದರಷ್ಟೆ. ಆಧುನಿಕತೆಯು ಬಳಸಿ ಬಿಸಾಡುವುದರಲ್ಲಿ ನಿಪುಣವಾಗಿದ್ದರೆ, ಆಧುನಿಕೋತ್ತರ ಆರ್ಥಿಕ ಜಗತ್ತು ರೂಪಿಸುವ ನಿರಾಕರಣೆಯು ಅರಿವಿಗೆ ಬಾರದಂತೆ ಸ್ವತಃ ಆ ಸಮುದಾಯಗಳೇ ತಂತಾನೇ ನಿರಾಕರಿಸಿಕೊಂಡು ಕಳೆದುಹೋಗುವಂತೆ ಮಾಡುವುದರಲ್ಲಿ ನಿಸ್ಸೀಮತೆ ಪಡೆದಿದೆ. ದೇಶದ ಒಳಗಿನ ನೀತಿ ಕುರುಡಾಗಿದ್ದರೆ ಅದು ತನ್ನ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲಾರದು. ದಾಸ್ಯವೇ ಸುಖ ಎಂದು ಕರ್ಮ ಸಿದ್ಧಾಂತದ ಚಪಲತೆಯಲ್ಲಿ ಬೆಳೆದ ಸಮಾಜ ಅಷ್ಟು ಸಲೀಸಾಗಿ ತನ್ನ ಹಳೆಯ ಗುಣವನ್ನು ಬಿಟ್ಟುಕೊಡಲಾರದು.

ಛಿದ್ರವಾದ ಸಮಾಜ ಒಟ್ಟಾಗಿ ಬಾಳುವಲ್ಲಿಯೂ ಅನೇಕ ಸಮಸ್ಯೆಗಳನ್ನು ಸದಾ ಎದುರಿಸುತ್ತ ಇರಬೇಕಾಗುತ್ತದೆ. ಗಾಂಧೀಜಿಯ ಭಾವದಲ್ಲಿ ಅಖಂಡ ಭಾರತ ಇತ್ತೇ ಹೊರತು ಅದರ ಒಳಗಿದ್ದ ಸಾವಿರಾರು ಬಿರುಕುಗಳು ಕಂಡೇ ಇರಲಿಲ್ಲ. ಛಿದ್ರತೆಯ ವ್ಯಸನದಲ್ಲೇ ಇರುವ ಸಮುದಾಯಗಳು ಸ್ವಾತಂತ್ರ್ಯವನ್ನು ಅನುಭವಿಸಲೂ ದುರ್ಬಲವಾಗಿರುತ್ತವೆ. ಹೀಗಾಗಿಯೇ ಇಂದಿಗೂ ಇಡೀ ಭಾರತದಲ್ಲಿ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಬರುವುದಿಲ್ಲ. ಆದರೆ ಆ ಹಕ್ಕು ಬಾಧ್ಯತೆಗಳನ್ನು ಕಸಿಯಲು ಚಾಣಾಕ್ಷತೆಯಿರುತ್ತದೆ. ಇಂತಹ ನೀತಿಯಿಂದ ನಮ್ಮ ದೇಶದ ಕಾನೂನುಗಳನ್ನೆಲ್ಲ ತಮಗೆ ಬೇಕಾದಂತೆಲ್ಲ ಅಪಮೌಲ್ಯಗೊಳಿಸಲು ಸಾಧ್ಯವಾಗಿರುವುದು. ಭಾರತದ ಸಂವಿಧಾನವನ್ನೇ ವಕೀಲರು ತಮ್ಮ ಸ್ವರ್ಗವನ್ನಾಗಿಸಿ ಕೊಂಡಿರುವುದು ಇಂತಹ ಅವಕಾಶಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಛಿದ್ರ ಸ್ವಾತಂತ್ರ್ಯದ ಬಯಕೆಯೇ ಜಾತಿ ಸಮಾಜದಲ್ಲಿ ಹೆಚ್ಚು. ಪ್ರತ್ಯೇಕತಾ ಚಳುವಳಿಗಳು ಈಗ ಮತ್ತಷ್ಟು ಬಲಗೊಂಡಿವೆ. ಸ್ವಾತಂತ್ರ್ಯವೂ ಜಾತಿಯ ಶ್ರೇಣಿಯಲ್ಲೇ ಬಳಕೆಯಾಗುತ್ತಿದೆ. ಕೆಳಜಾತಿಗಳಲ್ಲಿ ಉಂಟಾಗುತ್ತಿರುವ ಘರ್ಷಣೆಗೆ ಅಸಮಾನತೆಗಳು ಕಾರಣವಾಗಿದ್ದರೂ, ಛಿದ್ರತೆಯಲ್ಲಿ ಅವು ಸ್ವಾತಂತ್ರ್ಯವನ್ನು ಬಯಸುತ್ತಿವೆ. ಅವುಗಳ ಸಾಂಸ್ಕೃತಿಕ ಅನನ್ಯತೆಯೇ ಇಂತಹ ಪ್ರತ್ಯೇಕ ಸ್ವಾತಂತ್ರ್ಯವನ್ನು ಅಪೇಕ್ಷಿಸುತ್ತಿರುತ್ತದೆ. ಹೀಗೆ ಸ್ವಾತಂತ್ರ್ಯವನ್ನು ವರ್ಗೀಕರಿಸಿಕೊಳ್ಳುವುದು ಅತ್ಯಂತ ಕ್ರೂರವಾದ ಸಂಗತಿ. ಹೀಗೆ ಭಗ್ನ ಸ್ವಾತಂತ್ರ್ಯದಲ್ಲಿ ಸಮಾಜದ ಸಮಾನತೆ ಅಸಾಧ್ಯ. ಅಂತಹ ಸಮಾಜಗಳು ತಮ್ಮ ತಮ್ಮ ವಿರುದ್ಧವಾಗಿಯೇ ಪೈಪೋಟಿಗಿಳಿದು, ಅಸಾಧ್ಯವಾದ ಉದ್ದೇಶವನ್ನು ಕಟ್ಟಿಕೊಳ್ಳಬಲ್ಲವು. ಪಾಕಿಸ್ತಾನ, ಬಾಂಗ್ಲಾ, ಭಾರತಗಳು ಹೀಗೆ ಸೀಳಿಕೊಂಡೇ ಆಧುನಿಕೋತ್ತರ ಜಗತ್ತಿನಲ್ಲಿ ಹಲವಾರು ಸವಾಲುಗಳಿಗೆ ಸಿಲುಕಿ ತನ್ನ ನಾಗರಿಕ ವ್ಯವಸ್ಥೆಯಲ್ಲಿ ವಿಪರೀತವಾದ ಅಪ್ರಮಾಣಿಕತೆಯನ್ನು, ದುರ್ಬಲವಾದ ಆಡಳಿತ ವ್ಯವಸ್ಥೆಯನ್ನು ಹೊಂದಿರುವುದು. ಗಾಂಧೀಜಿಯವರ ಅಖಂಡ ಸ್ವಾತಂತ್ರ್ಯವೇ ಭಗ್ನಗೊಂಡಿರುವಲ್ಲಿ ದೇಶದ ಒಳಗಿನ ಸ್ವಾತಂತ್ರ್ಯವು ಭವಿಷ್ಯದಲ್ಲಿ ಮತ್ತೂ ಕ್ರೂರ ಸ್ಥಿತಿಯನ್ನು ತರಬಲ್ಲದು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಈ ದೇಶದ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ಅನಿವಾರ್ಯತೆ ಇದೆ. ಯಾರಿಗೆ ನಿಜವಾಗಿ ಸ್ವಾತಂತ್ರ್ಯ ಇಲ್ಲವೋ, ಅವರು ಯಾರ ಸ್ವಾತಂತ್ರ್ಯವನ್ನೂ ಮೊಟಕು ಮಾಡುವುದಿಲ್ಲ. ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಗಾಂಧೀಜಿ ಹೋರಾಡಿ ಗೆದ್ದ ಸ್ವಾತಂತ್ರ್ಯವನ್ನು ಹಂಚಿದ್ದಾರೆ. ಸ್ವಾತಂತ್ರ್ಯವನ್ನು ಹೀಗೆ ಪುನರ್ ಸೃಷ್ಟಿಸಿ ಸಮನಾಗಿ ಹಂಚುವುದು ಗಾಂಧೀಜಿ ಮಾಡಿದ ಹೋರಾಟದಷ್ಟೇ ಮುಖ್ಯವಾದದ್ದು. ಗಾಂಧೀಜಿ ಒಬ್ಬರೇ ನಿಜವಾಗಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಗೆದ್ದಿದ್ದರು. ಒಂದು ವೇಳೆ ಆ ಸ್ವಾತಂತ್ರ್ಯವನ್ನು ಕೇವಲ ಪಡೆದಿದ್ದರೆ ಅದನ್ನು ಅವರು ಉಳಿದವರ ಪಾಲಿಗೆ ಬಿಟ್ಟುಕೊಡುತ್ತಿರಲಿಲ್ಲ. ಇದು ಸ್ವಾತಂತ್ರ್ಯದ ದರ್ಶನದ ಪರಿ. ರಾಷ್ಟ್ರೀಯ ಕಾಂಗ್ರೆಸ್ ನ ಮುಂದಾಳುಗಳು ಆ ಸ್ವಾತಂತ್ರ್ಯವನ್ನು ಕೆಂಪು ಕೋಟೆಯಲ್ಲಿ ಕುಳಿತು ಹಂಚಿಕೊಂಡರು. ಹಾಗೆ ಅಂದು ಹಂಚಿಕೊಂಡದ್ದು ರಾಜಕೀಯ ಪಕ್ಷ ಮತ್ತು ಜಾತಿಗಳ ಕೈಯಿಂದ ಅವರವರಿಗೆ ಬೇಕಾದಂತೆ ಅರ್ಥೈಸಲ್ಲಟ್ಟಿತು. ಗಾಂಧೀಜಿಗೆ ಸ್ವಾತಂತ್ರ್ಯ ಮಾತ್ರ ತಿಳಿದಿತ್ತು. ಅದರ ರಾಜಕಾರಣದ ಬಗ್ಗೆ ಪೂರ್ತಿಯಾಗಿ ಅವರು ಮುಗ್ಧರಾಗಿದ್ದರು. ಅಂಬೇಡ್ಕರ್ ಆ ಸ್ವಾತಂತ್ರ್ಯದ ರಾಜಕಾರಣದ ವಿರೂಪವನ್ನು ಗ್ರಹಿಸಿದ್ದರು. ಸ್ವಾತಂತ್ರ್ಯದ ಮುಗ್ಧ ದರ್ಶನ ಗಾಂಧೀಜಿಗೆ ಅಖಂಡ ಪರ್ಯಾಯವಾಗಿತ್ತೆಂಬುದು ನಿಜವಿದ್ದರೂ, ಆ ಪರ್ಯಾಯವೇ ಅವರ ಮುಂದೆ ಇಂಡೋ ಪಾಕಿಸ್ತಾನದ ಸೀಳುವಿಕೆಯಲ್ಲಿ ದುರಂತದ ಆರಂಭವನ್ನು ಸೂಚಿಸಿತ್ತು.

ಅಂಬೇಡ್ಕರ್ ಈ ಎಲ್ಲ ಬೆಳವಣಿಗೆಗಳನ್ನು ನಿಷ್ಠುರವಾಗಿ ಏಕಾಂಗಿಯಾಗಿ ಧ್ಯಾನಿಸುತ್ತಿದ್ದರು. ಬುದ್ಧನ ಧ್ಯಾನ ಅವರನ್ನು ಕರೆಯುತ್ತಿತ್ತು. ಬುದ್ಧ ನೀಡುವ ಸ್ವಾತಂತ್ರ್ಯದ ಮಹಾ ಬೆಳಗು ಅಂಬೇಡ್ಕರ್ ಅವರಲ್ಲಿ ಭವಿಷ್ಯದ ಭಾರತದ ಬಗ್ಗೆ ಚಿಂತಿಸುವಂತೆ ಮಾಡಿತ್ತು. ಗಾಂಧೀಜಿಯನ್ನು ಸ್ವಾತಂತ್ರ್ಯದ ಉತ್ಸವಕ್ಕೆ ಗೋಡ್ಸೆ ಬಲಿಕೊಟ್ಟಿದ್ದು ಭಾರತೀಯರು ಸ್ವಾತಂತ್ರ್ಯವನ್ನು ಅರ್ಥಮಾಡಿಕೊಂಡಿರುವುದಕ್ಕೂ, ಅದನ್ನು ಭಗ್ನಗೊಳಿಸುವುದಕ್ಕೂ ಬಹುದೊಡ್ಡ ರೂಪಕ. ಗಾಂಧಿಯ ಜೊತೆಯಲ್ಲೆ ಗಾಂಧಿಯ ಸ್ವಾತಂತ್ರ್ಯದ ದರ್ಶನ ನೆತ್ತರಲ್ಲಿ ಲೀನವಾಗಿತ್ತು.

ದೇಶದಲ್ಲಿ ಜಾತಿ, ಮತ, ಧರ್ಮ, ವರ್ಗ, ಪಂಗಡಗಳು ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದವು. ಆದರೆ ಮನುಷ್ಯರು ಸ್ವಾತಂತ್ರ್ಯವನ್ನು ಪಡೆಯಲಿಲ್ಲ. ಅವರವರ ಸಂಕೇತಗಳು, ಅಧಿಕಾರದ ವ್ಯವಸ್ಥೆಗಳು, ಸನಾತನ ಮೌಲ್ಯಗಳು ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದವು. ಇಂತಹ ದುರಂತದ ನಡುವೆ ಅಂಬೇಡ್ಕರ್ ಸಂವಿಧಾನವನ್ನು ಬುದ್ಧನ ನೀತಿಯಲ್ಲಿ ಮತ್ತೆ ಪುನರ್ ಸೃಷ್ಟಿಸಿದರು. ಮನುಷ್ಯರಿಗೆ ಸಂವಿಧಾನದ ಮೂಲಕ ಸ್ವಾತಂತ್ರ್ಯವನ್ನು ಸಮನಾಗಿ ಹಂಚಿದರು. ಗದ್ದುಗೆಯನ್ನು ನಿರಾಕರಿಸಿ ಆಶ್ರಮ ಸೇರಿಕೊಂಡಿದ್ದ ಗಾಂಧಿಯ ಪ್ರಾರ್ಥನೆಯಲ್ಲಿ ಸ್ವಾತಂತ್ರ್ಯದ ಉಸಿರಾಟವಿತ್ತು. ನೆಹರು ಪಡೆ ಆ ಸ್ವಾತಂತ್ರ್ಯವನ್ನು ಆಧುನಿಕತೆಯ ಆದರ್ಶದಲ್ಲಿ ದೇಶವನ್ನು ಕಟ್ಟುವ ಭರದಲ್ಲಿ ಎಲ್ಲೆಲ್ಲಿಗೋ ಕೊಂಡೊಯ್ದಿತು. ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಮುಕ್ತಿಗೆ ಬೇಕಾದ ಎಲ್ಲ ದಾರಿಗಳನ್ನು ತೆರೆಯಲಾಗಿತ್ತು. ಅಖಂಡ ಸ್ವಾತಂತ್ರ್ಯವನ್ನು ವ್ಯಕ್ತಿ ಸ್ವಾತಂತ್ರ್ಯದಲ್ಲಿ ಅಂಬೇಡ್ಕರ್ ವಿಸ್ತರಿಸಿದರು. ಗಾಂಧೀಜಿಗೆ ವ್ಯಕ್ತಿ ಸ್ವಾತಂತ್ರ್ಯದ ಘನತೆಗಿಂತಲೂ ದೇಶದ ಸ್ವಾತಂತ್ರ್ಯವೇ ಮಿಗಿಲಾಗಿತ್ತು.

ಭಾರತೀಯ ಸಮಾಜ ಎಂದೂ ಯಾವುದನ್ನು ಹಂಚಿಕೊಂಡು ಬದುಕುವಂತಹುದಲ್ಲ. ವಿಷಾದ ಹಾಗೂ ವ್ಯಂಗ್ಯವೆಂದರೆ ಏನೂ ಇಲ್ಲದ ಬರಿಗೈ ಸಮುದಾಯಗಳು ಮಾತ್ರ ತನ್ನಲ್ಲಿರುವುದನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿರುತ್ತವೆ. ಪಡೆದ ಸಮಾಜಗಳು ಯಾವತ್ತೂ ಮತ್ತಷ್ಟು, ಇನ್ನಷ್ಟು ಎಂದು ಸಂಪತ್ತನ್ನು, ಅಧಿಕಾರವನ್ನು, ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಹೊಸಬಗೆಯ ಉಪಾಯಗಳನ್ನು ಹುಡುಕುತ್ತಲೇ ಇರುತ್ತವೆ. ಅಂಬೇಡ್ಕರ್ ಅವರು ಗಾಂಧೀಜಿಯ ಸ್ವಾತಂತ್ರ್ಯವನ್ನೂ, ಬುದ್ಧನ ತತ್ವವನ್ನೂ ಸಂವಿಧಾನವಾಗಿ ಪರಿರ್ವತಿಸಿ ನ್ಯಾಯಾಂಗ ಕಾಯ್ಯಾಂಗ ಶಾಸಕಾಂಗಗಳ ಮೂಲಕ ಸ್ವಾತಂತ್ರ್ಯವನ್ನು ಗೆದ್ದು ಬಿಟ್ಟರು. ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರು ಮಾತ್ರ ಸ್ವಾತಂತ್ರ್ಯವನ್ನು ಗೆದ್ದದ್ದು. ಇವರಿಬ್ಬರೇ ಅದನ್ನು ಮರಳಿ ಸಮಾಜದ ಹಿತಕ್ಕಾಗಿ ಬಿಟ್ಟುಕೊಟ್ಟವರು. ಇದರಿಂದಲೇ ದಲಿತರಿಗೆ ಸಂವಿಧಾನ ಬದ್ಧವಾದ ಅಸ್ತಿತ್ವ ರೂಪುಗೊಂಡಿದ್ದು.

ಮಹಿಳೆಯರಿಗೆ ಮೊದಲಬಾರಿಗೆ ಅಂಬೇಡ್ಕರ್ ಪ್ರತ್ಯೇಕ ಮೀಸಲಾತಿಯನ್ನು ಏಕಾಂಗಿಯಾಗಿ ಹೋರಾಡಿ ಪ್ರತಿಪಾದಿಸಿದರು. ಸಮಾಜದ ಮುಖ್ಯ ಶಕ್ತಿಯಾದ ಮಹಿಳೆಯರಿಗೆ ಸಂವಿಧಾನದ ಮೂಲಕ ಸ್ವಾತಂತ್ರ್ಯವನ್ನು ನೀಡಿದ್ದು ಅಂಬೇಡ್ಕರ್ ವ್ಯಕ್ತಿತ್ವ ಎಂಥದೆಂಬುದನ್ನು ಸಾರುತ್ತದೆ. ದಲಿತರಿಗಂತೂ ಸಂವಿಧಾನವು ದೊಡ್ಡ ರಕ್ಷಾಕವಚವಾಯಿತು. ಇಂತಹ ರಕ್ಷಾಕವಚ ದೇಶದ ಎಲ್ಲ ಸಮುದಾಯಗಳಿಗೂ ಸಾಧ್ಯವಾಗಿದೆ. ಇಲ್ಲದಿದ್ದರೆ ಎಷ್ಟೋ ಸಮುದಾಯಗಳು ಎಂದೋ ಕಳೆದುಹೋಗುತ್ತಿದ್ದವು. ಈ ರಕ್ಷಾಕವಚ ಎಷ್ಟೊಂದು ಅಗಾಧವಾದುದೆಂದರೆ ಈ ದೇಶದ ಭಿಕ್ಷುಕನಿಗೂ ಅದು ನ್ಯಾಯದ ವಕಾಲತ್ತನ್ನು ವಹಿಸುತ್ತದೆ. ಅನಾಥರ ಹಸಿವಿನ ಬಗ್ಗೆ ಪ್ರಶ್ನಿಸುತ್ತದೆ. ಜಗತ್ತಿನ ಯಾವ ಸಂವಿಧಾನದಲ್ಲೂ ಹಸಿವಿನಿಂದ ಬಳಲುವವರ ಬಗ್ಗೆ ಉಲ್ಲೇಖವಿಲ್ಲ. ಅಂಬೇಡ್ಕರ್ ರೂಪಿಸಿದ ಸಂವಿಧಾನದ ಪ್ರಕಾರ ದೇಶದ ಯಾರಾದರೂ ಹಸಿವಿನಿಂದ ನರಳಿ ಸತ್ತರೆ, ಅದು ಆ ವ್ಯವಸ್ಥೆಯ ತಪ್ಪು, ಸರ್ಕಾರ ಆ ಹೊಣೆ ಹೊರಬೇಕಾಗುತ್ತದೆ. ಅಂತವರ ಸಾವು ಇಲ್ಲವೆ ದುರ್ಬಲರ ದುರಂತಕ್ಕೆ ಸರ್ಕಾರ ನೈತಿಕವಾಗಿ ಹೊಣೆಯಾಗಬೇಕಾಗುತ್ತದೆ ಎಂದು ಅವರು ಸೂಚಿಸಿದ್ದಿದೆ.

ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಪ್ರಶ್ನಿಸುವ ಹಕ್ಕನ್ನು ಅಂಬೇಡ್ಕರ್ ಉದ್ದೇಶ ಪೂರ್ವಕವಾಗಿಯೆ ನೀಡಿದ್ದಾರೆ. ಧ್ವನಿಯೇ ಇಲ್ಲದವರ ಧ್ವನಿಯಾಗಿ ಸಂವಿಧಾನವು ತಂತಾನೇ ನ್ಯಾಯದ ಹೋರಾಟದ ಪ್ರಣಾಳಿಕೆಯಂತೆ ಅವರವರ ಅಸ್ತಿತ್ವಕ್ಕಾಗಿ ಹೋರಾಡುತ್ತದೆ. ಸಂವಿಧಾನದಲ್ಲಿ ಇಂತಹ ಸ್ವಾತಂತ್ರ್ಯದ ಅಂರ್ತಜಲ ಹರಿಯುವುದರಿಂದ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಬದುಕುಳಿಯಲು ಸಾಧ್ಯವಾಗಿರುವುದು. ಹೀಗಾಗಿ ಭಾರತೀಯ ಸಂವಿಧಾನವು ಪರಮ ಸ್ವಾತಂತ್ರ್ಯದ ವ್ಯವಸ್ಥೆ. ಅಂತೆಯೇ ಎಲ್ಲರನ್ನೂ ಸಮಾನವಾಗಿ ಕಾಣುತ್ತ, ಅವರವರ ಘನತೆಗೆ ಅನನ್ಯತೆಗೆ ಭಂಗ ಉಂಟಾಗದಂತೆ ಕಾಯುವ ಶಕ್ತಿ. ಆಳುವ ವ್ಯವಸ್ಥೆಯನ್ನು ಸದಾ ನಿಯಂತ್ರಿಸುವ ಸಂವಿಧಾನದಲ್ಲಿ ಈ ದೇಶದ ನೊಂದ ಎಲ್ಲರ ವಿವೇಕವಿದೆ.

ಛಿದ್ರವಾಗಿದ್ದ ಭಾರತ ಮಾತೆಯ ಸೀರೆಯನ್ನು ಗಾಂಧೀಜಿ ಗತಕಾಲದ ರಮ್ಯ ಸ್ವಾತಂತ್ರ್ಯದ, ಸರ್ವೋದಯದ, ಆಧ್ಯಾತ್ಮದ ಬಲದಿಂದ ಹೊಲೆದು ಕೊಟ್ಟಿದ್ದನ್ನು ಅಂಬೇಡ್ಕರ್ ಆಧುನಿಕ ಜಗತ್ತಿನ ಎಚ್ಚರದಿಂದ, ಬುದ್ಧನ ಧ್ಯಾನದಿಂದ ತೊಳೆದು ಅದನ್ನು ಕೌದಿಯಾಗಿಸಿ ಅನಾಥರಿಗೂ ಹೊದೆಸಿಬಿಟ್ಟರು. ಈ ಹಿನ್ನೆಲೆಯಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ದೇಹ ಮತ್ತು ಆತ್ಮವಿದ್ದಂತೆ. ಗಾಂಧೀಜಿಯು ಈ ದೇಶದ ದೇಹವಾದರೆ ಆ ದೇಹದ (ದೇಶದ) ಅಂತರಾತ್ಮ ಅಂಬೇಡ್ಕರ್. ಹಾಗೆಯೇ ಭಾರತದ ಸ್ವಾತಂತ್ರ್ಯ ಎಂದರೆ ಅದು ಗಾಂಧಿ. ಅಂತೆಯೆ ದೇಶದ ಸ್ವಾತಂತ್ರ್ಯದ ಆತ್ಮ ಎಂದರೆ ಅದು ಅಂಬೇಡ್ಕರ್. ದೇಹ ಮತ್ತು ಆತ್ಮ ಎರಡೂ ಒಂದನ್ನೊಂದು ಅವಲಂಬಿಸಿದ್ದರೂ ಅವು ಬೇರೆ ನೆಲೆಯ ಏಕಾಂತಗಳಲ್ಲಿ ಲೋಕಾಂತದ ಧಾವಂತಗಳನ್ನು ಹೊತ್ತು ಅಸ್ತಿತ್ವದ ಪಯಣದಲ್ಲಿ ಸಾಗುತ್ತಿರುತ್ತವೆ. ಆತ್ಮವಿಲ್ಲದ ದೇಹ ಅಸಾಧ್ಯ. ಹಾಗೆಯೆ ದೇಹವಿಲ್ಲದ ಆತ್ಮ ಅಸ್ತಿತ್ವರಹಿತವಾದದ್ದು. ಸವರ್ಣೀಯರಿಗೆ ಅಂಬೇಡ್ಕರ್ ಎಂಬ ಆತ್ಮವಿರಬೇಕು. ದಲಿತರಿಗೆ ಗಾಂಧಿ ಎಂಬ ದೇಹವಿರಬೇಕು. ಅದು ನಿಜವಾದ ಸೌಂದರ್ಯ, ಅದೇ ಆತ್ಯಂತಿಕವಾದ ಎಚ್ಚರ. ಅದೇ ನ್ಯಾಯದ ಪರಮ ಸಮಾನತೆಯ ವಾಸ್ತವ ಸ್ಥಿತಿ.

ಇಂತಹ ಧ್ಯಾನವಿಲ್ಲದ ಆಧುನಿಕೋತ್ತರ ಭಾರತವನ್ನು ಕಟ್ಟಲಾಗದು. ಸಂವಿಧಾನವನ್ನು ತಿದ್ದುಪಡಿ ಮಾಡಲು ಹಲವಾರು ಯತ್ನಗಳು ನಿರಂತರವಾಗಿ ಆಗುತ್ತಲೇ ಇವೆ. ಆಡಳಿತದ ಸುಧಾರಣೆಗೆ ಹಾಗೂ ಸಮಾಜದ ಹೊಸ ಬಗೆಯ ಅವಕಾಶಗಳಿಗೆ ತಿದ್ದುಪಡಿಗಳು ಅನಿವಾರ್ಯವಾಗಿ ಆಗಲೇಬೇಕು. ಯಾವ ಸಂವಿಧಾನವೂ ಸಾರ್ವಕಾಲಿಕವಾದುದಲ್ಲ. ತಿದ್ದುಪಡಿಗಳು ಸೀಮಿತ ನೆಲೆಯಿಂದ ಮತ, ಮೌಢ್ಯ, ಜಾತಿಗಳ ಹಿನ್ನೆಲೆಯಲ್ಲಿ ಆಗಬಾರದು. ಉನ್ನತ ನಾಗರೀಕತೆಯ ಕಡೆಗೆ ಚಲಿಸಬೇಕಾದಲ್ಲಿ ಸ್ವಾತಂತ್ರ್ಯ ಮತ್ತು ನೈತಿಕತೆ ಎರಡೂ ಸಾಧ್ಯತೆಗಳು ಇನ್ನಷ್ಟು ಬಲಶಾಲಿಯಾಗುವಂತೆ ಮಾರ್ಪಾಟಾಗಬೇಕು. ಸಂವಿಧಾನದಲ್ಲಿ ಲೋಪ ಇದೆ ಎನ್ನುವುದಕ್ಕಿಂತ ಆಳುವ ಸಮಾಜದಲ್ಲಿ ಯಾವ ಲೋಪ ಇದೆ ಎಂಬುದನ್ನು ಮೊದಲು ಪರಿಶೀಲಿಸಬೇಕು. ಗಾಂಧಿ ಮತ್ತು ಅಂಬೇಡ್ಕರ್ ರೂಪಿಸಿದ ಆಧುನಿಕ ಭಾರತ ಈ ಹೊತ್ತಿಗೆ ಬಹಳ ದೂರದ ಪಯಣಕ್ಕೆ ಸಜ್ಜಾಗುತ್ತಿದೆ. ಇಂಥಲ್ಲಿಯೇ ರೂಪವಿರೂಪ ಎಲ್ಲವೂ ಒಟ್ಟಿಗೆ ಬೆರೆತು ನಾಳೆಯ ವಾಸ್ತವ ತೀರ್ಮಾನವಾಗುವುದು. ಬಲ ಪಂಥೀಯ ರಾಜಕಾರಣವು ತನ್ನ ಹಿಂದುತ್ವದ ರಕ್ಷಣೆಗಾಗಿ ಸಂವಿಧಾನವನ್ನೆ ವಿರೂಪಗೊಳಿಸಬಲ್ಲದು. ಆಗ ದೇಶದ ‘ಅಹಿಂದ’ ಸಮುದಾಯಗಳ ರಕ್ಷಾಕವಚವೇ ಸಡಿಲವಾಗಿಬಿಡುತ್ತದೆ. ಅಂತಹ ಅಪಾಯದ ನಡುವೆ ಒಳಗೊಳ್ಳಬೇಕಾದ ಸಾಂಘಿಕವಾದ ಪ್ರತಿರೋಧ ಶಕ್ತಿಯು ಒಗ್ಗೂಡಲು ಇದು ಸಕಾಲ.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

ಬೆತ್ತಲೆ ವೃಕ್ಷ : ಹಿತ್ತಲ ಗಿಡ ಮುದ್ದಲ್ಲ


ಬಿ. ಶ್ರೀಪಾದ್ ಭಟ್

vartamaana

ಗೆಳೆಯ ಸಿ.ಜಿ.ಲಕ್ಷ್ಮೀಪತಿ ಅವರು ಬರೆದ ಬೆತ್ತಲೆ ವೃಕ್ಷ ಪುಸ್ತಕವು 2007ರಲ್ಲಿ ಪ್ರಕಟಣೆಗೊಂಡಿತು. ಲೈಂಗಿಕತೆಯನ್ನು ಅದರ ವಿವಿಧ ಆಯಾಮಗಳಲ್ಲಿ, ನಾಗರೀಕ ಸಮಾಜವು ಈ ಲೈಂಗಿಕತೆಗೆ ಆರೋಗ್ಯಕರವಾದ ಮನಸ್ಥಿತಿಯಲ್ಲಿ ತರೆದುಕೊಳ್ಳುವುದರ ಕುರಿತಾಗಿ, ಗಂಡು ಮತ್ತು ಹೆಣ್ಣಿನ ವಿಭಿನ್ನ ವ್ಯಕ್ತಿತ್ವಗಳು, ಬಹುರೂಪಿ ವರ್ತನೆಗಳ ಕುರಿತಾಗಿ ಸಿ.ಜಿ.ಲಕ್ಷ್ಮೀಪತಿಯವರು ತಮ್ಮ “ಬೆತ್ತಲೆ ವೃಕ್ಷ” ಪುಸ್ತಕದಲ್ಲಿ ಸಮಗ್ರವಾಗಿ ಮತ್ತು ವಿವರವಾಗಿ ಚರ್ಚಿಸಿದ್ದಾರೆ.

2000ರಲ್ಲಿ ‘ಅಗ್ನಿ’ವಾರಪತ್ರಿಕೆಯಲ್ಲಿ ಕೆಲವು ತಿಂಗಳುಗಳ ಕಾಲ ಪ್ರಕಟಗೊಂಡ ಲೇಖನಗಳ ಸಂಗ್ರಹವೇ ಈ ‘ಬೆತ್ತಲೆ ವೃಕ್ಷ’ ಪುಸ್ತಕ. ಲೇಖಕ ಲಕ್ಷ್ಮೀಪತಿ ಯವರು ಈ ಕೃತಿಯಲ್ಲಿ ‘ನಾನು ಸಾಂಪ್ರದಾಯಿಕ ಸಮಾಜಶಾಸ್ತ್ರೀಯ ವಿಧಾನವನ್ನು ಬಳಸಿಲ್ಲ. ಒಂದರರ್ಥದಲ್ಲಿ ಇತರರ ಜೀವನಾನುಭವ, ನನ್ನ ಅನುಭವ, ಲೈಂಗಿಕತೆ ಬಗೆಗಿನ ಗುಟ್ಟಾದ ಕತೆಗಳು, ನಂಬಿಕೆಗಳು ಈ ಕೃತಿಯನ್ನು ರೂಪಿಸುವಲ್ಲಿ ನೆರವಾಗಿವೆ. ಸಾಮಾನ್ಯವಾಗಿ ಲೈಂಗಿಕತೆಯನ್ನು ಕುರಿತು ಬರೆಯುವಾಗ ಅದು ವಲ್ಗರ್ ಆಗದಂತೆ ಹೇಳಬಹುದಾದ್ದನ್ನು ಓದುಗರಿಗೆ ಮುಜುಗರವಾಗದಂತೆ, ಆದರೆ ಮರೆಮಾಚದಂತೆ ಮಂಡಿಸುವುದು ಕಷ್ಟದ ಕೆಲಸ. ಈ ಕೆಲಸದಲ್ಲಿ ನಾನು ಸಾಕಷ್ಟು ಯಶಸ್ವಿಯಾಗಿದ್ದೇನೆ ಅಂದುಕೊಂಡಿದ್ದೇನೆ’ ಎಂದು ತಮ್ಮ ಮುನ್ನುಡಿ ಮಾತಿನಲ್ಲಿ ಬರೆಯುತ್ತಾರೆ.

ಅವರು ಈ ಲೇಖನವನ್ನು ಪ್ರತಿ ವಾರ ಪತ್ರಿಕೆಗೆ ಬರೆಯುತ್ತಿದ್ದಾಗ ಆರಂಭದ ದಿನಗಳಲ್ಲಿ ಕೆಲವು ಮಹಿಳಾ ಸಂಘಟನೆಗಳಿಂದ ಈ ಲೇಖನಗಳಿಗೆ ವಿರೋಧ ಎದುರಿಸಿದ್ದರು. ಲೇಖಕರು ಮುಕ್ತ ಲೈಂಗಿಕತೆಯ ಕುರಿತಾಗಿ ಬರೆವಾಗ ಅನೇಕ ಕಡೆ ಲೈಂಗಿಕ ಅಂಗಾಂಗಗಳ ಬಳಕೆಗಳ ಕುರಿತಾಗಿ ವಿವರವಾಗಿ ಬರೆದಿರುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಮಹಿಳೆಗೆ ಲೈಂಗಿಕತೆಯ ಕುರಿತಾಗಿ ನಿಯಂತ್ರಿಸುತ್ತಿರುವುದು ಸಮಾಜವನ್ನು ನಿಯಂತ್ರಿಸುತ್ತಿರುವ ಊಳಿಗಮಾನ್ಯ ಸಂಸ್ಕೃತಿ ಹಾಗೂ ಪುರುಷಾಧಿಪತ್ಯದ ಕುರಿತಾಗಿ ಲೇಖಕರು ಎಲ್ಲಿಯೂ ಬರೆದಿಲ್ಲ ಎಂದು ಮಹಿಳಾ ಸಂಘಟನೆಗಳು ಅರೋಪಿದ್ದವು. ಮಹಿಳಾ ಜಾಗೃತಿ ಸಂಘಟನೆಯ ಸುಷ್ಮಾ ಅವರು ಪ್ರತಿಭಟನೆ ರೂಪವಾಗಿ ಬರೆದ ಪತ್ರವನ್ನು ಸಹ ಇದೇ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

ಇದಕ್ಕೂ ಮುಂಚೆ ಮಹಿಳಾ ಜಾಗೃತಿ ಸಂಘಟನೆಗಳ ಪ್ರತಿಭಟನೆಗೆ ಉತ್ತರಿಸುತ್ತಾ ಲಕ್ಷ್ಮೀಪತಿಯವರು ಸಂಭೋಗಿಸುವುದು ಹೇಗೆಂದು ತಿಳಿಯದ ಕೋಟ್ಯಾಂತರ ಮಹಿಳೆಯರಿದ್ದಾರೆ. ಗಂಡಸಿನ ಲೈಂಗಿಕ ಒತ್ತಡ ತೀರಿದೊಡನೆ ಸಂಭೋಗವೇ ಮುಗಿದು ಹೋಯಿತೆಂದು ಭಾವಿಸುತ್ತಾರೆ. ಸ್ವಲ್ಪ ತಿಳಿವಳಿಕೆ, ಲೈಂಗಿಕ ಶಿಕ್ಷಣ, ನೈಸಿರ್ಗಕವಾಗಿ, ಗಂಡು ಹೆಣ್ಣಿನ ಸಲುಗೆ ಸ್ನೇಹದಿಂದ ಯಾವುದೇ ವೆಚ್ಚವಿಲ್ಲದೆ ಸುಲುಭವಾಗಿ ದೊರೆಯುವ ಈ ಪರಮೋನ್ನತ ಸುಖದಿಂದ ದಂಪತಿಗಳು ವಂಚಿತರಾಗುವುದನ್ನು ಗಮನಿಸಿದರೆ ವಿಷಾದ ಉಂಟಾಗುತ್ತದೆ.

ಬೈಯುವಾಗ, ತೀವ್ರವಾಗಿ ಪ್ರೀತಿಸುವಾಗ, ಹರಟೆ ಕೊಚ್ಚುವಾಗ ಲೈಂಗಿ ಭಾಷೆ ಎಷ್ಟು ಹಾಸು ಹೊಕ್ಕಾಗಿರುತ್ತದೆಂದರೆ ಅದನ್ನು ಹೊರತುಪಡಿಸಿ ಮಾತನಾಡಲೂ ಸಾಧ್ಯವಿಲ್ಲ ಎಂದು ಪ್ರತಿಕ್ರಯಿಸುತ್ತಾರೆ. ಮೇಲಿನ ಮಹಿಳಾ ಜಾಗೃತಿ ಸಂಘಟನೆಯ ಕಳಕಳಿಯ ಮಾತುಗಳು ಎಷ್ಟು ಸತ್ಯವೋ ಅಷ್ಟೇ ಸತ್ಯ ಗೆಳೆಯ ಲಕ್ಷ್ಮೀಪತಿಯವರ ವಿವರಣೆಗಳು. ಏಕೆಂದರೆ ಲೈಂಗಿಕ ಬದುಕಿನ ಕುರಿತಾಗಿ ಹಿಂದಿನ ಕಾಲದಿಂದಲೂ ಹೆಣ್ಣು ಕೌರ್ಯಕ್ಕೆ, ಅತ್ಯಾಚಾರಕ್ಕೆ, ಮೌಢ್ಯಕ್ಕೆ ಬಲಿಯಾಗುತ್ತಳೇ ಇದ್ದಾಳೆ. ಇದಕ್ಕೆ ಮಾನವಶಾಸ್ತ್ರಜ್ಞರೂ, ಸಮಾಜಶಾಸ್ತ್ರಜ್ಞರೂ ವಿಭಿನ್ನ ರೀತಿಯ ವಿಶ್ಲೇಷಣೆಗಳನ್ನ ನೀಡಿದ್ದಾರೆ.

ಇಲ್ಲಿನ ಪುಸ್ತಕದಲ್ಲಿ ಲೇಖಕ ಇದಕ್ಕೆ ಹೆಚ್ಚಾಗಿ ಒತ್ತು ನೀಡಿಲ್ಲ. ಮೌಢ್ಯದ ಕುರಿತಾಗಿ ವಿವರವಾಗಿ ಹಾಗೂ ವೈಚಾರಿಕವಾಗಿ ಬರೆದಿದ್ದಾರೆ ನಿಜ. ಆದರೆ ಈ ಮೌಢ್ಯವನ್ನು ವೈಯುಕ್ತಿಕ ಹಾಗೂ ಕುಟಂಬದ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆಯೇ ಹೊರತಾಗಿ ಈ ಊಳಿಗಮಾನ್ಯದ ಹಿನ್ನಲೆಯಲ್ಲಿ ಅಲ್ಲ.ಇಲ್ಲಿ ಲೇಖಕರೇ ಕೆಲವರು ಲೈಂಗಿಕ ವಿಚಾರಗಳನ್ನು ರಂಜಕವಾಗಿ ಬರೆಯಬಾರದು ಗಂಭೀರವಾಗಿ ಬರೆಯಬೇಕು ಮುಂತಾದ ಸಲಹೆಗಳನ್ನು ನೀಡುತ್ತಾರೆ.ಸೆಕ್ಸ ಎನ್ನುವುದು ನಮ್ಮ ದೇಹದ ಚೈತನ್ಯದ ಒಂದು ಭಾಗವೇ ಆಗಿರುವುದರಿಂದ ಅದರ ನೆನಪು,ಮಾತೇ ರೋಮಾಂಚನ ಉಂಟು ಮಾಡುತ್ತದೆ.ಅಂಥ ಅದ್ಭುತ ಆನಂದಮಯವಾದ ಕ್ರಿಯೆಯನ್ನು ಜೀವಂತವಾಗಿ ಬರೆದರೆ ಆಗುವ ತಪ್ಪಾದರೂ ಏನು ? ಲೈಂಗಿಕತೆಯನ್ನು ಕುರಿತು ನನಗೂ ಅದಕ್ಕೂ ಸಂಬಂಧವೂ ಇಲ್ಲವೇನೋ ಎಂಬಂತೆ ಬರೆಯುವುದು ಕೃತಕವೂ,ಅಪ್ರಾಮ್ರಾಣಿಕವೂ ಆಗುತ್ತದೆ. ಎಂದು ಹೇಳುತ್ತಾರೆ.ಅವರ ಮಾತು ನಿಜ.ಆದರೆ ಕೇವಲ ಗಂಡುಹೆಣ್ಣಿನ ವೈಯುಕ್ತಿಕ ಲೈಂಗಿಕ ಕ್ರಿಯೆಗಳ ಆಯಾಮದಲ್ಲೇ ಬರೆದರೆ ಅದಕ್ಕೆ ಸೀಮಿತ ಚೌಕಟ್ಟು ಹಾಕಿದಂತಾಗುವುದಿಲ್ಲವೇ? ಇದು ಈ ಪುಸ್ತಕದಲ್ಲಿ ಕೊರತೆಯಾಗಿ ಕಾಡುತ್ತದೆ.

ಈ ‘ಬೆತ್ತಲೆ ವೃಕ್ಷ’ ಪುಸ್ತಕವನ್ನು ಸ್ಥೂಲವಾಗಿ ನಾಲ್ಕು ಭಾಗಗಳಾಗಿ ಓದಬಹುದು. ಮೊದಲ ಭಾಗದಲ್ಲಿ ವೇದಗಳ ಕಾಲದ ಮುಕ್ತ ಕಾಮದ ಲೈಂಗಿಕತೆ, ತಂತ್ರ, ಮಿಥುನದ ವಿವಿಧ ಕ್ರಿಯೆಗಳ ವಿವರವಾದ ವಿವರಣೆ, ವಾತ್ಸಾಯನನ ಕಾಮಸೂತ್ರ ಕುರಿತಾಗಿ ಅತ್ಯಂತ ವಿವರವಾದ ಅಧ್ಯಯನ. ಈ ಮೊದಲ ಭಾಗದಲ್ಲಿ ಲೈಂಗಿಕ ಕ್ರಿಯೆಗಳ ಕುರಿತಾಗಿ, ಆ ಘಟ್ಟಗಳಲ್ಲಿ ಲೈಂಗಿಕ ಕ್ರಿಯೆಯ ಸಮಯದಲ್ಲಿನ ಅಂಗಾಂಗಳ ಬಳಕೆಗಳ ಕುರಿತಾಗಿ, ಸಾವಿರಾರು ವರ್ಷಗಳ ಹಿಂದಿನ ಕಾಲದ ನಾಗರೀಕತೆಯ ಹಾಗೂ ಆ ಕಾಲಘಟ್ಟದ ಸಮಾಜದ ಅನೇಕ ಕುರುಡು ನಂಬಿಕೆಗಳ, ಅವರ ಲೈಂಗಿಕ ಒರಟುತನದ ಕುರಿತಾಗಿಯೂ ವಿವರವಾಗಿ ಬರೆದಿದ್ದಾರೆ.

ಸೆಕ್ಸ್ ನ ಕುರಿತಾದ ವಿಸ್ತೃತ ವಿವರಣೆಗಳನ್ನು ಸಹ ಒದಗಿಸಿದ್ದಾರೆ. ಈ ವಿವರಗಳು ಅನೇಕ ವೇಳೆ ಪುನರಾವೃತ್ತಿಗೊಳ್ಳುತ್ತವೆ. ಅಲ್ಲದೆ ಈ ಲೇಖನಗಳು ವಾರಪತ್ರಿಕೆಗೆ ಬರೆದಿದ್ದಕ್ಕಾಗಿಯೋ ಏನೋ ಅದಕ್ಕೆ ಸಹಜವಾಗಿಯೇ ಒಂದು ಅಕಡೆಮಿಕ್ ಚೌಕಟ್ಟಾಗಲೀ, ಸಂಶೋಧನೆಯ ಸ್ವರೂಪವಾಗಲೀ ದಕ್ಕಿದಂತಿಲ್ಲ. ಇಲ್ಲಿ ಒಂದು ಬಗೆಯ ‘ಟ್ಯಾಬ್ಲಾಯ್ಡ್’ ರೋಚಕತೆ ಪ್ರಭಾವಿಸಿದೆ. ಈ ಭಾಗದಲ್ಲಿ ಲೈಂಗಿಕ ಕ್ರಿಯೆಗಳ ಕುರಿತಾಗಿ ಹಾಗೂ ಆ ಕಾಲಘಟ್ಟದ ಅನಾಗರಿಕ ವರ್ತನೆಗಳು ಮತ್ತು ಲೈಂಗಿಕತೆಯ ಕುರಿತಾದ ಮೂಢನಂಬಿಕೆಗಳನ್ನು ವಿವರಿಸುವಾಗ ಲೇಖಕರು ಎಲ್ಲಿಯೂ ಮಧ್ಯಮ ವರ್ಗ ಬಯಸುವ ಅಕಡೆಮಿಕ್ ಬಾಷೆಯನ್ನು, ಸಿದ್ಧ ಮಾದರಿಯನ್ನು ಬಳಸುವುದಿಲ್ಲ. ಅನೇಕ ವೇಳೆ ಭಾಷೆಯ ರಂಜಕ ಬಳಕೆಯೂ ಸಹ ಈ ಮಧ್ಯಮವರ್ಗದ ಮನಸ್ಥಿತಿಗೆ ಕಸಿವಿಸಿಯನ್ನುಂಟು ಮಾಡುತ್ತದೆ. ಈ ಕಾರಣಕ್ಕಾಗಿಯೇ ಈ ಮೊದಲ ಭಾಗವನ್ನು ಓದುವಾಗ ಅದು ಈ ಭಾಗದಲ್ಲಿ ಅನೇಕ ಕಡೆ ಲೈಂಗಿಕತೆಯ ಕುರಿತಾಗಿ ಅತ್ಯಂತ ವೈಜ್ಞಾನಿಕವಾಗಿ ವಿಶ್ಲೇಷಣೆಗೆ ಒಳಗಾಗಿದ್ದರೂ ಅದು ಓದುಗರನ್ನು ಆಕರ್ಷಿಸುವತ್ತಲೇ ಗಿರಿಕಿ ಹೊಡೆಯುತ್ತದೆ ಎನ್ನುವ ಭಾವನೆ ಉಂಟಾದರೆ ಅದು ಓದುಗರ ತಪ್ಪಲ್ಲ. ಇದು ಈ ಭಾಗದ ಮಿತಿಯೂ ಕೂಡ. ಏಕೆಂದರೆ ಈ ಮುಕ್ತ ಲೈಂಗಿಕತೆಯ ಕುರಿತಾಗಿ ಪ್ರಾಮಾಣಿಕವಾಗಿ, ವೈಜ್ಞಾನಿಕವಾಗಿ ಬರೆಯುವಾಗ ಯಾವ ಮಾದರಿಯನ್ನು ಅನುಸರಿಸಬೇಕು, ಬಳಸಬೇಕಾದ ಪರಿಕರಗಳಾವವು ಎನ್ನುವುದರ ಕುರಿತಾಗಿ ಲೇಖಕ ಲಕ್ಷ್ಮೀಪತಿಯವರಲ್ಲಿ ಗೊಂದಲಗಳಿವೆ.

ಆದರೆ ಇಲ್ಲಿ ಲೇಖಕರು ಎಲ್ಲಿಯೂ ವಿಕೃತ ಚಿತ್ರಣವನ್ನು ನೀಡಿಲ್ಲ. ಅನಗತ್ಯವಾಗಿ ತಪ್ಪು ಗ್ರಹಿಕೆಗಳನ್ನು ಕೊಟ್ಟಿಲ್ಲ. ಇಡೀ ಚರ್ಚೆಯು ಆರೋಗ್ಯಕರ ಮನಸ್ಥಿಯಲ್ಲೇ ನಡೆಯುತ್ತದೆ. ಎರಡನೇ ಭಾಗವಾದ ರತಿ ಸೂತ್ರ ಮತ್ತು ಗಾಂಧೀಜಿಯ ವೈಯುಕ್ತಿಕ ಬದುಕನ್ನು ಒಳಗೊಂಡ ಲೈಂಗಿಕ ವಿಶ್ಲೇಷಣೆಗೆ ಬಂದಾಗ ಈ ಗೊಂದಲಗಳು ಮತ್ತಷ್ಟು ಗೋಜಲುಗೊಂಡು ಕೆಲವು ಕಡೆ ಜಾಳು ಜಾಳಾಗಿ ನಿರೂಪಿತವಾಗಿವೆ. ಗಾಂಧೀಜಿಯವರ ಲೈಂಗಿಕತೆಯ ಪ್ರಯೋಗದ ಕುರಿತಾಗಿ ಈ ಭಾಗದಲ್ಲಿ ಪ್ರಕಟವಾದ ಅಸಹನೆಗೆ ಸಮಜಾಯಿಷಿಯೇ ಇಲ್ಲ. ಗಾಂಧಿಯವರ ವೈಯುಕ್ತಿಕ ಬದುಕನ್ನು ಲೈಂಗಿಕ ವಿಶ್ಲೇಷಣೆಗೆ ಬಳಸಿಕೊಳ್ಳುವಾಗ ಅದು ಕತ್ತಿಯ ಮೇಲಿನ ನಡಿಗೆಯಾಗಿರುತ್ತದೆ ಎನ್ನುವುದು ಬಹಳ ಮುಖ್ಯ.ಸ್ವಲ್ಪ ಎಚ್ಚರ ತಪ್ಪಿದರೂ ಮಹಾತ್ಮ ಗಾಂಧಿಯವರನ್ನು ಅತ್ಯಂತ ಕೆಳಮಟ್ಟದಲ್ಲಿ ಚಿತ್ರಿಸಬಹುದಾದ ಅಪಾಯಗಳಿವೆ.ಈ ಪುಸ್ತಕವೂ ಈ ಅಪಾಯದಿಂದ ಪಾರಾಗಿಲ್ಲ. ಮತ್ತು ಈ ಕುರಿತಾಗಿ ಅದರ ಸಾಮಾನ್ಯವಾದ ವಿಶ್ಲೇಷಣೆ ಹೆಚ್ಚಿನದೇನನ್ನು ಹೇಳದೆ ನಿರಾಶೆಗೊಳಿಸುತ್ತದೆ.

ಆದರೆ ಇಲ್ಲಿನ ಮೂರನೇ ಭಾಗವಾದ ರಜನೀಶ್ರವರ ಲೈಂಗಿಕ ಕ್ರಾಂತಿ ಹಾಗೂ ನಾಲ್ಕನೇ ಭಾಗವಾದ ವಿಹಾರಿ ವಿಕೃತಿ ಕುರಿತಾದ ಲೇಖನಗಳು ನಿಜಕ್ಕೂ ಯಶಸ್ವೀ ಲೇಖನಗಳು. ಈ ಭಾಗದಲ್ಲಿ ಡೊಮೆನಿಕ್ ಮುನ್ನುಡಿಯಲ್ಲಿ ಬರೆದಂತೆ ಲೈಂಗಿಕ ವ್ಯಕ್ತಿತ್ವಕ್ಕೊಂದು ಕನ್ನಡಿ ಯನ್ನು ಲಕ್ಷ್ಮೀಪತಿಯವರು ಸಮರ್ಥವಾಗಿ ಹಿಡಿದುಕೊಡುತ್ತಾರೆ. ಇಲ್ಲಿ ತಮ್ಮ ವೈಚಾರಿಕ ಪ್ರತಿಭೆಯನ್ನು ಸರಾಗವಾಗಿ ಬಳಸಿಕೊಂಡು ಬರೆದಿದ್ದಾರೆ.ಇಲ್ಲಿ ಭಾಷೆಯ ಬಳಕೆ ಲೇಖಕರ ಹಿಡಿತಕ್ಕೆ ದಕ್ಕಿದೆ.ಈ ಭಾಗಗಳಲ್ಲಿ ಲೈಂಗಿಕತೆಯ ಕುರಿತಾದ ಅನೇಕ ಪೂರ್ವಗ್ರಹ ಚಿಂತನೆಗಳನ್ನು ಕೆಡವಿಹಾಕುತ್ತಾರೆ.ಇಲ್ಲಿ ಸಮಾಜಶಾಸ್ತ್ರೀಯ ಹಾಗೂ ಮನೋ ವೈಜ್ನಾನಿಕ ಮಾದರಿಗಳನ್ನು ಲೇಖಕ ಲಕ್ಷ್ಮೀಪತಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಇಂದು 21ನೇ ಶತಮಾನದಲ್ಲಿ ನಾಗರೀಕ ಸಮಾಜವು ತನ್ನನ್ನು ತಾನು ಆಧುನಿಕತೆಗೆ ಒಪ್ಪಿಸಿಕೊಂಡಿದ್ದರೂ ಮುಕ್ತ ಲೈಂಗಿಕತೆಯ ಕುರಿತಾದ ಚರ್ಚೆಗೆ ಇನ್ನೂ ಮಡಿವಂತಿಕೆ ತೋರಿಸುತ್ತಿದೆ. ಈಗಲೂ ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕತೆಯನ್ನು ಒಂದು ವೈಜ್ಞಾನಿಕ ಪಾಠವಾಗಿ ಹೇಳಿಕೊಡಬೇಕೆ ಬೇಡವೇ ಎಂದು ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಲಕ್ಷ್ಮೀಪತಿಯವರ ಬೆತ್ತಲೆ ವೃಕ್ಷ ಪುಸ್ತಕವು ಈ ಚರ್ಚೆಗೆ ಒಂದು ವೇದಿಕೆಯನ್ನು ಒದಗಿಸಿಕೊಡುತ್ತದೆ. ಇಲ್ಲಿ ಬರೆಯಲ್ಪಟ್ಟ ಅನೇಕ ವಿಷಯಗಳ ಕುರಿತಾಗಿ ಒಪ್ಪಿಕೊಳ್ಳಬೇಕೆ ಬೇಡವೇ ಎನ್ನುವುದೂ ಸಹ ಚರ್ಚೆಗೊಳಗಾದಾಗ ಈ ಹೊಸ ಕಿಟಿಕಿಯ ಮೂಲಕ ದೊರಕುವ ಬೆಳಕಿಂಡಿಯ ಸಾಧ್ಯತೆಗಳು ಅಪಾರ.

ಈ ಪುಸ್ತಕ ಪ್ರಕಟವಾಗಿದ್ದು 2007ರಲ್ಲಿ. ಅಂದರೆ ಇದು ಪ್ರಕಟವಾಗಿ 5 ವರ್ಷಗಳ ನಂತರವೂ ಈ ಬೆತ್ತಲೆ ವೃಕ್ಷದ ಕೃತಿಯ ಕುರಿತಾಗಿ ಒಂದು ವಿಮರ್ಶೆಯೂ ಪ್ರಕಟವಾಗಿಲ್ಲ. ಚರ್ಚೆಯಾಗಿಲ್ಲ. ‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ’ ತರಹದ ಕವನಗಳ ಕುರಿತಾಗಿ ಪುಟಗಟ್ಟಲೆ ಬರೆಯುವ ಈ ವಿಮರ್ಶಕರಿಗೆ ಈ ಪ್ರೇಮದ ಪರಿಯ ನಿಗೂಢ ಆಕರ್ಷಣೆಯಾದ ಲೈಂಗಿಕತೆಯನ್ನು ಚರ್ಚಿಸುವ ಈ ಪುಸ್ತಕದ ಕುರಿತು ಅಸಡ್ಡೆ !

ನಮ್ಮ ಕನ್ನಡದ ಘೋಷಿತ ವಿಮರ್ಶಕರಿಗೆ ನವ್ಯದ ಸ್ವಚ್ಛಂದವಾದ, ಲಿಬಿಡೂ ಮಾದರಿಯ ಆತ್ಮವಂಚನೆಯನ್ನೇ ಹಾಸಿ ಹೊದ್ದ ಸಾಧಾರಣ ಕೃತಿಗಳ ಕುರಿತಾಗಿ ಇರುವ ಆಸಕ್ತಿ ಈ ಪ್ರಯೋಗಾತ್ಮಕ ಪುಸ್ತಕವಾದ ‘ಬೆತ್ತಲೆವೃಕ್ಷ’ ಬಗೆಗೆ ಇಲ್ಲವೇ ಇಲ್ಲ !! ಇವರ ಅನಾದರದ ಕಾರಣವೂ ಸಹ ನಿಗೂಢ ! ಕಡೆಗೆ ಕನ್ನಡ ಓದುಗರಿಗಾಗಿ ಇಂತಹದೊಂದು ಪುಸ್ತಕವಿದೆ ಎಂದು ಪರಿಚಯಿಸಲಿಕ್ಕಾಗಿಯೇ ನನ್ನಂತಹ ಸಾಮಾನ್ಯ ಓದುಗ ಇಂದು ಆತ್ಮೀಯ ಗೆಳೆಯ ಲಕ್ಷ್ಮೀಪತಿಯ ಈ ಕೃತಿಯ ಕುರಿತಾಗಿ ಬರೆಯಬೇಕಾಯಿತು !!

ಬೆತ್ತಲೆ ವೃಕ್ಷ

ಲೇಖಕ : ಸಿ.ಜಿ.ಲಕ್ಷ್ಮೀಪತಿ

ಪ್ರಕಾಶಕರು, ಸಖಿ ಪ್ರಕಾಶನ ಏಕಾಂತ ನಿಲಯ

ಎಂ.ಪಿ.ಪ್ರಕಾಶ ನಗರ ಹೊಸಪೇಟೆ

ಪುಟಗಳು : ೧೭೯ಬೆಲೆ :Rs.120

ಭಾರತೀಯ ಪ್ರಜಾವರ್ಗಕ್ಕೆ ಪ್ರಧಾನಿಯ ನಡಾವಳಿ ಅನಿವಾರ್ಯವೇ?ಸುಧಾಕರ ಹೊಸಳ್ಳಿ,
ರಾಜ್ಯಶಾಸ್ತ್ರ ವಿಭಾಗ, ಮೈಸೂರು


ಮಾನ್ಯ ಪ್ರಧಾನ ಮಂತ್ರಿಗಳೇ, ಈ ರಾಷ್ಟ್ರ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಮಂತ್ರಿಗಳಲ್ಲಿ ತಾವು ಕೂಡ ಅಗ್ರಪಂಕ್ತಿಯಲ್ಲಿ ನಿಲ್ಲುತ್ತೀರಿ. ಸ್ವತಃ ಆರ್ಥಿಕ ತಜ್ಞರಾದ ನೀವು ರಾಷ್ಟ್ರದ ಅಭಿವೃದ್ಧಿ ಪಥಕ್ಕೆ ಸಂಚಲನ ನೀಡುವಲ್ಲಿ ಯಶಸ್ವಿಯಾಗಿರುವುದು ವಾಸ್ತವವೇ. ತಮ್ಮ ಸಜ್ಜನಿಕೆಯಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಗೆ ಭಾಜನರಾಗಿದ್ದೀರಿ. ವಿಶ್ವದ ಅಗ್ರಗಣ್ಯ ರಾಷ್ಟ್ರದ ನಾಯಕನಾದ ಒಬಾಮರವರು ನಿಮ್ಮನ್ನು ಶ್ಲಾಘಿಸುವುದನ್ನು ಮರೆಯುವುದಿಲ್ಲ. ವಿಶ್ವಸಂಸ್ಥೆಯು ನಿಮ್ಮನ್ನು ಅಭಿನಂದಿಸಿದ್ದು ಆಗಿದೆ. ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪ್ರಶಸ್ತಿಗಳು ನಿಮ್ಮನ್ನು ಅರಸಿ ಅಪ್ಪಿದ್ದಾಯಿತು. ಇಡೀ ವಿಶ್ವಕ್ಕೆ ವಿಶ್ವವೇ ಆರ್ಥಿಕ ಹಿಂಜರಿಕೆಯಿಂದ ಬಳಲುತ್ತಿದ್ದರು, ಅದರ ಛಾಪು ನಮ್ಮೆಡೆ ಸುಳಿಯದಂತೆ ನೋಡಿಕೊಂಡ ಕೀರ್ತಿ ನಿಮಗೆ ಸಲ್ಲಲೇಬೇಕು. ಉನ್ನತ ಶಿಕ್ಷಣಕ್ಕೆ ಆದ್ಯತಾ ನೆಲೆಗಟ್ಟನ್ನು ಸೃಷ್ಟಿಸುವ ಮುಖೇನ, ಭಾರತೀಯ ವಿದ್ಯಾರ್ಥಿಗಳನ್ನು ಅಮೇರಿಕನ್ನರು ಅನುಕರಿಸು ವಂತೆ ಮಾಡಿದಿರಿ. ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತಿತರ ಘನ ಸಂಸ್ಥೆಗಳಲ್ಲಿ ಭಾರತೀಯರು ಸೇರ್ಪಡೆ ಯಾಗುವುದರಲ್ಲಿ ನಿಮ್ಮ ಪಾತ್ರ ಹಿರಿದಾದುದ್ದೇ.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸೋಮವಾರ ಹೊಸದಿಲ್ಲಿಯ ಸಂಸತ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು.

ಬಾಹ್ಯಾಕಾಶದಲ್ಲಿನ ಹಲವು ಶೋಧನೆಗೆ ನಾಂದಿ ಹಾಡಿದ್ದೀರಿ. (ಉದಾಹರಣೆಗೆ ಮಂಗಳನಲ್ಲಿಗೆ ಪಯಣ) ನಮ್ಮ ಅಸ್ತಿತ್ವವಿಲ್ಲದ ಜಿ-೮, ಜಿ-೧೫ ಒಕ್ಕೂಟಗಳು ನಮ್ಮನ್ನು ವಿಶೇಷ ಆಹ್ವಾನಿತರಾಗಿ ಕರೆಯಿಸಿಕೊಳ್ಳುವ ವಾತಾವರಣ ನಿರ್ಮಿಸಿದ್ದು ಶ್ಲಾಘನೀಯ.೧೨೦ ಕೋಟಿಗೂ ಮಿಗಿಲಾದ ಭಾರತೀಯರೆಲ್ಲರ ಮನದಲ್ಲೂ ನೀವು ಸಜ್ಜನರಾಗಿ ವಿರಮಿಸುತ್ತಿರುವಿರಿ. ನಿಮ್ಮನ್ನು ಟೀಕಿಸುವ ನೈತಿಕ ಹಕ್ಕು ನನಗಿಲ್ಲ ಹಾಗೂ ಇದು ಸಾರ್ವತ್ರಿಕ ಧ್ವನಿಯು ಹೌದು. ಆದರೆ ನಮ್ಮೆಲ್ಲರನ್ನು ಕಾಡುತ್ತಿರುವ ಬಹುದೊಡ್ಡ ಪ್ರಶ್ನೆ, ನೀವು ಸ್ವತಂತ್ರರೇ? ಭಾರತದಲ್ಲಿ ಸಾಂವಿಧಾನಿಕವಾಗಿ ರಾಷ್ಟ್ರಪತಿ ಹೆಚ್ಚಿನ ಅಧಿಕಾರ ಮತ್ತು ಕಾರ್ಯಗಳನ್ನು ಹೊಂದಿದ್ದರು.

ವಾಸ್ತವವಾಗಿ (೭೪(೨)) ಅವುಗಳು ಆಚರಣೆಗೆ ಬರುವುದು ಪ್ರಧಾನಿಯಿಂದಲೇ ಎಂಬುದು ಎಲ್ಲರಿಗೂ ತಿಳಿದ ವಿಷಯವೆ. ಈ ನಿಟ್ಟಿನಲ್ಲಿ ನೀವು ಸರ್ವ ಸ್ವತಂತ್ರರೆ? ಭಾರತೀಯ ಪ್ರಜಾವರ್ಗದ ಸಂಪೂರ್ಣ ಬೆಂಬಲವಿರುವ ನೀವು, ನಿರ್ವಿಘ್ನ ಅಧಿಕಾರ ಅನುಭವಿಸುತ್ತಿದ್ದೀರಾ? ಎಂಬುದೇ ಯಕ್ಷಪ್ರಶ್ನೆ. ಈ ಒಂದು ಮಹತ್ವಪೂರ್ಣ ಪ್ರಶ್ನೆಗೆ ಉತ್ತರ ಹುಡುಕಾಟದಲ್ಲಿ ಸರ್ವರು ಮಗ್ನವಾಗಿ ರುವುದು ಔಚಿತ್ಯವೇ ಸರಿ. ನಿಮ್ಮ ಮುಂದೆ ಇಂತಹದೊಂದು ಪ್ರಶ್ನೆಯನ್ನು ತರುವಾಗ ನಮ್ಮ ಮನವು ಕೂಡ ಮುದುಡುತ್ತಿರುವುದು ನಿಮ್ಮ ಅರಿವಿಗಿರಲಿ. ಆದರೆ ಪ್ರಶ್ನೆಯನ್ನು ನಿಮ್ಮೆಡೆ ತರುವುದು ಈ ಕಾಲ ಘಟ್ಟದಲ್ಲಿ ಅನಿವಾರ್ಯವೆ ಆಗಿದೆ. ನಮ್ಮಲ್ಲಿ ಒಂದು ಗಾದೆ ಮಾತಿದೆ. ಕತ್ತಿ ಚಿನ್ನದ್ದಾದರೆ ಕುತ್ತಿಗೆ ಕುಯ್ದುಕೊಳ್ಳಲು ಸಾಧ್ಯವೆ?

ಈ ಗಾದೆ ಎಳೆದು ತರುವ ಮುಖಾಂತರ ನಾವು ನಿಮ್ಮನ್ನು ನಿಂದಿಸಲು ಹೊರಟಿಲ್ಲ. ಬದಲಿಗೆ ಅವಶ್ಯವಿರುವ ಒಂದು ಮೂಲ ಪ್ರಶ್ನೆಯ ರಚನೆಗೆ ಮುನ್ನುಡಿ ಇಡುತ್ತಿದ್ದೇವೆ. ಬಹುಶಃ ಈ ಸ್ಥಿತಿಗೆ ಕಾರಣ ವಾಗಿರುವುದು ಮತ್ತು ನಮ್ಮನ್ನು ಈ ರೀತಿ ತಂದು ನಿಲ್ಲಿಸಿರುವುದರ ಹಿಂದೆ ಒಂದು ತಳಮಟ್ಟದ ಕಾರಣವಿದೆ. ಅದು ನಮ್ಮನ್ನು ಆಳಲು ನಿಮ್ಮನ್ನು ಆಯ್ಕೆ ಮಾಡಿದ್ದೇವೆ. ನಿಮ್ಮನ್ನು ಆಳಲು ಮತ್ತೊಬ್ಬರಿಗೆ ಅವಕಾಶ ಕಲ್ಪಿಸಿದ್ದೀರ? ಎಂಬುದು. ಈ ಭಾವನೆ ಪ್ರಾರಂಭದಲ್ಲಿ ವೈಯಕ್ತಿಕ ಅಭಿಪ್ರಾಯವಾಗಿತ್ತಷ್ಟೆ. ಆದರೆ ಇಂದು ಅದು ಸಾರ್ವತ್ರಿಕತೆಯಡಿಯಲ್ಲಿ ಬಂದು ನಿಂತಿದೆ.

ಈ ಕಲ್ಪನೆ, ಊಹೆ, ಪ್ರಶ್ನೆ ಅಥವಾ ಚಿಂತನೆ, ಅಂದು ರಾಷ್ಟ್ರ ಕಂಡ ಭೀಕರ ದುರಂತವಾದ ಕುಂಬಕೋಣಂನಲ್ಲಿ ಶಾಲೆಯೊಂದು ಬೆಂಕಿ ಹೊತ್ತಿ ಉರಿದಾಗ, (೨೦೦೬) ಆ ದುರ್ಘಟನೆಗೆ ಪರಿಹಾರವಾಗಿ ಸೋನಿಯಾ 1ಕೋಟಿ ರೂ.ಗಳನ್ನು ಸರಕಾರದ ಅಧಿಕೃತ ಪ್ರಕಟಣೆಯಡಿಯಲ್ಲಿ ಘೋಷಿಸಿದರು. ಬಹುಶಃ ಅಂದೇ ಬುದ್ಧಿಜೀವಿಗಳ ವರ್ಗದಲ್ಲಿ ಸಂಶಯವೊಂದು ಪ್ರಶ್ನೆಯ ರೂಪದಲ್ಲಿ ಉಗಮಿಸಿತು ಎಂದರೆ ತಪ್ಪಾಗಲಾರದು.

ಸರಕಾರದ ಪರವಾಗಿ ಪರಿಹಾರ ಘೋಷಿಸಲು ಇವರು ಯಾರು? ಇವರ ವ್ಯಾಪ್ತಿಗೆ ಸರಕಾರಿ ಪ್ರಕಟಣೆ ಬರಲು ಸಾಧ್ಯವೆ? ಆಗಿದ್ದರೆ ಪ್ರಧಾನಿಯು ಸೇರಿದಂತೆ ಅವರ ಕಚೇರಿ ಸೋನಿಯಾ ಪ್ರಭಾವಕ್ಕೆ ತಲೆ ಭಾಗಬೇಕಾದ ಅನಿವಾರ್ಯ ಇದೆಯೆ? ಎಂಬೆಲ್ಲ ಉಪ ಪ್ರಶ್ನೆಗಳು ಮೂಲ ಪ್ರಶ್ನೆಯಡಿಯಲ್ಲಿ ಉಗಮಿಸುತ್ತಾ ಹೊರಟವು. ಅಲ್ಲಿಂದೀಚೆಗೆ ಈ ಮೂಲವನ್ನು ಹಲವು ನಿದರ್ಶನಗಳು ಗಟ್ಟಿಗೊಳಿಸುತ್ತಾ ಬಂದದ್ದು ವಾಸ್ತವ ಸಂಗತಿ.ಉದಾಹರಣೆಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಇದೆ (೭೪/(೧)ವಿಧಿ). ಅದೇ ರೀತಿ ಕಿಚನ್ ಕ್ಯಾಬಿನೆಟ್ ಕೂಡ ಇದೆ. ಬಹುಶಃ ರಾಷ್ಟ್ರಮಟ್ಟದಲ್ಲಿ ಈ ಎರಡು ಅತ್ಯಂತ ಶಕ್ತಿಶಾಲಿ ಕಾರ್ಯಂಗ ವ್ಯವಸ್ಥೆಯ ಅಂಗಾಂಶಗಳಾಗಿವೆ. ಆದರೆ ಜನರ ಮನದೊಳು ಈ ಎರಡು ಬಗೆಯ ಕ್ಯಾಬಿನೆಟ್‌ಗಳನ್ನು ನಿಯಂತ್ರಿಸಲು ಸಂವಿಧಾನೇತರವಾದ ಸೂಪರ್ ಕ್ಯಾಬಿನೆಟ್‌ನ ಅಸ್ತಿತ್ವವಿದೆಯೇ? ಎಂಬ ಜಿಜ್ಞಾಸೆಯಿದೆ.

ವಾಸ್ತವವಾಗಿ ಇದರ ಮುಖ್ಯಸ್ಥರು ಸೋನಿಯಾ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಅಂದರೆ ಈ ಸಂವಿಧಾನೇತರ ಸೂಪರ್ ಕ್ಯಾಬಿನೆಟ್‌ಗೆ ಪ್ರಾಮಾಣಿಕರು, ಸಜ್ಜನರು ಆದ ನೀವು ಅವಕಾಶ ಕಲ್ಪಿಸಿದ್ದೀರ? ಒಂದು ವೇಳೆ ಇದು ನಿಜ ಸಂಗತಿಯಾಗಿದ್ದರೆ, ಇದು ಹಿಂಬದಿ ಯಿಂದ 120 ಕೋಟಿ ಭಾರತೀಯರಿಗೆ ದ್ರೋಹ ಬಗೆದಂತಾಗುವುದಿಲ್ಲವೆ? ನಿಮ್ಮ ಕಣ್ಮುಂದೆ ಹತ್ತು ಹಲವು ಹಗರಣಗಳು ರಾರಾಜಿಸುತ್ತಿದ್ದರೂ (ಆದರ್ಶ ಸೊಸೈಟಿ ಹಗರಣ, ೨ಜಿ ಸೆಕ್ಟ್ರಂ) ಅದರ ವಿರುದ್ಧ ಚಕಾರವೆತ್ತದ ನಿಮ್ಮ ಪರಿಸ್ಥಿತಿಯನ್ನು ಹೇಗೆ ವಿಶ್ಲೇಷಣೆ ಮಾಡಿಕೊಳ್ಳಬೇಕೆಂಬುದು ಚರ್ಚಾ ವಿಷಯ ವಸ್ತುವಾಗಿದೆ.

ನಿಮ್ಮ ಸಚಿವ ಸಹೋದ್ಯೋಗಿಯು ನಿಮ್ಮ ಆದೇಶ ದಿಕ್ಕರಿಸಿ, ಈ ರಾಷ್ಟ್ರಕಂಡ ದೈತ್ಯ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಲ್ಗೊಳ್ಳುವನೆಂದರೆ, ಅವನಿಗೆ ಮತ್ತು ನಮಗೆ ನಾಯಕರಾದ ನೀವು ಇದರಲ್ಲಿ ಪಾಲುದಾರ ರಾಗದಿರಲು ಸಾಧ್ಯವೆ? ರಾಜಾನಂತಹ ಒಬ್ಬ ಭ್ರಷ್ಟ ಸಚಿವ ನಿಮ್ಮ ಆದೇಶ ತಿರಸ್ಕರಿಸಿದಾಗ, ಆತನ ಕಾರ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗದ ನಿಮ್ಮಿಂದ ಜನತೆಯ ನಿರೀಕ್ಷೆಗಳನ್ನು ವಾಸ್ತಕರಿಸಲು ಸಾಧ್ಯವೇ? ಸಮಕಾಲೀನ ರಾಜಕೀಯ ಚಿಂತಕರಾದ ಪ್ರೊ.ಮುಜಾಫರ್ ಅಸಾದಿ ಅಭಿಪ್ರಾಯ ಪಡುವಂತೆ ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟಾದರೆ ಭಾರತದ ಪರಮಾಧಿಕಾರದ ಮಜಲುಗಳು ಶಿಥಿಲಗೊಳ್ಳುತ್ತವೆ ಎಂಬುದು ಸಾರ್ವತ್ರಿಕ ಸತ್ಯ.

ಈ ರಾಷ್ಟ್ರವನ್ನು ದೋಚಲು ನಿಮ್ಮನ್ನು ನಾಮಮಾತ್ರ ನಾಯಕರನ್ನಾಗಿಸಿರುವ ಶಕ್ತಿಯನ್ನು ನಿಂದಿಸಬೇಕೆ, ಅಥವಾ ನೀವು ಸೃಜನ ಶೀಲರಾಗಿರುವುದರಿಂದ ಈ ಎಲ್ಲ ದುಷ್ಟ ಕಾರ್ಯಗಳನ್ನು ಭಾರತೀಯ ಪ್ರಜೆಗಳು ತಮ್ಮ ಬಗಲಿಗೆ ಹಾಕಿಕೊಳ್ಳಬೇಕೆ? ಕಳಂಕಿತನೊಬ್ಬನನ್ನು (ಥಾಮಸ್) ಸಿವಿಸಿ ಮುಖ್ಯಸ್ಥನ ಸ್ಥಾನಕ್ಕೆ ತರಲು ಹೊರಟ ಪ್ರಯತ್ನಕ್ಕೆ ನಿಮ್ಮ ಸಮ್ಮತಿ ಇದೆ ಎಂದರೆ, ನಾಗ ಯಾರ ನಿಂದನೆಗೆ ಮುಂದಾಗಬೇಕು. ನಮ್ಮ ರಾಷ್ಟ್ರದಲ್ಲಿ ಸಂಸತ್ತಿನ ಮೇಲೆ, ಕೇಂದ್ರ ಸಚಿವ ಸಂಪುಟದ ಮೇಲೆ ಶ್ರೇಷ್ಠ ಮಟ್ಟದ ಪ್ರಭಾವ ಮತ್ತು ಅಧಿಕಾರವಿರುವ ಪ್ರಧಾನಿಯನ್ನು, ಲೋಕಪಾಲ್ ವ್ಯಾಪ್ತಿಯಿಂದ ಹೊರಗಿಟ್ಟರೆ ಪಾರದರ್ಶಕತೆ ನಿರೀಕ್ಷಿಸಲು ಸಾಧ್ಯವೆ? ಈ ಒಂದು ಭ್ರಷ್ಟಾಚಾರದ ವಿರುದ್ಧ ಬ್ರಹ್ಮಾಸ್ತ್ರಕ್ಕೆ ಜೀವ ತುಂಬಲು ಸಾಧ್ಯವೆ, ಇದರ ಬಗ್ಗೆ ಧ್ವನಿ ಎತ್ತದ ನೀವು ಭಾರತೀಯರ ನಂಬಿಕೆಗೆ ಅರ್ಹರಾಗಲು ಸಾಧ್ಯವೆ?

ಸಂವಿಧಾನೇತರ ಶಕ್ತಿಯ ಪ್ರಭಾವಕ್ಕೆ ತಲೆಬಾಗಿ ತಮ್ಮ ಅಸಕ್ತತೆಯನ್ನು ಬಿಂಬಿಸುತ್ತಿರುವ ನೀವು ನಿಮಗೆ ತಲೆಬಾಗಿದ ಶತಕೋಟಿ ಭಾರತೀಯರ ಬಗ್ಗೆ ಚಿಂತಿಸಿರುವಿರಾ? ಇತ್ತೀಚಿನ ಸಿಎಜಿ ವರದಿಯ ಕಲ್ಲಿದ್ದಲು ಹರಾಜು ಪ್ರಕ್ರಿಯೆಯಲ್ಲಿ (೧೫೦ನೇ ವಿಧಿ) ಸರಕಾರದ ಬೊಕ್ಕಸಕ್ಕೆ ೩ಲಕ್ಷ ಕೋಟಿ ನಷ್ಟವಾಗಿದೆ ಎಂದು ತಿಳಿಯಪಡಿಸಿದೆ. ಆ ಅವಧಿಯಲ್ಲಿ ಕಲ್ಲಿದ್ದಲು ಖಾತೆ ತಮ್ಮ ಬಳಿಯೇ ಇತ್ತು. ಇದರ ಹೊಣೆಗಾರಿಕೆ ನೀವು ಹೊರುವುದಿಲ್ಲವೆ? ನೀವು ಪ್ರಾಮಾಣಿಕರೆಂದರೆ ಈ ಪ್ರಮಾದವೆಸಗಲು ಅನ್ಯರಿಗೆ ಅವಕಾಶ ನೀಡಲಾಯಿತೆ? ಭಾರತ ಸಂವಿಧಾನದ ಪ್ರಕಾರ ತಪ್ಪು ಮಾಡುವುದಕ್ಕಿಂತ ತಪ್ಪು ಮಾಡಲು ಸಹಕರಿಸುವುದು ಕಾನೂನು ರಿತ್ಯ ಅಪರಾಧವೇ ಸರಿ.

ನೀವು ಸೃಜನಶೀಲರೇ ಆಗಿದ್ದರೂ ಸರಕಾರಕ್ಕೆ, ಪ್ರಜಾವರ್ಗಕ್ಕೆ ನಷ್ಟವಾಗುವುದನ್ನು ತಾವು ಸಹಿಸಿಕೊಳ್ಳುವುದಾದರೆ ಈ ನಾಡಿನ ಜನಕ್ಕೆ ದ್ರೋಹ ಬಗೆದಂತಾಗುವುದಿಲ್ಲವೆ? ವಿಶ್ವಕ್ಕೆ ವಿಶ್ವವೇ ಅಭಿನಂಧಿಸುವ ಪ್ರಧಾನಿಯನ್ನು ಹೊಂದಿರುವ ನಮ್ಮ ಸೌಭಾಗ್ಯಕ್ಕೆ ಹೆಮ್ಮೆಪಡಬೇಕೆ, ಅಥವಾ ನೀವು ಬಂಧಿತರಾಗಿ ರುವುದಕ್ಕೆ ದುಃಖಿಸಬೇಕೆ. ಮಾನ್ಯ ಸಿಂಗ್‌ರವರೆ ನೀವು ಸಿಡಿದೇಳಬೇಕಾದ ಅನಿವಾರ್ಯ ಇದೆ. ರಾಷ್ಟ್ರದಲ್ಲಿ ಒಂದು ಹೊತ್ತು ಕೂಳಿಗಿಲ್ಲದ ಜನರ ಅಸ್ತಿತ್ವ ಅಳಿಯಬೇಕೆಂದರೆ, ನೀವು ಜನತೆಯ ಮುಂದೆ ಸತ್ಯದ ನೆಲೆಗಟ್ಟನ್ನು ತೆರೆದಿಡಿ, ದೃಢನಿಲುವನ್ನು ಪ್ರದರ್ಶಿಸಿ, ಒಂದು ವೇಳೆ ನಿಮ್ಮ ನಿರ್ಬಂಧ ರಹಿತ ಕಾರ್ಯಾಚರಣೆಗೆ ಅವಕಾಶ ದೊರಕದಿದ್ದರೆ, ಜನತೆಯ ಮುಂದೆ ಅದರ ಅತಃಗರ್ಭವನ್ನು ತೆರೆದಿಟ್ಟು ಇಂತಹ ಭ್ರಷ್ಟ ವ್ಯವಸ್ಥೆಯಿಂದ ಹೊರ ಬನ್ನಿ, ನೈಜಾಂಶಗಳು ಜನತೆಗೆ ತಲುಪಿದರೆ ಅದರ ಬಗೆಗೆ ಅವರ ನಿರ್ಣಯ ಕೈಗೊಳ್ಳುತ್ತಾರೆ.

ಅದರ ಹೊರತು ನೀವು ಎಲ್ಲವನ್ನು ಸಹಿಸಿಕೊಂಡು ಮುನ್ನೆಡೆದರೆ ಮತ್ತೆ ಹಿಟ್ಲರ್, ಮುಸಲೋನಿಯಂತಹ ಸರ್ವಾಧಿಕಾರಿಗಳ ಉಗಮಕ್ಕೆ ನೀವೆ ನಾಂದಿಯಾಡಿದಂತಾಗುತ್ತದೆ. ಬ್ರಿಟಿಷರ ಗಲ್ಲಿಗೇರಿಸುತ್ತೀನೆ ಎಂದಾಗ ಅದರ ಬದಲು ನಿನ್ನ ಬಂದೂಕಿನಿಂದ ನನ್ನೆದೆಗೆ ಗುಂಡಿಡು ಎಂದು ಭಂಗತ ಸಿಂಗ್‌ರ ನಾಡಿನಲ್ಲಿ ಹುಟ್ಟಿರುವ ನೀವು, ಈ ಹಿತ ಶತ್ರುಗಳಿಗೆ ಹೆದರುವ ಪ್ರಮೇಯವೇ ಇಲ್ಲ. ಅದರ ಹೊರತಾಗಿ ನೀವು ಅಸಹಯಕರಾಗಿ ಮುನ್ನಡೆದರೆ, ನಿಮ್ಮ ಅಸಹಾಯಕತೆ ಭಾರತೀಯರಿಗೆ ಅನಿವಾರ್ಯ ಎಂಬ ಪ್ರಶ್ನೆಯೊಂದು ಕಗ್ಗಂಟಾಗಿ ಉಳಿದು ಬಿಡುತ್ತದೆ.


ಚಿನ್ನದ ಬಾಗಿಲಿಗೆ ‘ದೋಷ’ವಿಲ್ಲವೇ?! :ಏನಂತಾರೆ ಪೇಜಾವರರು


Profile Pictureಡಾ ಅಶೋಕ್. ಕೆ. ಆರ್ಚಿತ್ರಕೃಪೆ - ಇಂಡಿಯಾ ಟುಡೇ
ಕೆಲವು ದಿನಗಳ ಹಿಂದೆ ವಿಜಯ್ ಮಲ್ಯರವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಂಭತ್ತು ಲಕ್ಷ ಬೆಲೆಬಾಳುವ ಚಿನ್ನದ ಬಾಗಿಲನ್ನು ದಾನವಾಗಿ ನೀಡಿದ್ದಾರೆ. ತಿಂಗಳುಗಳ ಹಿಂದೆ ಅವರು ಹೊತ್ತಿದ್ದ ಹರಕೆಯಂತೆ ಅದು. ಮತ್ತೊಂದು ಬಾಗಿಲನ್ನು ದಾನವಾಗಿ ನೀಡುತ್ತಾರಂತೆ. ಕಿಂಗ್ ಫಿಷರ್ ಏರ್ ಲೈನ್ಸಿನ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡದ ಮಲ್ಯ ಲಕ್ಷಾಂತರ ರುಪಾಯಿಗಳನ್ನು ಹೀಗೆ ‘ದಾನ’ದ ರೂಪದಲ್ಲಿ ಕೊಟ್ಟಿರುವುದು ಕೆಲವರ ಕಣ್ಣು ಕೆಂಪಗಾಗಿಸಿದೆ. ಇದೇ ದುಡ್ಡನ್ನು ಸಮಾಜದ ಕೆಳಸ್ತರದಲ್ಲಿರುವವರಿಗೆ ನೀಡಬಹುದಿತ್ತಲ್ಲ? ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ. ಬಿಡಿ, ಮೊದಲನೆಯದು ಅವರ ವ್ಯವಹಾರಕ್ಕೆ ಸಂಬಂಧಿಸಿದ್ದು, ಎರಡನೆಯದು ಅವರ ಭಕ್ತಿಗೆ ಸಂಬಂಧಿಸಿದ್ದು. ಹರಕೆ ತೀರಿಸುವುದಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸುವುದು ಅವರ ಮರ್ಜಿ. ಆದರೆ ಅವರೆಲ್ಲಿದ್ದಾರೆ ಹಿಂದೂ ಧರ್ಮ ‘ರಕ್ಷಕರು’, ಪೇಜಾವರ ಸ್ವಾಮಿಗಳು, ಮುಖ್ಯವಾಗಿ ಅವರೆಲ್ಲಿದ್ದಾರೆ ಆ ದೇವರು?!

Udupi Pejawar Seer On Katari Veera Movie


ಪೇಜಾವರ ಸ್ವಾಮಿಗಳು ಮದ್ಯಪಾನ ಸೇವನೆಯನ್ನು ಖಂಡಿಸುತ್ತ ಜೊತೆಗೆ ಮಾಂಸಹಾರ ಸೇವನೆಯನ್ನು ತುಚ್ಛವಾಗಿ ಕಾಣುವ ಕೆಲವು ಮಾತುಗಳನ್ನಾಡಿದ್ದರು. ಅವರ ಮದ್ಯಪಾನ ವಿರೋಧಿ ಹೇಳಿಕೆಯ ಬಗ್ಗೆ ಸ್ವತಃ ಮದ್ಯಪಾನಿಗಳದೂ ವಿರೋಧವಿರಲಾರದು! ಆದರೆ ಮಾಂಸಹಾರಿಗಳ ಪಕ್ಕ ಸಸ್ಯಹಾರಿಗಳು ಕುಳಿತುಕೊಳ್ಳುವುದರಿಂದ ಸಸ್ಯಹಾರಿಗಳೂ ಮಾಂಸ ಸೇವಿಸುವ ‘ದುಷ್ಟ’ ಕೆಲಸ ಆರಂಭಿಸಿಬಿಡುತ್ತಾರೆಂಬ ಅವರ ‘ಭಯ’ (ಅಲ್ಲಿಗೆ ಮಾಂಸ ಸೇವನೆಯಲ್ಲಿರುವ ಆಕರ್ಷಣೆಯ ಅರಿವು ಸ್ವಾಮಿಗಳಿಗೂ ಇದೆ!) ಜಾತಿಯಾಧಾರಿತ ಪಂಕ್ತಿ ಭೇಧವನ್ನು ಬದಲಾದ ಕಾಲಘಟ್ಟದಲ್ಲಿ ಹೊಸತೊಂದು ವಾದದಿಂದ ಸಮರ್ಥಿಸಿಕೊಳ್ಳುವ ಯತ್ನವಷ್ಟೇ. ಇನ್ನು ಹಿಂದೂ ಧರ್ಮ ‘ರಕ್ಷಿಸುತ್ತ’ ಮದ್ಯಪಾನಿಗಳ ಮೇಲೆ, ಮಾಂಸಹಾರಿಗಳ ಮೇಲೆ, ಮಹಿಳೆಯರ ಮೇಲೆ ಅವ್ಯಾವತವಾಗಿ ದಾಳಿ ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಹತ್ತಾರು ಸಂಘಟನೆಗಳೂ ಕೂಡ “ಹೆಂಡ ಮಾರುವವರಿಂದ ಯಕಶ್ಚಿತ್ ಕ್ಯಾಲೆಂಡರಿಗಾಗಿ ಅರೆಬೆತ್ತಲೆ ಹುಡುಗಿಯರ ಫೋಟೋಶೂಟ್ ಮಾಡುವವರಿಂದ ಚಿನ್ನದ ಬಾಗಿಲನ್ನು ದಾನವಾಗಿ ಪಡೆದುಕೊಳ್ಳಬೇಡಿ” ಎಂದು ಸುಬ್ರಹ್ಮಣ್ಯ ದೇವಾಲಯದವರಿಗೆ ‘ಬುದ್ಧಿ’ ಹೇಳಿದ ವರದಿಗಳಾಗಿಲ್ಲ. ಕುಡಿಯೋದಷ್ಟೇ ತಪ್ಪು, ಕುಡಿಸುವುದಲ್ಲ ಎಂಬ ಮನೋಭಾವವೇ? ದೇವಸ್ಥಾನ ಪ್ರವೇಶಿಸುತ್ತ ಚಿನ್ನದ ಬಾಗಿಲೊಳಗೆ ಪ್ರವೇಶಿಸುವವರಿಗೆ ನಶೆಯೇರಿ ವಿಜಯ್ ಮಲ್ಯ ನೆನಪಾಗಿ ಸುಬ್ರಹ್ಮಣ್ಯ ಸ್ವಾಮಿಯೇ ಮರೆತುಹೋದರೆ ಯಾರು ಹೊಣೆ?! ನಮ್ಮ ಮದ್ಯಪಾನ, ಮಾಂಸಹಾರಗಳೆಲ್ಲವೂ ಈ ಸಂಘಟನೆಗಳಿಗೆ, ಸ್ವಾಮೀಜಿಗಳಿಗೆ ಪಥ್ಯವಾಗಬೇಕಾದರೆ ನಾವೂ ಕೂಡ ಕೋಟಿ ಲೆಕ್ಕದಲ್ಲಿ ದುಡಿದು ಚಿನ್ನದ್ದೋ ವಜ್ರದ್ದೋ ಬಾಗಿಲು – ಕಿರೀಟಗಳನ್ನು ದಾನ ಮಾಡಬೇಕೇನೋ?!

ನೇರ ಸಂಬಂಧವಿರದಿದ್ದರೂ ಸುಬ್ರಹ್ಮಣ್ಯ ದೇವಾಲಯ ಹಿಂದೊಮ್ಮೆ ನನ್ನಲ್ಲಿ ಹುಟ್ಟಿಸಿದ್ದ ಪ್ರಶ್ನೆಯೊಂದಿದೆ.
ಚಿಕ್ಕಂದಿನಿಂದಲೂ ನನಗೆ ದೇವರಲ್ಲಿ ‘ಬಹಳ’ ಎನ್ನುವಷ್ಟು ನಂಬುಗೆಯಿರಲಿಲ್ಲ. ಅಮ್ಮನ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದೆ. ಹಬ್ಬಹರಿದಿನಗಳಲ್ಲಿ ಮನೆಯಲ್ಲಿ ಪೂಜೆಯನ್ನೂ ಮಾಡುತ್ತಿದ್ದೆ. ದೇವರ ಅಸ್ತಿತ್ವದ ಬಗ್ಗೆ ಇದ್ದ ಗೊಂದಲಗಳನ್ನು ಕೊನೆಗಾಣಿಸಿ ನನ್ನನ್ನು ಸಂಪೂರ್ಣವಾಗಿ ನಾಸ್ತಿಕನನ್ನಾಗಿಸಿದ ಶ್ರೇಯ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗೆ ಸೇರಬೇಕು! ಹತ್ತನೇ ತರಗತಿಯಲ್ಲಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾಗ ದೇವಾಲಯದೊಳಗೆ ಪ್ರವೇಶಿಸಲು ಶರ್ಟು ತೆಗೆಯುವುದು ಕಡ್ಡಾಯವೆಂದು ಗೊತ್ತಾಯಿತು. ದೇವಲಾಯದ ಆವರಣ ಕೊಳೆಯಾಗಬಹುದೆಂಬ ಕಾರಣದಿಂದ ಚಪ್ಪಲಿ ಬಿಟ್ಟು ಒಳಹೋಗುವುದೇನೋ ಸರಿ, ಆದರೆ ಶರ್ಟು ಬಿಚ್ಚಿ ಹೆಗಲ ಮೇಲೆ ಹಾಕಿಕೊಳ್ಳುವುದು ಯಾವ ಪುರುಷಾರ್ಥಕ್ಕೆ? ಅವತ್ತಿನ ನನ್ನ ಮನಸ್ಸಿಗೆ ಕಾರಣ ಹೊಳೆದಿದ್ದು ಜನಿವಾರದವರಿಗೆ ಮತ್ತು ಜನಿವಾರರಹಿತರಿಗೆ ದೇವಲಾಯದ ಸಿಬ್ಬಂದಿ ಮಾಡುತ್ತಿದ್ದ ಭೇದಭಾವವನ್ನು ಕಂಡಾಗ! ಆ ಸಿಬ್ಬಂದಿಯವರ ಮೇಲೆ ಹುಟ್ಟಿದ ಅಸಹ್ಯ, ಕೋಪ, ಜಿಗುಪ್ಸೆ ಅವರ ನಡುವೆಯೇ ಕುಳಿತು ಕಣ್ಣು ಮುಚ್ಚಿದ್ದ ದೇವರ ಮೇಲೆಯೂ ಹುಟ್ಟಿತು. ಅಂದಿನಿಂದ ನಾಸ್ತಿಕನಾದೆ. ಶರ್ಟು ತೆಗೆಸುವುದಕ್ಕೆ ಬೇರೆ ಯಾವುದಾದರೂ ಕಾರಣವಿದ್ದಲ್ಲಿ ಅರಿತವರು ತಿಳಿಸಬೇಕಾಗಿ ವಿನಂತಿ!

- ಡಾ ಅಶೋಕ್. ಕೆ. ಆರ್

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...