Saturday, June 30, 2012

ಇವರಿಗೆ ನೈತಿಕತೆಯೇ ಇಲ್ಲವೇ ?
- ನಾ ದಿವಾಕರ್

ಅವಧಿಯಿಂದ

ಒಂದು ಕಾಲದಲ್ಲಿ ಹೈಕಮಾಂಡ್ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಪಯರ್ಾಯ ಪದವಾಗಿತ್ತು. ಎಲ್ಲ ಪಕ್ಷಗಳಲ್ಲೂ ಕೇಂದ್ರ ನಾಯಕತ್ವವನ್ನು ಹೀಗೆಯೇ ಸಂಬೋಧಿಸುತ್ತಿದ್ದರೂ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ಹೈಕಮಾಂಡ್ ಸಂಸ್ಕೃತಿ ಒಂದು ರಾಜಕೀಯ ವಿದ್ಯಮಾನವಾಗಿ ರೂಪುಗೊಂಡಿದ್ದು ಮಾತ್ರ ಸತ್ಯ. ರಾಷ್ಟ್ರಮಟ್ಟದಲ್ಲಿ ಒಂದು ಪಕ್ಷವಾಗಿ ಕಾರ್ಯನಿರ್ವಹಿಸುವಾಗ ರಾಜ್ಯಗಳ ಘಟಕಗಳನ್ನು ನಿಯಂತ್ತಿಸುವುದು ಅನಿವಾರ್ಯವೇ ಆದರೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯಲ್ಲಿ ರಾಜ್ಯ ಘಟಕಗಳಿಗೆ ಅಥವಾ ಎರಡನೆ ಹಂತದ ನಾಯಕರುಗಳಿಗೆ ಉಸಿರೆತ್ತಲೂ ಅಧಿಕಾರವಿರಲಿಲ್ಲ. ಸಚಿವ ಸಂಪುಟ ವಿಸ್ತರಣೆಯಿಂದ ಹಿಡಿದು, ರಾಜ್ಯಪಾಲರ ನೇಮಕದವರೆಗೆ ರಾಜ್ಯ ಘಟಕಗಳು ಹೈಕಮಾಂಡ್ ಆದೇಶ ಪಾಲಿಸುವುದು ಅನಿವಾರ್ಯವಾಗಿತ್ತು. ಇಂದಿರಾ ನಂತರದಲ್ಲಿ ಕಾಂಗ್ರೆಸ್ನ ಪ್ರಾಬಲ್ಯ ಕ್ಷೀಣಿಸಿ ಪ್ರಾದೇಶಿಕ ಪಕ್ಷಗಳು ಹೆಚ್ಚು ಜನಪ್ರಿಯತೆ ಗಳಿಸತೊಡಗಿದ ನಂತರ ಹೈಕಮಾಂಡ್ ಸಂಸ್ಕೃತಿಯೂ ತನ್ನ ಮೊನಚನ್ನು ಕಳೆದುಕೊಂಡಿತ್ತು. ಕಾರಣ ಅತೃಪ್ತ ರಾಜಕಾರಣಿಗಳಿಗೆ ಅವಕಾಶಗಳು ವಿಪುಲವಾಗಿದ್ದವು.

ವ್ಯ೦ಗ್ಯ ಚಿತ್ರ ಕೃಪೆ : ಆರ್ ಕೆ ಲಕ್ಷ್ಮಣ್

ಈ ಕಾಲಘಟ್ಟದಲ್ಲಿ ಹೊಸ ಭರವಸೆಯೊಂದಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ವಿರೋಧಿಸುತ್ತಲೇ ಉದಯಿಸಿದ ಬಿಜೆಪಿ ತನ್ನ ಜನಸಂಘದ ಮುಖವಾಡವನ್ನು ಕಳಚಿ ಹೊಸ ಚಹರೆಯೊಂದಿಗೆ ವಿಭಿನ್ನವಾದ ಪಕ್ಷವಾಗಿ ಹೊರಹೊಮ್ಮಿತ್ತು. ವಿಡಂಬನೆಯೋ ವಿಪಯರ್ಾಸವೋ ಕಳೆದ ಮೂರು ದಶಕಗಳಲ್ಲಿ (ಬಿಜೆಪಿ ಜನಿಸಿದ್ದು 1982ರಲ್ಲಿ) ಅಧಿಕಾರದ ಸವಿಯುಂಡಿರುವ ಬಿಜೆಪಿ ಕಾಂಗ್ರೆಸ್ಗಿಂತಲೂ ಪ್ರಬಲವಾದ ಹೈಕಮಾಂಡ್ ಸಂಸ್ಕೃತಿಯನ್ನು ಸೃಷ್ಟಿಮಾಡಿದೆ. ಇದು ಕನರ್ಾಟಕದ ರಾಜಕಾರಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಿಜೆಪಿಯನ್ನು ನಿಯಂತ್ತಿಸುವ ಸೂಪರ್ ಹೈಕಮಾಂಡ್, ಸಂಘಪರಿವಾರವನ್ನು ಬದಿಗಿಟ್ಟು ನೋಡಿದರೂ ಬಿಜೆಪಿ ಕೇಂದ್ರ ನಾಯಕತ್ವ ಕನರ್ಾಟಕದ ರಾಜಕಾರಣದಲ್ಲಿ ವಹಿಸುತ್ತಿರುವ ಪಾತ್ರವನ್ನು ನೋಡಿದರೆ 70ರ ದಶಕದ ಕಾಂಗ್ರೆಸ್ ಆಡಳಿತ ನೆನಪಾಗುತ್ತದೆ.

ಭಾರತದ ರಾಜಕಾರಣದಲ್ಲಿ ಕೆಸರಿನ ರಾಡಿ ಸೃಷ್ಟಿಯಾಗಿದೆ, ಈ ಕೆಸರಿನಲ್ಲಿ ಅರಳಿದ ಕಮಲದಂತೆ ಭಾರತೀಯ ಜನತಾ ಪಕ್ಷ ಒಂದು ವಿಭಿನ್ನ ಪಕ್ಷವಾಗಿ ಪಾಟರ್ಿ ವಿತ್ ಎ ಡಿಫರೆನ್ಸ್ ಎಂಬ ಘೋಷಣೆಯೊಂದಿಗೆ ಹುಟ್ಟಿಕೊಂಡಿತ್ತು. ವಾಜಪೇಯಿಯವರ ಸೌಮ್ಯ ಮುಖವಾಡದ ಹಿಂದೆ ಅಡ್ವಾಣಿಯವರ ಸಮರಶೀಲತೆ, ಜೋಷಿ, ಉಮಾಭಾರತಿ ಮುಂತಾದವರ ಧೂರ್ತ ಮುಖಗಳನ್ನು ಹೊತ್ತು ದೇಶದ ರಾಜಕಾರಣದಲ್ಲಿ ಸುಭದ್ರ ನೆಲೆ ಸ್ಥಾಪಿಸಿದ ಬಿಜೆಪಿ , ತನ್ನ ಫ್ಯಾಸಿಸ್ಟ್ ಸ್ವರೂಪವನ್ನು ಬಗಲಲ್ಲಿ ಹೊತ್ತುಕೊಂಡೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೆಲೆ ಕಂಡುಕೊಂಡಿತ್ತು. ಈ ತನ್ನ ಹೊಂದಾಣಿಕೆಯ ಲಕ್ಷಣಗಳಿಂದಲೇ ಅನ್ಯ ಪಕ್ಷಗಳ ಮತ್ತು ಸೆಕ್ಯುಲರ್ ನಾಯಕರುಗಳ ಬೆಂಬಲ ಗಳಿಸುವುದರಲ್ಲೂ ಯಶಸ್ವಿಯಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿ ಮಾತ್ರವಲ್ಲದೆ ಇತರ ರಾಜಕೀಯ ತಂತ್ರಗಳನ್ನೂ ಯಥಾವತ್ತಾಗಿ ಅನುಸರಿಸಿದ ಬಿಜೆಪಿ ಇಂದು ಅಧಿಕಾರ ರಾಜಕಾರಣದ ಹೊಸ ಆಯಾಮವನ್ನೇ ಸೃಷ್ಟಿಸಿರುವುದು ಕನರ್ಾಟಕದಲ್ಲಿ ಸ್ಪಷ್ಟವಾಗಿ ನಿರೂಪಿತವಾಗಿದೆ.

ದಕ್ಷಿಣ ಭಾರತದ ಪ್ರಥಮ ಸಕರ್ಾರವನ್ನು ಕನರ್ಾಟಕದಲ್ಲಿ ಸ್ಥಾಪಿಸಿದಾಗ, ನಿಚ್ಚಳ ಬಹುಮತ ಗಳಿಸಿದ್ದ ವಿಶ್ವಾಸದಲ್ಲಿ 20 ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿ ರಾಜ್ಯವನ್ನು ಗುಜರಾತ್ ಮಾಡುತ್ತೇವೆ, ಸಿಂಗಪುರ ಮಾಡುತ್ತೇವೆ ಎಂದು ಘೋಷಿಸಿದ್ದ ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ಎರಡನೆ ಬಾರಿಗೆ ಜೈಲುವಾಸ ಅನುಭವಿಸಲು ಸಿದ್ಧರಾಗುತ್ತಿದ್ದಾರೆ. ಮೂರೂವರೆ ವರ್ಷಗಳ ನಂತರ ಈ ರಾಜ್ಯ ಗುಜರಾತ್ ಆಗುವ ಬದಲು ಗುಜರಿ ರಾಜ್ಯವಾಗಿದೆ. ಇಲ್ಲಿ ಶಾಸಕರಿಂದ ಸಂಸದರವರೆಗೆ, ವಿಧಾನಸಭೆಯಿಂದ ವಿಧಾನಪರಿಷತ್ವರೆಗೆ ಎಲ್ಲವೂ ಮೌಲ್ಯಾಧಾರಿತವೇ, ಮಾರುಕಟ್ಟೆ ಮೌಲ್ಯಾಧಾರಿತ. ಎಲ್ಲವೂ ಬಿಕರಿಗಿವೆ. ಮತಗಳನ್ನು ಖರೀದಿಸುವ ಬದಲು ಮತದಾರರನ್ನೇ ಖರೀದಿಸುವ ಸಂಸ್ಕೃತಿ ಕೇವಲ ಶಾಸಕಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಹಿತ್ಯ ಪರಿಷತ್ ಚುನಾವಣೆಗಳಿಗೂ ವ್ಯಾಪಿಸಿದೆ. ರಾಜ್ಯವನ್ನು ಸುಂದರ ವಿಹಂಗಮ ಸಿಂಗಪೂರವನ್ನಾಗಿ ಮಾಡಲು ಹೊರಟ ಮಹಾರಥಿಗಳು ರಾಜ್ಯವನ್ನು ಸಿಂಗಲೀಕಪುರವನ್ನಾಗಿ ಮಾಡಿದ್ದಾರೆ. ರಾಜ್ಯದ ಈಗಿನ ಪರಿಸ್ಥಿತಿಯನ್ನು ನೋಡಿದರೆ ಆಳ್ವಿಕರಿಗೆ ಆಳುವ ಇಚ್ಚಾಶಕ್ತಿ, ಸಾಮಥ್ರ್ಯವೇ ಇಲ್ಲವೇನೋ ಎನ್ನುವಂತಾಗಿದೆ.

ಯಡಿಯೂರಪ್ಪ ಸ್ಥಾನವನ್ನು ಅಲಂಕರಿಸಿದ ಸದಾನಂದಗೌಡರು ತಮ್ಮ ಹತ್ತು ತಿಂಗಳ ಅಧಿಕಾರಾವಧಿಯಲ್ಲಿ ಭಿನ್ನಮತವನ್ನು ಶಮನಗೊಳಿಸುವುದರಲ್ಲೇ ಕಾಲ ಕಳೆದಿದ್ದು ಸಚಿವ ಸಂಪುಟವನ್ನೂ ವಿಸ್ತರಿಸದೆ, ಆಡಳಿತ ಯಂತ್ರವನ್ನೇ ನಿಷ್ಕ್ರಿಯಗೊಳಿಸಿದ್ದಾರೆ. ಹತ್ತೊಂಬತ್ತು ಇಲಾಖೆಗಳನ್ನು ತಮ್ಮ ಮಗ್ಗುಲಲ್ಲಿ ಹೊತ್ತುಕೊಂಡು ಯಾವ ಮುಖ್ಯಮಂತ್ರಿ ತಾನೇ ದಕ್ಷ ಆಡಳಿತ ನೀಡಲು ಸಾಧ್ಯ. ಅದರಲ್ಲೂ ಅಧಿಕಾರವನ್ನು ಉಳಿಸಿಕೊಳ್ಳಲು ಒಂದು ಬಣ ಹೆಣಗಾಡುತ್ತಿದ್ದರೆ, ಕಸಿದುಕೊಳ್ಳಲು ಮತ್ತೊಂದು ಬಣ ಶ್ರಮಿಸುತ್ತಿದೆ. ಈ ಹಗ್ಗ ಜಗ್ಗಾಟದಲ್ಲಿ ಜಾತಿ ರಾಜಕಾರಣ ಒಂದು ಸ್ಪಷ್ಟ ಆಯಾಮವನ್ನು ಪಡೆದುಕೊಳ್ಳುತ್ತಿದ್ದು ಗುಜರಾತ್ ಆಗಬೇಕಿದ್ದ ಕನರ್ಾಟಕ ಬಿಹಾರ ಆಗುತ್ತಿದೆ. ಆಗುತ್ತಿರುವುದೇನು ಆಗಿಯೇ ಹೋಗಿದೆ.

ಒಂದೆಡೆ ಬರಗಾಲ, ಮೇವಿನ ಕೊರತೆ, ನೀರಿನ ಕೊರತೆ, ಕುಡಿಯುವ ನೀರಿಗೆ ಹಾಹಾಕಾರ, ಬೆಳೆ ನಾಶ, ಬಣಗುಡುತ್ತಿರುವ ಕೃಷಿ ಭೂಮಿ, ಇವೇ ಮುಂತಾದ ಸಮಸ್ಯೆಗಳು ಜನಸಾಮಾನ್ಯರನ್ನು ಕಂಗೆಡಿಸುತ್ತಿದ್ದರೆ ಮತ್ತೊಂದೆಡೆ ರೋಮ್ ಸಾಮ್ರಾಜ್ಯದ ನೀರೋಗಳಂತೆ ಬಿಜೆಪಿ ನಾಯಕರು ಅಧಿಕಾರ ಲಾಲಸೆಯಲ್ಲಿ ಪಿಟೀಲು ಬಾರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಅಸಹ್ಯಕರ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ನಡೆದಿದ್ದು ಜಾತಿ ರಾಜಕಾರಣದ ಪರಾಕಾಷ್ಠೆಯನ್ನು ಜನತೆ ವೀಕ್ಷಿಸುತ್ತಿದ್ದಾರೆ. ಲಿಂಗಾಯತ-ಒಕ್ಕಲಿಗ-ಕುರುಬ ಸಮುದಾಯಗಳನ್ನು ಹೊರತುಪಡಿಸಿ ಅನ್ಯರಿಗೆ ಆಡಳಿತ ನಡೆಸಲು ಅವಕಾಶವೇ ಇಲ್ಲದಂತೆ ಜಾತಿ ಸಮಾವೇಶಗಳನ್ನು ನಡೆಸಿ, ಮಠೋದ್ಯಮಿಗಳ ಆಶೀರ್ವಚನ ಪಡೆದಿರುವ ರಾಜಕೀಯ ನಾಯಕರುಗಳು ಪಕ್ಷ ಬೇಧವನ್ನು ಮರೆತು ಜಾತಿ ಪ್ರಜ್ಞೆಯನ್ನು ಬೆಳೆಸುತ್ತಿರುವುದು ಪ್ರಜಾಸತ್ತೆಗೆ ಮಾರಕವಾದ ಸಂಗತಿಯಾಗಿದೆ.

ಈಗ ಬಿಜೆಪಿ ಹೈಕಮಾಂಡ್ ರಂಗಪ್ರವೇಶ ಮಾಡಲಿದ್ದು ಈ ಮೂರೂ ಜಾತಿಗಳ ನಾಯಕರುಗಳ, ಶೆಟ್ಟರ್ (ಅಂದರೆ ಯಡಿಯೂರಪ್ಪ), ಈಶ್ವರಪ್ಪ ಮತ್ತು ಸದಾನಂದಗೌಡರ ಪೈಕಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಿದೆ. ಇಲ್ಲಿ ಆಯ್ಕೆ ಇರುವುದು ಜಾತಿಗಳದ್ದೇ ಹೊರತು ಸಮರ್ಥ, ಅರ್ಹ ನಾಯಕರದ್ದಲ್ಲ. ಮುಖ್ಯಮಂತ್ರಿಯ ಆಯ್ಕೆಯ ಮಾನದಂಡ ಜನಾನುರಾಗಿ ನೀತಿಗಳಲ್ಲ, ಜನರನ್ನು ಒಡೆದಾಳುವ ಜಾತಿಗಳಾಗಿರುವುದು ಪ್ರಜಾತಂತ್ರ ವ್ಯವಸ್ಥೆಯ ದುರಂತ. ಈ ದುರಂತಕ್ಕೆ ಅಧಿಕೃತ ಮೊಹರು ಒತ್ತಿರುವುದು ಬಿಜೆಪಿಯ ಕೊಡುಗೆ. ಭ್ರಷ್ಟ, ಅಕ್ರಮ, ಅಸಮರ್ಥ ಆಡಳಿತದ ವಿರಾಟ್ ಸ್ವರೂಪವನ್ನು ಪ್ರಜೆಗಳಿಗೆ ಪ್ರದಶರ್ಿಸಿರುವ ಬಿಜೆಪಿ ಆಳುವ ಅರ್ಹತೆಯನ್ನೇ ಕಳೆದುಕೊಂಡಿದೆ. 20 ವರ್ಷ ಇರಲಿ ಒಂದು ದಿನವೂ ಅಧಿಕಾರದಲ್ಲಿರಲು ಅರ್ಹವಲ್ಲದ ಬಿಜೆಪಿ ನೈತಿಕತೆ ಇದ್ದರೆ ಜನರ ಬಳಿ ಹೋಗುವುದು ಒಳಿತು.

ವೈದ್ಯ ಬಂಧುಗಳಿಗಿಂದು ಆತ್ಮಾವಲೋಕನದ ದಿನ
-ಡಾ. ಮುರಲೀ ಮೋಹನ್ ಚೂಂತಾರು, ಕಾಸರಗೋಡುಇಂದು ವೈದ್ಯರ ದಿನ. ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೀಗೆ ಹತ್ತಾರು ವಿಧಾನಗಳ ಮೂಲಕ ಮನುಕುಲದ ಏಳಿಗೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡಿರುವ ವೈದ್ಯರಿಗೆ ಅಭಿನಂದಿಸುವ, ಕೃತಜ್ಞತೆ ಸೂಚಿಸುವ ದಿನ. ನಮ್ಮ ದೇಹದ ಆರೋಗ್ಯದಲ್ಲಿ ಏರು ಪೇರು ಬಂದಾಗ, ನೋವಿನಿಂದ ಸಂಕಟದಿಂದ ನರಳುವಾಗ ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ಧೈರ್ಯ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸಜೀವನಕ್ಕೆ ರಹದಾರಿ ಮಾಡಿ ಕೊಟ್ಟ ನಮ್ಮ ನೆಚ್ಚಿನ ವೈದ್ಯರನ್ನು ಸ್ಮರಿಸುವ, ನೆನಪಿಸಿಕೊಳ್ಳುವ ಮತ್ತು ಆದರಿಸುವ ಸ್ಮರಣೀಯವಾದ ದಿನವಿದು.


‘ವೈದ್ಯರ ದಿನ’ದಂದು ಎಲ್ಲ ವೈದ್ಯರೂ ಆತ್ಮ ವಿಮರ್ಶೆ ಮಾಡಿ ಕೊಂಡು ತಮ್ಮ ವೈದ್ಯಕೀಯ ವೃತ್ತಿ ಧರ್ಮದ ವೌಲ್ಯಗಳನ್ನು ತತ್ವಾದರ್ಶಗಳನ್ನು ಬಲಿಕೊಡದೆ, ಮಾನವೀಯತೆಯ ನೆಲೆಯಲ್ಲಿ ವೈದ್ಯಕೀಯ ವೃತ್ತಿಯನ್ನು ಪಾಲಿಸಿದಲ್ಲಿ ಸುಂದರ ಸುದೃಢ ಸಮಾಜ ನಿರ್ಮಾಣವಾಗಬಹುದು. ಅದುವೇ ನಾವು ಬಿ.ಸಿ.ರಾಯ್ ಎಂಬ ಮಹಾನ್ ಚೇತನಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೂ ತಪ್ಪಲ್ಲ.ಬಹುಶಃ ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ದಿನಗಳಲ್ಲಿ, ಮಾನವೀಯ ಸಂಬಂಧಗಳು ನಶಿಸಿ ಹೋಗು ತ್ತಿರುವ ಕಾಲಘಟ್ಟದಲ್ಲಿ ವೈದ್ಯ ಮತ್ತು ರೋಗಿಗಳ ನಡುವಿನ ಸಂಬಂಧವು ಮೊದಲಿನಂತೆ ಉಳಿದಿಲ್ಲ. ‘ವೈದ್ಯೋ ನಾರಾಯಣ ಹರಿಃ’ ಎಂಬ ಮಾತು ಈಗ ಬಹುಶಃ ಎಲ್ಲ ವೈದ್ಯರಿಗೂ ಅನ್ವಯಿಸಲಿಕ್ಕಿಲ್ಲ. ಅದೇ ರೀತಿ ಇಂದಿನ ರೋಗಿಗಳೂ ಕೂಡಾ ವೈದ್ಯರನ್ನು ಪೂರ್ತಿ ವಿಶ್ವಾಸದಿಂದ ನೋಡುವ ಸ್ಥಿತಿಯಲ್ಲಿ ಇಲ್ಲ. ರೋಗಿಗಳಿಗೆ ಶಾಂತಿ, ತಾಳ್ಮೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇವತ್ತಿನ ದಿನ ಬಹುಶಃ ಎಲ್ಲ ವೈದ್ಯ ಬಂಧುಗಳಿಗೆ ಆತ್ಮಾವಲೋಕನದ ದಿನ ಎಂದರೂ ತಪ್ಪಲ್ಲ. ತನ್ನ ವೃತ್ತಿ ಜೀವನದ ಏಳು ಬೀಳುಗಳತ್ತ ದೃಷ್ಟಿ ಹರಿಸಿ ತನ್ನ ತಪ್ಪು ಒಪ್ಪುಗಳನ್ನು ಪುನರ್ ವಿಮರ್ಶಿಸಿಕೊಂಡು, ಸಾಧನೆಯ ಮಜಲುಗಳತ್ತ ಹಿನ್ನೋಟ ಬೀರಿ, ತನು ಮನ ಧನಗಳನ್ನು ತನ್ನ ವೃತ್ತಿಗೆ ಪುನಃ ಅರ್ಪಿಸಿಕೊಳ್ಳುವ ದಿನ.

ಜುಲೈ 1ನ್ನು ಭಾರತದಲ್ಲಿ ‘ವೈದ್ಯರ ದಿನ’ ಎಂದು ಆಚರಿಸಲಾಗುತ್ತದೆ. ಅಂದು ಭಾರತದ ವೈದ್ಯರೆಲ್ಲರೂ ಅಭಿ ಮಾನ ಪಡುವ ಮಹಾವೈದ್ಯ, ಶಿಕ್ಷಣ ತಜ್ಞ, ಸ್ವಾತಂತ್ರ ಹೋರಾಟಗಾರ, ಅಪ್ರತಿಮ ವ್ಯಕ್ತಿತ್ವದ ಡಾ.ಬಿ.ಸಿ.ರಾಯ್ ಅವರು ಜನ್ಮವೆತ್ತ ದಿನ. (1882 ಜುಲೈ) ಇವರ ಸವಿನೆನಪಿಗಾಗಿ ಈ ದಿನವನ್ನು ‘ವೈದ್ಯರ ದಿನ’ ಎಂದು ಆಚರಿಸುತ್ತೇವೆ. ಈ ದಿನದಂದು ಭಾರತದ ಎಲ್ಲ ವೈದ್ಯ ಬಾಂಧವರು ಸಮಾಜದ ಬಡತನ ರೇಖೆಗಿಂತ ಕೆಳಗಿರುವ ಮನು ಸಂಕುಲದ ಉದ್ಧಾರಕ್ಕಾಗಿ ಪ್ರತಿಜ್ಞೆ ಮಾಡುತ್ತಾರೆ.

ಬಿಹಾರದ ಪಾಟ್ನಾದಲ್ಲಿ ಜನಿಸಿದ ಬಿ.ಸಿ ರಾಯ್ ಕಲ್ಕತ್ತದಲ್ಲಿ ಎಂಬಿಬಿಎಸ್ ಶಿಕ್ಷಣ ಮುಗಿಸಿದರು. ಅವರ ಜ್ಞಾನ ಸಂಪತ್ತಿಗೆ, ಅನುಭವಕ್ಕೆ ಯೋಗ್ಯತೆಗೆ ಇಂಗ್ಲೆಂಡ್‌ನ ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಸಿಗುತ್ತಿತ್ತು. ಆದರೆ ತಾಯಿನಾಡಿನ ವ್ಯಾಮೋಹ ಅವರನ್ನು ಬಿಡಲಿಲ್ಲ. 1911ರಲ್ಲಿ ಭಾರತಕ್ಕೆ ಬಂದು ನಮ್ಮ ದೇಶದ ಬಡಜನರ ಉದ್ಧಾರಕ್ಕಾಗಿ ಟೊಂಕಕಟ್ಟಿ ನಿಂತರು. ಕಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಕರಾಗಿ ಸಾವಿರಾರು ಮಂದಿ ಯುವವೈದ್ಯರಿಗೆ ಆದರ್ಶಪ್ರಾಯರಾದರು. ಇವತ್ತಿಗೂ ಅವರಿಂದ ಕಲಿತ ನೂರಾರು ವೈದ್ಯರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಮುನ್ನುಗ್ಗುತ್ತಿದ್ದಾರೆ. ಅವರು ತಮ್ಮ ಪ್ರತಿ ರೋಗಿಗಳಲ್ಲಿ ದೇವರನ್ನು ಕಾಣುತ್ತಿದ್ದರು. ‘my patients, God pays for them ’’ ಎಂಬ ಉಕ್ತಿಯನ್ನು ತಮ್ಮ ಜೀವನದುದ್ದಕ್ಕೂ ಅಕ್ಷರಶಃ ಪಾಲಿಸಿದ ವ್ಯಕ್ತಿ ಬಿ.ಸಿ ರಾಯ್. ತಾವು ನಂಬಿದ ತತ್ವ ಆದರ್ಶ ಧ್ಯೇಯಗಳನ್ನು ಬಲಿಗೊಡದೆ ವೈದ್ಯಕೀಯ ವೃತ್ತಿಯನ್ನು ಪ್ರಾಮಾಣಿಕವಾಗಿ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆಯೇ ನಡೆದರು. ಸ್ವಾತಂತ್ರ ಬಳಿಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪದವಿ ಏರಿ ಆ ಪದವಿಯ ಗೌರವವನ್ನು ಇಮ್ಮಡಿಗೊಳಿಸಿದರು. ಹಲವಾರು ಶಿಕ್ಷಣ ಸಂಸ್ಥೆ ಆಸ್ಪತ್ರೆಗಳನ್ನು ಕಟ್ಟಿಸಿ ಬಡ ವಿದ್ಯಾರ್ಥಿಗಳಿಗೆ ಬಡರೋಗಿಗಳಿಗೆ ಆಶಾಕಿರಣವಾದರು. ಹೀಗೆ ವೈದ್ಯಕೀಯ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಮತ್ತು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಕಾರ್ಯ ಬಾಹುಳ್ಯವನ್ನು ವಿಸ್ತರಿಸಿಕೊಂಡು, ಗಾಂಧೀಜಿ ಕನಸು ಕಂಡ ರಾಮರಾಜ್ಯದ ಸ್ಥಾಪನೆಗೆ ತಮ್ಮ ಜೀವನವನ್ನು ಮುಡಿಪಾಗಿಸಿದರು. ಸುಮಾರು 80 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿ, 1962 ಜುಲೈ 1 (ಜನಿಸಿದ ದಿನ ಕೂಡಾ ಜುಲೈ 1) ರಂದು ಕೀರ್ತಿ ಶೇಷರಾದರು.

ಭಾರತ ಸರಕಾರ ಇವರ ಸೇವೆಯನ್ನು ಗುರುತಿಸಿ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ನೀಡಿದ ವ್ಯಕ್ತಿಗಳನ್ನು ಗುರುತಿಸಿ 1976ರಿಂದ ಬಿ.ಸಿ.ರಾಯ್ ಪ್ರಶಸ್ತಿ ನೀಡಲು ಆರಂಭಿಸಿತ್ತು. ಇದು ಈ ಮಹಾ ವ್ಯಕ್ತಿಯ ಮಾನವೀಯ ಸೇವೆಗೆ ನೀಡಿದ ಕಿಂಚಿತ್ ಕಿರು ಕಾಣಿಕೆ ಎಂದರೂ ತಪ್ಪಲ್ಲ.
ನಮಗೆ ಸ್ವಾತಂತ್ರ ಲಭಿಸಿ 65 ವರ್ಷಗಳು ಕಳೆದಿದೆ. ಗಂಗೆ, ಯಮುನಾ, ಕಾವೇರಿ ನದಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ಕಾಲ ಬದಲಾದಂತೆ ನಮ್ಮ ಜೀವನ ಶೈಲಿ, ಆದರ್ಶಗಳೂ ಬದಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತವಾದ ಕ್ರಾಂತಿಗಳು, ಆವಿಷ್ಕಾರಗಳು ನಡೆದಿವೆ. ಹೊಸ ಹೊಸ ರೋಗಗಳು, ಹೊಸ ಹೊಸ ಔಷಧಿಗಳಿಗಾಗಿ ಹುಟ್ಟಿಕೊಂಡಿವೆ. ಇನ್ನೊಂದೆಡೆ ರೋಗಿ ಮತ್ತು ವೈದ್ಯರ ನಡುವಿನ ಭಾವನಾತ್ಮಕ ಸಂಬಂಧಗಳು ಶಿಥಿಲವಾಗುತ್ತಿವೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆ ಹೆಚ್ಚಾಗಿ ಬೆಳೆಯುತ್ತಿರುವುದು ವಿಷಾದನೀಯ ವಿಚಾರ. ವೈದ್ಯ ಶಿಕ್ಷಣವಿರಲಿ, ವೈದ್ಯಕೀಯ ವೃತ್ತಿಯಿರಲಿ, ಸಂಶೋಧನೆಗಳೇ ಇರಲಿ ಎಲ್ಲಾ ಕಡೆಯೂ ಧನಬಲವೇ ವಿಜೃಂಭಿಸುತ್ತಿದೆ. ಪ್ರತಿಭೆ, ಪ್ರಾಮಾಣಿಕ, ಪರಿಶ್ರಮಗಳಿಗೆ ಕಿಂಚಿತ್ತು ಬೆಲೆ ಸಿಗುತ್ತಿಲ್ಲ. ಇದು ಸುಂದರ, ಸುದೃಢ, ಸ್ವಸ್ಥ ಸಮಾಜಕ್ಕೆ ಖಂಡಿತ ಮಾರಕ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜನತೆ, ಸಂಘ ಸಂಸ್ಥೆಗಳು ಮತ್ತು ಸರಕಾರ ತ್ವರಿತಗತಿಯಲ್ಲಿ ಸ್ಪಂದಿಸಬೇಕು.
ಅರ್ಹ ಪ್ರತಿಭಾವಂತರಿಗೆ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ದೊರೆತು, ಆರೋಗ್ಯ ಕ್ಷೇತ್ರದಲ್ಲಿ ತೀವ್ರತರ ವಾದ ಸಂಶೋಧನೆಗಳು ನಡೆಯಬೇಕು. ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ರೋಗಗಳಿಗೂ ಮತ್ತು ತಲೆ ತಲಾಂತರಗಳಿಂದ ಬಾಧಿಸುವ ರೋಗಿಗಳಿಗೂ ಕಡಿ ವಾಣ ಹಾಕಬೇಕು. ಔಷಧ, ಶುಶ್ರೂಷೆ ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಬಡ ಜನರ ಮನೆಬಾಗಿಲಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಿಸ್ವಾರ್ಥ ದಿಂದ ಸೇವಾ ಮನೋಭಾವದಿಂದ ಹಗಲಿರುಳು ತಮ್ಮ ಜೀವನವನ್ನು ರೋಗಿಗಳ ಒಳಿತಿಗಾಗಿ ತೊಡಗಿಸಿ ಕೊಂಡು ವೈದ್ಯರನ್ನು ಗುರುತಿಸಿ, ಗೌರವಿಸುವ ಕಾರ್ಯ ನಡೆಯಬೇಕು.ನಾಗೇಶ್ ಹೆಗಡೆ ಕಂಡಂತೆ ಸಾಯಿನಾಥ್
ಪಿ ಸಾಯಿನಾಥ್


ನಿರಂತರ ದುರಂತಗಳ ಹಸಿಹಸಿ ಚರಿತೆ ‘ನೇಗಿಲ ಕುಳವಾಗಲಿ ಖಡ್ಗ’ ಎಂದರು ಹಿಂದಿನವರು. ‘ಖಡ್ಗವಾಗಲಿ ಲೇಖನಿ’ ಎಂದರು ಈಚಿನವರು. ಲೇಖನಿಯನ್ನು ಕುಳವಾಗಿಯೂ, ಖಡ್ಗವಾಗಿಯೂ ಅಷ್ಟೇಕೆ ಸರ್ಜರಿಯ ನಾಜೂಕು ಶಸ್ತ್ರವಾಗಿಯೂ ಬಳಸಿದ ಅನನ್ಯ ಪತ್ರಕರ್ತ ಪಿ.ಸಾಯಿನಾಥ್. ಗ್ರಾಮೀಣ ಭಾರತದ ನೆಲವನ್ನು ಅವರಷ್ಟು ಆಳವಾಗಿ ಕೆದಕಿ ನೋಡಿ, ಹಸಿಹಸಿಯಾಗಿ ಅಲ್ಲಿನ ದುರಂತಗಳನ್ನು ಎತ್ತಿ ತೋರಿಸುತ್ತ ಬಂದವರು ಬೇರೊಬ್ಬರಿಲ್ಲ. ದಿಲ್ಲಿಯ ಆಡಳಿತ ಯಂತ್ರದ ಜಡತ್ವವನ್ನು ಮತ್ತು ನಮ್ಮ ಜನಪ್ರತಿನಿಧಿಗಳಿಗೆ ಕವಿದ ಮಬ್ಬನ್ನು ಅವರಷ್ಟು ತೀಕ್ಷ್ಣವಾಗಿ ಛೇದಿಸಿ ತೋರಿಸುತ್ತ ಬಂದವರು ಬೇರೊಬ್ಬರಿಲ್ಲ.

ಅಭಿವೃದ್ಧಿಯ ಹೆಸರಿನಲ್ಲಿ ಯೋಜನಾತಜ್ಞರು ಮತ್ತು ಕೋಟ್ಯಧೀಶ ಉದ್ಯಮಪತಿಗಳು ತೊಡುವ ತರಾವರಿ ಮುಖವಾಡಗಳನ್ನು ಅವರಷ್ಟು ನಿರ್ಭಿಡೆಯಾಗಿ ಚಿಂದಿ ಮಾಡುವವರು ಬೇರೊಬ್ಬರಿಲ್ಲ. ನಮ್ಮ ಹಳ್ಳಿಗಳ ಕಡೆ ಮಾಧ್ಯಮಗಳು ಗಮನ ಹರಿಸುವುದೇ ಕಮ್ಮಿ. ಅದರಲ್ಲಂತೂ ಇಂಗ್ಲಿಷ್ ಪತ್ರಕರ್ತರಿಗೆ ಹಳ್ಳಿಗಳ ದೂಳು, ಸೆಗಣಿ ವಾಸನೆ, ಸವುಳು ನೀರು ಎಲ್ಲವೂ ಅಲರ್ಜಿ. ವರದಿಗಾರರನ್ನು ಸಂಪಾದಕರು ಹಳ್ಳಿಯ ಕಡೆ ಅಟ್ಟಿದರೆಂದರೆ ಒಂದೋ ಅಲ್ಲಿ ಭೀಕರ ದುರಂತ/ದುರಾಚಾರ ನಡೆದಿರಬೇಕು; ಇಲ್ಲವೆ ಸಾರ್ವತ್ರಿಕ ಚುನಾವಣೆ ಹತ್ತಿರ ಬಂದಿರಬೇಕು.

ದೇಶದ ಎಲ್ಲ ಪ್ರಮುಖ ಮಾಧ್ಯಮಗಳ ವರದಿಗಾರರೂ ನಗರಗಳ ಥಳಕು ಬೆಳಕಿನ ಕಡೆಗೇ ಮುಗಿಬಿದ್ದಿರುವಾಗ, ಒಬ್ಬಂಟಿ ಪಥಿಕನಂತೆ ಸಾಯಿನಾಥ್ ಹಳ್ಳಿ ಹಳ್ಳಿಗಳಲ್ಲಿ ಸುತ್ತುತ್ತಾರೆ. ಎಡಿಟರ‍್ ಗಳೂ ತಲೆದೂಗುವಷ್ಟು ಕಟುವಾಗಿ, ನಿರ್ಭಿಡೆಯಾಗಿ ಬರೆಯುತ್ತಾರೆ. ಇಂಗ್ಲಿಷ್ ಪತ್ರಿಕೆಗಳು ಸಾಮಾನ್ಯವಾಗಿ ಕೃಷಿಕರ ಬವಣೆಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ‘ಬರೆದರೆ ಯಾರೂ ಓದುವುದಿಲ್ಲ’ ಎಂಬ ದೋರಣೆ ಅವುಗಳದ್ದು. ಅಂಥ ಪತ್ರಿಕೆಯೊಂದರ ಸಂಪಾದಕರ ಮುಖಕ್ಕೆ ಹೊಡೆದಂತೆ ‘ಯಾರೂ ಓದುವುದಿಲ್ಲವೆಂದು ನಿಮಗೆ ಹೇಗೆ ಗೊತ್ತು? ನೀವೆಂದಾದರೂ ಓದುಗರ ಅಭಿಪ್ರಾಯ ಕೇಳಿದ್ದಿರಾ?’ ಎಂದು ಪ್ರಶ್ನಿಸಿ, ಅದೇ ಸಂಪಾದಕರಿಂದ ಪ್ರತಿಷ್ಠಿತ ಫೆಲೊಶಿಪ್ ಗಿಟ್ಟಿಸಿಕೊಂಡವರು ಸಾಯಿನಾಥ್. ಮಾಜಿ ರಾಷ್ಟ್ರಪತಿ ವಿ.ವಿ. ಗಿರಿಯವರ ಮೊಮ್ಮಗ ಅಂದಮೇಲೆ ಅಷ್ಟಾದರೂ ಜರ್ಬ ಅವರಿಗಿರಬೇಡವೆ? ಹಾಗಲ್ಲ. ಅವರಿಗೆ ಮೂಲತಃ ಭಾರತೀಯ ಕೃಷಿಕರ ಬಗ್ಗೆ ಕಳಕಳಿ ಇದೆ. ‘ಎಲ್ಲ ಇಂಗ್ಲಿಷ್ ಪತ್ರಿಕೆಗಳೂ ನಮ್ಮ ಸಮಾಜದ ತೀರ ಮೇಲ್ದರ್ಜೆಯ ಶೇಕಡಾ 5 ಜನರಿಗಾಗಿ ಲೇಖನಗಳನ್ನು ಬರೆಯುತ್ತವೆ; ನಾನು ತೀರ ಕೆಳದರ್ಜೆಯ ಶೇಕಡಾ 5 ಜನರಿಗಾಗಿ ಬರೆಯುತ್ತೇನೆ’ ಎಂಬ ಧ್ಯೇಯದಿಂದ ಪತ್ರಿಕಾರಂಗದಲ್ಲಿ ಸಾಗಿದವರು. ಮೊದಲು ‘ಬ್ಲಿಟ್ಝ್’, ನಂತರ ‘ಟೈಮ್ಸ್ ಆಫ್ ಇಂಡಿಯಾ’ಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿ ಈಗ ‘ದಿ ಹಿಂದೂ’ ಪತ್ರಿಕೆಯಲ್ಲಿ ಗ್ರಾಮೀಣ ವಿಭಾಗದ ಸಂಪಾದಕರಾಗಿದ್ದಾರೆ.

ಕೃಷಿಕರು ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಒಂದು ಸ್ಥಿರ ಚಿತ್ರಣ ಮೂಡುತ್ತದೆ. ಅವರಲ್ಲಿ ಹೆಚ್ಚಿನವರು ಬಡವರು, ಮುಗ್ಧರು. ಕಷ್ಟ ಸಹಿಷ್ಣುಗಳು. ಗಂಜಳ- ಗೊಬ್ಬರ- ಸೌದೆಹೊಗೆಯ ಮಧ್ಯೆ ಕೊಳಕು ಪರಿಸರದಲ್ಲೂ ಕ್ಯಾರೇ ಎನ್ನದೆ ಎಲ್ಲ ರಗಳೆಗಳ ನಡುವೆಯೂ ಆಗಾಗ ಹಾಡುಹಸೆಗಳಲ್ಲಿ ಬದುಕಿಗೆ ಬಣ್ಣ ಕಟ್ಟಿಕೊಳ್ಳುವವರು; ಶತಮಾನಗಳಿಂದ ‘ಅವರಿರುವುದೇ ಹೀಗೆ’ ಎಂಬ ಚಿತ್ರಣ ಅದು. ಅವರ ಕೊರತೆಗಳು ನೀಗಬೇಕು, ಬದುಕು ಸುಧಾರಿಸಬೇಕು, ಅದಕ್ಕೆ ಬೇಕಾದ ಶಿಕ್ಷಣ, ಆರೋಗ್ಯ, ಉದ್ಯೋಗಾವಕಾಶಗಳು ಸಿಗಬೇಕು, ನಾಗರಿಕ ಬದುಕನ್ನು ಹಳ್ಳಿಯ ಜನರೂ ಅನುಭವಿಸಬೇಕು ಎಂಬ ಸಂವಿಧಾನಶಿಲ್ಪಿಗಳ ಆಶಯಗಳು ನಮ್ಮ ಗಮನಕ್ಕೆ ಬರುವುದೇ ಕಡಿಮೆ. ಅಂಥ ಆಶಯವನ್ನು ಪೂರೈಸುವಲ್ಲಿ ಸ್ವತಂತ್ರ ಭಾರತದ ಆಡಳಿತ ಯಂತ್ರ ವಿಫಲವಾಗುತ್ತಿದೆ, ಹತ್ತು ಪಂಚವಾರ್ಷಿಕ ಯೋಜನೆಗಳ ನಂತರವೂ ನಾಳೆ ಎಂಬುದು ನಿನ್ನೆಗಿಂತ ಕರಾಳವಾಗುತ್ತಿದೆ. ಅದನ್ನು ಎತ್ತಿ ಹೇಳಬೇಕೆಂಬ ತುಡಿತ ಇನ್ನೂ ಕಡಿಮೆ. ದಿನಪತ್ರಿಕೆಯ ಯಾವುದೋ ಒಳಪುಟದಲ್ಲಿ ‘ಇಬ್ಬರು ರೈತರ ಆತ್ಮಹತ್ಯೆ’ ಎಂಬ ಪುಟ್ಟ ಸುದ್ದಿಯೊಂದು ಎಲ್ಲೋ ವಾರಕ್ಕೊಮ್ಮೆ ಪ್ರಕಟವಾದರೆ ಬಹುತೇಕ ಎಲ್ಲರೂ ಅದನ್ನು ಕಡೆಗಣಿಸುವುದು ಸಹಜ. ಕಷ್ಟಗಳನ್ನೇ ಹಾಸಿ ಹೊದೆದು ಬದುಕುತ್ತ, ಎಂಥ ತೀವ್ರ ಬರಗಾಲ, ಅನಾರೋಗ್ಯದ ಸ್ಥಿತಿಯಲ್ಲೂ ಹುಲ್ಲುಗರಿಕೆಯಂತೆ ನೆಲಕಚ್ಚಿ ಅವಡುಗಚ್ಚಿ ಜೀವ ಹಿಡಿದುಕೊಂಡು ಬದುಕುವ ಜೀವ ರೈತರದು. ಅಂಥ ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಕರಾಳ ಸಂದರ್ಭ ಏಕೆ ಬಂತು ಎಂಬ ಕುತೂಹಲ ಇದ್ದವರಿಗೆ ಮಾತ್ರ ಈ ಸುದ್ದಿ ಕಾಡುತ್ತದೆ. ಇದರ ಹಿಂದಿನ ಸತ್ಯವನ್ನು ಅರಿಯಲೆಂದು ಇಡೀ ರಾಷ್ಟ್ರದ ಆತ್ಮಹತ್ಯೆಗಳ ಅಂಕಿ ಸಂಖ್ಯೆಗಳನ್ನು ಕ್ರೋಡೀಕರಿಸಿದಾಗ ದಿಗಿಲಾಗುತ್ತದೆ. ನೂರಲ್ಲ, ಸಾವಿರವಲ್ಲ, ಲಕ್ಷಾಂತರ ರೈತರು ನಾನಾ ರಾಜ್ಯಗಳಲ್ಲಿ ಜೀವಹರಣ ಮಾಡಿಕೊಳ್ಳುತ್ತಿದ್ದಾರೆ; ಸರಾಸರಿ ಪ್ರತಿ 35 ನಿಮಿಷಗಳಿಗೆ ಒಬ್ಬೊಬ್ಬರಂತೆ ಸಾವಿಗೆ ಶರಣಾಗುತ್ತಿದ್ದಾರೆ ಎಂಬುದು ಅರಿವಾದಾಗ ಆತಂಕವಾಗುತ್ತದೆ. ಜಗತ್ತಿನ ಚರಿತ್ರೆಯಲ್ಲಿ ಹಿಂದೆಂದೂ ಕಂಡು ಕೇಳಿರದ ಬಹುದೊಡ್ಡ ದುರಂತವೊಂದು ನಮ್ಮ ಕಣ್ಣೆದುರೇ ನಡೆಯುತ್ತಿರುವಾಗ ಯಾರೂ ಅತ್ತ ಗಂಭೀರ ಗಮನ ಹರಿಸುತ್ತಿಲ್ಲವಲ್ಲ ಎಂದು ತಲ್ಲಣವಾಗುತ್ತದೆ.

ಅಷ್ಟೇ ಇದ್ದಿದ್ದರೆ ಹೇಗೂ ಆಗುತ್ತಿತ್ತು. ಆದರೆ ನೊಂದವರಿಗೆ ಸಾಂತ್ವನ ಹೇಳುವ ಬದಲು ಅವರತ್ತ ಕಣ್ಣೆತ್ತಿ ನೋಡದೆ ಗೆದ್ದೆತ್ತುಗಳನ್ನು ಹಾಡಿಹೊಗಳುವ ಭರಾಟೆಯಲ್ಲಿ ನಾವಿದ್ದೇವೆ; ಇನ್ನೂ ವಿಪರೀತದ ಸಂಗತಿ ಏನೆಂದರೆ ಇಂದಿನ ದುಃಸ್ಥಿತಿಗೆ ಕಾರಣರಾದವರನ್ನೇ ಹಾಡಿಹೊಗಳುವವರ ಹಾವಳಿ ಹೆಚ್ಚುತ್ತಿದೆ. ಕೃಷಿರಂಗದ ದಳ್ಳುರಿಯ ಕಡೆ ಗಮನ ಹರಿಸಬೇಕಾದ ಕೇಂದ್ರ ಕೃಷಿ ಸಚಿವರು ಕ್ರಿಕೆಟ್ ರಂಗಕ್ಕೆ ಬಣ್ಣಬ್ಯಾಗಡೆ ಹಚ್ಚುವುದರಲ್ಲಿ ಮೈಮರೆತಿರುತ್ತಾರೆ. ಸೆನ್ಸೆಕ್ಸ್ ಸೂಚ್ಯಂಕ 20 ಸಾವಿರಕ್ಕೆ ಸಮೀಪಿಸಿತು ಎಂದು ಆರ್ಥಿಕ ತಜ್ಞರು ಹರ್ಷೋದ್ಗಾರ ಮಾಡುವ ಚಿತ್ರಗಳು ಮಾಧ್ಯಮಗಳಲ್ಲಿ ಬರುತ್ತವೆ. ಅದೇ ದಿನ ಒಳಪುಟಗಳಲ್ಲಿ ‘ಜಾಗತಿಕ ಹಸಿವು (ನಿವಾರಣಾ) ಸೂಚ್ಯಂಕ’ದ ಪಟ್ಟಿಯಲ್ಲಿ ಭಾರತದ ಸ್ಥಾನ ಶೋಚನೀಯ 94ನೇ ಶ್ರೇಯಾಂಕಕ್ಕೆ ಕುಸಿಯಿತೆಂಬ ವಾರ್ತೆ ಚಿಕ್ಕದಾಗಿ ಮುದ್ರಿತವಾಗಿರುತ್ತದೆ. ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಒಂದೂವರೆ ಲಕ್ಷಕ್ಕೆ ಏರಿದ ಸಂಗತಿಯನ್ನು ವಾರ್ತಾ ಏಜನ್ಸಿಗಳು ಸಂಕ್ಷಿಪ್ತವಾಗಿ ವರದಿ ಮಾಡುತ್ತಿದ್ದಾಗ ಮಾಧ್ಯಮಗಳ ಗಮನವೆಲ್ಲ ದಿಲ್ಲಿಯ ವಿಮಾನ ನಿಲ್ದಾಣದ ಕಡೆ ಇರುತ್ತದೆ. ವಿದೇಶದಿಂದ ಬಂದಿಳಿದ ಇಬ್ಬರು ಶಂಕಿತ ಸಾಸರ್್/ಹಂದಿಜ್ವರ ಪೀಡಿತರ ವಾರ್ತೆಗೆಂದು ಮುಖಪುಟದಲ್ಲಿ ಜಾಗ ಕಾಯ್ದಿರಿಸಲಾಗುತ್ತದೆ. ಇಡೀ ದೇಶದ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಸಾರ್ಸ್ ಜ್ವರ ನಿರೋಧಕ ಔಷಧಗಳನ್ನು ವಿತರಿಸುವ ಬಗ್ಗೆ ಆರೋಗ್ಯ ಸಚಿವರು ಭರವಸೆ ನೀಡುತ್ತಾರೆ. ಈ ಮಧ್ಯೆ ‘ಭಾರತದ ಡಾಲರ್ ಕೋಟ್ಯಧೀಶರ ಸಂಖ್ಯೆ 52ಕ್ಕೇರಿತು. ಜಗತ್ತಿನಲ್ಲಿ ನಾಲ್ಕನೆಯ ಅತಿ ಹೆಚ್ಚು ಶತಕೋಟ್ಯಧೀಶರಿರುವ ದೇಶವೆಂಬ ಹೆಗ್ಗಳಿಕೆ ಭಾರತಕ್ಕೆ ಬಂತು’ ಎಂದು ಮಾಧ್ಯಮಗಳು ಭೋಪರಾಕ್ ಹೇಳುತ್ತವೆ. ಟೈಟಾನಿಕ್ ಮುಳುಗುವ ಸ್ಥಿತಿಯಲ್ಲೂ ಹಡಗಿನ ಆರ್ಕೆಸ್ಟ್ರಾ ತಂಡದವರು ಪಯಣಿಗರನ್ನು ಸಂಗೀತ ಲೋಕದಲ್ಲಿ ತೇಲಿಸಲು ಹೆಣಗಾಡುವ ದೃಶ್ಯ ನೆನಪಿಗೆ ಬರುತ್ತದೆ.

ಇಂಥ ವೈರುಧ್ಯಗಳನ್ನು, ಗ್ರಾಮಭಾರತದ ದುರಂತಗಳನ್ನು ಅದಕ್ಕೆ ಕಾರಣವಾದ ಜಾಗತಿಕ ಹುನ್ನಾರಗಳನ್ನು ಎತ್ತಿ ತೋರಿಸಬಲ್ಲ ಸಶಕ್ತ ಚಿಂತಕನೊಬ್ಬ ಇಂಗ್ಲಿಷ್ ಮಾಧ್ಯಮಕ್ಕೆ ಬೇಕಾಗಿತ್ತು. ಸಾಯಿನಾಥ್ ಬಂದರು. ನಮಗೆ ತೀರ ಸಾಮಾನ್ಯ ಎನ್ನಿಸುವ ದೃಶ್ಯಗಳನ್ನು ಸಾಯಿನಾಥ್ ಆಳಕ್ಕೆ ಬಗೆದು ತೋರಿಸಿದರು. ಒಂದು ಉದಾಹರಣೆ ನೋಡಿ: ನಗರದ ಎಲ್ಲ ಅನುಕೂಲಸ್ಥ ಮನೆಗಳಲ್ಲೂ ಕೆಲಸಕ್ಕೆ ಆಳುಗಳಿರುತ್ತಾರೆ. ಅದೇನೂ ನಮಗೆ ವಿಶೇಷ ಅಲ್ಲ. ಅದನ್ನೇ ಸಾಯಿನಾಥ್ ನಮಗೆ ತೋರಿಸುವುದು ಹೇಗೆಂದರೆ- ‘ದಿಲ್ಲಿಯಲ್ಲಿ ಜಾರ್ಖಂಡ್ ರಾಜ್ಯದಿಂದ ಬಂದ ಎರಡು ಲಕ್ಷ ಹೆಣ್ಣಾಳುಗಳು ಮನೆಗೂಲಿಗಳಾಗಿದ್ದಾರೆ. ಅವರೆಲ್ಲ ನೈಸರ್ಗಿಕ ಸಂಪತ್ತು ಚೆನ್ನಾಗಿರುವ ಊರುಗಳಿಂದಲೇ ಹೊರಟು ದಿಲ್ಲಿಗೆ ವಲಸೆ ಬಂದಿದ್ದಾರೆ. ಹೀನಾಯ ಬದುಕು ಮತ್ತು ಶೋಷಣೆಯನ್ನು ಬಿಟ್ಟರೆ ಈ ದಿಲ್ಲಿಯಲ್ಲಿ ಅವರಿಗೆ ಬೇರೇನೂ ಸಿಗಲಾರದು. ಆದರೂ ಇವರಿಗೆ ತಮ್ಮ ಹಳ್ಳಿಯ ದುರ್ಭರ ಪರಿಸ್ಥಿತಿಯಲ್ಲಿ ಏಗುವುದಕ್ಕಿಂತ ಇಲ್ಲಿನ ಅನಾಮಿಕ ಬದುಕೇ ಉತ್ತಮ ಎನ್ನಿಸಿರಬೇಕು. ಕಡೇಪಕ್ಷ ಇಲ್ಲಿ ಹೊಟ್ಟೆತುಂಬುತ್ತದೆ. ತುಸು ಹಣವನ್ನು ಊರಿಗೆ ಕಳಿಸುವ, ನಾಳಿನ ಬಗ್ಗೆ ತುಸು ಆಶಾಕಿರಣವನ್ನು ಉಳಿಸಿಕೊಳ್ಳುವ ಅವಕಾಶ ಇಲ್ಲಿದೆ.’

ಪಿ. ಸಾಯಿನಾಥ್ ಬರಹಗಳ ವಿಶೇಷ ಏನೆಂದರೆ, ಇವರು ಭಾವೋದ್ರೇಕಿತ ವಾಕ್ಯಗಳನ್ನು ಬಳಸುವುದಿಲ್ಲ. ಕೆರಳಿಸುವುದಿಲ್ಲ. ಚೀರುವುದಿಲ್ಲ. ಉದ್ಗಾರವನ್ನೇ ಎತ್ತುವುದಿಲ್ಲ. ಸಾಕಷ್ಟು ಸಂಯಮದಿಂದ, ತಗ್ಗಿದ ಸ್ವರದಲ್ಲೆಂಬಂತೆ ಸ್ಫೋಟಕ ಅಂಕಿ-ಅಂಶಗಳನ್ನು ನೀಡುತ್ತಾರೆ. ಶಬ್ದಗಳ ಡೊಂಬರಾಗಲೀ ಆಡಂಬರವಾಗಲೀ ಇಲ್ಲ. ಅವರ ಬರಹಗಳು ಕೆಂಡದ ಉಂಡೆಗಳಲ್ಲ; ಬದಲಿಗೆ ಹಿಮದಲ್ಲಿ ಹುದುಗಿಸಿಟ್ಟ ಹರಿತ ಚೂರಿ. ಬೇರೆಯವರ ಮಾತುಗಳನ್ನೇ ಕನ್ನಡಿಯಂತೆ ನಿಮ್ಮೆದುರು ಹಿಡಿದು ಸತ್ಯದ ಮುಖವಾಡವನ್ನು ಸರಿಸುತ್ತಾರೆ. ಅದೆಷ್ಟೊ ಬಾರಿ ಕಣ್ಣೆದುರು ಕಂಡ ವಾಸ್ತವಗಳನ್ನು ತೀರ ಹಸಿಹಸಿಯಾಗಿ, ಯಾವುದೇ ಬಗೆಯ ವಿಶ್ಲೇಷಣೆ ಮಾಡದೆ, ಉಪ್ಪು-ಖಾರಗಳ ಸ್ವಂತ ಮಾತುಗಳನ್ನೇ ಸೇರಿಸದೆ ನಿಭರ್ಾವುಕವಾಗಿ ಮುಂದಿಡುತ್ತಾರೆ. ಇನ್ನು ಕೆಲವೊಮ್ಮೆ ಕಣ್ಣಾರೆ ಕಂಡದ್ದನ್ನು, ಅವಿತಿದ್ದನ್ನು ಒಟ್ಟೊಟ್ಟಿಗೆ ಇಟ್ಟು ನಿಮ್ಮನ್ನು ದಂಗುಬಡಿಸುತ್ತಾರೆ. ವಿದರ್ಭದ ಹತ್ತಿ ಬೆಳೆಗಾರರ ಸಂಕಷ್ಟಗಳ ಕತೆಯನ್ನೇ ನೋಡಿ. ಸಾಯಿನಾಥ್ ರಂಥ ಕೆಲವರ ನಿರಂತರ ವರದಿಯಿಂದಾಗಿ ಅಲ್ಲಿನ ಕಟುವಾಸ್ತವಗಳು ಕೇಂದ್ರದ ಗಮನಕ್ಕೆ ಬಂದಾಗ ಪ್ರಧಾನ ಮಂತ್ರಿಯವರು 2006ರಲ್ಲಿ ವಿದರ್ಭಕ್ಕೆ ವಿಶೇಷ ನೆರವಿನ ಪ್ಯಾಕೇಜನ್ನು ಘೋಷಿಸುತ್ತಾರೆ. ಇತರ ನಾಲ್ಕಾರು ಇಂಗ್ಲಿಷ್ ಪತ್ರಿಕೆಗಳ ವರದಿಗಾರರೂ ತುಸು ಎಚ್ಚೆತ್ತು ವಿದರ್ಭದ ಪರಿಸ್ಥಿತಿಯನ್ನು ನೋಡಲೆಂದು ನಾಗಪುರಕ್ಕೆ ಬಂದಿಳಿಯುತ್ತಾರೆ. ಒಟ್ಟೂ ಆರು ಮಂದಿ ಹಳ್ಳಿಯ ಕಡೆ ಹೆಜ್ಜೆ ಹಾಕುತ್ತಾರೆ. ಅದೇ ಸಂದರ್ಭದಲ್ಲಿ (2006ರಲ್ಲಿ) ಮುಂಬೈಯಲ್ಲಿ ಲಕ್ಮೆ ಫ್ಯಾಶನ್ ವೀಕ್ ಪ್ರದರ್ಶನ ನಡೆದಿರುತ್ತದೆ. ದೇಶದ ನಾನಾ ಭಾಗಗಳಿಂದ ಬಂದ ಒಟ್ಟೂ 512 ಮಾಧ್ಯಮ ಪ್ರತಿನಿಧಿಗಳು ಅಲ್ಲಿನ ಶೋ ನೋಡಲೆಂದು ವಾರವಿಡೀ ಜಮಾಯಿಸಿರುತ್ತಾರೆ. ಜತೆಗೆ ಪ್ರತಿದಿನವೂ ನೂರು ಮಂದಿ ವರದಿಗಾರರು ನಿತ್ಯದ ಪಾಸ್ ಪಡೆದು ಬರುತ್ತಾರೆ. ಕ್ಯಾಟ್ವಾಕ್ ಮಾಡುವ ರೂಪದಶರ್ಿಯರನ್ನು ನೋಡಲೆಂದು, ವೇದಿಕೆಯ ಬಳಿ ಛಾಯಾಗ್ರಾಹಕರ, ವರದಿಗಾರರ ನೂಕು ನುಗ್ಗಲು ನಡೆದಿರುತ್ತದೆ. ಹತ್ತಿಯ ಉಡುಪುಗಳ ಪ್ರಚಾರಕ್ಕೆಂದೇ ವಿಶೇಷ ಆದ್ಯತೆ ಕೊಟ್ಟ ‘ಫ್ಯಾಶನ್ ಶೋ’ ಬಗ್ಗೆ ಎಲ್ಲೆಡೆ ರಸವತ್ತಾದ ವರದಿಗಳು ಪ್ರಕಟವಾಗುತ್ತವೆ. ಆದರೆ ಅದೇ ವೇಳೆಯಲ್ಲಿ ಅಲ್ಲಿಂದ ಒಂದೂವರೆ ಗಂಟೆಗಳಷ್ಟು ದೂರದಲ್ಲಿ ಹತ್ತಿ ಬೆಳೆಯ ವೈಫಲ್ಯ ಮತ್ತು ಬೆಲೆಕುಸಿತದಿಂದ ದಿವಾಳಿಯೆದ್ದ ರೈತರು ಮಾನ ಮುಚ್ಚಿಕೊಳ್ಳಲೂ ಆಗದೆ ನೇಣಿಗೆ ಶರಣಾಗುತ್ತಿರುವುದರ ಬಗ್ಗೆ ಅಧ್ಯಯನ ವರದಿ ತಯಾರಿಸಲೆಂದು ಕೇವಲ ಆರು ಪತ್ರಕರ್ತರು ಹಳ್ಳಿಗಳಲ್ಲಿ ಓಡಾಡುತ್ತಿರುತ್ತಾರೆ.

ಒಂದು ಕಡೆ ಹತ್ತಿಯ ಬಟ್ಟೆಯ ಝಗಮಗಿಸುವ ಆಡಂಬರದ ಶೋ. ಇನ್ನೊಂದು ಕಡೆ ಹತ್ತಿಯ ಉತ್ಪಾದಕರ ಕುಟುಂಬಗಳಲ್ಲಿ ಶೋಕಾಚರಣೆ. ಈ ವೈರುಧ್ಯಗಳೇ ಪತ್ರಿಕೆಗಳ ಮುಖಪುಟಗಳಲ್ಲಿ ಬರಬೇಕಿತ್ತು. ‘ಇದಕ್ಕಿಂತ ಮುಖ್ಯವಾದ ಸುದ್ದಿ ನಮ್ಮ ಪತ್ರಿಕೆಗಳ ಮುಖಪುಟಕ್ಕೆ ಬೇರೇನಿದ್ದೀತು?’ ಎಂದು ತಣ್ಣಗೆ ಕೇಳುತ್ತಾರೆ ಸಾಯಿನಾಥ್. ಮಾಧ್ಯಮಗಳಿಗೆ ಕಾಣುವ ಜಗತ್ತು ಮತ್ತು ವಾಸ್ತವ ಜಗತ್ತಿನ ನಡುವಣ ಕಂದರವನ್ನು ಎತ್ತಿ ತೋರಿಸಲು ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಯಾವುದಿದ್ದೀತು? ಬೇರೆ ಉದಾಹರಣೆಗಳನ್ನು ಸ್ವತಃ ಸಾಯಿನಾಥ್ ಅವರೇ ಕೊಡುತ್ತಾರೆ. ಮಂಡ್ಯದ ಬಳಿಯ ರೈತವಿಧವೆ ಜಯಲಕ್ಷ್ಮಮ್ಮನಿಗೆ ಪ್ರತಿ ತಿಂಗಳಿಗೆ ನಾಲ್ಕು ಕಿಲೊ ಅಕ್ಕಿಯನ್ನು ಕರ್ನಾಟಕ ಸಾರ್ವಜನಿಕ ವಿತರಣ ವ್ಯವಸ್ಥೆಯ ಮೂಲಕ ನೀಡಲಾಗುತ್ತದೆ. ಅಂದರೆ ಪ್ರತಿ ಊಟಕ್ಕೆ 45 ಗ್ರಾಮ್ ಅಕ್ಕಿ ಅಷ್ಟೆ. ಆದರೆ ಬೆಂಗಳೂರಿನ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗೆ ಪ್ರತಿ ಊಟಕ್ಕೆ 710 ಗ್ರಾಮ್ ಅಕ್ಕಿ ನೀಡಲಾಗುತ್ತದೆ. ಅದೂ ಆತನಿಗೆ ಉಚಿತವಾಗಿ!

ರೈತರ ಸಾಲ ಮನ್ನಾ ಮಾಡಲೆಂದು ಕೇಂದ್ರ ಸರಕಾರ 2007ರಲ್ಲಿ ಒಮ್ಮೆ ಮಾತ್ರ 60 ಸಾವಿರ ಕೋಟಿ ರೂಪಾಯಿಗಳನ್ನು ತೆಗೆದಿರಿಸಿದಾಗ ಎಲ್ಲ ಮಾಧ್ಯಮಗಳಲ್ಲೂ ಭಾರೀ ಚರ್ಚೆ ನಡೆದವು. ರೈತರ ಬಗ್ಗೆ ಸರಕಾರಕ್ಕಿರುವ ಕಾಳಜಿಯನ್ನು ಹಾಡಿ ಹೊಗಳುವ ವರದಿಗಳು ಬಂದವು. ಆದರೆ 1991ರಿಂದ ಪ್ರತಿವರ್ಷವೂ ಕಾರ್ಪೊರೇಟ್ ಬಿಸಿನೆಸ್ ಕಂಪನಿಗಳಿಗೆ ಸರಾಸರಿ 40 ಸಾವಿರ ರೂಪಾಯಿಗಳ ವಿನಾಯಿತಿಯನ್ನು ಘೋಷಿಸಲಾಗುತ್ತಿದೆ. ಪ್ರತಿವರ್ಷವೂ! ಆದರೆ ಅದರ ವಿವರ-ವಿಶ್ಲೇಷಣೆಗಳು ಪ್ರಕಟವಾಗುವುದೇ ಇಲ್ಲ.

ಇತಿಹಾಸದುದ್ದಕ್ಕೂ ‘ಉನ್ನತಶ್ರೇಣಿಯ ಪತ್ರಿಕೋದ್ಯಮ’ ಎಂದರೆ ಏನು ಅನ್ನುವುದಕ್ಕೆ ಒಂದು ಮಾನದಂಡ ಇದೆ. ಆ ಮಾನದಂಡ ಏನು ಅಂದರೆ ಅತ್ಯಂತ ಮಹತ್ವದ ಸಾಮಾಜಿಕ ಬದಲಾವಣೆಗಳು ಘಟಿಸುತ್ತಿರುವಾಗ ಅದಕ್ಕೆ ಪತ್ರಕರ್ತರು ಎಷ್ಟರಮಟ್ಟಿಗೆ ಸಾಕ್ಷಿಯಾಗಿದ್ದರು? ಪ್ರಸ್ತುತರಾಗಿದ್ದರು? ಎಷ್ಟರಮಟ್ಟಿಗೆ ಸೂಕ್ತವಾಗಿ ಸ್ಪಂದಿಸಿದ್ದರು? ನಮ್ಮ ಕಾಲಘಟ್ಟದಲ್ಲಿ ಒಂದು ಯುಗಪಲ್ಲಟ ಬದಲಾವಣೆ ನಡೆಯುತ್ತಿದೆ ಎಂಬುದನ್ನು ಗ್ರಹಿಸುವ ಸಾಮರ್ಥ್ಯ ಎಷ್ಟು ಮಂದಿಗಿದೆ? ಎಂಬುದರ ಮಾನದಂಡ ಅದು. ನಮ್ಮ ಮಾಧ್ಯಮಗಳ ತಾಕತ್ತು ನೆಲಕಚ್ಚಿದೆ. ಹೊಲಗಳ ಕಂಪನೀಕರಣ, ವಿದೇಶೀ ಆಹಾರಸರಕುಗಳ ಮುಕ್ತ ಆಮದು ಇವೇ ಮುಂತಾದ ಹುನ್ನಾರಗಳಿಂದಾಗಿ ಕಂಗೆಟ್ಟ ರೈತರು ಕೋಟಿಗಟ್ಟಲೆ ಸಂಖ್ಯೆಯಲ್ಲಿ ಕೃಷಿಗೆ ವಿದಾಯ ಹೇಳಿ ನಗರಗಳಿಗೆ ಬರತೊಡಗಿದ್ದಾರೆ. ಈ ಪ್ರವಾಹವನ್ನು ನೋಡಿಯೂ ನೋಡದಂತೆ, ತೋರಿಸಿಯೂ ತೋರಿಸದಂತೆ ಮುಂದೆ ಸಾಗುವ ಮಾಧ್ಯಮಗಳನ್ನು ಏನೆಂದು ಕರೆಯೋಣ? ಅಣೆಕಟ್ಟೆಯ ಕಿರುಬಿರುಕುಗಳಲ್ಲಿ ಕಂಡೂ ಕಾಣದಂತೆ ಆರಂಭವಾಗಿರುವ ಕಿರುಪ್ರವಾಹವೇ ಒಂದು ದಿನ ಕಟ್ಟೆಯೊಡೆದು ನುಗ್ಗುವ ಪ್ರಳಯಾಂತಕ ಧಾರೆಯಾದೀತೆಂಬ ದೂರಂದಾಜು ಇರಬೇಕಲ್ಲವೆ? ಯಾರಿಗಿದೆ?

ಸಾಯಿನಾಥ್ ಈ ಪ್ರಶ್ನೆಯನ್ನು ಎತ್ತಿಕೊಂಡೇ ಹಳ್ಳಿಗಳನ್ನು ಸುತ್ತಾಡುತ್ತ ಬರೆದ ಕೆಲವು ಲೇಖನಗಳು ಇಲ್ಲಿವೆ. ‘ಹಾಲು ಮತ್ತು ರೇಷ್ಮೆಯ ನಾಡು’ ಎಂದು ಕರೆಸಿಕೊಳ್ಳುತ್ತಿದ್ದ ಹಿಂದೂಪುರದಲ್ಲಿ ಈಗ ಎರಡೂ ತಳಕಚ್ಚಿವೆ. ಕಾಫಿ ಮತ್ತು ಕಾಳುಮೆಣಸಿನ ನಾಡೆಂದು ಪ್ರಸಿದ್ಧಿ ಪಡೆದಿದ್ದ ಕೇರಳದ ವೈನಾಡು ಪ್ರದೇಶದಲ್ಲಿ ಸಾಲು ಸಾಲು ಕೃಷಿಕರು ನೇಣಿಗೆ ತಲೆ ಕೊಟ್ಟಿದ್ದಾರೆ. ವಿದರ್ಭದಲ್ಲಿ ‘ಸಕ್ರಮ’ ಬಿಟಿ ಹತ್ತಿ ಎಂಬುದು ದೊಡ್ಡ ಹಿಡುವಳಿದಾರರನ್ನು ನಾಶ ಮಾಡಿದರೆ, ‘ಅಕ್ರಮ’ ಬಿಟಿ ಹತ್ತಿ ಚಿಕ್ಕ ಹಿಡುವಳಿದಾರರನ್ನು ನಾಶ ಮಾಡಿದೆ. ಇಂಥ ದುರಂತಗಳನ್ನೆಲ್ಲ ಹಿಂದಿಕ್ಕುವಂತೆ ಇದೀಗ ನೀರಿನ ಖಾಸಗೀಕರಣದ ಪ್ರಕ್ರಿಯೆ ಆರಂಭವಾಗಿದೆ. ದೇಶಕ್ಕೆ ಅನ್ನ ಕೊಡುತ್ತಿದ್ದ ರೈತನ ಅನ್ನದ ಬಟ್ಟಲನ್ನೇ ಕಸಿಯುವ ಯತ್ನ ಒಂದು ಕಡೆ ನಡೆದಿದೆ. ಅವನಿಗೆ ನೀರೂ ಸಿಗದಂತೆ ಮಾಡುವ ಯತ್ನ ಮತ್ತೊಂದು ಕಡೆ ನಡೆದಿದೆ. ಈ ಪುಸ್ತಕದ ಪುಟಪುಟಗಳ ಅಂಕಿ ಸಂಖ್ಯೆಗಳಲ್ಲಿ ಮತ್ತು ತಣ್ಣನೆಯ ಹೇಳಿಕೆಗಳಲ್ಲಿ ಹೇರಳ ಸ್ಫೋಟಕ ಸಾಮಗ್ರಿಗಳಿವೆ. ನಿಧಾನವಾಗಿ, ಹುಷಾರಾಗಿ ಓದುತ್ತ ಸಾಗಬೇಕು

ಟಿ ಎಲ್ ಕೃಷ್ಣೇಗೌಡ ಅವರು ಅನುವಾದಿಸಿರುವ ಸಾಯಿನಾಥ್ ಬರಹಗಳ ಸಂಕಲನಕ್ಕೆ ನಾಗೇಶ್ ಹೆಗಡೆ ಬರೆದ ಮುನ್ನುಡಿ. ಚಿಂತನ ಪ್ರಕಾಶನ ಪ್ರಕಟಿಸಿರುವ ಈ ಕೃತಿಯ ಹೆಸರು- ಬಿತ್ತಿದ್ದೀರಿ.. ಅದಕ್ಕೆ ಅಳುತ್ತಿದ್ದೀರಿ…

-ಅವಧಿಯಿಂದ

Friday, June 29, 2012

ಪೂನಾದ ಡಾ.ಕೇಲ್ಕರ್ ಮ್ಯೂಸಿಯಂ

ಶೂದ್ರ ಶ್ರೀನಿವಾಸ


ಭಾ­­­ರತದ ಸಾಂಸ್ಕೃತಿಕ ಬದುಕಿನಲ್ಲಿ ಯಾವು ಯಾವುದೋ ಪ್ರದೇಶಗಳು ಸಂಭ್ರಮಿಸಿವೆ.ಇತಿಹಾಸದ ಪುಟಗಳಿಗೆ ಕೆಲವು ಶ್ರೀಮಂತವಾದ ನೆನಪುಗಳನ್ನು ಬಿಟ್ಟು ಹೋಗಿವೆ.ಆ ನೆನಪುಗಳನ್ನು ನಾವು ಆ ಕಡೆ ಈ ಕಡೆ ಎಳೆದಾಡಿ ಚರ್ಚಿಸಿದರೂ; ಒಂದು ರೀತಿಯ ಅಪೂರ್ಣತೆ ಕಾಡುತ್ತಲೇ ಇರುತ್ತದೆ.ಈ ದೃಷ್ಟಿಯಿಂದ ‘ಡೆಕ್ಕನ್ ಕ್ಯೂನ್’ ಎಂದು ಕರೆಸಿಕೊಂಡಿರುವ ಇಂದಿನ ಮಹಾರಾಷ್ಟ್ರದ ಪೂನಾ ಮನಸ್ಸಿಗೆ ಸದಾ ಮುದ ನೀಡುವ ನಗರ.ಸ್ವಾತಂತ್ರ ಪೂರ್ವದ ನೆನಪುಗಳಿಗಿಂತ ಇಪ್ಪತ್ತನೆಯ ಶತಮಾನದ ಕೆಲವು ಅಲಂಕಾರಪೂರ್ಣ ವರ್ಷಗಳು ನನ್ನ ಮನಸ್ಸಿನ ತುಂಬ ಸ್ಥಾಯಿಯಾಗಿ ನಿಂತಿವೆ. ಅದರಲ್ಲಿ ‘ಭಾರತ ಬಿಟ್ಟು ತೊಲಗಿ’ ಎಂಬ ಚಾರಿತ್ರಿಕ ಆಂದೋಲನದ ಸಮಯದಲ್ಲಿ ಗಾಂಧೀಜಿಯವರು ಇಲ್ಲಿಯ ಆಗಾ ಖಾನ್ ಅರಮನೆಯಲ್ಲಿ ತಮ್ಮ ಪತ್ನಿ ಕಸ್ತೂರಿಬಾ ಮತ್ತು ಮಹಾದೇವ ದೇಸಾಯಿ ಮುಂತಾದವರೊಡನೆ ಇದ್ದುದು, ಹಾಗೆಯೇ ನನಗೆ ‘ವೌನ’ ಎಂದರೆ ಏನು ಎಂದು ತಮ್ಮ ‘ಸೈಲೆನ್ಸ್’ ಎಂಬ ಉಪನ್ಯಾಸದ ಕ್ಯಾಸೆಟ್‌ನಿಂದ ಆಧ್ಯಾತ್ಮಿಕ ಥ್ರಿಲ್‌ನಿಂದ ನಿರಂತರ ಆನಂದಿಸುವ ‘ಓಶೋ’ ಎಂಬ ಮಹಾನ್‌ಗುರು, ಮತ್ತೊಂದು ದಿಕ್ಕಿನಿಂದ ಬದುಕಿನಲ್ಲಿ ಮೌನದ ಕಡೆ ಚಲಿಸುತ್ತಲೇ ಇರು ಎನ್ನುವ ರೀತಿಯಲ್ಲಿ ಸಂಗೀತ ಸಾಮ್ರಾಜ್ಯವನ್ನು ನಿರ್ಮಿಸಿದ ಭೀಮಸೇನ ಜೋಶಿಯವರು, ಇದರ ಜೊತೆಗೆ ‘ಯೋಗಕ್ಕೆ ಎಲ್ಲಿಲ್ಲದ ಆಯಾಮವನ್ನು ತಂದುಕೊಟ್ಟ ಬಿ.ಕೆ.ಎಸ್. ಅಯ್ಯಂಗಾರ್’ ಅವರನ್ನು ಬೆಚ್ಚಗೆ ತನ್ನ ತೆಕ್ಕೆಯಲ್ಲಿ ಬಚ್ಚಿಟ್ಟು ಕೊಂಡಿದ್ದ ನಗರ.

ಇವರೆಲ್ಲರೂ ಪವಿತ್ರಗೊಳಿಸಿದ ನೆಲವನ್ನು ಕಣ್ಣಿಗೊತ್ತಿಕೊಂಡು ಆನಂದಿಸ ಬೇಕೆಂದು ಮೇ 2011ರಲ್ಲಿ ವಿವಿಧ ನೆನಪುಗಳ ಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದೆ.ಒಂದು ಕ್ಷಣ ಎರಡು ದಶಕಗಳ ಹಿಂದೆ ನೋಡಿದ ಪುಣೆ ಅಥವಾ ಪೂನಾ ಇದೇನಾ ಅನ್ನಿಸಿತು.ಭಾರತದ ಬಹುಪಾಲು ನಗರಗಳೂ ಲಂಗುಲಗಾಮಿಲ್ಲದೆ ಬೆಳೆದಂತೆ ಇದೂ ಬೆಳೆದಿದೆ. ಒಂದು ದೃಷ್ಟಿಯಿಂದ ‘ಬೆಳೆದಿದೆ’ ಎನ್ನುವ ಗುಣವಾಚಕಕ್ಕೆ ಅಪಚಾರವೆಸಗಿ ದಂತೆ.ಈ ಬಾರಿ ನನ್ನ ಕುಟುಂಬದ ಒಂದಷ್ಟು ಸದಸ್ಯರೊಡನೆ ಹೊರಟಿದ್ದೆ. ಅದೂ ಒಂದು ದೃಷ್ಟಿಯಿಂದ ಆಕಸ್ಮಿಕವೆಂಬಂತೆ. ಕಳೆದ ವರ್ಷ ಒಂದಷ್ಟು ದಿವಸ ಯುರೋಪು ಪ್ರವಾಸ ಮಾಡಲು ಸಿದ್ಧತೆ ನಡೆಸಿದ್ದೆ. ಆಗ ಸ್ವಿಸ್‌ನ ವೀಸಾ ಬರಲು ತಡವಾದಾಗ; ಮುಂಬೈಯ ಸ್ವಿಸ್‌ನ ರಾಯಬಾರಿ ಕಚೇರಿಯ ಬಾಗಿಲನ್ನು ತಟ್ಟಲು ಕರೆದಿದ್ದರು.

ಬೆಂಗಳೂರಿನಲ್ಲಿ ನನ್ನ ಕೆಲವು ಗೆಳೆಯರು ‘‘ನೀನು ಪಾಕಿಸ್ತಾನ ಮತ್ತು ಚೀನಾ ದೇಶವನ್ನು ಸ್ನೇಹಕೂಟದ ಮೂಲಕ ನೋಡಿರುವುದರಿಂದ ಅವರಿಗೆ ಗುಮಾನಿ ಬಂದಿದೆ.ನೀನೂ ಒಬ್ಬ ಟೆರರಿಸ್ಟ್ ಮರಿ ಇರಬಹುದೆಂದು’’ ತಮಾಷೆಯಾಡಿದ್ದರು. ಈ ಎಲ್ಲ ತಮಾಷೆ ಮತ್ತು ಗುಮಾನಿಗಳ ನಡುವೆ ವೀಸಾ ಅಧಿಕಾರಿಗಳ ಮುಂದೆ ಕೂತು; ಅವರ ಸರಳ ಪ್ರಶ್ನೆಗಳಿಗೆ ಉತ್ತರಿಸಿ ಹೊರಗೆ ಬಂದಿದ್ದೆ.ಮತ್ತು ಮುಂಬೈಯನ್ನು ನೋಡಿಕೊಂಡು, ಸಚಿನ್ ಕಟ್ಟಿಸುತ್ತಿದ್ದ ಹೊಸ ಮನೆಯ ಮುಂದೆ ನಿಂತು ಭಾವಚಿತ್ರ ತೆಗೆಸಿಕೊಂಡು ಪೂನಾಗೆ ಬಂದಿದ್ದೆವು. ಪೂನಾದಲ್ಲಿ ಸುತ್ತಾಡುವಾಗ ಹಳೆಯ ಹೆಜ್ಜೆ ಗುರುತುಗಳನ್ನೆಲ್ಲ ಎದುರುಗೊಂಡು; ನಾನು ನೋಡದೆ ಇದ್ದ ‘ರಾಜಾ ದಿನಕರ್ ಕೇಲ್ಕರ್ ಮ್ಯೂಸಿಯಂ’ನ್ನು ನೋಡಲು ಹೋದೆವು.

ಇದೊಂದು ಅಪರೂಪದ ಮ್ಯೂಸಿಯಂ. ಸುಮಾರು ಮೂರು ನಾಲ್ಕು ಗಂಟೆ ಇಲ್ಲಿ ಸುತ್ತಾಡು ವಾಗ ಎಷ್ಟೊಂದು ‘ಹಾಯ್’ ಅನ್ನಿಸಿತು. ನನ್ನ ಬಾಲ್ಯ ಕಾಲವನ್ನು ಕೆದಕಿ ನೋಡಿಕೊಳ್ಳುವಂತಾಯಿತು. ಯಾಕೆಂದರೆ ಆ ರೀತಿಯಲ್ಲಿ ವೈಭವವನ್ನು ತುಂಬಿ ಕೊಂಡ ಅದ್ಭುತ ವಸ್ತುಗಳೆಲ್ಲ ಅಲ್ಲಿ ಇದ್ದವು. ಇಂಥ ಅಮೂಲ್ಯ ವಸ್ತುಗಳಿಗೆ ಡಾ. ದಿನಕರ್ ಗಂಗಾಧರ್ ಕೇಲ್ಕರ್ ಅವರು ಒಂಟಿಯಾಗಿ ರಾಷ್ಟ್ರದ ಉದ್ದಗ ಲಕ್ಕೂ ಸುತ್ತಾಡಿದವರು. ಅರವತ್ತು ವರ್ಷಗಳಿಗೂ ಮೇಲ್ಪಟ್ಟು ಬಿಸಿಲು, ಮಳೆ, ಗಾಳಿಯೆನ್ನದೆ ಎಲ್ಲೆ ಲ್ಲಿಗೋ ಭೇಟಿ ಕೊಟ್ಟಿದ್ದಾರೆ. ಯಾರಾದರೂ ಇಂಥ ಅಮೂಲ್ಯ ವಸ್ತು ಇಂಥ ಕಡೆ ಇದೆ ಎಂದರೆ ಆ ಕಡೆಗೆ ತಪಸ್ಸಿನ ರೀತಿಯಲ್ಲಿ ಓಡಿ ಹೋಗಿ; ಅದನ್ನು ಪಡೆದ ನಂತರ ನೆಮ್ಮದಿಯನ್ನು ಕಂಡವರು.

ತಮ್ಮ ತೊಂಬತ್ತನೆಯ ವಯಸ್ಸಿನಲ್ಲಿಯೂ ಒಬ್ಬ ಯುವಕನ ರೀತಿಯಲ್ಲಿ ತಮ್ಮ ಮಗನ ಹೆಸರಿನಲ್ಲಿ ‘ಮ್ಯೂಸಿಯಂ’ ಪರಿಕಲ್ಪನೆಯನ್ನು ಮನಸ್ಸಿನಲ್ಲಿ ತುಂಬಿಕೊಂಡು ಆಕಾರ ಕೊಟ್ಟವರು.ಇದನ್ನೆಲ್ಲ ಯೋಚಿಸಿದಾಗ ಮನುಷ್ಯರ ಬದುಕಿನಲ್ಲಿ ಎಂತೆಂಥ ಹುಚ್ಚಾಟಗಳಿರುತ್ತವೆ ಅನ್ನಿಸುತ್ತದೆ. ಒಂದು ದೃಷ್ಟಿಯಿಂದ ಈ ಮ್ಯೂಸಿಯಂನ್ನು ನೋಡುವಾಗ; ಒಂದು ಕ್ಷಣ ನಮ್ಮ ವಿಜಯನಾಥ ಶೆಣೈ ಅವರ ‘ಹಸ್ತಶಿಲ್ಪ’ ನೆನಪಿಗೆ ಬಂದು ಹೋಯಿತು.ಡಾ. ದಿನಕರ್ ಗಂಗಾಧರ್ ಕೇಲ್ಕರ್ ಅವರು ತಮ್ಮ ಮಗ ರಾಜಾ ದಿನಕರ್ ಅವರು ಅಪ್ರಾಪ್ತ ವಯಸ್ಸಿನಲ್ಲಿ ನಿದನರಾದಾಗ; ಆ ನೋವನ್ನು ಮರೆಯಲು ಪ್ರಾರಂಭಿಸಿರುವಂಥದ್ದು. ಡಾ. ದಿನಕರ್ ಕೇಲ್ಕರ್ ಮತ್ತು ಅವರ ಶ್ರೀಮತಿಯವ ರಾದ ಕಮಲಾಬಾಯಿಯವರು ಈ ಮ್ಯೂಸಿ ಯಂಗೆ ಮಗನ ಹೆಸರನ್ನಿಟ್ಟರೂ ಎಲ್ಲಿಯೂ ಮಗನ ಭಾವಚಿತ್ರ ಕಾಣಿಸುವುದಿಲ್ಲ.

ಮೂರು ಅಂತಸ್ತಿನ ಈ ಕಟ್ಟಡವನ್ನು ವಿವಿಧ ಆಕಾರದಲ್ಲಿ ರೂಪಿಸಿ ದ್ದಾರೆ. ಮನುಷ್ಯ ಕೇವಲ ಹೊಟ್ಟೆ ಬಟ್ಟೆಯ ಬಗ್ಗೆ ಮಾತ್ರ ಯೋಚಿಸುತ್ತ ಬಂದಿಲ್ಲ.ಅದನ್ನು ಮೀರಿ ಇತಿಹಾಸದಲ್ಲಿ ಒಟ್ಟು ಪರಿಸರಕ್ಕೆ ಹೊಂದಿಕೊಳ್ಳಲು ನಡೆಸಿದ ಹುಡುಕಾಟ ಎಂಥ ರೋಚಕತೆಯಿಂದ ಕೂಡಿದೆ.ಒಂದನ್ನು ಸೃಷ್ಟಿಸಿದ ಮೇಲೆ ಅದಕ್ಕೆ ಮಿಗಿಲಾಗಿ ಇನ್ನು ಏನೇನೋ ಇದೆ ಎಂಬುದು ಮಹತ್ವಪೂರ್ಣವಾದದ್ದು. ಈ ಹುಡುಕಾಟಕ್ಕೆ ಅನ್ವಯಿಸಿ ಎಂತೆಂಥದೋ ಅಧ್ಯಯನಗಳು ನಡೆದಿದ್ದರೂ; ಇದು ಇನ್ನೂ ಪರಿಪೂರ್ಣ ಅಲ್ಲ ಎಂದು ವಿವಿಧ ರೂಪಗಳಲ್ಲಿ ಶೋಧಿಸುತ್ತಲೇ ಇದ್ದಾರೆ. ಈ ಶೋಧನೆಯ ಜಾಡು ಹಿಡಿದು ಡಾ. ಕೇಲ್ಕರ್ ಅವರು ಸುತ್ತಾಡಿ ಸಂಗ್ರಹಿಸಿರುವು ದಿದೆಯಲ್ಲ ನಿಜವಾಗಿಯೂ ಅದ್ಭುತವಾದದ್ದು.

ಇಲ್ಲಿ ಕೇವಲ ಶ್ರಮ ಮಾತ್ರ ವ್ಯಯವಾಗಿರುವುದಿಲ್ಲ. ಅಪಾರ ಪ್ರಮಾಣದ ಹಣವೂ ವೆಚ್ಚವಾಗಿ ರುತ್ತದೆ. ಹಾಗೆಯೇ ಅವುಗಳನ್ನೆಲ್ಲ ಸಾವಿರಾರು ಕಿ.ಮೀಟರ್ ದೂರದಿಂದ ಸಾಗಿಸಿರುವುದಿದೆಯಲ್ಲ; ಅದು ನಿಜವಾಗಿಯೂ ತಾದಾತ್ಮತೆ ಯಿಂದ ಕೂಡಿರುವಂಥದ್ದು. ಒಂದು ಸಂಸ್ಕೃತಿಯಲ್ಲಿ ಇಷ್ಟೊಂದು ಪ್ರಮಾಣದ ವೈವಿಧ್ಯಮಯವಾದ ಘಟಕಗಳು ತುಂಬಿಕೊಂಡಿರುತ್ತವೆ ಎಂಬ ಕಾರಣಕ್ಕಾಗಿಯೇ ನಮ್ಮ ಆಲೋಚನಾ ಕ್ರಮದ ಹಿಗ್ಗುವಿಕೆಗೆ ಅರ್ಥಪೂರ್ಣತೆ ಇದೆ. ಯಾಕೆಂದರೆ ಈ ಸಮಾಜದಲ್ಲಿ ಕೆಲವು ಮಂದಿ ತಮ್ಮ ಸಂಪತ್ತನ್ನು ಪ್ರದರ್ಶಿಸಲು ನಡೆಸುವ ಕ್ಷುಲ್ಲಕ ಕಾರ್ಯಗಳ ಮಧ್ಯೆ ಡಾ. ಕೇಲ್ಕರ್ ಮತ್ತು ಅವರ ಶ್ರೀಮತಿಯವರು ಎಂಥ ಮಹಾನು ಭಾವರ ರೀತಿಯಲ್ಲಿ ಕಾಣುತ್ತಿರುತ್ತಾರೆ.

ಕೆಲವರು ಈ ಸಮಾಜವನ್ನು ದುಷ್ಟ ಮಾರ್ಗಳಿಂದ ಭಸ್ಮ ಮಾಡುತ್ತಿದ್ದಾರೆ; ಮತ್ತೆ ಕೆಲವರು ಅದನ್ನು ಕಾಪಾಡುವಲ್ಲಿ ಸತ್ಯದ ಹುಡುಕಾಟದಲ್ಲಿ ತೊಡಗಿರುತ್ತಾರೆ ಎಂಬು ದೇ ಹೆಚ್ಚುಗಾರಿಕೆಯ ವಿಷಯವಾಗಿರುತ್ತದೆ. ಸೃಷ್ಟಿಯಲ್ಲಿ ಏನೂ ನಾಶವಾಗಬಾರದು ಎಂದು ಕೆಲವು ಮಹನೀಯರು ಕಾಪಾಡು ವುದಿದೆಯಲ್ಲ; ನಿಜವಾಗಿಯೂ ಅವರೇ ಸತ್ಯದ ವಾರಸುದಾರರು ಅನ್ನಿಸುತ್ತದೆ. ಇದನ್ನೆಲ್ಲ ನೋಡಿದಾಗ, ಯಾರೂ ಗಮನಿಸಲಿ ಅಥವಾ ಗಮನಿಸದಿರಲಿ ತಮ್ಮ ಪಾಡಿಗೆ ತಾವು ಪರರ ಇಲ್ಲವೇ ಈ ಸಮಾಜದ ಬದುಕಿಗೆ ಸುಖ ವನ್ನು ಹಂಚುವುದಿದೆಯಲ್ಲ; ಎಷ್ಟು ಆನಂದ ದಾಯಕವಾದದ್ದು.

ಇದನ್ನು ಬರೆಯುವ ಕಾಲಕ್ಕೆ ಗಾಂಧೀಜಿಯವರ ತತ್ವ ಚಿಂತನೆಗಳಿಂದ ಪ್ರಣೀತಗೊಂಡ ರಜಿನಿ ಭಕ್ಷಿಯವರು ಒಂದು ಮಾತು ಹೇಳುವರು: ‘‘ಗಾಂಧೀಜಿಯವರ ಆಲೋ ಚನಾಕ್ರಮಗಳಿಂದ ಪ್ರಭಾವಗೊಂಡ ನೂರಾರು ಮಂದಿ ಉನ್ನತ ದರ್ಜೆಯಲ್ಲಿದ್ದ ಅಧಿಕಾರಿಗಳು ತಮ್ಮ ಕೆಲಸಗಳನ್ನು ಬಿಟ್ಟು ಜನರ ಮಧ್ಯೆ ತಪಸ್ಸಿನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೇ ನಿಜವಾಗಿಯೂ ಈ ಸಮಾಜವನ್ನು ಕಾಪಾಡುತ್ತಿರುವಂಥ ವರು’’ ಎಂದು. ಆಗ ಸುಂದರಲಾಲ್ ಬುಹುಗುಣ, ಬಾಬಾ ಆಮ್ಟೆ, ಮೇಧಾ ಪಾಟ್ಕರ್, ರಾಜಸ್ಥಾನದ ರಾಜೇಂದ್ರ ಸಿಂಗ್ ಮುಂತಾದವರ ಜೊತೆಗೆ ಡಾ. ಕೇಲ್ಕರ್ ಅವರನ್ನು ಸೇರಿಸಬೇಕು ಅನ್ನಿಸುತ್ತದೆ.ಯಾವುದೇ ಸಾಧನೆಯ ಹಿಂದೆ ತನ್ಮಯತೆ ಎಂಬುದು ಆರಾಧನೆಯ ಮುಂದುವರಿದ ಭಾಗವೇ ಆಗಿರುತ್ತದೆ.

ತಾಯಿ ಮಗುವನ್ನು ಅಲಂಕರಿಸುವಾಗ ಸಂಗೀತಗಾರ ತಂದಿಗಳ ನಡುವೆ ಹಾಗೂ ಗಂಟಲಿನ ನಡುವೆ ನಾದ ವನ್ನು ಹುಡುಕುವಾಗ, ಕಲಾವಿದರು ಆಕಾರಗಳ ವೈಭವವನ್ನು ಹುಡುಕುವಾಗ; ಹೀಗೆಯೇ ಮುಂದುವರಿದ ಭಾಗವಾಗಿ ಸೃಷ್ಟಿಯ ಸಂಗತಿಗಳಿಗೆ ಅಂಟಿಕೊಂಡ ಅನನ್ಯ ರೂಪಕ ಗಳು ಎಲೆಮರೆಯ ಕಾಯಿಗಳಂತೆ ಬೆಳಕು ನೀಡುತ್ತಿರುತ್ತವೆ ಎಂಬುದೇ ಅತ್ಯಂತ ಸೋಜಿಗದ ಸಂಗತಿ. ಇವೆಲ್ಲವೂ ಪರೋಕ್ಷವಾಗಿ ಜ್ಞಾನದ ಹುಡುಕಾಟವೇ ಆಗಿರುತ್ತದೆ. ಇಷ್ಟೆಲ್ಲ ಸುತ್ತಿ ಬಳಸಿ ಹೇಳಿದ ಮೇಲೆ; ಮ್ಯೂಸಿಯಂನಲ್ಲಿ ನಿಜವಾದ ನಿಧಿ ಏನಿದೆ ಎಂಬುದನ್ನು ವಿವರಿಸಲೇ ಬೇಕಾಗುತ್ತದೆ.

ಯಾಕೆಂದರೆ ಈ ಭೂಮಿಯ ಅಂತರಂಗ ದಲ್ಲಿ ಮನುಷ್ಯರು ದುರಾಸೆಯಿಂದ ಏನೇನೋ ದೋಚುತ್ತಿದ್ದಾರೆ. ಇನ್ನು ಕೆಲವರು ಸಂತರ ರೀತಿಯಲ್ಲಿ ಇಂತಿಂಥ ಅಚ್ಚರಿಯ ಸಂಗತಿಗಳು ಅವಿತು ಕೂತಿದೆ ಎಂದು ಜಗತ್ತಿಗೆ ಸಾರಿ ಹೇಳುವ ನಮ್ರತೆಯೂ ನಡೆಯುತ್ತಿರುತ್ತದೆ. ಹಾಗೆ ಡಾ. ಕೇಲ್ಕರ್ ಅವರ ನಾಲ್ಕು ಅಂತಸ್ತಿನ ಮ್ಯೂಸಿಯಂ ನಲ್ಲಿ ಎಲ್ಲವೂ ಬಂದು ಕೂತಿವೆ. ಕಳೆದು ಹೋಗಿ ರುವಂಥವು ಸಾವಿರಾರು ಇರಬಹುದು.ಆದರೆ ಅವೆಲ್ಲವುಗಳ ಪ್ರತಿನಿಧಿಗಳಂತೆ ಅಪೂರ್ವವಾಗಿ ‘ನಾವು ನೂರಾರು ವರ್ಷಗಳಿಂದ ಈ ಸಂಸ್ಕೃತಿಯ ರೂಪಕಗಳಾಗಿ ಉಳಿದು ಬಂದಿರುವಂಥವು’ ಎಂದು ಹೇಳುತ್ತಿರುವಂಥವು. ಒಂದು ಅಂತಸ್ತಿನ ವಿವಿಧ ವಿಶಾಲವಾದ ಕೊಠಡಿಗಳಲ್ಲಿ ವೈವಿಧ್ಯಮಯವಾದ ಪೂಜಾ ಸಾಮಾಗ್ರಿಗಳೇ ತುಂಬಿಕೊಂಡಿವೆ.

ಅವ್ಯಾವುವೂ ಗುಡಿಗುಡಿ ಪೂಜಾ ಸಾಮಾಗ್ರಿಗಳಲ್ಲ. ಕಲಾತ್ಮಕತೆಯನ್ನು ಮೈದುಂಬಿಕೊಂಡಿರುವಂಥವು. ಚಿಕ್ಕದರಿಂದ ದೊಡ್ಡದರ ತನಕ ನಮ್ಮನ್ನು ಒಳಗೆ ಬಿಟ್ಟುಕೊಳ್ಳುವಂಥವು. ನಮ್ಮ ಒಡವೆಗಳಲ್ಲಿ ಯಾವ ಯಾವ ರೀತಿಯ ಕುಸುರಿ ಕೆಲಸಗಳಿವೆಯೋ ಅವುಗಳನ್ನೆಲ್ಲ ಪ್ರತಿನಿಧಿಸುವಂತೆ ಧುತ್ತನೆ ನಮಗೆ ಎದುರಾಗುತ್ತವೆ. ಎಂತೆಂಥ ಮನೆಗಳನ್ನು ಅಲಂಕರಿಸಿದ್ದುವೋ, ಎಂಥ ಸುಂದರವಾದ ಕೈಗಳಿಂದ ಪೂಜೆ ಮಾಡಿಕೊಂಡಿದ್ದವೋ, ಹಾಗೆಯೇ ಪೂಜೆ ಮಾಡುವ ಆ ಕೈಗಳು ಕಂಡುಂಡ ಸುಖ-ಸಂತೋಷ ಮತ್ತು ವಿಷಾದಕ್ಕೆ ಸಾಕ್ಷಿಭೂತವೆಂಬಂತೆ ಮೌನವಾಗಿ ಹೆಸರು ಪಡೆದು ಅಲ್ಲಲ್ಲಿ ಅಲಂಕಾರವಾಗಿ ಕೂತಿವೆ. ಇವುಗಳನ್ನೆಲ್ಲ ನೋಡುವಾಗ ಅಚ್ಚರಿಯಾಗದಿರದು.

ಯಾಕೆಂದರೆ ನೂರಾರು ದೇವರಿದ್ದಂತೆ;ಆ ದೇವರನ್ನು ದೇವತೆಗಳನ್ನು ಸಂತೃಪ್ತಿ ಪಡಿಸಲು ಸೃಷ್ಟಿಗೊಂಡ ಪೂಜಾ ಸಾಮಾಗ್ರಿಗಳು.ಕೊನೆಗೂ ಮನುಷ್ಯರು ತಮ್ಮ ಆನಂದಕ್ಕೆ ಏನೇನೋ ಕಂಡುಕೊಂಡರೂ; ಆ ಆನಂದದ ಉತ್ತುಂಗತೆಯನ್ನು ತಲುಪುದಕ್ಕೆ ನಡೆಸುವ ಕ್ರಿಯೆ ಇದೆಯಲ್ಲ; ಅದೇ ನಿಜವಾಗಿಯೂ ಪ್ರಸಾದ ಸ್ವರೂಪವಾದಂಥವು. ಹೀಗೆ ಇಂಥ ಸಾಮಗ್ರಿಗಳಿಂದ ಪೂಜಿಸುವಾಗ ಮನುಷ್ಯನ ಹುಚ್ಚು ಮನಸ್ಸಿನ ಕುಣಿತಗಳು ಯಾವ ಯಾವ ಘಟ್ಟವನ್ನು ತಲುಪಿರಬಹುದು ಎಂಬ ಭಾವನೆ ಬರದಿರದು. ಇದರ ಫಲಿತಾಂಶವಾಗಿ; ನಾವು ದೇವರನ್ನು ನಂಬದಿದ್ದರೂ; ‘‘ಅಯ್ಯ ದೇವರೇ ನೀನು ಪೂಜಿಸಿಕೊಳ್ಳುವ ಎಷ್ಟೊಂದು ಮುಖಗಳು’’ ಎಂಬ ಉದ್ಗಾರದ ನುಡಿ ಬಂದೇ ಬರುತ್ತದೆ.

ದೀಪಸ್ತಂಭಗಳಂತೂ ದೊಡ್ಡ ದೊಡ್ಡ ಪ್ರತಿಮೆಗಳಂತೆ ಅಲಂಕೃತಗೊಂಡಿರುವಂಥವು. ಅವುಗಳನ್ನು ನೋಡುವುದೇ ಒಂದು ವೈಭವ. ಇದಕ್ಕೆ ಹೊಂದಿಕೊಂಡ ಕೊಠಡಿಗಳಲ್ಲಿ ತಾಂಬೂಲದ ವಿವಿಧ ಸಾಮಗ್ರಿಗಳು.ಮನುಷ್ಯರು ಪೂಜೆ ಮಾಡಿದ ಮೇಲೆ, ಪ್ರಾರ್ಥನೆ ಮಾಡಿದ ಮೇಲೆ,ನಮಾಜ್ ಮಾಡಿದ ಮೇಲೆ ಸಂತೋಷವಾಗಿ ಊಟ ಮಾಡುವನು.ಆ ಊಟ ಅವನಿಗೆ ಅಥವಾ ಅವರಿಗೆ ಪರಿಪೂರ್ಣ ಅನ್ನಿಸುವುದು;ತಾಂಬೂಲದ ಮೂಲಕ.ಈ ತಾಂಬೂಲದ ಮುಂದುವರಿದ ಭಾಗವಾಗಿ ಏನೇನೋ ಸೇರಿಕೊಂಡಿರುತ್ತದೆ.ಸಾಮೂಹಿಕ ತಾಂಬೂಲವಿರಬಹುದು, ವೈಯುಕ್ತಿಕ ನೆಲೆಯಲ್ಲಿ ಪ್ರೀತಿ-ಪ್ರೇಮ ಮತ್ತು ಮನುಷ್ಯ ಸಂಬಂಧಗಳು ವಿಸ್ತರಿಸುವಂಥಹವು ಇರಬಹುದು.

ಅಂಥದ್ದನ್ನೆಲ್ಲ ನಾವು ನೂರಾರು ವರ್ಷಗಳಿಂದ ನೋಡುತ್ತ ಉಳಿದು ಬಂದಿದ್ದೇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಅಲಂಕೃತಗೊಂಡು ಕೂತ ತಾಂಬೂಲದ ಕಲಾತ್ಮಕ ವಸ್ತುಗಳು. ಅಡಿಕೆಯನ್ನು ಕತ್ತರಿಸುವುದಕ್ಕೆ, ಕತ್ತರಿಸಿದ ಮೇಲೆ ಪುಡಿ ಮಾಡುವುದಕ್ಕೆ,ಪುಡಿ ಮಾಡಿದ ಮೇಲೆ ಎಲೆಗಳಲ್ಲಿ ಮಡಚಿ ಇಡುವುದಕ್ಕೂ ಸಾಮಾಗ್ರಿಗಳು.ಯಾವುದೂ ಸುಮ್ಮನೆ ಸೃಷ್ಟಿಯಾಗಿರುವುದಿಲ್ಲ.ಆ ಸೃಷ್ಟಿಗೆ ಒಂದು ಸೊಬಗು ಕಂಡುಕೊಂಡವರು. ಇದಕ್ಕೆ ಸಿದ್ಧರಾದ ಕಲಾವಿದರು, ಕಸುಬುದಾರರು. ಎಲ್ಲವೂ ಒಂದಕ್ಕೊಂದು ಅಂಟಿಕೊಂಡೇ ಬೆಳೆದಿರುತ್ತವೆ ಎಂಬುದೇ ಇಲ್ಲಿ ಅಪ್ರತಿಮವಾದದ್ದು.

ಏನೇ ಆಗಲಿ ಆ ತಾಂಬೂಲದ ಕೈಗಳನ್ನು ಆ ಕೈಗಳ ಬೆರಳಿನುಂಗುರಗಳನ್ನು ಹಾಗೆಯೇ ಇದರ ಮುಂದುವರಿದ ಭಾಗವಾಗಿ ಕೆಂಪಾದ ತುಟಿಗಳನ್ನು ಸಂಭ್ರಮಿಸುವ ಕ್ರಮವನ್ನು ತುಂಟತನದಿಂದ ಯೋಚಿಸುವುದಕ್ಕೂ ಎಷ್ಟು ಸಾಮಗ್ರಿ ದೊರಕುವುದು. ನಮ್ಮ ಒಟ್ಟು ಜನ ಸಮುದಾಯವು ನಾನಾ ರೀತಿಯ ಕಷ್ಟ ಕಾರ್ಪಣ್ಯಗಳ ನಡುವೆ ಸುಖದ ಕ್ಷಣಗಳಿಗಾಗಿ ಹುಡುಕಾಡುವುದಿದೆಯಲ್ಲ ಅದೇ ನಿಜವಾಗಿಯೂ ಜೀವಂತವಾಗಿರುವಂಥದ್ದು.ಆದ್ದರಿಂದಲೇ ಆಯಾ ಹಂತಕ್ಕೆ ತಕ್ಕಂತೆ ಪೂರಕ ಸಾಮಾಗ್ರಿಗಳು ಸೃಷ್ಟಿಯಾಗುವಂಥವು.ಮತ್ತೊಂದು ವಿಶಾಲವಾದ ಅಂತಸ್ತಿನಲ್ಲಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಬಳಕೆಯಾಗುತ್ತ ಬಂದ ಸಾಮಾಗ್ರಿಗಳ ನೋಟ.

ಒಂದೊಂದು ಪ್ರದೇಶದ, ಜನಾಂಗದ ಪ್ರತೀಕಗಳಾಗಿ ಇರುವಂಥವು. ದವಸ ಧಾನ್ಯಗಳನ್ನು ವಿವಿಧ ರೀತಿಯಲ್ಲಿ ಸಂಗ್ರಹಿಸಿಡಲು ಬಳಸಬಹುದಾದ ವಿವಿಧ ಸ್ವರೂಪದ ಗುಡಾಣಗಳು. ರೈತರು ಕೃಷಿಗೆ ಉಪಯೋಗಿಸುತ್ತಿದ್ದ ಸಲಕರಣೆಗಳು. ಇವುಗಳಲ್ಲಿಯೂ ಕಾಲಕಾಲಕ್ಕೆ ಬೆಳೆದು ಬಂದಿರುವಂಥವನ್ನು ನೋಡಬಹುದು. ಹಾಗೆಯೇ ನೊಗಗಳ ವೈವಿಧ್ಯಮಯತೆ. ಕಲಾತ್ಮಕ ಕಂಚು ಮತ್ತು ತಾಮ್ರದ ಪಾತ್ರೆಗಳು.ಇವುಗಳಲ್ಲಿ ಕಬ್ಬಿಣವೂ ಕೂಡ. ಯಾವುವೂ ಸುಮ್ಮನೆ ಸೃಷ್ಟಿಯಾಗಿಲ್ಲ.ಅವುಗಳು ರೂಪ ಮತ್ತು ಆಕಾರವನ್ನು ತುಂಬಿಕೊಂಡೇ ಹುಟ್ಟಿಕೊಂಡಿವೆ ಎಂಬುದು ನಮ್ಮ ಸಂಸ್ಕೃತಿಯ ಹೆಚ್ಚುಗಾರಿಕೆಯೆನ್ನಬಹುದು.ನೆಲಮಹಡಿಯ ಮೂಲೆಯ ಕೊಠಡಿಗಳಂತೂ ವೈಭವದಿಂದ ಕೂಡಿರುವಂಥವು.

ನೂರಾರು ರೀತಿಯ ಸಂಗೀತದ ಕಲಾತ್ಮಕ ಸಲಕರಣೆಗಳು. ಶತಮಾನಗಳಿಂದ ಶೃತಿ ಮತ್ತು ಲಯಗಳಿಗೆ ತಕ್ಕಂತೆ ಸುಧಾರಣೆಯಾಗುತ್ತ ಬಂದಂಥವು. ಎಂತೆಂಥವರೋ ಮಹಾನ್ ಸಂಗೀತ ಕಲಾವಿದರ ಬೆರಳುಗಳ ಚಳಕಕ್ಕೆ ಮತ್ತು ನುಡಿಯ ನಾದಮಯತೆಗೆ ಒಗ್ಗಿಕೊಂಡು ಮುಂದುವರಿಯುತ್ತ ಸಾಗಿರುವಂಥವು.ಅವುಗಳನ್ನು ನೋಡುವುದಕ್ಕೆ, ಚಿಂತಿಸುವುದಕ್ಕೆ ವ್ಯಾಖ್ಯಾನಿಸುವುದಕ್ಕೆ ಪೂರಕವಾಗಿ ಒಂದೆಡೆ ಇರುವಂಥವು. ಎಲ್ಲ ಸಂಗೀತದ ಸಲಕರಣೆಗಳು ಸೇರಿ ವಾದ್ಯಗಳಗೋಷ್ಠಿಗಳನ್ನು ನಡೆಸುತ್ತಿವೆ ಎಂಬ ಭಾವನೆ ಬರುವಂತೆ ಶೇಖರಗೊಂಡಿವೆ.

ಇವುಗಳನ್ನೆಲ್ಲ ನೋಡುತ್ತ ಹೋದಂತೆ ಇನ್ನೂ ನೋಡುವಂಥವು ಎಷ್ಟೊಂದು ಇರಬಹುದು ಎಂಬ ಭಾವನೆ ಬಂದೇ ಬರುತ್ತದೆ. ಯಾಕೆಂದರೆ ಡಾ. ಕೇಲ್ಕರ್ ಅವರ ಕುಟುಂಬಕ್ಕೆ ಕಾಣದ ವಸ್ತುಗಳು ಈ ಜನಸಮುದಾಯದ ನಡುವೆ ನಾಪತ್ತೆಯಾಗಿರಲು ಸಾಧ್ಯವಿರುತ್ತದೆ. ಈ ಸಮಾಜ ಕಂಡ ಕಷ್ಟಗಳೆಷ್ಟು, ಯುದ್ಧಗಳು, ದರೋಡೆಗಳು ಹಾಗೂ ಪ್ರಕೃತಿಯ ವಿಕೋಪಗಳು, ಆದರೂ ಎಲ್ಲ ಜನಾಂಗಗಳು ನಾಗರಿಕತೆಯನ್ನು ಹುಡುಕುತ್ತಲೇ ತಮ್ಮ ಮಾನಸಿಕ ರಕ್ಷಣೆಯ ನೆಲೆಗಳಿಗಾಗಿ ನಿರಂತರ ಹೋರಾಟವನ್ನು ನಿಲ್ಲಿಸಿಲ್ಲ. ಇಂಥ ಹೋರಾಟಗಳನ್ನು ಜೀವಂತವಾಗಿಡುವುದಕ್ಕಾಗಿಯೇ ಇತಿಹಾಸದ ಸಂಗತಿಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಲೇ ಇರಬೇಕಾಗುತ್ತದೆ.

ಅಂಥ ಸಾಮಾಜಿಕ ಇತಿಹಾಸವನ್ನು ವಿನಮ್ರತೆಯಿಂದ ನಮಗಾಗಿ ಕಾಪಾಡಿ ಒಂದೆಡೆ ಅಚ್ಚುಕಟ್ಟಾಗಿ ಇಟ್ಟಿರುವ ಡಾ. ಕೇಲ್ಕರ್ ಅವರಿಗೆ ಅವರ ಕುಟುಂಬಕ್ಕೆ ನಮಸ್ಕರಿಸಿ ಹೊರಗೆ ಬಂದೆವು. ಇಷ್ಟಾದರೂ ಇನ್ನೂ ನೋಡುವುದು ಬೇಕಾದಷ್ಟಿದೆ. ಮತ್ತೊಮ್ಮೆ ಬರಬೇಕು ಅನ್ನಿಸಿತು.ಮ್ಯೂಸಿಯಂನಿಂದ ಹೊರಗೆ ಬಂದಾಗ; ಅಲ್ಲಿದ್ದ ಸ್ವಲ್ಪ ಬಯಲಿನಲ್ಲಿ ಅಬ್ದುಲ್ ಖಾದರ್ ಎಂಬ ವ್ಯಕ್ತಿ ನೂರಾರು ಕಂಚಿನ, ತಾಮ್ರದ ಮತ್ತು ಹಿತ್ತಾಳೆಯ ಕಲಾತ್ಮಕ ವಸ್ತುಗಳನ್ನು ರಾಶಿ ಹಾಕಿಕೊಂಡಿದ್ದ. ಆತನಿಗೆ ಆತನ ಕುಟುಂಬವು ಸಹಕಾರಿಯಾಗಿ ನಿಂತಿತ್ತು. ಎಲ್ಲೆಲ್ಲೋ ಗುಜರಿ ಮಾಲುಗಳನ್ನು ತಂದು ಪ್ರದರ್ಶನಕ್ಕಿಡುವುದು ಮತ್ತು ಮಾರುವುದು.

ಬೇರೆ ಬೇರೆ ರಾಜ್ಯಗಳಲ್ಲಿ ಪ್ರದರ್ಶನದ ದಿನಾಂಕಗಳನ್ನು ತಿಳಿಸಿದ.ಅವರ ವಂಶವೇ ಈ ರೀತಿಯ ವೃತ್ತಿಯನ್ನು ಮುಂದುವರೆಸಿಕೊಂಡು ಬಂದವರು.ನಾನು ಕಂಚಿನ ದೊಡ್ಡ ದೀಪಸ್ತಂಭವನ್ನು ಕೊಂಡುಕೊಂಡೆ.ಬೆಂಗಳೂರಿಗೆ ಬರುವ ದಿನಾಂಕವನ್ನು ತಿಳಿಸಿದ.ವಿಸಿಟಿಂಗ್ ಕಾರ್ಡ್ ಕೊಟ್ಟ.ನನ್ನ ದೂರವಾಣಿ ಸಂಖ್ಯೆಯನ್ನು ತೆಗೆದುಕೊಂಡ. ಅವರೆಲ್ಲರಿಗೂ ನಮಸ್ಕರಿಸಿ ಆಗಖಾನ್ ಅರಮನೆಯತ್ತ ನಡೆದೆ.

ಭಗತ್ ಸಿಂಗ್ ರ ಜೈಲ್ ಡೈರಿ -೨೦Bhagat-Singh


ಗುಲಾಮ ಗಿರಿ

ಧರ್ಮವು ಸ್ಥಾಪಿತ ವ್ಯವಸ್ಥೆಯನ್ನು ಬೆಂಬಲಿಸುತ್ತದೆ:

೧೮೩೫ರಲ್ಲಿ ಪ್ರೆಸ್ಬಿಟೇರಿಯನ್ ಚರ್ಚಿನ ಜನರಲ್ ಅಸೆಂಬ್ಲಿಯು ಈ ಅಭಿಪ್ರಾಯಕ್ಕೆ ಬಂತು: ‘ಹಳೆಯ ಮತ್ತು ಹೊಸ ಒಡಂಬಡಿಕೆ ಎರಡರಲ್ಲೂ ಗುಲಾಮಗಿರಿಯನ್ನು ಗುರುತಿಸಲಾಗಿದೆ, ಹಾಗೂ ಅಧಿಕೃತವಾಗಿ ದೇವರಿಂದ ಅದು ನಿಂದನೆಗೆ ಒಳಗಾಗಿಲ್ಲ.'

೧೮೩೫ರಲ್ಲಿ ಚಾರ್ಲ್ಸ್‌ಟನ್ ಬಾಪ್ಟಿಸ್ಟ್ ಅಸೋಸಿಯೇಷನ್ ಕೆಳಕಾಣಿಸಿದ ಸುತ್ತೋಲೆ ಹೊರಡಿಸಿತು:

‘ಎಲ್ಲ ವಸ್ತುಗಳ ಸೃಷ್ಟಿಕರ್ತನು ಗುಲಾಮನ ಸಮಯವನ್ನು ಹಸ್ತಾಂತರಿಸುವುದಕ್ಕೆ ಮಾಲೀಕನಿಗೆ ಹಕ್ಕು ನೀಡಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಅಷ್ಟೇ ಅಲ್ಲ, ಗುಲಾಮನ ಯಾವುದೇ ವಸ್ತುವಿನ ಮೇಲಿರುವ ಆಸ್ತಿ ಹಕ್ಕನ್ನೂ ಮಾಲೀಕ ಯಾರಿಗೆ ಬೇಕಾದರೂ, ತನಗಿಷ್ಟ ಬಂದವರಿಗೆ ಕೊಡಬಹುದು.'

ರೆವರೆಂಡ್ ಇ.ಡಿ.ಸೈಮನ್, ಡಾಕ್ಟರ್ ಆಫ್ ಡಿವಿನಿಟಿ, ವರ್ಜೀನಿಯಾದ ಮೆಥಾಡಿಸ್ಟ್ ಕಾಲೇಜಿನ ಪ್ರೊಫೆಸರ್ ಹೀಗೆ ಬರೆದಿದ್ದಾರೆ:

‘ಪವಿತ್ರ ಗ್ರಂಥದ ಉಲ್ಲೇಖ ಗುಲಾಮರ ಆಸ್ತಿಹಕ್ಕನ್ನು ಅನುಮಾನಕ್ಕೆಡೆಯಿಲ್ಲದಂತೆ ಖಚಿತಪಡಿಸುತ್ತದೆ. ಜೊತೆಗೆ ಆ ಹಕ್ಕಿನ ಜೊತೆ ಲಭ್ಯವಿರುವ ಇನ್ನಿತರ ಸಂಗತಿಗಳನ್ನೂ, ಕೊಳ್ಳುವ ಮತ್ತು ಮಾರುವ ಹಕ್ಕನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಒಟ್ಟಾರೆ ಹೇಳಬೇಕೆಂದರೆ ಜ್ಯೂಗಳಿಂದ ಪ್ರತಿಪಾದಿಸಲ್ಪಟ್ಟ ನೀತಿಯನ್ನನುಸರಿಸುತ್ತೇವೆಯೋ, ಮಾನವ ಕುಲ ಎಲ್ಲ ಕಾಲಕ್ಕೂ ಹೊಂದಿರುವ ಅಭಿಪ್ರಾಯ ಆಚರಣೆಗಳನ್ನು ಗೌರವಿಸುತ್ತೇವೆಯೋ, ಅಥವಾ ಹೊಸ ಒಡಂಬಡಿಕೆಯ ನೈತಿಕ ಕಟ್ಟಳೆಗಳನ್ನು ಪಾಲಿಸುತ್ತೇವೆಯೋ - ಅಂತೂ ಗುಲಾಮಗಿರಿ ಅನೈತಿಕವಲ್ಲ ಎಂಬ ನಿರ್ಧಾರಕ್ಕೆ ಬರಬಹುದು. ಆಫ್ರಿಕಾದಿಂದ ಕರೆತರಲ್ಪಟ್ಟ ಮೊದಲ ಗುಲಾಮರು ಕಾನೂನು ಪ್ರಕಾರವೇ ಜೀತಕ್ಕಾಗಿ ಕೊಳ್ಳಲ್ಪಟ್ಟಿರುವುದನ್ನು ಗಮನಿಸಿದರೆ ಅವರ ಮಕ್ಕಳನ್ನು ಗುಲಾಮರನ್ನಾಗಿ ಜೀತಕ್ಕಿಟ್ಟುಕೊಳ್ಳುವ ಹಕ್ಕು ತಂತಾನೇ ದೊರೆಯುತ್ತದೆ. ಹೀಗೆ ಅಮೆರಿಕದಲ್ಲಿ ಶುರುವಾದ ಗುಲಾಮಗಿರಿಯು ಹಕ್ಕಿನ ಪ್ರಕಾರವೇ ಸ್ಥಾಪನೆಯಾಗಿದೆ.'

ಅಮೆರಿಕ ಕುರಿತ ಅಂಕಿಅಂಶ

ಸೇನಾ ಬಲ ಮೊದಲು - ೫೦,೦೦೦
ಸೇನಾ ಬಲ ಈಗ - ೩೦೦,೦೦೦
ಧನಿಕ ವರ್ಗವು ೬೭ ಬಿಲಿಯನ್ ಡಾಲರ್ ಸಂಪತ್ತಿನ ಒಡೆತನ ಹೊಂದಿದೆ.
ಉದ್ಯೋಗಸ್ಥರಲ್ಲಿ ಶೇ ೦.೯% ಧನಿಕ ವರ್ಗದವರು ಸಂಪತ್ತಿನ ೭೦% ಒಡೆತನ ಹೊಂದಿದ್ದಾರೆ.
ಉದ್ಯೋಗಸ್ಥರಲ್ಲಿ ೨೯% ಮಧ್ಯಮವರ್ಗದವರು
ಅವರು ಒಟ್ಟು ಸಂಪತ್ತಿನ ೨೫% ಒಡೆತನ ಹೊಂದಿದ್ದಾರೆ = ೨೪ ಬಿಲಿಯನ್
ಉಳಿದ ೭೦% ಉದ್ಯೋಗಸ್ಥರು ಶ್ರಮಿಕ ವರ್ಗದವರಾಗಿದ್ದಾರೆ.
ಅವರು ಒಟ್ಟು ಸಂಪತ್ತಿನ ೪% ಎಂದರೆ ೪ ಬಿಲಿಯನ್ ಡಾಲರ್ ಒಡೆತನ ಹೊಂದಿದ್ದಾರೆ.

೧೯೦೦ರಲ್ಲಿ, ಲೂಸಿಯನ್ ಸ್ಯಾನಿಯಲ್ ಹೇಳಿದ ಪ್ರಕಾರ:
ಒಟ್ಟೂ ಉದ್ಯೋಗಸ್ಥರಲ್ಲಿ ಧನಿಕ ವರ್ಗ - ೨,೫೦,೨೫೧
ಮಧ್ಯಮವರ್ಗ - ೮೪,೨೯,೮೪೫
ಶ್ರಮಿಕ ವರ್ಗ - ೨,೦೩,೯೫,೧೩೭

- ಜ್ಯಾಕ್ ಲಂಡನ್‌‘ಐರನ್ ಹೀಲ್ ಕಾದಂಬರಿಯಿಂದ.

ಸಾಮ್ರಾಜ್ಯಶಾಹಿ

ಸಾಮ್ರಾಜ್ಯಶಾಹಿಯು ಬಂಡವಾಳಶಾಹಿ ಬೆಳವಣಿಗೆಯ ಒಂದು ಹಂತ. ಆಗ ಏಕಾಧಿಪತ್ಯ ಮತ್ತು ಆರ್ಥಿಕ ಬಂಡವಾಳಗಳು ಅತ್ಯಧಿಕ ಪ್ರಭಾವ ಹೊಂದಿ ಬಂಡವಾಳ ರಫ್ತು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅಂತರರಾಷ್ಟ್ರೀಯ ಸಮಿತಿಯೊಂದು ಪ್ರಪಂಚವನ್ನೇ ವಿಭಾಗ ಮಾಡುತ್ತದೆ. ಅತಿದೊಡ್ಡ ಬಂಡವಾಳಶಾಹಿ ದೇಶಗಳು ಭೂಮಂಡಲವನ್ನೇ ಪಾಲು ಮಾಡಿ ಹಂಚಿಕೊಳ್ಳುತ್ತವೆ.

- ಲೆನಿನ್

ಸರ್ವಾಧಿಕಾರ

ತನ್ನ ಬಲವನ್ನಷ್ಟೇ ನೆಚ್ಚಿಕೊಂಡಿರುವ, ಯಾವುದೇ ಕಾನೂನಿಗೊಳಪಡದ ಅಧಿಕಾರವೇ ಸರ್ವಾಧಿಕಾರ. ಕಾರ್ಮಿಕ ವರ್ಗದ ಕ್ರಾಂತಿಕಾರಿ ಸರ್ವಾಧಿಕಾರ ಎಂದರೆ ಬೂರ್ಜ್ವಾಗಳ ಮೇಲೆ ಮತ್ತು ಅವರ ವಿರುದ್ಧ ಬಲವನ್ನೇ ನೆಚ್ಚಿಕೊಂಡ, ಯಾವುದೇ ಕಾನೂನಿಗೊಳಪಡದ ಸರ್ವಾಧಿಕಾರ.

- ಲೆನಿನ್, ‘ಪ್ರೊಲಿಟೇರಿಯನ್ ರೆವಲ್ಯೂಷನ್ ಅಂಡ್ ರೆನೆಗೇಡ್ ಕಾಟ್‌ಸ್ಕಿ'.

ಕ್ರಾಂತಿಯ ಸರ್ವಾಧಿಕಾರ

ಕ್ರಾಂತಿಯೆಂದರೆ ಜನಸಂಖ್ಯೆಯ ಒಂದು ವಿಭಾಗವು ಮತ್ತೊಂದರ ಮೇಲೆ ತನ್ನ ಅಭಿಪ್ರಾಯವನ್ನು ರೈಫಲ್, ಬಯೋನೆಟ್, ಗನ್ ಮತ್ತಿತರ ಅಧಿಕಾರಯುತ ವಿಧಾನಗಳಿಂದ ಹೇರುವುದು. ಹೀಗೆ ಅಧಿಕಾರಕ್ಕೆ ಬಂದ ಪಕ್ಷವು ತನ್ನ ಆಡಳಿತವನ್ನು ಇಂತಹ ಶಸ್ತ್ರಾಸ್ತ್ರಗಳು ತೀವ್ರವಾದಿಗಳಲ್ಲಿ ಹುಟ್ಟಿಸುವ ಸ್ಫೂರ್ತಿಯಿಂದಲೇ ಮುಂದುವರೆಸಿಕೊಂಡು ಹೋಗಬೇಕಾದ ಅವಶ್ಯಕತೆಯಿದೆ. ಬೂರ್ಜ್ವಾಗಳ ವಿರುದ್ಧ ಪ್ಯಾರಿಸಿನ ಕಮ್ಯೂನ್ ಇಂಥ ಶಸ್ತ್ರಾಸ್ತ್ರಧಾರಿಗಳನ್ನು ನೆಚ್ಚಿಕೊಳ್ಳದಿದ್ದರೆ ಅದು ೨೪ ಗಂಟೆಯಾದರೂ ಉಳಿಯುವುದು ಸಾಧ್ಯವಿತ್ತೆ? ಅಥವಾ ಸಶಸ್ತ್ರ ಬಲವನ್ನು ತುಂಬ ಕಡಿಮೆ ಬಳಸಿದರೆಂದು ಕಮ್ಯೂನ್ ಅನ್ನು ನಾವು ತೆಗಳುವುದೇ ಸರಿಯಲ್ಲವೆ?

- ಫ್ರೆಡರಿಕ್ ಏಂಗೆಲ್ಸ್, ಪ್ಯಾರಿಸ್ ಕಮ್ಯೂನ್ ಕುರಿತು.

ಬೂರ್ಜ್ವಾ ಪ್ರಜಾಪ್ರಭುತ್ವ

ಬೂರ್ಜ್ವಾ ಪ್ರಜಾಪ್ರಭುತ್ವ ಊಳಿಗಮಾನ್ಯ ಪದ್ಧತಿಗೆ ಹೋಲಿಸಿದರೆ ಐತಿಹಾಸಿಕವಾಗಿ ಬಹಳಷ್ಟು ಮುಂದುವರಿದರೂ ಹಲವು ಮಿತಿಗಳುಳ್ಳ, ಬೂಟಾಟಿಕೆಯ ಸಂಸ್ಥೆಯಾಗಿ, ಶ್ರೀಮಂತರಿಗೆ ಸ್ವರ್ಗವಾಗಿ, ಶೋಷಿತ ಹಾಗೂ ಬಡವರಿಗೆ ಭ್ರಮೆಯ ಜಾಲವಾಗಿ ಉಳಿಯುತ್ತದೆ.

- ಲೆನಿನ್, ‘ದ ಪ್ರೊಲಿಟೇರಿಯನ್ ರೆವಲ್ಯೂಷನ್'
ಕನ್ನಡಕ್ಕೆ : ಡಾ .ಎಚ್ .ಎಸ್ . ಅನುಪಮಾ

ಅನುಭವ ಮತ್ತು ತಲ್ಲೀನತೆ

H.S.raghavendra Rao


ಡಾ .ಎಚ್ .ಎಸ್ .ರಾಘವೇಂದ್ರರಾವ್


ಇದು ಕೂಡ, ನಮ್ಮೆಲ್ಲರನ್ನೂ ಕಾಡಿರಬಹುದಾದ ಉತ್ತರವಿಲ್ಲದ ಪ್ರಶ್ನೆ. ಯಾವುದೇ ಸಂಗತಿಯನ್ನು ತೀವ್ರವಾಗಿ ಅನುಭವಿಸುವುದಕ್ಕೂ ಅದನ್ನು ಕುರಿತು ಆಲೋಚಿಸುವುದಕ್ಕೂ ಇರುವ ಸಂಬಂಧದ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಅವು ಕಣ್ಣು, ಕಿವಿ, ಮೂಗು, ಚರ್ಮ ಮುಂತಾದ ಇಂದ್ರಿಯಗಳಿಂದ ಪಡೆಯುವ ಹಲವು ಬಗೆಯ ಅನುಭವಗಳಿರಬಹುದು ಅಥವಾ ಇವುಗಳಾಚೆಗೆ ಇದೆ ಎನ್ನಲಾದ ಮಾನಸಿಕವಾದ, ಭಾವನಾತ್ಮಕವಾದ ಕೆಲವೊಮ್ಮೆ ಅತೀಂದ್ರಿಯವೆಂದೂ ಕರೆಯಲಾಗುವ ಅನುಭವಗಳೇ ಇರಬಹುದು. ಸಂಗೀತದ ಹಾಗೆ ಒಂದೇ ಒಂದು ಇಂದ್ರಿಯಕ್ಕೆ ಗೊತ್ತಾಗುವ ನೇರ ಅನುಭವ ಇರಬಹುದು ಅಥವಾ ಹಲವು ಇಂದ್ರಿಯಗಳ ಅನುಭವಗಳು ಸಂಕೀರ್ಣವಾಗಿ ಕಲೆತಿರುವ ಕೂಡುಅನುಭವ ಆಗಿರಬಹುದು. ಉದಾಹರಣೆಗೆ, ಗಂಡು-ಹೆಣ್ಣು ಕೂಡಿ ಪಡೆಯುವ ಅನುಭವವು ಎಲ್ಲ ಇಂದ್ರಿಯಗಳ ಕಟು-ಮಧುರ ಅನುಭವಗಳ ಸಂಕೀರ್ಣ ಹೆಣಿಗೆಯಲ್ಲವೇ? ನಾವು ನಮ್ಮ ವ್ಯಕ್ತಿತ್ವದ ಗಡಿಗೆರೆಗಳನ್ನು ದಾಟಿ, ಬೇರೊಂದರಲ್ಲಿ, ಕಳೆದುಹೋಗುವ ಆ ಪರಿ ಈ ಲೋಕದ ಎಷ್ಟು ಜನರಿಗೆ ಎಷ್ಟು ಬಾರಿ ಆದೀತು? ಬಹಳ ಬಹಳ ಅಪರೂಪ. ನಮ್ಮ ಬಾಲ್ಯಾನುಭವಗಳ ಲೋಕದ ಮರುಕಳಿಕೆಯೂ ಹಾಗೆಯೇ. ಅವು ಮೂಡುವುದು ಇಂದ್ರಿಯಗಳ ಅನುಭವದ ಮರುಸೃಷ್ಟಿಯಾಗಿಯೋ ಅಥವಾ ಅವುಗಳನ್ನು ಮಾತುಗಳಲ್ಲಿ ಕಟ್ಟಿರುವ ‘ನೆನಪು’ ಆಗಿಯೋ ನೀವೇ ಹೇಳಿ. ಆ ನೆನಪುಗಳನ್ನು ಬೇರೆಯವರಿಗೆ ಹೇಳಿದಾಗ ಅಲ್ಲ, ಸ್ವತಃ ನಾವೇ ಒಳಗಿನಿಂದ ಹೊರಗೆ ತಂದುಕೊಂಡಾಗ ನಿಜಕ್ಕೂ ಏನಾಗುತ್ತದೆ. ನಿಮಗೂ ಗೊತ್ತು. ಈಗ ಮೂಸುವ ಯಾವುದೋ ಗಂಧ, ಕೇಳುವ ಯಾವುದೋ ನಾದ, ಕಳೆದ ಅನುಭವಗಳ ಲೋಕಕ್ಕೆ ಲಗ್ಗೆಹಾಕಿ, ಮರೆತು ಮಲಗಿದ್ದ ಯಾವುದೋ ಲೋಕವನ್ನು ಮತ್ತೆ ಹುಟ್ಟಿಸುತ್ತದೆ. ಇಂಥ ಅನುಭವಗಳು ಎಲ್ಲಿ ಸ್ಟೋರ್ ಆಗಿರುತ್ತವೆ? ನಮ್ಮ ಮೆದುಳಿನಲ್ಲಿ ಬೇರೆ ಬೇರೆ ಇಂದ್ರಿಯಗಳ ಅನುಭವದ ದಾಖಲಾತಿ ಮತ್ತು ಸಂಗ್ರಹಕ್ಕೆಂದು ಮೀಸಲಾಗಿರುವ, ಜಾಗಗಳಲ್ಲಿಯೋ ಅಥವಾ ಭಾಷಿಕ ನೆನಪುಗಳ ಭಂಡಾರವೊಂದು ಇದೆಯೋ. ನಾವು ಯಾವಾಗಲೂ ಅನುಭವಗಳನ್ನು ಭಾಷೆಗೆ ಅನುವಾದ ಮಾಡಿಕೊಳ್ಳುತ್ತಿರುತ್ತೇವೆಯೇ? ಅದಿರಲಿ, ಈ ರೀತಿಯ ಅನುಭವಗಳನ್ನು ಪಡೆಯುವಾಗ ನಮ್ಮ ಮೈ, ಮನಸ್ಸು ಮತ್ತು ಪ್ರಜ್ಞೆಗಳ ನಡುವಿನ ಸಂಬಂಧ ಹೇಗಿರುತ್ತದೆ ಎಂಬುದು ನಾನು ಇಲ್ಲಿ ಹುಡುಕುತ್ತಿರುವ ವಿಷಯ. ಅನುಭವದ ತೀವ್ರತೆಯನ್ನು ಹೇಳುವಾಗ, ತಲ್ಲೀನವಾಗುವುದು, ಮೈಮರೆಯುವುದು ಎಂಬ ಪದಗಳನ್ನು ನಾವು ಬಳಸುತ್ತೇವೆ. ನಿಜಕ್ಕೂ ಮರೆಯಬೇಕಾದ್ದು ಮನವನ್ನೋ ಮೈಯನ್ನೋ? ಕುವೆಂಪು ಅವರು ತಮ್ಮ ‘ಹಸುರು’ ಎಂಬ ಕವಿತೆಯಲ್ಲಿ ಹೀಗೆ ಹೇಳುತ್ತಾರೆ: ‘ಹಸುರಿತ್ತಲ್ ಹಸುರತ್ತಲ್ ಹಸುರೆತ್ತಲ್ ಕಾಡಿನಲಿ ಹಸುರಾದುದೊ ಕವಿಯಾತ್ಮಂ ಹಸುರ್ನೆತ್ತರ್ ಒಡಲಿನಲಿ’ ಎಂದು ಬರೆಯುತ್ತಾರೆ. ಅಂತೆಯೇ ಗಗನವನ್ನು ಮೈನೀಲಿಗಟ್ಟುವವರೆಗೆ ನೋಡಬೇಕೆಂದು ಹೇಳುತ್ತಾರೆ. ಇಂಗ್ಲಿಷ್ ಕವಿಯಾದ ಎಜ್ರಾ ಪೌಂಡ್ ಕೂಡ, ‘I stood amidst the wood and was wood’ ಎನ್ನುತ್ತಾನೆ. ಹೀಗೆ ಅನುಭವದಲ್ಲಿ ಮೈಮರೆತಿರುವಾಗ ನಮ್ಮ ಮನಸ್ಸು ಏನು ಮಾಡುತ್ತಿರುತ್ತದೆ ಎನ್ನುವುದು ಮುಖ್ಯವಾದ ಪ್ರಶ್ನೆ. ಅದು ಆಲೋಚನೆಯಲ್ಲಿ ತೊಡಗಿರುವುದೇ? ತೊಡಗಿರಬೇಕೇ, ಆ ಅನುಭವನ್ನೇ ಕುರಿತು, ಆಗಲೇ ಯೋಚಿಸತೊಡಗಿದರೆ, ಅನುಭವದ ತೀವ್ರತೆಗೆ ಭಂಗ ಬರುತ್ತದೆಯೇ? ಆ ಅನುಭವವನ್ನು ಕುರಿತ ಹಾಗೆ ನಮ್ಮ ಮನಸ್ಸಿನಲ್ಲಿ ಅದುವರೆಗೆ ಮನೆಮಾಡಿದ್ದ ವಿಚಾರಗಳು, ಪೂರ್ವಾಗ್ರಹಗಳು, ಭಯಗಳು ಮತ್ತು ಆತಂಕಗಳು ಅನುಭವದ ಸ್ವರೂಪವನ್ನು ಬದಲಿಸುವುದಿಲ್ಲವೇ. ‘ಸ್ವ-ಪ್ರಜ್ಞೆ’ ಎನ್ನುವುದೇ ತಲ್ಲೀನತೆಯ ಶತ್ರುವಾಗಿಬಿಡುವುದೆ? ಅಂತಹ ಪ್ರಜ್ಞೆಯಿಲ್ಲದ ಪ್ರಾಣಿಗಳ ಅನುಭವವು ಮನುಷ್ಯರದಕ್ಕಿಂತ ತೀವ್ರವೇ. ಭೂತಕಾಲ ಮತ್ತು ಭವಿಷ್ಯತ್ ಕಾಲಗಳ ಬಗ್ಗೆ ನಮಗಿರುವ ತಿಳಿವಳಿಕೆಯೇ ಅನುಭವದ ಸವಿಯನ್ನು ಹಾಳುಮಾಡುತ್ತದೆಯೇ? ಅನುಭವ ಆಗಿಹೋದ ನಂತರ, ಅದರ ಬಗ್ಗೆ ಆಲೋಚನೆ ಮಾಡುವುದು ಬೇರೆ. ಅನುಭವವನ್ನು ಪಡೆಯುತ್ತಿರುವಾಗಲೇ ಅದರ ಬಗ್ಗೆ ಆಲೋಚನೆ ಮಾಡುವುದು, ಮಾತನಾಡುವುದು ಬೇರೆ. ಕೆಲವರಂತೂ ‘ಆಹಾ, ಎಷ್ಟು ಚೆನ್ನಾಗಿದೆ!’ ಎಂದು ಅನುಭವಕ್ಕೆ ಮಾತಿನ ಸರ್ಟಿಫಿಕೇಟ್ ಕೊಡುತ್ತಿರುತ್ತೇವೆ. ಬೇರೆ ಕೆಲವರು ಕಂಡುದನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯುವ ಹಪಹಪಿಯಲ್ಲಿ ಮುಳುಗಿಹೋಗಿ ಅನುಭವದ ಕ್ಷಣಗಳನ್ನೇ ಕಳೆದುಕೊಳ್ಳುತ್ತಾರೆ. ಇದೆಲ್ಲವೂ ಅನುಭವಗಳಿಂದ ಮಾಡುವ ಪಲಾಯನವೇ ಅಲ್ಲವೇ? ನಾವು ಮನಮರೆತು ಮೈನೆಲೆಯಲ್ಲಿ ಮಾತ್ರ ಅನುಭವ ಪಡೆಯುವುದು ಸಾಧ್ಯವಾದರೆ ಏನಾಗುತ್ತದೆ? ಈ ಸ್ಥಿತಿಯನ್ನು ಕುಮಾರವ್ಯಾಸನು ಅದ್ಭುತವಾಗಿ ಹೇಳಿದ್ದಾನೆ. ಶಾಪಗ್ರಸ್ತನಾಗಿ ಕಾಡಿನಲ್ಲಿದ್ದ ಪಾಂಡುರಾಜನು ಮಾದ್ರಿಯ ರೂಪಕ್ಕೆ ಮರುಳಾಗಿ ಶಾಪದ ಸಂಗತಿಯನ್ನೇ ಮರೆತು ಅವಳನ್ನು ಕೂಡುತ್ತಾನೆ. ಆಗಿನ ಅವನ ಸ್ಥಿತಿಯನ್ನು ಕವಿಯು ‘ಪ್ರಜ್ಞೆ ಜಾನ್ವಂಘ್ರಿಕಟಿ ಪರಿಮಿತವಾಯ್ತು’ ಎಂದು ವರ್ಣಿಸುತ್ತಾನೆ. (ಪ್ರಜ್ಞೆಯು ಮೊಣಕಾಲು, ಕಾಲು ಮತ್ತು ಸೊಂಟಗಳಿಗೆ ಸೀಮಿತವಾಯಿತು.) ಶಾಪದ ಭಯವಿಲ್ಲದಾಗಲೂ ಸಂಭೋಗದ ಸುಖವು ಈ ರೀತಿಯ ತಲ್ಲೀನತೆಯನ್ನು ಅವಲಂಬಿಸುತ್ತದೆಯೇ? ಆಗ ವ್ಯಕ್ತಿಗೆ ತನ್ನ ಜೊತೆಗಾತಿ/ಜೊತೆಗಾರ ಜೀವಗಳ ಬೇಕುಬೇಡಗಳ ಬಗೆಗಿನ ಆಲೋಚನೆ ಇರುವುದೇ, ಇರಬೇಕೇ, ಇರಬಾರದೇ. ಅಥವಾ ಅದು ನಾನು-ನೀನು ಎಂಬ ಪರಸ್ಪರ ವ್ಯತ್ಯಾಸವೇ ಅಳಿದುಹೋದ ಒಂದುತನದ ಸ್ಥಿತಿಯೋ? ಆಗ ಬೇಂದ್ರೆಯವರು ಹೇಳಿದ ಹಾಗೆ ಇಬ್ಬರಿಗೂ ನಾಲ್ಕು ಕೈಗಳಿರುತ್ತವೆಯೇ? ಇಂತಹ ಸ್ಥಿತಿಯು, ನಿಜದಲ್ಲಿ ಪಡೆದುಕೊಳ್ಳಬಹುದಾದ ವಾಸ್ತವವೋ ಅಥವಾ ಮಿಂಚಿ ಮಾಯವಾಗುವ ಆದರ್ಶವೋ? ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚು. ಇದೇ ಮಾತನ್ನು ಬೇರೆ ಅನುಭವಗಳಿಗೂ ಅನ್ವಯಿಸಬಹುದು. ಎಲ್ಲ ಕಡೆಯೂ ‘ಅರಿಯುವಿಕೆ’ ಮತ್ತು ‘ಇರುವಿಕೆ’ಗಳ ನಡುವಿನ ದ್ವಂದ್ವವು ನಮ್ಮನ್ನು ಕಾಡುತ್ತದೆ. ಯಾವುದೇ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು, ತಿಳಿಯಬೇಕು ಎನ್ನುವ ಒತ್ತಡವೇ, ಅಪೇಕ್ಷೆಯೇ ಇರುವಿಕೆಯ ಸುಖಕ್ಕೆ ಅಡ್ಡಿಯಾಗುತ್ತದೆಯೇ? ಮತ್ತೆ ಕುವೆಂಪು ನೆನಪಾಗುತ್ತಾರೆ. ಅವರು ಪ್ರಾಣಿಗಳಿಗೂ ಮನುಷ್ಯರಿಗೂ ಹೋಲಿಕೆ ಮಾಡುತ್ತಾರೆ. ದನಕರುಗಳು ಸುಮ್ಮನೆ ಮೇಯುತ್ತಿರುತ್ತವೆ. ಅವಕ್ಕೆ ಅರಿಯುವ ಗೋಜು ಇಲ್ಲ. ಮನುಷ್ಯನಿಗೆ ಮಾತ್ರ ಈ ಗೋಜು. “ನಾ ಮನುಜನು ಎನ್ನೆದೆಯಲ್ಲಿ ಅರಿವೆನ್ನುವ ಬಾವು ನೋವಾಗಿರೆ, ಕೀವಾಗಿರೆ ಬಾಳ್ಬೆಲ್ಲವೆ ಬೇವು.. ಅರಿವಾಸೆಯ ಬಿಡು ಇರುವಾಸೆಯ ತೊಡು ಅರಿವಾಸೆಯೆ ಮಾಯಾಬಂಧ, ಇರುವುದೆ ಮುಕ್ತಿಯ ಆನಂದ.” ಆದರೆ, ಹೀಗೆ ಅರಿಯದೆ ಸುಮ್ಮನೆ ಇರುವ ಸ್ಥಿತಿಯು ಸ್ವತಃ ಕುವೆಂಪು ಅವರಿಗಾದರೂ ಸಾಧ್ಯವಾಯಿತೇ? ಹೇಳುವುದು ಕಷ್ಟ. ಹಾಗೆ ನೋಡಿದರೆ, ಪಶ್ಚಿಮದ ಕೆಲವು ವಿದ್ವಾಂಸರು ಈ ಬಗ್ಗೆ ಭಿನ್ನವಾಗಿ ಆಲೋಚಿಸಿದ್ದಾರೆ. ಉದಾಹರಣೆಗೆ ಫ್ರಾನ್ಸ್ ದೇಶದ ಪ್ರಸಿದ್ಧ ಗಣಿತಶಾಸ್ತ್ರಜ್ಞ ಮತ್ತು ತತ್ವಜ್ಞಾನಿಯಾದ ಡೆಕಾರ್ಟೆಸ್, ಬಹಳ ಪ್ರಸಿದ್ಧವಾದ ‘I think, therefore I am’ ಎಂಬ ಮಾತನ್ನು ಹೇಳಿದ್ದಾನೆ. ‘ನಾನು ಆಲೋಚನೆ ಮಾಡುತ್ತೇನೆ ಎನ್ನುವುದೇ ನಾನು ಬದುಕಿರುವುದಕ್ಕೆ ಸಾಕ್ಷಿ’ ಎಂದು ಈ ಮಾತಿನ ಅರ್ಥ. ಆಲೋಚನೆ ಮಾಡದವನು ಮನುಷ್ಯನೇ ಅಲ್ಲ ಎಂದು ಅವನ ಅಭಿಪ್ರಾಯ. ನಮಗೂ ಹಾಗೆಯೇ ಅನ್ನಿಸಬಹುದೇ? ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ವ್ಯತ್ಯಾಸವು, ಆಲೋಚನಾಶಕ್ತಿ ಹಾಗೂ ಬುದ್ಧಿಶಕ್ತಿಗಳೇ ಎಂದು ನಾವು ಹೇಳುತ್ತೇವೆ. ಆದರೆ ಬುದ್ಧಿವಂತರೆನಿಸಿಕೊಂಡವರು ತಮ್ಮ ಬದುಕುಗಳನ್ನು ನಿರ್ವಹಿಸುತ್ತಿರುವ ಬಗೆಯು ಶೋಚನೀಯವಾಗಿದೆಯಲ್ಲಾ! ಅದು ಹೋಗಲಿ ಎಂದರೆ, ಈ ಬುದ್ಧಿವಂತರು ಸಮಾಜಗಳ, ದೇಶಗಳ ಬದುಕನ್ನೇ ಅವನತಿಯ ಕಡೆಗೆ ಕರೆದೊಯ್ಯುತ್ತಿರುವರಲ್ಲಾ! ಇಂತಹ ಆಧುನಿಕ ಭಸ್ಮಾಸುರರನ್ನು ಮ್ಯಾನೇಜ್ ಮಾಡುವುದು ಹೇಗೆ? ಯಾರು? ಆದ್ದರಿಂದಲೇ ಮನುಷ್ಯನ ನಾಗರಿಕತೆಯ ಬೆಳವಣಿಗೆಯ ದಿಕ್ಕಿಗೂ, ಮನುಷ್ಯನ ಅಂತರಂಗದ ವಿಷಾದಕ್ಕೂ ಹತ್ತಿರದ ಸಂಬಂಧವಿದೆಯೇ ಎಂಬ ಅನಿಸಿಕೆ ಮೂಡುತ್ತದೆ. ನಾವು ಮುಂದಿನ ಹೆಜ್ಜೆಯೆಂದು ಇಟ್ಟಿದ್ದು, ಹಿಂದಿನ ಹೆಜ್ಜೆಯಾಗಿಬಿಟ್ಟಿದೆಯೇ? ನಾವು ಮತ್ತು ನಮ್ಮ ನಾಗರಿಕತೆಯು ವಾಪಸ್ ಹೋಗಲು ಸಾಧ್ಯವಿಲ್ಲದ ಸ್ಥಿತಿಯನ್ನು ತಲುಪಿ ದಶಕಗಳೇ ಕಳೆದಿವೆಯೇ? ಮಾತು ಎಲ್ಲಿಂದ ಎಲ್ಲಿಗೋ ಹೋಯಿತು. ಆದರೆ, ಮೂಲ ಪ್ರಶ್ನೆ ಅದೇ? ಬುದ್ಧಿ ಮತ್ತು ಭಾವನೆ ಎರಡೂ ಕೂಡ ಇಂದ್ರಿಯಗಳಿಂದ ಪಡೆಯಬಹುದಾದ ಅನುಭವಗಳ ತೀವ್ರತೆಗೆ ಅಡ್ಡಿಯಾಗುವ ಸಂಗತಿಗಳೇ? ಮನುಷ್ಯ ಮತ್ತು ವಸ್ತುಗಳ ನಡುವಿನ ಸಂಬಂಧಕ್ಕೂ ಮತ್ತು ಮನುಷ್ಯ ಹಾಗೂ ಮನುಷ್ಯರ ಸಂಬಂಧಕ್ಕೂ ಅಂತರ ಇದೆಯೇ. ಉದಾಹರಣೆಗೆ ಮಲ್ಲಿಗೆಯನ್ನು ಮೂಸುವ ಹಾಗೆ, ಜಿಲೇಬಿಯನ್ನು ತಿನ್ನುವ ಹಾಗೆ, ಮನುಷ್ಯರ ಜೊತೆಯಲ್ಲಿಯೂ ವರ್ತಿಸಲು ಸಾಧ್ಯವೇ, ಸಾಧುವೇ? ಕೆಲವರು ಹಾಗೆಯೇ ಇರುತ್ತಾರೆಯೇ. ಭಾವದ ಜೊತೆ ಮತ್ತು ಬುದ್ಧಿಯ ಹಿನ್ನೆಲೆ ಎರಡೂ ಇಲ್ಲದೆ, ಮನುಷ್ಯನಿಗೆ ಏನೂ ದಕ್ಕುವುದಿಲ್ಲ ಎನ್ನುವುದೇ ನಿಜವಾದರೆ, ತಲ್ಲೀನವಾದ, ಸಮಗ್ರವಾದ ಅನುಭವ ಎನ್ನುವುದು ಕೊನೆಗೂ ಬಿಸಿಲುಗುದುರೆಯೇ? ಮನುಷ್ಯನ ವಿಷಾದದ ಮೂಲವು ಇಲ್ಲಿದೆಯೇ? ನಮ್ಮ ಲೋಕದಲ್ಲಿ ಅಲ್ಲ, ಮನುಷ್ಯರಾಗಿ ನಾವು ಲೋಕವನ್ನು ಪಡೆಯುವ ಬಗೆಯಲ್ಲಿಯೇ ಅಸಮಾಧಾನದ, ಅಪೂರ್ಣತೆಯ, ಪ್ಯಾಶನೇಟ್ ಅಗದೆ ಬದುಕುವುದರ ಮೂಲಕಾರಣವೂ ಇದೆಯೇ. ಉತ್ತರ ನನಗಂತೂ ಗೊತ್ತಿಲ್ಲ. ಗೊತ್ತಿದ್ದರೆ ನಾನೂ ಮನುಷ್ಯನಾಗದೆ ದೇವರೇ ಆಗಿಬಿಡುತ್ತಿದ್ದೆ.(ಅಂದಹಾಗೆ ಆ ದೇವರುಗಳು ಹೇಗೆ ಇರುತ್ತಾರೆ?) ನಿರ್ಲಿಪ್ತರಾಗಿಯೋ ಅಥವಾ ಭಾವುಕರಾಗಿಯೋ? ಪು.ತಿ.ನ. ಅವರ ಅಹಲ್ಯೆ ನಾಟಕದಲ್ಲಿ ಬರುವ ದೇವತೆಗಳಂತೂ ಯಾವ ಲಜ್ಜೆಯೂ ಇಲ್ಲದೆ, ‘ನಿರ್ಜರರಾವೆಮಗೇತರ ಭೀತಿ, ಸತತ ಬಿನದವೇ ನಮ್ಮಯ ರೀತಿ’ ಎನ್ನುತ್ತಾರೆ. ‘ಮೊದಲಿಳೆಯ ಮಡದಿಯರು ಸಲುವರಮರರಿಗೆ’ ಎಂದು ಡಿಮ್ಯಾಂಡ್ ಮಾಡುತ್ತಾರೆ. ಮುಪ್ಪಿಲ್ಲದ ರೋಗವಿಲ್ಲದ ಆ ಸ್ಥಿತಿಗೆ ಅಹಂಕಾರ ಮತ್ತು ಆತ್ಮವಿಶ್ವಾಸಗಳೇ ಮೂಲವಾದವು. ಬೇಂದ್ರೆಯವರು ಇದನ್ನು ‘ಅಮೃತದ ತೇಗಿನ ಮದ’ ಎಂದು ಕರೆದರು. ಮುಪ್ಪು, ರೋಗ, ದೈಹಿಕ ಅಸಮಾನತೆ ಮಾನಸಿಕ ಕುಗ್ಗುವಿಕೆಗಳಿಂದ ತುಂಬಿದ ನಮಗೆ ‘ಸತತ ಬಿನದ’ (ಕೊನೆಮೊದಲಿಲ್ಲದ ಸಂತೋಷ) ಎನ್ನುವುದು ಸಾಧ್ಯವಿಲ್ಲದ ನಿರೀಕ್ಷೆ. ಹಾಗೆ ನೋಡಿದರೆ, ದೇವತೆ ಎನ್ನುವ ಕಲ್ಪನೆಯೇ ಮನುಷ್ಯರ ಕನಸು ಇರಬೇಕು. ನಮಗೆ ಮನುಷ್ಯರಿಗೆ, ಅನುಭವದ ತಣಿಯುವಿಕೆಯು, ಬಾಯಾರಿಕೆಯನ್ನು ಹಿಂಗಿಸುವುದಿಲ್ಲ. ಅದು ಮರಳಿನಲ್ಲಿ ಸುರಿದ ನೀರಿನಂತೆ ಇಂಗಿಹೋಗುತ್ತದೆ. ನಾವು ಮತ್ತೆ ಹೊಸ ಬಾಯಾರಿಕೆಯೊಂದಿಗೆ ಹೊಸ ನೀರಿಗಾಗಿ ಹಾತೊರೆಯುತ್ತೇವೆ. ಸಂಸ್ಕೃತದಲ್ಲಿ ಹೀಗೆ ಹೇಳುತ್ತಾರೆ: ಭೋಗದ ಬಯಕೆಯು ಉಪಭೋಗದಿಂದ ತಣಿಯುವುದಿಲ್ಲ. ನಮ್ಮ ಈ ಕಾಲದಲ್ಲಿ, ಕೊಂಡುಕೊಳ್ಳುವ ದಾಹದೊಂದಿಗೆ, ಒಂದು ಸೂಪರ್ ಬಜಾರಿನಿಂದ ಇನ್ನೊಂದಕ್ಕೆ ತಿರುಗುತ್ತಿರುವ ನಮಗೆ ಈ ಮಾತು ಒಂದು ಪಾಠ.

Thursday, June 28, 2012

ಭಗತ್ ಸಿಂಗ್ ರ ಜೈಲ್ ಡೈರಿ -೧೯

ಇಂಗ್ಲೆಂಡಿನ ಲೇಬರ್ ಪಕ್ಷದ ನಾಯಕರ ದ್ರೋಹ

೧೯೧೧ ಮತ್ತು ೧೯೧೩ನೇ ಇಸವಿ. ಈ ವರ್ಷಗಳು ಗಣಿಕಾರ್ಮಿಕರು, ರೈಲ್ವೆ ಕಾರ್ಮಿಕರು ಹಾಗೂ ಸರಕು ಸಾಗಾಣಿಕೆ ಕಾರ್ಮಿಕರು ಹಿಂದೆಂದೂ ಕಾಣದಂತಹ ವರ್ಗಸಂಘರ್ಷದಲ್ಲಿ ತೊಡಗಿದ ವರ್ಷಗಳು. ೧೯೧೧ರಲ್ಲಿ ರೈಲ್ವೇಯವರ ಸಾರ್ವತ್ರಿಕ ಮುಷ್ಕರ ಆರಂಭವಾಯಿತು. ಕ್ರಾಂತಿಯ ಅಸ್ಪಷ್ಟ ನೆರಳು ಆ ದಿನಗಳಲ್ಲಿ ಬ್ರಿಟನ್ ಮೇಲೆ ಬಿದ್ದಿತ್ತು. ನಾಯಕರು ಚಳುವಳಿಯನ್ನು ಹತ್ತಿಕ್ಕಲು ತಮ್ಮೆಲ್ಲ ಶಕ್ತಿಯನ್ನು ಉಪಯೋಗಿಸಿದರು. ಅವರ ಮುಖ್ಯ ಪ್ರೇರಣೆ ‘ದೇಶಭಕ್ತಿ. ಜರ್ಮನಿಯ ಜೊತೆ ಯುದ್ಧ ಶುರುವಾಗುವ ಸೂಚನೆಗಳಿದ್ದ ಅಗಡೀರ್ ಘಟನೆಯ ಹೊತ್ತಿಗೆ ಇದು ನಡೆಯಿತು. ಈಗ ಎಲ್ಲರಿಗೂ ಗೊತ್ತಿರುವಂತೆ ಪ್ರಧಾನಿ ಕಾರ್ಮಿಕ ನಾಯಕನನ್ನು ಗುಪ್ತ ಸಭೆಗೆ ಕರೆದರು. ತಂದೆ ನೆಲವನ್ನು ಮುಕ್ತಿಗೊಳಿಸಿ ಎಂದು ಕೋರಿದರು. ಕಾರ್ಮಿಕ ನಾಯಕರು ತಮಗೆ ಸಾಧ್ಯವಿದ್ದ ಎಲ್ಲವನ್ನೂ ಮಾಡಿ ಬೂರ್ಜ್ವಾ ಆಡಳಿತವನ್ನು ಬಲಪಡಿಸಿದರು. ಬಂಡವಾಳಶಾಹಿಗಳ ವಿನಾಶಕಾರಿ ಕೃತ್ಯಕ್ಕೆ ದಾರಿ ಮಾಡಿಕೊಟ್ಟರು.

ದ್ರೋಹ

ಗಣಿಕಾರ್ಮಿಕರು, ರೈಲ್ವೆ ಕಾರ್ಮಿಕರು ಮತ್ತು ಸರಕುಸಾಗಾಣಿಕೆ ಕಾರ್ಮಿಕರು ಸಾರ್ವತ್ರಿಕ ಮುಷ್ಕರಕ್ಕೆ ದ್ರೋಹ ಬಗೆದ ‘ಕಪ್ಪು ಶುಕ್ರವಾರ'ದ ನಂತರ, ೧೯೨೦ರಲ್ಲಿ ಚಳುವಳಿ ತನ್ನ ಮೊದಲ ದಾರಿಗೆ ಬಂತು.
ಸುಧಾರಣೆಗೆ ಕ್ರಾಂತಿಯ ಭಯ ಅವಶ್ಯ

.. .. ಬ್ರಿಟಿಷ್ ಬೂರ್ಜ್ವಾಗಳು ಈ ತೆರನಾಗಿ ಕ್ರಾಂತಿಯನ್ನು ತಡೆಗಟ್ಟಬಹುದು ಎಂದು ಗುರುತಿಸಿದರು. ಆದ್ದರಿಂದ ಸುಧಾರಣೆಗಳನ್ನು ಪರಿಚಯಿಸುವುದಕ್ಕೆ ನಿಧಾನ ಧೋರಣೆ ಒಂದೇ ಸಾಕಾಗುವುದಿಲ್ಲ, ಕ್ರಾಂತಿಯ ನಿಜವಾದ ಭಯ ಅವಶ್ಯ.

ಸಾಮಾಜಿಕ ಐಕ್ಯತೆ

ತನ್ನ ದಾರಿಯಿಂದ ಆಚೀಚೆ ಸರಿಯಲು ನಿರಾಕರಿಸುವ ಉಳ್ಳವರ ವರ್ಗವನ್ನು ಸರ್ವನಾಶ ಮಾಡಿದ ಬಳಿಕ ವರ್ಗಸಂಘರ್ಷದ ಮೂಲ ಉದ್ದೇಶವನ್ನು ಸಾಧಿಸಿದಂತಾಯಿತು. ಆದರೆ ಇಲ್ಲ, ಮ್ಯಾಕ್‌ಡೊನಾಲ್ಡ್ ಸಾಮಾಜಿಕ ಐಕ್ಯತೆಯನ್ನು ಉದ್ದೀಪಿಸಬಯಸುತ್ತಾರೆ. ಯಾರೊಂದಿಗೆ ಐಕ್ಯತೆ? ಕಾರ್ಮಿಕ ವರ್ಗದ ಐಕ್ಯತೆ ಎಂದರೆ ಬೂರ್ಜ್ವಾಗಳ ಜೊತೆ ಆಂತರಿಕ ಹೊಂದಾಣಿಕೆ ಮಾಡಿಕೊಂಡಂತಲ್ಲವೆ?

ಮ್ಯಾಕ್ ಡೊನಾಲ್ಡ್ ಬೋಧಿಸುವ ಐಕ್ಯತೆ ಶೋಷಿತರು ಶೋಷಕರ ಜೊತೆ ಮಾಡಿಕೊಂಡ ಐಕ್ಯತೆ. ಬೇರೆ ಪದಗಳಲ್ಲಿ ಹೇಳುವುದಾದರೆ ಶೋಷಣೆಯ ಮುಂದುವರಿಕೆ.

ಕ್ರಾಂತಿ - ಒಂದು ವಿಪತ್ತು

ಮ್ಯಾಕ್‌ಡೊನಾಲ್ಡ್ ಹೇಳುತ್ತಾರೆ: ‘ರಷ್ಯಾ ಕ್ರಾಂತಿಯು ನಮಗೆ ಬಹುದೊಡ್ಡ ಪಾಠವನ್ನು ಹೇಳಿಕೊಟ್ಟಿದೆ. ಕ್ರಾಂತಿಯೆಂದರೆ ವಿನಾಶ ಮತ್ತು ವಿಪತ್ತು ಎರಡೂ ಎಂಬ ಪಾಠ ಹೇಳಿಕೊಟ್ಟಿದೆ.

ಕ್ರಾಂತಿಯು ಬರೀ ವಿಪತ್ತನ್ನುಂಟುಮಾಡುತ್ತದೆ! ಆದರೆ ಬ್ರಿಟಿಷ್ ಪ್ರಜಾಪ್ರಭುತ್ವ? ಅದು ಸಾಮ್ರಾಜ್ಯಶಾಹಿ ಯುದ್ಧಕ್ಕೆ ದಾರಿ ಮಾಡಿಕೊಟ್ಟಿತು.. .. ಯುದ್ಧದಿಂದ ಆದ ವಿನಾಶಕ್ಕೆ ಕ್ರಾಂತಿಯ ವಿಪತ್ತನ್ನು ಹೋಲಿಸುವಂತೆಯೇ ಇಲ್ಲ. ಝಾರ್‌ನನ್ನು, ಕುಲೀನ ಜಮೀನ್ದಾರರನ್ನು, ಬೂರ್ಜ್ವಾಗಳನ್ನು ಕೆಳಗಿಳಿಸಿ, ಚರ್ಚನ್ನು ಅಲುಗಾಡಿಸಿ, ೧೩ ಕೋಟಿ ಜನರ ದೇಶವೇ ಹೊಸ ಬದುಕು ಪಡೆದ ಕ್ರಾಂತಿಯನ್ನು ವಿಪತ್ತು ಎಂದು ಕರೆಯಲು ಕೆಪ್ಪ ಕಿವಿಗಳು ಮತ್ತು ನಾಚಿಕೆಯಿಲ್ಲದ ಮುಖಗಳಿಗಷ್ಟೇ ಸಾಧ್ಯ.

ಶಾಂತಿಯುತ

ತನ್ನ ಅಧಿಕಾರ ಮತ್ತು ಆಸ್ತಿಯನ್ನು ಆಳುವ ವರ್ಗ ಎಂದು ಶಾಂತಯುತವಾಗಿ ಬಳಸಿದೆ? ಅದರಲ್ಲೂ ಬ್ರಿಟಿಷ್ ಬೂರ್ಜ್ವಾಗಳಂತೆ ಶತಮಾನಗಳಷ್ಟು ಹಿಂದಿನಿಂದ ವಿಶ್ವವನ್ನು ದೋಚಿರುವ ವರ್ಗ?
ಸೋಶಿಯಲಿಸಂನ ಗುರಿ ಶಾಂತಿ

ಇದು ಸಂಪೂರ್ಣ ನಿರ್ವಿವಾದ ಸಂಗತಿ - ಸೋಶಿಯಲಿಸಂನ ಮೊದಲ ಗುರಿ ಬಲವನ್ನು ನಾಶ ಮಾಡುವುದು, ಮೊದಲು ಒರಟಾದ ರಕ್ತಸಿಕ್ತ ವಿಧಾನಗಳಲ್ಲಿ, ನಂತರ ಬೇರೆ ಗುಪ್ತ ಮಾರ್ಗಗಳಲ್ಲಿ.
- ಟ್ರಾಟ್‌ಸ್ಕಿ, ‘ಎಲ್ಲಿದೆ ಬ್ರಿಟನ್?'
ವಿಶ್ವಕ್ರಾಂತಿಯ ಗುರಿ

೧. ಬಂಡವಾಳಶಾಹಿಯನ್ನು ಕಿತ್ತೊಗೆಯುವುದು
೨. ಮಾನವ ಕುಲದ ಬಳಕೆಗಾಗಿ ಪ್ರಕೃತಿಯನ್ನು ನಿಯಂತ್ರಿಸುವುದು
ಬುಖಾರಿನ್ ವ್ಯಾಖ್ಯಾನ್ ಹೀಗೆ.

ಸಾಮ್ರಾಜ್ಯಶಾಹಿ

ಸಾಮ್ರಾಜ್ಯಶಾಹಿಯು ಬಂಡವಾಳಶಾಹಿ ಬೆಳವಣಿಗೆಯ ಒಂದು ಹಂತ. ಆಗ ಏಕಾಧಿಪತ್ಯ ಮತ್ತು ಆರ್ಥಿಕ ಬಂಡವಾಳಗಳು ಅತ್ಯಧಿಕ ಹೊಂದಿ ಬಂಡವಾಳ ರಫ್ತು ಮಾಡುವುದು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅಂತರರಾಷ್ಟ್ರೀಯ ಸಮಿತಿಯೊಂದು ಪ್ರಪಂಚವನ್ನೇ ವಿಭಾಗ ಮಾಡುತ್ತದೆ. ಅತಿದೊಡ್ಡ ಬಂಡವಾಳಶಾಹಿ ದೇಶಗಳು ಭೂಮಂಡಲವನ್ನೇ ಪಾಲು ಮಾಡಿ ಹಂಚಿಕೊಳ್ಳುತ್ತವೆ.

-ಲೆನಿನ್
ಕನ್ನಡಕ್ಕೆ : ಡಾ .ಎಚ್ .ಎಸ್ . ಅನುಪಮಾ

ಸಹಪಂಕ್ತಿ ಭೋಜನದಿಂದಲೇ ಜಾತಿ ಸಾಮರಸ್ಯ ಸಾಧ್ಯ : ಪ್ರೊ ಬಿ ವಿ ವೀರಭದ್ರಪ್ಪ ಸ೦ದರ್ಶನ,

- ಸಂದರ್ಶನ :ಹರ್ಷ ಕುಮಾರ್ ಕುಗ್ವೆ

ಕೃಪೆ : ದ ಸ೦ಡೆ ಇ೦ಡಿಯನ್

ಬಿ ವಿ ವೀರಭದ್ರಪ್ಪ

ನಾಡಿನಲ್ಲಿ ವೈಚಾರಿಕ ಸಾಹಿತ್ಯ ಪರಂಪರೆಗೆ ಬಹಳಷ್ಟು ಕೊಡುಗೆ ನೀಡಿರುವವರು ನೀವು. ವೈಚಾರಿಕ ಸಾಹಿತ್ಯ ರಚನೆಗೆ ತೊಡಗಲು ನಿಮಗಿದ್ದ ಪ್ರೇರಣೆಗಳೇನು?

ನನಗೆ ನನ್ನ ಸುತ್ತಮುತ್ತಲಿನ ಸಮಾಜವು ಧರ್ಮನಿಷ್ಠತೆ, ಜಾತಿ ನಿಷ್ಠತೆಯ ಅಂಧಕಾರದಲ್ಲಿ ಬಳಲುತ್ತಿದೆ ಎನಿಸಿತ್ತು. ಕಥೆ ಕವನಕ್ಕಿಂತ ವೈಚಾರಿಕ ಸಾಹಿತ್ಯ ಜನರನ್ನು ಜಾಗೃತಗೊಳಿಸಬಲ್ಲದು ಎಂಬ ನಂಬಿಕೆ ನನ್ನದಾಗಿತ್ತು. ಹಾಗಾಗಿ ಜನರಿಗೆ ವಿಚಾರವನ್ನು ನೇರವಾಗಿ ತಲುಪಿಸಬೇಕೆಂಬ ಪ್ರೇರಣೆ ಉಂಟಾಯಿತು. ಜನರು ಯಾವುದನ್ನು ಅತ್ಯಂತ ಪವಿತ್ರ, ಪೂಜ್ಯ ಎಂದು ತಿಳಿದಿದ್ದರೋ ಅದರ ಮೂಲ ಪರಿಕಲ್ಪನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದಲೇ ಅನೇಕ ಲೇಖನಗಳನ್ನು ಬರೆಯುತ್ತಾ ಹೋದೆ. ನನ್ನಲ್ಲಿ ವೈಚಾರಿಕ ಪ್ರಜ್ಞೆ ಬೆಳೆಯಲು ಕಾರಣ ಜನಪದರು. ಅವರ ನುಡಿ, ಬದುಕಿನ ಪ್ರೀತಿ, ಸ್ಥಾವರ ನಿರಾಕರಣದ ಪರಿಕಲ್ಪನೆಗಳು ಅತ್ಯಂತ ಆರೋಗ್ಯಕರವಾದವು. ಅಕ್ಷರ ಜಗತ್ತಿನ ಮೌಢ್ಯಗಳು ಜನಪದರಲ್ಲಿಲ್ಲ. ಎರಡನೆಯದಾಗಿ ಪ್ರೊ. ಕೋವೂರ್, ಎಚ್. ನರಸಿಂಹಯ್ಯ ಅವರನ್ನು ಆಹ್ವಾನಿಸಿ ಭಾಷಣ ಮಾಡಿಸಿದ್ದೆವು. ಇವೂ ನನಗಾದ ಪ್ರೇರಣೆಗಳೇ.

ಇದಕ್ಕೆ ನಿಮಗೆ ಸಾಹಿತ್ಯಕವಾಗಿ ಏನಾದರೂ ಪ್ರೇರಣೆಗಳಿದ್ದವೇ?

ಪರಂಪರೆಯೊಂದಿಗೆ ಹೇಗೆ ಅನುಸಂಧಾನ ನಡೆಸಬೇಕೆಂಬುದನ್ನು ನಮ್ಮಲ್ಲಿ ಪಂಪ ಮತ್ತು ಅವನ ಸಮಕಾಲೀನ ಕವಿಗಳು, ವಚನಕಾರರು, ದಾಸರು ತೋರಿಸಿಕೊಟ್ಟಿದ್ದಾರೆ. ವಚನಕಾರರು ವೇದ ಉಪನಿಷತ್ತುಗಳಲ್ಲಿನ ಮಿತಿ ಹಾಗೂ ಮೌಲ್ಯಗಳನ್ನು ಅರ್ಥೈಸಿದ ವಿಶಿಷ್ಟ ಬಗೆಗಳು ನನ್ನನ್ನು ಪ್ರಭಾವಿಸಿವೆ. ನಮ್ಮ ಇಂದಿನ ಸಮಕಾಲೀನ ತಲ್ಲಣಗಳಿಗೆ ಒಳಬೇರುಗಳು ಹಾಗೂ ಉತ್ತರಗಳು ವೇದ, ಉಪನಿಷತ್ತುಗಳಲ್ಲೇ ಇವೆ. ಆದ್ದರಿಂದ ನನ್ನ ಅಧ್ಯಯನ ಆ ಕುರಿತಾಗಿಯೇ ಇದೆ.

ನಿಮ್ಮ ಬರಹಗಳಿಗೆ ಸಿಕ್ಕಂತಹ ಪ್ರತಿಕ್ರಿಯೆ, ಪ್ರೋತ್ಸಾಹಗಳೇನಾಗಿದ್ದವು?

ನಾನು ಲಂಕೇಶ್ ಪತ್ರಿಕೆ ಪ್ರಾರಂಭವಾದ ಹೊಸತರಲ್ಲಿ ಒಂದು ಲೇಖನ ಬರೆದು ಕಳಿಸಿದ್ದೆ. ಆಗ ಅವರು ಅದನ್ನು ಮೆಚ್ಚಿಕೊಂಡು ನೀವು ಪತ್ರಿಕೆಗೆ ಬರೀತಾ ಇರಿ ಎಂದರು. ನಂತರ ಬರೆಯುತ್ತಾ ಹೋದೆ. ನನ್ನ ಲೇಖನಗಳನ್ನು ವೈಚಾರಿಕ ಲೇಖನಗಳು ಅಂತ ಹೆಸರಿಟ್ಟಿದ್ದು ಅವರೇ. ನನಗೆ ಅದೇನೂ ಗೊತ್ತಿರಲಿಲ್ಲ. ಆ ಕಾಲದಲ್ಲಿ ಸಂಪ್ರದಾಯಗಳು ಜಾಸ್ತಿ ರೂಢಿಯಲ್ಲಿದ್ದು ವಿದ್ಯಾವಂತರಾದವರೂ ಅವಕ್ಕೇ ಗಂಟು ಬಿದ್ದಿದ್ದಂತಹ ಸಂದರ್ಭ. ಆಗ ಲಂಕೇಶ್ ಅವರು ನನ್ನ ಲೇಖನಗಳನ್ನು ಪ್ರಕಟಿಸುವ ಜೊತೆಗೆ ’ವೇದಾಂತ ರೆಜಿಮೆಂಟ್’ ಶೀರ್ಷಿಕೆಯ ನನ್ನ ಲೇಖನಗಳ ಸಂಗ್ರಹ ಪುಸ್ತಕವನ್ನೂ ಪ್ರಕಟಿಸಿದರು. ಇಂದು ನಮ್ಮ ಉಡುಗೆ ತೊಡುಗೆ ಜೀವನ ವಿಧಾನಗಳೆಲ್ಲಾ ಅತ್ಯಂತ ಆಧುನಿಕವಾಗಿವೆಯಾದರೂ ಬಹಳಷ್ಟು ಜನರು ಮಡಿವಂತಿಕೆಗಳನ್ನು ಬಿಟ್ಟು ಬರಲು ತಯಾರಿಲ್ಲ. ಸಮಾಜ ಮುಂದುವರೆಯಬೇಕಾದರೆ ಇಂತಹ ಅಂಧವಿಶ್ವಾಸಗಳಿಂದ ಹೊರಬರುವ ಅಗತ್ಯ ಇದೆ ಎನ್ನುವುದು ನನ್ನ ಅಭಿಪ್ರಾಯ.

ತಾವು ಇತ್ತೀಚೆಗೆ ಬರೆಯುತ್ತಿಲ್ಲವಲ್ಲ?

ಇಲ್ಲ. ಇತ್ತೀಚೆಗೆ ಬರೆಯುವ ಶಕ್ತಿ ಕುಂದಿದೆ. ನೆನಪಿರುವುದಿಲ್ಲ. ಏನಾದರೂ ಬರೆಯಲು ಕುಳಿತರೆ ಅದರ ಹಿಂದೆ ಮುಂದಿನ ವಿಷಯಗಳು ನೆನಪಿಗೆ ಬರುವುದಿಲ್ಲ.

ಇಂದು ವೈಜ್ಞಾನಿಕ ಚಿಂತನೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳು ಕೆಲಸ ಮಾಡುತ್ತಿವೆಯಾ?

ಹಾಗಾಗುತ್ತಿಲ್ಲ ಎನ್ನುವುದೇ ವಿಷಾದ. ಇಂದು ಸಮಾಜದಲ್ಲಿ ವೈಜ್ಞಾನಿಕತೆ ಹೆಚ್ಚುತ್ತಿಲ್ಲ ಎಂದರೆ ಅದು ವಿಜ್ಞಾನದ ವೈಫಲ್ಯವಲ್ಲ. ಅದು ಜನರ ವೈಫಲ್ಯ. ವೈಜ್ಞಾನಿಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ವಿಜ್ಞಾನ ದಿನೇ ದಿನೇ ಪ್ರಗತಿಯಲ್ಲಿದೆ. ಸ್ಟೀಫನ್ ಹಾಕಿಂಗ್‌ನಂತವರು ಅದ್ಭುತವಾಗಿ ಬರೆಯುತ್ತಿದ್ದಾರೆ. ಆದರೆ ನಮ್ಮ ಮಾಧ್ಯಮಗಳು ಅವನ್ನು ಪ್ರಚುರಪಡಿಸುತ್ತಿಲ್ಲ. ಮೂಢನಂಬಿಕೆಗಳನ್ನು ಪ್ರಚಾರ ಮಾಡುವುದರಿಂದ ಮಾಧ್ಯಮಗಳಿಗೆ ಆರ್ಥಿಕ ಲಾಭವಿರುವುದರಿಂದ ಅವುಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಾರೆ. ಸಮಾಜದಲ್ಲಿ ಬಹಳ ಜನರು ವೈಚಾರಿಕತೆ ಅಳವಡಿಸಿಕೊಳ್ಳದಿದ್ದರೆ ಜನರ ಮೌಢ್ಯವನ್ನು ಬಳಸಿಕೊಂಡು ಸುಖಜೀವನ ನಡೆಸುವ ವರ್ಗಗಳಿಗೆ ಲಾಭವಿದೆ. ಹೀಗಾಗಿಯೇ ಮಾಧ್ಯಮಗಳೂ ಅಂತಹ ವರ್ಗಗಳಿಗೆ ಲಾಭವಾಗುವಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ.

ಮೊನ್ನೆ ಪೇಜಾವರ ಸ್ವಾಮಿಗಳು ಸಹಪಂಕ್ತಿ ಭೋಜನ ಕುರಿತು ಹೇಳಿದ ಮಾತುಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಪೇಜಾವರರು ಮಠಾಧಿಪತಿಗಳು ಈ ಹಿಂದೆ ದಲಿತರನ್ನೂ ತಮ್ಮ ಭಕ್ತರನ್ನಾಗಿಸಿಕೊಳ್ಳುವ ಕಾರಣಕ್ಕೆ ದಲಿತರ ಕೇರಿಯಲ್ಲಿ ಪಾದಯಾತ್ರೆ ಮಾಡಿದರು. ಜಾತಿಗಳ ನಡುವೆ ನಿಜಕ್ಕೂ ಸಾಮರಸ್ಯ ಮೂಡಿಸುವ ಉದ್ದೇಶ ಅವರಿಗೇನಾದರೂ ಇದ್ದಿದ್ದರೆ ದಲಿತರ ಕೇರಿಗಳಲ್ಲಿ ಮತ್ತು ಮೇಲ್ಜಾತಿಯವರ ಕೇರಿಗಳಲ್ಲಿ ಸಹಪಂಕ್ತಿ ಭೋಜನವನ್ನು ಅವರು ಏರ್ಪಡಿಸಬೇಕು. ಅದಕ್ಕೆ ಇವರು ತಯಾರಿಲ್ಲ. ಇಂದು ಪರಿಸ್ಥಿತಿ ಹೇಗಿದೆ ಎಂದರೆ ಆರ್ಥಿಕವಾಗಿ ಉತ್ತಮ ಹಂತದಲ್ಲಿರುವ, ವಿದ್ಯಾವಂತ ದಲಿತರಿಗೆ ಮೇಲ್ಜಾತಿ ಮನೆಗಳಲ್ಲಿ ಪ್ರವೇಶ ಸುಲಭವಿಲ್ಲ. ಒಬ್ಬ ಮೇಲಧಿಕಾರಿ ದಲಿತನಾಗಿದ್ದು ಕೆಳಗಿನ ಅಧಿಕಾರಿ ಮೇಲ್ಜಾತಿಯವನಾಗಿದ್ದರೆ ಆ ಮೇಲಧಿಕಾರಿಯ ಮನೆಯೊಳಗೆ ಕರೆಯುವ ಪರಿಸ್ಥಿತಿ ಇಂದೂ ಇಲ್ಲ. ಇಂತಹ ಕೀಳು ಮನಸ್ಥಿತಿಯೇ ನಮ್ಮ ದೇಶದ ಅವನತಿಗೆ ಕಾರಣ.

ಪ್ರಬಲ ಜಾತಿಗಳೆಲ್ಲಾ ಜಾತಿ ಸಮಾವೇಶಗಳನ್ನು ನಡೆಸುವ ಪ್ರಕ್ರಿಯೆ ನಡೆಯುತ್ತಿದೆ. ಇದು ಸಮಾಜದಲ್ಲಿ ಆರೋಗ್ಯಕರ ವಾತಾವರಣ ಉಂಟುಮಾಡುತ್ತದೆಯಾ?

ಈಗ ನೋಡಿ ಟಿವಿಯಲ್ಲಿ ಬರುತ್ತಿದೆ. ಒಕ್ಕಲಿಗೆರೆಲ್ಲ ಒಂದಾಗಬೇಕು, ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಬೇಕು ಎಂದೆಲ್ಲಾ ಹೇಳುತ್ತಿದ್ದಾರೆ. ಆದರೆ ಒಕ್ಕಲಿಗರಲ್ಲೇ ಮತ್ತೆ ನೂರಾರು ಜಾತಿಗಳಿವೆಯಲ್ಲ? ನಾವೆಲ್ಲಾ ಜಾತಿ ಪಂಗಡಗಳನ್ನು ಬಿಟ್ಟು ಒಂದು ಎನ್ನುವಂತಾಗಿದ್ದರೆ ಸಮಾಜ ಪ್ರಗತಿಯೆಡೆ ಸಾಗುತ್ತಿತ್ತು. ಆದರೆ ನಮ್ಮ ಪರಂಪರೆಯಲ್ಲಿಯೇ ಒಡೆದು ಆಳುವ ಪದ್ಧತಿ ಹಾಸು ಹೊಕ್ಕಾಗಿದೆ. ಇಲ್ಲಿ ಜನಪ್ರತಿನಿಧಿಗಳಾದವರೂ ಜಾತಿರಾಜಕಾರಣ ಮಾಡುತ್ತಾರೆ. ಜನಪ್ರತಿನಿಧಿಯಾದವರಿಗೆ ತನ್ನ ಜಾತಿ ಮುಖ್ಯವಾಗಬಾರದು. ದೇಶದ ಸಂವಿಧಾನಕ್ಕೆ ಅನುಸಾರವಾಗಿ ಆಡಳಿತ ನಡೆಸಬೇಕೇ ಹೊರತು, ತನ್ನ ಜಾತಿಯ ಹಿತದೃಷ್ಟಿಯಿಂದ ಅಲ್ಲ.

ಬಿಜೆಪಿ ಸರ್ಕಾರ ಬಂದ ಮೇಲೆ ಮಠಾಧೀಶರೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರಲ್ಲ?

ನಮ್ಮಲ್ಲಿ ರಾಜಕಾರಣ ಎನ್ನುವುದು ಸಂವಿಧಾನದಲ್ಲಿ ಹೇಳುವಂತೆ ಜಾತ್ಯಾತೀತವಾಗಿಲ್ಲ. ಸೆಕ್ಯುಲರ್ ಎಂದರೆ ಆಳ್ವಿಕೆಯಲ್ಲಿ ಧರ್ಮಗಳನ್ನಾಗಲೀ ಜಾತಿಗಳನ್ನಾಗಲೀ ಲೆಕ್ಕಕ್ಕೇ ತೆಗೆದುಕೊಳ್ಳಬಾರದು. ಆದರೆ ಇಲ್ಲಿ ಅದಕ್ಕೆ ವಿರುದ್ಧವಾಗಿಯೇ ನಡೆಯುತ್ತಿದೆ. ಯಡಿಯೂರಪ್ಪ ಲಿಂಗಾಯತ ಎಂದು ಹೇಳಿ ಮಠಗಳಿಗೆ ದುಡ್ಡು ಕೊಡುವುದನ್ನು ಆರಂಭಿಸಿ ಅಂತಹ ಕೆಟ್ಟ ಚಾಳಿಗೆ ನಾಂದಿ ಹಾಡಿದರು. ಇದರಿಂದ ಪ್ರಜೆಗಳಿಗಿಂತ ಮಠಾಧಿಪತಿಗಳ ಮಾತಿಗೇ ಹೆಚ್ಚು ಬಲ ಬಂದಿದೆ.

ನಿಮ್ಮ ಮನೆಗೆ ’ಲೋಕಾಯತ’ ಎಂದು ಹೆಸರಿಟ್ಟಿದೀರಲ್ಲ. ಏಕೆ?

ನಮ್ಮ ಈ ಮನೆಯನ್ನು ಕಟ್ಟುವಾಗ ದೇವಿಪ್ರಸಾದ್ ಚಟ್ಟೋಪಾದ್ಯಾಯ ಅವರ ’ಲೋಕಾಯತ’ ಎಂಬ ಪುಸ್ತಕ ಓದುತ್ತಿದ್ದುದರಿಂದ ಆ ಹೆಸರನ್ನೇ ಮನೆಗೆ ಇಟ್ಟಿದ್ದೆ. ಸಾಮಾನ್ಯವಾಗಿ ಮನೆಗಳಿಗೆ ದೇವರ ಹೆಸರಿಡುತ್ತಾರೆ. ದೇವರು ಬಂದು ತಮ್ಮನ್ನು ಕಾಪಾಡುತ್ತಾನೆ ಎಂದು. ’ಲೋಕಾಯತ’ ಅಂದರೆ ’ನಾನು ಈ ಲೋಕದ ಪ್ರಜೆ. ಲೋಕದ ಎಲ್ಲ ಜನರು ಸುಖ ಸಮೃದ್ಧಿಯಾಗಿರುವುದು ಜೀವನದ ಉದ್ದೇಶವಾಗಬೇಕು. ಎಲ್ಲರೊಂದಿಗೆ ನಾನು ಬದುಕಬೇಕು’ ಎಂಬ ಆಶಯವನ್ನು ಕೊಂಡೊಯ್ಯುವುದು. ಇದು ನಮ್ಮ ಭಾರತೀಯ ತತ್ವಶಾಸ್ತ್ರದ ಒಂದು ಮುಖ್ಯವಾದ ಪರಂಪರೆಯಾಗಿತ್ತು. ಈಗ ’ಲೋಕಾಯುಕ್ತ’ ಎನ್ನುವುದು ಪ್ರಚಾರಕ್ಕೆ ಬಂದ ಮೇಲೆ ಬಹಳ ಜನ ವಿದ್ಯಾವಂತರು ’ಓಹೋ ಲೋಕಾಯುಕ್ತರಾ ನೀವು?’ ಎಂದು ಕೇಳ್ತಾರೆ. ಲೋಕಾಯತ ಎಂಬುದರ ಅರಿವೇ ಅವರಿಗಿರುವುದಿಲ್ಲ.

ಪತ್ರಿಕೋದ್ಯಮದ ಭಾಗವಾಗಿಯೂ ಕೆಲಸ ನಿರ್ವಹಿಸಿದ್ದಿರಿ. ನಿಮ್ಮ ಕಾಲದ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ಯಾವ ಭಿನ್ನತೆ ಕಾಣುತ್ತೀರಿ?

ಉನ್ನತ ಉದ್ದೇಶಗಳನ್ನಿಟ್ಟುಕೊಂಡು, ಅದಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಡುವಂತವರು ಅಂದು ಇದ್ದರು. ಈಗ ಪತ್ರಿಕೆ- ಮಾಧ್ಯಮಗಳಲ್ಲಿ ಪೈಪೋಟಿ ವಿಪರೀತವಾಗಿದೆ. ಎಲ್ಲರೂ ಪತ್ರಿಕೆ ನಡೆಸುತ್ತಿರುವುದು ಹೊಟ್ಟೆ ಹೊರೆದುಕೊಳ್ಳುವುದಕ್ಕೆ ಮಾತ್ರ. ಅದಕ್ಕಾಗಿ ಜನಸಾಮಾನ್ಯರನ್ನು ಜಾಗೃತಗೊಳಿಸುವ ವಿಷಯಗಳಿಗಿಂತ ಸುಲಭವಾಗಿ ಜನರು ನೋಡುವಂತಹ, ಮನರಂಜನೆಗಳನ್ನು ಮಾತ್ರ ನೀಡುತ್ತಾರೆ. ಇಂದು ಮಾಧ್ಯಮಗಳಿಗೆ ಜಾಹೀರಾತುಗಳೇ ಮುಖ್ಯವಾಗಿಬಿಟ್ಟಿದೆ. ಜನಸಾಮಾನ್ಯರ ಪ್ರಗತಿಗಿಂತ ತಮ್ಮ ಹೊಟ್ಟೆಹೊರೆದುಕೊಳ್ಳುವುದೇ ಇಂದು ಪ್ರಧಾನ ಎಂಬಂತಾಗಿದೆ. ಸುದ್ದಿಗಳನ್ನೂ ಹಣ ತೆಗೆದುಕೊಂಡು ನೀಡುವ ದುಸ್ಥಿತಿ ಇದೆ.

ನಿಮ್ಮ ಮತ್ತು ಪತ್ರಿಕೋದ್ಯಮದ ಒಡನಾಟ ಹೇಗಾದದ್ದು?

ನಾನು ಪತ್ರಕರ್ತನಾಗಬೇಕೆಂದು ಉದ್ದೇಶ ಇಟ್ಟುಕೊಂಡವನಾಗಿರಲಿಲ್ಲ. ನಾನು ಪದವಿ ಓದುವಾಗಲೇ ಆಸಕ್ತಿಯ ಕಾರಣಕ್ಕೆ ಬರೆಯುತ್ತಿದ್ದೆ. ಒಮ್ಮೆ ಲಂಕೇಶ್ ಪತ್ರಿಕೆಗೆ ಪ್ರತಿಕ್ರಿಯೆ ಬರೆದೆ. ಅದಕ್ಕೆ ಅವರು ಮರುಪತ್ರ ಬರೆದು ನೀವು ಚೆನ್ನಾಗಿ ಬರೀತೀರಿ. ನಮ್ಮ ಪತ್ರಿಕೆಗೆ ಬರೆಯಿರಿ ಎಂದ ಮೇಲಷ್ಟೇ ನಾನು ಗಂಭೀರವಾಗಿ ನಾನಾ ವಿಷಯಗಳ ಬಗ್ಗೆ ವರದಿ, ವಿಶ್ಲೇಷಣೆಗಳನ್ನು ಬರೆಯುತ್ತಾ ಹೋದದ್ದು. ಅದರಿಂದ ಸಣ್ಣ ಪುಟ್ಟ ಬದಲಾವಣೆಗಳೂ ನನ್ನೆದುರಿಗೇ ಸಂಭವಿಸಿದ್ದು ನನಗೆ ಸಂತೋಷ ನೀಡುತ್ತಿತ್ತು. ಬರೆಯುತ್ತಾ ಬರೆಯುತ್ತಾ ವಿಷಯಗಳನ್ನು ಹೇಗೆ ನೋಡಬೇಕು, ನೋಡಬಾರದು ಎಂಬುದೂ ತಿಳಿಯುತ್ತಾ ಹೋಯಿತು. ಸುತ್ತಮುತ್ತಲಿನ ಹಲವಾರು ವಿಷಯಗಳ ಬಗ್ಗೆ ಬರೆದೆ.

ನಾವು ತಂತ್ರಜ್ಞಾನದ ಬೆಳವಣಿಗೆ ಉತ್ತುಂಗದಲ್ಲಿದ್ದೇವೆ. ಆದರೆ ಈ ಆಧುನಿಕತೆ ತಂತ್ರಜ್ಞಾನಗಳು ವೈಚಾರಿಕತೆಯನ್ನು ಮುಂದೆ ಕೊಂಡೊಯ್ಯಬಲ್ಲವಲ್ಲವೇ?

ಹಿಂದೆಲ್ಲಾ ವಿಚಾರವಾದಿಗಳು, ಲೇಖಕರು ಸಮಾವೇಶಗಳನ್ನು, ರ‍್ಯಾಲಿಗಳನ್ನೆಲ್ಲಾ ಸಂಘಟಿಸಿದ್ದೆವು. ವೈಚಾರಿಕ ಚಿಂತನೆ ಮತ್ತು ಮೂಢನಂಬಿಕೆಗಳ ವಿರುದ್ಧ ಜಾಗೃತಿಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದೆವು. ಆದರೆ ಇಂದು ಅಂತಹ ಆಂದೋಲನಗಳು ಇಲ್ಲ. ಇಂದು ಆಧುನಿಕೀಕರಣದ ಭರಾಟೆಯಲ್ಲಿ ಜನರು ತಮ್ಮ ತಮ್ಮ ಜೀವನ ನಿರ್ವಹಣೆಯನ್ನೇ ಮುಖ್ಯವಾಗಿಸಿಕೊಂಡಿದ್ದಾರೆ. ಸಾಮಾಜಿಕ ಕೆಲಸಗಳಿಗೆ ಸಮಯವೇ ಇಲ್ಲದಂತೆ ಹೈಟೆಕ್ ಆಗಿದ್ದೇವೆ ಇಂದು. ನಮ್ಮಲ್ಲಿ ಕಂಪ್ಯೂಟರ್ ಬಂದಿದೆ, ಇಂಟರ್ನೆಟ್ ಬಂದಿದೆ. ಎಲ್ಲಾ ಸರಿ. ಆದರೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ಇಂದು ಆಧುನಿಕತೆ ಎನ್ನುವುದು ಅನಿವಾರ್ಯವಾಗಿ ಬರುತ್ತಿದೆ. ಜಗತ್ತು ಹಳ್ಳಿಯಾಗಿ ಬಿಟ್ಟಿದೆ. ಈ ಕಾರಣದಿಂದಲೇ ಇಂದು ಅಸ್ತಿತ್ವಕ್ಕಾಗಿ ಸಂಘರ್ಷವೂ ನಡೆಯುತ್ತಿದೆ. ಆದರೆ ಸಂಸ್ಕೃತಿ, ನೈತಿಕತೆಗಳು ತಮ್ಮ ಸ್ಥಾನ ಕಳೆದಕೊಂಡಿವೆ. ನೈತಿಕವಾಗಿ, ಆಧ್ಯಾತ್ಮಿಕವಾಗಿ ಹಾಗೂ ಮಾನವೀಯವಾಗಿ ಮೌಲ್ಯಗಳನ್ನು ನಾವು ಉಳಿಸಿಕೊಂಡು ಹೋಗುತ್ತಿಲ್ಲ ಎನ್ನುವುದು ಖೇದಕರ. ಇದರ ನಡುವೆಯೂ ಅಲ್ಲಲ್ಲಿ ಕೆಲವರಿದ್ದಾರೆ. ಸಿದ್ದೇಶ್ವರ ಸ್ವಾಮಿ ಎಂಬುವವರೊಬ್ಬರಿದ್ದಾರೆ. ಅವರು ಕಾವಿ ಉಡುವುದಿಲ್ಲ. ಲುಂಗಿ ಜುಬ್ಬ ತೊಡುತ್ತಾರೆ. ತಮ್ಮ ಬಟ್ಟೆ ತಾವೇ ಒಗೆದುಕೊಳ್ಳುತ್ತಾರೆ. ಸ್ವಂತ ಕಾರಿಟ್ಟುಕೊಂಡಿಲ್ಲ. ದೂರ ಊರಿಗೆ ಹೋದರೆ ಮಾತ್ರ ಬಸ್‌ನಲ್ಲಿ ಓಡಾಡುತ್ತಾರೆ. ಉಳಿದಂತೆ ನಡೆದೇ ಹೋಗುತ್ತಾರೆ. ಇವರಿಗೆ ಅಪಾರ ಸಂಖ್ಯೆ ಭಕ್ತರೂ ಇದ್ದಾರೆ. ಇಂಥವರು ಜನರಿಗೆ ದಾರಿ ತೋರಿಸಬೇಕು.

ಆರೋಗ್ಯಕರ ಸಮಾಜದ ಕನಸು ಕಂಡಿರುವ ನೀವು ಇಂದಿನ ನಮ್ಮ ಅಭಿವೃದ್ಧಿ ಮಾದರಿಗಳ ಬಗ್ಗೆ ಏನು ಹೇಳುತ್ತೀರಿ?

ಇಂದಿನ ಅಭಿವೃದ್ಧಿ ಯೋಜನೆಗಳೆಲ್ಲಾ ತಯಾರಾಗುತ್ತಿರುವುದು ಕಾರ್ಪೊರೇಟ್ ಕಛೇರಿಗಳಲ್ಲಿ. ನೆಲದ ನೋವೇನೆಂದೇ ತಿಳಿಯದವರು ಈ ದೇಶದ ಅಭಿವೃದ್ಧಿ ಬಗ್ಗೆ ಯೋಜನೆಗಳನ್ನು ಸಿದ್ಧಪಡಿಸುತ್ತಾರೆ. ಬಡವರ ಹೆಸರಿನಲ್ಲಿಯೇ ಇರುವ ಇಂತಹ ಯೋಜನೆಗಳು ಅಕ್ಷರವಂತರಿಗೆ, ಶ್ರೀಮಂತರಿಗೆ, ಮೇಲ್ಜಾತಿಗಳಿಗಷ್ಟೇ ದಕ್ಕಿಬಿಡುವ ಯೋಜನೆಗಳಾಗಿವೆ.

ಸಮಾಜವನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಲ್ಲಿ ಯಾವುದು ಮುಖ್ಯ ಎನ್ನಿಸುತ್ತದೆ ನಿಮಗೆ?

ಭ್ರಷ್ಟಾಚಾರವೇ ಎಲ್ಲದಕ್ಕಿಂತ ದೊಡ್ಡ ಸಮಸ್ಯೆ. ಅದನ್ನು ಯಾರು ಯಾರ ಮೇಲೆ ಹೇಳುವುದು? ಭ್ರಷ್ಟಾಚಾರ ಇದೆ ಎಂದು ಹೇಳುವವರೇ ದೊಡ್ಡ ಭ್ರಷ್ಟರಾಗಿರುತ್ತಾರಲ್ಲ. ಯಾರಾದರೂ ಲಂಚ ಕೇಳಿದಾಗ ಪ್ರಶ್ನಿಸದೆ ಹಿಂದೆ ಮುಂದೆ ನೋಡದೆ ಕೊಟ್ಟು ಬರುವವರಿದ್ದಾಗ ಭ್ರಷ್ಟಾಚಾರ ಹೇಗೆ ನಿಲ್ಲುತ್ತದೆ ಹೇಳಿ?

ಇಂದಿನ ತರುಣರಿಗೆ ಏನು ಹೇಳಲು ಇಚ್ಛಿಸುತ್ತೀರಿ?

ಇಂದಿನ ಯುವಕರಿಗೆ ನಾನು ಹೇಳಲು ಇಚ್ಛಿಸುವುದಿಷ್ಟೆ. ಇಂದಿನ ಪರಿಸ್ಥಿತಿ, ಸಮಾಜ ಹದಗೆಟ್ಟಿದೆ ನಿಜ. ಅದರಲ್ಲೂ ಸಹ ನೀವು ಸಮಾಜದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತರಾಗದೇ ಬದುಕುವುದನ್ನು ಕಲಿಯಬೇಕು. ಪ್ರಾಮಾಣಿಕವಾಗಿ ದುಡಿದು ಜೀವನ ನಡೆಸುತ್ತಾ ಮತ್ತೊಬ್ಬರಿಗೆ ಮಾರ್ಗದರ್ಶನ ನೀಡಲು ಕಲಿಯಬೇಕಿದೆ.

ಯುವ ಬರಹಗಾರರಿಗೆ ನಿಮ್ಮ ಸಲಹೆ ಸೂಚನೆ ಏನು?

ಯುವ ಬರಹಗಾರರಾದವರು ನಿರಂತರ ಓದಿನಲ್ಲಿ ತೊಡಗಿರಬೇಕು. ಭಾರತೀಯ ತತ್ವಶಾಸ್ತ್ರ, ವೇದ ಉಪನಿಷತ್ತುಗಳಂತಹ ಪ್ರಾಚೀನ ಗ್ರಂಥಗಳನ್ನು ಮತ್ತು ಆಧುನಿಕ ಚಿಂತನೆಗಳನ್ನು ಅಧ್ಯಯನ ನಡೆಸಬೇಕು. ಇಲ್ಲದಿದ್ದರೆ ಸಾಮಾಜಿಕ ವಿಷಯಗಳ ಬಗ್ಗೆ ಸ್ಪಷ್ಟ ನಿಲುವುಗಳು ಹೊರಬರುವುದಿಲ್ಲ. ಹಾಗೆಯೇ ಸಾಮಾಜಿಕವಾದ ಉದ್ದೇಶವಿರದ ಬರಹಕ್ಕೆ ಯಾವ ಬೆಲೆಯೂ ಇಲ್ಲ ಎನ್ನುವುದನ್ನು ಅವರು ಅರಿತುಕೊಳ್ಳಬೇಕು. ನಮ್ಮ ಪರಂಪರೆಯನ್ನು ಅರ್ಥಮಾಡಿಕೊಂಡರೆ ಮಾತ್ರ ಸಮಕಾಲೀನ ಸಮಾಜದ ನಾಡಿಮಿಡಿತವನ್ನು ಕೇಳಿಸಿಕೊಳ್ಳಲು ಸಾಧ್ಯ. ಹೊಸ ತಲೆಮಾರಿನ ಬರಹಗಾರರಿಗೆ ಈ ಜವಾಬ್ದಾರಿ ಬೇಕಿದೆ.

ಅಸಮಾನ ಭಾರತ...
-ಶಿವಸುಂದರ್

ಈ ಭಾರತ ಮೊದಲಿನಿಂದಲೂ ಅಸಮಾನ ಭಾರತವೇ. ಅದರಲ್ಲೂ ಬುಡಕಟ್ಟು ಸಮಾಜಗಳು ನಶಿಸಿ ಅದರ ಜಾಗದಲ್ಲಿ ಜಾತಿಯಾಧಾರಿತ ಶ್ರೇಣೀಕೃತ ಸಮಾಜ ರೂಪುಗೊಂಡ ನಂತರದ ಕಳೆದ 2000ವರ್ಷಗಳ ಭಾರತ ಇತಿಹಾಸ ಅಸಮಾನತೆಯ ಅನಂತರೂಪಗಳ ವಿಶ್ವದರ್ಶನವನ್ನೇ ತೋರಿಸಿದೆ. ಈ ಅಸಮಾನತೆಗಳ ವಿರುದ್ಧ ಕಳೆದ ಎರಡು ಸಹಸ್ರಮಾನ ಗಳಿಂದಲೂ ಹೋರಾಟವೂ ನಡೆಯುತ್ತಲೇ ಬಂದಿದೆ. ಈ ಹೋರಾಟಗಳ ಪರಿಣಾಮ ವಾಗಿಯೇ ಅಸಮಾನತೆಯ ಪ್ರಮಾಣ ಅಸಹ ನೀಯ ಪ್ರಮಾಣಕ್ಕೆ ಏರಿರಲಿಲ್ಲ. ಆದರೆ ಜಾತಿ ಆಧಾರಿತ ಸಮಾಜವನ್ನು ಆಧರಿಸಿ ಹುಟ್ಟಿ ಕೊಂಡ ರಾಜಸತ್ತೆಗಳು, ಊಳಿಗಮಾನ್ಯ ವ್ಯವಸ್ಥೆ, ನಂತರ ತಮಗೆ ಬೇಕಾದಂತೆ ಇದಕ್ಕೆ ಅಲ್ಪಸ್ವಲ್ಪಮಾರ್ಪಾಡು ಮಾಡಿಕೊಂಡು ಬ್ರಿಟಿಷರು ಅಲ್ಪಪ್ರಮಾಣದಲ್ಲಿ ಪರಿಚಯಿಸಿದ ವಸಾಹತುಶಾಹಿ-ಬಂಡವಾಳಶಾಹಿ ವ್ಯವಸ್ಥೆ ಗಳೆಲ್ಲವೂ ಜನರ ಹೋರಾಟಗಳಿಗೆ ಹಲವು ಬಗೆಯ ಅಡ್ಡದಾರಿ ಹಿಡಿಸಿ, ದಮನ ಮಾಡಿ ಜನರನ್ನು ಸಂಪನ್ಮೂಲಗಳನ್ನು ಶೋಷಿಸುವ ಮೂಲಕ ಸಾಮಾಜಿಕ-ಆರ್ಥಿಕ ಅಸಮಾನತೆ ಯನ್ನು ಕ್ರಮೇಣ ಹೆಚ್ಚಿಸುತ್ತಲೇ ಬಂದವು.ಆದರೆ 1947ರಲ್ಲಿ ಸ್ವಾತಂತ್ರ್ಯ ಬಂದಾದ ಮೇಲೆ ರಾಜಸತ್ತೆ ನಶಿಸಿ ಜನರೇ ಆಯ್ಕೆ ಮಾಡುವ ಪ್ರಜಾತಂತ್ರ ಜಾರಿಗೆ ಬಂತಷ್ಟೆ. ಸಮಾನತೆಯನ್ನು ಆಡಳಿತಾತ್ಮಕ ಆಶಯವನ್ನಾಗಿ ಸಂವಿಧಾನದಲ್ಲಿ ಸೇರಿಸಲಾಯಿತು. ಆದರೆ ಅದಕ್ಕೆ ಬೇಕಾದ ಸಂಪನ್ಮೂಲ ವಿತರಣೆಯನ್ನು ಮಾತ್ರ ಕಡ್ಡಾಯಗೊಳಿಸುವ ಯಾವ ದರ್ದನ್ನೂ ಸಂವಿಧಾನ ವಿಧಿಸಲಿಲ್ಲ. ಹೀಗಾಗಿ ‘ಪ್ರಜಾ ಸತ್ತಾತ್ಮಕ’ ಭಾರತದಲ್ಲಿ ಅಸಮಾನತೆ ಅಬಾಧಿತವಾಗಿಯೇ ಮುಂದುವರಿಯಿತು. ಅದರಲ್ಲೂ ಜಾಗತೀಕರಣದ ಕಳೆದ ಇಪ್ಪತ್ತು ವರ್ಷಗಳಂತೂ ಸಂವಿಧಾನದ ಆಶಯ ಗಳನ್ನು ಅಣಕ ಮಾಡುವ ತೆರದಿ ಅಸಮಾ ನತೆಯನ್ನು ಹೆಚ್ಚಿಸಿದೆ.

ಹಾಗೆ ನೋಡಿದರೆ, ಸಂಪತ್ತಿನ ಅಸ ಮಾನ ಹಂಚಿಕೆಯನ್ನು ಒಂದು ಮಾನದಂಡ ವನ್ನಾಗಿ ಇಟ್ಟುಕೊಂಡು ಅಳೆಯುವುದಾದರೆ ಭಾರತವು ತನ್ನ ಇತಿಹಾಸದಲ್ಲೇ ಹಿಂದೆಂದೂ ಕಾಣದಷ್ಟು ಅಸಮಾನತೆಯನ್ನು ಅನುಭವಿಸುತ್ತಿದೆ. ಈ ‘ಪ್ರಜಾತಾಂತ್ರಿಕ’ ಯುಗದಲ್ಲಿ, ಮತ್ತು ಕೆಲವರು ಜಾಗತೀ ಕರಣವೆಂದರೆ ‘ವಸುಧೈವ ಕುಟುಂಬಂಕಂ’- ಜಾಗತಿಕ ಭ್ರಾತೃತ್ವ- ಎಂದು ಮುಗ್ಧ ಮುಠ್ಠಾಳತನದಲ್ಲಿ ನಂಬುವ ಈ ಯುಗದಲ್ಲಿ ಅಸಮಾನತೆಯ ಅಸಹನೀಯತೆಗೆ ರಾಜ ಕೀಯ ಸಮಾನತೆಯ ದಿರಿಸನು ಹೊದಿಸಿ ಶೋಷಿತ ಜನರಿಗೆ ಮೋಸಮಾಡಲಾ ಗುತ್ತಿದೆ. ಆದರೆ ಈ ದಿರಿಸನ್ನು ಸ್ವಲ್ಪಪಕ್ಕಕ್ಕೆ ಸರಿಸಿ ನೋಡಿದರೆ ಈ ಅಸಮಾನತೆಯ ವಿಶ್ವ ಸ್ವರೂಪ ಅರ್ಥವಾಗುತ್ತದೆ. ಅದರಲ್ಲೂ ಜಾಗತೀಕರಣದ ಈ ಕಾಲಘಟ್ಟ ಎಂಥಾ ಕಂದರವನ್ನು ಹುಟ್ಟು ಹಾಕುತ್ತಿದೆ ಎಂದು ಗೊತ್ತಾಗುತ್ತದೆ. ಹಾಗೆ ನೋಡಿದರೆ ಅದು ಭಾರತದಲ್ಲಿ ಮಾತ್ರವಲ್ಲ. ಇಡೀ ವಿಶ್ವದಲ್ಲೇ ಅಸಮಾನತೆಯ ಕಂದರ ಈ ಕಾಲಘಟ್ಟದಲ್ಲಿ ಅಸಹನೀಯವಾಗಿ ಹೆಚ್ಚಿದೆ.

ಜಗತ್ತಿನ ಮಟ್ಟದಲ್ಲಿ ಆಸ್ತಿಪಾಸ್ತಿಗಳ ಗಳಿಕೆ ಮತ್ತು ಒಡೆತನದ ಹಂಚಿಕೆ ಯಾವ ಪ್ರಮಾಣ ದಲ್ಲಿದೆ ಎಂದು ಅಧ್ಯಯನ ಮಾಡುವ ‘ಸೂಸೀ ಕ್ರೂಜ್’ ಸಂಸ್ಥೆ ಪ್ರತಿ ವರ್ಷ ಜಾಗತಿಕ ಆಸ್ತಿ ಪಾಸ್ತಿ ವರದಿಯನ್ನು ಬಿಡುಗಡೆ ಮಾಡುತ್ತದೆ. ಈ World Wealth Report ಪ್ರಕಾರ:2011ರ ಹೊತ್ತಿಗೆ ಜಗತ್ತಿನ ಒಟ್ಟಾರೆ ಆಸ್ತಿ ಪಾಸ್ತಿಯಲ್ಲಿ ಜಗತ್ತಿನ 310 ಕೋಟಿಗೂ ಹೆಚ್ಚು ಜನರಿಗೆ 10,000 ಡಾಲರ್‌ಗಿಂತಲೂ ಕಡಿಮೆ ಆಸ್ತಿ ಇದೆ. ಇನ್ನು 100 ಕೋಟಿ ಜನರ ಆಸಿಪಾಸ್ತಿ 10,000-1,00,000 ಡಾಲರ್ ಅಷ್ಟಿತ್ತು. ಇನ್ನು ಉಳಿದ 39.8 ಕೋಟಿಯಷ್ಟು ಜನ ಒಂದು ಲಕ್ಷ ಡಾಲರ್‌ಗಿಂತಲೂ ಹೆಚ್ಚಿನ ಆಸ್ತಿಯನ್ನುಳ್ಳವರಾಗಿದ್ದರು. 2011ರ ಮಧ್ಯದ ಹೊತ್ತಿಗೆ ಇದೇ ಈ ಸಂಖ್ಯೆಗಳು ಇನ್ನಷ್ಟು ಬದ ಲಾಗಿತ್ತು. ಜಗತ್ತಿನ ಶೇ.1ಕ್ಕಿಂತಲೂ ಕಮ್ಮಿಯಾ ಗುವ 2.97 ಕೋಟಿ ಜನರ ಬಳಿ ಶೇ.33 ಕ್ಕಿಂತಲೂ ಹೆಚ್ಚಿನ ಆಸ್ತಿಪಾಸ್ತಿ ಸಂಗ್ರಹವಾಗಿದೆ.

ಅವರಲ್ಲಿ 85,000 ಜನರ ಬಳಿ 50 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಆಸ್ತಿಪಾಸ್ತಿಯಿದ್ದರೆ 29,000 ಜನರ ಬಳಿ 100 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಆಸ್ತಿಪಾಸ್ತಿಯಿತ್ತು. ಇವರಲ್ಲಿ 2700 ಜನರ ಬಳಿ 500 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಆಸ್ತಿಪಾಸ್ತಿಯಿತ್ತು. ಇದೇ ವರದಿಯ ಪ್ರಕಾರ ಭಾರತದಲ್ಲೂ ಸಹ ಈ ಆಸ್ತಿಪಾಸ್ತಿ ಗಳಿಕೆಯ ಪಿರಮಿಡ್ ಸ್ವರೂಪ ಇಡೀ ಏಷಿಯಾದಲ್ಲೇ ಅತ್ಯಂತ ಹೆಚ್ಚಾಗಿದೆ. ಪಿರಮಿಡ್ ಸ್ವರೂಪ ಎಂದರೆ ಕಡಿಮೆ ಆಸ್ತಿಪಾಸ್ತಿ ಇರುವವರು ಅತಿ ಹೆಚ್ಚು ಇರುವ ಕಾರಣಕ್ಕೆ ತಳಪಾಯ ಅಗಲವಿರುವ ಮತ್ತು ಮೇಲಕ್ಕೆ ಹೋಗುತ್ತಾ ಹೋಗುತ್ತಾ ಹೆಚ್ಚೆಚ್ಚು ಆಸ್ತಿವಂತರ ಸಂಖ್ಯೆ ಕಡಿಮೆ ಆಗುತ್ತಾ ಹೋಗುವುದರಿಂದ ಪಿರಮಿಡ್‌ನ ವಿಸ್ತಾರ ಮೇಲ್ಭಾಗದಲ್ಲಿ ಕಿರಿದಾ ಗುತ್ತಾ ಹೋಗುತ್ತದೆ.

ಇಂದು ಭಾರತದ ಆರ್ಥಿ ಕತೆಯ ಪಿರಮಿಡ್‌ನ ತುದಿಯಲ್ಲಿ ಕೆಲವು ಸಾವಿರ 1800 ಜನ ಮಾತ್ರವಿದ್ದರೆ ತಳಭಾಗದಲ್ಲಿ ಯಾವ ಆಸ್ತಿಪಾಸ್ತಿಯೂ ಇಲ್ಲದ ಕೋಟ್ಯಂತರ ಜನರಿದ್ದಾರೆ ಎಂದು ಈ ವರದಿ ಹೇಳುತ್ತದೆ. ‘ಫೊರ್ಬ್ಸ್‌’ ಸಂಸ್ಥೆ ಮೊನ್ನೆ ಹೊರತಂದ ವರದಿಯ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಭಾರತದ ಶತಕೋಟ್ಯಾಧಿಪತಿಗಳ ಸಂಖ್ಯೆ 47ಕ್ಕೇರಿದೆ. ಜಪಾನನನ್ನು ಹಿಂದಿಕ್ಕಲಾಗಿದೆ. ಮತ್ತೊಂದು ವರದಿಯ ಪ್ರಕಾರ ಭಾರತದಲ್ಲಿ ಕೋಟ್ಯಾಧೀಶರ ಸಂಖ್ಯೆ 1,60,000ಕ್ಕೇರಿದೆ. ಆದರೆ ಅದೇ ಸಮಯದಲ್ಲಿ ಸಕ್ಸೇನ ವರದಿಯ ಪ್ರಕಾರವೇ ಈ ದೇಶದಲ್ಲಿ ಶೇ.42ರಷ್ಟು ಜನರಿಗೆ ಅಂದರೆ 50 ಕೋಟಿಗೂ ಹೆಚ್ಚು ಜನರಿಗೆ ವಾರ್ಷಿಕ ಆದಾಯ ಹತ್ತು ಸಾವಿರವನ್ನೂ ದಾಟುವುದಿಲ್ಲ.

ಶೇ. 25ಕ್ಕೂ ಹೆಚ್ಚು ಜನರಿಗೆ ಆಸ್ತಿಪಾಸ್ತಿಗಳಿರಲಿ, ದುಡಿಯಲು ಅಂಗೈಯಗಲ ಭೂಮಿಯೂ ಇಲ್ಲ. ಸರಕಾರದ ಪ್ರಕಾರವೇ 10 ಲಕ್ಷಕ್ಕೂ ಹೆಚ್ಚು ಜನ ಆಸ್ತಿಪಾಸ್ತಿ ಇರಲಿ ತಲೆಯ ಮೇಲೋಂದು ಸೂರಿಲ್ಲದ ಜನರಿದ್ದಾರೆ. ಅತಿಹೆಚ್ಚು ಸಂಖ್ಯೆಯ ಸೂರಿಲ್ಲದ ಜನ ಪಶ್ಚಿಮ ಬಂಗಾಳ (1 ಲಕ್ಷಕ್ಕೂ ಹೆಚ್ಚು), ಉತ್ತರ ಪ್ರದೇಶ ಮತ್ತು ತೀವ್ರ ಅಭಿವೃದ್ಧಿ ಪೀಡಿತ ರಾಜ್ಯಗಳಾದ ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿದ್ದಾರೆ. ಕರ್ನಾಟಕದಲ್ಲೂ 25,000 ನಿರ್ಗತಿಕರಿದ್ದಾರೆ. ಇವೆಲ್ಲಾ ಕೇವಲ ಸರಕಾರಿ ಅಂಕಿ ಸಂಖ್ಯೆಗಳು. ಬಡತನದ ಪ್ರಮಾಣ ಇತ್ಯಾದಿ ಆಶಲಿತ ಮತ್ತು ಆರ್ಥಿಕತೆಯ ಸಾಮರ್ಥ್ಯವನ್ನು ಅಳೆಯಲು ಪ್ರಾರಂಭಿಸಿದಂತೆ ಅದರ ಮಾನದಂಡಗಳೇ ಬದಲಾಗಿ ಕೋಟ್ಯಾನುಕೋಟಿ ಬಡವರು ರಾತ್ರೋರಾತ್ರಿ ಕಾಗದದ ಮೇಲೆ ಶ್ರೀಮಂತ ರಾಗಿಬಿಡುವ ಪವಾಡ ಸಂಭವಿಸುವ ದೇಶವಿದು. ಆದ್ದರಿಂದ ಈ ಸಂಖ್ಯೆಗಳು ಅಸಲಿಯತ್ತಿನ ಶೇ.10 ಭಾಗವನ್ನು ಪ್ರತಿಫಲಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

ಬೆಂಗಳೂರು ಒಂದರಲ್ಲೇ ನಗರಪಾಲಿಕೆಯ ಪ್ರಕಾರವೇ 3000 ಜನ ನಿರ್ಗತಿಕರಿದ್ದರೆ, ಅನಧಿಕೃತ ಅಂದಾಜುಗಳ ಪ್ರಕಾರ ಆ ಸಂಖ್ಯೆ ಒಂದು ಲಕ್ಷ. ಬೆಂಗಳೂ ರಿನ ಭಿಕ್ಷುಕರ ಕೇಂದ್ರದಲ್ಲೇ 3000 ಕ್ಕೂ ಹೆಚ್ಚು ಜನರಿರಲಿಲ್ಲವೇ. ಅವರ ಆಸ್ತಿಪಾಸ್ತಿ ಗಳೆಂದರೆ ಅವರ ಅಂಗಾಂಗಗಳಷ್ಟೇ! ಅದ ನ್ನೂ ಸಹ ಅಲ್ಲಿನ ಅಧಿಕಾರಿಗಳು ಮಾರಿ ಕೊಂಡು ತಿನ್ನುತ್ತಿದ್ದರೆಂಬ ಸುದ್ದಿ ಬಂದು ಇನ್ನೂ ಎರಡು ವರ್ಷಗಳೂ ಆಗಿಲ್ಲ.ಇದಲ್ಲದೇ ಅಸಮಾನತೆಯನ್ನು ಅಳೆಯಲು ಗಿನಿ ಸೂಚ್ಯಂಕವೆಂಬ ಮತ್ತೊಂದು ಮಾದರಿಯನ್ನು 1979ರಿಂದ ಜಗತ್ತಿನಾದ್ಯಂತ ಅನುಸರಿಸಲಾಗುತ್ತಿದೆ.ಇಟಲಿಯ ಸಮಾಜ ಶಾಸ್ತ್ರಜ್ಞನಾದ ಕೊರ್ಯಾಡೋ ಗಿನಿಯೆಂಬ ಈ ವಿದ್ವಾಂಸ ದೇಶಗಳ ನಡುವೆ, ದೇಶದೊಳಗೆ ಅಸ್ತಿತ್ವದಲ್ಲಿರುವ ಅಸಮಾನತೆಯನ್ನು ಅಳೆಯಲು ಒಂದು ಹೊಸ ಗಣಿತ ವಿಧಾನವನ್ನು ಸೂಚಿಸಿದ. ಅದರ ಫಲಿತವೇ ಈ ಗಿನಿ ಸೂಚ್ಯಂಕ.

ಇದರ ಪ್ರಕಾರ ಗಿನಿ ಸೂಚ್ಯಂಕ 0 ಇದ್ದರೆ ಅಸಮಾನತೆ ಶೂನ್ಯ. ಸರ್ವರಿಗೂ ಸಮ ಅಂದರೆ ಗಣಿತದಲ್ಲೂ ಹೆಚ್ಚು ಕಡಿಮೆ ಇರದಷ್ಟು ಸಮಪಾಲು. ಗಿನಿ ಸೂಚ್ಯಂಕ 1ನ್ನು ತಲುಪಿಬಿಟ್ಟರೆ ಅಸಮಾನತೆಯ ಶೃಂಗ. ಅಂದರೆ ಸಂಪತ್ತೆಲ್ಲವೂ ಒಬ್ಬರ ಬಳಿಯೇ ಇದ್ದು ಆ ದೇಶದ ಉಳಿದ ಜನರ ಬಳಿ ಏನೇನೂ ಸಂಪತ್ತಿರುವುದಿಲ್ಲ ಎಂದರ್ಥ. ಮಾನವನ ಇತಿಹಾಸದಲ್ಲಿ ಪ್ರಾಯಶಃ ಎಂದೂ ಈ 0 ಅಥವಾ 1 ಎನ್ನುವ ರೀತಿಯಲ್ಲಿ ಸಮಾಜ ಧ್ರುವೀಕರಣಗೊಂಡಿಲ್ಲವಾದರೂ ದಮನಿತ ಜನರು ಸಮಾಜವನ್ನು 0 ಎಡೆಗೂ ಶೋಷಕರು 1ರೆಡೆಗೂ ಎಳೆಯುತ್ತಿರುವುದೇ ಜಗತ್ತಿನ ಇತಿಹಾಸವೆನ್ನಬಹುದು. ಅದೇನೇ ಇರಲಿ ಈ ಗಿನಿ ಸೂಚ್ಯಂಕ 0 ಇಂದ 1ರೆಡೆಗೆ ಚಲಿಸುತ್ತಿದೆ ಎಂದರೆ ಸಮಾಜ ಹೆಚ್ಚೆಚ್ಚು ಅಸಮಾನತೆಯೆಡೆಗೆ ಚಲಿಸುತ್ತಿದೆ ಎಂದರ್ಥ.

ಅಂದರೆ ಆ ದೇಶದ ಸಂಪತ್ತು ಹಲವರಿಂದ ಕಸಿದುಕೊಂಡು ಕೆಲವರೆಡೆಗೇ ಸೇರುತ್ತಿದೆ ಎಂದರ್ಥ. ಗಿನಿ ಸೂಚ್ಯಂಕ ಹೆಚ್ಚಿದೆ ಎಂದರೆ ಅಸಮಾನತೆ ಹೆಚ್ಚಿದೆ ಎಂದರ್ಥ. ಕಳೆ ದೆರಡು ದಶಕಗಳಲ್ಲಿ ನೋಡಿದರೆ ಎಲ್ಲಾ ದೇಶ ಗಳಲ್ಲೂ ಗಿನಿ ಸೂಚ್ಯಂಕ ಹೆಚ್ಚುತ್ತಲೇ ಇದೆ. ಆದರೂ ಜಗತ್ತಿನಲ್ಲಿ ಅತಿ ಕಡಿಮೆ ಗಿನಿ ಸೂಚ್ಯಂಕ ಇರುವ ದೇಶ ಸ್ವೀಡನ್. 0.23. ನಂತರ ನಾರ್ವೆ.0.25. ಜಗತ್ತಿನಲ್ಲಿ ಅತಿ ವೇಗವಾಗಿ ಗಿನಿ ಸೂಚ್ಯಂಕ ಹೆಚ್ಚುತ್ತಿರುವ ದೇಶಗಳೆಂದರೆ ಅತಿ ಹೆಚ್ಚು ‘ಅಭಿವೃದ್ಧಿ ಗತಿ’ಯಲ್ಲಿರುವ ದೇಶಗಳೇ.

ಉದಾಹರಣೆಗೆ ಅಮೆರಿಕದ ಗಿನಿ ಸೂಚ್ಯಂಕ 0.45 . ಹಾಗೆಯೇ ಇಂದು ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ‘ಅಭಿವೃದ್ಧಿ ಹೊಂದಿದ’ ದೇಶವಾಗುತ್ತಿರುವ ಚೀನಾದಲ್ಲಿ ‘ಅಭಿವೃದ್ಧಿ ಪಥ’ವನ್ನು ಅನುಸರಿಸುವ ಮುಂಚೆ 1980ರಲ್ಲಿ ಇದ್ದ ಗಿನಿ ಸೂಚ್ಯಂಕ 0.23. ಆದರೆ ಮೂವತ್ತೆರಡು ವರ್ಷಗಳ ಅಭಿವೃದ್ಧಿಯ ನಂತರದಲ್ಲಿ ಚೀನಾದ ಗಿನಿ ಸೂಚ್ಯಂಕ 0.45! ಅಮೆರಿಕದಷ್ಟೆ. ಹೀಗೆ ಅಮೆರಿಕವಾಗುವುದು ಅಂದರೆ ದೇಶದೊಳಗೆ ಅಸಮಾನತೆ ಹೆಚ್ಚಿಸಿಕೊಳ್ಳುವುದೇ ಆಗಿದೆ. ಗಿನಿ ಸೂಚ್ಯಂಕದಲ್ಲಿ ಭಾರತವು ಸಹ ಅತಿ ವೇಗವಾಗಿ ಅಮೆರಿಕವಾಗುತ್ತಿದೆ.

ಈ ‘ಆರ್ಥಿಕ ಸುಧಾರಣಾ’ ನೀತಿಯನ್ನು ಪ್ರಾರಂಭಿಸುವ ಮುನ್ನ ಭಾರತದ ಗಿನಿ ಸೂಚ್ಯಂಕ 0.31 ಇತ್ತು. ಸರಕಾರದ ಅಂಗಸಂಸ್ಥೆಯೇ ಆಗಿರುವ NCAERಸಂಸ್ಥೆ ಆದಾಯ ಅಸಮಾನತೆಯನ್ನು ಅಳೆಯಲು 2005-06ರಲ್ಲಿ ಅದು ನಡೆಸಿದ ಆದಾಯ ಸರ್ವೇ ಪ್ರಕಾರ ಈ ದೇಶದಲ್ಲಿ ‘ಆದಾಯ ಅಸಮಾನತೆ’ಯ ಗಿನಿ ಸೂಚ್ಯಂಕ 0.53! ಆದರೆ ಸರಕಾರ ತನ್ನ ಅಧಿಕೃತ ಹೇಳಿಕೆಗಳಲ್ಲಿ ಭಾರತದ ಗಿನಿ ಸೂಚ್ಯಂಕ 0.31 ರಿಂದ 0.35ಕ್ಕೇ ಮಾತ್ರ ಏರಿದೆ ಎಂದು ಬೊಗಳೆ ಬಿಡುತ್ತದೆ. ಆದರೆ ಈ ಸಂಖ್ಯೆ ಸರಕಾರ ಕಾಲಕಾಲಕ್ಕೆ ತನಗೆ ಅನುಕೂಲಕ್ಕೆ ತಕ್ಕಂತೆ ಬದಲಿಸುವ ಬಡತನದ ಮಾನದಂಡವನ್ನು ಅನುಸರಿಸುವುದರಿಂದ ವಾಸ್ತವವಾಗಿ ಅದು ಸರಿಯಾದ ಚಿತ್ರಣವನ್ನೇನೂ ಕೊಡುವುದಿಲ್ಲ.

ಅಲ್ಲದೆ ಇತರ ಎಲ್ಲಾ ದೇಶಗಳೂ ಗಿನಿ ಸೂಚ್ಯಂಕ ಪತ್ತೆ ಹಚ್ಚಲು ಆದಾಯ ಗಳಿಕೆಯ ಸೂಚ್ಯಂಕ ಬಳಸಿದರೆ ಭಾರತ ಮಾತ್ರ ವೆಚ್ಚದ ಸೂಚ್ಯಂಕ ಬಳಸುತ್ತದೆ. ಆದ್ದರಿಂದಲೂ ನಿಜವಾದ ಸಮಾನತೆಯ ದರವನ್ನು ಕುಗ್ಗಿಸಿ ತೋರಿಸುತ್ತದೆ. ಏಕೆಂದರೆ ಶ್ರೀಮಂತರ ಗಳಿಕೆಯ ಬಹುಪಾಲನ್ನು ಉಳಿಸುತ್ತಾರೆ ಅಥವಾ ಹೂಡುತ್ತಾರೆಯೇ ವಿನಃ ‘ವೆಚ್ಚ’ ಮಾಡುವುದಿಲ್ಲ. ಆದ್ದರಿಂದ ಕೇವಲ ವೆಚ್ಚದ ಪ್ರಮಾಣ ಶ್ರೀಮಂತರ ಗಳಿಕೆಯ ಒಟ್ಟಾರೆ ಪ್ರಮಾಣವನ್ನು ಪ್ರತಿಫಲಿಸುವುದಿಲ್ಲ. ಇದಲ್ಲದೇ ಭಾರತ ಭೂ ಒಡೆತನದ ಗಿನಿ ಸೂಚ್ಯಂಕ 0.62ರಷ್ಟಿದ್ದು ಇಡೀ ಏಷಿಯಾದಲ್ಲೇ ಹೆಚ್ಚಿದ್ದರೆ (ಕಳೆದ ಹತ್ತು ವರ್ಷಗಳಲ್ಲಿ ಇದರಲ್ಲಿ ಬದಲಾವಣೆ ಬಂದಿದ್ದರೂ), ಭಾರತದ ಶಿಕ್ಷಣ ಗಳಿಕೆಯ ಸೂಚ್ಯಂಕ 0.52 ರಷ್ಟಿದ್ದು ಲ್ಯಾಟಿನ್ ಅಮೆರಿಕ ದೇಶಗಳಿಗಿಂತ ಹೀನಾಯವಾದ ಪರಿಸ್ಥಿತಿಯಲ್ಲಿದೆ. ಇದಕ್ಕೆ ನಮ್ಮ ದೇಶದ ಜಾತಿ ಅಸಮಾನತೆ ಇನ್ನಿತ್ಯಾದಿ ದೇಸೀ ಭಾರತೀಯ ಕಾರಣಗಳಿವೆ.

ಹಿರಿಯ ಪತ್ರಕರ್ತ ಸನತ್‌ಕುಮಾರ್ ಬೆಳಗಲಿಗೆ ಕಸಾಪ ಪ್ರಶಸ್ತಿ

ಹಿರಿಯ ಪತ್ರಕರ್ತ ಸನತ್‌ಕುಮಾರ್ ಬೆಳಗಲಿಗೆ ಕಸಾಪ ಪ್ರಶಸ್ತಿ

ಸಾಹಿತ್ಯ ಪರಿಷತ್ ವತಿಯಿಂದ ನೀಡಲಾಗುವ ‘ನಾಗಡಿಕೆರೆ-ಕಿಟ್ಟಪ್ಪ ಗೌಡ ರುಕ್ಮಿಣಿ’ ದತ್ತಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ‘ವಾರ್ತಾಭಾರತಿ’ಯ ಅಂಕಣಕಾರ ಸನತ್‌ಕುಮಾರ್ ಬೆಳಗಲಿ ಆಯ್ಕೆಯಾಗಿದ್ದಾರೆ.ನಿರ್ಭೀತ, ಪ್ರಾಮಾಣಿಕ ಪತ್ರಕರ್ತರಿಗಾಗಿ ನೀಡಲಾಗುವ ಈ ಪ್ರಶಸ್ತಿಯನ್ನು ಹಿರಿಯ ಸ್ವಾತಂತ್ರ ಹೋರಾಟಗಾರ ನಾಗಡಿಕೆರೆ ಕಿಟ್ಟಪ್ಪ ಗೌಡರು ದತ್ತಿ ನೀಡಿದ್ದಾರೆ.ಪ್ರಶಸ್ತಿ 10,000 ರೂ. ನಗದನ್ನು ಹೊಂದಿದೆ. ಸನತ್‌ಕುಮಾರ್ ಬೆಳಗಲಿ ಸಂಯುಕ್ತ ಕರ್ನಾಟಕ, ಜನವಾಹಿನಿ, ವಾರ್ತಾಭಾರತಿ ಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದು, ತನ್ನ ನಿರ್ಭೀತ ಅಂಕಣ ಬರಹಗಳ ಮೂಲಕ ನಾಡಿ ನಾದ್ಯಂತ ಖ್ಯಾತಿಯನ್ನು ಪಡೆದವ ರಾಗಿದ್ದಾರೆ. ಕಸಾಪ ನೀಡುವ ಈ ಪ್ರಶಸ್ತಿಯನ್ನು 2010ರಲ್ಲಿ ಹಿರಿಯ ಪತ್ರಕರ್ತ ಎಸ್. ವಿ. ಜಯಶೀಲ ರಾವ್ ಹಾಗೂ 2011ರಲ್ಲಿ ಪಿ. ರಾಮಯ್ಯ ಪಡೆದಿದ್ದಾರೆ.

ಮಾತೃಹತ್ಯೆಯ ಪರಶುರಾಮ ಕೃತ್ಯ-ಕೆ.ಪಿ. ನಟರಾಜ
ಮಾಧ್ಯಮಿಕ ಆರನೇ ತರಗತಿಯಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಬೋಧನಾ ಕ್ರಮವನ್ನು ಆರಂಭಿಸುವ ನಿರ್ಧಾರದ ಮೂಲಕ ಕರ್ನಾಟಕ ರಾಜ್ಯ ಸರ್ಕಾರವು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಶೈಕ್ಷಣಿಕ ಹಿತಾಸಕ್ತಿಗಳ ಮೇಲೆ ಮಾರಣಾಂತಿಕ ಪ್ರಹಾರ ಮಾಡಿದೆ.

ಭಾರತದ ಜನಭಾಷೆಗಳ ಅಸ್ಮಿತೆಯನ್ನು ಉದ್ದೀಪಿಸುವ ಮೂಲಕವೇ ರಾಷ್ಟ್ರದ ಉಳಿವಿನ ಸೂತ್ರ ರೂಪಿಸಿದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಮುಂಗಾಣ್ಕೆಯನ್ನಾಗಲೀ, ಡಾ. ಲೋಹಿಯಾ ಸಂಘಟಿಸಿದ `ಇಂಗ್ಲಿಷ್ ತೊಲಗಿಸಿ` ರಾಷ್ಟ್ರೀಯ ಆಂದೋಲನದ ಕಾಳಜಿಯನ್ನಾಗಲೀ ಅಥವಾ ರಾಷ್ಟ್ರಕವಿ ಕುವೆಂಪು ಅವರ ಕನ್ನಡಪರವಾದ ಪ್ರಾರ್ಥನಾ ಪೂರ್ವಕ ಆಗ್ರಹಕ್ಕಾಗಲಿ, ಕವಡೆ ಕಿಮ್ಮತ್ತನ್ನೂ ಕೊಡದ ಸಮಾಜದ ಮೇಲ್ವರ್ಗಗಳು ಮತ್ತು ಅವುಗಳ ಪ್ರತಿನಿಧಿಗಳಂತಿದ್ದ ಸರ್ಕಾರಗಳು ಕಳೆದ ಐವತ್ತು ವರ್ಷಗಳಲ್ಲಿ ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಹುಲುಸಾದ ಬೆಳೆ ತೆಗೆದಿವೆ.

ಈ ಅನ್ಯಾಯದಿಂದಾಗಿ ಕರ್ನಾಟಕದಲ್ಲಿ ಶೇ. 50 ರಷ್ಟು ಮಕ್ಕಳೀಗ ಖಾಸಗಿ ವಲಯದ ಇಂಗ್ಲಿಷ್ ಶಾಲೆಗಳಲ್ಲಿ ಓದುತ್ತಿದ್ದು, ಸರಿಸುಮಾರು ಇಷ್ಟೇ ಮಕ್ಕಳು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದಾಗಿ ಜಾತೀಯತೆಯ ಆಧುನಿಕ ಆವೃತ್ತಿಯೊಂದು ನಮ್ಮ ಸಾಮಾಜಿಕ ಪರಿಸರವನ್ನು ಆವರಿಸಿಬಿಟ್ಟಿದೆ.

ಇವರೀರ್ವರ ನಡುವೆ ತಾರತಮ್ಯದ ಕಂದಕ ಏರ್ಪಟ್ಟು, ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಬಹುದೊಡ್ಡ ವಿದ್ಯಾರ್ಥಿ ಸಮುದಾಯವು ಪ್ರೌಢಶಾಲೆಯ ನಂತರ ಶಿಕ್ಷಣವನ್ನು ಕೊನೆಗೊಳಿಸುವ ಇಲ್ಲವೇ ಕನ್ನಡ ಮಾಧ್ಯಮದಲ್ಲಿ ಓದಿದ ಕಾರಣಕ್ಕೆ ಉದ್ಯೋಗಗಳಿಂದ ವಂಚಿತರಾಗುವ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ.

ಈ ಅನ್ಯಾಯವನ್ನು ಸರಿಪಡಿಸಲೆಂದೇ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸರ್ಕಾರದ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೆ ಕನ್ನಡ ಭಾಷೆಯನ್ನು ಶಿಕ್ಷಣ ಮಾಧ್ಯಮದ ಸ್ಥಾನದಿಂದ ಪದಚ್ಯುತಗೊಳಿಸುವ ಮಾತೃಹತ್ಯೆಯ ಮೂಲಕ ಇದನ್ನು ಸಾಧಿಸ ಹೊರಟಿರುವ ಸರ್ಕಾರಕ್ಕೆ ತಾನೆಸಗುತ್ತಿರುವ ದುಷ್ಕೃತ್ಯದ ಹಿಂದು ಮುಂದುಗಳ ಪರಿವೆಯೇ ಇದ್ದಂತಿಲ್ಲ.

ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ನಡೆಸಲು ಸಂವಿಧಾನಾತ್ಮಕ ಅಥವಾ ರಾಷ್ಟ್ರನೀತಿಯ ಬೆಂಬಲವಿಲ್ಲದೆ ಇದ್ದರೂ ಖಾಸಗಿ ವಲಯದ ಬಲಿಷ್ಠರ ಜೊತೆಗಿನ ತನ್ನ ಈವರೆಗಿನ ನೈಚ್ಯಾನುಸಂಧಾನದಿಂದಾಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಬಲವಾಗಿ ಬೇರು ಬಿಟ್ಟಿವೆ.

ಈ ಜವಾಬ್ದಾರಿಯನ್ನು ಹೊರಲು ಸರ್ಕಾರವು ಅಸಮರ್ಥವಾದಲ್ಲಿ ಶೇ. 50 ರಷ್ಟಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪೂರೈಸುವಂತೆ ಶೈಕ್ಷಣಿಕ ಮೂಲ ಸೌಲಭ್ಯವನ್ನು ಒದಗಿಸಬೇಕು. ಮತ್ತು ಈ ವಿದ್ಯಾರ್ಥಿಗಳ ಸಂಖ್ಯಾನುಪಾತಕ್ಕೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ನೀಡಬೇಕು.

ಕರ್ನಾಟಕವನ್ನು ಒಳಗೊಂಡು ಇಡೀ ದೇಶದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ನಡೆಸುತ್ತಿರುವ ಖಾಸಗಿ ವಲಯ ಒಂದು ಸಂವಿಧಾನೇತರ ಶಕ್ತಿಯಾಗಿದೆ. ಅದೀಗ ಬಲಿಷ್ಠ ಮಾಫಿಯಾ ಸ್ವರೂಪ ಪಡೆದಿದ್ದು, ಧಾರ್ಮಿಕ ಸಂಸ್ಥೆಗಳು, ರಾಜಕಾರಣಿಗಳು, ಅಧಿಕಾರಿ ವರ್ಗ ಮತ್ತು ಫ್ಯೂಡಲ್ ಶಕ್ತಿಗಳು ಈ `ಉದ್ಯಮದಲ್ಲಿ ಒಂಟಿಯಾಗಿಯೋ ಅಥವಾ ಜಂಟಿಯಾಗಿಯೋ ಬಂಡವಾಳ ಹೂಡಿ ಕೋಟ್ಯಂತರ ರೂಪಾಯಿಗಳನ್ನು ಬಾಚುತ್ತಿದ್ದಾರೆ. ಚುನಾಯಿತ ಸರ್ಕಾರಗಳನ್ನು ಅಲ್ಲಾಡಿಸಬಲ್ಲಷ್ಟು ಪ್ರಬಲವಾಗಿರುವ ಈ ಶಕ್ತಿಗಳೇ ಕಳೆದ 50 ವರ್ಷಗಳಲ್ಲಿ ಕನ್ನಡವನ್ನು ಕೊಲ್ಲುತ್ತಿವೆ.

ಭಾರತದ ಜನಭಾಷೆಗಳಿಗೂ ರಾಷ್ಟ್ರದ ಏಕತೆಗೂ ಇರುವ ನಂಟನ್ನು ಬಲ್ಲವರಾಗಿದ್ದ ಗಾಂಧೀಜಿ ಕಳೆದ ಶತಮಾನದ ಆದಿಭಾಗದಲ್ಲಿಯೇ ಈ ಬಗ್ಗೆ ಆಳವಾಗಿ ಆಲೋಚಿಸಿ ಭಾಷಾಧಾರಿತ ಪ್ರಾಂತ ರಚನೆಯನ್ನು ಪ್ರತಿಪಾದಿಸಿದ್ದರು.

ಮಹಾತ್ಮನ ಈ ದೂರಾಲೋಚನೆಯು ಭಾರತದ ಜನಭಾಷೆಗಳ ಪುರೋಭಿವೃದ್ಧಿಯನ್ನೂ - ಅಂದರೆ ಆ ಭಾಷೆಗಳನ್ನಾಡುವ ಜನತೆಯ ಲೌಕಿಕ, ಆಧ್ಯಾತ್ಮಿಕ ವಿಕಾಸವನ್ನೂ ಜೊತೆಗೆ ರಾಷ್ಟ್ರದ ಏಕತೆಯನ್ನೂ ಏಕಕಾಲಕ್ಕೆ ಬೆಸೆಯಲು ಯೋಜಿಸಿದ ಸೂತ್ರವಾಗಿತ್ತು. ಈ ಪ್ರಾಣಸೂತ್ರದಂತೆ ಕನ್ನಡ ಶಿಕ್ಷಣ ಮಾಧ್ಯಮವಾಗಿತ್ತು.

`ಪ್ರತಿಯೊಂದು ಸ್ವತಂತ್ರ ರಾಷ್ಟ್ರದಲ್ಲಿಯೂ ಶಿಕ್ಷಣ ಮಾಧ್ಯಮದ ಪ್ರಶ್ನೆಯು ಆದಿಯಲ್ಲಿಯೇ ನಿರ್ಧಾರವಾಗುತ್ತದೆ. ರಾಷ್ಟ್ರದ ಇಚ್ಛೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರುವುದಷ್ಟೇ ಅವರ (ಶಿಕ್ಷಣ ತಜ್ಞರ) ಕರ್ತವ್ಯ` ಎಂದು ಗಾಂಧೀಜಿ ಹೇಳಿದ್ದಾರೆ. ಹೀಗಾಗಿ ರಾಷ್ಟ್ರವು ಸ್ವಾತಂತ್ರ್ಯ ಪಡೆದ ಆರಂಭದಲ್ಲಿಯೇ ನಿರ್ಧರಿಸಲ್ಪಟ್ಟ ಕನ್ನಡದ ಸಾರ್ವಭೌಮತೆಯನ್ನು ಕಾಲಾನಂತರದಲ್ಲಿ ಕಾಣಿಸಿಕೊಳ್ಳುವ ಯಾರೋ ಒಬ್ಬ ಶಿಕ್ಷಣ ತಜ್ಞನೋ ಅಥವಾ ಅಧಿಕಾರರೂಢ ಶಾಸಕನೋ ತಮ್ಮ ಇಚ್ಛಾನುಸಾರವಾಗಿ ಚ್ಯುತಿಗೊಳಿಸಲು ಬರುವುದಿಲ್ಲ.

ಜಾಗತೀಕರಣದ ಭೂತಚೇಷ್ಟೆಗೆ ಹೆದರಿ ಕಂಗಾಲಾಗಿರುವ `ಇಂಗ್ಲಿಷ್ ವಾದಿ` ಗಳಿಗೆ ನೂರು ವರ್ಷಗಳ ಹಿಂದೆ ಸೂರ್ಯ ಮುಳುಗದ ಸಾಮ್ರೋಜ್ಯ ಕಟ್ಟಿದ್ದ ಬ್ರಿಟಿಷ್ ಸಾಮ್ರೋಜ್ಯಶಾಹಿಯ ನೈಜ ಜಾಗತೀಕರಣದ ದೈತ್ಯ ಶಕ್ತಿಗೆ ಗಾಂಧೀಜಿ ಹೆದರಲಿಲ್ಲ ಎಂದು ನೆನಪಿಸಬೇಕಾಗಿದೆ. ಸ್ವಾತಂತ್ರ್ಯ ಗಳಿಕೆಯ ಸಾಧ್ಯತೆಯೇ ಮಸಕಾಗಿದ್ದಾಗ ಇಂಗ್ಲಿಷ್ ಪಾರಮ್ಯವನ್ನು ತಿರಸ್ಕರಿಸಿ ಭಾರತದ ಜನಭಾಷೆಗಳ ಅಸ್ಮಿತೆಯನ್ನು ಸಂಘಟಿಸಿ ರಾಷ್ಟ್ರೀಯವಾದಿ ಹೋರಾಟವನ್ನು ಗಾಂಧೀಜಿ ರೂಪಿಸಿದ್ದರು.

ಜಾಗತೀಕರಣದಿಂದಲೇ ಬದಲಾದ ಅರ್ಥವ್ಯವಸ್ಥೆಯಲ್ಲಿ ಅಮೆರಿಕಾ ಮತ್ತು ಯೂರೋಪ್‌ನ ಕೆಲವು ರಾಷ್ಟ್ರಗಳು ತೀವ್ರ ಆರ್ಥಿಕ ಹಿಂಜರಿತದಿಂದಾಗಿ ದಿವಾಳಿಯ ಅಂಚಿಗೆ ಬಂದು ನಿಂತಿದ್ದು, ಇಂಗ್ಲಿಷ್ ಭಾಷೆಯ ಪ್ರಾಧಾನ್ಯ ತನ್ನಷ್ಟಕ್ಕೆ ಕುಂದಿಹೋಗುತ್ತಿದೆ.

ಕುವೆಂಪು ಅವರ ಆತಂಕ: ಕನ್ನಡವೇ ಶಿಕ್ಷಣ ಮಾಧ್ಯಮವಾಗದಿದ್ದರೆ ಕನ್ನಡಿಗರ ಬಾಳು ಕುಂಠಿತವಾಗುತ್ತದೆ. ಕನ್ನಡಿಗರ ಏಳ್ಗೆಗೆ ಧಕ್ಕೆ ಬರುತ್ತದೆ, ಕರ್ನಾಟಕದ ರಚನೆ ಅರ್ಥವಿಹೀನವಾಗುತ್ತದೆ, ನಮ್ಮ ಜನಸಾಮಾನ್ಯರ ಸರ್ವಾಂಗೀಣವಾದ, ನ್ಯಾಯಬದ್ಧ ವಿಕಾಸಕ್ಕೆ ಅಡಚಣೆ ಒದಗುತ್ತದೆ...

ಅಂತಹ ದುಃಖದ, ಅಮಂಗಳದ, ದುರಂತದ ಪರಿಸ್ಥಿತಿಗೆ ಕಾರಣವಾಗುವವರೆಲ್ಲರೂ: ವ್ಯಕ್ತಿಗಳಾಗಲೀ, ಸಂಸ್ಥೆಗಳಾಗಲಿ ಚಿರಂತನವಾಗಿ ಶಾಪಗ್ರಸ್ತರಾಗುತ್ತಾರೆ....ಎಂದು ಹೇಳಿದ್ದ ಕುವೆಂಪು ಅವರ ಕಳವಳದ ಆಳವನ್ನರಿಯದೆ ಕನ್ನಡದ ಪಾಲಿಗೆ ದಮನಕಾರಿಯಾಗಿರುವ ಈ ನಿರ್ಣಯವನ್ನು ಖಂಡಿಸದಿದ್ದರೆ ಕುವೆಂಪು ಕನಲಿ ಹೇಳಿದಂತೆ ಚಿರಂತನವಾಗಿ ಶಾಪಗ್ರಸ್ಥರಾಗಬೇಕಾಗುತ್ತದೆ.

ಪ್ರಗತಿಶೀಲ ಸಾಹಿತ್ಯದಲ್ಲಿ ಜನಸಾಮಾನ್ಯರ ನೋವುಗಳ ಅನಾವರಣ

Sripad Bhat

ಶ್ರೀಪಾದ ಭಟ್


ನಾವು ಬದುಕುತ್ತಿರುವ ವರ್ತಮಾನದ ಸ್ಥಿತಿಗತಿಗಳ ಬಗೆಗೆ ನಿಮಗೆ ಅರಿವಿಲ್ಲದಿದ್ದರೆ ನೀವು ನನ್ನ ಕತೆಗಳನ್ನು ಓದಬೇಕು. ಈ ನನ್ನ ಕತೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಇಂದಿನ ವರ್ತಮಾನವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ”

- ಸಾದತ್ ಹಸನ್ ಮಂಟೋ.

“There was a grief I smoked
in silence, like a cigarette only a few poems fell
out of the ash I flicked from it.”
- ಅಮೃತಾ ಪ್ರೀತಮ್.

“ಇಂಡಿಯಾದ ಸಾಹಿತ್ಯವು ವಾಸ್ತವದ ಸ್ಥಿತಿಯನ್ನು ಎದುರಿಸುವುದನ್ನು ತಪ್ಪಿಸಿಕೊಳ್ಳಲು ದಯನೀಯವಾಗಿ ಪ್ರಯತ್ನಿಸುತ್ತಿದೆ. ವಾಸ್ತವದ ಅಸಮಾನತೆಗಳನ್ನು, ಬಡತನವನ್ನು ಎದುರಿಸಲಿಕ್ಕಾಗದೆ ಆಧ್ಯಾತ್ಮದ ಮೊರೆ ಹೋಗುತ್ತಲಿದೆ. ಬದಲಾಗಿ ನಿರ್ಜಿವವಾದ, ವ್ಯತಿರಿಕ್ತವಾದ ಜಡತ್ವವನ್ನು ಪ್ರದರ್ಶಿಸುತ್ತಿದೆ. ಇದು ಹೆಚ್ಚೂ ಕಡಿಮೆ ರಕ್ತಮಾಂಸವಿಲ್ಲದ ಸ್ಥಿತಿಯಾಗಿದೆ. ಇಂತಹ ಸಂದರ್ಭದಲ್ಲಿ ಇಂಡಿಯಾದ ಹೊಸ ಬರಹಗಾರರು ತಮ್ಮ ಪ್ರಗತಿಪರ ಚಿಂತನೆಗಳ ಮೂಲಕ ಸಾಹಿತ್ಯದಲ್ಲಿ ವೈಜ್ಞಾನಿಕವಾದ ಪರಿವರ್ತನೆಗೆ ಹೆಗಲುಗೊಡಬೇಕಾಗಿದೆ. ವೈಯುಕ್ತಿಕ ಸಂಸಾರ, ಧರ್ಮ ಮತ್ತು ಜಾತಿಗಳನ್ನು ಹೊದ್ದುಕೊಂಡಿರುವ ಇಂಡಿಯಾದ ಸಾಹಿತ್ಯವನ್ನು ಪ್ರೋತ್ಸಾಹಿಸದೆ ಕೋಮುವಾದ, ಜಾತಿವಾದ ಮತ್ತು ಮನುಷ್ಯ ಮನುಷ್ಯನನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ನಾಶಪಡಿಸುವತ್ತ ಹೆಜ್ಜೆ ಇಡಬೇಕಾಗಿದೆ. ಇಂಡಿಯಾದ ಸಾಹಿತ್ಯವನ್ನು ಸಾಂಪ್ರದಾಯಿಕ ಶಕ್ತಿಗಳಿಂದ ರಕ್ಷಿಸಬೇಕಾಗಿದೆ. ಇದು ನಮ್ಮ ಸಂಘಟನೆಯ ಮೂಲ ಉದ್ದೇಶ. ಈ ಮೂಲಕ ಸಾಹಿತ್ಯವನ್ನು ಜನರ ಬಳಿಗೆ ತರಬೇಕಾಗಿದೆ. ಇಂಡಿಯಾದ ಪ್ರಗತಿಪರ ಸಾಹಿತ್ಯವು ಈ ದೇಶದ ಮೂಲಭೂತ ಕಂಟಕಗಳಾದ ಹಸಿವು ಮತ್ತು ಬಡತನ, ಸಾಮಾಜಿಕ ಹಿಂದುಳುವಿಕೆ ಮತ್ತು ರಾಜಕೀಯ ಪರಿವರ್ತನೆಗಳನ್ನು ಉದ್ದೇಶಿಸಿ ಬರೆಯಬೇಕಾಗಿದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಎತಿಹಿಡಿಯಬೇಕಾಗಿದೆ”.

ಇದು 75 ವರ್ಷಗಳ ಹಿಂದೆ 1936 ರಲ್ಲಿ ಅಸ್ತಿತ್ವಕ್ಕೆ ಬಂದ “ಪ್ರಗತಿಪರ ಲೇಖಕರ ಚಳವಳಿ”ಯ ಮ್ಯಾನಿಫೆಸ್ಟೋದ ಸಂಕ್ಷಿಪ್ತ ಸಾರಾಂಶ. ಈ ಪ್ರಗತಿಪರ ಲೇಖಕರ ಚಳವಳಿಯಲ್ಲಿರುವ ಬಹುಪಾಲು ಲೇಖಕರು ಎಡಪಂಥೀಯ ಚಿಂತಕರಾಗಿದ್ದರು. ವಸಾಹತುಶಾಹಿಯ ವಿರೋಧಿಗಳಾಗಿದ್ದರು. ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ತಮ್ಮ ಸಾಹಿತ್ಯವನ್ನು ರಚಿಸಿದರು. ಈ ಲೇಖಕರು ಮಹಾನ್ ಕಾದಂಬರಿಕಾರ ಮುನ್ಷಿ ಪ್ರೇಮಚಂದರಿಂದ ಸ್ಪೂರ್ತಿಯನ್ನು, ಬೆಂಬಲವನ್ನು ಪಡೆದಿದ್ದರು. ಈ ಪ್ರಗತಿಪರ ಲೇಖಕರ ಚಳವಳಿಯ ಅಸ್ಥಿತ್ವವನ್ನು ಮೊದಲಿಗೆ ಘೋಷಿಸಿದವರು ಉರ್ದು ಲೇಖಕರಾದ ಅಹಮದ್ ಅಲಿ, ಮಾಮುದ್ ಜಫರ್ ಮತ್ತು ಸೈಯ್ಯದ್ ಸಾಜದ್ ಜಾಹಿರ್. ಇವರೊಂದಿಗೆ ಈ ಪ್ರಗತಿಪರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಪ್ರಮುಖ ಲೇಖಕರೆಂದರೆ ಸಾದತ್ ಹಸನ್ ಮಂಟೋ, ಅಲಿ ಜವಾದ್ ಜೈದಿ, ಫೈಜ್ ಅಹ್ಮದ್ ಫೈಜ್, ಭೀಷ್ಮ ಸಹಾನಿ, ಇಸ್ಮತ್ ಚುಗತಾಯಿ, ತನ್ವೀರ್ ಹಬೀಬ್, ಕೈಫಿ ಅಜ್ಮಿ, ಕೃಷ್ಣಚಂದರ್, ರಾಜೇಂದ್ರಸಿಂಗ್ ಬೇಡಿ, ಫಿರಕ್ ಗೋರಕ್ಪುರಿ, ಇದ್ರಿಸ್ ಇಜಾದ್, ಮುಲ್ಕರಾಜ್ ಆನಂದ್, ಕೆ.ಎ.ಅಬ್ಬಾಸ್, ಮುಂತಾದವರು.

ಇವರೆಲ್ಲ ಮನರಂಜನಾತ್ಮಕ ಸಾಹಿತ್ಯ ರಚನೆಯನ್ನು ಸಾರಾಸಗಟಾಗಿ ತ್ಯಜಿಸಿದರು. ಬದಲಾಗಿ ಕಲೋನಿಯಲ್ ಸಂದರ್ಭದಲ್ಲಿ ಬದುಕುತ್ತಿದ್ದ ಸಾಮಾನ್ಯ ಜನರ, ಮಧ್ಯಮವರ್ಗಗಳ ಬವಣೆಗಳನ್ನು, ನೋವುಗಳನ್ನು ತಮ್ಮ ಸಾಹಿತ್ಯದ ಮೂಲಧಾತುವಾಗಿ ಅಳವಡಿಸಿಕೊಂಡರು. ಇದರ ಫಲವಾಗಿ ಆ ಕಾಲಕ್ಕೆ ಜನಪ್ರಿಯವಾಗಿದ್ದ ಅತಿರಂಜಿತ, ಕಾಲ್ಪನಿಕ ಸುಂದರ ನಾಯಕ, ನಾಯಕಿರ ಮನಮೋಹಕ ಕಥೆಗಳು ಕರಗಿಹೋಗಿ ಬದಲಾಗಿ ದಿನನಿತ್ಯದಲ್ಲಿ ಕಾಣುವಂತಹ ನಮ್ಮ ನೆರೆಮನೆಯ ಹುಡುಗ, ಹುಡುಗಿಯರು, ಕಲೋನಿಯಲ್‌ನ ಕ್ರೂರತೆಗೆ ಬಲಿಯಾದ ದಂಪತಿಗಳು ಸಾಹಿತ್ಯದ ಅಕ್ಷರಗಳಲ್ಲಿ ಒಡಮೂಡತೊಗಿದರು. ಅದೂ ಅತ್ಯಂತ ಶಕ್ತಿಶಾಲಿಯಾಗಿ. ಭಾವಪೂರ್ಣವಾಗಿ, ಕೆಲವೊಮ್ಮೆ ರೋಮ್ಯಾಂಟಿಕ್ ಆಗಿಯೂ ಸಹ. ಅದರೂ ಈ ಪ್ರಗತಿಪರ ಲೇಖಕರ ಸಹಜ ಅಭಿವ್ಯಕ್ತಿಯ ಸಾಹಿತ್ಯದಲ್ಲಿ ಇಂಡಿಯಾದ ಸಂದರ್ಭದಲ್ಲಿ ಜನಸಾಮಾನ್ಯರ ಕತ್ತಲು ಬದುಕಿನ ನೋವುಗಳು ನೇರವಾಗಿ ಅನಾವರಣಗೊಂಡಿತು. ಈ ಬಿಚ್ಚುಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಆಕ್ರೋಶಕ್ಕೆ ಬದಲಾಗಿ ತಣ್ಣನೆಯ, ಮೌನವಾಗಿ ಪ್ರತಿಭಟಿಸುವ ಧೋರಣೆಯಿತ್ತು. ಆದರೆ ಆದರ್ಶವನ್ನು ಎಂದೂ ಬಿಟ್ಟುಕೊಡಲಿಲ್ಲ. ಈ ಪ್ರಗತಿಪರ ಲೇಖಕರು ಎಲ್ಲಿಯೂ ರೋಚಕತೆಗೆ ಬಲಿಯಾಗಲಿಲ್ಲ. ಎಡಪಂಥೀಯರಾಗಿದ್ದರೂ ಸಿದ್ಧಾಂತದ ಗೊಡ್ಡುತನವನ್ನು, ಮಾರ್ಕ್ಸವಾದದ ಭೌತಿಕವಾದವನ್ನು, “ಕೆಂಬಾವುಟ” ಕಾಮ್ರೇಡ್ತನವನ್ನು, “ಪಾಂಪ್ಲೆಟ್” ಘೋಷಣೆಗಳನ್ನು ಸಾಹಿತ್ಯದಿಂದ ಗಾವುದ, ಗಾವುದ ದೂರ ಇಟ್ಟಿದ್ದರು ಈ ಪ್ರಗತಿಶೀಲ ಲೇಖಕರು. ಇವರ ಈ ನೆಲದ ಜೀವಂತಿಕೆಯಿಂದಾಗಿಯೇ ಇವರ ಸಾಹಿತ್ಯದಲ್ಲಿ ತನ್ನೆಲ್ಲ ಸಹಜತೆಯೊಂದಿಗೆ ರೋಮ್ಯಾಂಟಿಸಂ ಮೈದಾಳಿತ್ತು. ಆದರೆ ಅಲ್ಲಿ ಸೌಂದರ್ಯದ ಮೀಮಾಂಸೆ ಇರಲಿಲ್ಲ. ಅಲ್ಲಿ ಮನದಾಳದ ನೋವು ಮತ್ತು ಪ್ರೀತಿ ಒಟ್ಟೊಟ್ಟಿಗೇ ಚಲಿಸುತ್ತಿದ್ದವು. ದಿಟ್ಟತೆಯ ಹೊಸ ನೋಟಗಳು ತನ್ನೆಲ್ಲ ಸಹಜತೆ ಮತ್ತು ಪ್ರಾಮಾಣಿಕತೆಯೊಂದಿಗೆ ಓದುಗರನ್ನು ಮನದಾಳಕ್ಕೆ ಲಗ್ಗೆಯಿಡುತ್ತಿದ್ದವು.

ಆದರೆ ಈ ದಿಟ್ಟತೆಯಲ್ಲಿ ಬೆಚ್ಚಿ ಬೀಳಿಸುವ, ರೋಚಕತೆಯ ಹಪಾಹಪಿತನ ಲವಲೇಶವೂ ಇರಲಿಲ್ಲ. ಉರ್ದು ಭಾಷೆಯಲ್ಲಿ ಸಾಹಿತ್ಯವನ್ನು ರಚಿಸಿದ “ಇಸ್ಮತ್ ಚುಗ್ತಾಯಿ” ಆ ಕಾಲದ ದಿಟ್ಟ ಹಾಗೂ ಸ್ತ್ರೀವಾದಿ ಬರಹಗಾರ್ತಿಯಾಗಿದ್ದರು. ಸ್ತ್ರೀ ಸಂವೇದನೆಗಳನ್ನು ತನ್ನ ಮೊನಚು ಭಾಷೆಯಲ್ಲಿ ಬರೆದ ಮೊದಲ ಉರ್ದು ಲೇಖಕಿ. 60 ವರ್ಷಗಳ ಹಿಂದೆಯೇ ಮುಸ್ಲಿಂ ಮಹಿಳೆಯರು ಬುರ್ಖಾ ತೊಡುವ ಪದ್ಧತಿಯನ್ನು ತೀವ್ರವಾಗಿ ವಿರೋಧಿಸಿದ್ದರು. ಚುಗ್ತಾಯಿ 40ರ ದಶಕದಲ್ಲಿ ಬರೆದ ತಮ್ಮ “ಲಿಹಾಫೆ” ಕಥೆಯ ಮೂಲಕ ಸಲಿಂಗಕಾಮದ ಬಗೆಗೆ ಬರೆದಿದ್ದರು. ಇದು ಸಂಪ್ರದಾಯವಾದಿಗಳಲ್ಲಿ ಎಷ್ಟೊಂದು ಕೆರಳಿಸಿತ್ತೆಂದರೆ ಈ ಪುಸ್ತಕವು ಇಂಡಿಯಾದಲ್ಲಿ ಮಾತ್ರವಲ್ಲ ದಕ್ಷಿಣ ಏಷ್ಯಾದಲ್ಲಿಯೂ ನಿಷೇದಿತಗೊಂಡಿತು. ಇವರನ್ನು ಕೋರ್ಟಗೆ ಸಹ ಎಳೆಯಲಾಯಿತು. 40ರ ದಶಕದಲ್ಲಿ ಈ 30ರ ಹರೆಯದ “ಚುಗ್ತಾಯಿ” ಕ್ಷಮೆ ಕೋರಲಿಲ್ಲ. ತಾವು ಬರೆದದ್ದನ್ನು ಸಮರ್ಥಿಸಿಕೊಂಡರು. ವಿಚಾರಣೆಯಲ್ಲಿ ಗೆಲವು ಸಾಧಿಸಿದರು. ಆದರೆ ಚುಗ್ತಾಯಿಯ ಸ್ತ್ರೀವಾದಿ ನೆಲೆಯ ಬಂಡಾಯ ನಮ್ಮ ಕಾಲದ ಲೇಖಕಿ “ತಸ್ಲೀಮ” ಅವರ ಬಂಡಾಯಕ್ಕಿಂತಲೂ ಭಿನ್ನವಾದದ್ದು. “ಇಸ್ಮತ್ ಚುಗ್ತಾಯಿ” ಅವರ ಬಂಡಾಯ ಅಪಾರ ತಿಳುವಳಿಕೆ, ಭದ್ರ ಬುನಾದಿ ಮತ್ತು ಕ್ರಿಯಾಶೀಲತೆಯಿಂದ ಕೂಡಿತ್ತು. ಇವರ ಇನ್ನೊಂದು ಕಥೆ “ಪವಿತ್ರ ಕರ್ತವ್ಯ”ದಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗುವ ಹಾಗೂ ತದ ನಂತರದ ವಿದ್ಯಾಮಾನಗಳ ಸುತ್ತ ಹೆಣೆಯಲ್ಪಟ್ಟದ್ದು. ಇದು “ಚುಗ್ತಾಯಿ”ಯವರ ಉತ್ತಮ ಕಥೆಗಳಲ್ಲೊಂದು. ಪಂಜಾಬ್ ಸಾಹಿತ್ಯದ ಮೊಟ್ಟ ಮೊದಲ ಆಧುನಿಕ ಲೇಖಕಿಯೆಂದು ಹೆಸರು ಪಡೆದ “ಅಮೃತಾ ಪ್ರೀತಮ್” ತನ್ನ ವೈಯುಕ್ತಿಕ ಜೀವನದ ವಿಫಲ ದಾಂಪತ್ಯವನ್ನು ಆಧರಿಸಿ ಅನೇಕ ಕಥೆಗಳನ್ನು ಬರೆದರು. ಆದರೆ ಅ ಕಥೆಗಳು ಎಂದೂ ಸ್ವಮರುಕದ, ಎಲ್ಲವನ್ನೂ ಅಬ್ಬರವಾಗಿ ಕೂಗಿ ಚೀರಿಕೊಳ್ಳುವ ಗುಣಗಳನ್ನು ಹೊಂದಿರಲಿಲ್ಲ. ಬದಲಾಗಿ ಆ ಕಥೆಗಳಲ್ಲಿ ತಣ್ಣನೆಯ ನೋವಿತ್ತು. ಈ ನೋವು ಓದುಗರಲ್ಲಿ ವಿಷಾದ ಮೂಡಿಸುತ್ತಿತ್ತು. “ಅಮೃತಾ ಪ್ರೀತಮ್” ತನ್ನ ಅನುಭವಗಳನ್ನು ಕಥೆಗಳ, ಕವನಗಳ ರೂಪದಲ್ಲಿ ಹೇಳುವಾಗ ಬಳಸುತ್ತಿದ್ದ ಅನೇಕ ರೂಪಕಗಳು ಸಂಕೀರ್ಣವಾಗಿದ್ದರೂ ತನ್ನ ಪ್ರಾಮಾಣಿಕತೆಯ ಕಾರಣದಿಂದಾಗಿಯೇ ಓದುಗರ ಪ್ರಜ್ನೆಗೆ ತಟ್ಟುತ್ತಿತ್ತು.

ಈ ಲೇಖಕಿಯ “ರಶೀದಿ ಚೀಟಿ” ಆತ್ಮಕಥೆ ಒಂದು ಮಾದರಿ ಆತ್ಮಕಥೆ. ಈಕೆಯ ಬರೆದ ನಾನು ನಾಳಿನ ತನಕ ಇರಬೇಕಾಗಿಲ್ಲ ಎನ್ನುವ ಕವನವನ್ನು ಪಂಜಾಬಿನ ಜನಪದ ಗಾಯಕರು ಹಾಡಿನ ಮೂಲಕ ಅಲ್ಲಿನ ಸಾಮಾನ್ಯ ಜನತೆಗೆ ತಲುಪಿಸಿದ್ದರು. ದೇಶ ವಿಭಜನೆಯ ಕಾಲದ ಘಟನೆಗಳ ಕುರಿತಾದ “ಪಿಂಜಾರ್” ಕಾದಂಬರಿ ಆ ವಿಭಜನೆ ಕಾಲದ ನೋವನ್ನು. ವಿದಾಯದ ವಿರಹವನ್ನು ಅತ್ಯಂತ ಶಕ್ತಿಶಾಲಿಯಾಗಿ ಕಟ್ಟಿಕೊಟ್ಟಿತು. ಗುಲ್ಜಾರ್ ಹೇಳುತ್ತಾರೆ ‘ಅಮೃತಾ ಪ್ರೀತಮ್‌ಜೀ ತಮ್ಮ ಪಂಜಾಬಿ ಕವನದ ಪುಟಗಳ ಮೂಲಕ ಇಡೀ 20ನೇ ಶತಮಾನವನ್ನು ಸಂಚರಿಸುತ್ತಾರೆ. ಸಿನಿಮಾ ರಂಗದಲ್ಲಿ ಪ್ರೇಮ ಗೀತೆಗಳನ್ನು ಬರೆಯುತ್ತಿದ್ದರೂ ಸಹ ಸಾಹಿರ್ “ಯೆ ಮೆಹಲೋ, ಯೆ ತಕ್ತೋ, ಯೆ ತಾಜೋಂಕಿ ದುನಿಯಾ, ಯೆ ದುನಿಯಾ ಅಗರ ಮಿಲ್ಭಿ ಜಾಯೆತೊ ಕ್ಯಾಹೆ, ಯೆ ದುನಿಯಾ ಅಗರ ಮಿಲ್ಭಿ ಜಾಯೆತೊ ಕ್ಯಾಹೆ”, ಎಂದು ಅತ್ಯಂತ ಧೀಮಂತಿಕೆಯಿಂದ ನಿರಾಕರಣೆಯ ಅರ್ಥಪೂರ್ಣ ಧ್ವನಿಯನ್ನು ತನ್ನ ಮರೆಯಲಾರದ ಸಾಹಿತ್ಯದ ಮೂಲಕ ವ್ಯಕ್ತಪಡಿಸುತ್ತಾನೆ. ಆ ಸಂದರ್ಭದಲ್ಲಿ ಇದು ಗಳಿಸುವ ಯಶಸ್ಸು ಬಲು ಶ್ರೇಷ್ಟವಾದದ್ದು. ಭೀಷ್ಮ ಸಹಾನಿಯವರು ತಮ್ಮ “ತಮಸ್” ಕಾದಂಬರಿಯಲ್ಲಿ ಎಲ್ಲಿಯೂ ಎಡಪಂಥೀಯ ಧೋರಣೆಗಳನ್ನು ತುರುಕುವುದಿಲ್ಲ. ಬದಲಾಗಿ ಈ ರಾಜಕೀಯ ಕಾದಂಬರಿಯಲ್ಲಿ ನೇರವಾಗಿ ಸ್ವಾಂತ್ರ್ಯಪೂರ್ವದ ರಾಷ್ಟ್ರೀಯವಾದಿ ಚಳವಳಿಗಳ ಧೋರಣೆಗಳು ಮತ್ತು ಆ ಕಾಲಘಟ್ಟದ ಒಟ್ಟೂ ವಿದ್ಯಾಮಾನಗಳನ್ನು ಅತ್ಯಂತ ಸ್ಥಿತಪ್ರಜ್ಞೆಯಿಂದ, ಮಾನವತಾವಾದಿ ಲೇಖಕನ ಜೀವಂತಿಕೆಯ ನೆಲೆಯಿಂದ ಕಟ್ಟಿಕೊಡುತ್ತಾರೆ. ಮತೀಯವಾದಿ ಆರೆಸಸ್ ಕೋಮುಗಲಭೆಗಳನ್ನು ಹುಟ್ಟು ಹಾಕುವ ದೃಶ್ಯಗಳನ್ನು ನಿರೂಪಿಸುವ ಸಂದರ್ಭದಲ್ಲೂ ಸಹ ರೋಚಕತೆಗೆ ಬಲಿಯಾಗುವುದಿಲ್ಲ.

ಭಾರತದ ವಿಭಜನೆಯ ಸಂದರ್ಭದಲ್ಲಿ ಮಹಿಳೆಯರು ಬಲತ್ಕಾರವಾಗಿ ಅಪಹರಿಸಲ್ಲಡುತ್ತಿದ್ದರು. ಅನೇಕ ತಿಂಗಳುಗಳ ನಂತರ ಎರಡೂ ರಾಷ್ಟ್ರಗಳು ಅಪಹರಣಗೊಂಡ ಮಹಿಳೆಯರನ್ನು ಬದಲಾಯಿಕೊಳ್ಳುವ ಆ ಮೂಲಕ ಈ ಮಹಿಳೆಯರನ್ನು ತಮ್ಮ ತಮ್ಮ ಗೂಡಿಗೆ ಮರಳಿ ಹೋಗುವ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದ್ದರು. ಆದರೆ ಈ ಅಮಾನವೀಯ ಪ್ರಕ್ರಿಯೆಯಲ್ಲಿ ಮಹಿಳೆ ವೈಯುಕ್ತಿಕವಾಗಿ ಅನುಭವಿಸುವ ಅವಮಾನಗಳನ್ನು, ನೋವುಗಳನ್ನು ರಾಜೇಂದ್ರಸಿಂಗ್ ಬೇಡಿಯವರು ತಮ್ಮ ಕಥೆ “ಲಾಜವಂತಿ”ಯಲ್ಲಿ ಎಲ್ಲಿಯೂ ರೋಚಕತೆಗೆ ಬಲಿಯಾಗದೆ ಶಕ್ತಿಶಾಲಿಯಾಗಿ ನಿರೂಪಿಸುತ್ತಾರೆ. ಕಡೆಗೆ ಓದುಗನಲ್ಲಿ ಉಳಿಯುವುದು ತೀವ್ರ ವಿಷಾದ ಮತ್ತು ಪಾಪ ಪ್ರಜ್ಞೆ. ಇದು ಮಂಟೋ ಕಥೆಗಳ ಸಂದರ್ಭದಲ್ಲಿಯೂ ಅಷ್ಟೇ ನಿಜ. ಈ ಸಾದತ್ ಮಂಟೋನ ಕಥೆಗಳು ಮನುಕುಲದ ದುರಂತತೆಯನ್ನು ಯಶಸ್ವಿಯಾಗಿ ದಾಖಲಿಸುತ್ತವೆ. 1932 ರಲ್ಲಿ ಅಹ್ಮದ್ ಅಲಿ ಮತ್ತು ಸಾಜ್ಜದ್ ಜಾಹೀರ್, ಮಹಮ್ಮದ್ ಜಫರ್, ರಶೀದ್ ಜಹಾನ್ ಒಟ್ಟಾಗಿ ಮೊಟ್ಟಮೊದಲ ಬಾರಿಗೆ ಸಂಪಾದಿಸುವ “ಅಂಗಾರೆ” ಕಥಾ ಸಂಕಲನದಲ್ಲಿ ಸರಳವಾಗಿ ಆದರೆ ಅರ್ಥಗರ್ಭಿತವಾಗಿ ತನ್ನ ಬಂಡಾಯವನ್ನು ಹುಲ್ಲಿನ ಗರುಕೆಯಂತೆ ಮೂಡಿಸುತ್ತಾರೆ. ಇಲ್ಲಿನ ರಾಜಕೀಯ ರ್‍ಯಾಡಿಕಲ್‌ತನವು ಯುರೋಪ್ ಮಾದರಿಯಿಂದ ಪ್ರೇರಣೆಗೊಂಡಿತ್ತು. ಆದರೆ ಈ ತಣ್ಣನೆಯ, ತೀಕ್ಷ್ಣ ಬಂಡಾಯ ಅಂದಿನ ಭಾರತ ಸರ್ಕಾರವನ್ನು ಕೆರಳಿಸುತ್ತದೆ. ಪ್ರಕಟಣೆಗೊಂಡು ಕೆಲವು ತಿಂಗಳುಗಳೊಳಗೆ “ಅಂಗಾರೆ” ಪುಸ್ತಕವನ್ನು ಸರ್ಕಾರ ನಿಷೇಧಿಸುತ್ತದೆ. ಆದರೆ ಮೇಲಿನ ಲೇಖಕರು ಒತ್ತಡಕ್ಕೆ ಮಣಿಯದೆ “ಡಿಫೆನ್ಸ್ ಆಫ್ ಅಂಗಾರೆ” ಎನ್ನುವ ಹೇಳಿಕೆಯ ಸಂದರ್ಭದಲ್ಲಿ ಈ ಪ್ರಗತಿಪರ ಲೇಖಕರ ಸಂಘಟನೆ ಮೈದಾಳುತ್ತದೆ. ಈ ಪ್ರಗತಿಪರ ಲೇಖಕರು ಉರ್ದು ಸಾಹಿತ್ಯಕ್ಕೆ ನೀಡಿದ ಹೊಳಪು, ತಾಜಾತನ, ಸಿನಿಕತೆ ಮತ್ತು, ನೋವಿನ ಲೇಪನದ ತೀಕ್ಣ್ಷತೆ ಮತ್ತು ನೇರವಾದ ಪ್ರತಿಭಟನೆ ಎಲ್ಲವನ್ನೂ ಒಳಗೊಂಡ Intellectual touch ಎಷ್ಟು ಶ್ರೇಷ್ಟವಾಗಿತ್ತೆಂದರೆ 75 ವರ್ಷಗಳ ನಂತರವೂ ಅದು ಇಂದಿಗೂ ತನ್ನ ಜೀವಂತಿಕೆಯನ್ನು ಕಳೆದುಕೊಂಡಿಲ್ಲ. ಕತ್ತಲ ಗರ್ಭವನ್ನು ಸೀಳಿ ಬೆಳಕಿನೆಡೆಗೆ ಪ್ರಯಾಣವನ್ನು ಬೆಳೆಸುವ ತಾತ್ವಿಕ ಮಾರ್ಗವನ್ನು ಈ ಲೇಖಕರು ನಂಬಿದ್ದರು.

ಈ ಕಾರಣಕ್ಕಾಗಿಯೇ ಇವರ ಕಥೆಗಳಲ್ಲಿ ಕಾದಂಬರಿಗಳಲ್ಲಿ, ಕವಿತೆಗಳಲ್ಲಿ, ಗಝಲ್‌ಗಳಲ್ಲಿ ಕತ್ತಲಲ್ಲಿರುವ ಹೆಣ್ಣು ಸದಾ ಕಾಲ ಬಿಡುಗಡೆಯ ಪ್ರವಾಹದಲ್ಲಿ ತನ್ನನ್ನು ತೊಡಗಿಸಿಕೊಂಡಿರುತ್ತಾಳೆ. ತುಳಿತಕ್ಕೊಳಗಾದ ರೈತ ತನ್ನ ಆತ್ಮಾಭಿಮಾನವನ್ನು ಬಿಟ್ಟುಕೊಡುವುದಿಲ್ಲ. 85 ವರ್ಷಗಳ ಹಿಂದೆ ಇಂಡಿಯಾದ ಉರ್ದು ಲೇಖಕರು ತಮ್ಮ ಸಮಾಜದ ರಾಜಕೀಯ ಸುಳಿಯೊಳಗೆ ಸಿಲುಕಿದ್ದರು. ಇದರಿಂದ ಬಿಡುಗಡೆಗೆ ಅವರು ಕಂಡುಕೊಂಡಿದ್ದು ಒಂದೇ ದಾರಿ ಅದೇ ಸಾಮಾಜಿಕ ವಿಮರ್ಶೆಯನ್ನು ಒಳಗೊಂಡ ವಾಸ್ತವವಾದಿ ಮಾರ್ಗ. ಈ ವಾಸ್ತವಾದಿವಾದಿ ಮಾರ್ಗವನ್ನು ಆ ಕಾಲಘಟ್ಟದ ಉರ್ದು ಲೇಖಕರು ಸಾಮಾಜಿಕ ಸಂಕೋಲೆಗಳಿಂದ ಬಿಡುಗಡೆಗೆ ರಹದಾರಿಯಾಗಿಯೂ ರೂಪಿಸಿಕೊಂಡರು. ಈ ಸಂದರ್ಭದಲ್ಲಿ ಸೋವಿಯತ್ ಯೂನಿಯನ್‌ನಲ್ಲಿ ಜರುಗಿದ ರಷ್ಯಾ ಕ್ರಾಂತಿ ಸಹ ಇವರ ಜಾಗೃತಾವಸ್ಥೆಯೊಳಗೆ ಬೇರು ಬಿಟ್ಟಿತು.ಈ ಉರ್ದು ಲೇಖಕರು 19ನೇ ಶತಮಾನದ ಮಿರ್ಜಾ ಗಾಲಿಬನಿಂದ ಅನುಭಾವವಾದದ ರೋಮ್ಯಾಂಟಿಸ್ಮ್‌ನ್ನು, 20ನೇ ಶತಮಾನದ ಆರಂಭದ ಇಕ್ಬಾಲ್ ಮತ್ತು ಪ್ರೇಮಚಂದ್ರಿಂದ ವಸಾಹತುಶಾಹೀ ವಿರೋದಿ, ಫ್ಯೂಡಲ್ ವಿರೋಧಿ, ಬಂಡವಾಳಶಾಹಿ ವಿರೋಧಿ ಸಾಮಾಜಿಕ ಜವಾಬ್ದಾರಿಯ ಪ್ರೇರಣೆಗಳನ್ನು ಪಡೆದುಕೊಂಡೇ ಈ ಪ್ರಗತಿಪರ ಲೇಖಕರ ಸಂಘಟನೆಯನ್ನು ರೂಪಿಸಿದರು. 40 ಮತ್ತು 50ನೇ ದಶಕಗಳಲ್ಲಿ ಅತ್ಯಂತ ಶ್ರೇಷ್ಟವೆನ್ನುಬಹುದಾದ ಸಾಹಿತ್ಯವನ್ನು ರಚಿಸಿದರು. ಆದರೆ ಇವರಲ್ಲೂ ಅನೇಕ ಬಗೆಯ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ತಲೆದೋರಿದವು. 50ರ ದಶಕದಲ್ಲಿ ಟಿಸಿಲೊಡೆದ ಈ ವಿಭಿನ್ನತೆಯ ವೈಚಾರಿಕತೆಯ ಜಗಳಗಳು ಅವರ ಜೀವಿತ ಕಾಲದವರೆಗೂ ಮುಂದುವರೆಯಿತು. ಒಂದು ಕಡೆ ಸಜ್ಜಿದ್ ಜಹೀರ್, ಅಲಿ ಸರ್ದಾರ್ ಜಫ್ರಿರವರಂತಹ ಸಿದ್ದಾಂತವಾದಿಗಳಿದ್ದರೆ ಮತ್ತೊಂದು ಕಡೆ ಇಸ್ಮತ್ ಚುಗ್ತಾಯಿ, ಮಂಟೋ (ನಂತರ ಇವರು ಪಾಕೀಸ್ತಾನಕ್ಕೆ ಹೋಗಿ ನೆಲೆಸಿದರು), ಇಫ್ರತ್, ಅಕ್ತರ್ ಹುಸೇನ್‌ರವರಂತಹ ಸೂಕ್ಷ್ಮವಾದಿ ಸಾಹಿತಿಗಳಿದ್ದರು. ಇವರ ನಡುವಿನ ಭಿನ್ನಾಭಿಪ್ರಯಗಳು ಅನೇಕ ಬಾರಿ ಸಾಹಿತ್ಯದ ಮಟ್ಟಿಗೆ, ಸೈದ್ಧಾಂತಿಕ ಬೇಧೀಯತೆಗೆ ಸೀಮಿತವಾಗಿದ್ದರೂ ಕೆಲವೊಮ್ಮೆ ವೈಯುಕ್ತಿಕ ಮಟ್ಟಕ್ಕೂ ಇಳಿದು ತೀವ್ರವಾದ ಆರೋಪ ಪ್ರತ್ಯಾರೋಪಗಳು ವ್ಯಕ್ತವಾಗುತ್ತಿದ್ದವು.

ಈ ಪ್ರಗತಿಶೀಲ ಚಳವಳಿಗೆ ನಾಂದಿ ಹಾಡಿದ ಅಹ್ಮದ ಅಲಿ ಅನೇಕ ಬಾರಿ ತಟಸ್ಥ ಧೋರಣೆಯನ್ನು ವ್ಯಕ್ತಪಡಿಸುತ್ತಿದ್ದರು. ಆದರೂ ನಮ್ಮ ಎಲ್ಲ ಪ್ರಗತಿಪರ ಸಂಘಟನೆಗಳಿಗೂ ಆದಂತೆ ಈ ಪ್ರಗತಿಶೀಲ ಸಂಘಟನೆಯು ಸಹ ಕೊನೆ ಕೊನೆಗೆ ಆದರ್ಶಗಳು ಮತ್ತು ಬದ್ಧತೆಗಳು ಒಂದೇ ಆಗಿದ್ದರೂ ವೈಯುಕ್ತಿಕ ಹಿತಾಸಕ್ತಿಗಳೇ ಮೇಲುಗೈ ಸಾಧಿಸಿದ್ದುದರ ಪರಿಣಾಮವಾಗಿ ಅನೇಕ ಬಾರಿ ವಿಘಟನೆಗಳಿಗೆ ಒಳಗಾಯಿತು. 70ರ ದಶಕದ ವೇಳೆಗೆ ಸಹಜವಾಗಿಯೇ ಹಿನ್ನೆಲೆಗೆ ಸರಿದ ಈ ಸಾಹಿತ್ಯ ಚಳವಳಿ ನಂತರ ಅವಜ್ನೆಗೆ ಈಡಾಗಿದೆ. ಇಂದು ತನ್ನ ಮೂಲ ಹೆಸರಿನೊಂದಿಗೇ ಸಂಘಟನೆ ನಡೆಸುತ್ತಿರುವ ಈ ಪ್ರಗತಿಪರ ಲೇಖಕರ ಸಂಘಟನೆಗೆ ಇಂದು ಆ 40 ಹಾಗೂ 50ರ ದಶಕಗಳ ರೋಮ್ಯಾಂಟಿಕ್ ಖದರ್ ಇಲ್ಲ, ಆ ಮುಗ್ಧ ಆದರ್ಶಗಳಿಲ್ಲ, ಆ ಇಸ್ಮತ್ ಚುಗ್ತಾಯಿ, ಮಂಟೋ, ಅಹ್ಮದ್ ಅಲಿರಂತಹವರ ವಿಕ್ಷಿಪ್ತತೆಯ, ದಿಟ್ಟತೆಯ ವ್ಯಗ್ರ ವ್ಯಕ್ತಿತ್ವವೇ ಇಲ್ಲ, ಕೆ.ಎ.ಅಬ್ಬಾಸರ ಸರಳತೆ ಇಲ್ಲ, ಅಮೃತಾ ಪ್ರೀತಂಳ ಕ್ರಿಯಾಶೀಲ ದಿಟ್ಟತೆಯ ರೋಮ್ಯಾಂಟಿಕ್ ಮಾದರಿ ಇಲ್ಲವೇ ಇಲ್ಲ. ಆದರ್ಶವನ್ನಾಧರಿಸಿದ ಸಾಹಿತ್ಯಕ್ಕೆ, ಎಡಪಂಥೀಯ ಬದ್ಧತೆಯನ್ನಾಧರಿಸಿದ ಸಾಹಿತ್ಯಕ್ಕೆ ತನ್ನದೇ ಬಗೆಯಲ್ಲಿ ಮಧುರ ರೋಮಾಂಚನವನ್ನು ತಂದು ಕೊಟ್ಟ ಈ ಲೇಖಕರು ಮತ್ತು ಲೇಖಕಿಯರ ಬಿಟ್ಟನೆಂದರೂ ಬಿಡದ ನೆನಪುಗಳು ಮಾತ್ರ ನಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತದೆ.

ಆದರೆ ಈ ಸಾಹಿತ್ಯ ಚಳವಳಿಯ ಸೈದ್ಧಾಂತಿಕ ಧೋರಣೆಯನ್ನು ಅನುಸರಿಸಿಯೇ ನಮ್ಮಲ್ಲಿ ಹುಟ್ಟಿಕೊಂಡ ಪ್ರಗತಿಶೀಲ ಚಳವಳಿಯ ಲೇಖಕರು 40 ರಿಂದ 60ರ ದಶಕಗಳವರೆಗೂ ವಿಫುಲವಾದ ಸಾಹಿತ್ಯವನ್ನು ರಚಿಸಿದರು. ಮೇಲಿನ ಉರ್ದು ಹಾಗೂ ಹಿಂದಿ ಲೇಖಕರು ತಮ್ಮ ಹಿಂದಿನ ತಲೆಮಾರಿನ ಜಡತ್ವವನ್ನು ಟೀಕಿಸಿದಂತೆಯೇ ನಮ್ಮ ಪ್ರಗತಿಶೀಲ ಸಾಹಿತಿಗಳು ನವೋದಯದವರನ್ನು ಮಡಿವಂತಿಕೆಯ, ಕಂದಾಚಾರಿ ಸಾಹಿತಿಗಳೆಂದು ದೂಷಿಸಿಸಿದರು. ಆದರೆ ಮರಳಿ ಕಟ್ಟುವ ಹಾದಿಯಲ್ಲಿ ಉರ್ದು ಹಾಗೂ ಹಿಂದೀ ಭಾಷೆಯ ಪ್ರಗತಿಶೀಲ ಲೇಖಕರು ಸಾಧಿಸಿದ ಯಶಸ್ಸನ್ನು ನಮ್ಮ ಪ್ರಗತಿಶೀಲ ಲೇಖಕರು ಸಾಧಿಸಲಾಗಲಿಲ್ಲ. ಇದಕ್ಕೆ ಹಲವಾರು ಕಾರಣಗಳಿರಬಹುದು. ಬಲು ಮುಖ್ಯ ಕಾರಣವೆಂದರೆ ನಮ್ಮಲ್ಲಿನ ಹಿಂದೂ ಧರ್ಮದ ಅಪಾಯಕಾರಿ ಧೋರಣೆಗಳು ಮತ್ತು ವರ್ಣಾಶ್ರಮದ ಸಂಕೀರ್ಣ ನೆಲೆಗಳು ನಮ್ಮ ಪ್ರಗತಿಶೀಲ ಸಾಹಿತಿಗಳ ಗ್ರಹಿಕೆಗೆ ಆಳವಾಗಿ ತಟ್ಟಲೇ ಇಲ್ಲ. ಹೀಗಾಗಿಯೇ ಇವರು ಮಾರ್ಕ್ಸವಾದವನ್ನು ತೀರಾ ತೆಳುಮಟ್ಟದಲ್ಲಿ ಗ್ರಹಿಸಿ ಈ ಗ್ರಹಿಕೆಯನ್ನೂ ಸಹ ಸಾಹಿತ್ಯದ ಮಾದರಿಗೆ ಒಗ್ಗಿಸಿಕೊಳ್ಳುವಾಗ ಎಡವಿದರು. ಇದರ ಪರಿಣಾಮವಾಗಿ ಅನೇಕ ಬಾರಿ ತೀರ ತೆಳುವಾದ ಕೃತಿಗಳು ರಚಿತವಾದವು. ಇದರ ವಿಮರ್ಶೆಗೆ ಇದು ತಕ್ಕುದಾದ ವೇದಿಕೆಯಲ್ಲ. ಆದರೆ ಬಸವರಾಜ ಕಟ್ಟೀಮನಿಯವರ ಜರತಾರೀ ಜಗದ್ಗುರು, ಜ್ವಾಲಾಮುಖಿ, ನಿರಂಜನರ ಚಿರಸ್ಮರಣೆ, ತರಾಸು ಅವರ ಚಂದವಳ್ಳಿಯ ತೋಟ ಮುಂತಾದ ಕಾದಂಬರಿಗಳು ಇಂದಿಗೂ ತಮ್ಮ ಶ್ರೇಷ್ಟತೆಯನ್ನು ಉಳಿಸಿಕೊಂಡಿವೆ. ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. ಇಂದಿಗೂ ನಮ್ಮನ್ನು ಕಾಡುತ್ತವೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಈ ಲೇಖಕರು ಕನ್ನಡದಲ್ಲಿ ಓದುವ ಬಲು ದೊಡ್ಡ ಓದುಗ ವಲಯವನ್ನು ಸೃಷ್ಟಿಸಿದರು. ಈ ಸಾಧನೆಯನ್ನು ಅಳೆಯಲು ಸಾಧ್ಯವೇ ಇಲ್ಲ. ಅನಕೃರವರು ತಮ್ಮ ಸೋಲರಿಯದ ಕನ್ನಡತನದ ಮೂಲಕ ಹುಟ್ಟಿಹಾಕಿದ ಕನ್ನಡ ಚಳವಳಿಯನ್ನು ಬೆಲೆ ಕಟ್ಟಲಾಗುವುದೇ ಇಲ್ಲ. ಅನಕೃ ಬಾರಿಸಿದ ಕನ್ನಡದ ಡಿಂಡಿಮದ ಆದರ್ಶವೇ ಇಂದಿಗೂ ಪ್ರಜ್ಞಾವಂತರನ್ನು ಪೊರೆಯುತ್ತಿರುವುದು. ತಮ್ಮ ಇಳಿ ವಯಸ್ಸಿನಲ್ಲಿಯೂ ನಿರಂಜನರು ಸಾಹಿತ್ಯದ ಪ್ರೀತಿಯನ್ನು ಬಿಟ್ಟುಕೊಡದೆ ವಿಶ್ವಕಥಾ ಕೋಶ ಮಾಲಿಕೆಯಲ್ಲಿ ಯುರೋಪಿನ, ಪಶ್ಚಿಮ, ಏಷ್ಯಾ, ಆಫ್ರಿಕ ರಾಷ್ಟ್ರಗಳ ಕಥೆಗಳನ್ನು ಕನ್ನಡಕ್ಕೆ ಸಂಪಾದಿಸಿ ಕೊಟ್ಟರು. 80ರ ದಶಕದಲ್ಲಿ ನಮ್ಮಂತಹ ಲಕ್ಷಾಂತರ ಜನಸಾಮಾನ್ಯರಲ್ಲಿ ಜಾಗತಿಕ ಸಾಹಿತ್ಯದ ಪರಿಚಯ ಮಾಡಿಸಿದ್ದು ಬಲು ದೊಡ್ಡ ಕನ್ನಡಮ್ಮನ ಸೇವೆ. ಈ ಪ್ರಗತಿಶೀಲ ಲೇಖಕರ ಈ ಕನ್ನಡತನ ದಶಕಗಳು ಕಳೆದರೂ ನಮ್ಮ ಗ್ರಹಿಕೆಯಿಂದ ಸ್ವಲ್ಪವೂ ಪಲ್ಲಟಗೊಂಡಿಲ್ಲ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...