Saturday, March 31, 2012

ಕೇರಳದಲ್ಲಿ ಕಾರಂತರ ‘ಧ್ವನಿ’Profile Picture

ಶೂದ್ರ ಶ್ರೀನಿವಾಸ

‘ತುರ್ತು ಪರಿಸ್ಥಿತಿ’ಯ ಸುದ್ದಿ ವಿವಿಧ ರೂಪದಲ್ಲಿ ಪ್ರಚಾರಗೊಳ್ಳುತ್ತಲೇ ಇತ್ತು. ಪತ್ರಿಕೆಗಳಲ್ಲಿ ಎಲ್ಲಾ ಸೂಕ್ಷ್ಮ ‘ಸುದ್ದಿ’ ಸೆನ್ಸಾರ್ ಆದರೂ; ಕಣ್ಣು ತಪ್ಪಿಸಿ ಪ್ರಕಟಗೊಳ್ಳುತ್ತಿದ್ದವು. ದೇವರಾಜ ಅರಸು ಅವರ ಸ್ವಲ್ಪ ಮಟ್ಟಿನ ಲಿಬರಲ್ ಧೋರಣೆಯಿಂದ ಕರ್ನಾಟಕಕ್ಕೆ ತೀವ್ರ ಪ್ರಮಾಣದಲ್ಲಿ ಇದರ ಬಿಸಿ ತಟ್ಟಲಿಲ್ಲ.ಕೊನೆಗೂ ಇದು ಆಡಳಿತಾತ್ಮಕವಾಗಿ ಎಲ್ಲೆಲ್ಲಿಗೋ ತಲುಪಿಸಬಹುದು ಎಂಬುದನ್ನು ಅರಿತಿದ್ದರು.ಅಧಿಕಾರಿಗಳೂ ಸಹ ಮುಟ್ಟಿದರೆ ಮುನಿಯಬಹುದು ಎಂಬ ಆಂತರಿಕ ತಲ್ಲಣಗಳನ್ನು ಹೊಂದಿದ್ದರು. ಈ ಸಮಯದಲ್ಲಿ ನಮ್ಮ ದಿನ ಪತ್ರಿಕೆಗಳ ಸುದ್ದಿಯನ್ನು ಮೀರಿ; ಭೂಗತವಾಗಿ ಪ್ರಕಟವಾಗುತ್ತಿದ್ದ ಕರಪತ್ರಗಳು ಹಾಗೂ ಒಟ್ಟು ವಾತಾವರಣದ ವಿಷಮತೆಯನ್ನು ಕುರಿತಂತೆ ಎಂತೆಂಥ ಕಿರು ಹೊತ್ತಿಗೆಗಳು ಪ್ರಕಟಗೊಳ್ಳುತ್ತಿದ್ದವು.ಅವುಗಳಲ್ಲಿ ತುಂಬಿರುತ್ತಿದ್ದುದು ಹಿಂಸೆಯ ವಿವಿಧ ಮುಖಗಳು. ಕೆಲವಂತೂ ಆಂತರಿಕವಾಗಿ ಗಾಬರಿಗೊಳಿಸು ವಂಥ ಘಟನೆಗಳು. ಒಂದು ದೃಷ್ಟಿಯಿಂದ ಇಂಥದನ್ನೆಲ್ಲ ಜೀರ್ಣಿಸಿಕೊಂಡು ಮುಖಾಮುಖಿಯಾಗುವ ಚೈತನ್ಯವನ್ನು ಪರೋಕ್ಷವಾಗಿ ಸ್ವಾತಂತ್ರ ಚಳವಳಿಯು ಕೊಡುಗೆಯಾಗಿ ಸಾಕಷ್ಟು ನೀಡಿತ್ತು. ಇದು ಭಾರತದ ರಾಜಕೀಯದಲ್ಲಿ ಅಪ್ರತಿಮವಾದದ್ದು. ಕೇವಲ ತುರ್ತು ಪರಿಸ್ಥಿತಿಗೆ ಮಾತ್ರವಲ್ಲ; ಭವಿಷ್ಯದ ರಾಜಕೀಯ ಮತ್ತು ಸಾಮಾಜಿಕ ಅತಿರೇಕಗಳನ್ನು ಎದುರಿಸಲು ಪ್ರೇರಣ ಶಕ್ತಿಯಾಗಿದೆ. ಯಾವುದೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎಂತೆಂಥ ಸ್ವತಂತ್ರ ಮನಸ್ಸುಗಳನ್ನು ಸೃಷ್ಟಿ ಮಾಡಿರುತ್ತದೆ.

ಇಂಥ ಬಿಸಿಬಿಸಿ ಮತ್ತು ಗುಸುಗುಸು ಭೂಗತ ಸುದ್ದಿಯ ನಡುವೆ; ಮಹತ್ತರವಾದ ಆಹ್ವಾನವೊಂದು ನಮಗೆ ತಲುಪಿತು. ಅದು ಕೇರಳ ‘ದೇಶಾಭಿಮಾನಿ’ ವಾರಪತ್ರಿಕೆ ‘ತುರ್ತು ಪರಿಸ್ಥಿತಿ ಲೇಖಕರ ಸಮಾವೇಶ’ ವನ್ನು ಕೊಚ್ಚಿನ್‌ನಲ್ಲಿ ಏರ್ಪಡಿಸಿತ್ತು. ಅದು ರಾಷ್ಟ್ರೀಯ ಮಟ್ಟದ ಸಮಾವೇಶ. ಅದಕ್ಕೆ ನೀವು ಹೋಗಲೇಬೇಕೆಂದು ಗೆಳೆಯರಾದ ಡಿ.ಆರ್. ನಾಗರಾಜ್, ಕವಿ ಸಿದ್ಧಲಿಂಗಯ್ಯ ಮತ್ತು ನನಗೆ ತಿಳಿಸಿದ್ದಾರೆಂದು ಎಂ.ಕೆ. ಭಟ್ ಅವರು ಒತ್ತಾಯ ಮಾಡಿದರು. ಕಾಮ್ರೆಡ್ ಇ.ಎಂ.ಎಸ್. ಅವರ ಅಭಿಲಾಷೆ ಇದು ಎಂದು ಹೇಳಿದರು. ಆ ಕಾಲಘಟ್ಟದಲ್ಲಿ ಎಂ.ಕೆ. ಭಟ್ ಅವರು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿದ್ದರು.

ಕಮ್ಯುನಿಸ್ಟ್ ಪಕ್ಷಕ್ಕೆ ಒಂದು ರೀತಿಯ ಸಾಂಸ್ಕೃತಿಕ ಸ್ವರೂಪವನ್ನು ಕೊಡಲು ಪ್ರಯತ್ನಿ ಸಿದ್ದರು. ಇವರ ಕಾರಣಕ್ಕಾಗಿ ನಮ್ಮಂಥ ಬಹ ಳಷ್ಟು ಲೇಖಕರು ಮತ್ತು ಪ್ರಸನ್ನ ಅವರಂಥ ರಂಗಭೂಮಿ ಧೀಮಂತರು ಮಾರ್ಕ್ಸ್‌ವಾದ ದತ್ತ ಒಲವು ತೋರಿದ್ದು. ಯಾಕೆಂದರೆ ಎಲ್ಲಾ ರೀತಿಯ ಮೂಲಭೂತವಾದಿಗಳ ವಿರುದ್ಧ ಹೋರಾಡುವ ವಿಶಾಲ ಮನೋಭಾವನೆಯ ‘ವೇದಿಕೆ’ಯ ಬಗ್ಗೆ ನಾವು ಆಶಯವನ್ನು ಹೊಂದಿದ್ದೆವು. ಇದೇ ಸಮಯದಲ್ಲಿ ಕರ್ನಾಟಕದ ಉದ್ದಗಲಕ್ಕೂ ಗಂಭೀರವಾಗಿ ರಾಜಕೀಯ ಮತ್ತು ಸಾಮಾಜಿಕ ಏರುಪೇರುಗಳನ್ನು ಕುರಿತಂತೆ ಯೋಚಿಸುವ ಸಂಘಟನೆಗಳು ರೂಪುಗೊಂಡಿದ್ದವು. ಇದರ ಜೊತೆಗೆ ದಲಿತ ಚಳವಳಿಯ ‘ಧ್ವನಿ’ ಒಂದು ದೊಡ್ಡ ಪ್ರಮಾಣದಲ್ಲಿ ಬೇರು ಬಿಡುತ್ತಿತ್ತು. ಇದನ್ನೆಲ್ಲ ತುಂಬ ಸೂಕ್ಷ್ಮವಾಗಿ ಎಂ.ಕೆ. ಭಟ್ ಅವರು ಗಮನಿಸುತ್ತಿದ್ದರು. ಇದರಿಂದ ಲೇಖಕರು ಮತ್ತು ಕಲಾವಿದರೊಡನೆ ಹತ್ತಿರವಾದ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಒಂದು ದೃಷ್ಟಿಯಿಂದ ‘ಕ್ರಿಯಾ’ ಪುಸ್ತಕಾಲಯವು ಪ್ರಾರಂಭವಾಗಿದ್ದು ಕೂಡ ಈ ಹಿನ್ನೆಲೆಯಿಂದಲೇ. ಇದಕ್ಕೆ ಸಂಬಂಧಿಸಿದಂತೆ ಹಿಂದಿನ ಅಂಕಣ ಬರಹದಲ್ಲಿ ಪ್ರಸ್ತಾಪಿಸಿರುವೆ.

ಎಂ. ಕೆ. ಭಟ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಶಿಕ್ಷಿತ ಬ್ರಾಹ್ಮಣರ ಕುಟುಂಬದಿಂದ ಬಂದವರು. ಉನ್ನತ ಶ್ರೇಣಿಯಲ್ಲಿ ವಿಜ್ಞಾನದಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದವರು.ನಾವು ಸಂತೋಷವಾಗಿ ಕೇರಳದ ತುರ್ತು ಪರಿಸ್ಥಿತಿ ವಿರೋಧಿ ಲೇಖಕರ ಸಮಾವೇಶದಲ್ಲಿ ಭಾಗವಹಿಸಲು ಒಪ್ಪಿದೆವು. ಇದಕ್ಕಾಗಿ ಕೊಚ್ಚಿನ್ ನಲ್ಲಿ ನಮಗೆ ಎಲ್ಲ ವ್ಯವಸ್ಥೆ ಮಾಡಿಕೊಡಲು ಎಂ.ಕೆ. ಭಟ್ ಅವರು ಕಾಮ್ರೆಡ್ ವಿ.ಜಿ. ಕೆ. ನಾಯರ್ ಅವರನ್ನು ಸಿದ್ಧಗೊಳಿಸಿದರು. ನಾವು ನೇರವಾಗಿ ಕೇರಳಕ್ಕೆ ಹೋಗದೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿದ್ದ ಕಾರ್ಯಕ್ರಮಕ್ಕೆ ಲಂಕೇಶ್ ಅವರ ಜೊತೆಯಲ್ಲಿ ಹೊರಟೆವು. ವಿ.ಜಿ.ಕೆ. ನಾಯರ್ ಅವರಿಗೆ ಕೇರಳದಲ್ಲಿ ಕೂಡಿಕೊಳ್ಳುವೆವು ಎಂದು ತಿಳಿಸಿದೆವು. ಅವರು ಯಾವುದೇ ಕಾರಣಕ್ಕಾಗಿ ತಪ್ಪಿಸಿಕೊಳ್ಳಬಾರದೆಂದು ವಿನಂತಿಸಿಕೊಂಡು ಹೊರಟರು.

ಎರಡು ದಿವಸ ಧಾರವಾಡದಲ್ಲಿ ಲಂಕೇಶ್ ಅವರ ಜೊತೆಯಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆವು. ತುಂಬ ಅರ್ಥಪೂರ್ಣವಾದ ಕಾರ್ಯಕ್ರಮಗಳು. ಆಗ ಇನ್ನೂ ಲಂಕೇಶ್ ಪತ್ರಿಕೆ ಹುಟ್ಟಿಕೊಂಡಿರಲಿಲ್ಲ. ಆದರೂ ಲಂಕೇಶ್ ಅವರು ಲೇಖಕರಾಗಿ ಅದಾಗಲೇ ಕರ್ನಾಟಕದಲ್ಲಿ ಸಾಹಿತಿಗಳ ನಡುವೆ ಹಾಗೂ ಸಂಸ್ಕೃತಿ ಚಿಂತಕರ ಮಧ್ಯೆ ಹೆಸರನ್ನು ಪಡೆದಿದ್ದರು. ನಮಗಂತೂ ಲಂಕೇಶ್ ಅವರ ಜೊತೆ ಸುತ್ತಾಡುವುದೇ ಒಂದು ಲಕ್ಸುರಿಯಾಗಿತ್ತು. ಧಾರವಾಡದಲ್ಲಿ ಲಂಕೇಶ್ ಅವರು ತಮ್ಮ ಭಾಷಣದ ಮಧ್ಯೆ ನಾವು ಕೇರಳದ ತುರ್ತು ಪರಿಸ್ಥಿತಿ ವಿರೋಧಿ ಲೇಖಕರ ಸಮಾವೇಶದಲ್ಲಿ ಭಾಗವಹಿಸುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದ್ದರು. ಒಂದು ರೀತಿಯಲ್ಲಿ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದರು.

ನಾವು ಧಾರವಾಡದ ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ಹೊರಟೆವು. ಲಂಕೇಶ್ ಅವರು ನಮಗೆ ಶುಭ ಕೋರಿ ಬೆಂಗಳೂರಿಗೆ ಹೊರಟರು. ಮಂಗಳೂರಿನಲ್ಲಿ ನಮಗಾಗಿ ಪಿ.ಆರ್. ಕಾಯುತ್ತಿದ್ದರು. ಪಿ.ಆರ್.ರಾಮಚಂದ್ರರಾವ್ ಅವರನ್ನು ನಾವೆಲ್ಲ ಪ್ರೀತಿಯಿಂದ ಪಿ.ಆರ್. ಎಂದು ಕರೆಯುತ್ತಿದ್ದೆವು. ತುಂಬ ಚೆನ್ನಾಗಿ ಓದಿಕೊಂಡಿದ್ದ ಬಹುದೊಡ್ಡ ಮಾರ್ಕ್ಸ್‌ವಾದಿ ಚಿಂತಕ. ಅಷ್ಟೇ ಸರಳ ಜೀವಿ. ಪಕ್ಷದ ಕಾರ್ಯಕ್ರಮಗಳಿಲ್ಲದಿದ್ದರೆ ಬಹುಪಾಲು ಸಮಯ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್ ಮಧ್ಯೆ ಇರುವ ರಾಜ್ಯ ಗ್ರಂಥಾಲಯದಲ್ಲಿ ಓದುತ್ತ ಕೂರುತ್ತಿದ್ದರು. ನಾವು ಬಹಳಷ್ಟು ಬಾರಿ ಗ್ರಂಥಾಲಯದಲ್ಲಿ ಭೇಟಿಯಾಗುತ್ತಿದ್ದೆವು.

ಪಿ.ಆರ್. ಅವರು ನಾವು ಬರುತ್ತಿದ್ದೇವೆ ಎಂದು ಮಂಗಳೂರಿನಲ್ಲಿ ಯಾರ್ಯಾರಿಗೋ ತಿಳಿಸಿದ್ದರು. ಕೆಲವು ಮುಸಲ್ಮಾನ ಬಾಂಧವರ ಮತ್ತು ಕ್ರಿಶ್ಚಿಯನ್ ಬಾಂಧವರ ಕುಟುಂಬಗಳಲ್ಲಿಗೆ ಕರೆದುಕೊಂಡು ಹೋದರು.ಅಲ್ಲೆಲ್ಲ ಸಾಮಾಜಿಕ ಏರುಪೇರುಗಳ ಬಗ್ಗೆ ಚರ್ಚೆ ಏರ್ಪಡಿಸಿದ್ದರು. ಅವರಿಗೆಲ್ಲ ಸಿದ್ಧಲಿಂಗಯ್ಯ ದೊಡ್ಡ ಆಕರ್ಷಣೆಯಾಗಿದ್ದರು. ಆ ಜನವೆಲ್ಲ ನಮ್ಮನ್ನು ಒಂದು ದೃಷ್ಟಿಯಿಂದ ‘ಸಾಂಸ್ಕೃತಿಕ ಹೀರೋ’ಗಳ ರೀತಿ ಯಲ್ಲಿ ನೋಡಿಕೊಂಡರು. ಹಾಗೆ ನೋಡಲು ‘ಪಿ.ಆರ್.’ ಅವರು ನಮ್ಮ ಬಗ್ಗೆ ವೇದಿಕೆಯನ್ನು ನಿರ್ಮಾಣ ಮಾಡಿದ್ದರು. ಒಂದು ರೀತಿಯಲ್ಲಿ ನಮಗೆ ಮುಜುಗರವಾಗುತ್ತಿತ್ತು. ಇವರೆಲ್ಲ ಇಷ್ಟೊಂದು ಪ್ರೀತಿಯಿಂದ ನೋಡುತ್ತಿದ್ದಾ ರಲ್ಲ ಎಂದು. ಆದರೆ ಆ ಜನವೆಲ್ಲ ಪರಿಚಯವಾಗುತ್ತಿದ್ದಾರೆ ಎಂಬ ಸಂತೋಷವೂ ಆಗುತ್ತಿತ್ತು.

ಪಿ.ಆರ್. ಅವರು ಕೆಲವು ಮಂದಿ ಬೀಡಿ ಕಾರ್ಮಿಕರ ಮಧ್ಯೆಯೂ ನಮ್ಮನ್ನು ಕೂರಿಸಿದ್ದರು. ಅವರ ಬದುಕಿನ ವಿವಿಧ ಘಟ್ಟಗಳನ್ನು ಆ ಕಾರ್ಮಿಕರ ಬಾಯಿಂದಲೇ ಕೇಳಿಸಿದ್ದರು. ಇದರ ಜೊತೆಗೆ ಇಂತಿಂಥ ಕಡೆ ಮೀನಿನ ಊಟ ಚೆನ್ನಾಗಿರುತ್ತದೆ ಎಂದು ಕರೆದುಕೊಂಡು ಸಾಕಷ್ಟು ತಿನ್ನಿಸಿದ್ದರು. ಇದು ಸಾಲದೆಂಬಂತೆ ಸಮುದ್ರದ ದಂಡೆಯಲ್ಲಿ ಸುತ್ತಾಡಿಸಿ ಮರಳಿನ ಮೇಲೆ ಕೂತು; ಜಗತ್ತಿನ ಕೆಲವು ಗ್ರೇಟ್ ರಾಜಕೀಯ ಕೃತಿಗಳನ್ನು ಕುರಿತು ಬಹಳಷ್ಟು ಮಾತಾಡಿದ್ದರು. ಹಾಗೆಯೇ ಮಾವೋತ್ಸೆ ತುಂಗರ ಕಲ್ಚರಲ್ ರೆವಲೂಷನ್ ಬಗ್ಗೆ ಎಂತೆಂಥ ಒಳ ನೋಟಗಳನ್ನು ಮುಂದಿಟ್ಟಿದ್ದರು. ಅವರ ಯಾವುದೇ ಒಂದು ಮಾತು ಹೇಳಿಕೆಯಾಗುತ್ತಿರಲಿಲ್ಲ. ಅಂತರಂಗದ ಮಾತಾಗುತ್ತಿರುತ್ತಿತ್ತು.

ಗಾಂಧೀಜಿಯವರ ರೀತಿಯಲ್ಲಿ ಒಟ್ಟು ಚೀನಿ ಭಾಷೆ ಮತ್ತು ಸಂಸ್ಕೃತಿಯನ್ನು ಮಾವೋ ಅವರು ಎಷ್ಟು ಅನನ್ಯತೆಯಿಂದ ನೋಡಿದರು. ಎಲ್ಲವನ್ನು ಕಡಿದು ಕಟ್ಟುವುದರಲ್ಲಿ ಅಲ್ಲ ಮುತ್ಸದ್ದಿತನ ಇರಬೇಕಾದದ್ದು. ಚಾರಿತ್ರಿಕವಾಗಿ ಉಳಿಸಿಕೊಂಡು ಕಟ್ಟಬೇಕಾದ್ದದನ್ನು ಸೃಜನಾತ್ಮಕವಾಗಿ ನಿರ್ಮಿಸುವುದರಲ್ಲಿ ‘ಸ್ಟೇಟ್ಸ್‌ಮನ್‌ಷಿಪ್’ಇರುವುದು ಎಂದು ಮಾವೋ ಮತ್ತು ಚಾಯನ್‌ಲಾಯ್ ಅವರನ್ನು ಉದಾಹರಿಸಿ ಹೇಳುತ್ತಿದ್ದರು. ಹಾಗೆಯೇ ಮಾರ್ಕ್ಸ್ ಕುರಿತೂ ಕೂಡ. ಪಿ.ಆರ್. ಅವರು ನಮಗೆ ಒಬ್ಬ ಗುಡಿ ಗುಡಿ ಕಮ್ಯೂನಿಸ್ಟ್ ಆಗಿ ಕಾಣಿಸುತ್ತಿರಲಿಲ್ಲ. ಆದ್ದರಿಂದಲೇ ಅವರನ್ನು ಪಿ.ಆರ್. ಮೇಷ್ಟ್ರು ಎಂದು ಕರೆಯುತ್ತಿದ್ದುದು.
ನಾವಂತೂ ಗಾಂಧೀಜಿ, ಲೋಹಿಯಾ ಮತ್ತು ಅಂಬೇಡ್ಕರ್ ಚಿಂತನೆಗಳ ಮೂಲಕ ಬಂದಿದ್ದವರು. ಆ ಚಿಂತನೆಗಳಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ತಮ್ಮ ಒಟ್ಟು ಆಲೋಚನಾ ಕ್ರಮವನ್ನು ನಮ್ಮ ಮುಂದಿಡುತ್ತಿದ್ದರು.

ಈಗಲೂ ಅಷ್ಟೇ ನನ್ನಂಥವರಿಗೆ ಪಿ.ಆರ್. ಅಂಥವರನ್ನು ಮಂಗಳೂರಿನಿಂದ ಪ್ರತ್ಯೇಕ ಪಡಿಸಿ ನೋಡಲು ಸಾಧ್ಯವಿಲ್ಲ. ಸದಾ ಬಿಳಿಯ ಷರ್ಟು, ಪಂಚೆ ಮತ್ತು ಟವಲಿನಿಂದ ನಮ್ಮ ಮನಸ್ಸನ್ನು ತುಂಬಿ ಕೊಂಡಿದ್ದವರು. ತಮ್ಮ ಕಂಕುಳಲ್ಲಿ ನಾನಾ ರೀತಿಯ ವೃತ್ತಪತ್ರಿಕೆಗಳ, ರಾಜಕೀಯ ಹೊತ್ತಿಗೆಗಳ ಜೊತೆಗೆ ಮನಸ್ಸಿನ ತುಂಬ ರಾಜಕೀಯ ತತ್ವ ಚಿಂತನೆಯನ್ನು ತುಂಬಿಕೊಂಡಿದ್ದ ಬಹುದೊಡ್ಡ ರಾಜಕೀಯ ಸಂತರಾಗಿದ್ದರು. ನಾವು ಇಂಥ ಮಹಾನುಭಾವ ವ್ಯಕ್ತಿಯನ್ನು ಕುರಿತು ಚರ್ಚಿಸುತ್ತಲೇ ಕೇರಳವನ್ನು ತಲುಪಿದ್ದೆವು. ಅಲ್ಲಿ ಕಾಮ್ರೆಡ್ ವಿ.ಜಿ.ಕೆ. ನಾಯರ್ ಅವರು ನಮಗಾಗಿ ಕಾಯುತ್ತಿದ್ದರು. ನಾಯರ್ ಅವರಿಗೆ ಪಿ.ಆರ್. ಅವರ ಪ್ರೀತಿಯ ಆತಿಥ್ಯ ಕುರಿತು ವರದಿ ಒಪ್ಪಿಸಿದೆವು. ಅದಕ್ಕೆ ನಾಯರ್ ಅವರು ‘ಪಿ.ಆರ್. ಸರ್ ಅವರು ನಮ್ಮ ಪಕ್ಷದಲ್ಲಿ ಅಪರೂಪದ ಕಾಮ್ರೆಡ್’ ಎಂದು ಪ್ರತಿಕ್ರಿಯಿಸಿದ್ದರು.

ಕೇರಳದ ಕೊಚ್ಚಿನ್‌ನ ಬೀದಿ ಮತ್ತು ರಸ್ತೆಗಳಲ್ಲಿ ಎಲ್ಲಿ ನೋಡಿದರೂ ತುರ್ತು ಪರಿಸ್ಥಿತಿ ವಿರೋಧಿ ಘೋಷಣೆಗಳ ಬ್ಯಾನರ್‌ಗಳು. ಲೇಖಕರು ಮತ್ತು ಕಲಾವಿದರ ಜೊತೆಗೆ ಎಡಪಂಥೀಯ ಕಾರ್ಯಕರ್ತರು ತುಂಬಿಕೊಂಡಿದ್ದರು. ನಮ್ಮನ್ನು ದೇಶಾಭಿಮಾನಿ ಪತ್ರಿಕೆಯ ಸಂಪಾದಕರಾದ ಗೋವಿಂದ ಪಿಳ್ಳೆಯವರು ಬೇರೆ ಬೇರೆ ರಾಜ್ಯಗಳಿಂದ ಬಂದ ಲೇಖಕರಿಗೆ ಪರಿಚಯ ಮಾಡಿಕೊಟ್ಟರು.ಅವರಲ್ಲಿ ಗಾಂಧಿವಾದಿಗಳಿದ್ದರು.ಲೋಹಿಯಾವಾದಿಗಳಿದ್ದರು.ಹಾಗೆಯೇ ಸರ್ವೋದಯ ಸಂಘಟನೆಯ ಚಿಂತಕರೂ ಇದ್ದರು.ಒಂದು ಬೃಹತ್ತಾದ ಸಭಾಂಗಣ. ರಾಜಕೀಯ ಚಿಂತನೆಗಳಿಗೆ ಸಂಬಂಧಿಸಿದ ಘೋಷಣೆಗಳನ್ನು ತುಂಬ ಅಚ್ಚುಕಟ್ಟಾಗಿ ಡಿಸ್‌ಪ್ಲೇ ಮಾಡಿದ್ದರು. ವೇದಿಕೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ಮಿಸಿದ್ದರು. ನಮ್ಮನ್ನು ಗೋವಿಂದ ಪಿಳ್ಳೆಯವರು ಕಾರ್ಯಕ್ರಮಕ್ಕೆ ಮುನ್ನ ಇ.ಎಂ.ಎಸ್. ನಂಬೂದರಿಪಾದ್ ಹಾಗೂ ಉದ್ಘಾಟನೆ ಮಾಡಲು ಬಂದಿದ್ದ ನಮ್ಮವರೇ ಆದ ಶಿವರಾಮ ಕಾರಂತರಿಗೆ ಪರಿಚಯ ಮಾಡಿಕೊಟ್ಟರು. ಅದೊಂದು ನಮಗೆ ಖುಷಿಯ ವಿಷಯವಾಗಿತ್ತು.ಕಾರ್ಯಕ್ರಮ ಪ್ರಾರಂಭವಾಯಿತು. ಒಟ್ಟು ಸಮಾವೇಶ ಕುರಿತು ಗೋವಿಂದ ಪಿಳ್ಳೆಯವರು ಅತ್ಯಂತ ಅರ್ಥಗರ್ಭಿತವಾದ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಯಾವುದೇ ದೇಶದಲ್ಲಿ ‘ತುರ್ತು ಪರಿಸ್ಥಿತಿ’ಯಂಥ ಆತಂಕದ ರಾಜಕೀಯ ಸ್ಥಿತಿ ಯಾಕೆ ಬರುತ್ತದೆಂದು ವಿವರಿಸಿದರು. ಜೊತೆಗೆ ಶಿವರಾಮ ಕಾರಂತರ ಕುರಿತು ದೀರ್ಘ ಪರಿಚಯ ಮಾಡಿಕೊಟ್ಟರು. ಆ ಪರಿಚಯದಲ್ಲಿ ಕಾರಂತರ ವ್ಯಕ್ತಿತ್ವದ ಹಿರಿಮೆಯೂ ಇತ್ತು. ಆ ಹಿರಿಮೆಯ ಮಾತುಗಳಿಗೆ ನಿಜವಾಗಿಯೂ ಅರ್ಹರು ಎನ್ನುವ ರೀತಿಯಲ್ಲಿ ಸುಮಾರು ಒಂದು ಕಾಲು ಗಂಟೆ ಅಮೋಘವಾಗಿ ಮಾತಾಡಿದರು. ಸಾಹಿತ್ಯ, ರಾಜಕೀಯ ಮತ್ತು ಮಾನವೀಯ ಸಂಬಂಧಗಳ ಬಗ್ಗೆ ಪ್ರಸ್ತಾಪಿಸುತ್ತಲೇ; ಯಾವುದೇ ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನ ವ್ಯಕ್ತಿತ್ವವನ್ನು ಕಾಪಾಡುತ್ತಲೇ ರಾಜಕೀಯ ಚಿಂತನೆಗಳನ್ನು ಆಡಳಿತಾತ್ಮಕವಾಗಿ ಪುನರುಜ್ಜೀವನಗೊಳಿಸಬೇಕು. ಪ್ರಜಾಪ್ರಭುತ್ವವೆಂಬ ಅಮೂಲ್ಯ ವ್ಯವಸ್ಥೆ ಇರುವುದೇ ಅದಕ್ಕಾಗಿ, ನಿರಂಕುಶ ವಾದಿಗಳನ್ನು ಬೆಳೆಸುವುದಕ್ಕಲ್ಲ ಎಂದು; ಇತಿಹಾಸದಿಂದ ಮತ್ತು ಸಾಹಿತ್ಯ ಕೃತಿಗಳಿಂದ ಅಮೂಲ್ಯವಾದ ಸಂಗತಿಗಳನ್ನು ಉದ್ಧರಿಸುತ್ತಲೇ ಒಟ್ಟು ಸಭಿಕರನ್ನು ಮಧ್ಯೆ ಮಧ್ಯೆ ಕರತಾಡನದ ಜೊತೆಗೆ ತಮ್ಮತ್ತ ಸೆಳೆದುಕೊಂಡಿದ್ದರು. ನಾನು ಶಿವರಾಮ ಕಾರಂತರ ಎಷ್ಟೋ ಉಪನ್ಯಾಸಗಳನ್ನು ಕೇಳಿದ್ದೇನೆ. ಆದರೆ ಅಂದಿನ ಉಪನ್ಯಾಸ ಇಂದಿಗೂ ನನ್ನ ಮನಸ್ಸಿನಲ್ಲಿ ಮೂವತ್ತೈದು ವರ್ಷಗಳ ನಂತರವೂ ಗುನುಗುನಿಸುತ್ತಿದೆ. ಈ ಗುನುಗುನುಗುವಿಕೆಗೆ ಪ್ರಮಾಣ ಪತ್ರವೆನ್ನುವ ರೀತಿಯಲ್ಲಿ, ಅಧ್ಯಕ್ಷತೆ ವಹಿಸಿದ್ದ ಮಹಾನ್ ರಾಜಕೀಯ ಮುತ್ಸದ್ದಿ ಇ.ಎಂ. ಎಸ್. ನಂಬೂದರಿಪಾದ್ ಮಾತಾಡುತ್ತ ‘ನಮ್ಮ ನಡುವೆ ರಾಜಕೀಯವಾಗಿ, ಸಾಮಾಜಿಕವಾಗಿ ಇಷ್ಟೊಂದು ಎತ್ತರದ ಮನಸ್ಥಿತಿಯಲ್ಲಿ ತುಂಬ ಧ್ವನಿಪೂರ್ಣವಾಗಿ ಮಾತಾಡುವ ಒಬ್ಬ ಸಾಹಿತಿ ಇದ್ದಾರೆಂಬುದೇ ನಾವು ಸದಾ ಸಂತೋಷಪಡಬೇಕಾದ ವಿಷಯ’ ಎಂದು ಹೇಳಿದಾಗ; ಒಟ್ಟು ಸಭೆ ಧನ್ಯತೆಯಿಂದ ಚಪ್ಪಾಳೆಯ ಮೂಲಕ ಸಮ್ಮತಿ ಸೂಚಿಸಿತ್ತು. ನನಗೆ ಈಗಲೂ ಅಂದಿನ ಕಾರಂತರ ಮಾತು ಒಂದು ಚಾರಿತ್ರಿಕ ಧ್ವನಿಯಾಗಿದೆ.


ವಾರ್ತಾಭಾರತಿ ಕೃಪೆ

ಮುಂದುವರಿದಿರುವ ಶ್ರೀಲಂಕಾ ತಮಿಳರ ಜನಾಂಗೀಯ ಹತ್ಯೆ:ಅಮೆರಿಕದ ಮೊಸಳೆ ಕಣ್ಣೀರು- ಬೆನ್ನಿಗೆ ಚೂರಿ ಹಾಕಿರುವ ಭಾರತಶಿವಸುಂದರ್


2008ರ ಕಳೆದ ಮೇ 18ರಂದು ಮುಲ್ಲತ್ತೀವು ಅಡವಿಗಳಲ್ಲಿ ಸೆರೆಸಿಕ್ಕ ಪ್ರಭಾಕರನ್‌ನನ್ನು ಹತ್ಯೆ ಮಾಡಿದ ನಂತರ ತಮ್ಮ ದೇಶದಲ್ಲಿ 25ವರ್ಷಗಳಿಂದ ನಡೆಯುತ್ತಿದ್ದ ಅಂತರ್ಯುದ್ಧ ಕೊನೆಗೊಂಡಿತೆಂದು ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಘೋಷಿಸಿದರೂ ಅವರ ಸರಕಾರ ಆ ಯುದ್ಧವನ್ನು ನಿಲ್ಲಿಸಿಲ್ಲ. ಎಲ್‌ಟಿಟಿಇ ಇರುವವರೆಗೆ ಕನಿಷ್ಠ ಪಕ್ಷ ತಮಿಳರ ಮಾನ ಮತ್ತು ಪ್ರಾಣಗಳನ್ನು ಮಾತ್ರ ಬಲಿ ತೆಗೆದುಕೊಳ್ಳುತ್ತಿದ್ದ ಶ್ರೀಲಂಕಾ ಸರಕಾರ ಎಲ್‌ಟಿಟಿಇಯ ನಿರ್ಮೂಲನದೊಂದಿಗೆ ತಮಿಳರ ಅಸ್ತಿತ್ವ ಮತ್ತು ಅಸ್ಮಿತೆಗಳ ಮೇಲೆಯೇ ಮಾರಣಾಂತಿಕ ಯುದ್ಧ ಪ್ರಾರಂಭಿಸಿದೆ.ಇತ್ತೀಚೆಗೆ ಬಿಬಿಸಿಯ ಚಾನೆಲ್ 4 ಬಿತ್ತರಿಸಿದ ಕೆಲವು ವಿಡಿಯೋ ಚಿತ್ರಗಳು ಯುದ್ಧದ ಕಾಲದಲ್ಲಿ ಮತ್ತು ನಂತರದಲ್ಲಿ ಶ್ರೀಲಂಕಾ ಸರಕಾರ ಹೇಗೆ ಶ್ರೀಲಂಕಾದ ಮೂಲನಿವಾಸಿಗಳೇ ಆಗಿರುವ ತಮಿಳರ ಮೀಲೆ ಅನ್ಯಾಯ-ಅತ್ಯಾಚಾರ-ನರಹತ್ಯೆ-ಬಾಲವಧೆ-ನಡೆಸುತ್ತಿದೆಯೆಂಬುದನ್ನು ಜಗತ್ತಿಗೆ ಬಯಲುಗೊಳಿಸಿದೆ.ಈ ಚಿತ್ರಗಳನ್ನು ಕಂಡ ಯಾರ ಮನಸ್ಸು ಕರಗುವುದಿಲ್ಲವೋ ಶ್ರೀಲಂಕಾ ಸರಕಾರವನ್ನು ಖಂಡಿಸಲು ಮನಸ್ಸಾಗುವುದಿಲ್ಲವೋ ಅವರು ಮನುಷ್ಯಕುಲದ ಸದಸ್ಯರಾಗಿರಲೇ ಅನರ್ಹರು.

ಕಳೆದ ಒಂದೆರಡು ವರ್ಷಗಳಿಂದ ಈ ಚಿತ್ರಗಳನ್ನು ಮತ್ತು ಸೋರಿ ಹೊರಬರುತ್ತಿದ್ದ ನರಹತ್ಯೆ ವರದಿಗಳಿಂದ ದಿಗ್ಭ್ರಾಂತರಾಗಿದ್ದ ಹಲವಾರು ದೇಶಗಳ ಜನತೆ ಶ್ರೀಲಂಕಾ ಸರಕಾರ ಈ ಮಾನವಹಕ್ಕು ಉಲ್ಲಂಘನೆಯನ್ನು ತಡೆಗಟ್ಟಬೇಕೆಂದು ಜಗತ್ತಿನಾದ್ಯಂತ ಹೋರಾಟ ಪ್ರಾರಂಭಿಸಿದ್ದರು.ಆದರೆ ಶ್ರೀಲಂಕಾ ಸರಕಾರಕ್ಕೆ ಮೊದಲಿಂದಲೂ ಚೀನಾ, ಅಮೆರಿಕ, ರಷ್ಯಾ, ಜರ್ಮನಿ, ಭಾರತ ಒಳಗೊಂಡಂತೆ ಎಲ್ಲಾ ಬಲಿಷ್ಠ ರಾಷ್ಟ್ರಗಳು ಬೆಂಬಲಕ್ಕಿದ್ದವು. ಅವುಗಳ ಕಣ್ಣೆಲ್ಲಾ ಶ್ರೀಲಂಕಾದ ಸಂಪನ್ಮೂಲಗಳ ಮೇಲೆ ಮತ್ತು ಆ ದೇಶದ ಸರಕಾರದ ಸಹಕಾರದೊಂದಿಗೆ ಇಡೀ ಏಷಿಯಾ- ಫೆಸಿಫಿಕ್ ವಲಯದಲ್ಲಿ ತನ್ನ ಮೇಲ್ಮೆ ಸಾಧಿಸುವುದರ ಮೇಲೆ.

ಆದರೆ ಕ್ರಮೇಣ ಚೀನಾದ ಬಂಡವಾಳ ಲಂಕಾದಲ್ಲಿ ಹೆಚ್ಚಾಗುತ್ತಿದ್ದಂತೆ ಲಂಕಾ ಸರಕಾರ ಅಮೆರಿಕಕ್ಕಿಂತ ಚೀನದ ಕಡೆ ಹೆಚ್ಚು ಒಲವು ತೋರಿಸಲು ಪ್ರಾರಂಭಿಸಿದೆ.ಈ ಕಾರಣದಿಂದಾಗಿಯೇ ಈವರೆಗೆ ಶ್ರೀಲಂಕಾ ಸರಕಾರದ ಬೆಂಬಲಕ್ಕೆ ನಿಂತಿದ್ದ ಅಮೆರಿಕ ಈಗ ಅದಕ್ಕೆ ವಿರುದ್ಧವಾದ ನಿಲುವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಅದೇ ಕಾರಣಕ್ಕೆ ಈವರೆಗೂ ತಾನೇ ಬೆಂಬಲಿಸಿದ್ದ ತಮಿಳರ ನರಮೇಧದ ವಿಷಯವನ್ನು ಇದೇ ಮಾರ್ಚ್ 7ರಂದು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯ ಎದುರು ತೆಗೆದುಕೊಂಡು ಹೋಗಿ ಶ್ರೀಲಂಕಾ ಸರಕಾರದ ವಿರುದ್ಧ ಮತ ನಿರ್ಣಯ ತೆಗೆದುಕೊಳ್ಳಲು ಮತಕ್ಕೆ ಹಾಕಬೇಕೆಂದು ಒತ್ತಾಯಿಸಿತ್ತು.

ಆ ನಿಟ್ಟಿನಲ್ಲಿ ಅಮೆರಿಕವು ಶ್ರೀಲಂಕಾ ಸರಕಾರವೇ ರಚಿಸಿದ, ಪಾಠ ಕಲಿತ ಮತ್ತು ಮರು ಸಂಧಾನ ಸಮಿತಿ (Lessons Learnt and Reconcialtion Committee- LLRC)ಯ ಸಲಹೆಗಳನ್ನು ಶ್ರೀಲಂಕಾ ಸರಕಾರ ಚಾಚೂ ತಪ್ಪದಂತೆ ಜಾರಿಗೆ ತರಲು ಅಂತಾರಾಷ್ಟ್ರೀಯ ಸಮುದಾಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ನಿರ್ಣಯವನ್ನು ಮತಕ್ಕೆ ಹಾಕಿತು.ಮಾರ್ಚ್ 22ರಂದು ನಡೆದ ಸಮಿತಿಯ 48 ದೇಶಗಳ ಮತದಾನದಲ್ಲಿ 24ದೇಶಗಳು ಅಮೆರಿಕದ ನಿರ್ಣಯದ ಪರವಾಗಿಯೂ,15ದೇಶಗಳು ವಿರುದ್ಧವಾಗಿಯೂ,8 ದೇಶಗಳು ತಟಸ್ಥವಾಗಿಯೂ ಉಳಿದುಕೊಂಡವು. ನಿರೀಕ್ಷೆಯಂತೆ ಚೀನಾ, ರಷ್ಯಾ ಇತರ ಅಮೆರಿಕ ವಿರೋಧಿ ಶ್ರೀಲಂಕಾ ಸ್ನೇಹಿತರು ಶ್ರೀಲಂಕಾ ಪರವಾಗಿ ನಿರ್ಣಯದ ವಿರುದ್ಧ ಮತ ಹಾಕಿದರು. ಅಮೆರಿಕದ ಎಲ್ಲಾ ಚೇಲಾ ದೇಶಗಳು ಅಮೆರಿಕದ ಪರವಾಗಿ ಮತಚಲಾಯಿಸಿದವು.

ಆದರೆ ಭಾರತ ಮಾತ್ರ ಬ್ರಾಹ್ಮಣೀಯ ಕುತಂತ್ರವನ್ನು ಮಾಡಿತು. ಭಾರತದ ತಮಿಳು ಜನರ ಮತ್ತು ಪ್ರಜಾತಾಂತ್ರಿಕ ಜನರ ಒತ್ತಾಯ ಹಾಗೂ ತಮಿಳು ಪಕ್ಷಗಳ ಒಕ್ಕೊರಲಿನ ಒತ್ತಾಯದಿಂದಾಗಿ ಭಾರತ ಶ್ರೀಲಂಕಾ ಸರಕಾರದ ಅಮಾನವೀಯ ಅತ್ಯಾಚಾರಗಳನ್ನು ಖಂಡಿಸುವ ನಿರ್ಣಯದ ಪರವಾಗಿ ಮತ ಹಾಕಲೇನೋ ಒಪ್ಪಿತು. ಆದರೆ ಅದೇ ಸಮಯದಲ್ಲಿ ಶ್ರೀಲಂಕಾ ಸರಕಾರ ತಮ್ಮನ್ನು ಎಂದಿಗೂ ತಪ್ಪುತಿಳಿದುಕೊಳ್ಳಬಾರದು ಎಂಬ ಉದ್ದೇಶದಿಂದ ಕೂಡಲೇ ಅಧ್ಯಕ್ಷ ರಾಜಪಕ್ಸೆಗೆ ಪತ್ರ ಬರೆದು ತಾವು ಹೇಗೆ ಶ್ರೀಲಂಕಾ ಸರಕಾರದ ವಿರುದ್ಧ ಮತ ಚಲಾಯಿಸುವಂತೆ ಕಂಡರೂ ಒಳಗಿದ್ದೇ ಅವರ ಪರವಾಗಿ ಕೆಲಸ ಮಾಡಿದ್ದೇವೆ ಎಂದು ನಾಚಿಕೆ ಬಿಟ್ಟು ಹೇಳಿ ಕೊಂಡಿದೆ.

ಕೊಲೆಗಡುಕ ಅಧ್ಯಕ್ಷ ರಾಜಪಕ್ಸೆಗೆ ಪ್ರಧಾನಿ ಮನಮೋಹನ್ ಸಿಂಗ್ ಬರೆದಿರುವ ಪತ್ರದಲ್ಲಿ ತಮ್ಮ ದೇಶದ ನಿಲುವನ್ನು ತಪ್ಪುತಿಳಿಯಬಾರದೆಂದೂ ತಾವೆಂದಿಗೂ ಶ್ರೀಲಂಕಾದ ಸಾರ್ವಭೌಮತೆ ಮತ್ತು ಭೌಗೋಲಿಕ ಘನತೆಯ ಪರವಾಗಿಯೇ ಇರುವೆವೆಂದು ಹೇಳುತ್ತಾ ಅಮೆರಿಕ ಮುಂದಿಟ್ಟ ನಿರ್ಣಯಕ್ಕೆ ಲಂಕಾ ಸರಕಾರದ ಪರವಾದ ತಿದ್ದುಪಡಿಯನ್ನು ತರುವಲ್ಲಿ ಯಶಸ್ವಿಯಾಗಿರುವುದಾಗಿಯೂ ಹೇಳಿಕೊಂಡಿದೆ. ಈ ತಿದ್ದುಪಡಿ ಪ್ರಕಾರ ಸಮಿತಿ ಮಾನವ ಹಕ್ಕು ಉಲ್ಲಂಘನೆಯನ್ನು ತಡೆಯಲು ತೆಗೆದುಕೊಳ್ಳುವ ಯಾವುದೇ ಕ್ರಮ ‘‘ಶ್ರೀಲಂಕಾ ಸರಕಾರದ ಸಮ್ಮತಿ ಮತ್ತು ಸಹಕಾರ’’

ದೊಂದಿಗೆ ಮಾತ್ರ ಜಾರಿಗೆ ಬರತಕ್ಕದ್ದು ಎಂಬ ತಿದ್ದುಪಡಿಯನ್ನು ತಂದುಬಿಟ್ಟಿದೆ. ಅಂದರೆ ಯಾರು ಕೊಲೆಗಾರನೋ ಅವನ ಒಪ್ಪಿಗೆಯೊಂದಿಗೆ ಕೊಲೆಯನ್ನು ತಡೆಯತಕ್ಕದ್ದು..ಅರ್ಥಾತ್ ಕೊಲೆಗಾರ ಒಪ್ಪದಿದ್ದಲ್ಲಿ ಕೊಲೆಯನ್ನು ತಡೆಯುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಹಾಗಿಲ್ಲ! ಹೀಗೆ ಭಾರತ ತಮಿಳರ ಪರ ಎನ್ನುತ್ತಾ ತಮಿಳರ ಬೆನ್ನಿಗೇ ಚೂರಿಹಾಕಿದೆ. ಹಿಂದಿನಿಂದಲೂ ಭಾರತ ಸರಕಾರ ಈ ಎಲ್ಲಾ ಜನಾಂಗೀಯ ನರಮೇಧದ ಯೋಜನೆಗಳಿಗೆ ಸಕ್ರಿಯ ಬೆಂಬಲ ಕೊಡುತ್ತಿದೆ. ಎಲ್‌ಟಿಟಿಇಯ ವಿರುದ್ಧದ ಯುದ್ಧಕ್ಕೆ ಆಗ ಹಣಕಾಸು ಮತ್ತು ಬೇಹುಗಾರಿಕಾ ನಕ್ಷೆಗಳನ್ನು ಒದಗಿಸಿದಂತೆ ಈಗ ಅಮಾಯಕ ತಮಿಳರ ಮೇಲಿನ ಯುದ್ಧಕ್ಕೆ ತನ್ನ ಬಜೆಟ್ಟುಗಳಲ್ಲಿ ಕೋಟ್ಯಂತರ ಹಣಕಾಸು ನೆರವು ಒದಗಿಸಿದೆ.

ಕನಿಷ್ಠ ಪಕ್ಷ ಕ್ಯಾಂಪುಗಳ ಪರಿಸ್ಥಿತಿ ಸುಧಾರಿಸಬೇಕೆಂಬ ಶರತ್ತನ್ನೂ ಹಾಕದೆ ಕೊಟ್ಟಿರುವ ಈ ಹಣ ತಮಿಳರ ಯೋಜಿತ ನರಮೇಧಕ್ಕೆ ಬಳಕೆಯಾಗುತ್ತದೆಂಬುದರಲ್ಲಿ ಸಂಶಯವಿಲ್ಲ. ಒಂದರ್ಥದಲ್ಲಿ ನಾಗರಿಕ ಸಮಾಜದ ಈ ಮೌಲಿಕ ಅಧಃಪತನ ಈ ಯುದ್ಧದ ಬಹುದೊಡ್ಡ ಕೊಲ್ಯಾಟರಲ್ ಡ್ಯಾಮೇಜು!


-ವಾರ್ತಾಭಾರತಿ ಕೃಪೆ

ನಾಳೆ ವಿಭಾ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ
ಗೆಳೆಯರೆ

ನನ್ನ ಬಾಳಸಂಗಾತಿ ವಿಭಾ ನೆನಪಿನಲ್ಲಿ ನಮ್ಮ ಲಡಾಯಿ ಪ್ರಕಾಶನವು ವರ್ಷವೂ ಹಸ್ತಪ್ರತಿರೂಪದಲ್ಲಿ ಇರುವ ಅತ್ಯುತ್ತಮ ಕಾವ್ಯ ಕೃತಿಗೆ ವಿಭಾ ಸಾಹಿತ್ಯ ಪ್ರಶಸ್ತಿ ನೀಡಿ ಆ ಕೃತಿಯನ್ನು ಪ್ರಕಟಿಸುವ ಕಾರ‍್ಯವನ್ನು ಮಾಡುತ್ತ ಬಂದಿದೆ. ಈ ಪ್ರಶಸ್ತಿಯು ೫೦೦೦ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ೨೦೧೧ ಅ ಸಾಲಿನ ಪ್ರಶಸ್ತಿಯನ್ನು ಡಾ ಎಸ್ ಜಿ ಸಿದ್ಧರಾಮಯ್ಯ ಮತ್ತು ಡಾ ಎಂ ಎಸ್ ಆಶಾದೇವಿ ಅವರ ನಿರ್ಣಾಯಕತ್ವದಲ್ಲಿ ಭರವಸೆಯ ಕವಿ ಚನ್ನಪ್ಪ ಅಂಗಡಿಯವರ ಭೂಮಿ ತಿರುಗುವ ಶಬ್ಧ ಕವನ ಸಂಕಲನಕ್ಕೆ ದೊರೆತಿದೆ

ಈ ಪ್ರಶಸ್ತಿ ವಿತರಣಾ ಸಮಾರಂಭವು ಎಪ್ರಿಲ್ ೧ ರಂದು ರವಿವಾರ ಸಂಜೆ ೬ ಗಂಟೆಗೆ ಧಾರವಾಡದ ವಿದ್ಯಾವರ್ದಕ ಸಂಘದಲ್ಲಿ ನಡೆಯಲಿದೆ ವಿಮರ್ಶಕ ಡಾ ಎಚ್ ಎಸ್ ರಾಘವೇಂದ್ರರಾವ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಪ್ರಶಸ್ತಿ ಪಡೆದ ಕೃತಿಯನ್ನು ಡಾ ಎಸ್ ಜಿ ಸಿದ್ದರಾಮಯ್ಯ ಬಿಡುಗಡೆ ಮಾಡುವರು. ಕವಯತ್ರಿ ಸವಿತಾ ನಾಗಭೂಷಣ ಅಧ್ಯಕ್ಷತೆ ವಹಿಸುವರು ಡಾ ಎಂ ಡಿ ಒಕ್ಕುಂದ ಪ್ರಾಸ್ತಾವಿಕ ಮಾತು ಆಡುವರು ಡಾ ಎಚ್ ಎಸ್ ಅನುಪಮಾ ನಿರೂಪಿಸಲದ್ದಾರೆ

ಇದಕ್ಕೂ ಮೊದಲು ೩.೩೦ ಗಂಟೆಗೆ ಇತ್ತೀಚೆಗೆ ಭರವಸೆ ಹುಟ್ಟಿಸುವ ರೀತಿಯಲ್ಲಿ ಬರೆಯುವ ಯುವ ಕವಿಗಳು ಭಾಗವಹಿಸುವ ಕವಿಗೊಷ್ಟಿ ನಡೆಯಲಿದೆ ಡಾ ಲೋಕೇಶ ಅಗಸನಕಟ್ಟೆ ಅವರು ಚಾಲನೆ ನೀಡುವ ಕವಿಗೊಷ್ಟಿಯ ಅಧ್ಯಕ್ಷತೆಯನ್ನು ಬಿ ಪೀರ್‌ಭಾಷಾ ವಹಿಸುವರು. ಡಾ ವಿನಯಾ , ಅರುಣ ಜೋಳದಕೂಡ್ಲಗಿ, ಡಾ ಬಸು ಬೇವಿನಗಿಡದ , ಎಂ ಡಿ ಒಕ್ಕುಂದ , ಬಸವರಾಜ ಹೂಗಾರ , ಡಾ ಅನಸೂಯ ಕಾಂಬಳೆ, ವಿ ಹರಿನಾಥ್ ಬಾಬು, ವೀರಣ್ನ ಮಡಿವಾಳರ, ಕಾವ್ಯಶ್ರೀ, ಚನ್ನಪ್ಪ ಅಂಗಡಿ, ಸುನಂದಾ ಕಡಮೆ, ಸುಧಾ ಚಿದಾನಂದಗೌಡ, ಶ್ರೀದೇವಿ ಕೆರೆಮನೆ , ಗಣೇಶ ಹೊಸ್ಮನೆ, ವಿಜಯಕಾಂತ ಪಾಟೀಲ, ಶೌಕತ್‌ಅಲಿ ಮೇಗಿಲಮನಿ, ಬಸವರಾಜ ಹೃತ್ಸಾಕ್ಷಿ, ಸೈಪ್ ಜಾನ್ಸೆ ಕೊಟ್ಟೂರ್, ಬಸವರಾಜ ಹಳ್ಳಿ, ಶರೀಫ್ ಹಸಮಕಲ್, ಚೈತ್ರಾ ಬೇವಿನಗಿಡದ, ಸ್ಮಿತಾ ಮಾಕಳ್ಳಿ , ಸೀಮಾ ಸಮತಳ, ವಿಠಲ್ ದಳವಾಯಿ, ನಾಗೇಶ ನಾಯಕ, ಲತೀಶ್, ಕೃಷ್ಣಮೂರ್ತಿ, ನಾಗರಾಜ ಬಣಕಾರ ಕವಿತಾ ವಾಚನ ಮಾಡುವರು ... ಕಾವ್ಯ ಪಿ ಕೆ ಕವಿಗೊಷ್ಟಿಯ ನಿರ್ಹಹಣೆ ಮಾಡುವರು..

ನೀವು ಈ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಇದು ನನ್ನ ವೈಯಕ್ತಿಕ ಕರೆ ಬನ್ನಿ

Wednesday, March 28, 2012

‘ಮೂತ್ರ ರಾಜಕೀಯ’

ಬಿ ಎಮ್ ಬಶೀರ್
ಮಾರ್ಚ್ 28, 2008 ರಂದು ಬರೆದ ಲೇಖನ. ಅಪೌಷ್ಟಿಕತೆಯ ಕುರಿತಂತೆ ಚರ್ಚೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ನಿಮ್ಮೆದುರಿಗಿಟ್ಟಿದ್ದೇನೆ.
ಸಾಧಾರಣವಾಗಿ ಮನುಷ್ಯನ ಬದುಕಿನಲ್ಲಿ ‘ಮೂತ್ರ’ ಮಹತ್ವವನ್ನು ಪಡೆದುಕೊಳ್ಳುವುದು ಅದರ ವಿಸರ್ಜನೆಗೆ ಕಷ್ಟವಾದಾಗ ಮಾತ್ರ. ನಮ್ಮ ದೇಹ ತನಗೆ ಬೇಡವಾದ ತ್ಯಾಜ್ಯವನ್ನು ದ್ರವ ರೂಪದಲ್ಲಿ ಹೊರಚೆಲ್ಲುವುದನ್ನೇ ನಾವು ಮೂತ್ರ ಎಂದು ಕರೆಯುತ್ತಾ ಬಂದಿದ್ದೇವೆ. ಆರೋಗ್ಯವನ್ನು ರಕ್ಷಿಸಿಕೊಳ್ಳುವುಲ್ಲಿ ಈ ಮೂತ್ರ ವಿಸರ್ಜನೆ ವ್ಯವಸ್ಥೆ ಭಾರೀ ಮಹತ್ವವನ್ನು ಪಡೆದಿದೆ. ಇಂತಹ ವಿಸರ್ಜನೆಗೊಂಡ ಮೂತ್ರವನ್ನು ‘ಸಂಸ್ಕೃತಿ’ಯ ಹೆಸರಿನಲ್ಲಿ, ‘ಧರ್ಮ’ದ ಹೆಸರಿನಲ್ಲಿ ಮತ್ತೆ ಕುಡಿಸುವ ಪ್ರಯತ್ನ ನಡೆದರೆ? ಅದೂ ದನದ ‘ಮೂತ್ರ’ವನ್ನು? ಸಾಧಾರಣವಾಗಿ ದನದ ಸೆಗಣಿ, ಮೂತ್ರ ಇತ್ಯಾದಿ ತೆಂಗಿನ ತೋಟಕ್ಕೆ, ಮರಗಿಡಗಳಿಗೆ ಬಳಸಿಕೊಂಡು ಬಂದ ದೇಶ ನಮ್ಮದು. ಮನುಷ್ಯರಿಗೂ ಮರಗಿಡಗಳಿಗೂ ವ್ಯತ್ಯಾಸವೇ ತಿಳಿಯದ, ಮನುಷ್ಯನನ್ನು ಮರಗಿಡಗಳಿಗಿಂತಲೂ ಕೀಳಾಗಿ ಕಂಡ ಒಂದು ಗುಂಪು ಇದೀಗ ‘ಮೂತ್ರ’ವನ್ನು ಔಷಧಿ ಎಂದು ಕುಡಿಸುವ ಪ್ರಯತ್ನದಲ್ದಿ. ಎಳೆ ಮಕ್ಕಳ ತುಟಿಯಿಂದ ಹಾಲನ್ನು ಕಿತ್ತು, ಹಸಿದವರ ಕೈಯಿಂದ ಅವರ ಆಹಾರವನ್ನು ಕಿತ್ತುಕೊಂಡು ಅದಕ್ಕೆ ಬದಲಾಗಿ ಮೂತ್ರವನ್ನು ಕುಡಿಯಿರಿ ಎಂದು ಸಲಹೆ ನೀಡುತ್ತಿದೆ. ತನ್ನ ಈ ಮೂತ್ರ ರಾಜಕೀಯಕ್ಕೆ ಆರೋಗ್ಯ ಕ್ಷೇತ್ರವನ್ನು, ಪ್ರಜಾಸತ್ತಾತ್ಮಕ ಸರಕಾರವನ್ನು ಬಳಸುತ್ತಿದೆ. ಕಳೆದ ಫೆಬ್ರವರಿಯಲ್ಲಿ ಉತ್ತರಖಂಡದ ಬಿಜೆಪಿ ಸರಕಾರ ದನದ ಹಾಲಿನಂತೆಯೇ ಮೂತ್ರವನ್ನು ಸಂಸ್ಕರಿಸಿ, ರಕ್ಷಿಸಿಡುವ ಕುರಿತು ಘೋಷಣೆ ಮಾಡಿತು. ದನದ ಡೈರಿಯಂತೆಯೇ ಮೂತ್ರದ ಡೈರಿಯನ್ನ ಮಾಡಿ ಅದನ್ನು ಆಯುರ್ವೇದಿಕ್ ಫಾರ್ಮಸಿಗೆ ಮಾರುವುದು ಈ ಸರಕಾರದ ಯೋಜನೆಯಂತೆ. ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಕೂಡಾ ಈ ಮೂತ್ರ ಕುಡಿಸುವ ರಾಜಕೀಯದಲ್ಲಿ ರಾಘವೇಶ್ವರ ಸ್ವಾಮೀಜಿಯ ಜೊತೆಗೆ ಶಾಮೀಲಾಗಿದ್ದರು ಮಾತ್ರವಲ್ಲ, ಬಜೆಟ್ ಹಣವನ್ನು ಅದಕ್ಕೆ ಮೀಸಲಿರಿಸಿದ್ದರು.

ದನದ ಮೂತ್ರವನ್ನು ಔಷಧಿಯಾಗಿ ಬಳಸುವ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳುವುದು ಸಾಧ್ಯವೇ ? ಅದನ್ನು ಔಷಧಿಯಾಗಿ ಬಳಸಬಹುದು ಎಂದು ಘೋಷಿಸಬೇಕಾದವರು ತಜ್ಞ ವೈದ್ಯರೇ ಹೊರತು, ರಾಜಕಾರಣಿಗಳೋ, ಸಂಘಪರಿವಾರದ ನಾಯಕರೋ ಅಲ್ಲ. ವೈದ್ಯರ ಕೆಲಸವನ್ನು ರಾಜಕಾರಣಿಗಳು ಮಾಡುವಂತಿಲ್ಲ. ಔಷಧಿಗಳಿಗೆ, ವೈದ್ಯಕೀಯಕ್ಕೆ ಅದರದೇ ಆದ ಚೌಕಟ್ಟುಗಳಿವೆ. ನೀತಿ ಸಂಹಿತೆಗಳಿವೆ. ಈಗಾಗಲೇ ಆಯುರ್ವೇದ ಔಷಧ ತಜ್ಞರ ಕುರಿತಂತೆಯೇ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಆಯುರ್ವೇದದ ಹೆಸರಲ್ಲಿ ನಕಲಿ ಔಷಧಿ ಮಾರಾಟ ಸದನದಲ್ಲಿ ಗದ್ದಲಕ್ಕೆ ಕಾರಣವಾಗಿತ್ತು. ಹೀಗಿರುವಾಗ, ಒಂದು ಸರಕಾರ ಏಕಾಏಕಿ ಮೂತ್ರವನ್ನು ಸಂಗ್ರಹಿಸುವ, ಸಂಸ್ಕರಿಸುವ ಮತ್ತು ಅದನ್ನು ಔಷಧಿಗೆ ಬಳಸುವ ಒತ್ತಡ ಎಷ್ಟರ ಮಟ್ಟಿಗೆ ಸರಿ? ಕೆಲವು ಸರಕಾರಗಳು ದನದ ಮೂತ್ರದಲ್ಲಿ ಔಷಧೀಯ ಗುಣಗಳಿವೆಯೇ ಎಂದು ಸಂಶೋಧಿಸಲೆಂದೇ ಕೆಲವು ತಜ್ಞರನ್ನು ನೇಮಿಸಿ, ಅವರಿಗೆ ಒಂದಿಷ್ಟು ದುಡ್ಡು, ಫಂಡು ನೀಡುತ್ತಿವೆ. ಇನ್ನು ಮುಂದೆ ದನದ ಸೆಗಣಿಯಲ್ಲಿ ಪ್ರೊಟೀನ್ ಇದೆಯೇ? (ಗೋಮಾಂಸದ ಬದಲಿಗೆ ತಿನ್ನುವುದಕ್ಕೆ ಕೊಡಬಹುದಲ್ಲ), ದನದ ಎಂಜಲಿನಲ್ಲಿ ಏಡ್ಸ್‌ಗೆ ಔಷಧಿಯಿದೆಯೇ? ಮೊದಲಾದ ಸಂಶೋಧನೆಯನ್ನು ನಡೆಸುವುದಕ್ಕೂ ಈ ಸರಕಾರಗಳು ಮುಂದಾಗಬಹುದು. ಸಂಶೋಧನೆ ನಡೆಸುವುದಕ್ಕೇನಾಗಬೇಕು?

ಸರಕಾರ ಸಂಶೋಧನೆಗಳನ್ನು ನಡೆಸಲಿ, ರಾಜಕಾರಣಿಗಳು ಬೇಕಾದರೆ ಕಡಾಯಿಗಟ್ಟಲೆ ದನದ ಮೂತ್ರವನ್ನು ಇಟ್ಟುಕೊಂಡು ಅದನ್ನೇ ದಿನನಿತ್ಯ ಕುಡಿಯುವುದಕ್ಕೆ, ಸ್ನಾನ ಮಾಡುವುದಕ್ಕೆ, ಬಟ್ಟೆ ಒಗೆಯುವುದಕ್ಕೆ ಬಳಸಿಕೊಳ್ಳಲಿ. ಆದರೆ ಔಷಧಿಯಂತಹ ವಸ್ತುವಾಗಿ ಮೂತ್ರವನ್ನು ಬಳಸುವುದಕ್ಕೆ ಮೊದಲು ಅದನ್ನು ವೈದ್ಯಕೀಯ ರಂಗ ಅಧಿಕೃತವಾಗಿ ದೃಢಪಡಿಸಬೇಕು. ಮೂತ್ರ ಔಷಧಿ ಎನ್ನುವುದು ಈವರೆಗೆ ಯಾವುದೇ ತಜ್ಞರಿಂದ, ವೈದ್ಯಕೀಯ ಕ್ಷೇತ್ರದಿಂದ ಅಧಿಕೃತವಾಗಿ ದೃಢೀಕರಣಗೊಂಡಿಲ್ಲ. ಹೀಗಿರುವಾಗ, ಒಂದು ಸರಕಾರದ ನೇತೃತ್ವದಲ್ಲಿ ಆಯುರ್ವೇದ ಫಾರ್ಮಸಿಗಳಿಗೆ ದನದ ಮೂತ್ರವನ್ನು ಪೂರೈಕೆ ಮಾಡುವುದು ಎಷ್ಟು ಸರಿ?

ಸ್ವಾಮೀಜಿಗಳು ಹೋದಲ್ಲಿ, ಬಂದಲ್ಲಿ ‘ಮೂತ್ರ ಔಷಧಿ’ ಎಂದು ಘೋಷಣೆ ಮಾಡುವುದರಿಂದ ಆಗುತ್ತಿರುವ ಅನಾಹುತಗಳು ಹಲವೆಡೆ ಬೆಳಕಿಗೆ ಬಂದಿವೆ. ಮೂತ್ರವೆನ್ನುವುದು ತ್ಯಾಜ್ಯ. ಪ್ರಾಣಿಗಳ ತ್ಯಾಜ್ಯವನ್ನು ಮನುಷ್ಯ ಮತ್ತೆ ಉಪಯೋಗಿಸುವುದರಿಂದ ಆಗುವ ಅನಾಹುತಗಳೇನು ಎನ್ನುವುದನ್ನು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಮೂತ್ರ ಸೇವನೆಯಿಂದ ಕಿಡ್ನಿಗೆ ನೇರ ಹಾನಿಯಿದೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಸ್ವಾಮೀಜಿಗಳ ಮಾತು ನಂಬಿ ಮೂತ್ರ ಸೇವಿಸಿದ ಹಲವರು ಕಿಡ್ನಿ ತೊಂದರೆಯಿಂದ ಆಸ್ಪತ್ರೆ ಸೇರಿದ್ದಾರೆ. ರಾಘವೇಶ್ವರ ಸ್ವಾಮೀಜಿಯವರ ದೇಹವನ್ನೇ ನೋಡಿ. ಅದು ದನದ ಮೂತ್ರ ಸೇವಿಸಿದ ದೇಹದಂತೆ ಕಾಣುತ್ತಿದೆಯೆ? ದನದ ಹಾಲು, ಮೊಸರು, ತುಪ್ಪ, ಬೆಣ್ಣೆ ಇತ್ಯಾದಿಗಳನ್ನು ತಿಂದು ಸದೃಢವಾಗಿ ಕೊಬ್ಬಿದ ದೇಹ ಅದು. ಅವರು ದಿನಕ್ಕೆ ಎಷ್ಟು ಬಾರಿ ಗೋಮೂತ್ರವನ್ನು ಸೇವಿಸುತ್ತಿದ್ದಾರೆ ಎನ್ನುವುದನ್ನು ಯಾವತ್ತಾದರೂ ಬಹಿರಂಗಪಡಿಸಿದ್ದಾರೆಯೇ? ಗೋಮೂತ್ರವನ್ನು ಔಷಧಿಯಾಗಿ ಬಿಂಬಿಸಲು ಹೊರಡುತ್ತಿರುವ ನಿಜವಾದ ಉದ್ದೇಶ ಏನು ಎನ್ನುವುದು ಎಲ್ಲರಿಗೂ ತಿಳಿದಿದೆ. ಗೋವನ್ನು ರಾಜಕೀಯ ಶಕ್ತಿಯನ್ನಾಗಿಸಿ, ಗೋಮಾಂಸ ಸೇವಿಸುವವರ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುವುದಕ್ಕಾಗಿ ಗೋಮೂತ್ರವನ್ನು ಔಷಧಿಯಾಗಿಸುವ ಪ್ರಯತ್ನ ನಡೆಯುತ್ತಿದೆ. ವೈದ್ಯಕೀಯ ಕ್ಷೇತ್ರ ಇದರ ವಿರುದ್ಧ ಸ್ಪಷ್ಟವಾಗಿ ಮಾತನಾಡಬೇಕಾಗಿದೆ. ತಜ್ಞರು ಇದರ ವಿರುದ್ಧ ನ್ಯಾಯಾಲಯಕ್ಕೆ ತೆರಳಬೇಕಾಗಿದೆ. ಗೋಮೂತ್ರದಿಂದ ಆರೋಗ್ಯದ ಮೇಲಾಗುವ ಪರಿಣಾಮವೇನು ಎನ್ನುವುದರ ಕುರಿತಂತೆ ಜನಜಾಗೃತಿಯನ್ನು ಮಾಡಬೇಕಾಗಿದೆ. ಸ್ವಾಮೀಜಿಗಳು, ರಾಜಕಾರಣಿಗಳು ತಮ್ಮ ತಮ್ಮ ಕ್ಷೇತ್ರವನ್ನು ಬಿಟ್ಟು, ತಮ್ಮ ರಾಜಕಾರಣಕ್ಕಾಗಿ ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶಿಸಿ ಅದನ್ನು ಕುಲಗೆಡಿಸುವುದನ್ನು ತಡೆಯಬೇಕಾಗಿದೆ.

ಗೋಮೂತ್ರ ಔಷಧವಲ್ಲ. ಗೋವಿನ ಹಾಲು, ತುಪ್ಪ, ಬೆಣ್ಣೆ, ಮೊಸರು ಔಷಧ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದಂತಹ ಬಡ ದೇಶಕ್ಕೆ ಗೋಮಾಂಸ ಅತಿ ಪರಿಣಾಮಕಾರಿ ಔಷಧ. ಬಡತನ, ಅಪೌಷ್ಠಿಕತೆ ಅತಿ ದೊಡ್ಡ ಕಾಯಿಲೆಯಾಗಿ ಈ ದೇಶವನ್ನು ಕಾಡುತ್ತಿದೆ. ದೇಶದಲ್ಲಿ ಕ್ಷಯ ರೋಗ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಈಗಾಗಲೇ ವರದಿಗಳು ಬಹಿರಂಗಪಡಿಸಿವೆ. ಪ್ರೋಟಿನ್‌ನ ಕೊರತೆಯಿಂದ ಕ್ಷಯ ರೋಗಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಕುರಿ, ಕೋಳಿ ಈ ದೇಶದಲ್ಲಿ ಅತಿ ದುಬಾರಿಯಾಗಿರುವಾಗ, ಅತ್ಯಂತ ಅಗ್ಗವಾಗಿ, ಅತ್ಯುತ್ತಮ ಆಹಾರವಾಗಿ ಗೋಮಾಂಸ ನಮ್ಮ ಮುಂದಿದೆ. ಗೋಮಾಂಸ ಕ್ಷಯ ರೋಗಕ್ಕೆ ರಾಮ ಬಾಣವಾಗಿದೆ. ಸಂಘ ಪರಿವಾರದ ರಾಜಕೀಯದಿಂದಾಗಿ ಇಂದು ಗೋಮಾಂಸವೂ ದುಬಾರಿಯಾಗುವಂತಹ ಸನ್ನಿವೇಶ ಎದುರಾಗಿದೆ. ಈ ಕಾರಣದಿಂದ ತಕ್ಷಣ ಗೋಮಾಂಸವನ್ನು ಜನಪ್ರಿಯಗೊಳಿಸುವ ಕಾರ್ಯಕ್ಕೆ ಸರಕಾರಗಳು ಮುಂದಾಗಬೇಕು. ಗೋಮಾಂಸವನ್ನು ಆಹಾರವಾಗಿ ಸ್ವೀಕರಿಸುವವರಿಗೆ ಅದು ಸುಲಭ ದರದಲ್ಲಿ ಮಾರುಕಟ್ಟೆಯಲ್ಲಿ ಸಿಗುವುದಕ್ಕೆ ವ್ಯವಸ್ಥೆ ಮಾಡಬೇಕಾಗಿದೆ. ಗೋಮಾಂಸವನ್ನು ಜನಪ್ರಿಯಗೊಳಿಸುವುದರಿಂದ ಅಪೌಷ್ಟಿಕತೆ, ಆಹಾರದ ಕೊರತೆ ಮೊದಲಾದವುಗಳಿಗೆ ಒಂದು ಪರಿಹಾರ ದೊರಕಿದಂತಾಗುತ್ತದೆ. ಗೋಮೂತ್ರದಲ್ಲಿ ಔಷಧೀಯ ಗುಣಗಳಿವೆಯೇ? ಸೆಗಣಿಯಲ್ಲಿ ಆಹಾರದ ಗುಣಗಳಿವೆಯೇ? ಎಂಬ ಹಾಸ್ಯಾಸ್ಪದ ಸಂಶೋಧನೆಗಳಿಗೆ ಕೋಟಿಗಟ್ಟಲೆ ಸುರಿಯುವುದಕ್ಕಿಂತ ಅತ್ಯುತ್ತಮ ಗೋಮಾಂಸವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯಕ್ಕೆ ಆ ಹಣವನ್ನು ವ್ಯಯ ಮಾಡಲಿ. ಭಾರತದ ಗೋಮಾಂಸ ವಿಶ್ವದಲ್ಲೇ ಜನಪ್ರಿಯ. ನಮ್ಮ ಮಕ್ಕಳೂ ಆ ಗೋಮಾಂಸವನ್ನು ತಿಂದು ಗೋವಿನಂತಹ ಗುಣಗಳನ್ನು ತಮ್ಮದಾಗಿಸಿಕೊಳ್ಳಲಿ.

ಅವೈಜ್ಞಾನಿಕ ಬಜೆಟ್, ಭ್ರಷ್ಟಾಚಾರ ಮತ್ತು ಅಪೌಷ್ಟಿಕತೆ

-ವೈ ಮರಿಸ್ವಾಮಿ

ತಮಿಳುನಾಡು ಮೂಲದ ‘ಕ್ರಿಸ್ಟಿ ಪ್ರೈಡ್ ಗ್ರಾಮ್ ಇಂಡಸ್ಟ್ರಿ’ ಎನ್ನುವ ಖಾಸಗಿ ಕಂಪನಿಯು ಅಂಗನವಾಡಿ ಕೇಂದ್ರಗಳಿಗೆ ವಿತರಿಸುವ ಪೂರಕ ಪೌಷ್ಟಿಕ ಆಹಾರ ಕಳಪೆ ಗುಣಮಟ್ಟದಾಗ್ದಿದ್ದು, ಅದರ ಸೇವನೆಯಿಂದ ರಾಜ್ಯದ ಲಕ್ಷಾಂತರ ಮಕ್ಕಳು ಅಜೀರ್ಣ, ಹೊಟ್ಟೆನೋವು, ವಾಂತಿ- ಭೇದಿಯಂತಹ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎನ್ನುವ ವಿಚಾರ, ಸಾಮಾಜಿಕ ಪರಿವರ್ತನಾ ಜನಾಂದೋಲನವು ರಾಜ್ಯದ ಏಳು ಜಿಲ್ಲೆಗಳಲ್ಲಿ ಸಂಘಟಿಸಿದ್ದ ಸಾರ್ವಜನಿಕ ಅಹವಾಲುಗಳ ಮುಖಾಂತರ ದೊಡ್ಡ ಮಟ್ಟದಲ್ಲಿ ಅನಾವರಣಗೊಂಡಿತ್ತು. ಅಂಗನವಾಡಿ ಕೇಂದ್ರಗಳಿಗೆ ಹೋಗುವ ಮಕ್ಕಳು ಮತ್ತು ಅವರ ಪೋಷಕರು ಸ್ವತಃ ಜನಾಂದೋಲನದ ಸಾರ್ವ ಜನಿಕ ಅಹವಾಲುಗಳಲ್ಲಿ ಭಾಗವಹಿಸಿ ಈ ಹೇಳಿಕೆ ನೀಡಿದ್ದರು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಕೊಡುವ ಪೂರಕ ಪೌಷ್ಟಿಕ ಆಹಾರ ತಂದೊಡ್ಡುವ ರೋಗ-ರುಜಿನಗಳಿಗೆ ಹೆದರಿ ಲಕ್ಷಾಂತರ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗಳಿಗೆ ಕಳುಹಿಸುವುದನ್ನೇ ನಿಲ್ಲಿಸಿರುವ ವಿಷಯವೂ ಇದೇ ಸಂದರ್ಭದಲ್ಲಿ ಬಹಿರಂಗವಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಗಸ್ಟ್ 2011ರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 71,605 ಮಕ್ಕಳು ತೀವ್ರ ಅಪೌಷ್ಟಿಕತೆಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ವಿವರವೂ ದೊರಕಿತು.ಇದೇ ಸಂದಭರ್ದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕೊಂದರಲ್ಲೇ ಮೂರು ಮಕ್ಕಳು ಅಪೌಷ್ಟಿಕತೆಗೆ ಬಲಿಯಾದ ಹೃದಯ ಹಿಂಡುವ ಘಟನೆಯೂ ನಡೆಯಿತು. ರಾಜ್ಯದ ಜನಪರ ಸಂಘಟನೆಗಳ ಮುಖಂಡರು, ಮಕ್ಕಳ ಹಕ್ಕುಗಳ ಸಂಘ ಸಂಸ್ಥೆಗಳು, ಮಾನವ ಹಕ್ಕುಗಳ ಹೋರಾಟಗಾರರು, ಶಿಕ್ಷಣ ತಜ್ಞರು, ಪೌಷ್ಟಿಕ ಆಹಾರ ತಜ್ಞರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಾಧ್ಯಮಗಳು ಒಕ್ಕೊರಲಿನಿಂದ ಈ ಸಾವುಗಳನ್ನು ಖಂಡಿಸುವುದರ ಜೊತೆಗೆ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರದ ಹೆಸರಿನಲ್ಲಿ ವಿತರಿಸುತ್ತಿರುವ ವಿಷ ಪಾಷಾಣ ವನ್ನು ನಿಲ್ಲಿಸುವಂತೆ ಆಗ್ರಹಿಸಿದರು.

ಆದರೆ ಸರಕಾರದ ಕಲ್ಲು ಹೃದಯ ಕರಗಲಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಂತೂ ಕದಲಲೇ ಇಲ್ಲ. ಈ ಸಾವುಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಷ್ಟೇ ಗುರುತರವಾದ ಸಮಾನ ಜವಾಬ್ಧಾರಿ ಯುಳ್ಳ ಆರೋಗ್ಯ ಇಲಾಖೆ ಸ್ಪಂದಿಸಲೇ ಇಲ್ಲ.ಸರಕಾರದ ಈ ಅಮಾನವೀಯವಾದ ನಿಲುವನ್ನು ಪ್ರಶ್ನಿಸಿ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವಿಮೋಚನಾ ಸಂಸ್ಥೆಯ ಸಂಸ್ಥಾಪಕರಾದ ಬಿ.ಎಲ್.ಪಾಟೀಲ್‌ರವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿದರು.

ಆಹಾರದ ಹಕ್ಕಿನ ಪ್ರಕರಣಗಳ ಉಲ್ಲಂಘನೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಆಯುಕ್ತರ ರಾಜ್ಯ ಸಲಹೆಗಾರರಾದ ವಕೀಲ ಕ್ಲಿಪ್ಟನ್ ರೊಜಾರಿಯೋರವರು ಈ ಮೊಕದ್ದಮೆಯಲ್ಲಿ ತೊಡಗಿಕೊಂಡು ಸಮರ್ಥವಾಗಿ ವಾದ ಮಂಡಿಸುವುದರ ಮೂಲಕ ರಾಜ್ಯದ ಹೈಕೋರ್ಟ್‌ನ ಗಮನ ಸೆಳೆದರು. ಪರಿಣಾಮವಾಗಿ,ಶಿಶು ಮರಣ ಹಾಗೂ ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಯೋಜನೆ ರೂಪಿಸುವಂತೆ ಹೈಕೋರ್ಟ್ ಸರಕಾರಕ್ಕೆ ಆದೇಶಿಸಿತು.ಸದರಿ ಸಮಿತಿಯಲ್ಲಿ ಸರಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಸೇರಿಸಿಕೊಳ್ಳುವಂತೆ ಮಾಡಲು ನಾವು ಕೆಲವು ಸ್ನೇಹಿತರು ಗುದ್ದಾಟ ವನ್ನೇ ಮಾಡಬೇಕಾಯಿತು.

ಅಂತಿಮವಾಗಿ, ಸಮಸ್ಯೆಯ ಸಮಗ್ರ ಅಧ್ಯಯನ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಸಮರ್ಪಕ ಅನು ಷ್ಠಾನದ ಕುರಿತು ಸರಕಾರಕ್ಕೆ ಶಿಫಾರಸು ಮಾಡಲು ಆರೋಗ್ಯ ಮತ್ತು ಪೌಷ್ಟಿಕತೆ ಸಮಿತಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ವಿಕಲಚೇತನ, HIV ಪೀಡಿತ ಹಾಗೂ ವಲಸೆ ಹೋಗುವ ಮಕ್ಕಳ ಸಮಿತಿ ಮತ್ತು ಸಮನ್ವಯತೆ ಹಾಗೂ ಮೇಲ್ವಿ ಚಾರಣೆ ಸಮಿತಿ ಎನ್ನುವ ಮೂರು ಉಪಸಮಿತಿ ಗಳನ್ನು ರಚಿಸಲಾಯಿತು.

ಅಕ್ಟೋಬರ್ 31, 2011ರಂದು ಅಸ್ತಿತ್ವಕ್ಕೆ ಬಂದ ಈ ಸಮಿತಿಗಳು ಹಲವಾರು ಸಭೆೆಗಳನ್ನು ನಡೆಸಿ, ಜನವರಿ 2012ರಲ್ಲಿ ಕ್ರೋಡೀಕೃತ ವರದಿ ಯನ್ನು ಸರಕಾರಕ್ಕೆ ಸಲ್ಲಿಸಿವೆ. ಸಮಿತಿಯ ಶಿಫಾ ರಸುಗಳನ್ನು ಒಪ್ಪಿಕೊಂಡಿರುವುದಾಗಿ ಜನವರಿ ತಿಂಗಳಿನಲ್ಲಿ ಹೈಕೋರ್ಟ್ ಮುಂದೆ ಒಪ್ಪಿಕೊಂಡಿ ರುವ ರಾಜ್ಯ ಸರಕಾರ, ಕಳೆದ ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಸಮಸ್ಯೆಯ ಪರಿಹಾರಕ್ಕೆ ಯಾವುದೇ ಪ್ರಾಮಾಣಿಕ ಮತ್ತು ಗಂಭೀರ ಪ್ರಯತ್ನ ನಡೆಸದಿರುವುದು ಖಂಡನೀಯ.

ಈಗಾಗಲೇ ಗುರುತಿಸಿರುವ ತೀವ್ರ ಅಪೌಷ್ಟಿಕ ಮಕ್ಕಳಿಗೆ ಸಮರೋಪಾದಿಯಲ್ಲಿ ವೈದ್ಯಕೀಯ ನೆರವು ಹಾಗೂ ಇತರೆ ಅಗತ್ಯ ಸೌಕರ್ಯ ಒದಗಿಸಬೇಕು, 0-6 ವರ್ಷದೊಳಗಿನ ಎಲ್ಲಾ ಮಕ್ಕಳು ಮರು ಸಮೀಕ್ಷೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗಳ ಜಂಟಿ ಸಹಯೋಗದಲ್ಲಿ ನಡೆಯಬೇಕು, ಅಂಗನವಾಡಿಗೆ ಬರುವ ಮಕ್ಕಳಿಗೆ ಪ್ರಾದೇಶಿಕ ಆಹಾರ ಪದ್ಧತಿಗನುಗುಣವಾಗಿ ಬೇಯಿಸಿದ ಬಿಸಿ ಆಹಾರ ಕೊಡಬೇಕು, ಅಪೌಷ್ಟಿಕ ಮಕ್ಕಳಿರುವ ಎಲ್ಲಾ ಕುಟುಂಬಗಳಿಗೆ ಅಂತ್ಯೋ ದಯ ರೇಷನ್ ಕಾರ್ಡ್ ಒದಗಿಸಬೇಕು ಎನ್ನುವ ಸಮಿತಿಯ ಸದಸ್ಯರ ಪ್ರಮುಖ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರಕಾರ ಈ ಕ್ಷಣದವರೆಗೂ ಧನಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ. ನೆರೆಯ ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಂತೆ ವಾರಕ್ಕೆ ಕನಿಷ್ಠ 3 ದಿನವಾದರೂ ಮೊಟ್ಟೆ ಮತ್ತು ಹಾಲು ಒದಗಿಸುವಂತೆ ನಿರಂತರ ವಾಗಿ ಒತ್ತಾಯಿಸುತ್ತ ಬಂದಿದ್ದರೂ, ನಿರೀಕ್ಷಿತ ಸ್ಪಂದನೆ ದೊರೆತಿಲ್ಲ.

ಸಾಮಾಜಿಕ ಪರಿವರ್ತನಾ ಜನಾಂದೋಲನದ ಹೋರಾಟಕ್ಕೆ ಮಣಿದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತೀವ್ರ ಅಪೌಷ್ಟಿಕ ಮಕ್ಕಳಿಗೆ ಮಾತ್ರ ಎರಡು ತಿಂಗಳ ಕಾಲ ಪ್ರಯೋಗಾತ್ಮಕವಾಗಿ ಮೊಟ್ಟೆ ಮತ್ತು ಹಾಲು ವಿತರಿಸಲು ಮುಂದಾದ ಸರಕಾರ, ಈ ಯೋಜನೆಯನ್ನು ಎರಡು ತಿಂಗಳ ಬದಲು ಕೇವಲ 50 ದಿನಕ್ಕೆ ಮೊಟಕುಗೊಳಿಸಿತು. ಆದರೂ, ಈ 50 ದಿನಗಳ ಪ್ರಯತ್ನದಿಂದ ಸಾಕಷ್ಟು ಮಕ್ಕಳ ಆರೋಗ್ಯ ಸುಧಾರಿಸಿದೆ ಎಂದು ಸ್ವತಃ ಸರಕಾರವೇ ಒಪ್ಪಿಕೊಂಡಿದೆ.

ಶಿಶು ಮರಣ ಹಾಗೂ ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಹೈಕೋರ್ಟ್ ಆದೇಶದ ಉನ್ನತ ಸಮಿತಿಯ ಶಿಫಾರಸನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ ಸರಕಾರ ಸೆಪ್ಟೆಂಬರ್ 2011ರ ನಂತರ ಸತತ ವಾಗಿ ಅಪೌಷ್ಟಿಕ ಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ನಿರೂಪಿಲು ಅಂಕಿ- ಸಂಖ್ಯೆಗಳನ್ನು ತಿರುಚುತ್ತಿರುವುದು ಆತ್ಮಘಾತಕ ಕೃತ್ಯವಾಗಿದೆ.

2011ರ ಆಗಸ್ಟ್‌ನಲ್ಲಿ 71,605ರಷ್ಟಿದ್ದ ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ, ಸೆಪ್ಟೆಂಬರ್‌ನಲ್ಲಿ 61,029, ಅಕ್ಟೋಬರ್‌ನಲ್ಲಿ 62,903, ನವೆಂ ಬರ್‌ನಲ್ಲಿ 61,142, ಡಿಸೆಂಬರ್‌ನಲ್ಲಿ 61,564 ಹಾಗೂ 2012 ಜನವರಿಯಲ್ಲಿ 58,572ಕ್ಕೆ ಕುಸಿದಿದೆ.ಸರಕಾರದ ಆತ್ಮವಂಚನೆಯ ಪರಮಾ ವಧಿ ಎನ್ನುವಂತೆ, ಕಳೆದ 6 ತಿಂಗಳ ಅವಧಿಯಲ್ಲಿ ತೀವ್ರ ಅಪೌಷ್ಟಿಕ ಮಕ್ಕಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿದ್ದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚು ಇಳಿಮುಖವಾಗಿದೆ. ಉದಾಹರಣೆಗೆ, 2011ರ ಆಗಸ್ಟ್‌ನಲ್ಲಿ ಬಾಗಲಕೋಟೆ ಜಿಲ್ಲೆ ಯಲ್ಲಿ 8957, ಬಿಜಾಪುರ ಜಿಲ್ಲೆಯಲ್ಲಿ 8983, ಬಳ್ಳಾರಿ ಜಿಲ್ಲೆಯಲ್ಲಿ 6411ರಷ್ಟಿದ್ದ ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ, 2012ರ ಜನವರಿ ತಿಂಗಳಿನಲ್ಲಿ ಬಾಗಲಕೋಟೆ ಜಿಲ್ಲೆ ಯಲ್ಲಿ 2925, ಬಿಜಾಪುರ ಜಿಲ್ಲೆಯಲ್ಲಿ 3843, ಬಳ್ಳಾರಿ ಜಿಲ್ಲೆಯಲ್ಲಿ 5045ಕ್ಕೆ ಬಂದು ನಿಂತಿದೆ.

ಸರಕಾರದ ಈ ಅಂಕಿ-ಸಂಖ್ಯೆಗಳೇ ಅವಾಸ್ತವಿಕವಾಗಿದ್ದು, ಅದರ ಆಧಾರದ ಮೇಲೆಯೇ, ಆಟ ಕಟ್ಟುವ ಕೆಲಸ ಅಚ್ಚು ಕಟ್ಟಾಗಿ ನಡೆಯುತ್ತಿದೆ. ಈ ಅದೃಶ್ಯ ಪವಾಡ ಹೀಗೇ ಮುಂದುವರಿದಲ್ಲಿ ಮುಂಬರುವ ಆರು ತಿಂಗಳಲ್ಲಿ ಕರ್ನಾಟಕ ಅಪೌಷ್ಟಿಕ ಮಕ್ಕಳ ಮುಕ್ತ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗ ಬಹುದು.ಪ್ರಸ್ತುತ ಅಂಗನವಾಡಿ ಕೇಂದ್ರದ ಫಲಾನು ಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಲಾ ಶೇ.50ರಷ್ಟು ಅನುದಾನವನ್ನು ಒದಗಿಸುತ್ತಿವೆ. ಕರ್ನಾಟಕದಲ್ಲಿ 6 ತಿಂಗಳಿನಿಂದ 6 ವರ್ಷ ದೊಳಗಿನ ಮಕ್ಕಳಿಗೆ 2+2=4 ರೂಪಾಯಿ, ಗರ್ಭಿಣಿ, ಬಾಣಂತಿಯರು ಮತ್ತು ಕಿಶೋರಿಯ ರಿಗೆ 2.50+2.50=5 ರೂಪಾಯಿ ಹಾಗೂ ಅಪೌಷ್ಟಿಕ ಮಕ್ಕಳಿಗೆ 3+3=6 ರೂಪಾಯಿ ನಿಗದಿಪಡಿಸಲಾಗಿದೆ. ಇದೇ ಘಟಕ ವೆಚ್ಚದ ಲ್ಲಿಯೇ ಆಹಾರ ಪದಾರ್ಥಗಳ ಸಾಗಾಣೆ ದಿನ ವೊಂದಕ್ಕೆ ವೆಚ್ಚ ಮತ್ತು ಉರುವಲು ವೆಚ್ಚವನ್ನು ಭರಿಸಲಾಗುತ್ತಿದ್ದು, ಈ ಘಟಕ ವೆಚ್ಚ ಅತಿ ಕಡಿಮೆಯಾಗಿದ್ದು, ಅವೈಜ್ಞಾನಿಕವಾಗಿದೆ.

ಪಕ್ಕದ ರಾಜ್ಯದ ತಮಿಳುನಾಡಿನಲ್ಲಿ ಪ್ರತಿ ಮಗುವಿಗೆ ಒಂದು ದಿನಕ್ಕೆ ವೈಜ್ಞಾನಿಕ ಘಟಕ ವೆಚ್ಚವನ್ನು ನಿಗದಿಪಡಿಸಲಾಗಿದೆ. 6 ತಿಂಗಳಿನಿಂದ 1 ವರ್ಷದೊಳಗಿನ ಮಗುವಿಗೆ ದಿನಕ್ಕೆ 5.14 ರೂಪಾಯಿ, 1 ವರ್ಷದಿಂದ 2 ವರ್ಷದ ಮಗು ವಿಗೆ 5.64 ರೂಪಾಯಿ, 2 ರಿಂದ 3 ವರ್ಷದ ಮಗುವಿಗೆ 9.14 ರೂಪಾಯಿ ಹಾಗೂ 3 ರಿಂದ 5 ವರ್ಷದ ಮಗುವಿಗೆ 9.14 ರೂಪಾಯಿಗಳನ್ನು 2010-11ನೇ ಆಯವ್ಯಯದಲ್ಲಿ ಮೀಸಲಾಗಿಡಲಾಗಿತ್ತು. ಅಪೌಷ್ಟಿಕತೆಯಿಂದ ನರಳುವ ಪ್ರತಿ ಮಗುವಿಗೆ 11.50 ರೂಪಾಯಿ, ಗರ್ಭಿಣಿ ಸ್ತ್ರೀಯರು, ಬಾಣಂತಿಯರು ಮತ್ತು ಕಿಶೋರಿಯರಿಗೆ ಪ್ರತಿ ದಿನ ತಲಾ 6.32 ರೂಪಾಯಿ ನಿಗದಿಪಡಿಸಲಾಗಿತ್ತು. ಈ ಘಟಕ ವೆಚ್ಚದಲ್ಲಿ ಮಧ್ಯಾಹ್ನದ ಊಟ ಸೇರಿಲ್ಲ ಎನ್ನುವುದು ಆ ರಾಜ್ಯದ ಮತ್ತೊಂದು ವಿಶೇಷ.

ತಮಿಳುನಾಡಿಗಿಂತಲೂ ಮಹಾರಾಷ್ಟ್ರ ಸರಕಾರ ಈ ಯೋಜನೆಗೆ ಇನ್ನೂ ಹೆಚ್ಚಿನ ಅನುದಾನ ನೀಡಿದ್ದು, ಪ್ರತಿದಿನ ಅಪೌಷ್ಟಿಕ ಮಗುವೊಂದರ ಹಾರೈಕೆಗೆ 15 ರೂಪಾಯಿ ಖರ್ಚು ಮಾಡುತ್ತಿದೆ ಎಂದು ಹೇಳುವವರಿದ್ದಾರೆ. ಇತರೆ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕ ಸರಕಾರವೂ ಸಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಿಗೆ, ಅದರಲ್ಲೂ ಬಹಳ ಮುಖ್ಯವಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಹೆಚ್ಚಿನ ಹಣಕಾಸಿನ ನೆರವು ಒದಗಿಸಬೇಕೆಂದು ಸಮಿತಿಯ ಸದಸ್ಯರು ಮನವಿ ಮಾಡಿದ್ದರೂ ಸರಕಾರ ತನ್ನ ಜಿಗುಟುತನದಿಂದ ಹೊರ ಬರುವ ಪ್ರಯತ್ನ ಮಾಡುತ್ತಿಲ್ಲ. ಅಪೌಷ್ಟಿಕ ಮಕ್ಕಳಿಗೆ ಹಾಲು, ಮೊಟ್ಟೆ ವಿತರಿಸಲು ತನ್ನ ಬಳಿ ಹಣವಿಲ್ಲ ಎಂದು ಕಳೆದ ತಿಂಗಳು ಹೈಕೋರ್ಟ್ ಮುಂದೆ ಹೇಳಿಕೆ ನೀಡಿ ಛೀಮಾರಿ ಹಾಕಿಸಿಕೊಂಡ ಸರಕಾರದ ಲಜ್ಜೆಗೇಡಿತನವನ್ನು ಇಲ್ಲಿ ಸ್ಮರಿಸಬಹುದು.

ಸಮಿತಿಯ ಸಭೆಗಳಲ್ಲಿ, ತಮಿಳುನಾಡು ಮೂಲದ ಖಾಸಗಿ ಕಂಪೆನಿ ಜೊತೆಗಿನ ಒಪ್ಪಂದ 2004ರ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ವಿರುದ್ಧವಾಗಿರುವುದರಿಂದ ಕೂಡಲೇ ಆ ಕಂಪೆನಿಯ ಜೊತೆಗಿನ ಕರಾರನ್ನು ರದ್ದುಪಡಿಸಬೇಕೆಂಬ ಬಲವಾದ ಒಕ್ಕೊರಲ ಶಿಫಾರಸು ಸದಸ್ಯರಿಂದ ವ್ಯಕ್ತವಾಗುತ್ತಿತ್ತು. ಆಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉನ್ನತ ಹಂತದ ಅಧಿಕಾರಿಗಳು ಸದಸ್ಯರ ಅಭಿಪ್ರಾಯ ಹಾಗೂ ಶಿಪಾರಸನ್ನು ಬಿಲ್‌ಕುಲ್ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಹೈಕೋರ್ಟ್‌ನ ಹೊಡೆತದಿಂದ ಕೊನೆಗೂ ಈ ಕರಾಳ ಒಪ್ಪಂದ ಇದೇ ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳಲಿದೆ.

ಇದೇ ಸಂದರ್ದಲ್ಲಿಯೇ ಖಾಸಗಿ ಕಂಪೆನಿಯ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಸರಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆದು, ಅಪೌಷ್ಟಿಕ ಮಕ್ಕಳು ಹೆಚ್ಚಲು ಕಾರಣಕರ್ತರು ಯಾರು ಎನ್ನುವ ರಾಜ್ಯದ ಜನತೆಯ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಈ ಅವ್ಯವಹಾರದಲ್ಲಿ ಶಾಮೀಲಾಗಿರುವ ಸಚಿವರು ಹಾಗೂ ಈ ಹಿಂದಿನ ಕಾರ್ಯದರ್ಶಿಗಳು ತಾಂತ್ರಿಕ ಕಾರಣಗಳಿಂದ ಬಚಾವ್ ಆಗಿದ್ದಾರೆ.

ಲೋಕಾಯುಕ್ತ ದಾಳಿ ಹೊರಗೆಡವಿದ ಮಾಹಿತಿ ಪ್ರಕಾರ ಈ ಹಗರಣ ಸುಮಾರು 1,000 ಕೋಟಿ ರೂಪಾಯಿಗಳ ದೊಡ್ಡ ಹಗರಣವಾಗಿದೆ.ಸದಾಕಾಲ ಮುಗುಳ್ನುಗುತ್ತಲೇ ಸರಕಾರದ ಮಟ್ಟದಲ್ಲಿ ಹಲವು ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೊಣೆಯನ್ನು ಹೊತ್ತಿರುವುದರಿಂದ ಕೆಲವು ತಕ್ಷಣದ ತೀರ್ಮಾನಗಳನ್ನು ತೆಗೆದುಕೊಂಡು ರಾಜ್ಯದ ಮಹಿಳೆಯರ, ಮಕ್ಕಳ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಬದುಕಿನಲ್ಲಿ ಮುಗುಳ್ನಗೆಯನ್ನು ಮೂಡಿಸಬೇಕಾಗಿದೆ.

ಈ ದಿಸೆಯಲ್ಲಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೊಸ ಕಾಯಕಲ್ಪನೀಡಲು ಪ್ರಾಮಾಣಿಕ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಾನಗಳಿಗೆ ತರಬೇಕು, ಹೈಕೋರ್ಟ್ ಆದೇಶದ ಉನ್ನತ ಸಮಿತಿ ನೀಡಿರುವ ಶಿಫಾರಸನ್ನು ನಿರ್ದಿಷ್ಟ ಕಾಲಾವಧಿಯೊಳಗೆ ಅನುಷ್ಠಾನಗೊಳಿಸಬೇಕು ಮತ್ತು ಪಕ್ಕದ ತಮಿಳುನಾಡಿಗಿಂತಲೂ ಹೆಚ್ಚಿನ ಅನುದಾನವನ್ನು ಈ ಸಾಲಿನ ಆಯವ್ಯಯದಲ್ಲಿ ನಿಗದಿಪಡಿಸಬೇಕು.ಈ ಮೂರು ವಿಷಯಗಳಿಗೆ ಸಂಬಂಧಪಟ್ಟಂತೆ ದಿಟ್ಟತನದ ನಿರ್ಧಾರವನ್ನು ಮಾನ್ಯ ಮುಖ್ಯಮಂತ್ರಿಗಳಿಂದ ನಿರೀಕ್ಷಿಸಬಹುದೇ?

-ವಾರ್ತಾಭಾರತಿ ಕೃಪೆ

Tuesday, March 27, 2012

ಇರಲಿ ಹಾಗೇ...The Death of Dido


ಚೈತ್ರಕ್ಕೆ ಮಾವು ಹೂ ತಳೆದದ್ದು
ಮೋಡದೊಳಗೆ ಮಳೆ ತುಂಬಿಕೊಂಡಿದ್ದು
ನಾಲ್ಕು ಹನಿಗೆ ಗರಿಕೆ ಚಿಗುರಿದ್ದು
ಯಾವಾಗ? ಹೇಗೆ?
ಗೊತ್ತೇ ಆಗಲಿಲ್ಲ ನನಗೆ
ಸುಂದರವಾಗಿರಲಿ ಈ ಜಗ ಹೀಗೇ...

ಕೋಶಬಿಟ್ಟ ಹುಳ ಚಿಟ್ಟೆಯಾಗಿ ಹಾರಿದ್ದು
‘ಹೊರಟೆ’ನೆಂದವ ಮತ್ತೆ ಒಳನುಸುಳಿದ್ದು
ನಗುಮುಖದೊಳಗೆ ನಿರಿಗೆ ಇಳಿದದ್ದು
ಎಂದು? ಹೇಗೆ?
ಗೊತ್ತೇ ಆಗಲಿಲ್ಲ ನನಗೆ
ಬದಲಾಗಬೇಕು ಎಲ್ಲ ಹಾಗೇ..

ನನ್ನೊಳಗೆ ನೆಲೆಯಾಗಿದ್ದ ಹಕ್ಕಿ
ಹೊರಹಾರಿದ್ದು, ಹಾರಿ ಚಿಕ್ಕೆಯಾದದ್ದು
ಚಿಕ್ಕೆ ಅನಂತವಾದದ್ದು
ಎಂದು? ಹೇಗೆ?
ತಿಳಿಯಲೇ ಇಲ್ಲ ನನಗೆ
ಸುಖವಾಗಿರಲಿ ಎಲ್ಲೋ ಹಾಗೇ...

ನಲವತ್ತರ ಆಸುಪಾಸಿನಲ್ಲಿ
ಹರೆಯದ ಹೊಳಪು ಮಾಸುತ್ತಿರುವಾಗ
ಗಲ್ಲದ ಮೇಲೊಂದು ಮೊಡವೆ
ಮೂಡಬಹುದೇ ಹೀಗೆ
ಈ ಪುಳಕ ಮರೆತುಹೋಗಿತ್ತು ನನಗೆ..

ಸಾಯುವ ದಿನಗಳ ಜೊತೆಗೇ
ಉದುರುವ ನನ್ನ ಬೆಳ್ಳಿಕೂದಲು
ಏನು ಹೇಳುತ್ತಿದೆ ಕಿವಿಯೊಳಗೆ?
ಹಕ್ಕಿ ಗೂಡಿಗೆ ದಾರವಾಗಿ
ಧನ್ಯವಾಗಲಿ ಹಾಗೇ..

ಢಾ ಎಚ್ ಎಸ್ ಅನುಪಮಾ

Sunday, March 25, 2012

ಫಟಿಂಗ ಮತ್ತು ತಾತ್ವಿಕ ಸನ್ಯಾಸಿಗಳು

ಸನತಕುಮಾರ ಬೆಳಗಲಿ

ಮನುಷ್ಯತ್ವದ ಘನತೆಯನ್ನು ಮಣ್ಣುಗೂಡಿಸುವ ಮಡೆಸ್ನಾನದ ವಿರುದ್ಧ ನಿಡುಮಾಮಿಡಿ ಸ್ವಾಮೀಜಿಯವರು ಎರಡನೆ ಸುತ್ತಿನ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಬಾರಿ ಅವರೊಂದಿಗೆ ಕರ್ನಾಟಕದ 136 ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಇಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನದಲ್ಲಿ ನಡೆಯಲಿರುವ ಬೃಹತ್ ಸಾಮೂಹಿಕ ಧರಣಿಯಲ್ಲಿ ನಾಡಿನ ವಿವಿಧ ದಲಿತ ಸಂಘಟನೆಗಳ, ಎಡಪಕ್ಷಗಳ, ರೈತ ಸಂಘಟನೆಗಳ ಮತ್ತು ಮಹಿಳಾ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಆ ಮೂಲಕ ಕರ್ನಾಟಕವನ್ನು ಶತಮಾನಗಳ ಹಿಂದೆ ಕೊಂಡೊಯ್ಯುವ ಮನುವಾದಿ, ಕೋಮುವಾದಿ ಶಕ್ತಿಗಳ ಸವಾಲಿಗೆ ಜವಾಬು ನೀಡಲಿದ್ದಾರೆ.ಮಡೆಸ್ನಾನ ಮತ್ತು ಪಂಕ್ತಿಭೇದದಂತಹ ಅಮಾನವೀಯ ಆಚರಣೆಗಳ ವಿರುದ್ಧ ಧರ್ಮಗುರುಗಳು ಹೋರಾಟಕ್ಕಿಳಿದ ಸುದ್ದಿ ಕೇಳಿ ಬೆಳಕಿನ ಕಿರಣ ಗೋಚರಿಸುತ್ತಿದೆಯಲ್ಲ ಎಂದು ಸಂತೋಷ ಉಂಟಾಗುತ್ತಿರುವಾಗಲೇ ರಾಜಾಸ್ಥಾನದ ಜೈಪುರದಿಂದ ಕಗ್ಗತ್ತಲಿನಂತಹ ಇನ್ನೊಂದು ಸುದ್ದಿ ಬಂದಿದೆ. ಧರ್ಮದ ಹೆಸರಿನಲ್ಲಿ ವ್ಯಾಪಾರ ಮಾಡುವ ಚಾರ್ ಸೌ ಬೀಸ್ ರವಿಶಂಕರ ಗುರೂಜಿ ಎಂಬಾತ ಸರಕಾರಿ ಶಾಲೆಗಳನ್ನು ಮುಚ್ಚಿ, ಅವುಗಳನ್ನು ಖಾಸಗಿಯ ವರಿಗೆ ವಹಿಸಿಕೊಡಬೇಕು ಎಂದು ಕರೆ ನೀಡಿದ್ದಾನೆ.

ಈ ನೆಲಗಳ್ಳ ರವಿಶಂಕರ್, ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸದಿಂದ ಸರಕಾರ ದೂರ ಸರಿಯಬೇಕು ಎಂದು ಹೇಳಿದ್ದಾನೆ. ಇದಕ್ಕೆ ಆತ ಕೊಡುವ ಕಾರಣ, ಈ ಸರಕಾರಿ ಶಾಲೆಗಳು ನಕ್ಸಲರನ್ನು ಸೃಷ್ಟಿಸುತ್ತವೆಯಂತೆ.ಜೈಪುರದ ಖಾಸಗಿ ಶಾಲೆ ಯೊಂದರಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರವಿಶಂಕರ್, ನಕ್ಸಲ್ ಅಭಿವೃದ್ಧಿ ಕೇಂದ್ರ ಗಳಾಗಿರುವ ಸರಕಾರಿ ಶಾಲೆ ಗಳನ್ನು ಮುಚ್ಚಬೇಕು. ಖಾಸಗಿ ಶಾಲೆಗಳಲ್ಲಿ ಓದಿದ ಮಕ್ಕಳು ನಕ್ಸಲರಾಗುವುದಿಲ್ಲ ಎಂದು ಹೇಳಿದ್ದಾನೆ. ಈತನ ಮಾತಿ ನಿಂದ ಆಕ್ರೋಶಗೊಂಡ ರಾಜಾಸ್ಥಾನದ ಶಿಕ್ಷಕ ಮತ್ತು ವಿದ್ಯಾರ್ಥಿ ಸಮುದಾಯ ಪ್ರಧಾನಿಗೆ ದೂರು ನೀಡಲು ತೀರ್ಮಾನಿಸಿವೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಈ ರವಿಶಂಕರ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಸರಕಾರಿ ಶಾಲೆಯಲ್ಲೇ ಓದಿದ್ದೇನೆ ಎಂದಿದ್ದಾರೆ. ಕಪಿಲ್ ಸಿಬಲ್ ಮಾತ್ರವಲ್ಲ ರಾಷ್ಟ್ರಕವಿ ಕುವೆಂಪು, ಬೇಂದ್ರೆ, ಕಾರಂತ್, ನಿಸಾರ್ ಅಹ್ಮದ್, ವಿಜ್ಞಾನಿಗಳಾದ ಜಗದೀಶ್ ಚಂದ್ರ ಭೋಸ್, ಅಬ್ದುಲ್ ಕಲಾಂ ಮುಂತಾದ ಹಲವರು ಗಣ್ಯರು ಸರಕಾರಿ ಶಾಲೆಗಳಲ್ಲಿ ಓದಿದವರೆಂಬುದನ್ನು ಈ ಅವಿವೇಕಿ ರವಿಶಂಕರ್‌ನಿಗೆ ಜನರೇ ತಿಳಿಸಿ ಹೇಳಬೇಕಾಗಿದೆ. ನನ್ನಂತೆಯೇ ಹಲವರು ರಾಜಕಾರಣಿಗಳು, ವಿಜ್ಞಾನಿಗಳು, ನ್ಯಾಯಾಧೀಶರು, ಸಾಹಿತಿಗಳು, ಪತ್ರಕರ್ತರು ಸರಕಾರಿ ಶಾಲೆಗಳಲ್ಲಿ ಓದಿದ್ದಾರೆ. ಅವರೆಲ್ಲ ನಕ್ಸಲರೇ ಎಂದು ಸಿಬಲ್ ಪ್ರಶ್ನಿಸಿದ್ದಾರೆ.

ತನ್ನ ಅವಿವೇಕದ ಮಾತಿಗೆ ಬಂದ ವಿರೋಧಕ್ಕೆ ಹೆದರಿದ ರವಿಶಂಕರ್ ಸಣ್ಣದೊಂದು ತಿದ್ದುಪಡಿ ಮಾಡಿ, ನಕ್ಸಲ್‌ಪೀಡಿತ ಪ್ರದೇಶಗಳ ಶಾಲೆಗಳ ಬಗ್ಗೆ ತಾನು ಆ ರೀತಿ ಹೇಳಿದ್ದಾಗಿ ಸಮಜಾಯಿಷಿ ನೀಡಿದ್ದಾನೆ. ಆದರೆ ದೇವರ ಹೆಸರಿನಲ್ಲಿ ವ್ಯಾಪಾರಕ್ಕಿಳಿದ ಇಂತಹ ಫಟಿಂಗ ಸ್ವಾಮಿಗಳಿಗೆ ಸರಕಾರಿ ಶಾಲೆಗಳು ಬೇಕಾಗಿಲ್ಲ. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಬಡವರು ಅಕ್ಷರ ಕಲಿಯುವುದು ಇವರಿಗೆ ಅಪಥ್ಯವಾಗಿದೆ. ಅಂತಲೇ ಖಾಸಗೀಕರಣದ ಹೆಸರಿನಲ್ಲಿ ಸರಕಾರಿ ಶಾಲೆ ಗಳಿಗೆ ಬೀಗ ಹಾಕಲು ಹುನ್ನಾರ ನಡೆಸಿದ್ದಾರೆ.ಧರ್ಮವು ಉದ್ಯಮವಾದಾಗ ಧರ್ಮಗುರು ಗಳು ವ್ಯಾಪಾರಿಗಳಾದಾಗ ಈ ರವಿಶಂಕರ್ ನಂತಹ ಲಫಂಗ ಸ್ವಾಮಿಗಳು ಸೃಷ್ಟಿಯಾಗು ತ್ತಾರೆ. ಮಾಧ್ಯಮಗಳು ಕೂಡ ಇನ್ನಿಲ್ಲದ ಪ್ರಚಾರ ಕೊಡುತ್ತವೆ.

ಆರ್ಟ್ ಆಫ್ ಲಿವಿಂಗ್ ಹೆಸರಿನಲ್ಲಿ ಈತ ನಡೆಸಿದ ಅನಾಚಾರದ ದಂಧೆ ಗೊತ್ತಿದ್ದರೂ ಅಧಿಕಾರದಲ್ಲಿ ಇದ್ದವರು ಮಂತ್ರಿಗಳು ಈತನ ಮಠಕ್ಕೆ ಹೋಗಿ ಪಾದ ಚುಂಬನ ಮಾಡಿ ಬರುತ್ತಾರೆ. ಬಸವಣ್ಣ, ಕುವೆಂಪು ಜನಿಸಿದ ಕರ್ನಾಟಕದಲ್ಲಿ ಇಂತಹ ಮೋಸಗಾರರು ಆಶ್ರಯ ಪಡೆದಿದ್ದು ದುರಂತದ ಸಂಗತಿ.ಇದೇ ಕನ್ನಡನಾಡಿನಲ್ಲಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಂತಹವರು ಇದ್ದಾರೆ. ಬಲಾಢ್ಯವಾಗಿರುವ ಲಿಂಗಾಯತ ಮಠದ ಅಧಿಪತಿಯಾಗಿದ್ದರೂ ಜಾತಿ-ಜಂಜಢದಿಂದ ದೂರ ಇರುವ ಇವರು ಮಡೆಸ್ನಾನ, ಮಡೆಸೇವೆ ಮತ್ತು ಪಂಕ್ತಿಭೇದದಂತಹ ಅಸಹ್ಯ ಪದ್ಧತಿಗಳ ವಿರುದ್ಧ ಬಂಡೆದಿದ್ದಾರೆ. ಅಡ್ಡಪಲ್ಲಕ್ಕಿ, ಪಾದಪೂಜೆ, ಪಾದೋದಕಗಳನ್ನು ಎಂದೋ ಧಿಕ್ಕರಿಸಿದ ಇಂತಹ ಸ್ವಾಮಿಗಳಿಂದಲೇ ಇಂದಿಗೂ ಬಸವಣ್ಣ ನಮ್ಮಾಡನೆ ಜೀವಂತವಾಗಿದ್ದಾರೆ ಎಂದು ಅನ್ನಸುತ್ತದೆ.

ಈ ಬಾರಿ ರಾಜ್ಯದ 136 ಮಠಾಧೀಶರನ್ನು,ಮಹಿಳಾ ಧರ್ಮಗುರುಗಳನ್ನು ಒಂದೇ ವೇದಿಕೆಗೆ ತರಲು ಸಾಕಷ್ಟು ಪರಿಶ್ರಮಿಸಿದ್ದಾರೆ. ಇಂತಹ ಸ್ವಾಮಿಗಳಿಗೆ ಬಲೆ ಹಾಕಿ, ಖೆಡ್ಡಾಕ್ಕೆ ಕೆಡವಲು ವಿಶ್ವ ಹಿಂದೂ ಪರಿಷತ್‌ನಂತಹ ಸಂಘಟನೆಗಳು ಹೊಂಚು ಹಾಕುತ್ತಲೇ ಇರುತ್ತವೆ.ಈ ಅಪಾಯದಿಂದ ಇವರನ್ನೆಲ್ಲ ಪಾರು ಮಾಡಿದ ಶ್ರೇಯಸ್ಸು ನಿಡುಮಾಮಿಡಿಯವರಿಗೆ ಸಲ್ಲುತ್ತದೆ.ಕರ್ನಾಟಕದಲ್ಲಿ ನಿಡುಮಾಮಿಡಿಯವರಂತೆ ಮನುವಾದಿ ಸಂಘಪರಿವಾರವನ್ನು ನೇರವಾಗಿ ವಿರೋಧಿಸುವ ಕೆಲ ವೀರಶೈವ ಮಠಾಧೀಶರಿದ್ದಾರೆ.ಅವರಲ್ಲಿ ಗದುಗಿನ ತೋಂಟದಾರ್ಯ ಸ್ವಾಮಿಗಳು, ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮಿಗಳು ಪ್ರಮುಖರಾಗಿದ್ದಾರೆ. ಇಂತಹವರಿಂದಲೇ ಕರ್ನಾಟಕವನ್ನು ಇನ್ನೊಂದು ಗುಜರಾತನ್ನಾಗಿ ಮಾಡುವ ಫ್ಯಾಸಿಸ್ಟ್ ಶಕ್ತಿಗಳ ಕುತಂತ್ರ ಯಶಸ್ವಿಯಾಗಿಲ್ಲ.

ನಿಡುಮಾಮಿಡಿ ಸ್ವಾಮಿಯಾಗಲಿ, ತೋಂಟದಾರ್ಯ ಸ್ವಾಮಿಯಾಗಲಿ ಹೊಸ ದೇನೂ ಹೇಳುತ್ತಿಲ್ಲ. 12ನೆ ಶತಮಾನದಲ್ಲಿ ಬಸವಣ್ಣನವರು ಕಂದಾಚಾರದ ವಿರುದ್ಧ ಹಚ್ಚಿದ ಜ್ಯೋತಿಯನ್ನು ಆರದಂತೆ ಈ ಸ್ವಾಮಿಗಳು ನೋಡಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ 26-1-1950ರಂದು ಭಾರತದ ಸಂವಿಧಾನ ಅಸ್ಪಶತೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಪಂಕ್ತಿಭೇದ, ಮಡೆಸ್ನಾನದಂತಹ ಅನಿಷ್ಟ ಪದ್ಧತಿಗಳು ಸಂವಿಧಾನಕ್ಕೆ ವಿರೋಧವಾಗಿವೆ ಎಂದು ಹೇಳುತ್ತಿರುವ ಈ ಸ್ವಾಮೀಜಿಗಳು ರಾಜ್ಯಾಂಗದ ಆಶಯಗಳನ್ನು ಎತ್ತಿ ಹಿಡಿಯುತ್ತಿದ್ದಾರೆ.

ಕರ್ನಾಟಕದಲ್ಲಿ (ಭಾರತದಲ್ಲೂ ಕೂಡ) ನಿಡುಮಾಮಿಡಿ, ತೋಂಟದಾರ್ಯ ಸ್ವಾಮೀಜಿ ಗಳು ಒಂದೆಡೆಯಿದ್ದರೆ, ಸರಕಾರಿ ಶಾಲೆಗಳನ್ನು ಮುಚ್ಚ ಬೇಕು ಎಂದು ಹೇಳುವ ಲಫಂಗ ರವಿಶಂಕರ್ ಅಂತಹವರು ಇನ್ನೊಂದು ಕಡೆ ಇದ್ದಾರೆ. ಈ ದೇಶದ ಉದಾತ್ತ ಮಾನವೀಯ ಪರಂಪರೆಯ ವಾರಸುದಾರರು ಯಾರು ಎಂದು ವಿವರಿಸಿ ಹೇಳ ಬೇಕಾಗಿಲ್ಲ. ಮನುಷ್ಯತ್ವದಲ್ಲಿ ನಂಬಿಕೆ ಇರುವವರು ಸಾಮಾನ್ಯವಾಗಿ ನಿಡುಮಾಮಿಡಿ ಅಂತಹವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ದೇಶವನ್ನು ಗುಜರಾತ್ ಮಾಡಲು ಹೊರಟವರು ರವಿಶಂಕರ್‌ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಈಗ ಮುಚ್ಚಬೇಕಾಗಿರುವುದು ಸರಕಾರಿ ಶಾಲೆಗಳನ್ನಲ್ಲ. ರವಿಶಂಕರ್‌ರಂತಹ ವಂಚಕರು ನಡೆಸುವ ಮಠ-ಮಂದಿರಗಳನ್ನು. ವ್ಯಾಪಾರಿಗಳಿಂದ ದೇವರನ್ನು ಮುಕ್ತಗೊಳಿಸುವ ಕೆಲಸ ಮೊದಲು ಆಗಬೇಕಾಗಿದೆ. ಅದಕ್ಕೂ ಮುನ್ನ ಜಗತ್ತಿನ ಎಲ್ಲೇ ಕಲಹ ಉಂಟಾದರೂ ಮಧ್ಯಸ್ಥಿಕೆ ವಹಿಸಿ ಬಗೆಹರಿಸುವುದಾಗಿ ಹೇಳಿ, ಉರಿಯುವ ಬೆಂಕಿಗೆ ತುಪ್ಪ ಸುರಿದು ಬರುವ ಇಂತಹ ಕಾವಿ ಗಳನ್ನು ಬಂಧಿಸಿ, ವಿಚಾರಣೆಗೆ ಗುರಿಪಡಿಸ ಬೇಕಾಗಿದೆ. ಆದರೆ ಜಾಗತೀಕರಣದ ಈ ದಿನಗಳಲ್ಲಿ ಇಂತಹವರಿಗೆ ಇನ್ನಿಲ್ಲದ ಮಹತ್ವ ದೊರೆಯುತ್ತಿದೆ. ಈತ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಸರಕಾರಿ ಜಾಗವನ್ನು ನುಂಗಿ ತನ್ನ ಸಾಮ್ರಾಜ್ಯ ಕಟ್ಟಿಕೊಂಡಿದ್ದಾನೆ. ಬದುಕುವ ಕಲೆ ಹೇಳಿ ಕೊಡುವುದಾಗಿ ಒಂದು ತಿಂಗಳ, ಮೂರು ತಿಂಗಳ ಮತ್ತು ಆರು ತಿಂಗಳ ಕೋರ್ಸ್ ಗಳನ್ನು ನಡೆಸುತ್ತ ಅಮಾಯಕರಿಂದ ಲಕ್ಷಾಂತರ ರೂಪಾಯಿ ದೋಚುತ್ತಿದ್ದಾನೆ.

ಧರ್ಮದ ಸೋಗು ಹಾಕಿರುವುದರಿಂದ ಆದಾಯ ತೆರಿಗ ಇಲಾಖೆಯ ಕಣ್ಣು ಇವನ ಮೇಲೆ ಬಿದ್ದಿಲ್ಲ.ಈ ರವಿಶಂಕರ್‌ನನ್ನು ಬಂಧಿಸು ವಂತೆ ಆಗ್ರಹಿಸಿ ಹೋರಾಟಕ್ಕೆ ಇಳಿಯುವುದು ತುರ್ತು ಅಗತ್ಯ ವಾಗಿದೆ. ಆದರೆ ಸರಕಾರ ಕ್ರಮಕ್ಕೆ ಮುಂದಾದರೆ, ಹಿಂದೂ ಸ್ವಾಮಿಗಳ ಮೇಲೆ ದಬ್ಬಾಳಿಕೆ ಎಂದು ಸಂಘ ಪರಿವಾರ ಬೊಬ್ಬೆ ಹಾಕುತ್ತದೆ. ಈ ಹಿಂದೆ ನಿತ್ಯಾನಂದ ಸ್ವಾಮಿಯನ್ನು ಬಂಧಿಸಿದಾಗ, ಪ್ರಮೋದ ಮುತಾಲಿಕ್ ಇದೇ ರೀತಿ ಬೊಬ್ಬೆ ಹಾಕಿ ಈ ಸ್ವಾಮಿಯನ್ನು ಜಮಖಂಡಿಗೆ ಕರೆಯಿಸಿ ಅದ್ದೂರಿ ಸನ್ಮಾನ ಮಾಡಿದ್ದ.ಬುದ್ಧ, ಬಸವಣ್ಣ, ಶಿಶುನಾಳ ಷರೀಫ್ ಅಂಥವರ ವೈಚಾಕರಿಕ ಬೆಳಕನ್ನು ನಂದಿಸಲು ಯತ್ನಿಸುತ್ತಿರುವ ಎಲ್ಲ ಶಕ್ತಿಗಳಿಗೆ ಸಂಘಪರಿವಾರ ಆಶ್ರಯ ತಾಣವಾಗಿದೆ.

1992ರಲ್ಲಿ ರಾಮಜನ್ಮ ಭೂಮಿ ಆಂದೋಲನದ ಮೂಲಕ ಹಿಂದುತ್ವ ಕೋಮುವಾದ ತಲೆ ಎತ್ತಿದಾಗಲೇ ಜಾಗತೀಕರಣ ಕೂಡ ಈ ದೇಶಕ್ಕೆ ಬಂದಿತ್ತು.ಆ ಕಾಲಘಟ್ಟದಲ್ಲೇ ರವಿಶಂಕರ್‌ನಂತಹ ಕ್ರಿಮಿಕೀಟಗಳು ಹುಟ್ಟಿಕೊಂಡಿವೆ. ಸರಕಾರವನ್ನು ನಿಯಂತ್ರಿಸುವಷ್ಟು ಬೆಳೆದು ನಿಂತಿವೆ.ಮನುಷ್ಯ ಸಮಾಜದ ಆರೋಗ್ಯಕ್ಕೆ ಅಪಾಯ ವನ್ನುಂಟು ಮಾಡುವ ರವಿಶಂಕರ್, ನಿತ್ಯಾನಂದ, ತೊಗಾಡಿಯಾರಂತಹ ರೋಗಾಣುಗಳ ನಾಶಕ್ಕೆ ಔಷಧಿ ಸಿಂಪಡಿಸಬೇಕಾಗುತ್ತದೆ. ಇಂಥವರು ಇರಬೇಕಾದುದು ಮಠಗಳಲ್ಲಿ ಅಲ್ಲ.ಪರಪ್ಪನ ಅಗ್ರಹಾರದಲ್ಲಿ ಎಂದು ಅ ದಿಕ್ಕಿನತ್ತ ಕರೆದೊಯ್ಯ ಬೇಕಾಗಿದೆ.ಇಂತಹ ವಿವೇಕವೊಂದು ಈ ದೇಶವನ್ನು ಕಾಪಾಡಬಲ್ಲದು.

-ವಾರ್ತಾಭಾರತಿ ಕೃಪೆ

ಇನ್ನೊಂದಿಷ್ಟು ಪದ್ಯಗಳು

ನಮ್ಮೊಳಗಿನಂತರಂಗ ನಮ್ಮ ಅಕ್ಷರ!

ಹೂ ತಾರೆ ಚಂದ್ರರ ಮೇಲೆ
ಕವನ ಕಟ್ಟಲೇಬಾರದು ಎಂದು
ನಾನೇನು ಪಣ ತೊಟ್ಟವನಲ್ಲ
ನಿಜ,
ಹೂ ತಾರೆ ಚಂದ್ರರ ಮೇಲೆ
ಬರೆಯಬಾರದು ಎಂದು
ಯಾರೂ ಫತ್ವಾ ಹೊರಡಿಸಿಲ್ಲ!
ಘಮಘಮದ ಹೂ ಮೂಸಿ
ಪರಿಮಳ ಹೀರಿ
ಫಳಫಳ ಹೊಳೆವ ತಾರೆ ಚಂದ್ರರ ನೋಡಿ
ಮೈಮರೆತು ಕವಿತೆ ಬರೆಯೋಣವೆಂದರೆ
ನಿಪ್ಪಸಗಿ ಬಿದ್ದ ಹೊಟ್ಟೆ
ಹೂವ ಮೂಸಲೊಲ್ಲದು
ಕಾಲ ಕೆಳಗೆ ತುಳಿಸಿಕೊಂಡ ಜೀವಕೆ
ತಾರೆ ಚಂದ್ರರ ನೋಡಲಾಗದು
ಕಂಚಿ ಅಂಗಳದ ಕೊಳ್ಳಿದೆವ್ವ
ಹಚ್ಚಿದ ಕೊಳ್ಳಿಗಾಹುತಿಯಾದ ಎದೆ
ಹಕ್ಕಿಗಳ ಹಾಡ ಕೇಳಲೊಲ್ಲದು
ಹೆಣದ ಮೆರವಣಿಗೆಯಲಿ ಹೊರಟ
ಸೋತ ಜೀವದ ಕಣ್ಣು
ಚಂದ ನೋಡಲು ತೆರೆಯಲೊಲ್ಲದು

ಬೆನ್ನಿಗೆ ಹಸಿವು
ಬೊಗಸೆ ಕಣ್ಣೀರು
ಸಂಕಟಗಳ ಸರಮಾಲೆ ಪೋಣಿಸಿಕೊಂಡವರು
ಎದುರೇ ಇರುವಾಗ
ನನ್ನ ಖಾಲಿ ಹಾಳೆಯಲ್ಲಿ
ಹೂ ತಾರೆ ಚಂದ್ರರು
ಕವನವಾಗಲೊಲ್ಲರು

ನೀವು ಹೂ ತಾರೆ ಚಂದ್ರರ ಕುರಿತೇ ಬರೆಯುವಿರಾದರೆ
ಏಕೆ ಬೇಡವೆನ್ನಲಿ?
ನಮ್ಮ ಅಕ್ಷರ ಬಯಲಾಗಿಸುತ್ತವೆ
ಅಂತರಂಗ..
(ಜನಶಕ್ತಿ)


ದೃಷ್ಟಿ

ಮನುಷ್ಯರನ್ನು ಇರಿಯಲು
ಚೂರಿಯೇ ಬೇಕೆಂದಿಲ್ಲ

ಕೆಲವು ಸಲ ಮಾತು
ಕೆಲವು ಸಲ ಮೌನ
ಕೆಲವು ಸಲ ಕಣ್ಣೀರು
ಕೆಲವು ಸಲ ನೆನಪು
ಕೆಲವು ಸಲ ಸಂಬಂಧ
ಚೂರಿಯ ಕೆಲಸ ಮಾಡುತ್ತವೆ

ಈಗೀಗ ಮನುಷ್ಯರನ್ನು ಇರಿಯಲು
ಚೂರಿ ಬಳಸುವುದಿಲ್ಲ!
ಮೂಕ ಬಾಲೆಯ ಬಯಲ ಕನಸು

೧.
ಚಿಂದಿ ಸೀರೆಯ ಸೆರಗ ದಾಟಿ ಎದೆಯ ಕುಲುಮೆಯಲಿ
ನೆರೆತ ಮೈಯಿಗೆ ಬೆಳ್ದಿಂಗಳ ಕಚಗುಳಿ
ಕಾಡ ಮುಂಗುರುಳಿನ ಕಣ್ಣ ಕಾಲುವೆಯಲಿ
ಗುಲಕಂದ ಹುಡುಕುವ ಕನಸುಗಳ ಹೋಳಿ

ಆಗೀಗ ನಗುತ್ತಾಳೆ ಈ ನಮ್ಮ ಮತ್ಸ್ಯಗಂಧಿ
ಕಣ್ಣೀರ ಕುಡಿದು
ಅವ್ವನ ಕುಷ್ಠ ಅಪ್ಪನ ಗೂರಲು
ಗುಡಿಸಲು ತುಂಬಿದ ನೋವಿನ ಜಾತ್ರೆಯಲಿ

ಬಯಲಸೀಮೆಯ ಕೆಂದಾಟಿಯಲಿ
ಈ ಹುಡುಗಿಗೊಂದು ಕನಸು
ಚಿಕ್ಕೆ ಪತ್ತಲ ಕಳೇವಾರ ಕುಬಸ
ಒಮ್ಮೆಯಾದರೂ ಮೈತುಂಬ ಉಡುವ ಮನಸು

ಪುರಲೆ ಆಯುವಾಗ ಹಿಂಡು ದನಗಳು ಗೋಳಿಡುವಾಗ
ಸುಡುಬಿಸಿಲಲ್ಲಿ ಬಯಕೆ ಸತಾಯಿಸುವಾಗ
ಚಿಕ್ಕೆ ಪತ್ತಲದ ನೆನಪು ಮೂಡಿಸುವ ಮಾಮರದ ಚಿಗುರು
ಎದೆಯೊಳಗೆ ಹುತ್ತಗಟ್ಟುವ ನಿಟ್ಟುಸಿರು

ಎತ್ತ ಹೋಗುತ್ತೀರಿ ಕನಸುಗಳೇ
ಬೆಳ್ಳಕ್ಕಿಗಳನೆಣಿಸುತ್ತ ನಿತ್ಯ ಬಿಕ್ಕುತ್ತಾಳೆ ಬಾಲೆ.

೨.

ಒಂದು ಮಧ್ಯಾಣ ಸುಡುವ ಸೂರ್ಯ
ಕಣ್ಣಕುಲುಮೆಯಲಿ ಹಚ್ಚಿದ ಕಾಮನ ಕಂದೀಲು
ಗಂಧದತ್ತರಿನ ಅತ್ಯಾಚಾರವರಿಯದ ಬಾಲೆ
ಬರೆದಳು ಹೊಲದ ಬದುವಿನಲಿ ಪ್ರೇಮಕಾವ್ಯ

ಹರಳುಗಟ್ಟಿದ ಬೆದೆಗೆ ಚಿಕ್ಕೆ ಪತ್ತಲದ ಮೈಯಲ್ಲಿ
ಹೂವು ಬಿರಿಯುವ ಕಥೆಯ ಹಕೀಕತ್ತು
ಅತ್ತ ಚಿಕ್ಕೆಗಳರಸಿ ಮನಮನೆಯ ಕಿಂಡಿಯಲಿ
ಹಣಕಿ ಹಾಕುವ ಸೂರ್ಯನ ಕರಾಮತ್ತು

ಈ ಬಾರೀಯೂ ಜೀವ ನುಂಗಿದ ಆ ಮರದ ಕಥೆ
ಸಂಜೆ ಹೊತ್ತು ಮತ್ತೆ ಊರಲ್ಲಿ ಸುದ್ದಿಯಾಯಿತು

ಮರದ ಕೊಂಬೆಯಲಿ ಚಿಕ್ಕೆ ಪತ್ತಲ ಕಳೇವಾರ ಕುಬಸದುಡುಗೆ
ಗುರುತು ಸಿಗದಂತಿದೆ ಆ ಮತ್ಸ್ಯಗಂಧಿಯ ಚಹರೆ
ಅವಳ ಕಣ್ಣಂಚಿನ ನಗು ಗಲ್ಲದಲ್ಲಿನ ಗುಲ್‌ಮೊಹರ್
ನೋಡಲು ನೆರೆದ ಜನರ ಮೇಲೆ ರೆಕ್ಕೆ ಬಿಚ್ಚಿದ ಹದ್ದುಗಳ ಪಹರೆ

೪.

ಊರ ಜನ ಮಾತ್ರ ಕಥೆ ಮಾಡಿ ಹಾಡುತ್ತಾರೆ
ಯಾವ ಕನಸಿದೆ ಮೂಕ ಬಾಲೆಯ ಬಯಲ ಬದುಕಲಿ?
ಆ ಹಾಡು ನಿಲ್ಲುವುದ್ಹೇಗೆ ? ಮೂಕಬಾಲೆಯ ಕನಸು ಬಯಲಾದ ನೆಲದಲಿ
ಋತುಗಳುರುಳಿದಂತೆ ಮತ್ತದೇ ಕೇರಿ ಬಾಲೆಚಿiರ ಸಾಲು ಸರದಿ!

(ಪ್ರಜಾಮತ ವಿಶೇಷಾಂಕ - ೨೦೦೫)
ಉತ್ತರ

ನಾನೊಂದು ದೇಹವಲ್ಲ
ನಾನೊಂದು ದೇಶವಲ್ಲ
ನಾನೊಂದು ಧರ್ಮವಲ್ಲ
ನಾನೊಂದು ಜಾತಿಯಲ್ಲ

ನಾನೊಂದು ವಿಚಾರ
ಸೀಮೆಗಳಿಲ್ಲದ ಜೀವನಾಡಿ!

ಆ ದಿನ ನೀವು
ನನ್ನ ಅಕ್ಷರಗಳ ನಿಜ ಮರೆಮಾಚಲು
ರೂಢಿಗತ ವಿಧಾನ ಅನುಸರಿಸಿದಿರಿ

ನನ್ನ ಚಿತ್ರದ ರೇಖೆಗಳ ಅಳಿಸಿ
ಅರ್ಥ ಬದಲಿಸಲು ಹವಣಿಸಿದಿರಿ

ನನ್ನ ನಿಶಾನೆ ಹೊಸಕಿಹಾಕಲು
ಪ್ರಚಾರದ ಭಿತ್ತಿಚಿತ್ರಗಳ ಅಂಟಿಸಿದಿರಿ

ನನ್ನ ಹಾಡಿನ ಲಯ ತಪ್ಪಿಸಲು
ಸಹವಾದ್ಯಗಾರನಿಂದಲೇ ಅಪಶೃತಿ ಮೀಟಿಸಿದಿರಿ

ನನ್ನ ಚರಿತ್ರೆಗೆ ರಾಡಿ ಬಳಿದು
ಇಲ್ಲವಾಗಿಸುವ ಪಣ ತೊಟ್ಟಿರಿ

ಈ ನೆಲದ ಬದುಕಿನ ಜೀವ ಇದು
ನನ್ನ ಮಾತು ನನ್ನ ಜನರ ನೋವಿನ ರೂಪಕ
ನನ್ನ ಮಾತುಗಳ ಹತ್ತಿಕ್ಕಲು
ನಿಮಗೆ ನ್ಯಾಯಾಧೀಶರ ರುಜು ಸಿಕ್ಕಿದೆ
ಪ್ರಭುತ್ವದ ದಂಡು ಬೆಂಗಾವಲಿಗಿದೆ!

ನಿಮ್ಮನೆದುರಿಸಲು ಏಕಾಂಗಿ
ಎಂಬ ಭಯ ನನಗಿಲ್ಲ!
ಏಕಾಂಗಿ ಎನಿಸಿದಾಗಲೂ ಈ ದನಿ
ನನ್ನವರ ಕೊರಳಿನ ಹಾಡಾಗಿದೆ
ನಾನು ಹೂತುಹೋದ ನೆಲದೆದೆಯಿಂದ ಅದು
ಎದ್ದು ಬರುತ್ತದೆ
ಕಣ್ಣೀರು
ನನ್ನನ್ನು ಮತ್ತೆಮತ್ತೆ ಹುಟ್ಟಿಸುತ್ತದೆ
ಸಂಕಟ
ಬೇಕಾದಾಗ ಗ್ಲುಕೋಸ್ ಒದಗಿಸುತ್ತದೆ
ನಿಮ್ಮ ಪ್ರತಿ ತುಳಿತ
ಈ ಆತ್ಮವನು ಸದಾ ಎಚ್ಚರದಲ್ಲಿಡುತ್ತದೆ!

ನೀವು ಅವಾಚ್ಯ ಪದಗಳಿಂದ ನಿಂದಿಸಿದಿರಿ
ನಿಮ್ಮ ನಿಂದನೆಗೆ ನಾನೇಕೆ ತಲ್ಲಣಸಲಿ ?
ನಿಮ್ಮ ಕೈಯ ರಾಡಿ
ನಾಲಿಗೆಯ ಪದಗಳು
ನಿಮ್ಮ ಚರಿತ್ರೆಯ ಸಾಕ್ಷಿಗಳು!
ನಾವಿಡುವ ಈ ಹೆಜ್ಜೆಗಳು ಭವಿಷ್ಯದ ಪ್ರಶ್ನೆಗಳಿಗೆ
ಉತ್ತರವಾಗಲೇಬೇಕು
ಚರಿತ್ರೆಯ ಪುಟಗಳಲಿ ಸೇಡಿನ ರಕ್ತಸಿಕ್ತ ಕೈಗಳ
ದ್ವೇಷದ ಪಿತೂರಿ
ಕೊಲ್ಲುವ ದ್ರೋಹ ಸೇರುವುದಾದರೂ
ಎಲ್ಲ ಕಾಲಕೂ ಉಳಿಯುವುದು
ಬದುಕಿಸುವ ಮಾತು
ಜೀವ ನೀಡುವ ಪ್ರೀತಿ
ಮತ್ತು
ಕಣ್ಣೀರು ಒರೆಸುವ ಬೆರಳು ಅಷ್ಟೇ...!

( ೧೬.೦೩.೦೮ರಂದು ಗದಗ ನಗರದಲ್ಲಿ ನಡೆದ ನಿಷೇಧಿತ ತ್ರಿಶೂಲ ದೀಕ್ಷೆ ಸಮಾರಂಭದಲ್ಲಿ ರಾಮಸೇನೆಯ ಮತೀಯ ಮುಖಂಡ ಅವಹೇಳನಕಾರಿ ಮಾತುಗಳಿಂದ ನಿಂದಿಸಿ ಕೊಲ್ಲುವ ಪಣತೊಟ್ಟನೆಂದು ತಿಳಿದಾಗ ಬರೆದಿದ್ದು)ಹಗಲ ನಿಶಾನೆಯ ಬೆರಳು

ಗಾಢ ಇರುಳು ಹೆಪ್ಪುಗಟ್ಟಿದ ಹೊತ್ತು
ಮುಚ್ಚಿದ ಎದೆ ಕದದ ಮೇಲೆ ಗೆರೆ ಮೂಡಿಸಿತು
ಹಗಲ ಸಂದೇಶದ ನಿಶಾನೆ ಹಿಡಿದ ಬೆರಳು
‘ನನ್ನಲಿ ಏನೂ ಇಲ್ಲ ನನ್ನ ಹೊರತು
ನಿನಗಾಗಿ ಕೊಡಲು
ದುಃಖ ತುಂಬಿದ ಎದೆಯೇ
ನೋವ ಕೊಳದಿ ಮಿಂದು ಬಂದಿರುವೆ
ಒಳಗೆ ಬಿಟ್ಟುಕೋ’ ಎಂದೊರಲುವ ಸ್ವರ!
ಆ ವಿನಯದ ಭಾಷೆಗೆ
ಎದೆಕದ ಹಾರುಹೋಗಿ
ಒಡಲೊಳಗೆ ಮೆಲ್ಲನರಳುವ ಹಾಡ ಸದ್ದು
ಸರಸರ ಹರಿವ ಜೀವರಸ
ಮತ್ತದೇ ಕಾಡು ಕುದುರೆಯ ಕೆನೆತ
ಮಾತು ಮರೆತ ತುಟಿಗಳಿಗೆ ಹೊಸರಾಗದ ಕಲಿಕೆ
ಕಪ್ಪುಬಿಳುಪಿನ ಬಯಲು ಬಣ್ಣದ ಮಳೆಯಲ್ಲಿ ಒದ್ದೆ
ವಸಂತಮಾಲೆ ಮುಡಿಗೇರಿದ ಜಡೆಯ ನರ್ತನ
ಬಾಳ ಹಾದಿಗೆ ಹೂದಂಡೆ ತೋರಣ!
ಮರೆತ ಮುತ್ತು, ಮುಲುಕು ಸ್ವರ ಮತ್ತು
ಆ ಒಲವ ಹುಚ್ಚು ಬೆಂಕಿಯ ರಂಗ ಪ್ರವೇಶ
ಎದೆಯಲ್ಲಿ ಮತ್ತೆ ಆರಲರಿಯದ ಕಿಚ್ಚು!
ತೋಳ ರಸಗಂಧ ಪರಿಮಳ ಕೊರಳಾವರಿಸಿ
ತೊಡೆಯ ನಡುವಿಗೆ ರತಿಯ ತಳುಕು
ಮೈಯ ಪೂರ ಕಾಲಿಲ್ಲದೆ ಹರಿವ ನಾಲಗೆ ನಾಗರ
ಆಶೆಗಣ್ಣಲಿ ಇರುಳು ಹಚ್ಚಿಟ್ಟ ಬಯಕೆಯುರಿ !
ನಡಗೊಳದಲಿ ಜೀವಕಲರವದ ಹುಟ್ಟು ಹಿಡಿದು
ನಾವೆ ನಡೆಸಲನುವಾದ ಹಯವದನನ ಹೆಜ್ಜೆಗುಣಿತ!
ನನ್ನೊಳಗೆ ನೀನು ಕತ್ತಲೆಯ ಬೆಳಗ ಪಯಣದ ಹಾದಿಗೆ
ಹೆಜ್ಜೆಹೆಜ್ಜೆಗೆ ಹಣತೆ ಹಚ್ಚಿಡುವಾಗ
ಎದೆ ತುಂಬ ನಿನ್ನದೇ ಬೆಳಕು!
ನಾನು ನೀನಾಗಿ ನೀನು ನಾನಾಗಿ ಏಕಾರ ರೂಪ ತಾಳಿ
ನಡೆವ ಹಾದಿಗುಂಟ ಕತ್ತಲೆಯ ಬೆಳಗಿನ ಯುಗಳ ಗೀತೆ
ನಮ್ಮ ನಾಂದಿ ಹಾಡು
ನನ್ನಲಿ ನನ್ನದೇನೂ ಇಲ್ಲ ಇರುವುದೆಲ್ಲ ನಿನ್ನದೇ
ಎಂಬ ದರ್ಶನದ ರಾಗ!

ಬೊಗಸೆ ತುಂಬ ಮೌನ ಹೊತ್ತು.. « ಅವಧಿ / Avadhi

ಬೊಗಸೆ ತುಂಬ ಮೌನ ಹೊತ್ತು.. « ಅವಧಿ / Avadhi

Saturday, March 24, 2012

ಜೇಲಿನ ಪದ್ಯಗಳು-2

೫. ಈ ರಾತ್ರಿ

ಈ ರಾತ್ರಿ
ಕಣ್ಣೆವೆ ಸುತ್ತ
ಚರಿತ್ರೆ ಚಕ್ರವ್ಯೂಹದ
ಕೋಟೆ ಕಟ್ಟಿದೆ
ಬೆಂಕಿಯಲ್ಲ ದೀಪವೂ
ದಹಿಸುವ ವಾಸ್ತವಕೆ
ಇಂದಿನ ಇರುಳು
ಪುರಾವೆ ಒದಗಿಸಿದೆ!

ಬೀಟ್ ಪೋಲೀಸರು
ಹೊರಗೋಡೆಯ ದಸ್ತಾವೇಜಿಗೆ
ರುಜು ಮಾಡಿ
ಸೀಟಿಯೂದುವ ಜಾವದಲಿ
ಖಾಲಿ ಕಂಗಳ ಹುಡುಗ
ಇರುಳ ತಿನ್ನುತ್ತಎಚ್ಚರದಲ್ಲಿದ್ದಾನೆ
ಮೂಲೆ ಸೇರಿದ ಪಲ್ಲಂಗದಲಿ
ನಿದ್ದೆಹೋಗಿದೆ
ಒದ್ದೆಗಣ್ಣಿನ ಯಾತನೆ!

ಕಣ್ಣೆವೆ ಸುತ್ತ
ಚರಿತ್ರೆ ಚಕ್ರವ್ಯೂಹದ
ಕೋಟೆ ಕಟ್ಟುವಾಗ
ಆ ಹುಡುಗ ಇರುಳ ತಿನ್ನುವುದ
ನೋಡಲಾರೆ
ನನ್ನ ಅಲ್ಲೇ ಹುಗಿದುಬಿಡು
ಎನ್ನುತ ರಾತ್ರಿ
ನೇಣುಗಂಬವನೇರಿತು!

ಮಳೆಗಾಲದ ಬಾನು ರೋದಿಸುವಾಗ
ರಾತ್ರಿಯ ಸಾವು ಭಯಾನಕ ಎನಿಸಿತು.

ರಾತ್ರಿಯ ಹೆಣ ಹೂಳುವುದೆಲ್ಲಿ?
ಪ್ರಶ್ನೆ ಬೆಳೆದ ಹಾಗೆ
ರಾತ್ರಿ ಹೆಣವೂ ಬೆಳೆದು
ರೋದಿಸುವ ಮಳೆಗಾಲದ ಬಾನಿನ ನೀರೂ ಬೆಳೆದು
ಗಾಬರಿಯ ಬೊಗಸೆ
ಹೆಣ ಹುಗಿಯದೆ
ಅಗ್ನಿಸ್ಪರ್ಶ ಮಾಡಿತು

ರಾತ್ರಿಯ ಹೆಣ ಉರಿಯುತ್ತಲೇ ಇದೆ ಇನ್ನೂ!
ದಣಿದ ಅಕಾಲ ಮುಪ್ಪಿನ ದೇಹ
ಉರಿವ ಕಿಚ್ಚಿನ ಎದುರು ಹಲಗೆ ಕಾಯಿಸುತ್ತಿದೆ
ತೊಗಲಿಗಂಟಿದ ಚಳಿ ಮಾತ್ರ ಬಿಡುತ್ತಿಲ್ಲ
ಕಿಚ್ಚ ಕಾಯಿಸುವ ಇರುಳ ತಿಂದವನ ಎದೆಯೀಗ
ಕಪ್ಪಾಗುತ್ತಿದೆ
ಇರುಳಿಗಿಂತಲೂ!

(ಉದಯ ವಾಣಿ)೬. ಜೇಲಿನ ರೊಟ್ಟಿ

ಮನುಷ್ಯರೆಲ್ಲರೂ ತಿನ್ನುವ
ಜೇಲಿನ ರೊಟ್ಟಿಯ
ಆಕಾರ ಯಾವಾಗಲೂ ಅನಿಶ್ಚಿತ
ಅರ್ಧ ರುಚಿಹೀನ ಅರ್ಧ ಸಿಹಿ
ಕೊಂಚ ಬೇಯ್ದಂತೆ ಕಾಣುವ ಹಸೇಹಿಟ್ಟು
ಜೇಲೊಳಗಿನ ಅಗಾಧ ಹಸಿವಿಗೆ
ಅಕಸ್ಮಾತ್ ತಡ ಮಾಡಿದರೆ
ಆ ರೊಟ್ಟಿ ಕೂಡಾ ಸಿಗುವುದಿಲ್ಲ!
ಅಂಥ ರೊಟ್ಟಿ ಕೆಲವೊಮ್ಮೆ ಜೇಲೊಳಗೆ
ಉದ್ದಗಿಡ್ಡ ಕತ್ತರಿಸಿಕೊಂಡು ಬರುತ್ತದೆ.
ಹಾಗೆ ಬಂದಾಗ ಅದರ ಮೇಲೆ
ಜೇಲಿನ ಅಧಿಕಾರಿಗಳ
ತಾಜಾ ಜೊಲ್ಲು ಅಂಟಿರುತ್ತದೆ

ಹಗಲು ಜೇಲಿನ ಕೋಣೆ ತುಂಬ
ಗಬ್ಬು ವಾಸನೆ
ಬೂಸಲು ಹಿಡಿಯಬಾರದೆಂದು
ತಂಗಳು ರೊಟ್ಟಿ ಅಂಗಾತ ಮಲಗಿರುತ್ತವೆ
ಮನೆಯ ಈ ರೊಟ್ಟಿ ಜೇಲೊಳಗೆ ಬರಲೂ
ಜೇಲಿನ ಕಂಬಗಳಿಗೆ ಲಂಚ ತಿನ್ನಿಸಿದೆ

ಹೊಟ್ಟೆ ಹಸಿವು ನೀಗಿಸುವ ಆ ರೊಟ್ಟಿ
ಹಸಿದ ಹೊಟ್ಟೆಯ ಕಣ್ಣುಗಳಿಗೆ
ಸಾಮಾಜಿಕ ನ್ಯಾಯದ ಕನಸು ತಿನಿಸಿದೆ
ಎಂಥ ವಿಚಿತ್ರ!
ಆ ಗಳಿಗೆಯಿಂದ
ನಮ್ಮ ರೊಟ್ಟಿಯ ರುಚಿಯೇ
ಬದಲಾಗಿಹೋಯಿತು!
(ಗೌರಿ ಲಂಕೇಶ್)
೭. ಗುರುತಿಗಾಗಿ

ಜೇಲಿನ ಹೆಬ್ಬಾಗಿಲಲಿ ಅವರು
ನನ್ನ ಗುರುತು ಕೇಳಿದರು
ನನ್ನ ಹಣೆಮೇಲಿನ ಕಚ್ಚು ನೋಡಿ
ಹಣೆಯೊಳಗಿನ ಗುರುತು ಅಳೆದರು
ಪೆಟ್ಟು ಬಿದ್ದ ಕಲೆಗಳನ್ನೇ
ಗುರುತು ಎಂದುಕೊಂಡು
ನನ್ನ ದೇಹದ ತುಂಬ ಕಣ್ಣು ಹರಿ ಬಿಟ್ಟು
ಗುರುತಿಗಾಗಿ ತಡಕಾಡಿದರು.

ನಾನು ಅವರಿಗೆ ಹೇಳಿದೆ:
ನಿಮಗಾಗಿ ಹಿಂದೊಮ್ಮೆ ತಲೆಯ ಒಪ್ಪಿಸಿದ್ದೇನೆ
ನಿಮಗೀಗ ಶಂಭೂಕನ ನೆನಪಿಲ್ಲ!

ನಿಮಗಾಗಿ ಹಿಂದೊಮ್ಮೆ ಹೆಬ್ಬೆರಳ ಒಪ್ಪಿಸಿದ್ದೇನೆ
ನಿಮಗೀಗ ಏಕಲವ್ಯನ ನೆನಪಿಲ್ಲ!

ನಿಮಗಾಗಿ ಹಿಂದೊಮ್ಮೆ ತೊಡೆಗಳ ಒಪ್ಪಿಸಿದ್ದೇನೆ
ನಿಮಗೀಗ ಕರ್ಣನ ನೆನಪಿಲ್ಲ!

ನಿಮಗಾಗಿ ಹಿಂದೊಮ್ಮೆ ಬದುಕನ್ನು ಮುಡಿಪಿಟ್ಟಿದ್ದೇನೆ
ನಿಮಗೀಗ ಜಾಬಾಲಿ ಸತ್ಯಕಾಮನ ನೆನಪಿಲ್ಲ!

ಈಗ ಹೇಳಿ,
ನನ್ನ ಗುರುತು ಸಿಕ್ಕುವುದಾದರೂ ಹೇಗೆ?

ನನ್ನ ಆಲೋಚನೆಗಳ ರೆಕ್ಕೆ ಮುರಿಯಲು
ಕನಸಿನ ಕಣ್ಣ ಕಳೆಯಲು
ಚಳುವಳಿಯ ಹೃದಯ ಗಾಯಗೊಳಿಸಿ
ಆಕ್ರಮಣದ ಆಯುಧ ಹಿಡಿದು ನಿಂತ ನಿಮಗೆ
ನನ್ನ ಗುರುತು ಹೇಗೆ ಹೇಳುವುದು?

ಕೇಳಿ:
ನನ್ನ ಗುರುತು
ನನ್ನವ್ವ ಸುಡುವ ರೊಟ್ಟಿಯ ಕಮ್ಮನೆಯ ವಾಸನೆಯಲ್ಲಿದೆ
ದಿನದ ಹಸಿವೆಗಾಗಿ ದಣಿಗೆ ಮಾರಿಕೊಂಡ ಕೈಗಳ ಪ್ರಾರ್ಥನೆಯಲ್ಲಿದೆ
ಅತ್ಯಾಚಾರಕ್ಕೆ ಬಸುರಾದವಳ ಭ್ರೂಣದ ಅಳುವಿನಲ್ಲಿದೆ
ಮುಂಜಾನೆ ಕಸಬರಿಗೆಗೆ ಸಿಗುವ ಹೂಗಳ ಪಕಳೆಯಲ್ಲಿದೆ
ಜೀತದ ಹಕ್ಕಿಯ ಸುಟ್ಟ ರೆಕ್ಕೆಗಳ ದುರ್ಗಂಧದಲ್ಲಿದೆ
ದೆವ್ವದ ಗಾಳಿ ಬೀಸಿ ಮುರಿದ ಗೋಣಿನ ನರಳಿಕೆಯಲ್ಲಿದೆ
ಭಾಂಡೆ ತಿಕ್ಕಿ ಅರ್ಧ ರೊಟ್ಟಿಗೆ ಸಲಾಮು ಹೇಳುವ ಅಕ್ಕ ಮೆಹಬೂಬಿಯ ನಿಟ್ಟುಸಿರಿನಲ್ಲಿದೆ
ನಗರದ ದಳ್ಳುರಿಯಲಿ ಉರಿವ ಜೋಪಡಿಗಳ ಆರ್ದ್ರತೆಯಲ್ಲಿದೆ

ಕೇಳಿ:
ನನ್ನ ಗುರುತು
ಬಾಗದ ನನ್ನ ಬೆನ್ನ ಹುರಿಯಲ್ಲಿದೆ
ಬಾಧೆಗಳ ಬವಣೆಯಲ್ಲೂ ಕನಸುವ ಒದ್ದೆ ಎವೆಗಳಲ್ಲಿದೆ
ಎಲ್ಲ ತಡೆಗೋಡೆ ದಾಟುವ ಹೆಜ್ಜೆಗಳ ಬೀಸಿನಲ್ಲಿದೆ
ನನ್ನ ಅರಳಿದ ತುಟಿಗಳ ನಗುವಿನಲ್ಲಿದೆ

ಈಗಲಾದರೂ ಹೇಳಿ:
ಗುರುತಿನ ಎಲ್ಲ ಚಹರೆ ಅಳಿಸಿಹಾಕುವ ನಿಮಗೆ
ನಾನ್ಯಾರು ನೀವ್ಯಾರು ಎಂಬುದರ ಗುರುತು ಸಿಕ್ಕಿತಾ?

ಈಗಲಾದರೂ ಹೇಳಿ...!


inkyeagle:  Anthony Lister’s paintings on wood೮. ಗಲಭೆಯ ಊರಿನಲ್ಲಿ

ಧರ್ಮದ ಗುರುತು ಕಾಣದಂತೆ
ಜಜ್ಜಿಹೋದ ಹೆಣ್ಣಿನ ಬತ್ತಲೆದೇಹ
ಸುಟ್ಟು ಕರಕಲಾದ ಗೂಡಂಗಡಿ ಚೂರು
ಹಾಡು ಹಗಲೇ ಕೆನ್ನಾಲಿಗೆ ಚಾಚಿದ ಜ್ವಾಲೆ
ನನಗೊಂದು ಪ್ರಶ್ನೆ ಕೇಳಿದವು!

ಮಸೀದಿ ಅಂಗಳದ ಹಂದಿಯ ತೊಗಲು
ಕವುಚಿಬಿದ್ದ ಗೋಪುರಗಳ ಮುಕ್ಕು ಗಾರೆ
ಚರಂಡಿಯಲಿ ತೇಲುವ ಗುಡಿಸಲಿನ ತಾಬಂಡಿ
ನನಗೊಂದು ಪ್ರಶ್ನೆ ಕೇಳಿದವು!

ನಡುಬೀದಿಯಲ್ಲಿ ಬಿದ್ದ
ಹಸಿ ರಕ್ತವಂಟಿದ ಚೂರಿ
ಪಕ್ಕದ ಅನಾಥ ಶವ
ಬೂಟುಗಳಡಿ ಸಿಕ್ಕು ಉಸಿರುಗಟ್ಟಿದ ಇರುವೆ
ನನಗೊಂದು ಪ್ರಶ್ನೆ ಕೇಳಿದವು!

ಮನುಷ್ಯನೆಲ್ಲಿ?
ಮನುಷ್ಯನಿರುವನೆ ಈ ಊರಿನಲ್ಲಿ?
ಇಂಥ ಊರಿರುವ ದೇಶದಲ್ಲಿ?

ಈ ಪ್ರಶ್ನೆಯನ್ನೇ ನಾನು
ಅಲ್ಲಿ ಕಾವಲಿಗೆ ನಿಂತ ಪೋಲೀಸರಿಗೆ
ಮೆರವಣಿಗೆಯಲಿ ಹೊರಟ ಮಂತ್ರಿಗೆ ಕೇಳಿದೆ.
ಅವರೆಂದರು:
ಪೋಲೀಸರು ಬಂದೂಕು ಹೊತ್ತು
ಗಸ್ತು ತಿರುಗುತ್ತಿದ್ದಾರೆ
ಸತ್ತವರ ಶಾಂತಿಗಾಗಿ
ಪ್ರಾರ್ಥಿಸಲು ಹೊರಟಿದ್ದೇವೆ
ಈಗೇಕೆ ಮನುಷ್ಯರ ಪ್ರಶ್ನೆ?

ಅವರು ಜಾಗ ಖಾಲಿ ಮಾಡಿದ ಮೇಲೆ
ನಿರ್ಜನ ಬೀದಿ ಮೆಲ್ಲಗೆ ಪಿಸುಗುಟ್ಟಿತು.
ಗಲಭೆಯ ಊರಿನಲ್ಲಿ ಮನುಷ್ಯರನ್ನು ಹುಡುಕಬೇಡಿ.
ಅವರೀಗ ಹೆಣವಾಗಿದ್ದಾರೆ!Friday, March 23, 2012

ಜೇಲಿನ ಪದ್ಯಗಳು

    A canvas painted by Venezuela's president, Hugo Chávez, when he was in prison after his failed 1992 coup attempt
೧. ಜೇಲಿನ ಸರಳುಗಳಲ್ಲಿ

ಜೇಲಿನ ಸರಳುಗಳಲ್ಲಿ
ಕೂಡಿಹಾಕಿದ ದಿನ
ನನ್ನ ಬಳಿ ಸಮಯವಿತ್ತು
ಆದರದು
ಮಗಳ ಮುನಿಸ ರಮಿಸಲು
ಗೆಳತಿ ಕಳಿಸಿದ ಇಷ್ಟದ ಪುಸ್ತಕ ಓದಲು
ಊರ ದಾರಿಯ ಮರಗಳೊಂದಿಗೆ ಸುತ್ತಲು
ಬರುವುದಿಲ್ಲ!
ಈಗದು ನನ್ನ ನೆನಪು -
ನೋವುಗಳ ಜೊತೆಗಾರ!
ಪಹರೆ ಕಾಯುವ ಬೂಟುಗಾಲಿನ ಸಪ್ಪಳದಲ್ಲಿ
ಬೊಗಸೆ ತುಂಬ
ಮೌನ ಹೊತ್ತು
ಹಗಲ ಗಳಿಗೆಗಳು ಕರಗುತ್ತಿವೆ!
ಎಲ್ಲೋ ಕುಂತು
ವ್ಯೂಹ ರಚಿಸುವ
ಕಪ್ಪು ಶಕ್ತಿಗಳು
ಗಾಳಿಯೂದುತ್ತಿವೆ
ನನ್ನೊಳಗಿನ ಖಿನ್ನ ಕಿಚ್ಚಿಗೆ!
ನನ್ನ ಕಣ್ಮುಂದೆ
ಡುಬ್ಬದ ಮೇಲೆ ಖಾಲಿ ದಿನದ ಹೆಣ ಹೊತ್ತು
ಸಮಯ
ಜೇಲಿನ ಗೋಡೆಗಳ
ಮೇಲೆ ಇಳಿ ಬೀಳುವ
ನೆರಳ ಕೆಳಗೆ ತೆವಳುತ್ತಿದೆ
ಹೆಜ್ಜೆ ಗುರುತಿಲ್ಲದೆ!

ಈ ದಿನಕ್ಕಾಗಿಯೇ ಹೊಸೆದ ಕನಸುಗಳು
ಹೋಗಬೇಕಾದ ಊರು
ಹತ್ತಿರದವರ ಬಳಿ -
ಆಡಬೇಕಾದ ಮಾತು
ಕೊಂಡಿ ಕಳಚಿ
ಏಕಾಂತದಲ್ಲಿ
ಕುಂಟೋಬಿಲ್ಲೆಯಾಡುತ್ತವೆ...!
ಒಂದು ಕ್ಷಣ
ಕಣ್ಣೊಳಗೆ ಆಕಾರವಿರದ ಚಿತ್ರಗಳು
ಮೂಡುತ್ತವೆ. ಮರೆಯಾಗುತ್ತಿಲ್ಲ:
ಈ ದಿನ, ರಿಪೇರಿಗೆ
ಬಿಡುವುದಿತ್ತು ಮಗಳ
ಪೆಡಲ್ ಮುರಿದ ಸೈಕಲ್ಲು!
ಹೊಲಿದುಕೊಳ್ಳುವದಿತ್ತು ಹರಿದ
ಚಪ್ಪಲಿಯ ಉಂಗುಟ!
ಹಿಡಿಯಬೇಕಿತ್ತು ದಿನಗೂಲಿಗಳ
ರ್‍ಯಾಲಿಯ ಕೆಂಬಾವುಟ!!

ಜೇಲಿನ ಸರಳುಗಳಲ್ಲಿ
ಕೂಡಿ ಹಾಕಿದ ದಿನ
ನನ್ನ ಬಳಿ ಸಮಯವಿತ್ತು...!A painting by convicted prisoner Virender Sharma

೨. ನಾನಿದ್ದ ಜೇಲಿನಲ್ಲಿ...!

ಹೆಸರಿಡದ ಕರುಳಕುಡಿ
ಕಣ್ಣು ಮಂಜಾದ ತಂದೆ
ವಸಂತನ ಕರೆತಂದು
ಮನೆಯ ಹೊಸ್ತಿಲು ತುಂಬಿಸಿದ ಸಖಿ
ತನ್ನ ರಟ್ಟೆಯನ್ನೇ ನಂಬಿ ಬಾಳುವವರ ನೆನಪು
ಬೆಳಗಾಗುವ ಹೊತ್ತಿಗೆ
ಗಂಟಲಾಚೆಗೆ ಬಂದು
ಬಂದೀಖಾನೆಯ ಕಂಬಿಗಳು ಒದ್ದೆಯಾಗುತ್ತವೆ
ಒಡಲ ಸಂಕಟದ ಬಿಕ್ಕುಗಳ
ಬೆಳಗಿನ ಸೂರ್ಯ ಕಿರಣ ಸ್ಪರ್ಶಿಸುತ್ತವೆ
ಖೈದಿಗಳ ತಪ್ತ ಎದೆಗೂಡಲ್ಲಿ
ಸರಿದಾಡುತ್ತವೆ ಮಾಸಿದ
ಕಪ್ಪು ಬಿಳುಪಿನ ಚಿತ್ರಗಳು!

ಇಲ್ಲಿನ ಮುಕ್ಕಾಲು ಜನಗಳಿಗೀಗ
ಜೇಲಿಗೆ ಬಂದ ತಾರೀಖಿನ ನೆನಪಿಲ್ಲ
ಹುಣ್ಣಿಮೆ ಅಮಾವಾಸ್ಯೆಗಳ ಎಣಿಕೆಯಲ್ಲಿ
ಕಳೆದ ಕಾಲದ ಲೆಕ್ಕವಿಟ್ಟಿಲ್ಲ!
ನಿಜಕ್ಕೂ ಕೆಲವರಿಗೆ ಯಾವ
ಅಪರಾಧಕೆ ತಮ್ಮನಿಲ್ಲಿಗೆ
ತರಲಾಗಿದೆ ಎಂಬುದೂ ತಿಳಿದಿಲ್ಲ!
ಅವರನ್ನೇಕೆ ಹಿಡಿದು ತರಲಾಗಿದೆಯೆಂದು
ಅಲ್ಲಿರುವ ಪೋಲೀಸರಿಗೂ ಗೊತ್ತಿಲ್ಲ!
ನ್ಯಾಯಾಂಗದ ಸಾರ್ವಭೌಮನ
ಕೃಪಾದೃಷ್ಟಿಗಾಗಿ ಕಾಯುತ
ವಿಚಾರಣೆಯ ನಾಟಕವೂ ನಡೆಯದೆ
ಗತಕಾಲದ ನೆನಪಿನ ಚಿತ್ರ
ವರ್ತಮಾನದ ಬೇನೆಯಾಗಿ
ಅವರ ಎದೆ ಹಿಂಡುವಾಗ
ಬಂದೀಖಾನೆಯ ಕಂಬಿಗಳ ನಡುವೆ
ಸಂಜೆ
ದಿನವೊಂದು ಜೀವ ಕಳೆದುಕೊಳ್ಳುತ್ತದೆ!
( ಸಂವಾದ)
***
A Prison Scene 1810-14


೩. ಒಂದು ಸಾಚಾ ಚಿತ್ರ ಮತ್ತು ಜೇಲು

ಜೇಲಿನ ಸರಳುಗಳ ಹಿಂದೆ
ನನ್ನ ಮಹಾನ್ ದೇಶದ
ಒಂದು ಸಾಚಾ ಚಿತ್ರವ ನೋಡುತ್ತ ಕುಳಿತಿದ್ದೇನೆ!

ನಾನು ಬದುಕಿರುವ ಈ ಶತಮಾನದಲಿ
ನನ್ನ ದೇಶ ಅಸಂಗತ ಭ್ರಮೆಗಳ ನಂಬಿದೆ
ಅಡಿಗಡಿಗೂ ಮಾಯಾಮಂತ್ರ
ಬಂಡವಾಳದ ಕಣ್ಕಟ್ ಆಟದಲಿ
ಮೂರು ಬಣ್ಣದ ಸೀರೆಯ ಒಡತಿ
ಉಡುಕಿಗೆ ಗಂಟು!
ತಾಯಿಯೆಂಬೋ ಈ ಮಹಾತಾಯಿ ಬಾಯಿಗೆ
ದೊಡ್ಡ ಬೀಗ:
ಇಂದು ಈ ಬೀಗ ತೆಗೆಯಲು
ಮುಂದಾದವರನ್ನು ಸೇರಿಸುತ್ತಾರೆ ಅಪರಾಧಿಗಳ ಲಿಸ್ಟಿಗೆ
ಆ ಲಿಸ್ಟಿನಲ್ಲಿ ನನ್ನ ಹೆಸರೂ ಇದೆ
ಅದಕಾಗೇ
ಬಾಗಲಕೋಟೆಯ ಸಬ್ ಜೇಲು
ನನ್ನ ವಾಸದ ಮನೆಯಾಗಿದೆ!

ದಲ್ಲಾಳಿಗಳ ಸರ್ಪಗಾವಲಿನಲ್ಲಿ
ನಗರ ನಗರಗಳಲ್ಲಿ
ಎಲ್ಲಿಂದಲೋ ಬಂದವರು
ನದಿ ಖರೀದಿಗೆ ನಿಂತಿದ್ದಾರೆ
ಕಾಡಿನ ಬೆಲೆ ನಿಕ್ಕಿಗೊಳಿಸಿದ್ದಾರೆ
ನೆಲದ ಹರಾಜು ಕೂಗಿ
ತುಂಬಾ ಸಮಯವಾಯಿತು!
‘ಒಂದು ಕೊಂಡರೆ ಮತ್ತೊಂದು ಉಚಿತವೆಂದು
ಜನಗಳ ನೋಡಿ ಮುಗುಮ್ ನಗುತ್ತಿದ್ದಾರೆ

ಶಾಸನ ಸದನದ ಬೀದಿಯಲ್ಲಿ
ಶಾಸನಕರ್ತರು ಒಂದು ನಿಷೇಧದ
ಪಟ ತೂಗುಹಾಕಿದ್ದಾರೆ
ಹೋರಾಟಗಾರರ ಹೊರತು ಅಲ್ಲಿ ಬೇರೆ ಹೆಸರುಗಳಿಲ್ಲ
ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ
‘ಪ್ರಶ್ನಿಸುವ ಹೋರಾಟವೇ ದೇಶದ ಏಡ್ಸ್ ರೋಗವೆಂದು!
ಶಾಸನ ಸದನದೆದುರು ಮನಮೋಹನ ಸುತ್ತ
ಪಾದಪೂಜೆಗೆ ಸರತಿಯಲಿ ನಿಂತವರ ಕಾಲ ಕೆಳಗೆ
ದೇಶೀ ರತ್ನಗಂಬಳಿ
ಅದರ ಕೆಳಗೆ ಈ ನನ್ನ ದೇಶದ
ವಿಶಾಲ ಜನಸ್ತೋಮದ ಬದುಕು
ರೊಟ್ಟಿಗಾಗಿ
ಅನ್ನಕ್ಕಾಗಿ
ಕುಂ
ಯ್ಞಿ
ಗು
ಡು
ತ್ತಿ
ದೆ
ಬೀದಿಗಳಲ್ಲಿ!

ನಾನು
ಜೇಲಿನ ಸರಳುಗಳ ಹಿಂದೆ
ನನ್ನ ಮಹಾನ್ ದೇಶದ
ಒಂದು ಸಾಚಾ ಚಿತ್ರ ನೋಡುತ್ತ ಕುಳಿತಿದ್ದೇನೆ!

೪. ಅಪರಾಧ

ನಾನು ಅಕ್ಷರಗಳಲ್ಲಿ
ಪ್ರಜಾಸತ್ತೆ, ನಾಗರಿಕ ಹಕ್ಕು
ಓದಿಕೊಂಡವನು ಮತ್ತು
ಪದವಿ ಕಲಿವ ಮಕ್ಕಳಿಗೆ
ದಶಕಗಳ ಕಾಲ
ಪಾಠ ಮಾಡಿದವನು.
ಆಗ ಜೇಲಿನವರೂ ಕರೆದು
ಹಾರ ಹಾಕಿ ಭಾಷಣ ಮಾಡಿಸಿದ್ದರು
ಒಣ ಪಾಠ ಪ್ರವಚನ ಸಾಕಾಗಿ
ಈ ದಿನ ನಾನು
ಒಂದು ನೊಂದ ಜೀವದ
ಕಣ್ಣೀರು ಒರೆಸಿದೆ
ನಡುಬೀದಿಯಲ್ಲಿ ನಿಂತು
ತೆರೆದು ತೋರಿಸಿದೆ
ನನ್ನ ಜನಗಳ ಎದೆಯ ಬೇನೆ
ಪ್ರಜಾಸತ್ತೆಯ ಉಳಿವಿನ ಮಾತು
ಎತ್ತಿದೆನಷ್ಟೇ,
ಈ ದೇಶದ ಜೇಲಿನ ಬಾಗಿಲೊಂದು
ನನಗಾಗಿ ತೆರೆದುಕೊಂಡಿತು
ಈಗ ಅರ್ಥವಾಗಿದೆ
ನನ್ನ ದೇಶದಲ್ಲಿ ಜೇಲು ಸೇರಲು
ಅಪರಾಧ ಮಾಡಬೇಕೆಂದೇನೂ ಇಲ್ಲ
ಹಸಿದವರ ದನಿಯಾದರಷ್ಟೇ ಸಾಕು!
ಉಳ್ಳವರ ದರ್ಪ ಪ್ರತಿಭಟಿಸುವುದು
ಅತ್ಯಾಚಾರಕ್ಕೊಳಗಾದವರ ಕನಲಿಕೆಗಳನಾಲಿಸುವುದು
ಹಸಿದ ಹೊಟ್ಟೆಗೆ ಅನ್ನ ಕೇಳುವುದು
ಇಲ್ಲಿ ಅಪರಾಧ ಅಪರಾಧ ಅಪರಾಧ

ನನ್ನ ದೇಶದಲ್ಲೀಗ
ಜನರ ಪರವಾಡುವ ಮಾತೂ
ಅಪರಾಧವಾಗುತ್ತದೆ
ಯಾರಿಗೆ ಗೊತ್ತಿಲ್ಲ
ಜನರ ಪರವಿರದ ನಿಮ್ಮ ಮೌನ
ಕೂಡಾ ಒಂದು ಅಪರಾಧವಾಗುತ್ತದೆ
ನಾನೀಗ ಜನರಪರ ಮಾತನಾಡಿದ
ಅಪರಾಧಿ,
ನೀವು?

ಯುಗಾದಿ : ಏನೆಂದು ಸ್ವಾಗತಿಸೋಣ?

ಅವಧಿಯಿಂದ


- ನಾ ದಿವಾಕರ


ವ್ಯ೦ಗ್ಯ ಚಿತ್ರ ಕೃಪೆ : ಆರ್ ಕೆ ಲಕ್ಷ್ಮಣ್

ಮತ್ತೊಂದು ಯುಗಾದಿಯನ್ನು ಸ್ವಾಗತಿಸೋಣ. ನಿಸರ್ಗ ತನ್ನ ಹಳೆಯದನ್ನೆಲ್ಲಾ ಮರೆಯಲು ಪೊರೆ ಕಳಚಿ, ಹೊಸ ರೂಪ ಧರಿಸುವ ಋತುವಿನಲ್ಲಿ ಸಮಾಜದ ಸ್ವಾಸ್ಥ್ಯಕ್ಕಾಗಿ ಪ್ರಾರ್ಥಿಸುತ್ತ ನವ ವರ್ಷದ ಸ್ವಾಗತಕ್ಕೆ ಸಿದ್ಧರಾಗೋಣ. ಏನೆಲ್ಲಾ ಅಡಗಿದೆ ಈ ಯುಗಾದಿಯ ಸಂಭ್ರಮದಲ್ಲಿ. ಅನಕ್ಷರಸ್ಥರಿಂದ ಹಿಡಿದು ವಿದ್ವಾಂಸರವರೆಗೆ, ಕವಿವರ್ಯರವರೆಗೆ ಸಮಾನವಾಗಿ ಆಕಷರ್ಿಸುವ ಈ ಹಬ್ಬದ ವೈಶಿಷ್ಟ್ಯ ಎಂದರೆ ಅದರ ಸಾರ್ವತ್ರಿಕತೆ ಮತ್ತು ಯುಗಾದಿಯ ಹಿಂದೆ ಅಡಗಿರುವ ಭಾವುಕತೆ. ಭಾರತೀಯ ಸಾಂಪ್ರದಾಯಿಕ ಸಮಾಜದಲ್ಲಿ ಯುಗಾದಿ ಒಂದು ವಿಶಿಷ್ಟವಾದ ಹಬ್ಬ. ನವ ವರ್ಷವನ್ನು ಹರ್ಷೊಲ್ಲಾಸಗಳಿಂದ ಸ್ವಾಗತಿಸುವ ಈ ಹಬ್ಬ ಸಾರ್ವತ್ರಿಕವಾದದ್ದು. ಆದರೂ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ರೀತಿಗಳಲ್ಲಿ ಆಚರಿಸಲಾಗುತ್ತದೆ. ಜನಸಮುದಾಯಗಳು ಹೊಸ ವರ್ಷವನ್ನು ಸ್ವಾಗತಿಸಲು ತಮ್ಮದೇ ಆದ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ವಿಭಿನ್ನ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಸಂಸ್ಕೃತಿ, ಸಂಪ್ರದಾಯ ಮತ್ತು ಧಾರ್ಮಿಕತೆಯ ನಡುವೆಯೇ ಜನಸಮುದಾಯಗಳ ಜೀವನ ಶೈಲಿಯೂ ಯುಗಾದಿಯ ವೈಭವವನ್ನು ಸಾರುತ್ತವೆ.

ವಸಂತ ಋತುವಿನ ಕರೆಗೆ ಓಗೊಟ್ಟು ತರಗೆಲೆಗಳು ಉದುರಿ, ಚಿಗುರೆಲೆಗಳು ಕಂಗೊಳಿಸುವ ನಿಸರ್ಗದ ಚೆಲುವಿನ ನಡುವೆ ಜೀವನದ ಸಿಹಿ ಕಹಿಗಳನ್ನು ಸಮನಾಗಿ ಹಂಚಿಕೊಂಡು ಭ್ರಾತೃತ್ವ-ಸೌಹಾರ್ದತೆ ಮತ್ತು ಸಮಾನತೆಗಳನ್ನು ಸಾರುವ ಒಂದು ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. ನಿಸರ್ಗ ತನ್ನದೇ ಆದ ವೈಜ್ಞಾನಿಕ ರೀತಿಯಲ್ಲಿ ತನ್ನ ಸುತ್ತಲಿನ ಪರಿಸರವನ್ನು ಕಾಲಕಾಲಕ್ಕೆ ಬದಲಾಯಿಸುತ್ತಾ ಮುನ್ನಡೆಯುತ್ತದೆ. ಮಾನವ ಸಮಾಜ ಎಷ್ಟೇ ಕ್ರೌರ್ಯ ಪ್ರದರ್ಶಿಸಿದರೂ ಅವೆಲ್ಲವನ್ನೂ ತನ್ನ ವಿಶಾಲ ಒಡಲಲ್ಲಿ ಅಡಗಿಸಿಕೊಂಡು ತನ್ನದೇ ಆದ ಗಜಗಾಂಭೀರ್ಯದ ನಡೆಯಲ್ಲಿ ಮುನ್ನಡೆಯುವ ನಿಸರ್ಗದ ಶಕ್ತಿ ಅಪಾರ. ತನ್ನೊಡಲ ಒಳಗಿನ ಬೇಗುದಿಯನ್ನು ತಾನೇ ಸರಿಪಡಿಸಿಕೊಂಡು ಮಾನವ ಸಮಾಜದ ಉಳಿವಿಗೆ ಸುಭದ್ರ ಬುನಾದಿ ಒದಗಿಸುವ ನಿಸರ್ಗದ ತಾಳ್ಮೆಯ ಮುಂದೆ ಮಾನವ ಸಮಾಜ ತಲೆತಗ್ಗಿಸುವುದು ಅನಿವಾರ್ಯ. ಆದರೂ ಮನುಕುಲದ ಅಹಂಕಾರ ನಿಸರ್ಗವನ್ನು ಸದಾ ಹಾಳುಮಾಡುತ್ತಲೇ ಬಂದಿದೆ.

ಆದರೂ ನಿಸರ್ಗ ತನ್ನ ಸ್ವಂತಿಕೆಯನ್ನು ಬಿಟ್ಟುಕೊಡದೆ ವರ್ಷದಿಂದ ವರ್ಷಕ್ಕೆ ಮಾನವ ಸಮಾಜ ಎದುರಿಸುತ್ತಿರುವ ಅಪಾಯಗಳ ಮುನ್ಸೂಚನೆಯನ್ನು ನೀಡುತ್ತಲೇ ಇದೆ. ಯುಗಾದಿ ಇಂತಹ ಮುನ್ಸೂಚನೆಯ ಒಂದು ಸಂಭ್ರಮದ ಆಚರಣೆ. ಆದರೆ ಹಾಗಾಗಿಯೇ ಕವಿವರ್ಯರು ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂದಿದ್ದಾರೆ. ಹೌದು ನಾವು ಒಂದು ಯುಗವನ್ನು ಪೂರೈಸಿ ಮತ್ತೊಂದು ಯುಗದ ಆದಿಯನ್ನು ಸ್ವಾಗತಿಸುತ್ತಿದ್ದೇವೆ. ಗತ ಯುಗದ ಎಲ್ಲ ನ್ಯೂನತೆಗಳನ್ನು, ಲೋಪಗಳನ್ನು, ಭಾವನೆಗಳನ್ನು ಸರಿಪಡಿಸಿಕೊಳ್ಳುತ್ತಾ ಮುಂದಿನ ದಿನಗಳನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯಲು ಯುಗಾದಿ ಮಾರ್ಗದರ್ಶಕವಾಗಿ ಆಗಮಿಸುತ್ತದೆ. ಹಾಗಾಗಿಯೇ ತಳಿರು ತೋರಣ, ಬೇವು ಬೆಲ್ಲಗಳ ನಡುವೆ ಸೌಹಾರ್ದ ಸಮಾಜದ ನಿರ್ಮಾಣಕ್ಕಾಗಿ ಪಣತೊಟ್ಟು ಸ್ವಾಗತಿಸುತ್ತಿದ್ದೇವೆ. ಮಾನವ ಸಮಾಜ ಕೂಡಿ ಬಾಳುವುದನ್ನು ನಿಸರ್ಗದಿಂದ ಕಲಿಯಲು ಇದೊಂದು ಸದಾವಕಾಶ.

ಆದರೆ ನಮ್ಮ ಸುತ್ತಲಿನ ಸಮಾಜದಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ನೋಡಿದಾಗ ಇದು ಯುಗದ ಆದಿಯೋ ಅಥವಾ ಪ್ರಬುದ್ಧ, ಪ್ರಜ್ಞಾವಂತ ಯುಗದ ಅಂತ್ಯವೋ ಎಂಬ ಅನುಮಾನ ಮೂಡುವುದು ಸಹಜ. ಸೌಹಾರ್ದತೆ, ಭ್ರಾತೃತ್ವ, ಬಾಂಧವ್ಯ, ಜೀವನ ಮೌಲ್ಯ, ನೈತಿಕತೆ, ಪ್ರಾಮಾಣಿಕತೆ ಇವೆಲ್ಲವೂ ಇನ್ನೂ ಮಾನವ ಸಮಾಜದಲ್ಲಿ ಜೀವಂತವಾಗಿದೆಯೋ ಇಲ್ಲವೋ ಎಂಬ ಅನುಮಾನದ ನಡುವೆಯೇ ಯುಗಾದಿಯ ಸಂಭ್ರಮವನ್ನು ಸ್ವಾಗತಿಸಬೇಕಾಗಿದೆ. ಈ ಮೌಲ್ಯಗಳನ್ನು ಎಲ್ಲೆಂದು ಹುಡುಕಲು ಸಾಧ್ಯ ? ಭಾರತೀಯ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಗುರುತರ ಹೊಣೆಗಾರಿಕೆ ಹೊತ್ತಿರುವ ಸಾಂವಿಧಾನಿಕ ಸಂಸ್ಥೆಗಳು ತನ್ನೆಲ್ಲಾ ಲೋಪದೋಷಗಳನ್ನು ಮೇಲ್ನೋಟಕ್ಕೇ ಪ್ರದರ್ಶಿಸುತ್ತ ಜನಸಾಮಾನ್ಯರ ಮುಂದೆ ನಗ್ನವಾಗಿ ನಿಂತುಬಿಟ್ಟಿದೆ. ರಾಜಕೀಯ ಕ್ಷೇತ್ರವೇನೋ ಹದಗೆಟ್ಟು ಹಲವು ದಶಕಗಳೇ ಕಳೆಯಿತೆನ್ನೋಣ. ಆದರೆ ಇತರ ಸಾರ್ವಜನಿಕ ಕ್ಷೇತ್ರಗಳ ಪಾಡೇನಾಗಿದೆ. ?

ನಮ್ಮ ಸಮಾಜದಲ್ಲೂ ಮೌಲ್ಯ ಎನ್ನುವ ಒಂದು ಪದ ಚಾಲ್ತಿಯಲ್ಲಿತ್ತು, ಮೌಲ್ಯಾಧಾರಿತ ರಾಜಕಾರಣ ಎಂಬ ವಿದ್ಯಮಾನ ಇತ್ತು, ನಿಷ್ಠಾವಂತ ರಾಜಕಾರಣಿಗಳಿದ್ದರು ಎಂದು ಇಂದಿನ ಪೀಳಿಗೆಗೆ ಹೇಳಿದರೆ, ಬಹುಶಃ ಇದು ಕಾಗಕ್ಕ ಗೂಬಕ್ಕನ ಕಥೆ ಇರಬಹುದೆಂದು ನಕ್ಕುಬಿಟ್ಟಾರು. ರಾಜಕಾರಣ ಎಂದರೆ ಠಕ್ಕರ ಅಂತಿಮ ಆಶ್ರಯ ತಾಣ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ರಾಜಕಾರಣ ಠಕ್ಕರ, ವಂಚಕರ, ಮಾಫಿಯಾಗಳ, ಪಾತಕಿಗಳ, ಭ್ರಷ್ಟರ ಪ್ರಾಥಮಿಕ ಶಾಲೆಯಂತಾಗಿಬಿಟ್ಟಿದೆ. ಕರ್ನಾಟಕದ ರಾಜಕಾರಣವಂತೂ ನೆನೆಯಲೂ ಅಸಹ್ಯ ಬರುವ ಮಟ್ಟಿಗೆ ಹದಗೆಟ್ಟಿದೆ. ಕೊಳೆತು ನಾರುತ್ತಿರುವ ರಾಜಕೀಯ ವ್ಯವಸ್ಥೆಯ ದುನರ್ಾತದಿಂದ ವಸಂತ ಋತುವಿನ ಚಿಗುರಿದ ಹಸಿರು ವನಗಳೂ ತಮ್ಮ ಸೌಂದರ್ಯವನ್ನು ಕಳೆದುಕೊಂಡು ನಿಸ್ಸಾರವಾದಂತೆ ಕಾಣುತ್ತಿದೆ. ಒಂದೆಡೆ ರಾಜಕೀಯ ಪಕ್ಷಗಳು ತಮ್ಮ ಅನೈತಿಕತೆ, ಅಪ್ರಾಮಾಣಿಕತೆ ಮತ್ತು ಮೌಲ್ಯರಹಿತ ರಾಜಕಾರಣವನ್ನು ಖುಲ್ಲಂಖುಲ್ಲಾ ಪ್ರದರ್ಶಿಸುತ್ತಿದ್ದರೆ ಮತ್ತೊಂದೆಡೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಸಾಂವಿಧಾನಿಕ ಸಂಸ್ಥೆಗಳು ಮೌಲ್ಯರಹಿತವಾಗಿ ಕಳೆಗುಂದುತ್ತಿವೆ.

ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಬೇಕಾದ ವೃತ್ತಿಪರರು, ವಕೀಲರು, ಪೊಲೀಸರು ಮತ್ತು ಮಾಧ್ಯಮಗಳು ಪರಸ್ಪರ ದೋಷಾರೋಪಗಳಲ್ಲಿ ತೊಡಗಿ, ಸಮಾಜದ ಸ್ವಾಸ್ಥ್ಯವನ್ನೇ ಹದಗೆಡಿಸುವ ಹೀನ ಮಟ್ಟಕ್ಕೆ ಇಳಿದಿವೆ. ದೇಶದ ನ್ಯಾಯ ವ್ಯವಸ್ಥೆಯನ್ನು ಪ್ರತಿನಿಧಿಸುವ ವಕೀಲರು ಮತ್ತು ಪೊಲೀಸರು ಜನಸಾಮಾನ್ಯರ ದೃಷ್ಟಿಯಲ್ಲಿ ಅಪರಾಧಿಗಳಾಗಿದ್ದರೆ, ಸಂವಿಧಾನ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಜನಪ್ರತಿನಿಧಿಗಳು ತಮ್ಮ ಅನೈತಿಕ ವರ್ತನೆಯಿಂದ ಇಡೀ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಜನತಾ ಜನಾರ್ಧನರ ಹಿತಾಸಕ್ತಿಗಳನ್ನು ಕಾಪಾಡುವ, ದೇಶದ ಸಂವಿಧಾನದ ಆಶಯಗಳನ್ನು ರಕ್ಷಿಸುವ ಗುರುತರ ಹೊಣೆಗಾರಿಕೆ, ಸಾಂವಿಧಾನಿಕ ಕರ್ತವ್ಯ, ರಾಜಕೀಯ ಜವಾಬ್ದಾರಿಯನ್ನು ಹೊತ್ತಿರುವ ರಾಜಕಾರಣಿಗಳು ಶಾಸನಸಭೆಗಳ ಪಾವಿತ್ರ್ಯತೆಯನ್ನೇ ಹಾಳು ಮಾಡುವ ಹೀನ ಮಟ್ಟಕ್ಕೆ ಇಳಿದಿದ್ದಾರೆ. ಜನತಾ ಜನಾರ್ಧನರು ಅತ್ತ ಜನರೂ ಅಲ್ಲದೆ ಇತ್ತ ಜನಾರ್ಧನರೂ ಅಲ್ಲದೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ.

ನಿಸರ್ಗ ತನ್ನೊಡಲಿನ ಬೇಗುದಿಯನ್ನು ತನ್ನೊಳಗೇ ಬಚ್ಚಿಟ್ಟುಕೊಂಡು ತನ್ನ ಕರ್ತವ್ಯವನ್ನು ನಿಭಾಯಿಸುತ್ತಿರುತ್ತದೆ. ಆದರೆ ಮನುಕುಲ ತನ್ನ ಬೇಗುದಿಯ ಮೂಲಕ ತನ್ನನ್ನು ಮಾತ್ರವಲ್ಲದೆ ನಿಸರ್ಗವನ್ನೂ ಧ್ವಂಸ ಮಾಡುವಲ್ಲಿ ತೊಡಗಿದೆ. ಆದರೂ ನಿಸರ್ಗದ ಸೃಷ್ಟಿ ಮಹತ್ವವಾದದ್ದು. ತರಗೆಲೆಗಳ ನಡುವೆ ಹಸಿರೆಲೆಗಳು ಕಂಗೊಳಿಸುತ್ತವೆ, ಮರುಭೂಮಿಯಲ್ಲಿ ಓಯಸಿಸ್ ಕಾಣುತ್ತದೆ, ಕೊಳೆತ ಹಣ್ಣುಗಳ ನಡುವೆಯೇ ರುಚಿಕರ ಹಣ್ಣುಗಳು ಇರುತ್ತವೆ. ಹಾಗೆಯೇ ನಮ್ಮ ಸಾಮಾಜಿಕ ರಾಜಕೀಯ ವಲಯದಲ್ಲೂ ಇದೇ ರೀತಿಯ ಕೆಲವು ವೈವಿಧ್ಯತೆಗಳಿವೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಭಾರತದ ರಾಜಕಾರಣವನ್ನು ಸಂಪೂರ್ಣವಾಗಿ ಆವರಿಸಿದ್ದು ಪ್ರಜೆಗಳಲ್ಲಿ ಹತಾಶೆ, ನಿರಾಸೆ ಬೇರೂರಿದ್ದು ಭ್ರಮನಿರಸನ ಉಂಟಾಗುತ್ತಿದೆ. ಆದರೂ ಎಲ್ಲೋ ಒಂದೆಡೆ ಓಯಸಿಸ್ ಗೋಚರಿಸುತ್ತಿದೆ. ನೀರಿಲ್ಲದೆ ಸೊರಗಿದ ಗಿಡಕ್ಕೆ ಯಾವುದೋ ಒಂದು ಬಳ್ಳಿ ಆಶ್ರಯ ನೀಡುತ್ತಿದೆ. ಆ ಬಳ್ಳಿಯೇ ಈ ದೇಶದ ಸಾರ್ವಭೌಮ ಪ್ರಜೆಗಳ ರಾಜಕೀಯ ಪ್ರಜ್ಞೆ ಮತ್ತು ಸಾಮಾಜಿಕ ಪ್ರಬುದ್ಧತೆ.

ಈ ಅಮೂಲ್ಯ ಬಳ್ಳಿಯನ್ನು ನೀರೆರೆದು ಪೋಷಿಸುವುದು ಈ ದೇಶದ ಯುವ ಪೀಳಿಗೆಯ ಆದ್ಯತೆಯಾದಲ್ಲಿ ಮಾತ್ರ ನವ ವಸಂತದ ಆಗಮನವನ್ನು ಯುಗದ ಆದಿಯೆಂದು ಪೋಷಿಸಿ ಸ್ವಾಗತಿಸಬಹುದು. ಇಲ್ಲವಾದಲ್ಲಿ, ಇಂತಹ ವಿಷಮ ಪರಿಸರದಲ್ಲಿ ಯುಗಾದಿಯನ್ನು ಏನೆಂದು ಸ್ವಾಗತಿಸೋಣ ?

Thursday, March 22, 2012

ಗೊತ್ತು ಗುರಿಯಿಲ್ಲದ ಚುನಾವಣಾ ಬಜೆಟ್

ವಾರ್ತಾಭಾರತಿ ಸಂಪಾದಕೀಯಮುಖ್ಯಮಂತ್ರಿ ಸದಾನಂದ ಗೌಡರು ತರಾತುರಿಯಲ್ಲಿ ಮಂಡಿಸಿರುವ ಮುಂಗಡ ಪತ್ರದಲ್ಲಿ ಏನಿದೆ ಎಂದು ಹುಡುಕಲು ಹೊರಟರೆ ಹೊಸದೆೇನೂ ಕಾಣುವುದಿಲ್ಲ. 1 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಎಂಬ ಒಣ ಹೆಗ್ಗಳಿಕೆ ಮಾತ್ರ ಇದಕ್ಕಿದೆ. ಹರಿದು ಹೋದ ಹಳೆ ಯೋಜನೆಗಳಿಗೆ ತೇಪೆ ಹಚ್ಚಿದ್ದನ್ನು ಬಿಟ್ಟರೆ ಬೇರೇನೂ ಇಲ್ಲ. ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಪ್ರಕಟಿಸಿದ ಯೋಜನೆಗಳಿಗೂ ತಾಳಮೇಳವಿಲ್ಲ. ಈ ಆಯವ್ಯಯವನ್ನು ಇಡಿಯಾಗಿ ನೋಡಿದರೆ ಕರ್ನಾಟಕದ ವಿಧಾನಸಭೆಗೆ ಶೀಘ್ರದಲ್ಲಿಯೇ ಮಧ್ಯಾಂತರ ಚುನಾವಣೆ ನಡೆಯುತ್ತದೆಯೇ ಎಂಬ ಸಂದೇಹ ಉಂಟಾಗುತ್ತದೆ. ಕಳೆದ ವರ್ಷದಂತೆ ಈ ವರ್ಷವೂ ಪ್ರತ್ಯೇಕ ಕೃಷಿ ಮುಂಗಡ ಪತ್ರವನ್ನು ಮಂಡಿಸಲಾಗಿದೆ.ಒಂದೆಡೆ ರೈತರ ಕೃಷಿ ಭೂಮಿಯನ್ನು ವಿಶ್ವ ಬಂಡವಾಳಗಾರರಿಗೆ ಬಿಟ್ಟು ಕೊಡುತ್ತಲೇ ಇನ್ನೊಂದೆಡೆಗೆ 50 ಸಾವಿರ ಕೋಟಿ ರೂ. ಅಗತ್ಯವಿರುವ ಕೃಷಿ ರಂಗಕ್ಕೆ ಬರೀ 19 ಸಾವಿರ ಕೋಟಿ ರೂ. ಒದಗಿಸಿ ತುಪ್ಪ ಸವರಲಾಗಿದೆ. ಕಳೆದ ವರ್ಷ ಯಡಿಯೂರಪ್ಪ ಕೃಷಿ ಬಜೆಟ್ ಮಂಡಿಸಿದ್ದಾಗಿ ಬಡಾಯಿ ಕೊಚ್ಚಿಕೊಂಡರು. ಆದರೆ ಅದರಿಂದ ಕೃಷಿ ಕ್ಷೇತ್ರದಲ್ಲಿ ಯಾವುದೇ ಪರಿಣಾಮವುಂಟಾಗಲಿಲ್ಲ.

ತದ್ವಿರುದ್ಧವಾಗಿ ಕೃಷಿಕ್ಷೇತ್ರದ ಬೆಳವಣಿಗೆ ಪ್ರಮಾಣ 16.9ರಿಂದ 15.9ಕ್ಕೆ ಕುಸಿದಿದೆ. ಕಳೆದ ವರ್ಷ ಕೃಷಿ ಬಜೆಟ್‌ನಲ್ಲಿ ಒದಗಿಸಿದ ಹಣದಲ್ಲಿ ಕಾಲು ಭಾಗವೂ ಖರ್ಚಾಗಿಲ್ಲ.ಈ ವರ್ಷವೂ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗಿರುವುದಿಲ್ಲ. ರೈತರ ಆತ್ಮಹತ್ಯೆ ತಡೆಯಲು ಕೃಷಿ ಬಜೆಟ್‌ನಿಂದ ಸಾಧ್ಯವಿಲ್ಲ.ಈ ಆಯವ್ಯಯದಲ್ಲಿ ಅತ್ಯಂತ ನಿರ್ಲಕ್ಷಕ್ಕೊಳಗಾಗಿರುವುದು ಶಿಕ್ಷಣ ಕ್ಷೇತ್ರ. ಅದರಲ್ಲೂ ಶಿಕ್ಷಣದಲ್ಲಿ ಸರಕಾರಿ ಶಾಲೆಗಳನ್ನು ನಿಷ್ಪ್ರಯೋಜಕ ಸಂಸ್ಥೆಗಳೆಂದು ಬಿಂಬಿಸಿ ಖಾಸಗಿ ಶಾಲೆಗಳಿಗೆ ಧಾರಾಳವಾಗಿ ಅನುದಾನವನ್ನು ನೀಡಲಾಗಿದೆ.ಇದರಿಂದ ಶಿಕ್ಷಣ ಮೂಲಭೂತ ಹಕ್ಕು ಎಂಬ ಸಂವಿಧಾನದ ಆಶಯಕ್ಕೆ ಬಜೆಟ್ ತಿಲಾಂಜಲಿ ನೀಡಿದೆ.

ಇದೇ ರೀತಿ ಕೈಗಾರಿಕಾ ಕ್ಷೇತ್ರವು ನಿರ್ಲಕ್ಷಕ್ಕೊಳಗಾಗಿದೆ.ಅರಣ್ಯ ಸಂರಕ್ಷಣೆಗೆ ಒದಗಿಸಿರುವ ಹಣವು ಅತ್ಯಂತ ಕಡಿಮೆಯಾಗಿದೆ. ಈ ಮುಂಗಡ ಪತ್ರದಲ್ಲಿ ಕಡೆಗಣಿಸಲ್ಪಟ್ಟಿರುವ ಇನ್ನೊಂದು ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ. ಕಳೆದ ಬಾರಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಈ ಇಲಾಖೆಗೆ 320 ಕೋಟಿ ರೂ. ಅನುದಾನವನ್ನು ನೀಡಲಾಗಿತ್ತು.ಆದರೆ ಸದಾನಂದ ಗೌಡರು ಈ ಬಾರಿ 90ಕೋಟಿ ರೂ. ಕಡಿತ ಮಾಡಿದ್ದಾರೆ. ಹಿಂದುಳಿದ ವರ್ಗಗಳಿಗೆ ಸಾವಿರ ಕೋಟಿ ಮೀಸಲಾಗಿಟ್ಟಿರುವ ಸರಕಾರ ಅಲ್ಪಸಂಖ್ಯಾತರಿಗೆ ಕನಿಷ್ಠ 500 ಕೋಟಿ ರೂ.ಗಳನ್ನಾದರೂ ಒದಗಿಸಬೇಕಾಗಿತ್ತು. ಆದರೆ ಇದರಲ್ಲೂ ಬಿಜೆಪಿ ವೋಟ್ ಬ್ಯಾಂಕ್ ಲೆಕ್ಕಾಚಾರ ಎದ್ದುಕಾಣುತ್ತದೆ.

ಯಡಿಯೂರಪ್ಪನವರಂತೆ ಸಂಘಪರಿವಾರದಲ್ಲಿ ಬೆಳೆದ ಸದಾನಂದ ಗೌಡರಿಗೆ ಮಠ-ಪೀಠಗಳ ಬಗ್ಗೆ ವಿಶೇಷ ಭಯಭಕ್ತಿ ಇರುವುದು ಈ ಬಜೆಟ್‌ನಿಂದ ವ್ಯಕ್ತವಾಗಿದೆ. ಯಡಿಯೂರಪ್ಪನವರು ಮಂಡಿಸಿದ ಮುಂಗಡ ಪತ್ರಗಳಲ್ಲಿ ವೀರಶೈವ ಮಠಗಳಿಗೆ 395 ಕೋಟಿ ರೂ. ನೀಡಿದ್ದರು.ಸದಾನಂದ ಗೌಡರು ತಮ್ಮ ಮೊದಲ ಬಜೆಟ್‌ನಲ್ಲಿ 75.5 ಕೋಟಿ ರೂ.ಗಳನ್ನು ಒದಗಿಸಿದ್ದಾರೆ. ಯಡಿಯೂರಪ್ಪನವರು ವೀರಶೈವ ಮಠಗಳಿಗೆ ಅದ್ಯತೆ ನೀಡಿದ್ದರು. ಆದರೆ ಸದಾನಂದ ಗೌಡರು ಹಿಂದುಳಿದ ವರ್ಗಗಳ ಮೇಲೆ ಕಣ್ಣಿಟ್ಟು ಕೋಟ್ಯಂತರ ರೂ. ಒದಗಿಸಿದ್ದಾರೆ.

ಸಾಮಾಜಿಕ ಸಮಾನತೆಯಲ್ಲಿ ನಂಬಿಕೆಯಿಲ್ಲದಿದ್ದರೂ ಜಾತಿಗಳನ್ನು ಗಟ್ಟಿಗೊಳಿಸಿ ಮತ್ತೆ ಅಧಿಕಾರಕ್ಕೆ ಬರುವ ಮಸಲತ್ತು ನಡೆಸಿದಂತೆ ಕಾಣುತ್ತದೆ.ಇದು ಸಂವಿಧಾನದ ಆಶಯವಾದ ಜಾತಿ ವಿನಾಶಕ್ಕೆ ದಾರಿಯಿಲ್ಲದಂತೆ ಮಾಡಿದೆ. ಹಿಂದುಳಿದ ಮತ್ತು ಪರಿಶಿಷ್ಟ ಪಂಗಡಗಳ ಮಠಗಳಿಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿ ವೋಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಹುನ್ನಾರ ನಡೆಸಿದಂತೆ ಕಾಣುತ್ತದೆ.ಎಲ್ಲಕ್ಕಿಂತ ಮುಖ್ಯವಾಗಿ ಜನಸಾಮಾನ್ಯರ ಹಸಿವನ್ನು ಇಂಗಿಸುವ ಸಾರ್ವಜನಿಕ ವಿತರಣೆ ವ್ಯವಸ್ಥೆ ಬಗ್ಗೆ ಮುಂಗಡ ಪತ್ರದಲ್ಲಿ ಉಲ್ಲೇಖವೇ ಇಲ್ಲ. ಅಪೌಷ್ಟಿಕತೆಯಿಂದ ಕೊನೆ ಉಸಿರು ಎಳೆಯುತ್ತಿರುವ ಮಕ್ಕಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ.

ಇಂಥವರ ಬದುಕಿಗೆ ಮುಂಗಡ ಪತ್ರದಲ್ಲಿ ಯಾವುದೇ ಕಾರ್ಯಕ್ರಮವನ್ನು ಪ್ರಕಟಿಸಿಲ್ಲ.ಯಡಿಯೂರಪ್ಪನವರ ವೀರಶೈವ ವೋಟ್ ಬ್ಯಾಂಕ್ ಎದುರು ಕರ್ನಾಟಕವನ್ನು ಹಿಂದುತ್ವದ ಪ್ರಯೋಗಶಾಲೆಯನ್ನಾಗಿ ಮಾಡುವ ಸದಾನಂದ, ಅನಂತ ಕುಮಾರ್, ಈಶ್ವರಪ್ಪನವರ ತ್ರಿವಳಿ ಕಾರ್ಯತಂತ್ರದ ಭಾಗವಾಗಿ ಈ ಆಯವ್ಯಯವು ಆಕಾರಗೊಂಡಿದೆ. ಮುಂಗಡ ಪತ್ರದಲ್ಲಿ ಘೋಷಿಸಿ, ಬಿಡುಗಡೆ ಮಾಡಿದ ಹಣವನ್ನು ಸರಕಾರಿ ಇಲಾಖೆಗಳು ಬಳಸಿಕೊಳ್ಳಲಾಗಿಲ್ಲ. ಈ ಬಜೆಟ್ ತೆರೆಮೆರೆಯಲ್ಲಿ ರೈತರ ಭೂಮಿಯನ್ನು ಕಬಳಿಸಲು ಬಾಯಿತೆರೆದು ನಿಂತಿರುವ ಕಾರ್ಪೊರೇಟ್ ಕಂಪೆನಿಗಳ ಪರವಾಗಿದೆ. ಇಂತಹ ಎಷ್ಟೇ ಲಕ್ಷ ಕೋಟಿ ರೂ. ಬಜೆಟ್ ಬಂದರೂ ಜನಸಾಮಾನ್ಯರ ಬದುಕಿನಲ್ಲಿ ಬೆಳಕು ನೀಡಲಾಗದು.

ಸದಾನಂದರ ಮೊದಲ ಬಜೆಟ್:ಯಾರಿದ್ದರೂ ಇದೇ ಬಜೆಟ್ಟೇ-ಜನರನ್ನು ಸುಲಿದು ಶ್ರೀಮಂತರನ್ನು ಕೊಬ್ಬಿಸುವ ಬಜೆಟ್


ಶಿವಸುಂದರ್

ಅಂತೂ ಇಂತೂ ಸದಾನಂದಗೌಡರು ‘ತಮ್ಮ’ ಮೊದಲ ಬಜೆಟ್ ಮಂಡಿಸಿದ್ದಾರೆ. ಬಿಜೆಪಿಯ ಒಳಗಿನ ಹೀನಾಯ ಒಳಜಗಳ ಎಂಥಾ ತಾರಕಕ್ಕೆ ಮುಟ್ಟಿತ್ತೆಂದರೆ ಅಸಲು ಬಜೆಟ್ ಅಧಿವೇಶನ ನಡೆಯುವುದೋ ಇಲ್ಲವೋ ಎಂಬ ಅನುಮಾನವನ್ನು ಹುಟ್ಟು ಹಾಕಿತ್ತು. ಬಿಜೆಪಿ ಮತ್ತು ಆರೆಸ್ಸೆಸ್ಸ್‌ಗಳ ಒಂದು ದೊಡ್ಡ ಭಾಗ ಕಾಂಗ್ರೆಸೀಕರಣ ಆಗುತ್ತಿರುವ ಭಾಗವಾಗಿ, ಯಡಿಯೂರಪ್ಪನವ ರಂಥ ಭ್ರಹ್ಮಾಂಡ ಭ್ರಷ್ಟರೂ ಅನಿವಾರ್ಯವಾಗುತ್ತಿರುವುದರ ಭಾಗವಾಗಿ ಹೇಗೋ ಸಂಧಾನ ಕುದುರಿ ಸದಾನಂದಗೌಡರ ಸರಕಾರಕ್ಕೆ ಹತ್ತು ದಿನಗಳ ಜೀವ ದೊರೆತಿದೆ. ಅದೇನೇ ಇರಲಿ. ಬಜೆಟ್ಟಿನ ವಿಷಯದಲ್ಲಿ ಜನರು ಕೇಳಬೇಕಿರುವ ಮುಖ್ಯ ಪ್ರಶ್ನೆ ಇದು ‘ಸದಾನಂದ ಗೌಡರ’ ಬಜೆಟ್ಟೇ? ಮತ್ತು ಸದಾ ನಂದರ ಬದಲು ಯಡಿಯೂರಪ್ಪಇದನ್ನು ಮಂಡಿಸಿದ್ದರೆ ಇದಕ್ಕಿಂತ ಭಿನ್ನವಿರುತ್ತಿತ್ತೇ?ಅಥವಾ ಯಡಿಯೂರಪ್ಪನವರನ್ನೂ ಬಿಟ್ಟು ಸಿದ್ದರಾಮಯ್ಯನವರೋ, ಕುಮಾರಸ್ವಾಮಿಯ ವರೋ ಮಂಡಿಸಿದ್ದರೆ ಇದಕ್ಕಿಂತ ಎಷ್ಟು ಭಿನ್ನವಿರುತ್ತಿತ್ತು ಎಂಬುದು! ವಾಸ್ತವವವಾಗಿ ಈ ಬಜೆಟ್ಟುಗಳು ನಾವು ಆಯ್ಕೆಮಾಡಿ ಕಳಿಸಿದ ಪ್ರತಿನಿಧಿಗಳು ರೂಪಿಸುತ್ತಿರುವ ಬಜೆಟ್ಟೇ ಅಲ್ಲ.ಬಜೆಟ್ಟಿನ ಸುತ್ತ ಮಾಧ್ಯಮಗಳು ಯಾವಾಗಲೂ ಒಂದು ಬಗೆಯ ಭ್ರಾಮಕವಾದ ಪ್ರಭಾವಳಿಯನ್ನು ಸೃಷ್ಟಿಸಿರುತ್ತವೆ.

ವಾಸ್ತವವಾಗಿ ಬಜೆಟ್ಟು ಒಂದು ಆರ್ಥಿಕ ನೀತಿಯನ್ನೇನು ಜಾರಿಗೆ ತರುವುದಿಲ್ಲ. ಈಗಾಗಲೇ ಆಳುವ ಪಕ್ಷ ಒಪ್ಪಿಕೊಂಡಿರುವ ಆರ್ಥಿಕ ನೀತಿಯನುಸಾರ ಮತ್ತು ಆ ನೀತಿಯನ್ನು ಅನುಷ್ಠಾನಕ್ಕೆ ತರಲು ಬೇಕಾದ ಕಾರ್ಯ ಯೋಜನೆ ಮತ್ತು ಹಣಕಾಸು ವಿತರಣೆಯನ್ನು ಮಾತ್ರ ಬಜೆಟ್ಟು ಮಾಡು Fiscal Responsibility Act (FRA)ತ್ತದೆ.ಹೀಗಾಗಿ ಬಜೆಟ್ಟನ್ನು ವಿಶ್ಲೇಷಣೆ ಮಾಡುವಾಗ ಯಾವುದರ ಬೆಲೆ ಇಳಿಯಿತು ಮತ್ತು ಯಾವುದು ಹೆಚ್ಚಾಯಿತು ಎಂದು ವಿಶ್ಲೇಷಿಸುವುದಕ್ಕಿಂತ ಯಾರಿಂದ ಕಿತ್ತು ಯಾರಿಗೆ ಮತ್ತು ಹೇಗೆ ಕೊಡಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.ಜಾಗತೀಕರಣ ಪ್ರಾರಂಭವಾದ ನಂತರ ಭಾರತದ ಎಲ್ಲಾ ಪಕ್ಷಗಳು ಅನುಸರಿಸುತ್ತಿರುವುದು ಒಂದೇ ಆರ್ಥಿಕ ನೀತಿ. ಅದು ಬಡವರಿಂದ ಕಿತ್ತು ಶ್ರೀಮಂತರಿಗೆ ನೀಡುವ ನೀತಿ.

ಏಕೆಂದರೆ ಬಡವರಿಗೆ ಜೀವನೋಪಾಯ ಕಲ್ಪಿಸುವುದಕ್ಕಿಂತ ಶ್ರೀಮಂತರ ಮತ್ತು ಬಂಡವಾಳಶಾಹಿಗಳ ಬಳಿ ಹಣ ಉಳಿದರೆ ಅವರು ಆರ್ಥಿಕತೆಯಲ್ಲಿ ಬೆಳವಣಿಗೆ ತಂದು ಅದರಿಂದ ಬಡತನ ಇಂಗುತ್ತದೆ ಎಂಬುದು ಇಂದು ಭಾರತದಂಥ ಎಲ್ಲಾ ದೇಶಗಳು ಅನುಸರಿಸುತ್ತಿರುವ ಆರ್ಥಿಕ ನೀತಿ.ಇದನ್ನೇ ಮಾರುಕಟ್ಟೆ ಆರ್ಥಿಕ ನೀತಿ ಎಂದೂ ಕರೆಯುತ್ತಾರೆ. ಹಾಗೂ ಎಲ್ಲಾ ದೇಶಗಳು ಈ ಬಗೆಯ ಆರ್ಥಿಕ ನೀತಿಯನ್ನೇ ಜಾರಿಗೆ ತರಲು ಖಾತರಿ ಮಾಡಿಕೊಳ್ಳಲು ಬೇಕಾದ ಕೇಂದ್ರ ಸರಕಾರ ಮತ್ತು ಶಾಸನವನ್ನೇ ಮಾಡಿಬಿಟ್ಟಿವೆ. ಈ ಶಾಸನ ವಾಸ್ತವವಾಗಿ ಸಂವಿಧಾನದ ನಿರ್ದೇ ಶನಾ ತತ್ವಗಳಿಗೆ ವಿರುದ್ಧವಾದವು. ಹೀಗಾಗಿ ಜನ ವಿರೋಧಿ ಹಾಗೂ ಬಂಡವಾಳಶಾಹಿಪರ ಬಜೆಟ್ಟನ್ನು ಮಂಡಿಸುವುದು ಶಾಸನವೇ ಆಗಿ ಬಿಟ್ಟಿರುವಾಗ ಸಿಡುಕು ಮೋರೆಯ ಯಡಿಯೂರಪ್ಪಮಂಡಿಸಿದರೂ, ಹಲ್ಲು ಕಿರಿಯುವ ಸದಾನಂದ ಗೌಡ ಮಂಡಿಸಿದರೂ, ಗಡಸು ಮೋರೆಯ ಸಿದ್ದರಾಮಯ್ಯ ಮಂಡಿಸಿದರೂ ಯಾವ ಮೂಲಭೂತ ವ್ಯತ್ಯಾಸಗಳು ಇರುತ್ತಿರಲಿಲ್ಲ.

ಸಾರಾಂಶದಲ್ಲಿ ಅವು ಜನ ವಿರೋಧಿಯೇ ಆಗಿರುತ್ತಿದ್ದವು. ಹಾಗಂತ ಬಿಜೆಪಿ ಮತ್ತು ಇತರ ಪಕ್ಷಗಳ ನಡುವೆ ವ್ಯತ್ಯಾಸವೇ ಇರುತ್ತಿರಲಿಲ್ಲ ಎಂದೇನಲ್ಲ. ಬಿಜೆಪಿ ತನ್ನ ಅಧಿಕಾರವನ್ನು ಹಿಂದೂತ್ವದ ಅಜೆಂಡಾವನ್ನು ಆಚರಣೆಗೆ ತರಲು ಬಳಸಿ ಕೊಳ್ಳುತ್ತದೆ. ಮತ್ತು ಬಜೆಟ್ಟಿನಲ್ಲ್ಲೂ ಅದಕ್ಕೆ ಬೇಕಾದ ಹಣಕಾಸು ಸಂಪನ್ಮೂಲವನ್ನು ಒದಗಿಸುತ್ತದೆ. ಯಡಿಯೂರಪ್ಪ ಮಾಡಿದ್ದು ಇದನ್ನೇ. ಸದಾನಂದ ಮಾಡಿರೋದು ಇದನ್ನೇ. ಅಷ್ಟರ ಮಟ್ಟಿಗೆ ಬಿಜೆಪಿ ಮತ್ತು ಇತರ ಪಕ್ಷಗಳಿಗೆ ವ್ಯತ್ಯಾಸ ಇದೆ. ಆದರೆ ಯಡಿಯೂರಪ್ಪಮತ್ತು ಆರೆಸ್ಸೆಸ್ ಕ್ಯಾಂಡಿಡೇಟ್ ಆದ ಸದಾನಂದರ ನಡುವೆ ಅದರ ಬಗ್ಗೆಯೂ ವ್ಯತ್ಯಾಸವಿಲ್ಲ. ಉದಾಹರಣೆಗೆ ಇಬ್ಬರೂ ಹಿಂದೂ ಮಠ ಮಂದಿರಗಳಿಗೆ ಸಾರ್ವ ಜನಿಕ ಹಣವನ್ನು ಸಂವಿಧಾನಬಾಹಿರವಾಗಿ ಸುರಿಯುತ್ತಿದ್ದಾರೆ.

ಯಡ್ಡಿ ಪ್ರಧಾನವಾಗಿ ಲಿಂಗಾಯತ ಮಠಗಳಿಗೆ ಕಳೆದ ವರ್ಷದಲ್ಲಿ 395 ಕೋಟಿ ನೀಡಿ ಹಿಂದೂತ್ವದ ಚೌಕಟ್ಟಿನೊಳಗೆ ಲಿಂಗಾಯತ ಜಾತಿಯನ್ನು ತನ್ನ ಪರವಾಗಿ ಸಧೃಡೀಕರಿಸಿ ಕೊಂಡಿರುವುದು ಈಗ ಬಿಜೆಪಿ ಬಿಕ್ಕಟ್ಟಿನ ಮೂಲ. ಈಗ ಅದಕ್ಕೆ ಪ್ರತಿಯಾಗಿ ಸದಾನಂದ ಗೌಡ ಇತರ ಹಿಂದುಳಿದ ಮಠಗಳಿಗೆ ಅದರಲ್ಲೂ ವಿಶೇಷವಾಗಿ ಕುರುಬ ಸಮುದಾಯದ ಮಠಗಳಿಗೆ ಹಣ ಸುರಿದು ಹಿಂದುತ್ವದ ಚೌಕಟ್ಟಿನೊಳಗೆ ಯಡ್ಡಿಯ ಪ್ರತಿಯಾಗಿ ಓಟು ಬ್ಯಾಂಕ ನ್ನು ನಿರ್ಮಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇದು ಹಿಂದೂತ್ವದ ಟೊಳ್ಳುತನವನ್ನೂ ತೋರಿಸುತ್ತಿದೆ. ಸದಾನಂದಗೌಡರ ಬಜೆಟ್ಟಿನ ಸುತ್ತ ಇರುವ ಬಿಜೆಪಿ ಮತ್ತು ಮಾಧ್ಯಮಗಳು ಹರಿಯಬಿಟ್ಟಿರುವ ಮಿಥ್ಯೆಗಳನ್ನು ಒಂದಷ್ಟು ಒಡೆದುನೋಡೊಣ...

ಮೊದಲನೆಯದಾಗಿ ಒಂದು ಲಕ್ಷ ಕೋಟಿ ಬಜೆಟ್ಟು ಮಂಡನೆಯೇ ಒಂದು ದೊಡ್ಡ ಹೆಗ್ಗಳಿಕೆ ಯೆಂದು ಕೊಚ್ಚಿಕೊಳ್ಳುತ್ತಾ ಬಿಜೆಪಿ ಜನರನ್ನು ಮಂಗ ಮಾಡಲು ಹೊರಟಿದೆ. ಏಕೆಂದರೆ ಒಂದು ರಾಜ್ಯದ ನಿವ್ವಳ ಉತ್ಪಾದಕತೆ ಜಾಸ್ತಿ ಆಗುತ್ತಾ ಹೋದಂತೆ ಅದಕ್ಕೆ ತಕ್ಕ ಹಾಗೆ ತೆರಿಗೆ ಮತ್ತು ಇನ್ನಿ ತರ ಆದಾಯ ಹಾಗೂ ಅದನ್ನು ಆಧರಿಸಿ ರಾಜ್ಯ ದ ವೆಚ್ಚದ ಅಂದಾಜು ಹೆಚ್ಚುತ್ತಲೇ ಹೋಗುತ್ತದೆ.1947ರಲ್ಲಿ ಭಾರತದ ಕೇಂದ್ರ ಸರಕಾರದ ಬಜೆಟ್ 1ಲಕ್ಷ ಕೋಟಿಯನ್ನು ದಾಟಿರಲಿಲ್ಲ. ಈಗದು 14 ಲಕ್ಷ ಕೋಟಿ.

ಹೀಗಾಗಿ ಅದು ಸಹಜ ಬೆಳವಣಿಗೆಯ ಭಾಗವೇ ಹೊರತು ಸಾಧನೆಯಲ್ಲ. ಪ್ರಶ್ನೆ ಇರುವುದು ಆ ಸಂಪನ್ಮೂಲ ದಲ್ಲಿ ಯಾವ ಬಗೆಯ ಆರ್ಥಿಕ ಅಭಿವೃದ್ಧಿ ಮಾಡಲು ಹೊರಟಿದೆ ಮತ್ತು ಯಾವ ವರ್ಗಗಳ ಅಭಿವೃದ್ಧಿಯನ್ನು ಸಾರಾಂಶದಲ್ಲಿ ಗುರಿ ಇಟ್ಟುಕೊಳ್ಳಲಾಗಿದೆ ಎಂಬುದು. ಎಲ್ಲಕ್ಕಿಂತ ಮುಖ್ಯವಾದದ್ದು ಕರ್ನಾಟಕದ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ 1.02 ಕೋಟಿ ರೂ. ರೂಢಿಸಲಾಗುವುದೇ ಎಂಬುದು? ಏಕೆಂದರೆ ದೇಶದ ಮತ್ತು ಜಗತ್ತಿನ ಆರ್ಥಿಕ ಪರಿಸ್ಥಿತಿ ಕುಂಠಿತವಾಗಿದೆ.

ಹೀಗಾಗಿ ದೇಶದ ಆರ್ಥಿಕ ಪ್ರಗತಿ ಗತಿ ಶೇ.8.4 ಇರ ಬಹುದು ಎಂದು ಅಂದಾಜು ಮಾಡಿದ್ದವರೇ ಈಗ ಅದು ಶೇ.6.4 ಅನ್ನು ದಾಟಲ್ಲ ಎನ್ನುತ್ತಿದ್ದಾರೆ. ಕರ್ನಾಟಕದ ಆರ್ಥಿಕತೆ ಕಳೆದ ವರ್ಷದಲ್ಲಿ ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರ ಮೂರರಲ್ಲೂ ಹಿನ್ನೆಡೆಯನ್ನು ಸಾಧಿಸಿದೆ.ಇವೆಲ್ಲದರ ಪರಿಣಾಮವಾಗಿ ಆ ಪ್ರಮಾಣದ ಆರ್ಥಿಕ ವಹಿವಾಟೇ ನಡೆಯದಿದ್ದರೆ ತೆರಿಗೆ ಸಂಗ್ರಹವೂ ಕಡಿಮೆಯಾಗುತ್ತದೆ.ಹೀಗಾಗಿಯೇ ಕಳೆದ ವರ್ಷ ಬಜೆಟ್ಟಿನಲ್ಲಿ 83,729 ಕೋಟಿ ತೆರಿಗೆ ಸಂಗ್ರಹವಾಗುತ್ತದೆ ಎಂದು ಅಂದಾಜು ಮಾಡಿದ್ದರೂ ತೆರಿಗೆ ಸಂಗ್ರಹವಾಗಿದ್ದು ಕೇವಲ 78,433 ಕೋಟಿ ಮಾತ್ರ. ಈ ಬಾರಿಯೂ 124 ತಾಲೂಕುಗಳಲ್ಲಿ ಬರ ಇದೆ.

ಹಾಗೂ ಒಟ್ಟಾರೆ ಆರ್ಥಿಕ ಪ್ರಗತಿ ಶೇ. 6ನ್ನು ದಾಟುವ ಯಾವ ಸೂಚನೆಯೂ ಇಲ್ಲ. ಹಾಗಿದ್ದ ಮೇಲೆ ತೆರಿಗೆ ಸಂಗ್ರಹ ಈ ಬಾರಿ ಕಳೆದ ವರ್ಷಕ್ಕಿಂತ ಕಡಿಮೆ ಆಗುತ್ತದೆ ಅಥವಾ ಕಳೆದ ವರ್ಷದಷ್ಟು ಮಾತ್ರ ಆಗುತ್ತದೆ. ಹಾಗಿ ದ್ದರೂ ಈ ಬಾರಿ 1.02 ಲಕ್ಷದಷ್ಟು ಆದಾಯ ಸಂಗ್ರಹವಾಗಬಹುದೆಂಬ ಸರಕಾರದ ಅಂದಾಜು ಪ್ರಾರಂಭದಲ್ಲೇ ಸುಳ್ಳು ಮತ್ತು ಮೋಸದಿಂದ ಕೂಡಿದ್ದಾಗಿದೆ.ಅಷ್ಟು ಮಾತ್ರವಲ್ಲ.ಸರಕಾರ ಹಣಕಾಸು ಕೊರತೆಯಾದಾಗ ಕೊರತೆ ಹಣವನ್ನು ಸಾಲ ಎತ್ತುತ್ತದೆ. ಸರಕಾರೀ ಹಣಕಾಸು ಸಂಸ್ಥೆಗಳು ಕಡಿಮೆ ದರದಲ್ಲಿ ಸಾಲ ನೀಡುತ್ತವೆ. ಆದರೆ ಅದಕ್ಕೆ ಮಿತಿಯಿರುತ್ತದೆ. ಓಪನ್ ಮಾರುಕಟ್ಟೆಯಲ್ಲಿ ಸರ ಕಾರಕ್ಕೆ ಸಾಲ ಸಿಗುತ್ತದೆ.ಅದಕ್ಕೆ ಸರಕಾರಿ ಆಸ್ತಿ ಯನ್ನು ಒತ್ತೆ ಇಡಬೇಕು ಮತ್ತು ಬಡ್ಡಿಯೂ ದುಬಾರಿ. ಅದು ಹೆಚ್ಚುತ್ತಾ ಹೋದಂತೆ ರಾಜ್ಯ ದಿವಾಳಿಯೆಡೆಗೆ ಸಾಗುತ್ತದೆ. ಈಗಾಗಲೇ ಬಿಬಿ ಎಂಪಿ ತಾನು ತಂದ ಸಾಲಗಳಿಗೆ ತನ್ನ ಆಸ್ತಿಪಾಸ್ತಿ ಯನ್ನು ಒತ್ತೆ ಇಡುತ್ತಿರುವುದನ್ನು ನೋಡಿದ್ದೇವೆ.

ಆದರೆ ಬಿಜೆಪಿ ಸರಕಾರ ಕಳೆದ ಬಾರಿ ತನ್ನ ಕೊರತೆಯನ್ನು ಜನರಿಂದ ಮುಚ್ಚಿಡಲು ಓಪನ್ ಮಾರುಕಟ್ಟೆಯಿಂದಲೇ 6206 ಕೋಟಿ ಸಾಲ ಎತ್ತಿದೆ.ಈ ಬಾರಿಯೂ 10,000 ಕೋಟಿ ಹಣವನ್ನು ಅದೇ ಮೂಲಗಳಿಂದ ಎತ್ತಲು ತೀರ್ಮಾನಿಸಿದೆ. ಇದರಿಂದಾಗಿ 2012-13ರ ಹೊತ್ತಿಗೆ ಕರ್ನಾಟಕ ರಾಜ್ಯದ ಒಟ್ಟು ಸಾಲದ ಹೊರೆ 81,994 ಕೋಟಿಯಾಗಿದ್ದರೆ (ಇದು ನಮ್ಮ ಒಟ್ಟಾರೆ ತೆರಿಗೆ ಆದಾಯಕ್ಕಿಂತಲೂ ಜಾಸ್ತಿ!) ಅದರಲ್ಲಿ ಓಪನ್ ಮಾರ್ಕೆಟ್ ದುಬಾರಿ ಸಾಲದ ಪ್ರಮಾಣವೇ 44,608 ಕೋಟಿಯಾಗಿದೆ.ಇದರಿಂದಾಗಿ ರಾಜ್ಯದ ದೊಡ್ಡ ವ್ಯಯಗಳ ಬಾಬತ್ತಿನಲ್ಲಿ ಬಡ್ಡಿ ತೀರುವಳಿ ನಾಲ್ಕನೆ ದೊಡ್ಡ ಬಾಬತ್ತಾಗಿ ಪರಿಣಮಿಸಿ ರಾಜ್ಯದ ಬಡಜನತೆಯ ಮೇಲೆ ತೆರಿಗೆ ಇನ್ನಿತರ ರೂಪದ ಹೊರೆಯಾಗಿ ಹೇರಲಾಗುತ್ತಿದೆ. ಹೀಗಾಗಿ ಒಂದೋ ಸದಾನಂದಗೌಡರ ಬಜೆಟ್ಟು ಬಂಡವಾಳವಿಲ್ಲದ ಬಡಾಯಿ. ಇಲ್ಲವೇ ಓಪನ್ ಮಾರ್ಕೆಟ್ನಿಂದ ಸಾಲ ತಂದರೆ ಅದು ಜನರನ್ನು ದಿವಾಳಿಯೆಬ್ಬಿಸುವ ನೀತಿ.

ಎರಡನೆಯದಾಗಿ ಎರಡನೇ ಕೃಷಿ ಬಜೆಟ್ಟೆಂಬ ಹೆಗ್ಗಳಿಕೆ. ಹಾಗೆ ನೋಡಿದರೆ ಹೋದವರ್ಷ ಯಡ್ಡಿ ಮಂಡಿಸಿದ ಬಜೆಟ್ ಭಾಷಣದ ಪ್ರತಿ ಹಸಿರು ಬಣ್ಣದಲ್ಲಿತ್ತೆಂಬುದನ್ನು ಬಿಟ್ಟರೆ ಅದರಲ್ಲಿ ರೈತಾಪಿ ವರ್ಗಕ್ಕೆ ಯಾವುದೇ ವಿಶೇಷವಾದ ಯೋಜನೆ ಅಥವಾ ಸಂಪನ್ಮೂಲಗಳನ್ನು ನೀಡಿರಲಿಲ್ಲ.ಹೀಗಾಗಿ ಕೃಷಿ ಬಜೆಟ್ ಎಂಬ ಶೀರ್ಷಿಕೆಯೇ ಜನರನ್ನು ಮೋಸ ಮಾಡುವ ಶೀರ್ಷಿಕೆ. ಇನ್ನು ವಿವಿಧ ಬಾಬತ್ತುಗಳಲ್ಲಿ ಒಟ್ಟಾರೆಯಾಗಿ ಈ ತಥಾಕಥಿತ ಕೃಷಿ ಬಜೆಟ್ಟಿಗೆ ಹೆಚ್ಚಿರುವ ಸಂಪನ್ಮೂಲ ಕೇವಲ 2921 ಕೋಟಿ ಮಾತ್ರ. ಅಂದರೆ ಶೇ.15ರಷ್ಟು ಮಾತ್ರ ಹೆಚ್ಚಳ. ಶೇ.7ರ ಹಣದುಬ್ಬರ ಮತ್ತು ಬೆಲೆ ಏರಿಕೆಗಳನ್ನು ಗಮನಕ್ಕೆ ತೆಗೆದುಕೊಂಡರೆ ಇದು ವಾಸ್ತವದ ರೂಪದಲ್ಲಿ ಹೆಚ್ಚಳವೇ ಅಲ್ಲ. ಮತ್ತು ಈಗಾಗಲೇ ಹೇಳಿದಂತೆ ಈ ಪ್ರಮಾಣದ ಹೆಚ್ಚಳಕ್ಕೆ ಬೇಕಾದ ತೆರಿಗೆ ಕ್ರೋಡೀಕರಣಕ್ಕೆ ಬೇಕಾದ ಆರ್ಥಿಕ ಪ್ರಗತಿಯಾಗಲೀ, ನೀತಿಯಾಗಲೀ ಸರಕಾರದ ಬಳಿ ಇಲ್ಲವೇ ಇಲ್ಲ.

ಹೀಗಾಗಿ ಇದು ಕೇವಲ ಕಾಗದದ ಮೇಲಿನ ಹೆಚ್ಚಳವಾಗಿ ಮಾತ್ರ ಉಳಿಯುವ ಸಂಭವವೇ ಹೆಚ್ಚು. ಅದಕ್ಕಿಂತಲೂ ಮುಖ್ಯವಾದದ್ದು ಕೃಷಿ ಬಜೆಟ್ಟಿನ ಒಳಗೆ ಈ ಬಜೆಟ್ಟು ಅನುಸರಿಸುತ್ತಿರುವ ನೀತಿಯೇನು.ಬಜೆಟ್ ಭಾಷಣದಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ ಕೃಷಿ ಮಾರುಕಟ್ಟೆ ವ್ಯವಹಾರ ಮತ್ತು ಉದ್ದಿಮೆಗಳತ್ತ ಕೃಷಿ ನೀತಿ ಹೊರಟಿದೆ.ಅದಕ್ಕಾಗಿಯೇ ಕೃಷಿ ಬಂಡವಾಳದಾರರ ಹೂಡಿಕೆದಾರರ ಸಮ್ಮೇಳನವೂ ಇತ್ತೀಚೆಗೆ ನಡೆಯಿತು. ಅದರ ಫಲಶ್ರುತಿಯಾಗಿ ಗುಲ್ಬರ್ಗಾದಲ್ಲಿ ತೊಗರಿ ಟೆಕ್ನಾಲಜಿ ಪಾರ್ಕ್, ರಾಣಿಬೆನ್ನೂರಿನಲ್ಲಿ ಮೆಕ್ಕೆಜೋಳ ಪಾರ್ಕ್, ಮತ್ತು ತಿಪಟೂರಿನಲ್ಲಿ ತೆಂಗು ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಭರವಸೆ ನೀಡಲಾಗಿದೆ. ಇವೆಲ್ಲವೂ ಖಾಸಗಿ ಸಹಭಾಗಿತ್ವದೊಂದಿಗೆ ಎಂಬುದನ್ನು ಮರೆಯುವಂತಿಲ್ಲ.

ಹಾಗೆಯೇ ಇನ್ನೂ ದೊಡ್ಡ ಅಪಾಯಕಾರಿ ಪ್ರಸ್ತಾಪವನ್ನು ಮಾಡಲಾಗಿದೆ. ಅದು ಖಾಸಗಿ ಸಹಭಾಗಿತ್ವದಲ್ಲಿ ಉಗ್ರಾಣಗಳ ಸ್ಥಾಪನೆ. ಇದು ನಿಧಾನವಾಗಿ ರೈತಾಪಿಯ ಬದುಕಿನ ಜುಟ್ಟನ್ನು ಖಾಸಗಿ ಬಂಡವಾಳಶಾಹಿಗಳ ಕೈಗೊಪ್ಪಿಸುತ್ತದೆ. ಹೀಗೆ ಕೃಷಿ ಬಜೆಟ್ಟಿನ ಒತ್ತೆಲ್ಲವೂ ಪ್ರಧಾನವಾಗಿ ಕೃಷಿ ಬಂಡವಾಳ ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡುವ ದಿಕ್ಕಿನಲ್ಲಿದೆಯೇ ವಿನಃ ಆತ್ಮಹತ್ಯೆಯ ಹಾದಿ ಹಿಡಿದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಪರವಾಗಿಯಲ್ಲ. ಆದ್ದರಿಂದಲೇ ಕೃಷಿಗೆ ಹೆಚ್ಚು ಹಣ ನೀಡಿದರೆ ರೈತಪರ ಬಜೆಟ್ಟು, ಇಲ್ಲದಿದ್ದರೆ ಮತ್ತೇನೋ ಎಂಬ ಸರಳ ಮೂಢ ಸರಳೀಕರಣಗಳನ್ನು ಮಾಡಬಾರದು.

ಇದಲ್ಲದೆ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳಲು ಸರಕಾರ ತನ್ನ ವೆಚ್ಚವನ್ನು ಕಡಿತಗೊಳಿಸಬೇಕೆಂದು ವಿತ್ತೀಯ ನಿರ್ವಹಣೆ ಮೇಲುಸ್ತುವಾರಿ ಸಮಿತಿ ಶಿಫಾರಸ್ಸು ಮಾಡಿ 2012-2016ರ ಸಾಲಿನಲ್ಲಿ ಈ ಬಗೆಯಲ್ಲಿ ವೆಚ್ಚವನ್ನು ಕಡಿತ ಮಾಡಲು ತುರ್ತು ವೈದ್ಯಕೀಯ ಸಿಬ್ಬಂದಿಯ ನೇಮಕಾತಿಯನ್ನು ಬಿಟ್ಟು ಯಾವುದೇ ಹೊಸ ನೇಮಕಾತಿ ಮಾಡಬಾರದೆಂದು ಸಲಹೆ ಮಾಡಿದೆ. ಹಾಗೆಯೇ ಇಂಧನ, ರಸ್ತೆ, ಕುಡಿಯುವ ನೀರು, ಇನ್ನಿತ್ಯಾದಿ ಬಂಡವಾಳ ವೆಚ್ಚದ ಮೇಲೆ ಬಳಕೆದಾರರ ಶುಲ್ಕವನ್ನು ಹೆಚ್ಚಿಸಬೇಕೆಂಬ ಮತ್ತು ಕ್ರಮೇಣವಾಗಿ ಅವಷ್ಟನ್ನೂ ಖಾಸಗೀಕರಿಸಬೇಕೆಂಬ ಪ್ರಸ್ತಾಪವನ್ನು ಇಟ್ಟಿದೆ. ಹಾಗೆಯೇ ಇಂಧನ ಮತ್ತು ಆಹಾರಕ್ಕಾಗಿ ಕೊಡುತ್ತಿದ್ದ ಸಬ್ಸಿಡಿಯನ್ನು ಕ್ರಮೇಣ ಕಡಿಮೆ ಮಾಡಬೇಕೆಂಬ ಪ್ರಸ್ತಾಪವನ್ನು ಇಟ್ಟಿದೆ.

ಈಗಾಗಲೇ 2009-10ರ ಸಾಲಿನಲ್ಲಿ 1164.41 ಕೋಟಿಯಷ್ಟಿದ್ದ ಆಹಾರ ಸಬ್ಸಿಡಿಯು 2010-11ರಲ್ಲಿ ವಾಸ್ತವವಾಗಿ 926 ಕೋಟಿಗೆ ಇಳಿಸುವುದಾಗಿ ಯಡಿಯೂರಪ್ಪನವರ ಸರಕಾರವೇ ಘೋಷಿಸಿತ್ತು. ಆದರೆ ಅದು ವಾಸ್ತವದಲ್ಲಿ ಅದಕ್ಕಿಂತಲೂ ನೂರು ಕೋಟಿ ಕಡಿಮೆಯಾಗಿ 810 ಕೋಟಿಗಿಳಿದಿದೆ.ಈ ಬಾರಿ ಅದನ್ನು 926 ಕೋಟಿಯಿಂದ 900 ಕೋಟಿಗೆ ಇಳಿಸುವುದಾಗಿ ಬಹಿರಂಗವಾಗಿಯೇ ಸರಕಾರ ಘೋಷಿಸಿದೆ.ಹಾಗೆಯೇ ಅದಕ್ಕೆ ಪೂರಕವಾಗಿ ಈ ಬಾರಿ 40ಲಕ್ಷ ಕಾರ್ಡುಗಳನ್ನು ರದ್ದುಗೊಳಿಸುವುದಾಗಿಯೂ ಹೇಳಿದೆ. ರಾಜ್ಯದಲ್ಲಿ 1.32 ಕಾರ್ಡುಗಳಿದ್ದು ಅದರಲ್ಲಿ 32 ಕೋಟಿ ಕಾರ್ಡುಗಳು ಬಡತನ ರೇಖೆಗಿಂತ ಕೆಳಗಿನವು. ಹೆಚ್ಚು ಸಬ್ಸಿಡಿ ಸಿಗುತ್ತಿರುವುದು ಈ ವರ್ಗಗಳಿಗೆ.

ಹೀಗಾಗಿ ಈಗ ಸಬ್ಸಿಡಿ ಕಡಿಮೆಯಾಗಬೇಕೆಂದರೆ ಹೊಡೆತ ಬೀಳುವುದು ಈ ವರ್ಗಗಳ ಮೇಲೆಯೇ. ಅದೇ ರೀತಿ ಪಿಂಚಣಿಯ ಮೇಲಿನ ವೆಚ್ಚವನ್ನು ಕಡಿಮೆ ಮಾಡಬೇಕು ಎನ್ನುವ ಉದ್ದೇಶದಿಂದ 8 ಲಕ್ಷ ನಕಲಿ ಪಿಂಚಣ ಕಾರ್ಡುಗಳನ್ನು ರದ್ದು ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದು ಸದಾನಂದರ ನಗುವಿನ ಹಿಂದಿನ ಕ್ರೌರ್ಯ.ಕೇಂದ್ರ ಸರಕಾರವೂ ಸಹ ತಾನೂ ಕೊಡುತ್ತಿದ್ದ ಅನುದಾನವನ್ನು ಕ್ರಮೇಣ ಕಡಿಮೆ ಮಾಡಲಿದೆ. ಪ್ರಣಬ್ ದಾದಾರಂತೂ ‘ನಾನೂ ದಯಾಮಯಿ ಆಗುವ ಮೊದಲು ಕ್ರೂರಿಯಾಗುತ್ತಾನೆ’ ಎಂದೆ ಹೇಳಿದ್ದಾರೆ.ಹೀಗಾಗಿ ಬಡಜನರ ಬದುಕಿನ ದೃಷ್ಟಿಯಿಂದ ನೋಡಿದರೆ ಆರ್ಥಿಕ ನೀತಿಯ ದೃಷ್ಟಿಯಿಂದ ನೋಡಿದರೆ ನಗುವ ಬಿಜೆಪಿಯ ಸದಾನಂದ, ಗಡಸು ಮೋರೆಯ ಮುತ್ಸದ್ದಿ ಪ್ರಣಬ್ ದಾದಾ ಇಬ್ಬರೂ ಜನರನ್ನು ತಿನ್ನುವ ಮೊರೆವ ಹುಲಿಗಳೇ..

ಹೀಗೆ ಬಡಜನರಿಗೆ ಕೊಡುತ್ತಿದ್ದ ರಿಯಾಯತಿ ಮತ್ತು ವಿನಾಯತಿಗಳನ್ನು ಮಾತ್ರ ಒಂದಾದ ಮೇಲೊಂದರಂತೆ ಹಿಂದೆಗೆದುಕೊಳ್ಳುತ್ತಿದ್ದರೂ ತಮ್ಮದೇ ರಾಜಕೀಯ ಉಳಿವಿಗಾಗಿ ಮಾತ್ರ ಮಠಮಾನ್ಯಗಳ ವೈಭವಕ್ಕೆ ಕೊಡುತ್ತಿದ್ದ ಹಣದಲ್ಲಿ ಮಾತ್ರ ಕೊರತೆ ಬಂದಿಲ್ಲ. ಕಳೆದ ಮೂರು ವರ್ಷಗಳಲ್ಲಿ ಯಡ್ಡಿ ಪ್ರಧಾನವಾಗಿ ವೀರಶೈವ ಮತ್ತು ಬ್ರಾಹ್ಮಣ ಮಠಗಳಿಗೆ ಒಟ್ಟಾರೆ 395 ಕೋಟಿ ರೂ.ಗಳನ್ನು ನೀಡಿದ್ದರೆ, ಅದಕ್ಕೆ ಪ್ರತಿಯಾಗಿ ಸದಾನಂದ ಒಬಿಸಿ ಮತಗಳನ್ನು ಗಟ್ಟಿಗೊಳಿಸಿಕೊಳ್ಳಲು ಒಬಿಸಿ ಮಠಗಳಿಗೆ ಮತ್ತು ಸಂಸ್ಥೆಗಳಿಗೆ ನೂರು ಕೋಟಿಯವರೆಗೂ ಅನುದಾನವನ್ನು ನೀಡಿದ್ದಾರೆ. ಜನರಿಂದ ಕಿತ್ತು ಮಠಗಳಿಗೆ, ಬಂಡವಾಳಶಾಹಿಗಳಿಗೆ ಸಂಪನ್ಮೂಲದ ಪುನರ್ ಹರಿವಲ್ಲಿ ಮಾತ್ರ ಯಾವ ಸರಕಾರ ಬಂದರೂ ವ್ಯತ್ಯಾಸವಿಲ್ಲ.

ಅದೇ ರೀತಿ ಗೋ ಸಂರಕ್ಷಣಾ ಹೆಸರಲ್ಲಿ 2009ರಲ್ಲಿ ಬಿಜೆಪಿ ಸರಕಾರ ಬಜರಂಗಿಗಳು ನಡೆಸುತ್ತಿದ್ದ ಹಿಂಸಾಚಾರಗಳಿಗೆ ಕಾನೂನು ಮಾನ್ಯತೆಯನ್ನು ನೀಡುವ ತಿದ್ದುಪಡಿಯೊಂದನ್ನು ಗೋಹತ್ಯಾ ನಿಷೇಧ ಕಾಯಿದೆಯಲ್ಲಿ ಪ್ರಸ್ತಾಪಿಸಿದ್ದರು.ಆದರೆ ಜನರ ಹೋರಾಟದಿಂದಾಗಿ ಅದನ್ನು ಹಿಂದೆಗೆದುಕೊಂಡು ಜಾನುವಾರು ಹತ್ಯಾ ನಿಷೇಧ ಕಾಯಿದೆಯನ್ನು ಮುಂದಿಟ್ಟಿತ್ತು. ಅದೀಗ ರಾಷ್ಟ್ರಪತಿಗಳಿಂದ ಛೀಮಾರಿಗೆ ಗುರಿಯಾಗಿ ಸರಕಾರಕ್ಕೆ ವಾಪಸ್ ಬಂದಿದೆ. ಪರಿಸ್ಥಿತಿ ಹೀಗಿದ್ದರೂ ಸದಾನಂದರ ಆರೆಸ್ಸೆಸ್ ರಿಮೋಟಿನಲ್ಲಿ ನಡೆಯುವ ಸರಕಾರ ಸ್ಥಳೀಯ ಗೋವುಗಳ ಸಂರಕ್ಷಣೆ ಮಾಡುವ ಸರಕಾರೇತರ ಸಂಸ್ಥೆಗಳಿಗೆ ಸಹಾಯಾನುದಾನ ನೀಡುವ ಪ್ರಸ್ತಾಪವನ್ನು ಮಾಡಿದೆ...ಹೀಗೆ ಹತ್ತು ಹಲವು ವಿಷಯಗಳಲ್ಲಿ ಇದೊಂದು ಜನವಿರೋಧಿ ಆರೆಸ್ಸೆಸ್ ಬಜೆಟ್. ಹಿಂದೂತ್ವದ ವಾಸನೆ ಹೊಡೆಯುವ ಶ್ರೀಮಂತ ಬಂಡವಾಳಶಾಹಿ ಮತ್ತು ವಿದೇಶಿ ಹೂಡಿಕೆದಾರರ ಪರವಾಗಿರುವ ಬಜೆಟ್ಟು.

-ವಾರ್ತಾಭಾರತಿಯಿಂದ

ಭಯೋತ್ಪಾದನೆ ವಿರುದ್ಧದ ಸಮರ ಮತ್ತು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ದಳ: ಭಾಗ-4


ಮನಿಷಾ ಸೇಠಿ
ಕನ್ನಡಕ್ಕೆ: ಸುರೇಶ್ ಭಟ್, ಬಾಕ್ರಬೈಲ್


ದಿಟ್ಟತನದಿಂದ ಸತ್ಯ ನುಡಿದ ಡಾ ಹರಿಕೃಷ್ಣ ಮುಂದಿನ ಹಲವು ವರ್ಷಗಳ ಕಾಲ ಪೊಲೀಸರ ಕೈಲಿ ನರಕಯಾತನೆ ಅನುಭವಿಸಬೇಕಾಯಿತು.ಮೊಬೈಲ್ ಕಂಪೆನಿಯೊಂದರ ಮೇಲೆ ಒತ್ತಡ ಹೇರಿ ಆತನ ಮೊಬೈಲ್ ದಾಖಲೆಗಳನ್ನು ತಿದ್ದಿ ಆತ ಎನ್ಕೌಂಟರ್ ಸ್ಥಳದಲ್ಲಿ ಇರಲೇ ಇಲ್ಲವೆಂದು ಸಾಧಿಸಲಾಯಿತು.ಆತನ ಹೆಸರಿಗೆ ಕಳಂಕ ಹಚ್ಚಲಾಯಿತು.ಎಂದೋ ಮುಗಿದುಹೋಗಿದ್ದ ಹಳೆಯ ಪ್ರಕರಣಗಳಿಗೆ ಮರುಜೀವ ಕೊಡಲಾಯಿತು.7ವರ್ಷಗಳ ಬಳಿಕ,2009ರಲ್ಲಿ ದೆಹಲಿಯ ನ್ಯಾಯಾಲಯದ ಅನುಮತಿ ಮೇರೆಗೆ ಡಾ ಹರಿಕೃಷ್ಣರಿಗೆ ಸಾಕ್ಷಿ ನುಡಿಯಲು ಅವಕಾಶ ಸಿಕ್ಕಿತು.ಆದರೆ ಅಷ್ಟರಲ್ಲಾಗಲೇ ಮುಖ್ಯ ಆರೋಪಿ ಎಸಿಪಿ ರಾಜ್‌ಬೀರ್ ಸಿಂಗ್ ಓರ್ವ ರಿಯಲ್ ಎಸ್ಟೇಟ್ ವ್ಯಾಪಾರಿ ಕೈಲಿ ಅನುಮಾನಾಸ್ಪದವಾಗಿ ಹತರಾಗಿದ್ದರು. (ಇತ್ತೀಚೆಗೆ 29.2.2012 ರಂದು ದೆಹಲಿಯಲ್ಲಿ ಸ್ಫೋಟ ನಡೆಸುವ ಸಂಚು ರೂಪಿಸುತ್ತಿ ದ್ದರೆಂಬ ಆರೋಪದ ಮೇಲೆ ಇಬ್ಬರು ‘ಲಷ್ಕರ್-ಎ-ತಯ್ಯಿಬ’ ಉಗ್ರರನ್ನು ಬಂಧಿಸಿದ ಮರುಕ್ಷಣದಲ್ಲೇ ಗೃಹಸಚಿವ ಚಿದಂಬರಂ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳುವುದಕ್ಕೂ ಮುನ್ನ ಇದನ್ನೆಲ್ಲ ಇಷ್ಟೊಂದು ತರಾತುರಿಯಿಂದ ಮಾಧ್ಯಮಗಳ ಮೂಲಕ ಬಹಿರಂಗಗೊಳಿಸುವುದರ ಮರ್ಮವೇನು?ಹಾಗಾದರೆ ಕಾನೂನು ಪ್ರಕ್ರಿಯೆಗೇನೂ ಬೆಲೆ ಇಲ್ಲವೇ? -ಅನುವಾದಕ)

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?

ಅಮಾಯಕರಾದ ಸಲ್ಮಾನ್, ದಾರ್,ಬಶೀರ್,ಇರ್ಷಾದ್ ಅಲಿ,ಕಮಾರ್,ಇಫ್ತಿಕಾರ್,ಹಾರೂನ್, ಕೀರ್ಮಾನಿ ಮೊದಲಾದವರು ಅಂತಿಮವಾಗಿ ಬಿಡುಗಡೆ ಗೊಂಡರು. ಆದರೆ ಅಷ್ಟರಲ್ಲಾಗಲೇ ಹಲವಾರು ವರ್ಷಗಳ ಸೆರೆಮನೆವಾಸದಲ್ಲಿ ಸಾಕಷ್ಟು ಚಿತ್ರಹಿಂಸೆ ಅನುಭವಿಸಿದ್ದರು. ಸಮಾಜದಲ್ಲಿ ಇದ್ದ ಗೌರವ, ನೌಕರಿ, ವ್ಯಾಪಾರ ಎಲ್ಲವನ್ನೂ ಕಳೆದುಕೊಂಡಿದ್ದರು. ಸದಾ ಪೊಲೀಸರ ಭೀತಿಯ ನೆರಳಲ್ಲೇ ಬದುಕುವಂತಾಗಿದ್ದ ಅವರ ಕೌಟುಂಬಿಕ ಜೀವನ ಸಂಪೂ ರ್ಣ ಅಸ್ತವ್ಯಸ್ತಗೊಂಡಿತ್ತು.ದೇಶದಲ್ಲಿಂದು ಇಂತಹ ಪ್ರಮಾದಗಳು ಆಗಾಗ ಸಂಭವಿಸುತ್ತಿರುವುದಕ್ಕೆ ಒಂದು ಕಾರಣವೇನೆಂದರೆ ಕೆಲವರ ಮಟ್ಟಿಗೆ ಅಮಾಯಕರನ್ನು ಉಗ್ರರೆಂದು ಬಿಂಬಿಸುವುದೇ ಒಂದು ವ್ಯವಸ್ಥಿತ ದಂಧೆಯಾಗಿಬಿಟ್ಟಿದೆ. ಇದರ ಹಿಂದೆ ಮುಂಭಡ್ತಿಯ ಆಮಿಷ, ಅವಕಾಶಗಳು, ನಗದು ಪಾರಿ ತೋಷಕಗಳು,ಸಾರ್ವಜನಿಕರ ಮಧ್ಯೆ ಹೀರೋ ಆಗಿ ಮಿಂಚುವ ಅವಕಾಶಗಳು,ಇಲಾಖೆಯ ಆಜ್ಞಾವರ್ತಿಗಳಂತಿ ರುವ ಮಾಧ್ಯಮದ ಒಂದು ವರ್ಗದಿಂದ ವೈಭವೀಕರಣ ಇವೆಲ್ಲವೂ ಅಡಗಿವೆ.

ಎನ್ಕೌಂಟರ್ ತಜ್ಞರ ವೈಭವೀಕರಣಕ್ಕೆ ಸಿನಿಮಾ ಮಾಧ್ಯ ಮವನ್ನು ಬಳಸಿಕೊಳ್ಳುತ್ತಿರುವುದು ಒಂದು ಕಳವಳಕಾರಿ ಬೆಳವಣಿಗೆ. ಈಗಾಗಲೇ ‘ಅಬ್ ತಕ್ ಛಪ್ಪನ್’ ಸಿನಿಮಾ ಮೂಲಕ ಮುಂಬೈನ ದಯಾ ನಾಯಕ್ ಮತ್ತಿತರ ಎನ್ಕೌಂಟರ್ ತಜ್ಞರನ್ನು ಹೀರೋಗಳ ಮಟ್ಟಕ್ಕೇರಿಸಲಾಗಿದೆ.ಎಸಿಪಿ ರಾಜ್‌ಬೀರ್ ಸಿಂಗ್‌ನ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾವೊಂದರ ಚಿತ್ರೀಕರಣ ನಡೆದಿದೆ.ನ್ಯಾಯಾಂಗ ವ್ಯವಸ್ಥೆಯನ್ನು ಧಿಕ್ಕರಿಸಿ ಸ್ಥಳದಲ್ಲೇ ನ್ಯಾಯದಾನ ಮಾಡುವ ಇಂತಹ ಪೊಲೀಸರನ್ನು ಹೀರೋಗಳಂತೆ ಬಿಂಬಿ ಸುವ ಸಿನಿಮಾರಂಗ ಬಹು ದೊಡ್ಡ ತಪ್ಪುಮಾಡುತ್ತಿದೆ.

ದೆಹಲಿ ಪೊಲೀಸ್ ಇಲಾಖೆಯ ಎನ್ಕೌಂಟರ್ ತಜ್ಞರೆಂಬ (ಕು)ಖ್ಯಾತಿಗೆ ಪಾತ್ರರಾದ ಎಸ್.ಎಸ್. ರಾಠಿ, ಎಲ್.ಎನ್ ರಾವ್ ಮತ್ತು ರಾಜ್‌ಬೀರ್ ಸಿಂಗ್ ಸರದಿಗೆ ಮುನ್ನವೇ ಮುಂಭಡ್ತಿ ಪಡೆದುಕೊಳುತ್ತಾ ಎಸಿಪಿಗಳಾದರು. 1982ರಲ್ಲಿ ಎಸ್‌ಐ ಆಗಿ ಸೇರಿದ್ದ ರಾಜ್‌ಬೀರ್ ಸಿಂಗ್ ಕೇವಲ 13 ವರ್ಷಗಳೊಳಗಾಗಿ ಎಸಿಪಿ ಹುದ್ದೆಗೇರಿರುವ ಏಕೈಕ ಅಧಿ ಕಾರಿ. ಇವರುಗಳ ಮುಂಭಡ್ತಿಯ ಹಿಂದೆ ದಾರ್, ಬಶೀರ್ರಂತಹ ಅನೇಕರ ಹಾಗೂ ಅವರ ಕುಟುಂಬವರ್ಗಗಳ ಕಣ್ಣೀರ ಕೊಡುಗೆಯಿದೆ. ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ದೆಪೊವಿದವನ್ನು ಕಟು ಶಬ್ದಗಳಲ್ಲಿ ಟೀಕಿಸಿವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಇಲಾಖಾ ತನಿಖೆ ನಡೆಸಲು (ದಾರ್, ಬಶೀರ್ ಪ್ರಕರಣ) ಅಥವಾ ಕಾನೂನು ಕ್ರಮ ಕೈಗೊಳ್ಳಲು (ಅಲ್ ಬದರ್ ಪ್ರಕರಣ, ಕನಾಟ್ ಪ್ಲೇಸ್ ಎನ್ಕೌಂಟರ್) ಆದೇಶಿಸಿವೆ. ಆದರೆ ಪ್ರತಿ ಸರ್ತಿಯೂ ತಪ್ಪಿತಸ್ಥರಿಗೆ ಅವರ ಹಿರಿಯ ಅಧಿಕಾರಿಗಳ ಶ್ರೀರಕ್ಷೆ ದೊರೆತಿದೆ.

ಹಿರಿಯ ಅಧಿಕಾರಿಗಳು ಪ್ರತಿಯೊಂದು ಪ್ರಕರಣದಲ್ಲೂ ಮೇಲ್ಮನವಿಗೆ ಸಹಾಯಮಾಡಿದ್ದಾರೆ. * 2011ರ ದೆಹಲಿ ಹೈಕೋರ್ಟ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿದ್ದ ದೆಪೊವಿದದ ಹೆಚ್ಚುವರಿ ಡಿಸಿಪಿ ರವಿ ಶಂಕರ್ ಎಂಬಾತ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಸಿ ಜನರಿಂದ ಹಣ ಕೀಳುತ್ತಿರುವ ಸಂಗತಿ ಪತ್ತೆಯಾಗಿತ್ತು. ನ್ಯಾಯಾಲಯ ರವಿ ಶಂಕರ್ ಮತ್ತಾತನ ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಆದೇಶವಿತ್ತಾಗ ರವಿ ಶಂಕರ್ ಅದಕ್ಕೆ ತಡೆಯಾಜ್ಞೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. *ರವಿಂದರ್ ತ್ಯಾಗಿ ಮತ್ತು ತನಿಖಾಧಿಕಾರಿ ಮಹಿಂದರ್ ಸಿಂಗ್ ಸೇರಿ ದಾರ್ ಮತ್ತಿತರರ ಬಿಡುಗಡೆಯ ಆದೇಶ ಮತ್ತು ತಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವ ಆದೇಶಗಳ ವಿರುದ್ಧ ಹೈಕೋರ್ಟಿನಲ್ಲಿ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.

ಈ ಕುರಿತಂತೆ ಜಾಮಿಯಾ ಟೀಚರ್ಸ್‌ ಸಾಲಿಡಾರಿಟಿ ಅಸೋಸಿಯೇಷನ್ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ ಉತ್ತರಿಸಿರುವ ಇಲಾಖೆ, ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ, ಇಲಾಖಾ ತನಿಖೆಯೂ ಆರಂಭವಾಗಿಲ್ಲವೆಂದು ತಿಳಿಸಿದೆ.ಹಾಗಾದರೆ ಪೊಲೀಸ್ ಆಯುಕ್ತರು ನ್ಯಾಯಾಲಯದ ತೀರ್ಪುಗಳನ್ನು ಓದಿಲ್ಲವೇ? ನ್ಯಾಯಾಲಯಗಳು ಇಲಾಖೆಯ ಬಿರುದಾಂಕಿತ ಅಧಿಕಾರಿಗಳ ವಿರುದ್ಧ ತೀಕ್ಷ್ಣ ದೋಷಾರೋಪಣೆ ಮಾಡಿರುವಾಗ ಹಿರಿಯ ಅಧಿಕಾರಿಗಳಿಗೆ ಒಂದು ತನಿಖೆ ನಡೆಸಬೇಕೆಂಬ ಕನಿಷ್ಠ ನೈತಿಕ ಪ್ರಜ್ಞೆಯಾದರೂ ಇಲ್ಲವೇ? ಅಮಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿರುವ ಅಧಿಕಾರಿಗಳ ವಿರುದ್ಧ ಸಿಬಿಐ ಕೂಡಾ ದೋಷಾರೋಪಣೆ ಮಾಡಿರುವುದರ ಅರಿವು ಅವರಿಗಿಲ್ಲವೇ? ಪತ್ರಿಕಾಗೋಷ್ಠಿಗಳಲ್ಲಿ ಪ್ರದರ್ಶಿಸಲಾಗುವ ಸ್ಫೋಟಕ ಸಾಮಗ್ರಿಗಳು ದೆಪೊವಿದಕ್ಕೆ ಎಲ್ಲಿಂದ ಸಿಗುತ್ತವೆಂದು ಇದುವರೆಗೂ ಪ್ರಶ್ನಿಸಿಲ್ಲವೇಕೆ?

ಕೆಳಹಂತದ ನ್ಯಾಯಾಲಯದಲ್ಲಿ ರಾಠಿ ಮತ್ತು ಇತರ 9 ಅಧಿಕಾರಿಗಳು ದೋಷಿಗಳೆಂದು ತೀರ್ಮಾನವಾಗಿದ್ದರೂ ಮೇಲ್ಮನವಿ ಸಲ್ಲಿಸಿದ್ದಾರೆಂಬ ಕಾರಣ ಕೊಟ್ಟು ಅವರನ್ನೇಕೆ ಸೇವೆಯಲ್ಲಿ ಮುಂದುವರಿಸಲಾಗಿದೆ? ಎನ್ನುವುದು ಗೃಹಸಚಿವಾಲಯಕ್ಕೆ ಹೈಕೋರ್ಟ್‌ನ ಆಕ್ರೋಶಭರಿತ ಪ್ರಶ್ನೆ. ಇಂತಹ ದುಷ್ಟ ಅಧಿಕಾರಿಗಳನ್ನು ಯಾವತ್ತೋ ಅಮಾನತುಗೊಳಿಸಿ ಸೇವೆಯಿಂದ ಕಿತ್ತುಹಾಕಬೇಕಿತ್ತಾದರೂ ಅವರಿಗೆ ಪದಕ, ಪ್ರಶಸ್ತಿ, ಶೀಘ್ರ ಮುಂಭಡ್ತಿ ಮತ್ತು ವಸ್ತುಶಃ ಕೊಲೆಗೈಯುವ ಲೈಸೆನ್ಸ್ ಯಾಕೆ ನೀಡಲಾಗಿದೆ? ಸರಕಾರ ಯಾಕಾಗಿ ತಪ್ಪಿತಸ್ಥ ಅಧಿಕಾರಿಗಳ ಬೆಂಬಲಕ್ಕೆ ನಿಲ್ಲುತ್ತಿದೆ? ಯಾಕೆ ಅವರ ವೈಯಕ್ತಿಕ ಕಾನೂನು ಸಮರಗಳಿಗೆ ಬೆಂಬಲ ನೀಡುತ್ತಿದೆ? ಬಾಟ್ಲಾ ಹೌಸ್ ಎನ್ಕೌಂಟರ್ ಪ್ರಕರಣದಲ್ಲಿ ಎನ್ನೆಚ್ಚಾರ್ಸಿ ನಿಯಮಗಳಂತೆ ಮ್ಯಾಜಿಸ್ಟ್ರೇಟ್ ತನಿಖೆ ಆಗಬೇಕಿದ್ದರೂ ಸರಕಾರ ಅದನ್ನೇಕೆ ತಳ್ಳಿಹಾಕಿತು? ಯಾಕೆ ಹಿರಿಯ ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಸಮರ್ಥಿಸಿತು?

ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವವರೆಂದು ತಿಳಿಯಲಾದವರಿಗೆ ಈ ರೀತಿ ಶಿಕ್ಷೆಯ ಭಯವಿಲ್ಲದೆ ಕಾರ್ಯಾಚರಿಸುವ ಸ್ವಾತಂತ್ರ್ಯವನ್ನು ನೀಡಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ. ಇದು ಕಾಶ್ಮೀರ, ಈಶಾನ್ಯ ರಾಜ್ಯಗಳು ಮೊದಲಾದೆಡೆ ಸೇನಾಪಡೆಗಳಿಗೆ ನೀಡಲಾಗುವ ವಿಶೇಷಾಧಿಕಾರಕ್ಕೆ ಸಮನಾಗಿದೆ. ವಾಸ್ತವವಾಗಿ ದೆಪೊವಿದ, ಎಟಿಎಸ್, ಎಸ್‌ಟಿಎಫ್ ಮುಂತಾದ ವಿಶೇಷ ತಂಡಗಳು ಕಾನೂನು ಪ್ರಕ್ರಿಯೆ ಬಗ್ಗೆ ನಮಗಿರುವ ಅಸಹನೆಯ ಸೂಚಕ.ದೆಪೊವಿದ ದಾಖಲಿಸಿರುವ ಒಟ್ಟೂ ಪ್ರಕರಣಗಳಿಗೆ ಹೋಲಿಸಿದರೆ ಆರೋಪಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿರುವ ಪ್ರಕರಣಗಳ ಸಂಖ್ಯೆ ತೀರಾ ಕಮ್ಮಿಯಾಗಿರುವುದು ಆತಂಕ ಮೂಡಿಸಬೇಕು ನಿಜ, ಆದರೆ ನಮಗೆ ಹೆಚ್ಚು ಆತಂಕ ಆಗಬೇಕಾಗಿರುವುದು ಸರಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಇಲಾಖಾ ತನಿಖೆ ಅಥವಾ ಕಾನೂನುಕ್ರಮ ಜರಗಿಸದಿರುವ ಬಗ್ಗೆ.

ವಾರ್ತಾಭಾರತಿ ಕೃಪೆ

ಆಧುನಿಕ ಕರ್ನಾಟಕ ಮತ್ತು ಜಾತ್ಯತೀತತೆ

-ಡಾ. ನಟರಾಜ್ ಹುಳಿಯಾರ್

ಕಳೆದ ಐವತ್ತು, ಅರವತ್ತು ವರ್ಷಗಳ ಕರ್ನಾಟಕದ ಚರಿತ್ರೆಯ ಮುಖ್ಯ ಬೆಳವಣಿಗೆಗಳಲ್ಲಿ “ಸೆಕ್ಯುಲರ್ ಇಂಟೆಲೆಕ್ಚುಯಲ್ಸ್” ವಿಕಾಸ ಕೂಡ ಒಂದು. ಈ ಸೆಕ್ಯುಲರ್ ಬುದ್ಧಿಜೀವಿಗಳು ಕರ್ನಾಟಕದಲ್ಲಿ ಹಲವು ಬಗೆಯ ವ್ಯವಸ್ಥೆಯ ವಿರೋಧಿ ಚಳವಳಿಗಳಲ್ಲಿ ಬೆರೆತು ಹೋಗಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಾ ಬಂದಿರುವ ಗಾಂಧೀವಾದಿ ಚಳವಳಿ, ಸಮಾಜವಾದಿ ಚಳವಳಿ, ಮಾರ್ಕ್ಸ್‌ವಾದಿ ಚಳವಳಿ, ವಿಚಾರವಾದಿ ಚಳವಳಿ, ದಲಿತ ಚಳವಳಿ, ರೈತಚಳವಳಿ, ಸ್ತ್ರೀವಾದಿ ಚಳವಳಿ, ಹಿಂದುಳಿದ ವರ್ಗಗಳ ಚಳವಳಿ… ಮುಂತಾಗಿ ಎಲ್ಲ ಮುಖ್ಯ ಚಳವಳಿಗಳಲ್ಲೂ ಈ ಸೆಕ್ಯುಲರ್ ಬುದ್ಧಿಜೀವಿಗಳು ಭಾಗಿಯಾಗಿದ್ದಾರೆ. ಹಾಗೆಯೇ ನವೋದಯ, ಪ್ರಗತಿಶೀಲ, ನವ್ಯ, ಬರಹಗಾರರ ಒಕ್ಕೂಟ, ದಲಿತ, ಬಂಡಾಯ ಹಾಗೂ ರಂಗಭೂಮಿ ಚಟುವಟಿಕೆಗಳಂಥ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಳವಳಿಗಳ ಜೊತೆಗೂ ಇದ್ದಾರೆ. ಸರ್ಕಾರೇತರ ಸಂಸ್ಥೆಗಳಲ್ಲೂ ಅವರು ಇದ್ದಾರೆ. ಈ ಎಲ್ಲ ಚಳವಳಿಗಳು, ಅವುಗಳ ನಾಯಕರು, ಅದರಲ್ಲಿ ಭಾಗಿಯಾದ ವಿವಿಧ ವೇದಿಕೆಗಳು, ವಿವಿಧ ರಾಜಕೀಯ ಪಕ್ಷಗಳ ಕಾಲಕಾಲದ ಜಾತ್ಯತೀತ ನಿಲುವುಗಳು ಹಾಗೂ ಜಾತ್ಯತೀತ ಬುದ್ಧಿಜೀವಿಗಳು ಈ ಎಲ್ಲರ ಪ್ರಯತ್ನಗಳಿಂದಾಗಿ ಕರ್ನಾಟಕದಲ್ಲಿ ಗಟ್ಟಿಯಾದ ಜಾತ್ಯತೀತ ಚಿಂತನೆ ಹಾಗೂ ಕೋಮುವಾದ ವಿರೋಧಿ ಚಿಂತನೆಗಳು ರೂಪುಗೊಂಡಿವೆ. ಈ ಚಿಂತನೆಗಳನ್ನು ವಿವಿಧ ಹಂತಗಳಲ್ಲಿ ಕರ್ನಾಟಕದ ಸಾಮಾನ್ಯ ಜನ ಕೂಡ ಒಂದು ಮಟ್ಟದಲ್ಲಿ ಪ್ರತಿಧ್ವನಿಸಿದ್ದಾರೆ. ಇವೆಲ್ಲದರ ಹಿನ್ನೆಲೆಗೆ ಕಳೆದ ಹಲವಾರು ದಶಕಗಳಲ್ಲಿ ಕರ್ನಾಟಕದಲ್ಲಿ ಬೆಳೆದ ಜಾತಿವಿನಾಶ ಪರಿಕಲ್ಪನೆಯೂ ಕೆಲಸ ಮಾಡಿದೆ.

ಸ್ವಾತಂತ್ರ್ಯೋತ್ತರ ಕರ್ನಾಟಕದ ಕಲೆ, ಸಂಸ್ಕೃತಿ, ರಾಜಕಾರಣ, ಚಳವಳಿ, ಚಿಂತನೆಗಳನ್ನು ಪ್ರಭಾವಿಸಿದ ಹಾಗೂ ಪ್ರೇರೇಪಿಸಿದ ಪೆರಿಯಾರ್‍‌ವಾದ, ಲೋಹಿಯಾವಾದ ಹಾಗೂ ಅಂಬೇಡ್ಕರ್‍‌ವಾದಗಳ ಮೂಲದಲ್ಲಿ ಹಾಗೂ ವಿವಿಧ ಸಾಹಿತ್ಯ ಚಳವಳಿಗಳ ಮುಖ್ಯ ಕಾಳಜಿಗಳಲ್ಲಿ ಜಾತಿವಿನಾಶ ಹಾಗೂ ಜಾತಿವಿರೋಧಗಳು ಕೂಡ ಇದ್ದವು. ಮಾರ್ಕ್ಸ್‌ವಾದದಿಂದ ಪ್ರಭಾವಿತರಾದ ಚಿಂತಕರು ಜಾತ್ಯತೀತತೆಯನ್ನು ಒಂದು ತತ್ವವಾಗಿ ಒಪ್ಪಿದವರಾಗಿದ್ದರು. ರೈತ ಚಳ‌ವಳಿಯನ್ನು ರೂಪಿಸಿದ ಎಂ.ಡಿ.‍ನಂಜುಂಡಸ್ವಾಮಿಯವರು ಎಪ್ಪತ್ತರ ದಶಕದ ಸಮಾಜವಾದಿ ಯುವಜನ ಸಭಾದ ಕಾಲದಿಂದಲೂ ಜಾತಿವಿನಾಶ ಕುರಿತ ಚಿಂತನೆಯನ್ನು ಬೆಳೆಸಿದವರು. ಮುಂದೆ ರೈತ ಚಳವಳಿಯ ಇನ್ನಿತರ ನಾಯಕರಲ್ಲೂ ಜಾತ್ಯತೀತತೆ ಒಂದು ಮಟ್ಟದಲ್ಲಾದರೂ ಮುಂದುವರಿಯಿತು. ದಲಿತ ಚಳವಳಿಯಲ್ಲಂತೂ ಜಾತಿ ವಿರೋಧ ಬಹಳ ಸ್ಪಷ್ಟವಾಗಿತ್ತು. ಪೆರಿಯಾರ್‌ವಾದ ವೈಚಾರಿಕತೆಯ ಮೂಲಕ ಜಾತಿಯ ವಿರುದ್ಧ ಸಮರ ಸಾರಿತ್ತು. ಲೋಹಿಯಾವಾದ ಜಾತಿ ಅಸಮಾನತೆಯ ವಿರುದ್ಧ ಹೋರಾಟ ಮಾಡುತ್ತಾ ಜಾತಿವಿನಾಶದ ಕಾರ್ಯನೀತಿಯನ್ನು ಅಳವಡಿಸಿಕೊಂಡಿತ್ತು.

ಎಪ್ಪತ್ತರ ದಶಕದ ಅರಸು ಆಡಳಿತದಲ್ಲಿ ಆರಂಭಗೊಂಡ ಹಿಂದುಳಿದ ಹಾಗೂ ದಲಿತ ಜಾತಿಗಳ ಹೊಸ ಸಮೀಕರಣ, ಹಾವನೂರು ವರದಿಯ ನಂತರ ಹಿಂದುಳಿದ ವರ್ಗಗಳಲ್ಲಿ ಕಂಡು ಬಂದ ಹೊಸ ಚಲನೆ, ಬಸವಲಿಂಗಪ್ಪನವರು ಪ್ರಾಚೀನ ಕನ್ನಡ ಸಾಹಿತ್ಯ ಕುರಿತು ಮಾಡಿದ ವಿಮರ್ಶೆಯ ಫಲವಾಗಿ ಹುಟ್ಟಿದ ಬೂಸಾ ಚಳವಳಿ, ಜಯಪ್ರಕಾಶ ನಾರಾಯಣರ ನವನಿರ್ಮಾಣ ಚಳವಳಿ, ಇಂದಿರಾಗಾಂಧಿಯವರು ಹೇರಿದ ಎಮರ್ಜೆನ್ಸಿಯನ್ನು ವಿರೋಧಿಸಿದ ಚಿಂತನೆಗಳು-ಇವೆಲ್ಲದರ ಫಲವಾಗಿ ಕೂಡ ಕರ್ನಾಟಕದಲ್ಲಿ ಜಾತ್ಯತೀತ ಚಿಂತನೆ ರೂಪುಗೊಂಡಿತು. ಈ ದಿಸೆಯಲ್ಲಿ ಎಪ್ಪತ್ತರ ದಶಕದಲ್ಲಿ ವಿಶ್ವವಿದ್ಯಾಲಯಗಳ ಪ್ರಜ್ಞಾವಂತ ವಿದ್ಯಾರ್ಥಿಗಳು ತಮ್ಮ ಹೆಸರುಗಳಲ್ಲಿದ್ದ ಜಾತಿಸೂಚಕ ಗುರುತುಗಳನ್ನು, ಜಾತಿ ಚಿಹ್ನೆಗಳನ್ನು ಕೈ ಬಿಟ್ಟದ್ದು ಕೂಡ ಒಂದು ಚಾರಿತ್ರಿಕ ಬೆಳವಣಿಗೆಯಾಗಿತ್ತು. ದಲಿತ ಸಂಘರ್ಷ ಸಮಿತಿಯನ್ನು ರೂಪಿಸಿದ ಬಿ.ಕೃಷ್ಣಪ್ಪ, ದೇವನೂರ ಮಹಾದೇವ, ಸಿದ್ಧಲಿಂಗಯ್ಯ ಮುಂತಾದವರ ಚಿಂತನೆ ಹಾಗೂ ಹೋರಾಟಗಳು ಕೇವಲ ದಲಿತ ಜಾತಿ, ವರ್ಗಗಳಿಗೆ ಮಾತ್ರ ಸೀಮಿತವಾಗದೆ, ಅವುಗಳ ಆಚೆಗೂ ಜಾತ್ಯತೀತ ಚಿಂತನೆಯನ್ನು ಬಿತ್ತಲು ನೆರವಾದವು. ವಚನ ಚಳವಳಿಯಿಂದ ಪ್ರಭಾವಿತರಾದ ಸೂಕ್ಷ್ಮಜ್ಞರು, ಕುವೆಂಪು, ಕಾರಂತರ ಬರಹಗಳಿಂದ ಪ್ರಭಾವಗೊಂಡ ಸೂಕ್ಷ್ಮವಾದ ತರುಣ ತರುಣಿಯರು, ನಂತರ ನವ್ಯ ದಲಿತ, ಬಂಡಾಯ ಹಾಗೂ ಸಮುದಾಯದಂಥ ರಂಗ ಚಳವಳಿಗಳಿಂದ ರೂಪುಗೊಂಡ ಬರಹಗಾರ, ಬರಹಗಾರ್ತಿಯರು, ಓದುಗರು, ರಂಗಭೂಮಿ ನಟನಟಿಯರು ಜಾತ್ಯತೀತತೆಯನ್ನು ಒಂದು ಮೌಲ್ಯವನ್ನಾಗಿ ಬೆಳೆಸತೊಡಗಿದರು. ಸಂಕ್ರಮಣ, ಶೂದ್ರ, ವಿಮುಕ್ತಿ, ಪಂಚಮ ಥರದ ಕಿರುಪತ್ರಿಕೆಗಳ ಜೊತೆಗೆ ಪ್ರಜಾವಾಣಿ, ಮುಂಗಾರು, ಆಂದೋಲನ, ಲಂಕೇಶ್‌ಪತ್ರಿಕೆ, ಸುದ್ದಿಸಂಗಾತಿ ಪತ್ರಿಕೆಗಳು ಕೂಡ ಜಾತ್ಯತೀತ ನೋಟಕ್ರಮವನ್ನು ಬೆಳೆಸಿದವು.

ಡಾ.ಸಿದ್ಧಲಿಂಗಯ್ಯನವರು ವಿಧಾನ ಪರಿಷತ್ತಿನ ಶಾಸಕರಾಗಿದ್ದಾಗ ಸದನದಲ್ಲಿ ಮಂಡಿಸಿದ ಅಂತರ್ಜಾತೀಯ ವಿವಾಹಿತರಿಗೆ ಮೀಸಲಾತಿಯ ಬೇಡಿಕೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ರವಿವರ್ಮಕುಮಾರ್ ಅವರು ಅಂತರ್ಜಾತೀಯ ವಿವಾಹಿತರ ಮೀಸಲಾತಿಗಾಗಿ ಮಾಡಿರುವ ಶಿಫಾರಸುಗಳು ಕೂಡ ಚಾರಿತ್ರಿಕ ಮಹತ್ವವುಳ್ಳವು. ಈ ಸಂದರ್ಭಗಳಲ್ಲಿ ಡಾ.ಸಿದ್ಧಲಿಂಗಯ್ಯ ಹಾಗೂ ರವಿವರ್ಮಕುಮಾರ್ ಇಬ್ಬರೂ ಭಾರತದ ದೇವಾನುದೇವತೆಗಳೇ ಜಾತಿ ಮೀರಿ ಮದುವೆಯಾದ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ. ಜಾತ್ಯತೀತ ಒಲವಿನ ವಿವಾಹ ವೇದಿಕೆಯಾದ ಮಾನವ ಮಂಟಪ, ಕೆ.ರಾಮದಾಸ್, ಕಡಿದಾಳು ಶಾಮಣ್ಣ, ಎಚ್.ಎಲ್. ಕೇಶವಮೂರ್ತಿ. ಬಂಜಗೆರೆ ಜಯಪ್ರಕಾಶ್, ರವಿವರ್ಮಕುಮಾರ್, ಅನಸೂಯಮ್ಮ ಥರದ ನೂರಾರು ಜಾತ್ಯತೀತ ಚಿಂತಕ, ಚಿಂತಕಿಯರು ಬೆಂಬಲಿಸಿರುವ, ಏರ್ಪಡಿಸಿರುವ ಸರಳ ಜಾತ್ಯತೀತ ವಿವಾಹಗಳು, ಸೈದ್ಧಾಂತಿಕ ಹಿನ್ನೆಲೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಜಾತ್ಯತೀತ ಆಲೋಚನೆಯನ್ನು ಬಿತ್ತಿ, ಬೆಳೆಸುತ್ತಾ ಬಂದಿವೆ. ಕನ್ನಡದ ಹಲವು ಜನಪ್ರಿಯ ಸಿನಿಮಾಗಳಲ್ಲಿ ಬರುವ ಅಂತರ್ಜಾತೀಯ ಪ್ರೇಮಗಳ ಸನ್ನಿವೇಶಗಳಲ್ಲಿ ಕೂಡ ಜಾತ್ಯತೀತ ಚಿಂತನೆ ಮೇಲ್ಪದರದಲ್ಲಿಯಾದರೂ ಕಾಣಿಸಿಕೊಳ್ಳುತ್ತಾ ಬಂದಿದೆ. ವಿಶ್ವವಿದ್ಯಾಲಯಗಳ ಪಠ್ಯ ಪುಸ್ತಕಗಳ ಮೂಲಕ, ಉದಾರವಾದಿ ಧೋರಣೆಯ ಶಿಕ್ಷಣ ಸಂಸ್ಥೆಗಳ ಮೂಲಕ ಕೂಡ ಜಾತ್ಯತೀತ ನೋಟ ಪ್ರಸಾರಗೊಂಡಿದೆ. ಆಧುನಿಕ ಕನ್ನಡ ಸಾಹಿತ್ಯದ ಗಂಭೀರ ಕೃತಿಗಳ ಆಳದಲ್ಲಿ ಜಾತ್ಯತೀತ ಧ್ವನಿಗಳಿವೆ. ಸಾಹಿತ್ಯ, ಕಲೆ, ಸಿನಿಮಾ ಹಾಗೂ ಪತ್ರಿಕೋದ್ಯಮಗಳಲ್ಲಿ ತೊಡಗಿರುವ ಅನೇಕ ಗಂಭೀರ ವ್ಯಕ್ತಿಗಳು ಸಾಮಾನ್ಯವಾಗಿ ಜಾತ್ಯತೀತ ತತ್ವಕ್ಕೆ ಬದ್ಧರಾಗಿಯೇ ಉಳಿದಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಕ್ರಿಯಾಶೀಲ ಅಧ್ಯಾಪಕ, ಅಧ್ಯಾಪಕಿಯರು, ಮಾನವ ಹಕ್ಕುಗಳ ಕಾರ್ಯಕರ್ತರು, ಲಾಯರುಗಳು, ವಿವಿಧ ರೀತಿಯ ಸಾಮಾಜಿಕ ನ್ಯಾಯಗಳ ಚಳವಳಿಯಲ್ಲಿ ಭಾಗಿಯಾಗುತ್ತಿರುವವರು ಕೂಡ ಜಾತ್ಯತೀತತೆಯನ್ನು ತಾತ್ವಿಕವಾಗಿ ಒಪ್ಪಿದವರೇ ಆಗಿದ್ದಾರೆ. ಬೌದ್ಧ, ಶರಣ, ಸೂಫಿ, ಮಂಟೇಸ್ವಾಮಿ, ಮಲೆಮಹದೇಶ್ವರ ಮಾರ್ಗಗಳನ್ನು ಆಧುನಿಕ ಕಾಲದಲ್ಲಿ ಹೊಸದಾಗಿ ವಿವರಿಸುತ್ತಿರುವ ಚಿಂತಕ, ಚಿಂತಕಿಯರು ಭಾರತದ ಧರ್ಮಗಳ ಒಳಗೇ ಇರುವ ಜಾತ್ಯತೀತ ಅಂಶಗಳನ್ನು ಮುನ್ನೆಲೆಗೆ ತರುವ ಯತ್ನ ಮಾಡುತ್ತಿದ್ದಾರೆ.

ಅದೇ ರೀತಿ, ಕಾಮ, ಪ್ರೇಮ, ಆಳವಾದ ರಾಷ್ಟ್ರೀಯತಾ ಭಾವ, ಸಮುದಾಯ ಪ್ರಜ್ಞೆ, ಅಸಲಿ ಆಧ್ಯಾತ್ಮ, ವೈಚಾರಿಕತೆ, ವೈಜ್ಞಾನಿಕ ನೋಟ, ಕರುಣೆ, ಮೇಲುಜಾತಿಯ ಜನರಲ್ಲಿರಬಹುದಾದ ನಿಜವಾದ ಪಾಪಪ್ರಜ್ಞೆ, ಸಂಸ್ಕೃತಿಯ ಸ್ವ-ಪರೀಕ್ಷೆ, ಮುಕ್ತತೆ, ತಾರುಣ್ಯದ ತೀವ್ರಸ್ಥಿತಿ, ಒಳಿತಿನ ಪ್ರಜ್ಞೆ, ಮುಗ್ಧತೆ… ಇವೇ ಮುಂತಾದ ಸ್ಥಿತಿಗಳಲ್ಲೂ ಭಾರತೀಯರು ಜಾತಿ ಮೀರಿ ನಡೆದುಕೊಳ್ಳಲೆತ್ನಿಸಿದ್ದಾರೆ. ಹಾಗೆಯೇ, ಹಿರಿಯರ ಅನಗತ್ಯ ಜಾತೀಯ ಹಾಗೂ ಮತೀಯ ದುರ್ಮಾರ್ಗದರ್ಶನವಿಲ್ಲದ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಜಾತ್ಯತೀತವಾಗಿ ವರ್ತಿಸುತ್ತಾ ಬಂದಿದ್ದಾರೆ. ಕರ್ನಾಟಕದ ಚುನಾವಣೆಗಳಲ್ಲಿ ಕೂಡ ಜನ ಆಗಾಗ್ಗೆ ಜಾತಿ, ಧರ್ಮಗಳನ್ನು ಮೀರಿ ಮತ ಚಲಾಯಿಸಿದ್ದಾರೆ. ನಗರಗಳಲ್ಲಿ ಹಾಗೂ ಬೆಂಗಳೂರಿನ ಕಾರ್ಪೊರೇಟ್ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿರುವ ಅಂತರ್ಜಾತೀಯ ವಿವಾಹಗಳು ಕೂಡ ಆಧುನಿಕ ವಲಯಗಳಲ್ಲಿ ಹಬ್ಬುತ್ತಿರುವ ಒಂದು ಮಟ್ಟದ ಜಾತ್ಯತೀತತೆಯನ್ನು ಸೂಚಿಸುತ್ತವೆ. ಆದರೆ, ಮೀಸಲಾತಿಯ ಪ್ರಶ್ನೆ ಬಂದಾಗ ಈ ಕಾರ್ಪೊರೇಟ್ ವಲಯದ ಜನ ಜಾತ್ಯತೀತವಾಗಿ ಯೋಚಿಸಲಾರರು ಎಂಬುದು ಈ ವಲಯದ ಜಾತ್ಯತೀತತೆಯ ಸೀಮಿತತೆಯನ್ನೂ ಸೂಚಿಸುತ್ತದೆ.

ಭಾರತೀಯ ಸಮಾಜದ ಎಲ್ಲ ಜಾತಿಗಳೂ ಭಾಗವಹಿಸುವ ಪ್ರಜಾಪ್ರಭುತ್ವದ ಸ್ವರೂಪದಿಂದಾಗಿ ಸರ್ಕಾರಗಳು ಜಾತ್ಯತೀತವಾಗಿ ವರ್ತಿಸಲೇಬೇಕಾದ ಅನಿವಾರ್ಯತೆಯೂ ಇದೆ. ಭಾರತೀಯ ಸಂವಿಧಾನದ ಬಗೆಬಗೆಯ ನಿರ್ದೆಶನಗಳಿಂದಾಗಿ ಹಾಗೂ ಸರ್ಕಾರಗಳನ್ನು ರೂಪಿಸಿದ ಕೆಲವು ರಾಜಕಾರಣಿಗಳು ಅಧಿಕಾರಿಗಳು ಹಾಗೂ ಸಲಹೆಗಾರರ ಆರೋಗ್ಯಕರ ನೋಟಗಳಿಂದಾಗಿ ಸರ್ಕಾರಿ ನೀತಿಗಳು ಹಾಗೂ ಯೋಜನೆಗಳಲ್ಲೂ ಜಾತ್ಯತೀತ ಚಿಂತನೆ ಕೆಲಸ ಮಾಡಿದೆ. ಉದ್ಯೋಗದಲ್ಲಿ ಮೀಸಲಾತಿ, ಎಲ್ಲ ಜಾತಿಯ ಹುಡುಗರೂ ಇರುವ ಹಿಂದುಳಿದ ವರ್ಗಗಳ ಹಾಸ್ಟೆಲುಗಳು, ಬಿ.ಡಿ.ಎ. ಸೈಟು ಹಂಚಿಕೆ, ವಿವಿಧ ಜಾತಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಯೋಜನೆಗಳು, ಸರ್ಕಾರಿ ಶಾಲಾಕಾಲೇಜುಗಳಲ್ಲಿ ವಿವಿಧ ಜಾತಿಗಳ ವಿದ್ಯಾರ್ಥಿಗಳಿಗೆ ಒದಗಿರುವ ವಿದ್ಯಾಭ್ಯಾಸದ ಅವಕಾಶಗಳು… ಇವೇ ಮುಂತಾದ ಸರ್ಕಾರಿ ಕಾರ್ಯಕ್ರಮಗಳಲ್ಲೂ ಜಾತ್ಯತೀತ ಚಿಂತನೆಯ ಎಳೆಗಳಿವೆ. ಕಾಂಗ್ರೆಸ್, ಜೆ.ಡಿ.ಎಸ್, ಬಹುಜನ ಸಮಾಜ ಪಕ್ಷಗಳು ಕೂಡ ತಮ್ಮ ಕೆಲ ಬಗೆಯ ಚಿಂತನೆ, ಕಾರ್ಯನೀತಿ ಹಾಗೂ ಕಾರ್ಯಕ್ರಮಗಳಲ್ಲಿ ಜಾತ್ಯತೀತತೆಯನ್ನು ಬಿಂಬಿಸುತ್ತಾ ಬಂದಿವೆ. ಎಷ್ಟೇ ಮತೀಯವಾದಿ ಧೋರಣೆಯಿದ್ದರೂ, ಬಿಜೆಪಿ ಥರದ ಸರ್ಕಾರಗಳು ಕೂಡ ಜಾತ್ಯತೀತವಾಗಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯೂ ಇದೆ. ಇವೆಲ್ಲದಕ್ಕೂ ಒಂದು ದೃಷ್ಟಿಯಿಂದ ಭಾರತೀಯ ಸಂವಿಧಾನದ ಜಾತ್ಯತೀತ ತಳಹದಿಯೇ ಕಾರಣವಾಗಿದೆ.

2

ಇಪ್ಪತ್ತನೆಯ ಶತಮಾನದ ಎಂಬತ್ತರ ದಶಕದಿಂದೀಚೆಗೆ ಹೆಡೆಯೆತ್ತಿದ ಕೋಮುವಾದದಿಂದಾಗಿ ಜಾತ್ಯತೀತ ಚಿಂತನೆಯ ಸ್ವರೂಪದಲ್ಲಿ ಮುಖ್ಯ ಪಲ್ಲಟವುಂಟಾಯಿತು. ಜಾತೀಯತೆಯ ಭಾಗವಾಗಿದ್ದ ನೀಚತನ, ಸಂಕುಚಿತತೆ, ಇತರ ಜಾತಿಗಳ ದಮನ ಹಾಗೂ ಅನ್ಯರ ಬಗ್ಗೆ ಅಸಹ್ಯ ಸೃಷ್ಟಿಸುವ ವಿಚಾರಗಳು ಕಳೆದ ಮೂರು ದಶಕಗಳಲ್ಲಿ ಬೆಳೆದ ಕೋಮುವಾದದ ಭಾಗವೂ ಆಗತೊಡಗಿದವು. ಜಾತೀಯತೆಯ ಭಾಗವಾಗಿದ್ದ ಫ್ಯಾಸಿಸ್ಟ ಧೋರಣೆ ಕೋಮುವಾದಕ್ಕೂ ವರ್ಗಾವಣೆಗೊಂಡಿತು. ಅಸ್ಪೃಶ್ಯತೆಗೆ ಒಗ್ಗಿ ಹೋದ ಕಂದಾಚಾರಿ ಹಿಂದೂ ಮನಸ್ಸು ಹೊಸಹೊಸ ಅಸ್ಪೃಶ್ಯತೆಗಳನ್ನು ಸೃಷ್ಟಿಸಲಾರಂಭಿಸಿತು. ಮುಸ್ಲಿಮರು ಹಾಗೂ ಕ್ರಿಶ್ಚ್ಚಿಯನ್ನರ ಬಗೆಗೆ ಅಸ್ಪೃಶ್ಯತೆಯ ಭಾವವನ್ನು ಬೆಳೆಸತೊಡಗಿತು. ಹಾಗೆಯೇ ಜನರ ಭಕ್ತಿ, ನಂಬಿಕೆಗಳ ದುರುಪಯೋಗ, ಚರಿತ್ರೆ ಹಾಗೂ ಚಾರಿತ್ರಿಕ ಬೆಳವಣಿಗೆಗಳ ವಿಕೃತ ವ್ಯಾಖ್ಯಾನ, ಧರ್ಮದ ದುರ್ಬಳಕೆಯ ಮೂಲಕ ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳ ಕುಟಿಲ ಯೋಜನೆಗಳು, ಪ್ರಬಲ ಜಾತಿಗಳ ಯಜಮಾನೀ ಹಿಡಿತ, ವೈದಿಕ ಹುನ್ನಾರಗಳು ಹಾಗೂ ವ್ಯಾಪಾರಿ ಶಕ್ತಿಗಳು ಕೂಡ ಕೋಮುವಾದವನ್ನು ಬೆಳೆಸಿವೆ, ಬೆಳೆಸುತ್ತಿವೆ. ಈ ದಿಸೆಯಲ್ಲಿ ಕೋಮುವಾದವನ್ನು ಬೆಳೆಸಲೆಂದೇ ಹುಟ್ಟಿರುವ ಆರ್.ಎಸ್.ಎಸ್. ವಿ.ಎಚ್.ಪಿ ಮತ್ತು ಅವುಗಳ ಅಂಗಸಂಸ್ಥೆಗಳು ಹಾಗೂ ಧರ್ಮಗುರುಗಳ ಕುಮ್ಮಕ್ಕು ನೇರವಾಗಿಯೂ ಹಿನ್ನೆಲೆಯಲ್ಲಿಯೂ ಕೆಲಸಮಾಡುತ್ತಿದೆ. ಬಹುಸಂಖ್ಯಾತ ಕೋಮುವಾದದಿಂದಾಗಿ ಜಮಾತೆ ಇಸ್ಲಾಮಿ ಥರದ ಅಲ್ಪಸಂಖ್ಯಾತ ಕೋಮುವಾದವೂ ತಲೆಯೆತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಧುನಿಕ ಕರ್ನಾಟಕದಲ್ಲಿ ಕಳೆದ ಮೂರು ದಶಕಗಳಲ್ಲಿ ಜಾತೀಯತೆಯ ಜೊತೆಜೊತೆಗೇ, ಅದಕ್ಕಿಂತ ಅಪಾಯಕಾರಿಯಾದ ಕೋಮುವಾದವೂ ಪ್ರಬಲವಾಗತೊಡಗಿತು. ಈ ಘಟ್ಟದಲ್ಲಿ, ಈ ಬರಹದ ಮೊದಲ ಭಾಗದಲ್ಲಿ ಉಲ್ಲೇಖಿಸಿದ ಎಲ್ಲ ಜನತಾ ಚಳವಳಿಗಳೂ ಕ್ರಮೇಣ ಕೋಮುವಾದವನ್ನು ವಿರೋಧಿಸುವ ಹಾಗೂ ಜಾತ್ಯತೀತತೆಯನ್ನು ಬೆಂಬಲಿಸುವ ಹೋರಾಟಗಳ ಜೊತೆ ಸೇರಿದ್ದು ಸಹಜವಾಗಿತ್ತು ಮತ್ತು ಅನಿವಾರ್ಯವಾಗಿತ್ತು. ಬಹುಸಂಖ್ಯಾತರ ಕೋಮುವಾದದಿಂದ ಆತಂಕಕ್ಕೊಳಗಾದ ಅಲ್ಪಸಂಖ್ಯಾತ ಬುದ್ಧಿಜೀವಿಗಳ ಜೊತೆಗೆ, ಅಲ್ಪಸಂಖ್ಯಾತರ ಕೆಲವು ವೇದಿಕೆಗಳು ಕೂಡ ಈ ಹೋರಾಟಗಳ ಜೊತೆ ಸೇರಿಕೊಂಡವು. ಅಲ್ಪಸಂಖ್ಯಾತ ವಲಯದ ಬುದ್ಧಿಜೀವಿಗಳು ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಕೋಮುವಾದಗಳೆರಡನ್ನೂ ವಿರೋಧಿಸುವ ಕೆಲಸ ಮಾಡಬೇಕಾಯಿತು.

ತೊಂಬತ್ತರ ದಶಕದ ಅಯೋಧ್ಯಾ ರಾಜಕೀಯ ಆರಂಭಿಸಿದ ಹಿಂಸಾಮಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕರ್ನಾಟಕದ ಜಾತ್ಯತೀತ ಹೋರಾಟಕ್ಕೆ ನಿರ್ದಿಷ್ಟವಾದ ಕೋಮುವಾದ ವಿರೋಧದ ಸ್ವರೂಪ ಸೇರಿಕೊಂಡಿತು. ಬಗೆಬಗೆಯ ಸಮಾಜಪರ ವೇದಿಕೆಗಳು ಒಂದಾಗಿ ಕೋಮುಸೌಹಾರ್ದ ವೇದಿಕೆಯನ್ನು ರೂಪಿಸಿದವು. ಆರಂಭದಲ್ಲಿ ಈ ವೇದಿಕೆಯನ್ನು ಬದ್ಧ ಎಡಪಂಥೀಯ ನಾಯಕರು ರೂಪಿಸಿದರೂ, ಕ್ರಮೇಣ ಅದರಲ್ಲಿ ಕರ್ನಾಟಕದ ದಲಿತ ಚಳವಳಿಯ ಹಲವು ಬಣಗಳು, ಕರ್ನಾಟಕ ರಾಜ್ಯ ರೈತ ಸಂಘ, ಮಾನವ ಹಕ್ಕುಗಳ ಕಾರ್ಯಕರ್ತರು, ಕಮ್ಯೂನಿಸ್ಟ ಪಕ್ಷಗಳಿಂದ ಹಿಡಿದು ಹಲಬಗೆಯ ಜಾತ್ಯತೀತ ವೇದಿಕೆಗಳು, ಸರ್ಕಾರೇತರ ಸಂಸ್ಥೆಗಳು, ಜಾತ್ಯತೀತ ಪತ್ರಕರ್ತರು, ಬರಹಗಾರ, ಬರಹಗಾರ್ತಿಯರು ಪ್ರಜಾಸತ್ತಾತ್ಮಕ ಸಂಘಟನೆಗಳು ಒಂದುಗೂಡಿದ್ದು ಕರ್ನಾಟಕದ ಚರಿತ್ರೆಯ ಮಹತ್ವದ ಬೆಳವಣಿಗೆಯೊಂದಕ್ಕೆ ಕಾರಣವಾಯಿತು. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬೆಳೆಸಲು ಕೋಮುವಾದಿ ಶಕ್ತಿಗಳು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡ‌ನ್‍ಗಿ‌ರಿಯನ್ನು ನೆಪವಾಗಿಸಿಕೊಂಡ ಆ ಕಾಲಘಟ್ಟದಲ್ಲಿ ಕೋಮುಸೌಹಾರ್ದ ವೇದಿಕೆಯ ಮೂಲಕ ಜಾತ್ಯತೀತ ಶಕ್ತಿಗಳು ಕರ್ನಾಟಕದ ಕೋಮುವಾದೀಕರಣಕ್ಕೆ ಪ್ರಬಲ ವಿರೋಧವೊಡ್ಡಿದವು. ’ಜನಮತ ಕೋಮುವಾದದ ವಿರುದ್ಧ ಕರ್ನಾಟಕ’ ಸಂಘಟನೆ ಕೂಡ ಕೆಲ ಕಾಲ ಕೋಮುವಾದದ ವಿರುದ್ಧ ಜನಮತವನ್ನು ರೂಪಿಸಿತು. ರಹಮತ್ ತರೀಕೆರೆ, ಎಸ್.ಎಸ್.ಹಿರೇಮಠ, ಜಿ.ರಾಜಶೇಖರ್, ಫಣಿರಾಜ್, ವಸು, ಶಿವಸುಂದರ್, ಎಸ್.ಚಂದ್ರಶೇಖರ್ ಮೊದಲಾದವರು ಚರಿತ್ರೆ, ಸಾಹಿತ್ಯ, ಸಮಾಜವಿಜ್ಞಾನಗಳಲ್ಲಿ ನಡೆಸಿರುವ ಜವಾಬ್ದಾರಿಯುತ ಸಂಶೋಧನೆಗಳು ಕೋಮುವಾದದ ಪಿತೂರಿಗಳನ್ನು ಬಯಲಿಗೆಳೆಯುತ್ತಾ ಜಾತ್ಯತೀತ ಚಿಂತನೆಯನ್ನು ಬಲಪಡಿಸಿವೆ. ಎಂ.ಡಿ.ನಂಜುಂಡಸ್ವಾಮಿ, ಯು.ಆರ್.ಅನಂತಮೂರ್ತಿ, ಕೆ.ಮರುಳಸಿದ್ಧಪ್ಪ, ರಾಜೇಂದ್ರ ಚೆನ್ನಿ, ಜಿ.ಕೆ.ಗೋವಿಂದರಾವ್, ಲಂಕೇಶ್, ತೇಜಸ್ವಿ, ಡಿ.ಆರ್.ನಾಗರಾಜ್. ಕಿ.ರಂ.ನಾಗರಾಜ್, ಗಿರೀಶ್ ಕಾರ್ನಾಡ, ಚಂದ್ರಶೇಖರ ಪಾಟೀಲ, ಬರಗೂರು ರಾಮಚಂದ್ರಪ್ಪ, ಬಾನು ಮುಷ್ತಾಕ್, ಸಾರಾ ಅಬೂಬಕ್ಕರ್, ಜಿ.ರಾಮಕೃಷ್ಣ, ದೇವನೂರ ಮಹಾದೇವ, ದಿನೇಶ್ಅಮೀನಮಟ್ಟು, ಪಟ್ಟಾಭಿರಾಮ ಸೋಮಯಾಜಿ, ಶೂದ್ರ ಶ್ರೀನಿವಾಸ್, ಇಂದೂಧರ ಹೊನ್ನಾಪುರ, ಬಿ.ಎಂ.ಹನೀಫ್, ಸುಬ್ಬುಹೊಲೆಯಾರ್, ಗೌರಿ ಲಂಕೇಶ್, ಕೆ.ನೀಲಾ, ಅಗ್ನಿ ಶ್ರೀಧರ್, ಟಿ.ಕೆ.ತ್ಯಾಗರಾಜ್, ಅಬ್ದುಲ್ ಬಶೀರ್, ಬಂಜಗೆರೆ ಜಯಪ್ರಕಾಶ್, ಮೊಗಳ್ಳಿ ಗಣೇಶ್, ಬಿ.ಎಂ.ಪುಟ್ಟಯ್ಯ, ದು.ಸರಸ್ವತಿ, ಮಲ್ಲಿಕಾ ಘಂಟಿ ಹಾಗೂ ಇಲ್ಲಿ ಹೆಸರಿಸದ ಇದೇ ರೀತಿಯ ನೂರಾರು ಬರಹಗಾರರು, ಹೋರಾಟಗಾರರು ತಮ್ಮ ಚಿಂತನೆ ಹಾಗೂ ಕ್ರಿಯೆಗಳ ಮೂಲಕ ಕೋಮುವಾದಕ್ಕೆ ವಿರೋಧ ಒಡ್ಡುತ್ತಾ ಬಂದಿದ್ದಾರೆ. ಬಿ.ಶಾಮಸುಂದರ್, ಬಿ.ಕೃಷ್ಣಪ್ಪ, ಕೆ.ರಾಮದಾಸ್, ಕೆ,ಎಸ್.ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್, ಜಿ.ಎನ್.ನಾಗರಾಜ್, ಸಿದ್ದನಗೌಡ ಪಾಟೀಲ, ಕೆ.ಎಲ್.ಅಶೋಕ್, ಮಾವಳ್ಳಿ ಶಂಕರ್, ಲಕ್ಮ್ಷೀನಾರಾಯಣ ನಾಗವಾರ, ಡಿ.ಜಿ.ಸಾಗರ್, ವೆಂಕಟಸ್ವಾಮಿ, ಗೋವಿಂದಯ್ಯ ಥರದ ಹೋರಾಟಗಾರರು ಕೋಮುವಾದದ ವಿರುದ್ಧ ಜನಾಭಿಪ್ರಾಯ ರೂಪಿಸುತ್ತಾ ಬಂದಿದ್ದಾರೆ. ಹಿಂದೂ ಕೋಮುವಾದವನ್ನು ವಿರೋಧಿಸುವ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಮುರುಘಾ ಶರಣರು, ಗದುಗಿನ ತೋಂಟದಾರ್‍ಯ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಯವರಂಥ ಕೆಲವು ಉದಾರವಾದಿ ಲಿಂಗಾಯತ ಹಾಗೂ ಶೂದ್ರ ಜಾತಿಗಳ ಧರ್ಮಗುರುಗಳು, ಫಾದರ್ ಚೆಸರಾ ಥರದ ಕ್ರೈಸ್ತ ಪಾದ್ರಿಗಳು ಕೂಡ ಕೋಮುವಾದ ವಿರೋಧಿ ಹೋರಾಟಗಳಲ್ಲಿ ಭಾಗಿಯಾದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ತಳವೂರಿದ ಮೇಲೆ ಬೇರೆ ಬೇರೆ ರೀತಿಯಲ್ಲಿ ಧ್ರುವೀಕರಣಗೊಳ್ಳತೊಡಗಿದ ಜಾತೀಯ ಹಾಗೂ ಮತೀಯ ಶಕ್ತಿಗಳಿಗೆ ಇವತ್ತಿಗೂ ಹಲಬಗೆಯ ಜಾತ್ಯತೀತ ವೇದಿಕೆಗಳು, ಗಾಂಧೀವಾದಿಗಳು, ಎಡಪಂಥೀಯರು, ಸಮಾಜವಾದಿಗಳು, ಎಡಪಕ್ಷಗಳು ಹಾಗೂ ದಲಿತ ಸಂಘಟನೆಗಳು ವಿರೋಧ ತೋರಿಸುತ್ತಲೇ ಇವೆ. ಈ ವಿರೋಧವು ಪತ್ರಿಕೆಗಳು, ಪ್ರತಿಭಟನೆ, ಸಾಹಿತ್ಯ, ಬರಹ, ಸಂವಾದ, ವಿಚಾರ ಸಂಕಿರಣ, ಬೋಧನೆ ಹಾಗೂ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ವ್ಯಕ್ತವಾಗುತ್ತಲೇ ಇದೆ.

3

ಕರ್ನಾಟಕದ ಟಿಪಿಕಲ್ ಸೆಕ್ಯುಲರ್ ಪ್ರಜ್ಞೆ ಏಕಕಾಲಕ್ಕೆ ಜಾತಿವಿರೋಧಿ ಹಾಗೂ ಕೋಮುವಾದ ವಿರೋಧಿ ಎರಡೂ ಆಗಿದೆ. ಆದರೆ ಕರ್ನಾಟಕದಲ್ಲಿ ಈ ಬಗೆಯ ಸೆಕ್ಯುಲರ್ ಪ್ರಜ್ಞೆ ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ಇರುವ ಕೆಲವು ತೊಡಕುಗಳನ್ನೂ ಸರಿಯಾಗಿ ಗಮನಿಸಬೇಕು. ಸಮಾಜಪರ ಕೆಲಸದಲ್ಲಿ ಭಾಗಿಯಾಗಿರುವ ಅನೇಕ ಸಂಘಟನೆಗಳಿಗೆ ಜಾತ್ಯತೀತತೆಯ ಬಗ್ಗೆ ಸ್ಪಷ್ಟ ನಿಲುವು ಹಾಗೂ ಅರಿವು ಇಲ್ಲದಿರುವುದು ಕೂಡ ಒಂದು ಮುಖ್ಯ ಸಮಸ್ಯೆಯೇ ಆಗಿದೆ. ಉದಾಹರಣೆಗೆ, ಅರಸು ಆಡಳಿತ ಹಾಗೂ ಆನಂತರದ ಕೆಲವು ಘಟ್ಟಗಳಲ್ಲಿ ಹಿಂದುಳಿದ ವರ್ಗಗಳು ಹಾಗೂ ಹಿಂದುಳಿದ ಜಾತಿಗಳ ಮರು ಧೃವೀಕರಣವಾದಾಗ ಅವುಗಳ ನಾಯಕರು ಜಾತಿವಿನಾಶ ಹಾಗೂ ಜಾತ್ಯತೀತತೆಯ ಅಂಶಗಳನ್ನು ಈ ಚಳವಳಿಯ ಜೊತೆಗೆ ಸಮರ್ಥವಾಗಿ ಬೆಸೆಯಲಾರದೆ ಹೋದರು. ಅಲ್ಪಸಂಖ್ಯಾತ, ಹಿಂದುಳಿದ ದಲಿತರನ್ನು ಒಗ್ಗೂಡಿಸಲು ಯತ್ನಿಸಿದ ’ಅಹಿಂದ’ದ ಪರಿಕಲ್ಪನೆ ಕೂಡ ಜಾತ್ಯತೀತ ಕಲ್ಪನೆಯಾಗಿ ವಿಕಾಸಗೊಳ್ಳಲಿಲ್ಲ. ಯಜಮಾನೀ ಜಾತಿಗಳ ಹಿಡಿತದಿಂದ ನರಳಿರುವ ಹಿಂದುಳಿದ ಜಾತಿಗಳು ಒಗ್ಗೂಡಿದ ಘಟ್ಟದಲ್ಲಿ, ಜಾತಿಪದ್ಧತಿಗೆ ಮಾರಣಾಂತಿಕ ಹೊಡೆತ ಕೊಡುವುದರ ಮೂಲಕವೇ ಹಿಂದುಳಿದವರ ನಿಜವಾದ ಬಿಡುಗಡೆ ಸಾಧ್ಯ ಎಂಬ ಮುಖ್ಯ ಸತ್ಯವನ್ನು ಈ ಜಾತಿಗಳ ನಾಯಕರು ಮರೆತರು. ಬದಲಿಗೆ ತಂತಮ್ಮ ಜಾತಿಗಳ ಜನರನ್ನು ಒಗ್ಗೂಡಿಸುವುದರ ಮೂಲಕ ಸಣ್ಣಪುಟ್ಟ ನಾಯಕತ್ವ ಪಡೆಯಲು ಈ ನಾಯಕರು ಮುಂದಾದರು. ಹಿಂದುಳಿದ ಜಾತಿಗಳ ಕೆಲವು ನಾಯಕರಲ್ಲಿ ಇದ್ದ ಒಂದು ಮಟ್ಟದ ಜಾತ್ಯತೀತ ಪ್ರಜ್ಞೆ ಅವರ ಹಿಂದುಳಿದ ಜಾತಿಗಳ ಅನುಯಾಯಿಗಳಿಗೆ ವರ್ಗಾವಣೆಯಾಗಲಿಲ್ಲ. ದಲಿತ ಸಂಘರ್ಷ ಸಮಿತಿಗಳ ಮೂಲಕ ದಲಿತ ಪ್ರಜ್ಞೆ ಹಾಗೂ ಜಾತ್ಯತೀತ ಪ್ರಜ್ಞೆಗಳು ದಲಿತ ಸಮುದಾಯಗಳಲ್ಲಿ ಬೆಳೆದಂತೆ, ಹಿಂದುಳಿದ ವರ್ಗಗಳ ಚಳವಳಿಯ ಮೂಲಕ ಹಿಂದುಳಿದ ಜಾತಿಗಳಲ್ಲಿ ಶೂದ್ರಪ್ರಜ್ಞೆ ಹಾಗೂ ಜಾತ್ಯತೀತ ಪ್ರಜ್ಞೆಗಳು ಬೆಳೆಯಲಿಲ್ಲ. ಹೀಗಾಗಿ, ಹಿಂದುಳಿದ ಜಾತಿಗಳ ಹುಡುಗರು ಭಜರಂಗ ದಳದಂಥ ಕ್ರೂರ ಮತೀಯ ವೇದಿಕೆಗಳ ಸೇವಕ ವರ್ಗವಾಗುವ ಹೀನಾಯಸ್ಥಿತಿ ತಲುಪಿ, ಕೋಮುವಾದಿ ಹಿಂಸೆಯನ್ನು ಬಿತ್ತುವವರ ದಾಳಗಳಾದರು. ಜಾತಿವಿರೋಧದ ಆಶಯವಿರುವ ಬಹುಜನ ಸಮಾಜ ಪಕ್ಷ ಕೂಡ ಬರಬರುತ್ತಾ, ’ಜಾತಿವಿನಾಶಕ್ಕಿಂತ ಜಾತಿಗಳ ಒಗ್ಗೂಡುವಿಕೆಯ ಮೂಲಕವೇ ಬಹುಜನರು ಅಧಿಕಾರ ಹಿಡಿಯಬೇಕು’ ಎಂದು ವಾದಿಸಿದ ಕಾನ್ಶೀರಾಮ್ ಅವರ ಚಿಂತನೆಯಿಂದ ಹೆಚ್ಚು ಪ್ರಭಾವಿತವಾಯಿತು.

ಸಾಂಸ್ಕೃತಿಕ ಕೇಂದ್ರಗಳಲ್ಲಿರುವ ಅನೇಕ ಉದಾರವಾದಿ ಗುಂಪುಗಳು ಜಾತಿವಿರೋಧ ಹಾಗೂ ಜಾತ್ಯತೀತತೆಯ ಬಗ್ಗೆ ಇನ್ನೂ ಸ್ಪಷ್ಟವಿದ್ದಂತಿಲ್ಲ. ಅಲ್ಲದೆ, ಸೆಕ್ಯುಲರ್ ಪ್ರಜ್ಞೆಯ ವ್ಯಕ್ತಿಗಳು ಹಾಗೂ ವೇದಿಕೆಗಳ ಜೊತೆಗೆ ಬುದ್ಧಿಜೀವಿ ವರ್ಗದ ಬಹು ದೊಡ್ಡ ಭಾಗವಾದ ಲಾಯರುಗಳು, ಇಂಜಿನಿಯರ್‌‍ಗಳು, ವಿಜ್ಞಾನಿಗಳು, ಡಾಕ್ಟರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದಂತೆ ಕಾಣುತ್ತಿಲ್ಲ. ಸ್ತ್ರೀವಾದಿಗಳು ಜಾತೀಯತೆ ಹಾಗೂ ಕೋಮುವಾದಕ್ಕೆ ವಿರೋಧ ತೋರುತ್ತಾ ಬಂದಿದ್ದರೂ, ಮಹಿಳೆಯರನ್ನು ಉದ್ದೇಶಿಸಿ ಬರೆದಾಗ, ಮಾತಾಡಿದಾಗ ಈ ಸಮಸ್ಯೆಯನ್ನು ಹೆಚ್ಚು ಮುಖ್ಯವಾಗಿ ಪರಿಗಣಿಸಿದಂತಿಲ್ಲ. ಕೋಮುವಾದದಿಂದ ಅಪಾರ ಅಪಾಯಕ್ಕೆ ಒಳಗಾಗುವ ಹಾಗೂ ಕೋಮುವಾದ ಹಬ್ಬಿಸುವ ಕಂದಾಚಾರದಿಂದಾಗಿ ತಮ್ಮ ಅವಕಾಶಗಳನ್ನು ಹಾಗೂ ಚಲನೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಮಹಿಳೆಯರಿಗೆ ಕೋಮುವಾದದ ಬಗ್ಗೆ ವ್ಯಾಪಕ ಎಚ್ಚರ ಮೂಡಿಸಲು ಸ್ತ್ರೀವಾದಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ, ಮಹಿಳೆಯರು ಪುರುಷರು ಬಿತ್ತುವ ಕೋಮು ಪೂರ್ವಗ್ರಹದ ಬಲಿಪಶುಗಳೂ ಆಗಿದ್ದಾರೆ. ತಮಗರಿವಿಲ್ಲದೆಯೇ ಆ ಪೂರ್ವಗ್ರಹವನ್ನು ಹಬ್ಬಿಸುವ ಪ್ರಸಾರಕೇಂದ್ರಗಳೂ ಆಗಿದ್ದಾರೆ. ಈ ಅಪಾಯವನ್ನು ನಮ್ಮ ಸ್ತ್ರೀವಾದಿಗಳು ದೊಡ್ಡ ಮಟ್ಟದಲ್ಲಿ ಗ್ರಹಿಸಿ ವಿವರಿಸಿದಂತಿಲ್ಲ. ಕೋಮುವಾದ ಕುರಿತಂತೆ ವಿದ್ಯಾರ್ಥಿ ಸಮುದಾಯವನ್ನು ಎಚ್ಚರಿಸುತ್ತಾ, ಜಾತ್ಯತೀತತೆಯನ್ನು ಬೆಳೆಸುವ ಕೆಲಸ ದಲಿತ ಚಳವಳಿ ಹಾಗೂ ಎಸ್.ಎಫ್.ಐ ಥರದ ಕೆಲವೇ ಸಂಘಟನೆಗಳು ಹಾಗೂ ಬಿಡಿ ಬಿಡಿ ವ್ಯಕ್ತಿಗಳ ಮಟ್ಟದಲ್ಲಿ ಮಾತ್ರ ನಡೆಯುತ್ತಾ ಬಂದಿದೆಯೇ ಹೊರತು ಉಳಿದ ವೇದಿಕೆಗಳು ಇತ್ತ ಹೆಚ್ಚು ಗಮನ ಕೊಟ್ಟಂತಿಲ್ಲ.

ಕರ್ನಾಟಕದ ವಿವಿಧ ಸಮುದಾಯಗಳು ಅನುಸರಿಸುತ್ತಿರುವ ಹಲವು ಧರ್ಮಗಳಲ್ಲಿ ಇರಬಹುದಾದ ಒಂದು ಮಟ್ಟದ ಜಾತ್ಯತೀತ ಲಕ್ಷಣಗಳಿಗೂ ಕೋಮುವಾದದಿಂದಾಗಿ ಹಾಗೂಈ ಧರ್ಮಗಳ ಒಳಗೇ ಇರುವ ಸನಾತನ ಧೋರಣೆಯಿಂದಾಗಿ ಹಿನ್ನಡೆಯಾದಂತಿದೆ. ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಧರ್ಮಗಳಲ್ಲಿ ಮನುಧರ್ಮವನ್ನು ಹಾಗೂ ವೈದಿಕ ಹಿಂದೂ ಧರ್ಮವನ್ನು ಪೋಷಿಸುತ್ತಾ ಬಂದಿರುವ ಸ್ಮಾರ್ತ ಹಾಗೂ ಮಾಧ್ವ ಧರ್ಮಗಳನ್ನು ಬಿಟ್ಟರೆ ಉಳಿದ ಅನೇಕ ಧರ್ಮಗಳ ನೋಟಕ್ರಮಗಳು ಚರಿತ್ರೆಯಲ್ಲಿ ಜಾತಿಪದ್ಧತಿಗೆ ಒಂದಲ್ಲ ಒಂದು ಬಗೆಯ ಭಿನ್ನಮತವನ್ನು ವ್ಯಕ್ತಪಡಿಸುತ್ತಾ ಬಂದಿವೆ. ಲಿಂಗಾಯತ ಧರ್ಮ, ಜೈನಧರ್ಮ, ಸಿಖ್ ಧರ್ಮ, ಬೌದ್ಧ ಧರ್ಮ, ಕ್ರಿಶ್ಚಿಯನ್ ಧರ್ಮ, ಇಸ್ಲಾಂ, ಸೂಫಿ ಮಾರ್ಗ, ಮಂಟೇಸ್ವಾಮಿ, ಮಲೆಮಾದೇಶ್ವರ ಚಿಂತನಾ ಕ್ರಮಗಳು ಜಾತಿಪದ್ಧತಿಗೆ ತಾತ್ವಿಕ ವಿರೋಧ ವ್ಯಕ್ತಪಡಿಸಿವೆ. ಆದರೆ ಈಚಿನ ದಶಕಗಳಲ್ಲಿ ಜೈನ, ಲಿಂಗಾಯತ, ಸಿಖ್ ಮಾರ್ಗಗಳು ತಮ್ಮ ಧರ್ಮಗಳ ಮೂಲದಲ್ಲಿರುವ ಜಾತ್ಯತೀತ ಸತ್ವವನ್ನೇ ನಾಶಮಾಡಿಕೊಂಡಂತೆ ಕಾಣುತ್ತದೆ. ಈ ಸ್ಥಿತಿಗೆ ಆಯಾ ಧರ್ಮಗಳ ಉದಾರ ಗುಣಗಳನ್ನು ಅವುಗಳ ಒಳಗಿದ್ದೇ ನಾಶ ಮಾಡುತ್ತಿರುವ ಪೂಜಾರಿ, ಪುರೋಹಿತರೂ, ಈ ಧರ್ಮಗಳ ಅಸ್ತಿತ್ವವನ್ನು ಇಲ್ಲವಾಗಿಸಲು ಯತ್ನಿಸುತ್ತಾ ಬಂದಿರುವ ವೈದಿಕರೂ ಕಾರಣರಾಗಿದ್ದಾರೆ. ’ಜಾತಿ ಸಹಜ ಅಲ್ಲ, ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ’ ಎಂಬ ತತ್ವದ ಮೇಲೆ ನಿಂತಿರುವ ಬೌದ್ಧ ಧರ್ಮ ಮಾತ್ರ ದಲಿತ ಚಳವಳಿಯ ಜೊತೆ ಬೆರೆತಿರುವ ಕಾರಣದಿಂದಾಗಿ ಇಂದಿಗೂ ಜಾತ್ಯತೀತ ತತ್ವವನ್ನು ಉಳಿಸಿಕೊಂಡೇ ಬೆಳೆಯುತ್ತಿದೆ.

ದೇಶದ ಎಲ್ಲೆಡೆ ಜಾತ್ಯತೀತ ಆಂದೋಲನದಲ್ಲಿರುವ ಒಂದು ಮುಖ್ಯ ಸಮಸ್ಯೆ ಕರ್ನಾಟಕದ ಜಾತ್ಯತೀತ ಆಂದೋಲನದಲ್ಲೂ ಇದೆ. ಅದೇನೆಂದರೆ, ಈ ಆಂದೋಲನ ಮತೀಯವಾದಿಗಳು ಒಡ್ಡುವ ಸಮಸ್ಯೆಗಳ ಸಂದರ್ಭದಲ್ಲಿ ಹೆಚ್ಚು ಜಾಗೃತವಾಗುತ್ತದೆ. ಉಳಿದಂತೆ ಅದು ಅಲ್ಪತೃಪ್ತ ಸ್ಥಿತಿಯಲ್ಲಿರತೊಡಗುತ್ತದೆ. ಸಾಮಾನ್ಯವಾಗಿ ಕೇಡನ್ನು ಸೃಷ್ಟಿಸುವವರಿಗೆ ಇರುವ ದುರುಳ ಏಕೋದ್ದೇಶ ಹಾಗೂ ಜಿಗುಟುತನ ಒಳಿತಿನ ಪರವಾಗಿರುವವರಿಗೆ ಇರುವುದಿಲ್ಲ. ಯಥಾಸ್ಥಿತಿವಾದಿಗಳಿಂದ, ರಾಜಕೀಯ ಪಕ್ಷಗಳಿಂದ ಹಾಗೂ ಮತೀಯ ಶಕ್ತಿಗಳಿಂದ ಹಣ ಹಾಗೂ ಇನ್ನಿತರ ಬಗೆಯ ಬೆಂಬಲ ಪಡೆವ ಕೋಮುವಾದಿಗಳು ಸದಾ ಒಂದಲ್ಲ ಒಂದು ಸಂಚು ಮಾಡಿ ಸಮಾಜದ ಸಮತೋಲನ ಕೆಡಿಸುತ್ತಲೇ ಇರುತ್ತಾರೆ. ಈ ಸಂಚುಗಳನ್ನು ಸಮಾಜ ವಿರೋಧಿ ಅಪರಾಧಗಳೆಂದು ಪರಿಗಣಿಸಿ ಮಟ್ಟ ಹಾಕುವುದು ಸರ್ಕಾರಗಳ ಕರ್ತವ್ಯ. ಈ ಕೆಲಸವನ್ನು ಜಾತ್ಯತೀತವಾದಿಗಳೇ ಮಾಡಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಆದರೆ, ಬಲಪಂಥೀಯ ಗುಂಪುಗಳು, ಧಾರ್ಮಿಕ ವೇದಿಕೆಗಳು, ಕೋಮುವಾದಿ ಪೋಲೀಸರು, ಅಧಿಕಾರಿಗಳು, ಮಾಧ್ಯಮಗಳಲ್ಲಿ ನುಸುಳಿಕೊಂಡಿರುವ ಕೋಮುವಾದಿಗಳು ವಿಚ್ಛಿದ್ರಕಾರಿ ಕೋಮು ಶಕ್ತಿಗಳಿಗೆ ಬಲ ತುಂಬುತ್ತಿರುವ ಕ್ರಮಗಳ ಬಗೆಗೆ ಸರ್ಕಾರಗಳನ್ನು ಹಾಗೂ ಜನರನ್ನು ಎಚ್ಚರಿಸುವ ಕೆಲಸವನ್ನಂತೂ ಜಾತ್ಯತೀತ ಶಕ್ತಿಗಳು ನಿರಂತರವಾಗಿ ಮಾಡುತ್ತಿರಬೇಕಾಗುತ್ತದೆ. ಸರ್ಕಾರಗಳೇ ಮತೀಯವಾದಾಗ ಈ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ.

ಹಾಗೆಯೇ, ಜಾತ್ಯತೀತತೆ ಎನ್ನುವುದು ಕೇವಲ ಕೋಮುವಾದ ಹುಟ್ಟು ಹಾಕುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಕೆಲಸಕ್ಕೆ ಮಾತ್ರ ಸೀಮಿತವಾಗಬಾರದು. ಬದಲಿಗೆ ಜಾತ್ಯತೀತತೆಯನ್ನು ಒಂದು ವಿಶಾಲ ನೋಟಕ್ರಮವಾಗಿ ಬೆಳೆಸಿ, ಜಾತ್ಯತೀತ ಮೌಲ್ಯಗಳನ್ನು, ಆಶಯಗಳನ್ನು ಜನರ ಜೀವನಕ್ರಮದ ಭಾಗವಾಗಿ ಬೆಳೆಸಲು ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ. ಜಾತ್ಯತೀತತೆ ಎನ್ನುವುದು ನಾವೂ ನೆಮ್ಮದಿಯಿಂದ ಬದುಕಿ ನಮ್ಮ ಸುತ್ತಲಿನವರನ್ನೂ ನೆಮ್ಮದಿಯಿಂದ ಬದುಕಲು ನೆರವಾಗುವ ಉದಾತ್ತ ಜೀವನಕ್ರಮ ಎಂಬುದನ್ನು ಮತ್ತೆ ಮತ್ತೆ ಮನವರಿಕೆ ಮಾಡಿಕೊಡುತ್ತಿರಬೇಕಾಗುತ್ತದೆ. ಆಧುನಿಕ ಭಾರತದಲ್ಲಿ ಜಾತ್ಯತೀತತೆ ಇಲ್ಲದಿದ್ದರೆ ಸ್ಕೂಲು, ಆಸ್ಪತ್ರೆಗಳಿಂದ ಹಿಡಿದು ಯಾವ ಆಧುನಿಕ ಸಂಸ್ಥೆಗಳೂ ಇರುತ್ತಿರಲಿಲ್ಲ ಹಾಗೂ ಶೋಷಿತ ವರ್ಗಗಳ ಬಿಡುಗಡೆ ಅಸಾಧ್ಯವಾಗುತ್ತಿತ್ತು ಎಂಬ ಸರಳ ಸತ್ಯವನ್ನು ಜನಸಾಮಾನ್ಯರು ಮನಗಾಣಬೇಕಾಗಿದೆ. ಜೊತಗೆ. ಕೋಮುವಾದದ ವಿಷದ ಬಗೆಗೆ ಹಾಗೂ ಅದರ ಭೀಕರತೆಯ ಬಗೆಗೆ ಎಲ್ಲ ತಲೆಮಾರಿನ ಜನರನ್ನೂ ಎಚ್ಚರಿಸುತ್ತಿರಬೇಕಾಗುತ್ತದೆ. ನಮ್ಮ ನಿಲುವು, ಬರಹ, ಮಾತು, ಕಾರ್ಯಕ್ರಮ, ರಾಜಕೀಯ ಹಾಗೂ ಸಾಮಾಜಿಕ ಆಯ್ಕೆಗಳು… ಮುಂತಾಗಿ ಎಲ್ಲ ವಲಯಗಳಲ್ಲೂ ಜಾತಿವಿನಾಶ, ಜಾತಿವಿರೋಧ, ಜಾತ್ಯತೀತತೆ ಹಾಗೂ ಧರ್ಮಾತೀತತೆಗಳು ಬೆಸೆದುಕೊಂಡೇ ಇರಬೇಕಾಗುತ್ತದೆ. ಅದರ ಜೊತೆಗೆ, ಜನಪರವಾದ ಚಳವಳಿಗಳಲ್ಲಿ ಭಾಗಿಯಾಗುವವರು ಜನರ ಕಷ್ಟಗಳನ್ನು ಹಂಚಿಕೊಳ್ಳುವ ಬಗೆಬಗೆಯ ವೇದಿಕೆಗಳಿಗೆ ನೆರವಾಗುತ್ತಾ ಜಾತ್ಯತೀತ ಮನೋಭಾವವನ್ನು ಹಬ್ಬಿಸಬೇಕಾಗುತ್ತದೆ. ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಮನಸ್ಸು ಜಾತೀಯತೆ ಹಾಗೂ ಕೋಮುಭಾವನೆಗಳಿಂದ ವಿಕಾರಗೊಳ್ಳದ ಹಾಗೆ ನೋಡಿಕೊಳ್ಳುವ ಕೆಲಸ ಲಕ್ಷಾಂತರ ಶಿಕ್ಷಕ, ಶಿಕ್ಷಕಿಯರ ಮೇಲೂ ಇದೆ. ಅದೇ ವೇಳೆಗೆ ಬಹುಸಂಖ್ಯಾತರ ಕೋಮುವಾದಕ್ಕೆ ಪ್ರತಿಯಾಗಿ ಹುಟ್ಟುವ ಅಲ್ಪಸಂಖ್ಯಾತರ ಕೋಮುವಾದದ ಅಪಾಯದ ಬಗೆಗೂ ಕೂಡ ಜಾತ್ಯತೀತರು ಎಚ್ಚರವಾಗಿರಬೇಕಾಗುತ್ತದೆ. ಹಿಂದೂ ಕೋಮುವಾದದಿಂದ ಹಿಂದೂಜಾತಿಗಳ ದುರ್ಬಲರಿಗೆ ಅನ್ಯಾಯವಾದಂತೆ, ಮುಸ್ಲಿಂ ಮೂಲಭೂತವಾದದಿಂದ ಬಡಮುಸ್ಲಿಮರಿಗೂ ಅನ್ಯಾಯವಾಗುತ್ತದೆ. ಲಂಕೇಶ್, ಅಥವಾ ತೇಜಸ್ವಿ ಥರದವರು ತೋರಿಸಿಕೊಟ್ಟಂತೆ ಸೆಕ್ಯುಲರ್ ಆಗಿರುವುದೆಂದರೆ ಎಲ್ಲ ಬಗೆಯ ಕೋಮುವಾದವನ್ನೂ ವಿರೋಧಿಸುವುದು ಎಂಬುದನ್ನು ನಾವು ಮರೆಯಬಾರದು. ಒಂದು ಬಗೆಯ ಕೋಮುವಾದದ ಬಗ್ಗೆ ಯೋಜಿತ ಮೌನದಿಂದಿರುವುದು ಕೂಡ ತಪ್ಪು ಎಂಬುದನ್ನು ಲೋಹಿಯಾರಂಥ ಚಿಂತಕರು ನಮಗೆ ಮನವರಿಕೆ ಮಾಡಿಕೊಟ್ಟಿರುವುದನ್ನು ಕಡೆಗಣಿಸಬಾರದು. ಈ ಎಲ್ಲದರ ನಡುವೆಯೂ ಭಾರತದ ಎಲ್ಲ ಜಾತಿ, ಧರ್ಮಗಳ ಅನುಯಾಯಿಗಳನ್ನೂ ಆಯಾ ಧರ್ಮಗಳ ಪುರೋಹಿತಶಾಹಿಗಳ ಹಿಡಿತದಿಂದ ಹೊರತರುವ ದಿಕ್ಕಿನಲ್ಲೂ ಯೋಚಿಸಬೇಕಾಗುತ್ತದೆ. ಹಾಗೆಯೇ, ಕೋಮು ಭಾವನೆಗಳನ್ನು ಬೆಳೆಸುವ ದುರುಳ ವೇದಿಕೆಗಳ ವ್ಯಾಖ್ಯಾನಗಳನ್ನು, ಸುಳ್ಳುಗಳನ್ನು ಹಾಗೂ ತಿರುಚಿದ ಸತ್ಯಗಳನ್ನು ಗಾಳಿಸುದ್ದಿಗಳಾಗಿ ಹಬ್ಬಿಸುವ ಬೇಜವಾಬ್ದಾರಿ ಮಧ್ಯಮ ವರ್ಗದ ವಾಚಾಳಿಗಳ ಪೂರ್ವಗ್ರಹ ಹಾಗೂ ಅಜ್ಞಾನಗಳನ್ನು ತಿದ್ದುವ ಕೆಲಸವನ್ನೂ ಮಾಡುತ್ತಿರಬೇಕಾಗುತ್ತದೆ.

ಸಂವಿಧಾನದ ಮೂಲ ಆಶಯವಾದ ಹಾಗೂ ಭಾರತದ ಉಳಿವಿಗೆ ಅತ್ಯಗತ್ಯವಾದ ಸೆಕ್ಯುಲರಿಸಮ್ಮನ್ನು ಅಪಾರ ಎಚ್ಚರದಿಂದ, ನಿರಂತರವಾಗಿ ಪೊರೆಯದಿದ್ದರೆ ಭಾರತದ ವರ್ತಮಾನ ಹಾಗೂ ಭವಿಷ್ಯಗಳೆರಡೂ ಗಂಡಾಂತರದಲ್ಲಿರುತ್ತವೆ ಎಂಬ ಕಠೋರ ಸತ್ಯವನ್ನು ಎಲ್ಲ ಭಾರತೀಯರಿಗೂ ತಲುಪಿಸುವ ದೊಡ್ಡ ಜವಾಬ್ದಾರಿ ಜಾತ್ಯತೀತರ ಮೇಲೇ ಇದೆ ಎಂಬುದನ್ನು ಮರೆಯಬಾರದು.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...