Sunday, April 29, 2012

ಹೈದರಾಬಾದ್‌ನಲ್ಲೊಂದು ಸಿಂಧಗಿ

-ವಾರ್ತಾಭಾರತಿ ಸಂಪಾದಕೀಯ

ಹೈದರಾಬಾದ್‌ನಲ್ಲಿ ನಡೆದ ಕೋಮುಗಲಭೆ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಹೈದರಾಬಾದಿನ ಮದನಪೇಟೆಯ ದೇವಾಲಯವೊಂದರಲ್ಲಿ ದುಷ್ಕರ್ಮಿಗಳು ದನದ ಕಾಲುಗಳನ್ನು ಇಟ್ಟು, ಗೋಡೆಗೆ ಹಸಿರು ಬಣ್ಣ ಬಳಿದ ಘಟನೆ ಕೋಮು ಗಲಭೆಯನ್ನು ಸ್ಫೋಟಿಸುವಂತೆ ಮಾಡಿತ್ತು.ಸಹಜವಾಗಿಯೇ ಇಲ್ಲಿನ ಹಿಂಧೂ ಧರ್ಮೀಯರು ಸ್ಥಳೀಯ ಮುಸ್ಲಿಮರ ವಿರುದ್ಧ ತಿರುಗಿ ಬಿದ್ದರು.ಮುಸ್ಲಿಮರಿಗೆ ಈ ಗಲಭೆಯಿಂದಾಗಿ ಅಪಾರ ನಾಶ ನಷ್ಟವುಂಟಾಯಿತು.ಎಲ್ಲಕ್ಕಿಂತ ಮುಖ್ಯವಾಗಿ ಹೈದರಾಬಾದಿನ ಈ ಗಲಭೆಯ ಹೊಣೆಯನ್ನು ಮುಸ್ಲಿಮರ ತಲೆಗೆ ಕಟ್ಟಲಾಯಿತು. ಆರಂಭದಲ್ಲಿ ಮುಸ್ಲಿಮ್ ದುಷ್ಕರ್ಮಿಗಳು ದನದ ಕಾಲನ್ನು ದೇವಸ್ಥಾನದಲ್ಲಿ ತಂದಿಟ್ಟುದುದರಿಂದಲೇ ಗಲಭೆ ಆರಂಭವಾಯಿತು ಎಂದು ಜನರನ್ನೂ ಮಾಧ್ಯಮಗಳು ನಂಬಿಸಿದವು.ಆದರೆ ಇದೀಗ ಪೊಲೀಸರ ತನಿಖೆ ದುಷ್ಟ ಕೂಟದ ಸಂಚನ್ನು ಬಯಲಿಗೆಳೆದಿದೆ. ದೇವಸ್ಥಾನದಲ್ಲಿ ದನದ ಕಾಲನ್ನು ಇಟ್ಟಿರುವುದು ಮುಸ್ಲಿಮರಲ್ಲ,ನಾಗರಾಜ್, ಕಿರಣ್ ಕುಮಾರ್,ರಮೇಶ್ ಹಾಗೂ ದಯಾನಂದ್ ಎಂಬ ದುಷ್ಕರ್ಮಿಗಳೇ ಕೋಮು ಗಲಭೆಯನ್ನು ಸೃಷ್ಟಿಸಲು ದನದ ಕಾಲನ್ನು ದೇವಸ್ಥಾನದಲ್ಲಿ ತಂದಿಟ್ಟಿದ್ದರು ಎನ್ನುವ ಅಂಶ ಹೊರ ಬಂದಿದೆ.ಅವರಿಗೆ ಕೆಲವು ಕೇಸರಿ ಸಂಘಟನೆಗಳ ಜೊತೆಗೆ ಸಂಬಂಧವಿರುವ ಕುರಿತಂತೆಯೂ ತನಿಖೆ ನಡೆಯುತ್ತಿದೆ.ಇವರೇನೂ ಪಾಕಿಸ್ತಾನದಿಂದ ವೇಷ ಮರೆಸಿ ಬಂದವರಲ್ಲ. ಇವರೆಲ್ಲರೂ ಸ್ಥಳೀಯರು.

ಸ್ಥಳೀಯ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.ಅಷ್ಟೇ ಅಲ್ಲ,ಸಂಘಪರಿವಾರದ ನಿಲುವುಗಳ ಜೊತೆಗೆ ಒಲವುಳ್ಳವರು.ಸಂಘಪರಿವಾರದ ಅಜೆಂಡಾಗಳನ್ನು ಹರಡ ಬೇಕಾದರೆ ಹಿಂದೂಗಳನ್ನು ಪ್ರಚೋದಿಸಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿದುಕೊಂಡವರು.ಆದುದರಿಂದಲೇ ಹಿಂದೂಗಳೆಂದು ಕರೆಸಿಕೊಂಡ ಇವರೇ ದೇವಸ್ಥಾನದಲ್ಲಿ ಕೊಳೆತ ದನದ ಕಾಲುಗಳನ್ನು ತಂದು ಇಟ್ಟರು.ಗೋಡೆಗೆ ಹಸಿರು ಬಣ್ಣವನ್ನು ಬಳಿದರು. ಈ ಪ್ರಕರಣ ಕೇವಲ ಹೈದರಾಬಾದ್‌ಗೆ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ವಿದ್ರೋಹಿ ಕೆಲಸಗಳನ್ನು ದೇಶಭಕ್ತಿಯ ಹೆಸರಿನಲ್ಲಿ, ರಾಮಭಕ್ತಿಯ ಹೆಸರಿನಲ್ಲಿ ವಿದ್ರೋಹಿಗಳು ಮಾಡುತ್ತಾ ಬರುತ್ತಿದ್ದಾರೆ. ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ ಬಾಂಬಿಟ್ಟು ಅದನ್ನು ಲಷ್ಕರ್‌ನಂತಹ ಸಂಘಟನೆಗಳ ತಲೆಗೆ ಕಟ್ಟಲು ಹವಣಿಸಿದರು. ಹಲವು ಅಮಾಯಕ ಮುಸ್ಲಿಮರು ಜೈಲು ಪಾಲಾದರು.

ಮಕ್ಕ ಮಸೀದಿ ಸ್ಫೋಟ, ಅಜ್ಮೀರ್ ಸ್ಫೋಟಗಳಲ್ಲೂ ಇದೇ ನಡೆಯಿತು. ಅಷ್ಟು ದೂರ ಯಾಕೆ ಹೋಗಬೇಕು. ಹುಬ್ಬಳ್ಳಿ ನ್ಯಾಯಾಲಯಕ್ಕೆ ಬಾಂಬಿಟ್ಟವರೂ ಇದೇ ಕೇಸರಿ ಉಗ್ರರು. ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಪ್ರಚೋದಿಸ ಬೇಕು ಎನ್ನುವ ಒಂದೇ ಒಂದು ಕಾರಣಕ್ಕಾಗಿ ಸಿಂಧಗಿಯ ತಹಶೀಲ್ದಾರ್ ಕಚೇರಿಯಲ್ಲಿ ಪಾಕಿಸ್ತಾನ ಧ್ವಜವನ್ನು ಹಾರಿಸಿದರು. ಪೊಲೀಸರ ಚಾಕಚಕ್ಯದಿಂದ ಆರೋಪಿಗಳು ಬಂಧನಕ್ಕೊಳಗಾದರು. ಶ್ರೀರಾಮಸೇನೆ, ಆರೆಸ್ಸೆಸ್ ಮತ್ತು ಪ್ರಮೋದ್ ಮುತಾಲಿಕ್‌ರ ಬಣ್ಣ ಬಯಲಾಯಿತು.ಒಂದು ವೇಳೆ ಆರೋಪಿಗಳ ಪತ್ತೆ ಕಷ್ಟವಾಗಿದ್ದರೆ, ಅದಕ್ಕಾಗಿ ಅಲ್ಲಿನ ಮುಸ್ಲಿಮರು ಬೆಲೆ ತೆರಬೇಕಾಗಿತ್ತು. ಮತ್ತು ಅದರ ಲಾಭವನ್ನು ಆರೆಸ್ಸೆಸ್, ಬಿಜೆಪಿಯಂಥ ಪಕ್ಷಗಳ ನಾಯಕರು ಕೊಯ್ಯುತ್ತಿದ್ದರು.

ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಹೈದರಾಬಾದ್‌ನಲ್ಲಿ ದನದ ಕಾಲನ್ನು ದೇವಸ್ಥಾನದಲ್ಲಿಟ್ಟವರ ಹೆಸರು ರಮೇಶ್, ದಯಾನಂದ್ ಎಂದೇ ಆಗಿರಬಹುದು.ಆದರೆ ಅವರನ್ನು ಹಿಂದೂ ಎಂದು ಕರೆಯಲು ಸಾಧ್ಯವೇ? ತಮ್ಮ ದುರುದ್ದೇಶವನ್ನು ಸಾಸಲು ತಾವು ನಂಬುವ ದೇವಸ್ಥಾನವನ್ನೇ ಅಪವಿತ್ರಗೊಳಿಸುವವರು ಹಿಂದೂ ಹೇಗಾದರು? ಹಿಂದೂಗಳ ಮುಖವಾಡ ಧರಿಸಿರುವ ವಿದ್ರೋಹಿಗಳು ಅವರು.ಹಿಂದೂ ಧರ್ಮಕ್ಕೂ,ಭಾರತಕ್ಕೂ ಏಕಕಾಲದ ಶತ್ರುಗಳು ಅವರು.ಸಿಂಧಗಿಯ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿದವರನ್ನು ಹಿಂದೂ ಎಂದಾಗಲಿ, ಭಾರತೀಯರೆಂದಾಗಲಿ ಕರೆಯಲು ಸಾಧ್ಯವೇ?

ದೇಶವನ್ನು, ಧರ್ಮವನ್ನೂ ತಮ್ಮ ದುರುದ್ದೇಶದ ಸಾಧನೆಗಾಗಿ ಬಲಿಪಶು ಮಾಡುವವರನ್ನು ಹೇಗೆ ಹಿಂದೂ ಎಂದಾಗಲಿ, ಭಾರತೀಯರೆಂದಾಗಲಿ ಕರೆಯಲು ಸಾಧ್ಯ? ದುರದೃಷ್ಟವಶಾತ್ ಈ ನಾಡಿನಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದಾತ ಇನ್ನೂ ನಾಯಕನಾಗಿ ಬಹಿರಂಗವಾಗಿ ಓಡಾಡುತ್ತಲೇ ಇದ್ದಾನೆ. ಕೆಲವರಿಗೆ ಧರ್ಮವೆನ್ನುವುದು ಸಮಾಜವನ್ನು ಒಡೆಯುವ ಒಂದು ಅಸವಲ್ಲದೆ ಇನ್ನೇನೂ ಅಲ್ಲ. ಆದುದರಿಂದಲೇ, ಮುಸ್ಲಿಮರಲ್ಲೂ ಮುಸ್ಲಿಂ ವೇಷ ಧರಿಸಿ ಸಮಾಜವನ್ನು ಒಡೆಯಲು ಹಲವರು ಪ್ರಯತ್ನಿಸುತ್ತಿರುತ್ತಾರೆ.ಕೇಸರಿ ಪಡೆಯಂತೂ ತನ್ನೆಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಲು ದೇಶ ಮತ್ತು ದೇವಸ್ಥಾನಗಳನ್ನು ಬಳಸುತ್ತಿದೆ. ಹತಾಶ ಸ್ಥಿತಿಯಲ್ಲಿರುವ ಸಂಘಪರಿವಾರಕ್ಕೆ ಮತ್ತೆ ಕೋಮು ಗಲಭೆ ಭುಗಿಲೇಳ ಬೇಕಾಗಿದೆ. ದೇಶ ಛಿದ್ರವಿಚ್ಛಿದ್ರವಾಗ ಬೇಕಾಗಿದೆ. ಅದಕ್ಕಾಗಿ ಅವರು ಸಿಂಧಗಿಯಲ್ಲಿ ಮಾತ್ರವಲ್ಲ, ಕೆಂಪುಕೋಟೆಯಲ್ಲೂ ಪಾಕಿಸ್ತಾನದ ಧ್ವಜ ಹಾರಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು. ಯಾರೋ ದೇವಸ್ಥಾನಕ್ಕೋ, ಮಸೀದಿಗೋ ಗೋಮಾಂಸ ಅಥವಾ ಹಂದಿಮಾಂಸ ಎಸೆದಾಕ್ಷಣ ಭಾವೋದ್ವೇಗಕ್ಕೆ ಒಳಗಾಗಬಾರದು.ಉಭಯ ಸಮುದಾಯಗಳೂ ಒಂದಾಗಿ ಸನ್ನಿವೇಶವನ್ನು ಎದುರಿಸಲು ಮುಂದಾಗಬೇಕು.ಎಲ್ಲ ನಾಶ ನಷ್ಟ ಸಂಭವಿಸಿದ ಬಳಿಕ,ನಿಜ ತಿಳಿದರೂ ಏನು ಪ್ರಯೋಜನ.ಆದುದರಿಂದ ಹಿಂದೂ ಮುಸ್ಲಿಮರು ಒಂದಾಗಿ ವಿದ್ರೋಹಿಗಳ ಸಂಚನ್ನು ಎದುರಿಸಬೇಕು.ದೇಶದ ಅಖಂಡತೆಯನ್ನು ಕಾಪಾಡಬೇಕು.

ಮೇ ದಿನ - ಬರೀ ಆಚರಣೆಯಾಗದಿರಲಿ

- ಸನತ್‌ ಕುಮಾರ ಬೆಳಗಲಿ

ನಾಳೆ ಮೇ 1.ಜಗತ್ತಿನ ದುಡಿಯುವ ವರ್ಗದ ಹೆಮ್ಮೆಯ ದಿನ.ಕಾರ್ಮಿಕ ವರ್ಗ ತನ್ನ ಚಾರಿತ್ರಿಕ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಮತ್ತೆ ಮತ್ತೆ ಈ ದಿನದ ಹಿರಿಮೆಯ ಬಗ್ಗೆ ಯೋಚಿಸಬೇಕಾಗಿದೆ. ಮೇ ದಿನದಂದು ಈಗ ಸರಕಾರಿ ರಜೆ ಘೋಷಿಸಲಾಗುತ್ತದೆ. ಕಾರ್ಮಿಕ ಇಲಾಖೆಯಿಂದಲೇ ಮೇ ದಿನದ ಆಚರಣೆ ನಡೆಯುತ್ತದೆ. ಬಿಜೆಪಿ ಸೇರಿದಂತೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಆಚರಿಸುತ್ತವೆ. ಆದರೆ ಎರಡು ದಶಕಗಳ ಹಿಂದಿನವರಿಗೆ ಕೆಂಬಾವುಟ ಹಿಡಿದು ಎಡಪಂಥೀಯ ಸಂಘಟನೆಗಳು ಮೇ ದಿನದಂದು ನಡೆಸುತ್ತಿದ್ದ ಸಭೆ, ಮೆರವಣಿಗಳ ಸೂರ್ತಿ ಈಗ ಎಲ್ಲೂ ಕಾಣುತ್ತಿಲ್ಲ. ಇದನ್ನೊಂದು ಕ್ರಿಯಾನಿ ಎಂಬಂತೆ ಕಾಟಾಚಾರಕ್ಕೆ ಮಾಡಿ ಮುಗಿಸುವ ಪ್ರವೃತ್ತಿ ಒಂದೆಡೆ ಕಾಣುತ್ತಿದ್ದರೆ, ಬಲಪಂಥೀಯ ಸರಕಾರಗಳು ಮತ್ತು ಪಕ್ಷಗಳೂ ಶ್ರಮಜೀವಿ ಆಂದೋಲನದ ಮೇಲೆ ಗೋರಿ ಕಟ್ಟಿ ಶ್ರಾದ್ಧದಂತೆ ಈ ದಿನವನ್ನು ಆಚರಿಸುತ್ತವೆ.ನಿಜ, ಅನೇಕ ಸಭೆ ಮೆರವಣಿಗೆಗಳಲ್ಲಿ ವೇದಿಕೆ ಮೇಲೆ ನಿಂತು ಚಿಕಾಗೊದ ಹೇ ಮಾರ್ಕೆಟ್ ಹುತಾತ್ಮರ ತ್ಯಾಗ ಬಲಿದಾನಗಳನ್ನು ಹಾಡಿ ಹೊಗಳಲಾಗುತ್ತಿದೆ. ಆದರೆ ಆ ಹುತಾತ್ಮರ ಕ್ರಾಂತಿಕಾರಿ ಆಶಯ ಗಳನ್ನು ನಿರ್ಲಕ್ಷಿಸಲಾಗುತ್ತಿದೆ. ‘‘ಜಗತ್ತಿನ ಕಾರ್ಮಿಕರೇ ಒಂದಾಗಿರಿ’’ ಎಂದು ಸಾಂಪ್ರಾದಾಯಿಕ ಕರೆ ನೀಡಿದರೂ ಬಂಡವಾಳಶಾಹಿ ಪ್ರಭುತ್ವದ ದಾಳಿಯನ್ನು ಎದುರಿಸಲು ಕಾರ್ಮಿಕ ವರ್ಗಗಳನ್ನು ಒಂದುಗೂಡಿಸುವತ್ತ ದೃಢವಾದ ಹೆಜ್ಜೆ ಇಡುತ್ತಿಲ್ಲ.

may

ವಿಶ್ವದ ಕಾರ್ಮಿಕರೆ ಒಂದಾಗಿರಿ ಎಂದು ಕರೆ ಕೊಡುವಂತಹ ಅದೇ ಕೆಂ ಬಣ್ಣದ ಬಾವುಟ ಹಿಡಿದು ಪ್ರತ್ಯೇಕವಾಗಿ ಮೇ ದಿನ ಆಚರಿಸುತ್ತಾರೆ. ಒಂದು ದಿನಾ ಚರಣೆಗೆ ಒಂದುಗೂಡಲಾಗದ ವಿಶಾಲ ಮನಸ್ಸಿಲ್ಲದವರು ಜಗತ್ತಿನ ಕಾರ್ಮಿಕರನ್ನು ಹೇಗೆ ಒಂದುಗೂಡಿಸಲು ಸಾಧ್ಯ? ಬರೀ ಘೋಷಣೆ ಹಾಕಿದರೆ ಕಾರ್ಮಿಕರು ಒಂದಾಗುತ್ತಾರೆಯೇ? ಕಳೆದ ಫೆಬ್ರವರಿ 28ರಂದು ಭಾರತದ ಕಾರ್ಮಿಕ ಸಂಘಟನೆಗಳು ಒಂದುಗೂಡಿ ನಡೆಸಿದ ರಾಷ್ಟ್ರವ್ಯಾಪಿ ಯಶಸ್ವಿ ಮುಷ್ಕರವನ್ನು ಗಮನದಲ್ಲಿಟ್ಟುಕೊಂಡೇ ಕೆಲ ವಿಮರ್ಶಾತ್ಮಕ ಪ್ರಶ್ನೆಗಳನ್ನು ಎತ್ತಲೇ ಬೇಕಾಗಿದೆ. ನಿಜ; ಈಚೆಗೆ ಕಾರ್ಮಿಕ ವರ್ಗದಲ್ಲಿ ಸಂಘಟನೆಗಳಲ್ಲಿ ಏಕತೆಯ ಯತ್ನ ನಡೆದಿದೆ. ಜಾಗತೀಕರಣ ಉದಾರೀಕರಣದ ಅಪಾಯದ ವಿರುದ್ಧ, ಜಾಗೃತಿ ಮೂಡತೊಡಗಿದೆ. ಸಾರ್ವಜನಿಕ ಕ್ಷೇತ್ರದ ಶೇರುಗಳ ಮಾರಾಟದ ಮೂಲಕ 40,000 ಕೋಟಿ ರೂಪಾಯಿ ಸಂಗ್ರಹಿಸುವ ಕೇಂದ್ರ ಸರಕಾರದ ವಿರುದ್ಧ ದುಡಿಯುವ ವರ್ಗ ಇತ್ತೀಚಿಗೆ ರೊಚ್ಚಿಗೆದ್ದು ಹೋರಾಡಿತು.

ಕಾರ್ಮಿಕ ಕಾನೂನುಗಳನ್ನು ನಿಷ್ಕ್ರಿಯಗೊಳಿಸುವ, ಗುತ್ತಿಗೆ ಕಾರ್ಮಿಕ ಪದ್ಧತಿಯ ವಿರುದ್ಧ, ಕನಿಷ್ಠ ವೇತನ, ಭವಿಷ್ಯನಿಧಿ, ಇ.ಎಸ್.ಐಗಾಗಿ ಎಲ್ಲಕ್ಕೂ ಮುಖ್ಯವಾಗಿ ಸಾಮಾಜಿಕ ಭದ್ರತೆಗಾಗಿ ನಡೆಸಿದ ಮುಷ್ಕರ ಯಶಸ್ವಿಯಾಯಿತು. ಆದರೆ ತನ್ನ ದೈನಂದಿನ ಆರ್ಥಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಷ್ಟೇ ಕಾರ್ಮಿಕ ವರ್ಗದ ಜವಾಬ್ದಾರಿಯಲ್ಲ.ಇದಕ್ಕೂ ಮಹತ್ತರವಾದ ಸಮಾನತೆಯ ಸಮಾಜವನ್ನು ಕಟ್ಟುವ ಚಾರಿತ್ರಿಕ ಹೊಣೆಗಾರಿಕೆ ಈ ವರ್ಗದ ಮೇಲಿದೆ.ಆ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಕಾರ್ಮಿಕ ವರ್ಗ ಯಶಸ್ವಿಯಾಗಿದಿಯೇ? ವರ್ಗ ರಹಿತ ಸಮಾಜ ಕಟ್ಟುವ ಕನಸು ನನಸಾಗಿದೆಯೇ? ಇಂಥ ಸಮಾಜವೊಂದನ್ನು ಕಟ್ಟಲು ಸೋವಿಯತ್ ರಷ್ಯದಲ್ಲಿ ನಡೆದ ಕ್ರಾಂತಿ ಯಶಸ್ವಿಯಾದರೂ ಆ ಪ್ರಯೋಗ ವಿಲವಾಯಿತೇಕೆ?

Photo Sharing and Video Hosting at Photobucket

ಚೀನಾ ದೇಶ,ಸಮಾಜವಾದಕ್ಕೆ ಎಳ್ಳುನೀರು ಬಿಟ್ಟು ಮಾರುಕಟ್ಟೆ ಆರ್ಥಿಕತೆಯನ್ನು ಬಿತ್ತಿಕೊಂಡಿರುವುದೇಕೆ? ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ನಿಜ, ಮೇ ದಿನ ರೋಮಾಂಚಕವಾದುದು. 1886ರ ಮೇ 4ರಂದು ಮಂಗಳವಾರ ರಾತ್ರಿ ಎಂಟೂವರೆ ಗಂಟೆ ಸಮಯದಲ್ಲಿ ಚಿಕಾಗೊ ನಗರದ ಹೇ ಮಾರ್ಕೆಟ್ ಚೌಕನ ಹತ್ತಿರದ ಡಿಸಪ್ಲೆನ್ತ್ ಓಣಿಯಲ್ಲಿ 2500 ಕಾರ್ಮಿಕರು ಸೇರಿದ್ದರು. ಕಾರ್ಮಿಕರ ಪತ್ರಿಕೆಯೊಂದರ ಸಂಪಾದಕನಾಗಿದ್ದ ಆಗಸ್ಟ್ ಸ್ಟೆಚ್ ಒಮ್ಮೆಲೆ ಅಲ್ಲಿ ನಿಂತಿದ್ದ ಹಳೆಯ ಬಂಡಿಯ ಮೇಲೆ ಹತ್ತಿ ಪ್ರತಿಭಟನಾ ಭಾಷಣ ಆರಂಭಿಸಿದ. ಹಿಂದಿನ ದಿನ ಮುಷ್ಕರ ನಿರತ ಕಾರ್ಮಿಕರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ನ್ನು ಆತ ಖಂಡಿಸಿದ. ಆನಂತರ ಆಲ್ಬರ್ಟ್ ಪಾರ್ಸಸ್ ಹಾಗೂ ಚರ್ಚೊಂದರಲ್ಲಿ ಪಾದ್ರಿಯಾಗಿದ್ದ ಸ್ಯಾಮುವೆಲ್ ಫೀಲ್ಟನ್ ಮಾತನಾಡಿದರು. ಅಮೆರಿಕದ ಬಂಡವಾಳಶಾಹಿ ಸಮಾಜದ ಹುಳುಕನ್ನು ಬಿಚ್ಚಿಟ್ಟರು.

ಈ ಸಭೆ ರಾತ್ರಿ ಹತ್ತು ಗಂಟೆಯ ವರೆಗೆ ಮುಂದುವರಿಯಿತು. ಇನ್ನೇನು ಫಿಲ್ಡನ್ ಎಂಬಾತ ತನ್ನ ಭಾಷಣ ಮುಗಿಸಬೇಕಿತ್ತು. ಅಷ್ಟರಲ್ಲಿ 176 ಮಂದಿ ಸಶಸ್ತ್ರ ಪೊಲೀಸರ ಗುಂಪು ಒಂದು ಜನಸಮೂಹದ ಮೇಲೆ ಗುಂಡು ಹಾರಿಸತೊಡಗಿತು. ಬೆನ್ನಟ್ಟಿ ಗುಂಡು ಹಾರಿಸತೊಡಗಿದಾಗ ನಾಲ್ಕು ಕಾರ್ಮಿಕರು ಕ್ಷಣಾರ್ಧದಲ್ಲಿ ಸಾವಿಗೀಡಾದರು. ಹೀಗೆ ಆರಂಭಗೊಂಡ ದುಡಿಯುವ ವರ್ಗದ ಹೋರಾಟ ಎಂಟು ಗಂಟೆಯ ದುಡಿಮೆಯ ಅವಧಿಗಾಗಿ ಆಗ್ರಹಿಸತೊಡಗಿತು. ಈ ಹೋರಾಟದ ಫಲವಾಗಿ ಜಗತ್ತಿನ ಕಾರ್ಮಿಕ ವರ್ಗ ಎಂಟು ಗಂಟೆ ಕೆಲಸದ ಅವಧಿ ಸೇರಿದಂತೆ ಹಲವಾರು ಸವಲತ್ತುಗಳನ್ನು ಪಡೆಯಿತು. ಹಲವು ಕಾರ್ಮಿಕ ಕಾಯಿದೆಗಳು ಜಾರಿಗೆ ಬಂದವು. ಕೆಲ ದೇಶಗಳಲ್ಲಿ ಕಾರ್ಮಿಕ ವರ್ಗವೇ ಅಧಿಕಾರ ಸೂತ್ರ ಹಿಡಿಯಿತು.

ಮೇ ದಿನದ ಈ ಇತಿಹಾಸವನ್ನು ಎಲ್ಲರಂತೆ ನಾನೂ ಕಳೆದ ನಲವತ್ತು ವರ್ಷಗಳಿಂದ ಬರೆಯುತ್ತಲೇ ಬಂದಿರುವೆ. ಪ್ರತಿ ವರ್ಷ ಮೇ 1 ಬಂದರೆ ತಪ್ಪದೇ ಲೇಖನವನ್ನು ಬರೆಯುತ್ತ ಬಂದಿರುವೆ. ಈ ನಾಲ್ಕು ದಶಕಗಳಲ್ಲಿ ಈ ಜಗತ್ತು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಕಾರ್ಮಿಕ ವರ್ಗದ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸರಕಾರಗಳು ಪತನಗೊಂಡಿವೆ. ಅಪಾರ ತ್ಯಾಗ ಬಲಿದಾನದಿಂದ ಗೆದ್ದುಕೊಂಡಿವೆ. ಹಕ್ಕುಗಳು ಅಪಹರಿಸಲ್ಪಡುತ್ತಿವೆ. ಉದ್ಯೋಗ ಭದ್ರತೆ ನೀರು ಪಾಲಾಗಿದೆ. ಗುತ್ತಿಗೆ ಪದ್ಧತಿ ಎಲ್ಲೆಡೆ ವಿಜೃಂಭಿಸತೊಡಗಿದೆ. ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆ ಹೆಸರಿನಲ್ಲಿ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದೆ.

ಆದರೆ ಹೇ ಮಾರ್ಕೆಟ್ ಹುತಾತ್ಮರ ತ್ಯಾಗ ಬಲಿದಾನದಿಂದ ಪಡೆದುಕೊಂಡಿದ್ದ ಹಕ್ಕುಗಳನ್ನು ಕಾಪಾಡಿಕೊಳ್ಳಲು ಯಾಕೆ ಸಾಧ್ಯವಾಗಲಿಲ್ಲ? ಕಾರ್ಮಿಕ ವರ್ಗದ ನೇತೃತ್ವದ ಸೋವಿಯತ್ ಮತ್ತು ಪೂರ್ವ ಯುರೋಪಿನ ದೇಶಗಳು ಏಕೆ ಪತನಗೊಂಡವು. ಭಾರತದಂಥ ದೇಶದಲ್ಲಿ ಕಾರ್ಮಿಕ ವರ್ಗದ ಪಕ್ಷಗಳಾದ ಕಮ್ಯೂನಿಸ್ಟ್ ಪಕ್ಷಗಳಿಗೆ ಕಾರ್ಮಿಕರು ಯಾಕೆ ಓಟು ಹಾಕುವುದಿಲ್ಲ. ಕಾರ್ಖಾನೆಗಳಲ್ಲಿ ಜಾತಿ ಮತ್ತು ಕೋಮುವಾದಿ ಸಂಘಟನೆಗಳು ಯಾಕೆ ಹುಟ್ಟಿಕೊಂಡಿವೆ. ಮೇ ದಿನದಂದು ಕೆಂಬಾವುಟ ಹಿಡಿದುಕೊಂಡು ಬರುವ ಕಾರ್ಮಿಕರೇ ಇಟ್ಟಿಗೆ ಹೊತ್ತುಕೊಂಡು ಅಯೋಧ್ಯೆಗೆ ಏಕೆ ಹೋಗಿದ್ದರು? ಈ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳದಿದ್ದರೆ ಅದು ಆತ್ಮ ವಂಚನೆಯಾಗುತ್ತದೆ.

ಈ ಪ್ರಶ್ನೆಗಳು ನನ್ನಂಥವರನ್ನು ಮಾತ್ರ ಕಾಡಿಲ್ಲ. ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರಾಗಿದ್ದ ಸರ್ದೇಸಾಯಿ ಸತ್ಯಪಾಲ ಡಾಂಗ್ ಅಂಥವರಿಗೂ ಇವು ನಿದ್ರೆ ಮಾಡಲು ಬಿಟ್ಟಿಲ್ಲ. ಕಾರ್ಮಿಕ ವರ್ಗಕ್ಕೆ ಜೀವತೇಯ್ದ ಸಿಪಿಎಂ ನಾಯಕ ಹಾಗೂ ಸಿಐಟಿಯು ಅಧ್ಯಕ್ಷರಾಗಿದ್ದ ಎಂ.ಕೆ. ಪಂಧೆ ಅವರೂ ಈ ಬಗ್ಗೆ ವ್ಯಾಕುಲಗೊಂಡಿದ್ದರು. ‘‘ಮೇ ದಿನಾಚರಣೆಯಂದು ಹೇ ಮಾರ್ಕೆಟ್ ಹುತಾತ್ಮರನ್ನು ವೈಭವೀಕರಿಸಿ ಮಾತಾಡುವ ಟ್ರೇಡ್ ಯೂನಿಯನ್ ನಾಯಕರು ಆ ಹುತಾತ್ಮರ ಧೀರ ಧೀಮಂತಿಕೆ ಮಾರ್ಗದಲ್ಲಿ ಹೆಜ್ಜೆ ಇಡದೇ ವರ್ಗ ಸಖ್ಯತೆಯ ಧೋರಣೆಯನ್ನು ಅನುಸರಿಸುತ್ತ ಬಂದರು’’ ಎಂದು ಪಂಧೆ ಒಂದೆಡೆ ಬರೆದಿದ್ದಾರೆ.

ಈ ಎಲ್ಲ ವಿಮರ್ಶೆಗಳನ್ನು ಇಟ್ಟುಕೊಂಡೇ ಪ್ರಸಕ್ತ ಸಾಮ್ರಾಜ್ಯಶಾಹಿ, ಜಾಗತೀಕರಣ, ಖಾಸಗೀಕರಣ ಆಧರಿತ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಖಂಡತುಂಡವಾಗಿ ವಿರೋಸಬೇಕಾಗಿದೆ. ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಿ ಶ್ರಮಜೀವಿಗಳನ್ನು ಜೀತದಾಳುಗಳನ್ನಾಗಿ ಮಾಡುವ ಹುನ್ನಾರ ನಡೆದಿದೆ. ಕಾರ್ಮಿಕ ಕಾನೂನುಗಳೇ ಉದ್ಯೋಗ ಸೃಷ್ಟಿಗೆ ಅಡ್ಡಿಯಾಗಿವೆ ಎಂಬ ವಿತಂಡವಾದಗಳೇ ಈಗ ಸರಕಾರದ ನೀತಿ ನಿರೂಪಣೆಗಳಾಗಿ ಹೊರಹೊಮ್ಮುತ್ತಿವೆ. ಎಂಟು ತಾಸಿನ ಕೆಲಸದ ಅವಯನ್ನು ಅನೇಕ ಕೈಗಾರಿಕೆಗಳಲ್ಲಿ ನಿರ್ನಾಮ ಮಾಡಲಾಗಿದೆ. ಕಾರ್ಮಿಕರು ಒಂದಾಗಿ ಧ್ವನಿಯೆತ್ತದಂತೆ ಜಾತಿ, ಧರ್ಮ,ಭಾಷೆಯ ಆಧಾರದಲ್ಲಿ ಅವರನ್ನು ವ್ಯವಸ್ಥಿತವಾಗಿ ವಿಭಜಿಸಲಾಗಿದೆ. ಖಾಸಗಿ ಉದ್ದಿಮೆಗಳು ಒತ್ತಟ್ಟಿಗಿರಲಿ ಕೆಎಸ್‌ಆರ್‌ಟಿಸಿಯಂಥ ಸರಕಾರಿ ರಂಗದ ಸಾರಿಗೆ ಸಂಸ್ಥೆಯಲ್ಲಿ ್ಯಾಸಿಸ್ಟ್ ದೌರ್ಜನ್ಯ ನಡೆದಿದೆ. ಕಳೆದ ಎಂಟು ವರ್ಷಗಳಿಂದ ಅಲ್ಲಿ ಯಾವುದೇ ಭತ್ಯೆ, ಸೌಕರ್ಯ ನೀಡಿಲ್ಲ.

ರಾಜ್ಯ ಸರಕಾರಕ್ಕೆ ಸಮಾನವಾದ ವೇತನವನ್ನು ನೀಡುವುದಿಲ್ಲ. ತಮ್ಮ ಹಕ್ಕುಗಳನ್ನು ಕೇಳುವ ನೌಕರರನ್ನು ಮನ ಬಂದಂತೆ ವರ್ಗಾವಣೆ ಮಾಡಲಾಗುತ್ತದೆ. ಅನೇಕರನ್ನು ಅಮಾನತ್ತಿನಲ್ಲಿಡಲಾಗಿದೆ. ಒಂದು ವರ್ಷದಲ್ಲಿ ನಿಗಮಗಳ ನೌಕರರಿಂದ 20 ಕೋಟಿ ರೂಪಾಯಿ ದಂಡ ರೂಪದಲ್ಲಿ ವಸೂಲಿ ಮಾಡಲಾಗಿದೆ. ಈ ಸಂಸ್ಥೆಯಲ್ಲಿ ಕಾರ್ಮಿಕ ಸಂಘದ ಮಾನ್ಯತೆಗಾಗಿ ಕಳೆದ ಹದಿನೈದು ವರ್ಷದಿಂದ ಚುನಾವಣೆಯೇ ನಡೆದಿಲ್ಲ.ಇಂಥ ಸ್ಥಿತಿಯಲ್ಲಿ ದುಡಿಯುವ ವರ್ಗ ತನ್ನ ಹಕ್ಕುಗಳನ್ನು ಕಾಪಾಡಿಕೊಳ್ಳಲು,ಎಲ್ಲ ಬಡವರ ಹಿತರಕ್ಷಿಸಲು ಸಮಾನತೆಯ ಸಮಾಜ ನಿರ್ಮಿಸಲು ಛಲದಿಂದ ಹೋರಾಟ ಮುಂದುವರಿಸಬೇಕಾಗಿದೆ. ಆದರೆ ಈ ಹೋರಾಟ ರಾಜಿರಹಿತವಾಗಿರಬೇಕೆಂಬುದನ್ನು ಮರೆಯಬಾರದು.

ಸಹಯಾನ: ಮಾಧ್ಯಮ ಮತ್ತು ಹೊಸ ತಲೆಮಾರುSaturday, April 28, 2012

ಅಂಚಿನಲ್ಲಿ ಇರುವವರು ಅಧಿಕಾರ ಹಿಡಿಯುವ ಕಷ್ಟ!

-ಪದ್ಮರಾಜ ದಂಡಾವತಿ
-ಕೃಪೆ : ಪ್ರಜಾವಾಣಿ

ಅವರ ಜನಸಂಖ್ಯೆ ಕಡಿಮೆಯೇನೂ ಇಲ್ಲ. ಕರ್ನಾಟಕದಲ್ಲಿ ಲಿಂಗಾಯತರನ್ನು ಬಿಟ್ಟರೆ ನಂತರ ಇರುವುದು ಇವರೇ. ಆದರೆ, ಐತಿಹಾಸಿಕ ಕಾರಣಗಳಿಂದಾಗಿ ಸಮಾಜದ ಅಂಚಿನಲ್ಲಿ ನಿಂತಿದ್ದಾರೆ. ಮಧ್ಯಕ್ಕೆ ಬಂದು ನಿಲ್ಲಲು ಶಿಕ್ಷಣದ ಬಲವಿಲ್ಲ. ಸಂಘಟನೆಯೂ ಇಲ್ಲ.
ಹೀಗೆ ಅಂಚಿನಲ್ಲಿ ನಿಂತವರ ಕಷ್ಟಗಳು ಒಂದೆರಡಲ್ಲ. ಸಮಾಜದ ಮುಖ್ಯವಾಹಿನಿಯಲ್ಲಿ ನೀವು ಸೇರದೇ ಹಾಗೆಯೇ ದಂಡೆಯಲ್ಲಿಯೇ ನಿಂತುಕೊಂಡರೆ ಯಾರೂ ನಿಮಗೆ ಅಧಿಕಾರದ ಮಣೆ ಹಾಕುವುದಿಲ್ಲ. ಪ್ರಜಾಪ್ರಭುತ್ವ ಎಂದರೆ ಅಲ್ಲಿ ಎಲ್ಲ ಸಮುದಾಯಗಳಿಗೂ ಒಂದಿಷ್ಟು ಅವಕಾಶ, ಒಂದಿಷ್ಟು ಜಾಗ ಇದ್ದೇ ಇರಬೇಕು. ಎಲ್ಲ ಸಮುದಾಯಗಳು ಪಾಲುಗೊಂಡಾಗಲೇ ಆ ಅಧಿಕಾರಕ್ಕೆ ಒಂದು ಅರ್ಥ, ಒಂದು ಸಾರ್ಥಕತೆ.

ಆದರೆ, ಕರ್ನಾಟಕದ ರಾಜಕೀಯದಲ್ಲಿ ಆಗಿರುವುದೇನು? ದೇಶದ ರಾಜಕೀಯದಲ್ಲಿಯೂ ಹೀಗೆಯೇ ಆಗಿರಬೇಕು. ಕರ್ನಾಟಕದ ಜನಸಂಖ್ಯೆಯಲ್ಲಿ ಮುಸಲ್ಮಾನರ ಪ್ರಮಾಣ ಶೇ 13. ಜನಸಂಖ್ಯೆ ಪ್ರಕಾರ ವಿಧಾನಸಭೆಯಲ್ಲಿ ಅವರ ಸಮುದಾಯದ 30 ಮಂದಿ ಶಾಸಕರು ಇರಬೇಕು.

ಆದರೆ, ರಾಜ್ಯಗಳ ಪುನರ್‌ವಿಂಗಡಣೆ ನಂತರ ಇದುವರೆಗೆ ಅತಿ ಹೆಚ್ಚು ಮುಸ್ಲಿಮರು ವಿಧಾನಸಭೆಯ ಸದಸ್ಯರಾಗಿದ್ದುದು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ (1978). ಆಗ ಅವರ ಸಂಖ್ಯೆ 17 ಇತ್ತು. ಅವರಲ್ಲಿ 12 ಮಂದಿ ಕಾಂಗ್ರೆಸ್ ಟಿಕೆಟ್ ಮೇಲೆ ಗೆದ್ದಿದ್ದರು. ಈಗಿನ ಸದನದಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಕೇವಲ ಒಂಬತ್ತು.

ಆದರೆ, ರಾಜ್ಯದ ಜನಸಂಖ್ಯೆಯಲ್ಲಿ ಶೇ 14 ರಷ್ಟು ಇರುವ ಲಿಂಗಾಯತ ಶಾಸಕರ ಸಂಖ್ಯೆ 59. ಮುಸ್ಲಿಮರಿಗಿಂತ ಕಡಿಮೆ ಅಂದರೆ ಶೇ 12ರಷ್ಟು ಇರುವ ಒಕ್ಕಲಿಗ ಶಾಸಕರ ಸಂಖ್ಯೆ 52! ಸ್ಥಳೀಯ ಸಂಸ್ಥೆಗಳಲ್ಲಿ ಮುಸ್ಲಿಂ ಪ್ರಾತಿನಿಧ್ಯ ಇನ್ನೂ ಶೋಚನೀಯವಾಗಿದೆ.

ಈಗ ರಾಜ್ಯದ 30 ಜಿಲ್ಲಾ ಪಂಚಾಯ್ತಿಗಳಲ್ಲಿ ಇರುವ ಒಟ್ಟು ಮುಸ್ಲಿಂ ಸದಸ್ಯರ ಸಂಖ್ಯೆ 15! 175 ತಾಲ್ಲೂಕು ಪಂಚಾಯ್ತಿಗಳ ಪೈಕಿ 100ಕ್ಕಿಂತ ಹೆಚ್ಚು ತಾಲ್ಲೂಕು ಪಂಚಾಯ್ತಿಗಳಲ್ಲಿ ಒಬ್ಬ ಮುಸ್ಲಿಂ ಸದಸ್ಯರೂ ಇಲ್ಲ! ಮೂರು ಹಂತದ ಪಂಚಾಯ್ತಿ ಸಂಸ್ಥೆಗಳಿಗೆ ಚುನಾವಣೆ ನಡೆಯುವುದಕ್ಕಿಂತ ಮುಂಚೆ ಹಾಲಿ ಸರ್ಕಾರ ವಿಶೇಷ ಸುಗ್ರೀವಾಜ್ಞೆ ಮೂಲಕ ಮೀಸಲಾತಿಗೆ ತಿದ್ದುಪಡಿ ತಂದುದರ ಫಲ ಇದು.

ವಿಧಾನ ಪರಿಷತ್ತಿನ ಹಾಲಿ ಸದಸ್ಯ ಮತ್ತು ಬೀದರ್‌ನ ಹಿರಿಯ ಪತ್ರಕರ್ತ ಕಾಜಿ ಅರ್ಷದ್ ಅಲಿ ಅವರು ಕಳೆದ ತಿಂಗಳು ಬಿಡುಗಡೆ ಮಾಡಿರುವ `ಕರ್ನಾಟಕ ಮುಸ್ಲಿಮ್ಸ ಅಂಡ್ ಎಲೆಕ್ಟೊರಲ್ ಪಾಲಿಟಿಕ್ಸ್` ಎಂಬ ಪುಸ್ತಕ ಬೆಳಕಿಗೆ ಹಿಡಿದಿರುವ ಅಂಶಗಳು ಇವು.

ಬೆಂಗಳೂರಿನ ಬುಕ್‌ವೇರ್ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ (ಪುಟ 258- ಬೆಲೆ ರೂ.250) ಈ ಪುಸ್ತಕ ತನ್ನ ಮಾದರಿಯಲ್ಲಿಯೇ ಪ್ರಥಮ ಎನ್ನುವಂಥದು. ಕಾಜಿ ಅರ್ಷದ್ ಅಲಿ ಅವರು ಬೀದರ್‌ನಿಂದ ಹಿಂದಿ ಭಾಷೆಯಲ್ಲಿ `ಬೀದರ್ ಕಿ ಆವಾಜ್` (1977) ಮತ್ತು ಉರ್ದು ಭಾಷೆಯಲ್ಲಿ `ಸುರ್ಖ್ ಜಮೀನ್` (1994) ಎಂಬ ಎರಡು ದೈನಿಕಗಳನ್ನು ಸಂಪಾದಿಸುತ್ತಾರೆ. ಅವರಿಗೆ ಚುನಾವಣೆ ಒಂದು ವಿಶೇಷ ಆಸಕ್ತಿ.

ಅವರು 1951-52ರಲ್ಲಿ ನಡೆದ ಮೊದಲ ಮಹಾ ಚುನಾವಣೆಯಿಂದ ಹಿಡಿದು ಈಚಿನ ವರೆಗೆ ನಡೆದ ಎಲ್ಲ ಚುನಾವಣೆಗಳ ಅಂಕಿ ಅಂಶಗಳನ್ನು ಕಲೆ ಹಾಕಿ ಕರ್ನಾಟಕದ ಚುನಾವಣಾ ರಾಜಕೀಯದಲ್ಲಿ ಮುಸ್ಲಿಮರ ಸ್ಥಾನಮಾನವೇನು ಎಂಬುದನ್ನು ಕಣ್ಣು ತೆರೆಸುವ ರೀತಿಯಲ್ಲಿ ಮಂಡಿಸಿದ್ದಾರೆ :

`ದೇಶದಲ್ಲಿ ಅತ್ತ ಸ್ವಾತಂತ್ರ್ಯದ ಬೆಳಕು ಮೂಡುತ್ತಿದ್ದಾಗ ಇತ್ತ ಮುಸ್ಲಿಮರಿಗೆ ಗಾಢಾಂಧಕಾರದ ಅನುಭವ. ದೇಶ ವಿಭಜನೆ ಬರೀ ಭೂಮಿಯನ್ನು ಮಾತ್ರ ಹಂಚಿರಲಿಲ್ಲ.

ಮನಸ್ಸುಗಳೂ ಒಡೆದು ಹೋಗಿದ್ದುವು. ಪರಿಚಿತರು ಅಪರಿಚಿತರಾಗಿದ್ದರು. ಅಪರಿಚಿತರು ಬದ್ಧ ವೈರಿಗಳಾಗಿ ಬಿಟ್ಟಿದ್ದರು... 1951-52ರಲ್ಲಿ ದೇಶದಲ್ಲಿ ಮೊದಲ ಮಹಾಚುನಾವಣೆ ನಡೆಯಿತು. ಇಡೀ ವಿಶ್ವ ಬೆರಗಿನಿಂದ, ತೆರೆದ ಕಣ್ಣಿನಿಂದ ಈ ವಿದ್ಯಮಾನವನ್ನು ಗಮನಿಸುತ್ತಿತ್ತು.

ಏಕೆಂದರೆ ಪ್ರಪಂಚದಲ್ಲಿ ಇಷ್ಟು ದೊಡ್ಡ ಚುನಾವಣೆ ಅದುವರೆಗೆ ನಡೆದಿರಲಿಲ್ಲ. ಆದರೆ, ಹೆದರಿದ್ದ ಮುಸ್ಲಿಮರು ತಮ್ಮ ಮನೆಗಳಿಗೆ, ಮೊಹಲ್ಲಾಗಳಿಗೆ ಮಾತ್ರ ಸೀಮಿತರಾಗಿ ಉಳಿದುಕೊಂಡರು. ಅವರು ತಾವು ಮಾಡದ `ಪಾಪ`ದ ಪ್ರತಿಕ್ರಿಯೆಯ ಭಯದಲ್ಲಿ ಇದ್ದರು; ಮಾತ್ರವಲ್ಲ ತಮ್ಮ ಸಮುದಾಯದ ಸಂಕುಚಿತ ದೃಷ್ಟಿಯ ನಾಯಕರು ಇಂಥ ದೊಡ್ಡ ಫಲವತ್ತಾದ ದೇಶವನ್ನು ಬಿಟ್ಟು ಆಗಲೇ ಹರಿದು ಹಂಚಿ ಹೋದಂತೆ ಇದ್ದ ಪಾಕಿಸ್ತಾನವನ್ನು ಆಯ್ದುಕೊಂಡ ಪರಿಣಾಮಗಳನ್ನೂ ಎದುರಿಸಬೇಕಿತ್ತು.

ಸ್ವಾತಂತ್ರ್ಯ ಬಂದ ನಂತರದ 15-20 ವರ್ಷಗಳ ಅವಧಿಯಲ್ಲಿನ ಮುಸ್ಲಿಮರ ಸ್ಥಿತಿಯನ್ನು ನೋಡಿದರೆ ಅವರು ಭಾರತ ದೇಶದ ಪಾರ್ಶ್ವವಾಯುಪೀಡಿತ ಒಂದು ಅಂಗದಂತೆ ಕಾಣುತ್ತಿದ್ದರು. ಆ ಅಂಗವನ್ನು ಕತ್ತರಿಸಿ ಹಾಕಲೂ ಸಾಧ್ಯವಿರಲಿಲ್ಲ. ಇತ್ತ ಅದನ್ನು ಬಳಸಿಕೊಳ್ಳಲು ಆಗುತ್ತಿರಲಿಲ್ಲ.

`ಆದರೆ, ಕಾಲ ಎಲ್ಲದಕ್ಕೂ ಒಂದು ಉತ್ತರ ಎನ್ನುತ್ತಾರೆ. ಮುಸ್ಲಿಮರ ವಿಚಾರದಲ್ಲಿಯೂ ಹಾಗೆಯೇ ಆಯಿತು. ಅವರು ಕತ್ತಲಲ್ಲೂ ಕಣ್ಣು ಪಿಳುಕಿಸಿ ನೋಡಲು ಆರಂಭಿಸಿದರು. ರಾಷ್ಟ್ರರಾಜಕಾರಣದಿಂದ ದೂರ ಉಳಿದುದರ ನಷ್ಟವೇನು ಎಂಬುದನ್ನು ಕಂಡುಕೊಂಡರು. ದೇಶದ ಬಗ್ಗೆ ಮಹತ್ವದ ನಿರ್ಣಯ ತೆಗೆದುಕೊಳ್ಳುವ ಸಂಸ್ಥೆಗಳಿಂದ ತಾವು ಮತ್ತೂ ದೂರ ಉಳಿದರೆ ಆಗುವ ಪರಿಣಾಮಗಳು ಏನು ಎಂಬುದನ್ನೂ ಅವರು ಯೋಚಿಸಿದರು.

ಅದುವರೆಗೆ ತಮ್ಮ ಜೀವನೋಪಾಯ, ಧರ್ಮ ಮತ್ತು ಅಸ್ಮಿತೆಯ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುತ್ತಿದ್ದ ಮುಖಂಡರು ರಾಷ್ಟ್ರದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವ ಅಗತ್ಯವನ್ನು ಮನಗಂಡರು... ಒಂದು ಪ್ರಜಾಸತ್ತಾತ್ಮಕ ದೇಶದಲ್ಲಿ ಎಲ್ಲರಿಗೂ ಇರುವ ಹಾಗೆ ಮುಸ್ಲಿಮರಿಗೂ ದೇಶದ ಸಂಪನ್ಮೂಲಗಳ ಮೇಲೆ ಸಮಾನ ಅಧಿಕಾರ ಇದೆ.

ಸಮಾನ ಹಕ್ಕು ಇದೆ... `ವ್ಯವಸ್ಥೆ`ಯ ಹೊರಗೆ ಇದ್ದೂ ಅದರಲ್ಲಿ ಪಾಲು ಪಡೆಯಬಹುದು ಎಂದು ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಹಕ್ಕುಗಳನ್ನು ಕೇಳಿ ಪಡೆಯಬಾರದು, ಕಸಿದುಕೊಳ್ಳಬೇಕು ಎಂದು ವಾದಿಸುತ್ತಾರೆ. ಎರಡೂ ವ್ಯರ್ಥ ಮತ್ತು ನಕಾರಾತ್ಮಕ ಕಸರತ್ತುಗಳು.

ಇಂಥ ಪ್ರಯತ್ನಗಳಿಂದ ಅಮೂಲ್ಯ ಶಕ್ತಿ ವ್ಯಯವಾಗುತ್ತದೆಯೇ ಹೊರತು ಮತ್ತೇನೂ ಆಗುವುದಿಲ್ಲ. ಅದಕ್ಕೆ ಬದಲು ಸಕಾರಾತ್ಮಕವಾಗಿ, `ವ್ಯವಸ್ಥೆ`ಯ ಒಂದು ಭಾಗವಾಗಿ ಮುಖ್ಯವಾಹಿನಿಯಲ್ಲಿ ಸೇರಿಕೊಂಡರೆ ಹಕ್ಕುಗಳು ತಂತಾನೇ ನಮ್ಮನ್ನು ಹಿಂಬಾಲಿಸಿ ಬರುತ್ತವೆ. ಬಹುಶಃ ಇಂಥ ಸಕಾರಾತ್ಮಕ ಚಿಂತನೆಯ ಫಲವಾಗಿ ಈಗ ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣ, ಆರ್ಥಿಕ ಅಭಿವೃದ್ಧಿ, ಮೀಸಲಾತಿ ಮತ್ತು ಪ್ರಜಾಸತ್ತೆಯಲ್ಲಿ ಪಾಲುಗೊಳ್ಳುವಿಕೆಯಂಥ ಸಂಗತಿಗಳ ಚರ್ಚೆ ನಡೆಯುತ್ತಿದೆ.

`ಇದೆಲ್ಲ ನಿಜವಾದರೂ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದ ಸ್ಥಿತಿ ಹೆಚ್ಚೇನೂ ಸುಧಾರಿಸಿಲ್ಲ. ಸ್ವಾತಂತ್ರ್ಯ ಬಂದ ನಂತರ 15 ಮಹಾ ಚುನಾವಣೆಗಳು ಮತ್ತು ವಿಧಾನಸಭೆಗೆ 13 ಚುನಾವಣೆಗಳು ನಡೆದಿವೆ. ವಿಧಾನ ಪರಿಷತ್ತಿಗೆ 30 ದ್ವೈವಾರ್ಷಿಕ ಚುನಾವಣೆಗಳು ನಡೆದಿವೆ.

ಯಾವ ಚುನಾವಣೆಯಲ್ಲಿಯೂ ಈ ಸಮುದಾಯದ ಪ್ರತಿನಿಧಿಗಳು ತಮ್ಮ ಜನಸಂಖ್ಯೆಗೆ ತಕ್ಕಂತೆ ಆಯ್ಕೆಯಾಗಲಿಲ್ಲ. ರಾಜ್ಯಸಭೆಗೆ ಇದುವರೆಗೆ ಕರ್ನಾಟಕದಿಂದ 12 ಮಂದಿ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಯಾವ ಒಂದು ಅವಧಿಯಲ್ಲಿಯೂ ಅದು ಮೂರಕ್ಕಿಂತ ಹೆಚ್ಚು ಇರಲಿಲ್ಲ... ಇದಕ್ಕೆ ಕಾರಣ ಅನೇಕ. `ಜಾತ್ಯತೀತ ಪಕ್ಷಗಳು` ಕೂಡ ಮುಸ್ಲಿಂ ಸಮುದಾಯದ ಜನಸಂಖ್ಯೆಗೆ ತಕ್ಕ ಪ್ರಾತಿನಿಧ್ಯ ಕೊಡಲು ಮನಸ್ಸು ಮಾಡಲಿಲ್ಲ...

ಕಳೆದ 50-60 ವರ್ಷಗಳ ಕರ್ನಾಟಕದ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಕೆಲವೇ ಕೆಲವು ಜಾತಿಗಳು ಮಾತ್ರ ರಾಜ್ಯದ ಸಂಪನ್ಮೂಲದ ಮೇಲೆ ಅಧಿಕಾರ ಹೊಂದಿರುವುದು ಎದ್ದು ಕಾಣುತ್ತದೆ. ಅನೇಕ ಜಾತಿಗಳ ಜನರಿಗೆ ವಿಧಾನಸಭೆಯಲ್ಲಿ ಪ್ರಾತಿನಿಧ್ಯವೇ ಸಿಕ್ಕಿಲ್ಲ.

ಅಷ್ಟೇ ಏಕೆ ಕೆಲವು ಜಾತಿಗಳ ಜನರು ಚುನಾವಣೆಯಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸುವ ಕನಿಷ್ಠ ಸಾಹಸವನ್ನೂ ಮಾಡಿಲ್ಲ...ಮುಸ್ಲಿಮರ ಪ್ರಾತಿನಿಧ್ಯ ಕಡಿಮೆ ಆದುದಕ್ಕೆ ಭಾವುಕವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಲಿಂಗಾಯತರನ್ನು ಬಿಟ್ಟರೆ ಮುಸ್ಲಿಮರೇ ಈ ರಾಜ್ಯದ ದೊಡ್ಡ ಸಮುದಾಯ ಎಂಬುದು ನಿಜ.

ಆದರೆ, ಲಿಂಗಾಯತರು ಹಾಗೂ ಒಕ್ಕಲಿಗರ ಹಾಗೆ ಮುಸ್ಲಿಮರು ಒಂದೊಂದು ಪ್ರದೇಶದಲ್ಲಿ ಸಾಂದ್ರವಾಗಿ ಇಲ್ಲ. ಸುಮಾರು 50 ವಿಧಾನಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗರ ಜನಸಂಖ್ಯೆ ಶೇ 30 ರಿಂದ 40ರ ಆಸುಪಾಸಿನಲ್ಲಿ ಇದೆ. ಅಲ್ಲಿ ರಾಜಕೀಯ ವಾತಾವರಣ ಹೇಗಿದೆಯೆಂದರೆ ಒಕ್ಕಲಿಗರನ್ನು ಬಿಟ್ಟರೆ ಬೇರೆ ಸಮುದಾಯದವರು ಸ್ಪರ್ಧಿಸಲು ಸಾಧ್ಯವೇ ಇರುವುದಿಲ್ಲ.

ಒಕ್ಕಲಿಗರು ಆರ್ಥಿಕವಾಗಿಯೂ ಬಲಿಷ್ಠ ಸಮುದಾಯ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಪ್ರಬಲ ಸಮುದಾಯ. ಅವರ ಕೈಯಲ್ಲಿ ಶಿಕ್ಷಣ ಸಂಸ್ಥೆಗಳು ಇವೆ.
ಕೈಗಾರಿಕೆಗಳು ಇವೆ. ಕೃಷಿ ಅವರ ಕೈಯಲ್ಲಿ ಇದೆ. ಲೇವಾದೇವಿ ದಂಧೆಯಲ್ಲಿಯೂ ಅವರು ತೊಡಗಿಕೊಂಡಿದ್ದಾರೆ.

ಹೀಗಾಗಿ ಆಯಾ ಕ್ಷೇತ್ರಗಳಲ್ಲಿ ಅವರ ಮಾತೇ ನಡೆಯುತ್ತದೆ. ಚುನಾವಣೆಗಳಲ್ಲಿ ಈ ಎರಡು ಸಮುದಾಯಗಳ ಅಭ್ಯರ್ಥಿಗಳು ಮೇಲುಗೈ ಸಾಧಿಸುವುದು ಈ ಕಾರಣಗಳಿಂದಲೇ. ರಾಜಕೀಯ ಪಕ್ಷಗಳು ಜಾತ್ಯತೀತತೆ, ಸಾಮಾಜಿಕ ನ್ಯಾಯ ಎಂದೆಲ್ಲ ಎಷ್ಟೇ ಮಾತನಾಡಿದರೂ ಅವುಗಳ ಮುಖ್ಯ ಉದ್ದೇಶ ಅಧಿಕಾರ ಹಿಡಿಯುವುದು. ಜತೆಗೆ ಮುಸ್ಲಿಂ ಸಮುದಾಯದ ಜನರು ಚದುರಿದಂತೆ ಇರುವುದರಿಂದ ಅವರ ಗೆಲುವಿನ ಬಗ್ಗೆ ರಾಜಕೀಯ ಪಕ್ಷಗಳಿಗೆ ಖಾತ್ರಿ ಇರುವುದಿಲ್ಲ. ಮುಸ್ಲಿಮರು ಆರ್ಥಿಕವಾಗಿ ದುರ್ಬಲರು. ಈ ಸಮುದಾಯದ ಬಹುಸಂಖ್ಯಾತರು ಹಳ್ಳಿವಾಸಿಗಳು. ಅವರು ತಾವು ವಾಸಿಸುವ ಹಳ್ಳಿ ಹೇಗೆ ಮತ ಹಾಕುತ್ತದೆಯೋ ಹಾಗೆಯೇ ಅವರೂ ಮಾಡಬೇಕಾಗುತ್ತದೆ.

`ಬರೀ ತಮ್ಮ ಸಮುದಾಯದ ಮತಗಳನ್ನು ನಂಬಿಕೊಂಡು ವಿಧಾನಸಭೆ ಅಥವಾ ಲೋಕಸಭೆಯನ್ನು ಪ್ರವೇಶಿಸುತ್ತೇನೆ ಎಂದು ಮುಸ್ಲಿಮರು ಅಂದುಕೊಳ್ಳಲು ಆಗದು. ಅವರು ಇತರ ಬಹುಸಂಖ್ಯಾತ ಸಮುದಾಯಗಳ ಬೆಂಬಲವನ್ನು ಗಳಿಸಲೇಬೇಕು. ಅದಕ್ಕೆ ಅವರು ಸಮಾಜದ ಎಲ್ಲ ಸಮುದಾಯಗಳ ಜತೆಗೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳಬೇಕು. ಮತ್ತು ಜನಪ್ರಿಯ ರಾಜಕೀಯ ಪಕ್ಷಗಳ ಟಿಕೆಟ್ ಪಡೆಯಲು ಯಶಸ್ವಿಯಾಗಬೇಕು...`

ಅರ್ಷದ್ ಅಲಿಯವರು ಹೇಳಿರುವುದೆಲ್ಲ ನಿಜ. ಕರ್ನಾಟಕದಲ್ಲಿ ಮುಸ್ಲಿಂ ಲೀಗ್ ಒಂದು ರಾಜಕೀಯ ಪಕ್ಷವಾಗಿ ಯಾವುದೇ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯ ಬಂದ ತಕ್ಷಣ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಕೆ.ಸಿ.ರೆಡ್ಡಿ ನೇತೃತ್ವದ ಮೊದಲ ಸಂಪುಟದಲ್ಲಿ ಮುಸ್ಲಿಂ ಲೀಗ್‌ನ ಅಧ್ಯಕ್ಷ ಮೊಹ್ಮದ್ ಷರೀಫ್ ಅವರು ಮಂತ್ರಿಯಾಗಿ ಎರಡು ವರ್ಷ ಕೆಲಸ ಮಾಡಿದರೂ ನಂತರ ಅವರು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.

ಮುಸ್ಲಿಂ ಲೀಗ್‌ನ ಅಭ್ಯರ್ಥಿಯಾಗಿ ರಾಜ್ಯ ವಿಧಾನಸಭೆಯನ್ನು ಮೊದಲು ಮತ್ತು ಕೊನೆಯವರಾಗಿ (ಇದುವರೆಗೆ) ಪ್ರವೇಶ ಮಾಡಿದ್ದು ಕಮರುಲ್ ಇಸ್ಲಾಂ ಮಾತ್ರ. ಗುಲ್ಬರ್ಗ ನಗರದಿಂದ 1978 ಮತ್ತು 89ರಲ್ಲಿ ಅವರು ಲೀಗ್ ಅಭ್ಯರ್ಥಿಯಾಗಿ ಗೆದ್ದರು.

ನಂತರ ಅವರು ಜನತಾದಳ ಸೇರಿದರು. ಈಗ ಅವರು ಕಾಂಗ್ರೆಸ್ಸಿನಲ್ಲಿ ಇದ್ದಾರೆ. ಕರ್ನಾಟಕದಲ್ಲಿ ಮುಸ್ಲಿಮರು ಬರೀ ತಮ್ಮ ಮತಗಳನ್ನು ಆಧರಿಸಿ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಕಮರುಲ್ ಅವರೂ ಒಂದು ಉದಾಹರಣೆ ಆಗಿರಬಹುದು.

ಆದರೆ, ಇದಕ್ಕೆ ತದ್ವಿರುದ್ಧವಾಗಿ ಮುಸ್ಲಿಂ ಸಮುದಾಯದ ಜನರು ತೀರಾ ಕಡಿಮೆ ಇರುವ ಕ್ಷೇತ್ರಗಳಿಂದ ಆ ಸಮುದಾಯದ ಅಭ್ಯರ್ಥಿಗಳು ಗೆದ್ದ ಅನೇಕ ಉದಾಹರಣೆಗಳನ್ನು ಅರ್ಷದ್ ಅಲಿ ಉಲ್ಲೇಖಿಸುತ್ತಾರೆ: 1952ರಲ್ಲಿ ಚಿತ್ರದುರ್ಗ ಜಿಲ್ಲೆ ಜಗಳೂರು ವಿಧಾನಸಭಾ ಕ್ಷೇತ್ರದಿಂದ ಕಿಸಾನ್ ಮಜದೂರ್ ಪ್ರಜಾ ಪಕ್ಷದ ಅಭ್ಯರ್ಥಿ ಜೆ.ಎಂ.ಇಮಾಂ ಸಾಹೇಬರು ಗೆದ್ದರು. ಇಮಾಂ ಸಾಹೇಬರ ನಂತರ ಜಗಳೂರಿನಿಂದ ಮತ್ತೆ ಯಾವ ಮುಸ್ಲಿಂ ಅಭ್ಯರ್ಥಿಯೂ ಸ್ಪರ್ಧಿಸಲಿಲ್ಲ ಎಂಬುದು ಸೋಜಿಗ!

1957ರಲ್ಲಿ ಇಮಾಂ ಸಾಹೇಬರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಪ್ರಜಾ ಸೋಷಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಜಯಗಳಿಸಿದರು. ಕರ್ನಾಟಕದಲ್ಲಿ ವಿಧಾನಸಭೆ ಹಾಗೂ ಲೋಕಸಭೆಯನ್ನು ಪ್ರವೇಶ ಮಾಡಿದ ಮೊದಲ ಮುಸ್ಲಿಂ ಎಂಬ ದಾಖಲೆ ಕೂಡ ಇಮಾಂ ಸಾಹೇಬರ ಹೆಸರಿನಲ್ಲಿಯೇ ಇದೆ. ಅವರು ಎರಡು ಸಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿರಲಿಲ್ಲ ಎಂಬುದು ಇನ್ನೊಂದು ದಾಖಲೆ!

ಹೊನ್ನಾವರದಿಂದ ಜೆ.ಎಚ್.ಷಂಸುದ್ದೀನ್ ಎಂಬುವರು ಎರಡು ಸಾರಿ ಗೆದ್ದಿದ್ದರು. ನಂತರ ಈ ಕ್ಷೇತ್ರದಿಂದ ಮತ್ತೆ ಯಾವ ಮುಸ್ಲಿಂ ಅಭ್ಯರ್ಥಿಯೂ ಸ್ಪರ್ಧಿಸಲಿಲ್ಲ. ಬೆಳಗಾವಿ ಜಿಲ್ಲೆಯ ಸಂಪಗಾಂವ (ಈಗಿನ ಬೈಲಹೊಂಗಲ)ದಿಂದ ಮೊಹ್ಮದ್ ನಬಿ ನಾಗನೂರ್, ಅದೇ ಜಿಲ್ಲೆಯ ಅಥಣಿ ಮತ್ತು ಪರಸಗಡ (ಈಗಿನ ಸವದತ್ತಿ), ಕೊಪ್ಪಳ ಜಿಲ್ಲೆ ಕುಷ್ಟಗಿ, ವಿಜಾಪುರ ಜಿಲ್ಲೆಯ ಸಿಂದಗಿ, ಶಿವಮೊಗ್ಗ ಕ್ಷೇತ್ರಗಳಲ್ಲಿ ಕೂಡ ಮುಸ್ಲಿಂ ಅಭ್ಯರ್ಥಿಗಳು ಜಯಗಳಿಸಿದ್ದರು.

ಸಿ.ಕೆ.ಜಾಫರ್ ಷರೀಫ್ ಅವರು ಕನಕಪುರ ಕ್ಷೇತ್ರದಿಂದ ಒಂದು ಸಾರಿ (1971) ಲೋಕಸಭೆಯನ್ನು ಪ್ರವೇಶ ಮಾಡಿದ್ದರು. ಸೇಡಂ, ರಾಮನಗರ, ಚನ್ನಪಟ್ಟಣ, ಭಟ್ಕಳ ಮತ್ತು ಬಂಟ್ವಾಳ ಕ್ಷೇತ್ರಗಳಿಂದಲೂ ಆಗೀಗ ಮುಸ್ಲಿಂ ಅಭ್ಯರ್ಥಿಗಳು ವಿಧಾನಸಭೆಯನ್ನು ಪ್ರವೇಶಿಸಿದ್ದರು. ಈಗ ಈ ಯಾವ ಕ್ಷೇತ್ರದಿಂದಲೂ ಒಬ್ಬ ಮುಸ್ಲಿಂ ನಿಂತು ಗೆಲ್ಲುವುದು ಕಷ್ಟ. ಅಷ್ಟೇ ಅಲ್ಲ, ಯಾರೂ ಮುಸ್ಲಿಮರಿಗೆ ಟಿಕೆಟ್ ಕೊಡುವುದೂ ಇಲ್ಲ ಎಂದು ಅರ್ಷದ್ ಅಲಿ ವಿಷಾದಿಸುತ್ತಾರೆ.

ರಾಜಕೀಯವಾಗಿ ಮೇಲೆ ಬರಲು ಪುರುಷರಿಗೇ ಇಷ್ಟೆಲ್ಲ ಕಷ್ಟ ಇರುವಾಗ ಇನ್ನು ಹೆಣ್ಣು ಮಕ್ಕಳ ಪಾಡು ಕೇಳುವುದೇ ಬೇಡ. ಇದುವರೆಗೆ ಅನೇಕ ಮುಸ್ಲಿಂ ಮಹಿಳೆಯರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರೂ ಮುಕ್ತರುನ್ನೀಸಾ ಬೇಗಂ (ನರಸಿಂಹರಾಜ-1985) ಅವರು ಮಾತ್ರ ಗೆಲ್ಲಲು ಸಾಧ್ಯವಾಯಿತು. ಮುಕ್ತರುನ್ನೀಸಾ ಅವರು ವಿಧಾನ ಪರಿಷತ್ತಿಗೂ ಆಯ್ಕೆಯಾಗಿದ್ದರು.

ಅವರನ್ನು ಬಿಟ್ಟರೆ ಇನ್ನಿಬ್ಬರು ಆ ಮನೆಯ ಸದಸ್ಯರಾಗುವ ಗೌರವ ಪಡೆದರು. ಅವರು ಅಬಾಸಿಯಾ ಬೇಗಂ ಮತ್ತು ನಫೀಸ್ ಫಜಲ್. ಇದುವರೆಗಿನ ಕರ್ನಾಟಕದ ಇತಿಹಾಸದಲ್ಲಿ ನಫೀಸ್ ಅವರು ಮಂತ್ರಿ ಆಗಿದ್ದ ಏಕೈಕ ಮುಸ್ಲಿಂ ಮಹಿಳೆ! ಅವರು ಎಸ್.ಎಂ.ಕೃಷ್ಣ ಸಂಪುಟ (1999-04)ದಲ್ಲಿ ಸಚಿವೆಯಾಗಿದ್ದರು... ಅಂಚಿನಲ್ಲಿ ಇರುವವರ ಕಷ್ಟವನ್ನು ಇನ್ನೂ ಎಷ್ಟೆಂದು ಹೇಳೋಣ?

ಜೀವ ಜೀವಾಳ ಗೀತೆ

Regrowth Love - Acrylic Painting on Tile Board | anthonykarlharris.com

T


ಬಟ್ಟೆ ತೊಟ್ಟೂ ಬತ್ತಲ ಮೋಹದ
ಜೀವ ನದಿಯ ಕಾಣುವ ಉತ್ಕಟ ಒಲುಮೆ
ನಿನ್ನೂರಿನ ಬೀದಿಯಲಿ ನನ್ನ ಕಾಲೂರಿಸಿತು

ಈ ಕಾಲದ ಬುದ್ಧನ ಖಾಸಾ ಗೆಳತಿ
ಬುದ್ಧಪೂರ್ಣಿಮೆ ರಾತ್ರಿ
ಬಯಕೆಗಳ ಹಾಸಿಗೆಯಲ್ಲಿ
ಮಲಗಿದ್ದಳು ಮೈ ತುಂಬ ಉನ್ಮಾದ ಹೊದ್ದು!

ಪ್ರೀತಿಯ ಗರಿಕೆ ಬೆಳೆಯುತ
ಚಂದನದ ಹೂವಾಗಿ ಮೈಯಾವರಿಸಿದ ಹಾಗೆ
ಬಚ್ಚಲಕೋಣೆಯೂ
ದಿವ್ಯಾನುಭವದ ಶಯನ ಮಂಚ!
ಮುಚ್ಚುಮರೆಯಿಲ್ಲದೆ
ತೆರೆದ ನಿನ್ನೆದೆಯಿಂದ ಪ್ರಗಲ್ಭ ಪ್ರಭೆ!
ನದಿ ದಡದ ಊರಲ್ಲಿ
ಎಂಥ ಸೆಕೆ; ಊರೆಲ್ಲ ಕೆಂಡಮಂಡಲ
ಥೇಟ್ ನಿನ್ನ ಹಾಗೆ!
ಕುಕ್ಕರಿನಲಿ ಕುದಿವ ಅಕ್ಕಿ
ಅನ್ನವಾಗುವ ಘಳಿಗೆ
ನೀರವ ರಾತ್ರಿಯಲಿ ನೀನುಲಿದ ಹಾಡು
ಕೇಳುತ ಧಗಧಗಿಸಿತು ಒಡಲು!

ಬೆಂಕಿಯುಸಿರಿಗೆ ಮೋಡ ಕಟ್ಟೆಯೊಡೆವ ಕ್ಷಣ
ಅಲ್ಲಿಲ್ಲಿ ಬೆಳಕು ಕತ್ತಲಾಟ
ನಿನ್ನ ಒದ್ದೆ ತುಟಿಯಲಿತ್ತು
ಪ್ರೇಮದ ಅನುಭೂತಿ
ಸಂಗೀತದ ರಾಗಾಲಾಪ, ಹತ್ತಿ ಆರುವ ಮಿಂಚಿನ ಬೆಳಕು!
ಒಳಹೊರಗೂ ಸುರಿದ ಮಳೆ
ಹನಿ ಹನಿ ಸ್ಫಟಿಕದ ಧಾರೆ
ಅಂಗುಲಂಗುಲವೂ ಅರಳಿ
ನಸುನಾಚಿದ ಕೆಂಪುಗಲ್ಲ
ಆನಂದದುನ್ಮಾದ
ಧಾರೆ ಧುಮ್ಮಿಕ್ಕುವಾಗ ತನಗೆಲ್ಲಿ ಬೇಕು
ಅಲ್ಲಲ್ಲಿಗೆ ಎಲ್ಲವನು ಪಡೆದ ಧರೆಗೆ ಸಂಭ್ರಮ!

ನಿನ್ನ ಮಾತೇ ಕವಿತೆಯಾಗುವ ಕ್ಷಣ
ಆಮೋದದಲಿ ಅರೆತೆರೆದ ನಿನ್ನ ರೆಪ್ಪೆ
ಮೈ ಸವರಿ ಉಲಿಯಿತು
‘ಸಖಾ, ನಿನ್ನೆಗಿಂತ ಈ ಕ್ಷಣ
ಕಣ್ಣೆದುರಿನ ಕನ್ನಡಿ ಮುದ್ದಾಗಿ ಕಾಣುತಿದೆ
ಈ ಬೆಳಗಿನಷ್ಟೇ ನಿಖರವಾಗಿ ನಿನ್ನೊಂದಿಗೆ ನಾನಿರುವೆ
ಉಳಿದ ಬದುಕಿಗಾಗಿ
ಪರಸ್ಪರ ಕೈ ಹಿಡಿದಿದ್ದೇವೆ
ಕುಸಿದು ಬೀಳದಂತೆ’ !

ಆ ಇನಿದನಿಯ ಕೇಳುತ
ಹಚ್ಚಿಟ್ಟ ಹಣತೆ ಸೊಡರಡಗದ ಹಾಗೆ
ಎಣ್ಣೆ ಹನಿಸುತ್ತಲಿರೋಣ ಅನುಕ್ಷಣ
ಎನ್ನುತ ಬಿಗಿದಪ್ಪಿದೆ ಇನ್ನಷ್ಟು!

ಅಂಬೇಡ್ಕರ್ : ಬುದ್ಧನ ಧರ್ಮ


buddha.jpg - 23661 Bytesಹಿಂದೂ ಧರ್ಮವನ್ನು ತ್ಯಜಿಸುವ ನಿರ್ಧಾರವನ್ನು ೧೯೩೫ರಲ್ಲಿ ನಾಸಿಕ್‌ನಲ್ಲಿ ತೆಗೆದುಕೊಂಡೆ. ಆಗಿನಿಂದ ಈ ಹೋರಾಟ ಮುಂದುವರೆಸಿದ್ದೇನೆ. ೧೯೩೫ರಲ್ಲಿ ಯೆವೋಲಾನಲ್ಲಿ ನಡೆದ ದೊಡ್ಡ ಸಮ್ಮೇಳನದಲ್ಲಿ ಹಿಂದೂ ಧರ್ಮ ತೊರೆಯುವ ನಿರ್ಧಾರ ಕೈಗೊಂಡೆವು. ಆ ಸಮ್ಮೇಳನದಲ್ಲಿ ನನ್ನ ಪ್ರಯತ್ನವಿಲ್ಲದೆ ಹಿಂದೂವಾಗಿ ಹುಟ್ಟಿದೆ, ಆದರೆ ಹಿಂದೂವಾಗಿ ಸಾಯಲಾರೆ ಎಂದು ಪ್ರತಿಜ್ಞೆ ಮಾಡಿದೆ. ಈ ಮತಾಂತರವು ನನಗೆ ಅಗಾಧ ತೃಪ್ತಿಯನ್ನೂ, ನೆಮ್ಮದಿಯನ್ನೂ ನೀಡಿದೆ. ನರಕದಿಂದ ನನಗೆ ಮುಕ್ತಿ ದೊರೆತಂತೆ ಅನಿಸುತ್ತಿದೆ. ಮತಾಂತರಗೊಂಡ ನೀವೆಲ್ಲರೂ ಇದನ್ನು ನಿಮ್ಮ ಅನುಭವದಿಂದಲೇ ಅರಿತುಕೊಳ್ಳಬೇಕು. ನನಗೆ ಕುರುಡು ನಂಬಿಕೆಯ ಅನುಯಾಯಿಗಳು ಬೇಡ. ನನಗೆ ಕುರಿಗಳ ಬುದ್ಧಿ ಇಷ್ಟವಿಲ್ಲ. ಬುದ್ಧನಲ್ಲಿ ಶರಣಾಗಬರುವವರು ತಮ್ಮ ಸ್ವಂತ ಅರಿವಿನಿಂದ, ಸ್ವಂತ ತ್ಯಾಗದಿಂದ ಬರಬೇಕು. ಏಕೆಂದರೆ ಪಾಲಿಸಲು ಅತಿ ಕಷ್ಟವಾದ ಧರ್ಮ ಇದು.

ಮನುಷ್ಯನ ಏಳ್ಗೆಗೆ ಧರ್ಮ ಅತ್ಯಂತ ಅಗತ್ಯ. ಕಾರ್ಲ್ ಮಾರ್ಕ್ಸ್‌ನ ಅನುಯಾಯಿಗಳು ಧರ್ಮವೆಂದರೆ ಅಫೀಮು ಎನ್ನುತ್ತಾರೆ. ಆದರೆ ಮಾರ್ಕ್ಸ್‌ನ ಈ ಹೇಳಿಕೆಯನ್ನು ಹಾಗೇ ಒಪ್ಪಲು ಬರುವುದಿಲ್ಲ. ಹಾಗೆ ಹೇಳುವವರಿಗೆ ಧರ್ಮವೆಂದರೆ ಏನೂ ಮುಖ್ಯವಲ್ಲ, ಅದು ಏನೂ ಅರ್ಥವಿಲ್ಲದ್ದು. ನಮ್ಮಲ್ಲೂ ಕೆಲವರು ತಿನ್ನು-ಕುಡಿ-ಮಜಾಮಾಡು ಎಂಬ ಸಂಪ್ರದಾಯದವರು. ಅವರಿಗೆ ಬೇಕಾಗಿರುವುದೆಲ್ಲ ತಿಂಡಿಗೆ ಬ್ರೆಡ್-ಬೆಣ್ಣೆ, ಮಧ್ಯಾಹ್ನ ರುಚಿಕಟ್ಟಾದ ಊಟ, ಮಲಗಲು ಸುಪ್ಪತ್ತಿಗೆ, ಸಮಯ ಕಳೆಯಲು ಸಿನಿಮಾ. ಅವರ ಜೀವನದಲ್ಲಿ ಧರ್ಮಕ್ಕೆ ಜಾಗವಿಲ್ಲ. ಅವರನ್ನು ಒಪ್ಪುವುದಿಲ್ಲ ನಾನು. ನನ್ನ ತಂದೆಯ ಬಡತನದ ದೆಸೆಯಿಂದ ಅದ್ಯಾವುದನ್ನೂ ನನಗೆ ಅನುಭವಿಸಲಾಗಲಿಲ್ಲ. ಜೀವನದಲ್ಲಿ ಎಷ್ಟೋ ದಿನಗಳವರೆಗೆ ಕಷ್ಟಪಟ್ಟು ದುಡಿಯುತ್ತಿದ್ದೆ. ಆದರೆ ಅದು ನನ್ನನ್ನು ಅಧರ್ಮೀಯನನ್ನಾಗಿ ಮಾಡಲಿಲ್ಲ.

ಬಡವರು ಅನುಭವಿಸಿ ತಾಳಿಕೊಳ್ಳಬೇಕಾದ ಕಷ್ಟಗಳ ಅರಿವಿದೆ ನನಗೆ. ಜನರ ಆರ್ಥಿಕ ಸ್ಥಿತಿ ಸುಧಾರಿಸುವ ಕುರಿತು ನಾವು ಹೋರಾಟ ನಡೆಸಬೇಕು. ಆರ್ಥಿಕವಾಗಿ ಸಬಲರಾಗಿ ಸ್ವತಂತ್ರರಾಗಬೇಕು. ನನ್ನ ಜೀವಮಾನವಿಡೀ ಅದಕ್ಕಾಗೇ ಹೋರಾಡುತ್ತಿದ್ದೇನೆ. ಅದಷ್ಟೇ ಅಲ್ಲ, ಮನುಷ್ಯಕುಲವೇ ಆರ್ಥಿಕವಾಗಿ ಸಬಲವಾಗಬೇಕು. ಆದರೆ ಇದರ ಬಗ್ಗೆ ನನಗೆ ಬೇರೆ ವಿಚಾರಗಳೂ ಇವೆ.

ಮನುಷ್ಯ ಮತ್ತು ಪ್ರಾಣಿಯ ನಡುವೆ ವ್ಯತ್ಯಾಸಗಳಿವೆ. ತನ್ನ ಬದುಕಿಗಾಗಿ ಆಹಾರವೊಂದನ್ನು ಬಿಟ್ಟು ಪ್ರಾಣಿಗೆ ಮತ್ತೇನೂ ಬೇಡ. ಆದರೆ ಮನಷ್ಯನಿಗೆ ದೇಹ ಮತ್ತು ಸಂವೇದನಾಶೀಲ ಮನಸ್ಸಿದೆ. ಮನಸ್ಸು ದೇಹದ ಜೊತೆಜೊತೆಗೇ ಬೆಳೆಯಬೇಕು. ಮನಸ್ಸು ಶುದ್ಧ ಆಲೋಚನೆಗಳೊಂದಿಗೂ ಕೂಡಿರಬೇಕು. ಕಾಯಿಲೆಗಳಿಂದ ಮುಕ್ತವಾಗಿರಬೇಕಾದರೆ ಹೇಗೆ ಧೃಢವಾದ ದೇಹವನ್ನು ಹೊಂದಿರಬೇಕೋ ಹಾಗೆ, ದೇಹವನ್ನು ಆರೋಗ್ಯಯುತವಾಗಿಡಬೇಕಾದರೆ ಶುದ್ಧ ಮನಸ್ಸಿರಬೇಕು. ಇಲ್ಲದಿದ್ದರೆ ಮನುಷ್ಯ ಅಭಿವೃದ್ಧಿ ಹೊಂದುತ್ತಿದ್ದಾನೆಂದು ಹೇಳಲಾಗದು.

ಮನುಷ್ಯ ಮನಸ್ಸು ಏಕೆ ಕಾಯಿಲೆ ಬೀಳುತ್ತದೆ? ಮಹಾರಾಷ್ಟ್ರದ ಸಂತ ಕವಿ ರಾಮದಾಸ ಹೇಳುತ್ತಾನೆ: ಮನುಷ್ಯನಲ್ಲಿ ಉತ್ಸಾಹವಿಲ್ಲ ಎಂದರೆ ಒಂದೋ ಅವನ ಮನಸ್ಸು ಅಥವಾ ಅವನ ದೇಹಕ್ಕೆ ಕಾಯಿಲೆಯಾಗಿರಬೇಕು. ಮನುಷ್ಯನ ಉತ್ಸಾಹವನ್ನು ಹೀರಿಬಿಡುವುದು ಯಾವುದು? ಉತ್ಸಾಹವಿಲ್ಲದಿದ್ದರೆ ಜೀವನವೇ ಗುಲಾಮಗಿರಿ - ಎಳೆದುಕೊಂಡು ಹೋಗಬೇಕಾದ ಭಾರವಾಗುತ್ತದೆ. ಉತ್ಸಾಹವಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಉತ್ಸಾಹ ಏಕೆ ಕಳೆದುಹೋಗುತ್ತದೆ? ಮನುಷ್ಯನ ಮಟ್ಟಿಗೆ ಹೇಳುವುದಾದರೆ ತನ್ನನ್ನು ತಾನು ಉಚ್ಛ್ರಾಯ ಸ್ಥಿತಿಗೊಯ್ಯಲು ಅವಕಾಶಗಳಿಲ್ಲದಿರುವುದು ಉತ್ಸಾಹವನ್ನು ಕಳೆದುಹಾಕುತ್ತದೆ. ನಿರಾಶಾದಾಯಕ ಪರಿಸ್ಥಿತಿ ಉತ್ಸಾಹ ಕಳೆಯುತ್ತದೆ. ಅಂಥ ಮನಸ್ಸು ಕಾಯಿಲೆಗೊಳಗಾಗುತ್ತದೆ.

ಸದ್ಯದ ಕಷ್ಟಗಳಿಂದ ಪಾರಾಗಲು ಯಾವುದೇ ಭರವಸೆ ಕಾಣದಿದ್ದರೆ ಆತ ಯಾವಾಗಲೂ ಅಸಂತೋಷಿಯಾಗಿರುತ್ತಾನೆ. ಉತ್ಸಾಹ ಹುಟ್ಟುವುದು ಯಾವಾಗ? ಒಬ್ಬ ಉಸಿರಾಡುವಷ್ಟು ಮುಕ್ತನಾಗಿದ್ದು ತನ್ನ ಕೆಲಸಕ್ಕೆ ಸೂಕ್ತ ಪ್ರತಿಫಲ ದೊರೆಯುತ್ತಿದ್ದರೆ ಉತ್ಸಾಹ, ಸ್ಫೂರ್ತಿ ಹೊಂದುತ್ತಾನೆ. ಶಾಲೆಯಲ್ಲಿ ಮಾಸ್ತರರು ‘ಓಹೋ, ಇಲ್ಲೊಬ್ಬ ಹೊಲೆಯ ಹುಡುಗನಿದ್ದಾನೆ. ತನ್ನ ತರಗತಿಯಲ್ಲಿ ಅದು ಹೇಗೆ ಅವನು ಮೊದಲ ಸ್ಥಾನ ಪಡೆಯಲು ಸಾಧ್ಯವಾಯಿತು? ಎಂದು ಹೇಳುತ್ತಿದ್ದರೆ, ಮೊದಲ ಸ್ಥಾನ ಯಾವಾಗಲೂ ಬ್ರಾಹ್ಮಣನಿಗೇ ಮೀಸಲಾಗಿರುವುದೆಂದರೆ ಆ ಹೊಲೆಯ ಹುಡುಗ ಹೇಗೆ ಉತ್ಸಾಹ, ಸ್ಪೂರ್ತಿ ಭರವಸೆಯನ್ನು ಹೊಂದುತ್ತಾನೆ? ತನ್ನ ಬದುಕಿನಲ್ಲಿ ಉನ್ನತಿಯನ್ನು ಹೇಗೆ ಸಾಧಿಸುತ್ತಾನೆ?

ದುರದೃಷ್ಟವಶಾತ್ ಅಸಮಾನತೆ ಮತ್ತು ಅನ್ಯಾಯದ ತತ್ವಗಳ ಮೇಲೆ ನಿಂತಿರುವ ಹಿಂದೂ ಧರ್ಮವು ಉತ್ಸಾಹ ತುಂಬಲು ಸಾಧ್ಯವಿಲ್ಲ. ಅಸ್ಪೃಶ್ಯರು ಹಿಂದೂ ಧರ್ಮದ ನೆರಳಿನಲ್ಲಿ ಗುಲಾಮಗಿರಿ ನಡೆಸುವ ತನಕ ಅವರ ಜೀವನ ಉತ್ತಮಪಡಿಸಿಕೊಳ್ಳಲು ಯಾವುದೇ ಭರವಸೆ, ಉತ್ಸಾಹ ಹುಟ್ಟುವುದಿಲ್ಲ. ಹೆಚ್ಚೆಂದರೆ ಅವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವತ್ತ ಗಮನ ಕೊಟ್ಟಾರು...'

(ನಾಗಪುರ ಬೌದ್ಧ ದೀಕ್ಷೆ - ೧೪-೧೦-೧೯೫೬)

ರಮಾ ಕುರಿತು ಅಂಬೇಡ್ಕರ

‘ನಿಮ್ಮ ಬಟ್ಟೆ ತೇಪೆಯಿಂದ ಕೂಡಿದ್ದರೇನಾಯಿತು? ಸ್ವಚ್ಛವಾಗಿರಿ. ನಿಮ್ಮನ್ನು ನೀವೇ ಮುಟ್ಟಿಸಿಕೊಳ್ಳದವರೆಂದು ಭಾವಿಸಬೇಡಿ. ನಿಮ್ಮ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿ. ಮಕ್ಕಳ ಮನಸ್ಸಿನ ಕೀಳರಿಮೆ ತೆಗೆದು ಅವರಲ್ಲಿ ಆತ್ಮಗೌರವ ತುಂಬಿ. ಮಹಾನ್ ವ್ಯಕ್ತಿಗಳಾಗಲು ಹುಟ್ಟಿದ್ದಾರೆಂದು ಅವರನ್ನು ನಂಬಿಸಿ. ವಿದ್ಯಾಭ್ಯಾಸ ತುಂಬ ಮುಖ್ಯ. ಕಲಿತ ಮಹಿಳೆ ಮುಂದುವರೆಯುತ್ತಾಳೆ. ಅವಳಂತೆ ಅವಳ ಮಕ್ಕಳೂ ತಯಾರಾಗುತ್ತಾರೆ. ಆದರೆ ಕುಡಿದು ಮನೆಗೆ ಬರುವ ನಿಮ್ಮ ಗಂಡ-ಮಗನನ್ನು ಮಾತ್ರ ಖಂಡಿತಾ ಸಾಕಬೇಡಿ. ಮದುವೆಗೆ ಅವಸರಪಡಬೇಡಿ. ಮದುವೆ ಒಂದು ಬಂಧನ. ಮದುವೆಯ ನಂತರದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಶಕ್ತಿಶಾಲಿಯಲ್ಲದಿದ್ದರೆ ಮದುವೆಯಾಗಬೇಡಿ. ಮದುವೆಯಾದ ಹೆಣ್ಣು ಗಂಡನ ಪಕ್ಕ ಸರಿಸಮಾನಳಾಗಿ ನಿಲ್ಲಬೇಕು, ದಾಸಿಯಂತಲ್ಲ. ಮದುವೆಯಾದವರು ನೆನಪಿಡಿ: ತುಂಬ ಮಕ್ಕಳನ್ನು ಹೆರುವುದು ಅಪರಾಧ. ಏಕೆಂದರೆ ನಮ್ಮ ಪಾಲಕರು ನೀಡಿದ್ದಕ್ಕಿಂತ ಹೆಚ್ಚಿನದನ್ನು ನಾವು ನಮ್ಮ ಮಕ್ಕಳಿಗೆ ನೀಡಲು ಶಕ್ತರಾಗಿರಬೇಕು. ನಾವು ಭಾರತೀಯರು ಮಕ್ಕಳು ಹುಟ್ಟಿದ ಮೇಲೆ ಅವರಿಗೆ ಬಟ್ಟೆ ಹೊಲಿಯುತ್ತೇವೆ. ವಿದೇಶದಲ್ಲಿ ಹಾಗಲ್ಲ, ಮಗು ಬರುವ ಮೊದಲೇ ಎಲ್ಲ ತಯಾರಿ ಮಾಡಿಕೊಂಡಿರುತ್ತಾರೆ. ನನ್ನ ಸ್ವಂತ ಅನುಭವವನ್ನೇ ಹೇಳಬೇಕೆಂದರೆ ವಿದೇಶದಿಂದ ಓದು ಮುಗಿಸಿ ವಾಪಸಾದ ಮೇಲೂ ಜಾತಿಯ ಕಾರಣದಿಂದ ಲಾಯರ್ ವೃತ್ತಿ ಕಷ್ಟವಾಯಿತು. ಬರಿಯ ನುಚ್ಚಿನ ಅನ್ನ ಉಂಡು ಬದುಕುತ್ತಿದ್ದೆವು. ನಾನೂ ದುರ್ಬಲನಾದೆ. ನನ್ನ ಮಗುವೊಂದು ಕಾಯಿಲೆ ಬಂದು ತೀರಿಕೊಂಡಿತು. ಅದರ ಅಂತ್ಯ ಸಂಸ್ಕಾರ ಮಾಡಲು ಹಣಕ್ಕೆ ಬಹಳ ತೊಂದರೆಯಾಯಿತು. ನಂತರ ಹೆಂಡತಿ ರಮಾ ತೀವ್ರ ಅಸ್ವಸ್ಥಗೊಂಡಳು. ವೈದ್ಯರು ಇನ್ನೊಂದು ಮಗುವಾದರೆ ಅವಳ ಜೀವಕ್ಕೆ ಅಪಾಯ ಎಂದರು. ನಾವು ಬ್ರಹ್ಮಚರ್ಯ ಪಾಲಿಸತೊಡಗಿದೆವು. ನನ್ನ ಬಳಿ ಸಾಧ್ಯವಾದ ಪ್ರಯತ್ನವನ್ನೆಲ್ಲ ಮಾಡಿದೆ. ಆದರೆ ನಮ್ಮೆಲ್ಲ ಪ್ರಯತ್ನ, ಚಿಕಿತ್ಸೆ ಫಲಿಸದೇ ಅವಳು ನನ್ನ ಬಿಟ್ಟೇ ಹೋದಳು.'

೧೯೨೭.

ಅಂಬೇಡ್ಕರ್ : ಠಕ್ಕರ್ ಬಾಪಾಗೆ ಬರೆದ ಪತ್ರ

‘ಸ್ಪೃಶ್ಯ-ಅಸ್ಪೃಶ್ಯರು ಕಾನೂನಿನಿಂದಾಗಲೀ, ಪ್ರತ್ಯೇಕ ಅಥವಾ ಒಂದೇ ಮತಪಟ್ಟಿಯಿಂದಾಗಲೀ ಒಂದಾಗಲು ಸಾಧ್ಯವಿಲ್ಲ. ಅವರನ್ನು ಒಟ್ಟಿಗೆ ಬಂಧಿಸಬಲ್ಲದ್ದು ಒಂದೇ - ಪ್ರೀತಿ. ಶೋಷಿತ ಸಮುದಾಯಗಳು ತಮ್ಮ ಕಷ್ಟದಿಂದ ಮುಕ್ತಿ ಹೊಂದಬೇಕಾದರೆ ಮೇಲ್ಜಾತಿ ಹಿಂದೂ ಯೋಚಿಸುವಂತೆ ಮಾಡಿ ಆತ ಬದಲಾಗುವಂತೆ ಮಾಡಬೇಕು. ಮೇಲ್ಜಾತಿ ಹಿಂದೂಗಳ ಮನಸ್ಥಿತಿಯಲ್ಲಿ ಕ್ರಾಂತಿಕಾರಿ ಬದಲಾವಣೆಯೇ ಆಗಬೇಕಿದೆ. ಆದ್ದರಿಂದ ಅಸ್ಪೃಶ್ಯತೆ ವಿರೋಧಿ ಸಂಘವು ಶೋಷಿತ ಸಮುದಾಯಗಳಿಗೆ ನೀರು, ರಸ್ತೆ, ಶಾಲೆಗಳನ್ನು ಬಳಸುವ ಅವಕಾಶ ಮಾಡಿಕೊಡಬೇಕು. ಇದು ಹಿಂದೂ ಸಮಾಜದಲ್ಲಿ ಕ್ರಾಂತಿಯನ್ನುಂಟುಮಾಡಬಹುದು. ಅದಕ್ಕಾಗಿ ಸಂಘಕ್ಕೆ ಕಾರ್ಯಕರ್ತರ ಸೇನೆಯೇ ಬೇಕಾಗುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವವರು ಬೇಕಾಗಿದ್ದಾರೆ. ಇಂತಹ ಕಾರ್ಯಕ್ರಮವು ಸಮಾಜದಲ್ಲಿ ಅಶಾಂತಿ ಮತ್ತು ಹಿಂಸಾತ್ಮಕ ಸನ್ನಿವೇಶ ಸೃಷ್ಟಿಸುತ್ತದೆ ಎನ್ನುವುದು ನಿಜವಾದರೂ ಅದನ್ನು ತಡೆಯಲಾಗದು. ಅಸ್ಪೃಶ್ಯತೆ ನಿವಾರಣೆಗೆ ಕನಿಷ್ಟ ಪ್ರತಿರೋಧ ವಿಧಾನವು ಉಪಯೋಗವಾಗದು. ಸವರ್ಣೀಯರ ಸಾಂಪ್ರದಾಯಿಕ ರೂಢಿನಿಯಮಗಳ ವಿರುದ್ಧ ಪ್ರಹಾರ ಮಾಡಬೇಕು. ಆಗ ತುರ್ತುಸ್ಥಿತಿಯೊಂದು ಹುಟ್ಟುತ್ತದೆ. ಈ ತುರ್ತು ಹಿಂದೂವನ್ನು ಯೋಚಿಸಲು ಹಚ್ಚುತ್ತದೆ. ಆಗ ಆತ ಬದಲಾವಣೆಯನ್ನು ಸುಲಭವಾಗಿ ಒಪ್ಪಿಕೊಳ್ಳಬಲ್ಲ. ಕನಿಷ್ಟ ಪ್ರತಿರೋಧ ಅಥವಾ ಮೌನ ಕ್ರಾಂತಿಯು ತುರ್ತನ್ನು ಹುಟ್ಟಿಸುವುದಿಲ್ಲ. ಕಾಳಾರಾಮ್ ದೇವಾಲಯ ಪ್ರವೇಶ, ಚೌಡರ್ ಕೆರೆ, ಗುರುವಾಯೂರು ಪ್ರವೇಶ ಹೋರಾಟಗಳು ಸಮಾಜ ಸುಧಾರಕರು ವರ್ಷಗಟ್ಟಲೆ ಸಾಧಿಸಲಾಗದ್ದನ್ನು ಕೆಲವೇ ದಿನಗಳಲ್ಲಿ ಸಾಧಿಸಿವೆ. ಶೋಷಿತ ಸಮುದಾಯಗಳ ದೀನ ಸ್ಥಿತಿಗೆ, ಬಡತನಕ್ಕೆ ಸಮಾನ ಅವಕಾಶ ಸಿಗದಿರುವುದೇ ಮುಖ್ಯ ಕಾರಣವಾಗಿದೆ. ಸಂಘವು ಈ ಬಗ್ಗೆ ಕೆಲಸ ಮಾಡಲು ಶೋಷಿತ ಸಮುದಾಯಗಳ ಕಾರ್ಯಕರ್ತರನ್ನೇ ತಯಾರು ಮಾಡಬೇಕು. ಅವರೇ ನೋವನುಭವಿಸಿದವರಾದ್ದರಿಂದ ಸವರ್ಣೀಯ ಕಾರ್ಯಕರ್ತರಿಗಿಂತ ಹೆಚ್ಚು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕೆಲಸ ಮಾಡಬಲ್ಲರು. ಟಾಲ್‌ಸ್ಟಾಯ್ ಹೇಳಿದಂತೆ ‘ಪ್ರೀತಿಸಬಲ್ಲವನು ಮಾತ್ರ ಸೇವೆ ಮಾಡಬಲ್ಲ. ಆದ್ದರಿಂದ ಸಂಬಳ ಪಡೆವ ಕೆಲಸಗಾರರು ಈ ವಿಷಯದಲ್ಲಿ ಉತ್ತಮ ಆಯ್ಕೆಯಾಗಲಾರರು.'

೧೯೩೨, ನ. ೧೪: ಠಕ್ಕರ್ ಬಾಪಾಗೆ ಬರೆದ ಪತ್ರ:

ಮಾವೊವಾದಿ ಸಮಸ್ಯೆ:ಮಾತುಕತೆಯೊಂದೇ ಪರಿಹಾರ

-ವಾರ್ತಾಭಾರತಿ ಸಂಪಾದಕೀಯ

ಮಾವೊವಾದಿಗಳಿಂದ ಅಪಹರಿಸಲ್ಪಟ್ಟಿರುವ ಛತ್ತೀಸಗಡದ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪೌಲ್ ಮೆನನ್‌ರ ಬಿಡುಗಡೆ ಇನ್ನೂ ಡೋಲಾಯಮಾನವಾಗಿದ್ದರೆ, ಒಡಿಶಾ ಆಡಳಿತ ಪಕ್ಷದ ಬಿಜೆಡಿ ಶಾಸಕ ಜಿನಾ ಹಿಕಾಕರನ್ನು ಮಾವೊವಾದಿಗಳು ಬಿಡುಗಡೆ ಮಾಡಿದ್ದಾರೆ. ಬರೊಬ್ಬರಿ 33 ದಿನಗಳ ಹಿಂದೆ ಅಪಹರಿಸಲ್ಪಟ್ಟ ಹಿಕಾಕ್ ಸುರಕ್ಷಿತವಾಗಿ ವಾಪಸ್ ತಲುಪಿದ್ದಾರೆ. ಇದಕ್ಕೆ ಪ್ರತಿಯಾಗಿ ಜೈಲಿನಲ್ಲಿ ರುವ 23 ನಕ್ಸಲೀಯರನ್ನು ಬಿಡೆಗಡೆ ಮಾಡಲು ನವೀನ್ ಪಟ್ನಾಯಕ್ ಸರಕಾರ ಒಪ್ಪಿಕೊಂಡಿದೆ. ನಕ್ಸಲೀಯ ಪ್ರಜಾ ನ್ಯಾಯಾಲಯದ ತೀರ್ಪಿನ ಪ್ರಕಾರ ಜಿನಾ ಹಿಕಾಕ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರಿಗಾಗಿ ಕೆಲಸ ಮಾಡುವುದಾಗಿ ಲಿಖಿತ ಭರವಸೆ ನೀಡಿದ್ದಾರೆ. ತನ್ನನ್ನು ಮಾವೊವಾದಿಗಳು ಚೆನ್ನಾಗಿ ನೋಡಿಕೊಂಡರೆಂದು ಹಿಕಾಕ್ ಹೇಳಿದ್ದಾರೆ.ಇನ್ನೊಂದೆಡೆ ಛತ್ತೀಸಗಡದ ಜಿಲ್ಲಾಧಿಕಾರಿ ಅಲೆಕ್ಸ್ ಪೌಲ್ ಮೆನನ್‌ರ ಬಿಡುಗಡೆಗೆ ಅಲ್ಲಿನ ಸರಕಾರ ಹಾಗೂ ಮಾವೊವಾದಿಗಳ ಪರ ಸಂಧಾನಕಾರರ ನಡುವೆ ಗುರುವಾರ ಮೊದಲ ಸುತ್ತಿನ ಮಾತುಕತೆ ನಡೆದಿದೆ. ಅಸ್ತಮಾ ಕಾಯಿಲೆಯಿಂದ ಬಳಲುತ್ತಿರುವ ಅಲೆಕ್ಸ್‌ರಿಗೆ ಅಗತ್ಯವಿದ್ದ ಔಷಧ ಸಾಮಗ್ರಿಗಳನ್ನು ಅಖಿಲ ಭಾರತ ಅದಿವಾಸಿ ಮಹಾ ಸಭಾದ ಅಧ್ಯಕ್ಷ ಕುಂಜುಂ ತಲುಪಿಸಿದ್ದಾರೆ.

ಅಲೆಕ್ಸ್ ಪಾಲ್ ಮೆನನ್ ಅರೋಗ್ಯಪೂರ್ಣವಾಗಿ ಇರುವರೆಂದು ಅವರು ಹೇಳಿದ್ದಾರೆ.ಮೆನನ್‌ರನ್ನು ಬಿಡುಗಡೆ ಮಾಡಬೇಕಾದರೆ ಜೈಲಿನಲ್ಲಿರುವ 8ಮಂದಿ ಮಾವೊವಾದಿಗಳನ್ನು ಸರಕಾರ ಬಿಡುಗಡೆ ಮಾಡಬೇಕು,ತಕ್ಷಣ ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂಬುದು ಮಾವೊವಾದಿಗಳ ಬೇಡಿಕೆಯಾಗಿದೆ.ಮೆನನ್‌ರ ಬಿಡುಗಡೆಗೆ ಮೊದಲ ಹೆಜ್ಜೆ ಯಾಗಿ ಮಾವೊವಾದಿಗಳ ಪರ ಸಂಧಾನಕಾರ ರಾದ ಪರಿಶಿಷ್ಟ ಜಾತಿ/ಪಂಗಡದ ಮಾಜಿ ಅಧ್ಯಕ್ಷ ಬಿ.ಡಿ. ಶರ್ಮಾ ಮತ್ತು ಆಂಧ್ರಪ್ರದೇಶದ ಮಾನವ ಹಕ್ಕು ಹೋರಾಟಗಾರ ಪ್ರೊ. ಹರ ಗೋಪಾಲ್ ಅವರು ಸರಕಾರ ಸೂಚಿಸಿದ ಸಂಧಾನಕಾರರ ಜೊತೆ ಮಾತುಕತೆ ಆರಂಭಿಸಿದ್ದಾರೆ. ಬಹುತೇಕ ಮೆನನ್ ಕೂಡ ಹಿಕಾಕ್‌ರಂತೆಯೇ ಹಿಂದಿರುಗಿ ಬರುತ್ತಾರೆಂಬುದರಲ್ಲಿ ಅನುಮಾನವಿಲ್ಲ.

ಈ ಎರಡು ಅಪಹರಣ ಪ್ರಕರಣಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲು ಹಾಕುವಂತೆ ನಡೆದುಕೊಳ್ಳುತ್ತಿರುವ ಮಾವೊವಾದಿಗಳ ವರ್ತನೆಯ ಬಗ್ಗೆ ಚರ್ಚಿಸುವ ಜೊತೆಗೆ, ಕೇಂದ್ರ ಹಾಗೂ ಆಯಾ ರಾಜ್ಯ ಸರಕಾರಗಳು ಸಮಸ್ಯೆಯನ್ನು ಎದುರಿಸುವಲ್ಲಿ ಇಡುವ ತಪ್ಪು ಹೆಜ್ಜೆ ಗಳು, ವೈಫಲ್ಯಗಳ ಬಗ್ಗೆ ಪರಾಮರ್ಶೆ ನಡೆಸ ಬೇಕಾಗಿದೆ. ನಕ್ಸಲ್ ಸಮಸ್ಯೆಯನ್ನು ಹೇಗೆ ಎದುರಿಸಬೇಕೆಂಬ ಬಗ್ಗೆ ಖಚಿತವಾದ ವೈಜ್ಞಾನಿಕ ವಿವರಣೆ ನೀಡಬೇಕಾಗಿದೆ. ಇನ್ನೊಂದೆಡೆ ಸರಕಾರ ದಿಢೀರ್ ಅರೆಸೇನಾ ಕಾರ್ಯಾಚರಣೆ ನಡೆಸಿ ನಕ್ಸಲರನ್ನು ಬಂದೂಕಿನ ಮೂಲಕ ನಿರ್ನಾಮ ಮಾಡಲು ಮುಂದಾಗಿದೆ. ಆದರೆ ನಕ್ಸಲರು ಈ ರೀತಿ ಅಪಹರಣ ತಂತ್ರಗಳನ್ನು ಅನುಸರಿಸಿದಾಗ ಮೂಗು ಹಿಡಿದರೆ ಬಾಯಿ ತೆರೆಯುವಂತೆ ಮಾತುಕತೆಗೆ ಮುಂದಾಗಿ ಅವರ ಎಲ್ಲ ಶರತ್ತುಗಳನ್ನು ಒಪ್ಪಿಕೊಳ್ಳುತ್ತದೆ.

ನಕ್ಸಲರು ನೆಲೆಸಿರುವ ಛತ್ತೀಸಗಡ, ಜಾರ್ಖಂಡ್ ಮುಂತಾದ ಅರಣ್ಯ ಪ್ರದೇಶ ಗಳಲ್ಲಿ ಭಾರೀ ಪ್ರಮಾಣದ ಖನಿಜ ಸಂಪತ್ತಿದೆ. ಈ ಖನಿಜ ಸಂಪತ್ತನ್ನೆಲ್ಲ ಬಹುರಾಷ್ಟ್ರೀಯ ಕಂಪೆನಿಗಳ ಮಡಿಲಿಗೆ ಹಾಕಲು ಹೊರಟಿರುವ ಕೇಂದ್ರ ಹಾಗೂ ಛತ್ತೀಸ್‌ಗಡ ಸರಕಾರಗಳು ಕಾರ್ಪೊರೇಟ್ ಕಂಪೆನಿಗಳ ಜೊತೆಗೆ ಮುಚ್ಚಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ.ಈ ಒಪ್ಪಂದದ ಪ್ರಕಾರ ಬಸ್ತಾರನಂತಹ ಸಮೃದ್ಧ ಪ್ರದೇಶಗಳಿಂದ ಆದಿವಾಸಿಗಳನ್ನು ಹೊರದಬ್ಬ ಬೇಕಾಗಿದೆ.ಇದಕ್ಕೆ ಮಾವೊವಾದಿಗಳು ಅಡ್ಡಿಯಾಗಿದ್ದಾರೆ.ಆ ಕಾರಣಕ್ಕಾಗಿ ದೇಶದ ಭದ್ರತೆಗೆ ಮಾವೊವಾದಿಗಳು ಗಂಡಾಂತರ ಕಾರಿಯಾಗಿದ್ದಾರೆ ಎಂದು ಗೃಹಮಂತ್ರಿ ಚಿದಂಬರಂ ಹೇಳುತ್ತಿದ್ದಾರೆ.ಛತ್ತೀಸಗಡ ಸರಕಾರ ಮಾವೊವಾದಿಗಳನ್ನು ಎದುರಿಸಲು ಕೆಲ ಆದಿವಾಸಿ ಗಳ ನೇತೃತ್ವದಲ್ಲಿ ‘ಸಲ್ವಾ ಜುಡಂ’ ಎಂಬ ಖಾಸಗಿ ಸೇನೆಯನ್ನು ಹುಟ್ಟು ಹಾಕಿ, ಆದಿವಾಸಿಗಳನ್ನು ಕಾಡಿನಿಂದ ಹೊರ ಹಾಕಲು ಕಾನೂನು ಬಾಹಿರ ಮಾರ್ಗ ಹಿಡಿದಿದೆ.

ಗಲಭೆಯ ಉತ್ಪಾದನೆ

Ram Puniyani

- ರಾಮ್ ಪುನಿಯಾನಿ

ಹೈದರಾಬಾದ್‌ನ ಸೈದಾಬಾದ್ ಮತ್ತು ಮದನಪೇಟ್ ಪ್ರದೇಶಗಳಲ್ಲಿ 2012ರ ಎಪ್ರಿಲ್ ಮೊದಲ ವಾರ ಸ್ಥಳೀಯ ಮುಸ್ಲಿಮರ ವಿರುದ್ಧ ಹಿಂಸೆಯನ್ನು ಹರಿಬಿಡಲಾಗಿತ್ತು. ಈ ಹಿಂಸಾಚಾರದಲ್ಲಿ ಹಲವು ಮನೆಗಳಿಗೆ ಹಾನಿಯಾಯಿತು ಹಾಗೂ ಹಲವರು ಗಾಯಗೊಂಡರು. ಹಿಂಸಾಚಾರಕ್ಕೆ ಸ್ವಲ್ಪವೇ ಮೊದಲು ಪ್ರವೀಣ್ ತೊಗಾಡಿಯ ಆ ಪ್ರದೇಶದಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದರು. ಮೂಲಭೂತವಾದಿಗಳು (ಮುಸ್ಲಿಮರು ಎಂದು ಓದಿಕೊಳ್ಳಿ) ಹನುಮಾನ್ ದೇವಸ್ಥಾನಕ್ಕೆ ದನದ ಮಾಂಸ ಮತ್ತು ಹಸಿರು ಬಣ್ಣ ಎಸೆದಿದ್ದರು ಎಂಬ ಸುದ್ದಿ ಹಬ್ಬಿಸಲಾಗಿತ್ತು. ಹಿಂಸೆಗೆ ಪ್ರಚೋದನೆ ನೀಡಲು ಈ ಸುದ್ದಿ ಸಾಕಾಗಿತ್ತು. ಪಾತಕಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಅವರು ಹಿಂದೂ ಕೋಮುವಾದಿ ಸಂಘಟನೆಗಳಿಗೆ ಸೇರಿದವರು ಎಂಬುದು ಬಳಿಕ ಗೊತ್ತಾಯಿತು.ಹೊಸ ವರ್ಷದ ದಿನದಂದು (2012 ಜನವರಿ 1) ಬಿಜಾಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸರಕಾರಿ ಕಟ್ಟಡವೊಂದರಲ್ಲಿ ಪಾಕಿಸ್ತಾನದ ಧ್ವಜವೊಂದು ಕಂಡುಬಂತು. ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು ಹಾಗೂ ಅದರ ಬೆನ್ನಿಗೇ ಹಿಂಸೆ ಆರಂಭವಾಯಿತು.

ಹಿಂಸಾಚಾರದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಆರು ಬಸ್ಸುಗಳು ಮತ್ತು ಇತರ ಹಲವು ವಾಹನಗಳು ಸುಟ್ಟುಹೋದವು. ನಂತರದ ತನಿಖೆಯಲ್ಲಿ ಅದು ಮಾಜಿ ಆರೆಸ್ಸೆಸ್ ಪ್ರಚಾರಕ ಪ್ರಮೋದ್ ಮುತಾಲಿಕ್‌ರ ಶ್ರೀರಾಮಸೇನೆಯ ಕಾರ್ಯ ಕರ್ತರು ನಡೆಸಿದ ಕೃತ್ಯ ಎಂದು ತಿಳಿದುಬಂತು. ಅವರು ಮೊದಲು ಪಾಕಿಸ್ತಾನದ ಧ್ವಜವನ್ನು ಹಾರಿಸಿ, ನಂತರ ಅದರ ಬಗ್ಗೆ ಜನರಿಗೆ ಹೇಳುತ್ತಾ ಬಂದಿದ್ದರು!

ಧಾರ್ಮಿಕ ಗುರುತು, ಸಂಕೇತಗಳು ಮತ್ತು ಭಾವನಾತ್ಮಕ ವಿಷಯಗಳನ್ನು ಪ್ರಚೋದಿಸಿ ನಡೆಸಲಾದ ಈ ಎರಡೂ ಹಿಂಸಾ ಕೃತ್ಯಗಳ ಘಟನೆ ಗಳಿಗೆ ಇನ್ನೂ ಹೆಚ್ಚಿನ ಆಯಾಮಗಳಿವೆ. ಕೋಮು ಹಿಂಸೆಯೆನ್ನುವುದು ಕ್ಯಾನ್ಸರ್‌ನಂತೆ ನಮ್ಮ ಸಮಾಜದಲ್ಲಿ ಹಬ್ಬುತ್ತಿದೆ. ‘ಇತರರ’ ವಿರುದ್ಧ ಹೊಂದಿರುವ ಮಿಥ್ಯೆಗಳು ಮತ್ತು ತಾರತಮ್ಯಗಳ ಆಧಾರದಲ್ಲಿ ಹುಟ್ಟಿ ಕೊಂಡ ‘‘ಇತರರನ್ನು ದ್ವೇಷಿಸು’’ ಎಂಬ ಸಿದ್ಧಾಂತವೇ ಈ ಹಿಂಸಾಚಾರದ ಮೂಲವಾಗಿದೆ. ಹಾಗಾಗಿ, ಕೋಮು ಹಿಂಸೆಯೆನ್ನುವುದು ಕೋಮು ರಾಜಕೀಯದ ಮೇಲ್ನೋಟಕ್ಕೆ ಕಾಣುವ ಭಾಗವಾಗಿದೆ. ಧರ್ಮದ ಗುರುತಿನಿಂದ ಕೋಮು ರಾಜಕೀಯವು ಮನ್ನಣೆ ಪಡೆದುಕೊಳ್ಳುತ್ತದೆ.

ಆರಂಭದಲ್ಲಿ, ‘ಇತರ ಸಮುದಾಯ’ ದತ್ತ ಇರುವ ದ್ವೇಷ ಇತಿಹಾಸವನ್ನು ಕೋಮು ನೆಲೆಯಲ್ಲಿ ಬಿಂಬಿಸುವಾಗ ಬಲಗೊಳ್ಳುತ್ತದೆ ಹಾಗೂ ಸಮುದಾಯವೊಂದರ ಈಗಿನ ಸಾಮಾಜಿಕ ಜೀವನದ ಅಂಶಗಳನ್ನು ಉತ್ಪ್ರೇಕ್ಷಿತವಾಗಿ ಹಾಗೂ ಹೀನಾಯ ರೀತಿಯಲ್ಲಿ ಪ್ರಚಾರ ಮಾಡು ವಾಗ ಬಲವನ್ನು ವರ್ಧಿಸಿಕೊಳ್ಳುತ್ತದೆ. ವಿಭಜನೆ ಪೂರ್ವ ಕಾಲದಲ್ಲಿ ಹಿಂಸೆ ಎರಡೂ ಕೋಮು ಧಾರೆಗಳಿಂದ ಹೊರಹೊಮ್ಮುತ್ತಿತ್ತು ಹಾಗೂ ಬ್ರಿಟಿಶರು ಒಂದು ರೀತಿಯ ತಟಸ್ಥ ಅಂಪಯರ್‌ಗಳಾಗಿದ್ದರು.ವಿಭಜನೆ ಬಳಿಕ ಮುಸ್ಲಿಮ್ ಕೋಮುವಾದ ಕ್ಷೀಣಿಸಿತು, ಹಿಂಸೆ ತನ್ನ ರೂಪವನ್ನು ಬದಲಾಯಿಸಿತು ಹಾಗೂ ಭಿನ್ನ ಪ್ರವೃತ್ತಿಯನ್ನು ಹೊಂದಲು ಆರಂಭಿಸಿತು. ಇದು ಸಂಪ್ರದಾಯವಾದ (ಕನ್ಸರ್ವೇ ಟಿಸಂ) ಹಾಗೂ ಮುಸ್ಲಿಮರಲ್ಲಿ ಆರ್ತೊಡಾಕ್ಸಿ (ಸಂಪ್ರದಾಯ ವಾದ)ಯ ಬೆಳವಣಿಗೆಗೆ ನಾಂದಿ ಹಾಡಿತು.

ಅಲ್ಪಸಂಖ್ಯಾತ ಕೋಮುವಾದ ಅಲ್ಪಸಂಖ್ಯಾತರಲ್ಲಿ ಹೆಚ್ಚು ಹೆಚ್ಚು ಸಂಪ್ರದಾಯವಾದಿ ಮೌಲ್ಯಗಳನ್ನು ಬೆಳೆಸಿತು ಹಾಗೂ ಬಹುಸಂಖ್ಯಾತ ಕೋಮುವಾದಕ್ಕೆ ಪ್ರಚೋದನೆಯನ್ನೂ ಒದಗಿಸಿತು. ವಿಭಜನೆ ಕಾಲದಲ್ಲಿ ನಡೆದ ಭೀಕರ ಕೋಮು ದಳ್ಳುರಿಯ ಬಳಿಕ ಕೋಮು ಹಿಂಸೆ ಮತ್ತೆ ತಲೆಯೆತ್ತಿದ್ದು ಜಬಲ್ಪುರದಲ್ಲಿ 1961ರಲ್ಲಿ. ಈ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರಾಷ್ಟ್ರೀಯ ಏಕತಾ ಸಮಿತಿಯನ್ನು ರಚಿಸಿದರು. ಇದು ರಾಷ್ಟ್ರೀಯ ಐಕ್ಯತೆಯನ್ನು ಬೆಳೆಸುವಲ್ಲಿ ನಗಣ್ಯ ಪಾತ್ರವನ್ನು ವಹಿಸುತ್ತಾ ಬಂದಿದೆ. ಅದು ಹೆಚ್ಚು ಕಡಿಮೆ ಯಾವಾಗಲಾದರೊಮ್ಮೆ ಸಭೆ ಸೇರುವ ಚರ್ಚಾ ಕೇಂದ್ರವಾಗಿ ಬಿಟ್ಟಿದೆ. ಉಳಿದ ಅವಧಿಯಲ್ಲಿ ಅದು ವಿಷಯವನ್ನೇ ಮರೆತು ಬಿಡುತ್ತದೆ.

ಎರಡು ಸಮುದಾಯಗಳು ಪರಸ್ಪರ ಹೊಡೆದಾಡಿಕೊಳ್ಳು ವಂತೆ ಮಾಡುವ ಕೋಮು ಹಿಂಸಾಚಾರ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ ಹಾಗೂ ಈಗ ಪ್ರಚೋದಿಸುವ ಹಾಗೂ ಆಕ್ರಮಣ ನಡೆಸುವ ಮನೋಭಾವದ ಕೋಮು ಸಂಘ ಟನೆಗಳು ಧಾರ್ಮಿಕ ಅಲ್ಪಸಂಖ್ಯಾತರಿಗೆ ಬೆದರಿಕೆಯೊಡ್ಡುತ್ತಿವೆ. ಅದೇ ವೇಳೆ, ಮುಸ್ಲಿಮರು ದಾಳಿ ನಡೆಸಿದ್ದಾರೆ ಹಾಗೂ ಕ್ರೈಸ್ತರು ಹಿಂಸೆಯಲ್ಲಿ ತೊಡಗಿದ್ದಾರೆ ಎಂಬ ಕಾರಣಗಳನ್ನು ಮುಂದಿಟ್ಟುಕೊಂಡು ಈ ಗುಂಪುಗಳು ಹಿಂಸಾಚಾರ ನಡೆಸಿ ತಮಗೆ ಬೇಕಾದಂತೆ ‘ಶಿಕ್ಷೆ’ ನೀಡುತ್ತವೆ.

ಮೇಲೆ ವಿವಿರಿಸಲಾದ ಎರಡು ಘಟನೆಗಳು ಕೋಮು ಹಿಂಸಾ ಚಾರವನ್ನು ಹೇಗೆ ಸೃಷ್ಟಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.ಬಹುಸಂಖ್ಯಾತ ಕೋಮು ಶಕ್ತಿಗಳು ಸಮುದಾಯಗಳನ್ನು ಧರ್ಮಗಳ ಆಧಾರದಲ್ಲಿ ಧ್ರುವೀಕರಣಗೊಳಿಸಿ ತಮ್ಮ ಶಕ್ತಿಯನ್ನು ಬೆಳೆಸಿಕೊಂಡಿವೆ. ಅಲ್ಪಸಂಖ್ಯಾತರ ವಿರುದ್ಧದ ಅತಿರೇಕದ ಪೂರ್ವಾಗ್ರಹಪೀಡಿತ ಕಲ್ಪ ನೆಗಳನ್ನು ಆಧರಿಸಿದ ಗಾಳಿಸುದ್ದಿಗಳು ಹಿಂಸಾಚಾರದ ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗೋಹತ್ಯೆ, ಹಿಂದೂ ಮಹಿಳೆಯರ ಅಪಹರಣ/ಅತ್ಯಾಚಾರ,ಪವಿತ್ರ ಸ್ಥಳ/ಪುಸ್ತಕದ ಅಪವಿತ್ರೀಕರಣ ಮುಂತಾದ ಹಲವು ಅಂಶಗಳನ್ನು ಗಾಳಿಸುದ್ದಿಗಳಿಗಾಗಿ ಬಳಸಲಾಗುತ್ತಿದೆ. ಈ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಗೊಂಡದ್ದು ಪಾಕಿಸ್ತಾನಿ ಧ್ವಜ. ಇದು ಈ ನಿಟ್ಟಿನಲ್ಲಿ ಕಳೆದ ಕೆಲವು ತಿಂಗಳಲ್ಲಿ ನಡೆದ ಹೊಸತನದ ಆವಿಷ್ಕಾರವಾಗಿದೆ.

ಹಿಂಸೆಯನ್ನು ಭಾರೀ ಪೂರ್ವ ನಿರ್ಧರಿತ ಯೋಜನೆ ಯೊಂದಿಗೆ ನಡೆಸಲಾಗುತ್ತದೆ. ಆದರೆ, ಅದು ಆ ಕ್ಷಣದಲ್ಲಿ ಪ್ರತಿ ಕ್ರಿಯೆಯಾಗಿ ನಡೆದ ಘಟನೆ ಹಾಗೂ ಅದಕ್ಕೆ ಪ್ರಚೋದನೆ ನೀಡಿದ್ದು ಅಲ್ಪಸಂಖ್ಯಾತರು ಎಂಬಂತೆ ಬಿಂಬಿಸಲಾಗುತ್ತದೆ. ಹೈದರಾಬಾದ್ ಮತ್ತು ಸಿಂದಗಿ ಘಟನೆಗಳು ಇದನ್ನು ಸ್ಪಷ್ಟಪಡಿ ಸುತ್ತವೆ. ಈ ಮೊದಲು ಕಂದಮಾಲ್‌ನಲ್ಲಿ ಸ್ವಾಮಿ ಲಕ್ಷ್ಮಣಾ ನಂದರ ಸಾವಿನ ಕಾರಣವೊಡ್ಡಿ ಹಿಂಸಾಚಾರ ನಡೆಸಲಾಗಿತ್ತು.ಆದರೆ ಲಕ್ಷ್ಮಣಾನಂದರನ್ನು ಕೊಂದಿದ್ದು ಮಾವೋವಾದಿಗಳು. ಸ್ವಾಮಿ ಲಕ್ಷ್ಮಣಾನಂದರ ಮೃತದೇಹದ ಮೆರವಣಿಗೆಯನ್ನು ಕ್ರೈಸ್ತ ಅಲ್ಪಸಂಖ್ಯಾತ ಪ್ರದೇಶಗಳ ಮೂಲಕ ತೆಗೆದುಕೊಂಡು ಹೋಗ ಲಾಯಿತು ಹಾಗೂ ಅಲ್ಲಿ ರಕ್ತದ ಹೊಳೆಯೇ ಹರಿಯಿತು.

ಗೋಧ್ರಾದಲ್ಲಿ ರೈಲು ದಹನದ ನೆವವೊಡ್ಡಿ ಗುಜರಾತ್ ಹತ್ಯಾಕಾಂಡವನ್ನು ಆಯೋಜಿಸಲಾಯಿತು ಹಾಗೂ ಅಲ್ಲಿನ ಸಾವಿನ ವ್ಯಾಪಾರಿಗಳು ಕೇಕೆ ಹಾಕಿದರು.ಬಾಬರಿ ಮಸೀದಿ ಧ್ವಂಸದ ಬಳಿಕ ಮುಂಬೈನಲ್ಲಿ ಕೆಲ ಮುಸ್ಲಿಂ ಯುವಕರು ಪೊಲೀಸ್ ಠಾಣೆಯೊಂದರ ಮೇಲೆ ಕಲ್ಲೆಸೆದರು ಹಾಗೂ ಶಿವಸೇನಾ ಕಾರ್ಯಕರ್ತರು ಮಸೀದಿಯೊಂದರ ಮೇಲೆ ಗುಲಾಲ್ (ಹಿಂದೂಗಳು ಸಮಾರಂಭದ ವೇಳೆ ಬಳಸುವ ಕಿತ್ತಳೆ ಬಣ್ಣದ ಹುಡಿ) ಎಸೆದರು. ಹಾಗೂ ‘‘ಅವರಿಗೆ ಬುದ್ಧಿ ಕಲಿಸುವಂತೆ’’ ಬಾಳಾ ಠಾಕ್ರೆ ಕರೆ ನೀಡಿದರು. ಈ ತನಕ ಹಲವು ವಿಚಾರಣಾ ಆಯೋಗಗಳು ಮತ್ತು ನಾಗರಿಕರ ನ್ಯಾಯ ಮಂಡಳಿಗಳು ಬಹುಸಂಖ್ಯಾತ ಕೋಮು ಸಂಘಟನೆಗಳ ಪಾತ್ರದ ಬಗ್ಗೆ ಬೆಟ್ಟು ಮಾಡಿವೆ.

ಮದನ್ ಆಯೋಗ (ಭಿವಂಡಿ ಗಲಭೆಯ ವರದಿ)ದಿಂದ ಹಿಡಿದು ಶ್ರೀಕೃಷ್ಣ ಆಯೋಗ (ಮುಂಬೈ ಗಲಭೆಯ ವರದಿ)ದವರೆಗೆ ಎಲ್ಲರ ತೀರ್ಮಾನಗಳು ಬಹುತೇಕ ಒಂದೇ ರೀತಿಯಾಗಿವೆ. ಆರಂಭದಲ್ಲಿ ಗಲಭೆಗೆ ಪ್ರಚೋದನೆಯನ್ನು ಕೊಡಲಾಗುತ್ತದೆ ಹಾಗೂ ಬಳಿಕ ಮುಸ್ಲಿಮರು ಮೊದಲ ಕಲ್ಲನ್ನು ಎಸೆದರು ಅಥವಾ ಕ್ರೈಸ್ತರು ಹಿಂಸೆಯನ್ನು ಆರಂಭಿಸಿದರೋ ಎಂಬ ರೀತಿಯಲ್ಲಿ ಹಿಂಸಾಚಾರವನ್ನು ಮುನ್ನಡೆಸಿಕೊಂಡು ಹೋಗಲಾಗುತ್ತದೆ.1968ರಿಂದ 1980ರವರೆಗೆ ನಡೆದ ಕೋಮುಗಲಭೆಗಳ ಮೇಲೆ ಡಾ. ವಿ.ಎನ್. ರೈ ಎಂಬ ಪೊಲೀಸ್ ಅಧಿಕಾರಿಯೊಬ್ಬರು ಪಿಎಚ್‌ಡಿ ಮಾಡಿದರು.

‘ಕಾಂಬ್ಯಾಟಿಂಗ್ ಕಮ್ಯುನಲ್ ಪೊಲಿಟಿಕ್ಸ್’ ಎಂಬ ಅವರ ಪ್ರಬಂಧದಿಂದ ತೆಗೆದುಕೊಳ್ಳಲಾದ ಈ ಮಾತು ಕೋಮು ಗಲಭೆಗಳ ಹಿಂದಿನ ಹುನ್ನಾರದ ಬಗ್ಗೆ ನಮಗೆ ಒಂದು ಒಳನೋಟವನ್ನು ಒದಗಿಸುತ್ತದೆ: ‘‘ಹೆಚ್ಚಿನ ಸಂದರ್ಭಗಳಲ್ಲಿ ಮೊದಲ ಕಲ್ಲು ಬಿಸಾಡಿದ್ದು ಅಥವಾ ಆಕ್ರೋಶದಿಂದ ಮೊದಲು ಕೈಎತ್ತಿದ್ದು ಯಾರದೋ ಹೊರಗಿನವರ ಕೃತ್ಯವಾಗಿರುತ್ತದೆ. ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಯಾವುದಾದರೂ ಕೃತ್ಯವೊಂದನ್ನು ನಡೆಸುವ ಪರಿಸ್ಥಿತಿಯನ್ನು ನಿರ್ಮಿಸಲು ಈ ಶಕ್ತಿಗಳು ಬಯಸುತ್ತವೆ. ಇಂಥದೇ ಸಮಯವನ್ನು ಕಾಯುವ ಈ ಶಕ್ತಿಗಳು ಪ್ರತೀಕಾರಕ್ಕಾಗಿ ಅಲ್ಪಸಂಖ್ಯಾತರ ವಿರುದ್ಧ ಹಿಂಸೆಯನ್ನು ಹರಿಯಬಿಡುತ್ತವೆ.

ಹೊರಗಿನ ಟೀಕೆಗಳಿಂದ ಪಾರಾಗಲು ಹಾಗೂ ತಮ್ಮ ಒಳ್ಳೆಯತನವನ್ನು ಕಾಪಾಡಿಕೊಳ್ಳಲು ಹಿಂಸೆಯನ್ನು ಮುಸ್ಲಿಮರು ಆರಂಭಿಸಿದ್ದು ಎಂಬುದಾಗಿ ಬಿಂಬಿಸಲಾಗುತ್ತದೆ. ಇದನ್ನು ಹೇಗೆ ಮಾಡಲಾಗುತ್ತದೆಂದರೆ, ಬಲಾಢ್ಯ ವ್ಯಕ್ತಿಯೊಬ್ಬ ದುರ್ಬಲ ವ್ಯಕ್ತಿಯೊಬ್ಬನನ್ನು ಮೂಲೆಗೆ ದೂಡಿ ಆತ ಕೈ ಎತ್ತುವಂತೆ ಮಾಡುತ್ತಾನೆ. ಬಳಿಕ ಈ ‘ಆಕ್ರಮಣ’ಕ್ಕೆ ಪ್ರತಿಯಾಗಿ ಆತನನ್ನು ಸರಿಕಂಡಂತೆ ಶಿಕ್ಷಿಸಬಹುದಾಗಿದೆ. ಶಿಕ್ಷೆಯನ್ನು ಜಾರಿಗೊಳಿಸುವ ಮುನ್ನ, ಮೂಲೆಗೆ ತಳ್ಳಲ್ಪಟ್ಟ ವ್ಯಕ್ತಿ ಕೆಟ್ಟವ ಮತ್ತು ಹಿಂಸಾ ಪ್ರವೃತ್ತಿಯವ ಹಾಗೂ ಆತ ಮೊದಲು ಆಕ್ರಮಣ ಮಾಡುವವನೇ ಆಗಿದ್ದಾನೆ ಎಂಬ ಬಗ್ಗೆ ಪ್ರಚಾರವನ್ನೂ ಮಾಡಬಹುದಾಗಿದೆ.’’ (ಪುಟ 56-57).

ಕೋಮುಗಲಭೆ ಪ್ರಚೋದನೆಗೆ ಬಳಸುವ ವಿಧಾನಗಳಲ್ಲಿ ಈಗ ಸ್ವಲ್ಪ ಬದಲಾವಣೆಗಳಾಗಿವೆ. ಗಲಭೆ ಉತ್ಪಾದನೆಗೆ ಬಳಸಲಾಗುವ ವಿಷಯಗಳಲ್ಲಿ ಹೊಸತನ ಹಾಗೂ ನಿರಂತರತೆಯಿದೆ. ಕೋಮುವಾದಿ ಶಕ್ತಿಗಳು ಈಗ ಪಾಕಿಸ್ತಾನಿ ಧ್ವಜವನ್ನು ಹಾರಿಸುವಷ್ಟು ಹಾಗೂ ಬೀಫ್ ಮತ್ತು ಹಸಿರು ಬಣ್ಣಗಳನ್ನು ಎಸೆಯುವಷ್ಟು ಧೈರ್ಯ ಪಡೆದಿವೆ. ಇನ್ನೊಂದು ಬದಲಾವಣೆಯೆಂದರೆ, ಕೋಮು ಹಿಂಸೆಗೆ ಬಲಿಯಾಗುವ ಅಲ್ಪಸಂಖ್ಯಾತರ ಶೇಕಡಾವಾರು ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 1980ರ ದಶಕದಲ್ಲಿ ಕೋಮು ಹಿಂಸೆಗೆ ಬಲಿಯಾಗವವರ ಪೈಕಿ 65 ಶೇ. ಮುಸ್ಲಿಮರಾಗಿದ್ದರು (ವಿ.ಎನ್. ರೈ), 1991ರಲ್ಲಿ ಅದು 80 ಶೇ.ಕ್ಕೇರಿತು (ಕೇಂದ್ರ ಗೃಹ ಸಚಿವಾಲಯದ ಅಂಕಿಸಂಖ್ಯೆಗಳು) ಹಾಗೂ 2001ರ ವೇಳೆಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಈ ಅಂಕಿಸಂಖ್ಯೆಗಳು ತಮ್ಮದೇ ಆದ ಕತೆ ಹೇಳುತ್ತಿವೆ.

ಕೋಮು ಹಿಂಸಾಚಾರವು ಸಮುದಾಯಗಳನ್ನು ಧರ್ಮಗಳ ಆಧಾರದಲ್ಲಿ ಧ್ರುವೀಕರಣಗೊಳಿಸಿದೆ ಹಾಗೂ ಕೋಮು ರಾಜಕಾರಣಕ್ಕೆ ರಕ್ತ ಮಾಂಸವನ್ನು ಒದಗಿಸುತ್ತಿದೆ.ಕೋಮು ಹಿಂಸಾಚಾರವನ್ನು ಹತ್ತಿಕ್ಕಲು ಹಾಗೂ ದುಷ್ಕೃತ್ಯಗಳಲ್ಲಿ ಉದ್ದೇಶಪೂರ್ವಕವಾಗಿ ತೊಡಗಿಕೊಳ್ಳುವ ಸಂಘಟನೆಗಳನ್ನು ದಮನಿಸಲು ಭಾರೀ ಸಂಖ್ಯೆಯ ಉಪಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಖಾತರಿಪಡಿಸಲು ಬಹುಪದರಗಳ ನೀತಿಯೊಂದನ್ನು ಅನುಸರಿಸುವುದೂ ಮುಖ್ಯವಾಗಿದೆ.ಎಲ್ಲ ಮಟ್ಟಗಳಲ್ಲಿರುವ ಜನರು ಮತ್ತು ಆಡಳಿತಗಳು ಹೊಂದಿರುವ ಪೂರ್ವಾಗ್ರಹಪೀಡಿತ ಮತ್ತು ಏಕರೀತಿಯ ಮನೋಭಾವ ವಿರುದ್ಧ ನಾವು ಹೋರಾಡಬೇಕಾದ ಅಗತ್ಯವಿದೆ.

ಅದೇ ವೇಳೆ, ಎಲ್ಲ ಸ್ಥಳಗಳಲ್ಲಿ ಅಂತರಧರ್ಮೀಯ ಸಮಿತಿಗಳನ್ನು ಸ್ಥಾಪಿಸಲು ತೆಗೆದುಕೊಳ್ಳಲಾದ ದಿಟ್ಟ ಕ್ರಮ ಊಹಾಪೋಹಗಳಿಗೆ ಕಡಿವಾಣ ಹಾಕಬಹುದು ಹಾಗೂ ಉಹಾಪೋಹಗಳ ಸತ್ಯಾಸತ್ಯತೆಯನ್ನು ತಿಳಿಯಲು ನೆರವಾಗಬಹುದು. ಹಾಗೂ ಇದು ಹೆಚ್ಚಿನ ಸಂದರ್ಭಗಳಲ್ಲಿ, ಪಾಕಿಸ್ತಾನದ ಧ್ವಜವನ್ನು ಯಾರು ಹಾರಿಸಿದರು ಅಥವಾ ಯಾರು ಬೀಫ್ ಎಸೆದರು- ಇವೇ ಮುಂತಾದಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ತೊಡಗಬಹುದು.

ಕೃಪೆ: ಬಿಯಾಂಡ್ ಹೆಡ್‌ಲೈನ್ಸ್ಅಂಬೇಡ್ಕರ್ :ತೋರು ಬೆರಳು: ಕೆಲ ವಾಸ್ತವಿಕ ಪ್ರಶ್ನೆಗಳು..


anu-1.jpg


ಕನ್ನಡಕ್ಕೆ: ಡಾ ಎಚ್ ಎಸ್ ಅನುಪಮಾ

ಭಾರತೀಯ ಸಮಾಜದ ಒಂದು ಭಾಗದ ಜನರಲ್ಲಿ ಬೌದ್ಧಧರ್ಮದ ಬಗೆಗೆ ಕುತೂಹಲ ಮೂಡುತ್ತಿರುವ ಸೂಚನೆಗಳಿವೆ. ಅದರ ಜೊತೆಗೇ ಬುದ್ಧನ ಜೀವನ, ಬೋಧನೆ ಮತ್ತು ಬೌದ್ಧಧರ್ಮದ ಕುರಿತು ಸ್ಪಷ್ಟ ಹಾಗೂ ಏಕರೂಪವಾದ ಮಾಹಿತಿಗೂ ಬೇಡಿಕೆಯಿದೆ.

ಬೌದ್ಧನಲ್ಲದವನಿಗೆ ಸಂಪೂರ್ಣವಾಗಿ, ಏಕರೂಪವಾಗಿ ಬುದ್ಧನ ಜೀವನ ಮತ್ತು ಬೋಧನೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ. ನಿಕಾಯಗಳನ್ನು ಅವಲಂಬಿಸಿದರೆ ಏಕರೂಪವಾದ ಬುದ್ಧನ ಜೀವನ ಚರಿತ್ರೆ ಸಿಗುವುದಿಲ್ಲ, ಮಾತ್ರವಲ್ಲ ಅವನ ಬೋಧನೆಗಳೂ ಏಕರೂಪವಾಗಿಲ್ಲ. ವಿಶ್ವದ ಉಳಿದ ಧರ್ಮಗಳಿಗೆ ಹೋಲಿಸಿದರೆ ಬೌದ್ಧ ಧರ್ಮದ ಸ್ಥಾಪಕನ ಜೀವನ ಮತ್ತು ಬೋಧನೆಗಳ ಕುರಿತ ಮಾಹಿತಿಗಳು ಗೊಂದಲ ಹುಟ್ಟಿಸುವಂತಿವೆ. ಈ ಗೊಂದಲಗಳನ್ನು ನಿವಾರಿಸಿ ಬುದ್ಧನೆಡೆಗಿನ ದಾರಿಯನ್ನು ಸ್ಪಷ್ಟಗೊಳಿಸುವುದು ಅವಶ್ಯವಲ್ಲವೆ? ಬೌದ್ಧರಾದವರು ಇಂಥ ಗೊಂದಲಮಯ ಪ್ರಶ್ನೆಗಳನ್ನು ಚರ್ಚೆಗೆ ತೆರೆದಿಟ್ಟು ಅದರ ಮೇಲೆ ಬೆಳಕು ಚೆಲ್ಲಲು ಇದು ಸಕಾಲವಲ್ಲವೆ?


ಚರ್ಚೆಗೆ ಎತ್ತಿಕೊಳ್ಳುವ ಏಕಮಾತ್ರ ಉದ್ದೇಶದಿಂದ ನಾನಿಲ್ಲಿ ಕೆಲ ಪ್ರಶ್ನೆಗಳನ್ನೆತ್ತಿದ್ದೇನೆ. ಮೊದಲನೆಯದು ಬುದ್ಧನ ಜೀವನದ ಅತಿಮುಖ್ಯ ಘಟನೆಗೆ ಸಂಬಂಧಿಸಿದ್ದು - ಆತ ಪರಿವ್ರಾಜಕನಾದದ್ದು. ಬುದ್ಧ ಏಕೆ ಪರಿವ್ರಾಜಕನಾದ? ಸಾಂಪ್ರದಾಯಿಕ ಉತ್ತರವೆಂದರೆ ಅವನು ಒಂದು ಶವ, ಒಬ್ಬ ರೋಗಿ ಮತ್ತು .
ಒಬ್ಬ ಮುದುಕನನ್ನು ನೋಡಿ ಪರಿವ್ರಾಜಕನಾದ ಎಂದು. ಆದರೆ ಇದು ಅಸಂಬದ್ಧ. ಬುದ್ಧ ಪರಿವ್ರಾಜಕನಾದಾಗ ಅವನಿಗೆ ೨೯ ವರ್ಷ. ಅಲ್ಲಿಯವರೆಗೆ ಆ ಮೂರು ದೃಶ್ಯಗಳನ್ನು ಅವನು ನೋಡಿರದೇ ಇರಲು ಸಾಧ್ಯವೆ? ನೂರಾರು ಜನರ ಬದುಕಿನಲ್ಲಿ ಸಂಭವಿಸುವ ಅತಿ ಸಾಮಾನ್ಯ ಘಟನೆಗಳು ಅವು. ಬುದ್ಧನೂ ಅವುಗಳನ್ನು ನೋಡದೇ ಇರುವ ಸಾಧ್ಯತೆಯಿಲ್ಲ. ಅದೇ ಮೊದಲ ಬಾರಿಗೆ ನೋಡಿದ ಎಂಬ ಪಾರಂಪರಿಕ ವಿವರಣೆ ಒಪ್ಪುವುದು ಕಷ್ಟ. ಈ ವಿವರಣೆ ಹೊಂದಿಕೊಳ್ಳುವುದಿಲ್ಲ ಮತ್ತು ಅದು ಸಕಾರಣವೆನಿಸುವುದಿಲ್ಲ. ಹಾಗಾದರೆ ನನ್ನ ಪ್ರಶ್ನೆಗೆ ಇದು ಉತ್ತರವಲ್ಲ ಎಂದಾದರೆ ನಿಜವಾದ ಉತ್ತರ ಏನು?

ಎರಡನೆಯ ಪ್ರಶ್ನೆ ನಾಲ್ಕು ಆರ್ಯ ಸತ್ಯಗಳ ಕುರಿತಾದುದು. ಅವು ನಿಜಕ್ಕೂ ಬುದ್ಧನ ಮೂಲ ಉಪದೇಶಗಳಲ್ಲಿ ಸೇರಿವೆಯೇ ಎಂಬ ಅನುಮಾನ ನನಗೆ. ಏಕೆಂದರೆ ಆ ತತ್ವಗಳು ಬೌದ್ಧ ಧರ್ಮವನ್ನು ಮೂಲದಲ್ಲೇ ವಿರೂಪಗೊಳಿಸುತ್ತವೆ. ಬದುಕೇ ದುಃಖಮಯ ಎಂದಾದರೆ, ಸಾವು ದುಃಖಮಯ ಎಂದಾದರೆ, ಪುನರ್ಜನ್ಮವೂ ದುಃಖಮಯ ಎಂದಾದರೆ ಅಲ್ಲಿಗೆ ಎಲ್ಲವೂ ಮುಗಿಯಿತು. ಧರ್ಮವಾಗಲೀ, ತತ್ವಜ್ಞಾನವಾಗಲೀ ಮನುಷ್ಯನನ್ನು ಖುಷಿಗೊಳಿಸದು ಎಂದಾಯಿತು. ಅವನಿಗೆ ದುಃಖದಿಂದ ಪಾರಾಗುವಂತೆಯೇ ಇಲ್ಲ ಎಂದಾದರೆ ಧರ್ಮವಾಗಲೀ, ಬುದ್ಧನಾಗಲೀ ಹುಟ್ಟಿನಿಂದ ಬರುವ ದುಃಖಕ್ಕೆ ಏನು ಮಾಡಿಯಾರು? ಬೌದ್ಧರಲ್ಲದವರು ಬುದ್ಧನ ಧರ್ಮ ಅರ್ಥಮಾಡಿಕೊಳ್ಳಲು ಇರುವ ದೊಡ್ಡ ಅಡೆತಡೆಯೆಂದರೆ ಈ ನಾಲ್ಕು ಆರ್ಯಸತ್ಯಗಳು. ಆ ನಾಲ್ಕು ಆರ್ಯಸತ್ಯಗಳು ಮನುಷ್ಯನಿಗೆ ಜೀವನದಲ್ಲಿ ಭರವಸೆಯನ್ನು ನಿರಾಕರಿಸುತ್ತವೆ. ಆ ನಾಲ್ಕು ಆರ್ಯಸತ್ಯಗಳು ಬುದ್ಧನ ಬೋಧನೆಯನ್ನು ನಿರಾಶಾವಾದಿ ದೈವವಾಣಿಯನ್ನಾಗಿ ಮಾಡಿವೆ. ಅವು ನಿಜವಾಗಿಯೂ ಬುದ್ಧನ ಬೋಧನೆಗಳೇ ಅಥವಾ ನಂತರ ಬೌದ್ಧ ಸನ್ಯಾಸಿಗಳಿಂದ ಸೇರಿಸಲ್ಪಟ್ಟವೆ?

ಮೂರನೆಯ ಪ್ರಶ್ನೆ ಆತ್ಮ, ಕರ್ಮ ಮತ್ತು ಪುನರ್ಜನ್ಮಕ್ಕೆ ಸಂಬಂಧಪಟ್ಟಿದ್ದು. ಬುದ್ಧ ಆತ್ಮದ ಅಸ್ತಿತ್ವವನ್ನು ನಿರಾಕರಿಸಿದ್ದ. ಆದರೆ ಅವನು ಕರ್ಮ ಮತ್ತು ಪುನರ್ಜನ್ಮಕ್ಕೆ ಸಂಬಂಧಪಟ್ಟಂತೆ ಬೋಧಿಸಿದ್ದನೆಂದು ಹೇಳಲಾಗುತ್ತದೆ. ಈಗ ಒಂದು ಪ್ರಶ್ನೆ ಹುಟ್ಟುತ್ತದೆ. ಆತ್ಮವೇ ಇಲ್ಲವೆಂದ ಮೇಲೆ ಕರ್ಮ ಹೇಗಿರಲು ಸಾಧ್ಯ? ಆತ್ಮವೇ ಇಲ್ಲವೆಂದ ಮೇಲೆ ಪುನರ್ಜನ್ಮ ಹೇಗಿರಲು ಸಾಧ್ಯ? ಇವು ದಿಗಿಲುಗೊಳಿಸುವ ಪ್ರಶ್ನೆಗಳು. ಯಾವ ಅರ್ಥದಲ್ಲಿ ಬುದ್ಧ ಕರ್ಮ ಮತ್ತು ಪುನರ್ಜನ್ಮ ಎಂಬ ಪದಗಳನ್ನು ಬಳಸಿದ? ಈಗ ಬ್ರಾಹ್ಮಣರು ಬಳಸುತ್ತಿರುವ ಅರ್ಥಕ್ಕಿಂತ ಭಿನ್ನ ಅರ್ಥದಲ್ಲಿ ಬಳಸಿದನೆ? ಆತ್ಮವೇ ಇಲ್ಲವೆಂದಾದರೆ, ಕರ್ಮ ಮತ್ತು ಪುನರ್ಜನ್ಮ ಇದೆಯೆಂದಾದರೆ ಇವೆರೆಡರ ನಡುವೆ ಭಯಂಕರ ವಿರೋಧಾಭಾಸ ಇಲ್ಲವೆ? ಇದನ್ನು ಬಗೆಹರಿಸಿಕೊಳ್ಳಬೇಕಿದೆ.

ನಾಲ್ಕನೆಯ ಪ್ರಶ್ನೆ ಭಿಕ್ಕುಗಳದ್ದು. ಭಿಕ್ಕುಗಳನ್ನು ಸೃಷ್ಟಿಸುವುದರಲ್ಲಿ ಬುದ್ಧನ ಉದ್ದೇಶ ಏನಿತ್ತು? ಒಬ್ಬ ಆದರ್ಶ ಪುರುಷನನ್ನು ಸೃಷ್ಟಿಸುವ ಉದ್ದೇಶವೆ? ಅಥವಾ ಜನರ ಸೇವೆಗಾಗಿ ಬದುಕನ್ನು ಮುಡಿಪಾಗಿಟ್ಟ ಒಬ್ಬ ಸಮಾಜಸೇವಕ, ಜನರಿಗೆ ಸ್ನೇಹಿ, ಮಾರ್ಗದರ್ಶಿ ಮತ್ತು ತತ್ವಜ್ಞಾನಿಯಾದ ವ್ಯಕ್ತಿಯನ್ನು ಸೃಷ್ಟಿಸುವ ಉದ್ದೇಶವಿತ್ತೆ? ಇದು ವಾಸ್ತವಿಕ ಪ್ರಶ್ನೆ. ಬೌದ್ಧಧರ್ಮದ ಭವಿಷ್ಯ ಇದರ ಮೇಲೇ ನಿಂತಿದೆ. ಭಿಕ್ಕುವು ಒಬ್ಬ ಆದರ್ಶ ಮಾನವನಷ್ಟೇ ಎಂದಾದರೆ ಅವನು ಬೌದ್ಧಧರ್ಮ ಪ್ರಚಾರ ಪಡಿಸುವುದರಲ್ಲಿ ಉಪಯೋಗವಿಲ್ಲ. ಏಕೆಂದರೆ ಅವನು ಆದರ್ಶ ಪುರುಷನಾದರೂ ಸ್ವಾರ್ಥಿ ಪುರುಷನಾಗಿರುತ್ತಾನೆ. ಆದರೆ ಅವನು ಸಮಾಜಸೇವಕ ಎಂದಾದಲ್ಲಿ ಬೌದ್ಧಧರ್ಮಕ್ಕೆ ಭವಿಷ್ಯವಿದೆ. ಈ ಪ್ರಶ್ನೆಯನ್ನು ತತ್ವದ ಸುಸಂಗತತೆಗಾಗಿ ಮಾತ್ರವಲ್ಲ, ಬೌದ್ಧ ಧರ್ಮದ ಭವಿಷ್ಯದ ದೃಷ್ಟಿಯಿಂದಲೂ ನಿರ್ಧರಿಸಬೇಕಾಗಿದೆ.

ನಿಜ ಹೇಳಬೇಕೆಂದರೆ ಮಹಾಬೋಧಿ ಸೊಸೈಟಿಯ ಜರ್ನಲ್ ಓದಲು ತುಂಬ ಸಪ್ಪೆಯೆನಿಸುತ್ತದೆ. ಅದರಲ್ಲಿರುವ ವಿಷಯಗಳು ಆಸಕ್ತಿದಾಯಕವಲ್ಲ ಅಥವಾ ಮಾಹಿತಿಪೂರ್ಣವಲ್ಲ ಎಂದು ನಾನು ಹೇಳುತ್ತಿಲ್ಲ. ಅದು ಸಪ್ಪೆಯಾಗಿರಲು ಕಾರಣ ಅದು ಜಡ ಓದುಗನನ್ನು ಉದ್ದೇಶಿಸಿರುತ್ತದೆ. ಯಾವುದೇ ಲೇಖನ ಓದಿದ ಮೇಲೆ ಓದುಗ ಏನೆನ್ನುತ್ತಾನೆ ಎಂದು ತಿಳಿದುಕೊಳ್ಳುವ ಇಚ್ಛೆಯಿರುತ್ತದೆ. ಆದರೆ ಅಲ್ಲಿ ಓದುಗ ಯಾವತ್ತೂ ಪ್ರತಿಕ್ರಿಯಿಸುವುದಿಲ್ಲ. ಓದುಗನ ಕಡೆಯಿಂದ ಈ ಮೌನ ಲೇಖಕನಿಗೆ ಏನೂ ಒಳ್ಳೆಯದಲ್ಲ. ನಾನು ಈ ಮೊದಲೇ ಎತ್ತಿದ ಪ್ರಶ್ನೆಗಳು ಓದುಗರನ್ನು ಚಿಂತನೆಗೆ ಹಚ್ಚಿ ಈ ಸಮಸ್ಯೆಗಳನ್ನು ಬಿಡಿಸುವಲ್ಲಿ ತಮ್ಮ ಸಹಾಯ ನೀಡುವರೆಂದು ಆಶಿಸುತ್ತೇನೆ.

(೧೯೫೫. ‘ದ ಬುದ್ಧ ಅಂಡ್ ಹಿಸ್ ಧಮ್ಮ' ಪುಸ್ತಕದ ಮುನ್ನುಡಿಯಿಂದ.)

ಚೌಕಟ್ಟನ್ನು ದಾಟುವವರ ಕಥನ

ಚೌಕಟ್ಟಿನಾಚೆಯವರು- ಟಿ.ಅವಿನಾಶ್

ಕೃಪೆ : ದ ಸ೦ಡೆ ಇ೦ಡಿಯನ್

ಸಾಹಿತ್ಯದ ಹೊಸ ತಲೆಮಾರಿಗೆ ಈಗ ಏರುಜವ್ವನ. ಗಟ್ಟಿ-ಜೊಳ್ಳು ಎಂಬ ವಾಗ್ವಾದದ ನಡುವೆಯೇ ನವ್ಯೋತ್ತರ ಕಾಲಘಟ್ಟದಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಯುವ ಲೇಖಕ-ಲೇಖಕಿಯರು ಹೊಸ ಅನುಭವಗಳ ಪ್ರಪಂಚವನ್ನು ತಮ್ಮ ಕೃತಿಗಳಲ್ಲಿ ಅನಾವರಣ ಮಾಡುತ್ತಿದ್ದಾರೆ. ಅವರಲ್ಲಿ ಕವಿ-ಕತೆಗಾರ್ತಿ ಗೀತಾ ವಸಂತ ಕೂಡ ಒಬ್ಬರು. ಈಗಾಗಲೇ ’ಪರಿಮಳದ ಬೀಜ’ ಕವನ ಸಂಕಲನವನ್ನು ಪ್ರಕಟಿಸಿರುವ ಇವರು ‘ಚೌಕಟ್ಟಿನಾಚೆಯವರು’ ಎಂಬ ಪ್ರಥಮ ಕಥಾಸಂಕಲನವನ್ನು ಕೊಟ್ಟಿದ್ದಾರೆ.

ಗೀತಾ ಅವರ ಕಥಾಪ್ರಪಂಚ ಅವರ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯ ಕೌಟುಂಬಿಕ-ಸಾಮಾಜಿಕ ಪರಿಸರವನ್ನು ಅದರೆಲ್ಲಾ ಸೂಕ್ಷ್ಮತೆಗಳೊಂದಿಗೆ ನಿರೂಪಿಸುತ್ತದೆ. ಇವರ ಮುಖ್ಯ ದೃಷ್ಟಿ, ಸಂಸಾರದೊಳಗೆ ಏಗುತ್ತಿರುವ ಮತ್ತು ತಮ್ಮದೇ ಸ್ವತಂತ್ರ ಅಸ್ಮಿತೆಗಾಗಿ, ಘನತೆಗಾಗಿ ಹಾತೊರೆಯುತ್ತಿರುವ ಹೆಣ್ಣು ಪ್ರಪಂಚ. ಇವರ ಅಂತರಂಗದ ತಲ್ಲಣ, ಬಿಕ್ಕಟ್ಟು, ವಿಷಾದ, ಅನಿವಾರ್ಯತೆಗಳನ್ನು ಕತೆಗಾರ್ತಿ ಹದವಾಗಿ ನಿರೂಪಿಸಿದ್ದಾರೆ. ಹವ್ಯಕ ಬ್ರಾಹ್ಮಣರ ಕೌಟುಂಬಿಕ ವ್ಯವಹಾರಗಳ ಸುತ್ತ ಕತೆಗಳು ಕಟ್ಟಲ್ಪಟ್ಟಿದ್ದರೂ, ಬೇರೆ ಬೇರೆ ಜಾತಿಯ ಹೆಣ್ಣಿನ ಲೋಕಕ್ಕೂ ನಿರೂಪಣೆಗೆ ಸಮಾನ ಅವಕಾಶ ನೀಡಿರುವುದು ಸಕಾರಾತ್ಮಕ ಅಂಶ. ಕಥಾ ಸಾಹಿತ್ಯಕ್ಕೆ ಅತ್ಯಗತ್ಯವಾದ ಭಾಷೆಯ ಮೂಲಕವೇ ತನ್ನ ಅನುಭವ ಸಂಕೀರ್ಣತೆಗಳನ್ನು ಹಿಡಿದಿಡುವ ಕಲೆ ಪ್ರಥಮ ಸಂಕಲನದಲ್ಲೇ ಗೀತಾ ಅವರಿಗೆ ದಕ್ಕಿರುವುದು ಆಶಾದಾಯಕ ಬೆಳವಣಿಗೆ.

ಶತಕದ ಹಿಂದೆಯೇ ಆರಂಭವಾದ ಆಧುನೀಕರಣ ಪ್ರಕ್ರಿಯೆ ದೂರದ ಉತ್ತರ ಕನ್ನಡದ ಕುಗ್ರಾಮಗಳನ್ನು ತಲುಪಿದ್ದು ಸ್ವಲ್ಪ ತಡವಾಗಿಯೇ. ಹಾಗಾಗಿ ಇಲ್ಲಿನ ಕತೆಗಳನ್ನು ಆಧುನೀಕರಣದ ಪ್ರಕ್ರಿಯೆ ಸಂಕೀರ್ಣತೆಗಳಿಗೆ ನೀಡಿದ ಒಂದು ಪ್ರತಿಕ್ರಿಯೆ ಎಂದೂ ಭಾವಿಸಬಹುದು. ಒಂದು ಕಡೆ ಸ್ಥಿತ್ಯಂತರಗೊಳ್ಳುತ್ತಿರುವ ನಗರೀಕರಣದ ಪ್ರಕ್ರಿಯೆಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿರುವ ಸಮಕಾಲೀನ ಸಮಾಜದಲ್ಲಿ ಸಂಸಾರದೊಳಗೇ ಕೊಳೆಯುತ್ತಿರುವ ಹೆಂಗಸರು ಒಂದು ಕಡೆ ಇದ್ದರೆ, ಬೆಂಗಳೂರಿನಂತಹ ಸ್ವತಂತ್ರ ಜೀವನದಲ್ಲೂ ತೀವ್ರ ಅತೃಪ್ತಿಯಿಂದ ಬಳಲುತ್ತಿರುವ ಹೆಂಗಸರು ಇಲ್ಲಿದ್ದಾರೆ. ಆಧುನಿಕತೆ ತನ್ನಷ್ಟಕ್ಕೆ ತಾನೇ ಬಿಡುಗಡೆಯನ್ನು ತರುವುದಿಲ್ಲ. ಎಲ್ಲಿಯೇ ಇದ್ದರೂ ಸ್ವತಂತ್ರ, ಅಭಿವ್ಯಕ್ತಿಯ ಸೆಲೆ ಹುಡುಕಿಕೊಳ್ಳುವವರು ಅಂತಿಮವಾಗಿ ಹೊಸ ಪ್ರಜ್ಞೆಗಾಗಿ ಹಾತೊರೆಯುತ್ತಿರುವ ಪಾತ್ರಗಳೆ. ತಮ್ಮ ಸೀಮಿತ ಚೌಕಟ್ಟಿನಲ್ಲೇ ಹೊಸ ಪ್ರಜ್ಞೆಗಾಗಿ ಹಾತೊರೆಯುವ ರೆಬೆಲ್ ಗುಣಗಳ ಬಗ್ಗೆ ಕತೆಗಾರ್ತಿಗೆ ವಿಶೇಷ ಗಮನವಿದೆ.

ಸ್ವಲ್ಪ ಭಾವುಕ ನೆಲೆಯಿಂದ ಹೊರಡುವ ಕತೆಗಳು ಈ ಸಂಕಲನದಲ್ಲಿದ್ದರೂ, ಇಲ್ಲಿರುವ ಸಾಮಾಜಿಕ ರಚನೆಗಳು ಗಂಡು ಹೆಗ್ಗಡೆಗಳ ಡೌಲು, ಹೆಣ್ಣಿನ ತವಕ-ತಲ್ಲಣ, ಸಂಭ್ರಮ, ವಿಷಾದದ ಬದುಕಿನ ಬಿರುಕು ಹಾಗೂ ಇವೆಲ್ಲವುಗಳ ನಡುವೆಯೇ ಸ್ವಂತಿಕೆ, ಪೂರ್ಣತ್ವಗಳಿಗಾಗಿ ಹಾತೊರೆಯುತ್ತಿರುವ ಹೆಣ್ಣುಮಕ್ಕಳ ಪ್ರಪಂಚವನ್ನು ಒಳಗೊಂಡಿದೆ. ಸಂಕಲನದ ಮೊದಲ ಕತೆ ‘ಚೌಕಟ್ಟಿನಾಚೆಯವರು’ ನನ್ನ ಈ ಮಾತುಗಳಿಗೆ ಒಳ್ಳೆಯ ಉದಾಹರಣೆ. ಇಲ್ಲಿ ಮೂವರು ಹೆಣ್ಣು ಮಕ್ಕಳು ಮೂರು ವಿಭಿನ್ನ ಎರಕದವರು. ಸಾಂಸಾರಿಕ ಮರ್ಯಾದೆ ತಲೆಯ ಮೇಲಿಟ್ಟು ಒಳಗೆ ನಲುಗುವ ದೊಡ್ಡಮ್ಮ, ಕಾಲೇಜು ದಿನಗಳಲ್ಲಿ ಕ್ರಾಂತಿಕಾರಿ ಆಲೋಚನೆಗಳುಳ್ಳ ಆದರೆ ಈಗ ಬಿಸಿ ಕಳೆದುಕೊಂಡ ಮಾಲತಿ, ಗಂಡನನ್ನು ಕಳೆದುಕೊಂಡು ಹಿಂಸಾತ್ಮಕ ಸಮಾಜದ ಕಾಮುಕತನದ ನಡುವೆಯೇ ಬದುಕು ಸಾಗಿಸುತ್ತಿರುವ ಜೋರುಬಾಯಿಯ ದುರ್ಗಿ, ನಿತ್ಯ ಬದುಕಿನ ಲಯಗಳಲ್ಲೇ ಇರುವವರು. ಆದರೆ ಕತೆಗಾರ್ತಿ ಇವರಲ್ಲಿರುವ ಉಲ್ಲಂಘನೆಯ ಅಂಶವನ್ನು ಎತ್ತಿ ತೋರಿಸುವಲ್ಲಿ ಸಫಲರಾಗಿದ್ದಾರೆ. ಅದರಲ್ಲೂ ಕೆಳಜಾತಿಯ ದುರ್ಗಿ ತನ್ನ ಜೋರು ಬಾಯಿಂದ ಹಗಲಿನಲ್ಲೇ ‘ದೊಡ’ವರ ಮರ್ಯಾದೆಯನ್ನು ತೆಗೆಯಬಲ್ಲಳು. ಎಲ್ಲರಂತೆ ಈಕೆಯೂ ಸಂಸಾರಸ್ಥಳೇ. ಆದರೆ ಬದುಕಿನ ಅನಿವಾರ್ಯತೆಯಲ್ಲಿ ಈ ಚೌಕಟ್ಟನ್ನು ದಾಟುವವಳು. ಈಕೆಗೆ ಸಮಾಜದ ರಚನೆಗಳ ಹಿಂದಿನ ಹಿಂಸೆಯ ಅರಿವಿದೆ. ಈ ರೀತಿಯ ಲೋಕಗ್ರಹಿಕೆ ಕತೆಗಾರ್ತಿಗೆ ದಕ್ಕಿರುವುದು ಪ್ರಾಯಶಃ ಆಧುನಿಕ ಸ್ತ್ರೀವಾದಿ ಚಿಂತನೆಗಳ ಹಿನ್ನಲೆಯಲ್ಲಿ ಇರಬಹುದು. ಇಡೀ ಕಥಾಸಂಕಲನದಲ್ಲಿ ಬೇರೆ ಬೇರೆ ಪಾತಳಿಗಳಲ್ಲಿ ತಮ್ಮ ಸ್ವಂತಿಕೆ ಹುಡುಕಿಕೊಳ್ಳುವ ಸ್ತ್ರೀ ಪಾತ್ರಗಳ ಸಮೂಹವೇ ಬೇಕಾದಷ್ಟಿದೆ ತಮ್ಮ ತಮ್ಮ ಮಿತಿಗಳಲ್ಲಿ ಚೌಕಟ್ಟನ್ನು ದಾಟುವವರ ಕಥನವನ್ನು ಗೀತಾ ವಸಂತ ಇಲ್ಲಿ ಬಿಚ್ಚಿಟ್ಟಿದ್ದಾರೆ.

ಹಾಗಂತ ಇಲ್ಲಿನ ಎಲ್ಲ ಕಥೆಗಳು ಸಮಾನ ಕಲಾತ್ಮಕ ಯಶಸ್ಸನ್ನು ಸಾಧಿಸಿಲ್ಲ. ಉರಿಯ ವಾಸನೆ ಹಾಗೂ ಬೇಟೆ ಕಥೆಗಳು ಅತಿ ನಾಟಕೀಯತೆಯಿಂದ ಹಾಗೂ ಟಿ.ವಿ. ಧಾರವಾಹಿಗಳಲ್ಲಿ ಎದ್ದು ಕಾಣುವ ಸೆಂಟಿಮೆಂಟಲ್ ಗುಣಗಳಿಂದ ಬಳಲುತ್ತವೆ. ಆದರೆ ಕತೆಗಾರ್ತಿಗೆ ಕಥೆ ಹೇಳುವ ಕಲೆ ದಕ್ಕಿರುವುದರಿಂದ ಇಲ್ಲಿನ ಬಹುತೇಕ ಕಥೆಗಳು ಓದಿಸಿಕೊಳ್ಳುತ್ತವೆ. ಈ ಕತೆಗಾರ್ತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಗಟ್ಟಿ ರಚನೆಗಳನ್ನು ನಿರೀಕ್ಷಿಸಬಹುದು.

ಕೃತಿಯ ಪುಟಗಳಿಂದ

‘ಮಗಳೇ ಮನೇಲಿ ರಾಶೀ ತ್ರಾಸನೇ?’ ಎಂದು ತಲೆ ನೇವರಿಸಿದರೆ ‘ಹೌದೇ ಆಯಿ’ಎನ್ನುತ್ತ ಇಲ್ಲೇ ಉಳಿದುಬಿಟ್ಟರೆ ಎಂಬ ಡುಗುಡುಗು. ಪ್ರಜ್ಞಾ ಗಂಡನ ಮನೆಗೆ ಹೋದ ಮೇಲೆ ಈ ಸಾರೆ ಬಂದಾಗ ಅವಳನ್ನು ಸರೀ ಮಾತಾಡಿಸಲೂ ಇಲ್ಲ ಎಂಬ ಅಪರಾಧೀಭಾವ ಅವಳನ್ನು ಕಾಡುತ್ತಿತ್ತು. ಈ ಎಲ್ಲ ಸಂಕಟಗಳನ್ನು ಒಳಗೊಳಗೆ ಒತ್ತಿಟ್ಟುಕೊಂಡ ಆಯಿ ಕಳೆದ ಸಾರಿ ಪ್ರಜ್ಞಾ ಹೊರಡುವಾಗ ಕಣ್ಣ ತುಂಬಾ ನೀರು ತುಂಬಿಕೊಂಡು ಗೇಟಿನವರೆಗೆ ಬಂದು ನಿಂತು ಅಲ್ಲೆ ಸ್ತಬ್ದ ಚಿತ್ರವಾಗಿದ್ದಳು. ಆಕೆ ಹೋದ ಮೇಲೆ ಭೋರ್ಗರೆಯುವ ಮಳೆಯಾಗಿದ್ದಳು.

ಕರ್ನಾಟಕದ ನಕಲಿ ಬಸವಣ್ಣ


- ಡಾ.ಎನ್. ಜಗದೀಶ್ ಕೊಪ್ಪ


ನಮ್ಮ ಕರ್ನಾಟಕ ಸರ್ಕಾರದ ಘನವೆತ್ತ ಅಬಕಾರಿ ಸಚಿವರಾದ ಸಿ.ರೇಣುಕಾಚಾರ್ಯರಿಂದ, ಬಾಡಿಗೆ ಜನರ ಸಮಾವೇಶಗಳಲ್ಲಿ, ದೇವರಾಜ ಅರಸುವಿನಿಂದ ಹಿಡಿದು, ಗಾಂಧಿ, ಬುದ್ಧ, ಅಂಬೇಡ್ಕರ್‌ವರೆಗೆ ಹೋಲಿಕೆಯಾಗಿ, ನಂತರ ಒಮ್ಮೊಮ್ಮೆ ಒಳಗಿರುವ ಪರಮಾತ್ಮ ಹೆಚ್ಚಾದಾಗ, ಕರ್ನಾಟಕದ ಬಸವೇಶ್ವರ ಎಂದೆಲ್ಲಾ ಹಾಡಿ ಹೊಗಳಿಸಿಕೊಂಡಿದ್ದ, ಲಿಂಗಾಯತ ಸಮುದಾಯದ ಮಹಾನ್ ನಾಯಕ(?) ಯಡಿಯೂರಪ್ಪಗೆ ಸಿ.ಬಿ.ಐ. ನೇಣಿನ ಕುಣಿಕೆ ಹತ್ತಿರವಾಗುತ್ತಿದೆ. ಶುಕ್ರವಾರ ಬೆಳಿಗ್ಗೆ ಸಿ.ಇ.ಸಿ. ತನ್ನ ವರದಿಯನ್ನ ಸುಪ್ರೀಮ್ ಕೋರ್ಟ್‌ಗೆ ಸಲ್ಲಿಸುತ್ತಿದ್ದಂತೆ, ಯಡಿಯೂರಪ್ಪನವರ ರಾಜಕೀಯದ ಅಂತಿಮ ಅಧ್ಯಾಯ ಆರಂಭಗೊಂಡಿದೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಂತಹ ಅಧ್ವಾನದ, ಭ್ರಷ್ಟಾಚಾರದ ಶಿಖರದಂತಿರುವ ಮುಖ್ಯಮಂತ್ರಿಯನ್ನು ಯಾರೂ ನೋಡಿರಲಿಲ್ಲ. ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಯಾವ ಅಳುಕು ಇಲ್ಲದೆ, ಭಂಡತನದಿಂದ ಜಾತಿ ಮತ್ತು ಧರ್ಮದ ರಾಜಕೀಯ ಮಾಡಿದ ಮುಖ್ಯಮಂತ್ರಿ ಎಂದರೆ, ಅದು ಯಡಿಯೂರಪ್ಪ ಮಾತ್ರ.

ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡು ಜೈಲು ಸೇರಿದ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಒಳಗಾದ ಈ ವ್ಯಕ್ತಿಗೆ ಇನ್ನಾದರೂ ಬುದ್ಧಿ ಬರಬಹುದು ಎಂದು ಜನತೆ ನಿರೀಕ್ಷಿಸಿದ್ದರು. ಆದರೆ, ಈ ಮನುಷ್ಯ ಮಾಡಿದ್ದೇನು? ಜೈಲಿನಿಂದ ಹೊರಬರುವಾಗಲೇ, ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಜೈಲು ಸೇರಿ ನಂತರ ಬಿಡುಗಡೆಗೊಂಡಂತೆ ತನ್ನ ಎರಡು ಬೆರಳು ಎತ್ತಿ ತೋರಿಸಿಕೊಂಡು ಹೊರಬಂದ ಬಗೆಯನ್ನು ಗಮನಿಸಿದ ಕರ್ನಾಟಕದ ಜನತೆ ಅಂದೇ ತೀರ್ಮಾನಿಸಿಬಿಟ್ಟಿತು, ಇದೊಂದು ಅವಿವೇಕತನದ ಪರಕಾಷ್ಟೆ ಮತ್ತು ರಿಪೇರಿಯಾಗದ ಗಿರಾಕಿ ಎಂದು.

ಪರಪ್ಪನ ಅಗ್ರಹಾರದ ಜೈಲು ಪಾಲಾಗುತಿದ್ದಂತೆ, ಇಲ್ಲಸಲ್ಲದ ರೋಗದ ನೆಪದಲ್ಲಿ ಜಯದೇವ ಆಸ್ಪತ್ರೆ, ನಂತರ ಬೆಡ್‌ಶೀಟ್ ಮರೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಸೇರಿ ನಾಟಕವಾಡಿದ ಇದೇ ಯಡಿಯೂರಪ್ಪ, ಬಿಡುಗಡೆಯ ನಂತರ ಮುಖ್ಯಮಂತ್ರಿ ಕುರ್ಚಿಗಾಗಿ, ಇಡೀ ದೇಶ ಮತ್ತು ರಾಜ್ಯವನ್ನು ಹುಚ್ಚುನಾಯಿ ಕಡಿದ ವ್ಯಕ್ತಿಯಂತೆ ತಿರುಗುವುದನ್ನು ಗಮನಿಸಿದರೆ, ಈ ವ್ಯಕ್ತಿಯ ಆಕಾಂಕ್ಷೆ, ಅಧಿಕಾರದ ಲಾಲಸೆ ಯಾವ ಮಟ್ಟದಲ್ಲಿದೆ ಎಂಬುದನ್ನ ನೀವೇ ಊಹಿಸಬಹುದು.

ಅಧಿಕಾರದ ಚುಕ್ಕಾಣಿ ಹಿಡಿದ ಯಾವುದೇ ನಾಯಕನ ಸುತ್ತ ಒಳ್ಳೆಯ ಅಧಿಕಾರಿಗಳ ವರ್ಗ, ಅಥವಾ ಸಹೋದ್ಯೋಗಿಗಳು ಇರಬೇಕು. ಆದರೆ, ಯಡಿಯೂರಪ್ಪನವರ ಬಳಿ ಇದ್ದವರ ಪಟ್ಟಿಯನ್ನ ಒಮ್ಮೆ ಹಾಗೇ ಗಮನಿಸಿ ನೋಡಿ, ಕೃಷ್ಣಯ್ಯಶೆಟ್ಟಿ, ಕಟ್ಟಾ ಸುಬ್ಯಮಣ್ಯ ನಾಯ್ಡು, ಹರತಾಳು ಹಾಲಪ್ಪ, ಲಕ್ಷಣ ಸವಡಿ, ಸಿ.ಸಿ.ಪಾಟೀಲ್, ಕೃಷ್ಣ ಪಾಲೇಮರ್, ಜನಾರ್ಧನ ರೆಡ್ಡಿ,… ಇವರುಗಳ ಪುರಾಣವನ್ನು ನಿಮಗೆ ಬಿಡಿಸಿ ಹೇಳಬೇಕಿಲ್ಲ. ಹೋಗಲಿ ಒಳ್ಳೆಯ ರಾಜಕೀಯ ಸಲಹೆಗಾರರು ಇದ್ದರೆ? ಅದೂ ಇಲ್ಲ. ಯಡ್ಡಿಯ ರಾಜಕೀಯ ಕಾರ್ಯದರ್ಶಿಯಾಗಿದ್ದ ಬಿ.ಜೆ. ಪುಟ್ಟಸ್ವಾಮಿ ಎಂಬ ಆಸಾಮಿ ತನ್ನ ಹುದ್ದೆಯ ಜವಾಬ್ದಾರಿಯನ್ನು ಮರೆತು ಯಡಿಯೂರಪ್ಪನ ಪರವಾಗಿ ದೇವೇಗೌಡರ ಕುಟುಂಬದ ವಿರುದ್ಧ ಬೊಗಳುವ ನಾಯಿಯಾಗಿ ಕೆಲಸ ಮಾಡಿದ್ದೇ ಹೆಚ್ಚು. ಈತನ ಪುರಾಣ ಕೂಡ ರೋಚಕವಾದುದು, ಜೊತೆಗೆ ಅದೊಂದು ದೊಡ್ಡ ಅಧ್ಯಾಯ.

ಈತ ಮಂಡ್ಯ ಜಿಲ್ಲೆ ಮದ್ದೂರು ತಾಲೋಕಿನ ಪ್ರಮುಖ ಹೋಬಳಿ ಕೇಂದ್ರವಾದ ನನ್ನೂರಾದ ಕೊಪ್ಪ ಗ್ರಾಮದಿಂದ ಐದು ಕಿ.ಮಿ. ದೂರವಿರುವ ಬೆಕ್ಕಳಲೆ ಗ್ರಾಮದವನು. ಮಂಡ್ಯ ಹಾಗೂ ತುಮಕೂರು ಜಿಲ್ಲೆಯನ್ನು ಬೇರ್ಪಡಿಸುವ ಶಿಂಷಾ ನದಿ ತೀರದ ಕಟ್ಟಕಡೆಯ ಆ ಗ್ರಾಮದಿಂದ ಬಂದ ಈ ವ್ಯಕ್ತಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದು, 1966ರಲ್ಲಿ ಬೆಂಗಳೂರಿನ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ ( ಈಗಿನ ಬಿ.ಡಿ.ಎ.) ನಲ್ಲಿ ಕಿರಿಯ ಇಂಜಿನಿಯರ್ ಆಗಿ ಸೇವೆಗೆ ಸೇರಿದವನು. 1976ರಲ್ಲಿ ತಾನೇ ನಾಯಕನಾಗಿ ನಟಿಸಿ, ನಿರ್ಮಿಸಿದ ಕನ್ನಡ ಚಿತ್ರವೊಂದರ ಮೂಲಕ ಬರೋಬ್ಬರಿ 36 ಲಕ್ಷ ಕಳೆದುಕೊಂಡವನು (ಜಯಂತಿ ಈ ಚಿತ್ರದ ನಾಯಕಿ). ನಿವೃತ್ತಿಯ ದಿನ ಹತ್ತಿರವಾಗುತಿದ್ದಂತೆ ತನ್ನ ಗಾಣಿಗ ಜಾತಿಸಮುದಾಯವನ್ನು ರಾಜ್ಯಾದ್ಯಂತ ಸಂಘಟಿಸಿ, ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣರ ಬೆಂಬಲದಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಎಂ.ಎಲ್.ಸಿ. ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷನಾಗಿ ಅಧಿಕಾರದ ರುಚಿ ಕಂಡವನು. ಹತ್ತು ವರ್ಷದ ಹಿಂದೆ ಬೃಹತ್ ಉದ್ದಿಮೆದಾರನಾಗಲು ಹೊರಟು, ಮೈಸೂರಿನ ವಿಮಾನ ನಿಲ್ದಾಣದ ಎದುರು (ನಂಜನಗೂಡು ರಸ್ತೆಯ ಮಂಡಕಳ್ಳಿ ಬಳಿ) ಪ್ಲಾಸ್ಟಿಕ್ ಚೀಲ ತಯಾರಿಸುವ ಫ್ಯಾಕ್ಟರಿ ತೆಗೆದು ಮುಚ್ಚಿದವನು ( ಬಿ.ಜೆ.ಪಿ. ಸ್ಯಾಕ್ಸ್ ಪ್ರೈ ಲಿಮಿಟೆಡ್). ಇದಕ್ಕಾಗಿ ಕೆ.ಎಸ್.ಎಫ್.ಸಿ.ಯಿಂದ ಮಾಡಿದ ಸಾಲ ಒಂದೂವರೆ ಕೋಟಿ ರೂಪಾಯಿಗೂ ಅಧಿಕ. ಈಗ ಅಂದಾಜು ಮೂರು ಕೋಟಿ ರೂ ದಾಟಿರಬಹುದು. ಸಾಲ ತೀರಿಸಲಾಗದೇ, ಯಡಿಯೂರಪ್ಪನ ಮೊರೆ ಹೊಕ್ಕ ಈತ ಸುದ್ದಿಗೋಷ್ಟಿಯಲ್ಲಿ ಸತ್ಯ ಹರಿಶ್ಚಂದ್ರನ ತುಂಡಿನಂತೆ ಮಾತನಾಡುವುದನ್ನು ನೀವೆಲ್ಲಾ ಗಮನಿಸಿದ್ದೀರಿ.

ಈವರೆಗೆ ಯಡಿಯೂರಪ್ಪ ಮಾಡಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಕೇವಲ ಕರ್ನಾಟಕದಲ್ಲಿ ಮಾತ್ರ ಸುದ್ಧಿಯಾಗುತಿತ್ತು. ಈಗ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿ ರಾಷ್ಟ್ರಮಟ್ಟದ ಚರ್ಚೆಯಾಗಿ ಮಾರ್ಪಟ್ಟು ಕರ್ನಾಟಕದ ಜನತೆ ತಲೆತಗ್ಗಿಸುವಂತಾಗಿದೆ. ಇಷ್ಟೆಲ್ಲಾ ಅಪರಾಧ ಮಾಡಿಯೂ, ಯಡಿಯೂರಪ್ಪ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುವ ದಾಟಿ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಹನ್ನೆರೆಡು ವರ್ಷ ಅನ್ನ ಕಾಣದ ವ್ಯಕ್ತಿ ಭಕ್ಷಭೋಜನದ ತಟ್ಟೆಯ ಎದರು ಕುಳಿತು ತಿನ್ನುವಂತೆ, ಮುಖ್ಯಮಂತ್ರಿಯ ಗಾದಿಯಲ್ಲಿ ಕುಳಿತು, ದೇಣಿಗೆ ಹೆಸರಿನಲ್ಲಿ, ತಾನು, ತನ್ನ ಮಕ್ಕಳು, ಅಳಿಯ ಸೇರಿ ಎಂಜಲು ಕಾಸಿಗೆ ಕೈಯೊಡ್ಡಿದ ರೀತಿ ನಿಜಕ್ಕೂ ಸಾರ್ವಜನಿಕವಾಗಿ ಅಸಹ್ಯ ಮೂಡಿಸುವಂತಹದ್ದು.

ಇಡೀ ಯಡಿಯೂರಪ್ಪನವರ ಕುಟುಂಬವನ್ನು ದಾರಿ ತಪ್ಪಿಸಿದ್ದು ಮಾಲೂರಿನ ಶಾಸಕ ಕೃಷ್ಣಯ್ಯ ಶೆಟ್ಟಿ ಎಂಬಾತ. ಸದಾ ತಿರುಪತಿ ತಿಮ್ಮಪ್ಪನ ಧ್ಯಾನದಲ್ಲಿರುವ ಈತ ಕೈಯಲ್ಲಿ ಉಂಡೆನಾಮ ಹಿಡಿದು ತಿರುಗುವ ಆಸಾಮಿ. ನೀವು ಯಾಮಾರಿದರೆ, ಹಣೆಗೆ ಮಾತ್ರವಲ್ಲ, ಮುಕುಳಿಗೂ ನಾಮ ಬಳಿಯುವಲ್ಲಿ ನಿಸ್ಸೀಮ.

ತನ್ನ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ಪಡೆದರೆ ತಪ್ಪೇನು ಎಂದು ವಾದಿಸುವ ಯಡಿಯೂರಪ್ಪನವರಿಗೆ ನಮ್ಮ ಪ್ರಶ್ನೆ ಇಷ್ಟೆ: ನಲವತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದು, ಶಾಸಕನಾದಾಗ, ವಿರೋಧಪಕ್ಷದ ನಾಯಕನಾದಾಗ, ಅಥವಾ ಉಪಮುಖ್ಯಮಂತ್ರಿಯಾಗಿದ್ದಾಗ ಬಾರದ ದೇಣಿಗೆ ಮುಖ್ಯಮಂತ್ರಿಯಾದಾಗ ಹೇಗೆ ಬಂತು?

ದೇಣಿಗೆ ಪಡೆದದ್ದು ಸತ್ಯವೇ ಆಗಿದ್ದರೆ, ಸುದ್ದಿ ಬಹಿರಂಗವಾಗುತಿದ್ದಂತೆ ರಾತ್ರೋರಾತ್ರಿ ಬೆಂಗಳೂರಿನ ರಾಜಮಹಲ್ ವಿಲಾಸ ಬಡಾವಣೆಯ ಮೈಸೂರು ಬ್ಯಾಂಕಿನಿಂದ 20 ಕೋಟಿ ಹಣವನ್ನು ತೆಗೆದು ಖಾತೆ ಮುಚ್ಚಿದ್ದು ಏಕೆ? ಅಕ್ರಮಗಳ ಕುರಿತು ಧಾರವಾಡದ ಎಸ್.ಆರ್. ಹಿರೇಮಠ ಸಿ.ಇ.ಸಿ.ಗೆ ದಾಖಲೆ ಸಲ್ಲಿಸುತಿದ್ದಂತೆ ಗಣಿ ಉದ್ಯಮಿ ಪ್ರವೀಣ್ ಚಂದ್ರ ಎಂಬುವರಿಂದ ಪಡೆದ ಐದು ಕೋಟಿ ದೇಣಿಗೆ ಹಣವನ್ನು ಈಗ ಸಾಲ ಎಂದು ವಾದಿಸುತ್ತಿರುವುದಾದರು ಏಕೆ?

ಕರ್ನಾಟಕದ ಜನತೆಯನ್ನು ಯಡಿಯೂರಪ್ಪ ಕಿವಿಗೆ ಹೂ ಮುಡಿಯುವ ಗಿರಾಕಿಗಳು ಎಂದು ಭಾವಿಸಿದಂತಿದೆ.

ತಾನು ಹಂಚಿದ ಎಂಜಲು ಪ್ರಸಾದ ತಿಂದು, ಬಹುಪರಾಕು ಹೇಳುವ ಕೆಲವು ಮಾನಗೆಟ್ಟ ಮಠಾಧೀಶರು ಮತ್ತು ಲಿಂಗಾಯುತ ನಾಯಕರಿಂದ ಆಧುನಿಕ ಬಸವೇಶ್ವರ ಎಂದು ಹಾಡಿ ಹೊಗಳಿಸಿಕೊಳ್ಳುವ ಯಡಿಯೂರಪ್ಪ ಒಮ್ಮೆ ಗಾಲಿ ಜನಾರ್ಧನ ರೆಡ್ಡಿಯನ್ನು ನೆನಪಿಸಿಕೊಳ್ಳುವುದು ಒಳಿತು. ತಾನು ಅಪ್ಪಟ 24 ಕ್ಯಾರೆಟ್ ಚಿನ್ನ ಎಂದು ಘೋಷಿಸಿಕೊಂಡಿದ್ದ ಈ ಗಣಿಕಳ್ಳ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಾ, ತುಕ್ಕುಹಿಡಿಯುವ ಕಬ್ಬಿಣವಾಗಿದ್ದಾನೆ. ಈತನ ಅಮೇದ್ಯ ತಿಂದು ಬಳ್ಳಾರಿಯ ಬೀದಿ, ಬೀದಿಯಲ್ಲಿ ಆಧುನಿಕ ಕೃಷ್ಣದೇವರಾಯ ಎಂದು ಹಾಡಿ ಹೊಗಳಿದ ನಾಯಿ ನರಿಗಳೆಲ್ಲಾ ಈಗ ಚೆಲ್ಲಾಪಿಲ್ಲಿಯಾಗಿವೆ.

ತಾನು ಎಸಗಿರುವ ಅಕ್ಷಮ್ಯ ಅಪರಾಧಗಳಿಗೆ ಯಾವ ಯಜ್ಞವಾಗಲಿ, ದೇವರಾಗಲಿ ರಕ್ಷಣೆಗೆ ಬರಲಾರವು. ಈ ಸತ್ಯವನ್ನು ಅರಿತು, ಕಾನೂನಿನ ಮುಂದೆ ತಲೆಬಾಗಿ, ಸಾರ್ವಜನಿಕವಾಗಿ ಮತ್ತು ರಾಜಕೀಯವಾಗಿ ನಿವೃತ್ತಿಯಾಗುವುದೊಂದೇ ಈಗ ಯಡಿಯೂರಪ್ಪನವರ ಪಾಲಿಗೆ ಉಳಿದಿರುವ ಏಕೈಕ ಮಾರ್ಗ. ಅದನ್ನು ಹೊರತು ಪಡಿಸಿ, ನನ್ನ ಈ ಅವಸ್ಥೆಗೆ ವಿರೋಧ ಪಕ್ಷಗಳು ಕಾರಣ, ನನ್ನ ಪಕ್ಷದ ಹಿತಶತ್ರುಗಳು ಕಾರಣ ಎಂದು ಬೊಬ್ಬಿರಿದರೆ, ಅದನ್ನು ಜಾಣತನವೆಂದು ಕರೆಯುವುದಿಲ್ಲ. ಬದಲಿಗೆ, ಹುಚ್ಚುತನ ಎಂದು ಕರೆಯಲಾಗುತ್ತದೆ.

-ವರ್ತಮಾನದಿಂದ

ಮುಸಲ್ಮಾನ ಸ್ತ್ರೀಯರ ಗೆಳತಿ ಮತ್ತು ಸಮಾನತೆ ಬಯಸುವವರ ಒಡನಾಡಿಯ ಆತ್ಮಕಥನ

- ರವಿ ಕೃಷ್ಣಾರೆಡ್ಡಿ

ಬಹುಶಃ ಭಾರತದಲ್ಲಿ ಇಂದು ಮುಸ್ಲಿಮರಲ್ಲಿ, ಅದರಲ್ಲೂ ಅವರ ಹೆಣ್ಣುಮಕ್ಕಳಲ್ಲಿರುವಷ್ಟು ಅಸಮಾನತೆ, ನಿರುದ್ಯೋಗ, ಅನಕ್ಷರತೆ, ಅನ್ಯಾಯ, infant mortality, ಬೇರೊಂದು ಜನವರ್ಗದಲ್ಲಿ ಇದೆ ಎಂದು ಹೇಳಲಾಗುವುದಿಲ್ಲ. ಈ ಒಂದೊಂದು ಅನಿಷ್ಟಗಳೂ ಬೇರೆಬೇರೆ ವರ್ಗದ ಜನರಲ್ಲಿ ಇನ್ನೂ ತೀವ್ರವಾಗಿ ಇರಬಹುದು. ಆದರೆ ಮುಸಲ್ಮಾನರನ್ನೇ ಒಟ್ಟಾಗಿ ತೆಗೆದುಕೊಂಡರೆ ಇವರನ್ನು ಬಾಧಿಸುವಷ್ಟು ಸಂಕೀರ್ಣ ಸಮಸ್ಯೆಗಳು ಬೇರೊಬ್ಬರನ್ನು ಬಾಧಿಸವು ಎನ್ನಿಸುತ್ತದೆ.

ಕನ್ನಡದ ಒಬ್ಬ ಲೇಖಕಿಯೇ ಹೇಳುವಂತೆ ಇಸ್ಲಾಮಿನಲ್ಲಿ ಹೆಣ್ಣಿಗೂ ಅನೇಕ ಹಕ್ಕುಗಳಿವೆ. ಆದರೆ ಬ್ರಿಟಿಷರು ಪ್ರಥಮವಾಗಿ 1872ರಲ್ಲಿ ಮೊಹಮ್ಮಡನ್ ಕಾನೂನು ಜಾರಿಗೆ ತಂದಾಗ ಸರಿಯಾದ ನ್ಯಾಯಮನಸ್ಸಿನ ಮೌಲ್ವಿಗಳ ಅಭಿಪ್ರಾಯಗಳನ್ನು ಪದೆದುಕೊಳ್ಳದೆ ಮುಸಲ್ಮಾನ ಹೆಣ್ಣಿನ ಮದುವೆ ಮತ್ತು ವಿಚ್ಚೇದನಕ್ಕೆ ಸಂಬಂಧಪಟ್ಟಂತೆ ಕೆಲವು ಹಕ್ಕುಗಳನ್ನು ನಿರಾಕರಿಸಿ ಅನ್ಯಾಯ ಎಸಗಿದ್ದರು. ಗಂಡ ಎಂತಹ ಕ್ರೂರಿಯಾದರೂ ಹೆಂಡತಿಯಾದವಳು ಅವನೊಡನೆ ಬಾಳಲೇಬೇಕಾಗಿತ್ತು. ಮುಸಲ್ಮಾನ ಹೆಣ್ಣು ವೈವಾಹಿಕ ಬಂಧನದಿಂದ ಬಿಡುಗಡೆಗೊಳ್ಳಲು, ತಾನಾಗಿ ವಿಚ್ಚೇದನ ಪಡೆದುಕೊಳ್ಳಲು ಸಾಧ್ಯವೇ ಇರಲಿಲ್ಲ.

ಕಳೆದ ಶತಮಾನದ ಆದಿಯಲ್ಲಿ ಭಾರತದ ಎಲ್ಲಾ ಜಾತಿಜನಾಂಗಗಳಲ್ಲಿ ಬಾಲ್ಯವಿವಾಹ ನಡೆಯುತ್ತಿತ್ತು. ಕೇರಳದ ಕಾಸರಗೋಡಿನ ಬಳಿಯ ತಳಂಗೆರೆ ಎಂಬ ಹಳ್ಳಿಯಲ್ಲಿ ಮಮ್ಮುಂಇ ಎನ್ನುವರೊಬ್ಬರು ಹೆಂಚು ಮತ್ತಿತರ ವ್ಯಾಪಾರಗಳಿಂದ 1900ರ ಸುಮಾರಿನಲ್ಲಿ ಸಾಕಷ್ಟು ಶ್ರೀಮಂತರಾದರು. ಅವರಿಗೆ ನಾಲ್ವರು ತಂಗಿಯವರೂ ಓರ್ವ ತಮ್ಮನೂ ಇದ್ದ. ಜೈನಾಬಿ ಎನ್ನುವ ಹೆಣ್ಣುಮಗಳು ಮಮ್ಮುಂಇರವರ ಕೊನೆಯ ತಂಗಿ. 1915ರ ಸುಮಾರಿನಲ್ಲಿ, ಜೈನಾಬಿಗೆ ಎಂಟು ವರ್ಷವಿದ್ದಾಗ, ಆಕೆಯ ಅನುಮತಿಯನ್ನು ಕೇಳದೇ ಸಮೀಪದ ಮೊಗ್ರಾಲ್ ಪುತ್ತೂರು ಎನ್ನುವ ಹಳ್ಳಿಯ ಶ್ರೀಮಂತ ಮನೆತನದ ಹಸ್ಸನ್ ಕುಟ್ಟಿ ಬ್ಯಾರಿ ಎನ್ನುವವರಿಗೆ ನಿಕಾಹ್ ಮಾಡಿಕೊಡಲಾಯಿತು. ಇದು ಒಂದು ರೀತಿಯಲ್ಲಿ ಅರೆ ಮದುವೆ. ನಿಶ್ಚಿತಾರ್ಥದಂತಿರುತ್ತಿದ್ದ ಈ ನಿಕಾಹ್‌ನ ಎರಡು-ಮೂರು ವರ್ಷಗಳ ನಂತರ ಮದುವೆ ಅಗುತ್ತಿತ್ತು.

ಆದರೆ ಆ ನಿಜವಾದ ಮದುವೆ ಅಗುವುದಕ್ಕೆ ಮೊದಲೇ ಎರಡೂ ಕಡೆಯವರಿಗೆ ಬಹುಶಃ ವರದಕ್ಷಿಣೆಯ ವಿಚಾರಕ್ಕೆ ಮನಸ್ತಾಪ ಉಂಟಾಯಿತು. ಇದರಿಂದ ಬೇಸತ್ತ ಶ್ರೀಮಂತ ಮಮ್ಮುಂಇ ತನ್ನ ತಂಗಿ ಜೈನಾಬಿಗೆ ಹಸ್ಸನ್ ಕುಟ್ಟಿ ತಲಾಖ್ ನೀಡಬೇಕೆಂದು ಕೇಳಿದರು. ಗಂಡಿನ ಕಡೆಯವರು ಒಪ್ಪಲಿಲ್ಲ. ಮಮ್ಮುಂಇ ತಂಗಿಯ ಪರವಾಗಿ ನ್ಯಾಯಾಲಯಕ್ಕೆ ಹೋದರು. ಆಗಿನ 1872ರ ಮುಸ್ಮಿಮ್ ವ್ಯಕ್ತಿನಿಯಮ ಕಾನೂನಿನಲ್ಲಿ ಆಸ್ಪದ ಇಲ್ಲದಿದ್ದರೂ ಖುರಾನಿನ ವಾಕ್ಯಗಳಿಗೆ ಅನುಗುಣವಾಗಿ ವಿಚ್ಛೆದನ ದೊರಕಬೇಕೆಂದು ಅವರು ವಾದ ಮಂಡಿಸಿದರು. ಮುನ್ಸಿಫ್ ಕೋರ್ಟ್, ಸಬ್ ಕೋರ್ಟ್, ಕೊನೆಗೆ ಮದ್ರಾಸಿನ ಹೈಕೋರ್ಟ್‌ವರೆಗೂ ಮೊಕದ್ದಮೆ ಹೋಯಿತು. ಐದಾರು ವರ್ಷಗಳ ಕಾನೂನು ಹೋರಾಟದ ನಂತರ ಮದ್ರಾಸ್ ಹೈಕೋರ್ಟ್‌ನ ಇಂಗ್ಲಿಷ್ ಜಡ್ಜ್ ಮತ್ತು ಹಿಂದು ಜಡ್ಜ್ ಇದ್ದ ಪೀಠ 1928ರಲ್ಲಿ ಜೈನಾಬಿಗೆ ವಿಚ್ಛೇದನವನ್ನು ಮಂಜೂರು ಮಾಡಿತು.

ಇದಾದ ನಂತರ 1937ರಲ್ಲಿ ಬ್ರಿಟಿಷರು ಶರಿಯತ್ ಕಾನೂನನ್ನು ತಂದರು. ಅದಾದ ಎರಡೇ ವರ್ಷಗಳಿಗೆ, 1939ರಲ್ಲಿ ಆಗಿನ ಭಾರತದ ಸಂಸತ್ತು ಮುಸಲ್ಮಾನ ಮದುವೆ ಕಾನೂನಿಗೆ ತಿದ್ದುಪಡಿ ತಂದು ವಿಚ್ಚೇದನ ವಿಷಯಗಳಿಗೆ ಸಂಬಂಧಪಟ್ಟಂತೆ ಆಗಿನ ಕಾಲಕ್ಕೆ ಕ್ರಾಂತಿಕಾರಕ ಎನ್ನಬಹುದಾದ ಬದಲಾವಣೆಗಳನ್ನು ತಂದಿತು. ಹಸನ್ ಕುಟ್ಟಿ ಬ್ಯಾರಿ ಮತ್ತು ಜೈನಾಬಿ ಮೊಕದ್ದಮೆಯ ತೀರ್ಪಿನ ಆಧಾರದ ಮೇಲೆ ಮುಸಲ್ಮಾನ ಹೆಣ್ಣುಮಗಳೂ ವಿಚ್ಚೇದನವನ್ನು ಕೇಳಬಹುದು ಎನ್ನುವ ಹಕ್ಕನ್ನು ಆ ಕಾನೂನು ಕೊಟ್ಟಿತು. (ಅದರೆ ವಿಚ್ಛೇದನ ನೀಡುವ ಹಕ್ಕನ್ನು ಮಾತ್ರ ಕೊಡಲಿಲ್ಲ.)

ಅಂದ ಹಾಗೆ, ಇದಾದ ನಂತರ, ಹಸನ್ ಕುಟ್ಟಿ ಮತ್ತು ಜೈನಾಬಿ ಮೊಕದ್ದಮೆಯ ತೀರ್ಪು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳ ಇಸ್ಲಾಮ್ ಕಾನೂನುಗಳಲ್ಲಿಯೂ ಉಲ್ಲೇಖಗೊಂಡಿದೆ.

ನ್ಯಾಯಾಲಯದ ತೀರ್ಪು ಬರುವಷ್ಟರಲ್ಲಿ ಜೈನಾಬಿಗೆ ಸುಮಾರು ಹದಿನಾಲ್ಕು ವರ್ಷ ವಯಸ್ಸಾಗಿತ್ತು. ಮದುವೆಯ ವಯಸ್ಸು (ಆಗಿನ ಕಾಲಕ್ಕೆ) ಮೀರುತ್ತ ಬಂದಿತ್ತು. ವಿಚ್ಛೇದನ ಬೇರೆ ಆಗಿತ್ತು. ಸಾಕಷ್ಟು ಶ್ರೀಮಂತ ಕುಟುಂಬವಾಗಿದ್ದರಿಂದ ಸರಿಸಮಾನ ಅಂತಸ್ತಿನ ಜನರ ನಡುವೆ ಸಂಬಂಧ ಏರ್ಪಡುವುದು ಕಷ್ಟಸಾಧ್ಯವಾಗಿತ್ತು. ಅಂತಹ ಸಂದರ್ಭದಲ್ಲಿ ದೂರದ ಸಂಬಂಧಿಕರ ವಯಸ್ಸಿಗೆ ಬಂದಿದ್ದ ಅಹಮದ್ ಎನ್ನುವ ಹುಡುಗನೊಬ್ಬ ಕಾನೂನು ಪದವಿ ಓದಲು ಬಯಸುತ್ತಿದ್ದ. ಆದರೆ ಮನೆಯ ಕಡೆ ಪರಿಸ್ಥಿತಿ ಆತನನ್ನು ಓದಿಸುವಷ್ಟು ಚೆನ್ನಾಗಿರಲಿಲ್ಲ. ಆತನನ್ನು ಓದಿಸುವ ಜವಾಬ್ದಾರಿ ಹೊತ್ತ ಮಮ್ಮುಂಇ ಆತನೊಡನೆ ತನ್ನ ತಂಗಿಗೆ ನಿಕಾಹ್ ಮಾಡಿದರು. ಆತನನ್ನು ನಾಲ್ಕು ವರ್ಷ ಮದ್ರಾಸಿನಲ್ಲಿ ಓದಿಸಿದರು. ಹುಡುಗ ಕಾನೂನು ಪದವಿಯ ಜೊತೆಗೆ ಮಹಮ್ಮದೀಯ ಕಾನೂನಿನಲ್ಲಿ ಚಿನ್ನದ ಪದಕ ಸಹ ಪಡೆದ. ಪದವಿ ಪಡೆದ ನಂತರ ಅಹಮದ್‌ಗೂ ಜೈನಾಬಿಗೂ ಮದುವೆ ಅಯಿತು.

ಜೈನಾಬಿಗೆ ಸಾಲಾಗಿ ಮೂರು ಜನ ಗಂಡುಮಕ್ಕಳಾದರು. ಮನೆಯಲ್ಲಿ ಎಲ್ಲರಿಗೂ ಹೆಣ್ಣುಮಗುವೊಂದು ಆಗಲಿ ಎಂಬ ಆಸೆಯಿತ್ತು. ಅಹಮದ್‌ರ ತಂದೆಗೂ ಆರು ಜನ ಗಂಡುಮಕ್ಕಳಾಗಿದ್ದರೇ ಹೊರತು ಒಂದೂ ಹೆಣ್ಣುಮಗು ಆಗಿರಲಿಲ್ಲ. ಜೈನಾಬಿ ನಾಲ್ಕನೇ ಬಾರಿ ಗರ್ಭಿಣಿಯಾದಾಗ ಆಕೆಯ ಮಾವ, ಅಂದರೆ ಅಹಮದ್‌ರ ತಂದೆ ಹರಕೆಯನ್ನೂ ಹೊತ್ತರು; “ಈ ಬಾರಿ ಜೈನಾಬಿಗೆ ಹೆಣ್ಣು ಮಗು ಹುಟ್ಟಿದರೆ ಮಗುವಿಗೆ ಪ್ರವಾದಿ ಇಬ್ರಾಹೀಂ ಅವರ ಪತ್ನಿಯಾದ ’ಸಾರಾ’ ರವರ ಹೆಸರನ್ನು ಇಡೋಣ.” ಜೈನಾಬಿ ತನ್ನ ನಾಲ್ಕನೇ ಮಗುವನ್ನು ಪ್ರವಾದಿ ಮಹಮ್ಮದರ ಜನ್ಮದಿನದಂದು ಹೆರುತ್ತಾರೆ. ಅದು ಹೆಣ್ಣು ಮಗು. ಹರಕೆಯಂತೆ ’ಸಾರಾ’ ಎಂದು ಹೆಸರಿಡುತ್ತಾರೆ.

ಸಾರಾಳ ತಂದೆ ಹೆಂಡತಿ ಜೈನಾಬಿಯ ಅಭಿಪ್ರಾಯಕ್ಕೆ ವಿರುದ್ಧವಾಗಿ ಮಗಳನ್ನು ಓದಿಸುತ್ತಾರೆ. ಆಕೆಗಾಗಿಯೇ ಕಾಸರಗೋಡಿಗೆ ವಾಸ್ತವ್ಯ ಬದಲಾಯಿಸುತ್ತಾರೆ. ಮಗಳು ಮೆಟ್ರಿಕ್ಯುಲೇಷನ್ ಅನ್ನು ಉತ್ತಮ ಅಂಕಗಳಿಂದ ಪಾಸಾಗುತ್ತಾಳೆ. ಆದರೆ ಹೆಂಡತಿ ಮತ್ತು ತಾಯಿ ತನ್ನ ಮಗಳ ಕಾಲೇಜು ಓದಿಗೆ ಸಮ್ಮತಿಸುವುದಿಲ್ಲ ಎಂದು ತಿಳಿದು ಅಪ್ಪ ಮಗಳನ್ನು ಮುಂದಕ್ಕೆ ಓದಿಸಲು ಹೋಗುವುದಿಲ್ಲ. ಕೆಲವು ವರ್ಷಗಳ ನಂತರ ಸಾರಾಳಿಗೆ ಮಂಗಳೂರಿನ ಎಂ. ಅಬೂಬಕ್ಕರ್ ಎನ್ನುವ ಇಂಜಿನಿಯರ್‌ರೊಡನೆ ವಿವಾಹವಾಗುತ್ತದೆ. ಮದುವೆಯ ನಂತರ ಆಕೆ ಸಾರಾ ಅಬೂಬಕ್ಕರ್ ಆಗುತ್ತಾರೆ.

ಇಂದು ಅಮ್ಮ ಜೈನಾಬಿ ಮತ್ತು ಮಗಳು ಸಾರಾ ಅಬೂಬಕ್ಕರ್ ಪುಸ್ತಕಗಳಲ್ಲಿ ದಾಖಲಾಗಿದ್ದಾರೆ. ಅಮ್ಮ ಕಾನೂನಿನ ಪುಸ್ತಕಗಳಲ್ಲಿ, ಮಗಳು ಸಾಹಿತ್ಯ, ಸಾಮಾಜಿಕ, ಮತ್ತು ವರ್ತಮಾನದ ಆಗುಹೋಗುಗಳಲ್ಲಿ.

ಕಳೆದ ಫೆಬ್ರವರಿಯಲ್ಲಿ ಗೆಳೆಯ ಅರವಿಂದ ಚೊಕ್ಕಾಡಿ ತಮ್ಮ ತಂದೆಯ ನೆನಪಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾರಾ ಅಬೂಬಕ್ಕರ್ ಮಾತನಾಡಿದ್ದರು. ಬಹುಶಃ ಅವರಿಗೆ ನಾನು ಅಪರಿಚಿತ ಎಂಬ ಭಾವನೆ ನನಗಿತ್ತು. ಅದರೆ ಅವರಿಗೆ ಗೊತ್ತಿತ್ತು. ನಾನು ನಾಲ್ಕು ವರ್ಷಗಳ ಹಿಂದೆ ಚುನಾವಣೆಗೆ ನಿಂತಿದ್ದು ಸಹ ಗೊತ್ತಿತ್ತು. ಹಾಗಾಗಿ ನಾನೊಬ್ಬ ರಾಜಕಾರಣಿ ಎಂದೂ ಸಹ ಹೇಳಿದರು! ನಾನದಕ್ಕೆ ತಮಾಷೆಯಾಗಿ ಸಾರಾ ಅಬೂಬಕ್ಕರ್‌ರವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹಾಸ್ಯ ಮಾಡಿದ್ದೆ. ನಮ್ಮ ಮಾತುಗಳು ಮುಗಿದ ನಂತರ ಹೋಗುವ ಮೊದಲು ಅವರಿಗೆ ನನ್ನ ಒಂದೆರಡು ಪುಸ್ತಕ ಕೊಟ್ಟಿದ್ದೆ. ಅದಾದ ಎರಡು-ಮೂರು ವಾರಗಳಿಗೆ ಅವರಿಂದ ಒಂದಷ್ಟು ಪುಸ್ತಕಗಳು ಅಂಚೆಯಲ್ಲಿ ಬಂದವು. ಅದರಲ್ಲಿ ನಾನು ಮೊದಲಿಗೆ ಓದಿದ್ದು “ಹೊತ್ತು ಕಂತುವ ಮುನ್ನ”. ಅದು ಸಾರಾ ಅಬೂಬಕ್ಕರ್‌ರವರ ಆತ್ಮಕಥನ.

ಸಾರಾ ಅಬೂಬಕ್ಕರ್‌ರವರು ತನ್ನ ಇಸ್ಲಾಮ್ ಮತದಲ್ಲಿ, ಪ್ರವಾದಿಗಳಲ್ಲಿ ನಂಬಿಕೆ ಇಟ್ಟಿರುವ ಮಹಿಳೆ. ಅದರೆ ಅದೇ ಸಮಯದಲ್ಲಿ ಇಸ್ಲಾಮಿನ ಪುರೋಹಿತಶಾಹಿ ತನ್ನ ಮತ ಮತ್ತು ಪ್ರವಾದಿಯ ಹೆಸರಿನಲ್ಲಿ ಹೆಣ್ಣಿಗೆ ನಿರಾಕರಿಸುತ್ತ ಬಂದಿರುವ ಮಾನವ ಹಕ್ಕುಗಳ ವಿರುದ್ಧ ಹೋರಾಡುತ್ತ ಬಂದಿರುವ ಹೋರಾಟಗಾರ್ತಿ ಸಹ. ಇಂದು ಕರ್ನಾಟಕದಲ್ಲಿ ಮುಸಲ್ಮಾನ ಹೆಣ್ಣುಮಗಳಿಗೆ ಆದರ್ಶವಾಗಬಹುದಾದ, ಗೆಳತಿಯಾಗಬಹುದಾದ ಹೆಣ್ಣುಮಕ್ಕಳಲ್ಲಿ ಸಾರಾರವರು ಮೊದಲಿಗರು. ಅವರಿಗೆ ಮುಸಲ್ಮಾನ ಹೆಣ್ಣುಮಕ್ಕಳಿಂದ ಬರುವ ಪತ್ರಗಳ ಬಗ್ಗೆ ಯೋಚಿಸಿದರೆ, ಆಗಿದ್ದಾರೆ ಸಹ.

ಅವರ ಆತ್ಮಕಥನ ಎಲ್ಲಾ ಕೋಮುವಾದಿ ಶಕ್ತಿಗಳ ಕುತಂತ್ರಗಳ ಬಗ್ಗೆ ಮಾತನಾಡುತ್ತದೆ. ಪುರುಷವರ್ಗದ ಅಸಹನೆಯ ಬಗ್ಗೆ, ತನ್ನದೇ ವಾರಿಗೆಯ ಕೆಲವು ಮುಸಲ್ಮಾನ ಲೇಖಕರ ಅಸಹನೆ ಮತ್ತು ಅಸೂಯೆಯ ಬಗ್ಗೆ ಮಾತನಾಡುತ್ತದೆ. ಹಾಗೆಯೆ ಕನ್ನಡದ ಕೆಲವು ಲೇಖಕಿಯರ ಅಸೂಯೆಯ ಬಗ್ಗೆಯೂ. ಇದು ಹಾಗಾಗಬಾರದಿತ್ತು. ಅದರೆ ಮನುಷ್ಯನ ಅಪ್ರಾಮಾಣಿಕತೆ ಮತ್ತು ಅಸೂಯೆ ಪ್ರಗತಿಪರರನ್ನೂ ಬಿಟ್ಟಿಲ್ಲ.

ಇಂಡೋನೇಷ್ಯಾ ಬಿಟ್ಟರೆ ಭಾರತದಲ್ಲಿಯೇ ಅತಿಹೆಚ್ಚು ಮುಸಲ್ಮಾನರಿರುವುದು. ಕರ್ನಾಟಕವನ್ನೇ ತೆಗೆದುಕೊಂಡರೆ ಮೂರನೇ ಅಥವ ನಾಲ್ಕನೇ ಅತಿದೊಡ್ಡ ಜನವರ್ಗ ಅದು. ಆದರೆ ಬೇರೆಲ್ಲಾ ವರ್ಗಗಳಿಗಿಂತ ಹೆಚ್ಚು ಹಿಂದುಳಿದ ವರ್ಗ ಎಂದರೇ ಅದೇನೆ. ವಿಶೇಷವಾಗಿ ಶೈಕ್ಷಣಿಕವಾಗಿ ಈ ವರ್ಗ ಹಿಂದುಳಿಯುತ್ತಲೇ ಇದೆ. ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ಸಮುದಾಯದಲ್ಲಿನ ನ್ಯಾಯಾನ್ಯಾಯ ವಿವೇಚನೆಯನ್ನೇ ಹಾಳು ಮಾಡುತ್ತದೆ. ಮಾನವ ಹಕ್ಕುಗಳ ದಮನವನ್ನು ಸಂಪ್ರದಾಯ ಎನ್ನುತ್ತದೆ. ಇನ್ನಷ್ಟು ಮತ್ತಷ್ತು ಕೋಮುವಾದಿಯಾಗುತ್ತ ಹೋಗುತ್ತದೆ. ಅದು ಮತ್ತೊಂದು ಕೋಮುವಾದಿ ಗುಂಪಿನ ಬೆಂಕಿಗೆ ಉಸಿರು ನೀಡುತ್ತ ಸಾಗುತ್ತದೆ. ಇದರ ಪರಿಣಾಮವನ್ನು ನಾವು ಕಳೆದೆರಡು ದಶಕಗಳಿಂದ ಕರಾವಳಿಯಲ್ಲಿ ಕಾಣುತ್ತ ಬಂದಿದ್ದೇವೆ. ಸರಿತಪ್ಪುಗಳ ಬಗ್ಗೆ ಮಾತನಾಡದಂತಹ ಪರಿಸ್ಥಿತಿಯನ್ನು ಇವು ತಂದೊಡ್ಡುತ್ತಿವೆ. ಭಾರತದ ಮುಸಲ್ಮಾನರ ಆಧುನಿಕತೆ ಮತ್ತು ಪ್ರಗತಿಯಲ್ಲಿ ಈ ದೇಶದ ಶಾಂತಿ ಮತ್ತು ಭದ್ರತೆ ಇದೆ. ಇದನ್ನು ಹಿಂದೂ ಕೋಮುವಾದಿಗಳು ತಿಳಿದುಕೊಳ್ಳಬೇಕು. ನ್ಯಾಯಾನ್ಯಾಯ ವಿವೇಚನೆಯ ಮುಸಲ್ಮಾನರೂ ಅರಿಯಬೇಕು. ಸಾಚಾರ್ ಸಮಿತಿಯ ಶಿಫಾರಸುಗಳ ಜಾರಿಗೆ ಮುಸಲ್ಮಾನರು ಮಾತ್ರವಲ್ಲದೆ ನ್ಯಾಯ ಮತ್ತು ಸಮಾನತೆ ಬಯಸುವ ಪ್ರತಿಯೊಬ್ಬರೂ ಆಗ್ರಹಿಸಬೇಕಿದೆ.

ಸ್ನೇಹಿತರೆ, “ಹೊತ್ತು ಕಂತುವ ಮುನ್ನ” ಓದಿಲ್ಲದಿದ್ದರೆ ದಯವಿಟ್ಟು ಒಮ್ಮೆ ಓದಿ. ಒಂದು ಶತಮಾನದ ಕರಾವಳಿ ಮುಸಲ್ಮಾನರ ಆಧುನಿಕತೆಯ ಹೋರಾಟವನ್ನು ಮಾತ್ರವಲ್ಲದೆ ಸಮಾಜದಲ್ಲಿಯ ವಿವಿಧ ಮನಸ್ಥಿತಿಗಳ ಪರಿಚಯವನ್ನೂ ಮಾಡಿಕೊಡುತ್ತದೆ. ಪ್ರಗತಿಪರರು ಹೇಳಲು ಹೆದರುವ ವಿಷಯಗಳ ಬಗ್ಗೆ ಸಾರಾರವರು ನಿರ್ಭೀತಿಯಿಂದ ಬರೆಯುತ್ತಾರೆ. ಹಾಗೆ ನಿರ್ಭೀತಿಯಿಂದ ಸಮಾಜದ ವಿವೇಚನೆ ಬೆಳೆಸಲು ಹೋರಾಡಿದವರ ಸಾವು-ಹತ್ಯೆಗಳ ಬಗ್ಗೆಯೂ ಬರೆದಿದ್ದಾರೆ. ಶಾ ಭಾನು ಪ್ರಕರಣದಿಂದ ಹಿಡಿದು ಏಕರೂಪ ಹಕ್ಕುಗಳ ಬಗ್ಗೆಯೂ ಅವರು ಮುಕ್ತವಾಗಿ ಬರೆದಿದ್ದಾರೆ. ಮುಸಲ್ಮಾನೇತರ ಪ್ರಗತಿಪರರು ಇಸ್ಲಾಮ್ ಕೋಮುವಾದದ ವಿಚಾರಕ್ಕೆ ಬಂದಾಗ ಯಾವ ಅಭಿಪ್ರಾಯ ತಳೆಯಬೇಕು ಎನ್ನುವುದನ್ನು ಈ ಆತ್ಮಕಥನ ಹೇಳುತ್ತದೆ. ಅಷಾಢಭೂತಿಗಳಾಗದಂತೆ ನಮ್ಮ ಅಂತಃಸಾಕ್ಷಿಯನ್ನು ಉದ್ದೀಪಿಸುತ್ತದೆ. ಹಲವು ಉತ್ತಮ ಕಾದಂಬರಿಗಳು ಕೊಡಲಾಗದ ನೇರಾನೇರ ಜೀವನದೃಷ್ಟಿಯನ್ನು ಈ ಆತ್ಮಕಥನ ಕೊಡುತ್ತದೆ.


“ಹೊತ್ತು ಕಂತುವ ಮುನ್ನ”
ಪ್ರಕಾಶಕರು: ಚಂದ್ರಗಿರಿ ಪ್ರಕಾಶನ
2-21-1631/2
ಸೂಕ್ಷ್ಮತರಂಗ ನಿಲಯ ರಸ್ತೆ,
ಮಂಗಳೂರು – 575 006

ಬೆಲೆ: ರೂ.150

Friday, April 27, 2012

ಎರಡು ಕವಿತೆಗಳುನಾವು ಖಾಲಿ ಮಾಡಲೇಬೇಕಾಗಿ ಬಂದ ಮನೆಯಲ್ಲಿ

ನಾವು ಖಾಲಿ ಮಾಡಲೇಬೇಕಾಗಿ ಬಂದ ಮನೆಯಲ್ಲಿತ್ತು
ಒಣಗಿದ ಮಲ್ಲಿಗೆ ಮಾಲೆ
ಮುರಿದು ಮೂಲೆ ಸೇರಿದ ಆಕಾಶ ಬುಟ್ಟಿ
ಗೋಡೆಗಳ ಮೈತುಂಬ ಮೊಳೆಯ ಗುರುತು

ನಾವು ಖಾಲಿ ಮಾಡಲೇಬೇಕಾಗಿ ಬಂದ ಮನೆಯಲ್ಲಿತ್ತು
ಆಡದೇ ಉಳಿದ ಮಾತುಗಳ ಸ್ತಬ್ಧಚಿತ್ರ
ಕವಿತೆ ಬರೆಯಲೆಂದು ಜೋಡಿಸಿಟ್ಟ ಹಾಳೆಗಳ ಕಟ್ಟು
ಸಾಯುವ ಮುನ್ನ ಕೊಟ್ಟ ಕಟ್ಟಕಡೆಯ ಚುಂಬನ

ನಾವು ಖಾಲಿ ಮಾಡಲೇಬೇಕಾಗಿ ಬಂದ ಮನೆಯಲ್ಲಿತ್ತು
ನಮ್ಮನು ಅಪರಿಮಿತ ಕಾಡಿದ ಚಿಟ್ಟೆ ಚಿತ್ರ
ಕನಸಿಗೆ ರೆಕ್ಕೆ ಮೂಡಿಸಿದ ನಗುವ ಕೂಸಿನ ಪಟ
ಪ್ರೇಮದ ನವಿರು ಅಚ್ಚಾದ ಪಲ್ಲಂಗವಿಲ್ಲದ ಖಾಲಿ ಕಣ

ನಾವು ಖಾಲಿ ಮಾಡಲೇಬೇಕಾಗಿ ಬಂದ ಮನೆಯಲ್ಲಿತ್ತು
ನೀನು ಬಿಟ್ಟುಹೋದ ಕರವಸ್ತ್ರ
ನನ್ನಷ್ಟಕ್ಕೆ ನಾನೇ ಕಳೆದುಹೋದ ವಿಸ್ಮೃತಿ
ಕವಿತೆ ಓದಿ ಬಿಕ್ಕಿದ ಒದ್ದೆ ಎವೆಗಳ ಕೊನೆಯ ಹನಿ

ನಾವು ಖಾಲಿ ಮಾಡಲೇಬೇಕಾಗಿ ಬಂದ ಮನೆಯಲ್ಲಿತ್ತು
ಅಸು ನೀಗಿದ ಎಳೆಯ ಕೋಮಲ ಕನಸು
ನೇಣಿನ ಕುಣಿಕೆ ಏರಿದ ಹರೆಯ
ಎದೆಯ ಬಾಧೆಗಳ ಬಗೆಬಗೆ ಹಾಡ ನುಡಿಸಿದ ಫರಸಿ
ಮತ್ತು ಸಿಗರೇಟಿನ ಬೂದಿ ತುಂಬಿದ ಕಪ್ಪು ಬಟ್ಟಲು..


ಹಿಡಿ ಪ್ರೀತಿ

ನಿನ್ನ ನಂಬದೇ ಹೋಗಿದ್ದರೆ
ನಿನ್ನ ಬಳಿ ಈ ರಾತ್ರಿ ನಾನು ಬರುತ್ತಿರಲಿಲ್ಲ
ನಾನು ಬಯಸಿ ಬಂದ ಈ ರಾತ್ರಿ
ನಿನ್ನ ಕೋಣೆಯ ಕಿಟಕಿ ಪರದೆ ಸರಿಯಲೇ ಇಲ್ಲ

ಈ ರಾತ್ರಿ ವಸಂತದ ನಿದ್ದೆ ಮಾರಲ್ಪಟ್ಟಿತು
ಈ ರಾತ್ರಿ ಚುಕ್ಕಿಗಳ ಹೊಳಪು ಹರಾಜಿಗಿತ್ತು
ಈ ರಾತ್ರಿ ಮಿಣುಕುಹುಳದ ದೀಪ ವಧಾಮನೆಯ ಜೀತಕ್ಕಿತ್ತು
ಈ ರಾತ್ರಿ ಪಲ್ಲಂಗದ ಪುಳಕ ಕೂಡ ಮಾರಲ್ಪಟ್ಟಿತು

ಯಾವ ರಾತ್ರಿಯೂ ಗೋಡೆಯೊಳಗಿನ ಹೂವಿಗೆ ಮಾತಿರುವುದಿಲ್ಲ

ಗೋಡೆ ಹುಡುಕಿಕೊಂಡು
ತೆರೆಯದ ಕಿಟಕಿಯ ಮೌನ ಆಲಿಸಲು ಕಿವಿಯ ಕಳಿಸಿದೆ
ನಗಗಳಲಿ ಬಂದಿಯಾದ ಉಸಿರ ಕಿಚ್ಚ ನಂದಿಸಲು ಹೃದಯ ಕಳಿಸಿದೆ
ಹುರುಪಳಿಸಿದ ಕನಸಿಗೆ ಭರವಸೆಯ ಬೀಸಣಿಕೆ ಹಿಡಿಯಲು ಮಾತು ಕಳಿಸಿದೆ

ಬೂದಿಯಿಂದ ಬದುಕು ಅರಳಿಕೊಳ್ಳುವ ಕ್ಷಣಗಳಿಗೆ ಕಾತರಿಸಿದೆ
ಒಂದು ಸತ್ಯ ತಿಳಿಯದೇ ಹೋಯಿತು
ನಮ್ಮ ಪುರಾತನರ ಕಾಲದಿಂದಲೂ
ಅರಳುವ ಕನಸು, ಬಿರಿಯುವ ಮೊಗ್ಗು, ಮುಂಜಾನೆಯ ನಸುನಗು
ಜಗದ ಬಜಾರಿನಲ್ಲಿ ಮಾರಲ್ಪಡುವ ಸರಕುಗಳು
ಸರಳವಲ್ಲ ಸುಲಭ ಸಾಧ್ಯವಲ್ಲ
ಹಿಡಿ ಪ್ರೀತಿ ದಕ್ಕುವುದು!

ಒಂದಾಗುವುದಕ್ಕೆ ಕರುಳ ಸಂಬಂಧವೊಂದೇ ಸಾಕು....

-ಬಿ ಎಮ್ ಬಶೀರ್

ಕಳೆದ ವರ್ಷ ಉಡುಪಿಯಲ್ಲಿ ವಿವಿಧ ಪ್ರಗತಿ ಪರ ಸಂಘಟನೆಗಳು ಒಂದಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದ್ದವು. ಅದರ ಉದ್ಘಾಟನಾ ಭಾಷಣವನ್ನು ನಾನು ಮಾಡಿದ್ದೆ. ಆ ಭಾಷಣದ ಸಂಗ್ರಹ ಇಲ್ಲಿದೆ.

ನಾನಿಲ್ಲಿ ಮೈಕ್‌ನ ಮುಂದೆ ನಿಂತು ಈ ಅಂಬೇಡ್ಕರ್ ಜಯಂತಿಯನ್ನು ಉದ್ಘಾಟಿಸಲು ಹೊರಟಿದ್ದರೆ ನನ್ನ ಮುಂದೆ ಮೋಂಟನ ಮುಖ ದುತ್ತೆಂದು ನಿಂತು, ನನ್ನನ್ನು ಅಣಕಿಸಿದಂತೆ ಭಾಸವಾಗುತ್ತಿದೆ. ಮೋಂಟ ನನ್ನ ಮನೆಗೆ ಕಟ್ಟಿಗೆಗಳನ್ನು ಹೊತ್ತು ತರುತ್ತಿದ್ದ. ತೆಂಗಿನ ಗಿಡಗಳ ಬುಡಗಳನ್ನು ಬಿಡಿಸುವುದಕ್ಕೆ ಬರುತ್ತಿದ್ದ. ನನ್ನ ಮನೆಯ ಜಮೀನಿನಲ್ಲಿ ನನ್ನ ಮತ್ತು ನನ್ನ ತಂದೆಯ ಬೆವರು ಬೀಳುವುದಕ್ಕಿಂತ ಹೆಚ್ಚಾಗಿ ಮೋಂಟನ ಬೆವರು ಹರಿದಿದೆ. ನಾನು ತೀರಾ ಸಣ್ಣವನಿರುವಾಗಲೇ ಆತ ನನ್ನ ಮನೆಗೆ ಬರುತ್ತಿದ್ದ. ನಾನು ಬೆಳಗ್ಗೆ ತಡವಾಗಿ ಎದ್ದು ಹಲ್ಲುಜ್ಜಿ ಟೇಬಲ್ ಮೇಲೆ ರೊಟ್ಟಿ ತಿನ್ನುತ್ತಿದ್ದರೆ ಆತ, ಬೆವರಿಳಿಸಿ ದುಡಿದು ನನ್ನ ಮನೆಯ ಹೊರಗೆ ಮೆಟ್ಟಿಲಲ್ಲಿ ಕೂತು ರೊಟ್ಟಿ ತಿನ್ನುತ್ತಿದ್ದ. ವಿಶೇಷವೆಂದರೆ ತೀರಾ ಸಣ್ಣವನಿದ್ದ ನನ್ನನ್ನು ಅವನು ಬಹುವಚನದಿಂದ ಕರೆಯುತ್ತಿದ್ದ. ನಾನು ಆತನನ್ನು ಏಕವಚನದಿಂದ ಕರೆಯುತ್ತಿದ್ದೆ. ಪಿಯುಸಿಗೆ ಕಾಲಿಡುತ್ತಿದ್ದ ಹಾಗೆ ನನಗೆ ನಿಧಾನಕ್ಕೆ ವಿಪರ್ಯಾಸ ಅರ್ಥವಾಗತೊಡಗಿತು. ಬಳಿಕ ಆತನನ್ನು ಮನೆಯ ಒಳಗೆ ಕರೆದು ರೊಟ್ಟಿ ಕೊಡುವಷ್ಟು ನಾನು ಸುಧಾರಿಸಿದೆ. ನಿಧಾನಕ್ಕೆ ಅವನಿಗೆ ಹತ್ತಿರವಾಗಲು ಪ್ರಯತ್ನಿಸಿದೆ. ದುರದೃಷ್ಟವಶಾತ್, ನಾವು ಹತ್ತಿರವಾಗುವುದು ಅಷ್ಟು ಸುಲಭವಿರಲಿಲ್ಲ. ‘‘ನನ್ನನ್ನು ಏಕವಚನದಿಂದ ಕರಿ’’ ಎಂದು ಅವನಲ್ಲಿ ಹೇಳುವುದಾಗಲಿ, ಅವನನ್ನು ಬಹುವಚನದಿಂದ ಕರೆಯುವುದಾಗಲಿ ನನ್ನಿಂದ ಸಾಧ್ಯವೇ ಆಗಲಿಲ್ಲ. ಎಷ್ಟೋ ಸಮಯದ ಬಳಿಕ, ಅಲ್ಲಿಲ್ಲಿ ಅವನು ಎದುರಾದರೆ ಅವನಿಗೆ ಐವತ್ತೋ, ನೂರೋ ಹಣ ಕೊಡುತ್ತಿದ್ದೆ. ಅವನದನ್ನು ನೇರ ಹೆಂಡದಂಗಡಿಗೆ ಕೊಡುತ್ತಿದ್ದ ಎನ್ನುವುದು ಗೊತ್ತಿದ್ದರೂ. ಅದು ನನ್ನ ಪಾಪ ಪ್ರಜ್ಞೆಯ ಫಲವಾಗಿರಬಹುದು. ಇತ್ತೀಚೆಗೆ ಮೋಂಟ ತೀರಿಕೊಡ. ಆದರೆ ಪ್ರಶ್ನೆ ಈಗಲೂ ನನ್ನಲ್ಲಿ ಉಳಿದಿದೆ. ಯಾಕೆ ಅವನನ್ನು ಬಹುವಚನದಿಂದ ನನಗೆ ಕರೆಯಲು ಸಾಧ್ಯವಾಗಲಿಲ್ಲ? ಈ ಕ್ಷಣದಲ್ಲೂ ಆತನನ್ನು ‘ನೀವು’ ಎಂದು ಕರೆಯುವುದಕ್ಕೆ ನನ್ನನ್ನು ಕಟ್ಟಿ ಹಾಕಿದ ಶಕ್ತಿ ಯಾವುದು? ನಿಜಕ್ಕೂ ನನ್ನನ್ನು ನಾನು ಜಾತ್ಯತೀತ ಎಂದು ಕರೆದುಕೊಳ್ಳಲು ಅರ್ಹನೆ...ಈ ಪ್ರಶ್ನೆಗಳು ಈ ಕ್ಷಣದಲ್ಲೂ ನನ್ನನ್ನು ಕಾಡುತ್ತಿದೆ.

ಈ ಸಮಾರಂಭದಲ್ಲಿ ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಕ್ರಿಶ್ಚಿಯನ್ನರೂ ಇದ್ದಾರೆ. ಈಗ ನನ್ನನ್ನು ಮತ್ತೊಂದು ಪ್ರಶ್ನೆ ಕಾಡುತ್ತಿದೆ. ಇಲ್ಲಿ ದಲಿತರು-ಮುಸ್ಲಿಮರು-ಕ್ರಿಶ್ಚಿಯನ್ನರು ಒಂದಿಷ್ಟು ಶೂದ್ರವರ್ಗದ ಜನರು ಒಂದಾಗಿ ಕುಳಿತಿದ್ದಾರೆ. ಆದರೆ ಯಾವ ಕಾರಣಕ್ಕೆ? ಹೌದು, ಕಾರಣ ಒಂದೇ...ಎಲ್ಲರಿಗೂ ಸಮಾನವಾದ ಒಬ್ಬ ಶತ್ರುವಿದ್ದಾನೆ. ಆ ಶತ್ರುವಿನ ಕಾರಣಕ್ಕಾಗಿ ನಾವು ಒಂದಾಗಿದ್ದೇವೆ. ಒಂದು ವೇಳೆ, ಈ ಶತ್ರು ಇಲ್ಲದೇ ಇರುತ್ತಿದ್ದರೆ ನಾವಿಲ್ಲಿ ಒಟ್ಟು ಸೇರುತ್ತಿದ್ದೇವೆಯೆ? ಸೇರುತ್ತಿರಲಿಲ್ಲ ಅನ್ನಿಸುತ್ತದೆ. ಆದುದರಿಂದಲೇ ನಾವೆಲ್ಲರೂ ನಮ್ಮಿಳಗಿನ ಜಾತ್ಯತೀತತೆಯನ್ನು ಉಜ್ಜಿ ನೋಡುವ ಸಂದರ್ಭ ಈ ಅಂಬೇಡ್ಕರ್ ಜಯಂತಿ.

ಮುಖ್ಯವಾಗಿ ದಲಿತರು ಮತ್ತು ಮುಸ್ಲಿಮರು ಒಟ್ಟು ಸೇರುವುದಕ್ಕೆ ಯಾವ ಶತ್ರುವಿನ ಅಗತ್ಯವೂ ಇಲ್ಲ. ಈ ಎರಡು ಸಮುದಾಯಗಳದ್ದು ಕರುಳ ಬಳ್ಳಿಯ ಸಂಬಂಧ. ಆ ಸಂಬಂಧವನ್ನು ನಾವು ಜೋಪಾನವಾಗಿ, ಗಟ್ಟಿ ಮಾಡಿ ಇಟ್ಟುಕೊಂಡಿದ್ದಿದ್ದರೆ ಯಾವ ಶತ್ರುವೂ ನಮ್ಮ ನಡುವೆ ಹುಟ್ಟುತ್ತಿರಲಿಲ್ಲ. ಶತ್ರುವಿದ್ದರೂ ನಮ್ಮ ಮುಂದೆ ತಲೆಯೆತ್ತುವ ಧೈರ್ಯ ಮಾಡುತ್ತಿರಲಿಲ್ಲ. ನಾವು ಕರುಳ ಸಂಬಂಧವನ್ನು ಮರೆತೆವು. ಅದರ ಪರಿಣಾಮವನ್ನು ಉಣ್ಣುತ್ತಿದ್ದೇವೆ.
ದಲಿತರು ಎನ್ನುವ ಶಬ್ದಕ್ಕೆ ವಿರುದ್ಧಾರ್ಥ ಬ್ರಾಹ್ಮಣ ಎಂದು ನಾವೆಲ್ಲ ತಿಳಿದುಕೊಂಡಿದ್ದೇವೆ. ಆದರೆ ಬ್ರಾಹ್ಮಣ್ಯ ಎನ್ನುವುದು ಒಂದು ಆಲೋಚನೆ ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕಾಗಿದೆ. ಆ ಆಲೋಚನೆ ನಮ್ಮ ನಿಮ್ಮಲ್ಲೆಲ್ಲ ಗುಟ್ಟಾಗಿ ಮನೆ ಮಾಡಿರಬಹುದು. ಮನು ಸಂವಿಧಾನದ ಫಲವನ್ನು ಕೇವಲ ಬ್ರಾಹ್ಮಣರು ಮಾತ್ರ ಉಂಡಿಲ್ಲ. ಅದರ ಸವಲತ್ತನ್ನು ಇಲ್ಲಿ ಕುಳಿತಿರುವ ಶೂದ್ರರು, ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ಉಂಡಿದ್ದಾರೆ. ಹಾಗೆ ನೋಡಿದರೆ ಇಂದು ಬ್ರಾಹ್ಮಣ್ಯವಾದ ಕಾರ್ಯ ನಿರ್ವಹಿಸುತ್ತಿರುವುದು ಬ್ರಾಹ್ಮಣೇತರ ಕೈಗಳ ಮೂಲಕ. ಮನು ಸಂವಿಧಾನವನ್ನು ಬರೆದು ಅದನ್ನು ಉಳಿದವರ ಕೈಯಲ್ಲಿಟ್ಟು, ಅವರು ದೂರದಲ್ಲಿ ನಿಂತು ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅಂದರೆ ಅದರ ಲಾಭಗಳನ್ನು ಇತರರೊಂದಿಗೆ ಹಂಚಿಕೊಳ್ಳುವಷ್ಟು ಉದಾರರಾಗಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿರುವವರಲ್ಲಿ ಶೂದ್ರರೇ ಬಹುಸಂಖ್ಯಾತರು. ಹಾಗೆಯೇ ಮುಸ್ಲಿಮರೂ ದಲಿತರನ್ನು ತುಳಿದಿದ್ದಾರೆ. ಕ್ರಿಶ್ಚಿಯನ್ನರೂ ದಲಿತರನ್ನು ತುಳಿದಿದ್ದಾರೆ. ಬ್ರಾಹ್ಮಣ್ಯವೆನ್ನುವುದು ಶೂದ್ರರಲ್ಲಿ, ಮುಸ್ಲಿಮರಲ್ಲಿಯೂ ವಿಷದ ಹಾವಿನಂತೆ ತಣ್ಣಗೆ ಮಲಗಿರುವುದನ್ನು ನಾನು ನೋಡಿದ್ದೇನೆ.

ಇಲ್ಲಿರುವ ಮುಸ್ಲಿಮರನ್ನು ನಾನೊಂದು ಪ್ರಶ್ನೆಯನ್ನು ಕೇಳುವುದಕ್ಕೆ ಬಯಸುತ್ತೇನೆ. ಇಸ್ಲಾಂ ಸಹೋದರತೆಯನ್ನು, ಸಮಾನತೆಯನ್ನು ಬೋಧಿಸುತ್ತದೆ ಎಂದು ನಾವೆಲ್ಲ ನಂಬಿದ್ದೇವೆ. ಆದರೂ ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಯಾಕೆ ಅನ್ನಿಸಲಿಲ್ಲ? ಇದೇ ಪ್ರಶ್ನೆಯನ್ನು ನನ್ನೊಬ್ಬ ಆತ್ಮೀಯ ಧರ್ಮಗುರುವಿಗೆ ಕೇಳಿದ್ದೆ. ಅವರು ಹೇಳಿದರು ‘‘ಬಹುಶಃ ಇಸ್ಲಾಮನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗಿರಬೇಕು’’

ಇಲ್ಲ, ಅದಲ್ಲ. ಇಸ್ಲಾಮನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾದುದಲ್ಲ. ಬದಲಿಗೆ ಇಲ್ಲಿನ ಮುಸ್ಲಿಮರು ಇಸ್ಲಾಮನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಗಡ್ಡವನ್ನೇ ಇಸ್ಲಾಮಿನ ಅಸ್ತಿತ್ವ ಎಂದು ನಂಬಿಕೊಂಡಿರುವ ವೌಲವಿಗಳು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ನಾವು, ನೀವು ಇಸ್ಲಾಮನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಆಳದಲ್ಲಿ ಭಾರತದ ಜಾತೀಯತೆಯ ಚರಂಡಿ ಇನ್ನೂ ನಮ್ಮ ಮನದಾಳದಲ್ಲಿ ಅಂತರ್‌ಗಂಗೆಯಂತೆ ಹರಿಯುತ್ತಿದೆ. ಆದುದರಿಂದಲೇ ನಾನು ಹೇಳುತ್ತಿದ್ದೇನೆ, ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಅನ್ನಿಸದೇ ಇರುವುದು ಭಾರತದ ಆಧುನಿಕ ದಿನಗಳಲ್ಲಿ ಇಸ್ಲಾಮ್ ಧರ್ಮದ ಅತಿ ದೊಡ್ಡ ಸೋಲು. ಅದಕ್ಕಾಗಿ ಇಲ್ಲಿನ ಮುಸ್ಲಿಮರು ಈಗಲೂ ಬೆಲೆ ತೆರುತ್ತಲೇ ಇದ್ದಾರೆ. ಭಾರತದ ಎಲ್ಲ ವೌಲ್ವಿಗಳು ಇದಾಕ್ಕಾಗಿ ನಾಚಿಕೆ ಪಟ್ಟುಕೊಳ್ಳಬೇಕು. ಇದು ಇಸ್ಲಾಂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರರಾದ ದಲಿತರ ಶವ ದಫನ ಹಲವು ಚರ್ಚುಗಳಲ್ಲಿ ವಿವಾದವಾದುದನ್ನು ನಾವು ನೋಡಿದ್ದೇವೆ. ದಲಿತ ಪಾದ್ರಿಗಳೇ ಅಲ್ಲಿ ಕೀಳರಿಮೆಯಿಂದ ಬದುಕುವ ಸನ್ನಿವೇಶವಿದೆ. ದಲಿತರು ದಲಿತರಾಗಿದ್ದುಗೊಂಡು ಅವಮಾನ ಅನುಭವಿಸುವುದಕ್ಕಿಂತಲೂ ಇದು ಕ್ರೂರವಾದುದು. ಇದೆಲ್ಲವೂ ಯಾಕೆ ಸಂಬಂಧವಿಸುತ್ತಿದೆಯೆಂದರೆ, ಇಂದು ನಾವು ರಾಜಕೀಯ ಕಾರಣಗಳಿಗಾಗಿ ದಲಿತರನ್ನು ಪ್ರೀತಿಸಲು ತೊಡಗಿರುವುದು. ದಲಿತರನ್ನು ಪ್ರೀತಿಸುವುದಕ್ಕೆ ಈ ದೇಶದ ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ ರಾಜಕೀಯ ಕಾರಣಗಳ ಅಗತ್ಯವಿಲ್ಲ. ಕರುಳ ಸಂಬಂಧವೊಂದೇ ಸಾಕು. ಅವರೊಂದಿಗೆ ನೂರಾರು ಜನ್ಮ ಜೊತೆ ಜೊತೆಯಾಗಿ ಬಾಳುವುದಕ್ಕೆ.

ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿರಬಹುದು. ಬೌದ್ಧರಾಗಿದ್ದರೂ ಅವರು ಅತ್ಯುತ್ತಮ ಮುಸ್ಲಿಮರಾಗಿಯೂ, ಅತ್ಯುತ್ತಮ ಕ್ರಿಶ್ಚಿಯನ್ನರಾಗಿಯೂ ಬಾಳಿದರು. ಈ ದೇಶದಲ್ಲಿ ನಾನು ಅತಿಯಾಗಿ ಗೌರವಿಸುವ, ಇಷ್ಟ ಪಡುವ ಎರಡು ಜೀವಗಳು ಗಾಂಧಿ ಮತ್ತು ಅಂಬೇಡ್ಕರ್. ಇದೇ ಸಂದರ್ಭದಲ್ಲಿ ಗಾಂಧಿ ಇಲ್ಲದ ಭಾರತವನ್ನು ನಾನು ಕಲ್ಪಿಸಬಲ್ಲೆ. ಆದರೆ ಅಂಬೇಡ್ಕರ್ ಇಲ್ಲದ ಭಾರತವನ್ನು ನನಗೆ ಕಲ್ಪಿಸಲು ಸಾಧ್ಯವಿಲ್ಲ. ಗಾಂಧಿ ಮತ್ತು ಅಂಬೇಡ್ಕರ್‌ರಲ್ಲಿ ಯಾರನ್ನಾದರೂ ಒಬ್ಬರನ್ನು ಆರಿಸುವ ಅನಿವಾರ್ಯತೆ ಬಂದರೆ ನಾನು ಆರಿಸುವುದು ಅಂಬೇಡ್ಕರ್‌ರನ್ನು. ಇಂತಹ ನಾಯಕ ಜಯಂತಿ ಈ ದಿನ ನಾವು ಒಂದುಗೂಡಿದ ಉದ್ದೇಶ ಪ್ರಾಮಾಣಿಕವಾಗಿರುವುದು ಅತ್ಯಗತ್ಯ. ಈ ದಿನ ದಲಿತರು ಮತ್ತು ಇತರ ಶೋಷಿತ ಸಮುದಾಯಗಳು ತಮ್ಮ ನಡುವಿನ ಕರುಳ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವತ್ತ ಯೋಚಿಸಬೇಕು. ಒಬ್ಬ ದಲಿತನಿಗೆ ನೋವಾದಾಗ ಅದಕ್ಕಾಗಿ ಈ ದೇಶದ ಸರ್ವ ಶೋಷಿತರ ಕರುಳುಗಳೂ ಸಹಜವಾಗಿ ಮಿಡಿಯಬೇಕು.

ನಮ್ಮ ಶತ್ರುಗಳನ್ನು ಹೇಗೆ ಎದುರಿಸುವುದು ಎನ್ನುವುದಕ್ಕಾಗಿ ನಾವು ಇಲ್ಲಿ ಒಂದಾಗಿದ್ದೇವೆ ಎಂದಾದರೆ ಅದು ಅಪ್ರಾಮಾಣಿಕ ನಡೆಯಾಗಿರುತ್ತದೆ. ಅಂತಹ ಬಾಂಧವ್ಯ ಹೆಚ್ಚು ಸಮಯ ಬಾಳದು. ಶತ್ರು ನಮ್ಮಾಳಗಿದ್ದಾನೆ. ಅವನನ್ನು ಹುಡುಕಿ ಎದಿರುಸುವುದು ಹೇಗೆ ಎನ್ನುವುದಕ್ಕಾಗಿ ನಾವು ಈ ದಿನವನ್ನು ಬಳಸಿಕೊಳ್ಳೋಣ. ನಾವು ಇನ್ನಷ್ಟು ಜಾತ್ಯತೀತರಾಗುವ ದಾರಿಯನ್ನು ಹುಡುಕೋಣ. ಎಲ್ಲರಿಗೂ ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

ಗಾಂಧೀಜಿಯವರ ಕುರಿತು ರೋಮಾಂಚನ ಹುಟ್ಟಿಸಿದವರು: ರಾಜಮೋಹನ ಗಾಂಧಿ

-ಶೂದ್ರ ಶ್ರೀನಿವಾಸ

‘‘ಜಗತ್ತಿನಲ್ಲಿ ಇನ್ನೂ ಎಷ್ಟು ಕೋಟ್ಯಂತರ ಜನ ಇದ್ದಾರೆ ಎಂಬುದೇ ಈ ಜಗತ್ತು ಶಸ್ತ್ರ ಬಲದಿಂದ ನಡೆದಿಲ್ಲ, ಆತ್ಮಬಲದಿಂದ ನಡೆದಿದೆ ಎಂಬುದಕ್ಕೆ ಸಾಕ್ಷಿ. ಆತ್ಮಬಲದ ಸಫಲತೆಯ ನಿರ್ವಿವಾದ ಪ್ರಮಾಣ. ಇಷ್ಟೆಲ್ಲ ಯುದ್ಧಗಳಾದರೂ ಜಗತ್ತು ಇನ್ನೂ ಉಳಿದಿದೆ, ಬದುಕಿದೆ ಎಂಬುದಕ್ಕಿಂತ ಹೆಚ್ಚು ಏನು ಬೇಕು?’’ ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಕೃತಿಯಲ್ಲಿನ ಈ ಸಾಲುಗಳನ್ನು ಕುರಿತು ಯೋಚಿಸಿದಾಗ; ಗಾಂಧೀಜಿಯವರನ್ನು ಯಾವ ಚೌಕಟ್ಟಿನಲ್ಲಿ ಫಿಕ್ಸ್ ಮಾಡಿ ಅವರು ಹೀಗೆ ಯೋಚಿ ಸುತ್ತಿದ್ದರು; ಹೀಗೆ ಮುನ್ನುಗ್ಗುತ್ತಿದ್ದರು ಎಂಬುದರ ಬಗ್ಗೆ ಒಂದು ತೀರ್ಮಾ ನಕ್ಕೆ ಬರುವುದೇ ಕಷ್ಟವಾಗುತ್ತದೆ. ಯಾಕೆಂದರೆ ಅವರು ಒಂದಷ್ಟು ತತ್ವಗಳನ್ನು ಮುಂದಿಟ್ಟುಕೊಂಡು ಬದುಕಿದವರಲ್ಲ.ಈ ತತ್ವಗಳೆಲ್ಲ ಯಾಕೆ ಹುಟ್ಟುತ್ತವೆ? ಇದಕ್ಕೆ ಸಂಬಂಧಿಸಿದಂತೆ ಮನುಷ್ಯರ ವಿವಿಧ ನಡಾವಳಿಗಳು ರೂಪ ತಾಳುವುದರ ಬಗ್ಗೆ ಯಾವಾಗಲೂ ಕುತೂಹಲ ವನ್ನು ಕಾಯ್ದುಕೊಂಡವರು. ಈ ದೃಷ್ಟಿಯಿಂದ ಜೀವನ ವೌಲ್ಯಗಳ ವಿಷಯದಲ್ಲಿ ಹುಡುಕಾಟಕ್ಕೆ ಒತ್ತು ಕೊಟ್ಟವರು.

ಗಾಂಧೀಜಿಯವರನ್ನು ಕುರಿತ ನನ್ನ ಓದು; ಒಂದೇ ಓದಿಗೆ ಸೀಮಿತವಾದದ್ದಲ್ಲ. ಹತ್ತಾರು ಓದುಗಳನ್ನು ಮುಗಿಸಿದರೂ; ಮತ್ತೊಂದು ಓದಿಗೆ ಆಹ್ವಾನಿಸುವಂಥದ್ದು. ಆದರೆ ಈ ರೀತಿಯ ಓದಿಗೆ ತಾಳ್ಮೆ ಮತ್ತು ಅನನ್ಯತೆ ಬೇಕಾಗುತ್ತದೆ. ಈ ರೀತಿಯ ತಾಳ್ಮೆ ಮತ್ತು ಅನನ್ಯತೆ ಕುರಿತಂತೆ; ಒಂದು ರೀತಿಯ ರೋಮಾಂಚನ ಹುಟ್ಟಿಸಿ ದವರು ರಾಜಮೋಹನ ಗಾಂಧಿಯವರು. ಇವರು ತನ್ನ ಅಜ್ಜ ಗಾಂಧಿಯವರನ್ನು ತುಂಬ ನಮ್ರತೆಯಿಂದ ಬಾಲ್ಯ ಕಾಲದಲ್ಲಿ ಗಮನಿಸುತ್ತ ಬಂದವರು. ಸ್ವಾತಂತ್ರ ಚಳವಳಿಯ ಸಂದರ್ಭದಲ್ಲಿ ನೂರಾರು ಅರ್ಥಪೂರ್ಣ ಮುಖಗಳನ್ನು ಎರಡು ಮಹತ್ವಪೂರ್ಣ ಕುಟುಂಬಗಳಲ್ಲಿ ನೋಡುತ್ತ ಬಂದವರು.
ಒಂದು ಕಡೆ ಗಾಂಧೀಜಿಯವರು ಮತ್ತೊಂದು ಕಡೆ ರಾಜಗೋಪಾಲಾಚಾರಿ (ರಾಜಾಜಿ)ಯವರು. ಇವರಿಬ್ಬರೂ ಭಿನ್ನ ಭಿನ್ನ ಸಂಸ್ಕೃತಿಗಳನ್ನು ಜನಮಾನಸದಲ್ಲಿ ಕಸಿ ಮಾಡುತ್ತಿದ್ದವರು. ಅದರ ಮುಂದುವರಿದ ಭಾಗವನ್ನು ಕುರಿತು ಚಿಂತಿಸುತ್ತಿದ್ದರು. ಯಾವುದಕ್ಕೂ ಇದೇ ಕೊನೆಯೆಂದು ಹೇಳಿ ದವರಲ್ಲ. ಇಲ್ಲಿ ಒಮ್ಮಿಮ್ಮೆ ಯೋಚಿಸಿದಾಗ ರಾಮಚಂದ್ರಗಾಂಧಿ, ರಾಜಮೋಹನ ಗಾಂಧಿ ಮತ್ತು ಗೋಪಾಲಕೃಷ್ಣ ಗಾಂಧಿಯ ವರು ಎಷ್ಟು ಚೆನ್ನಾಗಿ ಯೋಚಿಸುವರು ಅನ್ನಿಸುತ್ತದೆ. ಹಿಂದೆ ಪ್ರಸ್ತಾಪಿಸಿದಂತೆ; ಹೀಗೆ ಅನ್ನಿಸುವ ಮುಂದುವರಿದ ಭಾಗವನ್ನು ಇಂದಿಗೂ ಇಟ್ಟಿರುವಂಥವರು ಈ ಮೂರು ಮಂದಿ ಗಾಂಧಿ ಕುಟುಂಬದವರು. ಅರ್ಥಾತ್ ರಾಜಾಜಿ ಕುಟುಂಬಕ್ಕೂ ಸೇರಿದವರು. ಇವರ ಕೃತಿಗಳು ಎಲ್ಲಿಯೋ ಪ್ರಕಟವಾಗಲಿ, ಒಮ್ಮೆ ಓದಬೇಕು ಅನ್ನಿಸುವ ಧೋರಣೆಯ ಚಿಂತನೆ ಒಟ್ಟು ಬರವಣಿಗೆಯಲ್ಲಿ ಆಕಾರ ಪಡೆದಿರುತ್ತದೆ.
ಇದಕ್ಕೆ ಮುಖ್ಯ ಕಾರಣ: ಓದು, ಅಧ್ಯಯನ ಮತ್ತು ಅವಲೋಕನ ಕುರಿತಂತೆ ಆರೋಗ್ಯಪೂರ್ಣ ಮನಸ್ಥಿತಿಯನ್ನು ಕಾಪಾಡಿಕೊಂಡು ಬಂದವರು. ಅದಕ್ಕಿಂತ ಮುಖ್ಯವಾಗಿ ಗಾಂಧೀಜಿ ಮತ್ತು ರಾಜಾಜಿ ಕುಟುಂಬಕ್ಕೆ ಅನ್ವಯಿಸಿ ಕುರುಡು ವ್ಯಾಮೋಹಿಗಳಲ್ಲ. ಇತ್ತೀಚಿನ ದಿನಗಳಲ್ಲಿ ನನಗೆ ಗೋಪಾಲಕೃಷ್ಣ ಗಾಂಧಿಯವರ ಬರವಣಿಗೆ ಮತ್ತು ಅವರ ಸಾಮಾಜಿಕ ಭಾಗವಹಿಸುವಿಕೆಯ ಬಗ್ಗೆ ಒಂದು ರೀತಿಯಲ್ಲಿ ವ್ಯಾಮೋಹ. ಅವರು ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರಾಗಿದ್ದಾಗ ಎಷ್ಟು ರಚನಾತ್ಮಕವಾಗಿ ತಮ್ಮ ಕೆಲಸವನ್ನು ನಿರ್ವಹಿಸಿದರು. ಇವರನ್ನು ಹತ್ತಿರದಿಂದ ನೋಡಿ ಮಾತಾಡಿಸುವ ಆಶಯವು ಮನಸ್ಸಿನಲ್ಲಿಯೇ ಮರಿ ಮಾಡುತ್ತಿದೆ.

Mahatma Gandhi


ಇರಲಿ, ರಾಮಚಂದ್ರ ಗಾಂಧಿಯವರನ್ನು ಹಾಗೂ ರಾಜಮೋಹನ ಗಾಂಧಿಯವರನ್ನು ಸ್ವಲ್ಪಮಟ್ಟಿಗೆ ಹತ್ತಿರದಿಂದ ಬಲ್ಲೆ. ಆದರೆ ರಾಜಮೋಹನಗಾಂಧಿಯವರು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ; ತಮ್ಮ ಮಾತಿನ ಮೂಲಕ ಪ್ರಭಾವ ಬೀರಿದ್ದು ಈಗಲೂ ನನ್ನ ಮನಸ್ಸಿನ ತುಂಬ ಹಚ್ಚ ಹಸುರಾಗಿಯೇ ಇದೆ. ಚಿಕ್ಕಮಗಳೂರಿನ ಪ್ರತಿಷ್ಠಿತ ಲೋಕಸಭೆಯ ಚುನಾವಣೆ ಮುಗಿದ ಸಂದರ್ಭ. ಭಾರತದ ಉದ್ದಗಲಕ್ಕೂ ಸುದ್ದಿ ಮಾಡಿದ್ದ ಚುನಾವಣೆ. ಯಾಕೆಂದರೆ ಶ್ರೀಮತಿ ಇಂದಿರಾಗಾಂಧಿಯವರು ಆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರ ಪ್ರತಿಸ್ಪರ್ಧಿ ಯಾಗಿ ವೀರೇಂದ್ರ ಪಾಟೀಲರಿದ್ದರು. ಕರ್ನಾಟಕ ದಲ್ಲಿ ದೇವರಾಜ ಅರಸುರವರ ಪ್ರಭಾವ ದಟ್ಟವಾಗಿದ್ದ ಕಾಲವದು.
ಡಿ.ಬಿ. ಚಂದ್ರೇಗೌಡರು ತಮ್ಮ ಸ್ಥಾನವನ್ನು ಶ್ರೀಮತಿ ಗಾಂಧಿಯವರಿಗೆ ಬಿಟ್ಟುಕೊಟ್ಟಿದ್ದರು. ವೀರೇಂದ್ರ ಪಾಟೀಲರು ಸೋತರು. ಆದರೆ ಅದರ ಒಟ್ಟು ಸಾಧಕ ಬಾಧಕ ಗಳನ್ನು ಪರಾಮರ್ಶಿಸಲು ಭಾರತದ ಕೆಲವು ಹಿರಿಯ ರಾಜಕೀಯ ಮತ್ತು ಸಾಮಾಜಿಕ ಚಿಂತಕರನ್ನು ಕರ್ನಾಟಕದ ಕಾಂಗ್ರೆಸ್ ವಿರೋಧಿ ನಾಯಕರು ಬರಮಾಡಿಕೊಂಡಿದ್ದರು.ಅವರಲ್ಲಿ ರಾಜಮೋಹನ ಗಾಂಧಿಯವರೂ ಒಬ್ಬರು.ಆ ಸಂದರ್ಭದಲ್ಲಿ ಸಮಾಜವಾದಿ ಚಳವಳಿಯ ಹಾಗೂ ಜನತಾಪಕ್ಷ ಹುಟ್ಟಿಕೊಂಡಾಗ ತುಂಬ ಕ್ರಿಯಾಶೀಲ ಎರಡನೆಯ ಹಂತದ ನಾಯಕರಾಗಿ ದ್ದವರು ರಮೇಶ್ ಬಂದಗದ್ದೆಯವರು.ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದವರು. ಎಲ್ಲ ಜಾತಿ ಮತ್ತು ಮತದ ಲವಲವಿಕೆಯ ಮನಸ್ಸುಗಳನ್ನು ಒಂದೆಡೆ ಸೇರಿಸುವಲ್ಲಿ ತತ್ವಬದ್ಧರಾಗಿದ್ದವರು.
ಇಂಥ ರಮೇಶ್ ಬಂದಗದ್ದೆಯವರು ಬೆಂಗಳೂರಿನ ಜನತಾಪಕ್ಷದ ಕಚೇರಿಯ ಒಂದು ಕೊಠಡಿಯಲ್ಲಿ ರಾಜಮೋಹನ್ ಗಾಂಧಿಯವ ರನ್ನು ಭೇಟಿ ಮಾಡಿಸಿದ್ದರು. ಐದಾರು ಗಂಟೆಗೂ ಮೇಲ್ಪಟ್ಟು ನಾವು ಮೂವರೇ ಮಾತುಕತೆಗೆ ತೊಡಗಿದ್ದೆವು. ನಾನು ಮತ್ತು ರಮೇಶ್ ಬಂದ ಗದ್ದೆಯವರು ಮಾತಾಡುವುದಕ್ಕಿಂತ ರಾಜಮೋಹನ ಗಾಂಧಿಯವರ ಮಾತಿಗೆ ಕಿವಿ ತೆರೆದುಕೊಂಡಿದ್ದೆವು.ಅವರು ಭಾರತದ ಸಾಮಾ ಜಿಕ ಮತ್ತು ರಾಜಕೀಯ ಸಂದರ್ಭಕ್ಕೆ ಒಂದು ಚೌಕಟ್ಟು ರೂಪಿಸಿ ತಮ್ಮ ಮಾತುಗಳನ್ನು ನಮ್ಮ ಮುಂದಿಡುತ್ತಿದ್ದರು.ಆಗ ಅವರು ಎಷ್ಟೋ ಅಮೂಲ್ಯವಾದ ಮಾತುಗಳ ನಡುವೆ; ಒಂದು ಅಮೂಲ್ಯವಾದ ಮಾತನ್ನು ಹೇಳಿದರು; ಅದೇನೆಂದರೆ: ಗಾಂಧೀಜಿಯವರು ಪ್ರತಿದಿವಸ ತಮ್ಮ ಬದುಕಿಗೆ ಏಳುಮಂದಿ ಹೊಸ ಸ್ನೇಹಿತರು ಬರದಿದ್ದರೆ; ಊಟವನ್ನೇ ಮಾಡುತ್ತಿರಲಿಲ್ಲವಂತೆ.
ಆ ವಿಷಯಕ್ಕೆ ಸಂಬಂಧಿಸಿದಂತೆ ತುಂಬ ಹಠಮಾರಿಯಾಗಿದ್ದರಂತೆ. ಆಗ ಸ್ವಾತಂತ್ರ ಹೋರಾಟದ ಪ್ರಮುಖ ಕಾರ್ಯಕರ್ತರು ಯಾರ್ಯಾರೋ ಅಮಾಯಕರನ್ನು ಕರೆದುಕೊಂಡು ಬಂದು ಗಾಂಧೀಜಿಯವರ ಮುಂದೆ ಕೂರಿಸಿ ನಿರಾಳವಾಗಿ ಉಸಿರಾಡುತ್ತಿದ್ದರಂತೆ.ಆಗ ಗಾಂಧೀಜಿಯವರು ಬಂದ ಹೊಸ ಅತಿಥಿಗಳನ್ನು ಮುಂದೆ ಕೂರಿಸಿಕೊಂಡು; ತಲೆ ನೇವರಿಸಿ ಅವರ ಬದುಕಿನ ಗಾಥೆಗಳನ್ನು ಕೇಳಿಸಿ ಕೊಳ್ಳುತ್ತಿದ್ದರಂತೆ. ಹಾಗೂ ಅವರು ಬದುಕುವ ನಾನಾ ದಾರಿಗಳನ್ನು ಕುರಿತು ಸೂಚಿಸುತ್ತಲೇ; ಪರೋಕ್ಷವಾಗಿ ಸ್ವಾತಂತ್ರ ಚಳವಳಿಯೊಳಗೆ ಬಿಟ್ಟುಕೊಳ್ಳುತ್ತಿದ್ದರಂತೆ. ಇದನ್ನು ಗಾಂಧೀಜಿಯ ವರು ಒಂದು ವ್ರತ ಎನ್ನುವ ರೀತಿಯಲ್ಲಿ ಪಾಲಿಸುತ್ತಿದ್ದರಂತೆ.ಯಾವುದೇ ಕಾರಣಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಥಿತಿ ಯನ್ನು ತೋರಿಸುತ್ತಿರಲಿಲ್ಲವಂತೆ. ಇದನ್ನು ರಾಜಮೋಹನಗಾಂಧಿಯವರಿಂದ ಕೇಳಿ ದಾಗ ನಿಜವಾಗಿಯೂ ರೋಮಾಂಚಿತನಾದೆ. ಒಂದು ಕ್ಷಣ ಮನಸ್ಸಿನಲ್ಲಿ ‘ಗಾಂಧೀಜಿ ಹೌ ಬ್ಯೂಟಿಫುಲ್’ ಎಂಬ ಧ್ವನಿಯು ನನ್ನಲ್ಲಿ ಗುನುಗುನಿಸತೊಡಗಿತು. ಈಗಲೂ ಆ ಗುನುಗುನುವಿಕೆ ವಿಸ್ತಾರಗೊಳ್ಳುತ್ತಲೇ ಇದೆ.
ಇದರ ಮುಂದುವರಿದ ಭಾಗವಾಗಿ ಅಂದು ರಾಜಮೋಹನಗಾಂಧಿಯವರು ಮತ್ತೊಂದು ಮಾತನ್ನು ಹೇಳಿದರು: ಗಾಂಧೀಜಿಯವರು ಈ ರೀತಿಯ ವ್ಯಕ್ತಿತ್ವ ವನ್ನು ಹೊಂದಿದ್ದರಿಂದ ಸ್ವಾತಂತ್ರ ಚಳವಳಿಗೆ ಅಗಾಧವಾದ, ಚೈತನ್ಯಪೂರ್ಣವಾದ ಚಾಲನೆ ಸಿಕ್ಕಿತು.ಜನರು ಜಾತಿ-ಮತ ಎಂಬ ಭಿನ್ನಾಭಿಪ್ರಾಯವನ್ನು ಮರೆತು ಪಾಲ್ಗೊಳ್ಳ ತೊಡಗಿದ್ದರು. ಹಾಗೆಯೇ ಆ ಸಂದರ್ಭದಲ್ಲಿ ಹುಟ್ಟಿಕೊಂಡ ಅನಾಥಾಶ್ರಮಗಳು,ವಿಧವಾ ವಿವಾಹಗಳು, ಮಹಿಳಾ ಸಂಘಟನೆಗಳು ಚೇತೋಹಾರಿಯಾದುವು. ಸ್ವಾಭಾವಿಕವಾಗಿಯೇ ಎಲ್ಲರೂ ಬದುಕಿಗೆ ಸರಳತೆಯನ್ನು ಆರೋಪಿಸಿಕೊಂಡರು. ಇವೆಲ್ಲವೂ ಸ್ವಾತಂತ್ರ ಚಳವಳಿಗೆ ಜೀವನದಿಗಳ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು. ಇಂದಿಗೂ ಅಂದು ಗಾಂಧೀಜಿಯವರ ಪ್ರೇರಣೆಯಿಂದ ಬೆಳಕು ಕಂಡ ಎಲ್ಲ ರೀತಿಯ ಸಂಘಟನೆಗಳು ಭಾರತದ ಉದ್ದಗಲಕ್ಕೂ ಕ್ರಿಯಾಶೀಲವಾಗಿದೆ.
ಸ್ವಾತಂತ್ರ ಚಳವಳಿಯ ಮುಂದುವರಿದ ಭಾಗವಾಗಿ ಜನರ ಮಧ್ಯೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ. ಹೀಗೆ ಕೆಲಸ ಮಾಡುವಾಗ ಹೊಸ ಹೊಸ ಮನಸ್ಸುಗಳನ್ನು ಒಳಗೆ ಬಿಟ್ಟುಕೊಳ್ಳುತ್ತಲೇ ಇರುತ್ತಾರೆ.ಅವರೆಲ್ಲ ಗಾಂಧೀಜಿಯವರ ಚಿಂತನೆಗಳಿಂದ ಪ್ರಣೀತಗೊಂಡು ಆರೋಗ್ಯಪೂರ್ಣ ಸಮಾಜ ಮುಖಿಯಾಗಿರುತ್ತಾರೆ.ಈ ಎಲ್ಲ ರಾಜಮೋಹನಗಾಂಧಿಯವರ ಮಾತುಗಳಿಂದ ಪುಳಕಿತನಾಗಿ ಬಿಟ್ಟಿದ್ದೆ. ಎರಡು ಮೂರು ಬಾರಿ ಅವರೊಡನೆ ನಾನು ಮತ್ತು ರಮೇಶ್ ಬಂದಗದ್ದೆ ಟೀ ಕುಡಿಯುತ್ತ ಎಂಥ ಅಮೂಲ್ಯ ಕಾಲವನ್ನು ಕಳೆದಿದ್ದೆ. 
ಆ ಐದಾರು ಗಂಟೆಯ ಕಾಲ ನನ್ನ ಬದುಕಿನ ನೆನಪಿನ ಒಂದು ಚಾರಿತ್ರಿಕ ಘಟ್ಟ ಎಂದು ಭಾವಿಸಿರುವೆ. ಹಾಗೆಯೇ ಅಂದು ಅವರು ಮಾತಿನ ನಡುವೆ ಜಗತ್ತಿನ ಪ್ರಸಿದ್ಧ ಚಿಂತಕ ಷೂಮಾಚರ್ ಅವರ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಕೃತಿಯನ್ನು ಪರಿಚಯ ಮಾಡಿಕೊಟ್ಟರು. ಯೂರೋಪಿನ ಈ ಅರ್ಥಶಾಸ್ತ್ರಜ್ಞ ಗಾಂಧೀಜಿಯವರ ಚಿಂತನೆಗಳಿಂದ ಪ್ರೇರಣೆಗೊಂಡು ಮೇಲಿನ ಕೃತಿಯನ್ನು ರಚಿಸಿದವರು. ಈ ಕೃತಿ ಜಗತ್ತಿನಾದ್ಯಂತ ಎಂತೆಂಥ ಮನಸ್ಸುಗಳ ಮೇಲೆ ಪ್ರಭಾವ ಬೀರಿದೆ. 1863ರಲ್ಲಿ ಜಗತ್ತಿನ ಮಹಾನ್ ಚಿಂತಕ ಜಾನ್ ರಸ್ಕಿನ್ ‘ಅನ್‌ಟು ದಿಸ್ ಲಾಸ್ಟ್’ ಕೃತಿಯನ್ನು ಬರೆದಾಗ; ಎಷ್ಟು ಸುದ್ದಿಯಾಯಿತು. ಅದು ಗಾಂಧೀಜಿಯವರ ಮೇಲೆ ಎಂಥ ಪ್ರಭಾವ ಬೀರಿತು. ರಸ್ಕಿನ್ ಅಸಾಮಾನ್ಯ ಕಲಾ ಚಿಂತಕ. ಅವರು ‘ಸ್ಟೋನ್ಸ್ ಆಫ್ ವೆನಿಸ್’ ಕೃತಿಯನ್ನು ಬರೆದ ಮೇಲೆ; ತುಂಬ ವಿಷಾದದ ಮನಸ್ಥಿತಿಯಲ್ಲಿದ್ದಾಗ ‘ಅನ್ ಟು ದಿಸ್ ಲಾಸ್ಟ್’ ಕೃತಿಯನ್ನು ಬರೆದದ್ದು.
ಅದೇನೇ ಆಗಿರಲಿ, ರಾಜಮೋಹನಗಾಂಧಿಯವರು ಅಂದಿನ ಅವರ ಮಾತುಗಳಿಂದ ಒಬ್ಬ ಸಂತನಂತೆ ಕಂಡರು. ಅಂದು ಅವರು ಹೇಳಿದ: ‘‘ಗಾಂಧೀಜಿಯವರು ಪ್ರತಿದಿವಸ ಏಳು ಜನ ಹೊಸ ಸ್ನೇಹಿತರನ್ನು ಒಳಗೆ ಬಿಟ್ಟುಕೊಳ್ಳದಿದ್ದರೆ ಊಟ ಮಾಡುತ್ತಿರಲಿಲ್ಲ’’ ನುಡಿವಾಕ್ಯವನ್ನು ಹೊತ್ತು ತಿರುಗುತ್ತಲೇ ಇದ್ದೇನೆ. ಯಾವುದೇ ಸಭೆ ಸಮಾರಂಭಕ್ಕೆ ಹೋದಾಗ, ಕಾಲೇಜುಗಳಿಗೆ ಹೋದಾಗ; ವಿದ್ಯಾರ್ಥಿಗಳ ಮುಂದೆ ನಿಂತಾಗ ತಪ್ಪದೆ ಹೇಳುವೆ. ಯಾಕೆ ಹೊಸ ಹೊಸ ಮನಸ್ಸುಗಳನ್ನು ನಮ್ಮಾಳಗೆ ಬಿಟ್ಟುಕೊಳ್ಳಬೇಕು ಎಂದು. ಇದರ ಜೊತೆಗೆ ಮತ್ತೊಂದು ಅಮೂಲ್ಯವಾದ ಮಾತನ್ನು ಸೇರಿಸಬೇಕಿನ್ನಿಸುತ್ತದೆ: ಲಂಕೇಶ್ ಅವರು ಯಾವಾಗಲೂ ಬೇರೆ ಬೇರೆ ಜಾತಿ ಮತ್ತು ಜನಾಂಗದವರೊಡನೆ ಬದುಕುವುದನ್ನು ಕಲಿಸಿಕೊಟ್ಟರು. ಅವರನ್ನು ನೋಡಲು ಹೋದಾಗ; ನಮ್ಮ ನಮ್ಮ ಜಾತಿಯವರನ್ನು ಕರೆದುಕೊಂಡು ಹೋದರೆ; ಛೀಮಾರಿ ಹಾಕುತ್ತಿದ್ದರು. ಇದು ನಮ್ಮಂಥವರಿಗೆ ರಾಜಮೋಹನ ಗಾಂಧಿಯವರ ಮಾತಿನ ಮುಂದುವರಿದ ಭಾಗವಾಗಿ ಯಾವಾಗಲೂ ಅಮೂಲ್ಯವೇ ಆಗಿದೆ.
  

-ವಾರ್ತಾಭಾರತಿ ಕೃಪೆ
Noam chomsky on capitalismUnder capitalism we cannot have democracy by definition. Capitalism is a system in which the central institutions of society are under autocratic control. Thus, a corporation is, if we were to think of it in political terms, fascist; that is, it has tight control at the top and strict obedience has to be established at every level - there is a little bargaining, a little give and take, but the line of authority is perfectly straightforward.


Just as I am opposed to political fascism, I am opposed to economic fascism. Until major institutions of society are under the popular control of participants and communities, it is pointless to talk about democracy.

- Noam Chomsky (via Anarchist Writers)

Thursday, April 26, 2012

ಶಂಕರ್ ಬಿದರಿ ದೋಷಮುಕ್ತರೆ?-ಶಿವಸುಂದರ

ಶಂಕರ್ ಬಿದರಿಯವರನ್ನು ಡಿಜಿಪಿಯನ್ನಾಗಿ ನೇಮಕಾಡಿದ್ದ ಆದೇಶವನ್ನು ರದ್ದು ಪಡಿಸಿದ್ದ ಕರ್ನಾಟಕ ಹೈಕೋರ್ಟಿನ ಆದೇಶವನ್ನು ಸುಪ್ರೀಂ ಕೋರ್ಟು ರದ್ದು ಪಡಿಸಿದೆ. ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠವು ಕೂಡಲೇ ಬಿದರಿಯವರನ್ನು ಡಿಜಿಪಿಯಾಗಿ ನೇಮಕ ಮಾಡಬೇಕೆಂದು ಹೇಳಿಲ್ಲವಾದರೂ ತನ್ನ ಆದೇಶವನ್ನು ಪುನರ್ ಪರಿಶೀಲಿಸಿ ಮೇ 31 ರೊಳಗೆ ಆದೇಶವನ್ನು ನೀಡಬೇಕೆಂದು ಸೂಚಿಸಿದೆ.ಇದನ್ನು ಶಂಕರ್ ಬಿದರಿ ಮತ್ತು ಕರ್ನಾಟಕ ಸರಕಾರ ತಮಗೆ ಸಿಕ್ಕ ಜಯವೆಂದು ಬಣ್ಣಿಸಿಕೊಂಡಿದ್ದಾರೆ.ಬಿದರಿಯವರಂತೂ ‘‘ತಾವು 41 ವರ್ಷಗಳಿಂದ ಮಾಡಿದ ಪ್ರಾಮಾಣಿಕ ಸೇವೆಗೆ ಹೈಕೋರ್ಟ್ ತೀರ್ಪು ಹಚ್ಚಿದ ಕಳಂಕವನ್ನು ಸುಪ್ರೀಂ ಕೋರ್ಟು ಒರೆಸಿಹಾಕಿದೆ’’ ಎಂದು ಹೇಳಿದ್ದಾರೆ.ಆದರೆ, ಸುಪ್ರೀಂ ಕೋರ್ಟು ಇಷ್ಟೆಲ್ಲಾ ಸಂಭ್ರಮಕ್ಕೆ ಕಾರಣವಾಗುವಂತೆ ಎನ್‌ಹೆಚ್‌ಆರ್‌ಸಿ ಅಯೋಗದ ಮತ್ತು ಸದಾಶಿವ ಅಯೋಗದ ವರದಿಯನ್ನೆಲ್ಲಾ ಕೂಲಂಕಷವಾಗಿ ಪರೀಶೀಲಿಸಿ ‘‘ಶಂಕರ್ ಬಿದರಿಯವರು ಕಳಂಕರಹಿತರು. ಅವರು ಯಾವುದೇ ಮಾನವ ಹಕ್ಕು ದೌರ್ಜನ್ಯಗಳನ್ನು ನಡೆಸಿಲ್ಲ’’ ಎಂದೇನೂ ಹೇಳಿಲ್ಲ.

ಆ ವರದಿಯಲ್ಲಿ ಮೇಲ್ನೋಟಕ್ಕೆ ಶಂಕರ್ ಬಿದರಿಯವರ ಮೇಲೆ ನೇರ ಆರೋಪ ಇದ್ದಂತೆ ಕಾಣುತ್ತಿಲ್ಲ ಎಂದು ಹೇಳಿದೆ. ಮತ್ತು ಹೈಕೋರ್ಟು ಆದೇಶ ನೀಡುವಾಗ ಆ ವರದಿಯನ್ನು ಕೂಲಂಕಷವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದೆ ಮತ್ತು ಅದೇನೇ ಇದ್ದರೂ ಅವೆಲ್ಲವನ್ನೂ ಪುನರ್ ಪರಿಶೀಲಿಸಿ ಮೇ 31ರೊಳಗೆ ಪುನರಾದೇಶ ನೀಡುವಂತೆ ಸೂಚಿಸಿದೆ ಅಷ್ಟೆ.ಆದರೆ ಶಂಕರ್ ಬಿದರಿಯವರಿಗೆ ಕ್ಲೀನ್‌ಚಿಟ್ ಕೊಟ್ಟಿಲ್ಲ ಎನ್ನು ವುದು ಎಷ್ಟು ನಿಜವೋ ಅಷ್ಟೇ ನಿಜವಾದದ್ದು ಸುಪ್ರೀಂ ಕೋರ್ಟು ಶಂಕರ್ ಬಿದರಿಯವರು ವೀರಪ್ಪನ್ ಅವಧಿಯಲ್ಲಿ ನಡೆದ ಮಾನವ ಹಕ್ಕು ಉಲ್ಲಂಘನೆಯಲ್ಲಿ ಅವರಿದ್ದ ಹುದ್ದೆ ಅವರಿಗೆ ನೀಡಿದ್ದ ಜವಾಬ್ದಾರಿಯನ್ನು ನಿರ್ವಹಿಸದೆ ಎಷ್ಟರ ಮಟ್ಟಿಗೆ ಕಾರಣರಾಗಿದ್ದಾರೆ ಎಂಬ ನ್ಯಾಯಿಕ ವಿಷಯಗಳನ್ನು ಪರಿ ಗಣಿಸದೆ ಸದಾಶಿವ ವರದಿಯಲ್ಲಿ ನೇರವಾಗಿ ಅವರ ಹೆಸರು ಇದೆಯೋ ಇಲ್ಲವೋ ಎಂಬ ತಾಂತ್ರಿಕ ಅಂಶಗಳನ್ನು ಮಾತ್ರ ಪರಿ ಗಣಿಸಿರುವುದು ಅತ್ಯಂತ ಕಳವಳಕಾರಿಯಾಗಿದೆ.


ಸದಾಶಿವ ಅಯೋಗ 1993-96ರ ನಡುವೆ ವೀರಪ್ಪನ್ ಕಾರ್ಯಾಚರಣೆಯಲ್ಲಿ ಹಲವಾರು ಮಾನವ ಹಕ್ಕುಗಳ ಉಲ್ಲಂಘನೆ ಯಾಗಿದೆಯೆಂದು ಅನುಮಾನಕ್ಕೆಡೆಯಿಲ್ಲದಂತೆ ವರದಿ ನೀಡಿದೆ.ಅದರ ಪ್ರಕಾರ, ಈ ಅವಧಿಯಲ್ಲಿ ನಡೆದ 66 ಎನ್‌ಕೌಂಟರ್‌ಗಳಲ್ಲಿ 33 ಅನುಮಾನಾಸ್ಪದವಾದವು. ಒಬ್ಬ ಮಹಿಳೆಯ ಮೇಲೆ ಸತತವಾಗಿ ಒಂದು ತಿಂಗಳ ಅತ್ಯಾ ಚಾರ ನಡೆಸಲಾಗಿದೆ.ಮೂವರು ಮಹಿಳೆಯರನ್ನು ವಾರಕ್ಕೂ ಹೆಚ್ಚು ಕಾಲ ಅಕ್ರಮ ಬಂಧನ ದಲ್ಲಿರಿಸಿಕೊಂಡು ಎಲೆಕ್ಟ್ರಿಕ್ ಶಾಕ್ ಇತ್ಯಾದಿ ಚಿತ್ರಹಿಂಸೆಗಳನ್ನು ನೀಡಲಾಗಿದೆ.ವೀರಪ್ಪನ್‌ನ ಸಹಚರರು ಎಂಬುವರ ಮೇಲೆ ಕೇವಲ ಅನುಮಾನದಿಂದ ಹಲವಾರು ಚಿತ್ರಹಿಂಸೆ ನೀಡಲಾಗಿದೆ ಮತ್ತು ಹಲವರು ಈ ಅವಧಿಯಲ್ಲಿ ಕಣ್ಮರೆಯಾದವರು ಈವರೆಗೆ ಪತ್ತೆಯಾಗಿಲ್ಲ. ಸದಾಶಿವ ಅಯೋಗದ ವರದಿಯನ್ನು ರಾಷ್ಟ್ರೀಯ ಮಾನವ ಹಕ್ಕು ಅಯೋಗವೂ ಒಪ್ಪಿಕೊಂಡಿದೆ ಮತ್ತು ಪರಿಹಾರಕ್ಕೆ ಮತ್ತು ಇತರ ಕ್ರಮಗಳಿಗೆ ಸರಕಾರಕ್ಕೆ ಸೂಚನೆ ನೀಡಿದೆ.

ಈ ಎಲ್ಲಾ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸರಕಾರಿ ಕೊಲೆಗಳ ಬಹುಪಾಲು ನಡೆದಿರುವುದು ಶಂಕರ್ ಬಿದರಿಯವರು ವೀರಪ್ಪನ್ ನಿಗ್ರಹ ಪಡೆಯ ಡೆಪ್ಯೂಟಿ ಕಮಾಂ ಡೆಂಟ್ ಆಗಿದ್ದಾಗ. ಸಾಕ್ಷಾತ್ ಶಂಕರ್ ಬಿದರಿ ಯವರೇ ‘‘ತಾನು ಅಧಿಕಾರ ವಹಿಸಿಕೊಂಡ ಕಾಲಾವಧಿಯಲ್ಲಿ 300ರಷ್ಟಿದ್ದ ವೀರಪ್ಪನ್ ಪಡೆಯ ಶಕ್ತಿಯನ್ನು 4ಕ್ಕಿಳಿಸಿದ್ದು ತನ್ನ ಅತಿದೊಡ್ಡ ಸಾಧನೆ’’ಯೆಂದು ನಂತರದಲ್ಲಿ ನೀಡಿರುವ ಹಲವಾರು ಸಂದರ್ಶನಗಳಲ್ಲಿ ಕೊಚ್ಚಿಕೊಂಡಿದ್ದಾರೆ. ಆದರೆ ತಾವು ಅದನ್ನು ಜನರ ಸಾತ್ವಿಕ ಶಕ್ತಿಗೆ ಅಪೀಲ್ ಮಾಡುವ ಮೂಲಕ ಮಾಡಿದೆ ಎಂದು ಕೊಚ್ಚಿಕೊಳುತ್ತಾರೆ. ಆದರೆ ಸರಕಾರವೇ ಒಪ್ಪಿಕೊಂಡಿರುವ ಸದಾಶಿವ ವರದಿ ಪ್ರಕಾರ, ಈ ‘ಸಾತ್ವಿಕ’ ಪ್ರಯತ್ನ 66 ಜನರನ್ನು ಕೊಂದಿದೆ. ಎಲೆಕ್ಟ್ರಿಕ್ ಶಾಕ್, ಅತ್ಯಾಚಾರ ಇತ್ಯಾದಿ ಸಾತ್ವಿಕ ಪ್ರಯತ್ನಗಳನ್ನು ಪೊಲೀಸರು ನಡೆಸಿದ್ದಾರೆ ಎಂದು ನಿಸ್ಸಂದೇಹವಾಗಿ ಸಾಬೀತುಪಡಿಸಿದೆ.

ಇವೆಲ್ಲ ವನ್ನೂ ಶಂಕರ್ ಬಿದರಿಯವರೇ ನೇರವಾಗಿ ಮಾಡಿದ್ದಾರೆ ಎಂದು ವರದಿ ಹೇಳಿಲ್ಲ ನಿಜ. ಆದರೆ ಆ ಕ್ರಮಗಳಿಗೆ ಆದೇಶಿಸುವ ಅಥವಾ ಅದನ್ನು ತಡೆಯಲು ಕ್ರಮ ತೆಗೆದುಕೊಳ್ಳುವ Operational command ಹುದ್ದೆಯಲ್ಲಿ ಅವರಿದ್ದರು. ಹೀಗಾಗಿ ಅವರು ಆ ಎಲ್ಲಾ ಕ್ರಮಗಳಿಗೂ ಹೊಣೆಯಾಗುವುದಿಲ್ಲವೇ? ಅದರ ಕೀರ್ತಿ ಮಾತ್ರ ಬೇಕು. ಆದರೆ ಪಾಪದ ಹೊರೆ ಬೇಡ ವೆಂದರೆ ಹೇಗೆ? ಇರಲಿ. ಇದು ನೈತಿಕ ವಿಷಯ ಮಾತ್ರವಲ್ಲ. ಇಲ್ಲಿ ಕಾನೂನು, ನ್ಯಾಯ, ಹೊಣೆಗಾರಿಕೆ ಮತ್ತು ಅಧಿಕಾರದ ಪ್ರಶ್ನೆಗಳಿವೆ. ವಾಸ್ತವವಾಗಿ ಈ ಪ್ರಶ್ನೆಗಳ ಬಗ್ಗೆ ಸುಪ್ರೀಂ ಕೋರ್ಟು ಪಟ್ಟಿರುವ ಅಭಿಪ್ರಾಯ ಅತ್ಯಂತ ಕಳವಳಕಾರಿಯಾಗಿದೆ.

ಕೋರ್ಟು ತನ್ನ ಆದೇಶದಲ್ಲಿ:ಡಿಜಿಪಿ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಸದಾಶಿವ ವರದಿಯಂಥ ವರದಿಗಳು “not relevant”ಎಂದು ಹೇಳಿದೆ. ಅದರ ಪ್ರಕಾರ ಮೇಲ್ನೋಟಕ್ಕೆ ನೋಡಿದರೆ ಶಂಕರ್ ಬಿದರಿಯವರನ್ನೇನೂ ಸದಾಶಿವ ವರದಿ ಹೊಣೆಗಾರನನ್ನಾಗಿ ಮಾಡಿದಂತೆ ಕಾಣುವುದಿಲ್ಲ.ದೇಶದ ಅತ್ಯುಚ್ಚ ನ್ಯಾಯಿಕ ಸಂಸ್ಥೆ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಮತ್ತು ಅದಕ್ಕೆ ಪ್ರಧಾನವಾಗಿ ಕಾರಣವಾಗುವ ಪೊಲೀಸ್ ವ್ಯವಸ್ಥೆಯೊಂದರ ಮುಖ್ಯಸ್ಥನನ್ನು ನೇಮಕ ಮಾಡುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ಇಷ್ಟು ಸಲೀಸಾದ ಅಭಿಪ್ರಾಯವನ್ನು ನೀಡಿರುವುದು ಕಳವಳವನ್ನೇ ಹುಟ್ಟಿಸುತ್ತದೆ.

ಒಂದು ರಾಜ್ಯದ ಇಡೀ ಜನತೆಯ ಮಾನವ ಹಕ್ಕುಗಳನ್ನು ಮತ್ತು ನೆಮ್ಮದಿಯನ್ನು ಕಾಪಾಡುವ ಜವಾಬ್ದಾರಿ ಪೊಲೀಸ್ ವ್ಯವಸ್ಥೆಗಿದೆಯೆಂದು ಈ ಪ್ರಜಾಪ್ರಭುತ್ವದಲ್ಲಿ ಭಾವಿಸಲಾಗುತ್ತದೆ.ಅಂಥ ಪೊಲೀಸ್ ವ್ಯವಸ್ಥೆಗೆ ಆಡಳಿತಾತ್ಮಕ ನಾಯಕತ್ವ ವನ್ನು ಮಾತ್ರವಲ್ಲದೇ ನೈತಿಕ ನಾಯಕತ್ವವನ್ನೂ ನೀಡಬೇಕಿರುವುದು ಡಿಜಿಪಿ ಹುದ್ದೆ.ಇವೆಲ್ಲವೂ ಪುಸ್ತಕದ ಮಾತುಗಳೇ ಆದರೂ ಕನಿಷ್ಠ ಸಂವಿಧಾನಕರ್ತರ ಆಶಯವನ್ನಾದರೂ ಪ್ರತಿಫಲಿಸುತ್ತದೆ.ಸುಪ್ರೀಂ ಕೋರ್ಟು ಸರಕಾರಗಳ ಯಾವುದೇ ಕ್ರಮ ಆಡಳಿತಾತ್ಮಕ ಸಂಪ್ರದಾಯ ಮತ್ತು ನಿಯಮಾವಳಿಗಳಿಗೆ ತಕ್ಕಂತೆ ನಡೆದಿದೆಯೇ ಎಂದು ಮಾತ್ರ ಪರಿಗಣಿಸದೆ ಅವು ಸಂವಿಧಾನದ ಆಶಯಗಳಿಗೆ ತಕ್ಕಂತೆಯೂ ನಡೆದಿದೆಯೇ ಇಲ್ಲವೇ ಎಂಬುದನ್ನೂ ಪ್ರಧಾನವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು.

ಜೀವಿಸುವ ಹಕ್ಕು ಸಂವಿಧಾನ ನೀಡಿರುವ ಅತ್ಯಂತ ಮೂಲಭೂತ ಹಕ್ಕು. ಅದನ್ನು ಕಾಪಾಡಬೇಕಾದ್ದು ಪ್ರಭುತ್ವದ ಕರ್ತವ್ಯ. ಅದನ್ನು ಆಚರಣೆಯಲ್ಲಿ ರಕ್ಷಿಸಬೇಕಾದ್ದು ಪೊಲೀಸ್ ವ್ಯವಸ್ಥೆಯ ಹೊಣೆಗಾರಿಕೆ. ಹೀಗಾಗಿ ಒಂದು ರಾಜ್ಯದ ಪೊಲೀಸ್ ವ್ಯವಸ್ಥೆಗೆ ಮುಖ್ಯಸ್ಥನಾಗುವವರು, ಅಂದರೆ ನಾಯಕತ್ವ ನೀಡುವವರು ಈ ಸಂವಿಧಾನ ಬದ್ಧ ಜವಾಬ್ದಾರಿಯನ್ನು ಹೊರುವ ಬಗ್ಗೆ ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ನಡೆದುಕೊಂಡಿರಬೇಕು.ಒಂದು ವೇಳೆ ಅನುಮಾನಕ್ಕೆ ಆಸ್ಪದವಾಗುವಂತೆ ನಡೆದು ಕೊಂಡಿದ್ದರೆ ಅನುಮಾನವಿದೆಯೆಂಬ ಕಾರಣಕ್ಕೆ ಅನರ್ಹಗೊಳಿಸಬೇಕಿಲ್ಲವಾದರೂ ಅದರ ಸತ್ಯಾಸತ್ಯತೆಯನ್ನು ಮಾತ್ರ ಪರಿಶೀಲಿ ಸುವುದು ಅತ್ಯಂತ “relevant” ಆದ ವಿಷಯ.

ಮೇಲ್ನೋಟಕ್ಕೆ ಸದಾಶಿವ ವರದಿ ಶಂಕರ್ ಬಿದರಿಯವರನ್ನು ಹೊಣೆಗಾರರನ್ನಾಗಿ ಮಾಡಿಲ್ಲವಾದ್ದರಿಂದ ಶಂಕರ್ ಬಿದರಿಯವರು ಹೊಣೆಗಾರರು ಹೇಗಾಗುತ್ತಾರೆ,ಆ ತರ್ಕದಲ್ಲಿ ರಾಜ್ಯವೊಂದರಲ್ಲಿ ನಡೆಯುವ ಎಲ್ಲಾ ಮಾನವ ಹಕ್ಕು ಉಲ್ಲಂಘನೆಗಳಿಗೂ ಡಿಜಿಪಿಯೇ ಜವಾಬ್ದಾರರಾಗಿ ಬಿಡುವುದಿಲ್ಲವೇ ಎಂಬುದು ಸುಪ್ರೀಂ ಕೋರ್ಟು ಆಕ್ಷೇಪವೆತ್ತಿದೆ.ಆದರೆ ಇದರಲ್ಲಿ ಬಹು ಮುಖ್ಯವಾದ ವಿಷಯವೊಂದಿದೆ.ಡಿಜಿಪಿ ಒಂದು ರಾಜ್ಯದ ಪೊಲೀಸ್ ವ್ಯವಸ್ಥೆಯ ಮುಖ್ಯಸ್ಥ. ಆ ಕಾರಣಕ್ಕಾಗಿ ಆ ರಾಜ್ಯದಲ್ಲಿ ನಡೆಯುವ ಎಲ್ಲಾ ಪೊಲೀಸ್ ಕಾರ್ಯಾಚರಣೆಯ ಪದನಿಮಿತ್ತ (Notional Operational ) ಜವಾಬ್ದಾರ. ರಾಜ್ಯದ ಯಾವುದೋ ಮೂಲೆಯಲ್ಲಿರುವ ಠಾಣೆ ಯೊಂದರಲ್ಲಿನ ಸಬ್ ಇನ್ಸ್‌ಪೆಕ್ಟರ್ ನಡೆಸುವ ಲಾಕಪ್ ಡೆತ್‌ಗೆ ನೇರವಾಗಿ ಡಿಜಿಪಿ ಹೊಣೆಗಾರನಲ್ಲ. ಆ ಸಂದರ್ಭದಲ್ಲಿ ಅಲ್ಲಿನ ಠಾಣಾಧಿ ಕಾರಿಯೇ ಅಲ್ಲಿನ Operational ಜವಾಬ್ದಾರ. ಹೀಗಾಗಿ ಆ ಲಾಕಪ್ ಡೆತ್‌ಗೆ ಠಾಣಾಧಿಕಾರಿ ಅಪರಾಧಿಯೇ ವಿನಃ ಡಿಜಿಪಿಯಲ್ಲ ನಿಜ.

ಆದರೆ ಆತನ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳದಿದ್ದರೆ ಖಂಡಿತಾ ಡಿಜಿಪಿ ಕೂಡಾ ತಪ್ಪಿತಸ್ಥ.ಹಾಗೆಯೇ ಇಡೀ ರಾಜ್ಯಾದ್ಯಂತ ಹಿಂಸಾಚಾರ ಸಂಭವಿಸುತ್ತಿದ್ದಾಗ,ಗುಜರಾತಿನಲ್ಲಿ ನಡೆದಂತೆ,ಅದನ್ನು ತಡೆಗಟ್ಟುವಲ್ಲಿ ಕ್ರಮ ತೆಗೆದುಕೊಳ್ಳಲು ಬೇಕಾದ ರಾಜ್ಯವ್ಯಾಪಿ ಮಾರ್ಗದರ್ಶನವನ್ನು ನೀಡದಿದ್ದರೆ ಆ ಡಿಜಿಪಿ ನೇರವಾಗಿ ಹಿಂಸಾಚಾರ ಮುಂದುವರಿಯಲು ಕಾರಣಕರ್ತನಲ್ಲದಿದ್ದರೂ ಹೊಣೆಗಾರನಾಗಿರುತ್ತಾರೆ.ಇತ್ತೀಚಿನ ಕೋಮು ಹಿಂಸಾಚಾರ ನಿಯಂತ್ರಣಾ ಮಸೂದೆಯಲ್ಲಂತೂ ಒಂದು ಜಿಲ್ಲೆಯಲ್ಲಿ ಸತತವಾಗಿ ಮತ್ತು ವ್ಯಾಪಕವಾಗಿ ಹಿಂಸಾಚಾರ ನಡೆಯುತ್ತಿದ್ದರೆ ಅದನ್ನು ನಿಗ್ರಹಿಸಲಾಗದ ಅಪರಾಧದ ಮೇಲೆ ಆ ಜಿಲ್ಲೆಯ ಪೊಲೀಸ್ ಮುಖ್ಯಸ್ಥನ ಮೇಲೆ ಪ್ರಕರಣ ದಾಖಲಿಸುವ ಅವಕಾಶವನ್ನು ಕೊಟ್ಟಿದೆ.

ಹಾಗೆಯೇ ಒಂದು ರಾಜ್ಯಾದ್ಯಂತ ಅವ್ಯಾಹತವಾಗಿರುವ ಹಿಂಸಾಚಾರ ತಡೆಯದಿದ್ದರೆ ಆ ರಾಜ್ಯದ ಡಿಜಿಪಿ Notional ಮತ್ತು Operational ಜವಾಬ್ದಾರ ಎರಡೂ ಆಗಿರುತ್ತಾನೆ.ಇದು ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲೆಡೆ ನಾಗರಿಕ ಮತ್ತು ಪ್ರಜಾತಂತ್ರ ದೇಶಗಳು ಅನುಸರಿಸುತ್ತಿರುವ ನಾಗರಿಕ ಸಂಹಿತೆ.ಆದರೆ ಶಂಕರ್ ಬಿದರಿಯವರ ಪ್ರಕರಣದಲ್ಲಿ ಅಷ್ಟೊಂದು ಕೂದಲು ಸೀಳುವ ತರ್ಕವೂ ಅಗತ್ಯವಿಲ್ಲ.ಅವರು ಈ ಮಾನವ ಹಕ್ಕುಗಳ ಉಲ್ಲಂಘನೆಯು ನಡೆಯುವ ಸಂದರ್ಭದಲ್ಲಿ ಅಲ್ಲಿನ ಡೆಪ್ಯುಟಿ ಕಮ್ಯಾಂಡೆಂಟ್ ಆಗಿದ್ದರು. ಅದು ಅಲ್ಲ. ಬದಲಿಗೆ ಹೀಗಾಗಿ ಅ ಆವಧಿಯಲ್ಲಿ ನಡೆದ ಎಲ್ಲಾ ಮಾನವ ಹಕ್ಕು ಪ್ರಕರಣಗಳಲ್ಲಿ ಇವರೇ ಖುದ್ದಾಗಿ ಟ್ರಗರ್ ಒತ್ತಿ ಅಮಾಯಕರನ್ನು ಸಾಯಿಸಿಲ್ಲದೆ ಇದ್ದರೂ ಸತತವಾಗಿ ಮೂರು ವರ್ಷಗಳು ನಡೆದ ಮಾನವ ಹಕ್ಕು ಉಲ್ಲಂಘನೆಯ ಸಂದರ್ಭದಲ್ಲಿ ಅದನ್ನು ತಡೆಗಟ್ಟಲು ಇವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಇದು ಮಾನವ ಹಕ್ಕುಗಳ ಬಗ್ಗೆ ಅವರಿಗಿರುವ ಅಸಡ್ಡೆಯನ್ನು ಸಾಬೀತುಪಡಿಸುವುದಿಲ್ಲವೇ? ಸದಾಶಿವ ಅಯೋಗವು ಹೇಳುವ ಪ್ರಮುಖ ಅಂಶ ಇದೇ ಅಲ್ಲವೇ? ಹೀಗಾಗಿ ಆ ಅವಧಿಯಲ್ಲಿ ಅಲ್ಲಿ ನಡೆದ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳಲ್ಲಿ ಸದಾಶಿವ ವರದಿಯಲ್ಲಿ ಶಂಕರ್ ಬಿದರಿಯವರ ಹೆಸರು ಪ್ರಸ್ತಾಪವಾಗಿಲ್ಲ ಅಥವಾ ಅವರನ್ನು ದೂಷಣೆ ಮಾಡಿಲ್ಲ ಎಂಬುದು ಅವರ ಮೇಲೆ ಅಪರಾಧ ಸಂಹಿತೆ ಮೇಲೆ ಕ್ರಮ ಜರಗಿಸಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆಯೇ ವಿನಃ ಅವರನ್ನು ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ಮುಕ್ತಗೊಳಿಸುವುದಿಲ್ಲ.

ಹೀಗಾಗಿ ಒಂದು ರಾಜ್ಯದ ಪೊಲೀಸ್ ಮುಖ್ಯಸ್ಥ ಹುದ್ದೆಯನ್ನು ಶಂಕರ್ ಬಿದರಿಯವರಂಥ ವ್ಯಕ್ತಿಗೆ ಕೊಡಬಹುದೇ ಎಂದು ತೀರ್ಮಾನಿಸುವಾಗ ಸುಪ್ರೀಂ ಕೋರ್ಟ್ ಶಂಕರ್ ಬಿದರಿಯವರು ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ಸಂಭವಿಸುತ್ತಿರುವಾಗ ಅಲ್ಲಿನ ಕೇವಲ Notional command Operational command ಆಗಿರಲಿಲ್ಲ. ಬದಲಿಗೆ ಆಗಿದ್ದರು ಎಂಬುದನ್ನೂ ಮತ್ತು ಅದರಿಂದಾಗಿ ಅಲ್ಲಿ ಅವರ ಅವಧಿಯಲ್ಲಿ ನಿರಂತರವಾಗಿ ನಡೆದಿದೆ ಎಂದು ಸಾಬೀತಾಗಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರತ್ಯಕ್ಷ ಮತ್ತು ಪರೋಕ್ಷ ಹೊಣೆಗಾರರು ಎಂಬುದನ್ನು ಗಣನೆಗೆ ತೆಗೆದೊಳ್ಳದೇ ಇರುವುದು ನಿಜಕ್ಕೂ ವಿಷಾದನೀಯ, ಕಳವಳಕಾರಿ. ಇದಾಗಬಾರದಿತ್ತು.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...