Wednesday, February 29, 2012

ಲಾಲ್ ಪೇರಿ

- ಡಾ. ಎಚ್.ಎಸ್.ಅನುಪಮಾ

ಬ್ರಿಟಿಷ್ ಲೇಖಕ ವಿಲಿಯಂ ಡ್ಯಾಲ್‌ರಿಂಪಲ್‌ನ ಏಳನೆಯ ಹಾಗೂ ಇತ್ತೀಚಿನ ಪುಸ್ತಕ ‘ನೈನ್ ಲೈವ್ಸ್. ದೆಹಲಿಯ ಬಗೆಗೆ, ಮುಘಲ್ ಕಾಲದ ಭಾರತದ ಬಗೆಗೆ ಆಸಕ್ತಿಯಿಂದ ಹಳೆಯ ಲೈಬ್ರರಿಗಳಲ್ಲಿ, ಖಾಸಗಿ ಸಂಗ್ರಹಗಳಲ್ಲಿ ದಾಖಲೆಗೆ ತಡಕಾಡಿ ಮೂರು ಅತ್ಯುತ್ತಮ ಎನ್ನಬಹುದಾದ, ಸಂಶೋಧನಾ ಗ್ರಂಥಗಳಾದರೂ ಕಾದಂಬರಿಯಷ್ಟು ಆಸಕ್ತಿಯಿಂದ ಓದಿಸಿಕೊಂಡು ಹೋಗಬಲ್ಲ ಪುಸ್ತಕಗಳನ್ನು ಬರೆದಿದ್ದಾನೆ. ‘ಸಿಟಿ ಆಫ್ ಜಿನ್ಸ್, ‘ಲಾಸ್ಟ್ ಮುಘಲ್ ಹಾಗೂ ‘ವೈಟ್ ಮುಘಲ್ಸ್ ಪುಸ್ತಕಗಳು ‘ಇಂಡೋಫಿಲ್ ಎಂಬ ಬಿರುದನ್ನು ಅವನಿಗೆ ತಂದಿತ್ತರೂ ಕುರುಡು ಭಾರತ ಪ್ರೇಮ ಅವನದಲ್ಲ. ಹೆಚ್ಚು ಕಡಿಮೆ ಎರಡು ದಶಕ ಕಾಲ ಭಾರತದಲ್ಲೇ ಅಲೆಯುತ್ತ ಕಳೆದಿರುವ ಆತ ತನ್ನ ಮನೆಯೆಂದರೆ ‘ದೆಹಲಿ ಎಂಬಷ್ಟೇ ಆಗಿಹೋಗಿರುವುದಾಗಿ ಹೇಳಿಕೊಂಡಿದ್ದಾನೆ. ಬರೀ ಸಂಶೋಧನಕಾರನ ಚಿಕಿತ್ಸಕ ಬುದ್ಧಿಯಲ್ಲದೆ, ತೆರೆದ ಮನದ ವಿಶ್ಲೇಷಣೆ, ಕುತೂಹಲ, ಮಾನವ ಪ್ರೇಮ ಇವೆಲ್ಲ ತುಂಬಿರುವುದು ಆ ಪುಸ್ತಕಗಳನ್ನು ಓದುತ್ತ ಹೋದಂತೆ ಅರಿವಾಗುತ್ತದೆ. ಭಾರತ ಉಪಖಂಡದ ವಿವಿಧ ಪ್ರದೇಶ, ಭಾಷೆ, ಆಸಕ್ತಿ, ಧಾರ್ಮಿಕ ಹಿನ್ನೆಲೆಗಳ ಒಂಭತ್ತು ಜನರನ್ನು ಭೇಟಿಯಾಗಿ ಅವರ ಪೂರ್ವಾಪರ ಅರಿತು, ಅದನ್ನು ಭೂತ ವರ್ತಮಾನದ ಸಾಮಾಜಿಕ, ರಾಜಕೀಯ ವಿದ್ಯಮಾನಗಳ ಜೊತೆ ವಿಶ್ಲೇಷಿಸುವ ಅಪೂರ್ವ ಪ್ರವಾಸ ಕಥನ ‘ನೈನ್ ಲೈವ್ಸ್.

ಪಾಶ್ಚಾತ್ಯ ಜಗತ್ತಿಗೆ ಭಾರತವೆಂದರೆ ಸದಾ ಪುರಾತನವಾದ, ಎಂದೂ ಬದಲಾಗದ ಧಾರ್ಮಿಕ ಜ್ಞಾನದ ನಾಡು. ಭಾರತದಲ್ಲಾದರೋ ಧಾರ್ಮಿಕ ಅಸ್ಮಿತೆ ಎಂಬುದು ಜಾತಿ - ಗುಂಪು - ಪ್ರದೇಶ - ವಂಶಗಳಿಗೆ ಅಂಟಿಕೊಂಡಿದ್ದು ಆ ಸಂಸ್ಥೆಗಳ ಜೊತೆಗೇ ಬದಲಾಗುತ್ತ ಸಾಗಿದೆ ಎನ್ನುವುದು ಅವನ ಅಬ್ಸರ್ವೇಷನ್. ಬದಲಾವಣೆಯ ವೇಗಕ್ಕೆ ಒಂದಕ್ಕೊಂದು ಘರ್ಷಣೆಗೊಳಗಾಗಿರುವುದನ್ನು, ರಾಜಕೀಯ, ಕೋಮು ಹಿಂಸಾಚಾರಕ್ಕೆ ಬಲಿಯಾದವರು ಧರ್ಮದ ಮಬ್ಬಿನಲ್ಲಿ ಸಾಂತ್ವನ ಬಯಸುತ್ತಿರಬಹುದೇ ಎಂಬುದನ್ನು ತನ್ನ ತಿರುಗಾಟದ ವೇಳೆ ಆತ ಪರಿಶೀಲಿಸಿದ್ದಾನೆ. ಬದಲಾಗುತ್ತಿರುವ ಕಾಲದಲ್ಲಿ ಇನ್ನೂ ಪವಿತ್ರ, ಧಾರ್ಮಿಕ ಎಂಬುದಾಗಿ ಯಾವುದು ಉಳಿದಿದೆ? ಯಾವ ಸ್ವರೂಪದಲ್ಲಿ ಉಳಿದಿದೆ? ಯಾವ ಬದಲಾವಣೆಗೆ ಮುಖವೊಡ್ಡಿದೆ? ಎಂದೆಲ್ಲ ಪರಿಶೀಲಿಸುತ್ತ ೯ ಜನ ಧಾರ್ಮಿಕ ವ್ಯಕ್ತಿಗಳನ್ನು ಭೇಟಿಯಾಗಿದ್ದಾನೆ. ಅದಕ್ಕಾಗಿ ಈ ದೊಡ್ಡ ದೇಶವನ್ನು ಸುತ್ತಿದ ತನ್ನ ಎರಡು ದಶಕಗಳ ಅನುಭವವನ್ನೆಲ್ಲ ಬಳಸಿಕೊಂಡಿದ್ದಾನೆ.

ಆಲೋಪತಿ ಔಷಧವು ಪ್ರಾಣಿಹಿಂಸೆಯಿಂದ ತಯಾರಾಗಿದ್ದೆಂದು ಟಿಬಿ ಕಾಯಿಲೆಗೆ ಔಷಧಿ ಪಡೆಯದೇ ತನ್ನ ಆಪ್ತ ಗೆಳತಿ, ಸನ್ಯಾಸಿನಿ ಕಣ್ಣೆದುರೇ ಸಾಯುವುದನ್ನು ನೋಡುವ, ಸಲ್ಲೇಖನಕ್ಕೆ ಸಿದ್ಧಳಾಗಿರುವ ಯುವ ಜೈನ ಸನ್ಯಾಸಿನಿ ಪ್ರಯೋಗಮತಿ; ಮೈಮೇಲೆ ಬರುವ ದೈವಗಳು ಅಸ್ಪೃಶ್ಯತೆಯ ಕೀಳರಿಮೆಯಿಂದ ಹೊರಬರಲು ಶೂದ್ರ ಸಮುದಾಯಕ್ಕಿರುವ ಒಂದು ಮಾರ್ಗ ಎಂದು ವಿಶ್ಲೇಷಿಸುವ ಕೇರಳದ ಕಣ್ಣೂರಿನ ತೆಯ್ಯಂ ಕಲಾವಿದ ಹರಿದಾಸ; ಸನ್ಯಾಸ ತೊರೆದು ಚೀನಾ ವಿರುದ್ಧ ಹೋರಾಡಲು ಭಾರತ ಸೇನೆ ಸೇರಿ ನಂತರ ಭ್ರಮನಿರಸನಗೊಂಡು ಆತ್ಮಶುದ್ಧಿ ಮಾಡಿಕೊಳ್ಳುತ್ತಿರುವ ಟಿಬೆಟನ್ ಬೌದ್ಧ ಸನ್ಯಾಸಿ ತಶಿ ಪಸಂಗ್; ತನ್ನ ತಾಯಿ ತನ್ನನ್ನು ‘ದೇವರಿಗೆ ಬಿಟ್ಟಳೆಂದು ಅವಳನ್ನು ಕ್ಷಮಿಸದೇ, ಕೊನೆಗೆ ತಾನೇ ಇಬ್ಬರು ಹೆಣ್ಣುಮಕ್ಕಳನ್ನು ದೇವದಾಸಿ ಪದ್ಧತಿಗೆ ಬಲಿಕೊಟ್ಟ ಸವದತ್ತಿಯ ಯಲ್ಲಮ್ಮನ ಭಕ್ತೆ; ಹತ್ತನೆಯ ಶತಮಾನದ ರಾಜರಾಜ ಚೋಳನ ಆಸ್ಥಾನ ಶಿಲ್ಪಿಯಿಂದ ಹಿಡಿದು ಇಲ್ಲಿನವರೆಗೆ ೨೩ ತಲೆಮಾರು ಕಂಚಿನ ಉತ್ಸವ ಮೂರ್ತಿಗಳನ್ನು ಮಾಡುತ್ತಿದ್ದರೂ, ಈಗ ಕಂಪ್ಯೂಟರ್ ಎಂಜಿನಿಯರ್ ಆಗುತ್ತಿರುವ ಮಕ್ಕಳಿಂದ ವಂಶಪಾರಂಪರ್ಯ ಕಲೆಗೆ ಕುತ್ತು ಬಂದಿದೆಯೆಂದು ಆತಂಕಗೊಂಡಿರುವ ಸ್ವಾಮಿಮಲೈನ ಶ್ರೀಕಾಂತ ಸ್ಥಪತಿ - ಹೀಗೇ ಇಂತಹ ಒಂಭತ್ತು ಜನ ಶೀಘ್ರ ಬದಲಾಗುತ್ತಿರುವ ಭಾರತ ಉಪಖಂಡದ ಧಾರ್ಮಿಕ ಮುಖವನ್ನು ತೆರೆದು ತೋರಿಸುತ್ತಾ ವಾಸ್ತವವನ್ನು ಪ್ರತಿನಿಧಿಸಿದ್ದಾರೆ.

ಅಂತಹವರಲ್ಲಿ ಒಬ್ಬಳು ಸೂಫಿ ಭಕ್ತೆ ಲಾಲ್ ಫೇರಿ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಷೆಹ್ವಾನ್ ಷರೀಫ್ ಸೂಫಿ ಸಂತ ಲಾಲ್ ಶಹಬಾಜ್ ಖಲಂದರ್ ಅವರ ದರ್ಗಾದಿಂದ ವಿಖ್ಯಾತವಾದುದು. ಖಲಂದರ್ ಸಂತರ ಭಕ್ತಾನುಯಾಯಿ ‘ಲಾಲ್ ಫೇರಿ ಉಳಿದ ಸೂಫಿಗಳ ಹಾಗೆಯೇ ಲೋಕರೂಢಿಯನ್ನು ಮುರಿದವಳು. ಹೆಣ್ಣಾದರೂ ಸೂಫಿಯಾದವಳು. ಬಿಹಾರದ ಕುಗ್ರಾಮವೊಂದರ ಹೀನಾ ಕೊನೆಗೆ ಪಾಕಿಸ್ತಾನದ ಸಿಂಧ್‌ನ ಖ್ಯಾತ ದರ್ಗಾವೊಂದರ ಅನುಯಾಯಿಯಾಗುವ ತನಕ ಸಾಗಿ ಬಂದ ದಾರಿ ಹಲವು ಅಪಘಾತ, ಆಕಸ್ಮಿಕ, ದುಃಖಮಯ ತಿರುವುಗಳಿಂದ ಕೂಡಿದೆ. ಅವಳಷ್ಟೇ ಅವಳು ನಂಬಿ ಬಂದ ಸೂಫಿ ಮಾರ್ಗವೂ ಇಂದು ಅಪಾಯದಲ್ಲಿದೆ. ಅದನ್ನು ಡ್ಯಾಲ್‌ರಿಂಪಲ್‌ನ ಟಿಪ್ಪಣಿ ಸಹಿತ ಅವಳ ಬಾಯಿಯಲ್ಲೇ ಕೇಳಬೇಕು:

*******

‘ಭಾರತ ಬಾಂಗ್ಲಾ ಗಡಿ ಭಾಗದಲ್ಲಿರುವ ಬಿಹಾರದ ಸೋನೆಪುರ ಎಂಬ ಸಣ್ಣ ಹಳ್ಳಿಯವಳು ನಾನು. ಅಂದಿನ ನನ್ನ ಹೆಸರು ಹೀನಾ. ಕಾಡಿನಂಚಿನ ನಮ್ಮ ಹಳ್ಳಿ ಎಷ್ಟು ಫಲವತ್ತಾಗಿತ್ತೆಂದರೆ ಬಡವರಾಗಿದ್ದರೂ ಮಕ್ಕಳಾದ ನಾವೆಂದೂ ಹಸಿದಿರುತ್ತಿರಲಿಲ್ಲ. ನನ್ನ ಬಾಲ್ಯದ ನೆನಪೆಂದರೆ ಮರ ಹತ್ತಿ ಹಣ್ಣು ಕುಯ್ದಿದ್ದೇ. ಮಾವು, ನೇರಳೆ, ಪೇರಲೆ, ಖರ್ಜೂರ, ಸಿಹಿತೆಂಗು - ಹೀಗೆ ಅಂಗಡಿಯಿಂದ ಯಾವ ಹಣ್ಣನ್ನೂ ಕೊಳ್ಳಬೇಕಿರಲಿಲ್ಲ. ವರ್ಷದ ಹನ್ನೆರೆಡೂ ತಿಂಗಳೂ ಯಾವುದಾದರೊಂದು ಪುಕ್ಕಟೆ ದೊರೆಯುತ್ತಿತ್ತು. ಹಾಗೆಯೇ ಕಾಡಿನಲ್ಲೂ ಕಾಡುಕುರಿ ಹಾಗೂ ಜಿಂಕೆ ಹೇರಳವಾಗಿರುತ್ತಿದ್ದವು. ನನ್ನಪ್ಪ ಬೇಟೆಗೆ ಹೋದ ಒಂದು ತಾಸಿನಲ್ಲಿ ಏನಾದರೂ ಬೇಟೆ ಹಿಡಿದೇ ಮನೆಗೆ ಬರುತ್ತಿದ್ದ.

ನಾನು ಸಣ್ಣವಳಿರುವಾಗ ಹಿಂದೂ ಮುಸ್ಲಿಮರೆಲ್ಲ ಸೋದರರೇನೋ ಎಂಬಂತೆ ಎಲ್ಲ ಇದ್ದರು. ನಾವು ಖುರೇಶಿಗಳು. ನಮ್ಮ ಮನೆಯ ಹೆಂಗಸರನ್ನು ಕೂಲಿಗೆ ಕಳಿಸುತ್ತಿರಲಿಲ್ಲ. ನನ್ನ ಆತ್ಮೀಯ ಗೆಳತಿ ಹಿಂದೂ, ಬ್ರಾಹ್ಮಣರವಳು. ನನ್ನ ತಂದೆಗೂ ಅಷ್ಟೇ, ಹಿಂದೂ ಗೆಳೆಯರು. ದೇವಾಲಯ ಮತ್ತು ಮಸೀದಿ ಎರಡೂ ಅಕ್ಕಪಕ್ಕವೇ ಇದ್ದವು. ಜನ ಎರಡೂ ಕಡೆ ಹೋಗುತ್ತಿದ್ದರು.

ನನ್ನಪ್ಪ ಸತ್ತಾಗ ತೊಂದರೆಗಳು ಶುರುವಾದವು. ಅವನಿಗೆ ಟಿಬಿ ಕಾಯಿಲೆ ಬಂದು ಕೆಮ್ಮಿ ಕೆಮ್ಮಿ ರಕ್ತಕಾರಿ ತೀರಿಕೊಂಡ. ಅವನು ತೀರಿಕೊಂಡಿದ್ದೇ ನನ್ನ ಚಿಕ್ಕಪ್ಪ ಇದ್ದ ಸ್ವಲ್ಪ ಗದ್ದೆಯನ್ನು ಕಬಳಿಸಿದ್ದರಿಂದ ಅನಾಥರಾಗಿಬಿಟ್ಟೆವು. ಹೀಗೆ ಸೋದರಮಾವನ ಆಶ್ರಯಕ್ಕೆ ಬಂದೆವು. ಒಂದು ವರ್ಷದಲ್ಲಿ ಅಮ್ಮ ಮತ್ತೊಂದು ಮದುವೆಯಾದಳು. ನನ್ನ ಮಲತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ನಾನು ಹಾಗೂ ಅಣ್ಣಂದಿರೆಂದರೆ ಅವನಿಗೆ ಸಿಟ್ಟು. ಅದರಲ್ಲೂ ಕುರೂಪಿಯಾದ ನನ್ನಂಥವಳಿಗೆ ಅನ್ನ ಹಾಕಲು ತಾನೇಕೆ ದುಡಿಯಬೇಕೆಂಬುದು ಅವನ ತಕರಾರು. ಆದರೆ ಅಮ್ಮ ನನಗೆ ಯಾವಾಗಲೂ ಅರೆ ಹೊಟ್ಟೆಯಾಗಲು ಬಿಟ್ಟವಳಲ್ಲ.

ನನಗಾಗ ಹದಿಮೂರು ವರ್ಷ. ನನ್ನ ಆಪ್ತ ಗೆಳತಿ ಮುಸಲ್ಮಾನ ಹುಡುಗನನ್ನು ಪ್ರೀತಿಸಿ ಮದುವೆಯಾಗಲು ಸಾಧ್ಯವಾಗದೇ ಇದ್ದದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಳು. ಆಗ ನಮ್ಮೂರಲ್ಲಿ ವಾತಾವರಣ ಕಾವೇರತೊಡಗಿತು. ಹಿಂದೂಗಳು ಮುಸಲ್ಮಾನರನ್ನು ದ್ವೇಷಿಸತೊಡಗಿದರು. ಅದೇ ವೇಳೆಗೆ ಪೂರ್ವ ಪಾಕಿಸ್ತಾನ (ಬಂಗಾಳ) ದಲ್ಲಿ ಹಿಂದೂಗಳನ್ನು ಮುಸ್ಲಿಮರು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಬಗ್ಗೆ ವರದಿಗಳು ಬರುತ್ತಿದ್ದವು. ನಮಗೂ, ಬಾಂಗ್ಲಾದಲ್ಲಿ ನಡೆಯುವುದಕ್ಕೂ ಸಂಬಂಧವೇ ಇಲ್ಲದಿದ್ದರೂ ಮುಸಲ್ಮಾನರಾಗಿದ್ದಕ್ಕೆ ನಾವು ಶಿಕ್ಷೆ ಅನುಭವಿಸಬೇಕು ಎಂದು ಹಿಂದೂಗಳು ಹೇಳುತ್ತಿದ್ದರು. ‘ಮುಸ್ಲಿಮರನ್ನು ತರಿದು ರಾಶಿ ಹಾಕಿ, ಸೇತುವೆ ಕಟ್ಟಿ ರುಪ್ಶಾ ನದಿಯನ್ನು ದಾಟುತ್ತೇವೆ. ಅವರ ರಕ್ತದಲ್ಲಿ ಮೀಯುತ್ತೇವೆ ಎಂದು ಹಾಡು ಕಟ್ಟಿ ಹೇಳುತ್ತಿದ್ದರು.

ಹೀಗೇ ಪರಿಸ್ಥಿತಿ ಗಂಭೀರವಾಗುತ್ತಾ ಹೋಯಿತು. ಒಂದು ದಿನ ಮಸೀದಿಯಲ್ಲಿ ನಮಾಜು ನಡೆಯುತ್ತಿರುವಾಗ ಗೂಂಡಾಗಳು ಮಸೀದಿಯನ್ನು ಸುತ್ತುವರಿದರು, ‘ಮುಂಜಿ ಮಾಡಿಕೊಂಡ ಹೇಡಿಗಳೇ, ಹೊರಬನ್ನಿ ಎಂದು ಅಬ್ಬರಿಸತೊಡಗಿದರು. ಹೊರಬಂದ ಬಹುಪಾಲು ನಿಶ್ಶಸ್ತ್ರ ಗಂಡಸರನ್ನು ಕೊಂದರು. ನಾನು ಹೀಗೆ ನನ್ನ ಮಲತಂದೆ, ಚಿಕ್ಕಪ್ಪ, ಬಂಧುಗಳ ಹುಡುಗರನ್ನೆಲ್ಲ ಕಳೆದುಕೊಂಡೆ. ನನ್ನ ಸೋದರಮಾವನೊಬ್ಬ ಅಂದು ಮಸೀದಿಗೆ ಹೋಗದೇ ಉಳಿದುಕೊಂಡಿದ್ದ. ನಂತರ ನಾವೆಲ್ಲ ಹಗಲಲ್ಲಿ ಬಾಳೆಲೆ ಮುಚ್ಚಿದ ಗುಂಡಿಯೊಳಗೆ ಅವಿತು ಕುಳಿತು ಕಾಲ ತಳ್ಳತೊಡಗಿದೆವು.

ಹೀಗೇ ದಿನ ಕಳೆಯುತ್ತಿದ್ದವು. ಸನ್ನಿವೇಶ ತಿಳಿಯಾಗುವವರೆಗೆ ನಾವು ಆ ಊರನ್ನು ಬಿಟ್ಟುಬಿಡುವುದೆಂದೂ, ಗಡಿಯಾಚೆ ಬಾಂಗ್ಲಾದಲ್ಲಿದ್ದ ನಮ್ಮ ನೆಂಟರ ಮನೆಗೆ ಹೋಗುವುದೆಂದೂ ತೀರ್ಮಾನಿಸಿದೆವು. ಅಂತೂ ದಿನಗಟ್ಟಲೇ ಅಡವಿಯಲ್ಲಿ ನಡೆದು, ಒಂದು ದಿನ ಆ ಗಡಿ ತಲುಪಿದೆವು. ಗಡಿಕಾವಲು ಅಧಿಕಾರಿಗಳಿಗೆ ಚಿಕ್ಕಪ್ಪ ಲಂಚ ಕೊಟ್ಟಿದ್ದ. ಕಾವಲಿನವನ ಮನೆಯಲ್ಲೇ ಒಂದು ದಿನ ಉಳಿದೆವು. ಮರುಬೆಳಿಗ್ಗೆ ಅವನು ನಮ್ಮನ್ನು ಹೊಳೆ ದಾಟಿಸಿ ಆಚೆ ಕಳಿಸಿ, ಬಲಕ್ಕೆ ತಿರುಗಿ ಹೋಗಬೇಕೆಂದೂ, ಗುಂಡು ತಗುಲುವ ಸಾಧ್ಯತೆಗಳಿದ್ದು ಎಲ್ಲೂ ನಿಲ್ಲದೇ ಸುಮ್ಮನೇ ಓಡುತ್ತ ಹೋಗಬೇಕೆಂದೂ ತಿಳಿಸಿದ.

ಅಂತೂ ಎರಡು ದಿನ ಓಡಿ, ನಡೆದು, ನಮ್ಮ ನೆಂಟರ ಊರು ತಲುಪಿದೆವು. ನಮ್ಮನ್ನವರು ಆದರದಿಂದಲೇ ಕಂಡರು. ನಮಗಾಗಿ ಹೊಳೆದಂಡೆಯಲ್ಲಿ ಗುಡಿಸಲು ಹಾಕಿಕೊಟ್ಟರು. ಹೀಗೇ ಒಂದು ವರ್ಷ ಕಳೆಯಿತು. ನಮ್ಮ ಭಯ ಹೊಳೆಯ ಪ್ರವಾಹದ್ದಾಗಿತ್ತೇ ಹೊರತು ಜನರದ್ದಾಗಿರಲಿಲ್ಲ. ಅಲ್ಲೂ ನಮ್ಮೂರಿನ ಹಾಗೆಯೇ ಹಣ್ಣು ಹಂಪಲು, ನೀರು ಯಾವುದಕ್ಕೂ ಕೊರತೆಯಿರಲಿಲ್ಲ. ಮೊದಲ ಬಾರಿ ನಾನು ಶಾಲೆಗೂ ಸೇರಿದ್ದೆ.

ಆಗ ಬಂತು ೧೯೭೧. ನಿಜಕ್ಕೂ ಕೆಟ್ಟ ವರ್ಷ. ಬಾಂಗ್ಲಾದೇಶೀಯರು ಪಾಕಿಸ್ತಾನದೊಂದಿಗೆ ಯುದ್ಧ ಶುರುಮಾಡಿದರು. ಈ ಯುದ್ಧದಲ್ಲಿ ಬಿಹಾರಿಗಳು ಪಾಕಿಸ್ತಾನಿಗಳ ಜೊತೆ ಸೇರಿದ್ದರು. ಇದು ನಮಗ್ಯಾರಿಗೂ ಸಂಬಂಧಿಸಿರಲಿಲ್ಲ. ಆದರೆ ಬಂಗಾಳಿಗಳು ಬಿಹಾರಿಗಳ ಮೇಲೆ ರೊಚ್ಚಿಗೆದ್ದರು. ದ್ರೋಹಿಗಳೆಂದು ಕರೆದು, ಅಪಹರಿಸಿ, ತಲೆ ಕಡಿದು ಬಿಸಾಡುತ್ತಿದ್ದರು. ಹೆದರಿ ಅಡಗಿಕೊಂಡ ನಮ್ಮ ಕಡೆಯ ಎಷ್ಟೋ ಜನ ಹಸಿವಿನಿಂದ ಸತ್ತರು. ನದಿಯಲ್ಲಿ ಹೆಣಗಳು ತೇಲತೊಡಗಿ ಮೀನು ತಿನ್ನುವುದನ್ನೂ ಬಿಟ್ಟೆವು. ಹುಟ್ಟಿದೂರು ಸೋನೆಪುರದಲ್ಲಿ ಹಿಂದೂಗಳು ಮುಸ್ಲಿಮರನ್ನು ಕೊಂದರು ನಿಜ. ಇಂದು ಮುಸ್ಲಿಮರೇ ಮುಸ್ಲಿಮರನ್ನೇಕೆ ಕೊಲ್ಲುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ. ಜಗತ್ತೇ ರಕ್ತಮಯವಾಗಿದ್ದಂತೆ ಎನಿಸಿಬಿಟ್ಟಿತು.

ಹೀಗೇ ಪರಿಸ್ಥಿತಿ ಬಿಗಡಾಯಿಸುತ್ತ ಹೋದಾಗ ಪಾಕಿಸ್ತಾನ ಸರ್ಕಾರವು ಬಂಗಾಳದ ಬಿಹಾರಿಗಳು ಬರಲೊಪ್ಪಿದರೆ ಅವರಿಗೆ ಪಾಕಿಸ್ತಾನದ ದಕ್ಷಿಣ ಪಂಜಾಬ್‌ನಲ್ಲಿ ಭೂಮಿ ಕೊಡುವುದಾಗಿ ಹೇಳಿತು. ಯಾವ ಪಂಜಾಬ್? ಎಲ್ಲಿದೆ? ಏನೂ ಗೊತ್ತಿರದಿದ್ದರೂ ಪಂಜಾಬ್ ತುಂಬ ಸಮೃದ್ಧ ಎಂದಷ್ಟೇ ಕೇಳಿ ತಿಳಿದಿದ್ದೆವು. ಅಲ್ಲದೇ ನಾವಿದ್ದ ಬಂಗಾಳವು ಯುದ್ಧ, ಪ್ರವಾಹಗಳಿಂದ ತುಂಬ ಬಡ ನೆಲವಾಗಿತ್ತು. ಹೀಗಾಗಿ ತುಂಬ ಉತ್ಸುಕರಾಗಿ ಪಂಜಾಬಿಗೆ ಹೊರಟೆವು.

ಈಗ ನಮ್ಮ ಕುಟುಂಬ ಒಡೆಯಿತು. ತನಗೆ ವಯಸ್ಸಾದುದರಿಂದ ಪ್ರಯಾಣ ಸಾಧ್ಯವಿಲ್ಲವೆಂದು ಅಮ್ಮ ನಮ್ಮ ಜೊತೆ ಬರಲು ನಿರಾಕರಿಸಿದಳು. ನಾನೂ ನನ್ನ ತಮ್ಮನೂ ಪಾಕಿಸ್ತಾನಕ್ಕೆ ಹೊರಟೆವು. ಖುಲ್ನಾ ಕ್ಯಾಂಪ್ ಬಳಿಯ ಬಿಹಾರಿ ಸ್ವಯಂಸೇವಕರು ನಮ್ಮ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು. ಅವಶ್ಯವಿರುವ ದಾಖಲೆಗಳೊಂದಿಗೆ ಟ್ರಕ್ಕುಗಳಲ್ಲಿ ಮೊದಲು ಕಲಕತ್ತಾ, ನಂತರ ದೆಹಲಿ, ನಂತರ ಲಾಹೋರ್ ತಲುಪಿದೆವು. ಕೊನೆಗೆ ಮುಲ್ತಾನಿನ ಗಿರಣಿಗಳನ್ನು ಮುಟ್ಟಿದೆವು. ಭೂಮಿ ಸಿಗದಿದ್ದರೂ ಒಂದು ಸಣ್ಣ ಕೋಣೆ ಹಾಗೂ ಕೆಲಸ ದೊರೆಯಿತು.

ಅಲ್ಲಿ ಎಲ್ಲವೂ ಅಪರಿಚಿತ. ನಮಗೆ ಪಂಜಾಬಿ ಬರುತ್ತಿರಲಿಲ್ಲ. ಹತ್ತಿ ಗಿರಣಿಯ ಕೆಲಸ ಗೊತ್ತಿರಲಿಲ್ಲ. ಅನ್ನ ಮೀನು ತಿನ್ನುತ್ತಿದ್ದವರಿಗೆ ರೊಟ್ಟಿ ಮಾಂಸ ತಿಂದು ಗೊತ್ತಿರಲಿಲ್ಲ. ಆದರೆ ಅಲ್ಲಿ ರಕ್ಷಣೆಯಿತ್ತು. ನೆಲೆಯಿತ್ತು. ದಿನಕ್ಕೆ ಎಂಟು ಗಂಟೆ ದುಡಿದರೆ ೧೫ ರೂ. ಸಿಗುತ್ತಿತ್ತು. ಶಿಫ್ಟ್ ಕೆಲಸವಿಲ್ಲದಾಗ ಮುಲ್ತಾನಿನ ದರ್ಗಾಗಳಿಗೆ, ಫಕೀರರ ಬಳಿ ಹೋಗತೊಡಗಿದೆ. ಆಗಲೇ ನನಗೆ ಅಲೆಯುವ ಸೂಫಿಯಾಗಬೇಕೆಂಬ ಹಂಬಲ ಹುಟ್ಟಿದ್ದು.

ಈ ರೀತಿ ೧೦ ವರ್ಷ ಕಳೆಯಿತು. ಗಿರಣಿಯ ಕೆಲಸ ಮತ್ತು ಜೀವನಕ್ಕೆ ಹೊಂದಿಕೊಂಡುಬಿಟ್ಟಿದ್ದೆ. ಆಗಲೇ ಫ್ಯಾಕ್ಟರಿಯ ಅಪಘಾತದಲ್ಲಿ ನನ್ನ ತಮ್ಮ ತೀರಿಕೊಂಡ. ಅವನ ಹೆಂಡತಿ ನನ್ನ ಜೊತೆ ತುಂಬ ಕೆಟ್ಟದಾಗಿ ವರ್ತಿಸಿದಳು. ಅವನ ಹಣವನ್ನೆಲ್ಲ ನಾನೇ ಹಾಳು ಮಾಡಿದೆನೆಂದೂ, ನನ್ನ ದುರಾದೃಷ್ಟದಿಂದಲೇ ಅವನು ಸತ್ತಿದ್ದೆಂದೂ, ನಾನು ಮೂರ್ಖಳೂ, ಶಾಪಗ್ರಸ್ತಳೂ ಎಂದೂ, ಬಾಯಿಗೆ ಬಂದಂತೆ ಬೈದಳು. ನನ್ನ ಜೊತೆ ವಾಸಿಸುವ ಇಚ್ಛೆಯಿಲ್ಲವೆಂದು ಕೂಗಾಡಿದಳು. ಇಷ್ಟು ಕೇಳಿದ ಮೇಲೆ, ಮತ್ತಿನ್ನೇನು ಎಂದು ೪೦ನೆಯ ದಿನದ ಸೂತಕ ಕಳೆದಿದ್ದೇ ನಾನು ಮನೆ ಬಿಟ್ಟೆ.

ಅದಕ್ಕೆ ಮೊದಲು ಮುಲ್ತಾನಿನ ಶೇಕ್ ಬಹಾವುದ್ದೀನ್ ಝಕಾರಿಯಾ ದರ್ಗಾಕ್ಕೆ ಹೋಗಿದ್ದೆ. ಆ ರಾತ್ರಿ ಒಂದು ಕನಸಾಯಿತು. ಉದ್ದನೆಯ ಗಡ್ಡದ ವೃದ್ಧನೊಬ್ಬ ನನ್ನ ಹತ್ತಿರ ಬಂದು, ‘ನೀನೀಗ ಒಂಟಿಯಲ್ಲವೆ? ಹೆದರಬೇಡ, ನಾನು ನಿನ್ನನ್ನು ರಕ್ಷಿಸುವೆ. ಒಂದು ರೈಲು ಹತ್ತು. ಅದು ನಿನ್ನನ್ನು ನನ್ನ ಬಳಿ ತರುತ್ತದೆ. ಟಿಕೆಟ್ ಕೂಡಾ ಬೇಕಿಲ್ಲ. ಎಲ್ಲ ನಾನೇ ವ್ಯವಸ್ಥೆ ಮಾಡುತ್ತೇನೆ ಎಂದಂತಾಯಿತು.

ಕನಸಿನಲ್ಲಿ ಹೇಳಿದಂತೇ ನಡೆದುಕೊಂಡೆ. ಟಿಕೆಟ್ ಇಲ್ಲದೇ, ಕೈಯಲ್ಲಿ ಕಾಸಿಲ್ಲದೇ, ಪ್ರಯಾಣಿಸಿದರೂ ಊಟತಿಂಡಿಗೇನೂ ತೊಂದರೆಯಾಗಲಿಲ್ಲ. ಉರುಸ್ ನಡೆಯುವ ಸಮಯಕ್ಕೆ ಷೆಹ್ವಾನ್ ಷರೀಫ್ ತಲುಪಿದೆ. ‘ದಮ್ ದಮ್ ಮಸ್ತ್ ಖಲಂದರ್ ಎಂದು ಹಾಡುತ್ತಾ ಸಾವಿರಾರು ಜನ ಪ್ರಯಾಣಿಸುತ್ತಿದ್ದರು. ಫಕೀರರೊಬ್ಬರು ಇದು ನಿನ್ನ ರಕ್ಷೆಗೆ ಎಂದು ಪದಕವೊಂದನ್ನು ಕೊಟ್ಟರು. ಅದರಲ್ಲಿದ್ದ ಚಿತ್ರವು ನನಗೆ ಕನಸಿನಲ್ಲಿ ಕಂಡ ವೃದ್ಧರದೇ ಆಗಿತ್ತು. ಅವರೇ ಲಾಲ್ ಷಹಬಾಜ್ ಖಲಂದರ್. ಹೀಗೆ ಷೆಹ್ವಾನ್ ಷೆರೀಫ್ ತಲುಪಿದ ನಾನು ವರ್ಷಕ್ಕೊಮ್ಮೆ ಬಿಟ್ ಷಾದಲ್ಲಿ ಶಾಹ್ ಅಬ್ದುಲ್ ಲತೀಫ್ ಉರುಸಿಗೆ ಹೋಗುವುದು ಬಿಟ್ಟರೆ ಮತ್ತೆಲ್ಲೂ ಹೋಗದೇ ಇಲ್ಲೇ ಕಾಲ ಕಳೆಯುತ್ತಿದ್ದೇನೆ. ನನಗೀಗ ಲಾಲ್ ಖಲಂದರ್ ಬಾಬಾನೇ ಎಲ್ಲವೂ, ಎಲ್ಲರೂ..

******

ಡ್ಯಾಲ್‌ರಿಂಪಲ್ ಗಮನಿಸಿರುವಂತೆ, ಪಾಕಿಸ್ತಾನದ ಸಿಂಧ್ ಪ್ರಾಂತ್ಯವು ತುಂಬ ಹಿಂದುಳಿದ ಮರುಭೂಮಿ ಪ್ರದೇಶ. ಜಮೀನ್ದಾರೀ ಪಳೆಯುಳಿಕೆಯ ಭೂಮಾಲೀಕರ ಕೈಕೆಳಗೆ ಸಾವಿರಾರು ಜನ ಜೀತಕ್ಕಿರುವ, ಬಾಂಡೆಡ್ ಲೇಬರ್‌ಗಳಿರುವ ಸ್ಥಳ. ಈ ಪ್ರದೇಶದ ಭೌಗೋಳಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಸರ್ಕಾರಕ್ಕೆ ಒಂದು ಸವಾಲಾಗಿದ್ದರೆ, ಅವು ಸೃಷ್ಟಿಸಿರುವ ಹಾಗೂ ಮುಖ್ಯವಾಹಿನಿಯ ಸಮಾಜ ಮತ್ತು ಧರ್ಮದಿಂದ ಹೊರದೂಡಲ್ಪಟ್ಟ ಢಕಾಯಿತರು - ಧಾರ್ಮಿಕ ಪಂಥ ಪಂಗಡಗಳಿಗೆ ಇದು ಸುರಕ್ಷಿತ ಸ್ವರ್ಗವೂ ಆಗಿದೆ. ಈ ಎಲ್ಲ ಕಾರಣಗಳಿಂದ ಸಿಂಧ್ ಪ್ರಾಂತ್ಯವು ಹೇಗೆ ಹಿಂದೂ ಭಾರತ ಮತ್ತು ಮುಸ್ಲಿಂ ಮಧ್ಯಪ್ರಾಚ್ಯದ ನಡುವೆ ಭೌಗೋಳಿಕವಾಗಿ ಸೇತುವೆಯಾಗಿದೆಯೋ ಹಾಗೆಯೇ ಸಾಮಾಜಿಕವಾಗಿಯೂ ಹಿಂದೂ ಮುಸ್ಲಿಂ ಬಾಂಧವ್ಯ ಸಾರಿದ ಹಲವು ಸೂಫಿ ಸಂತರ ನಾಡಾಗಿದೆ. ಬರಡು ಮರುಭೂಮಿಯ ಧಗೆಯಲ್ಲಿ ದಕ್ಷಿಣ ಏಷಿಯಾದ ಎರಡು ಪ್ರಬಲ ಧರ್ಮಗಳ ನಡುವಿನ ತಿಕ್ಕಾಟಕ್ಕೆ ಕೊನೆಹಾಡುವ ಯತ್ನಗಳು ಜರುಗಿದ್ದು ಅಲ್ಲಿರುವ ಸೂಫಿ ದರ್ಗಾಗಳಿಂದ ತಿಳಿದುಬರುತ್ತದೆ.

‘ಶಿವ ಸ್ಥಾನವಾಗಿದ್ದ, ಶೈವ ಕವಿ ಭರ್ತೃಹರಿಯ ಸ್ಥಳವಾಗಿದ್ದ ಜಾಗವು ಇಂದು ‘ಷೆಹ್ವಾನ್ ಷರೀಫ್ ಆಗಿದೆ. ಲಾಲ್ ಶಾಹ್‌ಬಾಜ್ ಖಲಂದರ್ ಅವರ ದರ್ಗಾ ಇರುವ ಈ ಜಾಗಕ್ಕೆ ಹಿಂದೂ, ಮುಸ್ಲಿಂ ಭಕ್ತರಿಬ್ಬರೂ ನಡೆದುಕೊಳ್ಳುತ್ತಾರೆ. ಖಲಂದರ್ ಬಾಬಾನನ್ನು ‘ಜೂಲೆ ಲಾಲ್ ( ಸಿಂಧೂ ನದಿ ದೇವರು) ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ. ಮೊನ್ನೆಮೊನ್ನಿನ ತನಕ ದರ್ಗಾದಲ್ಲಿ ಶಿವಲಿಂಗವೊಂದು ಇದ್ದು, ಈಗದು ಬೀಗ ಹಾಕಿಟ್ಟ ಕೋಣೆ ಸೇರಿದೆ. ಯಾವ್ಯಾವ ವೈದ್ಯರಿಂದಲೂ ಗುಣ ಕಾಣದ ಖಾಯಿಲೆಗಳು ಖಲಂದರ್ ಬಾಬಾನಿಂದ ಗುಣ ಕಂಡಿದೆ ಎನ್ನುತ್ತ ಭಕ್ತರು ಗಡಿ ದಾಟಿ ಷೆಹ್ವಾನ್ ಷರೀಫ್‌ಗೆ ಹೋಗುತ್ತಾರೆ. ನಾಗಾ ಸಾಧುಗಳು ಮತ್ತು ತಾಂತ್ರಿಕರ ರೀತಿಯಲ್ಲಿಯೇ ರುದ್ರಾಕ್ಷಿ ಧರಿಸಿ ತಪಸ್ಸು ಮಾಡಿದ, ತಲೆಕೆಳಗಾಗಿ ಧ್ಯಾನ ಮಾಡಿದ, ಸೂಳೆಗೇರಿಗೆ ಹೋಗಿ ಅವರ ಮನಸ್ಸನ್ನೂ ಪರಿವರ್ತನೆ ಮಾಡಿದ ಹಠಯೋಗಿ ಖಲಂದರ್ ಬಾಬಾ ಪ್ರೇಮರಾಹಿತ್ಯದ ಖಾಯಿಲೆಗೆ ಒಂದು ಮದ್ದಾಗಿ ಆ ಪ್ರದೇಶಕ್ಕೆ ದೊರೆತವರು.

ಇರಾನಿನ ತಬ್ರೀಜ್‌ನವರಾದ ಷೇಕ್ ಉಸ್ಮಾನ್ ಮರ್‍ವಂಡಿ ಹೆಚ್ಚುಕಡಿಮೆ ಜಲಾಲುದ್ದೀನ್ ರೂಮಿ ಆಫ್ಘನಿಸ್ತಾನ ತೊರೆದು ಟರ್ಕಿ ಸೇರಿದ ಕಾಲದಲ್ಲೇ ಮಂಗೋಲರ ಆಕ್ರಮಣಕ್ಕೆ ತುತ್ತಾಗಿ ಇರಾನನ್ನು ತೊರೆದರು. ಅವರು ಮೊದಲಿನಿಂದ ಪವಿತ್ರ ಹುಚ್ಚನ ತರಹ ಲೋಕರೂಢಿಯನ್ನು ತೊರೆದು ತಿರುಗಿದವರು. ಸಮಾಜದ ತಿರಸ್ಕಾರ ಮತ್ತು ಅಪಹಾಸ್ಯ ನಮ್ಮ ವ್ಯಕ್ತಿತ್ವದ ಶುದ್ಧತೆಗೆ ಅಳತೆಗೋಲು ಎಂದು ತಿಳಿದು, ಷರಿಯತ್ ಹಾಗೂ ಸಮಾಜದ ಎಲ್ಲ ಕಟ್ಟಳೆಗಳನ್ನೂ ಧಿಕ್ಕರಿಸಿದವರು. ತನ್ನ ಅನುಯಾಯಿಗಳಿಗೆ ಹಾಡು ಮತ್ತು ನರ್ತನದಿಂದ ಎಲ್ಲವನ್ನು ಮರೆತು ಭಗವಂತನಲ್ಲಿ ಲೀನವಾಗುವಂತೆ ಕರೆಯಿತ್ತವರು. ಬೆಂಕಿ ಎದುರು ಕತ್ತಿಯೆದುರು ಪ್ರಾಣವನ್ನು ಪಣಕ್ಕಿಟ್ಟು ಆಧ್ಯಾತ್ಮ ಸವಿದ ಹಠಯೋಗದ ದಾರಿಯವರು. ತನ್ನನ್ನೇ ತಾನು ಶಿಕ್ಷಿಸಿಕೊಳ್ಳುತ್ತಾ ಆಧ್ಯಾತ್ಮಿಕ ಅನುಭೂತಿ ಪಡೆಯಲು ಹಾಡು ನರ್ತನಗಳ ಮೊರೆ ಹೊಕ್ಕವರು.

*******

ಧರ್ಮದ ನಡುವಿನ ಸೇತುವೆಯಂತೆ, ಗಾಯಕ್ಕೆ ತಂಪು ನೀಡುವ ಮುಲಾಮಿನಂತೆ ಹುಟ್ಟಿದ ಸೂಫಿ ಇಂದು ಅಪಾಯದಲ್ಲಿದೆ. ಸೂಫಿಗಳ ತತ್ವವನ್ನು ಇಸ್ಲಾಮಿನ ಮೌಲ್ಯ ಪ್ರತಿಪಾದಕರು ಒಪ್ಪುವುದಿಲ್ಲ. ಗೋರಿಪೂಜೆ, ಹಾಡು, ನೃತ್ಯ, ಹೆಂಗಸರು ದರ್ಗಾಗಳಿಗೆ ಬರುವುದು ಇವೆಲ್ಲ ಇಸ್ಲಾಮಿಗೆ ವಿರುದ್ಧ ಎಂದೇ ಅವರು ಭಾವಿಸುತ್ತಾರೆ. ದೇವ್‌ಬಂದ್‌ನವರು, ತಬ್ಲೀಗಿನವರು ಹಾಗೂ ಆಧುನಿಕ ವಹಾಬಿಗಳು ಸೂಫಿಗೆ ವಿರುದ್ಧವಾಗಿದ್ದಾರೆ.

ಡ್ಯಾಲ್‌ರಿಂಪಲ್ ದಾಖಲಿಸುವಂತೆ, ಸ್ವಾತಂತ್ರದ ಸಮಯದಲ್ಲಿ ಇದ್ದುದಕ್ಕಿಂತ ೨೭ ಪಟ್ಟು ಹೆಚ್ಚು ಮದ್ರಸಾಗಳು ಇಂದು ಪಾಕಿಸ್ತಾನದಾದ್ಯಂತ ಇವೆ. ಎಂಟು ಸಾವಿರಕ್ಕಿಂತ ಹೆಚ್ಚು ಇರುವ ಮದ್ರಸಾಗಳಲ್ಲಿ ಬಹುಪಾಲು ದರ್ಗಾಗಳ ಬಳಿ ತಲೆಯೆತ್ತುತ್ತಿವೆ. ಷೆಹ್ವಾನ್ ಷರೀಫ್ ಕೂಡಾ ಈ ಅಪಾಯದಿಂದ ಹೊರತಾಗಿಲ್ಲ. ದೇವಬಂದೀ ಮದ್ರಸಾವೊಂದು ಇತ್ತೀಚೆಗೆ ಅಲ್ಲಿ ತಲೆಯೆತ್ತಿದೆ. ಅದಕ್ಕೆ ಹೆಚ್ಚು ಮಕ್ಕಳು ದಾಖಲಾಗಿಲ್ಲದಿದ್ದರೂ ತಾಳ್ಮೆಯಿಂದ ಕಾಯಬೇಕೆಂದು ಅದರ ಗುರು ಸಲೀಮುಲ್ಲಾ ಹೇಳುತ್ತಾರೆ. ಬಡ ಮಕ್ಕಳಿಗೆ ಉಚಿತ ಊಟ ಬಟ್ಟೆ ಕೊಟ್ಟು ಮೊದಲು ಮದ್ರಸಾಗಳತ್ತ ಅವರನ್ನು ಸೆಳೆಯಬೇಕು. ನೈಜ ಇಸ್ಲಾಂ ಎಂದರೇನೆಂದು ಅವರಿಗೆ ತಿಳಿಸಿ ವಿದ್ಯಾಭ್ಯಾಸ ಮಾಡಿಸಬೇಕು. ಒಮ್ಮೆ ಮಕ್ಕಳಿಗೆ ತಿಳಿದುಬಿಟ್ಟರೆ ಉಳಿದ ಬದಲಾವಣೆಯೆಲ್ಲ ತಂತಾನೇ ಆಗಿ ಸತ್ಯ ಮಾತ್ರ ವಿಜೃಂಭಿಸುತ್ತದೆ ಎಂಬುದು ಸಲೀಮುಲ್ಲಾರ ನಂಬಿಕೆ. ಅವರ ಮಾತುಗಳಲ್ಲಿ ಹೇಳುವುದಾದರೆ:

‘ಸಂಗೀತ ಮನಸ್ಸನ್ನು ಚಂಚಲಗೊಳಿಸುತ್ತದೆ. ಅದು ಪಾಪಕರ, ನಿಷಿದ್ಧ. ಹಾಗಾಗಿ ಸಂಗೀತಗಾರರು ತಪ್ಪಿತಸ್ಥರು. ಕುರಾನ್ ಸತ್ತ ವ್ಯಕ್ತಿಗೆ ಪೂಜೆ ಮಾಡಿರೆಂದು, ಪ್ರಾರ್ಥನೆ ಸಲ್ಲಿಸಿರೆಂದು ಎಲ್ಲೂ ಹೇಳುವುದಿಲ್ಲ. ನಿಜವಾದ ಮುಸ್ಲಿಮ ಗೋರಿಗೆ ಹೋಗದೆ ಮಸೀದಿಗೆ ಹೋಗಬೇಕು. ಸತ್ತವನನ್ನು ಬೇಡುವುದಲ್ಲ, ಬದಲಿಗೆ ನೇರವಾಗಿ ದೇವರ ಬಳಿಯೇ ಬೇಡಿಕೊಳ್ಳಬೇಕು. ಸೂಫಿ ಇಸ್ಲಾಂ ಅಲ್ಲ. ಅದೊಂದು ತೆರನ ಮಾಟ, ಜಾದೂ. ಅದು ಮೂಢನಂಬಿಕೆ, ವಿಕೃತಿ, ಅಜ್ಞಾನ, ಮೂರ್ಖತನ ಈ ಎಲ್ಲದರ ಮಿಶ್ರಣ. ನಿರಕ್ಷರಿ ಫಕೀರರು ದೊಡ್ಡ ವಿದ್ವಾಂಸರಂತೆ ಮಾತನಾಡುತ್ತಾರೆ, ಆದರೆ ಅವರಿಗೆ ಕುರಾನ್ ಓದಲೂ ಬರುವುದಿಲ್ಲ. ಇದು ಹಿಂದೂ ಧರ್ಮದ ಸೋಂಕಿನಿಂದ ಹುಟ್ಟಿದ್ದು. ನಿಧಾನವಾಗಿಯಾದರೂ ಇದನ್ನು ತೆಗೆದು ಇಸ್ಲಾಮನ್ನು ಶುದ್ಧಗೊಳಿಸಬೇಕು.

ಸೂಫಿಯು ಸ್ವರ್ಗ ನಿನ್ನೊಳಗೇ ಇದೆಯೆನ್ನುತ್ತದೆ. ನಮ್ಮೊಳಗೇ ಸ್ವರ್ಗವೆ? ಇದೊಂದು ಭ್ರಮೆ ಮತ್ತು ಕನಸಷ್ಟೆ. ಕುರಾನಿನಲ್ಲಿ ಈ ಬಗ್ಗೆ ಯಾವ ಪುರಾವೆಯೂ ಇಲ್ಲ. ಮನುಷ್ಯನ ಹೃದಯ ದೇವನಿಗಾಗಿ ಬಹಳ ಸಣ್ಣದು. ಇನ್ನು ಸ್ವರ್ಗದ ಮಾತೆಲ್ಲಿ ಬಂತು? ಸ್ವರ್ಗ ಮನುಷ್ಯನ ಹೊರಗಿದೆ. ಅದು ನಮಗಾಗಿ ದೇವರ ಸೃಷ್ಟಿ.

ನೈಜ ಇಸ್ಲಾಂ ಎಂದರೆ ಶಿಸ್ತು. ಅದು ಮನಸ್ಸಿಗೆ ಬಂದ ಹಾಗೆ ವರ್ತಿಸುವುದಲ್ಲ. ಹೇಗೆ ತಿನ್ನಬೇಕು, ತೊಳೆಯಬೇಕು, ಮೀಸೆ ಹುರಿ ಮಾಡಿಕೊಳ್ಳಬೇಕು ಎಂಬುದೆಲ್ಲರ ಬಗ್ಗೆಯೂ ನೀತಿನಿಯಮಗಳಿವೆ. ಪ್ರವಾದಿಯವರು ಹೇಳಿರುವ ಈ ಕಟ್ಟಳೆಗಳನ್ನೆಲ್ಲ ಅನುಸರಿಸದ ಸೂಫಿಗಳು ಬರಿಯ ಪ್ರೀತಿ ಪ್ರೇಮವೆಂದು ಬಡಬಡಿಸಿದರೆ ಅದು ಅಸಮಂಜಸ.

ನೆನಪಿಡಿ. ತೀವ್ರವಾದಿಯಾದ ತಾಲಿಬಾನ್ ಈಗ ಬರುತ್ತಿದೆ. ಜನರೂ ಈಗಿರುವ ವ್ಯವಸ್ಥೆಯ ಬಗ್ಗೆ ಬೇಸತ್ತಿದ್ದಾರೆ. ಇಂಥ ಸಮಯದಲ್ಲಿ ತಾಲಿಬಾನ್ ಬಂದರೆ ಮತ್ತೆ ಖಲೀಫರ ಆಡಳಿತ ಬರುತ್ತದೆ. ಆಗ ಈ ಎಲ್ಲ ದರ್ಗಾಗಳೂ ಧ್ವಂಸವಾಗುವುದನ್ನು ನೋಡುತ್ತ ನಿಲ್ಲಬೇಕಷ್ಟೇ.

ತರುಣ ಶಿಕ್ಷಕ ಸಲೀಮುಲ್ಲಾ ಸೂಫಿಸಂ ಬಗೆಗೆ ಇಷ್ಟು ನಿಷ್ಠುರವಾಗಿ ಮಾತನಾಡುತ್ತ ಬರಲಿರುವ ಸುದಿನಗಳ ಬಗೆಗೆ ಸಂತಸಪಡುತ್ತ ಇರುವಾಗಲೇ, ಭವಿಷ್ಯದ ಮುನ್ಸೂಚನೆಯೋ ಎಂಬಂತೆ ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ರೆಹಮಾನ್ ಬಾಬಾ ಅವರ ದರ್ಗಾ ಇತ್ತೀಚೆಗೆ ಅರೇಬಿಕ್ ಮದ್ರಸಾದ ವಿದ್ಯಾರ್ಥಿಗಳಿಂದ ಧ್ವಂಸಗೊಳಿಸಲ್ಪಟ್ಟಿತು. ಯಾರಿಗೂ ಪ್ರಾಣಾಪಾಯವಾಗಲಿಲ್ಲ ಅಷ್ಟೆ. ಆದರೂ ತಲೆತಲೆಮಾರುಗಳಿಂದ ಆ ದರ್ಗಾದಲ್ಲಿ ಹಾಡು ಹೇಳಿಕೊಂಡು ಬಂದಿದ್ದ ಕುಟುಂಬ ಮತ್ತು ಸಂತನನ್ನು ನಂಬಿದ್ದ ಪಾಶ್ತೋ ಬುಡಕಟ್ಟು ಜನರು ಇದರಿಂದ ನೆಲೆ ಕಳೆದುಕೊಡ ಅತಂತ್ರ ಸ್ಥಿತಿ ತಲುಪಿ ನೆಮ್ಮದಿ ಕಳೆದುಕೊಂಡಿದ್ದಾರೆ.

********

ಆದರೆ ಲಾಲ್ ಪೇರಿ ಈ ಅಪಾಯದ ಬಗೆಗೆ ಹೆದರುವುದಿಲ್ಲ. ಸಿಂಧ್ ಪ್ರಾಂತ್ಯದ ಜನ ಖಲಂದರ್ ಬಾಬಾನ ಮೇಲಿನ ನಂಬಿಕೆ ಎಂದೂ ಕಳೆದುಕೊಳ್ಳುವುದಿಲ್ಲ ಎನ್ನುತ್ತಾಳೆ. ತನ್ನ ಇಂದಿನ ಕರ್ತವ್ಯವೆಂದರೆ ಖಲಂದರ್ ಬಾಬಾ ಹಾಗೂ ಶಾಹ್ ಅಬ್ದುಲ್ ಲತೀಫ್ ಅವರ ದರ್ಗಾ ರಕ್ಷಿಸುವುದೇ ಆಗಿದೆ ಎನ್ನುತ್ತಾಳೆ. ಅವಳ ಪ್ರಕಾರ: ‘ ಈ ಮುಲ್ಲಾಗಳು, ವಹಾಬಿಗಳು, ತಬ್ಲೀಗಿಗಳು, ಕಾನೂನು ಪುಸ್ತಕ ತಿರುವುತ್ತ, ಯಾರ ಗಡ್ಡ ಎಷ್ಟು ಉದ್ದ ಬೆಳೆಸಬೇಕೆಂದು ಕುರಾನಿನಲ್ಲಿ ಹೇಳಿದೆ ಎಂದು ವಾದಿಸುತ್ತಾ ಪ್ರವಾದಿಯವರ ನಿಜವಾದ ಸಂದೇಶ ಮರೆತಿದ್ದಾರೆ. ಸೈತಾನ ಮತ್ತು ಮುಲ್ಲಾ ಇಬ್ಬರೂ ಒಂದೇ.

ಷೆಹ್ವಾನ್ ಷರೀಫ್‌ಗೆ ಸನಿಹದಲ್ಲಿರುವ ಬಿಟ್‌ಷಾದಲ್ಲಿ ಮತ್ತೋರ್ವ ಸೂಫಿ ಗುರು ಶಾಹ್ ಅಬ್ದುಲ್ ಲತೀಫ್ ಅವರ ದರ್ಗಾ ಇದೆ. ಸಂತರ ಒಂದು ಹಾಡು ಲಾಲ್‌ಫೇರಿಯ ಮಾತುಗಳನ್ನೇ ಧ್ವನಿಸುತ್ತದೆ. ಅದು ಹೀಗಿದೆ:
‘ನಿನ್ನನ್ನು ಪಂಡಿತನೆಂದೇಕೆ
ಕರೆದುಕೊಳ್ಳುವೆ ಓ ಮುಲ್ಲಾ?

ಶಬ್ದಗಳ ಗೊಂಡಾರಣ್ಯದಲ್ಲಿ
ಕಳೆದುಹೋಗಿರುವೆ.
ಅಸಂಬದ್ಧ ಮಾತುಗಳನಾಡುತ್ತ
ನಿನ್ನನ್ನೇ ಪೂಜಿಸಿಕೊಳ್ಳುತ್ತಿರುವೆ.
ಕಣ್ತೆರೆದು ದೇವರನ್ನು ಅರಸುವ ಬದಲು
ಧೂಳಿನ ರಾಶಿಗೆ ಹಾರಿ ಬೀಳುತ್ತಿರುವೆ.
ನಾವು ಸೂಫಿಗಳು
ಪವಿತ್ರ ಕುರಾನಿನ ಮಿದು ಮಾಂಸ ಪಡೆದಿದ್ದೇವೆ.
ನೀವು ನಾಯಿಗಳು ಕಚ್ಚಾಡುತ್ತಿದ್ದೀರಿ
ಪರಸ್ಪರ ಕಿತ್ತೆಳೆಯುತ್ತಿದ್ದೀರಿ
ಒಣ ಎಲುಬು ಕಡಿಯುವ ಅವಕಾಶ ಸಿಗಲೆಂದು.. ‘

ಪಾಕಿಸ್ತಾನದ ವಾಯವ್ಯ ಪ್ರಾಂತದ ಸೂಫಿ ಸಂತ, ಪಾಶ್ತೋ ಬುಡಕಟ್ಟಿನ ಕವಿ, ರೆಹಮಾನ್ ಬಾಬಾ ಹಿಂಸೆಯನ್ನು ವಿರೋಧಿಸುವ, ಸಹಿಷ್ಣುತೆಯ ಕುರುಹಾಗಿರುವ ಸೂಫಿಯ ಸಾರವನ್ನೇ ತಮ್ಮ ಒಂದು ಉಕ್ತಿಯಲ್ಲಿ ಹೇಳಿಬಿಡುತ್ತಾರೆ:

ನಾನೊಬ್ಬ ಪ್ರೇಮಿ, ಪ್ರೇಮದ ವ್ಯಾಪಾರಿ.
ಹೂವನ್ನು ಬಿತ್ತು: ನಿನ್ನ ಸುತ್ತ ಉದ್ಯಾನ ಮೈದಳೆಯುತ್ತದೆ.
ಮುಳ್ಳನ್ನು ಬಿತ್ತದಿರು: ಅವು ನಿನ್ನ ಕಾಲನ್ನೇ ಚುಚ್ಚುತ್ತವೆ.
ನಮದೆಲ್ಲ ಒಂದೇ ದೇಹ.
ಅವಗೆ ಕೊಡುವ ಹಿಂಸೆ: ನಮ್ಮ ದೇಹಕ್ಕೆ ಗಾಯ.

ಷೆಹ್ವಾನ್ ಷರೀಫ್ ಮತ್ತೊಬ್ಬ ಸೂಫಿ ಕವಿ, ಮುಘಲ್ ಯುವರಾಜ ದಾರಾ ಶುಕೋನ ಗುರು ಮಿಯಾ ಮೀರ್‌ನ ಊರೂ ಹೌದು. ಹದಿನೇಳನೇ ಶತಮಾನದ ದಾರಾ ಶುಕೋ ಹಿಂದೂ ಮುಸ್ಲಿಂ ಬಾಂಧವ್ಯಕ್ಕಾಗಿ ಇನ್ನಿಲ್ಲದಂತೆ ಶ್ರಮಿಸಿದ, ಸೋದರ ಔರಂಗಜೇಬನಿಂದ ಹತ್ಯೆಗೀಡಾದ ಸೂಕ್ಷ್ಮ ಮನದ ಕವಿ. ಆತ ಹೀಗೆ ಬರೆಯುತ್ತಾನೆ:

ಓ ದೇವರೇ,
ನೀನು ಮೆಕ್ಕಾದ ಕಾಬಾದಲ್ಲಿರುವೆ
ಸೋಮನಾಥದ ಲಿಂಗದಲ್ಲೂ ಇರುವೆ
ಮಠದಲ್ಲಿರುವೆ
ಪಡಖಾನೆಯಲ್ಲೂ ಇರುವೆ.

ನೀನು ಒಮ್ಮೆಲೇ
ದೀಪ ಮತ್ತು ಪತಂಗ
ಮದಿರೆ ಮತ್ತು ಬಟ್ಟಲು
ಸಂತ ಮತ್ತು ಮೂರ್ಖ
ಸ್ನೇಹಿತ ಮತ್ತು ಅಪರಿಚಿತ
ಗುಲಾಬಿ ಮತ್ತು ಕೋಗಿಲೆ
ಎಲ್ಲವೂ ಆಗಿರುವೆ.

ಸೂಫಿ ತತ್ವದ ಅನುಯಾಯಿ, ಲಾಲ್ ಪೇರಿಯ ಗುರು ಮತ್ತು ಸ್ನೇಹಿತ ಎಲ್ಲವೂ ಆಗಿರುವ ಸೈನ್ ಫಕೀರ್ ಸೂಫಿಯೆಂದೊಡನೆ ಉತ್ಸಾಹದಿಂದ ಮಾತನಾಡುತ್ತಾನೆ. ಅವನ ಪ್ರಕಾರ, ‘ಸೂಫಿ ವಚನಗಳು, ಕಾವ್ಯಗಳು ಕುರಾನಿನ ಎಲ್ಲ ಮೌಲ್ಯವನ್ನೊಳಗೊಂಡಿವೆ. ಕುರಾನನ್ನು ಅರ್ಥೈಸುವುದು ಸುಲಭವಲ್ಲ. ಹಾಗಾಗಿ ಸಾಧಾರಣ ಮನುಷ್ಯರು ಪ್ರವಾದಿಯ ನಿಜ ಸಂದೇಶ ತಿಳಿದೇ ಇಲ್ಲ. ಸೂಫಿಗಳು ಮಾತ್ರ ಸತ್ಯದ ದಾರಿ ತಿಳಿದಿದ್ದಾರೆ, ಅದೇ ಪ್ರೇಮದ ದಾರಿ.

ಮುಲ್ಲಾಗಳು ವೈಯುಕ್ತಿಕ ಕಾರಣಗಳಿಗಾಗಿ ಪ್ರವಾದಿಯ ಮಾತುಗಳನ್ನು ತಿರುಚುತ್ತಾರೆ. ಅವರಂಥ ಕುರುಡರಿಗೆ ಬೆಳಗುವ ಸೂರ್ಯನೂ ಕಾಣಿಸುವುದಿಲ್ಲ. ಅದೊಂದು ಕ್ರೂರ ಜಾತಿ. ಅವರಿಗೆ ಮಾನವ ದೌರ್ಬಲ್ಯಗಳು ಅರ್ಥವಾಗುವುದಿಲ್ಲ. ಈ ಪ್ರಪಂಚದಲ್ಲಿ ಎಲ್ಲರೂ ಪಾಪ ಮಾಡುತ್ತಾರೆ. ಮಾನವ ದೌರ್ಬಲ್ಯವೆಂದರೇನೆಂದು ತಿಳಿದ ಸೂಫಿಗಳು ಅದಕ್ಕೆ ಕ್ಷಮೆ ನೀಡುತ್ತಾರೆ. ಜನ ಕ್ಷಮಿಸುವವರನ್ನು ಮೆಚ್ಚುತ್ತಾರೆ.

ಜಿಯಾ ಲತೀಫ್. ಲತೀಫ್ ಬಾಬಾ ಹೇಳುವ ಹಾಗೆ,

ಒಳ್ಳೆಯ ವಸ್ತು ವಿಷಯಗಳೊಂದಿಗೆ ಮಾತ್ರ ವ್ಯವಹರಿಸು.
ಕಲ್ಲಿದ್ದಲು ಖರೀದಿಸಿದರೆ ಮೈಯೆಲ್ಲ ಕರಿಧೂಳು
ಪುನುಗಿನ ವ್ಯವಹಾರದಲ್ಲಿ ಪರಿಮಳ ಎಲ್ಲವೂ.

ವಹಾಬಿಗಳು ಲಾಭಕ್ಕಾಗಿ ನಂಬಿಕೆಯನ್ನು ಮಾರುವ ವ್ಯಾಪಾರಿಗಳು. ನರಕದ ಬೆಂಕಿ ಹರಡುವ ಅವರು ನಿಜವಾದ ಮುಸ್ಲಿಮರಲ್ಲ. ಆದರೆ ಸೂಫಿ ಎಲ್ಲರನ್ನೂ ಪ್ರೀತಿಸುತ್ತದೆ - ಧರ್ಮಭ್ರಷ್ಟ, ಜಾರಿದ ಹೆಣ್ಣು, ಬಡವ, ಸಿರಿವಂತ, ಮುಸ್ಲಿಂ, ಮುಸ್ಲಿಂ ಅಲ್ಲದವ ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ.

ಮುಲ್ಲಾಗಳು ಜಿಹಾದ್‌ಗೆ ಕತ್ತಿ ಬಳಸುತ್ತಾರೆ. ಆದರೆ ನಿಜವಾದ ಜಿಹಾದ್ ನಡೆಯಬೇಕಾದದ್ದು ನಮ್ಮೊಳಗೆ. ನಮ್ಮ ಆಸೆಗಳ ಮೇಲೆ ಜಯ ಸಾಧಿಸಲು ಹೋರಾಡಬೇಕು. ದುಷ್ಟತನ ನಮ್ಮ ಹೃದಯದೊಳಗೆ ಸೃಷ್ಟಿಸುವ ನರಕದ ವಿರುದ್ಧ ಹೋರಾಡಬೇಕು. ಕತ್ತಿಯಿಂದ ಮಾಡುವ ಜಿಹಾದ್ ಕೀಳು ಮಟ್ಟದ್ದು. ನಿನ್ನೊಳಗೆ ನೀನೇ ಹೋರಾಡುವುದು ನಿಜವಾದ ಜಿಹಾದ್. ಲತೀಫ್ ಬಾಬಾ ಹೇಳಿದಂತೆ ಕಾಫಿರರನ್ನು ಕೊಲ್ಲಬೇಡ. ಮೊದಲು ನಿನ್ನ ಅಹಂನ್ನು ಕೊಲ್ಲು.

ಒಂದು ನೆನಪಿಡು: ಎಲ್ಲವೂ ನಿನ್ನೊಳಗೇ ಇದೆ - ಸ್ವರ್ಗ ಮತ್ತು ನರಕ.

*******

ಹೀಗೆ ಭವಿಷ್ಯದ ಬಗೆಗೆ ಆಶಾವಾದಿಯಾದ ಫಕೀರ್ ಅಜ್ಜ ಮುಂದುವರೆದು, ‘ಒಳ್ಳೆಯ ಕೆಲಸವು ಒಳ್ಳೆಯ ಪ್ರತಿಫಲ ನೀಡುತ್ತದೆ. ಕೆಟ್ಟ ಕೆಲಸವು ಕೆಟ್ಟ ಫಲ ನೀಡುತ್ತದೆ. ಈ ವಹಾಬಿ ಜನ ಈಗ ತಮ್ಮನ್ನೇ ತಾವು ಕೊಂದುಕೊಳ್ಳುತ್ತಿದ್ದಾರೆ. ಇಸ್ಲಾಮಾಬಾದ್‌ನಲ್ಲಿ, ಸ್ವಾತ್‌ನಲ್ಲಿ, ಆಫ್ಘನಿಸ್ತಾನದಲ್ಲಿ, ಇರಾಕಿನಲ್ಲಿ ಈಗ ಇದೇ ಆಗುತ್ತಿದೆ. ಅವರ ಅಂತ್ಯದ ಶುರು ಇದು.

ಸೈನ್ ಫಕೀರಜ್ಜನ ಭರವಸೆಯಂತೆ ‘ಅವರೇ ಅಂತ್ಯ ಕಾಣುತ್ತಾರೋ? ಲಾಲ್ ಫೇರಿಯ ಭಯವೇ ನಿಜವಾಗುವುದೋ? ಧಾರ್ಮಿಕ ಶುದ್ಧತೆಯ ಬಗೆಗೆ ಉಗ್ರನಿಲುವು ಹೊಂದಿದ ಸಂಪ್ರದಾಯವಾದಿಗಳ ಕೈ ಮೇಲಾಗುವುದೋ? ಸಹಿಷ್ಣುತೆಯ ಕುರುಹಾದ ಸೂಫಿ ವಿಜೃಂಭಿಸುವುದೋ?

ಉತ್ತರ ಕಾಲನ ಕೈಯಲ್ಲಿ..

- ಡಾ. ಎಚ್.ಎಸ್.ಅನುಪಮಾ


ಚಿಂತೆ

-ನಾಮದೇವ ಡಸಾಲ
ಕನ್ನಡಕ್ಕೆ : ಡಾ ಎಚ್ ಎಸ್ ಅನುಪಮಾ


ನಮ್ಮನ್ನು ನಾವೇ ಪ್ರೀತಿಸತೊಡಗಿ ಮದುವೆಯಾಗಲು ಅವಕಾಶವಿರಲಿಲ್ಲ
ಆಗಸದ ಕನಸಿನ ವ್ಯಾಪಾರಿಗಳೋ ತಮ್ಮ ಹಡಗುಗಳಿಗೆ ಲಂಗರು ಹಾಕಿಬಿಟ್ಟಿದ್ದರು
ನಡೆಯಲು ದಾರಿ ಸರಳವಿತ್ತು,
ಆದರೆ ಸುಖ ಸ್ವೇಚ್ಛೆಯ ಮಾಟದ ಒಡವೆ ಕಳಚಲಾಗದೆ ಉಳಿಯಿತು

ಆತ್ಮವು ಅಂತರಾಳದ ಸ್ವಮರುಕದ ಹಂಗಿನಿಂದ ಹೊರಬರುತ್ತಿದೆ
ಪ್ರತಿ ದಿನವೂ ಭವಿಷ್ಯದ ತುಟಿಗಳ ಮೇಲೆ ಮಂದಹಾಸ ಮೂಡಿಸುತ್ತದೆ
ದೇವಸೃಷ್ಟಿಯ ಈ ನರಕದೊಳಗೆ ಬಂದಿಯಾಗಲು ಇಷ್ಟವಿಲ್ಲ ನನಗೆ
ಅಮೃತ ಹೊತ್ತ ಮೋಡಗಳು ಅಮರತ್ವದ ಮಳೆ ಸುರಿಸುವವೋ ಇಲ್ಲವೋ
ಮೈಮರೆತು ಇಲ್ಲೇ ಗೋರಿಯಾಗಲಾರೆ

ನನ್ನ ಮಟ್ಟಿಗೆ ಈಗಲೂ ಅದೊಂದೇ
ನಾಳಿನ ರೊಟ್ಟಿಯ ಚಿಂತೆ..

Tuesday, February 28, 2012

ರಸವಿದ್ಯೆನೀನು ನನ್ನಂತರಂಗದ
ಒಳವಲಯಕ್ಕೆ ಸೇರಿರುವೆ

ನಿನ್ನ ಕಣ್ಣನೋಟದ ನೆರಳಲ್ಲೇ
ಸ್ಪರ್ಶಸುಖದ ತುದಿಬಿಂದು ತಲುಪುವೆ

ಬಿರಿದ ಚೈತ್ರಮಾಸದ ಪುಷ್ಪಗಳು
ಕೊನೆ ಮೊದಲಿಲ್ಲದ ನಿರಾಶೆ
ಪರದೇಶಿ ನನ್ನುಸಿರು
ಅನಂತದಲ್ಲೆಲ್ಲೋ ಸುತ್ತುತ್ತಿರುವಾಗ
ನೋವಿನ ಪುಟ್ಟ ಜಗತ್ತನ್ನು ಮಾತ್ರ ತೋರಿಸುತ್ತಿರುವೆ..

ನಿನ್ನ ಸೂಕ್ಷ್ಮ ದೇಹ ಎಷ್ಟು ಮನಸೆಳೆಯುತ್ತಿದೆ ಎಂದರೆ
ನನ್ನ ಪುಟ್ಟ ಆತ್ಮ
ಸಾವಿಲ್ಲದ ಮಳೆಯಲ್ಲಿ ತೋಯ್ದುಹೋಗಿದೆ..

- ಡಸಾಲ ನಾಮದೇವ
ಕನ್ನಡಕ್ಕೆ : ಡಾ ಎಚ್ ಎಸ್ ಅನುಪಮಾ

ದುಃಖ ಹಚ್ಚಿದ ದೀಪ

ಅಹ್ಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ಗುಜರಾತ್ ನರಮೇಧದ ಹತ್ತನೆ ವರ್ಷದ ದಿನದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಘಟನೆಯಲ್ಲಿ ಬದುಕುಳಿದ ಬಾಲಕಿಯೊಬ್ಬಳು ಕ್ಯಾಂಡಲ್ ದೀಪ ಬೆಳಗಿ ಮೃತರಿಗೆ ಸಂತಾಪ ಸೂಚಿಸುತ್ತಿರುವುದು.

ಅಹ್ಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ಗುಜರಾತ್ ನರಮೇಧದ ಹತ್ತನೆ ವರ್ಷದ ದಿನದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಘಟನೆಯಲ್ಲಿ ಬದುಕುಳಿದ ಬಾಲಕಿಯೊಬ್ಬಳು ಕ್ಯಾಂಡಲ್ ದೀಪ ಬೆಳಗಿ ಮೃತರಿಗೆ ಸಂತಾಪ ಸೂಚಿಸುತ್ತಿರುವುದು.


ಜನವಿರೋಧಿ ಗೋಹತ್ಯಾ ನಿಷೇಧ ಕಾಯ್ದೆಯ ಕಾರ್ಮೋಡಗಳು ಕವಿಯುತ್ತಿವೆ

ಸುರೇಶ ಭಟ್ಟ


ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾರತೀಯ ಜನತಾ ಪಕ್ಷದ ಒಳಜಗಳಗಳೇನೇ ಇದ್ದರೂ ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ನಿರ್ಮಾಣದ ರಹಸ್ಯ ಕಾರ್ಯಸೂಚಿಯಂತೂ ಸಾಂಗೋಪಾಂಗವಾಗಿ ಮುಂದುವರಿಯುತ್ತಿದೆ ಎನ್ನುವುದಕ್ಕೆ ಹಲವು ಪುರಾವೆಗಳನ್ನು ಕೊಡಬಹುದು.ಅಲ್ಪ ಸಂಖ್ಯಾತರ ಮೇಲೆ ಮತ್ತು ಅವರ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ, ನೈತಿಕ ಪೊಲೀಸ್ ಗಿರಿ, ಶಾಲೆಗಳಲ್ಲಿ ಭಗವದ್ಗೀತೆಯ ಪಠಣ, ಆಯಕಟ್ಟಿನ ಇಲಾಖೆಗಳ ಕೇಸರೀಕರಣ, ಶಿಕ್ಷಣದ ಕೇಸರೀಕರಣ, ಜಾನುವಾರು ಹತ್ಯಾ ನಿಷೇಧ ಕಾಯ್ದೆ ಮುಂತಾದ ಕಾರ್ಯಕ್ರಮಗಳು ಇದೇ ಕಾರ್ಯ ಸೂಚಿಗೆ ಅನುಗುಣವಾಗಿ ನಡೆಯುತ್ತಿವೆ. ದುರಂತವೆಂದರೆ ಸಂಘಪರಿವಾರ ಧರ್ಮವನ್ನು ಕೇವಲ ರಾಜಕೀಯ ಗದ್ದುಗೆಗೇರುವ ಉದ್ದೇಶಕ್ಕಾಗಿ ಬಳಸುತ್ತಿದೆಯೆಂಬ ಸತ್ಯ ದರ್ಶನ ಹೆಚ್ಚಿನವರಿಗೆ ಇನ್ನೂ ಆಗಿಲ್ಲ. ಈ ದೇಶದ ಪ್ರಜೆಗಳೇ ಆಗಿರುವ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಾ ಅಂತಿಮವಾಗಿ ಅವರು ಮತ್ತೆಂದೂ ತಲೆಎತ್ತದಂತೆ ಮಾಡಿ ಅವರನ್ನು ಭವಿಷ್ಯದ ಹಿಂದೂ ರಾಷ್ಟ್ರದಲ್ಲಿ ಎರಡನೆ ದರ್ಜೆಯ ಗುಲಾಮ ಪ್ರಜೆಗಳಾಗಿಸುವ ಅಥವಾ ದೇಶ ಬಿಟ್ಟು ತೊಲಗಿಸುವ ಹುನ್ನಾರ ಜಾರಿಯಲ್ಲಿದೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ.

2002ರ ನರಮೇಧದ ನಂತರ ಗುಜರಾತ್‌ನ ಅಲ್ಪಸಂಖ್ಯಾತರು ಅಕ್ಷರಶಃ ಎರಡನೆ ದರ್ಜೆಯ ಪ್ರಜೆಗಳಾಗಿಬಿಟ್ಟಿದ್ದಾರೆ. ಬಿಜೆಪಿ ಆಡಳಿತವಿರುವ ಕರ್ನಾಟಕ ಮತ್ತು ಮಧ್ಯಪ್ರದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನವಿಟ್ಟು ನೋಡಿದರೆ ಅವೆರಡೂ ಗುಜರಾತ್ ಹಾದಿಯನ್ನೇ ಹಿಡಿದಿರುವುದನ್ನು ಕಾಣಬಹುದು. ಮಧ್ಯ ಪ್ರದೇಶದ ವಿದ್ಯಮಾನಗಳನ್ನು ನೋಡೋಣ. ಭೋಪಾಲದ ಪೊಲೀಸ್ ಮುಖ್ಯಸ್ಥರು ಕಳೆದ ವರ್ಷ ಎಲ್ಲಾ ಪೊಲೀಸ್ ಠಾಣೆಗಳಿಗೆ ಒಂದು ರಹಸ್ಯ ಸುತ್ತೋಲೆಯನ್ನು ಕಳುಹಿಸಿ ಅವರವರ ಕಾರ್ಯವ್ಯಾಪ್ತಿ ಪ್ರದೇಶಗಳಲ್ಲಿರುವ ಕ್ರೈಸ್ತ ಸಂಸ್ಥೆಗಳ ಬಗ್ಗೆ ನಾನಾ ತೆರನಾದ ಮಾಹಿತಿಗಳನ್ನು ಕಲೆಹಾಕುವಂತೆ ಹೇಳಿದ್ದರು.

ಸರಕಾರಿ ಶಾಲೆಗಳಲ್ಲಿ ‘ಸೂರ್ಯ ನಮಸ್ಕಾರ’ ವಿಧಿಯನ್ನು 2007ರಷ್ಟು ಹಿಂದೆಯೇ ಕಡ್ಡಾಯವಾಗಿಸಲಾಗಿದೆ.2009ರಲ್ಲಿ ಹೊರಡಿಸಲಾದ ಮತ್ತೊಂದು ಸರ್ವಾಧಿಕಾರಿ ಆದೇಶದ ಪ್ರಕಾರ ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಮಧ್ಯಾಹ್ನದ ಬಿಸಿಯೂಟಕ್ಕೆ ಮೊದಲು ಸಂಸ್ಕೃತದ ‘ಭೋಜನ ಮಂತ್ರ’ವೊಂದನ್ನು ಪಠಿಸಬೇಕಾಗಿದೆ.ಎಲ್ಲಾ ಮಕ್ಕಳೂ ಕಡ್ಡಾಯವಾಗಿ ‘ಗೀತಾ ಸಾರ’ವನ್ನು ಕಲಿಯಬೇಕೆಂಬ ಆದೇಶವೊಂದು ಕಳೆದ ವರ್ಷ ಹೊರಬಿದ್ದಿದೆ.ಸಂಘ ಪರಿವಾರದ ವಿವಿಧ ಸಂಘಸಂಸ್ಥೆಗಳಿಗೆ ಸರಕಾರದ ವತಿಯಿಂದ ಜಮೀನುಗಳನ್ನು ವಿತರಿಸಲಾಗಿದೆ.ಮಧ್ಯಪ್ರದೇಶದ ಸರಕಾರಿ ನೌಕರರೆಲ್ಲರೂ ಆರೆಸ್ಸೆಸ್‌ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಖುದ್ದು ಅಲ್ಲಿನ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾಣರೇ ಬಹಿರಂಗವಾಗಿ ಆಜ್ಞಾಪಿಸುತ್ತಿದ್ದಾರೆ.

ಅನೇಕ ಸರಕಾರಿ ಕಾರ್ಯಕ್ರಮಗಳಿಗೆ ಹಿಂದೂ ಧಾರ್ಮಿಕ ಆಚರಣೆಗಳ ಹೆಸರನ್ನು ನೀಡಲಾಗುತ್ತಿದೆ. ಕೆಲವು ತಿಂಗಳ ಹಿಂದೆಯೇ ರಾಷ್ಟ್ರಪತಿಯವರಿಗೆ ಕಳುಹಿಸಲಾಗಿದ್ದ ಜಾನುವಾರು ಹತ್ಯಾ ನಿಷೇಧ ಮಸೂದೆಗೆ ಕೆಲವು ತಿದ್ದುಪಡಿಗಳನ್ನು ಮಾಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಯಿತು. ಆ ಮೇರೆಗೆ ಮಸೂದೆಯ ವ್ಯಾಪ್ತಿಯಿಂದ ಎಮ್ಮೆಯ ಸಂತತಿಗಳನ್ನು ಹೊರಗಿಡುವುದು ಸೇರಿದಂತೆ ಇನ್ನಿತರ ಕೆಲವು ತಿದ್ದುಪಡಿಗಳನ್ನು ಮಾಡಿ, ಅದಕ್ಕೆ ರಾಷ್ಟ್ರಪತಿಯವರ ಅಂಕಿತ ಪಡೆದುಕೊಂಡ ನಂತರ ಇದೀಗ 2012ರಿಂದ ‘ಗೋವಂಶ ವಧಾ ಪ್ರತಿಷೇಧ’ ಕಾಯ್ದೆ ಜಾರಿಗೆ ಬಂದಿದೆ.ಮಧ್ಯಪ್ರದೇಶದ ಈ ವಿದ್ಯಮಾನಗಳನ್ನು ಕರ್ನಾಟಕದೊಂದಿಗೆ ಹೋಲಿಸಿ ನೋಡಿದಾಗ ಆರೆಸ್ಸೆಸ್‌ನ ರಹಸ್ಯ ಕಾರ್ಯಸೂಚಿಯ ಅನುಷ್ಠಾನದ ವಿಷಯದಲ್ಲಿ ಅವೆರಡರ ನಡುವೆ ಇರುವ ಸಾಮ್ಯಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.

ಕೆಲವು ಅಂಶಗಳಲ್ಲಿ ಮಧ್ಯಪ್ರದೇಶವೇ ಮುಂದಿರುವುದಕ್ಕೆ ಕರ್ನಾಟಕ ಬಿಜೆಪಿಯ ಆಂತರಿಕ ಕಿತ್ತಾಟಗಳೇ ಕಾರಣವಿರಬಹುದು. ಆದರೂ ‘ಕೇಶವ ಕೃಪಾ’ದ ಮೇಲುಸ್ತುವಾರಿಯಲ್ಲಿ ಕರ್ನಾಟಕದಲ್ಲೂ ಆರೆಸ್ಸೆಸ್ ಕಾರ್ಯ ಸೂಚಿಯ ಅಂಶಗಳು ಒಂದೊಂದಾಗಿ ಕಾರ್ಯ ಗತಗೊಳ್ಳುತ್ತಿರುವುದು ನಿರ್ವಿವಾದ. ಕಳೆದ ವರ್ಷ ಕರ್ನಾಟಕ ಸರಕಾರ ಕೂಡ ಜಾನುವಾರು ಹತ್ಯಾ ನಿಷೇಧ ಕಾಯ್ದೆಯೊಂದನ್ನು ಜಾರಿಗೆ ತರಲುದ್ದೇಶಿಸಿತ್ತು. ಇದಕ್ಕೆ ವ್ಯಾಪಕ ಜನಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಯವರಿಗೆ ಕಳುಹಿಸಿಕೊಟ್ಟಿದ್ದರು. ಈಗ ಇದಕ್ಕೂ ಮಧ್ಯಪ್ರದೇಶದ ಮಾದರಿಯಲ್ಲೇ ಕೆಲವು ತಿದ್ದುಪಡಿಗಳನ್ನು ಮಾಡಿದರೆ ರಾಷ್ಟ್ರಪತಿಯವರ ಅಂಗೀಕಾರ ದೊರೆಯಲಿದೆಯೆಂದು ವರದಿಯಾಗಿದೆ.

ಇತ್ತೀಚೆಗೆ ತುಮಕೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು ‘‘ರಾಷ್ಟ್ರ ಪತಿಯವರ ಸಲಹೆ ಪ್ರಕಾರ ‘ಎಮ್ಮೆ’ಯನ್ನು ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗುವುದು ಮತ್ತು ಇನ್ನಿತರ ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾಡಿ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು’’ ಎಂದು ತಿಳಿಸಿದ್ದಾರೆ. ಮಾತ್ರವಲ್ಲ ರಾಜ್ಯದಲ್ಲೊಂದು ಗೋಸೇವಾ ಆಯೋಗವನ್ನು ರಚಿಸಲಾಗುವುದೆಂದೂ ಹೇಳಿದ್ದಾರೆ.ಆದುದರಿಂದ ಕರ್ನಾಟಕದ ಪರಿಷ್ಕೃತ ಮಸೂದೆ ಕೂಡಾ ಮಧ್ಯ ಪ್ರದೇಶದ ‘ಗೋವಂಶ ವಧಾ ಪ್ರತಿಷೇಧ’ ಕಾಯ್ದೆಯ ಮಾದರಿಯಲ್ಲೇ ರೂಪುಗೊಳ್ಳ ಲಿದೆ ಎಂದು ಧಾರಾಳವಾಗಿ ಅರ್ಥೈಸಿಕೊಳ್ಳ ಬಹುದಾಗಿದೆ.

ಮಧ್ಯಪ್ರದೇಶದ ಕಾಯ್ದೆಯಡಿ ದನ, ಕರುಗಳ ವಧೆ ಅಥವಾ ಅವುಗಳ ಮಾಂಸವನ್ನು ಸಾಗಾಟ ಮಾಡುವುದು ಅಥವಾ ಇರಿಸಿಕೊಳ್ಳುವುದು ಅಪರಾಧವಾಗುತ್ತದೆ.ಇದಕ್ಕೆ ಕನಿಷ್ಠ 7ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ವಿಪರ್ಯಾಸವೆಂದರೆ ಪೂಜಾಕೇಂದ್ರವೊಂದನ್ನು ಧ್ವಂಸಗೊಳಿಸುವವರಿಗೆ ಅಥವಾ ಹಾನಿ ಉಂಟುಮಾಡುವವರಿಗೆ ಅಥವಾ ಅಪವಿತ್ರಗೊಳಿಸುವವವರಿಗೆ ಐಪಿಸಿ ಕಲಮು 295ರ ಪ್ರಕಾರ ಸಿಗುವುದು ಗರಿಷ್ಠ 2ವರ್ಷಗಳ ಶಿಕ್ಷೆ ಮಾತ್ರ. ಹೊಸ ಕಾಯ್ದೆ ಜಾರಿಗೊಂಡ ಬಳಿಕ ಮಧ್ಯಪ್ರದೇಶದ ಮುಸಲ್ಮಾನರ ಮೇಲೆ ಹೆಚ್ಚೆಚ್ಚು ಅತ್ಯಾಚಾರಗಳು ನಡೆಯಲಾರಂಭಿಸಿವೆ. ಇತ್ತೀಚೆಗೆ ದನ ಸಾಗಾಟ ಮಾಡಿದ ಮುಸ್ಲಿಂ ಪ್ರಜೆಯೊಬ್ಬನನ್ನು ಹಿಡಿದು, ಥಳಿಸಿ, ಗಡ್ಡ ಮೀಸೆಗಳನ್ನು ಅರ್ಧ ಬೋಳಿಸಿ ಮೆರವಣಿಗೆ ಮಾಡಲಾಯಿತು. ಈ ಕಾಯ್ದೆಯ ಹಿಂದೆ ಏನು ದುರುದ್ದೇಶ ಅಡಗಿದೆ ಎನ್ನುವುದು ಇದರಿಂದ ಸ್ಪಷ್ಟ ವಾಗುತ್ತದೆ.

ಕಾಯ್ದೆಯಲ್ಲಿ ಮತ್ತೊಂದು ಕಳವಳಕಾರಿ ಅಂಶವೂ ಇದೆ. ಯಾವುದೇ ಒಂದು ಜಾಗದಲ್ಲಿ ಅಪರಾಧ ನಡೆದಿದೆ ಅಥವಾ ನಡೆಯುತ್ತಿದೆ ಅಥವಾ ನಡೆಯುವ ಸಾಧ್ಯತೆಗಳಿವೆ ಎಂದು ನಂಬಲು ಕಾರಣವಿದ್ದರೆ ಒಬ್ಬ ಸಾಮಾನ್ಯ ಹೆಡ್ ಕಾನ್ಸ್‌ಟೇಬಲ್ ಅಥವಾ ‘ನ್ಯಾಯಸಮ್ಮತ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಯಾವನೇ ವ್ಯಕ್ತಿ’ ಅಂತಹ ಜಾಗಕ್ಕೆ ಪ್ರವೇಶಿಸಬಹುದಾಗಿದೆ ಮತ್ತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ. ಇಲ್ಲಿ ವೈಯಕ್ತಿಕ ನಿರ್ಧಾರಗಳ ಮೂಲಕ ಕಾಯ್ದೆಯ ದುರುಪಯೋಗಕ್ಕೆ ಎಷ್ಟೊಂದು ವಿಪುಲ ಅವಕಾಶಗಳನ್ನು ಒದಗಿಸಲಾಗಿದೆ ಎಂಬುದನ್ನು ಪ್ರಜ್ಞಾವಂತ ಓದುಗರೇ ನಿರ್ಧರಿಸಬಹುದು.

ಬಿಜೆಪಿ ಆಡಳಿತವಿರುವಲ್ಲೆಲ್ಲ ನ್ಯಾಯಸಮ್ಮತ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಯಾವನೇ ವ್ಯಕ್ತಿ ಯಾರಾಗಿರುತ್ತಾರೆ ಎಂಬುದನ್ನು ಬಿಡಿಸಿ ಹೇಳಬೇಕಾದ ಅಗತ್ಯವೇ ಇಲ್ಲ.ಕೇಸರಿ ಪಾಳೆಯದ ಆಜ್ಞಾವರ್ತಿಯಾಗಿರುವ ಯಾವನೇ ಕಾನೂನುಪಾಲಕ ಅಥವಾ ಅಧಿಕೃತ ವ್ಯಕ್ತಿಯೂ ನಿರ್ದಿಷ್ಟ ಜಾಗವೊಂದರಲ್ಲಿ ಅಪರಾಧ ನಡೆಯುತ್ತಿದೆ/ನಡೆಯುವ ಸಾಧ್ಯತೆಗಳಿವೆ ಎಂದು ನಿರ್ಧರಿಸಿ ಅಲ್ಲಿಗೆ ದಾಳಿಮಾಡಬಹುದಾಗಿದೆ. ಅಂತಹ ಸಂದರ್ಭಗಳಲ್ಲಿ ಮನೆಯ ಫ್ರಿಜ್‌ನಲ್ಲಿ ಅಥವಾ ಹೊಟೇಲ್‌ನ ಫ್ರೀಜರ್‌ನಲ್ಲಿ ಅಥವಾ ಒಲೆಯ ಮೇಲಿರುವ ಮಾಂಸ ದನದ್ದಲ್ಲ,ಎಮ್ಮೆಯದು ಎಂದು ತೋರಿಸಿಕೊಡುವ ಆಸ್ಪದವಾದರೂ ಮಾಲಕನಿಗೆ ಎಲ್ಲಿರುತ್ತದೆ? ಈ ಕಾಯ್ದೆಯ ಪ್ರಕಾರ ಆರೋಪವನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡುವ ಹೊಣೆಗಾರಿಕೆಯೂ ಪ್ರಾಸಿಕ್ಯೂಷನ್‌ನದಲ್ಲ; ಆರೋಪಿಯೇ ತಾನು ನಿರ್ದೋಷಿ ಎಂದು ಸಾಬೀತುಪಡಿಸಬೇಕಾಗುತ್ತದೆ.

ಇಲ್ಲಿ ಜನರು ಒಂದೆರಡು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು.ಮನುಷ್ಯರು ಕೇವಲ ದನದ ಹಾಲನ್ನಷ್ಟೇ ಕುಡಿಯುವುದಲ್ಲ; ಆಡು, ಎಮ್ಮೆ, ಒಂಟೆ,ಯಾಕ್‌ಗಳ ಹಾಲನ್ನೂ ಕುಡಿಯುವವರಿದ್ದಾರೆ. ಹೀಗಿರುವಾಗ ಸಂತತಿ ರಕ್ಷಣೆಯ ಕಾಯ್ದೆಯನ್ನು ಕೇವಲ ಗೋವುಗಳಿಗಷ್ಟೇ ಯಾಕೆ ಸೀಮಿತಗೊಳಿಸಲಾಗುತ್ತಿದೆ? ಆಡು,ಎಮ್ಮೆ,ಯಾಕ್ ಮೊದಲಾದ ಪ್ರಾಣಿಗಳು ರಕ್ಷಣೆಗೆ ಯೋಗ್ಯವಲ್ಲವೇ?.ದನಗಳ ಸಾಗಾಟ, ಮಾರಾಟ ಮತ್ತು ಮಾಂಸಕ್ಕೆ ಸಂಬಂಧಿಸಿದಂತೆ ಈಶಾನ್ಯ ರಾಜ್ಯಗಳಲ್ಲಾಗಲಿ ಬಿಹಾರ, ಪಶ್ಚಿಮ ಬಂಗಾಳ, ಕೇರಳಗಳಲ್ಲಾಗಲಿ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಇತರ ಕೆಲವು ರಾಜ್ಯಗಳಲ್ಲಿ ತೀರಾ ಕನಿಷ್ಠ ನಿರ್ಬಂಧಗಳಿವೆ. ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿರುವ ರಾಜ್ಯಗಳಲ್ಲಿ ಸಹ 12 ವರ್ಷಕ್ಕೆ ಮೇಲ್ಪಟ್ಟ ಗೊಡ್ಡು ಹಸುಗಳನ್ನು ವಧೆ ಮಾಡುವ ಅವಕಾಶವಿದೆ. ಇದಕ್ಕೆ ತಪ್ಪಿದವರಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣ ಕೂಡ 6 ತಿಂಗಳುಗಳಿಂದ ಹಿಡಿದು ಗರಿಷ್ಠ 2 ವರ್ಷ.

ಹೀಗಿರುವಾಗ ಅದು ಯಾಕೆ ಅತ್ಯಂತ ಕಠೋರ ನಿಬಂಧನೆಗಳಿರುವ ಈ ನೂತನ ಕಾಯ್ದೆಯನ್ನು ಕೇವಲ ಬಿಜೆಪಿ ಆಡಳಿತವಿರುವ ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ, ಕರ್ನಾಟಕಗಳಲ್ಲಿ ಮಾತ್ರ ಜಾರಿಗೊಳಿಸಲಾಗುತ್ತಿದೆ? ಉತ್ತರ ಸ್ಪಷ್ಟವಿದೆ. ಕರ್ನಾಟಕದಲ್ಲಂತೂ ಮಧ್ಯಪ್ರದೇಶದಂತಹ ಕಾಯ್ದೆ ಜಾರಿಯಾಗುವುದಕ್ಕೂ ಮೊದಲೇ ಎಷ್ಟೆಲ್ಲ ದಾಳಿ, ಹಲ್ಲೆ, ಕೊಲೆಗಳು ನಡೆಯುತ್ತಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಂಘಪರಿವಾರದ ಸಂಘಟನೆಗಳು ಜಾನುವಾರು ಸಾಗಾಟಗಾರರ ಮೇಲೆ ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಪರೋಕ್ಷವಾಗಿ ಪೊಲೀಸರ ಮೂಲಕ ದಾಳಿ ನಡೆಸುವುದು ಹೆಚ್ಚುಕಮ್ಮಿ ದಿನನಿತ್ಯದ ವಿದ್ಯಮಾನ ಆಗಿಬಿಟ್ಟಿದೆ.

ಉಡುಪಿಯ ಹಾಜಬ್ಬ ಹಸನಬ್ಬರನ್ನು ಸಾರ್ವಜನಿಕರೆದುರೇ ಬೆತ್ತಲೆ ಮಾಡಿ ಥಳಿಸಲಾಗಿದ್ದರೆ ಅಸಂಖ್ಯಾತ ಜಾನುವಾರು ಸಾಗಾಟಗಾರರು ಪೆಟ್ಟು ತಿಂದು ಕೈಕಾಲು ಮುರಿದುಕೊಂಡಿದ್ದಾರೆ.ಪ್ರಾಣ ಕಳೆದುಕೊಂಡಿರುವವರ ಸಂಖ್ಯೆಯೂ ಬೆಳೆಯುತ್ತಿದೆ. ಈಗಲೇ ಹೀಗಿರುವಾಗ ಇನ್ನು ಈ ಹೊಸ ಕಾಯ್ದೆ ಜಾರಿಗೆ ಬಂದಲ್ಲಿ ಏನೆಲ್ಲ ಅನಾಹುತಗಳಾಗಲಿವೆಯೆಂದು ಊಹಿಸಿಕೊಂಡರೇ ಮೈನಡುಗುತ್ತದೆ.ಇಲ್ಲಿಯವರೆಗೆ ಕರ್ನಾಟಕದ ರೈತಾಪಿ ಜನ ತಮ್ಮಲ್ಲಿರುವ ಗೊಡ್ಡು ಮತ್ತು ಮುದಿ ಅನುಪಯುಕ್ತ ಜಾನುವಾರುಗಳನ್ನು ಹಾಗೂ ಗಂಡು ಕರುಗಳನ್ನು ಮಾರಾಟ ಮಾಡಿ ಹೊಸ ದನ, ಎತ್ತುಗಳನ್ನು ಖರೀದಿಸುವ ಸಂಪ್ರದಾಯವೊಂದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇದರಿಂದಾಗಿ ಕೆಲವರಿಗೆ ಪೌಷ್ಟಿಕ ಆಹಾರ ದೊರೆತರೆ ಸಕ್ಕರೆ, ಚರ್ಮೋದ್ಯಮ ಮತ್ತು ರಫ್ತಿನಂತಹ ಉದ್ದಿಮೆಗಳಿಗೆ ಕಚ್ಚಾ ಸಾಮಗ್ರಿಗಳ ಪೂರೈಕೆಯೂ ನಿರಂತರವಾಗಿ ನಡೆಯುತ್ತಿದೆ. ಈ ಆರ್ಥಿಕ ಸಮತೋಲನವೇ ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆಯನ್ನು ನೂರಾರು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದೆ.

ಈ ಹೊಸ ಕಠೋರ ಕಾಯ್ದೆ ಜಾರಿಗೊಂಡರೆ ಮುದಿ ಜಾನುವಾರುಗಳನ್ನು ಮಾರಾಟ ಮಾಡುವಂತಿಲ್ಲ. ಅವುಗಳನ್ನು ಸರಕಾರಿ ಗೋಶಾಲೆಯಲ್ಲಿರಿಸಬೇಕಾದರೆ ವೆಚ್ಚದ ಹಣವನ್ನೂ ರೈತರೇ ಪಾವತಿಸಬೇಕಂತೆ! ಹೀಗೆ ಬಡ ಮತ್ತು ಮಧ್ಯಮ ವರ್ಗಗಳ ರೈತರ ಪಾಲಿಗೆ ಹೈನುಗಾರಿಕೆ ಒಂದು ನಷ್ಟದಾಯಕ ಉಪಕಸುಬಾಗಿ ಪರಿಣಮಿಸಲಿದೆ. ಹೈನುಗಾರಿಕೆಗೆ ವಿದಾಯ ಹೇಳದೆ ವಿಧಿಯಿಲ್ಲ ಎಂದಾಗಲಿದೆ. ಇದರಿಂದ ಗ್ರಾಮೀಣ ಆರ್ಥಿಕತೆಯ ಮೇಲಾಗುವ ದುಷ್ಪರಿಣಾಮಗಳನ್ನು ಈಗಲೇ ಊಹಿಸಿಕೊಳ್ಳಬಹುದು. ಇಡೀ ಸಮಾಜದಲ್ಲಿ ಭಾರಿ ಅಲ್ಲೋಲಕಲ್ಲೋಲಗಳು ಉಂಟಾಗುವ ಸಾಧ್ಯತೆಗಳೂ ದಟ್ಟವಾಗಿವೆ. ಇಂತಹ ಕಾಯ್ದೆಯೊಂದನ್ನು ಜಾರಿಗೊಳಿಸಲು ಹೊರಟಿರುವ ಕರ್ನಾಟಕದ ಬಿಜೆಪಿ ಸರಕಾರ ಅದೆಷ್ಟು ರೈತ ವಿರೋಧಿ, ದಲಿತ ವಿರೋಧಿ ಹಾಗೂ ಅಲ್ಪಸಂಖ್ಯಾತ ವಿರೋಧಿಯಾಗಿದೆ ಎಂಬುದನ್ನು ತಿಳಿಯಲು ಇಷ್ಟೇ ಸಾಕು.

ಈಗಾಗಲೇ ಮೃದು ಹಿಂದೂತ್ವವಾದಿ ಎಂದು ಕರೆಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ಮೇಲೆ ಹಿಂದೂತ್ವವಾದಿಗಳ ಹಿಡಿತ ಇನ್ನಷ್ಟು ಬಿಗಿಯಾಗಿರುವುದಕ್ಕೆ ಈ ಕಾಯ್ದೆಯೊಂದೇ ಅಲ್ಲ, ಇನ್ನೂ ಅನೇಕ ನಿದರ್ಶನಗಳನ್ನು ಕೊಡಬಹುದು. ಶಾಲೆಗಳಲ್ಲಿ ಗೀತಾ ಬೋಧನೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವವರ ಪಟ್ಟಿಯಲ್ಲಿ ಕೆಲವು ಕಾಂಗ್ರೆಸಿಗರೂ ಇರುವುದು ರಹಸ್ಯವಾಗುಳಿದಿಲ್ಲ. ಬಿಜೆಪಿ ಸರಕಾರಗಳ ಈ ಜನಕಂಟಕ ಕಾಯ್ದೆಗೆ ರೈತರನ್ನೂ ಒಳಗೊಂಡಂತೆ ಬಹುಸಂಖ್ಯಾತ ಜನರ ಬೆಂಬಲವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮಧ್ಯಪ್ರದೇಶದ ಕಾಯ್ದೆಗೆ ಅನುಮೋದನೆ ನೀಡುವ ಮೂಲಕ ಮತ್ತು ಅದೇ ಮಾದರಿಯ ಕರ್ನಾಟಕದ ಕಾಯ್ದೆಗೆ ಅನುಮೋದನೆ ನೀಡಲೊಪ್ಪುವ ಮೂಲಕ ಯುಪಿಎ ಸರಕಾರ ತನ್ನ ಆಷಾಢಭೂತಿತನವನ್ನು ಪೂರ್ತಿಯಾಗಿ ಬಿಚ್ಚಿಟ್ಟಿದೆ.

ನಿಜ ಹೇಳಬೇಕೆಂದರೆ ಇಂತಹದೊಂದು ದಮನಕಾರಿ ಕಾಯ್ದೆಗೆ ಸಮ್ಮತಿ ನೀಡುವ ಮೂಲಕ ಅದು ತನ್ನ ಅಸಲಿ ಜನವಿರೋಧಿ ಮುಖವನ್ನು ತೋರಿಸಿಕೊಂಡಿದೆ. ಜನತೆಗೆ ವಿಶ್ವಾಸದ್ರೋಹ ಬಗೆದಿದೆ. ಲಕ್ಷಾಂತರ ರೈತರನ್ನು ಆತ್ಮಹತ್ಯೆಗೆ ದೂಡಿದ, ಸಾಚಾರ್ ಮತ್ತು ರಂಗನಾಥ ಮಿಶ್ರಾ ವರದಿಗಳನ್ನು ಕಸದ ಬುಟ್ಟಿಗೆಸೆದ, ಮೀಸಲಾತಿಯಿದ್ದರೂ ದಲಿತರಿಗೆ ಅನ್ಯಾಯ ಬಗೆಯುತ್ತಿರುವ ಯುಪಿಎ ಸರಕಾರ ಇನ್ನಾದರೂ ತನ್ನ ಉತ್ತರದಾಯಿತ್ವವನ್ನು ಅರಿತುಕೊಳ್ಳುವುದೇ? ಈ ರೈತವಿರೋಧಿ, ದಲಿತ ವಿರೋಧಿ, ಅಲ್ಪಸಂಖ್ಯಾತ ವಿರೋಧಿ ಕಾಯ್ದೆಯನ್ನು ತಡೆಗಟ್ಟುವಂತಹ ನೈಜ ಜನಪರ ಕೆಲಸವನ್ನು ಮಾಡುವುದೇ? *************

ಆಧಾರ: ಜನವರಿ 2012ರ ಕಮ್ಯೂನಲಿಸಂ ಕಾಂಬ್ಯಾಟ್‌ನಲ್ಲಿ ಜಾವೆದ್ ಆನಂದ್ ಬರೆದಿರುವ ಲೇಖನ‘Violating Sanctity’

ಭರವಸೆಯ ಕಿರಣಗಳು ಗೋಚರಿಸುತ್ತಿವೆ....

ಸನತಕುಮಾರ ಬೆಳಗಲಿ

ಜನಶತ್ರುಗಳು ದುರಾಕ್ರಮಣಕ್ಕೆ ಮುನ್ನುಗ್ಗಿ ಬರುತ್ತಿರುವಾಗ, ಜನಪರ ಸಂಘಟನೆಗಳು ಯಾಕೆ ನಿಷ್ಕ್ರಿಯವಾಗಿವೆ? ಒಡೆದು ಹೋಳಾಗಿವೆ? ಎಂದು ಕಳೆದ ವಾರ ಆತಂಕ ವ್ಯಕ್ತಪಡಿಸಿದ್ದೆ.ಆದರೆ,ಯಾವುದೇ ಕಾರಣಕ್ಕೂ ನಿರಾಸೆಯಾಗಬಾರದು. ಸಮಾನತೆಯ ಭಾರತವನ್ನು ಕಟ್ಟಲು ಸೆಣಸುತ್ತಲೇ ಇರಬೇಕು ಎಂದು ಸ್ಫೂರ್ತಿ ನೀಡುವ ವಿದ್ಯಮಾನಗಳು ಕರ್ನಾಟಕದಲ್ಲಿ ನಡೆದಿವೆ.ಹೋರಾಟಗಳು ಎಂದೂ ಸಾಯುವುದಿಲ್ಲ,ಸೋಲುವುದಿಲ್ಲ.ಆದರೆ ಆಗಾಗ ಹಿನ್ನಡೆಯಾಗುತ್ತದೆ.ಈ ಸೋಲಿನ ನೋವಿನಲ್ಲೂ ಸಾವರಿಸಿಕೊಂಡು ಎದ್ದು ನಿಲ್ಲುವ ಜೀವಪರ ಸಿದ್ಧಾಂತದ ಬದ್ಧತೆ ಪ್ರಗತಿಪರ ಸಂಘಟನೆಗಳ ರಕ್ತದಲ್ಲಿದೆ.ಒಡಕಿನ ಅಂಚಿಗೆ ಬಂದು ನಿಂತಿದ್ದ ರಾಜ್ಯ ರೈತ ಸಂಘದ ಎರಡು ಬಣಗಳು ಮತ್ತೆ ಒಂದುಗೂಡಲು ಮುಂದಾಗಿವೆ. ಚಿತ್ರದುರ್ಗದ ಮುರುಘಾಮಠದ ಶರಣರು ಪುಟ್ಟಣ್ಣಯ್ಯ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಇಬ್ಬರನ್ನೂ ಒಟ್ಟಿಗೆ ಸೇರಿಸಿ, ಅವರ ನಡುವಿನ ಮನಸ್ತಾಪ ನಿವಾರಿಸಿದ್ದಾರೆ.ಇನ್ನೊಂದೆಡೆ ದಲಿತ ಸಂಘಟನೆಗಳು ಭಿನ್ನಾಭಿಪ್ರಾಯಗಳ ನಡುವೆಯೂ ಸಮಾನ ಶತ್ರುವನ್ನು ಎದುರಿಸಿ, ಹೋರಾಡುತ್ತಿವೆ.ಉಭಯ ಕಮ್ಯುನಿಸ್ಟ್ ಪಕ್ಷಗಳು ನಾಳೆ ಫೆಬ್ರವರಿ 28ರ ಕಾರ್ಮಿಕರ ಮುಷ್ಕರ ಯಶಸ್ವಿಗೊಳಿಸಲು ಸಂಕಲ್ಪ ತೊಟ್ಟಿವೆ. ಬಿಜೆಪಿ ಸರಕಾರದ ಕೇಸರೀಕರಣದ ನೀತಿ ವಿರುದ್ಧ ಕೋಮು ಸೌಹಾರ್ದ ವೇದಿಕೆ ಹಾಗೂ ಕರ್ನಾಟಕ ಜನಶಕ್ತಿಯಂತಹ ಸಂಘಟನೆಗಳು ದಣಿಯವರಿಯದೇ ಹೋರಾಡುತ್ತಿವೆ.

ನವ ಉದಾರೀಕರಣದ ಈ ಕಾಲದಲ್ಲಿ ಯುವಕರು ಎಡ ಮತ್ತು ಜನಪರ ಚಳವಳಿಗೆ ಬರುತ್ತಿಲ್ಲ ಎಂಬ ಕಳವಳವನ್ನು ನಿವಾರಿಸುವಂತೆ ವಿವಿಧ ಸಂಘಟನೆಗಳತ್ತ ಹೊಸ ರಕ್ತ ತರುಣರು ನಿಧಾನವಾಗಿ ಬರುತ್ತಿದ್ದಾರೆ.ಬರೀ ಹೋರಾಡಿದರೆ ಸಾಲದು,ಹೋರಾಟಕ್ಕೊಂದು ಸೈದ್ಧಾಂತಿಕ ತಿಳಿವಳಿಕೆ ಇರಬೇಕು. ಇಲ್ಲವಾದರೆ, ಅಂತಹ ಹೋರಾಟಗಳು ಕಾಲಕ್ರಮೇಣ ನಿರರ್ಥಕವಾಗುತ್ತವೆ.ಈ ನಿಟ್ಟಿನಲ್ಲಿ ಯುವಕರನ್ನು ಅಣಿಗೊಳಿಸಲು ನಿರಂತರ ಅಧ್ಯಯನ ಅಗತ್ಯ. ಅದಕ್ಕಾಗಿ ಕಾರ್ಯಕರ್ತರಿಗೆ ಅಧ್ಯಯನ ಶಿಬಿರಗಳನ್ನು ನಡೆಸಲು ಹಲವಾರು ಸಂಘಟನೆಗಳು ಮುಂದಾಗಿವೆ.

70ರ ದಶಕದಲ್ಲಿ ಇಂತಹ ಅಧ್ಯಯನ ಶಿಬಿರಗಳಿಂದಲೇ ದಲಿತ ಸಂಘರ್ಷ ಸಮಿತಿ ಹೊರಹೊಮ್ಮಿತು. ಆದರೆ ಕಾಲಕ್ರಮೇಣ ಇಂತಹ ಶಿಬಿರಗಳು ಕಡಿಮೆಯಾಗಿವೆ.ಬರೀ ಹೋರಾಟದಲ್ಲಿ ಈ ಸಂಘಟನೆಗಳು ತಮ್ಮನ್ನು ತೊಡಗಿಸಿಕೊಂಡಿವೆ.ಆದರೆ ಎಡಪಕ್ಷಗಳು ಮಾತ್ರ ಇಂದಿಗೂ ಅಧ್ಯಯನ ಶಿಬಿರಗಳನ್ನು ಅವಿರತವಾಗಿ ನಡೆಸುತ್ತಿವೆ.ಕಳೆದ ವಾರ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ ಅಧ್ಯಯನ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಸಿಕ್ಕಿತ್ತು. ಬಾಗಲಕೋಟೆ ಜಿಲ್ಲೆಯ ಚಿಕ್ಕಸಂಗಮ ಎಂಬ ಹಳ್ಳಿಯಲ್ಲಿ ನಡೆದ ಈ ಶಿಬಿರದಲ್ಲಿ ಕರ್ನಾಟಕದ 24ಜಿಲ್ಲೆಗಳಿಂದ ಬಂದಿದ್ದ 180ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.ಅವರಲ್ಲಿ ಶೇ.90ರಷ್ಟು ಮಂದಿ ಯುವಕರೇ ಆಗಿದ್ದರು. ಕಾರ್ಯಕರ್ತರಲ್ಲಿ ಆರೋಗ್ಯಕರವಾದ ಹೊಸ ದೃಷ್ಟಿಕೋನ ಮೂಡಿಸುವಲ್ಲಿ ಶಿಬಿರ ಯಶಸ್ವಿಯಾಯಿತು.

ನಾನು ಬಾಗಲಕೋಟೆ ಜಿಲ್ಲೆಯಲ್ಲೇ ಜನಿಸಿದ್ದರೂ ಚಿಕ್ಕಸಂಗಮ ಎಂಬ ಊರಿನ ಹೆಸರನ್ನು ಕೇಳಿರಲಿಲ್ಲ. ಬಸವಣ್ಣನವರ ಕೂಡಲಸಂಗಮ ಗೊತ್ತಿತ್ತು. ಆಗಾಗ ಅಲ್ಲಿ ಹೋಗಿಬರುತ್ತೇನೆ. ಆದರೆ ಈ ಚಿಕ್ಕಸಂಗಮದ ಪರಿಚಯ ಮಾಡಿಕೊಟ್ಟವರು ರಾಜ್ಯ ದಸಂಸ ನಾಯಕ ಲಕ್ಷ್ಮೀನಾರಾಯಣ ನಾಗವಾರ.ಈ ಚಿಕ್ಕಸಂಗಮ ಮಲಪ್ರಭ, ಘಟಪ್ರಭ, ಕೃಷ್ಣ ನದಿಗಳು ಸಂಗಮಿಸಿದ ಸ್ಥಳ.ಇಲ್ಲೂ ಬಸವಣ್ಣ ಬಂದು ಹೋಗಿದ್ದರು ಎಂಬ ಪ್ರತೀತಿಯಿದೆ.ಇದು ಊರಿನಿಂದ ಐದಾರು ಕಿ.ಮೀ. ದೂರದಲ್ಲಿರುವುದರಿಂದ ಯಾವುದೇ ಮೂಲಸೌಕರ್ಯ ಇರಲಿಲ್ಲ.ಆದರೂ ಯಾವುದೇ ಕೊರತೆಯಾಗದಂತೆ ಮೂರು ದಿನಗಳ ಕಾಲ ಶಿಬಿರವನ್ನು ಯಶಸ್ವಿಯಾಗಿ ನಡೆಸಿದ ಸಂಗತಿ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಫೆಬ್ರುವರಿ 17,18 ಮತ್ತು 19 ಈ ಮೂರು ದಿನಗಳ ಕಾಲ ನಡೆದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿದವರು ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮಿಗಳು. ಇದೇ ಜಿಲ್ಲೆಯ ಶಿವಯೋಗ ಮಂದಿರದಲ್ಲಿ ಬಾಗಲಕೋಟೆ ಬಿಜೆಪಿ ಶಾಸಕ ಚರಂತಿಮಠ ಮತ್ತು ಸಂಘಪರಿವಾರದ ಗೂಂಡಾಗಳು ತೋಂಟದ ಶ್ರೀಗಳ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ್ದಾಗಿ ಹೇಳಿದ್ದ ಲಕ್ಷ್ಮಿನಾರಾಯಣ ನಾಗವಾರ ಇದೇ ನೆಲದಲ್ಲಿ ಶ್ರೀಗಳಿಂದ ಶಿಬಿರ ಉದ್ಘಾಟಿಸಿದರು.ಶಿಬಿರ ಉದ್ಘಾಟಿಸಿದ ತೋಂಟದ ಶ್ರೀಗಳು ಧರ್ಮಕ್ಕಿಂತ ಸಂವಿಧಾನ ಮುಖ್ಯ ಎಂಬುದನ್ನು ಪ್ರತಿಪಾದಿಸಿ, ಪೇಜಾವರ ಪರಿವಾರವನ್ನು ತರಾಟೆಗೆ ತೆಗೆದುಕೊಂಡರು.

ಮೊದಲ ದಿನ ನಡೆದ ಮೂರು ಗೋಷ್ಠಿಗಳಲ್ಲಿ ಅನುಸೂಯಾ ಕಾಂಬಳೆ, ಸಿ.ಎಚ್.ರಾಜಶೇಖರ್, ಅಲ್ಲಮಪ್ರಭು ಬೆಟದೂರು ವಿಚಾರಣಾಪೂರ್ಣವಾಗಿ ಮಾತನಾಡಿದರು.ಡಿಎಸ್‌ಎಸ್(ದಸಂಸ) ಸಿಡಿದು ನಿಂತರೆ, ಆರೆಸ್ಸೆಸ್ ಹೆದರಿ ಓಡಿ ಹೋಗುತ್ತದೆ ಎಂದು ಅಲ್ಲಮಪ್ರಭು ಹೇಳಿದಾಗ,ಕಾರ್ಯಕರ್ತರಲ್ಲಿ ಹೊಸ ಸ್ಫೂರ್ತಿ ಬಂತು.ಆರೆಸ್ಸೆಸ್ ಯಾಕೆ ಡಿಎಸ್‌ಎಸ್‌ಗೆ ಹೆದರುತ್ತದೆಯೆಂದು ಅನೇಕರು ಕೇಳಿದರು. ಡಿಎಸ್‌ಎಸ್ ಸಂಘಟನಾ ಶಕ್ತಿ ಮಾತ್ರವಲ್ಲ, ಮನುವಾದವನ್ನು ಗೋರಿ ತೋಡುವ ಸಂದೇಶ ನೀಡಿದ ಅಂಬೇಡ್ಕರ್ ಸಿದ್ಧಾಂತ ಆರೆಸ್ಸೆಸ್ ಹೆದರಿಕೆಗೆ ಕಾರಣ ಎಂದು ಚರ್ಚೆಯಲ್ಲಿ ಅನೇಕರು ಹೇಳಿದರು.

ಎರಡನೆ ದಿನದ ಗೋಷ್ಠಿಯಲ್ಲಿ ದಲಿತ ಚಳವಳಿಯ ಮುಂದಿರುವ ಸವಾಲುಗಳ ಬಗ್ಗೆ ಮಂಗ್ಳೂರು ವಿಜಯ, ಜಿ.ವಿ.ಸುಂದರ್, ಲಕ್ಷ್ಮೀನಾರಾಯಣ ನಾಗವಾರ, ಆನಂದ ಬೆಳ್ಳಾರೆ ಮುಂತಾದವರು ಮಾತನಾಡಿ, ಕೋಮುವಾದ ಮತ್ತು ಮನುವಾದದ ವಿರುದ್ಧ ಹೋರಾಟದ ಅಗತ್ಯವನ್ನು ಪ್ರತಿಪಾದಿಸಿದರು. ಮೂರನೆ ದಿನದ ಗೋಷ್ಠಿಯಲ್ಲಿ ಹೊನ್ನಾವರದ ಪ್ರಗತಿಪರ ಲೇಖಕಿ ಡಾ.ಅನುಪಮಾ ಕವಲಕ್ಕಿ ಮಹಿಳಾ ಹೋರಾಟದ ದಾರಿಯನ್ನು ವಿಶ್ಲೇಷಿಸಿದರು. ಅದೇ ದಿನ ನಡೆದ ಇನ್ನೊಂದು ಗೋಷ್ಠಿಯಲ್ಲಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹಿಂದೂತ್ವದ ಅಪಾಯ ಎದುರಿಸಲು ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಏಕತೆ ಅಗತ್ಯ ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜಿ.ಕೆ.ಗೋವಿಂದರಾವ್ ಶಿಕ್ಷಣದ ಕೇಸರೀಕರಣದ ಅಪಾಯದ ಬಗ್ಗೆ ವಿವರಿಸಿ, ಮನುಸ್ಮತಿ ಮೇಲೆ ನಿಂತಿರುವ ಹಿಂದೂಧರ್ಮವನ್ನು ಧಿಕ್ಕರಿಸಿ, ಪ್ರಜಾಪ್ರಭುತ್ವವೇ ನಮ್ಮ ಧರ್ಮ ಎಂದು ನುಡಿದರು.ಈ ಮೂರು ದಿನಗಳ ಕಾಲ ನಡೆದ ಶಿಬಿರದಲ್ಲಿ ಕಂಡು ಬಂದ ಅದ್ಭುತವಾದ ಶಿಸ್ತು ನನ್ನಲ್ಲಿ ಅಚ್ಚರಿ ಮೂಡಿಸಿತು.ಬೆಳಗ್ಗೆ 9 ಗಂಟೆಗೆ ಶಿಬಿರ ಆರಂಭವಾದರೆ, ರಾತ್ರಿ 9ಕ್ಕೆ ಕೊನೆಗೊಳ್ಳುತಿತ್ತು. ನಡುವೆ ಒಂದು ಬಾರಿ ಊಟಕ್ಕೆ ಮಾತ್ರ ಬಿಡುವು ನೀಡಲಾಗುತಿತ್ತು. ಉಳಿದ ಸಮಯದಲ್ಲಿ ಕಾರ್ಯಕರ್ತರು ಶಿಬಿರದಿಂದ ಹೊರಗೆ ಬರದೇ ಶಿಸ್ತುಬದ್ಧವಾಗಿ ಆಸಕ್ತಿಯಿಂದ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಈ ಮೂರು ದಿನಗಳ ಕಾಲ ನಡೆದ ಎಲ್ಲ ಶಿಬಿರಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಮಾಜವಾದಿ ಅಲಿ ಬಾಬಾ ಸಂಗಮನಾಥನ ಗುಡಿಯಲ್ಲೇ ತಂಗಿ ಕಾರ್ಯಕರ್ತರ ಬೇಕು-ಬೇಡಗಳನ್ನು ಆಲಿಸು ತ್ತಿದ್ದರು. ಇಡೀ ಶಿಬಿರ ಯಶಸ್ವಿ ಯಾಗಲು ಲಕ್ಷ್ಮೀನಾರಾಯಣ ನಾಗವಾರ ಮತ್ತು ಮಂಗ್ಳೂರು ವಿಜಯ ಪಟ್ಟಶ್ರಮ ಅಗಾಧ ವಾದದ್ದು.ಈ ಶಿಬಿರದಲ್ಲಿ ನನ್ನ ಗಮನಸೆಳೆದ ವಿಷಯವೆಂದರೆ, ಎರಡನೆ ದಿನದ ರಾತ್ರಿ ನಡೆದ ಶಿಬಿರಾರ್ಥಿಗಳ ಗುಂಪು ಚರ್ಚೆಯಲ್ಲಿ 180 ಜನರು 3-4 ಗುಂಪುಗಳಲ್ಲಿ ಪಾಲ್ಗೊಂಡಿದ್ದರು.ಮೂರು ದಿನಗಳ ಕಾಲ ನಡೆದ ಉಪನ್ಯಾಸಗಳ ಬಗ್ಗೆ ಸಂಘಟನೆಯ ಮುಂದಿನ ದಾರಿಯ ಬಗ್ಗೆ ಶಿಬಿರಾರ್ಥಿಗಳ ಅಭಿಪ್ರಾಯ ಸಂಗ್ರಹಿಸಲಾಯಿತು.ದಲಿತ ಸಂಘರ್ಷ ಸಮಿತಿ ಎಲ್ಲ ಜಾತಿಯ ಬಡವರ ಸಂಘಟನೆಯಾಗಬೇಕು ಎಂಬುದು ಬಹುತೇಕ ಕಾರ್ಯಕರ್ತರ ಅಭಿಪ್ರಾಯವಾಗಿತ್ತು. ದಲಿತ ಸಂಘಟನೆಗಳು ಒಂದುಗೂಡಿ ಕೆಲಸ ಮಾಡಬೇಕೆಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಮನುವಾದಿ, ಕೋಮುವಾದಿ ಶಕ್ತಿಗಳು ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡಲು ಹೊರಟಾಗ, ಅದನ್ನು ತಡೆದು ನಿಲ್ಲಿಸಬಲ್ಲ ಬಸವಣ್ಣ, ಕನಕದಾಸ, ಕುವೆಂಪು, ಶಿಶುನಾಳ ಷರೀಫರ ಕರ್ನಾಟಕವನ್ನು ಸುರಕ್ಷಿತವಾಗಿ ಉಳಿಸಬಲ್ಲ ಸಾಮರ್ಥ್ಯವಿರುವುದು ಇಂತಹ ಮಾನವತಾವಾದಿ ಸಂಘಟನೆಗಳಿಗೆ ಮಾತ್ರ.ಆ ನಿಟ್ಟಿನಲ್ಲಿ ಈ ಸಂಘಟನೆಗಳು ಯಶಸ್ವಿಯಾಗುತ್ತವೆ ಎಂಬ ಭರವಸೆ ಮೂಡತೊಡಗಿದೆ.

ಪ್ರಧಾನಿ ಸ್ಫೋಟಿಸಿದ ಕುಡಂಕುಳಂ

ಸದ್ಯಕ್ಕೆ ತಮಿಳುನಾಡಿನ ಕುಡಂಕುಳಂ ಪರಮಾಣು ಯೋಜನೆ ಅಂತಾರಾಷ್ಟ್ರೀಯ ಮಟ್ಟದ ವಿಷಯವಾಗಿ ಪರಿವರ್ತನೆಗೊಂಡಿದೆ. ಅದನ್ನು ಈ ಮಟ್ಟದಲ್ಲಿ ಬೆಳೆಸುವುದರ ನೇತೃತ್ವವನ್ನು ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರು ವಹಿಸಿರುವುದು ವಿಶೇಷವಾಗಿದೆ.ಜಪಾನ್‌ನಲ್ಲಿ ಸಂಭವಿಸಿದ ಸುನಾಮಿ ಮತ್ತು ಅಲ್ಲಿನ ಅಣುಸ್ಥಾವರಗಳ ಮೇಲೆ ಅದು ಮಾಡಿದ ದುಷ್ಪರಿಣಾಮದ ಬಳಿಕ ಕುಡಂಕುಳಂ ಯೋಜನೆಯ ವಿರುದ್ಧ ವ್ಯಾಪಕ ಪ್ರತಿಭಟನೆ ಕೇಳಿ ಬಂದಿತ್ತು. ಸಮುದ್ರ ತೀರ ಪ್ರದೇಶವಾಗಿರುವ ಕುಡಂಕುಳಂನಲ್ಲಿ ಈ ಸ್ಥಾವರ ಮೇಲೆದ್ದದ್ದೇ ಆದರೆ, ಇನ್ನೊಂದು ಭಾರೀ ದುರಂತಕ್ಕೆ ಕಾರಣವಾಗಲಿದೆ ಎನ್ನುವುದು ಅಲ್ಲಿಯ ಜನರ ಭಾವನೆಯಾಗಿದೆ.ಈ ಹಿನ್ನೆಲೆಯಲ್ಲಿ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ್ದು,ಇದು ಪ್ರಧಾನಿಯನ್ನೇ ಕಂಗೆಡಿಸಿತ್ತು.

ಇದೀಗ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಇಡೀ ಪ್ರತಿಭಟನೆಯ ಹಿಂದೆ ಅಮೆರಿಕದ ಸರಕಾರೇತರ ಸಂಸ್ಥೆಗಳ ಕೈವಾಡವಿದೆ ಎನ್ನುವ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.ಇದು ಕೇವಲ ಕುಡಂಕುಳಂ ಪ್ರತಿಭಟನೆಯ ಮೇಲೆ ಮಾತ್ರವಲ್ಲ,ಭಾರತ-ಅಮೆರಿಕದ ನಡುವಿನ ಸಂಬಂಧದ ಮೇಲೂ ಪರಿಣಾಮ ಬೀರುವಂತಹ ಹೇಳಿಕೆ.ಈಗಾಗಲೇ ಪ್ರಧಾನಿಯವರ ಹೇಳಿಕೆಯ ವಿರುದ್ಧ ಪೀಪಲ್ ಮೂವ್‌ಮೆಂಟ್ ಎಗೇನ್ಸ್‌ಟ್ ನ್ಯೂಕ್ಲಿಯರ್ ಎನರ್ಜಿ (ಪಿಎಂಎಎನ್‌ಇ) ಒಂದೂವರೆ ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ಹೂಡಲು ಸಿದ್ಧವಾಗಿದೆ.

ಹೋರಾಟದ ವಿರುದ್ಧ ಯಾರೋ ಸ್ಥಳೀಯ ರಾಜಕಾರಣಿಯೊಬ್ಬ ಹೇಳಿಕೆಯನ್ನು ನೀಡಿದ್ದಿದ್ದರೆ ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿರಲಿಲ್ಲ.ಆದರೆ ಈ ಹೇಳಿಕೆಯನ್ನು ನೀಡಿರುವುದು ಈ ದೇಶದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್.ತಮ್ಮ ಹೇಳಿಕೆಯ ಪರಿಣಾಮವೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳದಷ್ಟು ಬೇಜವಾಬ್ದಾರಿಯನ್ನು ಹೊಂದಿದವರಲ್ಲ ಡಾ.ಸಿಂಗ್. ಹೀಗಿರುವಾಗ, ಇಂತಹದೊಂದು ಆರೋಪದ ಹಿಂದಿರುವ ಸತ್ಯಾಸತ್ಯತೆಯ ಕುರಿತಂತೆ ಇನ್ನಷ್ಟು ವಿವರಗಳನ್ನು ದೇಶ ನಿರೀಕ್ಷಿಸಿದರೆ ಅದರಲ್ಲಿ ತಪ್ಪೇನು ಇಲ್ಲ.ಇದೇ ಸಂದರ್ಭದಲ್ಲಿ ರಶ್ಯ ಕೂಡ ಪ್ರಧಾನಿಯವರ ಮಾತುಗಳನ್ನು ಸಮರ್ಥಿಸಿದೆ.

ರಶ್ಯನ್ ರಾಯಭಾರಿಯೂ ಈ ಕುರಿತಂತೆ ಪ್ರಧಾನಿಯವರ ಬೆನ್ನಿಗೆ ನಿಂತಿದ್ದಾರೆ. ಅಂದ ಮೇಲೆ, ಸಣ್ಣದೊಂದು ಮಾಹಿತಿಯು ಕೇಂದ್ರ ಸಚಿವಾಲಯಕ್ಕೆ ಸಿಗದೇ ಇಂತಹದೊಂದು ವಿವಾದ ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಹಾಗೆಂದು ಪ್ರಧಾನಿಯವರ ಮಾತುಗಳನ್ನು ನಾವು ನೂರಕ್ಕೆ ನೂರು ನಂಬಬೇಕೆಂದೇನೂ ಇಲ್ಲ. ಹಲವು ಪ್ರತಿಭಟನೆ, ಹೋರಾಟ, ಚಳವಳಿ ಗಳನ್ನು ಬೇರೆ ಬೇರೆ ರೀತಿಯಲ್ಲಿ ಬಗ್ಗು ಬಡಿಯುವುದರಲ್ಲಿ ಪ್ರವೀಣರು ನಮ್ಮ ರಾಜಕಾರಣಿಗಳು.ನಕ್ಸಲ್ ಬೆಂಬಲವಿದೆ ಯೆಂದೋ, ಭಯೋತ್ಪಾದಕರ ಜೊತೆ ಸಂಬಂಧವಿದೆಯೆಂದೋ ಅಥವಾ ಇನ್ನಿತರ ಸಮಾಜಘಾತುಕ ಸಂಘಟನೆಗಳೊಂದಿಗೆ ಸಂಬಂಧವನ್ನು ಕಲ್ಪಿಸಿ ಇಡೀ ಪ್ರತಿಭಟನೆಯ ವಿಶ್ವಾಸಾರ್ಹತೆಯನ್ನೇ ನಾಶ ಮಾಡಿದ ಹಲವು ಉದಾಹರಣೆಗಳಿವೆ. ಹೀಗಿರುವಾಗ ಕುಡಂಕುಳಂದ ಪರಮಾಣು ಯೋಜನೆಯ ವಿರುದ್ಧದ ಪ್ರತಿಭಟನೆಯನ್ನು ಹೇಗಾದರೂ ಬಗ್ಗು ಬಡಿಯಲೇಬೇಕೆಂದು ಸರಕಾರ ಯೋಚಿಸಿದ್ದರೆ ಅದರಲ್ಲಿ ವಿಶೇಷವೇನೂ ಇಲ್ಲ.

ಆದರೆ ಇಲ್ಲಿ, ಭಾರತ ಅಮೆರಿಕದ ಕುರಿತಂತೆ ತನ್ನ ಸಂಶಯವನ್ನು ವ್ಯಕ್ತಪಡಿಸಿದೆ. ಅದಕ್ಕೆ ಇನ್ನೊಂದು ಮುಖ್ಯ ಕಾರಣವಿದೆ. ಭಾರತ ಅಮೆರಿಕೇತರ ರಾಷ್ಟ್ರಗಳೊಂದಿಗೆ ಮೈತ್ರಿಯನ್ನು, ಆರ್ಥಿಕ ಸಂಬಂಧವನ್ನು ಏರ್ಪಡಿಸಿ ಕೊಂಡಾಕ್ಷಣ ದೊಡ್ಡಣ್ಣನ ಹೊಟ್ಟೆ ಉರಿಯುವುದಕ್ಕಾರಂಬಿಸುತ್ತದೆ. ಇರಾನ್ ಜೊತೆಗೆ ಭಾರತದ ವ್ಯವಹಾರ ಸಂಬಂಧವನ್ನು ಇದೇ ಕಾರಣಕ್ಕೆ ಅಮೆರಿಕ ಟೀಕಿಸುತ್ತಿದೆ ಮತ್ತು ಆಗಾಗ ಎಚ್ಚರಿಕೆಯನ್ನು ನೀಡುತ್ತಿದೆ. ಕುಡಂಕುಳಂ ಅಣು ಯೋಜನೆಯನ್ನು ರಶ್ಯದ ಬೆಂಬಲದೊಂದಿಗೆ ಮುನ್ನಡೆಸುತ್ತಿದೆ.ಇದು ಸಹಜವಾಗಿಯೇ ಅಮೆರಿಕಕ್ಕೆ ಅಸಮಾಧಾನ ವನ್ನು ತಂದಿದೆ.ಆದರೆ ಇರಾನ್ ಕುರಿತು ತನ್ನ ಅಸಹನೆಯನ್ನು ವ್ಯಕ್ತಪಡಿಸಿದಂತೆ, ರಶ್ಯದ ವಿರುದ್ಧ ವ್ಯಕ್ತಪಡಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ವಿದೇಶಿ ಎನ್‌ಜಿಒ ಮೂಲಕ ಸ್ವದೇಶಿ ಎನ್‌ಜಿಓಗಳಿಗೆ ಹಣವನ್ನು ನೀಡಿ ಕುಡಂಕುಳಂ ವಿರುದ್ಧ ಪ್ರತಿಭಟನೆಯ ಪ್ರಾಯೋಜಕತ್ವವನ್ನು ವಹಿಸಿದೆ ಎನ್ನುವುದು ಪ್ರಧಾನಿಯ ಮಾತಿನ ಒಟ್ಟು ಸಾರ.

ಬರೇ ಹೇಳಿಕೆಯನ್ನು ನೀಡಿ, ಒಟ್ಟು ಪರಿಸ್ಥಿತಿಯನ್ನು ಗೊಂದಲಗೊಳಿಸಿ ಸುಮ್ಮಗಾಗುವುದು ಪ್ರಧಾನಿ ಹುದ್ದೆಗೆ ಶೋಭೆ ತರುವುದಿಲ್ಲ.ಪ್ರಧಾನಿಯವರು ವ್ಯಕ್ತಪಡಿಸಿದ ಅನುಮಾನ ಗಂಭೀರವಾದುದು. ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ವಿದೇಶಿ ಹಣ ಯಾವ ಸಂಸ್ಥೆಗೆ ಬಂದಿದೆ ಎನ್ನುವುದನ್ನು ಗುರುತಿಸಿ,ಆ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸರಕಾರದ ಕರ್ತವ್ಯ. ತಕ್ಷಣ ಅಂತಹ ಸಂಸ್ಥೆಗಳನ್ನು ನಿಷೇಧಿಸುವ ಅಗತ್ಯವೂ ಇದೆ.ಆದರೆ ಪೂರಕ ಸಾಕ್ಷಗಳನ್ನು ಇಟ್ಟಕೊಂಡು ಮುಂದಿನ ಹೆಜ್ಜೆಯನ್ನು ಇಡಬೇಕೇ ಹೊರತು, ಊಹೆಗಳ ಮೇಲೆ ಅಥವಾ ಸಂಶಯದ ಮೇಲೆ ಯಾವ ಕ್ರಮವನ್ನು ತೆಗೆದುಕೊಂಡರೂ ಅದು ಪ್ರಜಾಸತ್ತೆಗೆ ವಿರೋಧವಾಗುತ್ತದೆ. ಆದುದರಿಂದ ತಕ್ಷಣ ತನ್ನ ಹೇಳಿಕೆಯನ್ನು ಇನ್ನಷ್ಟು ಸ್ಪಷ್ಟ ಪಡಿಸಿ, ದೇಶದ ಜನರ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕು. ಜನರ ನಡುವೆ ಹರಡಿರುವ ಗೊಂದಲಗಳನ್ನು ನಿವಾರಿಸಬೇಕು.

-ವಾರ್ತಾಭಾರತಿ ಕೃಪೆ

ಪ್ರೀತಿಯ ನರೇಂದ್ರಭಾಯಿ, ದಯವಿಟ್ಟು ಉತ್ತರಿಸುತ್ತೀರಾ?ಗುಜರಾತ್ ನರಮೇಧಕ್ಕೆ 10 ವರ್ಷ: ಮೋದಿಗೆ 25 ಪ್ರಶ್ನೆಗಳು;

2002ರ ಭೀಕರ ಗುಜರಾತ್ ನರಮೇಧದಲ್ಲಿನ ತನ್ನ ಪಾತ್ರ ಅಥವಾ ಆರೋಪಗಳಿಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳಿಗೆ ಕಳೆದ ಹತ್ತು ವರ್ಷಗಳಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವೌನ ಹಾಗೂ ಚುನಾವಣಾ ಗೆಲುವುಗಳ ಮೂಲಕ ಉತ್ತರ ನೀಡುತ್ತಾ ಬಂದಿದ್ದಾರೆ. ಅವರು ಟಿವಿ ಸಂದರ್ಶನಗಳಿಂದ ಹೊರ ನಡೆದಿದ್ದಾರೆ, ಸಂದರ್ಶಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, ನ್ಯಾಯಾಲಯದ ಚೌಕಟ್ಟನ್ನೂ ಉಲ್ಲಂಘಿಸಿದ್ದಾರೆ. 2010, ಮಾರ್ಚ್‌ನಲ್ಲಿ ಸಿಟ್ ಸದಸ್ಯರ ಮುಂದೆ ಒಂದು ಬಾರಿ ಮಾತ್ರ ಅವರು ವಿಚಾರಣೆಗೊಳಪಟ್ಟಿದ್ದಾರೆ ಮತ್ತು ಅದಕ್ಕೆ ಸಂಬಂಧಿಸಿದ ಅವರ ಪ್ರತಿಕ್ರಿಯೆ ಇದೀಗ ಸಾರ್ವಜನಿಕರ ಮುಂದೆ ಇದೆ. ಆದರೆ ಮೋದಿ ಇನ್ನೂ ಹಲವಾರು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಇದೀಗ ಅವರು ಈ ಪ್ರಶ್ನೆಗಳಿಗೆ ಉತ್ತರಿಸಬಹುದು.
-ಕೃಪೆ: ಔಟ್ ಲುಕ್

ಪ್ರಶ್ನೆಗಳು: ಸಂದೀಪ್ ದೌಗಲ್

1. ಮೋದಿಯವರೆ, ಗೋಧ್ರೋತ್ತರ ಗಲಭೆಗೆ ಸಂಬಂಧಿಸಿ 2002, ಮಾರ್ಚ್ 1ರಂದು ಝೀ ಟಿವಿ ಸಂದರ್ಶನದಲ್ಲಿ, ‘‘ಕ್ರಿಯೆ ಮತ್ತು ಪ್ರತಿಕ್ರಿಯೆಯ ಸಂಕೋಲೆಯು ನಡೆಯುತ್ತಾ ಇದೆ. ಆದರೆ ನಾವು ಅದನ್ನು ಬಯಸುವುದಿಲ್ಲ’’ ಎಂದು ನೀವು ಹೇಳಿದ್ದೀರಿ. ಇಂತಹ ಹೇಳಿಕೆಗಳು 1984ರ ಸಂದರ್ಭ ರಾಜೀವ್ ಗಾಂಧಿಯವರ ‘ಭೂಮಿಯು ನಡುಗುತ್ತದೆ’ ಹೇಳಿಕೆಯನ್ನು ಪ್ರತಿಧ್ವನಿಸುವುದಿಲ್ಲವೇ?
2. ಕೆಲವು ದಿನಗಳ ನಂತರ ಔಟ್‌ಲುಕ್‌ಗೆ ನೀಡಿರುವ ಸಂದರ್ಶನದಲ್ಲಿ (ಮಾರ್ಚ್ 18, 2002) ನೀವು, ‘‘ಗುಜರಾತ್‌ನಲ್ಲಿ ಕೋಮುವಾದ ತೀವ್ರವಾಗಿತ್ತು ಎಂಬುದನ್ನು ನೀವು ನೆನಪಿಸಿಕೊಳ್ಳಬೇಕು, ಒಂದು ಸಣ್ಣ ಘಟನೆಯೂ ಹಿಂಸಾಚಾರಕ್ಕೆ ಕಾರಣವಾಗುವಂತಿತ್ತು ಮತ್ತು ಗೋಧ್ರಾ ಘಟನೆಯು ತುಂಬಾ ದೊಡ್ಡ ಘಟನೆ’’ ಎಂದು ಹೇಳಿದ್ದೀರಿ. ಗೋಧ್ರಾ ಸಂತ್ರಸ್ತರ ಮೃತದೇಹಗಳನ್ನ್ನು ಅಹ್ಮದಾಬಾದ್‌ಗೆ ಕೊಂಡೊಯ್ಯಲು ನಿರ್ಧರಿಸಿದ್ದಾಗ, ಹಿಂಸೆಯ ಕಿಡಿ ಭುಗಿಲೇಳುವುದು ಎಂದು ನಿಮಗೆ ಹೊಳೆದಿರಲಿಲ್ಲವೇ?
3. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಅಧಿಕಾರಿಗಳ ಸಭೆ (2002, ಫೆ.27)ಯಲ್ಲಿ ನೀವು ಅವರಿಗೆ ನಿರ್ದೇಶನಗಳನ್ನು ನೀಡಿದ್ದೀರಿ ಎಂಬ ಆರೋಪಗಳನ್ನು ನಿರಾಕರಿಸಿದ್ದೀರಿ. ‘‘ಕೋಮು ಸಂಘರ್ಷಗಳಲ್ಲಿ ಪೊಲೀಸರು ಹಿಂದೂಗಳು ಮತ್ತು ಮುಸ್ಲಿಮರ ವಿರುದ್ಧ ಒಂದಕ್ಕೊಂದು ಆಧಾರದಲ್ಲಿ ಕ್ರಮ ಕೈಗೊಳ್ಳುತ್ತಾರೆ. ಅದು ಈಗ ನಡೆಯುವುದಿಲ್ಲ, ಹಿಂದೂಗಳಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಬಿಟ್ಟುಬಿಡಿ’’ ಎಂದು ನೀವು ತಿಳಿಸಿರುವುದಾಗಿ ಗುಪ್ತಚರ ಇಲಾಖೆಯ ಉಪ ಆಯುಕ್ತ ಸಂಜೀವ್ ಭಟ್ ಮತ್ತು ಮೃತ ಸಚಿವ ಹರೇನ್ ಪಾಂಡ್ಯರ ಹೇಳಿಕೆಗಳಲ್ಲಿ ಆರೋಪಿಸಲಾಗಿದೆ. ಯಾಕೆ ಈ ಆರೋಪ ನಿಮ್ಮ ಬೆನ್ನುಹತ್ತಿದೆ?
4. ಫೆಬ್ರವರಿ 27ರ ಸಭೆಯಲ್ಲಿ ಹಾಜರಿದ್ದವರ ಬಗ್ಗೆ ಮಾತ್ರ ನಿಮ್ಮಲ್ಲಿ ಕೇಳಿದಾಗ, ಭಟ್ ಒಬ್ಬರನ್ನೇ ಯಾಕೆ ನೀವು ಪ್ರತ್ಯೇಕಿಸಿದಿರಿ ಮತ್ತು ಅವರು ಉಪಸ್ಥಿತರಿರಲಿಲ್ಲ ಎಂದು ಹೇಳಿದಿರಿ?
5. ಆಗಿನ ಸಚಿವ ಹರೇನ್ ಪಾಂಡ್ಯ ಸ್ವತಂತ್ರ ನಾಗರಿಕರ ಟ್ರಿಬ್ಯೂನಲ್‌ನಲ್ಲಿ ಫೆ. 27ರ ಸಭೆಯ ಕುರಿತು ಸಾಕ್ಷ ನುಡಿದಿರುವ ಬಗ್ಗೆ ದೃಢೀಕರಿಸುವಂತೆ ನಿಮ್ಮ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಗುಪ್ತಚರ ಇಲಾಖೆಯ ಆಗಿನ ಹೆಚ್ಚುವರಿ ಡಿಜಿ ಆರ್.ಬಿ. ಶ್ರೀಕುಮಾರ್‌ಗೆ ಸೂಚಿಸಿದ್ದುದು ನಿಜವೇ? ಪಾಂಡ್ಯರ ಮೊಬೈಲ್ ಸಂಖ್ಯೆ 9824030629ನ್ನು ಕದ್ದಾಲಿಸುವಂತೆ ಅವರು ಸೂಚಿಸಿರುವ ಆರೋಪಗಳು ನಿಜವೇ?
6. ಹರೇನ್ ಪಾಂಡ್ಯರ ಹತ್ಯೆ (2003, ಮಾರ್ಚ್ 26) ಕುರಿತಂತೆ ನಿಮ್ಮ ಆಡಳಿತದ ಮೇಲೆ ಇರುವ ಸಂಶಯಗಳ ಬಗ್ಗೆ, ನಿಮ್ಮ ಹೆಸರನ್ನು ಮುಕ್ತಗೊಳಿಸುವುದಕ್ಕೆ ಮತ್ತು ನಿಜವಾದ ಹಂತಕರು ಯಾರು ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಸಂಬಂಧಿಸಿ ಯಾವ ಕ್ರಮ ಕೈಗೊಳ್ಳಲಾಗಿದೆ?
7. 2002, ಫೆ. 28ರ ಗುಜರಾತ್ ಬಂದ್ ಮತ್ತು 2002, ಮಾರ್ಚ್ 1ರ ಭಾರತ್ ಬಂದ್‌ನಲ್ಲಿ ಬಿಜೆಪಿ ಕೈಜೋಡಿಸಿದ್ದ ಬಗ್ಗೆ ಸುದ್ದಿ ಪತ್ರಿಕೆಗಳ ವರದಿಯಿಂದ ತಿಳಿಯಿತು ಎಂದು ನೀವು ಸಿಟ್‌ಗೆ ತಿಳಿಸಿದ್ದೀರಿ. ಪಕ್ಷದ ವ್ಯವಹಾರಗಳ ಬಗ್ಗೆ ತುಂಬಾ ಸುಳಿವು ಹೊಂದಿರುವ ಒಬ್ಬರಿಗೆ ಈ ಬಗ್ಗೆ ತಿಳಿದಿಲ್ಲವೆಂದರೆ ಅದು ಅಸಂಬದ್ಧವೆನಿಸುವುದಿಲ್ಲವೇ?
8. ರಾಜ್ಯ ಪೊಲೀಸ್ ಕಂಟ್ರೋಲ್ ರೂಂ ಮತ್ತು ಅಹ್ಮದಾಬಾದ್ ನಗರ ಕಂಟ್ರೋಲ್ ರೂಂನಲ್ಲಿ (2002, ಫೆ. 28ರಂದು) ಬಿಜೆಪಿ ಸಚಿವರುಗಳಾದ ಅಶೋಕ್ ಭಟ್ ಮತ್ತು ಐ.ಕೆ. ಜಡೇಜಾ ಹಾಜರಿದ್ದರು ಎಂಬುದರ ಬಗ್ಗೆ ವೈಯಕ್ತಿಕ ಅರಿವು ಇರಲಿಲ್ಲ ಎಂದು ನೀವು ಸಿಟ್ ಮುಂದೆ ಪ್ರತಿಪಾದಿಸಿದ್ದೀರಿ. ಇದು ತಮ್ಮ ಪಾಲಿನ ಅಸಮರ್ಥತೆಯನ್ನು ಪ್ರದರ್ಶಿಸುವುದಿಲ್ಲವೇ?
9. ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಹತ್ಯೆಯಾದ ಕಾಂಗ್ರೆಸ್‌ನ ಮಾಜಿ ಸಂಸದ ಇಹ್ಸಾನ್ ಜಾಫ್ರಿ, ನಿಮಗೆ ದೂರವಾಣಿ ಕರೆ ಮಾಡಿ ತನ್ನ ಮನೆ ಬಾಗಿಲ ಮುಂದೆ ಗಲಭೆಕೋರರು ನೆರೆದಿರುವ ಬಗ್ಗೆ ಹಾಗೂ ತನಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದ ಕುರಿತು ಸಿಟ್ ಮುಂದೆ ನೀವು ನಿರಾಕರಿಸಿದ್ದೀರಿ. ನಿಮ್ಮೆಂದಿಗೆ ಅವರು ಮಾತನಾಡಿದ್ದರು ಎಂದು ಪ್ರತ್ಯಕ್ಷದರ್ಶಿಗಳೇ ಹೇಳುತ್ತಿದ್ದಾರೆ. ಇದೊಂದು ವೈಯಕ್ತಿಕ ದ್ವೇಷದ ಮತ್ತು ಕಡು ಹಗೆತನದ ಪ್ರಕರಣವೆಂದು ಯಾಕೆ ವಾದಿಸಲಾಗುತ್ತಿದೆ?
10. ಪೊಲೀಸರು ಮತ್ತು ರಾಜಕಾರಣಿಗಳ ಜೊತೆಗೆ ಗಲಭೆಕೋರರಿಗೆ ಸಂಪರ್ಕವಿದ್ದ ಕುರಿತು ತಿಳಿಸುವ ದೂರವಾಣಿ ಸಂಭಾಷಣೆಯ ದಾಖಲೆಗಳನ್ನು ನಾನಾವತಿ ಆಯೋಗಕ್ಕೆ ಒದಗಿಸಿರುವ ಪೊಲೀಸ್ ಅಧಿಕಾರಿ ರಾಹುಲ್ ಶರ್ಮಾ ವಿರುದ್ಧ ನಿಮ್ಮ ಸರಕಾರ ಗೌಪ್ಯ ದಾಖಲೆಗಳ ಕಾನೂನಿನ್ವಯ ಕ್ರಮ ಕೈಗೊಂಡಿದೆಯೇ?
11. ತಮ್ಮ ಸರಕಾರವನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವ, ಸಾಮಾಜಿಕ ಕಾರ್ಯಕತೆ ತೀಸ್ತಾ ಸೆಟಲ್ವಾಡ್ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆಯನ್ನು ಆರಂಭಿಸಿರುವ ಪ್ರಕರಣವು, ಅವರ ವಿರುದ್ಧದ ಪ್ರತೀಕಾರದಂತೆ ಕಾಣುವುದಿಲ್ಲವೇ?
12. ಸಂಜೀವ್ ಭಟ್ ವಿರುದ್ಧದ 21 ವರ್ಷಗಳ ಹಳೆಯ ಕಸ್ಟಡಿ ಸಾವಿನ ಪ್ರಕರಣವನ್ನು ಮತ್ತೆ ಕೆದಕಿರುವುದು ಮತ್ತು ಅವರ ವಿರುದ್ಧ ಅಮಾನತು ಆದೇಶ ಜಾರಿಗೊಳಿಸಿರುವುದೂ ಇದರಂತೆಯೇ ಅನಿಸುವುದಿಲ್ಲವೇ?
13. 2002ರ ಗಲಭೆಯ ಸಂದರ್ಭ ವಿಧೇಯರಾಗಿದ್ದ ಪೊಲೀಸ್ ಅಧಿಕಾರಿಗಳಿಗೆ ಭಡ್ತಿ ನೀಡಲಾಗಿದೆ ಮತ್ತು ತಮ್ಮ ಕರ್ತವ್ಯವನ್ನು ಅಚಲವಾಗಿ ನಿರ್ವಹಿಸಿರುವವರನ್ನು ಕಡೆಗಣಿಸಲಾಗಿದೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಂತಹ ಹಲವಾರು ಪ್ರಕರಣಗಳು ವ್ಯಾಪಕವಾಗಿ ದಾಖಲಾಗಿವೆ ಮತ್ತು ತಮ್ಮ ಗಮನಕ್ಕೂ ತರಲಾಗಿದೆ. ಈ ಬಗ್ಗೆ ತಾವು ಯಾವ ಕ್ರಮ ಕೈಗೊಂಡಿದ್ದೀರಿ?
14. ಹಿಂಸಾತ್ಮಕ ಗುಂಪುಗಳನ್ನು ಮುನ್ನಡೆಸುವಲ್ಲಿ ನಿಮ್ಮ ಸಚಿವರು ಭಾಗಿಯಾಗಿದ್ದರು ಎಂಬ ಆರೋಪವನ್ನು ನೀವು ಸಿಟ್ ಮುಂದೆ ನಿರಾಕರಿಸಿ ದ್ದೀರಿ. ಭರತ್ ಬರೋಟ್, ಮಾಯಾಬೆನ್ ಕೊಡ್ನಾನಿ, ನಿತಿನ್‌ಭಾಯಿ ಪಟೇಲ್ ಮತ್ತು ನಾರಾಯಣ ಲಲ್ಲು ಪಟೇಲ್‌ರತಂಹವರ ಭಾಗೀದಾರಿ ಕೆಗೆ ಸಂಬಂಧಿಸಿ ಅಧಿಕೃತವಾಗಿ ನಿಮ್ಮ ಗಮನಕ್ಕೆ ತಂದಾಗ ನೀವು ಏನು ಕ್ರಮ ಕೈಗೊಂಡಿದ್ದೀರಿ?
15. ಗಲಭೆಗೆ ಸಂಬಂಧಿಸಿದ ಮಾಧ್ಯಮಗಳಲ್ಲಿ ಪ್ರಸಾರವಾದ ತುಣುಕುಗಳ ಆಧಾರದಲ್ಲಿ ಕ್ರಮ ಕೈಗೊಳ್ಳದಿರುವಂತೆ ನಿಮ್ಮನ್ನು ತಡೆದವರ್ಯಾರು? ದುರಂತವನ್ನು ಗುಜರಾತ್ ಪೊಲೀಸರು ಯಾಕೆ ದಾಖಲಿಸಿಕೊಂಡಿಲ್ಲ?
16. ಹರೀಶ್ ಭಟ್, ಬಾಬು ಬಜರಂಗಿ ಮತ್ತು ರಾಜೇಂದ್ರ ವ್ಯಾಸ್‌ರಂತಹವರು ತಾವು ನಡೆಸಿರುವ ದೌರ್ಜನ್ಯಕ್ಕೆ ಸಂಬಂಧಿಸಿ ಮತ್ತು ತಮ್ಮ ಹಾಗೂ ತಮ್ಮ ಆಡಳಿತದ ಹೆಸರನ್ನೂ ಪ್ರಸ್ತಾಸಿರುವ ತೆಹಲ್ಕಾದ ಆಪರೇಶನ್ ಕಳಂಕ್ ಬಗ್ಗೆ ನೀವು ಏನಾದರೂ ಕ್ರಮಗಳನ್ನು ತೆಗೆದುಕೊಂಡಿದ್ದೀರೇ? ತೆಗೆದುಕೊಂಡಿದ್ದರೆ ಯಾವುದು?
17. 2002, ಫೆ. 27ರಿಂದ ಮಾ. 4ರರ ನಡುವೆ ಗಲಭೆಗಳಲ್ಲಿ ಭಾಗಿಯಾಗಿದ್ದ ಗಲಭೆಕೋರರ ಮೇಲೆ ಪ್ರಾಮಾಣಿಕ ಕ್ರಮ ಕೈಗೊಳ್ಳಲು ವಿಫಲರಾಗಿದ್ದ ಜಿಲ್ಲಾಧಿಕಾರಿಗಳು ಹಾಗೂ ಇತರ ಹಿರಿಯ ಅಧಿಕಾರಿಗಳ ವಿರುದ್ಧ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ ಅಥವಾ ತನಿಖೆಗೆ ಆದೇಶಿಸಿಲ್ಲ?
18. ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾಗಿ ಬಿಜೆಪಿ/ವಿಎಚ್‌ಪಿ ಪರ ನ್ಯಾಯವಾದಿಗಳನ್ನು ನೇಮಕಗೊಳಿಸಲು ಶಿಫಾರಸು ಮಾಡಿರುವ ಆರೋಪಗಳನ್ನು ನೀವು ತಳ್ಳಿ ಹಾಕಿದ್ದೀರಿ. ಹಾಗಿದ್ದಲ್ಲಿ, ಅಂತಹ ಪೂರ್ವಗ್ರಹ ಪೀಡಿತ ಆಯ್ಕೆಯನ್ನು ನಡೆಸಿರುವ ಜಿಲ್ಲಾಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಅಥವಾ ತನಿಖೆಗೆ ಆದೇಶಿಸಿಲ್ಲ?
19. ಧಾರ್ಮಿಕತೆಯ ಆಧಾರದಲ್ಲಿ ತಾರತಮ್ಯ ಎಸಗುವುದಿಲ್ಲ ಎಂದು ನೀವು ಯಾವಾಗಲೂ ಬಡಾಯಿ ಕೊಚ್ಚುತ್ತೀರಿ. ಆದರೆ 2002, ಸೆಪ್ಟಂಬರ್ 9ರಂದು ನಿಮ್ಮ ಗೌರವ ಯಾತ್ರೆಯ ನಿಮ್ಮ ಭಾಷಣದಲ್ಲಿ ನೀವು , ಮುಸ್ಲಿಂ ಪರಿಹಾರ ಶಿಬಿರಗಳನ್ನು ‘ಮಕ್ಕಳನ್ನು ಉತ್ಪಾದಿಸುವ ಕೇಂದ್ರ’ಗಳೆಂದು ಎಂದು ಹೇಳಿದ್ದೀರಿ. ಈ ಬಗ್ಗೆ ನೀವು ‘ಹಂ ಪಾಂಚ್, ಹಮಾರೇ ಪಚ್ಚೀಸ್ (ನಾವು ಐವರು, ನಮ್ಮದು ಇಪ್ಪತ್ತೈದು)’ ಎಂದೂ ವ್ಯಂಗ್ಯವಾಡಿದ್ದೀರಿ. ಇಂತಹ ಹೇಳಿಕೆಗಳ ಬಗ್ಗೆ ನಿಮಗೆ ಹೆಮ್ಮೆಯಿದೆಯೇ?
20. ಗಲಭೆಗಳಲ್ಲಿ ಅಂಗಡಿಗಳು ಸುಟ್ಟು ಹೋಗಿರುವವರಿಗೆ ಪರಿಹಾರ ನೀಡದಿರುವುದಕ್ಕೆ ಕೊನೆಗೂ ನಿಮ್ಮ ಸರಕಾರಕ್ಕೆ ಗುಜರಾತ್ ಹೈಕೋರ್ಟ್ ಇತ್ತೀಚೆಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸುವ ಮೂಲಕ ತಮ್ಮನ್ನು ತರಾಟೆಗೆ ತೆಗೆದುಕೊಂಡಿದೆ ಎನಿಸುವುದಿಲ್ಲವೇ? ಕಳೆದ ಹತ್ತು ವರ್ಷಗಳಲ್ಲಿ ನಿಮ್ಮ ‘ಸದ್ಭಾವನಾ’ ಎಲ್ಲಿ ಹೋಗಿತ್ತು?
21. ನಾಶಕ್ಕೊಳಪಟ್ಟಿರುವ ನೂರಾರು ಧಾರ್ಮಿಕ ಕೇಂದ್ರಗಳ ಪುನರ್ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡುವಂತೆ ಕೂಡ ನಿಮ್ಮ ಆಡಳಿತದ ವಿವಿಧ ವಿಭಾಗಕ್ಕೆ ಗುಜರಾತ್ ಹೈಕೋರ್ಟ್ ಆದೇಶಿಸಬೇಕಾಯಿತು. ಇಂತಹ ಸ್ಥಿತಿ ಯಾಕೆ ನಿರ್ಮಾಣವಾಯಿತು?
22. 2002ರ ಗಲಭೆಯು ‘‘ರಾಜ್ಯದ ನಿರ್ಲಕ್ಷ’’ ಎಂಬ ಗುಜರಾತ್ ಹೈಕೋರ್ಟ್‌ನ ಟೀಕೆಗೆ ನಿಮ್ಮ ಪ್ರತಿಕ್ರಿಯೆ ಏನು?

23. ಗಲಭೆಯ ಸಂದರ್ಭ ತಪ್ಪು ಸುದ್ದಿಗಳನ್ನು ಪ್ರಕಟಿಸುತ್ತಾ, ಭೀಕರ ಮತ್ತು ಕೋಮು ಗಲಭೆಗೆ ಪ್ರಚೋದಿಸುವ ಅಪ ಪ್ರಚಾರಗಳನ್ನು ನಡೆಸಿದ ಸಂದೇಶ್ ಮತ್ತು ಗುಜರಾತ್ ಸಮಾಚಾರ್ ಪತ್ರಗಳಿಗೆ ಕಡಿವಾಣ ಹಾಕುವುದರ ಬದಲು, ಹಿಂಸಾಚಾರದಲ್ಲಿ ನಿಮ್ಮ ಆಡಳಿತದ ಭಾಗಿತ್ವವನ್ನು ಬಹಿರಂಗಗೊಳಿಸಿರುವ ಮಾಧ್ಯಮಗಳನ್ನು ನಿಷೇಧಿಸುವಂತೆ ಆಗ್ರಹಿಸುತ್ತಾ, ಮೇಲೆ ತಿಳಿಸಿರುವ ಪತ್ರಿಕೆಗಳನ್ನು ಹೊಗಳಿದಂತಹ ಪತ್ರವನ್ನು ಹೇಗೆ ಬರೆದಿರಿ?
24. 2002ರ ಹತ್ಯಾಕಾಂಡದ ಬಗ್ಗೆ ಖಂಡಿಸುವ ನೀವು, ಅದೇ ಸಂದರ್ಭ ಈ ಗಲಭೆಗೆ ಸಂಬಂಧಿಸಿ ವಿಷಾದ ವ್ಯಕ್ತಪಡಿಸಲು ನಿರಾಕರಿಸುತ್ತೀರಿ ಎಂದು ಹೇಳಲಾಗುತ್ತದೆ. ಇದು ನಿಮ್ಮೆಳಗೆ ಆಳವಾಗಿ ಬೇರೂರಿರುವ ಮುಸ್ಲಿಂ ವಿರೋಧಿ ಪೂರ್ವಗ್ರಹ ವೆನಿಸುತ್ತದೆ. ಇದನ್ನು ನೀವು ಒಪ್ಪುತ್ತೀರಾ?

25. ನಿಮ್ಮಲ್ಲಿ ಯಾವುದನ್ನೂ ಮುಚ್ಚಿಡಲು ಇಲ್ಲವಾದಲ್ಲಿ, ನಿಮ್ಮ ಬಗ್ಗೆ ಅಂತಹ ಆರೋಪಗಳನ್ನು ಮಾಡಿರುವವರೊಂದಿಗೆ ಮಾತನಾಡಲು ನೀವು ಯಾಕೆ ನಿರಾಕರಿಸುತ್ತಿದ್ದೀರಿ?

ಕೃಪೆ: ವಾರ್ತಾಭಾರತಿ

೪೦ ದ್ವಿಪದಿಗಳು


ನಿನ್ನ ಹಾಗೆ ಮುಗಿಲೂ ಕಣ್ಣು ತೆರೆಯಿತು
ಹೊರಗೂ ಬೆಳಕಾಯಿತುನಿನ್ನ ಪ್ರೀತಿಸುವದೆಂದರೆ
ಏನಿಲ್ಲ ನನ್ನೊಳಗೊಂದು ದೀಪ
ಹಚ್ಚಿಟ್ಟುಕೊಳ್ಳುವುದು


ಎಲ್ಲವನು ನಿರಾಕರಿಸಿದ ಹೆಜ್ಜೆ ಅಂತಿಮವಾಗಿ ತನಗೊಪ್ಪುವ ನಿನ್ನ ಮನೆಯ ಕಡೆಗೆ ಪಯಣ ಬೆಳೆಸಿತು
ಕೆಲವು ಸಲ ಹೀಗಿಯೇ ವಾಸನೆ ಹತ್ತಿದ ಇರುವೆ ಬರುವ ಹೊತ್ತಿಗೆ ಸಕ್ಕರೆ ಜಾಗವೆ ಬದಲಾಗಿ ಹೋಗಿರುವುದುನಿನ್ನುಸಿರ ಮಾತು ನನಗೆ ತಲುಪಿದಾಗೊಮ್ಮೆ ಅಕ್ಷರವೇಷ ಕಳಚುವ ಕವಿತೆ ಬದುಕಾಗಿ ಬಿಡುತ್ತದೆ
ಪಿಸುಮಾತಿನ ಒಳದನಿಗಳೆರಡು ಕತ್ತಲನ್ನು ಬೆಳಕಿಗೆ ಅನುವಾದಿಸುತ್ತ ಇರುಳಗಳೆಯುತ್ತವೆನಿನ್ನುಸಿರ ಮಾತು ನನಗೆ ತಲುಪಿದಾಗೊಮ್ಮೆ
ಅಕ್ಷರವೇಷ ಕಳಚುವ ಕವಿತೆ ಬದುಕಾಗಿ ಬಿಡುತ್ತದೆನಿನ್ನ ತುಂಬಿಕೊಂಡ ರೆಪ್ಪೆ ಶತಮಾನದಾಯಾಸ ನಿವಾರಿಸಿಕೊಳ್ಳಲು ನಿನ್ನೊಡಲಿಗೊರಗಲು ಆಸೆ ಪಟ್ಟಿತು
ತನಗೊಪ್ಪದ ಸ್ವರ್ಗದಲಿ ಕಾಲೂರಿದ ಹಕ್ಕಿಗೆ ಮತ್ತೆ ಇರುಳ ಮನೆಯಲ್ಲಿಯೇ ಬೆಳಕಿನ ಗರ್ಭ ಕಟ್ಟಿತುಇಡೀ ಇರುಳು ನಿನ್ನೊಡನಿದ್ದೆ
ಈಗ ಬೆಳಗಾಯಿತೆಂದು ಏಕೆ ಸುಳ್ಳು ಹೇಳಲಿ ?ಎಷ್ಟು ಸಲ ತೊಳೆದರೂ ಕನ್ನಡಿಯನ್ನ
ಮುಖದ ಮೇಲಿನ ಕಲೆ ಹಾಗೆ ಉಳಿಯಿತುಮತ್ತೆ ಮತ್ತೆ ಸಾವಿನ ಮಾತೇಕೆ ಆಡುವಿರೆಂದು ಕೇಳಿದೆ
ಛೀ ಹುಚ್ಚಿ ಅದಿಲ್ಲದಿದ್ದರೆ ಅನುಕ್ಷಣವು ನಾನಿನ್ನ ಪ್ರೀತಿಸುತ್ತಿರಲಿಲ್ಲವೇನೊ...


೧೦
ಎಷ್ಟು ಸಲ ಕೂಡಿದರೂ ನಿನ್ನ ಕೂಡುವ ಬಯಕೆ ಹೊಸತಾಗಿಯೇ ಹುಟ್ಟುವುದು
ನಿನ್ನ ಅಂಗಳದಲಿ ಮುಂಜಾನೆ ಅರಳಿದ ಹೂವಿನ ಗಂಧ ಹಳತಾಗುವುದಿಲ್ಲ


೧೧
ಬದುಕಿನ ಸಿದ್ದ ಮಾದರಿ ಒಡೆದುಹೋದ ಮೇಲೆ ಲೋಕದ ಪ್ರಶ್ನೆಗಳೆದುರಿಸದೆ ಬದುಕಲಾಗದು
ಎಷ್ಟು ಮಾತಾಡಿದರೇನು ಬೇರು ಎದೆಗೆ ಇಳಿಬಿದ್ದರಷ್ಟೇ ಹೂವರಳುವವು ಮಿಡಿ ಉಳಿಯುವವು


೧೨
ನಿನ್ನ ನೆನಪಾಯಿತೆಂದೆ ನನ್ನ ಹೋದ ಜೀವ ಮರಳಿ ಬಂತು
ಎದೆಯ ಜೀವ ಮಿಡಿತ ನಿಂತ ಮೇಲೆ ಎದೆಯೊಳಗಿನ ಬೆಳಕನ್ನು ಯಾವ ಕಣ್ಣೂ ಉಳಿಸಿಕೊಳ್ಳದು


೧೩
ಗೊತ್ತಿರುವ ಏಕೈಕ ವಿಳಾಸ ಕಳೆದುಹೋಗಿ ಬದುಕು ಕಾಲದ ಭಾವಿಯೊಳಗೆ ಬಿದ್ದಿತು
ಸದ್ದಿಲ್ಲದೆ ಮೊಳಕೆಯೊಡೆದ ಸಸಿ ಮರವಾಗಿ ಬೀಳುವಾಗಷ್ಟೇ ಸದ್ದು ಮಾಡುವುದು

೧೪

ಈ ಬೆಳಗಿನ ಹಾಗೆ ನೀನು ಕಂಡ ಮೇಲಷ್ಟೇ ನಾ ಕೊಡುವ ಬಾಕಿ ಇನ್ನೂ ಉಳಿದಿದೆಂದು ಖಾತ್ರಿಯಾಯಿತು
ನಿನ್ನ ಹಾಗೆ ಈ ಸಾವು ಅಷ್ಟೆ ಬಾಕಿ ಉಳಿಸಿಕೊಂಡವರನ್ನು ಹುಡುಕಿಕೊಂಡು ಬರುವುದೇಯಿಲ್ಲ


೧೫
ಗುರುತು ಅಳುಕಿಸಿ ಸುಮ್ಮನಿರು ಎಂದೆ ಸುಮ್ಮನಿದ್ದೇನೆ ಸುಮ್ಮನಿರುವ ಮೌನದಲ್ಲೂ ನೀನಿರುವೆ
ಇನ್ನೇನು ವಿಳಾಸವಿಲ್ಲದವರ ಮನೆಗೆ ಯಾವ ಕೊರಿಯರ್ ಪ್ರೇಮಸಂದೇಶ ತಲುಪಿಸದು


೧೬
ಮಾತುನಿಂತ ಕೊರಳು ಈ ಬಾರಿ ಸೋಲಬಾರದೆಂದು ಮತ್ತೆ ಮಾತನ್ನಪ್ಪಿತು
ದನಿಯಾಗುವ ಆಪ್ತರೆ ಕದವು ಹಾಕಿಕೊಂಡಿರುವಾಗ ಕೊನೆಗೂ ತೊಳಲ್ಲಿ ಮೌನವೆ ಉಳಿಯಿತು


೧೭
ಇನ್ನಾದರೂ ಬಿಟ್ಟುಬಿಡು ಲೋಕದ ಹಂಗು
ಬಾ ಬದುಕಿನ ಈ ಕಡೆಯ ರಾತ್ರಿಯನ್ನಾದರೂ ಪ್ರೀತಿಯಲ್ಲಿ ಅದ್ಡೋಣ

೧೮

ಎಲ್ಲಡೆ ಅಷ್ಟೆ ಒಳಗಡೆ ಒಂದು ಸದ್ದಿರುವುದೆಂದೇ ಎಲ್ಲ ಮೌನಗಳು ಬದುಕಿರುವವು
ನನ್ನೀ ಉರಿಯುವ ತೀವ್ರತೆಯನ್ನು ಮನ್ನಿಸು ಉರಿಯದೆ ಹೋದರೆ ಯಾವ ಹಣತೆಯೂ ಬದುಕುವುದಿಲ್ಲ


೧೯
ಹುಲ್ಲುಕಡ್ಡಿಯ ಪಾಠ ದೊಡ್ಡದೇನಲ್ಲ
ನೀನೆಷ್ಟೆ ತುಳಿ ನಿನ್ನ ಕಾಲಡಿಯ ಹುಲ್ಲು ಗರಿಕೆಯ ಚೈತನ್ಯವನ್ನು ಉಡುಗಿಸಲಾಗದು


೨೦
ನನ್ನ ಯಾಚನೆ ನಿನಗೆ ಹೇಗೆ ಅರ್ಥವಾಯಿತೋ ಬೊಗಸೆಗೆ ಮಣ್ಣು ತುಂಬಿಕೊಂಡೆ
ಇನ್ನೇನು ಬೇಕು ನನಗೆ ಬೀಜ ಮೊಳೆಯಲು ಇಡೀ ಭೂಮಿಯೇ ಬೇಕೆಂದೆನಿಲ್ಲ


೨೧
ನಿನ್ನ ನಾಲಿಗೆಗೆ ರಕ್ತದ ರುಚಿ
ನನ್ನ ಗಾಯ ವಾಸಿಯಾಗುವುದೆಂತು ?


೨೨
ನಿನ್ನನು ನನ್ನೊಳಗೆ ಬದುಕಿಸಿಕೊಳ್ಳುವುದೆಂದರೆ ಬೇರೇನಲ್ಲ ಜೀವವೇ
ಕತ್ತಲಿರುವ ಹಾದಿಯಲಿ ಹಣತೆಯಾಗಿ ಉಳಿದುಹೋಗುವುದು


೨೩
ಅಂಗಳದಲಿ ಕಸ ಬಿದ್ದಷ್ಟು ತಿಪ್ಪೆಯ ಗಾತ್ರ ದೊಡ್ಡದಾಗುವುದು
ಎರಡು ಸಾಲಿನವ ನಾನು ; ಹಿಡಿ ಮಣ್ಣಿನಲಿ ಮೊಳೆಯದ ಬೀಜವನ್ನು ಇಡೀ ಭೂಮಂಡಲದಲಿಟ್ಟರೇನು ?


೨೪
ಎಂದೋ ಮೂಡಿದ ಈ ಕನಸು ಕಮರುವಾಗ ಲೋಕವೆ ತುದಿಗಾಲಲಿ ನಿಂತು ನೋಡುವ ಹಾಗಾಯ್ತು
ಯಾವಾಗಲೂ ಹೀಗೇನೆ ಮೊಳೆಯುವ ಮೌನ ಆಧಾರ ತಪ್ಪಿ ಕುಸಿಯುವಾಗ ಮಾತಾಗಿ ಬಿಡುವುದು


೨೫
ಹುಣ್ಣಿಮೆಯ ಬೆಳದಿಂಗಳಲ್ಲ ಸ್ಮಶಾನದ ಹಾದಿ ನೋಡಿ ನಿನ್ನೆಡೆಗೆ ಮತ್ತೆ ಧಾವಿಸಿ ಬಂದವನು ನಾನು
ಮತ್ತೇನು ಕತ್ತಲಾಗದೇ ಹೋದರೆ ಬೆಳಕು ಕೊಡುವ ಹಣತೆಯನ್ನೂ ಕೇಳುವವರು ಇರುವುದಿಲ್ಲ


೨೬
ಹಗಲುಗಣ್ಣಿಗೆ ಕತ್ತಲಿರುವ ತನಕ
ತಾರೆಗಳ ಮೈಬಣ್ಣ ಅಗಾಧವೆನಿಸುವುದು


೨೭

ರೆಪ್ಪೆ ತಾಕಿದ ಮೇಲೆ
ಯಾವ ತುಟಿಯು ಕವಿತೆ ಬರಿಯಲಾರದು ಹೇಳಿ ?


೨೮
ನಿನಗೆ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಬಂದಿದ್ದರೆ
ನಿನ್ನಿಂದ ಈಗ ಕತ್ತಲಾಯಿತೆಂಬ ಮಾತೇ ಬರುತ್ತಿರಲಿಲ್ಲ


೨೯
ಅಂತೂ ಕೊನೆಗೊಮ್ಮೆ ಭೂಮಿಗೆ ಬೆಳಕು ಬೇಕೆನಿಸಿತು
ಭೂಮಂಡಲದ ತುಂಬ ಸದ್ದಿಲ್ಲದೆ ಕತ್ತಲಾವರಿಸಿತು


೩೦
ನಡೆವ ಹಾದಿಯಲಿ ಎಷ್ಟು ಮಾತಾಡಿದರೂ ಮನದ ಒಳಗುಟ್ಟುಗಳು ಮಾತಾಗದೆ ಉಳಿದುಬಿಟ್ಟವು
ಕಾಣುವ ಬೆಳಕು ಮುಟ್ಟಲಾಗದ ಹಾಗೆ ಮರಿಯಲಾಗದ ಪ್ರೀತಿ ಮುಟ್ಟಲಾಗದ ಕನಸು ಮಾತಾಗದೆಹೋದವು


೩೧
ಈ ತಿರುವಿನಲ್ಲಿ ಎಲ್ಲಿಯತನಕ ನೀನು ಗೆಲ್ಲುತ್ತಲೇ ಇರುವೆಯೋ
ಅಲ್ಲಿಯವರೆಗೆ ನನ್ನ ಮನುಷ್ಯನಾಗಿಯೇ ಉಳಿಸಿದ ನಿನ್ನ ಋಣ ಹೆಗಲ ಮೇಲೆ ಹೆಚ್ಚುತ್ತಲೇ ಇರುವುದು


೩೨
ಬಾಗಿದ ಮಂಡಿ ಚಾಚಿದ ಬೊಗಸೆ ಯಾಚನೆಯ ರೆಪ್ಪೆಗೆ ನಿನ್ನೆದುರು ಸೋಲು ಹೊಸದೇನಲ್ಲ
ಪ್ರತಿಸಲವೂ ನಿನ್ನ ಸೋಲಷ್ಟೇ ನಿನ್ನೊಳಗಿನ ಪ್ರೀತಿಯನ್ನು ಜೋಪಾನವಾಗಿರಿಸುವುದು


೩೩
ಯಾರ ಮನೆಯಲ್ಲಿಯೂ ಕಾಯಂ ವಾಸಿಯಲ್ಲದ ಗಾಳಿ ಎಲ್ಲರ ಮನೆಗಳ ಕದ ತಟ್ಟುವುದು
ಹೊರಹೋಗಲೆಂದೇ ಒಳ ಬರುವ ಗಾಳಿಯನು ಒಳಗೆ ತಗೆದುಕೊಳ್ಳದೆ ಯಾರೂ ಬದುಕುವುದಿಲ್ಲ ನಾನು ಸಹ೩೪
ಕಳೆದುಹೋಗುವ ಕಾಲದಲಿ ಇರುಳು -ಬೆಳಕಿನ ಹಾಗೆ ಈ ಪ್ರಿತಿಯೇಕೆ ಉಳಿಯಿತು ?
ನಿನ್ನ ಸಂಗದಲಿ ಕಂಡ ಕನ್ನಡಿ ಹೇಳಿತು ; ಬದುಕುವುದು ಅಳಿಯುತ್ತದೆ ಬದುಕಿಸುವುದಲ್ಲ


೩೫
ನಿನ್ನೆ ನೀಡಿದ ಸಂತೃಪ್ತಿ ನಿನಗಿರಬಹುದು ಬೆಳಗೆದ್ದು ನೋಡಿದರೆ ನಿನ್ನೆಡೆಗೆ ಚಾಚಿದ ಬೊಗಸೆ ಖಾಲಿಯಾಗಿದೆ
ನಿನ್ನಂತೆ ಭೂಮಿ ಒಡಲಲಿ ಸುಳಿವ ದಾಹ ಕಳಕೊಂಡು ಆತ್ಮಘನತೆ ಇಲ್ಲದ ಹಾಗೆ ಬದುಕಲು ನನಗೆ ಬಾರದು


೩೬
ಬಾಯಿ ಮುಚ್ಚಿಸಿದವರೆದುರೇ ನಾನು ಏನು ಹೇಳಬೇಕಿತ್ತೊ ಅದೆಲ್ಲವನ್ನು ಕಂಗಳಿಂದ ಹೇಳಿದೆ
ಪಂಜರದ ಹಕ್ಕಿಯ ಹಾಗೆ ಇಷ್ಟಪಟ್ಟವರೆದುರಲ್ಲಿ ಕನಸಿನ ಭಾಷೆಯನು ದೇಹದಂಗುಲಂಗುಲವೂ ಆಡುವುದು


೩೭
ಮಗಳು ಕೇಳಿದಳೆಂದು ಊರ ತುಂಬ ಹುಡುಕಿದರೂ ಕಾಣದೆ ಹೋದ ಗುಬ್ಬಿಗಳನು ದೂರಿದೆ
ಹಿಂತಿರುವಾಗ ಕಾಲು ಒಜ್ಜೆನಿಸಿ ಹೆಗಲ್ಮುಟ್ಟಿದರೆ ಗುಬ್ಬಿಗಳ ವಾಸ ನಾಶ ಮಾಡಿದ ಕಳಂಕ ಹಗಲೇರಿತ್ತು


೩೮
ನಿನ್ನನು ಕಣ್ಣಲ್ಲಿ ಕಣ್ಣಿಟ್ಟು ನೋಡುವುದ್ಯಾಕೆ ?
ನನ್ನ ಬೆನ್ನು ನನಗೆ ಸದಾ ಕಾಣಬೇಕೆನಿಸುವುದು

೩೯

ಕಣ್ಣೇ ಮಂಜಾಗಿರುವಾಗ
ಎದುರಿಗಿಟ್ಟುಕೊಂಡಿರುವ ಕನ್ನಡಿಯದೇನು ತಪ್ಪು ?


೪೦
ನಾನು ಹೊರಗಿನಿಂದ ಬಾಗಿಲು ತಟ್ಟಿದೆ ನೀನು ಒಳಗಿನಿಂದ ಬಾಗಿಲು ತೆರೆದೆ
ಹೇಗೆ ಸಾಧ್ಯ ಹೇಳು ನಾವು ಮುಖಾಮುಖಿಯಾಗಲು ?

Sunday, February 26, 2012

ಒಂದು ಪದ್ಯ - ಪೇಸ್ ಬುಕ್ಕ್ ಸ್ಪಂದನ

ಅಕ್ಷರಕ್ಕಾಗಿ ಚಾಚುವ ಬೊಗಸೆಯೇ
ನನ್ನಲ್ಲೆನಿದೆ ?
ನನ್ನೆಲ್ಲಾ ಅಕ್ಷರಗಳು
ಹುಟ್ಟುವುದೇ ನಿನ್ನೋಡಲಿನಿಂದ
ಏನೂ ಬರಿಯಲಿಲ್ಲವೆಂದು ಹಾಗೆ
ದೂರಬೇಡ
ಈಗಲಾದರೂ ಹೇಳು
ಬೇರಿಗೆ ನೀರಾಗದೆ
ಯಾವ ಮರ ಹೂ ಬಿಟ್ಟೀತು ?

  • Chetan Solagi ನಿಜ ಸರ್, ಆದರೆ ಆದುನಿಕತೆಯ ನಿಟ್ಟುನಿಸಲ್ಲಿ ಬದುಕುವ ಕೆಲ ಮನಸ್ಸುಳು ಬೊನ್ಸಾಯ್ ತರಹದ ಕುಂಡಲಲ್ಲಿ ಬೆಳೆಸುವ ತರ ಬೆಳೆದು ಹೂ ಬಿಟ್ಟು ಬಿಡುತ್ತಾವಲ್ಲಾ.....................................................~


  • Bhuvana S Gowda superb..:-) but i wanted to ask u a quest from long time.. ki where do u get the true inspiration from? bcoz bariyodu 2-5 lines aadroo tumbaane arthagarbhitavaagirutte..:-) to be honest am a big fan u as i read almost all posting of urs n like it to the core..:-)


  • Basavaraja Halli ನೈಸ್
  • Basavaraj Sulibhavi ಏನು ಹೇಳಲಿ ನಿಮಗೆ .... ? ಪದದಾಚೆಯ ಮೌನ ಮಾತ್ರ ನನ್ನಲ್ಲಿ ಉಳಿದುಕೊಂಡಿದೆ . ನಾನು ಲಿಪಿಕನಂತೆ ಅಷ್ಟೇ .. ನನ್ನೊಳಗಿನ ಒಡಲು ಅಕ್ಷರವಾಗುವ ಪರಿಯದು .... ನಿಮಗೆ ನಮನಗಳುBhuvana S Gowda
  • · 1
  • Basavaraj Sulibhavi ಬಿ ಎಂ ಬಷೀರ , ಜಾಹ್ನವಿ , ಚೇತನ , ಬಸವರಾಜ್ ಹಳ್ಳಿ , ನಿಮಗೆಲ್ಲ ನಮನಗಳು ...


  • Ramesh Megaravalli Berige neerilladiddare gida chigureetu hegfe? For the creation of poem, the feed of good reaeding is essential. Good lines Basavaraj.  • Murali Krishna Maddikeri Basavaraj Sulibhavi avare.. Bhuvana avru nanna haage yochistiddaare.. :) adre naane senior nimma abhimaanigalalli :))) hegideeri ?


  • Basavaraj Sulibhavi Ramesh Megaravalliರಮೇಶ ನಿಮ್ಮ ಸ್ಪಂದನೆಗೆ ನಮನಗಳು .... ಪದ್ಯವಾಗಿಸುವ ನನ್ನೊಳಗಿನ ಚೇತನಕ್ಕೆ ನಾನು ಋಣಿ


  • Ramesh Megaravalli I love and respect the poet in you.


  • Basavaraj Sulibhavi Murali Krishna Maddikeriಮುರುಳಿಯವರೇ ನೀವು ಯಾವಾಗಲೂ ನನ್ನ ನಾಲಿಗೆ ಆಡದ ಹಾಗೆ ಮಾತುಗಳನ್ನು ಆಡಿಬಿಡುವಿರಿ ... ಮೌನ ಆಗುವುದಷ್ಟೇ ನನಗುಳಿದಿರುವ ದಾರಿ ... ನಿಮ್ಮ ಸ್ಪಂದನವನ್ನು ಎದೆಯಲ್ಲಿ ಇಟ್ಟುಕೊಳ್ಳುವೆ ... ನಿಮಗೆ ನಮನಗಳು

ದಿನೇಶ್ ಕುಕ್ಕುಜಡ್ಕ ಅವರ ಕಾರ್ಟೂನ್
ದೇವನಲ್ಲದ ದೇವರೊಡನೆಲೋಕದ ಗುಟ್ಟು ಗೊತ್ತಾದದ್ದೇ
ಕಾವ್ಯ ರಚನೆಯ ನನ್ನ ಹಂಬಲ ಸತ್ತುಹೋಯಿತು

ಕಗ್ಗತ್ತಲ ನಡುರಾತ್ರಿ ಸರಿದು ಎಷ್ಟೋ ಹೊತ್ತಾದ ಮೇಲೆ
ಕಾಡಿಗೆ ಹಚ್ಚಿದ ನಿನ್ನ ಕಣ್ಣೆವೆಗಳು ನೆನಪಾಗುತ್ತಿವೆ
ಅವು ನನ್ನನ್ನು
ನನ್ನಿಂದಲೇ ಬಹುದೂರ ಕೊಂಡೊಯ್ಯುತ್ತಿವೆ
ಬಹುಶ್ರಮದಿಂದ ಕಟ್ಟಿದ ನನ್ನ ಜಗತ್ತು
ಕಣ್ಣೆದುರೇ ಕುಸಿದುಬೀಳುತ್ತಿದೆ

ನನ್ನ ನೆರಳೇ ನನಗೆ ಭಯ ಹುಟ್ಟಿಸುವಷ್ಟು
ಒಂಟಿ ಎನಿಸಿದ ಆ ಘಳಿಗೆ
ನನ್ನ ಬದುಕು
ಪಿಕಾಸೋನ ‘ಗೆರ್ನಿಕಾದಂತೆ
ಭವಿಷ್ಯದ ಪ್ರತಿಬಿಂಬವಾಯಿತು
ಓ ಸರಳ ಮುಗ್ಧ ಹುಡುಗೀ
ನನ್ನ ಅಂಗೈಯೊಳಗೆ ಪಾರಿಜಾತ ಹೂಗಳನ್ನು ಸುರಿದದ್ದೇಕೆ ನೀನು?
ಅನಾದಿ ಪ್ರೇಮದ ಹೊರಬಾಗಿಲ ತೆರೆಯಲೆಂದೇ?
ನಾನೀಗ ಎಲ್ಲರಿಗೂ ಹೆದರುತ್ತೇನೆ
ನೆಂಟರಿಷ್ಟರು, ಬಂಧುಬಳಗ ಮತ್ತು ಇಡಿ ಜಗತ್ತು
ಎಂದಿನಿಂದಲೋ ಎಲ್ಲರೂ ದೂರವಾಗಿದ್ದಾರೆ
ಈಗ ನಿನ್ನನ್ನೂ ಕಳೆದುಕೊಳ್ಳುವ ಭಯ
ಬೊಗಸೆಯೊಳಗೆ ಪಾರಿಜಾತದ ಹೂವು ಸುರಿದು
ಎಷ್ಟು ಗೊಂದಲಗೊಳಿಸಿದೆ ನೀನು?

ಈ ಜಗದ ಒಂದು ತುದಿ ನೀನು, ಮತ್ತೊಂದೆಡೆ ನಾನು
ತಿಳಿಯಲಿಲ್ಲ ನಡುವಿನ ಗೆರೆ ಕೊನೆಯಾದುದು ಹೇಗೆಂದು
ಆಳಗಲವಿಲ್ಲದ ಅನಂತ ಅವಕಾಶದ ವಿಶ್ವದ ಗುರುತ್ವ
ಬ್ರಹ್ಮನ ಹೊಕ್ಕುಳ ಹೂವು
ನನ್ನ ಅಣುಅಣುವಿನೊಳಗೂ ಕುರುಡು ಕಾಮ
ತೀವ್ರ ಪ್ರೇಮ ಅನುಭವಿಸಿದ ಮೇಲೆ
ಅದರ ವ್ಯಾಖ್ಯಾನ ನಿಲ್ಲಿಸಿದ್ದೆ
ನಿರ್ವಂಚನೆಯ ನಿನ್ನ ಪ್ರೇಮದ ಮಾತು ಕೇಳಿ
ಮರುವ್ಯಾಖ್ಯಾನಕ್ಕೆ ಧೈರ್ಯ ಸಾಲುತ್ತಿಲ್ಲ
ಮನುಷ್ಯ ಮತ್ತು ಮೃಗಗಳಿಗೆ ಪ್ರೇಮಿಸಲು ಥರಾವರಿ ರೀತಿಗಳಿವೆ
ಮಿಲನವೇ ಅದರ ಮಿತಿ
ಆದರೆ ಮೃಗವಾದ ಮನುಷ್ಯನ ಜೊತೆ
ಮಾನವ ಪ್ರೇಮ ಸಾಧ್ಯವಿಲ್ಲ

ನನಗೀಗ ಪಡೆಯಲೇಬೇಕೆಂಬ ಹಸಿವಿಲ್ಲ, ಬಂಧನದ ಸರಪಳಿಯಿಲ್ಲ
ಆದರೂ ನನ್ನೊಳಗೆ ಭೂತವೊಂದು ಹಿಂಸಿಸುತ್ತಿದೆ
ದುರ್ದೈವಿ, ಅಸಹಾಯಕ ನಾನು
ನಿನ್ನ ಕೈ ಹಿಡಿಯಲೇ ಎಂದು ಮತ್ತೆ ಕೇಳಲಾರೆ
ಬದುಕಿಡೀ ನನ್ನ ಬಾಯ್ತುಂಬಿದ ವಿಷವ
ತುಟಿ ತೊಳೆದು ಮುತ್ತಿಟ್ಟು ನಿನಗೆ ದಾಟಿಸಲಾರೆ
ನಿನ್ನ ಕರುಣೆ ಗಳಿಸಲು ಗತ ಬದುಕನ್ನು ಆಪಾದಿಸುತ್ತಿಲ್ಲ
ನನ್ನ ಕತ್ತಲ ಬದುಕಿನ ಹೋರಾಟವನ್ನು
ನಿನ್ನ ಮೇಲೆ ಹೇರಬಯಸುವುದೂ ಇಲ್ಲ
ದಿಬ್ಬಣದ ಮೆರವಣಿಗೆಯನ್ನು
ನಡುವೆ ಬಿಟ್ಟೋಡುವ ಮೂರ್ಖ ನಾನಲ್ಲ
ಅನಾಥ ಕ್ಷಣಗಳ ಅನುಭವಿಸಿ
ನಂತರ ಬರುವೆ ನಿನ್ನ ಬಳಿ
ನೆರವಿಗಾಗಿ..

ನನ್ನ ಒಮ್ಮುಖ ಪ್ರೀತಿಗೆ ನಾನೇ ಸಾಕ್ಷಿ
ಅಥವಾ
ಬೆಂಕಿ ಒಮ್ಮುಖವಾಗಿ ಉರಿಯುತ್ತಿದೆ
ದೇಶ ಕಾಲ ಆತ್ಮಗಳ ಮೀರಿದ
ಪ್ರೇಮ ಸಾಕಾರದ ಅರೆಬರೆ ಕತೆಗಳನ್ನು ನಿನಗೆ ಹೇಳಲಾಗಲಿಲ್ಲ
ನೀ ಕೇಳಿದ್ದೆ
‘ಅದೆಷ್ಟು ಬಾರಿ ಹೀಗೆ ಉರಿದಿರಬಹುದು ನೀನು?

ನಿನಗೆ ಮುಳ್ಳಿರದ ಗುಲಾಬಿ ಕೊಡುವಷ್ಟು
ನನ್ನ ಹೆದರಿಸಿದ್ದು ಯಾವುದು?
ಪ್ರೇಮಕಾಣಿಕೆಯಾಗಿ ಹೂಎಲೆ ನೀಡುವುದು ಹಳೆಯ ರೂಢಿ
ನಮ್ಮ ಬದುಕು, ಜಗತ್ತು ನಿಸರ್ಗದಂತೇ
ಬದಲಾಗುತ್ತಿದೆ..
ಈಗ ಪ್ರೇಮಿಗೆ ಪೇಪರು ಬಾಣ ಎಸೆಯುವುದಿಲ್ಲ
ತಮ್ಮ ಹೃದಯದ ಮಧುರ ಯಾತನೆಗಳನ್ನೆಲ್ಲ
ಮಿನಿ ಕ್ಷಿಪಣಿಗಳಾಗಿಸಿ
ನಿಖರ ಗುರಿ ತಲುಪಿಸುತ್ತಾರೆ

ಒಮ್ಮುಖ ಪ್ರೀತಿಯ ಕೊಡುಗೆಯಾಗಿ
ನಿನಗೊಂದು ಬಿಳಿ ಗುಲಾಬಿ ನೀಡಿದ್ದೆ
ಅದು ನನ್ನ ನಿನ್ನ ನಡುವಿನ
ತಲೆಮಾರುಗಳ ಅಂತರ ಮುಚ್ಚಬಹುದೆಂದು ಭಾವಿಸಿದ್ದೆ
ತಿಳಿದಿರಲಿಲ್ಲ ಆಗ
ಗುಲಾಬಿ ಪ್ರೇಮಸಂಕೇತವೇ ಅಲ್ಲವೆಂದು
ಹುಲುಸಾಗಿ ಬೆಳೆಯುತ್ತಿರುವ ನಿನ್ನ ಮಹಾನಗರಕ್ಕೆ ಬರುವ ಮುನ್ನ
ಆ ಅಪರಿಚಿತ ಹೊಸ ಲೋಕ ತಲುಪುವ ಮುನ್ನ
ಪ್ರೇಮದಡವಿಯಿಂದ ಹೊರಟೆ,
ಕಾಡುಮೇಡು ದಾಟಿದೆ
ಕಣ್ಣಗಲಿಸಿ ನಿನ್ನ ಆಸುಪಾಸನೆಲ್ಲ ನೋಡಿದೆ
ನಿನ್ನ ಮನೆ, ನೆರೆಹೊರೆ, ಬಂಧುಬಳಗ
ಸುರಕ್ಷಿತ ಮೂಲೆಯೊಂದನ್ನು ಹುಡುಕಿಕೊಂಡೆ
ಆಸರೆಗಾಗಿ ನಿನ್ನ ಕೈ ಹಿಡಿಯಬಯಸಿದ್ದೆ
ವರ್ಷಗಟ್ಟಲೆ ಬೆನ್ನ ಮೇಲೆ ಹೊತ್ತ ಶಿಲುಬೆಯ ಭಾರವನ್ನು
ಚಣಹೊತ್ತಿನ ಮಟ್ಟಿಗಾದರೂ ಇಳಿಸಬಯಸಿದ್ದೆ
ಬದುಕಿಡೀ ಎಸಗಿದ ಪಾಪಕೃತ್ಯಗಳಿಗೆ
ಇಲ್ಲದ ದೇವರೆದುರು ಮೊಣಕಾಲೂರಿ
ಕ್ಷಮೆ ಯಾಚಿಸಬಯಸಿದ್ದೆ

ಅಂಗಾತ ಮಲಗಿ ಮಂದಿರದ ಸೂರಿನಲ್ಲಿ
ಮೈಕೆಲೆಂಜೆಲೋ ಚಿತ್ರಿಸಿದ ಬೈಬಲನ್ನು
ಅನುಭವಿಸ ಬಯಸಿದ್ದೆ
ಅವನ ಬೆನ್ನ ಹಿಂದೆ ಸ್ಫೂರ್ತಿಯಾಗಿ
ನಿಂತ ಹೆಣ್ಣ ಹುಡುಕಬಯಸಿದ್ದೆ

ಸಹಾಯ ಮಾಡಬಲ್ಲೆಯಾ ನನಗೆ?

-ನಾಮದೇವ ಸಾಳ
ಕನ್ನಡಕ್ಕೆ : ಡಾ ಎಚ್ ಎಸ್ ಅನುಪಮಾ

ಎರಡು ಪದ್ಯಗಳುನಿನ್ನ ಬೆರಳಿನ ಮೇಲಿನ ಮೋಹ
ನನಗಿನ್ನೂ ಹಾಗೆ ಇದೆ
ನಿನ್ನ ಕಾಣಲೆಂದು
ಚಲಿಸಿದೆ ಬೆಳಕಿನ ಹಾಗೆ
ಚಾಚಿದೆ ಬಯಲಿನ ಹಾಗೆ
ಹರಡಿದೆ ಗಾಳಿಯ ಹಾಗೆ
ತುಂಬಿಕೊಂಡೆ ಭೂಮಿಯ ಹಾಗೆ
ಹಾಡಿದೆ ಹಕ್ಕಿಯ ಹಾಗೆ
ಶುದ್ಧ ಲೌಕಿಕಲೆ
ಅಲ್ಲೆಲ್ಲೋ ಕಾಣದ ನಿನ್ನನು
ಆ ರೋಗಿ
ಕಣ್ಣೀರು ಒರೆಸುವ ಬೆರಳಿನಲ್ಲಿ
ನಿನ್ನ ತೋರಿಸಿದನಷ್ಟೇಅಕ್ಷರಕ್ಕಾಗಿ ಚಾಚುವ ಬೊಗಸೆಯೇ
ನನ್ನಲ್ಲೆನಿದೆ ?
ನನ್ನೆಲ್ಲಾ ಅಕ್ಷರಗಳು
ಹುಟ್ಟುವುದೇ ನಿನ್ನೋಡಲಿನಿಂದ
ಏನೂ ಬರಿಯಲಿಲ್ಲವೆಂದು ಹಾಗೆ
ದೂರಬೇಡ
ಈಗಲಾದರೂ ಹೇಳು
ಬೇರಿಗೆ ನೀರಾಗದೆ
ಯಾವ ಮರ ಹೂ ಬಿಟ್ಟೀತು ?

ನೀನು ನನಗೆ ಸತ್ಯದ ಪಾಠಗಳನ್ನು ಹೇಳಿದ್ದು ಹೀಗೆ.. « ಅವಧಿ / Avadhi

ನೀನು ನನಗೆ ಸತ್ಯದ ಪಾಠಗಳನ್ನು ಹೇಳಿದ್ದು ಹೀಗೆ.. « ಅವಧಿ / Avadhi

ಆಕಾಶವೆಂಬ ಚಪ್ಪರದ ಕೆಳಗೆ

ಶೂದ್ರ ಶ್ರೀನಿವಾಸ

ಸುಮಾರು ಮೂರು ದಶಕಗಳಿಗಿಂತಲೂ ಹಿಂದಿನ ಮಾತು. ಆಕಾಶವೆಂಬ ಚಪ್ಪರದ ಕೆಳಗೆ ಭಾರತದ ಉದ್ದಗಲದಿಂದ ಬಂದ ನಾವು ಸೇರಿದ್ದೆವು. ಒಟ್ಟು ಎಪ್ಪತ್ತು ಮಂದಿ ಇದ್ದೆವು. ಲೇಖಕರು, ಕಲಾವಿದರು ಮತ್ತು ಸಾಮಾಜಿಕ ಕಾರ್ಯಕರ್ತರು. ರಾತ್ರಿ ಒಂಬತ್ತೂವರೆಯಾಗಿತ್ತು. ಚಂದ್ರ ಆಕಾಶದ ಮಧ್ಯಕ್ಕೆ ಬಂದಿದ್ದಾನೆ. ಅವನ ಸುತ್ತಲೂ ನಕ್ಷತ್ರಗಳೆಂಬ ಲಲನೆಯರು ಸಾವಿರಾರು ವರ್ಷಗಳಿಂದಲೂ ಮೋಹಿಸುತ್ತಲೇ ಬಂದಿದ್ದರೂ;ಇನ್ನೂ ಸಾಲದೆಂಬಂತೆ ನೆರೆದಿದ್ದಾರೆ.ಇದನ್ನೆಲ್ಲ ನೋಡುತ್ತಲೇ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುತ್ತಿದ್ದೆವು. ಕೆಲವರಿಗೆ ಹಿಂದಿ ಬರುತ್ತಿರಲಿಲ್ಲ. ಮತ್ತಷ್ಟು ಮಂದಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಮಿಕ್ಕವರಿಗೆ ಮಾತೃ ಭಾಷೆಯೇ ಜೀವಭಾಷೆ, ಹೋರಾಟದ ಭಾಷೆಯಾಗಿತ್ತು. ಅಂಥ ಹೋರಾಟದ ಭಾಷೆಯಲ್ಲಿ ರಾಜಸ್ಥಾನದ ಗುಡ್ಡಗಾಡು ಜನರ ಮಧ್ಯೆ ಕೆಲಸ ಮಾಡುತ್ತಿದ್ದ ಪ್ರಮೀಳಾ ಎಂಬ ಮಹಿಳೆ ತನ್ನ ಹಿನ್ನೆಲೆಯನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದು; ಮದುವೆಯಾಗದೆ ನಾಳೆಯೇ ಈ ಸಮಾಜ ಸುಧಾರಣೆಯಾಗಿ ಬಿಡಬೇಕು ಎಂಬ ಭಾವನಾತ್ಮಕ ತವಕವನ್ನು ತುಂಬಿಕೊಂಡಿದ್ದಳು. ತುಂಬ ಲವಲವಿಕೆಯ ಹೆಂಗಸು. ಆ ಲವಲವಿಕೆಯಿಂದಲೇ ಎಲ್ಲರ ಮಧ್ಯೆ ಎದ್ದು ಕಾಣುವಂತಿದ್ದಳು. ಆಕೆ ಕೇವಲ ಸುಂದರ ಮಾತಿನ ಮಲ್ಲಿ ಮಾತ್ರವಾಗಿರಲಿಲ್ಲ. ಅದಕ್ಕೆ ಪೂರಕವಾಗಿ ಜಾನಪದ ಹಾಡು ಮತ್ತು ಕುಣಿತವನ್ನು ರೂಢಿಸಿಕೊಂಡಿದ್ದಳು.

ನಾವೆಲ್ಲ ಸೇರಿದ್ದಿದು ಪಾಂಡಿಚೇರಿಯಿಂದ ಅರುವತ್ತು ಕಿ.ಮೀ. ದೂರದಲ್ಲಿಯ ಒಂದು ಅತ್ಯಂತ ಹಿಂದುಳಿದ ಗ್ರಾಮದ ಪ್ರದೇಶದಲ್ಲಿ. ಬಡತನವೆಂಬುದು ಅತ್ಯಂತ ಶ್ರೀಮಂತಿಕೆಯಿಂದ ತುಳುಕಾಡುತ್ತಿತ್ತು. ಯಾರಿಗೂ ಸರಿಯಾಗಿ ಮೈತುಂಬ ಬಟ್ಟೆ ಇರಲಿಲ್ಲ. ಇದ್ದಬದ್ದ ಬಟ್ಟೆಯೆಲ್ಲ ದುಡಿಮೆಯ ಮತ್ತು ವಾತಾವರಣದ ಬೆವರಿಗೆ ಹಾಗೂ ಕೊಳೆಗೆ ರಟ್ಟಿನ ರೀತಿಯಲ್ಲಿ ಆಗಿತ್ತು. ಅಲ್ಲಲ್ಲಿ ಹಳ್ಳಗಳು. ಅದರಲ್ಲಿ ಕೊಚ್ಚೆಯ ನೀರು. ಹುಡುಗರು ಮೈಯೆಲ್ಲ ಕೆಸರು ಮಾಡಿಕೊಂಡು ಆಡುತ್ತಿದ್ದರು. ಆ ಊರಿಗೆ ಇನ್ನೂ ಶಾಲೆ ಬಂದಿರಲಿಲ್ಲ.

ಪಕ್ಕದ ಊರಿನಲ್ಲಿ ಶಾಲೆ ಇತ್ತು. ಅಲ್ಲಿಗೆ ಇಲ್ಲಿ ಕೆಸರಿನಲ್ಲಿ ಆಡುವ ಹುಡುಗರು ಕಡ್ಡಾಯವಾಗಿ ಶಾಲೆಗೆ ಹೋಗಬೇಕೆಂದೇನು ಇರಲಿಲ್ಲ. ವಿದ್ಯುತ್ ಹೊಸದಾಗಿ ಬಂದಿತ್ತು. ಆದರೆ ಅದು ಕೂಡ ಎಲ್ಲ ಮನೆಗಳಿಗೂ ತಲುಪಿರಲಿಲ್ಲ. ಯಾರೋ ಕೆಲವರ ಮನೆಗೆ ಮಾತ್ರ ಇತ್ತು. ಮಿಣಕ್ ಮಿಣಕ್ ಎಂದು ಸಣ್ಣ ಪ್ರಮಾಣದಲ್ಲಿ ಬೆಳಕು ಕೊಡುತ್ತಿತ್ತು. ಬಹುಪಾಲು ಮನೆಗಳಲ್ಲಿ ಹೊಂಗೆ ಎಣ್ಣೆಯ ದೀಪಗಳು. ನಾನೂ ಬಹಳಷ್ಟು ವರ್ಷ ಅಂಥ ದೀಪದ ಬೆಳಕಿನಲ್ಲಿಯೇ ಬೆಳೆದವನು. ಮೊದಲನೆಯ ಬಾರಿಗೆ ಊರಿಗೆ ವಿದ್ಯುತ್ ಬಂದಾಗ; ಬರುವುದಕ್ಕೆ ಕಂಬಗಳನ್ನು ಎತ್ತಿ ನಿಲ್ಲಿಸುವಾಗ, ತಂತಿಯನ್ನು ಎಳೆದು ಕಟ್ಟುವಾಗ ಐಸಾ ಐಸಾ ಹಲಕ್ ಎಂದು ಕೆಲಸ ಗಾರರು ಕೂಗುತ್ತಿದ್ದರೆ, ನಾವು ಹುಡುಗರು ನಮ್ಮ ದೇಶ ಎಷ್ಟು ಮುಂದುವರಿಯುತ್ತಿದೆ ಎಂದು ಸಂಭ್ರಮದಲ್ಲಿದ್ದೆವು.

ಕೇವಲ ನಾವು ಹುಡುಗರು ಯಾಕೆ; ಹಿರಿಯರ ಬಾಯಲ್ಲೂ ನಮ್ಮೂರಿಗೆ ವಿದ್ಯುತ್ ಬರುತ್ತಿದೆ ಎಂಬ ಮಾತುಗಳೇ ತುಂಬಿ ತುಳುಕಾಡುತ್ತಿದ್ದ ಕಾಲವದು. ಇಲ್ಲಿಯೂ ಅಂಥ ಸಂಭ್ರಮ ಸಣ್ಣ ಪ್ರಮಾಣದಲ್ಲಿ ಬಂದು ಹೋಗಿರಬಹುದು. ಆದರೆ ಗುಡಿಸಲುಗಳೇ ಜಾಸ್ತಿ ಇರುವಂಥ ಪ್ರದೇಶಕ್ಕೆ ಯಾವ ರೀತಿಯ ವಿದ್ಯುತ್.ಇಂಥ ಜಾಗದಲ್ಲಿ ನಾವು ಸೇರಲು ಯೋಜಿಸಿದ್ದು ಪ್ರೊ.ಭರತ್‌ಜುಂಜನ್‌ವಾಲಾ.ಈತ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಾಧ್ಯಾಪಕರಾಗಿದ್ದರು. ಉತ್ತರ ಪ್ರದೇಶದ ಅತ್ಯಂತ ಸ್ಥಿತಿವಂತ ಕುಟುಂಬ ದಿಂದ ಬಂದವರು. ಬೇರೆ ಬೇರೆ ಸ್ಕೂಲ್ ಆಫ್ ಥಾಟ್ಸ್‌ಗಳನ್ನು ಚೆನ್ನಾಗಿ ಓದಿಕೊಂಡವರು.ನಾಳೆಯೇ ಕ್ರಾಂತಿಯಾಗಬೇಕು ಎಂಬ ಮನಸ್ಥಿತಿಯನ್ನು ವಿಸ್ತರಿಸಲು ಪ್ರಯತ್ನಿಸಿದವರು.

ಪ್ರೊ. ಭರತ್ ಜುಂಜನ್‌ವಾಲಾ ಅವರು ತಮ್ಮನ್ನು ತಾವು ಅರಿತುಕೊಳ್ಳಲು; ಕೆಳವರ್ಗದವರ ಜೊತೆ ಗುರುತಿಸಿಕೊಳ್ಳಲು ಬೆಂಗಳೂರಿನ ಮಧ್ಯಭಾಗದ ಅರ್ಥಾತ್ ಅತ್ಯಂತ ಮುಖ್ಯಸ್ಥಳವಾದ ಜೆ.ಸಿ. ರಸ್ತೆಯ ಪಕ್ಕದ ಭಾರತ್ ಟಾಕೀಸ್ ಪ್ರದೇಶದ ಕೊಳಚೆ ಪ್ರದೇಶಗಳಲ್ಲಿ ಒಂದು ಗುಡಿಸಲನ್ನು ಬಾಡಿಗೆ ತೆಗೆದುಕೊಂಡು ವಾಸಮಾಡಲು ಪ್ರಯತ್ನಿಸಿದ್ದರು. ಸುಮಾರು ನಾಲ್ಕೈದು ವರ್ಷ ಅಲ್ಲಿ ವಾಸಮಾಡುವುದರ ಮೂಲಕ ಗುಡಿಸಲು ವಾಸಿಗಳ ಜೊತೆ ಸಂಪರ್ಕ ಬೆಳೆಸಿಕೊಂಡರು. ಇದಕ್ಕಾಗಿ ಕನ್ನಡ ಮತ್ತು ತಮಿಳನ್ನು ಕಲಿತರು. ನಾನಾ ರೀತಿಯ ಭಾಷೆ ಮತ್ತು ಸಂಸ್ಕೃತಿಯ ತುಂಬ ಕೆಳವರ್ಗದ ಮಂದಿ ವಾಸ ಮಾಡುತ್ತಿದ್ದ ಕೆಲವೇ ಮುಖ್ಯ ಕೊಳಚೆ ಪ್ರದೇಶಗಳಲ್ಲಿ ಇದೂ ಒಂದಾಗಿತ್ತು.

ಎಂಥೆಂಥೋ ಮಾಫಿಯಾ ಸಂಘಟನೆಗಳು ಇಲ್ಲಿ ಬೇರು ಬಿಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು. ಬಡತನವನ್ನು ದುರುಪಯೋಗ ಪಡಿಸಿಕೊಂಡು ಅಕ್ರಮ ಮನಸ್ಸುಗಳನ್ನು ಕಾರ್ಯಕರ್ತರಾಗಿ ತಯಾರು ಮಾಡುತ್ತಿದ್ದರು. ಇಂಥ ಸೂಕ್ಷ್ಮ ತಾಣದಲ್ಲಿ ತಮ್ಮ ಆದರ್ಶದ ಆಶಯಗಳನ್ನು ಒಂದು ರೀತಿಯಲ್ಲಿ ವ್ಯಾಪಾರಕ್ಕಿಟ್ಟಿದ್ದರು. ಇಂಥದ್ದನ್ನೆಲ್ಲ ಅಲ್ಲಿಯ ಮಂದಿ ಗುಮಾನಿಯಿಂದ ನೋಡತೊಡಗಿದ್ದರು. ನೋಡುವಂತೆ ಮಾಫಿಯಾದ ಮಧ್ಯವರ್ತಿಗಳು ವ್ಯವಸ್ಥೆ ಮಾಡಿದ್ದರು. ಆ ಕೊಳಚೆ ಪ್ರದೇಶದ ತಗಡು ವ್ಯಾಪಾರಸ್ಥರಿಗೆ, ಗಾಡಿಗಳಲ್ಲಿ ತಳ್ಳುತ್ತ ತರಕಾರಿ ಮಾರುವಂಥವರಿಗೆ, ಪೇಪರ್ ಸಂಗ್ರಹಿಸುವ ಹುಡುಗರಿಗೆ ಹಣ ಸಹಾಯ ಮಾಡಿ ಅವರು ಸ್ವತಂತ್ರವಾಗಿ ಬದುಕುವಲ್ಲಿ ಮಾರ್ಗದರ್ಶನ ನೀಡಲು ಪ್ರಯತ್ನಿಸಿದರು. ಇದು ಅಲ್ಲಿಯ ಮಾಫಿಯಾದ ಕಾರ್ಯಕರ್ತರಿಗೆ ಕಣ್ಣು ಕೆಂಪಗಾಗಲು ಕಾರಣವಾಯಿತು.

ಭರತ್ ಜುಂಜನ್ ವಾಲಾ ಅವರು ಡಿ.ಆರ್. ನಾಗರಾಜ್, ಕವಿ ಸಿದ್ದಲಿಂಗಯ್ಯ ಮತ್ತು ನನ್ನಂಥವರನ್ನು ತೊಡಗಿಸಿ ಕೊಂಡಿದ್ದರು. ನಾವು ಅಲ್ಲಿಯ ಮಕ್ಕಳಿಗೆ ಮತ್ತು ಕೆಲವು ಯುವಕರಿಗೆ ರಾತ್ರಿವೇಳೆ ಅಕ್ಷರಾಭ್ಯಾಸಕ್ಕೆ ತರಗತಿಗಳನ್ನು ತೆಗೆದುಕೊಂಡೆವು. ಅವರು ಪ್ರಾರಂಭದಲ್ಲಿ ಒಲವು ತೋರಿಸಿದರು. ಆದರೆ ತೊಡಕುಗಳನ್ನು ಸೃಷ್ಟಿಸುವಂಥವರೇ ಜಾಸ್ತಿಯಾದರು. ಈ ಕೊಳಚೆ ಪ್ರದೇಶದಲ್ಲಿ ಎಲ್ಲ ಕೊಳಚೆ ಪ್ರದೇಶಗಳಲ್ಲಿರುವಂತೆ ತುಂಬಾ ಕೆಳವರ್ಗದ ಮುಸ್ಲಿಂ ಬಾಂಧವರು ತುಂಬ ಇದ್ದರು. ಇವರೆಲ್ಲರನ್ನು ಒಟ್ಟಿಗೆ ಸೇರಿಸಿ ಸಾಮರಸ್ಯದ ನೆಲೆಗಳನ್ನು ಬೆಳೆಸಲು ಪ್ರಯತ್ನಿಸಿದೆವು. ಇದು ನಿಜವಾಗಿಯೂ ಸಮಸ್ಯೆಯಾಯಿತು.

ಇಂಥ ಪ್ರಮುಖ ಘಟ್ಟದಲ್ಲಿ ನಮ್ಮ ದಿನಪತ್ರಿಕೆಗಳಲ್ಲಿ ಪ್ರೊ.ಭರತ್ ಜುಂಜನ್‌ವಾಲಾ ಅವರನ್ನು ಕುರಿತು ಲೇಖನಗಳು ಬಂದಾಗ; ನಾವು ಗೆಳೆಯರು ವಿರೋಧಿಸಿದಾಗ; ಪ್ರೊ. ಜುಂಜನ್ ವಾಲಾ ಅವರು ಉತ್ತರಿಸಿದ್ದು: ನಾಳೆ ಪೊಲೀಸ್‌ನವರ ಕಡೆಯಿಂದ ತೊಂದರೆಯಾದಾಗ ಜನರ ರಕ್ಷಣೆ ಬೇಕಾಗುತ್ತದೆ ಎಂದು. ನಮಗೆ ಇದು ರೋಮ್ಯಾಂಟಿಕ್ ಅನ್ನಿಸಿತು. ಆದರೆ ಪ್ರೊಫೆಸರ್ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಲು ಹೋಗಲಿಲ್ಲ. ಅವರಿಗೆ ಇದೊಂದು ಅನುಭವವಾಗಲಿ ಎಂದು ಮೌನಿಗಳಾದೆವು. ಮನುಷ್ಯರು ಸೃಷ್ಟಿಸಿಕೊಳ್ಳುವ ಲೋಕ ಎಷ್ಟು ವಿಚಿತ್ರವಾದದ್ದು.

ಇದೊಂದು ಪ್ರಮುಖ ಘಟ್ಟವೇ ಆಗಿತ್ತು. ಇದೇ ಸಮಯದಲ್ಲಿಯೇ ಪ್ರೊಫೆಸರ್ ಅವರು ಬೆಂಗಳೂರಿನಿಂದ ಡಾ.ಡಿ.ಆರ್. ನಾಗರಾಜ್, ಡಾ. ಸಿದ್ದಲಿಂಗಯ್ಯ, ಪ್ರೊ. ಜಯಪ್ಪ, ಅಶೋಕ್ ಧಾರೇಶ್ವರ ಮತ್ತು ನನ್ನನ್ನು ಪಾಂಡಿಚೆರಿ ಬಳಿಯ ಆ ಶಿಬಿರಕ್ಕೆ ಕರೆದುಕೊಂಡು ಹೋಗಿದ್ದರು. ನಿಜವಾಗಿಯೂ ನಮ್ಮ ಬದುಕಿನಲ್ಲಿ ಒಂದು ದೊಡ್ಡ ಅನುಭವವೇ ಎಂದು ಈಗಲೂ ಸ್ಮರಿಸಿಕೊಳ್ಳುವೆ. ಆ ಒಂದು ವಾರ ಭಾರತದಲ್ಲಿಯ ಹೋರಾಟದ ಸ್ವರೂಪವನ್ನು ಅರಿಯಲು ಎಷ್ಟು ಸಹಕಾರಿಯಾಯಿತು. ಡಾ.ಸಿದ್ದಲಿಂಗಯ್ಯ ಅವರ ‘ಹೊಲೆಮಾದಿಗರ ಹಾಡು’ ಕವನ ಸಂಕಲನ ಬಂದ ಪ್ರಾರಂಭದ ದಿನಗಳವು. ಬೂಸಾ ಚಳವಳಿಯ ಬಿಸಿ ಇನ್ನೂ ಸಾಮಾಜಿಕವಾಗಿ ಹೆಚ್ಚು ಚರ್ಚೆಯಾಗುತ್ತಿದ್ದ ಕಾಲಘಟ್ಟವದು.

‘ಹೊಲೆಮಾದಿಗರ ಹಾಡು’ ಕವನ ಸಂಕಲನವಂತೂ ಕರ್ನಾಟಕದ ಮೂಲೆ ಮೂಲೆಯಲ್ಲೂ ದಲಿತ ಚಳವಳಿ ರೂಪುಗೊಳ್ಳಲು ಒಂದು ಮ್ಯಾನಿಫೆಸ್ಟೋ ರೀತಿಯಲ್ಲಿ ವಾತಾವರಣ ನಿರ್ಮಿಸಿತ್ತು. ಇದಕ್ಕೆ ಪರೋಕ್ಷವಾಗಿ ಡಾ. ಡಿ.ಆರ್. ನಾಗರಾಜ್ ಅವರ ಕೊಡುಗೆ ಅಪಾರವಾದದ್ದು.ಈ ಶಿಬಿರದಲ್ಲಿಯೂ ಡಾ.ಸಿದ್ಧಲಿಂಗಯ್ಯ ಅವರ ಮಾತು ಮತ್ತು ಕವನಗಳು ತುಂಬ ಜನಪ್ರಿಯತೆಯನ್ನು ಪಡೆಯಿತು.ಅದಕ್ಕೆ ಡಿ.ಆರ್.ನ ವ್ಯಾಖ್ಯಾನವೂ ಮುಖ್ಯ ಕಾರಣವಾಯಿತು.ಈ ರೀತಿಯಲ್ಲಿ ರಾಜಸ್ಥಾನದಿಂದ ಬಂದ ಪ್ರಮಿಳ ಅವರಿಂದ ಮೊದಲ್ಗೊಂಡು ಯಾರ್ಯಾರೋ ತಮ್ಮ ಗ್ರಾಮಾಂತರ ಅನುಭವಗಳನ್ನು ನಮ್ಮಂಥವರ ಜೊತೆ ಹಂಚಿಕೊಂಡರು.

ಈ ಶಿಬಿರದ ಮತ್ತೊಂದು ಮುಖ್ಯ ಕೊಡುಗೆಯೆಂದರೆ: ಗಾಂಧಿ ಚಿಂತನೆಧಾರೆಯ, ಮಾರ್ಕ್ಸ್ ವಾದದ, ಪೆರಿಯಾರ್, ನಾರಾಯಣಗುರು ಹಾಗೂ ಅಂಬೇಡ್ಕರ್ ಚಿಂತನೆಧಾರೆಯ ಮನಸ್ಸುಗಳು ಒಟ್ಟಿಗೆ ಸೇರಿದ್ದುದು. ಅವರೆಲ್ಲ ತಮ್ಮ ಹೋರಾಟದ ಮತ್ತು ಚಟುವಟಿಕೆಯ ಸ್ವರೂಪ ವನ್ನು ವಿವರಿಸಿ ಹೇಳುತ್ತಿದ್ದಾಗ; ನಾವೆಲ್ಲ ಭಾವನಾ ತ್ಮಕವಾಗಿ ಪುಳಕಿತರಾಗಿದ್ದೆವು. ಹಾಗೆಯೇ ಬೇರೆ ಬೇರೆ ಗುಂಪುಗಳನ್ನು ಮಾಡಿಕೊಂಡು ಒಬ್ಬರೊಬ್ಬ ರನ್ನು ಅರಿಯಲು ಮತ್ತು ಚಳವಳಿಗಳ ಸೋಲು ಗೆಲುವುಗಳನ್ನು ತಿಳಿಯಲು ನಿಜವಾಗಿಯೂ ಸಹಕಾರಿಯಾಯಿತು. ಇದರ ಜೊತೆಗೆ ಮತ್ತೊಂದು ಅದ್ಭುತವೆಂದರೆ; ನಾವು ಬೇರೆ ಬೇರೆ ಗುಂಪುಗಳಾಗಿ ಪ್ರತಿದಿವಸ ಬೆಳಗ್ಗೆ ಮತ್ತು ಸಂಜೆ ಒಂದೊಂದು ಗುಡಿಸಲಿಗೆ ಊಟಕ್ಕೆ ಹೋಗ ಬೇಕಾಗಿತ್ತು.

ಹೀಗೆ ನಮ್ಮನ್ನು ನಾವು ಕೆಳಸ್ತರದಿಂದ ನೋಡಿಕೊಳ್ಳಲು ಸಹಕಾರಿಯಾಗುವುದು ಎಂದು ಪ್ರೊ. ಜುಂಜನ್‌ನಾಲಾ ಅವರು ಗಾಢವಾಗಿ ನಂಬಿದ್ದರು. ನಾವು ಗುಡಿಸಲುಗಳಿಗೆ ಊಟಕ್ಕೆ ಹೋದಾಗ; ಆ ಗುಡಿಸಲಿನ ಹೆಂಗಸರು ಎಷ್ಟೊಂದು ಪ್ರೀತಿ ಮತ್ತು ಅಭಿಮಾನದಿಂದ ಬರಮಾಡಿಕೊಳ್ಳುತ್ತಿದ್ದರು. ಇದರ ಜೊತೆಗೆ ತಮ್ಮ ಗುಡಿಸಲುಗಳ ನೆಲವನ್ನು ಹಸುಗಳ ಸೆಗಣಿಯಿಂದ ಸಾರಿಸಿ ರಂಗೋಲಿಯನ್ನು ಹಾಕಿರುತ್ತಿದ್ದರು. ನಾವು ಬಂದಿದ್ದೇವೆಂದು ಅನ್ನಮಾಡಿ ಮೆಣಸಿನ ರಸವನ್ನು ಮಾಡಿರುತ್ತಿದ್ದರು. ರಸವನ್ನು ಅನ್ನಕ್ಕೆ ಹಾಕಿಕೊಳ್ಳುವಾಗ ಎಷ್ಟೇ ಎಚ್ಚರಿಕೆಯಿಂದಿರುತ್ತಿದ್ದರೂ, ರಸ ಊಟದೆಲೆಯಿಂದ ಹೊರಗೆ ಹರಿದು ಹೋಗುತ್ತಿತ್ತು.

ನಾವು ನಮಗೆ ಗೊತ್ತಿದ್ದ ಚೂರು ಪಾರು ತಮಿಳಿನಿಂದ ‘ನಲ್ಲ ಇರ್ಕುದು’ (ಚೆನ್ನಾಗಿದೆ) ಎಂದು ಹೇಳಿದಾಗ, ಬಡತನದಿಂದ ಸೊರಗಿದ ಅವರ ಮುಖಗಳಲ್ಲಿ ಕಣ್ಣು ಹೊಳಪನ್ನು ತುಂಬಿಕೊಂಡು ನಗುಸೂಸುತ್ತಿತ್ತು. ಎಲ್ಲ ಗುಡಿಸಲುಗಳಲ್ಲಿ ಈ ರೀತಿಯದ್ದೇ ಅಭಿಮಾನ ತುಂಬಿದ ಅಂತಃಕರಣದ ನೋಟ ಎದುರಾಗುತ್ತಿತ್ತು. ಆಗ ‘ಒಣಕ್ಕುಂ’ರ ಜೊತೆಗೆ ‘ನಲ್ಲ ಇರ್ಕುದು’ ಎಂಬುದನ್ನು ವ್ಯಕ್ತಪಡಿಸಿ ಹೊರಡುತ್ತಿದ್ದೆವು.ಎಪ್ಪತ್ತು ಮಂದಿಯಲ್ಲಿ ಮಹಿಳೆಯರು ಐದಾರು ಮಂದಿ ಇದ್ದರು. ಎಲ್ಲರೂ ಬಯಲಿನಲ್ಲಿಯೇ ಮಲಗುತ್ತಿದ್ದುದು. ರಾತ್ರಿ ಹನ್ನೆರಡು ಗಂಟೆಯಾದರೂ ಏನೇನೋ ಮಾತುಕತೆ. ಅನುಭವಗಳನ್ನು ಎಷ್ಟು ಹಂಚಿಕೊಂಡರೂ ಸಾಲದು. ಕೊನೆಯ ದಿವಸವೂ ಸಿದ್ದಲಿಂಗಯ್ಯನವರ ಹೊಲೆಮಾದಿಗರ ಕವನಸಂಕಲನದಿಂದ ಒಂದಷ್ಟು ಕವನಗಳನ್ನು ಓದಿಸಿದ್ದರು. ಸಿದ್ದಲಿಂಗಯ್ಯ ಅಷ್ಟು ಜನಪ್ರಿಯತೆಯನ್ನು ಪಡೆದಿದ್ದರು.

ಇಲ್ಲಿ ಡಿ.ಆರ್.ನಾಗರಾಜರ ಪಾತ್ರವನ್ನು ಮರೆಯುವಂತಿಲ್ಲ. ಆ ಕೊನೆಯ ರಾತ್ರಿಯಂತೂ ಬೆಳದಿಂಗಳು ತುಂಬಿದ್ದರಿಂದ ನಾನಾ ರೀತಿಯ ಹರಟೆಗೆ, ಮಾತುಕತೆಗೆ ತೊಂದರೆ ಇರಲಿಲ್ಲ. ಪ್ರೊ.ಜುಂಜನ್‌ವಾಲಾ ಅವರಂತೂ ಓಡಾಡುತ್ತಲೇ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಿದ್ದರು. ಡಿ.ಆರ್. ಅಂತೂ ತುಂಟತನದಿಂದ ಕಥೆಗಳನ್ನು ಸೃಷ್ಟಿಸಿ ಎಲ್ಲರನ್ನು ನಗೆಗಡಲಿನಲ್ಲಿಟ್ಟಿದ್ದ. ಇದಕ್ಕೆ ಅಶೋಕ್ ಧಾರೇಶ್ವರ್ ಕೈ ಜೋಡಿಸುತ್ತಿದ್ದರು, ಸಿದ್ಧಾಂತದ ಜೊತೆಗೆ.ಬೆಂಗಳೂರಿನಿಂದ ಬಂದೆವು. ಕ್ರಾಂತಿಯ ಮುಂದುವರಿದ ಭಾಗವಾಗಿ; ಗಾಂಧಿನಗರದಲ್ಲಿ ‘ಕ್ರಿಯಾ’ ಪುಸ್ತಕಾಲಯವೂ ಪ್ರಾರಂಭವಾಯಿತು. ಆ ಹೆಸರು ನನ್ನ ಮಗಳ ಹೆಸರಾಗಿದ್ದರಿಂದ; ಆ ಹೆಸರನ್ನೇ ಪುಸ್ತಕಾಲಯಕ್ಕಿಡಲು ತೀರ್ಮಾನಿಸಿದರು. ಇದಕ್ಕೆ ಪ್ರೊಫೆಸರ್ ಅವರು ಬಂಡವಾಳವಾಗಿ ಪೂರ್ತಿ ಹಣವನ್ನು ಕೊಟ್ಟರು. ಅದೊಂದು ಸಾಂಸ್ಕೃತಿಕ ಚರ್ಚಾ ಕೇಂದ್ರವಾಯಿತು.

ಸಮಾಜವಾದ ಮತ್ತು ಸಮತಾವಾದದ ಎಲ್ಲಾ ಸಾಹಿತ್ಯ ಅಲ್ಲಿ ದೊರಕುವಂತಾಯಿತು. ಪ್ರೊಫೆಸರ್ ಅವರು ಕೆಲಸ ಬಿಟ್ಟರು. ಭಾರತ್ ಟಾಕೀಸ್ ಬಳಿಯ ಕೊಳಚೆ ಪ್ರದೇಶವನ್ನು ಬಿಟ್ಟರು. ಮನೆಯ ವ್ಯವಹಾರವನ್ನು ನೋಡಿಕೊಳ್ಳಲು ಉತ್ತರ ಪ್ರದೇಶಕ್ಕೆ ಹೋದರು. ಈ ಮಧ್ಯೆ ಎರಡು ಮೂರು ಬಾರಿ ಬಂದು ಹೋದರು. ಕ್ರಿಯಾ ಪುಸ್ತಕಾಲಯ ಚೆನ್ನಾಗಿ ನಡೆದುಕೊಂಡು ಹೋಗಲು ಒಂದು ಸಮಿತಿ ಮಾಡಿದರು. ಅದೂ ಒಂದಷ್ಟು ದಿವಸ ನಡೆಯಿತು.ಈಗ ಯಾರ್ಯಾರೋ ಮರೆಯಾಗಿದ್ದಾರೆ. ಜಾಗತೀಕರಣದ ವೇಗ ನೂರಾರು ಆಮಿಷಗಳನ್ನು ಮುಂದೊಡ್ಡಿ ಸಾಕಷ್ಟು ಮಂದಿಯನ್ನು ಭ್ರಷ್ಟಗೊಳಿಸಿದೆ. ಸುಖದ ವಸ್ತುಗಳ ಆಕರ್ಷಣೆಯ ಕಾರಣಕ್ಕಾಗಿ ಬದುಕಿನೊಡನೆ ರಾಜಿ ಮಾಡಿಕೊಂಡಿದ್ದಾರೆ.

‘ನಾಳೆಯೇ ಕ್ರಾಂತಿಯಾಗಬೇಕು’ ಎಂಬ ಘೋಷಣೆ ಧ್ವನಿಯನ್ನು ಕಳೆದುಕೊಂಡಿದೆ. ನಾವು ಓಡಾಡಿದ ಜಾಗವೆಲ್ಲ ಈಗ ಒಂದು ಶ್ರೀಮಂತ ನೆನಪು ಮಾತ್ರ. ಆದರೆ ಕೊಳಚೆ ಪ್ರದೇಶದ ಬಡತನ ಕಡಿಮೆಯಾಗಿಲ್ಲ. ಪಕ್ಕದಲ್ಲಿ ಹರಿಯುವ ಬೃಹತ್ ಕೊಳಚೆ ನೀರಿನ ಕಾಲುವೆಗಳಲ್ಲಿ ಅಲ್ಲಿಯ ಮಕ್ಕಳು ಆಡುವುದನ್ನು ನಿಲ್ಲಿಸಿಲ್ಲ. ಅದೇ ಸಮಯಕ್ಕೆ ಎಲ್ಲೆಲ್ಲೋ ಎಲೆಮರೆ ಕಾಯಿಗಳಂತೆ ಕ್ರಾಂತಿಯ, ಬದಲಾವಣೆಯ ಕನಸುಗಳನ್ನು ತುಂಬಿಕೊಂಡು ಹೋರಾಡುತ್ತಲೇ ಇದ್ದಾರೆ. ಹಿಂಸೆಯನ್ನು ಅನುಭವಿಸುತ್ತ ನೊಂದ ಜನತೆಗೆ ‘ಲೋಕದ ಬೆಳಕ’ನ್ನು ವಿಸ್ತರಿಸುತ್ತಿದ್ದಾರೆ.

ಪ್ರೊ.ಜುಂಜನ್‌ವಾಲಾ ಅವರು ದೆಹಲಿಯಿಂದ ಭಾರತದ ಅರ್ಥವ್ಯವಸ್ಥೆಯ ಏರುಪೇರುಗಳನ್ನು ಕುರಿತು ಪತ್ರಿಕೆಗಳಿಗೆ ಲೇಖನ ಬರೆಯುತ್ತಾರೆ. ಆಗಾಗ ಶುಭಾಶಯದ ಗ್ರೀಟಿಂಗ್ಸ್ ಕಳಿಸುತ್ತಾರೆ. ಅದರಲ್ಲಿ ಕ್ರಾಂತಿಯ ಅಥವಾ ಬದಲಾವಣೆಯ ವಾಕ್ಯವಿರುವುದಿಲ್ಲ. ಆದರೆ ಬದಲಾವಣೆಯ ಕನಸುಗಳು ನ್ಯೂಕ್ಲಿಯಸ್ ರೀತಿಯಲ್ಲಿ ವ್ಯಾಪಿಸುತ್ತಲೇ ಇರುತ್ತದೆ.ನಾನಾ ರೀತಿಯ ಗೊಂದಲಗಳ ಮಧ್ಯೆಯೂ ಪ್ರಜಾಪ್ರಭುತ್ವ ವ್ಯವಸ್ಥೆ ಹೋರಾಟದ ನೂರಾರು ಮಾರ್ಗಗಳಿಗೆ ಬಾಗಿಲುಗಳನ್ನು ತೆರೆಯುತ್ತಲೇ ಇದೆ. ಇದೆಲ್ಲಾ ನಮ್ಮ ವಿಚಾರದ ಮನಸ್ಸು ಲವಲವಿಕೆಯಿಂದ ಇರುವವರೆಗೆ ನಮಗೆ ಗೋಚರಿಸುತ್ತಿರುತ್ತದೆ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...