Friday, March 25, 2011

’ಹಗುರ ಗಾಂಭೀರ್ಯ’ದ ಪ್ರವಾಸ

ಆಫ್ರಿಕಾ ಮತ್ತು ಅಮೆರಿಕಾ- ವಿಶ್ವ ನಾಗರಿಕ ಜಗತ್ತಿನ ಎರಡು ಧ್ರುವಗಳು. ಮೊದಲು ಆಫ್ರಿಕಾಗೆ ಹೋಗಿ ಬಂದು ತಾವು ಅಲ್ಲಿ ಪಾಲ್ಗೊಂಡಿದ್ದ ಸಮ್ಮೇಳನ ಹಾಗೂ ಆಫ್ರಿಕಾದ ಹೆಂಗಸರ ಬಗ್ಗೆ ಸಮಾನ ಆಸಕ್ತಿಯಿಂದ ಬರೆದಿದ್ದ ಗೆಳೆಯ ಡಾ. ಸಿ.ಎಸ್. ದ್ವಾರಕಾನಾಥ್, ಈಗ ’ಅಕ್ಕ’ ಸಮ್ಮೇಳನದ ನೆಪದಲ್ಲಿ ಅಮೆರಿಕಾ ಸುತ್ತಿ ಬಂದಿದ್ದಾರೆ. (ಅವರ ಪ್ರವಾಸ ಯಾವ ದಿನಾಂಕದಿಂದ ಎಂಬುದು ಗೊತ್ತಾಗುತ್ತದೆ; ಆದರೆ ಯಾವ ವರ್ಷ ಎಂದು ಎಲ್ಲೂ ನಮೂದಾಗಿಲ್ಲವಾದ್ದರಿಂದ ಈಚೆಗೆ ಎಂದೇ ಭಾವಿಸೋಣ.)
ಕೌತುಕವೆಂದರೆ ಅವರು ಅಮೆರಿಕೆಯಲ್ಲೂ ಆಫ್ರಿಕಾ ಪ್ರವಾಸವನ್ನೇ ಮುಂದುವರೆಸಿದಂತಿದೆ...!
ಪ್ರವಾಸ ಕಥನಗಳಲ್ಲಿ ಸಾಮಾನ್ಯ ನಾವು ಕಾಣುವುದು- ಯಾವ ಉದ್ದೇಶವೂ ಇಲ್ಲದೆ ಅಮೆರಿಕಾದಂಥ ದೇಶಕ್ಕೆ ಹೋಗಿಬಂದವರು ಅಲ್ಲಿ ಕಣ್ಣಿಗೆ ರಾಚುವ ಸಮೃದ್ಧಿ, ಭವ್ಯ ಕಟ್ಟಡ, ರಸ್ತೆ, ವ್ಯವಸ್ಥೆಗಳ ಬಗ್ಗೆ ಬೆರಗಿನಿಂದ ಕರುಬುತ್ತ ಬರೆಯುವುದು. ಅಥವಾ ಆ ವೈಭವವೆಲ್ಲ ಏನೂ ಅಲ್ಲ, ನಮ್ಮ ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯ, ಲೊಟ್ಟೆ ಲೊಸಕು ಎಂದು ಕಾರಿಕೊಳ್ಳುವ ಪರಿ ಇನ್ನೊಂದು. ಈ ಎರಡೂ ಅತಿಗಳು ಎಂಥ ರೇಜಿಗೆಯವು ಎಂದು ಬಿಡಿಸಿ ಹೇಳಬೇಕಿಲ್ಲ. ಅಂತೂ ಕಾಣುವ ಕಣ್ಣಿರದಿದ್ದರೆ, ಅಂದರೆ ಒಂದು ಸಂಸ್ಕೃತಿಯಲ್ಲಿ ಬೆಳೆದವನೊಬ್ಬ ಇನ್ನೊಂದು ಸಂಸ್ಕೃತಿಯ ಸ್ಪರ್ಶಕ್ಕೆ ತೆರೆದುಕೊಂಡು ಗ್ರಹಿಸುವ ಪ್ರಬುದ್ಧತೆ ಇಲ್ಲದಿದ್ದರೆ ಎಲ್ಲವೂ ಕುರುಡ ಕಂಡ ಆನೆಯ ದೃಷ್ಟಾಂತಗಳಾಗಿ ಮುಗಿಯುತ್ತವೆ.
ದ್ವಾರಕಾನಾಥ್ ತಮ್ಮ ’ಅಮೆರಿಕಾ: ಆ ಮುಖ’ದಲ್ಲಿ ಅಂಥ ಪ್ರಮಾದಕ್ಕೆ ಆಸ್ಪದ ಕೊಟ್ಟಿಲ್ಲ. ಆದರೆ ಅವರಿಲ್ಲಿ ತಮ್ಮ ಅನುಭವದ ನಿರೂಪಣೆಯ ಗಡಿಕಲ್ಲುಗಳನ್ನು ತಾವಾಗಿ ನೆಟ್ಟುಕೊಂಡೇ ಆರಂಭಿಸುತ್ತಾರೆ. ಈ ನಿರೂಪಣೆಯಲ್ಲಿ ಅವರ ಮುಖ್ಯ ಕಾಳಜಿ- ಅಮೆರಿಕೆಯ ವರ್ಣಭೇದದ ಇತಿಹಾಸ ಮತ್ತು ಕರಿಯರ ಹೋರಾಟದ (ಹಾಗೂ ಇತರೆ ಹೋರಾಟಗಳ) ಚರಿತ್ರೆ. ಹಾಗಾಗಿ ’ಮೊದಲೇ ಅಮೆರಿಕಾ ಕಂಡರಾಗದ’ ದ್ವಾರಕಾನಾಥ್- ಅವರೇ ಬರೆದುಕೊಂಡಂತೆ- ಗತಿಸಿದ ’ಕಪ್ಪು ನಾಯಕರ ಸಾಮಾಜಿಕ ಮೌಲ್ಯಗಳ ನೆರಳನ್ನು ಹುಡುಕುತ್ತಾ ಅದೇ ಜಾಡಿನಲ್ಲಿ’ ಮನಸ್ಸು ನೆಟ್ಟು ತಮ್ಮ ಆತ್ಮೀಯ ಗೆಳೆಯ- ಆತಿಥೇಯ ಹನುಮಂತ ರೆಡ್ಡಿಯೊಂದಿಗೆ ದೇಶ ಸುತ್ತಿದ್ದಾರೆ. ನಮ್ಮಲ್ಲಿ ಹಿಂದುಳಿದ ವರ್ಗಗಳ ಹೋರಾಟದಲ್ಲಿ ತೊಡಗಿಕೊಂಡಿರುವ ದ್ವಾರಕಾನಾಥ್ ಪ್ರಜ್ಞಾಪೂರ್ವಕವಾಗಿಯೇ ಈ ಜಾಡು ಆರಿಸಿಕೊಂಡಿರುವಂತಿದೆ. ಆದರೆ ಇದರಿಂದಾಗಿ ಒಂದೆರಡು ಕೌತುಕಗಳು ಘಟಿಸಿವೆ.
ಮೊದಲನೆಯದು- ಈ ಕಥನವು ನಿರುದ್ದಿಶ್ಯ ಅಲೆದಾಟದ ಪ್ರವರವಾಗುವುದು ತಪ್ಪಿ ಇದಕ್ಕೊಂದು ತಾತ್ವಿಕ ಚೌಕಟ್ಟು ಒದಗಿದೆ. ಎರಡನೆಯದು- ಅದೇ ಇದರ ಮಿತಿಯೂ ಆಗಿದೆ! ಯಾಕೆಂದರೆ ಇವರು ಹುಡುಕಿ ಹೊರಟ ಕಪ್ಪು ಇತಿಹಾಸ ಎಷ್ಟೆಂದರೂ ಓದಿ ಅಥವಾ ಕೇಳಿ ತಿಳಿದ ಆಗಂತುಕನ ವರದಿ ಮಾತ್ರ. ಆದ್ದರಿಂದಲೇ ಬರವಣಿಗೆ ಪೂರ್ವನಿಶ್ಚಿತ ಜಾಡಿನಲ್ಲೇ ಸಾಗುತ್ತ, ಓದುಗನಿಗೆ, ಪ್ರಶ್ನೆ ಉತ್ತರ ಎರಡೂ ಬಲ್ಲವನ ಸಮ್ಮುಖದಲ್ಲಿ ಕೂತಂಥ ಕಸಿವಿಸಿ ಹುಟ್ಟಿಸತೊಡಗುತ್ತದೆ! ಹಾಗೆಂದು ಇವರ ಸ್ಥಳ ಪುರಾಣಗಳು ಮತ್ತಿತರೆ ವಿವರಗಳು (ಒಮ್ಮೊಮ್ಮೆ ತುಸು ಜಾಸ್ತಿ ಅನಿಸಿದರೂ- ಉದಾಹರಣೆಗೆ ’ಟಾಯ್ಲೆಟ್ ಪೇಪರ್’ ಪ್ರವರ) ಶುಷ್ಕವಾಗಿವೆ ಎಂದರ್ಥವಲ್ಲ. ಈ ಪುಟಗಳಲ್ಲಿ ಅನೇಕ ಆಸಕ್ತಿದಾಯಕ ಮಾಹಿತಿಗಳಿವೆ. ಉದಾಹರಣೆಗೆ ಇರಾಕ್ ಯುದ್ಧದಲ್ಲಿ ಇದ್ದೊಬ್ಬ ಮಗನನ್ನು ಕಳೆದುಕೊಂಡು ಜಾರ್ಜ್ ಬುಷ್ ವಿರುದ್ಧ ಏಕಾಂಗಿ ಹೋರಾಟ ನಡೆಸಿ ದೇಶದ ಆತ್ಮಸಾಕ್ಷಿ ಕೆಣಕಿದ ಸಿಂಡಿ ಶಿಹಾನ್ ಎಂಬ ಮಹಿಳೆಯ ಕಥೆ ತನ್ನ ಸ್ಥೂಲ ವಿವರಗಳಲ್ಲೇ ಮನ ಕಲಕುವಂತಿದೆ... ಜೊತೆಗೆ, ಅಮೆರಿಕೆಗೆ ಸೂಫಿ ಸಂಗೀತದ ಪರಿಚಯವಾಗಿದ್ದು ಭಾರತೀಯನಿಂದ ಎಂಬ ಕುತೂಹಲಕರ ಸಂಗತಿ. ಇನಾಯತ್ ಖಾನ್ ಎಂಬ ಆ ಮಹಾನುಭಾವನಿಗೆ ಅಮೆರಿಕಾದವರು ’ಭಾರತದ ತಾನ್‌ಸೇನ್’ ಎಂಬ ಬಿರುದು ಕೊಟ್ಟರಂತೆ. ಅರೆ! ಸ್ವತಃ ತಾನ್‌ಸೇನ್ ಭಾರತೀಯನಲ್ಲವೇ ಎಂಬ ಗೊಂದಲ ನನ್ನದು. ಅಲ್ಲದೆ ಮೈಕೆಲ್ ಜಾಕ್ಸನ್‌ಗೆ ಲೇಖಕರು ’ಕೋಡಂಗಿ’ ಎಂಬ ಬಿರುದನ್ನೂ ದಯಪಾಲಿಸಿದ್ದಾರೆ! ಆತನೂ ಕಪ್ಪು ಮನುಜರ ಸ್ವಾಭಿಮಾನ ಹೋರಾಟದ ಪ್ರತೀಕವೇ ಅಲ್ಲವೇ? ಲೇಖಕರ ಬಾಯ್ತಪ್ಪಿ ಈ ಮಾತು ಬಂತೇ?!...
ಇರಲಿ, ಮೊಸರಲ್ಲಿ ಕಲ್ಲು ಹುಡುಕುವ ನನ್ನ ಇಂಥ ದುಷ್ಟ ಚಾಳಿಯನ್ನು ಬದಿಗೊತ್ತಿ ನೋಡಿದರೆ, ಎಂಥ ಲವಲವಿಕೆಯ ಗದ್ಯವಿದು! ಮೊದಲ ಪುಟದಿಂದಲೇ ದ್ವಾರಕಾನಾಥ್ ಜಾರಿಗೊಳಿಸುವ ಸುರಸವಾದ ತುಂಟ ಶೈಲಿ ನನಗಂತೂ ಸಾಕಷ್ಟು ಓದಿನ ಸುಖ ಕೊಟ್ಟಿದೆ. ಅಷ್ಟಲ್ಲದೆ ಈಗ ಅವರಲ್ಲಿ ಮೈಗೂಡಿರುವ ಸೂಕ್ಷ್ಮ ಪ್ರೌಢಿಮೆಗೂ ’ಅಮೆರಿಕಾ...’ ಅಸಂಖ್ಯ ನಿದರ್ಶನಗಳನ್ನು ಒದಗಿಸುತ್ತದೆ.
ಪ್ರಯಾಣದ ಹಾದಿಯಲ್ಲಿ ಅಮೆರಿಕಾ ತಲುಪುವ ಮುನ್ನವೇ ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿದು ಕಾಲಹರಣ ಮಾಡುವಾಗ ಹೊರಗೆ ಕೆಲವು ಹಕ್ಕಿಗಳು ಇವರ ಕಣ್ಣಿಗೆ ಬೀಳುತ್ತವೆ. ಆ ಹಕ್ಕಿಗಳ ಬಗ್ಗೆ ದ್ವಾರಕಾನಾಥ್ ಬರೆಯುವುದು: ’ಅವು ನಮ್ಮೂರಿನ ಹಕ್ಕಿಗಳ ಭಾಷೆಯಲ್ಲೇ ಚಿಲಿಪಿಲಿಗುಟ್ಟುತ್ತಿದ್ದರಿಂದ ಲಂಡನ್ನಿನ ಇಂಗ್ಲಿಷ್ ಈ ಹಕ್ಕಿಗಳ ಮೇಲೆ ಪ್ರಭಾವ ಬೀರಿಲ್ಲವೆಂಬುದು ಖಚಿತವಾಯಿತು....!’
ತಮ್ಮ ಪ್ರವಾಸದುದ್ದಕ್ಕೂ ರೆಡ್ಡಿಯ ಕಿರುಬೆರಳು ಹಿಡಿದೇ ಓಡಾಡುವ ದ್ವಾರಕಾನಾಥ್ ಒಮ್ಮೆ ಮಾತ್ರ- ಡಲ್ಲಾಸ್‌ನಿಂದ ಸ್ಯಾನ್ ಫ್ರಾನ್ಸಿಸ್ಕೊಗೆ- ಒಂಟಿಯಾಗಿ ಪ್ರಯಾಣ ಮಾಡುವ ಪ್ರಸಂಗ ಬರುತ್ತದೆ. ಆಗ ರೆಡ್ಡಿ ನೀಡುವ ಸಾವಿರ ಮುನ್ನೆಚ್ಚರಿಕೆಗೆ ಸೋಜಿಗಗೊಂಡ ಇವರ ಪ್ರತಿಕ್ರಿಯೆ:
(ರೆಡ್ಡಿ ವರ್ತನೆ) ಹಿಂದೆ ನಾನು ಕೋಲಾರದಿಂದ ಇಪ್ಪತ್ತು ಮೈಲು ದೂರದ ಕೆಜಿಎಫ್‌ಗೆ ಹೋಗುವಾಗ ನನ್ನ ಮನೆಯವರೆಲ್ಲ ನನಗೆ ನೀಡುತ್ತಿದ್ದ ಮುನ್ನೆಚ್ಚರಿಕೆ ಕ್ರಮದಂತೆ ಕಾಣುತ್ತಿತ್ತು. ಆಗ ಬಸ್ಸಿನಲ್ಲಿ ಹೋಗುತ್ತಿದ್ದ ನಾನು ಕಿಟಕಿಯಲ್ಲಿ ಹೊರಕ್ಕೆ ಕೈಯಿಟ್ಟು ಪ್ರಯಾಣ ಮಾಡಬಹುದೆಂದು ನನ್ನವರು ಆತಂಕಪಡಲು ಕಾರಣವಿತ್ತು. ಆದರೆ ಕಿಟಕಿಯೇ ತೆರೆಯದ ವಿಮಾನಕ್ಕೇರಿಸಲು ರೆಡ್ಡಿ ಯಾಕೆ ಅಷ್ಟೊಂದು ಮುನ್ನೆಚ್ಚರಿಕೆ ವಹಿಸಿದ ಎಂದು ನನಗರ್ಥವಾಗಲೇಯಿಲ್ಲ!...
ಇಷ್ಟು ಹಗುರವಾಗಿ ನಮ್ಮಲ್ಲಿ ಮಂದಹಾಸ ಮೂಡಿಸಬಲ್ಲ ಲೇಖಕರು ಗಂಭೀರ ವಿಷಯಗಳನ್ನೂ ಹೇಗೆ ತೂಗಿಸಬಲ್ಲರು ಎಂಬುದಕ್ಕೆ ಉದಾಹರಣೆಯಾಗಿ ಅವರು ಕ್ಯಾಲಿಫೋರ್ನಿಯಾ ಬಗ್ಗೆ ಮಾಡುವ ಟಿಪ್ಪಣಿ ಗಮನಿಸಬೇಕು. ಪ್ರಾಚೀನ ಕಾಲದ ’ಗೋಲ್ಡ್ ರಶ್’, ಸಿಲಿಕಾನ್ ವ್ಯಾಲಿ ಮತ್ತು ನೈಸರ್ಗಿಕ ಸಂಪತ್ತುಗಳಿಂದ ಸಿರಿ ಸಮೃದ್ಧಿಯನ್ನೇ ಸುರಿದುಕೊಂಡಿರುವ ಕ್ಯಾಲಿಫೋರ್ನಿಯಾಗೆ (ಭಾರತೀಯರು ಅದರಲ್ಲೂ ಕನ್ನಡಿಗರೂ ಸೇರಿದಂತೆ) ಜಗತ್ತಿನ ಮೂಲೆಮೂಲೆಗಳಿಂದ ಜನ ಮುಕುರುತ್ತಾರೆ. ಹಾಗೆ ನೋಡಿದರೆ ಕ್ಯಾಲಿಫೋರ್ನಿಯಾ ಸದಾ ಭೂಕಂಪದ ಭೀತಿಯಲ್ಲೇ ಜೀವಿಸುವ ಸಾಮ್ರಾಜ್ಯ. ಆದರೆ ದ್ವ್ವಾರಕಾನಾಥ್ ಬರೆಯುತ್ತಾರೆ: ’ಇಲ್ಲಿನ ಚಿನ್ನಕ್ಕಾಗಿ, ಸಂಪತ್ತಿಗಾಗಿ, ಹಣಕ್ಕಾಗಿ ಮುಗಿಬೀಳುವ ಜನಕ್ಕೆ ಸಾವಿನ ಅರಿವಿಲ್ಲವೆಂದಲ್ಲ, ಆದರೆ ಮನುಷ್ಯನ ಆಸೆಯ ಮುಂದೆ ಸಾವೂ ಸೊರಗಿದಂತೆ ಕಾಣುತ್ತದೆ....’
ಇವರ ಇಂಥ ’ಹಗುರ ಗಾಂಭೀರ್ಯ’ದ ಕುರುಹಾಗಿ ’ಸುಮ್ಮನೆ ಕಳೆದ ಒಂದು ದಿನ’ ಅಧ್ಯಾಯವನ್ನು ಓದಬಹುದು. ಈ ಶೀರ್ಷಿಕೆ- ಲಂಕೇಶರ ಟೀಕೆ ಟಿಪ್ಪಣಿಯಿಂದ ಪಡೆದದ್ದು ಎಂಬ ನೆನಪು. ಮತ್ತು ಲಂಕೇಶರ ನೆನಪು ದ್ವಾರಕಾನಾಥ್‌ರನ್ನು ಅಲ್ಲಲ್ಲಿ ಕಾಡಿರುವುದು ಸಹಜವಾಗಿಯೇ ಇದೆ. ಹಾಗೆ ಅಮೆರಿಕಾದ ನೊಬೆಲ್ ಪ್ರಶಸ್ತಿ ವಿಜೇತ ಬರಹಗಾರ ಹೆಮಿಂಗ್ ವೇ ಮತ್ತು ಲಂಕೇಶರ ನಡುವೆ ಇವರು ತರುವ ಸಾಮ್ಯ ನೋಡಬೇಕು:
...ಇಬ್ಬರೂ ಸ್ವೇಚ್ಛೆಯನ್ನು ಪ್ರೀತಿಸಿದವರು. ಜೀವನವನ್ನು ಉತ್ಕಟವಾಗಿ ಪ್ರೀತಿಸಿದವರು. ತಮಗೆ ಸಿಕ್ಕ ಸ್ವಾತಂತ್ರ್ಯದಲ್ಲಿ ಯಶಸ್ವಿಯಾದರೊ ಇಲ್ಲವೊ, ಕಡೆ ತನಕ ಪ್ರೇಮಕ್ಕಾಗಿ ಕಾತರಿಸಿದವರು. ಸಾಯುವ ತನಕ ಅನುಭವಿಸಿದ್ದನ್ನು ಬರೆದವರು. ಬರಹವನ್ನೇ ಉಸಿರಾಗಿಸಿಕೊಂಡವರು...
ಬಿಟ್ಟರೆ ಹೀಗೆ ಎಲ್ಲವನ್ನೂ ನಾನೇ ಹೇಳಿ ಓದುಗರ ಸುಖಕ್ಕೆ ಭಂಗ ತರುವ ಅಪಾಯವಿದೆ. ಆದ್ದರಿಂದ ಇಲ್ಲಿಗೆ ನಿಲ್ಲಿಸಿ ಗೆಳೆಯ ದ್ವಾರಕಾನಾಥ್‌ರ ಈ ಚೈತನ್ಯಪೂರ್ಣ ಕಥನ ನನಗೆ ಕೊಟ್ಟ ಸಂತೋಷದ ಕಾರಣಕ್ಕೆ ಅವರಿಗೆ ಅಭಿನಂದನೆ ಹೇಳುತ್ತ ನನ್ನ ಮೆಚ್ಚಿನ ಭಾಗವೊಂದನ್ನು ಉಲ್ಲೇಖಿಸುತ್ತೇನೆ.
ನಯಾಗರಾ ಜಲಪಾತವನ್ನು ಕಂಡು ’ಆ ಅಪರಿಮಿತ ಆನಂದವನ್ನು ಅನುಭವಿಸಿ ಹೊರಬಂದ ಮೇಲೆ ಒಂದು ರೀತಿಯ ವೈರಾಗ್ಯ ಮುತ್ತಿಬಿಡುತ್ತೆ. ನಾವು ನಮ್ಮ ಸಾವನ್ನು ಡಿಕ್ಲೇರ್ ಮಾಡಬಹುದು ಎನಿಸಿಬಿಡುತ್ತದೆ’ ಎನ್ನುವ ದ್ವಾರಕಾನಾಥ್‌ಗೆ ಅನಿಸುವುದು ಇದಿಷ್ಟೇ ಅಲ್ಲ:
...ನಯಾಗರವನ್ನು ಅದೆಷ್ಟು ಆಂಗಲ್‌ಗಳಿಂದ ನೋಡಿದರೂ ಸಾಲದೆನಿಸುವ ಈ ಸಂತೋಷವನ್ನು ನನ್ನ ಊರಿಂದ ಇಲ್ಲಿಗೆ ಎಂದೆಂದಿಗೂ ಬರಲಾಗದ ನನ್ನ ಗೆಳೆಯರಿಗೆ, ಆತ್ಮೀಯರಿಗೆ ಹೇಗೆ ಕೊಂಡೊಯ್ಯಲಿ ಎಂದು ಮನಸ್ಸು ಭಾರವಾಯಿತು. ಈ ಇಡೀ ಫಾಲ್ಸ್‌ಅನ್ನು ತನ್ನ ಬೊಗಸೆಯಲ್ಲಿ ಹಿಡಿದು ಇಡೀ ಭೂಮಂಡಲಕ್ಕೆ ತೋರಿಸುತ್ತ ಜಗತ್ತೆಲ್ಲಾ ಸುತ್ತುವ ಶಕ್ತಿಯಿರುವುದು ಆ ಭಗವಂತನಿಗೆ ಮಾತ್ರ! ಈ ಕಾರಣಕ್ಕಾದರೂ ಆ ಭಗವಂತ ಅಸ್ತಿತ್ವದಲ್ಲಿರಬಾರದಿತ್ತೆ ಎಂದು ಮನಸ್ಸು ದೇವರ ಅಸ್ತಿತ್ವವನ್ನು ಬಯಸಿತು. ಈ ಹುಚ್ಚಿನಿಂದ ಹೊರಬರಲು ಇನ್ನೂ ಸಾಕಷ್ಟು ಕಾಲ ಬೇಕಾಗಬಹುದು ಎಂದು ಚಿಂತಿಸುತ್ತಾ ರೆಡ್ಡಿಯೊಂದಿಗೆ ಹೆಜ್ಜೆ ಹಾಕತೊಡಗಿದೆ....
ಬೆಂಗಳೂರು -ಎನ್.ಎಸ್. ಶಂಕರ್
೫ ಮೇ ೨೦೧೦

ಕೊಂಡದ ಮೇಲಿನ ನಡಿಗೆ ಕೆಂಡಕ್ಕೆ ರೇಸಿಗೆ ಹುಟ್ಟುವ ಹಾಗೆ

ಕಾಲನ ಕಾಲಿಗೆ ಹಸಿಗಾಯ
ಜಗತ್ತು ಕಾಲದ ಜೊತೆ ಪೈಪೋಟಿಗೆ ಬಿದ್ದು ಆಧುನಿಕತೆ ಅಭಿವೃಧ್ಧಿ ತಂತ್ರಜ್ಞಾನವೆಂದು ಬೊಬ್ಬೆಹೊಡೆದು ನಾಗಾಲೋಟದಲ್ಲಿ ಓಡುತ್ತಿದ್ದರೆ ಮತ್ತೊಂದು ಕಡೆ ಇದೇ ಕಾಲ ಕತ್ತು ತಿರುಗಿಸದೆ ಕಾಲು ಮುರಿದುಕೊಂಡು ಬಿದ್ದಿದೆ. ಚಲಿಸುವುದಂತೂ ದೂರದ ಮಾತು. ಪ್ರತಿ ಹೆಜ್ಜೆಗೂ ಜಾಲಿಮುಳ್ಳು, ಶತಶತಮಾನದಿಂದಲೂ ಮಾಯದ ಹಸಿಗಾಯಗಳು ದೊಡ್ಡದಾಗುತ್ತಲೇ ಇವೆ.


ಸವಣೂರಿನ ಮಾಂಸದ ಮಾರುಕಟ್ಟೆಯ ಒಂದು ಮೂಲೆಯಲ್ಲಿ ನಾಗರಿಕ ಸಮಾಜದಿಂದ ದೂರವೆ ಉಳಿದಂತಿರುವ ಹದಿನೇಳು ಕುಟುಂಬಗಳು ಮಾತ್ರ ನವಾಬರು ಕೊಟ್ಟ ಕೊಟ್ಟಿಗೆಗಳಂಥ ಜೀವಂತ ನರಕದಲ್ಲಿ ಬೀಡುಬಿಟ್ಟು ನರಳಾಟವನ್ನೆ ಬದುಕಾಗಿಸಿಕೊಂಡು ರೋಗಗಳನ್ನು ತಮ್ಮ ಒಡಹುಟ್ಟಿದವರಂತೆ ಭಾವಿಸಿ ಸಾವುಗಳೆಲ್ಲ ಸಹಜವೆಂದುಕೊಳ್ಳುತ್ತಲೇ ಪಾಪಕೂಪದಲ್ಲಿದ್ದರೂ ಹುಸಿಮುಗುಳು ತುಟಿಯ ಮೇಲೆ ಭಾರವಾಗಿ ಹೊತ್ತು ತಲೆತಲಾಂತರದಿಂದ ಊರಮಂದಿಯ ಮಲ ಹೊರುತ್ತಾ ಬದುಕು ದೂಡುತ್ತಿವೆಯೆಂದರೆ.... ಅಂತಃಕರಣ ಮನುಷ್ಯತ್ವ ಪದಗಳು ನಾಚಿಕೆಪಡುತ್ತವೆ.


ಬೀದಿಯಲ್ಲಿ ನಿಂತು ನೋಡಿದರೆ ಒಂದರಮೇಲೊಂದು ವಾಲಿಕೊಂಡು ನಾಗರಿಕ ಸಮಾಜವನ್ನು ಅಣಕಿಸುವಂತೆ ತೋರುವ ಐದು ಜೋಪಡಿಗಳು. ಅಲ್ಲಲ್ಲಿ ಚೆಲ್ಲಾಪಿಲ್ಲಿ ಬಿದ್ದಿರುವ ಚಿತ್ರಗಳಂತಹ ಅಮಾಯಕ ಜೀವಗಳು ತುಟಿಕಚ್ಚಿ ಬಿಕ್ಕುತ್ತಾ ಭೇಟಿಗೆ ಬಂದವರನ್ನು ಭಾಗ್ಯದೆವತೆಗಳೆಂದೇ ಭಾವಿಸಿ ನಿರೀಕ್ಷೆಯ ಕಂಗಳಿಂದ ಎವೆಯಿಕ್ಕದೆ ನೊಡುತ್ತವೆ. ಹೊರಬಾಗಿಲಲ್ಲೆ ಒಲೆಹೂಡಿದ್ದರೆ, ಒಳಗಿಣಿಕಿದಾಗ ಕಾಲುಚಾಚಿ ಮಲಗಲೂ ಸಾಧ್ಯವಿಲ್ಲದ ನಾಲ್ಕುಮೊಳ ಪಡಸಾಲೆಯಲ್ಲಿ ಮೂರು ನಾಲ್ಕು ಕುಟುಂಬಗಳ ನಿತ್ಯ ಜೀವನ ಜಾಥಾ. ಜೋಳಿಗೆಯಲ್ಲಿ ಕಿರುಚಿತ್ತಿರುವ ಹಸುಗೂಸು, ಚಾಪೆಯಲ್ಲಿ ತಾಯಂದಿರ ನಿಟ್ಟುಸಿರು, ಚಿಕ್ಕಮಕ್ಕಳ ಏದುಸಿರಿನ ಕರಾಳ ವಾಸ್ತವ ಜೀವಅಲುಗಾಡಿಸುತ್ತವೆ. ಈ ಅಮಾನುಷ ಬದುಕಿಗೆ ಶತಮಾನದ ಆಯಸ್ಸೆಂದರೆ.... ರಾಜ್ಯ, ದೇಶ, ಪ್ರಜಾಪ್ರಭುತ್ವ, ಸಂವಿಧಾನ, ನ್ಯಾಯ ಮುಂತಾದ ಪದಗಳನ್ನು ಗಾಳಿಗೆ ತೂರುವುದೆ ಲೇಸು.


ಕಿಡಿಯಾಗಿ ಉದುರುತಿವೆ ಕೆಂಡದಾ ಮೋಡ


"ನಾನು ಕೃಷ್ಣ ಓಬಳೇಶ ಭಂಗಿ, ನವಾಬರ ಕಾಲದಗಿನಿಂದ ಮಲ ಹೊತ್ತು ಜೀವನ ಮಾಡ್ತಾ ಬಂದೀವ್ರಿ. ನಮ್ಮಜ್ಜಗ ಈ ಮನೆಗಳ್ನ ನವಾಬ್ರು ಕೊಟ್ಟಿದ್ರಂತ್ರಿ, ಆವಾಗ ಓರ ಹೊರಗ ದೂರಿದ್ವಂತ್ರಿ, ಈಗ ಪ್ಯಾಟಿ ಬೆಳದು ಊರ ಒಲಗ ಸೇರೆವ್ರಿ. ನನು ಚಿಕ್ಕವನಿದ್ದಾಗ ನಮ್ಮಪ್ಪನ ಜೊತೆ ಪಯಿಖಾನೆ ತೊಳೆಯಾಕ ಹೊಕ್ಕಿದ್ನಿರಿ, ಬ್ಯಾರೆ ದಂಧೆ ಯಾವೂ ಸಿಗಲರದ್ದಕ್ಕ ನಾನೂ ಅದನ್ನ ಮುಂದುವರೆಸಿದ್ನಿರಿ, ಊರಾಗ ಹೋದ್ರ ಕತ್ತೆ ಹಂದಿತರ ನೋಡ್ತಾರ್ರಿ, ಇನ್ನು ನಮಗ್ಯಾರು ಕೆಲಸ ಕೊಡ್ತಾರ್ರಿ, ಕೆಲಸ ಭಾಳ ಆತಂದ್ರ ಸಾಲಿಗ್ಹೋಗೊ ಮಗನನ್ನು ದಂಧೇಕ ಕರಕೊಂಡು ಹೋಗಬೇಕಾಕೈತ್ರಿ. ಜಡ್ಡು ಜಾಪತ್ರಿ ಎಲ್ಲಾ ನಮಗ ಮಾಮೂಲಿರಿ. ನಮಗ ಒಂದು ನೋಕ್ರಿ ಕೊಡ್ರಿ ಅಂತ ಅಲದು ಅಲದು ಸಾಕಾತ್ರಿ. ಇಷ್ಟೊಂದು ಮಂದಿ ಅದೀವ್ರಿ, ಐದಾರು ಮಂದಿಗೆ ಮಾತ್ರ ವೋಟಿಂಗ್ ಕಾರ್ಡು ಅದಾವ್ರಿ, ಎರಡು ರೇಷನ್ ಕಾರ್ಡು, ಮನೀನ ಕೊಟ್ಟಿಲ್ಲಾಂದ್ರ ಇನ್ನು ಬ್ಯಾರೆ ಏನು ಕೇಳಬೇಕ್ರಿ, ಹೆಂಗೋ ಬದುಕು


ದೂಡಿಕೊಂಡು ಹೊಂಟಿದ್ವಿರಿ, ಯಾವಾಗ ಪುರಸಭೆನೋರು ಮನಿ ಖಾಲಿ ಮಾಡ್ರಿ ಇಲ್ಲಿ ಕಾಂಪ್ಲೆಕ್ಸಕಟ್ಟತೀವಿ ಅಂದ್ರೋ, ನಮ್ಮ ಜೀವಾನಾ ಹೋದಂಗಾತ್ರಿ ಏನು ಮಾಡಬೇಕೊ ತಿಳಿಲಿಲ್ರಿ. ಎಲ್ಲಾ ಆಫಿಸ ಕಛೇರಿ, ದೊಡ್ಡೋರು ಏಲ್ಲರಿಗೂ ಕೈಕಾಲೂ ಬಿದ್ದವಿರಿ, ಯಾರೂ ಕಿವಿಗೊಡಲಿಲ್ಲ. ನಮ್ಮ ಹೆಂಡ್ರು ಮಕ್ಳು ನರಳಾಟ ನೋಡಿ ಸಾಯಬೇಕು ಅನ್ನೀಸತಿತ್ರಿ. ಕೊನೆಗೆ ನಾನೋಬ್ಬನೆ ಸತ್ರೆ ಇವರಿಗೆಲ್ಲ ಯಾರು ದಿಕ್ಕು, ಏನೂ ಉಪಯೋಗ ಆಗಂಗಿಲ್ಲಾ, ಏನಾರ ಮಾಡಿ ಜನರಿಗೆ,ಸರ್ಕಾರಕ್ಕೆ ನಮ್ಮ ಸಂಕಟ ತೋಡಿಕೋಬೇಕು ಅವರು ಕಣ್ಣು ಬಿಟ್ರ ನಮ್ಮ ಮಕ್ಕಳ ಬಾಳೆವಾದ್ರು ಚಂದ ಆಕೈತಿ ಅಂತ ಯೋಚನೆ ಮಾಡಿ ಕೊನೆಗೆ ಯಾವೂದು ದಾರಿ ಕಾಣದ ಕಚೇರಿ ಮುಂದ ಹೋಗಿ ಮಲದ ಅಭಿಷೇಕ ಮಾಡಿಕೊಂಡಿವ್ರಿ."
ಕಂಬನಿಯ ಬೊಂಬೆಮುರಿದು ಬಿದ್ದ ಸದ್ದು


’ನಾನು ನಾಗಮ್ಮ ಭಂಗಿರಿ ಯಪ್ಪ, ನಮಗ ಈ ಮನೀನ ನವಾಬ್ರು ಕೊಟ್ಟಾರ್ರಿ ಆದ್ರ ಆವಾಗೆಲ್ಲಾ ದಾಖಲೆ ಅದೂ ಇದೂ ಇರಲಿಲ್ಲ. ನಮ್ಮ ಹಿರೇರು ಇದು ನಮ್ದ ಮನಿ ಅಂತ ಹೇಳಿ ಹರೇದಾಗ ರೋಗಹತ್ತಿ ಸತ್ತು ಹೋದ್ರು, ಪುರಸಭೆನೋರು ಇದು ಸರ್ಕಾರದ್ದು ಖಾಲಿ ಮಾಡ್ರಿ ಅಂದ್ರುರಿ.
ಹಂಗಾರ ನೀವು ದಾಖಲೆ ಕೊಡ್ರಿ ಅಂದ್ರ, ಕಚೇರಿಗೆ ಬೆಂಕಿ ಬಿದ್ದಾಗ ಏಲ್ಲಾ ಸುಟ್ಟು ಹೊಗ್ಯಾವು ಅಂತಾರ್ರಿ. ಈಗೀಗಂತು ಪಡಬಾರದ ಕಷ್ಪ ಪಡಾಕಹತ್ತೆವ್ರಿ. ನಮ್ಮ ಮನಿಮುಂದ ಅಲ್ಲಿ ಬಾರ್ ಕಾಣಸತೈತಲ್ರಿ ಅಲ್ಲಿಂದ ರಾತ್ರಿ ಕುಡದು ಬಾಟಲಿ, ಕಲ್ಲು ವಗಿತಾರ್ರಿ, ಈ ಮಾಂಸದ ಮಾರ್ಕೆಟನಾಗಿನ ಉಳಿದ ಹೊಲಸ ತಂದ ಮನಿ ಬಾಗಿಲದಾಗ ಸುರವತಾರ್ರಿ, ಹೊರಗ ಬಂದು ನಿಲ್ಲಾಂಗಿಲ್ರಿ, ಬಾಯಿಗೆಬಂದಂಗ ಬೈತಾರ್ರಿ, ನಾವು ಹೆಣ್ಮಕ್ಳು ಬಹಿರ್ದೆಸೆಗೆ ಬೇಲಿಯೊಳಗ ಹೊಕ್ಕಿದ್ವಿರಿ, ಅಲ್ಲೂ ಕಲ್ಲು ಒಗೆಯೋರ್ರಿ, ಹಿಂಗಾದ್ರ ನಾವು ಹೆಂಗ ಬದುಕೋಣ್ರಿ, ಈ ಅಂಜಲಿ ಮೊನ್ನೆ ಹಡೆದಾಳ್ರಿ, ತಗಡೆಲ್ಲಾ ಸೋರತವ್ರಿ, ರಾತ್ರಿ ಆಗಿತ್ರಿ, ಚರಂಡಿ ನೀರೆಲ್ಲಾ ಮನಿಒಳಗ ಬಂತ್ರಿ, ಹಸಗೂಸನ್ನು ಜೋಳಗ್ಯಾಗ ಹಾಕಿ, ಬಾಣಂತಿನ ಕುರ್ಚಿ ಮ್ಯಾಲ ಕುಂದರಸಿ, ನಾವೆಲ್ಲ ಪಾತ್ರೆ ಪಗಡ ತೊಗುಂಡು ನೀರು ಹೊರಗ ಚೆಲ್ಲಾಕ್ಕತ್ತಿದ್ವಿರಿ, ಎಷ್ಟೋ ವರ್ಷದಿಂದ ಇದ ನಮ್ಮ ಬದುಕಾಗೆತ್ರಿ..... ಆದ್ರ ಹಿಂಗ ಬದುಕಾಕು ನಮ್ಮನ್ನ ಬಿಡುವಲ್ರರಿ. ನಮ್ಮ ಜೀವ ಬದುಕೊ ಜಾಗ ಎಲ್ಲೈತ್ರಿ ಯಪ್ಪಾ ನೀವ ತೋರಸಿ’


ಬಡಪಾಯಿ ಕಣ್ಣೀರು ತುಂಬಾ ಸೋವಿ

ನನ್ನ ಹೆಸರು ಮಂಜುನಾಥ ಬಾಬು ಭಂಗಿರಿ. ಈಗೀಗ ನಮ್ಮ ಹೊಟ್ಟೆಗೂ ಕಲ್ಲು ಬಿದ್ದೈತ್ರಿ. ಮಲ ಬಳ್ಯಾಕ ಹೋದ್ರ ಲಾಟಿಲೆ ಹೊಡಿತಾರ್ರಿ, ಬೈತಾರಿ, ಯಾಕ್ರಿ ಅಂತ ಕೇಳಿದ್ರ ಇದನೆಲ್ಲ ಮಾಡಬಾರದು ಅಂತಾರ್ರಿ, ಎಷ್ಟೋ ವರ್ಷದಿಂದ ಇದನ್ನ ಮಾಡಿಕೊಂತ ದಿನಾ ಅರವತ್ತು ಎಪ್ಪತ್ತು ರೂ ದುಡಕೋಂಡ ಬಂದು ಹೆಂಗೊ ಬದಕ್ತಿದ್ವಿರಿ. ನಾವು ಮಾಡೊ ಧಂದೆ ತಪ್ಪು ಅಂತಾ ನಮಗೆಂದು ಅನಿಸಿಲ್ರಿ. ಹೇಸಿಗೆ ಮೈಮೇಲೆ ಸುರಿವಿಕೊಳ್ಳಾಕ ಮನಸ್ಸು ಹೆಂಗ ಬಂತು ಅಂತಾ ಕೇಳ್ತಾರಿ. ನಾವು ದಿನಾ ಅದನ್ನ ಮಾಡ್ತೀವ್ರಿ, ತಲೆಗೆ ಮೈಗೆ ಹತ್ತಲಾರದ ಹೆಂಗ ಕೆಲಸ ಮಾಡಬೇಕ್ರಿ, ಎಲ್ಲರೂ ನೋಡ್ಯಾರಿ, ಈ ಸಲ ಕಛೇರಿ ಮುಂದ ಬಂದು ನಾವು ಹಾಕೆಂಡೆವಿ ಅಷ್ಟರಿ. ಇದರಾಗೇನು ಹೊಸದಿಲ್ರಿ, ಈ ಧಂದೆ ಮಾಡಬೇಕಂದ್ರ ಕುಡಿಬೇಕ್ರಿ, ಮೊದಲ ಚಲೋದೇನು ತಿನ್ನಂಗಿಲ್ರಿ, ಮ್ಯಾಲೆ ಕುಡಿತಾ ಹಿಂಗಾದರ ಜೀವ ಎಲ್ಲಿ ಉಳಿತೈತ್ರಿ, ಎಷ್ಟೊ ಜನ ನಮ್ಮೋರು ಸತ್ತ ಹೋಗ್ಯಾರಿ. ಆದರ ನಮ್ಮ ಹೆಂಡ್ರು ಮಕ್ಕಳು ಮರೀನಾದರೂ ಈ ಭಂಡ ಬದುಕು ಬದಕೋದು ಬ್ಯಾಡ್ರಿ, ಅವರಾದ್ರು ಮನುಷ್ಯಾರಂಗ ಬದಕಬೇಕು ಅನ್ನೋದು ಒಂದ ಆಸೆರಿ”


ಎಳೆಯ ಹೂಗಳ ಅಳುದನಿ


ನಾನು ಸಾಲಿಗೆ ಹೊಕ್ಕೆನ್ರಿ, ಓದಾಕ ಬರಿಯಾಕ ಕಲಿಯಾಕತ್ತೆನ್ರಿ” ಎಂದು ತೊದಲು ತೊದಲಾಗಿ ಮಾತನಾಡುವ ಅನನ್ಯ, ಸೌಮ್ಯ, ಪ್ರಿಯಾಂಕರ ಮನಸ್ಸಿನೊಳಗಿನ ದುಗುಡ ಮಾತ್ರ ತೋರಿಸಲಾಗದ್ದು, ಕೆದರಿದ ಕೂದಲು, ಹರಿದ ಬಟ್ಟೆ ಅರ್ದಂಬರ್ದ ತೊಟ್ಟ ಮಕ್ಕಳ ಮುಖದಲ್ಲಿ ಮಾತ್ರ ಈ ದಾರಿದ್ರ್ಯವನ್ನೆಲ್ಲ ಮೀರಿದ ಕಳೆ. ಆದರೆ ಅದರ ಆಯಸ್ಸು ಎಷ್ಟು ? ಒಂದು ವರ್ಷದ ಎರಡು ವರ್ಷದ ಚಿಕ್ಕ ಮಕ್ಕಳ ರೋಧನ ಹೇಳತೀರದ್ದು, ಹೇಳಲಾಗದ್ದು. ಸುಮ್ಮನೆ ಕಿರುಚುತ್ತವೆ ಹಾಲುಣಿಸುವ ತಾಯಂದಿರು ಕಾಯಿಲೆ ಬಿದ್ದಿರುವ ಚಿತ್ರ ಮನಕಲಕುತ್ತದೆ.


ಕಣ್ಣೀರು ಅಳುತ್ತಿದೆ ಕಣ್ಣಿನ ಕಷ್ಟಕ್ಕೆ


ಈ ಶತಶತಮಾನದ ಯಾತನೆಗೆ ಸಂಹಾರವೆಲ್ಲಿದೆ ಹೇಳಿ. ಭೋಗ ಜಗತ್ತಿನ ವಾರಸುದಾರರಿಗೆ ಸಮಾಜದ ಕಟ್ಟಕಡೆಯವರ ಅತ್ಯಂತಿಕ ಸ್ಥಿತಿ ಅರ್ಥಮಾಡಿಕೋಳ್ಳಲು ಪುರುಸೊತ್ತಿಲ್ಲ. ಬವಣಿತರಿಗೆ ಕನಿಷ್ಠ ಈ ದೇಶದ ಪ್ರಜೆಗಳು ಎನ್ನುವ ಅನುಭವ ಕೊಡಲಾರದ ಸ್ಥಿತಿಯಲ್ಲಿ ನಾವಿದ್ದೇವೆ. ಪರಂಪರೆಯ ಪಿಡುಗುಗಳು ಮುನ್ನಡೆಯಲ್ಲಿರುವ ಈ ಕಾಲದಲ್ಲಿ ಮಾಧ್ಯಾಮ ಅತ್ಯಾಧುನಿಕ ಶಯನಗೃಹಗಳ ಸೌಂದರ್ಯ ವರ್ದನೆಯ ಕುರಿತು ತರ್ಕ ಮಾಡುತ್ತಿರುವ ದುರಂತವಿದು. ಲೋಕ ಐಭೋಗ ಪ್ರಧಾನತೆಯ ಲೋಲುಪ್ತತೆಯಲ್ಲಿ ತೇಲುತ್ತಿರುವಾಗ ತನ್ನೊಳಗೆ ಹುಟ್ಟಿರುವ ಈ ರೀತಿಯ ಅಸಹನೀಯ ಕ್ರೌರ್ಯದ ಬೀಜಗಳು ಅಲ್ಲಲ್ಲಿ ಬೆಳೆಯುತ್ತಲೆ ಇವೆ. ಯಾರೂ ಗುರುತಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದಾಗಲೂ ಕೃಷ್ಣ, ಮಂಜುನಾಥರಂಥ ಬರ್ಬರ ಚಿತ್ರಗಳು ತಮ್ಮೊಡಲ ದಾವಾನಿಲವನ್ನು ಸಹಜವಾಗಿಯೆ ಆಸ್ಪೋಟಿಸುತ್ತವೆ. ಕೋಟ್ಯಾನುಕೋಟಿ ಬಜೆಟ್ಟು, ವಹಿವಾಟು, ಖರ್ಚಿನ ಬಗ್ಗೆ ಲೆಕ್ಕಹೊಂದಿಸುವ ತರಾತುರಿಯಲ್ಲಿರುವಾಗ ಸ್ವಾತಂತ್ಯ್ರಾನಂತರದ ಎಷ್ಠೋ ವರುಷಗಳುರುಳಿದರೂ ಪ್ರವಾಹದಂತೆ ಹರಿದ ಹಣ ಎಲ್ಲಿ ಹೋಯಿತು? ಅಂತಃಸ್ಸಾಕ್ಷಿಯ ಪ್ರಶ್ನೆಯಿದು. ಸಾಮಾಜಿಕ ನ್ಯಾಯವೆಂಬ ಪದ ಅಸ್ತಿತ್ವದಲ್ಲಿದೆಯೆ? ಎದೆಮುಟ್ಟಿಕೊಂಡು ಸಾಕ್ಷೀಕರಿಸಬೇಕಿದೆ. ವಚನ ಬಂಡಾಯ ಸಂಧರ್ಭದ ಧೂರ್ತತೆಗಿಂತಲೂ ವರ್ತಮಾನ ಕರ್ನಾಟಕದ ಸಾಮಾಜಿಕ ಅಮಾನುಷತೆ ಎಷ್ಟೋ ಪಾಲು ದೊಡ್ಡದು. ಸಹಜೀವಿಯೊಬ್ಬ ಒಡಲುರಿಯಲ್ಲಿ ಬೇಯುತ್ತಿರುವಾಗ, ತಂಗಾಳಿಯನ್ನು ಒಳಕೋಣೆಯಲ್ಲಿ ಕಟ್ಟಿ ಹಾಕಿ ನೆಮ್ಮದಿಯ ನಿದ್ರೆಗೆ ತಹತಹಿಸುವವರಿಗೆ ಹಸಿವಿನ ಬೇಗುದಿಯ ಅನುಭವ ಅರ್ಥ ಮಾಡಿಸುವುದು ಹೇಗೆ? ಸುತ್ತಲೂ ಹೆಡೆಯತ್ತಿದ ಮೂಢ ನಾಗರಗಳಡಿ ನಿತ್ಯ ಪವಡಿಸುವ ಸವಣೂರಿನ ಭಂಗಿ ಸಮುದಾಯ ಇನ್ನು ಕಗ್ಗತ್ತಲಲ್ಲೆ ಇದ್ದು ಬೆಳಕಿನ ಧ್ಯಾನದಲ್ಲಿರುವ ಎಷ್ಟೋ ಬವಣಿತರ ಆಸ್ಮಿತೆ ಉಳಿಸುವುದು ಹೇಗೆ? ಉದಯರವಿಯ ಉರಿಪಾದದ ಕೆಳಗೆ ಬಕಬರಲೆ ಬಿದ್ದಿರುವ ವಸಂತನನ್ನು ಎತ್ತುವವರಾರು?


-ವೀರಣ್ಣ ಮಡಿವಾಳರ


ಎ.ಜಿ.ನೂರಾನಿ- ಅನುವಾದಕನ ಮಾತು

ಎ.ಜಿ.ನೂರಾನಿ
ಲೇಖಕರ ಕಿರು ಪರಿಚಯ
ನ್ಯಾಯವಾದಿ, ಸಂವಿಧಾನ ತಜ್ಞ, ರಾಜಕೀಯ ವಿಮರ್ಶಕ ಹಾಗೂ ಬರಹಗಾರನಾಗಿರುವ ಎ.ಜಿ.ನೂರಾನಿ ತಡೆರಹಿತವಾಗಿ ಹೋರಾಟ ಮಾಡುತ್ತಲೆ ಇರುವ ಓರ್ವ ಅಪರೂಪದ ಬುದ್ಧಿಜೀವಿ. ಸಂವಿಧಾನದ ಬಗ್ಗೆ ಈತನಷ್ಟು ಕೂಲಂಕಷವಾಗಿ ತಿಳಿದಿರುವವರು ಪ್ರಾಯಶಃ ಇನ್ಯಾರೂ ಇಲ್ಲ. ಎಲ್ಲಾ ವಾದಗಳನ್ನು ಬಲ್ಲ ಈತನ ಜತೆ ವಾದಕ್ಕಿಳಿಯುವುದು ಸುಲಭದ ಮಾತಲ್ಲ. ತಾನು ಹೇಳಬೇಕೆಂದಿರುವುದನ್ನು ಎಳ್ಳಷ್ಟೂ ಮುಚ್ಚುಮರೆಯಿಲ್ಲದೆ, ನಿರ್ದಾಕ್ಷಿಣ್ಯವಾಗಿ ಹೇಳುವ ನೂರಾನಿಯವರ ಶೈಲಿ ವಿಶಿಷ್ಟವಾದುದು. ಅವರು ಹಲವು ದಶಕಗಳ ಕಾಲ ದ ಸ್ಟೇಟ್ಸ್‌ಮನ್ ಪತ್ರಿಕೆಗೆ ಬರೆಯುತ್ತಿದ್ದರು. ನಂತರ ಹಿಂದುಸ್ತಾನ್ ಟೈಮ್ಸ್ ಗೆ ಬರೆಯಲಾರಂಭಿಸಿದರು. ಅವರ ಲೇಖನಗಳು ಫ್ರಂಟ್‌ಲೈನ್, ಇಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ ಹಾಗೂ ದೈನಿಕ್ ಭಾಸ್ಕರ್‌ಗಳಲ್ಲಿ ಕೂಡಾ ಪ್ರಕಟವಾಗಿವೆ. The RSS and BJP, The Kashmir Question, The Kashmir Question Revisited, Badruddin Tyabji, Ministers’ Misconduct, Brezhnev’s Plan for Asian Security, The Presidential System, The Trial of Bhagat Singh, Constitutional Questions in India ªÀÄÄAvÁzÀÀ ¥ÀĸÀÛPÀUÀ¼À£ÀÄß §gÉ¢zÁÝgÉ. The Babri Masjid Question (Vol. I, II) ನೂರಾನಿಯವರ ಇತ್ತೀಚಿನ ಕೃತಿಯಾಗಿದೆ.
--------

ಅಸತ್ಯಗಳನ್ನು, ಅಧ ಸತ್ಯಗಳನ್ನು ಪ್ರಚಾರಮಾಡುತ್ತ ಸಂಸ್ಕೃತಿಯ ಹೆಸರಿನಲ್ಲಿ ಜನವಿರೋಧಿ ಮೌಲ್ಯಗಳನ್ನು ಬಿತ್ತಿ ಸಮಾಜವನ್ನು ಒಡೆದು ಧ್ರುವೀಕರಿಸುತ್ತಿರುವ ಆರೆಸ್ಸೆಸ್, ಬಿಜೆಪಿ ಮತ್ತಿತರ ಸಂಘ ಪರಿವಾರದ ಸಂಘಟನೆಗಳ ನಿಜರೂಪವನ್ನು ಓದುಗರಿಗೆ ಅದರಲ್ಲೂ ಮುಖ್ಯವಾಗಿ ಹೊಸತಲೆಮಾರಿನವರಿಗೆ ದರ್ಶಿಸುವ ಪ್ರಯತ್ನವನ್ನು ಪ್ರಸ್ತುತ ಕೃತಿಯಲ್ಲಿ ಮಾಡಲಾಗಿದೆ. ಭಾರತ ಅಳವಡಿಸಿಕೊಂಡಿರುವ ಪ್ರಜಾತಾಂತ್ರಿಕ ವ್ಯವಸ್ಥೆ ಮತ್ತು ಜಾತ್ಯತೀತತೆಯಂತಹ ಸಾಂವಿಧಾನಿಕ ಮೌಲ್ಯಗಳಿಗೆ ಹಿಂದೂತ್ವವಾದಿ ಆರೆಸ್ಸೆಸ್ ಹೇಗೆ ಒಂದು ಬಹುದೊಡ್ಡ ಗಂಡಾಂತರವಾಗಿದೆ ಎಂಬುದನ್ನು ಲೇಖಕ ಎ.ಜಿ.ನೂರಾನಿ ತನ್ನದೇ ಆದ ಶೈಲಿಯಲ್ಲಿ ವಿವರಿಸುತ್ತಾರೆ. ಆರೆಸ್ಸೆಸ್‌ನ ಫ್ಯಾಶಿಸ್ಟ್ ಮುಖವನ್ನು, ಅದರ ಆಷಾಢಭೂತಿತನವನ್ನು ಸೋದಾಹರಣವಾಗಿ ಬೆತ್ತಲುಗೊಳಿಸುತ್ತಾರೆ. ಸಂಘ ಪರಿವಾರ ಕುರಿತಂತೆ ಜನಮಾನಸದಲ್ಲಿ ಆಳವಾಗಿ ಬೇರೂರಿರುವ ಕೆಲವು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲೆತ್ನಿಸುತ್ತಾ ಜನಸಾಮಾನ್ಯರನ್ನು ಕಾಡುತ್ತಿರುವ ಅನೇಕ ಪ್ರಶ್ನೆಗಳಿಗೆ ಪುರಾವೆಗಳೊಂದಿಗೆ ಉತ್ತರ ಒದಗಿಸುವ ಪ್ರಯತ್ನವನ್ನು ಮಾಡುತ್ತಾರೆ. ಉದಾಹರಣೆಗೆ, ಆರೆಸ್ಸೆಸ್ ಮತ್ತು ಇಟೆಲಿಯ ಫ್ಯಾಶಿಸ್ಟ್ ಸಂಘಟನೆಗಳ ನಡುವೆ ಯಾವ ತೆರನಾದ ಸಾಮ್ಯಗಳಿವೆ? ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಭಾರತೀಯರು ನಡೆಸಿದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂದೂತ್ವವಾದಿ ಶಕ್ತಿಗಳು ನಿಜಕ್ಕೂ ಯಾವ ಪಾತ್ರ ವಹಿಸಿದ್ದವು? ಗಾಂಧೀ ಹಂತಕ ನಾಥೂರಾಮ್ ಗೋಡ್ಸೆಗೂ ಆರೆಸ್ಸೆಸ್‌ಗೂ ಯಾವುದೇ ರೀತಿಯ ಸಂಬಂಧವಿರಲಿಲ್ಲವೆಂದು ಪ್ರತಿಪಾದಿಸುವ ಸಂಘ ಪರಿವಾರದ ಹೇಳಿಕೆಗಳು ಎಷ್ಟರ ಮಟ್ಟಿಗೆ ಸತ್ಯ? ಆರೆಸ್ಸೆಸ್‌ನ ರಾಜಕೀಯ ಅಂಗವಾದ ಭಾರತೀಯ ಜನಸಂಘ ರೂಪುದಾಳಿದ್ದು ಹೇಗೆ? ಇದೇ ಜನಸಂಘ ನಂತರದಲ್ಲಿ ಭಾರತೀಯ ಜನತಾ ಪಕ್ಷವೆಂಬ ಹೊಸ ಅವತಾರವನ್ನು ಹೇಗೆ ಪಡೆದುಕೊಂಡಿತು? ಬಿಜೆಪಿಗೆ ಮತ್ತು ಅದರ ಮುಖಾಂತರ ಆರೆಸ್ಸೆಸ್‌ಗೆ ರಾಜಕೀಯ ರಂಗದಲ್ಲಿ ತಕ್ಕ ಮಟ್ಟಿನ ಮಾನ್ಯತೆ ಗಳಿಸಿಕೊಳ್ಳಲು ಸಾಧ್ಯವಾದುದು ಹೇಗೆ? ಸಂಘ ಪರಿವಾರವೆಂಬ ಮಹಾವೃಕ್ಷದ ಅನೇಕಾನೇಕ ಶಾಖೆಗಳು ಯಾವುವು? ಸಂಘ ಪರಿವಾರದ ನಾನಾ ಅಂಗಸಂಸ್ಥೆಗಳಿಗೆ ಮತ್ತು ನಾಯಕರುಗಳಿಗೆ ಸಮೇತ ನಿಗದಿಪಡಿಸಲಾಗುವ ಶ್ರಮ ವಿಭಜನೆ ಹೇಗೆ ಕೆಲಸ ಮಾಡುತ್ತದೆ? ಡಿಸೆಂಬರ್ ೬, ೧೯೯೨ರಂದು ಅಯೋಧ್ಯೆಯಲ್ಲಿ ನಡೆದದ್ದೇನು?
ಆರೆಸ್ಸೆಸ್, ಜನಸಂಘ ಮತ್ತು ಬಿಜೆಪಿಗಳ ಹುಟ್ಟಿನ ಹಿನ್ನೆಲೆಯನ್ನು ತಿಳಿಸುವ ಮಾಹಿತಿಗಳು ಪುಸ್ತಕದಲ್ಲಿವೆ. ಸಂಘ ಪರಿವಾರದ ವಿಶಿಷ್ಟ ಗುಣಲಕ್ಷಣವಾದ ಉದ್ದೇಶಪೂರ್ವಕ ಅಸ್ಪಷ್ಟತೆಯನ್ನು ನೂರಾನಿ ದೃಷ್ಟಾಂತ ಸಮೇತ ಬಯಲಿಗೆಳೆಯುತ್ತಾರೆ. ಆರೆಸ್ಸೆಸ್‌ನ ಒಂದು ಅಪ್ಪಟ ಉತ್ಪನ್ನವಾದ ವಾಜಪೇಯಿಯಿಂದ ಇನ್ನಷ್ಟು ಒಳ್ಳೆಯತನವನ್ನು ನಿರೀಕ್ಷಿಸುವ ಜನ ಯಾಕೆ ಬಾರಿಬಾರಿಗೂ ನಿರಾಸೆಗೊಳಗಾಗುತ್ತಾರೆಂಬುದನ್ನು ನೂರಾನಿ ವಿವರಿಸಿದ್ದಾರೆ. ಸಂಘ ಪರಿವಾರವನ್ನು ನಿಗ್ರಹಿಸಿ ಸೋಲಿಸದಿದ್ದಲ್ಲಿ ಈಗಾಗಲೇ ದುರ್ಬಲಗೊಂಡಿರುವ ಜಾತ್ಯತೀತತೆಯ ಆದರ್ಶವನ್ನೂ ಅದರೊಂದಿಗೆ ಭಾರತದ ಪ್ರಜಾತಂತ್ರವನ್ನೂ ಕೈಬಿಡಬೇಕಾಗುತ್ತದೆಂದು ಆತ ಸ್ಪಷ್ಟ ವಾಕ್ಯಗಳಲ್ಲಿ ನಮ್ಮನ್ನು ಎಚ್ಚರಿಸುತ್ತಾರೆ. ಈ ಫ್ಯಾಶಿಷ್ಟ್ ಚಳುವಳಿಯನ್ನು ಮಿಕ್ಕುಳಿದವರಂತೆ ಕೇವಲ ದೂರದಿಂದ ವೀಕ್ಷಿಸುವುದರಿಂದಷ್ಟೆ ತೃಪ್ತರಾಗದೆ ಅದನ್ನೆದುರಿಸಿ ಅದರ ವಿರುದ್ಧ ಜೀವಮಾನಪೂರ್ತಿ ಹೋರಾಡಿದ ನೆಹರೂರನ್ನು ಪ್ರಶಂಸಿಸುತ್ತಾರೆ.
ಆರೆಸ್ಸೆಸ್ ಸಾರ್ವಜನಿಕವಾಗಿ ತಾನೊಂದು ’ಸಾಂಸ್ಕೃತಿಕ’ ಸಂಸ್ಥೆಯೆಂದು ಹೇಳಿಕೊಳ್ಳುತ್ತದಾದರೂ ವಾಸ್ತವದಲ್ಲಿ ’ಸಂಸ್ಕೃತಿ’ ಎನ್ನುವ ಪದಕ್ಕೆ ಅದು ಕೊಡುವ ವ್ಯಾಖ್ಯಾನ ಮಾತ್ರ ಬೇರೆ. ಸಮಾಜ ಅಥವಾ ರಾಷ್ಟ್ರದ ರಾಜಕೀಯ, ಸಾಮಾಜಿಕ, ಆರ್ಥಿಕ ಇತ್ಯಾದಿ ಎಲ್ಲಾ ಮಗ್ಗುಲುಗಳನ್ನೂ ’ಸಂಸ್ಕೃತಿ’ ಒಳಗೊಂಡಿದೆಯೆಂದು ಅದು ನ್ಯಾಯಾಲಯಕ್ಕೆ ತಿಳಿಸಿರುವುದನ್ನು ನೂರಾನಿ ದಾಖಲೆ ಸಮೇತ ಉಲ್ಲೇಖಿಸಿದ್ದಾರೆ. ಪುಸ್ತಕದಲ್ಲಿ ಕೆಲವು ಮುಖ್ಯ ತನಿಖಾ ಆಯೋಗಗಳ ಸಂಕ್ಷಿಪ್ತ ವರದಿಗಳನ್ನೂ, ರಾಮಜನ್ಮಭೂಮಿ ಆಂದೋಳನ ಭಾರೀ ರಾಜಕೀಯ ಲಾಭ ತಂದುಕೊಟ್ಟಿರುವುದನ್ನು ಒಪ್ಪಿಕೊಂಡಿರುವ ಬಿಜೆಪಿ ಪ್ರಮುಖರ ದಾಖಲಿತ ಹೇಳಿಕೆಗಳನ್ನೂ ನೀಡಲಾಗಿದೆ.
ಭಾರತದ ರಾಜಕಾರಣದ ಇತಿಹಾಸದಲ್ಲಿ ಸಂಘ ಪರಿವಾರ ವಹಿಸಿರುವ ಪಾತ್ರದ ಕುರಿತು ತಿಳಿಯಲು ಆಸಕ್ತಿ ಉಳ್ಳವರಿಗೆಲ್ಲ ಈ ಕೃತಿ ಸಾಕಷ್ಟು ಉಪಯುಕ್ತ ಮಾಹಿತಿಗಳನ್ನೊದಗಿಸುತ್ತದೆಂಬ ಖಾತರಿ ನನಗಿದೆ. ಭಾರತದ ಸೌಹಾರ್ದಯುತ ಸಾಮಾಜಿಕ ಬದುಕನ್ನು ಹಾಳುಗೆಡವಿ ಅದನ್ನೊಂದು ಹಿಂದೂ ರಾಷ್ಟ್ರ ವಾಗಿಸಿ ದಲಿತ, ಅಲ್ಪಸಂಖ್ಯಾತರನ್ನು ಎರಡನೆ ಮತ್ತು ಮೂರನೆ ದರ್ಜೆಯ ಸೇವಕರನ್ನಾಗಿಸುವ ರಹಸ್ಯ ಕಾರ್ಯಸೂಚಿಗೆ ಅನುಗುಣವಾಗಿ ಕಾರ್ಯಾಚರಿಸುತ್ತಿರುವ ಸಂಘ ಪರಿವಾರದ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ, ಅವಿರತವಾಗಿ ತೊಡಗಿಸಿಕೊಂಡಿರುವ ಕನ್ನಡದ ಗೆಳೆಯರಿಗೆಲ್ಲ ಇದೊಂದು ಉತ್ತಮ ಆಕರಗ್ರಂಥ.
ಈ ಪುಸ್ತಕವನ್ನು ಅನುವಾದಿಸಲು ಪ್ರೋತ್ಸಾಹಿಸಿದ ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿಯವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಮಂಗಳೂರು ಸುರೇಶ ಭಟ್ ಬಾಕ್ರಬೈಲು

ಸಂಪಾದಕರ ಮಾತು

ಈ ಸಲದ ಗಣತಿಯಲ್ಲಿ ಜಾತಿಯನ್ನು ಸೇರಿಸಬೇಕೇ? ಬೇಡವೇ? ಎಂಬ ಬಗ್ಗೆ ಹಲವರ, ಹಲವು ದೃಷ್ಟಿಕೋನದ ವಾದಗಳನ್ನು ಓದುತ್ತ, ಕೇಳುತ್ತ ಬಂದಿದ್ದೇವೆ. ಗಣತಿ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಸಿಬ್ಬಂದಿ ಹಾಗೂ ಸರ್ಕಾರವು ಜಾತಿಗಣತಿಯ ಕಷ್ಟದ ಕುರಿತು ಹೇಳುವ ತಕರಾರು ಮಾತುಗಳನ್ನೂ ಕೇಳಿಸಿಕೊಂಡಿದ್ದೇವೆ.

ನಾವೆಲ್ಲ ಬದುಕುತ್ತಿರುವ ಈ ಸಮಾಜ ವಿರುದ್ಧ ಅಭಿಪ್ರಾಯಗಳಿಂದ ಕೂಡಿದೆ. ‘ಜಾತಿಯೆಂಬುದು ಎಲ್ಲಿದೆ ಈಗ’ ಎಂದು ಕೇಳುವವರು ಮಗು ಹುಟ್ಟಿದ ಕೂಡಲೇ ಜಾತಿಸೂಚಕ ಹೆಸರಿಡುತ್ತಾರೆ. ಜಾತಿಗಣತಿ ನಡೆದರೆ ಜಾತೀಯತೆ ಹೆಚ್ಚಿ ದೇಶ ಛಿದ್ರವಾಗುತ್ತದೆನ್ನುವವರೇ ಜಾತಿ ಸಮ್ಮೇಳನವನ್ನು ಸಂಘಟಿಸುತ್ತಾರೆ. ಜಾತಿನಾಶವಾಗಬೇಕಿದ್ದರೆ ಜಾತಿಗಣತಿ ಮಾಡಿ ಎಂದು ಪ್ರಗತಿಪರರು ಒತ್ತಾಯಿಸುತ್ತಾರೆ. ಜನಸಂಖ್ಯೆ ಲೆಕ್ಕ ದೊರೆತ ಮೇಲೆ ಯಾವ ಜಾತಿಯವರನ್ನು ಎಲ್ಲೆಲ್ಲಿ ನಿಲ್ಲಿಸಬಹುದೆಂಬ ನಿಚ್ಚಳ ಚಿತ್ರ ದೊರೆತೀತೆಂದು ರಾಜಕೀಯ ನಾಯಕರು ಲೆಕ್ಕ ಹಾಕುತ್ತಿದ್ದಾರೆ. ಹೀಗೇ ಜಾತಿಯ ಕುರಿತು, ಜಾತಿಗಣತಿಯ ಕುರಿತು ಪರಸ್ಪರ ವೈರುಧ್ಯದ ಎಷ್ಟೋ ಅಭಿಪ್ರಾಯಗಳನ್ನು ಕೇಳುತ್ತಿದ್ದೇವೆ. ರಾಜಕಾರಣಿಗಳು ಹಾಗೂ ಸಾಮಾನ್ಯ ಮನುಷ್ಯರಲ್ಲಷ್ಟೇ ಅಲ್ಲ, ಸಿದ್ಧಾಂತಗಳಲ್ಲೂ ಭಿನ್ನಾಭಿಪ್ರಾಯಗಳನ್ನು ಕಾಣಬಹುದು. ಸಮಾಜವಾದವು ಜಾತಿಗೆ ಬೆನ್ನು ಹಾಕಿ ನಿಂತರೆ, ಮಾರ್ಕ್ಸ್‌ವಾದವು ವರ್ಗವನ್ನು ಮುಂದೊಡ್ಡುತ್ತಾ ಹೋರಾಟಕ್ಕೆ ಶೋಷಣೆ ಸಮಾನ ನೆಲೆಯಾಗಬೇಕೇ ಹೊರತು ಜಾತಿಯಲ್ಲ ಎನ್ನುತ್ತದೆ. ಕೆಲ ಸಮುದಾಯಗಳು ಉಪಜಾತಿಗಳ ಗಣತಿ ಹಾಗೂ ಅಸ್ಮಿತೆಯೂ ಅವಶ್ಯವೆನ್ನುತ್ತಿವೆ.

ಪ್ರಜಾಪ್ರಭುತ್ವದ ಜೀವಂತಿಕೆಯ ನೆಲೆಗಟ್ಟಿನಲ್ಲಿ ಇಂಥ ಭಿನ್ನ ಅಭಿಪ್ರಾಯಗಳು ಇರುವ ಹೊತ್ತಲ್ಲೇ ಸರ್ಕಾರ ಜಾತಿ ಜನಗಣತಿಗೆ ಒಪ್ಪಿಗೆ ನೀಡಿದೆ.

ಜನಗಣತಿಯಲ್ಲಿ ಜಾತಿ ಎಣಿಕೆ ಮಾಡುವುದರಿಂದ ಒಟ್ಟು ಜನಗಣತಿಯ ಐಕ್ಯತೆಗೆ ಕುತ್ತು ಬರಬಹುದೆಂದು ಅನೇಕರು ಹೊಸವಾದಗಳನ್ನು ಹುಟ್ಟುಹಾಕುತ್ತಿದ್ದಾರೆ. ತಮ್ಮ ಜಾತಿಬಲವನ್ನು ಹೆಚ್ಚಿಸಿಕೊಳ್ಳಲು ಜನಗಣತಿಗೆ ಒಳಪಡುವ ಪ್ರತಿಯೊಂದು ಕುಟುಂಬವೂ ತನ್ನ ಮನೆಮಂದಿಯ ಸಂಖ್ಯೆಯನ್ನು ಹಠಾತ್ ಹಿಗ್ಗಿಸಿಕೊಳ್ಳುವ ಸಾಧ್ಯತೆಗಳಿವೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲವೆನ್ನಿಸುತ್ತದೆ. ಏಕೆಂದರೆ, ಈ ಜನಗಣತಿಯಲ್ಲಿ ಹೆಸರು, ಲಿಂಗ, ಶಿಕ್ಷಣ, ವೈವಾಹಿಕ ಸ್ಥಾನ, ಉದ್ಯೋಗ ಇವೇ ಮೊದಲಾದವುಗಳ ಮಾಹಿತಿ ಪಡೆಯುವಂತೆ ಜಾತಿಯ ವಿವರಗಳನ್ನೂ ಪಡೆದುಕೊಳ್ಳಲಾಗುತ್ತದೆ. ಜನಗಣತಿ ನಡೆಸುವಾಗ ಜೀವಂತವಿರುವ ವ್ಯಕ್ತಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ೧೮೭೧ರಿಂದ ೧೯೩೧ರವರೆಗೆ ನಡೆಸಲಾದ ಜನಗಣತಿಗಳಲ್ಲಿ ಜಾತಿ ಎಣಿಕೆಯನ್ನು ನಡೆಸಿ ಅದರ ವಿವರಗಳನ್ನು ಪ್ರಕಟಿಸಲಾಯಿತು. ಇದಾದನಂತರ ೧೯೫೧ರಿಂದ ೨೦೦೧ರವರೆಗೆ ನಡೆದ ಜನಗಣತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾತಿ ಎಣಿಕೆಯನ್ನು ಮಾತ್ರ ನಡೆಸಲಾಗಿದೆ. ಇದುವರೆವಿಗೂ ನಡೆಸಲಾಗಿರುವ ಎಲ್ಲ ಜನಗಣತಿಗಳಲ್ಲಿ ಯಾವುದೇ ಜಾತಿಗಳ ಜನರು ಹೆಚ್ಚಾದ ಅಥವಾ ಕಮ್ಮಿಯಾದ ವಿವರಗಳನ್ನು ಜನಗಣತಿ ಆಯೋಗವು ಎಲ್ಲೂ ವರದಿ ಮಾಡಿಲ್ಲ.


*******

ಜಾತಿಗಣತಿ ಕುರಿತು ಅಲ್ಲಿಲ್ಲಿ ಚರ್ಚೆ, ಸೆಮಿನಾರುಗಳು ನಡೆಯುತ್ತಿದ್ದಾಗಲೇ ವಿಶ್ವವಿದ್ಯಾಲಯ, ವಿಧಾನಸೌಧ ಎರಡೂ ಹತ್ತಿರವಿಲ್ಲದ ಹೊನ್ನಾವರದ ತನಕವೂ ಈ ಚರ್ಚೆಯನ್ನು ಎಳೆದು ತರುವುದು ಸಾಧ್ಯವೆ ಎಂಬ ಆಲೋಚನೆ ಬಂತು. ಬರೀ ಜಾತಿ ಜನಗಣತಿಯ ಚರ್ಚೆ ತೀರಾ ಅಕಾಡೆಮಿಕ್ ಆಗಿ ಸಾಮಾನ್ಯ ಜನರನ್ನು ತಲುಪಲಾರದೇನೋ ಎನಿಸಿದ್ದರಿಂದಲೂ; ಜಾತಿ ಗಣತಿಯ ಆತ್ಯಂತಿಕ ಉದ್ದೇಶ ಮತ್ತು ಗುರಿ ಮೀಸಲಾತಿ ನೀತಿಯನ್ನು ರೂಪಿಸಲು ಅಂಕಿಅಂಶಗಳ ಆಧಾರ ಒದಗಿಸುವುದು ಎಂಬ ತಿಳುವಳಿಕೆಯಿಂದಲೂ, ಜಾತಿಗಣತಿ ವಿಷಯದ ಜೊತೆ ಮೀಸಲಾತಿಯನ್ನೂ ಸೇರಿಸಿ ಒಂದು ಸಂವಾದ ಕಾರ್ಯಕ್ರಮ ಸಿದ್ಧವಾಯಿತು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ೨೬-೦೯-೨೦೧೦ ರಂದು ‘ಜಾತಿ ಜನಗಣತಿ ಮತ್ತು ಮೀಸಲಾತಿ’ ಸಂವಾದ ಕಾರ್ಯಕ್ರಮವು ‘ಮಂಥನ’ - ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಏರ್ಪಾಡಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರೊ. ರವೀಂದ್ರ ರೇಶ್ಮೆ ಸಾಮಾಜಿಕ ನ್ಯಾಯ ಮತ್ತು ಪ್ರಸಕ್ತ ರಾಜಕಾರಣದ ಬಗ್ಗೆ ಗಮನ ಸೆಳೆದರೆ, ಡಾ. ಸಿ. ಎಸ್. ದ್ವಾರಕಾನಾಥ್ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯ ಅನುಭವಗಳನ್ನು ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ವಿಶ್ಲೇಷಿಸಿದರು. ಶ್ರೀ ಶಿವಸುಂದರ್ ನಮ್ಮ ಗಮನ ಮೀಸಲಾತಿಯ ಕಡೆಗಷ್ಟೇ ಅಲ್ಲ, ವರ್ಗ ಕಂದರ ಹೆಚ್ಚಿಸುತ್ತಿರುವ ಜಾಗತೀಕರಣ ಹಾಗೂ ಜಾತಿ ಪದ್ಧತಿಯ ಬಗೆಗೂ ಹರಿಯಬೇಕಿದೆ ಎಂದು ಎಚ್ಚರಿಸಿದರು. ರಾಜಕಾರಣಿಗಳಾದ ಶ್ರೀ ಎಸ್. ವಿ. ನಾಯ್ಕ್ ಹಾಗೂ ಶ್ರೀ ಜೆ. ಡಿ. ನಾಯ್ಕ್ ಅವರು ರಾಜಕಾರಣದ ಇಂದಿನ ಸವಾಲುಗಳ ಕುರಿತು ಹೇಳಿದರು. ನಂತರ ಸಂವಾದ ನಡೆದು, ಇದನ್ನು ಪುಸ್ತಕ ರೂಪದಲ್ಲಿ ಹೊರ ತರಬೇಕೆಂಬ ಅಭಿಪ್ರಾಯವೂ ಬಂತು.

ಈ ಭಾಷಣಗಳಷ್ಟೇ ಅಲ್ಲದೇ, ಆಸಕ್ತರಿಗೆ ಈ ವಿಷಯದ ಬಗೆಗೆ ಕ್ರೋಢೀಕರಿಸಿದ ಮಾಹಿತಿ ಒದಗಿಸುವ ಆಶಯದಿಂದ ಕನ್ನಡದ ಹಾಗೂ ದೇಶದ ಕೆಲವು ಖ್ಯಾತ ಚಿಂತಕರ ಬರಹಗಳನ್ನು ಕಲೆಹಾಕಲಾಯಿತು. ಒಳಮೀಸಲಾತಿಯ ಬಗೆಗೆ, ಜಾತಿ ಎಂಬ ಪದವನ್ನೇ ಕೈಬಿಡಬಹುದೇ ಎಂಬ ಬಗೆಗೆ ದೇವನೂರ ಮಹಾದೇವ ಅವರ ಚಿಂತನೆಗಳಿದ್ದರೆ, ಡಿ. ಎಸ್. ನಾಗಭೂಷಣ ಅವರು ಮೀಸಲಾತಿಯ ಪರ ವಿರೋಧ ಆಯಾಮಗಳ ಕುರಿತು ವಿಶ್ಲೇಷಿಸಿದ ಬರಹವಿದೆ. ಅಲೆಮಾರಿ ಸಮುದಾಯವಾದ ಕರಡಿ ಖಲಂದರರ ಕುರಿತು ಪ್ರೊ. ರಹಮತ್ ಅವರ ಆಪ್ತ ಬರಹ ಹಾಗೂ ಡಾ. ಮೊಗಳ್ಳಿ ಗಣೇಶ್ ಮೀಸಲಾತಿಯ ವಿವಿಧ ಆಯಾಮಗಳ ಕುರಿತು ಚಿಂತಿಸಿದ ಬರಹವೂ ಇಲ್ಲಿದೆ. ಕನ್ನಡದ ಪತ್ರಿಕೆಗಳಲ್ಲಿ ಈ ವಿಷಯದ ಕುರಿತು ಪ್ರಕಟವಾಗಿದ್ದ ಡಾ. ಟಿ. ಆರ್. ಚಂದ್ರಶೇಖರ್, ಡಾ. ಮುಜಫ್ಫರ್ ಅಸ್ಸಾದಿ, ದಿನೇಶ್ ಅಮಿನ್‌ಮಟ್ಟು ಅವರ ಲೇಖನಗಳನ್ನೂ ಸೇರಿಸಿಕೊಳ್ಳಲಾಯಿತು.

ಪಿ. ಲಂಕೇಶರ ‘ಟೀಕೆ-ಟಿಪ್ಪಣಿ’ಯ ಮೊದಲ ಸಂಪುಟದಲ್ಲಿದ್ದ ’ಒಂದು ನೀತಿ ಸಂಹಿತೆ’ ಲೇಖನವು ಜಾತಿ ಕುರಿತ ನಮ್ಮೆಲ್ಲ ಪ್ರಶ್ನೆ ಮತ್ತು ಗೊಂದಲಗಳಿಗೆ ಖಚಿತ ಉತ್ತರ ನೀಡಿ ಮತ್ತೆಮತ್ತೆ ಓದಿಸಿಕೊಳ್ಳುತ್ತಿತ್ತು. ಅಲ್ಲದೇ ರೈತ ನಾಯಕರಾಗಿದ್ದ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರ ’ಜಾತಿ ವಿನಾಶ ಮತ್ತು ಹಾವನೂರು ವರದಿ’ ಲೇಖನವು ಇವತ್ತಿನ ಜಾತಿ ಉಪಜಾತಿಗಳ ನಡುವಿನ ಒಡಕಿನ ಸಂದರ್ಭದಲ್ಲಿ ಹಿಂದುಳಿದ ವರ್ಗಗಳು ಸಾಮಾಜಿಕ ಹೋರಾಟಕ್ಕೆ ತೆತ್ತುಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಹೆಚ್ಚಿನ ಅರಿವು ನೀಡುತ್ತಿತ್ತು. ಈ ಎರಡು ಲೇಖನಗಳ ಮಹತ್ವವನ್ನು ನಮ್ಮ ಗಮನಕ್ಕೆ ತಂದ ಡಾ. ನಟರಾಜ್ ಹುಳಿಯಾರ್ ಅವರ ಸಲಹೆಯಂತೆ ಅವನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ.

ಈ ಹಿಂದೆ ಬೆಂಗಳೂರಿನ ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ’ಯ ‘ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ’ವು ಜಾತಿ ಜನಗಣತಿಯ ಅಗತ್ಯದ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣವೊಂದನ್ನು ಏರ್ಪಡಿಸಿತ್ತು. ಈ ವಿಚಾರ ಸಂಕಿರಣದ ನಡಾವಳಿಗಳ ಪರಿಣಾಮವಾಗಿ ಜಾತಿ ಜನಗಣತಿಯನ್ನು ಭಾರತೀಯ ಯುನಿಕ್ ಗುರುತು ಚೀಟಿ ಪ್ರಾಧಿಕಾರದ ಬಯೋಮೆಟ್ರಿಕ್ (ದೈಹಿಕ ಮತ್ತು ಜೈವಿಕ ಸಂಕೇತಗಳನ್ನೊಳಗೊಂಡ ವಿವರಗಳು) ಮಾಹಿತಿ ಸಂಗ್ರಹಣೆಯ ಜೊತೆಗೆ ಸೇರಿಸಬಾರದು ಮತ್ತು ಜಾತಿ ಕುರಿತಾದ ಮಾಹಿತಿ ಸಂಗ್ರಹ, ವಿಶ್ಲೇಷಣೆ ಮತ್ತು ಕ್ರೋಢೀಕರಣದ ಬಗೆಗೆ ರೆಜಿಸ್ಟ್ರಾರ್ ಜನರಲ್ ಅವರಿಗೆ ಸಹಾಯ ಮಾಡಲು ರಾಷ್ಟ್ರೀಯ ಕಾರ್ಯಪಡೆ (ನ್ಯಾಷನಲ್ ಟಾಸ್ಕ್ ಫೋರ್ಸ್) ಅಥವಾ ಉನ್ನತ ಸಲಹಾ ಸಮಿತಿಯೊಂದನ್ನು ಕೂಡಲೇ ರಚಿಸಬೇಕು ಎಂಬ ಒತ್ತಡವನ್ನು ಜಾತಿ ಜನಗಣತಿ ಕುರಿತ ಮಂತ್ರಿ ಮಂಡಲ ಸಮಿತಿ ಎದುರು ‘ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ’ವು ಇಟ್ಟಿತು. ಈ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಎಲ್ಲ ಪ್ರಬಂಧಗಳನ್ನು ಒಟ್ಟುಗೂಡಿಸಿ ಡಾ. ಎಸ್. ಜಾಫೆಟ್ ಮತ್ತು ಡಾ. ಚಂದನ್ ಗೌಡರವರ ಸಂಪಾದಕತ್ವದಲ್ಲಿ ‘ಕ್ಯಾಸ್ಟ್ ಸೆನ್ಸಸ್ - ಟುವಾರ್ಡ್ಸ್ ಎನ್ ಇನ್‌ಕ್ಲೂಸಿವ್ ಇಂಡಿಯಾ’ ಎಂಬ ಪುಸ್ತಕವು ಪ್ರಕಟಗೊಂಡಿತು. ಈ ಪುಸ್ತಕದ ನಾಲ್ಕು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿ ಇಲ್ಲಿ ಬಳಸಿಕೊಳ್ಳಲಾಗಿದೆ. ಜೊತೆಗೆ ಇದೇ ಸಂದರ್ಭದಲ್ಲಿ ವಿವಿಧ ಇಂಗ್ಲಿಷ್ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡ ಚಿಂತಕರಾದ ಆನಂದ್ ತೇಲ್ತುಂಬ್ಡೆ, ಕಾಂಚಾ ಐಲಯ್ಯಾ ಹಾಗೂ ಗೇಲ್ ಓಂವೆಡ್ತ್ ಅವರ ಲೇಖನಗಳನ್ನೂ ಅನುವಾದಿಸಿ ಬಳಸಿಕೊಳ್ಳಲಾಗಿದೆ.

ಜಾತಿ-ಮೀಸಲಾತಿ ಕುರಿತು ಇಂದಿನ ತಲೆಮಾರಿನವರು ಪರಿಭಾವಿಸುವ ಕ್ರಮವನ್ನು ತಿಳಿಸುವ ಅರವಿಂದ ಚೊಕ್ಕಾಡಿ ಹಾಗೂ ಎಸ್. ಸಿ. ದಿನೇಶ್ ಕುಮಾರ್ ಅವರ ಬರಹಗಳೂ ಇಲ್ಲಿವೆ.

ಜಾತಿ, ಜನಗಣತಿ ಮತ್ತು ಮೀಸಲಾತಿಯ ವಿಶ್ಲೇಷಣೆ ಕುರಿತು ಇನ್ನೂ ಹಲವರ ಉತ್ತಮ ಚಿಂತನೆ, ಬರಹಗಳಿದ್ದಿರಬಹುದು. ನಮ್ಮ ಗಮನಕ್ಕೆ ಬಂದ ಕೆಲವನ್ನಷ್ಟೇ ಇಲ್ಲಿ ಸಂಪಾದಿಸಿ ಪುಸ್ತಕ ರೂಪದಲ್ಲಿ ಓದುಗರ ಕೈಗಿಟ್ಟಿದ್ದೇವೆ.

******

ತಮ್ಮ ಲೇಖನಗಳನ್ನು ಪ್ರಕಟಿಸಲು ಅನುಮತಿ ನೀಡಿದ ಎಲ್ಲ ಬರಹಗಾರರಿಗೆ; ಪುಸ್ತಕ ರೂಪಿಸುವ ಸಂದರ್ಭದಲ್ಲಿ ಸಲಹೆ ಸೂಚನೆಗಳನ್ನು ನೀಡಿದ ಪ್ರೊ. ಬಿ. ಗಂಗಾಧರ ಮೂರ್ತಿ, ಡಾ. ನಟರಾಜ್ ಹುಳಿಯಾರ್, ಶ್ರೀ ಶಿವಮೊಗ್ಗ ಮುನೀರ್; ಲಂಕೇಶರ ಲೇಖನಕ್ಕಾಗಿ ಗೌರಿ ಲಂಕೇಶ್; ಪ್ರೊ.ಎಂ.ಡಿ.ಎನ್. ಅವರ ಲೇಖನಕ್ಕಾಗಿ ಪಚ್ಚೆ ನಂಜುಂಡಸ್ವಾಮಿ ಮತ್ತು ರವಿಕುಮಾರ್ ಬಾಗಿ; ಬರಹಗಳನ್ನು ಅನುವಾದಿಸಲು ಅನುಮತಿ ನೀಡಿದ ಡಾ. ಎಸ್. ಜಾಫೆಟ್; ಉತ್ಸಾಹದಿಂದ ಇದನ್ನು ಪ್ರಕಟಿಸಲು ಮುಂದೆ ಬಂದ ಹಾಗೂ ಪುಸ್ತಕದ ಆಶಯಕ್ಕೆ ತಕ್ಕಂಥ ಹೆಸರು ಸೂಚಿಸಿದ ಲಡಾಯಿ ಪ್ರಕಾಶನದ ಶ್ರೀ ಬಸವರಾಜ ಸೂಳಿಭಾವಿ; ಅಂದದ ಮುಖಪುಟ ರಚಿಸಿಕೊಟ್ಟ ಲೇಖಕ ಮಂಜುನಾಥ್ ಲತಾ; ಮುದ್ರಣ ಸಹಾಯಕರು ಹಾಗೂ ಈ ಪುಸ್ತಕ ಪ್ರಕಟಗೊಳ್ಳಲು ಕಾರಣರಾದ ಎಲ್ಲರಿಗೂ ನಮ್ಮ ಕೃತಜ್ಞತೆಗಳು.

ಡಾ. ಎಚ್. ಎಸ್. ಅನುಪಮಾ
ಡಾ. ಕೃಷ್ಣ ಜಿ.
ಕೆ. ಎಲ್. ಚಂದ್ರಶೇಖರ್ ಐಜೂರ್

ಅಪೂರ್ಣ

ವೈಶಾಖದ ಸಂಜೆಗಳ ನಂತರ
ಈ ಹಠಾತ್ ಮೌನದ ರಾತ್ರಿಗಳು
ಯಾರು ಇಳಿಸಿ ತಂದದ್ದು ಓ ದೇವರೇ?!
ಈ ನಟ್ಟಿರುಳಿನ ಹೊತ್ತು
ಎತ್ತಲೋ ಸುಳಿಯುವ ಗಾಳಿ
ಮುಟ್ಟದೇ ಓಡುವ ಚಂದ್ರ
ಮೌನ ತಳೆದ ನಿಷ್ಕರುಣಿ ಹಕ್ಕಿಗಳು
ಸ್ತಬ್ಧತೆ ನನ್ನೊಳಗೇ ಬೆಳೆಯುತ್ತಿದೆ
ನಾನಿಲ್ಲಿ ಯಾರು? ಯಾರವಳು?
ಚಂದ್ರ ತಾರೆಯರ ನನ್ನ ಹಂಬಲ
ಕಾಳ ರಾತ್ರಿಯಾಯಿತೆ?
ಓ ದೀರ್ಘ ರಾತ್ರಿಗಳೇ
ತಾರೆ ಮಿನುಗುವುದು ಕಾಣುತ್ತಿದೆ
ಆ ತಾರೆಗೆ ನಾನು ಕಾಣುವೆನೆ?
ನನ್ನೊಳಗಿನ ಖಾಲಿಯಲ್ಲಿ
ನೀರವತೆಯೇ ತುಂಬಿದೆ ಗೆಳೆಯಾ
ನಿನ್ನ ನೆನಪಾದದ್ದೇ ಹಾಡಬೇಕೆನಿಸುತ್ತಿದೆ
ಹಾಗೇ ಒರಗಿ ಮೈ ಚಾಚಬೇಕೆನಿಸುತ್ತಿದೆ
ಸದ್ದಿರದ ಈ ಏಕಾಂತದಲ್ಲಿ
ಸಾವು ಬಂದರು ಹಾಗೇ
ಅಪ್ಪಿಬಿಡಬಹುದೆನಿಸುತ್ತಿದೆ
ಭ್ರಮೆಗಳೆಲ್ಲ ಕತ್ತಲಲ್ಲಿ ಕರಗಿ
ತಿಳಿಯುತ್ತಿದೆ ಈಗ
ನಾನು ಕಳೆದುಕೊಂಡವಳೆಂದೇ ಭಾವಿಸಿದ್ದೆ
ಎಲ್ಲ ಕೊನೆಯಾಯಿತೆಂದೇ ತಿಳಿದಿದ್ದೆ
ಕಳೆದದ್ದೇನು? ಪಡೆದುಕೊಂಡದ್ದೇನು?
ಮೊದಲು ಕೊನೆಯೋ?
ಕೊನೆ ಇನ್ನೊಂದರ ಮೊದಲೋ?
ನಾನು ಅಪೂರ್ಣ
ನೀನೂ ಅಪೂರ್ಣ
ಆತ್ಮ ಸಂಗಾತದಲಿ ಒಂದಾದೆವೋ ನೋಡು
ಕೂಡಿದರೂ ಕಳೆದರೂ
ಕಡೆಗುಳಿಯುವುದು ಪೂರ್ಣವೇ...
-ಅನುಪಮಾ

Tuesday, March 15, 2011

ಸಂಭ್ರಮದಲ್ಲಿ ಕಳೆದು ಹೋದ ಮಾತುಗಳು

ಈಚೆಗೆ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಅದ್ದೂರಿಯಾಗಿ ಯಶಸ್ವಿಯಾಯಿತು. ಅಪಾರ ಜನಸಾಗರ ಇದಕ್ಕೆ ಸಾಕ್ಷಿಯಾಯಿತು. ಜನಸ್ತೋಮದ ಎದುರು, ಕನ್ನಡ, ಕನ್ನಡತನ ಅಭಿಮಾನದ ಮಾತುಗಳ ಸಂಭ್ರಮಸಿದವು. ಆದರೆ ಅದಷ್ಟೇ ಕನ್ನಡನಾಡಿನ ವರ್ತಮಾನವಲ್ಲ. ಸದ್ಯದ ಕರ್ನಾಟಕ ಬ್ರಷ್ಟಾಚಾರದಲ್ಲಿ ಮುಳುಗಿದೆ. ಮಠಮಾನ್ಯಗಳಿಗೆ ಸರಕಾರ ಹಣದ ಸಾಗರವನ್ನೇ ಹರಿಸಿದೆ. ನೆರೆಸಂತ್ರಸ್ತರು ಇನ್ನೂ ಶೆಡ್ಡಿನ ಮನೆಗಳಲ್ಲೇ ಏದುಸಿರು ಬಿಡುತ್ತಿದ್ದಾರೆ. ರೈತರ ಭೂಮಿ ಎಗ್ಗಿಲ್ಲದೆ ಅತಿಕ್ರಮಣವಾಗುತ್ತಿದೆ. ಇಂತಹ ನೂರು ಸಂಕಷ್ಟಗಳಿಗೆ, ವಿಶ್ವಕನ್ನಡ ಸಮ್ಮೇಳನವನ್ನು ಆಯೋಜಿಸಿದ ಇದೇ ಸರಕಾರ ಕಾರಣವಾಗಿದೆ. ಆದರೆ ಈ ಸಮ್ಮೇಳನದಲ್ಲಿ ಭಾಗವಹಿಸಿದ ಕನ್ನಡನಾಡಿನ ಹಿರಿಯ ಸಾಹಿತಿ ಸಜ್ಜನರಿಗೆ ಈ ಸಂಗತಿಗಳು ಕಾಣದಿದ್ದದ್ದು ವಿಷಾದಕರ ಸಂಗತಿ.

ಅನೇಕ ಹಿರಿ ಸಜ್ಜನ ಸಾಹಿತಿಗಳು ಸರಕಾರವನ್ನು ಮೈದುಂಬಿ ಹೊಗಳಿದರು. (ಅಥಾವಾ ಮೈದುಂಬಿ ಹೊಗಳುವ ಸಾಹಿತಿಗಳನ್ನಷ್ಟೇ ಆಹ್ವಾನಿಸಿದಂತಿದೆ) ಅನೇಕ ಕವಿ ಕಲಾವಿದರು, ಯುವ ಸಾಹಿತಿಗಳು, ಕರ್ನಾಟಕದ ಭವಿಷ್ಯತ್ತಿನ ಯುವ ವಿದ್ವಾಂಸರು ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರಾದರೂ ಹೆಚ್ಚಾಗಿ ಯಾರೂ ಕರ್ನಾಟಕದ ನಿಜ ವರ್ತಮಾನವನ್ನು ಬಿಚ್ಚಿಡಲಿಲ್ಲ. ಹಂಪ ನಾಗರಾಜಯ್ಯ ಅವರು ಹರ್ಷಚಿತ್ತರಾಗಿ ಮಾತನಾಡುತ್ತಿದ್ದುದನ್ನು ನೋಡಿದರೆ, ಕನ್ನಡನಾಡು ಸುಭೀಕ್ಷವಾಗಿದೆ, ಹಾಗಾಗಿ ಸುಖನಿದ್ದೆ ಮಾಡಬಹುದು ಎನ್ನುವಂತಿತ್ತು.

ಈ ಇಡೀ ಸಮ್ಮೇಳನದ ಲಕ್ಷಾಂತರ ಜನರ ಎದುರು ಸದ್ಯದ ಕರ್ನಾಟಕ ನಿಜವಾಗಿಯೂ ಎದುರಿಸುತ್ತಿರುವ ಸಮಸ್ಯೆಗಳಾವುವು? ಅವುಗಳನ್ನು ಜನರು ಎದುರಿಸುವ ಬಗೆ ಹೇಗೆ? ಈ ಸ್ಥಿತಿಗೆ ಕಾರಣವಾದ ಸರಕಾರವನ್ನು ಜನ ಹೇಗೆ ಅರ್ಥಮಾಡಿಕೊಳ್ಳಬೇಕು? ಎನ್ನುವ ಮಾತುಗಳನ್ನು ದೊಡ್ಡ ದ್ವನಿಯಲ್ಲಿ ಹೇಳುವ ಅಗತ್ಯವಿತ್ತು. ಆದರೆ ಇಂತಹ ಮಾತುಗಳು ಸಮ್ಮೇಳನದ ಸಂಭ್ರಮದಲ್ಲಿ ಕಳೆದು ಹೋದವು. ಅಥವಾ ಸಾಹಿತಿ ಸಜ್ಜನರು ಇಂತಹ ಮಾತುಗಳು ತಲೆ ಎತ್ತದಂತೆ ನೋಡಿಕೊಂಡರು. ಹಾಗೆ ನೋಡಿದರೆ ಇದೊಂದು ರೀತಿಯ ಆತ್ಮವಂಚನೆ. ಇದು ಕರ್ನಾಟಕದ ಪ್ರಜ್ಞಾವಂತಿಕೆಯ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಯಾರಾದರೂ ಹೇಳಬಹುದು.
-ಅರುಣ್ ಜೋಳದಕೂಡ್ಲಿಗಿ

ಜಾತಿ ವ್ಯವಸ್ಥೆಯ ಅನಾವರಣ-ಅಸಮಾನ ಭಾರತ ವಿಮರ್ಶೆ

ಜಾತಿ ಜನಗಣತಿ ವಿಷಯದ ನೆಪದಲ್ಲಿ ಅಸಮಾನ ಭಾರತಜಾತಿ ವ್ಯವಸ್ಥೆ ಮತ್ತು ಮೀಸಲಾತಿಗಳ ಕುರಿತಂತೆ ನಾನಾ ಬಗೆಯ ಹೊಳಹುಗಳನ್ನು ನೀಡುವ ಅಮೂಲ್ಯ ಬರಹಗಳನ್ನು ಹೊಂದಿದೆ.
ಹರ್ಷಕುಮಾರ್ ಕುಗ್ವೆ ಮಾರ್ಚ್ 20, 2011 15:59 ಲಡಾಯಿ ಪ್ರಕಾಶನವು ಇತ್ತೀಚೆಗೆ ಹೊರತಂದಿರುವ ಕೃತಿ ಅಸಮಾನ ಭಾರತ. ಭಾರತದಲ್ಲಿ ಜಾತಿ ಜನಗಣತಿ ನಡೆಸುವ ಕುರಿತು ಎದ್ದ ವಾದ-ವಿವಾದಗಳ ಹಿನ್ನೆಲೆಯಲ್ಲಿ ಈ ಕೃತಿಯನ್ನು ಹೊರತರಲಾಗಿದೆ. ಜಾತಿ ಜನಗಣತಿ ವಿಷಯದ ನೆಪದಲ್ಲಿ ಈ ಕೃತಿ ಜಾತಿ ವ್ಯವಸ್ಥೆ ಮತ್ತು ಮೀಸಲಾತಿಗಳ ಕುರಿತಂತೆ ನಾನಾ ಬಗೆಯ ಹೊಳಹುಗಳನ್ನು ನೀಡುವ ಅಮೂಲ್ಯ ಬರಹಗಳನ್ನು ಹೊಂದಿದೆ.
ಒಟ್ಟು 23 ಲೇಖಕರ ಬರಹಗಳನ್ನೂ 2 ಅನುಬಂಧಗಳನ್ನೂ ಹೊಂದಿರುವ ಅಸಮಾನ ಭಾರತದ ಲೇಖನಗಳನ್ನು ನೋಡಿದರೆ ಪ್ರಾಯಶಃ ಕನ್ನಡದಲ್ಲಿ ಈ ವಿಷಯದ ಕುರಿತು ಪ್ರಕಟವಾಗಿರುವ ಕೃತಿಗಳಲ್ಲಿ ಅತ್ಯಂತ ಸಮಗ್ರವಾದ ಕೃತಿ ಇದು ಎಂದು ಹೇಳಲು ಯಾವ ಅಡ್ಡಿಯೂ ಇಲ್ಲ. ಪ್ರೊ. ರವೀಂದ್ರ ರೇಶ್ಮೆಯವರ ಸಾಮಾಜಿಕ ನ್ಯಾಯ ಮತ್ತು ರಾಜಕಾರಣ ಎಂಬ ಲೇಖನದಿಂದ ಮೊದಲುಗೊಂಡು ಡಾ.ಸಿ.ಎಸ್. ದ್ವಾರಕನಾಥ್, ಶಿವಸುಂದರ್, ದೇವನೂರ ಮಹದೇವ, ಡಿ.ಎಸ್. ನಾಗಭೂಷಣ, ಪ್ರೊ. ರಹಮತ್ ತರೀಕೆರೆ, ಡಾ. ಟಿ.ಆರ್. ಚಂದ್ರಶೇಖರ್, ಡಾ. ಮುಜಾಪ್ಫರ್ ಅಸ್ಸಾದಿ, ಪ್ರೊ.ರವಿವರ್ಮ ಕುಮಾರ್, ಸುಖದೇವ್ ಥೋರಟ್, ದಿನೇಶ್ ಅಮೀನ್‌ಮಟ್ಟು, ಡಾ. ಮೊಗಳ್ಳಿ ಗಣೇಶ, ಡಾ. ಆನಂದ್ ತೇಲ್ತುಂಬ್ಡೆ, ಪಿ. ಲಂಕೇಶ್, ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಗೇಲ್ ಓಂವೆಡ್ತ್, ಡಾ.ಎಚ್.ಎಸ್. ಅನುಪಮಾ, ಮುಂತಾದವರ ಬರಹಗಳು ಇದರಲ್ಲಿವೆ. ದಲಿತ ಚಿಂತಕ ಆನಂದ್ ತೇಲ್ತುಂಬ್ಡೆಯವರ ಲೇಖನವೊಂದನ್ನು ಹೊರತುಪಡಿಸಿ ಎಲ್ಲಾ ಲೇಖನಗಳೂ ಜಾತಿ ಜನಗಣತಿಯನ್ನು ಸಮರ್ಥಿಸುತ್ತವೆ. ಆದರೆ, ಯಾವ ಲೇಖನವೂ ’ಮಕ್ಕಿ ಕಾ ಮಕ್ಕಿ’ ಎನ್ನಿಸದೇ ಪ್ರತಿಯೊಂದು ಲೇಖನವೂ ಅನನ್ಯತೆಯನ್ನು ಉಳಿಸಿಕೊಂಡಿರುವುದು ಈ ವಿಷಯದ ಗಹನತೆಯನ್ನು ತೋರುತ್ತದೆ.
ಒಟ್ಟಾರೆ ಕೃತಿಯು ಇಂದು ಜಾತಿ ವ್ಯವಸ್ಥೆಯ ಕರಾಳ ಮುಖಗಳನ್ನು ಅನಾವರಣಗೊಳಿಸುತ್ತದೆ. ಜಾತಿ ಎನ್ನುವುದು ಇಂದು ಹೇಳಿಕೊಳ್ಳುವಷ್ಟೇನೂ ಇಲ್ಲ, ಹಿಂದಿದ್ದ ಜಾತಿ ಪದ್ಧತಿ ಇಲ್ಲ ಎಂದು ಹಲವರು ಭಾವಿಸುತ್ತಿರುವ ಈ ಸಂದರ್ಭದಲ್ಲಿಯೇ ನಮ್ಮ ಸಮಾಜದ ಜಾತಿ ವಾಸ್ತವವನ್ನು ಇನ್ನಿಲ್ಲದಂತೆ ಈ ಕೃತಿಯ ಹಲವು ಲೇಖನಗಳು ಬಿಚ್ಚಿಡುತ್ತವೆ. ಜಾತಿ ವ್ಯವಸ್ಥೆ ಇದೆ ಎಂಬುದನ್ನೇ ನಿರಾಕರಿಸುವ ಅಥವಾ ಜಾತಿ ಶಿಥಿಲಗೊಳ್ಳುತ್ತಿದೆ ಎಂಬ ವಾದಗಳನ್ನು ಇಲ್ಲಿರುವ ಅನೇಕ ಬರಹಗಳು ಪರಿಣಾಮಕಾರಿಯಾಗಿ ಜಾಡಿಸಿವೆ. ಡಾ.ಸಿ.ಎಸ್.ದ್ವಾರಕನಾಥ್ ತಿಳಿಸುವ ಅದೃಶ್ಯ ಅಲೆಮಾರಿ ಜಾತಿಗಳ ವಿವರಗಳಂತೂ ತಥಾಕಥಿತ ನಾಗರಿಕ ಸಮಾಜದ ನಮ್ಮನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತವೆ.
ಶಿವಸುಂದರ್‌ರವರ ಸುದೀರ್ಘ ಲೇಖನವು ಇಂದು ಜಾತಿ ವ್ಯವಸ್ಥೆಯ ಬಗೆಗೆ ಎಡಪಂಥೀಯರ ನಿಲುವು ನಡೆಗಳನ್ನು ನಿಕಷಕ್ಕೊಳಪಡಿಸುತ್ತದೆ. ಜೊತೆಗೆ ಮೀಸಲಾತಿ ಹಾಗೂ ಜಾತಿ ಜನಗಣತಿಗಳನ್ನು ಸಮರ್ಥಿಸುತ್ತಲೇ ಮೀಸಲಾತಿ ವ್ಯವಸ್ಥೆಯ ಮಿತಿಗಳನ್ನೂ, ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಜಾತಿ ಪದ್ಧತಿ ಪಡೆದುಕೊಳ್ಳುತ್ತಿರುವ ತಿರುವುಗಳನ್ನು, ಅದಕ್ಕೆ ಬೇಕಾದ ರಾಜಕೀಯ ಆರ್ಥಿಕತೆ ನಿಲುವುಗಳನ್ನು ಚರ್ಚಿಸುತ್ತದೆ. ಡಿ.ಎಸ್. ನಾಗಭೂಷಣ್‌ರ ಲೇಖನ ಮೀಸಲಾತಿಯನ್ನು ಸಾರಾಸಗಟಾಗಿ ಬೆಂಬಲಿಸುವುದರ ಸಮಸ್ಯೆಗಳನ್ನು, ಕೆನೆಪದರ ನೀತಿ, ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಮೀಸಲಾತಿ ಕೊಡುವ ಕ್ರಮಗಳನ್ನು ಚರ್ಚಿಸುತ್ತದೆ.
ಡಾ. ರಹಮತ್ ತರೀಕೆರೆಯವರು ತಮ್ಮ ಎಂದಿನ ಶೈಲಿಯಲ್ಲಿ ಆಪ್ತವಾಗಿ ಬರೆದ ಲೇಖನವು ಮನುಷ್ಯರಿಗಿಂತ ಪ್ರಾಣಿಗಳ ಮೇಲೆ ಹುಸಿ ಪ್ರೀತಿ ತೋರಿಸುವ ವಿವೇಚನಾರಹಿತ ಹಿತಾಸಕ್ತಿಗಳ ಬಣ್ಣವನ್ನು ಬಯಲು ಮಾಡುತ್ತದೆ. ದಿನೇಶ್ ಅಮೀನ್‌ಮಟ್ಟು ಅವರ ಲೇಖನವು ಇಂದು ಜಾತಿ ಜನಗಣತಿಯನ್ನು ವಿರೋಧಿಸುವವರ ಮನಸ್ಥಿತಿಯನ್ನು ಬಯಲು ಮಾಡುತ್ತದೆ.
ಪಿ.ಲಂಕೇಶ್ ಹಾಗೂ ನಂಜುಂಡಸ್ವಾಮಿಯವರ ಬರಹಗಳನ್ನೂ ಒಳಗೊಂಡಿರುವುದು ಇಡೀ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ ಎನ್ನಬಹುದು. ಲಂಕೇಶ್ ನಿಜಕ್ಕೂ ಜಾತ್ಯಾತೀತರಾಗಿ ಬದುಕುವ ಕಲೆಯ ಕುರಿತು ಹೇಳಿದ್ದಾರೆ. ನಂಜುಂಡಸ್ವಾಮಿಯವರ ಲೇಖನವೂ ಸಹ ಹಿಂದುಳಿದ ವರ್ಗಗಳ ಸಾಮಾಜಿಕ ಹೋರಾಟದ ಅಗತ್ಯತೆಯನ್ನು ಅಂದು ಅವರು ಪರಿಭಾವಿಸಿದ ಬಗೆಯನ್ನು ತಿಳಿಸುತ್ತದೆ.
ಬಹತೇಕ ಎಲ್ಲಾ ಲೇಖನಗಳ ದಾಟಿಗೆ ಹೊರತಾಗಿರುವಂತಾದ್ದು ಆನಂದ ತೇಲ್ತುಂಬ್ಡೆಯವರ ಜಾತಿ ಜನಗಣತಿ: ಆಳುವ ವರ್ಗಕ್ಕೆ ಲಾಭ ಲೇಖನ. ಇಂದು ಜಾತಿ ಜನಗಣತಿ ಹಾಗೂ ಹಿಂದುಳಿದ ವರ್ಗಗಳ ಜಾತಿಯಾಧಾರಿತ ಮೀಸಲಾತಿಗಳು ವಾಸ್ತವದಲ್ಲಿ ಜಾತಿನಿರ್ಮೂಲನೆ ಉದ್ದೇಶಕ್ಕೆ ಗಂಭೀರ ತೊಡಕಾಗುವಂತಾದ್ದು ಎನ್ನುವುದು ಅವರ ಖಚಿತ ನಿಲುವು.
ಹೀಗೆ ಅಸಮಾನ ಭಾರತ ಕೃತಿಯು ದಲಿತ, ಶೋಷಿತ ಜನವರ್ಗಗಳ ಪರವಾಗಿಯೇ ಯೋಚಿಸುವವರಲ್ಲಿಯೇ ಇರುವ ಅಭಿಪ್ರಾಯ ಭೇದಕ್ಕೆ ವೇದಿಕೆಯಾಗಿರುವುದರಿಂದ ಓದುಗರನ್ನು ಗಂಭೀರ ಚಿಂತನೆಗೆ ಪ್ರೇರೇಪಿಸುತ್ತದೆ.
ಈ ಕೃತಿಯ ಲೇಖನಗಳನ್ನು ಶ್ರಮವಹಿಸಿ ಸರಿಪಡಿಸಿರುವ ಪುಸ್ತಕದ ಸಂಪಾದಕರಾದ ಡಾ. ಎಚ್.ಎಸ್. ಅನುಪಮ, ಡಾ.ಜಿ. ಕೃಷ್ಣ ಮತ್ತು ಕೆ.ಎಲ್. ಚಂದ್ರಶೇಖರ್ ಐಜೂರು ಅವರ ಪ್ರಯತ್ನ ಅಭಿನಂದನಾರ್ಹ

ಕ್ಷಮಿಸಿ, ಸಾಫ್ಟ್‌ವೇರ್ ಕರಪ್ಟಾಗಿದೆ

ಯಾಕೋ ಈ ನಾಡಿನ
ಸಾಫ್ಟ್‌ವೇರುಗಳೆಲ್ಲಾ ಕರಪ್ಟಾಗಿವೆ
ಐಕಾನುಗಳಿಗೆ.ಇಮೇಜುಗಳಿಗೆ
ಸಿಪಿಯುನೊಂದಿಗೆ ಸಂಬಂಧವೇ ಕಟ್ಟಾಗಿದೆ

ನೆಚ್ಚಿಕೊಂಡ ಪ್ರೊಗ್ರಾಮುಗಳಲ್ಲಿ
ಠಿಠಿಠಿ ವೈರಸ್ ಹತ್ತಿಕೊಂಡಿದೆ
ಕರ್ನಾಟಕವನ್ನು ಎಷ್ಟೇ ಗೂಗಲಾಡಿದರೂ
ಎಲೆಕ್ಟ್ರಾನಿಕ್ ಸಿಟಿಯನ್ನು ಬಿಟ್ಟು ಬೇರೇನೂ ಬರದಂತಾಗಿದೆ

ಅಷ್ಟೇ ಇದ್ದರೆ ಪರವಿಲ್ಲ,
ಇಲ್ಲಿ, ಮದರ್ ಬೋರ್ಡಿಗೇ ತ್ರೋಜನ್ ಹತ್ತಿಕೊಂಡಿದೆ
ಒಳದೊಳಗನ್ನು ಕೊರೆಯುತ್ತಾ
ಮೆಮೊರಿ ಫೈಲುಗಳನ್ನೆಲ್ಲಾ ನಾಶ ಮಾಡಿದೆ

ಈಗ ಯಾವ ಮೆಮೊರಿಯೂ ಇಲ್ಲ
ವಿದ್ಯೆ ಕೊಡದೆ ದಕ್ಷಿಣೆ ಪಡೆದುಕೊಂಡಿದ್ದೂ
ಮಹಾಮನೆಗೆ ಬೆಂಕಿಹಚ್ಚಿದ್ದು, ತಥಾಗತನನ್ನು ಓಡಿಸಿದ್ದೂ,
ಮಹಾಮಾನವನ ನಾಲಿಗೆಯನ್ನೇ ಕಿತ್ತದ್ದು
ಯಾವ ಮೆಮೋರಿಯೂ ಇಲ್ಲ

ಮೊನ್ನೆಮೊನ್ನೆ ಹಾಕಿಸಿದ ಗಣತಂತ್ರದ ಮದರಬೋಡಿಗೆ
ಮೆಮೊರಿ ಆಪ್ಷನ್ನೇ ತೆಗೆದುಹಾಕಲಾಗಿದೆಯಂತೆ
ಈಗ ಪ್ರಜಾತಂತ್ರದ ಸಾಫ್ಟ್‌ವೇರೂ ಬರುವುದೇ ಹೀಗಂತೆ!
ಇಂದು ಭಾರತ, ನಾಳೆ ಈಜಿಪ್ಟು, ಲಿಬಿಯಾ ಎಲ್ಲದ್ದು ಒಂದೇ ಕಥೆ

ಹಿಂದಿಗಿಂತಾ ಭಿನ್ನ ಹೌದು
ಏನೂ ಕೊಡಲ್ಲ ಅಂತೇನಲ್ಲ
ಬಿಲ್ಲನ್ನು ಕೊಡುತ್ತಾರೆ, ಬಾಣವನ್ನಲ್ಲ,
ಬಂದೂಕು ಕೊಡುತ್ತಾರೆ, ಗುಂಡುಗಳನ್ನಲ್ಲ,
ಅಕ್ಷರ ಕೊಡುತ್ತಾರೆ, ಅರ್ಥವನ್ನಲ್ಲ

ಮೆಮೋರಿ ಲಾಸಾಗಿದೆ, ಎಲ್ಲವೂ ಮರೆತಿದೆ
ಅನೆಸ್ತೇಷಿಯಾ ತಿನ್ನುತ್ತಾ ಆಪರೇಷನ್ ಟೇಬಲ್ಲಿನ ಮೇಲೆ
ಅರ್ಧ ಶತಮಾನ
ಕಳೆದದ್ದೂ ಮರೆತುಹೋಗಿದೆ
ಮತ್ತೆ,
ಸಂವಿಧಾನದ ವೈರಸ್ ಗಾರ್ಡು ಎಕ್ಸ್‌ಪೈರಿ ಆಗಿಬಿಟ್ಟಿದೆ
ಕಾರ್ಯಾಂಗದ ಫೈಲುಗಳಲ್ಲೂ, ಶಾಸಕಾಂಗದ ಫೋಲ್ಡರುಗಳಲ್ಲೂ
ಜನತೆಯ ವಿಂಡೋ ಬಂದಾಗಿದೆ
ಈ ಪ್ರಜಾತಂತ್ರದ ಲ್ಯಾಪ್‌ಟಾಪಿಗೆ ಬ್ಯಾಟರಿ ಡ್ರೈವೇ ಇಲ್ಲ
ಜನಮನದ ಮೇನ್‌ಸ್ವಿಚ್ಚಿನೊಂದಿಗೆ ಕನೆಕ್ಷನ್ನೂ ಇಲ್ಲ
ಅದಕೆಂದೇ ಸತ್ತ ರೈತನ ಸೂತಕವಿದ್ದರೂ
ಇಲ್ಲಿ ಸಮ್ಮೇಳನ ಸಂಭ್ರಮಗಳು ನಡೆಯುತ್ತವೆ
ಕರುಳಿನ ಬೇನೆಯರಿಯದ ಮೆದುಳು
ಕೊಂದವನಿಗೇ ಜೈಕಾರ ಹಾಕುತ್ತದೆ


ಇನ್ನು ವೈರಸ್ ಗಾರ್ಡ್‌ಗಳಾಕಿ ಪ್ರಯೋಜನವಿಲ್ಲ
ಮೆಮೋರಿ ಮರೆಯದ ಮದರ್ ಬೋರ್ಡ್ ಹಾಕಬೇಕು
ಮನುಷ್ಯತ್ವಕ್ಕೆ ವೈರಸ್ ಹತ್ತದ ಸಾಫ್ಟ್‌ವೇರನ್ನು ಹಾಕಬೇಕು
ಅದಕ್ಕೇ ಬೇಕಾದ ಪ್ಲಾಟ್‌ಫಾರಮ್ಮು ಇಲ್ಲವೆಂದರೆ
ನಮ್ಮ ಲ್ಯಾಪು ಮತ್ತದರ ಟಾಪು ಎರಡನ್ನೂ ಬದಲಿಸಬೇಕು.


- ಶಿವಸುಂದರ್

Monday, March 07, 2011

ಬದುಕಿನ ಬಣ್ಣ ಮತ್ತು ಬಣ್ಣದ ಬದುಕು

ಬೇರೆ ಕಡೆಗಳಲ್ಲಿ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಉತ್ತರ ಕರ್ನಾಟಕದ ಜರ್ನಲಿಸಂ ಡಿಪಾರ್ಟಮೆಂಟುಗಳಲ್ಲಿ ಮಾತ್ರ ಕೋರ್ಸು ಸೇರುವ ಹುಡುಗಿಯರ ಸಂಖ್ಯೆ ಕಣ್ಣಿಗೆ ರಾಚುವಷ್ಟು ಕಡಿಮೆ. ನಮ್ಮ ಸೀನಿಯರ್‍ಸ ಮೂವತ್ತು ಜನರಲ್ಲಿ ಕೇವಲ ನಾಲ್ಕು ಜನ ಹುಡುಗಿಯರಿದ್ದಾರೆ. ಆದರೆ ಕ್ಲಾಸಿನಲ್ಲಿ ಅವರ ಮಾತೇ ನಡೆಯುವುದು ಎನ್ನುವುದು ಬೇರೆ ವಿಷಯ. ನಮ್ಮ ಕ್ಲಾಸಿನಲ್ಲಿ ಕೂಡ ನಾವು ಏಳೇ ಹುಡುಗಿಯರು ಇರುವುದು. ಇಲ್ಲಿ ಮುಖ್ಯವಾಗಿ ಹೇಳಬೇಕಾದುದೆಂದರೆ ನಮ್ಮ ಕ್ಲಾಸಿನ ಹುಡುಗರ್‍ಯಾರೂ ನಮ್ಮನ್ನು ಹುಡುಗಿಯರು ಅಂತ ಪ್ರತ್ಯೇಕವಾಗಿ ನೋಡುವುದೇ ಇಲ್ಲ. ನಾವು ತಟಕ್ಕೆಂದು ಕೇಳುವ ಸಣ್ಣ ಸಣ್ಣ ಪ್ರಶ್ನೆಗಳಿಗೆ ಉತ್ತರಿಸುವಾಗ ಬೆವರುವುದಿಲ್ಲ, ನಾವು ಜೊತೆಗಿದ್ದಾಗ ಬೇರೆ ಡಿಪಾರ್ಟಮೆಂಟಿನ ಹುಡುಗಿಯರ ಟಾಪ್‌ನ ಅಳತೆಯ ಬಗ್ಗೆಯೋ ಅಥವಾ ಅವರ ದಾವಣಿಯ ಮುದ್ದಾದ ಸುಕ್ಕುಗಳ ಬಗ್ಗೆಯೋ ಅಥವಾ ಅವರ ಮುಂಗುರುಳು ಸಹಜವಾಗಿ ಹಾರುತ್ತದೋ ಇಲ್ಲಾ ಅದರ ಹಿಂದೆ ಬ್ಯೂಟೀಷಿಯನ್‌ಗಳ ಕೈವಾಡವಿದೆಯೋ ಎಂಬುದರ ಬಗ್ಗೆಯೋ ನಿಸ್ಸಂಕೋಚವಾಗಿ ಚರ್ಚಿಸಬಲ್ಲರು. ನಾವು ಕೂಡ ನಿಮಗೆ ಹುಡುಗಿಯರು ಅಂದರೆ ಹಣೆಯ ಮೇಲಿಷ್ಟು ಕೂದಲು ಬಿಟ್ಟು, ತುಸು ಬೆಳ್ಳಗಿದ್ದು ಪರ್‌ಫ್ಯೂಮ್ ಮೂಗಿಗೆ ಹೊಡೆಯುವಂತಿದ್ದರೆ ಸಾಕು ಮಕ್ಕಳೇ ಕಣ್ಣುಮುಚ್ಚಿ ಹಿಂದೆ ಹೋಗಿಬಿಡುತ್ತೀರಿ ಅಂತ ರೇಗಿಸುತ್ತಿರುತ್ತೇವೆ. ಇದೆಲ್ಲವನ್ನೂ ಇಲ್ಲಿ ಏಕೆ ಹೇಳಲೇಬೇಕು ಅನ್ನಿಸಿತೆಂದರೆ ಗಂಡು ಹೆಣ್ಣಿನ ಸಂಬಂಧ ನಗರಗಳಲ್ಲಿ ಹೇಗೆ ಮೆಲ್ಲಗೆ ಹೊಸ ರೂಪ, ಹೊಸ ಅಂಗಿ ತೊಟ್ಟು ಸಹಜವಾಗುತ್ತಿದೆ ಎಂಬುದನ್ನು ಈ ಮಹಿಳಾ ದಿನಾಚರಣೆಯ ಹೊತ್ತಿನಲ್ಲಿ ನೆನೆಯಲೇಬೇಕು ಅಂತ ಅನ್ನಿಸಿತು. ಆ ಮೂಲಕ ಸ್ತ್ರೀವಾದದ ಕ್ಲೀಷೆ ಮೀರಿ ಹೆಣ್ಣಿನ ವ್ಯಕ್ತಿತ್ವ ವಿಕಸಿತವಾಗುತ್ತ ನಡೆದಿದೆ ಎಂದು ದಿಟ್ಟವಾಗಿ ನುಡಿಯಬಹುದು.
ಮೊನ್ನೆಯೂ ಹಾಗೆಯೇ ಆಯಿತು. ನಮ್ಮ ಡಿಪಾರ್ಟಮೆಂಟಿನಲ್ಲಿ ರಾಜ್ಯಮಟ್ಟದ ಮೀಡಿಯಾ ಫೆಸ್ಟ ಆರ್ಗನೈಸ್ ಮಾಡಿದ್ದೆವು. ಅಷ್ಟು ದೊಡ್ಡ ಇವೆಂಟ್ ಎಂದರೆ ಫೆಸ್ಟ ಹತ್ತಿರ ಬರುತ್ತಿದ್ದಂತೆ ಅದೂ ಇದೂ ಕೆಲಸ ಅಂತ ರಾತ್ರಿ ಒಂಭತ್ತು ಹೊಡೆದೇಬಿಡುತ್ತಿತ್ತು. ಆಗ ಮನೆಯಿಂದ ಪಪ್ಪ ಫೋನ್ ಮಾಡಿ ಪೀಜಿಯ ತನಕ ಒಬ್ಬಳೇ ಹೋಗಬೇಡ, ಕ್ಲಾಸಿನ ಹುಡುಗರನ್ಯಾರಾದರನ್ನೂ ಜೊತೆಗೆ ಕರೆದುಕೊಂಡು ಹೋಗು ಅಂತ ಹೇಳುತ್ತಿದ್ದರು. ಪಪ್ಪ ಅಮ್ಮನ ಮುಂದೆ ಕೂಡ ಇವನು ನನ್ನ ಫ್ರೆಂಡ್ ಅಂತ ಯಾವುದೇ ಹಿಂಜರಿತವಿಲ್ಲದೇ ಇಂದಿನ ಹುಡುಗಿಯರು ಪರಿಚಯ ಮಾಡಿಕೊಡುತ್ತಾರೆ.
ಮೊದಲೆಲ್ಲ ಟಾಯ್ಲೆಟ್ಟಿಗೆ ಹೋಗಬೇಕೆಂದರೂ ಹುಡುಗಿಯರು "ಲೇ ಪ್ಲೀಸ್ ಬಾರಲೇ" ಅಂತ ತಮ್ಮ ಸ್ನೇಹಿತೆಯರನ್ನು ಜೊತೆಗೆ ಕರೆಯುತ್ತಿದ್ದರು. ಆದರೆ ಇಂದು ಆಕೆ ಒಬ್ಬಳೇ ದುರ್ಗದಬೈಲಿಗೆ ಶಾಪಿಂಗ್ ಹೋಗಬಲ್ಲಳು, ತನ್ನಿಷ್ಟದ ಪಾನೀಪುರಿಯನ್ನು ಒಬ್ಬಳೇ ಸವಿಯಬಲ್ಲಳು, ಬಿಸಿಲಿನಿಂದ ಕಂಗೆಟ್ಟಾಗ ಒಬ್ಬಳೇ ಹೋಗಿ ಎಳನೀರನ್ನೋ ಕಬ್ಬಿನಹಾಲನ್ನೋ ಕೋಲ್ಡ ಬದಾಮ್ ಮಿಲ್ಕ್ ಅನ್ನೋ ಕುಡಿಯುವ ನಿರಾಳತೆಯನ್ನು ಅನುಭವಿಸಬಲ್ಲಳು, ಇಷ್ಟದ ಸಿನಿಮಾವನ್ನು ಒಬ್ಬಳೇ ಹೋಗಿ ಕೂತು ನೋಡಿ ಬಂದು ಹೊಸತನದಿಂದ ಕಂಗೊಳಿಸಬಲ್ಲಳು. ಚಿನ್ನದ ಕಂಪನಿಯವರೊಂದು ಜಾಹಿರಾತು ಕೊಡಿತ್ತಾರಲ್ಲ 'ಃeಚಿuಣiಜಿuಟಟಥಿ ಥಿou' ಅಂತ ಅಷ್ಟೇ ನಿರಮ್ಮಳ, ನಿಶ್ಕಪಟ ಆತ್ಮವಿಶ್ವಾಸದ ಗೆರೆಯಿದು.. ಆ ಗೆರೆಯುದ್ದಕ್ಕೂ ತನ್ನ ತೀಕ್ಷ್ಣ ದೃಷ್ಟಿಯನ್ನು ಅಷ್ಟೇ ಸೂಕ್ಷ್ಮವಾಗಿ ಬೀರಬಲ್ಲಳು. ತನ್ನ ಸ್ವಂತ ನಿರ್ಧಾರವನ್ನೂ, ಅನಿಸಿಕೆಯನ್ನೂ ಯಾವ ಕಳವಳವೂ ಇಲ್ಲದೇ ಯಾರ ಹಂಗೂ ಇಲ್ಲದೇ ನಿಶ್ಚಿತವಾಗಿ ಪ್ರಕಿಟಿಸಬಲ್ಲಳು.
ಇವೆಲ್ಲಕ್ಕೂ ಕಾರಣಗಳಲ್ಲಿ ಬಹುಶಃ ಮಾಧ್ಯಮದ ಪಾತ್ರವೂ ಮುಖ್ಯವಿರಬಹುದು. ತನ್ನ ಒಂದು ಸಂದರ್ಶನದಲ್ಲಿ ಐಶ್ವರ್ಯ ರೈ 'I ಚಿm ಠಿಡಿouಜ ಣo be ಚಿ ತಿomಚಿಟಿ' ಅಂತ ಹೇಳದ್ದೋ ಅಥವಾ ಶೀಲಾ ಕಿ ಜವಾನಿಯಲ್ಲಿ ಕತ್ರೀನಾ 'ಕಿಸೀ ಔರ ಕಿ ಮುಝಕೋ ಜರೂರತ ಕ್ಯಾ, ಮೈ ತೋ ಖುದ್ ಸೇ ಪ್ಯಾರ ಜತಾವೂ' ಎಂದು ಆತ್ಮವಿಶ್ವಾಸದಿಂದ ಉಸುರಿದ್ದೂ ಇಂದಿನ ಹುಡುಗಿಯರ ಹೊಸ ವ್ಯಕ್ತಿತ್ವದ ಬೆನ್ನೆಲುಬಾಗಿದ್ದೂ ಸ್ವಲ್ಪಮಟ್ಟಿಗೆ ಸತ್ಯ. ನಮ್ಮ ಮನೆಯ ಕೆಲಸಕ್ಕೆ ಬರುವ ಚೆನ್ನವ್ವ ಕುಡಿದು ಬರುವ ಗಂಡನಿಗೆ ದಿನವೂ ತಾನೇ ಹೊಡೆಯುತ್ತಾಳೆ. ಇಂಟರ್ನೆಟ್ ಎಂಬ ಮಾಯಾಜಾಲ ಮೇನ್‌ಸ್ಟ್ರೀಮಿಗೆ ಬಂದಮೇಲಂತೂ ಜಗತ್ತಿನ ಎಲ್ಲ ಸಂಗತಿಗಳನ್ನೂ ಆಕೆ ತಿಳಿದುಕೊಳ್ಳುತ್ತಿದ್ದಾಳೆ. ಮಣಿಪುರದಲ್ಲಿ ನಡೆದ ಹಿಂಸೆಯ ಕುರಿತಾಗಿಯೂ ಫೇಸ್‌ಬುಕ್ಕಿನಲ್ಲಿ ಛಿಚಿuse ಕ್ರಿಯೇಟ್ ಮಾಡಿ ತನ್ನದೇ ರೀತಿಯಲ್ಲಿ ಪ್ರತಿಭಟಿಸಿದ್ದಾಳೆ. ಇಂದು ಜಗತ್ತಿನ ಯಾವ ಸಂಗತಿಯೂ ಅವಳ ಕೈಗೆಟುಕದಷ್ಟು ದೂರದಲ್ಲಿ ಇಲ್ಲ. ಇವಳಿಗೆ ಖಂಡಿತವಾಗಿಯೂ 'ಮಹಿಳಾ ದಿನಾಚರಣೆ'ಯ ಪ್ರತ್ಯೇಕತೆ ಅವಶ್ಯಕತೆಯೂ ಇಲ್ಲ, ಅನಿವಾರ್ಯವೂ ಅಲ್ಲ.
* * * * * * * * * *
ಆದರೆ ಸಂಕಟದ ಸಂಗತಿಯೆಂದರೆ ಮೇಲೆ ಹೇಳಿದ ಎಲ್ಲ ಬಗೆಯ ಹೆಣ್ಣುಮಕ್ಕಳು ಒಳಗೊಳ್ಳುವುದು ಕೇವಲ ೫% ನಷ್ಟು ಮಹಿಳಾ ಜನಸಂಖ್ಯೆಯನ್ನು ಮಾತ್ರ. ಉಳಿದ ಹೆಣ್ಣುಮಕ್ಕಳು ಇಂದಿಗೂ ಮನೆಯಿಂದ ಹೊರಗೆ ಹೆಜ್ಜೆಯಿಡಲು ಮನೆಯವರ ಮರ್ಜಿ ಕಾಯುತ್ತಾರೆ. ಎಷ್ಟೋ ಆಫೀಸುಗಳಲ್ಲಿ ವಯಕ್ತಿಕ ಹಿಂಸೆಯನ್ನು ಮೌನವಾಗಿ ಅನುಭವಿಸುತ್ತಿದ್ದಾರೆ, 'ಹೆಣ್ಣು' ಎಂಬ ಒಂದೇ ಕಾರಣಕ್ಕೆ 'ಯಾರಿಗೆ ಬೇಕ್ರೀ ರಗಳೆ' ಎನ್ನಿಸಿಕೊಂಡು ಎಷ್ಟೋ ಇಂಟರ್ವ್ಯೂಗಳಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ, ಒಂದೇ ಕೊಡ ನೀರಿನ ಸಲುವಾಗಿ ಆರು ಮೈಲಿ ನಡೆದೇ ಜೀವ ಸವೆಸುವವರಿದ್ದಾರೆ, ಸ್ವಂತ ಹೊಟ್ಟೆಯ ಕುಡಿಗಳನ್ನು ವರ್ಷಾನುಗಟ್ಟಲೇ ನೋಡಲಾರದೇ ಬತ್ತಿದ ಕಣ್ಗಳಲ್ಲಿ ಕಾಣದ ಬಂಧುಗಳ ಬರುವಿಕೆಗಾಗಿ ಕಾಯುತ್ತಿರುವ ಜೈಲು ಹಕ್ಕಿಗಳಿದ್ದಾರೆ, ಸಂಜೆಯಾಗುತ್ತಲೇ ಎಬ್ಬಿಸಿಕೊಂಡು ಆರಿದ ತುಟಿ-ಕೆನ್ನೆಗಳಿಗೆ ರಂಗು ಬಳಿದುಕೊಂಡು ಫೇರ್ ಅಂಡ್ ಲವ್ಲಿಯನ್ನೇ ಕೂದಲಿಗೂ ಹಚ್ಚಿಕೊಂಡು ಸೆಟ್ ಮಾಡುತ್ತ ಕಣ್ಣಿನ ಸನ್ನೆಗಳನ್ನು ತನ್ನದೇ ವೃತ್ತಿಯ ಹಿರಿಯರಿಂದ ಹೊಸದಾಗಿ ಕಲಿಯುತ್ತಿರುವ ಹದಿನೈದು ವರುಷದ ತಂಗಿಯರೂ ಇಲ್ಲೇ, ಇದೇ ಊರಿನಲ್ಲಿ, ನಮ್ಮ ಕಣ್ಣಳತೆಯಿಂದ ತುಸುವೇ ಮರೆಯಲ್ಲಿ, ಕತ್ತಲಿನಲ್ಲಿ ಇದ್ದಾರೆ. ಅವರ ಕಷ್ಟಗಳನ್ನು ತುಸುವಾದರೂ ದೂರಮಾಡಲು, ಅವರ ಅಸಹಾಯಕತೆಯನ್ನು ಚೂರಾದರೂ ಹೊಡೆದೋಡಿಸಲು, ಅವರ ಬದುಕಿನಲ್ಲಿ ಬೇರೆ ಬಣ್ಣಗಳೂ ಇವೆ ಅಂತ ಸಮಾಜಕ್ಕೆ ಮತ್ತು ಸ್ವತಃ ಅವರಿಗೇ ತೋರಿಸಿಕೊಡಲು ಮಹಿಳಾ ದಿನಾಚರಣೆ ಎಂಬ ಪ್ರತ್ಯೇಕವಾದ ಆಚರಣೆ ಖಂಡಿತ ಬೇಕು. ಇದೊಂದು ದಿನವಾದರೂ ಒಟ್ಟಿಗೆ ಕೂತು ಕತ್ತಲಲ್ಲಿರುವ ಈ ಗೆಳತಿಯರ ಸೌಖ್ಯಕ್ಕಾಗಿ ತುಸು ಸಮಯ ವ್ಯಯಿಸಿದರೆ ಏನೂ ತಪ್ಪಿಲ್ಲ ಎಂಬುದೇ ನನ್ನ ನಂಬಿಕೆ.
ಕಾವ್ಯಾ ಪಿ ಕೆ
೨ನೇ ಸೆಮಿಸ್ಟರ್ ಎಂಎ
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
ಸೆಲ್: ೯೭೩೯೦೫೧೩೭೨
ಮಿಂಚಂಚೆ: ಞಚಿvಥಿಚಿ.ಞಚಿಜಚಿme@gmಚಿiಟ.ಛಿom

*ನಾವೀಗ ಬಂಡೆಗಳ ಮೇಲೆ ಚಿಗುರಬೇಕಿದೆ..*

* `ಒಂದು ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಅದರ
ಮಹಿಳೆಯರ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.* -ಅಂಬೇಡ್ಕರ್*
* `ಹೆಣ್ಣು ಬೇರೆ, ಗಂಡು ಬೇರೆ. ಆದರೆ ಇಬ್ಬರೂ ಸಮಾನ.*
* - ಗಾಂಧೀಜಿ. *
೨೦೧೧ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶತಮಾನೋತ್ಸವ ವರ್ಷ.
ಒಂದು ನೂರು ವರ್ಷಗಳಿಂದ ಮಹಿಳೆಗಾಗಿಯೇ ಒಂದು ದಿನ ಮೀಸಲಿಟ್ಟು ಮಹಿಳಾ
ಹಕ್ಕುಗಳ ಜಾಗೃತಿಯ ಕುರಿತು ಮಾತನಾಡುತ್ತಿದ್ದೇವೆ. ಆದರೂ
ಪರಂಪರಾನುಗತವಾಗಿ ಪುರುಷಪ್ರಧಾನ ವ್ಯವಸ್ಥೆಯಿರುವ ಭಾರತದಲ್ಲಷ್ಟೇ ಅಲ್ಲ,
ವಿಶ್ವದ ಬಹುಪಾಲು ದೇಶಗಳಲ್ಲಿ ಮಹಿಳೆಯ ಸ್ಥಿತಿಗತಿ, ಸ್ಥಾನಮಾನಗಳಲ್ಲಿ ಗುಣಾತ್ಮಕ
ಬದಲಾವಣೆ ಆಗಬೇಕಾಗಿದೆ. ಎಲ್ಲ ಸಮಾಜಗಳೂ, ಧರ್ಮಗಳೂ ಒಂದಲ್ಲ ಒಂದು ರೀತಿಯಲ್ಲಿ
ಲಿಂಗಸಂಬಂಧೀ ತಾರತಮ್ಯವನ್ನು ರೂಢಿಸಿಕೊಂಡು ಬಂದಿವೆ. ಹೆಣ್ಣಿಗೆ ಒಂದನ್ನು ಕೊಟ್ಟರೆ
ಹತ್ತನ್ನು ಕಸಿದುಕೊಳ್ಳಲಾಗಿದೆ. ಧರ್ಮ-ದೇಶದ ಅಂತರವಿಲ್ಲದೆ ಎಲ್ಲ
ಸಮುದಾಯಗಳೂ ಹೆಣ್ಣು ಮತ್ತವಳ ಶೋಷಣೆಯ ವಿಧಾನಗಳನ್ನು
ನವೀಕರಣಗೊಳಿಸಿಕೊಳ್ಳುತ್ತ ಬಂದಿವೆ. ಪಾವಿತ್ರ್ಯವನ್ನು ಕಾಪಾಡಬೇಕಾದ ಅಗತ್ಯವಿರುವ
ಕಡೆ ವಿಧಿನಿಷೇಧಗಳು ಹುಟ್ಟುತ್ತವೆ. ಅದರಲ್ಲೂ ಹೆಣ್ಣಿನ ಪಾವಿತ್ರ್ಯ ಕಾಪಾಡುವುದು
ಪುರುಷಪ್ರಧಾನ ಸಮಾಜದ ಪ್ರಮುಖ ಆದ್ಯತೆ. ಹಾಗಾಗಿ ಅವಳ ಮೇಲೆ ಹೇರಲ್ಪಟ್ಟ
ಕಟ್ಟುಪಾಡುಗಳು ಧಾರ್ಮಿಕ ನಿಷೇಧಗಳು, ಮದುವೆಯ ಆಚರಣೆಗಳು,
ಚಲನವಲನ-ಕರ್ತವ್ಯ-ವೇಷಭೂಷಣಗಳ ನಿರ್ದೇಶನ ಇತ್ಯಾದಿ ನಾನಾ ರೂಪಗಳನ್ನು
ಪಡೆದುಕೊಂಡಿವೆ. ಸ್ವಾತಂತ್ರಾನಂತರ ಭಾರತದಲ್ಲಿ ಪ್ರಜಾಪ್ರಭುತ್ವವು ಮಹಿಳೆಗೆ
ಮೂಲಭೂತ ಹಕ್ಕುಗಳನ್ನೇನೋ ನೀಡಿತಾದರೂ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶ
ಗಳಿಸಲು ವಿಫಲಳಾಗುತ್ತಿದ್ದಾಳೆಂದು ಮಹಿಳಾ ಮೀಸಲಾತಿಗೆ ಒತ್ತಾಯ ಕೇಳಿಬರುತ್ತಿದೆ.
ಜಾತಿಯನ್ನು ಗಣನೆಗೆ ತೆಗೆದುಕೊಳ್ಳದೇ ಭಾರತದ ಯಾವ ಸಾಮಾಜಿಕ
ಸಮಸ್ಯೆಯ ಬಗೆಗೂ ಮಾತನಾಡಲಾರೆವು. ಮಹಿಳಾ ಸಮಸ್ಯೆಯ ಬಗೆಗೂ ಕೂಡಾ.
ಮಹಿಳೆಯರು ಎಂಬ ಗುಂಪು-ಪ್ರಭೇಧ ಒಂದೇ. ಇಬ್ಬರೂ ಅನುಭವಿಸುವ ಜೈವಿಕ,
ದೈಹಿಕ ಅವಸ್ಥೆಗಳೂ, ನೋವೂ ಒಂದೇ. ಆದರೆ ಈ ಸಾಮ್ಯತೆ ಇಲ್ಲಿಗೇ ನಿಲ್ಲುತ್ತದೆ.
ಮೇಲ್ಜಾತಿ ಹಾಗೂ ತಳಸಮುದಾಯದ ಹೆಣ್ಣುಮಕ್ಕಳು ಅನುಭವಿಸುವ ಕಷ್ಟಗಳೂ,
ಅವರ ಬಿಡುಗಡೆಯ ದಾರಿಗಳೂ ಬೇರೆಬೇರೆಯಾಗಿವೆ. ವಿಮೋಚನೆ ಎಂಬುದು
ತಳಸಮುದಾಯದ ಹೆಣ್ಣಿಗೆ ಹಲವು ಆಯಾಮಗಳಲ್ಲಿ ದೊರಕಬೇಕಾದಂಥದು.
ಸ್ವಾತಂತ್ರ ಹೋರಾಟ ಕಾಲದ ಸಮಾಜ ಸುಧಾರಣೆಯ ಚಟುವಟಿಕೆಗಳನ್ನು ಗಮನಿಸಿದಲ್ಲಿ
ಇದು ಸ್ಪಷ್ಟವಾಗುತ್ತದೆ. ಸಮಾಜದ ಅನೇಕ ಅನಿಷ್ಟಗಳ ವಿರುದ್ಧವೂ ಜನಜಾಗೃತಿ
ಮೂಡಿದ ಕಾಲವದು. ಅಂದಿನ ಸಮಾಜ ಸುಧಾರಕರು ಮಹಿಳಾ ಶೋಷಣೆಯ
ವಿಷಯಗಳನ್ನೇ ಮುಖ್ಯವಾಗಿ ಕೈಗೆತ್ತಿಕೊಂಡರು.* *ಬಾಲ್ಯ ವಿವಾಹ, ವಿಧವಾ ಪದ್ಧತಿ, ಸತಿ
ಸಹಗಮನದಂತಹ ಅನಿಷ್ಟ ಪದ್ಧತಿಗಳನ್ನು ಕೈಬಿಡುವಂತೆ, ಮಹಿಳೆಯರಿಗೂ ಶಿಕ್ಷಣ
ನೀಡುವಂತೆ ಸಮಾಜದ ಮನವೊಲಿಸಲಾಯಿತು. ವಿಷಾದವೆಂದರೆ ಮೇಲ್ವರ್ಗದ
ಸ್ತ್ರೀಯರು ಎದುರಿಸುತ್ತಿದ್ದ ಈ ಸಾಮಾಜಿಕ ಅನಿಷ್ಟಗಳು ಪಡೆದಷ್ಟು ಗಮನವನ್ನು
ಕೆಳವರ್ಗದ ಸ್ತ್ರೀಯರು ಅನುಭವಿಸುತ್ತಿದ್ದ ದೇವದಾಸಿ ಪದ್ಧತಿ, ಬೆತ್ತಲೆ ಸೇವೆ,
ಸಾಮೂಹಿಕ ಅತ್ಯಾಚಾರದಂತಹ ಯಾತನಾಮಯ ವಿಷಯಗಳು ಪಡೆಯಲೇ ಇಲ್ಲ.
ಇದನ್ನು ಇನ್ನೂ ಮುಂದುವರೆಸಿ ಹೇಳುವುದಾದರೆ ಮುಸ್ಲಿಂ ಹೆಣ್ಣುಮಕ್ಕಳು
ಅನುಭವಿಸುವ ಪ್ರತ್ಯೇಕತೆಯ ಸಂಕಟಗಳೂ, ಇತರ ಧರ್ಮಗಳ ಮಹಿಳೆಯರು
ಅನುಭವಿಸುವ ನೋವೂ ಬೇರೆಬೇರೆಯೇ ಆಗಿದೆ. ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ
ಮುಸ್ಲಿಂ ಮಹಿಳೆ ಹಿಂದೆಂದಿಗಿಂತ ಹೆಚ್ಚು ಪ್ರತ್ಯೇಕತೆಗೆ ಹಾಗೂ ನಿರ್ಬಂಧಗಳಿಗೆ
ಒಳಗಾಗಿದ್ದಾಳೆ. ಕುರಾನ್ ಹಾಗೂ ಪ್ರವಾದಿಯವರ ನಿರ್ದೇಶನಗಳು ಇಸ್ಲಾಮಿನ
ಮಹಿಳೆಯರಿಗೆ ಬೇರಾವ ಧರ್ಮದಲ್ಲೂ ಇಲ್ಲದಷ್ಟು ಸ್ವಾತಂತ್ರ್ಯ ಹಾಗೂ
ಹಕ್ಕುಗಳನ್ನು ನೀಡಿದೆ. ಆದರೆ ಇವೆಲ್ಲ ಥಿಯರಿಯಾಗೇ ಉಳಿದು ನಿಜಜೀವನದಲ್ಲಿ ಮುಸ್ಲಿಂ
ಮಹಿಳೆಯರು ದನಿ ಕಳೆದುಕೊಂಡವರಾಗಿದ್ದಾರೆ. ಮಹಿಳಾ ಸಮಸ್ಯೆಗಳ ಬಗ್ಗೆ
ಸೃಜನಾತ್ಮಕವಾಗಿ ನಿರ್ಭಿಡೆಯಿಂದ ಅಭಿವ್ಯಕ್ತಿಸುತ್ತಿದ್ದ ಮಹಿಳಾ ಬರಹಗಾರರೂ ಬಾಬ್ರಿ ಮಸೀದಿ
ಹಾಗೂ ಗೋಧ್ರಾ ಘಟನೆಗಳ ನಂತರ ತಮ್ಮ ವಿಚಾರಗಳು ಬಲಪಂಥೀಯ
ಕೋಮುವಾದಕ್ಕೆ ಆಹಾರವಾಗಬಹುದು ಎಂಬ ಹಿಂಜರಿಕೆಯಿಂದ ಮೌನ
ವಹಿಸುತ್ತಿದ್ದಾರೆ. ಮುಸ್ಲಿಂ
ಮಹಿಳೆಯ ಹಕ್ಕುಗಳ ಕುರಿತು ಮಾತನಾಡುವುದೇ ಸವಾಲಿನ ವಿಷಯವಾಗಿರುವಾಗ
ರಾಜಕೀಯದಲ್ಲಿ ಮುಸ್ಲಿಂ ಮಹಿಳೆ ಭಾಗವಹಿಸುವುದನ್ನು ಎಷ್ಟರಮಟ್ಟಿಗೆ
ನಿರೀಕ್ಷಿಸಬಹುದು?
ಮುಖ್ಯವಾಹಿನಿಯಲ್ಲಿರುವ ಹೆಣ್ಣುಮಕ್ಕಳ ಸಂಕಟವನ್ನಷ್ಟೇ ಅಲ್ಲ, ಕೇಳದ
ದನಿಗಳನ್ನೂ ಕೇಳಿಸಿಕೊಳ್ಳುವಷ್ಟು ಸೂಕ್ಷ್ಮವಾಗಬೇಕಾದ ಅವಶ್ಯಕತೆ ಇಂದು
ಹಿಂದೆಂದಿಗಿಂತ ಹೆಚ್ಚು ಇದೆ. ಈ ಕಾರಣಕ್ಕೇ ಮಹಿಳಾ ಮೀಸಲಾತಿ ಎಂದು ೩೩% ನೀಡಿದರೆ ಸಾಲದು,
ಒಳಮೀಸಲಾತಿಯೂ ಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಸರ್ವೋದಯವಷ್ಟೇ ಅಲ್ಲ,
ಅಂತ್ಯೋದಯ ಮೊದಲ ಗುರಿಯಾಗಬೇಕಾಗಿದೆ.
ಮಹಿಳೆಗೆ ತ್ಯಾಗಮೂರ್ತಿ ತಾಯಿ, ದೇವತೆ, ಪತ್ನಿ, ಗೆಳತಿ ಎಂಬ ಕಿರೀಟಗಳಿವೆ. ಆದರೆ
ಅದರೊಳಗೆ ಮುಳ್ಳಿದೆ. ಮಹಿಳೆ ದುರ್ಬಲಳು ಎಂದು ಸಮಾಜ ನಂಬಿರುವುದಷ್ಟೇ ಅಲ್ಲ,
ಅವಳನ್ನೂ ನಂಬಿಸಿಬಿಟ್ಟಿದೆ. ಭಾರತದ ಮಹಿಳಾ ಸ್ಥಿತಿಗತಿಯಂತೂ ಆಯಿತು, ವೈಜ್ಞಾನಿಕ
ಮತ್ತು ವೈಚಾರಿಕ ಕ್ರಾಂತಿಯ ಮೂಲ ನೆಲೆಯಾದ ಯೂರೋಪಿನಲ್ಲಿ, ಸ್ತ್ರೀಯರಿಗೆ
ಧಾರ್ಮಿಕವಾಗಿ ಉನ್ನತ ಸ್ಥಾನ, ಸ್ವಾತಂತ್ರ ನೀಡಿರುವ ಕುರಾನ್‌ನ್ನು ಕಾನೂನುಮೂಲವಾಗಿ
ಹೊಂದಿರುವ ಇಸ್ಲಾಮಿಕ್ ದೇಶಗಳಲ್ಲಿಯೂ ಹೆಣ್ಣಿನ ಪರಿಸ್ಥಿತಿ ಭಿನ್ನವಾಗಿಲ್ಲ.
ಇತ್ತೀಚೆಗೆ ಗಮನಕ್ಕೆ ಬಂದ ಒಂದು ಸಿನಿಮಾ ಹಾಗೂ ಮತ್ತೆರೆಡು ಘಟನೆಗಳನ್ನು
ಉಲ್ಲೇಖಿಸುತ್ತಾ ಈ ಬರಹ..
*****
೪೩ ವರ್ಷ ವಯಸ್ಸಿನ, ೨ ಮಕ್ಕಳ ತಾಯಿ ಸಕೀನೆ ಮೊಹಮ್ಮದಿ ಅಷ್ಟಿಯಾನಿ
ವಿವಾಹಬಾಹಿರ ಸಂಬಂಧ ಹೊಂದಿದವಳೆಂದು ಇರಾನಿನ ಸರ್ಕಾರ ಮರಣ ದಂಡನೆ ಶಿಕ್ಷೆ
ವಿಧಿಸಿತು. ೨೨ ವರ್ಷದ ಮಗನಿರುವ ಅವಳಿಗೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ! ಇದು
ಯೂರೋಪ್ ಅಲ್ಲದೇ ವಿಶ್ವಾದ್ಯಂತ ಮಾನವಹಕ್ಕು ಕಾರ್ಯಕರ್ತರ ಗಮನ
ಸೆಳೆಯಿತು. ಅವಳ ಶಿಕ್ಷೆಯನ್ನು ಮರು ಪರಿಗಣಿಸಿ ರದ್ದುಮಾಡಬೇಕೆಂದು ಇರಾನ್
ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಾ ಹೋಯಿತು. ಸಕೀನೆಗೆ ವಿಧಿಸಿದ ಶಿಕ್ಷೆಯ
ಮರುಪರಿಶೀಲನೆಗೆ ಅಂತೂ ಒಪ್ಪಿದರೂ ಅವಳನ್ನು ಈಗಲೂ ಜೈಲಿನಲ್ಲೇ ಇಡಲಾಗಿದೆ.
ಇದೇ ವೇಳೆ ಬ್ರಿಟಿಷ್ ಪತ್ರಿಕೆಯೊಂದು ಸಕೀನೆಯ ಕುರಿತು ಪ್ರಕಟಿಸಿದ ಬರಹದಲ್ಲಿ
ಮುಖ ಕಾಣುವಂತಿದ್ದ ಬುರ್ಖಾಧಾರಿ ಮಹಿಳೆಯ ಫೋಟೋ ಪ್ರಕಟಿಸಿತು. ಅದು ಕೋರ್ಟಿನ
ಗಮನಕ್ಕೆ ಬಂತು. ಇದನ್ನು ಗಂಭೀರ ಲೋಪವೆಂದು ಪರಿಗಣಿಸಿದ ಕೋರ್ಟು
ಪರಪುರುಷನೆದುರು ಮುಖಕ್ಕೆ ಪರ್ದಾ ಇಲ್ಲದೇ ಪೋಸು ನೀಡಿದ್ದಕ್ಕಾಗಿ ಆಕೆಗೆ ೯೯
ಛಡಿಯೇಟಿನ ಶಿಕ್ಷೆ ನೀಡಿತು! ಜೈಲಿನಲ್ಲೇ ಶಿಕ್ಷೆ ಜಾರಿಯೂ ಆಯಿತು. ಈಗ ಅವಳ ಮಗ
ಪ್ರಕಟಗೊಂಡಿದ್ದು ತನ್ನ ತಾಯಿಯ ಭಾವಚಿತ್ರ ಅಲ್ಲವೆಂದೂ, ಅವಳಿಗೆ ವಿನಾಕಾರಣ ಶಿಕ್ಷೆ
ನೀಡಲಾಗಿದೆಯೆಂದೂ ಆರೋಪಿಸಿದ್ದಾನೆ.
ಇಂಥ ಇರಾನಿನಲ್ಲೇ ೨೬ ವರ್ಷದ ಮತ್ತೊಬ್ಬ ಪತ್ರಕರ್ತೆ, ಮಾನವ ಹಕ್ಕುಗಳ
ಕಾರ್ಯಕರ್ತೆ ಶೀವಾ ನಝರ್ ಅಹರಿಯನ್ನೂ ಕಲ್ಲು ಹೊಡೆದು ಸಾಯಿಸುವ
ಮರಣದಂಡನೆಗೆ ಗುರಿಮಾಡಲಾಗಿದೆ. ಅವಳ ತಪ್ಪು `ದೇವರ ವಿರುದ್ಧ ಯುದ್ಧ
ಅಥವಾ `ಮೊಹರೆಬೆಹ್. ಪ್ರಗತಿಪರ ಚಿಂತನೆಗಳೆಲ್ಲ `ಇಸ್ಲಾಮಿಕ್ ಸರ್ಕಾರ ವಿರೋಧಿ
ಎಂದು ಸಾರಿ, ಪ್ರತಿಭಟನೆಯ ದನಿಯೆತ್ತುವವರನ್ನು ರಾಷ್ಟ್ರೀಯ ಭದ್ರತೆಗೆ
ಅಪಾಯ ಒಡ್ಡುವವರು ಅಥವಾ ಶಾಂತಿ ಕದಡುವ ವ್ಯಕ್ತಿಗಳು ಎಂಬ ಹಣೆ ಪಟ್ಟಿ ಹಚ್ಚಿ
ದೀರ್ಘಾವಧಿ ಜೈಲು ಶಿಕ್ಷೆಗೆ ಅಥವಾ `ಮೊಹರೆಬೆಹ್ ಪಾಪಕ್ಕೆ ಮರಣದಂಡನೆ
ಶಿಕ್ಷೆಗೊಳಪಡಿಸಿಬಿಡುವುದು ಅಲ್ಲಿನ ಸರ್ಕಾರಕ್ಕೆ ಬಹಳ ಸುಲಭದ ಮಾತಾಗಿದೆ. ಇತ್ತೀಚೆಗೆ
ಬಂಧನಕ್ಕೊಳಗಾಗುವ ಖ್ಯಾತ ಚಿತ್ರ ನಿರ್ದೇಶಕ ಜಾಫರ್ ಪನಾಹಿಯದೂ ಇಂಥದ್ದೇ
ಒಂದು `ಅಪರಾಧ- ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡುವ, ಚಿತ್ರ
ತೆಗೆಯುವ ಅಪರಾಧ.
******
೨೦೦೨ರಲ್ಲಿ `ಮ್ಯಾಗ್ಡಲೀನ್ ಸಿಸ್ಟರ್‍ಸ್ ಎಂಬ ಹಾಲಿವುಡ್ ಚಿತ್ರ ತೆಗೆಯಲಾಯಿತು.
ಐರ್ಲೆಂಡಿನ ಮ್ಯಾಗ್ಡಲೀನ್ ಅಸೈಲಮ್‌ಗಳಲ್ಲಿ ಸಿಲುಕಿದ ಮೂವರು ನತದೃಷ್ಟ
ಹೆಣ್ಣುಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಬರುವ ಕತೆ ಹೊಂದಿದ ಈ ಸಿನಿಮಾಗೆ ಹಲವು
ಪ್ರಶಸ್ತಿಗಳು ಸಂದಿವೆ. ಈ ಸಿನಿಮಾ ಹಾಗೂ ಈ ವಸ್ತು ಕುರಿತ ಕೆಲವು ಕೃತಿಗಳು ಬರುವ
ಮುನ್ನ ಬಹಳಷ್ಟು ಜನರಿಗೆ ಮ್ಯಾಗ್ಡಲೀನ್ ಅಸೈಲಮ್ಮುಗಳ ಬಗೆಗೆ ತಿಳಿದೇ ಇರಲಿಲ್ಲ.
ಮ್ಯಾಗ್ಡಲೀನ್ ಆರ್ಡರ್‌ನ ಸನ್ಯಾಸಿನಿಯರು ನಡೆಸುತ್ತಿದ್ದ ಮ್ಯಾಗ್ಡಲೀನ್ ಅಸೈಲಮ್
೧೮ನೇ ಶತಮಾನದ ಹೊತ್ತಿಗೆ ಶುರುವಾದವು. ಪರಿತ್ಯಕ್ತ ಮತ್ತು ಸಮಾಜ ಭ್ರಷ್ಟ
ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ, ವೇಶ್ಯೆಯರ
ಪುನರ್ವಸತಿ ಕೇಂದ್ರಗಳಾಗಿ ಶುರುವಾದ ಇವಕ್ಕೆ `ಸೇಂಟ್ ಮೇರಿ ಮ್ಯಾಗ್ಡಲೀನ್ ಎಂಬ
ಹೆಸರು ಬಂತು. ತನ್ನ ಪಾಪ ತೊಳೆದುಕೊಳ್ಳಲು ಯೇಸುವಿನ ಪರಮಭಕ್ತ
ಶಿಷ್ಯೆಯಾಗಿ ಸೇವೆ ಮಾಡಿದ್ದ ಮೇರಿ ಮ್ಯಾಗ್ಡಲೀನಳ ಹೆಸರು ಹೊತ್ತ ಇವು ಅಲ್ಪಾವಧಿ
ಪುನರ್ವಸತಿ ಕೇಂದ್ರಗಳಾಗಿದ್ದು ಧಾರ್ಮಿಕ ದತ್ತಿ ದೊರೆಯಲಿಲ್ಲ. ಹಾಗಾಗಿ ಆದಾಯ
ಗಳಿಕೆಗಾಗಿ ಅಲ್ಲಿರುವವರಿಗೆ ದೈಹಿಕ ಶ್ರಮದ ಕೆಲಸ ವಹಿಸಲಾಯಿತು. ಇಂಗ್ಲೆಂಡ್,
ಐರ್ಲೆಂಡ್, ಜರ್ಮನಿ, ಅಮೆರಿಕಾ, ಇಟಲಿ, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಕೆಲವು
ಯುರೋಪಿನ ದೇಶಗಳಲ್ಲೂ ಇದು ಶುರುವಾಯಿತು. ಪ್ರತಿ ಅಸೈಲಮ್ ಹಿರಿಯ
ಮ್ಯಾಗ್ಡಲೀನ್ ಸನ್ಯಾಸಿನಿಯೊಬ್ಬರ ಮೇಲ್ವಿಚಾರಣೆಯಲ್ಲಿರುತ್ತಿತ್ತು.
ಆರಂಭದಲ್ಲಿ ತನ್ನ ಉದಾತ್ತ ಉದ್ದೇಶಗಳಿಗೆ ಅನುಗುಣವಾಗಿಯೇ ಕಾರ್ಯ
ನಿರ್ವಹಿಸಿದವು. ಪುನರ್ವಸತಿಗೆಂದು ಬರುವವರ ಮನಃಪರಿವರ್ತನೆ ಮಾಡಿ, ಬದುಕಲು
ದಾರಿಯೊಂದನ್ನು ತೋರಿಸಿಕೊಡಲಾಗುತ್ತಿತ್ತು. ಆದರೆ ಹಾಗೆ ಹೋದ ಕೆಲವರು ಮತ್ತೆ
ಬಂದು ಸೇರಿದರಲ್ಲದೇ ಇನ್ನೂ ಹಲವರು ಕಾಯಂ ವಾಸಿಗಳಾದರು. ಕಠಿಣ ವ್ರತಾಚರಣೆ
ಕಲಿಸದಿದ್ದರೆ ಹೆಣ್ಣುಮಕ್ಕಳ ಮನಃಪರಿವರ್ತನೆ ಅಸಾಧ್ಯವೆಂದು ಭಾವಿಸಿ ಅಸೈಲಮ್‌ಗಳ
ರೂಪುರೇಷೆ ಬದಲಾಯಿಸಲಾಯ್ತು. ಧಾರ್ಮಿಕ ವಿಷಯಗಳನ್ನು ಬೋಧಿಸಿ,
ಪುರುಸೊತ್ತಿಲ್ಲದಷ್ಟು ಕೆಲಸ ಕೊಡಲಾಯಿತು. ಹೊರಹೋದರೆ ಮತ್ತೆ
ಆಮಿಷಕ್ಕೊಳಗಾಗಬಹುದೆಂದು ಮುಚ್ಚಿದ ಬಾಗಿಲುಗಳ ಹಿಂದೆ ಕೂಡಿ ಹಾಕಲಾಯಿತು.
೧೯ನೇ ಶತಮಾನದ ಹೊತ್ತಿಗೆ ಐರ್ಲೆಂಡ್ ಹಾಗೂ ಸ್ಕಾಟ್ಲೆಂಡಿನಲ್ಲಿ ಇಂತಹ ದೊಡ್ಡದೊಡ್ಡ
ಅಸೈಲಮ್ಮುಗಳು ಶುರುವಾದವು. ಅವುಗಳನ್ನು ನಿರ್ವಹಿಸಲು ಕಷ್ಟವಾದಾಗ, ಶಿಕ್ಷೆ
ನೀಡುವ ಜೈಲುಗಳಂತೆ ಕೆಲಸ ಮಾಡಿದವು. ವೇಶ್ಯೆಯರಷ್ಟೇ ಅಲ್ಲದೇ ಮದುವೆಗಿಂತ
ಮುನ್ನ ಬಸುರಾದವರು, ವಿವಾಹಬಾಹಿರ ಸಂಬಂಧದಿಂದ ಹುಟ್ಟಿದವರು,
ಅತ್ಯಾಚಾರಕ್ಕೊಳಗಾದವರು, ಬಸುರಾದ ವಿಧವೆಯರು, ಅನಾಥ ಹೆಣ್ಣು ಮಕ್ಕಳು,
ಸುಂದರ ಬಡ ಹೆಣ್ಣು ಮಕ್ಕಳೆಲ್ಲ ಕುಟುಂಬವ್ಯವಸ್ಥೆಗೆ ಭಂಗತರುವರೆಂಬ ನೆಪವೊಡ್ಡಿ
ವೈದ್ಯರು, ಕುಟುಂಬ ಸದಸ್ಯರು ಮತ್ತು ಚರ್ಚಿನ ಪಾದ್ರಿಗಳ ಮನವಿಯ ಮೇರೆಗೆ
ಅಸೈಲಮ್ಮುಗಳಿಗೆ ನೋಂದಾಯಿಸಲಾಗುತ್ತಿತ್ತು.
ಅಲ್ಲಿದ್ದವರಾರಿಗೂ ಹೆಸರುಗಳಿರಲಿಲ್ಲ. ಬರಿಯ ನಂಬರುಗಳು ಮಾತ್ರ. ತಮ್ಮ
ಕುಟುಂಬ ವರ್ಗದಿಂದ ಖಾಯಂ ದೂರವಿರುತ್ತಿದ್ದ ಅವರಾರಿಗೂ ಹೊರಗಿನವರ ಭೇಟಿಗೆ
ಅವಕಾಶವಿರಲಿಲ್ಲ. ಎತ್ತರದ ಗೋಡೆಗಳ, ಮುಚ್ಚಿದ ಬಾಗಿಲುಗಳ ನಡುವೆ ಆ
ಹೆಣ್ಣುಮಕ್ಕಳನ್ನು ಅಕ್ಷರಶಃ ಕೂಡಿಹಾಕಲಾಗುತ್ತಿತ್ತು. ಕಟ್ಟುನಿಟ್ಟಿನ ಶಿಸ್ತು
ಪಾಲಿಸಬೇಕು. ವಿಧಿಸಿದಷ್ಟು ಪ್ರಾರ್ಥನೆಯನ್ನು ಕಡ್ಡಾಯವಾಗಿ ಮಾಡಬೇಕು.
ಪ್ರಾರ್ಥನೆಯ ವೇಳೆ ಬಾಯಿ ತೆರೆಯುವುದನ್ನು ಬಿಟ್ಟರೆ ಮತ್ತೆಲ್ಲ ಕಡ್ಡಾಯ ಮೌನ.
ಇದಕ್ಕೆ ಪ್ರತಿಭಟನೆ ತೋರಿದವರನ್ನು ನೂರಾರು ಮೈಲಿ ದೂರದ ಹೆಚ್ಚು ದೈಹಿಕ
ಶ್ರಮದ ಕೆಲಸವಿರುವ ಅಸೈಲಮ್‌ಗೆ ಕಳಿಸುತ್ತಿದ್ದರು. ಊಟಬಿಟ್ಟು ಪ್ರತಿಭಟಿಸಿದರೆ
ಅದನ್ನು ಯಾರೂ ಗಮನಕ್ಕೇ ತೆಗೆದುಕೊಳ್ಳದೇ, ಊಟ ಬಿಟ್ಟವರು ಹೊಟ್ಟೆಯ ಬೇಗೆ
ತಾಳಲಾರದೇ ಸೋಲೊಪ್ಪಿಬಿಡುವಂತೆ ಮಾಡಲಾಗುತ್ತಿತ್ತು. ಮೂಲ ಹೆಸರನ್ನೂ
ವಿಳಾಸವನ್ನೂ ತಪ್ಪುತಪ್ಪಾಗಿ ದಾಖಲಿಸಿಕೊಂಡಿರುತ್ತಿದ್ದರು. ಇಪ್ಪತ್ತು ಮೂವತ್ತು
ವರ್ಷಗಳ ನಂತರ ಅಸೈಲಮ್ಮಿನಿಂದ ಹೊರಬಂದವರು ತಾವೆಲ್ಲಿ ಹೋಗಬೇಕೆಂಬ
ವಿಳಾಸವಾಗಲೀ, ಸಂಬಂಧಿಗಳು ಯಾರೆಂಬ ಗುರುತಾಗಲೀ ತಿಳಿಯದೇ
ಗೊಂದಲಗೊಳ್ಳುತ್ತಿದ್ದರು.
ಹೀಗೆ ಕೂಡಿ ಹಾಕಿಕೊಂಡ ಮಹಿಳೆಯರಿಗೆ ಜೈಲಧಿಕಾರಿಗಳ, ಸನ್ಯಾಸಿನಿಯರ ಬಟ್ಟೆ
ತೊಳೆಯುವ ಮತ್ತು ಹೊಲಿಯುವ ಕೆಲಸವನ್ನು ವಹಿಸಲಾಯಿತು. ಬಟ್ಟೆ
ತೊಳೆಯುವುದು-ಶುಚಿ-ಹೊಲಿಗೆ-ಅಡುಗೆ-ಮುದಿ ಸನ್ಯಾಸಿನಿಯರ ಸೇವೆ-ಹಿರಿಯ
ಸನ್ಯಾಸಿನಿಯರ ಖಾಸಗಿ ಸೇವೆ-ಚರ್ಚ್ ಜನರ ಸೇವೆ ಹೀಗೆ ಎಂತಹ ಕೆಲಸಕ್ಕೂ, ಸೇವೆಗೂ
ಅವರು ಯಾವತ್ತೂ ಸಿದ್ಧವಿರಬೇಕು. ಹುಟ್ಟಿನಿಂದ ಪಾಪಿಗಳಾಗಿರುವ ಕಾರಣ ಪಾಪ
ತೊಳೆದುಕೊಳ್ಳಲು ಬೇರೆಯವರ ಸೇವೆ ಮಾಡಬೇಕೆಂದು ಹೇಳಲಾಗುತ್ತಿತ್ತು. ಎಷ್ಟು
ಕಾಲ ಅಲ್ಲಿರಬೇಕು, ಯಾವಾಗ ವಾಪಸಾಗಬಹುದು ಎಂದು ಕೇಳುವಂತಿರಲಿಲ್ಲ. ಹೀಗೆ
`ಮ್ಯಾಗ್ಡಲೀನ್ ಲಾಂಡ್ರಿ ಎಂದೇ ಹೆಸರಾದ ಈ ಅಸೈಲಮ್‌ಗಳಲ್ಲಿ ಬರಿಯ ಐರ್ಲೆಂಡ್
ಒಂದರಲ್ಲೇ ಮೂವತ್ತು ಸಾವಿರ ಹೆಣ್ಣು ಮಕ್ಕಳನ್ನು ಕೂಡಿಡಲಾಗಿತ್ತು.
ಧರ್ಮದ ಹೆಸರಿನ ಕಾನ್ಸಂಟ್ರೇಷನ್ ಕ್ಯಾಂಪ್ ಆಗಿದ್ದ, ಗುಲಾಮಗಿರಿಯ ಮತ್ತೊಂದು
ಅವತಾರವಾಗಿದ್ದ ಇಂತಹ ಕೊನೆಯ ಅಸೈಲಮ್ ಐರ್ಲೆಂಡಿನಲ್ಲಿ ೧೯೯೬ರಲ್ಲಿ ಮುಚ್ಚಲ್ಪಟ್ಟಿತು!
ಬಹುಶಃ ವಾಶಿಂಗ್ ಮಶೀನಿನ ಆವಿಷ್ಕಾರ ಹಾಗೂ ಮಾನವ ಹಕ್ಕುಗಳ ಮೇಲಿನ ಬದಲಾದ
ವ್ಯಾಖ್ಯೆ ಇದು ಮುಚ್ಚಲು ಪ್ರಮುಖ ಕಾರಣ. ಐರ್ಲೆಂಡಿನ ಡಬ್ಲಿನ್ನಿನ ಅಸೈಲಮ್‌ನ್ನು
ಕಾನ್ವೆಂಟ್ ರಿಯಲ್ ಎಸ್ಟೇಟಿವರಿಗೆ ಮಾರಿದಾಗ ಅಲ್ಲಿ ೧೫೫ ಅನಾಮಿಕ ಗೋರಿಗಳು
ಪತ್ತೆಯಾಗಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ಗೋರಿಕಲ್ಲಾಗಲೀ, ಮರಣ ಪತ್ರವಾಗಲೀ
ಇರಲಿಲ್ಲ. ಕೆಲವರು ತಮ್ಮ ಮಕ್ಕಳ ಜೊತೆಗೇ ಗೋರಿಯಲ್ಲಿದ್ದರು. ಅವರೆಲ್ಲ
ಸಹಜವಾಗಿ ಸತ್ತವರೋ ಅಲ್ಲವೋ ಎಂದೂ ತಿಳಿಯಲಿಲ್ಲ.
ಅಲ್ಲಿದ್ದು ಬಿಡುಗಡೆಯಾಗಿ ಹೊರಬಂದ ೬೮ ವರ್ಷದ ಮಹಿಳೆ ಹಾಗೂ ಅಲ್ಲಿ ವಾಸಿಸಿದ್ದ
ಇನ್ನಿಬ್ಬರು ಹೇಳಿದ ಸತ್ಯಕತೆ ಆಧರಿಸಿ ಪೀಟರ್ ಮುಲ್ಲನ್ ಚಿತ್ರಕತೆ ಬರೆದು ತಯಾರಿಸಿದ
`ಮ್ಯಾಗ್ಡಲೀನ್ ಸಿಸ್ಟರ್ಸ್ ಸಿನಿಮಾ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತು. ನಂತರ
ಅಲ್ಲಿದ್ದು ಹೊರಬಂದವರ ಕತೆಗಳು ಒಂದೊಂದಾಗಿ ಹೊರಬರತೊಡಗಿವೆ. ಒಬ್ಬಳು ತಾನು ೨
ವರ್ಷದವಳಿದ್ದಾಗ ಅಲ್ಲಿ ಹೋಗಿ ಸೇರಿದ್ದಾಗಿಯೂ, ೧೦ ವರ್ಷ ಅಲ್ಲಿದ್ದು ನಂತರ
ಹೊರಬಂದುದಾಗಿಯೂ, ಅಲ್ಲಿ ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ
ಹಿಂಸೆಗೊಳಪಡಿಸುತ್ತಿದ್ದರೆಂದೂ ಹೇಳಿಕೊಂಡಿದ್ದಾಳೆ. ಮತ್ತೊಬ್ಬ ಹುಡುಗಿ ತಾನು ದಿನದಿನವೂ
ತಾಯಿಗೆ ಕಾಗದ ಬರೆದು ಪೋಸ್ಟ್ ಮಾಡುತ್ತಿದ್ದುದಾಗಿಯೂ, ಆದರೆ ಅವು ಅಸೈಲಮ್ಮಿನ
ಗೋಡೆ ದಾಟಿ ಆಚೆ ಹೋಗುತ್ತಿರಲಿಲ್ಲವೆಂದೂ, ತನ್ನ ಅಮ್ಮನ ಪತ್ರಕ್ಕಾಗಿ ಕಾಯುತ್ತಾ
ನಿರಾಶಳಾಗುತ್ತಿದ್ದುದಾಗಿಯೂ ತಿಳಿಸಿದ್ದಾಳೆ. ಕೊನೆಗೊಂದು ದಿನ ಅಸೈಲಮ್‌ನಿಂದ ಹೊರಬಂದ
ಮೇಲೆಯೇ ಅಮ್ಮ ಸತ್ತ ವಿಷಯ ತಿಳಿಯಿತಂತೆ.
ಉತ್ಸಾಹದಲ್ಲಿ ಅರಳಬೇಕಿದ್ದ ಎಳೆಯ, ತರುಣ ಮನಸ್ಸುಗಳು ನಾಲ್ಕು ಗೋಡೆಗಳ
ನಡುವೆ ಬಂಧಿತರಾಗಿ, ಒತ್ತಾಯದ ಮೌನಕ್ಕೆ ಶರಣಾಗಿ, ಶುದ್ಧಿ-ಸೇವೆಯ ಹೆಸರಲ್ಲಿ
ಕಮರಿಹೋಗಿದ್ದನ್ನು ನೆನೆದರೆ ಅವರನ್ನು ಹಾಗೆ ನಡೆಸಿಕೊಂಡ ಸಮಾಜದ
ಅಮಾನವೀಯ ಕ್ರೌರ್‍ಯ ಎಂಥದೆಂಬುದು ಹೊಳೆಯುತ್ತದೆ. ಶಿಷ್ಟ ಸಮಾಜದ
ಪರಿಕಲ್ಪನೆಯು ಎಂತೆಂಥ ಕಟ್ಟುಪಾಡುಗಳ ಮುಖವಾಡ ಹೊತ್ತು ಶೋಷಣೆಯನ್ನು
ಸಮರ್ಥಿಸಿಕೊಳ್ಳುತ್ತದೆಂದು ದಿಗ್ಭ್ರಮೆಯಾಗುತ್ತದೆ!
******
* *ಹಿಂದೂ ದೇವಾನುದೇವತೆಗಳಿಗೆ ಗಂಡು ಮತ್ತು ಹೆಣ್ಣುದೇವರಿಗೆಲ್ಲ ಮಹಿಳೆ
ಅಸ್ಪೃಶ್ಯಳೇ. ಮಡಿಮೈಲಿಗೆ ನೆಪವೊಡ್ಡಿ ಅವಳಿಂದ ಪೂಜೆ ನಿರಾಕರಿಸಲಾಗಿದೆ. ಪುರಿಯ
ಜಗನ್ನಾಥನಿಂದ ಹಿಡಿದು ಮಲೆಮಾದೇಶ್ವರ, ಮಂಟೇಸ್ವಾಮಿಯ ತನಕ ಹೆಣ್ಣುಕುಲ
ಪೂಜಾಕಾರ್ಯಕ್ಕೆ ಅನರ್ಹ. ಅಣ್ಣಮ್ಮ ದೇವಸ್ಥಾನದಂತಹ ಎಲ್ಲೋ ಒಂದೆರೆಡು
ಅಪವಾದಗಳನ್ನು ಹೊರತುಪಡಿಸಿ, ಎಲ್ಲ ಕಡೆಯೂ ಪೂಜಿಸುವವರು ಗಂಡಸರೇ.
ದುರಂತವೆಂದರೆ ಇದೇ ದೇವದೇವತೆಗಳ ಹೆಸರಲ್ಲೇ, ಹೆಣ್ಣನ್ನು ಭೋಗ
ವಸ್ತುವನ್ನಾಗಿ ಮಾಡಿ ಅದಕ್ಕೆ `ಸೇವೆಯೆಂಬ ಬಿರುದು ನೀಡಿದ ಸಮಾಜ ನಮ್ಮದು.
ದೇವಾಲಯದಲ್ಲಿ ನರ್ತನ-ಗಾಯನ ಸೇವೆಗಳಿಗೆಂದೇ ಮೀಸಲಾಗಿರುವ
ಹೆಣ್ಣುಮಕ್ಕಳಿದ್ದಾರೆ. ಅವರು ದೇವರನ್ನಷ್ಟೇ ತೃಪ್ತಿಪಡಿಸಿದರೆ ಸಾಲದು, ಅವನ
ಏಜೆಂಟರಾದ ಹುಲುಮಾನವರನ್ನೂ ತೃಪ್ತಿಗೊಳಿಸಬೇಕು. ಅವರೆಲ್ಲ `ದೇವದಾಸಿಯರು.
ನಮ್ಮ ರಾಜ್ಯದ ಗುತ್ತೆಮ್ಮ, ಎಲ್ಲಮ್ಮರಂತಹ ದೇವತೆಗಳು ತಮ್ಮ ಒಕ್ಕಲ ಕುಟುಂಬದ
ಎಳೆಯ ಹೆಣ್ಣುಮಕ್ಕಳ `ಸೇವೆ ಬಯಸಿ, ಅವರ ಶೀಲ-ಬದುಕನ್ನು `ಲೋಕಾರ್ಪಣೆ
ಮಾಡುತ್ತಿರುವಾಗ ಯಾರನ್ನು ದೇವರೆಂದು ನಂಬುವುದು ತಿಳಿಯದಾಗುತ್ತದೆ.
ಬಹುತೇಕ ಎಲ್ಲ ಸಂಸ್ಕೃತಿ, ನಾಗರಿಕತೆಗಳಲ್ಲಿ ಹೆಣ್ಣನ್ನು ದೇವರು-ಆಧ್ಯಾತ್ಮಗಳಿಂದ
ದೂರ ಇಡಲಾಗಿದೆ. ದೇವರಿಗಷ್ಟೇ ಅಲ್ಲ, ಧರ್ಮಕ್ಕೂ ಹೆಣ್ಣು ದೂರವೇ. ಪ್ರಪಂಚದ
ಯಾವ ಧರ್ಮಕ್ಕೂ ಪರಮೋಚ್ಛ ಗುರು ಹೆಣ್ಣಾಗಿಲ್ಲ. ಸಂತ ಭಕ್ತೆಯರಿದ್ದಾರೆ,
ಬೋಧಕರಿದ್ದಾರೆ, ಸಂಸಾರ ತೊರೆದು ಸನ್ಯಾಸಿನಿಯಾಗಿದ್ದಾರೆ ಆದರೆ ಒಂದಿಡೀ ಧರ್ಮ
ಪರಮೋಚ್ಛ ಗುರುವೆಂದು ಯಾವ ಹೆಣ್ಣುಜೀವವನ್ನೂ ಪಡೆದಿಲ್ಲ. ಬಹುಶಃ
ಬ್ರಹ್ಮಚರ್‍ಯಕ್ಕಿರುವ ಕಲ್ಪಿತ ಮೌಲ್ಯದಿಂದ ಅದನ್ನು ಭಂಗಗೊಳಿಸುವ ಹೆಣ್ಣನ್ನು
ಪುರುಷರಿಂದಲೂ, ದೇವಾನುದೇವತೆಗಳಿಂದಲೂ ದೂರವಿಟ್ಟಿರಬಹುದು.
ಪುರುಷಾರ್ಥಗಳಲ್ಲೊಂದಾದ ಕಾಮವನ್ನು ಜಯಿಸಲು ದೇವರೂ ಹೆಣಗಬೇಕಾಗಿದೆ.
ಬ್ರಹ್ಮಚರ್ಯ ದೇವರ ಕಳೆ ಹೆಚ್ಚಿಸುವುದರಿಂದ ಅದಕ್ಕಾಗಿ ದೇವರೂ ಕಷ್ಟಪಡುತ್ತಾರೆ
ಎಂದಾಯಿತು.
ಭಾರತೀಯ ಸಮಾಜ ಮಹಿಳೆಯನ್ನು ಒಂದು ಕೈಯಲ್ಲಿ ಪೂಜಿಸುತ್ತ, ಇನ್ನೊಂದು
ಕೈಯಲ್ಲಿ ಬೆತ್ತ ಹಿಡಿದು ಹೊಡೆಯುತ್ತಾ ಬೆಳೆಸಿದೆ. ಆದರೂ ಧರ್ಮ ದೇವರ
ಹೆಸರಿನಲ್ಲೇ ಕಟ್ಟಳೆಗಳನ್ನು ಮೀರಲು ಯತ್ನಿಸಿದ ಅಕ್ಕ, ಇನ್ನಿತರ
ವಚನಕಾರ್ತಿಯರು, ಕಾಶ್ಮೀರದ ಲಲ್ಲೇಶ್ವರಿ, ಮೀರಾಬಾಯಿ, ೨೨ನೇ ತೀರ್ಥಂಕರ
ಮಲ್ಲಿನಾಥರೆಂದು ಕರೆಯಲ್ಪಡುವ(?) ಮಲ್ಲಿದೇವಿ, ಮಹಿಳಾ ಸೂಫಿಗಳು - ಇವರೆಲ್ಲ
ಸ್ತ್ರೀಯರಿಂದ ದೂರವಿದ್ದ ಆಧ್ಯಾತ್ಮ ಲೋಕದೊಳಹೊಕ್ಕು ಅದರ ಆಳಕ್ಕಿಳಿದು
ಜಯಿಸಿದವರು. ಯಾವುದೇ ಸ್ತ್ರೀವಾದಿ ಸಿದ್ಧಾಂತಗಳಿಲ್ಲದ ಕಾಲದಲ್ಲೂ ಎಲ್ಲ ಬಂಧನಗಳಿಂದ
ಬಿಡುಗಡೆ ಪಡೆದವರು.
ಮಹಿಳೆಯ ಹಕ್ಕು ನಿರಾಕರಿಸುವ ಪುರುಷಪ್ರಧಾನ ಮನಸ್ಸು ಹೊಸಹೊಸ
ರೂಪ ತಳೆದು ಪ್ರಕಟವಾಗುತ್ತಿರುವುದಕ್ಕೆ ಇತ್ತೀಚಿನ ಜಯಮಾಲಾ ಕೇಸು ಉತ್ತಮ
ಉದಾಹರಣೆ. ಹೆಂಗಸರಿಗೆ ನಿಷಿದ್ಧ ಪ್ರದೇಶವಾಗಿದ್ದ ಶಬರಿಮಲೈಗೆ ೨೫ ವರ್ಷದ ಕೆಳಗೇ
ತಾನು ಹೋಗಿಬಂದಿದ್ದಾಗಿ, ಅಯ್ಯಪ್ಪನ ಪಾದಸ್ಪರ್ಶ ಮಾಡಿದ್ದಾಗಿ ಹೇಳಿ ಜಯಮಾಲಾ
ಆಸ್ತಿಕರಲ್ಲಿ ಕೋಲಾಹಲವನ್ನೂ, ಮಹಿಳೆಯರಲ್ಲಿ ಥ್ರಿಲ್ ಅನ್ನೂ ಸೃಷ್ಟಿಸಿದರು. ಆದರೆ
ತುಂಬ ಧಾರ್ಮಿಕ ಮನೋಭಾವದ ಜಯಮಾಲಾ ಕಟ್ಟಳೆಯ ವಿರುದ್ಧ ದೇವಸ್ಥಾನಕ್ಕೆ
ಹೋಗಿದ್ದೇ ತನ್ನ ಸಾಂಸಾರಿಕ ಮತ್ತು ವೃತ್ತಿಜೀವನದ ಎಲ್ಲ ಏಳುಬೀಳುಗಳಿಗೆ
ಕಾರಣವೆಂದು ಭಾವಿಸಿ, ಅದನ್ನು ಜ್ಯೋತಿಷಿಯೊಬ್ಬರ ಹತ್ತಿರ ಗುಟ್ಟಾಗಿ ಹೇಳಿಕೊಂಡು
ಪರಿಹಾರ ಕೇಳಿದರು. ವಿಷಯ ತಿಳಿದ ಜಯಮಾಲಾರ ಜ್ಯೋತಿಷಿ ಅವರಿಗೊಂದು ಪರಿಹಾರ
ಸೂಚಿಸುವ ಬದಲು, ಶಬರಿಮಲೆಯ ಅರ್ಚಕವರ್ಗವನ್ನು ಮಣಿಸುವ ರಾಜಕೀಯಕ್ಕೆ ಈ
ವಿಷಯವನ್ನು ಬಳಸಿಕೊಂಡರು. ಈಗ ಅದು ಪುರೋಹಿತರ ಜಗಳವಾಗಿ ಜಯಮಾಲಾ
ಕೋರ್ಟ್ ಕಟ್ಟೆ ಹತ್ತುವಂತಾಗಿದೆ.
ಗುರುವಾಯೂರಿಗೆ ಏಸುದಾಸ್ ಪ್ರವೇಶ ನಿರಾಕರಣೆ, ದಲಿತ ಶೂದ್ರ
ಸಮುದಾಯಕ್ಕೆ ಮುಚ್ಚಿಕೊಂಡ ಇನ್ನೂ ಎಷ್ಟೆಷ್ಟೋ ದೇವಸ್ಥಾನಗಳು, ಶಬರಿಮಲೈಗೆ
ಹೆಂಗಸರ ಪ್ರವೇಶ ನಿರಾಕರಣೆ - ಇಂಥ ವಿವಾದಗಳನ್ನೆಲ್ಲ ನೋಡುತ್ತಿದ್ದರೆ ದೇವರು
ಮತ್ತು ಮಾನವನ ನಡುವಿನ ದೊಡ್ಡ ಗೋಡೆ ಯಾವುದೆಂಬುದು ತಿಳಿಯುತ್ತದೆ.
ಭಕ್ತರ ಸಂಖ್ಯೆ, ಆರ್ಥಿಕ ವಹಿವಾಟು, ಪ್ರಚಾರ ಇವೆಲ್ಲದರಿಂದ ಕ್ಷೇತ್ರವೊಂದು
ಪ್ರಸಿದ್ಧಿಯಾಗುತ್ತ ಹೋದಂತೆ ಅದರ ಸುತ್ತಮುತ್ತ ಪರೋಪಜೀವಿಗಳ
ಸಣ್ಣತನಗಳೂ ದೊಡ್ಡವಾಗುತ್ತ, ಕೊನೆಗೆ ಅವೇ ಕಟ್ಟಳೆಗಳಾಗಿಬಿಡುವ ಅಪಾಯವಿದೆ.
ಬಹುಶಃ ಶಬರಿಮಲೈ ಕುರಿತಾದ ನಿಷೇಧಗಳೂ ಹೀಗೇ ಚಾಲ್ತಿಗೆ ಬಂದವಿರಬೇಕು.
ಈಗ ಮಿಲಿಯನ್ ಡಾಲರ್ ಪ್ರಶ್ನೆ ಎಂದರೆ, ಜಾತಿಯನ್ನೇ ನೋಡದೆ ಭಕ್ತರನ್ನು
ಬರಮಾಡಿಕೊಳ್ಳುವ ಕ್ರಾಂತಿಕಾರಿ ಅಯ್ಯಪ್ಪಸ್ವಾಮಿಗೆ ಹೆಣ್ಣೆಂದರೆ ಏಕೆ ಲಜ್ಜೆ?
ಹೆಂಡ-ಹೆಂಡತಿ-ಸಿಗರೇಟು ಎಲ್ಲವನ್ನೂ ಬಿಟ್ಟು ಪುರುಷ ಭಕ್ತರು ತನ್ನ ಬಳಿ ಬರುವಂತೆ
ಮಾಡುವ ಆತ ಹೆಣ್ಣು ಅವನ್ನೆಲ್ಲ ಬಿಡಲಾರಳೆಂದು ನಂಬಿರುವನೆ? ಊರುಕೇರಿ ಬಯಲು
ಗುಡಿಗಳಲ್ಲಿ ಸಾವಿರಾರು ದೇವರಿರುವಾಗ ಜಯಮಾಲಾ ನಾಚಿ ಗುಡ್ಡಹತ್ತಿ ಕುಳಿತ ಈ
ದೇವನ ಪಾದ ಹಿಡಿಯಹೋದದ್ದು ಏಕೆ?
ಉತ್ತರ ಜಯಮಾಲಾ ಮತ್ತು ಅಯ್ಯಪ್ಪನಿಗೆ ಮಾತ್ರ ಗೊತ್ತು..
*******
ದೇವನೂರು ಹೇಳಿದ ಮಾತು ಇಲ್ಲೂ ನಿಜ: `ನಾವೀಗ ಬಂಡೆಗಳ ಮೇಲೆ
ಚಿಗುರಬೇಕಿದೆ..

Friday, March 04, 2011

ಸೂಫಿ ಸಂತ ದಾರಾ ಶಿಕೋ

ಮೊಗಲ್ ಚಕ್ರವರ್ತಿ ಶಾಜಹಾನ್ ಚಿಂತಾಕ್ರಾಂತನಾಗಿದ್ದ. ಆತನ ವಿಸ್ತಾರವಾದ ಚಕ್ರಾಧಿಪತ್ಯವನ್ನು ಮುನ್ನಡೆಸುವ ಮಗ ಆತನಿಗೆ ಹುಟ್ಟಿರಲಿಲ್ಲ. ಮತ್ತೊಬ್ಬ ಮಗಳು ಜಹಾನಾರ ಬೇಗಮ್ ಹುಟ್ಟಿದ ನಂತರ ಪ್ರೀತಿಯ ಮಡದಿ ಮುಮ್ತಾಜ್ ಮಹಲ್‌ಳ ಕಣ್ಣೀರನ್ನೊರೆಸುತ್ತಾ ಆಜ್ಮೀರ್‌ನ ಯಾತ್ರೆ ಕೈಗೊಂಡ. ದಂಡು ದೌಲತ್ತಿನ ಪ್ರದರ್ಶನವಿಲ್ಲದೆ ಮುತ್ತುರತ್ನಗಳ ಅಲಂಕಾರವಿಲ್ಲದೆ ಕೇವಲ ತನ್ನ ಬೆಂಗಾವಲಿನ ಪಡೆಯೊಡನೆ ಬಂದ ಶಾಜಹಾನ್ ಆಜ್ಮೀರ್ ತಲುಪಿದ ನಂತರ ಕಾಲ್ನಡಿಗೆಯಲ್ಲಿ ದರ್ಗಾಕ್ಕೆ ಧಾವಿಸಿದ. ಆಜ್ಮೀರ್‌ನ ಆಧ್ಯಾತ್ಮಿಕ ಚೇತನವಾದ ಹಜರತ್ ಮೊಯಿನುದ್ದೀನ್ ಚಿಶ್ತಿಯ ದರ್ಗಾಕ್ಕೆ ಹೋದ ಶಾಜಹಾನ್ ಎದೆ ತುಂಬಿ ಪ್ರಾರ್ಥಿಸಿದ್ದು, ಸಂತಾನ ಪ್ರಾಪ್ತಿಗಾಗಿ. ಈ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ೧೬೧೫ರ ಮಾರ್ಚಿ ತಿಂಗಳಿನ ಇಪ್ಪತ್ತರಂದು ಮೊಹಮ್ಮದ್ ದಾರಾ ಶಿಕೋ ಜನಿಸಿದಾಗ ಶಾಜಹಾನ್‌ನ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ. ದಾರಾಸಿಕೋ ಎಂಬುದು ಪರ್ಶಿಯನ್ ಹೆಸರಗಿದ್ದು ಡೇರಿಯಸ್ ದಿ ಮ್ಯಗ್ನಿಫಿಶಿಉಎಂಟ್ ಎಂಬ ಅರ್ಥವನ್ನು ಹೊಂದಿತ್ತು . ಪ್ರತಿ ಮಾರ್ಚ್ ತಿಂಗಳಿನಲ್ಲಿ ಆಚರಿಸುತ್ತಿದ್ದ ನೌರೋಜ್ (ಹೊಸ ವರ್ಷ) ಉತ್ಸವಕ್ಕೆ ಆ ವರ್ಷ ವಿಶೇಷ ಕಳೆ ಮತ್ತು ಉತ್ಸಾಹ ಮೂಡಿ ಬಂದಿತ್ತು. ರಾಜಕುಮಾರ ದಾರಾಗೆ ಸಹಜವಾಗಿಯೇ ಅತ್ಯುತ್ತಮ, ಶಿಕ್ಷಣ, ಯುದ್ಧಕಲೆಯ ತರಬೇತಿ ದೊರಕಿತು.ರಾಜಕುಮಾರ ದಾರಾಶಿಕೋ ಅಂತಃಪುರಕ್ಕಿಂತ ಹೆಚ್ಚು ವೇಳೆಯನ್ನು ಕಳೆದಿದ್ದು ಗ್ರಂಥಾಲಯದಲ್ಲಿ . ಏಕಪತ್ನೀವ್ರತಸ್ಥನಾಗಿದ್ದ ಆತನ ಮನದನ್ನೆ ಮತ್ತು ಪತ್ನಿ ನಾದಿರಬೇಗಮ್‌ಳ ಹೊರತು ಬೇರೆಯವರತ್ತ ಕಣ್ಣೆತ್ತಿಯೂ ನೋಡದ ಆತ ರಾಜವೈಭೋಗದ ನಡುವೆಯೂ ಬೈರಾಗಿಯಾಗಿದ್ದ. ಗ್ರಂಥಾಲಯದ ಮೆಟ್ಟಲಿಳಿಯುವಾಗ ಜಾರಿ ಬಿದ್ದು ಮರಣಹೊಂದಿದ ಹುಮಾಯೂನ್‌ನಂತೆ ಅವನು ಅಧ್ಯಯನಶೀಲನಾಗಿದ್ದು ಧರ್ಮಗಳ ನಡುವೆ ಸಾಮರಸ್ಯವನ್ನು ಸಾಧಿಸಲು ವಿಶೇಷ ಪ್ರಯತ್ನವನ್ನು ಮಾಡಿದ ಅಕ್ಬರ್‌ನಂತೆ ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಆಳವಾದ ಪಾಂಡಿತ್ಯ ಮತ್ತ ಗೌರವಾದರವನ್ನುಹೊಂದಿದ್ದ. ಮುಖ್ಯ ಶಿಕ್ಷಕ ಮುಲ್ಲಾ ಅಬ್ದುಲ್ ಲತೀಫ್ ಸಹಾರನ್ ಪೂರಿಯು ಪ್ರಾಥಮಿಕ ಶಿಕ್ಷಣವು ದಾರಾ ಶಿಕೋವಿನ ಜ್ಞಾನದಾಹವನ್ನು ಹೆಚ್ಚಿಸುತ್ತಲೇ ಹೋಯಿತು. ಕುರಾನ್ ಅಧ್ಯಯನ , ಪರ್ಶಿಯನ್ ಕಾವ್ಯ ಹಾಗೂ ಚರಿತ್ರೆಯಿಂದ ಕೂಡಿದ ಪಠ್ಯಕ್ರಮದಿಂದ ಸಂಪನ್ನನಾದ ರಾಜಕುಮಾರನ ಜ್ಞಾನದಾಹ ಹೆಚ್ಚುತ್ತಲೇ ಹೋಯಿತು . ಲಾಹೋರಿನ ಖಾದ್ರಿ ಪಂಥದ ಸೂಫಿ ಹಜರತ್ ಮಿಯಾಂ ಮೀರ್‌ರವರು ದಾರಾ ಶಿಕೋನ ಮೇಲೆ ವಿಶೇಷ ಪ್ರಭಾವ ಬೀರಿದ ಆಧ್ಯಾತ್ಮ ಗುರುವಾಗಿದ್ದರು . ಮಿಯಾಂ ಮೀರ್‌ನಂತಹ ಗುರುವಾದರೋ . . . ಎಂತಹ ಸರ್ವಧರ್ಮ ಸಮಭಾವದ ವಕ್ತಾರರಾಗಿದ್ದರೆಂದರೆ, ಅಮೃತಸರದಲ್ಲಿ ನಿರ್ಮಾಣವಾದ ಸಿಖ್ಖರ ಪವಿತ್ರ ಸ್ವರ್ಣ ದೇಗುಲಕ್ಕೆ ತಮ್ಮ ಹಸ್ತದಿಂದ ಅಡಿಪಾಯವನ್ನಿಟ್ಟವರು ಮತ್ತು ಇಸ್ಲಾಮ್‌ನ ಎರಡನೇ ಖಲೀಫ್ ಆಗಿದ್ದ ಹಜರತ್ ಉಮರ್‌ರವರ ಸಂತತಿಯವರು. ಅಷ್ಟೇ ಅಲ್ಲದೆ ಆಧ್ಯಾತ್ಮದ ಅನ್ವೇಷಣೆಯ ಹಾದಿಯಲ್ಲಿ ದಾರಾ ಶಿಕೋಗೆ ಮಾರ್ಗದರ್ಶಕರಾದವರು ಶಾ ಮುಹೀಬುಲ್ಲಾ, ಶಾದಿಲ್ ರುಬ್, ಶಾ ಮೊಹಮ್ಮದ್ ಲಿಸಾದುಲ್ಲಾ ರೋಸ್ಪಕಿ ಮೊದಲಾದ ಮುಸ್ಲಿಮ್ ಸೂಫಿ ಸಂತರು. ಅಷ್ಟೇ ಪ್ರಮುಖವಾಗಿ ದಾರಾ ಶಿಕೋನ ಜ್ಞಾನ ದಾಹವನ್ನು ತಣಿಸಿದವರು ಬಾಬಾ ಲಾಲ್‌ದಾಸ್ ಬೈರಾಗಿ, ಜಗನ್ನಾಥ್ ಮಿಶ್ರ ಮೊದಲಾದ ಹಿಂದೂ ಧಾರ್ಮಿಕ ಸಂತರು. ಹೀಗಾಗಿ ದಾರಾ ಶಿಕೋ ಮುಸ್ಲಿಂ ಧರ್ಮದ ನಿಜವಾದ ಅನುಯಾಯಿಯಾಗಿದ್ದು, ವಿಶಾಲ ದೃಷ್ಟಿಕೋನವನ್ನು ಹೊಂದಿದ್ದು, ಹಿಂದೂ ಧರ್ಮ ಗ್ರಂಥಗಳ ವಿಶೇಷ ಅಧ್ಯಯನ ಹಾಗೂ ಭಾಷಾಂತರವನ್ನು ಮಾಡಿದ್ದು ಮತ್ತು ಭಾರತೀಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ನೀಡಿರುವ ಕೊಡುಗೆಯು ಅದ್ಭುತ ಐತಿಹಾಸಿಕ ದಾಖಲೆಗಳಾಗಿವೆ. ದಾರಾ ಶಿಕೋ ಸ್ವತಃ ಸೂಫಿ ಸಂತ. ಇಸ್ಲಾಮಿ ಭಕ್ತಿ ಪಂಥದ ಪ್ರವರ್ತಕ. ಅದರಲ್ಲೂ ಖಾದ್ರಿ ಪಂಥದತ್ತ ವಿಶೇಷ ಒಲವು. ಹೀಗಾಗಿ ತನ್ನ ಇಪ್ಪತ್ತೈದನೇ ವಯಸ್ಸಿನಲ್ಲಿಯೇ ಆತನಿಂದ ವಿರಚಿತವಾದ ಗ್ರಂಥ ಸಫೀನತ್-ಉಲ್-ಔಲಿಯಾ, ನಿಜವಾದ ಗುರುವಿನ, ಸಂತನ ಗುಣಲಕ್ಷಣ ಹಾಗೂ ಮಾರ್ಗದರ್ಶನ ಹಾಗೂ ಉದಾತ್ತತೆಯ ಅನೇಕ ಉದಾಹರಣೆಗಳನ್ನು ಮೇಲ್ಕಂಡ ಗ್ರಂಥದಲ್ಲಿ ದಾರಾ ಶಿಕೋ ಪ್ರತಿಪಾದಿಸಿದ್ದಾನೆ. ಇದೇ ನಿಟ್ಟಿನ ಇನ್ನೊಂದು ಗ್ರಂಥ ಸಕೀನತ್-ಉಲ್-ಔಲಿಯಾ, ಇಸ್ಲಾಮಿ ಸೂಫಿ ಪಂಥದ ಮುಂದಿನ ಗ್ರಂಥ ಹಸನತ್-ಉಲ್-ಆರೀಫಿನ್. ಈ ಗ್ರಂಥವು ಮಿಥ್ಯೆ ಹಾಗೂ ವಾಸ್ತವತೆಯ ನಡುವಿನ ಅಂತರವನ್ನು ವಿಶ್ಲೇಷಿಸಿದೆ. ದಾರಾಶಿಕೋವಿನ ಮುಂದಿನ ಬೌದ್ಧಿಕ ವಿಕಾಸದ ಹಂತವು ಹಿಂದೂ ಆಧ್ಯಾತ್ಮಿಕತೆಯ ಅರಿವು ಮತ್ತು ಧರ್ಮಗಳ ನಡುವಿನ ತೌಲನಿಕ ಅಧ್ಯಯನದತ್ತ ಕೇಂದ್ರೀಕೃತವಾಯಿತು. ಹಿಂದೂ-ಮುಸ್ಲಿಮ್ ಸಂಸ್ಕೃತಿಯ ವೈವಿಧ್ಯತೆಯ ನಡುವೆ ಧಾರ್ಮಿಕವಾಗಿ ಸಾಮ್ಯತೆ ಇರುವ ಮೌಲ್ಯಗಳ ಬಗ್ಗೆ ಹೆಚ್ಚಿನ ವಿಚಾರವನ್ನು ಮುಂದಿಟ್ಟ ದಾರಾ ತನ್ನ ಸಂಶೋಧನೆಯ ವಿಚಾರಧಾರೆಯನ್ನು ಬರವಣಿಗೆಯ ಮೂಲಕ ದಾಖಲಿಸಿದ್ದಾನೆ . ಈ ನಿಟ್ಟಿನಲ್ಲಿ ಆತನು ರಚಿಸಿದ ರಿಸಾಲಾ-ಎ-ಹಕ್ ನಾಮಾ ಎಂಬ ಗ್ರಂಥದಲ್ಲಿ ಭೌತಿಕವಾದ ಸ್ಥಿತಿಯಿಂದ ಒಬ್ಬ ಅನ್ವೇಷಕ ಯಾವ ಹಂತಗಳಿಂದ ಹಾದು ಅಂತಿಮ ಸತ್ಯದ ದರ್ಶನ ಪಡೆಯುತ್ತಾನೆ ಎಂಬ ವಿಶ್ಲೇಷಣೆ ಇದೆ. ಈ ಪರಿಕ್ರಮದಲ್ಲಿ ಹಿಂದೂ ತಾಂತ್ರಿಕ ಪದ್ಧತಿಯ ಸತ್ಯದ ಅನ್ವೇಷಣೆಯ ಪ್ರಭಾವ ಕಂಡುಬರುತ್ತದೆ. ಧ್ಯಾನದ ಅನೇಕ ಸ್ಥಿತಿಗಳನ್ನು ಆತ ಗುರುತಿಸುತ್ತಾನೆ. ಆತ ಪ್ರಸ್ತಾಪಿಸುವ ನಾಸುತ್ ಹಿಂದೂ ಪರಿಕಲ್ಪನೆಯ ಜಾಗೃತ ಅವಸ್ಥೆ. ಆಬ್ರುತ್ ಅಂದರೆ ಸ್ವಪ್ನಾವಸ್ಥೆ, ಮಲಕೂತ್ ಅಂದರೆ ಸುಶುಪ್ತಿ ಹಾಗೂ ಲಾಹೂತ್ ಎಂದರೆ ತುರಿಯಾವಸ್ಥೆಗೆ ದಾರಾಶಿಕೋ ಸಮೀಕರಿಸಿದ್ದಾನೆ. ದಾರಾ ಶಿಕೋನ ಆಧ್ಯಾತ್ಮಿಕ ಹಾಗೂ ಸಾಹಿತ್ಯಿಕ ಪರಿಕಲ್ಪನೆಗಳ ಪೈಕಿ ಅತ್ಯಂತ ಹೆಚ್ಚು ಮೆಚ್ಚುಗೆ ಪಡೆದಿರುವ ಗ್ರಂಥವೆಂದರೆ ಮಜ್ಮಾ-ಉಲ್-ಬಹರೈನ್ (ಎರಡು ಸಾಗರಗಳ ಮಿಲನ) ಈ ಗ್ರಂಥವು ಹಿಂದೂ ಮತ್ತು ಮುಸ್ಲಿಮ್ ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಚಾರಗಳ ಸಾಮ್ಯತೆಯ ಅದ್ಭುತ ಅಭಿವ್ಯಕ್ತಿಯಾಗಿದೆ. "ಎರಡು ಸತ್ಯದ ಅನ್ವೇಷಕ ಗುಂಪುಗಳ ವಿವೇಕ ಮತ್ತು ಸತ್ಯದ ಸಂಕಲನ" ಎಂದು ಈ ಗ್ರಂಥದ ಒಟ್ಟಾರೆ ಸಾರವನ್ನು ಹಿಡಿದಿಟ್ಟಿದ್ದಾನೆ. ಮುಕ್ತಿ ಎಂಬುದು ಸೂಫಿಗಳ ಫನಾ ಪರಿಕಲ್ಪನೆಗೆ ಹಾಗೂ ಸೂಫಿ ಸಂತರ ಪ್ರೇಮ ಹಿಂದೂ ಪರಿಕಲ್ಪನೆಯ ಮಾಯೆಗೆ ಅನುಗುಣವಾಗಿದೆ ಎಂಬುದು ಈತನ ಅನಿಸಿಕೆ. ಮಧ್ಯಕಾಲೀನ ಭಾರತದ ಇತಿಹಾಸದ ಬಹುದೊಡ್ಡ ಕೊಡುಗೆ ಎಂದರೆ ದಾರಾ ಶಿಕೋ ಹಾಗೂ ಆತನ ವೈಚಾರಿಕ ಗ್ರಂಥಗಳು. ಹಿಂದೂ-ಮುಸ್ಲಿಮ್ ಜನ ಸಮುದಾಯದ ನಡುವೆ ಅವರ ಎಲ್ಲಾ ಧಾರ್ಮಿಕ ನಂಬಿಕೆಗಳ ನಡುವೆಯೂ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯ ಸೇತುವೆಯಾಗಿದ್ದ ದಾರಾ ಶಿಕೋ ಅತ್ಯಂತ ಪ್ರಾಮಾಣಿಕವಾಗಿ ತಾನು ನಂಬಿದ್ದನ್ನು ಬರವಣಿಗೆಯ ಮೂಲಕ ಪ್ರತಿಪಾದಿಸಿ ಅಂದಿನ ಸಮಾಜದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಸೌಹಾರ್ದತೆಯ ಸಂಬಂಧವನ್ನು ಬೆಳೆಸುವುದರಲ್ಲಿ ಕ್ರಿಯಾಶೀಲನಾದ . ಭಗವದ್ಗೀತೆಯನ್ನು ಪರ್ಶಿಯನ್ ಭಾಷೆಗೆ ಅನುವಾದಿಸಿದ ದಾರಾ ಶಿಕೋ ತಾನು ಅತ್ಯಂತ ಆಳವಾಗಿ ನಂಬಿದ್ದ ಯೋಗದ ಸಿದ್ದಾಂತವನ್ನು ಪರಿಚಯಿಸುವ ಉದ್ದೇಶದಿಂದ ಯೋಗ ವಶಿಷ್ಠ ಗ್ರಂಥವನ್ನು ಸಂಸ್ಕೃತ ಭಾಷೆಯ ಆಳವಾದ ಪಾಂಡಿತ್ಯವನ್ನು ಹೊಂದಿದ್ದ ದಾರಾ ಶಿಕೋ ಬನಾರಸ್‌ಗೆ ಪ್ರಯಾಣ ಬೆಳೆಸಿ ಉದ್ದಾಮ ಸಂಸ್ಕೃತ ಪಂಡಿತರನ್ನು ಭೇಟಿಯಾಗಿ ಈ ಭಾಷಾಂತರ ಕಾರ್ಯವನ್ನು ಕೈಗೊಂಡ. ದಾರಾ ಶಿಕೋ ಧಾರ್ಮಿಕ ಸಹಿಷ್ಣುತೆಯ ಜೀವಂತ ಪ್ರತೀಕವಾಗಿದ್ದ. ಇತರೇ ಧರ್ಮಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದು, ಸರ್ವಧರ್ಮ ಸಮಭಾವದ ಸಿದ್ಧಾಂತದ ಪ್ರಾಮಾಣಿಕ ಪ್ರತಿಪಾದಕನಾಗಿದ್ದ ಅದ್ಭುತವಾದ ಸಾಹಿತ್ಯ ರಚಿಸಿದ್ದು, ಅಲೌಕಿಕವಾದ ಭಾವಪ್ರಧಾನವಾದ ಕವನಗಳನ್ನು ಕೂಡ ರಚಿಸಿದ್ದಾನೆ. ಇಕ್ಸೀರ್-ಎ-ಆಜಮ್ ಎಂಬ ಹೆಸರಿನ ಅವನ ಕವನ ಸಂಕಲನವು ಊಹಾತೀತ ಮತ್ತು ಅದಮ್ಯ ವಿಚಾರಗಳನ್ನು ಭಾವಪ್ರಧಾನವಾಗಿ ಬಿಂಬಿಸಿದೆ. ವರ್ಣಚಿತ್ರರಚನೆ, ಸಂಗೀತ ಹಾಗೂ ನೃತ್ಯದಲ್ಲಿ ಕೂಡಾ ಅಪಾರ ಪಾಂಡಿತ್ಯವನನು ಪಡೆದಿದ್ದ ರಾಜಕುಮಾರ ಸಕಲ ಕಲಾವಲ್ಲಭನಾಗಿದ್ದ. ೧೬೩೦ನೇ ಇಸವಿಯಿಂದ ಅವನ ಸಾವಿನವರೆವಿಗೂ ಅವನು ರಚಿಸಿದ ವರ್ಣಚಿತ್ರಗಳು ಮತ್ತು ಕ್ಯಾಲಿಗ್ರಫಿಗಳ ಸಂಗ್ರಹವಾದ ದಾರಾಶಿಕೋ ಆಲ್ಬಮನ್ನು ಆತ ತನ್ನ ಪತ್ನಿ ನಾದಿರಾಬೇಗಮ್‌ಗೆ ಉಡುಗೊರೆಯಾಗಿ ನೀಡಿದ್ದ . ತಮ್ಮನಾದ ಔರಂಗಜೇಬನ ಅಧಿಕಾರದ ಲಾಲಸೆಯಿಂದ ತನ್ನ ಮತ್ತು ಕುಟುಂಬದವರ ಪ್ರಾಣವುಳಿಸಿಕೊಳ್ಳಲು ಅವಿರತ ಪ್ರಯಾಣ ಮಾಡುತ್ತಿದ್ದ ದಾರಾ ಶಿಕೋನೊಡನೆ ಇದ್ದ ನಾದಿರಾ ಪ್ರಯಾಣದ ಸಂಕಷ್ಟಗಳನ್ನು ಸಹಿಸಲಾರದೆ , ಅವನ ತೊಡೆಯ ಮೇಲೆ ತಲೆಇಟ್ಟು ಇಹಲೋಕವನ್ನು ತ್ಯಜಿಸಿದ ನಂತರ , ಆ ಆಲ್ಬಮ್ ಅನೇಕ ಕೈ ಸೇರಿ ಈಗ ದೆಹಲಿಯ ಮ್ಯೂಜಿಯಮ್‌ನಲ್ಲಿದೆ ಮತ್ತು ದಾರಾಶಿಕೋವಿನ ಭಾವತರಂಗಗಳು ಆತನ ಕಲಾಕೃತಿಯ ರೂಪದಲ್ಲಿ ಇಂದಿಗೂ ಸಹೃದಯರೊಡನೆ ಸಂವಾದವನ್ನು ನಡೆಸುತ್ತಿವೆ . ದಾರಾ ಶಿಕೋ ಹುಟ್ಟಾ ಬಂಡಾಯಗಾರನಾಗಿದ್ದ . ಹುಟ್ಟಿನಿಂದಲೇ ಉನ್ನತ ಸ್ಥಾನವನ್ನು ಪಡೆದಿದ್ದ ರಾಜಕುಮಾರ ಅಧ್ಯಯನಶೀಲನಾಗಿದ್ದು , ಶೋಷಕ ವ್ಯವಸ್ಥೆಯನ್ನು ಗುರುತಿಸುವುದರಲ್ಲಿ ಯಶಸ್ವಿಯಾಗಿದ್ದ. ದಾರ್ಮಿಕ ಸೋಗಲಾಡಿತನವನ್ನು ಅವನು ಲೇವಡಿ ಮಾಡಿದ್ದ . ಜಡ್ಡುಗಟ್ಟಿದ್ದ ಧಾರ್ಮಿಕ ವ್ಯವಸ್ಥೆಯ ದುರ್ಲಾಭ ಪಡೆದುಕೊಂಡು ಜನರನ್ನು ಶೋಷಣೆಗೊಳಪಡಿಸಿದ್ದ ಪುರೋಹಿತಶಾಹಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸುತ್ತಿದ್ದ . ನಿರಾಧಾರವಾದ ಸಂಪ್ರದಾಯಗಳನ್ನು ಪ್ರಶ್ನಿಸುವುದರ ಮೂಲಕ ರಾಜಕುಮಾರ ದಾರಾ ಶಿಕೋ ಪುರೋಹಿತಶಾಹಿ ವ್ಯವಸ್ಥೆಯ ಅಸಮಾಧಾನಕ್ಕೆ ಗುರಿಯಾಗಿದ್ದ ಅನೇಕ ಪ್ರಸಂಗಗಳು ಇತಿಹಾಸದಲ್ಲಿ ಕಂಡುಬಂದಿದೆ. ಮುಲ್ಲಾಗಳ ಗದ್ದಲದಿಂದ ಪ್ರಪಂಚ ಮುಕ್ತವಾಗಲಿ ಅವರ ಫತ್ವಾಗಳ ಹಾವಳಿಗೆ ಬೆದರದಿರಿ ಎಂದು ಜನಸಾಮಾನ್ಯರಿಗೆ ಕರೆ ನೀಡಿದ ದಾರಾ ಶಿಕೋ ಮುಲ್ಲಾಗಳ ಕ್ರೌರ್ಯ ಮತ್ತು ಹಿಂಸೆಯಿಂದ ಪ್ರವಾದಿ, ಸಂತರು ನರಳಿಯೇ ನರಳಿದರು. ಎಂದು ನುಡಿದ
ಆತನಿಗಿಂತ ಮೂರು ವರ್ಷ ಕಿರಿಯವನಾಗಿದ್ದ ಔರಂಗಜೇಬ್ ಚಕ್ರವರ್ತಿ ಸ್ಥಾನಕ್ಕೆ ಅತ್ಯಂತ ಹೀನವಾದ ಷಡ್ಯಂತ್ರವನ್ನು ರಚಿಸಿದಾಗ ಅವನ ಮೋಸಗಾರಿಕೆಯನ್ನು ಅರಿಯದೆ ಬಲಿಯಾದ. ಔರಂಗಜೇಬ್‌ಗೆ ಅವನನ್ನು ಮುಗಿಸುವುದು ಸುಲಭವಾಗಿತ್ತು. ದೆಹಲಿಯಿಂದ ಗುಜರಾತ್‌ವರೆಗೂ ದೌಡಾಯಿಸಿದ ದಾರಾ ಶಿಕೋ ಸಿಂಧ್ ಮತ್ತು ಕಂದಾಹಾರ್ ಮೂಲಕ ಪರ್ಶಿಯಾಗೆ ಹೋಗಿ ಆಶ್ರಯ ಪಡೆಯಲು ಉದ್ದೇಶಿಸಿದ. ಹೀಗಾಗಿ ಆತ ತಾನು ಹಿಂದೊಮ್ಮೆ ಜೀವ ರಕ್ಷಣೆ ಮಾಡಿದ್ದ ಬಲೂಚಿ ನಾಯಕ ಮಾಲಿಕ್ ಜೀವನ್‌ನ ಬಳಿ ಆಶ್ರಯ ಪಡೆದಿದ್ದ. ಕೇವಲ ಮೂರು ದಿನ ಮಾತ್ರ. ಆತನ ಬಳಿ ಇದ್ದ ದಾರಾ ಶಿಕೋ ಜೀವನದ ಅತ್ಯಂತ ಘೋರ ದುರಂತವನ್ನು ಕಂಡ. ಆತನ ಪತ್ನಿ ನಾದಿರಾ ಬೇಗಂ ಪ್ರಯಾಣದ ಬಳಲಿಕೆಯಿಂದ ಸಾವನ್ನಪ್ಪಿದಳು. ಆಕೆಯ ಸಾವು ದಾರಾನ ಬದುಕುವ ಹಂಬಲವನ್ನೇ ಕಸಿದುಕೊಂಡಿತ್ತು. ಇನ್ನೂ ದುರಂತವೆಂದರೆ ಮೂರನೇಯ ದಿನ ಆತನ ಆಪ್ತ ಮಾಲಿಕ್ ಜೀವನ್ ಆತನನ್ನು ಔರಂಗಜೇಬ್‌ನಿಗೆ ತಂದೊಪ್ಪಿಸಿದ. ೧೬೫೮ನೇ ಸಪ್ಟೆಂಬರ್ ೧ನೇ ತಾರೀಖು ದೆಹಲಿಯ ಬೀದಿಗಳಲ್ಲಿ ಮಲಿನ ದೇಹ ಮತ್ತು ಚಿಂದಿ ಬಟ್ಟೆಯನ್ನು ತೊಟ್ಟಿದ್ದು ಮಾನಸಿಕವಾಗಿ ಜರ್ಜರಿತನಾಗಿದ್ದ ಹಾಗೂ ಕಬ್ಬಿಣದ ಸಂಕೋಲೆಗಳಿಂದ ಆವೃತನಾಗಿದ್ದ ದಾರಾ ಶಿಕೋನನ್ನು ಔರಂಗಜೇಬ್ ಮೆರವಣಿಗೆ ಮಾಡಿಸಿದ. ಅದೇ ದಿನ ಆತನನ್ನು ನಿರ್ದಯವಾಗಿ ಕೊಲೆ ಮಾಡಿದ ಔರಂಗಜೇಬ್ ಕೊಟ್ಟ ಕಾರಣ ಆತ ಧರ್ಮ ವಿರೋಧಿ ಎಂಬುದು. ನಂತರ ಮಾಲಿಕ್ ಜೀವನ್‌ಗೆ ಔರಂಗಜೇಬ್ ಮಾನ್‌ಸಾಬ್ ಎಂಬ ಬಿರುದು ಮತ್ತು ಒಂದು ಸಾವಿರ ಅಶ್ವಾರೋಹಿಗಳ ಗೌರವ ನೀಡಿದ. ಆ ಗೌರವದೊಡನೆ ಆತ ದೆಹಲಿಯ ಬೀದಿಗಳಲ್ಲಿ ಬಂದಾಗ ಜನರು ಗುಂಪು ಸೇರಿ ಆತನ ಮೇಲೆ ಮಲಮೂತ್ರಗಳ ಕುಡಿಕೆಗಳನ್ನು ಎಸೆದದ್ದೂ ಅಲ್ಲದೇ ಆತನ ಸಹಚರರಲ್ಲಿ, ಅನೇಕರನ್ನು ಕೊಂದು ಹಾಕಿದರು. ಮಾಲಿಕ್ ಜೀವನ್‌ನ ಪ್ರಾಣ ಕೊತ್ವಾಲ್‌ನ ಪ್ರವೇಶದಿಂದ ಉಳಿಯಿತು. ದಾರಾ ಶಿಕೋ ಜನ ಸಮುದಾಯದ ಸಂತ ಹಾಗೂ ಹೀರೋ ಆಗಿಯೇ ಉಳಿದ. ಆನತೆಯ ಕೋಪವನನು ತಣಿಸಲು ದಾರಾ ಶಿಕೋನ ಶವವನ್ನು ಆನೆಯ ಮೇಲೆ ಅಂಬಾರಿಯಲ್ಲಿಟ್ಟು ಔರಂಗಜೇಬ್ ಮೆರವಣಿಗೆ ಮಾಡಿಸಿದ. ಆದರೆ ಜನರು ಕಣ್ಣೀರಿನ ಕೋಡಿಯನ್ನೇ ಹರಿಸಿದರು. ಮಧ್ಯಯುಗದ ಭಾರತದಲ್ಲಿ ಇದ್ದಂತಹ ಎಲ್ಲಾ ರೀತಿಯ ಸಾಮಾಜಿಕ ಸಂರಚನೆಯ ನಡುವೆಯು ಕೂಡ ಜನ ಸಮುದಾಯಗಳ ನಡುವೆ ಭಾವೈಕ್ಯತೆಯ ನೈಜ ಸಂಸ್ಕೃತಿಯನ್ನು ಪೋಷಿಸಲು, ಪ್ರೇರೇಪಿಸಲು ಪ್ರಯತ್ನಪಟ್ಟ ದಾರಾ ಶಿಕೋ ಕುಟುಂಬ ಸಂರಚನೆಯ ಭ್ರಾತೃತ್ವವನ್ನು ಉಳಿಸಲು ಸೋತು ಹೋದದ್ದು ವಿಪರ್ಯಾಸವೇ ಸರಿ. ಆದರೂ ದಾರಾ ಶಿಕೋ ತನ್ನ ಸಾಹಿತ್ಯದ ಮೂಲಕ ಭಾವೈಕ್ಯತೆಯ ಮೂಲಕ ಸೂಫಿ ಸಂತನಾಗಿ ಇಂದಿಗೂ ನೆನಪಿನಲ್ಲಿ ಉಳಿಯುವ ಅದ್ಭುತ ವ್ಯಕ್ತಿತ್ವ ಹೊಂದಿದ್ದು, ಆತನ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ.

ಪ್ರಸ್ತಾವನೆ- ಬಾನು ಮುಷ್ತಾಕ್


ಹೀಗೆ ನಿಮ್ಮೊಡನೆ ಒಂದಿಷ್ಟು ಅತ್ಮೀಯವಾಗಿ ಮಾತನಾಡುವಾಗ ನನಗೆ ಒಂದು ಕತೆ ನೆನಪಾಗುತ್ತಿದೆ. ಬಹುಶಃ ಜಾನಪದ ಹಿನ್ನೆಲೆಯಿಂದ ಈ ಕಥೆ ಹುಟ್ಟಿರಬಹುದು ಎಂದು ನನ್ನ ಅನಿಸಿಕೆ . ನಾನು ಎಲ್ಲಿ ಈ ಕಥೆಯನ್ನು ಕೇಳಿದ್ದೆ ಎನ್ನುವುದು ಕೂಡ ನೆನಪಾಗುತ್ತಿಲ್ಲ. ಪೂರ್ತಾ ಕತೆ ಕೂಡಾ ನೆನಪಿನಲ್ಲಿ ಉಳಿದಿಲ್ಲ . ಮನಸ್ಸಿನಾಳದಲ್ಲಿ ಎಲ್ಲೋ ಹುದುಗಿದ್ದ ಒಂದು ಎಳೆಗೆ ನನ್ನ ಕಲ್ಪನೆಯನ್ನೂ ಸೇರಿಸಿಕೊಂಡು ಹೇಳುವುದಾದರೆ ಕಥೆ ಹೀಗಿದೆ ; ಆಕೆಯೊಬ್ಬ ಕನಸುಗಣ್ಣಿನ ಚೆಲುವೆ . ಬಳುಕುವ ಬಳ್ಳಿಯಂತಿದ್ದ ಆಕೆಗೆ ಪ್ರಕೃತಿದತ್ತವಾದ ಯೌವನದೊಂದಿಗೆ ಸಿರಿಕಂಠದ ಬಳುವಳಿಯೂ ದೊರಕಿತ್ತು . ಆಕೆ ಹಾಡುತ್ತಾ ಹಾಡುತ್ತ ಬೆಳೆದಳು . ಅಕೆಯ ಕಂಠ ಮಾಧುರ್ಯಕ್ಕೆ ಸೋತ ಕೋಗಿಲೆಯೊಂದು ಬಾಲ್ಯದಿಂದಲೇ ಅದಕೆ ಹಾಡಿನ ಸಾಂಗತ್ಯವನ್ನು ನೀಡುತ್ತಿತ್ತು . ಇಬ್ಬರೂ ಅನ್ಯೋನ್ಯವಾಗಿದ್ದರು . ಹೊಸಹೊಸ ರಾಗಗಳನ್ನು ಸೃಷ್ಟಿಸಿದ್ದೇವೆ ಎಂಬ ಯಾವ ಹಮ್ಮುಬಿಮ್ಮುಗಳಿಲ್ಲದೆ ಸಹಜವಾಗಿ,ಮುಕ್ತವಾಗಿ ಸಂತೋಷದಿಂದ ಹಾಡುತ್ತಾ ಆತ್ಮ ತೃಪ್ತಿಯನ್ನು ಪಡೆಯುತ್ತಿದ್ದರು . ಆಕೆ ನೀರಿಗೆ ಹೋದಾಗ ಅದು ಮರದಿಂದ ಮರಕೆ ಹಾರುತ್ತ ,ಬೀಸುಗಾಳಿಯ ನಿನಾದದ ಲಯವನ್ನು ಆಕೆಯ ಹೃದಯದಲಿ ಸ್ಥಾಪಿಸುತ್ತಿತ್ತು . ಆಕೆ ಕೆರೆಯಲಿ ಬಿಂದಿಗೆಯನ್ನು ಮುಳುಗಿಸಿದಾಗ ,ಅದರ ನಾದಕೆ ಸೊತು ಕೋಗಿಲೆ ಅವಳ ಸುತ್ತಾ ರೆಕ್ಕೆ ಬಡಿದು ಸುಳಿ ಸುಳಿದು ಚಿಮ್ಮುತ್ತಿತ್ತು . ಅವರಿಬ್ಬರ ನೆಂಟನ್ನು ಕಂಡು ಹಲವಾರು ಮಂದಿ ಸಂತೋಷ ಪಡುತ್ತಿದ್ದರು . ಆದರೆ ವಿಘ್ನಸಂತೋಷಿಗಳೂ ಕೂಡ ಇರುತ್ತಾರಲ್ಲಾ . .. . ಅವರು ಪುಕಾರೊಂದನ್ನು ಹಬ್ಬಿಸಿದರು . ಆಕೆಗೆ ಯಾವುದೋ ಪ್ರೇತದ ಕಾಟವಿದೆ . . .ಅದು ಕೋಗಿಲೆಯ ರೂಪದಲ್ಲಿ ಆಕೆಯನ್ನು ಕಾಡುತ್ತಿದೆ. . ಗೊತ್ತಲ್ಲಾ ಈ ಪ್ರಪಂಚದ ರಿವಾಜು ; ಮಾಮೂಲಿಗಿಂತ ಭಿನ್ನವಾದುದು ಮತ್ತು ಈ ಜನರ ಅರಿವಿಗೆ ಎರವಾದುದು ದೇವರಾಗುತ್ತೆ ಇಲ್ಲ ದೆವ್ವವಾಗುತ್ತೆ . ಹೀಗಾಗಿ ಅವಳ ಮದುವೆಯೇ ಆಗಲಿಲ್ಲ . ಆ ಕಾರಣದಿಂದಲೇ ಆಕೆ ಹಾಡುತ್ತಾ ಹಾಡುತ್ತಾ ಮತ್ತು ಕೋಗಿಲೆಯ ಸ್ವರ ಬಾಂಧವ್ಯದೊಂದಿಗೆ ನೆಮ್ಮದಿಯಾಗಿದ್ದಳು . ತಂಪಾದ ಮಳೆಗಾಲದ ಒಂದು ದಿನ ಕೋಗಿಲೆಯು ಅವಳ ಅಡಿಗೆ ಮನೆಯ ಕಿಟಕಿಯಲ್ಲಿ ಬಂದು ಕುಳಿತು ಅವಳ ಕೈಯ ರವಷ್ಟು ತಿನಿಸು ಮತ್ತು ಅವಳ ಧ್ವನಿಯ ಮಾಧುರ್ಯದ ಇಂಪು ಒಂದಿಷ್ಟನ್ನು ನಿರೀಕ್ಷಿಸುತ್ತಿತ್ತು . ಆದರೆ ಕಿಟಕಿಯಿಂದ ಹೊರ ಚಾಚಿದ್ದು ರೊಮಭರಿತ ಒರಟು ಕೈ .ಅವಳ ತಂದೆ ಆ ಕೋಗಿಲೆಯನ್ನು ಸೆರೆಹಿಡಿದ ಮತ್ತು ಯಾರೋ ಒಬ್ಬ ದೂರದೇಶದವನನ್ನು ಹಿಡಿದು ಆಕೆಯ ಮದುವೆಯನ್ನು ಮಾಡಿ ಮುಗಿಸಿದ . ಅದೆಷ್ಟೋ ದಿನಗಳ ನಂತರ ಬಿಡುಗಡೆ ಹೊಂದಿದ ಕೋಗಿಲೆ ಆಕೆಯ ದನಿಗಾಗಿ ಪರಿತಪಿಸಿತು . ತನ್ನ ರೆಕ್ಕೆಗಳ ಸಾಮರ್ಥ್ಯವನ್ನು ಕೂಡ ಮೀರಿ ಹದ್ದಿನಂತೆ ನಭದ ವಿಸ್ತಾರದಗಲಕೂ ರೆಕ್ಕೆಗಳನು ಹರಡಿತು . ಅದು ಅಲೆದು ಅಲೆದು ಬೆಂಡಾಯಿತು .ಅವಳ ಸುಳಿವು ಕೂಡ ದೊರಕಲಿಲ್ಲ . ಅವಳ ಸಾಂಗತ್ಯ ಮತ್ತು ಒಡನಾಟದ ಅನ್ವೇಷಣೆಯೇ ಆ ಕೋಗಿಲೆಯ ಬದುಕಿನ ಪರಮ ಗುರಿಯಾಯಿತು . ಒಂದು ದಿನ ಬೆಂಗಾಡಿನ ಒಂಟಿ ಮನೆಯ ಚಿಮಣಿಯ ಹೊಗೆಯನ್ನು ನಿರ್ಲಕ್ಷಿಸಿ , ಬೇರೆತ್ತಲೋ ಹಾರಬೇಕೆಂದುಕೊಂಡಿದ್ದ ಕೋಗಿಲೆಗೆ ಯಾವುದೋ ಚಿರಪರಿಚಿತ ಸುವಾಸನೆ ಆಕರ್ಷಿಸಿತು . ನಿಧಾನಕ್ಕೆ ರೆಕ್ಕೆಗಳ ಇಳಿ ಬಿಟ್ಟು ಒಂಟಿ ಮನೆಯ ಪಕ್ಕದ ಮಾವಿನ ಮರದ ಮೇಲೆ ಬೀಡು ಬಿಟ್ಟು ಕುಹೂ ಕುಹೂ ಎಂದು ಉಲಿಯಿತು . ಅದರ ಸ್ವರ ಮಾತ್ರ ಪ್ರತಿಧ್ವನಿಸಿತು . ಸುತ್ತಲೂ ನಿರುತ್ತರ .ಸೋತು ಬಳಲಿ ಬೆಂಡಾಗಿ ಹನಿದುಂಬಿದ ಕಿರಿದಾದ ಕಂಗಳಿಂದ ಅದು ವೀಕ್ಷಿಸಿದಾಗ , ಕಿಟಕಿಯ ಬಳಿ ಚಾಚಿದ್ದು, ಅದೇ ಚಿರಪರಿಚಿತ ಅನ್ನವಿಕ್ಕಿದ ಕೈ . ಸಂತೋಷಾತಿರೇಕದಿಂದ ಅದರ ಕಂಠವೇ ರುದ್ಧವಾಯಿತು . ಅದರೂ ಸಾವರಿಸಿಕೊಂಡು , ಅದು ತನ್ನ ಎದೆಯ ಹಾಡನು ಆಲಾಪಿಸಿತು . ಸಂತೋಷ ,ದುಃಖ ,ಯಾತನೆ ,ವಿರಹ -ಎಲ್ಲಾ ಭಾವಗಳನು ಪಲಕು ಹಾಕಿತು . ಯಾವುದೇ ಪ್ರತಿಕ್ರಿಯೆ ಇಲ್ಲಾ . ತನ್ನ ಜೀವದುಂಬಿದ ಹಸಿಮಣ್ಣಿನ ಸಂದೇಶ ಅಕೆಗೆ ತಲುಪಿತೋ ಇಲ್ಲವೋ . . . ಆಕೆ ಹೌದೋ ಅಲ್ಲವೋ . . . . ಹಾಗಾದರೆ ಅವಳೆಲ್ಲಿ ? ಅದರ ಚಡಪಡಿಕೆಯನ್ನು ಪರದೇಶದಲ್ಲಿ ಕೇಳುವವರಾದರೂ ಯಾರು ? ಅದರ ಕಂಠವು ದನಿಯನ್ನು ಕಳೆದುಕೊಂಡು ,ಮೈ ಮನಸು ಶಕ್ತಿಹೀನವಾಗಿ ,ಗೋಣನ್ನು ಚೆಲ್ಲಬೇಕೆಂದು ಕೊಂಡಾಗ , ಆ ಮನೆಯ ಕದ ತೆರೆಯಿತು . ಅವಳು ಮೆಲ್ಲನೆ ಅಡಿ ಇಟ್ಟು ಬಂದಳು . ಕೃಶಾಂಗಿಯಾಗಿದ್ದ ಅವಳು ಬೀರಿದ್ದು ಒಂದೇ ನೋಟ . ’ಎಲ್ಲವೂ ಸರಿ ಇಲ್ಲಾ . ಏನೇನೂ ಸರಿ ಇಲ್ಲಾ ’ ಅದರ ಎದೆ ಬಿರಿಯಿತು . ಅವಳು ಮತ್ತೊಂದು ದೃಷ್ಟಿಯನ್ನು ಅದರತ್ತ ಹಾಯಿಸಲಿಲ್ಲ . ನಿದಾನವಾಗಿ ನೆಲದತ್ತ ನೊಟವನ್ನು ನೆಟ್ಟು ರಂಗವಲ್ಲಿಯನ್ನು ಬಿಡಿಸತೊಡಗಿದಳು , ಆ ರಂಗವಲ್ಲಿಯು ಚಿತ್ರವಾಗುತ್ತಾ ಹೋಗುತ್ತಿದ್ದಂತೆಯೇ ರಾಗಗಳು ಗಾಳಿಯಲ್ಲಿ ಬಿತ್ತರವಾಗತೊಡಗಿದವು . ಥರಥರನೆ ನಡುಗಿದ ಕೋಗಿಲೆ ತನ್ನ ಹೃದಯವಿದ್ರಾವಕವಾದ ಚೀತ್ಕಾರವನ್ನು ಅಲ್ಲಿಯೇ ತಡೆ ಹಿಡಿಯಿತು .ರಂಗವಲ್ಲಿ ಸ್ಫುಟವಾಗತೊಡಗಿತು . ಅದು ಬಿತ್ತರಿಸಿದ ಸಂದೇಶ ಹೀಗಿತ್ತು " ನಾನು ಹಾಡಲಾರೆ , ಅವನು ನನ್ನ ನಾಲಿಗೆಯನ್ನು ತುಂಡರಿಸಿದ್ದಾನೆ. ಈ ರಂಗವಲ್ಲಿಯ ಮೂಲಕ ನಾನು ನನ್ನ ಸಂಗತಿಯನ್ನು ಅರುಹಲು ಹೊರ ಬಂದಿದ್ದೇನೆ . ನೀನು ಇಲ್ಲಿಂದ ಹೋಗು ; ನಿನ್ನ ಗಗನ ವಿಸ್ತಾರವಾಗಿದೆ . ಯಾವಾಗಲಾದರೊಮ್ಮೆ ನಿನ್ನ ಕುಹೂ ಕುಹೂ ರಾಗ ನನ್ನ ಕಿವಿಗೆ ಬಿದ್ದರೆ , ನನ್ನ ಪುಣ್ಯ ". ಆ ಕೋಗಿಲೆ ಹಾರಿತೇ ಅವಳ ಸಾಂಗತ್ಯವನ್ನು ತೊರೆದು ? ಯಾವುದಾದರೂ ಯಕ್ಷಿಣಿ ಅಥವ ದೈವಕೃಪೆಯಿಂದ ಅವಳ ನಾಲಿಗೆ ಮರಳಿ ಬೆಳೆಯಿತೇ? ಮತ್ತೆ ಅವರಿಬ್ಬರ ಕೂಡು ಮೇಳ ಮುಂದುವರೆಯಿತೆ ? ಈ ಬಾಂಧವ್ಯವು ಸಮಾಜದ ಸಂಕೋಲೆಗಳಿಂದ ಮುಕ್ತವಾಗಿ ಹೊಸ ದಿಕ್ಕು ದೆಶೆಗಳನ್ನು ಅರಸಿತೇ? ಈ ಸಂಬಂಧಕ್ಕೆ ಸಮಾಜ ಹೆಸರನ್ನೇನಾದರೂ ಕೊಟ್ಟು ಮಾನ್ಯ ಮಾಡಿತೇ ? ಇನ್ನೇನು ಸಾಧ್ಯತೆಗಳು ಸನ್ನಿವೇಶಗಳು ಕೂಡಿ ಶುಭ ಮಂಗಳದ ಮುಕ್ತಾಯವಾಗಬೇಕು ; ಅಥವಾ ಇದೊಂದು ದುರಂತ ಅಂತ್ಯವನ್ನು ಕಾಣುವುದೇ - ಈ ಎಲ್ಲಾ ವಿಷಯವು ಮುಂದುವರೆಯ ಬೇಕಾದುದು ನಿಮ್ಮ ಕಲ್ಪನೆಯ ಆಧಾರದ ಮೇಲೆ, ನಿಮ್ಮ ಮನಸ್ಸಿನ ಪರದೆಯ ಮೇಲೆ . ನಿಮ್ಮ ಆಲೋಚನೆ ಇನ್ನೊಂದು ರೀತಿಯಲ್ಲಿ ಪ್ರವಹಿಸಲು ಕೂಡ ಸಾಧ್ಯವಿದೆ .ಇದೊಂದು ಪ್ರೇಮ ಕಥೆ . ಆ ಕೋಗಿಲೆ ಒಬ್ಬ ಶಾಪಗ್ರಸ್ತ ರಾಜಕುಮಾರ . ಅದರ ಪ್ರೀತಿಯ ಶಕ್ತಿಯಿಂದ ಅವಳು ನಾಲಿಗೆಯನ್ನು ಮತ್ತು ತನ್ನ ಗಾನವನ್ನು ಮರಳಿಪಡೆದಳು ಅವಳ ಪ್ರೀತಿಯ ದೆಸೆಯಿಂದ ಆ ಕೋಗಿಲೆಯ ಮಾರುವೇಷ ಕಳಚಿ ರಾಜಕುಮಾರನಾದ ಎಂದು ಸುಲಭವಾಗಿ ಕೆಲವರು ಪರಿಹಾರ ಸೂಚಿಸಿ , ಪರರ ಪತ್ನಿಯನ್ನು ದಾರಾಳವಾಗಿ ಪರಪುರುಷನಿಗೆ ಧಾರೆ ಎರೆದು ಕೊಟ್ಟು ನೆಮ್ಮದಿಯನ್ನು ಅನುಭವಿಸಬಹುದು . ನಾನು ಈ ಅಪೂರ್ಣ ಕಥೆಯನ್ನು ಮುಂದಿಟ್ಟುಕೊಂಡು , ಮನುಷ್ಯ ಜೀವಿಯ ಅಭಿವ್ಯಕ್ತಿಯ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದೇನೆ. ಅದರಲ್ಲಿಯೂ ಅವಳ ಅಸ್ತಿತ್ವವನ್ನು ಹದ್ದುಬಸ್ತಿನಲ್ಲಿಟ್ಟಿರುವ ಸಾಮಾಜಿಕ ಸೀಮಾರೇಖೆಗಳು ಅವಳ ಅಭಿವ್ಯಕ್ತಿಯ ಸಾಧ್ಯತೆಗಳಿಗೆ ನಿರ್ಮಿಸಿರುವ ನಿರ್ದಯ ಗಡಿಗಳನ್ನು ಹಾಗೂ ಅದನ್ನು ಉಲ್ಲಂಘಿಸಿದವರ ಮೇಲಿನ ಅಮಾನುಷ ಕ್ರೌರ್ಯವನ್ನು ಗಮನಿಸಿದಾಗ, ’ ಅವಳ ನಾಲಿಗೆ’ ಕೇವಲ ಸಂಕೇತವಾಗಿ ಉಳಿಯುವುದಿಲ್ಲ ; ಬದಲಿಗೆ ವಿಭಿನ್ನ ರೂಪದಲ್ಲಿ ಇತಿಹಾಸದ ಪುಟಗಳಲ್ಲಿ ಪದೇ ಪದೇ ಪ್ರಕಟಗೊಳ್ಳುವ ವಾಸ್ತವತೆಯಾಗುತ್ತದೆ. ನಾಗರಿಕ ಸಮಾಜದ ಅಸೀಮ ಸಾಧ್ಯತೆಗಳ ನಡುವೆಯೂ ಈ ವಾಸ್ತವತೆ ತನ್ನ ಎಲ್ಲಾ ಕರಾಳಮುಖಗಳೊಂದಿಗೆ ವಿಜೃಂಭಿಸುತ್ತದೆ. ಅಭಿವ್ಯಕ್ತಿ ಕ್ರಿಯೆಯು ನಮ್ಮ ವ್ಯಕ್ತಿತ್ವದ ಅವಿನಾವ ಭಾಗ ,ನಮ್ಮ ಸಾಮಾಜಿಕ ವ್ಯಕ್ತಿತ್ವದ ಅಭಿವ್ಯಕ್ತಿಯು ನಾವು ನಂಬಿದ ಸತ್ಯಗಳ ಆಧಾರದ ಮೇಲೆ ಪ್ರೇರಿತವಾಗಿರುತ್ತದೆ .ನಮ್ಮ ವೈಯುಕ್ತಿಕ ಸತ್ಯ ಮತ್ತು ಇತರೆಯವರ ಸತ್ಯದ ನಡುವಿನ ತಾಕಲಾಟ ಮತ್ತು ಮೇಲುಕೀಳಾಟವು ಪಟ್ಟಭದ್ರಹಿತಾಸಕ್ತಿಗಳು ಹಾಗೂ ಪ್ರಭುತ್ವಕ್ಕೆ ಎಂದಿನಿಂದಲೂ ಸವಾಲನ್ನು ಒಡ್ಡುತ್ತಲೇ ಬರುತ್ತಿವೆ . ಹಾಗೂ ನಿರ್ದಯವಾಗಿ ದಮನಕ್ಕೆ ಒಳಗಾಗುತ್ತಲೇ ಇವೆ . ವರ್ತಮಾನದ ಬದುಕಿನಲ್ಲಿ ಮೌನವೆಂಬುದು ಶರಣಾಗತಿಯ ಇನ್ನೊಂದು ರೂಪವಾಗುತ್ತಿದೆ . ಯಾರ ಪರವೂ ವಹಿಸದೇ ಇರುವುದೂ ಕೂಡ ಪರ ವಹಿಸಿದಂತೆ ಎಂಬ ಸತ್ಯವನ್ನು ನಾವು ಕಂಡೂ ಕಾಣದಂತೆ ಮೌನ ವಹಿಸಿ ಜಾಣ ಕುರುಡು ಮತ್ತು ಜಾಣ ಕಿವುಡನ್ನು ಅಭ್ಯಾಸ ಮಾಡಿಕೊಂಡಿದ್ದೇವೆ . ನಾಜೂಕಾಗಿ ನಾವು ಬದುಕುವುದನ್ನು ಕಲಿಯುತ್ತಿದ್ದೇವೆ . ಹೀಗಾಗಿ ನಾವು ನಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವುದಕ್ಕೆ ಬದಲಾಗಿ ಮುಂದೊಂದು ದಿನ ಯಾವಾಗಲಾದರೂ ಉಪಯೋಗಕ್ಕೆ ಬಂದೀತೆಂದು ಅವುಗಳನ್ನು ಶೈತ್ಯೀಕರಿಸುವ , ಮಂಜುಗಡ್ಡೆಯನ್ನಾಗಿಸುವ ಕ್ರಿಯೆಯಲ್ಲಿ ತೊಡಗಿದ್ದೇವೇನೋ . . . . ಎಂದೆನಿಸುತ್ತಿದೆ . ಈ ಎಲ್ಲಾ ಅತಂಕ ಮತ್ತು ಕಾರ್ಮೋಡಗಳ ನಡುವೆ ಹಿಂದೆ ನಾನು ಕಾಲಕಾಲಕ್ಕೆ ಸಾಮಾಜಿಕವಾಗಿ ಪ್ರತಿಕ್ರಿಯೆ ನೀಡಿದ ಕೆಲವು ಲೇಖನಗಳು ನನ್ನ ಕಣ್ಣ ಮುಂದೆ ಮೂಡಿದ ಸಂದರ್ಭದಲ್ಲಿಯೇ ಮಿತ್ರರಾದ ಬಸವರಾಜ ಸೂಳಿಭಾವಿಯವರು ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿ , ಆ ಪ್ರಬಂಧಗಳನ್ನು ಪ್ರಕಟಿಸುವುದಾಗಿ ಹೇಳಿದರು . ಮತ್ತು ಅವುಗಳ ಪೈಕಿ ಕೆಲವೊಂದು ನಿಮ್ಮೆದುರಿಗೆ ಇವೆ .ನೀಲು , ಇಶಿಡೋಲ್ಮ ,ಜಮಾಲ್‌ನನ್ನು ಕಬಳಿಸಿದ ಆಲೂ ಗೆಡ್ಡೆ , ಹಜ್ ಕಮಿಟಿ , ಕಪ್ಪುಹಣ , ಮದ್ರಸ -ಇವುಗಳೆಲ್ಲಾ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದವು . ಆವರಣದ ಬಗ್ಗೆ ಬರೆದ ಪ್ರಬಂಧವು ಗೌರಿ ಲಂಕೇಶ್ ಪ್ರಕಟಿತ ’ಆವರಣ ಒಂದು ವಿಕೃತಿ ’ಪುಸ್ತಕದಲ್ಲಿ ಪ್ರಕಟವಾಗಿದೆ . ಸಾಮಾಜಿಕ ಪ್ರತ್ಯೇಕೀಕರಣ ದ ಬಗೆಗಿನ ಲೇಖನವು ಚಂದ್ರಶೇಖರ್ ಐಜೂರ್‌ರವರ ಅನುರೋಧದ ಮೆರೆಗೆ ಮೂಡಿಬಂದದ್ದು. ಸಾರಾಗೊಂದು ಪತ್ರ ವು ಸಬೀಹಾರವರ ಕೋರಿಕೆ ,ನೆನಪಿನ ದೂರವಾಣಿ ಮತ್ತು ಕೊನೆಯದಾಗಿ ಅವರ ಭಯೋತ್ಪಾದನೆಯ ಮೇರೆಗೆ ಅಕ್ಷರ ರೂಪವನ್ನು ತಾಳಿದ್ದು . ಸೊರಯ್ಯಾ ,ಎಮ್ ಮತ್ತು ಲಂಕೇಶರವರ ಬಗೆಗಿನ ಲೇಖನವು ತಿಂಗಳು ಮಾಸಪತ್ರಿಕೆಯ ಸಂಪಾದಕರು ಮತ್ತು ಅಭಿರುಚಿ ಪ್ರಕಾಶನದ ಗಣೇಶ್‌ರವರ ಕೋರಿಕೆಯ ಮೇರೆಗೆ - ಹೀಗೆ ಈ ಬರವಣಿಗೆಯ ಹಿನ್ನೆಲೆಯಲ್ಲಿ ಮತ್ತು ಪ್ರಕಟಗೊಂಡಿದ್ದರ ಬಗ್ಗೆ ಅನೇಕಾನೇಕ ಮಿತ್ರರ ಒತ್ತಡ ಮತ್ತು ಅನುರೋಧವು ಕ್ರಿಯಾಶೀಲವಾಗಿದೆ .ಅವರೆಲ್ಲರಿಗೂ ನನ್ನ ಕೃತಜ್ಞತೆಗಳು . ಆಯಾಕಾಲಘಟ್ಟದ ನನ್ನ ಅನಿಸಿಕೆಗಳು ಹಾಗೂ ಸಾಮಾಜಿಕ ನಿಲುವುಗಳನ್ನು ನಿಮ್ಮೆದುರಿಗೆ ಸಂಕಲನದ ರೂಪದಲ್ಲಿ ತರಲು ಶ್ರಮಿಸಿರುವ ಬಸವರಾಜ್‌ರವರಿಗೆ ವಂದನೆಗಳನ್ನು ಸಲ್ಲಿಸುತ್ತಾ == ಬಾನು ಮುಷ್ತಾಕ್

*ಪದ್ಮಶ್ರೀ ಅಮಾಸ - **ಮಹಾದೇವರಿಗೆ*ಪ್ರಶಸ್ತಿ**ಬಂದುದು****ಪ್ರೊರಾಜೇಂದ್ರ**ಚೆನ್ನಿ

ದೇವನೂರು ಮಹಾದೇವರಿಗೆ ಪದ್ಮಶ್ರೀ ಪ್ರಶಸ್ತಿ ಬಂದ ಸುದ್ದಿ ಪ್ರಸಾರವಾದ ಕೂಡಲೇನಾವೆಲ್ಲ ನಿರೀಕ್ಷಿಸಿದಂತೆ ಅವರು ಭೂಗತರಾಗಿದ್ದರು. ಹೀಗಾಗಿ ನಾವು - ಅಂದರೆ ಅವರ ಅಭಿಮಾನಿಗಳಸಂಘದ ಖಾಯಂ ಸದಸ್ಯರು - ಒಬ್ಬರನ್ನೊಬ್ಬರು ಅಭಿನಂದಿಸಿಕೊಂಡೆವು. ಯಾವ ಕಾನೂನಿನ ಪ್ರಕಾರವೂನೋಂದಾಯಿತವಾಗಲಾರದ ಅರಾಜಕ ಓದುಗರ ಸಂಘವಿದಾಗಿದೆ. ಒಂದು ಸಾರಿ ಸಭೆಯೊಂದರ ಅಧ್ಯಕ್ಷತೆ ವಹಿಸಿದಮಹಾದೇವರು ಅಲ್ಲಿ ಶುರುವಾದ ಚರ್ಚೆ, ಗೊಂದಲಗಳನ್ನು ನೋಡಿ ’ನಾನು ಇದ್ದಲ್ಲಿ ಅರಾಜಕತೆ ತಂತಾನೆಶುರುವಾಗುತ್ತದೆ’ ಎಂದು ವಿಪರೀತ ಖುಷಿಪಟ್ಟಿದ್ದರು. ಕನ್ನಡದ ದುರ್ದೈವವೆಂದರೆ ಪ್ರತಿಭಾವಂತಬರಹಗಾರರು ಪ್ರಭಾವಿಗಳು ಆದಾಗ ನಾಡಿನುದ್ದಕ್ಕೂ ಅವರ ಮತದ ಗಿಂಡಿಮಾಣಿಗಳು, ಅವರು ಕಟ್ಟುವಮಾಫಿಯಾದ ಜ್ಯೂನಿಯರ್ ಡಾನ್‌ಗಳು ಹಾಗೂ ಉನ್ಮತ್ತ ದರ್ವೇಶಿಗಳನ್ನು ಅಪಾರ ಸಂಖ್ಯೆಯಲ್ಲಿಉತ್ಪಾದಿಸತೊಡಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಮಾಜವಿಜ್ಞಾನಿಯೊಬ್ಬನ ಸುತ್ತಹುಟ್ಟಿಕೊಂಡಿರುವ cultನ ಉಗ್ರ ಹಿಂಬಾಲಕರನ್ನು ನೋಡಿ ನಾನಂತೂ ತತ್ತರಿಸಿಹೋಗಿದ್ದೇನೆ.ಚಿಕ್ಕವನಿದ್ದಾಗ ಧಾರವಾಡದಲ್ಲಿ ಎಲ್ಲಮ್ಮನ ಭಕ್ತೆಯರಾದ ಜೋಗತಿಯರು ಭಿಕ್ಷೆ ಹಾಕುವವರೆಗೂಉಗ್ರವಾದ ಕಣ್ಣುಗಳಿಂದ ಹೆದರಿಸುತ್ತಿದ್ದಾಗ ಅನಿಸುತ್ತಿದ್ದ ಭೀತಿಯನ್ನೇ ಈತನ ಹಿಂಬಾಲಕರುವೈಚಾರಿಕ ವಲಯದಲ್ಲಿ ಪ್ರಯೋಗಿಸುತ್ತಿದ್ದಾರೆ. ಇದೆಲ್ಲಾ ಯಾಕೆ ಹೇಳಿದೆನೆಂದರೆ ಸಾಹಿತ್ಯಕೊಡುವ ಸವಲತ್ತೆಂದರೆ ಅದರ ಓದಿನ ಮೂಲಕ ನಾವು ಕಂಡುಕೊಳ್ಳುವ ಸ್ವಾಯತ್ತತೆ. ಪಂಪ, ಅಲ್ಲಮ,ಕುವೆಂಪು ಅವರೊಂದಿಗೆ ನಮ್ಮ ಸ್ವತಂತ್ರ ನೆಲೆಗಳಲ್ಲಿ ನಿಂತುಕೊಂಡು ಹೆಗಲ ಮೇಲೆ ಕೈಹಾಕಿಮಾತನಾಡುವ ಸ್ವಚ್ಛಂದ ವಾಸ್ತವಿಕ ಸಮಾಜದಲ್ಲಿ ಇರುವ ಇಕ್ಕಟ್ಟುಗಳು, ಆಕ್ರಮಣಶೀಲವಾದ ಸಂಕಥನಗಳುಮನಸ್ಸುಗಳನ್ನು ಮುರುಟಿಸಿ ಬುದ್ಧಿಯನ್ನು ಸೀಮಿತಗೊಳಿಸಿ ಇನ್ನೊಬ್ಬರ ಗುಲಾಮನನ್ನಾಗಿಸುತ್ತವೆ.ಇದಾವುದೂ ಇಲ್ಲದ ಆರೋಗ್ಯಕರವಾದ ಅರಾಜಕತೆಗಾಗಿಯೇ ನಾವು ಸಾಹಿತ್ಯವನ್ನು ಇಷ್ಟುಹಚ್ಚಿಕೊಳ್ಳುತ್ತೇವೆಯಲ್ಲವೆ? ಆದರೆ ಅಂತಃಕರಣ ಮಾತ್ರ ಇರಬೇಕಾದ ಸಾಹಿತ್ಯದ ವಲಯದಲ್ಲಿ ಕೂಡಪ್ರಭಾವಿ ಬರಹಗಾರರ ಅಧಿಕಾರ ಕೇಂದ್ರಗಳು ಹುಟ್ಟಿಕೊಂಡು ಸಮಾಜದಲ್ಲಿರುವ ಯಾವತ್ತೂವಿಕೃತಿಗಳನ್ನು ಇಲ್ಲಿಯೂ ಅನುಕರಿಸತೊಡಗುತ್ತಾರೆ. ಹಾಗೆ ಆಗದೇ ಇರುವಂಥ ಸಾಂಸ್ಕೃತಿಕವ್ಯಕ್ತಿತ್ವವನ್ನು ಇಷ್ಟೊಂದು ವರ್ಷ ಮಯ್ಗೆಡದಂತೆ ಕಾಪಾಡಿಕೊಂಡ ಮಹಾದೇವ ಕನ್ನಡ ಸಂಸ್ಕೃತಿಯಆರೋಗ್ಯಕ್ಕೆ ಮುಖ್ಯ ಕಾರಣವಾಗಿದ್ದಾರೆ. ತಮ್ಮ ಏಕಾಂತ, ನಾಚಿಕೆ, ದಾಕ್ಷಿಣ್ಯ, ಯಾರು ಯಾವವರಸೆ ಹಾಕಿದರೂ ತಮ್ಮ ಬಾಯಿಂದ ಇನ್ನೊಬ್ಬರ ಮಾತನ್ನು ಆಡುವುದಿಲ್ಲ ಎನ್ನುವ ಜಿಗುಟುತನಇವುಗಳಿಂದಾಗಿ ಮಹಾದೇವ ಇಂದಿಗೂ ಸಹಜವಾಗಿದ್ದಾರೆ. ಇದರಿಂದಾಗಿ ಕನ್ನಡದ ದಲಿತ ಬರಹ, ದಲಿತಸಂಸ್ಕೃತಿ ರಾಜಕಾರಣಿಗಳಿಗೆ ಆಗಿರುವ ಅಪಾರವಾದ ಪ್ರಯೋಜನಗಳ ಬಗ್ಗೆ ಯೋಚಿಸುತ್ತಿದ್ದೇನೆ.ಇಂಗ್ಲಿಷ್ ಬಾರದ ಮಹಾದೇವರು ಅಮೆರಿಕಕ್ಕೆ ಹೋದಾಗ ’ಅಮೇರಿಕದಲ್ಲಿ ಅಮಾಸ’ ಎಂದುಕೊಂಡುಖುಷಿಪಟ್ಟಿದ್ದ ನಾನು ಈಗ ಅವರಿಗೆ ಪ್ರಶಸ್ತಿ ಬಂದಿರುವಾಗ ’ಪದ್ಮಶ್ರೀ ಅಮಾಸ’ ಅಂದರೆಹೇಗನಿಸುತ್ತಿದೆಯೆಂದು ಖುಷಿಪಡುತ್ತಿದ್ದೇನೆ. ದಲಿತ ಸಂಕಥನಗಳಿಗೆ (discourses) ಇರುವ ದೊಡ್ಡ ಅಪಾಯವೆಂದರೆ ಸವರ್ಣೀಯ ಮತ್ತುಮೇಲುವರ್ಗದ ಗ್ರಹಿಕೆಗಳನ್ನು ಗೊತ್ತಿಲ್ಲದೇ ಒಪ್ಪಿಕೊಂಡುಬಿಡುವುದು. ಈ ಗ್ರಹಿಕೆಗಳು ಒಂದುಕಡೆಗೆ ದಲಿತ ಸಮುದಾಯಗಳಿಗೆ ಯಾವ ವರ್ಣದಲ್ಲೂ ಜಾಗವಿಲ್ಲದಂತೆ ಮಾಡಿ ಅವರನ್ನು ಸಮಾಜ, ಭಾಷೆಹಾಗೂ ಸಂಸ್ಕೃತಿಗಳಿಂದ ’ಅದೃಶ್ಯ’ಗೊಳಿಸಿಬಿಡುತ್ತವೆ. ಅವರುಗಳಿಗೆ ಯಾವ ಪ್ರಾತಿನಿಧ್ಯವೇಇಲ್ಲದಂತೆ ಮಾಡುತ್ತವೆ. ಸಾವಿರಾರು ವರ್ಷಗಳವರೆಗೆ ಮಲ ಹೊರುವ ಮುಂತಾದ ಅಶೌಚ ಕೆಲಸಗಳನ್ನುಮಾಡುವ ದೇಹಗಳ ಹೊರತಾಗಿ ಇವರಿಗೆ ಅಸ್ತಿತ್ವವೇ ಇಲ್ಲವೆನ್ನುವಂಥ ಧರ್ಮ, ಸಂಸ್ಕೃತಿ,ಭಾಷೆಗಳನ್ನು ಸವರ್ಣೀಯರು ರಚಿಸಿಕೊಂಡರು. ಭಕ್ತಿ ಪರಂಪರೆಗಳಲ್ಲಿ, ಅದು ಕೂಡಾ ಆ ಪರಂಪರೆಗಳುಸಾಂಸ್ಥೀಕರಣಗೊಂಡು ವೈದಿಕ ಪರಂಪರೆಗಳೊಂದಿಗೆ ರಾಜೀಕಬೂಲಿ ಮಾಡಿಕೊಳ್ಳುವವರೆಗೆ ಮಾತ್ರ, ದಲಿತರಅಸ್ತಿತ್ವದ ಬಗ್ಗೆ ಅಲ್ಲಲ್ಲಿ ಚಿಂತನೆಯಿದೆ. ಇನ್ನೊಂದು ಕಡೆಗೆ ಕಾಲಕ್ರಮೇಣವಾಗಿ ಸವರ್ಣೀಯಗ್ರಹಿಕೆಗಳಲ್ಲಿ ಒಂದಿಷ್ಟು ಮಾನವೀಯತೆ, ನ್ಯಾಯಬದ್ಧತೆಗಳು ಪ್ರವೇಶ ಮಾಡಿದ ಮೇಲೆ ದಲಿತರನ್ನೂಶೋಷಿತರನ್ನಾಗಿ ನೋಡುವ, ಜಾತಿ ವ್ಯವಸ್ಥೆಯ ಬಲಿಪಶುಗಳನ್ನಾಗಿ ನೋಡುವ, ಅನುಕಂಪದವಸ್ತುಗಳನ್ನಾಗಿ ನೋಡುವ ಗ್ರಹಿಕೆಗಳು ಹುಟ್ಟಿಕೊಂಡವು. ಆದರೆ, ಇಂಥ ಗ್ರಹಿಕೆಗಳು ಕೂಡದಲಿತರನ್ನು ಸವರ್ಣೀಯರ ’ಅನ್ಯ’ರನ್ನಾಗಿ ರಚಿಸಿಕೊಂಡು ನೋಡುತ್ತಿವೆಯೇ ಹೊರತು ದಲಿತಅಸ್ತಿತ್ವದ ಅನನ್ಯತೆಯನ್ನು ಗುರುತಿಸುವುದಿಲ್ಲ. ಹೀಗಾಗಿ ಇಂಥ ’ಸಹಾನುಭೂತಿಪರ’ ನಿಲುವುಗಳಿಂದದಲಿತ ಅಸ್ತಿತ್ವವನ್ನು ನೋಡುವುದು ಕೂಡ ಅದನ್ನು ಇಕ್ಕಟ್ಟಿಗೆ ಸಿಕ್ಕಿಸುವಕೆಲಸವಾಗಿಬಿಡುತ್ತದೆ. ಈ ಇಕ್ಕಟ್ಟುಗಳ ಆಚೆಗೆ ದಲಿತ ಸಮುದಾಯಗಳು ತಮ್ಮ ಅಸ್ತಿತ್ವವನ್ನು ತಾವೇತಮ್ಮ ನುಡಿಗಟ್ಟಿನಲ್ಲಿ ನಿರ್ವಚಿಸಿಕೊಂಡು ಬಂದಿವೆ. ತಮ್ಮದೇ ಆದ ಸಮಗ್ರವಾದ,self-sufficient ಆದ, ಸ್ವಾಯತ್ತ ವಿಶ್ವಗಳನ್ನು ರಚಿಸಿಕೊಂಡಿವೆ. ಇದರಲ್ಲಿರುವಲೋಕಗ್ರಹಿಕೆ, ಮನುಷ್ಯ ಸಂಬಂಧಗಳ ಸ್ವರೂಪದ ಕಲ್ಪನೆ, ಮನುಷ್ಯ-ಪ್ರಕೃತಿಗಳ ಸಂಬಂಧದ ಕಲ್ಪನೆ,ತಮಗೆ ಬೇಕಾದ ಆದರೆ ಇನ್ನೂ ಸೃಷ್ಟಿಯಾಗಿರದ ಸಮಾಜದ ಕಲ್ಪನೆ ಇವೆಲ್ಲವೂ ಸೇರಿ ನೇಯ್ಗೆಗೊಂಡಿವೆ.ಸವರ್ಣೀಯ ಪ್ರಜ್ಞೆ ಈ ದಲಿತ ವಿಶ್ವವನ್ನು ಅದು ತನ್ನ ವಿಶ್ವದಿಂದ ಹೇಗೆ ಭಿನ್ನವಾಗಿದೆಯೆಂದುವಿವರಿಸಬಲ್ಲದೇ ಹೊರತು ಅದರಲ್ಲಿ ಸಂಪೂರ್ಣವಾಗಿ ಪ್ರವೇಶಿಸಲಾರದು. ದೇವನೂರು ಮಹಾದೇವರಂಥಶ್ರೇಷ್ಠ ಸೃಜನಶೀಲ ಪ್ರತಿಭೆ ತನ್ನ ಅಗಾಧವಾದ ರೂಪಕಶಕ್ತಿಯಿಂದ, ಭಾಷೆ ಮತ್ತು ಅದರ ಹಿಂದಿನಗ್ರಹಿಕೆಗಳನ್ನು ಮುರಿದುಕಟ್ಟುವ ಸಾಮರ್ಥ್ಯದಿಂದ ಹಾಗೂ ಸಾಹಿತ್ಯಸಂಪ್ರದಾಯದಲ್ಲಿರೂಢಿಯಲ್ಲಿರುವ ಕಥನಕ್ರಮಗಳನ್ನು ಭಗ್ನಗೊಳಿಸುವ ಮೂಲಕ ಈ ದಲಿತ ವಿಶ್ವವನ್ನು ಮೂರ್ತಗೊಳಿಸಿತೋರಿಸಬಲ್ಲದು; ದಲಿತ ಅನುಭವವನ್ನು ಅದರ ಮೂಲ ಆಕೃತಿಗಳೊಂದಿಗೆ ಅದರ ಸಹಜ ಶರೀರದೊಂದಿಗೆಪುನಃಸೃಷ್ಟಿಸಬಲ್ಲದು. ಇದು ಸಾಧ್ಯವಾಗಬೇಕಾದರೆ, ದಲಿತ ಬರಹಗಾರನಿಗೆ ತಾನು ಈಗಾಗಲೇಸಾಹಿತ್ಯವೆನ್ನುವ ಸವರ್ಣೀಯ ಸಾಂಸ್ಕೃತಿಕ ಸಂಸ್ಥೆಯೊಂದರ ಭಾಗವಾಗಿದ್ದರೂ ಕೂಡ, ಸವರ್ಣೀಯಸಂಕಥನಗಳಲ್ಲಿ ಪ್ರವೇಶ ಮಾಡಿದ್ದರೂ ಕೂಡ, ದಲಿತ ಅನುಭವದ ಅನನ್ಯತೆಯನ್ನು ಒಂದು ತೀವ್ರವಾದಅಂತರ್ಮುಖತೆಯೊಂದಿಗೆ (passionate inwardness) ಶೋಧಿಸುವ ಅಪೂರ್ವವಾದ ಏಕಾಗ್ರತೆಬೇಕಾಗುತ್ತದೆ. ಈಗಾಗಲೇ ಮಾನ್ಯತೆ ಪಡೆದ ಕಥನಕ್ರಮಗಳು ಪ್ರಭಾವಿಯಾಗಿರುವದರಿಂದ ಅವು ಯಾವುದೇಅನುಭವವನ್ನು ಕಥಿಸಬಲ್ಲವು ಎನ್ನುವ ಪ್ರಭಾವಿಗುಣವನ್ನು ಬೆಳೆಸಿಕೊಂಡಿರುತ್ತವೆ. ಆದರೆ, ಈಕಥನಕ್ರಮಗಳು ಕೂಡ ದಲಿತ ಅನುಭವದ ಅನನ್ಯತೆಯನ್ನು ಮೊಟಕುಗೊಳಿಸುತ್ತವೆಯಾದ್ದರಿಂದ ವಿಭಿನ್ನಕಥನಕ್ರಮಗಳನ್ನು ಶೋಧಿಸುವ ಸೃಜನಶೀಲತೆಯೂ ದಲಿತ ಬರಹಗಾರನಿಗೆ ಬೇಕಾಗುತ್ತದೆ. ಇದೆಲ್ಲವೂದೇವನೂರು ಮಹಾದೇವರಿಗೆ ಸಾಧ್ಯವಾಗಿದ್ದರಿಂದ ಕನ್ನಡ ದಲಿತ ಸಾಹಿತ್ಯಕ್ಕೆ ಇತರ ಭಾಷಾ ಸಾಹಿತ್ಯದದಲಿತ ಬರಹಗಳಲ್ಲಿ ಕಾಣದ ವಿಶಿಷ್ಟ ಪ್ರಭೆಯೊಂದು ಲಭ್ಯವಾಗಿದೆ. ಇದು ಕೇವಲ ಮಹಾದೇವರ ವೈಯಕ್ತಿಕಸಾಧನೆಯಲ್ಲ. ಅನೇಕ ಪ್ರತಿಭಾವಂತ ದಲಿತ ಬರಹಗಾರರು ಏಕಕಾಲಕ್ಕೆ ಬರೆಯುತ್ತಿರುವುದು ಸುದೈವದಸಂಗತಿಯಾಗಿದೆ. ಮಹಾದೇವರು ಸುಲಭವಲ್ಲದ, ಸದಾ ಎಚ್ಚರವನ್ನು ಉನ್ನತ ಮಟ್ಟದ ಸೃಜನಶೀಲತೆಯನ್ನುಅಪೇಕ್ಷಿಸುವ ಕಷ್ಟದ ದಾರಿಯನ್ನು ತೋರಿಸಿಕೊಟ್ಟರು. ಉದಾಹರಣೆಗೆ ಹೇಳುವುದಾದರೆ, ಬಹುಪಾಲುದಲಿತ ಬರಹಗಳು ವಾಸ್ತವವಾದಿ ಕಥನ ಸಂಪ್ರದಾಯವನ್ನು ನೆಚ್ಚಿಕೊಂಡು ಬಂದವು. ಮರಾಠಿ ಭಾಷೆಯಲ್ಲಿಬಂದ ದಲಿತ ಆತ್ಮಚರಿತ್ರೆಗಳ ಅಗಾಧವಾದ ಶ್ರೀಮಂತಿಕೆಯಿಂದಾಗಿ ಆನಂತರದ ದಲಿತ ಬರಹಗಾರರಿಗೆ ತಮ್ಮಅನುಭವಗಳನ್ನು ಇದ್ದದ್ದು ಇದ್ದ ಹಾಗೆ ಅಂದರೆ ವಾಸ್ತವವಾದಿ ಕಥನಗಳ ಮೂಲಕ ಹೇಳಬೇಕು; ಹೀಗೆಹೇಳಿದರೆ ಮಾತ್ರ ಅದು ಸಾಚಾ (authentic) ಆಗಲು ಸಾಧ್ಯವೆನ್ನುವ ನಂಬಿಕೆ ಬಂದಿತು. ಆದರೆ ’ದ್ಯಾವನೂರು’ ಸಂಗ್ರಹದ ಒಂದೆರಡು ಕತೆಗಳನ್ನು ಬಿಟ್ಟರೆ ಮಹಾದೇವರು ವಾಸ್ತವವಾದಿ ಕಥನದಇಕ್ಕಟ್ಟಿನಿಂದ ದೂರ ಬಂದರು. ಬದಲಾಗಿ ಮೌಖಿಕ ಕಥನ, ಜಾನಪದ ಕಥನ, ಪುರಾಣ, ಕಾವ್ಯ ಇವುಗಳಮಾದರಿಯನ್ನು ಹೋಲುವ ವಾಸ್ತವವಾದಿಯಲ್ಲದ ಕಥನಕ್ರಮಗಳನ್ನು ಅನ್ವೇಷಿಸಿದರು. ನನ್ನದೃಷ್ಟಿಯಲ್ಲಿ ಇದು ದಲಿತ ಬರಹಕ್ಕೆ ದೊರೆತ ಅತಿ ಮಹತ್ವದ ಪಲ್ಲಟ. ವಾಸ್ತವವಾದಿ ಕಥನದಮೂಲಗಳನ್ನು ಹುಡುಕುತ್ತಾ ಹೋದರೆ ಅದು ಕೊನೆಗೆ ನಮ್ಮನ್ನು ಪಶ್ಚಿಮದ ಬಹುಪ್ರಬಲವಾದ ವೈಚಾರಿಕಸಂಪ್ರದಾಯಗಳಿಗೆ ಕೊಂಡೊಯ್ಯುತ್ತದೆ. ಪಶ್ಚಿಮವು ಸರಿಸುಮಾರು ೧೭ನೇ ಶತಮಾನದ ಕೊನೆಯ ಭಾಗದಿಂದಆರಂಭವಾದ ಜ್ಞಾನಪರ್ವದ (Enlightenment) ಯುಗದಿಂದ ಒಂದು ಬಲವಾದ ಲೋಕಗ್ರಹಿಕೆಯನ್ನುಪ್ರತಿಪಾದಿಸುತ್ತಾ ಬಂದಿದೆ. ಇದರ ಪ್ರಕಾರ ಇಂದ್ರಿಯಗಮ್ಯವಾದ ಅನುಭವ ಮಾತ್ರ ಸತ್ಯವಾದುದು;ಇದೇ ವಿಜ್ಞಾನಕ್ಕೂ ಆಧಾರವಾದುದು. ಅಲ್ಲದೇ ಈ ಅನುಭವವನ್ನು ಅರ್ಥಮಾಡಿಕೊಳ್ಳುವುದಕ್ಕಾಗಿತರ್ಕದ ಆಧಾರ ಸಾಕು. ೧೮ನೇ ಶತಮಾನದಲ್ಲಿ ಇಂಗ್ಲಿಷ್ ಕಾದಂಬರಿ ಪ್ರವರ್ಧಮಾನಕ್ಕೆ ಬಂದಾಗ ಸತ್ಯದಈ ಪರಿಕಲ್ಪನೆ ಸಾಮಾಜಿಕ ವಾಸ್ತವವಾಗಿ ಪರಿವರ್ತಿತವಾಯಿತು. ಅಂದರೆ, ಕಾದಂಬರಿಯು ಕಣ್ಣಿಗೆಕಾಣುವ ಸಾಮಾಜಿಕ ವಾಸ್ತವವನ್ನು ಕನ್ನಡಿಸುವ ಮಾಧ್ಯಮವಾಯಿತು. ಸಾಹಿತ್ಯದ ಇನ್ನೆಲ್ಲಪ್ರಕಾರಗಳಿಗಿಂತ ಕಾದಂಬರಿ ಪ್ರಕಾರವು ಸಾಮಾಜಿಕ ವಾಸ್ತವವನ್ನು ಸತ್ಯಕ್ಕೆ ಹತ್ತಿರವಾಗುವಂತೆಅದನ್ನು ತೋರಿಸುವ ಜವಾಬ್ದಾರಿಯನ್ನು ಹೊರಬೇಕಾಯಿತು. ಇದರಿಂದ ಮುಂದಿನ ೧೯ನೇ ಶತಮಾನದಇಂಗ್ಲಿಷ್ ಹಾಗೂ ಯುರೋಪಿಯನ್ ಕಾದಂಬರಿ ಸಾಮಾಜಿಕ-ವಾಸ್ತವಿಕ ಕಾದಂಬರಿಯಾಯಿತು. ಅಲ್ಲದೇ ಆಶತಮಾನದ ದಾಖಲೆಯೂ ಆಯಿತು. ಸುದೈವದಿಂದ ವಾಸ್ತವವಾದವನ್ನು ಮೀರಿದ ತಂತ್ರಗಳನ್ನು ಪ್ರಯೋಗಿಸುವಕಾದಂಬರಿಕಾರರೂ ೧೮ನೇ ಶತಮಾನದಿಂದಲೇ ಬರೆಯುತ್ತಿದ್ದರು. ಆದರೂ ಕಾದಂಬರಿಯಲ್ಲಿ ವಾಸ್ತವವಾದದಪ್ರಭಾವವು ಒಂದಲ್ಲ ಒಂದು ರೀತಿಯಲ್ಲಿ ಮುಂದುವರೆಯಿತು. ೧೯೬೦ ದಶಕದಿಂದ ಮುನ್ನೆಲೆಗೆ ಬಂದಸ್ಪ್ಯಾನಿಷ್ ಭಾಷೆಯಲ್ಲಿ ಬರೆಯಲಾದ ಮಾಂತ್ರಿಕ ವಾಸ್ತವತಾವಾದ (magic realism) ಅದರಹಿಡಿತವನ್ನು ಸಡಿಲಿಸಿ ವಾಸ್ತವದ ಬಗೆಗಿನ ಪರಿಕಲ್ಪನೆಗಳನ್ನೇ ಬದಲಾಯಿಸಿತು. ವಾಸ್ತವ,ಫ್ಯಾಂಟಸಿ, ಕಲ್ಪನೆ ಇವುಗಳನ್ನು ಸ್ಚಚ್ಛಂದದಿಂದ ಬೆರೆಸುವ ಹೊಸ ಕಥನಕ್ರಮವು ಹುಟ್ಟಿಕೊಂಡಿತು.ಇದೆಲ್ಲ ಕೇವಲ ಕಾದಂಬರಿ ಪ್ರಕಾರದಲ್ಲಿ ಕಂಡುಬಂದ ನವೀನ ಪ್ರಯೋಗಶೀಲತೆಯೆಂದು ಯುರೋಪಿಯನ್ವಿಮರ್ಶೆ ಮೊದಲು ಅಂದುಕೊಂಡಿತು. ಆದರೆ ನಿಜವೆಂದರೆ ಯುರೋಪಿನ ಪ್ರಬಲವಾದ ಅನುಭವಗ್ರಹಿಕೆಮಾದರಿಯನ್ನು ಧಿಕ್ಕರಿಸುವ, ವಿಭಿನ್ನ ಲೋಕಗ್ರಹಿಕೆಯಲ್ಲಿ ಹುಟ್ಟಿದ ಕಥನಕ್ರಮವಿದಾಗಿತ್ತು.ಮಾರ್ಕೆಜ್‌ನಂಥ ಬರಹಗಾರ ಕಾಲ, ಚರಿತ್ರೆ, ಪ್ರಗತಿ ಇವೆಲ್ಲವುಗಳ ಬಗ್ಗೆ ಯುರೋಪು ಇಟ್ಟುಕೊಂಡಪರಿಕಲ್ಪನೆಗಳನ್ನು ಬುಡಮೇಲು ಮಾಡುವ ಕಥನಗಳನ್ನು ಬರೆಯುತ್ತಾನೆ. ಕನ್ನಡದ ದಲಿತ ಬರಹಗಾರರಿಗೆ ಮಾಂತ್ರಿಕ ವಾಸ್ತವವಾದವನ್ನು ಹೊರಗಿನಿಂದ ತರುವಅವಶ್ಯಕತೆ ಇರಲಿಲ್ಲ. ಶಿಷ್ಟ ಸಾಹಿತ್ಯ ಸಂಪ್ರದಾಯದ ಆಚೆಗೆ ನಮ್ಮ ಸಮಾಜದಲ್ಲಿ ಜೀವಂತವಾಗಿಇರುವ ಮೌಖಿಕ, ಜಾನಪದ ಕಥನಗಳಲ್ಲಿ, ಜನಪದ ಕಾವ್ಯ ಪುರಾಣಗಳಲ್ಲಿ ವಾಸ್ತವವಾದವನ್ನುತಿರಸ್ಕರಿಸುವ ಕಥನಕ್ರಮಗಳು ಲಭ್ಯವಿದ್ದವು. ಮಹಾದೇವ ಮುಖ್ಯವಾಗಿ ’ಮಲೆಮಾದೇಶ್ವರ ಕಾವ್ಯ’, ’ಮಂಟೆಸ್ವಾಮಿ ಕಾವ್ಯ’, ಜನಪದ ಕತೆಗಳು ಹಾಗೂ ಕನ್ನಡದ ಚಂಪೂ ಪರಂಪರೆಯ ಸಾಧ್ಯತೆಗಳನ್ನುಬಳಸಿಕೊಂಡು ಹೊಸ ಕಥನಕ್ರಮವನ್ನು ರಚಿಸಿಕೊಂಡರು. ಇದರ ಸ್ವರೂಪದ ಬಗ್ಗೆ ನಾನು ಹಲವಾರುಲೇಖನಗಳಲ್ಲಿ ವಿಸ್ತಾರವಾಗಿ ಬರೆದಿದ್ದೇನೆ. ಮುಖ್ಯವಾಗಿ ಪ್ರಸ್ತಾಪ ಮಾಡಬೇಕಾದ ವಿಷಯವೆಂದರೆಮಹಾದೇವರ ಬರಹ ಕನ್ನಡ ಕಥನವನ್ನು ವಾಸ್ತವವಾದದ ಸೆರೆಮನೆಯಿಂದ ಬಿಡುಗಡೆಗೊಳಿಸಿತು. ’ಕುಸುಮಬಾಲೆ’ಯ ಬಹುಮುಖಿ ಬರಹವು print-capitalism ಎಂದು ಕರೆಯಲಾಗುವ ಘಟ್ಟದಿಂದ ಆರಂಭಗೊಂಡಪ್ರಕಾರಗಳ ವಿಭಜನೆಯನ್ನು (ಅಂದರೆ ಕಾವ್ಯ-ಕಥನ, ಗದ್ಯ-ಕಾವ್ಯ) ಮುರಿದುಹಾಕಿ ಬಹುಮುಖಿಯಾದಕಥನಕ್ರಮವನ್ನು ರಚಿಸಿಕೊಳ್ಳುತ್ತದೆ. ಇದು ಒಂದು ಕಡೆಗೆ ಅತ್ಯಂತ ನವೀನ ಪ್ರಯೋಗಶೀಲತೆಯಾಗಿಕಂಡರೆ ಇನ್ನೊಂದು ಕಡೆಗೆ ನಮ್ಮ ಸಂಸ್ಕೃತಿಯ ದಮನಿತ ಲೋಕಗಳ ಅಭಿವ್ಯಕ್ತಿ ಕ್ರಮಗಳಿಗೆ (ಪ್ರಧಾನವಾಗಿ ಮೌಖಿಕ ಅಭಿವ್ಯಕ್ತಿ ಕ್ರಮಗಳಿಗೆ) ಮರಳುವುದೂ ಆಗುತ್ತದೆ. ಅದಕ್ಕೆ ’ಕುಸುಮಬಾಲೆ’ಯನ್ನು ಪೂರ್ವಿಕನಾದ ಮಲೆಮಾದೇಶ್ವರನಿಗೆ ಅರ್ಪಿಸಲಾಗಿದೆ. ಮಹಾದೇವರ ಈ ಆಯ್ಕೆಯ ಇನ್ನೊಂದುಮಹತ್ವಪೂರ್ಣ ಪುರಾಣವೂ ಇದೆ. ವಸಾಹತುಶಾಹಿಯ ಮೂಲಕ ನಮ್ಮ ಸಾಹಿತ್ಯ ಪರಂಪರೆಯನ್ನು ಪ್ರವೇಶಿಸಿದವಾಸ್ತವವಾದಿ ಕಾದಂಬರಿಯು ಪ್ರಬಲವಾದ ಮಾದರಿಯಾಗಿಬಿಟ್ಟಿತ್ತು(modular form). ಈ ಯಜಮಾನಮಾದರಿಯನ್ನೂ ಅವರು ಪಲ್ಲಟಗೊಳಿಸಿ ’ದೇಸೀ’ ಎಂದು ಕರೆಯಬಹುದಾದ ಕಥನಕ್ರಮಗಳನ್ನು ಮತ್ತೆಮುನ್ನೆಲೆಗೆ ತಂದರು. ಅಷ್ಟರಮಟ್ಟಿಗೆ ಕನ್ನಡ ಕಥನದ ನಿರ್ವಸಾಹತೀಕರಣವು ಸಾಧ್ಯವಾಯಿತು. ಇಂಥಕಥನಕ್ರಮಗಳನ್ನು ಮಹಾದೇವ ಶೋಧಿಸಿದ್ದು ಒಂದು ಖಚಿತವಾದ ಉದ್ದೇಶಕ್ಕಾಗಿ. ಅದೇನೆಂದರೆ, ನಮ್ಮದಮನಿತ ಲೋಕಗಳ ಸೃಜನಶೀಲ ಕಲ್ಪನಾಶಕ್ತಿಯನ್ನು ಬಿಡುಗಡೆಗೊಳಿಸುವುದು. ದಲಿತ ಲೋಕದ ಅನನ್ಯಅನುಭವಲೋಕಗಳು ತಮ್ಮ ಸಂಪೂರ್ಣ ಶರೀರದೊಂದಿಗೆ ಅವತರಿಸುವಂತೆ ಮೊದಲು ಈ ಬಗೆಯ ಕಥನಕ್ರಮದಪಲ್ಲಟವು ಅತ್ಯವಶ್ಯಕವಾಗಿತ್ತು. ಇಲ್ಲದಿದ್ದರೆ ನಿಗಿನಿಗಿ ಕೆಂಡದಂಥ ಅನುಭವಗಳನ್ನುಒಡಲಲ್ಲಿಟ್ಟುಕೊಂಡ ದಲಿತ ಸಮುದಾಯಗಳು ಸವರ್ಣೀಯ ಅಭಿವ್ಯಕ್ತಿ ಕ್ರಮಗಳನ್ನೇ ಅನುಕರಿಸುತ್ತಾತಮ್ಮ ನೈಜ ಅನುಭವಕ್ಕೆ ತಾವೇ ಎರವಾಗುತ್ತಿದ್ದವು. ದಲಿತ ಸಾಹಿತ್ಯದ ಕೊಂಚ ಮೊದಲು ಹುಟ್ಟಿದಬಂಡಾಯ ಚಳುವಳಿ ಹೋರಾಟ, ಶೋಷಣೆ ಇವುಗಳ ಬಗ್ಗೆ ಸರಳವಾದ ಗ್ರಹಿಕೆಗಳನ್ನು ಪ್ರತಿಪಾದಿಸಿದ್ದುಮಾತ್ರವಲ್ಲ ದಮನಿತ ವರ್ಗಗಳ ಅನುಭವಗಳ ಸಮಗ್ರ ಅಭಿವ್ಯಕ್ತಿಗಾಗಿ ಹೊಸ ಕಥನಕ್ರಮಗಳುಬೇಕೆನ್ನುವುದನ್ನು ಗಮನಿಸಲಿಲ್ಲ. ಅದರ ಪ್ರಭಾವದಲ್ಲಿ ಹೊರಬಂದ ಬಂಡಾಯಪರ ದಲಿತ ಕಾವ್ಯಕ್ಕೆಒಂದು ಅವಶ್ಯಕವಾದ ಆದರೆ ಸೀಮಿತವಾದ ಸಾಂಸ್ಕೃತಿಕ ಪಾತ್ರವಿತ್ತು. ಮಹಾದೇವರ ಸೃಜನಶೀಲಒಳನೋಟಗಳಿಂದಾಗಿ ಕನ್ನಡ ದಲಿತ ಸಾಹಿತ್ಯ ಅನೇಕ ಹೊಸ ಸಾಧ್ಯತೆಗಳನ್ನು ಕಂಡುಕೊಂಡಿತು. (ಅಂದಹಾಗೆ ನನ್ನ ಈ ವ್ಯಾಖ್ಯಾನವನ್ನು ಅಕಸ್ಮಾತ್ತಾಗಿ ಮಹಾದೇವರು ಓದಿದರೆ ಗಾಬರಿಯಾಗಿ ಛೆ, ಛೆ,ನಾನಿದನೆಲ್ಲ ಮಾಡಿಲ್ಲ ಎಂದು ಮುದುಡಿಕೊಳ್ಳುತ್ತಾರೆ! ಆದರೆ ಸೃಜನಶೀಲತೆಯನ್ನು ಕೇವಲ ಬರಹಗಾರರ’ಮುಗ್ಧ’ ವಿವರಣೆಗಳ ಮೂಲಕ ನೋಡಲಾಗುವುದಿಲ್ಲ. ಅದನ್ನು ಚಾರಿತ್ರಿಕ ಚೌಕಟ್ಟುಗಳಲ್ಲಿಟ್ಟೇನೋಡಬೇಕಾಗುತ್ತದೆ). ಇದೆಲ್ಲ ಸಾಧ್ಯವಾದದ್ದು ದಲಿತ ಸಂಘರ್ಷ ಸಮಿತಿಯು ನಡೆಸಿದ ಸಾಂಸ್ಕೃತಿಕಹೋರಾಟಗಳಿಂದಲೇ. ದಲಿತ ಅಸ್ತಿತ್ವದ ಗುರುತು (identity) ಮತ್ತು ಸಾಂಸ್ಕೃತಿಕ ಸ್ವಾಭಿಮಾನದ ಈಚಳುವಳಿ ದಲಿತ ಜನಾಂಗಗಳಲ್ಲಿ ಹುಟ್ಟುಹಾಕಿದ ಆತ್ಮವಿಶ್ವಾಸ ಹಾಗೂ ಹೋರಾಟದ ಕ್ರಿಯಾಶೀಲತೆಆಧುನಿಕ ಕನ್ನಡ ಸಮಾಜದ ಅತ್ಯಂತ ಮಹತ್ವಪೂರ್ಣ ಪಲ್ಲಟವನ್ನು ತಂದಿತು. ದಲಿತ ಅಸ್ತಿತ್ವದಅನನ್ಯತೆಗೆ ರಾಜಕೀಯ ಶಕ್ತಿ ಕೊಡಲು ಅಂಬೇಡ್ಕರ್ ಮಾಡಿದ ಹೋರಾಟದ ಮಾದರಿಯಲ್ಲಿ ಈ ಚಳುವಳಿ ಆಅನನ್ಯತೆಗೆ ಸಾಂಸ್ಕೃತಿಕ ಸವರೂಪವನ್ನು ಕೊಡುವ ಹೋರಾಟವನ್ನು ಆರಂಭಿಸಿತು. ಕೃಷ್ಣಪ್ಪನವರನೇತೃತ್ವದಲ್ಲಿ ಬಹುಬೇಗನೇ ಈ ಚಳುವಳಿ ಭೂರಹಿತ ರೈತ ಕಾರ್ಮಿಕರಾದ ದಲಿತರ ಸಮಸ್ಯೆ, ದಲಿತಮಹಿಳೆಯ ಮೇಲಿನ ಅತ್ಯಾಚಾರ, ದಲಿತ ಸಂಸ್ಕೃತಿಯ ಅವಹೇಳನದ ವಿರುದ್ಧ ಸಂಘಟಿತ ಹೋರಾಟ ಮುಂತಾದಮಹತ್ವಪೂರ್ಣ ವಿಷಯಗಳನ್ನು ಎತ್ತಿಕೊಂಡು ಪ್ರಬುದ್ಧವಾಗಿ ಬೆಳೆಯಿತು. ಇಂದು ಈ ಚಳುವಳಿಛಿದ್ರವಾಗಿ ಹೋಗಿದೆ ಎನ್ನುವಾಗಲೇ ನಾನು ಇದನ್ನು ಬರೆಯುತ್ತಿರುವ ಇಂದಿನ ’ಪ್ರಜಾವಾಣಿ’ಯಲ್ಲಿ(೧೨-೨-೨೦೧೧) ಒಬ್ಬ ದಲಿತ ಯುವತಿ, ದಲಿತರ ಸಂಘ ನಮ್ಮೂರಲ್ಲಿದ್ದಾಗ ಹೀಂಗೆ ಯಾವ ಮಗನುಮಾತಾಡಂಗಿರ್ಲಿಲ್ಲ ಇಂದಿಗೂ ಹೇಳುತ್ತಾಳೆ ಎನ್ನುವುದನ್ನು ಗಮನಿಸಬೇಕು. ತನ್ನೆಲ್ಲ ಅವನತಿಗಳಮಧ್ಯೆ ದಲಿತ ಸಂಘರ್ಷ ಸಮಿತಿ ಹುಟ್ಟಿಸುವ ಆತ್ಮವಿಶ್ವಾಸ ದಲಿತ ಜನಾಂಗಗಳ ಮೇಲೆ ಶಾಶ್ವತವಾದಪರಿಣಾಮವನ್ನು ಮಾಡಿದೆ ಎನ್ನುವುದು ನಿಶ್ಚಿತ. ಈ ಚಳುವಳಿಯನ್ನು ಕಟ್ಟಿ ಬೆಳೆಸುವುದರಲ್ಲಿಮಹಾದೇವರ ಪಾತ್ರ ಬಹಳ ದೊಡ್ಡದು. ಆರಂಭದ ದಿನಗಳಲ್ಲಿಯೇ ಕೃಷ್ಣಪ್ಪ, ಸಿದ್ಧಲಿಂಗಯ್ಯ ಮತ್ತುಮಹಾದೇವರಂಥ ಸೂಕ್ಷ್ಮ ಸಂವೇದನೆಯ ಹಾಗೂ ಸಾಹಿತಿಗಳ ಮುಂದಾಳತ್ವ ಪಡೆದದ್ದು ಡಿಎಸ್‌ಎಸ್‌ನಸುದೈವವಾಗಿತ್ತು. ಚಳುವಳಿಗಳನ್ನು ವ್ಯಕ್ತಿಗಳ ಕೊಡುಗೆಯಾಗಿ ನೋಡುವುದು ನನಗೆಸಮ್ಮತವಲ್ಲವಾದರೂ ಸಾಮಾಜಿಕ ಚಳುವಳಿಗಳಲ್ಲಿ ವ್ಯಕ್ತಿತ್ವಗಳೂ ಮುಖ್ಯವಾಗುತ್ತವೆ. ತಾವು ಮೂವರುವಹಿಸಿದ ಪಾತ್ರಗಳ ಬಗ್ಗೆ ಮಹಾದೇವರೇ ಬರೆದ ಲಘುಶೈಲಿಯ ಟಿಪ್ಪಣಿಯನ್ನು ನೋಡಬಹುದು. ಮಹಾದೇವರುದಲಿತ ಚಳುವಳಿಗೆ ಒಂದು ವಿಶಾಲವಾದ ಸಾಂಸ್ಕೃತಿಕ ಆಯಾಮವನ್ನು ನೀಡಿದರು. ಅದಕ್ಕೆ ಸಾಹಿತ್ಯಕಸಾಂಸ್ಕೃತಿಕ ವಲಯದಲ್ಲಿ ಅಧಿಕೃತತೆಯನ್ನು ತಂದುಕೊಟ್ಟರು. ತಮ್ಮ ಪ್ರಾಮಾಣಿಕತೆಯಿಂದಾಗಿಚಳುವಳಿಯ ಚಿಂತನೆ ಹಾಗೂ ಕ್ರಿಯೆಗಳು ಪೆಡಸಾಗದಂತೆ, ಜಡವಾಗದಂತೆ ಪ್ರಯತ್ನಿಸಿದರು. ಗಾಂಧಿಸಿನಿಮಾ ನೋಡಿದ್ದರ ಬಗ್ಗೆ ಬರೆದು ಗಾಂಧಿ-ಅಂಬೇಡ್ಕರ್‌ರನ್ನು ಎರಡು ವಿರುದ್ಧ ಧ್ರುವಗಳನ್ನಾಗಿನೋಡುವ ಕ್ರಮದಲ್ಲಿ ಪಲ್ಲಟ ತಂದರು. ಆನಂತರ ಬಂದ ಡಿ.ಆರ್. ಅವರ ’ಉರಿವ ಚಮ್ಮಾಳಿಗೆ ಈಕ್ರಮವನ್ನು ಮುಂದುವರೆಸಿತು. ಆದರೆ ಹೀಗೆ ಮಾಡುತ್ತಲೇ ಗಾಂಧಿ ಆಕಾಶಕ್ಕೆ ಮೂರುಗೇಣು ಕಮ್ಮಿಎಂದೂ ಖಚಿತವಾಗಿ ಹೇಳಿದರು. ಬಂಡಾಯವೆಂದರೆ ’ಬಂಡೆಗಲ್ಲಲ್ಲಿ ಚಿಗುರು ಮೂಡಿಸುವ ಕೆಲಸ’ವೆಂದುಹೇಳಿ ದಲಿತ ಬಂಡಾಯ ಚಳುವಳಿಗಳ ಸಂಬಂಧವನ್ನು ಕುದುರಿಸಿದರು. ಸಾವಿರಾರು ವರ್ಷಗಳ ಕನ್ನಡಸಾಹಿತ್ಯ ಪರಂಪರೆಯ ವಿಮರ್ಶೆಯು ಅದು ಎಷ್ಟರಮಟ್ಟಿಗೆ ದಮನಿತ ವರ್ಗಗಳ ಸಾಂಸ್ಕೃತಿಕಅಭಿವ್ಯಕ್ತಿಯಾಗಿದೆಯೆನ್ನುವ ಪ್ರಶ್ನೆಯನ್ನು ಕೇಳಿಕೊಂಡಿರಲಿಲ್ಲ. ಸಾಹಿತ್ಯವೆನ್ನುವ ಸಂಸ್ಥೆಯಾವ ಅನುಭವಲೋಕಗಳನ್ನು ಹೊರಗಿಟ್ಟಿದೆಎನ್ನುವ ಪ್ರಶ್ನೆಯನ್ನು ಕೇಳಿರಲಿಲ್ಲ. ಅದನ್ನು ಒರಟಾಗಿಹಾಗೂ ಪ್ರಾಮಾಣಿಕವಾಗಿ ಬಸವಲಿಂಗಪ್ಪನವರು ’ಕನ್ನಡ ಸಾಹಿತ್ಯವನ್ನು ಬೂಸಾ’ ಎಂದು ಕರೆದುಎತ್ತಿದರು. ಮಹಾದೇವ ಸಾಹಿತ್ಯ ಪರಂಪರೆಯಲ್ಲಿ ಮಾನವಪರ ಮೌಲ್ಯಗಳನ್ನು ಶೋಧಿಸುವುದೆಂದರೆ ’ಹೆಣದರಾಶಿಯಲ್ಲಿ ಜೀವ ಹುಡುಕುವ ಕೆಲಸ’ ಎಂದು ವರ್ಣಿಸಿ ಈ ಪ್ರಶ್ನೆಗೆ ಸ್ಪಂದಿಸಿದರು. ಹೀಗೆ ತಮ್ಮಸಂಕ್ಷಿಪ್ತವಾದ ಆದರೆ ಅಪಾರ ಅರ್ಥವಂತಿಕೆಯ ರೂಪಕಕೇಂದ್ರಿತ ಹೇಳಿಕೆಗಳಿಂದ ಮಹಾದೇವ ಕನ್ನಡಸಮಾಜದ ಬಹುಮುಖ್ಯ ಸಂವಾದಗಳಲ್ಲಿ ಭಾಗಿಯಾಗುತ್ತ ಬಂದಿದ್ದಾರೆ. ಜಾಗತೀಕರಣ ವ್ಯಾಪಾರವಲ್ಲ;ಅದು ಯುದ್ಧ ಮಾಹಿತಿ ತಂತ್ರಜ್ಞಾನ ನರಭಕ್ಷಕ ತಂತ್ರಜ್ಞಾನ...ಇವು ನಮ್ಮ ಕಾಲದ ರಾಜಕೀಯದ ’ನಿರ್ಲಜ್ಯತನ’ ಹೀಗೆ ಇತ್ತೀಚಿನ ಸಂವಾದಗಳಲ್ಲಿ ತಮ್ಮ ಒಳನೋಟಗಳನ್ನು ಸೇರಿಸಿದ್ದಾರೆ. ’ಬೆತ್ತಲೆ ಸೇವೆ ಯಾಕೆ ಕೂಡದು’ ಎಂದು ಬ್ರಾಹ್ಮಣ ಬುದ್ಧಿಜೀವಿವರ್ಗ ವಾದಿಸಿದಾಗಬೆತ್ತಲೆ ಸೇವೆಯನ್ನು ನೋಡುವವರೂ ಬೆತ್ತಲೆಯಾಗಿದ್ದರೆ ಸರಿ ಎನ್ನುವ ಮೂಲಕ ಆ ವಾದಕ್ಕೆ ತೆರೆಎಳೆದರು. ( ತೀರಾ ಇತ್ತೀಚಿನ ಮಡೆಸ್ನಾನ ವಿವಾದದ ಬಗ್ಗೆ ’ದಲಿತರು ಉಂಡ ಎಲೆಗಳ ಮೇಲೆಬ್ರಾಹ್ಮಣರು ಉರುಳಾಡಿದರೆ ಆಗಬಹುದೇನೋ ಎನ್ನುತ್ತಾರೆಂದು ಕಾಯುತ್ತಿದ್ದೇನೆ!) ಹೀಗೆ ನಮ್ಮಪ್ರಮುಖ ವಾಗ್ವಾದಗಳಲ್ಲಿ ಮಹಾದೇವರು ಮಾಡುತ್ತ ಬಂದಿರುವ interactions ಸಾಂಸ್ಕೃತಿಕವಾಗಿಬಹಳ ಮಹತ್ವಪೂರ್ಣವಾಗಿವೆ. ಅಲ್ಲದೆ ಅಕ್ಯಾಡೆಮಿಕ್ ಅಲ್ಲದ, ಭಾರವಲ್ಲದ ರೂಪಕನಿಷ್ಠಮಾತುಗಳಲ್ಲಿ ಇಷ್ಟೆಲ್ಲಾ ವಿಷಯಗಳ ಬಗ್ಗೆ ಚಿಂತಿಸಬಹುದೆಂದು ತೋರಿಸಿ ಪರ್ಯಾಯವಾದ ವೈಚಾರಿಕನುಡಿಗಟ್ಟನ್ನು ಅವರು ರೂಪಿಸಿದ್ದಾರೆ. ಇದು ಚಾಲ್ತಿಯಲ್ಲಿರುವ ವೈಚಾರಿಕ ನುಡಿಗಟ್ಟಿನಿಂದ ಬಹಳಭಿನ್ನವಾಗಿರುವುದರಿಂದಾಗಿ ಇದರ ಪ್ರಖರ ವೈಚಾರಿಕತೆಯನ್ನು ನಾವಿಂದೂ ಗುರುತಿಸಿಲ್ಲ. ಇದೆಲ್ಲಾ ಹೇಳುವಾಗ ಮಹಾದೇವರ ವ್ಯಕ್ತಿತ್ವ ಹಾಗೂ ಡಿ.ಎಸ್.ಎಸ್.ನಲ್ಲಿ ವಹಿಸಿದಪಾತ್ರಗಳ ಬಗ್ಗೆ ಅತ್ಯಂತ ಕಟುವಾದ ಅಭಿಪ್ರಾಯಗಳಿವೆ ಎನ್ನುವುದನ್ನೂ ನಾನು ಬಲ್ಲೆ. ಇವರಎಡಬಿಡಂಗಿತನದಿಂದಾಗಿ ಡಿ.ಎಸ್.ಎಸ್ ಹೋಳಾಯಿತು, ಕೃಷ್ಣಪ್ಪನವರ ಹೋರಾಟ ಸೋತಿತು ಎಂದುಗಟ್ಟಿಯಾಗಿ ನಂಬಿರುವ ಒಂದು ದೊಡ್ಡ ಗುಂಪು ಇದೆ. ಸಾಹಿತ್ಯಕ ವಲಯದಲ್ಲಿ ಪ್ರಭಾವಿಯಾದವರಸಾನಿಧ್ಯದಿಂದಾಗಿ ತಮ್ಮ radical ಗುಣ ಕಳೆದುಕೊಂಡರು ಎನ್ನುವ ಸಂಶಯವೂ ಅನೇಕರಲ್ಲಿದೆ. ಅವರಎಚ್ಚರದ ಕಲಾತ್ಮಕತೆಯು ದಲಿತ ಅನುಭವದ ಹಿಂಸೆಯನ್ನು ಮರೆಮಾಚಿ ಅದನ್ನು ನವಿರಾಗಿ ಮಂಡಿಸುತ್ತದೆಎನ್ನುವ ಗಂಭೀರ ಓದುಗರೂ ಇದ್ದಾರೆ. ದಲಿತ ಚಳುವಳಿಗಳೂ ಸೇರಿದಂತೆ ೭೦, ೮೦ರ ದಶಕದ ಸಾಮಾಜಿಕಚಳುವಳಿಗಳ ವಸ್ತುನಿಷ್ಠವಾದ ಚಾರಿತ್ರಿಕ ಅಧ್ಯಯನ ಇದುವರೆಗೆ ನಡೆದಿಲ್ಲವಾದ್ದರಿಂದ ಅವುಗಳಸೋಲಿನ ಹೊಣೆಯನ್ನು ಅವುಗಳ ನೇತಾರರ ವ್ಯಕ್ತಿತ್ವದ ಮೇಲೆ ಹೊರೆಸಲಾಗುತ್ತಿದೆ. ನನಗೆ ತೋರುವಹಾಗೆ ಈ ಚಳುವಳಿಗಳಿಗೆ ಇದ್ದ ಸಾಂಸ್ಕೃತಿಕ ಜೀವಂತಿಕೆಗೆ ಸಮಾನವಾದ ರಾಜಕೀಯ ಕ್ರಿಯಾಶೀಲತೆಇರಲಿಲ್ಲ. ಆದ್ದರಿಂದ ಅವು ಪ್ರಜ್ಞೆಯಲ್ಲಿ ಬದಲಾವಣೆಗಳನ್ನು ತರುವುದರಲ್ಲಿ ಸಫಲವಾದವೇ ಹೊರತುಸಮಾಜದ ರಚನೆಗಳಲ್ಲಿ, ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಲಾಗಲಿಲ್ಲ. ಇದನ್ನುಅರ್ಥಮಾಡಿಕೊಳ್ಳದಿದ್ದರೆ ಅವುಗಳ ಸೋಲಿನ ಜವಾಬ್ದಾರಿಯನ್ನು ಒಬ್ಬ ವ್ಯಕ್ತಿಯ ಮೇಲೆಹೊರೆಸುವುದು ಸುಲಭವಾಗುತ್ತದೆ. ದಲಿತ ಚಳುವಳಿ ಒಡೆದು ತುಂಡಾಗಿರುವುದು ಮಾತ್ರ ನಮ್ಮ ಕಾಲದಅತಿದೊಡ್ಡ ಸಾಂಸ್ಕೃತಿಕ ದುರಂತವಾಗಿದೆ. ನನಗೆ ಮಹಾದೇವರು ಮುಖ್ಯರಾಗುವುದು ಅವರು ಸೃಷ್ಟಿಸಿದ ಅನನ್ಯವಾದ ಕಥನಗಳಿಂದಾಗಿ.ಒಟ್ಟಾರೆ ೧೮೦ಕ್ಕೂ ಕಡಿಮೆ ಪುಟಗಳ ಸೃಜನಶೀಲ ಸಾಹಿತ್ಯವನ್ನು ರಚಿಸಿರುವ ಮಹಾದೇವರು ದಲಿತಲೋಕವನ್ನು(Cosmos) ಕಟ್ಟಿಕೊಟ್ಟಿರುವ ರೀತಿ ಅಪೂರ್ವವಾದುದು. ’ಗ್ರಸ್ತರು’, ’ಒಂದು ದಹನದಕಥೆ’ ಈ ಮುಂತಾದ ಕತೆಗಳ ವ್ಯಗ್ರತೆಯಿಂದ, ’ಒಡಲಾಳ’ದ ಸಾಕವ್ವನ ಮನೆಯ ಅದ್ಭುತ ನಿಬಿಡಮನುಷ್ಯಪ್ರಪಂಚದವರೆಗೆ, ’ಕುಸುಮಬಾಲೆ’ಯ ಹಲವು ಅವ್ವಂದಿರ ಸಹನೆ ಹಾಗೂ ಪ್ರೀತಿಯಿಂದ ಚೆನ್ನನತಂದೆ-ತಾಯಿಯರ ಮುಗ್ಧ ದುರಂತಮಯ ಪ್ರೀತಿಯವರೆಗೆ ಹೀಗೆ ಮನುಷ್ಯಜೀವಿಗಳ ಅನುಭವಗಳು ಒಂದುಸಂಕೀರ್ಣವಾದ ಸಿಂಫನಿ (symphony)ಯಾಗಿ ಅವರ ಕಥನಲೋಕವು ನನಗೆ ಕಂಡಿದೆ. ದುಷ್ಟ ಕಮೀಷನರ್,ಗೋಡೆಯ ಮೇಲಿನ ನವಿಲುಗಳು, ದೇವದೂತೆಯಾಗಿ ಮಾರ್ಪಡುವ ಸಾಕವ್ವ, ಕದ್ದ ಕಡಲೆಕಾಯಿಯನ್ನು ಕೂತುತಿನ್ನುವ ದಲಿತ ಕುಟುಂಬದ ’ಯಜ್ಞ’ ಇವೇ ಮುಂತಾದ ಅದ್ಭುತ ರೂಪಕಗಳ ಮೂಲಕ ದಲಿತಲೋಕದ ಅವಮಾನ,ಶೋಷಣೆಗಳ ಜೊತೆಗೆ ಅದರ ಜೀವಂತಿಕೆ, ಕ್ರಿಯಾಶೀಲತೆಯನ್ನು ದರ್ಶಿಸಿದ್ದಾರೆ. ಮೇಲಿನ ಕೇರಿಯವರಜಡಗಟ್ಟಿಸುವ ಸಂಕಥನಗಳಿಂದಾಚೆಗೆ ತನ್ನದೇ ಸ್ವಾಯತ್ತತೆಯುಳ್ಳ ದಲಿತ ವಿಶ್ವವನ್ನು ವಿವರಿಸುವಕಥನಕ್ರಮಗಳನ್ನು ಶೋಧಿಸಿದ್ದಾರೆ. ಇದಕ್ಕಿಂತ ದೊಡ್ಡದನ್ನು ಏನು ಮಾಡಬಹುದು?ಪದ್ಮಶ್ರೀ ಅಮಾಸನಿಗೆ ಅಭಿನಂದನೆಗಳು.

ನುಡಿ ಹಂತಕ ನಾರಾಯಣಮೂರ್ತಿಗಳಿಂದ ನುಡಿಹಬ್ಬಕ್ಕೆ ಚಾಲನೆಯಂತೆ !

ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದ ಉದ್ಘಾಟನೆಗೆ ಏಕಾಏಕಿ ಕಾರ್ಪೊರೇಟ್ ದಣಿ ನಾರಾಯಣಮೂರ್ತಿಯವರನ್ನು ಆವ್ಹಾನಿಸಿ ಕರ್ನಾಟಕ ಸರಕಾರ ನಾಡಿನ ಸಂವೇದನಾಶೀಲ ವಿಚಾರವಂತ ಮನಸ್ಸುಗಳಿಗೆ ಶಾಕ್ ನೀಡಿದೆ. ಕರ್ನಾಟಕ ಏಕೀಕರಣ ಚಳುವಳಿ, ಗೋಕಾಕ್ ಚಳುವಳಿಗಳನ್ನೊಳಗೊಂಡಂತೆ ನಾಡು ನುಡಿಗಳ ರಕ್ಷಣೆ ಮತ್ತು ಏಳಿಗೆಗಾಗಿ ಜೀವ ತೇಯುತ್ತ ಬಂದ ಹಿರಿಯ ಜೀವಗಳಿದ್ದವು. ಸಾಹಿತ್ಯ, ಸಂಗೀತ, ನಾಟಕ, ಚಿತ್ರರಂಗ, ಚಿತ್ರಕಲೆ ಮೊದಲಾದ ಕ್ಷೇತ್ರದಲ್ಲಿ ಕರ್ನಾಟಕದ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಸಾಂಸ್ಕೃತಿಕ ವಕ್ತಾರರಿದ್ದರು. ಜಾಗತೀಕರಣದ ಆಕ್ರಮಣಕ್ಕೆ ತುತ್ತಾಗಿ ನಾಶವಾಗುತ್ತಿರುವ ಪ್ರಾದೇಶಿಕ ಭಾಷೆ, ಸಂಸ್ಕೃತಿಗಳ ಅಳಿವು ಉಳಿವುಗಳನ್ನು ಕುರಿತು ವಿಶ್ವಮಟ್ಟದಲ್ಲಿ ಗಂಭೀರವಾಗಿ ಚಿಂತಿಸುತ್ತಿರುವ ವಿದ್ವಾಂಸರಿದ್ದರು. ಕರ್ನಾಟಕ ಸರಕಾರ ಹಾಗೂ ಸಮ್ಮೇಳನದ ಸ್ವಾಗತ-ಸಮಿತಿಗೆ ಇವರಾರೂ ನೆನಪಾಗದೇ ತಮ್ಮ ಮಾತೃಭಾಷಾ ವಿರೋಧಿ ನಿಲುವಿನ ನಾರಾಯಣ ಮೂರ್ತಿಯವರಿಗೆ ಮಣೆ ಹಾಕಿರುವುದು ಸಾಂಸ್ಕೃತಿಕ ವಲಯದಲ್ಲಿ ದೊಡ್ಡ ಅಸಮಾಧಾನವನ್ನು ಸೃಷ್ಟಿಸಿದೆ. ಮೂರು ದಿನಗಳ ದೊಡ್ಡ ಸಂತೆಯಲ್ಲಿ ಭಾಗವಹಿಸಲು ಆವ್ಹಾನಿತರಾದವರು ವಿಚಿತ್ರ ಮುಜುಗರವನ್ನು ಅನುಭವಿಸುತ್ತಿದ್ದಾರೆ. ಈ ಕಾರಣಕ್ಕೆ ಕೆಲವರು ಸಮ್ಮೇಳನವನ್ನು ಬಹಿಷ್ಕರಿಸುವ ಸಾಧ್ಯತೆ ಇದೆ. ಕೆಲವರು ಸಮ್ಮೇಳನದ ವೇದಿಕೆಗಳಿಂದಲೇ ವಿರೋಧಿಸುವ ಸನ್ನಾಹದಲ್ಲಿದ್ದಾರೆ. ಈಗಾಗಲೇ ಚಂದ್ರಶೇಖರ ಪಾಟೀಲ, ಬಸವರಾಜ ಸಬರದ ಅವರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಬರಗೂರು ರಾಮಚಂದ್ರಪ್ಪನವರಂತೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ನಾರಾಯಣಮೂರ್ತಿಗಳನ್ನು ಆವ್ಹಾನಿಸದಂತೆ ಕೋರಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದ ಸಾಂಸ್ಕೃತಿಕ ಲೋಕ ಒಕ್ಕೊರಲಿನಿಂದ ಪ್ರತಿಭಟಿಸಿ ವಿಶ್ವಕನ್ನಡ ಸಮ್ಮೇಳನದ ಮಾನವನ್ನು ಕಾಪಾಡಬೇಕಿದೆ. ನಾರಾಯಣಮೂರ್ತಿಯವರು ಈ ಹಿಂದೆ ಸಮಾರಂಭವೊಂದರಲ್ಲಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಒಂದರಿಂದ ಹತ್ತನೆಯ ತರಗತಿಯವರೆಗೆ ಕಡ್ಡಾಯವಾಗಿ ಇಂಗ್ಲೀಷ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂದು ತಾಕೀತು ಮಾಡಿದ್ದರು. ಕಾರ್ಪೊರೇಟ್ ಜಗತ್ತಿನ ಹಿತಾಸಕ್ತಿಗಾಗಿ ತಾಯ್ನುಡಿಯನ್ನು ಬಲಿಕೊಡಬೇಕೆಂಬ ಫರ್ಮಾನು ಹೊರಡಿಸಿದ್ದರು. ಸಾಫ್ಟವೇರ್ ಹಾರ್ಡವೇರ್ ಉದ್ಯಮಗಳಲ್ಲಿಯ ನೌಕರಶಾಹಿ ಅವಕಾಶಗಳೆಲ್ಲ ಮೇಲುಜಾತಿ ಮೇಲುವರ್ಗಗಳಿಗೆ ಹರಿದುಹೋಗಬೇಕೆಂಬ ಉದ್ದೇಶದಿಂದ ಮೀಸಲಾತಿಯನ್ನು ವಿರೋಧಿಸಿದ್ದರು. ವಿದೇಶೀ ಕಾರ್ಪೊರೇಟ್ ದಣಿಗಳ ಮರ್ಜಿ ಹಿಡಿಯಲು ’ರಾಷ್ಟ್ರಗೀತೆ’ಯ ಬಗ್ಗೆ ಅಪಮಾನಕರ ಹೇಳಿಕೆ ನೀಡಿ ತಮ್ಮ ಸುಪ್ತವಾದ ಕೋಮುವಾದಿ ಅಜೆಂಡಾವನ್ನು ಹೊರಹಾಕಿದ್ದರು. ಆಗೆಲ್ಲ ಸಾಂಸ್ಕೃತಿಕ ಲೋಕದ ದಿಗ್ಗಜರ ಹಾಗೂ ಪ್ರಗತಿಪರ ಚಿಂತಕರ ಖಚಿಡನೆಗೆ ಒಳಗಾಗಿದ್ದರು. ನವಬಂಡವಾಳಶಾಹಿಯ ಸುರಕ್ಷಿತ ಚಲನೆಗಾಗಿ, ಸಾವಿರ ಸಾವಿರ ಕೋಟಿಗಳ ಲಾಭದ ದುರಾಸೆಗಾಗಿ ಅವರು ಮಾತೃಭಾಷೆಯ ಸಂಹಾರಕ್ಕೆ ಕೊಡಲಿ ಎತ್ತಬಲ್ಲರು. ಸಂವಿಧಾನದ ಸಮಾಜವಾದಿ ನಿಲುವುಗಳನ್ನು ಧಿಕ್ಕರಿಸಿ ದಲಿತ-ಮತ್ತು ಕೆಳವರ್ಗಗಳ ಹಿತವನ್ನು ಮೆಟ್ಟಲು ಕಾಲೆತ್ತಬಲ್ಲರು. ಸಂವಿಧಾನಬದ್ಧ ರಾಷ್ಟ್ರೀಯ ಲಾಂಛನಗಳನ್ನು ಅವಮಾನಿಸಬಲ್ಲರು. ಇಂಥ ಮನುಷ್ಯ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ತಮ್ಮ ಅನರ್ಹತೆಯ ಅರಿವಿದ್ದೇ ಹಿಂದೇಟು ಹಾಕಿದಂತಿದೆ. ಜಾಗತೀಕರಣದ ಕಾಲು ಶತಮಾನದ ಅವಧಿಯಲ್ಲಿ ಕಾರ್ಪೊರೇಟ್ ದಣಿಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಅವುಗಳ ಆರ್ಥಿಕ ಯೋಜನೆ, ರಾಜಕೀಯ ನಡೆಗಳನ್ನು ಸಂಪೂರ್ಣವಾಗಿ ನಿರ್ದೇಶಿಸುವ ಹಾಗೂ ನಿಯಂತ್ರಿಸುವ ಮಟ್ಟದಲ್ಲಿ ಬೆಳೆದಿದ್ದಾರೆ. ಸಾಂಸ್ಕೃತಿಕ ಲೋಕವನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಯತ್ನವನ್ನು ನಿರಂತರವಾಗಿ ಮುಂದುವರೆಸಿದ್ದಾರೆ. ಬಂಡವಾಳಶಾಹಿ ಆರ್ಥಿಕತೆಯ ಲಾಭಾಂಶದ ಬಿಂದುವಿನಷ್ಟು ಖರ್ಚಿನಲ್ಲಿ ಅಸಂಖ್ಯ ಉತ್ಸವ, ಆಚರಣೆ, ಸಮಾರಂಭಗಳನ್ನು ಭರ್ಜರಿಯಾಗಿ ನಡೆಸುತ್ತ ಸಾಂಸ್ಕೃತಿಕ ಲೋಕಗಳನ್ನು ಸಾಂಸ್ಕೃತಿಕವಾದ ವಿಧಾನದಲ್ಲಿಯೇ ತನ್ನ ಭಾಗವಾಗಿಸಿಕೊಳ್ಳುವ ವ್ಯವಸ್ಥಿತ ಹುನ್ನಾರಗಳು ನಡೆಯುತ್ತಿವೆ. ಈ ಪ್ರಕ್ರಿಯೆಗೆ ಪ್ರಭುತ್ವಗಳು ಮಾಧ್ಯಮಗಳಾಗಿ ಬಳಕೆಯಾಗುತ್ತಿವೆ. ನಾರಾಯಣಮೂರ್ತಿಯವರನ್ನು ಉದ್ಘಾಟನೆಗೆ ಆವ್ಹಾನಿಸುವದನ್ನು ಗಮನಿಸಿದರೆ ವಿಶ್ವ ಕನ್ನಡ ಸಮ್ಮೇಳನ ಕೂಡ ಪ್ರಭುತ್ವ ಮತ್ತು ಬಂಡವಾಳಶಾಹಿಗಳು ಒಟ್ಟಾಗಿ ತಮ್ಮ ಜನವಿರೋಧಿ ನಿಲುವುಗಳಿಗೆ ಸಾಂಸ್ಕೃತಿಕ ಕ್ಷೇತ್ರದ ಒಪ್ಪಿಗೆಯನ್ನು ಉತ್ಪಾದಿಸುವ ಹುನ್ನಾರ ನಡೆಸಿದಂತೆ ಭಾಸವಾಗುತ್ತದೆ. ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಉತ್ಸವಗಳು ಕೋಮುವಾದ ಮತ್ತು ಕಾರ್ಪೊರೇಟ್ ಮೌಲ್ಯಗಳ ಪ್ರಚಾರದ ವೇದಿಕೆಗಳಾಗಿ ಬಳಕೆಯಾಗುತ್ತಿರುವುದನ್ನು ನೆನಪಿಸಿಕೊಳ್ಳಬಹುದಾಗಿದೆ. ವಿಶ್ವಕನ್ನಡ ಸಮ್ಮೇಳನವು ಕೋಮುವಾದ ಹಾಗೂ ಜಾಗತೀಕರಣಗಳೆಂಬ ಸಂಯಾಮಿ ಅವಳಿಗಳ ತುಳಿತಕ್ಕೆ ಸಿಕ್ಕು ದಿಕ್ಕಾಪಾಲಾಗುತ್ತಿರುವ ನಾಡು, ನುಡಿ, ಸಂಸ್ಕೃತಿ, ಸಮಾಜ, ಆರ್ಥಿಕತೆಗಳನ್ನು ಕುರಿತು ಗಂಭೀರವಾಗಿ ಚರ್ಚಿಸಿ ಉಳಿವಿನ ದಾರಿಗಳನ್ನು ಶೋಧಿಸಬೇಕಾದ ಬೃಹತ್ ವೇದಿಕೆಯಾಗಬೇಕಾಗಿತ್ತು. ಆದರೆ ಆರ್ಥಿಕ ಅಸಮಾನತೆಯನ್ನು ಹೆಚ್ಚಿಸಿ ರೈತರ ಬಡವರ, ದಲಿತರ ಆತ್ಮಹತ್ಯೆ ಸಾವು-ನೋವುಗಳಿಗೆ ಕಾರಣವಾಗಿರುವ, ಮತಾಂಧತೆಯನ್ನು ಬಿತ್ತುತ್ತ ಹಿಂಸೆಯನ್ನು ಉತ್ಪಾದಿಸುತ್ತಿರುವ ನವಬಂಡವಾಳಶಾಹಿ ವ್ಯವಸ್ಥೆಯ ಪ್ರತಿನಿಧಿಗೆ ಅದನ್ನು ಒಪ್ಪಿಸಿರುವುದು ಪ್ರಶ್ನಾರ್ಹವಾಗಿದೆ. ದೇಶೀ ಭಾಷೆ, ಸಂಸ್ಕೃತಿಗಳ ತಲೆ ಮೇಲೆ ಬಸ್ಮಾಸುರ ಹಸ್ತ ಚಾಚಿರುವ ಜಾಗತೀಕರಣದ ಫಲಾನುಭವಿಯೊಬ್ಬರಿಗೆ ದೀಪ ಹಚ್ಚಲು ನೀಡಿರುವ ಅವಕಾಶ ಅವರು ಹಚ್ಚಿರುವ ಬೆಂಕಿಯನ್ನು ಮರೆಮಾಡುವ ತಂತ್ರವೂ ಆಗಿದೆ. ಹೀಗಾಗಿ ನಾಡಿನ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ನಾರಾಯಣಮೂರ್ತಿಗಳು ವಿಶ್ವಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸುವದನ್ನು ಪ್ರತಿಭಟಿಸಬೇಕಿದೆ. ವೈಯಕ್ತಿಕವಾಗಿ ಅವರನ್ನು ಅವಮಾನಿಸಲಲ್ಲ. ನಾಡು ನುಡಿ ಸಂಸ್ಕೃತಿಗಳನ್ನು ಕುರಿತಾದ ಜಾಗತೀಕರಣದ ಸಂಹಾರಕ ನೀತಿಯನ್ನು ವಿರೋಧಿಸಿಲು.
-ಎಂ.ಡಿ. ಒಕ್ಕುಂದ

Tuesday, March 01, 2011

ಪ್ರತ್ಯೇಕ ಕೃಷಿ ಬಜೆಟ್-ರೈತಾಪಿಯ ಕನವರಿಕೆಗೆ ಯಡ್ಡಿಯ ಬುಡಬುಡಿಕೆ!

ರೈತಸಂಘದ ಸಂಗಾತಿಗಳಿಗೊಂದು ಪತ್ರ!!
ಯಡ್ಡಿಯ ಕೊನೆಗಾಲ ಹತ್ತಿರವಾಗುತ್ತಿದ್ದಂತೆ ದಿನಕ್ಕೊಂದು ಗಿಮಿಕ್ಕು ಮಾಡುತ್ತಾ ಗಳಿಗೆಗೊಬ್ಬರಿಗೆ ಟೋಪಿ ಹಾಕಲು ಹೊರಟಿರುವುದು ಸ್ಪಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಬಜೆಟ್ ಅಧಿವೇಶನ ಹತ್ತಿರ ಬರುತ್ತಿದ್ದಂತೆ 'ಪ್ರತ್ಯೇಕ ಕೃಷಿ ಬಜೆಟ್' ಎಂಬ ಹೊಸ ನಾಟಕ ಪ್ರಾರಂಭವಾಗಿದೆ. ಈ ನಾಟಕದ ವಿಶೇಷ ಮತ್ತು ವಿಷಾದ ಏನೆಂದರೆ ಈ ನಾಟಕವನ್ನಾಡಲು ಯಡಿಯೂರಪ್ಪನವರು, ರೈತಸಂಘದವರು ಆಚರಿಸುತ್ತಿದ್ದ, ಈ ನಾಡು ಕಂಡ ಅಪರೂಪದ ರೈತ ಚಿಂತಕ-ನಾಯಕ ಪ್ರೊ.ನಂಜುಂಡಸ್ವಾಮಿಯವರ 75ನೇ ಜನ್ಮ ದಿನೋತ್ಸವದ ಸಂದರ್ಭದ 'ರೈತೋತ್ಸವದ ವೇದಿಕೆಯನ್ನೇ ಬಳಸಿಕೊಂಡಿದ್ದು. ಹೀಗಾಗಿಯೇ ಈ ನಾಟಕವು ರೈತರ ಮಟ್ಟಿಗೆ ಒಂದು ದೊಡ್ಡ ಟ್ರಾಜೆಡಿಯಾಗುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದೆ.
ಅಸಲು ಈ ಕೃಷಿ ಬಜೆಟ್ ಎಂದರೇನು?
ಯಡಿಯೂರಪ್ಪನವರ ಪ್ರಕಾರ ತಮ್ಮ ನೇತ್ರೂತ್ವದಲ್ಲಿ ಮಂಡಿಸಲಿರುವ ಈ ಕೃಷಿ ಬಜೆಟ್ಟು ಇತರ ರಾಜ್ಯಗಳಿಗೂ ಮತ್ತು ಕೇಂದ್ರ ಸರ್ಕಾರಕ್ಕೂ ಮಾದರಿಯಾಗಲಿದೆಯಂತೆ! ಈ ಕಾರಣಕ್ಕಾಗಿಯೇ ಅವರು ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರಕ್ಕಿಂತ ನಾಲ್ಕು ದಿನ ಮುಂಚಿತವಾಗಿ ಫೆಬ್ರವರಿ 24ರಂದೇ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ.
ಅವರ ಪ್ರಕಾರ ಕೃಷಿ ಬಜೆಟ್ಟೆಂದರೆ ಕೃಷಿಯ ಬಗ್ಗೆಯೇ ವಿಶೇಷ ಕಾಳಜಿಯುಳ್ಳ ಪ್ರತ್ಯೇಕ ಬಜೆಟ್.
ಆದರೆ, ಈ ಹಿಂದೆಯೂ ಬಜೆಟ್ಟಿನಲ್ಲಿ ನಿರ್ಲಕ್ಷ್ಯಕ್ಕೊಳಗಾದ ಪ್ರದೇಶ ಅಥವಾ ವರ್ಗಗಳನ್ನು ವಿಶೇಷವಾಗಿ ಗುರುತಿಸಬೇಕೆಂದು ಜನತೆ ಆಗ್ರಹ ಪಡಿಸುತ್ತಲೇ ಬಂದಿದ್ದಾರೆ. ಉದಾಹರಣೆಗೆ ಹಿಂದುಳಿದ ಪ್ರದೇಶವಾದ ಹೈದರಾಬಾದ್ ಕನರ್ಾಟಕದ ಅಭಿವೃದ್ಧಿಯಾಗಬೇಕೆಂದರೆ ಅದರ ಸಮಸ್ಯೆಗಳನ್ನು ಬೇರೆಯಾಗಿಯೇ ಅರ್ಥಮಾಡಿಕೊಂಡು ಬಜೆಟ್ಟನ್ನು ಮತ್ತು ಪರಿಹಾರವನ್ನು ಒದಗಿಸಬೇಕೆಂಬ ಆಗ್ರಹವಿತ್ತು. ಅದರ ಭಾಗವಾಗಿಯೇ ನಂಜುಂಡಪ್ಪ ಅಯೋಗ, ಹೈ-ಕ ಅಭಿವೃದ್ಧಿ ಮಂಡಳಿಗಳು ಸೃಷ್ಟಿಯಾದವು. ಹಾಗೆಯೇ ಲಿಂಗ ಅಸಮಾನತೆಯನ್ನು ಹೊಡೆದೋಡಿಸಬೆಕಿದ್ದರೆ ಸಕರ್ಾರ ಬಜೆಟ್ ಮಂಡಿಸುವಾಗ ಜೆಂಡರ್ ಬಜೆಟ್ ಅಂದರೆ ಪ್ರತ್ಯೇಕವಾಗಿ ಸ್ತ್ರೀಯರ ಅಭಿವೃದ್ಧಿ-ತಾರತಮ್ಯ ನಿವಾರಣೆಯನ್ನೇ ಗಮನದಲ್ಲಿಟ್ಟುಕೊಂಡಿರುವ ಯೋಜನೆಗಳು ಮತ್ತು ಅದರ ಅನುಷ್ಠಾನವನ್ನು ಉದ್ದೇಶಿಸಿರುವ ಬಜೆಟ್ಟು.. ಕೇಂದ್ರ ಹಾಗೂ ಕೆಲವು ರಾಜ್ಯಗಳು ಜೆಂಡರ್ ಬಜೆಟ್ ಮಂಡಿಸುವ ಪ್ರಯತ್ನಗಳನ್ನು ನಡೆಸಿದೆ.
ಇವೆಲ್ಲಾ ಪ್ರಾರಂಭವಾಗಿ ಒಂದೆರೆಡು ದಶಕಗಳೇ ಕಳೆದ ನಂತರವೂ, ಪ್ರಾದೇಶಿಕ ಮಂಡಳಿಗಳು ಮತ್ತು ಜೆಂಡರ್ ಬಜೆಟ್ಗಳು ಪ್ರಾದೇಶಿಕ ತಾರತಮ್ಯವಾಗಲೀ, ಲಿಂಗ ತಾರತಮ್ಯವಾಗಲೀ ಪರಿಹಾರವಾಗಲಿಲ್ಲವೆಂಬುದನ್ನು ಅನುಭವದಿಂದಲೇ ಕಂಡುಕೊಂಡಿದ್ದೇವೆ.
ಈಗ ಈ ಕೃಷಿ ಬಜೆಟ್ಟು!
ಕೃಷಿ ಬಜೆಟ್ಟಾಗಲೀ, ಜೆಂಡರ್ ಬಜೆಟ್ಟಾಗಲೀ ವಾಸ್ತವವಾಗಿ ಆಯಾ ವರ್ಗಗಳಿಗೆ ಹೆಚ್ಚಿನ ಸಂಪನ್ಮೂಲವನ್ನೇನೂ ಕಡ್ಡಾಯವಾಗಿ ಒದಗಿಸಿಕೊಡುವುದಿಲ್ಲ. ಆವುಗಳು ಬಹುಮುಖ್ಯವಾಗಿ ಆಯಾ ವರ್ಗಗಳ ಸಮಸ್ಯೆಗಳನ್ನು ಮತ್ತು ಪರಿಹಾರಗಳನ್ನು ಗ್ರಹಿಸುವುದರಲ್ಲಿ, ಅದನ್ನು ನಿವಾರಿಸಲು ಬೇಕಾದ ಯೋಜನೆಯನ್ನು ರೂಪಿಸುವಲ್ಲಿ, ಅದನ್ನು ಮಂಜೂರು ಮಾಡಿ ಅನುಷ್ಠಾನಗೊಳಿಸುವಲ್ಲಿ, ಅದರ ಉಸ್ತುವಾರಿಯನ್ನು ನೋಡಿಕೊಳ್ಳುವಲ್ಲಿ ಮತ್ತು ನಂತರದಲ್ಲಿ ಫಲಿತಾಂಶಗಳನ್ನು ವಿಶ್ಲೇಷಿಸಿ ಮರುರೂಪಿಸುವಂಥ ಯೋಜನಾತ್ಮಕ ಮತ್ತು ಪರಿಹಾರ ನೀತಿಗಳ ಮೂಲಕ ಆ ವರ್ಗಗಳಿಗೆ ವಿಶೇಷ ಒತ್ತನ್ನು ತಂದುಕೊಡುತ್ತವೆ. ಹೀಗಾಗಿ ಆ ಸಮಸ್ಯೆ ಮತ್ತು ಅದಕ್ಕೆ ಪರಿಹಾರವನ್ನು ಒಂದು ಸರ್ಕಾರ ಹೇಗೆ ಭಾವಿಸಿಕೊಂಡಿರುತ್ತದೆ ಎಂಬುದು ಅದರಲ್ಲಿ ಅತ್ಯಂತ ಕೀಲಕವಾದ ಅಂಶ.
ಆದರೆ ಪ್ರಾದೇಶಿಕ ಅಭಿವೃದ್ಧಿಯಾಗಲೀ, ಲಿಂಗ ತಾರತಮ್ಯ ನಿವಾರಣೆಯ ವಿಷಯದಲ್ಲಾಗಲೀ, ಅಥವಾ ಅಭಿವೃದ್ಧಿ ಸಂಬಂಧಿ ಇತರ ಯಾವುದೇ ವಿಷಯಗಳಲ್ಲಾಗಲೀ ನಮ್ಮ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನೀತಿಗಳು ಯಾವ ಪಕ್ಷ ಬಂದರೂ ಏನೂ ಭಿನ್ನವಾಗಿಲ್ಲ. ಹೀಗಾಗಿಯೇ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಯಾವುದೇ ಗಿಮಿಕ್ಕುಗಳನ್ನು ಮಾಡುತ್ತಾ ಬಂದರೂ ಜನತೆಯ ಪರಿಸ್ಥಿತಿಯೂ ಸುಧಾರಿಸಲಿಲ್ಲ.
ಹೀಗಾಗಿ ಯಡ್ಡಿಯವರ ಕೃಷಿ ಬಜೆಟ್ಟೂ ಇವೆಲ್ಲಕ್ಕಿಂತ ಭಿನ್ನವಾಗಿರಬೇಕೆಂದರೆ ಕೃಷಿಯ ಬಗ್ಗೆ
1. ಸಮಸ್ಯೆಗಳನ್ನು ಮತ್ತು ಪರಿಹಾರಗಳನ್ನು ಗ್ರಹಿಸುವುದರಲ್ಲಿ
2. ಅದನ್ನು ನಿವಾರಿಸಲು ಬೇಕಾದ ಯೋಜನೆಯನ್ನು ರೂಪಿಸುವಲ್ಲಿ
3. ಅದನ್ನು ಮಂಜೂರು ಮಾಡಿ ಅನುಷ್ಠಾನಗೊಳಿಸುವಲ್ಲಿ
4. ಅದರ ಉಸ್ತುವಾರಿಯನ್ನು ನೋಡಿಕೊಳ್ಳುವಲ್ಲಿ
5. ಮತ್ತು ನಂತರದಲ್ಲಿ ಫಲಿತಾಂಶಗಳನ್ನು ವಿಶ್ಲೇಷಿಸಿ ಮರುರೂಪಿಸುವಲ್ಲಿ
...ಭಿನ್ನವಾಗಿರಬೇಕಾಗಿರುತ್ತದೆ.
ಮೇಲಿನ ಈ ಐದೂ ವಿಷಯಗಳಲ್ಲಿ ಯಡ್ಡಿಯವರ ಸರ್ಕಾರದ ನಿಲುವೇನಿದೆ ಎಂಬುದರ ಹಿನ್ನೆಲೆಯಲ್ಲಿ ಮಾತ್ರ ಈ ಕೃಷಿ ಬಜೆಟ್ಟು ರೈತರ ಬದುಕಿನ ಮೇಲೆ ಆಡುತ್ತಿರುವ ಎಂಥಾ ಕ್ರೂರ ಪ್ರಹಸನವೆಂದು ತಿಳಿಯುತ್ತದೆ.
ಅದರ ವಿಶ್ಲೇಷಣೆಗೆ ಹೋಗುವ ಮೊದಲು ಯಡಿಯೂರಪ್ಪನವರು ಕೃಷಿ ಬಜೆಟ್ಟಿನ ಮೂಲಕ ಒಟ್ಟಾರೆಯಾಗಿ ಕೃಷಿ ಕ್ಷೇತ್ರಕ್ಕೆ ಒಟ್ಟಾರೆಯಾಗಿ ಹೆಚ್ಚು ಹಣವನ್ನು ಒದಗಿಸುವುದಾಗಿಯೂ, ಒಟ್ಟಾರೆ ಬಜೆಟ್ಟನ್ನೇ ಒಂದು ಲಕ್ಷ ಕೋಟಿಯಷ್ಟು ಬೃಹತ್ ಗಾತ್ರಕ್ಕೆ ಏರಿಸಲಾಗುವುದೆಂದೂ ನೀಡುತ್ತಿರುವ ಹೇಳಿಕೆ ಎಷ್ಟು ಅರ್ಧ ಸತ್ಯದಿಂದ, ಅಗ್ಗದ ಗಿಮಿಕ್ಕಿನಿಂದ ಕೂಡಿದೆ ಎಂಬುದನ್ನು ನೋಡೋಣ!
ಕಳೆದ ವರ್ಷ 2010-11ನೇ ಸಾಲಿನ ಬಜೆಟ್ಟಿನ ಗಾತ್ರ 70,063 ಕೋಟಿ ರೂಪಾಯಿಯಷ್ತು ದೊಡ್ದದಾಗಿತ್ತು. ಅದರಲ್ಲಿ ರಾಜ್ಯದ ತೆರಗೆ, ಕೇಂದ್ರದ ತೆರಿಗೆಯ ಪಾಲು, ಇನ್ನಿತ್ಯಾದಿ ರೆವೆನ್ಯೂ ಮೂಲಗಳಿಂದ 53,639 ಕೋಟಿ ರೂಪಾಯಿಗಳು ಸಂದಾಯವಾದರೆ, 14, 925 ಕೋಟಿ ರೂಪಾಯಿಗಳನ್ನು ಲಾಭ, ಬಡ್ಡಿ ಇನ್ನಿತರ ಬಂಡವಾಳ ಖಾತೆಯಿಂದ ಗಳಿಸಲಾಗಿತ್ತು. ಆದರೂ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಖೋತಾ ಬಿದ್ದಿತ್ತು. ರಾಜ್ಯದ ರಾಜಸ್ವ ಆದಾಯದ ಪ್ರಧಾನ ಮೂಲ ವಾಣಿಜ್ಯ ತೆರಿಗೆ, ಎéಕ್ಸೈಸ್ ತೆರಿಗೆ, ಮೋಟಾರು ವಾಹನಗಳ ತೆರಿಗೆ, ಸ್ಟಾಂಪ್ ಡ್ಯೂಟಿ, ಅದಿರು ಇನ್ನಿತರ ರಾಜ್ಯದ ಸಂಪನ್ಮೂಲಗಳ ಬಳಕೆಗೆ ವಿಧಿಸುವ ರಾಜಧನ ಇನ್ನಿತ್ಯಾದಿಗಳೇ ಪ್ರಧಾನ ಮೂಲಗಳು. ಕಳೆದ ವರ್ಷ ರಾಜ್ಯದ ಈ ಸ್ವಂತ ಮೂಲಗಳಿಂದ ಅಂದಾಜು 39,000 ಕೋಟಿ ಆದಾಯ ಬಂದಿರಬಹುದೆಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಕೇಂದ್ರದಿಂದ 15,000 ಕೋಟಿ ಅನುದಾನ ಮತ್ತು ಪಾಲು ಹಾಗೂ ಅಂದಾಜು 3,000 ಕೋಟಿ ತೆರಿಗೇತರ ಆದಾಯದಿಂದ ಬಂದಿರಬಹುದೆಂದು ನಿರೀಕ್ಷಿಸಲಾಗಿದೆ.
ಈಗ 72,000 ಕೋಟಿ ರೂಪಾಯಿಗಳಿರುವ ನಮ್ಮ ಬಜೆಟ್ಟಿನ ಗಾತ್ರ ಇನ್ನೂ 30,000 ಕೋಟಿಗಳಷ್ಟು ಹೆಚ್ಚಿ ಒಂದು ಲಕ್ಷ ಕೋಟಿ ರೂಗಲಾಗಬೇಕೆಂದರೆ ಪ್ರಧಾನವಾಗಿ ಇರುವುದು ಮೂರು ಮಾರ್ಗ.
1. ನಮ್ಮ ರಾಜಸ್ವ ಆದಾಯಗಳಾದ ವಾಣಿಜ್ಯ ತೆರಿಗೆ, ಎಕ್ಸೈಸ್ ತೆರಿಗೆ, ಮೋಟಾರು ವಾಹನಗಳ ತೆರಿಗೆ, ಸ್ಟಾಂಪ್ ಡ್ಯೂಟಿ, ಇನ್ನಿತ್ಯಾದಿಗಳನ್ನು ಮೊದಲಿಗಿಂತ ಶೇ.30ರಷ್ಟು ಹೆಚ್ಚಿಸುವುದು. ಅಥರ್ಾತ್ ಒಟ್ಟಾರೆ ತೆರಿಗೆಯನ್ನು ಶೇ.30ರಷ್ಟು ಹೆಚ್ಚಿಸುವುದು.
- ಆದರೆ ಇವೆಲ್ಲವೂ ಪರೋಕ್ಷ ತೆರಿಗಗಳೇ ಆಗಿರುವುದರಿಂದ ತೆರಿಗೆ ಹೆಚ್ಚಳದ ಅಂತಿಮ ಹೊರೆ ಸಾಮಾನ್ಯ ಜನರ ಮೇಲೇ ಅಂದರೆ ರೈತರ ಮೇಲೆಯೇ ಬೀಳುತ್ತದೆ. ಮತ್ತು ತೆರಿಗೆ ಹೆಚ್ಚಳದಿಂದ ಹಣದುಬ್ಬರವೂ ಹೆಚ್ಚಾಗಿ ರೈತಾಪಿಯ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಕೃಷಿ ಬಜೆಟ್ಟಿನ ಗಾತ್ರ ಹೆಚ್ಚಾದರೂ ರೈತ ಫಲಾನುಭವಿಯಾಗುವ ಬದಲು ಬಲಿಪಶುವಾಗುತ್ತಾನೆ.
2. ನಂತರದ ಮಾರ್ಗ ತೆರಿಗೇತರ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು. ಅಂದರೆ ರಾಜ್ಯದ ಸಂಪನ್ಮೂಲಗಳಾದ ಅದಿರು, ಕಾಡು ಇತ್ಯಾದಿ ಬಳಕೆಗೆ ರಾಜಧನ ವಿಧಿಸುವುದು. ಸರ್ಕಾರಿ ಕಾರ್ಖಾನೆ ಅಥವಾ ಸೇವಾ ಸಂಸ್ಥೆಗಳು ಕೊಡುತ್ತಿರುವ ಸೇವೆಗೆ ಹೆಚ್ಚು ಶುಲ್ಕ ವಿಧಿಸುವುದು.
-ಇದರಲ್ಲಿ ರಾಜ್ಯದ ಅದಿರು ಸಾಗಾಣಿಕೆಯ ಮೇಲೆ ರಸ್ತೆ ಶುಲ್ಕ ವಿಧಿಸಲು ಮಾಡಿದ ಪ್ರಯತ್ನ ಹೇಗೆ ಸರ್ಕಾರವನ್ನೇ ಅಸ್ಥಿರಗೊಳಿಸತು ಎಂಬುದನ್ನು ನೋಡಿದ್ದೇವೆ. ಅಲ್ಲಿಂದಾಚೆಗೆ ಯಡ್ಡಿ ಸರ್ಕಾರ ಪ್ರಭಾವಿಗಳಿಗೆ ಸೇವೆ ಮಾಡುತ್ತಿದೆಯೇ ವಿನಃ ಯಾವುದೇ ಸೇವಾ ಶುಲ್ಕ ಹಾಕುವ ಯೋಚನೆಯನ್ನೂ ಮಾಡುತ್ತಿಲ್ಲ. ಇನ್ನು ಸಕರ್ಾರ ಈವರೆಗೆ ಸಾಮಾನ್ಯ ಜನರಿಗೆ ಕೊಡುತ್ತಿದ್ದ ಉಚಿತವಾಗಿ ಕೊಡುತ್ತಿದ್ದ ಕುಡಿಯುವ ನೀರು, ನೀರಾವರಿ ನೀರು, ವಿದ್ಯುತ್, ಸಾರಿಗೆ ಸೇವೆ, ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳ ಮೇಲೆ ಶುಲ್ಕ ವಿಧಿಸಲು ಪ್ರಾರಂಭಿಸಿದೆ. ಅದನ್ನು ಇನ್ನೂ ಶೇ.30ರಷ್ಟು ಹೆಚ್ಚಳ ಮಾಡಿದರೆ ಸಾಮಾನ್ಯರ ಗತಿ? ಅದು ಕೃಷಿ ಬಜೆಟ್ಟಲ್ಲ-ರೈತರ ತಿಥಿ ಬಜೆಟ್ಟಾಗುವುದಷ್ಟೆ!
3. ಮೂರನೆಯ ದಾರಿ ಸಾಲ ಮಾಡಿ ಬಜೆಟ್ಟಿನ ಗಾತ್ರವನ್ನು ಹೆಚ್ಚಿಸುವುದು. ಮೊದಲನೆಯದಾಗಿ ಈ ಪ್ರಮಾಣದಲ್ಲಿ ಸಾಲ ಕೊಡುವುದು ವಿಶ್ವಬ್ಯಾಂಕು. ಅದು ಸಾಲ ಕೊಡುತ್ತದೆ. ಆದರೆ ಅವು ಹಾಕುವ ಶರತ್ತುಗಳನ್ನು ಪಾಲಿಸುತ್ತಾ ಬಂದಿರುವುದರಿಂದಲೇ ಇಂದು ರಾಜ್ಯದ-ದೇಶದ ಕೃಷಿ ಮತ್ತು ರೈತಾಪಿಯ ಪರಿಸ್ಥಿತಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಅದನ್ನು ನಂತರದಲ್ಲಿ ಚರ್ಚಿಸೋಣ.
4. ಇನ್ನೊಂದು ದಾರಿ ಇದೆ. ಅದು ಒಂದು ಲಕ್ಷ ಕೋಟಿಯಷ್ಟು ಬಜೆಟ್ ಮಂಡಿಸುವುದು. ಅದಕ್ಕೆ ಪೂರಕವಾದ ಮಾರ್ಗೋಪಾಯಗಳಿಲ್ಲದೆ ಅಂತಿಮವಾಗಿ ಖೋತಾ ಬಜೆಟ್ ಎದುರಿಸುವುದು. ಅಂದರೆ ಬಜೆಟ್ಟಿನಲ್ಲಿ ಹಣಕಾಸಿನ ಬೆಂಬಲವಿಲ್ಲದೆ ಸುಖಾಸುಮ್ಮನೆ ಯೋಜನೆಗಳ ಮಹಾಪೂರವನ್ನೇ ಹರಿಸುವುದು. ಆದರೆ ವರ್ಷದ ಕೊನೆಯಲ್ಲಿ ಹಣಕಾಸು ಕೊರತೆಯಿಂದ ಅದನ್ನು ಈಡೇರಿಸಲಾಗಲಿಲ್ಲ ಎಂದು ಘೋಷಿಸುವುದು. ನಮ್ಮ ಬಹುಪಾಲು ಸರ್ಕಾರಗಳು ಚುನಾವಣೆ ಹತ್ತಿರ ಬರುತ್ತಿದ್ದಂತೆ ಅನುಸರಿಸುವ ಮಾರ್ಗ ಇದೇ! ಕಳೆದ ಎರಡು ವರ್ಷಗಳಿಂದ ಯಡಿಯೂರಪ್ಪನವರು ಅನುಸರಿಸುತ್ತಿರುವ ಮಾರ್ಗವೂ ಇದೇ!
ಹೀಗೆ ಬಜೆಟ್ಟಿನ ಗಾತ್ರ ಹೆಚ್ಚಾಗುವುದು ಹೇಗೆ ಎಂಬ ಪ್ರಶ್ನೆ ಕೇಳಿಕೊಳ್ಳದೆ, ಕೃಷಿಗೆ ಹೆಚ್ಚು ಹಣ ಕೊಟ್ಟಲ್ಲಿ ಅದೇ ಕೃಷಿ ಬಜೆಟ್, ರೈತಪರ ಬಜೆಟ್ಟೆಂದು ಭಾವಿಸುವುದು ರಾಜಕೀಯ ಮುಠಾಳತನ. ಪ್ರೊ.ನಂಜುಂಡಸ್ವಾಮಿಯವರು ಕರ್ನಾಟಕದ ರೈತರಿಗೆ ಈ ಬಗ್ಗೆ ನೀಡಿದ ರಾಜಕೀಯ ಶಿಕ್ಷಣವೇ ಕರ್ನಾಟಕದ ರೈತರನ್ನು ರಾಜಕೀಯವಾಗಿ ವಂಚನೆಗೆ ಬಲಿಬೀಳದಂತೆ ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿತ್ತು ಎಂದರೂ ತಪ್ಪಿಲ್ಲ. ಆದರೆ ಈಗ ಯಡ್ಡಿಯವರು ನಂಜುಂಡಸ್ವಾಮಿಯವರ ನೆನಪಿನ ವೇದಿಕೆಯ ಮೇಲೇ, ರೈತಸಂಘದ ಸಮಾರಂಭದಲ್ಲೇ ರಾಜಾರೋಷವಾಗಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ!!
ಇನ್ನೂ ಯಡ್ಡಿ ಹೇಳುತ್ತಿರುವ ಕೃಷಿ ಬಜೆಟ್ಟಿನ ಸಾರಾಂಶವೇನು?
ಅದರಲ್ಲಿ ಕೃಷಿಯ ಸಮಸ್ಯೆಗಳನ್ನು ಮತ್ತು ಅದರ ಪರಿಹಾರವನ್ನು ಅವರು ಪರಿಭಾವಿಸಿಕೊಂಡಿರುವ ಬಗೆಯೇನು? ಅದಕ್ಕೆ ಅವರು ರೂಪಿಸುತ್ತಿರುವ ಯೋಜನೆಗಳೇನು? ಅದರ ಉಸ್ತುವಾರಿ ಮತ್ತು ಪುನರ್ವಿಮರ್ಶೆಗೆ ಅವರು ರೂಪಿಸಿರುವ ಸಾಂಸ್ಥಿಕ ರಚನೆಗಳೇನು?
ಕೃಷಿ ಮತ್ತು ಆತ್ಮಹತ್ಯೆಯ ದಾರಿ ಹಿಡಿದಿರುವ ರೈತಾಪಿಯ ಸಮಸ್ಯೆಗಳ ಬಗೆಗೆ ಬಿಜೆಪಿಯ ರಾಷ್ಟ್ರೀಯ ನಿಲುವು 2000ದಲ್ಲಿ ವಾಜಪೀಯಿ ಸಕರ್ಾರದ ರಾಷ್ಯ್ರೀಯ ಕೃಷಿ ನೀತಿಯಲ್ಲಿ ತುಂಬಾ ಸ್ಪಷ್ಟವಾಗಿ ನಿರೂಪಿಸಲಾಗಿದೆ. ಅದರ ಪ್ರಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿಯಲ್ಲಿ ಭವಿಷ್ಯವಿಲ್ಲ. ಆದ್ದರಿಂದ ಅವರು ಕೃಷಿ ಬಿಟ್ಟು ಹೊರಬರಬೇಕು. ನಿಧಾನಕ್ಕೆ ಭಾರತದ ಕೃಷಿಯಲ್ಲಿ ಕಾಂಟ್ರಾಕ್ಟ್ ಫಾರ್ಮಿಂಗ್ ಮತ್ತು ಕಾರ್ಪೊರೇಟ್ ಫಾರ್ಮಿಂಗ್ ಗೆ ಅವಕಾಶ ಮಾಡಿಕೊಡಬೇಕು. ಬಿಟಿ ತಂತ್ರಜ್ನಾನದ ಮೂಲಕ ಎರಡನೇ ಹಸಿರುಕ್ರಾಂತಿಗೆ ಅವಕಾಶ ಮಾಡಿಕೊಡಬೇಕು. 2004ರಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಹ ಇದನ್ನೇ ಚಾಚೂ ತಪ್ಪದೇ ಮುಂದುವರೆಸಿದೆ.
ಯಡಿಯೂರಪ್ಪನವರ ಸರ್ಕಾರವಂತೂ ಒಂದೆಡೆ ಕೃಷಿ ಬಜೆಟ್ ನ ಭರವಸೆಗಳನ್ನು ನೀಡುತ್ತಿರುವ ಮರುಕ್ಷಣದಲ್ಲೇ ಕೃಷಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 50,000 ಕೋಟಿ ಖಾಸಗಿ ಬಂಡವಾಳವನ್ನು ಹೂಡಲಾಗುವುದೆಂದೂ, ಅದಕ್ಕಾಗಿ ಬರುವ ಜೂನ್ನಲ್ಲಿ ಕೃಷಿ ಕ್ಷೇತ್ರದಲ್ಲಿನ ವಿಶ್ವ ಬಂಡವಾಳಿಗರ ಸಮ್ಮೇಳನವನ್ನು ನಡೆಸುವುದಾಗಿ ಘೋಷಿಸಿದೆ. ಹಾಗೂ ಆ ನಿಟ್ಟಿನಲ್ಲಿ ಈಗಾಗಲೇ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ವಶಪಡಿಸಿಕೊಂಡಿರುವ 1.75 ಲಕ್ಷ ಎಕರೆಯ ಜೊತೆಜೊತೆಗೆ ಇನ್ನೂ ಒಂದು ಲಕ್ಷ ಎಕರೆ ವಶಪಡಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯಾದ್ಯಂತ ದೊಡ್ಡ ರಸ್ತೆಗಳಿಗೆ, ಟೌ ನ್ ಶಿಪ್ ಗಳಿಗೆ, ವಿಮಾನ ನಿಲ್ದಾಣಗಳಿಗೆ ರೈತಾಪಿಯ ಜಮೀನು ದೊಡ್ಡ ಮಟ್ಟದಲ್ಲಿ ವಶವಾಗುತ್ತಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಪಟ್ಟಿಯಲ್ಲಿ ಹೆಚ್ಚಾಗುತ್ತಿರುವುದು ಎಕ್ಸ್ಪ್ರೆಸ್ ಹೈವೇಗಳೇ ವಿನಃ ಸರ್ವಋತು ಗ್ರಾಮಿಣ ರಸ್ತೆಯಲ್ಲ. ದೊಡ್ಡ ದೊಡ್ಡ ಮಲ್ಗಳೇ ವಿನಃ ರೈತರು ಬೆಳದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡುವ ಕೋಲ್ಡ್ ಸ್ಟೋರೇಜ್ ಗಳಲ್ಲ. ಸಾವಯವ ಕೃಷಿ ಉತ್ತೇಜನ ಇನ್ನಿತರ ಹೆಸರಲ್ಲಿ ರೈತಾಪಿಯ ಒಟ್ಟಾರೆ ಅಭಿವೃದ್ಧಿಗೆ ಸಹಾಯಕವಾಗುತ್ತಿದ್ದೇವೆ ಎಂದು ಹೇಳಿದರೂ ಅದಕ್ಕೆ ಖರ್ಚಾಗುತ್ತಿರುವ ಹಣದ ದುಪ್ಪಟ್ಟು ಹಣವನ್ನು ರೈತರಿಗೆ ಕೊಡುತ್ತಿದ್ದ ನೀರು, ವಿದ್ಯುತ್, ಸಾರಿಗೆ, ಪಡಿತರ ಸೇವೆಯ ಶುಲ್ಕವನ್ನು ಏರಿಸುವ ಮೂಲಕ ಹಿಂಪಡೆಯಲಾಗುತ್ತಿದೆ. ಸುಲಿಯಲಾಗುತ್ತಿದೆ. ಅದೇರೀತಿ ಅವರ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ಯೋಜನೆಗಳು, ಉಚಿತ ವಿದ್ಯುತ್ ಯೋಜನೆಗಳು ಇವೆಲ್ಲಾ ಅದಕ್ಕೆ ಬೇಕಾದ ಹಣಕಾಸು ಬೆಂಬಲವನ್ನು ಬಜೆಟ್ಟಿನಲ್ಲಿ ಪಡೆಯದೇ ಹೇಗೆ ಪೊಳ್ಳು ಭರವಸೆಗಳಾಗಿ ಮಾತ್ರ ಉಳಿದವು ಎಂಬುದನ್ನು ಕಳೆದ ಎರಡು ವರ್ಷಗಳಲ್ಲಿ ನೋಡಿದ್ದೇವೆ. ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಕರ್ನಾಟಕದ ಸ್ಥಾನ ಕೆಳಗಿರುವುದರಿಂದಲೇ ಸತತ ಹತ್ತನೇ ವರ್ಷವೂ ಕನರ್ಾಟಕ ಅತಿ ಹೆಚ್ಚು ರೈತರ ಆತ್ಮಹತ್ಯೆಗಳಾಗುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ಶೇ.2ರ ಬಡ್ಡಿ ದರದ ಸಾಲದ ಬಗ್ಗೆ ಘೋಷಣೆಯಾದ ನಂತರವೂ ಕರ್ನಾಟಕದಲ್ಲಿ ಸಾಲ ಬಾಧೆ ತಡೆಯಲಾಗದೆ 2009ರಲ್ಲಿ 1500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಬೆಳದ ಬೆಳೆಗೆ ವೈಜ್ನಾನಿಕ ದರವಿರಲಿ, ಕನಿಷ್ಟ ಬೆಂಬಲ ದರ ನಿಗದಿ ಮಾಡಬೇಕೆಂಬುದಕ್ಕೂ ಸರ್ಕಾರ ಒಗೊಡದಿದ್ದರಿಂದ ಬೇರೆಬೇರೆ ಕೃಷಿ ಉತ್ಪನ್ನಗಳ ಬೆಳೆಗಾರರು ಇಡೀ ವರ್ಷ ಹೋರಾಟದಲ್ಲೇ ಕಳೆದರು. ಬೇಡಿಕೆಯ ಅರ್ಧ ಭಾಗವೂ ಈಡೇರಲಿಲ್ಲ. ರೈತರಿಗೆ ಚುನಾವಣಾ ಸಂದರ್ಭದಲ್ಲಿ ಬಿಟ್ಟರೆ ಉಚಿತ ವಿದ್ಯುತ್ತಿರಲಿ 12 ಗಂಟಗಳ ನಿರಂತರ ಕೊಳ್ಳುವ ವಿದ್ಯುತ್ತೂ ಸಿಗಲಿಲ್ಲ.
ಇವೆಲ್ಲವೂ ಆಡಳಿತ ವೈಫಲ್ಯವೇನಲ್ಲ. ಬದಲಿಗೆ ಇವು ರೈತ ವಿರೋಧಿ ನೀತಿಗಳ ಪರಿಣಾಮ. ಹೀಗಾಗಿ ಬೇಕಿರುವುದು ಕೃಷಿ ಬಜೆಟ್ಟು ಅಥವಾ ಹೆಚ್ಚಿನ ಬಜೆಟ್ಟು ಮಾತ್ರವಲ್ಲ. ಮೂಲಭೂತವಾಗಿ ಬದಲಾಗಿರಬೇಕಿರುವುದು ರೈತ ವಿರೋಧಿ ನೀತಿಗಳು. ಆದರೆ ಈ ರೈತ ವಿರೋಧಿ ನೀತಿಗಳ ಬಗ್ಗೆ ಕಾಂಗ್ರೆಸ್, ಬಿಜೆಪಿ,ಜನತಾ ದಳ ಎಲ್ಲಾ ಪಕ್ಷಗಳಲ್ಲೂ ಸಮ್ಮತಿ ಇದೆ. ಏಕೆಂದರೆ ಈ ದೇಶದ ಅಭಿವೃದ್ಧಿಯ ಬಗ್ಗೆ ಈ ಪಕ್ಷ ಕಾಣುತ್ತಿರುವ ಕನಸುಗಳೆಲ್ಲಾ ವಿಶ್ವಬ್ಯಾಂಕಿನಿಂದ ಕಿರಾಯಿಗೆ ತಂದವೇ! ವಿಶ್ವಬ್ಯಾಂಕು ಈ ದೇಶದ ಕೃಷಿಯನ್ನು ಮೂಲಭೂತವಾಗಿ ಸಾಮ್ರಾಜ್ಯಶಾಹಿ ದೇಶಗಳ ವಸಾಹತುವನ್ನಾಗಿ ಮಾಡಿಕೊಳ್ಳಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಈ ದೇಶದ ಕೃಷಿ ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಗೂ ಅದು ಮಾನ್ಸಾಂಟೋ, ಸಿಬಾ-ಗೈಗಿ, ಸಿಂಜೆಂಟಾ, ಕಾರ್ಗಿಲ್, ಡುಪಾಂಟ್ ಹಾಗೂ ಇನ್ನಿತರ ದೈತ್ಯ ಕೃಷಿ ಕಾರ್ಪೋರೇಟ್ ಕಂಪನಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂದು ನೀತಿಗಳನ್ನು ಸಲಹೆ ನೀಡಿದೆ. ಮತ್ತು ಅದನ್ನು ನಮ್ಮ ಪಕ್ಷಗಳು ಚಾಚೂ ತಪ್ಪದೆ ಪಾಲಿಸುತ್ತಿವೆಯಲ್ಲದೆ ಅದನ್ನೇ ಶಾಸನ ಮಾಡಿದೆ.
2002ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ Karnataka Fiscal Responsibility Act ಎಂಬ ಶಾಸನವನ್ನು ಜಾರಿಗೆ ತಂದಿದೆ. ಅದರ ಪ್ರಕಾರ ಸರ್ಕಾರ -
- ತನ್ನ ಬಜೆಟ್ ಮಂಡಿಸುವಾಗ ಮತ್ತು ಆರ್ಥಿಕ ನೀತಿಗಳನ್ನು ಜಾರಿಗೆ ತರುವಾಗ ಸರ್ಕಾರದ ವೆಚ್ಚಗಳನ್ನು ಕಡಿಮೆ ಮಾಡಬೇಕು,
- ಸರ್ಕಾರ ಕೊಡುತ್ತಿರುವ ಸೇವೆ-ಸರಕುಗಳನ್ನು ಉಚಿತವಾಗಿಯಲ್ಲದೆ ಲಾಭದ ಬೆಲೆಗೆ ಮಾರಬೇಕು,
- ಪ್ರತಿಯೊಂದು ಕ್ಷೇತ್ರಗಳಲ್ಲೂ ಖಾಸಗಿ ಬಂಡವಾಳದ ಪ್ರವೇಶಕ್ಕೆ ಅವಕಾಶ ಒದಗಿಸಬೇಕು,
- ಕೃಷಿ ಮಾರುಕಟ್ಟೆ, ನೀರಾವರಿ, ಬೀಜ ಮಾರುಕಟ್ಟೆ, ಗೊಬ್ಬರ, ಸಾಲ, ಬೆಳೆ ಖರೀದಿ ಎಲ್ಲದರಲ್ಲೂ ಕಾರ್ಪೋರೇಟ್ ಬಂಡವಾಳಿಗರಿಗೆ ಅವಕಾಶ ಮಾಡಿಕೊಡಬೇಕು ಮತ್ತು ಸರ್ಕಾರ ಆ ಕ್ಷೇತ್ರದಿಂದ ಹಿಂತೆಗಯಬೇಕು.
ಇವು ಸಾರಾಂಶದಲ್ಲಿ ಆ ಶಾಸನದ ತಾತ್ಪರ್ಯ. ಹೀಗಾಗಿ ಒಂದು ನಿರ್ಧಿಷ್ಟ ಕಾಲಾವಧಿಯಲ್ಲಿ ಸರ್ಕಾರ ಕೊಡುತ್ತಿದ್ದ ಎಲ್ಲಾ ಸಬ್ಸಿಡಿಗಳನ್ನು ತಾನು ಹೇಗೆ ಹಂತಹಂತವಾಗಿ ಹಿಂತೆಗೆದುಕೊಳ್ಳುತ್ತೇನೆಂಬ ಬಗ್ಗೆ ಸರ್ಕಾರ ಪ್ರತಿ ಬಜೆಟ್ ಮಂಡನೆ ಮಾಡುವ ಮುನ್ನ ಒಂದು ಮಧ್ಯಂತರ ವಿತ್ತೀಯ ಕಾರ್ಯಯೋಜನೆಯನ್ನು (Mid Term Fiscal Policy)ಸದನದಲ್ಲಿ ಮಂಡಿಸಬೇಕು. ಅದರಲ್ಲಿ ಏನಾದರೂ ಒಂದು ವರ್ಷದಲ್ಲಿ ಏರುಪೇರಾಗಿದ್ದರೆ ಹೇಗೆ ಅದನ್ನು ತಿದುಪ್ಪಡಿ ಮಾಡಿಕೊಳ್ಳುತ್ತೇನೆಂದೂ ಅದರಲ್ಲಿ ಸೂಚಿಸಬೇಕು.
ಈ ಶಾಸನದ ಶರತ್ತುಗಳಿಗೆ ಅಧೀನವಾಗಿಯೇ 2002ರಿಂದಲೂ ಹಂತಹಂತವಾಗಿ ಸರ್ಕಾರ ಕೊಡುತ್ತಿದ್ದ ಎಲ್ಲಾ ಸರಕು ಮತ್ತು ಸೇವೆಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದೆ. 2015ರ ವೇಳೆಗೆ ಈ ಬಗೆಯ ಸರಕಾರಿ ಸಹಾಯ ಶೂನ್ಯಕ್ಕೆ ತಲುಪಬೇಕೆಂಬುದು ವಿಶ್ವಬ್ಯಾಂಕಿನ ಕಡ್ಡಾಯ ಶರತ್ತು. ಹೀಗಾಗಿಯೇ 2009ರಲ್ಲಿ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಮಂಡಿಸಿದ 2009-12ರವರೆಗಿನ Mid Term Fiscal Policy-MTFP ಯಲ್ಲಿ- ಆಹಾರ, ಸಾರಿಗೆ, ವಸತಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಕೊಡುತ್ತಿದ್ದ ಸಬ್ಸಿಡಿಯು 2007ರಲ್ಲಿ ಶೇ.1.37 ಇದ್ದದ್ದು 2011-12ರಲ್ಲಿ ಶೇ.0.63ಕ್ಕೂ ಮತ್ತು 2012-13ರಲ್ಲಿ ಶೇ. 0. 59ಕ್ಕೂ ಇಳಿಸುವ ಭರವಸೆಯನ್ನು ನೀಡಲಾಗಿದೆ. ಅದೇ ರೀತಿ ವಿದ್ಯುತ್ತಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು 2007ರಲ್ಲಿ ಶೇ.0.98 ಇದ್ದದ್ದು 2011-12ರಲ್ಲಿ ಶೇ.0.85ಕ್ಕೂ ಇಳಿಸಿ 2012-13ನೇ ಸಾಲಿಗೆ ಶೇ.0.80ಗೆ ಇಳಿಸುವ ಯೋಜನೆಯನ್ನು ಮಂಡಿಸಲಾಗಿದೆ.
ಇದೇ ನಿಜವಾದ ಬಜೆಟ್ಟು. ಸದನದಲ್ಲಿ ಮಂಡಿಸುವುದು ಬಜೆಟ್ಟಲ್ಲ. ಚುನಾವಣಾ ಅಗತ್ಯಗಳಿಗನುಸಾರವಾಗಿ ಘೋಷಿಸಲ್ಪಡುವ ಕರಪತ್ರಗಳು!!
ಇವು ಬದಲಾಗದೆ ಕೃಷಿ ಬಜೆಟ್ಟು ಮಾತ್ರ ಹೇಗೆ ಭಿನ್ನವಾದೀತು?
ಹೀಗಾಗಿ ಕೃಷಿ ಬಜೆಟ್ಟು ಎನ್ನುವುದು ಹೆಚ್ಚೆಂದರೆ ಈವರೆಗೆ ಸರ್ಕಾರವು ವಿವಿಧ ಶೀರ್ಷಿಕೆಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೃಷಿಗೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಮಾಡುತ್ತಿದ್ದ ವೆಚ್ಚವನ್ನೆಲ್ಲಾ ಒಂದೆಡೆ ಕ್ರೂಢೀಕರಿಸಿ, ನಂಜುಂಡಸ್ವಾಮಿಯವರ ಹೆಸರಿನಲ್ಲಿ ಯಾವುದಾದರೂ ಯೋಜನೆಯನ್ನು ಪ್ರಕಟಿಸಿ, ಮಿಕ್ಕಿದ್ದೆಲ್ಲವನ್ನೂ ವಿಶ್ವಬ್ಯಾಂಕಿನ ಶರತ್ತಿಗನುಗುಣವಾಗಿ -ಈಗಾಗಲೇ ಚರ್ಚಿಸಿ ದಂತೆ ಅತ್ಯಂತ ರೈತ ವಿರೋಧಿ ಮತ್ತು ದೈತ್ಯ ಬಹುರಾಷ್ಟ್ರೀಯ ಕಂಪನಿಗಳ ಪರವಾದ Karnataka Fiscal Responsibility Act ಶಾಸನಕ್ಕೆ ಬದ್ಧವಾಗಿ ನಡೆದುಕೊಳುವ- ಮತ್ತೊಂದು ಗಿಮಿಕ್ ಆಗಿದೆ.
ಹೀಗೆ ಯಡಿಯೂರಪ್ಪನವರು ಸಾರಾಂಶದಲ್ಲಿ ಅತ್ಯಂತ ರೈತವಿರೋಧಿಯಾದ ಕಾರ್ಪೋರೇಟ್ ಪರ ಕೃಷಿ ನೀತಿಯನ್ನೇ ಮುಂದುವರೆಸಲು ಇಟ್ಟಿರುವ ಹೊಸ ಹೆಸರೇ ಕೃಷಿ ಬಜೆಟ್ಟು.
ಆದರೆ ರೈತ ಸಂಘವು ಕಳೆದ ಹಲವು ದಶಕಗಳಿಂದ ಒಂದು ರೈತಪರವಾದ ಕೃಷಿ ಬಜೆಟ್ಟನ್ನು ಆಗ್ರಹಿಸುತ್ತಾ ಬಂದಿತ್ತು. ಈಗ ಯಡಿಯೂರಪ್ಪನವರು ರೈತಸಂಘದವರು ಆಹ್ರಹಿಸುತ್ತಿದ್ದ ಬೇಡಿಕೆಯ ಹೆಸರನ್ನು ಮಾತ್ರ ತೆಗೆದುಕೊಂಡು ಸಾರಾಂಶವನ್ನು ಮಾತ್ರ ರೈತವಿರೋಧಿಯನ್ನಾಗಿಯೇ ಉಳಿಸಿಕೊಂಡಿದೆ. ದುರದೃಷ್ಟಕರ ಸಂಗತಿಯೆಂದರೆ ನಂಜುಂಡಸ್ವಾಮಿಯವರ ಗರಡಿಯಲ್ಲಿ ಪಳಗಿದ ರೈತಸಂಘದಂತಹ ವಿಚಾರಶೀಲ ನಾಯಕತ್ವವೂ ಸಹ ಯಡಿಯೂರಪ್ಪನವರ ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳದಿರುವುದು!!
ಯಡಿಯೂರಪ್ಪನವರ ನೀತಿಗಳೆಲ್ಲಾ ಉದ್ದಕ್ಕೂ ರೈತ ವಿರೋಧಿಯೇ ಆಗಿರುವಾಗ, ಈಗಲೂ ಒಂದೆಡೆ ಕೃಷಿ ಬಜೆಟ್ ಎನ್ನುತ್ತಲೇ ಮತ್ತೊಂದು ಕಡೆ ಕಾಪರ್ೊರೇಟ್ ಪರ ಬೀಜ ನೀತಿ, ಬಂಡವಾಳ ಹೂಡಿಕೆ ನೀತಿ ಮತ್ತು ವಿಶ್ವ ಹೂಡಿಕೆದಾರರ ಬಂಡವಾಳವನ್ನು ಆಯೋಜಿಸಿ ಲಕ್ಷ ಲಕ್ಷ ಎಕರೆ ಜಮೀನು ವಶಪಡಿಸಿಕೊಳ್ಳುತ್ತಿರುವಾಗ, ಕೃಷಿ ಬಜೆಟ್ಟಿನ ಹೆಸರನ್ನು ನೋಡಿ ಹೇಗೆ ಮಾರುಹೋದರು? ಇದು ನಿಜಕ್ಕೂ ವಿಷಾದಕರ.
ಹೀಗಾಗಿ ಈ ಬಜೆಟ್ಟಿನಲ್ಲಿ ಖಂಡಿತಾ ಕೃಷಿಪರತೆಯ ಹೆಸರಿನಲ್ಲಿ ಒಂದಷ್ಟು ಹಣ ಮತ್ತು ಯೋಜನೆಗಳು ಖಂಡಿತಾ ಘೋಷಿತವಾಗುತ್ತವೆ..ಆದರೆ ಅದರ ನಿಜವಾದ ಬಣ್ಣ ಅರ್ಥಮಾಡಿಕೊಳ್ಳಲು ರೈತರು ಮತ್ತು ಜನರು ಈ ಕೆಳಗಿನ ವಿಷಯಗಳನ್ನು ಪರಿಶೀಲಿಸಬೇಕು:
1. ಈ ಬಜೆಟ್ಟು ವಿಶ್ವ ಬ್ಯಾಂಕಿನ ಆದೇಶದಂತೆKarnataka Fiscal Responsibility Act ಶಾಸನಕ್ಕೆ ಬದ್ಧವಾಗಿ ನಡೆದುಕೊಳ್ಳುವ ಬದ್ಧತೆಯನ್ನು ಘೋಷಿಸಿರುತ್ತದೆಯೋ ಇಲ್ಲವೊ? (ಇದನ್ನು ಹುಡುಕಲು ಹೆಚ್ಚು ಕಷ್ಟಪಡಬೇಕಿಲ್ಲ. ಇದು ಬಜೆಟ್ ಭಾಷಣದ ಮೊದಲ ವಾಕ್ಯಗಳಲ್ಲೇ ಇರುತ್ತದೆ.)
2. ಕೃಷಿ ಬಜೆಟ್ ಎಂಬ ಶೀರ್ಷಿಕೆಯಲ್ಲಿ ಹೆಚ್ಚುವರಿ ಹಣ ಘೋಷಣೆ ಮಾಡಿದ್ದರೆ ಅಥವಾ ಒಟ್ಟಾರೆ ಬಜೆಟ್ ಗಾತ್ರ ಒಂದು ಲಕ್ಷ ಕೋಟಿಯಾಗಿದ್ದರೆ ಹೆಚ್ಚುವರಿ ಹಣ ಸಂಪನ್ಮೂಲ ಸಂಗ್ರಹವಾಗಿರುವ ಬಗೆ ಹೇಗೆ? ಅದು ಶ್ರೀಮಂತರ ಮೇಲೆ ಹೆಚ್ಚಿಗೆ ತೆರಿಗೆ ಹಾಕುವುದರಿಂದ ಸಂಗ್ರಹಿಸಲಾಗುತ್ತಿದೆಯೋ ಅಥವಾ ರೈತಾಪಿ ಮತ್ತು ಸಾಮಾನ್ಯ ಜನರ ಮೇಲೆಯೇ ಹೆಚ್ಚಿನ ತೆರಿಗೆ ಹಾಕಿ ಸಂಗ್ರಹಿಸಲಾಗುತತಿದೆಯೋ?
3. ಎಲ್ಲಕ್ಕಿಂತ ಹೆಚ್ಚಾಗಿ ರೈತಪರ ಎಂದು ಸರ್ಕಾರ ಘೋಷಿಸುವ ಯೋಜನೆಗಳಿಗೆ ಸೂಕ್ತ ಬಜೆಟ್ ಬೆಂಬಲವಿದೆಯೋ ಅಥವಾ ಅದು ಕೇವಲ ಹಣಕಾಸು ಬೆಂಬಲವಿಲ್ಲದ ಘೋಷಣೆಯೋ?
4. ಕೃಷಿಗೆಂದು ಎತ್ತಿಡಲಾಗಿರುವ ಮೊತ್ತವು ಹೋದ ವರ್ಷಕ್ಕಿಂತ ಎಷ್ಟು ಜಾಸ್ತಿ?
5. ಕೃಷಿಗೆ ಜಾಸ್ತಿ ಹಣ ನೀಡಿದ ಮಾತ್ರಕ್ಕೆ ಅದು ರೈತಪರವಾಗುವುದಿಲ್ಲ. ಹೆಚ್ಚುವರಿ ಯಾವ ಬಾಬತ್ತಿಗೆ ಎಂಬುದು ಮುಖ್ಯ. ಉದಾಹರಣೆಗೆ ಕೃಷಿ ಸಲಕರಣೆಗಳನ್ನು ಕೊಳ್ಳಲು ನೀಡಲಾಗುವ ಸಬ್ಸಿಡಿ ಪ್ರಧಾನವಾಗಿ ಟ್ರಾಕ್ಟರ್ ಕೊಳ್ಳಲು ಹೋದರೆ ಅದು ಯಾವರೈತನನ್ನು ಮತ್ತು ಯಾವ ಬಗೆಯ ಕೃಷಿಯನ್ನು ಬೆಂಬಲಿಸುತ್ತದೆ ಎಂಬುದನ್ನು ಪರಿಶೀಲಿಸಬೇಕು.
6. ರೈತರಿಗೆ ವಿಮೆ, ಪಿಂಚಣಿ, ನಿರ್ದಿಷ್ಟ ಆದಾಯ ಖಾತರಿ, ಹಿಡುವಳಿ ಆಧಾರಿತ ಬೆಳೆ ಆಧಾರಿತ ಕಡ್ಡಾಯ ಕನಿಷ್ಟ ಆದಾಯದ ಖಾತರಿ-ಇವೇ ಇನ್ನಿತರ ವಿಷಯಗಳನ್ನು ಖ್ಯಾತ ರೈತಪರ ಅರ್ತಶಾಸ್ತ್ರಜ್ನ ದೇವೆಂದರ್ ಶರ್ಮಾ ಬಿಜೆಪಿ-ಜೆಡಿಎಸ್ ಆಡಳಿತವಿದ್ದಾಗಲೂ ಸರ್ಕಾರಕ್ಕೆ ಸಲಹೆ ನೀಡಿದ್ದರು. ಸರ್ಕಾರ ಒಪ್ಪಿಕೊಂಡಿದ್ದಕ್ಕೆ ಅವರಿಗೆ ಸಂತೋಷವೂ ಆಗಿತ್ತು. ಆದರೆ ಅದು ಜಾರಿಗೆ ಬರಲಿಲ್ಲ. ಏಕೆಂದರೆ ಅದನ್ನು ಜಾರಿಗೆ ತರಲು ಬೇಕಾದ ಸಂಪನ್ಮೂಲ ಸರ್ಕಾರದ ಬಳಿ ಇರಲಿಲ್ಲ. ಸಂಪನ್ಮೂಲ ಇದ್ದವರಿಂದ ವಸೂಲಿ ಮಾಡುವ ರಾಜಕೀಯ ಬಿಜೆಪಿಯದ್ದೂ ಆಗಿರಲಿಲ್ಲ. ಜೆಡಿಎಸ್ದೂ ಆಗಿರಲಲ್ಲ. ಈಗಲೂ ಅಷ್ಟೆ. ಸರ್ಕಾರ ಶಮರ್ಾರವರ ಸಲಹೆಯನ್ನು ಮನ್ನಿಸಿ, ಬಿಜೆಪಿ ಸಕರ್ಾರ ನಂಜುಂಡಸ್ವಾಮಿಯವರ ಹೆಸರಿನಲ್ಲಿ ಯೋಜನೆಗಳನ್ನು ಘೋಷಿಸಬಹುದು. ಆದರೆ ಅದಕ್ಕೆ ಬೇಕಾದ ಹಣವನ್ನು ಸರ್ಕಾರ ಎಲ್ಲಿಂದ ಮತ್ತು ಹೇಗೆ ಒದಗಿಸಿದೆ ಎಂಬುದು ಸ್ಪಷ್ಟವಾಗದೆ ಅದು ಕೇವಲ ಪೊಳ್ಳೂ ಭರವಸೆ ಮಾತ್ರ.
7. ಘೋಷಿತವಾಗುವ ಕೃಷಿ ಯೋಜನೆಗಳಲ್ಲಿ ಸಾಲ, ಹಿಡುವಳಿ, ನೀರಾವರಿ, ಉತ್ಪನ್ನ ಮಾರಾಟ ವ್ಯವಸ್ಥೆ, ಬೀಜ ಮಾರುಕಟ್ಟೆ ಇವುಗಳಲ್ಲಿ ಸೂಕ್ಷ್ಮವಾಗಿ ಸಕರ್ಾರ ತಾನು ವಹಿಸಿಕೊಳ್ಳುವ ಯೋಜನೆಯೆಷ್ಟು? ಮತ್ತು ಸರ್ಕಾರಿ - ಖಾಸಗಿ ಪಾಲುದಾರಿಕೆಯ ಹೆಸರಿನಲ್ಲಿ ಲಾಭಕೋರತನವೇ ಪ್ರೇರಣೆಯಾಗಿರುವ ಖಾಸಗಿ ಕೃಷಿ ದೈತ್ಯ ಕಂಪನಿಗಳಿಗೆ ವಹಿಸಿಕೊಡುವ ಯೋಜನೆಗಳೆಷ್ಟು?
8. ಹಾಗೂ ಒಟ್ಟಾರೆಯಾಗಿ ರಾಜ್ಯದ ಆರ್ಥಿಕತೆಯಲ್ಲಿ ನವ ಆರ್ಥಿಕ ನೀತಿ ಪ್ರಣೀತ ಬಹುರಾಷ್ಟ್ರೀಯ ಕಂಪನಿಗಳ ಪರ ಒತ್ತೆಷ್ಟು?
ಇವುಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ಯಾವುದೇ ತೀರ್ಮಾನಕ್ಕೆ ಬರಬಾರದೆಂದು ರೈತಸಂಘದ ಸಂಗಾತಿಗಳಲ್ಲಿ ಈ ಲೇಖಕ ನಮ್ರ ಮನವಿ ಮಾಡಿಕೊಳ್ಳಲು ಬಯಸುತ್ತಾನೆ!
ಏಕೆಂದರೆ ಯಡಿಯೂರಪ್ಪನವರ ಮತ್ತು ಬಿಜೆಪಿಯ ಕೃಷಿ ನೀತಿಗಳೆಲ್ಲಾ ರೈತವಿರೋಧಿಯೇ ಆಗಿರುವಾಗ ವಿಶ್ವಬ್ಯಾಂಕಿನ ಆದೇಶದಂತೆ ನಡೆಯುತ್ತಿರುವಾಗ ಕೃಷಿ ಬಜೆಟ್ಟು ಮಾತ್ರ ರೈತ ಪರವಾಗಿರಲು ಹೇಗೆ ಸಾಧ್ಯ? ರೈತಸಂಘಕ್ಕೆ ಈ ಪ್ರಶ್ನೆ ಏಕೆ ಮೂಡಲಿಲ್ಲ? ಅದು ನಂಜುಂಡಸ್ವಾಮಿಯವರ ಜನ್ಮದಿನದಂದು ರೈತೋತ್ಸವ ಮಾಡುತ್ತಿರುವಾಗ!!!???
- ಶಿವಸುಂದರ್

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...