Wednesday, June 29, 2011

ಮಳೆಗಾಲದ ಮಲೆನಾಡಿನ ಚಿತ್ರಗಳುಕೆ ಅಕ್ಷತಾಈ ಕಾಲ ಮಳೆಗಾಲ ಬಾಳ
ನನ ಗಂಡ ಕೂತಲ್ಲಿಂದೇಳ
ಎಂದು ಹಾಡುತ್ತಿದ್ದ ಹಲವು ಹೆಣ್ಣು ಸ್ವರಗಳನ್ನು, ಆ ಸ್ವರಗಳನ್ನು ಕೇಳಿಸಿಕೊಳ್ಳುತ್ತಲೇ ಮಳೆಯ ಅಬ್ಬರದಲ್ಲಿ ಅದು ತನ್ನ ಕಿವಿಗೆ ಬೀಳುತ್ತಲೇ ಇಲ್ಲ ಎನ್ನುವಂತೆ ನಟಿಸುತ್ತಾ ಮುರು ಬೇಯಿಸುವ ಒಲೆ ಎದಿರಿಗೋ, ಬಚ್ಚಲ ಒಲೆಯ ಮುಂದೋ, ಕೊನೆಗೆ ಎಲ್ಲಿಯೂ ಬೆಂಕಿ ಕೆಂಡ ಕಾಣದಿದ್ದರೆ ಕೊನೆಗೆ ಅಡುಗೆ ಒಲೆಗೆ ಕೈಯೊಡ್ಡಿ ಮೈ ಕಾಯಿಸುತ್ತಾ ಬೆಚ್ಚಗೆ ಕುಳಿತ ಹಲವು ಗಂಡು ಜೀವಗಳನ್ನು ನೋಡುತ್ತಾ ಬೆಳೆದವಳು ನಾನು. ಮಲೆನಾಡಿನ ಹೆಣ್ಣು. ಮಳೆಗಾಲ ಎಂದರೆ ನನ್ನ ಕಣ್ಮುಂದೆ ಸಾಲು ಸಾಲು ದೃಷ್ಯಾವಳಿಗಳ ಮೆರವಣಿಗೆಯೇ ಸಾಗುತ್ತದೆ.ಜೂನ್‌ನಲ್ಲಿ ಶಾಲೆ ಶುರುವಾದರೆ ಅದರ ಜೊತೆಗೆ ಮಳೆಯೂ ಶುರುವಾಗಿರುತ್ತಿತ್ತು. ಮಳೆ ಒಮ್ಮೆ ಶುರುವಾಯಿತೆಂದರೆ ಅದು ವಾರಗಟ್ಟಲೆ ಬಿಡುವ ಪ್ರಶ್ನೆಯೇ ಇಲ್ಲ. ಗೊರಬು, ಪ್ಲಾಸ್ಟಿಕ್, ಕಂಬಳಿ ಹೊದ್ದು ದೂರದೂರದ ‘ಊರೆಂದರೊಂದೆಮನೆಗಳಿಂದ ಬರುತಿದ್ದ ಸಹಪಾಠಿಗಳೆದುರು ಶಾಲೆಯೆದಿರು ಮನೆಯಿರುವ ನಾವು ತರುತಿದ್ದ ಛತ್ರಿಗಳು ಮಂಕಾಗುತಿದ್ದವು. ಅದಕ್ಕೆ ಶಿಸ್ತಾಗಿ ಛತ್ರಿ ಮಡಚಿ ಅವರ ಕಂಬಳಿ ಕುಪ್ಪೆಯಲ್ಲೋ, ಗೊರಬಿನ ಸಂಧಿಯಲ್ಲೋ ಹೊಕ್ಕಿಕೊಂಡರೆ ಅವರು ನಮ್ಮನ್ನು ಮನೆಗೆ ತಲುಪಿಸಿ ತಮ್ಮ ಹಳ್ಳಿಯ ಹಾದಿ ಹಿಡಿಯುವರು.ಗುಡುಗು, ಸಿಡಿಲು, ಮಿಂಚು ಎಲ್ಲದರ ಜೊತೆಗೆ ಮಳೆ ಸುರಿಯುತ್ತಿದೆ. ಮಳೆಗೆ ಹೆದರದ ಮಕ್ಕಳು ಗುಡುಗು, ಸಿಡಿಲಿಗೆ ಬೆಚ್ಚಿ ಬೀಳುತ್ತಿವೆ. ಅದನ್ನೆಲ್ಲ ಅರಿಯದವಳಲ್ಲ ಅಮ್ಮಮ್ಮ ಅದಕ್ಕೆ ‘ಮಕ್ಕಳೇ ನೋಡಿ ಕತ್ತಿ ಹೊರಗೆ ಹಾಕ್ತೀನಿ ಆಗ ಸಿಡಿಲು ಮಿಂಚು ಎಲ್ಲ ನಿಂತೆ ಹೋಗತ್ತೆ ಎಂದು ಮೆಟ್ಟುಗತ್ತಿಯನ್ನು ಮಣೆಸಹಿತ ಮನೆಯ ಅಂಗಳಕ್ಕೆ ಹಾಕಿದ್ದಾಳೆ. ಅವಳ ಮಾತನ್ನು ಸತ್ಯ ಮಾಡುವಂತೆ ಅದಾಗಿ ಐದೇ ನಿಮಿಷಕ್ಕೆ ಮಿಂಚು, ಗುಡುಗು ಎಲ್ಲ ನಿಂತು ಮಳೆ ಮಾತ್ರ ಬರುತ್ತಿದೆ. ಅಮ್ಮಮ್ಮನ ಮಾತಿಗೆ ಅಷ್ಟು ಶಕ್ತಿಯಲ್ಲವೇ ಮತ್ತೆ.
ಮಳೆ ಸುರಿಯುತ್ತಲೇ ಇದೆ. ನಾಟಿ ಕೆಲಸಕ್ಕೆ ಆಳು ಕರೆಯಲು ಅಪ್ಪ ಹೋಗಿದ್ದವನು. ಮನೆಗೆ ಬಂದು ಹೇಳುತ್ತಾನೆ. ‘ನಾಟಿ ದಿನ ಆಳುಗಳಿಗೆಲ್ಲ ಕೋಳಿ ಪಲಾವ್ ಮಾಡಿಸಬೇಕು. ‘ಇಷ್ಟು ವರುಷ ಇಲ್ಲದ ಸಂಭ್ರಮ ಈಗೇನು? ಅಮ್ಮ ಮೂಗು ಮುರಿಯುವಳು. ಆಳು ಸಿಗುವುದೇ ಕಷ್ಟ. ಎಲ್ಲರ ಮನೆಯಲ್ಲೂ ಮುಯ್ಯಾಳುಗಳಿದ್ದಾರೆ. ನಮ್ಮನೆಯಲ್ಲಿ ಹಾಗೂ ಇಲ್ಲ. ಅಡುಗೆಯಂತೂ ಮಾಡಿಸ್ಲೇಬೇಕು. ನೀನಂತೂ ನಮ್ಮಮ್ಮನ ಹಾಗೆ ಬೆಳಗಿನ ಜಾವ ಎದು ಕಡಬು ಪಲ್ಯ ಮಾಡಲಾರೆ. ಮಾಡೋದೊಂದು ಚಿತ್ರಾನ್ನ ಅದರ ಬದಲು ಕೋಳಿ ಪಲಾವ್ ಕೊಟ್ಟರಾಯಿತು. ಅವರೂ ಉಂಡು ಖುಷಿಯಾಗಿರಲಿ. ಜಿಟಿಜಿಟಿ ಮಳೆ, ನಾಟಿ ಹಚ್ಚುವ ಸಂಭ್ರಮ ಮನೆಯ ಯಜಮಾನನಲ್ಲಿ ಹೊಸ ಸಂಭ್ರಮವನ್ನೇ ತಂದಿದೆ.ಅಪ್ಪ ಊರ ಕೆರೆಗಳನ್ನು ಪಂಚಾಯ್ತಿ ಹರಾಜಿನಲ್ಲಿ ಹಿಡಿದು ಮೀನು ಸಾಕಿದ್ದಾನೆ. ಮಳೆಗಾಲ ಶುರುವಾಗಿದೆ. ಮೀನು ಹಿಡಿಯಲು ಒಂದು ದಿನ ನಿಗದಿ ಮಾಡಿದ್ದಾನೆ. ಯಾರು ಬೇಕಾರೂ ಬಂದು ಆ ದಿನ ಸಾಮೂಹಿವಾಗಿ. ತಮ್ಮಿಂದ ಸಾಧ್ಯವಾದಷ್ಟು ಮೀನು ಹಿಡಿಬಹುದು ಕೆರೆಯಲ್ಲಿ. ಬಲೆ ಹಾಕುವ ಗಂಡಸರು, ಬುಟ್ಟಿಯಲ್ಲಿ ಮೀನು ಹಿಡಿಯುವ ಹೆಂಗಸರು ಎಲ್ಲರೂ ಸೇರಿ. ಕೆರೆ ಹಿಡಿದ ಅಪ್ಪನ ಜೋಳಿಗೆಗೆ ನಿಗದಿತ ದುಡ್ಡನ್ನು ಪಾವತಿಸಿ ಮೀನು ಹಿಡಿಯುವರು. ಗೌರಿ, ಕುಂಚು, ಅವಿಲು, ಮುರುಗೋಡು, ಮಂಜುಗೊಡವ ಬಾಳೆ, ಕಾಟ್ಲಾ ದೊಡ್ಡ ದೊಡ್ಡ ಮೀನುಗಳು ಗಂಡಸರ ಬಲೆಯ ಪಾಲಾದರೆ ಸಣ್ಣಸಣ್ಣ ಜಬ್ಬು, ಗೊದಮಟ್ಟೆ ಹಂಗಸರ ಬುಟ್ಟಿಗೆ ಸಿಗುವವು. ಕೆರೆಯೊಳಗೆ ಮೀನು ಹಿಡಿಯುವವರ ಸಂಭ್ರಮವಾದರೆ ಕೆರೆ ದಂಡೆಯ ಮೇಲೆ ಮೀನು ಕೊಳ್ಳಲು ಜಾತ್ರೆಯೇ ನೆರೆದಿದೆ. ಮಳೆಯಲ್ಲೇ ಚರ್ಚೆ, ಚೌಕಾಸಿ, ಕೊಳ್ಳುವ ಗಡಿಬಿಡಿ. ಥಂಡಿ ಥಂಢಿ ಮಳೆಗೆ ಸಾಥ್ ನೀಡುವಂತೆ ಬಿಸಿ ಬಿಸಿ ಕಾಳು ಮೆಣಸು ಅರೆದು ಕಟ್ಟಗೆ ಮಾಡಿದ ಮೀನು ಸಾರು. ಉಂಡರೆ ಎಂಥ ಥಂಡಿಯೂ ಗಡಿಪಾರು.ಮಳೆಗಾಲದಲ್ಲಿ ಮೂರ‍್ನಾಲ್ಕು ದಿನವಂತೂ ಮಲೆನಾಡಿನ ಶಾಲೆಗೆ ರಜೆ ಬಿಡುವುದು ಮಾಮೂಲು. ಹೊಳೆ-ಹಳ್ಳ ತುಂಬಿ ಹರಿವಲ್ಲಿ ಹುಡುಗರು ದಾಟಿ ಬರುವುದು ಕಷ್ಟ ಎಂಬ ಮುಂಜಾಗ್ರತೆ. ಆದರೆ ಅದನ್ನೇ ಉಪಯೋಗಿಸಿಕೊಂಡು ಗುಡ್ಡ, ಬೆಟ್ಟ,ಕಾನುಗಳಿಗೆ ದಾಳಿಯಿಡಲು ಯಾರ ಪರವಾನಿಗೆಯೂ ಮಕ್ಕಳಿಗೆ ಬೇಡ. ಇದೆ ಸಂದರ್ಭ ನೇರಳೆ, ಸಂಪಗೆ, ಮುಳ್ಳಣ್ಣು, ಹಲಸು, ಕಾಡು ಮಾವು, ಥರಾವರಿ ಹಣ್ಣುಗಳು ತಿನ್ನಲು. ನೀರು ಕುಡಿದ ಹಣ್ಣುಗಳನ್ನು ತಿಂದರೆ ಶೀತ ಆಗತ್ತೆ, ಜ್ವರ ಬರತ್ತೆ ಅಪ್ಪ-ಅಮ್ಮನ ಮಾತು ಮಳೆಯಲ್ಲಿ ಕೇಳಿಸುವುದೇ ಇಲ್ಲ.ಕೆಸುವಿನ ಸೊಪ್ಪಿನ ಪತ್ರೊಡೆ, ಕಡಲೆ ಜೊತೆಗಿನ ಕಳಲೆ ಪಲ್ಯ, ಥರಾವರಿ ಅಣಬೆಗಳು, ಬೆಂಕಿಗೆ ಹಾಕಿ ಸುಟ್ಟ ಗೇರುಬೀಜ, ಹಲಸಿನ ಬೀಜದ ಸವಿ ಎಲ್ಲದರ ರುಚಿ ಸಿಗುವುದು ಮಳೆಗಾಲದಲ್ಲಿ.ಗುಡುಗು ಸಹಿತ ಮಳೆಯಾದೊಡನೆ ಯಾರೋ ಸುದ್ದಿ ತರುವರು. ಅಣಬೆ ಬಂದಿದೆ ಅಣಬೆ ಬಂದಿದೆ. ಅಂಗಡಿಗೆ ಅಣಬೆ ಬಂದಿದೆಯೇನೋ ಮಾರಲು ಎಂಬಂತೆ. ಹಾಗಲ್ಲ ಅದು ಭೂಮಿಯಲ್ಲಿ ಅಣಬೆ ಬಂದಿದೆ ಎಂದು. ಅದರ ಆಯಸ್ಸು ಸಹ ಬಹಳ ಕಡಿಮೆ. ಆದ್ದರಿಂದ ಬೇಗನೆ ಮಳೆಯಲ್ಲಿ ಅದನ್ನು ಆರಿಸಲು ಹೋಗಬೇಕು. ಅಣಬೆ ಆರಿಸಲು ಹುಡುಗರ ದಂಡೇ ಹೋಗುವುದು ಕಾನಿಗೆ. ಅಜ್ಜಿಯೇ ಮಾರ್ಗದರ್ಶಿ. ಕಲ್ಲಣಬೆ ಅಂತ ಭೂಮಿಯೊಳಗಡೆ ಇರ‍್ತದೆ. ಮೇಲೆ ಬಲೆಯ ಹಾಗೆ ಹಾಸಿರುತ್ತದೆ. ಆ ಬಾಗದಲ್ಲಿ ತುಸು ಅಗೆದರೆ ಗುಂಡಾದ ಬಿಳಿ ಬಳಿ ಅಣಬೆಗಳು. ಸಿಡಿಲು, ಗುಡುಗು ಬಂದಷ್ಟೂ ಅಣಬೆ ಜಾಸ್ತಿ ಬಿಡ್ತದೆ. ಅಂತ ಅಮ್ಮಮ್ಮ ಹೇಳಿದಾಗ ಎಲ್ಲ ಮಕ್ಕಳು ಬೇಡುವವು ಆಕಾಶ ರಾಯನಲ್ಲಿ ‘ಸಿಡಿಲು ಗುಡುಗು ಬರಲಿ, ಅಣಬೆ ಆರಿಸಲು ಮಳೆ ಬಿಡುವು ಕೊಡಲಿ. ಛತ್ರಿಯಾಕಾರದ ಹೆಗ್ಗುಲಣಬೆಯದಂತೂ ಇನ್ನೂ ಮೋಜು. ಮನೆಯ ಹಿಂದಿನ ಧರೆಯಲ್ಲಿ ರಾತ್ರಿ ನೋಡುವಾಗ ಏನೂ ಇರುವುದಿಲ್ಲ. ಬೆಳಿಗೆದ್ದು ನೋಡಿದರೆ ನೂರಾರು ಅಣಬೆ ಸಾಲು. ಇದು ಬಾಳಿಕೆ ಬರುವುದು ಒಂದೇ ದಿನ. ಎಂಥ ಜುಗ್ಗಿ ಯಜಮಾನಿಯಾದರೂ ಸುತ್ತ ಮುತ್ತಲಿನವರಿಗೆ, ಆಳು-ಕಾಳುಗಳಿಗೆ ಕೊಟ್ಟೆ ತಿನ್ನಬೇಕು. ಅದಕ್ಕೆ ಈ ವ್ಯವಸ್ಥೆ.ಮಳೆಗಾಲವೆಂದರೆ ಜಾರಿಕೆಯ ನೆಲ, ಕಾಲ ಸಂಧಿಯಲ್ಲಿ ಕೆಸರು ಸೇರಿಕೊಂಡು ಕೆಸರು ಹುಣ್ಣು .ಜ್ವರ, ಶೀತ, ಕೆಮ್ಮು, ಜಾರಿಕೆಯ ಜೋಪಾನ ನಡೆಯಬೇಕೆಂಬ ಪಾಠ. ಕೆಸರು ಹುಣ್ಣಿಗೆ ಅರಸಿನ-ಕೊಬ್ಬರಿ ಎಣ್ಣೆಯ ಉಪಚಾರ. ಜ್ವರ-ಶೀತಕ್ಕೆ ಕಟ್ಟಗಿನ ಕಾಳುಮೆಣಸಿನ ಕಷಾಯವೇ ಮದ್ದು. ಪ್ರತಿಯೊಬ್ಬರ ಮನೆ ಅಂಗಳದಲ್ಲೂ ಅರಳಿದ ಡೇರೆ ಹೂಗಳು, ಗದ್ದೆಯಲ್ಲಿ ಗೊರಬು ಧರಿಸಿ ಕೆಲಸ ಮಾಡುವವರು, ಬೆಂಕಿ ಆರದ ಮುರುವಿನ ಒಲೆಗಳು, ಖಾಲಿಯಾಗುತ್ತಿರುವ ಕೂಡಿಟ್ಟ ಕಟ್ಟಿಗೆ, ಮದುವೆ ಮನೆಗಳು, ಆಷಾಡಕ್ಕೆ ತೌರಿಗೆ ಬಂದ ಹೆಣ್ಣುಗಳು, ಎಷ್ಟೇ ಜೋಪಾನ ಮಾಡಿದರೂ ಅಲ್ಲಲ್ಲಿ ಸೋರುವ ಮನೆಗಳು. ಅಲ್ಲೆಲ್ಲ ಒಂದೊಂದು ಪಾತ್ರೆ. ದಬ್ಬೆಯಿಂದ ಧೋ ಎಂದು ಸುರಿವ ನೀರು… ಇವು ನಾ ಕಂಡ ಮಲೆನಾಡಿನ ಮಳೆಗಾಲದ ಚಿತ್ರಗಳು. ಆದರೆ ಇದಿಷ್ಟೇ ಅಲ್ಲ. ಸಿಡಿಲು ಬಡಿದು, ತೀವ್ರ ಜ್ವರಕ್ಕೆ ಬಲಿಯಾಗಿ ಸತ್ತವರ ಮನೆಯ ಶೋಕ, ಜಾರಿ ಬಿದ್ದು ಕೈ ಕಾಲು ಮುರಿದುಕೊಂಡವರ ನೋವು, ಗುಡ್ಡೆಗೆ ಮೇಯಲು ಹೋಗಿ ಮಳೆಗೆ ಸಿಕ್ಕಿ ಮರೆಯಾದ ದನಕರುಗಳ ಚಿತ್ರಗಳು ಕಣ್ಮುಂದೆ ಹಾದು ವಿಷಾಧವುಕ್ಕಿಸುತ್ತವೆ.

ಕುರಿಯ ಪರಿಮಳದ ಕೆಂಪ್ಲಿಂಗಜ್ಜ

ವ್ಯಕ್ತಿ ಚಿತ್ರ

ಗಂಗಾಧರಯ್ಯ

ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ ಹಸು, ಎತ್ತು, ಎಮ್ಮೆಗಳ ಜೊತೆಗೆ ನೂರಾರು ಕುರಿಗಳೂ ಅವುಗಳೊಳಗೆ ಹತ್ತಾರು ಮೇಕೆಗಳೂ ಇದ್ದವು. ಈ ಕುರಿ ಮತ್ತು ಮೇಕೆಗಳನ್ನು ನೋಡಿಕೊಳ್ಳಲೆಂದೇ ಒಬ್ಬರು ಇದ್ದರು. ಇವರ ಹೆಸರು ಕೆಂಪ್ಲಿಂಗಜ್ಜ ಅಂತ. ಸುಮಾರು ಐದು ಅಡಿ ಎತ್ತರದ, ಕಡುಗಪ್ಪು ಬಣ್ಣದ, ಬೊಚ್ಚು ಬಾಯಿಯ ಕೆಂಪ್ಲಿಂಗಜ್ಜ ಹೆಂಗಸರಂತೆ ಜುಟ್ಟು ಬಿಟ್ಟು ಅದನ್ನು ತುರುಬು ಕಟ್ಟಿಕೊಂಡು ಎರಡೂ ಕಿವಿಗಳಿಗೆ ಓಲೆಗಳನ್ನು ಹಾಕಿಕೊಳ್ಳುತ್ತಿದ್ದರು. ಸದಾ ಎಲೆ ಅಡಿಕೆ ಜಗಿಯುತ್ತಾ, ಕೈಯ್ಯಲ್ಲಿ ಕುರಿಯ ಕೋಲನ್ನು ಹಿಡಿದು, ಹೆಗಲಿಗೊಂದು ಕರಿಯ ತುಂಡುಗಂಬಳಿಯನ್ನು ಹಾಕಿಕೊಂಡು ಹೊರಟರೆಂದರೆ ಕುರಿ ನಾಯಿಗಳೆರಡು ಭಂಟರಂತೆ ಇವರನ್ನು ಹಿಂಬಾಲಿಸುತ್ತಿದ್ದವು. ಇವರು ಈ ಕುರಿ ಕಾಯುವ ಕಾಯಕದಿಂದ ತಪ್ಪಿಸಿಕೊಳ್ಳುತ್ತಿದ್ದ ಯಾವ ದಿನವೂ ನನಗೆ ನೆನಪಿಲ್ಲ. ಅದು ಮಳೆಗಾಲವಿರಲಿ, ಬೇಸಿಗೆಯಾಗಿರಲಿ ಬೆಳಗಿನ ಒಂಭತ್ತಕ್ಕೆಲ್ಲಾ ಗೂಡಿನಿಂದ ಕುರಿಗಳನ್ನು ಹೊರಡಿಸಿಕೊಂಡು, ಹೆಗಲ ಮೇಲಿನ ತುಂಡುಗಂಬಳಿಯೊಳಗೆ ರೊಟ್ಟಿಯ ಗಂಟನ್ನು ಇಟ್ಟುಕೊಂಡು, ಕಾಡಿನತ್ತ ಹೋಗುತ್ತಿದ್ದ ಕೆಂಪ್ಲಿಂಗಜ್ಜ ಮತ್ತೆ ಮನೆಗೆ ಹಿಂದಿರುಗುತ್ತಿದ್ದುದು ಸಂಜೆಗೇ, ಅದೂ ಕುರಿಗಳನ್ನೆಲ್ಲಾ ಗೂಡಿಗೆ ಕೂಡಿ. ನಮ್ಮ ಮನೆಗೆ ಕೆಲಸಕ್ಕೆ ಸೇರಿಕೊಂಡು ಆ ಹೊತ್ತಿಗಾಗಲೇ ಹತ್ತಾರು ವರ್ಷಗಳು ಆಗಿ ಹೋಗಿದ್ದರಿಂದ ನಮ್ಮ ಮನೆಯವರಲ್ಲಿ ಇವರೂ ಒಬ್ಬರಾಗಿ ಹೋಗಿದ್ದರು. ಜೊತೆಗೆ ಕುರಿ ಮೇಕೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ, ಯಾವುದನ್ನ ಮಾರಬೇಕು ಯಾವುದನ್ನ ಬಿಡಬೇಕು ಅನ್ನುವುದರಲ್ಲಿ ಇವರದೇ ಅಂತಿಮ ನಿರ್ಧಾರವೂ ಆಗಿರುತ್ತಿತ್ತು.

ಊರಾಚೆಯ ಬಳಸುವ ಕಟ್ಟೆ ಅಂತ ಕರೆಯಲ್ಪಡುತ್ತಿದ್ದ ಪುಟ್ಟ ಕೆರೆಯ ತಡಿಯ ದಿಬ್ಬದಲ್ಲಿ ಊರಿನ ಹತ್ತಾರು ಗೂಡುಗಳ ಜೊತೆಗೆ ನಮ್ಮದೂ ಕುರಿಯ ಗೂಡಿತ್ತು. ಇದನ್ನು ಕಲ್ಲು ಕಂಭಗಳನ್ನು ನೆಟ್ಟು, ತೆಂಗಿನ ಗರಿಗಳನ್ನು ಕವುಚಿ ಕಟ್ಟಲಾಗಿತ್ತು. ಇದರ ಸುತ್ತಲೂ ಬಿಗಿಯಾದ, ಎಂಥ ಕಿರುಬ, ತೋಳ, ನರಿ ಮುಂತಾದ ಯಾವ ಪ್ರಾಣಿಗಳೂ, ಎಂಥಾ ಕಳ್ಳರೂ ಹರಸಾಹಸ ಮಾಡಿದರೂ ನುಗ್ಗಲಾಗದಂಥ ದಪ್ಪ ಮುಳ್ಳಿನ ಬೇಲಿಯಿತ್ತು. ಇಂಥ ಗೂಡಿನೊಳಗೆ ಇಬ್ಬರು ಮಲಗಬಹುದಾದ, ಸುಮಾರು ನಾಲ್ಕೈದು ಅಡಿ ಎತ್ತರದಲ್ಲಿ ಸಣ್ಣದೊಂದು ಮಂಚಿಗೆ ಇತ್ತು. ಈ ಮಂಚಿಗೆಯೇ ಕೆಂಪ್ಲಿಂಗಜ್ಜನ ವೈಭವದ ಮಂಚವಾಗಿತ್ತು. ಬೇಸಿಗೆಯ ದಿನಗಳಲ್ಲಿ ಕೆಂಪ್ಲಿಂಗಜ್ಜನನ್ನು ಕಾಡಿ ಬೇಡಿ ರಾತ್ರಿ ಊಟವಾದ ಮೇಲೆ ಇವರ ಜೊತೆ ನಾನೂ ಕುರಿಯ ಗೂಡಿಗೆ ಮಲಗಲು ಹೋಗುತ್ತಿದ್ದೆ.ಆಗ ಈ ಕೆಂಪ್ಲಿಗಜ್ಜ ಕುಡಿಯಲು ಬಿಟ್ಟಿದ್ದ ಎಳೆಯ ಮರಿಗಳನ್ನೆಲ್ಲಾ ಹಿಡಿದು ಮರಿಗಳಿಗೆಂದೇ ಇದ್ದ ಗುಬ್ಬದೊಳಕ್ಕೆ ಕೂಡುತ್ತಾ, ಒಂದೊಂದು ಕುರಿ ಮೇಕೆಯನ್ನು ಹತ್ತಿರದಿಂದ ನೋಡಿ ಅವುಗಳ ಮೈದಡವಿ ಪರೀಕ್ಷಿಸುತ್ತಿದ್ದ ರೀತಿ ಎಂಥವರಿಗೂ ಹಿತವಾಗುತ್ತಿತ್ತು.
ಒಮ್ಮೆ ಹೀಗೆ ಪರೀಕ್ಷಿಸುತ್ತಿದ್ದಾಗ ಗಬ್ಬದ ಕುರಿಯೊಂದು ಕತ್ತನ್ನು ಕೆಳಗಾಕಿಕೊಂಡು ಜೊಲ್ಲು ಸುರಿಸುತ್ತಾ ಏದುಸಿರು ಬಿಟ್ಟಂತೆ ಕಷ್ಟಪಟ್ಟು ಉಸಿರಾಡುತ್ತಿತ್ತು. ಆ ಕುರಿಯನ್ನು ನೋಡಿದ ಕೆಂಪ್ಲಿಂಗಜ್ಜ, ‘ಅಯ್ಯೋ ಶಿವನೇ, ಸಂಜೀನಾಗಿನ್ನೂ ವೈನಾಗಿತ್ತು ಅದೇನಾಗ್ಬಿಡ್ತಪ್ಪಾ ಈಗ, ಯಾವುದಾದ್ರೂ ಹುಳಾ ಗಿಳಾ ಮುಟ್ತೋ ಏನು ಕತ್ಯೋ,’ ಅಂದುಕೊಳ್ಳುತ್ತಾ ಸೀದಾ ಮಂಚಿಗೆಯತ್ತ ಬಂದು ಅದರ ಮೇಲಿದ್ದ ಕುಡುಗೋಲನ್ನೂ, ಅದರ ಗಳಕ್ಕೆ ಸಿಗಿಸಿದ್ದ ಲಾಟೀನನ್ನೂ ತೆಗೆದುಕೊಂಡು, ‘ವಸಿ ಹಂಗೇ ಮನಿಕಂಡಿರು ಮಗಾ ಈಗ ಬಂದು ಬಿಡ್ತೀನಿ,’ ಅಂತ ಹೊರಗೆಲ್ಲೋ ಹೊರಡಲು ಅನುವಾಗತೊಡಗಿದರು. ಆಗಲೇ ರಾತ್ರಿ ಹತ್ತಕ್ಕೂ ಮೀರಿತ್ತು. ನನ್ನೊಬ್ಬನನ್ನೇ ಆ ಗೂಡಿನಲ್ಲಿ ಬಿಟ್ಟು ಹೋಗುವ ಸೂಚನೆ ಸಿಕ್ಕಿದ್ದೇ ತಡ ನಾನು ಮಂಚಿಗೆಯ ಮೇಲಿಂದ ಚಂಗನೆ ಕೆಳಕ್ಕೆ ನೆಗೆದು, ‘ನಾನೂ ಬರ‍್ತೀನಿ, ನಂಗಿಲ್ಲಿ ಒಬ್ಬನಿಗೇ ಹೆದ್ರಿಕೆಯಾಗುತ್ತೆ,’ ಅನ್ನುತ್ತಾ ಅಜ್ಜ ಎಷ್ಟು ಬೇಡವೆಂದರೂ ಕೆಂಪ್ಲಿಗಜ್ಜನ ಹಿಂದೆ ಬಿದ್ದೆ. ಸರಿ ಬಾ ಅಂತ ಹೊರಟ ಕೆಂಪ್ಲಿಂಗಜ್ಜನ ಹಿಂದೆ ಹೊರಟರೆ, ಆ ಅಜ್ಜ ಆ ಹೊತ್ತಿನಾಗೆ ಹೊರಟಿದ್ದು ಊರಾಚೆಯ ಕಾಡಿಗೆ. ಬೆಳದಿಂಗಳೂ ಇಲ್ಲದ ಗವ್ವೆನ್ನುವ ಕತ್ತಲೆ. ಅಜ್ಜನ ಕೈಯ್ಯಲ್ಲಿರುವ ಕುರುಡು ಲಾಟೀನು ಬೀಸುತ್ತಿದ್ದ ಗಾಳಿಗೆ ಪುಕುಗುಡುತ್ತಾ ಜೀವ ಉಳಿಸಿಕೊಳ್ಳುತ್ತಿತ್ತು. ನನಗೆ ಆ ಕಾಡುಗಲ್ಲುಗಳಲ್ಲಿ ನಡೆಯಲಾರದೆ ಕುಂಟತೊಡಗಿದಾಗ, ನನ್ನನ್ನು ಎತ್ತಿ ಹೆಗಲ ಮೇಲೆ ಕೂರಿಸಿಕೊಂಡು ಆ ರಾತ್ರೀಲಿ ಅಜ್ಜ ಹಾಗೆ ಆ ಕುರುಡು ಲಾಟೀನಿನ ಬೆಳಕಲ್ಲಿ ಸುಮಾರು ಎರಡು ಮೈಲಿಗಳಷ್ಟು ದೂರ ನಡೆದು, ಅಲ್ಲಿ ಯಾವುದೋ ಪೊದೆಯ ಬಳಿ ನನ್ನನ್ನು ಇಳಿಸಿ, ಅದರೊಳಗಿಂದ ಒಂದಷ್ಟು ಎಂಥದೋ ಎಲೆಗಳನ್ನು ಕಿತ್ತುಕೊಂಡು, ಮತ್ತೆ ನನ್ನನ್ನು ಹೊತ್ತುಕೊಂಡು ಗೂಡು ಸೇರುವ ಹೊತ್ತಿಗೆ ನಡು ರಾತ್ರಿಯೂ ಮೀರಿತ್ತು. ಗೂಡು ಸೇರುತ್ತಿದ್ದಂತೆ ಆ ಎಲೆಗಳನ್ನೆಲ್ಲಾ ಕಲ್ಲಿನ ಮೇಲೆ ಜಜ್ಜಿ ಅದರ ರಸ ತೆಗೆದು ಖಾಯಿಲೆಯಾಗಿದ್ದ ಕುರಿಗೆ ಕುಡಿಸಿದರು. ಬೆಳಗಾಗೆದ್ದು ನೋಡಿದರೆ ಆ ಕುರಿ ಎಲ್ಲ ಕುರಿಗಳಂತೆ ಎದ್ದು ಮೆಲುಕು ಹಾಕುತ್ತಾ ನಿಂತಿತ್ತು.

ನನ್ನ ಅಜ್ಜನಿಗೆ ಪರಮಾಪ್ತ ಗೆಳೆಯರಾಗಿದ್ದ ಕೆಂಪ್ಲಿಗಜ್ಜನನ್ನು ಎಂದೂ ಯಾವತ್ತೂ ನನ್ನ ಅಜ್ಜ ಕೂಡಾ ಕೆಲಸದವನು ಅಂತ ಕಂಡದ್ದಿಲ್ಲ. ಸಂಜೆ ಊಟವಾದ ಮೇಲೆ ಇಬ್ಬರೂ ಮನೆಯ ಎದುರಿನ ಬಾವಿಯ ಕಟ್ಟೆಯಲ್ಲಿ ಕೂತು ಎಲೆ ಅಡಿಕೆ ಹಾಕಿಕೊಂಡು ಒಂದಷ್ಟು ಹೊತ್ತು ಹರಟುತ್ತಿದ್ದುದು, ಮಕ್ಕಳಾದ ನಾವೂ ಇವರುಗಳ ಜೊತೆ ಕೂಡಿಕೊಂಡು ಕಾಲ ಕಳೆಯುತ್ತಿದ್ದುದು, ಆಗ ಕೆಂಪ್ಲಿಗಜ್ಜ ಕುರಿ ಕಾಯುವ ಹೊತ್ತಿನಲ್ಲಿ ಕಿರುಬನ ಬಾಯಿಗೋ, ಇಲ್ಲಾ ತೋಳದ ಬಾಯಿಗೋ ಇನ್ನೇನು ಸಿಕ್ಕೇ ಬಿಟ್ಟಿತ್ತು ಅನ್ನುವ ಕುರಿಯನ್ನು ಕಾಪಾಡಿದ್ದು, ಕಾಡಿನ ತಡಿಯ ಜೋಳದ ಹೊಲಕ್ಕೋ, ಇಲ್ಲಾ ಭತ್ತದ ಗದ್ದೆಗೂ ಅಚಾನಕ್ ಆಗಿ ನುಗ್ಗಿ ಸೊಕ್ಕಿ ಸತ್ತೇ ಬಿಡುವಂಥ ಕುರಿಗಳನ್ನು ಉಳಿಸಿದ್ದು, ಹೀಗೆ ಮಳೆ, ಬೆಳೆ, ಊರಿನ ವಿಚಾರಗಳ ನಡುವೆ ಅನೇಕ ಸಂಗತಿಗಳು ಇವರಿಬ್ಬರ ನಡುವೆ ಹರಿದಾಡುತ್ತಿದ್ದವು. ಕೆಲವೊಮ್ಮೆ ಅಜ್ಜ ಊರಿನಲ್ಲಿ ಇರದಿದ್ದ ದಿನಗಳಲ್ಲಿ ಈ ಕೆಂಪ್ಲಿಗಜ್ಜ ನಮಗಾಗಿ ಕಥೆಗಳನ್ನು ಹೇಳುತ್ತಿದ್ದುದೂ ಉಂಟು.

ಕೆಂಪ್ಲಿಗಜ್ಜನಿಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಮಕ್ಕಳಿಗೂ ಅಷ್ಟೇ ಇವರೊಂದಿಗೆ ಇನ್ನಿಲ್ಲದ ಸಲಿಗೆ ಇರುತ್ತಿತ್ತು. ಆದರೆ ತಪ್ಪು ಮಾಡಿ ಸಿಕ್ಕಕೊಂಡರೆ ಮಾತ್ರ ಯಾರಿಗೇ ಆಗಲಿ ಇವರ ಕೈಯ್ಯಲ್ಲಿರುತ್ತಿದ್ದ ಕುರಿಯ ಕೋಲು ಮಾತನಾಡುತ್ತಿತ್ತು. ಹೀಗೆ ಈ ಅಜ್ಜನಿಂದ ಏಟು ತಿಂದ ಪ್ರಸಂಗವೊಂದು ನನ್ನ ಮನದಲ್ಲಿ ಎಂದಿಗೂ ಮಾಸದಂತೆ ಉಳಿದುಬಿಟ್ಟಿದೆ.
ಅವತ್ತು ಶನಿವಾರ. ಮಾರ್ನಿಂಗ್ ಕ್ಲಾಸನ್ನು ಮುಗಿಸಿಕೊಂಡು ಎಮ್ಮೆಯನ್ನು ಮೇಯಿಸಲೆಂದು ಹುಡುಗರ ಜೊತೆ ನಾನೂ ಊರಾಚೆಯ ಕಟ್ಟೆಯ ಹತ್ತಿರ ಹೋಗಿದ್ದೆ. ಎಮ್ಮೆಯನ್ನೋ ಇಲ್ಲಾ ದನವನ್ನೋ ಮೇಯಿಸಲೆಂದು ಅಲ್ಲಿಗೆ ಹೋಗುತ್ತೇವೆಂಬುದು ನಾವು ಮನೆಯವರಿಗೆ ಹೇಳುತ್ತಿದ್ದ ಒಂದು ಸುಳ್ಳು ನೆಪವಾಗಿರುತ್ತಿತ್ತು. ನಮ್ಮ ಒಳ ಮರ್ಮ ಬೇರೆಯೇ ಆಗಿರುತ್ತಿತ್ತು. ಅದೆಂದರೆ ಆ ಕಟ್ಟೆಯ ನೀರಿನಲ್ಲಿ ಸಂಜೆಯವರೆಗೂ ಈಜಾಡುತ್ತಾ ಕಾಲ ಕಳೆಯುವುದು. ನನ್ನ ವಾರಿಗೆಯ ಕೆಲವರಿಗೆ ಕೊಂಚ ಈಜು ಬರುತ್ತಿದ್ದರೂ ನನಗೆ ನೀರಿನಲ್ಲಿ ಬಿದ್ದು ಒದ್ದಾಡುವುದನ್ನು ಬಿಟ್ಟರೆ ಒಂದಿಂಚೂ ಈಜಲು ಬರುತ್ತಿರಲಿಲ್ಲ. ಹೀಗಿರುವಾಗ, ‘ನೀನು ಹಿಂಗೆ ದಡದಲ್ಲಿ ಬಿದ್ದು ಒದ್ದಾಡಿದ್ರೆ ನಿನ್ನ ಜನ್ಮದಲ್ಲಿ ಈಜು ಕಲಿಯಲ್ಲ,’ ಅಂತ ಅಂದ ನನ್ನ ಗೆಳೆಯನೊಬ್ಬ ಅವತ್ತು ಒಂದು ಮಹಾನ್ ಉಪಾಯವನ್ನು ನನ್ನ ತಲೆಗೆ ತುಂಬಿದ. ಅದೆಂದರೆ, ಎಮ್ಮೆಯನ್ನೋ ದನವನ್ನೋ ನೀರಿನೊಳಕ್ಕೆ ಇಳಿಸಿ ಅದರ ಬಾಲವನ್ನು ಹಿಡಿದು ಅದು ಹೋದಂತೆಲ್ಲಾ ನಾವೂ ಅದರ ಹಿಂದೆ ಹೋದರೆ ಸಾಕು, ಹೆಂಗಿದ್ದರೂ ದನಗಳು ನೀರಿನಲ್ಲಿ ಮುಳುಗುವುದಿಲ್ಲ, ಹಂಗಾಗಿ ನಾವೂ ನೀರಿನಲ್ಲಿ ಮುಳುಗುವುದಿಲ್ಲ, ಜೊತೆಗೆ ನಮಗೂ ಈಜು ಕಲಿತಂತಾಗುತ್ತೆ, ಅನ್ನುವುದಾಗಿತ್ತು. ಅದು ನನಗೂ ಸರಿ ಅಂತ ಅನಿಸಿತ್ತು ಆಗ.
ಸರಿ, ಅದರಂತೆ ನಾನು ಅಲ್ಲೇ ದಡದಲ್ಲಿ ಮೇಯುತ್ತಿದ್ದ ನಮ್ಮ ಎಮ್ಮೆಯನ್ನು ಕಟ್ಟೆಯೊಳಕ್ಕೆ ಎಳೆದು ತಂದು, ಉಡುದಾರವೂ ಸೇರಿದಂತೆ ನನ್ನ ಬಟ್ಟೆಗಳನ್ನೆಲ್ಲಾ ಬಿಚ್ಚಿ, ಎಮ್ಮೆಯನ್ನು ನೀರಿಗಿಳಿಸಿ ಅದನ್ನು ಗದ್ದಲಿಸಿಕೊಳ್ಳುತ್ತಾ ಅದರ ಬಾಲ ಹಿಡಿದು ಹೊರಟೆ. ಮಧ್ಯಾಹ್ನದ ಉರಿ ಬಿಸಿಲಿಗೆ ಎಮ್ಮೆಗೆ ತುಂಬಾ ಹಿತವೆನಿಸಿರಬೇಕು, ಅದು ನನ್ನ ಉತ್ಸಾಹಕ್ಕಿಂತಲೂ ಒಂದು ಕೈ ಮಿಗಿಲಾಗಿಯೇ ನೀರಿನೊಳಗೆ ಮುನ್ನೆಡೆಯ ತೊಡಗಿತು. ಅಗಾ ಇಗಾ ಅನ್ನುವುದರೊಳಗೆ ಅದು ಕಟ್ಟೆಯ ನಡುವಿಗೆ ತಲುಪಿ ಬಿಟ್ಟಿತ್ತು. ಆಗ ಅದಕ್ಕೆ ಏನು ಅನ್ನಿಸಿತೋ ಏನೋ ಇದ್ದಕ್ಕಿದ್ದಂತೆ ತನ್ನ ವೇಗವನ್ನು ಕಡಿಮೆ ಮಾಡಿಕೊಂಡು, ನಂತರ ಕೆಲವೇ ಕ್ಷಣಗಳಲ್ಲಿ ತನ್ನ ಮೂಗೊಂದನ್ನು ಮಾತ್ರ ಮೇಲಕ್ಕೆತ್ತಿಕೊಂಡು ನಿಂತಲ್ಲೇ ನಿಂತು ಬಿಟ್ಟಿತು. ಯಾವಾಗ ಎಮ್ಮೆ ಹೀಗೆ ನಿಂತು ಬಿಟ್ಟಿತೋ ಅದರ ಬಾಲವನ್ನು ಹಿಡಿದು ಸಲೀಸಾಗಿ ತೇಲುತ್ತಾ ಖುಷಿಯಲ್ಲಿದ್ದ ನನಗೆ ಗಾಬರಿಯಾಗತೊಡಗಿತು. ಮುಂದಕ್ಕೆ ಹೋಗುವಂತೆ ಎಮ್ಮೆಯನ್ನು ಜೋರಾಗಿ ಗದ್ದಲಿಸಿಕೊಂಡೆ. ಎಮ್ಮೆ ಜಪ್ಪಯ್ಯ ಅನ್ನಲಿಲ್ಲ. ಏನೂ ಕೇಳಿಸದಂತೆ ನಿಂತೇ ಇತ್ತು. ಕ್ಷಣಾರ್ಧದಲ್ಲಿ ಈಜು ಗೊತ್ತಿಲ್ಲದ ನಾನು ಗಾಬರಿಯಿಂದ ಎಷ್ಟೇ ಕೈಕಾಲುಗಳನ್ನು ಆಡಿಸಿದರೂ ಮೆಲ್ಲಗೆ ಮುಳುಗ ತೊಡಗಿದೆ. ಇದನ್ನು ಕಂಡು ದಡದಲ್ಲಿ ನಿಂತಿದ್ದ ನನ್ನ ಗೆಳೆಯರು ಜೋರಾಗಿ ಕೂಗಿಕೊಳ್ಳ ತೊಡಗಿದರು. ನನಗೆ ಏನು ಮಾಡಬೇಕೆಂಬುದು ತೋಚದೆ ಜೋರಾಗಿ ಅಳುತ್ತಾ ಎಮ್ಮೆಯ ಮೈಯ್ಯನ್ನಿಡಿದು ಆಸರೆ ಪಡೆಯಲು ನೋಡಿದೆ. ಮೊದಲೇ ನುಣುಪಾಗಿರುತ್ತಿದ್ದ ಆ ಎಮ್ಮೆಯ ಮೈ ನೀರಿನಿಂದಾಗಿ ಮತ್ತೂ ನುಣುಪುಗೊಂಡು ಕೈ ಇಟ್ಟರೆ ಸಾಕು ಹಾಗೇ ಜಾರಿ ಬಿಡುತ್ತಿತ್ತು. ಈ ಗಾಬರಿಯಲ್ಲಿ ನಾನಾಗಲೇ ಎಮ್ಮೆಯ ಬಾಲವನ್ನೂ ಕೈ ಬಿಟ್ಟು ಬಿಟ್ಟಿದ್ದೆ. ದಡಲ್ಲಿದ್ದವರ ಕೂಗು ದೂರದಲ್ಲಿ ಎಲ್ಲಿಂದಲೋ ತೇಲಿ ಬರುತ್ತಿರುವಂತೆ ಭಾಸವಾಗುತ್ತಿತ್ತು.

ಇಂಥ ಕೂಗು ಅಲ್ಲೇ ಕಟ್ಟೆಯ ಮೇಲಿನ ಬಾರೆಯಲ್ಲಿ ಕುರಿಗಳನ್ನು ಬಿಟ್ಟುಕೊಂಡಿದ್ದ ಕೆಂಪ್ಲಿಂಗಜ್ಜನ ಕಿವಿಗೂ ಬಿದ್ದು, ಏನೋ ಆಗಿ ಹೋಗಿದೆ, ಯಾರೋ ಕಟ್ಟೆಯಲ್ಲಿ ಮುಳುಗಿ ಬಿಟ್ಟಿದ್ದಾರೆ, ಅಂತ ಒಂದೇ ಉಸುರಿಗೆ ಓಡಿ ಬಂದು ಕಟ್ಟೆಯ ನೀರಿಗೆ ಬಿದ್ದು ಬರಬರನೆ ಈಜಿ ನನ್ನತ್ತ ಬರುವ ಹೊತ್ತಿಗಾಗಲೇ ನಾನು ಒಂದಷ್ಟು ನೀರನ್ನು ಕುಡಿದು ಹೆದರಿಕೆಯಿಂದ ಥಂಡು ಹೊಡೆದು ಹೋಗಿದ್ದೆ. ನನ್ನ ಜುಟ್ಟನ್ನು ಹಿಡಿದು ದಡಕ್ಕೆ ಎಳೆದುಕೊಂಡು ಹೋದ ಕೆಂಪ್ಲಿಂಗಜ್ಜ ದಡ ಸೇರುತ್ತಿದ್ದಂತೆ, ಅಲ್ಲಿ ಬಿಸಾಕಿದ್ದ ತನ್ನ ಕುರಿಯ ಕೋಲನ್ನು ಎತ್ತಿಕೊಂಡು ಒಂದೇ ಸಮನೆ ನಾಲ್ಕೈದು ಏಟುಗಳನ್ನು ಬಿಗಿಯುತ್ತಾ, ನನ್ನ ಈ ಸಾಹಸದಲ್ಲಿ ಭಾಗಿಯಾಗಿದ್ದವರತ್ತ ದುರುಗುಟ್ಟಿಕೊಂಡು ನೋಡುತ್ತಿದ್ದಂತೆ, ಅವರೆಲ್ಲಾ ಎದ್ದೆವೋ ಬಿದ್ದೆವೋ ಅಂತ ಅಲ್ಲಿಂದ ಓಡಿ ಬಿಟ್ಟಿದ್ದರು. ಕೆಂಪ್ಲಿಂಗಜ್ಜನ ಕೋಪ ಅಷ್ಟಕ್ಕೇ ತಣ್ಣಗಾಗಿದ್ದರೆ, ನನಗೆ ಅವತ್ತು ರಾತ್ರಿ ಅಪ್ಪನ ಕೈಯ್ಯಿಂದ ಬೀಳಬಹುದಾಗಿದ್ದ ಏಟುಗಳು ತಪ್ಪುತ್ತಿದ್ದವು.

ಇಂಥ ಕೆಂಪ್ಲಿಂಗಜ್ಜನಿಗೆ ಹೆಂಡತಿ ಮಕ್ಕಳು ಇದ್ದರಂತೆ. ನಾನು ಯಾವತ್ತೂ ಅವರನ್ನು ನೋಡಿರಲಿಲ್ಲ. ಅದಾವ ಕಾರಣಕ್ಕೋ ಕೆಂಪ್ಲಿಗಜ್ಜನ ಹೆಂಡತಿ ತನ್ನೆರಡು ಮಕ್ಕಳನ್ನು ಕರೆದುಕೊಂಡು ಊರು ಬಿಟ್ಟು ಹೋಗುವಾಗ, ಗಂಡನ ಮೇಲಿನ ಸಿಟ್ಟಿಗೆ ಹೊಲದಲ್ಲಿದ್ದ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿ ಬಿಟ್ಟಿದ್ದಳಂತೆ. ಅದಾದ ಮೇಲೆ ಈ ಅಜ್ಜನೂ ಹೆಂಡತಿಯ ಮನೆಯ ಕಡೆ ಹೋಗುತ್ತಿರಲಿಲ್ಲ. ಅವರೂ ಇತ್ತ ಬರುತ್ತಿರಲಿಲ್ಲ. ನನಗೆ ಗೊತ್ತಿರುವಂತೆ ಈ ಬಗ್ಗೆ ಯಾರೂ ಕೆಂಪ್ಲಿಗಜ್ಜನನ್ನು ಕೆಣಕುತ್ತಿರಲಿಲ್ಲ.
ಹೆಂಡತಿ ಸತ್ತ ನಂತರ, ಕಡೆಯ ದಿನಗಳಲ್ಲಿ ಮಕ್ಕಳೇ ಬಂದು ಕೆಂಪ್ಲಿಂಗಜ್ಜನನ್ನು ತಮ್ಮ ಊರಿಗೆ ಕರೆದುಕೊಂಡು ಹೋಗಿದ್ದರು. ಆದರೂ ನನ್ನ ಅಜ್ಜ ಇರುವವರೆಗೂ ವಾರಕ್ಕೆ ಹದಿನೈದು ದಿನಕ್ಕೆ ಅಜ್ಜನನ್ನು ನೋಡುವ ಸಲುವಾಗಿ ನನ್ನ ಹಳ್ಳಿಗೆ ತಪ್ಪದೇ ಬರುತ್ತಿದ್ದರು. ಅಜ್ಜ ಸತ್ತ ನಂತರ ಕೆಂಪ್ಲಿಂಗಜ್ಜ ನನ್ನ ಊರಿನ ಕಡೆಗೆ ಬರುವುದು ಕಡಿಮೆಯಾಯ್ತು.
ಎಂಭತ್ತರ ಆಸುಪಾಸಿನಲ್ಲಿ ತೀರಿಕೊಂಡ ಕೆಂಪ್ಲಿಗಜ್ಜನ ಆ ರೂಪ, ಆ ಮಾತುಗಳು, ಆ ಪ್ರೀತಿ, ಕುರಿಯ ಗೂಡಿದ್ದ ಕಟ್ಟೆಯ ಮೇಲಿನ ಆ ಜಾಗ, ಈಗಲೂ ಕಣ್ಣಿಗೆ ಕಟ್ಟುತ್ತಾ ಬಾಲ್ಯದ ದಿನಗಳ ಆ ಕ್ಷಣಗಳನ್ನು ನೆನಪಾಗಿಸುತ್ತಾ ಎದೆಯನ್ನಿಡಿದು ಜಗ್ಗುತ್ತಿವೆ

Wednesday, June 22, 2011

ಬ್ರೆಕ್ಟ್ ನೆನಪಿನ ಅಂಗಳದಲ್ಲಿ..


ಬರ್ಲಿನ್ ನಲ್ಲಿ ಒಂದು ದಿನ -ಬ್ರೆಕ್ಟ್ ರಂಗಮಂದಿರದಲ್ಲಿ ಬ್ರೆಕ್ಟ್ ನೆನಪಿನ ಅಂಗಳದಲ್ಲಿ

ಬಿ .ಎ . ವಿವೇಕ ರೈ

ಬರ್ಲಿನ್ ನಲ್ಲಿ ಇರುವ ಬ್ರೆಕ್ಟ್ ರಂಗಮಂದಿರವೆಂದೇ ಪ್ರಸಿದ್ಧವಾಗಿರುವ ‘ಬರ್ಲಿನರ್ ಎನ್ ಸೇಮ್ಬ್ ಲ್’ ( ಜರ್ಮನ್ ಭಾಷೆಯಲ್ಲಿ ‘ಬೆರ್ಲಿನೆರ್ ಎನ್ಸೆಮ್ಬ್ಲೆ’) ಯನ್ನು ನಾನು ಮೊದಲು ನೋಡಿದ್ದು ೧೯೯೩ರ ಸಪ್ಟಂಬರದಲ್ಲಿ. ಪೀಟರ್ ಬ್ರೂಕ್ ನ ಫ್ರೆಂಚ್ ನಾಟಕ L’homme qui ವನ್ನು ಬರ್ಲಿನರ್ ಎನ್ ಸೇಮ್ಬ್ ಲ್ ನಲ್ಲಿ ಸಪ್ಟಂಬರ ೯ರ೦ದು . ಮತ್ತೆ ಮೊನ್ನೆ ಜೂನ್ ೧೩ರನ್ದು ಬರ್ಲಿನ್ ನಲ್ಲಿ ಇದ್ದಾಗ ನನ್ನ ಮೊದಲ ಭೇಟಿಯೇ ಬೆಳಗ್ಗೆ ‘ಬರ್ಲಿನರ್ ರಂಗಮಂದಿರ’ಕ್ಕೆ.ತಣ್ಣನೆಯ ಹವೆಯಲ್ಲಿ ಪ್ರಶಾಂತ ವಾತಾವರಣದಲ್ಲಿ ಸುಮಾರು ಹೊತ್ತು ರಂಗಮಂದಿರದ ಒಳಗೆ ಮತ್ತು ಹೊರಗೆ ಸುತ್ತಾಡಿದೆ. ಪ್ರದರ್ಶನ ಸಂಜೆ ಇರುವ ಕಾರಣ ,ಮಾಹಿತಿ ಕಚೇರಿಯಲ್ಲಿ ಇಬ್ಬರು ಮತ್ತು ಟಿಕೆಟ್ ಕೊಡುವ ಒಬ್ಬಾಕೆ ಬಿಟ್ಟರೆ ಉಳಿದ ಕಡೆ ಎಲ್ಲಾ ನನಗೆ ಕಂಡದ್ದು ಬ್ರೆಕ್ಟ್. ನಾನು ಕನ್ನಡದಲ್ಲಿ ಓದಿದ ಮತ್ತು ರಂಗಭೂಮಿಯಲ್ಲಿ ನೋಡಿದ ಅನೇಕ ಬ್ರೆಕ್ಟ್ ನಾಟಕಗಳು ನೆನಪಾದುವು. ಕಕೆಸಿಯನ್ ಚಾಕ್ ಸರ್ಕಲ್, ಗೆಲಿಲಿಯೋ, ತ್ರೀ ಪೆನ್ನಿ ಒಪೆರ (ಮೂರು ಕಾಸಿನ ಸಂಗೀತ ನಾಟಕ ), ಸೆಜುವಾನ್ ನಗರದ ಸಾದ್ವಿ, ತಾಯಿ ….ಹಿಟ್ಲರನ ನಾಜಿ ಆಡಳಿತದ ಅವಧಿಯಲ್ಲಿ ಜರ್ಮನಿಯ ಹೊರಗೆ ಇದ್ದುಕೊಂಡು , ತನ್ನ ನಾಡಿನ ಬರ್ಬರತೆಯ ವಿರುದ್ಧ ಬರೆದ ಅನೇಕ ನಾಟಕಗಳ ಹಾಡುಗಳು ಮಾತುಗಳು ಹರಿಯುವ ನೀರಿನ ದಂಡೆಯಲ್ಲಿರುವ ‘ಬರ್ಲಿನರ್..’ಪರಿಸರದಲ್ಲಿ ಅನುರಣಿಸಿದವು.

ಆ ದಿನ ಸಂಜೆ ಅಲ್ಲಿ ಎರಡು ನಾಟಕಗಳ ಪ್ರದರ್ಶನಗಳು ಇದ್ದುವು. ಪ್ರಧಾನ ರಂಗಮಂದಿರದಲ್ಲಿ ತೋಮಸ್ ಬೆರ್ನ್ ಹರ್ದ್ ನ ‘EINFACH KOMPLIZIERT’ ಪಕ್ಕದ ಸಣ್ಣ ರಂಗಮಂದಿರದಲ್ಲಿ ‘ANTONO/KARGE/BRECHT’. ಇದು ಬ್ರೆಕ್ಟ್ ನಾಟಕಗಳ ಹಾಡು ಮತ್ತು ಮಾತುಗಳ ತುಣುಕುಗಳ ಮೂಲಕ ಬ್ರೆಕ್ಟ್ ನಾಟಕಗಳ ಒಬ್ಬಳು ಪ್ರಸಿದ್ಧ ನಟಿ ಮತ್ತು ಒಬ್ಬ ಪ್ರಸಿದ್ಧ ನಟ ಅಭಿನಯಿಸುವ ಒಂದು ಪ್ರಯೋಗ. ಬ್ರೆಕ್ಟ್ ನ ಹೆಸರಿನ ಕಾರಣಕ್ಕಾಗಿ ನಾನು ಇದರ ಟಿಕೆಟ್ ಕೊಂಡುಕೊಂಡೆ , ಆ ದಿನದ ಸಂಜೆಯ ಪ್ರದರ್ಶನಕ್ಕೆ. ಸಂಜೆ ಏಳು ಗಂಟೆಗೆ ಪ್ರದರ್ಶನ. ಮತ್ತೆ ಸಂಜೆ ಬಂದು ನಾಟಕ ನೋಡಿದೆ. ಆ ಪ್ರದರ್ಶನದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

‘ಬರ್ಲಿನರ್ ಎನ್ ಸೇಮ್ಬ್ ಲ್ ‘ವನ್ನು ಬೆರ್ತೊಲ್ತ್ ಬ್ರೆಕ್ಟ್ (೧೮೯೮-೧೯೫೬) ಮತ್ತು ಅವನ ಕಲಾವಿದೆ ಹೆಂಡತಿ ಹೆಲೆನೆ ವೈಗೆಲ್ ೧೯೪೯ರಲ್ಲಿ ಸ್ಫಾಪಿಸಿದರು. ಬ್ರೆಕ್ಟ್ ನ ‘ಮದರ್ ಕರೆಜ್ ‘ನಾಟಕದ ಯಶಸ್ಸು ಇದರೊಂದಿಗೆ ಇತ್ತು. ನಾಜಿ ಆಡಳಿತ ಕೊನೆಗೊಂಡ ಬಳಿಕ ಜರ್ಮನಿಗೆ ಹಿಂದಿರುಗಿದ ಬ್ರೆಕ್ಟ್ ತನ್ನ ಕಂಪೆನಿಯನ್ನು ಆರಂಭದಲ್ಲಿ ವೊಲ್ಫ್ ಗ್ಯಾಂಗ್ ಲಾಂಗ್ ಹೊಫ್ಫ್ ನ ‘ದಾಯಿಶ್ಚ್ ಥಿಯೇಟರ್ ‘ ನಲ್ಲಿ ಸುರುಮಾಡಿದ. ಬಳಿಕ ೧೯೫೪ರಿಂದ ಈಗ ಇರುವ ಸ್ಚಿಫ್ಫ್ ಬುಎರ್ ದಮ್ಮ್ ಥಿಯೇಟರ್ , ಅದರ ಶಾಶ್ವತ ಮನೆ ಆಯಿತು. ಎರಡನೆಯ ಮಹಾಯುದ್ಧದಲ್ಲಿ ಹೆಚ್ಚು ಹಾನಿಗೆ ಒಳಗಾಗದ ಈ ಕಲಾತ್ಮಕ ಕಟ್ಟಡದ ಥಿಯೇಟರ್ ನಲ್ಲಿ ೧೯೨೮ರಲ್ಲಿ ಬ್ರೆಕ್ಟ್ ನ ‘ತ್ರೀ ಪೆನ್ನಿ ಒಪೆರ’ ನಾಟಕ ದೀರ್ಘ ಕಾಲ ಪ್ರದರ್ಶನ ಕಂಡು ಜನಪ್ರಿಯ ಆಗಿತ್ತು. ಈ ರಂಗಮಂದಿರದಲ್ಲಿ ಬ್ರೆಕ್ಟ್ ತನ್ನ ‘ಕಕೆಸಿಯನ್ ಚಾಕ್ ಸರ್ಕಲ್’ ನಾಟಕವನ್ನು ನಿರ್ದೇಶಿಸಿ ಪ್ರದರ್ಶಿಸಿದ. ಬಳಿಕ ಎರಿಕ್ ಎಂಗೆಲ್ ಜೊತೆಗೆ ‘ಗೆಲಿಲಿಯೋ’ ನಾಟಕ ನಿರ್ದೇಶಿಸಿದ. ಆವರೆಗೆ ರಂಗ ಪ್ರದರ್ಶನ ಕಾಣದಿದ್ದ ಬ್ರೆಕ್ಟಿನ ನಾಟಕಗಳನ್ನು ನಿರ್ದೇಶಿಸಲು ತನ್ನ ವಿದ್ಯಾರ್ಥಿಗಳಾದ ಬೆನ್ನೊ ಬೆಸ್ಸೋನ್, ಎಗೊನ್ ಮೊಂಕ್, ಪೀಟರ್ ಪಲಿತ್ಸ್ಚ್ ಮತ್ತು ಮ್ಯಾನ್ ಫ್ರೆಡ್ ವೇಕ್ ವೆರ್ಥ್ ಅವರಿಗೆ ಅವಕಾಶ ಕಲ್ಪಿಸಿದ. ರಂಗ ಸಜ್ಜಿಕೆ , ಪ್ರಸಾಧನ , ಸಂಗೀತ -ಇವುಗಳಿಗೆ ಬ್ರೆಕ್ಟ್ ನ ಆಪ್ತ ಸಹಯೋಗಿಗಳಾಗಿದ್ದವರು-ಕಸ್ಪರ್ ನೆಹೆರ್, ಕಾರ್ಲ್ ವೊನ್ ಅಪ್ಪೆನ್, ಪೌಲ್ ದೆಸ್ಸವು , ಹನ್ನ್ಸ್ ಐಸ್ಲೆರ್ ಮತ್ತು ಎಲಿಸಬೆಥ್ ಹೊವ್ಪ್ತ್ ಮ್ಯಾನ್ .

ಬ್ರೆಕ್ಟ್ ನ ಮರಣದ (೧೯೫೬)ದ ಬಳಿಕ ಅವನ ಹೆಂಡತಿ ಕಲಾವಿದೆ ಹೆಲೆನೆ ವೈಗೆಲ್ ಈ ರಂಗತಂಡದ ಕಲಾ ಮ್ಯಾನೇಜರ್ ಆದಳು. ಯುವ ನಿರ್ದೇಶಕರಾದ ಮನ್ಫ್ರೆದ್ ಕರ್ಗೆ , ಮತಿಯಾಸ್ ಲಾಂಗ್ ಹೊಫ್ಫ್ ತಮ್ಮ ನಿರ್ದೇಶನದ ಬದುಕನ್ನು ಆರಂಭಿಸಿದ್ದು ಇಲ್ಲಿ. ಈ ಕಂಪನಿಯ ‘ಮದರ್’ ,’ಅರ್ತುರೋ ಉಯಿ …’ ಯಂತಹ ಪ್ರದರ್ಶನಗಳು ಇಲ್ಲಿ ತುಂಬಾ ಜನಪ್ರಿಯತೆ ಪಡೆದವು. ರುತ್ ಬೆರ್ಗ್ ಹೌಸ್ ಈ ಕಂಪೆನಿಯ ಕಲಾ ನಿರ್ದೇಶಕಿ ಆದಾಗ , ರಾಜಕೀಯ ಮತ್ತು ಕಲಾತ್ಮಕ ಪುನಶ್ಚೇತನಕ್ಕೆ ಅವಕಾಶ ದೊರೆಯಿತು. ಜರ್ಮನ್ ಡೆಮೊಕ್ರೆಟಿಕ್ ರಿಪಬ್ಲಿಕ್ ನಿಷೇಧ ಹೇರಿದ್ದ ಹೈನರ್ ಮುಲ್ಲರ್ ನ ‘ಸಿಮೆಂಟ್’ ನಾಟಕವನ್ನು ರುತ್ ನಿರ್ದೆಶಿಸಿದಳು. ಆಡಳಿತಾರೂಡ ರಾಜಕೀಯವು ಆಕೆಯ ಸವಾಲು ಒಡ್ಡುವ ಪ್ರಯೋಗಾತ್ಮಕ ನಾಟಕ ಪ್ರದರ್ಶನಗಳನ್ನು ಒಪ್ಪಿಕೊಳ್ಳಲಿಲ್ಲ. ಹಾಗಾಗಿ ೧೯೭೭ರಲ್ಲಿ ಮನ್ ಫ್ರೆಡ್ ವೇಕ್ ವೆರ್ಥ್ಅನ್ನು ನಿರ್ದೇಶಕ ಆಗಿ ಅವಳ ಸ್ಥಾನಕ್ಕೆ ತರಲಾಯಿತು. ಆದರೂ ಹೊಸ ನಾಟಕಗಳು ಈ ರಂಗಮಂದಿರದಲ್ಲಿ ಕಾಣಿಸಿ ಕೊಂಡವು. ಆಡಳಿತದ ಧೋರಣೆಗಳ ನಿರ್ಬಂಧಗಳ ಚೌಕಟ್ಟಿನಲ್ಲಿ ಹೆಣಗುತ್ತಿದ್ದ ರೆಪರ್ಟರಿಗೆ ಹೊಸ ಜೀವ ಬರಲಾರಂಭಿಸಿತು.

೧೯೯೨ರಲ್ಲಿ ಬರ್ಲಿನ್ ಗೋಡೆ ಬಿದ್ದು ,ಪೂರ್ವ ಮತ್ತು ಪಶ್ಚಿಮಗಳು ಒಂದಾಗಿ ಹೊಸ ಯುಗವೊಂದು ಜರ್ಮನಿಯಲ್ಲಿ ಆರಂಭವಾದಾಗ , ಬರ್ಲಿನರ್ ರೆಪರ್ಟರಿಗೆ ಹೊಸ ಆಡಳಿತ ಮಂಡಳಿ ಬಂದಿತು. ಮಥಿಯಾಸ್ ಲಾಂಗ್ ಹೊಫ್ಫ್ , ಫ್ರಿಟ್ಜ್ ಮರ್ಕುವರ್ದ್, ಹೈನೆರ್ ಮುಲ್ಲರ್ , ಪೀಟರ್ ಪಲಿತ್ಸ್ ಶ್ಚ್ ಮತ್ತು ಪೀಟರ್ ಜ್ಯದೆಕ್ -ಇವರು ಹೊಸ ರೂಪ ಹೊಸ ಚಿಂತನೆಯನ್ನು ಕೊಟ್ಟರು. ಸರಕಾರದ ಅಧೀನ ಇದ್ದ ಕಂಪೆನಿಯು ಬದಲಾಗಿ , ನಗರ ಆಡಳಿತದಿಂದ ಸಬ್ಸಿಡಿ ಪಡೆಯುವ ಖಾಸಗಿ ನಿಯಮಿತ ಕಂಪೆನಿ ಆಯಿತು. ಹೈನೆರ್ ಮುಲ್ಲರ್ ನಿರ್ದೇಶಿಸಿದ , ಬ್ರೆಕ್ಟ್ ನ ‘ಅರ್ತುರೋ ಉಯಿ …’ಪ್ರದರ್ಶನವು ಬಹಳ ಯಶಸ್ವಿಯಾಗಿ ಜನಪ್ರಿಯತೆ ಗಳಿಸಿತು.

೧೯೯೯ರಲ್ಲಿ ಕ್ಲ್ವುಸ್ ಪೆಯ್ಮನ್ನ್ ಈ ‘ಬೆರ್ಲಿನರ್ ..’ಕಂಪೆನಿಯ ಕಲಾ ನಿರ್ದೇಶಕ ಆದಾಗ ಸಮಕಾಲೀನ ರಂಗಭೂಮಿಯ ಮತ್ತು ಕ್ಲಾಸಿಕ್ ಗಳನ್ನು ಆಧುನಿಕ ದೃಷ್ಟಿ ಕೋನದಿಂದ ನಿರ್ದೇಶಿಸುವ ನಾಟಕಗಳು ಹೆಚ್ಚು ಕಾಣಿಸಿಕೊಂಡುವು. ೨೦೦೦ದಲ್ಲಿ ಜಾರ್ಜ್ ತಬೊರಿಯ’ Brecht -Akte’ ಪ್ರದರ್ಶನದ ಮೂಲಕ ‘ಬರ್ಲಿನೆರ್ …’ಮತ್ತೆ ತೆರೆದುಕೊಂಡಿತು.೨೦೦೨-೨೦೦೩ರಲ್ಲಿ ಕ್ಲವುಸ್ ಪೇಯ್ ಮನ್ ತಾನು ಕಲಾ ನಿರ್ದೇಶಕನಾದ ಬಳಿಕ ಮೊದಲ ಬಾರಿ ಬ್ರೆಕ್ಟ್ ನಾಟಕಗಳನ್ನು ನಿರ್ದೇಶಿಸಿದನು.-ಮದರ್,ಸೈಂಟ್ ಜೋನ್ ಆಫ್ ದ ಸ್ಟಾಕ್ ಯಾರ್ಡ್ಸ್.ಈಗ ಬರ್ಲಿನೆರ್ ..ನಲ್ಲಿ ಕೆಲಸಮಾಡುತ್ತಿರುವ ನಿರ್ದೇಶಕರು-ಲಿಯಂದೆರ್ ಹೌಸ್ ಮನ್ ,ಲುಕ್ ಬೋಂದಿ ,ವೆರ್ನೆರ್ ಸ್ಚ್ರೋಯೇತೆರ್ ,ಅಕಿಂ ಫ್ರೆಯೇರ್,ತೋಮಸ್ ಲಾಂಗ್ ಹೊಫ್ಫ್,ರೋಬೆರ್ತ್ ವಿಲ್ಸನ್,ಪೀಟರ್ ಜ್ಯದೆಕ್.

ಬ್ರೆಕ್ಟ್ ಮತ್ತೆ ಮತ್ತೆ ಕಾಲ ದೇಶಗಳನ್ನು ಮೀರಿ ,ತನ್ನ ನಾಟಕಗಳಿಂದ ನಮ್ಮನ್ನು ಕಾಡುತ್ತಾನೆ,ಗೇಲಿ ಮಾಡುತ್ತಾನೆ ,ನಮ್ಮ ನಡುವೆ ಈಗ ನಡೆಯುತ್ತಿರುವುದೆಲ್ಲವನ್ನು ತಾನು ಎಪ್ಪತ್ತು ಎಂಬತ್ತು ವರ್ಷಗಳ ಹಿಂದೆಯೇ ಕಂಡಿದ್ದೆ ಎಂದು ನಮಗೆ ಬೆರಗು ಭಯ ಹುಟ್ಟಿಸುತ್ತಾನೆ.’ಮೂರು ಕಾಸಿನ ಸಂಗೀತ ನಾಟಕ’ ನಮ್ಮಲ್ಲಿ ದಿನನಿತ್ಯ ಪ್ರದರ್ಶನ ಆಗುತ್ತಿರುವಾಗ ಬ್ರೆಕ್ಟ್ ಎಲ್ಲಿದ್ದಾನೆ -’ಬರ್ಲಿನರ್ ….’ನಲ್ಲಿ ಮಾತ್ರವೇ ?

ಮಾಲಿಂಗಪ್ಪ ಮತ್ತವರ ಮಗ ಮಲ್ಲಿಕಾರ್ಜುನಎಸ್.ಗಂಗಾಧರಯ್ಯ

ಮಲ್ಲಿಕಾರ್ಜುನ

‘ನಾಲ್ಕೈದು ತಿಂಗಳ ಹಿಂದೆ ಇಲ್ಲಿ ಈ ಕಾಡ್ನಾಗೆ ಕರಡಿ ನಮ್ಮೂರಿನ ಒಬ್ಬನ ಒಂದು ಕಣ್ಣು ಗುಡ್ಡೇನೇ ಕಿತ್ತಾಕಿ ಬಿಟ್ಟಿತ್ತು, ಎಷ್ಟೋ ದಿನ ನಂಗೂ ಎದೂರ‍್ಗೇ ಕಾಣಿಸ್ಕಂಡವೇ, ಎಷ್ಟು ಹೊತ್ತಿನಾಗ ಅಂದ್ರೆ ಅಷ್ಟು ಹೊತ್ತಿನಾಗ ಈ ದಾರೀಲಿ ಓಡಾಡ್ತೀನಿ, ಒಂದಿನಾನೂ ಅವು ನನ್ನ ತಂಟೆಗೆ ಬಂದಿಲ್ಲ,’ ಅಂದ ಮಲ್ಲಿಕಾರ್ಜುನ. ಇಷ್ಟೊತ್ತಿನಾಗೆ ಹಿಂಗೆ ನೀನೊಬ್ಬನೇ ತಿರುಗಾಡ್ತೀಯಲ್ಲ ನಿಂಗೇನೂ ಭಯ ಆಗಲ್ವ ಅಂತ ಕೇಳಿದ್ದಕ್ಕೆ ಹೇಳಿದ ಮಾತುಗಳಿವು. ಆಗ ಗಂಟೆ ರಾತ್ರಿ ಹನ್ನೊಂದಾಗಿತ್ತು. ನಾವಾಗ ಮಲ್ಲಿಕಾರ್ಜುನನ ಕಾಡಿನ ನಡುವಿರುವ ಮಾವಿನ ತೋಟಕ್ಕೆ ಅವನ ಜೊತೆ ಹೋಗುತ್ತಿದ್ದೆವು. ಕೈಯ್ಯಲ್ಲಿ ಕುಡುಗೋಲಿನ ಜೊತೆಗೊಂದು ಕುರುಡು ಬ್ಯಾಟರಿಯನ್ನು ಹಿಡಿದು, ತಲೆಯ ಮೇಲೆ ನಮಗಾಗಿ ಹೊದಿಯುವ ಹೊದಿಕೆಗಳನ್ನು ಹೊತ್ತು, ಅದೇ ತಾನೆ ಊಟ ಮುಗಿಸಿಕೊಂಡು, ತೋಟದಲ್ಲಿರುವ ಅಪ್ಪನಿಗಾಗಿ ಬುತ್ತಿಯನ್ನು ಕಟ್ಟಿಕೊಂಡು ತೋಟದ ದಾರಿ ಹಿಡಿದಿದ್ದ ಮಲ್ಲಿಕಾರ್ಜುನ.

ತಿಪಟೂರಿನಿಂದ ಚಿಕ್ಕನಾಯಕನಹಳ್ಳಿಗೆ ಹೋಗುವ ರಸ್ತೆಯಲ್ಲಿ ಈರಲಗೆರೆ, ಗೋಪಾಲನಹಳ್ಳಿ ಎಂಬ ಹಳ್ಳಿಗಳು ಸಿಕ್ಕುತ್ತವೆ. ಅದುವರೆವಿಗೂ ಅಪ್ಪಟ ಬಯಲು ಸೀಮೆಯ ರಸ್ತೆಯಂತಿರುವ ರಸ್ತೆ ಈ ಊರುಗಳ ನಡುವಲ್ಲಿ ಮಲೆನಾಡಿನ ರಸ್ತೆಯಾಗಿ ಬಿಡುತ್ತದೆ. ಏಕೆಂದರೆ, ಈ ಈರಲಗೆರೆಯಿಂದ ಗೋಪಾಲನಹಳ್ಳಿಯವರೆಗೂ ಸುಮಾರು ಮೂರು ಕಿಲೋಮೀಟರುಗಳಷ್ಟು ರಸ್ತೆಯ ಇಕ್ಕೆಲಗಳಲ್ಲೂ ಸಣ್ಣ ಪುಟ್ಟ ತೋಟಗಳನ್ನು ಬಿಟ್ಟರೆ, ಅವುಗಳಾಚೆಗೆ ಕಣ್ಣಾಯಿಸಿದಷ್ಟೂ ಕಾಡೇ ಕಾಣುತ್ತದೆ. ರಾತ್ರಿಯ ಹೊತ್ತಲ್ಲಿ ತಡವಾಗಿ ಓಡಾಡುವವರಿಗೆ ಈ ರಸ್ತೆಯಲ್ಲಿ ಅನೇಕ ಕಾಡು ಮೃಗಗಳು ಎದುರಾಗುತ್ತವೆ.

ಇಂಥ ಕಾಡಿನ ನಡುವೆ ಇರುವ ಮಾವಿನ ತೋಟದಲ್ಲಿ ಗುಡಸಲಿನಂಥ ಪುಟ್ಟದೊಂದು ಮನೆಯಲ್ಲಿ ಸುಮಾರು ವರ್ಷಗಳಿಂದ ವಾಸಿಸುತ್ತಿದ್ದಾರೆ ಮಾಲಿಂಗಪ್ಪ ಮತ್ತವರ ಮಗ ಮಲ್ಲಿಕಾರ್ಜುನ. ತಮ್ಮ ಜೊತೆಗೆ ನಾಲ್ಕೈದು ಎಮ್ಮೆ, ಒಂದೆರಡು ಹಸುಗಳನ್ನು ಸಾಕಿಕೊಂಡು, ಅವುಗಳ ನಿಗಾ ಮಾಡುತ್ತಾ ಅಪ್ಪಟ ಒಕ್ಕಲು ಮನೆತನದ ಬದುಕು ಬದುಕುತ್ತಿರುವ ಇವರಿಬ್ಬರಿಗೆ ಈ ತೋಟವೇ ಸರ್ವಸ್ವ. ಇದೇ ಇವರ ಲೋಕ. ಬೆಳಗು ಬೈಗುಗಳಲ್ಲಿ ಕಿವಿತುಂಬಿಕೊಳ್ಳುವ ಹಕ್ಕಿಗಳ ಕಲರವ, ನವಿಲುಗಳ ನರ್ತನ, ತಣ್ಣನೆಯ ತಂಗಾಳಿ, ಯಾರ ಹಂಗೂ ಇಲ್ಲದ ಏಕಾಂತಕ್ಕೆ ಒಗ್ಗಿ ಹೋಗಿರುವ ಇವರಿಬ್ಬರೂ ಅಕ್ಷರಶಃ ಕಾಡಿನ ಮಕ್ಕಳೇ ಆಗಿ ಹೋಗಿದ್ದಾರೆ.

ಗೋಪಾಲನಹಳ್ಳಿಯಲ್ಲಿ ಇವರದು ಒಂದು ಮನೆಯಿದೆ. ಮನೆಯ ಉಳಿದವರು ಅಂದರೆ, ಮಲ್ಲಿಕಾರ್ಜುನನ ತಾಯಿ, ತಮ್ಮ, ತಂಗಿ ಅಲ್ಲಿ ಆ ಮನೆಯಲ್ಲಿ ಇರುತ್ತಾರೆ. ಹೀಗಿದ್ದರೂ ಈ ಅಪ್ಪ ಮಗ ಸುಮಾರು ಹನ್ನೊಂದು ವರ್ಷಗಳಿಂದಲೂ, ಊಟಕ್ಕೆ, ಸ್ನಾನಕ್ಕೆ ಅಂತ ಹಳ್ಳಿಯ ಮನೆಗೆ ಬರುವುದನ್ನು ಬಿಟ್ಟರೆ, ಉಳಿದಂತೆ ಆ ತೋಟದ ನಡುವೆಯೇ ಕಳೆಯುತ್ತಾರೆ. ‘ಇಲ್ಲಿಗೆ ಬಂದು ಹನ್ನೊಂದು ವರ್ಷ ಆಯ್ತು, ಅವತ್ತಿನಿಂದ ಒಂದಿನಾನೂ ನಾನು ಹಳ್ಳಿಯ ಮನೆಯಲ್ಲಿ ಉಳ್ಕಂಡಿಲ್ಲ, ಅಲ್ಲಿದ್ರೆ ನಿದ್ದೇನೆ ಹತ್ತಲ್ಲ, ಅವತ್ತು ಒಂದಿನ ಮನೆಯವರೆಲ್ಲಾ ಮನೆ ಕಾಯಾಕೆ ನನಗೆ ಹೇಳಿ ಯಾವುದೋ ಊರಿಗೆ ಹೋಗಿದ್ರು, ಅವತ್ತು ಅಲ್ಲಿ ಉಳುಕಳಾನ ಅಂತ ಹೋಗಿದ್ದೆ, ಎಷ್ಟು ಹೊತ್ತು ಹೊರಳಾಡಿದ್ರೂ ನಿದ್ದೆ ಬರಲೇ ಇಲ್ಲ. ಅಷ್ಟು ಹೊತ್ತಿಗಾಗಲೇ ರಾತ್ರಿ ಎರಡು ಗಂಟೆ ಆಗಿತ್ತು. ಇದು ಆಡಿದ ಆಟ ಅಲ್ಲ ಅಂದುಕೊಂಡು ಎದ್ದವನೇ ಮನೆಗೆ ಬೀಗ ಹಾಕಿಕೊಂಡು ಸೀದಾ ತೋಟಕ್ಕೆ ಬಂದು ಮಲಗಿ ಬಿಟ್ಟಿದ್ದೆ.’ ಅನ್ನುತ್ತಾನೆ ಮಲ್ಲಿಕಾರ್ಜುನ.

ಇವರಿರುವ ಈ ತೋಟ ದೊಡ್ಡದೊಂದು ಮಲ್ಟಿಯ ಮೇಲಿದೆ. ಅದರೊಳಗೆ ಸುಮಾರು ಆರು ನೂರರಷ್ಟು ಮಾವಿನ ಮರಗಳಿವೆ. ಇತ್ತೀಚೆಗಷ್ಟೇ ಫಸಲು ಬಿಡಲಾರಂಬಿಸಿರುವ ಇವುಗಳು ದೂರದ ರಸ್ತೆಯಿಂದ ನೋಡಿದರೆ ಮಲ್ಟಿಯ ಮೇಲೆ ಅಗಲಿಸಿರುವ ಹಸುರಿನ ಛತ್ರಿಗಳಂತೆ ಕಾಣುತ್ತವೆ. ಅದರ ಸುತ್ತಲೂ ಕಾಡಿದೆ. ಅದರೊಳಗೆ ತೇಗ, ಬಿದಿರು, ಮುತ್ತುಗ ಮುಂತಾದ ಮರಗಿಡಗಳ ಜೊತೆಗೆ ಕಾಡಿನ ಕಳ್ಳರ ಕಣ್ಣಿಂದ ತಪ್ಪಿಸಿಕೊಂಡು ಬೆಳೆದಿರುವ ಗಂಧದ ಗಿಡಗಳು ಹಳ್ಳ ಕೊಳ್ಳಗಳಲ್ಲಿ ಅಲ್ಲಿ ಕಾಣ ಸಿಗುತ್ತವೆ. ಇನ್ನು ಕಾಡು ಹಂದಿ, ಜಿಂಕೆ, ಮೊಲ, ಕಿರುಬ ಮುಂತಾದ ಪ್ರಾಣಿಗಳ ಜೊತೆಗೆ ಅಸಂಖ್ಯ ನವಿಲುಗಳಿವೆ. ‘ಮಾಮೂಲಿ ನವಿಲುಗಳ ಜೊತೆಗೆ ಒಂದಷ್ಟು ಬಿಳೀ ನವಿಲುಗಳದಾವೆ, ಅವುನ್ನ ನೋಡ್ಬೇಕು ನೀವು ಹೆಂಗೆ ಕಾಣ್ತವೆ ಅಂತೀರಾ,’ ಅನ್ನುವ ಮಲ್ಲಿಕಾರ್ಜುನ ನವಿಲುಗಳ ನರ್ತನದ ವೈಭವವನ್ನು ವರ್ಣಿಸುತ್ತಾನೆ. ‘ಈಗೊಂದು ವಾರದ ಕೆಳಗೆ ರಾತ್ರಿ ನಾವಿಬ್ರೂ ಒಳಗೆ ಏನೋ ಮಾತಾಡ್ಕೆಂಡು ಕೂತಿದ್ವಿ, ಹೊರಗಡೆ ಮೆಲ್ಲಗೆ ಏನೋ ಸದ್ದಾದಂಗಾತು, ಅದಾದ ಸ್ವಲ್ಪ ಹೊತ್ತಗೆ ಇದ್ದಕ್ಕಿದ್ದಂತೆ ನಾಯಿ ಕಯ್‌ಗುಡೋದು ಕೇಳುಸ್ತು, ಚಕ್ ಅಂತ ಎದ್ದು ಬಂದು ನೋಡ್ತೀವಿ, ಕತ್ತೆ ಕಿರುಬ ಆಚೆ ಕಡೆ ಮಲಗಿದ್ದ ನಾಯೀನ ಕಚ್ಕೆಂಡು ಓಡ್ತಾ ಇತ್ತು. ಕೈಗೆ ಸಿಕ್ಕಿದ್ದನ್ನ ತಗಂಡು ಜೋರಾಗಿ ಬಾಯಿ ಮಾಡಿಕೊಂಡು ನಾವೂ ಓಡಿಸ್ಕಂಡು ಹೋದ್ವಿ, ಆದ್ರದು ಕಣ್ಮುಚ್ಚಿ ಬಿಡಾದ್ರೊಳ್ಗೆ ಮಂಗ ಮಾಯವಾಗಿ ಬಿಡ್ತು,’ ಅಂತ ಅಂದ ಅಪ್ಪ ಮಾಲಿಂಗಪ್ಪ ಮಾತಿಗೆ ಪೂರಕವಾಗಿ ಕೆಲವು ದಿನಗಳ ಹಿಂದೆ ಕಂಡ ಚಿರತೆಯ ಬಗ್ಗೆ ಹೇಳಿದ ಮಲ್ಲಿಕಾರ್ಜುನ.

ಈ ತೋಟದ ಎದುರಿಗೊಂದು ಕಾಡಿನ ಕೆರೆಯಿದೆ. ಸರ್ಕಾರದ ಜಲಸಮೃದ್ಧಿ ಯೋಜನೆಯಡಿಯಲ್ಲಿ ಈ ಕೆರೆಯನ್ನು ಚಂದಗೊಳಿಸಿ, ಇದರ ಸುತ್ತಲೂ ಮತ್ತಷ್ಟು ಗಿಡ ಮರಗಳನ್ನು ನೆಡಲಾಗಿದೆ. ಅದೇ ರೀತಿ ಕೆರೆಯ ಅಂಗಳಕ್ಕೆ ದನ ಕುರಿ ಮೇಕೆಗಳನ್ನು ಬಿಡದಂತೆ, ಕೆರೆಯ ಏರಿಯನ್ನು ಹಾಳುಗೆಡವದಂತೆ ಕಲ್ಲುಗಳ ಮೇಲೆ, ಗಿಡ ಮರಗಳ ಮೇಲೆ, ಜನರಿಗೆ ಎಚ್ಚರಿಕೆಯ ಮಾತುಗಳನ್ನು ಬರೆಯಲಾಗಿದೆ. ಹಗಲು ಹೊತ್ತಿನಲ್ಲಿ ದನ ಕುರಿಗಳನ್ನು ಮೇಯಿಸಲೆಂದು ಅತ್ತ ಹೋಗುವ ಊರಿನ ಕೆಲವರಿಂದ ಕೊಂಚ ಮನುಷ್ಯರ ನೆರಳು ಬೀಳಿಸಿಕೊಳ್ಳುವ ಈ ಜಾಗ ಸಂಜೆಯಾಗುತ್ತಿದ್ದಂತೆ ನಿರ್ಜನವಾಗಿಬಿಡುತ್ತದೆ.

ಇಲ್ಲಿನ ವಿಶೇಷ ಅಂದ್ರೆ, ಈ ತೋಟದ ಮಾಲಿಕ ಮಾಲಿಂಗಪ್ಪನಾಗಲಿ, ಇಲ್ಲಾ ಇವರ ಮಗ ಮಲ್ಲಿಕಾರ್ಜುನನಾಗಲಿ ಅಲ್ಲ. ಇವರು ಅದರ ಉಸ್ತುವಾರಿಯನ್ನಷ್ಟೇ ನೋಡಿಕೊಳ್ಳುತ್ತಿದ್ದಾರೆ. ಸುಮಾರು ಹದಿನೈದು ವರ್ಷಗಳ ಹಿಂದೆ ತಿಪಟೂರಿನ ಸಾಬರೊಬ್ಬರು ಈ ಜಾಗವನ್ನು ಖರೀದಿಸಿ ಹಸನು ಮಾಡಿ, ಅದರಲ್ಲಿ ಮಾವಿನ ಸಸಿಗಳನ್ನು ನೆಡಿಸಿದ್ದರು. ಸುತ್ತಲೂ ಯಾವುದೇ ತೋಟಗಳಿರದಿದ್ದರಿಂದಲೂ, ಜೊತೆಗೆ ಅವರು ಆ ಊರಿನವರು ಅಲ್ಲದ್ದರಿಂದಲೂ, ಸುತ್ತಲ ಹಳ್ಳಿಯವರೆಲ್ಲಾ ತೋಟವನ್ನು ಲೇವಡಿ ಮಾಡಲು ಶುರು ಮಾಡಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಆ ಸಾಬರು ತೋಟದ ಸುತ್ತಲೂ ಬಂದೂಬಸ್ತಾದ ಬೇಲಿಯನ್ನು ಹಾಕಿಸುವುದರಿಂದ ಹಿಡಿದು,ತೋಟವನ್ನು ಕಾಯಲೆಂದು ಕಾವಲುಗಾರರನ್ನೂ ನೇಮಿಸಿದ್ದಾರೆ, ಆದರೆ ಇವಾವುಗಳಿಂದಲೂ ಆಗುತ್ತಿದ್ದ ಲೇವಡಿಯನ್ನು ತಪ್ಪಿಸಲಾಗದೆ ರೋಸಿ ಹೋದ ಸಾಬರು ಅದೊಂದು ದಿನ ತೋಟವನ್ನು ಮಾರುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ. ಆಗ ಆರಕ್ಕೆ ಮೂರಕ್ಕೆ ವ್ಯಾಪಾರ ಕುದುರಿಸಲು ನೋಡಿದ ಜನರನ್ನು ಕಂಡ ಸಾಬರು ಹಾಕಿದ ಅಸಲೂ ಕೈ ಬಿಡುತ್ತಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಅಂಥ ಹೊತ್ತಲ್ಲಿ, ಅದುವರೆವಿಗೂ ತಮ್ಮದೂ ಅಂತ ನೆಲವಿರದಿದ್ದ, ಬರೀ ಕುರಿ ಮೇಕೆಗಳನ್ನಷ್ಟೇ ಸಾಕುತ್ತಾ ಬದುಕು ಸಾಗಿಸುತ್ತಿದ್ದ ಅಪ್ಪ ಮಕ್ಕಳು ಈ ಇಡೀ ತೋಟದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದಾಗಿ ಹದಿನೈದು ವರ್ಷಗಳೇ ಕಳೆದಿವೆ. ಅಂದಿನಿಂದ ಅದನ್ನು ತಮ್ಮದೇ ತೋಟ ಅನ್ನುವಂತೆ ನೋಡಿಕೊಳ್ಳುತ್ತಿರುವ ಇವರುಗಳ ಆಸ್ಥೆಯಿಂದಾಗಿ ಈ ತೋಟ ದಿನದಿಂದ ದಿನಕ್ಕೆ ಚಂದವಾಗುತ್ತಿರುವುದರ ಜೊತೆಗೆ ವರ್ಷಕ್ಕೆ ಎರಡು ಮೂರು ಲಕ್ಷ ಆದಾಯವನ್ನು ಕೊಡುತ್ತಿದೆ. ಇತ್ತೀಚೆಗಷ್ಟೇ ಇವರು ತಮಗಾಗಿ ಅಂತ ದರಕಾಸ್ತಿನಲ್ಲಿ ಈ ತೋಟದ ಪಕ್ಕದಲ್ಲೇ ಒಂದಷ್ಟು ಜಮೀನನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ಇವರು ಇನ್ನೂ ಏನನ್ನೂ ಮಾಡಿಲ್ಲ.

ಕಳೆದ ವಾರ ನಾನು ಮತ್ತು ನನ್ನ ಗೆಳೆಯ ರಘುಪತಿ ಬೆಳದಿಂಗಳ ರಾತ್ರಿಯಲ್ಲಿ, ಈ ಅಪ್ಪ ಮಕ್ಕಳ ಜೊತೆ, ಕಾಡಿನ ನಡುವಲ್ಲಿರುವ ಈ ತೋಟದಲ್ಲಿ ತಂಗಿದ್ದೆವು. ವೃತ್ತಿಯಲ್ಲಿ ಪಶುವೈದ್ಯನಾಗಿರುವ ರಘುಪತಿಗೆ ಅತ್ಯಂತ ಆಪ್ತರು ಈ ಅಪ್ಪ ಮಕ್ಕಳು. ನನ್ನ ಹಳ್ಳಿಗೆ ಹೋಗುವ ದಾರಿಗೆ ದೂರದಿಂದಲೇ ಕಾಣುವ, ಮಲ್ಟಿಯ ಮೇಲೆ, ಕಾಡು ಗಿಡಗಳ ನಡುವೆ ಬೆಳೆಸಿದ್ದ ಈ ತೋಟ ಒಂದು ರೀತಿಯಲ್ಲಿ ನನ್ನನ್ನು ವಿಶೇಷವಾಗಿ ಆಕರ್ಷಿಸಿತ್ತು.

ಬೆಳದಿಂಗಳು ಚೆಲ್ಲಿದ್ದ ಆ ರಾತ್ರಿಯಲ್ಲಿ ಹಾಗೇ ಬಯಲಿನಲ್ಲಿ ಮಲಗಲು ಅಣಿಯಾದ ನಮ್ಮನ್ನು ಕಂಡ ಮಾಲಿಂಗಪ್ಪನವರು ಆತಂಕಗೊಂಡು ‘ಹೆಂಗಾದ್ರೂ ಆಗ್ಲಿ ಒಳೀಕೆ ಬಂದು ಮನಿಕಳಿ, ಕರಡಿ ಚಿರತೆ ಕಾಟ,’ ಅಂದರು. ‘ಈ ತೋಟ್ದಲ್ಲಿ ನಾನು ಒಬ್ಬೊಬ್ನೇ ಹಿಂಗೆ ಎಲ್ಲೆಂದರಲ್ಲಿ ಆಚೇ ಮನಿಕಂಡಿದೀನಿ, ಎಂದೂ ಯಾವತ್ತೂ ನನಗೆ ಭಯಾನೂ ಆಗಿಲ್ಲ, ಯಾವ ಪ್ರಾಣೀನೂ ನನ್ನ ಏನೂ ಮಾಡಿಲ್ಲ,’ ಅಂತ ಧೈರ್ಯದ ಮಾತುಗಳನ್ನಾಡಿದ ಮಲ್ಲಿಕಾರ್ಜುನನೊಂದಿಗೆ ಆ ಬೆಳದಿಂಗಳ ರಾತ್ರಿಯಲ್ಲಿ ಸಣ್ಣಗೆ ಸುರಿಯುತ್ತಿದ್ದ ಹಿಮದಲ್ಲಿ ಮಲಗಿದ ನಮ್ಮನ್ನು ಮತ್ತೆ ಎಚ್ಚರಗೊಳಿಸಿದ್ದೇ ರಾತ್ರಿಯ ನಾಲ್ಕು ಗಂಟೆಗೆಲ್ಲಾ ಎದ್ದು ಸುತ್ತಲೂ ಅರುಚತೊಡಗಿದ ನವಿಲುಗಳು.

ಇನ್ನೇನು ಅಚ್ಚಗಾಗುತ್ತಿದೆ ಅನ್ನುವ ಹೊತ್ತಿಗೆಲ್ಲಾ ಎದ್ದು, ನವಿಲುಗಳನ್ನು ನೋಡುವ ಆಸೆಯಿಂದ ಆ ನವಿಲುಗಳ ದನಿಗಳು ಬಂದತ್ತ ನಡೆಯುತ್ತಾ ಹೋದೆವು. ಅಂದು ಅದ್ಯಾಕೋ ನಾವು ಹೋದಂತೆಲ್ಲಾ ಅವುಗಳ ದನಿಗಳೂ ದೂರಾಗುತ್ತಾ ಹೋಗಿ, ಕನಿಷ್ಠ ಒಂದೂ ನಮ್ಮ ಕಣ್ಣಿಗೆ ಬೀಳದೆ ನಿರಾಸೆಗೊಳಿಸಿದವು.

ಮಾಲಿಂಗಪ್ಪನರಿಗೀಗ ಅರವತ್ತು ದಾಟಿದೆ. ಹರೆಯವನ್ನು ಹಲವು ಆಮಿಷಗಳು ಅಪ್ಪಚ್ಚಿ ಮಾಡುತ್ತಿರುವ ಇಂಥ ಹೊತ್ತಿನಲ್ಲಿ ಇಪ್ಪತ್ನಾಕರ ಹರೆಯದಲ್ಲಿರುವ ಮಲ್ಲಿಕಾರ್ಜುನನ ಬದುಕಿನ ಧ್ಯಾನ ನನ್ನನ್ನು ಅಚ್ಚರಿಗೊಳಿಸುತ್ತಿದೆ.

ಬುಡಬುಡಿಕೆ ರಾಮಯ್ಯನ ಮಾತುಗಳು


ಟಿ . ಕೆ .ದಯಾನಂದ(ಫೋಟೋಗಳು:ದಯಾ)

‘ಎಲ್ಲಾರ ಜೀವದ ಗೂಡನಾಗೆ ಒಂದು ಹಸಕೊಂಡಿರೋ ಹಕ್ಕಿ ಕುಂತಿರತೈತೆ..!’ ಎನ್ನುವ ಬುಡಬುಡಿಕೆ ರಾಮಯ್ಯನ ಮಾತುಗಳು

ಪರೂಕ್ಷೆ ಮಾಡಾಕ ನಿಂತಿದೀಯ ನನ್ನನ್ನ.. ಹ್ಹಾಂ.. ಪರೂಕ್ಷೆ ಮಾಡಾಕ ನಿಂತಿದೀಯ ನನ್ನ.. ಮೂರು ಹೊತ್ತನಾಗ ಒಂದು ಹೊತ್ತು ಸತ್ತು, ಒಂದು ಹೊತ್ತು ಹುಟ್ಟಾಕ ಮುಂದ ನಿಗಿನಿಗಿ ಬೆಳಗೋ ಸೂರಿಯ ದೇವುರು ಝಳಝಳ ಅನ್ನಾ ಟೈಮಿನಾಗೆ ಪರೂಕ್ಷೆ ಮಾಡಾಕೆ ಬಂದಿದೀಯ ನನಗೆ.. ಮೂವತ್ತಾರು ಬಣ್ಣದ ಬಟ್ಟೆ ಹಾಕ್ಕಂಡು, ಕೈನಾಗೆ ಎಂಥದೋ ಲಿವಿಲಿವಿ ಅನ್ನೋದ ಹಿಡಕಂಡು ಮನೆಮನೆ ಭಿಕ್ಷ ಮಾಡೋವನು ಇವನು ಅಂತ ತಿಳದುಕೊಂಡಿದೀಯ ನನ್ನನ್ನ.. ಚವುಡಮ್ಮ ದೇವರ ಕುಲಪುತ್ತುರ ನಾನು.. ಏನಂದುಕೊಂಡಿದೀ.. ನನ್ನಾ ಪರೂಕ್ಷೇ ಮಾಡಾದೂ ಒಂದೇ ಚವುಡಮ್ಮನ ಜುಟ್ಟಿಗೆ ಕೈ ಹಾಕಾದೂ ಒಂದೇ ತಿಳಕ.. ಮಳ್ಳೂರು ಕಾಲೋನಿ ಗೊತ್ತ ನಿನಗೆ..? ಗೊತ್ಥಾ ನಿನಗೆ..? ಬಾ ಅಲ್ಲಿಗೆ ನಮ್ಮ ಹಿರೀಕರು ಅವರೆ.. ಅಲ್ಲಷ್ಟೇ ಅಲ್ಲ ನಮ್ಮ ಕುಲಸ್ಥರು ದೊಡ್ಡಬಳ್ಳಾಪುರ, ಚಿಳಕಟ್ಟ, ಚಿಂತಾಮಣಿ, ಮುಳುವಾಗಲು.. ಅರ್ಥುವಾಯ್ತಾ.. ಇಲ್ಲೆಲ್ಲ ಅವುರೆ. ತಲತಲಾಂತರದಿಂದ ಚವುಡಮ್ಮನ ಸೇವಾ ಮಾಡ್ತಾ ಬಂದೋರು ನಾವು, ಭಿಕ್ಷದೋರು ಅಲ್ಲ.. ಭಿಕ್ಷದಲ್ಲಿ ತರಾವರಿ ಭಿಕ್ಷ ಮಾಡ್ತಾರೆ, ಅನ್ನದ ಭಿಕ್ಷ, ಇಟ್ಟಿನ ಭಿಕ್ಷ, ಸೇವದ ಭಿಕ್ಷ.. ನಮ್ಮದು ಚವುಡಮ್ಮ ಕಥೆ, ಚವುಡಮ್ಮ ನುಡಿಸೋ ಸತ್ಯಾನ ಊರೂರಿಗೆ ಮುಟ್ಟಿಸೋ ಭಿಕ್ಷ..

ಎಲ್ಲಾ ಭಿಕ್ಷಾ ಒಂದೇ ಅಲ್ಲ.. ಎಲ್ಲಾರ ಜೀವದ ಗೂಡನಾಗೆ ಒಂದು ಹಸಕೊಂಡಿರೋ ಹಕ್ಕಿ ಕುಂತಿರತೈತೆ ಅದಕ್ಕೆ ಕಾಳು ಹಾಕ್ತಾ ಇರಬೇಕು, ನ್ಯಾಯದ ಕಾಳು, ಸತ್ಯದ ಕಾಳು, ಕರುಣೆ ಕಾಳು, ನಿಯತ್ತಿನ ಕಾಳು.. ನೀನು ಯಾವತ್ತು ಆ ಕಾಳು ಹಾಕಾದು ನಿಲ್ಲಸತೀಯೋ ಆವತ್ತು ಆ ಹಕ್ಕಿ ನಿನ್ನ ದೇಹ ಬಿಟ್ಟು ಹಾರಿ ಹೋಗತೈತೆ, ಕಾಲ ಕುಲಗೆಟ್ಟುಹೋಗಿ, ಉಳುಮೆ ಮಾಡೋ ಮಂದಿ ಜಮೀನು ಮಾರಕಂಡು ಪೇಟೆ ಪಾಲಾಗಿ, ಚವುಡಮ್ಮನ ಗುಡಿ ಕೆಡವಿ ರಸ್ತೆ ಮಾಡಿ, ರಥ ಮುರದು ಕೊಂಡ ಮಾಡಿ ಕಾಲ ಕುಲಗೆಟ್ಟು ಹೋಗೈತೆ.. ಜೀವದ ಗೂಡಾಗಿರೋ ಹಕ್ಕಿಗೇ ಕಾಳು ಹಾಕೋರಿಲ್ಲ.. ವರುಸಗಳಿಂದ ಆ ಹಕ್ಕಿ ಉಪವಾಸ ಬಿದ್ದೈತೆ.. ಬ್ಯಾಡ್ರಪ್ಪ.. ಆ ಹಕ್ಕೀಗೆ ಮೋಸ ಮಾಡಬ್ಯಾಡ್ರಿ.. ಒಂದೆರಡು ಕಾಳು ಹಾಕರಪ್ಪ ಅಂತ ಚವುಡವ್ವ ಕನಸಿಗೆ ಬಂದು ಗೋಗರೀತಾ ಅವುಳೆ, ಅವಳ ಗೋಳಾಟ ನೋಡಕ್ಕಾಗದೆ ಚವುಡವ್ವನ ಮಾತ್ನ ಮನೆ ಮನೆ ತಿರುಗಿ ಹೇಳಕಂಡು ಬತ್ತಾ ಇರೋ ಬುಡಬುಡಿಕೆ ಕುಲ ನಮ್ಮದು.. ಅಂಥಾ ನನ್ನ ಪರೂಕ್ಷೆ ಮಾಡಾಕೆ ನಿಂತಿದೀಯ ಗರಿಕೆ ಹುಲ್ಲಂಥ ಹುಡುಗನೇ..? ಎಡಗಾಲಲ್ಲಿ ಹೊಸಕಿಹಾಕ್ತಾಳೆ ಚವುಡಿ.. ಏನಂದುಕಂಡಿದ್ದೀಯ ಅವುಳನ್ನ..?

ನಂಗೂ ಮನೆ ಐತೆ, ಮಕ್ಕುಳು ಅವರೆ, ಮರಿಗುಳು ಅವರೆ, ಬದುಕಾಕೆ ಯಾವ ತೊಂದರೇನೂ ಇಲ್ಲ ನಂಗೆ, ಕುಲಕಸುಬು ಚವುಡಮ್ಮನ ಕುಲಕಸುಬು, ಅವಳ ಚರಿತ್ರೇನಾ ಹಾಡೋದು, ಅವುಳು ಹೇಳಿಕೊಟ್ಟ ಮಾತ್ನ ನಾಲಿಗೇಲಿ ನುಡಿಯೋದು ಮನೆಮನೆಗೆ ಮುಟ್ಟಿಸೋದು ನಮ್ಮ ಕುಲದ ಕಸುಬು. ನೀನೆಂಗೆ ಹೊಲ ಉಳತೀಯೋ, ಆಫೀಸಿಗೆ ಹೋಗತೀಯೋ ಹಂಗೆ ಇದು.. ಅದು ನಿನ್ನ ಕಸುಬು ಇದು ನನ್ನ ಕುಲಕಸುಬು. ನನ್ ಕಸುಬು ನನ್ ಬಲ. ನಮಗೆ ಓದಿಲ್ಲ ಬರವಿಲ್ಲ.. ಕೈನಾಗೆ ಸರಸೋತಿ ಕುಂತವುಳೆ ನ್ನನ ಕೈಯಲ್ಲಿ ಸತ್ಯ ನುಡಿಸ್ತಾಳೆ.. ನಾಲಕ್ಕು ಮನೆ ತಿರುಗ್ತೀನಿ ಎಂಟು ಸತ್ಯಾವು ಹೇಳತೀನಿ.. ಹಿಡಿ ಅಕ್ಕೀನೋ, ರಾಗಿಹಿಟ್ಟೋ ಕೊಟ್ರೆ ಕೊಡು ಬುಟ್ರೆ ಬುಡು.. ಸತ್ಯ ನುಡೀತೀನಿ.. ಜೀವದ ಹಕ್ಕೀಗೆ ಕಾಳು ಹಾಕ್ರವ್ವ ಅಂತ ಕೇಳಕತೀನಿ.. ಪಿಲುಮಾಟ್ರೆಸ್ ದೊಡ್ಡಣ್ಣ ಗೊತ್ತ ನಿನಗೆ ನಮ್ಮೂರು ಪಕ್ಕದಾಗೇ ಇರೋದು ಅವುನು.. ಚನ್ನಕ್ಕಪಾಳ್ಯ ಅಂತ, ಎಷ್ಟು ಮಾತಾಡ್ತನೆ ಅವುನು.. ಹ್ಹ.. ಅವುನಿಗೆ ಸೈತ ಚವುಡಮ್ಮನ ಕಥೆ ಹೇಳಿದೀನಿ ನಾನು.. ಜತೆಗೆ ಈ ಥರಕ್ಕೆ ಈಥರ ಇದೆ ಸ್ವಾಮಿ..ನಿಮಗ, ನಡೆದ ದಾರಿ.. ಮಾಡೋ ಕೆಲಸ ಕರೆಕ್ಟಾಗತೈತೆ ಹೋಗ್.. ಅಂತ ಹೇಳಿದೀನಿ ಹೋಗಿ ಕೇಳವುನಿಗೆ..

ಈ ಪದುಗಳನ್ನೆಲ್ಲ ಹೆಂಗೆ ಕಲುತೆ ಅಂತ ಕೇಳಬೇಡ ನನಗೆ, ನೀನೆಂಗೆ ಅಕ್ಷರ ಕಲುತೆ.. ಇದಕ್ಕೆ ಉತ್ತರ ಕೊಡು.. ನಾನೆಂಗೆ ಪದ ಕಲುತೆ ಅಂತ ಹೇಳ್ತೀನಿ.. ತಲಾಂತರದಿಂದ ನಮ್ಮ ಹಿರೀಕರಿದ್ರು.. ನಾವವಾಗ ಚಿಕ್ಕುಡುಗರು, ಅಲೆಲೆಲೆಲೆ ಇದೆಂಗೆ ಲಿವಿ ಲಿವಿ ಲಿವಿ ಅಂತದೆ ಅಂತ ಕಣ್ ಕಣ್ ಬಿಟಗಂಡು ನೋಡತಾ ಇದ್ವಿ.. ಅವಾಗ ನಮ್ಮ ಹಿರೀಕ್ರು.. ಲೇಯ್..ಇದ್ನ ಹಿಂಗೆ ಹಿಡಕಳ್ರಲೇ.. ಅಹಹಹ.. ನನ್ ಮಕ್ಕಳ್ರು.. ನೋಡಾಕೆ ನಿಂತವ್ರೆ ಹಿಡ್ಕಳ್ರೋ ಅಂತ ಬುಡಬುಡಿಕೆ ಕೊಡೋರು ನಮಗೆ. ನಮಗೆ ಬುಡುಬುಡಿಕೆ ಹೊಡೆಯೋಕೆ ಬತ್ತಿರಲಿಲ್ಲ.. ಬರೀ ಟುಂಗ್ ಟುಂಗ್ ಅಂತ ಸವಂಡು ಬರ‍್ತಾ ಇತ್ತು. ಇವಾಗ ಸ್ಕೂಲಿನಾಗೆ ಅಕ್ಷರ ಕಲೀದಿದ್ರೆ ಮಕ್ಕುಳಿಗೆ ಮೇಸ್ಟರು ಹೊಡೀತಾರಲ್ಲ ಹಂಗೆ ಕೈ ಕೈಗೇ ಹೊಡೆಯೋರು.. ಕಲಿಯೋ ತನಕ ಬಿಡ್ತ ಇರಲಿಲ್ಲ.. ನುಡುಸೋ ಲೇಯ್.. ಅಂತ ಗೆಣ್ಣು ಗೆಣ್ಣಿಗೆ ಹೊಡೆಯೋರು. ಅವಾಗ ಕಲುತ್ವಿ ಈ ಸರಸ್ವತಿ (ಬುಡಬುಡಿಕೆ) ನುಡಿಸೋದನ್ನ. ಅವಾಗ ನಮಗೆ ಬುದ್ದಿಗೆ ಬಲ ಬಂತು. ಚವುಡವ್ವನ ಪದ ಕಲುತಿವಿ, ಹಾಲಕ್ಕಿ ಶಬುದ ಆಲಿಸೋದನ್ನ ಕಲುತಿವಿ. ಹಾಲಕ್ಕಿ ಶಬುದ ಅಂದ್ರೆ ಗೊತ್ತೈತಾ ನಿನಗೆ.. ಒಂದು ಗಂಟೆ ರಾತ್ರೀನಾಗೆ ಎದ್ದೇಳೋಕೆ ಧೈರ್ಯ ಐತಾ ನಿಂಗೆ..? ಮಶಾಣದಾಗೆ ರಾತ್ರಿ ವೊತ್ತಾಗೆ ಭೂತಾನೋ ಪಿಚಾಚೀನೋ ಯಾವುದಕ್ಕೂ ಹೆದರಂಗೆ ನಿಂತಗಬೇಕು.. ಅವಾಗ ನುಡೀತದೆ ಹಾಲಕ್ಕಿ.. ಅದು ಭವುಷ್ಯ ನುಡಿಯೋದನ್ನ ಕೇಳಿಸಿಗೋತೀವಿ.. ಹಕ್ಕಿ ಭಾಷೆ ಗೊತ್ತೈತಾ ನಿಂಗೆ? ನಂಗೆ ಹೆಂಗೆ ಗೊತ್ತು ಅಂತ ಕೇಳಬೇಡ.. ಏನ್ ನುಡೀತು.. ನಿಂಗೆ ಹೆಂಗೆ ಗೊತ್ತಾಯ್ತು ಅಂತ ಕೇಳಬೇಡ ನಂಗೆ.. ಅದು ಕುಲದ ರಹಸ್ಯ. ಇಷ್ಟೊಂದು ಪ್ರಸ್ನೆ ಮಾಡ್ತಾ ಇದೀಯಲ್ಲ ತಗಾ ಈ ಬುಡುಬುಡೀಕೇನಾ.. ನುಡುಸು ಒಂದ್ಸಲ ನೋಡನ.. ನೀನ್ ಒಂದ್ಸಲ ನುಡುಸುಬುಡು ೫೦ ರೂಪಾಯ್ ಇವಾಗ್ಲೇ ಕೊಡ್ತೀನಿ.. ನೀನು ನನ್ ಪರೂಕ್ಷೆ ಮಾಡದೆ.. ಇವಾಗ ನಾನು ನಿನ್ನ ಪರೂಕ್ಷೆ ಮಾಡ್ತೀನಿ ನುಡುಸು.. ಸರುಸ್ವತಿ ಇವುಳು.. ನುಡುಸು ನೋಡನ. ಚವುಡಿ, ಎಲ್ಲಮ್ಮ ಸರುಸ್ವತಿ ಮಹಾತಾಯಿ, ಯಾವ ಸತ್ಯಾನ ಹೆಂಗೆ ನಮ್ಮ ಕೈಯಾಗೆ ನುಡುಸ್ತಾಳೆ ಅಂತ ಗೊತ್ತೈತಾ ನಿನಗೆ..?

ನಿನ್ನಂಗೇನೇ ಭಾಳಾ ಜನ ಕೇಳುಬುಟ್ರು.. ಬಂದುಬುಟ್ಟ ಬುಡಬುಡುಕೆ ಅಲ್ಲಾಡಿಸ್ಕಂಡು ದುಡಕಂಡ್ ತಿನ್ನೋಕೇನು ಇವನಿಗೆ ಅಂತ.. ಅವರಿಗೂ ಶಕುನ ಹೇಳ್ತೀನಿ ಚವುಡಮ್ಮ ಒಳ್ಳೇದು ಮಾಡವ್ವ ಅಂತ ಬೇಡಕತಿನಿ.. ಒಂದೆರಡು ದಿನ ಆದ ಮೇಲೆ ಹಂಗಂತರಲ್ಲ ಅದೇ ಜನ.. ಏ ಬುಡುಬುಡಕೆಯವನು ಅವತ್ತು ಹೇಳುದ್ನಲ್ಲ ಹಂಗೇ ನಡದದೆ ಕಣಯ್ಯೋ.. ಅಂತ್ಹೇಳಿ ಮನೆ ಒಳಕೆ ಕರದು ಇಟ್ಟು ಸಾರು ಕೊಟ್ಟು ಉಪಚಾರ ಮಾಡ್ತರೆ. ಈ ಕಾಸಿನೋರು ಇರ‍್ತರಲ್ಲ ದೊಡ್ಡ ದೊಡ್ಡ ಮನೆಯೋರು ಅವರ ಮನೆಗಳಿಗೆಲ್ಲ ನಾವು ಹೋಗಕ್ಕಾಗಲ್ಲ.. ನಾಯಿ ಕಟ್ಟಾಕ್ಕೆಂಡು ಇರ‍್ತರೆ.. ಅಟ್ಟಿಸಿಕೊಂಡು ಬತ್ತವೆ ನಾಯಿಮುಂಡೇವು.. ಈ ನಮ್ ಥರದೋರೇ, ಬಡೂವ್ರು ಬಗ್ಗುರು ಇರೋ ಊರುಗಳಾಗೆ ಅಡ್ಡಾಡಿಕೊಂಡು ಇರ‍್ತೀನಿ. ಮಿಕ್ಕಿದಂಗೆ ಉಳುಮೆ ಕೆಲಸ, ಮನೆ ಕೆಲಸ ಅಂತ ಕಾಲಾಯಾಪನೆ ಮಾಡ್ತೀನಿ, ಮೂರು ಹೆಣ್ಣು ಮಕ್ಕಳವೆ, ಎರಡಕ್ಕೆ ಮದುವಿ ಮಾಡಿದೆ. ಇನ್ನೊಂದು ಚಿಕ್ಕುದು ಐತೆ.. ಅದುಕ್ಕೆ ಇನ್ನೂ ಮದುವಿ ಮಾಡಿಲ್ಲ.. ಓದುಸ್ತಾ ಇದೀನಿ. ನಮ್ಮ ಕುಲದ ಮಕ್ಕಳು ಇವಾಗ ಬುಡುಬುಡಕೆ ಹಿಡಿಯಾಕೆ ಅಂಜಕಂತವೆ.. ಉದ್ಯೋಗ, ಗಾರ್ಮೆಂಟ್ಸು ಅಂತ ಪೇಟೆ ಕಡೀಕೆಲ್ಲ ಓಯ್ತಾ ಇದಾವೆ.. ಒಂದಷ್ಟು ಜನ ಕುಲ ಕಸುಬುಬು ಬಿಡಬಾರದಲ್ವ ಅಂತ ಮನಿಗೊಬ್ಬರು ಮಕ್ಕಳು ಈ ಬುಡಬುಡಕೆ ಕೆಲಸಾನ ಕೆಲಸದ ನಡುವೆ ಬಿಡುವಿದ್ದಾಗ ಊರೂರಿಗೆ ಹೋಗಿ ಮಾಡಿಕೊಂಡು ಬತ್ತವೆ. ನಮಗೆಷ್ಟೇ ಯವಾರ ಇದ್ರೂ, ಕಷ್ಟ ಇದ್ರೂ ಈ ಕುಲಕಸುಬು ಬಿಡಲ್ಲ. ನಂಗೆ ಮೂರು ಮನೆ ಬಾಡಿಗೆ ಬತ್ತದೆ.. ದುಡ್ಡಿಗೇನೂ ಕೊರತೆ ಇಲ್ಲ.. ದುಡ್ಡು ಬಂತು ಅಂತ ನಮ್ ಕುಲಕಸುಬನ್ನ ಬಿಡಕ್ಕಾಗತ್ತಾ? ಹೊಲ ಉಳೋನು ಉಳುಮೆ ಬಿಟ್ರೆ ಅನ್ನ ಇರಲ್ಲ.. ನಮ್ ಕಸುಬನ್ನ ಹಂಗೇ ಬಿಟ್ರೆ ನಾವ್ ಉದ್ದಾರ ಆಗಲ್ಲ..

ನಿನ್ನೆಸ್ರೇಳು.. ಬರಕೊಡು ಒಂದು ಪೇಪರ‍್ನಾಗೆ.. (ನಾನು ಪೆನ್ನಿಲ್ಲ ಎಂದು ಉತ್ತರಿಸಿದೆ) ಇದ್ಯಾವಂತ ಅಂತೀಯ ಒಂದು ಪೆನ್ನು ಗತಿ ಇಲ್ವಾ ನಿನಗೆ? ತಗಾ ನಿನ್ ಮ್ಯಾಲೆ ಚವುಡಿ ಏನೇಳ್ತಳೆ ಅಂತ ಹೇಳ್ತಿನಿ ಕೇಳುಸ್ಗ.. ಈಸ್ವರಿ ಮೂರಕ್ಷರ, ಚವುಡಿ ಮೂರಕ್ಷರ, ಎಲ್ಲಮ್ಮ ಮೂರಕ್ಷರ, ಗಂಗಮ್ಮ ಮೂರಕ್ಷರ, ಎಳೇಚೌಡಿ, ಬಿಳೇಚೌಡಿ, ಅಣ್ಣಮ್ಮತ್ತಾಯಿ.. ಸರುಸ್ವತಿ, ಜಗದಾಂಬೆ, ಮಹತಾಯಿ..ಜಗುದೇಶ್ವರಿ ಅದುಕ್ಕೂ ಮುಂದೆ ಚವುಡಿ ಬಲ, ದೇವೀ ಬಲ, ಲಕ್ಷ್ಮಿ ಬಲ, ಸರುಸ್ವತಿ ಬಲ, ಮಹತ್ತಾಯಿ ಬಲ, ಜಗನ್ಮಾತೆ, ಅಷ್ಟದೇವಿ, ಸರ್ವ ಕಾಳೇಶ್ವರಿ, ಅವುತಾರದೋಳು, ಏನಂತ ನುಡೀತೀಯ, ಏನ್ ಪರೂಕ್ಷೆ ಮಾಡತೀಯ.. ನುಡಿಯೇ ತಾಯಿ..

ಕೇಳಕಳೋ ಹುಡುಗನೇ.. ಈ ಹದಿನಾಲ್ಕು ವರ್ಸದಿಂದ ಹದಿನಾಲ್ಕು ಗ್ಯಾನ ಮಾಡಿಬಿಟ್ಟೆ, ಇನ್ನೊಂಭತ್ತು ದಿವಸದಲ್ಲಿ ನಿನಗೆ ತೊಂದರೆ ಆಗ್ತದೆ.. ಸಪೋರ್ಟಿಗೆ ಜನರಿರಬಹುದು ನಿನಗೆ.. ಒಂಭತ್ತನೇ ದಿನದಲ್ಲಿ ಯಾರೂ ಇರಲ್ಲ.. ಇವಾಗ ನಾಲಕ್ಕು ಜನರ ಕೈ ಹಿಡಕಂಡು, ನಾಲಕ್ಕು ಮಂದೀಗೆ ಒಳ್ಳೇದು ಬಯಸ್ತಾ ಇದೀಯ.. ನಂಗೆ ಚೆನಾಗ್ ಗೊತ್ತು. ಈಗ ಮುಂದೆ ಧೈರ್ಯ, ಸಾಧನೆ ಮಾಡ್ತ ಇದ್ದೀಯ.. ಮನಸು ಬಲವಾಗೈತೆ.. ಆ ಕೂತ ಕೆಲಸ ಕಾರ್ಯ ಏನಾಯ್ತದೆ ಅಂತ ಕೇಳ್ತಾ ಇದಿಯ. ಮೂಂದಕ್ಕೊಂದು ಗೂಡು ಕಟ್ಟಬೇಕು ಅಂತ ಅಂದಕಂಡಿದ್ದೀಯ.. ಗೂಡಂದ್ರೆ ಅರ್ಥ ಆಯ್ತಾ..? ಅನುಕೂಲ ಆಯ್ತದೆ, ಅದ್ರಾಗೇನೂ ಮಿಸ್ಟೀಕ್ ಇಲ್ಲ. ಈಗ ಮೂರಕ್ಕೆ ಎರಡು ಭಾಗ ಕಷ್ಟ ಅನುಭವಿಸಿಬಿಟ್ಟಿದೀಯ ಚಿಕ್ ವಯಸ್ಸಿನಲ್ಲಿ, ಇವಾಗ ನೀನು ಕೈ ಹಾಕಿರೋ ಕೆಲಸದಲ್ಲಿ ಯಸಸ್ಸು ತಗಂತೀಯ.. ಮುಂದೆ ಗೌಳಿ ಕೂಗಿದಾಗ ಮನೆ ಬಿಟ್ಟು ಹೋಗಬೇಡ.. ಗಂಡಾಂತರ ಐತೆ ನಿನಗೆ.. ಅಮಾಶೆ ದಿನ ಹುಸಾರಾಗಿರು.. ನೀನು ಓದಿರೋನು ನೀನು.. ಅಮಾಶೆ ಯಾವಾಗ ಹೇಳು ನೋಡನ? ಇವತ್ತಿಗೆ ಒಂದಿಸ ಕಮ್ಮಿ ೧೫ ದಿನಕ್ಕೆ ಅಮಾಶೆ.. ಅವತ್ತು ಗಾಡಿ ಎತ್ತಬೇಡ, ಜೊತೇರ ಸಂಗ ಸೇರಬ್ಯಾಡ.. ಬೆಳಗಾನ ಎದ್ದು ಸ್ನಾನ ಮಾಡಿ ದೇವರಿಗೆ ಕೈ ಮುಗಿ.. ನಡಿಯೋ ಟೈಂ ಚೆನ್ನಾಗೈತೆ ನಿನಗೆ.. ನಿನ್ನ ಅಪ್ಪಾವರು ಅಮ್ಮಾವರು ನಿನ್ನ ಬೈಕೋಂತಾ ಅವುರೆ.. ಈ ನನ್ನ ಮಗ ಹಂಗೆ ಹಿಂಗೆ ಓಡಾಡಿಕೊಂಡು ಅವುನೆ, ಉದ್ದಾರ ಆಗೋವನಲ್ಲ ಇವನು ಅಂತ, ಅಮಾಶೆ ದಿನ ಹುಸಾರಾಗಿರು. ಚವುಡಮ್ಮನ ಹೆಸರೇಳಿ ಒಂದು ನಿಂಬೇಹಣ್ಣು ತಗಂಡು ಮೂರು ದಾರಿ ಕೂಡೋ ಜಾಗದಾಗೆ ನಿಂಬೇ ಹಣ್ಣನ್ನ ಬಲಗಾಲಲ್ಲಿ ತುಳಿದು, ಚವುಡಮ್ಮನ್ನ ಮನದಲ್ಲಿ ನೆನದು ಹಿಂತಿರುಗಿ ನೋಡದಂಗೆ ಹೋಗಿಬಿಡು ಒಳ್ಳೇದಾಗ್ತದೆ ಹೋಗ್..

Monday, June 20, 2011

ಚಳಿಗಾಲದ ಎಲೆ ಸಾಲು'' ಕವನ ಸಂಕಲನ ಬಿಡುಗಡೆ


chaligala cover page.jpg


ಎಸ್.ಕುಮಾರ್ ಎರಡು ಕವಿತೆಗಳು


ಎಸ್ ಕುಮಾರ್ ಅವರ ಪ್ರಥಮ ಸಂಕಲನ ಚಳಿಗಾಲದ ಎಲೆ ಸಾಲು ಬರುತ್ತಿರುವ ಸಂದರ್ಭದಲ್ಲಿ ಸಂಕಲನದ ಎರಡು ಕವಿತೆಗಳು ನಿಮಗಾಗಿ


ಸಂಜೆಗತ್ತಲ ಹಾಡು

ನೆರಳು ಬಿಡಿಸಿಕೊಂಡಾಗಿದೆ
ಕನಸುಗಳ ಮಾತೆಲ್ಲಿ?
ಮಾತು ತರಗೆಲೆ
ಹಿಡಿದು ಪ್ರಯೋಜನವಿಲ್ಲದೆಯೆ
ಪಾಲೋ ಕಾವೋ, ಖಲೀಲ್ ಗಿಬ್ರಾನ್
ಕಡೆಗೆ…
ರಾಬಿನ್ ಶಮರ್ಾನ
ಫೆರಾರಿ ಕೂಡ
ಬೀದಿ ದೀಪದ ಸಾಲಿನಲ್ಲಿ…

ಸಿಗರೇಟಿನ ಬೂದಿ ಜತೆ
ಕೊಡವಿದರೆ ಬೇಸರ ಬೀದಿಗೆ
ಸಿಗ್ನಲ್ಲಿನ ಕೆಂಪು ದೀಪ
ದಾರಿಗೆ!

ಕಾಫಿ ಡೇ ಎದುರು
ಚಹಾ ಮಾರುವ
ಹುಡುಗನಿಗೆ ಕಂಡಿದ್ದು
ಶಾಪಿಂಗ್ ಮಾಲ್
ಹುಡುಗಿಯರ ಸೊಂಟ,
ತನ್ನೂರ ಹುಡುಗಿಯರ
ಕೊಡಪಾನದ ನೆನಪು…

ರಾತ್ರೋರಾತ್ರಿ
ಕಂಪ್ಯೂಟರ್ ಪರದೆ
-ಯಿಂದ
ಎದ್ದು ಬಂದ
ಯಾರದ್ದೋ ಫ್ರೆಂಡ್ ರಿಕ್ವೆಸ್ಟ್…
ಈ ಮೇಲು
ಫೀಮೇಲು
ಆಮೇಲಾಮೇಲೆ
ಮೇಲೆ.. ಮೇಲೆ..
ಲೆ…
ಲೆ…
ಎಂದ ಮೇಷ್ಟ್ರು ಕೂಡ
ಕಣ್ಣ ಮುಂದೆ..
*
ಲಜ್ಜೆಗೇಡಿ ಸಂಜೆ
ಬೇಡದ ಚಿತ್ರಗಳು
ಯಾರದ್ದೋ ಪುಳಕದ ನಗು
ಮೂಲೆಯಲ್ಲಿ ಸೆಳಕಿನ ಬಿಗು
ಮನೆ ದಾರಿಯಲ್ಲಿ

ಧ್ಯಾನ ಮೌನ
ಬುದ್ಧ, ತಾವೋ..
ಮೂರು ಮುಕ್ಕಾಲು ಕೋಟಿ
ದೇವರುಗಳೆಲ್ಲಾ
ಊರು ದಾರಿಯಲ್ಲಿ

ಒಳಗೊಳಗೆ ಒದ್ದಾಟ
ಸುಖಾಸುಮ್ಮನೆ ಸಂಕಟ

ಕಂಡರೆ ಕೈ ಮುಗಿಯಿರಿ…

ಕ್ಷಮಿಸುವ ಭಗವಂತನ
ಕೈಯೂ ರಕ್ತವಾಗಿದೆ
ಅವನಿಗೂ ಕಾಡುತ್ತಿರಬಹುದು ಪಾಪಪ್ರಜ್ಞೆ.

ಗರ್ಭಗುಡಿ ಮಂದ ಬೆಳಕು,
ಸೂತಕದ ಮನೆ ಹಣತೆಯ ಹಾಗೆ
ಕಂಡಿದೆಯಂತೆ ಅವಗೆ

ಕಣ್ಣುಜ್ಜಿಕೊಂಡಾಗಲೆಲ್ಲ
ಗಪ್ಪನಡುರುವ ರಕ್ತದ ವಾಸನೆ
ಮೂಗಿಗೆ ಮಾತ್ರವಲ್ಲ!

ಭಕ್ತರು ನೂರು ಮಂದಿ
ನೆರೆದು ನಿಂತರೆ
ತತ್ತರಿಸಿ ದುಃಸ್ವಪ್ನ
ಕಂಡಂತೆ ನಡುಗು

ಊರ ಬೀರನು, ಸಾಬರ ಪೀರನು
ಕೂಡಿ ಆಡುತ್ತಿದ್ದರೆ,
ದೇಗುಲದ ಕಟ್ಟೆ ಮೇಲೆ
ಅವನು ಅನಾಥ

ಗಂಟೆ ನಾದ ಮೀರಿದೆ
ಮದ್ದು ಗುಂಡುಗಳ ಸದ್ದು,
ಶಂಖನಾದ ಸೀಳಿದ ಆಕ್ರಂದನ,
ಗುಡಿಯ ಒಳಗೆಲ್ಲಾ ಮಾರ್ದನಿಸಿ ಆಕ್ರೋಶ

*
ಅಮಲುಗತ್ತಲು, ಬರೀ ಮಂತ್ರಗಳು
ಏನೂ ಕೇಳದೆ,
ಜಗದಲ್ಲೇನುಗುತ್ತದೆ ತಿಳಿಯದೆ
ಮೂಡನಾಗಿಹನೆಂದು ಊರಾಚೆ
ಬೆಟ್ಟದ ಮೇಲೆ ಕೂತಿಹನಂತೆ…
ಕಂಡರೆ ಕೈ ಮುಗಿದು
ಅಲ್ಲಿಂದಲೂ ಕಳಿಸಿಕೊಟ್ಟು ಬಿಡಿ..

ಪೂಜಾರಿ ಕರಿಸಿದ್ದಯ್ಯ


ವ್ಯಕ್ತಿ ಚಿತ್ರ
ಎಸ್.ಗಂಗಾಧರಯ್ಯ

(ಫೋಟೋಗಳು:ಗಂಗೂ)

ನನ್ನ ಹಳ್ಳಿಯಿಂದ ಪಶ್ಚಿಮಕ್ಕೆ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ಕುರುಚಲು ಗಿಡಗಳಿಂದ ಕೂಡಿದ ಒಂದು ಕಾಡಿದೆ. ಸುತ್ತಮುತ್ತಲ ಹಳ್ಳಿಯವರಿಗಿದು ದನ ಕುರಿಗಳನ್ನು ಮೇಯಿಸುವ, ಸಣ್ಣ ಪುಟ್ಟ ಪ್ರಾಣಿಗಳನ್ನು ಬೇಟೆಯಾಡುವ ಪ್ರಿಯವಾದ ತಾಣ. ಇಂಥ ಕಾಡಿನ ನಡುವೆ ಒಂದು ಕೆರೆಯಿದೆ. ಪಟ್ಟದ ದೇವರ ಕೆರೆ ಅಂತ ಕರೆಯಲ್ಪಡುವ ಇದು ವರ್ಷವಿಡೀ ಬತ್ತುವುದೇ ಇಲ್ಲ. ಇಲ್ಲಿಗೆ ಬರುವ ಪ್ರಾಣಿ ಪಕ್ಷಿಗಳಿಂದ ಹಿಡಿದು ಮನುಷ್ಯರವರೆಗೆ ದಣಿವಾರಿಸಿಕೊಳ್ಳಲು ಇರುವ ಏಕೈಕ ಆಸರೆ. ಇದರ ತಡಿಯಲ್ಲೊಂದು ದೇವರ ಗುಡಿಯಿದೆ. ಸಿದ್ದಪ್ಪ ದೇವರು ಅಂತ ಕರೆಯಲ್ಪಡುವ ಇದರೊಳಗಿನ ದೇವರಿಗೆ ಯಾವುದೇ ಜಾತಿ ಭೇದವಿಲ್ಲದೆ ಸುತ್ತಲ ಹಳ್ಳಿಯಲ್ಲೆಲ್ಲಾ ಭಕ್ತರಿದ್ದಾರೆ. ಹಬ್ಬ ಹರಿದಿನಗಳಲ್ಲಿ ಅಮವಾಸ್ಯೆ ಪೂರ್ಣಿಮೆಗಳಲ್ಲಿ ಅಲ್ಲದೆ, ದಿನವೂ ಒಬ್ಬರಲ್ಲ ಒಬ್ಬರು ಹರಕೆಯ ನೆಪದಲ್ಲೋ, ತಳಿಗೆಯ ನೆಪದಲ್ಲೋ ಪೂಜೆಗಾಗಿ ಬರುತ್ತಾರೆ. ಹಾಗಾಗಿ ದನಕುರಿಗಳನ್ನು ಮೇಯಿಸಲೆಂದು ಹೋದವರಿಗೆ ಬಾಳೇ ಹಣ್ಣಿನ ಚರ್ಪು ಇಲ್ಲವೇ ಗಟ್ಟಕ್ಕಿ ಪಾಯಸ ಸಿಕ್ಕೇ ಸಿಗುತ್ತದೆ. ಮೊದ ಮೊದಲು ಕೇವಲ ಕೆಲವೇ ಕೆಲವು ಕಲ್ಲು ಚಪ್ಪಡಿಗಳ ಗುಡಿಯೊಳಗಿದ್ದ ಈ ಸಿದ್ದಪ್ಪ ದೇವರಿಗೆ ಭಕ್ತರು ಇತ್ತೀಚೆಗೆ ಹೊಸದೊಂದು ನವೀನ ಮಾದರಿಯ ಕಟ್ಟಡವನ್ನು ಕಟ್ಟಿಸಿದ್ದಾರೆ.

ಹೀಗೆ ಕಾಡಿನ ನಡುವೆ ಕುಳಿತು ಸುತ್ತಲ ಹಳ್ಳಿಗರಿಗೆಲ್ಲಾ ಇಷ್ಟದ ದೇವರಾಗಿರುವ ಈ ಸಿದ್ದಪ್ಪ ದೇವರಿಗೊಂದು ಐತಿಹ್ಯವಿದೆ. ಅದೆಂದರೆ, ಹನ್ನೆರಡನೆಯ ಶತಮಾನದ ವಚನಕಾರ ಸಿದ್ಧರಾಮ ಇಲ್ಲಿ ಕೆಲ ಕಾಲ ನೆಲಸಿದ್ದನೆಂದೂ, ಆ ಕಾರಣಕ್ಕಾಗಿಯೇ ಈ ದೇವರಿಗೆ ಸಿದ್ದಪ್ಪ ಅಂತ ಹೆಸರು ಬಂತೆಂದೂ, ಪಕ್ಕದಲ್ಲಿರುವ ಕೆರೆಯನ್ನು ಅವನೇ ಕಟ್ಟಿಸಿದ್ದನೆಂದೂ, ಆ ಕಾಲಕ್ಕೆ ಭರ್ಜರಿ ಕಾಡಾಗಿದ್ದ ಇಲ್ಲಿ ಹುಲಿ, ಚಿರತೆ ಮುಂತಾದ ಪ್ರಾಣಿಗಳಿದ್ದವೆಂದೂ ಹೇಳುತ್ತಾರೆ. ಆದರೀಗ ಇಂಥ ಅಪರೂಪದ ಪ್ರಾಣಿಗಳ ಬದಲಿಗೆ ಕಾಡು ಹಂದಿ, ಜಿಂಕೆ, ಮೊಲ, ನವಿಲು ಮುಂತಾದ ಪ್ರಾಣಿಗಳಿವೆ.

ನಾವು ಚಿಕ್ಕವರಿದ್ದಾಗ ಇಂಥ ಸಿದ್ದಪ್ಪ ದೇವರಿಗೆ ಒಬ್ಬ ಪೂಜಾರಿ ಇದ್ದರು. ಹೆಸರು ಕರಿಸಿದ್ದಯ್ಯ ಅಂತ. ಅವರು ಹೆಸರಿಗೆ ತಕ್ಕಂತೆ ಕಪ್ಪಗಿದ್ದರು. ಆರು ಅಡಿಗಿಂತಲೂ ಎತ್ತರವಿದ್ದ ಇವರು ಆಜಾನುಬಾಹುವಾಗಿದ್ದರು. ಇವರದು ತಿಪಟೂರಿನ ಹತ್ತಿರದ ಒಂದು ಹಳ್ಳಿ. ಇವರ ಅಕ್ಕನನ್ನು ನಮ್ಮ ಊರಿಗೆ ಕೊಟ್ಟಿತ್ತು. ಅಕ್ಕನ ಮನೆಯಲ್ಲಿ ಇರಲೆಂದು ಬಂದಿದ್ದ ಇವರು ಸಿದ್ದಪ್ಪ ದೇವರಿಂದ ಆಕರ್ಷಣೆಗೊಂಡು ದಿನವೂ ಪಟ್ಟದ ದೇವರ ಕೆರೆಯ ತಡಿಯಲ್ಲಿರುವ ಸಿದ್ದಪ್ಪ ದೇವರ ದರ್ಶನಕ್ಕೆಂದು ಹೋಗ ತೊಡಗಿ ಕ್ರಮೇಣ ಹಳ್ಳಿಯಲ್ಲಿದ್ದ ಅಕ್ಕನ ಮನೆಗೆ ಬರುವುದನ್ನು ನಿಲ್ಲಿಸಿ ಅಲ್ಲೇ ಕಾಡಿನಲ್ಲೇ ಸಿದ್ದಪ್ಪನ ಗುಡಿಯಲ್ಲೇ ಉಳಿದು ಅದರ ಪೂಜಾರಿಕೆ ಮಾಡತೊಡಗಿದ್ದರಂತೆ.

ಆವರೆಗೂ ಸಿದ್ದಪ್ಪ ದೇವರಿಗೆ ಪೂಜಾರಿ ಅಂತ ಯಾರೂ ಇರಲಿಲ್ಲವಂತೆ. ಪೂಜೆಗೆಂದು ಹೋದ ಭಕ್ತಾಧಿಗಳೇ ಗುಡಿಯನ್ನು ಗುಡಿಸಿ ಸ್ವಚ್ಚ ಮಾಡಿ ಪೂಜೆ ಮಾಡಿಕೊಂಡು ಬರುತ್ತಿದ್ದರಂತೆ. ಕರಿಸಿದ್ದಯ್ಯ ಇದರ ಪೂಜಾರಿಕೆ ಮಾಡತೊಡಗಿದ ಮೇಲೆ, ಪೂಜೆಯಲ್ಲಿದ್ದ ಇವರ ತನ್ಮಯತೆಯನ್ನು ನೋಡಿದ ಜನರು, ದೇವರೇ ಇವರನ್ನು ತನ್ನ ಪೂಜೆಗಾಗಿ ಕರೆಸಿಕೊಂಡಿದ್ದಾನೆ ಅಂತ ಕರಿಸಿದ್ದಯ್ಯನವರ ಬಗ್ಗೆ ಪ್ರೀತಿ, ಗೌರವ ತೋರತೊಡಗಿದ್ದಾರೆ. ಅದರಂತೆ ದಿನದಿಂದ ದಿನಕ್ಕೆ ಹೆಚ್ಚತೊಡಗಿದ ಕರಿಸಿದ್ದಯ್ಯನವರ ಉತ್ಸಾಹದಿಂದಾಗಿ ಗುಡಿಯ ಸಿದ್ದಪ್ಪನಿಗೆ ದೂರದ ಊರುಗಳಿಂದಲೂ ಭಕ್ತರು ಬರತೊಡಗಿದ್ದಾರೆ. ಜಾತಿಯಲ್ಲಿ ಇವರು ಐನೋರು.

ನಮಗೆಲ್ಲಾ ಈ ಕರಿಸಿದ್ದಯ್ಯನವರು ಪರಿಚಯವಾಗುವ ಹೊತ್ತಿಗೆ ಜನರಲ್ಲಿ ಸಿದ್ದಪ್ಪನ ಗುಡಿಯ ಬಗ್ಗೆ, ಅಲ್ಲಿನ ಪೂಜಾರಿಕೆಯ ಬಗ್ಗೆ ವಿಶೇಷವಾದ ಒಲವು ಮೂಡಿ ಬಿಟ್ಟಿತ್ತು. ಹಗಲೆಲ್ಲಾ ಜನರಿಂದ ಗಿಜಿಗುಡುತ್ತಿದ್ದ ಗುಡಿಯ ವಾತಾವರಣ ಸಂಜೆಯಾಗ ತೊಡಗುತ್ತಿದ್ದಂತೆ ನಿರ್ಜನವಾಗಿ ಬಿಡುತ್ತಿತ್ತು. ಇಂಥ ನಿರ್ಜನ ಪ್ರದೇಶದಲ್ಲಿ, ಅದೂ ಕಾಡಿನ ನಡುವೆ ಒಂಟಿಯಾಗಿ ಇರುತ್ತಿದ್ದ ಕರಿಸಿದ್ದಯ್ಯ ನಮಗೆ ಒಂದು ರೀತಿಯ ಬೆರಗಿನ ಮನುಷ್ಯರಂತೆ ಕಾಣುತ್ತಿದ್ದರು. ಮಹಾ ಮೌನಿಯಾಗಿದ್ದ ಇವರು ಮಾತನಾಡ ತೊಡಗಿದರೆ ಮುಖದಗಲಕೂ ನಗುವರಳುತ್ತಿತ್ತು. ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ಎಂದೂ ಯಾರನ್ನೂ ಏಕ ವಚನದಲ್ಲಿ ಮಾತನಾಡಿಸದ ಇವರು ಪೂಜೆಯಾದ ತಕ್ಷಣ ಕೆರೆಯ ಮತ್ತೊಂದು ತಡಿಯಲ್ಲಿದ್ದ ಕಾಡಿನೊಳಗೆ ಮಾಯವಾಗಿ ಬಿಡುತ್ತಿದ್ದರು. ಹಾಗೆ ಮಾಯವಾಗುತ್ತಿದ್ದ ಇವರು ಇಳಿ ಹೊತ್ತಿಗೆ ಸರಿಯಾಗಿ ಮತ್ತೆ ಗುಡಿಗೆ ಮರಳುತ್ತಿದ್ದರು. ಇವರ ಇಂಥ ವರ್ತನೆಯ ಹಿಂದೆ ಯಾವುದೋ ಗುಟ್ಟು ಇರಲೇಬೇಕೆಂದು ಅನುಮಾನಿಸಿದ ಕೆಲವರು, ಆ ಗುಟ್ಟನ್ನು ಅರಿಯುವ ಸಲುವಾಗಿ ಕೆಲವರು ಇವರನ್ನು ಸುಮಾರು ಸಲ ಹಿಂಬಾಲಿಸಿದ್ದಾರೆ. ಕಾಡಿನ ಜಾಡಿನಲ್ಲಿ ಏನೊಂದೂ ಮಾಡದೆ, ಕಾಡಿನಗಲಕೂ ಸುಮ್ಮನೇ ತಿರುಗಾಡುವುದನ್ನು ಕಂಡು ಸೋಜಿಗಗೊಂಡಿದ್ದಾರೆ. ಹಾಗೆ ತಿರುಗಾಡುವ ಹೊತ್ತಲ್ಲಿ ಇವರಿಗೆ ಸಿಕ್ಕ ಜಿಂಕೆ ಮರಿ, ನವಿಲಿನ ಮರಿಗಳನ್ನು ತಂದು ಸಾಕುತ್ತಿದ್ದುದರ ಪರಿಣಾಮದಿಂದಾಗಿ ನಮ್ಮಂಥ ಹುಡುಗರಿಗೆಲ್ಲಾ ಗುಡಿಗೆ ಹೋಗುವ ಸಡಗರಕ್ಕಿಂತ, ಗುಡಿಯ ಎದುರಿನ ಗಿಡಗಳ ನಡುವೆ ಇರುತ್ತಿದ್ದ ನವಿಲು, ಜಿಂಕೆಯ ಮರಿಗಳನ್ನು ನೋಡುವ ಸಡಗರವೇ ಹೆಚ್ಚಾಗಿರುತ್ತಿತ್ತು.

ಈಜುವುದರಲ್ಲಿ ಆ ಕಾಲಕ್ಕೆ ಕರಿಸಿದ್ದಯ್ಯನವರನ್ನು ಮೀರಿಸುವವರಿರಲಿಲ್ಲ. ಕೆರೆಯ ಏರಿಯ ಮೇಲಿದ್ದ ಆಲದ ಮರವನ್ನು ಹತ್ತಿ ಅಲ್ಲಿಂದ ನೀರಿನೊಳಕ್ಕೆ ಧುಮುಕಿ ಕೆಲ ಕ್ಷಣ ನೀರಿನೊಳಗೆ ಮಾಯವಾಗಿ ಬಿಡುತ್ತಿದ್ದ ಇವರು, ಕೆರೆಯನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಸಲೀಸಾಗಿ ಈಜುತ್ತಿದ್ದರು. ದನಗಳನ್ನೋ, ಕುರಿಗಳನ್ನೋ ಕಾಯಲೆಂದು ಹೋಗುತ್ತಿದ್ದ ಹುಡುಗರಿಗೆಲ್ಲಾ ಇವರು ಈಜು ಕಲಿಸುವ ಗುರುಗಳಾಗಿದ್ದರು. ಇಬ್ಬಿಬ್ಬರನ್ನು ಒಟ್ಟೊಟ್ಟಿಗೇ ಕುತ್ತಿಗೆ ಮಟ್ಟದ ನೀರಿಗೆ ಎಳೆದೊಯ್ದು ಕೈಬಿಟ್ಟು ನಾವು ಯಪರಾತಪರಾ ಕೈಕಾಲುಗಳನ್ನು ಆಡಿಸುತ್ತಾ ಇನ್ನೇನು ಮುಳುಗಿ ಬಿಟ್ಟೆವು ಅನ್ನುವ ಹೊತ್ತಿಗೆ ನಮ್ಮ ಹೊಟ್ಟೆಗಳ ಭಾಗಕ್ಕೆ ಕೈ ಹಾಕಿ ಹಕ್ಕಿಯಂತೆ ತೇಲಿಸುತ್ತಾ, ಈಗ ಮುಂದೆ ಹೋಗಿ ಅನ್ನುತ್ತಿದ್ದರು.

ಕರಿಸಿದ್ದಯ್ಯನವರು ಯಾವತ್ತೂ ಚಪ್ಪಲಿಗಳನ್ನು ಹಾಕುತ್ತಿರಲಿಲ್ಲ. ಇವರಿಗೆ ಬೇಸಿದ ಊಟವೇ ಆಗಬೇಕು ಅಂತೇನೂ ಇರಲಿಲ್ಲ. ಗುಡಿಗೆ ಬಂದ ಭಕ್ತರ ತಳಿಗೆಯ ಊಟಕ್ಕಾಗಿ ಅವರು ಕಾಯುತ್ತಲೂ ಇರಲಿಲ್ಲ. ಅವರಾಗೇ ಪೀಡಿಸಿ ಕೊಟ್ಟರೆ ಉಂಟು ಇಲ್ಲದಿದ್ದರೆ ತಮ್ಮ ಪಾಡಿಗೆ ತಾವು ಅಲ್ಲಿಂದ ಹೊರಟು ಬಿಡುತ್ತಿದ್ದರು. ಅದೇ ರೀತಿ ಊಟದ ಹೊತ್ತಲ್ಲಿ ಹಳ್ಳಿಗಳಿಗೆ ಹೋಗಿದ್ದರೆ ಯಾರು ಕರೆದರೂ ಸರಿಯೇ, ಅದು ಆ ಜಾತಿ ಈ ಜಾತಿ ಅನ್ನದೆ ಅಲ್ಲಿ ಊಟ ಮಾಡುತ್ತಿದ್ದರು. ಇವರಿಗೆ ಹಲಸಿನ ಹಣ್ಣುಗಳೆಂದರೆ ಪಂಚ ಪ್ರಾಣ. ಹಾಗಾಗಿ ಹಲಸಿನ ಹಣ್ಣುಗಳ ಕಾಲ ಬಂತೆಂದರೆ ಇವರಿಗೆ ಸುಗ್ಗಿ ಕಾಲ ಬಂದಂತೆ. ಮನಸೋ ಇಚ್ಚೆ ಹಲಸಿನ ಹಣ್ಣುಗಳನ್ನು ತಿನ್ನುತ್ತಿದ್ದರು. ಅದೇ ರೀತಿ ಎಳ ನೀರುಗಳ ಬಗ್ಗೆಯೂ ಇವರಿಗೆ ಇನ್ನಿಲ್ಲದ ಒಲವಿತ್ತು. ಎಳ ನೀರನ್ನು ಕುಡಿಯ ಬೇಕೆಂದರೆ, ಅದು ಯಾರದೇ ತೋಟವಾಗಿರಲಿ ಅಲ್ಲಿ ತಾವೇ ಮರ ಹತ್ತಿ ಎಳ ನೀರುಗಳನ್ನು ಕುಡಿಯುತ್ತಿದ್ದರು. ಹಲಸಿನ ಮರದ ಪಕ್ಕದಲ್ಲಿ ಸುಳಿದರೂ ಸಾಕು, ಇವರ ಮೂಗಿಗೆ ಆ ಮರದಲ್ಲಿರುವ ಹಣ್ಣಿನ ವಾಸನೆ ಬಡಿದು ಬಿಡುತ್ತಿತ್ತು. ಇವರು ಹಲಸಿನ ಹಣ್ಣು ಬಿಡಿಸುವ ರೀತಿಯೂ ವಿಚಿತ್ರವಾಗಿರುತ್ತಿತ್ತು. ಥೇಟ್ ಕರಡಿಯ ಥರ ಇಡೀ ಹಣ್ಣನ್ನು ಕಲ್ಲೊಂದರ ಮೇಲೆ ಚಚ್ಚಿ, ಅದರ ಪಟ್ಟೆಯನ್ನು ಕೈಯ್ಯಲ್ಲೇ ಬಿಡಿಸಿ ಬಿಡುತ್ತಿದ್ದರು. ಹಾಗಾಗಿ ಇವರನ್ನು ಕೆಲವರು ಕರಡಿ ಅಯ್ಯ ಅಂತ ಕರೆಯುತ್ತಿದ್ದರು. ಹಣ್ಣುಗಳ ಕಾಲವಾಗಿರದೇ ಹೋದಲ್ಲಿ ಇವರಿಗೆ ಕಾಡಿನಲ್ಲಿ ಸಿಗುತ್ತಿದ್ದ ಥರಾವರಿ ಗೆಡ್ಡೆ ಗೆಣಸುಗಳು ಇವರ ಆಹಾರವಾಗುತ್ತಿದ್ದವು. ಹಾಗೆ ಹೋಗಿ ಹೀಗೆ ಬಂದರೆಂದರೆ ಇವರ ಕೈಯ್ಯಲ್ಲಿ ಗೆಡ್ಡೆಗಳ ರಾಶಿಯೇ ಇರುತ್ತಿತ್ತು.

ಇವರಿಗೆ ಕೊಂಚ ಭಂಗಿ ಸೇದುವ ಖಯಾಲೂ ಇತ್ತು. ಇಂಥ ಚಟದ ಇವರದೊಂದು ಗುಂಪಿತ್ತು. ಭಂಗಿ ಸೊಪ್ಪನ ಗಿಡಗಳನ್ನು ಕಾಡಿನ ಗಿಡಗಳ ನಡುವೆ ಯಾರಿಗೂ ಗುರುತಾಗದಂತೆ ಗುಟ್ಟಾಗಿ ಬೆಳೆಸುತ್ತಿದ್ದ ಇವರ ಹದ್ದುಬಸ್ತಿನಲ್ಲಿ ಸದಾ ಕಂತೆಗಟ್ಟಲೆ ಭಂಗಿ ಗಿಡಗಳಿರುತ್ತಿದ್ದವು. ರಾತ್ರಿಯ ಹೊತ್ತು ಆಗಾಗ ಸೇರುತ್ತಿದ್ದ ಇವರ ಗುಂಪು ಭಂಗಿ ಸೊಪ್ಪಿನ ಆರಾಧನೆಯಲ್ಲಿ ಇಡೀ ರಾತ್ರಿಯನ್ನು ಕಳೆಯುತ್ತಿತ್ತಂತೆ. ಇದು ಪೊಲೀಸರ ಕಿವಿಗೂ ಬಿದ್ದು ಕೆಲವೊಮ್ಮೆ ಪಟ್ಟದದೇವರ ಕೆರೆಯ ಕಾಡಿನಲ್ಲಿ ಅವರು ಭಂಗಿ ಗಿಡಗಳಿಗಾಗಿ ತಡಕಾಡಿದ್ದೂ ಇದೆ.

ಮದುವೆಯ ವಯಸ್ಸಾಗಲೇ ಮೀರುತ್ತಾ ಬಂದಿದ್ದರೂ ಇವರು ಮದುವೆಯಾಗಿರಲಿಲ್ಲ. ಈ ಬಗ್ಗೆ ಇವರ ಮನೆಯವರಿಗೂ ಅಂಥಾ ಆಸಕ್ತಿ ಇದ್ದಂತೆ ಕಾಣುತ್ತಿರಲಿಲ್ಲ. ದೊಡ್ಡವರಿಗಿಂತ ಚಿಕ್ಕವರ ಜೊತೆ ಹೆಚ್ಚು ಬೆರೆಯುತ್ತಿದ್ದ ಇವರು ಮಕ್ಕಳನ್ನು ಕಂಡರೆ ಇನ್ನಿಲ್ಲದ ಪ್ರೀತಿ ತೋರುತ್ತಿದ್ದರು. ಮಕ್ಕಳ ಜೊತೆ ಈಜುವುದರಿಂದ ಹಿಡಿದು, ಮರಗೋತಿ ಮುಂತಾದ ಆಟಗಳನ್ನು ಆಡುತ್ತಿದ್ದರು. ಇದನ್ನು ಕಂಡ ಕೆಲವರು ‘ಈ ಅಯ್ಯ ಅದೇನು ಆ ಮಕ್ಕಳ ಜೊತೆ ಹಂಗೆ ಅಡಾಡುತ್ತೆ’, ಅಂತ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು. ಕರಿಸಿದ್ದಯ್ಯನವರ ಮೇಲಿನ ದೊಡ್ಡವರ ಅಸಮಾಧಾನ ದಿನಗಳು ಕಳೆದಂತೆ ಹಲವು ಕಾರಣಕ್ಕೆ ದೊಡ್ಡದಾಗುತ್ತಾ ಹೋದವು. ಇದರಲ್ಲಿ ಕರಿಸಿದ್ದಯ್ಯನವರು ವಡ್ಡರ ಹೆಣ್ಣೊಬ್ಬಳ ಸಹವಾಸ ಮಾಡಿದ್ದಾರೆ, ಅನ್ನುವುದು ಅತ್ಯಂತ ಪ್ರಮುಖ ಕಾರಣವಾಗಿತ್ತು.

ಇದು ನಿಜ ಕೂಡಾ ಆಗಿತ್ತು. ಇದರಿಂದಾಗಿ ಹಳ್ಳಿಯ ಅನೇಕ ಮನೆಗಳ ಬಾಗಿಲುಗಳು ಇವರಿಗೆ ಮುಚ್ಚಲ್ಪಟ್ಟವು. ಇದನ್ನೇ ನೆಪ ಮಾಡಿಕೊಂಡು ಹಿರಿಯ ತಲೆಗಳು ಹಳ್ಳಿಗಳಲ್ಲಿ ಅನೇಕ ಸಲ ಪಂಚಾಯಿತಿ ಇಡಿಸಿದ್ದರು. ಆ ಪಂಚಾಯಿತಿಯಲ್ಲಿ ಕರಿಸಿದ್ದಯ್ಯನವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಛೀಮಾರಿ ಕೂಡಾ ಹಾಕಿದ್ದರು. ಅದಾದ ಮೇಲೂ ಕರಿಸಿದ್ದಯ್ಯನವರು ಆ ಹೆಂಗಸಿನ ಸಹವಾಸವನ್ನು ಬಿಡದಿದ್ದರಿಂದ ಇವರಿಂದ ಗುಡಿಯ ಪೂಜಾರಿಕೆಯನ್ನು ಕಿತ್ತುಕೊಳ್ಳಬೇಕೆಂದು ಪಂಚಾಯ್ತಿಯಲ್ಲಿ ಠರಾವು ಕೂಡಾ ಪಾಸಾಗಿತ್ತು. ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಎಂದಿನಂತೆ ಪೂಜೆ ಮಾಡಿಕೊಂಡು ಇರುವಂತೆ ಕಾಣುತ್ತಿದ್ದ ಕರಿಸಿದ್ದಯ್ಯನವರು ಅದೊಂದು ದಿನ ತಮ್ಮ ಪ್ರೀತಿಯ ತಾಣವನ್ನೂ, ಗುಡಿಯನ್ನೂ ಬಿಟ್ಟು ಕಣ್ಮರೆಯಾಗಿ ಬಿಟ್ಟರು.

ಆ ಹೆಂಗಸಿನ ಜೊತೆ ಓಡಿ ಹೋಗಿದ್ದಾರೆ ಅಂತ ಅಂದರು ಕೆಲವರು, ಯಾರೋ ಹೆದರಿಸಿ ಓಡಿಸಿದ್ದಾರೆ ಅಂತ ಮತ್ತೆ ಕೆಲವರು. ಇದಾವುದೂ ಅಲ್ಲ ಅವರ ಕಥೆಯನ್ನು ಮುಗಿಸಿದ್ದಾರೆ ಅಂತ ಹರಡಿದ್ದ ಗುಸು ಗುಸುವಿಗೆ ಪುಷ್ಠಿ ಕೊಡುವಂತೆ ಇಂದಿಗೂ ಕರಿಸಿದ್ದಯ್ಯನವರು ಎಲ್ಲೂ ಯಾರ ಕಣ್ಣಿಗೂ ಬಿದ್ದಿಲ್ಲಕನಸಾಗಿ ಕಾಡುವ ಗಂಧವತಿಆಡು ಕಾಯೋ ದಿನಗಳು: ಕೊನೆಯ ಕಂತು

ಟಿ.ಎಸ್. ಗೊರವರ

ಚಿತ್ರಗಳು: ಹರೀಶ್ ನಾಯಕ್

ಅವು ನನ್ನ ಹೈಸ್ಕೂಲಿನ ಉಡಾಳ ದಿನಗಳು. ಅಪ್ಪನಿಗೆ ಥಟಗೂ ಗೊತ್ತಾಗದಂತೆ ಸಾಲಿ ತಪ್ಪಿಸಿ ಚಡ್ಡಿದೋಸ್ತರೊಂದಿಗೆ ಅಂಡಲೆಯುತ್ತಿದ್ದ ಸಂಭ್ರಮದ ಕ್ಷಣಗಳವು. ಆಗ ನಮ್ಮ ಮನೆಯ ಮಗ್ಗುಲ ಹಂಚುಗಳೆಲ್ಲ ಬಿದ್ದು ಹೋಗಿದ್ದ ಸರಕಾರಿ ಮನೆಯಲ್ಲಿ ಸಾಮಾಜಿಕ ನಾಟಕವೊಂದರ ಭರ್ಜರಿ ತಾಲೀಮು ನಡೆದಿತ್ತು. ಅದನ್ನು ಕಣ್ತುಂಬಿಕೊಳ್ಳಲು ನಿತ್ಯ ಸಂಜೆ ಹೊತ್ತು ಅಲ್ಲಿಗೆ ಹಾಜರಿ ಹಾಕುತ್ತಿದ್ದೆ. ಒಂದೊಂದು ಸಲ ನಾಟಕ ಕಲಿಸುವ ಮಾಸ್ತರರಿಲ್ಲದಿದ್ದಾಗ ಮಾತು ಎತ್ತಿ ಕೊಡುವ ಜವಾಬ್ದಾರಿ ನನ್ನ ಹೆಗಲೇರುತ್ತಿತ್ತು.

ಆ ನಾಟಕದಲ್ಲಿ ವಿದ್ಯಾವಂತನ ಪಾತ್ರವೊಂದಿತ್ತು. ಅಂವ ಧಾರವಾಡದಲ್ಲಿ ಕಲಿತು ಕಂಡಾಪಟಿ ಶಾಣ್ಯ ಆಗಿ ನೌಕರಿ ತಗೊಂಡಿದ್ದ. ನನಗೆ ಅವಾಗಿನಿಂದ ಧಾರವಾಡವೆಂದರೆ ಅದೇನೋ ಬೆರಗು. ಈಗ ನಮ್ಮ ಜಿಲ್ಲೆ ಗದಗ ಆಗಿದೆ. ಈ ಮೊದಲು ಧಾರವಾಡವಾಗಿದ್ದರೂ ಅದನ್ನು ನೋಡುವ ಭಾಗ್ಯ ಒಲಿದು ಬಂದಿರಲಿಲ್ಲ. ಕುತೂಹಲ ತಡಿಯದೆ ಅಪ್ಪ ನೋಡಿರಬಹುದೆಂದು ಕೇಳಿದೆ. ಆತನೂ ಆ ದೂರದ ಊರನ್ನು ನೋಡಿರಲಿಲ್ಲ. ಕೂಲಿ ಮಾಡುವುದರಲ್ಲೇ ಬದುಕು ಸವೆಸುತ್ತಿರುವ ಅಪ್ಪನಿಗೆ ದೂರದ ಧಾರವಾಡ ನನಗೆ ಹ್ಯಾಗೊ ಆತನಿಗೂ ಅಷ್ಟೇ ಕುತೂಹಲವಿತ್ತು. ಅಂದಿನಿಂದ ಧಾರವಾಡ ಮೋಹಕ ಹುಡುಗಿಯಂತೆ ತೀವ್ರವಾಗಿ ಕಾಡತೊಡಗಿತು.

ಇದಕ್ಕಿಂತ ಮಿಗಿಲಾಗಿ ಧಾರವಾಡದಲ್ಲಿ ಎಲ್ಲಿ ನಿಂತು ಕಲ್ಲೆಸೆದರೂ ಅದು ಕವಿಗಳ ಮನೆ ಮ್ಯಾಲೆ ಬೀಳುತ್ತದೆ ಎನ್ನುವ ಮಾತುಗಳನ್ನು ಕೇಳಿದ್ದ ನನಗೆ ದಿನಗಳು ಕಾಲನ ಒಳಗೆ ಒಂದಾಗುತ್ತಾ ಹೋದಂತೆ ಆ ಮಾಯಕದ ಊರು ನೋಡುವ, ಕಣ್ತುಂಬಿಕೊಳ್ಳುವ ಹಂಬಲ ಬಲಗೊಳ್ಳುತ್ತಾ ಹೋಯಿತು. ಆ ಕನಸಿನೂರ ಸುತ್ತ ನಾನಾ ನಮೂನೆ ಕಲ್ಪನೆ ಕಟ್ಟುತ್ತಾ ಕಡು ಚಲುವೆಯಂತೆ ಮೋಹಿಸತೊಡಗಿದೆ. ಅದನ್ನು ನೋಡುವ, ಸಾಧ್ಯವಾದರೆ ಅಲ್ಲಿಯೇ ಕಲಿಯುವ ಕನಸುಗಳ ಮಹಾಪೂರ ನನ್ನೊಳಗೆ ಗುಪ್ತಗಾಮಿನಿಯಾಗಿ ಹರಿಯುತ್ತಲೇ ಇತ್ತು.

****

ಬಿ.ಎ. ಪಾಸುಮಾಡಿಕೊಂಡ ತರುವಾಯ ನನ್ನೊಳಗೆ ಧ್ಯಾನಸ್ಥವಾಗಿದ್ದ ಧಾರವಾಡ ಕಣ್ದೆರೆಯಿತು. ಎಂ.ಎ. ಮಾಡುವ ಉಮೇದಿ ಅದಕ್ಕೆ ತುಪ್ಪ ಸುರಿಯಿತು. ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವೇಶಾತಿಯೂ ದೊರೆಯಿತು. ಸ್ವರ್ಗ ಇನ್ನೇನು ಮೂರೇ ಗೇಣು ಅನಿಸತೊಡಗಿತು. ’ಇದನ್ನು ಕಲಿತರೆ ಮಾಸ್ತರ ನೌಕರಿ ಸಿಗುತ್ತನು....’ ಅಂದ ಅಪ್ಪ. ಪತ್ರಕರ್ತನಾಗಬಹುದು ಅಂದೆ. ಅಪ್ಪ ಬೆಚ್ಚಿ ಬೆವರಿದ. ಆತ ನೋಡಿದ್ದ ಅದ್ಯಾವುದೋ ಸಿನೇಮಾದಲ್ಲಿ ಕೊಲೆಯಾದ ಪತ್ರಕರ್ತನನ್ನು ನೆಪ್ಪಿಸಿಕೊಂಡು ಸುತಾರಾಂ ನೀನು ಅದನ್ನು ಕಲಿಯುವುದು ಬೇಡ ಅಂದ. ಧಾರವಾಡದಲ್ಲಿ ಕಲಿಯುವ ಕನಸಿನ ಮ್ಯಾಲೆ ಬಿಸಿನೀರು ಚೆಲ್ಲಿದಂತಾಯಿತು. ಅಪ್ಪನ ಮಾತು ನನ್ನೊಳಗೆ ನೂರೆಂಟು ನೋವು ಹಡೆಯಿತು. ತಿಳಿಸಿ ಹೇಳಿದಾಗ ಕಲಿಸಲು ಮನಸು ಮಾಡಿದ. ಆದರೆ, ರೊಕ್ಕ ಕಡಿಮೆ ಬಿದ್ದು ಅಡ್ಡಗಾಲು ಒಗೆಯಿತು. ಅಪ್ಪ ಅಲ್ಲಿ ಇಲ್ಲಿ ಬಡ್ಡಿ ಸಾಲ ಮಾಡಿ ಕೊಟ್ಟ ರೊಕ್ಕ ತೆಗೆದುಕೊಂಡು ಅಂತೂ ಇಂತೂ ಕನಸಿನೂರು ಧಾರವಾಡ ಸೇರಿದೆ.

***

ಬಯಲು ಸೀಮೆಯ ರಣ ರಣ ಸುರಿಯುವ ಬಿಸಿಲೂರಿಂದ ಬಂದ ನನಗೆ ಧಾರವಾಡದ ತಂಪೊತ್ತು ಹಾಯೆನಿಸಿತು. ನಮ್ಮೂರಲ್ಲಿ ಕುರಿ ಮೇಯಿಸಲು ಹೋದಾಗ ಹೀಗೆನಾದರೂ ತಂಪೊತ್ತು ಬಿದ್ದರೆ ಆಗ ಗಿಡದ ಎಲೆ ಹರಿದುಕೊಂಡು ಅದರಲ್ಲಿ ಉಗುಳಿ ತಂಪೊತ್ತು ಕಟ್ಟಿಕೊಂಡು ಬಕ್ಕಣದಲ್ಲಿ ಇಟ್ಟುಕೊಳ್ಳುತ್ತಿದ್ದೆವು. ಹೀಗೆ ಮಾಡಿದರೆ ಬಿದ್ದ ತಂಪೊತ್ತು ಹಾಗೇ ನಿಂತು ನಿರಂತರ ಮುಂದುವರೆಯುತ್ತದೆ ಎನ್ನುವ ನಂಬಿಕೆ ಇತ್ತು. ನಮ್ಮೂರು ಜಾಲಿಗಿಡಗಳ ಪೊದೆಗೆ ಸಾಟಿಯೇ ಇಲ್ಲ ಎಂದು ಬೀಗುತ್ತಿದ್ದ ನನಗೆ ಧಾರವಾಡದ ಹಸಿರು ಸೊಬಗು ನೋಡಿ ಹೀಗೂ ಉಂಟೆ ಅನಿಸಿತು.

ಸಿನೇಮಾದಲ್ಲಿ ಬೆಂಗಳೂರು ನೋಡಿ ವಿಸ್ಮಯಗೊಂಡಿದ್ದ ನಾನು ಧಾರವಾಡದಲ್ಲೂ ಅಲ್ಲಿಯಂತೆಯೇ ಕಾಂಕ್ರಿಟ್ ಕಾಡಿನಂತೆ ತೋರುವ ಗಗನಚುಂಬಿ ಕಟ್ಟಡಗಳಿರಬಹುದು ಅಂತ ಭಾವಿಸಿದ್ದೆ. ನನ್ನ ಊಹೆ ತಲೆಕೆಳಗಾಗಿತ್ತು. ಇದು ಶಿಕ್ಷಣ ಕಾಶಿ ಎಂದು ಭಾವಿಸಿದ್ದ ನನಗೆ ಸಸ್ಯ ಕಾಶಿಯೂ ಹೌದೆನಿಸಿತು. ಇಲ್ಲಿ ಹೆಚ್ಚಾಗಿ ಚೆಂದಾಗಿ ತೋರುವಂತೆ ಹೆಂಚು ಹೊದೆಸಿದ ಮನೆಗಳಿವೆ. ಹಾಗಾಗಿ ಇದು ಪಟ್ಟಣ ಮತ್ತು ಹಳ್ಳಿಯನ್ನು ಕಲೆಸಿದಂತಿದೆ. ಮನೆಗಳಿಗೆ ಕಂಪೌಂಡ್, ಕೈ ತೋಟ ಇವೆ. ಅದರೊಳಗೆ ಹಚ್ಚಗೆ ತುಟಿ ತುಂಬಾ ನಗು ಚೆಲ್ಲಿ ನಿಂತಿರುವ ನಾನಾ ನಮೂನೆಯ ಗಿಡ-ಮರ, ಹೂವಿನ ಗಿಡಗಳು ಕಣ್ಣಿಗೆ ಹಬ್ಬವನ್ನುಂಟು ಮಾಡಿ ಮನಸು ರಸವಶವಾಗುವಂತೆ ಮಾಡುತ್ತವೆ. ಗಂಧವತಿ ಧಾರವಾಡದ ಮೈ ತುಂಬಾ ಬೆಳೆದು ಅರಳಿ ನಿಂತಿರುವ ಹೂ ಗಿಡಗಳು ಕಮ್ಮನೆಯ ಘಮ ಬೀರುತ್ತಾ ರಸಾನುಭವದಲ್ಲಿ ಮನ ಮಿಂದೇಳುವಂತೆ ಮಾಡುತ್ತವೆ. ಧಾರವಾಡದ ತುಂಬಾ ಇರುವ ಗುಲ್‌ಮೊಹರ್ ಗಿಡಗಳು ತಲೆ ತುಂಬಾ ಕಡುಗೆಂಪು ಹೂ ಮುಡಿದುಕೊಂಡು ಎದೆಯೊಳಗೆ ಹರೆಯ ತುಂಬಿಕೊಂಡ ಹುಡುಗಿಯರು ಪ್ರಿಯಕರನ ಕಣ್ಣ ಸನ್ನೆಗೆ ನಾಚಿ ನೆಲದ ಮ್ಯಾಲೆ ಕಾಲ ಹೆಬ್ಬೆರಳಿಂದ ಗೀರು ಎಳೆಯುತ್ತಾ ನಿಂತಿರುವಂತೆ ಮೋಹಕವಾಗಿ ಕಾಣುತ್ತವೆ. ನೆಲದ ಮ್ಯಾಲೆ ಚೆಲ್ಲಿ ಹೂವಿನ ಹಾಸಿಗೆಯಂತೆ ತೋರುವ ದೃಶ್ಯ ಪದಗಳ ಅಂಕೆಗೆ ನಿಲುಕದ ಕಾವ್ಯದಂತೆ ತೋರುತ್ತವೆ. ಧಾರವಾಡ ನಿಜಕ್ಕೂ ರೂಪವತಿ. ಗಂಧವತಿ.

***

ಮೊದಲ ಮಳೆ ಅಂದ್ರೆ ಅದ್ಯಾಕೊ ಏನೊ ಎಲ್ಲರಿಗೂ ಜೀವಪ್ರೀತಿ. ಮಳೆಗೆ ಏಳುವ ಮಣ್ಣಿನ ಕಮ್ಮನೆ ಘಮದೊಂದಿಗೆ ನವಿರಾದ ನೂರೆಂಟು ನೆನಪುಗಳು ನಮ್ಮೊಳಗೆ ಸಾಲುಗಟ್ಟಿ ನಿಲ್ಲುತ್ತವೆ. ನಿಮಗೆ ಧಾರವಾಡದ ಮಳೆ ಬಗ್ಗೆ ಒಂದಿಷ್ಟು ಹೇಳಲೇಬೇಕು. ಇಲ್ಲಿ ಮಳೆಗಾಲ ಪಾದವೂರಿದ ಬಳಿಕ ಅದು ರೆಸ್ಟು ಮಾಡುವುದು ಬಹಳ ಅಪರೂಪ. ಅದಕ್ಕೆ ಗೈರು ಅಂದ್ರೆ ಮಹಾಬೋರು, ಅಲರ್ಜಿ. ಒಮ್ಮೊಮ್ಮೆ ಮನದುಂಬಿ ಧೋ ಧೋ ಎಂದು ಸುರಿದರೆ ಮತ್ತೊಮ್ಮೆ ಅಂಗಳಕ್ಕೆ ಚಳ ಹೊಡೆದಂತೆ ಜಿಟಿ ಜಿಟಿ ಸುರಿಯುತ್ತದೆ. ಮಗದೊಮ್ಮೆ ಬಿಸಿಲು, ಮಳೆ ಯಾವ ಭೇದ ಎಣಿಸಿದೆ ಎರಡೂ ಏಕತ್ರಗೊಂಡು ಹದವಾಗಿ ಸುರಿಯುತ್ತವೆ.

ಈ ಮಳೆಯ ದೆಸೆಯಿಂದ ಧಾರವಾಡಿಗರ ಮತ್ತು ಕೊಡೆಯ ಅನನ್ಯ ಮೈತ್ರಿಗೆ ಅದ್ಯಾವತ್ತೂ ಶಾಪವಿಲ್ಲ. ಭಂಗವಿಲ್ಲ. ಮಳೆಗಾಲದಲ್ಲಿ ಯಾವ ಬೀದಿ ಕಡೆ ತಿರುಗಿ ನೋಡಿದರೂ ’ಕೊಡ್ಯಾಧೀಶರ’ ಸಾಲು ಸಾಲು ಪಡೆ ಕಾಣುತ್ತವೆ. ಇದನ್ನು ಕಣ್ತುಂಬಿಕೊಳ್ಳುವುದೇ ಒಂದು ಚೆಂದ.

ಹಸಿರು ಬಣ್ಣದ ಚೂಡಿ ಧರಿಸಿ ಶೃಂಗಾರಗೊಂಡು ಕಾಲೇಜಿಗೆ ಹೊರಟ ಹುಡುಗಿಯಂತೆ ತೋರುವ ಯುನಿವರ್ಸಿಟಿ ಕ್ಯಾಂಪಸ್ಸಿನ ಬೀದಿಗಳು ಕೊನೆಯಾಗುವವರೆಗೆ ಬೇಕಂತಲೇ ಕೊಡೆ ತ್ಯಜಿಸಿ ಮಳೆಗೆ ಮೈಯೊಡ್ಡಿ ಹಸಿರ ಸೊಬಗಿಗೆ ರಸವಶವಾಗುತ್ತ, ಸುರಿಯುವ ಮಳೆಗೆ ಆಹ್ಲಾದಗೊಳ್ಳುತ್ತ ಅದೆಷ್ಟೋ ಸಲ ನಡೆದದ್ದಿದೆ. ಮಳೆ ಉಸುರುವ ತಣ್ಣನೆ ಹವೆಗೆ ನೆಗಡಿಯಾದೀತೆಂಬ ಅಳುಕು ಒಳಗೊಳಗೆ ಇದ್ದರೂ ಹೀಗೆ ಮಳೆಗೆ ಮೈಯೊಡ್ಡಿ ನಡೆವಾಗ ನನ್ನೊಳಗಿನ ಕಲ್ಮಶತನವೆಲ್ಲಾ ಕೊಚ್ಚಿಕೊಂಡು ಹೋದಂತೆನಿಸಿ ಪದಗಳಿಗೆ ನಿಲುಕದಂತ ಅವರ್ಣನೀಯ ಖುಷಿಯಾಗುತ್ತಿತ್ತು.

***

ಯುನಿವರ್ಸಿಟಿ ಕ್ಯಾಂಪಸ್ಸಿಗೆ ಹತ್ತಿಕೊಂಡೆ ನವೋದಯ ನಗರವಿದೆ. ಶಾಲ್ಮಲಾ ಹಾಸ್ಟೇಲಿನಿಂದ ಒಂದೆರಡು ಕಿಲೊ ಮೀಟರ್ ದೂರವಾಗಬಹುದು. ನಾವು ಇಲ್ಲಿಂದ ನವೋದಯ ನಗರದಲ್ಲಿ ಗುಡಿಸಲಿನಂತ ಹೋಟೆಲಿನಲ್ಲಿ ಊಟ ಮಾಡಲು ರಾತ್ರಿ ಒಂಬತ್ತರ ಹೊತ್ತಿಗೆ ಮುಖ ಮಾಡುತ್ತಿದ್ದೆವು. ಆ ಹೋಟೆಲಿನಲ್ಲಿ ಪ್ರತಿ ಬುಧವಾರಕ್ಕೊಮ್ಮೆ ಅಂಡಾಕರಿ ಮಾಡುತ್ತಿದ್ದರು. ನಾವು ಬ್ಯಾರೆ ಬ್ಯಾರೆ ದಿನ ಬ್ಯಾರೆ ಮೆಸ್‌ಗಳಲ್ಲಿ ಊಟ ಮಾಡಿದರೂ ಬುಧವಾರಕ್ಕೊಮ್ಮೆ ತತ್ತಿ ಊಟ ತಪ್ಪಿಸಿಕೊಳ್ಳುತ್ತಿರಲಿಲ್ಲ.

ಒಂದಿನ ಗುಡಿಸಲ ಹೋಟಲಿಂದ ಊಟ ಮಾಡಿ ಹೊರ ಬರುವಾಗ ಅಚಾನಕ್ಕಾಗಿ ಹೋಟೆಲ್ ಎದುರಿನ ಮನೆ ಕಡೆ ಕಣ್ಣಾಯಿಸಿದೆ. ನನ್ನ ಕಣ್ಣು ನಂಬದೇ ಹೋದವು. ಆ ಮನೆಗ ಬಸವರಾಜ ಕಟ್ಟಿಮನಿ ಅಂತ ಬೋರ್ಡಿತ್ತು. ಖಾರ ಬರವಣಿಗೆಯ ಕಾದಂಬರಿಕಾರ ಕಟ್ಟಿಮನಿಯವರ ಮನೆ ಇರಬಹುದು ಅಂದೊಕೊಂಡು ಅಲ್ಲಿದ್ದ ಝರಾಕ್ಸ್ ಅಂಗಡಿಯಲ್ಲಿ ಕೇಳಿದೆ. ಅವರು ಹೌದೆಂದರು. ’ಮೋಹದ ಬಲೆ’ ಕಾದಂಬರಿ ನೆನಪಾತು. ಅದ್ಯಾಕೊ ಭಾವುಕತೆ ಆವರಿಸಿತು. ಅವರಿದ್ದಿದ್ದರೆ ಮಾತಾಡಿಸಬಹುದಿತ್ತು ಅಂದುಕೊಂಡೆ.

ಕಟ್ಟಿಮನಿಯವರ ಮನೆಯಿಂದ ಎರಡು ಮನೆ ದಾಟಿದರೆ ಅಲ್ಲಿ ಕಥೆಗಾರ ಗಿರಡ್ಡಿ ಗೋವಿಂದರಾಜರ ಮನೆ ಇದೆ. ಅವರು ನಾವು ನಿತ್ಯ ರಾತ್ರಿ ಊಟಕ್ಕೆ ಬರುವಾಗ ಕ್ಯಾಂಪಸ್ಸಿನ ಬೀದಿಯಲ್ಲಿ ಕಾಣುತ್ತಿದ್ದರು. ಬಹುಶಃ ಊಟ ಮಾಡಿದ ತರುವಾಯ ವಾಕ್ ಬರುತ್ತಿರಬಹುದು. ನಾನು ಅವರನ್ನು ಒಮ್ಮೆಯೂ ಮಾತಾಡಿಸಲಿಲ್ಲ. ಅವರನ್ನು ಮಾತಾಡಿಸಲು ಅದ್ಯಾಕೊ ಅಧೀರತೆ ಕಾಡುತ್ತಿತ್ತು. ಮೌನವೇ ಮೂರ್ತಿವೆತ್ತಂತೆ ಕಾಣುವ ಗಿರಡ್ಡಿಯವರು ಸಿಗರೇಟು ಸೇದಿ ಹೊಗೆ ಬಿಡುತ್ತಾ ತಮ್ಮ ಪಾಡಿಗೆ ತಾವು ಅದೇನನ್ನೊ ಧ್ಯಾನಿಸುತ್ತಾ ಹೆಜ್ಜೆ ಹಾಕುತ್ತಿದ್ದರು. ಅವರನ್ನು ದೂರದಿಂದ ನೋಡಿ ಸುಮ್ಮನೆ ಕಣ್ತುಂಬಿಕೊಳ್ಳುತ್ತಿದ್ದೆ.

ಆಗಲೇ ಸಂಜೆ ಮುಗಿಲು ಕೆಂಪಾಗಿತ್ತು. ಅವೊತ್ತು ಭೀಮಾ ಹಾಸ್ಟೇಲಿನ ಹಿಂದುಗಡೆ ಇರುವ ಚಾದಂಗಡಿಯಲ್ಲಿ ಗೆಳೆಯರೆಲ್ಲಾ ಚಾ ಕುಡಿಯುತ್ತ, ಒಬ್ಬರನ್ನೊಬ್ಬರು ರೇಗಿಸುತ್ತಾ ಹರಟುತ್ತಾ ನಿಂತಿದ್ದೆವು. ಗೆಳೆಯನೊಬ್ಬ ಒಂದಿಷ್ಟು ದೂರದಲ್ಲಿ ಹೂವಿನ ಗಿಡದ ಬೇರು ಹಿಡಿದುಕೊಂಡು ಮೆಲ್ಲಗೆ ಹೊರಟಿದ್ದ ವೃದ್ದರ ಕಡೆ ಬೆರಳು ತೋರಿಸಿ ’ಇವ್ರಿಗೆ ಯಾಕ ಬೇಕಿತ್ತು. ತಮ್ಮದ ತಮಗ ಜೋಲಿ ಸಾಲೂದಿಲ್ಲ. ವಾಕಿಂಗ್ ಮಾಡಿ ನೆಟ್ಟಗೆ ಮನಿಗೆ ಹೋಗೂದು ಬಿಟ್ಟು...’ ಅಂದ. ಆಕಸ್ಮಿಕವಾಗಿ ಅವರು ಹಿಂದಿರುಗಿ ನೋಡಿದರು. ನಮಗೆ ಶಾಕ್ ಹೊಡೆದಂತಾಯಿತು. ಕ್ಷಣ ಹೊತ್ತು ನಮ್ಮೊಳಗೆ ಪಾಪ ಪ್ರಜ್ಞೆ ಕಾಡಿತು. ಮನಸು ಒಳಗೊಳಗೆ ಶಾಂತಂ ಪಾಪಂ ಹೇಳಿತು. ನಮ್ಮ ಗೇಲಿತನಕ್ಕೆ ಪಿಚ್ಚೆನಿಸಿತು. ಅವರು ಚೆಂಬಳಕಿನ ಕವಿ ಚೆನ್ನವೀರ ಕಣವಿ ಆಗಿದ್ದರು.

***

ನನ್ನ ಎಂ.ಎ.ದಿನಗಳಲ್ಲಿ ಶಾಲ್ಮಲಾ ಹಾಸ್ಟೇಲ್ ನನ್ನ ಅರಮನೆ. ಅಲ್ಲಿಯೇ ನನ್ನ ವಾಸ್ತವ್ಯ. ಅಲ್ಲಿಯ ನೆನಪುಗಳು ಮೊಗೆದಷ್ಟೂ ಖಾಲಿಯಾಗದ ನಮ್ಮೂರ ಹಳ್ಳದ ವರ್ತಿ ನೀರಂತೆ. ಹಾಸ್ಟೇಲಿನ ಅಣತಿ ದೂರದಲ್ಲಿ ಸಸ್ಯೋದ್ಯಾನವಿದೆ. ಇಲ್ಲಿ ಹುಬ್ಬಳ್ಳಿ-ಧಾರವಾಡದ ವಿವಿಧ ಏರಿಯಾಗಳಿಂದ ಆಗ ತಾನೆ ಕಣ್ತೆರೆದಿರುವ ’ಲವ್ವರ್ ಬರ್ಡ್ಸ್’ ಗಳು ಹಾರಿಕೊಂಡು ವಲಸೆ ಬರುತ್ತವೆ. ಅದೇನೆನೊ ಪಿಸ ಪಿಸ ಮಾತಾಡಿಕೊಂಡು ರಸಗುಲ್ಲ ಸಿಹಿಯ ತುಟಿಮುತ್ತುಗಳನ್ನು ಅದಲು ಬದಲು ಮಾಡಿಕೊಂಡು ತಮ್ಮ ತಮ್ಮ ಗೂಡು ಸೇರುತ್ತವೆ. ಈ ಸಸ್ಯೋದ್ಯಾನದ ಅಕ್ರಮ ಕಾಲು ದಾರಿ ಬಳಸಿ ಹತ್ತಿರದಲ್ಲಿಯೇ ಇರುವ ನಮ್ಮ ಪತ್ರಿಕೋದ್ಯಮ ವಿಭಾಗಕ್ಕೆ ಹೋಗುತ್ತಿದ್ದೆವು. ಹಾಗೆ ಕಾಲು ದಾರಿ ಬಳಸಿಕೊಂಡು ಹೋಗುವಾಗ ಅಲ್ಲಿ ಬರುವ ಸ್ಮಶಾನದಲ್ಲಿ ’ಮನುಜ ಮೂಳೆ ಮಾಂಸದ ತಡಿಕೆ...’ ಎಂದು ನೆನಪಿಸುವ ಸುಟ್ಟ ಶವಗಳ ಎಲಬುಗಳನ್ನು ದಾಟಿಕೊಂಡೇ ಹೋಗುತ್ತಿದ್ದೆವು. ಅದು ಸ್ಮಶಾನವಾಗಿದ್ದರೂ ಆ ರೌರವದ ಚಹರೆಗಳು ಇರಲಿಲ್ಲ.

ಸೋಜಿಗವೆಂದರೆ ಆ ಸ್ಮಶಾನದ ಹಾಸುಗಲ್ಲ ಮ್ಯಾಲೆ ಕುಳಿತು ಓದಿಯೇ ನಾನು ಮತ್ತು ಕೆಲ ಗೆಳೆಯರು ಎಂ.ಎ. ಮುಗಿಸಿದ್ದು. ಸಂಜೆ ಹೊತ್ತು ಹಾಸುಗಲ್ಲ ಮ್ಯಾಲೆ ಕುಳಿತು ರಾಗರತಿಗೆ ರಂಗೇರುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಾ ಕುಳಿತಾಗ ಅಲ್ಲಿ ನಿತ್ಯ ಎಂಟತ್ತು ನವಿಲುಗಳು ಬರುತ್ತಿದ್ದವು. ಅವು ತಮ್ಮ ಪಾಡಿಗೆ ತಾವು ಮೈ ಮರೆತು ದಿನಚರಿಯಲ್ಲಿ ತೊಡಗಿಕೊಂಡಿರುವುದನ್ನು ನೋಡುವುದೇ ಒಂದು ಪರಮ ಭಾಗ್ಯ.

ಒಂದಿನ ಹೀಗೆ ಕುಳಿತಾಗ ನಮ್ಮ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ನವಿಲ ಕುಣಿತದ ಬಗ್ಗೆ ಅಲ್ಲಿ ಇಲ್ಲಿ ಓದಿ ಬೆರಗುಗೊಂಡಿದ್ದ ನಾನು ಈವರೆಗೂ ನವಿಲು ಕುಣಿತ ನೋಡಿರಲಿಲ್ಲ. ಅವತ್ತು ನವಿಲು ಕುಣಿಯತೊಡಗಿತ್ತು. ನೋಡುತ್ತಿದ್ದ ನಮ್ಮೊಳಗೂ ಸಂಭ್ರಮ ಹುಚ್ಚೆದ್ದು ಕುಣಿಯಿತು. ಆ ಕುಣಿತವನ್ನು ಮನದಣಿಯೇ ನೋಡಿದೆ. ಆ ಕುಣಿತದ ಸೊಗಸನ್ನು ನನ್ನ ಕ್ಯಾಮೆರಾ ಕಣ್ಣುಗಳು ಅಚ್ಚಳಿಯದಂತೆ ಸೆರೆ ಹಿಡಿದವು. ಜೀವ ಧನ್ಯತಾ ಭಾವ ಅನುಭವಿಸಿತು. ಮನಸೊಳಗೆ ಅದೆಂತದೊ ಉಲ್ಲಾಸದ ಭಾವ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯಿತು.

ಆ ಸ್ಮಶಾನದಲ್ಲಿ ಹೆಣ ಸುಟ್ಟೊ ಹೂಳಿಯೊ ಹೋಗುವಾಗ ಒಡೆದ ಟೆಂಗಿನ ಕಾಯಿಯ ಕೊಬ್ಬರಿ ಚೂರುಗಳು ಚಂದಿರನ ತುಣುಕುಗಳಂತೆ ಚೆಲ್ಲಿಕೊಂಡಿರುತ್ತಿದ್ದವು. ಅವು ನಮ್ಮ ಹಸಿದ ಹೊಟ್ಟೆ ಸೇರುತ್ತಿದ್ದವು. ಒಮ್ಮೊಮ್ಮೆ ಸತ್ತವರ ಬಯಕೆಗನುಸಾರವಾಗಿ ಸೇಬುಹಣ್ಣು, ಬಾಳೆ, ದ್ರಾಕ್ಷಿ, ಉತ್ತತ್ತಿ, ಬೇಯಿಸಿದ ತತ್ತಿ ಇಟ್ಟಿರುತ್ತಿದ್ದರು. ದೆವ್ವ ಮತ್ತು ದೇವರನ್ನು ನಂಬದ ನಾವು ಅದನ್ನು ಸಾಬೀತು ಪಡಿಸುವವರಂತೆ ಅವನ್ನೆಲ್ಲ ತಿಂದು ಸಂತೃಪ್ತಿಗೊಳ್ಳುತ್ತಿದ್ದೆವು.

***

ಎಂ.ಎ.ಮುಗಿದ ನಂತರ ನಮ್ಮ ರೂಮು ಸಪ್ತಾಪುರ ಬಾವಿ ಹತ್ತಿರದ ನಾಯಕ ಕಂಪೌಂಡಿನಲ್ಲಿತ್ತು. ರಾತ್ರಿ ಒಂದು ಗಂಟೆಯಾಗಿರಬೇಕು. ಅದು ಇದು ಹರಟುತ್ತಾ ಕುಳಿತಿದ್ದ ಗೆಳೆಯರೆಲ್ಲಾ ಸಾಮೂಹಿಕ ಮೂತ್ರ ವಿಸರ್ಜನೆ ಮಾಡಲು ರೋಡಿಗೆ ಬಂದೆವು. ರಾತ್ರಿಯ ಕತ್ತಲು ಜಲ ಜಲ ಸುರಿಯತೊಡಗಿತ್ತು. ಅಲ್ಲೊಂದಿಲ್ಲೊಂದು ಬೀದಿ ದೀಪಗಳು ಪಿಳಿ ಪಿಳಿ ಕಣ್ಣು ಬಿಡತೊಡಗಿದ್ದವು. ತಂಡಿ ಗಾಳಿ ಸಣ್ಣಗೆ ಸೆರಗು ಬೀಸತೊಡಗಿತ್ತು. ಉಚ್ಚೆ ಹೊಯ್ದು ನಿರುಮ್ಮಳವಾದ ನಾವು ಇನ್ನೇನು ರೂಮಿನ ಕಡೆ ಪಾದ ಬೆಳೆಸಬೇಕು ಅನ್ನುವಷ್ಟರಲ್ಲೇ ಬಾವಿ ಹತ್ತಿರ ದೊಪ್ಪೆಂದು ಸಪ್ಪಳವಾಯಿತು. ನೋಡಿದರೆ ಅಷ್ಟು ದೂರದಲ್ಲಿ ಬೈಕ್ ಸವಾರ ಬಿದ್ದಿದ್ದ. ಗೆಳೆಯರೆಲ್ಲಾ ಅಲ್ಲಿಗೆ ದೌಡಾಯಿಸಿದೆವು. ನಾವು ಅಲ್ಲಿಗೆ ತಲುಪುವುದರೊಳಗೆ ಸುತ್ತಣ ಮನೆಯವರು ಬಿದ್ದ ಬೈಕ್ ಸವಾರನಿಗೆ ನೀರು ಚಿಮುಕಿಸಿ, ಗಾಳಿ ಹಾಕತೊಡಗಿದ್ದರು. ನನಗೆ ಅದ್ಯಾಕೊ ಬೆಂಗಳೂರಿನ ಮೆಜೆಸ್ಟಿಕ್, ಅಲ್ಲಿನ ಹಗಲು ದರೋಡೆ, ಆ ಊರಿನ ತೋರಿಕೆಯ ಕೃತಕ ಸಂಬಂಧಗಳು ನೆಪ್ಪಾದವು. ಧಾರವಾಡ ಆಪ್ತವೆನಿಸಿ ಮನಸ್ಸು ಒಳಗೊಳಗೆ ಸೆಲೂಟ್ ಹೊಡೆಯಿತು.

(ಮುಗಿಯಿತು)

ನಿರುತ್ತರನಾದನೆ ಚಾರ್ವಾಕ??

ಡಾ. ನಟರಾಜ್ ಹುಳಿಯಾರ್ಸಾಧ್ಯವಾದಷ್ಟೂ ತನ್ನ ಅಂತಃಸಾಕ್ಷಿಗೆ ಹತ್ತಿರವಾಗಿ ನಡೆದುಕೊಳ್ಳಬಲ್ಲ ದಿಟ್ಟ ಮನುಷ್ಯನನ್ನು ಕಂಡರೆ ವ್ಯವಸ್ಥೆ ಯಾಕೆ ಬೆಚ್ಚುತ್ತದೆ ಎಂಬುದು ಪ್ರೊ.ಕೆ.ರಾಮದಾಸರ ಬದುಕಿನ ರೀತಿಯನ್ನು ನೋಡಿದರೆ ಗೊತ್ತಾಗುತ್ತದೆ. ಬನ್ನಿ, ಗೊತ್ತು ಮಾಡಿಕೊಳ್ಳೋಣ…

ಡಾ. ನಟರಾಜ್ ಹುಳಿಯಾರ್

ಸುಮಾರು 35ವರ್ಷಗಳ ಕಾಲ ಕರ್ನಾಟಕದ ಅನೇಕ ರೀತಿಯ ಚಳವಳಿಗಳನ್ನು ಜೀವಂತವಾಗಿರಿಸಿದವರು ಪ್ರೊ. ಕೆ ರಾಮದಾಸ್. ಮಹಾರಾಜ ಕಾಲೇಜಿನ ಕ್ಲಾಸುಗಳಲ್ಲಿ, ಮೈಸೂರಿನ ಮೂಲೆಗಳಲ್ಲಿ, ಕರ್ನಾಟಕದ ನೂರಾರು ಊರುಗಳಲ್ಲಿ ಮಾಡಿದ ಭಾಷಣದ ಮೂಲಕವೇ ನಾಡಿನ ರಾಜಕಾರಣ ಹಾಗೂ ಸಮಾಜವನ್ನು ಕಟುವಾಗಿ ವಿರ್ಮಶಿಸಿದವರು ಅವರು. ಎಲ್ಲಾ ಮುಖ್ಯ ಚಳವಳಿಗಳ ಜೊತೆಗಿದ್ದು, ಬರಬರುತ್ತ ಅವುಗಳ ರಾಜಿಗಳನ್ನು ಒಪ್ಪದೆ ದೂರಾದವರು. ಇದು ರಾಮದಾಸ್ ವ್ಯಕ್ತಿತ್ವದ ಮುಖ್ಯ ಗುಣವನ್ನು ಹೇಳುತ್ತದೆ.

ರಾಮದಾಸ್ ತಮಗನಿಸಿದ್ದನ್ನು ಹೇಳಬಲ್ಲವರಾಗಿದ್ದರಿಂದ ಅವರು ಯಾವುದೇ ಚಳವಳಿಗಳ ಜೊತೆ ನಿರಂತರವಾಗಿ ಇರಬಲ್ಲವರಾಗಿರಲಿಲ್ಲ. ನಿಜ, ಆದರೆ ಆ ಚಳವಳಿಗಳ ಮೂಲ ಸತ್ವವನ್ನು ಸದಾ ತಮ್ಮದೇ ರೀತಿಯಲ್ಲಿ ಹಬ್ಬಿಸಬಲ್ಲವರಾಗಿದ್ದರು. ರೈತ, ದಲಿತ, ಜಾತ್ಯತೀತ ಚಳವಳಿಗಳ ಕೇಂದ್ರ ಪ್ರಶ್ನೆಗಳನ್ನು ಅವರು ಏಕಾಂಗಿಯಾಗಿಯೂ ಕೈಗೆತ್ತಿಗೊಳ್ಳಬಲ್ಲವರಾಗಿದ್ದರು. ಸಾಮಾಜಿಕ ಬಿಕ್ಕಟ್ಟುಗಳು ಬಂದಾಗ ಇಡೀ ಕರ್ನಾಟಕದ ಪ್ರಗತಿಪರರು ರಾಮದಾಸರ ನಾಯಕತ್ವ, ಮಾರ್ಗದರ್ಶನಕ್ಕಾಗಿ ಅವರನ್ನು ಹುಡುಕಿಕೊಂಡು ಹೋಗುತ್ತಿದ್ದರು.

ಸಂಘಟನೆಗಳ ಬೆಂಬಲವಿರಲಿ, ಇಲ್ಲದಿರಲಿ ತಾವು ನಂಬಿದ್ದನ್ನು ಹೇಳಲು ರಾಮದಾಸ್ ಹಿಂಜರಿದವರಲ್ಲ. ಎದುರಿಗಿರುವುದು ಎಷ್ಟೇ ಅಧಿಕಾರಯುತ ಶಕ್ತಿಯಾಗಿರಲಿ, ಅದನ್ನು ಮುಖಾಮುಖಿಯಾಗಲು ಅವರು ಹಿಂದೆ ಮುಂದೆ ನೋಡಿದವರಲ್ಲ.

ಲಂಕೇಶರು ತಮ್ಮ “ಕಲ್ಲು ಕರಗುವ ಸಮಯ”ವನ್ನು “ಗೆಳೆಯ, ಶಿಷ್ಯ, ಮಾರ್ಗದರ್ಶಿ” ರಾಮದಾಸ್ ಗೆ ಅರ್ಪಿಸಿದ್ದು ರಾಮದಾಸ್ ಮತ್ತು ಲಂಕೇಶರ ವಿಶಿಷ್ಟ ಸಂಬಂಧವನ್ನು ಹೇಳುವಂತಿದೆ.

ಲಂಕೇಶರ ಬರಹ ಮತ್ತು ನಿಲುವುಗಳು, ಹಾದಿ ತಪ್ಪಿದ್ದು ಕಂಡಾಗಲೆಲ್ಲ ನೇರವಾಗಿ ಅವರನ್ನು ಟೀಕಿಸಬಲ್ಲವರಾಗಿದ್ದ ಕೆಲವೇ ಕೆಲವರಲ್ಲಿ ರಾಮದಾಸ್ ಒಬ್ಬರು. ಲಂಕೇಶರು ಆ ಬಗ್ಗೆ ಗೊಣಗುತ್ತಿದ್ದರೂ ರಾಮದಾಸರ ಮಾತಿನಲ್ಲಿದ್ದ ಸತ್ಯ ನಿಧಾನವಾಗಿ ಅವರ ಎದೆಗಿಳಿಯುತ್ತಿತ್ತು.

90ರ ದಶಕದಲ್ಲಿ ಲಂಕೇಶ್ ಹಾಗೂ ರಾಮದಾಸ್ ಪ್ರಗತಿ ರಂಗ ಎಂಬ ರಾಜಕೀಯ ಪಕ್ಷ ಕಟ್ಟಿ ಕರ್ನಾಟಕವನ್ನು ಎಚ್ಚರಿಸಲು ಯತ್ನಿಸಿದರು. ಲಂಕೇಶ್ ಹಾಗೂ ತೇಜಸ್ವಿ ನಡುವೆ ಬಿರುಕುಂಟಾದಾಗ ರಾಮದಾಸ್ ಒಳಗೊಳಗೆ ನೊಂದರು. ಅದು ಖಾಸಗಿ ನೋವಾಗಿರಲಿಲ್ಲ. ಬದಲಿಗೆ ಎರಡು ದೊಡ್ಡ ಶಕ್ತಿಗಳು ಒಟ್ಟಿಗೇ ಇದ್ದರೆ ಕರ್ನಾಟಕದ ಸಂಸ್ಕೃತಿಗೆ ದಕ್ಕಬಲ್ಲ ಹೊಸ ಸಾಧ್ಯತೆ ತಪ್ಪಿದ್ದನ್ನು ಕಂಡು ಹುಟ್ಟಿದ ನೋವಾಗಿತ್ತು ಅದು.

ಸಾಧ್ಯವಾದಷ್ಟೂ ತನ್ನ ಅಂತಃಸಾಕ್ಷಿಗೆ ಹತ್ತಿರವಾಗಿ ನಡೆದುಕೊಳ್ಳಬಲ್ಲ ದಿಟ್ಟ ಮನುಷ್ಯನನ್ನು ಕಂಡರೆ ವ್ಯವಸ್ಥೆ ಯಾಕೆ ಬೆಚ್ಚುತ್ತದೆ ಎಂಬುದು ರಾಮದಾಸರ ಬದುಕಿನ ರೀತಿಯನ್ನು ನೋಡಿದರೆ ಗೊತ್ತಾಗುತ್ತದೆ. ರಾಮದಾಸ್ ಜಾತ್ಯತೀತತೆಯನ್ನು ಪ್ರತಿಪಾದಿಸಿದ್ದಷ್ಟೇ ಅಲ್ಲ, ಅಂತರ್ಜಾತೀಯ ವಿವಾಹಗಳ ನಿರಂತರ ಬೆಂಬಲಿಗರೂ ಆಗಿದ್ದರು. ರಾಮದಾಸ್ ಮನೆಯಲ್ಲಿ ನಡೆದ ಅಂತರ್ಜಾತೀಯ ವಿವಾಹಗಳ ಸಂಖ್ಯೆ ದೊಡ್ಡದು.

ಕೆಲವೊಮ್ಮೆ ರಾಮದಾಸ್ ತಮ್ಮ ಮನೆ “ಚಾರ್ವಾಕ”ದ ಕಾಂಪೌಂಡಿನಲ್ಲಿ “ತೆರೆದ ಬಾಗಿಲು ನಾನು; ಸರ್ವಋತು ಬಂದರು” ಎಂಬ ಸಾಲನ್ನು ನೆನಪಿಸುವ ಹಾಗೆ ಪೇಪರ್ ಓದುತ್ತಾ ಕೂತಿರುತ್ತಿದ್ದರು. ಯಾವುದೋ ಊರಿನಿಂದ ಜಾತಿ ಮೀರಿ ಪ್ರೀತಿಯ ಆಶ್ರಯ ಹುಡುಕುತ್ತ ತರುಣ ಹಾಗೂ ತರುಣಿ ಅಳುಕುತ್ತ ಅವರ ಕಾಂಪೌಂಡಿನೊಳಗೆ ಹೆಜ್ಜೆ ಇಡುತ್ತಿದ್ದರು. ಆಗ ಸ್ವಾಮಿ ಆನಂದ್, ಉಗ್ರನರಸಿಂಹೇಗೌಡರಂತಹ ಬಂಟರಿಗೆ ರಾಮದಾಸರ ಬುಲಾವ್ ಹೋಗುತ್ತಿತ್ತು.

ಒಂದೆರಡು ದಿನಗಳಲ್ಲೇ ರಾಮದಾಸರ ಮನೆಯ ಟೆರೇಸ್ ಮೇಲೆ ಸರಳ ಅಂತರ್ಜಾತಿ ವಿವಾಹ ಏರ್ಪಾಡಾಗುತ್ತಿತ್ತು. ಎಲ್ಲಾ ಸಾಮಾಜಿಕ ಚಳವಳಿಗಳೂ ಕ್ಷೀಣವಾದಾಗ ರಾಮದಾಸ್ ಈ ವಿವಾಹಗಳನ್ನೇ ಒಂದು ಚಳವಳಿಯಾಗಿಸಬಲ್ಲ ಜಾತ್ಯತೀತ ಒಲವಿನ ವೇದಿಕೆ “ಮಾನವ ಮಂಟಪ”ವನ್ನು ಕಟ್ಟಿದರು. ಈ ವಿವಾಹಿತರೆಲ್ಲ ಬರಬರುತ್ತಾ ಕರ್ನಾಟಕದ ಜಾತ್ಯತೀತ ಪಡೆಗಳಾಗಿ ಪರಿವರ್ತಿತರಾಗುತ್ತಿದ್ದರು.

ರಾಮದಾಸ್ ಕರ್ನಾಟಕದಲ್ಲಿ ಲೋಹಿಯಾ ವಾದವನ್ನು ಜೀವಂತವಾಗಿರಿಸಿದ್ದ ಕೆಲವೇ ಚಿಂತಕರಲ್ಲಿ ಒಬ್ಬರು. ಹರೆಯದಿಂದಲೂ ಲೋಹಿಯಾ ಚೈತನ್ಯ ಅವರಲ್ಲಿ ಹರಿಯುತ್ತಿತ್ತು. ಲೋಹಿಯಾ ಬರಹಗಳಲ್ಲಿ ವ್ಯಕ್ತವಾಗುವ ಅನೇಕ ನಿಲುವುಗಳು ಹೆಚ್ಚು ಪ್ರಖರವಾಗಿ ಕಾಣುತ್ತಿದ್ದದ್ದು ಪ್ರೊ.ನಂಜುಂಡಸ್ವಾಮಿ ಹಾಗೂ ರಾಮದಾಸರಲ್ಲಿಯೇ. ಕಾಂಗ್ರೆಸ್, ಬಿಜೆಪಿಗಳ ಬಗ್ಗೆ ರಾಮದಾಸರ ತಾತ್ವಿಕ ನಿಲುವುಗಳು ಹಾಗೂ ಬೀದಿ ಹೋರಾಟಗಳು ಲೋಹಿಯಾವಾದಿ ಚಿಂತನೆಯ ಮೇಲೇ ರೂಪುಗೊಂಡಿದ್ದವು. ಹಾಗೆಯೇ ವ್ಯವಸ್ಥೆಯ ವಿರುದ್ಧ ಅವರ ತೀಕ್ಷ್ಣ ಪ್ರಹಾರಗಳು ಕೂಡ ಲೋಹಿಯಾವಾದಿ ತಾತ್ವಿಕತೆಯಿಂದಲೇ ಚಿಮ್ಮುತ್ತಿದ್ದವು.

ಇಂದಿರಾಗಾಂಧಿಯವರ ಎಮರ್ಜೆನ್ಸಿ, ಬೂಸಾ ಪ್ರಕರಣಗಳಿಂದ ಹಿಡಿದು ಬಾಬಾ ಬುಡನ್ ಗಿರಿಯ ಮತೀಯ ರಾಜಕಾರಣದವರೆಗೂ ರಾಮದಾಸರ ನಿಲುವು ಕರ್ನಾಟಕದ ಜನಪರ ಚಳವಳಿಗಳನ್ನು ಜೀವಂತವಾಗಿರಿಸುವ ದ್ರವ್ಯಗಳಲ್ಲೊಂದಾಗಿತ್ತು. ಲೋಹಿಯಾವಾದದ ಕರ್ನಾಟಕದ ಮಾದರಿಯನ್ನು ಹುಡುಕುವವರು ರಾಮದಾಸ್ ಸಂಘಟಿಸಿದ ಹೋರಾಟ, ಚರ್ಚೆ, ಪ್ರತಿಭಟನೆಗಳಲ್ಲಿ ಆ ಮಾದರಿಯನ್ನು ಸ್ಪಷ್ಟವಾಗಿ ಕಾಣಬಹುದು.

ಗೆಳೆಯ ತೇಜಸ್ವಿ ತೀರಿಕೊಂಡ ಮೇಲೆ ರಾಮದಾಸ್ ಒಳಗೇ ಕುಸಿಯತೊಡಗಿದ್ದರೆಂದು ಅವರ ಜೊತೆಗಿದ್ದವರು ಹೇಳುತ್ತಿದ್ದರು. “ನಾವೆಲ್ಲಾ ಈ ಭೂಮಂಡಲದ ಎನ್ ಡೇಂಜರ್ಡ್ ಸ್ಪೀಶೀಸ್ ಕಣ್ರೀ” ಎಂದು ಅವರು ತಮ್ಮನ್ನು ತಾವು ತಮಾಷೆ ಮಾಡಿಕೊಳ್ಳುತ್ತಿದ್ದರು. ಹತ್ತು ವರ್ಷಗಳ ಕೆಳಗೆ ಅವರಿಗೆ ಹೃದಯಾಘಾತವಾದಾಗ ರಾತ್ರಿ ನಾನು ಅವರ ಬಳಿ ಇದ್ದೆ. ಆಪರೇಷನ್ ಮಾಡಿಸಿಕೊಳ್ಳದೆ ಮಾತ್ರೆಗಳಲ್ಲೇ ಅದನ್ನೆಲ್ಲ ಗೆಲ್ಲಲು ನೋಡಿದರು.

ರಾಮದಾಸ್ ತಮ್ಮ ಸ್ವಂತದ ಏಳುಬೀಳುಗಳ ಬಗ್ಗೆ ಹೆಚ್ಚು ಮಾತಾಡಿದವರಲ್ಲ. ಅವರು ಸಮಾಜವನ್ನು ಪೂರ್ತಿ ಒಳಗೆ ತೆಗೆದುಕೊಂಡು ನವೆದವರು. ಎರಡು ತಿಂಗಳ ಹಿಂದೆ ತೇಜಸ್ವಿಯವರ “ನಿರುತ್ತರ”ದಿಂದ ಬಂದ “ಚಾರ್ವಾಕ” ಕೂಡ ನಿರುತ್ತರನಾಗಿಬಿಟ್ಟನೆ?

ರಾಮದಾಸರ ಶಾಶ್ವತ ಮೌನ ನಮ್ಮೆಲ್ಲರಲ್ಲೂ ವಿಚಿತ್ರ ಅಸಹಾಯಕತೆ ಹಾಗೂ ತಬ್ಬಲಿತನ ಮೂಡಿಸುತ್ತಿದೆ.

ಆಣೆ ರಾಜಕೀಯವೋ ನಾಲ್ಕಾಣೆ ರಾಜಕೀಯವೋ ?


ನಾ ದಿವಾಕರ

ದೇಶದ ಜನಸಾಮಾನ್ಯರ ದೃಷ್ಟಿಯಲ್ಲಿ ರಾಜಕಾರಣ/ರಾಜಕೀಯ ಎಂದರೆ ಜನತೆಯಿಂದ ಚುನಾಯಿತರಾದ ಪ್ರತಿನಿಧಿಗಳು ಪ್ರಜಾತಾಂತ್ರಿಕ ಚೌಕಟ್ಟಿನಲ್ಲಿ ರಾಜ್ಯದ/ದೇಶದ ಪ್ರಜೆಗಳ ಅಭಿವೃದ್ಧಿಗಾಗಿ ಶ್ರಮಿಸುವ ಒಂದು ಪ್ರಕ್ರಿಯೆ ಎಂದಾಗಿತ್ತು. ಈ ಪ್ರಕ್ರಿಯೆಯಲ್ಲಿ ಒಂದು ಗುಂಪು ಅಧಿಕಾರರೂಢರಾಗಿದ್ದರೆ ಮತ್ತೊಂದು ಗುಂಪು ವಿರೋಧಿ ನೆಲೆಗಟ್ಟಿನಲ್ಲಿ ನಿಂತು ಆಳುವ ಪಕ್ಷದ ತಪ್ಪು ಒಪ್ಪುಗಳನ್ನು ಜನತೆಗೆ ತಿಳಿಸುತ್ತಾ ಆಡಳಿತದ ಸುಧಾರಣೆಗಾಗಿ ಶ್ರಮಿಸುತ್ತದೆ. ಈ ಚೌಕಟ್ಟಿನೊಳಗೇ ನಡೆಯುವ ವಿದ್ಯಮಾನಗಳಲ್ಲಿ ಏನೇ ನ್ಯೂನತೆಗಳು ಕಂಡುಬಂದರೂ ಅವುಗಳನ್ನು ಸರಿಪಡಿಸಲು ನ್ಯಾಯಾಂಗ ಮತ್ತು ಕಾರ್ಯಾಂಗ ಸಿದ್ಧವಾಗಿರುತ್ತವೆ. ರಾಜಕೀಯ ವ್ಯವಸ್ಥೆ, ಆಡಳಿತ ಯಂತ್ರ ಮತ್ತು ಅಧಿಕಾರಶಾಹಿ ಎಷ್ಟೇ ಕುಲಗೆಟ್ಟು ಹೋದರೂ ಸಂವಿಧಾನ ಬದ್ಧವಾಗಿ ಐದು ವರ್ಷಕ್ಕೊಮ್ಮೆ ಜನತೆಯ ಬಳಿ ವೋಟಿನ ಭಿಕ್ಷೆ ಬೇಡುವ ಅಗತ್ಯತೆ ಎಲ್ಲಾ ರಾಜಕೀಯ ಪಕ್ಷಗಳನ್ನೂ ಕಟ್ಟಿಹಾಕಿರುತ್ತದೆ. ಇದು ಮೂಲತಃ ರಾಜಕಾರಣದ ಬಗ್ಗೆ ಜನತೆಯಲ್ಲಿರುವ ನಿರೀಕ್ಷೆ.

ಚಿತ್ರಕೃಪೆ: ಸತೀಶ್ ಶೃಂಗೇರಿ

ಆದರೆ ಭಾಜಪ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ರಾಜಕಾರಣದ ಮೂಲ ಅರ್ಥವೇ ಬದಲಾಗಿಹೋಗಿದೆ. ಇಲ್ಲಿ ಆಳುವ ಪಕ್ಷ ಎಂದರೆ ಏನಾದರೂ ಮಾಡು ಅಧಿಕಾರದಲ್ಲಿರು ಎಂಬ ಮಂತ್ರವನ್ನು ಪಠಿಸುವ ಒಂದು ಭ್ರಷ್ಟ ಪ್ರಕ್ರಿಯೆಯಾಗಿದೆ. ಮತ್ತೊಂದೆಡೆ ವಿರೋಧ ಪಕ್ಷ ಎಂದರೆ ಆಳುವ ಪಕ್ಷದ ಭ್ರಷ್ಟಾಚಾರವನ್ನು ಬಹಿರಂಗಗೊಳಿಸುವ ಏಜೆನ್ಸಿಯಂತಾಗಿದೆ. ಆಳುವ ವರ್ಗಕ್ಕೇ ಸೇರಿದ ವಿರೋಧ ಪಕ್ಷಗಳಿಗೂ ಸಂವಿಧಾನ ಬದ್ಧವಾದ ಕೆಲವು ಮೂಲಭೂತ ಕರ್ತವ್ಯಗಳಿವೆ, ಪ್ರಜಾಹಿತದ ದೃಷ್ಟಿಯಿಂದ ಮಾಡಬೇಕಾದ ಕೆಲವು ಮಹತ್ತರ ಕಾರ್ಯಗಳಿವೆ ಎಂಬ ಸಂಗತಿಯನ್ನೇ ಕರ್ನಾಟಕದ ರಾಜಕೀಯ ಪಕ್ಷಗಳು ಮರೆತಂತಿದೆ. ಹಾಗಾಗಿ ಕಳೆದ ಎರಡು ವರ್ಷಗಳಿಂದ ರಾಜ್ಯದ ಜನತೆ ಭ್ರಷ್ಟಾಚಾರ, ಭೂ ಸ್ವಾಧೀನ, ಡಿ ನೋಟಿಫಿಕೇಷನ್, ಭೂ ಹಗರಣ, ಅಕ್ರಮ ಗಣಿಗಾರಿಕೆ, ಆಪರೇಷನ್ ಕಮಲ ಇವೇ ಮುಂತಾದ ಹಗರಣಗಳನ್ನು ಬಿಟ್ಟರೆ ಮತ್ತಾವ ರಾಜಕಾರಣವನ್ನೂ ಕಂಡಿಲ್ಲ. ಪರಿಣಾಮ ರಾಜ್ಯದಲ್ಲಿ ಸೃಷ್ಟಿಯಾಗಿರುವ ಅರಾಜಕತೆ.

ಈಗ ಮತ್ತೊಂದು ಹೊಸ ಪ್ರಹಸನಕ್ಕೆ ಕುಮಾರ ಸ್ವಾಮಿ ನಾಂದಿ ಹಾಡಿದ್ದಾರೆ. ಜನತಾದಳ ಪಕ್ಷವನ್ನು ಕಟ್ಟಲು ಹಣ ನೀಡುವುದಾಗಿ ಯಡಿಯೂರಪ್ಪನವರು ತಮಗೆ ಆಮಿಷ ಒಡ್ಡಿದ್ದರು ಎಂಬ ಕುಮಾರಸ್ವಾಮಿಯ ಹೇಳಿಕೆ ಮತ್ತೊಂದೆ ವ್ಯಾಪಕ ಚರ್ಚೆ, ವಾದವಿವಾದಗಳಿಗೆ ಎಡೆಮಾಡಿಕೊಟ್ಟಿದೆ. ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆಯಲು ಮಾನ್ಯ ಮುಖ್ಯಮಂತ್ರಿಗಳು ಧರ್ಮಸ್ಥಳದ ಮಂಜುನಾಥೇಶ್ವರನ ಸನ್ನಿಧಿಯಲ್ಲಿ ಆಣೆ ಮಾಡುವುದಾಗಿ ಶಪಥ ಮಾಡಿದ್ದಾರೆ. ಈ ಪಂಥಾಹ್ವಾನವನ್ನು ಮಾಜಿ ಮುಖ್ಯಮಂತ್ರಿಗಳೂ ಸ್ವೀಕರಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿರುವ ಇಬ್ಬರು ರಾಜಕಾರಣಿಗಳು ಈ ರೀತಿ ಆಣೆ ಮಾಡುವ ಮೂಲಕ ತಮ್ಮ ವಾದವನ್ನು ಸಮರ್ಥಿಸಲು ಹೊರಟಿರುವುದು ಇಬ್ಬರ ಅಪ್ರಬುದ್ಧತೆ ಮತ್ತು ಕರ್ನಾಟಕ ರಾಜಕಾರಣದ ದುರ್ವ್ಯವಸ್ಥೆಯ ಪ್ರತೀಕವಾಗಿಯೇ ಕಾಣುತ್ತದೆ.

ಒಂದು ವೇಳೆ ಇಬ್ಬರೂ ತಮ್ಮ ನಿಲುವುಗಳಿಗೆ ಬದ್ಧರಾಗಿ ಆಣೆ ಪ್ರಮಾಣ ಮಾಡಿದರೆನ್ನಿ. ಆಗ ತಪ್ಪಿತಸ್ಥರು ಯಾರು ಎಂದು ನಿರ್ಧರಿಸುವ ಹೊಣೆಗಾರಿಕೆ ಮಂಜುನಾಥೇಶ್ವರನದಾಗುತ್ತದೆಯೇ ? ಅಥವಾ ವೀರೇಂದ್ರ ಹೆಗ್ಡೆ ಡಿ ಫ್ಯಾಕ್ಟೋ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸುತ್ತಾರೋ ? ಸುಳ್ಳಿನ ಹಾದಿಯಲ್ಲೇ ಸಾಗಿಬಂದು ರಾಜಕೀಯ ನೆಲೆ ಕಂಡುಕೊಂಡಿರುವ ರಾಜಕಾರಣಿಗಳ ಆಣೆ ಪ್ರಮಾಣಗಳಿಗೆ ಜನಸಾಮಾನ್ಯರು ಏಕೆ ಬೆಲೆ ಕೊಡಬೇಕು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಸಂವಿಧಾನ ಬದ್ಧರಾಗಿ ಸ್ವೀಕರಿಸುವ ಪ್ರಮಾಣವಚನಕ್ಕೇ ಶ್ರದ್ಧೆ, ನಿಷ್ಠೆ, ಬದ್ಧತೆ ತೋರದಿರುವ ಪ್ರಭೃತಿಗಳು ಅಗೋಚರ ದೈವತ್ವದ ಮುಂದೆ ಮಾಡುವ ಪ್ರಮಾಣಕ್ಕೆ ಹೇಗೆ ಮೌಲ್ಯ ಕಟ್ಟಲು ಸಾಧ್ಯ ? ಬಹುಶಃ ಧರ್ಮಸ್ಥಳದಲ್ಲಿ ಬಾಬಾ ರಾಂದೇವ್ ತರಹದ ಮತ್ತೊಂದು ಮನರಂಜನಾ ಪ್ರಹಸನವನ್ನು ಕರ್ನಾಟಕದ ಜನತೆ ಎಂಜಾಯ್ ಮಾಡಬಹುದೇನೋ.

ದೇವೇಗೌಡರ ಕುಟುಂಬ ಯಡಿಯೂರಪ್ಪನವರ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಇದೆ. ಅನೇಕ ಭೂ ಹಗರಣಗಳ ಕಡತಗಳನ್ನು ಜನತೆಯ ಮುಂದಿಡುತ್ತಿದೆ. ಲೋಕಾಯುಕ್ತ, ಉಚ್ಚ ನ್ಯಾಯಾಲಯದಲ್ಲೂ ಅನೇಕ ಪ್ರಕರಣಗಳು ದಾಖಲಾಗಿದ್ದು ಮೊಕದ್ದಮೆ ನಡೆಯುತ್ತಿದೆ. ಇಷ್ಟೆಲ್ಲಾ ಆದರೂ ರಾಜ್ಯ ಭಾಜಪ ಸರ್ಕಾರ ಏನೂ ನಡೆದೇ ಇಲ್ಲವೆಂಬಂತೆ ಮುಂದುವರೆಯುತ್ತಿರಲು ಕಾರಣ, ವಿರೋಧ ಪಕ್ಷಗಳ ಮೌಲ್ಯ ರಹಿತ ರಾಜಕಾರಣ ಮತ್ತು ಈ ಪಕ್ಷಗಳಲ್ಲಿ ಕಾಣಲಾಗದ ಸಂವಿಧಾನ ನಿಷ್ಠೆ. ಪ್ರಾಥಮಿಕ ಶಾಲಾ ಮಕ್ಕಳಂತೆ ಆಣೆ ಪ್ರಮಾಣಗಳ ರಾಜಕಾರಣ ಮಾಡುವ ಕೀಳು ಮಟ್ಟದ ರಾಜಕಾರಣ, ರಾಜಕೀಯ ಭ್ರಷ್ಟಾಚಾರದಂತಹ ಗಂಭೀರ ವಿಚಾರಗಳನ್ನು ಮನರಂಜನಾ ವಸ್ತುವನ್ನಾಗಿ ಮಾಡಿಬಿಡುತ್ತದೆ. ರಾಜ್ಯದಲ್ಲಿ, ದೇಶದಲ್ಲಿ ಬೇರೂರಿರುವ ಭ್ರಷ್ಟಾಚಾರ ಕೇವಲ ಒಂದು ಪಕ್ಷಕ್ಕೆ ಸೀಮಿತವಾದ ವಿದ್ಯಮಾನವಲ್ಲ. ಅಥವಾ ಒಂದು ಕ್ಷೇತ್ರಕ್ಕೆ ಮೀಸಲಾಗಿರುವುದೂ ಅಲ್ಲ.

ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಒಳಗೊಳಗೇ ಶಿಥಿಲವಾಗುತ್ತಿದೆ. ಈ ದುರವಸ್ಥೆಯ ವಿರುದ್ಧ ದೇಶದ ಜನಸಾಮಾನ್ಯರು ವಿಭಿನ್ನ ಸ್ತರಗಳಲ್ಲಿ ಹೋರಾಟದ ಹಾದಿ ಹಿಡಿಯುತ್ತಿರುವ ಈ ಸಂದರ್ಭದಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕಾದ ಪಕ್ಷಗಳು ಈ ರೀತಿಯ ನಾಲ್ಕಾಣೆ ರಾಜಕಾರಣ ಮಾಡುವುದು ಖಂಡನಾರ್ಹ. ಭ್ರಷ್ಟಾಚಾರ ಇಂದು ಸರ್ವವ್ಯಾಪಿಯಾಗಿದೆ. ಭ್ರಷ್ಟರು ಸರ್ವಾಂತರ್ಯಾಮಿಗಳಾಗಿದ್ದಾರೆ. ಭ್ರಷ್ಟತೆಯ ಆರೋಪಗಳು ಪರಸ್ಪರ ದೋಷಾರೋಪಗಳಿಗೆ ಸೀಮಿತವಾಗಿದೆ. ಇಡೀ ರಾಜಕೀಯ ವ್ಯವಸ್ಥೆಯನ್ನು ಫಿನಾಲ್‌ನಲ್ಲಿ ತೊಳೆದು ಸ್ವಚ್ಚಗೊಳಿಸಬೇಕಾಗಿದೆ. ಕರ್ನಾಟಕದ ಜನತೆಗೆ ಮನರಂಜನೆ ಸಾಕಾಗಿದೆ. ಸ್ವಚ್ಚ ಆಡಳಿತ ಬೇಕಿದೆ. ಸಾಧ್ಯವಾದರೆ ಒದಗಿಸಿ. ಇಲ್ಲವೇ ನಿರ್ಗಮಿಸಿ ಎಂದು ಒಕ್ಕೊರಲಿನಿಂದ ಹೇಳೋಣವೇ ?

ಬ್ರಾಹ್ಮಣ ಪ್ರೀತಿಯೋ, ’ಬ್ರಾಹ್ಮಣ್ಯ’ದ ಪ್ರೀತಿಯೋ?


ಸಿದ್ದಲಿಂಗಯ್ಯನವರ ನಡಿಗೆ ಬಲಪಂಥೀಯತೆಯ ಕಡೆಗೆ...

ನಾನು ಬ್ರಾಹ್ಮಣ ದ್ವೇಷಿಯಲ್ಲ... ಬ್ರಾಹ್ಮಣರಿಂದಲೂ ಕಲಿಯುವುದು ಬಹಳಷ್ಟಿದೆ...
ಇಕರ‍್ಲಾ ವದಿರ‍್ಲಾ ಎಂಬ ಬಗೆಯ ಪದ್ಯಗಳನ್ನು ನಾನೀಗ ಬರೆಯಲಾರೆ... ನನ್ನಲ್ಲಿ ಈಗ ಆ ಆಕ್ರೋಶ ಉಳಿದಿಲ್ಲ...
-ಹೀಗೆಂದು ನಮ್ಮ ದಲಿತ ಕವಿ ಡಾ. ಸಿದ್ದಲಿಂಗಯ್ಯನವರು ಕಾರ್ಯಕ್ರಮವೊಂದರಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ ಎಂದು ಗೆಳೆಯರು ಹೇಳಿದಾಗ ನನಗೆ ಆಶ್ಚರ್ಯವೇನೂ ಆಗಲಿಲ್ಲ; ಬದಲಿಗೆ ನನ್ನೊಳಗೆ ಉಳಿದಿದ್ದ ವಿಷಾದವೊಂದು ಮತ್ತಷ್ಟು ಹೆಚ್ಚಾದಂತಾಯಿತು.

ಈ ವಿಷಾದ ಸಿದ್ದಲಿಂಗಯ್ಯನವರು ತಮ್ಮ ’ಊರು-ಕೇರಿ’ಗಳನ್ನು ಮೊದಲು ರಾಮಕೃಷ್ಣ ಹೆಗಡೆಯವರಿಗೂ ನಂತರ ಕುಮಾರಸ್ವಾಮಿಯವರಿಗೂ ಅರ್ಪಿಸಿದಾಗ, ರಾಮಾಜೋಯಿಸರು ಅನುವಾದಿಸಿದ ’ಮನುಸ್ಮೃತಿ’ಯನ್ನು ಬಿಡುಗಡೆಗೊಳಿಸಿದಾಗ, ಜನಾರ್ದನ ರೆಡ್ಡಿಯವರಿಂದ ತಮ್ಮ ’ನನ್ನ ಜನಗಳು’ ಪದ್ಯವನ್ನು ಓದಿಸಿ ಸಂಪ್ರೀತರಾದಾಗ, ಮೊನ್ನೆ ಮೊನ್ನೆ ಯಡಿಯೂರಪ್ಪನವರನ್ನು ’ಆಧುನಿಕ ಬಸವಣ್ಣ’ ಎಂದು ಬಣ್ಣಿಸಿದಾಗ ಬೆಳೆಯುತ್ತಾ ಬಂದದ್ದು. ಈಗ ಮತ್ತಷ್ಟು ಹೆಚ್ಚಾದಂತಾಯಿತಷ್ಟೆ.
ಬಹುಶಃ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಇಂತಹ ವಿಷಾದಗಳು ಆಗಾಗ್ಗೆ ಕಾಡದಿರುವುದರಿಂದಲೇ ನಮ್ಮೆಲ್ಲ ಸಾಹಿತ್ಯ-ಸಾಂಸ್ಕೃತಿಕ ಚಿಂತಕರು ತಮ್ಮ ಸಿದ್ಧಾಂತಗಳನ್ನು ’ಪಕ್ಷಾಂತರ’ ಮಾಡಿಕೊಂಡಾಗಲೆಲ್ಲ ನಮಗೆ ಏನೂ ಅನ್ನಿಸದಿರುವುದು-ಕನಿಷ್ಠ ಇದಕ್ಕೊಂದು ಪ್ರತಿಕ್ರಿಯೆ ನೀಡಬೇಕೆಂಬ ಜವಾಬ್ದಾರಿಯೂ ಇಲ್ಲದೆ ಹೋಗಿರುವುದು. ಹಾಗಾಗಿಯೇ ಜನರನ್ನು ಇನ್ನಿಲ್ಲದಷ್ಟು ಶೋಷಿಸುತ್ತಿರುವ, ಜನವಿರೋಧಿ ನೀತಿಗಳ ವಾರಸುದಾರರಾಗಿರುವ ಜನಾರ್ದನ ರೆಡ್ಡಿಯಂತಹವರ ಕೈಗೆ ’ಭಕ್ತರಪ್ಪ ಭಕ್ತರೋ ನನ್ನ ಜನಗಳು’ ಪದ್ಯವನ್ನು ಕೊಟ್ಟು, ಅದೇ ಶೋಷಿತ ಜನರ ಎದುರು ವಾಚಿಸಬಯಸುವ ಕವಿಗಳ ಲಜ್ಜೆಹೀನ ನಡವಳಿಕೆ ನಮ್ಮಲ್ಲಿ ಲಜ್ಜೆ ಹುಟ್ಟಿಸದೆ ಇರುವುದು. ಅಥವಾ ಈ ಎಲ್ಲವನ್ನೂ ಮುಗುಮ್ಮಾಗಿ ನೋಡುತ್ತಾ ಕುಳಿತಿರುವ ನಮ್ಮ ಸಾಂಸ್ಕೃತಿಕ ಲೋಕ ಜಾಣಕುರುಡು ಪ್ರದರ್ಶಿಸುತ್ತಿದೆಯೆ?
* * * * *

ಮೂರು ವರ್ಷಗಳ ಹಿಂದಿನ ಸಂಗತಿ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ’ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು’ ಎಂಬ ವಿಚಾರ ಸಂಕಿರಣವೊಂದು ನಡೆಯಿತು. ಸಭೆಯಲ್ಲಿ ಕವಿಗೆಳೆಯ ಪೀರ್ ಬಾಷಾ ಕಾವ್ಯದ ಕುರಿತು ತನ್ನ ಅನ್ನಿಸಿಕೆಗಳನ್ನು ಮಂಡಿಸುತ್ತಾ ’ದಲಿತ ಕವಿ ಸಿದ್ದಲಿಂಗಯ್ಯನವರು ಕವಿಯಾಗಿ ತೀರಿಕೊಂಡು ಬಹಳ ದಿನಗಳಾದವು’ ಎಂಬರ್ಥದ ಮಾತುಗಳನ್ನಾಡಿದ. ಆತನ ಆ ಅಭಿಪ್ರಾಯದ ಮೇಲೆ ಸಭೆಯಲ್ಲಿದ್ದ ಕಿ.ರಂ. ನಾಗರಾಜ, ಡಿ.ವಿ. ಪ್ರಹ್ಲಾದ ಹಾಗೂ ಇನ್ನೊಂದಿಷ್ಟು ಮಂದಿ ’ಶುದ್ಧ ಸಾಹಿತ್ಯಾಸಕ್ತರು’ ಹರಿಹಾಯ್ದರು. ’ಕವಿ ಪದ್ಯ ಬರೆದಾದ ಮೇಲೆ ಸಂಜೆ ಮನೆಗೆ ಹೋಗಿ ಏನು ಮಾಡುತ್ತಾನೆ ಎಂಬುದು ನಮಗ್ಯಾಕ್ರಿ ಬೇಕು? ಕವಿತೆಯಷ್ಟೆ ಮುಖ್ಯ; ಕವಿಯಲ್ಲ’ ಎಂಬುದು ಕಿ.ರಂ. ಮತ್ತಿತರರ ವಾದ.
ವೇದಿಕೆಯಲ್ಲಿದ್ದ ನಾನು ಹಾಗೂ ಕವಿ ಎನ್.ಕೆ. ಹನುಮಂತಯ್ಯ ಪೀರ್ ಬಾಷಾನ ನಿಲುವನ್ನು ಸಮರ್ಥಿಸಿಕೊಂಡೆವು. ’ತನ್ನ ಕಾವ್ಯದಲ್ಲಿ ಹೇಳಿದ್ದಕ್ಕೆ ಬದ್ಧನಾಗದ ಕವಿಯಿಂದೇನು ಪ್ರಯೋಜನ? ಒಳ್ಳೆಯ ಕವಿಯಾದವನು ಒಳ್ಳೆಯ ಮನುಷ್ಯನಾಗಿರುವುದೂ ಮುಖ್ಯ. ಒಳ್ಳೆಯ ಕವಿಯಾಗದಿದ್ದರೂ ಒಳ್ಳೆಯ ಮನುಷ್ಯನಾಗುವುದು ಎಲ್ಲಕ್ಕಿಂತ ಮುಖ್ಯ. ಹಿಟ್ಲರ್ ಒಳ್ಳೆಯ ಕಲಾವಿದನೇ ಆಗಿರಬಹುದು, ನರೇಂದ್ರ ಮೋದಿ ಒಳ್ಳೆಯ ಪದ್ಯವನ್ನೇ ಬರೆಯಬಹುದು. ಅವರು ಪದ್ಯದಲ್ಲಿ, ತಮ್ಮ ಕಲೆಯಲ್ಲಿ ಮನುಷ್ಯತ್ವದ ಪರವಾದದನ್ನೇನಾದರೂ ಹೇಳಿದರೆ ಅದನ್ನೇ ಸಮಾಜ ಅವರಲ್ಲಿಯೂ ನಿರೀಕ್ಷಿಸುತ್ತದೆ...’ ಎಂಬುದು ನಮ್ಮ ವಾದ.
ಅಂದು ಕಿ.ರಂ. ಮತ್ತಿತರರು ಕೇವಲ ಸಾಹಿತ್ಯದ ’ಶುದ್ಧ ಸಾಹಿತ್ಯ’ದ ಕಲ್ಪನೆಯ, ಆದರೆ ಸ್ವಾರ್ಥವಿಲ್ಲದ ಕಾರಣಕ್ಕೆ ಸಿದ್ದಲಿಂಗಯ್ಯನವರನ್ನು ಸಮರ್ಥಿಸಿಕೊಂಡಿದ್ದಕ್ಕೂ ಇಂದು ಸಿದ್ದಲಿಂಗಯ್ಯನವರು ತಮ್ಮ ಮೂಲ ಕಾವ್ಯದ ಧೋರಣೆಯನ್ನು ಹಿಂತೆಗೆದುಕೊಂಡಿರುವ ಸ್ವಾರ್ಥದ ಹೇಳಿಕೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಈ ವೈರುಧ್ಯ ಸದ್ಯ ಈ ನಾಡು ತಲುಪುತ್ತಿರುವ ಸಾಂಸ್ಕೃತಿಕ ದಿವಾಳಿತನಕ್ಕೆ ಸಾಕ್ಷಿಯಂತೆಯೂ ಕಾಣುತ್ತಿದೆ.

ಇರಲಿ; ಸಿದ್ದಲಿಂಗಯ್ಯನವರು ಬ್ರಾಹ್ಮಣರ ದ್ವೇಷಿಯಾಗಬೇಕಾದದ್ದೇನೂ ಇಲ್ಲ. ಯಾರೂ ಯಾರನ್ನೂ ದ್ವೇಷಿಸುವಷ್ಟು ಅಮಾನವೀಯರೂ ಆಗಬೇಕಾಗಿಲ್ಲ. ಬ್ರಾಹ್ಮಣರಿಂದಷ್ಟೇ ಅಲ್ಲ, ಎಲ್ಲಾ ಜಾತಿ, ಜನಾಂಗಗಳಿಂದ ನಾವು ಜಾತ್ಯತೀತವಾಗಿ ಕಲಿಯಬೇಕಾಗಿರುವುದು ಬಹಳಷ್ಟಿದೆ- ಇದು ಎಲ್ಲರಿಗೂ ಗೊತ್ತಿರುವ, ಎಲ್ಲರಿಗೂ ಒಪ್ಪಿತವಾಗಿರುವ ಒಂದು ಸಾಮಾಜಿಕ ಮೌಲ್ಯ. ಆದರೆ ಸಿದ್ದಲಿಂಗಯ್ಯನವರು ಹೇಳಿದ ’ಬ್ರಾಹ್ಮಣ’ ಎನ್ನುವ ಶಬ್ದ ’ಬ್ರಾಹ್ಮಣ್ಯ’ ಎಂಬುದನ್ನು ತನ್ನ ಒಳಾರ್ಥದಲ್ಲಿ ಸೂಚಿಸುತ್ತಿರಬಹುದೆ? ಹೌದು ಎಂದೇ ಎನ್ನಿಸುವಂತಿವೆ ಅವರ ಇತ್ತೀಚಿನ ಎಲ್ಲಾ ಚಿಂತನೆಗಳ ನಡೆಗಳೂ ಕೂಡ.

’ಮನುಸ್ಮೃತಿ’ ಎಂಬುದು ’ಮನುಷ್ಯವಿರೋಧಿ ಸಂವಿಧಾನ’ವೆಂಬ ಕಾರಣಕ್ಕೆ ಅಂದು ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಅದನ್ನು ಸುಟ್ಟರು. ಇಂದು ಸಿದ್ದಲಿಂಗಯ್ಯನವರು ಅದನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದರು. ಅಂದು ಬಸವಣ್ಣ ನಾಡಿನ ಸರ್ವಜಾತಿಯ ಜನರನ್ನೂ ಸಮಾನವಾಗಿ ಕಂಡು, ಅವರನ್ನೆಲ್ಲ ಸಮಾಜದ ಮುಖ್ಯವಾಹಿನಿಗೆ ತರಲು ದುಡಿದ. ಇಂದು ಯಡಿಯೂರಪ್ಪನವರು ’ವೀರಶೈವ ಮಹಾಸಭಾ’ದ ಬ್ಯಾನರ್‌ನಡಿಯಲ್ಲಿ ತಮ್ಮ ಜಾತೀಯ ಪ್ರಾಬಲ್ಯವನ್ನು ಗಟ್ಟಿಗೊಳಿಸಿಕೊಳ್ಳಲು, ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ದುಡಿದರು. ಹೀಗೆ ಅಂಬೇಡ್ಕರ್ ಅವರ ಆಶಯಗಳನ್ನು ಹಿಂದಕ್ಕೆಳೆಯುವ, ಬಸವಣ್ಣನ ಸಮಾಜವಾದಿ ಚಿಂತನೆಗಳಿಗೆ ವ್ಯತಿರಿಕ್ತವಾದ ಬಲಪಂಥೀಯ ನಿಲುವಿಗೆ ಸಿದ್ದಲಿಂಗಯ್ಯ ಬರುವುದಾದರೆ ಅವರು ’ಬ್ರಾಹ್ಮಣ್ಯ’ದ ಆರಾಧನೆಗೆ ನಿಂತಿದ್ದಾರೆಂದೇ ಅರ್ಥೈಸಿಕೊಳ್ಳಬೇಕಾಗುತ್ತದೆ. ಹಾಗಾಗಿಯೇ ಅವರು ಹೇಳಿದ ’ನಾನು ಬ್ರಾಹ್ಮಣರ ದ್ವೇಷಿಯಲ್ಲ’ ಎಂಬ ಹೇಳಿಕೆಯನ್ನು ’ಬ್ರಾಹ್ಮಣ್ಯದ ದ್ವೇಷಿಯಲ್ಲ’ ಎಂದೇ ತಿಳಿದುಕೊಳ್ಳಬೇಕಾಗುತ್ತದೆ. ’ಮನುಸ್ಮೃತಿ’ಯ ಅನಾವರಣದಿಂದಲೇ ಆರಂಭವಾದ ಅವರ ’ಬ್ರಾಹ್ಮಣ್ಯ’ದ ಪ್ರೀತಿ ನೆನ್ನೆ ನೀಡಿದ ಹೇಳಿಕೆಯ ಬಹಿರಂಗ ಶರಣಾಗತಿಯಷ್ಟೆ.
ಹೀಗೆ ವ್ಯಕ್ತಿಯೊಬ್ಬ ತನಗೆ ಅನ್ನಿಸಿದ ಸಿದ್ಧಾಂತಕ್ಕೆ ವಾಲುವುದಕ್ಕೆ ಯಾರ ಅಪ್ಪಣೆಯನ್ನೇನೂ ಕೇಳಬೇಕಾಗಿಲ್ಲ. ಅದು ಅವರ ವೈಯಕ್ತಿಕ ಆಸಕ್ತಿಗೆ ಸಂಬಂಧಿಸಿದ್ದಷ್ಟೆ. ಆದರೆ ಸಿದ್ದಲಿಂಗಯ್ಯನಂತಹ ಸಾರ್ವಜನಿಕ ಬದುಕಿನ ದೊಡ್ಡ ವ್ಯಕ್ತಿತ್ವವೊಂದು ಹೀಗೆ ತನ್ನದೇ ಮೂಲಚಿಂತನೆಗಳಿಗೆ ವಿರುದ್ಧವಾದ ನಿಲುವಿಗೆ ಬರುವುದಾದರೆ ಅದನ್ನು ಅನುಮಾನಿಸಲೇಬೇಕಾಗುತ್ತದೆ;ಪ್ರಶ್ನಿಸಲೇಬೇಕಾಗುತ್ತದೆ. ಹೇಗೆಂದರೆ ಸಿದ್ದಲಿಂಗಯ್ಯನವರು ಒಂದು ಕಾಲದ ಸಮಾಜವನ್ನು ತಮ್ಮ ಹೋರಾಟ, ಬರಹ, ಚಿಂತನೆಗಳಿಂದ ಪ್ರಭಾವಿಸಿದವರು, ಸಮಸಮಾಜದ ಆಶಯಗಳನ್ನು ಎತ್ತಿ ಹಿಡಿದವರು, ಬ್ರಾಹ್ಮಣ್ಯದ, ಪುರೋಹಿತಶಾಹಿಯ ಮುಖಗಳನ್ನು ತಮ್ಮ ಬರಹ, ಚಿಂತನೆ, ಹೋರಾಟಗಳ ಮೂಲಕ ಛಿದ್ರಗೊಳಿಸಲು ಯತ್ನಿಸಿದವರು, ಕನ್ನಡ ನಾಡಿನಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸಿದವರು- ಈ ಎಲ್ಲಾ ಕಾರಣಗಳಿಗೆ ಸಿದ್ದಲಿಂಗಯ್ಯನವರ ವ್ಯಕ್ತಿತ್ವವನ್ನು ಸಮಾಜ ಸದಾ ತನ್ನ ಎಚ್ಚರದ ಕಣ್ಣುಗಳಿಂದ ನೋಡುತ್ತಿರುತ್ತದೆ. ತನ್ನ ನಿಲುವುಗಳನ್ನು ಚಿಂತಕನೊಬ್ಬ ಕಾವುಗೆಡದಂತೆ ಕಾಪಿಟ್ಟುಕೊಳ್ಳಬೇಕೆಂದು ಬಯಸುತ್ತಿರುತ್ತದೆ. ಹಾಗೆಂದು ಸಮಾಜ ವ್ಯಕ್ತಿಯೊಬ್ಬನನ್ನು ತನ್ನ ಚಾರಿತ್ರ್ಯದ ಪರಿಕಲ್ಪನೆಯ ಚೌಕಟ್ಟಿನೊಳಗೇ ಬದುಕಬೇಕೆಂದು ಕತ್ತಿನ ಪಟ್ಟಿ ಹಿಡಿದು ಕೇಳಬೇಕೆಂದೇನೂ ಇಲ್ಲ. ಆದರೆ ತನ್ನ ಚಿಂತನೆಗಳನ್ನು ಸಾರ್ವಜನಿಕ ಬದುಕಿನೊಂದಿಗೆ ಹಂಚಿಕೊಂಡ ಜವಾಬ್ದಾರಿಯುತ ಚಿಂತಕನೊಬ್ಬ ಅದಕ್ಕೆ ಬಾಧ್ಯಸ್ಥನಾಗಿರಬೇಕಾಗುತ್ತದೆ. ಹಾಗೆ ಇಲ್ಲವೆಂದಾದರೆ ಅಂದು ಸಿದ್ದಲಿಂಗಯ್ಯನವರು ಮಾಡಿದ ಹೋರಾಟಗಳು, ಅವರ ಚಿಂತನೆಗಳು, ಅವರ ಬರಹಗಳು ಎಲ್ಲವೂ ಸುಳ್ಳು ಎಂದಾಗುತ್ತದೆಯಲ್ಲವೆ?
ಹಾಗೆ ಸುಳ್ಳು ಎನ್ನುವುದಾದರೆ ಅವರ ಬರಹಗಳನ್ನು, ಬಂಡಾಯ ಮನೋಭಾವವನ್ನು ಅವರ ಬರಹಗಳ ಮೂಲಕ ಓದಿ ಅವರನ್ನು ತಮ್ಮ ’ರೋಲ್ ಮಾಡೆಲ್’ ಮಾಡಿಕೊಂಡ ತಲೆಮಾರೊಂದು ಸಿದ್ದಲಿಂಗಯ್ಯನವರ ಈ ಪ್ರತಿಕ್ಷಣದ ಸಮಾಜವಿಮುಖಿ ನಡೆಯನ್ನು ಏನೆಂದು ಪರಿಗಣಿಸಬೇಕು?

ಅಂದು ಕಿ.ರಂ. ಅವರು ವಿಚಾರ ಸಂಕಿರಣದಲ್ಲಿ ಹೇಳಿದ ಇನ್ನೊಂದು ವಿಚಾರವೂ ನೆನಪಾಗುತ್ತಿದೆ. ’ಬರಹಗಾರರಲ್ಲಿ ನೀವು ಸಿದ್ದಲಿಂಗಯ್ಯನವರನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡಿಕೊಂಡಿದ್ದೀರಿ? ಚಂಪಾ ಅವರಿಲ್ಲವೆ? ಅವರನ್ನು ಯಾಕೆ ಅಧಿಕಾರಕ್ಕಾಗಿ ತಮ್ಮ ಚಿಂತನೆಗಳನ್ನು, ಹೋರಾಟಗಳನ್ನು ರಾಜಿ ಮಾಡಿಕೊಂಡವರೆಂದು ನೀವು ಟೀಕಿಸುವುದಿಲ್ಲ? ಎಂಬುದು ಕಿ.ರಂ. ಅವರ ಪ್ರಶ್ನೆಯಾಗಿತ್ತು.

ಆದರೆ ಚಂಪಾ ಅವರು ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೇ ಆಗಲೀ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿಯೇ ಆಗಲೀ ಹಾಗೂ ತೀರಾ ಈಚೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಡಾ.ಸಿ.ಎಸ್.ದ್ವಾರಕಾನಾಥ್ ಅವರಾಗಲೀ ವ್ಯವಸ್ಥೆಯ ಲೋಪಗಳನ್ನು, ಸರ್ಕಾರದ ಜನವಿರೋಧಿ ನೀತಿಗಳನ್ನು ಸಾರ್ವಜನಿಕವಾಗಿ ಖಂಡಿಸುವಲ್ಲಿ ಹಿಂಜರಿಯಲಿಲ್ಲ. ಹಾಗೆಯೇ ತಮ್ಮ ಎಂದಿನ ಕೋಮುವಿರೋಧಿ ಚಿಂತನೆಗಳಿಂದ ಹಿಂದೆ ಸರಿಯಲಿಲ್ಲ. ಆದರೆ ಅವರ ಸಮಕಾಲೀನರಾಗಿ ದಲಿತ-ಬಂಡಾಯ ಚಳವಳಿಯ ಸಕ್ರಿಯ ಹೋರಾಟಗಾರರಲ್ಲೊಬ್ಬರಾಗಿದ್ದ ಸಿದ್ದಲಿಂಗಯ್ಯನವರು ಸರ್ಕಾರದ ಪರವಾದ ನಿಲುವುಗಳನ್ನು ಮಂಡಿಸುತ್ತಾ, ಇನ್ನೂ ಮುಂದುವರೆದು ಬಲಪಂಥೀಯ ಚಿಂತನೆಗಳ ಸಮರ್ಥನೆಗೆ ಇಳಿದಿರುವುದು ಅವರು ನೈತಿಕವಾಗಿ ಎಷ್ಟು ಕುಸಿದಿದ್ದಾರೆಂಬುದನ್ನು ತೋರಿಸುತ್ತಿದೆ.

ಒಟ್ಟು ಹನ್ನೆರಡು ವರ್ಷಗಳ ಕಾಲ ವಿಧಾನಪರಿಷತ್‌ನ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಈಗ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರದಲ್ಲೇ ಉಳಿಯುವ ನಿರಂತರ ಪಯಣದಲ್ಲಿ ತೊಡಗಿರುವ ಸಿದ್ದಲಿಂಗಯ್ಯನವರ ಈ ಬಲಪಂಥೀಯ ನಿಲುವಿನ ನಡೆ ಏನನ್ನು ಸೂಚಿಸುತ್ತಿದೆ? ಕೋಮುವಾದಿ ಬಿಜೆಪಿ ಸರ್ಕಾರದಲ್ಲಿ ಮುಂದೆಯೂ ಇನ್ನೊಂದು ಅಧಿಕಾರದ ಕುರ್ಚಿಗಾಗಿ ಉಳಿಯಬೇಕೆಂಬ ಕ್ಷುಲ್ಲಕ ವಾಂಛೆಯೆ? ಅಥವಾ ಸಿದ್ಧಾಂತಗಳೆಲ್ಲ ಪೊಳ್ಳಾಗುತ್ತಿರುವ ಸಾಮಾಜಿಕ ಸತ್ಯವನ್ನೆ?
* * * * *

ಸಿದ್ದಲಿಂಗಯ್ಯನವರು ಈಗಲೂ ಹಾಗೆಯೇ ಇದ್ದಾರೆ. ಅದೇ ಮೆಲುದನಿಯ ಮಾತು, ಹಾಸ್ಯ ಚಟಾಕಿ, ವಿನಯಶೀಲತೆ-ಎಲ್ಲವೂ ಹಾಗೆಯೇ ಇವೆ. ಅವೆಲ್ಲವೂ ಇಂದಿಗೂ ಸಾರ್ವಜನಿಕ ವೇದಿಕೆಗಳಲ್ಲಿ ಹಾಗೆಯೇ ವ್ಯಕ್ತವಾಗುತ್ತಿವೆ. ಅವರು ಯಾವ ಸಾಹಿತ್ಯಕ-ಸಾಂಸ್ಕೃತಿಕ ವೇದಿಕೆಗಳಲ್ಲೂ ಎಂದೂ ಅಬ್ಬರದಿಂದ ಮಾತನಾಡುವುದಿಲ್ಲ; ’ಇಕರ‍್ಲಾ ವದಿರ‍್ಲಾ!’ ಎಂಬ ಆಕ್ರೋಶದ ಧ್ವನಿಗಳೂ ಅವರ ಮಾತುಗಳಲ್ಲಿ ಕಂಡುಬರುವುದಿಲ್ಲ. ’ಸಾವಿರಾರು ನದಿಗಳು’ ಕವಿತೆಯ ವಿಷಾದದ ಛಾಯೆಯೂ ಅವರ ಮಾತುಗಳಲ್ಲಿ ಸುಳಿಯುವುದಿಲ್ಲ.

ಕರ್ನಾಟಕದಲ್ಲಿ ಬಿ.ಎಸ್.ಪಿ ಚಳವಳಿ ಉಗ್ರಸ್ವರೂಪದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ದಿನಗಳಲ್ಲಿ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಬಹುಜನ ವಿದ್ಯಾರ್ಥಿ ಚಳವಳಿಯ ಹುಡುಗರು ’ಅಭಿನವ ಅಂಬೇಡ್ಕರ್’ಗಳ ಹಾಗೆ ಸಿದ್ದಲಿಂಗಯ್ಯ, ದೇವನೂರ ಮಹಾದೇವರಂತಹ ಹಿರಿಯ ಹೋರಾಟಗಾರರಿಗೆ ಎಸೆಯುತ್ತಿದ್ದ ನಿಷ್ಠುರದ ಪ್ರಶ್ನೆಗಳಿಗೆ ಅವರು ಅಂದೂ ನೇರವಾಗಿ ಉತ್ತರಿಸಲಿಲ್ಲ; ಇಂದೂ ಕೂಡ ಉತ್ತರಿಸಲಾರರೇನೋ?

ಇರಲಿ; ಅವರೀಗ ಹಿರಿಯರಾಗಿರುವುದರಿಂದ ಅಂದಿನ ’ಆಸ್ಫೋಟಕ’ ಚಿಂತನೆಗಳನ್ನು ಅವರಿಂದ ನಾವು ನಿರೀಕ್ಷಿಸಲೂ ಬಾರದು; ಹಾಗೆಂದು ಅವರು ಒಂದು ಕಾಲದಲ್ಲಿ ತೀಕ್ಷ್ಣವಾಗಿ ವಿರೋಧಿಸಿದ ಬಲಪಂಥೀಯ, ಮಾನವವಿರೋಧಿ ಚಿಂತನೆಗಳತ್ತ ತುಡಿಯುತ್ತಿರುವುದನ್ನು ನೋಡುತ್ತಾ ಜಾಣಕುರುಡು, ಜಾಣಕಿವುಡನ್ನು ಪ್ರದರ್ಶಿಸಲೂ ಬಾರದು.
ಕೊನೆಯದಾಗಿ:
ಅಂದು ಕ್ರೈಸ್ಟ್ ಕಾಲೇಜಿನ ವಿಚಾರ ಸಂಕಿರಣದಲ್ಲಿ ಸಿದ್ದಲಿಂಗಯ್ಯನವರ ಕುರಿತು ಪರ-ವಿರೋಧದ ಚರ್ಚೆಗಳು ಕಾವೇರಿದ್ದಾಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಗಲಿದ ಕವಿಗೆಳೆಯ ಎನ್.ಕೆ. ಹನುಮಂತಯ್ಯನ ತಣ್ಣನೆಯ ಮಾತುಗಳು ನನಗೆ ಈಗಲೂ ನೆನಪಾಗುತ್ತಿವೆ:
ಗೆಳೆಯ ಪೀರ್ ಬಾಷಾ ’ಸಿದ್ದಲಿಂಗಯ್ಯನವರು ಕವಿಯಾಗಿ ತೀರಿಕೊಂಡಿದ್ದಾರೆ’ ಎಂದು ಹೇಳಿರುವುದರ ಹಿಂದೆ ನನಗೆ ಕಾಣುತ್ತಿರುವುದು ನಾವೆಲ್ಲ ಪ್ರೀತಿಸಿದ, ನಮ್ಮ ಲೋಕದೃಷ್ಟಿಯನ್ನು ಆರೋಗ್ಯಕರವಾಗಿಡಲು ಕಣ್ಣುಗಳನ್ನು ನೀಡಿದ ಕವಿಯೊಬ್ಬರು ತಮ್ಮ ಕಣ್ಣುಗಳನ್ನೇ ಕಳೆದುಕೊಂಡಿದ್ದಾರೆಂಬ ತೀವ್ರ ವಿಷಾದವೊಂದೇ. ಈ ವಿಷಾದದ ಹಿಂದೆ ನಮ್ಮ ಸಮಾಜದ ಕಹಿಸತ್ಯವೊಂದಿದೆ. ಈ ಕಹಿ ವಿಷವಾಗಿ ನಮ್ಮನ್ನೆಲ್ಲ ಬಲಿ ತೆಗೆದುಕೊಳ್ಳದಿರಲಿ ಎಂಬುದೇ ನಮ್ಮೆಲ್ಲರ ಒಳ ಆಸೆ...
ಹಾಗೆಯೇ,
ಸಿದ್ದಲಿಂಗಯ್ಯನವರ ಪದ್ಯದ
ಹಸಿವಿನಿಂದ ಸತ್ತೋರು
ಸೈಜುಗಲ್ಲು ಹೊತ್ತೋರು
ಒದೆಸಿಕೊಂಡು ಒರಗಿದೋರು
ನನ್ನ ಜನಗಳು

ಕಾಲು ಕೈ ಹಿಡಿಯೋರು
ಕೈ ಮಡಗಿಸಿಕೊಳ್ಳೋರು
ಭಕ್ತರಪ್ಪ ಭಕ್ತರೋ
ನನ್ನ ಜನಗಳು
ಎಂಬ ಸಾಲುಗಳನ್ನು ಬಳ್ಳಾರಿಯ ಹಸಿದ ಬಡಜನರ ಮುಂದೆ ಓದಿದ ಜನಾರ್ದನ ರೆಡ್ಡಿಯವರ ಫ್ಯೂಡಲ್ ವೈಖರಿ, ಇದಕ್ಕೆ ಸಾಕ್ಷಿಯಾಗಿದ್ದ ಕವಿ ಸಿದ್ದಲಿಂಗಯ್ಯನವರ ಜಾಣನಗೆ ಈ ನಾಡಿನ ಈ ಹೊತ್ತಿನ ಸಾಂಸ್ಕೃತಿಕ-ಸಾಮಾಜಿಕ ತಳಮಳಗಳ ರೂಪಕದಂತೆ ನನಗೆ ಕಾಣುತ್ತಿದೆ.

-ಮಂಜುನಾಥ್‌ಲತಾ

ಮಾಧ್ಯಮ ಕರ್ನಾಟಕ ಕುರಿತು ಚರ್ಚೆ

ಆತ್ಮೀಯರೇ,
ಪ್ರಜೆಗಳು ಮತ್ತು ಆಳುವವರ ನಡುವಣ ಕೊಂಡಿಯಾಗಿ ಪ್ರಜಾಪ್ರಭುತ್ವದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಾಧ್ಯಮದ್ದು ನಿಣರ್ಾಯಕವಾದ ಪಾತ್ರ. ಜೊತೆಗೆ ಸರಿಯಾದ ತಿಳಿವನ್ನು ಜನರಿಗೆ ತಲುಪಿಸುವ, ಜನವಿರೋಧಿ ಸಂಗತಿಗಳನ್ನು ಮುನ್ನೆಲೆಗೆ ತಂದು ಅವ್ಯವಸ್ಥೆಗೆ ಮದ್ದರೆಯುವ ಸಾಮಾಜಿಕ ಜವಾಬ್ದಾರಿಯನ್ನೂ ಮಾಧ್ಯಮ ಹೊತ್ತುಕೊಂಡು ಬಂದಿದೆ.
ಆದರೆ ಪ್ರಸ್ತುತ 'ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ' ಎಂಬ ಮಾತೆತ್ತಿದರೆ ನಮ್ಮನ್ನು ಕವಿಯುವುದು ಗಾಢವಾದ ವಿಷಾದ. ಸುದ್ದಿಮನೆಯಲ್ಲಿ ರಾಜಕಾರಣಿಗಳ ವಿಜೃಂಭಣೆ, ವರದಿಗಾರರ ಅನಗತ್ಯ ಧಾವಂತ, ಅನಾರೋಗ್ಯಕರ ಟಿಆರ್ಪಿ ಮಾನದಂಡಗಳು, ಅಮಾನವೀಯ ರಿಯಾಲಿಟಿ ಶೋಗಳು, ಮೂಢನಂಬಿಕೆಯನ್ನು ಮತ್ತೆ ಬಿತ್ತುತ್ತಿರುವ ಜ್ಯೋತಿಷ್ಯ, ಜಾತಕ ಫಲಗಳು... ಹೀಗೆ ಅನೇಕ ಸಂಗತಿಗಳು ಮಾಧ್ಯಮ ರಂಗವನ್ನು ಗ್ರಹಣದಂತೆ ಆವರಿಸಿವೆ.
ಹೀಗೆ ಮಾಧ್ಯಮದ ಬಗ್ಗೆ ಮಾತಾಡಲು ಹೊರಟಾಗಲೆಲ್ಲ ಮಾತಿನಲ್ಲಿ ಕೆಲವೊಮ್ಮೆ ಅಸಹನೆ, ಕೋಪ ಹೇವರಿಕೆ, ಅಪರೂಪಕ್ಕೊಮ್ಮೆ ಸಮಾಧಾನ ಎಲ್ಲವೂ ಇರುತ್ತವೆ. ಹೀಗೆ ಆಗಾಗ ಹರಿದು ಹೊಗುವ ಮಾತುಗಳಿಗೆ ಒಂದು ಚೌಕಟ್ಟು ನೀಡುವ ಒಂದು ಪ್ರಯತ್ನಕ್ಕೆ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆ ಮುಂದಾಗಿದೆ. ಈ ಬಗ್ಗೆ ಒಂದಿಷ್ಟು ಚಚರ್ೆ ನಡೆಸುವ ಉದ್ದೇಶ ವೇದಿಕೆಯದು.
ಚಿತ್ರದುರ್ಗದಲ್ಲಿ ಜೂನ್ 25 ಮತ್ತು 26 ರಂದು 'ಮಾಧ್ಯಮ ಕನರ್ಾಟಕ' ಎಂಬ ಶೀಷರ್ಿಕೆ ಅಡಿಯಲ್ಲಿ ಕಾರ್ಯಕ್ರಮ ನಡೆಸುವ ಪ್ರಯತ್ನಕ್ಕೆ ನಾವು ಕೈ ಹಾಕಿದ್ದೇವೆ. ಅದು ವಿಚಾರ ಸಂಕಿರಣ, ಚಚರ್ಾಗೋಷ್ಠಿ ಹೀಗೆ ಏನೂ ಆಗಬಹುದು. ಈ ಕುರಿತು ಕಾಳಜಿ ಇರುವ ಕೆಲ ಉತ್ಸಾಹಿ ಗೆಳೆಯರು ಹಾಗೂ ಈ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿರುವ ಹಿರಿಯರು ನಮ್ಮೊಂದಿಗೆ ಆ ಎರಡು ದಿನಗಳನ್ನು ಕಳೆಯಬೇಕೆಂದು ಬಯಸುತ್ತೇವೆ. ಆ ಎರಡು ದಿನಗಳಲ್ಲಿ ನೀವು ನಮ್ಮ ಜೊತೆಗಿರಬೇಕೆಂದು ನಮ್ಮ ಬಯಕೆ.

Saturday, June 18, 2011

ದಿನೇಶ್ ಅಮೀನ್‌ಮಟ್ಟು ಬರಹಕ್ಕೆ ನಾಗಭೂಷಣ ಪ್ರತಿಕ್ರಿಯೆ

ಪ್ರಿಯಶ್ರೀ ದಿನೇಶ್ ಅಮೀನ್‌ಮಟ್ಟು ಅವರಲ್ಲಿ,
ಇಂದಿನ ಪ್ರಜಾವಾಣಿಯಲ್ಲಿ ಸಂವಿಧಾನೇತರ ಶಕ್ತಿಗಳ ಬಗ್ಗೆ ನೀವು ಬರೆದ ಅಂಕಣ ಓದಿದೆ. ನಿಮ್ಮ ವಾದ ಒಂದು ಆದರ್ಶ ಅಥವಾ ಪ್ರಬುದ್ಧ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಸರಿಯೆನಿಸೀತೇನೋ! ನಿಮ್ಮ ಬರಹದ ಕೊನೆಯಲ್ಲಿ ಹಾಕಿರುವ, ಇದರಿಂದ ಸಂಸದೀಯ ಪ್ರಜಾಪ್ರಭುತ್ವ ದುರ್ಬಲಗೊಳ್ಳುವುದಿಲ್ಲವೇ? ಎಂಬ ಪ್ರಶ್ನೆಯನ್ನು ನಿಮ್ಮ ಬರಹದ ಆರಂಭದಲ್ಲೇ ಹಾಕಿಕೊಂಡು, ಇಂದಿನ ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮುಟ್ಟಿರುವ ಸ್ಥಿತಿಯನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದರೆ ಬಹುಶಃ ನೀವು ಹೀಗೆ ವಾದ ಮಾಡುತ್ತಿರಲಿಲ್ಲ!

ಪ್ರಜಾಪ್ರಭುತ್ವ ಇಂದು ದುರ್ಬಲಗೊಂಡಾಗಿದೆಯಲ್ಲವೇ? ಅದರಿಂದಾಗಿಯೇ ಇಷ್ಟೆಲ್ಲ ಗೊಂದಲಗಳಲ್ಲವೇ, ಸಾಂವಿಧಾನಿಕ-ಅಸಂವಿಧಾನಿಕ ಶಕ್ತಿಗಳನ್ನು ಕುರಿತ ಚರ್ಚೆಗಳಲ್ಲವೇ? ಪ್ರಜಾಪ್ರಭುತ್ವ ಇಂದು ದುರ್ಬಲಗೊಂಡಿರುವುದು, ಯಾವುದನ್ನು ನೀವು ಇವು ಮಾತ್ರ ಸಾಂವಿಧಾನಿಕ ಶಕ್ತಿಗಳು ಎಂದು ಮಾನ್ಯತೆ ನೀಡಿರುವಿರೋ, ಅವುಗಳಿಂದಲೇ ಅಲ್ಲವೇ? ಸಭ್ಯ ಸಾಮಾನ್ಯ ನಾಗರಿಕರಾರೂ ಚುನಾವಣೆಗಳಿಗೆ ನಿಂತು ನೀವು ಚೌಕಟ್ಟು ಹಾಕಿರುವಂತಹ ಸಂವಿಧಾನಿಕ ಶಕ್ತಿಗಳಾಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಉಂಟಾಗಿರುವಾಗ ನೀವು ಯಾವ ತೆರೆನ ಸಾಂವಿಧಾನಿಕ ಶಕ್ತಿಯ ಬಗ್ಗೆ ಮಾತನಾಡುತ್ತಿರುವಿರೋ ತಿಳಿಯದಾಗಿದೆ!

ನಾಗರಿಕ ಸಮುದಾಯವೂ, ತನಗೆ ದತ್ತವಾಗಿರುವ ಪ್ರಜೆತನದಿಂದಾಗಿ ಸಾಂವಿಧಾನಿಕ ಶಕ್ತಿಯ ಒಂದು (ಸುಪ್ತ)ಭಾಗವೇ ಆಗಿದೆ. ನೀವು ಹೇಳುವ (ಕ್ರಿಯಾತ್ಮಕ)ಸಾಂವಿಧಾನಿಕ ಶಕ್ತಿ, ಇದರ ಪ್ರಾತಿನಿಧಿಕ ರೂಪವಷ್ಟೇ. ಹಾಗಾಗಿ ಈ ಪ್ರಾತಿನಿಧಿಕ ಶಕ್ತಿ ರೂಪವು, ಯಾವುದರಿಂದ ತಾನು ಸಂಭವಿಸಲು ಸಾಧ್ಯವಾಗಿದೆಯೋ ಆ ಸಂವಿಧಾನದ ಮೂಲ ಉದ್ದೇಶಗಳನ್ನೇ, ಅದರ ಪ್ರಕ್ರಿಯೆಗಳನ್ನೇ ಬುಡಮೇಲು ಮಾಡಬಲ್ಲಷ್ಟು ರಾಕ್ಷಸವಾದಾಗ, ಅದರ ಮೂಲಾಧಾರವಾದ ಪ್ರಜಾಶಕ್ತಿಯ ರೂಪದಲ್ಲಿರುವ (ಸುಪ್ತ)ಸಾಂವಿಧಾನಿಕ ಶಕ್ತಿಯು ಎಚ್ಚರಗೊಳ್ಳುವುದೂ ಸಾಂವಿಧಾನಿಕವೇ ಎಂದು ನಾನು ಭಾವಿಸಿದ್ದೇನೆ. ನೀವು ಸಂವಿಧಾನೇತರವೆಂದು ಗುರುತಿಸುವ ಈ ಶಕ್ತಿಗಳೂ ಜನತೆಯ ಸಾಮೂಹಿಕ ಬೆಂಬಲ ಪಡೆದಿರುವುದರಿಂದಲೇ ಅವು ಸರ್ಕಾರದ ಮೇಲೆ ಒತ್ತಡ ಉಂಟು ಮಾಡಲು ಸಾಧ್ಯವಾಗಿರುವುದು ಅಲ್ಲವೇ? ಅವಕ್ಕೆ ಜನ ಬೆಂಬಲ ಇಲ್ಲವಾದ ಕೂಡಲೇ-ಈಗ ನಿಧಾನವಾಗಿ ರಾಂದೇವ್‌ಗೆ ಆಗುತ್ತಿರುವಂತೆ-ಅವುಗಳ ಪರಿಣಾಮವೂ ಕುಂದುತ್ತಾ ಹೋಗುತ್ತದೆ.

ನೀವು ನಿಮ್ಮ ವಾದದ ಭಾಗವಾಗಿ ಪ್ರಸ್ತಾಪಿಸುವ ಆರೆಸೆಸ್ ಅಥವಾ ಇನ್ನಿತರ ಫ್ಯಾಸಿಸ್ಟ್ ಶಕ್ತಿಗಳ ಕೈವಾಡವನ್ನು ಜನತಾ ಶಕ್ತಿಯೇ ನಿರ್ವಹಿಸಬಲ್ಲುದಾಗಿದೆ. ಮತ್ತು ಜನತಾ ಶಕ್ತಿ ಮಾತ್ರ ನಿರ್ವಹಿಸಬೇಕಾಗಿದೆ. ಆ ದಿಕ್ಕಿನಲ್ಲಿ ಜನತೆಯನ್ನು ಎಚ್ಚರಿಸುವ ಕೆಲಸವನ್ನು(ಈಗ ಬಾಬಾ ರಾಂದೇವ್ ಅವರ ಆಂದೋಲನದ ಬಗ್ಗೆ ಮಾಡಿದಂತೆ)ಮಾಡುವುದು ಪ್ರಜ್ಞಾವಂತಿಕೆಯ ಕೆಲಸವಾದೀತೇ ಹೊರತು, ಸಾರಾ ಸಗಟಾಗಿ ಜನತಾ ಶಕ್ತಿಯ ಒಂದು ಅಭಿವ್ಯಕ್ತಿ ಕ್ರಮವನ್ನೇ ಅಸಂವಿಧಾನಿಕ ಎಂದು ಗುರುತಿಸುವುದು ಸಂಸದೀಯ ಪ್ರಜಾಪ್ರಭುತ್ವವನ್ನು ಕೇವಲ ತಾಂತ್ರಿಕ ಚೌಕಟ್ಟಿನೊಳಕ್ಕೆ ತುರುಕಿ ಉಸಿರುಗಟ್ಟಿಸುವ ಅಪಾಯಕಾರೀ ಕೆಲಸವಾದೀತೆಂದು ನನ್ನ ಭಾವನೆ. ನಿಮ್ಮ ವಾದವೇ ಸರಿಯಿದ್ದರೆ, ೭೦ರ ದಶಕದ ಜೆಪಿ ಆಂದೋಲನವೇ ಸಾಧ್ಯವಾಗುತ್ತಿರಲಿಲ್ಲ. ಅಂದು ಈ ಆಂದೋಲನದ ಬಗ್ಗೆಯೂ ಸರಿ ಸುಮಾರು ಇಂತಹುದೇ ಆಕ್ಷೇಪಣೆಗಳನ್ನು ಎತ್ತಲಾಯಿತು.(ಅವನ್ನು ಪುನರುಚ್ಚರಿಸುವ ಜನ ಈಗಲೂ ಇದ್ದಾರೆ ಎಂಬುದು ಬೇರೆ ವಿಷಯ.) ಆದರೆ ಜೆಪಿ ಆಂದೋಲನ ನಡೆಯದಿದ್ದರೆ, ಯಾವ ಸಾಂವಿಧಾನಿಕ ಸಂಸದೀಯ ಪ್ರಜಾಪ್ರಭುತ್ವದ ರಕ್ಷಣೆಯ ಕಳಕಳಿಯನ್ನು ನೀವು ತೋರಿಸುತ್ತಿದ್ದೀರೋ ಆ ಪ್ರಜಾಪ್ರಭುತ್ವ ಖಂಡಿತ ನಮ್ಮ ಪಾಲಿಗೆ ಹೀಗಂತೂ ಇರುತ್ತಿರಲಿಲ್ಲ.

ಇನ್ನು ನೀವು ಪ್ರಸ್ತಾಪಿಸಿರುವ ಸೋನಿಯಾ ಗಾಂಧಿ-ರಾಷ್ಟ್ರೀಯ ಸಲಹಾ ಮಂಡಳಿ(ಎನ್.ಎ.ಸಿ.)-ಮನಮೋಹನ ಸಿಂಗ್ ಅವರ ಸಾಂವಿಧಾನಿಕ ಸಂಬಂಧಗಳ ಬಗ್ಗೆ ಹೇಳುವುದಾದರೆ, ಮೊದಲಾಗಿ ಮನಮೋಹನ ಸಿಂಗರು ಯಾವ ಜನತಾ ಶಕ್ತಿಯ, ಎಂತಹ ಪ್ರತಿನಿಧಿಯೆಂದು ಮೊದಲು ಯೋಚಿಸಬೇಕಾಗುತ್ತದೆ. ಅಣ್ಣ ಹಜಾರೆ ಮತ್ತವರ ಸಹವರ್ತಿಗಳೋ ಅಥವಾ ಬಾಬಾ ರಾಂದೇವ್ ಆರೆಸ್ಸೆಸ್ ಕೈಗೊಂಬೆಗಳೇ ಆಗಿದ್ದಾರೆಂದು ಹೇಳುವುದಾದರೆ, ಈ ಮನಮೋಹನ ಸಿಂಗ್ ಮೂಲತಃ ಯಾರ ಕೈಗೊಂಬೆ ಎಂದು ಕೇಳಬಹುದಲ್ಲವೇ? ಮೊದಲು ಸುಳ್ಳು ವಿಳಾಸ ನೀಡಿ ಸಂವಿಧಾನದ ನಿಮವನ್ನೇ ಉಲ್ಲಂಘಿಸಿ ಸಂಸತ್ತನ್ನು ಪ್ರವೇಶಿಸಿ, ಸಚಿವರೂ ಆಗಿ; ಜನತಾ ಆದೇಶವಿಲ್ಲದೆಯೇ ದೇಶದ ಅಭಿವೃದ್ಧಿಯ ಆದ್ಯತೆ ಮತ್ತು ಸ್ವರೂಪಗಳನ್ನೇ ಮೂಲಭೂತವಾಗಿ ಬದಲಿಸಿದ ಈ ಮನಮೋಹನ ಸಿಂಗರು, ಈಗ ನಮ್ಮ ಸಂವಿಧಾನ ನಿರ್ಮಾತೃಗಳು ಬಹುಶಃ ತುರ್ತು ಸಂದರ್ಭಗಳಿಗಿರಲೆಂದು ಮಾಡಿಕೊಟ್ಟ ರಾಜ್ಯಸಭಾ ಸದಸ್ಯರೂ ಪ್ರಧಾನ ಮಂತ್ರಿಗಳಾಗಬಹುದೆಂಬ ಅವಕಾಶವನ್ನು ಬಳಸಿಕೊಂಡು ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿರುವವರು. ಇವರು ಪ್ರಧಾನ ಮಂತ್ರಿಯಾಗಿರುವುದೇ ಸೋನಿಯಾ ಅವರ ಕೃಪೆಯಿಂದ ಎಂಬುದು ಸಾರ್ವಜನಿಕವಾಗಿ ಬಹಿರಂಗವಾದ ವಿಚಾರ. ಹೀಗಿರುವಾಗ ಇವರು ಎಂತಹ ರಾಜಕೀಯ ಅಧಿಕಾರಕ್ಕೆ ಬಾಧ್ಯಸ್ಥರಾಗಬಲ್ಲರು? ಹಾಗೆ ಬಾಧ್ಯಸ್ಥರಾಗಿಲ್ಲದಿರುವುದರಿಂದಲೇ, ಸೋನಿಯಾ ಗಾಂಧಿಯವರು ರಾಷ್ಟ್ರೀಯ ಸಲಹಾ ಮಂಡಳಿಯನ್ನು ರಚಿಸಿ ಆಡಳಿತ ನೀತಿ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಿಣಿತಿಯನ್ನು ಹೊರಗುತ್ತಿಗೆಗೆ ಪಡೆಯುವ ಅನಿವಾರ್ಯತೆU ಸಿಕ್ಕಿರುವುದು ಅಲ್ಲವೇ? ಅಂದಹಾಗೇ ಈ ಹೊರ ಗುತ್ತಿಗೆ ಪದ್ಧತಿ ಯಾರ ಕೊಡುಗೆ?

ಹೀಗೆ ಪ್ರಜಾಪ್ರಭುತ್ವವೆಂಬುದೇ ಮೂಲಾಧಾರಗಳನ್ನು ಕಳಚಿಕೊಂಡು, ಹೊಸ ಸಂದರ್ಭಕ್ಕೆ ತನ್ನನ್ನು ತಾನು ಅಳವಡಿಕೊಳ್ಳುತ್ತಿರುವ ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಆದರ್ಶ ಪ್ರಜಾಪ್ರಭುತ್ವದ ಆದರ್ಶಗಳ ಪಾಲನೆಯ ಮಾತಾಡುವುದು, ರೋಗ ಲಕ್ಷಣಗಳನ್ನೇ ರೋಗವೆಂದು ಗುರುತಿಸಿ ಗಾಬರಿಗೊಳ್ಳುವ ಕೆಲಸವಾಗುತ್ತದೆ. ನೀವು ಸಂವಿಧಾನೇತರ ಶಕ್ತಿಗಳು ಎಂದು ಕರೆಯುವ ಈ ನಾಗರಿಕ ಸಮಿತಿಗಳು ನೀವು ಹೇಳಿದಂತೆ ಶಾಸನ ರಚಿಸುವ ಕೆಲವನ್ನೇನೂ ಮಾಡುತ್ತಿಲ್ಲ. ಅವರದೇನಿದ್ದರೂ, ಸರ್ಕಾರದೊಂದಿಗೆ ಅನುಸಂಧಾನಿಸುತ್ತಾ ಕರಡು ಮಸೂದೆಯನ್ನೇ ನೀತಿ ನಿರೂಪಣೆಯನ್ನೋ ಸಿದ್ಧಪಡಿಸುವುದಷ್ಟೆ. ಅದರ ಮೇಲೆ, ಸಚಿವ ಸಂಪುಟವಿದೆ, ಸಂಸತ್ತಿದೆ, ಅದರದೇ ಆದ ಅಂಗ ಸಂಸ್ಥೆಗಳಿವೆ, ಅವನ್ನು ಅಂತಿಮವಾಗಿ ಒಪ್ಪಲು ಅಥವಾ ಬಿಡಲು.

ಆದುದರಿಂದ ನೀವು ಹೇಳುವಂತಹ ಸಂವಿಧಾನೇತರ ಶಕ್ತಿಗಳು ಸಂವೈಧಾನಿಕವಾಗಿ ನಿರ್ಣಾಯಕವೆನ್ನಬಹುದಾದ ಕೆಲಸಗಳಲ್ಲೇನೂ ತೊಡಗಿಲ್ಲ. ಅವು ನಮ್ಮ ಸಂವಿಧಾನದ ಕ್ರಿಯಾತ್ಮಕ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಹಾಗೂ ನಾಲ್ಕನೇ ಅನೌಪಚಾರಿಕ ಅಂಗವೆನಿಸಿದ ಮಾಧ್ಯಮ ರಂಗ ನಿಧಾನವಾಗಿ ಭ್ರಷ್ಟತೆಯ ಗಂಭೀರ ಆರೋಪಗಳನ್ನು ಎದುರಿಸುವಂತಾಗಿ, ಇವುಗಳನ್ನಾಧರಿಸಿದ ಪ್ರಜಾಪ್ರಭುತ್ವವೇ ಅರ್ಥಹೀನವೆನ್ನಿಸತೊಡಗಿ ಅಪಾಯಕ್ಕೆ ಸಿಕ್ಕಿರುವಾಗ, ಸಂವಿಧಾನದ ಸುಪ್ತ ಶಕ್ತಿಯೆನಿಸಿರುವ ಜನತಾ ಶಕ್ತಿಯ ಪ್ರತಿನಿಧಿಯಾಗಿ ನಾಗರಿಕ ಸಮಿತಿಗಳು ಕ್ರಿಯಾಶೀಲವಾಗತೊಡಗುವುದು ಭರವಸೆಯ ಬೆಳಕಾಗಿ ಕಾಣಬೇಕೇ ಹೊರತು, ಕೆಡುಕಿನ ಸೂಚನೆಯಾಗಿ ಅಲ್ಲ. ಜನತಾ ಶಕ್ತಿ ಪ್ರಜಾಪ್ರಭುತ್ವಕ್ಕೆ ಉಂಟಾಗಿರುವ ಅಪಾಯದ ಬಗ್ಗೆ ಎಷ್ಟು ಸೂಕ್ಷ್ಮ ಹಾಗೂ ಕ್ರಿಯಾಶೀಲವಾಗಿರುತ್ತದೋ ಅಷ್ಟು ಮಾತ್ರ ಈ ನಾಗರೀಕ ಸಮಿತಿಗಳು ಸೂಕ್ಷ್ಮ ಹಾಗೂ ಕ್ರಿಯಾಶೀಲವಾಗಿರಬಲ್ಲವು. ಹಾಗಾಗಿ ಈ ನಾಗರಿಕ ಸಮಿತಿಗಳ ಮಿತಿಗಳು ಮತ್ತು ಅತಿಗಳ ಬಗ್ಗೆ ದೂರುತ್ತಾ ಕೂರುವುದಕ್ಕಿಂತ, ಜನತಾ ಶಕ್ತಿಯನ್ನು ಹೆಚ್ಚು ಸೂಕ್ಷ್ಮ ಹಾಗೂ ಕ್ರಿಯಾಶೀಲಗೊಳಿಸುವತ್ತ ಗಮನ ಹರಿಸುವುದು ಪ್ರಜ್ಞಾವಂತರ ಕೆಲಸವಾಗಬೇಕು.

ನಿಮ್ಮ ಪತ್ರಿಕೆಯಲ್ಲಿ ಯಾವುದಾವುದೋ ತಾಂತ್ರಿಕ ಕಾರಣಗಳ ಮೇಲೆ ಓದುಗರಿಗೆ ದೀರ್ಘ ಪ್ರತಿಕ್ರಿಯೆ ಹಾಗೂ ಸಂವಾದಕ್ಕೆ ಅವಕಾಶವಿಲ್ಲದಿರುವುದರಿಂದ ನಿಮಗೆ ನೇರವಾಗಿ ಬರೆದಿರುವೆ. ನೀವು ಗಮನಿಸದ ಮೇಲೆ ಇದನ್ನು ನನ್ನ ಇತರ ಕೆಲವು ಗೆಳೆಯರಿಗೆ ತಲುಪಿಸುವ ಇರಾದೆ ನನ್ನದು..

೧೮ ಮತ್ತು ೧೯ ರಂದು ಕೊಪ್ಪಳದಲ್ಲಿ ಮೂರನೆ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

ಪೂರ್ಣ ಸರಿಹೊಂದಿಸು ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ ಐತಿಹಾಸಿಕ ನಗರ ಕೊಪ್ಪಳದಲ್ಲಿ ಜೂ. ೧೮ ಹಾಗೂ ೧೯ ರಂದು ಎರಡು ದಿನಗಳ ಕಾಲ ಮೂರನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಡಿನ ಪ್ರಖ್ಯಾತ ಕವಿಗಳೂ, ದಲಿತ ಚಿಂತಕರೂ ಆದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರನ್ನು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ದಸಾಪ ಜಿಲ್ಲಾಧ್ಯಕ್ಷ, ಪತ್ರಕರ್ತ ಸಿ. ಮಂಜುನಾಥ್ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ದಲಿತ ಸಾಹಿತ್ಯ, ಸಂಸ್ಕೃತಿ, ಚಳುವಳಿ ಕುರಿತ ಎರಡು ಉಪನ್ಯಾಸಗಳು, ಬದಲಾಗಬೇಕಾದ ದಲಿತ ಮಹಿಳಾ ಬದುಕು, ತೆಲುಗು ದಲಿತ ಸಾಹಿತ್ಯ ಕುರಿತು ಮೂರು ವಿಶೇಷ ಉಪನ್ಯಾಸಗಳು, ಗೌರವ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಕಾವ್ಯ-ಕುಂಚ-ಗೀತ ಗಾಯನ, ಸಾಧಕರಿಗೆ ಸನ್ಮಾನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಉದ್ಘಾಟನಾ ಸಮಾರಂಭದ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನದ ಅಂಗವಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿಬಾರಿ ಸಮ್ಮೇಳನದಲ್ಲಿ ನಾಡಿನ ದಲಿತ ಸಾಹಿತಿಗಳನ್ನು
ಗೌರವಿಸಲಾಗುತ್ತಿದ್ದು, ಈ ಬಾರಿ ಪರಿಷತ್ತು ನೀಡುವ ಗೌರವ ಪ್ರಶಸ್ತಿಗೆ ಪ್ರಖ್ಯಾತ ಕವಿ ಡಾ. ಸತ್ಯಾನಂದ ಪಾತ್ರೋಟ ಹಾಗೂ ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ. ಸಾಗರ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡುವ ಬ್ರಹದ್ದೇಶಿ ಪ್ರಶಸ್ತಿಗೆ ನಾಡಿನ ಪ್ರಸಿದ್ಧ ಜಾನಪದ ಗಾಯಕಿ ನಾಡೋಜ ಬುರ್ರ ಕಥಾ ಈರಮ್ಮ ಅವರನ್ನು ಆಯ್ಕೆ ಮಾಡಲಾಗಿದೆ. ದಲಿತ ಚೇತನ ಪ್ರಶಸ್ತಿಗೆ ಬೆಳಗಾವಿಯ ಸಮಾಜ ಸೇವಕ ಡಾ. ಭೀಮರಾವ್ ಗಸ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
ದಲಿತ ಸಿರಿ ಪ್ರಶಸ್ತಿಗೆ ಹುಬ್ಬಳ್ಳಿಯ ದಲಿತ ಕ್ರಾಂತಿ ಪತ್ರಿಕೆಯ ಸಂಪಾದಕ ಪ.ಶಿ. ದೊಡ್ಡಮನಿ ಅವರು ಆಯ್ಕೆ ಯಾಗಿದ್ದಾರೆ ಎಂದು ಮಂಜುನಾಥ್ ವಿವರಿಸಿದ್ದಾರೆ.
ಜೂ. ೧೮ ರಂದು ಬೆಳಿಗ್ಗೆ ೧೧ ಗಂಟೆಗೆ ಸಮ್ಮೇಳನವನ್ನು ನಾಡಿನ ಖ್ಯಾತ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರು ಉದ್ಘಾಟಿಸಲಿದ್ದಾರೆ. ಪ್ರಖ್ಯಾತ ಸಾಹಿತಿ ಡಾ. ಕುಂ. ವೀರಭದ್ರಪ್ಪ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಬೆಂಗಳೂರು ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿಗಳೂ, ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Thursday, June 16, 2011

ಒಂದು ಕಾಲದಲ್ಲಿ ಚಿನ್ನ ತೆಗೆಯುತ್ತಿದ್ದ ಪ್ರಸಾದನ ಮಾತುಗಳುಟಿ.ಕೆ. ದಯಾನಂದ


‘ಇವು ಒಂದು ಕಾಲದಲ್ಲಿ ಚಿನ್ನ ತೆಗೆಯುತ್ತಿದ್ದ ಕೈಗಳು ಸಾರೂ.. ಇವತ್ತು ನೋಡಿ..!’ ಎಂದ ಕೆಜಿಎಫ್‌ನ ಮಲಹೊರುವ ಪ್ರಸಾದ್ ಮಾಟುಗಳುಇಡೀ ಕೆಜಿಎಫ್‌ನಲ್ಲಿ ಅರ್ಧಕ್ಕೆ ಅರ್ಧ ನಮ್ಮಂತೋರೇ ಇರೋದು. ಒಟ್ಟು ೧೬ ಏರಿಯಾಗಳಲ್ಲಿ ಇದೀವಿ, ಮೊದಲಿಗೆ ನಮ್ಮ ತಾತ ಮುತ್ತಾತಂದಿರನ್ನ ಈ ಇಂಗ್ಲೀಸಿನೋರು ಕೆಜಿಎಫ್‌ನಲ್ಲಿ ಚಿನ್ನ ತೆಗೆಯೋಕೆ ಅಂತ ಕೆಲಸಕ್ಕೆ ಹಾಕ್ಕೆಂಡಿದ್ರು, ಊರೊಳಗೆ ನಮ್ಮನ್ನ ಬಿಟ್ಟುಕೋತಾ ಇರಲಿಲ್ಲ, ಮುಟ್ಟಿಸಿಗೋತ ಇರಲಿಲ್ಲ, ಚಿನ್ನದ ಗಣೀ ಒಳಗೆ ಕೆಲಸ ಅಂತಿದ್ದಂಗೆ ನಮ್ಮ ತಾತಂಗೆ ಆಕಾಸಾನೇ ಕೈಗೆ ಸಿಕ್ಕಿತ್ತಂತೆ. ಅಲ್ಲಿ ಕೆಲಸ ಮಾಡೋಕೆ ಅಂತ ಹೋದ ಮೇಲಾದ್ರೂ ಜನ ನಮ್ಮನ್ನ ಮುಟ್ಟಿಸಿಗೋತಾರೇನೋ ಅಂತ. ಗಣೀ ಒಳಗೆ ನಮ್ ತಾತ ತಂದೇಗೆ ಕೆಲಸ ಸಿಕ್ಕಿದ ಮೇಲೆ ಯತ್ಯಾಸ ಏನೂ ಆಗಲಿಲ್ರ.. ಮೊದ್ಲು ಎಂಗಿತ್ತೋ ಅದು ಆಮೇಲೂ ಹಂಗೇ ಇತ್ತು. ಅವರಂಥೋರು ವರ್ಷಗಟ್ಟಲೆ ದುಡಿದ್ರು ಗಣೀ ಒಳಗೆ, ಆಮೇಲೆ ನಾನೂ ವಯಸ್ಸಿಗೆ ಬಂದ ಮೇಲೆ ಒಂದು ಹದಿನೈದು ವರ್ಷದ ಹಿಂದೆ ಅಲ್ಲೇ ಕೆಲಸ ಸಿಕ್ಕಿತು. ನಾನು ಗಣೀ ಒಳಗೆ ಕೆಲಸಕ್ಕೆ ಅಂತ ಹೋದ ಮೇಲೆ ತಿಳೀತು.. ಇಲ್ಲಿ ಚಿನ್ನ ತೆಗೆಯೋ ಕೆಲಸದಲ್ಲೂ ಬೆಣ್ಣೆ ಸುಣ್ಣ ಯವಾರ ಇದೆ ಅಂತ. ಸ್ವಲ್ಪ ಮ್ಯಾಗಿನೋರೆಲ್ಲ ಆಫೀಸರ್‌ಗುಳು, ಚೂರು ಮಧ್ಯದೋರು ಸುರಂಗಕ್ಕಿಳಿಯೋರು, ಈ ಕೆಳಗಿನೋರು ಇದ್ರಲ್ಲ ನಮ್ಮಂತೋರು ಅವರನ್ನ ಚಿನ್ನದ್ದು ಮಣ್ಣು ತೋಡಿ ರಾಶಿ ಹಾಕೋರಲ್ಲ.. ಅದರ ಲೋಡಿಂಗು ಅನ್ ಲೋಡಿಂಗು ಕೆಲಸಕ್ಕೆ ಇಟ್ಟಗಂಡಿದ್ರು. ಜೊತೆಗೆ ಗಣೀ ಒಳಗೇನೇ ಕಕ್ಕಸುರೂಂಗಳಿರ‍್ತಾ ಇದ್ವು, ಅದರ ಗುಂಡೀನಾ ಒಂದಾದ ಮ್ಯಾಲೊಂದರಂಗೆ ಬಳದು ತೊಳದು ಖಾಲೀ ಮಾಡೋದು ನಮ್ಮಂತೋರಿಗೆ ಕೊಟ್ಟಿದ್ರು. ನಾವು ಆ ಕಕ್ಕಸುರೂಮು ತುಂಬಿದಾಗ ಒಂದು ಬಾಣಲೀನಾಗೆ ತುಂಬಿಕೊಂಡು ಗಣೀ ಇಂದ ಆಚೆಗಡೆಗೆ ಹೊತ್ತುಕೊಂಡೋಗಿ ಬಿಸಾಕಿ ಬತ್ತಿದ್ವಿ. ಕೆಲಸ ಎಲ್ಲ ಮುಗಿದ ಮೇಲೆ ನಾವು ಬಿಸಾಕಿದ ಜಾಗದಾಗೇನೇ ಹೇಲುಗುಂಡಿ ಆಗ್ತಾ ಇತ್ತು. ಅದಕ್ಕೆ ಬೂದಿತುಂಬಿ ಮುಚ್ಚುತಾ ಇದ್ವಿ. ನಮ್ಮನ್ನ ಈ ಗಣೀ ಸಾಯೇಬರುಗಳು ಅವರ ಮನೇ ಗುಂಡೀ ಮುಚ್ಚಿದಾಗ ಕರಕಂಡೋಗಿ ಅದನ್ನೂ ಬಾಚಿಸೋರು, ಅದಕ್ಕೇನೂ ಕಾಸು ಕರೇಮಣಿ ಕೊಡ್ತಾ ಇರಲಿಲ್ಲ. ಗಣೀ ಕೆಲಸಕ್ಕೆ ಅಂತ ಚೂರು ಸಂಬಳ ಏನಿತ್ತು ಅದಕ್ಕೇ ಜಮಾ ಆಗ್ತಿತ್ತು ಈ ಕೆಲಸ. ಹಿಂಗಿತ್ತು ಅವಾಗ, ಇದ್ದಕ್ಕಿದ್ದಂಗೆ ಗಣೀ ಮುಚ್ಚಿಬಿಟ್ರು. ಪಿಚ್ಚರ್ ಸುರುವಾಗಿದ್ದೇ ಅವಾಗ ಸಾರೂ..ಗಣೀ ಮುಚ್ಚಗಂಡು ಹೋದ ಮೇಲೆ ಆಪೀಸರ್ ಸಾಯೇಬರುಗಳು, ಮ್ಯಾಗಿನ ಕೆಲಸದಾಗೆ ಇದ್ದೋರು ಎಲ್ಲಾರಿಗೂ ಇಷ್ಟಿಷ್ಟು ಅಂತ ಕಾಸು ಕೊಟ್ರು, ಇಂಗ್ಲೀಸಿನೋರ ಕಾಲದಾಗಿನಿಂದಲೂ ಗಣೀ ಒಳಗೆ ಕೆಲಸ ಮಾಡ್ತಾ ಇದ್ದ ನಮ್ ತಾತ ತಂದೆಯೋರು, ನನ್ನಂತೋರಿಗೆ ಬಿಡಿಗಾಸೂ ಇಲ್ಲ. ಅನಾಮತ್ತಾಗಿ ಬೀದಿಪಾಲಾಗೋದಿವಿ. ಆವತ್ತು ಶುರುವಾಗಿದ್ದು ನಮ್ ಹಣೇಬರವು ಇವತ್ತಿನ ತಂಕ ನೆಟ್ಟಗಾಗಿಲ್ಲ ನೋಡಿ. ಮೊದಲಿಗೆ ಗಣೀ ಏನೋ ಮುಚ್ಚಿದ್ರು ದುಡಿಯಾಕೆ ಅಂತ ಬ್ಯಾರೆ ಕೆಲಸ ಹುಡಿಕ್ಕಳನ ಅಂತ ಎಷ್ಟೆಷ್ಟೋ ಕಡೆ ಕೆಲಸ ಐತ್ರಾ ಕೆಲಸ ಐತ್ರಾ ಅಂತ ಕೇಳಿಕಂಡು ಬಂದ್ವಿ.. ಯಾರೂ ಕೆಲಸ ಕೊಡೋರಿಲ್ಲ ನಮಗೆ, ಗಾರೆ ಕೆಲಸ, ಮಣ್ಣು ಹೊರೋ ಕೆಲಸ ಒಂದಾದರೂ ಬ್ಯಾಡವಾ.. ಕೆಲಸಗಳೇನೋ ಇದ್ವು.. ನಮ್ದು ಒಂದು ಪ್ರಾಬ್ಲಂ ಐತೆ.. ನಾವು ಮನೇಲಿ ಮಾತಾಡೋದು ತೆಲುಗು ಬಾಸೆ.. ಬ್ಯಾರೆಯೋರ ಜೊತೆ ಕನ್ನಡ ಮಾತಾಡ್ತಾ ಇದ್ರೂವೆ ಒಂದೊಂದು ಪದ ತೆಲುಗು ಬಂದು ಬುಡ್ತವೆ.. ಇಲ್ಲಿ ಕೆಜಿಎಫ್‌ನಲ್ಲಿ ಒಂದಂತೂ ಚೆನ್ನಾಗಿ ಎಲ್ಲಾರಿಗೂ ಗೊತ್ತೈತೆ, ಅದೇನಪ್ಪ ಅಂದ್ರೆ ಕನ್ನಡ ಮಾತಾಡಿದ್ರೆ ಮೊದ್ಲಿಂದಾನೂ ಇಲ್ಲಿರೋರು ಅಂತ, ತಮಿಳು ಮಾತಾಡಿದ್ರೆ ಗಣೀ ಆಫೀಸರ್‌ಗಳು, ಒಳ್ಳೇ ಕೆಲಸದಾಗೆ ಇರೋರು.. ತೆಲುಗು ಮಾತಾಡೋರು ಹೇಲು ಬಳಿಯೋರು ಅಂತ. ನಾವು ಮಾತಾಡಬೇಕಾದ್ರೆ ತೆಲುಗು ಪದ ಒಂದೇ ಒಂದು ಬಂದ್ರೂವೆ.. ನಮ್ಮನ್ನ ಕೆಲಸಕ್ಕೆ ತಗಳ್ಳಲ್ಲ.. ಆಟೋಗೆ ಸೈತ ಹತ್ತಿಸಿಕಳಲ್ಲ.ನಮ್ ಬಾಬೂ ಅಂತ ಒಬ್ಬ ಇದಾನೆ.. ಅವನಿಗೆ ಪಿಡಸು ಬರುತ್ತೆ, ಒಂದ್ಸಲ ಇಲ್ಲೇ ಆಲದಮರದ ತಾವ ಪಿಡಸು ಬಂದು ನೆಲಕ್ಕೆ ಬಿದ್ದು ಒದ್ದಾಡ್ತಾ ಇದ್ದ.. ಒಬ್ಬೇ ಒಬ್ಬನೂ ಅವನ ಕೈಗೆ ಕಬ್ಬಿಣ ಕೊಡೋಕೆ ಹೋಗಿಲ್ಲ ಸಾರೂ.. ಕಬ್ಬಿಣ ಕೊಡೋಕೆ ಹೋದರೆ ಅವನನ್ನ ಮುಟ್ಟಬೇಕಾಗುತ್ತೆ ನೋಡಿ..! ಆಮೇಲೆ ನಾವೇ ಓಡೋಗಿ ಅವನನ್ನ ಎತ್ತಿಕೊಂಡು ಬಂದ್ವಿ. ಹಿಂಗಿದೆ ನಮ್ ಕಂಡೀಸನ್ನು. ಕೆಲಸ ಯಾರು ಕೊಡ್ತಾರೆ ಹೇಳಿ ನಮಗೆ? ಕೊನೆಕೊನೆಗೆ ಏನಾಯ್ತು ನಾವೇ ಕೂತಗಂಡು ಏನ್ ಮಾಡನ ಅಂತ ಮಾತಾಡಿಕೊಂಡ ಮೇಲೆ ನಮಗೆ ಕಾಂಪಿಟಿಸನ್ ಇಲ್ದಿರೋ, ನಮ್ ಜಾತಿ ಅಡ್ಡ ಬರ‍್ದ ಇರೋ ಒಂದೇ ಕೆಲಸ ಕಾಣುಸ್ತು ನಮಗೆ, ಅದೇ ಗಣೀಲಿ ನಮ್ ಅರ್ಧಕ್ಕರ್ಧ ಜನ ಮಾಡ್ತಾ ಇದ್ರಲ್ಲ ಗುಂಡಿಗಿಳಿದು ಹೇಲೆತ್ತೋ ಕೆಲಸ.. ಅದನ್ನೇ ಮಾಡನ ಅಂತ. ಕೆಜಿಎಫ್ ಊರಾಗೆಲ್ಲ ಮುಕ್ಕಾಲುವಾಸಿ ಪೈಪ್ ಯವಸ್ಥೆ ಇಲ್ಲ. ಗಣೀ ಆಫಿಸರ್‌ಗಳ ಮನೇಲೂ ಗುಂಡಿಗಳೇ ಇರೋದು. ಎರಡು ದಿನಕ್ಕೊಂದು ಗುಂಡಿ ಅಂತ ಬಾಚೋ ಕೆಲಸ ಸಿಕ್ಕಿದ್ರೂ ಸಾಕು ಅಂತೇಳಿ ಒಂದು ಕೆಲಸ ಅಂತ ಮಾಡಕಂಡವಿ. ಅಲ್ಲಿ ಬೀಡಿ ಸೇದ್ಕಂಡು ಕುಂತವನೆ ನೋಡ್ರಿ.. ಗಂಗರಾಜ ಅಂತ ಅವನು ದಿನಾ ಬೆಳಗೆದ್ದು ಈ ಗಣೀ ಆಫೀಸರ್‌ಗಳ ಕ್ವಾಟ್ರಸ್ಸು, ಮನೆಗಳಿರೋ ಕಡೆಗೆ ಒಂದು ರವಂಡು ಹೋಗಿ ಕೆಲಸ ಇದ್ದತಾ ಅಂತ ನೋಡಿಕಂಡು ಬತ್ತನೆ, ಅಲ್ಲಿ ಕಕ್ಕಸುಗುಂಡಿ ತುಂಬಿರೋ ಮನೆಯವರು ಏನಾರ ಕೆಲಸ ಇದ್ರೆ ಇವನಿಗೆ ಹೇಳ್ತಾರೆ.. ಆಮೇಲೆ ನಾವೆಲ್ರೂ ಒಂದು ನಾಕೈದು ಜನ ಒಟ್ಟಾಗಿ ಹೋಗ್ತೀವಿ. ಕೆಲಸ ಮಾಡೋಕೆ ಗುದ್ದಲಿ, ಪಿಕಾಸಿ, ಡಬ್ಬ ಎಲ್ಲಾನೂ ಸಾಮಾನಿಗೆ ೨೦ ರೂಪಾಯಂಗೆ ಬಾಡಿಗೆಗೆ ತಗೊಂಡೋಗಬೇಕು. ಗುಂಡಿ ಕೆಲಸದ ಮನೆಯವರು ಅಲ್ಲಿ ಏನೂ ಕೊಡಲ್ಲ. ಅಲ್ಲೋಗಿ ಗುಂಡಿ ನೋಡಿಕೊಂಡು ಅಗೆಯೋಕೆ ಶುರು ಮಾಡ್ತಿವಿ. ಒಂದೊಂದು ಗುಂಡಿ ೧೨ ಅಡಿ ೧೫ ಅಡಿ ತನಕಾನೂ ಇರ‍್ತವೆ ಸಾರೂ.. ಗುಂಡಿ ಮೇಲೆ ಕಲ್ಲುಚಪ್ಪಡಿ ಮುಚ್ಚಿರ‍್ತಾರೆ, ಅದನ್ನ ಮೊದಲು ಸರಿಸಿ ಆಮೇಲೆ ಮೇಲಿರೋ ನೀರನ್ನೆಲ್ಲ ಬಕೇಟು ಡಬ್ಬದಲ್ಲಿ ಎತ್ತಿ ಹಾಕ್ತೀವಿ, ನೀರೆಲ್ಲ ಖಾಲಿ ಮಾಡಿದ ಮೇಲೆ ಪುಸುಕ್ಕನ ಇಳಿಯಲ್ಲ, ಡೇಂಜರ್ರು.. ಅದು.. ಎಂತೆಂಥದೋ ಗ್ಯಾಸು ಎಲ್ಲ ಇರ‍್ತದೆ.. ಹಂಗೇ ಪುಸುಕ್ಕನ ಇಳಿದ್ರೆ ಉಸುರು ಕಟ್ಟಿಕಂಡಂಗೆ ಆಗ್ತದೆ. ೨ ನಿಮಿಷ ಬಿಟ್ಕಂಡು ಒಳಗೆ ಇಳೀತೀವಿ. ಕೈಯಲ್ಲಿ ಬಾಚಿ ಬಕೇಟು ಡಬ್ಬಕ್ಕೆ ಒಬ್ರು ತುಂಬಿಕೊಟ್ರೆ ಉಳದೋರು ಅದನ್ನ ದೂರ ತಗಂಡೋಗಿ ಹಾಕಿ ಬರ‍್ತರೆ. ಒಬ್ಬನೇ ಮನಸಾ ಹತ್ತು ನಿಮಿಷಕ್ಕಿಂತ ಮೇಲೆ ಗುಂಡಿ ಒಳಗೆ ಇದ್ರೆ ತಲೆ ಗಿರ್ರ್ ಅಂದಂಗೆ ಆಯ್ತದೆ. ಅದಕ್ಕೆ ೧೦ ನಿಮಿಷಕ್ಕೊಂದು ಸಲ ಗುಂಡಿ ಒಳಗಿರೋರು ಮೇಲೆ ಬಂದು ಸುಧಾರಿಸಿಕೊಂಡರೆ, ಬೇರಯವ್ರು ಗುಂಡಿಗೆ ಇಳಿತೀವಿ. ಹಿಂಗೆ ಒಂದು ಗುಂಡಿ ಬಾಚಿದ ಮೇಲೆ ಒಂದು ಗುಂಡಿಗೆ ೬೦೦ ರೂಪಾಯಿ ಕೊಡ್ತಾರೆ. ಈ ೬೦೦ ರೂಪಾಯಲ್ಲಿ ಗುದ್ದಲಿ ಸನಿಕೆ ಡಬ್ಬ ಬಕೀಟು ಬಾಡಿಗೆ ಎತ್ತಿಟ್ಟು ಉಳಿದ ದುಡ್ಡಲ್ಲಿ ಐದಾರು ಜನ ಹಣ ಹಂಚಿಕೊಳ್ಳಬೇಕು. ಏನ್ ಒಬ್ಬೊಬ್ಬರಿಗೆ ೬೦-೭೦ ಸಿಗ್ತದೇ ಸಾರೂ.. ಅದ್ರಾಗೇನೇ ನುಚ್ಚೋ ಪಚ್ಚೋ ತಂದು ಮುದ್ದೆ ಬೇಯಿಸಕೊಂಡು ಉಣಕಬೇಕು. ಬೆಳಗೆದ್ದರೆ ಮತ್ತೆ ಮಾಮೂಲಿ, ಗಂಗರಾಜ ಕೆಲಸ ಹುಡಿಕ್ಕಂಡು ಬರಾಕೆ, ನಾವು ಬಾಡಿಗೆ ಡಬ್ಬ, ಗುದ್ದಲಿ ಹಿಡಕೊಂಡು ಕಕ್ಕಸುಗುಂಡಿ ಹುಡಿಕ್ಕೆಂಡು ಹೋಗಾಕೆ.ಅತ್ಲಾಗೆ ಅದೂ ಇಲ್ಲ ಇತ್ಲಾಗೆ ಇದೂ ಅನ್ನತರಲ್ಲ.. ಹಂಗೇ ನಡೀತಾ ಇದೆ ನಮ್ ಬದುಕು. ಒಂದೊಂದ್ ಸಲ ಗುಂಡಿ ಕೆಲಸಾನೂ ಸಿಗಾದಿಲ್ಲ.. ಅವಾಗ ಯಾಕಪ್ಪ ಬೇಕು ಈ ಹೇಲೆತ್ತೋ ಬಾಳು ಅನ್ನಿಸಿ ಕೆಲಸ ಹುಡಿಕ್ಕಂಡು ಹೋಗೋದು, ಅಲ್ಲೊಂದು ಇಲ್ಲೊಂದು ತೆಲುಗು ಮಾತಾಡಿ ಕೆಲಸ ಇಲ್ಲ ಅನ್ನಿಸಿಕೊಂಡು ಬರೋದು. ಇದೇ ಆಗೋಯ್ತು. ಹಂಗೂ ಒಂದಷ್ಟು ದಿನ ಬೆಂಗಳೂರಿಗೆ ಕೂಲಿನಾಲಿ ಮಾಡಕೆ ಅಂತ ರೈಲು ಹತ್ತಿಕಂಡು ವಿತೌಟ್ (ಟಿಕೆಟ್ ಇಲ್ಲದೆ) ಬೆಂಗಳೂರಿಗೆ ಹೋಗಿ ಬರ‍್ತಾ ಇದ್ವಿ. ಅದೇನಾಗಿಬಿಡ್ತು, ವಿತೌಟ್ ಹೋಗ್ತಾ ಇರಬೇಕಾದ್ರೆ ಚೆಕಿಂಗ್‌ನೋರು ಕೊಳಪಟ್ಟಿ ಹಿಡಕಂಡು ಜೈಲಿಗಾಕ್ತೀನಿ ಹಂಗೆ ಹಿಂಗೆ ಅಂತ ಹೆದರಿಸ್ತಾ ಇದ್ರು. ಕೊಡೋಕೆ ಕಾಸಿರಬೇಕಲ್ಲ.. ಚೆಕಿಂಗ್‌ನೋರು ಅಲ್ಲಿ ಬಂದ್ರು ಅಂತಿದ್ದಂಗೆ ಇಲ್ಲಿ ರೈಲಿಂದ ದಫ ದಫ ದಫ ಅಂತ ಕೆಳಕ್ಕೆ ಜಂಪ್ ಮಾಡ್ತ ಇದ್ವಿ, ಕೆಳಗೇನು ಕೆರೆ ಇದೆಯೋ, ಹಳ್ಳಾನೋ ಗುಂಡೀನೋ, ಒಂದೂ ನೋಡ್ತಾ ಇರಲಿಲ್ಲ.. ಹಂಗೆ ಹಿಂದೆ ಮುಂದೆ ನೋಡದಂಗೆ ರೈಲಿಂದ ಧುಮುಕ್ತಾ ಇದ್ವಿ. ಬಂಡೆಗೆ ತಲೆ ವಡಕಂಡು, ಕೊರಕಲಿಗೆ ಬಿದ್ದು ನಮ್ಮೋರು ಒಂದ್ ನಾಕೈದ್ ಜನ ಸತ್ತೇ ಹೋದ್ರು ಸಾರೂ.. ಪೇಪರಗೆಲ್ಲ ಬಂದಿತ್ತು.. ಟಿಕೆಟ್ಟಿಲ್ಲದಂಗೆ ಓಡಾಡೋರು ರೈಲಿಂದ ಜಂಪ್ ಮಾಡಿ ಸತ್ತೋದ್ರು ಅಂತ. ಒಂದೊತ್ತಿನ ಅನ್ನಕ್ಕೆ, ಒಂದು ಗ್ಲಾಸು ಗಂಜೀಕೆ ಕೂಲಿ ಹುಡಿಕ್ಕೆಂಡು ಹೋದೋರು ಟಿಕೆಟ್ಟಿಗೆ ಕಾಸಿಲ್ಲದಂಗೆ ಧುಮುಕಿ ಧುಮುಕಿ ಜೀವ ಕಳಕಂಡ್ರು.
ನಮ್ ಜನಗಳಿಗೆ, ನಮ್ಮೂರಿಗೆ ಸಾಯೋದು ಅನ್ನೋದು ಬದುಕೋಕಿಂತ ಸುಲಭ ಅನ್ನೋ ಥರ ಆಗೋಗಿದೆ ಸಾರೂ.. ತಗಳ್ರೀ ಇವತ್ತಿಗೆ ಒಂದು ತಿಂಗಳ ಹಿಂದಿನಿಂದಲೂ ಇಲ್ಲೀತನಾ ೫ ಹೆಣಾ ಬಿದ್ದಿದಾವೆ ಇಲ್ಲಿ. ಮೊನ್ನೆ ಮೊನ್ನೆ ತಾನೇ ಇಬ್ಬರನ್ನ ಮಣ್ಣಿಗೆ ಹಾಕಿ ಬಂದ್ವಿ, ಬಾಬು, ನಾಗರಾಜ ಅಂತ. ಇಬ್ರೂ ಒಂತಾಯಿ ಮಕ್ಕಳು. ಅಣ್ಣ ತೀರಿಕಂಡ ವಾರಕ್ಕೆ ತಮ್ಮ. ವಯಸ್ಸು ಎಷ್ಟು ಅಂತೀರಿ ಒಬ್ಬನಿಗೆ ೩೧ ಇನ್ನೊಬ್ಬನಿಗೆ ೩೭. ನಲುವತ್ತರ ಮೇಲೆ ಬದುಕೋ ಗಂಡು ಒಬ್ಬನಾದ್ರೂ ಇದಾನಾ ನಮ್ ಜೊತೆ, ಉಹುಂ. ಏನಾಗ್ತದೆ.. ಆ ಗುಂಡಿಗಿಳಿದು ಕೆಲಸ ಮಾಡಿ ಮಾಡಿ ಆ ಗಲೀಜು ಕೆಲಸಕ್ಕೆ ಬರಬಾರದ ಕಾಯಿಲೆಗಳೆಲ್ಲ ಬತ್ತವೆ ಸಾರೂ.. ಇವಾಗ ಒಂದು ಕೆಲಸ ಮಾಡನ ಸಾರೂ .. ನಾಲಕ್ ಕಲ್ಲು ತಗಂಡು ಮ್ಯಾಕೆ ಚಿಮ್ಮನ.. ಆ ನಾಕು ಕಲ್ಲಲ್ಲಿ ೩ ಕಲ್ಲು ಯಾರಾದ್ರೂ ಗಂಡ ಇಲ್ಲದೋಳ ಮನೆ ಮೇಲೆ ಹೋಗಿ ಬೀಳ್ತವೆ ಇಲ್ಲಿ. ಯಾರೂ ಬದುಕಲ್ಲ ಸಾರೂ. ೪೦ ವಯಸ್ಸು ಆಗೋಕೆ ಮುಂಚೇನೇ ಎಲ್ಲಾರೂ ಏನಾರಾ ಕಾಯಿಲೆ ಬಂದು ಮಣ್ಣು ಸೇರ‍್ಕತರೆ. ನನ್ನೇ ನೋಡ್ರೀ.. ಮ್ಯಾಲೆ ನೋಡೋಕೆ ಏನೂ ಆಗಿಲ್ಲದಂಗೆ ಇದೀನಿ.. ಒಳಗೆ ಇರೋ ಕಾಯ್ಲೆಗಳು ಏನಂತ ನನಗೊಬ್ಬನಿಗೆ ಗೊತ್ತು. ನನ್ ಆಯುಸ್ಸೂ ಅಷ್ಟೇ.. ಇನ್ನೆರಡು ಮೂರು ವರ್ಷ ಅಷ್ಟೇ.. ಹಂಡ್ರಡ್ ಪರ್ಸೆಂಟ್ ಅಷ್ಟೇ. ಆಮೇಲೆ ನಾನೂ ಇರಲ್ಲ. ಗೊತ್ತಾಗೋಗಿದೆ ನಂಗೆ. ಇಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೇಳಲಿಲ್ಲ ಸಾರೂ ನೀನು..! ಈ ಹೆಂಗಸರು ಅವರಲ್ಲ.. ಎಲ್ರೂ ಮನೆ ಕೆಲಸಕ್ಕೆ ಹೋಯ್ತರೆ.. ಅವರ ಕೈಲಿ ಆ ಕೆಲಸದ ಮನೆಯೋರು ಹೇಲೆತ್ತೋ ಜನ ಇವರು ಅಂತ.. ಪಾತ್ರೆಲೋಟ ಸಮೇತ ತಿಕ್ಕಿಸಲ್ಲ.. ಲೆಕ್ಕ ಹಾಕ್ಕಳಿ..! ಬರೀ ಕಸ ಗುಡಿಸೋದು, ಬಾತ್ರೂಂ ತೊಳದು ಬರಬೇಕು ನಮ್ಮೆಂಗಸರು. ಮದುವೆ ಛತ್ರಗಳವಲ್ಲ.. ಆ ಕಡೇ ಕೆಲಸಕ್ಕೆ ಒಂದಷ್ಟು ಹೆಂಗಸರು ಹೋಗ್ತಾರೆ.. ನನ್ನೆಂಡ್ರೇ ಓಗ್ತಾಳೆ.. ಅಲ್ಲೂ ಅದೇ.. ಪಾತರೆ ಲೋಟ ಮುಟ್ಟಿಸಲ್ಲ.. ಬರೇ ಎಲೇ ಎತ್ತಾಕೋದು, ಎಂಜಲು ಗುಡಿಸೋದು ಇಂಥಾ ಕೆಲಸಗಳು ನಮ್ಮೆಂಗಸರಿಗೆ ಕೊಡೋದು. ಏನ್ ಸಾರೂ.. ನ್ಯಾಯಾನ ಸಾರೂ.. ಇದು? ಸುರಂಗದೊಳಕ್ಕೆ ಇಳದು, ಭೂಮ್ತಾಯಿ ಹೊಕ್ಕಳತನ ಹೋಗಿ ಚಿನ್ನ ಬಗದುಕೊಂಡು ಬಂದು ರಾಶಿ ರಾಶಿ ಕೊಟ್ಟ ಜನ ಸಾರೂ ನಾವು.. ಆ ಚಿನ್ನ ಹಾಕ್ಕಂಡು ಎದೆ ಎತ್ತಿಕೊಂಡು ಓಡಾಡೋಕೆ ಆಯ್ತದೆ.. ಅವಾಗ ಆಗದೆ ಇರೋ ಅಪಸಗುನ, ನಮ್ಮನೆ ಹೆಂಗಸರು ಅವರ ಮನೆ ಪಾತ್ರೆ ಲೋಟ ಮುಟ್ಟಿ ಬಿಟ್ರೆ ಮಾತ್ರ ಅದೆಂಗೆ ಅಪಸಗುನ ಆಯ್ತದೆ ಸಾರೂ?ಕೆಜಿಎಫ್‌ನಲ್ಲಿ ಪೈಪ್ ಲೈನ್ ಯವಸ್ಥೆ ಇಲ್ಲ ಹಂಗಾಗಿ ನಾವು ಇವಾಗ ಬಚಾವು, ಯಾವತ್ತಾರ ಅದೊಂದು ಬಂದುಬಿಡ್ತು ಅಂತಂದ್ರೆ ಆಮೇಲೆ ಬಳಿಯೋಕೆ ನಮಗೆ ಕಕ್ಕಸ್ಸು ಗುಂಡೀನೇ ಇರಲ್ಲ.. ಆಮೇಲೆ ಏನಪ್ಪ ಮಾಡದು ಅಂತಂದ್ರೆ.. ಅದೇ ಇದ್ದೇ ಇದೆಯಲ್ಲ ಕೋಲಾರ ಬೆಂಗಲೂರು ಪ್ಯಾಸೆಂಜರ್ ಟ್ರೈನು.. ಗುಂಪ್ ಗುಂಪಾಗಿ ವಿತೌಟ್ ಹತ್ತದು.. ಚೆಕಿಂಗ್‌ನೋರು ಬಂದ್ರೆ ಧಫಧಫ ಅಂತ ಕೆಳಗೇನೈತೆ ಅಂತನೂ ನೋಡದಲೆ ಒಮ್ಮಕ್ಕೇ ಕೆಳಕ್ಕೆ ಧುಮುಕದು.. ಆಮೇಲೆ ಪೇಪರ್‌ನೋರು, ನೀವೂ ಸೇರ‍್ಕಂಡು ಬರೀರಿ ಸಾರೂ.. ಈ ಜನಗುಳು ಸತ್ತಿದ್ದು ಟಿಕೆಟ್ ಕೊಡದಂಗೆ ಓಡೋಗಕೋಗಿ ಬಿದ್ರು ಸತ್ರು ಅಂತ.. ಗಣಿ ಮುಚ್ಚಿ ನಮ್ಮನ್ನ ಹಿಂಗೆ ನಾಯಿಸಾವು ಸಾಯೋ ಹಂಗೆ ಮಾಡ್ತಾವ್ರೆ ಅಂತ ಸತ್ಯ ಮಾತ್ರ ಬರ‍್ದು ಗಿರ‍್ದೀರ.. ಎಲ್ಲಾರಾ ಉಂಟಾ.. ? ನಮ್ದೇನು ಜೀವ ಅಲ್ಲ ಹುಣಸೇಬೀಜ ಅನ್ನಕಂಡವ್ರೆ, ಒಂದಲ್ಲಾ ಒಂದಿನ ಎಲ್ಲಾರೂ ಅರವಯಸ್ಸಿಗೇ ಸಾಯ್ತೀವಿ.. ಆಮೇಲೆ ಮಣ್ಣಾದರೆ ನಾನು ಕೋಲಾರ ಮಣ್ಣಲಿ ಬೆರೆವೆ ಅಂತ ಹಾಡಾನಾ ಬರ‍್ಕಳ್ರೀ.. ಚಿನ್ನದ ನಾಡು, ಗಂಧದ ಬೀಡು ಅಂತವ ಹಾಡ್ನಾದ್ರೂ ಬರಕಳ್ರೀ.. ಚಿನ್ನ ತೆಗೆದುಕೊಟ್ಟೋರು ನಾವು ಹುಳಗಳಂಗೆ ಸಾಯ್ತಾನೇ ಇರ‍್ತೀವಿ.. ನೀವು ಹಾಡ್ ಮೇಲ್ ಹಾಡ್ ಬರ‍್ಕಂಡು ಆರಾಮಾಗಿರಿ.. ತೆಗೀರಿ ಅತ್ತಗೆ ಏನ್ ಮಾತಂತ ಆಡ್ತರೆ ಜನ.. ಇವು ಒಂದು ಕಾಲದಾಗೆ ಮೂಟೆ ಮೂಟೆ ಚಿನ್ನ ತೆಗೀತಾ ಇದ್ದ ಕೈಗಳು ಸಾರೂ.. ಇವತ್ತು ನೋಡಿ..?

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...